ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಎರಡು)

ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ ಗ್ರಹಗಳ ದೂರಗಳು ಹೀಗಿವೆ (ದಶಲಕ್ಷ ಕಿಮೀಗಳಲ್ಲಿ) ಸೂರ್ಯನ ಕಡೆಗೆ – ಶುಕ್ರ ೪೦, ಬುಧ ೯೧.೨. ಸೂರ್ಯನ ವಿರುದ್ಧ ದಿಕ್ಕಿಗೆ ಮಂಗಳ ೭೭.೬ ಗುರು ೧೨೬೯ ಯುರೆನಸ್ ೨೭೦೪ ನೆಪ್ಚೂನ್ ೪೩೨೦ ಪ್ಲುಟೋ ೫೭೩೧.

ಭೂಮಿಯ ಉಪಗ್ರಹವಾಗಿರುವ ಚಂದ್ರನ ದೂರ ೩,೮೨,೪೦೦ ಕಿಮೀ. ಆಕಾಶದಲ್ಲಿ ಚಂದ್ರ ನಮಗೆಷ್ಟು ಸಮೀಪ! ಚಂದ್ರ ನಮ್ಮ ನೆರೆಮನೆ. ಶುಕ್ರದೂರ ಚಂದ್ರದೂರದ ನೂರರಷ್ಟಕ್ಕಿಂತಲೂ ಹೆಚ್ಚು. ಮಂಗಳದೂರ ಇನ್ನೂರರಕ್ಕಿಂತಲೂ ಹೆಚ್ಚು; ಶುಕ್ರ ಮಂಗಳಗಳು ನಮ್ಮ ನೆರೆ ಗ್ರಹಗಳು. ಆದ್ದರಿಂದ ಆಕಾಶಯಾನ ಅಂತರಗ್ರಹ ಪ್ರಯಾಣ ಮಾಡುವ ಮನುಷ್ಯನ ಮೊದಲ ಆಕಾಶ ನಿಲ್ದಾಣ ಸಮೀಪದ ಚಂದ್ರ. ವೈಜ್ಞಾನಿಕ ವೀಕ್ಷಣೆಗೆ ಚಂದ್ರನಷ್ಟು ಸುಲಭವಾಗಿ ದೊರೆಯುವ ಆಕಾಶಕಾಯ ಬೇರೊಂದಿಲ್ಲ. ಚಂದ್ರನಲ್ಲಿರುವ ಕಲೆಗಳು ಅಲ್ಲಿರುವ ವಿವಿಧ ಗಾತ್ರದ ಕೂಪಗಳಿಂದಾದವು. ಚಂದ್ರನ ಬೆಟ್ಟಗಳ ಎತ್ತರಗಳನ್ನು ನಿಖರವಾಗಿ ಅಳೆಯಲಾಗಿದೆ. ನಮ್ಮ ನೆರಳಿನ ಉದ್ದ ಸೂರ್ಯನ ಕೋನೋನ್ನತಿ ಇವನ್ನು ತಿಳಿದಾಗ ನಮ್ಮ ಎತ್ತರವನ್ನು ಗುಣಿಸಿ ಹೇಳಬಹುದು. ಇದೇ ಕ್ರಮದಿಂದ ಚಂದ್ರನ ಬೆಟ್ಟಗಳ ಎತ್ತರಗಳನ್ನು ಭೂಮಿಯಲ್ಲಿ ಕುಳಿತೇ ಅಳೆದಿದ್ದಾರೆ.

 

೨೦,೦೦೦ ಅಡಿಗಳಷ್ಟು ಎತ್ತರಕ್ಕೆ ಚಾಚಿರುವ ಬೆಟ್ಟಗಳು ಅಲ್ಲಿವೆ (ನಮ್ಮ ಎವರೆಸ್ಟ್ ಶಿಖರದ ಎತ್ತರ ೨೯೦೦೨ ಅಡಿಗಳು). ಚಂದ್ರನ ದ್ರವ್ಯ ರಾಶಿಯನ್ನು ಗುರುತ್ವಾಕರ್ಷಣಬಲದ ನಿಯಮದ ಸಹಾಯದಿಂದ ಅಳೆಯಲಾಗಿದೆ. ಚಂದ್ರನ ದ್ರವ್ಯ ರಾಶಿ ಭೂಮಿ ದ್ರವ್ಯರಾಶಿಯ ಸುಮಾರು ೧/೮೧ರಷ್ಟು. ಚಂದ್ರಗೋಳದ ವ್ಯಾಸ ಭೂಮಿವ್ಯಾಸದ ಸುಮಾರು ೧/೪ರಷ್ಟು – ಅಂದರೆ, ಭೂಮಿಗೋಳದೊಳಗೆ ಸುಮಾರು ೫೦ ಚಂದ್ರರನ್ನು ತುಂಬಿಸಬಹುದು. ಭೂಮಿ-ಚಂದ್ರರ ನಡುವಿನ ದೂರ ಗಂಟೆಗೆ ೧೬೦೦ ಕಿಮೀ ವೇಗದಲ್ಲಿ ಹಾರುವ ವಿಮಾನಕ್ಕೆ ಹತ್ತು ದಿವಸಗಳ ನಿರಂತರ ಪ್ರಯಾಣ; ಗಂಟೆಗೆ ೧೬೦ ಕಿಮೀ ವೇಗದಲ್ಲಿ ಧಾವಿಸುವ ಕಾರಿಗೆ ೧೦೦ ದಿವಸಗಳ ನಿರಂತರ ಓಟ; ಗಂಟೆಗೆ ೪.೮ ಕಿಮೀ ವೇಗದ ನಡಿಗೆಗಾರನಿಗೆ ಏಳು ವರ್ಷಗಳಿಗಿಂತಲೂ ಹೆಚ್ಚು ಕಾಲದ ನಿರಂತರ ನಡಿಗೆ. ಭೂಮಿಗಾತ್ರದ ಬಂಡೆಗಳನ್ನು ಸಾಲಾಗಿ ಜೋಡಿಸಿ ಭೂಮಿಯಿಂದ ಚಂದ್ರನಿಗೆ ಒಂದು ಸೇತುವೆ ಕಟ್ಟಿದರೆ ಸುಮಾರು ೩೦ ಬಂಡೆಗಳು ಬೇಕಾಗುತ್ತವೆ. ಹೀಗೆ ನಮ್ಮ ಯಾವ ಮಿತಿಯಿಂದ ಅಳೆದರೂ ಚಂದ್ರನ ದೂರ ಸಾಕಷ್ಟು ದೊಡ್ಡ, ಊಹೆಗೂ ನಿಲುಕದ ಸಂಖ್ಯೆ. ಆದರೆ ಬೆಳಕಿನ ಕಿರಣಕ್ಕೆ ಈ ದೂರ ಎರಡು ಸೆಕೆಂಡುಗಳಿಗಿಂತಲೂ ಕಡಿಮೆ. ಬೆಳಕು, ರೇಡಿಯೋ ತರಂಗ ಮುಂತಾದ ವಿದ್ಯುತ್ಕಾಂತ ತರಂಗಗಳ ವೇಗ ಸೆಕೆಂಡಿಗೆ ೩,೦೦,೦೦೦ ಕಿಮೀ. ಈ ವೇಗವನ್ನು ಮೀರಿಸುವ (ಅಥವಾ ಹೊಂದುವ) ಇತರ ಭೌತ ವಸ್ತುಗಳು ಅಥವಾ ಶಕ್ತಿಗಳು ಇದುವರೆಗೆ ತಿಳಿದಿಲ್ಲ. ಇದರ ಅರ್ಥ ಇಷ್ಟು: ಭೂಮಿಯಲ್ಲಿ ಈ ರಾತ್ರಿ ನಿಂತು ಚಂದ್ರನೆಡೆಗೆ ಸಾಕಷ್ಟು ಪ್ರಕಾಶಮಾನವಾದ ಟಾರ್ಚ್ ಲೈಟನ್ನು ಬೀರಿದರೆ ಎರಡು ಸೆಕೆಂಡುಗಳು ಮುಗಿಯುವ ಮೊದಲೇ ಆ ಬೆಳಕು ಚಂದ್ರನಿಗೆ ಕಂಡಿರುತ್ತದೆ. ಅದೇ ಅವಧಿಯಲ್ಲಿ ಒಂದು ಬೆಳಕಿನ ಕಿರಣ ಸುಮಾರು ಏಳು ಸಲ ಭೂಮಿಯನ್ನು (ಪರಿಧಿ ೪೦,೦೦೦ ಕಿಮೀ) ಪರಿಭ್ರಮಿಸಿರುತ್ತದೆ.

ಚಂದ್ರ ಭೂಮಿಯ ಗುರುತ್ವಾಕರ್ಷಣ ವಲಯದಲ್ಲಿದೆ. ವಿಜ್ಞಾನಿಗಳು ಭೂಮಿ-ಚಂದ್ರ ಇವುಗಳ ಚಲನೆ ತಿಳಿಯಲು ಅವನ್ನು ಒಟ್ಟಾಗಿ ಒಂದು ವ್ಯವಸ್ಥೆ ಎಂದು ತಿಳಿಯುತ್ತಾರೆ. ಒಂದು ಇನ್ನೊಂದರ ನಿಕಟ ಅನುಯಾಯಿ. ಒಂದಿಲ್ಲದಿದ್ದರೆ ಇನ್ನೊಂದರ ಸ್ಥಿತಿಗತಿಗಳು ಮೊದಲಿನಂತೆ ಇರುವುದಿಲ್ಲ. ಭೂಮಿ-ಚಂದ್ರ ವ್ಯವಸ್ಥೆಯನ್ನು ಡಂಬೆಲ್ ಅಥವಾ ಇಗ್ಗುಂಡಿಗೆ ಹೋಲಿಸುವುದುಂಟು. ೩೬.೭ ಕೆಜಿ (೮೧ ಪೌಂಡು) ಮತ್ತು ೦.೪೫ (೧ ಪೌಂಡು) ಕೆಜಿ ಭಾರದ, ೨೦ ಸೆಮೀ (೮ ಇಂಚು) ಮತ್ತು ೫ ಸೆಂಮೀ (೨ ಇಂಚು) ವ್ಯಾಸದ ಎರಡು ಗುಂಡುಗಳನ್ನು ೨೦ ಅಡಿ ಉದ್ದದ ಸರಳಿನಿಂದ ಜೋಡಿಸಿ ಮಾಡಿದ ಅಸಮಭಾರದ ಇಗ್ಗುಂಡು ಈ ವ್ಯವಸ್ಥೆಯ ಸಂಕ್ಷೇಪ ಚಿತ್ರಣ. ಸರಳಿನ ಮಧ್ಯಬಿಂದುವಿನಲ್ಲಿ ಇಗ್ಗುಂಡನ್ನು ಎತ್ತಲು ಪ್ರಯತ್ನಿಸಿದರೆ ಅದು (ಗದೆಯಂತೆ) ನೆಲದೆಡೆಗೆ ವಾಲುವುದನ್ನು ನೋಡುತ್ತೇವೆ – ಭಾರದ ಗುಂಡು ನೆಲದೆಡೆಗೆ ಸೆಳೆಯುತ್ತದೆ. ಆದ್ದರಿಂದ ಇಗ್ಗುಂಡನ್ನು ಸಮತೂಕವಾಗಿ ಎತ್ತಲು ಹಿಡಿಕೆಯನ್ನು ಭಾರದ ಗುಂಡಿನೆಡೆಗೆ ಸರಿಸಬೇಕು. ಈ ಹಿಡಿಕೆಯ ಬಿಂದು ಇಗ್ಗುಂಡಿನ ಗುರುತ್ವ ಕೇಂದ್ರ. ಭೂಮಿ-ಚಂದ್ರ ಇಗ್ಗುಂಡಿನ ಗುರುತ್ವ ಕೇಂದ್ರ ಎಲ್ಲಿರಬಹುದು? ಭೂಮಿಯಿಂದ ಎಷ್ಟು ಮೈಲು ಎತ್ತರದಲ್ಲಿ ಇರಬಹುದು? ಉತ್ತರ ನಿರಾಶೆ ಉಂಟುಮಾಡುತ್ತದೆ – ಆ ಬಿಂದು ಭೂಮಿಯ ಮೇಲ್ಮೈಯಿಂದ (ನಾವು ನಿಂತಿರುವ ಭಾಗ ಮೇಲ್ಮೈ) ೧೬೦೦ ಕಿಮೀ ಆಳದಲ್ಲಿದೆ! ಅಂದರೆ ಭೂಮಿ ಕೇಂದ್ರದಿಂದ ಅದನ್ನು ಚಂದ್ರ ಕೇಂದ್ರಕ್ಕೆ ಜೋಡಿಸುವ ಸರಳ ರೇಖೆಯ ಮೇಲೆ ಸುಮಾರು ೪೮೦೦ ಕಿಮೀ ದೂರದಲ್ಲಿ. ತಾಯಿಮಗಳ ಅಪ್ಪಾಲೆತಿಪ್ಪಾಲೆ ಆಟದ ಚಿತ್ರವನ್ನು ಇನ್ನೊಂದು ಸಲ ಸ್ಮರಿಸಿಕೊಳ್ಳಬಹುದು. ಭೂಮಿ ಸೂರ್ಯನ ಸುತ್ತಲೂ ಪರಿಭ್ರಮಿಸುವಾಗ ಭೂಮಿಯಲ್ಲಿರುವ ಚಂದ್ರ ಸಹಜವಾಗಿ ಸೂರ್ಯನ ಸುತ್ತಲೂ ಸಹ ಪರಿಭ್ರಮಿಸಬೇಕಾಗುತ್ತದೆ. ಭೂಮಿ – ಚಂದ್ರ ವ್ಯವಸ್ಥೆಯ ಈ ಸೂರ್ಯ ಪರಿಭ್ರಮಣೆಯಲ್ಲಿ ನಡೆಯುವ ಭೌತ ಘಟನೆಯಿಷ್ಟು: ವ್ಯವಸ್ಥೆಯ ಗುರುತ್ವ ಕೇಂದ್ರ ಕೆಪ್ಲರನ ಮೊದಲನೆಯ ಸೂತ್ರದ ಪ್ರಕಾರ ಸೂರ್ಯ ಒಂದು ನಾಭಿಯಲ್ಲಿರುವ ದೀರ್ಘ ವೃತ್ತದ ಮೇಲೆ ಚಲಿಸುವುದು; ಭೂಮಿ, ಚಂದ್ರರು ಈ ಕೇಂದ್ರದ ಸುತ್ತಲೂ ಅಪ್ಪಲೆತಿಪ್ಪಾಲೆ ಆಡುತ್ತ ಸಾಗುತ್ತವೆ.

ಭೂಮಿಗೆ ಇರುವಂತೆ ಚಂದ್ರನಿಗೂ ಎರಡು ವಿಧವಾದ ಚಲನೆಗಳಿವೆ – ಒಂದು, ತನ್ನ ಸುತ್ತಲೂ ತಿರುಗುವುದು, ಆವರ್ತನೆ; ಇನ್ನೊಂದು, ಭೂಮಿಯ ಸುತ್ತಲೂ ಚಲಿಸುವುದು, ಪರಿಭ್ರಮಣೆ. ಇವೆರಡರ ಅವಧಿಯೂ ೨೭.೫ ದಿವಸಗಳು (ದಿವಸ = ೨೪ ಗಂಟೆಗಳ ಅವಧಿ). ನಮ್ಮ ದಿವಸ ಮತ್ತು ವರ್ಷ (೩೬೫.೨೪೨೨ ದಿವಸಗಳು) ಎರಡರ ಕಾಲಾವಧಿ ಒಂದೇ ಆದರೆ ಏನಾದೀತು? ಚಳಿಗಾಲದ ಹಿಮದಟ್ಟೈಸಿರುವ ನಡುರಾತ್ರಿಯನ್ನು ಸ್ಮರಿಸಿಕೊಳ್ಳಿ. ಶಾಖಕ್ಕಾಗಿ ಧಗಧಗನೆ ಉರಿಯುತ್ತಿರುವ ಅಗ್ಗಿಷ್ಟಿಕೆಯನ್ನು ನಡುಮನೆಯಲ್ಲಿಟ್ಟಿದ್ದೀರಿ. ಅದರ ಸುತ್ತಲೂ ಸುತ್ತುತ್ತಿದ್ದೀರಿ – ನಿಮ್ಮ ಮುಂಭಾಗ, ಅಂಗೈ ಸದಾ ಶಾಖದೆಡೆಗೆ. ಇಂಥ ಒಂದೊಂದು ಸುತ್ತನ್ನೂ ಮುಗಿಸುವಾಗ ನೀವು ನಿಮ್ಮ ಸುತ್ತಲೂ ನಿಮಗೆ ತಿಳಿಯದಂತೆಯೇ ಒಂದು ಸುತ್ತನ್ನೂ ಮುಗಿಸಿರುತ್ತೀರಿ! (ನಿಮ್ಮ ಬೆನ್ನಿನ ದರ್ಶನ ಭಾಗ್ಯ ಅಗ್ಗಿಷ್ಟಿಕೆಗೆ ಲಭಿಸುವುದೇ ಇಲ್ಲ. ಭೂಮಿಯ ದಿವಸ, ವರ್ಷಗಳು ಸಮಾನ ಉದ್ದದವಾದಾಗ ಇದೇ ಭಾಗ್ಯ ಪ್ರಾಪ್ತವಾಗುವುದು – ಭೂಮಿಯ ಒಂದು ಭಾಗ ಎಂದೂ ಸೂರ್ಯನನ್ನು ನೋಡದು. ಅಲ್ಲಿ ಸಾಂದ್ರ ತಮಸ್ಸು ಮೇರುಶೈತ್ಯ; ಇನ್ನೊಂದು ಭಾಗದಲ್ಲಿ ಅಖಂಡ ಹಗಲು, ಅಲ್ಲಿ ಜೀವಿಗಳು ಬದುಕಿ ಉಳಿಯಲಾರದಷ್ಟು ಶಾಖ ಶೇಖರಣೆಯಾಗುವ ಸಂಭವವೂ ಇದೆ. ಚಂದ್ರ-ಭೂಮಿ ಸಂಬಂಧ ಇಂಥ ಕೌತುಕ ಪರಿಸ್ಥಿತಿಯನ್ನು ಎದುರಿಸಬೇಕು. ವ್ಯತ್ಯಾಸವಿಷ್ಟೆ – ಭೂಮಿ ಚಂದ್ರನಿಗೆ ಬೆಳಕು ಶಾಖ ನೀಡುವ ಆಕರವಲ್ಲ. ಭೂಮಿಯಿಂದ ನೋಡುವವನಿಗೆ ಚಂದ್ರನ ಒಂದು ಭಾಗ ಎಂದೂ ಕಾಣುವುದಿಲ್ಲ. ಆದ್ದರಿಂದ ಆ ಭಾಗ ಚಂದ್ರನ ಹಿಂಬದಿ, ಕಾಣದ ಮೈ. ಹಾಗಾದರೆ ಚಂದ್ರಬಿಂಬದ ಗಾತ್ರದಲ್ಲಿ ಏರಿಳಿತಗಳೇಕೆ ಎಂಬ ಪ್ರಶ್ನೆ ಮೂಡುವುದು. ಇಲ್ಲಿ ಮೂರು ಭಿನ್ನ ವಸ್ತುಗಳ ನಿಲುವುಗಳ ಸಂಯುಕ್ತ ಫಲವಿದೆ. ಚಂದ್ರ, ಭೂಮಿಗಳಿಗೆ ಬೆಳಕು ನೀಡುವ ಆಕರ ಸೂರ್ಯ; ಈ ಬೆಳಕನ್ನು ಅವು ಹೀರಿ ಸ್ವಲ್ಪಾಂಶವನ್ನು ಚಂದ್ರ ಕಾಂತಿ ಅಥವಾ ಭೂಮಿ ಕಾಂತಿ (ಶುಕ್ಲ ಪಕ್ಷದ ಆರಂಭದ ದಿವಸಗಳಲ್ಲಿ ಚಂದ್ರನ ಹೊಳೆಯದ ಭಾಗ ಮಸಕಾಗಿ ಕಾಣುವುದು ಭೂಮಿಕಾಂತಿ ಆ ಪ್ರದೇಶದ ಮೇಲೆ ಬೀಳುವುದರಿಂದ) ಎಂದು ಪ್ರತಿಫಲಿಸುತ್ತದೆ. ಭೂಮಿಯ ದ್ವಿವಿಧ ಚಲನೆಗಳ (ಆವರ್ತನೆ, ಪರಿಭ್ರಮಣೆ) ಪರಿಣಾಮವಾಗಿ ಅದರ ವಿವಿಧಭಾಗಗಳು ವಿವಿಧಕಾಲಗಳಲ್ಲಿ ವಿವಿಧ ಕೋನಗಳಿಂದ ಚಂದ್ರನನ್ನು ನೋಡುತ್ತವೆ. ಚಂದ್ರನಿಗೆ ಇದೇ ತರದ ಎರಡು ಚಲನೆಗಳಿವೆ – ಆದರೆ ಅವಧಿಗಳು ಬೇರೆ. ಪರಿಭ್ರಮಣೆ ಭೂಮಿಯ ಸುತ್ತ. ಆದ್ದರಿಂದ ಸೂರ್ಯನೆಡೆಗೆ ಮುಖ ಮಾಡಿರುವ ಚಂದ್ರಭಾಗಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ. ಹೀಗೆ ಸೂರ್ಯ, ಚಂದ್ರ, ಭೂಮಿ (ಅಂದರೆ ಇದರ ಮೇಲಿರುವ ನಮ್ಮ ಸ್ಥಾನ) ಇವು ಮೂರರ ವಿನ್ಯಾಸಫಲವಾಗಿ ಚಂದ್ರಬಿಂಬ (ಹೊಳೆಯುವ ಭಾಗ) ನಮಗೆ ಕಾಣುತ್ತದೆ. ಭೂಮಿ, ಚಂದ್ರರ ಚಲನೆಗಳಲ್ಲಿ ಒಂದು ವಿಶಿಷ್ಟಲಯ, ಬದಲಾಗುವ ದೂರಗಳಲ್ಲಿ ಒಂದು ಸ್ಪಷ್ಟ ನಿಯತಕಾಲಿಕತೆ ಇರುವುದರಿಂದ ಇವುಗಳ ಸಂಯುಕ್ತ ಫಲವಾದ ಚಂದ್ರಬಿಂಬದ ಏರಿಳಿತಗಳಲ್ಲಿ ಒಂದು ನಿರ್ದಿಷ್ಟ ಕ್ರಮವಿರುವುದು.

ಆಕಾಶಕಾಯದ ಗುರುತ್ವಾಕರ್ಷಾಣಬಲ ಅದರ ದ್ರವ್ಯರಾಶಿಯನ್ನು ಅವಲಂಬಿಸಿದೆ. ಭೂಮಿಯ ಗುರುತ್ವಾಕರ್ಷಣಬಲ ನಮಗೆ ಅರಿವಾಗುವುದು ತೊಟ್ಟು ಕಳಚಿದ ಸೇಬಿನ ಹಣ್ಣು ಅಕಾಶಕ್ಕೆ ಹಾರಿ ಹೋಗದೇ ನೆಲಕ್ಕೆ ಕೆಡೆಯುವುದರ ಮೂಲಕ; ನಮ್ಮ ಭಾರವನ್ನು ಅರಿಯುವುದರ ಮೂಲಕ; ಎಸೆದ ಕಲ್ಲು ಎಲ್ಲೋ ನೆಲಕ್ಕೆ ಬಡಿಯುವುದನ್ನು ನೋಡುವುದರ ಮೂಲಕ. ಭೂಮಿಯ ಗುರುತ್ವಾಕರ್ಷಣ ಬಲ ಎಷ್ಟು ಎಂದು ಪ್ರಯೋಗಗಳ ಸಹಾಯದಿಂದ ನಿರ್ಧರಿಸಿದೆ. ಇದರ ಪ್ರಕಾರ ನಿಶ್ಚಲಸ್ಥಿತಿಯಿಂದ ಕೈಬಿಟ್ಟ ಕಲ್ಲಿನ ವೇಗ ಪ್ರತಿ ಸೆಕೆಂಡಿಗೆ ೯.೮ ಮೀಟರ್ ಹೆಚ್ಚುತ್ತ ಸಾಗುವುದು – ಗುರುತ್ವಾಕರ್ಷಣೆಯ ವೇಗೋತ್ಕರ್ಷ ಸೆಕೆಂಡು ಸೆಕೆಂಡಿಗೆ ೯.೮ ಮೀಟರ್, ಇದರ ಪರಿಣಾಮವಾಗಿ ಕಲ್ಲು ಮೊದಲ ಸೆಕೆಂಡಿನಲ್ಲಿ ೪.೮೮ ಮೀಟರನ್ನೂ ಎರಡನೆಯ ಸೆಕೆಂಡಿನಲ್ಲಿ ೧೪.೬೩ ಮೀ, ಮೂರನೆಯ ಸೆಕೆಂಡಿನಲ್ಲಿ ೨೬.೧ ಮೀ, ನಾಲ್ಕನೆಯ ಸೆಕೆಂಡಿನಲ್ಲಿ ೩೪.೧ ಮೀ ಇತ್ಯಾದಿ ಗಮಿಸಿರುವುದು. ನನ್ನ ಭಾರ ೯೮ ಕೆ.ಜಿ ಎಂದು ಎದೆ ತಟ್ಟಿಕೊಂಡರೆ ಒಳಗಿರುವ ದ್ರವ್ಯರಾಶಿ ಕೇವಲ ೧೦ ಕೆಜಿ ಎಂದು ಗುರುತ್ವಾಕರ್ಷಣ ಬಲ ನಗುತ್ತದೆ. ಈ ಕಾರಣದಿಂದ ನನ್ನ ಭಾರ ಚಂದ್ರನ ಮೇಲೆ ಬೇರೆಯೇ ಆಗುವುದು – ಅಲ್ಲಿ ಭಾರಯಂತ್ರದಿಂದ ಹೊರ ಬರುವ ಕಾರ್ಡು ನನ್ನ ಭಾರವನ್ನು ೧೬.೩ ಕೆಜಿ ಎಂದು ಸೂಚಿಸುತ್ತದೆ. ಎಷ್ಟು ಹಗುರವಾಯಿತು. ಚಂದ್ರನ ದ್ರವ್ಯರಾಶಿ ಕಡಿಮೆ; ಪರಿಣಾಮವಾಗಿ ಗುರುತ್ವಾಕರ್ಷಣಬಲ ಭೂಮಿಯ ೧/೬ರಷ್ಟು ಮಾತ್ರ. ಇಂಥ ದುರ್ಬಲ ಚಂದ್ರನಲ್ಲಿ ಅತಿ ಚಂಚಲ ಗಾಳಿಯ ಕಣಗಳು, ಉಗಿ ಅಣುಗಳು, ಧೂಳಿನ ಹುಡಿಗಳು ತೇಲುವುದುಂಟೇ? ಚಂದ್ರನಲ್ಲಿ ಒಂದಾನೊಂದು ಕಾಲದಲ್ಲಿ ಇದ್ದಿರಬಹುದಾದ ಗಾಳಿ ನೀರು ಎಂದೋ ಅಲ್ಲಿಂದ ತಪ್ಪಿಸಿಕೊಂಡು ಸ್ವಚ್ಛಂದವಾಗಿ ಹಾರಿಹೋಗಿರಬೇಕು. ಆದ್ದರಿಂದ ಚಂದ್ರಲೋಕ ಬರಡು – ಅಲ್ಲಿ ನಮಗೆ ತಿಳಿದ ಅಥವಾ ತಿಳಿಯದ ಯಾವ ವಿಧವಾದ ಮುಂದುವರಿದ ಜೀವ, ಸಸ್ಯ ಬದುಕಿ ಉಳಿದಿರುವುದು ವಿಕಸಿಸಿರುವುದು ಅಸಾಧ್ಯ.

ಚಂದ್ರನ ಹಲವಾರು ಭೌತ ವಿವರಗಳನ್ನು ಭೂಮಿಯಿಂದ ವೀಕ್ಷಿಸಿಯೇ ನಿರ್ಧರಿಸಲಾಗಿದೆ. ಖಗೋಳಶಾಸ್ತ್ರ ಬೆಳೆದು ಬರುತ್ತಿದ್ದಂತೆ ಭೌತ, ರಸಾಯನ, ಗಣಿತ ಮುಂತಾದ ವಿವಿಧ ಶಸ್ತ್ರಗಳು ಪ್ರತ್ಯೇಕವಾಗಿಯೂ ಪರಸ್ಪರ ಪೂರಕವಾಗಿಯೂ ಪ್ರವರ್ಧಿಸಿದುವು. ಆದ್ದರಿಂದ ಖಗೋಳ ಶಾಸ್ತ್ರದಲ್ಲಿ ಬಂದ ಸಂಶಯ ಇನ್ನೊಂದು ಶಾಸ್ತ್ರಕ್ಕೆ ಹೊಸ ಸವಾಲೊಡ್ಡಿತು. ಅದು ಸಮರ್ಪಕ ಉತ್ತರ ನೀಡುವ ಮಾಧ್ಯಮವಾಯಿತು. ಇಂಥ ವಿವರ ಹೆಚ್ಚು ಹೆಚ್ಚು ಸಂಗ್ರಹವಾದಂತೆ ಮನುಷ್ಯ ಚಂದ್ರರ ಅಂತರ ಅಷ್ಟು ಅಷ್ಟು ಕಡಿಮೆಯಾಯಿತು.

ಚಂದ್ರನ ಜನನ

ಚಂದ್ರನ ಜನನವನ್ನು ಕುರಿತು ಸಾಕಷ್ಟು ಸಂಶೋಧನ ನಡೆದಿದೆ. ಇಲ್ಲಿರುವ ಕುತೂಹಲಗಳು ಬಗೆ ತರದವು. ನಮ್ಮ ಉಪಗ್ರಹ, ನೆರೆಮನೆ ಎಂಬ ಕಾರಣ ಮೊದಲಿನದು. ನಿರಪೇಕ್ಷವಾಗಿ ನೋಡಿದರೆ ಭೂಮಿಯಂಥ ‘ಚಿಕ್ಕ’ ಗ್ರಹಕ್ಕೆ ಚಂದ್ರನಂಥ ‘ದೊಡ್ಡ’ ಉಪಗ್ರಹವಿರುವುದು ಒಂದು ವಿಶೇಷ ಪರಿಸ್ಥಿತಿ. ಚಂದ್ರನ ಜನನವನ್ನು ಸಾಧಾರವಾಗಿ ವಿವರಿಸಿದರೆ ಸೌರವ್ಯೂಹದ ಇತಿಹಾಸವನ್ನು ವೈಜ್ಞಾನಿಕವಾಗಿ ಬರೆಯಬಹುದು. ತಿಳಿದಿರುವ ಅಂಶಗಳಿಂದ ತಿಳಿಯದ ಹಿಂದಿನ ಕತೆಯನ್ನು ಹೊಸೆಯುವ ಕ್ರಮ. ಮೂರು ಮುಖ್ಯ ಊಹೆಗಳಿವೆ.

ಒಂದಾನೊಂದು ಕಾಲದಲ್ಲಿ ಸೂರ್ಯ ಮತ್ತು ಇನ್ನೊಂದು ಸಮಗಾತ್ರದ ನಕ್ಷತ್ರದ ಸಂಘಟ್ಟಣೆಯ ಪರಿಣಾಮವಾಗಿ ಸೂರ್ಯನಿಂದ ಅನಿಲದ ಹನಿಗಳು ಸಿಡಿದು ಕಾಲಕ್ರಮೇಣ ಅವು ಗ್ರಹಗಳಾಗಿ ಘನೀಭವಿಸಿದುವು. ಮೂಲತಃ ಅನಿಲರೂಪದಲ್ಲಿದ್ದ ಭೂಮಿ ಹೆಪ್ಪುಗಟ್ಟಿ ತಣ್ಣಗಾದಂತೆ ಅದನ್ನು ಆವರಿಸಿದ್ದ ನೀರಿನ ಹವೆ ಮೋಡವಾಗಿ ಪ್ರಥಮ ಪ್ರಳಯದ ಮಳೆಯಾಗಿ ಹಲವಾರು ವರ್ಷ ಸುರಿಯಿತು. ಭೂಮಿಯ ಮೈಮೇಲಿನ ನೆರಿಗೆಗಳನ್ನು ಬಿರುಕು ಕೊರಕಲುಗಳನ್ನು ನೀರು ತುಂಬಿ ಸಮುದ್ರಗಳುಂಟಾದುವು. ಮಹಾವೇಗದಿಂದ ಆವರ್ತಿಸುತ್ತಿದ್ದ ಭೂಮಿಯ ನೆಲದೊಡನೆ ಹೊಂದಿಕೊಳ್ಳಲಾರದ ಜಲರಾಶಿ ವಿರುದ್ಧ ದಿಕ್ಕಿನ ಬಿರಿಬಲಗಳನ್ನು ಉತ್ಪಾದಿಸಿತು. ಸೂರ್ಯನ ಗುರುತ್ವಾಕರ್ಷಣಬಲ ಮತ್ತು ಈ ಬಿರಿಬಲಗಳ ಸಂಯುಕ್ತ ಫಲವಾಗಿ ಮೆದುನೆಲ ಬಿರುಕುಬಿಟ್ಟಿತು; ಮುಂದೊಂದು ದಿವಸ ಭೂಮಿಯ ಒಂದು ಅಂಶ ಕಳಚಿಕೊಂಡು ಆಕಾಶಕ್ಕೆ ನೆಗೆಯಿತು. ಹೀಗೆ ಸಿಡಿದ ಭಾಗವೇ ಭೂಮಿಯ ಉಪಗ್ರಹ ಚಂದ್ರ. ಈ ಊಹೆಯಂತೆ ಚಂದ್ರ ಭೂಮಿಯ ಮಗ.

ಎರಡನೆಯ ಊಹೆ: ಭೂಮಿ, ಚಂದ್ರ, ಮಂಗಳ ಒಂದಾಗಿದ್ದ ದೊಡ್ಡ ಸಂಯುಕ್ತ ವಸ್ತುವಿತ್ತು. ಆವರ್ತನೆಯನ್ನು ಸೂರ್ಯಪರಿಭ್ರಮಣೆಯನ್ನೂ ಮಾಡುತ್ತಿದ್ದ ಆ ವಸ್ತುವಿಗೆ ಸಮತೋಲವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದರ ರೂಪ ಉದ್ದುದ್ದವಾಗಿ ವಿಕಾರಗೊಂಡು ಕ್ರಮೇಣ ನಡುವಿನ ತೆಳುಭಾಗದಲ್ಲಿ ತುಂಡಾಯಿತು. ಈ ಕ್ರಿಯೆಯಲ್ಲಿ ‘ಕೊಸರಾ’ಗಿ ಮೂರನೆಯ ಒಂದು ತುಂಡೂ ಉಳಿಯಿತು, ಇದು ಚಂದ್ರ. ದೊಡ್ಡ ಭಾಗ ಭೂಮಿ, ಚಿಕ್ಕ ಭಾಗ ಮಂಗಳ. ಭೂಮಿಯ ಗುರುತ್ವಾಕರ್ಷಣಬಲ ಅಧಿಕ. ಆದ್ದರಿಂದ ಚಂದ್ರನನ್ನು ಅದು ತನ್ನ ವಲಯದಲ್ಲಿ ಉಳಿಸಿಕೊಂಡಿತು. ಭೂಮಿ, ಚಂದ್ರ, ಮಂಗಳ ಏಕಕಾಲದಲ್ಲಿ ಜನಿಸಿದುದರಿಂದ ಚಂದ್ರನನ್ನು ಭೂಮಿಯೂ ತಮ್ಮ ಎಂದೂ ಮಂಗಳವನ್ನು ಭೂಮಿಯ ಅವಳಿ ಎಂದೂ ಕರೆಯುವುದಿದೆ.

ಮೂರನೆಯ ಊಹೆಯ ಪ್ರಕಾರ ಚಂದ್ರ ಮತ್ತು ಭೂಮಿಗೆ ಮೂಲತಃ ಯಾವುದೇ ಸಂಬಂಧವಿರಲಿಲ್ಲ. ಭೂಮಿಯಂತೆ ಸ್ವತಂತ್ರ ಗ್ರಹವಾಗಿದ್ದ ಚಂದ್ರ ‘ದಾರಿತಪ್ಪಿ’ ಭೂಮಿಯ ಗುರುತ್ವಾಕರ್ಷಣ ವಲಯ ಪ್ರವೇಶಿಸಿತು. ಆಗ ಈ ‘ಪ್ರಬಲಿ’ ಭೂಮಿ ‘ನಿರ್ಬಲಿ’ ಚಂದ್ರನನ್ನು ಸೆರೆಹಿಡಿಯಿತು. ಅಂದಿನಿಂದ ಚಂದ್ರನಿಗೆ ಭೂಮಿಯನ್ನು ಪರಿಭ್ರಮಿಸುವ, ರಾತ್ರಿ ಕಂದೀಲು ಹಿಡಿಯುವ ಶಿಕ್ಷೆ.

ಈ ಮೂರು ವಾದಗಳು ಸಿಡಿ, ಒಡಿ, ಸೆರೆಪಿಡಿ ಎಂಬ ಸೂತ್ರಗಳಲ್ಲಿವೆ. ಇವು ಯಾವುದನ್ನೂ ಒಪ್ಪದ ನಾಲ್ಕನೆಯ ಊಹೆಯೊಂದಿದೆ. ಭೂಮಿ ಚಂದ್ರರು ಇದೇ ರೀತಿಯಲ್ಲಿ ಜನನ ಕಾಲದಿಂದಲೂ ಇದ್ದಿರಬೇಕು ಎಂದು.

ಈ ವಾದಗಳು ಕಲ್ಪನಾ ವಿಲಾಸಗಳಲ್ಲ, ಕಾದಂಬರಿಗಳಲ್ಲ. ಆಗಿಂದಾಗ ದೊರೆಯುವ ವಿವಿಧ ದತ್ತಾಂಶಗಳನ್ನು ಹೊಂದಿಸಿ ಒಂದು ಸಂಗತ ಊಹೆಯನ್ನು “ಹೀಗಾಗಿರಬಹುದೇ?” ಎಂದು ಮುಂದಿಡುವ ಪ್ರಯತ್ನ. “ಇದೇ ಕೊನೆಯ ಮಾತು” ಎಂದು ಕರಾರುವಾಕ್ಕಾಗಿ ಹೇಳುವಂತಿಲ್ಲ. ಇನ್ನು ಮುಂದೆ ಲಭಿಸುವ ವಿವರಗಳು ಇದುವರೆಗಿನ ಎಲ್ಲ ವಾದಗಳನ್ನೂ ಅಲ್ಲಗಳೆದು ಹೊಸದೊಂದು ವಾದವನ್ನು ಮಂಡಿಸುವಂತೆ ಪ್ರೇರಿಸಬಹುದು ಅಥವಾ ಇವುಗಳಲ್ಲಿ ಯಾವುದೇ ಒಂದು ಬಲುಮಟ್ಟಿಗೆ ಸರಿ ಎಂದು ಸಮರ್ಥಿಸಲೂಬಹುದು.

ಇಂಥ ವಿವಿಧ ತಾರ್ಕಿಕ ಊಹೆಗಳು ಖಗೋಲಶಾಸ್ತ್ರ ಕಂಡ ಚಂದ್ರನನ್ನು ವಿವರಿಸುತ್ತವೆ. ಇವು ಮಾನವನನ್ನು ಚಂದ್ರನ ‘ಸಮೀಪಕ್ಕೆ’ ಭೌತಿಕವಾಗಿ ತಂದಿರುವ ಹೆಜ್ಜೆಗಳು.

ಅಧ್ಯಾಯ ಎರಡು
ತೊಟ್ಟಿಲು ಹಾರಲು ಬಯಸಿದ ಕೂಸು
ನಮ್ಮ ಮನೆ ಭೂಮಿ

ಸೂರ್ಯನಲ್ಲಿ ಒಂದು ಲಕ್ಷ ಭೂಮಿ ಹಿಡಿಯುತ್ತವೆ. ಇಂಥ ಸೂರ್ಯರನ್ನು ನುಂಗುವ ಮಹಾನಕ್ಷತ್ರಗಳು ಅವೆಷ್ಟೊ. ಇಂಥ ನಕ್ಷತ್ರಗಳ ಸಮುದಾಯಗಳು ಅಸಂಖ್ಯಾತ. ಹಾಗಿದ್ದರೂ ಆಕಾಶದ ಬಹುಭಾಗ ಖಾಲಿಯಾಗಿಯೇ ಇದೆ.

ಭೂಮಿಯಲ್ಲಿ ಮಣ್ಣಿನ ಕಣಗಳು ಅಪರಿಮಿತ. ಒಂದು ಕಣದಲ್ಲಿಯೂ ಇರುವ ಅಣುಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಪ್ರತಿ ಅಣುವೂ ಅದರಲ್ಲಿರುವ ಪರಮಾಣುಬೀಜಗಳ ದೃಷ್ಟಿಯಿಂದ ಬಹುಭಾಗ ಖಾಲಿಯೇ ಇರುವ ಮಹಾವಿಶ್ವ.

ಈ ಎರಡು ಅತಿಗಳ – ಒಂದು ಬೃಹದ್ವಿಶ್ವ ಇನ್ನೊಂದು ಪರಮಾಣು ವಿಶ್ವ – ನಡುವಿನ ಯಾವುದೋ ಒಂದು ಸ್ಥಾನ ಮನುಷ್ಯನದು. ಇವೆಲ್ಲವನ್ನೂ ನೋಡಿ ತಿಳಿದು ಅನುಭವಿಸುವವ ಮನುಷ್ಯ. ಆದ್ದರಿಂದ ವಾಸ್ತವಿಕ ಪರಿಸ್ಥಿತಿಯ ತೀರ್ಮಾನ ಮನುಷ್ಯ-ಭೂಮಿ ಹೊಂದಿಕೆಯಿಂದ. ಮನುಷ್ಯ ಅಂದರೇನು? ಮಣ್ಣಿನ ಮುದ್ದೆ; ವಾತಾವರಣ ಉಸಿರೂದಿತು, ಸೂರ್ಯ ಬೆಳಕು ಬೀರಿತು, ಹಸುರು ಹಿಟ್ಟು ಕೊಟ್ಟಿತು, ನೀರು ರಸ ನೀಡಿತು – ಇದೊಂದು ರಾಗಭಾವ ಸುಖದುಖಗಳ ಮಿಶ್ರಣ, ಜೀವಂತ ವ್ಯಕ್ತಿಯಾಗಿ ನೆಲದ ಮೇಲೆ ಅಲೆದಾಡಿತು. ಆದ್ದರಿಂದ ಭೂಮಿಯ ಸಾರ ಈ ಪುಟ್ಟ ಮನುಷ್ಯ. ಇದನ್ನು ಬಿಟ್ಟು ಅವನಿಲ್ಲ, ಅವನನ್ನು ಬಿಟ್ಟು ಇದಿರುವುದು ಸಾಧ್ಯ.

ಭೂಮಿಗೆ ಹೋಲಿಸುವಾಗ ಮನುಷ್ಯನ ಗಾತ್ರ ಎಷ್ಟು? ವ್ಯಾಸ ಸುಮಾರು ೧೨,೬೪೦ ಕಿಮೀ, ಸುತ್ತಳತೆ ೪೦,೦೦೦ ಕಿಮೀ – ಇದು ಭೂಮಿ. ಮನುಷ್ಯ? ೬ ಅಡಿ ಎತ್ತರ, ೩ ಅಡಿ ಎದೆಯ ಸುತ್ತಳತೆ. ಒಂದು ಬೆಟ್ಟ, ಒಂದು ಕಣಿವೆ (ಸಮುದ್ರ ಒತ್ತಟ್ಟಿಗಿರಲಿ) ನೋಡುವಾಗಲೇ ಆ ಮಹಾಗಾತ್ರ ಮನಸ್ಸನ್ನು ಕುಕ್ಕುವುದು. ಆದರೂ ಮನುಷ್ಯ ನಿರ್ಮಿತ ಗಗನಚುಂಬೀ ಸೌಧಗಳು, ಯಂತ್ರ, ಕಾರ್ಖಾನೆ, ವಿಮಾನ, ಹಡಗು, ಬಲು ಆಳವಾದ ಗಣಿ ಸುರಂಗಗಳಿವೆಯೆಂದು ಸಮಾಧಾನ ತಳೆಯಬಹುದೇ? ಇವುಗಳ ಅಸ್ತಿತ್ವವಾದರೂ ಏನು? ಜೀವನದ ನಮ್ಮ ಪ್ರತಿ ಅನುಭವವೂ ಹೋಲಿಕೆಯಿಂದಲೇ ಲಭಿಸಿದ್ದು, ಆದ್ದರಿಂದ ಒಂದು ನಿದರ್ಶನದಿಂದ ನಮ್ಮ ದೊ(ದ)ಡ್ಡತನ ಅರಿಯುವುದು ಲೇಸು.

೧೨,೬೪೦ ಕಿಮೀ ವ್ಯಾಸದ ಭೂಮಿ ಒಂದು ಅಡಿ ವ್ಯಾಸದ ಚೆಂಡಾಗಿ ಸಂಕೋಚಗೊಂಡಿದೆ ಎಂದು ಭಾವಿಸೋಣ. ಲೆಕ್ಕದ ಮಾಷ್ಟ್ರ ಭಾಷೆಯಲ್ಲಿ ಸ್ಕೇಲ್ ೧ ಅಡಿ = ೧೨೬೪೦ ಕಿಮೀ. ೮ ಕಿಮೀ ಎತ್ತರದ ಹಿಮಾಲಯ ಶಿಖರ ಈ ಚಂಡಿನ ಮೇಲೆ ೦.೦೦೮ ಇಂಚು ಗಾತ್ರದ ಧೂಳಿನ ಕಣವಾಗುತ್ತದೆ. ಅತಿಗಭೀರ ಸಮುದ್ರ ಇಷ್ಟೇ ಆಳದ ಗೀರಾಗುವುದು. ಒಂದು ಚಂಡಿನ ಮೈಮೇಲಿರುವ ಇಂಥ ಧೂಳು ಗೀರು ನಿಮ್ಮ ಕಣ್ಣಿಗೆ ಕಾಣುವುವೇ, ನೋಡಿ. ಅಂದರೆ ಭೂಮಿಗಾತ್ರದೊಡನೆ ಹೋಲಿಸುವಾಗ ಹಿಮಾಲಯ ದೊಡ್ಡ ಎತ್ತರ ಅಲ್ಲ. ಪೆಸಿಫಿಕ್ ಸಾಗರ ಮಹಾ ಆಳ ಅಲ್ಲ. ಆದ್ದರಿಂದಲೇ ಬಲು ಎತ್ತರಕ್ಕೆ ಹಾರಿ ಭೂಮಿಯನ್ನು ನೋಡುವಾಗ ಇದೊಂದು ಚಂಡಿನಂತೆಯೂ (ಇನ್ನೂ ಎತ್ತರ ಹೋದರೆ ಒಂದು ಉರುಟುಬಿಲ್ಲೆಯಂತೆಯೂ) ಇದರ ಮೈಮೇಲೆ ಭೂಖಂಡ, ಸಾಗರ, ಪರ್ವತ, ನದಿ ಮುಂತಾದ ಚಿತ್ರಗಳನ್ನು ಬಿಡಿಸಿದಂತೆಯೂ ಕಾಣುವುದು. ಈ ನೈಸರ್ಗಿಕ ಮಹಾಗಾತ್ರಗಳ ಪರಿಸ್ಥಿತಿಯೇ ಹೀಗಾದರೆ ಮನುಷ್ಯ ಮತ್ತು ಅವನ ಮಹಾ ನಿರ್ಮಾಣಗಳ ಅವಸ್ಥೆ ಎಷ್ಟು ಕಿರಿಯದು ಎಂದು ಊಹಿಸಿಕೊಳ್ಳಬಹುದು.

ಇವೆಲ್ಲ ನೈಸರ್ಗಿಕ ಕೊರತೆಗಳನ್ನೂ ಪರಿಹರಿಸಲು ಒಂದು ಮಹಾ ಆಯುಧ (ಅದನ್ನೂ ಭೂಮಿಯೇ ವರವಿತ್ತದ್ದು) ಮನುಷ್ಯನಲ್ಲಿದೆ – ಮಿದುಳು. ಭೂಮಿಯ ಕಾರ್ಯಕಲಾಪಗಳನ್ನು ನಿಯತ್ರಿಸುವುದು ಮನುಷ್ಯನಿಗೆ ಸಾಧ್ಯವಾಗದಿರಬಹುದು. ಆದರೆ ಅವನ್ನು ಅರ್ಥವಿಸಿ ತಿಳಿದು ಅನುವರ್ತಿಯಾಗಿ ವರ್ತಿಸಿ ಮಹಾಸಾಹಸಗಳನ್ನು ನೆರವೇರಿಸುವುದು ಅವನಿಗೆ ಸಾಧ್ಯವಾಗಿದೆ. ಹಿಡಿಯುವ ಪೆನ್ನು, ಕೂರುವ ಕುರ್ಚಿ, ಪಯಣಿಸುವ ಬಂಡಿ – ಒಂದೊಂದು ರಚನೆಯ ಹಿನ್ನೆಲೆಯಲ್ಲಿಯೂ ನಿಸರ್ಗದ ಬಲಗಳನ್ನು ಹೊಂದಿ ಅದರ ವೈಶಿಷ್ಟ್ಯವಿರುವುದು; ಈ ಬಲಗಳೇ ಮೈದಳೆದು ಅದು ರೂಪುಗೊಂಡಂತೆ ಇರುವುದು. ಹೀಗಲ್ಲದಿದ್ದರೆ ಆ ರಚನೆ ಉಪಯುಕ್ತವಾಗದು, ನಿಸರ್ಗದ ಪ್ರತಿರೋಧ ಬಲಗಳನ್ನು ಎದುರಿಸಿ ಬಹುಕಾಲ ಉಳಿಯದು. ಪ್ರವಾಹದ ವಿರುದ್ಧ ಎಷ್ಟು ಕಾಲ ಈಸಬಹುದು?