[ಭವಿಷ್ಯ ವಿಜ್ಞಾನ – ಅನುಬಂಧ – ಒಂದು, ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಏಳನೇ ಮತ್ತು ಕೊನೆಯ ಕಂತು]

ಇಪ್ಪತ್ತನೆಯ ಶತಮಾನ ಇನ್ನು ಕೆಲವೇ ವರ್ಷಗಳಲ್ಲಿ (೧೯೯೩ರಲ್ಲಿ ಬರೆದ ಮಾತು.) ನೇಪಥ್ಯಕ್ಕೆ ನಿರ್ಗಮಿಸಿ ಇಪ್ಪತ್ತೊಂದನೆಯ ಶತಮಾನ ರಂಗ ಪ್ರವೇಶಿಸಿರುತ್ತದೆ. ಸದ್ಯದಲ್ಲಿ ಮಾನವ ನವ ಶತಮಾನದ ಅರುಣೋದಯ ಕಾಲದಲ್ಲಿದ್ದಾನೆ.

ವರ್ತಮಾನ ಜೀವನ ಹೇಗಿದೆ? ಎಲ್ಲಿ ನೋಡಿದರೂ ಅಶಾಂತಿ, ತುಮುಲ, ಮಾಲಿನ್ಯ, ಬಿಕ್ಕಟ್ಟು, ಮನುಕುಲದ ಅಂತ್ಯಕಾಲವೇ ಸನ್ನಿಹಿತವಾಗಿದೆಯೇ ಎನ್ನುವ ಸನ್ನಿವೇಶ. ಆಹಾರೋತ್ಪಾದನೆಯ ಆಧಿಕ್ಯದ ಜೊತೆಗೇ ಹಸಿವಿನ ಭೂತದ ಕರಾಳ ಕೂಗು. ತಂತ್ರವಿದ್ಯೆಯ ಪರಾಕಾಷ್ಟೆಯ ಬೆನ್ನಿಗೇ ತೀವ್ರ ಶಕ್ತಿ ಬಿಕ್ಕಟ್ಟಿನ ಸಮಸ್ಯೆ. ನಾಗರಿಕತೆಯ ಉಚ್ಛ್ರಾಯದ ಹಿನ್ನೆಲೆಯಲ್ಲಿ ಪಾಶವೀಯತೆಯ ಉಗ್ರ ಮುಖ. ಈ ವೈರುದ್ಧ್ಯಗಳನ್ನು ಗಮನಿಸಿ ಮಾನವ ಪ್ರಜ್ಞೆಯ ಮೂಲಭೂತ ವಿವೇಕದಲ್ಲಿ ಭರವಸೆ ಇರಿಸಿ ಬರಲಿರುವ ಶತಮಾನದಲ್ಲಿ ಬದುಕು ಹೇಗಿರಬಹುದೆನ್ನುವುದನ್ನು ವೈಜ್ಞಾನಿಕವಾಗಿ ಮುನ್ನುಡಿಯುವುದು ಸಾಹಸವೇ ಸರಿ. ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಪ್ರಸಕ್ತ ರೂಪಕ. ಮಾನವ ವಿವೇಕಯುತನಾಗಿ ತನ್ನ ಮನೆಯನ್ನೂ ಬದುಕನ್ನೂ ಹದದಲ್ಲಿಟ್ಟುಕೊಂಡು ತಂತ್ರವಿದ್ಯೆಯ ದಾಸನಾಗದೇ ಯಜಮಾನನಾಗಿ ಉಳಿದದ್ದಾದರೆ ಇಪ್ಪತ್ತೊಂದನೆಯ ಶತಮಾನ ಅವನೆದುರು ಭವ್ಯ ನವ ಜೀವನವನ್ನು ಅನಾವರಣಗೊಳಿಸಬಲ್ಲುದೆಂಬ ಆಶಾವಾದ ಪ್ರಸಕ್ತ ರೂಪಕದ ಪ್ರಧಾನ ಶ್ರುತಿ. ಇದೊಂದು ವೈಜ್ಞಾನಿಕರೂಪಕ, ೧೯೮೩ರಲ್ಲಿ ಬರೆದದ್ದು ಬೆಂಗಳೂರು ಆಕಾಶವಾಣಿಯ ಕೋರಿಕೆ ಮೇರೆಗೆ. ಅದೇ ವರ್ಷ ಇದು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಇಲ್ಲಿ ಬರುವ ಪಾತ್ರಗಳು ಪ್ರತೀಕಾತ್ಮಕ.

ಕಾಲಪುರುಷ – ಚಿರಂತನ ಕಾಲದ ಪ್ರತೀಕ. ಎಲ್ಲ ಶತಮಾನಗಳ ಸಾರ್ವತ್ರಿಕ ಪ್ರಜ್ಞೆ.
ಇಪ್ಪತ್ತನೆಯ ಶತಮಾನ – ವರ್ತಮಾನ ಕಾಲದ ಪ್ರತೀಕ. ಪ್ರಸಕ್ತ ಶತಮಾನದ ಅನುಭವಗಳ ಸಾರ.
ಇಪ್ಪತ್ತೊಂದನೆಯ ಶತಮಾನ – ಸದ್ಯವೇ ರಂಗಪ್ರವೇಶಿಸಲಿರುವ ಹೊಸ ಕಾಲದ ಪ್ರತೀಕ. ಮಾನವನ ಭವಿಷ್ಯ ಆಶೋತ್ತರಗಳ ಮೂರ್ತರೂಪ.

ರೆಡ್ ಇಂಡಿಯನ್ ನಾಯಕ – ಮನುಕುಲದ ಮನಸ್ಸಾಕ್ಷಿಯ ಪ್ರತೀಕ.
ಹಿನ್ನೆಲೆ ಗಾನ ಇರುಳಿರುಳಳಿದು ದಿನದಿನ ಬೆಳಗೆಸುತ್ತುಮುತ್ತಲೂ ಮೇಲಕೆ ಕೆಳಗೆಗಾವುದ ಗಾವುದ ಗಾವುದ ಮುಂದೆಎವೆತೆರೆದಿಕ್ಕುವ ಹೊತ್ತಿನ ಒಳಗೆಹಕ್ಕಿ ಹಾರುತಿದೆ ನೋಡಿದಿರಾ? ಯುಗಯುಗಗಳ ಹಣೆಬರಹವ ಒರಸಿಮನ್ವಂತರಗಳ ಭಾಗ್ಯವ ತೆರಸಿರೆಕ್ಕೆಯ ಬೀಸುತ ಚೇತನಗೊಳಿಸಿಹೊಸಗಾಲದ ಹಸುಮಕ್ಕಳ ಹರಸಿಹಕ್ಕಿ ಹಾರುತಿದೆ ನೋಡಿದಿರಾ?

ಅಂಬಿಕಾತನಯದತ್ತ

ಕಾಲಪುರುಷ: ನಾನು ಕಾಲಪುರುಷ. ಸಮಸ್ತ ವಿಶ್ವದ ನಿಯಂತ್ರಣಕಾರ. ನಿರಂತರ ಗತಿಶೀಲತೆ ನನ್ನ ಧರ್ಮ. ನನ್ನ ಎದುರು ಶಾಶ್ವತ ಎಂಬುದೇ ಇಲ್ಲ. ಅಯ್ಯಾ ಇಪ್ಪತ್ತನೆಯ ಶತಮಾನ! ನೀನೀಗ ಎಂಬತ್ತಮೂರು ವರ್ಷ ವಯಸ್ಸಿನ ವೃದ್ಧ. ನಿನಗೆ ಉಳಿದಿರುವುದು ಇನ್ನು ಹದಿನೇಳು ವರ್ಷ ಮಾತ್ರ. ನಿನ್ನ ಜೀವಿತಾವಧಿಯಲ್ಲಿ ಮಾನವ ಹೇಗೆ ಬೆಳೆದ ಹೇಳು.

ಇಪ್ಪತ್ತನೆಯ ಶತಮಾನ: ಮಾನವ ಹೇಗೆ ಬೆಳೆದ? ಕಾಲಪುರುಷ! ತುಂಬ ಧ್ವನಿಪೂರ್ಣ ಪ್ರಶ್ನೆ ಹಾಕಿರುವೆ. ಮಾನವ ಹೇಗೆ ಅಳಿಯುತ್ತಿದ್ದಾನೆ ಎಂದು ಕೇಳಿದ್ದರೆ ಪ್ರಶ್ನೆ ಹೆಚ್ಚು ನೇರವಾಗಿರುತ್ತಿತ್ತು.

ಕಾಲಪುರುಷ: ವೃದ್ಧರಿಗೆ ಅನ್ನಿಸುವುದು ಹೀಗೆಯೇ ನೋಡು – ತಮ್ಮ ಬಾಲ್ಯದಲ್ಲಿದ್ದಂಥ ಜೀವನಲಾಸ್ಯ ಈಗ ಇಲ್ಲ. ತಮ್ಮ ಹಿತೋಕ್ತಿ ಆಲಿಸುವ ವಿನಯ ಕಿರಿಯಲ್ಲಿರಲಿಲ್ಲ. ತಮ್ಮ ತರುವಾಯ ಮಹಾಪ್ರಳಯ ಶತಸ್ಸಿದ್ಧ ಎಂದು ಮುಂತಾಗಿ. ನಿನಗೆ ಕಣ್ಣುಬುದ್ಧಿ ಎರಡೂ ಮಂಜಾಗಿ
ಈ ಭಾವನೆ ಬರುತ್ತಿದೆಯೇ ವಿನಾ ವಾಸ್ತವ ಸ್ಥಿತಿಯ ಪರಿಣಾಮವಾಗಿ ಅಲ್ಲ… ನಿಜ, ಮನುಕುಲ ಎಂದೂ ವಿವೇಕದ ನೆಲವೆನೆ ಆಗಿರಲಿಲ್ಲ. ಆದರೆ ಎಂದೂ ಅದು ಅತಿರೇಕದ ಕಸಾಯಿಖಾನೆಯೂ ಆಗಿರಲಿಲ್ಲ. ತನ್ನ ಉಳಿವನ್ನು ಕಾಪಾಡುವ ಎಚ್ಚರ ಮಾನವನಿಗಿದೆ.

ಇಪ್ಪತ್ತನೆಯ ಶತಮಾನ: ಮಿತ್ರ ಕಾಲಪುರುಷ! ನಿನ್ನ ಆಶಾಭಾವನೆಗೆ ಸಮರ್ಥನೆ ಏನೇ ಇದ್ದರೂ ನಾನು ಮಾತ್ರ ನಿನ್ನೊಂದಿಗೆ ಸಹಮತನಾಗಲಾರೆ. ಕಾರಣ ಕೇಳು. ೧೯೦೦ರಲ್ಲಿ ನಾನು ರಂಗಪ್ರವೇಶಿಸಿದಾಗ ಭೂಮಿಯಲ್ಲಿದ್ದ ಜನಸಂಖ್ಯೆ ಎಷ್ಟು ಗೊತ್ತೇ? ಸುಮಾರು ೧೭೦ ಕೋಟಿ. ಈಗ ಅದು ೫೦೦ ಕೋಟಿ ದಾಟಿ ಜಿಗಿದಿದ್ದು, ನನ್ನ ತಮ್ಮ ಇಪ್ಪತ್ತೊಂದನೆಯ ಶತಮಾನ ಕಾಲಿಡುವ ವೇಳೆಗೆ ೬೦೦ ಕೋಟಿಗೆ ಏರಿರುತ್ತದೆ.

ಕಾಲಪುರುಷ: ಅನುಕೂಲವೇ ಆಯಿತಲ್ಲ! ಕೆಲಸಮಾಡಲು ಅಧಿಕ ಜನ.

ಇಪ್ಪತ್ತನೆಯ ಶತಮಾನ: ಹಾಗೆಯೇ ತಿನ್ನಲು, ತಿರುಪೆ ಎತ್ತಲು, ಕಿಚ್ಚು ಹಚ್ಚಲು ಮತ್ತು ಹೊಲಸು ಮಾಡಲು ಕೂಡ! ಆಧುನಿಕ ನಾಗರಿಕತೆಯ ವಿಸ್ತರಣೆಯಲ್ಲಿ ತೊಡಗಿದ್ದ ಅಮೆರಿಕದ ಅಧ್ಯಕ್ಷನಿಗೆ ಮುಗ್ಧ ರೆಡ್ ಇಂಡಿಯನ್ ನಾಯಕನೊಬ್ಬ ೧೮೫೫ರಷ್ಟು ಹಿಂದೆಯೇ ಏನು ಎಚ್ಚರಿಕೆ ನೀಡಿದ್ದ ಗೊತ್ತೇ?

ರೆಡ್ ಇಂಡಿಯನ್ ನಾಯಕ: ನಿಮ್ಮ ಹಾಸಿಗೆಯನ್ನು ಹೊಲಸುಗೊಳಿಸುವುದನ್ನು ಹೀಗೆಯೇ ಮುಂದುವರಿಸುತ್ತಿರಿ – ಒಂದು ರಾತ್ರಿ ಆ ರೊಚ್ಚೆಯಲ್ಲಿ ನಿಮ್ಮ ಉಸಿರೇ ಕಟ್ಟಿಹೋಗುತ್ತದೆ. ಕಾಡೆಮ್ಮೆಗಳೆಲ್ಲವನ್ನೂ ಕಡಿದೊಗೆದ ಬಳಿಕ, ಕಾಡುಕುದುರೆಗಳೆಲ್ಲವನ್ನೂ ಪಳಗಿಸಿ ಮುಗಿದ ತರುವಾಯ, ವನಾಂತರಗಳ ಪ್ರಶಾಂತ ಏಕಾಂತಗಳೆಲ್ಲವೂ ನರಗಬ್ಬಿನಿಂದ ನಾರುತ್ತಿರುವಾಗ ಮತ್ತು ಫಲಸಮೃದ್ಧ ಗಿರಿದೃಶ್ಯಗಳು ಚೆಲ್ಲಗಾತಿಯರ ಬೋಳುಹರಟೆಯಲ್ಲಿ ಮುಳುಗಿಹೋದಾಗ ಹೊದರೆಲ್ಲಿ ಉಳಿದಿರುವುದು? ಸಾವಿನ ಮೊನೆ ತಿವಿಯುವಂದೇ ಬದುಕಿನ ಕೊನೆ.

ಕಾಲಪುರುಷ: ಮಿತ್ರ ಇಪ್ಪತ್ತನೆಯ ಶತಮಾನ! ರೆಡ್ ಇಂಡಿಯನ್ ನಾಯಕನ ಮಾತು ಒಂದು ಅರ್ಥದಲ್ಲಿ ನಿಜ. ಏಕೆಂದರೆ ಕ್ರಿಸ್ತಶಕದ ಆರಂಭದಲ್ಲಿದ್ದ ಜನಸಂಖ್ಯೆ ಕೇವಲ ೩೦ ಕೋಟಿ. ಈಗ ೫೦೦ ಕೋಟಿ. ನೆಲದ ವಿಸ್ತಾರವೇನೂ ಹಿಗ್ಗಿರುವುದಿಲ್ಲ – ಆಗಲೂ ಈಗಲೂ ಒಂದೇ.

ಇಪ್ಪತ್ತನೆಯ ಶತಮಾನ: ಅದೇ ಇಂದಿನ ಮಾನವನ ಬವಣೆಯ ಕಾರಣ.

ಕಾಲಪುರುಷ: ಬವಣೆ? ಏಕೆ?

ಇಪ್ಪತ್ತನೆಯ ಶತಮಾನ: ಗಂಗಳ ಅದೇ ಇದ್ದು ಕಬಳಿಸುವ ಕೈಗಳು ಜಾಸ್ತಿ ಆದಾಗ ನೆಮ್ಮದಿ ಹೇಗೆ ತಾನೇ ಉಳಿದೀತು?

ಕಾಲಪುರುಷ: ನಿನ್ನ ತರ್ಕ ಸರಿಯಲ್ಲ ಇಪ್ಪತ್ತನೆಯ ಶತಮಾನ! ವಿಜ್ಞಾನ ಮತ್ತು ತಂತ್ರವಿದ್ಯೆಗಳಲ್ಲಿ ಹಿಂದಿನ ಎಲ್ಲ ಪೀಳಿಗೆಗಳಿಗಿಂತ ಹೆಚ್ಚಿನ ಪ್ರಗತಿ ಸಾಧಿಸಿರುವ ಇಂದಿನ ಪೀಳಿಗೆ ಅದೇ ನೆಲದಿಂದ ಅಧಿಕ ಸಂಪತ್ತು ಕೊಯ್ಲು ಮಾಡಿ ಸಮೃದ್ಧ ಜೀವನ ನಡೆಸುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೇನೆ. ಜನಸಂಖ್ಯೆಯ ವೃದ್ಧಿಯೊಡನೆ ಗಳಿಕೆ ಸಂಪತ್ತಿನ ಮೊತ್ತವೂ ಜಾಸ್ತಿ ಆಗಬೇಕಷ್ಟೆ?

ಇಪ್ಪತ್ತನೆಯ ಶತಮಾನ: ಕಾಲಪುರುಷ! ನೀನು ವರ್ತಮಾನದಲ್ಲಿ ಬಾಳುತ್ತಿಲ್ಲ. ಯಾವುದೋ ಆದರ್ಶದ ಗುಂಗಿನಲ್ಲಿ ತೇಲುತ್ತಿರುವೆ. ನನ್ನ ವಿವರಣೆ ಆಲಿಸು. ಇಂದಿನ ಪ್ರಪಂಚ ಅನುಭೋಗಾತಿರೇಕತ್ವ ಎಂಬ ಭೀಕರ ಮಾರಕಜ್ವರದಿಂದ ತಹತಹಿಸುತ್ತಿದೆ.

ಕಾಲಪುರುಷ: ಅನುಭೋಗಾತಿರೇಕತ್ವ ಎಂದರೇನು?

ಇಪ್ಪತ್ತನೆಯ ಶತಮಾನ: ಋಣಂ ಕೃತ್ವಾ ಘೃತಂ ಪಿಬೇತ್ – ಸಾಲ ಮಾಡಿ ತುಪ್ಪ ತಿನ್ನು – ಈ ಅನುಕೂಲ ಮಂತ್ರದ ಉಗ್ರಮುಖವೇ ಅನುಭೋಗಾತಿರೇಕತ್ವ. ಅಗತ್ಯವಿರಲಿ ಇಲ್ಲದಿರಲಿ ಸರಕು ಸೇವೆಗಳನ್ನು ಶಕ್ತಿ ಮೀರಿ ಕೊಳ್ಳೆ ಹೊಡೆದು ಅನುಭೋಗಿಸುವುದೇ ಪ್ರಗತಿಯ ಮಾನಕ ಎಂಬ ಭ್ರಮಾಧೀನನಾಗಿದ್ದಾನೆ ಮಾನವ. ಸ್ವಂತ ನಿರ್ಮಾಣಗಳಾದ ಯಂತ್ರವಾಹನಗಳ ಮತ್ತು ತಂತ್ರಸಾಧನಗಳ ದಾಸಾನುದಾಸನಾಗಿದ್ದಾನೆ. (ಹಿನ್ನೆಲೆಯಲ್ಲಿ ಯಂತ್ರ ವಾಹನಗಳ ಗಲಭೆ) ತನ್ನ ಮಿದುಳ ಶಿಶುವಾದ ತಂತ್ರವಿದ್ಯೆಯನ್ನು ನಿಯಂತ್ರಿಸುವುದರಲ್ಲಿ ಮಾನವ ವಿಫಲನಾಗಿದ್ದಾನೆ. ಇದು ಅವನ ಸೇವಕ ಆಗಿರಬೇಕಾಗಿತ್ತು. ಆದರೆ ಈಗ ತದ್ವಿಪರೀತವಾಗಿ ಇವನೇ ಅದರ ಸೇವಕ ಆಗಿದ್ದಾನೆ. ತಂತ್ರವಿದ್ಯೆಯ ನೀರಸ ಶಿಸ್ತು ಮತ್ತು ಹಿಂಗದ ದಾಹ ಇವುಗಳಿಗೆ ತನ್ನ ಬದುಕನ್ನೇ ಪಣವಾಗಿ ಒಡ್ಡಿದ್ದಾನೆ. ಹೀಗಾಗಿ ಮೌಲ್ಯರಹಿತ ರಭಸಜೀವನ ಅವನ ಭವ್ಯ ಆದರ್ಶವಾಗಿದೆ. ಪರಿಣಾಮ? ಪ್ರಕೃತಿ ಸೂರೆ, ಸ್ವಾಸ್ಥ್ಯ ಹನನ, ಸರ್ವನಾಶ, ಡಿವಿಜಿಯವರ ಮಾತಿನಲ್ಲಿ
ಪ್ರಕೃತಿಯನವರತ ಮನುಜನ ತಿದ್ದುತಿರುವಂತೆವಿಕೃತಿಗೊಳಿಸುವನವನುಮಾಕೆಯಂಗಗಳಭೂಕೃಷಿಕ ರಸತಂತ್ರಿ ಶಿಲ್ಪಿವಾಹನ ಯಂತ್ರಿವ್ಯಾಕೃತಿಸರೇನವಳ? ಮಂಕುತಿಮ್ಮ

ಕಾಲಪುರುಷ: ತಾಳು ತಾಳು ಇಪ್ಪತ್ತನೆಯ ಶತಮಾನ! ಅಷ್ಟೊಂದು ಉದ್ವೇಗ ಬೇಡ, ಹತಾಶೆಯೂ ಬೇಡ. ನಿನ್ನ ಜೀವಿತಾವಧಿಯಲ್ಲಿ ನೀನು ಗಳಿಸಿದ ಕಹಿ ಅನುಭವ ನಿನ್ನಲ್ಲಿ ಈ ನಿರಾಶಾದಾಯಕ ಚಿತ್ರ ಮೂಡಿಸಿದೆ ಎನ್ನುವುದು ನನಗೆ ಅರ್ಥವಾಗುತ್ತದೆ. ಇದು ತಾತ್ಕಾಲಿಕವಾದದ್ದು, ಸಾರ್ವಕಾಲಿಕವಾದದ್ದಲ್ಲ. ಅನಾದಿ ಪುರುಷನಾದ ನಾನು ಮಂಗಮಾನವ ನರಮಾನವನಾದ ದಿನದಿಂದಲೂ ಮನುಕುಲದ ವಿಕಾಸ ನೋಡುತ್ತ ಬಂದಿದ್ದೇನೆ. ತ್ಯಾಗ- ಭೋಗ, ವಿವೇಕ-ಅತಿರೇಕ, ಪ್ರೀತಿ-ದ್ವೇಷ ಮುಂತಾದ ವಿರುದ್ಧ ಗುಣಗಳ ಘರ್ಷಣೆ ಮಾನವೇತಿಹಾಸವನ್ನು ಉದ್ದಕ್ಕೂ ರೂಪಿಸಿಕೊಂಡು ಬಂದಿದೆ. ದುಷ್ಟ ಗುಣಗಳು ಉಲ್ಬಣಿಸಿ ಆತ ವಿನಾಶದ ಅಂಚಿಗೆ ಹೋದಾಗಲೆಲ್ಲ ಸದ್ಗುಣಗಳು ಪ್ರಾಬಲ್ಯಕ್ಕೆ ಬಂದು ಲಗಾಮು ಜಗ್ಗಿ ಆತನ ಬಾಳಬಂಡಿಯನ್ನು ಹಳಿಹತ್ತಿಸಿವೆ. ನನ್ನ ಮಾತು ನಂಬು: ಇಂದಿನ ಸರಾಸರಿ ವ್ಯಕ್ತಿ ಹಿಂದಿನ ಪ್ರತಿಯೊಂದು ಶತಮಾನದ ಸರಾಸರಿ ವ್ಯಕ್ತಿಗಿಂತ ಹೆಚ್ಚು ಸುಶಿಕ್ಷಿತನಾಗಿದ್ದಾನೆ. ಈತನ ಆಯುರ್ನಿರೀಕ್ಷೆ ಹೆಚ್ಚು. ಆದ್ದರಿಂದ ನಿನ್ನ ತಮ್ಮ ಇಪ್ಪತ್ತೊಂದನೆಯ ಶತಮಾನ ರಂಗಪ್ರವೇಶಿಸುವ ವೇಳೆಗೆ ಮಾನವನ ಜೀವನದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿರುತ್ತದೆ.

ಇಪ್ಪತ್ತನೆಯ ಶತಮಾನ: ಕಾಲಪುರುಷ! ನಿನ್ನ ಈ ಆಶಾವಾದ ತಾತ್ತ್ವಿಕ ನೆಲೆಯಲ್ಲಿ ನಿಜವಿರಬಹುದು. ಆದರೆ ವಾಸ್ತವ ನೆಲೆಯಲ್ಲಿ ಸಂಗತವಾಗದೆಂದು ನನ್ನ ಅನುಭವ ನುಡಿಯುತ್ತದೆ. ನಾನು ಕೊಡುವ ಕಾರಣಗಳು ಮುಖ್ಯವಾಗಿ ಐದು. ಒಂದನೆಯದಾಗಿ ಆಹಾರ ಪದಾರ್ಥಗಳ ತೀವ್ರ ಅಭಾವ. ಪ್ರಪಂಚದಲ್ಲಿಂದು ಒಂದು ಕೋಟಿ ಮಕ್ಕಳು ನ್ಯೂನಪೋಷಣೆಯಿಂದ ಪೀಡಿತರಾಗಿ ಇವರ ಬೆಳೆವಣಿಗೆ ಕುಂಠಿತವಾಗಿದೆ. ಇವರು ಯಾವ ಉತ್ಸಾಹದಿಂದ ಇಪ್ಪತ್ತೊಂದನೆಯ ಶತಮಾನವನ್ನು ಸ್ವಾಗತಿಸಿಯಾರು? ೪೦ ಕೋಟಿಜನ ಉಪವಾಸದ ಅಂಚಿನಲ್ಲಿ ನವೆಯುತ್ತಿದ್ದಾರೆ. ೧೦೦ ಕೋಟಿ ಜನ ಹಸಿವು ಮತ್ತು ನ್ಯೂನ ಪೋಷಣೆಯಿಂದ ಬಾಧಿತರಾಗಿದ್ದಾರೆ. ಪ್ರತಿದಿನ ೧೨,೦೦೦ ಮಂದಿ ಆಹಾರಾಭಾವದಿಂದ ಮಡಿಯುತ್ತಿದ್ದಾರೆ. ಅಂದರೆ ಪ್ರತಿ ೨೫ರಲ್ಲಿ ೭ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ ಕಂಗಾಲಾಗಿದ್ದಾರೆ, ಇಲ್ಲವೇ ಸಾಯುತ್ತಿದ್ದಾರೆ. ಈ ಸಂಖ್ಯೆಗಳು ತೇಜಿಯಲ್ಲಿವೆಯೇ ಹೊರತು ಮಂದದಲ್ಲಿಲ್ಲ. (ಹಿನ್ನೆಲೆಯಲ್ಲಿ ಹಸಿವಿನ ಮೊರೆ, ಅನ್ನದ ಕೂಗು).

ಎರಡನೆಯದಾಗಿ ಈ ಅಸಂತೃಪ್ತ ಮತ್ತು ಅನಾರೋಗ್ಯ ಮಂದಿ ಬಹುತೇಕ ಅಭಿವೃದ್ಧಿಶೀಲ ಮತ್ತು ಆನಭಿವರ್ಧಿತ ರಾಷ್ಟ್ರಗಳ ಮಹಾನಗರಗಳಲ್ಲಿ ದಟ್ಟವಾಗಿ ಹೆಣೆದುಕೊಂಡಿದ್ದಾರೆ. ಆಯಾ ರಾಷ್ಟ್ರಗಳ ವ್ಯಾಪಾರ ಮತ್ತು ಆಡಳಿತ ಕೇಂದ್ರಗಳಾದ ಈ ನಗರಗಳು ಕೊಳಚೆಗುಂಡಿಗಳಾಗಿ ರೋಗರುಜಿನಗಳ ಜವುಗು ನೆಲಗಳಾಗಿವೆ. ಕೊಲೆ ದರೋಡೆಗಳ ಬೀಡುಗಳಾಗಿವೆ. ಏಡಿಗಂತಿಯಂತೆ ಹಬ್ಬುತ್ತಿರುವ ಪಿಡುಗಿನಿಂದ ನಾಗರಿಕತೆ ಪಾರಾಗುವುದು ನನ್ನ ಶೇಷಾಯುಷ್ಯದಲ್ಲಂತೂ ಅತ್ಯಂತ ಅಸಂಭವ. (ಹಿನ್ನೆಲೆಯಲ್ಲಿ ಕೊಳೆಗೇರಿಯ ಗಲಭೆ ಗುಲ್ಲು ಗೊಂದಲ)

ಮೂರನೆಯದಾಗಿ ವ್ಯಕ್ತಿಯ ಪ್ರಾಥಮಿಕ ಆವಶ್ಯಕತೆಗಳಾದ ಅಶನ ವಸನ ವಸತಿ ಪೂರೈಸುವ ಏಕೈಕ ಅಕ್ಷಯ ಪಾತ್ರೆ ಈ ವಸುಂಧರೆ. ಆದರೆ ವರ್ತಮಾನ ದಿನಗಳಲ್ಲಿ ಇದು ಬರಿ ದೂಳಬಟ್ಟಲಾಗುತ್ತಿರುವಂತೆ ತೋರುತ್ತದೆ. ಹಸುರು ಕಾಡುಗಳು ಪರಿಮಳಿಸುತ್ತಿದ್ದಲ್ಲಿ ಕಾಂಕ್ರಿಟ್ ಪೆಡಂಭೂತಗಳು ರಣಗುಟ್ಟುತ್ತಿವೆ. ವನ್ಯಮೃಗಗಳು ಮುಕ್ತವಾಗಿ ವಿಹರಿಸುತ್ತಿದ್ದಲ್ಲಿ ಸ್ವಯಂಚಲಿಗಳು ಯಾಂತ್ರಿಕವಾಗಿ ಧಾವಿಸುತ್ತಿವೆ. ಜಲಗೋಳ ಮತ್ತು ವಾಯುಮಂಡಲ ಕೂಡ ಈ ಅವ್ಯಾಹತ ಸೂರೆಯಿಂದ ವಿನಾಯತೆ ಪಡೆದಿಲ್ಲ. ತನ್ನ ಕೊರಳ ಸುತ್ತಿನ ಉರುಳನ್ನು ತಾನೇ ಬಿಗಿಗೊಳಿಸುತ್ತಿರುವ ಮಾನವ ಮುಂದಿನ ಶತಮಾನ ಕಾಣುವುದುಂಟೇ? ಸ್ವಾಗತಿಸುವುದುಂಟೇ? (ಹಿನ್ನೆಲೆಯಲ್ಲಿ ಗೂಗೆಗಳ ಘೂಕಾರ, ಲಾರಿ ರೈಲು ವಿಮಾನಗಳ ಚೀತ್ಕಾರ.)

ನಾಲ್ಕನೆಯದಾಗಿ ಮಾನವಕೃತಾಪರಾಧವಾದ ಪರಿಸರ ಮಾಲಿನ್ಯದಿಂದ ಇಂದು ಇಡೀ ಭೂಮಿ ಕಲುಷಿತವಾಗಿದೆ. ಆತ ಉಸಿರಾಡುವ ವಾಯು, ಉಣ್ಣುವ ಅನ್ನ, ಕುಡಿಯುವ ನೀರು ಮತ್ತು ತೊಡುವ ಬಟ್ಟೆ ಎಲ್ಲವೂ ಕಲಬೆರಕೆಗಳೇ. ಇಂಥ ಶ್ವಾಸಬಂಧಕ ಕೃತಕ ಪರಿಸರದಲ್ಲಿ ಮಾನವನ ಅಭ್ಯುದಯ ಹೇಗೆ ತಾನೇ ಸಾಧ್ಯವಾದೀತು? ಎಸ್.ವಿ. ಪರಮೇಶ್ವರ ಭಟ್ಟರ ಮಾತಿನಲ್ಲಿ:
ನಿಧಿಯ ಶಂಕೆಯಿನಿಳೆಯನಗೆದೆನು ಗಿರಿಯ ಧಾತುವನೂದಿ ಕರಗಿಸಿದೆ
ಕಡಲನುತ್ತರಿಸಿದೆನು ನೃಪರನು ಯತ್ನದಿಂದಾಮೋದಗೊಳಿಸುತೆ ನಲಿಸಿದೆ
ಬಗೆಯ ಮಂತ್ರಾರ್ಚನೆಯೊಳಿರಿಸುತಲಿರುಳನೆನಿತನೊ ಮಸಣದೊಳು ನಾ ಕಳೆದೆನು
ದೊರೆಯದಾಯಿತು ಕುರುಡು ಕವಡೆಯುಮೆನಗೆ ತೃಷ್ಣೆಯೆ ಸಾಕು ಬಿಡು ಬಿಡು ನನ್ನನು

ಕಾಲಪುರುಷ: ಸ್ವಲ್ಪ ತಡೆ ಇಪ್ಪತ್ತನೆಯ ಶತಮಾನ! ಕೊಂಚ ಕೇಳು ನನ್ನ ಮಾತು. ಕುಂದು ಮಾತ್ರ ಕಾಣುತ್ತೇನೆಂಬ ಕಾಮಾಲೆ ನೋಟ ತಳೆಯುವುದರಿಂದ ಪ್ರಯೋಜನವಾಗದು. ನಿನಗಿಂತ ಹಿಂದೆ ಬಂದು ಸಂದು ಹೋದ ಶತಮಾನ ಪುರುಷರೆಲ್ಲರೂ ಅವರವರ ಕೊನೆಯ ದಿನಗಳಲ್ಲಿ ಆಡಿದ ಮಾತಿನ ಧಾಟಿ ಹೀಗೆಯೇ ಇತ್ತು. ಆದರೆ ನಾನು ಕಣ್ಣಾರೆ ಕಂಡಿದ್ದೇನೆ: ಮಾನವನ ಜೀವನದಲ್ಲಿ ಶತಮಾನದಿಂದ ಶತಮಾನಕ್ಕೆ ಪ್ರಗತಿ ಆಗಿದೆ, ಈಗಲೂ ಅದು ಪುರೋಗಾಮಿಯಾಗಿಯೇ ಇದೆ.

ಇಪ್ಪತ್ತನೆಯ ಶತಮಾನ: ಕಾಲಪುರುಷ! ಹಿಂದಿನವರ ಅನುಭವ ಏನೆಂಬುದು ನನಗೆ ತಿಳಿಯದು. ಹತ್ತೊಂಬತ್ತನೆಯ ಶತಮಾನ ನನಗೇನೂ ಒಳ್ಳೆಯ ಬಳುವಳಿ ಬಿಡಲಿಲ್ಲ. ಪ್ರಕೃತಿಯನ್ನು ಥಳಿಸಿ ತೊತ್ತಾಗಿ ದುಡಿಸಿಕೊಳ್ಳಬೇಕೆಂಬ ಅತಿ ಸ್ವಾರ್ಥ ದುರಾಶೆಯಿಂದ ಕೂಡಿದ್ದ ಜನಾಂಗವನ್ನು ಅವನು ನನಗೆ ಒಪ್ಪಿಸಿ ಹೋದ. ಫಲಿತಾಂಶ? ನೀನೇ ನೋಡಿರುವೆ: ಎರಡು ಮಹಾಯುದ್ಧಗಳು. ಹಿಂದಿನ ಎಲ್ಲ ಯುದ್ಧಗಳ ಕ್ರೌರ್ಯ ಮೀರಿಸುವ ಪಾಶವೀಯತೆ ಈ ಯುದ್ಧಗಳಲ್ಲಿ ಪ್ರಕಟವಾಯಿತು. ಪ್ರಪಂಚ ಈಗ ಮೂರನೆಯ ಮಹಾಯುದ್ಧದ ಅಂಚಿನಲ್ಲಿ ನಿಂತಿದೆ. ಇದೇನಾದಾದರೂ ಸಿಡಿಯಿತೋ ಆಗ ಪರಮಾಣುಬಾಂಬುಗಳ ತಾಂಡವ ನೃತ್ಯದಿಂದ ಮನು ಕುಲವೇ ನಿರ್ನಾಮಗಾಗಿ ಹೋದೀತು.
ಪರಮಾಲ್ಪ ಗಾತ್ರದಾ ಪರಮಾಣುಛೇದನೆಮಾನವಜನಾಂಗದಾ ತೀವ್ರ ಪ್ರಲೋಭನೆಪರಮಾಣುಮನದಿ ಸ್ಪಂದಿಸಿದೆ ಸಂವೇದನೆಮರಳಿಸಲು ಬಂದಿಹುದು ನೋಡು ಗುರುವಂದನೆ!
ಒಂದು ಪಕ್ಷ ಮೂರನೆಯ ಮಹಾಯುದ್ಧ ಸಂಭವಿಸದಿದ್ದರೂ ಈಗಾಗಲೇ ತಲೆದೋರಿರುವ ಶಕ್ತಿ ಬಿಕ್ಕಟ್ಟು ಪ್ರಕೋಪಕ್ಕೆ ಹೋಗಿ ಬದುಕು ದುಸ್ಸಹನೀಯವಾಗುವುದು ಕಂಡಂತೆಯೇ ಇದೆ.

ಕಾಲಪುರುಷ: ಶಕ್ತಿಬಿಕ್ಕಟ್ಟು ಎಂದರೇನು?

ಇಪ್ಪತ್ತನೆಯ ಶತಮಾನ: ವಿವರಿಸುತ್ತೇನೆ ಕೇಳು. ವಿದ್ಯುಚ್ಛಕ್ತಿ, ಡೀಸೆಲ್ ಶಕ್ತಿ, ಬೈಜಿಕ ಮುಂತಾದ ಕೃತಕ ಶಕ್ತಿ ಪ್ರಕಾರಗಳು ಮಾನವ ಪ್ರಯತ್ನದಿಂದ ದೊರೆತಿರುವುದು ಸರಿಯಷ್ಟೆ. ಇವು ಇಂದಿನ ಜೀವನದ ತಳಹದಿಗಳಾಗಿವೆ. ಶಕ್ತಿರಹಿತ ಜೀವನ ಇಂದು ಊಹೆಗೂ ನಿಲುಕದು. ಈ ಶಕ್ತಿ ಎಲ್ಲಿಂದ ಒದಗುತ್ತದೆ?

ಕಾಲಪುರುಷ: ಅಂತಿಮವಾಗಿ ನಿಸರ್ಗದಿಂದ?

ಇಪ್ಪತ್ತನೆಯ ಶತಮಾನ: ಸರಿಯಾದ ಮಾತು. ನಿಸರ್ಗದಿಂದ ಕಚ್ಚಾ ಸಾಮಗ್ರಿ ಸಂಗ್ರಹಿಸಲು, ಅದನ್ನು ಕಾರ್ಖಾನೆಗೆ ಸಾಗಿಸಲು, ಅಲ್ಲಿ ಉಪಯುಕ್ತ ವಸ್ತು ತಯಾರಿಸಲು, ಜನ ಈ ವಸ್ತುಗಳಿಂದ ಸೇವೆ ಪಡೆಯಲು ಮತ್ತು ಕೊನೆಯದಾಗಿ ಉಪಯೋಗಾನಂತರ ಉಳಿಯುವ ವಸ್ತುವಿನ ವಿಲೆವಾರಿ ಮಾಡಲು ಶಕ್ತಿಬೇಕು. ಈ ಶಕ್ತಿಯ ಅತ್ಯಧಿಕ ಭಾಗ ಪೂರೈಕೆ ಆಗುತ್ತಿರುವುದು ಫಾಸಿಲ್ ಇಂಧನಗಳಿಂದ – ಅಂದರೆ ಕಲ್ಲಿದ್ದಲು, ಪೆಟ್ರೋಲಿಯಮ್ ಮುಂತಾದ ಭೂಸಂಪನ್ಮೂಲಗಳಿಂದ. ಇವುಗಳ ವಿನಿಯೋಗ ಇಸವಿ ೧೯೦೦ರಲ್ಲಿ ೬೨೫ ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲಿನ ದಹನಕ್ಕೆ ಸಮಾನವಾಗಿತ್ತು. ೧೯೫೦ರಲ್ಲಿ ಅದು ೩೧೫೦ ಮಿಲಿಯನ್ನಿಗೂ ೧೯೮೦ರಲ್ಲಿ ೧೦,೦೦೦ ಮಿಲಿಯನ್ನಿಗೂ ಏರಿತು. ಇಸವಿ ೨೦೦೦ದಲ್ಲಿ ೨೨೫೦೦ ಮಿಲಿಯನ್ನಿಗೆ ಜಿಗಿಯುವ ನಿರೀಕ್ಷೆ ಇದೆ. ಇದರ ಅರ್ಥ ಸ್ಪಷ್ಟ: ಪ್ರಸಕ್ತ ಶತಮಾನದ ಮೊದಲ ಐವತ್ತು ವರ್ಷಗಳಲ್ಲಿ ಸರಾಸರಿ ವೃದ್ಧಿದರ ಶೇಕಡಾ ೯ ಇದ್ದದ್ದು ಮುಂದಿನ ಮೂವತ್ತು ವರ್ಷಗಳಲ್ಲಿ ಶೇಕಡಾ ೧೦ಕ್ಕೆ ಏರಿತು, ಕೊನೆಯ ಇಪ್ಪತ್ತು ವರ್ಷಗಳಲ್ಲಿ ಶೇಕಡಾ ೧೧.೨೫ಕ್ಕೆ ಜಿಗಿಯಲಿದೆ.

ಕಾಲಪುರುಷ: ಆಗಲಿ, ತೊಂದರೆ ಏನು?

ಇಪ್ಪತ್ತನೆಯ ಶತಮಾನ: ಎಲ್ಲ ರೀತಿಯಲ್ಲಿಯೂ ತೊಂದರೆ ಉಂಟು. ಫಾಸಿಲ್ ಇಂಧನ ಹೆಚ್ಚೆಂದರೆ ಇನ್ನು ಒಂದು ಶತಮಾನಪರ್ಯಂತ ದೊರೆಯಬಹುದು – ಅದೂ ಅತಿ ಪ್ರಯಾಸದಿಂದ. ಹೀಗಾಗಿ ಮಾನವ ಈಗ ಎರಡು ವಿರುದ್ಧ ಬಲಗಳ ಎಳೆತದಿಂದ ಕಂಗಾಲಾಗಿದ್ದಾನೆ: ತಂತ್ರವಿದ್ಯೆಯ ಎಂದೂ ಹಿಂಗದ, ಬದಲು, ಸದಾ ಉಲ್ಬಣಿಸುತ್ತಿರುವ ಶಕ್ತಿದಾಹ, ಫಾಸಿಲ್ ಇಂಧನದ ಶಾಶ್ವತವಲ್ಲದ, ಬದಲು, ದಿನದಿನ ನಶಿಸುತ್ತಿರುವ ರಿಕ್ತ ಮೂಲ. ಇವೆರಡರ ನಡುವಿನ ಕೊರತೆಯೇ ಶಕ್ತಿ ಬಿಕ್ಕಟ್ಟು. ಇಪ್ಪತ್ತೊಂದನೆಯ ಶತಮಾನ ಹೊಸ್ತಿಲು ಒಳ ದಾಟುವ ವೇಳೆಗೆ ಇದು ಅಡ್ಡ ಹಾಯಲಾಗದ ಒಂದಿಗೇ ಮುಚ್ಚಲೂ ಆಗದ ಅಗಲ ಆಳ ಕಮರಿಯಾಗಿ ಮಾನವ ಜೀವನ ಅಸ್ತವ್ಯಸ್ತವಾಗಿ ಹೋಗುವುದು ನನಗಂತೂ ನಿಚ್ಚಳವಾಗಿ ಎದ್ದು ಕಾಣುತ್ತಿದೆ. ಶಕ್ತಿ ಬಿಕ್ಕಟ್ಟು ಐದನೆಯ ಮುಖ್ಯ ಕಾರಣ.

ಕಾಲಪುರುಷ: ಏರು ಕಡಿದಾದಷ್ಟೂ ಹುಮ್ಮಸ್ಸು ಹಿಗ್ಗುವುದು ಮಾನವ ಸ್ವಭಾವ. ನೀನು ನೀಡಿರುವ ಐದು ನಿಷೇಧಾತ್ಮಕ ಕಾರಣಗಳನ್ನೂ ಮೀರಿ ನಿಲ್ಲಬಲ್ಲ ಧೃತಿ ಮಾನವನಿಗಿದೆ. ಈಗ ಅವನ್ನು ಒಂದೊಂದಾಗಿ ಪರಿಶೀಲಿಸುತ್ತೇನೆ. ಮೊದಲನೆಯದು?

ಇಪ್ಪತ್ತನೆಯ ಶತಮಾನ: ಜನಸಂಖ್ಯೆಯ ಅತಿವೃದ್ಧಿ ಮತ್ತು ಆಹಾರ ಪದಾರ್ಥಗಳ ಅಲಭ್ಯತೆ.

ಕಾಲಪುರುಷ: ಹೌದು. ಈಗ, ಜನಸಂಖ್ಯಾವೃದ್ಧಿಯ ಕಾರಣ ಜನನದಲ್ಲಿಯ ಹೆಚ್ಚಳ ಅಲ್ಲ, ಬದಲು ಮರಣದಲ್ಲಿಯ ಇಳಿತ. ವಾಸ್ತವವಾಗಿ ಪ್ರಪಂಚದ ಸರಾಸರಿ ಜನನ ದರ ಇಳಿದಿದ್ದು ಮುಂಬರುವ ವರ್ಷಗಳಲ್ಲಿ ಜನಸಂಖ್ಯೆ ಆಗಿನ ಮಟ್ಟದಲ್ಲಿ ಸ್ಥಿರಗೊಳ್ಳಲಿದೆ, ಅಥವಾ ಅಭಿವರ್ಧಿತ ರಾಷ್ಟ್ರಗಳ ಮಾದರಿಯಲ್ಲಿ ಇತರೆಡೆಗಳಲ್ಲಿ ಕೂಡ ಇನ್ನಷ್ಟು ಇಳಿದು ಜನಸಂಖ್ಯೆ ಕಡಿಮೆಯಾಗಲಿದೆ. ಇನ್ನು ಆಹಾರಪದಾರ್ಥಗಳ ವಿಚಾರ. ಇವುಗಳ ಉತ್ಪಾದನೆ ಸಮೃದ್ಧವಾಗಿದ್ದರೂ ವಿತರಣೆಯಲ್ಲಿ ಸಾಕಷ್ಟು ಕೃತಕ ಪ್ರತಿಬಂಧಕಗಳು ಅಡ್ಡಬಂದು ಜನರಲ್ಲಿ, ಅಂತೆಯೇ ರಾಷ್ಟ್ರಗಳಲ್ಲಿ ಕೂಡ, ಅತಿ ಸಮೃದ್ಧವರ್ಗ ಮತ್ತು ಅತಿ ದರಿದ್ರ ವರ್ಗ ಎಂಬ ಎರಡು ವರ್ಗಗಳು ತಲೆದೋರಿವೆ. ಇಂದಿನ ವಿಚಾರಶೀಲ ಮಾನವ ಈ ಆತಂಕಗಳನ್ನು ನಿವಾರಿಸಿ ಆಹಾರವಿತರಣೆಯಲ್ಲಿ ಸಮತೋಲ ಸಾಧಿಸಿಕೊಳ್ಳಬಲ್ಲವನಾಗಿದ್ದಾನೆ.

ಇಪ್ಪತ್ತನೆಯ ಶತಮಾನ: ಆಗಲಿ ಎರಡನೆಯ ಕಾರಣಕ್ಕೆ ಸಜಾಯಿಷಿ ಕೊಡು ನೋಡೋಣ.

ಕಾಲಪುರುಷ: ನೀನು ವಿಶದೀಕರಿಸಿರುವ ಎರಡನೆಯ ಕಾರಣ ನಗರಗಳ ಅತಿಲಂಬನೆ ಮತ್ತು ತತ್ಪರಿಣಾಮವಾದ ಸಮಸ್ಯೆಗಳು, ಅಲ್ಲವೇ ಇಪ್ಪತ್ತನೇ ಶತಮಾನ?

ಇಪ್ಪತ್ತನೆಯ ಶತಮಾನ: ಹೌದು ಕಾಲಪುರುಷ!

ಕಾಲಪುರುಷ: ಮಾನವೇತಿಹಾಸದಲ್ಲಿ ಮೂರನೆಯ ಕ್ರಾಂತಿ ತಲೆದೋರಿದಾಗ ನಗರಗಳ ಅಸಹಜ ಬೆಳೆವಣಿಗೆ ಆರಂಭವಾಯಿತೆಂಬ ಸಂಗತಿ ನಿನಗೆ ತಿಳಿದಿದೆಯಷ್ಟೆ?

ಇಪ್ಪತ್ತನೆಯ ಶತಮಾನ: ಇಲ್ಲ, ಅದೇನೆಂದು ಹೇಳು.

ಕಾಲಪುರುಷ: ಮಾನವ ತನ್ನ ಭಾವನೆಗಳಿಗೆ ಮಾತಿನ ಒಡಲು ಕೊಡಲು ಕಲಿತಾಗ ಮೊದಲನೆಯ ಕ್ರಾಂತಿ ಸಂಭವಿಸಿತು. ಉದಾಹರಣೆಗೆ ವೇದ ಮಂತ್ರಗಳು:
ವೇದಾಹಮೇತಂ ಪುರುಷಂ ಮಹಾಂತಂಆದಿತ್ಯವರ್ಣಂ ತಮಸಸ್ತು ಪಾರೇಸರ್ವಾಣಿ ರೂಪಾಣಿ ವಿಚಿತ್ಯ ಧೀರ:ನಾಮಾನಿ ಕೃತ್ವಾ(ಆ)ಭಿವದನ್ಯದಾಸ್ತೇಮುಂದೆ ಈ ಮಾತನ್ನು – ಅಂದರೆ ಕಿವಿಗೆ ಮಾತ್ರ ಗ್ರಾಹ್ಯವಾಗುವ ಶಬ್ದರೂಪಿಯನ್ನು – ಲಿಪಿಲೋಕದಲ್ಲಿ ಘನೀಕರಿಸಲು ಕಲಿತಾಗ ಎರಡನೆಯ ಕ್ರಾಂತಿ ಸಂಭವಿಸಿತು. ಇದು ಲಿಪಿಕ್ರಾಂತಿ. ಉದಾಹರಣೆಗೆ ಹಲ್ಮಿಡಿ ಶಾಸನದಲ್ಲಿ ಕೆತ್ತಿರುವ ಮಾತು:ಜಯತಿ ಶ್ರೀ ಪರಿಷ್ವಙ್ಗಶ್ಯಾರ್ಙ್ಗವ್ಯಾನತಿರಚ್ಯುತಃದಾನವಾಷ್ಣೋ ಯುಗಾನ್ತಾಗ್ನಿಃ ಶಿಷ್ಟಾನಾನ್ತು ಸುದರ್ಶನಃನಮಃ ಶ್ರೀಮತ್ಕದಂಬಪನ್ತ್ಯಾಗ ಸಂಪನ್ನನ್ಕಲಾಭೋರನಾ ಅರಿಕಕುಸ್ಥ ಭಟ್ಟೋರನಾಳೆನರಿದಾವಿಳೆ ನಾಡುಳ್-

ಮುಂದೆ ಈ ಲಿಪಿಯನ್ನು – ಅಂದರೆ ಕಣ್ಣಿಗೆ ಮಾತ್ರ ಗ್ರಾಹ್ಯವಾಗುವ ಚಿತ್ರರೂಪಿಯನ್ನು ಮುದ್ರಿತ – ಗ್ರಂಥಗಳಾಗಿ ಪ್ರಕಟಿಸಲು ಕಲಿತಾಗ ಮೂರನೆಯ ಕ್ರಾಂತಿ ಸಂಭವಿಸಿತು (ಹಿನ್ನೆಲೆಯಲ್ಲಿ ಮುದ್ರಣ ಯಂತ್ರಗಳ ಕಾರ್ಯವೈಖರಿ ಶಬ್ದ).

ಹದಿನೈದನೆಯ ಶತಮಾನದಲ್ಲಿ ಪ್ರಾರಂಭವಾದ ಕೈಗಾರಿಕೋನ್ಮೇಷಕ್ಕೆ ನಡೆಹಾಸಿ ಸೇಸೆ ತಳೆದದ್ದೇ ಈ ಮುದ್ರಣಕ್ರಾಂತಿ. ಜ್ಞಾನದಾಹಿಗಳಿಗೆ ಅವರು ಇಚ್ಛಿಸಿದಲ್ಲಿ ಜ್ಞಾನ ಆಕರ್ಷಕ ರೂಪದಲ್ಲಿ ಸುಲಭ ಬೆಲೆಗೆ ಲಭಿಸಿ ಜ್ಞಾನಪ್ರಸಾರ ಸರ್ವವ್ಯಾಪಿ ಆಯಿತು. ಆಗ ದೃಶ್ಯ ಯಂತ್ರಸ್ಥಾವರಗಳು, ಮಹಾ ವಿಶ್ವವಿದ್ಯಾಲಯಗಳು, ನೂತನಾನ್ವೇಷಣೆಗಳು, ಸಮರ್ಥ ಆರ್ಥಿಕ ವ್ಯವಹಾರಗಳು, ಸುಭದ್ರ ಸರ್ಕಾರಗಳು ಎಲ್ಲವೂ ಒಂದೆಡೆ ಕೇಂದ್ರೀಕೃತವಾಗಿ ಅಭಿವರ್ಧಿಸಿದುವು. ಈ ನೆಲೆಗಳೇ ನಗರಗಳು.

ಇಪ್ಪತ್ತನೆಯ ಶತಮಾನ: ಕೊಡು-ಕೊಳು ವಿನಿಮಯ ಕಾರ್ಯ ಕ್ಷಿಪ್ರವಾಗಿಯೂ ಸುಲಭವಾಗಿಯೂ ಜರಗುವ ಕೇಂದ್ರವೇ ನಗರವೆಂದು ಅರ್ಥವಾಗುತ್ತದೆ. (ಹಿನ್ನೆಲೆಯಲ್ಲಿ ನಗರ ಪ್ರಾತಿನಿಧಿಕ ಸನ್ನಿವೇಶಗಳ ಬಿಂಬನ)

ಕಾಲಪುರುಷ: ನಿಜ, ನಾಗರಿಕತೆಯ ನರಕೇಂದ್ರವೇ ನಗರ. ಅಂದು ಹೀಗಾಗಬೇಕಾದದ್ದು ಸರಿ. ವರ್ತಮಾನ ಕಾಲದ ಅತಿಕೇಂದ್ರೀಕರಣ ಇದರ ಪರಿಣಾಮ. ಮಾನವ ಇದರ ದುಷ್ಫಲಗಳನ್ನು ಅನುಭವಿಸುತ್ತಿರುವಾಗಲೇ ನಾಲ್ಕನೆಯ ಕ್ರಾಂತಿಯಿಂದಲೂ ಪರಿವೇಷ್ಟಿತನಾಗಿದ್ದಾನೆ.

ಇಪ್ಪತ್ತನೆಯ ಶತಮಾನ: ಏನದು?

ಕಾಲಪುರುಷ: ಅದರ ಹೆಸರು ಎಲೆಕ್ಟ್ರಾನಿಕ್ ಕ್ರಾಂತಿ. ಗಣಕ ಅದರ ಮಿದುಳು, ಅಂದರೆ ನರಕೇಂದ್ರ. ಸ್ವಯಂಚಾಲಿತ ಯಂತ್ರ ಸಾಧನಗಳು ದೇಹ, ಅಂದರೆ ಕಾರ್ಯ ನಿರ್ವಾಹಕ ಸಲಕರಣೆ. ರೇಡಿಯೊ, ದೂರದರ್ಶನ, ದೂರವಾಣಿ ಮುಂತಾದವು ಅವಯವಗಳು, ಅಂದರೆ ಸಂಪರ್ಕೋಪಕರಣಗಳು.

ಇಪ್ಪತ್ತನೆಯ ಶತಮಾನ: ಹಾಗಾದರೆ ಉಸಿರು?

ಕಾಲಪುರುಷ: ಶಕ್ತಿ – ವಿದ್ಯುಚ್ಛಕ್ತಿ.

ಇಪ್ಪತ್ತನೆಯ ಶತಮಾನ: ಈ ಕ್ರಾಂತಿಯ ಪರಿಣಾಮವಾಗಿ ಬದುಕಿನಲ್ಲಿ ಏನು ಬದಲಾವಣೆ ಕಂಡುಬಂದಿದೆ?

ಕಾಲಪುರುಷ: ಈಗ್ಗೆ ಕೇವಲ ಮೂವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿರದಿದ್ದ ರೀತಿಯಲ್ಲಿ ಇಂದು ಸಾರಿಗೆ ಸಂಪರ್ಕ ಅಭಿವರ್ಧಿಸಿ ದೂರಗಳು ಕುಸಿದಿವೆ. ಗಗನಕುಸುಮವಾಗಿದ್ದ ಚಂದ್ರ ನೆರೆಮನೆ ಆಗಿದೆ. ಗ್ರಹಗಳು ಮಾನವನ ಭೌತಾನ್ವೇಷಣೆಯ ಪರಿಧಿಯೊಳಗೆ ಅಡಕವಾಗಿವೆ. ಒಟ್ಟಾರೆ ಬದುಕಿಗೆ ಹೊಸ ಆಯಾಮ ಒದಗಿದೆ. ಎಂದೇ ಇಂದು ನಗರಗಳಲ್ಲಿ ಮಾತ್ರ ಲಭ್ಯವಿರುವ ಸೌಕರ್ಯಗಳು ಮುಂಬರಲಿರುವ ದಿನಗಳಲ್ಲಿ ಎಲ್ಲಿ ಬೇಕೆಂದರಲ್ಲಿ ದೊರೆಯಲಿವೆ. (ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಬೀಪ್ ಬೀಪ್ ಮುಂತಾದ ಧ್ವನಿಸೂಚಕಗಳು)

ಇಪ್ಪತ್ತನೆಯ ಶತಮಾನ: ನೀನು ಹೇಳುತ್ತಿರುವುದು, ಕಾಲಪುರುಷ, ತಾತ್ತ್ವಿಕವಾಗಿ ಸರಿಯಾಗಿರಬಹುದು. ಈಗ ನಾನೊಂದು ನಿರ್ದಿಷ್ಟ ನಿದರ್ಶನ ಕೊಡುತ್ತೇನೆ. ನಗರಜೀವನದ ಕೃತಕತೆಯಿಂದ ರೋಸಿಹೋದ ಚಂದ್ರಶೇಖರ್ ಹಳ್ಳಿಯ ನಿರ್ಮಲ ಪರಿಸರಕ್ಕೆ ಹೋಗಿ ನೆಲಸುತ್ತಾನೆ. ಅವನ ಬಯಕೆಗಳೇನು? ದೈನಂದಿನ ಜೀವನಕ್ಕೆ ಹಲವು ಬಗೆಯ ಸರಕು ಸೇವೆಗಳು, ಮಕ್ಕಳಿಗೆ ಉನ್ನತ ಶಿಕ್ಷಣ, ಕುಟುಂಬಕ್ಕೆ ವೈದ್ಯಕೀಯ ನೆರವು ಮತ್ತು ಬಾಹ್ಯ ಜಗತ್ತಿನೊಡನೆ ಸಂಪರ್ಕ – ಇವಿಷ್ಟು ಪ್ರಮುಖ ಬೇಕುಗಳು. ಜೊತೆಯಲ್ಲೇ ಅವನ ಉತ್ಪಾದನೆಗೆ ಮಾರುಕಟ್ಟೆಯೂ ಬೇಕು. ಇವೆಲ್ಲವೂ ಹಳ್ಳಿಯಲ್ಲಿ ಹೇಗೆ ಲಭಿಸುತ್ತವೆ?

ಕಾಲಪುರುಷ: ಉತ್ಪಾದಕ-ಗ್ರಾಹಕ ಇಬ್ಬರ ನಡುವೆ ಕ್ಷಿಪ್ರ ಆರ್ಥಿಕ ಸಂಪರ್ಕ ಏರ್ಪಡಿಸಿದಾಗ ಈ ಎಲ್ಲ ಸಮಸ್ಯೆಗಳು ತಂತಾವೇ ಪರಿಹಾರವಾಗುತ್ತವೆ. ಇಲ್ಲಿ ಉತ್ಪಾದಕ ಎಂದರೆ ಸರಕು ಮತ್ತು ಸೇವೆ ಒದಗಿಸಬಲ್ಲವ, ಗ್ರಾಹಕ ಎಂದರೆ ಇವನ್ನು ಬಯಸುವವ. ಗಣಕ ಮಾಡುವುದು ಈ ಕೆಲಸವನ್ನೇ. ಅಂಗಡಿಯಲ್ಲಿರುವ ಸಾಮಗ್ರಿಗಳು, ಗ್ರಂಥಾಲಯದಲ್ಲಿರುವ ಪುಸ್ತಕಗಳು ತಜ್ಞರಲ್ಲಿ ಲಭ್ಯವಿರುವ ಸೇವೆಗಳು ಎಲ್ಲವೂ ಗಣಕದ ನೆನಪಿನಲ್ಲಿ ಲಿಖಿತವಾಗಿರುತ್ತವೆ. ಚಂದ್ರಶೇಖರ ಇಂಥ ಒಂದು ಗಣಕಕ್ಕೆ ಪ್ರಶ್ನೆ ಹಾಕಿ, ಉತ್ತರಪಡೆದು, ಹುಕುಂ ಕೊಟ್ಟರೆ ಮುಂದಿನ ನಿರ್ವಹಣೆ ಸ್ವಯಂಚಾಲಿತವಾಗಿ ನಡೆದಿರುತ್ತದೆ.

ಇಪ್ಪತ್ತನೆಯ ಶತಮಾನ: ಒಂದು ಉದಾಹರಣೆ ಹೇಳು.

ಕಾಲಪುರುಷ: ಪುತಿ ನರಸಿಂಹಾಚಾರ್ ಬರೆದಿರುವ ‘ಎಚ್ಚರಚ್ಯುತ’ ಕೀರ್ತನೆ ಓದಬೇಕು, ಕೇಳಲೂ ಬೇಕು ಎಂಬುದು ಚಂದ್ರಶೇಖರನ ಬಯಕೆ ಎಂದು ಭಾವಿಸೋಣ. ಗಣಕಕ್ಕೆ ಈ ಆದೇಶವಿತ್ತೊಡನೆ ಆತನ ಅಧ್ಯಯನ ಕೊಠಡಿಯಲ್ಲಿ ದೂರದರ್ಶನ ತೆರೆಯ ಮೇಲೆ ಆ ಕೀರ್ತನೆಯ ಸಾಲುಗಳು ಪಡಿಮೂಡುತ್ತವೆ. ಹಿನ್ನೆಲೆಯಲ್ಲಿ ಹಾಡೂ ಕೇಳಿಬರುತ್ತದೆ:
(ರಾಗ ಸಾವೇರಿ, ತಾಳ ರೂಪಕ)
ಎಚ್ಚರಚ್ಯುತತಿರೆಯಳಲನು ಪರಿಹರಿಸಲು |ಪಲ್ಲವಿ|ಎಚ್ಚರೈವಿಭೋ ನೀನೆಚ್ಚದಿರೆ ನೆಚ್ಚಿದವರಬೆಚ್ಚಳಿವುದೇ? |ಅಪ|ವೇದಂಗಳು ಹೋದ ಸಮಯದಿಆದಿ ಮತ್ಸ್ಯನಾದುದ ನೆನೆದುಪಾದಗತರ ಖೇದವಳಿಸುವಾಮೋದದಿ ಮನವನಿರಿಸಿ |ಎಚ್ಚರಚ್ಯುತ|
ಬೇಕಾದರೆ ಈ ದೃಶ್ಯಗಳನ್ನು ಸಿನಿಮಾದಲ್ಲಿಯಂತೆ ಬಿತ್ತರಿಸುವುದು ಕೂಡ ಸಾಧ್ಯವಿದೆ.

ಇಪ್ಪತ್ತನೆಯ ಶತಮಾನ: ಸರಿ, ಚಂದ್ರಶೇಖರನಲ್ಲಿ ವಿಕ್ರಯಿಸಲು ಸಾಮಗ್ರಿಗಳಿದ್ದರೆ?

ಕಾಲಪುರುಷ: ಅವುಗಳ ವಿವರಗಳನ್ನು ಗಣಕಕ್ಕೆ ಊಡಿ ತನ್ನ ಷರತ್ತುಗಳನ್ನು ವಿಧಿಸಿದರೆ ಅದು ಸಾಧ್ಯ ಗಿರಾಕಿಗಳ ಒಂದು ತಪಶೀಲನ್ನು ತೆರೆಯ ಮೇಲೆ ಬಿಂಬಿಸಿ ತೋರಿಸುತ್ತದೆ. ಆವಶ್ಯವಿದ್ದರೆ ಅವರ ಜೊತೆ ಕುಳಿತಲ್ಲಿಂದಲೇ ಮುಖನೋಡಿ ಸಂಭಾಶಿಸಬಹುದು ಕೂಡ.

ಇಪ್ಪತ್ತನೆಯ ಶತಮನಾ: ಪರಿಸ್ಥಿತಿ ಇಷ್ಟೊಂದು ಸುಲಭವಾದ ಪಕ್ಷ ನಗರಗಳ ಕಿಷ್ಕಿಂಧಾಪ್ರದೇಶಗಳಲ್ಲಿ ಯಾರಾದರೂ ಏಕೆ ತಾನೇ ತೊಳಲುತ್ತಾರೆ?

ಕಾಲಪುರುಷ: ಅದೆ ನನ್ನ ವಾದ. ನಗರಗಳ ವಿಕೇಂದ್ರೀಕರಣ ಈಗಾಗಲೇ ಆರಂಭವಾಗಿದೆ. ಸಮೀಪದ ಭವಿಷ್ಯದಲ್ಲಿ ಗ್ರಾಮೀಣ ಜೀವನವೇ ಸಾರ್ವತ್ರಿಕವಾಗಲಿದೆ. ಈಗ ನೀನು ಹೇಳಿದ ಮೂರನೆಯ ಕಾರಣ ಪರಿಶೀಲಿಸೋಣ. ಅದೇನೇಂದು ಕೊಂಚ ನೆನಪು ಮಾಡುವೆಯಾ ಇಪ್ಪತ್ತನೆಯ ಶತಮಾನ?

ಇಪ್ಪತ್ತನೆಯ ಶತಮಾನ: ಭೂಮಿಗೆ ಹಸಿರುಡೆ ತೊಡಿಸಿದಂತಿರುವ ಕಾಡುಗಳ ಹನನ ಮತ್ತು ಅವುಗಳ ಸ್ಥಾನದಲ್ಲಿ ವಿಕಾರರೂಪದ ಸಿಮೆಂಟ್ ಪೆಡಂಭೂತಗಳ ನಿರ್ಮಾಣ. ಈ ಮೊದಲು ನಾನು ಪ್ರಸ್ತಾವಿಸಿದ ರೆಡ್ ಇಂಡಿಯನ್ ನಾಯಕ ಈ ಬಗ್ಗೆ ೧೮೫೫ರಷ್ಟು ಹಿಂದೆಯೇ ಏನು ಹೇಳಿದ್ದ ಗೊತ್ತೇ?

ರೆಡ್ ಇಂಡಿಯನ್ ನಾಯಕ: ಬಿಳಿ ಮನುಷ್ಯನ ಪಟ್ಟಣಗಳಲ್ಲಿ ಎಲ್ಲಿಯೂ ಶಾಂತಪ್ರದೇಶವೇ ಇಲ್ಲ. ವಸಂತ ಮಾರುತದಿಂದ ತೊನೆಯುವ ಎಲೆಗಳ ನಿನದ ಅಲ್ಲಿಲ್ಲ. ಜೀರುಂಡೆಗಳ ರೆಕ್ಕೆ ಅದಿರಿಕೆಯ ಸೊಲ್ಲು ಅಲ್ಲಿಲ್ಲ. ಆದರೆ ನಾನೊಬ್ಬ ಅನಾಗರಿಕ. ನನಗೆ ತಿಳಿಯಲಾರದೋ ಏನೋ. ನಗರದ ಹರಟೆ ನನ್ನ ಕಿವಿಗಳನ್ನು ಇರಿಯುತ್ತದೆ. ಕೋಗಿಲೆಯ ಕುಹು ಕುಹೂರವವನ್ನಾಗಲಿ ಇರುಳ ವೇಳೆ ಕೊಳದ ಸುತ್ತ ನೆರೆದು ಅಖಂಡ ಸಂವಾದದಲ್ಲಿ ಲೀನವಾಗಿರುವ ಮಂಡೂಕಗಳ ಟ್ರೊಯ್ ಟ್ರೊಯ್ ನಾದವನ್ನಾಗಲಿ ಆಲಿಸಲಾಗದಿದ್ದರೆ ಬದುಕಿನಲ್ಲಿ ಉಳಿದುದೇನು?

ಕಾಲಪುರುಷ: ಇಪ್ಪತ್ತನೆಯ ಶತಮಾನ! ನೀನು ಇನ್ನೂ ಎರಡು ಕಾರಣ ಹೇಳಿರುವೆಯಲ್ಲವೇ?

ಇಪ್ಪತ್ತನೆಯ ಶತಮಾನ: ಹೌದು – ಪರಿಸರ ಮಾಲಿನ್ಯ ಮತ್ತು ಶಕ್ತಿಬಿಕ್ಕಟ್ಟು.

ಕಾಲಪುರುಷ: ಅರಣ್ಯ ನಾಶ, ಪರಿಸರ ಮಾಲಿನ್ಯ, ಶಕ್ತಿಬಿಕ್ಕಟ್ಟು ಇವು ಪರಸ್ಪರ ಸಂಬಂಧಿಗಳಾಗಿದ್ದು ಮಾನವನನ್ನು ಒಂದು ವಿಷವರ್ತುಲದೊಳಗೆ ಬಂಧಿಸಿಟ್ಟಿವೆ. ಇಲ್ಲಿ ಶಕ್ತಿಬಿಕ್ಕಟ್ಟು ಪ್ರಧಾನ ಸಮಸ್ಯೆ. ಏಕೆಂದರೆ ಏರುತ್ತಿರುವ ಜೀವನಮಟ್ಟ ಎತ್ತಿ ಹಿಡಿಯಲು ತಂತ್ರವಿದ್ಯೆ ಹೊಸ ಹಾದಿ ಅರಸುತ್ತಲೇ ಇರಬೇಕಾಗುತ್ತದೆ. ತಂತ್ರವಿದ್ಯೆಯ ಅಭಿವರ್ಧನ ಎಂದರೆ ಕಚ್ಚಾ ಸಾಮಗ್ರಿಗಳ ಪೂರೈಕೆ ಮತ್ತು ಅಧಿಕ ಶಕ್ತಿಯ ಬೇಡಿಕೆ. ಇವನ್ನು ತೃಪ್ತಿಪಡಿಸಲು ಕಾಡು ಕಡಿಯದೆ ವಿಧಿ ಇಲ್ಲ. ಜಲವಿದ್ಯುದ್ಯೋಜನೆಗಳೂ ಸಾಕಷ್ಟು ಅರಣ್ಯ ನಾಶಕ್ಕೆ ಕಾರಣವಾಗಿವೆ. ಪರಿಸರಮಾಲಿನ್ಯ ಈ ಕುಕೃತ್ಯಗಳ ಸಹಜ ವಿಷಫಲ, ಮಾನವಕೃತ ಹಾಲಾಹಲ.

ಇಪ್ಪತ್ತನೆಯ ಶತಮಾನ: ಹಾಗೆ ಬಾ ಕಾಲಪುರುಷ! ನಾನು ಹೇಳುತ್ತಿರುವುದೂ ಇದನ್ನೇ. ಈ ವಿಷಚಕ್ರವ್ಯೂಹದಿಂದ ಮಾನವ ಹೊರಗೆ ಬರಲಾರ.

ಕಾಲಪುರುಷ: ಇಲ್ಲ, ಇಲ್ಲ. ಶಕ್ತಿಮೂಲಗಳನ್ನು ಅನ್ವೇಷಿಸುವ ದಿಶೆಯಲ್ಲಿ ಮಾನವ ನಡೆದು ಬಂದ ಹಾದಿ ನೋಡಿದರೆ ಹೀಗಾಗಬೇಕಿಲ್ಲ ಅನ್ನಿಸುತ್ತದೆ. ಆರಂಭದಲ್ಲಿ ಸ್ವಂತ ಸ್ನಾಯುಬಲ ಮಾತ್ರ ಅವನಿಗೆ ಲಭ್ಯವಿತ್ತು. ಇದಕ್ಕೆ ಸಾಕುಪ್ರಾಣಿಗಳ ಸೇರ್ಪಡೆ ಅಧಿಕ ತ್ರಾಣ ಒದಗಿಸಿತು. ಮುಂದೆ ಬೆಂಕಿ ಹೊತ್ತಿಸಲು ಕಲಿತಾಗ ತಂತ್ರವಿದ್ಯೆ ಅಂಬೆಗಾಲಿಟ್ಟಿತು. ಅದಕ್ಕೆ ಉರುವಲು ಮರ, ಕ್ರಮೇಣ ಕಲ್ಲಿದ್ದಲು, ಡಾಂಬರು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಉರುವಲುಗಳಾಗಿ ಒದಗಿದಂತೆ ತಂತ್ರವಿದ್ಯೆ ಹಿರಿ ಹೆಜ್ಜೆ ಇಟ್ಟು ಮುನ್ನೆಗೆಯಿತು.

ಇಪ್ಪತ್ತನೆಯ ಶತಮಾನ: ನಿಜ, ಇಂದು ಪೆಟ್ರೋಲಿಯಮ್ ನಾಗರಿಕಜೀವನದ ಅವಿಭಾಜ್ಯ ಅಂಗವಾಗಿದೆ.

ಕಾಲಪುರುಷ: ಆದರೆ ಮಾನವ ಭೂಗರ್ಭದಿಂದ ಬಸಿಯುತ್ತಿರುವ ಮತ್ತು ಪುನರುಪಯುಕ್ತಶೀಲವಲ್ಲದ ಈ ಫಾಸಿಲ್ ಇಂಧನ ಬೇಗನೇ ಬತ್ತಿ ಹೋಗಲಿದೆ.

ಇಪ್ಪತ್ತನೆಯ ಶತಮಾನ: ಶಕ್ತಿಬಿಕ್ಕಟ್ಟಿನ ಮೂಲವೇ ಇದು.

ಕಾಲಪುರುಷ: ಇದರ ಅರ್ಥ ಮಾನವ ಈಗ ನವಶಕ್ತಿಮೂಲಗಳತ್ತ ದೃಷ್ಟಿ ಹಾಯಿಸಬೇಕು ಎಂದು. ಹಾಗೆ ಮಾಡುವ ಸಾಮರ್ಥ್ಯ ಅವನಿಗಿದೆ. ಪರಿಸ್ಥಿತಿಯೂ ಇದನ್ನು ಒತ್ತಾಯಿಸುತ್ತಿದೆ.

ಇಪ್ಪತ್ತನೆಯ ಶತಮಾಮ: ಆ ದಿಶೆಯಲ್ಲಿ ಏನು ನಡೆದಿದೆ?

ಕಾಲಪುರುಷ: ಬೈಜಿಕ ಶಕ್ತಿಯನ್ನು ೧೯೪೫ರಲ್ಲಿ, ನಾಶಕಾರ್ಯಕ್ಕೆ ಆದರೂ, ಪ್ರಯೋಗಿಸಿದಾಗ ಶಕ್ತಿಯ ಹೊಸ ನೆಲೆಯೊಂದು ಮಾನವನ ವಶವಾದಂತಾಯಿತು.

ಇಪ್ಪತ್ತನೆಯ ಶತಮಾನ: ಆದರೆ ಬೈಜಿಕ ಶಕ್ತಿಯ ಉಪಯೋಗ ರೋಗಕ್ಕಿಂತ ಔಷಧಿಯೇ ಅಧಿಕ ಅಪಾಯಕಾರಿ ಎಂಬಂತಾಗಿದೆಯಲ್ಲ?

ಕಾಲಪುರುಷ: ಸದ್ಯಕ್ಕೆ ಇದು ನಿಜ. ಈ ಔಷಧಿ ಬಲು ದುಬಾರಿ ವೆಚ್ಚದ್ದು ಮಾತ್ರವೇ ಅಲ್ಲ, ತೀವ್ರ ಪರಿಸರಮಾಲಿನ್ಯಕ್ಕೆ ಕಾರಣವೂ ಆಗಿದೆ. ಇದರ ತಂತ್ರವಿದ್ಯೆಯಲ್ಲಿ ಸುಧಾರಣೆ ಆದಂತೆ ಅಗ್ಗದರದಲ್ಲಿ ಅಕಲುಷಿತ ಬೈಜಿಕ ಶಕ್ತಿಯ ಉತ್ಪಾದನೆ ಮಾನವನಿಗೆ ಸಿದ್ಧಿಸುತ್ತದೆ. ಸಂಲಯನ ಜ್ವಾಲೆ ಎಂಬ ಹೆಸರು ಕೇಳಿರುವೆಯಷ್ಟೆ?

ಇಪ್ಪತ್ತನೆಯ ಶತಮಾನ: ಹೌದು ಪರಮಾಣುಗಳನ್ನು ಬೆಸೆಯಲು ಬಳಸುವ ತೀವ್ರ ಮತ್ತು ತೀಕ್ಷ್ಣ ಉಷ್ಣತೆಯ ಜ್ಯೋತಿಕೂರ್ಚ.

ಕಾಲಪುರುಷ: ಸರಿಯಾದ ವಿವರಣೆ. ಈ ಜ್ವಾಲೆಗೆ ಉರುವಲಾಗಿ ಮರಳ ಹರಳುಗಳನ್ನು ಒಡ್ಡಿದಾಗ ಅವು ಬೆಸೆದುಕೊಂಡು ಸಂಯುಕ್ತ ಮೈದಳೆಯುತ್ತದೆ. ಅದೇ ವೇಳೆ ಅಲ್ಪ ವಸ್ತು ನಷ್ಟವಾಗಿರುತ್ತದೆ. ಇದು ಅಗಾಧ ಶಕ್ತಿಯಾಗಿ ಪ್ರವಹಿಸಿ ಮಾನವೋಪಯೋಗಕ್ಕೆ ಲಭ್ಯವಾಗುತ್ತದೆ.

ಇಪ್ಪತ್ತನೆಯ ಶತಮಾನ: ಹೈಡ್ರೋಜನ್ ಬಾಂಬಿನ ತತ್ತ್ವ ಇದೇ ಅಲ್ಲವೇ?

ಕಾಲಪುರುಷ: ಹೌದು. ಅಲ್ಲಿ ಹೈಡ್ರೋಜನ್ ಉರುವಲು, ಇಲ್ಲಿ ಮರಳು ಉರುವಲು.

ಇಪ್ಪತ್ತನೆಯ ಶತಮಾನ: ಮರಳು ಹಿಂಡಿ ಶಕ್ತಿ ಬಸಿವ ತಂತ್ರವಿದು. ಇದಲ್ಲದೇ ಬೇರೆ ಯಾವ ಮೂಲದಿಂದ ಶಕ್ತಿ ಒದಗೀತು?

ಕಾಲಪುರುಷ: ಕಡಲ ಅಲೆಗಳಲ್ಲಿ ಪ್ರಕಟವಾಗುವ ಚಲನಶಕ್ತಿ, ಭೂಗರ್ಭದಲ್ಲಿ ಸಂಚಿತವಾಗಿರುವ ಶಾಖಶಕ್ತಿ, ಮತ್ತು ಮಾರುತ ಒಳಗೊಂಡಿರುವ ಚಲನಶಕ್ತಿ. ಆದರೆ ಇವೆಲ್ಲ ಮೂಲಗಳಿಗಿಂತ ತೀವ್ರ, ಸುಲಭ ಮತ್ತು ಸತತವಾದದ್ದು ಸೌರಶಕ್ತಿ.

ಇಪ್ಪತ್ತನೆಯ ಶತಮಾನ: ಏನಂದೆ ಕಾಲಪುರುಷ? ಸಾಕ್ಷಾತ್ ನೇಸರಿಗೇ ಲಗ್ಗೆ ಹಾಕುವುದೇ?

ಕಾಲಪುರುಷ: ಚೆನ್ನಾಗಿ ಊಹಿಸಿದೆ ಮಿತ್ರ! ಭೂಮಿಯಲ್ಲಿಯ ಎಲ್ಲ ಶಕ್ತಿಗಳ ಮೂಲವೂ ಸೂರ್ಯನೇ. ಏಕೆಂದರೆ ಪೆಟ್ರೋಲಿಯಮ್ ಉತ್ಪನ್ನಗಳು, ಗಿಡ, ಮರ ಎಲ್ಲವೂ ಘನೀಭವಿತ ಸೌರಶಕ್ತಿ, ಸುಡುವ ಬಿಸಿಲು, ಬೀಸುವ ಗಾಳಿ, ಹರಿಯುವ ಹೊಳೆ, ಸುರಿಯುವ ಮಳೆ ಕೂಡ ಸೌರಶಕ್ತಿಯ ವಿವಿಧ ರೂಪಗಳು. ಹಲವು ಲಕ್ಷ ವರ್ಷಗಳಿಂದ ಸೂರ್ಯ ಏಕಪ್ರಕಾರವಾಗಿ, ಸತತವಾಗಿ ಮತ್ತು ವಿಪುಳವಾಗಿ ಈ ಶಕ್ತಿಯನ್ನು ಭೂಮಿಯ ಮೇಲೆ ಸುರಿಯುತ್ತಲೇ ಇದೆ. ಸೂರ್ಯಸ್ತುತಿಯನ್ನು ಮುತ್ತುಸ್ವಾಮಿ ದೀಕ್ಷಿತರು ಮಾಡಿರುವ ಪರಿ ಕೇಳು:
ರಾಗ ಸೌರಾಷ್ಟ್ರ, ತಾಳ ಚತುರಶ್ರ ಜಾತಿ ಧ್ರುವ ಸೂರ್ಯಮೂರ್ತೇ ನಮೋಸ್ತುತೇ ಸುಂದರಚ್ಛಾಯಾಧಿಪತೇ |ಪ|ಕಾರ್ಯಕಾರಣಾತ್ಮಕ ಜಗತ್ಪ್ರಕಾಶ ಸಿಂಹಾರಾಶ್ಯಾಧಿಪತೇಆರ್ಯವಿನುತ ತೇಜಸ್ಫೂರ್ತೇ ಆರೋಗ್ಯಾದಿ ಫಲದಕೀರ್ತೇ |ಅಪ|ಸಾರಸಮಿತ್ರ ಮಿತ್ರಭಾನೋ ಸಹಸ್ರಕಿರಣ ಕರ್ಣಸೂನೋಕ್ರೂರ ಪಾಪಹರ ಕೃಶಾನೋ ಗುರುಗುಹಮೋದಿತ ಸ್ವಭಾನೋಸೂರಿಜನೇಡಿತ ಸುದಿನಮಣೀ ಸೋಮಾದಿಗ್ರಹ ಶಿಖಾಮಣೀಧೀರಾರ್ಚಿತ ಕರ್ಮಸಾಕ್ಷಿಣೀ ದಿವ್ಯತರ ಸಪ್ತಾಶ್ವ ರಥಿನೇಸೌರಾಷ್ಟ್ರಾರ್ಣ ಮಂತ್ರಾತ್ಮನೇ ಸೌವರ್ಣಸ್ವರೂಪಾತ್ಮನೇಭಾರತೀಶಹರಿಹರಾತ್ಮನೇ ಭಕ್ತಿಮುಕ್ತಿ ವಿತರಣಾತ್ಮನೇ
ಇಪ್ಪತ್ತನೆಯ ಶತಮಾನ: ನಿಜಕ್ಕೂ ಸೌರಶಕ್ತಿಯ ಕಡಲಿನಲ್ಲಿ ತೇಲುತ್ತಿರುವ ಬೆಂಡು ಈ ಭೂಮಿ ಅಲ್ಲವೇ?

ಕಾಲಪುರುಷ: ಹಾಗೆನ್ನಬಹುದು. ಸೌರಶಕ್ತಿ ಹುಚ್ಚು ಹೊಳೆಯಂತೆ – ಅಪಾರಶಕ್ತಿಯ ಅಖಂಡ ಹರಿವು. ತುಂಬು ಹೊನಲಿಗೆ ಕಟ್ಟೆ ಕಟ್ಟಿ ಜಲಾಶಯ ನಿರ್ಮಿಸಿ ಅಲ್ಲಿ ಸಂಚಯವಾಗುವ ವಿಭವಶಕ್ತಿ ಬಳಸಿ ವಿದ್ಯುಚ್ಛಕ್ತಿ ಉತ್ಪಾದಿಸಿ ನಾಗರಿಕತೆಯ ಗಾಲಿಗಳನ್ನು ಉರುಳಿಸುತ್ತಿರುವುದು ಸರಿಯಷ್ಟೆ. ಅದೇ ಪ್ರಕಾರ ಸೌರಶಕ್ತಿಗೆ ಕಟ್ಟೆಹಾಕಿ ಉದ್ದಿಷ್ಟ ಕಾರ್ಯದತ್ತ ಹರಿಸುವ ಇಂದಿನ ಪ್ರಯತ್ನ ಶೀಘ್ರವಾಗಿ ಫಲಿಸಿ ಮುಂದಿನ ಶತಮಾನದಲ್ಲಿ ಚಾಲ್ತಿಗೆ ಬರಲಿದೆ.

ಇಪ್ಪತ್ತನೆಯ ಶತಮಾನ: ಹೇಗೆ?

ಕಾಲಪುರುಷ: ವಾಯುಮಂಡಲದ ಆಚೆಗಿನ ನಿರ್ದ್ರವ್ಯ ಆಕಾಶದಲ್ಲಿ ಭೂಮಿಯನ್ನು ಸತತವಾಗಿ ಪರಿಭ್ರಮಿಸುತ್ತಿರುವಂತೆ ಕೃತಕ ಉಪಗ್ರಹಗಳ ಸರಣಿ ನಿಯೋಜಿತವಾಗಿರುವುದು. ಸೌರಶಕ್ತಿ ಸಮುದ್ರದಲ್ಲಿ ವಿಹರಿಸುವ ಪ್ರಯೋಗ ನೌಕೆಗಳಿವು. ಸದಾ ಸೂರ್ಯನೆಡೆಗೆ ತೆರೆದುಕೊಂಡಿರುವ ಶಕ್ತಿಸಂಗ್ರಾಹಕ ಫಲಕಗಳನ್ನು ಇವುಗಳಲ್ಲಿ ಅಳವಡಿಸಲಾಗುವುದು.

ಇಪ್ಪತ್ತನೆಯ ಶತಮಾನ: ಆ ಪ್ರವಾಹದಿಂದ ಶಕ್ತಿ ಗೋಚುವುದು ಇವುಗಳ ಹೊಣೆ?

ಕಾಲಪುರುಷ: ಹೌದು. ಬಟ್ಟಲಿನಾಕಾರದ ಇವು ನಿಜಕ್ಕೂ ಗೋಚುವ ಕೆಲಸವನ್ನೇ ಮಾಡುವುದಾಗಿದೆ. ಹೀಗೆ ಸಂಗ್ರಹಿಸಿದ ಶಕ್ತಿಯನ್ನು ಅಲ್ಲಿಯೇ ಸೂಕ್ಷ್ಮತರಂಗಗಳಾಗಿ ಪರಿವರ್ತಿಸಲಾಗುವುದು – ಬಿಸಿಲನ್ನು ವಿದ್ಯುತ್ತಾಗಿ ಅಥವಾ ವಿದ್ಯುತ್ತನ್ನು ಶಾಖವಾಗಿ ಮಾರ್ಪಡಿಸುವುದಿಲ್ಲವೇ, ಹಾಗೆ. ಸೂಕ್ಷ್ಮ ತರಂಗಗಳ ಅತಿಶಕ್ತಿಯುತ ದೂಲಗಳನ್ನು ಭೂಮಿಯಲ್ಲಿಯ ನಿಯೋಜಿತ ಗ್ರಾಹಕ ಠಾಣೆಗಳಿಗೆ ಬೀರಲಾಗುವುದು – ಬಿಸಿಲಿಗೆ ಕನ್ನಡಿ ಒಡ್ಡಿ ಪ್ರತಿಫಲಿತ ಕಂಬಿಯನ್ನು ಕೋಣೆಯೊಳಕ್ಕೆ ತೂರುವಂತೆ.

ಇಪ್ಪತ್ತನೆಯ ಶತಮಾನ: ಈ ಠಾಣೆಗಳು ದೂಲಗಳನ್ನು ಸ್ವೀಕರಿಸುತ್ತವೆ. ಬಳಿಕ?

ಕಾಲಪುರುಷ: ಒಡನೆ ಅವನ್ನು ವಿದ್ಯುತ್ತಾಗಿ ಪರಿವರ್ತಿಸಿ ಸಾರ್ವಜನಿಕ ವಿದ್ಯುಜ್ಜಾಲಕ್ಕೆ ಊಡುತ್ತವೆ.

ಇಪ್ಪತ್ತನೆಯ ಶತಮಾನ: ಅಲ್ಲಿಗೆ ಮಾಲಿನ್ಯ ಶೂನ್ಯ ಶಕ್ತಿಯ ಸಂತತ ಪ್ರವಾಹ ಒದಗುವುದೆಂದಾಯಿತು. ಇನ್ನೂ ಬೇರೆ ಶಕ್ತಿ ಮೂಲಗಳಿವೆಯೇ?

ಕಾಲಪುರುಷ: ಧಾರಾಳವಾಗಿ. ಉದಾಹರಣೆಗೆ ಕ್ಷುದ್ರಗ್ರಹಗಳ ಹೊನಲಿನಿಂದ ಶಕ್ತಿ ಬಸಿಯಬಹುದು. ಇಡೀ ವಿಶ್ವವನ್ನು ನೇಯ್ದು ಆಕಾಶಕಾಯಗಳ ಕಕ್ಷೆಯನ್ನು ನಿರ್ಧರಿಸುವ ಗುರುತ್ವಬಲವನ್ನು ಪಳಗಿಸಬಹುದು. ದ್ರವ್ಯ ಮತ್ತು ಪ್ರತಿದ್ರವ್ಯ ಸಂಘಟ್ಟಣೆಯಿಂದ ಅಗಾಧ ಶಕ್ತಿಯನ್ನು ಉತ್ಪಾದಿಸಬಹುದು. ಆದರೆ ಇವೆಲ್ಲ ಅತಿ ದೂರದ ಭವಿಷ್ಯದಲ್ಲಿ ಸಾಧ್ಯವಾಗಬಹುದಾದ ಸಾಹಸಗಳು. ಅದಿರಲಿ ಸದ್ಯೋಭವಿಷ್ಯದಲ್ಲಿ ಶಕ್ತಿ ಬಿಕ್ಕಟ್ಟು ಸೌರಶಕ್ತಿಯ ಬಸಿತದಿಂದ ಪರಿಹಾರವಾಗುವುದು ದಿಟ.

ಇಪ್ಪತ್ತನೆಯ ಶತಮಾನ: ಉಳಿದ ಸಮಸ್ಯೆಗಳೆಲ್ಲವೂ ಆಗ ತಾವಾಗಿಯೇ ಮಾಯವಾಗುತ್ತವೆ ಎಂಬುದು ತಾನೇ ನಿನ್ನ ವಾದ?

ಕಾಲಪುರುಷ: ಅದೇ.

ಇಪ್ಪತ್ತನೆಯ ಶತಮಾನ: ಹಾಗಾದರೆ ಬರಲಿರುವ ದಿನಗಳಲ್ಲಿ ಬದುಕು ಹೇಗಿರಬಹುದು?

ಕಾಲಪುರುಷ: ತಾಳು ಅಂಬಿಕಾತನಯದತ್ತರ ಕವನ ಹಾಡಿ ನಿನ್ನ ತಮ್ಮ ಇಪ್ಪತ್ತೊಂದನೆಯ ಶತಮಾನವನ್ನು ಕಾಲ್ಪನಿಕವಾಗಿ ಆವಾಹಿಸುತ್ತೇನೆ. ಅವನೇ ಹೇಳಲಿ:
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸಾಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸಾ | ಭೃಂಗದ |ಗಾಳಿಯೊಡನೆ ತಿಳ್ಳಿಯಾಡುತಾಡುತದರ ಓಟಾದಿಕ್ತಟಗಳ ಹಾಯುತ್ತಿತ್ತು ಅದರ ಬಿದಿಗೆ ನೋಟಾನಕ್ಕು ನಗುವ ಚಿಕ್ಕೆಯೊಡನೆ ಬೆಳೆಸುತ್ತಿತ್ತು ಕೂಟಾ |ಭೃಂಗದ|
ಇಪ್ಪತ್ತೊಂದನೆಯ ಶತಮಾನ: ನಾನು ಇಪ್ಪತ್ತೊಂದನೆಯ ಶತಮಾನ, ಕಾಲಪುರುಷ! ನನ್ನ ಕಾಲಕ್ಕೆ ಮೊದಲೇ ನನ್ನನ್ನೇಕೆ ರಂಗ ಪ್ರವೇಶಿಸುವಂತೆ ಮಾಡಿದೆ?

ಕಾಲಪುರುಷ: ಮಿತ್ರ! ನಿನ್ನ ಜೀವಿತಾವಧಿಯಲ್ಲಿ ಮಾನವಜೀವನ ಹೇಗಿರುತ್ತದೆ? ಕೊಂಚ ವಿವರಿಸುವೆಯಾ?

ಇಪ್ಪತ್ತೊಂದನೆಯ ಶತಮಾನ: ವರ್ತಮಾನ ಕಾಲದಲ್ಲಿ ಮಾನವನ ಎದುರು ಎರಡು ಸ್ಪಷ್ಟ ಮಾರ್ಗಗಳು ತೆರೆದುಕೊಂಡಿವೆ. ನಾಳಿನ ಪೀಳಿಗೆಯ ಬಗ್ಗೆ ಒಂದಿಷ್ಟೂ ಚಿಂತಿಸದೆ ಅನುಭೋಗಾತಿರೇಕತ್ವದ ದಾಸನಾಗಿ ವಿನಾಶಮಾರ್ಗಗಾಮಿ ಆಗುವುದು ಒಂದು ಮಾರ್ಗ. ಜನಸಂಖ್ಯೆಯಲ್ಲಿ ಅತಿ ವೃದ್ಧಿ, ಪರಿಸರಮಾಲಿನ್ಯ, ಪರಮಾಣುಯುದ್ಧ ಮುಂತಾದ ಪಿಡುಗುಗಳತ್ತ ಅತಿ ವೇಗದಿಂದ ಧಾವಿಸುವ ಈ ಹಾದಿಯಲ್ಲಿ ಆತ ಹೋದದ್ದಾದರೆ ನನ್ನ ದಿನಗಳಲ್ಲಿ ಮಾನವ ಸಂತತಿ ನಶಿಸಿಹೋಗುವ ಅಪಾಯವಿದೆ.

ಕಾಲಪುರುಷ: ಎರಡನೆಯ ಮಾರ್ಗ ಯಾವುದು?

ಇಪ್ಪತ್ತೊಂದನೆಯ ಶತಮಾನ: ಈಗ ಲಭ್ಯವಿರುವ ಜ್ಞಾನವನ್ನು ಜನಹಿತಕ್ಕೋಸ್ಕರ ಬಳಸುವ ವಿವೇಕಮಾರ್ಗಗಾಮಿ ಆಗುವುದು.

ಕಾಲಪುರುಷ: ಇದು ಹೇಗೆ ಸಾಧ್ಯವಾದೀತು?

ಇಪ್ಪತ್ತೊಂದನೆಯ ಶತಮಾನ: ಮಾನವ ನಾಲ್ಕು ಅಪಾಯಗಳ ಎದುರು ವಿಶೇಷ ಎಚ್ಚರಿಕೆ ವಹಿಸುವುದರಿಂದ ಸಾಧ್ಯವಾದೀತು. ಒಂದನೆಯದು ಜನಸಂಖ್ಯೆ ಇನ್ನು ಮುಂದೆ ಏರದಂತೆ ಅದಕ್ಕೆ ತಡೆ ಹಾಕಲೇಬೇಕು. ಎರಡನೆಯದು ನಗರಗಳ ವಿಕೇಂದ್ರೀಕರಣ ಜರೂರಾಗಿ ಸಾಧಿಸಬೇಕು. ಮೂರನೆಯದು ಶಕ್ತಿ ಪಡೆಯಲು ಸೌರಶಕ್ತಿಯಂಥ ಬಾಹ್ಯ ಹಾಗೂ ನಿರ್ಮಲ ಮೂಲಗಳನ್ನು ಅವಲಂಬಿಸಬೇಕು. ನಾಲ್ಕನೆಯದು ಪ್ರಾದೇಶಿಕ ಅಸಮತೆಗಳನ್ನು ನಿರ್ಮೂಲಿಸಲೇಬೇಕು.

ಕಾಲಪುರುಷ: ಅಂದರೆ ಭೂಮಿ ಒಂದು ಸೀಮಿತ ಕುಟುಂಬ. ಇದರಲ್ಲಿಯ ಯಾವುದೇ ಪ್ರದೇಶ ಅನಾರೋಗ್ಯಪೀಡಿತವಾಗಿದ್ದರೆ ಅದರ ಸೋಂಕು ಇಡೀ ಗ್ರಹಕ್ಕೆ ತಾಗದಿರದು ಎಂಬ ಅರಿವು ಮೂಡಿ ತದನುಗುಣವಾಗಿ ಮಾನವ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಾನೇ ನಿನ್ನ ಆಶಯ?

ಇಪ್ಪತ್ತೊಂದನೆಯ ಶತಮಾನ: ಹೌದು ಅದೇ!

ಕಾಲಪುರುಷ: ಈ ಹಾದಿಯನ್ನು ಆತ ಹಿಡಿಯುವನೆಂದು ನನಗೆ ಭರವಸೆ ಉಂಟು. ಆಗ ಅಂದಿನ ಪ್ರಪಂಚ ಹೇಗಿರುವುದು?

ಇಪ್ಪತ್ತೊಂದನೆಯೆ ಶತಮಾನ: ಮನುಷ್ಯರು ಭೂಮಿಯ ಮೇಲಿನ ವಾಸಯೋಗ್ಯ ಪ್ರದೇಶಗಳಲ್ಲೆಲ್ಲ ವಿರಳವಾಗಿ ಹರಡಿ ಹೋಗಿರುತ್ತಾರೆ. ಕೆಲವೇ ಎಡೆಗಳಲ್ಲಿ ದಟ್ಟೈಸಿಕೊಂಡಿರುವುದಿಲ್ಲ. ಅವರ ಸಂಪರ್ಕ ಸಮಸ್ಯೆಗಳೆಲ್ಲವನ್ನೂ ಎಲೆಕ್ಟ್ರಾನಿಕ್ ಉಪಕರಣಗಳು ಪರಿಹರಿಸಿರುತ್ತವೆ.

ಕಾಲಪುರುಷ: ಹೇಗೆ?

ಇಪ್ಪತ್ತೊಂದನೆಯ ಶತಮಾನ: ಉದಾಹರಣೆಗೆ ಮಡಿಕೇರಿ ನಿವಾಸಿ ರಾಘವೇಂದ್ರ ನ್ಯೂಯಾರ್ಕ್ ನಾಗರಿಕ ಆನಂದವರ್ಧನನ ಜೊತೆ ನೇರ ದೂರವಾಣಿ ಮೂಲಕ ಆಗಲೇ ಮಾತಾಡಬಹುದು. ಜಪಾನಿನಲ್ಲಿರುವ ಮಿತ್ರ ವೆಂಕಟರಮಣನ ಮನೆಯಲ್ಲಿ ಜರಗುವ ಸಮಾರಂಭವನ್ನು ದೂರದರ್ಶನ ತೆರೆಯ ಮೇಲೆ ನೋಡಿ ಮತ್ತು ಕೇಳಿ ಆನಂದಿಸಬಹುದು. ತನ್ನ ಪ್ರತಿಕ್ರಿಯೆಯನ್ನು ಒಡನೆ ಆತನಿಗೆ ತಿಳಿಸಬಹುದು ಕೂಡ. ವೈದ್ಯಕೀಯ ಸೇವೆ, ಶೈಕ್ಷಣಿಕ ಸಲಹೆ, ಮಾರುಕಟ್ಟೆ ವ್ಯವಹಾರ ಮುಂತಾದ ದೈನಂದಿನ ಚಟುವಟಿಕೆಗಳನ್ನು ಸ್ವಯಂಚಲಿಗಳ ಬಳಕೆಯಿಂದ ಆಗಿಂದಾಗಲೇ ನಿರ್ವಹಿಸಬಹುದು.

ಕಾಲಪುರುಷ: ಇವೆಲ್ಲ ಕುಳಿತಲ್ಲೇ ಆಗುವಂಥವು. ಇರಲಿ, ಸಾರಿಗೆ ವ್ಯವಸ್ಥೆ ಹೇಗಿರುತ್ತದೆ?

ಇಪ್ಪತ್ತೊಂದನೆಯ ಶತಮಾನ: ಇಂದು ಬಸ್, ರೈಲು, ವಿಮಾನ, ಹಡಗು ಎಂಬ ನಾಲ್ಕು ಪ್ರಮುಖ ಸಾರ್ವಜನಿಕ ಸಾರಿಗೆ ಸಾಧನಗಳಿರುವುದು ಸರಿಯಷ್ಟೆ. ನಿಗದಿಯಾದ ವೇಳಾಪಟ್ಟಿಗೆ ಅನುಗುಣವಾಗಿ ಇವು ಗೊತ್ತಾದ ಹಾದಿಗಳಲ್ಲಿ ಸಂಚರಿಸುತ್ತವೆ. ಬಿಡಿ ವ್ಯಕ್ತಿ ತದನಸಾರವಾಗಿ ತನ್ನ ಪ್ರಯಾಣ ವಿವರಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಈ ಗಳಿಗೆ ಶ್ರೀರಂಗಪಟ್ಟಣದಿಂದ ಹೊರಟು ಧರ್ಮಸ್ಥಳಕ್ಕೆ ಯಾತ್ರೆ ಹೋಗಬೇಕೆಂದು ಬಯಸಿದರೆ ಆತನ ವಿಶಿಷ್ಟ ಅಪೇಕ್ಷೆ ಪೂರೈಸುವ ಸಾರ್ವಜನಿಕ ಏರ್ಪಾಡು ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಆತ ಮೋಟಾರ್ ಕಾರನ್ನು ಆಶ್ರಯಿಸುವುದು ವಾಡಿಕೆ. ಕಾರ್ ಒಂದು ವೈಯಕ್ತಿಕ ಸಲಕರಣೆ. ಇದರ ಓಟಕ್ಕೆ ಯೋಗ್ಯ ಮಾರ್ಗ ಬೇಕು, ಸೇತುವೆಗಳಿರಬೇಕು. ಇಲ್ಲಿಯೂ ಹಾದಿ ನಡುವೆ ನೂರೆಂಟು ವಿಘ್ನಗಳು. ನನ್ನ ಕಾಲದ ಮಾನವ ನೆಲದ ಮೇಲಿನ ಈ ನಿಧಾನ ಪ್ರಯಾಣಕ್ಕೆ ಪೂರ್ಣ ವಿದಾಯ ಹೇಳಿರುತ್ತಾನೆ.

ಕಾಲಪುರುಷ: ಆತ ವಿಮಾನದಲ್ಲಿ ಹಾರಿ ಹೋಗಿ ಇಳಿಯುತ್ತಾನೆ ಎಂಬುದು ನಿನ್ನ ಇಂಗಿತವಾಗಿದ್ದರೆ ಅಲ್ಲಿ ನೂರೆಂಟು ಅಲ್ಲ ಸಾವಿರಾರು ಅಡ್ಡಿ ಅಡಚಣೆಗಳು ಎದುರಾಗುವುದು ಖಂಡಿತ.

ಇಪ್ಪತ್ತೊಂದನೆಯ ಶತಮಾನ: ಅವು ಯಾವುವೂ ಇಲ್ಲದಿರುವುದೇ ಇಲ್ಲಿಯ ಸ್ವಾರಸ್ಯ. ಇಂದಿನವನಿಗೆ ಕಾರ್ ಹೇಗೋ ಅಂದಿನವನಿಗೆ ಕುಪ್ಪಳಿ ವಿಮಾನ ಹಾಗೆ. ಇದೊಂದು ಕೌಟುಂಬಿಕ ಅಥವಾ ಖಾಸಾ ವೈಯಕ್ತಿಕ ಸಾರಿಗೆ ಸಾಧನ.

ಕಾಲಪುರುಷ: ಕುಪ್ಪಳಿ ವಿಮಾನವೆಂದರೇನು?

ಇಪ್ಪತ್ತೊಂದನೆಯ ಶತಮಾನ: ಅದು ನಿಂತಲ್ಲಿಂದ ನೇರ ಮೇಲಕ್ಕೆ ನೆಗೆಯುತ್ತದೆ. ಅದರಲ್ಲಿ ಬಳಕೆ ಆಗುವುದು ರಾಕೆಟ್ ತಂತ್ರ. ಮುಕ್ತ ವಾಯುಮಂಡಲದಲ್ಲಿ ಅದರ ಸಂಚಾರ. ಪಥ ನಿಯಂತ್ರಣವನ್ನು ಗಣಕ ನಿರ್ವಹಿಸುತ್ತದೆ. ವೈಮಾನಿಕ ಇಚ್ಛಿಸುವಲ್ಲಿ ಅದು ನೇರ ಇಳಿಯುತ್ತದೆ.

ಕಾಲಪುರುಷ: ಅಂದಮೇಲೆ ವಿಮಾನ ನಿಲ್ದಾಣ, ಓಡುದಾರಿ ಮುಂತಾದ ಭಾರೀ ಏರ್ಪಾಡುಗಳು…

ಇಪ್ಪತ್ತೊಂದನೆಯ ಶತಮಾನ: ಎಲ್ಲವೂ ಗತಶತಮಾನದ ಭವ್ಯಸ್ಮಾರಕಗಳು. ಇನ್ನೂ ಸುಧಾರಿಸಿದ ಮತ್ತು ಬಲಿಷ್ಠವಾದ ಕುಪ್ಪಳಿವಿಮಾನ ಏರಿ, ವಾಯುಮಂಡಲಾತೀತ ಆಕಾಶದಲ್ಲಿ ನಿತ್ಯ ಸಂಚಾರಿಗಳಾಗಿರುವ ಕೃತಕೋಪಗ್ರಹಗಳ ಮೇಲೆ ಇಳಿಯಬಹುದು. ಇವು ಅಂತರಿಕ್ಷ ವೇದಿಕೆಗಳು. ಬೇರೆ ಬೇರೆ ಎತ್ತರಗಳಿರುವ ಇಂಥ ಹಲವಾರು ವೇದಿಕೆಗಳನ್ನು ಸರದಿಯಲ್ಲಿ ಜಿಗಿಹಲಗೆಗಳಾಗಿ ಬಳಸಿಕೊಂಡು ಚಂದ್ರಲೋಕಕ್ಕೆ ಹೋಗಿ ಮರಳುವುದು ನನ್ನ ಕಾಲದಲ್ಲಿ ಕೈಗೂಡುತ್ತದೆ. ವಾಸ್ತವಾಗಿ ಆಗ ಚಂದ್ರಲೋಕ ಮಾನವನ ನೆರೆ ವಸಾಹತಾಗಿ ನಳನಳಿಸಿರುತ್ತದೆ. ಆತ ಮುಂದೆ ಕೈಗೊಳ್ಳಲಿರುವ ವಿಶ್ವ ಪರ್ಯಟನೆಯಲ್ಲಿ ಇದು ಮೊದಲ ತಾಂಡೆ.

ಇಪ್ಪತ್ತನೆಯ ಶತಮಾನ: ಆಗ ಜೀವನ ಹೇಗಿರುವುದೋ!

ಇಪ್ಪತ್ತೊಂದನೆಯ ಶತಮಾನ: ಅಣ್ಣಾ! ನಿನ್ನ ಇಂಗಿತ ನನಗೆ ತಿಳಿಯಿತು. ಆದರೆ ನಿನ್ನ ಕಾಲದಲ್ಲಿಯ ಸಮಸ್ಯೆಗಳ ಮುಖ್ಯ ಕಾರಣ ಏನು ಗೊತ್ತೇ? ಅಮಿತ ಮುಸುಡುಗಳು ಮಿತ ಕವಳವನ್ನು ಮುಕ್ಕಲು ನಡೆಸುವ ಹೋರಾಟ. ನನ್ನ ಕಾಲದಲ್ಲಿ ಈ ಸನ್ನಿವೇಶ ಪೂರ್ತಿ ಮಾಯವಾಗಿರುತ್ತದೆ. ತಳಿ ವಿಜ್ಞಾನದಲ್ಲಿ ಆಗಿರುವ ಮತ್ತು ಆಗಲಿರುವ ಮಹತ್ತ್ವದ ಶೋಧಗಳ ಪರಿಣಾಮವಾಗಿ ಭೂಮಿಯೊಂದು ಅಮರಾವತಿ ಆಗಿರುತ್ತದೆ. ಇಲ್ಲಿಯ ಮಿತಜನ ಅಮಿತ ಅವಕಾಶಗಳನ್ನು ಬಳಸಿಕೊಳ್ಳುವ ಸಾಹಸಕ್ರೀಡೆಯಲ್ಲಿ ಅಥವಾ ಉಲ್ಲಾಸ ಕ್ರೀಡೆಯಲ್ಲಿ ಉದ್ಯುಕ್ತರಾಗಿರುತ್ತಾರೆ. ವಿಶ್ವಮಾನವರಾಗುವತ್ತ ದೈತ್ಯದಾಪು ಇಟ್ಟಿರುತ್ತಾರೆ.
ಓ ನನ್ನ ಚೇತನಆಗು ನೀ ಅನಿಕೇತನ! |ಓ ನನ್ನ|ಎಲ್ಲಿಯೂ ನಿಲ್ಲದಿರುಮನೆಯನೆಂದೂ ಕಟ್ಟದಿರುಕೊನೆಯನೆಂದೂ ಮುಟ್ಟದಿರುಓ ಅನಂತವಾಗಿರು |ಓ ನನ್ನ|ಅನಂತ ತಾನ್ ಅನಂತವಾಗಿಆಗುತಿಹನೆ ನಿತ್ಯಯೋಗಿಅನಂತ ನೀ ಅನಂತವಾಗುಆಗು ಆಗು ಆಗು ಆಗು |ಓ ನನ್ನ| -ಕುವೆಂಪು ಬೆಳ್ಳಿಯ ಹಳ್ಳಿಯ ಮೇರೆಯ ಮೀರಿತಿಂಗಳಿನೂರಿನ ನೀರನು ಹೀರಿಆಡಲು ಹಾಡಲು ತಾ ಹಾರಾಡಲುಮಂಗಳಲೋಕದ ಅಂಗಳಕೇರಿಹಕ್ಕಿಹಾರುತಿದೆ ನೋಡಿದಿರಾ? ಮುಟ್ಟಿದೆ ದಿಙ್ಮಂಡಲಗಳ ಅಂಚಆಚೆಗೆ ಚಾಚಿದ ತನ್ನಯ ಚುಂಚಬ್ರಹ್ಮಾಂಡಗಳ ಒಡೆಯಲು ಎಂದೋಬಲ್ಲರು ಯಾರು ಹಾಕಿದ ಹೊಂಚಹಕ್ಕಿ ಹಾರುತಿದೆ ನೋಡಿದಿರಾ! -ಅಂಬಿಕಾತನಯದತ್ತ!

ವ್ಯಕ್ತಿ – ಪರಿಸರ ಸಂಬಂಧ ವ್ಯಷ್ಟಿ – ಸಮಷ್ಟಿ ಸಂಬಂಧದಂತೆ ಅವಿಭಾಜ್ಯ. ಆದರೆ ಒಂದು ವ್ಯತ್ಯಾಸ ವ್ಯಕ್ತಿರಹಿತ ಪರಿಸರವಿರಬಹುದು, ಪರಿಸರರಹಿತ ವ್ಯಕ್ತಿ ಇರಲಾರದು. ಜನ್ಮತಃ ವಿವೇಚನ ಸಾಮರ್ಥ್ಯಯುತನಾದ ವ್ಯಕ್ತಿ ತನ್ನ ಪ್ರತಿಯೊಂದು ಚಟುವಟಿಕೆಯೂ ಪರಿಸರ ಪೋಷಕವಾಗುವಂತೆ, ಎಂದೂ ಪರಿಸರ ಶೋಷಕವಾಗದಂತೆ, ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ಆ ಕ್ಷಣದಲ್ಲಿ ಅಥವಾ ಆ ಸ್ಥಳದಲ್ಲಿ ವ್ಯಕ್ತಿ ಹಠಾತ್ತನೆ ಎಸಗುವ ಒಂದು ಕ್ರಿಯೆ ಆತನಿಗೆ ತಾತ್‌ಕ್ಷಣಿಕ ಯಶಸ್ಸು ತರಬಹುದಾದರೂ, ಅದು ಪರಿಸರಕ್ಕೆ ಘಾತಕವಾಗುವುದಾದರೆ, ಅಂತಿಮವಾಗಿ ಸ್ವತಃ ಆತನಿಗೇ ಘಾತಕವಾಗುವುದು ನಿಸರ್ಗ ನಿಯಮ: ಬಿತ್ತಿದಂತೆ ಬೆಳೆ. ಆದ್ದರಿಂದ ಸಮಷ್ಟಿಯ ಹಿತಕ್ಕೆ ಮಾರಕವಾಗಬಲ್ಲ ಯಾವ ಕ್ರಿಯೆಯನ್ನೂ ವ್ಯಷ್ಟಿ ಮಾಡತಕ್ಕದ್ದಲ್ಲ, ಮಾಡಿದ್ದುಣ್ಣೋ ಮಹಾರಾಯ!

ಇಲ್ಲಿಗೆ ಭವಿಷ್ಯ ವಿಜ್ಞಾನ ಪುಸ್ತಕದ ಎಲ್ಲಾ ಕಂತುಗಳು ಮುಕ್ತಾಯವಾದವು.

ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿ-ಪ್ರಕಾಶನ (ಉಚಿತ)

ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣ-ಪ್ರಕಾಶನ ಮಾಧ್ಯಮದ ಹುಸಿತನಕ್ಕೆ ರೋಸಿ ಪ್ರಕಾಶನವನ್ನು ಮುಚ್ಚಿದೆ, ಅನಂತರ ಸ್ವಯಂ ನಿವೃತ್ತಿ ಘೋಷಿಸಿ ಪುಸ್ತಕ ಮಾರಾಟವನ್ನೂ ನಿಲ್ಲಿಸಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಗಂಭೀರ ಓದುಗರಿಲ್ಲ ಅಥವಾ ಸಾರ್ವತ್ರಿಕ ಉಪಯುಕ್ತವಾದ ಅನುಭವಗಳಿಗೆ ಅಭಿವ್ಯಕ್ತಿ ಮಾಧ್ಯಮವೇ ಇಲ್ಲ ಎಂದಲ್ಲ ಎನ್ನುವಂತೆ ಅಂತರ್ಜಾಲದ ಜಾಲತಾಣಗಳು, ಜಾಲಪತ್ರಿಕೆಗಳು ವಿಕಸಿಸುವುದನ್ನು ಕಾಣುತ್ತಿದ್ದೇನೆ. ಸ್ವತಃ ನನ್ನದೇ ಆದ ಈ ಜಾಲತಾಣದ (www.athreebook.com) ವ್ಯಾಪ್ತಿ ಇನ್ನೂ ಅಚಿಂತ್ಯ, ಅನಂತವಾಗಿಯೇ ಕಾಣುತ್ತಿದೆ. ಜಾಲತಾಣದ ಬಹುಮುಖೀ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ, ಕಾಲಕಾಲಕ್ಕೆ ಅವನ್ನು ನನ್ನ ಜಾಲತಾಣಕ್ಕೆ ಅಳವಡಿಸಿಕೊಡುತ್ತಲಿರುವವನು ನನ್ನ ಮಗ ಅಭಯಸಿಂಹ – ಈ ಜಾಲತಾಣದ ನಿರ್ವಾಹಕ.
ನಾನು ಜಾಲತಾಣಕ್ಕಿಳಿಯುವ ಕಾಲದಲ್ಲಿ, ಇದು ಮುದ್ರಣ ಮಾಧ್ಯಮದಲ್ಲಿ ಬಂದ ನನ್ನ ಬರಹಗಳ ವಿದ್ಯುನ್ಮಾನ ದಾಸ್ತಾನು ಕೋಠಿ ಎಂದಷ್ಟೇ ಭಾವಿಸಿದ್ದೆ. ಆದರಿಂದು ಇಲ್ಲಿನ ಇನ್ನೂರಕ್ಕೂ ಮಿಕ್ಕ ಸಚಿತ್ರ ಬರಹಗಳು, ಸಾವಿರಕ್ಕೂ ಮಿಕ್ಕು ಪ್ರತಿಕ್ರಿಯೆಗಳು, ಅಸಂಖ್ಯ ಸಂಪರ್ಕಸೇತುಗಳು, ಚಲನಚಿತ್ರ ಮತ್ತು ಧ್ವನಿದಾಖಲೆಗಳು, ಪರೋಕ್ಷವಾಗಿ ಇದರ ಪ್ರೇರಣೆಯಲ್ಲೇ ರೂಪುಗೊಳ್ಳುತ್ತಿರುವ ಪತ್ರಿಕಾ ಬರಹಗಳು, ಪುಸ್ತಕಗಳು ನಿಜ ಕನ್ನಡಕ್ಕೆ ಹೊಸದೇ ಆಯುಷ್ಯ ವಿಸ್ತರಣೆಯನ್ನು ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅತ್ರಿ ಬುಕ್ ಸೆಂಟರಿನ ಹೆಸರಿನಲ್ಲಿ ನಾನು ಐವತ್ತಕ್ಕೂ ಮಿಕ್ಕು, ಅದರಲ್ಲೂ ಮುಖ್ಯವಾಗಿ ನನ್ನ ತಂದೆ – ಜಿಟಿನಾರಾಯಣ ರಾಯರ ವಿಜ್ಞಾನ ಬರಹಗಳನ್ನು ಪ್ರಕಟಿಸಿದ್ದೆ. ಅವು ಮುಗಿಯುತ್ತ ಬಂದಂತೆ ಕಾಲನ ಅಟ್ಟಕ್ಕೆ ತಳ್ಳಿ, ಮರೆವಿನ ಹೊದಿಕೆ ಮುಚ್ಚುವುದರಲ್ಲಿದ್ದೆ. ಆಗ ಕಾಣಿಸಿದ ಸಾಧ್ಯತೆ ವಿ-ಪುಸ್ತಕ.
ಇಂದು ಮುದ್ರಿತ ಪತ್ರಿಕೆಗಳ ಜೀವಾಳ ಜಾಹೀರಾತುಗಳು ಮತ್ತು ಪ್ರಾಯೋಜಿತ ಸುದ್ದಿಗಳು. ಜಾಹೀರಾತಿನ ಎಡೆ ತುಂಬುವುದಕ್ಕೆ ಎಷ್ಟೂ ಅಂಕಣ ಬರಹಗಾರರಿದ್ದಾರೆ. ಮತ್ತೆ ಈ ಅಂಕಣ ಸಂಕಲನವೂ ಮಹಾಪ್ರಸಾದ ಎನ್ನುವುದಕ್ಕೆ ಎಷ್ಟೂ ಪ್ರಕಾಶಕರು ಇದ್ದಾರೆ. ಈ ಪ್ರಕಾಶಕರು ಮುದ್ರಿಸಿದ್ದೆಲ್ಲಾ ಖರೀದಿಸಲು ನಮ್ಮಲ್ಲಿ ಎಷ್ಟೂ ಯೋಜನೆಗಳಿವೆ. ಪರೋಕ್ಷವಾಗಿ ಅಷ್ಟೂ ಮತ್ತು ಬರಲಿರುವ ಇನ್ನಷ್ಟೂ ಯೋಜನೆಗಳು ನಾಡಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಉತ್ಥಾನಕ್ಕೆ ಅವಶ್ಯ ಎಂದು ಕಾಲಕಾಲಕ್ಕೆ ಆ ಎಲ್ಲ ಜಾಹೀರಾತುದಾರರು, ಲೇಖಕರು, ಪ್ರಕಾಶಕರು, ಯೋಜಕರು ಪ್ರಚುರಿಸುತ್ತಲೇ ಇದ್ದಾರೆ. ಆದರಿದು ಸುಳ್ಳನ್ನು ಹಲವು ಬಾರಿ ಹೇಳಿ ‘ಸತ್ಯ’ ಕಾಣಿಸುವ ಪ್ರಯತ್ನ ಮಾತ್ರ. ಮುದ್ರಣದ ಪುಸ್ತಕೋದ್ಯಮ ನಿಸ್ಸಂದೇಹವಾಗಿ ತನ್ನ ಕೊನೆಗಾಲದಲ್ಲಿದೆ. ಹಾಗಾಗಿ ನಾನು ತಂದೆಯ ಪುಸ್ತಕಗಳನ್ನು ಸ್ವಂತ ನೆಲೆಯಲ್ಲಿ ಮರುಮುದ್ರಣ ಮಾಡಿಸಿ, ಮಾರಾಟಕ್ಕೆ ಒಡ್ಡಲಿಲ್ಲ. ಅಯಾಚಿತವಾಗಿಯೇ ಕೇಳಿ ಬಂದ ಅನ್ಯ ಪ್ರಕಾಶಕರಿಗೂ ಕೊಡಲಿಲ್ಲ.
ಕನ್ನಡದಲ್ಲೂ ವಿದ್ಯುನ್ಮಾನ ಪುಸ್ತಕಗಳು ರೂಪುಗೊಳ್ಳುವ ಮಾತುಗಳು ಬರುವಾಗ ನನ್ನ ‘ಸನ್ಯಾಸ’ಕ್ಕೆ ರಕ್ತಿ ಮೂಡಿತು. ಗೆಳೆಯ ಪಂಡಿತಾರಾಧ್ಯರು ಕನ್ನಡ ಗಣಕ ಪರಿಷತ್ತಿನ ಅಪರಿಮಿತ ಚಟುವಟಿಕೆಗಳ ಅಂಗವಾಗಿ ನನ್ನೆಲ್ಲ ಪ್ರಕಟಣೆಗಳನ್ನು ಅಂತರ್ಜಾಲಕ್ಕೆ ಮುಕ್ತಗೊಳಿಸುವ ಮಾತುಗಳನ್ನು ಕೆಲವು ಸಮಯದ ಹಿಂದೆಯೇ ಪ್ರಸ್ತಾವಿಸಿದ್ದರು. ಸರಕಾರದ ಕೃಪಾಪೋಷಿತ ಇಲಾಖೆಯೂ ಅಂತಹುದೇ ಮನವಿ ಸಲ್ಲಿಸಿತ್ತು. ತೀರಾ ಈಚೆಗೆ ಇನ್ನೋರ್ವ ಗೆಳೆಯ ಪವನಜರಂತೂ ವಿ-ಪ್ರಕಾಶನದ ಆರ್ಥಿಕ ಸಾಧ್ಯತೆಗಳನ್ನೂ ವಿವರಿಸಿದ್ದರು. ಈ ಮೂರೂ ಶಕ್ತಿಗಳ ಹಿಂದಿನ ಆಶಯಗಳು ಮತ್ತು ವ್ಯಕ್ತಿಗಳು ನನಗೆ ಒಪ್ಪಿತವೇ. ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಒಳ್ಳೆಯ ಹೆಸರಿನಲ್ಲಿ ಅದೆಷ್ಟು ಉದಾತ್ತ ಆಶಯಗಳು ನಂಬಲಸಾಧ್ಯವಾದ ಕೆಳಮಟ್ಟವನ್ನು ಕಂಡಿವೆ ಎಂಬ ಕಹಿ ನನ್ನ ಗಂಟಲಲ್ಲಿ ಉಳಿದದ್ದಕ್ಕೆ ಅವೆಲ್ಲವನ್ನೂ ಸವಿನಯ ತಿರಸ್ಕರಿಸಿದ್ದೆ. ಆದರೀಗ ನನ್ನದೇ ಮಿತಿಯಲ್ಲಿ ಅವನ್ನು ವಿದ್ಯುನ್ಮಾನ ಅವತರಣಿಕೆಗಳಾಗಿ ಮೂಡಿಸಿ ಸಾರ್ವಜನಿಕಕ್ಕೆ ಮುಕ್ತಗೊಳಿಸುತ್ತಿದ್ದೇನೆ. ಇಲ್ಲಿ ಯಾವುದೇ ವಾಣಿಜ್ಯ ಅನುಸಂಧಾನವಿಲ್ಲ.

ಹೀಗೇ ಇನ್ಯಾರಿಗಾದರು ತಮ್ಮ ಬರಹಗಳನ್ನು ನನ್ನ ಜಾಲತಾಣದ ಮೂಲಕ ಸಾರ್ವಜನಿಕಕ್ಕೆ ಮುಕ್ತಗೊಳಿಸುವ ಬಯಕೆ ಇದ್ದರೆ ಅದಕ್ಕೂ ಆದರದ ಸ್ವಾಗತವಿದೆ. ಒಂದೇ ನಿಬಂಧನೆ – ಕೃತಿಯ ವಿ-ಮೂಲಪ್ರತಿಯನ್ನು ಅವರೇ ಸಂಯೋಜಿಸಿ ನಮಗೆ ಪೂರೈಸಬೇಕು.

ಈಗ ತೆಗೆದುಕೊಳ್ಳಿ

೧೯೮೧ರಲ್ಲಿ ಬರೆದು ಪ್ರಕಟಿಸಿ, ೧೯೯೩ರಲ್ಲಿ ಪರಿಷ್ಕರಿಸಿ ಪ್ರಕಟಿಸಿದ ಕಿರು ಹೊತ್ತಗೆ, ಅತ್ರಿ ಬುಕ್ ಜಾಲತಾಣದ ಪ್ರಥಮ ವಿ-ಪುಸ್ತಕ, ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಕೊಳ್ಳಲು ಮತ್ತು ಅನುಕೂಲದ ವಾಚನಕ್ಕೆ ಯಾವುದೇ ಸಲಕರಣೆಯಲ್ಲಿ ಅಳವಡಿಸಿಕೊಳ್ಳಲು ಉಚಿತವಾಗಿಯೇ ಲಭ್ಯವಿರುವ ಜಿ. ಟಿ.ನಾರಾಯಣರಾಯರ ಕೃತಿ

ಭವಿಷ್ಯ ವಿಜ್ಞಾನ
ಲೇಖಕ ಜಿ.ಟಿ. ನಾರಾಯಣ ರಾವ್
(೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ೧೯೮೧. ಪುಟ ೯೦. ಬೆಲೆ ರೂ ೧೨)

ವಿಜ್ಞಾನಕ್ಕೂ ಫಲಜ್ಯೋತಿಷ್ಯಕ್ಕೂ ಸಾಮ್ಯ ವೈಷಮ್ಯಗಳೇನು? ಎರಡೂ ಮಾನವಕೃತ ಅಧ್ಯಯನಪ್ರಕಾರಗಳು. ಅವು ಭವಿಷ್ಯ ಕುರಿತಂತೆ ಎಣಿಕೆಗಳನ್ನು ಇಲ್ಲವೇ ಊಹೆಗಳನ್ನು ಮಂಡಿಸುತ್ತವೆ. ಮತ್ತು ತಿದ್ದುಪಡಿಗಳನ್ನು ಇಲ್ಲವೇ ಪರಿಹಾರಗಳನ್ನು ಸೂಚಿಸುತವೆ. ಇಲ್ಲಿಗೆ ಸಾಮ್ಯ ಮುಗಿಯುತ್ತದೆ. ವೈಷಮ್ಯ? ಪರಿಪೂರ್ಣ ವಿರೋಧಿಗಳಿವು. ಮೊದಲನೆಯದು ಶುದ್ಧ ವಿಜ್ಞಾನ, ಎರಡನೆಯದು ಅನಿರ್ಬಂಧಿತ ಅವಿದ್ಯೆ. ವಾಸ್ತವವಾಗಿ ಬೌದ್ಧಿಕ ವಂಚನೆಯ ಇನ್ನೊಂದೇ ಹೆಸರು ಫಲಜ್ಯೋತಿಷ್ಯ. ಪ್ರಸಕ್ತ ಪುಸ್ತಕ ಭವಿಷ್ಯವಿಜ್ಞಾನ ಎಂಬ ಪ್ರಕಾರವನ್ನು ವಿವಿಧ ಕೋನಗಳಿಂದ ಪರಾಂಬರಿಸಿರುವ ಒಂದು ಅಧ್ಯಯನ. ನಾಗರಿಕತೆ ನಡೆದುಬಂದ ದಾರಿಯನ್ನು ವೈಜ್ಞಾನಿಕವಾಗಿ ವಿಮರ್ಶಿಸಿ, ವರ್ತಮಾನ ಸ್ಥಿತಿಗಳನ್ನು ಪರಿಶೀಲಿಸಿ, ಮುಂಬರಲಿರುವ ದಿನಗಳ ಬಗ್ಗೆ ಮಾಡಿರುವ ಊಹೆ ಇದರ ಹೂರಣ – ಸರ್ಕಾರದ ವಾರ್ಷಿಕ ಹಣಕಾಸು ಮುಂಗಡ ಪತ್ರದಂತೆ, ಹವೆ ಕುರಿತ ಮುನ್ನೋಟದಂತೆ, ಜನಸಂಖ್ಯೆ ಏರಿಳಿತ ಕುರಿತ ಅಂದಾಜಿನಂತೆ.