ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನಾರು
ಅಧ್ಯಾಯ ಇಪ್ಪತ್ತೊಂಬತ್ತು

ಸುಮಾರು ೧೯೬೦ರ ತನಕ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯಪರ್ವದಲ್ಲಿದ್ದ ನನ್ನ ಜೀವನಕ್ಕೆ ಆಗ ಹೊಸ ಸಮಸ್ಯೆಗಳು ಕ್ರಮೇಣ ಎದುರಾಗತೊಡಗಿದುವು. ಕಾಲೇಜ್ ಬಳಿ ಸ್ವಂತ ಮನೆಯೊಂದನ್ನು ಖರೀದಿಸಿ (೧೯೫೭) ಸಂಸಾರವನ್ನು ಅಲ್ಲಿಗೆ ವರ್ಗಾಯಿಸಿದೆ. ಆ ವೇಳೆಗೆ ನನ್ನ ದೈನಂದಿನ ಚಟುವಟಿಕೆಗಳು ಪಾಠ ಪ್ರವಚನ ಮತ್ತು ವಿಶೇಷ ತರಗತಿಗಳು, ಎನ್‌ಸಿಸಿ ಮತ್ತು ಕಾಲೇಜ್ ಸಹಕಾರ ಸಂಘ ಎಂಬ ಮೂರು ಸಮಾಂತರ ಕವಲುಗಳಲ್ಲಿ ಏಕಕಾಲಿಕವಾಗಿ ಬಿರುಸಿನಿಂದ ಸಾಗುತ್ತಿದ್ದುವು. ಎನ್‌ಸಿಸಿ ಕಛೇರಿ ಮನೆಯಿಂದ ಕೇವಲ ೫ ಮಿನಿಟ್ ನಡಿಗೆ ದೂರದಲ್ಲಿತ್ತು. ಎದುರು ದಿಶೆಯಲ್ಲಿ ೧೦ ಮಿನಿಟ್ ನಡೆದರೆ ಕಾಲೇಜ್. ಯಾವುದೇ ಕೆಲಸ ಕೈಗೊಂಡರೂ ಅದರಲ್ಲಿ ಸಂಪೂರ್ಣ ಮಗ್ನನಾಗಿ ದೇಶ ಕಾಲ ಮರೆತು ದುಡಿಯುವುದು ನನ್ನ ಜಾಯಮಾನ. ಫಲವಾಗಿ ನನಗೆ ಅಂಟುತ್ತಿದ್ದ ಮತ್ತು ನಾನೇ ಎಳೆದು ಹಾಕಿಕೊಳ್ಳುತ್ತಿದ್ದ (ಇತರರ ದೃಷ್ಟಿಯಲ್ಲಿ ವೃಥಾ ತಾಪತ್ರಯವೆಂದು ಕಾಣುತ್ತಿದ್ದ) ಹೊಣೆಗಾರಿಕೆಗಳು ದಿನೇ ದಿನೇ ವರ್ಧಿಸತೊಡಗಿದುವು. ಮನೆ, ಮಡದಿ, ಮಕ್ಕಳ ಯೋಗಕ್ಷೇಮದ ಬಗ್ಗೆ ಸಂಪೂರ್ಣ ಉದಾಸೀನನಾದೆ.

೧೯೫೯ರ ಹೊತ್ತಿಗೆ ಸಂಸಾರ ಬೆಳೆದಿತ್ತು. ಹಿರಿಮಗ ಅಶೋಕನಿಗೆ (೧೯೫೨) ಇಬ್ಬರು ತಮ್ಮಂದಿರು ಹುಟ್ಟಿದ್ದರು: ಆನಂದ (೧೯೫೭) ಮತ್ತು ಅನಂತ (೧೯೫೯). ಇಬ್ಬರ ನಡುವೆ ಒಂದು ಹೆಣ್ಣು ಮಗು ಜನಿಸಿತ್ತು. ಖುದ್ದು ನನ್ನ ಬೇಜವಾಬ್ದಾರಿಯಿಂದ ಈ ಶಿಶುವಿಗೆ ಸಕಾಲದಲ್ಲಿ ಯುಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗದೆ ಕೆಲವೇ ತಿಂಗಳುಗಳಲ್ಲಿ ಅದು ಅಸುನೀಗಿತು. ಈ ದುರ್ಘಟನೆಯನ್ನು ನಿರೂಪಿಸವಾಗ ಈಗಲೂ (೨೦೦೬) ನನ್ನ ಕಣ್ಣು ಒದ್ದೆಯಾಗುತ್ತದೆ. ಎನ್‌ಸಿಸಿ ಮತ್ತು ಸಹಕಾರ ಸಂಘಗಳು ನನ್ನ ಸಮಸ್ತ ವ್ಯಕ್ತಿತ್ವವನ್ನೇ ಆಪೋಶಿಸಿ ನನಗೆ ಬಿಡುವೇಳೆ ಎಂಬುದೇ ದೊರೆಯುತ್ತಿರಲಿಲ್ಲ.

೧೯೬೨ ಬಂದಿತು. ದೇಶಕ್ಕೂ ಸಂಸಾರಕ್ಕೂ ಅಪರಿಹಾರ್ಯ ಗಂಡಾಂತರ ತಂದಿತು. ಅಲ್ಲಿ, ಉತ್ತರದ ಗಡಿಯಲ್ಲಿ ಚೀನೀ ಮಾರಿಹಲುಬೆಯ ಅನಿರೀಕ್ಷಿತ ಹೊಡೆತ. ಇಲ್ಲಿ, ನನ್ನ ಚಿಕ್ಕಪ್ಪ (ರಾಮಚಂದ್ರರಾವ್), ೫೦ರ ಹರೆಯದ ದಷ್ಟಪುಷ್ಟ ಸಮೃದ್ಧಜೀವ, ಹೋಮಿಯೋಪತಿ ವೈದ್ಯ, ಹಠಾತ್ತನೆ ಸಿಡುಬಿಗೆ ಬಲಿಯಾದರು. ಇವರ ಹಿರಿಮಗ ದೂರದ ಕೇರಳದಲ್ಲಿ ಹೋಮಿಯೋಪತಿ ಓದುತ್ತಿದ್ದಾತ ಮರುದಿನ ಮರಳಿದ. “ಸಿಡುಬು ಲಸಿಕೆ ಹಾಕಿಕೊ (ವ್ಯಾಕ್ಸಿನೇಷನ್)” ಎಂದು ಯಾರು ಏನು ಹೇಳಿದರೂ “ಅದು ನನ್ನ ಅಪ್ಪನ ಪವಿತ್ರ ಆತ್ಮಕ್ಕೆ ಮೆಚ್ಚಿಗೆ ಆಗದು” ಎಂದು ನಿರಾಕರಿಸಿ ಹೋಮಿಯೋಪತಿ ಸಿಡುಬುರೋಧಕ ಗುಳಿಗೆಗಳನ್ನು ಸೇವಿಸತೊಡಗಿದ. ಚಿಕ್ಕಪ್ಪ ಮಡಿದ ಒಂದು ತಿಂಗಳ ಒಳಗೆ ಈತನೂ ತದ್ವತ್ತು ಉಗ್ರ ಸಿಡುಬಿಗೆ ಬಲಿಯಾಗಿ ತಂದೆಯ ‘ಪವಿತ್ರ ಆತ್ಮ’ದಲ್ಲಿ ಲೀನನಾದ. ಇತ್ತ ಮನೆಯಲ್ಲಿ ಆನಂದನಿಗೆ (ಹೋಮಿಯೋಪತಿ ಭಕ್ತನಾಗಿದ್ದ ನಾನು ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸಿರಲಿಲ್ಲ) ಉಲ್ಬಣ ಸಿಡುಬು ತಾಗಿ ಅವನು ಬದುಕಿ ಉಳಿದುದೇ ಪವಾಡ. ನನ್ನ ತಾಯಿ ಮತ್ತು ಇತರ ಸಮೀಪ ಸಂಬಂಧಿಕರಿಗೂ ಆ ದುರ್ದಿನಗಳಲ್ಲಿ ಸಿಡುಬು ಬಡಿದಿತ್ತು. ಪುಣ್ಯವಶಾತ್ ಎಲ್ಲರೂ ಚೇತರಿಸಿಕೊಂಡರು.

ಇವೆಲ್ಲ ದುರಂತಗಳೂ ಒಂದರ ಬೆನ್ನಿಗೊಂದರಂತೆ ಮಡಿಕೇರಿಯ ಕಡು ಮಳೆ-ಚಳಿಗಾಲಗಳ ಅವಧಿಯಲ್ಲಿ ಸಂಭವಿಸಿದುವು. ಅವಿಶ್ರಾಂತ ದುಡಿಮೆ, ಖಾಯಿಲಸ್ತರ ಶುಶ್ರೂಷೆ, ಕಾಲೇಜ್ ಮನೆಯಿಂದ ಚಿಕ್ಕಪ್ಪನವರ ಮನೆಗೆ ನಡೆದು (ಸುಮಾರು ೪ ಕಿಮೀ) ಹೋಗಿ ಅಲ್ಲಿ ಅವರಿಗೆ ಸಾಂತ್ವನ ಹೇಳಿ ಹಿಂತಿರುಗುವುದು, ಮಾನಸಿಕ ವ್ಯಾಕುಲ, ಆತಂಕ ಎಲ್ಲ ಸೇರಿ ನನ್ನ ಹೆಂಡತಿ ತೀವ್ರ ಜ್ವರಗ್ರಸ್ತಳಾದಳು. ಆಗಲಾದರೂ ನಾನು ಎಚ್ಚತ್ತು ಮಿಕ್ಕೆಲ್ಲ ಚಟುವಟಿಕೆಗಳಿಗೆ ತಾತ್ಕಾಲಿಕ ವಿದಾಯ ಹೇಳಿ ಆಕೆಯನ್ನು ಶುಶ್ರೂಷಿಸುವುದರಲ್ಲಿ ಪೂರ್ಣ ಲೀನನಾಗಬೇಕಾಗಿತ್ತು. ಹಾಗೆ ಮಾಡದೆ ಅವಳನ್ನು ತವರ್ಮನೆಗೆ (ಮರಿಕೆ) ಸಾಗಹಾಕಿ ನಿರ್ಲಿಪ್ತ ನಿಶ್ಚಿಂತ ನಿರ್ವಿಕಾರನಾದೆ — “ಹರಿಯೇ! ಇದು ನಿನಗೆ ಸರಿಯೇ ದೊರೆಯೇ?” ಎಂದು ಅಂದಾಗಲೀ ಇಂದಾಗಲೀ ಒಮ್ಮೆಯೂ ಆಕೆ ನನ್ನಲ್ಲಿ ತಪ್ಪು ಕಾಣಲಿಲ್ಲ. ಏಕೆ ಗೊತ್ತೇ? ಅವಳು “ಕಡೆಗೆ ಕರುಣಾಳು ರಾಘವನಲಿ ತಪ್ಪಿಲ್ಲ” ಎಂಬ ಗೋತ್ರಜೆ, ಪರಮ ಸಾಧು ಸಜ್ಜನ ಶೀಲೆ.

ಪಾಠಪ್ರವಚನಗಳಲ್ಲಿ ಸಂತೋಷ ಒದಗುತ್ತಿರಲಿಲ್ಲ. ಜ್ಞಾನನಿಷ್ಠೆಯ ಸ್ಥಾನವನ್ನು ಪರೀಕ್ಷೆಯಲ್ಲಿ ಹೇಗಾದರೂ ಅತ್ಯಧಿಕ ಅಂಕ ಗಳಿಕೆ ಎಂಬ ಹೊಸ ಆಮಿಷ ವಿದ್ಯಾರ್ಥಿಮನಗಳನ್ನ ಆಕ್ರಮಿಸಿತ್ತು. ಸಹಜವಾಗಿ ಕಾಲೇಜಿನಲ್ಲಿಯ ಶಿಸ್ತು ಕುಸಿಯಿತು. ಎನ್‌ಸಿಸಿಗೆ ಬಂದ ಹೊಸ ಸೇನಾ ಕಮಾಂಡರ್ ಭಾಗಕಾಲೀನ ಅಧಿಕಾರಿಗಳಾಗಿದ್ದ ನಮ್ಮ ಮೂವರ ಬಗ್ಗೆ ಅಪಮಾನಕಾರಿಯಾಗಿ ವರ್ತಿಸತೊಡಗಿದರು. ಎನ್‌ಸಿಸಿಗೆ ರಾಜಿನಾಮೆ ಸಲ್ಲಿಸಿದೆವು. ನಾನು, ಬಾಳಿಗ ಮತ್ತು ಇ.ಎಸ್. ಕೃಷ್ಣಯ್ಯ. [ಹೆಚ್ಚಿನ ವಿವರಗಳಿಗೆ ಇಲ್ಲೇ ಮೇಲೆ ನಮೂದಾಗಿರುವ ಪುಸ್ತಕ ವಿಭಾಗದಲ್ಲಿನ ಎನ್‌ಸಿಸಿ ದಿನಗಳು ಪುಸ್ತಕ (ನಿಮ್ಮಲ್ಲಿಲ್ಲವಾದರೆ ಅಲ್ಲೇ ಸೂಚಿಸಿದಂತೆ ಕೊಂಡು) ಓದಿನೋಡಿ]

ಇನ್ನು ನನ್ನನ್ನು ಕುರಿತಂತೆ ಸಹಕಾರ ಸಂಘದ ಹೊಣೆಗಾರಿಕೆ ‘ಒಂಟೆ ಮತ್ತು ಅರಬ’ನ ಕತೆಯ ಪುನರಾವರ್ತನೆಯಾಗಿತ್ತು. ಪೂರ್ತಿ ಪುಕ್ಕಟೆ ಸೇವೆಯಾಗಿ ೧೯೫೪ರಲ್ಲಿ ತೊಡಗಿದ ಈ ವಿದ್ಯಾರ್ಥಿ ಸೌಕರ್ಯ ಇಡೀ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ಪ್ರವರ್ಧಿಸಿತ್ತು, ಮೊದಲು ಕೇವಲ ೫ ಅಂಕಗಳೊಳಗಿದ್ದ ಇದರ ವಹಿವಾಟು ಈಗ ಹಲವು ಲಕ್ಷಗಳ ಮಟ್ಟಕ್ಕೆ ಉಬ್ಬಿತ್ತು, ಸೇವಾಕ್ಷೇತ್ರ ವ್ಯಾಪಕವಾಗಿ ವಿಸ್ತರಿಸಿತ್ತು, ಎಲ್ಲವೂ ನಿಜ. ಫಲಿತಾಂಶ? ಇದು ಖುದ್ದು ನನ್ನ ಮುಖ್ಯ ವೃತ್ತಿಗೇ ಸಂಚಕಾರ ತಂದಿತ್ತು: ವ್ಯಾಪಾರ ವಾಣಿಜ್ಯವೆಂಬ “ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ” ಎಂದು ಅಂತರಾತ್ಮ ನನ್ನನ್ನು ಎಚ್ಚರಿಸಿತು. ಹುಲಿ ಸವಾರನ ಸ್ಥಿತಿ ನನ್ನದು! ಎನ್‌ಸಿಸಿಗೆ ಸಲ್ಲಿಸಿದ ರಾಜಿನಾಮೆಗಿನ್ನೂ ಅಂಗೀಕಾರ ಮುದ್ರೆ ಬಿದ್ದಿರಲಿಲ್ಲ. ಸಂಘದ ಗೌರವ ಕಾರ್ಯದರ್ಶಿತ್ವದ ಹೊಣೆ ವಹಿಸಿಕೊಳ್ಳಲು ಯಾವ ಸಹೋದ್ಯೋಗಿ ಮಿತ್ರರೂ ಸಿದ್ಧರಿರಲಿಲ್ಲ.

ಆ ದುರ್ಭರ ಸನ್ನಿವೇಶದಲ್ಲಿ ಮೂರು ಪವಾಡಸದೃಶ ಘಟನೆಗಳು ಸಂಭವಿಸಿದುವು. ಎನ್‌ಸಿಸಿ ಸಂಸ್ಥೆಗಳಲ್ಲಿ ಸೇನಾನಿಯೋಜಿತರಾಗಿದ್ದ ಎಲ್ಲ ಸೇನಾಧಿಕಾರಿಗಳನ್ನೂ ಭಾರತ ಸರ್ಕಾರ ತತ್‌ಕ್ಷಣ ಅವರವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಿಬಿಟ್ಟಿತು, ದೇಶಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೂ ಎನ್‌ಸಿಸಿ ತರಬೇತಿಯನ್ನು ಕಡ್ಡಾಯಗೊಳಿಸಿತು, ನನ್ನಂಥ ಭಾಗಕಾಲೀನ ಎನ್‌ಸಿಸಿ ಅಧಿಕಾರಿಗಳಿಗೆ ಪೂರ್ಣ ಕಮಿಶನ್ ನೀಡಿ ಎನ್‌ಸಿಸಿ ಘಟಕಗಳ ಕಮಾಂಡರ್ ಹುದ್ದೆಗಳನ್ನು ಕೊಡಲು ಮುಂಬಂದಿತು. ಇವು ಯಾವುದರಲ್ಲಿಯೂ ನನಗೆ ಆಸಕ್ತಿ ಇರಲಿಲ್ಲ. ಆದರೆ ತತ್ಪೂರ್ವ ನನ್ನೊಬ್ಬ ಕಮಾಂಡಿಂಗ್ ಆಪಿ಼ಸರ್ ಆಗಿದ್ದ ಒಬ್ಬರು ಸೇನಾಧಿಕಾರಿ ಬೆಂಗಳೂರಿನಿಂದ ಖುದ್ದು ಮಡಿಕೇರಿಗೆ ಬಂದು ನನ್ನನ್ನು ಈ ಪೂರ್ಣಕಾಲೀನ ಹುದ್ದೆ ಸೇರಲು ಇನ್ನಿಲ್ಲದ ರೀತಿಯಲ್ಲಿ ಪುಸಲಾಯಿಸಿದರು. ದೇಶಕ್ಕೆ ಗಂಡಾಂತರ ಬಂದಿರುವ ಈ ಸನ್ನಿವೇಶದಲ್ಲಿ ನನ್ನಂಥ ಸಮರ್ಥ ಮತ್ತು ಅನುಭವೀ ಅಧಿಕಾರಿ ಹಿಂದೇಟು ಹೊಡೆಯುವುದು ಸರಿಯೇ ಎಂಬುದು ಅವರ ಕಳಕಳಿಯ ವಾದದ ಸಾರ. ಆ ಕ್ಷಣ ನಾನು ಭಾವುಕನಾಗಿ ಈ ಕೋರಿಕೆಗೆ ಮಣಿದೆ.

೧೯೬೩ರ ಆರಂಭದಲ್ಲಿ ನಾನು ಕಾಲೇಜ್ ಹೊಣೆಗಾರಿಕೆಯಿಂದ (ದೇಶಸೇವೆಯೆಂಬ ಹೊಸ ಅಮಲಿನಲ್ಲಿ) ಬಿಡುಗಡೆಗೊಂಡೆ, ಸಹಕಾರ ಸಂಘದ ಉಡ ಹಿಡಿತದಿಂದ ಪಾರಾದೆ, ಸಂಸಾರಸಮೇತ ಮಡಿಕೇರಿ ಬಿಟ್ಟು ದೂರದ ಬಳ್ಳಾರಿಯಲ್ಲಿ ನೂತನ ಎನ್‌ಸಿಸಿ ಘಟಕದ ಪೂರ್ಣಕಾಲೀನ ಕಮಾಂಡರ್ ಆಗಿ ಬೀಡುಬಿಟ್ಟೆ. ೨೦ ತಿಂಗಳು ಪರ್ಯಂತ ಕಂಬಿ ತಪ್ಪಿದ ಬಂಡಿಯಾಗಿದ್ದೆ. ನಡುನೀರಿನಲ್ಲಿ ಅಂಬಿಗನನ್ನು ಹೇಗೆ ಬದಲಾಯಿಸಬಾರದೋ ಹಾಗೆ ದೋಣಿಯನ್ನು ಕೂಡ. ಬಳ್ಳಾರಿಯಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ಇಡೀ ವ್ಯವಸ್ಥಾಪನೆ ಬಗ್ಗೆ ಜುಗುಪ್ಸೆ ಮೂಡಿ ಮತ್ತೆ ನನ್ನ ಮೂಲ ವೃತ್ತಿಗೆ — ಕಾಲೇಜಿನಲ್ಲಿ ಗಣಿತೋಪನ್ಯಾಸಕ — ೩೧-೩-೧೯೬೫ರಂದು ಮರಳಿದೆ. ಈಗ ನನ್ನ ಹೊಸ ನೆಲೆ ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ. ನಾನು ಬಳ್ಳಾರಿಯಲ್ಲಿದ್ದಾಗ ಒಮ್ಮೆ ಮಡಿಕೇರಿಗೆ ಹೋಗಿದ್ದೆ. ಆಗ ಒದಗಿದ ಒಂದು ವಿಶಿಷ್ಟ ಅನುಭವ, ನಾನು ಜಂಕ್ ಕಾರನ್ನು ಕೊಂಕು ಹಾದಿಯಲ್ಲಿ ಪೀಂಕಿಸಿದ್ದು!

ಅಧ್ಯಾಯ ಮೂವತ್ತು
ಕೈಕೊಡದ ಹಿಲ್ ಮ್ಯಾನ್

ಬಳ್ಳಾರಿಯ ಬೇಸಗೆಯ ಬೇಗೆ ತಡೆಯಲಾಗದೆ ಒಂದು ವಾರ ರಜೆ ಪಡೆದು ಮಡಿಕೇರಿಗೆ ಮರಳಿದ್ದೆ (೧೯೬೪). ಸ್ವಿಟ್ಸರ್ಲೆಂಡನ್ನು ಯುರೋಪಿನ ಮಡಿಕೇರಿ ಎಂಬುದಾಗಿ ಹಿರಿಯರೊಬ್ಬರು ಬಣ್ಣಿಸಿದ್ದನ್ನು ಕೇಳಿ ಹೆಮ್ಮೆ ತಳೆದಿದ್ದೇನೆ. ನನ್ನೂರಿಡೀ ಬೃಹತ್ತಾದ ಶೀತಕಾರಿ (ರೆಫ್ರಿಜಿರೇಟರ್). ಬೆಟ್ಟಗಳ ನಡುವಿನ ಬೋಗುಣಿ ಈ ಪುಟ್ಟ ಪಟ್ಟಣ. ಎಲ್ಲೆಲ್ಲಿಯೂ ಕಾಡೋಕಾಡು, ಹಸುರೋ ಹಸುರು. ವಿರಳ ಜನಸಂಖ್ಯೆ. ಸಾರಿಗೆ ಸಂಪರ್ಕ ಸರ್ವವ್ಯಾಪಿಯೂ ಅಲ್ಲ, ಸರ್ವಗ್ರಾಹಿಯೂ ಅಲ್ಲ. ನಿಸರ್ಗವೇ ಇಲ್ಲಿ ಆರಾಮವಾಗಿ ಮೈಚೆಲ್ಲಿ ವಿಶ್ರಾಂತಿ ಸುಖ ಸವಿಯುತ್ತಿರುವಾಗ ಅದರ ಕೂಸುಗಳಾದ ಜನರಿಗೆ ಎಲ್ಲಿಂದ ತಾನೇ ತುರ್ತುತನ ಬಂದೀತು! ನಾನು ಅಜ್ಜಿ ಸಾಕಿದ ಮಗು. ಅಜ್ಜಿಯ ಗುಡಾರಕ್ಕೆ ಬಂದಿದ್ದೆ. ತಾಯಿ ಚಿಕ್ಕಮ್ಮ ಬೆಳೆಸಿದ ಕೂಸು. ತವರಿನ ಬಿಡಾರಕ್ಕೆ ಮರಳಿದ್ದೆ. ಬಳ್ಳಾರಿಯಲ್ಲಿ ಹಿರಿಯ ಸೇನಾಧಿಕಾರಿಯಾಗಿದ್ದ ನಾನು ಅಜ್ಜಿ, ತಾಯಿ, ಚಿಕ್ಕಮ್ಮ ಇವರ ದೃಷ್ಟಿಯಲ್ಲಿ ಲೋಕೈಕ ವೀರ, ಪ್ರತಾಪಶಾಲಿ, ಮಹಾಪುರುಷ. ತವರಿನ ಈ ನಲುಮೆ ನನಗೆ ಹಿತಕರವಾಗಿತ್ತು. ಅಲ್ಲಿ ಕ್ಷಣವೊಂದು ಯುಗವಾಗಿ ಇರಿಯುತ್ತಿತ್ತು. ಇಲ್ಲಿ? ಯುಗವೊಂದು ಕ್ಷಣವಾಗಿ ಸರಿಯುತ್ತಿತ್ತು.

ಮೇ ತಿಂಗಳ ಕೊನೆಯ ಪಾದ. ಅದೇ ಮಳೆಗಾಲದ ಆರಂಭದ ದಿನಗಳು. ಹೀಗಾಗಿ ಪ್ರಕೃತಿ ವ್ಯಾಪಾರಗಳು ಅಸಾಧಾರಣ ಚಟುವಟಿಕೆಯಿಂದ ಬದಲಾಗುತ್ತಿದ್ದುವು. ಈಗ ಸೆಕೆ, ಬೆನ್ನಿಗೇ ಸುಯ್ಯೆಂದು ತಂಗಾಳಿ. ಈಗ ನೀರವ, ಒಡನೆ ಗಿಡಮರಗಳ ಹಸುರೆಲೆಗಳ ಚಾಮರ ಬೀಸಿನ ಸರ ಸರ ಸದ್ದು. ಈಗ ಆಗಸ ನಿಚ್ಚಳ, ಅಗೋ ಬಂದೇ ಬಂತು ಮೋಡಗಳ ಆನೆವಿಂಡು. ಆದರೆ ಹುಯ್ಯಲಿಲ್ಲ ಮಳೆರಾಯ, ಕೈಕೊಟ್ಟ. ನಡೆದೇಬಿಟ್ಟ. ಎಲ್ಲೆಲ್ಲೂ ಪಸೆ ಪಸೆ, ಮಳೆ ಮೂರಿ. ಮತ್ತೆ ಸೆಕೆ, ಗಾಳಿ ಅಲೆತ, ಸ್ಥಗಿತ.

ಊರವರಿಗೆಲ್ಲ ಗೊತ್ತು ಮಳೆರಾಯನ ಬಗೆಬಗೆಯ ವರಿಸೆಗಳ ಹಿಕಮತ್ತು. ಕಡಲಿನಿಂದ ಮೇಲೇರಿದ ಅವನು ಕೋಡುಮಲೆಗಳ ಈ ನಾಡನ್ನು ಹೊಗುವುದೇನು ಸಾಧಾರಣ ಸಾಹಸವೇ? ಮೇಲೇರಿದವ ಇಳೆಗಿಳಿಯದೆ ಇನ್ನೆಲ್ಲಿಗೆ ಹೋದಾನು? ನೆಲದ ನೀರಡಕೆಯನ್ನೂ ಗಿರಿವನಗಳ ಬಯಕೆಯನ್ನೂ ಕೆರೆತೊರೆಗಳ ಆಸೆಯನ್ನೂ ಹಿಂಗಿಸದಿರುವನೇ? ದಿನದಿಂದ ದಿನಕ್ಕೆ, ಅಲ್ಲಲ್ಲ, ಸಂಜೆಯಿಂದ ಸಂಜೆಗೆ, ಬಾನಂಗಳದಲ್ಲಿ ರಂಗೇರುತ್ತಿತ್ತು. ಕೋಲ್ಮಿಂಚಿನ ಸುರುಸುರು ಬತ್ತಿಯ ಛಳಕುಗಳು ವಿಚಿತ್ರಾಕಾರಗಳನ್ನು ಕುಂಚಿಸುತ್ತಿದ್ದುವು. ಗುಡುಗಿನ ನಿನದ ದಿಗ್ದಿಗಂತಗಳನ್ನು ಭೇದಿಸಿ ಮೊಳಗುತ್ತಿತ್ತು.

ನಾನು ತಂಗಿದ್ದುದು ನನ್ನ ಚಿಕ್ಕಪ್ಪನವರ ಮನೆಯಲ್ಲಿ. ಅಲ್ಲೇ ನಾನು ಓದಿ ಬೆಳೆದವ. ಮನೆಯಲ್ಲಿ ಇದ್ದವರು ಚಿಕ್ಕಮ್ಮ, ಅವರ ಮಕ್ಕಳು, ಅಜ್ಜಿ, ಕೆಲಸದವರು ಇಷ್ಟು ಮಂದಿ. ಚಿಕ್ಕಪ್ಪ ಮತ್ತು ಅವರ ಹಿರಿಮಗ ಪುಂಡರೀಕ ಗತಿಸಿ ಎರಡು ವರ್ಷಗಳು ಸಂದಿದ್ದುವು. ಎರಡನೆಯ ಮಗ ನಾರಾಯಣ, ಇಪ್ಪತ್ತೆರಡರ ಹುರುಪಿನ ತರುಣ. ಕೃಷಿಕಾರ್ಯಗಳಲ್ಲಿ ನಿರತನಾಗಿದ್ದ. ಮಡಿಕೇರಿಯಿಂದ ಭಾಗಮಂಡಲಕ್ಕೆ ಹೋಗುವ ರಾಜಮಾರ್ಗದ ಬದಿಯ ಅಪ್ಪುಕಳ ಎಂಬ ಹಳ್ಳಿಯಲ್ಲಿ ಅವರ ಆಸ್ತಿ ಇತ್ತು. ದೂರ ಸುಮಾರು ೭ ಕಿಮೀ. ನಾರಾಯಣ ಪ್ರತಿನಿತ್ಯ ಮೊದಲ ಬಸ್ಸಿನಲ್ಲಿ ಅಪ್ಪುಕಳಕ್ಕೆ ಹೋಗಿ ಹಗಲಿಡೀ ಅಲ್ಲಿದ್ದು ಸಂಜೆ ಕೊನೆ ಬಸ್ಸಿನಲ್ಲಿ ಮರಳುತ್ತಿದ್ದುದು ವಾಡಿಕೆ.

ಅಂದು ಶುಕ್ರವಾರ, ಮಡಿಕೇರಿಯಲ್ಲಿ ಸಂತೆ. ಹಳ್ಳಿಗರೆಲ್ಲರೂ ಪೇಟೆಗೆ ಬಂದು ತಮ್ಮ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಿ, ತಮಗೆ ಬೇಕಾಗಿದ್ದ ಪದಾರ್ಥಗಳನ್ನು ಅಂಗಡಿಗಳಿಂದ ಖರೀದಿಸಿ ಮರಳುವ ವಾರದ ರಜಾ ದಿನ. ಇತ್ತ ಮನೆಯಲ್ಲಿ ಗೌರವಾನ್ವಿತ ಅತಿಥಿಯಾದ ನಾನು ಬೇರೆ ಇದ್ದೇನೆ. ಹೀಗಾಗಿ ನಾರಾಯಣ ಆ ಮುಂಜಾನೆ ಅಪ್ಪುಕಳಕ್ಕೆ ಹೋಗಲಿಲ್ಲ. ನಿಸರ್ಗ ಪೂರ್ಣ ಸಹಕಾರ ನೀಡುವಂತೆ ಪ್ರಸನ್ನವಾಗಿತ್ತು. ಹೂಬಿಸಿಲು, ಸ್ವಚ್ಛಾಕಾಶ, ಗಾಳಿಯೇ ಹೆಪ್ಪುಗಟ್ಟಿ ಬಾನಾಯಿತೋ ಎನ್ನುವಂಥ ನೋಟ.

ಕೃಷಿರಂಗ ಯುದ್ಧರಂಗದಂತೆ, ನಿರಂತರ ಜಾಗರೂಕತೆಯೇ ಎರಡೂ ರಂಗಗಳಲ್ಲಿಯ ಯಶಸ್ಸಿನ ಗುಟ್ಟು. ನಾರಾಯಣನಿಗೆ ಅಪ್ಪುಕಳದಲ್ಲಿ ಜರೂರು ಕೆಲಸ ಬಂತು, ಹೀಗಾಗಿ ಅವನು ಬೇಗನೆ ಮಧ್ಯಾಹ್ನದ ಊಟ ಮುಗಿಸಿ ಅತ್ತ ಕಡೆಗೆ ಪಾದಯಾತ್ರೆ ಮಾಡಿದ. ಆ ಅವೇಳೆಯಲ್ಲಿ ಯಾವ ಬಸ್ಸೂ ಇರಲಿಲ್ಲ.

“ಹೊತ್ತು ಕಂತುವ ಮೊದಲೇ ಬಂದುಬಿಡು” ಅಜ್ಜಿಯ ಬುದ್ಧಿವಾದ.
“ಹೋಗದಿದ್ದರೇನು ಮಹಾ ಸೂರೆಹೋಗೋದು? ನಾಳೆ ಹೋದರಾಯಿತು” ತಾಯಿಯ ಕಾಳಜಿ ನುಡಿ.
“ಮಳೆರಾಯನ ಮೂಡ್ ನಂಬಬೇಡ” ನನ್ನ ಅನುಭವೋಕ್ತಿ.
“ಕೊನೆ ಬಸ್ಸಿನಲ್ಲಿ ಬಂದೇ ಬರುತ್ತೇನೆ. ಒಟ್ಟಿಗೇ ಊಟ ಮಾಡೋಣ” ನಾರಾಯಣನ ಸಮಜಾಯಿಷಿ.
ಸರಿ, ಅತ್ತ ಅವನು ನಡೆದು ಹೋದ, ಇತ್ತ ನಾನು ನಿದ್ರೆ ಹೋದೆ.

ಗಡಿಯಾರದ ಪ್ರಕಾರ ಸಾಯಂಕಾಲದ ೫ ಗಂಟೆ. ಆದರೆ ಸುತ್ತಲೂ ದಟ್ಟವಾಗಿ ಹಬ್ಬಿದ್ದ ಮೋಡಗಳ ದಪ್ಪ ಮುಸುಕು ಆಗಲೇ ಮಡಿಕೇರಿಗೆ ಕತ್ತಲೆಯ ಕರಿಗವಸು ತೊಡಿಸಿತ್ತು. ನಾನು ಎದ್ದೆ. ಮಳೆಯ ಮೊದಲ ಸುತ್ತು ಇನ್ನೇನು ಆರಂಭವಾಗುವುದರಲ್ಲಿತ್ತು. ಕೋಲ್ಮಿಂಚಿನ ಆರತಿ, ಗುಡುಗಿನ ನಗಾರಿ, ಕಪ್ಪೆ ಬಿಬ್ರಿಗಳ ಮಂತ್ರ ಪಠಣ, ಗಿಡಮರಗಳ ತೊನೆತ, ಹೊಸ ಮಣ್ಣಿನ ಹಿತಕರ ಪರಿಮಳ ಇವೆಲ್ಲವೂ ನನಗೆ ಅಪ್ಯಾಯಮಾನವೇ. ಆದರೆ ನಾರಾಯಣ ಅಪ್ಪುಕಳಕ್ಕೆ ಹೋಗಿರುವನಲ್ಲ. ಬೇಗನೆ ಮರಳಲಿ ಎಂಬ ಚಿಂತೆ ಮನಸ್ಸಿನ ಅಂತರಾಳದಲ್ಲಿ ಕಲಕುತ್ತಿತ್ತು. ಆಲಿಕಲ್ಲುಗಳ ಹೊಡೆತ ಬಿರುಸಾಗಿಯೇ ಇತ್ತು. ಅವುಗಳ ಬೆನ್ನಿಗೆ ಮಳೆಯ ತೋರ ಹನಿಗಳ ತೀವ್ರ ಕುಟ್ಟಣೆಯೂ ತೊಡಗಿತ್ತು. ಕೇವಲ ನಿಮಿಷಗಳಲ್ಲೇ ಚರಂಡಿ ತೋಡುಗಳು ತುಂಬಿ ಉಕ್ಕಿದುವು. ಪ್ರಕೃತಿಯೇ ಕರಗಿ ನೀರಾಗಿ ಹರಿಯುತ್ತಿತ್ತು. ಆಗಸವೇ ಬಿರಿದೊಡೆದು ನೆಲದ ಮೇಲೆ ಕೆಡೆದಿತ್ತು.

ಗಡಿಯಾರದ ಲೋಲಕ ನಿರಂತರವಾಗಿ ಆಂದೋಲಿಸಿತು. ಅಡುಗೆ ಮನೆಯಲ್ಲಿ ಸೌದೆ ಒಲೆಯ ಬೆಚ್ಚಗಿನ ಮೂಲೆಯಲ್ಲಿ ಕಾಲು ಚಾಚಿ ಕುಳಿತು ಸುಟ್ಟ ಹಲಸಿನ ಬೇಳೆಗಳನ್ನು ಕಟುಂ ಕುಟುಂ ಜಗಿಯುತ್ತ ಕೊಡಗಿನ ಘಮಘಮಿಸುವ ಸುಡು ಸುಡು ಕಾಫಿಯನ್ನು ತೆಳು ಪೊರೆಯಲ್ಲಿ ಹೀರುತ್ತ ಪರನಿಂದೆ ಹಾಗೂ ಆತ್ಮಶ್ಲಾಘನೆ ಎಂಬ ಅತ್ಯುತ್ಸಾಹದಾಯಕ ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿ ಮಾತಾಡುತ್ತ ಕಾಲಸವೆದದ್ದಾಯಿತು. ರಾತ್ರಿ ಗಂಟೆ ಎಂಟಾದರೂ ಕೊನೆಯ ಬಸ್ ಮಡಿಕೇರಿ ನಿಲ್ದಾಣ ತಲಪಿ ಒಂದು ಗಂಟೆಯೇ ಸಂದು ಹೋಗಿದ್ದರೂ ನಾರಾಯಣ ಬರಲಿಲ್ಲ. ಚಿಂತೆ ಕಾತರತೆಯಾಗಿ ಭಯರೂಪದಲ್ಲಿ ಹೆಪ್ಪುಗಟ್ಟಿತು.

“ದಾರಿಯಲ್ಲಿ ಮರಬಿದ್ದು ಬಸ್ ಸಂಚಾರ ಬಂದ್ ಆಗಿರಬಹುದು.”
“ಸೇತುವೆ ಕುಸಿದು ಬಸ್ ಆ ಕಡೆ ನಿಂತುಹೋಗಿರಬಹುದು.”
“ಬಸ್ ಓಡಿಯೇ ಇರಲಾರದು.”
“ಬಂದೇ ಬರುವೆನೆಂದ. ಮಹಾ ಹಠಮಾರಿ, ನಡೆದುಕೊಂಡೇ ಹೊರಟಿರಬಹುದು.”
“ಹಾಗಾದರೆ ಯಾಕೆ ಅಂವ ಬರಲಿಲ್ಲ?”
ಇನ್ನೂ ಯಾಕ ಬರಲ್ಲಿಲ್ಲಾಂವಾ ಅಪ್ಪುಕಳದಾಂವಾ?
ಮುಂದಿನ ಊಹಾಪೋಹಗಳು ಯಾರಿಗೂ ಬೇಕಾಗಿರಲಿಲ್ಲ. ಚಿಕ್ಕಮ್ಮನವರ ಕಳವಳ ವ್ಯಾಕುಲವಾಯಿತು. ಮಳೆಗಾಳಿಗಳು ಗಿಯರ್ ಏರಿಸಿ ಇನ್ನೂ ರಭಸದಿಂದ ಪ್ರತಾಪ ಪ್ರದರ್ಶಿಸತೊಡಗಿದುವು. ರಾಕ್ಷಸ ಶಕ್ತಿಗಳೇ ಹಾಗೆ. ರಾತ್ರಿ ವೇಳೆ ಅವಕ್ಕೆ ಹೆಚ್ಚಿನ ಹುಮ್ಮಸ್ಸು ಧಿಮಾಕು.

ಸೇನಾಧಿಕಾರಿಯಾದ ನಾನೊಂದು ಮಿಲಿಟರಿ ಆಪರೇಷನ್ – ಯುದ್ಧ ಕಾರ್ಯಾಚರಣೆ ಸೂಚಿಸಿದೆ. ಚಿಕ್ಕಪ್ಪನವರ ಹಳೆ ಕಾರ್ ೧೯೩೦ರ ಮೊಡೆಲ್ ಹಿಲ್ ಮ್ಯಾನ್ ಮಿಂಕ್ಸ್ ಮನೆಯ ಗೆರಾಜಿನಲ್ಲಿದ್ದದ್ದು (ಕಾರುಕೊಟ್ಟಿಗೆ) ನನಗೆ ಗೊತ್ತಿತ್ತು. ಎರಡು ದಿನಗಳ ಹಿಂದೆ ನಾರಾಯಣ ಅದನ್ನು ಮಡಿಕೇರಿಯ ಇಕ್ಕಟ್ಟು ಬೀದಿಗಳಲ್ಲಿ ಓಡಿಸಿದ್ದ. ನಾನದರೊಳಗೆ ಮಂಡಿಸಿದ್ದೆ. “ಈಗ ನಾನು ಆ ಕಾರನ್ನು ಡ್ರೈವ್ ಮಾಡಿ ಅಪ್ಪುಕಳಕ್ಕೆ ಹೋಗಿ ಏನಾಗಿದೆ ಎಂದು ತಿಳಿದು ಬರುತ್ತೇನೆ” ಎಂದೆ. ಚಿಕ್ಕಮ್ಮನವರ ಆಗಿನ ಮನಸ್ಥಿತಿಯಲ್ಲಿ ಈ ಸೂಚನೆ ಅಮೃತೋಪಮವಾಯಿತಾದರೂ ಒಡನೆ ಅವರಿಗೆ ನನ್ನ ಯೋಗಕ್ಷೇಮದ ಬಗ್ಗೆ ಚಿಂತೆ ಕವಿಯಿತು. ಇಂಥ ಎಲ್ಲ ಸನ್ನಿವೇಶಗಳಲ್ಲಿ ನಡೆಯುವಂತೆ ಅತಿ ಕಾಳಜಿಯ ವಾದವಿವಾದವಾದ ಬಳಿಕ ಚಿಕ್ಕಮ್ಮ ಮತ್ತು ನಾನು ಇಬ್ಬರೂ ಕಾರಿನಲ್ಲಿ ಅಪ್ಪುಕಳಕ್ಕೆ ಹೋಗುವುದೆಂಬ ಒಪ್ಪಂದಕ್ಕೆ ಬಂದೆವು.

ಕತ್ತಲೆಯ ಗುಹೆಯೊಳಗೆ ಹುದುಗಿದ್ದ ಹಿಲ್ ಮ್ಯಾನನ್ನು ಮುಟ್ಟಿ ನೋಡಿ ಅರಿತೆ. ಚಾಲಕನ ಆಸನದ ಕಡೆಗಿದ್ದ ಕದವನ್ನು ಪ್ರಯಾಸದಿಂದ ತೆರೆದೆ. ಅದು ಕಿರೋರೋರೋರಕ್ ಎಂದು ಅರಚಿ ಹಠಾತ್ತಾಗಿ ನಿಂತಾಗ ಪಾತಾಳದಾಕಳಿಕೆಯೋ ಕುಂಭಕರ್ಣನ ಸೆಟೆತವೋ ಎಂಬ ಭಾವಗಳು ಮೂಡಿದುವು. ಒಳಹೊಕ್ಕೆ, ಕುಳಿತೆ, ಬಡಿದು ಕದವಿಕ್ಕಿದೆ. ಸ್ವಿಚ್ ಕೀಲಿಯನ್ನು ಪರಡಿ ತೂತಕ್ಕೆ ಸಿಕ್ಕಿಸಿದೆ, ತಿರುಗಿಸಿದೆ. ಫಲಕದಲ್ಲಿ ಬೆಳಕು ಮಿನುಗಲಿಲ್ಲ. ಬಿರಿ ಒತ್ತಿ ಕ್ಲಚ್ ಅಮರಿಸಿ ಗಿಯರನ್ನು ತಟಸ್ಥ ಸ್ಥಾನಕ್ಕೆ ತಳ್ಳಿ ಸ್ಟಾರ್ಟರನ್ನು ಎಳೆದೆ, ಚೋಕ್ ಕೊಟ್ಟೆ. ಊಹೂಂ, ಜೀವ ಸ್ಪಂದಿಸಲಿಲ್ಲ. ಸ್ಪಂದನ ಶ್ರುತಿಯೂ ನಾಸ್ತಿ. ಬ್ಯಾಟರಿ ಡೌನ್, ನನ್ನದೂ ಹಾಗೆ. ಮನೆ ಮಂದಿ ಸೇರಿ ಕಾರನ್ನು ರೊಪ್ಪದಿಂದ ಉತ್ಖನನ ಮಾಡಿದ್ದಾಯಿತು. ಈಗ ಅದು ರಸ್ತೆಯ ತೆರೆ ಜಾಗದಲ್ಲಿ ನಿಂತಿರುವ ಲಠಾರಿ ಮಾಲು. ಅದರ ಮೇಲೆ ಮಳೆಯ ಒನಕೆ ಹನಿಗಳು ಎಡಬಿಡದೆ ಬಡಿದು ಅಭ್ಯಂಜನ ಮಾಡಿಸುತ್ತಿವೆ. ಟಾರ್ಚ್ ಲೈಟಿನಿಂದ ಬೆಳಕು ಬೀರಿ ಕಾರಿನ ಒಳಭಾಗವನ್ನು ಒಮ್ಮೆ ಪರಿಶೀಲಿಸಿದೆ. ಇದೇನು ಕಾರೇ? ಗತಯುಗದ ಭವ್ಯ ಸ್ಮಾರಕವೇ? ಪ್ರಾಚ್ಯ ಸಂಶೋಧನಾಲಯದಲ್ಲಿ ಇಡಬೇಕಾದ ವಸ್ತು ವಿಶೇಷವೇ? ಚಿಕ್ಕಪ್ಪನವರ ಅತಿವಿಧೇಯ ಪುಷ್ಪಕವಾಗಿದ್ದ ಈ ಕಾರ್ ತನ್ನ ಆತ್ಮವನ್ನು ಅವರೊಂದಿಗೆ ಪರಲೋಕಕ್ಕೆ ರವಾನಿಸಿಬಿಟ್ಟಿರಬೇಕು ಎಂದೆನಿಸಿತು ನನಗೆ. ಹರಕು ಮುರುಕು, ಜಂಗು ಹಿಡಿದ ಈ ಜಂಕನ್ನು ನಾನು ಚಾಲೂ ಮಾಡಬಲ್ಲೆನೇ?

ಆದರೆ ನಾರಾಯಣ ಅಲ್ಲಿ, ಚಿಕ್ಕಮ್ಮ ಇಲ್ಲಿ. ನಡುವೆ ನಾನು! ನಾವು ಹೋಗಲೇಬೇಕು. ನೋಡಿಯೇ ಬಿಡೋಣ ಒಂದು ಕೈ ಎಂದು ಜಟ್ಕಾ ಸ್ಟಾರ್ಟ್ ಮಾಡಲು ಪ್ರಯತ್ನಿಸಿದೆ. ಕಾರನ್ನು ಜೋರಾಗಿ ತಳ್ಳಿಸಿ ಅದು ಓಡುತ್ತಿದ್ದಂತೆ ಗಿಯರನ್ನು ಲಗಾಯಿಸಿ ಎಂಜಿನ್ನನ್ನು ಚಾಲೂ ಮಾಡುವ ಉಲ್ಟಾ ವಿಧಾನವಿದು. ನನ್ನ ಈ ಹಿಕಮತ್ತು ಫಲ ನೀಡಿತು. ಡೊರಡೊರಡೊರ ಠಪ್ ಬ್ರೂರೋ ಎಂಬ ಕರ್ಣಾನಂದಕರ ಹೃದಯಮಧುರ ನಿನದದೊಡನೆ ಕಾರ್ ಜೀವ ಪಡೆದೇ ಪಡೆಯಿತು. ಭಲೇ ಹಿಲ್ ಮ್ಯಾನ್ ಯೂ ಆರ್ ಎ ಮ್ಯಾನ್! (ಅಥವಾ ನಾನೋ?) ದೀಪಗಳ ಸ್ವಿಚ್ ಹಾಕಿದೆ, ಜ್ಯೋತಿ ಬೆಳಗಲಿಲ್ಲ. ಎಂಜಿನ್ನಿನ ನಾದವೇನೋ ಭರವಸೆ ಮೂಡಿಸುವಂತಿದೆ. ಆದರೆ ಬೆಳಕಿಲ್ಲದೆ ಆ ಅಪರಾತ್ರಿ ಮಳೆಗೋಡೆ ಭೇದಿಸುತ್ತ ಮಲೆನಾಡಿನ ಗೊಂಡಾರಣ್ಯದ ಸರ್ಪ ಮಾರ್ಗದಲ್ಲಿ ಈ ಚರಸ್ಮಾರಕವನ್ನು ಓಡಿಸುವುದು ಹೇಗೆ? ಇನ್ನೂ ಒಂದು ತೊಂದರೆ ಕಾದಿತ್ತು. ಚಾಲಕನಿಗೆ ಎದುರಾಗಿ ಅಖಂಡ ಕನ್ನಡಿ ಚೌಕಟ್ಟು – ಗಾಳಿತೆರೆ (ವಿಂಡ್ ಸ್ಕ್ರೀನ್), ಇದೆಯಷ್ಟೆ. ಅದರ ಹೊರಮೈ ಮೇಲೆ ಚಾಮರ ಬೀಸಿ ನೀರೊರೆಸುವ ವೈಪರುಗಳೇ ಇರಲಿಲ್ಲ. ಹೀಗಾಗಿ ರಸ್ತೆ ಒಂದಿಷ್ಟೂ ಕಾಣುತ್ತಿರಲಿಲ್ಲ. ಹಾಗಾದರೆ ಕಾರನ್ನು ಹಿಂತಿರುಗಿಸುವುದೇ? ಆದರೆ ನಾರಾಯಣ ಅಲ್ಲಿ, ಚಿಕ್ಕಮ್ಮ ಇಲ್ಲಿ, ನಡುವೆ ನಾನು. ನಾವು ಹೋಗಲೇಬೇಕು.

ಪ್ರಾಚೀನ ಕಾಲದ ಯಂತ್ರೋದ್ಯಮದ ಪ್ರತೀಕವಾದ ಹಿಲ್ ಮ್ಯಾನನ ಗಾಳಿತೆರೆಯ ತಿರುಪನ್ನು ಸಡಿಲಗೊಳಿಸಿ ಕೈ ಹಿಡಿಯನ್ನು ತಿರುಗಿಸಿದೆ. ಗಾಳಿತೆರೆ ಹೊರಕ್ಕೆ ತೆರೆದುಕೊಂಡು ಬಾನೆಟ್ಟಿಗೆ ಸಮಾಂತರವಾಗಿ ನಿಂತಿತು. ಅಲ್ಲಿಗೆ ನನಗೂ ಹಾದಿಗೂ ನಡುವಿನ ಅಡಚಣೆ ಇಲ್ಲವಾದಂತಾಯಿತು, ನಿಜ. ಆದರೆ ಈಗ ಮಳೆಯ ನೇರ ಹೊಡೆತಕ್ಕೆ ಅದೂ ಕಾರ್ ಓಡುವಾಗ ಹೆಚ್ಚಿನ ಬಡಿತಕ್ಕೆ ನಾನು ತುತ್ತಾಗುತ್ತಿದ್ದೆ. ಮಳೆಯೂರಿನವನಾದ ನಾನು ಈ ಹೊಡೆತ ಬಡಿತಗಳಿಗೆ ಅಂಜುವ ಮಾಣಿ ಅಲ್ಲ. ಮಡಿಕೇರಿಯಿಂದ ಅಪ್ಪುಕಳದವರೆಗಿನ ಹಾದಿ ಕಂಡುದಾದರೆ ಹೇಗೂ ಹೋಗಬಹುದು. ಎಕ್ಸ್‌ಕಿರಣ ನೇತ್ರಗಳಿರಬಾದಿತ್ತೇ ನನಗೆ?

ಆ ಹಾದಿಯ ಒಂದೊಂದು ತಿರುವು ಮುರುವು, ಏಳುಬೀಳು, ಓರೆಕೋರೆ ಎಲ್ಲವೂ ನನಗೆ ಕಂಠಪಾಠ, ಅಲ್ಲಲ್ಲ ಪಾದಪಾಠ. ಹಾದಿಬದಿಯ ಗಿಡಗಂಟಿ, ಪೊದೆ ಕುರುಚಲು, ಬರೆ ಕೊರಕಲು ಎಲ್ಲವೂ ಆತ್ಮೀಯ ಒಡನಾಡಿಗಳು. ಹಾಗಿದ್ದರೂ ತಿಳಿಯದ ಕಾರನ್ನು ಕಾಣದ ಹೊತ್ತಿನಲ್ಲಿ, ಅರಿಯದ ಗುರಿಯೆಡೆಗೆ, ಆ ಹಾದಿಯಲ್ಲಿ ಒಯ್ದೇನೆಂಬ ಧೈರ್ಯ ಮೂಡಲಿಲ್ಲ. ಕಾರಿನ ಟೈರುಗಳು ಪಾದಗಳಲ್ಲವಷ್ಟೆ. ಹಾಗಾದರೆ ಕಾರನ್ನು ಲಾಯದೊಳಕ್ಕೆ ನುಗ್ಗಿಸುವುದೇ? ಆದರೆ ನಾರಾಯಣ ಅಲ್ಲಿ, ಚಿಕ್ಕಮ್ಮ ಇಲ್ಲಿ, ನಡುವೆ ನಾನು. ನಾವು ಹೋಗಲೇಬೇಕು.

ಚಿಕ್ಕಮ್ಮನಿಗೆ ಹೇಳಿದೆ, “ನೀವು ಮುಂದಿನ ಆಸನದಲ್ಲಿ ಎಡಗಡೆ ಕುಳಿತುಕೊಳ್ಳಿ. ಮಳೆನೀರಿನಿಂದ ತೋಯದಂತೆ ಕಂಬಳಿ ಹೊದ್ದುಕೊಳ್ಳಿ. ಎಡಗೈಯಲ್ಲಿ ಟಾರ್ಚ್ ಹಿಡಿದು ಅದರ ಬೆಳಕನ್ನು ಡಾಮರು ದಾರಿಯ ಎಡ ಅಂಚು ಸರಿಯಾಗಿ ನನಗೆ ಕಾಣುವಂತೆ ಬೀರುತ್ತಿರಿ. ಆ ಅಂದಾಜಿನ ಮೇಲೆ ನಾನು ಕಾರ್ ಚಾಲಿಸುತ್ತೇನೆ. ನಿಧಾನವಾಗಿ ಹೋಗೋಣ.” ಕುರುಡಚಾಲಕ ಕುಂಟಪಯಣಿಗ ಅವರ ಸಹಯೋಗದಿಂದ ಬಂಡಿ ಉರುಳಿತು. ದಾರಿ ಸರಿಯಿತು. ದೂರ ತೀರಕೆ?

ಕಾರನ್ನು ಒಂದನೆಯ ಗಿಯರಿಗೆ ಸರಿಸಿ ಎಂಜಿನ್ ನಾದ ಏರಿದಂತೆ ಎರಡನೆಯ ಗಿಯರಿಗೆ ಬದಲಾಯಿಸಿದೆ. ರಸ್ತೆಯಲ್ಲಿ ಜುಳುಜುಳಿಸುತ್ತಿದ್ದ ನೀರನ್ನು ಇಕ್ಕೆಲಗಳಿಗೂ ಚೇಪುತ್ತ ಎರಡೆರಡು ತಿರುಗಾಸುಗಳನ್ನು ಮಂದಗತಿಯಿಂದ ದಾಟುತ್ತ ಕಾರ್ ಸಾಗಿತು. ಈಗ ಬ್ರಾಹ್ಮಣಕೇರಿಯ ಬಲು ಕಡಿದಾದ ಚಡಾವು ಏರಬೇಕು. ಮೂರನೆಯ ಗಿಯರಿಗೆ ಆ ತಾಕತ್ತು ಬಾರದೆಂದು ಅನಿಸಿದ್ದರಿಂದ, ಜೊತೆಗೆ ಮೂರನೆಯದರಲ್ಲಿ ಹೋಗುತ್ತಿರುವಾಗ ನಡು ಚಡಾವಿನಲ್ಲಿ ವೇಗ ತಗ್ಗಿದರೆ ಗಿಯರನ್ನು ಎರಡನೆಯದಕ್ಕೆ ಇಳಿಸಲು ಬೇಕಾಗುವ ಎದೆಗಾರಿಕೆ ಆಗ ನನಗೆ ಇಲ್ಲದ್ದರಿಂದ – ಹೊಸ ನೀರು, ಹೊಸ ಕಾರು, ಬಲು ಹುಷಾರು – ಯಥಾಸ್ಥಿತಿಯನ್ನೇ ಮುಂದುವರಿಸಿದೆ. ಊರ ಒಳಗಿನ ಓಣಿ ಕೇರಿಗಳನ್ನು ಹಿಂದೆ ಹಾಕಿ ಮಡಿಕೇರಿಯ ಗಡಿಯಲ್ಲಿರುವ ಸುಂಕದ ಕಟ್ಟೆ ತಲಪಿದೆವು. ಪೆಟ್ರೊಲ್ ಪಂಪಿನಿಂದ ಕಾರಿಗೆ ಅಮೃತ ಊಡಿಸಿದೆ.

ಇನ್ನು ಮುಂದೆ ನಾವು ೭ ಕಿಮೀಗಳಷ್ಟು ದೂರ ಗೊಂಡಾರಣ್ಯದ ನಡುವೆ, ಬೆಟ್ಟದ ಮಗ್ಗುಲನ್ನು ಕೊರೆದು ಮಾಡಿದ್ದ ಬಳಸುದಾರಿಯ ಮೇಲೆ, ಸುತ್ತುತ್ತ ಬಳುಕುತ್ತ ಇಳಿಯುತ್ತ ಏರುತ್ತ ತೆವಳಬೇಕು. ಮಳೆರಾಯ ಗಿಯರ್ ಏರಿಸಿ ಇನ್ನೂ ತೀವ್ರವಾಗಿ ಜಡಿಯತೊಡಗಿದ. ನಾನೇನು ಕಡಿಮೆ? ನಾನು ಗಿಯರ್ ಏರಿಸಿ ಅಪ್ಪುಕಳದ ಹಾದಿಗೆ, ಗಹನ ತಿಮಿರದ ಬಾಯಿಗೆ, ಅಜ್ಞಾತ ಭವಿಷ್ಯದ ಕೂಪಕ್ಕೆ, ಕಾರನ್ನು ಹೊರಳಿಸಿಯೇ ಬಿಟ್ಟೆ. ಕಾರಿನ ಬಿರಿಗಳು ಸಮರ್ಪಕವಾಗಿಲ್ಲ. ಆದ್ದರಿಂದ ನಾಲ್ಕನೆಯ (ಟಾಪ್) ಗಿಯರ್ ಪೂರ್ಣ ವರ್ಜ್ಯ. ಮೂರನೆಯ ಗಿಯರಿನಲ್ಲಿ ಹೋಗೋಣವೇ? ಅದರಲ್ಲಿ ಜಾರಿಕೆ, ಎಂದರೆ ಗಿಯರಿನ ಸರಳು ಬೇಕಾದಲ್ಲಿ ನಿಲ್ಲದೆ ತಟಸ್ಥ ಸ್ಥಾನಕ್ಕೆ ಜಾರಿ ಬೀಳುವ ಐಬು. ಆಗ ಎಂಜಿನ್ ಚಾಲೂ ಇದ್ದರೂ ಬಂಡಿ ಓಡದು. ಎರಡನೆಯ ಗಿಯರಿನಲ್ಲಿಯೇ ಇಡೀ ಪಯಣ ಮಾಡೋಣವೇ? ಗತಿ ಅತಿ ಮಂದ. ಎಂಜಿನ್ ತುಂಬ ಬಿಸಿಯಾಗಿ ಕಾದು ಒಡೆದೇ ಹೋಡೀತು. ಆದ್ದರಿಂದ ಮೂರನೆಯ ಗಿಯರೇ ಶರಣು. ಸರಳನ್ನು ಎಡಗೈಯಿಂದ ಅಮರಿಸಿ ಬಿಗಿಹಿಡಿದು ಬಲಗೈಯಿಂದ ಚುಕ್ಕಾಣೀಚಕ್ರ (ಸ್ಟೀಯರಿಂಗ್ ವೀಲ್) ತಿರುಗಿಸುವ ಕರ್ಣನಾದೆ.

ಕಾರು ಮುಂದೆ ಮುಂದೆ ಹರಿಯಿತು, ಅಲ್ಲ, ರಸ್ತೆ ಹಿಂದೆ ಹಿಂದೆ ಜಾರಿತು. ಕಣ್ಣುಗಳಿಗೆ ಮಳೆಹನಿಗಳು ಬಡಿದು ಎಮೆ ಮೇಲೆ ಮಿನಿ ಭೂತಗನ್ನಡಿಗಳನ್ನು ರಚಿಸಿದುವು. ಅವುಗಳ ಮೂಲಕ ಕಂಡ ನೋಟವೇ ಬೇರೆ. ಇತ್ತ ಡಾಮರು ರಸ್ತೆಯಲ್ಲಿ ಹರಿಯುತ್ತಿದ್ದ ನೀರ ಹೊನಲಿನಲ್ಲಿ ಪ್ರತಿಫಲಗೊಂಡ ಟಾರ್ಚ್ ಬೆಳಕು ಮಾಯಾಲೋಕವೊಂದನ್ನು ನಿರ್ಮಿಸಿತ್ತು. ದಾರಿ ಯಾವುದಯ್ಯಾ ತಿಳಿಯದೆ ಭಯಗೊಂಡೆ. ಬಲಗಡೆಗೆ ಬರೆ, ಎಡಗಡೆಗೆ ದರೆ, ಎದುರಿಗೋ ಮಳೆಹಿಮಗಳ ದಟ್ಟ ತೆರೆ, ನಡುವೆ ಈ ಮಿಲಿಟರಿ ದೊರೆ! ಟಾರ್ಚಿನ ಸುತ್ತಲೂ ಬೆಳಕಿನ ಮಬ್ಬು ಜೊಂಪೆ, ಅದರಿಂದಾಚೆಗೆ ಗಭೀರ ಶೂನ್ಯ.

ಚಿಕ್ಕ ಕಲ್ಲಿನ ಮೇಲೂ ಚಕ್ರ ಉರುಳಿದಾಗ, ಪುಟ್ಟ ಹೊಂಡವನ್ನೂ ಅದು ದಾಟಿದಾಗ, ಸಣ್ಣ ಕಣಿವೆಯನ್ನೂ ಅದು ಅಡ್ಡ ಹಾಯ್ದಾಗ ಚುಕ್ಕಾಣಿಚಕ್ರ ಅಲುಗುತ್ತಿತ್ತು. ನನ್ನ ಗುಂಡಿಗೆ ಬಡಿತ ತಾರಕ್ಕೆ ಜಿಗಿಯುತ್ತಿತ್ತು. ಎಂಜಿನ್ ನಾದ ಮಂದ್ರಕ್ಕೆ ಕುಸಿಯುತ್ತಿತ್ತು. ಅತ್ತಿತ್ತ ನೋಡುವುದುಂಟೇ? ರಸ್ತೆಯ ಎಡ ಅಂಚೊಂದೇ ನನ್ನ ಧ್ರುವ ತಾರೆ. ಆದರೆ ಎಡ ಅಂಚೇ ನಲುಗಿ ಕರಗಿ ನೀರಾಗಿ ಪ್ರವಹಿಸುತ್ತಿದೆ. ಚಿಕ್ಕಮ್ಮ ಎವೆ ಮುಚ್ಚದೆ ಹಾದಿ ದಿಟ್ಟಿಸುತ್ತ ನನಗೆ ಸೂಚನೆ ನೀಡುತ್ತಿದ್ದಾರೆ. ಅಳ್ಳೇಶಿ ಅರ್ಜುನನ ಟೊಳ್ಳು ಎದೆಗೆ ಕೆಚ್ಚು ತುಂಬುತ್ತಿದ್ದಾರೆ. ಅಂಥದ್ದರಲ್ಲೂ ನನಗೆ ಖಾತ್ರಿ ಇದೆ, ನಮ್ಮ ವಾಹನ ಕೇರೆಹಾವಿನಂತೆ ಅಂಕುಡೊಂಕಾಗಿಯೇ ತೆವಳಿರಬೇಕೆಂದು.

ಐದು ಕಿಮೀ ಉದ್ದದ ಇಳಿಜಾರು ಹಾದಿ ಮುಗಿಯಿತು. ದಾರಿಗೆ ಅಡ್ಡ ಮರ ಬಿದ್ದಿರಲಿಲ್ಲ. ಬಿದ್ದಿದ್ದರೆ ಅದೇ ನಮ್ಮನ್ನು ತಡೆದು ನಿಲ್ಲಿಸಿರುತ್ತಿತ್ತು. ಮೋರಿ ಸೇತುವೆ ಯಾವುದೂ ಕುಸಿದಿರಲಿಲ್ಲ. ಕುಸಿದಿದ್ದರೆ ಅವೇ ನಮ್ಮ ಕಾರನ್ನು ಮುಗ್ಗರಿಸಿ ಕುಕ್ಕರಿಸುವಂತೆ ವಿಧಿಸಿರುತ್ತಿದ್ದುವು. ಈಗ ಬಂದಿದೆ ನಿಜವಾದ ಪರೀಕ್ಷಾ ಕಾಲ. ನನ್ನೂರಿನ ನನಗೆ ಬಲು ಚೆನ್ನಾಗಿ ಗೊತ್ತಿರುವ, ಎಂದೂ ಬದಲಾಗದಿರುವ ಹಾದಿಯೊಂದು, ಸನ್ನಿವೇಶದ ಬದಲಾವಣೆಯಿಂದ ಎಂಥಾ ಸವಾಲಾದೀತೆಂಬುದನ್ನು ಯೋಚಿಸಿ ನಡುಗಿದೆ. ಬಿಗಿ ಸರಿಗೆಯ ಮೇಲೆ ಸಮತೋಲ ತಪ್ಪದೆ ನಡೆದು ಗುರಿ ತಲಪುವ ಅದಟು ನನಗುಂಟೇ? ಮೂರು ಕಿಮೀ ಉದ್ದದ ಉಡುವತ್ತುಮೊಟ್ಟೆ ಚಡಾವನ್ನು ನಾವೀಗ ಏರಬೇಕಾಗಿದೆ. ಅದೆಂಥ ಚಡಾವು? ಏರುಧಾಟಿಯಲ್ಲಿ ಬಳಸುತ್ತ ಸುತ್ತುತ್ತ ಹತ್ತುತ್ತ ಬಳುಕುತ್ತ ಹೋಗಿ ಕೊನೆಯ ಹಂತದಲ್ಲಿ ನೇರ ನೆತ್ತಿಗೇ ನೆಗೆದು ಬಲಕ್ಕೆ ಲಂಬ ಕೋನದಲ್ಲಿ ಒಮ್ಮೆಗೇ ತಿರುಗಿ ದಿಢೀರನೆ ಇಳಿಯಲು ತೊಡಗುವ ಕಾಲನ ಕೋಣನ ಜಾಡು. ಇದರ ಬಹುಭಾಗವನ್ನು ಮೂರನೆಯ ಗಿಯರಿನಲ್ಲಿ ನಿಭಾಯಿಸಬಹುದು. ನಿಜ, ಆದರೆ ಗಿಯರ್ ಜಾರಿಕೆಗೆ ಮದ್ದು? ಚಡಾವು ಏರುವಾಗ ಚುಕ್ಕಾಣಿ ಚಕ್ರದ ಮೇಲೆ ಬೀಳುವ ಒತ್ತಡ ಜಾಸ್ತಿ. ಆದ್ದರಿಂದ ಎರಡು ಕೈಗಳೂ ಅದರ ಮೇಲಿರುವುದು ಅಪೇಕ್ಷಣೀಯ. ಈ ಕಾರಣಕ್ಕಾಗಿ ಎರಡನೆಯ ಗಿಯರಿನಲ್ಲಿ ಹೋಗಲಾದೀತೇ? ಅತಿಯಾಗಿ ಕಾದು ಹೋಗುವ ಎಂಜಿನ್ ಯಾವ ಗಳಿಗೆಯಲ್ಲಿಯೂ ಸ್ಫೋಟಗೊಳ್ಳಬಹುದಾದ ಶಾಶ್ವತ ಅಪಾಯದೊಂದಿಗೆ ಸೆಣಸಾಟ. ಸರಿ, ಹಿಂದಿನಂತೆಯೇ ಎಡಗೈಯಲ್ಲಿ ಗಿಯರ್ ಸರಳು, ಬಲಗೈಯಲ್ಲಿ ಚುಕ್ಕಾಣಿ ಚಕ್ರ ಹಿಡಿದು, ಮೂರನೆಯ ಗಿಯರಿನಲ್ಲಿ ಬಂಡಿ ಚಾಲೂ ಮಾಡಿದೆ.

ಏರಿದೆವು, ಮಳೆ ತಾಡನೆಯನ್ನು ಲೆಕ್ಕಿಸದೆ ಏರಿದೆವು, ಎಂಜಿನ್ನಿನ ನಾದ ತಾರಕ್ಕೇರಿದಂತೆ ಕಾಡಿನ ಗುಹಾಂತರದಿಂದ ಅದರ ಪ್ರತಿಧ್ವನಿ ಭೀಕರವಾಗಿ ಅನುರಣಿಸಿದಂತೆ ಮೇಲೆ ಮೇಲೆ ಏರಿದೆವು. ಬಲಗಡೆಯ ಬರೆಗೆ ಹೆಟ್ಟದೆ, ಎಡಗಡೆಯ ಕೊರಕಲಿಗೆ ಬೀಳದೆ ಏರಿದೆವು. ಈಗ ಬಂದೇ ಬಂತು ಕೊನೆಯ ಇಪ್ಪತ್ತೈದು ಮೀಟರುಗಳ ಅಗ್ನಿಪರೀಕ್ಷಾ ಸ್ಥಳ. ಮೂರನೆಯ ಗಿಯರಿನಲ್ಲಿಯೇ ಮುಂದುವರಿಯುವುದೇ? ಇಲ್ಲ, ಎಂಜಿನ್ ಹುಯಿಲಿಡುತ್ತಿದೆ “ನಾನಿನ್ನು ಎಳೆಯಲಾರೆ.” ಅದರ ಮೊರೆಯನ್ನು ಅಲಕ್ಷಿಸಿ “ಹೋಗಿಯೇ ಹೋಗು” ಎಂದು ವಿಧಿಸಲೇ? ಅದು ನಡು ಚಡಾವಿನಲ್ಲಿ ದುಡುಂ ಸಂಪು ಹೂಡಿ ನಿಂತೇ ಹೋದರೆ? ಒಡನೆ ಗಿಯರ್ ಪೆಟ್ಟಿಗೆ ಒಡೆದೇ ಹೋದೀತು, ಅಥವಾ ಕಾರ್ ಹಿಂದಕ್ಕೆ ದಡದಡನೆ ಧಾವಿಸೀತು. ದುರ್ಬಲ ಬಿರಿಗಳು ಈ ಹಿನ್ಸರಿತವನ್ನು ತಡೆಯಲಾರವು. “ನ್ಯೂಟನ್ ಮಹಾಶಯಾ! ನೀನು ದೂರದ ಇಂಗ್ಲೆಂಡಿನಲ್ಲಿ ಸತ್ತು ಹೋಗಿ ಎರಡು ಶತಮಾನಗಳೇ ಸಂದಿದ್ದರೂ ನಮ್ಮನ್ನು ಕಾಡಿನ ಈ ಸಂದಿನಲ್ಲಿ ಕೂಡ ಗೋಳು ಹುಯ್ದುಕೊಳ್ಳುವುದನ್ನು ಇನಿತೂ ಕಡಿಮೆ ಮಾಡಿಲ್ಲವಲ್ಲ!” ಎಂದು ಅವನಿಗೆ ಮನಸ್ವೀ ಶಾಪ ಹಾಕಿದೆ. ಯೋಚನೆಗೆ ಈಗ ಪುರುಸೊತ್ತಿಲ್ಲ. ಕ್ರಿಯೆ, ಅಧಿಕ ಕ್ರಿಯೆ, ಕಾರ್ ಮುಂದೆ ಹೋಗಲೇಬೇಕು. ಪರ್ವ ಬಿಂದುವನ್ನು ಉತ್ತರಿಸಲೇಬೇಕು. ಜಯ ಲಭಿಸಲೇಬೇಕು.

ಕ್ಲಚ್ ಒತ್ತಿದೆ. ಗಿಯರನ್ನು ಅದೇ ಕ್ಷಣ ತಟಸ್ಥ ಸ್ಥಾನಕ್ಕೆ ಎಳೆದೆ. ಕ್ಲಚ್ ಬಿಟ್ಟೆ, ಆಕ್ಸಿಲರೇಟರ್ ಒತ್ತಿದೆ. ಎಂಜಿನ್ ಬುಸ್ ಗುಂಯ್ ಎಂದಿತು. ಆಕ್ಸಿಲರೇಟರ್ ಬಿಟ್ಟೆ. ಕ್ಲಚ್ ಒತ್ತಿದೆ ಅದೇ ಕ್ಷಣ ಗಿಯರನ್ನು ಬಲಪ್ರಯೋಗಿಸಿ ಎರಡನೆಯ ಸ್ಥಾನಕ್ಕೆ ಎಳೆದೇ ಬಿಟ್ಟೆ. ನಿಧಾನವಾಗಿ ಕ್ಲಚ್ಚನ್ನು ಸಡಿಲಗೊಳಿಸುತ್ತ ಆಕ್ಸಿಲರೇಟರನ್ನು ಒತ್ತತೊಡಗಿದೆ. ಇವೆಲ್ಲ ಕ್ರಿಯೆಗಳೂ ನಡೆದು ಹೋದುದು ಸೆಕೆಂಡಿನ ಅಲ್ಪಾಂಶ ಅವಧಿಯಲ್ಲಿ. ಆ ವೇಳೆ ನಾನೇ ಗಿಯರ್, ನಾನೇ ಕ್ಲಚ್, ನಾನೇ ಆಕ್ಸಿಲರೇಟರ್. ನಾನೇ ಎಲ್ಲವೂ : “ಅಹಂ ಕ್ರತುರಹಂ ಯಜ್ಞ.” ಒಮ್ಮೆ ಕಾರ್ ಹಿಂದೆ ಸರಿದಂತಾಯಿತು, ದೇವರೇ ಗತಿ (ಅಂದ ಹಾಗೇ ಶತನಾಸ್ತಿಕನಾದ ನಾನು ದೇವರೇ ಗತಿ ಎಂದು ಮರೆತೂ ಅನ್ನುವಂತಿಲ್ಲ!). ಬಲಗಡೆಗೆ ಹೋಗಿ ಬರೆಗೆ ಬಡಿದು ನಿಲ್ಲಲಿ, ಎಡಗಡೆಗೆ ಸಾಗಿ ದರೆಗೆ ಬಿದ್ದು ನುಚ್ಚುನುರಿ ಆಗುವುದಕ್ಕಿಂತ ಎಂದು ಬಗೆದು ಚುಕ್ಕಾಣಿಚಕ್ರವನ್ನು ಬಲಗಡೆಗೆ ತಿರುಗಿಸಿದೆ. ಹಿಲ್ ಮ್ಯಾನ್ ಕೈಕೊಡಲಿಲ್ಲ. ಹಸ್ತಾಲಿಂಗನ ನೀಡಿತು! ಎಂಜಿನ್ ಎರಡನೆಯ ಗಿಯರನ್ನು ಒಪ್ಪಿಕೊಂಡು ಘೋರ ಗರ್ಜನೆ ಸಹಿತ ಎಳೆಯತೊಡಗಿತು. ‘ನೀರೊಳಗಿರ್ದು ಬೆಮರ್ದ’ ನಾನು ಆ ಕ್ಷಣ ಗಾಳಿಯಂತೆ ಹಗುರಾದೆ, ಮಿಂಚಿನಂತೆ ಚುರುಕಾದೆ, ಮಳೆ ಹನಿಯಂತೆ ಮುಕ್ತನಾದೆ. ಚಡಾವಿನ ಕೊನೆಯ ಮಜಲನ್ನು ಕಾರ್ ಯಶಸ್ವಿಯಾಗಿ ಉತ್ತರಿಸಿ ತಿರುಗಾಸಿನಲ್ಲಿ ರಷ್ಯದ ಬ್ಯಾಲೇ ನರ್ತಕಿಯಂತೆ ಬಳುಕಿ ತಿರುಗಿ ಮುಂದಿನ ಇಳಿಜಾರು ಹಾದಿಯಲ್ಲಿ ಓಡಲು ಸಿದ್ಧವಾಗಿತ್ತು.

ಅಲ್ಲಿ ಅದನ್ನು ಕ್ಷಣಕಾಲ ನಿಲ್ಲಿಸಿಕೊಂಡು, ಆದರೆ ಎಂಜಿನ್ನನ್ನು ಚಾಲೂ ಸ್ಥಿತಿಯಲ್ಲಿಯೇ ಇಟ್ಟುಕೊಂಡು, ಕೈ ಮುಸುಡು ಒರೆಸಿಕೊಂಡು ನಿಡು ಉಸಿರು ಎಳೆದುಕೊಂಡು, “ಹೋಗಿನ್ನು ಸಲೀಸಾಗಿ” ಎಂದು ಹಿಲ್ ಮ್ಯಾನನಿಗೆ ಅತ್ಮೀಯತೆಯಿಂದ ಉಸುರಿದೆ. ಅಚ್ಚರಿ ಎಂದರೆ ಈಗ ತೇಜಿ ಮಳೆ ಪೂರ್ತಿ ಬಂದ್ ಆಗಿತ್ತು. ಕಾಡಿನ ಹೆಮ್ಮರಗಳ ಕೊಂಬೆ ರೆಂಬೆ ಎಳೆ ಹೂಗಳ ಮೇಲೆ ಒಟ್ಟಯಿಸಿದ್ದ ನೀರು ತೊಟ್ಟು ತೊಟ್ಟಾಗಿ ಜಿನುಗುತ್ತಿತ್ತು. ನಮ್ಮ ಟಾರ್ಚಿನ ಪ್ರಕಾಶದಲ್ಲಿ (ಈಗದು ಅತಿ ಪ್ರಖರವಾಗಿತ್ತು) ಆ ನೀರ ಹನಿಗಳು ತೋರ ಬೆಂಕಿ ಉಂಡೆಗಳಂತೆ ಪ್ರಜ್ವಲಿಸುತ್ತಿದ್ದುವು. ಮೋಡಗಳ ಎಡೆಯಿಂದ ತಿಂಗಳ ಬೆಳಕು ಮಂದವಾಗಿ ಒಸರಿ ಗಿಡಮರಗಳ ಎಲೆ ಅಡರುಗಳ ಜರಡಿ ಮೂಲಕ ಸೋರಿ ಅಲ್ಲೆಲ್ಲ ತೆಳು ಅರಿಸಿನ ಹುಡಿ ಚೇಪಿರುವಂತೆ ತೋರುತ್ತಿತ್ತು. ಕೇವಲ ಒಂದು ಗಳಿಗೆ ಹಿಂದೆ ಕಾಡಿನ ಏಕಾಂಗೀ ಭೀಕರತೆಯಿಂದ ಭೀತನಾಗಿದ್ದೆ. ಈಗಾದರೋ ಅದರ ರುದ್ರರಮಣೀಯತೆಯಿಂದ ಉಲ್ಲಸಿತನಾಗಿದ್ದೇನೆ. ಆದರೆ ನಾರಾಯಣ? ‘ನಾರಾಯಣಂ ನಮಸ್ಕೃತ್ಯಂ.. .’

ಕಾರು ದೌಡಾಯಿಸುತ್ತಿದೆ. ಅಪ್ಪುಕಳದ ಶಹರು ಎರಡಂಗಡಿಗಳ ಹಿರಿ ಸಾಲು. ಇನ್ನೇನು ಎದುರಗಲಿದೆ. ಅಲ್ಲಿಂದ ಮುಂದೆ ರಾಜಮಾರ್ಗ ಬಿಟ್ಟು ಎಡಕ್ಕೆ ಹೊಡೆದುಕೊಂಡು ಕೆಸರು ರಾಡಿ ಸೆಗಣಿ ರೊಚ್ಚೆ ತುಂಬಿರುವ ಹಳ್ಳಿಹಾದಿಯಲ್ಲಿ ನಮ್ಮ ಜಮೀನಿಗೆ ಹೋಗಬೇಕು. ಅಲ್ಲಿ ಕಾರ್ ಓಡೀತೇ? ಹೂತು ಹೋಗದೇ? ಮೊಸಳೆ ಹಿಡಿದೆಳೆದಾಗ ಕರಿಯ ಮೊರೆ ಕೇಳಿ ಹರಿಬಂದು ರಕ್ಷಣೆ ನೀಡಿದನಂತೆ. ಆದರೆ ಕಲಿಯುಗದಲ್ಲಿ ಅದೆಲ್ಲ ನಡೆದೀತೇ? ದಾಸವಾಣಿ ಮೊಳಗಿತು, “ಎಲ್ಲಿರುವನೋ ಹರಿ ಎಂಬ ಸಂಶಯವೇಕೆ?” ಹೀಗೆ ಎಣಿಕೆ ಹಾಕುತ್ತಿದ್ದಂತೆಯೇ ಅಪ್ಪುಕಳದ ಶಹರು ಬಂದೇ ಬಂತು. ಆ ತನಕ, ಸುಮಾರು ಒಂದೂವರೆ ತಾಸು, ಎಡೆಬಿಡದೆ ಮಿಡಿದಿದ್ದ ಎಂಜಿನ್ ಅಲ್ಲಿ ಇದ್ದಕ್ಕಿದ್ದಂತೆ ನಿಶ್ಶಬ್ದವಾಯಿತು. ಇನ್ನೂ ಇಳಿಜಾರೇ ಇದ್ದುದರಿಂದ ಜಟ್ಕಾ ಸ್ಟಾರ್ಟ್ ಪ್ರಯತ್ನಿಸಿದೆ. ಸ್ಟಾರ್ಟರ್ ಎಳೆದೆ. ಚೋಕ್ ಕೊಟ್ಟೆ, ಸ್ವಿಚ್ ಕೀಲಿ ಮೇಲೆ ಕೈ ಪರಡಿದೆ. ಆದರೆ ಎಂಜಿನ್ನಿಗೆ ಜೀವ ಬರಲಿಲ್ಲ. ಕಾರಿನಿಂದ ಇಳಿದೆ. ನನಗೆ ಸೊಂಟವಿದೆ, ಮಂಡಿಕೀಲುಗಳೂ ಇವೆ ಎಂದು ಚೆನ್ನಾಗಿ ತಿವಿದು ಹೇಳುವಂತೆ ಅವು ನೋಯುತ್ತಿದ್ದುವು. ಕಾರಿನ ಬಾನೆಟ್ ಮುಟ್ಟಿದೆ. ಅದು ಕಾದು ಕರಗಲು ಸನ್ನದ್ಧವಾಗಿದ್ದ ಕಬ್ಬಿಣವಾಗಿತ್ತು. ಮಳೆಯ ನಿರಂತರ ಅಭಿಷೇಕವೂ ಅದರ ಕಾವನ್ನು ತಗ್ಗಿಸಿರಲಿಲ್ಲ.

ಉಳಿದಿದ್ದ ದೂರ ಕೇವಲ ಅರ್ಧ ಕಿಮೀ ಮಾತ್ರ. ನಡೆದೇ ಹೋದೆವು. ಅಲ್ಲಿಯ ವಠಾರದಲ್ಲಿ ನಾರಾಯಣ ಮಲಗಿದ್ದರೆ ಸರಿ, ಇಲ್ಲವಾದರೆ? ಈ ಯೋಚನೆ ಬೇಕಾಗಲಿಲ್ಲ. ನಾಯಿಗಳು ಬಗುಳಿದುವು, ಕೋಳಿಗಳು ಕೊಕ್ಕೊಕ್ಕೊಕ್ಕೋ ಕೂಗಿ ರಂಪ ಎಬ್ಬಿಸಿದುವು, ಹಂದಿಗಳು ಡುರುಕುತ್ತ ಎಡ್ಡ ತಿಡ್ಡ ಓಡಿದುವು. ಕಾಲ್ನಡೆಗಳು ಘೂಕಾರ ಮಾಡಿ ಮಲೆತುವು. ಒಕ್ಕಲಿನ ಗಂಡಸರು ಹೆಂಗಸರು ಲಾಂದ್ರ ಹಿಡಿದು ಹೊರಗೆ ಬಂದು ಬೊಬ್ಬೆ ಅಬ್ಬರಿಸಿದರು. ಯಾರೋ ಕಳ್ಳರು ಹಂದಿ ಕೋಳಿಗಳನ್ನು ಲಪಟಾಯಿಸಲು ಬಂದಿರಬೇಕೆಂದು ಅವರ ಊಹೆ. ಚಿಕ್ಕಮ್ಮ ಕೂಗಿ ಹೇಳಿದರು ತಾವು ಯಾರೆಂದು.

“ಓ ಅಮ್ಮಾ ನೀವಾ? ಏನು ಈ ಹೊತ್ತಿನಲ್ಲಿ? ಮನೇಲೆಲ್ಲಾ ಚೆನ್ನಾಗಿದ್ದಾರಾ?”
“ನಮ್ಮ ನಾರಾಯಣಸ್ವಾಮೀ. . .?”
ಕೂರಲಗಿನ ಮೇಲೆ ನಿಂತಿದ್ದೇವೆ. ಯಶಸ್ವಿಯಾಗಿ ದಾಟುತ್ತೇವೋ? ಸಿಗಿದು ಉದುರುತ್ತೇವೋ? ಒಕ್ಕಲಿನವರ ಉತ್ತರವನ್ನು ಅವಲಂಬಿಸಿದೆ.
“ನಾರಾಯಣಸ್ವಾಮೀ? ಬಂಗ್ಲೆಯೊಳಗೆ ಮಲಗಿದ್ದಾರಲ್ಲ!”

ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ
ಆಶೆ ಬೂದಿ ತಳದಲ್ಲು ಕೆರಳುತಿವೆ
ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನದ ಕೊರಡೊಳೂ
ಹೂವು ಹೂವು ಅರಳಿ

– ಗೋಪಾಲಕೃಷ್ಣ ಅಡಿಗ

(ಮುಂದುವರಿಯಲಿದೆ)