ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು ಈಗಾಗಲೇ ಮೂರು ಸಿನಿಮಾಗಳಲ್ಲಿ (ಗುಬ್ಬಚ್ಚಿಗಳು, ಶಿಕಾರಿ – ಕನ್ನಡ ಮತು ಮಲಯಾಳದಲ್ಲಿ) ಗಳಿಸಿದ ಗಟ್ಟಿ ಅನುಭವದ ಮುನ್ನೆಲೆಯಲ್ಲಿ ಸ್ವಂತ ಕತೆ ಹಾಗೂ ನಿರ್ದೇಶನದಲ್ಲಿ ಕಥಾಚಿತ್ರ ‘ಸಕ್ಕರೆ’ ಅಚ್ಚನ್ನು ರುಚಿರುಚಿಯಾಗಿಯೇ ಕಟ್ಟಿದ್ದಾನೆ. ಯಶಸ್ಸಿನ ಅನೇಕಾನೇಕ ಉತ್ತುಂಗ ಶಿಖರಗಳನ್ನು ಏರಿದ ಗಣೇಶ್, ದೀಪಾಸನ್ನಿಧಿ, ಅನಂತನಾಗ್, ವಿನಯಾಪ್ರಸಾದ್, ಅಚ್ಯುತ, ಅನುಪ್ರಭಾಕರ್ ಮುಂತಾದ ನಟವೃಂದದ ಭಾವಾನುರಕ್ತಿ ‘ಸಕ್ಕರೆ’ಯಲ್ಲಿ ಹರಳುಗಟ್ಟಿ ನಿಂತಿದೆ. ಅಭಯನ ಪುಣೆ ಕಲಿಕೆಯಲ್ಲಿ ಕ್ಯಾಮರಾ ಸಹಪಾಠಿಯಾಗಿ ಮತ್ತೆ ಮೂರೂ ಚಿತ್ರಗಳಲ್ಲಿ ದೃಶ್ಯಸರ್ವಸ್ವವಾಗಿ ತೊಡಗಿಕೊಂಡ ವಿಕ್ರಂ ಶ್ರೀವಾಸ್ತವ ಇಲ್ಲೂ ಬೆರಗಿನ ಬೆಳಕಿನಾಟವನ್ನು ತುಂಬಿಕೊಟ್ಟಿದ್ದಾನೆ. ಪ್ರಾಕೃತಿಕವಿಲ್ಲದಲ್ಲಿ ದೃಶ್ಯ ಸೌಂದರ್ಯಕ್ಕೆ ವೈವಿಧ್ಯ ಕಟ್ಟಿಕೊಟ್ಟವರು ಶಶಿಧರ ಅಡಪ. ಅದಕ್ಕೆ ಶ್ರಾವ್ಯದಲ್ಲಿ ರಾಗದ ಮೆರುಗು ಕೊಡುವಲ್ಲಿ ಹರಿಕೃಷ್ಣ, ಸಾಹಿತ್ಯ ಭಾವ ಮಿಡಿಯುವಲ್ಲಿ ಜಯಂತ ಕಾಯ್ಕಿಣಿ ಮತ್ತು ಯೋಗರಾಜ ಭಟ್, ಚಲನೆಯ ಲಯ ಹಿಡಿಯುವಲ್ಲಿ ಹರ್ಷ ಮತ್ತು ಚಿನ್ನಿ ಪ್ರಕಾಶ್ ಹೆಸರಿಗೆ ತಕ್ಕಂತೆ ಅಸಾಮಾನ್ಯವನ್ನೇ ಸಾಧಿಸಿದ್ದಾರೆ. ಸೆನ್ಸಾರ್ ಯಾವ ಹಿಡಿತ ಹಿಂಜರಿಕೆಗಳಿಲ್ಲದೆ ಸಾರ್ವಜನಿಕ ವೀಕ್ಷಣೆಗೆ ಉತ್ತಮ ರಹದಾರಿಯನ್ನೇ ಕೊಟ್ಟಿದೆ. ಮೊದಲಾಗಿ ಬಿಡುಗಡೆಗೊಂಡ ಹಾಡುಗಳು ನಿರೀಕ್ಷೆ ಮೀರಿ ರಾಜ್ಯಾದ್ಯಂತ ಅನುರಣಿಸುತ್ತಿವೆ. ‘ಗೆಲ್ಲಿಸು’ವ ಮಂತ್ರಗಳು, ಪ್ರಚಾರ ತಂತ್ರಗಳ ಸಿದ್ಧಿ ಮೀಡಿಯಾ ಹೌಸಿಗೆ ಹೊಸತೇನೂ ಅಲ್ಲ. ಆದರೂ ನಿರ್ಮಾಪಕದ್ವಯರಾದ ಬಿ.ಸುರೇಶ್, ಶೈಲಜಾ ನಾಗ್ ಅವರಿಗೆ ‘ಸಕ್ಕರೆ’ ಬಿಡುಗಡೆಯ ದಿನ ನಿಗದಿಯಲ್ಲಿ ತಡವರಿಕೆ ಕಾಡಿದ್ದಿದ್ದರೆ ನಾನು ಮೊದಲೇ ಹೇಳಿದಂತೆ ವಾಣಿಜ್ಯ ವಹಿವಾಟಿನದು ಮಾತ್ರ. ಈಗ ಅದನ್ನೂ ಉತ್ತರಿಸಿ ಇಂದು (೧೮-೧೦-೨೦೧೩, ಶುಕ್ರವಾರ) ರಾಜ್ಯಾದ್ಯಂತ ಒಂದು ಅವಧಿಯಲ್ಲಿ ಕನಿಷ್ಠ ನೂರಕ್ಕೂ ಮಿಕ್ಕು ಬೆಳ್ಳಿತೆರೆಗಳಲ್ಲಿ ರಂಗಿನಾಟವಾಡಿ, ಲಕ್ಷಾಂತರ ಮನಗಳಲ್ಲಿ ಉತ್ಸಾಹದ ಉಕ್ಕೇರಿಸಲಿದೆ ‘ಸಕ್ಕರೆ.’ ಶುದ್ಧ ಮನರಂಜನೆಯ ಪ್ರವಾಹ ವಾರ, ತಿಂಗಳುಗಳ ಲೆಕ್ಕದಲ್ಲಿ ಜನಮನವನ್ನು ವ್ಯಾಪಿಸಲಿ ಎಂದು ಹಾರೈಸುವುದಷ್ಟೇ ನಮಗುಳಿದಿದೆ!

‘ಸಕ್ಕರೆ’ ನಿರ್ಮಾಣದ ಉದ್ದಕ್ಕೆ ಅಭಯನ ಸಂಬಂಧದಲ್ಲಿ ನಮಗೊದಗಿದ ಕೆಲವು ಪ್ರತ್ಯಕ್ಷ ಅನುಭವಗಳನ್ನು ನಾನು ಈಗಾಗಲೇ ಕೆಲವು ವಾರಗಳ ಹಿಂದೆ ‘ಸಕ್ಕರೆಯ ಜೊತೆಗೆ ಅಕ್ಕರೆಯ ಸುತ್ತು’ನಲ್ಲಿ ಹಂಚಿಕೊಂಡಿದ್ದೆ. ರಸಿಕಮನ ರಂಜಿಸಿದ ‘ಸಕ್ಕರೆ’ಯ ಪಲುಕುಗಳು, ದೃಶ್ಯ ಝಲಕುಗಳು, ನಿರ್ಮಾಣದ ರಸ ತುಣುಕುಗಳು ‘ಇದ್ದಲ್ಲಿಯೇ ಸದ್ದಿಲ್ಲ’ವಾಗಿದ್ದವು

ಈಗ ನಮ್ಮ ಮೇಲೆ ‘ನೆನಪುಗಳ ಗಾಳಿ ದಾಳಿ’ಯಾಗಿ ಮುದವುಂಟು ಮಾಡುತ್ತಿದ್ದಾವೆ. ಮಾತಿನ ಲಹರಿಯ “ತೊಂದರೆಯಿಲ್ಲಗಳು” ‘ಡೋಂಟೂವರಿ’ಗಳಾಗುತ್ತಿವೆ. ಹೆಂಡತಿಯ ‘ಕಿರುಕುಳ’ಗಳಿಗೆ ‘ಯಾಕಾನ ಸಿಗ್ತಿವೋ ಹುಡ್ಗೀರಿಗೆ’ ರಾಗ ತೊಡುತ್ತಿವೆ. (ಅಡ್ಡ ಪರಿಣಾಮದಲ್ಲಿ, ಪ್ರಾಯದಲ್ಲಿ ಅರ್ಧ ಶತಮಾನ ಎಂದೋ ದಾಟಿದ ದೇವಕಿ ‘ಹುಡ್ಗೀ’ ಎಂದಾಗ ಪ್ರಸನ್ನಳಾಗಿ ನನ್ನ ವ್ಯಾ-ಕುಳ ಇಂಗಿಹೋಗುತ್ತದೆ!) “ಇವ್ರು ಎತ್ತಾಕೋದು ಯಾವುದೋ ಎತ್ತಿನ ಹೊಳೆಯಲ್ಲ ಮಾರಾಯ್ರೇ, ನಮ್ಮ ನೇತ್ರಾವತಿಯೇ…” ಎಂದು ಸುಂದರರಾಯರು ಗಡ್ಡ ಕಿತ್ಕೊಳ್ಳುವ ಪರಿಸ್ಥಿತಿಯಲ್ಲಿ, ನನ್ನ ಸಣ್ಣ ಗುನುಗು ‘ಸುತಿಗೇಲಿ ಹೊಡ್ಕಂಡ್ವಿ ಹೆಲ್ಮೆಟ್ಟಿಗೇ’ ದುರಂತ ನಾಟಕದ ನಡುವಣ ಹಾಸ್ಯದ ನಿಟ್ಟುಸಿರಾಗುವುದನ್ನು ಕಂಡಿದ್ದೇನೆ! ಒಟ್ಟಾರೆ ಬೇಡ ಬೇಡವೆಂದರೂ ಬಿಡುಗಡೆಯ ದಿನಾಂಕ ಗಟ್ಟಿಯಾಗುತ್ತಿದ್ದಂತೆ ನನ್ನ ಕಲ್ಪನಾಲಹರಿ ಹಿಗ್ಗಿ ನಾಲ್ಕು ‘ಕುಶಾಲು’ ತೋಪನ್ನು ಮುಖಪುಸ್ತಕದಲ್ಲಿ (ಫೇಸ್ ಬುಕ್) ಉಡಾಯಿಸಿತು. ಮುಖಪುಸ್ತಕದ ಪ್ರಸ್ತುತಿಗಳೆಲ್ಲ ಕುಟುಕು ಜೀವ ಹಿಡಿದಿರುತ್ತವೆ. ಮತ್ತು ನಿರ್ಬಂಧಿತ ರಸಿಕರಿಗಷ್ಟೇ ಸೀಮಿತವೂ ಆಗಿರುತ್ತವೆ. ಹಾಗಾಗಿ ಆ ಸಕ್ಕರೆ ತುಣುಕುಗಳನ್ನು ಸದ್ಯದ ಸಂತೋಷಕ್ಕೆ ಪೂರಕವಾಗಿ ಇಲ್ಲಿ ಪರಿಷ್ಕರಿಸಿ ಪ್ರಸ್ತುತಪಡಿಸುತ್ತಿದ್ದೇನೆ.

ಬೋರೇ ಗೌಡ ಉಡುಪಿಗ್ಬಂದ!

ಬೋರೇಗೌಡ ಉಡುಪಿ ಕೃಷ್ಣನ್ನ ನೋಡಿ, ಹಾಗೇ ಸಮುದ್ರ ನೋಡಕ್ಕೇಂತ ಮಲ್ಪೆ ಕಡೆಗೆ ಹೋದ. ಅಲ್ಲಿ ಎಲ್ಲೆಲ್ಲೂ ಮೀನು ವಾಸನೆ ಮತ್ತೆ ಬೇಕಾದರೆ ಡೀಸೆಲ್ ಕಮಟು. ಕಚಪಚ ಕೆಸರು, ಜಾರಿಕೆ, ಸಾಲದ್ದಕ್ಕೆ ಉಪ್ಪಿನ ಬಿಸಿ ಗಾಳಿ. ಲೆಕ್ಕ ತೆಗೆಯಲಾಗದಷ್ಟು ದೋಣಿಗಳು ತೆರಪಾಗಿ, ಖಾಲಿಖಾಲೀ ಟ್ರೇಗಳನ್ನು ಹೇರಿಕೊಂಡು, ಒತ್ತೊತ್ತಾಗಿ ನಿಂತು ಏನನ್ನೋ ಕಾಯ್ತಾ ಇದ್ದವು. ದಂಡೇಲೂ ತರಹೇವಾರಿ ವಾಹನಗಳು ಕಿಕ್ಕಿರಿದು ನೆರೆದು, ಒಟ್ಟಾರೆ ಜನ ಏದುಸಿರು ಬಿಟ್ಟುಕೊಂಡು, ಬೆವರೊರೆಸಿಕೊಂಡು, ಒಂದೇ ಕಡೆಗೆ ಮುತ್ತಿಗೆ ಹಾಕ್ತಲೇ ಇದ್ದರು. ಎಲ್ಲರ ಬಾಯಲ್ಲೂ ಮಾತು ಮಾತ್ರ – ಸಕ್ರೆ, ಸಕ್ಕರೆ, ಸಕ್ಕರೇ! ಬೋರೇಗೌಡನಿಗೆ ಭಾರೀ ಕುಶಿ, “ಓ ನಮ್ಮಂಡ್ಯ ಸಕ್ರೇನ್ ಇಲ್ ಜನಕ್ಕೂ ದೋಣಿಗಾಕ್ಬುಟ್ಟು ಪರ್ದೇಸಕ್ಕೂ ಹಂಚ್ತಾ ಇರ್ಬೇಕು. ನಾನೂ ವಸೀ ನೋಡ್ಮಾ” ಅಂತ ಅಂದುಕೊಂಡು ಎರಡಾಳು ಸಂದಿನಲ್ಲಿ ನುಗ್ಗಿದ. ಆದರೆ ಅಲ್ಲಿ ದೊಡ್ಡ ದೊಡ್ಡ ಪ್ಲ್ಯಾಸ್ಟಿಕ್ ಕ್ರೇಟ್‌ಗಳು ಹಾರಾಡ್ತಾ ಇದ್ದುವು, ಧಾಂಡಿಗರು ಆ ದೋಣಿ, ಈ ಸಂದಿನಿಂದ ಹಾರಿ, ನುಸುಳಿ ಯಾರೋ ಕೆಂಪಂಗಿ ಹಾಕಿದವನ ಮೇಲೆ ಮುಗಿಬಿದ್ದು ಭಾರೀ ಫೈಟೇ ಫೈಟು! “ಅರೇ ಈ ಕೆಂಪಂಗಿ ನಮ್ಮ್ ಗಣೇಸಾ ಅಲ್ವಾ! ಅವನ್ಗೂ ಮನೇಲಿ ಸಕ್ರೇ ಮುಗುದೋಯ್ತಾ…” ಪಕ್ಕದವನನ್ನು ತಿವಿದು ಬೋರೇಗೌಡ ಕೇಳ್ತಾ ಇದ್ದ. ಅಭಿಮಾನೀ ಸಂಘದ ನವೀನ್ ಸಾಲ್ಯಾನಿಗೆ ಕಿಸಕ್ ನಗೆ. “ಅಜ್ಜೇರೇ ನಿಮ್ಮ ಮಂಡ್ಯಕ್ಕೇ ಹೋಗಿ. ಅಕ್ಟೋಬರ್ ಹದ್ನೆಂಟಕ್ಕೆ ಗಣೇಶನೇ ‘ಸಕ್ಕರೆ ತಂದು ಅಲ್ಲಿ ಹಂಚ್ತಾನೆ. ಅಷ್ಟೇ ಅಲ್ಲಾ ಕರ್ನಾಟಕದೊಳಗೆ ಎಲ್ಲೇ ಹೋಗಿ ೧೮-೧೦-೨೦೧೩ ಶುಕ್ರವಾರದಂದು ಗಣೇಶ ‘ಸಕ್ಕರೆ’ ಕೊಟ್ಟೇ ಕೊಡ್ತಾನೆ.”

ಬಾಡಿಗೆಗೆ ಸೈಕಲ್ಲುಗಳು?

ಕಂಠೀರವ ಸ್ಟುಡಿಯೋದೊಳಗೆ, ಪತ್ರಕರ್ತರೂಂತ ಕಾಣುತ್ತೆ ಹತ್ತೈವತ್ತರ ಸಂಖ್ಯೆಯಲ್ಲಿ ಗಣೇಶರನ್ನು ಮುತ್ತಿಕೊಂಡಿದ್ದರು; ‘ಸಕ್ಕರೆ’ಗೆ ಇರುವೆಗಳ ದಾಳಿ! “ಆಟೋ..’ ಸಾಕಾಯ್ತಾ? ಸೈಕಲ್ ಶಾಪ್ ಇಡೋ ಅಂದಾಜಾ?” ಕಿಡಿಗೇಡಿ ಪ್ರಶ್ನೆ. “ಇಲ್ಲ, ಇಲ್ಲ. ಆಟೋ ಕೂಡ ನುಗ್ಗದ ಗಲ್ಲಿ ಬಿದ್ದು ‘ಸಕ್ಕರೆ’ ಒಟ್ಟು ಮಾಡಲು ಅಭಯಸಿಂಹ ಸೂಚನೆ ಕೊಡ್ತಾ ಹೋದ್ರು. ಸುರೇಶ್ ಸರ್, ಶೈಲ್ಜಾ ಮೇಡಂ ಹಣಕಾಸು ನೋಡ್ಕೊಂಡ್ರು.” “ಎಲ್ಲೆಲ್ಲಾ ಪೆಡಲ್ ಹೊಡ್ದಿದೀರಾ? ಇಷ್ಟೊಂದು ಬೇಕಾಯ್ತಾ?” “ಹಾಸನದ ಹಿನ್ನೀರಿಂದಾ ಉಡ್ಪಿಯ ಉಪ್ಪಿನಕೋಟೆಯಿಂದಾ ಮಡ್ಕೇರಿ ಕೋಟೆ ಬೆಟ್ಟದಷ್ಟೆತ್ತರಕ್ಕೆ ‘ಸಕ್ಕರೆ’ ಬೆಳೆಸ್ತಾ ಬೆಳೆಸ್ತಾ ವರ್ಷ ಹಳ್ತಾದ ಸೈಕಲ್ಲುಗಳು ಕಣ್ರೀ. . .” ಕಿಲಾಡಿ ಉತ್ತರ!

“ಏನು ಟನ್‌ಗಟ್ಲೆ ‘ಸಕ್ಕರೆ’ ನೀವೊಬ್ಬರೇ ಒಟ್ ಮಾಡಿದ್ರಾ?” “ಹಂಗೇನ್ ಇಲ್ಲಪ್ಪಾ. ಓ ಅದ್ನೋಡಿ, ಲೇಡೀಸ್ ಸೈಕಲ್ಲು – ದೀಪಾಸನ್ನಿಧಿ ಹೊಡ್ದಿದ್ದು. ಆ ಕ್ಯಾರಿಯರ್ಯಿರೋ ಹಳೇ ಸೈಕಲ್ ನೋಡಿ – ತುಂಬಾ ಇಂಪಾರ್ಟೆಂಟೂ. ಅನಂತ್ನಾಗ್ ಸರ್ ಆನ್ ಪೆಡಲ್, ವಿನಯಾಪ್ರಸಾದ್ ಮ್ಯಾಡಂ ಆನ್ ಕ್ಯಾರಿಯರ್ರು. ಅವರು ಡಬ್ಬಲ್ ರೈಡ್ ಮಾಡ್ಕೊಂಡ್ ಮಡ್ಕೇರಿ ಸಂತೆ ಡೌನಲ್ಲಿ ಹ್ಯಂಗೆ ಬಿಟ್ರೂಂತೀನೀ. . .” “ಅರೆ! ಮಧುಮೇಹ, ಅಧಿ-ರಕ್ತ ಒತ್ತಡ, ಹೃದಯ ಸ್ತಂಭನ. . . ಎಲ್ಲ ಅನಿಷ್ಠಕ್ಕೂ ಸಕ್ಕರೇನೇ ಕಾರಣ, ಸಕ್ಕರೆ ಬಿಡಿ…” ಕಾಲೆಳೆಯುವುದು ಇವರ ವೃತ್ತಿಧರ್ಮ. “ಅವೆಲ್ಲಾ ಬರೀ ‘ಸಕ್ಕರೆ’ ಸಮಸ್ಯೆ ಅಲ್ಲಾ ಕಣ್ರೀ. ಅದನ್ನು ಉರ್ಸೋವಷ್ಟು ದುಡ್ಮೇ ಕೊರತೆಯಾಗಿರೋದು! ಅದ್ಕೇ ಇಷ್ಟೂನೂ ಸೈಕಲ್, ನಾವೆಲ್ಲಾ ಮೆಟ್ತಾ ಮೆಟ್ತಾ…” “ಏಏ ತಡಿ, ತಡೀರೀ. ಅಷ್ಟನ್ನೂವೇ ಗೋಡೆಗೇರ್ಸಿಟ್ಟು ‘ಮೆಟ್ತಾ ಮೆಟ್ತಾ’ ಅಂತಾ ಬೂಸಿ ಬಿಡ್ತಿದ್ದೀರಾ…” “ಏ ಇಲ್ಲಾ. ತುಂಬಾ ಹೇಳಬೇಕು ನಾನು, (ಕೇಳೋಕ್) ನೀವು ಫ್ರೀ ಇದ್ದೀರಾ?

ಊಟ ಬಿಟ್ರೂ ‘ಸಕ್ಕರೆ’ ಅಲ್ಲ!

ಚೌತಿ ಮುಗಿಯುತ್ತಿದ್ದಂತೆ ಗದ್ದಲ ಮಾಡಿ ‘ಗಣೇಶ’ನನ್ನು ನೀರಿಗೆ ಬಿಟ್ಟರೂ ಮರೆಯಲಾಗದ ‘ಗಣೇಶ’ ಇಲ್ಲಿದ್ದ! ಮಂಗಳಾರತಿ ತೆಗೆದ ಮೇಲೆ ದೀಪಸಾನ್ನಿಧ್ಯ ದೂರಾದರೂ ‘ದೀಪ ಸನ್ನಿಧಿ’ ಇಲ್ಲಿದ್ದಳು!! ಅಂದಂದಿನ ಕಜ್ಜಾಯಗಳು ಮುಗಿದರೂ ‘ಸಕ್ಕರೆ’ ಬೇಡಿಕೆ ಸಾರ್ವಕಾಲಿಕ, ಸಾರ್ವಜನಿಕ. ಅಂಥಾ ‘ಸಕ್ಕರೆ’ಯದೇ ಕನಸು ಅಭಯಸಿಂಹನದ್ದು!!! ಸಿನಿಮಾ ‘ಸಕ್ಕರೆ’ ಬೆಳೆಯುವಲ್ಲಿ ವರ್ಷ ಮೀರಿದರೂ ಸಜ್ಜಾಗಿತ್ತು, ಮಾಗಿತ್ತು. ಆಡಿಯೋ ಬಿಡುಗಡೆ ಮುಗಿದಿತ್ತು.

ಇನ್ನೇನು ಕೆಲವೇ ದಿನಗಳಲ್ಲಿ ‘ಸಕ್ಕರೆ’ ಸಿನಿಮಾವೇ ತೆರೆಯ ಮೇಲೆ ಜನರಂಜಿಸಲಿತ್ತು. ನಿರ್ಮಾಪಕ (-ಬಿ.ಸುರೇಶ ಮತ್ತು ಶೈಲಜಾನಾಗ್), ವಿತರಕ, ಪ್ರಚಾರಕ, ಊರೂರಿನ (ಥಿಯೇಟರ್) ಮಾಲಿಕ ಎಲ್ಲಾ ಇದ್ದರೂ ನಿರ್ದೇಶಕನ ಮುದ್ರೆಗೆ ಅಭಯಸಿಂಹನೇ ಸೈ ಎಂದು ಒತ್ತಡ ಹೆಚ್ಚಿದ್ದ ದಿನಗಳು. ಆದರೆ ಕದ್ರಿ ಕ್ರಿಕೆಟರ್ಸ್ ಮಂಗಳೂರು, ಇವರಿಗೆ ತಮ್ಮ ವರ್ಷಾವಧಿ ಅಷ್ಟಮಿಯ ತಾರಾರಂಜಿತ ಮಹೋನ್ನತ ಕಾರ್ಯಕ್ರಮಕ್ಕಾಗುವಾಗ ‘ಸಕ್ಕರೆ’ ತುಸು ಭಿನ್ನವಾಗಿ ಆಕರ್ಷಿಸಿತು. ಅಭಯಸಿಂಹ ‘ಊರ್ದಾಯೆ’ – ನಮ್ಮ ಮಂಗಳೂರಿನವ. ತಮ್ಮ ಭರ್ಜರಿ ವೇದಿಕೆಯ ಮೇಲೆ ಅಭಯ ಸಮ್ಮಾನ ಗಟ್ಟಿ ಮಾಡಿದರು. ಬೆಂಗಳೂರಿನ ಕೆಲಸದ ಒತ್ತಡಗಳನ್ನು ಒಂದೇ ದಿನದ ಮಟ್ಟಿಗೆ, ಅಂದರೆ ಕೇವಲ ಇಪ್ಪತ್ನಾಲ್ಕು ಗಂಟೆಗಳಿಗಷ್ಟೇ ಒತ್ತಟ್ಟಿಗಿಟ್ಟು ಅಂದರೆ, ಮರುಪಯಣದ ಟಿಕೆಟ್ ಕಿಸೆಯೊಳಗೇ ಇಟ್ಟು ಅಭಯ ಮಂಗಳೂರಿನ ರಾತ್ರಿ ಬಸ್ ಹಿಡಿದ.

ಮಂಗಳೂರಿನ ಕತೆಯೇ ಬೇರೆ. ಬೆಳಿಗ್ಗೆ ಸ್ಪಷ್ಟವಾಗುತ್ತಿದ್ದಂತೆ ಅಭಯನನ್ನು ಮಾತಾಡಿಸಿದ್ದಾತನ ಚರವಾಣಿ ಸಂಪರ್ಕ ದೂರವಾಗಿಹೋಯ್ತು. ಏನೇನೋ ಸಂಪರ್ಕ ಬೆಳೆದು ಸಂಜೆ ಏಳು ಗಂಟೆಗೆ ‘ಸ್ವಾಗತ ಕಚೇರಿ’ಗೆ ಅಭಯ ಹಾಜರಾದರೂ ಕದ್ರಿಗೆ, ವೇದಿಕೆಗೆ ಏರುವುದು ಮತ್ತೂ ತಡವಾಯ್ತು. ಯುವ ಸಂಘಟಕರು ಸಭಾ ಕಲಾಪಗಳನ್ನು ರಾತ್ರಿಯ ಉದ್ದಕ್ಕೆ ತೆರೆದಿಟ್ಟಂತಿತ್ತು. ಆದರೆ ಅಭಯನಿಗೆ ಹಿಂದಿರುಗುವ ರಾತ್ರಿ ಬಸ್ಸಿನ ಸಮಯಮಿತಿ ಕಿಸೆಯಲ್ಲಿ ಚುಚ್ಚುತ್ತಲೇ ಇತ್ತು. ಸಂಘಟಕರು ಅತೀವ ಪ್ರೀತಿಯಲ್ಲೇ ಆದಷ್ಟೂ ಬೇಗನೇ ಸಮ್ಮಾನಿಸಿದರು. ಜನಸಮ್ಮರ್ದದ ನಡುವೆ ದಾರಿಬಿಡಿಸಿ, ಕಾರೇರಿಸಿ ಬಸ್ ನಿಲ್ದಾಣಕ್ಕೇ ನೇರ ಮುಟ್ಟಿಸಿದರು. ಅವನ ಚೀಲ, ತವರುಮನೆಯ ‘ಹರಕೆ’ಗಳನ್ನು ನಾವಿಬ್ಬರು ರಾತ್ರಿ ಬಸ್ಸಿನ ಬಾಗಿಲಿಗೇ ಒಯ್ದು ಮುಟ್ಟಿಸಿದೆವು. “ಅಬ್ಬ! ಹೇಗೂ ತಲಪಿದಿಯಲ್ಲ. ಊಟ ಇಲ್ಲದಿದ್ದರೇನು ಇಕೋ ಸ್ವೀಟ್ ತಿನ್ನು, ನೀರು ಕುಡೀ…” ಎಂದು ದೇವಕಿ ಅನ್ನುತ್ತಿರುವಂತೇ ಬಸ್ಸಿನೊಳಗಿನಿಂದ ಗಟ್ಟಿ ಧ್ವನಿಯಲ್ಲಿ ಕೇಳ್ತಾ ಇತ್ತು “…ಸಕ್ರೇ ತಿಂದೂ ನೀರೂ ಕುಡೀ”

ಯಾಕಾನ ಸಿಗ್ತೀವೋ ಹುಡ್ಗೀರಿಗೇ…

ಸಕ್ಕರೆ ಸಿನಿಮಾ ಬಿಡುಗಡೆಗೆ ಇನ್ನು ‘ಇಷ್ಟೇ ದಿನ’ ಎಂದು ಅಭಯ ದಿನೆ-ದಿನೇ ಮುಖಪುಸ್ತಕದಲ್ಲಿ ಇಳಿಯೆಣಿಕೆಗೆ ತೊಡಗಿಯಾಗಿತ್ತು. ಅವನಮ್ಮ – ದೇವಕಿ, “ಹಾಡುಗಳ ಸೀಡೀ ಬಿಡುಗಡೆ ನನಗೆ ತಪ್ಪಿಹೋಯ್ತು. ಸಿನಿಮಾ ಬಿಡುಗಡೆಗೇನಾದರೂ ಗಮ್ಮತ್ತಿದ್ದರೆ ನಾವು ಖಂಡಿತ ಬರ್ತೇವೆ” ಎಂದು ಚರವಾಣಿ ಚಕ್ಕಂದದಲ್ಲಿ ಚಕ್ಕುಲಿ ಸುತ್ತುತ್ತಿದ್ದಳು. ಅಭಯನಿಗೆ ನಾವು ಬೆಂಗಳೂರಿಸುವುದು ಕುಶಿಯೇ. ಆದರೆ ಠಕ್ಕಿನ ಸಭೆಗಿಂತ ನಿಜ ಸಾರ್ವಜನಿಕ ಪ್ರತಿಕ್ರಿಯೆ ಬಗ್ಗೆ ಹೆಚ್ಚು ಕಾತರನಾಗಿದ್ದವ “ಬಿಡುಗಡೆ ಗಿಡುಗಡೇ… ನೆಪಗಳು ಯಾಕೇಂತ…” ಮಾತು ತೇಲಿಸಿಕೊಂಡೇ ಇದ್ದ.

ಅಭಯನ ಹೆಂಡತಿ – ರಶ್ಮಿ, ಎಂದಿನಂತೆ ತನ್ನ ಟೆಲಿ-ಧಾರಾವಾಹಿಗಳ (ಸದ್ಯ ಪಲ್ಲವಿ ಅನುಪಲ್ಲವಿಯ ‘ನಂದಿನಿ’ ಮತ್ತು ಅಳಗುಳಿಮನೆಯ ‘ಸೌಜನ್ಯ’) ಚಿತ್ರೀಕರಣದ ಭರಾಟೆಯಲ್ಲಿ ಮುಳುಗಿದ್ದಳು. ಆದರೆ ಸಾಮಾನ್ಯರ ಮೇಲಿನ ಪರಿಣಾಮದಲ್ಲಿ ಆಕೆ ಅಭಯನಿಗಿಂತ ಹೆಚ್ಚು ಹತ್ತಿರದವಳಾಗಿದ್ದಳು! ದಕ ಜಿಲ್ಲೆಯ ಶಿರಂಕಲ್ಲಿನ ಮೂಲೆಯ ನವಚೇತನ ಯುವಕ ಮಂಡಲಕ್ಕೆ ‘ನಂದಿನಿ’ಯ ಒಲವು ಸಹಜವಾಗಿ ಬೆಳೆದಿತ್ತು. ಅದರ ಮೇಲೆ ಊರಿನ ಏಕೈಕ ಶಾಲೆಯ (ಶ್ರೀ ವಾಣಿವಿಲಾಸ ಅನುದಾನಿತ ಹಿ.ಪ್ರಾ ಶಾಲೆ) ಮುಖ್ಯೋಪಾಧ್ಯಾಯ – ಭಾಸ್ಕರ ಉಪಾಧ್ಯಾಯರ ಮಗಳು ಈ ರಶ್ಮಿ. ಕೊನೆಯದಾಗಿ ಒಂದೆರಡು ತಿಂಗಳ ಹಿಂದೆ ‘ಕನ್ನಡ ಕೋಟ್ಯಾಧಿಪತಿ’ ಸ್ಪರ್ಧೆಯಲ್ಲಿ ರಶ್ಮಿ ತಾರಾವರ್ಚಸ್ಸಿನಲ್ಲಿ ಭಾಗವಹಿಸಿದ್ದಾಗ ದಕ್ಕಿದ್ದ ಲಕ್ಷಾಂತರ ರೂಪಾಯಿಯನ್ನು ಈ ಊರಿನ ಶಾಲೆಗೆ (ಅಪ್ಪನಿಗಲ್ಲ!) ವರ್ಗಾಯಿಸಿದ್ದಳು. ಹೀಗೆ ಊರವರ ಪ್ರೀತಿ ಮುಪ್ಪುರಿಗೊಂಡು ಯುವಕ ಮಂಡಲ ತನ್ನ ಶ್ರೀ ಶಾರದಾ ಪೂಜೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ (೧೩-೧೦-೨೦೧೩) ರಶ್ಮಿಯನ್ನು ವಿಶೇಷವಾಗಿ ಅಭಿನಂದಿಸುವ ಕಾರ್ಯಕ್ರಮಕ್ಕೆ ಕಟ್ಟಿ ಹಾಕಿದರು. ಸಹಜವಾಗಿ ‘ಖ್ಯಾತ ನಿರ್ದೇಶಕ’ ಪತಿಯೆಂದೂ ಅಭಯಸಿಂಹನನ್ನು ಮುಖ್ಯ ಅತಿಥಿಗಳಲ್ಲಿ ಒಬ್ಬನನ್ನಾಗಿಸಿಬಿಟ್ಟರು. ‘ಸಕ್ಕರೆ’ ಪಾಕ ಹದಗೊಳ್ಳುವ ದಿನ ಸೆಪ್ಟೆಂಬರ್, ಅಕ್ಟೋಬರ್‌ಗಳ ನಡುವೆ ಓಲಾಡುತ್ತಿದ್ದಾಗ ಅಭಯ ಔಪಚಾರಿಕ ಕೂಟಗಳ ಮುಜುಗರ ತಪ್ಪಿಸಿಕೊಳ್ಳಲು ನೆಪವೂ ಆಗುತ್ತದೆಂದುಕೊಳ್ಳುತ್ತ “ನೀವು ನಡೆಸಿಯಪ್ಪಾ. ಅದಕ್ಕೂ ಮೊದಲು ‘ಸಕ್ಕರೆ’ ಬಿಸಿ ಇಳಿಯದಿದ್ದರೆ ನಾನು ಬರಲ್ಲ. ಎರಡೆರಡು ರಾತ್ರಿ ಪ್ರಯಾಣದಲ್ಲಿ ನಿದ್ದೆಗೆಟ್ಟರೆ ‘ಬೇರೆ ಶಿಕ್ಷೇ ಬೇಡ’…” ಎಂದು ಜಾರುತ್ತಲೇ ಇದ್ದ. ಈಗ ‘ಸಕ್ಕರೆ’ ಬಿಡುಗಡೆ ಹದಿನೆಂಟಕ್ಕೆ ಪಕ್ಕಾ ಆದ ಮೇಲೆ ರಶ್ಮಿಯೂ “ಹೋಗಿ ಬರುವ ಅಭಯಾ”ಂತ ಒತ್ತಾಯಿಸುತ್ತಿರಬೇಕು.

ರಶ್ಮಿ ಮಾತು ಮುಟ್ಟಿತೋ ಏನೋ ಹಿಡ್ಕೊಂಡ್ರು ‘ಸಕ್ಕರೆ’ ನಿರ್ಮಾಪಕಿ ಶೈಲಜಾ ನಾಗ್ (ಜೊತೆಗೆ ಬಿ. ಸುರೇಶ್ ಕೂಡಾ ಇದ್ದಾರೆ), “ಇಲ್ಲ ಅಭಯ್, ಪ್ರಚಾರಕ್ಕೆ ಬೇಕಾಗುತ್ತೇ. ನೀವೂನೂ ಹೋಗ್ಬನ್ನಿ…” ಅವನಿಗೆ (ನನ್ನ ಕುಶಾಲಿನ ಸರಣಿಯಲ್ಲೂ) ಮೂರು ‘ಹುಡ್ಗೀರ’ ಹೂಟಕ್ಕೆ ಸಿಕ್ಕಿಬಿದ್ದ ಅನುಭವ. ಇಲ್ಲಿ ಹೊಳೆದ ಅರ್ಥಕ್ಕೆ ಸಿಕ್ಕಿದ್ದು ಮತ್ತು ಚಿತ್ರದಲ್ಲಿ ಉಳಿದದ್ದೂ ಒಂದೇ ಹಾಡು…