(ಕ್ಷೇತ್ರ ದರ್ಶನದಲ್ಲೊಂದು ಸುತ್ತು – ಭಾಗ ಎರಡು)

ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ ಎರಡನೇ ಕಾರ್ಯಕ್ರಮದ (ಒಂದು ಹಗಲು) ಮುಖ್ಯ ಲಕ್ಷ್ಯ ಮಹಾಬಲಿಪುರಂ ಅಥವಾ ಮಾಮಲ್ಲಪುರ; ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು ೫೮ ಕಿಮೀ ಓಟ. ಹಿಂದಿನ ದಿನದ ನಗರ ತಿರುಗಾಟದಲ್ಲಿ ಹದಿನಾಲ್ಕೇ ಜನರಿದ್ದರೆ ಈ ದೊಡ್ಡದಕ್ಕೆ ಇನ್ನೂ ಕಡಿಮೆ – ಎಂಟೇ ಜನ. ಇಲ್ಲಿನ ನಿರ್ವಾಹಕ ಬರಿಯ ಉದ್ಘೋಷಕನಲ್ಲ, ಇಂಗ್ಲಿಷ್ನಲ್ಲಿ ತುಸು ಮಾತಾಡಬಲ್ಲವನಾಗಿದ್ದ. ಚಾಲಕನ ಗೂಡೊಳಗೆ ಮುಖಮರೆಸಿಕೊಳ್ಳದೆ, ಅನೌಪಚಾರಿಕವಾಗಿ ನಮ್ಮ ಪುಟ್ಟ ತಂಡದ ನಡುವೆ ನಿಂತೇ ವಿವರಣೆ ಕೊಡುತ್ತಿದ್ದ. ಈತನ ಬಗ್ಗೆ ಇನ್ನೊಂದು ಮಾತೂ ಇಲ್ಲೇ ಹೇಳಿಬಿಡುತ್ತೇನೆ, ದಿನದ ಕೊನೆಯಲ್ಲಿ ಹೆಚ್ಚಿನ ಆದಾಯಕ್ಕೆ ವ್ಯಕ್ತಿತ್ವ ಮಾರಿಕೊಂಡು ಆತ ಯಾರಿಗೂ ಸಲಾಮು ಹೊಡೆಯಲಿಲ್ಲ; ಸಂತತಿ ಸಾವಿರವಾಗಲಿ.

ಮರುಂದೀಶ್ವರ
ಮದ್ದು (ಕನ್ನಡ) ಮತ್ತು ಮರ್ದ್‌ಗಳ (ತುಳು) ಹತ್ತಿರದ ಸಂಬಂಧಿಯಾಗೇ (ದ್ರಾವಿಡ ಹೌದು, ದ್ರಾವಿಡಪ್ರಾಣಾಯಮ ಅಲ್ಲ!) ಕೇಳುವ ಮರುಂದ್‌ಗೆ ಒಡೆಯನೇ ಈ ಮರುಂದೀಶ್ವರ. ಚೆನ್ನೈ ನಗರ ಮಿತಿಯಲ್ಲೇ ನಮ್ಮ ಮೊದಲ ಭೇಟಿಯ ದೇವಾಲಯವಿದು. ಈ ಪ್ರಾಚೀನ ಶಿವ ದೇವಾಲಯ ಹೊಸಗಾಲಕ್ಕೆ ಕಣ್ಣು ತೆರೆದದ್ದರಿಂದ ವ್ಯರ್ಥ ಬೀಳುವ ಅಂಗಳವನ್ನು ಕಲ್ಯಾಣ ಮಂಟಪ ಮಾಡಿ, ವಾಹನ ತಂಗಲು, ಭಕ್ತಾದಿಗಳ ಸಾಮಾನ್ಯ ಓಡಾಟಕ್ಕೆಲ್ಲ ಸಾರ್ವಜನಿಕ ಜಾಗಗಳನ್ನು ‘ದೈವೀ ಹಕ್ಕಿ’ನಿಂದ ಬಳಸುತ್ತಿತ್ತು. ನಾವು ಹೊಕ್ಕಿದ್ದು ಮತ್ತು ಬಹುತೇಕ ಸಾರ್ವಜನಿಕರು ಪ್ರವೇಶಿಸುವುದೂ ಹಿತ್ತಿಲ ಬಾಗಿಲು. ಅಲ್ಲಿನ ಸಣ್ಣ ಮತ್ತು ಎದುರಿನ ಮಹಾದ್ವಾರಗಳ ಗೋಪುರ, ಮುಖ್ಯ ಮಂದಿರದ ಶಿಲಾರಚನೆಗಳೆಲ್ಲ ಪಾರಂಪರಿಕವೇ ಇದ್ದುವು. ಆದರೂ ಕಾಲದ ಮಹಿಮೆಯಲ್ಲಿ (ಭಕ್ತಿ ಉದ್ದಿಮೆ!) ಜಿಡ್ಡು, ಮುಕ್ಕು ಕಾಣುವಾಗ ತೀವ್ರ ಬಳಲಿರುವುದು ಸ್ಪಷ್ಟವಿತ್ತು. ಅದರ ಆವರಣದೊಳಗೇ ಇದ್ದ ಇತರ ಪುಟ್ಟ ಗುಡಿಗಳ ಮುಂದಿನ ಅಂಗಳದ ಅವ್ಯವಸ್ಥೆಗಳನ್ನು ಚುರುಕಾಗಿ ಸುತ್ತಿ, ಸಮಯ ಮಿತಿಯೊಳಗೆ ನಾವು ಬಸ್ಸು ಸೇರಿದೆವು. ಈ ಲೇಖನ ಬರೆಯುವ ಕಾಲದಲ್ಲಿ, ಜಾಲಾಟ ನಡೆಸಿದಾಗಷ್ಟೇ ಇದರದೇ ಅಂಗವಾದ ವಿಸ್ತಾರ ಕೆರೆಯೊಂದು ಎದುರು ದ್ವಾರದಾಚಿನ ದಾರಿಗೂ ಆಚಿನ ವಠಾರದಲ್ಲಿರುವುದು ತಿಳಿಯಿತು.

ಬೆಳಿಗ್ಗೆ ನಾವು ಇಲಾಖಾ ಕಛೇರಿಗೆ ತಲಪಿದಾಗಲೇ ಎದುರಿನ ಪುಟ್ಟಪಥದಲ್ಲಿ ಬೋಳುಮಂಡೆಯ ವಿದೇಶೀ ಯಾತ್ರಿಯೊಬ್ಬ (ಸುಮಾರು ನಲ್ವತ್ತರ ಪ್ರಾಯದವ) ಠಳಾಯಿಸಿದ್ದ. ಬಸ್ಸು ಹೊರಡುವಾಗ ಎಂಟರ ಪಟ್ಟಿಗೆ ಅವನೊಬ್ಬನೇ ವಿದೇಶಿಯನಾಗಿ ಸೇರಿಕೊಂಡಿದ್ದ. ಉಳಿದಂತೆ ಬಸ್ಸಿನಲ್ಲಿ ಎರಡು ಅಸ್ಸಾಮೀ ಹಿರಿಯ ಮಹಿಳೆಯರು, ಮೂವರು ಮರಾಠೀಯರು. ಮರುಂದೀಶ್ವರ ನೋಡಿ ಬಂದ ಮೇಲೆ ನಮ್ಮ ಸಣ್ಣ ತಂಡದಲ್ಲಿ ಎಲ್ಲ ಅವರವರ ಲೋಕದಲ್ಲಿದ್ದು ವಿದೇಶೀಯ ಒಂಟಿಯಾಗಿದ್ದದ್ದು ನನಗೆ ಸರಿ ಕಾಣಲಿಲ್ಲ. ನಮಗೆ ಪರಿಸರದಲ್ಲೇ ಸೇರಿಬರುವ ಎಷ್ಟೋ ವಿಚಾರಗಳು ಖಂಡಿತಕ್ಕೂ ವಿದೇಶೀಯನಿಗೆ ಸುಳುಹು ಮಾತ್ರದಲ್ಲೂ ಸಿಗುವುದು ಅಸಾಧ್ಯ ಎಂದನ್ನಿಸಿದ್ದಕ್ಕೆ ಆತನನ್ನು ಮಾತಾಡಿಸಿದೆ.

ಆಂಡ್ರೆ ಪ್ರೌಸ್ಟ್ – ಕೆನಡಾದ ವಿವಿನಿಲಯ ಒಂದರ ಆಡಳಿತ ನಿರ್ವಾಹಕ. ಫ್ರೆಂಚ್ ಆತನ ಸಹಜ ಭಾಷೆ. ಹಿಂದೆಂದೋ ವಿವಿನಿಲಯದ ಕರ್ತವ್ಯದ ಮೇಲೆ ಆತ ಭಾರತಕ್ಕೆ ಬರುವುದಿದ್ದಾಗ ಕಷ್ಟದಲ್ಲಿ ಕಲಿತ ಭಾಷೆ ಇಂಗ್ಲಿಷಂತೆ. ಆ ಭೇಟಿಯನಂತರ ಆತ ಇಷ್ಟಪಟ್ಟೇ ಭಾರದಲ್ಲಿ ಒಂದೆರಡು ಖಾಸಾ ಪ್ರವಾಸವನ್ನೂ ಮಾಡಿದ್ದಿತ್ತು. ಆದರೂ ನಾನು ಊಹಿಸಿದಂತೆ ಅಂದು ನಮ್ಮ ನಿರ್ವಾಹಕನ ಇಂಗ್ಲಿಷಿನಲ್ಲಿ ಆತ ಗ್ರಹಿಸಿದ್ದು ಬಲು ಕಡಿಮೆ. ದೇವಕಿ “ಯಾಕೆ ಸುಮ್ಮನೆ ಅವನ ಖಾಸಾತನದಲ್ಲಿ ನಿಮ್ಮ ಅಧಿಕಪ್ರಸಂಗ” ಎಂದು ಕಡಿವಾಣ ಎಳೆಯುತ್ತಲೇ ಇದ್ದರೂ ಮರುಂದೀಶ್ವರನನ್ನು ಆತನಿಗೆ ಕಿರಿದರಲ್ಲಿ ಅರ್ಥಮಾಡಿಸಿದೆ. ಮುಂದುವರಿದು, ಆತನ ವೈಯಕ್ತಿಕವನ್ನೇನೂ ಕೆದಕದೆ, ನಾವು ನೋಡುತ್ತಿದ್ದ ಸ್ಥಳಗಳ ಕುರಿತು ತುಸು ಹೆಚ್ಚಿನ ತಿಳುವಳಿಕೆಯನ್ನು ಅಯಾಚಿತ (ಶುಲ್ಕರಹಿತ!) ಕೊಟ್ಟು ಸಂತೋಷಪಟ್ಟೆ. ಆದರೆ ಇಲ್ಲೇ ಸ್ಪಷ್ಟಪಡಿಸುತ್ತೇನೆ – ಖಂಡಿತವಾಗಿಯೂ ಅವನಿಗೆ ಹೀಗೇ ಮಾಡು, ಇದನ್ನೇ ನೋಡು ಎಂದೆಲ್ಲಾ ನಿರ್ದೇಶನ ಕೊಡಲಿಲ್ಲ.

ಇಸ್ಕಾನ್ ಮಂದಿರ
ಚೆನ್ನೈ ನಗರದ ದಕ್ಷಿಣ ಹೊರ ಅಂಚಿನ ಶೋಲಿಂಗನಲ್ಲೂರಿನಲ್ಲಿ ಹೊಸತಾಗಿ (೨೦೧೨) ಮೂಡಿದ್ದ ಇಸ್ಕಾನ್ ಶಾಖಾ ಮಂದಿರ ನಮ್ಮ ಮತ್ತಿನ ನಿಲ್ದಾಣ. ಈ ಅಂತಾರಾಷ್ಟ್ರೀಯ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ವ್ಯಾಪಾರಿಯಾಗಿ ನಾನು ಸಾಕಷ್ಟು ಮಾರಿದವನೇ. ಅವಿಭಜಿತ ದಕ ಜಿಲ್ಲೆಯಲ್ಲಿ ವಿಭಜಿತ ಇಸ್ಕಾನಿನ ಎರಡೂ ಘಟಕಗಳೊಡನೆ ಸಾಕಷ್ಟು ಪರಿಚಯ ಇಟ್ಟುಕೊಂಡವನೇ. (ಹೆಚ್ಚಿನ ವಿವರಗಳನ್ನು ಮುಂದೆ ಇಲ್ಲೇ ‘ಚಕ್ರವರ್ತಿಗಳು’ ಪುಸ್ತಕದ ವಿ-ಧಾರಾವಾಹಿಯ ಭಾಗವಾಗಿ ಬರಲಿರುವ ‘ಕೊಡಚಾದ್ರಿಯ ಸುತ್ತಮುತ್ತ’ದಲ್ಲಿ ಕೊಡುತ್ತೇನೆ.) ಕ್ರಿಸ್ತಧರ್ಮದಲ್ಲಿ ಬಳಕೆಯಾಗುವ ‘ಕ್ರೈಸ್ತ ಮಿಶನರಿ’ಗೆ ಸಂವಾದಿಯಾದ ಸ್ಥಾನ ಮತ್ತು ಕೆಲಸ ‘ಹಿಂದೂ ಲೋಕದಲ್ಲಿ’ ಇರುವುದೇ ಆದರೆ ಲಕ್ಷಿಸಲೇ ಬೇಕಾದ ಸಂಸ್ಥೆ ಇಸ್ಕಾನ್. ಇವರು ಕಲಿಯುಗದ ಎಲ್ಲಾ ಪ್ರಚಾರ ತಂತ್ರಗಳನ್ನೂ ಬಳಸಿಕೊಳ್ಳುವ ಕಟ್ಟಾ ಮತಪ್ರಚಾರಕರು. ಇನ್ನೂ ಹೆಚ್ಚು ಹೇಳಬೇಕಾದರೆ ಬುದ್ಧಿಪೂರ್ವಕವಾಗಿ ವೈಚಾರಿಕತೆಯನ್ನು ಮೆಟ್ಟಿ, ದ್ವಾಪರಯುಗವನ್ನೇ ಭುವಿಗಿಳಿಸಿ ‘ಸತ್ಯದರ್ಶನ’ ಮಾಡಿಸುವ ಭ್ರಮಾಪೀಡಿತರು. ಸುಮಾರು ಒಂದೂವರೆ ಎಕ್ರೆ ಗೊಸರು ನೆಲದಲ್ಲಿ ಈ ಧವಳ ಕುಸುಮ ಅರಳಿದೆ. ಅದರ ಎರಡೂ ಅಂತಸ್ತಿನ ಸುಂದರ ಪ್ರದರ್ಶಿಕೆಗಳು, ಚೊಕ್ಕ ತಣ್ಪಿನ ಮಂದಿರ, ಮೆಲುಧ್ವನಿಯಲ್ಲಿ ತೇಲಿಬರುತ್ತಿದ್ದ ‘ಕಿಸ್ಣ ಕಿಸ್ಣಾ’ದ ಗುಂಜನವನ್ನು ಆನಂದದಿಂದ ಅನುಭವಿಸಿದೆವು.

ಮಂದಿರದಿಂದ ಹೊರಬರುವಲ್ಲಿ ಅವರೆಲ್ಲಾ ಪುಸ್ತಕ, ಚಿತ್ರ, ಪೂಜಾ ಸಲಕರಣೆಗಳನ್ನು ಮಾರುವ ಮಳಿಗೆಗೆ ಒಂದು ತೇಲುನೋಟ ಹಾಕಿದೆ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಯುವ ಸ್ವಯಂಸೇವಕರು (ವ್ರತಸ್ಥ ಬ್ರಹ್ಮಚಾರಿಗಳೂ ಇರಬಹುದು) “ಪರ್ಶಾದ್” ಎಂದು ಪೇಪರ್ ತಟ್ಟೆಯಲ್ಲಿ ಇನ್ನೂ ಹಬೆಯಾಡುತ್ತಿದ್ದ, ಪರಿಮಳ ಬೀರುತ್ತಿದ್ದ ಪೊಂಗಲ್ (ಹಯಗ್ರೀವ ಮಡ್ಡಿ?) ಮುಂದೊಡ್ಡಿದರು. ಇಸ್ಕಾನ್ ಬಗೆಗಿನ ಸಣ್ಣ ಒಗ್ಗದಿಕೆಯಿಂದಲೂ ಆ ವೇಳೆಯಲ್ಲಿ ನನಗೆ ಹೊಟ್ಟೆ ತುಂಬಿಸುವ ಅಗತ್ಯವೂ ಇರದುದರಿಂದಲೂ ಸವಿನಯ ನಿರಾಕರಿಸಿ ಮುಂದುವರಿದಿದ್ದೆ. ಅಷ್ಟರಲ್ಲಿ ಮಳಿಗೆಯಲ್ಲಿದ್ದ ಹಿರಿಯರೊಬ್ಬರು (ಶ್ವೇತವಸ್ತ್ರಧಾರಿ) ಹೊರಬಂದು ಬಹು ಆತ್ಮೀಯವಾಗಿ ನನ್ನ ಭುಜ ಆವರಿಸಿ (ಇಂಗ್ಲಿಷಿನಲ್ಲೇ) “ಇಲ್ಲ ಇಲ್ಲ, ಪ್ರಸಾದವನ್ನು ನಿರಾಕರಿಸಬಾರದು” ಎಂದು ತಟ್ಟೆ ಹಿಡಿಸಿದ್ದಲ್ಲದೆ, ಎಲ್ಲಿ ಏನು ವಿಚಾರಿಸಿಕೊಂಡರು. ನನಗೆ ಆ ಸಂಸ್ಥೆಯ ಯಾವ ವ್ಯಕ್ತಿಯೊಡನೆಯೂ ಘೋಷಿತ ಯುದ್ಧವಿರಲಿಲ್ಲ. ಹಾಗಾಗಿ “ನಮ್ಮೂರೂ ಮಂಗಳೂರೂ” ಎಂದು ಶುರುವಾದ ಸಲ್ಲಾಪ, ಆತ ನನ್ನ ಮಳಿಗೆಗೂ ತಮ್ಮ ಪ್ರಕಟಣೆಗಳ ಪ್ರಸರಣಕ್ಕಾಗಿ ಬಂದದ್ದನ್ನು ನೆನಪಿಸಿಕೊಳ್ಳುವವರೆಗೂ ಬೆಳೆದು, ನನ್ನ ಮನಸ್ಸು ಪ್ರಸನ್ನವಾಯಿತು.

[ನನ್ನ ತಾತ್ತ್ವಿಕ ಭಿನ್ನಾಭಿಪ್ರಾಯಕ್ಕೂ ಶುಚಿರುಚಿಯಾದ ತೀರ್ಥ, ಪ್ರಸಾದ ಸ್ವೀಕಾರಕ್ಕೂ ನಾನು ಎಂದೂ ಗೊಂದಲ ಮಾಡಿಕೊಂಡಿಲ್ಲ. ತಮಾಷೆಗೆ ನನ್ನ ಬಾಲ್ಯವನ್ನೇ ನೆನಪಿಸಿಕೊಂಡರೆ, ನವರಾತ್ರಿಯಲ್ಲಿ ಒಳ್ಳೇ ಗೋಧೀ ದೋಸೆ ಸಿಕ್ಕುತ್ತದೆಂದು ನಾನು ಅಷ್ಟೂ ಮಧ್ಯಾಹ್ನಗಳು ಅಜ್ಜನೊಡನೆ ‘ಉಪವಾಸಿ.’ ರಾತ್ರಿ ಪೂಜೆಯ ಕೊನೆಯಲ್ಲಿ ಪಂಚಾಮೃತ ಹಂಚುವಾಗ ಅಜ್ಜ ಒಂದು ಪುಟ್ಟ ಗಿಂಡಿ ತುಂಬಾ ‘ಕುಲಪುರೋಹಿತರಿಗೆ’ ಎಂದು ಕೊಟ್ಟದ್ದನ್ನು ಹಕ್ಕಿನಿಂದ ಎಂಬಂತೆ ನುಂಗಿ ನೆಕ್ಕುತ್ತಿದ್ದೆ. ಈಗಲೂ ಸತ್ಯನಾರಾಯಣ ಪೂಜೆಗಳಲ್ಲಿ ಸಪಾತ್ ಭಕ್ಷ್ಯ ರೇಷನ್ ಮಾಡುವುದಕ್ಕೆ ನನ್ನ ಬದ್ಧ ವಿರೋಧವಿದೆ. ಅದಕ್ಕೆ ಹೇಗೆ ವೈಚಾರಿಕ ಸಮಜಾಯಿಷಿ ಕೊಡಬಹುದು ಎಂದು ನೀವು – ಓದುಗ ವಿದ್ವನ್ಮಣಿಗಳು, ದಯವಿಟ್ಟು ತಿಳಿಸಬೇಕು.]

ದಕ್ಷಿಣಚಿತ
ಚಲನಚಿತ್ರ ಪ್ರಪಂಚದ ಅಣುಗ (ನಮ್ಮ ಮಗ,) ಅಭಯನಿಗೆ ತುಳು ಚಿತ್ರ ನಡೆದುಬಂದ ದಾರಿಯನ್ನು ಗುರುತಿಸಿ, ವ್ಯಾಖ್ಯಾನಿಸುವ ಕೆಲಸ ಹಿಂದೊಮ್ಮೆ ಬಂದಿತ್ತು. ಅದನ್ನು ಚೆನ್ನೈಯಿಂದ ತುಸು ದಕ್ಷಿಣದಲ್ಲೆಲ್ಲೋ ಹಳ್ಳಿಗಾಡಿನ ನಡುವಿನ ವಿಚಿತ್ರ ಕೇಂದ್ರವೊಂದರಲ್ಲಿ ಮಂಡಿಸಿ ಬಂದ. ಆ ಸ್ಥಳದ ಕುರಿತ ನಮ್ಮ ಕುತೂಹಲದ ಪ್ರಶ್ನೆಗಳಿಗೆ ಆತ ‘ಬ್ರಹ್ಮ’ವನ್ನು ವಿವರಿಸುವವನಂತೆ ಕಷ್ಟಪಟ್ಟಿದ್ದ. ಹೆಸರು ದಕ್ಷಿಣಚಿತ್ರ. ಅದು ಬರಿಯ ಚಿತ್ರವಲ್ಲ, ಎಲ್ಲ ವಾಸ್ತವದ ಪ್ರಾತಿನಿಧಿಕ ಪ್ರತಿಕೃತಿಗಳೇ. ಹಾಗೆಂದು ‘ಸತ್ತ’ ಮ್ಯೂಸಿಯಂ ಅಲ್ಲ, ಪ್ರದರ್ಶಿಕೆಗಳು ಮಾರಾಟಕ್ಕೂ ಇವೆ. ಕಲಾಪ ಭಾಗಿಗಳು ‘ವೇಷ’ ತೊಟ್ಟವರಲ್ಲ, ವೃತ್ತಿ ಕುಶಲಿಗಳು. ಅವರು ನೈಜ ಉತ್ಪನ್ನಗಳನ್ನೇ ಕೊಡುತ್ತಾರಾದರೂ ಜೀವನಾವಲಂಬನೆಗೆ ಅದರ ಮಾರಾಟವನ್ನೇ ಅವಲಂಬಿಸಿದವರಲ್ಲ (‘ದಕ್ಷಿಣಚಿತ್ರ’ವನ್ನು ನೆಚ್ಚಿದವರು). ಹಾಗಾದರೆ ಪಾರಂಪರಿಕ ವಸ್ತುಗಳ ಉತ್ಪನ್ನವೇ ಇವರ ಲಕ್ಷ್ಯವೋ? ಇಲ್ಲ, ವಿಚಾರ ಗೋಷ್ಠಿ, ಕಮ್ಮಟ, ಭಿನ್ನ ಪ್ರಾದೇಶಿಕ ಉತ್ಸವ, ಪ್ರದರ್ಶನಕಲೆಗಳಾದಿ ಇನ್ನೂ ಹಲವು ಇಲ್ಲಿ ಗಂಭೀರವಾಗಿಯೇ ನಡೆಯುತ್ತವೆ.

ಅಂದರೆ ಸಂಶೋಧನಾ ಕೇಂದ್ರ? ಹೌದು, ಅಲ್ಲ; ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗಳು, ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಒಪ್ಪಂದದ ಮೇರೆಗೆ ಇಲ್ಲಿ ಪ್ರವೇಶ ಹಾಸಲು ಕೊಟ್ಟು ನುಗ್ಗುತ್ತಲೇ ಇರುತ್ತಾರೆ. “ಓ, ‘ಮನೆಯಿಂದ ದೂರಾದ ಮನೆ,’ ಗೊತ್ತು ಬಿಡಿ, ಒಂಥರಾ ಹೋಟ್ಲು ಅಥ್ವಾ ಹೋಮ್ ಸ್ಟೇ” ಅಂದುಕೊಂಡರೆ, ಇಲ್ಲಿ ಉಂಡು, ಉಳಿಯಲು ವ್ಯವಸ್ಥೆಯೇ ಇಲ್ಲ. ಚುಟುಕದಲ್ಲಿ ಹೇಳುವುದಾದರೆ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಪಾರಂಪರಿಕ ಜನಪದ, ವೃತ್ತಿ, ಕಲೆ ಮುಂತಾದವನ್ನು ಪ್ರಾತಿನಿಧಿಕವಾಗಿ ಮತ್ತು ಸಜೀವವಾಗಿ ನಿತ್ಯ ನಿರೂಪಿಸುವ ಕೇಂದ್ರ.

ಆಧುನೀಕರಣ ಮತ್ತು ಯಾಂತ್ರೀಕರಣದ ಭರಾಟೆಯಲ್ಲಿ ನಶಿಸುತ್ತಿರುವ ಪಾರಂಪರಿಕ ‘ಚಿತ್ರ’ಗಳನ್ನು, ಕರ್ತೃಗಳೊಡನೆ ವಿಚಾರಪೂರ್ಣವಾಗಿ ಜೀವಂತವಾಗುಳಿಸುವ ಪ್ರಯತ್ನವೇ ದಕ್ಷಿಣಚಿತ್ರ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ ಚಿಟಿಕೆ ಹೊಡೆಯಿರಿ. ಇದನ್ನು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಎಲ್ಲರೂ ಒಂದೋ ಮಂಗಳೂರಿನ ಪಿಲಿಕುಳದಲ್ಲಿ ವಿಕಸಿಸುತ್ತಿರುವ ಪಾರಂಪರಿಕ ದಕ ಜಿಲ್ಲೆಯ ಜೀವಂತ ಪ್ರತಿಕೃತಿಗೆ ಭೇಟಿ ಕೊಡಲೇಬೇಕು.

(ವಾಸ್ತವವಾಗಿ ನಮ್ಮದು ದಕ್ಷಿಣಚಿತ್ರಕ್ಕೂ ಹೆಚ್ಚು ಸೂಕ್ಷ್ಮದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿನ ಉತ್ಪನ್ನಗಳು ಕದ್ರಿ ಶಿವಭಾಗ್ ಬಳಿಯಿರುವ ಅದರದೇ ನಗರ-ಮಳಿಗೆಯಲ್ಲೂ ಲಭ್ಯ.) ಇಲ್ಲವೇ ವ್ಯಾಪ್ತಿ ಸಣ್ಣದಾದರೂ ಉಜಿರೆಯ ತುಳುಮೇಳದಲ್ಲಿ ಜೀವನ್ರಾಂ ಸುಳ್ಯರ ಸಾಹಸದಲ್ಲಿ ‘ನಾಲ್ಕು ದಿನ’ ‘ನಡೆದ’ ತುಳು ಹಳ್ಳಿಯ ನೆನಪೂ ಮಾಡಿಕೊಳ್ಳಬಹುದು. ಇಂಥಾ ರಚನೆ, ನಿರ್ವಹಣೆಗಳ ಬಹುಮುಖೀ ಉಪಯುಕ್ತತೆಯನ್ನು ವ್ಯಾಖ್ಯಾನಿಸಲು ನಾನು ಅಧಿಕಾರಿಯಲ್ಲ. ಸೂಕ್ಷ್ಮವಾಗಿ ವರದಿ ಮಾಡಿ ಮುಂದುವರಿಯುತ್ತೇನೆ.

ವಿಶಾಲ ಆವರಣದೊಳಗೆ ರಾಜ್ಯವಾರು ಕೆಲವು ಓಣಿ, ಕಟ್ಟಡ, ಕಲೆ, ವೃತ್ತಿ ಎಂದು ಸಾಧ್ಯವಿರುವ ಎಲ್ಲವನ್ನೂ ಸಣ್ಣ ರೂಪಿನಲ್ಲಿ ಸಜ್ಜುಗೊಳಿಸುತ್ತಲೇ ಇದ್ದಾರೆ. ರಚನೆಗಳಲ್ಲಿ ಸಹಜವಾಗಿ ತಮಿಳುನಾಡಿನ ಪ್ರಾತಿನಿಧ್ಯ ಜಾಸ್ತಿಯಿದೆ. ಪ್ರದರ್ಶನ ಕಲೆಗಳಿಗೆ ಅನುಕೂಲವಾಗುವಂತೆ ವಿಶಾಲ ಹಜಾರಗಳಿವೆ, ಬಯಲು ರಂಗಭೂಮಿಯೂ ಇದೆ. ಬೇರೆ ಬೇರೆ ವಠಾರಗಳಲ್ಲಿ, ಮನೆ/ ಕಟ್ಟಡಗಳೊಳಗೆ ಅನುರೂಪವಾಗಿ ಮಣ್ಣು, ಮರ, ಗಾಜು, ಮಗ್ಗ, ವರ್ಣಚಿತ್ರವೇ ಮೊದಲಾದ ಕೆಲಸಗಳು ನಡೆದಿದ್ದವು, ಸೂಕ್ತ ನೆಲೆಗಳಲ್ಲಿ ಪ್ರದರ್ಶಿಕೆಗಳು ಮೆರೆದಿದ್ದವು. ‘ಬೀದಿ’ಯೊಂದರ ‘ಪಟೇಲ’ನ ಮನೆಯ ಒಳಾಂಗಣದಲ್ಲಿ ಶಾಲಾ ಮಕ್ಕಳ ತಂಡವೊಂದಕ್ಕೆ ನಿರ್ವಾಹಕನೊಬ್ಬನಿಂದ ಪರಿಚಯ ಭಾಷಣ ನಡೆದಿತ್ತು. ಆ ದಿನ, ನಾವಲ್ಲಿದ್ದ ಸಮಯದಲ್ಲಿ ವಿಶಿಷ್ಟಕಲಾಪಗಳೇನೂ ವ್ಯವಸ್ಥೆಗೊಂಡದ್ದಿಲ್ಲದ್ದು ಒಂದು ಲೆಕ್ಕದಲ್ಲಿ ನಮ್ಮ ದುರದೃಷ್ಟ. ದಿನದ ಪ್ರವಾಸ ಕಲಾಪದಲ್ಲಿ ಒಟ್ಟು ದಕ್ಷಿಣಚಿತ್ರ ವೀಕ್ಷಣೆಗೆ ಹಂಚಿಕೊಟ್ಟದ್ದು ಕೇವಲ ನಲವತ್ತೈದೇ ಮಿನಿಟು ಎನ್ನುವುದನ್ನು ನೆನೆಸಿದಾಗ ಅದೃಷ್ಟವೇ ಇರಬೇಕು. (ಇದ್ದೂ ಅನುಭವಿಸಲಾಗದ ಕಟ್ಟುಪಾಡು ಹೆಚ್ಚು ಸಂಕಟಕರ) ‘ಬೀದಿ ಬದಿ’ಯ ಕೆಲವು ಮಳಿಗೆಗಳು, ಮುಖ್ಯದ್ವಾರದ ಬಳಿಯ ಹೆಚ್ಚು ವಿಸ್ತೃತ ಮತ್ತು ಅಧಿಕೃತ ಮಳಿಗೆಗಳಲ್ಲಿ ಕುಶಿ ಕಂಡಂತೆ ಸ್ಮರಣಿಕೆಗಳನ್ನು ಕೊಂಡು, ನಮ್ಮ ಪ್ರವಾಸ ಕೊಟ್ಟಣದ ಮುಂದಿನ ಕಲಾಪಕ್ಕೆ ಬಸ್ಸೇರಿ ಸಾಗಿದೆವು.

ಮುತ್ತುಕಾಡು ದೋಣಿವಿಹಾರ
ನಾವು ಉದ್ದಕ್ಕೂ ಬಂದ ಪೂರ್ವ ಕರಾವಳಿ ರಸ್ತೆ ಒಂದೆಡೆ ಸಾಕಷ್ಟು ಉದ್ದದ ಸೇತುವೆಯಲ್ಲಿ ಹಿನ್ನೀರ ಹರಹನ್ನು ಹಾಯುತ್ತದೆ. ಅಲ್ಲಿ ವಿಹಾರಿಗಳಿಗಾಗಿಯೇ ಸರಕಾರ ಒಂದು ಸಣ್ಣ ದೋಣಿಕಟ್ಟೆ ಮಾಡಿದೆ. ಅಲ್ಲಿ ಬಿಚ್ಚಿದ ಪೈಸೆಗನುಗುಣವಾಗಿ ಹಲವು ನಮೂನೆಯ ಹುಟ್ಟು ಹಾಕುವ ದೋಣಿಗಳು, ಯಾಂತ್ರೀಕೃತ ದೋಣಿಗಳು ಇದ್ದುವು. ಸವಾರರಿಗೆ ಜೀವರಕ್ಷಣಾ ಕವಚ ಸಹಿತ ನುರಿತ ನಾವಿಕರ ಸಹಾಯವೂ ಲಭ್ಯವಿತ್ತು. ದಂಡೆಯಲ್ಲಿ ಬಿಸಿಲ ಮರೆ, ಆರಾಮಾಸನಗಳು, ಕಾಫಿತಿನಿಸುಗಳ ಕ್ಯಾಂಟೀನ್, ಸ್ನಾನ ಶೌಚಾಲಯಗಳನ್ನೂ ಕೊಟ್ಟಿದ್ದರು. ಆದರೆ ಪಶ್ಚಿಮ ಕರಾವಳಿಯಿಂದ ಹೋಗಿದ್ದ ನಮಗೆ ಇದೇನೂ ಆಕರ್ಷಣೆಯೊಡ್ಡಲಿಲ್ಲ. ನಮ್ಮೊಡನೆ ಅಸ್ಸಾಮಿನ ಹಿರಿಯ ಮಹಿಳೆಯರಿಬ್ಬರೂ ಹಿಂದುಳಿದರು. ನಾವು ಉಚಿತ ಆರಾಮಾಸನದಲ್ಲಿ ಕುಳಿತಿದ್ದಂತೆ ಉಳಿದ ನಾಲ್ವರು ಬಾಡಿಗೆ ಪಾಲ್ದಾರಿಕೆಯಲ್ಲಿ ಒಂದು ಯಾಂತ್ರಿಕ ದೋಣಿ ಹಿಡಿದು (ತಲಾ ರೂ ನೂರೈವತ್ತೋ ಇನ್ನೂರೋ ಕೊಟ್ಟಿರಬೇಕು) ಸುಮಾರು ಇಪ್ಪತ್ತು ಮಿನಿಟಿನ ವಿಹಾರ ನಡೆಸಿದರು. ಯಾವುದೋ ತಮಿಳು ಸಿನಿಮಾ ಒಂದರ ಚಿತ್ರೀಕರಣವೂ ಅದೇ ದೋಣಿಗಟ್ಟೆಯಲ್ಲಿ ನಡೆದಿತ್ತು. ರಣಗುಡುವ ಬಿಸಿಲೇ ಆದರೂ ನೀರು ಹಾಯ್ದು ಬರುತ್ತಿದ್ದ ತಂಗಾಳಿ ತೀಡುತ್ತಿದ್ದಂತೆ ನಾನು ಖರ್ಚಿಲ್ಲದ ನೆನಪಿನೋಣಿಯಲ್ಲಿ ತುಸು ತೇಲಿಹೋದೆ.

ಮಂಗಳೂರಿನಿಂದ ಉಡುಪಿಗೆ ಹೋಗುತ್ತಾ ಕೂಳೂರು ಸಂಕ ಕಳೆದದ್ದೇ ಎಡಕ್ಕೊಂದು ಸಾಮಾನ್ಯ ದಾರಿ ತಣ್ಣೀರುಬಾವಿ, ಬೆಂಗ್ರೆಯತ್ತ ಹೋಗುವುದಿತ್ತು. ನಾನು ಹೇಳುವುದು ಸುಮಾರು ಒಂದೂವರೆ ಎರಡು ದಶಕದ ಹಿಂದಿನ ಮಾತು. ಇಂದೂ ದಾರಿಯಿದೆ, ಆದರೆ ಅದು ‘ಅದ್ಭುತ ರಾಷ್ಠ್ರ ನಿರ್ಮಾಣ’ಕ್ಕೆ ಸಹಕಾರಿಯಾಗಿ ಸುವಿಸ್ತಾರವೂ ಸುಂದರವೂ ಆದ ಕಾಂಕ್ರಿಟೀಕರಣಕ್ಕೊಳಪಟ್ಟಿದೆ. ಅದರ ಗಣ್ಯ ಪಾಲುದಾರರ ಪಟ್ಟಿಯಲ್ಲಿ ಕೆಲವನ್ನೇ ಹೆಸರಿಸುವುದಾದರೆ ಅರಣ್ಯ ಮತ್ತು ಬಂದರು ಇಲಾಖೆಗಳ ಅತಿಥಿಗೃಹಗಳು, ಬಾರ್ಜ್ ಮೌಂಟೆಡ್ ವಿದ್ಯುಜ್ಜನಕ (ಬಂದು, ಹೋಗಿಯೂ ಆಗಿದೆ), ಆಯಿಲ್ ಇಂಡಿಯಾದ ದಾಸ್ತಾನು ಕೋಠಿ, ಎಂಸಿಎಫ್ ಎಮ್ಮಾರ್ಪೀಯೆಲ್ ಬೀಯೆಎಸ್ಸೆಫ್‌ನಂಥವರ ‘ಪರಿಸರ ಸ್ನೇಹೀ ಕೊಳಚೆ’ಯನ್ನು ನಿಗೂಢವಾಗಿ ಸಮುದ್ರಕ್ಕೆ ಸುರಿಯುವ ಕೊಳವೆ ಸಾಲುಗಳು ಇತ್ಯಾದಿ ಇವೆ, ಬಿಡಿ. ನಾನು ಹೇಳುವ ಹಿಂದಿನ ಕಾಲದಲ್ಲಿ ಆ ದಾರಿಗಿಳಿದಲ್ಲೇ ಗುರುಪುರ ಹೊಳೆಯಂಚಿನಲ್ಲಿ ನನ್ನ ಹಾರು-ಮಿತ್ರ, ನೆವಿಲ್ ರಾಡ್ರಿಗ್ಸ್ (ಹೆಚ್ಚಿನ ವಿವರಗಳಿಗೆ ಇಲ್ಲೇ ನನ್ನ ಹಿಂದಿನ ಲೇಖನ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ.) ಆತನ ಸೀಮಿತ ಆರ್ಥಿಕ ತಾಕತ್ತಿನಲ್ಲಿ ಒಂದು ಜಲಕ್ರೀಡೆಗಳ ತಾಣ ಶುರು ಮಾಡಿದ್ದ. ಬಹುಶಃ ಅದು ಒಂದು ಮಳೆಗಾಲಕ್ಕೂ ಮೊದಲಿನ ಋತುಮಾನದಲ್ಲಷ್ಟೇ ಚಟುವಟಿಕೆ (ಚಡಪಡಿಕೆ?) ತೋರಿ, ಆತನ ಜೀವನ ಕಟ್ಟಲು ವಿಫಲವಾಗಿ ಮುಳುಗಿ ಹೋಯಿತು.

ಊಪ್ಸ್, ಟಿಪ್ಸ್!
ಮಾಮಲ್ಲಪುರಂ ಪ್ರವಾಸಿ ಪೊಟ್ಟಣದ ಅಪರಾಹ್ನದ ಚಟುವಟಿಕೆಗಳ ಪೀಠಿಕೆಯಾಗಿ ದಾರಿ ಬದಿಯ ಒಂದು ಹೋಟೆಲಿನಲ್ಲಿ ನಮ್ಮನ್ನು ಊಟಕ್ಕೆ ಬಿಟ್ಟರು (ನಮ್ಮದೇ ಆಯ್ಕೆ ಮತ್ತು ವೆಚ್ಚ). ಅದು ತುಸು ಉನ್ನತಮಟ್ಟದ್ದೇ ಇರಬೇಕು, ಗಿರಾಕಿಗಳು ವಿರಳವಾಗಿದ್ದರು. ನಾವಿಬ್ಬರು ನಾಲ್ಕು ಖಾಲಿ ಕುರ್ಚಿಯ ಮೇಜು ಹಿಡಿದೆವು. ಕೆನೆಡಿಯನ್ ಗೆಳೆಯ ಆಂಡ್ರೆ ಕೈ, ಮುಖಗಳಿಗೆ ನೀರು ಹನಿಸಿ ಹೀಗೆ ಬರುತ್ತಿದ್ದವನಿಗೆ ಸಹಜವಾಗಿ ನಮ್ಮಲ್ಲೇ ಇದ್ದ ಕುರ್ಚಿಗೆ ಕೈ ತೋರಿಸಿ ಕರೆದೆ. ಅದು ಆತನ ಸಾಂಪ್ರದಾಯಿಕ ಸಂಸ್ಕಾರದಲ್ಲಿ ‘ಅ ವೆರಿ ಗುಡ್ ಗೆಸ್ಚರ್’ ಆದದ್ದು ನನಗೆ ಆಕಸ್ಮಿಕ. (ಇಸ್ಕಾನ್ ಮಂದಿರದಲ್ಲಿ ಆಂಡ್ರೆ ಇನ್ಯಾವುದೋ ಬಾಗಿಲಿನಲ್ಲಿ ಹೊರಬಂದು ‘ಪರ್ಶಾದ್’ ತಪ್ಪಿಸಿಕೊಂಡಿದ್ದ. ನಾನು ಇನ್ನೂ ಬಾಯಿಗಿಡದೇ ತಂದಿದ್ದ ಪೊಂಗಲ್ ತೋರಿಸಿ, ವಿವರಿಸಿ “ರುಚಿ ನೋಡ್ತೀರಾ”ಂತ ವಿಚಾರಿಸಿದ್ದೆ. ಆತ ಅದನ್ನು ‘ಸೋ ಕೈನ್ಡ್ ಆಫ್ ಯೂ’ ಅಂತ ಅಂಗೈ ಒಡ್ಡಿ, ತಿಂದು ಸಂತಸಪಟ್ಟಿದ್ದ.)

ಹೊಟೆಲಿನ ‘ಪಯ್ಯ’ ಪಕ್ಕಾ ಭಾರತೀಯ, ಇನ್ನೂ ಮುಖ್ಯವಾಗಿ ದಕ್ಷಿಣ ಭಾರತೀಯ ತಿನಿಸುಗಳ ಪಟ್ಟಿ ತೋರಿಸಿದರೂ ನಾವು ಸಾಂಪ್ರದಾಯಿಕ ಎರಡು ಊಟ ಹೇಳಿದೆವು. ನನ್ನ ದಿನದ ‘ಒಳ್ಳೇ ಕಾರ್ಯಗಳ ಪಟ್ಟಿ’ಯಲ್ಲಿ, ಆಂಡ್ರೆಗೆ ಆ ಪಟ್ಟಿಯಿಂದ ‘ತಿನ್ನು/ ತಿನ್ನಬೇಕಿಲ್ಲ’ ಬಿಟ್ಟಿ ಸಲಹೆ ಕೊಡುವ ನಮೂದು ಇನ್ನೇನು ಸೇರಿಸಬೇಕೆಂದಿದ್ದೆ. ಅಷ್ಟರಲ್ಲಿ ನನ್ನ ‘ನವಿಲೂರ ಚೆಲುವೆ’, ನನ್ನ ವರ್ತನೆಗಳ ಜವಾಬ್ದಾರಿಯನ್ನು ಸ್ವಾಂಗೀಕರಿಸಿಕೊಂಡು ‘ಸುಮ್ಮಗಿರಿ ಎಂದಳಾಕೆ.’ ಆಂಡ್ರೆ ಎರಡು ಚಪಾತಿ, ನಾಲ್ಕಕ್ಕಾಗುವಷ್ಟು ವೆಜಿಟೆಬಲ್ ಕರ್ರಿ ಮತ್ತು ಒಂದು ಬಾಟಲಿ ನೀರು ತರಿಸಿಕೊಂಡ. ಇಸುಮುಳ್ಳು, ಚಮಚ, ಆಗೀಗ ಬೆರಳು ಪ್ರಯೋಗಿಸಿ ಹೇಗೋ ಚಪಾತಿಗೆ ಕರ್ರೀ ತೋರಿಸಿ, ನೀರು ಖಾಲಿ ಮಾಡಿ, ಅರ್ಧಕ್ಕರ್ಧ ಕರ್ರೀ (ತಿನ್ನಲಾಗದೇ) ಹಾಳುಬಿಟ್ಟ. ಇನ್ನೇನು ನಂನಮ್ಮ ತಿನಿಸುಗಳ ಬಿಲ್ಲ್ ಬರಬೇಕೆನ್ನುವ ವೇಳೆಗೆ ಆತ ‘ಇಫ್ ಯೂ ಡೋಂಟ್ ಮೈಂಡ್’ನೊಡನೆ ಟಿಪ್ಸ್ ಕೊಡುವ ಬಗ್ಗೆ ನನ್ನ ಅಭಿಪ್ರಾಯ ಕೇಳಿದ. ಮುತ್ತುಕಾಡು ದೋಣಿ ಸವಾರಿಯ ಕೊನೆಯಲ್ಲಿ ಹಿಂಬಾಲಿಸಿದ ನಾವಿಕ ಈತನ ಬಳಿ ಹಲ್ಲುಗಿಂಜುವುದು ನಾವು ಕಂಡಿದ್ದೆವು. ಅನಾವಶ್ಯಕವಾಗಿ ನಮ್ಮ ಪ್ರವಾಸೀ ನಿರ್ವಾಹಕ ಆಂಡ್ರೆಗೆ ಅದರ ‘ಅರ್ಥ’ ವಿವರಿಸಿದ್ದ. ಈತ ಸ್ಥಳೀಯ ಮರ್ಯಾದೆಗೇನಾದರೂ ಊನವಾದರೆ ಎಂದು ಹೆದರಿಯೋ ಏನೋ (ಸವಾರಿಯ ನಿಜ ಹಾಸಲನ್ನು ಈತ ನಿರ್ವಾಹಕನಲ್ಲಿ ಮೊದಲೇ ಕೊಟ್ಟಾಗಿತ್ತು. ಈಗ ಅದರ ಮೇಲೆ) ನೂರು ರೂಪಾಯಿ ಕೊಡುವುದು ಕಂಡು ನಾವು ಸಂಕಟಪಟ್ಟುಕೊಂಡಿದ್ದೆವು. ಬಹುಶಃ ಆತನಿಗೆ ಅದು ಮನಸ್ಸಿನಲ್ಲಿ ಕಾಡುತ್ತಿದ್ದಂತೆ, ಬರಲಿರುವ ಪಯ್ಯನನ್ನು ಎದುರಿಸಲು ಸಜ್ಜಾಗಬೇಕಿತ್ತು. ನಾನು ಟಿಪ್ಸ್ ಒಪ್ಪಿದವನೂ ಅಲ್ಲ, ಕೊಡುವವನೂ ಅಲ್ಲ ಎಂದೇ ಹೇಳಿದೆ. ಆತನಿಗೆ ಸಹಜವಾಗಿ ಭಾರೀ ಸಂತೋಷವೇ ಆಗಿರಬೇಕು. ಹೊಟೆಲಲ್ಲಿ ಪಯ್ಯ ‘ಮರ್ಯಾದೆ ಹೊದಿಕೆ’ಯೊಳಗೆ ಬಿಲ್ ಪಾವತಿಯನಂತರದ ಚಿಲ್ಲರೆ ತಂದಿಟ್ಟಾಗ ಆಂಡ್ರೆ ಎರಡೋ ಮೂರೋ ರೂಪಾಯಿ ನಾಣ್ಯಗಳ ಸಮೇತ ಎಲ್ಲವನ್ನೂ ತನ್ನ ಕಿಸೆ ಸೇರಿಸಿದಾಗ ನಮ್ಮೆಲ್ಲರಲ್ಲೂ ಒಂದು ಸಣ್ಣ ನಗೆ ಇತ್ತು.

ಮುಂದೆ ಬೆಂಗಳೂರಿಸಿದಲ್ಲಿ ಅಭಯನೊಡನೆ ಈ ಮಾತು ಚರ್ಚೆಗೆ ಬಂದಾಗ ಅವನ ಮೊದಲ ಜರ್ಮನಿ ಯಾತ್ರೆಯ ನೆನಪೊಂದನ್ನು ಹಂಚಿಕೊಂಡ. ಇವರು ಮೂರುನಾಲ್ಕು ಮಂದಿ ಪುಣೆ ಸಿನಿಮಾ ಶಾಲೆಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮದಲ್ಲಿ, ಅಂದರೆ ಬಹಳ ಬಡ-ಬಜೆಟ್ಟಿನ ಅಲ್ಲಿ ಕೆಲವೇ ದಿನಗಳ ಭೇಟಿ ಮತ್ತು ಚಟುವಟಿಕೆ ನಡೆಸುತ್ತಿದ್ದರು. ಅಲ್ಲಿನ ಯಾವುದೋ ಒಂದು ಪ್ರತಿಷ್ಠಿತ ಬಾರಿನ ಒಳಾಂಗಣ ನೋಡುವ ಕುತೂಹಲ ಇವರದು. ಹಾಗೆಂದು ಅಲ್ಲಿನ ಉತ್ತಮವನ್ನು ರುಚಿಸುವ ಬಲ ಇವರ ಕಿಸೆಗೆ ಇರಲಿಲ್ಲ. ಭಂಡ ಧೈರ್ಯ ಮತ್ತು ಪುಟ್ಟ ತಂತ್ರ ಬೆರೆಸಿ ಇವರು ಹೋಗಿ ಕುಳಿತರು. ಇಲ್ಲೆಲ್ಲ ಹೋಟೆಲಲ್ಲಿ ಮಾಣಿ ನೀರಿನ ಲೋಟ ತಂದು ಮೇಜಿನ ಮೇಲೆ ಕುಕ್ಕಿದಂತೇ ಅಲ್ಲಿನ ಮಾಣಿ ಪುಟ್ಟ ಬೋಗುಣಿ ತುಂಬ ಕುರುಕಲೇನೋ ತಂದಿಟ್ಟು, ಮೆನು ಕೊಟ್ಟು ಹಿಂದೆ ಸರಿದನಂತೆ. ಆ ಬೋಗುಣಿಯ ತಿನಿಸು ಉಚಿತ ಮತ್ತು ಖಾಲಿಯಾದಂತೇ ತುಂಬುವುದು ಕ್ರಮ ಎಂದು ಇವರು ಮೊದಲೇ ಕೇಳಿ ತಿಳಿದುಕೊಂಡಿದ್ದರು. ಬರಗೇಡಿಗಳು ಚುರುಕಾಗಿ ಎರಡು ಮೂರು ಬಾರಿ ಬೋಗುಣಿ ಖಾಲಿ ಮಾಡಿದಂತೆ ‘ಮಾಣಿ’ ನಿರ್ಭಾವದಿಂದ (ಒಳಗಿನೆಲ್ಲ ಭಾವಕ್ಕೆ ಮಾತು ಕೊಟ್ಟವರುಂಟೇ ಶ್ಮಶ್ರುಕೂರ್ಚೇಶ್ವರಾ!) ಮತ್ತದನ್ನು ತುಂಬಿಟ್ಟ. ಕೊನೆಯಲ್ಲಿ ಕಣ್ಕಟ್ಟಿಗೆ ಅತ್ಯಂತ ಕಡಿಮೆ ಬೆಲೆಯ ಏನೋ ಪಾನೀಯ ಇವರು ತರಿಸಿಕೊಂಡು ಮುಗಿಸಿದ್ದೂ ಆಯಿತು, ಬಿಲ್ಲೂ ಬಂತು. ಅಲ್ಲೆಲ್ಲ ಟಿಪ್ಸು ಕಡ್ಡಾಯವಾಗಿ ಮತ್ತು ಬಿಲ್ಲಿನ ಭಾಗವಾಗಿಯೇ ರೂಢಿಯಲ್ಲಿದೆಯೆಂದೂ ಇವರು ಕೇಳಿ ತಿಳಿದಿದ್ದರು. ನೋಡ್ತಾರೆ, ಪಾನೀಯದ ಬೆಲೆಯ ಕೊನೆಯಲ್ಲಿ ಟಿಪ್ಸ್ ಅಂಕಣವಿತ್ತು. ಆದರೆ ಗಿರಾಕಿಯ ಔದಾರ್ಯವನ್ನು ಮಿತಿಗೊಳಿಸಲಿಚ್ಛಿಸದೆ ಅದನ್ನೂ ಅಂತಿಮ ಮೊತ್ತವನ್ನೂ ಖಾಲಿ ಉಳಿಸಿದ್ದರು. ಇವರು ಕೈಗಿಡ್ಡ ಮಾಡಿ ಬಿಲ್ ಮೊತ್ತದೊಡನೆ ಏನೋ ಆಣೆ, ಪೈಸೆ ಇಟ್ಟು ಕೊಟ್ಟರಂತೆ. ಮಾಣಿ ಮೊದಲು ಬಿಲ್ ಮೊತ್ತ ಮಾತ್ರ ಕಿಸೆ ಸೇರಿಸಿದ. ಮತ್ತೆ ಮಾತಿಲ್ಲ, ಗೊಣಗಿಲ್ಲದೆ ಇವರ ಟಿಪ್ಸ್ ಹಣಕ್ಕೆ ತನ್ನ ಕಿಸೆಯಿಂದ ಒಂದು ನೋಟು ಸೇರಿಸಿ ‘ಮರ್ಯಾದೆ ಹೊದಿಕೆ’ಯೊಳಗಿಟ್ಟು ಇವರೆದುರೇ ಇಟ್ಟು ನಡೆದುಬಿಟ್ಟ. ಒಮ್ಮೆಗೆ ಚಪ್ಪಲಿಯಲ್ಲೇ ಕಪಾಳಮೋಕ್ಷ ಮಾಡಿಸಿಕೊಂಡಂತಾಯಿತು. ಮತ್ತೆ ಗುರುತುಪರಿಚಯ ಇಲ್ಲದ ದೇಶದಲ್ಲಿ ಮರ್ಯಾದೆಗಾಗಿ ಹಣಕಳೆದುಕೊಳ್ಳಲಿಚ್ಛಿಸದೆ, ಅದನ್ನಲ್ಲೇ ಬಿಟ್ಟು ಮಳ್ಳಗೆ ಹೊರ ಜಾರಿದ್ದರು. ಆಗ ಇವರ ಮುಖದಲ್ಲಿ ಸುಳಿದ ನಗೆಗೆ ರೋದನದ ಧ್ವನಿಯಿತ್ತಂತೆ!

ಮಹಾಬಲಿಪುರಂ
ರಾಮೇಶ್ವರ, ಮಧುರೆಗಳ ಪಟ್ಟಿಯಲ್ಲೇ ಮಹಾಬಲಿಪುರಂ ಕೇಳಿದ್ದೆನಾದ್ದರಿಂದ ಇನ್ನೊಂದೇ ತೀರ್ಥಕ್ಷೇತ್ರವಿರಬಹುದೆಂದು ಭಾವಿಸಿದ್ದೆ. ಆದರೆ ಸುಮಾರು ಏಳನೇ ಶತಮಾನದಲ್ಲಿ ಪಲ್ಲವರ ಬಂದರು ನಗರಿಯಾಗಿ ವಿಕಸಿಸಿದ ಊರಿದು. ಆದರೆ ನಮ್ಮ ಪ್ರವಾಸೀ ಪಟ್ಟಿಯಲ್ಲಿ ಕಾಣಿಸಿದಂತೆ ಅದು ನೇರ ಕಡಲಕರೆಯಲ್ಲೇ ಪ್ರಕಟಗೊಳ್ಳುವ, ಪ್ರಾಕೃತಿಕ ಸವಕಳಿಯಲ್ಲಿ ತೀವ್ರ ಶಿಥಿಲಗೊಂಡ ಶಿಲಾರಚನೆಗಳ ಬೀಡು. ಇನ್ನೊಂದು ವಿಶೇಷ, ಇಲ್ಲಿ ಕಾಣುವ ಬಹುತೇಕ ಮುಖ್ಯ ಕಟ್ಟಡಗಳು, ಬಿಂಬಗಳು ಸ್ಥಳದಲ್ಲೇ ಇದ್ದಿರಬಹುದಾದ ಏಕ ಶಿಲಾಸ್ತರವನ್ನೇ ಕೆತ್ತಿ ಮೂಡಿಸಿದವು. (ಆಯ, ಅನುಕೂಲಕ್ಕಾಗಿ ಮನುಷ್ಯ ನಿರ್ಮಿತ ಅಡಿಪಾಯ, ಯೋಜನಾನುಸಾರ ವಿಕಸಿಸಿದ ಭವನಗಳಲ್ಲ.) ಕೆಲವು ಗೋಡೆ, ಮಂಟಪಗಳಲ್ಲಿ ಸ್ವಲ್ಪ ಸ್ಥಳಾಂತರಿಸಿದ ಬಂಡೆ ತುಣುಕುಗಳು ಇಲ್ಲದಿಲ್ಲ. ರಚನೆಗಳಲ್ಲಿರುವ ವೈವಿಧ್ಯ ನೋಡುವಾಗ ಎಲ್ಲವೂ ಬರಿಯ ದೇವ ಸಂಬಂಧೀ ಇರಲಾರವೆಂದೂ ಕಾಣುತ್ತದೆ. ಮೂಲದಲ್ಲಿ ಇವುಗಳ ನವಿರು, ಆರಾಧನಾ ಮೌಲ್ಯ ಏನಿತ್ತೋ ತಿಳಿದಿಲ್ಲ. ಇಂದು ಕೆಲವೆಡೆಗಳಲ್ಲಿ ತೀರಾ ಅವಸರದ ರಚನೆಗಳಂತೆಯೂ ಅಪೂರ್ಣ ಸ್ಥಿತಿಯಲ್ಲೇ ಕೈಬಿಟ್ಟಂತೆಯೂ ತೋರುತ್ತವೆ. ಅದೃಷ್ಟವಶಾತ್ ಎಲ್ಲೂ ಮತೀಯ ಆಚಾರಗಳ (ಸಹಜವಾಗಿ ಜೀರ್ಣೋದ್ಧಾರಗಳ) ಸುಳಿಯಲ್ಲಿ ಬಿದ್ದದ್ದು ಕಾಣಲಿಲ್ಲ. ಪ್ರಾಚ್ಯ ಇಲಾಖೆ ಒಂದಷ್ಟು ಬೇಲಿ, ಹುಲ್ಲ ಹಾಸು ಮಾಡಿ ನಿಜ ರಕ್ಷಣೆಗಿಂತಲೂ ಪ್ರವಾಸೀ ‘ಸೌಕರ್ಯ’, ಪ್ರವೇಶಧನ ಸಂಗ್ರಹವೇ ಮೊದಲಾದ ತೋರಿಕೆಯ ವ್ಯವಸ್ಥೆಯನ್ನಷ್ಟು ಮಾಡಿ ಸೋಮಾರಿಗಳಿಗೆ ‘ಉದ್ಯೋಗ ನಿರ್ಮಾಣ’ ಮಾಡಿರುವುದು ಕಾಣುತ್ತದೆ.

ನನ್ನ ಮಟ್ಟಿಗೆ ಮಹಾಬಲಿಪುರಂ ದಕ್ಕಿಸಿಕೊಂಡ ಪ್ರಚಾರಬಲವೇ ದೊಡ್ಡದು. ಪಂಚರಥ, ಅರ್ಜುನನ ವ್ರತ, ಕೃಷ್ಣನ ಬೆಣ್ಣೆಮುದ್ದೆ, ಹುಲಿ ಗವಿ ಮುಂತಾದವು ಕೇವಲ ಪ್ರವಾಸೋದ್ದಿಮೆ ಹೆಸರಿಸಿಕೊಳ್ಳುವ ‘ಐಟಮ್ಮು’ಗಳು ಮಾತ್ರ. ಸಾಮಾನ್ಯ ಪ್ರವಾಸಿ ಅದನ್ನೇ ಕುರಿತು ಯಾತ್ರೆ ಹೂಡುವ ಅಗತ್ಯ ಮತ್ತು ಅಲ್ಲಿ ವಿರಾಮದಲ್ಲಿ ವಿಹರಿಸಿ ಗ್ರಹಿಸಬಹುದಾದ ವಿಶೇಷ ಏನೂ ಇಲ್ಲ. ಅದೇ ನಮ್ಮ ಹಂಪಿ, ನಿಜಕ್ಕೂ ಜಾಗತಿಕ ಮಟ್ಟದ್ದು (ನಾನೇನೂ ಹೊಸದಾಗಿ ಹೇಳಬೇಕಿಲ್ಲ). ಹಾಗೇ ತೀರಾ ಅವಗಣನೆಗೆ ಒಳಗಾದ ನಮ್ಮ ತೀರ್ಥಳ್ಳಿಯ ಸಮೀಪದ ಕೌಲೇದುರ್ಗಕ್ಕೆ ಹೋಲಿಸಿದರೆ ಅಜಗಜಾಂತರ; ಮಹಾಬಲಿಪುರಂ ಅಜ ದುರ್ಗ ಗಜ. ಆದರೆ ಪ್ರಚಾರ ಮತ್ತು ಕನಿಷ್ಠ ಸೌಕರ್ಯದ ಮಟ್ಟದಲ್ಲಿ ತದ್ವಿರುದ್ಧ ಎನ್ನುವುದು ತೀರಾ ವಿಷಾದದ ಸಂಗತಿ.

ಮಹಾಬಲಿಪುರಂ ದಾರಿಬದಿಯಲ್ಲಿ ಅಸಂಖ್ಯ ಆಧುನಿಕ ಶಿಲಾ ಕೆತ್ತನೆಗಳ ಕಾರ್ಯಾಗಾರಗಳು, ಮಾರಾಟ ಮಳಿಗೆಗಳೂ ಕಾಣಿಸುತ್ತವೆ. (ಅಷ್ಟೇ ಏಕೆ, ಹಾದುಹೋಗುವಾಗ ಭಾರೀ ವಿಸ್ತಾರದ ವಿಗ್ರಹರಚನೆಯ ಮಹಾಶಿಕ್ಷಣ ಸಂಸ್ಥೆಯೊಂದರ ಬೋರ್ಡೂ ವಠಾರವನ್ನೂ ಕಂಡೆವು.) ನಿರ್ವಾಹಕ ನಮ್ಮ ಹಿತರಕ್ಷಕನಂತೆ ಸ್ಮರಣಿಕೆ ಖರೀದಿಸಲು ಯಾವುದೋ ಎರಡು ಖಾಸಗಿ ಮಳಿಗೆಗಳೆದುರು ಬಸು ನಿಲ್ಲಿಸಿ ಸಮಯವನ್ನೂ ಕೊಟ್ಟ. ಮಂಗಳೂರಿನಲ್ಲಿ ‘ತಮಿಳುನಾಡಿನಿಂದ’ ಎಂದೇ ಕೆಲವರು ಬೀದಿಬೀದಿಗಳಲ್ಲಿ, ನೂರು ರೂಪಾಯಿಗೊಂದರಂತೆ ಮಾರಿಕೊಂಡು ಬಂದ ಕಲ್ಲಿನ ಕುಟ್ಟಣಿ ಇಲ್ಲಿ ಕಂಡು ದೇವಕಿಗೆ ಕುತೂಹಲ ಮೂಡಿತು. ಆದರೆ ಅದಕ್ಕೆ ಇಲ್ಲೂ ಬೆಲೆ ನೂರು ರೂಪಾಯಿ ಎಂದು ತಿಳಿದಾಗ ಜಾಣ್ಣುಡಿ ನೆನಪಾಯ್ತು – ಬೇರೆಯವರಲ್ಲಿ ಮೋಸಹೋಗಬೇಡಿ, ನಮ್ಮಲ್ಲಿಗೇ ಬನ್ನಿ! ದೇವಕಿ ಅದನ್ನು ಅಲ್ಲೇ ಉಳಿದವರಿಗೂ ತಿಳಿಸಿಬಿಟ್ಟಳು. ಉತ್ಸಾಹದಲ್ಲೇ ಆಯ್ಕೆಗಿಳಿದಿದ್ದ ಇತರ ಸಹಪಯಣಿಗರೂ ದುರ್ದಾನ ತೆಗೆದುಕೊಂಡವರಂತೆ ಕೈಚೆಲ್ಲಿ ಬಸ್ಸಿಗೆ ಮರಳಿದರು.

ಬಸ್ಸು ಸಮೀಪದ ಪೆಟ್ರೋಲ್ ಬಂಕಿಗೆ ಡೀಸೆಲ್ ಹಾಕಿಸಿಕೊಳ್ಳಲು ನುಗ್ಗಿತು. ನಿರ್ವಾಹಕ ಯಾತ್ರಾ ಪೊಟ್ಟಣದ ಕೊನೆಯ ಔಪಚಾರಿಕ ಮಾತುಗಳಿಗೆ ನಮ್ಮೆದುರು ನಿಂತಿದ್ದ. ಇದ್ದಕ್ಕಿದ್ದಂತೆ ನಮ್ಮಲ್ಲೊಬ್ಬರಿಗೆ ಘೋಷಿಸುವ ಉತ್ಸಾಹ ಬಂತು. “Now you are going to visit a petrol bunk. Here diesel per litre is Rs. Fifty for Indians and Rs five hundred for foreigners” ಆಂಡ್ರೆ ಸೇರಿದಂತೆ ಎಲ್ಲರಿಗೂ ಮನಸ್ವೀ ನಗೆಯುಕ್ಕಿತು. ನಿರ್ವಾಹಕನೂ ಅನಿಯಂತ್ರಿತ ನಗೆಯೊಡನೇ ಆತನ ಮಾತುಗಳನ್ನಾಡಿದ. ‘ಯಾತ್ರಾ ಪೊಟ್ಟಣದ ಕೊನೆಯ ಕಲಾಪ ವಿಜಿಪಿ ಬೀಚ್ ಭೇಟಿ – ಒಂದು ಖಾಸಗಿ ಕಡಲ ಕಿನಾರೆ!’ ಸಹಜವಾಗಿದ್ದ ದುಬಾರಿ ಪ್ರವೇಶ ದರ ನಾವೇ ಕೊಡಬೇಕು ಎಂದೂ ತಿಳಿಯಿತು. ಹೊಳೆ ನೀರಿಗೆ ‘ದೊಣ್ಣೆನಾಯ್ಕನ ಅಪ್ಪಣೆಯೇ’ ಎಂದು ಗೇಲಿಮಾಡುವ ಸ್ಥಿತಿ ನಮ್ಮದು. ಉಳಿದವರೂ ಧರ್ಮಕ್ಕೆ ಬಿದ್ದ ಸಮುದ್ರವನ್ನು ಯಾರಿಗೋ ದುಡ್ಡು ಕೊಟ್ಟು, ನಾಲ್ಕು ಕಟ್ಟೆಗಳ ನಡುವೆ ನೋಡುವ ಉಮೇದು ತೋರಲಿಲ್ಲ. ಹಗಲು ಬಾಡಿದಂತೆ ನಾವು ಚೆನ್ನೈಗೆ ಮರಳಿದೆವು.

(ಮುಂದಿನ ಕಂತು ತಿರುಪತಿಗೆ)