ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಮೂರು
ಅಧ್ಯಾಯ ನಾಲ್ಕು

ಮೋಡದಂತೆ ತೇಲಿ, ಹಕ್ಕಿಯಂತೆ ಹಾರಿ, ಕಪ್ಪೆಯಂತೆ ಜಿಗಿದು ಸರ್ವತಂತ್ರ ಸ್ವತಂತ್ರನಾಗಿ ಬೆಳೆಯುತ್ತಿದ್ದ ನನ್ನನ್ನು ಐದು ವರ್ಷ ತುಂಬಿದಾಗ ಶಾಲೆಗೆ ಸೇರಿಸಿದರು (೧೯೩೧). ಅದರ ಹೆಸರು ಸರ್ಕಾರೀ ಮಾಧ್ಯಮಿಕ ಪ್ರಾಥಮಿಕ ಶಾಲೆ – Government Middle Primary School (GMP School). ಇದರ ಮೇಲಿನ ಮಜಲುಗಳು ಎರಡು: ಮಾಧ್ಯಮಿಕ ಮತ್ತು ಪ್ರೌಢ. ಈ ಮೂರು ಶಾಲೆಗಳೂ Central High Schoolನ (CH School) – ಉನ್ನತ ಪ್ರೌಢ ಶಾಲೆ – ವಿಶಾಲ ಆವರಣದೊಳಗೆ ವಿಸ್ತಾರವಾಗಿ ಹರಡಿದ್ದುವು. ಭರ್ಜರಿ ಕಟ್ಟಡಗಳು, ಆಟವಾಡಲು ಮತ್ತು ತೋಟಗಾರಿಕೆ ಕೆಲಸ ಮಾಡಲು ಮೂರು ಹಂತಗಳಲ್ಲಿ ಮೈದಾನಗಳಿದ್ದುವು: ಶಾಲಾವರಣದೊಳಗೆ, ಇದಕ್ಕೆ ಮುಟ್ಟಿಕೊಂಡು ಹಿಂದೆ ಕೆಳ ಮ್ಯಾನ್ಸ್ ಕಾಂಪೌಂಡ್, ಮುಂದಿನ ಹಂತದಲ್ಲಿ ಮೇಲಿನ ಮ್ಯಾನ್ಸ್ ಕಾಂಪೌಂಡ್ (lower and upper Mann’s compounds). ಎಲ್ಲೆಲ್ಲೂ ಮರಗಾಡು, ಪೀಠಭೂಮಿ ಕ್ರಮೇಣ ಏರುತ್ತ ಹೋಗಿ ದೂರದ ಬಾನಿನ ನೀಲಿಮೆಯೊಂದಿಗೆ ಲೀನವಾಗುವ ದೃಶ್ಯ ಅನುಪಮ. ಇಂದು (೨೦೦೫) ಈ ಸಂಕೀರ್ಣ ಪೂರ್ತಿ ಕಾಂಕ್ರೀಟ್ ಕಾಡು, ಕೃತಕ ಭಿತ್ತಿಗಳು, ವೃಕ್ಷರಿಕ್ತ ಬಯಲು, ನೀರು ಹರಿಯದ ತೋಡು ಮತ್ತು ಸರ್ವತ್ರ ಕೊಳಕು ‘ರಾರಾಜಿಸುತ್ತಿವೆ.’ ಇಂದು ಒಟ್ಟು ಸಮುಚ್ಚಯದ ಹೆಸರು ಸರ್ಕಾರೀ ಪದವಿಪೂರ್ವ ಕಾಲೇಜು (Government P.U. College).

ಶಾಲೆ ಸೇರುವುದು ನನಗೊಂದು ಪ್ರತಿಷ್ಠೆಯ ಪ್ರತೀಕ — ನಾನು ದೊಡ್ಡವನಾಗಿದ್ದೇನೆಂಬುದರ ರುಜುವಾತು. ಅಲ್ಲದೇ ಆಟವಾಡಲು ಹೆಚ್ಚು ಮಕ್ಕಳು ದೊರೆಯುತ್ತಾರೆಂಬುದರ ಆಸೆಯೂ ಇತ್ತು. ಇಷ್ಟದಿಂದಲೇ ‘ಹಲಗೆ ಬಳಪವ ಹಿಡಿ’ದು ಶಾಲೆಗೆ ಹೋದೆ, ಚೀಲವನ್ನು ಹೆಗಲಿಗೆ ಹಾಕಿ ನೆಟ್ಟಗೆ ನಡೆದೆ, ಬಾಲಶಿಕ್ಷೆ ತರಗತಿಯ ಸುಮಾರು ನಲವತ್ತು ಚಿಳ್ಳೆಪಿಳ್ಳೆಗಳ ಜೊತೆ ಒಬ್ಬನಾಗಿ ಕುಳಿತೆ. ಹುಡುಗಿಯರೂ ಇದ್ದರು. ಆದರೆ ಅವರು ಪ್ರತ್ಯೇಕವಾಗಿ ತರಗತಿಗೆ ಬಂದು ಬೇರೆಯಾಗಿ ಕುಳಿತು ಪಾಠ ಮುಗಿದನಂತರ ಒಟ್ಟಾಗಿ ಅವರಿಗೆಂದೇ ಮೀಸಲಿಟ್ಟ ಕೊಠಡಿಗೆ ಹಿಂತಿರುಗುತ್ತಿದ್ದರು. ಆ ಹನ್ನೊಂದು ವರ್ಷಗಳೂ (ಬಾಲಶಿಕ್ಷೆ ೧ ವರ್ಷ, ಪ್ರಾಥಮಿಕ ೪ ವರ್ಷಗಳು, ಮಾಧ್ಯಮಿಕ ಮತ್ತು ಪ್ರೌಢ ತಲಾ ೩ ವರ್ಷಗಳು) ಈ ಶಿಸ್ತು ಜಾರಿಯಲ್ಲಿತ್ತು.

ರಾಜು ಮಾಸ್ತರರು ಮೂರು ಕರಡಿಗಳ ಕತೆ, ಪಂಚತಂತ್ರದ ಕತೆಗಳು, ರಾಮಾಯಣ, ಮಹಾಭಾರತ ಮುಂತಾದವುಗಳಿಂದ ನೀತಿಪ್ರಧಾನ ಘಟನೆಗಳು ಮುಂತಾದವನ್ನು ನಿಧಾನವಾಗಿ ಹೇಳಿ, ಕರಿಹಲಗೆ ಮೇಲೆ ಚಿತ್ರಸಹಿತ ಬರೆದು ಕನ್ನಡದ ಅಕ್ಷರಗಳಿಗೆ ಸುಲಭ ಪ್ರವೇಶವೊದಗಿಸಿದರು – ಕತೆ, ಚಿತ್ರ, ವಾಕ್ಯ, ಅಕ್ಷರ ಈ ಕ್ರಮದಲ್ಲಿ. ಹೀಗೆ ಅಕ್ಷರಾಭ್ಯಾಸವೊಂದು ಪ್ರೀತಿಯ ಆಟವಾಯಿತು. ಬಲಗೈಯಲ್ಲಿ ಆರು ಬೆರಳಿದ್ದ ರಾಮಚಂದ್ರ ಗುರುಗಳು ‘ತಿರುಕನ ಕನಸು’ ಮತ್ತು ‘ಗೋವಿನ ಕತೆ’ಗಳನ್ನು ರಾಗವಾಗಿ ಹಾಡಿದರು, ನಮ್ಮನ್ನು ಬೇರೆ ಬೇರೆ ತಂಡಗಳಾಗಿ ವಿಂಗಡಿಸಿ ನಾವೇ ಅಭಿನಯಿಸುವಂತೆ ಮಾಡಿ ಉತ್ಸಾಹ ತುಂಬಿದರು. ಅಷ್ಟರಲ್ಲಿ ಬಂದನಾ ಹುಲಿರಾಯನು: ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ಯ ಅವಿಸ್ಮರಣೀಯ ಕತೆ, ಹಾಡು ಮತ್ತು ಅಭಿನಯ ಸಹಿತ ‘ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ.’ ಇದರ ಕಲ್ಪನೆ ಮತ್ತು ಪದ್ಯದ ನೇಯ್ಗೆಯಿಂದ ನಾನೆಷ್ಟು ಮೋಹಿತನಾಗಿದ್ದೆನೆಂದರೆ ಇದೇ ಧಾಟಿಯಲ್ಲಿ ನಾಲ್ಕು ಸಾಲುಗಳನ್ನು ಹೊಸೆದೂ ಬಿಟ್ಟೆ:

ಕಿಬ್ಬಿಯ ಮೇಲಿಂದಬ್ಬಿಯ ಮಡಿಲಿಗೆ ಲಾಗವ ಹೊಡೆದನು ತಿಮ್ಮಪ್ಪಬೊಬ್ಬೆಯನಿಟ್ಟನು ಮುಳುಗುತ್ತಿಹೆ ನಾ ರಕ್ಷಿಸಿರೆನ್ನನು ನಮ್ಮಪ್ಪ! ಇಂಥ ಹುಚ್ಚು ಸಾಹಸವನ್ನು ಖುದ್ದು ನಾನೇ ಚಿಕ್ಕವನಾಗಿದ್ದಾಗ ಪ್ರದರ್ಶಿಸಿ ಒಂದು ಕ್ಷಣ ಹಿರಿಯರೆಲ್ಲರಿಗೂ ಆತಂಕ ಉಂಟು ಮಾಡಿದ್ದೆನೆಂದು ಕೇಳಿದ್ದೆ. ಇನ್ನೊಮ್ಮೆ ‘ಮಾವಿನ ಗೊರಟನು ಇಡಿ ಇಡಿ ನುಂಗಿ ಅಪ್ಪನ ಪೆಟ್ಟನು ತಿಂದಿದ್ದೆ’ ಕೂಡ! ಈ ಘಟನೆ ನೆನಪಿನಲ್ಲಿದೆ.

ನಮ್ಮ ಕಪಿಪಾಳ್ಯ ಒಮ್ಮೆ ರಾಜಾಸೀಟಿಗೆ (Raja’s seat) ಹಿರಿಯರಿಗೆ ತಿಳಿಯದಂತೆ ಲಗ್ಗೆಹಾಕಿತು. ಅಲ್ಲೇನಿದೆ? ಮಡಿಕೇರಿಯ ಅತ್ಯಂತ ಆಕರ್ಷಕ ಪ್ರೇಕ್ಷಣೀಯ ತಾಣವದು, ಬ್ರಾಹ್ಮಣಕೇರಿಯಲ್ಲಿಯ ನಮ್ಮ ಮನೆಯಿಂದ ಕೇವಲ ೨೦ ನಿಮಿಷಗಳ ನಡಿಗೆ ದೂರ. ಆದರೆ ಚಿಕ್ಕವರಿಗೆ ಪ್ರವೇಶ ಪ್ರತಿಬಂಧಿತ ಪ್ರದೇಶ — ಬ್ರಹ್ಮರಾಕ್ಷಸನಿರುವನೆಂದೂ ಎಳೆಯರನ್ನು ಸೆಳೆದು ನುಂಗುವನೆಂದೂ ಹೆದರಿಸಿಟ್ಟಿದ್ದರು. ಅದರ ಸ್ಥಳಪುರಾಣ ದೊಡ್ಡದು. ಪ್ರತಿ ಮುಂಜಾನೆ ಮತ್ತು ಸಂಜೆ ರಾಜ ಅಲ್ಲಿಗೆ ಅಶ್ವಾರೋಹಿಯಾಗಿ ಬಂದು ಆತನೇ ಕಟ್ಟಿಸಿದ್ದ ಸುಂದರ ಮಂಟಪದಲ್ಲಿ (ಇಂದಿಗೂ ಇದನ್ನು ನೋಡಬಹುದು) ತುಸು ಹೊತ್ತು ಕುಳಿತಿದ್ದು ಪ್ರಕೃತಿ ದೃಶ್ಯದ ಸೊಬಗನ್ನು ಸವಿಯುತ್ತಿದ್ದನೆಂದು ಪ್ರತೀತಿ. ನಾವು ಚಿಕ್ಕವರಾಗಿದ್ದಾಗ ಮಂಟಪ ಮಾತ್ರ ಪುರಾತನ ವೈಭವದ ವರ್ತಮಾನ ಕಳೇಬರದಂತೆ ಅನಾಥವಾಗಿತ್ತು. ಅದರ ಚಾಚು ಅಂಚಿನಿಂದ ಮುಂದಕ್ಕೆ ಕಡಿದಾದ ಇಳಿಜಾರು, ತೀರ ಕೆಳಗಿನ ದಟ್ಟ ಗೊಂಡಾರಣ್ಯದಲ್ಲಿ ಇದು ಮರೆಯಾಗುತ್ತಿತ್ತು, ಅಲ್ಲಿಂದ ಮುಂದಕ್ಕೆ ವಿಸ್ತಾರವಾದ ಹಸುರ ಕಡಲು, ಇದು ಅಲೆಯಲೆಯಾಗಿ ಹರಡುತ್ತ ಹೋಗಿ ದಿಗಂತದಲ್ಲಿ ಬೆಟ್ಟ ಸಾಲುಗಳಾಗಿ ತಲೆಯೆತ್ತುತ್ತಿತ್ತು. ಈ ಸಾಲುಗಳ ತೆಳುವಾದ ಕೊಡಿಗೆರೆ ಬಾನಿಗೆ ಬರೆದ ಲಘು ಚಿತ್ತಾರ. ಇನ್ನು ಬಿಸಿಲು-ಮಳೆ-ಮೋಡ ಸೇರಿದ ಸಂಜೆಯ ನೋಟವಂತೂ ಪರಮಾದ್ಭುತ.

ಆದರೆ ಆ ಎಳವೆಯಂದು ನಮ್ಮನ್ನು ಅಲ್ಲಿಗೆ ಸೆಳೆದದ್ದು ಈ ದೃಶ್ಯಾವಳಿಯಲ್ಲ — ಕಡಲ ಮೀನಿಗೆ ನೀರ ಬಿತ್ತರದ ಅರಿವುಂಟೆ, ಬೇಕೆ? ರಾಜಾಸೀಟಿನ ತಪ್ಪಲಿನಲ್ಲಿದ್ದ ಕಾಡು ಮಾವಿನ ಭಾರೀ ಮರದಲ್ಲಿ ಭರ್ಜರಿ ಹಣ್ಣುಗಳು ಸೂರೆ ಹೋಗಿದ್ದ ಸುದ್ದಿ ಮಾತ್ರವಲ್ಲ, ಘಮ ಘಮ ಕೂಡ, ನಮ್ಮ ಘ್ರಾಣೇಂದ್ರಿಯಗಳನ್ನು ಮರುಳುಮಾಡಿತ್ತು. ‘ಪರಿಮಳಕ್ಕೆ ಹಾರುತಿರುವ ತುಂಬಿಯಂತೆ ಸುಳಿದು ಸುಳಿದು’ ಅತ್ತ ಧಾವಿಸಿದೆವು. ಮೂರುಮಂದಿ ಒತ್ತೊತ್ತಿಗೆ ನಿಂತು ತಬ್ಬಿದರೂ ಮುಗಿಯದಷ್ಟು ತೋರ ಅದರ ಕಾಂಡ. ನಾಲ್ಕಾಳು ಎತ್ತರದಲ್ಲಿ ಕೊಂಬೆಗಳು ಟಿಸಿಲೊಡೆದಿದ್ದುವು. ಮರಹತ್ತಿ ಹಣ್ಣು ಕೊಯ್ಯುವುದು ಅಸಾಧ್ಯ. ಹೀಗಾಗಿ ಕವಣೆ ಕಲ್ಲು ಬೀರಿ ಹಣ್ಣುಗಳನ್ನು ಉದುರಿಸಿ ಪಂಟಿಬಿರಿಯ ತಿಂದೆವು, ಇನ್ನಷ್ಟನ್ನು ಕಟ್ಟಿಕೊಂಡೆವು.

ಪಂಟಿಬಿರಿಯವೆಂಬುದು ಭೋಜನಪ್ರಿಯ ವೈದಿಕ ಬ್ರಾಹ್ಮಣರಲ್ಲಿ ಅಂದು ಪ್ರಚಾರದಲ್ಲಿದ್ದ ಪಾರಿಭಾಷಿಕ ಪದ! ಭೂರಿ ಬಿಟ್ಟಿ ಊಟದಲ್ಲಿ ಕವಳ ಕತ್ತರಿಸಲು ತೊಡಗುವ ಮೊದಲು ನೊಜೆಹುಲ್ಲಿನ ಗಟ್ಟಿ ದಾರವನ್ನು ಹೊಟ್ಟೆಗೆ ಬಿಗಿಯಾಗಿ ಕಟ್ಟಬೇಕು, ಮನಸೋ ಇಚ್ಛೆ ಭಕ್ಷಿಸುತ್ತ ಹೋದಂತೆ ಬಕಾಸುರನ ಹೊಟ್ಟೆ ಉಬ್ಬಿ ದಾರ ಬಿರಿದು ತುಂಡಾಗುವ ತನಕವೂ ಈ ಸ್ವಾಹಾ ಕ್ರಿಯೆಯನ್ನು ಮುಂದುವರಿಸಬೇಕು! ದಾರದ ಹೆಸರು ಪಂಟಿ. ಚಿಕ್ಕಂದಿನಲ್ಲಿ ಈ ಪ್ರಯೋಗ ಮಾಡಿ ಗೆದ್ದವರು ಕೆಲವರಿದ್ದರು. ನಾನು ಮಾತ್ರ ನರಪೇತಲ, ಸೋತಿದ್ದೆ!

ಸಂಜೆ ಕವಿದಂತೆ ಎಲ್ಲರ ಮನದೊಳಗೂ ಆತಂಕ — ಹಿರಿಯರ ಆಣತಿ ಮೀರಿದ್ದೆವಲ್ಲ. ನೆರಳ ಮರೆಯಲ್ಲೇನಾದರೂ ಬ್ರಹ್ಮರಾಕ್ಷಸ ಅಡಗಿ ಕುಳಿತಿದ್ದರೆ, ಅವಕಾಶಕ್ಕಾಗಿ ಕಾದು ಹೊಂಚುತ್ತಿದ್ದರೆ? ಲಗುಬಗೆಯಿಂದ ಗೂಡುಗಳಿಗೆ ಹಾರಲು ತೊಡಗುತ್ತಿದ್ದಂತೆಯೇ ಕೊನೆಯ ಗುಟುಕೆಂದು ಪುಟ್ಟ ಗೊರಟನ್ನು ಚೀಪುವ ಸಲುವಾಗಿ ಬಾಯೊಳಕ್ಕೆ ಸೇದಿದೆ. ತಕೋ! ಅದು ನನ್ನ ಹದ್ದು ಮೀರಿ ಗಂಟಲೊಳಕ್ಕೆ ಜಾರಬೇಕೇ! ಉಸಿರು ಕಟ್ಟಿತು, ಕಣ್ಣು ಕತ್ತಲೆ ಹೋಯಿತು, ದೊಡ್ಡ ಹುಡುಗರು ನನ್ನ ಬೆನ್ನು ತಟ್ಟಿದರು, ಗಂಟಲೊಳಗೆ ಕೈಹಾಕಿ ವಾಂತಿ ಬರಿಸಿದರು, ಆದರೆ ಗೊರಟು ಮಾತ್ರ ನಾಪತ್ತೆ. ಉಸಿರಾಟದ ತೊಂದರೆಯೇನೋ ನಿಂತಿತು.

ನಿಟ್ಟುಸಿರು ಸೂಸುತ್ತ ಮೌನವಾಗಿ ಎಲ್ಲರೂ ಮನೆಗಳತ್ತ ಕಾಲಿಡುತ್ತಿದ್ದಾಗ ಬಂದರಾ ಯಮರಾಯರು – ಸಾಕ್ಷಾತ್ ನನ್ನಪ್ಪ, ನನಗೇನೂ ಆಗಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು ಬೆನ್ನಿಗೆ ಮತ್ತೆರಡು ಬಾರಿಸಬೇಕೇ! ಮನೆಗೆ ಹೋದೊಡನೆ ನಿರಾಹಾರದ ಶಿಕ್ಷೆ, ಮತ್ತು ಮರುಮುಂಜಾನೆ ಹರಳೆಣ್ಣೆ ಕುಡಿಯುವ ಹೆಚ್ಚಿನ ರಕ್ಷೆ. ಗೊರಟು ಮಾತ್ರ ಹೊರಹೊಮ್ಮಲಿಲ್ಲ. ಎಷ್ಟೆಂದರೂ ‘ವಾತಾಪಿ ಜೀರ್ಣೋಭವ’ ಎಂಬ ಮಂತ್ರ ಹೇಳಿ ಹೊಟ್ಟೆ ಮೇಲೆ ಕೈಯಾಡಿಸಿ ಆ ರಾಕ್ಷಸನನ್ನು ಜೀರ್ಣಿಸಿಕೊಂಡ ಅಗಸ್ತ್ಯ ಋಷಿಯ ಊರಿನವನಲ್ಲವೇ ನಾನು?

ಮುಂದೊಮ್ಮೆ ಗೀಚಿದೆ:

ರಾಜಾ ಸೀಟಿನ ನಂದೀ ಮರದಲಿ ಕಪಿಗಳ ಬೀಡನು ನಾಕಂಡೆಕಲ್ಲನು ಹೊಡೆದೆ ತೊಪ್ಪಿಯು ಕಳಚಿತು ಆಯಿತು ನನ್ನದು ಬರಿ ಮಂಡೆ!
ಮಾವಿನ ಹಣ್ಣಿನ ಗೊರಟನು ನುಂಗಿದ ವೀರಶಿರೋಮಣಿ ನಾನಹುದುನೀರಿಗೆ ಬಿದ್ದೂ ಮುಳುಗದೆ ಎದ್ದಿಹ ರಾಮನ ಬಂಡೆಯು ನಾಹೌದು!

ಹೀಗೆ ಮಡಿಕೇರಿ ಎಂಬ ಬೆಟ್ಟದೊಳಗಿನ ಬೋಗುಣಿಯಲ್ಲಿ ನಾವೆಲ್ಲ ಕೂಪ ಮಂಡೂಕಗಳಂತೆ ನಿತ್ಯ ಸುಖ ಸಂತೃಪ್ತಿಯಲ್ಲಿ ಅರಳುತ್ತಿದ್ದೆವು — ಅರಸನ ಅಂಕೆಯಿಲ್ಲ, ದೈವದ ಕಾಟವಿಲ್ಲ ಎಂಬ ಗಾದೆ ಮಾತಿನಂತೆ. ಇದ್ದಕ್ಕಿದ್ದಂತೆ ನನಗೊಂದು ದಿನ ತೀವ್ರ ಶೀತ, ಜ್ವರ, ಕೆಮ್ಮಲು ಬಾಧೆ ತಟ್ಟಿತು. ಬೋಧೆ ತಪ್ಪಿ ಮಲಗಿದ್ದೆನಂತೆ. ನಮ್ಮೂರಿನ ಧನ್ವಂತರಿಯೆಂದೇ ಪ್ರಖ್ಯಾತರಾಗಿದ್ದ ವಾರುಣ್ಣಿ ಡಾಕ್ಟ್ರು ಬಂದರು, ಸ್ಟೆತಸ್ಕೋಪ್ ಹಚ್ಚಿ “ಇವನಿಕೆ ನ್ಯೂಮೋನಿಯಾ ಆಕಿದೆ” ಎಂದರಂತೆ (ಅವರು ಕೇರಳೀಯರು). ಎದೆ ಪೂರ್ತಿ ಏಂಟಿಫ಼್ಲೋಜಿಸ್ಟೈನ್ ಬೆಚ್ಚಾರ ಹಚ್ಚಿದರಂತೆ, ಎಷ್ಟೋ ವಾರ ಹಾಗೆಯೇ ಮಲಗಿರಬೇಕಾಯಿತಂತೆ, ಅಂತೂ ಸಾಯದೆ ಬದುಕಿದೆ!

ಇತ್ತ ಮಡಿಕೇರಿಯ ವರಾಹಮಿಹಿರ ಶ್ರೀಕಂಠಯ್ಯ ನನ್ನ ಜಾತಕ ಪರಾಂಬರಿಸಿ “ಇವನಿಗೀಗ ದುಷ್ಟಗ್ರಹ ಕೇತುವಿನ ಬಾಧೆ. ಪ್ರಾಣಾಪಾಯವಿದೆ. ಇದರ ನಿವಾರಣೆಗೆ ಬೇಗನೆ ಉಪನಯನ ಮಾಡಿ. ಬ್ರಹ್ಮತೇಜೋಬಲವಿರುವ ದ್ವಿಜೋತ್ತಮನನ್ನು ಕೇತು ಪೀಡಿಸುವುದಿಲ್ಲ. ಜೊತೆಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ತುಲಾಭಾರ ಹರಕೆಯನ್ನೂ ಹೇಳಿಕೊಳ್ಳಿ” ಎಂದು ಕಣಿ ನುಡಿದರಂತೆ.

ಹೀಗೆ ಹಲವು ಹತ್ತು ಹಂಚಿಕೆ ಮಂಚಿಕೆ (ಒತ್ತುಗಂಬ ಅಥವಾ ಅಟ್ಟಳಿಗೆ) ಮತ್ತು ಅನುಕಂಪಗಳು ಏಕೀಭವಿಸಿ ನಾನು ಯಥಾಸ್ಥಿತಿಗೆ ಮರಳಿದೆ, ನಿಜ. ಆದರೆ ಅದನ್ನು ಕುರಿತ ಜಿಜ್ಞಾಸೆ ಬಲುಕಾಲ ಚರ್ಚೆ, ವಾದ, ಪ್ರತಿವಾದಗಳಿಗೆ ಸುಗ್ರಾಸ ಒದಗಿಸಿತ್ತು. ವಾರುಣ್ಣಿ ಡಾಕ್ಟರರ ಕೈಗುಣವೇ ಇದರ ಕಾರಣವೆಂದು ಚಿಕ್ಕಪ್ಪ ವಾದಿಸಿದರು, ತಾಯಿಯ ಹೊರತಾಗಿ ಇತರ ಹಿರಿಯರು ಹರಕೆಯ ಫಲವಿದೆಂದು ಪಟ್ಟು ಹಿಡಿದರು! ಹೇಗೂ ಇರಲಿ ಶೀಘ್ರದಲ್ಲೇ ಮಾಣಿಗೆ ಜನಿವಾರ ತೊಡಿಸಬೇಕೆಂಬುದು ಸರ್ವರ ಅಭಿಪ್ರಾಯ. ಅಲ್ಲದೇ ಆಟವಾಡಲು ಬಯಲಿಗೆಂದೂ ಹೋಗತಕ್ಕದ್ದಲ್ಲ ಎಂಬ ಶಾಶ್ವತ ಫ಼ರ್ಮಾನನ್ನು ಅಪ್ಪ ಹೊರಡಿಸಿದರು. ನನ್ನ ಭಾವನೆ ಏನು? ಹಾಕಿ (ಇದು ಕೊಡಗಿನ ರಾಜ-ಆಟ), ಕಾಲ್ಚೆಂಡು, ಕ್ರಿಕೆಟ್ ಮುಂತಾದ ಅಂದಿನ ಸಾಮೂಹಿಕ ಕ್ರೀಡೆಗಳು ಎಂದೂ ನನ್ನ ಮನ ಸೆಳೆದಿರಲಿಲ್ಲ. ಒಬ್ಬಿಬ್ಬ ಗೆಳೆಯರ ಜೊತೆ ಬೆಟ್ಟ ಗುಡ್ಡ ಹತ್ತಿ ಇಳಿಯುವುದು, ಅಂಕು ಡೊಂಕು ನಿರ್ಜನ ರಸ್ತೆಗಳಲ್ಲಿ ಅಲೆಯುವುದು, ಎತ್ತರದ ದಿಬ್ಬವೇರಿ ನಿಸರ್ಗ ದೃಶ್ಯಗಳನ್ನು ವೀಕ್ಷಿಸುತ್ತ ಕನಸು ಕಾಣುವುದು ಮುಂತಾದವು ಪ್ರಿಯ ಹವ್ಯಾಸಗಳು.

ಇನ್ನು ಉಪನಯನ? ಬ್ರಾಹ್ಮಣಭೋಜನಗಳಲ್ಲಿ ದಕ್ಷಿಣೆ ಪಡೆಯಲು ಆ ವಿಧಿ ನನಗೆ ಪರವಾನಿಗೆ ಒದಗಿಸುತ್ತದೆಂದು ಗೊತ್ತಿತ್ತು. ಉಡುಗೊರೆಗಳು ಬರುವುದು ಖಾತ್ರಿ. ಹೀಗಾಗಿ ನಾನೂ ಅದನ್ನು ಸ್ವಾಗತಿಸಿದೆ. ಆ ಮೊದಲೇ ಮುತ್ತಜ್ಜನ ಜೊತೆ ದನಿಗೂಡಿಸಿ ಸಂಧ್ಯಾವಂದನೆ, ಅಗ್ನಿಕಾರ್ಯ, ದೇವರ ಪೂಜೆ ಮುಂತಾದ ನಿತ್ಯ ನೈಮಿತ್ತಿಕ ಮಂತ್ರಗಳೆಲ್ಲವೂ ಕಂಠಸ್ಥವಾಗಿದ್ದುವು. ಉಳಿದದ್ದೇನಿದ್ದರೂ ವಿಪ್ರವರ್ಗದ ಸಾಮೂಹಿಕ ಅಸ್ತು ಮುದ್ರೆ.

ಮನೆಯಲ್ಲೇ ನನ್ನ ಉಪನಯನ, ತಂದೆಯಿಂದ ಮುಸುಕಿನೊಳಗೆ ಗಾಯತ್ರೀ ಮಂತ್ರಾಪನೆ, ಬಂಧುಬಾಂಧವರಿಂದ ಆಶೀರ್ವಚನ ಮತ್ತು ಉಡುಗೊರೆಗಳ ಮಹಾಪೂರ, ನಾಲ್ಕು ದಿನಗಳ ಅನ್ನಸಂತರ್ಪಣೆ ಎಲ್ಲವೂ ಅತಿಶಯ ವಿಜೃಂಭಣೆಯಿಂದ ನೆರವೇರಿ ನಾನು ಜಂತುತ್ವದಿಂದ ದ್ವಿಜತ್ವಕ್ಕೆ ಬಡ್ತಿ ಪಡೆದೆ ಏಳರ ಹರೆಯದಲ್ಲಿ. ಆ ವೇಳೆಗೆ ಶಾಲೆಯಲ್ಲಿ ಒಂದನೆಯ ತರಗತಿಗೆ ಉತ್ತೀರ್ಣನಾಗಿದ್ದೆ.

ಉಪನಯನ ತಂದ ಅಪಾಯ
ಅಧ್ಯಾಯ ಐದು

ನನ್ನ ತಾಯಿ ತಂದೆಯರ ಕನಸು ನಾನೊಬ್ಬ ಯುವ ಶಂಕರಾಚಾರ್ಯನಾಗಬೇಕೆಂದಿತ್ತು. ಇದಕ್ಕೆ ಮೊದಲ ಹೆಜ್ಜೆ ಶಾಸ್ತ್ರೋಕ್ತವಾಗಿ ವೇದಾಧ್ಯಯನ. ಮನೆಯಿಂದ ನೂರು ಹೆಜ್ಜೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಪಾಲ್ಘಾಟ್ ಸುಬ್ರಹ್ಮಣ್ಯ ಅವಧಾನಿಗಳು ವಿಪ್ರ ವಟುಗಳಿಗೆ ಪ್ರತಿ ದಿನ ಎರಡು ಹೊತ್ತು ಪಾಳಿಗಳಲ್ಲಿ ವೇದ ಪಾಠಮಾಡಲು ನಿಯೋಜಿತರಾಗಿದ್ದರು. ಅಂಥ ಒಂದು ತರಗತಿಗೆ ಸ್ವಂತ ಇಷ್ಟದಿಂದ ನಾನು ದಾಖಲಾದೆ. ಚತುರ್ದಶಿ, ಹುಣ್ಣಮೆ/ಅಮಾವಾಸ್ಯೆ, ಪಾಡ್ಯ ಮತ್ತು ಹಬ್ಬದಿನಗಳ ಹೊರತಾಗಿ ಈ ಪಾಠ ಸಾಗಿತು: ಗುರುಗಳ ಎದುರು ಪದ್ಮಾಸನಹಾಕಿ ನೆಟ್ಟಗೆ ಕೂರಬೇಕು, ಅವರು, ಉದಾಹರಣೆಗೆ,

ಗುರುಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ

ಎಂಬ ಶ್ಲೋಕದ ಒಂದೊಂದು ಸಾಲನ್ನೂ ಮೊದಲು ಹೇಳುತ್ತಿದ್ದರು, ನಾನದನ್ನು ಅದೇ ಶ್ರುತಿ-ಗತಿ-ಧಾಟಿಯಲ್ಲಿ ಎರಡೆರಡು ಸಲ ಉಚ್ಚರಿಸಬೇಕು. ಹೆಚ್ಚಿನ ಈ ಶ್ಲೋಕಗಳು ನನ್ನ ಮನದಲ್ಲಿ ಆ ಮೊದಲೇ ಛಾಪುಗೊಂಡಿದ್ದುದರಿಂದ ತ್ವರಿತ ಗತಿಯಲ್ಲಿ ಪಾಠ ಮುಂದುವರಿಯಿತು. ಸುಮಾರು ಆರು ತಿಂಗಳುಗಳಲ್ಲಿ ನವಗ್ರಹ ಮಂತ್ರ, ರುದ್ರ, ಚಮೆ, ಪುರುಷಸೂಕ್ತ, ಶ್ರೀಸೂಕ್ತ ಮುಂತಾದವನ್ನು ಅಸ್ಖಲಿತವಾಗಿ ನೆನಪಿನಿಂದಲೇ ನಾನು ಹೇಳಬಲ್ಲವನಾಗಿದ್ದೆ. ಇನ್ನು ಪೂಜಾ ಮಂತ್ರಗಳು, ಶಿವಪಂಚಾಕ್ಷರಸೂತ್ರ, ಪುಷ್ಪಾಂಜಲಿ ಮುಂತಾದವು ಮುತ್ತಜ್ಜನ ಸಾನ್ನಿಧ್ಯದಲ್ಲಿ ಮೊದಲೇ ಕಲಿತಿದ್ದೆ.

ಹೀಗೆ ನನ್ನ ಬಾಲಬ್ರಹ್ಮಚಾರಿತ್ವದ (ವಯಸ್ಸು ಹನ್ನೊಂದರ ಮಗ್ಗುಲಲ್ಲಿತ್ತು) ಖ್ಯಾತಿ ವರ್ಚಸ್ಸುಗಳು ಮಡಿಕೇರಿಯ ಆಚೆ ಪುತ್ತೂರಿನಲ್ಲಿಯೂ (ಸೋದರಮಾವನ ಮನೆ) ಪಸರಿಸಿತು, ಸತ್ಯನಾರಾಯಣ ಪೂಜೆ, ರುದ್ರಾಭಿಷೇಕ, ನವಗ್ರಹಶಾಂತಿ ಮುಂತಾದವನ್ನು ನಿರ್ವಹಿಸಲು ಹಲವಾರು ಸಿರಿವಂತರ ಮನೆಗಳಿಂದ ನನಗೆ ಪದೇಪದೇ ಬೇಡಿಕೆಗಳು ಬರತೊಡಗಿದುವು. ಇಲ್ಲೆಲ್ಲ ಅಯಾಚಿತವಾಗಿ ಸಿಕ್ಕುತ್ತಿದ್ದ ದಕ್ಷಿಣೆ ಹಣವನ್ನು ತಂದೆ ನನ್ನ ಹೆಸರಿನಲ್ಲಿ, ಆಗ ತಾನೇ ಮಡಿಕೇರಿಯಲ್ಲಿ ಸಾಕಷ್ಟು ಬಜಾವಣೆ ಸಹಿತ ಆರಂಭವಾಗಿದ್ದ, Travancore National and Quilon Bank Limited ಶಾಖೆಯ ಉಳಿತಾಯಖಾತೆಗೆ ಜಮಾಮಾಡಿಸುತ್ತಿದ್ದರು. ರೂಪಾಯಿಗೆ ೨೦ ತೆಂಗಿನಕಾಯಿ, ೧೬-೧೭ ಸೇರು ಅಕ್ಕಿ ದೊರೆಯುತ್ತಿದ್ದ ೧೯೩೭ರ ಸಮೃದ್ಧ ದಿನಗಳಂದು ನನ್ನ ಖಾತೆ ರೂ ೧೦೦ನ್ನು ಮೀರಿ ಜಿಗಿದಿತ್ತು. ‘ಸಮಾನರಾರೆನಗೆ, ಮೂರು ಲೋಕದಾ ಗಂಡರ ನಡುವೆ ಸಮಾನರಾರೆನಗೆ?’ ಎಂದು ಜಂಬದಿಂದ ಬೀಗುತ್ತಿದ್ದೆ.

ಅಷ್ಟರಲ್ಲಿ ಎರಡು ಗಂಡಾಂತರಗಳು ಅನಿರೀಕ್ಷಿತವಾಗಿ ಬಡಿದು ಈ ಭಾವೀ ಶಂಕರಾಚಾರ್ಯನ ಬದುಕಿಗೆ ಒಂದು ಮಹತ್ತರ ತಿರುವನ್ನು ಕೊಟ್ಟುವು. ಒಂದು, ಕೊಡವ ಭಕ್ತರೊಬ್ಬರು (ಕೊಡಗಿನ ನಿವಾಸಿಗಳೆಲ್ಲರೂ ಕೊಡಗರು, ಉದಾಹರಣೆಗೆ ನಾನು, ನಮ್ಮ ಮನೆಯವರು, ಹೆಚ್ಚಿನವರು ಬಹಳ ಹಿಂದೆ ಕೊಡಗಿಗೆ ವಲಸೆಬಂದು ಇಲ್ಲಿಯೇ ನೆಲಸಿದವರು — ಕನ್ನಡದ ಹಿರಿಯ ಕತೆಗಾರ್ತಿ ಶ್ರೀಮತಿ ಬಿ.ಟಿ.ಜಿ.ಕೃಷ್ಣ, ಕಾದಂಬರೀಕಾರ ಭಾರತೀಸುತ ಕೊಡಗರು; ಇನ್ನು ಕೊಡಗಿನ ಮೂಲನಿವಾಸಿಗಳಾಗಿದ್ದು ತಮ್ಮ ವಿಶಿಷ್ಟ ದೈಹಿಕ ನಿಲವು, ಉಡುಪು, ಭಾಷೆ, ಆಚಾರ ಮುಂತಾದವುಗಳಿಂದ ಯಾವುದೇ ಹಿಂದೂಸಮುದಾಯದಲ್ಲಿ ಎದ್ದು ಕಾಣುವ ವ್ಯಕ್ತಿಗಳು ಕೊಡವರು – ಸ್ವತಂತ್ರ ಭಾರತದ ಪ್ರಥಮ ಮಹಾದಂಡನಾಯಕ ಪಿ಼ಲ್ಡ್ ಮಾರ್ಷಲ್ ಕೊಡಂದೆರ ಎಂ.ಕಾರ್ಯಪ್ಪ, ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಬಿದ್ದಂಡ ಎಸ್.ಕುಶಾಲಪ್ಪ ಮೊದಲಾದವರು) ಸತ್ಯನಾರಾಯಣ ಪೂಜೆಯ ಸಂಸ್ಕೃತ ಮಂತ್ರಗಳ ಅರ್ಥ ವಿವರಿಸಬೇಕೆಂದು ಶ್ರದ್ಧಾಭಕ್ತಿಸಹಿತ ನನ್ನನ್ನು ಪ್ರಾರ್ಥಿಸಿದರು. ಗಿಳಿಬಾಯಿಪಾಠ ಒಪ್ಪಿಸುತ್ತಿದ್ದ ನನಗೆ ಆ ಶ್ಲೋಕಗಳ ಅರ್ಥ ಗೊತ್ತಿರಲಿಲ್ಲ. ಗುರುಗಳನ್ನು ಕೇಳಿ ಬರುವೆನೆಂದು ಸಮಜಾಯಿಷಿ ಕೊಟ್ಟಾಗ ಆತ, “ಇದೇನು ಪುಟ್ಸಾಮೀ! ನಿಮಗೆಲ್ಲವೂ ತಿಳಿದಿದೆಯೆಂದು ನಾವೆಲ್ಲರೂ ನಂಬಿದ್ದೆವು” ಎನ್ನಬೇಕೇ? ಗುರುಗಳ ಮುಂದೆ ಈ ಸಮಸ್ಯೆಯನ್ನಿಟ್ಟಾಗ, “ಮಂತ್ರಗಳ ಅರ್ಥ ಕೇಳಬಾರದು, ಗೊತ್ತಿದ್ದರೂ ಆ ದೇವವಾಣಿಗಳನ್ನು ಶೂದ್ರರಿಗೆಂದೂ ಹೇಳಲೇಬಾರದು” ಎಂದು ನನ್ನನ್ನೇ ದಬಾಯಿಸಿದರು!

“ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ ಎಂದು ಸಾಕ್ಷಾತ್ ಗೀತಾಚಾರ್ಯನೇ ಹೇಳಿರುವನಲ್ಲವೇ? ಇನ್ನು ಶ್ರೀಕೃಷ್ಣನಾಗಲೀ ಅರ್ಜುನನಾಗಲೀ ಜನ್ಮತಃ ಬ್ರಾಹ್ಮಣರಲ್ಲವಷ್ಟೆ?” ಹರಿಕಥೆಗಳಲ್ಲಿ ಈ ವಿವರಣೆ ಕೇಳಿ ತಲೆದೂಗಿದ್ದೆ, ಕನಕದಾಸರ “ಆತ್ಮ ಯಾವ ಕುಲ, ಜೀವ ಯಾವ ಕುಲ” ಪದ್ಯವನ್ನು ತರಗತಿಯಲ್ಲಿ ಬ್ರಾಹ್ಮಣ ಉಪಾಧ್ಯಾಯರೇ ಸಾಕಷ್ಟು ಸ್ಥಳೀಯ ನಿದರ್ಶನ ಸಹಿತ ಮನಂಬುಗುವಂತೆ ವಿವರಿಸಿದ್ದರು. ಮನೆಯಲ್ಲಾದರೂ ಪರಿಸ್ಥಿತಿ ಉದಾರವಾಗಿತ್ತು: ಊಟ ತಿಂಡಿಗಳ ಹೊತ್ತಿಗೆ ಬಂದವರೆಲ್ಲರಿಗೂ, ಬ್ರಾಹ್ಮಣ-ಶೂದ್ರ ವ್ಯತ್ಯಾಸವಿಲ್ಲದೆ, ಸಹಪಂಕ್ತಿ ಮಾಮೂಲು ಕ್ರಮ, ಅಸ್ಪೃಶ್ಯತೆ ಮುಂತಾದ ಮಾನವಭೇದಕ ಆಚರಣೆಗಳನ್ನು ಮನ್ನಾ ಮಾಡಿದ್ದರು, ಜಾತಿನಿಂದನೆ ಮಾತುಗಳು ಅತಿ ವಿರಳ. ಅರ್ಥಾತ್ ಅತ್ತೆಮ್ಮ ಹಾಡುತ್ತಿದ್ದ ಕನಕದಾಸರ

ಜಪವ ಮಾಡಿದರೇನು ತಪವ ಮಾಡಿದರೇನು
ಕಪಟ ಗುಣ ವಿಪರೀತ ಕಲುಷವಿದ್ದವರು

ಕೀರ್ತನೆಯ ಅನುಷ್ಠಾನ ಮನೆಯೊಳಗಣ ಸಮಷ್ಟಿ ದೃಷ್ಟಿಯಾಗಿತ್ತು. ಇದು ಮುತ್ತಜ್ಜನ ವ್ಯಕ್ತಿತ್ವದ ಪ್ರಭಾವವೆಂದು ಮುಂದೊಂದು ದಿನ ನನ್ನ ಅರಿವಿಗೆ ಬಂದಿತು: ಸ್ವಂತ ಆಚರಣೆಗಳಲ್ಲಿ ಕರ್ಮಠರಾಗಿದ್ದರೂ ಸಾಮಾಜಿಕ ನಡವಳಿಕೆಗಳಲ್ಲಿ ಸಮದೃಷ್ಟಿ ತಳೆದಿದ್ದ ಉದಾರಮತಿ ಅವರದು. ಸಹಜವಾಗಿ ನನ್ನ ಗುರುಭಕ್ತಿ ಅಲುಗಾಡಿತು. ಶಾಲೆಯಲ್ಲಿಯ ಪಾಠ ಪ್ರವಚನಗಳು, ಆಂಜನೇಯನ ಗುಡಿಯಲ್ಲಿಯೂ ವೇದಾಂತ ಸಂಘದಲ್ಲಿಯೂ ನಡೆಯುತ್ತಿದ್ದ ಹರಿಕಥೆ, ಭಾಷಣ, ಚರ್ಚಾಗೋಷ್ಠಿ ಮುಂತಾದವು ನನ್ನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದುವು. ಶಾಲೆಯ ಕೆಲಸ ವಿಪರೀತವೆಂದು ನೆಪ ಹೂಡಿ ವೇದಪಾಠಕ್ಕೆ ಮಂಗಳ ಹಾಡಿದೆ. ಗುರುಗಳು ನೊಂದರು, ತಾಯಿ ಪರಿತಪಿಸಿದರು, ನಾನು ಮಾತ್ರ ವಿಚಲಿತನಾಗಲಿಲ್ಲ. ಅರ್ಥಹೀನ ಶಬ್ದಕವಾಯತಿಯಿಂದ ಮುಕ್ತನಾದುದಕ್ಕೆ ಸಂತೋಷವೇ ಆಯಿತು. ಜೊತೆಗೆ ಈ ಸೋಲು ನನಗೆ ಸ್ಫುಟ ಉಚ್ಚಾರಣೆ ಮತ್ತು ಲಯಬದ್ಧ ವಾಚನ ಕಲೆಯನ್ನು ಕಲಿಸಿತು.

ಎರಡನೆಯ ಗಂಡಾಂತರ ತೀರ ಹಠಾತ್ತಾಗಿ ಬಡಿಯಿತು. ನನ್ನ ತಿಜೋರಿಯಾಗಿದ್ದ ಆ ಬ್ಯಾಂಕ್ ದಿವಾಳಿ ಹೋಗಿ ನಾನದರಲ್ಲಿ ಜೋಪಾನವಾಗಿ ಕೂಡಿಟ್ಟಿದ್ದ ಸ್ವಂತ ಸಂಪಾದನೆಯೆಲ್ಲವೂ ಮಂಗಮಾಯವಾಯಿತು! ದಕ್ಷಿಣೆಯ ‘ದೈವಿಕ’ ಹಣವನ್ನೂ ಕಾಪಾಡದ ಈ ಪೊಳ್ಳು ಭಗವಂತನ ಅಸ್ತಿತ್ವದ ಬಗೆಗೇ ನನ್ನಲ್ಲಿ ಸಂದೇಹ ಹಣುಕಿತು. ಹಣಕಾಸಿನ ವಿಚಾರದಲ್ಲಿ ಗೋಪಾಲಕೃಷ್ಣ ಅಡಿಗರ ನುಡಿಗಳ ಸೊಗಡು ಚೆನ್ನಾಗಿ ಅರಿವಿಗೆ ಬಂತು:

ನಿನಗೆ ನೀನೇ, ಗೆಳೆಯ, ನಿನಗೆ ನೀನೇ!
ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ, ಗೆಳೆಯ, ನಿನಗೆ ನೀನೇ!

ಹೀಗೆ ಮಂತ್ರ, ಭಕ್ತಿ ಮತ್ತು ದೈವನಿಷ್ಠೆಗಳೆಂಬ ಸ್ವಯಂವಿಧಿತ ಬಂಧನಗಳಿಂದ ವಿಮೋಚನೆಗೊಂಡ ಮತಿಗೆ ಅದೇ ವೇಳೆ ನಮ್ಮ ಶಾಲೆಯ ಆವರಣದಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ ಹಾದಿಯನ್ನು ತೋರಿಸಿತು.

(ಮುಂದುವರಿಯಲಿದೆ)