ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಮೂರು)

ಬುದ್ಧಿ ಬಂದಾಗ ಮೊದಲ ಆಕರ್ಷಣೆ ಆಕಾಶ. ‘ಮನುಷ್ಯನಿಗೆ ಭೂಮಿ ತೊಟ್ಟಿಲು. ಸದಾ ನೀವು ತೊಟ್ಟಿಲಲ್ಲೇ ಉಳಿದೀರೇ!” ಎಂದು ರಷ್ಯಾ ದೇಶದ ರಾಕೆಟ್ ಪಿತಾಮಹ ಕಾನ್‌ಸ್ಟಾಂಟಿನ್ ಎಡ್ವರ್ಡೋವಿಚ್ ನಿಯೋಲ್ಕೋವ್‌ಸ್ಕಿ ಪ್ರಶ್ನಿಸಿದ್ದ (೧೮೯೮). ತೊಟ್ಟಿಲಿನ ತಳ ಹೇಗೂ ಇದ್ದದ್ದೇ. ಮೇಲೆ ನೆಗೆಯಬಹುದೇ? ಹಕ್ಕಿ ಹಾರುತ್ತಿಲ್ಲವೇ? ಮೋಡ ತೇಲುತ್ತಿಲ್ಲವೇ? ಚಂದ್ರ ಸೂರ್ಯ ನಕ್ಷತ್ರ ಜಾರುತ್ತಿಲ್ಲವೇ? ಆದರೆ ಒಂದು ವಿಚಾರ; ಮನುಷ್ಯ ದೇಹದ ರಚನೆ ನೆಲದ ಮೇಲೆ ಬಾಳಲು. ಹಾರಿದರೆ ಬೀಳುತ್ತಾನೆ. ಹೆಚ್ಚು ಹಾರಿದರೆ ಕಾಲು ಮುರಿದುಕೊಳ್ಳುತ್ತಾನೆ. ಆದ್ದರಿಂದ ಹಾರುವುದು ಬೀಳುವುದು ಎಂದರೇನು ಎಂದು ವಿಚಾರಿಸಿದ ಮನುಷ್ಯನಿಗೆ ಭೂಮಿಯ ಗುರುತ್ವಾಕರ್ಷಣ ಬಲ ಪರಿಚಯವಾಯಿತು.

ಇದರ ಪರಿಣಾಮವಾಗಿ ವಾಲುವ ಗೋಪುರದ ಶಿಖರದಿಂದ ಏಕಕಾಲದಲ್ಲಿ ಕೈಬಿಟ್ಟ ಭಾರದ ಮತ್ತು ಹಗುರಾದ ವಸ್ತುಗಳೆರಡೂ ಒಂದೇ ವೇಳೆಯಲ್ಲಿ ನೆಲಕ್ಕೆ ಬಡಿಯುತ್ತವೆ. ಮರದಿಂದ ತೊಟ್ಟು ಕಳಚಿದ ಸೇಬಿನ ಹಣ್ಣು ನೆಲಕ್ಕೆ (ಸರಿಯಾಗಿ ಹೊಂದಿಸಿದರೆ ನಮ್ಮ ಬಾಯಿಗೂ) ಬೀಳುತ್ತದೆ. ಗಾಳಿಯ ಹಗುರಾದ ಅಣುಗಳು ಮೋಡದ ತೆಳುಪದರಗಳೂ ಭೂಮ್ಯಾವರಣವನ್ನು ತ್ಯಜಿಸಿ ಪಾರಾಗುವುದಿಲ್ಲ. ಭೂಮಿ ಆವರ್ತಿಸುವಾಗ ‘ಕೆಳಗಿನ ಭಾಗದ’ ಸಮುದ್ರ, ಕೆರೆ, ಹೊಳೆಗಳ ನೀರು ಚೆಲ್ಲಿ ಹೋಗುವುದಿಲ್ಲ. (ಭೂಮಿಯಲ್ಲಿ ನಿಂತವನಿಗೆ ಚಂದ್ರ ಮೇಲೆ ಕಾಣುವುದು. ಚಂದ್ರನಲ್ಲಿ ನಿಂತವನಿಗೆ ಭೂಮಿ? ಕೆಳಗೆ ಕಾಣುವುದೇ? ಅದು ಚಂದ್ರನ ನೆಲ! ಅವನಿಗೆ ಭೂಮಿ ಮೇಲೆಯೇ ಕಾಣುವುದು. ನಮ್ಮ ಕಾಲೂರಿರುವ ಭಾಗ ನಮಗೆ ಕೆಳಗೆ, ಇದರ ಲಂಬ ವಿರುದ್ಧ ಭಾಗ ನಮಗೆ ಮೇಲೆ. ಸೀಲಿಂಗಿಗೆ ಅಂಟಿರುವ ಹಲ್ಲಿಗೆ ನಾವು ಮೇಲೆ ಇದ್ದೇವೆ; ನೆಲದ ಮೇಲಿರುವ ನಮಗೆ ಹಲ್ಲಿ ಮೇಲೆ ಇದೆ. ಭೂಮಿ, ಚಂದ್ರರಿಗೆ ಮೇಲು ಭಾಗ ಕೆಳಭಾಗ ಎಂಬ ವಿಭಾಗಗಳಿಲ್ಲ.) ಭೂಮಿ ತೊಟ್ಟಿಲಿನಿಂದ ಚಂದ್ರಬೊಂಬೆಯಲ್ಲಿಗೆ ನೆಗೆಯಬೇಕಾದರೆ ಈ ಗುರುತ್ವಾಕರ್ಷಣೆಯ ಬಲವನ್ನು ವಿರೋಧಿಸಿ ಸಾಗುವುದೊಂದೇ ಶಿಶುವಿಗೆ ಇರುವ ಮಾರ್ಗ.

ಗುರುತ್ವಾಕರ್ಷಣ ಬಲದ ದಿವ್ಯಾಲಿಂಗನ

ತರಕಾರಿ ಗಿಡ ಹಿತ್ತಲಲ್ಲಿ ಸೊಂಪಾಗಿ ಬೆಳೆದಿದೆ. ನೆರೆಮನೆಯ ಹಾಳು ಹಂದಿ (ನೆರೆಮನೆಯದಾದ್ದರಿಂದ?) ಮುಸುಡಿಕ್ಕಿದೆ. ಕಲ್ಲುಬೀರಿ ಅದಕ್ಕೆ ಎಸೆಯುತ್ತೀರಿ. ಕಲ್ಲು ಅದಕ್ಕೆ ತಗುಲದಿದ್ದರೂ ನಿಮ್ಮ ಬೊಬ್ಬೆ ಸಹಿಸಲಾರದೆ (ಬಹುಶಃ ನಿಮ್ಮ ಮೇಲಿನ ಮರುಕದಿಂದ) ಅದು ಓಡುವುದು. ನೀವು ವಿಜಯ ಸಂತೋಷಿಗಳಾಗಿ ವಿಷಯ ಮರೆತಿರಿ – ವರಾಹಗಾನ ನಿಮ್ಮನ್ನು ಪುನಃ ಆಕರ್ಷಿಸುವವರೆಗೂ. ಈ ಘಟನೆ ಹಾಗಿರಲಿ. ದೂರದ ತೋಟದ ಕಿತ್ತಳೆ ಮರಕ್ಕೆ ಕಪಿ ಏರಿದಾಗ? ಕಲ್ಲೆಸೆದರೆ ಅಂಗಳದ ಅಂಚು ದಾಟುವುದಿಲ್ಲ. ಆರ್ಭಟೆಗೆ ಪ್ರತಿಯಾಗಿ ಮಂಗಚೇಷ್ಟೆ! ಕೋಪೋದ್ರಿಕ್ತರಾಗಿ ಕವಣೆಕಲ್ಲು ಬೀರುತ್ತೀರಿ. ಈ ಕತೆಯನ್ನು ಇಲ್ಲಿಗೇ ಬಿಟ್ಟು ‘ಹಂದಿಕಲ್ಲು’, ‘ಕವಣೆ ಕಲ್ಲು’ ಸಾಗಿದ ಪಥಗಳನ್ನು ಸ್ವಲ್ಪ ಪರಿಶೀಲಿಸಬಹುದು. ಪ್ರತಿಯೊಂದು ಸಲ ಕಲ್ಲನ್ನು ಎಸೆದಿದ್ದೀರಿ, ಅಂದರೆ ಮುಂದಕ್ಕೆ ನೂಕಿದ್ದೀರಿ; ಒಂದು ದಿಕ್ಕಿನಲ್ಲಿ, ಎತ್ತರದಲ್ಲಿ ಅಂದರೆ ಕೋನದಲ್ಲಿ ಇದನ್ನು ಮಾಡಿದ್ದೀರಿ. ಮೊದಲಿನದು ನೂಕುಬಲ; ಎರಡನೆಯದು ಎಸೆತದ ಕೋನ. ನೂಕುಬಲದ ಪರಿಣಾಮವಾಗಿ ಕಲ್ಲಿಗೆ ಪಡೆದುಕೊಂಡು ಬಂದಂಥ ವೇಗ ಅಥವಾ ಮೂಲ ವೇಗ ಲಭಿಸುವುದು. ಎಸೆದ ದಿಕ್ಕು (ಅಥವಾ ಗುರಿ) ಸಮತಾಟ್ಟಾದ ನೆಲದೊಡನೆ ಉಂಟುಮಾಡುವ ಕೋನದ ಹೆಸರು ಎಸೆತದ ಕೋನ (ಮೇಲೆ ನೋಡಿ ಉಗಿದಾಗ ಎಸೆತದ ಕೋನ ೯೦೦ ಆಗುತ್ತದೆ: ಮುಂದೇನಾಗುತ್ತದೆ ಎಂದು ಅಲ್ಲೇ ನಿಂತು ಮಾತ್ರ ನೋಡಬೇಡಿ). ನೂಕುಬಲ ಮತ್ತು ಎಸೆತದ ಕೋನಗಳಲ್ಲಿ ಯಾವುದೇ ಒಂದನ್ನು ಅಥವಾ ಎರಡನ್ನು ಬದಲಾಯಿಸಿದರೆ ಕಲ್ಲು ಸಾಗಿದ ಪಥ ಬದಲಾಗುವುದು. ಕಲ್ಲನ್ನು ನಾವು ಸರಳ ರೇಖೆಯಲ್ಲೇ ಎಸೆದರೂ ಅದರ ಪಥ ಮಾತ್ರ ನಿರಂತರ ಭೂಮಿಯೆಡೆಗೆ ನುಣುಪಾಗಿ ಬಾಗುವ ವಕ್ರರೇಖೆ. ಇದರ ಕಾರಣ ಭೂಮಿಯ ಗುರುತ್ವಾಕರ್ಷಣೆ. ಇದರ ನಿಯಮವನ್ನು ಅನುಸರಿಸಿ ಖಂಡಾಂತರ ಕ್ಷಿಪಣಿ, ಮಾರ್ಟರ್ (ಸೈನ್ಯದಲ್ಲಿ ಒಂದು ಆಯುಧ) ಅಗ್ನಿವರ್ಷ, ಚಲಿಸುತ್ತಿರುವ ವಿಮಾನದಿಂದ ಶತ್ರು ನೆಲೆಯ ಮೇಲೆ ಬಾಂಬ್ ಎಸೆತ ಇತ್ಯಾದಿ ಕ್ರಿಯೆ ನಡೆಸುತ್ತಾರೆ.

ಚಂದ್ರಲೋಕ ಯಾನದ ಅತ್ಯಂತ ಸರಳೀಕೃತ ವಿವರ ಇಷ್ಟು: ಭೂಮಿಯಿಂದ ಚಂದ್ರನೆಡೆಗೆ ಎಸೆದ ಕಲ್ಲು ಹಿಂದಿನ ವಿವರಣೆಯ ಪ್ರಕಾರ ಸಾಕಷ್ಟು ನೂಕುಬಲವನ್ನೂ ನೀಡಿ ಎಸೆತದ ಕೋನವನ್ನು ಅಳವಡಿಸಿದರೆ ಚಂದ್ರಲೋಕ ಅಥವಾ ಅದರಾಚೆಗೆ ಬೇರೆ ಯಾವುದೇ ಲೋಕ ತಲುಪಲು ಕಾಲಾವಕಾಶ ಮಾತ್ರ ಸಾಕು. ಒಂದು ದೊಡ್ಡ ವಿಮಾನ, ಸಾಕಷ್ಟು ಆಹಾರ, ಇಂಧನ, ಗಾಳಿ ಎಲ್ಲ ತುಂಬಿಕೊಂಡು ಚಂದ್ರನೆಡೆಗೆ ಹಾರುವುದು. ಹಲವಾರು ದಿವಸಗಳ ಅನಂತರ ಅಲ್ಲಿ ಇಳಿಯಲೇಬೇಕಷ್ಟೆ. ಗಂಟೆಗೆ ೬೦ ಕಿಮೀ ವೇಗದಲ್ಲಿ ಓಡುವ ಬಸ್ಸು ೩ ಗಂಟೆಗಳಲ್ಲಿ ೬೦ X ೩ = ೧೮೦ ಕಿಮೀ; ಅಂದರೆ ವೇಗ U ವನ್ನು ತೆಗೆದುಕೊಂಡ ಕಾಲ t ಯಿಂದ ಗುಣಿಸಿದರೆ ಗಮಿಸಿದ ದೂರ s ದೊರೆಯುವುದು. ಸಾಂಕೇತಿಕವಾಗಿ Ut=s. ಆದ್ದರಿಂದ ಒಂದು ನಿರ್ದಿಷ್ಟ ವೇಗದಿಂದ ಸಾಕಷ್ಟು ಕಾಲ ಹಾರಿದರೆ ಎಷ್ಟು ದೂರವಾದರೂ ಮುಗಿಯಲೇಬೇಕಷ್ಟೆ. ಎಲ್ಲ ವಾದಗಳೂ ಅವನ್ನು ಮೂಲತಃ ಸೃಜಿಸಿದ ಆವರಣದಲ್ಲಿ ಸಂಗತ ಫಲಿತಾಂಶಗಳನ್ನು ನೀಡುತ್ತವೆ. ಆದರೆ ಅವನ್ನು ಸಾಮ್ಯೀಕರಿಸಿ ಆ ಆವರಣದಿಂದ ಹೊರಗೆ ಅನ್ವಯಿಸಿದರೆ ಅಸಂಗತ ಮತ್ತು ವಿರೋಧಾಭಾಸ ಫಲಿತಾಂಶಗಳು ದೊರೆಯುವುವು. ಭೂಮಿಯ ಮೇಲಿನ ಚಲನೆಗೆ, ಅಂದರೆ ಈ ಆವರಣಕ್ಕೆ, ಮೇಲಿನ ಸೂತ್ರ ಸರಿ. ಚಂದ್ರ ಲೋಕಯಾನವೆಂದರೆ ಭೂಮ್ಯಾವರಣದಿಂದ ಭಿನ್ನಾವರಣಕ್ಕೆ ಪ್ರಯಾಣ. ಆದ್ದರಿಂದ ಚಂದ್ರ ಲೋಕದೆಡೆಗೆ ಹಾರಿದ ನಮ್ಮ ವಿಮಾನ ವರ್ಷಗಟ್ಟಲೆ ಹಾರಿದರೂ ಎಷ್ಟು ಕೋಟಿ ಮೈಲು ಗಮಿಸಿದರೂ ೩,೮೨,೪೦೦ ಕಿಮೀ ದೂರದ ಚಂದ್ರನ ಸಮೀಪ ಸಹ ತಲುಪಲಾರದು – ಬದಲು, ಯಾವುದೋ ಎತ್ತರದಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಿರುತ್ತದೆ. ಇದಕ್ಕೆ ಕಾರಣ ಎರಡು – ಒಂದು, ಭೂಮಿಯ ಗುರುತ್ವಾಕರ್ಷಣೆಯ ಪ್ರಬಲ ಸೆಳೆತ (ಭೂಮಿ ತಳದೆಡೆಗೆ); ಇನ್ನೊಂದು ವಿಮಾನದ ರಚನೆಯ ವೈಶಿಷ್ಟ್ಯ.

ಗುರುತ್ವಾಕರ್ಷಣೆಯ ಪ್ರಾಬಲ್ಯ ಎಷ್ಟೆಂದು ಅರಿವಾಗಲು ಇರುವ ಮಾರ್ಗ ಒಂದೇ – ಅದರಿಂದ ವಿಮೋಚನೆ ಹೊಂದುವ ಪ್ರಯತ್ನ. ಭೂತಳದಿಂದ ಹಲವಾರು ಕಿಮೀ ಮೇಲೇರಿ ಅಲ್ಲಿ ನೆಲಕ್ಕೆ ಸಮಾನಾಂತರವಾಗಿರುವಂತೆ ಒಂದು ಕಲ್ಲನ್ನು ಸೆಕೆಂಡಿಗೆ ೯-೧೦ ಕಿಮೀ ವೇಗದಲ್ಲಿ ಎಸೆದರೆ ಆ ಕಲ್ಲು ನೆಲಕ್ಕೆ ಬೀಳುವುದೇ ಇಲ್ಲ! ಭೂಮಿಯನ್ನು ಆ ಎತ್ತರದಲ್ಲಿ ಪರಿಭ್ರಮಿಸುವ ಕೃತಕ ಉಪಗ್ರಹವಾಗುವುದು.

ಕಡಿಮೆ ವೇಗದಲ್ಲಿ ಹೀಗೆ ಎಸೆದ ಕಲ್ಲು ಒಂದು ದೀರ್ಘ ವಕ್ರ ರೇಖೆಯ ಮೇಲೆ ಚಲಿಸಿ ಭೂತಳವನ್ನು ಬಡಿಯುವುದು. ಇದರ ಬದಲು, ನೆಲದಿಂದ ಲಂಬವಾಗಿ ಸೆಕೆಂಡಿಗೆ ೧೧.೨ (ಅಥವಾ ಹೆಚ್ಚು) ಕಿಮೀ ವೇಗದಲ್ಲಿ ಮೇಲೆಸೆದ ಕಲ್ಲು ವಾಯುಮಂಡಲದ ಸರಹದ್ದನ್ನು ದಾಟಿ ಗುರುತ್ವಾಕರ್ಷಣ ವಲಯದ ಹಿಡಿತವನ್ನು ಮೀರಿ ವಿಶಾಲಾಕಾಶದಲ್ಲಿ ಸ್ವಚ್ಛಂದವಾಗುವುದು. ಗುರುತ್ವಾಕರ್ಷಣೆಯ ಬಲ ಎಷ್ಟು ಎಂದು ಇದರಿಂದ ತಿಳಿಯುತ್ತದೆ. ಅಷ್ಟಿಲ್ಲದಿದ್ದರೆ ಅತಿ ಚಂಚಲ ವಾಯುಕಣ ಇಲ್ಲಿ ಉಳಿಯುತ್ತಿರಲಿಲ್ಲ; ಮೋಡ, ನೀರು ಭೂಮಿಗೆ ಬಂಧಿತವಾಗಿರುತ್ತಿರಲಿಲ್ಲ. ಇವು ಇಲ್ಲದಿದ್ದರೆ ಹಸುರೆಲ್ಲಿ? ಜೀವ ಎಲ್ಲಿ? ಮನುಷ್ಯ ಎಲ್ಲಿ? ಚಂದ್ರ ಲೋಕದ ದುಸ್ಥಿತಿಯೇ ಇದು, ಅದು ಜೀವಿಗಳ ವಾಸಕ್ಕೆ ಸರ್ವಥಾ ಅಯೋಗ್ಯ. ಸೆಕೆಂಡಿಗೆ ೧೧.೨ ಕಿಮೀ ವೇಗ – ಇದು ಭೂಮಿಯ ಹಿಡಿತದಿಂದ ಬಿಡುಗಡೆ ಹೊಂದಲು ಆವಶ್ಯಕವಾದ ಕನಿಷ್ಠ ವೇಗ. ಇದರ ಹೆಸರು ಬಿಡುಗಡೆಯ ವೇಗ ಅಥವಾ ವಿಮೋಚನಾ ವೇಗ. ವಿಜ್ಞಾನಿಗಳು ಸೈದ್ಧಾಂತಿಕವಾಗಿ (ಅಂದರೆ ಸಮೀಕರಣಗಳ ಮೂಲಕ ಕಾಗದದ ಮೇಲೆ) ಸ್ಥಾಪಿಸಿದ ದಾಖಲೆಗಳನ್ನು ಯಂತ್ರ ವಿಜ್ಞಾನಿಗಳು ಪ್ರಾಯೋಗಿಕವಾಗಿ ನಿರ್ವಹಿಸಬೇಕು. ಇಂಥ ನಿರ್ಮಾಣ ಕಾರ್ಯ ಹಲವಾರು ಹೊಸ ಮತ್ತು ಬಿಡಿ ಸಮಸ್ಯೆಗಳನ್ನು ಮುಂದೊಡ್ಡುವುದು. ಗಂಟೆಗೆ ೪೦,೦೦೦ ಕಿಮೀ ವೇಗದಲ್ಲಿ ಹಾರಿಸಲು ಬೇಕಾಗುವ ನೂಕುಬಲವೆಷ್ಟು? ಅಂಥ ನೂಕುಬಲ ಸೃಜಿಸಲು ಉಪಯೋಗಿಸುವ ಇಂಧನ ಯಾವುದು? ಆಕಾಶ ನೌಕೆಯನ್ನು ರಚಿಸಲು ಯಾವ ಲೋಹವನ್ನು ಬಳಸಬೇಕು? ಅದರೊಳಗೆ ಕುಳಿತಿರುವ ಮನುಷ್ಯನ ರಕ್ಷಣೆಯ ಏರ್ಪಾಡೇನು? ಒಂದೊಂದು ಸಮಸ್ಯೆಯನ್ನೂ ಪ್ರಾಯೋಗಿಕವಾಗಿ ಪರಿಹರಿಸಬೇಕು. ಇಂಥ ಪರಿಹಾರ ಸಮಗ್ರ ಯೋಜನೆಗೆ ಪೂರಕವಾಗಿರಬೇಕೇ ವಿನಾ ಅದರ ಯಾವುದೇ ಒಂದು ಬಿಡಿಯೋಜನೆಗೂ ಸ್ವಲ್ಪ ಮಾತ್ರವೂ ವ್ಯತಿರಿಕ್ತವಾಗಿರಬಾರದು. ಮನುಷ್ಯ ಜೀವವನ್ನು ರಕ್ಷಿಸಿಕೊಳ್ಳಲಾರದ ಆಕಾಶ ನೌಕೆ ರಚಿಸಿ ಪ್ರಯೋಜನವೇನು? ಹಾಗೆಂದು ಒಂದು ಮನೆಯನ್ನೇ ಹಾರಿಸಲು ಬಂದೀತೇ? ಪುನಃ ತೋರಿಕೆಗೆ ವಿರುದ್ಧವಾಗಿರುವ ಹಲವಾರು ಸಮಸ್ಯೆಗಳಲ್ಲಿ ಒಂದು ಸಮತೋಲ ಪರಿಹಾರ ಸಾಧಿಸುವ ಪ್ರಯತ್ನ.

ಇನ್ನು ವಿಮಾನದ ರಚನೆಯ ವೈಶಿಷ್ಟ್ಯ. ಸಮುದ್ರದ ಮಾಧ್ಯಮವನ್ನು ತೊರೆದು ಹಡಗು ತೇಲಲಾರದು; ಗಟ್ಟಿ ರಸ್ತೆಯ ಮಾಧ್ಯಮವಿಲ್ಲದೆ ಗಾಡಿ ಉರುಳಲಾರದು – ಕಾರಣ, ಮಾಧ್ಯಮಗಳಿಗೆ ಅನುಗುಣವಾದ ರಚನೆಗಳಿವು. ಮಾಧ್ಯಮ ನೈಸರ್ಗಿಕ: ವಾಹನ ಮನುಷ್ಯಕೃತ. ಹಡಗು ನೆಲದ ಮೇಲೆ ಉರುಳಲಾರದು, ಗಾಡಿ ನೀರ ಮೇಲೆ ತೇಲಲಾರದು. ಆಯಾ ಮಾಧ್ಯಮಕ್ಕೆ ಅನುಗುಣವಾದ ವಾಹನವನ್ನು ರಚಿಸಬೇಕು. ವಾಯುಮಂಡಲದ ಮಾಧ್ಯಮವನ್ನು ಅನುಸರಿಸಿ ವಿಮಾನವಿದೆ. ಹಡಗು ನೀರನ್ನು ಹಿಂದೆ ನೂಕಿ ಅದರಿಂದ ಜನಿಸುವ ವಿರುದ್ಧ ಬಲಗಳ ಸಹಾಯದಿಂದ ಮುಂದೆ ಸಾಗುವುದು. (‘ದೋಣಿ ಸಾಗಲಿ, ಮುಂದೆ ಹೋಗಲಿ’ಯ ವೈಜ್ಞಾನಿಕ ಸೂತ್ರ ‘ಹುಟ್ಟ ಹೊಡೆಯಲಿ, ಹಿಂದೆ ನೂಕಲಿ!’) ಇದೇ ಪ್ರಕಾರ ವಾಯುಸಮುದ್ರದಲ್ಲಿ ವಿರುದ್ಧ ಬಲಗಳನ್ನು ಉಂಟುಮಾಡಿ ವಿಮಾನ ಹಾರುತ್ತದೆ. ಹಕ್ಕಿಗಳು ರೆಕ್ಕೆ ಬಡಿವಾಗ ಇದೇ ಕ್ರಿಯೆ ನಡೆಯುವುದು. ವಾಯುಸಮುದ್ರದ ದಟ್ಟಣೆ ಭೂಮಿತಳದಲ್ಲಿ ಅತಿ ಹೆಚ್ಚು; ಮೇಲೆ ಮೇಲೆ ಏರಿದಂತೆ ಇದು ಕಡಿಮೆ ಕಡಿಮೆ ಆಗಿ ಸುಮಾರು ೧೨೦ ಕಿಮೀ ಮೀರಿದ ಮೇಲೆ ಇಲ್ಲವಾಗುವುದು. ಅಲ್ಲಿಂದ ಮುಂದೆ ಅಖಂಡ ನಿರ್ವಾತ ಪ್ರದೇಶ. ವಿಮಾನಕ್ಕೆ ಇದು ಅಪ್ರವೇಶ್ಯ – ಯಾವುದರ ಮೇಲೆ, ಹೇಗೆ, ಎಲ್ಲಿ ಹುಟ್ಟ ಹೊಡೆಯುವುದು? ಆದ್ದರಿಂದ ಆಕಾಶಯಾನ ಪ್ರಾಯೋಗಿಕವಾಗಬೇಕಾದರೆ ನಿರ್ವಾತ ಪ್ರದೇಶದಲ್ಲಿ ಚಲಿಸಬಲ್ಲ ಒಂದು ವಾಹನ ಅವಶ್ಯ.

ಚೇಳುಬಾಣದ ಪರಿಷ್ಕೃತ ರೂಪ

ರೈಫಲ್ ರೇಂಜ್, ಅಂದರೆ ಸೈನಿಕರು ಕೋವಿ ಹೊಟ್ಟಿಸಿ ಗುರಿ ಪರೀಕ್ಷೆ, ಪರಿಷ್ಕಾರ ಮಾಡುವ ಊರ ಹೊರಗಿನ ನಿರ್ಜನ ಪ್ರದೇಶ. ಗುರಿದಿಬ್ಬದ ಮೇಲೆ ಸಾಲಾಗಿ ಗುರಿಹಲಗೆಗಳನ್ನು ( ಟಾರ್ಗೆಟ್ಸ್) ಜೋಡಿಸಿದ್ದಾರೆ. ಎದುರು ೨೦೦ ಮೀಟರ್ ದೂರದಲ್ಲಿ ಅಷ್ಟೇ ಸಂಖ್ಯೆಯಲ್ಲಿ ಗುರಿ ಹೊಡೆಯಲು ಸೈನಿಕರು ಕವುಚಿ ಮಲಗಿದ್ದಾರೆ. ನಾಯಕ “ಹೊಡೆ” ಎಂದು ಆಜ್ಞೆ ನೀಡಿದ. ಢಮ ಢಮ ನಿನಾದ, ಗುರಿದಿಬ್ಬದಿಂದ ದೂಳಿನ ಹಾರಿಕೆ ಎಲ್ಲ ಒಂದು ಕ್ಷಣದಲ್ಲಿ ಮುಗಿದುವು. ಆ ಗಳಿಗೆ ಸೈನಿಕರ ದೇಹಗಳನ್ನು ನೋಡಿದ್ದರೆ ಅವು ಸ್ವಲ್ಪ ಹಿಂದಕ್ಕೆ ಅಲುಗಿದುದು ಕಾಣುತ್ತಿತ್ತು. ಒಬ್ಬ ಸೈನಿಕನನ್ನೇ ಪ್ರಶ್ನಿಸಿದರೆ “ರೈಫಲ್‌ನ ಕುದುರೆಯನ್ನು ಒತ್ತಿದಾಗ ಗುಂಡು ಗುರಿಯೆಡೆಗೆ ಜಿಗಿಯಿತು. ರೈಫಲ್ ನನ್ನ ಎದೆಗೆ ಒದ್ದಿತು” ಎನ್ನುತ್ತಾನೆ. ಗುಂಡಿನ ಚಲನೆ ಮುಂದೆ ಆದರೆ ರೈಫಲ್ ಒದೆತ ಹಿಂದೆ. ಲಾಂಗ್ ಜಂಪ್ ಹಾರುವವ ದೂರದಿಂದ ಓಡಿ ಬಂದು ಗಡಿ ಗುರುತಿನಲ್ಲಿ ನೆಲ ಮೀಟಿ ಮುಂದಕ್ಕೆ ನೆಗೆಯುತ್ತಾನೆ. ಗೋಡೆಗೆ ಗುದ್ದಿ (ಗಾಳಿಗೆ ಅಲ್ಲ) – ಅದು ನಿಮ್ಮ ಕೈಗೆ ಅಷ್ಟೇ ಬಲವಾಗಿ ಮರುಗುದ್ದಿರುತ್ತದೆ. ಈ ‘ಗುದ್ದು – ಮರುಗುದ್ದು’ (ಎಂಬ ನ್ಯೂಟನ್ನನ ಮೂರನೇ) ನಿಯಮ ಚೇಳುಬಾಣದ ಹಾರಾಟದಲ್ಲಿದೆ. ಅದನ್ನು ಆಧುನಿಕ ಕವಿ ಹೀಗೆಂದು ಗೀಚಿದ್ದಾನೆ:

ಉರಿಯಲಿ ಬೆಂಕಿ ಹಿಂದೆ ಹಿಂದೆಜಿಗಿಯಲಿ ರಾಕೆಟ್ ಮುಂದೆ ಮುಂದೆನ್ಯೂಟನ್ ಗೋರಿ ನಕ್ಕಿತು ನೋಡಿ:“ಅಂದೇ ನಾ ಹೇಳಿಲ್ಲವೇ ಈ ಮೋಡಿ?” ೨೦೦೦ ವರ್ಷಗಳ ಹಿಂದೆ ಚೈನಾ ದೇಶದಲ್ಲಿ ಆಕಾಶಬಾಣಗಳನ್ನು (ಚೇಳುಬಾಣ ಅಥವಾ ಬಿರುಸುಬಾಣ) ಹಾರಿಸುತ್ತಿದ್ದುದರ ಉಲ್ಲೇಖವಿದೆ. ಇಂದಿಗೂ ದೀಪಾವಳಿ ಬಂದಾಗ ಗಗನಕ್ಕೆ ನೆಗೆದು ಮಾಯವಾಗುವ ಚೇಳುಬಾಣಗಳನ್ನು ನೋಡುತ್ತೇವೆ. ಬೆಂಕಿಯನ್ನು ಹಿಂದೆ ಕಾರುತ್ತ ಮುಂದೆ ಮುಂದೆ ಧಾವಿಸುವ ದೃಶ್ಯ. ಬೆಂಕಿ ಉರಿದ ದಿಕ್ಕಿಗೆ ವಿರುದ್ಧ ಅದರ ಒದೆತ. ಚೇಳುಬಾಣದ ಚಲನೆಗೂ ವಿಮಾನದ ಚಲನೆಗೂ ಒಂದು ಮುಖ್ಯ ವ್ಯತ್ಯಾಸವಿದೆ. ವಿಮಾನದ ಚಲನೆ ಮಾಧ್ಯಮವನ್ನು (ಅಂದರೆ ಗಾಳಿಯನ್ನು) ನೂಕಿ; ಚೇಳುಬಾಣದ ಚಲನೆ ಆಂತರಿಕವಾಗಿ ಜನಿಸುವ ವಿರುದ್ಧ ಬಲದಿಂದ. ಇಲ್ಲಿ ವಾಯುಮಂಡಲ ಚೇಳುಬಾಣದ ಮುನ್ನೋಟವನ್ನು ವಿರೋಧಿಸುವುದರಿಂದ ಅಷ್ಟರಮಟ್ಟಿಗೆ ಚಲನೆಯ ವೇಗ ತಗ್ಗುತ್ತದೆ. ವಾಯುಮಂಡಲ ರಹಿತ ಪ್ರದೇಶದಲ್ಲಿ ಚೇಳುಬಾಣದ ಮುನ್ನೋಟಕ್ಕೆ ಪ್ರತಿರೋಧವೇ ಇರುವುದಿಲ್ಲ. ಆದರೆ ಒಂದು ಹೊಸ ಸಮಸ್ಯೆ ಇಲ್ಲಿ ಎದುರಾಗುತ್ತದೆ; ಚೇಳುಬಾಣದ ಬೆಂಕಿ ಉರಿಯಲು ವಾಯುಮಂಡಲದಲ್ಲಿರುವ ಆಕ್ಸಿಜನ್ ಅತ್ಯಾವಶ್ಯ. ನಿರ್ವಾತ ಪ್ರದೇಶದಲ್ಲಿ ಇದು ಇಲ್ಲ; ಆದ್ದರಿಂದ ಬೆಂಕಿ ಉರಿಯದು, ಚಲನೆ ತೊಡಗದು. ಸಮಸ್ಯೆಯ ಪರಿಹಾರ ಸುಲಭ – ನಿರ್ವಾತ ಪ್ರದೇಶದಲ್ಲಿ ಉರಿಯುವ ಇಂಧನದ ಶೋಧ. ಇಂಥ ಇಂಧನಪೂರಿತ ಬಾಣ ನಿರ್ವಾತ ಪ್ರದೇಶದ ಚಲನೆಗೆ ಸಮರ್ಥವಾದದ್ದು.

ಚೇಳುಬಾಣದ ಪರಿಷ್ಕೃತ ರೂಪ ರಾಕೆಟ್, ಆಕಾಶಯಾನದ ವಾಹನ ರಾಕೆಟ್. ಆಕಾಶಸಾಗರೋಲ್ಲಂಘನ ಮಾಡುವ ಹನುಮಂತ ರಾಕೆಟ್. “ಉರಿ ಹಿಂದೆ – ನಡೆ ಮುಂದೆ” ಇದರ ಸೂತ್ರ.

ಗೊಡ್ಡಾರ್ಡನ ಕನಸು

ಪ್ರಥಮ ಜಾಗತಿಕ ಯುದ್ಧದ ಭೀಕರ ಸನ್ನಿವೇಶ. ಮಿಲಿಟೆರಿ ವಿಮಾನಗಳು ಅಂತಾರಾಷ್ಟ್ರೀಯ ಗಡಿರೇಖೆಗಳನ್ನು ಅತಿಕ್ರಮಿಸಿ ಹಾರುತ್ತಿದ್ದುವು. ಅದೇ ಸಮಯದಲ್ಲಿ ರಾಕೆಟ್‌ನ ಸಿದ್ಧಾಂತ, ಪ್ರಯೋಗ ಇವುಗಳ ಅನ್ವೇಷಣೆ ವಿವಿಧ ದೇಶಗಳಲ್ಲಿ ಭರದಿಂದ ಮುಂದುವರಿಯಿತು. ಮಾರಕಾಸ್ತ್ರ, ಗುಪ್ತಾಸ್ತ್ರಗಳನ್ನು ಮೊದಲು ಸಂಶೋಧಿಸಿ ಪ್ರಯೋಗಿಸುವ ರಾಷ್ಟ್ರಕ್ಕೆ ಶತ್ರು ವಿರುದ್ಧ ಹಠಾತ್ ಪರಿಣಾಮದ ಲಾಭ ಇದೆ.

ಅಮೆರಿಕಾ ದೇಶದ ಮಸ್ಸಾಚುಸೆಟ್ಸ್‌ನ ವೊರ್ಸೆಸ್ಟರ್‌ನಲ್ಲಿರುವ ಕ್ಲಾರ್ಕ್ ವಿಶ್ವವಿದ್ಯಾನಿಲಯ. ಅಲ್ಲೊಬ್ಬ ಅನಾಮಧೇಯ ಭೌತಶಾಸ್ತ್ರ ಪ್ರಾಧ್ಯಾಪಕ. ಅವನ ಆಸಕ್ತಿ ರಾಕೆಟ್ ಚಾಲನ. ಇವನ ಪ್ರಯೋಗಗಳು ಬಹಳ ಕಾಲ ನೇಪಥ್ಯದಲ್ಲಿರುವುದು ಸಾಧ್ಯವಿರಲಿಲ್ಲ. ವಿಜ್ಞಾನಿಗಳ ಗಮನ ಆ ಕಡೆ ಹರಿಯಿತು. ಭೌತ ವಿಜ್ಞಾನಿಯ ಹೆಸರು ರಾಬರ್ಟ್ ಎಚ್. ಗೊಡ್ಡಾರ್ಡ್.

ಕನಸು ಕಂಡನು ರಾಬರ್ಟ್ ಗೊಡ್ಡಾರ್ಡ್:ಸೌರವ್ಯೂಹದ ವೀಕೆಂಡ್ ಟ್ರಿಪ್! ಓ ಲಾರ್ಡ್!ದೈತ್ಯಾಕಾರದ ಉರುಳೆಯ ಮೇಲೆಬಿಗಿದಪ್ಪುತ ಕುಳಿತಿಹುದೀ ಹಸುಳೆ.ಕಾರಿತು ಜ್ವಾಲೆ, ಭೈರವ ಲೀಲೆ.ಅನಂತ ಕಾಲಕೆ ಅನಂತ ವ್ಯಾಪ್ತಿಗೆನೆಗೆಯಿತು ಎಡೆತಡೆಯಿಲ್ಲದೆ ಉರುಳೆ! ಅಮೆರಿಕಾ ದೇಶದ ಆಕಾಶಯೋಜನೆಗಳ ಹಿನ್ನೆಲೆಯಲ್ಲಿರುವ ಸುಪ್ರಸಿದ್ಧ ಕನಸುಗಾರ ಪ್ರಯೋಗ ಪರಿಣತಮತಿ ಗೊಡ್ಡಾರ್ಡ್. ಈ ಮಹಾವ್ಯಕ್ತಿಯ ಹೆಸರನ್ನು ಚಿರಸ್ಥಾಯಿ ಆಗಿಸಲು ನಾಸಾ ಸಂಸ್ಥೆ ಮೇರಿ ಲ್ಯಾಂಡಿನ ಗ್ರೀನ್‌ಬೆಲ್ಟಿನಲ್ಲಿ ಗೊಡ್ಡಾರ್ಡ್ ಆಕಾಶಯಾನ ಕೇಂದ್ರವನ್ನು ಸ್ಥಾಪಿಸಿದೆ.

ವೊರ್ಸೆಸ್ಟರ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟಿನಿಂದ ಈ ಪ್ರತಿಭಾವಂತ ಪದವೀಧರನಾದ (೧೯೦೮). ೧೯೧೧ರಲ್ಲಿ ಕ್ಲಾರ್ಕ್ ವಿವಿನಿಲಯದಿಂದ ಡಾಕ್ಟರೇಟ್ ಪದವಿ ಪಡೆದ. ೧೯೧೪ರಲ್ಲಿ ಅಲ್ಲೇ ಅಧ್ಯಾಪಕನಾದ. ಅವನ ತೀವ್ರಾಸಕ್ತಿ ರಾಕೆಟ್ ಚಾಲನ ಸೂತ್ರಗಳ ಅನ್ವೇಷಣೆ. ಅವನ ಗುರಿ ೩೦ ಕಿಮೀ? ೬೦ ಕಿಮೀ? ೬೦೦೦ ಕಿಮೀ, ಎಲ್ಲ ಅತ್ಯಲ್ಪ. ಸೀದಾ ಚಂದ್ರಲೋಕ, ಸಾಧ್ಯವಾದರೆ ಮತ್ತೂ ಮುಂದೆ. ೧೯೧೯ರಲ್ಲಿ ಚಂದ್ರಲೋಕಕ್ಕೆ ರಾಕೆಟ್ ಉಡಾಯಿಸುವ ವಿಧಾನವನ್ನು ಅವನು ರೂಪಿಸಿದ್ದ. ತನ್ನ ಪ್ರಬಂಧವನ್ನು ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಟಿನಲ್ಲಿ ಓದಿ ಹೇಳಿದ. ನೆರೆದವರಿಗೆ ೧೯೬೯ರವರೆಗೆ ದೃಷ್ಟಿ ವಿಸ್ತರಿಸುವ ಸಾಮರ್ಥ್ಯವಿರಲಿಲ್ಲ. ಕಲ್ಪನಾವಿಲಾಸಕ್ಕೆ ಲಭಿಸಿದ್ದು ಕರುಣೆ, ಅನುಕಂಪ. “ರಾಕೆಟ್ಟನ್ನು ಎಸೆಯುವುದನ್ನು ಒಪ್ಪೋಣ. ಆದರೆ ಈ ಯಶಸ್ಸು ನಮಗೆ ತಿಳಿಯುವುದು ಹೇಗೆ?” ಈ ಪ್ರಶ್ನೆಯ ಹಿಂದೆ ವೈಜ್ಞಾನಿಕ ಕುತೂಹಲಕ್ಕಿಂತಲೂ ಹೆಚ್ಚಾಗಿದ್ದದ್ದು ಗೊಡ್ಡಾರ್ಡನನ್ನು ಗೇಲಿಸುವ ಮನೋಭಾವ. ಅಂದು ರೇಡಿಯೋ ಸಂಜ್ಞೆಗಳ ಪ್ರಸಾರ ಬೆಳೆದಿರಲಿಲ್ಲ. ದೂರದರ್ಶಕಗಳಿಂದ ಈ ಘಟನೆ ನೋಡುವುದು ಅಸಾಧ್ಯ. (ಕೇಳುವುದಂತೂ ಅಶಕ್ಯ. ಅಂಥ ಆಸ್ಫೋಟನೆ ಸಾಧ್ಯವಿಲ್ಲ; ಅಲ್ಲದೆ ಆಸ್ಫೋಟನೆಯ ಶಬ್ದ ನಿರ್ವಾತ ಪ್ರದೇಶದಲ್ಲಿ ಪ್ರಸಾರವಾಗದು. ಶಬ್ದ ಪ್ರಸಾರವಾಗಲು, ಕೇಳಲು ಗಾಳಿಯ ಮಾಧ್ಯಮ ಅತ್ಯಾವಶ್ಯಕ). ಗೊಡ್ಡಾರ್ಡ್ ಈ ಸಮಸ್ಯೆಗೂ ಪರಿಹಾರ ಚಿಂತಿಸಿದ್ದ: ರಾಕೆಟ್‌ನಲ್ಲಿ ಮಿಂಚುಪುಡಿ ಇಡಬೇಕು. ರಾಕೆಟ್ ಚಂದ್ರತಲ ಬಡಿದೊಡನೆ ಈ ಪುಡಿ ಸ್ಫೋಟಿಸಿ ಮಿಂಚುಕಾರಬೇಕು. ಆಗ ರಾಕೆಟ್ ಇಳಿದುದು ಖಚಿತವೆಂದು ಭೂಮಿಯಲ್ಲಿ ನಿಂತವರಿಗೆ (ದೂರದರ್ಶಕದ ಮೂಲಕ) ಕಾಣುವುದು. ಎಲ್ಲರಂತೆ ಗೊಡ್ಡಾರ್ಡನಿಗೂ ತನ್ನ ಕೃತಿ ಫಲಿಸೀತೇ ಇಲ್ಲವೇ ಎಂದು ತಿಳಿಯುವ ಹಂಬಲವಿತ್ತು. ಅಡುಗೆಯ ರುಚಿ ಊಟದಲ್ಲಿ ತಾನೇ.

ಪ್ರಥಮ ಜಾಗತಿಕ ಯುದ್ಧ ಮುಗಿಯಿತು. ಆಮೆ ತಲೆಯನ್ನು ಚಿಪ್ಪಿನೊಳಗೆ ಎಳೆದುಕೊಂಡಿತು. ಸಂತೃಪ್ತಭಾವನೆ ಸಾರ್ವತ್ರಿಕವಾಗಿ ವ್ಯಾಪಿಸಿತು. ಹಾಗಿರುವಾಗ ವಿಜ್ಞಾನದ ಪ್ರಗತಿ ಅಗತ್ಯವೇ? ಸಾಧ್ಯವೇ? ಗೊಡ್ಡಾರ್ಡನ ಯೋಜನೆ ಕಾರ್ಯಗತವಾಗಲು ನಡೆಯಬೇಕಾದ ದಾರಿ ಏರಬೇಕಾದ ಎತ್ತರ ಬಹಳ ಇದ್ದುವು. ಇಂಥ ಎಲ್ಲ ಹೊಸ ಪ್ರಯೋಗಗಳ ಸಂಕಟ ತಾಪತ್ರಯಗಳು ಗೊಡ್ಡಾರ್ಡನನ್ನೂ ಬಿಡಲಿಲ್ಲ. ಧನ ಸಹಾಯ ಮೊದಲ ಆವಶ್ಯಕತೆ – ಹಾಕಿದ ಹಣ ಹೋಯಿತೆಂದೇ ತಿಳಿದು ಮುಕ್ತಮನಸ್ಸಿನಿಂದ ಹಣ ಚೆಲ್ಲಬೇಕು. ಗುರಿ ತಿಳಿಯದೆ ಆದರೂ ಒಂದು ಘನೋದ್ದೇಶದಿಂದ ದೀಪ್ತರಾಗಿ ದುಡಿಮೆಯಲ್ಲೇ ಸಂತೋಷ ಪಡೆಯುವ ಪ್ರತಿಭಾನ್ವಿತರ ಒಂದು ತಂಡವೇ ಬೇಕು. ಆದರೆ ಯುದ್ಧ ಮುಗಿದೊಡನೆ ಸರಕಾರದ ಬಿಗಿ ಖಜಾನೆಗೆ ಬಲವದ್ಬಂಧನದ ಬೀಗ ಜಡಿದರು. ಹೀಗಾಗಿ ಗೊಡ್ಡಾರ್ಡನ ಪ್ರಯೋಗಗಳು ಕುಂಟುತ್ತ ತೆವಳುತ್ತ ಮುಂದುವರಿದುವು. ಚೈತನ್ಯವನ್ನು ಎಷ್ಟೇ ಅದುಮಿಟ್ಟರೂ ಅದರ ಸ್ವಭಾವಸಿದ್ಧ ಚಲನೆಯನ್ನು ಬಿಟ್ಟೀತೇ? ಒಳಗೆ ಸಿಡಿಯುತ್ತಿದ್ದ ರಾಕೆಟ್ ಗೊಡ್ಡಾರ್ಡನನ್ನು ಮುಂದೆ ಮುಂದೆ ನೂಕಿತು. ಅವನ ಗಮನವೆಲ್ಲ ಇಂಧನ ಪರಿಷ್ಕರಣದಲ್ಲಿ – ನೂಕುಬಲದ ಆಗಾರ ಇದು ತಾನೇ. ಘನರೂಪದ ಇಂಧನಕ್ಕಿಂತಲೂ ದ್ರವರೂಪದ ಇಂಧನವೇ ಹೆಚ್ಚು ಉಪಯುಕ್ತ ಎಂದು ಅವನು ಕಂಡುಕೊಂಡಿದ್ದ. ೧೯೨೬ರ ಮಾರ್ಚ್ ೧೬ರಂದು ಪ್ರಪಂಚದ ಪ್ರಥಮ ದ್ರವ ಇಂಧನ ಚಾಲಿತ ರಾಕೆಟ್ಟನ್ನು ಗೊಡ್ಡಾರ್ಡ್ ಉಡಾಯಿಸಿದ. ದ್ರವೀಕೃತ ಆಕ್ಸಿಜನ್‌ಗೆ ಸೊಲಿನ್ ಮಿಶ್ರಣ ಅಲ್ಲಿ ಇಂಧನ. ಉರಿದದ್ದು ೨.೫ ಸೆಕೆಂಡ್ ಕಾಲ; ತಲುಪಿದ ಪರಮಾವಧಿ ವೇಗ ಗಂಟೆಗೆ ೯೬ ಕಿಮೀ; ಏರಿದ ಎತ್ತರ ೫೬ ಮೀ. ಆ ಸಮಯದಲ್ಲಿ ಇಂಥ ಮಹಾ ಪ್ರಯೋಗಕ್ಕೆ ದೊರೆತ ಮನ್ನಣೆ ಸ್ವಾಗತ ಪ್ರಚಾರ ಅತ್ಯಲ್ಪ. ಆದರೆ ಇಂದು ಪರಿಸ್ಥಿತಿಯ ಸಿಂಹಾವಲೋಕನ ಮಾಡುವಾಗ ಒಂದು ವಿಷಯ ಸ್ಪಷ್ಟವಾಗುವುದು – ವಾಯುಚಲನ ಶಾಸ್ತ್ರದ ಇಂಜಿನಿಯರಿಂಗಿಗೆ ಡೇಯ್ಟನ್ನಿನ ರೈಟ್ ಸಹೋದರರ ಕಿಟ್ಟೀಹಾಕ್ ವಿಮಾನ ಹಾರಾಟ ಎಷ್ಟು ಪ್ರಮುಖವೋ ಅಷ್ಟೇ ಗೊಡ್ಡಾರ್ಡನ ಪ್ರಯೋಗವೂ ಸಹ. ಆದರೆ ಜನ ಇದನ್ನು ಗ್ರಹಿಸಲಿಲ್ಲ.

೧೯೩೦ರ ದಶಕದಲ್ಲಿ ನ್ಯೂ ಮೆಕ್ಸಿಕೋದ ರಾಸ್ವೆಲ್‌ನ ಪ್ರಯೋಗ ಕ್ಷೇತ್ರದಲ್ಲಿ ಗೊಡ್ಡಾರ್ಡ್ ರಾಕೆಟ್ ಉಡಾವಣೆಯನ್ನು ಮುಂದುವರಿಸಿದ. ೧೯೩೨ರಲ್ಲಿ ಅವನ ಕಲ್ಪನೆಯ ಶಿಶು – ದ್ರವ ಇಂಧನ ಚಾಲಿತ ರಾಕೆಟ್ – ಗಂಟೆಗೆ ೮೦೦ ಕಿಮೀ ವೇಗದಲ್ಲಿ ೬೦೦ ಮೀ ಎತ್ತರಕ್ಕೆ ಹಾರಿತು. ೧೯೪೫ರಲ್ಲಿ ಅವನು ಮಡಿಯುವವರೆಗೂ ಪ್ರಯೋಗಗಳು ಮುಂದುವರಿದುವು. ಚಂದ್ರನೆಡೆಗೆ ಪ್ರಥಮ ಇಂಜಿನಿಯರಿಂಗ್ ಸೋಪಾನ ರಚಿಸಿದವನೂ ಅವನೇ. ಬಾಹ್ಯಾಕಾಶ ಚಲನೆಗೆ ನಾಂದಿ ನೆರವೇರಿಸಿದ ಆಚಾರ್ಯ ಪುರುಷ ಗೊಡ್ಡಾರ್ಡ್. ಆದರೂ ಜನ – ಎಲ್ಲ ಕಾಲದ ಎಲ್ಲ ಜನರಂತೆ – ಗೊಡ್ಡಾರ್ಡನಿಗಿಂತ ಅದೆಷ್ಟೋ ಕಾಲ ಹಿಂದೆ ಇದ್ದರು. ಇದೊಂದು ತಮಾಷೆ ಎಂದು ಅವರ ಭಾವನೆ. ಸಂಶೋಧಕರು ತಜ್ಞರು ಮಾತ್ರ ಗೊಡ್ಡಾರ್ಡನನ್ನು ಅಲಕ್ಷಿಸಲಿಲ್ಲ. ಕೆಲವರಾದರೂ ಅವನ ಕನಸುಗಳಲ್ಲಿ ಮನಃಪೂರ್ವಕವಾಗಿ ಭಾಗಿಗಳಾದರು. ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ರಾಕೆಟ್ ಎಂಬ ರಾಕೆಟ್ ಮಂತ್ರವನ್ನು ಅವರು ಉಚ್ಚ ಸ್ವರದಲ್ಲಿ ಪಠಿಸಿದರು. ಆದರೆ ಆಲಿಸಿದವರು ವಿರಳ.

(ಮುಂದುವರಿಯುತ್ತದೆ)