[‘ಮಂಗಳೂರಿನ ಆದಿ ಉರಗೋದ್ಯಾನ’– ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ) ಸದ್ಯ ಅಮೆರಿಕದಲ್ಲಿರುವ ಕಥಾನಾಯಕ – ಶರತ್‌ಗೆ ತನ್ನ ಪ್ರೇಮಸಮಾಗಮದ (ಅಯ್ಯೋ ಯಾವುದೋ ದಮಯಂತಿಯೊಡನಲ್ಲಪ್ಪಾ ಆದಿ ಉರಗೋದ್ಯಾನದೊಡನೆ) ನೆನಪುಗಳು ಕಾಡತೊಡಗಿದವು. “ಅಶೋಕರೇ ಅದು ಹಾಗಲ್ಲಾ…” ಎಂದು ಅಂತರ್ಜಾಲದ ‘ಸಂವಾದ’ ಪೆಟ್ಟಿಗೆಯೊಳಗೆ ಟಿಪ್ಪಣಿಸತೊಡಗಿದಾತನಿಗೆ ನಾನು (ಋತುಪರ್ಣ) ಸರಿಯಾದ ಪಟ್ಟೇ ಹಾಕಿರಬೇಕು. ನನ್ನಿಂದ ಯಾವತ್ತೂ ‘ಅಕ್ಷರವೈರಿ’ ಎಂದು ಗೇಲಿಗೊಳಗಾಗುತ್ತಿದ್ದಾತ ಆಶ್ಚರ್ಯಕರವಾಗಿ ಮೂರು ಕಂತುಗಳಲ್ಲಿ ಅವ್ಯವಸ್ಥಿತ ಟಿಪ್ಪಣಿಗಳಂತೆ, ಇಂಗ್ಲಿಶಿನ ಜಾಯಮಾನವನ್ನು ತನ್ನ ಭಾವಮಾನಕ್ಕೆ ತಕ್ಕಂತೆ ಜಗ್ಗಾಡಿ ಒಂದು ಸಮಗ್ರ ಚಿತ್ರಣವನ್ನೇ ಮಿಂಚಂಚೆ ಮೂಲಕ ಕಳಿಸಿದರು. ಈ ಉರಗೋದ್ಯಾನದಲ್ಲಿ ಶರತ್‌ನ ಅವಳಿ ಸೋದರನಂತೇ ತೆತ್ತುಕೊಂಡ ಅಥವಾ ಈತನಿಗಿಂತಲೂ ಒಂದು ಕೈ ಹೆಚ್ಚೇ ದುಡಿದರೂ ಸಹಜ ನಾಚಿಕೆ ಸ್ವಭಾವದಲ್ಲಿ ಹೆಚ್ಚು ಬೆಳಕಿಗೆ ಬಾರದ ಚಾರ್ಲ್ಸ್ ಪಾಲ್ ಕೂಡಾ ನನಗಷ್ಟೇ ಆತ್ಮೀಯ. ಶರತ್ ಮರೆತೋ ತಿಳಿಯದೆಯೋ ಬಿಟ್ಟಿರಬಹುದಾದ ಇನ್ನಷ್ಟು ವಿವರಗಳನ್ನು ಕಲೆಹಾಕಲು ನಾನು ಚಾರ್ಲ್ಸ್ ಸಂಪರ್ಕ ಮಾಡಿದೆ. ಆದರೀ ಪುಣ್ಯಾತ್ಮ ಅಕ್ಷರವೈರಿ ಮಾತ್ರವಲ್ಲ, ಪ್ರಚಾರ-ಸಂಕೋಚಿ! ನಾನು ಮುಖತಃ ಭೇಟಿಯಾದರೂ, ಮಿಂಚಂಚೆಯಲ್ಲಿ ಹೊಡೆದು, ಚರವಾಣಿಯಲ್ಲಿ ಕೊರೆದರೂ ಟಿಪ್ಪಣಿ ಬರಲಿಲ್ಲ, ಸಂದರ್ಶನ ದಕ್ಕಲಿಲ್ಲ, ಚಿತ್ರಗಳೂ ಒದಗಲಿಲ್ಲ. ತಾಳ್ಮೆ ಕಳೆದು ಶರತ್ ಕೊಟ್ಟ ವಿವರಗಳನ್ನೇ ಕನ್ನಡಿಸಿ, ವ್ಯವಸ್ಥೆ ಮಾಡಿ, ಮೊದಲ ಕಂತು ಇನ್ನೇನು ಜಾಲತಾಣಕ್ಕೇರಬೇಕೆನ್ನುವಲ್ಲಿ…

ನಿಮಗೆ ಗೊತ್ತು, ನನ್ನ ಜಾಲತಾಣ ನಿರ್ವಾಹಕ – ಮಗ, ಅಭಯಸಿಂಹ. ನನ್ನ ಸಾದಾ ಬರಹವನ್ನು ಸಾರ್ವತ್ರಿಕಕ್ಕೆ ಲಿಪ್ಯಂತರಗೊಳಿಸಿ (Ansi to Unicode), ಚಿತ್ರಗಳನ್ನು ಹದಗೊಳಿಸಿ (resolution, cropping, positioning), ಸೇತುಗಳನ್ನು (ಚಿತ್ರ, ವಿಡಿಯೋ, ಹಳೇ ಉಲ್ಲೇಖಗಳು ಎಷ್ಟೋ ಬಾರಿ ವಾಸ್ತವದಲ್ಲಿ ಕಾಣುವಂತೆ ಆಯಾ ಜಾಲತಾಣದಲ್ಲೇ ಇರಬೇಕೆಂದಿಲ್ಲ) ನೇರ್ಪುಗೊಳಿಸಿ ಜಾಲಕ್ಕೇರಿಸಲು ಕನಿಷ್ಠ ಅರ್ಧ ಗಂಟೆ ವ್ಯಯಿಸುತ್ತಾನೆ. ಹಾಗೇ ಅಭಯ ಈ ಲೇಖನವನ್ನು ಮಾಡುತ್ತಿರುವ ಕಾಲಕ್ಕೆ ನಡುವೆ ನಮ್ಮಿಬ್ಬರ ಸಮಾನ ಗೆಳೆಯ – ಪ್ರಜಾವಾಣಿಯ ಇಸ್ಮಾಯಿಲ್ ಸಂಪರ್ಕಕ್ಕೆ ಬಂದರು. ಅವರಿಗೆ ಇದರ ಸ್ವಾರಸ್ಯ ಹಿಡಿಸಿದ್ದಕ್ಕೇ ನಾನು ತುಸು ಸಂಗ್ರಹಗೊಳಿಸಿದ ರೂಪವನ್ನು ಕೊಟ್ಟು ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವವರೆಗೆ ಇಲ್ಲಿ ಪ್ರಕಟಣೆಯನ್ನು ಮುಂದೂಡಬೇಕಾಯ್ತು. ಇಂದಿನ ಮಟ್ಟದಲ್ಲಿ ಮುದ್ರಣ ಮಾಧ್ಯಮದ ಸಾರ್ವಜನಿಕ ಸಂಪರ್ಕ ವ್ಯಾಪ್ತಿ ಜಾಲತಾಣಕ್ಕಿಲ್ಲದಿದ್ದರೂ ಇಲ್ಲಿ ಬರಹಗಳಿಗೆ ಸ್ಥಳ ಸಂಕೋಚದ ಬಾಧೆಯಿಲ್ಲ, ಪತ್ರಿಕೆಗಳಂತೆ ಕ್ಷಣಿಕತೆಯಿಲ್ಲ, ಚಲನ ದೃಶ್ಯ ಹಾಗೂ ಧ್ವನಿಗಳ ಸೇರ್ಪಡೆಯೇ ಮುಂತಾದ ಸೌಲಭ್ಯಗಳನ್ನು ಗಣಿಸಿದರೆ ಇದರ ಶಕ್ತಿ ಅಪಾರ. ಅವಕ್ಕೆಲ್ಲ ಹೊಂದುವಂತೆ ಈಗ ಮಂಗಳೂರಿನ ಸರ್ವಪ್ರಥಮ ಹಾವುಗಳ ಸಂಗ್ರಹಾಗರದ ಹುಟ್ಟು ಬೆಳವಣಿಗೆಯ ಕಥೆಯನ್ನು ಎರಡು ಕಂತಿನಲ್ಲಿ direct from the horse’s mouth (ಕುದುರೆಯ ಬಾಯಿಯಿಂದ!) ಎನ್ನುತ್ತಾರಲ್ಲಾ ಹಾಗೆ ಡಾ| ಬಿ.ಕೆ. ಶರತ್ (ಕೃಷ್ಣ – ಅಮೆರಿಕದ ಅಗತ್ಯಕ್ಕಾಗಿ ಸ್ಫುಟಗೊಂಡ ಈತನದೇ ಅಪ್ಪನ ಹೆಸರು) ಮಾತುಗಳಲ್ಲೇ ಓದಿ -ಅಶೋಕವರ್ಧನ]

ಉರಗೋದ್ಯಾನ – ಬಿ.ಕೆ. ಶರತ್

ವಂಶಪಾರಂಪರ್ಯದಲ್ಲಿ ನೆಲ್ಯಾಡಿಯ ಹಳ್ಳಿಮೂಲೆಯಲ್ಲಿರಬೇಕಾದವ ನಾನು. ಆದರೆ ನನ್ನಪ್ಪ ವಕೀಲರಾಗಿ ಮಂಗಳೂರಿನಲ್ಲಿ ನೆಲೆಸಿದ್ದುದರಿಂದ ನಾನು (೧೯೬೦ – ೭೦ರ ದಶಕಗಳು) ಅಲ್ಲೇ ಹಳ್ಳಿಮನೆ ಕಂಡುಕೊಂಡೆ. ದನ, ನಾಯಿ, ಬೆಕ್ಕು – ಮನೆಯಲ್ಲಿ ಜನಕ್ಕಿಂತ ಜಾನುವಾರು ಸಂಖ್ಯೆ ದೊಡ್ಡದು! ಹಟ್ಟಿ ಸೆಗಣಿ ಬಾಚು, ಹುಲ್ಲು ಹಾಕು. ಹಿಂಡಿ ಪಾತ್ರೆ ಇಟ್ಟು, ಸಿಂಧು, ಗಂಗೆ, ಕಪಿಲೆ ಹಾಲು ಕರೆ. ಭೀಮ, ಬಸವರನ್ನು (ಹೋರಿಗಳು) ‘ವಾಕಿಂಗ್’ ನಡೆಸು. ನಾಯಿ ಕಟ್ಟು, ಬೆಕ್ಕಿಗೆ ಹಾಲಿಡು, ಗೋಡಾಕ್ಟ್ರು ಪ್ರಭಾಕರ ರಾಯರಿಂದ ಗಿರಿಜೆಗೆ ಮದ್ದು ತಾ – ಮುಗಿದದ್ದಿಲ್ಲ! ಇವುಗಳಲ್ಲಿ ಬಹುತೇಕವನ್ನು ಒಂದು ಹಂತದವರೆಗೆ ಅಮ್ಮ ನಡೆಸಿದವಳೇ. ಆದರೆ ಅವಳಿ ತಮ್ಮಂದಿರ ಅವತರಣದೊಡನೆ ಪ್ರೌಢಶಾಲೆಯಲ್ಲಿದ್ದ ನಾನು ಹೆಚ್ಚು ವಹಿಸಿಕೊಳ್ಳುವುದು ಅನಿವಾರ್ಯವೇ ಆಯ್ತು. ಈ ಗೋಜಲ ನಡುವೆ ನನಗೆ ಅದು ಹೇಗೋ ಮೀನು ಸಾಕಣೆಯ ಗೀಳೂ ಹತ್ತಿಕೊಂಡಿತ್ತು. ಹೀಗೆ ‘ಪಠ್ಯೇತರ ಚಟುವಟಿಕೆಗಳು’ ತಲೆಗೇರಿದ್ದಕ್ಕೇ ಇರಬೇಕು ನಾನು ಪೀಯೂಸಿಯಲ್ಲಿ ವರ್ಷಕಾಲ ವಿಶ್ರಾಂತಿ ತೆಗೆದುಕೊಂಡು ಮುಂದುವರಿದಿದ್ದೆ.

ಅಲೋಶಿಯಸ್ಸಿನಲ್ಲಿ ಬಿ.ಎಸ್ಸಿ ಮೊದಲ ವರ್ಷಕ್ಕೆ ಬಂದಾಗ ಅನಿರೀಕ್ಷಿತವಾಗಿ ಈ ಚಾರ್ಲೀ ಪರಿಚಯವಾಯ್ತು. ಆತ ಪೀಯೂಸಿಯಲ್ಲಿ ಬೇರೇ ವರ್ಗದಲ್ಲಿದ್ದ. ಆದರೆ ಎಲ್ಲೋ ಕೇಳಿ ಒಮ್ಮೆಗೆ ಗ್ರಂಥಾಲಯದಲ್ಲಿ ಢಿಕ್ಕಿ ಹೊಡೆದು ಕೇಳಿದ – “ನೀನೂ ಮೀನು ಸಾಕ್ತಿಯಾ?” ಹೀಗೆ ನಮ್ಮಿಬ್ಬರ ನಡುವೆ ಶುರುವಾದ ಮೀನ್ಮನೆ ಗೆಳೆತನ ಇಂದಿಗೂ ನಮ್ಮ ನಡುವೆ ಅವಳಿತನದ ಬೆಸುಗೆಯನ್ನೇ ಹಾಕಿದೆ ಎಂದರೆ ತಪ್ಪಾಗದು. ಕಾಲೇಜು ಮ್ಯೂಸಿಯಮ್ಮಿನಲ್ಲಿ ಚಿಪ್ಪು, ಶಂಖಗಳ ಅಪಾರ ಸಂಗ್ರಹವಿತ್ತು. ಅವುಗಳ ಪರಿಚಯ, ಲಕ್ಷಣ ತಿಳಿಯಲು ನಾವು ಮೂಗು ತೂರಿದೆವು. ಹಾಗೇ ಇತರ ಪ್ರಾಣಿ ಪಕ್ಷಿಗಳ ಬಗ್ಗೆಯೂ ನಮ್ಮ ಕುತೂಹಲದ ಕಡಲಿಗೆ ನೆಚ್ಚಬಹುದಾದ ದಂಡೆ ಎಂದೇ ನಾವು ಕಾಲೇಜ್ ಮ್ಯೂಸಿಯಂಗೆ ಪ್ರವೇಶಾವಕಾಶ ಕೋರಿದೆವು. ಅಲ್ಲೊಬ್ಬ ಮಾಂತ್ರಿಕ…

ಫಾದರ್ ಅಲ್ಫಾನ್ಸೋ

ಕಾಲೇಜಿನ ಉಪಪ್ರಾಂಶುಪಾಲ ಫಾ| ಅಲ್ಫಾನ್ಸೋ ಲೆಕ್ಕಕ್ಕೆ ಸಮಾಜಶಾಸ್ತ್ರದ ಅಧ್ಯಾಪಕ. ಆದರೆ ವಿದ್ಯಾರ್ಥಿ ಪ್ರೀತಿ, ತಿಳುವಳಿಕೆಯ ಹರಹು ಇವರನ್ನು ಮ್ಯೂಸಿಯಮ್ಮಿನ ನಿರ್ದೇಶಕನನ್ನಾಗಿಯೂ ಕೂರಿಸಿತ್ತು. ಅದು ಬಹುಶಃ ನಾನು ಎರಡನೇ ವರ್ಷ ಬೀಎಸ್ಸಿಯಲ್ಲಿದ್ದಾಗ (೧೯೭೮-೭೯). ಅಲ್ಫಾನ್ಸೋ ಸುಮಾರು ಒಂದು ತಾಸು ಎಲ್ಲವನ್ನು ತೋರಿಸಿದರು. ಅಲ್ಲಿನ ದೂಳು, ಕಸ, ಅವ್ಯವಸ್ಥೆ ಸರಿಪಡಿಸುವಲ್ಲಿ ನಮ್ಮ ಸಹಾಯವನ್ನೂ ಕೇಳಿದರು. ಹಾಗೆ ಸುರುವಾಯಿತು ನಮ್ಮ ಹೊಸಜಾಡು; ಪ್ರತಿ ಸಂಜೆ ನಾವು ಪ್ರೀತಿಯಿಂದ ಮ್ಯೂಸಿಯಂ ಕ್ಲೀನರ್ಸ್! ಆಗ ರಾಸಾಯನಿಕ ದ್ರವಗಳಲ್ಲಿ ಮುಳುಗಿಸಿಟ್ಟ ಅಸಂಖ್ಯ ಉರಗ ಮಾದರಿಗಳು ನಮಗೆ ಕಾಣಸಿಕ್ಕವು. ಯಾರೋ ಪುಣ್ಯಾತ್ಮ ಹಗಲು ಬೆವರು ಹರಿಸಿ, ರಾತ್ರಿ ನಿದ್ದೆಗೆಟ್ಟು ಸಂಗ್ರಹ ನಡೆಸಿದ್ದಂತೂ ಸ್ಪಷ್ಟವಿತ್ತು. ಆದರೆ ಆ ಗಾಜಿನ ಬಾಟಲಿಗಳ ಮೇಲೆ ಆತ ಶ್ರದ್ಧೆಯಿಂದ ಬರೆದು ಅಂಟಿಸಿದ್ದಿರಬಹುದಾದ ಗುರುತು ಚೀಟಿ, ಟಿಪ್ಪಣಿಗಳೆಲ್ಲ ಮಾಸಿಯೋ ಕಳೆದೋ ಹೋಗಿ, ಸಂಗ್ರಹ ಒಂದು ಲೆಕ್ಕದಲ್ಲಿ ಅನಾಥವೇ ಆಗಿದ್ದವು. ಅವುಗಳಲ್ಲಿ ಹಾವು ಮಾದರಿಗಳ ಸಂಗ್ರಹ ಸಾಕಷ್ಟು ದೊಡ್ಡದೇ ಇತ್ತು. ಸಜವಾಗಿ ಅವುಗಳನ್ನು ಮತ್ತೆ ಗುರುತಿಸುವ ಕೆಲಸ ನಾವು ವಹಿಸಿಕೊಂಡೆವು. ಭಾರೀ ಆಕರ ಗ್ರಂಥಗಳು, ಏನು ಕೇಳಿದರೂ ಪುಟಗಟ್ಟಳೆ ಮಾಹಿತಿ, ಚಿತ್ರ ಕೊಡುವ ಅಂತರ್ಜಾಲದ ದಿನಗಳಲ್ಲ, ನೆನಪಿರಲಿ. ಪಠ್ಯ ಪುಸ್ತಕದ ಬದನೆಕಾಯಿ ಮಾತ್ರ ಕೊಚ್ಚುತ್ತಿದ್ದ ಪ್ರಾಣಿಶಾಶ್ತ್ರ ವಿಭಾಗದ ಅಧ್ಯಾಪಕರು ಉಪಯೋಗಕ್ಕೆ ಒದಗಲಿಲ್ಲ. ಬಣ್ಣಗುಂದಿ, ಕೊರಡುಗಟ್ಟಿದ ಮಾದರಿಗಳನ್ನು ನಿಖರವಾಗಿ ಗುರುತಿಸುವುದು ನಮಗೆ ಬಹಳ ದೊಡ್ಡ ಸವಾಲಾಗಿಯೇ ಪರಿಣಮಿಸಿತು.

ಉಚ್ಚಿನ (=ತುಳುವಿನಲ್ಲಿ, ಹಾವು) ಹುಚ್ಚು ಹೆಚ್ಚಾಯಿತು! ಆಗ ಅದೃಷ್ಟಕ್ಕೆ ಹಂಪನಕಟ್ಟೆ ಸಿಂಡಿಕೇಟ್ ಬ್ಯಾಂಕ್ ಕಟ್ಟಡದಲ್ಲಿದ್ದ ಕರ್ನಾಟಕ ಲ್ಯಾಬೊರೇಟರಿ ಸರ್ವಿಸಸ್ಸಿನಲ್ಲೊಂದು ಆಶಾದೀಪ ಕಾಣಿಸಿತು. ಯಾರೋ ಫರಂಗಿಪೇಟೆಯ ಕ್ರಿಸ್ತ ಸೋದರನಂತೆ (ಕಪುಚಿನ್ ಪಾದ್ರಿ), ಹೆಸರು ಬ್ರ| ಓಡ್ರಿಕ್ ದೇವಾನಂದ ಅಂತೆ, ಆಗಾಗ ಹಾವುಗಳ ಮಾದರಿ ಕೆಡದಂತುಳಿಸಿಕೊಳ್ಳಲು ಬೇಕಾಗುವ ರಾಸಾಯನಿಕ, ಗಾಜಿನ ಬಾಟಲುಗಳೆಲ್ಲ ಖರೀದಿಸುತ್ತಿರುತ್ತಾರಂತೆ. ನಾನು, ಚಾರ್ಲಿ ತಡ ಮಾಡದೆ ಫರಂಗಿಪೇಟೆಗೆ ಸವಾರಿ ಹೊರಟೆವು. ಅಲ್ಲಿ ಬಸ್ಟಾಪಿನಲ್ಲಿ ಕೇಳಿದಾಗ “ಬ್ರ| ಓಡ್ರಿಕ್ಕಾ? ಅಲ್ಲಿ ಪೇದ್ರುವಿನ ಅಂಗಡಿಯಲ್ಲಿ ಕೇಳಿ. ಯಾವಾಗಲು ಬರುತ್ತಾರೆ. ಅವರ ಬಳಿಯಲ್ಲಿ ತುಂಬಾ ಜೀವಂತ ಹಾವುಗಳಿದೆಯಂತೆ.” ಪೇದ್ರು, ಕ್ರೈಸ್ತ ಮಠವೊಂದರ (Franciscan Friary) ವಿಳಾಸ ಕೊಟ್ಟರು. ಅದು ಒಂದು ದೊಡ್ಡ ಬ್ರಿಟಿಷ್ ಯುಗದ ಕೋಟೆಯ ಹಾಗೇ ಇತ್ತು. ನಮ್ಮ ದುರದೃಷ್ಟಕ್ಕೆ ಅಂದು ಓಡ್ರಿಕ್ ಮನೆಯಲ್ಲಿರಲಿಲ್ಲ. ಆದರೆ ಮತ್ತೆ ಎರಡು ವಾರಗಳನಂತರ ಪುನಃ ಹೊದಾಗ ಒಣಕಲು ಜೀವಿ ಓಡ್ರಿಕ್ ಅವರ ಭೇಟಿಯಾಯಿತು.

ಫರಂಗಿಪೇಟೆಯ ಮಝಾ. ಬ್ರ|ಓಡ್ರಿಕ್ ದೇವಾನಂದ (ಓರ್ವ ಕ್ರಿಶ್ಚಿಯನ್ ಧರ್ಮಭ್ರಾತೃ) ಬಹಳ ಸ್ನೇಹಮಯಿ ವ್ಯಕ್ತಿ. ಹೋದಾಗೆಲ್ಲ ನಮಗಾಗಿ ಬಿಸ್ಕೆಟ್, ಚಾ ತರಿಸಿ ಕೊಟ್ಟು ಗಂಟೆಗಟ್ಟಳೆ ಪಟ್ಟಾಂಗವೇನೋ ಹೊಡೀತಿದ್ರು. ನಾವು ನಮ್ಮ ಮ್ಯೂಸಿಯಂನ ಹಾವುಗಳ ಕತೆ ಹೇಳಿದೆವು. ಅವನ್ನೆಲ್ಲ ಹಿಂದೆ ಪಾದ್ರಿಯೊಬ್ಬ ಮಾಡಿದ್ದೂ ಓಡ್ರಿಕ್ಕಿಗೆ ತಿಳಿದಿತ್ತು. ಓಡ್ರಿಕ್ ಸ್ವಂತ ಓದು ಮತ್ತು ಪ್ರಯೋಗಗಳಿಂದ ಹಾವುಗಳನ್ನು ಗುರುತು ಹಚ್ಚಲು ಮಾಹಿತಿ (identification key) ಪಟ್ಟಿಯನ್ನೇ ಮಾಡಿ ಇಟ್ಟುಕೊಂಡಿದ್ದರು. ಗಣಕದ ಹಾಗೇ ಛಾಯಾನಕಲೂ (ಫೋಟೋ ಕಾಪಿ) ಮಾಡುವ ಯಂತ್ರಗಳಿಲ್ಲದ ಕಾಲ. ಆದರೆ ನಮ್ಮ ಆಸಕ್ತಿ ನೋಡಿ ಓಡ್ರಿಕ್, ಅಷ್ಟನ್ನೂ ಕೈಯಾರೆ ಬೆರಳಚ್ಚಿನ ಪ್ರತಿ ಮಾಡಿ, ಎರಡುವಾರಗಳ ಮೇಲೆ ಕೊಟ್ಟರು. (ಆ ಪ್ರತಿಯನ್ನು ನಾನು ಸುಮಾರು ವರ್ಷ ಇಟ್ಟುಕೊಂಡಿದ್ದೆ) ಅವರ ಜೀವಂತ ಮತ್ತು ಮೃತ ಹಾವುಗಳನ್ನೂ ನಮಗೆ ಧಾರಾಳ ತೋರಿಸಿದರು. ಜೀವವೈವಿಧ್ಯದ ಹತ್ತೆಂಟು ಶಾಖೆಗಳಲ್ಲಿ ಹಂಚಿಹೋಗಿದ್ದ ನಮ್ಮ ಕುತೂಹಲವೆಲ್ಲಾ ಕ್ರಮೇಣ ಹಾವುಗಳನ್ನು ಮಾತ್ರ ತಿಳಿಯುವ ಕಡೆಗೆ ಪೂರ್ಣ ಹೊರಳಿತು.

ಓಡ್ರಿಕ್ ನಮ್ಮೆಲ್ಲಾ ಆಸಕ್ತಿ, ತರ್ಕ ಮೀರಿ ವಿಷದ ಹಾವುಗಳನ್ನು ನಮ್ಮ ಕೈಗೆ ಕೊಡಲು ಮಾತ್ರ ಹಿಂಜರಿಯುತ್ತಿದ್ದರು. “ವಿಷದ ಹಾವು ಅಂದ್ರೇ ಸಜೀವ ವಿದ್ಯುತ್ ತಂತಿಯ ಹಾಗೆ. ಸರಿಯಾದ ಆವರಣ ಇದ್ರೆ ಸರಿ, ಆದ್ರೆ ಒಳಗೆ ಯಾವತ್ತೂ ಮರಣಾಂತಿಕ!” ಆದರೆ ಅವರೊಡನೆ ಆಗುತ್ತಿದ್ದ ಸಂವಾದಗಳು ವಿವಿಧ ಹಾವುಗಳ ವರ್ತನೆಯ ಕುರಿತಂತೆ ನಮಗೆ ಅನ್ಯತ್ರ ಸಿಗದ ಮಾಹಿತಿಗಳನ್ನು ಧಾರಾಳ ಕೊಡುತ್ತಿದ್ದವು. ನೆನಪಿರಲಿ, ನಾನು ಗಣಕ, ಅಂತರ್ಜಾಲಗಳ ಕಲ್ಪನೆಯೂ ಇಲ್ಲದ ೧೯೭೦ರ ದಶಕದ ಮಾತು ಹೇಳ್ತಾ ಇದ್ದೇನೆ. ಅವರು ನಾಗರ ಹಾವಿನ ಪಂಜರ ಚೊಕ್ಕಟ ಮಾಡುವಾಗ ನಮ್ಮನ್ನು ದೂರದಲ್ಲಿ ನಿಲ್ಲಿಸಿ ಬಿಡುತ್ತಿದ್ದರು. ವಿಷರಹಿತ ಹಾವುಗಳ ನಿರ್ವಹಣೆ ಅದರಲ್ಲೂ ನಮ್ಮ ಪ್ರಿಯ ಮರಳು ಹಾವಿನ (Russell’s Sand Boa) ಗೂಡುಗಳನ್ನು ಚೊಕ್ಕಟಮಾಡಲು ನಮಗೆ ಧಾರಾಳ ಅವಕಾಶ ಕೊಡುತ್ತಿದ್ದರು. ನಮ್ಮ ಕೆಲವು ತಿಂಗಳ ಉಪದ್ರ ತಡೆಯಲಾಗದೆ ಅಂತೂ ಒಂದು ದಿನ ಹಾವು ಹುಡುಕಿಕೊಂಡು ನಮ್ಮನ್ನು ಅವರ ಮಠದ ತೆಂಗಿನತೋಟಕ್ಕೆ ಕರೆದೊಯ್ದರು.

೧೯೭೮ರ ಮಳೆಗಾಲ ಮುಗಿದ ದಿನಗಳಿರಬೇಕು. ಹತ್ತೆಕ್ರೆ ತೋಟದೊಳಗೆ ಕೆಲಸದವರು ತೆಂಗಿನ ಬುಡ ಬಿಡಿಸುತ್ತಾ, ಸೊಪ್ಪಿನ ಗೊಬ್ಬರ ಕೂಡುತ್ತಾ ಇದ್ದರು. ಹತ್ತು ಮಿನಿಟು ಕಳೆಯುವುದರೊಳಗೆ ಬೊಬ್ಬೆ ಕೇಳಿತು “ಹಾವು ಹಾವೂ.” ಓಡ್ರಿಕ್ ಜೊತೆಯಲ್ಲೇ ಚಾರ್ಲ್ಸ್ ಮತ್ತು ನಾನೂ ಸ್ಥಳಕ್ಕೆ ಓಡಿದ್ದೇ ಬಂತು! ನೋಡಿದರೆ ಅದು ಪಗಲೆ – ವಿಷರಹಿತ ಹಾವು (ಸ್ಟ್ರೈಪ್ಡ್ ಕೀಲ್ ಬ್ಯಾಕ್). ಓಡ್ರಿಕ್ ಅದನ್ನು ಎಡ ಅಂಗೈ ಮೇಲಿಟ್ಟು ಬಲ ಹಸ್ತವನ್ನು ಅರಳಿಸಿ, ಹಾವಿನ ಎದುರು ಆಡಿಸತೊಡಗಿದರು (ಪರಿಚಯ ಇಲ್ಲದವರು ಪಾದ್ರಿ ಅದನ್ನು ಹರಸುತ್ತಿದ್ದಾರೋ ಎಂದು ಭಾವಿಸಬೇಕು!) ವಾಸ್ತವದಲ್ಲಿ ಹಾವಿನ ವರ್ತನೆಯನ್ನು ಶಾಂತವಾಗಿಸುವ ಈ ತಂತ್ರವನ್ನು ನಾನು ಇಂದಿಗೂ ಬಳಸುತ್ತೇನೆ. ಹಾವು ಬೇಗನೆ ಪಳಗಿದಂತೆ ಶಾಂತವಾಯ್ತು. ಮತ್ತೆ ಅವರು ಅದನ್ನು ನಮ್ಮ ಕೈಗೊಪ್ಪಿಸಿದರು. ನಮಗೋ ಪರಮಾನಂದ. ಮುಂದಿನ ಕೆಲವು ಗಂಟೆಗಳ ಕಾಲ ನಾನು ಮತ್ತು ಚಾರ್ಲೀ ಅದನ್ನು ಕೈ ಬದಲಿಸುತ್ತಾ ಸಂತೊಷಿಸಿದೆವು. ಕೊನೆಯಲ್ಲಿ ಅದನ್ನು ಕಟ್ಟಡದ ಒಳಗೂ ಒಯ್ದು, ಅದರ ನೆಪದಲ್ಲಿ ನಮಗೆ ವಿಷದ ಹಾವುಗಳನ್ನು ನಿರ್ವಹಿಸುವ ಪಾಠವನ್ನೂ ಓಡ್ರಿಕ್ ಕೊಟ್ಟರು. ನೇರ ಪ್ರಕೃತಿಯಿಂದ ಬಂದ (ಹಲ್ಲು ಕಳೆದುಕೊಂಡ ಅಥವಾ ಸಾಕಷ್ಟು ಹಿಂಸೆಯೊಡನೆ ಪಳಗಿಸಲ್ಪಟ್ಟ ಹಾವಾಡಿಗನ ಬುಟ್ಟಿಯಿಂದ ಅಲ್ಲ ಎಂಬರ್ಥದಲ್ಲಿ) ಜೀವಂತ ಹಾವನ್ನು ಮೊದಲು ಕೈಯಲ್ಲಿ ಹಿಡಿದ ಆ ಅನುಭವ ನಮಗಂತೂ ಚಿರಸ್ಮರಣೀಯ.

ಅತ್ರಿ ಬುಕ್ ಸೆಂಟರಿನ ಅಶೋಕವರ್ಧನ ನನಗೆ ನಿತ್ಯದ ಹಿರಿಯ ಗೆಳೆಯ. ನಾನು ಚಾರ್ಲಿಯೊಡನೆ ಇಲ್ಲವೆಂದರೆ ಅತ್ರಿಯಲ್ಲಿ ಖಾತ್ರಿ ಎಂಬಷ್ಟು ಅಲ್ಲಿನ ವಿಚಾರಗಳು ನನ್ನನ್ನು ಆಕರ್ಷಿಸುತ್ತಿದ್ದವು. ಪ್ರಾಕೃತಿಕ ಪರಿಸರದ ಮೇಲೆ ಅಭಿವೃದ್ಧಿಯ ಹೆಸರಿನಲ್ಲಾಗುವ ಅವಹೇಳನಗಳನ್ನು ನಾವು ವಿಷಾದಪೂರ್ವಕವಾಗಿ ಚರ್ಚಿಸುತ್ತ ದೀರ್ಘ ವನವಿಹಾರಗಳ ಕುರಿತು ಸಾಕಷ್ಟು ಚಿಂತಿಸಿದ್ದಿತ್ತು. ಇದರ ಪರಿಣಾಮವಾಗಿ ನಾನು ಒಮ್ಮೆ ಚಾರ್ಲಿಯೊಡನೆ ಫರಂಗಿಪೇಟೆಯಿಂದ ಗುಡ್ಡೆಗಳ ಮೇಲೇ ಮಂಗಳೂರಿಗೆ ನಡೆದು ಹೋಗುವ ಕೆಲಸಕ್ಕೂ ಇಳಿದಿದ್ದೆ. ಹೆದ್ದಾರಿಯಿಂದ ಉತ್ತರಕ್ಕೆ ಬೆಂಜನಪದವಿನ ಎತ್ತರದಿಂದ ತೊಡಗಿದ ಈ ಜಾಡು ಸುಮಾರು ಇಪ್ಪತ್ತು ಕಿಮೀ ಇದ್ದಿರಬಹುದು. ಉರಿಬಿಸಿಲಿನಲ್ಲಿ ಸುಮಾರು ಎರಡು ಗಂಟೆ ನಡೆದದ್ದಿರಬಹುದು. ಆ ಹೊತ್ತಿನಲ್ಲಿ ನಾವು ಯಾವ ಹಾವಿನ ನಿರೀಕ್ಷೆಯಲ್ಲೂ ಇರಲಿಲ್ಲ. ಆದರೂ ಒಂದು ಒಣ ತೊರೆಯ ಜಾಡಿನಲ್ಲಿ ಒಂದು ಪಗಲೆ ಕಲ್ಲಿನ ಸಂದಿಗೆ ತೂರಿಕೊಳ್ಳಲು ಪ್ರಯತ್ನಿಸುವುದನ್ನು ಕಂಡುಬಿಟ್ಟೆವು. ಮತ್ತೆ ಕೇಳಬೇಕೇ ಓಡ್ರಿಕ್ ಶೈಲಿಯಲ್ಲಿ ಅದನ್ನು ಹಿಡಿದು, ಅಂಗೈ ತಿರುವಿ ಮಂಕು ಮಾಡಿದ್ದೆಲ್ಲಾ ಆಯ್ತು. ಅದನ್ನು ಒಯ್ಯಲು ನಮ್ಮ ಸಿದ್ಧತೆಗಳೇನೂ ಇರಲಿಲ್ಲ. ಆದರೆ ಓಡ್ರಿಕ್ ಅವರಿಗೆ ತೋರಿಸಬೇಕೆಂಬ ಹುಮ್ಮಸ್ಸು. ತುಸು ರಾಜೀ ಮಾಡಿಕೊಂಡು, ಇದ್ದ ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ತುಂಬಿ, ಬಾಯಿಗೊಂದು ರಬ್ಬರ್ ಬ್ಯಾಂಡ್ ಹಾಕಿ (ಚಾರ್ಲಿಗೆ ಸಂತೆಯಿಂದ ಬಂಗುಡೆ ತಂದ ಅನುಭವ ಇರಲಿಲ್ಲವೇ!) ಹೊರಟೇ ಬಿಟ್ಟೆವು. ಆದರೆ ನಮ್ಮ ‘ಕೊಂಡಾಟ’ದಲ್ಲಿ ಬಸವಳಿದು, ಉರಿ ಬಿಸಿಲಿಗೆ ಬೆಂದು, ಪ್ಲ್ಯಾಸ್ಟಿಕ್ ಒಳಗೆ ದಮ್ಮು ಕಟ್ಟಿ ಹಾವು ಹತ್ತೇ ಮಿನಿಟಿನಲ್ಲಿ ಅಸು ನೀಗಿತು. ನಾವು ನಿರಾಶರಾಗಿ ದೀರ್ಘ ಚಾರಣ ಬಿಟ್ಟು, ಮಾರ್ಗಕ್ಕಿಳಿದು (ಬಹುಶಃ ಪಡೀಲಿನ ಹತ್ತಿರವೆಲ್ಲೋ) ಮನೆ ಸೇರಿಕೊಂಡೆವು.

ಒಂದು ದಿನ ನಾನೊಬ್ಬನೇ ಫರಂಗಿಪೇಟೆಗೆ ಹೋದಾಗ ಓಡ್ರಿಕ್ ಬಸ್ ಕಾದಿದ್ದರು. ಮತ್ತೆ ಕುಶಿಯಿಂದಲೇ ಎಕ್ಕೂರು ಬಳಿಯ ಐದು ಸೆಂಟು ಕಾಲನಿಯೆಡೆಗೆ ಹಾವು ಹಿಡಿಯಲು ಕರೆದೊಯ್ದರು. ಓಡ್ರಿಕ್ ಅಲ್ಲಿನ ಬಡಜನರನ್ನು ಕೃಷಿ ಸಾಲದ ಮಧ್ಯವರ್ತಿಗಳಿಂದ ಬಚಾಯಿಸಲು ಸ್ವಸಹಾಯಪದ್ಧತಿಯಂತೇ ಸಂಘಟಿಸಿ ಪ್ರೀತಿ ಗಳಿಸಿದ್ದರು. ಅಂದು ಆ ಒಂದು ಮನೆಯಲ್ಲಿ ಯಾರೂ ಬಯಸದ ಅತಿಥಿ – ಒಂದು ನಾಗರಹಾವು, ಬಂದು ಬಿಟ್ಟಿತ್ತು. ನಾವಲ್ಲಿಗೆ ಹೋದಾಗ ಮನೆಯವರೆಲ್ಲಾ ಅಂಗಳದಲ್ಲಿದ್ದರು, ಅತಿಥಿ ಅಡುಗೆಮನೆ ಆಕ್ರಮಿಸಿದ್ದಂತಿತ್ತು. ಓಡ್ರಿಕ್ ನನ್ನನ್ನು ದೂರ ನಿಲ್ಲಲು ಸೂಚಿಸಿ, ಸಿಮೆಂಟ್ ಹಾಕಿ ಗಟ್ಟಿ ಮಾಡದ ಸ್ಲ್ಯಾಬನ್ನು ಮೆಲ್ಲಗೆ ಸರಿಸಿದರು. ಕೆಳಗಿನ ಸಂದಿನಲ್ಲಿದ್ದ ನಾಗರಾಜ ಬುಸ್ಸೆಂದು ತಲೆ ಎತ್ತಿ ಹೆಡೆಯರಳಿಸಿದ. ಆದರೆ ಓಡ್ರಿಕ್ ಸಮಾಧಾನದಲ್ಲಿ ಅದರೊಡನೆ ಮಾತಾಡುತ್ತಾ ತಾವು ತಂದಿದ್ದ ತುದಿ ಡೊಂಕಿನ ಕೋಲಿನಲ್ಲಿ ಮೆಲ್ಲನೆ ಅದರ ತಲೆಯನ್ನು ನೆಲಕ್ಕೆ ಒತ್ತಿಟ್ಟು, ಜಾಣ್ಮೆಯಲ್ಲಿ ಕೈಗೆ ತಂದುಕೊಂಡರು. ಕೆಲವೇ ಮಿನಿಟುಗಳಲ್ಲಿ ಅವರು ಅದಕ್ಕಾಗಿಯೇ ಒಯ್ದಿದ್ದ ಚೀಲದೊಳಕ್ಕೂ ಆ ನಾಗರ ಹಾವನ್ನು ಸೇರಿಸಿದ ಮೆಲೆ, ಫರಂಗಿಪೇಟೆ ದಾರಿ ಹಿಡಿದೆವು. ಮುಂದಿನ ದಿನಗಳಲ್ಲಿ ನನಗೂ ಚಾರ್ಲಿಗೂ ಹಾವು ಹಿಡಿಯುವ ಕೊಕ್ಕೆ ಮಾಡುವುದು, ಚೀಲ ಹೊಲಿಯುವುದು ಒಂದು ಗಿರವೇ ಆಗಿತ್ತು. ತಮಾಷೆ ಎಂದರೆ ಚಾರ್ಲಿಗದು ತೀರಾ ಈಚಿನವರೆಗೂ ಕಳಚಲಾಗದ ಹವ್ಯಾಸವೇ ಆಗಿತ್ತಂತೆ!

ಓಡ್ರಿಕ್ ವರ್ಗಾವಣೆ, ಬಯಸದೇ ಬಂದ ಭಾಗ್ಯ!

ಇದ್ದಕ್ಕಿದ್ದಂತೆ ಒಂದು ದಿನ ಬ್ರ| ಓಡ್ರಿಕ್ ಅವರಿಗೆ ಮುಂಬೈಗೆ ವರ್ಗಾವಣೆ ಎಂಬ ಬಲು ಬೇಸರದ ಸಮಾಚಾರ ಬಂತು. ಜೊತೆಗೆ ತಿಂಗಳೊಳಗಾಗಿ ಅವರು ತಮ್ಮೆಲ್ಲ ಉರಗ ಸಂಗ್ರಹ, ಗೂಡುಗಳನ್ನು ವಿಲೇವಾರಿ ಮಾಡಿಯೇ ಹೊರಡಬೇಕಿತ್ತು; ಒಯ್ಯುವಂತಿರಲಿಲ್ಲ. ನಮಗೆ ಫರಂಗಿಪೇಟೆಯ ಮಝಾದ ದಿನಗಳು ಮುಗಿದಿತ್ತು, ಇನ್ನೊಂದೇ ಸಾಹಸದ ದ್ವಾರ ತೆರೆದಿತ್ತು! ನಾವು ಓಡ್ರಿಕ್ಕರ ಉರಗ ಸಂಗ್ರಹವನ್ನೆಲ್ಲಾ ಜೋಪಾನವಾಗಿ ನೋಡಿಕೊಳ್ಳುವ ಭರವಸೆ ಕೊಟ್ಟು ಅವನ್ನು ಸಂಗ್ರಹಿಸುವಲ್ಲಿ ದಾರಿ ಹುಡುಕತೊಡಗಿದೆವು. ವಿಷಯ ಸಣ್ಣದಲ್ಲ – ೨೩ ಉರಗಗಳು; ಹತ್ತಡಿಗೂ ಮಿಕ್ಕು ಉದ್ದದ ಹೆಬ್ಬಾವು, ಏಳು ನಾಗರಹಾವು, ಮೂರು ರಸೆಲ್ಸ್ ವೈಪರ್, ಐದು ಮರಳು ಹಾವು, ಒಂದು ಹಸುರು ಹಾವು, ಒಂದು ಸಾಸ್ಕೇಲ್ ವೈಪರ್, ಎರಡು ಕೇರೇ ಹಾವು ಇತ್ಯಾದಿ, ಇಂದು ಎಲ್ಲ ನನ್ನ ನೆನಪಿಗೆ ಬರುತ್ತಿಲ್ಲ. ಆದರೂ ಇಗರ್ಜಿಯ ಕೊಟ್ಟಿಗೆಯೊಂದರಲ್ಲಿ ಇವೆಲ್ಲವನ್ನೂ ತುಂಬಿಕೊಂಡಿದ್ದ ಅಷ್ಟೂ ಪಂಜರ, ಗೂಡುಗಳನ್ನು ನಾವು ಕೂಡಲೆ ಹೊಸದೇ ಆಶ್ರಯಕ್ಕೆ ಸಾಗಿಸಬೇಕಿತ್ತು.

ಆದರೆ ಎಲ್ಲಿಗೆ? ನಮಗೆ ಮೊದಲು ಹೊಳೆದ ಸ್ಥಳ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿವಿಜ್ಞಾನ ವಿಭಾಗ. ಅಲ್ಲಿ ಆಗಲೇ ಎರಡು ನಾಗರ ಹಾವು, ಒಂದು ಮೊಸಳೆ ಕೆಲವು ಮೊಲಗಳು ಇದ್ದವು. ಆದರೆ ದುರದೃಷ್ಟವಶಾತ್ ವಿಭಾಗ ಮುಖ್ಯಸ್ಥರಿಗೆ ಹೆಚ್ಚಿನ ಜವಾಬ್ದಾರಿ ಬೇಕಿರಲಿಲ್ಲ. ನಮ್ಮ ಬಲುದೊಡ್ಡ ಹಿತೈಷಿ ಪಾ| ಆಲ್ಫಾನ್ಸೋ ಸ್ವತಃ ಪ್ರಭಾವ ಬೀರಿದರೂ ವಿಭಾಗ ಮುಖ್ಯಸ್ಥ ಜವಾಬ್ದಾರಿ ವಹಿಸಿಕೊಳ್ಳಲಿಲ್ಲ. ಆದರೂ ಆಲ್ಫಾನ್ಸೋ ನಮ್ಮ ಜೊತೆಗೆ ಫರಂಗಿಪೇಟೆಗೆ ಬಂದು ಓಡ್ರಿಕ್ಕರ ಬಳಿ ಧೈರ್ಯದ ಮಾತು ಹೇಳಲು ತಪ್ಪಲಿಲ್ಲ. ನಮಗುಳಿದ ಕೊನೆಯ ಆಯ್ಕೆ ಉರಗ ಸಂಗ್ರಹಕ್ಕೆ ಚರಮಗೀತೆ ಹಾಡುವುದು.

ನಾನು ಅಲೋಶಿಯಸ್ ಪ್ರೌಢಶಾಲೆಯಲ್ಲಿದ್ದಾಗ ನನ್ನ ಮೀನ್ಮನೆ ಆಸಕ್ತಿ, ಕಿರು ಪ್ರಾಣಿಗಳ ಬಗೆಗಿನ ಪ್ರೀತಿಯನ್ನೆಲ್ಲ ಅರ್ಥ ಮಾಡಿಕೊಂಡು ಬಲವಾಗಿ ಬೆಂಬಲಿಸಿದವರು ವಿಜ್ಞಾನ ಅಧ್ಯಾಪಕ ಫಾ| ಎಲ್. ಪಿಂಟೋ. ಅವರೀಗ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ಅವರ ಶರಣು ಹೋದೆ. ಶಾಲಾ ವಠಾರದೊಳಗೆ ಒಂದು ಹಳೆಯ ಕೆಂಪು ಕಟ್ಟಡ – ರೆಡ್ ಬಿಲ್ಡಿಂಗ್ ಅಂತಲೇ ಖ್ಯಾತ, ಶಿಥಿಲಾವಸ್ಥೆಗೆ ತಲಪಿದ್ದರಿಂದ ಹೆಚ್ಚು ಬಳಕೆಯಲ್ಲಿರಲಿಲ್ಲ. ಕನಿಷ್ಠ ಅದರಲ್ಲಾದರೂ ತತ್ಕಾಲೀನವಾಗಿ ನೆಲೆಕೊಡಲು ಬೇಡಿಕೊಂಡೆ. ಹಾಗೊಮ್ಮೆ ನಾವು ಪರ್ಯಾಯ ಜಾಗ ಹುಡುಕುವಲ್ಲಿ ಸೋತದ್ದೇ ಆದರೆ ಅಷ್ಟೂ ಜೀವಗಳಿಗೆ ಕೊನೆ ಹಾಡಿ, ‘ವಸ್ತು ಸಂಗ್ರಹಾಲಯಕ್ಕೆ’ ಹೊಸದೇ ಮಾದರಿಗಳನ್ನು ಕೊಡುವುದಾಗಿಯೂ ಮಾತು ಕೊಟ್ಟೆವು. ಬೀಸೋ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು!

ಹಾವುಗಳಿಗೆ ನೆಲೆ ಹುಡುಕುವ ಕೆಲಸ ಮುಂದುವರಿಸಿದೆವು. ಆ ದಿನಗಳಲ್ಲಿ ಮಿಲಿಯನ್ ಮರಗಳ ಮಂಡಳಿ ಕಟ್ಟಿಕೊಂಡು, ಎಲ್ಲಂದರಲ್ಲಿ ಮರವಾಗುವ ಗಿಡಗಳನ್ನು ನೆಟ್ಟು ರೂಢಿಸುವಲ್ಲಿ ಖ್ಯಾತರಾಗಿದ್ದವರು ಬೆನ್ ಸೋನ್ಸ್. ಇವರು ಮುಖ್ಯವಾಗಿ ಹಸಿರು ಎಂದರೂ ಜೀವವೈವಿಧ್ಯದ ಬೆಂಬಲಿಗರೂ ಆಗಿದುದರಿಂದ ನನಗೆ ಅವರ ಬಗ್ಗೆ ಬಹಳ ಅಭಿಮಾನವಿತ್ತು. ಸಾಲದ್ದಕ್ಕೆ ಮಿಶನ್ ಕಾಂಪೌಂಡಿನೊಳಗೇ ಇದ್ದ ಚಾರ್ಲಿಗೆ ಶಾಂತಿ ಇಗರ್ಜಿಯ ಸಂಬಂಧದಲ್ಲಿ ಸೋನ್ಸರೊಡನೆ ಆತ್ಮೀಯತೆಯೂ ಇತ್ತು. ಚಾರ್ಲಿ ಮೂಲಕ ಅವರನ್ನು ನಮಗೊಂದು ನೆಲೆ ಕೊಡಲು ಕೇಳಿಕೊಂಡೆವು. ವೈಯಕ್ತಿಕವಾಗಿ ಅವರಿಗಾಗದಿದ್ದರೂ ಆಗಿನ ಮಂಗಳೂರು ಮೇಯರ್ ಬ್ಲೇಸಿಯಸ್ ಡಿಸೋಜಾ – ತಮ್ಮ ಚಳವಳಿಯ ಮಹಾ ಬೆಂಬಲಿಗ, ಇವರನ್ನು ಸಂಪರ್ಕಿಸಲು ಸಲಹೆ ನೀಡಿದರು. ೧೯೬೯ಕ್ಕೂ ಮೊದಲು ನನ್ನ ಕುಟುಂಬ ಬೆಂದೂರ್ ವೆಲ್ ಬಳಿ ಇದ್ದಾಗ, ಬ್ಲೇಸಿ ನನ್ನಪ್ಪನ ಸಹೋದ್ಯೋಗಿ ಮತ್ತು ನಮಗೆ ನೆರೆಮನೆಯವರು. ಚುನಾವಣಾ ದಿನಗಳಲ್ಲಿ ಅವರ ವಿಭಾಗದ ಪ್ರಚಾರಕ್ಕೆ ಒದಗುತ್ತಿದ್ದ ಬಾಲಕರ ಬಳಗದಲ್ಲಿದ್ದ ನಾನು ಬ್ಲೇಸಿಗೆ ಪ್ರತ್ಯೇಕ ಪರಿಚಯ ಮಾಡಿಕೊಳ್ಳುವ ಅಗತ್ಯವೂ ಇರಲಿಲ್ಲ. ಸರಿ, ‘ಯಡಪಡಿತ್ತಾಯರ ಮಗ’ ಎಂದೇ ಬ್ಲೇಸಿ ಭೇಟಿ ಏನೋ ಮಾಡಿದ್ದಾಯ್ತು. ಆದರೆ ಹಾವುಗಳ ಬಗ್ಗೆ ನನ್ನ ಉದ್ದುದ್ದ ಮಾತುಗಳನ್ನು ಜೀರ್ಣಿಸಿಕೊಳ್ಳಲು ಮಾತ್ರ ಅವರು ಭಾರೀ ಕಷ್ಟಪಟ್ಟರು. ಕೊನೆಗೆ “ವಿಚಾರ ಒಳ್ಳೇದೇ. ಆದರೆ ನನಗೆ ಸಹಾಯ ಮಾಡುವುದು ಕಷ್ಟವಾದೀತು. ಜಾಗ ನೀನೆ ಹುಡುಕಿಕೋ, ನಾನು ಬೇರೇನಾದರೂ ಸಹಾಯ ಮಾಡಲು ಪ್ರಯತ್ನ ಮಾಡುತ್ತೇನೆ” ಎಂದುಬಿಟ್ಟರು. ನಾನು ಭಾರೀ ನಿರಾಶೆಯಲ್ಲಿ ‘ಜಂಗಲ್’ ಸೇರಿದೆ! ಕ್ಷಮಿಸಿ, ಈ ಜಂಗಲ್ಲು ಅಲೋಶಿಯಸ್ ವಠಾರಕ್ಕೆ ಸೇರಿದ, ಕಾರ್ನಾಡ್ ಗ್ರಂಥಾಲಯದ ಹಿಂದೆ, ಇಂಗ್ಲಿಶಿನ ‘ಎಲ್’ ಆಕಾರದಲ್ಲಿರುವ ಪುಟ್ಟ ಕಾಡು. ಇದರ ಒತ್ತಿನಲ್ಲೇ ಹಳೆಯ ಗೊನ್ಸಾಗಾ ಮನೆಯೂ ಇತ್ತು. ಅದರ ತಳಮನೆಯನ್ನು ನನ್ನ ‘ಸಮುದಾಯ’ದ ಗೆಳೆಯರಾದ ಅಡಪ್ಪ ಮತ್ತು ಉಮಾಶಂಕರ ತಮ್ಮ ಸೋಮಾರಿಕಟ್ಟೆಯಾಗಿ ಮಾಡಿಕೊಂಡಿದ್ದರು. ಅಲ್ಲಿ ಸಿಕ್ಕ ಅಡಪ್ಪ, ನಮ್ಮ ಇಂಗ್ಲಿಷ್ ಮೇಶ್ಟ್ರು – ಸನ್ನಿ ತರಪ್ಪನ್, ಹೆಸರು ನೆನಪಿಸಿದ. ಅವರು ಸ್ವತಃ ‘ರಾಜು’ ಎಂಬ ಹೆಸರಿನ ಒಂದು ಮಂಗವನ್ನು ಸಾಕಿಕೊಂಡಿದ್ದರು ಮತ್ತು ಪಶುಪಕ್ಷಿಗಳ ಬಗ್ಗೆ ವಿಶೇಷ ಒಲವಿದ್ದವರೂ ಆಗಿದ್ದರು.

ಉಳಿದದ್ದೆಲ್ಲ ಸನ್ನಿ ಮಹಾತ್ಮೆ! ಚಾರ್ಲಿ ಮತ್ತು ನಾನು ಸನ್ನಿಯವರ ಪಾಠ – ಜೂಲಿಯಸ್ ಸೀಸರ್, ತುಂಬಾ ಮೆಚ್ಚಿಕೊಂಡಿದ್ದೆವು. ಅದರಲ್ಲೂ ಅವರು ಪಾಠ ಮಾಡಿದ ಕೆಲವು ಭಾಗಗಳು – great men fall due to a blemish in their character, ನಮ್ಮ ಮನಸ್ಸಿನಲ್ಲಿ ಈಗಲೂ ಕೊರೆದಿಟ್ಟಂತೆ ಇದೆ. ನಾನು ಸನ್ನಿಯವರ Students Orators Forum of Action (SOFA) ಇದರ ಸದಸ್ಯನೂ ಆಗಿ ಭಾಷಣ ಕಲೆಯಲ್ಲಿ ಪಳಗಿದ್ದುದರಿಂದಲೇ ಇಂದು ಅಧ್ಯಾಪಕನಾಗಿ ಯಶಸ್ವಿಯಾಗಿದ್ದೇನೆ ಎಂದರೆ ತಪ್ಪಾಗದು. ಅಷ್ಟರಲ್ಲೇ ಸನ್ನಿಯವರ ಭಿಕ್ಷಾಟನಾ ನಿರ್ಮೂಲನಕ್ಕಾಗಿ ಒಲವಿನ ಹಳ್ಳಿಯಲ್ಲಿ ನಡೆಸಿದ್ದ ಚಟುವಟಿಕೆಗಳೂ ನನಗೆ ತಿಳಿದಿದ್ದವು. ಅವರ ಕಾರ್ಯಶೈಲಿ ಅಸಾಮಾನ್ಯವಾದ್ದರಿಂದ ನಾನು ಅವರ ಭೇಟಿಗೂ ಮೊದಲು ಸಾಕಷ್ಟು ಚಿಂತನೆ ನಡೆಸಿದೆ. ಅವರು ನನಗೆ ಕೊನೆಯ ಆಸರೆ ಎಂಬ ಭಾವವೂ ನನ್ನಲ್ಲಿತ್ತು. ನಾನು ಅವರ ಮನೆಯ ಬಳಿ ಅಡ್ಡಾಡಿದೆ, ರಾಜು ಮಂಗನನ್ನು ಕಾಣಲು ತಿಣುಕಿದೆ, ಪರಿಚಿತರ ಮೂಲಕ ಸನ್ನಿಯವರನ್ನು ಪ್ರಭಾವಿಸಲೂ ಪ್ರಯತ್ನ ಮಾಡಿದೆ. ರಾಜು – ಬಾನೆಟ್ ವರ್ಗದ ಮಂಗ, ಭಾರೀ ಜೋರಿತ್ತು. ಅದಕ್ಕೆ ಮನೆ ಎದುರಿನ ದೊಡ್ಡ ಚಿಕ್ಕು ಮರದ ಎತ್ತರದಲ್ಲಿ ಬಲವಾದ ಕಬ್ಬಿಣದ ಗೂಡು ಮಾಡಿ ಕೂಡಿ ಹಾಕಿದ್ದರು. ಅಂತೂ ಒಂದು ದಿನ ತರಗತಿಯಾದ ಮೇಲೆ, ಅವರಲ್ಲಿ ‘ರಾಜು’ವನ್ನು ನೋಡಲು ಅವರ ಮನೆಗೆ ಭೇಟಿ ಕೊಡಲು ಅನುಮತಿ ಗಿಟ್ಟಿಸಿಕೊಂಡೆ.

ಆಗಲೇ ನಾನು ಮನೆಯಲ್ಲೂ ಕೆಲವು ವಿಷರಹಿತ ಹಾವುಗಳನ್ನು ಸಾಕಿದ್ದೆ. ಅದರಲ್ಲೂ ಒಂದು ಮರಳು ಹಾವು ನನಗೆ ಬಹಳ ಪ್ರಿಯವಾಗಿತ್ತು. ಅದನ್ನೂ ಕಿಸೆಯಲ್ಲಿಟ್ಟುಕೊಂಡು ಆ ಸಂಜೆ ಸನ್ನಿ ಮನೆಗೆ ಹೋದೆ. ಅಂದು ಚಾರ್ಲಿ ನನ್ನೊಡನಿದ್ದನೋ ಇಲ್ಲವೋಂತ ಮರೆತಿದ್ದೇನೆ. ಕದ್ರಿ ಸಿಂಡಿಕೇಟ್ ಬ್ಯಾಂಕಿನ ಒತ್ತಿನಲ್ಲಿದ್ದ ಅವರ ಮನೆಯಲ್ಲಿ ರಾಜುವನ್ನ ತೋರಿಸಿ, ವೆರಾಂಡಕ್ಕೆ ಕರೆದೊಯ್ದು ಪಟ್ಟಾಂಗಕ್ಕೆ ಕೂರಿಸಿದರು. ಪ್ಲ್ಯಾಸ್ಟಿಕ್ ಹೆಣೆದ ಆ ಎರಡು ಉರುಟು ಕಬ್ಬಿಣದ ಕುರ್ಚಿ ನನಗಂದು ಬಹಳ ಇರಿಸುಮುರಿಸು ಉಂಟು ಮಾಡಿದ್ದು ಈಗಲೂ ನೆನಪಿದೆ. (ಮುಂದಿನ ದಿನಗಳಲ್ಲಿ ನಾನು ಅದರ ಮೇಲೆ ಬಹಳ ಸಲ ಕುಳಿತಿದ್ದೇನೆ) ಆಗ ನಾನು ಹಾವುಗಳ ವಿಷಯ ಪ್ರಸ್ತಾವಿಸಿದೆ. ಹಾವುಗಳ ಆವಶ್ಯಕತೆ, ಸಜೀವ ಸಂಗ್ರಹದ ಪರವಿರೋಧಗಳನ್ನೆಲ್ಲಾ ಬಿಡಿಸಿಟ್ಟೆ. ಅವರು ಮುಂದುವರಿದಾಗ, ನನಗೆ ಹಾವುಗಳ ಬಗ್ಗೆ ಸಂಶೋಧನೆ ಮಾಡಬೇಕೆಂಬ ಆಸೆ ಇರುವುದನ್ನೂ ಅದಕ್ಕೆ ಪೂರಕವಾಗಿ ವಿಷ ಸಂಗ್ರಹಿಸಲು ಜೀವಂತ ಹಾವುಗಳ ಆವಶ್ಯಕತೆಯನ್ನೂ ವಿವರಿಸಿದೆ. ಕೊನೆಯಲ್ಲಿ ಅವರ ಅನುಮತಿ ಕೇಳಿ ಕಿಸೆಯ ಹಾವು ತೆಗೆದು ತೋರಿಸಿದೆ. ಆಗ ಅವರ ಮುಖದ ಚಹರೆ ಬದಲಾದದ್ದು ನೋಡಬೇಕಿತ್ತು. ಮಾತಿನ ಜಾಣ್ಮೆ ಮರೆಸಿ, ಉತ್ತೇಜಿತರಾಗಿ ಹಲವು ಪ್ರಶ್ನೆಗಳನ್ನು ಕೇಳಿದರು. ನಾನೂ ಸಾಕಷ್ಟು ತಯಾರಿ ನಡೆಸಿದ್ದುದರಿಂದ ಸರಾಗ ಉತ್ತರಿಸಿದೆ. ಸುಮಾರು ಅರ್ಧ ಗಂಟೆಯಾದ ಮೇಲೆ ಅವರು ಪತ್ನಿ – ಶಾಂತಿಯನ್ನೂ ಹಾವು ನೋಡಲು ಕರೆದರು. ಆಕೆ ಅಡುಗೆ ಕೋಣೆಯಲ್ಲಿ ಬಿಸಿಯಾಗಿದ್ದುದರಿಂದ ಫೋನ್ ಇಡಲು ಮಾಡಿದ್ದ ಕಂಡಿಯಿಂದ ಇಣುಕಿಯೇನೋ ನೋಡಿದರು. ಆದರೆ ಹಾವು ಎಂದ ಕೂಡಲೇ “ಅಯ್ಯೋ ಹೋಗಿ” ಎಂದು ನೋಟವನ್ನೇ ತಿರಸ್ಕರಿಸಿಬಿಟ್ಟರು! ಅನಂತರದ ದಿನಗಳಲ್ಲಿ ಅದ್ಭುತ ಸಂಘಟಕ ಸನ್ನಿ, ಹಾವುಗಳನ್ನು ಹಿಡಿಯಲೂ ಕಲಿತದ್ದು ಮುಂದೆ ಹೇಳುತ್ತೇನೆ.

ಹಾವುಗಳನ್ನು ಫರಂಗಿಪೇಟೆಯಿಂದ ರೆಡ್ ಬಿಲ್ಡಿಂಗಿಗೆ ಸಾಗಿಸುವ ಕೆಲಸ ಮೊದಲಾಗಬೇಕಿತ್ತು. ಓಡ್ರಿಕ್ ಮತ್ತು ಪಿಂಟೋರವರಿಗೆ ಸೂಚನೆ ಕೊಟ್ಟು ಮುಂದುವರಿದೆವು. ಈಗ ಸನ್ನಿಯೊಡನೆ ನನ್ನ ಮೊದಲ ಭೇಟಿ ಮತ್ತೆ ಬ್ಲೇಸಿಯಸ್ ಡಿಸೋಜಾರೊಡನೆ. ಅವರೂ ಮತ್ತೆ ತಮ್ಮ ಬೆಂಬಲವಿದೆಯೆಂದರೂ ಸಹಾಯ ಏನೂ ಮಾಡಲಿಲ್ಲ. ಜಿಲ್ಲಾಧಿಕಾರಿ ಕಛೇರಿಯ ಬಳಿಯೇ ಇದ್ದ ಜಿಲ್ಲಾ ಅರಣ್ಯಾಧಿಕಾರಿ (ಡೀಎಫೋ) ಸಂಪಂಗಿಯವರನ್ನು ಕಛೇರಿಯಲ್ಲೇ ಭೇಟಿಯಾದೆವು. ಅವರಿಗೂ ಮರಳು ಹಾವು ತೋರಿಸಿದೆ. ಅವರು ಹಾವಿನ ಬಗ್ಗೆ ಭಯಪಟ್ಟುಕೊಂಡರೂ ಸಹಾಯಮಾಡಲು ಭಾರೀ ಉತ್ಸುಕರಾದರು. ಮೊದಲು ಹಾವುಗಳನ್ನೆಲ್ಲಾ ಇಲಾಖೆಗೆ ಕೊಟ್ಟುಬಿಡಿ, ನೋಡಿಕೊಳ್ತೇವೆ ಎಂದರು. ಆಗ ವನ್ಯಜೀವಿ ಕಾನೂನು ಈಗಿನಷ್ಟು ಪರಿಷ್ಕಾರಗೊಂಡಿರಲಿಲ್ಲ. ಹಾಗಾಗಿ “ಇಲ್ಲ ಅವುಗಳು ನಮಗೇ ಬೇಕು” ಎಂದಾಗ ಒಪ್ಪಿಕೊಂಡರು. ಅವರು ಒಂದು ಉರಗೋದ್ಯಾನವನ್ನೇ ಮಾಡಿ, ಪ್ರದರ್ಶನ ಮಾಡಿ ಎಂದೆಲ್ಲಾ ಸೂಚಿಸಿದಾಗ ಸನ್ನಿಯವರ ಮನಸ್ಸಿನಲ್ಲೂ ಇದ್ದಿರಬಹುದಾದ ಚಿಂತನೆ ಸ್ಪಷ್ಟ ರೂಪುಪಡೆಯಿತು. ಅರಣ್ಯಾಧಿಕಾರಿ, ಮೇಯರ್ ಎಲ್ಲಾ ಬೆಂಬಲಿಸಿದ ಕೆಲಸಕ್ಕೀಗ ಹೊಸ ರಭಸ ಒದಗಿತು.

ಎಲ್ಲಕ್ಕೂ ಮೊದಲು ಒಂದು ಕಾನೂನು ಬದ್ಧವಾದ ವ್ಯವಸ್ಥೆ, ಹೆಸರು ಕೊಡುವ ಕೆಲಸಕ್ಕೆ ನನ್ನ ಕುಟುಂಬ ಮಿತ್ರರೂ ದೂರದ ಸಂಬಂಧಿಗಳೂ ಆಗಿದ್ದ ಹಿರಿಯ ವಕೀಲ ನಾರಾಯಣಾಚಾರ್ಯರನ್ನು ಭೇಟಿಯಾದೆವು. ಮತ್ತು ಸನ್ನಿ, ನಾನು, ಚಾರ್ಲಿ ಸೇರಿ ಅವರೊಡನೆ ಚರ್ಚಿಸಿ, ನೋಂದಣಿಯ ಅಗತ್ಯವಿಲ್ಲದೇ ಮ್ಯಾಂಗಲೂರ್ ವೈಲ್ಡ್ ಲೈಫ್ ಟ್ರಸ್ಟ್ ಎಂದು ನಾಮಕರಿಸಿದೆವು. ಇನ್ನು ಅದಕ್ಕೊಂದು ಸಂಕೇತ ಚಿಹ್ನೆ, ಲೆಟರ್ ಹೆಡ್, ರಸೀದಿ ಆಗಬೇಕಲ್ಲಾಂತ ಸನ್ನಿ ನನ್ನನ್ನು ಮೊದಲು ದಯಾ ಆರ‍್ಟ್ಸಿನ (ಪ್ರಭಾತ್ ತಿಯೇಟರ್ ಎದುರು) ದಯಾನಂದರ ಬಳಿ ಕಳಿಸಿದರು. ಅವರು ಕೊಟ್ಟ ಕೆಲವು ಆಯ್ಕೆಗಳಲ್ಲಿ ಹಸುರು ಮರದ ಕೆಳಗಿನ ಕೆಂಪು ಹುಲಿಯ ಚಿತ್ರವನ್ನು ಸನ್ನಿ ಒಪ್ಪಿಕೊಂಡರು. ಎಲ್ಲಾ ಆರಂಭಿಕ ಕೆಲಸಗಳಿಗೂ ಸನ್ನಿ ಹಣ ಹಾಕಿದ್ದಲ್ಲದೆ ತಮ್ಮ ಸಂಘಟನಾ ಚಾತುರ್ಯ, ನಾಯಕತ್ವದ ಗುಣ, ಬರವಣಿಗೆಯ ಜಾಣ್ಮೆಯನ್ನೆಲ್ಲಾ ತೊಡಗಿಸಿದ್ದರು. ರೊಮುಲಸ್ ವಿಟೇಕರ್ ನಮ್ಮ ಪ್ರದರ್ಶನಕ್ಕೆ ಕೆಲವು ಹಾವುಗಳನ್ನೂ ನಿಭಾವಣೆಗೆ ಅವರೊಡನಿದ್ದ ಆದಿವಾಸಿ ಮತ್ತು ಜನಪದ ಉರಗ ಪರಿಣತರಾದ ಒಬ್ಬಿಬ್ಬ ಇರುಳರನ್ನೂ ಕಳಿಸುವ ಆಶ್ವಾಸನೆ ಕೊಟ್ಟರು. ನಾನು, ಚಾರ್ಲಿ ಹಾವುಗಳನ್ನು ನಿಭಾಯಿಸುವಲ್ಲಿ ಇನ್ನೂ ವಿದ್ಯಾರ್ಥಿಗಳೇ ಆಗಿದ್ದೆವು ಎನ್ನುವುದನ್ನು ಮರೆಯಬಾರದು. ಉರಗಪ್ರದರ್ಶನಕ್ಕೆ ಸೂಕ್ತ ಜಾಗ ಯಾವುದೆಂದು ಕೆಲವು ಸಾಧ್ಯತೆಗಳನ್ನು ಪರಿಶೀಲಿಸಿದೆವು. ನೆಹರೂ ಮೈದಾನ, ಕಂಕನಾಡಿ ಮೈದಾನ, ಅಲೋಶಿಯಸ್ ಅಳೆದು ಸುರಿದದ್ದಾಯ್ತು. ಈ ಚರ್ಚೆ ಮುಗಿದು ನಾವು ಹೊರನಡೆಯುತ್ತಿದ್ದಂತೆ ನಾನು ನನ್ನ ‘ಜಂಗಲ್’ ಪ್ರಸ್ತಾವಿಸಿದೆ. ಮೊದಲು ಎಲ್ಲ ತಳ್ಳಿ ಹಾಕಿದರೂ ಸನ್ನಿ ನೋಡಿಯೇ ಬಿಡೋಣ ಎಂದು ನಡೆದ ಮೇಲೆ ಅದೇ ಒಪ್ಪಿತವಾಯ್ತು.

ಏತನ್ಮಧ್ಯೆ ಓಡ್ರಿಕ್ ಊರು ಬಿಡುವ ಅವಸರದಲ್ಲಿದ್ದರಲ್ಲಾ. ಹಾಗಾಗಿ ನಾವು ಹಾವುಗಳನ್ನು ರೆಡ್ ಬಿಲ್ಡಿಂಗಿಗೆ ಸಾಗಿಸಿದ ಸಾಹಸವೂ ನಡೆದುಹೋಯ್ತು. ಅದರ ವಿವರಗಳನ್ನು ಮುಂದಿನ ಭಾಗಕ್ಕುಳಿಸಿಕೊಂಡು ಸದ್ಯ ಓಡ್ರಿಕ್ಕರಿಗೊಂದು ಶ್ರದ್ಧಾಂಜಲಿ ಸಲ್ಲಿಸಿ ವಿರಮಿಸುತ್ತೇನೆ.

ಬ್ರ| ಓಡ್ರಿಕ್ ದೇವಾನಂದ ಫರಂಗಿಪೇಟೆಯಿಂದ ಮುಂಬೈಯ ವಿದ್ಯಾನಗರಿಗೆ ತೆರಳಿದರು. ಮತ್ತೆಷ್ಟೋ ಸಮಯದ ಮೇಲೆ ನಮ್ಮ ಕಾಲೇಜಿನ ಪ್ರವಾಸದಲ್ಲಿ ನಾನು ಮುಂಬೈಗೆ ಹೋಗಿದ್ದಾಗ ಅವರನ್ನು ಭೇಟಿಮಾಡಬೇಕೆಂದೇ ಪ್ರವಾಸದ ಕಾರ್ಯಕ್ರಮ ಪಟ್ಟಿ ತಪ್ಪಿಸಿದ್ದೆ. (ಆಗ ಬಹುಶಃ ನನ್ನ ಜೊತೆಗೆ ಚಾರ್ಲಿ ಇರಲಿಲ್ಲ, ಸೂರ್ಯ ಇದ್ದ) ಅವರಿಗೆ ನಮ್ಮನ್ನು ಕಂಡು ತುಂಬ ಕುಶಿಯಾಯ್ತು. ನನ್ನ ಉರಗಾಧ್ಯಯನಾಸಕ್ತಿ ಎಂಎಸ್ಸಿ ಮತ್ತು ಸಂಶೋಧನೆಗಳ ಮಟ್ಟಕ್ಕೂ ವಿಸ್ತರಿಸುವ ಆಕಾಂಕ್ಷೆ ಕೇಳಿ ಮತ್ತಷ್ಟು ಸಂತೋಷಿಸಿದರು. ಅವರು ಪರೇಲಿನ ಬಳಿಯಿದ್ದ ಹಾಪ್ ಕಿನ್ಸ್ ಇನ್ಸ್‌ಟಿಟ್ಯೂಟಿಗೆ ನಮ್ಮನ್ನು ಕರೆದೊಯ್ದು, ಅಲ್ಲಿನ ವಿಜ್ಞಾನಿಗಳಿಗೆ ಪರಿಚಯಿಸಿದರು, ವಿಷವೈದ್ಯದ ಮೇಲೆ ಅಲ್ಲಿ ನಡೆದಿದ್ದ ಸಂಶೋಧನೆಗಳನ್ನೂ ವಿವರಿಸಿದರು. ಸನ್ನಿ, ಚಾರ್ಲೀ ಬಗ್ಗೆ ವಿಚಾರಿಸಿದ್ದಲ್ಲದೆ ನಮ್ಮೆಲ್ಲರಿಗೂ ಹಾರ್ದಿಕ ಆಶೀರ್ವಾದಗಳನ್ನೂ ಮಾಡಿದರು. ನನಗೆ ವಿಶೇಷವಾಗಿ ಎರಡು ಹ್ಯಾಂಸ್ಟರ್ (ಹೆಗ್ಗಣದಂಥ ಪುಟ್ಟ ಪ್ರಾಣಿ) ಉಡುಗೊರೆ ಬೇರೇ ಮಾಡಿಬಿಟ್ಟರು. ನಾನವನ್ನು ಸಣ್ಣ ಬಿಸ್ಕೆಟ್ ಡಬ್ಬಿಯಲ್ಲಿಟ್ಟುಕೊಂಡು ಪ್ರವಾಸ ಪೂರೈಸಿದ್ದೆ. ತಂಡದಲ್ಲಿದ್ದ ಸಮಾನಾಸಕ್ತ ಗೆಳೆಯರಾದ ಅಖ್ತರ್ ಹುಸೇನ್, ಹರೀಶ್ ಶೆಟ್ಟಿಯೇನೋ ಸಂಭ್ರಮಿಸಿದ್ದರು. ಆದರೆ ಅವನ್ನು ಕಾಪಾಡಿಕೊಂಡು ಮಂಗಳೂರು ಮುಟ್ಟಿದಾಗ ಪ್ರವಾಸದ ಮಝಾ ಹಾಳುಮಾಡಿಕೊಂಡ ಎಂದು ಗೇಲಿ ಮಾಡಿದವರೇ ಹೆಚ್ಚು. ಚಾರ್ಲಿ ಓಡ್ರಿಕ್ ಅವರೊಡನೆ ಗಟ್ಟಿ ಪತ್ರ ಸಂಬಂಧ ಉಳಿಸಿಕೊಂಡಿದ್ದ. ಅವನು ತಿಳಿಸಿದಂತೆ, ಓಡ್ರಿಕ್ ಕೆಲವು ವರ್ಷಗಳ ಮೇಲೆ ಮಸ್ಸೂರಿ, ಮತ್ತಷ್ಟೂ ಉತ್ತರ-ಪೂರ್ವದಲ್ಲೆಲ್ಲೋ ಮೊಕ್ಕಾಂ ಮಾಡಿ ಕೊನೆಗೆ ಸಾಗರಕ್ಕೆ ಬಂದು, ಹೊಸ ಮಠ ಕಟ್ಟುವಲ್ಲಿ ನೆಲೆಸಿದ್ದರು. ೨೦೦೬ರ ಸುಮಾರಿಗೆ ನಾನು ಹಾಸನದ ವಿವಿ ಕೇಂದ್ರದಲ್ಲಿ ಪ್ರಾಧ್ಯಾಪಕನಾಗಿದ್ದಾಗ, ಅಂತರ್ಜಾಲದಲ್ಲಿ ಹುಡುಕಿ ಮಾಡಿ, ಓಡ್ರಿಕ್‌ರನ್ನು ದೂರವಾಣಿಯಲ್ಲಿ ಮಾತಾಡಿಸಿದೆ. ಮತ್ತೆ ನನ್ನ ‘ನಿಜಕ್ಕೂ ಫ಼ೋರ್ ವೀಲ್ ಡ್ರೈವ್’ (ನೋಡಿ: ಕುಮಾರಪರ್ವತ ಲೇಖನ) ಇದ್ದ ಜಿಪ್ಸಿಯಲ್ಲಿ ಹೆಂಡತಿ – ಸವಿತ ಮತ್ತು ಮಗ – ಅಮೋಘರನ್ನು ಕರೆದುಕೊಂಡು ಹೋಗಿ ಭೇಟಿಯಾಗಿದ್ದೆ. ಆಗ ದಿನ ಪೂರ್ತಿ ಅವರೊಡನೆ ಕಳೆದದ್ದು ದಿವ್ಯ ಸ್ಮೃತಿಯೇ ಸರಿ. ಸನ್ನಿ, ಚಾರ್ಲಿಯರ ಹಲವು ನೆನಪುಗಳನ್ನು ಸವಿತ ಅಮೋಘರ ಅನುಕೂಲಕ್ಕಾಗಿ ಎಂಬಂತೆ ಅವರು ಮೆಲುಕು ಹಾಕಿದ್ದರು. ಅವರು ಹೊಸದಾಗಿ ಪ್ರತಿಷ್ಠಾಪಿಸುತ್ತಿದ್ದ ಮಠದ ಉದ್ದಗಲ ಸುತ್ತಿಸಿದರು. ಅಲ್ಲೂ ಊರವರಿಗೆ ‘ಉರಗ ಸಂಕಟ’ ಕಾಣಿಸಿದಾಗ ಇವರು ಹಾವು ಹಿಡಿದು ಉಭಯ ಪಕ್ಷಗಳಿಗೆ ಶಾಂತಿಯನ್ನು ಕಾಣಿಸುತ್ತಿದ್ದರು. ಆದರೆ ಮೊದಲಿನಂತೆ ಸಂಗ್ರಹಿಸುತ್ತಿರಲಿಲ್ಲ. ಪ್ರಾಯವಾದದ್ದು ಸ್ಪಷ್ಟ ಕಾಣಿಸುತ್ತಿತ್ತು. ಆದರೆ ಫರಂಗಿಪೇಟೆಯಲ್ಲಿ ನಮ್ಮನ್ನು ಒಪ್ಪಿಕೊಂಡಾಗ, ಅಷ್ಟು ದೊಡ್ಡ ಸಂಗ್ರಹವನ್ನು ಉದಾರವಾಗಿ ಬಿಟ್ಟು ನಡೆದಾಗಿದ್ದ ಸಂತತನವೇನೂ ಮಾಸಿರಲಿಲ್ಲ. ನೆನಪುಗಳೂ ಆಸಕ್ತಿಗಳೂ ಸರಿಯಾಗೇ ಇದ್ದರೂ ಭಾವತೀವ್ರತೆ ಇಲ್ಲ, ಯಾವುದಕ್ಕೂ ಅಂಟಿಕೊಳ್ಳದ ನಿಲುವು! ನಾವು ಅಲ್ಲಿಂದ ಈಚೆಗೆ ಬಂದ ಕೆಲವೇ ವಾರಗಳಲ್ಲಿ ತೀರಿಕೊಂಡರೆಂದು ಸುದ್ದಿ ಸಿಕ್ಕಿತು. ಅವರ ಕೇಳಿಕೆಯ ಮೇರೆಗೆ ದೇಹವನ್ನು ಫರಂಗಿಪೇಟೆಗೇ ಒಯ್ದು ಅಂತಿಮಸಂಸ್ಕಾರವನ್ನು ಮಾಡಿದರಂತೆ. ಓಡ್ರಿಕ್ ಪ್ರಿಯ ನೇತ್ರಾವತಿಯ ಕಲಕಲ ಕೇಳಿಸಿಕೊಂಡು ಮಲಗಿದ ಚಿತ್ರ ಕಣ್ಣ ಮುಂದೆ ಬರುತ್ತದೆ…

ಓ ನಿಲ್ಲಿ, ನಿಲ್ಲಿ ಫರಂಗಿಪೇಟೆಯಿಂದ ಹಾವುಗಳು ಮುಂದೇನಾದವು ಕಥನಕ್ಕೆ ನಾನು ಇನ್ನೊಂದೇ ವಾರ ಕಾಲದಲ್ಲಿ ಸಜ್ಜಾಗಿ ಬರುತ್ತೇನೆ. ಅಲ್ಲಿವರೆಗೆ ಕಾದಿರ್ತೀರಲ್ಲಾ?