ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ ಮಾರುಕಟ್ಟೆಯತ್ತ ನಡೆಯುತ್ತಿದ್ದಳು. ಅಲ್ಲಿ ಒಂದೋ ಎರಡೋ ತರಕಾರಿ, ಜಿನಸು ಸಣ್ಣದಾಗಿ ಕೊಂಡು, ಭುಜಕ್ಕೇರಿಸಿ ನಮ್ಮಂಗಡಿಗೆ ನಡೆದೇ ಬರುತ್ತಿದ್ದಳು. ಮಾರ್ಕೆಟ್ ಕಡೆ ಹೋಗುವ ಯಾವುದೇ ಪ್ರಸಂಗ ಇಲ್ಲದಾಗಲೂ ಅವಳು ನೇರ ದಾರಿ ಹಿಡಿದದ್ದು ಕಡಿಮೆ! ತಪ್ಪು ತಿಳಿಯಬೇಡಿ, ಅಲೋಶಿಯಸ್ ಗುಡ್ಡೆ ಹತ್ತಿ, ಬಾವುಟಗುಡ್ಡೆ ದಾರಿಯಲ್ಲಿ ಇಳಿದು ಬರುತ್ತಿದ್ದಳು ಅಥವಾ ಕದ್ರಿ ರಸ್ತೆಯಲ್ಲಿ ಮುಂದುವರಿದು, ಆರ್ಯಸಮಾಜಕ್ಕಾಗಿ ಬಳಸಂಬಟ್ಟೆ ಹಿಡಿಯುತ್ತಿದ್ದಳು. (ಇದರ ಅಂದಾಜಿಲ್ಲದವರು ಅನುಕಂಪ ತೋರಿಸುವುದಿತ್ತು, ಅರೆಹಾಸ್ಯದಲ್ಲೇ ಜಿಪುಣತನದ ಆರೋಪ ಮಾಡುವುದೂ ಇತ್ತು.) ಸ್ವಂತ ವಾಹನವೋ ಆಟೋದಲ್ಲೋ ಸುತ್ತಾಡಿ ಮನೇಲಿ ‘ವರ್ಕೌಟ್ ಮಶೀನ್’ ಇಟ್ಟುಕೊಳ್ಳುವುದು ನಮ್ಮಿಬ್ಬರ ಮನಸ್ಸಿನಲ್ಲಿ ಎಂದೂ ‘ವರ್ಕೌಟ್’ ಆದದ್ದೇ ಇಲ್ಲ. ಹೀಗೆ ಎರಡು ಮೂರು ಕಿಮೀ ಸುತ್ತಿದರೂ ಸುಮಾರು ಸಂಜೆ ಐದು ಗಂಟೆಯೊಳಗೆ ನನ್ನನ್ನು ‘ಬಿಡುಗಡೆ’ ಮಾಡಲು ಅನುಕೂಲವಾಗುವಂತೆ ಆಕೆ ಅಂಗಡಿ ಸೇರುವುದನ್ನು ಮರೆಯುತ್ತಿರಲಿಲ್ಲ.

ದೇವಕಿ ಅಂಗಡಿ ಮುಟ್ಟಿದ್ದೇ ರಿಲೇ ತಂಡದ ಸದಸ್ಯನಂತೆ ನಾನು ಹೊರಟುಬಿಡುತ್ತಿದ್ದೆ. ನೆಪ ಮಾತ್ರಕ್ಕೆ “ಕಾಫಿ ಕುಡಿಯಲಿಕ್ಕೆಂ”ದು ಹೇಳಿದರೂ ಊರಿನ ಯಾವ್ಯಾವುದೋ ಗಲ್ಲಿ ಸುತ್ತಿ ಕನಿಷ್ಠ ಒಂದು ಗಂಟೆಯಾದರೂ ಕಾಣೆಯಾಗಿಬಿಡುತ್ತಿದ್ದೆ. ಪುರಭವನದಲ್ಲಿ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಯಾಚಿತ ಹಿಂದಿನ ಸಾಲಿನ ಪ್ರೇಕ್ಷಕನಾಗಿ ಕೆಲಕಾಲ ಕುಳಿತು ಮರಳುವುದೂ ಇತ್ತು. “ಛೆ, ಸಂಜೆ ನಿಮ್ಮನ್ನು ನೋಡಲು, ಮಾತಾಡಿಸಲೆಂದೇ ಅಂಗಡಿಗೆ ಬರುವ ‘ಅಭಿಮಾನಿಗಳಿಗೆ’ ಅನ್ಯಾಯವಾಗುತ್ತದೆ” ಎಂದು ಶಾಂತಾರಾಮ (ಅಂಗಡಿ ಸಹಾಯಕ) ಬಗೆ ತರದಲ್ಲಿ ಗೊಣಗುತ್ತಿದ್ದ, ನನ್ನ ಅಂಗಡ್ಯೇತರ ಆಸಕ್ತಿಗಳನ್ನು ಧ್ವನಿಪೂರ್ಣವಾಗಿ ಟೀಕಿಸುತ್ತಲೂ ಇದ್ದ! ನಾನದಕ್ಕೆಲ್ಲ ಜಗ್ಗುತ್ತಿರಲಿಲ್ಲ, ನನ್ನ ನಡಿಗೆಯ ಚಪಲ ತಗ್ಗಿಸಲೂ ಇಲ್ಲ. ಆದರೆ ಕಾಫಿ, ಬಳಸು ದಾರಿ (ನನ್ನ ಹೆಜ್ಜೆಯ ಬೀಸು ಮತ್ತು ಅಂತರ ಹೆಚ್ಚಾದ್ದಕ್ಕೆ ಸಹಜವಾಗಿ ಐದಾರು ಕಿಮೀ ಹೋಗಿಬರುವುದಿತ್ತು.), ಸಾಂಸ್ಕೃತಿಕ ಕಲಾಪ ಏನೇ ಇದ್ದರೂ ನಾನೂ ಸಕಾಲಕ್ಕೆ ಅಂದರೆ ಗರಿಷ್ಠ ಸಂಜೆ ಏಳೂವರೆ ಗಂಟೆಯೊಳಗೆ ಅಂಗಡಿ ಸೇರುವುದನ್ನು ತಪ್ಪಿಸುತ್ತಿರಲಿಲ್ಲ. ಇದು ಮಾತ್ರ ಶಾಂತಾರಾಮನ ಅನುಕೂಲಕ್ಕಾಗಿ. ಅವನು ಮಂಜೇಶ್ವರದ ದೂರಕ್ಕೆ ಹೋಗುವ ಕಾರಣ ಅಂಗಡಿಯ ಸಮಯಕ್ಕೂ ಅರ್ಧ ಗಂಟೆ ಮೊದಲೇ ಮನೆಗೆ ಕಳಿಸುತ್ತಿದ್ದೆ. ಅದೇ ಈಗ – ಅಂಗಡಿಯನ್ನೇ ಮಾರಿದ ಮೇಲೆ, ಮನೆಯಲ್ಲೇ ಉಳಿಯುವ ದಿನಗಳಲ್ಲಿ ನಮಗಿಬ್ಬರಿಗೂ ಸಮಯದ ಕಟ್ಟುಪಾಡೇನೂ ಇಲ್ಲ, ಆದರೆ ನಡೆಯಲು ಲಕ್ಷ್ಯವೇ ಕಳೆದು ಹೋದಂತಾಗಿತ್ತು. ದೇವಕಿಗೆ ಐದು ಗಂಟೆ, ನನಗೆ ಏಳೂವರೆ ಗಂಟೆ, ಅಂಗಡಿಗೆ ಎಂಟು ಗಂಟೆ ಇತ್ಯಾದಿ ‘ದಂಡೆ ಕಾಣುವ’ ಕೆರೆಯಲ್ಲಿ ಈಜುತ್ತಿದ್ದವರು ಈಗ ಕಡಲಿನಲ್ಲಿ ಬಿದ್ದಿದ್ದೆವು!

ಸ್ವಸ್ಥ ಜೀವನಕ್ಕೆ ಮಾನಸಿಕದಷ್ಟೇ ದೈಹಿಕ ಚಟುವಟಿಕೆಗಳೂ ಅವಶ್ಯ ಎಂದು ನಾನೇನು ಹೊಸದಾಗಿ ಹೇಳಬೇಕಾಗಿಲ್ಲ. ಹೊಟ್ಟೆ ಇಳಿಸಲು, ರಟ್ಟೆ ಬೆಳೆಸಲು ವ್ಯಾಯಾಮ, ಯೋಗ ಎಂದೆಲ್ಲಾ ಉಬ್ಬರದ ಅಲೆ ಏಳುತ್ತಲೇ ಇರುತ್ತದೆ. ಆದರೆ ನನಗವುಗಳನ್ನು ನಿಯತವಾಗಿ ಅನುಷ್ಠಾನಕ್ಕೆ ತರುವಲ್ಲಿ ಒಗ್ಗದಿಕೆ ಜಾಸ್ತಿ. ಕವಾಯತಿನ ಶಿಸ್ತು, ಏಕತಾನತೆ, ಮಾಡಿದ್ದನ್ನೇ ಮಾಡುವುದು, ಹಳ್ತೆಲ್ಲಾ ಚಿನ್ನ ಎಂಬ ವ್ಯಾಮೋಹಿಗಳಿಗೆ ಮೊದಲ ನೋಟಕ್ಕೆ, ಅನಿವಾರ್ಯತೆಗೆ ರಸಸ್ಯಂದಿಯಾಗಬಹುದು; ನನಗಂತೂ ಅಲ್ಲ. ವ್ಯವಸ್ಥಿತ ದೈಹಿಕ ಚಟುವಟಿಕೆಗೆ ಅವುಗಳೆಲ್ಲ ಸ್ಪಷ್ಟ ನಿಯಮಗಳನ್ನೇನೋ ಹಾಕಿ ಕೊಡುವುದು ಇರಬಹುದು; ಎನ್ಸಿಸಿ ಕವಾಯತಿನಂತೆ, ಅನುಷ್ಠಾನಕ್ಕೆ ಶಾಸ್ತ್ರದಂತೆ, ಭಾಷೆಗೆ ವ್ಯಾಕರಣದಂತೆ. ಆದರೆ ನನಗೆ ಎಡವಿ ತಡವುವ ಅಡವಿ ನಡೆಯಲ್ಲಿ ಪ್ರೀತಿ ಹೆಚ್ಚು, ಶಾಸ್ತ್ರ ಮರೆಸುವ ಪುರಾಣ ಅಚ್ಚುಮೆಚ್ಚು. ವ್ಯಾಕರಣ ಕಲಿತು ಮರೆಯುವುದಕ್ಕಲ್ಲವೇ ಎಂದ ಮಹಾಕವಿಯೇ ನನಗೆ ಆದರ್ಶ! (ಹೆದರಬೇಡಿ, ಕಾವ್ಯ ಗೀವ್ಯಾ ನನ್ನ ತುತ್ತು ಅಲ್ಲ.) ಉಳಿದದ್ದು – ಯಾರ ಹಂಗಿಲ್ಲದೆ, ಯಾವ ಸಲಕರಣೆ ಅಥವಾ ಖರ್ಚಿನ ಮುಖ ನೋಡದೇ ನಡೆಯುವುದು – ಅಧುನಿಕ ಕನ್ನಡದಲ್ಲಿ ವಾಕಿಂಗು!

ಬೆಳಿಗ್ಗೆ ಆರು ಗಂಟೆಗೂ ಮುನ್ನ ಏಳಲಾಗದ ಪ್ರಕೃತಿ ನಮ್ಮದು. ಮತ್ತೆ ಪ್ರಾತಃವಿಧಿಗಳ ಗೋಜಲು ಬಿಡಿಸಿಕೊಳ್ಳುವುದರೊಳಗೆ ನಡೆಯಲು ಪ್ರಶಸ್ತವಾದ ಮುಂಜಾವಿನ ತಣ್ಪು ದೂರವಾಗುತ್ತಿತ್ತು. ಹಾಗಾಗಿ ಸಂಗೀತ, ನಾಟಕ, ಯಕ್ಷಗಾನ, ವಿಶೇಷೋಪನ್ಯಾಸ, ಪ್ರವಾಸ ಇತ್ಯಾದಿ ಏನೂ ಇಲ್ಲದ ಪ್ರತಿ ಸಂಜೆ ನಾನು, ದೇವಕಿ ದಾರಿಗೆ ಇಳಿಯುತ್ತಿದ್ದೆವು. ಯಾವ್ಯಾವುದೋ ದಾರಿ, ಗಲ್ಲಿ, ಗುಡ್ಡೆ ಹತ್ತಿಳಿದು ಮಂಗಳೂರಿಗೆ ‘ದಮ್ಮಾಸ್’ ಹಾಕತೊಡಗಿದೆವು. (ಉಡ್‌ಲ್ಯಾಂಡ್ಸ್ ಹೋಟೆಲಿನ ದಿ| ಬಾಬಣ್ಣನವರ ಪ್ರಿಯ ಶಬ್ದ – ದಮ್ಮಾಸ್!) ನನ್ನದು ಭೀಮಬಕ್ಕರ್ (ದೀರ್ಘ ಹೆಜ್ಜೆಯ ನಡಿಗೆ), ದೇವಕಿಯದು ಕುಕ್ಕಲು ನಡೆ. ಹಲವರಿಗೆ ನಾನು ಆರುಮಾರು ಮುಂದೆ ಓಡಿದಂತೆಯೂ ಇವಳು ದಮ್ಮಯ್ಯಗುಡ್ಡೆ ಹಾಕುತ್ತಾ ಹಿಂಬಾಲಿಸಿದಂತೆಯೂ ಕಂಡದ್ದಿದೆ. ಆದರೆ ಕೆಳದಾರಿಯ ಶಾಮಿಯಾನ ಕುರ್ಚಿ ಬಾಡಿಗೆ ಕೊಡುವ ಅಂಗಡಿ ಮಾಲಿಕರಿಗೆ ನನ್ನ ಹುರಿಗಟ್ಟಿದ ಮೀಸೆ ಮೇಲೇ ಕಣ್ಣು. ಸಹಜವಾಗಿ “ರಾಯ್ರೇ ಅದೇನು ಮ್ಯಾಡಮ್ಮನ್ನು ಹಿಂದೆ ಬಿಟ್ಟು ಓಡುದು?” ದೇವಕಿಗೆ ಬೀಸುಗಾಲು ಹಾಕಲು ಹೇಳಿ, ನಾನು ಕಾಲಿಗೆ ಮರ ಹತ್ತುವ ತಳೆ ಹಾಕಿದವನಂತೆ ತಡವರಿಸುತ್ತ ಮಗ್ಗುಲ ನಡೆಗಿಳಿದರೆ ನಮ್ಮ ಗಲ್ಲಿ ದಾರಿ ಹಾದು ಹೋಗುವ ಸೈಕಲ್ಲಿಗನಿಗೂ ಆತಂಕ “ಅಜ್ಜೇರೇ ಸಾದಿ ಬುಡ್ಪರೇ?” (ಅಜ್ಜಯ್ಯಾ ದಾರಿ ಕೊಡ್ತೀರಾ?) ಗೇಲಿ ಅಥವಾ “ದಾನೆ, ಅಮ್ಮೆನ ದರ್ಖಾಸ್ತೋ” (ಏನು, ಅಪ್ಪನ ಪಟ್ಟೇ ನೆಲವೋ?) ದಬಾಯಿಕೆ. ಇವರ ತಂಟೆ ಬೇಡಾಂತ ಅವಳನ್ನ ಮುಂದೆ ಬಿಟ್ಟು ನಾನು ಹಿಂಬಾಲಿಸಿದೆನೋ “ಮೊಮ್ಮಕ್ಕಳಾಡಿಸುವ ಪ್ರಾಯದಲ್ಲೂ ಜಡೆ ಬೆನ್ನು ಬೀಳುವ ಚಟ ಬಿಡಲಿಲ್ಲವೋ?” (ನಂಬಿದರೆ ನಂಬಿ, ಮೊದಲೂ ನನಗೀ ಚಾಳಿ ಇರಲಿಲ್ಲ!)

ಇನ್ನು ಇಲ್ಲಿನ ದಾರಿಯ ಅವಸ್ಥೆ ಕುರಿತಂತೆ ಹೇಳಲು ಹೊರಟರೆ ಎಷ್ಟೂ ಉಂಟು. ಯಕ್ಷಪ್ರದರ್ಶನಕ್ಕೆ ಮೊದಲಾಗಿ ನಡೆಯುವ ಸಭಾಕಲಾಪಕ್ಕೆ ಬಂದ (ಪ್ರಾಮಾಣಿಕವಾಗಿ ಎಂದೂ ಯಕ್ಷಗಾನ ನೋಡದ, ಆದರೂ ಎರಡೇ ಮಾತಿನ ಮಿತಿ ಹಾಕಿಕೊಂಡು ಹನ್ನೆರಡು ತೊದಲುವ, ಪರಿಣತ ಪ್ರೇಕ್ಷಕರ ಎದುರು ಬಣ್ಣಗೇಡಾಗುವ) ಮುಖ್ಯ ತಿಥಿಯಂತೆ (“ಮಾಡ್ತೇನೆ ನಿನ್ನ ತಿಥಿ” ಎಂಬಲ್ಲಿನ ಬಯ್ಗುಳಾರ್ಥವನ್ನು ಅನ್ವಯಿಸಿಕೊಳ್ಳಿ) ಕೆಲವೇ ಮಾತುಗಳಲ್ಲಿ ಹೇಳುತ್ತೇನೆ. ಪ್ರಾಕೃತಿಕವಾಗಿಯೂ ಯೋಜನಾ ಅಬದ್ಧವಾಗಿಯೂ ವಿಪರೀತ ಏರಿಳಿತಗಳ, ಅಂಕುಡೊಂಕಿನ ಗಲ್ಲಿ ದಾರಿಗಳ ನಗರ; ಕುರುಡು ಗಲ್ಲಿ, ಮೆಟ್ಟಿಲ ಜಾಡು, ಪುಟ್ಟಪಥವೇ ಇಲ್ಲದ ಸ್ಥಿತಿ ಇಲ್ಲಿ ಮಾಮೂಲು. ಅಗಲೀಕರಣ, ಕಾಂಕ್ರೀಟೀಕರಣಗಳ ಹೊಸ ತಲೆಮಾರಿನ ದಾರಿಗಳಲ್ಲೂ ಹೆಚ್ಚಿನವುಗಳ ಸೌಲಭ್ಯ ಪರಿಗಣನೆಯಲ್ಲಿ ಚಕ್ರಗಳ ಮೇಲಿನ ವಾಹನಗಳಿಗಷ್ಟೇ ಮರ್ಯಾದೆ; ನಡೆಯುವವರಿಗೆ ಅವಹೇಳನ. ಪುಟ್ಟಪಥವಿಲ್ಲ, ಇದ್ದಲ್ಲಿ ಮಳೆನೀರ ಚರಂಡಿಗಳಿಲ್ಲ, ಅದೂ ಇದ್ದಲ್ಲಿ ಆದಿ ಅಂತ್ಯಗಳ ಸಂಪರ್ಕವಿಲ್ಲ, ಅದರದೇ ರೂಪಣೆಯಲ್ಲಿ ಉಳಿದ ಮಣ್ಣು ಮರಳು ಜಲ್ಲಿಗಳ ಅವಶೇಷದೊಡನೆ ಪರಿಸರದ ಕಸತೊಟ್ಟಿಯ ಕೊರತೆಯನ್ನೂ ನೀಗುವ ಕೂಪವೇ ಎಲ್ಲಾ!

ಮಳೆಗಾಲದ ಅಬ್ಬರದಲ್ಲಿ ಭೂಗತ ಕೊಳಚೆ ಕೊಳವೆ ಸಾಲಿಗೆ ಮಣ್ಣು ಕಸ ಸೇರುವುದು ಸಾಮಾನ್ಯ. ಅದರ ‘ನೆನಪಿನಲ್ಲಿ’ ಹೆಚ್ಚಿಕೊಂಡೋ ‘ಕಸಕಡ್ಡಿ’ಯ ಅಡ್ಡಿಗೆ ಬೆದರಿಯೋ ಭೂಗತ ‘ಕೊಳಚೆನೀರು’ (ಮಾಮೂಲಿನಂತೆ ಅಲ್ಲಿ ಇಲ್ಲಿ) ಮನುಷ್ಯ-ಗುಂಡಿಗಳನ್ನು ಮೀರಿ ಕಾರಂಜಿಗಳಾಗುವುದಿರುತ್ತದೆ. ಅದರ ಚಂದ ನೋಡಲು ‘ಕುಡಿನೀರು’ ಕೊಳವೆ ಸೀಳಿಕೊಂಡು ಚಿಮ್ಮಿ, ಕೈಕೈ ಮಿಲಾಯಿಸುವುದೂ ಉಂಟು. ಅವೆಲ್ಲ ಮೋರಿಗಳೊಳಗಿನ ಅಜ್ಞಾತ ಓಟಕ್ಕಿಂತ ಹೆಚ್ಚಿಗೆ ದಾರಿಯ ಮೇಲೇ ‘ಸಂಭ್ರಮಿಸು’ತ್ತವೆ. ಕಟು ಬಣ್ಣ, ವಾಸನೆಗಳ ಈ ಹರಿವು ವಾಹನಗಳ ಓಟಕ್ಕೆ ಸಿಕ್ಕು ಚಿಮ್ಮುವ ಚಂದವನ್ನು ಜನಪದ ಕ್ರೀಡೆ ಕಂಬಳಕ್ಕೆ ಪರ್ಯಾಯವಾಗಿ ರೂಪಿಸಿದ್ದಾರೋ ಎಂದು ಸಂಶಯಿಸಿದರೆ ತಪ್ಪಿಲ್ಲ. ಇಲ್ಲಿ ಪಾದಚಾರಿಗಳು ಬರಿದೇ ನೋಡುವುದಲ್ಲ, ಮೈಮೇಲೆ ಧರಿಸಿ ಸಂತೋಷಿಸುವುದು ಇದ್ದದ್ದೇ. ಕೊನೆಯದಾಗಿ ಸಣ್ಣದೊಂದು ಪಟ್ಟಿ ಮಾಡುವುದಾದರೆ ಮೋರಿ ಬಿಡಿಸಲು ಮಗುಚಿಹಾಕಿದ ಸ್ಲ್ಯಾಬ್, ಕುಡಿನೀರ ಒಡೆದ ಕೊಳವೆ ಹುಡುಕಲು ತೋಡಿಟ್ಟ ಹೊಂಡ (ಕೆಲವು ಆನೆ ಹಿಡಿಯಲು ತೋಡಿದ ಕರ್ಪಿನಷ್ಟು ದೊಡ್ಡದಿರುವುದೂ ಇದೆ!), ಹಳೆ ತಲೆಮಾರಿನ ಅದುರುವ ಕಲ್ಲಚಪ್ಪಡಿ, ಕಾಲು ತೊಡರಲು ಹೊಂಚುವ ಯಾವುದೋ ಕೇಬಲ್ಲು (ಜ್ಯೋತಿ ವೃತ್ತದ ಬಳಿ ಕಾಡುಹಂದಿ ಬೇಟೆಯ ಹುನ್ನಾರವಿರಬಹುದೇ?), ನೂರಡಿ ಸುತ್ತಳತೆಗೆಲ್ಲಾ ಪರಿಮಳ ಬೀರುವ ನರಕಪಾಲಿಕೆಯ ತೊಟ್ಟಿ, ಮುಚ್ಚಳ ಹಾರಿದ ಕೊಳಚೆ ನೀರಿನ ಮಾನವಗುಂಡಿ, ಬರಲಿರುವ ಗಗನಗಾಮಿ ಕಟ್ಟಡಗಳ ‘ಅದು, ಇದು, ಎದು’ (ಮರಳು, ಜಲ್ಲಿ, ರಾಡು, ಒಡಕು ಸಿಮೆಂಟು, ತೋಡಿದ ಮಣ್ಣ ರಾಶಿ, ಸೆಂಟ್ರಿಂಗ್ ಸಾಮಾನು, ಕಾಂಕ್ರಿಟ್ ಮಿಕ್ಸರ್, ರೆಡಿಮಿಕ್ಸಿನ ಲಾರಿಗಳು ಇತ್ಯಾದಿ ಇತ್ಯಾದಿ), ಅಂಗಡಿಯವರ ಸದಾ ವಿಸ್ತರಣೆಯ ಹವಣುಗಳು ಮತ್ತು ಹೆಚ್ಚುಗಾರಿಕೆಯ ಬೋರ‍್ಡುಗಳು, ಸಾವ್ಕಾರರ ‘ಕಾರು ಮತ್ತು ವಠಾರ ಶುಚಿ’ ಮಾಡುವಲ್ಲಿ ರೋಡಿಗೆ ಲೀಕಿದ ಕೊಳಚೆ, ನಾಯಿಗಳ ಅನಿಷ್ಠದ ಗುಪ್ಪೆಗಳು (ನಮ್ಮನೆ ದಾರಿಗೆ ‘ಡಾಗ್ ಶಿಟ್ ರೋಡ್’ ಎಂದೇ ಹೆಸರಿಸಲು ಅರ್ಜಿ ಹಾಕುವವನಿದ್ದೇನೆ. ಸಹಾನುಭೂತಿಪರ ನೆರೆಕರೆಯವರು ಮತ್ತು ಬೀಡಾಡಿ ನಾಯಿಗಳು ಸೇರಿ ಕೆಲವು ವರ್ಷಗಳಿಂದಲೇ ನನಗಿದಕ್ಕೆ ಸಾಕ್ಷಿ ಕೊಡುತ್ತಲೇ ಇದ್ದಾರೆ.), ಪಾಗಾರ ಮೀರಿ ತಲೆ ಕುಕ್ಕುವ ‘ಹಸುರುಪ್ರೀತಿ’ಯವರ ಭೋಗನ್ವಿಲ್ಲಾ, ಮಹಾಮಡಿಯ ಟ್ರಾನ್ಸ್ಫರ್ಮರ್ ಮತ್ತು ಪಕ್ಕೆ ತಿವಿಯುವ ಅವುಗಳ ಸ್ವಿಚ್ ಲಿವರ್ರು, ಬಾಟಿಕ್ ಹೋಟೆಲಿನ ಕಾರಂಜಿಯುಗುಳು (ಏಪ್ರಿಲ್, ಮೇ ತಿಂಗಳಲ್ಲಿ ನೇತ್ರಾವತಿ ಬತ್ತಿದಾಗ ಕಾಗೆ ಸ್ನಾನಕ್ಕೆ ಇಲ್ಲಿ ಸಾಲು ನಿಲ್ಲಬಹುದು!), ಬೀದಿಯಂಚಿನ ಗೂಳಿಯಂತೆ ಸ್ಥಿತನಾದ ಏಟೀಎಂ ಕಾವಲ್ದಾರ, ಅಪಾರ್ಟ್ಮೆಂಟ್ ವಠಾರ ಬಿಡುವ ‘ರಾಜಕು-ಮಾರಿ’ಗಾಗಿ ನಮ್ಮನ್ನು ತಡೆಯುವ ಸೆಕ್ಕುರ್ಕುಟ್ಟಿ, ಮಳಿಗೆಗೆ ಬಂದದ್ದು ಬೀದಿಗಿಳಿಯದೇ ಎಂಬಂತೆ ಬೀದಿವ್ಯಾಪಾರಿಗಳು (ಎಷ್ಟೊಂದು ವಿಧ – ತಾಜಾ ತರಕಾರಿಯಿಂದ ತೊಡಗಿ, ತಿಂದರೆ ಕೈಲಾಸಕ್ಕೇ ರವಾನಿಸುವ ‘ಬಿಶಿ ತಿನಿಶುಗಳ’ ಕೈಲಾಸ್ ಗಾಡಿಗಳು, ಜೂಶು ಶೆಂಟರುಗಳು, ಅಲ್ಲೂ ಒಳ ಕೈಯಲ್ಲಿ ಮಾದಕದ್ರವ್ಯಗಳು, ತೋರಿಕೆಯ ಒರಟು ಚಕ್ರಗಳಿದ್ದರೂ ಗಟ್ಟಿ ಅಡಿಪಾಯದ ಮೇಲೆದ್ದ ಗೂಡು-ಗಾಡ್ಯಂಗಡಿಗಳು ಮತ್ತವರ ವರ್ಣಮಯ ತಾಡಪತ್ರಿಯ ಮುಂಚಾಚಿಕೆಗಳು, ಸರಿಯಾದ ಓಡಾಟವೇ ಇರುವ ರಿಕ್ಷಾ, ಕಾರು, ಟೆಂಪೋ, ಜೀಪುಗಳ ಪರಿವರ್ತಿತ ಚರಾಚರ-ಉಪಾಹಾರ ಮಂದಿರಗಳು, ಕಳ್ಳ ಪುಸ್ತಕ, ಚಪ್ಪಲಿ ಕೊಡೆ ರಿಪೇರಿ, ಮುತ್ತಿನ ನಡುವೆ ಹವಳ ಕೋದಂತೆ ಬಿಕ್ಕೆಬೇಡುವವರು, ಹೆಲ್ಮೆಟ್, ಗಾಗಲ್ಸು, ವಾಚಸ್ಸು, ಬಿದಿರುಬೆತ್ತಗಳ ತರಹೇವಾರಿ ಆಸನ ಅಲಂಕರಣಗಳು), ಗುರ್ರಾಯಿಸುವ ನಾಯಿಗಳು (ಪುರಾಣಕೃತ ನವಜಾಗೃತಿಯಿಂದಲೋ ಪಾಖಂಡಿಗಳ ಜಿಹ್ವಾಚಾಪಲ್ಯದಿಂದಲೋ ಅಂಡಲೆಯುವ ಗೋಮಾತೆ ಮತ್ತು ಪಿತ-ಪುತ್ತರ್ಗಳು ಗಣನೀಯವಾಗಿ ಕಡಿಮೆಯಾಗಿದ್ದಾರೆ! ಹಾಗಾಗಿ ಮೃದು ಬಿಸುಪಿನ ಸೆಗಣಿ ಮೆಟ್ಟುವ ಅವಕಾಶದಿಂದ ಪಥಿಕರು ವಂಚಿತರಾಗಿದ್ದಾರೆ!!) ಹೀಗೆ ಊರೆಲ್ಲಾ ಪುಟ್ಟಪಥದಲ್ಲೇ ನೆರೆದಾಗ ನಮ್ಮಿಬ್ಬರದು ವಾಕಿಂಗ್ ಆಗುವುದು ಹೇಗೆ?

ಕೆನರಾ ಶಾಲೆಯ ಟೀಚರ್ ಒಬ್ಬರು ಬಂಟ್ಸ್ ಹಾಸ್ಟೆಲ್ ವೃತ್ತದಂಚಿನಲ್ಲಿ ‘ಸುಂದರ ವಿನ್ಯಾಸ’ದ ಮೋರಿ ಮುಚ್ಚಳದಲ್ಲಿ ಪಾದ ಸಿಕ್ಕಿಸಿಕೊಂಡು, ಮೊಣಕಾಲಿನವರೆಗೆ ಚರ್ಮ ಸುಲಿದುಕೊಂಡದ್ದು, ಜ್ಯೋತಿ ಬಳಿಯ ನೆಲದಲ್ಲೆದ್ದ ಕೇಬಲ್ಲಿಗೆ (ಬಿದ್ದವರೆಷ್ಟೋ ಲೆಕ್ಕ ಇಟ್ಟವರಿಲ್ಲ) ಉಂಗುಷ್ಟ ಕಿತ್ತ ಚಪ್ಪಲಿಗಳಂತೂ ಅಲ್ಲೇ ಶೋಕಿಸುತ್ತ ಹರಡಿರುವುದು, ಉಡ್ಲ್ಯಾಂಡ್ಸಿನೆದುರಿನ ಅಡ್ಡಾದಿಡ್ಡಿ ಚಪ್ಪಡಿಯಲ್ಲಿ ಅಡಿ ತಪ್ಪಿ ನಾನೇ ಪಾದ ಉಳುಕಿ ತಿಂಗಳೆರಡು ಕುಂಟಿದ್ದು, ನನ್ನತ್ತೆ ಹಂಪನಕಟ್ಟೆಯಲ್ಲಿ ‘ಬನಿಯನ್ ವ್ಯಾಪಾರಿ ಮಳಿಗೆ’ ತಪ್ಪಿಸಲು ಹೋಗಿ ದೀರ್ಘದಂಡ ನಮಸ್ಕಾರ ಹಾಕಿದ್ದು, ಮದುವೆ ಹಾಲಿಗೆ ಸಜ್ಜಾಗಿ ಸ್ಕೂಟರ್ ಸವಾರಿ ಬಂದವರು ಅಲೋಶಿಯಸ್ ಪ್ರಾಥಮಿಕ ಶಾಲೆಯೆದುರು ಬಸ್ಸು ಹಾಯ್ದಾಗ ಪರಮ ಪವಿತ್ರ (ಮೂಲದಲ್ಲಿ ನೇತ್ರಾವತಿಯೇ ಆದ್ದರಿಂದ!) ಕೊಳಚೆ ಅಭಿಷೇಕಕ್ಕೆ ತುತ್ತಾದದ್ದು, ಬೆಸೆಂಟಿನೆದುರು ಹೈ-ಹೀಲ್ಡ್ ಲಲನಾಮಣಿ ಪುಟ್ಟಪಥದಲ್ಲೇ ಎರಡು ಮಿನಿಟು ಚಡಪಡಿಸಿ, ಚಪ್ಪಲಿಯ ಬಾರ್ ಕಳಚಿ (ಕಪಾಳ ಮೋಕ್ಷಕ್ಕಲ್ಲಿ ವೈರಿಗಳಿರಲಿಲ್ಲ) ಕೈಯಲ್ಲೇ ಮಾರ್ಗದ ಗುಳಿಯಿಂದ ‘ಹೀಲ್’ ಬಿಡಿಸಿಕೊಂಡದ್ದು ಮುಂತಾದ ನೂರೆಂಟು ಕೂರ್ಗಣೆಗಳು ನನ್ನ ಬತ್ತಳಿಕೆಯಲ್ಲಿವೆ. ಮತ್ತದರ ಪಟ್ಟಿಗಿಳಿದು ನಿಮ್ಮ ಓದಿನ ಉತ್ಸಾಹವನ್ನು ನಿರಸ್ತ್ರಗೊಳಿಸದೇ ಒಂದೇ ವಾಕ್ಯದಲ್ಲಿ ಹೇಳುತ್ತೇನೆ – ನಮಗೆ ಸಂಜೆಯ ನಡಿಗೆ ಬಲುಬೇಗನೆ ವ್ಯಾಯಾಮಕ್ಕಿಂತಲೂ ಶಿಕ್ಷೆಯಾಗತೊಡಗಿತು.

ಇದರ ಎಡೆಯಲ್ಲಿ ಆದ ಒಂದು ಉಪೋತ್ಪತ್ತಿ (ಬರೆದದ್ದಕ್ಕೆ ತುಸು ಗೌರವಧನ ಬಂದದ್ದಕ್ಕೆ ಲಾಭ ಎನ್ನಿ -) ನಗರದ ತುಣುಕುಗಳು (ಇಲ್ಲೆ ಹಿಂದೆ ಪ್ರಕಟವಾದ ಅವನ್ನು ಓದಲು ಇಲ್ಲಿ ಚಿಟಿಕೆ ಹೊಡೆಯಿರಿ). ನಾವು ನಡೆದಂತೆ ಕಾಣುತ್ತಿದ್ದ ಕೆಲವು ಕುತೂಹಲಕಾರಿ ಅಂಶಗಳನ್ನು ಸಚಿತ್ರ ಟಿಪ್ಪಣಿ ಬರೆದು ಕೆಲವು ಪತ್ರಿಕೆಗಳಿಗೆ ಪ್ರಕಟಣೆಗೆ ಕೊಟ್ಟೆ. ಪ್ರಜಾವಾಣಿ ತನ್ನ ಕರಾವಳಿ ಪುಟದಲ್ಲಿ ಕೆಲವನ್ನು ಪ್ರಕಟಿಸಿತು. ಹಿಂದೆ ಉದಯವಾಣಿ ಈಶ್ವರ ದೈತೋಟರ ಉತ್ಸಾಹದಲ್ಲಿ ಒಂದು ಚಿತ್ರ, ಫುರಕವಾಗಿ ಪುಟ್ಟ ಬರಹ ಸೇರಿಸಿ ಚಿತ್ರಾವಳಿ ಎಂದೊಂದು ಸಾರ್ವಜನಿಕ ಅಂಕಣ ತೆರೆದಿತ್ತು. ಅವರ ‘ದೂರುಗಂಟೆ’ಯಂತೂ ಓದುಗರ ಪತ್ರಗಳ ವಿಭಾಗವಾದ ಜನತಾವಾಣಿಯಿಂದ ಸಾಮಾಜಿಕ ಅಹವಾಲುಗಳ ಅಂಶಗಳನ್ನೇ ಎತ್ತಿ ಕೊಡುತ್ತಿತ್ತು. ನಾನೆರಡನ್ನೂ ಸಾಕಷ್ಟೂ ಬಳಸಿಕೊಳ್ಳುತ್ತಿದ್ದೆ ಮತ್ತು ಆಡಳಿತಾಧಿಕಾರಿಗಳು ಒಟ್ಟಾರೆ ಈ ಅಂಕಣಗಳಿಗೆ ಸ್ಪಂದಿಸುವುದನ್ನೂ ಕಂಡಿದ್ದೆ. ಆದರೆ ಈಗ ನಾನು ಅಯಾಚಿತವಾಗಿ ಕೊಡ ತೊಡಗಿದ ಈ ‘ನಗರ ತುಣುಕುಗಳು’ ಮಾಲಿಕೆಯನ್ನು ಪತ್ರಿಕೆಗಳು ಯಾಕೋ ಉದಾಸೀನದಲ್ಲೇ ನಿರ್ವಹಿಸಿತು. ಅದಕ್ಕೂ ಮಿಗಿಲಾಗಿ ನನ್ನ ಸಂಗಾತಿಗೆ ಈ ‘ಸಾಹಸ’ಗಳು ಹೊಸದೇ ‘ಜಗಳ’ಗಳನ್ನು ಹುಡುಕಿ ಹೊರಟ ಅಪಾಯಗಳಂತೆ ಕಾಣತೊಡಗಿತು! ಒಟ್ಟಾರೆ ನಮ್ಮ ನಡುಗೆಗೆ ಕಾಲ್ತೊಡರುಗಳು ಹೆಚ್ಚಿದುವು!

ಎಷ್ಟೋ ಬಾರಿ ಅನಿವಾರ್ಯತೆಗಳು ನಮ್ಮ ಆವಶ್ಯಕತೆಗಳೂ ಆಗುವುದಿದೆ. ಹಾಗೆ ಏನಾದರೂ ವಿಶಿಷ್ಟ ಸಾಧಿಸಿದಾಗ ಪದವಿ, ಪ್ರಶಸ್ತಿ, ಪ್ರಚಾರಗಳ (ಪತ್ರಯ?) ಬೆನ್ನು ಬಿದ್ದವರು ಮಾತ್ರ ಆ ಅನಿವಾರ್ಯತೆಯನ್ನು ಹೇಳಿಕೊಳ್ಳುವಲ್ಲಿ ಹಿಂದುಳಿಯುತ್ತಾರೆ. ಗುಣಕ್ಕಾಗಿ ತೆತ್ತುಕೊಂಡವರು ತತ್ತ್ವದ ಪ್ರಸರಣಕ್ಕಷ್ಟೇ ದುಡಿಯುತ್ತಾರೆ. ಈ ಎರಡನೇ ವರ್ಗಕ್ಕೆ ಸೇರಿದವ ನನ್ನ ಕಿರಿಯ ಗೆಳೆಯ ವಿಶ್ವಯಾನಿ ಗೋವಿಂದ. ಅವನಿಗೆ ಸಾಹಸಾಪೇಕ್ಷೆ ಇತ್ತು, ಲಕ್ಷ್ಯ ವಿಶ್ವಮಟ್ಟದ್ದೇ ಇತ್ತು. ಮತ್ತಾ ಕಾಲದಲ್ಲಿ ಗೋವಿಂದನಿಗೆ ಆರ್ಥಿಕ ಮತ್ತು ವೈಯಕ್ತಿಕ ಬಿಡುವುಗಳದ್ದು ದೊಡ್ಡ ಸಮಸ್ಯೆಯೂ ಆಗಿರಲಿಲ್ಲ. ದೇಹದಾರ್ಢ್ಯ, ಕ್ರೀಡೆಯೇ ಮುಂತಾದ ದೈಹಿಕ ಸಾಧನೆಗಳ ನೆಲೆ ಹೇಳಿಕೊಳ್ಳುವಂತದ್ದು ಏನೂ ಅವನಿಗಿರಲಿಲ್ಲ. ಮೋಟಾರ್ ಸೈಕಲ್ ಸವಾರಿಯೇನೋ ಧಾರಾಳ ಮಾಡುತ್ತಿದ್ದ. ಸರಿ, ಅದನ್ನೇರಿಯೇ ವಿಶ್ವಯಾನ ಎಂದು ಮೊದಲಿಗೆ ಯೋಚಿಸಿದ್ದ. ಆದರೆ ವೈಚಾರಿಕ ಮಟ್ಟದಲ್ಲೇ ಸ್ವಯಂಚಲಿ ಯಂತ್ರಗಳಿಗೆ ದೇಶ ದೇಶಗಳಲ್ಲೂ ವಿಭಿನ್ನ ಕಟ್ಟುಪಾಡುಗಳು ಕಂಡು, ಅವಕ್ಕೆ ಪರಿಹಾರ ಹುಡುಕುವಲ್ಲಿ ಸೋತುಹೋದ. ಆಗ ಅನಿವಾರ್ಯತೆಗೆ ಅವನು ಆಶ್ರಯಿಸಿದ್ದು ಸೈಕಲ್. ನನ್ನ ಮಸುಕು ನೆನಪಿನಲ್ಲಿ ಕಾಣುತ್ತದೆ – ‘ಇಲ್ಲೇ ಗೋವಾದವರೆಗೆ ಟ್ರಯಲ್ ಸೈಕಲ್ ಸವಾರಿ’ಗೆ ಹೊರಟ ಗೋವಿಂದ, ಸಣ್ಣಪುಟ್ಟ ಕಾಯಿಲೆ, ವಿಶ್ರಾಂತಿ ಅನುಭವಿಸಿದರೂ ದಿಲ್ಲಿಯಲ್ಲಿ ಓಟ ಮುಗಿಸಿ ಮರಳಿದ್ದ! ಕಸರತ್ತು ಮುಂದುವರಿಸಿ ಅಪೂರ್ವ ವಿಶ್ವಯಾನಿಯೇ ಆದ.

ಇಂದು ಗೋವಿಂದ ಸೈಕಲ್ ತತ್ವ ಮತ್ತು ಪ್ರೀತಿಯನ್ನೂ ಕಂಡುಕೊಂಡ, ಅತ್ಯುತ್ಸಾಹೀ ಪ್ರಚಾರಕನೂ ಆಗಿದ್ದಾನೆ. ಆತ ಅನ್ಯ ಅಪಘಾತಕ್ಕೆ ಸಿಕ್ಕಿ ದೇಹ ನಲುಗಿದರೂ ವಿದೇಶದಿಂದಾದರೂ ಸರಿಯೇ ಎಂದು ಮೂರು ಚಕ್ರದ ವಿದ್ಯುಚ್ಛಕ್ತಿ ಬೆಂಬಲಿತ ಸೈಕಲ್ ತರಿಸಿ ಮೆಟ್ಟುತ್ತಲೇ ಹೋದ. ಅವನ ಊರಾದ ವಿಟ್ಲ, ಪುತ್ತೂರು ಕಲ್ಲಡ್ಕಗಳಲ್ಲಿ ಬಾಲಪಾಠ ನಡೆಸಿದ. ಶಿರಾಡಿ ಘಾಟಿಯಲ್ಲಿ ಅದೂ ಮಳೆ ಹೊಡೆತದಲ್ಲೂ ಪ್ರೌಢತೆಯನ್ನು ಗಳಿಸಿದ. ಮುಗ್ಗಾಲಿ ಸೈಕಲ್ಲಿನಲ್ಲಿ ಮಂಗಳೂರಿಗೆ ಬಂದು, ಹತ್ತು ಹಲವು ಕೆಲಸ ಮುಗಿಸಿ, ಸಂಜೆಗೆ ಮರಳುವುದು ಇವನಿಗೊಂದು ಸಾಹಸವೇ ಅಲ್ಲ. ಮುಂದುವರಿದು ಇಂದು ನಾಲ್ಕೈದು ರಾಜ್ಯಗಳ ಗಡಿಯನ್ನು ಮೀರಿಯೂ ಅವನ ‘ಪ್ರತಾಪ’ ಹರಿಯುತ್ತಲೂ ಇದೆ. ಇಷ್ಟಾಗಿಯೂ ಮಂಗಳೂರಿನಲ್ಲಿ ಆರೆಕ್ಸ್ ಲೈಫಿನವರ ಪ್ರಚಾರವೇ ಪ್ರಧಾನವಾದ ಪುಟ್ಟ (ಮತ್ತು ಪುಟ್ಟವರೇ ಜಾಸ್ತಿಯಿರುವ), ಅಂದರೆ ಹದಿನೆಂಟೇ ಕಿಮೀ ಸೈಕಲ್ ರ‍್ಯಾಲೀಯಲ್ಲೂ ಯಾವ ಅಬ್ಬರವಿಲ್ಲದೆ ಭಾಗವಹಿಸುವ ಉತ್ಸಾಹಿ ಗೋವಿಂದ. ಪುನರುತ್ಪಾದನೆ ಅಸಾಧ್ಯವಾದ ಪಳೆಯುಳಿಕೆ-ಇಂಧನವನ್ನು (ಫಾಸಿಲ್ ಫ್ಯೂಯೆಲ್) ಉಳಿಸುವಲ್ಲಿ, ಏರುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ, ಸೌಕರ್ಯಗಳ ಭ್ರಮೆಯಲ್ಲಿ ಮನುಷ್ಯ ಶಕ್ತಿಯು ಸವಕಳಿಗೆ ತುತ್ತಾಗುವ ಪರಿಸ್ಥಿತಿಯಲ್ಲಿ ಗೋವಿಂದನಿಗೆ ‘ಸೈಕಲ್ ಮಹಾತ್ಮ್ಯೆ’ಯನ್ನು ಆಡುವುದಕ್ಕಿಂತ ಮಾಡಿ ಪ್ರಸರಿಸುವ ಉತ್ಸಾಹ. ಕುರಿತು ಕೇಳಿದರೆ ಇವನು ಮಾತಿನಲ್ಲಿ, ಅವನದೇ ಜಾಲತಾಣದ ಅಸಂಖ್ಯ ಬರಹಗಳಲ್ಲಿ, ಬಯಸಿದವರಿಗೆ ಜಾಲಾಡಿ ಕೊಡುವ ಮಾಹಿತಿಯಲ್ಲೂ ಸೈಕಲ್ ಮಹಿಮೆ ಕಾಣುತ್ತದೆ, ಪ್ರಕೃತಿ ಪ್ರೇಮ ಅರಳುತ್ತದೆ, ಸಾವಯವ/ಸಹಜ ಕೃಷಿಯ ಕಾಳಜಿ ಪುಟಿಯುತ್ತದೆ.

ಕಾಲೇಜು ದಿನಗಳಲ್ಲಿ ನಾನು ಅನಿವಾರ್ಯವಾಗಿ ಸೈಕಲ್ ಸವಾರನೇ. (ತಂದೆ ಮೋಟಾರ್ ಸೈಕಲ್ ತೆಗೆದುಕೊಟ್ಟಿದ್ದರೆ ಖಂಡಿತವಾಗಿ ತಿರಸ್ಕರಿಸುತ್ತಿರಲಿಲ್ಲ!) ಇದೇ ಅನಿವಾರ್ಯತೆ ನನ್ನ ವಿದ್ಯಾರ್ಥಿ ದಿನಗಳ ಪರ್ವತಾರೋಹಣ ಪೂರೈಕೆಗೂ ಸಾಹಸಾಪೇಕ್ಷೆಗಳಿಗೂ ಸೈಕಲ್ಲನ್ನೇ ಒದಗಿಸಿತ್ತು. ಮುಂದುವರಿದ ದಿನಗಳಲ್ಲಿ ಒಮ್ಮೆ ದಕ್ಷಿಣ ಭಾರತ, ಎರಡು ಬಾರಿ ಅಖಿಲ ಭಾರತ ಸುತ್ತುವಾಗ ಸಮಯದ ಸಂಕೋಚದಲ್ಲಿ ನನಗೆ ಸೈಕಲ್ ಸಾಕಾಗಲಿಲ್ಲ, ಪೂರ್ಣ ಮೋಟಾರ್ ಸೈಕಲನ್ನೇ ಬಳಸಿದ್ದೆ. ಆದರೆ ಗೋವಿಂದ ಕಿರಿಯನಾದರೇನು ಆತನ ಪ್ರೇರಣೆಯಲ್ಲೂ ಆರೆಕ್ಸ್ ಲೈಫಿನ ರ‍್ಯಾಲೀ ಸಂಘಟಕರ ಪ್ರೀತಿಯಲ್ಲೂ ನಾನು ಮತ್ತೆ ಸೈಕಲ್ ಪ್ರೀತಿಯನ್ನು ಗಳಿಸಿಕೊಳ್ಳುತ್ತಿದ್ದೇನೆ.

***

(ಆರೆಕ್ಸ್ ಲೈಪಿನವರು ಮೊದಲ ಬಾರಿಗೆ ನನ್ನಲ್ಲೇನೋ ಹಿರಿತನ ಕಂಡು, ನನ್ನ ಬಳಕೆಗೆ ಅವರದೇ ಸೈಕಲ್ ಕೊಟ್ಟು ರ‍್ಯಾಲೀಗೆ ಸೇರಿಸಿಕೊಂಡಿದ್ದರು. ವಿವರಗಳಿಗೆ ನನ್ನದೇ ಹಳೆಯ ಬರಹಗಳಿಗೆ ಇಲ್ಲಿ ಚಿಟಿಕೆ ಹೊಡೆಯಿರಿ. ಈಗ ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ನಡಿಗೆಯಿಂದ ಸೈಕಲ್ಲಿಗೇರಿದ ನಮ್ಮ ‘ವ್ಯಾಯಾಮ’ದ ವಿವರಗಳನ್ನು ಅವಶ್ಯ ಮುಂದಿನ ವಾರ ಕೊಡುತ್ತೇನೆ, ಓದಲು ಮರೆಯಬೇಡಿ. ಅದುವರೆಗೆ ನಿಮ್ಮ ನಗರ ನಡಿಗೆಯ ರಂಗುಗಳನ್ನು ಕೆಳಗೆ ಯಾಕೆ ಟಿಪ್ಪಣಿ ಮಾಡಬಾರದು?)