[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಮೂರನೇ ಕಂತು]

ಬಲು ಹಿಂದಿನ ಕತೆಯೇನೂ ಅಲ್ಲವಿದು. ಅದೊಂದು ದೊಡ್ಡ ದೇಶ. ಅದರ ವಕ್ಷಸ್ಥಳದಲ್ಲಿ ಪುಟ್ಟ ಒಂದು ಹಳ್ಳಿ. ಉಲ್ಲಾಸವೇ ಅದರ ಉಸಿರು. ಅಲ್ಲಿಯ ಬದುಕು ಪರಿಸರದೊಡನೆ ಸಂಗತವಾಗಿಯೂ ಸಂತತವಾಗಿಯೂ ಹೊಂದಿಕೊಂಡಿದ್ದು ಎಲ್ಲೆಲ್ಲಿಯೂ ಸಂತೋಷ ಸಂಭ್ರಮ ಹರಿಯುತ್ತಿದ್ದುವು. ಬೇಸಾಯದಿಂದ ಬಂದ ಗಳಿಕೆಯಿಂದ ನೆಮ್ಮದಿಯ ಬದುಕನ್ನು ಬಾಳುತ್ತಿದ್ದ ಆರೋಗ್ಯವಂತ ಜನ, ಶ್ರಾಯಾನುಸಾರ ಕಂಗೊಳಿಸುತ್ತಿದ್ದ ಹಲ ಬಗೆಯ ಪೈರುಪಚ್ಚೆ, ಎಲ್ಲೆಲ್ಲೂ ಗಗನ ನಿವೇದಿತವಾಗಿ ನೆಟ್ಟಗೆ ನಿಂತಿದ್ದ ವೃಕ್ಷಸಮೂಹ, ಇವುಗಳಿಗೆ ರಕ್ಷಣೆ ನೀಡಲು ಹಳ್ಳಿಯನ್ನು ಬಳಸಿ ಹರಡಿಹೋಗಿದ್ದ ಬೆಟ್ಟ ಕಣಿವೆಗಳ ಸಾಲು, ಬೆಟ್ಟಗಳ ಒಡಲಿನಿಂದ ನಿರಂತರವಾಗಿ ಸ್ರವಿಸುತ್ತಿದ್ದ ಸಲಿಲಧಾರೆ, ಹಸುರು ಹಚ್ಚಡದ ಮೇಲೆ ಹಾದಿ ಬಿಡಿಸಿ ಸಾಗುತ್ತಿದ್ದ ನೀರಿನ ಹರಿವು ನೇಯ್ದ ಬೆಳ್ಳಿ ಚಿತ್ತಾರ, ಸಮೃದ್ಧ ನೆಲ ಜನ ಬಾನುಗಳಲ್ಲಿ ವಿಹರಿಸುತ್ತಿದ ಪ್ರಾಣಿ ಜಲಚರ ಪಕ್ಷಿ ಸಂಕುಲ – ಇವೆಲ್ಲ ಅಲ್ಲಿಯ ಜೀವಿಪರಿಸರ ಅಖಂಡತೆಯ ಅವಿಭಾಜ್ಯ ಅಂಗಗಳಾಗಿ ಎರಕಗೊಂಡಿದ್ದುವು. ನಿಸರ್ಗವಲ್ಲಿ ಹಾಡುತ್ತಿತ್ತು, ಕೊಳಲೂದುತ್ತಿತ್ತು, ಚೆಲುವು ಸೂರೆ ಹೋಗಿತ್ತು, ಪರಿಮಳ ಸರ್ವವ್ಯಾಪಿ ಆಗಿತ್ತು, ಸೌಂದರ್ಯ ಸೀಮೆಯದು. ಇಂತಿರ್ಪೊಡೆ ಅಲ್ಲೊಂದು ವಿಚಿತ್ರ ಸನ್ನಿವೇಶ ತಲೆಹಾಕಿತು. ಆ ಹಳ್ಳಿಯ ಮೇಲೆ ದುಷ್ಟಗ್ರಹದ ವಕ್ರದೃಷ್ಟಿ ಕೆಡೆಯಿತೋ ಮಾಟಗಾರನ ಛೂಮಂತ್ರಗಾಳಿ ಮಂಕು ಎರಚಿತೋ ಪೂತನಿಸ್ತನ್ಯಪಾನದಿಂದ ವಿಷ ಸರ್ವತ್ರ ವ್ಯಾಪಿಸಿತೋ ಎಂಬಂತೆ ಆ ತನಕ ಕಂಡು ಕೇಳಿ ಅರಿತಿರದಿದ್ದ ‘ಭೂತ ಚೇಷ್ಟೆ’ಗಳು ಹಳ್ಳಿಗರನ್ನು ಪೀಡಿಸತೊಡಗಿದುವು. ಹಸುರು ಕಡಲಿನಲ್ಲಿ ಸಾವಿನ ನೀರ್ಗಲ್ಲಬೆಟ್ಟ ಗುಟ್ಟಾಗಿ ಆದರೆ ಖಚಿತವಾಗಿ ಮುನ್ನಡಿಯಿಡುತ್ತ ಬರುತ್ತಿರುವಂತೆ ತೋರಿತು. ಶಾಂತಿವನದಲ್ಲಿ ಅಶಾಂತಿ, ಮೂಕಶೋಕ. ಹೊಸ ಬೇನೆಯಿಂದ ಜನ ಸತ್ತರು, ಮಕ್ಕಳು ಮರಗಟ್ಟಿದುವು. ವೈದ್ಯರಿಗೆ ಸವಾಲಾಗಿ ಯಮರಾಯನ ಕೋಣ ಎದುರಾದಂಥ ಭೀಕರ ಪರಿಸ್ಥಿತಿ.

ಮುಂಜಾವಿನ ಮಬ್ಬನ್ನು ಸೀಳಿ ನೇಸರು ಬರುತ್ತಿದೆಯೆಂದು ಕಣಿ ನುಡಿವ ಶಕುನದ ಹಕ್ಕಿಯ ಸೊಲ್ಲು ಇಲ್ಲವಾಗಿತ್ತು. ಕೊಳದ ಬಳಿಯ ಟಿಸಿಲ ಮೇಲೆ ಮರಸು ಕುಳಿತು ತಿಳಿನೀರ ಮೇಲೆ ಫಕ್ಕನೆ ಎಗರಿ ಬೆಳ್ಳಿ ಮೀನನ್ನು ಗಬಕ್ಕನೆ ಕಚ್ಚಿ ಚಿಮ್ಮುವ ಮೀಂಚುಳ್ಳಿಯ ಕಾಮನಬಿಲ್ಲಿನ ಹಾರಾಟ ಕೈದಾಗಿತ್ತು. ಹೊಲತೋಟಗಳು ಕಾಡುಬೆಟ್ಟಗಳು ಒಣಗಿ ಬೆಂಗಾಡಿನ ಬಕಾಸುರಾಪೋಶನಕ್ಕೆ ಕಾಲ ಕೂಡಿಬಂದಿತ್ತು. ಹಳ್ಳಿಗರ ಉಸಿರೇ ಕಟ್ಟಿಹೋಗುವಂಥ ಈ ದುರ್ಭರ ಪರಿಸ್ಥಿತಿಯ ಕಾರಣವೇನು?

ಕಾರಣವೇನು ಗೊತ್ತೇ?

ಸರ್ವಕೀಟನಾಶಕ ಸಕಲ ಸಮೃದ್ಧಿದಾಯಕ ಆನಂದಮೃತವರ್ಷಿಣಿ ಡಿಡಿಟಿಯ ಸಾರ್ವತ್ರಿಕೋಪಯೋಗ – ನಿಸರ್ಗದ ಎದುರು ಮಾನವ ಅರಿಯದೆ (ಅರಿತು?) ಹೂಡಿದ ಕಾಳಗದ ಎದುರುಹೊಡೆತ, ಹಿಂದೊದೆತ, ಎಗರೇಟು, ಯಮಪ್ರಹಾರ. ರ‍ಯಾಶೆಲ್ ಕಾರ್ಸನ್ ಎಂಬ ಪ್ರಸಿದ್ಧ ಲೇಖಿಕೆ ವೈಜ್ಞಾನಿಕ ಸಾಕ್ಷ್ಯಾಧಾರ ಸಮೇತ ಬರೆದು ಪ್ರಕಟಿಸಿದ (೧೯೬೨) ‘ಸೈಲೆಂಟ್ ಸ್ಪ್ರಿಂಗ್’ ಎನ್ನುವ ಉದ್ಗ್ರಂಥದ ಮೊದಲ ಅಧ್ಯಾಯ ಪ್ರಾರಂಭವಾಗುವುದು ಈ ಮೇಲಿನಂತೆ. ಭಾರತದಲ್ಲಿ ಇಂಥ ಹಳ್ಳಿಗಳನ್ನು ಹುಡುಕುವುದು ಅತಿ ಸುಲಭ.

“ಭವಿಷ್ಯವನ್ನು ದರ್ಶಿಸಬಲ್ಲ ಮತ್ತು ದುರಂತವನ್ನು ನಿಲ್ಲಿಸಬಲ್ಲ ಸಾಮರ್ಥ್ಯವನ್ನು ಮಾನವ ಕಳೆದುಕೊಂಡಿದ್ದಾನೆ. ಆತ ಭೂಮಿಯನ್ನು ನಾಶಗೊಳಿಸುವುದರ ಜೊತೆಗೆ ತಾನೂ ನಿರ್ನಾಮವಾಗಿ ಹೋಗುತ್ತಾನೆ.” ಇದು ಆಲ್ಬರ್ಟ್ ಶ್ವೈಟ್ಝರರ(೧೮೭೫-೧೯೬೫, ವೈದ್ಯ, ತತ್ವಜ್ಞಾನಿ, ಸಂಗೀತವಿದ, ಎಲ್ಲಕ್ಕೂ ಮಿಗಿಲಾಗಿ ಗಾಂಧಿ ಐನ್ಸ್ಟೈನ್ ರಂತೆ ಮಾನವತಾವಾದಿ) ಪ್ರವಾದಿ ವಾಣಿ.

ಪುರುಷ ಪ್ರಕೃತಿ – ಎಂಟು

“ನಮ್ಮ ಜೀವನದ ಅಧಿಕಾಂಶವನ್ನು ನಾವು ಮನುಷ್ಯರು ತೋರ್ಕೆಗೆ ಸುಪರಿಚಿತವೂ ವಿಶ್ವಾಸಾರ್ಹವೂ ಆದ ಭೌತ ಮತ್ತು ಮಾನವೀಯ ಪರಿಸರದಲ್ಲಿದ್ದೇವೆಂಬ ಮಿಥ್ಯಾ ಕಲ್ಪನೆಯಿಂದಲೂ ಸ್ವಗೃಹದಲ್ಲಿ ಸಹಜವಾಗಿ ಒದಗುವ ಸ್ವಾಸ್ಥ್ಯಭಾವದಿಂದಲೂ ಬಾಳುತ್ತಿದ್ದೇವೆ. ಆದರೆ ದೈನಂದಿನ ಜೀವನದ ನಿರೀಕ್ಷಿತ ಗತಿಗೆ ತಡೆ ಎದುರಾದಾಗ ನಮ್ಮ ಸ್ಥಿತಿ ಹಡಗೊಡೆದು ಕಡಲಿಗೊಗೆಯಲ್ಪಟ್ಟು, ವಿಶಾಲಸಾಗರದ ಅಪಾರ ವಿಸ್ತಾರದಲ್ಲಿ ಕೈಗೆಟುಕಿದ ಮರದ ಹಲಗೆಯನ್ನು ಬಿಗಿದಪ್ಪಿಕೊಂಡು, ಎಲ್ಲಿಂದ ಬಂದೆವೋ ಎಲ್ಲಿಗೆ ಕೊಚ್ಚಿಕೊಂಡು ಹೋಗುವೆವೋ ಎಂಬುದರ ಅರಿವಿಲ್ಲದೆ, ಬದುಕು-ಸಾವು ಹೋರಾಟ ನಡೆಸುತ್ತಿರುವ ಹೊನಲು ಪಾಲಾದವರ ಸ್ಥಿತಿಯಂತಾಗಿದೆ ಎಂಬುದು ಸುವೇದ್ಯವಾಗುತ್ತದೆ.”

ಆಲ್ಬರ್ಟ್ ಐನ್ಸ್ಟೈನರ (೧೮೭೯-೧೯೫೫) ಈ ಮಾತಿನ ಅರ್ಥ ವರ್ತಮಾನ ದಿನಗಳಲ್ಲಿ ನಮಗೆ ಸಾಕಷ್ಟು ತೀಕ್ಷ್ಣವಾಗಿಯೇ ಕುಟುಕುತ್ತಿದೆ – ದೈನಂದಿನ ಜೀವನದ ನಿರೀಕ್ಷಿತ ಗತಿಗೆ ತಡೆ ಎದುರಾಗಿದೆ. ಇದರ ಕಾರಣ ನಾವೇ. ಮಂಕುತಿಮ್ಮನ ನುಡಿಗಳಲ್ಲಿ “ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ ವಿಕೃತಿಗೊಳಿಸುವನವನುಮಾಕೆಯಂಗಗಳ ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ, ವ್ಯಾಕೃತಿಸರೇನವಳ?”

ಇದರ ಸಾರಾಂಶ: ಇಲ್ಲಿ ‘ಪ್ರಕೃತಿ’ ಎಂದರೆ ನಿಸರ್ಗ, ಪರಿಸರ, ಆವರಣ, ಭೂಮಿ, ಸೌರವ್ಯೂಹ, ಆಕಾಶಗಂಗೆ ಅಥವಾ ವಿಶ್ವ ಎಂಬುದಾಗಿ ಸಂದರ್ಭ ಗ್ರಹಿಸಿ ಅರ್ಥವಿಸಬೇಕು. ಇದು ನಮ್ಮ ಹೊರಗಿನ ‘ಪ್ರಕೃತಿ.’ ಇನ್ನು ನಮ್ಮೊಳಗಿನ ‘ಪ್ರಕೃತಿ’ಯೂ ಇದೆ. ನಮ್ಮ ಮನೋದೈಹಿಕ ವ್ಯಾಪಾರದ ಫಲವಾದ ಸ್ವಭಾವ. ಎಲ್ಲ ಜೀವಿಗಳಿಗೂ ಸಾಮಾನ್ಯವಾದ ಎರಡು ಗುಣಗಳಿವೆ: ಜೀವನ ಮತ್ತು ಪ್ರಜನನ. ಮನುಷ್ಯ (ಅಂದರೆ ‘ಪುರುಷ’) ತನ್ನ ನಿಕಟ ಪರಿಸರದ (ಅಂದರೆ ‘ಪ್ರಕೃತಿ’) ಜೊತೆ ನಿರಂತರವಾಗಿ ವ್ಯವಹರಿಸುತ್ತಿರಬೇಕು: ಇದೇ ಬದುಕು. ವ್ಯಕ್ತಿ ಉದ್ದೇಶಪೂರ್ವಕವಾಗಿ ‘ಪ್ರಯತ್ನ’ ಪಟ್ಟ ಹೊರತು ಆತನಿಗೆ ಆಹಾರ ದೊರೆಯದು. ಈ ‘ಪ್ರಯತ್ನ’ವೇ ಮನುಷ್ಯ-ಪರಿಸರ ಅಥವಾ ಪುರುಷ-ಪ್ರಕೃತಿ ಅಂತರಕ್ರಿಯೆ. ಈ ‘ಪ್ರಯತ್ನ’ದ ಫಲವಾಗಿ ಬದುಕಿನಲ್ಲಿ ಸುಧಾರಣೆ ಕಂಡುಬರುತ್ತದೆ. ನಾಗರಿಕತೆ ಮುನ್ನಡೆಯುತ್ತದೆ, ಹೊಸ ಹರವುಗಳು ಎದುರಾಗುತ್ತವೆ. ನಾಗರಿಕತೆಯ ಇತಿಹಾಸ ಗಮನಿಸಿದಾಗ ಪುರುಷ-ಪ್ರಕೃತಿ ‘ಸಂಘರ್ಷ’ವೇ ಅದರ (ನಾಗರಿಕತೆಯ) ಚಾಲನಬಲ ಎಂದನ್ನಿಸುತ್ತದೆ. ಈ ‘ಸಂಘರ್ಷ’ದಲ್ಲಿ ಪ್ರತಿಸಲವೂ ‘ಪ್ರಕೃತಿ’ ಮನುಷ್ಯನನ್ನು (‘ಪುರುಷ’) ತಿದ್ದುತ್ತಲೇ ಇರುವುದು. ಆದರೆ ಎಲ್ಲಿಯ ತನಕ?

ಸಂಘರ್ಷವೇಕೆ? ಮಾನವ ತನ್ನ ಪರಿಸರದ ಜೊತೆ ಅನುವರ್ತಿಸಿ ಮತ್ತು ಸಹಕರಿಸಿ ಸುಖಿಯಾಗಿರಬಾರದೇಕೆ? ಮಾನವ-ನಿಸರ್ಗ ಪೂರಕ ಪೋಷಕವಾಗಿರಬೇಕೇ ವಿನಾ ಮಾರಕ ಶೋಷಕವಾಗಿ ಅಲ್ಲ. ಇಲ್ಲಿ ಮೊದಲ ಹೆಚ್ಚೆ ಇಡಬೇಕಾದವ ಮಾನವ. ಇವನೇನಾದರೂ ನಿಸರ್ಗದ ಜೊತೆ ಸೆಣಸಲು ನಿಂತನಾದರೆ ಇವನ ಸರ್ವನಾಶ ಖಾತ್ರಿ. ಪ್ರಾಚೀನ ನಾಗರಿಕತೆಗಳಿಗೆ ಈ ಸೂಕ್ಷ್ಮ ಮನವರಿಕೆ ಆಗಿತ್ತು.

“ದೇವಸ್ಯಪಶ್ಯ ಕಾವ್ಯಂ ನಮಮಾರನಜೀರ್ಯತಿ” (ದೇವರ ಕಾವ್ಯ ನೋಡು ಅದಕ್ಕೆ ಮರಣವಿಲ್ಲ ಜೀರ್ಣವಿಲ್ಲ) ಎಂದು ಹಾಡಿದ, “ಅಣುರೇಣು ತೃಣಕಾಷ್ಠದಲಿ ಸಂಚರಿಸುತಿಹನು” ಎಂದು ವಿವರಿಸಿದ ಇಲ್ಲವೇ ಸಮಸ್ತಚರಾಚರ ವಸ್ತುಗಳಲ್ಲಿ ಭಗವಂತನ ಒಂದೊಂದು ಗುಣವನ್ನು ಆವಾಹಿಸಿದ ಭಾರತೀಯ ಚಿಂತನೆ ಸರ್ವವೇದ್ಯ. ಗ್ರೀಕ್ ಸಂಸ್ಕೃತಿ ಗಗನಕಾಯಗಳಲ್ಲಿ ದೇವತೆಯರನ್ನೂ ನಿಸರ್ಗ ಬಲಗಳಲ್ಲಿ ಅವರ ಲೀಲಾವಿನೋದಗಳನ್ನೂ ಕಂಡಿತು. ಪ್ರಕೃತಿ ಪುರುಷರ (yin & yang) ಸಮಾಗಮವೇ ಭೂಮಿ ಎಂದಿತು ಚೀನಾ ಸಂಸ್ಕೃತಿ.

ವರ್ತಮಾನ ಜೀವನ ಭಗವದನುಗ್ರಹವೆಂದು ಮಾಯಾ ಸಂಸ್ಕೃತಿ ಭಾವಿಸಿತ್ತು. ಇಲ್ಲೆಲ್ಲ ಭಾಷೆ ಹೇಗೆಯೇ ಇರಲಿ, ಅಂತರ್ಗತ ಭಾವ ಒಂದೇ: ಮಾನವ ನಿಸರ್ಗಾವಲಂಬಿ ಮತ್ತು ನಿಸರ್ಗಾಧೀನ, ಆದ್ದರಿಂದ ಈತ ನಿಸರ್ಗಕ್ಕೆ ವಿನೀತನಾಗಿರಬೇಕು. ಆದರೆ ನಾಗರಿಕತೆ ನಡೆದು ಬಂದ ಹಾದಿ ಬೇರೆಯೇ. ಬದುಕಿನ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ “ಸರ್ವೇಜನಾಸ್ಸುಖಿನೋ ಭವಂತು” ಎಂಬ ಆದರ್ಶವನ್ನು ಪ್ರತ್ಯಕ್ಷವಾಗಿಸುವುದು ತಂತ್ರವಿದ್ಯೆಯ (technology) ಪ್ರಕಟಿತೋದ್ದೇಶ. ವಾಸ್ತವವಾಗಿ ಕಂಡುಬರುತ್ತಿರುವುದೇನು? ನಿವ್ವಳ ಮೊತ್ತ ಪರಿಶೀಲಿಸಿದುದಾದರೆ ತದ್ವಿಪರೀತ ಸ್ಥಿತಿ. ಇದಕ್ಕೆ ಪುರಾವೆಯಾಗಿ ನಿಮ್ನ ಮತ್ತು ಮಧ್ಯಮ ವರ್ಗದವರ – ಇವರು ತಾನೇ ಬಹುಸಂಖ್ಯಾತರು – ಬವಣೆ ಗಮನಿಸಬಹುದು: ಪಾವತಿಸಿದ ಹಣಕ್ಕೆ ಅನುಗುಣವಾಗಿ ಸರಕು ಸೇವೆ ದೊರೆಯದಿರುವುದು, ಪ್ರಾಮಾಣಿಕ ಜೀವನ ಅಸಹನೀಯವಾಗಿರುವುದು, ಮಿಥ್ಯಾಮೌಲ್ಯಗಳು ಶಾಶ್ವತಮೌಲ್ಯಗಳ ಸ್ಥಾನಾತಿಕ್ರಮಣ ಮಾಡಿರುವುದು, ಶುದ್ಧ ವಾಯು, ಜಲ, ಆಹಾರ, ಅಂತೆಯೇ ನಾಗರಿಕ ವಸತಿ, ಸರಳ ವಸನ, ಯುಕ್ತ ಶಿಕ್ಷಣ, ಉಪಯುಕ್ತ ಉದ್ಯೋಗ ಅಲಭ್ಯವಾಗಿರುವುದು, ಸಮಗ್ರವಾಗಿ ಬದುಕಿನ ಮಟ್ಟ ಕುಸಿದಿರುವುದು.

ಅನುಭೋಗಾತಿರೇಕತ್ವ – ಒಂಬತ್ತು

ಇಂದಿನ ಪ್ರಪಂಚ consumerism ಎಂಬ ತೀವ್ರ ಜ್ವರಗ್ರಸ್ತವಾಗಿರುವಂತೆ ತೋರುತ್ತದೆ. ‘ಋಣಂ ಕೃತ್ವಾ ಘೃತಂ ಪಿಬೇತ್’ ಎಂಬ ಅನುಕೂಲ ಸೂತ್ರದ ಒಂದು ಮುಖವಿದು – ಅನುಭೋಗಾತಿರೇಕತ್ವ. ಎಂದರೆ ಸರಕು ಸೇವೆಗಳನ್ನು ಅವು ನಮಗೆ ಅವಶ್ಯವಿರಲಿ ಇಲ್ಲದಿರಲಿ, ಸಮೃದ್ಧವಾಗಿ ಅನುಭೋಗಿಸುವುದೇ ಉಪಯೋಗಿಸಿ ವೆಚ್ಚಿಸಿ ಮಾಲಿನ್ಯಕ್ಕೆ ಕಾರಣವಾಗುವುದೇ ಪ್ರಗತಿಯ ಮಾನಕ ಎಂಬ ಭ್ರಮೆ. ಉಪಕರಣ ಸಲಕರಣೆ ಯಂತ್ರಸಾಮಗ್ರಿಗಳ ನಿರಂತರ ದಾಸನಾಗಿರುವ ಆಧುನಿಕ ಮಾನವ, ಆತನ ಮಿದುಳ ಶಿಶುವಾದ ತಂತ್ರವಿದ್ಯೆಯನ್ನು ನಿಯಂತ್ರಿಸುವುದರ ಬದಲು ಅದಕ್ಕೆ ಸುಲಭ ಲಭ್ಯ ಪ್ರಯೋಗ ಪಶುವಾಗಿದ್ದಾನೆ – ಶ್ವಾನಲಾಂಗೂಲಚಾಲನೆ (dog wagging the tail) ಲಾಂಗೂಲಶ್ವಾನಚಾಲನೆಗೆ (tail wagging the dog) ಮಣಿದಂತೆ!

ಆತ ಹಳೆಯ ಮನೆಯೊಂದನ್ನು ಕೊಂಡು ಅದಕ್ಕೆ ಪರಿಪೂರ್ಣ ಮುಖಮಾರ್ಜನ ಅಥವಾ ಕಾಯಕಲ್ಪವಿತ್ತು ಹೊಸಮನೆಯ ಜೀವ ಕಳೆ ತಂದ. ಸಾಕಷ್ಟು ಪೀಠೋಪಕರಣಗಳಿಂದಲೂ ಮೆತ್ತೆ ಆಸನಗಳಿಂದಲೂ ಅಲಂಕಾರ ವಸ್ತುಗಳಿಂದಲೂ ಅದರ ‘ಅಂತರಂಗ’ವನ್ನು ಸಿಂಗರಿಸಿದ. ‘ಶುಭದಿನ’ದಂದು ನೂತನ ಗೃಹಪ್ರವೇಶ ಸಮಾರಂಭ ಏರ್ಪಡಿಸಿ ಬಂಧುಮಿತ್ರನ್ನೂ ಪ್ರತಿಷ್ಠಿತ ಗಣ್ಯರನ್ನೂ ಆಹ್ವಾನಿಸಿದ. ಅವರು ಬಂದರು. ಮನೆಯ ಒಳಹೊರಗು ನೋಡಿ ಬೆರಗಾದರು. ಮನೆಯೊಡೆಯನ ವಿವರಣೆ ಆಲಿಸಿ ತಲೆದೂಗಿದರು ಮತ್ತು ಆತನಿಗೆ ಮುಕ್ತ ಅಭಿನಂದನೆ ಸಲ್ಲಿಸಿದರು.

“ಹೇಗಿದೆ ನನ್ನ ಯೋಜನೆ ಮತ್ತು ನಿರ್ವಹಣೆ?” ಹಿರಿಯರೊಬ್ಬರನ್ನು ಆತ ಉತ್ಸುಕತೆಯಿಂದ ಪ್ರಶ್ನಿಸಿದ. ಅವರೆಂದರು “ನಾನು ಭಾವಿಸಿದ್ದೆ ಮನೆಯಿರುವುದು ವಾಸಕ್ಕೆಂದು!” ಆ ಪ್ರದರ್ಶನ ಪರಿವಾರಗಳ ಸಂತೆಯಲ್ಲಿ ‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬುದು ಅವರ ಮಾತಿನ ಧ್ವನಿ. ಅನುಭೋಗಾತಿರೇಕತ್ವಕ್ಕೇಕೆ ಇಷ್ಟೊಂದು ಪ್ರಾಶಸ್ತ್ಯ? ತಂತ್ರವಿದ್ಯೆ ಹಿರಿ ಬಂಡವಾಳದ ಅನುಯಾಯಿ. ಅಂದ ಮೇಲೆ ತಂತ್ರವಿದ್ಯೆಯ ಫಲಗಳು ಹಿರಿ ಸಂಖ್ಯೆಯಲ್ಲಿ ಖರ್ಚಾಗದಿದ್ದರೆ, ಅಂದರೆ ಜನರಿಂದ ಅನುಭೋಗಿಸಲ್ಪಡದಿದ್ದರೆ, ಬಂಡವಾಳ ಬೆಳೆಯಲಾರದೆಂಬುದು ಸ್ಪಷ್ಟ. ನಮ್ಮ ಜೀವನದ ಸಮಸ್ತ ಮುಖಗಳೂ – ಅನ್ನ, ಬಟ್ಟೆ, ಮನೆ, ವಿದ್ಯೆ, ವಿಹಾರ, ಉದ್ಯೋಗ, ಪ್ರಯಾಣ ಇತ್ಯಾದಿ – ಅನುಭೋಗಾತಿರೇಕತ್ವದ ಧೃತರಾಷ್ಟ್ರಾಲಿಂಗನಕ್ಕೆ ಒಳಗಾಗಿವೆ ಎಂಬುದು ಕೊಂಚ ಯೋಚಿಸಿದರೆ ಹೊಳೆಯದಿರದು. ದುರ್ದೈವವೆಂದರೆ ಆಧುನಿಕ ಯುಗದಲ್ಲಿ ಪ್ರಾಯಶಃ ಸರ್ವಸಂಗ ಪರಿತ್ಯಾಗಿ ಗೊಂಡಾರಣ್ಯವಾಸಿ ಋಷಿಯ ಹೊರತಾಗಿ, ಅನುಭೋಗಾತಿರೇಕತ್ವ ಸರ್ವವ್ಯಾಪಿ ಸರ್ವಗ್ರಾಹಿಯಾಗಿದೆ.

ಭವಿಷ್ಯ ವಿಜ್ಞಾನವೆಂದರೇನು? – ಹತ್ತು

“ಭವಿಷ್ಯವಿಜ್ಞಾನ” ವರ್ತಮಾನದ ಅನುಕೂಲ ಮಂಚಿಕೆಯಲ್ಲಿ ನಿಂತು ಭೂತವನ್ನು ಸಿಂಹಾವಲೋಕಿಸಿ ಭವಿಷ್ಯದತ್ತ ದೃಷ್ಟಿ ಹಾಯಿಸಲು ಮಾಡಿರುವ ಶಾಸ್ತ್ರೀಯ ಪ್ರಯತ್ನ. ವಿಜ್ಞಾನ, ತಂತ್ರವಿದ್ಯೆ ಮಾತ್ರವೇ ಇದರ ಘಟಕಗಳಲ್ಲ. ಇವು ಪ್ರಧಾನ ಘಟಕಗಳೆಂಬುದು ನಿಜ. ಮಾನವನ ಇತರ ಎಲ್ಲ ಚಟುವಟಿಕೆಗಳೂ ಆಶೋತ್ತರಗಳೂ ಭವಿಷ್ಯವಿಜ್ಞಾನವನ್ನು ರೂಪಿಸುವ ಕಾರಕಗಳು. ಗ್ರಹಸಂಚಾರಕ್ಕೂ (ಗ್ರಹಚಾರ?) ವ್ಯಕ್ತಿ ಭವಿಷ್ಯಕ್ಕೂ ತಳಕುಹಾಕುವ ಫಲಜ್ಯೋತಿಷ್ಯವನ್ನು ಕುರಿತು ನಾನಿಲ್ಲಿ ಪ್ರಸ್ತಾವಿಸುತ್ತಿಲ್ಲ. ‘ಫಲಜ್ಯೋತಿಷ್ಯ’ದ (astrology) ಬಗ್ಗೆ ತಿಳಿಯಬಯಸುವವರು ನನ್ನದೇ ‘ಜಾತಕ ಮತ್ತು ಭವಿಷ್ಯ,’ ಭವಿಷ್ಯವಾಚನ’, ‘ವೈಜ್ಞಾನಿಕ ಮನೋಧರ್ಮ’ ಮೊದಲಾದ ಪುಸ್ತಕಗಳನ್ನು ಗಮನಿಸಬಹುದು.

ವರ್ತಮಾನ ಕಾಲದಲ್ಲಿ ಪ್ರಪಂಚದ ಸ್ಥಿತಿಗತಿಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಭವಿಷ್ಯಕಾಲದ ಸ್ಥಿತಿಗತಿಗಳನ್ನು ಕಣಿನುಡಿಯುವ ವಿಜ್ಞಾನವೇ ಭವಿಷ್ಯ ವಿಜ್ಞಾನ (Futurology). ಇದು ನಾವು ರೂಢಿಯಲ್ಲಿ ತಿಳಿದಿರುವಂಥ – ಉದಾಹರಣೆಗೆ ಖಗೋಳ, ಗಣಿತ, ಭೌತ ಅಥವಾ ರಸಾಯನ ವಿಜ್ಞಾನಗಳಂಥ – ಒಂದು ನಿರ್ದಿಷ್ಟ ವಿಜ್ಞಾನಪ್ರಕಾರವಲ್ಲ. ಬದಲು ಹಲವಾರು ವಿಜ್ಞಾನ ಹಾಗೂ ಮಾನವಿಕ ಪ್ರಕಾರಗಳ ಸಂಗಮದಿಂದ ತೀರಾ ಈಚೆಗೆ ಹದಿಗಟ್ಟಿ ಮೈದಳೆದಿರುವ ಒಂದು ಅಧ್ಯಯನ ವಿಭಾಗ. ಬರ್ಲಿನ್ ಸ್ವತಂತ್ರ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಅಸಿಪ್ ಕೆ. ಫ್ಲೆಕ್‌ಥೀಮ್ ಎಂಬವರು, ೧೯೫೦ರ ಸುಮಾರಿಗೆ, ಫ್ಯೂಚರಾಲಜಿ (ಭವಿಷ್ಯವಿಜ್ಞಾನ) ಎಂಬ ಇಂಗ್ಲಿಷ್ ಶಬ್ದವನ್ನು ಟಂಕಿಸಿ ಚಲಾವಣೆಗೆ ತಂದು ಭವಿಷ್ಯದ ಸಮಾಜ ಮತ್ತು ಸಂಸ್ಕೃತಿಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸಬೇಕು ಎನ್ನುವ ಸಲಹೆ ನೀಡಿದರು. ಸ್ವತಃ ಇವರೂ ಇವರಂತೆ ಆರ್ನಾಲ್ಡ್ ಟಾಯನ್ಬೀ, ಆಲ್ಫ್ರೆಡ್ ವೆಬರ್, ರ‍್ಯಾಶೆಲ್, ಕಾರ್ಸನ್, ರುತ್ ಮೂರ್, ಬಾರ್ಬರ ವಾರ್ಡ್ ಮೊದಲಾದವರೂ ಈ ನಿಟ್ಟಿನಲ್ಲಿ ಮೂಲಭೂತ ಚಿಂತನೆಗಳನ್ನು ನಡೆಸಿ ತಮ್ಮ ಅಧ್ಯಯನ ಫಲಗಳನ್ನು ಪ್ರಕಟಿಸಿ ಪ್ರಪಂಚದ ಗಮನವನ್ನು ಭವಿಷ್ಯ ವಿಜ್ಞಾನದತ್ತ ಸೆಳೆದ ಮೊದಲಿಗರು.

ಭವಿಷ್ಯವಿಜ್ಞಾನದ ಪರಿಕಲ್ಪನೆ – ಹನ್ನೊಂದು

ಭೂತಕಾಲದಿಂದ ಬೆಳೆದು ಅಭಿವರ್ಧಿಸಿ ಬಂದಿರುವ ಈ ಪ್ರಪಂಚ ಈಗ ವರ್ತಮಾನ ಕಾಲದ ಅಸಿಧಾರೆಯನ್ನು ಅಡ್ಡಹಾಯುತ್ತಿದೆ. ಈ ತನಕ ಪ್ರಪಂಚ ನಡೆದು, ಅಥವಾ ಇನ್ನೂ ಸ್ಪಷ್ಟವಾಗಿ, ಉರುಳಿ ಬಂದಿರುವ ಜಾಡನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಮುಂದೆ ಅದು ಯಾವ ಜಾಡಿನ ಮೇಲೆ ಉರುಳಬಹುದು ಎನ್ನುವುದನ್ನು ಭವಿಷ್ಯವಿಜ್ಞಾನ ಮುನ್ನುಡಿಯುತ್ತದೆ.

ಪ್ರಪಂಚದ ಸಂಪನ್ಮೂಲಗಳನ್ನು ಆಧರಿಸಿ ಮಾನವ ತನ್ನ ನಾಗರಿಕತೆಯನ್ನು ಅಭಿವರ್ಧಿಸಿಕೊಂಡು ಬಂದಿದ್ದಾನೆ. ಪ್ರಜ್ಞಾಪೂರ್ವಕವಾಗಿ ಹೀಗೆ ಮಾಡಿದ್ದಾನೆ ಎಂದು ಇದರ ಅರ್ಥವಲ್ಲ. ನಡೆದು ಬಂಡ ಜಾಡನ್ನು ಇಂದಿನ ಔನ್ನತ್ಯದಿಂದ ಸಿಂಹಾವಲೋಕಿಸಿದಾಗ ಮೂಡುವ ಭಾವನೆ ಇದು ಎಂದು ಅರ್ಥ. ಮುಂಬರುವ ದಶಕಗಳಲ್ಲಿ ಈ ನಾಗರಿಕತೆ ಹೇಗೆ ರೂಪುಗೊಂಡೀತು ಎನ್ನುವುದನ್ನು ಭವಿಷ್ಯ ವಿಜ್ಞಾನ ಈಗ ಕುಂಚಿಸಲು ಪ್ರಯತ್ನಿಸುತ್ತದೆ.

ಮಾನವನ ಮಿದುಳಕೂಸು ವಿಜ್ಞಾನ (ಸೈನ್ಸ್). ವಿಜ್ಞಾನದ ದೂತ ತಂತ್ರವಿದ್ಯೆ (ಟೆಕ್ನಾಲಜಿ). ಮಾನವ-ತಂತ್ರವಿದ್ಯೆ ಅಂತರಕ್ರಿಯೆಯ ಹಾಗೂ ಅಂತರಾವಲಂಬನದ ಪರಿಣಾಮವಾಗಿ ವರ್ತಮಾನ ಜೀವನ ಅತಿ ಸಂಕೀರ್ಣವಾಗಿದೆ. ಈ ಸಂಕೀರ್ಣ ಜೀವನದ ಭವಿಷ್ಯ ಏನು ಎನ್ನುವುದನ್ನು ಭವಿಷ್ಯವಿಜ್ಞಾನ ಈಗ ಚಿತ್ರಿಸಲು ಹವಣಿಸುತ್ತದೆ. ೧೯೫೦ಕ್ಕೆ ಪೂರ್ವದಲ್ಲಿ ಭವಿಷ್ಯವಿಜ್ಞಾನದ ಪರಿಕಲ್ಪನೆ ಹೊಳೆಯಲಿಲ್ಲವೇಕೆ? ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.

ಒಂದು, ಅಂದಿನ ಜನಸಂಖ್ಯೆ ತೀರ ಮಿತವಾಗಿತ್ತು. ಆ ದಿನದ ಮಾನವನ ಆವಶ್ಯಕತೆಗಳಾದರೂ ಅಷ್ಟೆ – ಸರಳ ಮತ್ತು ಪರಿಮಿತ. ಇತ್ತ ನಿಸರ್ಗದ ಸಂಪನ್ಮೂಲಗಳಾದರೂ ಅಪರಿಮಿತವೇ ಎನ್ನುವ ಭಾವನೆಯನ್ನು ಮೂಡಿಸುವಂತಿದ್ದುವು. ಹೀಗಾಗಿ ೧೯೫೦ರ ಹಿಂದಿನ ವರ್ಷಗಳಲ್ಲಿ ಪ್ರಪಂಚದ ಜನಸಂಖ್ಯೆ ಮತ್ತು ಸಂಪನ್ಮೂಲಗಳ ನಡುವೆ ಗಮನಾರ್ಹ ಕಂದರವೇನೂ ಏರ್ಪಟ್ಟಿರಲಿಲ್ಲ. ನೈಸರ್ಗಿಕ ಸಂಪನ್ಮೂಲಗಳ ಪೂರ್ಣಾನ್ವೇಷಣೆಯನ್ನೇ ಆಗಲಿ ವ್ಯವಸ್ಥಿತ ಉಪಯೋಗವನ್ನೇ ಆಗಲಿ ಮಾನವ ಇನ್ನೂ ಮಾಡಿರಲಿಲ್ಲ. ಕೋರಿದ ವರಗಳನ್ನು ಅನುಗ್ರಹಿಸುವ ಕಲ್ಪತರುವೇ ಧರಿತ್ರಿ ಎಂಬುದು ಅಂದಿನ ಮನೋಧರ್ಮವಾಗಿತ್ತು.

ಎರಡು, ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ತಂತ್ರವಿದ್ಯೆ ಅಭೂತಪೂರ್ವ ವೇಗೋತ್ಕರ್ಷ ಪಡೆದು ದೌಡಾಯಿಸತೊಡಗಿತು. ಅಭಿನವ ಬ್ರಹ್ಮನಾದ ತಂತ್ರವಿದ್ಯಾಪಾರಂಗತ ಮಾನವ ನಿಸರ್ಗದ ಅನೇಕ ನಿಗೂಢ ರಹಸ್ಯಗಳನ್ನು ಭೇದಿಸಿ ಬದುಕನ್ನು ಹಸನುಗೊಳಿಸುವ ವಿಧಾನಗಳನ್ನು ಶೋಧಿಸಿ ರೂಢಿಸಿದ. ಇವುಗಳ ಪರಿಣಾಮವಾಗಿ ತಂತ್ರವಿದ್ಯೆಯ ಶಕ್ತಿದಾಹ ತೀವ್ರವಾಯಿತು. ಇದರ ಶಮನಕ್ಕೆ ಮತ್ತೆ ನಿಸರ್ಗವನ್ನೇ ಮರೆಹೊಗುವುದು ಅನಿವಾರ್ಯವಾಯಿತು – ಅಂದರೆ ನಿಸರ್ಗದ ಸೂರೆ ಅವ್ಯಾಹತವಾಗಿ ಸಾಗಿತು. ನಿಸರ್ಗ ಇದರಿಂದ ಬರಡಾಯಿತು; ಬತ್ತಿತು. ತಂತ್ರವಿದ್ಯೆ – ಶಕ್ತಿ ಮಜಲೋಟದ ಪರಿಣಾಮವಾಗಿ ತ್ಯಾಜ್ಯವಸ್ತುಗಳ ಹಿರಿಮೊತ್ತ ಪೇರಿಕೊಂಡು ಪರಿಸರಮಾಲಿನ್ಯಕ್ಕೆ ಕಾರಣವಾಯಿತು. ವ್ಯಾಪಕ ಪರಿಸರಮಾಲಿನ್ಯ ಇಪ್ಪತ್ತನೆಯ ಶತಮಾನದ, ತತ್ರಾಪಿ ಅದರ ಉತ್ತರಾರ್ಧದ, ತಂತ್ರವಿದ್ಯೆಯ ಉಪೋತ್ಪನ್ನ.

ಇಲ್ಲಿ ಇನ್ನೂ ಒಂದು ಸಂಗತಿಯನ್ನು ಪ್ರಸ್ತಾವಿಸಬೇಕು. ತಂತ್ರವಿದ್ಯಾಭಿವರ್ಧನೆಯ ಸಮಗ್ರ ಪರಿಣಾಮವಾಗಿ, ಮರಣಕಾರಕ ರೋಗರುಜಿನಗಳು ಹಿಮ್ಮೆಟ್ಟಿ ಜನರ ಜೀವಿತ ನಿರೀಕ್ಷೆ ಏರುಮೊಗವಾಗಿದೆ. ಸಾವಿನ ಸಂಖ್ಯೆ ಕಡಿಮೆ ಆಗಿದೆ. ಇಂಥ ಪರಿಸ್ಥಿತಿಯಲ್ಲಿ ಜನನ ದರ ಹೆಚ್ಚಿದ್ದೇ ಆದರೆ ಜನಸಂಖ್ಯೆ ಜಿಗಿದೇರುತ್ತದೆ. ಹೀಗೆ ವೃದ್ಧಿಸುವ ಜನಸಂಖ್ಯೆ ಅಧಿಕಶಕ್ತಿಯನ್ನು ಬೇಡುತ್ತದೆ. ಇದರ ಪೂರೈಕೆಗಾಗಿ ತಂತ್ರವಿದ್ಯೆ ಬೆಳೆಯಬೇಕಾಗುತ್ತದೆ ಹೊಸ ನೆಲಗಳನ್ನು ಅರಸಬೇಕಾಗುತ್ತದೆ. ಹೀಗೆ ಜನಸಂಖ್ಯೆ – ತಂತ್ರವಿದ್ಯೆ – ಶಕ್ತಿವಿನಿಯೋಗ ಒಂದು ವಿಷತ್ರಿಭುಜವನ್ನೇ ರಚಿಸುವಂತೆ ತೋರುತ್ತದೆ. ಒಂದು ಇನ್ನೆರಡಕ್ಕೆ ಕೊಕ್ಕೊಡುತ್ತ ಮೂರೂ ಚಟುಲಗತಿಯಿಂದ ಹೊರಧಾವಿಸುತ್ತ ತ್ರಿಭುಜದ ಸಲೆ ವ್ಯಾಕೋಚಿಸುತ್ತದೆ.

ಎರಡು ನಿದರ್ಶನಗಳು – ಹನ್ನೆರಡು

ಪರಿಸರಪ್ರೇಮಿಗಳ ಬೃಹತ್ಸಮಾವೇಶ. ಮಂತ್ರಿ ಮಹೋದಯರು, ಗಣ್ಯ ಆಮಂತ್ರಿತರು, ಹಿರಿಯ ಅಧಿಕಾರಿ ವರ್ಗ, ಸ್ವಯಂಸೇವಕರ ದಂಡು ಮತ್ತು ಪ್ರೇಕ್ಷಕಗಡಣ ಎಲ್ಲರೂ ಆ ಶುಭ ಪ್ರಾತಃಕಾಲ ಅಲ್ಲಿ – ನಗರದ ಅತಿ ಪ್ರತಿಷ್ಠಿತ ತಾರಾಸಭಾಂಗಣದಲ್ಲಿ – ಕಿಕ್ಕಿರಿದು ನೆರೆದಿದ್ದರು. ಮಂತ್ರಿಗಳಿಂದ ಉದ್ಘಾಟನೆ, ವರಿಷ್ಠ ಧೀಮಂತನಿಂದ ಆಶಯ ಭಾಷಣ, ಸಾಮೂಹಿಕ ಸ್ವಸ್ತಿಪಾನ ಮುಂತಾದ ಪೂರ್ವವಿಧಿಗಳು ಸಾಂಗವಾಗಿ ನೆರವೇರಿದ ಬಳಿಕ ತಜ್ಞ ಮಂಡಳಿಯ ವಿಶೇಷ ಸಭೆ ಆರಂಭವಾಯಿತು. ಸಂಶೋಧನ ಪ್ರಬಂಧಗಳ ಮಂಡನೆ, ಚರ್ಚೆ ಮೊದಲಾದ ಗೋಷ್ಠಿ ಚಟುವಟಿಕೆಗಳು ಭರದಿಂದ ಮುನ್ನಡೆದುವು – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ, ದೂರದರ್ಶನದ ಪ್ರಖರ ವಿದ್ಯುದ್ದೀಪಗಳ ಉಜ್ವಲತೆಯಲ್ಲಿ, ಪತ್ರಿಕಾಪ್ರತಿನಿಧಿಗಳ ದಿವ್ಯ ಸಮ್ಮುಖದಲ್ಲಿ, ಹಾಜರಿದ್ದ ಸ್ಥಳೀಯ ‘ಪರಿಸರ’ ಅಲ್ಲ ಆ ಸಂಘಟಕರ ಲಕ್ಷ್ಯ, ಹಾಜರಿರದ ಪ್ರಪಂಚ ಪರಿಸರ!

ಈ ಎಲ್ಲ ‘ರಾಗ – ತಾನ – ಪಲ್ಲವಿ’ಗಳ ತಳದಲ್ಲಿ ಅನುರಣಿಸುತ್ತಿದ್ದ ಶ್ರುತಿ ಒಂದೇ “ಅಜ್ಞಾತ ಪರಿಸರವೈರಿಯ ಸರ್ವಹನನವೇ ನಮ್ಮ ಚರಮ ಧ್ಯೇಯ!” ಆತ ಎಲ್ಲಿರುವನು? ವಿದೇಶಗಳಿಂದ ಆಮದಾಗುವ ಸರಕು ಸೇವೆಗಳಲ್ಲಿ? ಹಿರಿಬಂಡವಾಳಿಗರ ಪುಂಗಿಯಾಟಕ್ಕೆ ತಲೆದೂಗುವ ಭ್ರಷ್ಟ ರಾಜಕಾರಣಿಗಳ ಗುಪ್ತ ವ್ಯವಹಾರಗಳಲ್ಲಿ? ಅರಣ್ಯ ಹಂತಕರ ಕುಠಾರಾಂತರ್ಗತ ಅಗ್ನಿಯಲ್ಲಿ? ಬೃಹಜ್ಜಲವಿದ್ಯುದ್ಯೋಜನೆಗಳ ಮಹಾಪಂಚಾಂಗಗಳ ತಳದಲ್ಲಿ? ಎಲ್ಲಿರುವನು? ಎಲ್ಲಿರುವನು? ಶೋಧ ಮುಂದುವರಿಯಿತು ತಾರಸ್ಥಾಯಿಯಲ್ಲಿ, ಇಂಗ್ಲಿಷಿನ ಸಿದ್ಧ ಪದಪುಂಜಗಳಲ್ಲಿ ಮತ್ತು ಪ್ರಸಿದ್ಧ ಸೂಕ್ತಿಗಳಲ್ಲಿ.

ಮುಂದೆ ಸಭಾಸದರ ಸರದಿ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ, ಆದರೆ ಸಂಕ್ಷೇಪವಾಗಿ ಮಂಡಿಸಲು ಅವಕಾಶ. ಆಗ ಅವನೆದ್ದ – ಹಿಂದಿನ ಸಾಲಿನಿಂದ. ಅಂವ ಹ್ಯಾಂಗಿದ್ದ? ಅಲ್ಲಿಯ ‘ಕುಲೀನ’ ಪರಿಸರಕ್ಕೆ ಅಪಸ್ವರದಂತೆ! ಬಾಣದಂತೆ ಧಾವಿಸಿ ವೇದಿಕೆ ಏರಿ ಧ್ವನಿವರ್ಧಕದ ಹಿಂದೆ ನಿಂತ – ಪರಿಸರ ಪರಿಣತರ ಕುಚೋದ್ಯ ಟೀಕೆಗಳಿಗೆ ಸುಯೋಗ್ಯ ಗ್ರಾಸವಾಗಿ. ಮೊದಲ ನಾಲ್ಕು ವಾಕ್ಯಗಳನ್ನು ಶುದ್ಧ ಇಂಗ್ಲಿಷಿನಲ್ಲಿ, ಸ್ಫುಟ ಉಚ್ಚಾರಣೆಯಲ್ಲಿ, ಅಸ್ಖಲಿತಠಾಯಿಯಲ್ಲಿ ಉರುಳಿಸಿ ಸರ್ವರ ಮನಗೆದ್ದ. ಮುಂದೆ ತನ್ನ ವಾದವನ್ನು ‘ಲಲಿತವಹ’ ದೇಸಿಗನ್ನಡದಲ್ಲಿ ಬಿತ್ತರಿಸಿದ. ಸಾರಾಂಶ:

“ನೀವು ತೊಟ್ಟಿರುವ ಪೋಷಾಕು, ಬಳಸುತ್ತಿರುವ ಅತಿಶಯ ಸೌಕರ್ಯ, ನಡೆಸುತ್ತಿರುವ ಜೀವನಶೈಲಿ ಒಂದೊಂದೂ ಪರಿಸರದ ನೆತ್ತರನ್ನು ಅಗಾಧವಾಗಿ ಬಸಿಯುತ್ತಿದೆಯೆಂದು ನಿಮಗೆ ಗೊತ್ತಿದೆಯೇ? ನಿಸರ್ಗದ ಸೂರೆಯೇ ಧ್ಯೇಯವಾಗಿರುವ ದುರ್ಲಾಭಕೋರರ ಕಪ್ಪು ಹಣ ಇಂದಿನ ಈ ಸಭೆಯ ಪೂರ್ತಿ ವೆಚ್ಚ ಭರಿಸಿದೆ ಎಂಬುದು ನಿಮಗೆ ತಿಳಿದಿದೆಯೇ? ಪರಿಸರವೈರಿಯನ್ನು ಹೊರಗೇಕೆ ಅರಸುತ್ತೀರಿ? ನಿಮ್ಮಲ್ಲೆ ಒಬ್ಬೊಬ್ಬರಲ್ಲೂ ಆತ ಅವಿತು ಕುಳಿತಿದ್ದಾನೆ – ಬಿಡಿ ನಿಮ್ಮ ದುರಾಸೆ, ಮೈಗಳ್ಳತನ ಮತ್ತು ಅನುಭೋಗಾತಿರೇಕತ್ವ; ತೊಡಿ ಪಣ, ಸರಳ ಜೀವನ ಗಹನ ಚಿಂತನ ನಡೆಸಲು. ನೆಲದಿಂದ ಎತ್ತರ ಎತ್ತರ ಏರಿದಷ್ಟೂ ಭೌತವಾಗಿ ಮಾತ್ರ ಅಲ್ಲ ಮಾನಸಿಕವಾಗಿ ಕೂಡ ನೀವು ಜೀವನ ವಿಮುಖರಾಗುತ್ತೀರಿ, ಪರಿಸರ ವೈರಿಗಳಾಗುತ್ತೀರಿ.”

ಮುಂಜಾನೆಯ ಹೂಬಿಸಿಲಿನ ಮೃದು ಶಾಖಕ್ಕೆ ಮೈಯೊಡ್ಡಿ ವೃದ್ಧ ಸರದಾರಜೀ ಜೋಕಾಲಿಯಲ್ಲಿ ಲಘುವಾಗಿ ಹಿಂದೆ ಮುಂದೆ ತೇಲುತ್ತಿದ್ದ. ಎದುರಿಗೆ ಗಾವುದ ಗಾವುದ ಹಬ್ಬಿ ನಳನಳಿಸುತ್ತಿದ್ದ ಗೋಧಿ ಪೈರಿನ ಸಮೃದ್ಧಿ ನೋಡಿ ಆನಂದಪರವಶನಾಗಿದ್ದ. ಅದು ಆತ ಮತ್ತು ಆತನ ಕುಟುಂಬಸ್ಥರ ವ್ಯವಸ್ಥಿತ ಕಾಯಕದ ಫಲ, ನೆಲತಾಯಿ ಮನತುಂಬಿ ಕೃಪೆಯಿಟ್ಟು ಹರಸಿದ ಫಸಲು. ಇನ್ನು ಕೆಲವೇ ದಿನಗಳಲ್ಲಿ ಕೊಯ್ಲಿಗಾಗಿ ಮಾಗುತ್ತಿದ್ದ ಸಂಪತ್ತಿನ ಕಣಜ: ‘ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗಸೊಗವ ತರುತಿದೆ!’ ಮಂದಮಾರುತದ ಬೀಸು, ಕಾಳಿನ ಭಾರದಿಂದ ಬಾಗಿದ ತೆನೆಗಳ ತೊನೆತದ ಸುಯ್ಲು, ಹಕ್ಕಿಗಳ ಕಲರವ. ಆವಿಯಾಡುತ್ತಿದ್ದ ಕುದಿ ಚಹಾ ತುಂಬಿದ ಭರ್ಜರಿ ಚಾದಾನಿಸಹಿತ ಬಂದಳು ಸರದಾರಿಣೀ. ಗಂಡನಿಗೆ ಅದನ್ನು – ಜೀವಪೋಷಕ ಪೀಯೂಷಕುಂಭವನ್ನು – ನಲ್ಮೆಯಿಂದೊಪ್ಪಿಸಿ ಮನೆಗೆಲಸಕ್ಕೆ ಮರಳಿದಳು. ನಿಸರ್ಗ ನಲಿಯಿತಲ್ಲಿ!

ಮುದುಕನ ನೆತ್ತಿಗೆ ಚಹಾದ ‘ಸೊಕ್ಕು’ ಅಡರಿ ಆತ ಅರ್ಧ ನಿಮೀಲಿತನಯನನಾಗಿದ್ದ. ಆಗ ಅಲ್ಲಿಗೆ ಭರದಿಂದ ಬಂದು ನಿಂತಿತೊಂದು ಜೀಪ್. ಲಗುಬಗೆಯಿಂದ ಹೊರ ಹಾರಿದರು ಸುಟಿ ತರುಣರು – ಅತ್ಯಾಧುನಿಕ ಪೋಷಾಕು ಧಾರಿಗಳು. ಸರದಾರಜಿಯ ಎದುರು ವಿನಯಪೂರ್ವಕವಾಗಿ ನಿಂತು ಆತನಿಗೆ ಗೌರವಯುಕ್ತ ಪ್ರಣಾಮವರ್ಪಿಸಿ ತಮ್ಮ ಪರಿಚಯ ನಿವೇದಿಸಿದರು. ಮುದ್ರಿತ ಪತ್ರದಾಖಲೆಗಳ ಕಂತೆಯನ್ನು ಕೊಟ್ಟರು ಮತ್ತು ಆತನ ಪ್ರತಿಕ್ರಿಯೆಯನ್ನು ಉತ್ಸುಕತೆಯಿಂದ ನಿರೀಕ್ಷಿಸಿದರು.

ದಾಖಲೆಗಳ ಮೇಲೆ ಕಣ್ಣು ಹಾಯಿಸಿದ, ಪತ್ರಗಳನ್ನು ತಿರುವಿ ಹಾಕಿದ. “ನೀವು ಟ್ರ್ಯಾಕ್ಟರ್ ಮಾರಾಟಗಾರರು. ಆದರೆ ನಮ್ಮ ಹೊಲಗಳಿಗೆ ಅವು ಅನಾವಶ್ಯಕ. ಅತಿ ದುಬಾರಿಕೂಡ. ನಾವು ಮಾನವ-ಟ್ರ್ಯಾಕ್ಟರುಗಳು ಸಾಕಷ್ಟು ಇದ್ದೇವೆ!” ಸರದಾರಜೀ ನುಡಿದ. ಆದರೆ ಆ ತರುಣರು ಎಂಬಿಎ ಮುಂತಾದ ಆಧುನಿಕ ಸರ್ವಜ್ಞ- ಸರ್ವಶಕ್ತ -ಪದವೀಧರರು, ಸಾಕ್ಷಾತ್ ಯಮನನ್ನೂ ಒಲಿಸಬಲ್ಲ ನಚಿಕೇತರು. ಅವರೆಂದರು “ಎದುರಿಗೆ ದಿಗಂತದವರೆಗೂ ಮೈಚೆಲ್ಲಿಕೊಂಡಿರುವ ಹೊಲಗಳೆಲ್ಲವೂ ನಿಮ್ಮವೇ ಅಲ್ಲವೇ?” “ಇನ್ನೂ ಮುಂದಕ್ಕೆ ಕೂಡ ಚಾಚಿವೆ. ಇವು ಒಟ್ಟು ನನಗೂ ನನ್ನ ಕುಟುಂಬಸ್ಥರಿಗೂ ಸೇರಿರುವ ಹಿಸೆಗಳು, ಯಾವನೇ ಒಬ್ಬನವಲ್ಲ.”

ಅಮೆರಿಕದ ಬೃಹತ್ ಕೃಷಿ ಉದ್ಯಮಗಳು, ಯಾಂತ್ರೀಕರಣದ ಸೌಲಭ್ಯಗಳು, ರಾಸಾಯನಿಕ ಗೊಬ್ಬರದ ಮಹಿಮೆ, ಮಾರುಕಟ್ಟೆಯ ಭೂರಿವಹಿವಾಟುಗಳು ಮುಂತಾದವನ್ನು ಆ ತರುಣರು ಎಳೆಎಳೆಯಾಗಿ ವಿವರಿಸಿ “ಈಗ ತಮ್ಮ ಮುಂದೆ ನಾವೊಂದು ಸಲಹೆ ಮಂಡಿಸಬಹುದೇ?”
“ಧಾರಾಳವಾಗಿ!”
“ನಿಮ್ಮ ಎಲ್ಲ ಹಿಸೆಗಳನ್ನೂ ಸಂಯುಕ್ತ ಸಂಘವೊಂದರ ಹೆಸರಿನಲ್ಲಿ ನೋಂದಾಯಿಸಿ ಒಂದೇ ಆಡಳಿತಕ್ಕೆ ಒಳಪಡಿಸಬೇಕು. ಬಳಿಕ ಈ ಸಮಗ್ರ ಬಯಲಿನಲ್ಲಿ ನೀವು ಆಧುನಿಕ ಯಾಂತ್ರೀಕೃತ ಕೃಷಿಯನ್ನು ರೂಢಿಸಬೇಕು.”
“ಆಗ ಏನಾಗುತ್ತದೆ?”
“ನಿಮ್ಮ ಉತ್ಪಾದನೆ ಅತಿಶಯವಾಗಿ ವರ್ಧಿಸುತ್ತದೆ, ಜೊತೆಯಲ್ಲೇ ಮನುಷ್ಯ ಮತ್ತು ಪ್ರಾಣಿ ಒಟ್ಟಾಗಿ ಪಡುವ ಶ್ರಮ ತೀರ ಕನಿಷ್ಠ ಮಿತಿಗೆ ಇಳಿಯುತ್ತದೆ. ಯಂತ್ರಗಳು ಈ ಪವಾಡ ಗೈಯುತ್ತವೆ.”
“ಈಗ ನಾವೇನು ಮಾಡಬೇಕು?”
ಯುವಕರು ಉತ್ತೇಜಿತರಾದರು “ಸಂಘವನ್ನು ಕಟ್ಟಿ ಜೊತೆಯಲ್ಲೇ ಟ್ರ್ಯಾಕ್ಟರ್ ಮುಂತಾದ ಯಂತ್ರ ಸಲಕರಣೆಗಳನ್ನು ಕೊಳ್ಳಲು ನಮ್ಮ ಜೊತೆ ವ್ಯವಹರಿಸಬೇಕು.”
“ಆದರೆ ಅಷ್ಟು ದೊಡ್ಡ ಮೊತ್ತದ ಹಣವನ್ನೆಲ್ಲಿಂದ ಒದಗಿಸಲಿ!”
“ಬ್ಯಾಂಕ್ ಸಾಲಕ್ಕೆ ನಾವೇ ಏರ್ಪಾಡು ಮಾಡುತ್ತೇವೆ.”
“ಸರಿ, ಮುಂದೇನು?”
“ಕೇವಲ ಕೆಲವೇ ವರ್ಷಗಳಲ್ಲಿ ನಿಮ್ಮ ಸಾಲವೆಲ್ಲ ತೀರಿ ನೀವು ಘನ ಶ್ರೀಮಂತರಾಗುತ್ತೀರಿ. ನಿಮಗೆ ಅಪಾರ ವಿರಾಮ ದೊರೆಯುತ್ತದೆ. ಈ ಹರಕಲು ಮನೆಯ ಬದಲು ಅರಮನೆಯಲ್ಲಿ ಸುಖವಾಗಿರಬಹುದು – ಕಾರು, ಟೀವಿ, ವಿಮಾನಯಾನ, ಪ್ರಪಂಚಪರ್ಯಟನ…”
ಮುದುಕ ನಡುವೆ ಬಾಯಿಹಾಕಿ “ಆಗ ಏನಾಗುತ್ತದೆ?”
“ನೀವು ಸಮೃದ್ಧ ಆನಂದಲೀನರಾಗಿರಬಹುದು.”
“ಈಗ ಮತ್ತೆ ಹೇಗಿದ್ದೇನೆ? ದುಡ್ಡುಕೊಟ್ಟು ಕೊಳ್ಳಬೇಕಾದ ಆ ದುಬಾರಿ ಆನಂದ ನನಗೆ ಬೇಕಾಗಿಲ್ಲ. ದುಡಿಮೆಯಿಂದ ದೊರೆಯುವ ಈ ಸುಲಭಾನಂದವೇ ಸಾಕು. ಇದಕ್ಕೆ ಕಾಸು ಕೊಡಬೇಕಾಗಿಲ್ಲ. ಇದನ್ನು ಕಳ್ಳರು ಕದ್ದಾರೆಂಬ ಹೆದರಿಕೆ ಇಲ್ಲ. ಆದ್ದರಿಂದ ಮಕ್ಕಳೇ ನೀವು ಈಗ ಬಂದದಾರಿಗೆ ಸುಂಕವಿಲ್ಲವೆಂದು ಹಿಂದೆ ಹೋಗಬಹುದು.”

[ಭವಿಷ್ಯವಿಜ್ಞಾನ ಪುಸ್ತಕದ ಮುಂದಿನ ಭಾಗಗಳನ್ನು ಹೀಗೇ ಅಧ್ಯಾಯಗಳ ಅಂತ್ಯದ ಅನುಕೂಲ ನೋಡಿಕೊಂಡು ಕಂತುಗಳಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ಪ್ರಕಟವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆ, ಚರ್ಚೆಯ ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]