(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ)

ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು.

ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ ಇತ್ಯಾದಿ ಭೂಮಿಯ ಆಂತರಿಕ ಬಲಗಳು. ಕೊನೆಯವೆರಡು ಹೇಗೂ ಚಂದ್ರನಲ್ಲಿಲ್ಲ. ಜ್ವಾಲಾಮುಖಿಗಳ ಅಸ್ತಿತ್ವದ ಬಗ್ಗೆ ಸ್ಪಷ್ಟ ಪುರಾವೆ ಲಭಿಸಿಲ್ಲ. ಎಂದರೆ ಚಂದ್ರಗರ್ಭ ಸಹ ಘನೀಭವಿಸಿ ಹೋಗಿದೆಯೇ (ಭೂಮಿಯಲ್ಲಿ ಹೀಗಾಗಿಲ್ಲವಷ್ಟೆ?) ಅಥವಾ ಚಂದ್ರನ ತೊಗಟೆ ಸಾಕಷ್ಟು ದಪ್ಪ ಮತ್ತು ಗಡಸಾಗಿದ್ದು ಸುಪ್ತ ಜ್ವಾಲಾಮುಖಿಗಳ ಪ್ರಕಟಣೆಯನ್ನು ಅದುಮಿಟ್ಟಿದೆಯೇ ಉತ್ತರ ಖಚಿತವಿಲ್ಲ. ಚಂದ್ರನ ಮೇಲೆ ಬಾಹ್ಯ ಬಲಗಳ ಪ್ರಹಾರ ಭೂಮಿಯ ಮೇಲೆ ಆಗುವುದಕ್ಕಿಂತ ಅದೆಷ್ಟೊ ಪಾಲು ಹೆಚ್ಚು. ಒಂದನೆಯ ಹೊಡೆತ ಸೂರ್ಯನಿಂದ. ಸೌರಶಕ್ತಿ (ಎಂದರೆ ವಿದ್ಯುತ್ಕಾಂತ ತರಂಗಗಳ ಸಂಕೀರ್ಣ ಮೊತ್ತ) ಅವ್ಯಾಹತವಾಗಿ ಆಕಾಶದ ಎಲ್ಲೆಡೆಗೆ ಚೆಲ್ಲುತ್ತಿದೆ. ಆದರೆ ಭೂಮಿಯ ವಾಯುಮಂಡಲ ಇದರ ಎಷ್ಟೋ ಅಂಶಗಳನ್ನು ತಡೆದೋ ಹೀರಿಯೋ ಜರಡಿ ಕೆಲಸ ಮಾಡಿ ಹಿತಮಿತವೆನ್ನುವಷ್ಟನ್ನು ಮಾತ್ರ ನೆಲದೆಡೆಗೆ ಹರಿಯ ಬಿಡುವುದು. ಚಂದ್ರನಲ್ಲಿ ವಾಯುಮಂಡಲದ ರಕ್ಷಾ ಕವಚ ಇಲ್ಲದಿರುವುದರಿಂದ ಹಗಲಿನ ಭಾಗ ಸೌರಶಕ್ತಿಯ ಪೂರ್ಣ ಪ್ರವಾಹದಿಂದ ತೊಯ್ದಿರುತ್ತದೆ. ಅದೇ ವೇಳೆಯಲ್ಲಿ ರಾತ್ರಿಯ ಭಾಗಕ್ಕೆ ಉಪವಾಸ. ಇದರಿಂದ ಚಂದ್ರತಲದ ಕಲ್ಲು ಮಣ್ಣು ಲೋಹಾಂಶಗಳ ಮೇಲೆ ಆಗುವ ಪರಿಣಾಮಗಳು ತೀವ್ರ ಮತ್ತು ಭೂಮಿಯ ಮೇಲಿನ ಪರಿಣಾಮಗಳಿಗಿಂತ ಬೇರೆ. ಎರಡನೆಯ ಹೊಡೆತ ಉಲ್ಕೆಗಳಿಂದ. ಭೂಮಿಗೆ ವಾಯು ಕವಚವಿರುವುದರಿಂದ ನಮಗೆ ಉಲ್ಕೆಗಳಿಂದ ರಕ್ಷೆ ಇದೆ. ಆದರೆ ಚಂದ್ರ ತಲದ ಮೇಲೆ ಚಿಕ್ಕ ದೊಡ್ಡ ಉಲ್ಕೆಗಳ ಅವಿಚ್ಛಿನ್ನ ಪ್ರಹಾರ ನಡೆದಿರುವುದು. ಚಂದ್ರನ ಹೊರಮೈ ಮೇಲೆ ಕಾಣುವ ಸಿಡುಬು ಕಲೆಗಳಂಥ ಚಿಕ್ಕ ಗುಳಿಗಳು, ಕೂಪಗಳು ಇಂಥ ಬಡಿತಗಳಿಂದಾಗಿರಬಹುದು. ಗಡಸು ತೊಗಟೆಯ ಮೇಲೆ ಈ ತರದ ಗಾಯಗಳಾಗುವುದು ಸಾಧ್ಯವಿಲ್ಲ; ತೊಗಟೆ ಮೆದುವಾಗಿದ್ದಾಗ ಇವು ಆಗಿರಬಹುದು. ಆದ್ದರಿಂದ ಗುಳಿಗಳ ಕೂಪಗಳ ರಚನೆ, ಪ್ರಾಯ ಮುಂತಾದವುಗಳ ವಿಶ್ಲೇಷಣೆ ಚಂದ್ರನ ರಚನೆಯನ್ನು ವಿವರಿಸಬಹುದೆಂಬ ನಿರೀಕ್ಷೆ ಇದೆ. ಕೂಪ ಮತ್ತು ಗುಳಿಗಳು ಚಂದ್ರನ ಜ್ವಾಲಾಮುಖಿಗಳ ಸ್ಫೋಟನೆಯಿಂದಲೂ ಆಗಿರಬಹುದೆಂದು ಕೆಲವರ ಮತ. ಹಿಂದೊಮ್ಮೆ ಕ್ರಿಯಾಪಟುಗಳಾಗಿದ್ದ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಆಕಾರ ರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂದು ಅವರ ವಾದ. ಈ ಕೂಪಗಳ ಗಾತ್ರ ರೂಪ ಬದಲಾದದ್ದನ್ನು ಗಮನಿಸಲಾಗಿದೆ. ಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕೆಲವು ಕೂಪಗಳು ಸ್ವಯಂ ಪ್ರಭೆ ಬೀರಿವೆ. ಅವುಗಳ ಒಳಗೆ ಇರುವ ಲೋಹಾಂಶಗಳ ವಿಶ್ಲೇಷಣೆ ಸಾಕಷ್ಟು ಆದ ಮೇಲೆ ಇದರ ಕಾರಣ ತಿಳಿಯಬಹುದು.

ಬೈಲಿ ಎಂಬ ಹೆಸರಿನ ಕೂಪದ ವ್ಯಾಸ ೨೮೮ ಕಿಮೀ. ಕ್ಲೇವಿಯಸ್ ಕೂಪದ ವ್ಯಾಸ ೨೧೦ ಕಿಮೀ. ಚಂದ್ರನ ಭೂಮಿಯೆಡೆಗೆ ತಿರುಗಿರುವ ಮುಖದ ಮೇಲಿರುವ ಅತಿ ದೊಡ್ಡ ಎರಡು ಕೂಪಗಳಿವು. ೧ ಕಿಮೀಗಿಂತ ಹೆಚ್ಚು ಉದ್ದದ ವ್ಯಾಸಗಳಿರುವ ಕೂಪಗಳ ಸಂಖ್ಯೆ ೩,೦೦,೦೦೦ದಷ್ಟೇ ಇರಬಹುದೆಂದು ಅಂದಾಜು. ಕೂಪಗಳ ತಳಭಾಗ ಮಟ್ಟವಾಗಿರುವುದೂ ಇದೆ, ಪರ್ವತಶ್ರೇಣಿಗಳಿಂದ ಆವೃತವಾಗಿರುವುದೂ ಇದೆ. ಎತ್ತರದಲ್ಲಿ ೨೬,೦೦೦ ಅಡಿಗಳನ್ನು (ಮೌಂಟ್ ಎವರೆಸ್ಟ್ ಎತ್ತರ ೨೯೦೦೨ ಅಡಿಗಳು) ಮೀರುವ ಪರ್ವತಗಳು ಚಂದ್ರನಲ್ಲಿವೆ. ಆದರೆ ಗಾಳಿ ನೀರು ಹವೆಗಳ ಸವೆತವಿಲ್ಲದೆ ಈ ಪರ್ವತಗಳ ಬದಿಗಳು ನಯವಾಗಿಲ್ಲ.

ಚಂದ್ರನ ಹೊರಮೈಯಲ್ಲಿ ಗಮನಿಸಬೇಕಾದ ಇತರ ವಿಭಾಗಳು ಸಮುದ್ರಗಳು, ಕಣಿವೆಗಳು ಮತ್ತು ಸಮತಟ್ಟು ಪ್ರದೇಶಗಳು. ಭೂಮಿಯಿಂದ ವೀಕ್ಷಿಸಿದ ವಿಜ್ಞಾನಿಗಳಿಗೆ ಆಳವಾದ ಪ್ರದೇಶಗಳಲ್ಲಿ ನೀರಿನ ರಾಶಿಯೇ ಕಂಡಿತು. (ಕಲ್ಪನೆಯ ಒರತೆ ತುಂಬಿರಬಹುದು!) ಆದ್ದರಿಂದ ಅವು ಸಮುದ್ರಗಳಾದುವು. ಪರ್ವತಗಳ ಬದಿಗಳಲ್ಲಿ ಕಣಿವೆಗಳನ್ನು ಗುರುತಿಸಿದರು. ಯಾವ ಏರು ತಗ್ಗೂ ಕೂಪಗಳೂ ಇಲ್ಲದ ಭಾಗ ಸಮತಟ್ಟು ಪ್ರದೇಶವಾಯಿತು. ಇಂಥ ಅಭ್ಯಾಸಗಳ ಫಲಿತಾಂಶವಾಗಿ ಚಂದ್ರ ತಲದ ನಕ್ಷೆ (ಮ್ಯಾಪ್) ಸಿದ್ಧಪಡಿಸಲಾಗಿದೆ. ಚಂದ್ರನ ಸಮುದ್ರಗಳು ಬರಡು ಆಳಗಳೆಂದು ಇಂದು ತಿಳಿದಿದ್ದರೂ ಸಮುದ್ರ (ಒಣ ಎಂದು ಬೇಕಾದರೆ ಪೂರ್ವ ಪ್ರತ್ಯಯ ಸೇರಿಸಿ!) ಎಂಬ ಪದಪ್ರಯೋಗ ಮಾತ್ರ ನೆಲೆ ನಿಂತಿದೆ. ಚಂದ್ರನ ಪರ್ವತ ಶ್ರೇಣಿಗಳಲ್ಲಿ ಅಪೆನೈನ್ ಒಂದು. ಹ್ಯಾಡ್ಲೇ (ಎಂಬುವನ ಹೆಸರು) ರಿಲ್ ಅಥವಾ ಕಣಿವೆ ಈ ಪರ್ವತ ತಪ್ಪಲಿನಲ್ಲಿ ಎದ್ದು ತೋರುವ ಒಂದು ಉದ್ದ ಕಣಿವೆ (ಬಿರುಕು). ಸರಿಸುಮಾರು ಒಂದೇ ದಪ್ಪದ ನಳಿಗೆ ಅಡ್ಡಾದಿಡ್ಡಿ ಹರಿದಂತೆ ಇದರ ವ್ಯಾಪ್ತಿ. ಪರ್ವತದಿಂದ ತೊಡಗಿ ಪಕ್ಕದ ಸಮುದ್ರದವರೆಗೆ ಹಬ್ಬಿದೆ. ಆದ್ದರಿಂದ ಹ್ಯಾಡ್ಲೇ ಕಣಿವೆ ಒಂದು ನದಿಯ ಪಾತ್ರವಾಗಿರಬಹುದೇ? ಈ ವಲಯದ ಛಾಯಾ ಚಿತ್ರಗಳನ್ನು ಚಂದ್ರ ಕಕ್ಷೆಯಲ್ಲಿ ಆಕಾಶ ನೌಕೆಗಳು ಸಾಗುತ್ತಿದ್ದಾಗ ಸಮೀಪದಿಂದ ತೆಗೆಯಲಾಗಿದೆ. (ಅಲ್ಲಿಗೆ ಇಳಿದು ವಸ್ತು ಸಂಗ್ರಹ ಮಾಡಿ ಪ್ರಯೋಗ ನಡೆಸುವ ಏರ್ಪಾಡುಗಳು ಇನ್ನು ಮುಂದಿನ ‘ಮಾನವ, ಚಂದ್ರನ ಮೇಲೆ’ ಯೋಜನೆಗಳಿಂದ ಆಗಬೇಕಷ್ಟೆ). ಇವುಗಳ ಪರಿಶೀಲನೆಯಿಂದ ಈಗ ತಿಳಿಯುವುದಿಷ್ಟು. ಹ್ಯಾಡ್ಲೇ ಕಣಿವೆಯ ಎರಡೂ ಪಕ್ಕಗಳ ಗೋಡೆಗಳಿಂದ ಹೊಸತಾಗಿ ಕಲ್ಲುಗಳು ಉರುಳಿರುವ ಗಾಯಗಳನ್ನು ಗುರುತಿಸಲಾಗಿದೆ; ಈ ಕಣಿವೆ ಒಂದು ಸಮುದ್ರದ ತಳವನ್ನು ಸೇರಿ ಅಲ್ಲಿಯೂ ಕೊರೆದುಕೊಂಡು ಮುಂದೆ ಹೋಗಿದೆ. ಆದ್ದರಿಂದ ಇದರ ಹರಿವಿನ ಪೂರ್ಣಾಭ್ಯಾಸ ಚಂದ್ರನ ವಿವಿಧ ಸ್ತರಗಳ ರಚನೆ, ರೂಪಾಂತರ, ಪ್ರಾಯ ಮುಂತಾದುವುಗಳಿಗೆ ಪ್ರವೇಶ ನೀಡಬಹುದು.

ಮ್ಯಾಸ್ಕಾನ್‌ಗಳು

ಅಪೊಲೊ ಯಾನಿಗಳು ಚಂದ್ರನ ಸುತ್ತಲೂ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದರು. ಆ ಮೊದಲು ಮಾನವರಹಿತ ನೌಕೆಗಳು ಚಂದ್ರನನ್ನು ಸಾಕಷ್ಟು ಸಲ ಪರಿಭ್ರಮಿಸಿ ವರದಿಗಳನ್ನು ಭೂಮಿಗೆ ಪ್ರಸರಿಸಿವೆ, ಚಂದ್ರನ ವಿವಿಧ ಪ್ರದೇಶಗಳ ಛಾಯಾಚಿತ್ರಗಳನ್ನು ತೆಗೆದಿವೆ. ನೌಕೆಯ ಕಕ್ಷೆಯ ಪೂರ್ಣ ವಿವರಗಳನ್ನುಮೊದಲೇ ಗಣನೆಗಳಿಂದ ಸಿದ್ಧಪಡಿಸಿರುತ್ತಾರೆ. ಚಂದ್ರನ ಗುರುತ್ವಾಕರ್ಷಣಬಲ, ಹೊರಮೈ ವಿನ್ಯಾಸಗಳಿಂದ ಇದರಲ್ಲಿ ಉಂಟಾಗುವ ಏರಿಳಿತಗಳು, ನೌಕೆಯ ವೇಗ, ಚಲನೆಯ ದಿಕ್ಕು ಮುಂತಾದುವನ್ನು ಅವಲಂಬಿಸಿರುವ ಈ ಲೆಕ್ಕ ಕಕ್ಷೆಯನ್ನು ಕರಾರುವಾಕ್ಕಾಗಿ ಪೂರ್ವ ನಿರ್ಧಾರ ಮಾಡಿರುತ್ತದೆ; ಗಣಕಯಂತ್ರಗಳು ಚಲನೆಯ ನಿಯಂತ್ರಣ, ಪರಿಶೀಲನೆ ಮಾಡುತ್ತಿರುತ್ತವೆ; ಮನುಷ್ಯೇಂದ್ರಿಯಗಳಿಂದ ಇಂಥ ಕೆಲಸ ಸಾಧ್ಯವಾಗದು; ಅತ್ಯಲ್ಪ ದೋಷವೂ ಪ್ರಾಣಾಪಾಯಕಾರಿಯಾಗಬಹುದು. ಚಂದ್ರನ ಸುತ್ತ ಪರಿಭ್ರಮಿಸುತ್ತಿದ್ದ ನೌಕೆಗಳ ಕಕ್ಷೆಗಳಲ್ಲಿ ಹೊಸತೊಂದು ಸಮಸ್ಯೆಯನ್ನು ಭೂಮಿಯ ಮೇಲಿನ ನಿಯಂತ್ರಕ ವಿಜ್ಞಾನಿಗಳು ಗಮನಿಸಿದರು – ನೌಕೆಗಳ ವಾಸ್ತವಿಕ ಕಕ್ಷೆಗಳು ಗಣನೆಯ ಕಕ್ಷೆಗಳಿಗಿಂತ ಕೆಲವೆಡೆಗಳಲ್ಲಿ ಅಲ್ಪ ಸ್ವಲ್ಪ ಭಿನ್ನವಾಗಿದ್ದುವು. ಇಂಬ್ರಿಯಂ, ಸೆರೆನಿಡೆಟಿಸ್, ಕ್ರಿಸಿಯಂ, ಹ್ಯೂಮರಂ ಮತ್ತು ನೆಕ್ಟಾರಿಸ್ ಸಮುದ್ರಗಳ ಮೇಲು ಭಾಗಗಳಲ್ಲಿ ಒಂದು ನೌಕೆ ಸಾಗುತ್ತಿದ್ದಾಗ ಅದರ ಕಕ್ಷಾವೇಗ ಏರುತ್ತಿತ್ತು. ಆದ್ದರಿಂದ ತಾರ್ಕಿಕವಾಗಿ ಆ ವಲಯಗಳಲ್ಲಿ ಚಂದ್ರನ ಗುರುತ್ವಾಕರ್ಷಣಬಲ ಹೆಚ್ಚು ಎಂದು ವಿಜ್ಞಾನಿಗಳು ತೀರ್ಮಾನಿಸಿದರು. ಇದರ ಕಾರಣ ಅಲ್ಲಿ ಅಧಿಕ ದ್ರವ್ಯರಾಶಿ ಶೇಖರಣೆ. ಇಂಥ ವಲಯಗಳನ್ನು Mass Concentration = Mascon ಮ್ಯಾಸ್ಕಾನ್ಗಳೆಂದು ಕರೆದರು. ಚಂದ್ರನ ಸಮುದ್ರಗಳಲ್ಲಿ ಅಧಿಕ ದ್ರವ್ಯರಾಶಿಯ ಶೇಖರಣೆಗೆ ಎಂದರೆ ಮ್ಯಾಸ್ಕಾನ್‌ಗಳ ಇರುವಿಕೆಗೆ ಕಾರಣವೇನು? ದೈತ್ಯಗಾತ್ರದ ಮಹಾಭಾರದ ಕಬ್ಬಿಣದ ಅಂಶ ಬಹಳ ಇರುವ ಉಲ್ಕೆಗಳು ಅಲ್ಲಿ ಬಡಿದು ತಳದಲ್ಲಿ ಹುದುಗಿ ಹೋಗಿರಬಹುದು; ಆದ್ದರಿಂದ ಇತರ ಎಡೆಗಳಿಗಿಂತ ಅಲ್ಲಿನ ಸಾಂದ್ರತೆ ಅಥವಾ ದ್ರವ್ಯರಾಶಿ ಹೆಚ್ಚು ಎಂದು ಕೆಲವರ ಅಭಿಪ್ರಾಯ. ಇದನ್ನೊಪ್ಪದವರ ಭಾವನೆಯಲ್ಲಿ ಜ್ವಾಲಾಮುಖಿಗಳಿಂದ ಹರಿದ ಲಾವಾರಸ ಈ ತಗ್ಗು ಪ್ರದೇಶಗಳನ್ನು ಆವರಿಸಿ ದಟ್ಟವಾಗಿ ಘನೀಕರಿಸಿರಬಹುದು; ಅಥವಾ ಉಲ್ಕಾ ಸಂಘರ್ಷದಿಂದ ಉಂಟಾದ ಕೂಪಗಳನ್ನು ಮುಚ್ಚಲು (ಅಂದು ದ್ರವರೂಪದಲ್ಲಿದ್ದಿರಬಹುದಾದ) ಚಂದ್ರರಸ ಹರಿದು ಬಂದು ಇಲ್ಲಿ ದಟ್ಟೈಸಿರಬಹುದು; ಅಥವಾ ಒಂದು ಕಾಲದಲ್ಲಿ ಚಂದ್ರನಲ್ಲಿ ಇದ್ದಿರಬಹುದಾದ ನೀರು ಲವಣ ಮತ್ತು ಇತರ ಖನಿಜಗಳ ಮಿಶ್ರಣಗಳನ್ನೊಳಗೊಂಡು ಮಂದವಾಗಿ ಹರಿದು ಬಂದು ಇಲ್ಲಿನ ದ್ರವ್ಯರಾಶಿಯ ಏರಿಕೆಗೆ ಕಾರಣವಾಗಿರಬಹುದು.

ಅಪೊಲೊ ೧೨ರ ಯಾನಿಗಳು ಮಾತೃ ನೌಕೆಯನ್ನು ಪ್ರವೇಶಿಸಿದ ಮೇಲೆ ಏರು ಘಟ್ಟವನ್ನು ಚಂದ್ರತಲಕ್ಕೆ ಡಿಕ್ಕಿಯಾಗುವಂತೆ ಎಸೆದರಷ್ಟೆ. ಅದು ಗಂಟೆಗೆ ೬,೦೦೦ ಕಿಮೀ ವೇಗದಿಂದ ಚಂದ್ರನಿಗೆ ಡಿಕ್ಕಿ ಹೊಡೆಯಿತು. ಇದರಿಂದ ಜನಿಸಿದ ಚಂದ್ರ ಕಂಪದ ವಿವರ ಪರಿಶೀಲಿಸಿದ ವಿಜ್ಞಾನಿಗಳು “ಇದಕ್ಕೆ ಹೋಲಿಕೆಯಾಗುವಂಥ ಯಾವ ಘಟನೆಯನ್ನೂ ನಾವು ಭೂಮಿಯ ಮೇಲೆ ನೋಡಿಲ್ಲ. ಇದು ನಮಗೆ ಪೂರ್ಣ ಅಪರಿಚಿತ, ಚಂದ್ರ ರಚನೆಯ ರಹಸ್ಯವರಿಯಲು ಈ ವಿವರ ನಮಗೆ ಸಹಾಯಕವಾಗುವುದು” ಎಂದು ಉದ್ಗರಿಸಿದರು.

ಚಂದ್ರನಿಂದ ತಂದ ದ್ರವ್ಯ

ಅಪೊಲೊ ೧೧ ತಂದ ಚಂದ್ರ ನಮೂನೆಗಳ ಸಾಂದ್ರತೆ ಘನ ಸೆಂಟಿಮೀಟರಿಗೆ ೩.೨ ರಿಂದ ೩.೪ ಗ್ರಾಂ ಎಂಬುದು ಗಮನಾರ್ಯ. ಭೂಮಿಯ ಮೇಲಣ ಇಂಥ ಕಲ್ಲುಗಳ ಸಾಂದ್ರತೆ ಕಡಿಮೆ. ಆದ್ದರಿಂದ ಚಂದ್ರನಲ್ಲಿ ದ್ರವ್ಯ ನಿಬಿಡವಾಗಿ ಸೇರಿಕೊಂಡಿರಬಹುದು. ಮ್ಯಾಸ್ಕಾನ್‌ಗಳಿರುವಲ್ಲಿ ಈ ನಿಬಿಡತೆ ಇನ್ನಷ್ಟು ಹೆಚ್ಚು ಇರಬಹುದು ಎಂದು ನಂಬಲಾಗಿದೆ. ಖಚಿತ ತೀರ್ಮಾನವನ್ನು ಒಂದೆರಡು ನಮೂನೆಗಳ ಪರಿಶೀಲನೆಯಿಂದ ನೀಡುವುದು ಸಾಧುವಲ್ಲ. ಈ ಕಲ್ಲುಗಳು ಅಗ್ನಿ ಜನ್ಯ ಅಥವಾ ಉಷ್ಣ ಶಕ್ತಿಯಿಂದ ನಿರ್ಮಿತವಾದವರೆಂದು ಗೊತ್ತಾಗಿದೆ (ಮ್ಯಾಗ್ಮದ – ಎಂದರೆ, ಗ್ರಹ ಘನೀಭವಿಸುವ ಪೂರ್ವಸ್ಥಿತಿಯ ಶಿಲಾದ್ರವದ – ಉಷ್ಣ ವಿಸರಣೆಯಿಂದ ನಷ್ಟವಾದಂತೆ ಮ್ಯಾಗ್ಮ ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡದಿಂದ ಕಲ್ಲಾಗುವುದು. ಇದೇ ಅಗ್ನಿಜನ್ಯ ಶಿಲೆ ಅಥವಾ ಅಗ್ನಿ ಶಿಲೆ. ಭೂಮಿಯ ಮೇಲೆ ಇರುವ ಇತರ ಎರಡು ವಿಧದ ಶಿಲೆಗಳು ಜಲಜ ಶಿಲೆಗಳು ಮತ್ತು ರೂಪಾಂತರ ಶಿಲೆಗಳು. ಆದರೆ ಶೇಕಡ ೯೫ ಅಗ್ನಿ ಶಿಲೆಗಳೇ). ಆದ್ದರಿಂದ ಚಂದ್ರ ಮೊದಲು ಶಿಲಾದ್ರವ ರೂಪದಲ್ಲಿದ್ದು ಘನೀಭವಿಸಿ ಈಗಿನ ರೂಪಕ್ಕೆ ಬಂದಿರಬಹುದು ಎಂಬ ವಾದಕ್ಕೆ ಬಲವಾದ ಪುರಾವೆ ದೊರೆತಂತಾಗಿದೆ. ಆ ಜಲಜಶಿಲೆ ಇನ್ನೂ ದೊರೆತಿಲ್ಲ – ಭವಿಷ್ಯದ ಮಾನವ ಯಾತ್ರಿಗಳಿಂದ ಇಂಥವೇನಾದರೂ ಲಭಿಸಿದರೆ ಅದೊಂದು ಬಲು ಮಹತ್ವದ ಮುನ್ನಡೆ ಆಗುವುದು. ಅಂತೂ “ಶೀತಲ ಚಂದ್ರ ಸಿದ್ಧಾಂತ”ಕ್ಕೆ (ಇದರ ಪ್ರಕಾರ ಚಂದ್ರ ಎಂದೂ ಬಿಸಿಯಾಗಿರಲಿಲ್ಲ. ಆದ್ದರಿಂದ ಅದರ ಗರ್ಭದಲ್ಲಿಯೂ ಉಷ್ಣವಿರುವುದು ಸಾಧ್ಯವಿಲ್ಲ) ಅಗ್ನಿ ಶಿಲೆಗಳ ಅಸ್ತಿತ್ವದಿಂದ ಮಂಗಳ ಹಾಡಿದಂತಾಯಿತು. ಅಗ್ನಿ ಶಿಲೆಗಳ ಪ್ರಾಯ 3.1×108 ವರ್ಷಗಳೆಂದು ಲೆಕ್ಕ ಹಾಕಿದ್ದಾರೆ. ಇದನ್ನು ಪಡೆದದ್ದು ಚಂದ್ರನ ಸಮುದ್ರದಿಂದ. ಆದ್ದರಿಂದ ಸಮುದ್ರದ ಪ್ರಾಯ ಕನಿಷ್ಠ ಪಕ್ಷ 3.1×108 ವರ್ಷಗಳಾಗಿರಬೇಕು. ಅರ್ಥಾತ್ ಅವು ಈಚೆಗಿನ ರಚನೆಗಳಲ್ಲ, ಸಾಕಷ್ಟು ಹಳೆಯವೇ ಎಂದೂ ಚಂದ್ರನ ರೂಪ ಲಕ್ಷಾಂತರ ವರ್ಷಗಳಿಂದಲೂ ವ್ಯತ್ಯಾಸಗೊಳ್ಳದೇ ಇದೆಯೆಂದೂ ತೀರ್ಮಾನಿಸಿದ್ದಾರೆ. ಭೂಮಿಯ ಮೇಲೆ ದೊರೆತಿರುವ ಅತಿ ಪ್ರಾಚೀನ ಕಲ್ಲುಗಳ ಪ್ರಾಯ 3.3×108 ವರ್ಷಗಳು – ಈ ಹೋಲಿಕೆಯಲ್ಲಿ ಚಂದ್ರ ಮತ್ತು ಭೂಮಿಶಿಲೆಗಳು ಸಮಕಾಲೀನವಾಗಿದೆ. ಇಲ್ಲಿ ಒಂದು ವಿಚಾರ ಮರೆಯಬಾರದು – ಭೂಮಿಶಿಲೆಗಳ ಮೇಲೆ ಹವೆ, ಗಾಳಿ, ನೀರು ಮುಂತಾದ ಸವೆತದ ಬಲಗಳ ಪ್ರಭಾವ ಸಾಕಷ್ಟು ಇದೆ; ಚಂದ್ರನಲ್ಲಿ ಈ ಬಲಗಳಿಲ್ಲ. ಆರ್ಮ್‌ಸ್ಟ್ರಾಂಗ್ ಚಂದ್ರನನ್ನು ಪರಿಭ್ರಮಿಸುತ್ತಿದ್ದಾಗ ಸುಮಾರು ೬-೮ ಕಡೆಗಳಲ್ಲಿ ಒಂದೊಂದು ಕೂಪ, ತಳದಲ್ಲಿ ಗಾಜಿನಂತೆ ಥಳಥಳಿಸುವ ಹಲವಾರು ಮಚ್ಚೆಗಳನ್ನು ಕಂಡ. ಇವು ಉಲ್ಕಾಪಾತದಿಂದ ನಾಶವಾಗದೇ ಉಳಿದಿರುವುದು ಆಶ್ಚರ್ಯ. ಹೊಳೆವ ಮಚ್ಚೆಗಳ ರಹಸ್ಯ ತಿಳಿದಿಲ್ಲ. ಆದರೂ ಅವುಗಳ ಪ್ರಾಯ ೩೦,೦೦೦ ವರ್ಷಗಳಿಗಿಂತ ಹೆಚ್ಚು ಇರಲರದೆಂದು ಊಹಿಸಿದ್ದಾರೆ.

ಈ ವರ್ಷದ ಪ್ರಾರಂಭದಲ್ಲಿ (೧೯೭೦) ನಾಸಾ ಸಂಸ್ಥೆ ಆಕಾಶ ವಿಜ್ಞಾನಿಗಳ ಒಂದು ವಿಚಾರ ಸಂಕೀರ್ಣವನ್ನು ಏರ್ಪಡಿಸಿತ್ತು. ಅಪೊಲೊ ೧೧ರ ಯಾನಿಗಳು ಭೂಮಿಗೆ ತಂದ ಚಂದ್ರ ಸ್ಮಾರಕಗಳನ್ನು ಆ ಮೊದಲು ೧೪೨ ವಿವಿಧ ವಿಜ್ಞಾನಿಗಳು ವಿವಿಧ ದೃಷ್ಟಿಗಳಿಂದ ವಿಭಜಿಸಿ ಪರಿಶೀಲಿಸಿದ್ದರು. ಇದರ ಮೇಲೆ ಅಪೊಲೊ ೧೨ರ ಕೊಡುಗೆಗಳು ದೊರೆತಿದ್ದುವು. ಈ ಸಭೆಯಲ್ಲಿ ಬಹಿರಂಗವಾದ ಅಭಿಪ್ರಾಯ ಸಾರ ಹೀಗಿದೆ.

ಟ್ರಾಂಕ್ವಿಲಿಟಿ ಸಮುದ್ರ ತಳದಿಂದ ಆರಿಸಿ ತಂದ ದೂಳನ್ನು ಕಲ್ಲುಗಳನ್ನೂ ಪರಿಶೀಲಿಸಿದಾಗ ದೂಳಿನ ಪ್ರಾಯ ಸುಮಾರು 4.6×109 ವರ್ಷಗಳೆಂದೂ ಕಲ್ಲುಗಳ ಪ್ರಾಯ ಸುಮಾರು 3.6×109 ವರ್ಷಗಳೆಂದೂ (ಎಂದರೆ ಕಲ್ಲುಗಳು ದೂಳಿಗಿಂತ 1×109 ವರ್ಷಗಳಷ್ಟು ತರುಣವೆಂದೂ) ತಿಳಿಯಿತು. ದೂಳಿನ ಪ್ರಾಯ ಚಂದ್ರನ ಪ್ರಾಯದಷ್ಟೇ. ಅದೇ ವಲಯದಲ್ಲಿ ಕಲ್ಲುಗಳ ಪ್ರಾಯ ಕಡಿಮೆ ಏಕೆ? ಈ ಕಲ್ಲುಗಳಲ್ಲೂ ಒಂದು ತುಂಡಿನ ಪ್ರಾಯ 4.4×109 ವರ್ಷಗಳು. ಆದ್ದರಿಂದ ಚಂದ್ರನ ಬೇರೆ ಬೇರೆ ಕಡೆಗಳಿಂದ ಕಲ್ಲುಗಳನ್ನು ಸಂಗ್ರಹಿಸಿದರೆ ಚಂದ್ರನ ಪ್ರಾಯದಷ್ಟೇ ಹಳೆಯವು ದೊರೆಯುವ ಸಾಧ್ಯತೆ ಇದೆ.

ಚಂದ್ರನ ಪ್ರಾಯದ ವಿಚಾರ (ಸುಮಾರು 4.6×109 ವರ್ಷಗಳು) ವಿಜ್ಞಾನಿಗಳಲ್ಲಿ ಬಲುಮಟ್ಟಿಗೆ ಒಪ್ಪಿಗೆ ಇದೆ; ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ವಿಶೇಷ ಭಿನ್ನಮತವಿಲ್ಲ.

ಚಂದ್ರ ಜನನವಾದ ಸುಮಾರು 1×109 ವರ್ಷಗಳ ತರುವಾಯ – ಎಂದರೆ ಸುಮಾರು 3.6×109 ವರ್ಷಗಳ ಹಿಂದೆ – ದುರ್ಘಟನಾ ಪರಂಪರೆಗಳು ಚಂದ್ರನನ್ನು ಭೀಕರವಾಗಿ ಅಲುಗಿಸಿಬಿಟ್ಟುವು. ಆಗ ಲಾವಾರಸ (ಅಥವಾ ಚಂದ್ರಶಿಲಾರಸ) ಪ್ರವಾಹವೇ ಹರಿದಿದೆ. ಆದರೆ ಇದು ಚಂದ್ರ ಗರ್ಭದಿಂದ ಹೊರಹೊಮ್ಮಿದ ಜ್ವಾಲಾಮುಖಿಗಳಿಂದ ಆಗಿರಬಹುದೇ ಅಥವಾ ಉಲ್ಕಾಪಾತಗಳಿಂದ ಜನಿಸಿದ ಅತ್ಯುಷ್ಣದಿಂದ ಚಂದ್ರಶಿಲೆಗಳು ಕರಗಿ ಉಂಟಾದುದಾಗಿರಬಹುದೇ ಎಂಬ ವಿಚಾರ ಇನ್ನೂ ಮಸಕು. ಎರಡನೆಯ ಕಾರಣ ಸಮರ್ಪಕವೆಂದು ಭಾವಿಸಿದರೆ ಅಂಥ ದುರ್ಘಟನೆಯ ಕುರುಹು ಚಂದ್ರನ ನೆರೆವಸ್ತುವಾದ ಭೂಮಿಯಲ್ಲಿಯೂ ಕಾಣಬೇಕು. ಬಹುಶಃ ಈ ಕಾರಣದಿಂದ ವಿಜ್ಞಾನಿಗಳಿಗೆ ಭೂಮಿಯ ಮೇಲೆ 3.6×109 ವರ್ಷಗಳಿಗಿಂತ ಹಳೆಯ ಕಲ್ಲುಗಳನ್ನು (ಭೂಮಿಯ ಪ್ರಾಯ ಸುಮಾರು 5×109 ವರ್ಷಗಳು) ಗುರುತಿಸುವುದು ಸಾಧ್ಯವಾಗಿಲ್ಲ.

ಚಂದ್ರ ಸ್ಮಾರಕಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳ ಸಹಾಯದಿಂದ ಪರಿಶೀಲಿಸಿದಾಗ ಉಲ್ಕಾಪಾತದ ಪರವಾಗಿ ಇನ್ನಷ್ಟು ದಾಖಲೆ ದೊರೆಯಿತು. ಅನಂತ ಸೂಕ್ಷ್ಮ ಕಣಗಳ (ಅತಿಸೂಕ್ಷ್ಮ ಉಲ್ಕೆಗಳು) ಮಹಾ ಮತ್ತು ಅವಿಚ್ಛಿನ್ನ ಪ್ರಹಾರದಿಂದ ಚಂದ್ರನ ಶಿಲೆಗಳ ಕಣಕಣಗಳ ಮೇಲೆಯೂ ಆದ ಗುರುತಗಳು ಸ್ಪಷ್ಟವಾಗಿ ಕಂಡುವು. ಗಾಜಿನಂತೆ ಹೊಳೆವ ತುಣುಕುಗಳೂ ಸಾಕಷ್ಟು ದೊರೆತಿವೆ. ಉಲ್ಕಾಪಾತದಿಂದ ಕರಗಿ ಹಾರಿದ ಮರಳು ಮಿಶ್ರಿತ ಕಲ್ಲಿನ ದ್ರವ ಘನೀಭವಿಸಿದಾಗ ಇವು ಉಂಟಾಗಿರಬಹುದು. ವಿಶ್ವಕಿರಣ (ಕಾಸ್ಮಿಕ್ ರೇ) ಮತ್ತು ಸೌರಕಣಗಳ ಪ್ರಹಾರದ ಅಚ್ಚಳಿಯದ ಕುರುಹುಗಳನ್ನೂ ಗುರುತಿಸಲಾಗಿದೆ. ಎಂದೂ ಮಾಸದ ಈ ಕುರುಹುಗಳಿಂದ ಅವು ಎಂದು ಉಂಟಾದುವೆಂದು ಕಂಡುಹಿಡಿಯಬಹುದು. ಆ ದಿವಸ ಭೂಮಿಯ ಹವಾ ಪರಿಸ್ಥಿತಿಗಳನ್ನರಿತು ಸೂರ್ಯ-ಭೂಮಿ ಸಂಬಂಧದ ಮೇಲೆ ಹೆಚ್ಚಿನ ಬೆಳಕು ಬೀರುವ ಸಾಧ್ಯತೆ ಇದೆ.

ಟ್ರಾಂಕ್ವಿಲಿಟಿ ಸಮುದ್ರದ ಶಿಲೆಗಳಲ್ಲು ಭೂಮಿಯ ಮೇಲೆ ಇರದಂಥ ಕನಿಷ್ಠ ಪಕ್ಷ ಮೂರು ಲೋಹ ಸಂಯುಕ್ತಗಳನ್ನು ಕಂಡಿದ್ದಾರೆ. ಇವೆಲ್ಲವುಗಳಲ್ಲೂ ಕಬ್ಬಿಣದ ಅಂಶ ಪ್ರಧಾನವಾಗಿದೆ. ಚಿನ್ನ ಮತ್ತು ಮಾಣಿಕ್ಯಗಳ ಛಾಯೆಯೂ ತೋರಿದೆ. ಚಂದ್ರಮುಖಿಯರೂ ಈ ಕಾರಣದಿಂದ ಸಹ (ಹಿಂದೆ ಕಾಣಿಸಿದ ಡಾ| ಶಿವರುದ್ರಪ್ಪನವರ ಪದ್ಯ ನೋಡಿ) ಚಂದ್ರಯಾನದಲ್ಲಿ ತೊಡಗುವಂತಿಲ್ಲ – ಚಂದ್ರನಲ್ಲಿರುವ ಚಿನ್ನದ ಅಂಶ ಇಂಥ ಯಾನವನ್ನು ಆರ್ಥಿಕವಾಗಿ ಯಶಸ್ವಿಯನ್ನಾಗಿಸುವಷ್ಟು ಇಲ್ಲ.

ಇಂಗಾಲಾಂಶ ಮತ್ತು ಅಮೈನೊ ಆಮ್ಲ (ಪ್ರೊಟೀನ್ ಕಟ್ಟುವ, ಆದ್ದರಿಂದ ಜೀವೋತ್ಪತ್ತಿಕಾರಕ ಮೂಲ ಇಟ್ಟಿಗೆಗಳು) ಟ್ರಾಂಕ್ವಿಲಿಟಿ ಸಮುದ್ರದಲ್ಲಿ ಇವೆ ಎಂದು ವಿಶ್ಲೇಷಣೆಯಿಂದ ತಿಳಿದಾಗ ಚಂದ್ರನಲ್ಲಿ ಹಿಂದೆ ಎಂದಾದರೂ ಮೂಲ ಸ್ವರೂಪದ ಜೀವಿ ಇದ್ದಿರಬಹುದೇ ಎಂಬ ಸಂದೇಹ ಮೂಡಿತು. ಆದರೆ ಇಲ್ಲಿ ಒಂದು ಲೋಪ ಘಟಿಸಿರಬಹುದು. ಭೂಮಿಯ ಪರಿಸರದಲ್ಲಿ, ಪ್ರಯೋಗ ಶಾಲೆಯ ಒಳಗೆ ಅಮೈನೊ ಆಮ್ಲ ಚಂದ್ರಶಿಲೆಗಳ ಮೇಲೆ ಸೇರಿರುವ ಸಾಧ್ಯತೆ ಇದೆ. ಇನ್ನು ಇಂಗಾಲಾಂಶ ಉಲ್ಕೆಗಳಿಂದ ಬಂದಿರಬಹುದು. ಅಂತೂ ಚಂದ್ರನಲ್ಲಿ ಜೀವವಿಕಾಸವನ್ನು ಕುರಿತ ಅಭಿಪ್ರಾಯ ಸ್ಪಷ್ಟವಾಗಿದೆ – ಅಲ್ಲಿ ಎಂದೂ ಜೀವಿಗಳು ಇದ್ದಿರಲಾರವು, ಜೀವವಿಕಾಸಕ್ಕೆ ಚಂದ್ರ ಖಂಡಿತವಾಗಿಯೂ ಪ್ರತಿಕೂಲ ಪರಿಸರ.

ರಚನೆ, ಪ್ರಾಯ ಈ ದೃಷ್ಟಿಯಿಂದ ಭೂಮಿ, ಚಂದ್ರರಲ್ಲಿ ಸಾಮ್ಯ ಕಂಡು ಬಂದರೂ ಇತರ ವಿವರ ಪರಿಶೀಲನೆಯಿಂದ ಇವುಗಳಲ್ಲಿರುವ ಭಿನ್ನತೆ ಅಸಮತೆಗಳೇ ಹೆಚ್ಚು ಎಂದು ತಿಳಿದಿದೆ. ಚಂದ್ರಗರ್ಭದಲ್ಲಿ ಯಾವ ತರಹದ ಕಂಪನವನ್ನೂ ಪತ್ತೆ ಹಚ್ಚಲಾಗಿಲ್ಲ. ಚಂದ್ರನ ತೊಗಟೆಯ ಮೇಲಿರುವ ರಾಸಾಯನಿಕ ಸಂಯುಕ್ತಗಳೂ ಖನಿಜಗಳೂ ಭೂಮಿಯ ಮೇಲಿನವುಗಳಿಗಿಂತ ಗಮನಾರ್ಹವಾಗಿ ಬೇರೆಯಾಗಿವೆ. ಅದೊಂದು ಕಿಟ್ಟ; ಅಧಿಕ ಉಷ್ಣದಲ್ಲಿ ತಯಾರಾದ, ನೀರು ಇದ್ದಿದ್ದರೆ ಅದನ್ನು ಅಂದೇ ಕಳೆದುಕೊಂಡ, ಒಣಗಟ್ಟಿ ಎಂದು ಒಬ್ಬ ವಿಜ್ಞಾನಿಯ ತೀರ್ಮಾನ. ಇವೆಲ್ಲದರ ಪರಿಣಾಮವಾಗಿ “ಚಂದ್ರ ಭೂಮಿಯ ಮಗ” (ಅಥವ “ಸಿಡಿ” ನೋಡಿ: ಚಂದ್ರನ ಜನನ) ಎಂಬ ಆಧಾರ ಭಾವನೆಯನ್ನು ಪೂರ್ಣವಾಗಿ ಕೈ ಬಿಡಲಾಗಿದೆ.

ಹಾಗಾದರೆ ಚಂದ್ರ ಜನನದ ರಹಸ್ಯ?
ಸೌರವ್ಯೂಹದ ಇತಿಹಾಸ?
ಭೂಮಿಯ ಪ್ರಾಚೀನ ಚರಿತ್ರೆ?
ಜೀವ ವಿಕಾಸದ ಅಲಿಬಾಬನ ಗವಿ?
ಚಂದ್ರನನ್ನು ಇನ್ನಷ್ಟು ಅರಸಬೇಕು!

ಚಂದ್ರಲೋಕದಿಂದ ಮುಂದೆ
ಅಧ್ಯಾಯ ಏಳು

ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದವರು ಅಥವಾ ಮಹಾ ವಿಜ್ಞಾನಿಗಳ ಕೃತಿಗಳನ್ನು ಓದಿದವರು ಒಂದು ಸಂಗತಿಯನ್ನು ಗಮನಿಸದಿರರು – ನಿಖರ ಪ್ರಯೋಗ ಮತ್ತು ನಿಷ್ಕೃಷ್ಟ ವೀಕ್ಷಣೆ ಇವನ್ನು ಬೆಸೆಯುವ ಸಿದ್ಧಾಂತದ ಶಿಲ್ಪಿ ಪ್ರತಿಭೆ (ಟೆಂಡಾಲ್‌ನ ವಿಶ್ಲೇಷಣೆ). ವಾಮನ (ಮಾನವ) ತ್ರಿವಿಕ್ರಮನಾದ (ಆರ್ಮ್‌ಸ್ಟ್ರಾಂಗ್ ಸಂಗಡಿಗರು ಮೂವರ ವಿಜಯ) ವೈಜ್ಞಾನಿಕ ಚರಿತ್ರೆ ಈ ಮಾತಿಗೆ ಇನ್ನೊಂದು ನಿದರ್ಶನ. ಮನುಷ್ಯನ ಹಂಬಲ ಅಲ್ಲಿಗೇ – ಎಂದರೆ ಒಂದು ಉದ್ದೇಶ ಸಫಲವಾದೊಡನೆ – ಕೊನೆಗೊಳ್ಳುವುದಿಲ್ಲ. ಆದ್ದರಿಂದ ಮುಂದೇನು? ಈಗ ಚಂದ್ರಲೋಕವನ್ನು ಎಷ್ಟು ಅರಸಿ ಆಗಿದೆ? ಒಂದು ಕಾಲ್ಪನಿಕ ಕತೆಯನ್ನು ಇಲ್ಲಿ ಬರೆದು ಈ ಪ್ರಶ್ನೆಗೆ ಉತ್ತರ ಹುಡುಕುವುದು ಸಮರ್ಪಕ.

ಚಂದ್ರಲೋಕದಲ್ಲಿ ಬುದ್ಧಿವಂತ ಜೀವಿಗಳು ವಿಕಾಸಗೊಂಡು ವಿಜ್ಞಾನದಲ್ಲಿಯೂ ಸಾಕಷ್ಟು ಮುಂದುವರಿದರು. ಚಂದ್ರಜರ ಪ್ರಥಮ ಮತ್ತು ಮಹಾಕರ್ಷಣೆ ಸೂರ್ಯನಲ್ಲ, ನಕ್ಷತ್ರಗಳಲ್ಲ – ಭೂಮಿ. ಚಂದ್ರನ ಒಂದು ಭಾಗದವರಿಗೆ ಎಂದೆಂದೂ ಭೂಮಿದರ್ಶನವಿಲ್ಲ. ಇನ್ನೊಂದು ಭಾಗದವರಿಗೆ ಈ ಸುಂದರ ನೀಲವರ್ಣ ಪ್ರಧಾನವಾಗಿರುವ ದೊಡ್ಡ ಬಿಂಬ, ಅದರ ಗಾತ್ರಗಳ ಏರಿಳಿತ ಅತ್ಯಾಶ್ಚರ್ಯಕರ ದೃಶ್ಯ. ಭೂಮಿಗೆ ಹೋಗಬೇಕು, ಅಲ್ಲಿನ ಪರಿಸರವನ್ನು ಅನ್ವೇಷಿಸಬೇಕು, ಸ್ಮಾರಕಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಮರಳಬೇಕು ಇದು ಚಂದ್ರಜರ ನಿರಂತರ ಆಶಯ. ಇಂಥ ಸ್ಮಾರಕಗಳ ವಿಶ್ಲೇಷಣೆಯಿಂದ ಭೂಮಿಯು, ಸೌರವ್ಯೂಹದ ಮತ್ತು ತಮ್ಮ ಲೋಕದ ಇತಿಹಾಸವನ್ನು ವೈಜ್ಞಾನಿಕವಾಗಿ ವಿವರಿಸಬಹುದೆಂದು ಅವರ ನಂಬಿಕೆ. ತಾಂತ್ರಿಕ ಕೌಶಲ ಕ್ರಮೇಣ ಪ್ರಗತಿಗೊಂಡು ಒಂದು ದಿವಸ ಮೂವರು ಚಂದ್ರಜರು ಭೂಮಿಯೆಡೆಗೆ ಹೊರಟೇ ಬಿಟ್ಟರು. ಅವರು ಕುಳಿತಿದ್ದ ಆಕಾಶ ನೌಕೆ ಕರ್ನಾಟಕದ ಕುದುರೆಮುಖ ಪರ್ವತ ಸಾಲಿನ ನಿರ್ಜನ ಪ್ರದೇಶದಲ್ಲಿ ಸುಲಭವಾಗಿ ಇಳಿಯಿತು. ಭೂಮಿಯ ಪ್ರತಿಕೂಲ ಪರಿಸರದಿಂದ ರಕ್ಷಣೆ ಪಡೆಯಲು ಅವರು ಆಕಾಶ ಉಡುಪುಧಾರಿಗಳಾಗಿ ಭೂಮಿ ಕೋಶದಿಂದ ಹೊರಕ್ಕೆ ಇಳಿದು ನೆಲವನ್ನು ಸ್ಪರ್ಶಿಸಿದರು.ಅಲ್ಲಿ ಅವರು (ಇಬ್ಬರು) ಓಡಾಡಿದ್ದು ಕೆಲವು ಗಂಟೆ ಕಾಲ; ಕಂಡದ್ದು ಅಲ್ಲಿನ ನೂತನ ವಿಸ್ಮಯಕಾರಕ ದೃಶ್ಯವನ್ನು; ಸಂಗ್ರಹಿಸಿದ್ದು ಕೊಂಡೊಯ್ಯುವಷ್ಟು ಕಲ್ಲು, ಮಣ್ಣು, ಅದುರು ಇತ್ಯಾದಿ. ಅವರು ಹಿಂದೆ ಮರಳಿದರು. ಈ ಆಕಾಶ ವಿಜಯ ಚಂದ್ರಜರನ್ನು ಆಕಾಶಜೀವಿಗಳಾಗಿ ಮಾರ್ಪಡಿಸಿತು. ಚಂದ್ರಲೋಕದ ಪ್ರಚಂಡ ವಿಜ್ಞಾನಿಗಳ ಒಂದು ಸೈನ್ಯವೇ ಭೂಮಿಸ್ಮಾರಕಗಳ ವಿಶ್ಲೇಷಣೆ ಅಭ್ಯಾಸಗಳಲ್ಲಿ ನಿರತವಾಯಿತು. ಫಲಿತಾಂಶವಾಗಿ ಅವರು ಭೂಮಿಯ ಸಮಗ್ರ ಇತಿಹಾಸವನ್ನು ಕರಾರುವಾಕ್ಕಾಗಿ ಬರೆಯಲು ಸಿದ್ದರಾಗಿದ್ದಾರೆ; ಪರೋಕ್ಷವಾಗಿ ಸೌರವ್ಯೂಹದ ಇತಿಹಾಸವೂ ಈ ಗ್ರಂಥದಲ್ಲಿ ಉಲ್ಲೇಖಿತವಾಗಲಿದೆ!

ಕತೆಯಿಂದ ವಾಸ್ತವಿಕತೆಗೆ ಮರಳೋಣ. “ಈಗ ಚಂದ್ರಲೋಕವನ್ನು ಎಷ್ಟು ಅರಸಿ ಆಗಿದೆ?” ಪುನರುಕ್ತಿ ದೋಷ ಬರಬಾರದೆಂದು ಉತ್ತರ ಬರೆಯುವುದಿಲ್ಲ. ಚಂದ್ರನ ಸಮಗ್ರ ಕೂಲಂಕಷಾಭ್ಯಾಸ ಭವಿಷ್ಯದಲ್ಲಿ ನಡೆಯಬೇಕು. ಅದಕ್ಕೆ ಜೊತೆಜೊತೆಯಾಗಿಯೇ ಚಂದ್ರಲೋಕದಿಂದ ಮುಂದೆ ಎಲ್ಲಿಗೆ ಎಂಬ ಪ್ರಶ್ನೆಗೆ ಪ್ರಾಯೋಗಿಕ ಉತ್ತರವನ್ನು ಪಡೆಯಬೇಕು.

ಭೂಮಿಯಿಂದ ಸೂರ್ಯನ ಕಡೆಗೆ ಶುಕ್ರಗ್ರಹವೂ ವಿರುದ್ಧ ದಿಕ್ಕಿಗೆ ಮಂಗಳಗ್ರಹವೂ ಇವೆ. ಮಾನವರಹಿತ ಆಕಾಶನೌಕೆಗಳು ಇವೆರಡು ಗ್ರಹಗಳ ಸಮೀಪ ಸಂದರ್ಶನ ಮಾಡಿ (ಒಂದಂತೂ ಶುಕ್ರನ ಮೇಲೆಯೇ ಬಿದ್ದಿದೆ) ಭೂಮಿಗೆ ಉಪಯುಕ್ತ ವಿವರಗಳನ್ನು ಪ್ರಸರಿಸಿವೆ. ಶುಕ್ರಗ್ರಹಯಾನ ಮುಂಬರುವ ಹಲವಾರು ವರ್ಷಗಳ ಕಾಲ (ಅಲ್ಲಿನ ಪ್ರತಿಕೂಲ ಪರಿಸರದ ಕಾರಣದಿಂದ) ಸಾಧ್ಯವಾಗದು. ಆದ್ದರಿಂದ ಮಂಗಳವೊಂದೇ ಪ್ರಸಕ್ತ ಶತಮಾನದ ಮುಖ್ಯ ಆಸಕ್ತಿಯಾಗಿ (ಮಾನವ ಪ್ರಯಾಣಕ್ಕೆ) ಉಳಿಯುವ ಸಂಭಾವ್ಯತೆ ಅಧಿಕ. ಸುಮಾರು ೯ ತಿಂಗಳುಗಳಷ್ಟು ಕಾಲ ನಿರಂತರವಾಗಿ ಆಕಾಶ ನೌಕೆಯಲ್ಲಿ ಹಾರಿದರೆ ಮಂಗಳವನ್ನು ತಲುಪಬಹುದು. ತಲುಪಿದರೆ ಮತ್ತೆ ಹಿಂದೆ ಬರಲು ಇನ್ನಷ್ಟು ಸಮಯಬೇಕು. ಇಂದಿನ ತಾಂತ್ರಿಕ ಪ್ರಗತಿಯ ದೃಷ್ಟಿಯಿಂದ ಇಂಥ ಪ್ರಯಾಣ ಅಪ್ರಾಯೋಗಿಕ; ಎಂದೆಂದೂ ಅಪ್ರಾಯೋಗಿಕ ಎನ್ನುವುದು ಅಜ್ಞಾನದಿಂದ ಮೂಡಿಬರುವ ಸುಲಭ ಸಾಮಾನ್ಯೀಕರಣ. ಈಗ ಸುಮಾರು ೧೫ ವರ್ಷಗಳ ಹಿಂದೆ ಚಂದ್ರಯಾನ ವಾಸ್ತವಿಕವಾಗಿ ಅಸಾಧ್ಯ, ಕತೆ ಕಾದಂಬರಿಗಳಲ್ಲಿ ಮಾತ್ರ ಸಾಧ್ಯ ಎಂದು ತಿಳಿದಿದ್ದ ವಾದಿಸುತ್ತಿದ್ದ ಹಲವಾರು ವಿಜ್ಞಾನಿಗಳು (ಸಾಮಾನ್ಯ ಜನರು ಒತ್ತಟ್ಟಿಗಿರಲಿ) ತಮ್ಮ ವಾದ ಕುಸಿದು ಬಿದ್ದುದನ್ನು ನೋಡಲು ಬದುಕಿದ್ದಾರೆ.

ದ್ವಾಪರ _ ಕಲಿದೇವ,
ಇಂದಳಿದುದನಿತುಮುಂ ಮುಂದೆ ಐತಂದುಪುದೆ!
ಕಲಿ – ಅಹುದು, ಸಂಶಯವಿಲ್ಲ.
ದ್ವಾಪರ – ಈ ಬೀರರನಿಬರುಂ?
ಕಲಿ – ಈ ಬೀರರನಿಬರುಂ!
ದ್ವಾಪರ – ಬಾಂದೊರೆಯ ಕಂದನಹ
ಭೀಷ್ಮನಂತಹ ಬ್ರಹ್ಮಚಾರಿಗಳ್?
. . . . . . . . . . . . . . .
ಕಲಿ – ಕರ್ಬೊಗೆಯ ಕಾರುವ ಸಿಡಿಲ್ಗಳನೆ ನಿರ್ಮಿಪರ್!
ಗ್ರಹ ಚಂದ್ರ ತಾರೆಗಳನಳೆಯುವರ್; ತೂಗುವರ್!
(ಕುವೆಂಪು ವಿರಚಿತ ‘ಶ್ಮಶಾನ ಕುರುಕ್ಷೇತ್ರ’ದಿಂದ)

– ಮುಗಿಯಿತು –

ಗ್ರಂಥಋಣ
NASA publications and despatchesTIME Magazine, SPAN MagazineThe Hindu dailyTIROS Weather eye in Space by John JakesAviation and Space medicine by Martin & Grace GaidinEncyclopaedia of Space by Paul HamlynA number of technical books on Astronomy, Space Science, Physics, Matematics etc.

[ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ ‘ಭವಿಷ್ಯವಿಜ್ಞಾನ,’ದನಂತರದ ಕೃತಿ ಇದು. Micro soft wordನ ೨೦ರ ಗಾತ್ರದ ಅಕ್ಷರಗಳಲ್ಲಿ ವಾರಕ್ಕೆ ಸುಮಾರು ೧೦-೧೫ ಪುಟ, ಅಂದರೆ ಮೂಲ ಪುಸ್ತಕದ ಅಧ್ಯಾಯ ಒಂದರ ತಾರ್ಕಿಕ ಕೊನೆಯಲ್ಲಿ ಕೊನೆಗೊಳ್ಳುವಂತೆ ಹೊಂದಿಸಿಕೊಂಡು ಧಾರಾವಾಹಿಯಾಗಿಸುತ್ತ ಬಂದೆ. ಕಾಲಧರ್ಮಾನುಸಾರ ಮಾನಗಳನ್ನು ಮೆಟ್ರಿಕ್ ಪದ್ಧತಿಗೆ ಅಳವಡಿಸುವುದರಲ್ಲಿ ಸಹಕರಿಸಿದವ ಮೊದಲೇ ಹೇಳಿದಂತೆ ಎ.ಪಿ. ರಾಧಾಕೃಷ್ಣ. ಕೇವಲ ಬೆರಳಚ್ಚುಗಾರನ ಕೆಲಸ ಮಾಡಿ ಮಿಂಚಂಚೆ ಮೂಲಕ ರವಾನಿಸಿದ ಪಠ್ಯಕ್ಕೆ ಯೋಗ್ಯ ಚಿತ್ರ, ಚಲಚಿತ್ರಗಳನ್ನು ಹೊಂದಿಸಿ ಪುಟ ಹೊಂದಿಸಿ ಕೊಟ್ಟವನು ಎಂದಿನಚಿತೆ ನನ್ನ ಜಾಲತಾಣದ ಸಮಗ್ರ ನಿರ್ವಾಹಕ – ಅಭಯಸಿಂಹ, ಮಗ. ಈ ಪುಸ್ತಕವೂ ಭವಿಷ್ಯವಿಜ್ಞಾನದಂತೇ ನಿಮಗೆ ಹೀಗೇ ಕಂತುಗಳಲ್ಲೂ ವಿ-ಪುಸ್ತಕರೂಪದಲ್ಲೂ ಓದುವುದಕ್ಕೂ ಸಂಗ್ರಹಿಸಿಕೊಳ್ಳುವುದಕ್ಕೂ ಮುಕ್ತವಾಗಿರಿಸಿದ್ದೇನೆ. ಮಾನವ ಚಂದ್ರನ ಮೇಲೆ ಪುಸ್ತಕದ ಇ-ಪ್ರತಿಯನ್ನು ಓದಲು, ಸಂಗ್ರಹಿಸಿಟ್ಟುಕೊಳ್ಳಲು ಇಲ್ಲಿ ಚಿಟಿಕೆ ಹೊಡೆಯಿರಿ.

www.athreebook.com ನ ಪುಸ್ತಕ ವಿಭಾಗವನ್ನು ಸಂದರ್ಶಿಸಲು ಇಲ್ಲಿ ಚಿಟಿಕೆ ಹೊಡೆಯಿರಿ. – ಅಶೋಕವರ್ಧನ]