ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ನಾಲ್ಕು)

ಗೊಡ್ಡಾರ್ಡನ ಕನಸನ್ನು ತಮ್ಮ ಕನಸೇ ಎಂದು ಅತ್ಯುತ್ಸಾಹದಿಂದ ಸ್ವಾಗತಿಸಿದವರು ವಿಜ್ಞಾನಿಗಳ ಒಂದು ಕಿರಿತಂಡ. ಅದನ್ನು ಸಾಕಷ್ಟು ಧನ ಸಹಾಯದಿಂದ ಮತ್ತು ನಿಷ್ಠಾಪೂರ್ವಕ ದುಡಿಮೆಯಿಂದ ವಾಸ್ತವವಾಗಿಸಬೇಕು ಎಂದು ಅವರು ಪಣತೊಟ್ಟರು. ಇವರು ನಾಝೀ ಜರ್ಮನಿಯ ಪ್ರತಿಭಾನ್ವಿತ ವಿಜ್ಞಾನಿಗಳು. ಒಬ್ಬ ವಿಜ್ಞಾನಿ ಬರೆದಿದ್ದಾನೆ. “ಪ್ರಪಂಚದ ಇತರ ರಾಷ್ಟ್ರಗಳು ಗೊಡ್ಡಾರ್ಡನ ಸಂಶೋಧನೆಯನ್ನು ಅಲಕ್ಷಿಸಿದ್ದಾಗ, ತಮ್ಮ ನೆಲದ (ಅಮೆರಿಕಾದ) ಮೇಲೆಯೇ ವಿಶೇಷ ಮಹತ್ತ್ವಪೂರ್ಣ ಪ್ರಯೋಗಗಳು ಮುಂದುವರಿಯುತ್ತಿದ್ದರೂ ಅವುಗಳನ್ನು ಅರಿಯದಿದ್ದಾಗ ರಾಕೆಟ್ ಯಾನ ಕೇವಲ ಕನಸುಗಾರರ ಬುರುಡೆ ಎಂದು ಅದಕ್ಕೆ ಬೆಲೆ ನೀಡದಿದ್ದಾಗ ಜರ್ಮನಿಯ ವಿಜ್ಞಾನಿಗಳು ಗೊಡ್ಡಾರ್ಡನ ಸಿದ್ಧಾಂತಗಳಲ್ಲಿ ಭವಿಷ್ಯದ ಯುದ್ಧನಿರ್ಣಾಯಕ ಆಯುಧವನ್ನು ಕಂಡರು.” ಕ್ಯಾಪ್ಟನ್ ವಾಲ್ಟರ್ ಡಾರ್ನ್ ಬರ್ಗರ್ ಎಂಬ ಮಿಲಿಟೆರಿ ಅಧಿಕಾರಿಯ ಮುಂದಾಳುತನದಲ್ಲಿ ಡಾ. ವರ್ನರ್ ವಾಬ್ರಾ ಎಂಬ ತರುಣ ವಿಜ್ಞಾನಿಯ ನೆರವಿನಿಂದ (೧೯೩೨) ನಾಝೀ ಜರ್ಮನಿಯ ರಾಕೆಟ್ ಸಂಶೋಧನ ಯೋಜನೆ ತ್ವರಿತ ಗತಿಯಿಂದ ಮುಂದೆ ಸಾಗಿತು. ಹೀಗೆ ಬಲು ಚಿಕ್ಕ ಪ್ರಮಾಣದಲ್ಲಿ ಆರಂಭವಾದ ರಾಕೆಟ್ ಸಂಸ್ಥೆ ನಾಝೀ ಜರ್ಮನಿಯ ವರಿಷ್ಠ ಆಡಳಿತೆಯ ಪ್ರೋತ್ಸಾಹ ಅನುಮೋದನೆಗಳಿಂದ ಪೀಣ್ಮುಂಡ್ ಎಂಬ ಸ್ಥಳದಲ್ಲಿ ಗುಪ್ತವಾಗಿ ಪ್ರವರ್ಧಿಸಿತು. ಇಲ್ಲಿನ ಗುಪ್ತ ಸ್ಥಳದಲ್ಲಿದ್ದ ಜರ್ಮನರು ಹಗಲೂ ರಾತ್ರಿಯೂ ಎಡೆಬಿಡದೆ ದುಡಿದರು – ರಾಕೆಟ್ ಇಂಜಿನಿಯರಿಂಗ್‌ನಲ್ಲಿ ಬಲು ದೊಡ್ಡ ಸಾಧನೆ ಮಾಡಬೇಕೆಂದು ಅವರ ಛಲ. ಜರ್ಮನ್ ಭಾಷೆಯಲ್ಲಿ Vergeltungswaffe zwei ಅಂದರೆ ಪ್ರತೀಕಾರಾಸ್ತ್ರ – II ಎಂದು ಕರೆದರು.

ಇದೇ ಸಂಕ್ಷೇಪವಾಗಿ v-2 ಅಸ್ತ್ರ ಎಂದು ಹೆಸರು ಪಡೆಯಿತು. ಆದರೆ v-2 ಅಸ್ತ್ರ ಪ್ರಾಯೋಗಿಕ ಸಾಫಲ್ಯ ಪಡೆಯುವ ಮೊದಲೇ ಹಿಟ್ಲರನ ದುರ್ದೈವದಿಂದ ಯುದ್ಧದ ಕೊನೆಯ ದಿನಗಳು ಅವನಿಗೆ ಪ್ರತಿಕೂಲವಾಗಿ ಸಮೀಪಿಸುತ್ತಿದ್ದುವು. ೧೯೪೪ರ ಸೆಪ್ಟೆಂಬರಿನಲ್ಲಿ ಮೊದಲ v-2ನ್ನು ಪ್ಯಾರಿಸ್ ಮೇಲೆಸೆದರು. ಮುಂದೆ ಇಂಗ್ಲೆಂಡ್ ಮೇಲೆ v-2ರ ಮಳೆಯನ್ನೇ ಸುರಿದರು. ಆದರೆ ಸಕಾಲದಲ್ಲಿ ಲಭಿಸದ ಸಂಶೋಧನ ಫಲ ಹಿಟ್ಲರನನ್ನು ರಕ್ಷಿಸಲಿಲ್ಲ.

ಇಂಗ್ಲೆಂಡಿನ ಮೇಲೆ ರಾಕೆಟ್ ಮಳೆ ಸುರಿದ ಜರ್ಮನಿಯ ಎಷ್ಟು ವಿನಾಶ ಕೃತ್ಯವನ್ನು ಸಾಧಿಸಿದರೋ ತಿಳಿಯದು; ಆದರೆ ಈ ಹಠಾತ್ ಘಟನೆಯಿಂದ ಮಿತ್ರರಾಷ್ಟ್ರಗಳಿಗೆ ಒಂದು ವಿಷಯ ಮಾತ್ರ ಚೆನ್ನಾಗಿ ಮನವರಿಕೆಯಾಯಿತು. v-2 ಒಂದು ಪ್ರಬಲ ಅಸ್ತ್ರ; ಗೊಡ್ಡಾರ್ಡನ ಸಂಶೋಧನೆಗಳನ್ನು ಅವರು ಅಲಕ್ಷಿಸಿದ್ದು ಅವರಿಗೇ ಮುಳುವಾಯಿತು.

ಯುದ್ಧಾನಂತರ ಜರ್ಮನಿಯ ರಾಕೆಟ್ ವಿಜ್ಞಾನಿಗಳ ತಂಡ ಎರಡಾಗಿ ಒಡೆಯಿತು. ಅಮೆರಿಕ ಮತ್ತು ರಷ್ಯ ಸೇನಾಬಲಗಳು ಪೀಣ್ಮುಂಡನ್ನು ತ್ವರಿತಗತಿಯಿಂದ ಆಕ್ರಮಿಸಿದುವು – ಆದರೆ ಮಿದುಳು ಈಗಾಗಲೇ ದಕ್ಷಿಣ ಭಾಗಕ್ಕೆ ಓಡಿಹೋಗಿತ್ತು; ಅಲ್ಲಿ ಅದು ಸುಲಭವಾಗಿ ಅಮೆರಿಕನರ ಆಶ್ರಯ ಯಾಚಿಸಿತು; ಎರಡನೆಯ ಮೂರನೆಯ ದರ್ಜೆಯ ತಾಂತ್ರಿಕ ಸಿಬ್ಬಂದಿ ರಷ್ಯನ್ನರ ವಶವಾಯಿತು. ಒಂದಾಗಿ ಒಟ್ಟಾಗಿ ದುಡಿಯುತ್ತಿದ್ದ ವಿಜ್ಞಾನಿಗಳು ಎರಡಾದರು. ಉಕ್ಕಿನ ಪರದೆಯ ಉಭಯ ಪಾರ್ಶ್ವಗಳಲ್ಲಿ ಚದರಿಹೋದರು. ಆದರೆ ವಿಜ್ಞಾನಿಗಳ ದೃಷ್ಟಿ ಬೇರೆ. ತಮ್ಮ ಪ್ರಭು ಯಾರು ಎಂದಲ್ಲ, ಜ್ಞಾನಾನ್ವೇಷಣೆ ನಿರಂತರ ನಡೆಯಲು ಪರಿಣತರ ತೀರ್ಮಾನದ ಪ್ರಕಾರ v-2 ರಲ್ಲಿ ಬಳಸಿದ ಸೂತ್ರಗಳೇ ಅಮೆರಿಕ ಮತ್ತು ರಷ್ಯಾ ರಾಷ್ಟ್ರಗಳ ತಾಂತ್ರಿಕಜ್ಞಾನದ ತಳಹದಿ. ಇದರ ಫಲ ೧೯೫೭ರಲ್ಲಿ ಪ್ರಾರಂಭವಾದ ಆಕಾಶಯುಗ. ಆ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬೆರಗಿನಿಂದ ದಂಗುಬಡಿದ ಜನತೆ ಹೊಸ ಒಂದು ಸತ್ಯವನ್ನು ಸ್ವೀಕರಿಸಿತು: ಮನುಷ್ಯ ನಿರ್ಮಿತ ವಸ್ತುಗಳು ಭೂಮಿಯನ್ನು ಪರಿಭ್ರಮಿಸಬಲ್ಲುವು!

ಪ್ರಥಮ ಕೃತಕ ಉಪಗ್ರಹ, ಆಕಾಶಯುಗದ ಪೀಠಿಕೆ ಬರೆದ ಸ್ಪೂಟ್ನಿಕ್, ಮನುಷ್ಯನ ತೋಳನ್ನು ಆಶೆ ಆಕಾಂಕ್ಷೆಗಳನ್ನು ಸಾವಿರಾರು ಕಿಮೀ ಎತ್ತರಕ್ಕೆ ವಿಸ್ತರಿಸಿದ ಆಕಾಶ ನೌಕೆ. ಇದರ ಐತಿಹಾಸಿಕ ವಿಕ್ರಮ ಆಕಸ್ಮಿಕ ಅಲ್ಲ; ಅದೃಷ್ಟದ ಕಾಣಿಕೆಯೂ ಅಲ್ಲ. ಅದರ ಸಿದ್ಧಾಂತ ದೀರ್ಘ ಕಾಲದ ಹಿಂದೆ ರೂಪು ತಳೆದಿತ್ತು, ಪ್ರತ್ಯಕ್ಷಫಲ ಈಗ ಲಭಿಸಿತು. ಸ್ಪೂಟ್ನಿಕ್ ಆಕಾಶದಲ್ಲಿ ಚಲಿಸುತ್ತಿರುವ ಉಪಗ್ರಹ; ಗಂಟೆಗಟ್ಟಲೆ ಅಲ್ಲ ತಾತ್ತ್ವಿಕವಾಗಿ ಅದು ಸದಾ ಚಲಿಸುತ್ತಲೇ ಇರಬಹುದು.

ರಾಕೆಟ್ ಚಾಲನ

ರಾಕೆಟ್ ಒಳಗೆ ಇಂಧನ ದಹಿಸಿ, ತೆರೆದಿರುವ ಹಿಂಬದಿಗೆ ಅಧಿಕ ಸಂಮರ್ದದಲ್ಲಿ ಧಾವಿಸುತ್ತದೆ – ಜೆಟ್ ವಿಮಾನ ಹಾರುವಾಗ ಬಿಳಿ ಹೊಗೆಯನ್ನು ಹಿಂದಕ್ಕೆ ಕಾರುವಂತೆ ಈ ಕ್ರಿಯೆಯ ಪರಿಣಾಮವಾಗಿ ಜನಿಸುವ ವಿರುದ್ಧ (ಅಂದರೆ ಮುಂದಿನ) ದಿಕ್ಕಿನ ಬಲ ರಾಕೆಟ್ಟನ್ನು ಅದು ಶಿರದ ಮೇಲೆ ಹೊತ್ತಿರುವ ಸಂಪುಟದ ಸಮೇತ ಮೇಲೆತ್ತುತ್ತದೆ. ರಾಕೆಟ್ ಇಂಧನದ ಒಂದು ಆವಶ್ಯಕ ಮತ್ತು ಮುಖ್ಯ ಅಂಶ ಆಕ್ಸಿಜನ್. ದಹನ ಕ್ರಿಯೆ ಆಕ್ಸಿಜನ್ ಇಲ್ಲದೆ ನಡೆಯದು; ದಹನಕ್ರಿಯೆ ನಡೆಯದೆ ಬಲದ ಉತ್ಪಾದನೆ ಇಲ್ಲ. ನಮ್ಮ ದೈನಂದಿನ ವ್ಯವಹಾರಗಳಲ್ಲಿ (ವಿಮಾನ ಹಾರಾಟ, ಬಸ್ಸುಗಳ ಓಟ, ಅಡುಗೆಮನೆಯ ಬೆಂಕಿ ಎಲ್ಲವೂ ಸೇರಿವೆ) ವಾಯುಮಂಡಲದಿಂದ ಆಕ್ಸಿಜನ್ನಿನ ಸಹಜ ಪೂರೈಕೆ ಆಗುತ್ತದೆ. ಆದರೆ ರಾಕೆಟ್‌ಗೆ ಈ ತರಹದ ಪೂರೈಕೆ ಅನಗತ್ಯ; ನಿರ್ವಾತ ಪ್ರದೇಶದ ಚಲನೆಯಲ್ಲಿ ಅಲಭ್ಯ. ಆಕ್ಸಿಜನ್ ವಾಯುಮಂಡಲದಲ್ಲಿ ಅನಿಲ ರೂಪದಲ್ಲಿರುವ ಒಂದು ಮೂಲ ವಸ್ತು. ರಾಕೆಟ್ ಇಂಧನ ಸಂಗ್ರಹಾಗಾರದಲ್ಲಿ ಈ ಅತಿ ಚುರುಕಿನ ಅನಿಲವನ್ನು ಆಕಾಶಯಾನದ ದೀರ್ಘಕಾಲ ಸಾಕಷ್ಟು ಪ್ರಮಾಣದಲ್ಲಿ ಲಭಿಸುವಂತೆ ಹಿಡಿದಿಡುವುದು ಎಷ್ಟು ಅಪಾಯಕಾರಿಯೋ ತಾಂತ್ರಿಕವಾಗಿ ಅಷ್ಟೇ ಅಪ್ರಾಯೋಗಿಕವೂ ಹೌದು. ಆದ್ದರಿಂದ ಆಕ್ಸಿಜನನ್ನು ಕೃತಕವಾಗಿ ದ್ರವೀಕರಿಸಿ ಸಂಗ್ರಹಿಸುತ್ತಾರೆ. ಇದನ್ನು ಇಂಧನಾಗಾರದಲ್ಲಿ ಕಾಪಾಡಿಕೊಳ್ಳುವುದು ಬಲು ಕಠಿನ, ಸೂಕ್ಷ್ಮ ಕ್ರಿಯೆ.

ಭೂಮಿ ತಳದಿಂದ ಮೊದಲು ಜಿಗಿಯುವಾಗ ಮೂರು ಮುಖ್ಯ ವಿರುದ್ಧ ಬಲಗಳನ್ನು ಎದುರಿಸಬೇಕಾಗುತ್ತದೆ. ಒಟ್ಟು ವ್ಯವಸ್ಥೆಯ ಭಾರ ಪರಮಾವಧಿ; ಗುರುತ್ವಾಕರ್ಷಣೆಯ ಬಲ ಪರಮಾವಧಿ; ಅತಿ ಸಾಂದ್ರತೆಯ ವಾಯುಮಂಡಲದ ಪ್ರತಿರೋಧ ಬಲ ಪರಮಾವಧಿ. ಇವನ್ನು ಸಮರ್ಥವಾಗಿ ಎದುರಿಸಿ, ಉತ್ತರಿಸಿ ಹಾರಬೇಕಾದರೆ ಆ ರಾಕೆಟ್ ತಾಂತ್ರಿಕವಾಗಿ ರಚಿಸಲಾಗದ ಒಂದು ಮಹಾ ಗಾತ್ರವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಮಜಲು ರಾಕೆಟ್ ನಿರ್ಮಾಣ – ಒಂದರ ಮೇಲೊಂದು. ತಳದ್ದು ಉರಿದು ವ್ಯವಸ್ಥೆಯನ್ನು ಒಂದು ವೇಗದಲ್ಲಿ ಒಂದು ಎತ್ತರಕ್ಕೆ ಕೊಂಡೊಯ್ಯುತ್ತವೆ; ಅದು ಮುಗಿದಂತೆ ಮುಂದಿನದು ಹೊಣೆ ವಹಿಸಿಕೊಳ್ಳುವುದು; ಅದು ಮುಗಿದ ಮೇಲೆ ಮುಂದಿನದರ ಸರತಿ. ಇದು ಮಜಲು ರಾಕೆಟ್‌ನ ತಂತ್ರ. ಒಂದು ಮಜಲಿನಿಂದ ಇನ್ನೊಂದು ಮಜಲಿಗೆ ದಾಟಿದಂತೆ ವಿರುದ್ಧ ಬಲಗಳ ಪ್ರತಿರೋಧ ಕಡಿಮೆಯಾಗುವುದರಿಂದ ಏರಿದ ಎತ್ತರ, ಚಲನೆಯ ವೇಗ ವರ್ಧಿಸುತ್ತವೆ. ಇನ್ನು ಚಲನೆಯ ವೇಗವನ್ನು ಕಡಿಮೆ ಮಾಡಬೇಕಾದರೆ ಎದುರು ದಿಕ್ಕಿನಲ್ಲಿ ರಾಕೆಟ್ ಉರಿಸಿ ಚಲನೆಯ ದಿಕ್ಕಿಗೆ ವಿರುದ್ಧವಾಗಿ ಬಲಗಳನ್ನು ಉತ್ಪಾದಿಸಬೇಕು. “ಉರಿ ಮುಂದೆ – ನಡೆ ಹಿಂದೆ” ಇದರ ಸೂತ್ರ; ಇಂಥ ರಾಕೆಟ್‌ನ ಹೆಸರು ತಡೆ ರಾಕೆಟ್. ಹೀಗೆ ರಾಕೆಟ್ ಉರಿಯುವ ದಿಕ್ಕನ್ನು ಅನುಸರಿಸಿ ಅದು ವೇಗವನ್ನು ವರ್ಧಿಸಬಹುದು; ಅಥವಾ ತಗ್ಗಿಸಬಹುದು.

ಹೊಸ್ತಿಲು ದಾಟಿದ ಮೇಲೆ

ಹೊಸ್ತಿಲು ದಾಟುವವರೆಗೆ ಮಗುವಿನ ಪ್ರಯತ್ನ, ಮರುಪ್ರಯತ್ನ. ದಾಟಿದ ಮೇಲೆ? ಇನ್ನೊಂದು ವಿಶಾಲ ಪ್ರಪಂಚ ಮಗುವಿನೆದುರು. ಪುನಃ ಹೆದರಿಸುವ ಹಿಮ್ಮೆಟ್ಟಿಸುವ ಸೋಲುಗಳ ಸಾಲುಗಳ ವಿರುದ್ಧ ಪ್ರಯತ್ನ ಪರಂಪರೆ – ಮುಂದೊಂದು ದಿವಸ ಬಾಗಿಲು ದಾಟಿತು. ಹೀಗೆ ಸ್ಪೂಟ್ನಿಕ್‌ನಿಂದ ತೊಡಗಿದ ಆಕಾಶಯಾನ ನೂತನ ವಿಸ್ಮಯಕಾರಕ ಸಾಧ್ಯತೆಗಳನ್ನು ಮನುಷ್ಯನ ಮುಂದಿಟ್ಟಿತು. ಮೊದಲು ಮಾನವರಹಿತ ಮತ್ತೆ ಮಾನವಸಹಿತ ಕೃತಕ ಉಪಗ್ರಹಗಳು; ಚಂದ್ರನ ಮೇಲೆ ರಾಕೆಟ್ ಬಡಿತ; ಚಂದ್ರ ಪ್ರದಕ್ಷಿಣೆ ಮಾಡಿ ಆಚೆ ಬದಿ ವರದಿ ಮಾಡಿದ ನೌಕೆಗಳು; ಚಂದ್ರನ ಮೇಲೆ ಮೆತ್ತಗೆ ಇಳಿದ ನೌಕೆ; ಮಂಗಳ, ಶುಕ್ರ ಗ್ರಹಗಳ ಸಮೀಪವಾಗಿ ಹಾದುಹೋದ ನೌಕೆಗಳು; ಭೂಮಿಯ ಸುತ್ತ ಮಾನವ ಸಹಿತ ನೌಕೆ ಪರಿಭ್ರಮಿಸುತ್ತಿದ್ದಾಗ ಆ ಎತ್ತರದಲ್ಲಿ ಆ ವೇಗದಲ್ಲಿ (ಗಂಟೆಗೆ ಸುಮಾರು ೬೬೦೦೦ ಕಿಮೀ) ಒಬ್ಬ ಯಾನಿ ಅದರಿಂದ ಹೊರಗೆ ಬಂದು ಆಕಾಶದಲ್ಲಿ “ನಡೆದು” ಪುನಃ ನೌಕೆಯನ್ನು ಸುರಕ್ಷಿತವಾಗಿ ಪ್ರವೇಶಿಸಿದ್ದು; ಚಂದ್ರಲೋಕವನ್ನು ಮಾನವ ಸಹಿತ ನೌಕೆ ಪ್ರದಕ್ಷಿಣೆ ಮಾಡಿ ಭೂಮಿಗೆ ಮರಳಿದ್ದು – ಇವನ್ನೆಲ್ಲ ಒಂದು ನಿಯಮಿತ ಯಾದಿಯ ಮೇಲೆ ಬರೆದು ಪರಿಶೀಲಿಸಿದರೆ ಈ ಪ್ರಗತಿ ಎಷ್ಟು ಕ್ಷಿಪ್ರವಾಗಿ ಕ್ರಮಬದ್ಧವಾಗಿ ಗುರಿಯೆಡೆಗೆ ಸಾಗಿದೆ ಎಂದು ತಿಳಿಯದಿರದು. ಸಹಸ್ರಾರು ವರ್ಷಗಳ ಆಸೆ ಆಕಾಂಕ್ಷೆ ಕತೆ ಕವನ ವೈಜ್ಞಾನಿಕ ಸಂಶೋಧನೆಗಳ ಸಂಯುಕ್ತ ಫಲ ೧೯೫೭ರಿಂದೀಚೆಗೆ ಮನುಷ್ಯನಿಗೆ ಲಭಿಸುತ್ತಿದೆ.

ಅಧ್ಯಾಯ ಮೂರು | ಮಾನವ, ಚಂದ್ರನ ಸುತ್ತ | ಮೊದಲ ನೆಗೆತ

ಡಿಸೆಂಬರ್ ೨೧. ೧೯೬೮. ಆಧುನಿಕ ಕೊಲಂಬಸ್ ಚಂದ್ರಯಾನ ಪ್ರಾರಂಭಿಸುವ ಮಹಾದಿನ. ಮನುಷ್ಯನ ಯುಗ ಯುಗಾಂತರಗಳ ಹಂಬಲ ಸಿದ್ಧಿಸಲಿರುವ ಸುಮುಹೂರ್ತ. ಅಮೆರಿಕದ ಕೆನೆಡಿ ಭೂಶಿರದಲ್ಲಿ ಅತಿ ಸಂಭ್ರಮ. ಸುಮಾರು ೧೦೯ ಮೀಟರ್ ಎತ್ತರದ ೩,೧೦೦ ಟನ್ ಭಾರದ ಅಪೊಲೊ ೮/ ಸ್ಯಾಟರ್ನ್ ೫ ಎಂಬ ಆಕಾಶನೌಕೆ ಮತ್ತು ಅದರ ವಾಹನ ನೆಲಕ್ಕೆ ಲಂಬವಾಗಿ ನಿಂತಿವೆ.

೧೦೩ ಗಂಟೆಗಳಿಗೆ ಮೊದಲೇ ಕೊನೆಯೆಣಿಕೆ ಪ್ರಾರಂಭವಾಯಿತು. “ಹತ್ತು, ಒಂಬತ್ತು… ಎರಡು, ಒಂದು, ಹೋಗು” ಇದು ಕೊನೆಯೆಣಿಕೆಯ ಕ್ರಮ. ಒಂದೊಂದು ಸೋಪಾನವಿಳಿದಂತೆ ಬ್ಲೇಡಿನ ಅಲಗಿಗೆ ಅಷ್ಟಷ್ಟು ಸಮೀಪ ಬರುತ್ತಿದ್ದೇವೆ, ಆದ್ದರಿಂದ ದೋಷಗಳೇನಾದರೂ ಉಳಿದಿದ್ದರೆ ಅವುಗಳ ನಿವಾರಣೆಗೆ ಸಮಯ ಅಷ್ಟಷ್ಟು ಕಡಿಮೆಯಾಗುತ್ತದೆ ಎಂದು ಇದು ಸೂಚಿಸುತ್ತದೆ. ಜೊತೆಯಲ್ಲಿಯೇ ಇದು ನಮ್ಮ ಉತ್ಸಾಹ ನಿರೀಕ್ಷೆಗಳ ವಕ್ರರೇಖೆಯನ್ನು ಮೇಲೆ ಮೇಲೆ ಕೊಂಡೊಯ್ಯುವುದು. ೧೦೩ ಇದ್ದದ್ದು ೧೦೨ ಆಯಿತು, ೧೦೧ ಆಯಿತು… ಭೂಮಿಯ ಕ್ರಮಬದ್ಧ ಆವರ್ತನೆ ನಿಶ್ಚಿತ ಸಮಯವನ್ನು ಆವಾಹಿಸಿಯೇ ಬಿಟ್ಟಿತು. ೭ ಗಂಟೆ ೫೧ ಮಿನಿಟ್ ಪೂರ್ವಾಹ್ನ. ತಳದ ರಾಕೆಟ್ (ಸ್ಯಾಟರ್ನ್ ೫ ಎಂಬ ಹೆಸರಿನ ಮಜಲು ರಾಕೆಟಿನ ಒಂದನೆಯ ಮಜಲು) ಭೀಕರ ಶಬ್ದದಿಂದ ಸ್ಫೋಟಿಸಿತು. ಶಿರದ ಮೇಲೆ ಅಪೊಲೊ ೮ ಎಂಬ ಹೆಸರಿನ ಆಕಾಶನೌಕೆ. ಅದರೊಳಗೆ ಕುಳಿತಿದ್ದವರು ಮೂವರು ಯಾತ್ರಿಗಳು ಫ್ರೇಂಕ್ ಬೋರ್ಮನ್ (೪೦), ಜೇಮ್ಸ್ ಲೊವೆಲ್ (೪೦) ಮತ್ತು ರೂಕಿ ವಿಲಿಯಂ ಏಂಡರ್ಸ್ (೩೫). ರಾಕೆಟ್ ಸ್ಫೋಟನದಿಂದ ಅಗಾಧ ನೂಕುಬಲ ಸಂಜನಿಸಿತು. ೧೧ ಮಿನಿಟುಗಳ ಅನಂತರ (ಇಷ್ಟರಲ್ಲಿ ಎರಡನೆಯ ಮಜಲು ರಾಕೆಟ್ಟೂ ಸ್ಫೋಟಿಸಿತ್ತು) ವ್ಯವಸ್ಥೆ ಗಂಟೆಗೆ ೫೭,೪೨೦ ಕಿಮೀ ವೇಗದಲ್ಲಿ ಭೂಮಿಯ ಸುತ್ತಲೂ ಪರಿಭ್ರಮಿಸತೊಡಗಿತು. ಈ ಕಕ್ಷೆಯ ಹೆಸರು ಕಕ್ಷಾನಿಲ್ದಾಣ (ಪಾರ್ಕಿಂಗ್ ಆರ್ಬಿಟ್). ಕಾರ್‌ಗಳನ್ನು ‘ಪಾರ್ಕ್’ ಮಾಡಿದಂತೆ ಆಕಾಶ ನೌಕೆಯನ್ನು ಪಾರ್ಕ್ ಮಾಡಿದ ಕಕ್ಷೆ. ಕಕ್ಷಾ ನಿಲ್ದಾಣದಿಂದ ನೌಕೆಯನ್ನು ಭೂಮಿಗೆ ಬರಮಾಡಿಕೊಳ್ಳುವುದು ಬಲು ಸುಲಭದ ತಾಂತ್ರಿಕ ಕ್ರಮ.

ಚಂದ್ರನೆಡೆಗೆ

ನೆಲದಿಂದ ನೆಗೆದು ೨ ಗಂ. ೫೦ ಮಿ. ಸಂದಿದ್ದುವು. ಎರಡನೆಯ ಭೂಪ್ರದಕ್ಷಿಣೆಯನ್ನು ನೌಕೆ ಮುಗಿಸುತ್ತಿದ್ದಂತೆಯೇ ನೆಲದ ನಿಯಂತ್ರಣಾಗಾರದಿಂದ ರೇಡಿಯೋ ಸಂಜ್ಞೆಯ ಮೂಲಕ ಆಜ್ಞೆ ಬಂದಿತು “ನೀನು ಚಂದ್ರನೆಡೆಗೆ ಹೋಗು.” ಮೂರನೆಯ ಮಜಲು ರಾಕೆಟ್ ಸ್ಫೋಟಿಸಿತು – ದಿಕ್ಕು ವೇಗ ಬದಲಾದುವು. ನೌಕೆ ಚಂದ್ರನೆಡೆಗೆ ಗಂಟೆಗೆ ಸುಮಾರು ೮೨,೫೦೦ ಕಿಮೀ ವೇಗದಲ್ಲಿ ಜಿಗಿಯಿತು. ಇಲ್ಲಿಗೆ ಸ್ಯಾಟರ್ನ್ ೫ ರಾಕೆಟ್ ಪೂರ್ಣವಾಗಿ ಮುಗಿಯಿತು; ನಿರ್ವಾತ ಪ್ರದೇಶದಲ್ಲಿ ಭೂಮಿಯ ಗುರುತ್ವಾಕರ್ಷಣ ಬಲ ತಗ್ಗುತ್ತಿರುವ ಮಹಾ ಶೂನ್ಯದಲ್ಲಿ ಅಪೊಲೊ ೮ ಚಂದ್ರ ಲೋಕಾಭಿಮುಖವಾಗಿ ಸಾಗಿತು. ಮುಂದಿನ ವಿವರ: ೨೧ ರಂದು ೧೮ ಗಂ. ೫೧ ಮಿ.ಭೂಮಿಯಿಂದ ದೂರ ೧,೬೫,೦೦೦ ಕಿಮೀ; ೨೨ರಂದು ೧೫ ಗಂ. ೩೦ ಮಿ. ೪,೯೫,೦೦೦ ಕಿಮೀ; ೨೩ರಂದು ೧೪ ಗಂ. ೫೫ ಮಿ. ದೂರ ೬,೬೦,೦೦೦ ಕಿಮೀ. ನೌಕೆಯ ವೇಗವನ್ನೂ ಗಮಿಸಿದ ದೂರ, ಸಂದ ಸಮಯವನ್ನೂ ಸಮೀಕರಿಸುವಾಗ ತಾಳೆಯಾಗುವುದಿಲ್ಲವಲ್ಲ ಎಂದು ಸಂದೇಹ ಮೂಡಬಹುದು. ಆದರೆ ಆಕಾಶಯಾನದಲ್ಲಿ ‘ಹಕ್ಕಿ ಹಾರಿದಂತೆ’, ಅಂದರೆ ಸರಳ ರೇಖೆಯ ಮೇಲಿನ ಪ್ರಯಾಣ ಎಂಬುದು ಇಲ್ಲ.

ಅಪೊಲೊ ನೌಕೆ ಚಂದ್ರನ ಸುತ್ತಲೂ ಪರಿಭ್ರಮಿಸುವ ಉಪಗ್ರಹವಾಗಿರಬೇಕೇ ಅಥವಾ ಸುರುಳಿಯಾಕಾರದ ಪಥದಲ್ಲಿ ಚಂದ್ರನ ಸುತ್ತಲೂ ಸಂಚರಿಸಿ ಭೂಮಿಗೆ ಮರಳಬೇಕೇ? ಈ ನಿರ್ಧಾರವನ್ನು ಮುಂದಿನ ಕೆಲವೇ ಗಂಟೆಗಳಲ್ಲಿ ತೆಗೆದುಕೊಳ್ಳಬೇಕಾಗಿತ್ತು. ಬೇರೆ ಮಾರ್ಗಗಳಿಲ್ಲವೇ? ಇವೆ, ನೇರವಾಗಿ ಚಂದ್ರನ ಮೇಲೆಯೇ ಬೀಳುವುದು ಅಥವಾ ಚಂದ್ರನ ಗುರುತ್ವಾಕರ್ಷಣದ ಕ್ಷೇತ್ರವನ್ನು ಸ್ಪರ್ಷಿಸುತ್ತ ಅನಂತ ವಿಸ್ತಾರದೆಡೆಗೆ ಸಿಡಿಯುವುದು. ಇವೆರಡು ದಾರಿಗಳೂ ಸರ್ವನಾಶಕ್ಕೆ ನಾಂದಿ ಎಂಬ ಪ್ರತ್ಯೇಕ ವಿವರ ಅನಾವಶ್ಯಕ. ಮೊದಲನೆಯ ನಿರ್ಧಾರದಲ್ಲಿಯೂ (ಚಂದ್ರನ ಉಪಗ್ರಹವಾಗಿ ಸುತ್ತುತ್ತಿರುವುದು) ಅಪಾಯವಿಲ್ಲದಿಲ್ಲ. ಭೂಮಿಯ ಸುತ್ತಲೂ ಪರಿಭ್ರಮಿಸುತ್ತಿದ್ದ ನೌಕೆಯನ್ನು ಚಂದ್ರನೆಡೆಗೆ ನೂಕಲು ಒಂದು ರಾಕೆಟನ್ನು ಸ್ಫೋಟಿಸಿದಂತೆಯೇ ಚಂದ್ರನ ಸುತ್ತಲೂ ಪರಿಭ್ರಮಿಸುವ ನೌಕೆಯನ್ನು ಭೂಮಿಗೆ ಬರಮಾಡಿಕೊಳ್ಳಲು ಇನ್ನೊಂದು ರಾಕೆಟ್ಟನ್ನು ಸ್ಫೋಟಿಸಬೇಕು. ಈ ರಾಕೆಟ್ ಏನಾದರೂ ಸರಿಯಾಗಿ ಕೆಲಸ ಮಾಡದಿದ್ದರೆ ಆಗ ನೌಕೆ ಚಂದ್ರನ ಬಂಧಿಯಾಗಿ (ಚಂದ್ರನಿಗೊಂದು ಮರಿಚಂದ್ರನಾಗಿ) ಅಲ್ಲಿಯೇ ಸುತ್ತುತ್ತಿರಬೇಕಾದೀತು. ಯಾನಿಗಳೂ ಭೂಮಿಯ ಮೇಲಿನ ನಿಯಂತ್ರಕರೂ ಈ ಎಲ್ಲ ಸಮಸ್ಯೆಗಳನ್ನು ಕೂಲಂಕಶವಾಗಿ ಪರಿಶೀಲಿಸಿದರು.

ಚಂದ್ರನ ಮರಿಚಂದ್ರ ಅಪೊಲೊ

“ಇದು ಭೂಮಿ. ಈಗ ೬೮-೦೪ (ಅಂದರೆ ನೌಕೆ ಭೂಮಿಯಿಂದ ಜಿಗಿದು ೬೮ ಗಂ. ೪ ಮಿ. ಸಂದಿದೆ ಎಂದರ್ಥ). ನೀನು ಚಂದ್ರನ ಉಪಗ್ರಹವಾಗಿ ಹೋಗು.” ಅಪೊಲೊ ನಾಯಕ ಉತ್ತರಿಸಿದ “ಸರಿ, ಸರಿ. ಅಪೊಲೊ ೮ ಹೊರಟಿತು.” ಅತ್ಯುತ್ಕೃಷ್ಟ ಪಕ್ಷಿಯಲ್ಲಿ ಕುಳಿತಿದ್ದೀರಿ ಮಕ್ಕಳೇ. ಧೈರ್ಯವಾಗಿರಿ” ನೆಲದ ಆಶ್ವಾಸನೆ.

ಡಿಸೆಂಬರ್ ೨೪, ೪ ಗಂ. ೫೯ ಮಿ. ತಡೆರಾಕೆಟ್ ಪ್ರಯೋಗದಿಂದ ಅಪೊಲೊ ವೇಗವನ್ನು ತಗ್ಗಿಸಿದರು, ಚಲನೆಯ ದಿಕ್ಕನ್ನು ಬದಲಾಯಿಸಿದರು. ಅಪೊಲೊ ಚಂದ್ರನ ಸುತ್ತಲೂ ಗಂಟೆಗೆ ೧೮,೮೭೬ ಕಿಮೀ ವೇಗದಲ್ಲಿ ಪರಿಭ್ರಮಿಸತೊಡಗಿತು. ಪಕ್ಷಿಯೇನೋ ಅತ್ಯುತ್ಕೃಷ್ಟವಾದದ್ದೇ. ಆದರೆ ಅದು ಹಾರುತ್ತಿರುವುದೆಲ್ಲಿ? ಅದನ್ನು ಕಾಣುತ್ತ (ಅಂದರೆ ರೇಡಿಯೋ ಸಂಜ್ಞೆಗಳ ಮೂಲಕ ಕೇಳುತ್ತ ಟೆಲಿವಿಷನ್ ಮೂಲಕ ಕಾಣುತ್ತ) ಇರುವವರೆಗೆ ನೆಲದ ಮೇಲಿನ ನಿಯಂತ್ರಕರಿಗೆ ಸಮಾಧಾನವಿದೆ. ಆ ಸಾಹಸಿಗರ ಸಂತೋಷಾರ್ಥವಾಗಿ ನೆಲದಿಂದ ಸಂಗೀತ, ಸಮಾಚಾರ ಪ್ರಸರಿಸಿದರು. ಕ್ರಿಸ್ಮಸ್ ಪ್ರಾರ್ಥನೆಗಳನ್ನೂ ಆಶೀರ್ವಚನಗಳನ್ನೂ ಸಲ್ಲಿಸಿದರು. ಆದರೆ ಅಷ್ಟರಲ್ಲಿಯೇ ಅವರಿಗೂ ನೆಲಕ್ಕೂ ನಡುವೆ ಇದ್ದ ಏಕಮತ್ರ ಭೌತ ಸಂಪರ್ಕ ಕಡಿದುಹೋಯಿತು. ರೇಡಿಯೊ ಸಂಜ್ಞೆ ಈಗ ಬರುತ್ತಿಲ್ಲ. ‘ಕ್ಷಣವೊಂದು ಯುಗ’ ಅಲ್ಲ, ಯುಗ ಯುಗಾಂತರದ ದೀರ್ಘ ತೀವ್ರ ನಿರೀಕ್ಷೆ: ೨ ಮಿ. ೫೦ ಸೆ. ಕಾಲ – ಆ ಅವಧಿಯಲ್ಲಿ ನೌಕೆ ಚಂದ್ರನ ಹಿಂದೆ ಮರೆಯಾಗಿತ್ತು. ನೌಕೆಗೂ ಭೂಮಿಗೂ ನಡುವೆ ಚಂದ್ರ ಬದುದರಿಂದ ರೇಡಿಯೊ ಸಂಜ್ಞೆಗಳು ಬಂದಾದುವು. ಏನೂ ಆಗಲಿಲ್ಲ – ನೌಕೆ ಸುರಕ್ಷಿತವಾಗಿ ಚಂದ್ರನ ಇನ್ನೊಂದು ಅಂಚಿನಿಂದ ಹೊರಗೆ ಇಣುಕಿತು. ನಿಯಂತ್ರಕರು ಸಂತೋಷದ ನಿಟ್ಟುಸಿರು ಬಿಟ್ಟರು.

ಈಗ ನೌಕೆ ಚಂದ್ರನ ಮರಿಚಂದ್ರ. ಪ್ರತಿಯೊಂದು ಪ್ರದಕ್ಷಿಣೆಯಲ್ಲಿಯೂ ೪೫ ಮಿನಿಟುಗಳ ಕಾಲ ಚಂದ್ರನ ಹಿಂಬದಿಯಲ್ಲಿ ಇರಬೇಕು. ಅಷ್ಟು ಹೊತ್ತು ನೌಕೆಗೂ ನೆಲಕ್ಕೂ ಸಂಪರ್ಕವೇ ಇರುವುದಿಲ್ಲ. ೨ ಮಿ. ೫೦ಸೆಕೆಂಡೇ ಯುಗವಾಗಿತ್ತು. ಈಗ ೪೫ ಮಿ. ಕಾದಿರಬೇಕು. ಕಾದ ಕಾವಲಿಯ ಮೇಲಿನ ಹುರಿಗಾಳಾದರು ನಿಯಂತ್ರಕರು. ಪಕ್ಷಿಯ ರಕ್ಷಣೆ ಸಮರ್ಪಕವಾಗಿತ್ತು. “ಅವರು ಬಂದರು, ಅವರನ್ನು ಸಂಧಿಸಿದೆವು” ಎಂದು ನಿಯಂತ್ರಕರು ಸಂತೋಷದಿಂದ ಕುಣಿದಾಡಿದರು. ಚಂದ್ರನ ಒಂದು ಅಂಚಿನಲ್ಲಿ ಮರೆಯಾದ ನೌಕೆ ಎದುರು ಅಂಚಿನಲ್ಲಿ ಹೊರಗೆ ಬಂದು ಭೂಮಿಯೆಡೆಗೆ ರೇಡಿಯೋ ಸಂಜ್ಞೆ ಬಿತ್ತರಿಸಿತು. (ಡಿ. ೨೪, ೭ ಗ. ೨೯ ಮಿ) ಕ್ರಿಸ್ಮಸ್ ಪ್ರವೇಶ ಮತ್ತು ಚಂದ್ರ ಕಕ್ಷೆ ಪ್ರವೇಶ ಎರಕಗೊಂಡಿದ್ದುವು. ಚಂದ್ರನ ಸುತ್ತಲೂ ಸುಮಾರು ೨೩೦ ಕಿಮೀ ಎತ್ತರದಲ್ಲಿ ಅಪೊಲೊ ಕಕ್ಷೆ. ಪ್ರಥಮವಾಗಿ ಚಂದ್ರನ ಹಿಂಬದಿ ನೋಡಿದವರು ಈ ಯಾತ್ರಿಕರು, ಬೋರ್ಮನ್ ಅನುಯಾಯಿಗಳು. ಇಷ್ಟು ಮಾತ್ರವಲ್ಲ – ಚಂದ್ರಲೋಕದ ಮೇಲ್ಮೈಯ್ಯ ವಿನ್ಯಾಸಗಳನ್ನು ಅವರು ಸಮೀಪದಿಂದ ವೀಕ್ಷಿಸಿದರು. ಫೋಟೋ ತೆಗೆದು ವಿವರ ಸಂಗ್ರಹಿಸಿದರು. ಮುಂದೆ ಎಂದಾದರೊಂದು ದಿವಸ ಆಕಾಶಯಾತ್ರಿಕರ ನೌಕೆ ಚಂದ್ರನ ಮೆಲೆ ಸುಖವಾಗಿ ಇಳಿಯಲು ಅನುಕೂಲಿಸುವ ಇಳಿದಾಣವಿದೆಯೇ ಎಂದು ಅನ್ವೇಷಿಸಿದರು. ಚಂದ್ರನ ಮೇಲೆ ಸೂರ್ಯ, ಭೂಮಿಗಳ ಉದಯಾಸ್ತಗಳನ್ನು ನೋಡಿ ಪುಳಕಿತರಾದರು. ಬೆಳಕು ಕತ್ತಲೆಗಳ ಆಟ, ಇವುಗಳ ಹಿಂದೆ ಇರುವ ಅನಂತಾಕಾಶದ ಕಡುಗಪ್ಪು ಪರದೆ, ಅದಕ್ಕೆ ದೂರದಲ್ಲಿ ಅಂಟಿಸಿದಂತಿದ್ದ ಭೂಮಿಯ ಬಿಂಬ, ಅತಿ ದೂರದಿಂದ ತಿವಿಯುವಂತೆ ನೋಡುತ್ತಿದ್ದ ನಕ್ಷತ್ರಗಳು ಇವುಗಳನ್ನು ನೋಡಿ ಮುಗ್ಧರಾದರು.

ಒಂಬತ್ತು ಪ್ರದಕ್ಷಿಣೆಗಳು ಮುಗಿದುವು. ಮೊದಲು “ಹೇಗಪ್ಪಾ” ಎಂದಿದ್ದುದು ಈಗ ಮಾಮೂಲಾಯಿತು. ೨೪ರ ಪ್ರಾತಃಕಾಲ ೪ ಗ. ೫೯ ಮಿ. ತೊಡಗಿದ ಚಂದ್ರಪ್ರದಕ್ಷಿಣೆ ೨೫ ರ ಪ್ರಾತಃ ಕಾಲ ೧ ಗ. ೧೦ ಮಿ.ಗೆ ಅಂತ್ಯಗೊಳ್ಳಬೇಕು. ಹತ್ತು ಪ್ರದಕ್ಷಿಣೆಗಳೂ ಈ ಅವಧಿಯಲ್ಲಿ ಮುಗಿದು ನೌಕೆ ಭೂಮಿಯೆಡೆಗೆ ಸಿಡಿಯಬೇಕು. ಈಗ ಗಂಟೆಗೆ ೧೧,೯೬೩ ವೇಗದಲ್ಲಿ ಚಲಿಸುತ್ತಿರುವ ನೌಕೆಯ ವೇಗ ಗಂಟೆಗೆ ೧೯,೭೩೪ ಕಿಮೀಗೆ ಏರಿ ದಿಕ್ಕು ಸಮರ್ಪಕವಾಗಿ ಬದಲಾದರೆ ನೌಕೆ ಚಂದ್ರನ ಗುರುತ್ವಾಕರ್ಷಣೆಯಿಂದ ವಿಮೋಚನೆಗೊಂಡು ಭೂಮಿಯೆಡೆಗೆ ಧಾವಿಸಲಾರಂಭಿಸುವುದು. ಇದನ್ನು ಸಾಧಿಸಬೇಕಾದ ರಾಕೆಟ್ ಸ್ಫೋಟಿಸದಿದ್ದರೆ?

[ರಾಕೆಟ್ ಸ್ಫೋಟಿಸಿತೇ? ಚಂದ್ರನ ಸಮೀಪ ದರ್ಶನ ಮಾಡಿದವರು ಯಶಸ್ವಿಯಾಗಿ ಭೂಮಿಗೆ ಮರಳಿದರೇ? ಚಂದ್ರನ ಮೇಲೆ ಮಾನವ ಪದಾರ್ಪಾಣೆಯಲ್ಲಿ ಈ ಸೋಲು/ಗೆಲುವಿನ ಪಾತ್ರವೇನು ಇತ್ಯಾದಿ ೪೫ ವರ್ಷಗಳ ಹಿಂದಿನ ಸಾಧನೆಯ ಕುರಿತ ಸಂದೇಹಗಳಿಗೆ ಅವಶ್ಯ ಇನ್ನು ಕೇವಲ ಹದಿನಾಲ್ಕು ದಿನಗಳ ಬಿಡುವಿನಲ್ಲಿ ಇಲ್ಲೇ ಉತ್ತರದೊಡನೆ ಮುಂದುವರಿಯಲಿದೆ ಕಥನ – ಮಾನವ, ಚಂದ್ರನ ಮೇಲೆ – ವಿ ಧಾರಾವಾಹಿಯ ಐದನೇ ಕಂತು]