ಮೋಡಿಗಾರನ ಮಹಾರಾಜಾ!
(ಅಥವಾ ಪ್ರೊ| ಶಂಕರ್ ಕಂಡ ಮಹಾರಾಜ ಕಾಲೇಜು) (ಮಹಾರಾಜ ನೆನಪು ಭಾಗ ಆರು)

[ದೇರಾಜೆ ಮೂರ್ತಿಯ ಲೇಖನದ ಕೊನೆಯಲ್ಲಿ ನಾನು “ಇಂತಿಪ್ಪ ಮಹಾ ‘ಮೂರ್ತಿ’ಯ ಜೀವದ ಗೆಳೆಯ ಶಂಕರ್ ಯಾಕೆ ಏನೂ ಬರೆಯುತ್ತಿಲ್ಲ” ಎಂದು ನನ್ನ ಕೆಣಕನ್ನು ಸಾರ್ವಜನಿಕ ಮಾಡಿದ್ದೆ. ಉತ್ತರ ರೂಪದಲ್ಲಿ ಮೂರ್ತಿ ನನಗೆ ಬರೆದ ಪತ್ರದ ಸಾಲುಗಳನ್ನೂ ಹಾಕಿ, “ಹಣ್ಣು ಉದುರಿದರೆ, ಕಾಲಾಂತರದಲ್ಲಿ ಪ್ರಕಟಿಸುತ್ತೇನೆ” ಎಂದೇ ಮುಗಿಸಿದ್ದೆ. ಅತ್ತ ಶಂಕರ್ ಮಗ – ತೇಜಸ್ವಿ ಉರುಫ್ ಜೂನಿಯರ್ ಶಂಕರ್ ಮತ್ತು ಅಳಿಯ – ಭಾರವಿ ದೇರಾಜೆ ಉರುಫ್ ಜೂನಿಯರ್ ಮೂರ್ತಿಗಳ ಮೂಲಕವೂ ‘ವಿಚಾರಿಸಿ’ಕೊಳ್ಳುತ್ತಲೇ ಇದ್ದೆ 🙂 ಕಸ ಉಜ್ಜಿ ಹೂಗುಚ್ಛ ಅರಳಿಸುವ, ಜೀವಂತ ಪಾರಿವಾಳವನ್ನೇ ಹಾರಿಬಿಡುವ ಮಾಂತ್ರಿಕ ನನ್ನ ಹುಸಿ ಬೆದರಿಕೆಗಳಿಗೆ ಮನೋಹರ ನೆನಪುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ! ಸವಿಯುವ ಸಂತೋಷ ನಿಮ್ಮದಾಗಲಿ -ಅವ]

Computer ಎಂದರೆ ನನಗೇಕೋ ಉದಾಸೀನ. ಕಲಿಯಲು ಸಾಧ್ಯ ಇಲ್ಲ ಎಂದಲ್ಲ- ‘ಬೇಡ’ಎಂಬ ಧೋರಣೆ. ಮನೆ ಮಂದಿಯಲ್ಲಿ ಒಬ್ಬನಾದರೂ ಈ ರೀತಿಯ ಅಜ್ಞಾನಿಗಳಾದಲ್ಲಿ ಮನೆಯ ವಾತಾವರಣಕ್ಕೆ ಹಿತ (ಅಹಿತ!) ಎಂಬ ಹಿತಧೋರಣೆ ನನ್ನದು. ಆದ್ದರಿಂದಲೇ ಅಶೋಕವರ್ಧನ ಮಹಾರಾಜಾ ಕಾಲೇಜಿನ ಅನುಭವ ಬರಿ… ಎಂದಾಗಲೆಲ್ಲಾ ಉದಾಸೀನ ತೋರುತ್ತಿದ್ದೆ. ಬೆನ್ನು ಬಿಡದ ಭೇತಾಳನ ಹಾಗೆ ‘ಅವ’ ಕಾಡಿದ್ದರ ಫಲ ಈ ನಾಲ್ಕು ಗೆರೆಗಳು. ಗೆಳೆಯ ಮೂರ್ತಿ ಮತ್ತು ನಾನು ಅವಳಿ ಜವಳಿಗಳಂತೆ. ಮಹಾರಾಜಾ ಕಾಲೇಜಿನವರಿಗೆ – ಹಾಸ್ಟೆಲಿನವರಿಗೆ ಹೆಚ್ಚೇಕೆ ಮಹಾರಾಣೀ ಸರ್ಕಲ್, ದಾಸಪ್ರಕಾಶ್ ಹೋಟೆಲ್‌ವರೆಗೆ.. ಎಲ್ಲಿ ಹೋಗುವಾಗಲೂ ನಾವಿಬ್ಬರೂ ಒಟ್ಟಿಗೆ. ಒಬ್ಬನಿಲ್ಲದೇ ಮತ್ತೊಬ್ಬನಿಲ್ಲ.

ಪಿ.ಯು.ಸಿ ನಂತರ ನನಗೆ ಊರು ಬಿಡಬೇಕೆಂದಿತ್ತು. ಮೂರ್ತಿಗೆ ಮೈಸೂರಿನಲ್ಲಿ ಓದಬೇಕೆಂದಿತ್ತು. ಎಲಿಮೆಂಟರಿ ಶಾಲೆಯ ದಿನಗಳಿಂದಲೂ ಮ್ಯಾಜಿಕ್ ಮಾಡುತ್ತಾ ಬೆಳೆಯುತ್ತಿದ್ದ ನಾನು ಊರಿನವರಿಗೆ ನಮ್ಮ ಸಮಾಜದವರಿಗೆ ಹಿತ್ತಿಲ ಗಿಡವಾಗಿದ್ದೆ. ಮ್ಯಾಜಿಕ್ ಎಂದರೆ “ಡೊಂಬರಾಟ” ಎಂಬ ಭಾವನೆ ಎಲ್ಲರದಾಗಿತ್ತು. ಅಲ್ಲ- ಇದೊಂದು ಸಮರ್ಥವಾದ ಕಲೆ ಎಂದು ಊರಿನವರಿಗೆ ಸಮಾಜದವರಿಗೆ ತೋರಿಸಲು ಊರಲ್ಲೇ ಇದ್ದರೆ ಸಾಧ್ಯವಿಲ್ಲ ಎಂದು ತಿಳಿದ ನಾನು ಮೂರ್ತಿ ಜತೆಗೆ ಮೈಸೂರಿಗೆ ಬಂದು ಮಹಾರಾಜಾ ಕಾಲೇಜಿಗೆ ಸೇರಿದೆ.

ಅಬ್ಬ! ಅದು ನಿಜವಾಗಿಯೂ “ಮಹಾರಾಜಾ” ಕಾಲೇಜು. ಆ ಕಾಲೇಜಿನ ಅರಮನೆಯಂತಹ ಕಟ್ಟಡ, ಸುಂದರ ವಾತಾವರಣ, ಓದದವರನ್ನೂ ಓದಿಸುವಂತಿತ್ತು. ಸೈಕಾಲಜಿ ಕಲಿತರೆ ಹಿಪ್ನಾಟಿಸಂ ಬಗ್ಗೆ ಹೆಚ್ಚು ತಿಳಿಯಬಹುದು, ಕಾರ್ಯಕ್ರಮ ಕೊಡುವಾಗ ಪ್ರೇಕ್ಷಕರ ಮನಃಸ್ಥಿತಿ ತಿಳಿಯಲು ಸಹಕಾರಿ ಎಂದೆಲ್ಲಾ ಯೋಚಿಸಿ ಸೈಕಾಲಜಿ ಆಯ್ಕೆ ಮಾಡಿದೆ. ಮೂರ್ತಿ ಕ್ಲಾಸಿಗೆ ಹೆಚ್ಚು ಚಕ್ಕರ್ ಕೊಟ್ಟರೂ ಅವನ ತಲೆ ಗಟ್ಟಿ. ಓದಿದ್ದು ಕೇಳಿದ್ದು ಸರಿಯಾಗಿ ನೆನಪಿನಲ್ಲಿರುತ್ತಿತ್ತು. ಅದರ ಸದುಪಯೋಗ ನನಗೆ ಆಗಿತ್ತು.

ಕಾಲೇಜಿನ ಪರಿಸರ, ನಮ್ಮ ಪ್ರಾಧ್ಯಾಪಕರ ಬಗ್ಗೆ ಅಶೋಕ, ರಾಮಚಂದ್ರನ್, ಮೂರ್ತಿ, ಗೋಪಾಲ್ ಎಲ್ಲಾ ಈಗಾಗಲೇ ಸವಿವರವಾಗಿ ತಿಳಿಸಿದ್ದಾರೆ. ನನ್ನ ಒಂದೆರಡು ನೆನಪಿರುವ ಅನುಭವಗಳನ್ನು ಹಂಚಿಕೊಳ್ಳುತ್ತಾ ಇದ್ದೇನೆ. ನಾನು ಕ್ಲಾಸಿಗೆ ಚಕ್ಕರ್ ಕೊಟ್ಟದ್ದು ಕಡಿಮೆ. ಒಂದು ದಿನ ಎಲ್ಲೋ ಮ್ಯಾಜಿಕ್ ಶೋ. ಬೇಗ ಹೋಗಬೇಕಾಗಿತ್ತು. ನನ್ನ ಕಾರ್ಯಕ್ರಮದ ಹಿನ್ನೆಲೆ ಸಂಗೀತ ಮೂರ್ತಿಯದು. ತಲೆನೋವು ಎಂದು ಅದಾಗಲೇ ಹಾಸ್ಟೆಲ್ಲಿನಲ್ಲಿದ್ದ. ಸೈಕಾಲಜಿ ಪ್ರೊಫೆಸರ್ ನಾರಾಯಣ ರಾವ್ ಪವಾರ್, ಲೆಕ್ಚರ್ ಹಾಲಿಗೆ ಬಂದಾಗಿತ್ತು. ಈ ಲೆಕ್ಚರ್ ಹಾಲ್ stadium ಗ್ಯಾಲರಿಯಂತೆ ಮೆಟ್ಟಲು ಮೆಟ್ಟಲಾಗಿತ್ತು(ಮರದಿಂದ ಮಾಡಿದ್ದು). ನಾನು ಮೇಲೆ ಒಂದು ಬದಿಯಲ್ಲಿ ಏನೋ ಪ್ಲಾನ್ ಮಾಡಿ ಕುಳಿತಿದ್ದೆ. ಆಗಾಗ ವಾಚು ನೋಡುತ್ತಿದ್ದೆ. ಪಾಠ ನಡೀತಿತ್ತು. ಒಮ್ಮೆ ಪವಾರ್‌ರವರು ಬೋರ್ಡ್‌ನಲ್ಲಿ ಏನೋ ಬರೆಯಲು ತಿರುಗಿದರು. ಇದೇ ಸರಿಯಾದ ಸಮಯ ಅಂತ ಯೋಚಿಸಿ ನಾನು ಮೆತ್ತಗೆ ಹಿಂದೆ, ಬದಿಯಲ್ಲಿದ್ದ ಏಣಿಯಂತಹ ಮೆಟ್ಟಲ ಮೇಲಿಂದ ಕೆಳಗೆ ಇಳಿದೆ. ನನ್ನ ಗ್ರಹಚಾರಕ್ಕೆ ಬೋರ್ಡ್‌ನಲ್ಲಿ ಬರೆಯಲು ಏನೋ ಯೋಚಿಸಿ ತಿರುಗಿದ್ದ ಪವಾರ್‌ರವರು ಮನಸ್ಸು ಬದಲಾಯಿಸಿ ತಕ್ಷಣ ನಮ್ಮ ಕಡೆಗೆ ತಿರುಗಿದರು. ನಾನು ಇಳಿಯುತ್ತಿರುವುದನ್ನು ಅವರು ಕಂಡೇ ಬಿಟ್ಟರು !! ನೇರವಾಗಿ ಅವರ ಬಳಿಗೆ ಹೋಗಿ.. “ಸಾರ್, ಕ್ಷಮಿಸಿ ಅರ್ಜೆಂಟಾಗಿ ಹಾಸ್ಟೆಲಿಗೆ ಹೋಗಬೇಕಾಗಿದೆ. ಹೋಗಿ ಬರ್ತೇನೆ” ಎಂದು ಧೈರ‍್ಯ ಮಾಡಿಕೊಂಡು ಪೆಚ್ಚು ಮೋರೆ ಹಾಕಿ ಹೇಳಿದೆ. ಅವರಿಗೆ ನಗು ಬಂತು.. “ಹೋಗಪ್ಪ.. ನೀನು ಇಳಿದು ಓಡೋಕೆ ಪ್ಲಾನ್ ಮಾಡಿದ್ದೆ. ನಾನು ಕಂಡು ಬಿಟ್ಟೆ. ಸಭ್ಯನ ಹಾಗೆ ಈಗ ಬಂದು ಹೇಳ್ತಾ ಇದ್ದಿ!! ಹೋಗು…. ಹೋಗು” ಎಂದು ಹೇಳಿ ಬಿಡ್ಬೇಕೆ !! ಅವರಿಗೆ ಎಷ್ಟೆಂದರೂ ನನ್ನಲ್ಲಿ ಒಂದು ರೀತಿ ವಿಶೇಷ ಪ್ರೀತಿ ಇತ್ತು.

ಪವಾರ್ ಸರ್ ಒಂದು ಸಾರಿ, ಮುಂಬೈಯ ಖ್ಯಾತ ಹಿಪ್ನಾಟಿಸ್ಟ್ ‘ಡಿನ್ ಕೊಲಿ’ಯವರ ಹಿಪ್ನಾಟಿಸಂ demonstration, ನಮ್ಮ ಸೈಕಾಲಜಿ ಕ್ಲಾಸಿನವರಿಗಾಗಿ, ಏರ್ಪಡಿಸಿದ್ದರು. ಕಾರ್ಯಕ್ರಮದ ಗಡಿಬಿಡಿಯಲ್ಲಿ ಡಿನ್ ಕೊಲಿಯವರು ಹಿಪ್ನೊ ಎನಸ್ತೀಸಿಯ ಮಾಡಿದ ಹುಡುಗನಿಗೆ ಕೊಟ್ಟ suggestion ಹಿಂದೆ ತೆಗೆಯಲು ಮರೆತಿದ್ದರು. ಇದು ನನ್ನ ಗಮನಕ್ಕೆ ಬಂದಿತ್ತು. ಪ್ರಶ್ನೋತ್ತರದ ವೇಳೆ ಡಿನ್ ಕೊಲಿಯವರ ಗಮನವನ್ನು ಇದಕ್ಕೆ ಸೆಳೆದೆ. “yes…yes…sorry …sorry” ಎಂದು ಅದೇ ಹುಡುಗನನ್ನು ಪುನಃ ಕರೆಸಿ Hypnotic suggestion ಗಳನ್ನು ವಾಪಾಸು ತೆಗೆದು ಸರಿಪಡಿಸಿದರು. ಈ ಸಂದರ್ಭ ಪವಾರ್‌ರವರು ಅಭಿಮಾನದಿಂದ ಡಿನ್ ಕೊಲಿಯವರಿಗೆ ನನ್ನ ಪರಿಚಯ ಮಾಡಿ, “ಇವನು ಮ್ಯಾಜಿಕ್, ಹಿಪ್ನಾಟಿಸಂ ಮಾಡ್ತಾನೆ.. ವಿದ್ಯಾರ್ಥಿ ಆಗಿರುವಾಗಲೇ ಪ್ರೊಫೆಸರ್ ಎಂಬ ಹೆಸರು ಪಡೆದವ ಈ ಹುಡುಗ.. ಮಂಗಳೂರಿನವ” ಎಂದಿದ್ದರು. ಇದರಿಂದಾಗಿ ಡಿನ್‌ಕೊಲಿಯವರು ಆಸುಪಾಸುಗಳಲ್ಲಿ ಹಿಪ್ನಾಟಿಸಂ ಕಾರ್ಯಕ್ರಮ ಕೊಡುತ್ತಿದ್ದಾಗ ನನ್ನನ್ನು ಅವರ ಸಹಾಯಕರಾಗಿ ಕರೆಸುತ್ತಿದ್ದರು. ಇದಕ್ಕೆ ಕಾರಣರು ಅವರಿಗೆ ನನ್ನನ್ನು ಪರಿಚಯಿಸಿದ ನಮ್ಮ ಪವಾರ್ ಸರ್.

ನಾನೂ ಕೆಲವು ಹಿಪ್ನೋತೆರಪಿ ನಡೆಸಿದ್ದು ಇದೆ. ಪ್ರಕಾಶ್ ಬಾಪಟ್ ಎನ್ನುವ ನಮ್ಮ ಸಹಪಾಠಿಗೆ ಮಾತಾಡುವಾಗ ಉಗ್ಗು ಇತ್ತು. ಕೀಳರಿಮೆಯಿಂದಾಗಿ ಅದು ವಿಪರೀತಕ್ಕೆ ಹೋಗಿತ್ತು. ನನ್ನ ತೆರಪಿಯಿಂದ ಆತನಿಗೆ ತುಂಬಾ ಪ್ರಯೋಜನ ಆಗಿತ್ತು, ಎನ್ನುವುದೊಂದು ತೃಪ್ತಿ. ಆದರೆ ಈ ನನ್ನ ಹಿಪ್ನೊಟಿಸಂ ತೆರಪಿ ವಯಸ್ಸಿಗೆ ಸರಿಯಾಗಿ ಕೆಲವರಲ್ಲಿ ಏನೋ ಒಂದು ಆಸೆಯನ್ನೂ ಹುಟ್ಟಿಸಿದ್ದು ಸುಳ್ಳಲ್ಲ. ಸಹಪಾಠಿಯೊಬ್ಬಳ ಆಕರ್ಷಣೆಗೆ ಒಳಗಾದ ಗೆಳೆಯನೊಬ್ಬ, (ವನ್ ವೇ ಟ್ರಾಫಿಕ್…!!!) ದೂರದಿಂದಲೇ ಹಿಪ್ನೋಟೈಸ್ ಮಾಡಿ ಅವಳ ಮನಸ್ಸನ್ನು ತನ್ನತ್ತ ತಿರುಗಿಸಲು ಸಾದ್ಯವೇ ಎಂದು ಕೇಳಿದ್ದೂ ಇದೆ. ಆತ ಯಾರೆಂದು ನಾನು ಮೂರ್ತಿಗೂ ಹೇಳಿಲ್ಲ. ಆಗ ಆತನ ಮೇಲೆ ಒಂದು ರೀತಿಯ ಜಿಗುಪ್ಸೆ ಬಂದಿದ್ದರೂ, ಇಂದು ಯೋಚನೆ ಮಾಡಿದಾಗ, ಆ ವಯಸ್ಸಿನ ಒಂದು ಸಹಜ ಆಕಾಂಕ್ಷೆ ಅಷ್ಟೇ…ತಪ್ಪೇನಿಲ್ಲ ಅಂತ ಕಾಣ್ತಾ ಇದೆ. ಆತನಿಗೆ ಈಗ ಅದು ನೆನಪಿನಿಂದಲೇ ಹಾರಿ ಹೋಗಿರಬಹುದು. ದೊಡ್ಡವರ ಸಣ್ಣಗುಣ….!!! ಇದೂ ಕೂಡ ಮಹಾರಾಜಾ ಕಾಲೇಜೆಂಬ ಸಾಗರದ ಒಂದು ಮುತ್ತು.

ಮಹಾರಾಜಾ ಕಾಲೇಜು, ನನ್ನ ನಾಟಕದ ಹುಚ್ಚನ್ನೂ ಪೋಷಿಸಿತ್ತು ಎನ್ನುವುದು ಮರೆತೇ ಹೋಗಿತ್ತು. ಪ್ರಾಥಮಿಕ, ಪ್ರೌಡಶಾಲೆಗಳಲ್ಲಿ ಪ್ರತಿ ನಾಟಕದಲ್ಲೂಪಾತ್ರ ವಹಿಸುತ್ತಿದ್ದ ನನಗೆ ಮ್ಯಾಜಿಕ್‌ನಿಂದಾಗಿ ನಾಟಕ ಹಿಂದೆ ಸರಿದದ್ದು ಇಲ್ಲಿ ಮತ್ತೆ ಸ್ವಲ್ಪ ಮುನ್ನೆಲೆಗೆ ಬಂತು. ಇದಕ್ಕೆ ಕಾರಣ ಹಿಂದಿ ಮೇಷ್ಟ್ರು ಪಿ.ವಿ.ನಂಜರಾಜೇ ಅರಸು ಅವರು ನನ್ನ ಜಾದೂ ಕಾರ್ಯಕ್ರಮ ನೋಡಿ, ನನ್ನನ್ನು ನಾಟಕದಲ್ಲಿ ಬಣ್ಣ ಹಚ್ಚಲು ಪ್ರೋತ್ಸಾಹಿಸಿದವರು. ಮೊದಲನೇ ವರ್ಷ ಯಾವ ನಾಟಕ ಅಂತ ನೆನಪಿಲ್ಲ. ಹೈಸ್ಕೂಲಿನಲ್ಲಿದ್ದಾಗ ಎಷ್ಟು ಒತ್ತಾಯಿಸಿದರೂ ನಾಟಕ ಮಾಡಲು ಅಳುಕುತ್ತಿದ್ದ ಮೂರ್ತಿಗೆ ಈ ಕಾಲೇಜು ಸ್ಪೂರ್ತಿ ಕೊಟ್ಟಿತೇನೋ….! ಅವನೂ ಒಂದು ಚಿಕ್ಕ ಪಾರ್ಟು ಮಾಡಿದ್ದ.. ಮಾತಿಲ್ಲ… ಮೂರು ನಾಕೈದು ಜನರ ಜೊತೆ ಸುಮ್ಮನೇ ಕುಳಿತು ಸಿಗರೇಟ್ ಸೇದುವ ಪಾತ್ರ…!! ಚೈನ್ ಸ್ಮೋಕರ್ ಆಗಿದ್ದ ದೇರಾಜೆಯವರಿಗೆ (ದೇರಾಜೆ ಸೀತಾರಾಮಯ್ಯ – ಮೂರ್ತಿಯ ಅಪ್ಪ) ದಿನಾ ಸಿಗರೇಟು ತಂದುಕೊಡುತ್ತಿದ್ದ ಮಗ ಈ ಮೂರ್ತಿ… ಆದರೆ ಒಂದು ದಿನವೂ ಸಿಗರೇಟ್ ಸೇದುವ ಆಸೆಗೆ ಬಲಿಯಾದದ್ದು ನಾನು ನೋಡಿಲ್ಲ ಅಥವಾ ಆ ಆಸೆಯೇ ಅವನ ಈ ಅಭಿನಯಕ್ಕೆ ಪ್ರೇರಣೆ ನೀಡಿತ್ತೋ…ಗೊತ್ತಿಲ್ಲ. ಎರಡನೇ ವರ್ಷ ಅಳಿಯ ದೇವರು ಎನ್ನುವ ನಾಟಕ…… ಅದರ ನೆನಪೂ ಇರಲಿಲ್ಲ…

ಹಳೆಯ ಫೊಟೊ ಏನಾದರೂ ಇದೆಯೇನೋ ಅಂತ ಪೆಟ್ಟಿಗೆ ಜಾಲಾಡಿಸಿದಾಗ, ಯಾವುದೋ ನಾಟಕ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಸರ್ಟಿಫಿಕೆಟ್ ಸಿಕ್ಕಿತು. ಅದರಲ್ಲಿ ನರೇಂದ್ರಸಿಂಹ ಎಂ.ಆರ್, ವೆಂಕಟಪತಯ್ಯ ಬಿ.ಆರ್, (ಆತ ಸಾಹಿತಿಯೂ ಆಗಿದ್ದ) [ವೆಂಕಟಪತಯ್ಯ ಪತ್ರಿಕೋದ್ಯಮ ವಿದ್ಯಾರ್ಥಿ ಮತ್ತೆ ವೃತ್ತಿಪರ ಪತ್ರಕರ್ತನಾಗಿಯೇ ಮೈಸೂರಿನ ಯಾವುದೋ ಸಣ್ಣ ಪತ್ರಿಕೆಯಲ್ಲಿ ನೆಲೆಸಿದ್ದರು. ಎಷ್ಟೋ ವರ್ಷಗಳ ಮೇಲೆ ಒಮ್ಮೆ ನನ್ನ ಅಂಗಡಿಗೂ ಬಂದಿದ್ದರು. ಅವರ ವೃತ್ತಿ ಪ್ರಾವೀಣ್ಯ ನನಗ್ಗೊತ್ತಿಲ್ಲ ಆದರೆ ‘ಸ್ಥಾನಪ್ರಜ್ಞೆ’ ವಿಪರೀತ ಇದ್ದಂತೆ ಕಂಡಿತ್ತು. ಬಹುಶಃ ಹಾಗಾಗಿ ಲೋಕಮುಖಿಯಾಗಲಿಲ್ಲ – ಅವ] ನಾಗೇಂದ್ರಪ್ಪ ಒ, ಚಂದ್ರಶೇಖರ್ ಜಿ.ಎಸ್, ಗೋಪಾಲ್ ಎಂ.ಎನ್ ಮೊದಲಾದ ವಿದ್ಯಾರ್ಥಿ ಮಿತ್ರರ ಉಲ್ಲೇಖವೂ ಇದೆ. ನನ್ನದು ಯಾವ ಪಾತ್ರ ಎಂದೂ ನೆನಪಿಲ್ಲ. (ಗೋಪಾಲ್ ಹೇಳಿದಂತೆ… ಉಳ್ಳಾಲ್ ಶೀಲ್ಡ್ ಸ್ಪರ್ದೆಯ ತಂಡದಲ್ಲಿ ನಾನು ಇದ್ದ ನೆನಪು ನನಗಿಲ್ಲ.) ನಂತರ ನಾಟಕದಲ್ಲಿ ಬಣ್ಣ ಹಚ್ಚಲಿಲ್ಲವಾದರೂ… ನಮ್ಮ ಮ್ಯಾಜಿಕ್ಕಿನಲ್ಲಿ ನಾಟಕ ನನ್ಗೂ ಗೊತ್ತಿಲ್ಲದೇ ಇಣುಕುತ್ತಿತ್ತೇನೋ. ಮುಂದೊಮ್ಮೆ ಬಿ.ವಿ. ಕಾರಂತರು ರಂಗಾಯಣದಲ್ಲಿ ನಮ್ಮ ಮ್ಯಾಜಿಕ್ ನೋಡಿ ಇದನ್ನು ಹೇಳಿದಾಗ.. ಖುಶಿಯಾಗಿತ್ತು, ಕಾರಂತರು ಮೆಚ್ಚಿಕೊಂಡದ್ದರಿಂದ ಹೆಮ್ಮೆಯೂ ಆಗಿತ್ತು. ನಾಟಕಕ್ಕೆ ಮ್ಯಾಜಿಕ್ ಕೂಡಾ ಒಂದು ಸಂಪನ್ಮೂಲ ಅಂದಿದ್ರು. ಯಾವ ಅರ್ಥದಲ್ಲಿ ಹೇಳಿದ್ದರೋ ನನಗೆ ತಿಳಿಯದು.

ಆ ದಿನಗಳಲ್ಲಿ ಚಂದ್ರಶೇಖರ್ ಹಿರೇಮಠ್ ಅನ್ನುವವರು ತಮ್ಮ ಮಿಮಿಕ್ರಿ ಕಾರ್ಯಕ್ರಮಗಳನ್ನು ಮೈಸೂರಿನ ಎಲ್ಲಾ ಕಾಲೇಜುಗಳಲ್ಲೂ ನೀಡಿ ಬಹಳ ಪ್ರಸಿದ್ದರಾಗಿದ್ದರು. ಅದನ್ನು ನೋಡಿ ಗೆಳೆಯರು ಚ್ಯಾಲೆಂಜ್ ಮಾಡಿ ನನ್ನಿಂದ ಮಿಮಿಕ್ರಿ ಕಾರ್ಯಕ್ರಮ ಮಾಡಿಸಿದ್ರು. ಅದೂ ವೈಸ್ ಚಾನ್ಸಲರ್ ಆಗಿದ್ದ ಮಾನ್ಯ ದೇ. ಜವರೇ ಗೌಡರ ಘನ ಉಪಸ್ಥಿತಿಯಲ್ಲಿ. ಒಂದು ಸಾರಿ, ಹಿಂದಿ ಪ್ರೊಫೆಸರ್ ನಂಜರಾಜೇ ಅರಸ್ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ಒಂದು ಜಾದೂ ಕಾರ್ಯಕ್ರಮಕ್ಕೆ ಬಂದಿದ್ದರು. ಪ್ರಖ್ಯಾತ ಚಲನಚಿತ್ರ ನಿರ್ದೇಶಕರಾಗಿದ್ದ ಜಿ.ವಿ. ಅಯ್ಯರ್ ಜೊತೆಯಲ್ಲಿದ್ದರು. ಮೂರ್ತಿಯ ಸಂಗೀತ ವಿನ್ಯಾಸ. ಜೊತೆಯಲ್ಲಿ ಮೈಸೂರಿನ ಆ ಕಾಲದ ಉದಯೋನ್ಮುಖ ಸಂಗೀತಕಾರರಾಗಿದ್ದ ಮೋಹನ್- ಕುಮಾರ್ ಬಳಗ ಸಹಕರಿಸಿತ್ತು. (ಮುಂದೆ, ಆ ತಂಡ ಡಾ| ರಾಜಕುಮಾರ್ ಅವರ ಸಂಗೀತ ಸಂಜೆ ಕಾರ್ಯಕ್ರಮದ ಸಂಗೀತ ನಿರ್ವಹಣೆ ಮಾಡುತ್ತಿದ್ದರು. ಸಿನಿಮಾಕ್ಕೂ ಸಂಗೀತ ನೀಡಿದ್ದರು) ಕಾರ್ಯಕ್ರಮದಂದು ಬೆಳಗ್ಗಿನಿಂದಲೇ ನನಗೆ ಜ್ವರ ಸುಡುತ್ತಿತ್ತು. ಸಂಜೆಯಾದಂತೇ ಇನ್ನೂ ಜೋರಾಯ್ತು. ಡಾಕ್ಟರ್ ಹತ್ತಿರ ಹೋಗಲೂ ಸಮಯ ಇರಲಿಲ್ಲ. ನಾನು, “ಏನು ಮಾಡೋದು….?” ಎಂಬ ಚಿಂತೆಯಲ್ಲಿದ್ದೆ. ಕಾರ್ಯಕ್ರಮ ಪ್ರಾರಂಭ ಆಗೋದಕ್ಕಿಂತ ಸ್ವಲ್ಪ ಮೊದಲು ಗೆಳೆಯ ಮಂಜಪ್ಪ ನಾಯಕ್ ಏನೋ ಒಂದಿಷ್ಟು ಔಷಧಿ ಕುಡಿಸಿದ. ಬಾಯಿಯಿಂದ ಗಂಟಲು… ಹೊಟ್ಟೆಯವರೆಗೆ ಔಷಧಿ ಹೋದ ಅನುಭವ. ಸ್ವಲ್ಪ ಹೊತ್ತಲ್ಲಿ ಪೂರಾ ಬೆವರಿಳಿಯಿತು. ಜ್ವರದ ಕಾವು ತಗ್ಗಿತು. ಕಾರ್ಯಕ್ರಮ ಚೆನ್ನಾಗಿ ಆಯ್ತು. ಮರುದಿನ ಮತ್ತೊಮ್ಮೆ ಮಂಜಪ್ಪ ನಾಯಕನಿಗೆ ಥ್ಯಾಂಕ್ಸ್ ಹೇಳಿ, “ಅದು ಯಾವ ಔಷಧಿ ಮಾರಾಯ್ರೆ, ವೆರಿ ಎಫ಼್ಫೆಕ್ಟಿವ್…. ಹೆಸರು ಹೇಳಿ ಬರೆದಿಟ್ ಕೊಳ್ತೇನೆ…” ಅಂದ್ರೆ ….ಈ ಮಂಜಪ್ಪ ನಾಯಕ ಸುಮ್ಮನೆ ಹಲ್ಲು ಕಿರಿಯುವಾಗ, ಅಂದಾಜು ಆಯ್ತು….. ಈತ ಕೊಟ್ಟದ್ದು ಒಂದು ಪೆಗ್ ಬ್ರಾಂಡಿ……!!! ….. ಹಾಗೆ ಜಾತಿ ಕೆಟ್ಟದ್ದೂ ಆಯ್ತು…!!!

ನಂಜರಾಜೇ ಅರಸು ಮರುದಿನ ನನ್ನನ್ನು ಜಿ.ವಿ ಅಯ್ಯರ್ ಅವರ ಸರಸ್ವತಿ ಪುರಂನ ಮನೆಗೆ ಕರೆದುಕೊಂಡು ಹೋದರು. “ನೋಡಯ್ಯ… ನಿನ್ನೆ ಕಾರ್ಯಕ್ರಮ ನೋಡಿ ಅಯ್ಯರ್ ಅವರಿಗೂ ನನಗೂ ಒಂದು ಸಿನೆಮಾ ಮಾಡೋಣ ಅಂತ ಆಗಿದೆ. ವಿಜ್ಞಾನ, ಮೂಡನಂಬಿಕೆ ಹಾಗೂ ಜಾದು ತಂತ್ರದ ಹಿನ್ನೆಲೆ. ಮ್ಯಾಜಿಕ್ ಹಾಗೂ ಹಿಪ್ನಾಟಿಸಂಗೆ ನೀನು ನಮ್ಮೊಡನೆ ಇರಬೇಕು” ಎಂದಾಗ ನನಗೆ ಖುಷಿಯೋ ಖುಷಿ. ಮೂರ್ತಿಗೆ ಈ ವಿಷಯ ಹಾಸ್ಟೆಲ್‌ಗೆ ಬಂದು ಹೇಳಿದಾಗ ತುಂಬಾ ಖುಷಿಪಟ್ಟ. ಆ ಮೇಲೆ ನಾನು ಕ್ಲಾಸಿಗೆ ಚಕ್ಕರ್ ಹಾಕುವುದು ಸುರುವಾಯ್ತು. ಸುಂದರಕೃಷ್ಣ ಅರಸು, ಅನಂತರಾಮ ಮಚ್ಚೇರಿ, ಹಾಗೂ ಹೊಸಮುಖಗಳಾದ ಅನಂತನಾಗರಕಟ್ಟಿ (ಇವತ್ತಿನ ಅನಂತನಾಗ್), ಶ್ರೀಮತಿ ಬಿಂದು ಜಯದೇವ ಮುಂತಾದವರ ಜತೆಯಲ್ಲಿ ನನ್ನದೊಂದು ಪಾತ್ರ…

ಕಥೆಯಲ್ಲಿ ಬರುವ ಹಿಪ್ನಾಟಿಸಂ ಸಂದರ್ಭಗಳಿಗೆ ನನ್ನ ಸಹಕಾರ, ಸಲಹೆ. ಒಟ್ಟಿನಲ್ಲಿ ಜಿ.ವಿ.ಅಯ್ಯರ್, ನಂಜರಾಜೇ ಅರಸ್ ದಿಗ್ದರ್ಶನ. ಎಸ್. ರಾಮಚಂದ್ರರ ಅದ್ಭುತ ಕ್ಯಾಮರಾ ವರ್ಕ್‌ನಿಂದಾಗಿ ೧೯೭೨ರ ರಾಜ್ಯಪ್ರಶಸ್ತಿ ಈ ಚಿತ್ರಕ್ಕೆ ಬಂದಿತ್ತು. ಚಿತ್ರ, ಪ್ರದರ್ಶನ ಕಂಡಿತ್ತೋ ಇಲ್ಲವೋ… ಗೊತ್ತಿಲ್ಲ. ಇನ್ನು ನನ್ನ ಕಥೆ.. ಚಿತ್ರ ತಂಡದೊಂದಿಗೆ ಸೇರಿಹೋದ ನನಗೆ, ಪಾಠ, ಅಟೆಂಡೆನ್ಸ್ ಎಲ್ಲಾ ತಪ್ಪಿ ಹೋಯ್ತು. ಅಟೆಂಡೆನ್ಸ್ ತೊಂದರೆಯಾಗದಂತೆ ಎಲ್ಲಾ ಮೇಷ್ಟ್ರುಗಳೂ ನೋಡಿಕೊಂಡರು. ಪರೀಕ್ಷೆಗೆ, ಪಾಠ ‘ಉರು ಹೊಡೆಯದೇ’ ಬೇರೆ ದಾರಿ ಇರಲಿಲ್ಲ.

ಮಹಾರಾಜಾ ಕಾಲೇಜಿನಂತೆಯೇ ಮಹಾರಾಜಾ ಕಾಲೇಜ್ ಹಾಸ್ಟೆಲ್ ನೆನಪು ಕೂಡಾ ಮುಖ್ಯವಾದುದು. ಅಲ್ಲಿಯ ವಾತಾವರಣ, ಊಟ-ತಿಂಡಿ, ನೌಕರವೃಂದ, ಅಡುಗೆಯ ಸುಬ್ಬರಾಯರು, ರಾಮಾಚಾರ್, ನಾಯರ್, ಸರ್ವರ್ ಮಾಯಣ್ಣ (ಒಬ್ಬ ಒಳ್ಳೆಯ ಹಾಡುಗಾರ ಕೂಡ ಆಗಿದ್ದ.), ಡೋಬಿ ಬೋಗಯ್ಯ, ಅವನ ಮಗ ಶ್ರೀಕಂಠ, ಒಬ್ಬೊಬ್ಬರಾಗಿ ನನ್ನ ನೆನಪಿಗೆ ಬರ್ತಿದ್ದಾರೆ. ನಾನು ಜಾದು ಮಾಡುವವ, ಮೋಡಿ ಮಾಡುವವ ಎನ್ನುವ ಸಣ್ಣ ಭಯ ಅವರಿಗೆಲ್ಲಾ ಇದ್ದಂತಿತ್ತು. ಶ್ರೀಕಂಠ ಹಾಗೂ ವೈಸ್ ಚಾನ್ಸಲರ್ ಮನೆಯ ತೋಟಮಾಲಿ ಪುಟ್ಲಿಂಗ ಇಬ್ಬರೂ ನಮ್ಮ ಮ್ಯಾಜಿಕ್ ತಂಡದ ಸದಸ್ಯರು.

ಒಮ್ಮೆ ಮೂರ್ತಿ ರಜೆ ಹಾಕಿ ಯಾವುದೋ ಕಾರ್ಯನಿಮಿತ್ತ ಊರಿಗೆ ಬಂದಿದ್ದ. ನಾನು ‘ಬೂತ್ ಬಂಗಾ’ ಎಂಬ ಒಂದು ಮ್ಯಾಜಿಕ್ ಕಾನ್ಸೆಪ್ಟ್‌ನ ತಯಾರಿಗಾಗಿ ನನ್ನ ಜಾದೂ ಸ್ನೇಹಿತ- ನಜರ್‌ಬಾದ್‌ನಲ್ಲಿದ್ದ ಬೂಬಾಶಾನ್ ಒಂದು ತಲೆಬುರುಡೆ ಮಾಡಿಕೊಟ್ಟಿದ್ರು. ಬೂಬಾಶಾನ್ ಒಳ್ಳೆ ಜಾದೂ ಕಲಾವಿದ ಹಾಗೂ ನನ್ನನ್ನೂ ಈ ರಂಗದಲ್ಲಿ ಬೆಳೆಸುವಲ್ಲಿ ತುಂಬಾ ಉತ್ಸಾಹಕನಾಗಿದ್ದ. ಆಗ ನಾವು ಪ್ರಿನ್ಸ್ ಹಾಲ್ ರೂಮಿನಿಂದ ಮೊದಲ ಮಹಡಿಯ ‘ಆರಾಧನಾ’ (ನಾವೇ ಇಟ್ಟ ಹೆಸರು… ಗೆಳೆಯ ಮೂರ್ತಿ ಚಿತ್ರನಟ ರಾಜೇಶ್ ಖನ್ನಾನ ದೊಡ್ಡ ಅಭಿಮಾನಿ.) ರೂಂಗೆ ಬಂದಿದ್ದೆವು. ರೂಂ ಬಾಗಿಲು ತೆಗೆಯುವಾಗ ಈ ತಲೆ ಬುರುಡೆ ನೇರವಾಗಿ ಬಾಗಿಲು ಎದುರು ಬರುವಂತೆ ದಾರದಲ್ಲಿ ಕಟ್ಟಿದ್ದೆ. ಪಾಪ… ಒಂದು ದಿನ ನಮ್ಮ ವಾರ್ಡನ್, ಹಾಸ್ಟೆಲ್ ರೂಂಗಳಿಗೆ ಚೆಕ್ಕಿಂಗ್ ಮಾಡ್ತಾ ಬಂದವರು, ನನ್ನ ಕೋಣೆಯ ಬಾಗಿಲು ತಟ್ಟಿದರು. ಚಿಲಕ ಹಾಕಿರಲಿಲ್ಲ. ನಾನು ಹಾಸಿಗೆಯಲ್ಲಿ ಮಲಗಿದ್ದೆ. ಯಾರೆಂದು ಗೊತ್ತಿಲ್ಲದೇ ನಾನು, “ಕಮಿನ್..” ಎಂದೆ.

ಅವರು ಬಾಗಿಲು ತೆರೆದರು. ರಪ್ಪನೆ ತಲೆಬುರುಡೆ ಎದುರು ಬಂತು. ಡಬ್ಬನೆ ಬಾಗಿಲು ಹಾಕಿ ವಾರ್ಡನ್ ಹೋಗಿಯೇ ಬಿಟ್ಟ್ರು! ನಾನು ಎದ್ದು ನೋಡಿ, ಹೆದರಿದೆ. ವಾರ್ಡನ್ ಒಂದು ಶಬ್ದ ಮಾತಾಡದೆ ಆಫೀಸಿಗೆ ಹೋದ್ರು. ಸ್ವಲ್ಪ ಹೊತ್ತಲ್ಲಿ ಹಾಸ್ಟೆಲ್ ಡೋಬಿ ಬೋಗಯ್ಯ ಬಂದ… “ಸಾರ್ ನಿಮ್ಮನ್ನು ವಾರ್ಡನ್ ಕರೀತಾರೆ” ಎಂದ. ಹೆದರಿ.. ಹೆದರಿ ಹೋದೆ. ವಾರ್ಡನ್ ಶಿವಲಿಂಗಯ್ಯನವರು ನನ್ನನ್ನು ಕೂರಿಸಿ ಒಂದಷ್ಟು ಉಪದೇಶ ಮಾಡಿ, “ನೀವು ಬ್ರಾಹ್ಮಣರು.. ಹೀಗೆಲ್ಲಾ ತಲೆಬುರುಡೆ, ಎಲುಬು, ಜಾದು, ಮೋಡಿ ನಿಮಗೆ ಬೇಡ. ಚೆನ್ನಾಗಿ ಓದಿ ಪಾಸ್ ಮಾಡ್ಕೊಳ್ಳಿ.” ಎಂದ್ರು. “ಹೂಂ..” ಎಂದೆ. ಅವರ ಮುಖ ನೋಡಿದಾಗ ಅವರು ಎಷ್ಟು ಹೆದರಿಕೊಂಡಿದ್ರು ಅಂತ ಗೊತ್ತಾಗ್ತಿತ್ತು… ಈ ಸುದ್ಧಿ ಹಾಸ್ಟೆಲ್‌ನಲ್ಲಿ ಎಲ್ಲರಿಗೂ ಮುಟ್ಟಿ ಹೋಗಿತ್ತು.

ಮತ್ತೊಮ್ಮೆ ನಮ್ಮ ಸಹಪಾಠಿ ರಘುವೀರ ಪುರಾಣಿಕ್ ಎಂಬವ. ಬಹಳ ಸಾಧು ಸ್ವಭಾವ. ಆಗಾಗ ನಮ್ಮ ರೂಂಗೆ ಬರ್ತಿದ್ದ. ಅವನಿಗೆ ಒಂದು ಸೈಕಲ್. ಒಂದು ದಿನ ನಮ್ಮ ರೂಮಿಗೆ ಬಂದವ, ವಾಪಾಸ್ ಹೋಗಲು ಹೊರಟಾಗ ಹಾಸ್ಟೆಲ್‌ನಲ್ಲಿ ನಿಲ್ಲಿಸಿದ್ದ ಅವನ ಸೈಕಲ್ ಕಾಣೆಯಾಗಿತ್ತು. ಅಳಲು ಶುರುಮಾಡಿದ. ಬಹಳ ಕಷ್ಟದಿಂದ ಖರೀದಿಸಿದ್ದ ಸೈಕಲ್ ಕಾಣೆಯಾಗಿತ್ತು. ನಾನೂ ಮೂರ್ತಿಯೂ ರೂಮಿನಿಂದ ಹೊರಗೆ ಬಂದೆವು. ಸೋಮಾರಿಕಟ್ಟೆಯಲ್ಲಿ ಎಲ್ಲರೂ ಸೇರಿದ್ದರು. ನಾನು ಮೊದಲನೇ ಮಹಡಿಯ ಹೊರಗೆ ನಿಂತು ಏರು ಸ್ವರದಲ್ಲಿ ಹೇಳಿದೆ… “ಇವತ್ತು ರಾತ್ರೆಯೊಳಗೆ ಸೈಕಲ್ ಇಲ್ಲಿ ಕಾಣಬೇಕು. ಇಲ್ಲದಿದ್ದರೆ ಸೈಕಲ್ ಕದ್ದವ ರಕ್ತ ಕಾರ್ತಾನೆ..” ಎಂದೆ. ಪುರಾಣಿಕನನ್ನು ನಮ್ಮೊಂದಿಗೇ ನಿಲ್ಲಿಸಿದೆವು. ಸ್ವಲ್ಪ ಹೊತ್ತಲ್ಲಿ ಯಾರೋ ಕಿಟಿಕಿ ಹತ್ತಿರ ಬಂದು, “ಶಂಕರ್ ಸಾರ್.. ಅಲ್ಲೊಂದು ಸೈಕಲ್ ಇದೆ.. ಯಾರದೆಂದು ಗೊತ್ತಿಲ್ಲ” ಎಂದ ಹಾಗಾಯ್ತು. ಸೈಕಲ್ ಹೆಸರು ಹೇಳಿದ ತಕ್ಷಣ ಪುರಾಣಿಕ್ ಓಡಿ ಹೋಗಿ ನೋಡಿದ…. “ ಸೈಕಲ್ ಸಿಕ್ತು… ನನ್ನ ಸೈಕಲ್ ಸಿಕ್ತು…” ಎಂದ. ಎಲ್ಲರಿಗೂ ಖುಷಿಯೋ ಖುಷಿ.. ನನಗೆ ಮಾತ್ರ ಇಂದಿಗೂ, ಈ ಘಟನೆ ನೆನಪಿಗೆ ಬಂದಾಗ ಆಶ್ಚರ್ಯ ಮತ್ತು ಪ್ರಶ್ನಾರ್ಥಕ ಚಿಹ್ನೆ ನನ್ನ ಕಣ್ಣ ಮುಂದೆ!!!

ನಮ್ಮ ಮಹಾರಾಜ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಸ್ವಾಭಿಮಾನ ಮೆಚ್ಚುವಂತಹದು. ಒಮ್ಮೆ ನನ್ನ ಜಾದೂ ಕಾರ್ಯಕ್ರಮ ಏರ್ಪಡಿಸಿದ ಸಂಘವೊಂದು ನನಗೆ ಖರ್ಚಾದ ಹಣ ಕೊಡಲು ಸತಾಯಿಸಿತು. ನಾನು ಆ ಸಂಘದ ಅಧ್ಯಕ್ಷರ ಬಳಿಗೆ ಹೋಗಿ ಸ್ವಲ್ಪ ಖಾರವಾಗಿ ಮಾತಾಡಿದ್ದೆ. ಅದು ಆ ಸಂಘದ ಕಾರ್ಯದರ್ಶಿಗೆ (ಆತ ಸ್ವಲ್ಪ ಗೂಂಡಾ ಥರಾ!) ನನ್ನ ಮೇಲೆ ಸಿಟ್ಟು ಬಂದು .. “ಆ ಭಟ್ಟನಿಗೆ ಅಷ್ಟು ಧೈರ್ಯವೋ.. ನೋಡ್ತೇನೆ” ಎಂದ. ಈ ಸುದ್ಧಿ ನನ್ನ ಕಾಲೇಜಿನ ಕೆಲವು ಸ್ನೇಹಿತರಿಗೆ ಹೇಳಿದ್ದೆ. ಅದು ಗುಸುಗುಸು ಸುದ್ಧಿಯಾಗಿ ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಒಟ್ಟಾದರು! “ಹೇಳಿ ಶಂಕರ್ ಯಾವನ್ರಿ ಆತ… ನಾವ್ ನೋಡ್ಕೋತೀವಿ….” ಅಂದಾಗ, ಗಂಭೀರತೆಯ ಅರಿವು ಸ್ವಲ್ಪ ನನಗಾದ್ದರಿಂದ, ನಾನು ಆತನ ಹೆಸರು ಹೇಳದೇ, “ಛೆ!! ಅದೆಲ್ಲಾ ಏನೂ ಇಲ್ಲ, ಹಾಳಾಗಿ ಹೋಗ್ಲಿ… ಬ್ಯಾಡಾ ಅಲ್ಲಿಗೆ ಬಿಟ್ಬಿಡಿ…” ಅಂದಿದ್ದೆ. ಆದರೂ ತಡಿಲಿಕ್ಕಾಗದೇ, ಅವರೇ ಸುಮಾರಾಗಿ ಊಹಿಸಿ ಆ ಕಾರ್ಯದರ್ಶಿ ಇರುವ ಹಾಸ್ಟೆಲ್‌ಗೆ ಹೋಗಿ ಹೊರಗೆ ನಿಂತು, “ಲೇ ಯಾವನೋ ಅವ್ನು ನಮ್ಮ ಕಾಲೇಜಿನವರಿಗೆ ಹೊಡಿಯೋನು.. ತಾಕತ್ತಿದ್ರೆ ಬಾರ‍್ಲಾ ಹೊರಕ್ಕೆ… ನೋಡೇಬಿಡ್ತೀವಿ..” ಎಂದಾಗ ಆ ಕಾರ್ಯದರ್ಶಿ ಅಲ್ಲಿಂದ ಕಾಲ್ಕಿತ್ತಿದ್ದ!! ಆ ಮೇಲೆ, ಬೇರೆ ಯಾವುದೋ ನೆಪದಲ್ಲಿ ಅವನನ್ನು “ನೋಡ್ಕೊಂಡ್ರು” ಅಂತ ವದಂತಿ ಇತ್ತು. ಹೀಗಿರುವ ‘ಮಹಾರಾಜನ ಸೈನಿಕರೂ’ ಇದ್ದರು.

ಅಂದಿನ ವಿದ್ಯಾರ್ಥಿ ಕ್ಷೇಮಪಾಲಕರಾಗಿದ್ದ ಉ.ಕಾ. ಸುಬ್ಬರಾಯಾಚಾರ್ ನಮಗೆಲ್ಲಾ ತುಂಬಾ ಅಚ್ಚುಮೆಚ್ಚಿನವರು. ಅತ್ಯಂತ ಮೃದು ಸ್ವಭಾವದವರು. ಮುಂದೊಮ್ಮೆ ಅವರ ಮುತುವರ್ಜಿಯಿಂದಾಗಿ ಗಂಗೋತ್ರಿಯಲ್ಲಿ ಮ್ಯಾಜಿಕ್ ಕ್ಲಾಸ್ ಕೂಡಾ ಪ್ರಾರಂಭವಾದ ನೆನಪು. ಏನೇ ಇರಲಿ, ನಮ್ಮ ಮಹಾರಾಜಾ ಕಾಲೇಜು ಎಷ್ಟೋ ಮೇಷ್ಟ್ರು – ಪ್ರೊಫೆಸರ್‌ಗಳನ್ನು, ರಂಗಕರ್ಮಿಗಳನ್ನು, ಸಾಹಿತಿಗಳನ್ನು ರೂಪಿಸಿದಂತೆ ನನ್ನಲ್ಲಿ ಇದ್ದ ಜಾದೂ ಕಲೆಯ ಬೆಳವಣಿಗೆಗೆ ನೀರನ್ನೆರೆದು ಪೋಷಿಸಿದೆ ಎಂಬುದಂತೂ ಸತ್ಯ. ವಿದ್ಯಾಭ್ಯಾಸ ಮುಗಿಸಿ ಊರಿಗೆ ಬಂದಾಗ ಮೈಸೂರಿನಲ್ಲಿ ಮತ್ತು ಬೇರೆ ಊರುಗಳಲ್ಲಿ ನಾನು ನೀಡುತ್ತಿದ್ದ ಜಾದೂ ಕಾರ್ಯಕ್ರಮಗಳ ಸುದ್ದಿ, ಮಾಧ್ಯಮಗಳ ಮೂಲಕ ನನ್ನೂರಿಗೂ ತಲುಪಿ ನಾನೊಬ್ಬ ‘ದೊಡ್ದ ಜಾದೂಗಾರ’ ಎಂಬ ಊರವರ ಹೆಗ್ಗಳಿಕೆ ದೊರೆಯಿತು. ಹಿತ್ತಲಗಿಡವೂ ಕಡೆಗಣಿಸುವಂತಾದ್ದು ಅಲ್ಲ ಎನ್ನುವ ಅರಿವು ಊರಿನವರಿಗೆ ಆಯ್ತೋ ಏನೋ…. “ವಾಸ್ತವಕ್ಕೊಂದು ಕನ್ನಡಿ” ಎನ್ನುವುದು ಇದೇ ಏನು …??

ಮಹಾರಾಜಾ ಕಾಲೇಜಿಗೆ ಮನದಾಳದ ಪ್ರಣಾಮಗಳು.

ನನ್ನ ‘ಮಹಾರಾಜಾ’ ನೆನಪುಗಳಿಂದ ಪ್ರೇರಿತನಾಗಿ ಸಹಪಾಠಿ, ಗೆಳೆಯ ನಾಗನಾಥ್ ಕಿರು ಪ್ರತಿಕ್ರಿಯೆಯನ್ನೇನೋ ಹಾಕಿದ್ದರು. ಅವರ ಹೆಚ್ಚಿನ ನೆನಪುಗಳು ಲೇಖನರೂಪದಲ್ಲಿ ಬರಲೆಂದು ನಾನು ಸತತ ಪ್ರಯತ್ನದಲ್ಲಿದ್ದೇನೆ. (ಅವರು ಬರೆದು ಕೊಟ್ಟಾಗ ಅವಶ್ಯ ಹಾಕುತ್ತೇನೆ) ಏತನ್ಮಧ್ಯೆ ನಾಗನಾಥ್ ಅವರ ಸಂಗ್ರಹದಿಂದ ನಮ್ಮ ಇಂಗ್ಲಿಶ್ ಐಚ್ಛಿಕದವರ ಒಂದು ಸಮೂಹ ಚಿತ್ರವನ್ನು ಕಳಿಸುವ ಕೃಪೆ ಮಾಡಿದರು. ಇದರಲ್ಲಿ ನನ್ನೀ ಜಾಲಾತಾಣದ ಲೇಖನ ಸರಣಿಗಳಲ್ಲಿ ಮಿಂಚಿದ ಕೆಲವು ಹೆಸರುಗಳ ಮೂರ್ತರೂಪರು ಇರುವುದರಿಂದ ಇಲ್ಲೇ ತೆರೆದಿಡುವ ಸಂತೋಷ ನನ್ನದು. ಚಿತ್ರದಲ್ಲಿ ಹಿಂದಿನ ಸಾಲಿನಲ್ಲಿ ಎಡದಿಂದ ನಾಲ್ಕನೆಯವರಾಗಿ (ಸೂಟುಧಾರಿ) ನಿಂತ ನಾಗನಾಥರಿಗೆ ಇಲ್ಲಿ ಪ್ರಥಮ ವಂದನೆ. ಉಳಿದಂತೆ: ಎದುರು ಸಾಲಿನಲ್ಲಿ: ಎಡದಿಂದ ಬಲಕ್ಕೆ – (ಸಹಪಾಠಿ) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, (ಗುರುಗಳಾದ -) ಎಸ್. ಅನಂತನಾರಾಯಣ, ಸಿ.ಡಿ ಗೋವಿಂದರಾವ್, ಜಿ.ಎಸ್. ಮೈಲಾರಿ ರಾವ್, ವಿ. ಎಂ ಪುಟ್ಟಮಾದಪ್ಪ, ಎಂ.ಎನ್ ರಾಮಸ್ವಾಮಿ, ಪುಟ್ಟಸ್ವಾಮಿ ಗೌಡ, (ವಿದ್ಯಾರ್ಥಿಗಳಾದ -) ಬಶೀರ್ ಖಾನ್ ಮತ್ತು ಗಾಯತ್ರಿ. ಮಧ್ಯ ಸಾಲಿನಲ್ಲಿ ಎಡದಿಂದ – ಐದನೆಯವ ಅವ, ಆರನೆಯವ ಎಂ.ಕೆ ಶಂಕರಲಿಂಗೇ ಗೌಡ. ಹಿಂದಿನ ಸಾಲು – ಎಡದಿಂದ ಎರಡನೆಯವ ಪ್ರಕಾಶ ಬಾಪಟ್. ವಿಶೇಷ ಮನವಿ: ಈ ಲೇಖನ ಮಾಲೆ ಓದಿ ಪ್ರೇರಿತರಾದ ಇತರ ‘ಮಹಾರಾಜ’ರೂ, ಈ ಚಿತ್ರದಲ್ಲಿದ್ದೂ ಇದುವರೆಗೆ ಇಲ್ಲಿ ಉಲ್ಲೇಖಗಳಿಗೆ ಸಿಗದ ಇತರ ಸಹಪಾಠಿಗಳೂ ತಮ್ಮ ಗುರುತು ಹೇಳಿ, ನೆನಪುಗಳನ್ನು ಪೋಣಿಸಿ ಕೊಟ್ಟರೆ ಪ್ರಕಟಿಸುವ ಸಂತೋಷ ನನಗೆ ಇದ್ದೇ ಇದೆ.

– ಅಶೋಕವರ್ಧನ