ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು
ಅಧ್ಯಾಯ ಇಪ್ಪತ್ತೊಂದು

ನನ್ನ ಕ್ರಿಶ್ಚಿಯನ್ ಕಾಲೇಜ್ ಗೆಳೆಯ ಕು.ಶಿ.ಹರಿದಾಸಭಟ್ಟರ ಬಗ್ಗೆ ಹಿಂದೆ ಹೇಳಿದ್ದೇನೆ. ಇವರು ಅರ್ಥಶಾಶ್ತ್ರ ಎಂಎ ಪದವಿಯನ್ನು ಉತ್ತಮ ಸ್ಥಾನ ಮತ್ತು ಶ್ರೇಣಿಯಲ್ಲಿ ಗಳಿಸಿ (೧೯೪೯) ತಮ್ಮ ತವರು ಉಡುಪಿಯಲ್ಲಿ ಅದಾಗ ತಾನೇ ಸ್ಥಾಪಿತವಾಗಿದ್ದ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮನಗೊಂಡಿದ್ದರು. ಅವರ ದೀರ್ಘ ಕಾಲದ ಕರೆ ಮನ್ನಿಸಿ ಒಂದು ವಾರಾಂತ್ಯ ಅಲ್ಲಿಗೆ ಹೋದೆ. ಕರಾವಳಿ ಹಾದಿಯಾಗಿ ಬಸ್ ಪಯಣ: ಮೂರು ಕಡೆ — ಕೂಳೂರು, ಮೂಲ್ಕಿ ಮತ್ತು ಉದ್ಯಾವರ — ಹೊಳೆದಾಟಲು ದೋಣಿ ಹಿಡಿದು ಸಾಗುವ ಮಜಲು ಬಸ್-ದೋಣಿ ಯಾತ್ರೆ. ಅವರ ಮನೆಯಲ್ಲಿಯ ತುಂಬು ಆತಿಥ್ಯ ಮತ್ತು ಅದರ ತಳದಲ್ಲಿ ಸಹಜವಾಗಿ ಹೊಮ್ಮುತ್ತಿದ್ದ ಪ್ರೀತಿ ನನಗೆ “ಶಬರಿಗಾದನು ಅತಿಥಿ ದಾಶರಥಿ”ಯನ್ನು (‘ಶ್ರೀ ರಾಮಾಯಣ ದರ್ಶನಂ’) ನೆನಪಿಗೆ ತಂದಿತು.

ಅಂದಿನ ಉಡುಪಿ ಒಂದು ವಿಸ್ತೃತ ಗ್ರಾಮ. ಕುಶಿನಿವಾಸ ಇದರ ಹೊರವಲಯದ ಕುಂಜಿಬೆಟ್ಟುವಿನಲ್ಲಿತ್ತು. ಅಲ್ಲಿಂದಾಚೆಗೆ ಬಹುತೇಕ ನಿರ್ಜನ ಪ್ರದೇಶ. ಮುರಕಲ್ಲಿನ ದಿಬ್ಬ ಗುಡ್ಡಗಳು, ಕಣಿವೆ ಕೊರಕಲುಗಳು, ಹಸುರಿನ ಹರವು, ಅಲ್ಲಲ್ಲಿ ನಿಬಿಡ ಮರ ಕಾಡುಗಳು, ಜುಳುಜುಳು ಹರಿಯುವ ನಿತ್ಯ ತೊರೆಗಳು – ಪ್ರಾಚೀನ ಋಷ್ಯಾಶ್ರಮ ಅಥವಾ ಪವಿತ್ರ ಕ್ಷೇತ್ರಗಳನ್ನು ನೆನಪಿಗೆ ತರುವ ನಿಸರ್ಗ ವೈಭವ. ಅಲ್ಲೇ ಸುತ್ತು ಬಳಸಿ ಕಾರ್ಕಳಕ್ಕೆ ಸಾಗುತ್ತಿದ್ದ ಬಸ್ ಹಾದಿಯಲ್ಲಿ ಸುಮಾರು ೪ ಕಿಮೀ ನಡೆದು ಎತ್ತರದ ನೆಲೆಯನ್ನು ತಲಪಿದೆವು. ನಮ್ಮೆದುರಿನ ವಿಸ್ತಾರ ಇಳಿಜಾರಿಡೀ ಮುರಕಲ್ಲಿನ ಎಡ್ಡತಿಡ್ಡ ಹರವು, ಪ್ರಕೃತಿಯ ರೌದ್ರತಾಂಡವ ಹಠಾತ್ತನೆ ಘನೀಭವಿಸಿದಂಥ ನೋಟ. “ಈ ಒಟ್ಟು ಪ್ರದೇಶದ ಹೆಸರು ಮಣಿಪಾಲ” ಎಂದರು ಕುಶಿ.

ನೇಸರು ಪಡುಬಾನಿಗೆ ಹೊರಳಿತ್ತು. ನೆರಳುಗಳು ಉದ್ದುದ್ದವಾಗುತ್ತಿದ್ದುವು. ಕಾಗೆಗಳು ಹಿಂಡುಹಿಂಡಾಗಿ ಕಾಕಾರವ ಸಹಿತ ಎಲ್ಲಿಂದಲೋ ಇನ್ನೆಲ್ಲಿಗೋ ಹಾರುತ್ತಿದ್ದುವು. ಆ ದೈವಿಕ ದೃಶ್ಯ ಕುವೆಂಪು ಸಾಲುಗಳಿಗೆ “ದೇವರು ರುಜು ಮಾಡಿದನು, ಕವಿ ಅದ ರಸವಶನಾಗುತ ನೋಡಿದನು” ಬರೆದ ಭಾಷ್ಯದಂತೆ ಕಂಡಿತು. ಅದೇ ವರ್ಷ (೧೯೪೯) ಪ್ರಕಟವಾಗಿದ್ದ ಮತ್ತು ನಾವಿಬ್ಬರೂ ಗರಬಡಿದವರಂತೆ ಓದಿ ಮೈಮರೆತಿದ್ದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ‘ಶಿಲಾತಪಸ್ವಿನಿ’ ಅಧ್ಯಾಯ ನಮ್ಮ ನೆನಪಿಗೆ ಬಂತು:

ಪಾಂಥರ್ಗೆಗೋಚರಿಸಿತೊಂದು ಋಷಿವನ ಸದೃಶ ಕಾನನಂ.ಪೊಕ್ಕರದನೇನೆಂಬೆನಾ ಮಹಾ
ಶಕುನಮಯದುಃಖಗರ್ಭಿತ ಮೌನಮಂ! ಹಾಡದಿವೆ ಹಕ್ಕಿ.ನಲಿದಾಡದಿವೆ ಮಿಗಂ. ಸಂಚರಿಸದಿದೆ
ಗಾಳಿ.ತನಿಗಂಪನೀಯದಿವೆ ಮರಗೋಡಿನೊಳ್ ಮಲರ್.ಚಲಿಸವೆಲೆ ಪುಲ್ಲೆಸಳ್. ಆವ ದುಃಖವೊ
ಅಲ್ಲಿಕೊನೆಗಾಣದಂತಮಂ ದಿನಮುಂ ನಿರೀಕ್ಷಿಪೊಲ್ಮೂಗುವಟ್ಟಿರ್ದ ಬನಮೆಸೆದುದಾ ಪಥಿಕರ್ಗೆಬರೆದಂತೆ ನೀರವಂ,
ಕೊರೆದಂತೆ ನಿಶ್ಚಲಂ,ನಿಶ್ಶಬ್ದತಾ ಕುಂಭಕ ಸ್ಥಿತಿಯ ಯತಿನಾದದೋಲ್.

ನಿರ್ಜನ, ನಿರ್ಮೃಗ, ನೀರವ, ನಿರ್ವನ ವಿಸ್ತಾರ. ಇದ್ದವರು ನಾವಿಬ್ಬರೇ. ದೂರ ದಿಗಂತದ ಅಂಚಿನಲ್ಲಿ ವ್ಯಕ್ತಿಯೊಬ್ಬನ ಛಾಯೆ ಕಂಡಂತಾಯಿತು. ಅತ್ತ ಕಡೆಗೆ ಲಗುಬಗೆಯಿಂದ ನಡೆದೆವು, ಅಲ್ಲ, ಬಂಡೆಗಳ ಮಂಡೆಗಳನ್ನು ಕುಪ್ಪಳಿಸಿ ನೆಗೆಯುತ್ತ ಅಡ್ಡಹಾಯ್ದೆವು. ಆ ಮಧ್ಯವಯಸ್ಕ ಹಸನ್ಮುಖಿಗೆ ಕುಶಿ ವಂದನೆ ಸಲ್ಲಿಸಿ, “ಇವರು ಜಿ.ಟಿ.ನಾರಾಯಣರಾವ್, ನನ್ನ ಪರಮಾಪ್ತರು, ವಿದ್ಯಾರ್ಥಿಗಳ ಮಾತಿನಲ್ಲಿ Grand Trunk Nonstop Railway! ಅಂದರೆ ಎಲ್ಲಿಯೂ ನಿಲ್ಲದೇ ಮಾತಾಡುತ್ತಿರುವ ವಾಗ್ಧುರಧೀರರು!” ಹೀಗೆ ಹೇಳಿ ಮುಂದೆ ನಡೆದು ಆ ಕರ್ಬಂಡೆಗಳೆಡೆಯಲ್ಲಿ ಕರಗಿಯೇಹೋದರು.

ಈಗ ಅಲ್ಲಿ ನಾವಿಬ್ಬರೇ: ಹೊಸ ಹಿರಿಯ ಮತ್ತು ಹಳೆ ಕಿರಿಯ — ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಬೆರಗು (ಮಂಕುತಿಮ್ಮನ ಕ್ಷಮೆಕೋರಿ)! ಅವರೋ ನನ್ನನ್ನು ಒಬ್ಬ ಹಿರಿಯಣ್ಣನ ಒಲವಿನಿಂದ ತಮ್ಮತ್ತ ಸೆಳೆದುಕೊಂಡು ತಮ್ಮ ಕನಸುಗಳನ್ನು ಎಳೆ ಎಳೆಯಾಗಿ ನನ್ನೆದುರು ಬಿಡಿಸಿಡಲು ತೊಡಗಿದರು. ಮುಂದಿನ ೧ ತಾಸು, ಸೂರ್ಯ ಕಂತುವ ತನಕವೂ, ಆ ವಲಯ ಪೂರ್ತಿ ಅಲೆದಾಡಿದೆವು. ಅವರೊಂದು ಹಿರಿಕನಸನ್ನು ಕನವರಿಸುತ್ತಿದ್ದಂತೆ ನನಗನ್ನಿಸಿತು: ವೈದ್ಯಕೀಯ-ಎಂಜಿನಿಯರಿಂಗ್ ಕಾಲೇಜ್ ಸಮುಚ್ಚಯದ ನಿರ್ಮಾಣ, ಹಾಸ್ಟೆಲ್, ಮನೆ, ಅತಿಥಿಗೃಹ, ಕ್ರೀಡಾಂಗಣ, ಕ್ಯಾಂಟೀನ್ ಮುಂತಾದ ಸೌಕರ್ಯಗಳ ಏರ್ಪಾಡು! ಪ್ರತಿ ಸಲವೂ ಅವರು ನನ್ನನ್ನೇ ಉದ್ದೇಸಿಸಿ ಅಷ್ಟು ವಿವರವಾಗಿಯೂ ಆತ್ಮೀಯವಾಗಿಯೂ ಹೇಳುತ್ತಿದ್ದಾಗ, ಇನ್ನು ನಾನು ಹೆಡ್ಡನಾಗಬಾರದಲ್ಲ ಎಂಬ ಆತ್ಮಪ್ರತ್ಯಯದಿಂದ, ಒಂದು ಮಾರ್ಮಿಕ ಪ್ರಶ್ನೆ ಅವರತ್ತ ಎಸೆದೆ (ಹಾಗೆಂದು ಆಗ ಭಾವಿಸಿದ್ದೆ). ಮತ್ತು ಅವರಿಂದ ನಿಭಾಯಿಸಲಾಗದಿದ್ದ ಪಟ್ಟು ಹೊಡೆದೆನೆಂದು ಬೀಗಿದೆ ಕೂಡ. “ಅದೆಲ್ಲ ಸರಿ ಸರ್! ಆದರೆ ಇಷ್ಟೆಲ್ಲ ಯೋಚನೆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಅತ್ಯವಶ್ಯವಾದ ಹಣಸಂಗ್ರಹ ಹೇಗೆ ಮಾಡುತ್ತೀರಿ?”

ನಾನು ಹೇಳಬಾರದ್ದನ್ನು ಹೇಳಿದೆನೋ ಎಂಬಂತೆ ಅವರು ನನ್ನತ್ತ ತೀಕ್ಷ ದೃಷ್ಟಿ ಕುತ್ತಿ ನುಡಿದರು, “That’s the last priority.”
My ego was hurt. “How can you be so sure of it, sir?”
“Well, young man! No great cause has ever suffered for want of funds. The real question is how great the cause is and how unselfish and committed you are towards achieving it.”
“Can you prove it?”
“Life is not mathematics. It’s my experience for the past four-odd decades in public life that emboldens me to visualize dreams and realize them. If you live like me, by the time you attain my present age, you too will realize the truth underlying my assertion.” He was emphatic and uncompromising!
ಅಷ್ಟರಲ್ಲಿ ಹರಿದಾಸಭಟ್ಟರು ಅಲ್ಲಿ ಹಾಜರಾದರು.

ಬೈಗಿನ ಹೊಂಬೆಳಕಿನಲ್ಲಿ ಮತ್ತೆ ನಾವಿಬ್ಬರೂ ಕುಶಿ ಮನೆಯತ್ತ ನಡೆಯತೊಡಗಿದೆವು. “ಯಾರಯ್ಯಾ ಈ ಹುಚ್ಚು ಕನಸಿಗ? ಶುದ್ಧ ಬೋರ್!” ಎಂದೆ. “ಅಂಥಿಂಥ ವ್ಯಕ್ತಿ ಇವರಲ್ಲ. ಇವರಂಥ ವ್ಯಕ್ತಿ ಇನ್ನಿಲ್ಲ. ಜಮ್‌ಶೆಡ್ಜೀ ತಾತಾ ಅಥವಾ ಪಂಡಿತ ಮದನಮೋಹನ ಮಾಳವೀಯ ಸಮಾನರಿವರು. ಡಾಕ್ಟರ್ ಟಿ.ಮಾಧವ ಪೈ ಎಂದರೆ ಇವರೇ. ಕಲ್ಲಿನಿಂದ ಗೊಮ್ಮಟನನ್ನು ಉತ್ಖನಿಸುವ ಮಹಾಶಿಲ್ಪಿ, ಮಣಿಪಾಲದ ಬ್ರಹ್ಮ, ನಿಂದೆಡೆ ನೆಲವನೆ ತುಂಬುವ ಜಾದೂಗಾರ. ಸದ್ಯ ನಾನಿರುವ ಕಾಲೇಜ್ ಇವರ ಕನಸಿನ ನನಸು!” ಪುರಂದರದಾಸರು ಹಾಡಿದ್ದಾರೆ, “ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ.” ಅಂದು ಮಾಧವ ಪೈಗಳು ಬಿತ್ತಿದ ಆ ‘ನಾಮ’ – ಯಾವ ಘನೋದ್ದೇಶವೂ ಧನಾಭಾವದಿಂದ ಕುಂಠಿತವಾದದ್ದಿಲ್ಲ, ನಿಜಕ್ಕೂ ಅದರ ನಿರ್ವಹಣೆ ಬಗ್ಗೆ ನೀವೆಷ್ಟು ಬದ್ಧ ಮತ್ತು ಸ್ವಾರ್ಥರಹಿತರಾಗಿರುವಿರೆಂಬುದೇ ಇಲ್ಲಿಯ ಪ್ರಶ್ನೆ — ಮುಂದೆ ನನ್ನ ಬದುಕಿನ ವಿವಿಧ ಕಲಾಪಗಳಲ್ಲಿ ಹೇಗೆ ಮೊಳೆತು ಹೆಮ್ಮರವಾಯಿತೆಂಬುದನ್ನು ಇಂದು ಸಿಂಹಾವಲೋಕಿಸುವಾಗ ವಿಸ್ಮಯವಾಗುತ್ತದೆ. ನನ್ನ ಅನುಭವಗಳನ್ನು ಮುಖ್ಯವಾಗಿ ‘ಎನ್‌ಸಿಸಿ ದಿನಗಳು’ [ಪುಸ್ತಕ ಲಭ್ಯ ಬೆಲೆ ರೂ ೫೫ ವಿಳಾಸ ಸಹಿತ ಮನಿಯಾರ್ಡರ್ ಮಾಡಿ] ಮತ್ತು ‘ಸವಾಲನ್ನು ಎದುರಿಸುವ ಛಲ’ (ನೋಡಿ – ‘ವೀಣೆ ಶೇಷಣ್ಣ ಭವನ’ ಲೇಖನ) ಎನ್ನುವ ಎರಡು ಕೃತಿಗಳಲ್ಲಿ ನಿವೇದಿಸಿದ್ದೇನೆ.

ಮಂಗಳೂರಿನಲ್ಲಿಯ ಇನ್ನೊಂದು ರಸಾನುಭವ ‘ಷೋಡಶಿಯರ ಕಾಂತಕ್ಷೇತ್ರ ಮತ್ತು ನಾನೆಂಬ ಋಷ್ಯಶೃಂಗ.’ ಬೆಸೆಂಟ್ ಮಹಿಳಾ ಶಾಲೆಯ ಅಧ್ಯಾಪಕ ಮಿತ್ರ ಶ್ರೀನಿವಾಸ ಉಡುಪರ ಕೋರಿಕೆ ಮೇರೆಗೆ ನಾನು ಅಲ್ಲಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ನನ್ನ ಬಿಡುವೇಳೆಯಲ್ಲಿ ಐಚ್ಛಿಕ ಗಣಿತ ಪಾಠ ಮಾಡಲು ಒಪ್ಪಿ ಅಲ್ಲಿಗೆ ಹೋದೆ. ಕಾಲೇಜಿನ ಅನುಮತಿಯನ್ನು ಅವರೇ ಪಡೆದಿದ್ದರು. ಆ ತನಕ ನನ್ನ ಅರಿವಿಗೆ ಬಂದಿರದ ವಿಚಿತ್ರ ಸಮಸ್ಯೆಯೊಂದು ಆಗ ನನ್ನೆದುರು ಧುತ್ತೆಂದು ಎದ್ದುನಿಂತಿತು: ಸುಮಾರು ೩೦ ಮಂದಿ ಹದಿಹರೆಯದ ಮುಗುದೆಯರು ಏಕಕಾಲದಲ್ಲಿ ನನ್ನಲ್ಲೇ ತಮ್ಮ ದೃಷ್ಟಿ ನೆಟ್ಟಿದ್ದಾರೆ! ಒಂಟಿ ಹುಡುಗನಾಗಿ ಬಾಳಿದ ನಾನು ಎಂದೂ ಒಬ್ಬ ಹುಡುಗಿಯ ಮುಖವನ್ನೂ ನೇರ ನೋಡಿರಲಿಲ್ಲ, ಯಾರೊಬ್ಬಳ ಜೊತೆಯೂ ಮಾತಾಡಿರಲಿಲ್ಲ. ಹುಚ್ಚುಚ್ಚು ಕಲ್ಪನೆಗಳು. ದೂರವಿರುವುದೇ ಕ್ಷೇಮವೆಂಬ ಪಲಾಯನವಾದ. ಶುದ್ಧ ಪುಕ್ಕಲುತನ!

ತರಗತಿಯತ್ತ ಮುಖ ತಿರುಗಿಸಿ ಪಾಠ ಹೇಳಲು ಪ್ರಯತ್ನಿಸಿ ಸೋತೆ. ಗಣಿತ ಪರಿಕಲ್ಪನೆಗಳೆಲ್ಲವೂ ಆವಿಯಾಗಿ ಹೋಗಿ ಪೆಚ್ಚಾದೆ. ಈಗೇನು ವಡಲಿ? ಸರಿ, ಕರಿಹಲಗೆಯತ್ತ ದೃಷ್ಟಿಹರಿಸಿ ಎಲ್ಲವನ್ನೂ ಅಲ್ಲಿ ಬರೆಯುತ್ತ ಮೊದಲ ಹಲವಾರು ತರಗತಿಗಳನ್ನು ನಿಭಾಯಿಸಿದೆ. ಆ ಒಂದು ತರಗತಿಯನ್ನು ಎಂದಿನಂತೆ ತಲೆ ಅಡಿಹಾಗಿ ಕರಿಹಲಗೆಯನ್ನೇ ದಿಟ್ಟಿಸುತ್ತ ಹೊಕ್ಕಾಗ ಅದರ ಮೇಲೆ ಅತ್ಯಂತ ಕಲಾತ್ಮಕವಾಗಿ ರೂಪಿಸಿದ್ದ ಅಣಕುಚಿತ್ರವನ್ನೂ ಅಡಿಬರೆಹವನ್ನೂ ಕಂಡು ಹೌಹಾರಿದೆ: ಬಾಲಬ್ರಹ್ಮಚಾರಿಯೊಬ್ಬ ಕಪ್ಪುಹಲಗೆ ಜೊತೆ ಚಕ್ಕಂದವಾಡುತ್ತಿದ್ದ ದೃಶ್ಯ, ಇದರ ಕೆಳಗೆ our smart and handsome teacher is wedded to the black board! ಬಹುಶಿರದ ರುದ್ರ ಭದ್ರ ಕಾಳಿ ಹಠಾತ್ತನೆ ಪ್ರತ್ಯಕ್ಷವಾದಾಗ ಗಾಬರಿಗೊಂಡ ತೆನಾಲಿ ರಾಮಕೃಷ್ಣನ ಸುಹಾಸ ಪ್ರಜ್ಞೆ ನೆನಪಿಗೆ ಬಂತು: “ಒಂದು ಮೂಗು ಮಾತ್ರ ಇರುವ ನನಗೇ ಶೀತಬಾಧೆಯಿಂದ ಸೀನುಗಳು ಪುಂಖಾನುಪುಂಖವಾಗಿ ಸಿಡಿದಾಗ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ನೂರಾರು ಮೂಗುಗಳಿರುವ ನಿನಗಂಥ ಸ್ಥಿತಿ ಎದುರಾದರೆ ಹೇಗೆ ಸಹಿಸುವೆ ತಾಯೀ!”

ನಾನೂ ಸುಹಾಸಕ್ಕೇ ಶರಣಾದೆ, “Thank you very much my dear dancing damsels for giving me such compliments ‘smart and handsome.’ Are you not contradicting yourselves when you say in the very next sentence that I am wedded to the black board? Am I that ugly?” ಇಡೀ ತರಗತಿಯಲ್ಲಿ ನಗುವಿನ ಹೊನಲು ಕಟ್ಟೆಯೊಡೆದು ಭೋರ್ಗರೆಯಿತು, ಜೊತೆಗೇ ನನ್ನ ಅಳುಕು ಆತಂಕಗಳನ್ನು ಕೊಚ್ಚಿಕೊಂಡು ಹೋಯಿತು ಕೂಡ.

ಮಂಗಳೂರಿನಲ್ಲಿದ್ದಾಗ ನಡೆದ ಇನ್ನೆರಡು ಘಟನೆಗಳನ್ನು ‘ಸಂಗೀತ ರಸನಿಮಿಷಗಳು’ ಪುಸ್ತಕದಲ್ಲಿ [ಪುಸ್ತಕ ಲಭ್ಯವಿದೆ. ಬೆಲೆ ರೂ ೬೦ ವಿಳಾಸ ಸಹಿತ ಮನಿಯಾರ್ಡರ್ ಮಾಡಿ] ಚಿತ್ರಿಸಿದ್ದೇನೆ: ಭಾವೀ ಚಿತ್ರವೀಣಾ ಜೀನಿಯಸ್ ಎನ್.ರವಿಕಿರಣ್‌ನ ತಂದೆ ಎನ್.ನರಸಿಂಹನ್ ಮತ್ತು ಅಜ್ಜ ಗೋಟುವಾದ್ಯ ನಾರಾಯಣ ಅಯ್ಯಂಗಾರ್ ಇವರ ಭೇಟಿ, ಕಾಂಚನವೆಂಬ ಕುಗ್ರಾಮದಲ್ಲಿ ಆಸ್ವಾದಿಸಿದ ತ್ಯಾಗರಾಜರ ಪಂಚರತ್ನ ಕೃತಿಗಳ ಸೊಗಸು.

ಅವೇ ದಿನಗಳಲ್ಲಿ ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಲು ಶಂಕರಭಟ್ಟ, ಸೇಡಿಯಾಪು ಕೃಷ್ಣಭಟ್ಟ, ಉಗ್ರಾಣ ಮಂಗೇಶರಾವ್, ಕಡವ ಶಂಭುಶರ್ಮ ಮತ್ತು ಕೋಟ ಶಿವರಾಮಕಾರಂತ – ಈ ವಾಙ್ಮಯ-ಸಪ್ತರ್ಷಿಗಳೊಂದಿಗೆ ನನಗೆ ನಿಕಟ ಸಾಹಚರ್ಯ ಒದಗಿದ್ದೊಂದು ಭಾಗ್ಯ. ಕುಶಿ ಮತ್ತು ನಾನು ಮಂಜೇಶ್ವರರಲ್ಲಿಗೆ ಆಗಾಗ ತೀರ್ಥಯಾತ್ರಾರ್ಥ ಹೋಗಿ ಆ ಸಾಹಿತ್ಯಗಂಗೋತ್ರಿಯಲ್ಲಿ ಯಥೇಚ್ಛವಾಗಿ ಮಿಂದು ಪುನೀತರಾಗಿ ಮರಳುತ್ತಿದ್ದೆವು. ದಾಖಲೆಗಳ ಪರಿಶೀಲನೆ, ತುಲನೆ ಮತ್ತು ತೀರ್ಮಾನಗಳಿಗೆ ಇವರು ಪರ್ಯಾಯ ನಾಮ. ತತ್ಪೂರ್ವ ಇಂಟರ್ಮೀಡಿಯೆಟ್ ತರಗತಿಗಳಲ್ಲಿ ನನ್ನ ಗುರುಗಳಾಗಿದ್ದ ಮುಳಿಯರು ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿ ಪರ ಊರಿಗೆ ತೆರಳಿದ್ದರು. ಹಳೆಗನ್ನಡ ಕಾವ್ಯಗಳನ್ನು ಭಾವಾರ್ಥಸಹಿತ ಓದಿ ವಿವರಿಸಿ ಆ ದೃಶ್ಯಗಳನ್ನು ನಮ್ಮೊಳಗೆ ಬಿಂಬಿಸುವುದರಲ್ಲಿ ಇವರು ಸಿದ್ಧಹಸ್ತರು.

ಕಡೆಂಗೋಡ್ಲು ತಮ್ಮ ವೃತ್ತಿ (ಸಂತ ಅಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ) ಜೊತೆ ‘ರಾಷ್ಟ್ರಬಂಧು’ ಸಾಪ್ತಾಹಿಕದ ಸಂಪಾದಕರೂ ಆಗಿದ್ದರು. ಇವರ ಸಹಸಂಪಾದಕ ಕುಳುಕುಂದ ಶಿವರಾಯರ (ಮುಂದೆ ನಿರಂಜನ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದರು) ನಿಕಟ ಪರಿಚಯಲಾಭ ನನಗೊದಗಿತು. ಶಂಕರಭಟ್ಟರ ಹಿರಿ ಮಗ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯೂ ಹೌದು. ಇತ್ತ ನಾನೊಬ್ಬ ಮರಿಲೇಖಕ! ಹೀಗಾಗಿ ಶಂಕರಭಟ್ಟರು ನನ್ನ ಪ್ರಗತಿಯಲ್ಲಿ ವಿಶೇಷ ಆಸ್ಥೆ ತಳೆದು ನನಗೆ ಪ್ರೋತ್ಸಾಹವಿತ್ತರು. ನನ್ನ ಹಲವಾರು ಲೇಖನಗಳು ಮತ್ತು ಕತೆಗಳು ‘ರಾಷ್ಟ್ರಬಂಧು’ವಿನಲ್ಲಿ ಬೆಳಕು ಕಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನೊಬ್ಬ ‘ಗಣ್ಯ ಲೇಖಕ’ನಾದೆ!

ಕಡೆಂಗೋಡ್ಲು ಮತ್ತು ಸೇಡಿಯಾಪು ಇಬ್ಬರೂ ಮುಳಿಯರ ಶಿಷ್ಯರು. ಅವರು ಅಭಿಮನ್ಯು, ಇವರು ವಿದುರ! ಇಬ್ಬರೂ ನವೋದಯ ಕಾವ್ಯದ ಹರಿಕಾರರಲ್ಲಿ ಅಗ್ರ ಪಙ್ತಿಯ ಕವಿಗಳು. ಒಮ್ಮೆ ಇಂಟರ್ಮೀಡಿಯೆಟ್ ತರಗತಿಯಲ್ಲಿ ಮುಳಿಯರೆಂದಿದ್ದರು, “ಕನ್ನಡದ ಮುಖವಾಣಿ ಕಡೆಂಗೋಡ್ಲು, ಒರೆಗಲ್ಲು ಸೇಡಿಯಾಪು.” ಸೇಡಿಯಾಪು ಮೊದಲು ನಮ್ಮ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಾನು ಉಪನ್ಯಾಸಕ ವೃತ್ತಿಗೆ ಬಡ್ತಿ ಪಡೆದು ಕಾಲೇಜಿಗೆ ಬಂದಾಗ ಇವರು ನಮ್ಮ ಜೊತೆ ಕನ್ನಡ ಟ್ಯೂಟರ್ ಆಗಿ ನೇಮನಗೊಂಡಿದ್ದರು. ಆಡಳಿತೆಯ ವಿಪರ್ಯಾಸ: ಗುರುಗಳ ಗುರುವಾಗಿದ್ದ ಸೇಡಿಯಾಪು ಇನ್ನೂ ಟ್ಯೂಟರ್, ಹುಡುಗತನ ಮಾಸದಿದ್ದ ಎಳೆನಿಂಬೆ ನಾನೋ? ಉಪನ್ಯಾಸಕ! ಒಮ್ಮೆ ಕೃಷ್ಣಭಟ್ಟರ ಮನೆಗೆ ಹೋದೆ. ಅವರ ಮಗಳು ಶಿವಸುಂದರಿ ಐದಾರು ವರ್ಷದ ಕೂಸು. ಅವಳನ್ನು ರಂಜಿಸುವ ಸಲುವಾಗಿ ತಿರುಚಿದ ಒಂದು ಕನ್ನಡ ಪದ್ಯವನ್ನು ದ್ರುತಗತಿಯಲ್ಲಿ ಉದುರಿಸಿದೆ:

ಟೋಮುಲಾಕು ಟಾಕುಯಾನಿ ಟೇಪೆದೀಬಿ ಟಾದುಗಾವ
ಟಾಸೆಡುಮ್ತದೊಮ್ನಡಮ್ಕು ತಿಮ್ನುಟಿತ್ತಿಬು
ಟೋತಿಬೊಯ್ಯ ಟಾಸೆಡುಮ್ತಿದಿಮ್ನ ಡಯಿಬೆ ಟೋಮುಲಾಕ
ಡದಿಬು ಡದಿಬು ಣ್ರಾಪಟಿತ್ತಿಬು!

ಆ ಹುಡುಗಿ ‘ಟಾಸೆಡುಮ್ತದೊಮ್ನಡಮ್ಕು ತಿಮ್ನುಟಿತ್ತಿಬು’ ಭಾಗದಲ್ಲಿ ಬಿದ್ದು ಬಿದ್ದು ನಗತೊಡಗಿದಳು. ಮತ್ತೆ ಮತ್ತೆ ಅದನ್ನು ನನ್ನಿಂದ ಹೇಳಿಸಿ ಕೇಳಿ ಸಂತೋಷಪಟ್ಟಳು. ನಮ್ಮ ಗಲಾಟೆ ಕೇಳಿದ ಸೇಡಿಯಾಪು ಹೊರಬಂದು ಈ ತಿರುಚಾಟ ಕಿರುಚಾಟಗಳಲ್ಲಿ ತಾವೂ ಭಾಗಿಗಳಾದರು. ಕಗ್ಗದ ನೇರ ಪಾಠವನ್ನು ಕೂಡಲೇ ಗ್ರಹಿಸಿ ನನ್ನ ಕಸರತ್ತನ್ನು ಮೆಚ್ಚಿದರು. ಅದರ ಆರಂಭ ಸಾಲು ಹೀಗಿದೆ, “ಮೋಟುಕಾಲು ಕಾಟುನಾಯಿ ಪೇಟೆಬೀದಿ ದಾಟುವಾಗ.” ಮುಂದೆ ನನಗೆ ಕಾಗದ ಬರೆಯುವಾಗಲೆಲ್ಲ ‘ಪ್ರಿಯ ಟೋಮುಲಾಕು’ ಎಂದೇ ಸಂಬೋಧಿಸುತ್ತಿದ್ದರು.

ಉಗ್ರಾಣ, ಕಡವ ಮತ್ತು ಕಾರಂತ ಅಂದು ಪುತ್ತೂರಿನ ಸಾಹಿತ್ಯರತ್ನರು, ಸ್ವತಃ ಸೃಜನಶೀಲ ಲೇಖಕರೂ ಭಾಷಾಂತರಕಾರರೂ ಆಗಿದ್ದ ನನ್ನ ಸೋದರಮಾವ ಮರಿಕೆ ಎ.ಪಿ.ಸುಬ್ಬಯ್ಯನವರ ಪರಮಮಿತ್ರರು. ಹೀಗಾಗಿ ರಜಾದಿನಗಳಲ್ಲಿ ಪುತ್ತೂರಿಗೆ ಹೋದಾಗ ಈ ತ್ರಿಮೂರ್ತಿಗಳ ಸಂಗ ನನ್ನ ಚಿಂತನೆ ಕಾರ್ಯವೈಖರಿಗಳಿಗೆ ಹೊಸ ಆಯಾಮ ನೀಡಿತು. ಕಾರಂತರ ‘ಬಾಲವನ’ ಈ ಮಾನವಮೇರುವಿನ ಪ್ರಯೋಗರಂಗ, ನಮ್ಮಂಥ ತರುಣರ ಶಿಕ್ಷಣಕಾಶಿ ಮತ್ತು ಮಕ್ಕಳ ಕ್ರೀಡಾಲೋಕ. ಉಗ್ರಾಣರದು ವಿದ್ವಜ್ಜನ್ಯ ಸಾಗರೋಪಮ ಗಾಂಭೀರ್ಯ. ಕಡವರನ್ನೊಮ್ಮೆ ಕಾರಂತರು ಪುತ್ತೂರಿನ ಸಾಕ್ರೆಟೀಸ್ ಎಂದು ಸಕಾರಣವಾಗಿ ವರ್ಣಿಸಿದ್ದುಂಟು — ಅಂಥ ಪ್ರಖರ ವೈಚಾರಿಕತೆ ಮತ್ತು ಆಚರಣೆ, ನಿರ್ಭೀತ ಮನೋವೃತ್ತಿ ಮತ್ತು ಪರಿಪೂರ್ಣ ಪಾರದರ್ಶಕತೆ. ಶಿವರಾಮ ಕಾರಂತರಂತೂ ಮೈವೆತ್ತ ವಿಕಿರಣಪಟುತ್ವ (radioactivity) – ಅವರದೇ ಮಾತಿನಲ್ಲಿ ಸುತ್ತಲೂ ಲತ್ತೆ ಕೊಡುವ ಕತ್ತೆ ಇದು!

ಅದೇ ಸುಮಾರಿಗೆ ವೈಜಯಂತೀ ಪಂಚಾಂಗದ ಸ್ಥಾಪಕ-ಸಂಪಾದಕ ಯರ್ಮುಂಜ ಶಂಕರಜೋಯಿಸರ ಸಾಹಚರ್ಯ ನನಗೆ ಲಭಿಸಿತು. ಇದೊಂದು ಬೋನಸ್. ಖಗೋಳವಿಜ್ಞಾನದಲ್ಲಿಯ ಆಧುನಿಕ ದೃಕ್ಸಿದ್ಧಾಂತವನ್ನು ಬೋಧಿಸುವಲ್ಲಿ ಈ ಮಹಾನುಭಾವರು ಕೈಗೊಂಡ ಕ್ರಮಗಳು ಮೂರು ಸಮಾಂತರ ಸಮಕಾಲೀನ ಧಾರೆಗಳಲ್ಲಿ ಪ್ರವಹಿಸಿದುವು: ವಾರ್ಷಿಕ ಪಂಚಾಂಗ ಪ್ರಕಟಣೆ, ಮದುವೆ ಮುಂಜಿ ಮುಂತಾದ ಧಾರ್ಮಿಕ ಸಭೆಗಳಲ್ಲಿ ದೃಕ್ಸಿದ್ಧಾಂತದ ಪ್ರಚಾರ ಮತ್ತು ವಿದ್ವದ್ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಹಾಗೂ ಚರ್ಚೆ.

ಸಿದ್ಧಾಂತದ ಸಾರವಿಷ್ಟು: ವರ್ತಮಾನಕಾಲದಲ್ಲಿ ಗೋಚರಿಸುವ ಮತ್ತು ಪ್ರತ್ಯಕ್ಷ ವೀಕ್ಷಣೆಗೆ ಲಭಿಸುವ ಗಗನವಿದ್ಯಮಾನಗಳ — ಮುಖ್ಯವಾಗಿ ಸೂರ್ಯ, ಚಂದ್ರ, ಗ್ರಹಗಳ ಚಲನೆ, ಯುಗಾದಿ, ಉತ್ತರಾಯಣ ಮತ್ತು ದಕ್ಷಿಣಾಯನ ಆರಂಭ ದಿನಗಳು — ಖಚಿತ ನಿರ್ಣಯ. ಉದಾಹರಣೆಗೆ ಪರಂಪರಾಗತವಾಗಿ (ಆದ್ದರಿಂದ ಯಾಂತ್ರಿಕವಾಗಿ ಕೂಡ) ಬಂದಿರುವ ಸೂರ್ಯಸಿದ್ಧಾಂತದ ಪ್ರಕಾರ ಎರಡು ಯುಗಾದಿಗಳಿವೆ: ಸೌರ ಮತ್ತು ಚಾಂದ್ರ. ಇವೆರಡೂ ವರ್ತಮಾನ ಆಕಾಶದಲ್ಲಿ ಅಸಿಂಧು, ವಸಂತ ವಿಷುವವೊಂದೇ (ಸಾಧಾರಣವಾಗಿ ಮಾರ್ಚ್ ೨೧/೨೨) ಋಜು ಯುಗಾದಿ; ಉತ್ತರಾಯಣಾರಂಭ ಮಕರಾಯಣದಂದು (ಡಿಸೆಂಬರ್ ೨೧/೨೨) ಸಂಭವಿಸುತ್ತದೆ, ಮಕರ ಸಂಕ್ರಮಣದಂದು ಅಲ್ಲ ಮುಂತಾದ ಪ್ರತಿಪಾದನೆಗಳು ಅಂದಿನ ಪಟ್ಟಭದ್ರ ಮತ್ತು ಚಿಂತನಶೂನ್ಯ ಧಾರ್ಮಿಕ ನಾಯಕರಿಗೆ ಪಥ್ಯವಾಗಲಿಲ್ಲ. ಆದರೆ ಜೋಯಿಸರು ಬಗ್ಗಲಿಲ್ಲ.

ಕ್ಯಾಂಬ್ರಿಜ್ ವಿಶ್ವವಿದ್ಯಾಲಯದ ಗಣಿತ ಟ್ರೈಪಾಸ್ ಎಂಬ ಅತ್ಯುನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಪುಣೆಯ ಬಾಲಗಂಗಾಧರ ತಿಲಕರು ಮರಾಠಿಯಲ್ಲಿ ಮೊದಲಿಗೆ ದೃಕ್ಸಿದ್ಧಾಂತವನ್ನು ಬಳಕೆಗೆ ತಂದವರಂತೆ. ಶಂಕರಜೋಯಿಸರ ವೈಜ್ಞಾನಿಕಮತಿ ಈ ನೂತನ ಚಿಂತನಪ್ರಕಾರದ ಭೌತಿಕ-ಬೌದ್ಧಿಕ ಸೌಂದರ್ಯಕ್ಕೆ ಮಾರುಹೋಯಿತು. ಮುಂದೆ ಇವರು ಪುಣೆಗೆ ತೆರಳಿ ಮರಾಠಿ ಕಲಿತು ಅದರ ಹೂರಣವನ್ನು ಸ್ವಾಂಗೀಕರಿಸಿ ಕನ್ನಡದಲ್ಲಿ ಬಳಕೆಗೆ ತಂದರು. ಹಿಂದೆ ಭಾರತದಲ್ಲಿ ವರಾಹಮಿಹಿರ (ಕ್ರಿಶ ಸುಮಾರು ೬ನೆಯ ಶತಮಾನ) ಮುಂದೆ ಯೂರೊಪಿನಲ್ಲಿ ಕೊಪರ್ನಿಕಸ್ (೧೫-೧೬ನೆಯ ಶತಮಾನ) ಇಂಥ ಕ್ರಾಂತಿಗಳಿಗೆ ಕಾರಣರಾಗಿದ್ದರು. ಆದರೆ ದುರ್ದೈವ: ಯಾವ ಯುಗಪುರುಷನೂ, ಬುದ್ಧನಿಂದ ತೊಡಗಿ ಗಾಂಧಿವರೆಗೂ, ಸಮಕಾಲೀನವಾಗಿ ಗಣ್ಯತೆ (ಅಂದರೆ ಬಹುಸಂಖ್ಯಾತ ಅಜವೃಂದದ ಮಾನ್ಯತೆ) ಗಳಿಸಲಿಲ್ಲ, ಬದಲು, ಭವಿಷ್ಯಕಾಲೀನವಾಗಿ ಆರಾಧ್ಯನಾಗುತ್ತಾನೆ!

ಅರಿಯದ ಮಾಧ್ಯಮದಲ್ಲಿ ಪ್ರಯೋಗ
ಅಧ್ಯಾಯ ಇಪ್ಪತ್ತೆರಡು

ಪ್ರತಿಯೊಂದು ನೂತನ ವಿಷಯವನ್ನು ಪ್ರವೇಶಗೊಳಿಸುವಾಗಲೂ ಅದರ ಐತಿಹಾಸಿಕ ನೆಲೆ ಮತ್ತು ಮಹತ್ತ್ವಗಳನ್ನು ಸೂಕ್ಷ್ಮವಾಗಿ ವಿವರಿಸುತ್ತಿದ್ದೆ. “ಆರ್ಕಿಮಿಡೀಸ್‌ನಿಗೆ ಸಾಪೇಕ್ಷ ಸಾಂದ್ರತೆಯ ರಹಸ್ಯ ಅಥವಾ ನ್ಯೂಟನ್‌ನಿಗೆ ಗುರುತ್ವಾಕರ್ಷಣ ನಿಯಮದ ಮೂಲ, ಅಂತೆಯೇ ಒಬ್ಬ ಯುಗಪುರುಷನಿಗೆ ಪ್ರಕೃತಿಯ ನೂತನ ಸುಪ್ತ ಗುಣವೊಂದು ಹೊಳೆದುದೇನೂ ಪವಾಡವಲ್ಲ, ಬದಲು, ತಪಸ್ಸಿದ್ಧ ಮನಸ್ಸಿಗೆ ಅದೃಷ್ಟ ಒಲಿವ ಸಹಜ ವಿದ್ಯಮಾನವದು. ನಿಮ್ಮೊಳಗೆ ಪ್ರತಿಯೊಬ್ಬನಲ್ಲಿಯೂ ಅಡಗಿರುವ ಇಂಥ ಪ್ರತಿಭೆಯನ್ನು ಉದ್ದೀಪಿಸಿ ಪ್ರಕಾಶಿಸುವಂತೆ ಮಾಡುವುದು ಉಪಾಧ್ಯಾಯರ ಕರ್ತವ್ಯ” ಎಂಬ ತತ್ತ್ವವನ್ನು ಮತ್ತೆ ಮತ್ತೆ ತರಗತಿಗೆ ಹೇಳುತ್ತಿದ್ದೆ ಮತ್ತು ಈ ನಿಟ್ಟಿನಲ್ಲಿ ಅವರಿಗೆ ಪ್ರೇರಣೆ ನೀಡುತ್ತಿದ್ದೆ.

ಆ ಸಲ ಕ್ಯಾಲ್ಕುಲಸ್ (Calculus) ಎಂಬ ನೂತನ ಗಣಿತವಿಭಾಗವನ್ನು ಶುರುಮಾಡುವ ಮೊದಲು ಹೇಗೆ ಈ ಪರಿಕಲ್ಪನೆ ಸಮಕಾಲೀನವಾಗಿ ಇಂಗ್ಲೆಂಡಿನ ನ್ಯೂಟನ್ ಮತ್ತು ಜರ್ಮನಿಯ ಲೈಬ್‌ನಿಟ್ಜ್ (೧೬-೧೭ನೆಯ ಶತಮಾನ) ಎಂಬ ಗಣಿತವಿದರಿಗೆ ಪರಸ್ಪರ ಸ್ವತಂತ್ರವಾಗಿ ಹೊಳೆಯಿತು, ಅವರು ಹೇಗೆ ತಮ್ಮವೇ ವಿಧಾನಗಳಲ್ಲಿ ಅದನ್ನು ಬೆಳೆಸಿ ಪ್ರಕಟಿಸಿದರು, ಆದರೆ ಇದನ್ನು ಮೊದಲು ಶೋಧಿಸಿದವರು ಯಾರೆಂಬ ಆದ್ಯತೆ ಕುರಿತಂತೆ ಇಬ್ಬರ ನಡುವೆ, ಮುಂದೆ ಉಭಯ ರಾಷ್ಟ್ರಗಳ ನಡುವೆ, ಮತ್ಸರ ಮತ್ತು ಕೃತಿಚೌರ್ಯಗಳ ಅಗ್ನಿ ಭುಗಿಲೆದ್ದು ಹೆಚ್ಚುಕಡಿಮೆ ಒಂದು ಶತಮಾನ ಗಣಿತದ ಮುನ್ನಡೆಗೆ ಪ್ರತಿಬಂಧಕವಾಯಿತು ಎಂಬ ಸಂಗತಿಗಳನ್ನು ಕೂಲಂಕಷವಾಗಿ ವಿವರಿಸಿದೆ ಶಿಕ್ಷಣಮಾಧ್ಯಮ ಇಂಗ್ಲಿಷಿನಲ್ಲಿ.

ನನ್ನ ಈ ನಿರೂಪಣೆಯನ್ನು ಮೆಚ್ಚಿದ ವಿದ್ಯಾರ್ಥಿಗಳ ಪ್ರೀತಿಯ ಒತ್ತಾಯಕ್ಕೆ ಮಣಿದು ಇಡೀ ಲೇಖನವನ್ನು ಕನ್ನಡದಲ್ಲಿ ಬರೆದು ಅಂದಿನ ಜನಪ್ರಿಯ ಸಾಪ್ತಾಹಿಕ ‘ಕರ್ಮವೀರ’ಕ್ಕೆ ಕಳಿಸಿದೆ. ಅದು ಸಂಕಬು (ಸಂಪಾದಕರ ಕಸದ ಬುಟ್ಟಿ) ಸೇರುವುದು ಖಾತ್ರಿ ಎಂದು ನಿರಾಳನಾಗಿದ್ದೆ. ಇಲ್ಲ! ಮುಂದಿನ ವಾರವೇ ಅವರಿಂದ ಪೋಸ್ಟ್ ಕಾರ್ಡ್ ಬಂತು, “ಇಂಥ ಲೇಖನಗಳನ್ನು ಕಳಿಸುತ್ತ ಇರಿ” ಎಂಬ ಷರಾ ಸಹಿತ. ಅಡಿಯಲ್ಲಿ ಸಂಪಾದಕರ ಪರವಾಗಿ ‘ಪಾವೆಂ’ ಎಂಬ ಎರಡಕ್ಷರಗಳ ಬೀಜಮಂತ್ರವಿತ್ತು. ಆ ಲೇಖನ ಪ್ರಕಟವಾಯಿತು, ನನಗೆ ಸಂಭಾವನೆ ಬಂತು, ಅನೇಕ ಜನರ ಮೆಚ್ಚುಗೆಗೂ ಪಾತ್ರವಾಯಿತು. ಮುಂದೆ ಪಾವೆಂ ಮತ್ತು ನನ್ನ ಸ್ನೇಹ ವರ್ಧಿಸಿದಂತೆ ಒಂದು ಸಂಜೆ ಖುದ್ದು ಅವರೇ ನನ್ನನ್ನು ಅರಸಿ ಕವಿ ಗೋಪಾಲಕೃಷ್ಣ ಅಡಿಗರ ಸಹಿತ ನಮ್ಮ ಕಾಲೇಜಿಗೇ ಆಗಮಿಸಿದರು — ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ. ಪಾಡಿಗಾರು ವೆಂಕಟರಮಣ ಆಚಾರ್ಯ ಅವರ ಪೂರ್ತಿ ನಾಮಧೇಯ. ಊರು ಉಡುಪಿ, ಹುದ್ದೆ ಮತ್ತು ವಾಸ ಹುಬ್ಬಳ್ಳಿ. ಉಡುಪಿಗೆ ಬಂದವರು ನನ್ನನ್ನು ನೋಡಲೆಂದೇ ಮಂಗಳೂರಿಗೆ ಪಯಣಿಸಿದ್ದರು. “ವಿಜ್ಞಾನ ವಿಷಯಗಳ ಸಹಜ ಕಾಠಿಣ್ಯವನ್ನು ನೀವು ಸಾಹಿತ್ಯ ಸಂಸ್ಪರ್ಶದಿಂದ ಮಾರ್ದವಗೊಳಿಸುವ ವಿಧಾನ ಸೊಗಸಾಗಿದೆ. ಹೀಗೆಯೇ ಕೃಷಿಮಾಡುತ್ತಿರಿ” ಎಂದು ಹರಸಿದರು ಕೂಡ.

ಜಗತ್ತಿನಲ್ಲಿ ಯಾವ ನಿಸ್ವಾರ್ಥ ಸತ್ಪ್ರಯತ್ನವೂ ದೀರ್ಘ ಕಾಲದಲ್ಲಾದರೂ ಸತ್ಫಲವೀಯದಿರದು ಎಂಬ ಅನುಭವೋಕ್ತಿಗೆ ಇದೊಂದು ನಿದರ್ಶನ. ಏಕೆಂದರೆ, ತತ್ಪೂರ್ವ ನನಗೆ ಎರಡು ಸಲ ಭ್ರಮನಿರಸನವಾಗಿತ್ತು: ನಾನು ಕವಿಯಲ್ಲ, ಕತೆಗಾರನೂ ಅಲ್ಲ. ಆದರೆ ಆ ಕವಾಯತಿಗಳ ಸಂದರ್ಭದಲ್ಲಿ ಗಳಿಸಿದ ತಂತ್ರಗಾರಿಕೆ ಈಗ ಫಲ ನೀಡಿತ್ತು. ಕಾಡ ಕಲ್ಲು ನಾಡ ವಿಗ್ರಹವಾಗಲು ಅದೆಷ್ಟು ಚಾಣದೇಟು ತಿನ್ನಬೇಕೋ! ಅಷ್ಟರಲ್ಲಿ ಹಿರಿಯರಿಂದ ಅದೇ ಬೇಸಗೆಯಲ್ಲಿ (೧೯೫೧ ಮಾರ್ಚ್-ಏಪ್ರಿಲ್) ನನಗೆ ಮದುವೆ ಮಾಡಿಸಲು `ಪಿತೂರಿ’ ನಡೆದಿತ್ತು.

(ಮುಂದುವರಿಯಲಿದೆ)