ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು
ಅಧ್ಯಾಯ ಅರವತ್ತು [ಮೂಲದಲ್ಲಿ ೩೪]

“ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ ಸಮರಸ, ಸಮಸತ್ತ್ವವಾಗುತ್ತವೆ; ಫಲಿಸುತ್ತವೆ.” – ವಿಸೀ

ರಾಜ್ಯ ಸರಕಾರದಿಂದ ಪ್ರಶಸ್ತಿ ಪಡೆದ (೧೯೬೬) ಸಾಹಿತಿಗಳಿಗೆ ಒಂದು ಅಭಿನಂದನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಂಗಣದಲ್ಲಿ ಏರ್ಪಡಿಸಿದ್ದರು (೧೦-೩-೧೯೬೬). ಆಗ ಭಾಷಣ ಮಾಡಲು ಆಹ್ವಾನಿತರಾದವರಲ್ಲಿ ನಾನೂ ಒಬ್ಬ. ಸಭೆಗೆ ಆಗಮಿಸಿದ್ದ ಮಾಸ್ತಿಯವರನ್ನು ಪರಿಷತ್ತಿನ ಅಧ್ಯಕ್ಷರು ವೇದಿಕೆಗೆ ಕರೆದೊಯ್ದು ನಾಲ್ಕು ಆಶೀರ್ವಚನ ಹರಸಬೇಕೆಂದು ಕೋರಿದರು. ಸಮಾರಂಭ ಮುಗಿದ ತರುವಾಯ ಮಾಸ್ತಿಯವರು ನನ್ನೆಡೆಗೆ ಬಂದು ಮೆಲು ಮಾತಿನಲ್ಲಿ, “ನಿಮ್ಮ ಯೋಜನೆ ಸರಿಯಾದದ್ದು, ಔಚಿತ್ಯಪೂರ್ಣವಾದದ್ದು” ಎಂದರು. ಆದದ್ದಿಷ್ಟು: ಆರು ಸಾಹಿತಿಗಳಿಗೆ ಅಂದು ಶುಭಾಶಂಸನೆ. ಆರು ಜನ ಭಾಷಣಕಾರರು. ಇವರಲ್ಲಿ ಕೆಲವರಿಗೆ ವಿಷಯ ಸರಿಯಾಗಿ ತಿಳಿಯದೇ ಅಥವಾ ತಿಳಿದದ್ದನ್ನು ಹೇಳುವಾಗ ಭಾಷೆ ಸರಿಯಾಗಿ ಹೊಂದದೇ ರಸಭಂಗವಾಗಿತ್ತು. ನಾನು ಹೇಳಬೇಕಾದುದನ್ನು ಬರೆದುಕೊಂಡು ಹೋಗಿ ಓದಿದ್ದೆ.

“ನೀವು ನಮ್ಮ ‘ಜೀವನ’ ಪತ್ರಿಕೆಗೆ ಹಿಂದೆ ಕತೆಗಳನ್ನು ಬರೆಯುತ್ತಿದ್ದವರಲ್ಲವೇ?” ಮಾಸ್ತಿಯವರ ಮಾತು. “ಹೌದು ಸ್ವಾಮೀ.” ಇದು ೧೯೫೧-೫೨ರ ಮಾತು. ಅವರ ಪ್ರಖರ ಜ್ಞಾಪಕ ಶಕ್ತಿ ನಿಜವಾಗಿಯೂ ಅದ್ಭುತ. ಇಲ್ಲಿಗೇ ಮುಗಿಯಲಿಲ್ಲ. “ನೀವು ಮಡಿಕೇರಿಯವರು, ತಿಮ್ಮಪ್ಪಯ್ಯನವರ ಮಗ. ಈಗ ಇಲ್ಲೇ ಕೆಲಸದಲ್ಲಿದ್ದೀರೆಂದು ಕೇಳಿದೆ. ಬಿಡುವು ಮಾಡಿಕೊಂಡು ಮನೆಗೆ ಬನ್ನಿ. ತಿಮ್ಮಪ್ಪಯ್ಯನವರು ಚೆನ್ನಾಗಿದ್ದಾರಾ? ಈಗಲೂ ಸೈಕಲ್ ಬಿಡುತ್ತಾರಾ?” ಅವರ ಈ ಸಹಜ ವಿನಯ ಸೌಜನ್ಯಗಳಿಗೆ ಮಾರುಹೋದೆ. ಅವರ ಪರಿಚಿತ ಸಹಸ್ರರಲ್ಲಿ ದೂರದ ಅಂಚಿನಲ್ಲಿದ್ದ ನಮ್ಮ ವಿಷಯದ ಅವೆಷ್ಟು ಬಿಡಿ ವಿವರಗಳ ನೆನಪು ಅವರಿಗೆ! ಆ ವೇಳೆಗೆ ನಾನು ಬೆಂಗಳೂರಿನಲ್ಲಿ ನೆಲಸಿ ಒಂದು ವರ್ಷ ಸಂದಿತ್ತು. ನನ್ನ ಮನೆ ಮಾಸ್ತಿಯವರ ಮನೆಯ ಸಮೀಪದಲ್ಲಿಯೇ ಇದ್ದರೂ ಅಳುಕಿನಿಂದ ಅವರನ್ನು ನೋಡಲು ಅದುವರೆಗೂ ಹೋಗಿರಲಿಲ್ಲ. ಚಿಕ್ಕಂದಿನಿಂದಲೂ ನಾನು ಮಾಸ್ತಿ, ಕಾರಂತ, ಸಿಕೆವಿ, ವಿಸೀ ಮೊದಲಾದ ಮಹನೀಯರ ಉಜ್ವಲ ಭಾಷಣಗಳನ್ನು ಕೇಳಿ ಅವರ ವಿಚಾರಧಾರೆಗೂ ಕನ್ನಡದ ಸೊಗಸಿಗೂ ಮಾರುಹೋಗಿದ್ದೆ; ಅವರ ಕೃತಿಗಳನ್ನು ಓದಿ ಪ್ರಭಾವಿತನಾಗಿದ್ದೆ. ಜೊತೆಯಲ್ಲೇ ಅವರೆಲ್ಲರೂ ನನಗೆ ಅತಿ ಅಲಭ್ಯರು ಎಂಬ ಭಾವವೂ ಬೆಳೆದು ಬಂದಿತ್ತು.

ಮುಂದಿನ ಆದಿತ್ಯವಾರ ಅವರ ಮನೆಗೆ ಹೋದೆ. ನಡುಕೋಣೆಯಲ್ಲಿ ಮುದ್ರಿತ ಫಾರ್ಮುಗಳ ರಾಶಿ ಮಧ್ಯೆ ಮಾಸ್ತಿ ತುದಿಗಾಲಿನಲ್ಲಿ ಕುಳಿತಿದ್ದರು. ಹುಲುಸಾದ ಬೆಳೆ ಬಂದಿದೆ; ಕಟಾವಾಗಿ ಕಣಕ್ಕೆ ತಂದಿದ್ದಾರೆ; ಸುತ್ತಲೂ ಮೆದೆಯೊಟ್ಟಿದ್ದಾರೆ; ನಡುವೆ ತೃಪ್ತ ರೈತ ಕುಳಿತಿದ್ದಾನೆ. ಇಂಥ ಒಂದು ಪೂರ್ಣ ದೃಶ್ಯವನ್ನು ಕಂಡೆ. ಒಂದೊಂದು ಒಟ್ಟಿನಿಂದಲೂ ಒಂದೊಂದು ಫಾರ್ಮನ್ನು ಅವರು ಕ್ರಮಬದ್ಧವಾಗಿ ತೆಗೆಯುವರು, ಓರಣವಾಗಿ ಜೋಡಿಸುವರು, ಅಲ್ಲಿಗೆ ಒಂದು ಪುಸ್ತಕವಾಯಿತು. ಅದನ್ನು ಎಚ್ಚರಿಕೆಯಿಂದ ಬೇರೆಯಾಗಿ ಇಡುವರು. ನನ್ನನ್ನು ಕಂಡವರೇ ಎದ್ದು ನಿಂತು, “ಬಂದಿರಾ! ಬನ್ನಿ” ಎಂದು ಸ್ವಾಗತಿಸಿ ಒಳ ಹಜಾರಕ್ಕೆ ಕರೆದೊಯ್ದರು. ನನ್ನನ್ನು ಮೊದಲು ಕೂರುವಂತೆ ಮಾಡಿ ಮತ್ತೆ ತಾವು ಕುಳಿತರು. ಪಕ್ಕದ ಗೋಡೆಯಲ್ಲಿ ರವೀಂದ್ರನಾಥ ಠಾಕೂರರ ಸ್ವಹಸ್ತ ಲಿಖಿತ Thou hast made me known to friends whom I knew not… ಚರಣಕ್ಕೆ ಚೌಕಟ್ಟು ಕಟ್ಟಿ ತೂಗಲಾಗಿತ್ತು. ಸ್ವತಃ ಕವಿಗಳೇ ಅದನ್ನು ಮಾಸ್ತಿಯವರಿಗೆ ಬರೆದು ಕೊಟ್ಟುದಂತೆ.

ಹಿಂದಿನ ದಿನಗಳನ್ನು ಮಾಸ್ತಿಯವರು ಸ್ಮರಿಸಿಕೊಂಡರು. ‘ಚಿಕ್ಕವೀರರಾಜೇಂದ್ರ’ ಕಾದಂಬರಿಯನ್ನು ಬರೆಯುವ ಮುನ್ನ ಮಡಿಕೇರಿಗೆ ತಾವು ಹೋದದ್ದು; ಅಪ್ಪುಕಳದ ಅರಮನೆ, ಉಡುವತ್ತುಮೊಟ್ಟೆ ಇಲ್ಲೆಲ್ಲ ನನ್ನ ತಂದೆಯವರ ನೆರವಿನಿಂದ ಅಂಡಲೆದು ವಿಷಯ ಸಂಗ್ರಹ ಮಾಡಿದ್ದು ಮುಂತಾದವನ್ನೆಲ್ಲ ಸಂತೋಷದಿಂದ ಹೇಳಿದರು. “ತಿಮ್ಮಪ್ಪಯ್ಯನವರಿಗೆ ಹೇಳಿ, ಈ ಪ್ರಾಯದಲ್ಲಿ (೬೭) ಅವರು ಸೈಕಲ್ ತುಳಿಯುವುದು ಒಳ್ಳೆಯದಲ್ಲ, ನಾನು ಹೇಳಿದ್ದೇನೆ ಎಂದು..

ನಾನು ಎದ್ದೆ, “ನಿಮಗೆ ನನ್ನಿಂದ ಏನಾದ್ರೂ ಆಗಬೇಕಾಗಿದ್ದರೆ ಹೇಳಿ, ಕರಡು ತಿದ್ದುವುದು, ಮುದ್ರಣಾಲಯಕ್ಕೆ ಹೋಗುವುದು ಇವನ್ನೆಲ್ಲ ನಾನು ಸಂತೋಷವಾಗಿ ಮಾಡಬಲ್ಲೆ.” ಅವರು ತಮ್ಮ ಆತ್ಮೀಯ ಮಲ್ಲಿಗೆ ಮೊಗ್ಗು ಅರಳುವ ನಗು ಸೂಸಿ ನುಡಿದರು, “ಇವೆಲ್ಲವೂ ನನಗೆ ಬಲು ಪ್ರಿಯವಾದ ಕೆಲಸಗಳು. ಹೊತ್ತು ಹೋಗುತ್ತದೆ. ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ, ನೋಡಿ.” “ಇಲ್ಲ, ಇಲ್ಲ. ಈ ಕೆಲಸಗಳಿಂದ ನಿಮಗೆ ಬಿಡುವು ದೊರೆತರೆ ಇನ್ನಷ್ಟು ಸೃಜನಾತ್ಮಕ ಕಾರ್ಯ ನಡೆಸಬಹುದು. ಆ ದೃಷ್ಟಿಯಿಂದ ಹಾಗೆ ಹೇಳಿದೆ.” “ಇವೆಲ್ಲವೂ ಒಂದೇ ಸೃಜನಾತ್ಮಕ ಕಾರ್ಯದ ವಿವಿಧ ಭಾಗಗಳು. ಇವು ಚೆನ್ನಾಗಿದ್ದರೆ ತಾನೇ ಅದು ಚೆನ್ನ?” ಅವರ ಮಾತೇ ಹಾಗೆ, ತೋರ್ಕೆಗೆ ಬಲು ಸರಳ. ಯೋಚಿಸಿದಷ್ಟೂ ಅದರಿಂದ ಹೆಚ್ಚಿನ ಅರ್ಥ ಸ್ಫುರಣವಾಗುತ್ತದೆ. ಎಚ್ಚೆಸ್ಕೆಯವರೆಂದಂತೆ, ಮಾಸ್ತಿಯವರನ್ನು ಮೊದಲ ಬಾರಿಗೆ ನೋಡಿದ ಯಾರಿಗಾದರೂ ಇವರ ಸಾಹಿತ್ಯ ಸಿದ್ಧಿಯ ಅರಿವಾಗುವುದಿಲ್ಲ. ಇವರ ಲೇಖನಿಗೂ ಮೂರ್ತಿಗೂ ಅಷ್ಟೊಂದು ವ್ಯತ್ಯಾಸ.”

ಇನ್ನೆರಡು ವಾರ ಕಳೆದ ಮೇಲೆ ಪುನಃ ಅವರ ಮನೆಗೆ ಹೋದೆ, “ನನ್ನಿಂದ ಏನಾದರೂ ಕೆಲಸ ಆಗಬೇಕೆ” ಎಂದು ಕೇಳಲು. ಅವರು ಒಂದು ಕ್ಷಣ ಯೋಚಿಸಿದರು. ನೇರವಾಗಿ ಮಾತಾಡಿದರು, “ಒಂದು ವಿಚಾರ ನಾನು ನಿಮ್ಮಲ್ಲಿ ಪ್ರಸ್ತಾವಿಸಿದರೆ ಅದು ಸರಿಯೋ ಅಲ್ಲವೋ ತಿಳಿಯದು.” “ನೀವು ಅಂಥ ಯಾವ ಸಂಕೋಚವನ್ನೂ ನನ್ನ ವಿಷಯದಲ್ಲಿ ಇಟ್ಟುಕೊಳ್ಳಬೇಡಿ. ನನ್ನಿಂದ ಆಗುವಂಥ ಕೆಲಸವಾದರೆ ಹೇಳಿ, ಖಂಡಿತ ಸಂತೋಷದಿಂದ ಮಾಡಲು ಪ್ರಯತ್ನಿಸುತ್ತೇನೆ.” “ನನ್ನ ಜೀವನ ಬೆಳೆದು ಬಂದ ಬಗೆಯನ್ನು ಬರೆಯಬೇಕೆಂದು ಹಿಂದೊಮ್ಮೆ ಮನಸ್ಸಾಯಿತು. ನಾನು ಹೇಳಿದುದನ್ನು ಬರೆದುಕೊಳ್ಳುವ ಮಹನೀಯರೊಬ್ಬರು ಅಂದು ಸಿಕ್ಕಿದ್ದರು. ಆದರೆ ಮಧ್ಯೆ ವಿಘ್ನ ಬಂದು ಕೆಲವು ವರ್ಷಗಳ ಹಿಂದೆ ಆ ಕೆಲಸ ನಿಂತುಹೋಯಿತು. ಈಗ ಆ ಕೆಲಸವನ್ನು ನೀವು ಮುಂದುವರಿಸುವುದಾದರೆ ಬಹಳ ಸಂತೋಷ.” “ಸಂತೋಷದಿಂದ ಮಾಡುತ್ತೇನೆ ಸ್ವಾಮೀ.” “ಇಲ್ಲಪ್ಪ, ನೀವು ಯೂನಿವರ್ಸಿಟಿ ಪ್ರೊಫೆಸರ್. ನಾನು ಹೇಳಿದ್ದನ್ನು ನೀವು ಬರೆದುಕೊಳ್ಳುವುದೆಂದರೇನು! ಇದು ಸರಿಯೇ? ನಾನೇನೋ ನೀವು ಕೇಳಿದ್ದಕ್ಕೆ ಹೇಳಿಬಿಟ್ಟೆ.” “ಈ ಕೆಲಸವನ್ನು ನನಗೆ ನೀವು ಒಪ್ಪಿಸಿರುವುದೇ ಅನುಗ್ರಹ ಎಂದು ತಿಳಿಯುವವ ನಾನು. ಆದ್ದರಿಂದ ಈ ವಿಚಾರ ತಾವು ಎಳ್ಳಷ್ಟೂ ಸಂಕೋಚಪಡಬಾರದು. ಒಂದೇ ವಿಚಾರ. ಕಾಲೇಜು ಇರುವ ದಿವಸಗಳಂದು ನಾನು ರಾತ್ರಿ ವೇಳೆಯಲ್ಲೂ ರಜಾ ದಿವಸಗಳಲ್ಲಿ ನೀವು ಹೇಳಿದ ವೇಳೆಯಲ್ಲೂ ಬಂದು ಬರೆದುಕೊಳ್ಳುತ್ತೇನೆ.” “ಸಂಜೆ ಹೊತ್ತು ನೀವು ದಣಿದು ಮನೆಗೆ ಮರಳುತ್ತೀರಿ. ನನಗೂ ಕ್ಲಬ್ ಇದೆ. ರಜಾ ದಿನಗಳಲ್ಲಿ ಮಾತ್ರ ನಡೆಯಲಿ, ಹೇಳಿ. ನಿಧಾನವಾಗಿಯೇ ಮುಂದುವರಿಯಲಿ. ಅಪರಾಹ್ನ ೩ ಗಂಟೆಗೆ ಆರಂಭಿಸೋಣವೇ?” “ಆಗಬಹುದು. ಮುಂದಿನ ಆದಿತ್ಯವಾರ ಬರುತ್ತೇನೆ.” ಮಹತ್ತನ್ನು ಸಾಧಿಸಿದಾಗ ಒದಗುವ ಉತ್ಸಾಹದ ನಡೆಯಿಂದ ಪುಟಿಯುತ್ತ ಮನೆಗೆ ಮರಳಿದೆ.

ಮುಂದಿನ ಆದಿತ್ಯವಾರ. ೨ ಗಂಟೆ ೫೯ ಮಿನಿಟಿಗೆ ಸರಿಯಾಗಿ ನಾನು ಅವರ ಗೇಟಿನ ಬಳಿಗೆ ಹೋದೆ. ಹೊರ ಜಗಲಿಯಲ್ಲಿ ಬಾಗಿಲಿನ ಹಿಂದೆ ನನ್ನ ಬರವನ್ನೇ ಕಾಯುತ್ತ ನಿಂತಿದ್ದರು ಅಜ್ಜಯ್ಯ. “ನಮಸ್ಕಾರ ದಯಮಾಡಿ” ಅವರದೇ ಮೊದಲ ಮಾತು. ನಾನು ಚಪ್ಪಲಿಗಳನ್ನು ಜಗಲಿಯ ಮೂಲೆಯಲ್ಲಿ ಇಡಲು ಹೋದಾಗ ಅವರೆಂದರು, “ಬೇಡಿ, ಇಲ್ಲಿಡಬೇಡಿ. ಪೇಟೆ ಕದ್ದು ಬಿಡುತ್ತಾರೆ. ಒಳಗೇ ಇಡುವಿರಂತೆ.” ನಡುಮನೆಯಲ್ಲಿ ಬಾಗಿಲ ಮರೆಯಲ್ಲಿ ಇಟ್ಟೆ. ನಾನುಮುಂದೆ ನಡೆಯಬೇಕು, ಅವರು ಹಿಂದೆ ಬರಬೇಕು – “ಭಕ್ತಜನ ಮುಂದೆ ನೀನವರ ಹಿಂದೆ” ಎಂಬ ದಾಸವಾಣಿಯ ಪ್ರತ್ಯಕ್ಷರೂಪವದು. ನಡುಮನೆ ದಾಟಿ ಒಳಕೋಣೆ ಹಾದು ಮೆಟ್ಟಲು ಏರಿ ಮಹಡಿ ತಲಪಿದ್ದಾಯಿತು. ಅಲ್ಲೆಲ್ಲ ಪುಸ್ತಕಗಳ ರಾಶಿ. ಬೀರುಗಳಲ್ಲಿ ಓರಣವಾಗಿಟ್ಟ ಹಲವಾರು ಗ್ರಂಥಗಳು. ಒಂದು ಸೋಫದ ಮೇಲೆ ನನ್ನನ್ನು ಕೂರಲು ಹೇಳಿದರು. ಅವರು ನಿಂತೇ ಇರುವಾಗ ನಾನು ಹೇಗೆ ಕೂರಲಿ? ಭುಜ ತಟ್ಟಿ ಕೂರಿಸಿ ಎದುರಿಗೆ ಒಂದು ಕಾಲುಮಣೆ ತಂದಿಟ್ಟರು. ಹಿಂದೆಂದೋ ಬರೆಸಿದ್ದ ಸುಮಾರು ೪೦ ಪುಟಗಳಷ್ಟು ವಿಷಯವನ್ನು ನನಗೆ ಕೊಟ್ಟು, “ಹೀಗೆ ಮೇಲಿಂದ ಮೇಲೆ ನೋಡಿ. ಇದೇ ಧಾಟಿಯಲ್ಲಿ ಮುಂದುವರಿಸಬೇಕು” ಎಂದರು. ಬರೆಯುವ ಕಾಗದ ಸಿದ್ಧವಾಯಿತು. ಮುಂದಿನ ಐದು ನಿಮಿಷಗಳಲ್ಲಿ ಅವರು ತಯಾರಾಗಿ ನನ್ನ ಎದುರಿನ ಕುರ್ಚಿಯಲ್ಲಿ ಕುಳಿತರು. ವೀರನಾರಾಯಣನೆ ಕವಿ! ಲಿಪಿಕಾರ ಮಾತ್ರ ಕುಮಾರವ್ಯಾಸ ಅಲ್ಲ!

ಈ ಘಟನೆಯನ್ನು ಕುರಿತು ‘ಭಾವ’ ಗ್ರಂಥದ ಮುನ್ನುಡಿಯಲ್ಲಿ ಮಾಸ್ತಿಯವರು ಬರೆದಿರುವ (೧೭-೧೨-೧೯೬೮) ಮಾತುಗಳಿವು, “ಮೂರು ವರ್ಷಗಳ ಹಿಂದೆ ಗೆಳೆಯ ಶ್ರೀ ಜಿ.ಟಿ. ನಾರಾಯಣರಾವ್ ಇದರ ಪ್ರಸ್ತಾಪ ತೆಗೆದು ನಾನು ಹೇಳುವುದಾದರೆ ತಾವು ಬರೆದುಕೊಳ್ಳುವುದಾಗಿ ಮಾತುಕೊಟ್ಟರು. ತುಂಬ ಹಿಂದು ಮುಂದು ನೋಡಿ ಇವರು ಈ ಕೆಲಸವನ್ನು ಮಾಡುವುದನ್ನು ನಾನು ಒಪ್ಪಿದೆನು. ವಾರದಲ್ಲಿ ಒಂದು ದಿನ, ಭಾನುವಾರ, ಕೆಲವು ವಾರ ಮಧ್ಯೆ ಬರಬಹುದಾದ ರಜಾದಿನ, ತಪ್ಪದೆ ಬಂದು ಹೇಳಿದ್ದನ್ನು ಬರೆದುಕೊಂಡು ಈ ಮಿತ್ರರು ಹಲವು ತಿಂಗಳಲ್ಲಿ ಪುಸ್ತಕದ ಹಸ್ತಪ್ರತಿಯ ಆರು ನೂರು ಪುಟವನ್ನು ಸಿದ್ಧ ಮಾಡಿದರು.”

ಅವರು ಅರೆತೆರೆದ ಕಣ್ಣುಗಳಿಂದ ಧ್ಯಾನಸ್ಥರಾಗಿರುವಂತೆ ಕುಳಿತಿರುತ್ತಿದ್ದರು. ದೃಷ್ಟಿ ಅಂತರ್ಮುಖಿಯಾಗಿ ಹಿಂದೆ ನಡೆದ ಸಂಗತಿಗಳನ್ನು, ಚಲನ ಚಿತ್ರದಲ್ಲಿ ಕಾಣುವಂತೆ, ನೋಡುತ್ತಿದ್ದಿರಬೇಕು. ಬಾಯಿ ಆ ಚಿತ್ರಕ್ಕೆ ಸರಿಹೊಂದುವ ಮಾತನ್ನು ಸಾವಕಾಶವಾಗಿ ಪೋಣಿಸುತ್ತಿತ್ತು. ಅರ್ಥಕ್ಕೆ ಲೋಪ ಬರದಂತೆ ಬರೆದುಕೊಳ್ಳಲು ಅನುಕೂಲಿಸುವಂತೆ ವಾಕ್ಯಗಳನ್ನು ಒಡೆದು ಹೇಳುವರು. ಸ್ವಲ್ಪ ತಡೆದು ಮುಂದುವರಿಸುವರು. ನಾನು ತಲೆ ಅಡಿ ಹಾಕಿ ಲೆಕ್ಕಣಿಕೆಯನ್ನು ಹರಿಯಬಿಡುತ್ತಿದ್ದೆ. ಇನ್ನೊಮ್ಮೆ ಹೇಳಿ ಎಂದು ಕೇಳುವ ಅವಕಾಶವೇ ಒದಗುತ್ತಿರಲಿಲ್ಲ – ಅಷ್ಟರ ಮಟ್ಟಿಗೆ ಪರೇಂಗಿತಜ್ಞರು ಮಾಸ್ತಿಯವರು. ಇನ್ನು ಆ ವಾಕ್ಯಗಳೋ ಸಹಜವಾಗಿ ಒಪ್ಪಪಡೆದು ಪೂರ್ಣ ಸಿದ್ಧವಾಗಿ ಕೋದ ಶಬ್ದ ಮುತ್ತುಗಳ ಸುಂದರ ಮಾಲೆಗಳೇ ಸರಿ. ಅವು ತಾವೇ ತಾವಾಗಿ ಹೊರಹೊಮ್ಮಬೇಕು. ಠಾಕೂರರ ಮಾತು, This little flute of a reed thou hast carried over hills and dales, and has breathed through it melodies eternally new ಇದರ ಪೂರ್ಣ ಅರ್ಥ ಮಾಸ್ತಿಯವರ ಸಮ್ಮುಖದಲ್ಲಿ ನನಗೆ ನಿರಂತರವಾಗಿ ಆಗುತ್ತಿತ್ತು. ‘ಪದವಿಟ್ಟಳುಪದೊಂದಗ್ಗಳಿಕೆ’ಯನ್ನು ನಾನು ಪ್ರತ್ಯಕ್ಷ ಕಂಡದ್ದು ಅಲ್ಲಿ. ಬಿಡು ವೇಳೆಯಲ್ಲಿ ನಾನು ಕೇಳಿದ್ದುಂಟು, “ಇದರ ರಹಸ್ಯವೇನು?” ಎಂದು. “ಮೊದಲು ಅನುಭವ, ಮತ್ತೆ ಮನದಲ್ಲಿ ಅದರ ಮಂಥನ ಸಾಕಷ್ಟು ಆಗಿರುತ್ತದೆ, ನಾನು ನಂಬಿರುವ ದೈವ ಅಪ್ಪಣೆ ಕೊಡಿಸಿದಂತೆ ಮಾತು ಹೊರಡುತ್ತದೆ.”

‘ಭಾವ’ದ ಮೂರನೆಯ ಸಂಪುಟದಲ್ಲಿ ಇದನ್ನು ಮಾಸ್ತಿಯವರೇ ವಿವರಿಸಿದ್ದಾರೆ: “ಬರಬರುತ್ತ ನನ್ನ ಮನಸ್ಸಿಗೆ ನನ್ನ ಒಂದೊಂದು ಉಸಿರೂ ನನಗೆ ದೈವದ ಅನುಗ್ರಹದಿಂದ ಬರುತ್ತಿದೆ, ನನ್ನ ಒಂದೊಂದು ಎಣಿಕೆಯೂ ಅದೇ ಮೂಲದಿಂದ ಬರುತ್ತಿದೆ, ಮಾತೆಲ್ಲ ಬರುವುದೂ ಅಲ್ಲಿಂದಲೇ, ಎಲ್ಲ ಕ್ರಿಯೆಯ ಪ್ರೇರಣೆ ಅಲ್ಲಿಂದಲೇ ಬರುತ್ತಿದೆ ಎನ್ನುವುದು ಮನದಟ್ಟಾಯಿತು.”

‘ಭಾವ’ವನ್ನು ಬರೆದುಕೊಳ್ಳಲು ಅವರು ನನಗೆ ಹೇಳುತ್ತಿದ್ದಾಗ ಸಾಮಾನ್ಯವಾಗಿ ಅವರ ಮುಖದ ಮೇಲೆ ವಿಶೇಷ ಪರಿವರ್ತನೆಯನ್ನಾಗಲೀ ಭಾವವನ್ನಾಗಲೀ ನಾನು ಕಾಣುತ್ತಿರಲಿಲ್ಲ. ಆದರೆ ಎರಡು ಸಲ ವಿಶೇಷವಾಗಿ ನಾನು ಗಮನಿಸಿದ ಉದ್ವೇಗವನ್ನು ಇಲ್ಲಿ ಉಲ್ಲೇಖಿಸಬೇಕು. ಮೊದಲನೆಯದು ಅವರ ದೊಡ್ಡ ಸೋದರಮಾವ ವೆಂಕಟರಾಮ ಅಯ್ಯಂಗಾರ್ಯರನ್ನು ಕುರಿತ ನೆನಪು. ಮಾಸ್ತಿಯವರ ವಿದ್ಯಾಭ್ಯಾಸ ನಡೆದದ್ದು ತೀರ ಬಡತನದಲ್ಲಿ. ಬಲು ಸುಟಿಯೂ ಬುದ್ಧಿವಂತನೂ ಆಗಿದ್ದ ಈ ಹುಡುಗ ಜೀವನದಲ್ಲಿ ಬಹಳ ಎತ್ತರ ಏರುತ್ತಾನೆ ಎಂದು ಹಿರಿಯರಿಗೆ ಈತನಲ್ಲಿ ಅಪಾರ ಅಭಿಮಾನ, ವಿಶ್ವಾಸ. ವೆಂಕಟರಾಮ ಅಯ್ಯಂಗಾರ್ಯರು ಪೊಲೀಸ್ ಜಮೆದಾರ್. ಬರುತ್ತಿದ್ದ ಪಗಾರದಲ್ಲಿ ಅವರ ಸಂಸಾರವನ್ನೇ ನೆಮ್ಮದಿಯಿಂದ ಸುಧಾರಿಸಿಕೊಂಡು ಹೋಗುವುದು ಕಷ್ಟಕರವಾಗಿದ್ದಾಗ ಅಳಿಯನ ವಿದ್ಯಾಭ್ಯಾಸಕ್ಕೂ ಈ ದಂಪತಿಗಳು ಅಷ್ಟಷ್ಟು ಹಣವನ್ನು ಪೂರೈಸುತ್ತಿದ್ದುದು ಸಾಮಾನ್ಯ ತ್ಯಾಗವೇನಲ್ಲ. ಮೈಸೂರಿನಲ್ಲಿ ವಾರಾನ್ನ ನಡೆಸಿ ಈತನ ವಿದ್ಯಾರ್ಜನೆ ನಡೆಯುತ್ತಿತ್ತು. “ಶಾಲೆಯಲ್ಲಿ ತರಗತಿಗೆ ಫಸ್ಟ್ ಆದೆನಾದರೂ… ಫ್ರೀಶಿಪ್ ಸಿಕ್ಕದ್ದರಿಂದ ನಾನು ಮಾವ ವೆಂಕಟರಾಮ ಅಯ್ಯಂಗಾರ್ಯರಿಗೆ ಒಂದು ಹೊರೆ ಆದೆನು. ಮಾವನಿಗೆ ಈ ಹೊರೆಯನ್ನು ಹೊರುವುದು ಸುಲಭವಾಗಿರಲಿಲ್ಲ. ಅವರ ತಮ್ಮ, ನನ್ನ ಚಿಕ್ಕ ಸೋದರಮಾವ, ಬೆಂಗಳೂರಿನಲ್ಲಿ ಓದುತ್ತ ಇದ್ದುದರಿಂದ ಅಲ್ಲಿಗೆ ತಿಂಗಳು ಸ್ವಲ್ಪ ಹಣ ಹೋಗಬೇಕಾಗಿತ್ತು. ಹೀಗಾಗಿ ನನ್ನ ಹಿರಿಯ ಮಾವ ತಮ್ಮ ಸಣ್ಣ ಸಂಬಳದಿಂದ ದೊಡ್ಡ ಒಂದು ಭಾಗವನ್ನು ನಮ್ಮ ವಿದ್ಯೆಗಾಗಿ ವೆಚ್ಚ ಮಾಡಬೇಕಾಯಿತು. ಆಗ ನನಗೆ ಇದು ಅಷ್ಟಾಗಿ ಮನಮುಟ್ಟಲಿಲ್ಲ. ಈಗ ಮುಟ್ಟುತ್ತಿದೆ. ಬರುತ್ತಿದ್ದ ಇಪ್ಪತ್ತು ರೂಪಾಯಿಯಲ್ಲಿ ಈ ನನ್ನ ಮಾವ ಏನಿಲ್ಲವೆಂದರೂ ಆರೂವರೆ ರೂಪಾಯಿಯಷ್ಟು ಹಣವನ್ನು ನನಗೆ ತನ್ನ ತಮ್ಮನಿಗೆ ತಿಂಗಳು ತಿಂಗಳೂ ಕಳುಹಿಸುತ್ತಿದ್ದರಲ್ಲ! ಇವರು ವಾತ್ಸಲ್ಯ ತೋರಿದರು: ತಮ್ಮನಿಗೆಂದು, ಸೋದರಳಿಯನಿಗೆಂದು ಈ ದೊಡ್ಡ ರೀತಿಯಲ್ಲಿ ನಡೆದರು. ಆದರೆ ಗಂಡ ಹೀಗೆ ನಡೆದುಕೊಂಡರೆ ಅವರ ಹೆಂಡತಿ, ನನ್ನ ಸೋದರತ್ತೆ, ಅದನ್ನು ಒಪ್ಪಿಕೊಂಡು ಸಮಾಧಾನವಾಗಿ ಇದ್ದರಲ್ಲ. ಇದನ್ನು ನೆನೆದರೆ ನನಗೆ ಆ ಗಂಡ ಎಷ್ಟು ಹಿರಿಯ ಸ್ವಭಾವದ ಮನುಷ್ಯ, ಅವರ ಈ ಹೆಂಡತಿ ಅಷ್ಟೇ ಹಿರಿಯ ಸ್ವಭಾವದ ಸ್ತ್ರೀ ಅನ್ನಿಸುತ್ತದೆ. ನಾನೀಗ ವಯಸ್ಸಾದ ಮನುಷ್ಯ – ಅವರ ದಿನ ಮುಗಿದು ಅವರಿಬ್ಬರೂ ದೇವರ ಸನ್ನಿಧಿಯನ್ನು ಸೇರಿದ್ದಾರೆ. ನನ್ನ ನಮನದಿಂದ ಅವರಿಗೆ ಆಗಬೇಕಾದದ್ದು ಏನೂ ಇಲ್ಲ. ಆದರೂ ಇಲ್ಲಿ ಈ ಕೃತಜ್ಞತೆಯನ್ನು ನಮನವನ್ನು ನನ್ನ ತೃಪ್ತಿಗಾಗಿ ಒಪ್ಪಿಸುತ್ತೇನೆ. ವಾತ್ಸಲ್ಯಮೂರ್ತಿ ಆ ಮಾವ, ತ್ಯಾಗರೂಪಿಣಿ ಆ ಅತ್ತೆ, ನನ್ನ ಮನಸ್ಸಿಗೆ ಲೋಕವನ್ನು ಕಾಯುವ ದೈವ ಒಂದಿದೆ ಎನ್ನುವುದಕ್ಕೆ ಪ್ರಮಾಣವಾಗಿ ನೆನಪಾಗಿ ಉಳಿದಿದ್ದಾರೆ. ಆ ಮಾವನಿಗೆ ನಮೋ! ಆ ಅತ್ತೆಗೆ ನಮೋ!”

ಎರಡನೆಯದು ಅವರ ತಾತ ಕೊನೆಯುಸಿರೆಳೆದುದನ್ನು ಹೇಳಿದಾಗ. “ಹತ್ತೇ ನಿಮಿಷದ ಹಿಂದೆ ಎದ್ದು ಕುಳಿತು ಆಚಾರವಾಗಿ ಜಲಶಂಕೆ ತೀರಿಸಿಕೊಂಡ ಈ ಮೈಯಿಂದ ಇಷ್ಟು ಬೇಗನೆ ಉಸಿರು ಹೊರಟುಹೋದೀತೆಂದು ನಾವು ನಂಬದೇ ಹೋದೆವು. ಆದರೇನು? ಉಸಿರು ಹೋಗಿತ್ತು. ಒಂದು ನೋವಿಲ್ಲ, ಒಂದು ನುಡಿ ಇಲ್ಲ; ಬೇನೆ ಆಯಾಸ ಲವಲೇಶ ಇಲ್ಲ. ತಾತನಿಗೆ ಕೊನೆಯ ಕ್ಷಣದವರೆಗೆ ಬುದ್ಧಿ ತಿಳಿಯಾಗಿತ್ತು. ‘ತೀರ್ಥ ತಾ’ ಎಂದಾಗ ತಾನು ಇನ್ನು ಕೆಲವು ಕ್ಷಣದಲ್ಲಿ ತೀರಿಕೊಳ್ಳುವೆನೆಂದೂ ತಿಳಿದಿತ್ತು. ದೈವದ ನಂಬಿಕೆಯಲ್ಲಿ ಎಂಬತ್ತು ವರ್ಷ ಬಾಳಿದ್ದ ಮುದುಕ ದೈವದ ನಂಬಿಕೆಯಲ್ಲೇ ನಿಂತ ಮನಸ್ಸಿನಲ್ಲಿ ಸಮಾಧಾನವಾಗಿ ದೇಹ ಬಿಟ್ಟರು. ಅನಾಯಾಸ ಮರಣ ವಿನಾ ದೈನ್ಯ ಜೀವನ ಪೂರ್ವಿಕರ ಬಯಕೆ. ತಾತನ ಜೀವನ ಬಡವನ ಜೀವನ ಆಗಿತ್ತು. ಆದರೂ ಅದರಲ್ಲಿ ದೈನ್ಯವಿರಲಿಲ್ಲ. ಎಂದರೂ ಒಟ್ಟು ಆ ಜೀವನವನ್ನು ನಾನು ಕಾಣೆನು. ಮರಣವನ್ನೋ ಹತ್ತಿರದಲ್ಲೇ ಇದ್ದು ಪ್ರತ್ಯಕ್ಷ ನೋಡಿದೆನು. ಅದು ತೀರ ಅನಾಯಾಸದ ಮರಣ. ಅವರು ನಂಬಿದ್ದ ದೈವ ಕೊನೆಯ ಕ್ಷಣದಲ್ಲಿ ಅವರ ಜೀವನವನ್ನು ಕೈ ಹಿಡಿದು ಕರೆದುಕೊಂಡು ತನ್ನ ಪಾದವನ್ನು ಸೇರಿಸಿಕೊಂಡಿತು.”

ಈ ವಿವರಗಳನ್ನು ಹೇಳುವಾಗ ಅವರ ಧ್ವನಿಯಲ್ಲಿ ಹೆಚ್ಚಿನ ಮಾರ್ದವತೆ ಗಮನಾರ್ಹವಾಗಿ ಮೂಡುತ್ತಿತ್ತು. ದೃಷ್ಟಿ ಇನ್ನಷ್ಟು ಅಂತರ್ಮುಖಿಯಾಗುತ್ತಿತ್ತು. “Yes, very good and simple souls. They sacrificed so that we may prosper” ಎಂದು ಸ್ವಗತವಾಗಿ ಹೇಳುತ್ತ ಕಣ್ಣಂಚನ್ನು ಒರೆಸಿಕೊಳ್ಳುತ್ತಿದ್ದರು. ಅನುಕಂಪಕ್ಕೆ ಮೃದುತ್ವಕ್ಕೆ ಪರ್ಯಾಯನಾಮ ಮಾಸ್ತಿ.

ಅವರು ಈ ಆತ್ಮವೃತ್ತವನ್ನು ಹೇಳುತ್ತಿದ್ದಾಗ ಅವರಾಗಲೀ ನಾನಾಗಲೀ ಗಡಿಯಾರ ನೋಡಿದವರಲ್ಲ. ನೋಡುವ ಆವಶ್ಯಕತೆಯೇ ಇರಲಿಲ್ಲ. ಯಾವುದೋ ಒಂದು ಘಟ್ಟಕ್ಕೆ ಬರಬೇಕು. ಆಗ ಅವರು “ಇನ್ನು ಮುಂದಿನ ಸಲ ಹೇಳುತ್ತೇನೆ” ಎಂದು ವರ್ತಮಾನ ಪ್ರಪಂಚಕ್ಕೆ ಇಳಿಯುವರು. ಆಗ ಗಂಟೆ ಸರಿ ಸುಮಾರಾಗಿ ೪ ಆಗಿರುತ್ತಿತ್ತು. “ಇಲ್ಲ ಸ್ವಾಮೀ. ನಾನು ಇನ್ನೂ ಒಂದೆರಡು ಗಂಟೆ ಬರೆದುಕೊಳ್ಳಬಲ್ಲೆ.”

“ಇದು ನಿಮಗೆ ಹಿಡಿಸುತ್ತದೆಯೇ?” “ಬಲು ಚೆನ್ನಾಗಿ. ಒಂದು ಜೀವ ಅವೆಷ್ಟು ಪ್ರಭಾವಗಳಿಂದ ಪೋಷಿತವಾಗಿ ಸ್ವಂತಿಕೆಯನ್ನು ಬೆಳೆಸಿಕೊಂಡು ಮೇಲೆ ಬರುತ್ತದೆ ಎಂಬುದು ತುಂಬ ಕುತೂಹಲಕಾರಿಯಾಗಿದೆ.” “ತುಂಬ ಸಂತೋಷ. ನಿಮ್ಮ ಈ ಪ್ರತಿಕ್ರಿಯೆ ನನಗೊಂದು ಟಾನಿಕ್ಕಿನಂತೆ. ಮುಂದಿನ ಸಲ ಹೇಳುತ್ತೇನೆ. ಹಿಂದಿನ ಸಂಗತಿಗಳನ್ನು ಒಂದೇ ಸಲ ಹೊರಗೆಳೆಯಬಾರದು. ದೈವ ನಡೆಸಿದಂತೆ ಮುಂದುವರಿಯಲಿ.” ಅವರು ಏಳುವರು. ನಾನು ಎರಡೋ ಮೂರೋ ಗಂಟೆ ಕಾಲವೇ ಕುಳಿತು ಅಲುಗಾಡದೇ ಬರೆಯಬಲ್ಲೆ. ಆದರೂ ನನಗೆ ಹೊರೆಯಾಗಬಾರದು, ಇದು ಅವರ ಇಂಗಿತ. ಆದರೆ ಅದನ್ನು ಹೇಳಲಾರರು, ಕಾರ್ಯತಃ ಮಾಡಿ ತೋರಿಸುವರು. ಆಗ ಅವರ ಸಾಯಂಕಾಲದ ಉಪಾಹಾರದ ವೇಳೆ, ಘಮಘಮಿಸುವ ದೋಸೆ, ತುಪ್ಪ, ಅಯ್ಯಂಗಾರ್ ಚಟ್ನಿ, ಕಾಫಿ ಬರುತ್ತವೆ. ನನಗೂ ಅವನ್ನು ಅವರ ಸೌಭಾಗ್ಯವತಿ ಪಂಕಜಮ್ಮನವರು ತಂದುಕೊಡುತ್ತಾರೆ. ಕೊಡುವ ಆ ಅಮ್ಮನ ಕೈ ತುಂಬ ದೊಡ್ಡದು. ಮೊದಲ ವಾರ ಅವನ್ನೆಲ್ಲ ರುಚಿಯಾಗಿ ತಿಂದೆ. ಆದರೆ ಮತ್ತೆ ಹೇಳಿದೆ, “ಇದು ನನ್ನ ಆಹಾರದ ನಿಯಮಕ್ಕೆ ಸರಿ ಹೊಂದುವುದಿಲ್ಲ. ಸಾಯಂಕಾಲ ತಿಂಡಿ ತಿಂದರೆ ಅಪಥ್ಯವಾಗುತ್ತದೆ. ಇಲ್ಲಿಗೆ ಬರುವ ಮುನ್ನ ಟೀ ಸೇವಿಸಿ ಹೊರಡುವುದು ವಾಡಿಕೆ. ಹೀಗೆ ಹೇಳಿದೆ ಎಂದು ತಾವು ಬೇಸರಿಸಬಾರದು.”

“ಆಹಾರದ ವಿಷಯ ನಿಯಮವಿರುವುದು ಬಲು ಸರಿಯಾದ ಕ್ರಮ. ನಾನು ಅದನ್ನು ಒಪ್ಪತಕ್ಕವನೇ. ಆದರೆ ಮನೆಯಾಕೆಗೂ ನನಗೂ ನಿಮ್ಮನ್ನು ಹಾಗೆಯೇ ಕಳಿಸುವುದು ಒಪ್ಪದಲ್ಲ!” “ಒಂದು ಗಂಟೆ ಕಾಲ ತಮ್ಮೊಡನೆ ಕಳೆಯುವ ಈ ಸಂತೋಷವೇ ನನಗೆ ಯೋಗ್ಯ ಪ್ರತಿಫಲ.” “ನಾರಾಯಣ ರಾವ್! ನಿಮ್ಮ ಈ ದೃಷ್ಟಿಯನ್ನು ನಾನು ಮೆಚ್ಚುತ್ತೇನೆ. ಹಾಗೆಯೇ ಆಗಲಿ, ಸಂತೋಷ.”

ಅವೆಷ್ಟೋ ವಾರಗಳು ಹೀಗೇ ಸಂದುವು. ನನ್ನ ಒಡನಾಟ ಅವರಿಗೆ ತುಂಬ ಹಿಡಿಸುತ್ತಿತ್ತೆಂದು ಪ್ರತಿಸಲವೂ ನನಗೆ ಅನ್ನಿಸುತ್ತಿತ್ತು. ಅದೇ ನನಗೆ ಪರಮಾನಂದಕರ ಪ್ರತಿಫಲ. ಒಂದು ಆದಿತ್ಯವಾರ ನಾನು ಹತ್ತು ಮಿನಿಟು ಮುಂಚಿತವಾಗಿ (ಅಂದರೆ ೨ ಗಂಟೆ ೫೦ ಮಿನಿಟಿಗೆ) ಅವರ ಮನೆಗೆ ಹೋದೆ – ಹಿಂದಿನ ವಾರ ಬರೆದದ್ದನ್ನು ಇನ್ನೊಮ್ಮೆ ಓದಿಕೊಳ್ಳಬೇಕು ಎಂಬ ಉದ್ದೇಶದಿಂದ. ಅಜ್ಜಯ್ಯನ ಮಾಮೂಲು ದರ್ಶನ ಆಗಲಿಲ್ಲ. ಇನ್ನೂ ಎಂಟೊಂಬತ್ತು ನಿಮಿಷಗಳು ಉಳಿದಿದ್ದವಷ್ಟೆ. ಆದರೆ ಈ ವೇಳೆಗೆ ಮನೆಯವನೇ ಆಗಿಹೋಗಿದ್ದ ನನಗೆ ನನ್ನ ಕೆಲಸದೆಡೆಗೆ ಸಾಗಲು ಅಡಚಣೆ ಏನೂ ಇರಲಿಲ್ಲ. ಮನೆ ನಾಯಿಗೆ ನನ್ನ ಗುರುತಿದ್ದುದರಿಂದ ಬಾಲ ಆಡಿಸಿತು. ಪಂಜರದ ಗಿಳಿ ಹಿಂದೆ ಮುಂದೆ ತಿರುಗಿ ನಾನು ಬಂದುದಕ್ಕೆ ಹರ್ಷ ವ್ಯಕ್ತಪಡಿಸುವಂಥ ಧ್ವನಿ ಹೊರಡಿಸಿತು. ಮಹಡಿಗೆ ಹೋದೆ. ಅಜ್ಜಯ್ಯನ ಹಾಸಿಗೆ ಖಾಲಿ. ಅವರು ವಿಶ್ರಾಂತಿ ತಿಳಿದೆದ್ದು ಶೌಚಕ್ರಿಯೆಗೆ ಹೋಗಿರಬೇಕೆಂದು ಊಹಿಸಿಕೊಂಡೆ. ಹಿಂದಿನ ಬರವಣಿಗೆಯ ಹಾಳೆಗಳನ್ನು ತೆಗೆದುಕೊಂಡು ಓದುತ್ತ ಕುಳಿತೆ. ಗಂಟೆ ಮೂರು ಹೊಡೆದದ್ದು ಕೇಳಿಸಿತು. ಮತ್ತೆ ಐದು ನಿಮಿಷಗಳೂ ಸಂದುವು. ಇವರೇಕೆ ಇನ್ನೂ ಬರಲಿಲ್ಲ ಎಂದು ಎದ್ದು ನೋಡುವಾಗಲೇ ಅವರು ಬಂದರು, ಅದೇ ಮಂದಹಾಸ, “ಹೋದೆ, ನಿಂತೆ, ನೋಡಿದೆ, ಕಾದೆ. ನೀವು ಬರಲಿಲ್ಲ. ಪಾಪ ಏನೋ ತೊಂದರೆ ಆಗಿರಬೇಕು ಎಂದು ಹಿಂತಿರುಗಿದೆ. ಅಲ್ಲೇ ಹೊರಜಗಲಿ ಮೂಲೆಯಲ್ಲಿ ನಿಮ್ಮ ಚಪ್ಪಲಿ ಕಂಡೆ. ಓ ಮೊದಲೇ ಬಂದಿದ್ದಾರೆ ಅಂದುಕೊಂಡು ಬಂದೆ. ನನ್ನ ಗಡಿಯಾರ ತಪ್ಪಾಗಿರಲೂಬಹುದು.”

“ಇಲ್ಲ ಇಲ್ಲ. ನಿಮ್ಮ ವಾಚೂ ನನ್ನ ವಾಚೂ ಸರಿಯಾದ ಕಾಲವನ್ನೇ ತೋರಿಸುತ್ತಿವೆ. ನಾನೇ ಒಂದಷ್ಟು ಹೊತ್ತು ಮೊದಲೇ ಬಂದೆನಷ್ಟೇ.” ಅಂದಿನ ಬೈಠಕ್ಕು ಮುಗಿದು ಮರಳುತ್ತಿದ್ದಾಗ ನಾನು ಕಂಡದ್ದೇನು? ನನ್ನ ಚಪ್ಪಲಿಗಳು ನಡುಮನೆಯಲ್ಲಿ ಭದ್ರವಾಗಿ ಉಪಸ್ಥಿತವಾಗಿದ್ದುವು. ಎಣೆಯಿಲ್ಲದ ಅವರ ಈ ಸೌಜನ್ಯಕ್ಕೆ ಒಂದೇ ಒಂದು ಉಪಮೆ ಆಗ ನನಗೆ ಹೊಳೆದದ್ದು, “ರಾಜರಾಜರ ಗಂಡ ಶಬರಿ ಎಂಜಲನುಂಡ” (ಮೈಶೇಆ).

ನನ್ನ ಹಳೆಯ ಸಂಗೀತಮಿತ್ರರಾದ ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಮತ್ತು ಅವರ ಬಳಗದವರು ೧೯೬೭ ಡಿಸೆಂಬರಿನಲ್ಲಿ ಅಕಸ್ಮಾತ್ತಾಗಿ ನನ್ನ ಮನೆಗೆ ಬಂದರು. ಇವರು ಸಂಗೀತ ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ಕಾಂಚನ ಎಂಬ ಗ್ರಾಮದಲ್ಲಿ ಒಂದು ಸಂಗೀತ ಶಾಲೆಯನ್ನು ಸ್ಥಾಪಿಸಿ ಅದನ್ನು ಗುರುಕುಲ ಕ್ರಮದಲ್ಲಿ ನಡೆಸುತ್ತಿದ್ದರು. ಮುಂದಿನ ತ್ಯಾಗರಾಜ ಆರಾಧನಾ ಮಹೋತ್ಸವಕ್ಕೆ (ಜನವರಿ ೧೯೬೮) ಅಧ್ಯಕ್ಷರೂ ಮುಖ್ಯ ಅತಿಥಿಗಳೂ ಆಗಿ ಪೂಜ್ಯ ಮಾಸ್ತಿಯವರನ್ನು ಬರಮಾಡಿಕೊಳ್ಳಬೇಕೆಂಬುದು ಅವರ ಹಂಬಲ. ಅಜ್ಜಯ್ಯನವರನ್ನು ಒಪ್ಪಿಸುವ ಹೊಣೆ ನನ್ನದಾಗಬೇಕೆಂದು ಅವರ ಆಸೆ. ಮಾಸ್ತಿಯವರ ಮನೆಗೆ ಹೋದೆವು.

“ನಾನು ಸಭೆ ಭಾಷಣ ಇವನ್ನೆಲ್ಲ ಬಿಟ್ಟು ಬಹಳ ಕಾಲವಾಯಿತು. ಅದೂ ಅಷ್ಟು ದೂರದ ಪ್ರಯಾಣವನ್ನು ಈ ವಯಸ್ಸಿನಲ್ಲಿ (೭೭) ಮಾಡಲಾರೆ” ಎಂದರು ಮಾಸ್ತಿ. ಆದರೆ ಕಾಂಚನದವರು ಸುಲಭವಾಗಿ ಸೋಲೊಪ್ಪುವವರಲ್ಲ. ನಾನು ಅಸಹಾಯಕನಾಗಿ ಸುಮ್ಮನೆ ಕುಳಿತಿದ್ದೆ. ಮಾಸ್ತಿಯವರು ಕೊನೆಗೆ ಅಂದರು, “ನಮ್ಮ ನಾರಾಯಣರಾವ್ ಜೊತೆಯಲ್ಲಿ ಬರುವುದಾದರೆ ನಾನು ಬರುತ್ತೇನೆ.” ನನಗೆ ಈ ಯಾತ್ರೆ ಬಲು ಪ್ರಿಯ. ಮಡಿಕೇರಿ ನನ್ನೂರು. ಪುತ್ತೂರು ನನ್ನ ಮಾವಂದಿರ ಊರು. ಉಪ್ಪಿನಂಗಡಿ, ಕಾಂಚನ ಮುಂತಾದ ವಲಯಗಳೆಲ್ಲವೂ ನನಗೆ ಚಿರಪರಿಚಿತ. ಈ ದಾರಿಯಲ್ಲಿ ಪೂಜ್ಯರನ್ನು ಒಂದು ಸಂಗೀತ ಸಮಾರಂಭಕ್ಕೆ ಕೊಂಡೊಯ್ಯುವುದು ಭಾಗ್ಯವೆಂದುಕೊಂಡೆ. ಕಾಂಚನದಲ್ಲಿ ಆ ಸಮಾರಂಭದಂದು ಸಂಗೀತ ಹಾಡಲು ಆಹ್ವಾನಿತ ಗಾನಪಟುಗಳಾಗಿ ನನ್ನ ಮಿತ್ರರೂ ಶ್ರೇಷ್ಠ ಸಂಗೀತ ವಿದ್ವಾಂಸರೂ ಆದ (ಬೆಂಗಳೂರಿನ) ಕುರೂಡಿ ವೆಂಕಣ್ಣಾಚಾರ್ಯರು ಬರುವವರಿದ್ದರು. ಇವರೆಲ್ಲರನ್ನೂ ಒಂದು ಬಾಡಿಗೆ ಕಾರಿನಲ್ಲಿ ಕರೆದು ತರುವ ಹೊಣೆಯನ್ನು ನನಗೆ ವಹಿಸಿ ಕಾಂಚನದವರು ಊರಿಗೆ ಮರಳಿದರು.

ಇದು ನಡೆದು ನಾಲ್ಕೈದು ವಾರಗಳುರುಳಿದುವು. ಒಂದು ಶನಿವಾರ ರಾತ್ರಿ ೧೦ ಗಂಟೆಯ ವೇಳೆ ಮಹಡಿಯ ಮೇಲಿನ ನನ್ನ ಮನೆಯ ಹೊರಬಾಗಿಲನ್ನು ಯಾರೋ ಬಲು ಮೃದುವಾಗಿ ತಟ್ಟುತ್ತಿದ್ದಂತೆ ಭಾಸವಾಯಿತು. ಸದಾ ಕದನ ಕುತೂಹಲಿಗಳಾಗಿದ್ದ ನನ್ನ ಮಕ್ಕಳು “ಯಾರದು?” ಎಂದು ಗರ್ಜಿಸಿದರು. “ನಾನು, ಮಾಸ್ತಿ ಬಂದಿದ್ದೇನೆ ತಾಯಿ” ಎಂದು ಮೆಲುನುಡಿ ನನ್ನ ಹೆಂಡತಿಗೆ ಕೇಳಿಸಿದಾಗ ನಮ್ಮ ಸ್ಥಿತಿ ಏನಾಗಿರಬೇಡ! ‘ಸದಾ ಇವರು ಹೀಗೆಯೇ’ ಒಳಕೋಣೆಯಿಂದ ಓಡಿ ಬಂದೆ ಗಾಬರಿಯಾಗಿ, “ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿವರೆಗೆ? ಹೇಳಿ ಕಳಿಸಿದ್ದರೆ ನಾನೇ ಬರುತ್ತಿದ್ದೆನಲ್ಲ?” ನನ್ನ ಮಾತು. “ಸರಿಯಪ್ಪ, ನಾಳೆ ಅಲ್ಲಿಗೆ ಹೋಗಬೇಕಷ್ಟೆ, ಏನು ಏರ್ಪಾಡು ಎಂದು ಹೇಳಲಿಲ್ಲವಲ್ಲ?” “ಎಲ್ಲಿಗೆಂದು ತಿಳಿಯಲಿಲ್ಲವಲ್ಲ?” “ಅದೇ ಕಾಂಚನಕ್ಕೆ; ಕಾರ್ಯಕ್ರಮವೇನಾದರೂ ರದ್ದಾಯಿತೇನು?” “ಅದು ನಾಳೆ ಅಲ್ಲ, ಮುಂದಿನ ಆದಿತ್ಯವಾರ. ನಾಳೆ ನಾಡಿದ್ದಾಗಿ ನಾನೇ ತಮ್ಮಲ್ಲಿಗೆ ಬಂದು ಎಲ್ಲ ವಿವರವನ್ನು ಹೇಳುವವನಿದ್ದೆ.” ಮಾಸ್ತಿ ನಕ್ಕರು. ನಿಸಾರ್ ಅಹಮದರ ಮಾತಿನಲ್ಲಿ –

ಕೂಗು ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ
ಬಿರಿಸಿ ನಕ್ಕಾಗಿವರು ಥೇಟ್ ಜುಲಯ್ ತಿಂಗಳಿನ ಶಿವಮೊಗ್ಗೆ:
ಚಣಕ್ಕಷ್ಟು ಚಳಿನೂಲು, ಒಂದಿಷ್ಟು ಹೂ ಬಿಸಿಲು
ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು.

ಅವರೆಂದರು, “ಕಾಲವನ್ನು ಕಾಯ್ದಿಟ್ಟು ನೆನಪಿಸುವ ನನ್ನ ಮಿದುಳಿನ ಭಾಗ over smart ಆಗಿಬಿಟ್ಟಿದೆ.” ತಾವೂ ನಕ್ಕರು ನಮ್ಮನ್ನೂ ನಗಿಸಿದರು. ಅಲ್ಲಿಂದ ಆ ಕಿಷ್ಕಿಂಧೆ ಮೆಟ್ಟಲು ದ್ವಾರ ಇಳಿಯುವಾಗ ನಾನು ಮುಂದೆ ಅವರು ಹಿಂದೆ. ರಸ್ತೆಗೆ ಬಂದೆವು. ನನ್ನನ್ನು ಹಿಂದೆ ಹೋಗಲು ಹೇಳಿದರು. “ತಾವು ಬರಿ ತಲೆಯನ್ನು ಬಿಟ್ಟುಕೊಂಡು ಈ ರಾತ್ರಿ ಹೋಗುವುದು ತರವಲ್ಲ. ಶೀತವಾದೀತು” ಎಂದೆ. ಅವರು ವಸ್ತ್ರ ಸುತ್ತಿಕೊಂಡರು. ಅವರ ಗೇಟ್‌ವರೆಗೂ ಜೊತೆಯಲ್ಲಿ ಹೋಗಿ ಹಿಂತಿರುಗಲು ಹೊರಟೆ. “ಒಳ್ಳೇದಪ್ಪ, ಹುಷಾರಗಿ ಹೋಗಿ. ಶೀತ ಆದೀತು” ಎಂದು ಎಚ್ಚರ ಹೇಳಿ ನಿಂತರು. ನಾನು ರಸ್ತೆಯ ತಿರುಗಾಸಿನಲ್ಲಿ ಮರೆ ಆಗುವವರೆಗೂ ಅವರು ಹಾಗೆಯೇ ನಿಂತಿದ್ದರು.

ನಮ್ಮ ಕಾಂಚನ ಪ್ರಯಾಣದ ಕಾರ್ಯಕ್ರಮ ಸಿದ್ಧವಾಯಿತು. ಗೆಳೆಯರೂ ಸಾಹಿತ್ಯ ಪ್ರೇಮಿಗಳು ಆದ ಗುಂಡ್ಮಿ ರಾಮಕೃಷ್ಣ ಐತಾಳರ ಕಾರು. ಪಯಣಿಗರು ಶ್ರೀ ಮತ್ತು ಶ್ರೀಮತಿ ಮಾಸ್ತಿಯವರು, ವೆಂಕಣ್ಣಾಚಾರ್ ಮತ್ತು ಅವರ ಮಗ, ಐತಾಳರು, ನಾನು ಮತ್ತು ನನ್ನ ಇಬ್ಬರು ಚಿಕ್ಕಮಕ್ಕಳು, ಕಾರಿನ ಡ್ರೈವರ್. ಅಂಬಾಸಿಡರ್ ಕಾರಿಗೂ ಇದು ತುಂಬಲಾರದ ಬಳಗ. ವೃದ್ಧ ದಂಪತಿಗಳಿಗೆ ಇದರಿಂದ ದೀರ್ಘ ಪ್ರಯಾಣ ಖಂಡಿತವಾಗಿಯೂ ತ್ರಾಸವಾಗುತ್ತದೆ. ಆದರೆ ಸ್ವತಃ ಮಾಸ್ತಿಯವರೇ ಇವರೆಲ್ಲರೂ ಬರುವುದನ್ನು ಸಂತೋಷದಿಂದ ಸ್ವಾಗತಿಸಿದ್ದರು. ಅವರ ಔದಾರ್ಯ ಶ್ರೀಮಂತಿಕೆ ಆ ಮಟ್ಟದ್ದು.

ನಾವು ಬೆಂಗಳೂರನ್ನು ಬಿಟ್ಟದ್ದು ಬೆಳಗ್ಗೆ ೬-೩೦ ಗಂಟೆಗೆ. ಹಳೇ ಮೈಸೂರಿನ ಗಡಿ ದಾಟಿ ಕೊಡಗನ್ನು ಪ್ರವೇಶಿಸುವವರೆಗೂ ದಾರಿ ಪಕ್ಕದ ಪ್ರತಿಯೊಂದು ಹಳ್ಳಿ, ಅದರ ಹೆಸರಿನ ಐತಿಹ್ಯ, ಅಲ್ಲಿಯ ವೈಶಿಷ್ಟ್ಯ, ಅಲ್ಲಿಗೆ ಹೋಗಲಿರುವ ದಾರಿ ಇವನ್ನು ಮಾಸ್ತಿಯವರು ವಿವರಿಸುತ್ತಿದ್ದಾಗ ನಮ್ಮ ಬೆರಗು ಹಲವು ಬಗೆಯದು – ಅವರ ನೆನಪಿನ ಹರವು, ಆಳ, ಅವರು ವಿವರಿಸುವ ಕೌಶಲ, ಅವರ ಹಿಂಗದ ಉತ್ಸಾಹ ಒಂದೊಂದೂ ನಮಗೆ ಪವಾಡದಂತೆ ಕಾಣುತ್ತಿತ್ತು. ಶ್ರೀರಂಗಪಟ್ಟಣದ ಬಳಿ ಒಳದಾರಿ ಹಿಡಿದು ಹುಣಸೂರು ಮಾರ್ಗದೆಡೆಗೆ (ಇದು ಕೃಷ್ಣರಾಜ ಸಾಗರದ ಮೂಲಕ ಹೋಗುತ್ತದೆ) ಹೋಗುತ್ತಿದ್ದಾಗ ಹಾದಿ ತಪ್ಪಿತು. ಆಗ ಜೊಂಪಿನಿಂದ ತಿಳಿದೆದ್ದು ಸರಿದಾರಿ ತೋರಿಸಿದವರು ಮಾಸ್ತಿ! ಅಂದು ಮಧ್ಯಾಹ್ನದ ಊಟ ಶುಂಠಿಕೊಪ್ಪದ ಮಂಜುನಾಥಯ್ಯನವರಲ್ಲಿ ಮಂಜುನಾಥಯ್ಯ ದಂಪತಿಗಳ, ಅವರ ಮಕ್ಕಳ, ಮೊಮ್ಮಕ್ಕಳ ಯೋಗಕ್ಷೇಮವನ್ನು ಅಜ್ಜಯ್ಯ ವಿಚಾರಿಸಿಕೊಂಡ ಬಗೆ ಅದ್ವಿತೀಯವಾದದ್ದು. ಇತರರ ವಿಚಾರದಲ್ಲಿ ಅಷ್ಟೊಂದು ಸವಿವರ ಆಸಕ್ತಿ ಇವರಿಗೆ. ನನ್ನ ತಂದೆಯವರೂ ಆಹ್ವಾನಿತರಾಗಿ ಅಲ್ಲಿಗೆ ಬಂದಿದ್ದುದು ಮಾಸ್ತಿಯವರಿಗೆ ಬಲು ಪ್ರಿಯವಾಯಿತು. “ಈಗಲು ಸೈಕಲ್ ಬಿಡುತ್ತೀರಾ? ಬಿಡಬೇಡಿ ಎಂದು ನಾನು ಹೇಳಿದೆ ಎಂದು ನಿಮಗೆ ತಿಳಿಸಲು ನಿಮ್ಮ ಮಗನೊಡನೆ ಹೇಳಿದ್ದೆ. ಈ ಪ್ರಾಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಮಾದವಾಗುತ್ತದೆ.”

ಅದೇ ಸಾಯಂಕಾಲ ನಾಲ್ಕು ಗಂಟೆಗೆ ನಾವು ಪುತ್ತೂರು ತಲಪಿದೆವು. ಮೊಕ್ಕಾಂ ನನ್ನ ಮಾವಂದಿರಾದ ಎ.ಪಿ. ಸುಬ್ಬಯ್ಯನವರಲ್ಲಿ. ಇವರು ಮಾಸ್ತಿಯವರ ಹಳೆಯ ಸಾಹಿತ್ಯ ಮಿತ್ರರು. ಸುದೀರ್ಘ ಪ್ರಯಾಣಾನಂತರ ಮಾಸ್ತಿ ಕಾರಿನಿಂದ ಹಗುರಾಗಿ ಇಳಿಯುವಾಗ, ಮುಂಜಾನೆಯ ಉತ್ಸಾಹದಿಂದಲೇ ಮಾತಾಡುವಾಗ ಯಾರಿಗಾದರೂ ಅವರ ಆರೋಗ್ಯ ಆಶ್ಚರ್ಯವನ್ನೂ ಹೆಮ್ಮೆಯನ್ನೂ ತರುವಂತಿತ್ತು. ನಮ್ಮ ಮಾವನ ಮನೆಯಲ್ಲಿ ಒಂದು ಸಾಹಿತಿಗಳ ಕೂಟವೇ ಸೇರಿತು. ಆದರೆ ಪುರಸೊತ್ತೆಲ್ಲಿ? ಆಗಲೇ ಮಾಸ್ತಿ ಕರ್ಣಾಟಕ ಸಂಘದ ಸಭೆಗೆ ದಯಮಾಡಿಸಬೇಕಾಗಿತ್ತು. ಅದಾದ ತರುವಾಯ ರೋಟರಿ ಕ್ಲಬ್ಬಿನಲ್ಲಿ ಭಾಷಣ. ಕೊನೆಚಿiದಾಗಿ ವೆಂಕಣ್ಣಾಚಾರ್ಯರ ಸಂಗೀತ ಸಭೆಯ ಅಧ್ಯಕ್ಷತೆ. ಇವನ್ನೆಲ್ಲ ಅದೇ ಮಾಸ್ತಿ-ದಿವ್ಯ-ಸಂಸ್ಪರ್ಷದಿಂದ ನೆರವೇರಿಸಿ ರಾತ್ರಿ ೧೦ ಗಂಟೆಗೆ ಅಜ್ಜಯ್ಯ ಮರಳಿದರು. ಬಾಸ್ವೆಲ್ ಮತ್ತೆ ಹುಟ್ಟಲಿಲ್ಲವಲ್ಲ, ಮಾಸ್ತಿಯವರಂಥ ಜಾನ್ಸನ್ನರ ದೈನಂದಿನ ಮಾತು ಕತೆ ಆಖ್ಯಾನಗಳು ಕ್ಷಣಿಕ ಘಟನೆಗಳಾಗಿ ಮಿಂಚಿ ಬೆಳಗಿ ಮರೆಯಾಗಿ ಹೋಗುವುವಲ್ಲ ಎಂದು ಪದೇ ಪದೇ ನನಗೆ ಅನಿಸುತ್ತಿತ್ತು.

ಶಿವರಾಮ ಕಾರಂತರು, ಮಾಸ್ತಿ ಪುತ್ತೂರಿಗೆ ಬರುವಾಗ, ತಾವು ಪೂರ್ವಯೋಜಿತ ಕಾರ್ಯಕ್ರಮಾನುಸಾರ ಪರ ಊರಿಗೆ ಹೋಗಬೇಕಾಗಿರುವುದನ್ನು ಕುರಿತು ಇವರಿಗೆ ಮೊದಲೇ ತಿಳಿಸಿದ್ದರು. ಮಾಸ್ತಿ ಎಂದರು, “ಲೀಲಾ ತಾಯಿಯವರನ್ನು ನೋಡಿ ಮಾತಾಡಿಸಿಕೊಂಡು ಬರಬೇಕು.” ಸೋಮವಾರ ಬೆಳಿಗ್ಗೆ ‘ಬಾಲವನ’ಕ್ಕೆ ಹೋಗಿ ಲೀಲಾ ಕಾರಂತರನ್ನು ನೋಡಿ ಮಾತಾಡಿದ್ದಾಯಿತು. ಅಲ್ಲಿಂದ ವಿವೇಕಾನಂದ ಕಾಲೇಜಿಗೆ ಲೀಲಾ ತಾಯಿಯವರ ಸಹಿತ ನಮ್ಮ ಮೆರವಣಿಗೆ ಸಾಗಿತು. ಆ ಹೃಸ್ವ ಪಯಣದ ವೇಳೆ ಮಾಸ್ತಿ ಏನೋ ಲಘು ಹಾಸ್ಯ ಬೀರಿದರು. ಆಗ ಉಕ್ಕಿ ಬಂದ ನಗುವಿನ ಕಾರಣವಾಗಿ ಲೀಲಾ ತಾಯಿಯವರ ತಾಂಬೂಲ ರಸ ತುಂಬಿದ್ದ ಬಾಯಿ ಬಿರಿದು ಎದುರಿನ ಸಾಲಿನಲ್ಲಿ ಕುಳಿತಿದ್ದ ನನ್ನ ಬೆನ್ನಿನ ಮೇಲೆ ಸಮೃದ್ಧ ಲಾಲಾರಸದ ಅಭಿಷೇಕವಾಯಿತು. ತಾಯಿಯವರಿಗೆ ತುಂಬ ಮುಜುಗರವಾಯಿತು, ಬಲು ಪೇಚಾಟಪಟ್ಟುಕೊಂಡರು. “ಏನೂ ಚಿಂತೆ ಮಾಡಬೇಡಿ ತೊಳೆದರಾಯಿತು” ಎಂದು ನಾನು ಸಮಾಧಾನ ಹೇಳಿದೆ. ಆಗ ಮಾಸ್ತಿ ನುಡಿದರು, “ಅಯಾಚಿತವಾಗಿ ಗುರು ಪತ್ನಿಯ ಉಚ್ಛಿಷ್ಟ ಲಭಿಸಿರುವ ನೀವು ಅದೃಷ್ಟವಂತರು!” ಎಂಥ ಸುಸಂಸ್ಕೃತ ಸ್ಪರ್ಶ!

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಹಾಸಭೆಯನ್ನು ಉದ್ದೇಶಿಸಿ ಮಾಸ್ತಿ ಭಾಷಣ ಮಾಡಿದರು. ತರುವಾಯ ಕಾಂಚನದೆಡೆಗೆ ಕಾರನ್ನು ಓಡಿಸಿದೆವು. ಅಂದು ಬೆಳಗ್ಗೆ ೧೧-೩೦ ಗಂಟೆಗೆ ಸರಿಯಾಗಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಸಾಮೂಹಿಕ ಹಾಡುಗಾರಿಕೆ ಪ್ರಾರಂಭ. ಆ ಮೊದಲೇ ನಾವು ಕಾಂಚನವನ್ನು ತಲಪಿರಬೇಕು ಎಂಬುದು ಕಾರ್ಯಕ್ರಮ. ಆದರೆ ಒಂದಷ್ಟು ನಿಮಿಷ ತಡವಾಗಿಯೇ ಸಭಾಮಂದಿರವನ್ನು ತಲಪಿದೆವು. ಕ್ಲುಪ್ತ ವೇಳೆಗೆ ಸಾಮೂಹಿಕ ಗಾನ ಪ್ರಾರಂಭವಾಗಿದ್ದುದರಿಂದ ನಮ್ಮನ್ನು ಬರಮಾಡಿಕೊಳ್ಳಲು ಗಣ್ಯರು ಯಾರೂ ಎದುರಿಗಿರಲಿಲ್ಲ. ಆ ಸೆಖೆಯಲ್ಲಿ ಕಾರಿನಿಂದ ಇಳಿದ ಅಜ್ಜಯ್ಯ ಮಂದಿರದ ಹೊರಜಗಲಿಯಲ್ಲಿ ಕಾಲು ಚಾಚಿ ಕುಳಿತರು. “ಒಳಗೆ ಬನ್ನಿ” ಎಂದು ಯಾರೋ ಕರೆದರು. ಆದರೆ ಅದು ಸಭಾ ಮರ್ಯಾದೆಗೆ ಭಂಗವೆಂದು ಇವರು ಒಪ್ಪಲಿಲ್ಲ. ನಾವೆಲ್ಲರೂ ಅಲ್ಲೇ ಜಗಲಿಯಲ್ಲಿ ಹರಡಿ ಕುಳಿತೆವು. “ಎಂದರೋ ಮಹಾನುಭಾವುಲು” ಆಗ ಒಳಗಿನಿಂದ ಪ್ರವಹಿಸುತ್ತಿದ್ದುದು ಅರ್ಥಗರ್ಭಿತವೆಂದು ನನಗನ್ನಿಸಿತು. ಮಾಸ್ತಿಯವರು ಆ ಸಂಗೀತ ಸುಖ ಸವಿಯುತ್ತ ಮೃದುವಾಗಿ ತಾಳ ಹಾಕುತ್ತ ತನ್ಮಯರಾದರು. ಕೀರ್ತನೆಯ ಕಾರ್ಯಕ್ರಮ ಮುಗಿದ ತರುವಾಯ ಕಾಂಚನದ ಯಜಮಾನರು ಮಂದಿರದಿಂದ ಹೊರಬಂದು ಮಾಸ್ತಿಯವರನ್ನೂ ನಮ್ಮೆಲ್ಲರನ್ನೂ ಸ್ವಾಗತಿಸಿದರು. ಭೋಜನಾನಂತರ ಮಹಾಸಭೆ. ಅದಕ್ಕೆ ಅಧ್ಯಕ್ಷರು ಇವರೇ. ಕಾಂಚನ ಗುರುಕುಲದ ಶಿಷ್ಯ ಶಿಷ್ಯೆಯರಿಂದ ಸಂಗೀತ, ಮಾಸ್ತಿಯವರ ಭಾಷಣ, ಕೊನೆಗೆ (ರಾತ್ರಿ ೯-೩೦ ಗಂಟೆಗೆ) ಅಂದಿನ ಮುಖ್ಯ ಸಂಗೀತಗಾರರೂ ಆಹ್ವಾನಿತರೂ ಆದ ವೆಂಕಣ್ಣಾಚಾರ್ಯರಿಂದ ಸಂಗೀತ. ಇವಿಷ್ಟು ಮುಗಿದು ರಾತ್ರಿಯ ೧೧ ಗಂಟೆಗೆ ಕಾಂಚನದವರ ಮನೆಗೆ ಮರಳುವಾಗ ನನಗೆ ಬಹಳ ಸಂಕಟವಾಗಿತ್ತು; ಈ ಹಿರಿಯರನ್ನು ಇಲ್ಲಿವರೆಗೆ ಕರೆದು ತಂದು ಅಚಾತುರ್ಯವೆಸಗಿದೆನೇ ಎಂದು. ನನಗೆ ಮಾಸ್ತಿಯವರ ಎಣೆಯಿಲ್ಲದ ಸೌಜನ್ಯದ ಅರಿವಾದದ್ದು ಅಲ್ಲಿ. ಮಾತಿನಲ್ಲಾಗಲೀ ಯಾವುದೇ ಕೃತಿಯಲ್ಲಾಗಲೀ ಕೊನೆಗೆ ನೋಟದಲ್ಲಾಗಲೀ ಅವರು ಅಸಮಾಧಾನದ ರೇಖೆಯನ್ನೂ ತೋರ್ಪಡಿಸಲಿಲ್ಲ. “ಒಳ್ಳೆಯದನ್ನು ನೋಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯದನ್ನು ಹೇಳಿ” – ಇದು ಅವರ ಜೀವನ ಮಂತ್ರ. ಮರುದಿನ ಅಲ್ಲಿಂದ ಹಿಂದಕ್ಕೆ ಹೊರಟಾಗ ತೀರ ನಾಚಿಕೆ ಅಪಮಾನಗಳಿಂದ ನಾನು ಅವರಿಗೆ ಹೇಳಿದೆ, “ನನಗೂ ತಿಳಿದಿರಲಿಲ್ಲ ಹೀಗೆಂದು. ತಾವು ಮನ್ನಿಸಬೇಕು.”

“ಏನು ಏನಾಯ್ತು? ಎಲ್ಲವೂ ಚೆನ್ನಾಗಿ ಆಯಿತಲ್ಲ!” ಅವರ ಪ್ರತಿಕ್ರಿಯೆ ಬಗ್ಗೆ ಪುತಿನ ಬರೆದಿರುವ ಮಾತು ಗಮನಾರ್ಹವಾಗಿದೆ. “ಗೂಢವಾಗಿ ದಾನ, ಮನೆಗೆ ಬಂದವರ ಸಂಕೋಚ ಮುರಿಯುವಂಥ ಸಂಭ್ರಮದ ಆತಿಥ್ಯ, ಪ್ರಿಯವನ್ನು ಮಾಡಿದರೂ ಹೇಳದೇ ಮೌನವಾಗಿ ಇದ್ದುಬಿಡುವುದು, ಪರರ ಗುಣಗಳನ್ನು ಪ್ರಶಂಸಿಸುವುದು, ಸಿರಿಬಂದಾಗ ಗರ್ವ ಪಡದಿರುವುದು, ಹೆರರ ಅವಗುಣಗಳ ಬಗ್ಗೆ ಅನಾಸ್ಥೆಯಿಂದಿರುವುದು – ಈ ಅಸಿಧಾರಾವ್ರತವನ್ನು ಪುಣ್ಯವಂತರಾದ ಆತ್ಮಶಾಲಿಗಳು ಮಾತ್ರ ನಡೆಸಬಲ್ಲರು. ಮಾಸ್ತಿಯವರು ಈ ಅಸಿಧಾರವ್ರತಿಗಳ ಸಾಲಿಗೆ ಸೇರತಕ್ಕವರು.”

‘ಭಾವ’ದ ಬರವಣಿಗೆಯ ಗತಿ ತೀರ ನಿಧಾನವಾಗಿತ್ತು. ಆದರೆ ನಾನು ಬೇರೆ ಏನೂ ಮಾಡುವಂತಿರಲಿಲ್ಲ. ಬರವಣಿಗೆಯ ಒಂದು ಘಟ್ಟ ಮುಟ್ಟಿದಾಗ ಮಾಸ್ತಿಯವರ ಪತ್ನಿ ಪಂಕಜಮ್ಮನವರೂ ಅಶ್ವತ್ಥನಾರಾಯಣ ಎಂಬ ತರುಣ ಮಿತ್ರರೂ ಪ್ರತಿ ದಿನವೂ ಅದನ್ನು ಬರೆದುಕೊಳ್ಳಲು ಒದಗಿ ಬಂದದ್ದು ಒಂದು ಪುಣ್ಯ. ಆದಿತ್ಯವಾರದ ನನ್ನ ಪಾಲಿನ ಸುಖ ನನಗೇ ಮೀಸಲಾಗಿರಬೇಕು ಎಂದು ಕೋರಿದೆ. ಹಾಗೆ ಹೋದಾಗಲೆಲ್ಲ ಹಿಂದೆ ಇತರರು ಬರದಿಟ್ಟುದನ್ನು ನಾನು ಕುತೂಹಲದಿಂದ ಓದುತ್ತಿದ್ದೆ.

“ಗಟ್ಟಿಯಾಗಿಯೇ ಓದಿರಂತಲ್ಲ. ನಾನೂ ಕೇಳುತ್ತೇನೆ” ಎನ್ನುವರು ಮಾಸ್ತಿ. ನಾನು ಓದಬೇಕು, ಅವರು ಆಲಿಸಬೇಕು. “Does it interest you, Narayana Rao?” ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ದಾಕ್ಷಿಣ್ಯಕ್ಕಾಗಿ ನಾನು ಕಷ್ಟಪಡಬಾರದು ಎಂಬುದು ಅವರ ಮನೋಗತ. ನಾನು ಅ ಘಟನೆಗಳ ಸ್ವಾರಸ್ಯವನ್ನು ಅವನ್ನು ನಿರೂಪಿಸಿರುವ ಭಾಷೆಯ ನವುರನ್ನು ಎಳೆ ಎಳೆಯಾಗಿ ಬಿಡಿಸಿ ನನಗೆ ಅವು ಹೇಗೆ ಮನೋಜ್ಞವಾಗಿದೆ ಎಂದು ಹೇಳುವಾಗ ಅವರು ಮೆಚ್ಚು ನಗು ಸೂಸುತ್ತ “Because you have absolute love for me” ಎನ್ನುವರು.

“ಸಾಹಿತ್ಯರಂಗದಲ್ಲಿ ಬರುವ ಕೆಟ್ಟ ಪುಸ್ತಕಗಳನ್ನು ನೀವು ಖಂಡಿಸಿ ನಾಲ್ಕು ಮಾತುಗಳನ್ನು ಏಕೆ ಹೇಳಬಾರದು” ಎಂದು ಒಮ್ಮೆ ಕೇಳಿದೆ. “ಬರೆದಾತ ಅದು ಕೆಟ್ಟ ಪುಸ್ತಕ ಆಗಬೇಕೆಂದು ಬರೆದನೇ? ಅದನ್ನು ಸಾರ್ವಜನಿಕವಾಗಿ ಖಂಡನೆ ಮಾಡಿ ಅವನಿಗೆ ನಾನೇಕೆ ನೋವುಂಟುಮಾಡಬೇಕು? ಹೀಗೆ ಮಾಡಿದರೆ ಮುಂದೆ ಎಂದೂ ಅವನಿಂದ ಒಳ್ಳೆಯ ಪುಸ್ತಕ ಬರಲಾರದು. ಕಾಲವೇ ಕೆಟ್ಟ ಪುಸ್ತಕವನ್ನು ತಳ್ಳಿ ಹಾಕಿಬಿಡುವುದು.” “ಅಂಥ ಒಬ್ಬ ಲೇಖಕ ನಿಮ್ಮ ಎದುರೇ ಬಂದು ಅಭಿಪ್ರಾಯ ಕೇಳಿದರೆ ಏನು ಮಾಡುತ್ತೀರಿ?” “ಖಂಡಿತವಾಗಿಯೂ ಅವನಿಗೆ ಬಿಡಿಸಿ ಹೇಳುತ್ತೇನೆ. ಅವನು ಎಲ್ಲಿ ತಪ್ಪಿದ್ದಾನೆ ಎಂಬುದನ್ನು ನನಗೆ ತಿಳಿದಂತೆ ವಿವರಿಸುತ್ತೇನೆ. ಇಲ್ಲಿಯೂ ಅವನಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಲ್ಲ.”

ಒಮ್ಮೆ ಸಂಭಾಷಣೆ ವೇಳೆ ಮಾಸ್ತಿ ಆನುಷಂಗಿಕವಾಗಿ ನುಡಿದರು, “ನೀವು ಸಂಗೀತ ಪ್ರಿಯರಾಗದಿದ್ದರೆ ಉತ್ತಮ ಶೈಲಿವಿದರಾಗಲಾರಿರಿ.” ಈ ಒಗಟು ಮಾತನ್ನು ಬಿಡಿಸಿ ಹೇಳಲು ಕೋರಿದಾಗ ಅವರು ನೀಡಿದ ವಿವರಣೆ! “ಸಂಗತ ಪದಗಳ ಸುಮಧುರ ಜೋಡಣೆಯೇ ಸಂಗೀತ. ಸುಂದರ ಶೈಲಿ ಎಂದರೆ ಇದೇ. ನೀವು ಗದ್ಯಲಯ ಗಳಿಸಬೇಕಾದರೆ ಸಂಗೀತಪ್ರಿಯರಾಗಲೇ ಬೇಕು.” ಒಂದು ಸಲ ಗೆಳೆಯ ವೆಂಕಣ್ಣಾಚಾರ್ಯರು ‘ಶ್ರೀನಿವಾಸ’ರ ಹಾಡುಗಳನ್ನು ಶುದ್ಧ ಕರ್ನಾಟಕ ಸಂಗೀತ ಶೈಲಿಯಲ್ಲಿ ೩ ತಾಸು ಹಾಡಿದರು. ಇದು ನಡೆದದ್ದು ಮಾಸ್ತಿಯವರ ಮನೆಯಲ್ಲೇ. ಈ ಹಾಡುಗಳು ಸಮರ್ಥರ ಬಾಯಿಯಲ್ಲಿ ಶಾಸ್ತ್ರೀಯ ಹಾಡುಗಾರಿಕೆಗೆ ಅವೆಷ್ಟು ಪರಿಪೂರ್ಣವಾಗಿ ಒಗ್ಗುತ್ತವೆ ಎಂಬುದು ನಮಗಾಗ ತಿಳಿಯಿತು.

ಹೀಗೆ ಬೆಳೆದು ಬಂದ ನಮ್ಮ ಬಾಂಧವ್ಯದ ಪರಿಣಾಮವಾಗಿ ನಮಗೆ ತಿಳಿಯದೇ ನಾವು ಮಾಸ್ತಿ ಕುಟುಂಬದ ಆಂತರ್ಯದ ಸದಸ್ಯರಾದೆವು. “ಮುದುಕರಾದ ನಮ್ಮನ್ನು ನೀವೆಲ್ಲರೂ ವಿಚಾರಿಸಿಕೊಂಡು ನಡೆಸಿಕೊಂಡು ಹೋಗಬೇಕು. ನಮಗೆ ಇನ್ನು ಯಾರಿದ್ದಾರೆ?’ ಎಂದು ವೃದ್ಧ ದಂಪತಿಗಳು ತುಂಬಿದ ಮನದಿಂದ ಆಗಾಗ ಹೇಳುವುದಿತ್ತು. ೧೯೬೮ರ ತರುಣದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯದ ದೇ. ಜವರೇಗೌಡರಿಂದ ನನಗೆ ಒಂದು ಆಹ್ವಾನ ಬಂದಿತು. ನಾನು ‘ಕನ್ನಡ ವಿಶ್ವಕೋಶ’ದ ವಿಜ್ಞಾನ ಸಂಪಾದಕನಾಗಿ ಅವರ ಸಂಸ್ಥೆಯನ್ನು ಸೇರಬೇಕೆಂಬುದು ಅದರ ಸಾರ. ಈ ವಿಚಾರವನ್ನು ಮಾಸ್ತಿಯವರೊಡನೆ ಪ್ರಸ್ತಾವಿಸಿದೆ. “ಜವರೇಗೌಡರು ಹಿಡಿದ ಕೆಲಸ ಸಾಧಿಸುವ ಖ್ಯಾತಿವಂತ. ಕನ್ನಡಕ್ಕಾಗಿ ತುಂಬ ದುಡಿಯುತ್ತಿದ್ದಾರೆ. ನೀವು ಹೋಗಿ ಅವರ ಕೈಗಳನ್ನು ಬಲಗೊಳಿಸಬೇಕು. ನಿಮ್ಮಿಂದ ಈ ಕೆಲಸ ಆಗುತ್ತದೆ” ಎಂದರು. ಮತ್ತೆ ಸ್ವಲ್ಪ ತಡೆದು, “ಆದರೆ ಇದರಿಂದ ಅನಿವಾರ್ಯವಾಗಿ ನಿಮ್ಮಿಂದ ನಾನು ದೂರವಾಗಬೇಕಾಗುತ್ತದೆ. ಆದರೆ ಕನ್ನಡದ ಕೆಲಸ ಬೇರೆಲ್ಲವಕ್ಕಿಂತಲೂ ದೊಡ್ಡದು. ನೀವು ಒಪ್ಪಿಕೊಳ್ಳಿ” ಎಂದು ಖಚಿತವಾಗಿ ನಿರ್ದೇಶಿಸಿದರು. ನಾನು ಒಪ್ಪಿ ನಿರ್ವಹಿಸಬೇಕಾಗಿದ್ದ ಇತರ ಹೊಣೆಗಾರಿಕೆಗಳ ಪರಿಣಾಮವಾಗಿ ಆ ಗಳಿಗೆಯಲ್ಲಿ ದೇಜಗೌರ ಕರೆಯನ್ನು ಮನ್ನಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ಕಾಲ ಪಕ್ವವಾದಾಗ (ಜೂನ್ ೧೯೬೯) ಮೈಸೂರಿಗೆ ಹೊರಟು, ಆಶೀರ್ವಾದ ಪಡೆಯಲು ಮಾಸ್ತಿಯವರಲ್ಲಿಗೆ ಹೋದೆವು.

“ಈಗ ಹತ್ತು ವರ್ಷಗಳ ಹಿಂದೆಯೇ ಆಗಬೇಕಿದ್ದ ಕೆಲಸವದು. ‘ವಿಶ್ವಕೋಶ’ದ ನಿರ್ಮಾಣ ಇನ್ನು ಖಂಡಿತ ಬೇಗ ಬೇಗ ಆಗುತ್ತದೆ” ಎಂಬ ಪ್ರವಾದಿ ನುಡಿ ಆಡಿದರು. ಅವರ ಈ ಪ್ರೀತ್ಯಭಿಮಾನಗಳಿಗೆ ಏನು ಹೇಳಲಿ! ಪುತಿನರವರ ಮಾತೇ ಸರಿ, “ಪೂಜ್ಯ ಮಾಸ್ತಿಯವರನ್ನು ನೆನೆದಾಗ ನನ್ನಂತ ಅನೇಕರ ಹೃದಯ ಕೃತಜ್ಞತೆಯಿಂದ ನಮ್ರವಾಗುತ್ತದೆ. ನಮ್ಮ ನಾಡು, ನಮ್ಮ ಜನ, ನಮ್ಮ ಸಂಸ್ಕೃತಿಗಳಿಗೆ ಅವರಷ್ಟು ಒಲಿದಿರುವವರು ವಿರಳ.” ಮಾಸ್ತಿ ೧೯೧೬ರಷ್ಟು ಹಿಂದೆಯೇ ಕನ್ನಡದ ಕೆಲಸ ಕುರಿತು ತಳೆದಿದ್ದ ಸ್ಪಷ್ಟ ನಿಲವನ್ನು ಅವರ ಮಾತಿನಲ್ಲಿಯೇ ನೋಡಬಹುದು, “ಇಂಥ ಕೆಲಸವನ್ನು ಮಾಡಿ ಎಂದು ನಾವು ಹೇಳಬಹುದಾದದ್ದು ಆಧುನಿಕ ವಿಚಾರಗಳನ್ನು ಬಲ್ಲ ಈಗಿನ ಜನತೆಗೆ ಮಾತ್ರ. ಇವರಲ್ಲಿ ಒಂದು ಪ್ರಾರ್ಥನೆ ಮಾಡುತ್ತೇನೆ. ಆ ಪ್ರಾರ್ಥನೆ ಇದು. ಈ ವಿದ್ಯಾವಂತ ಜನ ಜೀವನದಲ್ಲಿ ನೆಲಸಿದ ಒಡನೆ ಆರಂಭದ ಕೆಲವು ವರ್ಷಗಳನ್ನು, ಎಂದರೆ ಅದರಲ್ಲಿ ತಮಗಿರುವ ವಿರಾಮ ಕಾಲವನ್ನು, ಕನ್ನಡವನ್ನು ಚೆನ್ನಾಗಿ ಅಭ್ಯಾಸ ಮಾಡುವುದಕ್ಕೂ ಜೊತೆಗೆ ತಮ್ಮ ಅಭಿರುಚಿಯ ವಿಷಯವೊಂದರಲ್ಲಿ ಹೊಸ ತಿಳುವಳಿಕೆಯನ್ನು ಗ್ರಹಿಸುವುದಕ್ಕೂ ವಿನಿಯೋಗಿಸಬೇಕು. ಅಭ್ಯಾಸದ ಗ್ರಹಣದ ಈ ಕೆಲಸವು, ಎಂದರೆ ಸುಮಾರು ಹತ್ತು ವರ್ಷಗಳ ಅನಂತರ, ಇವರು ನಮ್ಮ ಸಾಹಿತ್ಯಕ್ಕೆ ತಮ್ಮಿಂದಾದ ಸೇವೆಯನ್ನು ಸಲ್ಲಿಸಲು ತೊಡಗಬೇಕು. ಇವರಲ್ಲಿ ಕೆಲವರಿಗೆ ಬಂಕಿಂಚಂದ್ರರಂತೆ, ರವೀಂದ್ರನಾಥರಂತೆ ಕೃತಿಕಾರರಾಗುವ ಭಾಗ್ಯ ಇರಬಹುದು. ಭಾಗ್ಯ ಇತ್ತೇ ಸಂತೋಷ, ಇಲ್ಲವೇ ನಷ್ಟವಿಲ್ಲ. ಇವರ ಈ ಕಾರ್ಯ ತಳಹದಿ ಹಾಕುತ್ತದೆ. ಉತ್ತಮ ಕೃತಿರಚನೆ ಸುಲಭವಾಗುತ್ತದೆ, ಮುಂದೆ ಬರುತ್ತದೆ.”

(ಮಾಸ್ತಿಯವರನ್ನು ಕುರಿತ ಈ ಮುಂದಿನ ಆಖ್ಯಾನಕವನ್ನು ದೇಜಗೌರವರ ‘ತೀನಂಶ್ರೀ’ ಗ್ರಂಥದಿಂದ ಆಯ್ದಿದೆ.)

ಮಾಸ್ತಿಯವರು ಹೇಳಿದ್ದೆಂದು ಬರೆದುಕೊಂಡಿರುವ ಮತ್ತೊಂದು ಕತೆ ತುಂಬ ಧ್ವನಿಪೂರ್ಣವಾಗಿದೆ. ಆ ಕತೆಯನ್ನು ಕೆ.ಎಚ್. ರಾಮಯ್ಯನವರು ಮಾಸ್ತಿಯವರಿಗೆ ಎಂದೋ ಹೇಳಿದ್ದರಂತೆ: “ನಮ್ಮ ಜನ ಗೂಡ್ಸ್ ಬಂಡಿಗಳ ಹಾಗೆ, ವಿಶ್ವೇಶ್ವರಯ್ಯನವರು ಒಳ್ಳೆ ಎಂಜಿನ್ ಹಾಗೆ. ಎಂಜಿನ್ ಬಂಡಿಗಳನ್ನು ಒಂದು ಸಲ ಎಳೆಯಿತು, ಇವು ಜಗ್ಗಲಿಲ್ಲ. ಇನ್ನೊಂದು ಸಲ ಎಳೆಯಿತು, ಜಗ್ಗಲಿಲ್ಲ. ಮತ್ತೊಂದು ಸಲ ಎಳೆದಾಗ ಎಂಜಿನ್ನೇ ಕಳಚಿಕೊಂಡು ‘ಹೊರಟೇ ಹೋಯಿತು.’ ಬಂಡಿಗಳು ಇದ್ದ ಕಡೆಯೇ ಇದ್ದುಬಿಟ್ಟವು. ಇಷ್ಟು ಕತೆಯನ್ನು ಹೇಳುವಾಗ ಮುಂದಿನ ವಿಸ್ತರಣ ಆ ಕ್ಷಣದಲ್ಲಿ ಮಾಸ್ತಿಯವರಿಗೆ ಹೊಳೆಯಿತಂತೆ. “ಬಂಡಿಗಳು ಯಾಕೆ ಕದಲಲಿಲ್ಲ ಗೊತ್ತೇ? ಎಂಜಿನ್ ಕೊಕ್ಕೆ (hook) ಬಂಡಿಗಳಿಗೆ ಸರಿಯಾಗಿ ತಗಲಿರಲಿಲ್ಲ! ಈ ಕೊಕ್ಕೆ ಯಾವುದು? ಕನ್ನಡ ಮಾತು. ವಿಶ್ವೇಶ್ವರಯ್ಯನವರು ತಮ್ಮ ಉದ್ದೇಶಗಳನ್ನು ಧ್ಯೇಯಗಳನ್ನು ಜನಕ್ಕೆ ತಿಳಿಯುವ ಹಾಗೆ ಕನ್ನಡದಲ್ಲಿ ಹೇಳಿ ಜನಸಾಮಾನ್ಯರ ಮನಸ್ಸಿಗೆ ಹತ್ತಿಸಿದ್ದರೆ ಅವರ ಪ್ರಗತಿಯ ಭಾವನೆಗಳಲ್ಲಿ ಜನಗಳೂ ಭಾಗಿಗಳಾಗುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರ ಭಾವನೆಗಳೆಲ್ಲ, ಆಲೋಚನೆಯೆಲ್ಲ ಇಂಗ್ಲಿಷಿನಲ್ಲಿ; ಜನ ಸಾಮಾನ್ಯಕ್ಕೂ ಅವರಿಗೂ ಬಿಗಿಯಾದ ಸಂಬಂಧ ಏರ್ಪಡಲಿಲ್ಲ.”

ನನ್ನ ಕಾರ್ಯಕ್ಷೇತ ಮೈಸೂರಾದರೂ (ಜೂನ್ ೧೯೬೯ರಿಂದ) ವಿಶ್ವಕೋಶದ ಮುದ್ರಣ ಕಾರ್ಯಕ್ಕೆ ಆಗಾಗ ನಾನು ಬೆಂಗಳೂರಿಗೆ ಹೋಗಬೇಕಾಗುತ್ತಿತ್ತು. ಹೀಗೆ ಒಂದು ಸಲ ಹೋಗಿದ್ದಾಗ ರಂ.ಶ್ರೀ. ಮುಗಳಿಯವರ ಬಳಿಗೆ ಹೋಗಿದ್ದೆ (ಬೆಂಗಳೂರು ವಿಶ್ವವಿದ್ಯಾಲಯ). “ನಿಮಗೆ ಗೊತ್ತೇ? ಮಾಸ್ತಿಯವರ ಮನೆಯವರು ಇಂದು ಮುಂಜಾನೆ ತೀರಿಕೊಂಡರಂತೆ” ಎಂದು ಅವರು ಹೇಳಿದಾಗ ನನಗೆ ತೀವ್ರ ಆಘಾತವಾಯಿತು. ಆಗ ಅಪರಾಹ್ಣದ ೩ ಗಂಟೆ. ಗೆಳೆಯ ರಾಮಕೃಷ್ಣ ಐತಾಳರೂ ಇನ್ನಿಬ್ಬರು ಮಿತ್ರರೂ ಆ ಕ್ಷಣವೇ ಮಾಸ್ತಿಯವರ ಮನೆಗೆ ಹೋದೆವು. ಅವರನ್ನು ನಾವು ಹೇಗೆ ಮಾತಾಡಿಸುವುದು ಸಾಂತ್ವನ ನುಡಿಗಳನ್ನು ಹೇಗೆ ಹೇಳುವುದು ಎಂದು ತಿಳಿಯದೇ ಅಳುಕಿನಿಂದ ಮನೆಯನ್ನು ಪ್ರವೇಶಿಸಿದೆವು.

 ಚಿರಪರಿಚಿತ ಗಿಳಿ ಪಂಜರದೊಳಿರಲಿಲ್ಲ. ನಾಯಿ ಬಗುಳಲೂ ಇಲ್ಲ, ಬಾಲ ಆಡಿಸಲೂ ಇಲ್ಲ. ಮೂಕಶೋಕ ಸಾರ್ವತ್ರಿಕವಾಗಿ ವ್ಯಾಪಿಸಿ ಮಹಾತಾಯಿಯ ನಿರ್ಗಮನದಿಂದ ಉಂಟಾದ ಶೂನ್ಯವನ್ನು ಸಂಕೇತಿಸುತ್ತಿತ್ತು. ನಡುಮನೆ, ಅದೇ ಸೋಫಾ. ಮಾಸ್ತಿ ಎಂದಿನಂತೆ ಅದರ ಎಡ ಅಂಚಿನಲ್ಲಿ ಕುಳಿತಿದ್ದಾರೆ. ಉತ್ತರ ಕ್ರಿಯೆಗಳು ಆ ಬೆಳಗ್ಗೆಯೇ ಮುಗಿದು ಹೋಗಿದ್ದುವು. ಅವರು ಮುಖವನ್ನು ಕೈಗಳಿಂದ ಮುಚ್ಚಿಕೊಂಡಿದ್ದರು. “ಬಂದಿರಾ! ಬನ್ನಿ ಕೂತುಕೊಳ್ಳಿ.” ಅದೇ ನಯ ಆತ್ಮೀಯತೆ. “ಬಹಳ ಸಂಕಟವಾಯಿತು ಕೇಳಿ.” “ಇದುವರೆಗೆ ನಾವು ಒಂದೇ ಬಂಡಿಗೆ ಹೂಡಿದ ಎತ್ತು ಮತ್ತು ಹಸುವಾಗಿ ಅದನ್ನು ಎಳೆಯುತ್ತಿದ್ದೆವು. ದೈವ ಹಸುವನ್ನು ಬರಮಾಡಿಕೊಂಡಿತು. ಎತ್ತು ಆ ದೈವದ ಅಪ್ಪಣೆ ಕಾಯುತ್ತ ಬಂಡಿಯನ್ನು ಎಳೆಯುತ್ತ ಮುಂದೆ ಸಾಗುತ್ತಿರಬೇಕು.” “ತುಂಬ ಪರಿಪಕ್ವವಾದ ಜೀವ. ಪುಣ್ಯವಂತ ಜೀವ. ಹಿಂದೂ ಮಹಿಳೆ ಇದಕ್ಕಿಂತ ಹೆಚ್ಚಿನದೇನನ್ನು ಬಯಸುತ್ತಾಳೆ.” “ನಿಜ ನಿಜ. ದೊಡ್ಡದಾಗಿ ಬಾಳಿದಳು. ದೊಡ್ಡ ಮನೆ ನಡೆಸಿದಳು.” ಅಷ್ಟರಲ್ಲಿ ಬಲು ಸೂಟಿಯಾಗಿ ಉಡುಪು ಧರಿಸಿದ್ದ ಒಬ್ಬ ತರುಣ ಲಗುಬಗೆಯಿಂದ ಒಳಗೆ ಬಂದ, “ನಮಸ್ಕಾರ ಸಾರ್. ತಾವೇ ಮಾಸ್ತಿಯವರಲ್ಲವೇ?” ಉತ್ಸಾಹ ತುಳುಕುತ್ತಿತ್ತು ಧ್ವನಿಯಲ್ಲಿ. “ನಮಸ್ಕಾರ, ಹೌದಪ್ಪಾ ನಾನೇ ಮಾಸ್ತಿ. ಕೂತುಕೊಳ್ಳಿ.” “ಕೇಂದ್ರ ಅಕಾಡಮಿಯಿಂದ ತಮಗೆ ಬಹುಮಾನ ಬಂದಿತಲ್ಲ ಸಾರ್! ‘ಸಣ್ಣ ಕತೆಗಳು’ ಆ ಪುಸ್ತಕದ ಒಂದು ಪ್ರತಿ ಬೇಕೆಂದು ನಾನು ಎಲ್ಲ ಅಂಗಡಿಗಳನ್ನೂ ತಲಾಸು ಮಾಡಿದೆ ಸಾರ್.” “ಆಮೇಲೆ?” “ಎಲ್ಲಿಯೂ ದೊರೆಯಲಿಲ್ಲ, ಸಾರ್.” “ಹೌದಪ್ಪಾ ಅವರೇಕೆ ಅದನ್ನಿಡುತ್ತಾರೆ? ಅವರಿಗೆ ಅದು ಖರ್ಚಾಗದ ಮಾಲು, ಮಾರಿಬರುವ ಲಾಭವೂ ಕಡಿಮೆ.” “ನಾನು ಸತ್ಯಶೋಧನ ಪುಸ್ತಕ ಭಂಡಾರಕ್ಕೆ ಹೋದಾಗ ನಿಮ್ಮಲ್ಲಿ ಅದು ದೊರೆಯಬಹುದೆಂದು ಹೇಳಿ ನಿಮ್ಮ ವಿಳಾಸ ಕೊಟ್ಟರು ಸಾರ್. ಹಾಗಾಗಿ ಬಂದೆ. ತಮ್ಮಲ್ಲಿ ಅದು ಸಿಕ್ಕಬಹುದೇ?” ಮಗಳನ್ನು ಕರೆದು ಆ ಪುಸ್ತಕದ ಒಂದು ಪ್ರತಿಯನ್ನು ತರಿಸಿದರು. ಆತನಿಗೆ ಕೊಟ್ಟಾಗ, “ಇದರ ಬೆಲೆ ಎಷ್ಟು ಸಾರ್?” ಎಂದು ಅವನು ಕೇಳಿದ. “ಅದರ ಒಳಗೆ ಬರೆದಿದೆ ನೋಡಿ.”

ಎರಡು ರೂಪಾಯಿ ನೋಟೊಂದನ್ನು ಹೊರತೆಗೆದು ಅವರಿಗೆ ಕೊಡಲು ಹೋದ. ಅಲ್ಲೇ ಮೇಜಿನ ಮೇಲಿಡಲು ಸೂಚಿಸಿದರು. ಪುನಃ ಮಗಳನ್ನು ಕರೆದು ಆತನಿಗೆ ರಶೀತಿಯನ್ನೂ ಎಂಟಾಣೆ ಬಾಕಿಯನ್ನೂ ಕೊಡಲು ಹೇಳಿದರು. ಕೆಲಸ ಮುಗಿಯಿತು. “ತುಂಬ ಉಪಕಾರವಾಯಿತು ಸಾರ್, ಬರುತ್ತೇನೆ. ನಮಸ್ಕಾರ ಸಾರ್” ತರುಣ ಎದ್ದ. “ಒಳ್ಳೇದಪ್ಪ, ನಮಸ್ಕಾರ.” ‘ದುಃಖೇಶ್ವನುದ್ವಿಗ್ನಮನಾಃ’ (ದುಃಖಗಳಲ್ಲಿ ಉದ್ವೇಗವಿಲ್ಲದ ಮನಸ್ಸುಳ್ಳವನು) ಎಂಬುದರ ಈ ಪರಮೋತ್ಕೃಷ್ಟ ನಿದರ್ಶನವನ್ನು ಕಂಡ ನಮ್ಮ ಮನಃಸ್ಥಿತಿ ಹೇಗಿದ್ದಿರಬೇಡ?

ಮಾಸ್ತಿಯವರೊಡನೆ ನಾನು ಕಳೆದ ಒಂದೊಂದು ನಿಮಿಷವೂ ರಸಯಾತ್ರೆಯೇ. ಇಂಥ ಪರಿಪಕ್ವ ಸುಸಂಸ್ಕೃತ ಕಲಾಭಿಜ್ಞ ಜೀವ ನಿಜವಾಗಿಯೂ ಈ ನೆಲದ ಮೇಲೆ ಎಲ್ಲರಂತೆ ಬಾಳಿ ಬದುಕಿತ್ತೇ, ಎಲ್ಲರಂತೆ ಸುಖದುಃಖ ಅನುಭವಿಸಿಯೂ ಆ ಹಿರಿಮೆ ಉಳಿಸಿಕೊಂಡಿತ್ತೇ ಎಂದು ಶತಮಾನಗಳ ತರುವಾಯ ಜನ ಆಶ್ಚರ್ಯಪಡುವಂಥ ಚೇತನ ಅವರದು. ಒಮ್ಮೆ ಮಾಸ್ತಿ ಹೇಳಿದರು, “ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೊಬ್ಬ ಪ್ರಾಂಶುಪಾಲರು ಬೇಕಾಗಿದ್ದಾರೆ, ಅರ್ಹರ ಹೆಸರನ್ನು ಸೂಚಿಸಬೇಕೆಂದು ಹಿರಿಯ ಸ್ವಾಮೀಜಿ ನನ್ನನ್ನು ಕೇಳಿದ್ದಾರೆ. ನಿಮ್ಮ ಹೆಸರನ್ನು ಸೂಚಿಸಬಯಸುತ್ತೇನೆ. ಇದನ್ನೊಂದು ಸವಾಲೆಂದು ನೀವು ಒಪ್ಪಿ ಮುಂದುವರಿಯಬೇಕೆಂದು ನನ್ನ ಸಲಹೆ.”

ಅವರ ಕಳಕಳಿಗೆ ಶರಣಾಗಿ ಮರುದಿನ ನನ್ನ ನಿರ್ಧಾರ ತಿಳಿಸುವೆನೆಂದು ಹೇಳಿದೆ. ನನ್ನ ಕಾಲೇಜ್ ಶಿಕ್ಷಣವಾದದ್ದೂ ಮುಂದೆ ೬ ವರ್ಷ ವೃತ್ತಿ ಅನುಭವ ಗಳಿಸಿದ್ದೂ ಧಾರ್ಮಿಕ ಸಂಸ್ಥೆಗಳ ಒಡೆತನದಲ್ಲಿದ್ದ ಕಾಲೇಜುಗಳಲ್ಲಿ. ೧೯೫೩ರಿಂದೀಚೆಗೆ ಸರ್ಕಾರೀ ಕಾಲೇಜುಗಳಲ್ಲಿ ಸೇವೆ. ಉಪನ್ಯಾಸಕರನ್ನು ನಡೆಸಿಕೊಳ್ಳುವುದರ ಬಗ್ಗೆ ಇವೆರಡರ ನಡುವಿನ ವ್ಯತ್ಯಾಸದ ಅರಿವು ನನಗೆ ಚೆನ್ನಾಗಿತ್ತು. ಅಲ್ಲಿ ನಾವು ಜೀತದ ಆಳುಗಳೆಂಬ ಅಳುಕು ನನ್ನನ್ನು ಮಾತ್ರವಲ್ಲ ನನಗಿಂತ ಎಷ್ಟೋ ಹಿರಿಯರನ್ನು ಕೂಡ ಬಾಧಿಸುತ್ತಿತ್ತು. “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ; ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ, ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ” ಎಂಬ ಸೂಕ್ತಿ ಆಚರಣೆಯಲ್ಲಿ ಮಾತ್ರ ಪ್ರಕಟವಾಗುತ್ತಿರಲಿಲ್ಲ. ಸರ್ಕಾರೀ ಕಾಲೇಜುಗಳಲ್ಲಾದರೋ ಹೆಚ್ಚುಕಡಿಮೆ ಅರಾಜಕತೆಯ ಅಂಚು ತಲಪಿದ್ದ ಮುಕ್ತತೆ! ಎಂದೇ ಇವುಗಳಲ್ಲಿ ವಿಹರಿಸಿ ವಿವಿಧ ಪ್ರಯೋಗಮಾಡಿ ಬೆಳೆದಿದ್ದ ನನಗೆ ಈ ಏರು ಹರೆಯದಲ್ಲಿ (೪೦) ಮತ್ತೆ ‘ಧರ್ಮತುರಂಗ’ನಿವಾಸಿಯಾಗುವ ಬಯಕೆ ಖಂಡಿತ ಇರಲಿಲ್ಲ. ನನ್ನ ನಿಲವನ್ನು ಮಾಸ್ತಿಯವರಿಗೆ ನಯವಾಗಿ ಹೇಳಿ ಈ ‘ಗಂಡಾಂತರ’ದಿಂದ ಪಾರಾದೆ.

(ಮುಂದುವರಿಯಲಿದೆ)