(ಎರಡನೇ ಸಣ್ಣ ಕತೆ -೧೯೪೮)
– ಜಿ.ಟಿ. ನಾರಾಯಣ ರಾವ್)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೭ರಲ್ಲಿ ಬರೆದ, ಇಲ್ಲಿ ಕೆಲವು ವಾರಗಳ ಹಿಂದೆ ಪ್ರಕಟವಾದ ‘ಸುಬ್ಬಪ್ಪನ ದಯೆ’ಯೂ (ಓದದವರು ಇಲ್ಲಿ ಚಿಟಿಕೆ ಹೊಡೆಯಿರಿ) ಸೇರಿದಂತೆ ತನ್ನ ಹನ್ನೆರಡು ಕತೆಗಳ, ಅಂದರೆ ಸಮಗ್ರ ಕಥಾಸಂಕಲನ – ಕೊಡಗಿನ ಸುಮಗಳು, ಇದಕ್ಕೆ ೧೯೯೩ರಲ್ಲಿ ಬರೆದ ಅರಿಕೆಯ ಕೆಲವು ಮಾತುಗಳು ಹೀಗಿವೆ: “ವನಸುಮ ಮತ್ತು ಕೊಡಗಿನ ಕತೆಗಳು ಎಂಬ ‘ಪ್ರಾಚೀನ’ ಕಥಾಸಂಕಲನಗಳ ಲೇಖಕ ಖುದ್ದು ನಾನೇ ಎಂಬುದು ಮರೆತೇ ಹೋಗಿದ್ದಾಗ, ಆ ‘ಮೇರು ಕೃತಿಗಳ’ ಪ್ರತಿಗಳು ನನ್ನ ಗ್ರಂಥಗೊಂಡಾರಣ್ಯದಲ್ಲಿ ರಜಃಕಣಾಂತರ್ಗತ ಪಳೆಯುಳಿಕೆಗಳಾಗಿ ಮಾಸಿ ಹೋಗಿದ್ದಾಗ, ಲೇಖನಕೃಷಿಯ ಸದ್ಯೋಜಾತ ಉಲ್ಲಾಸ ಇಂಗಿದ ಬಳಿಕ, ನನ್ನ ಯಾವುದೇ ಕೃತಿಯ ಅಥವಾ ಬರೆಹದ ಬಗ್ಗೆ ಏನೊಂದೂ ಆಸಕ್ತಿ ಅಥವಾ ಒಲುಮೆ ಇಲ್ಲದೆ ವರ್ತಮಾನದಲ್ಲಿ ಪೂರ್ಣಮಗ್ನನಾಗಿ ಭವಿಷ್ಯದತ್ತ ‘ಚುಂಚ’ ಚಾಚುತ್ತಿರುವಾಗ ನಮ್ಮ ಹಿರಿಯ ಮಗ ಜಿ.ಎನ್. ಅಶೋಕವರ್ಧನ (ಅತ್ರಿ ಬುಕ್ ಸೆಂಟರಿನ ‘ದೊರೆ’) ಈ ಹೊಸ ಕೀಟವನ್ನು ನನ್ನ ತಲೆಗೆ ಹೊಗಿಸಿದ (ದೊರೆಯೇ ಇದು ಸರಿಯೇ ನಿನಗೆ ಹರಿಯೇ): ವನಸುಮ + ಕೊಡಗಿನ ಕತೆಗಳು = ಕೊಡಗಿನ ಸುಮಗಳು ಎಂಬ ಹೊಸ ಸಂಕಲನವನ್ನು ಪ್ರಕಟಿಸಬಾರದೇಕೆ? ಇಂಥ ಒಂದು ಕೃತಿ ಅಂದಿನ ಕೊಡಗಿನ ಬದುಕಿಗೆ ಒಂದು ಇಣುಕುನೋಟ ಒದಗಿಸುವದರ ಜೊತೆಗೆ ನನ್ನ ದೃಷ್ಟಿ ಮತ್ತು ಶೈಲಿಗಳ ವಿಕಾಸ ಅರಿಯಲು ಒಂದು ಅವಕಾಶವನ್ನೂ ಕಲ್ಪಿಸಬಹುದು. ಇದು ಅವನ ವಾದ. ‘ಪಸಿಮಣ್ ನಲ್ವೆಣ್ ತನಿಪಣ್ ಕಲಿಗಳ್’ – ಇದು ಕೊಡಗು ಎಂಬ ಅರ್ಥ ಬರುವ ಮಾತನ್ನು ಹಿಂದೊಮ್ಮೆ ನೆಹರೂ ಮಡಿಕೇರಿಯಲ್ಲಿ ಮಾಡಿದ ಭಾಷಣದಲ್ಲಿ ನುಡಿದದ್ದು ನೆನಪಿಸಿಕೊಂಡೆ. ಕುಸಿಯುತ್ತಿರುವ (?) ನನ್ನ ಧೃತಿಗೆ ಕಾಯಕಲ್ಪ ಮತ್ತು ಮುಖಮಾರ್ಜನ ನೀಡಲು ಅವನು ಹೂಡಿರುವ ಹೂಟ ಇದಾಗಿರಬಹುದೇ ಎಂಬ ಗುಮಾನಿ ನನಗುಂಟು – ಅವನೆಷ್ಟು ಖಡಾಖಂಡಿತವಾಗಿ ಇದನ್ನು ನಿರಕಾರಿಸಿದರೂ!”

ಮುಂದೆ ಕೊಡಗಿನ ಸುಮಗಳು ಸಂಕಲನದಲ್ಲಿ ಉಳಿದವನ್ನು ಹೀಗೇ ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ – ಅಶೋಕವರ್ಧನ]

ಗಿರಿಶಿಖರದ ನೆರಳಿನಲ್ಲಿ, ಮರಗಳ ಮರೆಯಲ್ಲಿ ಹೊಂಬಣ್ಣದ ಸೂರ್ಯನು ಅಡಗುತ್ತಿದ್ದಾನೆ. ಚಳಿಗಾಳಿಯು ಆಗಲೇ ಬೀಸಲು ಪ್ರಾರಂಭವಾಗಿದೆ. ಒಂದು ಸಲ ಪ್ರವಾಹದಂತೆ ಅದು ಬೀಸಿ ಮತ್ತೆ ಸ್ವಲ್ಪ ಹೊತ್ತು ಶಾಂತವಾಗುವುದು. ಚಿನ್ನದ ಹೊದಿಕೆಯನ್ನು ತೆರೆಯಾಗಿ ಹಾಸಿದಂತೆ ಇರುವ ಇಡೀ ಗದ್ದೆಗಳು ಆಗ ತಲೆದೂಗಿ, ಬತ್ತದ ಪರಿಮಳವನ್ನು ಗಾಳಿಗೆ ಬೆರೆಸಿ ಶಾಂತವಾಗುವುವು. ಎಲ್ಲಿ ನೋಡಿದರೂ ಗದ್ದೆಗಳು, ಅತಿ ದೂರದಲ್ಲಿ ಬೆಟ್ಟದ ಸಾಲುಗಳು. ಅವು ಸಂಜೆಯ ಸೂರ್ಯನ ರಶ್ಮಿಯಲ್ಲಿ ಧೂಳಿನ ಪರೆಯಿಂದ ಮುಚ್ಚಿದಂತೆ ತೋರುವುವು. ಈ ಗದ್ದೆಗಳು ಮೆಟ್ಟಲು ಮೆಟ್ಟಲಾಗಿ, ಒಂದು ಕಡೆ ನೋಡಿದರೆ ಇಳಿಯುತ್ತಾ ಸಾಗಿರುವುವು. ಪ್ರತಿ ಗದ್ದೆಯೂ ಬತ್ತದ ಕದಿರುಗಳಿಂದ ತುಂಬಿ ತುಳುಕುತ್ತಿದೆ. ಅದೇ ಹುತ್ತರಿಯು (ಪುದಿಯ ಅರಿ ಪುತ್ತರಿ, ಹೊಸ ಅಕ್ಕಿ ಬರುವ ಶುಭಸೂಚಕವಾದ ಒಂದು ಹಬ್ಬ) ಕಳೆದಿರುವ ಸಮಯ. ಇನ್ನೇನು ಒಂದು ವಾರ, ಎರಡು ವಾರಗಳಲ್ಲಿ ಅವೆಲ್ಲ ಕಟಾವಿಗೆ ಸಿದ್ಧವಾಗುವುವು. “ಈ ದಿನ ಈ ಗದ್ದೆ, ನಾಳೆ ಆ ಗದ್ದೆ” ಎಂದು ಎಲ್ಲ ಗದ್ದೆಗಳೂ ಕೊಯ್ದು ಮುಗಿಯುವುವು. ತೆನೆ ತುಂಬಿ ಬಾಗಿ ನಿಂತಿರುವ ಬತ್ತದ ಪೈರುಗಳನ್ನು ಕೊಯ್ದು, ಹತ್ತಿರ ಹತ್ತಿರ ಸಾಲಾಗಿ ಗದ್ದೆಯಲ್ಲಿ ಹರಡುತ್ತಾರೆ. ಆಗ ದೂರದಿಂದ ಒಂದು ಮರದ ಮೇಲಿನಿಂದಲೋ ಒಂದು ಗುಡ್ಡದ ತುದಿಯಿಂದಲೋ ಈ ಗದ್ದೆಗಳನ್ನು ನೋಡಬೇಕು. ಹಸುರು ಬಟ್ಟೆಯ ಮೇಲೆ ಅರಸಿನದ ಚಿತ್ರಗಳನ್ನು ಯಾರೋ ನುರಿತ ಚಿತ್ರಕಾರನು ಕುಂಚಿಸಿದಂತೆ ಚೆಲುವಾಗಿ ತೋರುವುವು. ಪ್ರಕೃತಿಯು ಪ್ರತಿ ಋತುವಿನಲ್ಲಿಯೂ ನವರೂಪ ಧರಿಸಿ ನಮ್ಮನ್ನು ಆಹ್ಲಾದಪಡಿಸುತ್ತಿರುತ್ತಾಳೆ.

ಅದೂ ಈ ವರ್ಷದ ಬೆಳೆಯೆಂದರೆ ಮೃಗ ತಿಂದರೂ ಅಳಿಯದು ಎಂದು ಹಳ್ಳಿಗರೆಲ್ಲರೂ ಸಂತೋಷದಿಂದ ಹೇಳಿಕೊಳ್ಳುತ್ತಿದ್ದರು. ಮಳೆಯು ಸಮೃದ್ಧಿಯಾಗಿ ಕಾಲಕಾಲಕ್ಕೆ ಸರಿಯಾಗಿ ಸುರಿಯಿತು. ಬಿಸಿಲು ಬೇಕಾದಾಗ ಸರಿಯಾಗಿ ಕಾಯಿತು. ಭೂಮಿತಾಯಿ ಚಿನ್ನವನ್ನೇ ಹಡೆದಳು. ಈ ಕ್ಷಾಮಸಮಯದಲ್ಲಿ ಬತ್ತದ ಪ್ರತಿಯೊಂದು ಕಾಳೂ ಅತ್ಯಮೂಲ್ಯವಾದುದು. ಪ್ರತಿಯೊಬ್ಬ ರೈತನಿಗೂ ಹರ್ಷ – ಯಾರಿಗೆ ತಾನೇ ಆಗದು? ಇಡೀ ವರ್ಷದ ಗೈಮೆಯ ಫಲ ಆಗ ಕಾಣುವುದು. ಅರೆ ಹೊಟ್ಟೆ ಉಂಡು, ಕಾಯಿಲೆಗಳಿಂದ ಪೀಡಿತನಾಗಿ, ಸಾಲದಲ್ಲಿ ಮುಳುಗಿ ಅಂತೂ ಉತ್ತು ಬಿತ್ತುವನು. ಮಳೆಗಾಲ ಮುಗಿದು, ಕಾಯಿಲೆಗಳೆಲ್ಲ ಅಳಿದು, ಹೊಟ್ಟೆ ತುಂಬ – ನಾಲ್ಕು ದಿವಸಗಳಾದರೂ – ತಿನ್ನಲು ಧಾನ್ಯ ದೊರೆಯುವುದು ಎನ್ನುವಾಗ ಆನಂದಕ್ಕೆ ಪಾರವೇ ಇಲ್ಲ. ಬಡತನ, ಅರೆಹೊಟ್ಟೆ, ಉಣಿಸು – ಇವೇ ಅವನಿಗೆ ವ್ಯಾಧಿಗಳನ್ನು ತರುವ ಮುಖ್ಯ ಸೋಂಕುಗಳು. ಆದರೆ ಈ ವರ್ಷ ಹಾಗಲ್ಲ; ಆನಂದ, ತೃಪ್ತಿಗಳು ಎಲ್ಲ ಕಡೆಗಳಲ್ಲಿಯೂ ತುಂಬಿದ್ದುವು.

ತಿಮ್ಮಯ್ಯನು ಸಾಯಂಕಾಲ ಗದ್ದೆಯ ಏರಿಯ ಮೇಲೆ ನಡೆದು ಬರುತ್ತಿದ್ದನು. ದನಗಳನ್ನು ಕೊಟ್ಟಿಗೆಗೆ ಕೂಡಿಸಿ ಆಯಿತು. “ಇನ್ನೇನು ಒಂದು ವಾರ ತಡೆದರೆ ಈ ಗದ್ದೆಗಳನ್ನೆಲ್ಲಾ ಕೊಯ್ಯಬಹುದು. ಈ ವರ್ಷ ದೃಷ್ಟಿ ತಾಗುವಂತೆ ಪೈರು ಬಂದಿದೆ. ದೇವರ ದಯದಿಂದ ಇನ್ನು ಒಂದು ತಿಂಗಳು ಅಥವಾ ಕಡಿಮೆ ಎರಡು ವಾರ, ಮಳೆ ಬಾರದಿದ್ದರೆ ಈ ವರ್ಷದ ಸುಭಿಕ್ಷಕ್ಕೆ ಅಂತ್ಯವೇ ಇಲ್ಲ. ಕಳೆದ ವರ್ಷ ಗದ್ದೆಗಳಿಗೆ ನೀರಿಲ್ಲದೆ ಹೊತ್ತಿ ಹೋಗಿ ಆದ ಸಾಲವನ್ನು ತೀರಿಸಬಹುದು. ಆದರೆ ಕಾಡು ಹಂದಿಯ ಕಾಟ ವಿಪರೀತವಾಗಿದೆ. ಈಗೀಗ ಅವುಗಳಿಗೇನು ನಮ್ಮ ಮೇಲೆ ಇಷ್ಟು ಹೊಟ್ಟೆಕಿಚ್ಚು? ಇದುವರೆಗೆ ಆಗದಿದ್ದಷ್ಟು ಹಾನಿ ಅವುಗಳಿಂದ ಈ ವರ್ಷವಾಯಿತು. ರಾತ್ರಿ ಇಡೀ ಗದ್ದೆಯಲ್ಲಿ ಬೆಂಕಿ ಹಾಕಿಕೊಂಡು ಬೊಬ್ಬೆ ಹೊಡೆಯುತ್ತಿರಬೇಕು. ಈ ನಾಯಿಯೋ ಹೆಣ ಪಾರಕಾಯಲಿಕ್ಕೂ ಹರಿಯದು! ‘ಒಂದು ಕೋವಿ ತೆಗೆದುಕೊಡಿ’ ಸ್ವಾಮಿಯವರಿಗೆ ಎಷ್ಟು ಸಲ ಹೇಳಿದೆ. ‘ಆಗಲಿ, ಆಗಲಿ’ ಎಂದೇ ಅವರು ಸತಾಯಿಸುತ್ತಿದ್ದಾರೆ. ಇಲ್ಲಿ ಕೋವಿ ಬರುವವರೆಗೆ ಹಂದಿ ಕಾಯುತ್ತದೋ? ಆಗಲೇ ಆ ಕರೆಯಲ್ಲಿ ಮೂರು ಬಟ್ಟಿ ಬತ್ತವನ್ನು ತಿಂದು ಹಾಳು ಮಾಡಿತು. ಮೂರು ಬಟ್ಟಿ ಎಂದರೆ ಈಗ ಕಡಿಮೆ ಮೂವತ್ತು ರೂಪಾಯಿ ನಷ್ಟವಾಯಿತು. ಅವರಿಗೇನು! ಬಂದದ್ದರಲ್ಲಿ ಸಮ ಅರ್ಧ ತೆಗೆದುಕೊಂಡು ಹೋಗುತ್ತಾರೆ. ನಮ್ಮ ಕಷ್ಟ ತಿಳಿಯುತ್ತದೋ? ಆ ಬೋನಿರ ಮನೆಯವನು ಮೊನ್ನೆ ಒಂದು ಹಂದಿಗೆ ಗುಂಡು ಹೊಡೆದು ಓಡಿಸಿದ. ಈ ಪಾಣಾಲೆ ಶಿವಣ್ಣನು ಒಂದನ್ನು ಹೊಡೆದು ತಿಂದೇ ಬಿಟ್ಟ. ಸುತ್ತಲೂ ಪೆಟ್ಟು ಬೀಳುವ ಹಂದಿ ನನ್ನ ಗದ್ದೆಗೇ ಬಂದು ಬೀಳುತ್ತದೆ. ನಾನು ಮಾತ್ರ ಬಾಯಿ ಬಡಿದೇ ಸಾಯಬೇಕು” ಎಂದು ಯೋಚಿಸುತ್ತ ತಿಮ್ಮಯ್ಯನು ಗದ್ದೆಯ ಏರಿಯ ಮೇಲೆ ತಿರುಗುತ್ತಿದ್ದನು.

“ರೈತರು ಬೆಳೆಯ ಸಮಯದಲ್ಲಿ ಮಾತ್ರ ದುಡಿದು, ಬೇಸಗೆಯ ಸಮಯವನ್ನು ಅನಾವಶ್ಯಕವಾಗಿ ಹಾಳುಮಾಡುತ್ತಾರೆ” ಎಂದು ಮುಂತಾಗಿ ಗ್ರಾಮೋದ್ಧಾರಕರು ಹೇಳುತ್ತಾರೆ. ಆದರೆ ಮಳೆ ಹಿಡಿಯುವಾಗಿನಿಂದ ಬೆಳೆಯನ್ನು ಪತ್ತಾಯ ತುಂಬುವುದರವರೆಗೆ ಅವರು ಎಷ್ಟು ಕೆಲಸ ಮಾಡುತ್ತಾರೆ ಎಂದು ಇವರು ಲಕ್ಷಿಸುವುದಿಲ್ಲ. ನಮಗೆ ಆರು ದಿವಸ ಅದೂ ನಿಶ್ಚಿತ ಸಮಯದಲ್ಲಿ ಮಾತ್ರ ಕೆಲಸ ಮಾಡಿದರೆ ಏಳನೆಯ ದಿವಸ ರಜೆ ಬೇಕು. ಮತ್ತೆ ವರ್ಷಕ್ಕೊಂದಾವರ್ತಿ ಹಕ್ಕಿನ ರಜೆ ಬೇಕೆಂದು ಗಲಭೆ ಎಬ್ಬಿಸುತ್ತೇವೆ. ರೈತರಿಗೆ ವಿಶ್ರಾಂತಿ ಬೇಡವೇ? ಬೆಳೆಯ ಕೆಲಸದ ಸಮಯದಲ್ಲಿ ಹಗಲೂ ರಾತ್ರಿಯೂ ಗದ್ದೆಗಳನ್ನು ಕಾಯುತ್ತಿರಬೇಕು. ಕಾಡುಹಂದಿಗಳಿಂದ, ನಾಡು (ಸಾಕಿದ) ಹಂದಿಗಳಿಂದ, ಕಪಿಗಳಿಂದ ಪೈರು ರಕ್ಷಿಸಬೇಕು. ಕಾಡು ಹಂದಿಗಳು ರಾತ್ರಿ ಬರುವುವು, ಕಪಿ ನಾಡುಹಂದಿಗಳು ಹಗಲು ಬರುವುವು. ದನ, ಕರುಗಳು ಸರ್ವಸಮಯದಲ್ಲಿಯೂ! ಮತ್ತೆ ಇಲಿ, ಹೆಗ್ಗಣ, ಹಕ್ಕಿಗಳಿಂದ ಆಗುವ ನಷ್ಟವೆಷ್ಟೋ! ಇಷ್ಟೆಲ್ಲ ಆದ ಮೇಲೆ, ಕೊಯ್ಯುವಾಗ ಅಥವಾ ಕೊಯ್ಲು ಗದ್ದೆಯಲ್ಲೇ ಹಾಸಿರುವಾಗ ಮಳೆ ಸುರಿದರೆ ಅರ್ಧಕ್ಕರ್ಧ ನಷ್ಟ. ಈ ಎಲ್ಲ ಕಠಿಣ ಸೋಪಾನಗಳನ್ನು ಉತ್ತರಿಸಬೇಕು – ಅದೂ ಕಡುಬಡತನದಲ್ಲಿ, ಅನಾರೋಗ್ಯದಲ್ಲಿ. ಈ ಮಹಾಪರೀಕ್ಷೆಯಾದ ಅನಂತರ ಒಂದೆರಡು ತಿಂಗಳು ಸ್ವಲ್ಪ ವಿರಾಮವಾಗಿರುವುದು ತಪ್ಪೇ?

ತಿಮ್ಮಯ್ಯನು ಹಾಗೆಯೇ ಮುಂದೆ ಮುಂದೆ ನಡೆದನು. ಬಿಸಿಲು ಗದ್ದೆಗಳಿಂದ ಮೇಲಕ್ಕೆ ಏರುತ್ತಾ ಇತ್ತು. ಅಲ್ಲೇ ದೂರದಲ್ಲಿ ಒಂದು ಗದ್ದೆಯಲ್ಲಿ ಕಪ್ಪಾಗಿ ಏನೋ ನಿಂತಿದ್ದುದನ್ನು ತಿಮ್ಮಯ್ಯನು ಫಕ್ಕನೆ ಕಂಡು, “ಇದರ ಸಾವು, ಮಣ್ಣು ತಿಂಧೋಗ!” ಎಂದು ಬೊಬ್ಬೆ ಹೊಡೆಯುತ್ತ ಆ ಕಡೆಗೆ ಓಡಿದನು. ಅಲ್ಲಿ ಎರಡು ಸಾಕಿದ ಹಂದಿಗಳು ಮನಸೋ ಇಚ್ಛೆ ಭತ್ತದ ತೆನೆಗಳನ್ನು ಮೇಯುತ್ತಿದ್ದುವು. ಇವು ತಿನ್ನುವುದು ಒಂದು ಪಾಲಾದರೆ ಮೆಟ್ಟಿ ಹಾಳು ಮಾಡುವುದು ಮೂರು ಪಾಲು. ಹಂದಿಗಳು ತಿಮ್ಮಯ್ಯನನ್ನು ನೋಡಿದೊಡನೆಯೇ ಹುಚ್ಚುಹುಚ್ಚಾಗಿ ಓಡಿಹೋದುವು. ಆ ಹಂದಿಗಳು ಬೇಕನ ಮನೆ ಸಿಂಗಪ್ಪನವು ಎಂದು ತಿಮ್ಮಯ್ಯನಿಗೆ ತಿಳಿದಿತ್ತು. ಹಿಂದಿನ ದಿನವೂ ಬಂದಿದ್ದುವು. ಆಗ ಅವುಗಳನ್ನು ಓಡಿಸಿ, ಸಿಂಗಪ್ಪನಲ್ಲಿಗೆ ಹೋಗಿ ದೂರು ಹೇಳಿದ್ದನು. ಆದರೆ ಸಿಂಗಪ್ಪನು ಸ್ವಲ್ಪ ಠೇಂಕಾರಿ. “ಬಂದರೆ ಬಂತು, ಅವನ್ನೇನು ಪಾರ ಕಾಯುವುದೇ ನಮ್ಮ ಕೆಲಸವೋ?” ಎಂದಿದ್ದನು ಗಡುಸು ದನಿಯಲ್ಲಿ. “ಹಾಗೆ ಹೇಳಿದರೆ ಆಗುವುದೇ? ಸ್ವಲ್ಪ ಗೂಡೊಳಗೆ ಕಟ್ಟಿ ಹಾಕಿ!” ಸಿಂಗನು ಮುಖ ತಿರುಗಿಸಿಕೊಂಡು ತೋಟದ ಕಡೆಗೆ ಹೋದನು.

ಮರುದಿನವೂ ಅವೇ ಹಂದಿಗಳು ಬಂದು ಮೇಯುತ್ತಿದ್ದರೆ ಯಾರಿಗೆ ತಾನೆ ಕೋಪೋದ್ರೇಕವಾಗುವುದಿಲ್ಲ? ತಿಮ್ಮಯ್ಯನು “ಇವನ ಮನೆ ಹಾಳಾಗ. ಮರ್ಯಾದೆಲಿ ಹೇಳಿದರೆ ಇವನಿಗೆ ತಿಳಿಯೋದಿಲ್ಲ” ಎಂದು ಶಪಿಸುತ್ತ ಸಿಂಗಪ್ಪನಲ್ಲಿಗೆ ಹೋದನು.
“ನಿಮ್ಮ ಹಂದಿಗಳು ಇವತ್ತು ಕೂಡ ಬಂದಿದ್ದುವು; ಲೂಟಿಯೇ ಲೂಟಿ.”
“ಒಳ್ಳೇದಾಯ್ತು, ಹಿಡಿದು ದೊಡ್ಡಿಗೆ ಹಾಕಬಹುದಲ್ಲ!” ಎಂದನು ಸಿಂಗಪ್ಪ.
“ನೀವು ಹಾಗೆಲ್ಲ ಕಾನೂನು ಮಾತಾಡಿದರೆ ನಡೀಲಿಕ್ಕಿಲ್ಲ. ಹಂದಿಗಳನ್ನು ಕಟ್ಟಿ ಹಾಕಿ, ಕುತ್ತಿಗೆಗೆ ಬಡಿಗೆ ಕಟ್ಟಿ” (ತ್ರಿಕೋಣಾಕಾರವಾಗಿ ಕೋಲುಗಳನ್ನು ಕೊರಳಿಗೆ ಕಟ್ಟುತ್ತಾರೆ. ಆಗ ಹಂದಿಗೆ ಬೇಲಿ ಸಂದಿನೊಳಗೆ ನುಗ್ಗಿ ಗದ್ದೆಯೊಳಗೆ ಹೋಗಲು ಆಗುವುದಿಲ್ಲ).
“ನನಗೆ ಹಂದಿಯನ್ನು ಸಾಕುವ ವಿಷಯ ನೀನೇನು ಬುದ್ಧಿ ಹೇಳಬೇಕಾಗಿಲ್ಲ.”
“ಹಾಗಾದ್ರೆ, ಇನ್ನೊಂದ್ಸಲ ಬರಲಿ. ಕಾಲ್ಹೊಡೆದು ಮುರೀದೇ ಇದ್ರೆ.”
“ಏನದು ನಮ್ಮ ಮನೆಗೆ ಬಂದು ಎಷ್ಟದು ನಿನ್ನ ಜೋರು? ನಡೀ ಹೊರಗೆ!” ಎಂದು ಅಬ್ಬರಿಸಿದನು, ಸಿಂಗಪ್ಪನ ಪ್ರಾಯದ ಮಗ ಬೆಳ್ಯಪ್ಪನು.
“ನಿಮಗೆ ಪಾಠ ಕಲಿಸದೇ ಇದ್ರೆ ನೋಡಿ.”
“ಬಹಳ ಕಲಿಸುವನಂತೆ. ಕೆಲಸ ನೋಡು, ಹೋಗೋಗು” ಎಂದರು ತಂದೆ ಮಕ್ಕಳಿಬ್ಬರೂ ತಾತ್ಸಾರದಿಂದ.

ತಿಮ್ಮಯ್ಯನು ಅಪಮಾನದಿಂದಲೂ ಸಿಟ್ಟಿನಿಂದಲೂ ಹಿಂತಿರುಗಿದನು. “ಇನ್ನೊಂದು ಸಲ ಬಂದರೆ, ಆ ಹಂದಿಗಳ ಹುಟ್ಟಿದ ಹಬ್ಬವನ್ನೇ ಮಾಡಿಬಿಡುತ್ತೇನೆ. ಇವನಿಗೆ ಯಾಲಕ್ಕಿ ಮಾರಿ ಸ್ವಲ್ಪ ಹಣ ಜಮೆಯಾಗಿದೆಯೆಂದು ಇಷ್ಟು ಕೋಡು! ಮೂರು ವರ್ಷದ ಹಿಂದೆ ಮಳೆ ಹಿಡಿದಾಗ, ನನ್ನಿಂದ ದಮ್ಮಯ್ಯ ಹಾಕಿ ಬತ್ತ ಸಾಲ ತೆಗೆದುಕೊಂಡು ಹೋದ ಅಲ್ಪನಿಗೆ ಈಗ ಎಷ್ಟು ಸೊಕ್ಕು ಅಬ್ಬ!” ಎಂದು ಯೋಚಿಸುತ್ತ ತಿಮ್ಮಯ್ಯನು ಅವಡು ಕಚ್ಚಿದನು.

ಸೂರ್ಯನು ಮುಳುಗಿದನು. ಚಳಿಗಾಲದಲ್ಲಿ ಸಮಯ ಬಹಳ ಬೇಗ ಓಡುವುದು. ಬೇಗ ಊಟ ಮಾಡಿ ಗದ್ದೆಗೆ ಗಸ್ತು ತಿರುಗುವ ಕೆಲಸಕ್ಕೆ, ಕಾಡು ಹಂದಿಗಳನ್ನು ಅಟ್ಟುವ ಕೆಲಸಕ್ಕೆ ತಿಮ್ಮಯ್ಯನು ಹೋದನು. ಕಾಡು ಹಂದಿಗಳನ್ನು ಬೊಬ್ಬೆ ಹೊಡೆದು ಓಡಿಸಬಹುದು, ಪೆಟ್ಟು ಹೊಡೆದು ಗಾಯಗೊಳಿಸಬಹುದು. ನಾಡು ಹಂದಿಗಳನ್ನು ಹಾಗೆ ಮಾಡಬಹುದಾದರೂ ಆ ಹಂದಿಗಳ ಮಾಲಿಕರ ತಲೆಗಳಲ್ಲಿ ಹಂದಿಯ ಲದ್ದಿಯೇ ತುಂಬಿದ್ದರೆ ಮಾಡುವುದೇನು? ಅವರು ನಿಷ್ಠುರವಾಗಿ ಜಗಳಕ್ಕೆ ಇಳಿಯುತ್ತಾರೆ. ತಿಮ್ಮಯ್ಯನು ಗದ್ದೆಯ ಮಧ್ಯದಲ್ಲಿ ಕಟ್ಟಿದ ಅಟ್ಟಣಿಗೆಯಲ್ಲಿ (ಹುಲ್ಲು ಮಾಡು, ಗೋಡೆಯಿಲ್ಲ. ಎತ್ತರದಲ್ಲಿ ನಾಲ್ಕು ಹಲಗೆಗಳನ್ನು ಜೋಡಿಸಿ, ಅಲ್ಲಿ ಮಲಗಲು ಏರ್ಪಾಡು. ಅಡಿಯಲ್ಲಿ ಬೆಂಕಿ ಉರಿಯಲು ಒಂದು ಒಲೆ) ಬೆಂಕಿ ಹಾಕಿ ಟಿನ್ನು ಬಡಿಯುತ್ತಾ ಕುಳಿತುಕೊಂಡನು. ಆದರೆ ಹಗಲೂ ರಾತ್ರಿಯೂ ಒಂದೇ ಸವನೆ ದುಡಿಯುವುದು ಯಾರಿಂದ ತಾನೇ ಸಾಧ್ಯ? ಮಧ್ಯರಾತ್ರಿಯ ಅನಂತರ, ಆ ಶಾಂತ ಸಮುದ್ರ ಮಧ್ಯದ ದ್ವೀಪದಲ್ಲಿ ಅವನು ನಿದ್ರೆ ಮಾಡಿದನು. ಹೊರಗೆಲ್ಲ ಚಳಿಯು ಮೂಳೆಯನ್ನು ನಡುಗಿಸುವಷ್ಟು ಇತ್ತು. ಬೆಂಕಿಯ ಉಷ್ಣವನ್ನೂ ಲೆಕ್ಕಿಸದು ಆ ಚಳಿ. ಅಭ್ಯಾಸ ಬಲದಿಂದಲೇ ತಿಮ್ಮಯ್ಯನು ಅಲ್ಲಿ ಮಲಗಿದನು. ಆದರೆ ಇದೇನು? ಪುನಃ ಅವೇ ಹಂದಿಗಳು ಬಂದು, ಬೇರೆ ಗದ್ದೆಗಳನ್ನು ತಿಂದು ಹಾಳು ಮಾಡತೊಡಗಿದುವು! ಹಠಾತ್ತಾಗಿ ತಿಮ್ಮಯ್ಯನಿಗೆ ಈ ಸ್ವಪ್ನ ಕಂಡು ಎಚ್ಚರವಾಯಿತು. ದಣಿದು ಮಲಗಿದ್ದುದರಿಂದ ನಿದ್ರೆಯು ಬಲವಾಗಿಯೇ ಹಿಡಿದಿತ್ತು. ಕಣ್ಣು ತೆರೆಯುವುದೂ ಕಷ್ಟವಾಯಿತು. ಆದರೂ ಬಲಾತ್ಕಾರದಿಂದ ಎದ್ದು ಕಣ್ಣುಜ್ಜಿ ಸುತ್ತಲೂ ನೋಡಿದನು. ಕೃಷ್ಣ ಪಕ್ಷ ಪ್ರಾರಂಭದ ಚಂದ್ರನು ಪಶ್ಚಿಮ ದಿಗಂತದ ಕಡೆಗೆ ಹೊರಳಿದ್ದನು. ಮಂದ ಪ್ರಕಾಶ ಆ ಗದ್ದೆಯ ಸಮುದ್ರದ ಮೇಲೆ ಹಬ್ಬಿತ್ತು. ಆಕಾಶ ಸ್ವಚ್ಛ, ಪೂರ್ವ ದಿಗಂತ ಪ್ರಭಾಮಯ. ಟಿನ್ನು ಹೊಡೆದು ಗಲಾಟೆ ಎಬ್ಬಿಸಿದನು ತಿಮ್ಮಯ್ಯ. ಜತೆಯಲ್ಲಿದ್ದ ಬಡಕಲು ನಾಯಿ ಮಲಗಿದಲ್ಲಿಂದಲೇ “ವೌ ವೌ” ಎಂದು ಬಗುಳಿತು. ಅವನು ತೃಪ್ತನಾಗದೇ ನಡುಗುತ್ತ ಗದ್ದೆಗೆ ಇಳಿದನು. ಹಿಂದಿನ ಸಂಜೆಯಲ್ಲಿ ನೋಡಿದ ಗದ್ದೆಗೇ ಸೀದಾ ಹೋದನು – ಅವೇ ಹಂದಿಗಳು ಏನನ್ನೂ ತಿಳಿಯದವುಗಳಂತೆ ಬಕಬಕನೆ ಮೇಯುತ್ತಿದ್ದುವು. ಎಷ್ಟು ತಿಂದುವೋ ಇನ್ನೆಷ್ಟು ಹಾಳುಮಾಡಿದುವೋ ಒಂದು ಭಾಗವಿಡೀ ಬೋಳಾಗಿದೆ. ನಖಶಿಖಾಂತ ತಿಮ್ಮಯ್ಯ ನಡುಗಿದನು. ಓಡಲು ತೊಡಗಿದ ಹಂದಿಗಳ ಹಿಂದೆಯೇ ತಾನೂ ಓಡುತ್ತ, ಕೈಯಲ್ಲಿದ್ದ ಬಡಿಗೆಯಿಂದಲೇ ಬೀಸಿ ಬೀಸಿ ಹೊಡೆದನು. ಒಂದು ಹಂದಿಯು ತಪ್ಪಿಸಿಕೊಂಡು ಓಡಿಹೋಯಿತು. ಪೆಟ್ಟು ತಗಲಿದ ಇನ್ನೊಂದು ಓಡಲಾರದೇ ಓಡುತ್ತಿತ್ತು. “ಹೆಣ, ಇನ್ನು ಬರುತ್ತಿಯಾ?” ಎಂದು ಅದಕ್ಕೆ ಹೊಡೆದು, ಕುಂಟುಕಾಲನ್ನು ಮುರಿದೇ ಬಿಟ್ಟನು. ಹಂದಿಯು ನೋವಿನಿಂದ ವಿಕಾರವಾಗಿ ಕೂಗುತ್ತ – ಹರಿಶ್ಚಂದ್ರನನ್ನು ಬಲೆಗೆ ಕೆಡವಿ ವಿಶ್ವಾಮಿತ್ರಾಶ್ರಮಕ್ಕೆ ತೆರಳಿದಂತೆ – ಗೂಡಿನೆಡೆಗೆ ತೆವಳುತ್ತಾ ಹೋಯಿತು. ಆದರೆ ಮುಂದೆ ಹೋಗಲಾರದೇ ಅಲ್ಲೆ ಕುಸಿದುಬಿತ್ತು. ಕರ್ಕಶವಾಗಿ, ಇಡೀ ಶಾಚಿತ ವಾತಾವರಣದಲ್ಲಿ ಒಂದು ಸುಂಟರಗಾಳಿಯು ಎದ್ದಂತೆ ಅರಚುತ್ತ, ಆ ಗದ್ದೆಯ ಮೇಲೆ ಬಿದ್ದು ಹೊರಳುತ್ತಿತ್ತು.

ತನ್ನ ಗದ್ದೆಯಲ್ಲಿ ಗಸ್ತು ತಿರುಗುತ್ತಿದ್ದ ಸಿಂಗಪ್ಪನಿಗೆ ಈ ಹಂದಿಯ ಆರ್ತಸ್ವರ ಕೇಳಿಸಿತು. ಕೂಡಲೇ ಹಿಂದಿನ ಸಾಯಂಕಾಲದ ದೃಶ್ಯ ಹೊಳೆಯಿತು. ಕ್ರೋಧದಿಂದ ನಡುಗುತ್ತ, ಒಂದು ದೊಣ್ಣೆಯನ್ನು ಹಿಡಿದು, ಆ ಹಂದಿಯು ಕೂಗುವ ಕಡೆಗೂ ಹೋಗದೆ, ತಿಮ್ಮಯ್ಯನ ಅಟ್ಟಣಿಗೆಯೆಡೆಗೇ ಓಡಿದನು – ಅವನನ್ನೇ ಕೊಂದುಬಿಡುವವನಂತೆ.

“ನನ್ನ ಹಂದಿಯನ್ನು ಹೊಡೆಯಲು ನೀನಾರೋ?” “ನನ್ನ ಗದ್ದೆಯನ್ನು ಮೇಯಿತು, ಹೊಡೆದೆ.” ಇಲ್ಲಿಂದ ಮಾತು ಅಶ್ಲೀಲಕ್ಕಿಳಿಯಿತು. ಹೆಂಡಿರನ್ನು ಮಕ್ಕಳನ್ನು, ಹುಟ್ಟಿದವರನ್ನು, ಹುಟ್ಟದವರನ್ನು ಎಲ್ಲರನ್ನೂ ವಿಧವಿಧವಾಗಿ ಬಯ್ದುಕೊಳ್ಳುತ್ತಾ ಪ್ರಾತರ್ಗಾನ ಸಾಗಿತು. ಕೆಲವೇ ನಿಮಿಷದಲ್ಲಿ ಸಿಂಗಪ್ಪನ ಮಗ – ಹುಡುಗರಕ್ತದ ಗರ್ವದ ಬೆಳ್ಯಪ್ಪನೂ ಅಲ್ಲಿಗೆ ಕತ್ತಿ ಸಮೇತ ಬಂದನು. ಹೊಡೆದಾಟವೋ ಖೂನಿಯೋ ಆಗುವುದರಲ್ಲಿದ್ದುದನ್ನು ನೆರೆಕರೆಯವರು, ಈ ಗಲಾಟೆ ಕೇಳಿ ಸೇರಿದವರು ತಪ್ಪಿಸಿದರು. ಸಿಂಗಪ್ಪನದೇ ತಪ್ಪು. ಅವನು ತಿಮ್ಮಯ್ಯನಿಗೆ ನಷ್ಟದ ಪಾಲೆಂದು ಒಂದು ಬಟ್ಟಿ ಬತ್ತ ತೆರಬೇಕೆಂದು ಅವರು ವಿಧಿಸಿದರು.

“ನಷ್ಟ ಕೊಡೋದಿರಲಿ; ನನ್ನ ಹಂದಿಯನ್ನು ಹೊಡೆದು ಹಾಕಿದ್ದಕ್ಕೆ ನೀನು ಜುಲ್ಮಾನು ತೆರಬೇಕು. ನಾನು ಕೋರ್ಟಿಗೆ ಹೋಗುತ್ತೇನೆ” ಎಂದನು ಯಾಲಕ್ಕಿ ಮದದ ಸಿಂಗಪ್ಪ. “ಅಷ್ಟೆಲ್ಲ ದೂರ ಹೋಗಬೇಡಿ ಗೌಡ್ರೆ. ಇಷ್ಟು ಚಿಕ್ಕ ವಿಷಯಗಳಿಗೆ ಕೋರ್ಟು ಕಛೇರಿ ಹತ್ತಿ, ದಾವಾ ಜುಲ್ಮಾನು ಎಂದು ಯಾಕೆ ಕೂಗುತ್ತೀರಿ” ಎಂದು ಇತರರು ಬೋಧಿಸಿದರು. ಪ್ರಾತಃಕಾಲದ ತಂಗಾಳಿಯು ಬೀಸಿ, ಈ ಜ್ವಾಲೆಯನ್ನು ಆಗ ಶಾಂತ ಮಾಡಿತು. ಕಾಲು ಮುರಿದ ಹಂದಿಯು ಮಾತ್ರ “ಕಿರ್ರೋ” ಎಂದು ದಿಗ್ಭಿತ್ತಿಗಳನ್ನು ಭೇದಿಸುವಂತೆ ಅರಚುತ್ತಿದ್ದಿತು.

ಬೆಳ್ಯಪ್ಪನಿಗೆ ಈ ಅವಮಾನ ತಡೆಯಲಾಗಲಿಲ್ಲ. ಮಿಲಿಟರಿಗೆ ಹೋಗಿ ಬಂದವನು. ಮುಂದೆ ಒಂದೇ ತಿಂಗಳಲ್ಲಿ ಮದುವೆಯಾಗುವ ಮೀಸೆ ಹೊತ್ತ ಗಂಡು. ಇವನ ಮುಂದೆ ಆ ತಿಮ್ಮಯ್ಯ ಎಷ್ಟರವನು! ಶುದ್ಧ ಪೊರ್ಕಿ. ಇಷ್ಟು ಸೊಕ್ಕಿನಿಂದ ಜಗಳಾಡಿದನಲ್ಲಾ. ಈ ಮೂರು ಕಾಸಿನ ಮನುಷ್ಯನಿಗೆ ಈ ವರ್ಷ ನಾಲ್ಕು ಕಾಳು ಬತ್ತ ಹೆಚ್ಚು ಬಂದಿದೆಯೆಂದು ಪಿತ್ತ ತಲೆಗೆ ಏರಿದೆ. ಇವನಿಗೆ ಹೇಗಾದರೂ ಪಾಠ ಕಲಿಸಬೇಕು ಎಂದು ಯೋಚಿಸುತ್ತ, ಕತ್ತಿ ಬೀಸಿ ಪುಟ್ಟ ಸಸಿಯೊಂದರ ಮೇಲೆ ತನ್ನ ಬಲ ಮತ್ತು ಕೋಪವನ್ನು ವ್ಯಕ್ತಪಡಿಸಿದನು. ಆ ಗಿಡವು ಬಳುಕಿ, ಸರ್ರನೆ ಜಾರಿ ಜೀವ ಉಳಿಸಿಕೊಂಡಿತು. ಮನೆಗೆ ತಂದು ಹಾಕಿದ್ದ, ಬೆಳ್ಯಪ್ಪನ ಮದುವೆಯ ದಿನದ ಔತಣಕ್ಕೆಂದು ಮೀಸಲು ಇಟ್ಟಿದ್ದ ಹಂದಿಯು ಒಂದೇ ಸವನೆ ಕಿರಿಚುತ್ತಿತ್ತು. ಅದು ಒಂದೊಂದು ಸಲ ಅರಚುತ್ತಿದ್ದಂತೆಯೇ ಬೆಳ್ಯಪ್ಪನ ಕ್ರೋಧ ನೂರ್ಮಡಿಯಾಗಿ, ಚಂಡೆಬಡಿದಂತೆ ದೇವರು ಹೊತ್ತವನಿಗೆ ಆವೇಶ ಬರುವಂತೆ ಏರುತ್ತಿತ್ತು.

ಮುಂದೆ ಒಂದು ವಾರದಲ್ಲಿ ತಿಮ್ಮಯ್ಯನ ಗದ್ದೆಯೆಲ್ಲವನ್ನೂ ಕೊಯ್ದಾಯಿತು. ಕೊಯ್ಯುವಾಗ ಇತರ ಗದ್ದೆಗಳವರು ಸಹಾಯಕ್ಕೆ ಬರುವರು. ಹಾಗೆಯೇ ಇವನು ಅವರ ಗದ್ದೆಗಳನ್ನು ಕೊಯ್ಯುವಾಗ ಕೂಡುಗೆಲಸಕ್ಕೆ ಹೋಗಬೇಕು. ಆ ದಿನ ಯಾರ ಗದ್ದೆಯನ್ನು ಕೊಯ್ಯುವರೋ ಅವರ ಮನೆಯಲ್ಲಿ ಬಂದವರಿಗೆಲ್ಲ ಕೋಳಿಯ ಮೇಲೋಗರ ಔತಣ. ದೇವರ ಸಂಪೂರ್ಣ ದಯೆಯಿಂದ, ಮಳೇ ಬರುವುದಿರಲಿ, ಒಂದು ಹೂಮೋಡ ಕೂಡ ಆ ದಿನಗಳಲ್ಲಿ ಆಕಾಶದಲ್ಲಿ ಸುಳಿಯಲಿಲ್ಲ. ಪೈರುಗಳನ್ನು ಕೊಯ್ದಂತೆಯೇ ಒಣಗಲೆಂದು ಗದ್ದೆಗಳಲ್ಲಿ ಗುಂಪುಗುಂಪಾಗಿ ಹರಡುತ್ತಿದ್ದರು. ಒಂದೆರಡು ದಿನ ಈ ರೀತಿ ಒಣಗಿದ ರಾಶಿಗಳನ್ನು ಕಟ್ಟಿ ಹೊತ್ತುಕೊಂಡು ಹೋಗಿ ಮನೆಯ ಅಂಗಳಕ್ಕೆ (ಕಳಕ್ಕೆ) ಹಾಕುತ್ತಿದ್ದರು. ಈ ಹಿಂಡುಗಳನ್ನು ಕಳದಲ್ಲಿ ಆನೆಯಷ್ಟು ಎತ್ತರದ ಮೆದೆಗಳನ್ನಾಗಿ ಒಟ್ಟುತ್ತಾರೆ. ಈ ಕೆಲಸ ಮುಗಿದ ಮೇಲೆ ಒಕ್ಕಲು ಹಾಕಲು ಶುರುಮಾಡುವರು. (ಎಂದರೆ ಬತ್ತದ ಕಾಳುಗಳನ್ನು ಹುಲ್ಲಿನಿಂದ ಬೇರ್ಪಡಿಸಲು ಪೈರನ್ನು ಕಳದಲ್ಲಿ ಸಮವಾಗಿ ಹಾಸಿ, ಅದರ ಮೇಲೆ ಎಮ್ಮೆ ದನಗಳನ್ನು ಬಹಳ ಹೊತ್ತು ಚಲಾಯಿಸುವರು.) ಮೆದೆ ಒಟ್ಟಿ ಆದ ಮೇಲೆ ಮಳೆ ಬಂದರೂ ತೊಂದರೆಯಿಲ್ಲ. ತಿಮ್ಮಯ್ಯನ ಗದ್ದೆಯ ಮುಕ್ಕಾಲು ಅಂಶ ಆ ರಾತ್ರಿಗೆ ಹೊತ್ತು ಮುಗಿಯಿತು. ಇನ್ನುಳಿದ ಭಾಗ ಗದ್ದೆಯಲ್ಲಿಯೇ ಉಳಿಯಿತು. ಕೊಯ್ದಾಗಿದ್ದಿತ್ತು, ಮರುದಿವಸ ಸಾಯಂಕಾಲಕ್ಕೆ ಅವನ ಹೆಚಿಡತಿಯೊಬ್ಬಳಿಂದಲೇ ಎಲ್ಲವೂ ಹೊತ್ತು ಮುಗಿದೀತು. ಮಾರನೆಯ ದಿನ ಅವನು ಕೂಡುಗೆಲಸಕ್ಕೆ ಬೇರೊಬ್ಬರ ಗದ್ದೆಗೆ ಹೋಗಬೇಕಾಗಿತ್ತು. ಮೂರು ದಿವಸಗಳ ಮೇಲೆ ಒಕ್ಕಲು ಹಾಕಲು ಪ್ರಾರಂಭಿಸಬೇಕು. ಆಗ ಸ್ವಾಮಿಯವರಲ್ಲಿಂದ ಯಾರನ್ನಾದರೂ ಬರಹೇಳಲು (ಸೋಮವಾರವಾದುದರಿಂದ) ನಾಡಿದ್ದು ಸಂತೆ ದಿನ ಮಡಿಕೇರಿಗೆ ಹೋಗಬೇಕು ಎಂದು ಯೋಚನೆ ಮಾಡುತ್ತ, ತೃಪ್ತಿಯಿಂದ ತಿಮ್ಮಯ್ಯನು ನಿದ್ರಿಸಿದನು. ಇನ್ನು ಗದ್ದೆಯಲ್ಲಿ ಮರಗಟ್ಟುವ ಆವಶ್ಯಕತೆಯಿರದಿದ್ದುದರಿಂದ ಅವನು ಮನೆಯಲ್ಲಿಯೇ ಮಲಗಿದನು.

ಹಂದಿಯ ಮುರಿದ ಕಾಲು ಕೊಳೆತು, ಅರಚಿ ಬೆಳ್ಯಪ್ಪನ ಕೋಪಾಗ್ನಿಗೆ ಕೊಬ್ಬನ್ನು ಎರಚಿ ಸತ್ತುಹೋಯಿತು. ಬೆಳ್ಯಪ್ಪನಿಗೆ ಕೋಪ ತಡೆಯಲಾಗಲಿಲ್ಲ. ಮಲಗಿದರೆ ನಿದ್ರೆ ಬರಲೊಲ್ಲದು. “ಈ ಭಿಕಾರಿಗೆ ಇಷ್ಟು ಸೊಕ್ಕೇ? ಅವನಿಗೆ ಪಾಠ ಕಲಿಸಲೇಬೇಕು. ಹೇಗೆ, ಹೇಗೆ” ಎಂದು ಯೋಚಿಸುತ್ತ ಹೊರಳುತ್ತಿದ್ದನು. ಪ್ರತಿ ನಿಮಿಷವೂ ಅವನಿಗೆ “ಹೇಗೆ ಹೇಗೆ” ಎಂದು ಮೈಗೆ ಮುಳ್ಳು ಚುಚ್ಚಿದಂತೆ ಎನಿಸುತ್ತಿತ್ತು. ಜತೆಗೆ ಆ ಹಂದಿಯ ಒರಲುವಿಕೆ ಆಗಾಗ ಕಿವಿಯಲ್ಲಿ ಕೇಳಿಸಿದಂತೆ ಆಗಿ, ಅವನಿಗೆ ಶಾಂತಿಯೇ ಇಲ್ಲದಾಯಿತು. ಮದುವೆಗಿಟ್ಟ ಹಂದಿ ಕೊಳೆತು ಸತ್ತಿತಲ್ಲ, ಇನ್ನು ಮಲಗಿದರೆ ಮನೆಯೇ ತಲೆಯ ಮೇಲೆ ಬಿದ್ದೀತು. ಹುಚ್ಚು ಹಿಡಿದೀತು ಎಂದು ಅಂಗಳಕ್ಕೆ ಓಡಿದನು ಬೆಳ್ಯಪ್ಪ. ಚಂದ್ರ ತಲೆಯ ಮೇಲೆ ತೇಲುತ್ತಿದ್ದನು. ಅಂಗಳದಲ್ಲಿದ್ದ ನಾಯಿಯು ಬಾಲ ಅಲ್ಲಾಡಿಸುತ್ತ ಹತ್ತಿರ ಬಂದಿತು. ಚಳಿಯು ರಕ್ತವನ್ನು ಹೆಪ್ಪುಗಟ್ಟಿಸುವಷ್ಟಿತ್ತು. ಆದರೆ ದೇಹದೊಳಗೆ ಕೋಪಾನಲವಿದೆಯಷ್ಟೆ! ಬೆಂಕಿ ಕಡ್ಡಿ ಗೀರಿ ಬೀಡಿ ಹೊತ್ತಿಸಿದರೆ ಅದು ಶಾಖ ಸಾಕಾಗದೆ ತಣ್ಣಗಾಯಿತು. ಬೆಳ್ಯಪ್ಪನು ಅಂಗಳ ಬಿಟ್ಟು ಓಡಿದನು. ನಾಯಿಯು ಹಿಂಬಾಲಿಸಿತು. “ಸೂ” ಎಂದು ಅದಕ್ಕೆರಡು ಒದ್ದು, ಉಗುಳಿ ಮನೆಗೆ ಅಟ್ಟಿದನು. ಅದು “ಕುಂಯ್ ಕುಂಯ್” ಎಂದು ಅರಚುತ್ತ ಹಿಂದಕ್ಕೆ ಜಿಗಿಯಿತು. ಒಂದು ಗುಹೆಯೊಳಗೆ ಹುಗುವವನಂತೆ, ಹುಚ್ಚನಂತೆ ಉದ್ವಿಗ್ನ ಬೆಳ್ಯಪ್ಪನು ತಿಮ್ಮಯ್ಯನ ಕಳದ ಕಡೆಗೆ ಧಾವಿಸಿದನು. ಬೆಂಕಿ ಕಡ್ಡಿಗೀರಿ ಆ ಹುಲ್ಲಿಗೆ ಹಿಡಿದನು. ಅವನ ಬೀಡಿಯನ್ನು ಹೊತ್ತಿಸಲು ನಾಚಿದ ಆ ಬೆಂಕಿಯು ಈಗ ಇಬ್ಬನಿಯಿಂದ ತಣ್ಣಗಾದ ಒಣಹುಲ್ಲಿಗೆ ಕೂಡಲೇ ಹಿಡಿಯಿತು. ಬೆಳ್ಯಪ್ಪನು ಹಿಂದೆ ಹಾರಿದನು, ಓಡಿ ಹೋಗಿ ಪುನಃ ಮಲಗಿದನು. ಆದರೂ ತೃಪ್ತಿಯಿಲ್ಲ; ಅಂತೂ ಬೆಳಗಿನ ಝಾಮಕ್ಕೆ ಸ್ವಲ್ಪ ಜೊಂಪು ಹಿಡಿಯಿತು.

ಆ ಬೆಂಕಿಯು ಹಬ್ಬಿ ಅಲ್ಲಿಂದ ಹಾರಿದ ಒಂದು ಕಿಡಿಯು ತಮ್ಮ ಮನೆಯ ಮಾಡಿನ ಹುಲ್ಲಿಗೆ ಸಿಡಿಯಿತು. ಇಡೀ ಮನೆಯೇ ಉರಿಯುತ್ತಿದೆ. “ಅಯ್ಯೋ ಎಲ್ಲಿಗೆ ಹೋಗಲಿ, ಹೀಗೆ ಆಗಬೇಕೇ?” ಏಳಬೇಕೆಂದು ಪ್ರಯತ್ನಿಸುತ್ತಾನೆ, ಆಗುವುದಿಲ್ಲ. ಕೈಕಾಲುಗಳನ್ನು ಯಾರೋ ಮಂಚಕ್ಕೆ ಕಟ್ಟಿ ಹಾಕಿದ್ದಾರೆ. “ನಾನು ಸುಟ್ಟು ಹೋಗುತ್ತಿದ್ದೇನೆ, ಬದುಕಿಸಿ” ಎಂದು ಕೂಗುತ್ತಾನೆ. ತಿಮ್ಮಯ್ಯನು ಅಲ್ಲಿ ಈ ಸ್ಥಿತಿಯನ್ನು ನೋಡಿ ನಗುತ್ತಾನೆ. “ಅಯ್ಯೋ ಹೀಗೆ ಮಾಡಿದೆನಲ್ಲ, ಹೀಗೆ ಮಾಡಬಹುದೇ” ಗಾಬರಿಯಿಂದಲೂ ಉದ್ವೇಗದಿಂದಲೂ ಹೊದಿಕೆಯನ್ನು ಒದ್ದು ಬೆಳ್ಯಪ್ಪನು ಏಳುತ್ತಾನೆ. ಬೆಳಕು ಹರಿಯುವುದರಲ್ಲಿತ್ತು. ದೂರದಿಂದ ಏನೋ ಒಂದು ಗಲಭೆ ಕೇಳಿಸುತ್ತಿತ್ತು. ಬೆಳ್ಯಪ್ಪನು ಮಂಕನಂತೆ ಕುಕ್ಕರಿಸಿದನು. ಮನೆಯಲ್ಲಿ ಅವನ ಸಣ್ಣ ತಮ್ಮನ ಹೊರತಾಗಿ ಯಾರೂ ಇರಲಿಲ್ಲ.

ಒಣ ಹುಲ್ಲಿಗೆ ಬೆಳ್ಯಪ್ಪ ಹಿಡಿದ ಆ ಬೆಂಕಿಯು, ಒಂದು ಕ್ಷಣದಲ್ಲಿ ಅಗಲಗಲವಾಗಿ ವ್ಯಾಪಿಸಿತು. ಇನ್ನೆರಡು ನಿಮಿಷಗಳಲ್ಲಿಯೇ ಜೋರಾಗಿ ಹಬ್ಬಿತು. ಚಳಿಯೆಂದು ಆ ಹುಲ್ಲಿನ ಬಣವೆಯಲ್ಲಿ ಮುದುರಿ ಮಲಗಿದ್ದ ಹೆಣನಾಯಿಯು ಹೆದರಿ ನೆಗೆಯಿತು, ಅತ್ತಿತ್ತ ಓಡಿತು, ಒಂದೇ ಉಸುರಿಗೆ ಬಗುಳಲು ಹೊರಟಿತು; ಮನೆಯ ಬಾಗಿಲ ಹತ್ತಿರವೇ ನಿಂತು ಬಗುಳಿತು. ಮನೆಯ ಅಂಗಳವೇ ಕಳ. ಪತ್ತಾಯದೊಳಗೆ (ಕಣಜ) ಬತ್ತ ತುಂಬುವುದರವರೆಗೂ ರೈತರಿಗೆ ಸರಿಯಾಗಿ ನಿದ್ರೆಯಿಲ್ಲ. ತಿಮ್ಮಯ್ಯನು ನಾಯಿ ಬಗುಳುವ ಶಬ್ದ ಕೇಳಿ ಕೂಡಲೇ ಎದ್ದು ಹೊರಗೆ ಬಂದನು – ದನವೋ ಏನಾದರೂ ಬಂದು ಕಳದಿಂದ ತೆನೆಗಳನ್ನು ತಿನ್ನುತ್ತಿದೆಯೋ ಎಂದು ನೋಡಲು. ಆದರೆ ಭಯಂಕರ ದೃಶ್ಯ. ಈ ಅಗ್ನಿರಾಕ್ಷಸನ ರುದ್ರ ತಾಂಡವ ನೋಡಿ ಅಲ್ಲೇ ಎದೆಯೊಡೆದು ಕುಸಿದು ಬಿದ್ದನು. ಒಂದೊಂದು ಕ್ಷಣವೂ ಬೆಂಕಿಯು ಜೋರುಜೋರಾಗಿ ಹಬ್ಬುತ್ತಿತ್ತು. ಹೆಂಡತಿಯನ್ನು ಬಡಿದು ಎಬ್ಬಿಸಿದನು. ಮಗಳನ್ನು ಕರೆದು ನೆರೆಮನೆಯವರನ್ನು ಕರೆದುಕೊಂಡು ಬರಲು ಅಟ್ಟಿದನು. ಉದ್ದದ ಬಡಿಗೆಯನ್ನು ಹಿಡಿದು, ಇಡೀ ಮೆದೆಯನ್ನು ಮಗುಚಲು ಪ್ರಯತ್ನಿಸಿದನು. ಆದರೆ ಆನೆಯೆತ್ತರದ ಹುಲ್ಲು ರಾಶಿ ಭಾರವಾಗಿಯೇ ಕುಳಿತಿತ್ತು. ಬತ್ತದ ಕಣಗಳು ಬೆಂಕಿ ತಾಕಿದಂತೆ ಅರಳಾಗಿ ನಾಲ್ಕೂ ಕಡೆಗೆ ಚಟ್ ಪಟ್ ಎಂದು ಸಿಡಿಯುತ್ತಿದ್ದುವು. ಬೆಂಕಿಯು ಸುಲಭದಲ್ಲಿ ಹಿಡಿತಕ್ಕೆ ಬರುವ ಹಾಗಿರಲಿಲ್ಲ. ಪೇಟೆ ಪಟ್ಟಣಗಳಲ್ಲಿರುವಂತೆ ಬೆಂಕಿ ನಂದಿಸುವ ಯಂತ್ರ ಅಲ್ಲಿ ಇಲ್ಲ. ಅಂತೆಯೇ ಬೆಂಕಿ ಬಿದ್ದಾಗ ಲಕ್ಷಗಟ್ಟಲೆ ರೂಪಾಯಿ ನಷ್ಟವೂ ಇಲ್ಲ. “ಇನ್ನು ಮನೆಗೆ ಬೆಂಕಿ ಹಿಡಿಯದಿದ್ದರೆ ಸಾಕು ದೇವರೇ” ಎಂದು ಮನೆಯ ಕಡೆಗಿದ್ದ ಹುಲ್ಲನ್ನು ತೆಗೆದು ದೂರ ಎಸೆಯುತ್ತಿದ್ದನು. ಅಷ್ಟರಲ್ಲಿ ನೆರೆಕರೆಯವರು ಅಲ್ಲಿ ಸೇರಿದರು. ಬೊಬ್ಬೆಯೇ ಬೊಬ್ಬೆ. ನೀರು ತಂದು, ಏಣಿ ಹಿಡಿದು ಹತ್ತಿ ಬೆಂಕಿಯ ಮೇಲೆ ಸುರಿದರು. ನೀರಿನಲ್ಲಿ ಅದ್ದಿದ ಹಳೇ ಹುಲ್ಲು ಕಂತೆಗಳನ್ನು ಬೆಂಕಿಯ ಮೇಲೆ ಎಸೆದರು. ಬಾಳೇ ಮರಗಳನ್ನು ಕಡಿದು, ಅವುಗಳ ಸೊಪ್ಪು ರೆಂಬೆಗಳನ್ನೂ (ಪಟ್ಟಿ) ಎಸೆದರು. ಮಣ್ಣನ್ನು ಅಗೆದು ಬೆಂಕಿಯ ಮೇಲೆ ಎರಚಿದರು. ಈ ಹವಿಸ್ಸುಗಳನ್ನೆಲ್ಲ ನುಂಗಿ ಶಿಖಾರಾಕ್ಷಸನು ತನ್ನ ಉದರಂಭರಣೆ ಮಾಡಿಯೇ ಬಿಟ್ಟನು. ಸೂರ್ಯ ಸರಿಯಾಗಿ ಕಾಣುವವರೆಗೂ ಈ ಯುದ್ಧ ನಡೆದೇ ಇತ್ತು. ಆ ಹುಲ್ಲು ಮೆದೆ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಬೆಂದು ಹೋಗಿತ್ತು. ಮನೆಗೆ ಮಾತ್ರ ಬೆಂಕಿ ಹಿಡಿದು ಸರ್ವನಾಶವಾಗಲಿಲ್ಲವೆಂಬ ಒಂದೇ ತೃಪ್ತಿ. ಮಣ್ಣು, ಕಸ, ಮಸಿ, ಅರಳು ಇವುಗಳಿಂದ ತುಂಬಿ ಆ ಸ್ಥಳವು ಯುದ್ಧರಂಗದಂತೆ ಭೀಕರವೇ ಆಗಿತ್ತು. ಇನ್ನೂ ನಂದುತ್ತಲಿದ್ದ ಬೆಂಕಿಯು ವಿಷ (ಹೊಗೆ) ಕಾರುತ್ತಿತ್ತು. ತಿಮ್ಮಯ್ಯನು ಹುಚ್ಚು ಹಿಡಿದವನಂತೆ, ದೆವ್ವ ಬಡಿದವನಂತೆ ಮಂಕು ಕವಿದು, ಒಂದು ಮೂಲೆಯಲ್ಲಿ ಕುಕ್ಕರಿಸಿದನು.

“ಏನಾಯಿತು, ಹೇಗಾಗಿರಬಹುದು?” ಎಂದು ಪ್ರತಿಯೊಬ್ಬರೂ ಮಾತಾಡಲು ಪ್ರಾರಂಭಿಸಿದರು. ಸಿಂಗಪ್ಪನೂ ಅವನ ಹೆಂಡತಿಯೂ ಅಲ್ಲಿಗೆ ಬಂದಿದ್ದರು. “ಹೀಗಾಗಬಾರದಿತ್ತು,” “ಅಯ್ಯೋ ಪಾಪ, ಒಳ್ಳೇ ಬೆಳೆ,” “ಮುಖ್ಯ ದೇವರಿಗೆ ದಯವಿಲ್ಲ” ಎಂದು ಮಾತನಾಡುತ್ತ, ಕೊನೆಗೂ ಕಾಣದ ದೇವರ ಮೇಲೆ ಆ ಬೆಂಕಿಯ ತಪ್ಪನ್ನು ಹೊರಿಸಿದರು. ಹಳ್ಳಿಯಲ್ಲಿ ಒಂದು ಬರೆ (ಕಡಿದಾದ ಸ್ಥಳ) ಜರಿದರೆ, ಒಂದು ಮನೆಗೆ ಬೆಂಕಿ ಬಿದ್ದರೆ, ಒಂದು ಮಗು ಶೀತಜ್ವರದಿಂದ ಸತ್ತರೆ, ಅದಕ್ಕೆ ಕಾರಣವನ್ನು ದೆವ್ವ ಅಥವಾ ದೈವದಲ್ಲಿ ನೋಡುವರೇ ಹೊರತು, ಬೇರೆ ಏನಾದರೂ ಕಾರಣವಿರಬಹುದೆ ಎಂದು ವಿಚಾರಿಸುವುದೇ ಇಲ್ಲ. “ಯಾವುದೋ ಕೊಳ್ಳಿ ದೆವ್ವದ ಕಾಟ ಇದಾಗಿರಬೇಕು” ಎಂದು ಆ ಮಹಾಸಭೆಯು, ಮಹಾನಿರ್ಧಾರಕ್ಕೆ ಆ ಅಶುಭ ಪ್ರಾತಃಕಾಲದಲ್ಲಿ ಬಂದಿತು! ಆ ಪೀಡೆಯ ಉಪದ್ರವ ಇನ್ನೂ ಆಗದಂತೆ, ಹಳ್ಳಿಯ ದೈವಕ್ಕೆ ಎರಡೂ ಕಾಣಿಕೆ, ಮತ್ತು ಒಂದು ಹುಂಜದ (ಗಂಡುಕೋಳಿ) ಹರಕೆಯನ್ನು ತಿಮ್ಮಯ್ಯನಿಂದ ಹೇಳಿಸಿದರು.

“ನೋಡಿದೆಯಾ ಬೆಳ್ಳೀ, ತಿಮ್ಮಯ್ಯನಿಗೆ ಹೀಗಾಗಬಾರದಿತ್ತು” ಎಂದಳು ತಾಯಿ ನೀಲವ್ವ. ಬೆಳ್ಯಪ್ಪನಿಗೆ ಚೇಳು ಕಡಿದಂತೆ ಆಯಿತು. “ಅಯ್ಯೋ ಪಾಪ. ಎಂಥಾ ಮುತ್ತಿನಂತಹ ಬೆಳೆ” ಬೆಳ್ಯಪ್ಪನಿಗೆ ಮೈಯ ಎಲುಬನ್ನೇ ಕುಲುಕಿದಂತೆ ಆಯಿತು. “ಒಂದಿಷ್ಟಾದರೂ ಉಳಿಯಬೇಡವಾ?” ಎಂದು ಮುಂದುವರಿಸಿದಳು, ಗಂಜಿ ಬೇಯಿಸಲು ಮಡಿಕೆಯನ್ನು ಒಲೆಯ ಮೇಲೆ ಇಡುತ್ತಾ ನೀಲವ್ವ. ಬೆಳ್ಯಪ್ಪನು ಮಂಚದ ಮೇಲೆ ಕುಳಿತಿದ್ದವನು ಎದ್ದು ಅಂಗಳಕ್ಕೆ ನಡೆದನು. ಸಿಂಗಪ್ಪನು ಗುದ್ದಲಿಯ ಕಾವನ್ನು ಸರಿಮಾಡುತ್ತ ಅಲ್ಲಿ ಬಿಸಿಲು ಕಾಯಿಸುತ್ತಿದ್ದನು. “ತಿಮ್ಮಯ್ಯನಿಗೆ ಹೀಗಾಗಬೇಕಾ? ಎಂಥಾ ಹೊಡೆತ ಭೂತದ್ದು!” ಎಂದು ಅವನಿಂದಲೂ ಹೊರಟಿತು ಇನ್ನೊಂದು ಚೂಪಾದ ಬಾಣ.

ಬೆಳ್ಯಪ್ಪನು ಅಲ್ಲಿ ನಿಲ್ಲಲೂ ಆಗದೆ, ಕೂರಲೂ ಆಗದೆ ಮಂತ್ರ ಮುಗ್ಧನಂತೆ ಗದ್ದೆಗೆ ಇಳಿದನು. ಆ ಗದ್ದೆಗಳನ್ನು ಕೊಯ್ದು ಪೈರನ್ನು ಸಾಲಾಗಿ ಗದ್ದೆಯಲ್ಲೇ ಹಾಸಿದ್ದರು. ಬೆಳ್ಯಪ್ಪನನ್ನು ನೋಡಿ “ಅಯ್ಯೋ” ಎಂದು ಅವು ಹೆದರಿದುವು. ಅಲ್ಲಿಂದಲೇ ತಿಮ್ಮಯ್ಯನ ಗದ್ದೆ ಕಾಣುತ್ತಿತ್ತು. ಕೊಯ್ದ ಗದ್ದೆ ಸತ್ತ್ವಹೀನವಾಗಿ ನಿಂತಿದೆ. “ನನ್ನ ಹೊಟ್ಟೆಗೆ ಬೆಂಕಿ ಹಾಕಿದೆಯಾ?” ಎಂದು ಅಲ್ಲಿಂದ ಕೇಳಿಸುವುದು! ಈ ಕಡೆಯಿಂದ ಸೂರ್ಯನು ಅಣಕಿಸುತ್ತ ಕಣ್ಣು ಕುಕ್ಕುತ್ತಿದ್ದಾನೆ. ಗದ್ದೆಯಲ್ಲಿ ನಿಲ್ಲಲು ಸಾಧ್ಯವಿಲ್ಲ. ಭೂಮಿಯೇ ಬಿರಿಯುವಂತೆ ಆಗುತ್ತದೆ. ಬಿರಿದು ಈ ಪಾಪಿಯನ್ನು ನುಂಗಿದ್ದರೆ ಆಗುತ್ತಿತ್ತು. ತರಕಾರಿ ತೋಟಕ್ಕೆ ನುಗ್ಗಿದನು. ಮದುವೆಯ ಊಟಕ್ಕೆಂದು ಬೆಳ್ಯಪ್ಪನೇ ನೆಟ್ಟು ಬೆಳೆಸಿದ ಮೊಟ್ಟೆಗೋಸು, ಅವರೆ, ಚೀನಿ, ಕುಂಬಳ ಮುಂತಾದುವುಗಳು ಸೊಕ್ಕಿ ಬೆಳೆದಿದ್ದುವು. “ಅಯ್ಯೋ, ನಮ್ಮ ಹತ್ತಿರ ಬರಬೇಡಾ” ಎಂದು ಅವು ಮೈಮುದುರಿದುವು. ಸೊಕ್ಕಿ ಬೆಳೆದಿದ್ದ, ಚಪ್ಪರದಿಂದ ನೇಲುತ್ತಿದ್ದ ಚೀನಿಕಾಯಿಯ ತೊಟ್ಟನ್ನೇ ಕಾಗೆಯೊಂದು ಕೊಡವಿ ಕತ್ತರಿಸಿತು. ಅದು ಧಡಾರನೆ ಬಿದ್ದು ರಟ್ಟಿತು. “ಕಾ ಕಾ” ಎಂದು ಕರ್ಕಶವಾಗಿ ಅದು ಕೂಗುತ್ತ ಹಾರಿಹೋಯಿತು. “ಹೀಗೆ ಮಾಡುವುದೇ?” ಎಂದು ತರಕಾರಿ ತೋಟದ ಬೇಲಿ ಕೇಳುತ್ತದೆ. ಅಲ್ಲಿಯೂ ನಿಲ್ಲಲಾರದೆ ಮುಂದೆ ಓಡಿದನು. ಗದ್ದೆ ದಾಟಿ ಗುಡ್ಡ ಹತ್ತಿ ಓಡಿದನು.

“ಬೆಳ್ಳೀ, ಬೆಳ್ಳೀ ತರಕಾರೀ ತೋಟಕ್ಕೆ ಮತ್ತೆ ನೀರು ಹೊಯ್ಯಬಹುದು. ಗಂಜಿ ಉಣ್ಣಕ್ಕೆ ಬಾರೋ” ಎಂದು ಕೂಗುತ್ತಿದ್ದನು ಸಿಂಗಪ್ಪ. “ಎಂಥ ಬೆಂಕಿ, ವುಯ್. ಇದರ ಸಾವು!” ಎಂದು ಅಲ್ಲೇ ಬೇರೆ ಇಬ್ಬರು ಗೌಡರು ಮಾತಾಡುತ್ತಾ ಸಾಗಿದ್ದರು. “ಹೀಗೆ ಮಾಡುವುದೇ, ಹೀಗೆ ಮಾಡುವುದೇ?” ಮರಗಳು ಪ್ರಶ್ನಿಸುತ್ತವೆ. ನೆಲದ ಮೇಲೆ ಬಿದ್ದಿದ್ದ ತರಗೆಲೆಗಳು ಗಾಳಿಯಿಂದ ದಿಕ್ಕಾಪಾಲಾಗಿ ಚದರಿ “ನಮ್ಮನ್ನು ಸುಡಬೇಡ. ಹೀಗೆ ಮಾಡುವುದೇ?” ಎನ್ನುತ್ತವೆ. “ಹೀಗೆ ಮಾಡುವುದೇ ಹೀಗೆ ಮಾಡುವುದೇ” ಎಂಬ ಸಾವಿರ ಕಠಾರಿಗಳು ಅವನನ್ನು ಸುತ್ತಲಿಂದಲೂ ಇರಿಯುತ್ತಿದ್ದುವು. “ಈ ಕಡೆ ಬರಬೇಡ, ಈ ಕಡೆ ಬರಬೇಡ” ಎಂದು ಪ್ರತಿಯೊಂದು ವಸ್ತುವೂ ಮೈ ಮುದುರುತ್ತಿತ್ತು. ಬೀಳುತ್ತ, ಏಳುತ್ತ ದಿಕ್ಕು ಗುರಿಯಿಲ್ಲದೇ “ಹೀಗೆ ಮಾಡುವುದೇ?” ಎಂಬ ಪ್ರಶ್ನೆಯು ಕೇಳದ ಶಾಂತಿನಿಲಯದ ಕಡೆಗೆ ಧಾವಿಸಿದನು. ಆದರೆ “ಹೀಗೆ ಮಾಡುವುದೇ?” ಮಾತ್ರ ಅವನ ಬೆನ್ನು ಹಿಡಿದೇ ಇತ್ತು. ರಾತ್ರಿಯಾಯಿತು. ದಣಿವಿನಿಂದ, ಹಸಿವೆಯಿಂದ, ತಾನು ನಡೆಯುತ್ತಿದ್ದ ಹಸಿರು ಬಯಲಿನಲ್ಲಿಯೇ ಕುಸಿದುಬಿದ್ದನು. ಅಲ್ಲೇ ಅವನಿಗೆ ಗಾಢ ನಿದ್ರೆಯು ಹತ್ತಿತು. ಆಗ ಅವನಿಗೆ ಸ್ವಲ್ಪ ಶಾಂತಿ ದೊರೆತಂತಿತ್ತು – ಶಾಂತಿ ಏನು, ಮನಸ್ಸಿನ ಮೇಲೆ ಶ್ರಮದಿಂದಾಗಿ ಒಂದು ಪರೆ ಕವಿದಿತ್ತು.

ಬೆಳಗ್ಗಿನ ತಂಗಾಳಿಗೆ ಅವನಿಗೆ ಎಚ್ಚರವಾಯಿತು. ಹಸಿವು ವಿಪರೀತವಾಗಿತ್ತು. ಮನಸ್ಸು ಸ್ತಿಮಿತಕ್ಕೆ ಬಂದಿತ್ತು. “ಹೀಗೆ ಮಾಡುವುದೇ?” ಆಗ ಇರಿಯುತ್ತಿದ್ದಿಲ್ಲ. ಹಿಂದೆ ನಡೆದುದನ್ನೆಲ್ಲ ಅವನು ಕುಳಿತಲ್ಲಿಯೇ ಚಿಂತಿಸಿದನು “…ತಿಮ್ಮಯ್ಯನಿಗೆ ನನ್ನಿಂದಾಗಿ ಐನೂರು ರೂಪಾಯಿಯಾದರೂ ಲುಕ್ಸಾನಾಗಿದೆ. ನನಗೆ ದೇವರು ಆ ಕೆಟ್ಟ ಯೋಚನೆ ಯಾಕೆ ಕೊಟ್ಟನೋ? ಈಗ ನಾನು ಹೇಗಾದರೂ ಮಾಡಿ ಅದನ್ನು ತೀರಿಸಲೇಬೇಕು. ನಾನು ಆ ಹಣ ಸಂಪಾದಿಸಿಯೇ ಮನೆಗೆ ಹೋಗೋದು …ಆದರೆ ನನ್ನ ಮದುವೆ… ಮದುವೆಗೆ ಮಣ್ಣು ಹಾಕ! ನಾನು ಐನೂರು ರೂಪಾಯಿ ಸಂಪಾದಿಸಿಯೇ ಮನೆಗೆ ಹೋಗೋದು” ಎಂದು ನಿಶ್ಚೈಸಿ ಎದ್ದನು.

ಸೂರ್ಯನನ್ನು ಮುಚ್ಚಿದ್ದ ಒಂದು ತೆಳು ಮೋಡವು ದೂರ ಸರಿಯಿತು. ಸೂರ್ಯನು ನವಪ್ರಭೆಯಿಂದ ಪ್ರಜ್ವಲಿಸಿದನು. ಹಸುರು ಹುಲ್ಲಿನ ಸಮುದ್ರದ ಮೇಲೆ “ಬಾಲದಿನೇಶನ ಕೋಮಲ ಲೀಲೆ” ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ನಾನಾ ವಿಧದ ಮಣಿಗಳ ಬಣ್ಣದಲ್ಲಿ ರಂಜಿಸುತ್ತಿದ್ದ ಇಬ್ಬನಿಗಳು ಆಗ ಆರುತ್ತಿದ್ದುವು. ಒಂದು ತಂಪು, ಒಂದು ಮೃದುವಾದ ಪರಿಮಳ, ಒಂದು ಉಲ್ಲಾಸ ಅಲ್ಲೆಲ್ಲ ತುಂಬಿ ಹರಿಯುತ್ತಿದ್ದಿತು. ಬೆಳಕಿನ ಕಡಲಿನಲ್ಲಿ ಮಿಂದು, ಚೈತನ್ಯದ ಮಡಿ ಬಟ್ಟೆಯನ್ನು ಉಟ್ಟು, ಪ್ರಕೃತಿಯು ದಿನಕರನನ್ನು ಆರಾಧಿಸುತ್ತಿದ್ದಳು. ದನಕಾಯುವ ಹುಡುಗರ “ಓವೋವೋ ಹೋಯ್ ಹೇ…” ಕೂಗು ಕೇಳುತ್ತಿದ್ದಿತು. ದನಗಳ ಕುತ್ತಿಗೆಗೆ ಕಟ್ಟಿದ ತಟ್ಟೆಗಳು (ಮರದಿಂದ ಮಾಡಿದ ಒಂದು ವಿಧವಾದ ಗಂಟೆ) “ತಟಪಟ” ಎಂದು, ದನ ಅತ್ತಿತ್ತ ಓಡಾಡುವಾಗ ಶಬ್ದ ಮಾಡುತ್ತಿದ್ದುವು. ಕರುಗಳ ಕೊರಳಿನ ಕಿರುಗಂಟೆಗಳ ಕಿಂಕಿಣಿನಾದವು ಈ ಸಂಗೀತಕ್ಕೆ ಶ್ರುತಿ ಮಿಡಿಯುತ್ತಿತ್ತು. ಬೆಳ್ಯಪ್ಪನು ತನ್ನ ದೃಢ ನಿಶ್ಚಯವನ್ನು ನೆರವೇರಿಸಲು ಮುಂದೆ ನಡೆದೇ ಇದ್ದನು!

– ಮುಗೀತು –

[ಕಾಲಾನುಕ್ರಮದಲ್ಲಿ ಆದರೆ ಅನಿಯತವಾಗಿ ಇನ್ನಷ್ಟು ಜಿಟಿನಾ ಸಣ್ಣ ಕತೆಗಳನ್ನು ಹೀಗೇ ಕೊಡಲಿದ್ದೇನೆ. ಸದ್ಯ ಇದಕ್ಕೆ ನಿಮ್ಮ ಪ್ರತಿಕ್ರಿಯೆ?]