ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂಬತ್ತು
ಅಧ್ಯಾಯ ಅರವತ್ತ ಮೂರು [ಮೂಲದಲ್ಲಿ ೩೫]

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಬೆಂಗಳೂರಿನ ಹೆಬ್ಬಾಳದಲ್ಲಿದೆ. ವಿಜ್ಞಾನದ ವಿದ್ಯಾರ್ಥಿಗಳಿಗೂ ಬೆಂಗಳೂರಿನ ನಾಗರಿಕರಿಗೂ ಇದು ರಾಮನ್ ಇನ್ಸ್‌ಟಿಟ್ಯೂಟ್ ಎಂದೇ ಪರಿಚಿತವಾಗಿದೆ. ಇದನ್ನು ಪ್ರವೇಶಿಸುವಾಗ ಮೊದಲು ನಮ್ಮ ಕಣ್ಣು ಕುಕ್ಕುವ ಫಲಕ ಭಯಾಕಾರಕವೇ ಎಂದೆನ್ನಬಹುದು: ‘The Institute is not open to Visitors. Please do not disturb us.’ ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ’ ಎನ್ನುವ ಭಾವದ ನೇರರೂಪ, ಚುಚ್ಚುರೂಪ ಎನ್ನಿಬೇಕಾದರೆ. ಗಿಡಮರ ಹೂದೋಟಗಳಿಂದ ತುಂಬಿರುವ ವಿಶಾಲ ಆವರಣ ರಚಿಸುವ ಪ್ರಶಾಂತ ವಾತಾವರಣ. ಪ್ರತಿ ಅಂಗುಲವೂ ರಾಮನ್ನರ ಸೌಂದರ್ಯಪ್ರಿಯತೆಗೆ ಹೇಗೊ ನಿಸರ್ಗದ ಚೆಲುವಿಗೂ ಹಾಗೆ ಸಾಕ್ಷಿ. ಬೆಂಗಳೂರಿನ ಗಲಭೆ ಗೊಂದಲ ಇಲ್ಲಿಲ್ಲ; ಕಲುಷಿತ ವಾತಾವರಣವೂ ಇಲ್ಲ. ಕಕ್ಕಟ್ಟು ದಾಟಿ ಒಳಗೆ ಕಾಲಿಟ್ಟೊಡನೆ ಎಡಗಡೆ ಎಲೆಗಳ ಅಡಿಯಲ್ಲಿ ಸಂಸ್ಥೆಯ ಕಚೇರಿ ಇದೆ. ಈ ಕಡೆ ಹೋಗದೆ ನೇರದಾರಿಯ ಮೇಲೆ ಸ್ವಲ್ಪ ದೂರ ನಡೆಯುವಾಗ ಬಲಗಡೆ ಇರುವ ಮಹಾಸೌಧ ವಿಜ್ಞಾನಿಯ ಚಟುವಟಿಕೆಯ ರಂಗ, ಆತನ ಕನಸಿನ ನನಸು. ಎಡಗಡೆ ಒಂದು ಆಕಾಶ ವೀಕ್ಷಣ ಗೋಪುರವೂ ಇದೆ. ಇವೆರಡನ್ನೂ ಬಿಟ್ಟು ಅದೇ ದಾರಿಯಲ್ಲಿ ಮುನ್ನಡೆದರೆ ರಾಮನ್ನರ ಭವ್ಯ ನಿವಾಸ ಎದುರಾಗುತ್ತದೆ. ಅಲ್ಲಿಯ ಚೇತನ ಲೋಕಸುಂದರಿ ರಾಮನ್ – ಮಹಾವಿಜ್ಞಾನಿಯ ಸಮರ್ಥ ಪತ್ನಿ.

ಇಡೀ ನಿವೇಶನದಲ್ಲಿ ಅತಿ ಎತ್ತರವಾದ ಹಾಗೂ ರಾಜಮಾರ್ಗದಿಂದ ಅತಿ ದೂರವಾದ ಪಾಯದ ಮೇಲೆ ವಿಜ್ಞಾನಮಂದಿರ ನಿಂತಿದೆ. ಇಲ್ಲಿ ಕೆಲಸ ಮಾಡುವ ಯಾವ ವಿಜ್ಞಾನಿಗೂ ಆತನ ಉಪಕರಣಕ್ಕೂ ನಗರದ ಗಲಭೆ ಕಂಪನಗಳು ತಟ್ಟದಂಥ ಏರ್ಪಾಡು ಇದು. ವಿಶಾಲ ಅಂಗಳ. ಎದುರು ಎತ್ತರ ತಳಪಾಯ. ಮೆಟ್ಟಲು ಏರಿದರೆ ಉದ್ದ ಜಗಲಿ, ಕಟ್ಟಡದ ಎಡಕೊನೆಯಲ್ಲಿ ಮುಖ್ಯಪ್ರವೇಶದ್ವಾರವಿದೆ; ಅಲ್ಲೇ ಉಪ್ಪರಿಗೆ ಏರಲು ಪಾವಟಿಗೆ ಸಾಲೂ ಉಂಟು. ಜಗಲಿಯ ಬಲಕೊನೆಯಲ್ಲಿ ಅಂಗಳಕ್ಕೆ ಚಾಚಿರುವ ಒಂದು ಕೊಠಡಿಯೇ ರಾಮನ್ನರ ಅಧಿಕೃತ ಕೊಠಡಿ. ಏಕ ಅಂತಸ್ತಿನ ಈ ಸೌಧದಲ್ಲಿ ಪ್ರಯೋಗ ಕೊಠಡಿಗಳು ಮತ್ತು ಪುಸ್ತಕ ಭಂಡಾರ ನೆಲ ಹಂತದಲ್ಲಿವೆ. ಮಹಡಿಯ ಮೇಲೆ ವಸ್ತು ಸಂಗ್ರಹಾಲಯ, ಮತ್ತು ಇನ್ನೂರು ಮಂದಿ ಕುಳಿತು ಆಲಿಸುವಂಥ ಭಾಷಣ ಮಂದಿರ ಇವೆ.

ರಾಮನ್ ತಮ್ಮ ತನುಮನ ಧನಗಳನ್ನು ಅಕ್ಷರಶಃ ಅರ್ಪಿಸಿ ಕಟ್ಟಿಸಿರುವ ಈ ಮಹಾಮಂದಿರ ಒಂದು ದೇಗುಲ. ಇದರ ದರ್ಶನ ಯಾರಿಗೂ ಜೀವನದಲ್ಲಿ ಒಂದು ಅಪೂರ್ವಾನುಭವ. ಅದೂ ರಾಮನ್ನರೇ ನಮ್ಮನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುತ್ತ ಒಂದೊಂದೂ ಉಪಕರಣದ ವೈಶಿಷ್ಟ್ಯವನ್ನು ಅವರ ವಿಶಿಷ್ಟ ಶೈಲಿಯಲ್ಲಿ ಭಾವಭಂಗಿ ಸಮೇತ ವಿವರಿಸಬೇಕು. ಆಗಾಗ “Do you follow what I say? Do you see that?” ಎಂದು ಮುಂತಾಗಿ ಕೈಗಳನ್ನು ಕೊಡಹಿ ಕಣ್ಣುಗಳಿಂದ ಮಿಂಚು ಬೀರಿ ತುಟಿಗಳ ಮೇಲೆ ತುಂಟ ನಗೆ ಸೂಸಿ ಪ್ರಶ್ನಿಸಬೇಕು – ಇದು ವರ್ಣನಾತೀತ. ಒಬ್ಬ ವ್ಯಕ್ತಿ, ಒಂದು ಜೀವಮಾನಕಾಲದಲ್ಲಿ ಇಷ್ಟನ್ನು ಇಷ್ಟು ಅಚ್ಚುಕಟ್ಟಾಗಿ ನಿರ್ಮಿಸುವುದು ಸಾಧ್ಯವೇ, ಮೇಲಾಗಿ ಆತ ಮೂಲಭೂತ ಸಂಶೋಧನೆಗಳಲ್ಲಿ ತೀವ್ರ ಆಸಕ್ತಿ ತಳೆದು ಅಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡುವುದು ಕೂಡ ಶಕ್ಯವೇ ಎಂದು ಸಾಮಾನ್ಯರಿಗೆ ಸಂದೇಹ ಬಂದರೆ ಅದಕ್ಕೆ ಉತ್ತರ, ಹೌದು – ರಾಮನ್. ಪುಸ್ತಕ ಪ್ರೇಮಿಗಳು ಈ ಗ್ರಂಥಾಲಯದಲ್ಲಿ ಕಾಣುವುದೇನು? ಇದೊಂದು ಅತ್ಯಾಧುನಿಕ ಸಮಗ್ರ ವಿಜ್ಞಾನಗ್ರಂಥ ಸಂಗ್ರಹ ಮಾತ್ರವಲ್ಲ. ಪ್ರತಿಯೊಂದು ಗ್ರಂಥದ ಮೇಲೂ ರಾಮನ್ ನಿಶಿತಮತಿಯ ಕ್ಷೇಪ – ಎಂದರೆ ರಾಮನ್ ಪರಿಣಾಮವನ್ನು ನೋಡಬಹುದು.

ಪರಮಶಿವಯ್ಯನವರ ಮಾತಿನಲ್ಲಿ, “ದಿನದ ಕೆಲಸ ಮುಗಿಸಿ ಮಲಗುವ ಮುಂದೆ ಪ್ರತಿ ರಾತ್ರಿ ಹೊಸತೊಂದು ಭೌತವಿಜ್ಞಾನ ಪುಸ್ತಕವನ್ನು ಓದುವ ನಿಯಮವನ್ನು ಅವರು ಸರ್ವಥಾ ತಪ್ಪಿಸುತ್ತಿರಲಿಲ್ಲ. ಬೆಳಗಾವಿಗೆ ಅವರು ಬಂದಾಗ ರೋಟರಿಯಲ್ಲಿ ಭಾಷಣ ಮುಗಿಸಿ ಬಿಡಾರಕ್ಕೆ ಮರಳಿದ್ದು ರಾತ್ರಿ ೧ ಗಂಟೆಗೆ. ನಾನು ನೇರವಾಗಿ ಮಲಗುವುದಕ್ಕೆ ಹೊರಟೆ. ಒಡನೆಯ ಬಂತು ಅವರ ಗುರುದಂಡದ ಪ್ರಹಾರ ‘ಬಲು ದೊಡ್ಡ ಮನುಷ್ಯನಾಗಿ ಬಿಟ್ಟೆ; ನಿತ್ಯರಾತ್ರಿ ಒಂದು ಹೊಸ ಭೌತವಿಜ್ಞಾನ ಪುಸ್ತಕ ಓದಬೇಕೆಂದು ನಾನು ಹೇಳಿದ್ದನ್ನು ಮರೆತೇ ಬಿಟ್ಟೆಯಲ್ಲ!’ ಹೀಗೆಂದು ಹೇಳಿ ತಮ್ಮ ಟ್ರಂಕಿನಿಂದ ಅದೇ ಪ್ರಕಟವಾಗಿದ್ದ ಸ್ಪೇಟರ್ ಮತ್ತು ಫ್ರಾಂಕ್ ವಿರಚಿತ Introduction to theoretical physics ಪುಸ್ತಕವನ್ನು ತೆಗೆದು ನನಗೆ ಕೊಟ್ಟರು, ತಾವು ಇನ್ನೊಂದನ್ನು ಹಿಡಿದುಕೊಂಡು ಕುಳಿತರು. ಓದು ಮುಗಿಸುವಾಗ ಬೆಳಗಿನ ೪ ಗಂಟೆ.”

A (Antropology)ಯಿಂದ Z (Zoology)ವರೆಗಿನ ಅವರ ಆಸಕ್ತಿಯ ವಿಶ್ವಕೋಶ ವ್ಯಾಪ್ತಿ ಒಂದು ಪವಾಡವೇ ಸರಿ. ಗ್ರಂಥಭಂಡಾರದಿಂದ ವಸ್ತು ಸಂಗ್ರಹಾಲಯವನ್ನು ಪ್ರವೇಶಿಸಿದಿರೋ ಅಲ್ಲೊಂದು ಡಿಸ್ನಿ ಮಾಯಾಲೋಕ ಕಾಣುವಿರಿ. ರಾಮಾಯಣದ ಸ್ವಯಂ ಪ್ರಭೆಯ ಪ್ರಪಂಚ. ಹಕ್ಕಿಗಳು, ಕೀಟಗಳು, ಉರಗಗಳು, ಪತಂಗಗಳು ವಿವಿಧ ಶಿಲೆಗಳು, ಹರಳುಗಳು, ವಜ್ರಗಳು – ಒಂದೇ ಎರಡೇ? ದಿವಸಗಟ್ಟಲೆ ನೋಡಿ ಪರೀಕ್ಷಿಸಿದರೂ ಮುಗಿಯದ ಸಂಗ್ರಹವಿದು. ವಜ್ರ ಪರೀಕ್ಷೆ ರಾಮನ್ನರ ಅಸಂಖ್ಯಾತ ಆಸಕ್ತಿಗಳ ಪೈಕಿ ಒಂದು. ಒಂದು ಕಾಲದಲ್ಲಿ ಇದರ ಹುಚ್ಚು ಅವರನ್ನು ವಿಪರೀತವಾಗಿ ಆವರಿಸಿತ್ತು. ನೊಬೆಲ್ ಪಾರಿತೋಷಿಕದ (೧೯೩೦ರಲ್ಲಿ ಇದರ ಮೌಲ್ಯ ಸುಮಾರು ೪೦,೦೦೦ ಡಾಲರುಗಳು) ಬಹ್ವಂಶವನ್ನು ಸಂಶೋಧನೆಗೋಸ್ಕರ ವಿವಿಧ ನಮೂನೆಯ ವಜ್ರಗಳ ಖರೀದಿಗಾಗಿಯೇ ವಿನಿಯೋಗಿಸಿದ್ದರು. ಒಂದು ಶತಮಾನಕ್ಕಿಂತ ಹಿಂದೆ ಫ್ಯಾರಡೇ ಆವಿಷ್ಕರಿಸಿದ ಮತ್ತು ಆತನ ಹೆಸರಿನಿಂದಲೇ ಕರೆಯಲಾಗಿರುವ ವಜ್ರಗಳಲ್ಲಿಯ (ಫ್ಯಾರಡೇ) ಆವರ್ತನೆಯನ್ನು ನಿಖರವಾಗಿ ಅಳೆದ ಕೀರ್ತಿ ರಾಮನ್ನರದು. ಮಂದಿರದ ಮೂಲಕ ಸಾಗುವಾಗ ಒಂದೊಂದು ಸಂಗ್ರಹವನ್ನೂ ಕುರಿತು ರಾಮನ್ ನೀಡುವ ಆತ್ಮೀಯ ವಿವರಣೆಗಳು ತುಂಬ ಮೋಹಕ. ಇದನ್ನು ಅವರು ಎಲ್ಲಿ ಕೊಂಡರು, ಅದನ್ನು ಯಾರು ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಕಲ್ಲಿನ ಕತೆ ಏನು, ಈ ವಜ್ರದ ಇತಿಹಾಸ ಏನು, ಈ ಹಕ್ಕಿಯ ವಂಶದ ರಹಸ್ಯ ಏನು – ಮುಂತಾದ ಸಂಗತಿಗಳನ್ನು ಅವರ ಮಾತಿನಲ್ಲೇ ಕೇಳುವಾಗ ಇವರೇನು ಭೌತ ವಿಜ್ಞಾನಿಯೋ ಕೀಟ ವಿಜ್ಞಾನಿಯೋ ಭೂಗರ್ಭ ವಿಜ್ಞಾನಿಯೋ ಎಂದು ನಮಗೆ ಅನ್ನಿಸಿದರೆ ಆಶ್ಚರ್ಯವಿಲ್ಲ.

ಇಲ್ಲಿಗೇ ಮುಗಿಯುವುದಿಲ್ಲ. ನಮ್ಮನ್ನು ಅವರು ಒಂದು ಚಿಕ್ಕ ಕೋಣೆಗೆ ಕರೆದೊಯ್ಯುವರು. ಅಲ್ಲಿ ಕನ್ನಡಿ ಕಪಾಟುಗಳ ಒಳಗೆ ಓರಣವಾಗಿ ಅಳವಡಿಸಿರುವ ಯದ್ವಾತದ್ವಾ ಆಕಾರಗಳ ಹಲವಾರು ಕಲ್ಲುಗಳನ್ನು ನೋಡಲು ಹೇಳುತ್ತಾರೆ. ಹಗಲು ಬೆಳಕಿನಲ್ಲಿ ಅವನ್ನು ಕಾಣುವ ನಮ್ಮ ಮುಖದಲ್ಲಿ ಮೂಡುವುದು ನಗು, ಈ ಮುದುಕನ ಹವ್ಯಾಸ ನೋಡಿ – ರಸ್ತೆ ಬದಿಯ ಜಲ್ಲಿ ಕಲ್ಲುಗಳಿಗೆ ಬೆಟ್ಟಗುಡ್ಡಗಳ ಹರವಿನಲ್ಲಿ ಯಾದೃಚ್ಛಿಕವಾಗಿ ಹರಡಿ ಬಿದ್ದಿರುವ ಭೂರಿ ಶಿಲೆಗಳಿಗೆ ಈ ರಾಜಸನ್ಮಾನವೇ ಎಂದು. ರಾಮನ್ ಕದ ಮುಚ್ಚುತ್ತಾರೆ. ಕಿಟಕಿಗಳಿಗೆ ಕಪ್ಪು ಪರದೆ ಎಳೆಯುತ್ತಾರೆ. ಈಗ ನಾವು ಕಗ್ಗತ್ತಲ ಕೋಣೆಯ ಅಖಂಡತೆಯಲ್ಲಿ ಅಸ್ತಿತ್ವ ಕಳೆದುಕೊಂಡಿರುತ್ತೇವೆ. ಟಿಕ್ ಶಬ್ದ – ಕಪಾಟುಗಳ ಒಳಗೆ ಯಾವುದೋ ಬಣ್ಣದ ವಿದ್ಯುದ್ದೀಪಗಳು ಬೆಳಕು ಹರಿಸುತ್ತವೆ. ಆ ಬೆಳಕಿನಲ್ಲಿ ನಾವು ಕಾಣುವುದೇನು – ವಿಶ್ವಕರ್ಮನಿಂದಲೂ ನಿರ್ಮಿಸಲು ಸಾಧ್ಯವಾಗದ ಆಭರಣದ ಕುಸುರಿ ಕೆಲಸಗಳು, ವರ್ಣ ವೈವಿಧ್ಯಗಳು. ಇವನ್ನೆಲ್ಲ ಆ ಕಲ್ಲುಗಳ ಮೇಳೆ ಬಿಡಿಸಿದವರಾರೋ? ಆ ಬಣ್ಣದ ಬೆಳಕು ನಂದಿತು, ಬೇರೆ ಬಣ್ಣದ ಬೆಳಕು ಸೂಸಿತು. ಅವೇ ಕಲ್ಲುಗಳು, ಅವೇ ಸ್ಥಾನಗಳು. ಆದರೆ ಈಗಿನ ನೋಟ ಬೇರೆಯೇ. ಬೆಳಕು ಎಂಥ ವಿಸ್ಮಯ ರಚನೆ ಎಂಬುದನ್ನೆಲ್ಲ ರಾಮನ್ ದಂಡೆ ಮೀರಿದ ಉತ್ಸಾಹದಿಂದ ವಿವರಿಸಿ, ದೊಗಲೆ ಶರಾಯಿಯನ್ನು ಮೇಲೆಳೆದು ಕೋಟಿನ ತೋಳುಗಳನ್ನು ಕುಲುಕುವಾಗ ನಮ್ಮಲ್ಲಿ ಮೂಡುವ ಭಾವ ಕೃತಕೃತ್ಯತೆ.

ಅಂದಮಾತ್ರಕ್ಕೆ ರಾಮನ್ ಬದುಕಿದ್ದಾಗ ಸುಲಭ ಲಭ್ಯರಿದ್ದರೆಂದಾಗಲೀ ಯಾರು ಬೇಕಾದರೂ ಅವರನ್ನು ಹೋಗಿ ನೋಡಿ ಇವೆಲ್ಲ ಅನುಭವಗಳನ್ನು ಪಡೆದು ಬರಬಹುದಿತ್ತೆಂದಾಗಲೀ ಭಾವಿಸಬೇಕಾಗಿಲ್ಲ. ‘ಪ್ರಬುದ್ಧ ಕರ್ಣಾಟಕ’ದ ಚಿನ್ನದ ಸಂಚಿಕೆಗೋಸ್ಕರ ಸಿ.ವಿ ರಾಮನ್ ಅವರ ಜೀವನಚಿತ್ರವನ್ನು ನಾನು ಬರೆದುಕೊಡಬೇಕೆಂಬ ಕೋರಿಕೆ ಪತ್ರ ಬಂದದ್ದು ಸರಿಯಷ್ಟೆ (ಈ ರಾಮನ್-ತ್ರಿವಳಿ ಕಂತಿನ ಮೊದಲ ಭಾಗ ನೋಡಿ). ನಾನಾಗ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಾರನಾಗಿದ್ದೆ. ಭೌತ ವಿಜ್ಞಾನದ ವಿದ್ಯಾರ್ಥಿಯಲ್ಲದ ನನಗೆ ರಾಮನ್ನರ ವೈಜ್ಞಾನಿಕ ಸಾಧನೆಗಳನ್ನು ಕುರಿತು ತಿಳಿದಿದ್ದುದು ಸಾಮಾನ್ಯ ಓದುಗನಿಗೆ ತಿಳಿದಿದ್ದಷ್ಟು ಮಾತ್ರ. ಅವರನ್ನೇ ಸಂದರ್ಶಿಸಿ ನೇರ ಮಾಹಿತಿ ಪಡೆದರೆ ಜೀವನಚಿತ್ರಕ್ಕೆ ಹೆಚ್ಚಿನ ನೈಜತೆ ಬರುವುದೆಂದು ಮನಗಂಡು ಅವರ ಭೇಟಿಗಾಗಿ ರಾಮನ್ ಇನ್ಸ್‌ಟಿಟ್ಯೂಟಿಗೆ ಹೋದೆ. ಮೊದಲು ಸಂಸ್ಥೆಯ ಕಾರ್ಯದರ್ಶಿಯವರನ್ನು ನೋಡಿದಾಗ ದೊರೆತ ಅನುಭವ ಆಶಾದಾಯಕವಾಗಿರಲಿಲ್ಲ. ಅವರ ಮಾತಿನ ಸಾರವಿಷ್ಟೆ, “ರಾಮನ್ ಯಾರಿಗೂ ಭೇಟಿ ನೀಡಲು ಇಷ್ಟಪಡುವುದಿಲ್ಲ. ಅದೂ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾತಾಡಲು ಅವರಿಗೆ ಪುರಸೊತ್ತಿಲ್ಲ.”

“ನೀವೇ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ, ಆಗದೇ?” ನನ್ನ ಮುಂದಿನ ಯೋಚನೆ. “ಅವರ ಅಪ್ಪಣೆ ಇಲ್ಲ.” ಅಂತೂ ನನ್ನ ಒತ್ತಾಯಕ್ಕೆ ಮಣಿದ ಕಾರ್ಯದರ್ಶಿ ಒಂದು ಸಲಹೆ ನೀಡಿದರು – ಲೋಕಸುಂದರಿ ರಾಮನ್ ಜೊತೆ ನಾನು ಪ್ರಸ್ತಾವಿಸಿ ಮುಂದುವರಿಸಬಹುದೆಂದು. ಶ್ರೀಮತಿಯವರಲ್ಲಿಯೂ ನನಗೆ ಕಾದಿದ್ದುದು ಹತಾಶೆಯೇ – ಯಾವುದೇ ವಿವರವನ್ನು ನೀಡಲು ಅವರು ನಿರಾಕರಿಸಿದರು. ಕೊನೆಗೆ ಅವರು ಕೂಡ ನನ್ನ ಬೇಡಿಕೆಯನ್ನು ನಿರಾಕರಿಸಲೂ ಆಗದೆ ನಿವಾರಿಸಲೂ ಆಗದೆ ತಾವು ಪತಿಯೊಡನೆ ಮಾತಾಡಿ ನನಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪತ್ರ ಬರಲಿಲ್ಲ. ನಾನೇ ಪುನಃ ಹೋದೆ. ಈ ಸಲ ಶ್ರೀಮತಿಯವರು ಮನೆಯಲ್ಲಿರಲಿಲ್ಲ. ಹೇಗೂ ಬಂದಿದ್ದೇನೆ. ಪ್ರಯೋಗಮಂದಿರಕ್ಕೆ ಹೋಗಿ ಭೇಟಿಯ ತಾರೀಕನ್ನು ನಿಶ್ಚೈಸಿ ಬರೋಣ ಎಂಬ ಹುಚ್ಚು ಧೈರ್ಯದಿಂದ ಆ ಕಡೆಗೆ ನಡೆದೆ. ಮೌನವೇ ನಿಂತಿದ್ದಂತಿತ್ತು ಆ ಮಂದಿರ. ಜಗಲಿಯ ಬಲಪಾರ್ಶ್ವದ ಕೊಠಡಿಯೊಂದನ್ನು ಉಳಿದು ಮಿಕ್ಕೆಲ್ಲ ಪಡಿಗಳಿಗೂ ಬೀಗ. ಅದರ ಪಕ್ಕದ ಒಂದು ಕೋಣೆಯಲ್ಲಿ ಗುಮಾಸ್ತ ಬೆರಳಚ್ಚು ಒತ್ತುತ್ತಿದ್ದುದನ್ನು ಕಂಡೆ. ಆತನೆಡೆಗೆ ಸಾಗಿ ನಾನು ಬಂದ ಉದ್ದೇಶ ಹೇಳಿದೆ. ನನ್ನ ಹೆಸರು ಬರೆದಿದ್ದ ಚೀಟಿ ತೆಗೆದುಕೊಂಡು ಆತ ಕೊಠಡಿ ಒಳಹೊಕ್ಕ. ನಾನು ಅದರ ಕದದ ಎದುರಿನ ಜಗಲಿಯ ಮೇಲೆ ನಿಂತಿದ್ದೆ. ಗುಮಾಸ್ತನ ಹಿಂದೆಯೇ ಅಲ್ಲಿಗೆ ನಡೆದು ಬಂದರು ರಾಮನ್. ಅಸಹನೆಯನ್ನು ಬೀರುವ ತೀಕ್ಷ್ಣ ನೋಟದಿಂದ ನನ್ನನ್ನು ಇರಿದಂತಾಯಿತು. ನನ್ನ ವಿನೀತ ಮನಸ್ಸಿನ ವಂದನೆಯನ್ನು ಸ್ವೀಕರಿಸಿದರೋ ಇಲ್ಲವೋ ತಿಳಿಯಲಿಲ್ಲ. ಮುಂದಿನ ಸಂಭಾಷಣೆ ನಡೆದದ್ದು ಇಂಗ್ಲಿಷಿನಲ್ಲಿ, ಸಾರಾಂಶ:

“ಏನು ಏನು ಏನು ಬೇಕು ನಿಮಗೆ!” ಅವರ ಮಾತು. “ನಾನು ಮೈಸೂರು ವಿಶ್ವವಿದ್ಯಾಲಯ. . .” “ಏನು? ಮೈಸೂರು ವಿಶ್ವವಿದ್ಯಾನಿಲಯ? ನನಗೂ ಅದಕ್ಕೂ ಏನೂ ಸಂಬಂಧವಿಲ್ಲ. ನೀವು ತೊಲಗಬಹುದು” (You may get out) “ಒಂದು ಸುವರ್ಣಸಂಚಿಕೆ. . .” “ಪತ್ರಿಕೆಗೂ ನನಗೂ ಏನೂ ಸಂಬಂಧವಿಲ್ಲ, ನೀವು ತೊಲಗಬಹುದು.” “ಇದು ವಾರ್ತಾಪತ್ರಿಕೆ ಅಲ್ಲ. ನೋಡಿ ನನಗೆ ಬಂದಿರುವ ಪತ್ರ” ಎಂದು ಮೈಸೂರು ವಿಶ್ವವಿದ್ಯಾನಿಲಯದಿಂದ ಅಧಿಕೃತವಾಗಿ ಬಂದಿದ್ದ ಪತ್ರವನ್ನು ಅವರ ಎದುರು ಹಿಡಿದೆ. “ಇದನ್ನೆಲ್ಲ ಓದಿ ಕಾಲಹರಣ ಮಾಡಲು ನಾನು ತಯಾರಿಲ್ಲ. ನೀವು ತೊಲಗಬಹುದು.” “ತಮ್ಮಂಥ ಜಗದ್ವಿಖ್ಯಾತ ವಿಜ್ಞಾನಿಗಳ ಜೀವನಚರಿತ್ರೆ ಈ ವಿಶೇಷ ಸಂಚಿಕೆಯಲ್ಲಿ ಬರಬೇಕು.” “ಸ್ವಾಮಿ! ಈ ಪೇಪರಿನವರೊಡನೆ ನನಗೆ ಯಾವ ವ್ಯವಹಾರವೂ ಬೇಕಾಗಿಲ್ಲ. ನೀವು ತೊಲಗಬಹುದು…” “ನಮ್ಮ ಓದುಗರಿಗೆ ನಿಮ್ಮ ಜೀವನಚರಿತ್ರೆ ಖಂಡಿತ ಉತ್ಸಾಹದಾಯವಾಗುತ್ತದೆ. ತಮ್ಮ ಸಂದರ್ಶನ ಭಾಗ್ಯವನ್ನು ನನಗೆ ಕರುಣಿಸಬೇಕು.” ಹೀಗೆಯೇ ‘ನೀವು ತೊಲಗಬಹುದು’ ಪಲ್ಲವಿಯ ಸುತ್ತಲೂ ನಮ್ಮ ಮಾತು ಅಲ್ಲಿ ನಿಂತುಕೊಂಡೇ ಮುಂದುವರಿಯಿತು. ಆದರೆ ನನ್ನ ನಚಿಕೇತ ಪ್ರಯತ್ನದ ಎದುರು – ಬಹುಶಃ ನಾನೊಬ್ಬ ಖದೀಮನಲ್ಲ ಎಂದು ಅವರಿಗೆ ಅನ್ನಿಸಿತೋ ಏನೋ – ಅವರು ಕ್ರಮೇಣ ಹಿಂಜರಿಯುತ್ತಿದ್ದುದು ನನಗೆ ತಿಳಿಯದಿರಲಿಲ್ಲ. ನನಗೇ ಆಶ್ಚರ್ಯವಾಗುವಂತೆ ಅವರ ಮುಂದಿನ ವರ್ತನೆ. ಕೊಠಡಿಯೊಳಗೆ ಬರಹೇಳಿದರು. ಅವರ ಆಸನದ ನೇರಿದಿರು ಕುರ್ಚಿಯ ಮೇಲೆ ಕೂರಲು ಹೇಳಿದರು. ಅವರು ಕೂರುವ ಮೊದಲೇ ನಾನು ಹೇಗೆ ಕೂರಲಿ ಎಂದು ನಿಂತೇ ಇದ್ದೆ. ಆದರೆ ಅವರೊಂದು ಬಲು ದೊಡ್ಡ ಮಾತು ಹೇಳಿ ನನ್ನನ್ನು ಪೂರ್ಣವಾಗಿ ಗೆದ್ದುಬಿಟ್ಟರು, “ನೀವು ಬಂದವರು; ಮೊದಲು ನೀವು ಕೂರಬೇಕು.”

ನಾನು ಕುಳಿತೆನೋ ಕುಸಿದು ಹೋದೆನೋ ಅಂತು ರಾಮನ್ ಎದುರು ಇದ್ದದ್ದು ಹೌದು. ನನ್ನ ಕೈಯಲ್ಲಿದ್ದ ವಿಶ್ವವಿದ್ಯಾನಿಲಯದ ಪತ್ರವನ್ನು ಅವರು ಆಗ ಓದಿದರು. ಅವರೇ ಮಾತು ಮುಂದುವರಿಸಿದರು, “ಸರಿ, ಸುವರ್ಣ ಸಂಚಿಕೆಗಾಗಿ ನನ್ನ ಜೀವನಚಿತ್ರ ಬರೆಯಬೇಕೆಂಬುದು ನಿಮ್ಮ ಇರಾದೆ. ಆದರೆ ನನ್ನ ಜೀವನಚರಿತ್ರೆ ನನಗೆ ಏನೇನೂ ಮಹತ್ತ್ವದ್ದಾಗಿ ತೋರುವುದಿಲ್ಲ. ಎಲ್ಲರಂತೆ ಹುಟ್ಟಿದೆ, ಓದಿದೆ, ಇತ್ಯಾದಿ.”

“ಹಾಗೆನ್ನಬಾರದು. ನೀವು ನಡೆದುಬಂದ ದಾರಿ, ಏರಿರುವ ಎತ್ತರ ಮುಂದಿನ ಜನಾಂಗಕ್ಕೆ ಒಂದು ಆದರ್ಶ, ದಾರಿ ನಡೆಯಲು ಕೈದೀವಿಗೆ. ನೀವು ಬದುಕಿ ಬಾಳಿರುವ ಈ ಸುದಿನಗಳಲ್ಲಿ ನಿಮ್ಮ ಮಾತುಗಳು ನೇರವಾಗಿ ಅವರಿಗೆ ಮುಟ್ಟಬೇಕು ಎಂಬುದು ನಮ್ಮೆಲ್ಲರ ಹಂಬಲ. ಆದ್ದರಿಂದ ನೀವು ನಿಮ್ಮ ಜೀವನ ಬೆಳೆದು ಬಂದ ಬಗೆಯನ್ನು ನನಗೆ ಹೇಳಬೇಕೆಂದು ಬೇಡುತ್ತೇನೆ.” “ಸ್ವಾಮೀ! ನನ್ನ ವಿಜ್ಞಾನ ಜೀವನವೇ ನನ್ನ ಜೀವನ. ಈ ಮಂದಿರವೆಲ್ಲವೂ ನನ್ನ ಜೀವನ. ಇಂಥ ನನ್ನ ಜೀವನವನ್ನು ಕುರಿತು ಬರೆಯ ಬೇಕಾದರೆ ನೀವು ಭೌತವಿಜ್ಞಾನದ ಎಂಎಸ್ಸಿ ಪದವೀಧರರಾದರೂ ಆಗಿರಬೇಕು. ನೀವು ಕಲಿತಿರುವ ವಿಷಯವೇನು?” “ಗಣಿತ.” “ಹಾಗಾದರೆ ಈ ಕೆಲಸ ನಿಮಗೆ ಬೇಡ. ರಾಮನ್ ಪರಿಣಾಮ, ರಾಮನ್ ಲೇಸರ್ ವಿಷಯವೆಲ್ಲ ನಿಮಗೆ ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ನೀವಿನ್ನು ತೊಲಗಬಹುದು” ಅವರೆದ್ದರು. ನಾನೂ ಅನಿವಾರ್ಯವಾಗಿ, ಇಂಥ ಹಠಾತ್ ರಂಗಬದಲಾವಣೆಗೆ ತಯಾರಾಗಿರದಿದ್ದುದರಿಂದ, ಏಳಲೇಬೇಕಾಯಿತು. “ಅದನ್ನು ನಾನು ತಿಳಿಯದೇ ಬಂದದ್ದು ಅಪರಾಧ. ಇನ್ನೊಮ್ಮೆ ಕಲಿತು ಬರುತ್ತೇನೆ. ತಾವು ಕೃಪೆ ಮಾಡಬೇಕು.”

ಆ ಸಲ ನಾನು ಮರಳಿದೆ. ಮನಃಪೂರ್ವಕವಾದ ನಮ್ಮ ಮೆಚ್ಚುಗೆಯ ಮಾತು ವರ್ತನೆ ಅವರಿಗೆ ಅಪ್ರಿಯವಲ್ಲ ಎಂದು ಅನ್ನಿಸಿ ಧೈರ್ಯ ತಳೆದೆ. ಕೆಲವು ವಾರ ಪರ್ಯಂತ ನಾನು ರಾಮನ್ ಪರಿಣಾಮಕ್ಕೆ ಸಂಬಂಧಿಸಿದ ಜ್ಞಾನ ಸಂಪಾದಿಸಲು ಶ್ರಮವಹಿಸಿ ಓದಿದೆ. ನಮ್ಮ ಕಾಲೇಜಿನ ಭೌತವಿಜ್ಞಾನ ಪ್ರಾಧ್ಯಾಪಕರೊಡನೆ ವಿಚಾರವಿನಿಮಯ ನಡೆಸಿ ಸಂಶಯಗಳನ್ನು ಪರಿಹರಿಸಿಕೊಂಡೆ. ಈ ಮಧ್ಯೆ ರಾಮನ್ ಜೀವನದ ಮುಖ್ಯ ವಿವರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಬರೆಯಬೇಕಾಗಿದ್ದ ಲೇಖನದ ರೂಪರೇಷೆ ಸಿದ್ಧಪಡಿಸಿದೆ. ಈಗ ಅವರ ಅಲೆಯುದ್ದದಿಂದ ಪೂರ್ಣ ಭಿನ್ನ ನಾನಲ್ಲ ಎಂದು ಧೈರ್ಯ ತಳೆದು ಪುನಃ ಅವರನ್ನು ನೋಡಲು ಹೋದೆ. ತತ್ಪೂರ್ವ ಅವರಿಗೆ ದೂರವಾಣಿಸಿದಾಗ ಅಪರಾಹ್ಣ ೩ ಗಂಟೆಗೆ ಬರಲು ಹುಕುಂ ಆಯಿತು. ನಾನು ೨.೫೮ ಗಂಟೆಗೆ ಅವರ ಜಗಲಿ ಏರುತ್ತಿದ್ದಾಗ ಅವರು ಅಲ್ಲೇ ನಿಂತಿದ್ದು ನನ್ನನ್ನು ಕಾಯುತ್ತಿದ್ದರು.

“Well Sir, you are on time!” ಎಂದು ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. “ಏನಿದೆಲ್ಲ ಫೈಲ್, ಪತ್ರ” ಎಂದು ನಾನು ಹಿಡಿದಿದ್ದ ದಫ್ತರಗಳತ್ತ ದೃಷ್ಟಿ ಹಾಯಿಸಿದರು. ತೋರಿಸಿದೆ – ರಾಮನ್ ಪರಿಣಾಮ ಕುರಿತು ನಾನು ಸಂಗ್ರಹಿಸಿದ್ದ ವಿವರಗಳನ್ನು ಅವರ ಮುಖ ಪ್ರಸನ್ನತೆಯಿಂದ ಅರಳಿತು. ಪುನಃ ಹಿಂದಿನಂತೆ, ಎದುರುಬದಿರಾಗಿ ಕುಳಿತೆವು. ನಾನೇ ಮೊದಲು ಕುಳಿತದ್ದು ಅವರ ಅಪ್ಪಣೆ ಮೇರೆಗೆ. ಅವರು ಮಾತಾಡಿದರು ಬಲು ರಭಸದಿಂದ. ನಾನು ಮಾತಾಡದೇ ಟಿಪ್ಪಣಿ ಗೀಚುತ್ತ ಥಾನು ತಿರುವುತ್ತ ಮುನ್ನಡೆದೆ. ನಮ್ಮ ದೇಶದ ಪ್ರಾಚೀನತೆ, ಸಂಸ್ಕೃತಿ ಪರಂಪರೆ, ನಮ್ಮ ಜನರ ಸಹಜ ಕೌಶಲ, ಆದರೂ ನಮ್ಮ ಸರ್ಕಾರದ (ಸ್ವತಂತ್ರ ಭಾರತ ಸರ್ಕಾರದ) ಅನಾಸ್ಥೆ, ನಿಷ್ಕ್ರಿಯತೆ, ಅದರಿಂದ ಆಗುತ್ತಿರುವ ಪ್ರತಿಭಾ ಪಲಾಯನ, ವಿದೇಶೀ ಮುದ್ರೆ ಪಡೆಯದೇ ಜ್ಞಾನರಂಗದಲ್ಲಿ ಮೇಲೇರಲು ಇಂದಿಗೂ ಎದುರಾಗುವ ಅಡಚಣೆಗಳು, ಹೋಗಿ ಮರಳಿದವರಿಗೂ ಇಲ್ಲಿರುವವರಿಗೂ ಒಮ್ಮೆ ಉನ್ನತ ಸ್ಥಾನ ಗಿಟ್ಟಿಸಿಕೊಂಡರೆ ಮತ್ತೆ ಜ್ಞಾನದ ವಿಚಾರ ತಲೆದೋರುವ ಪೂರ್ಣ ವಿರಾಮ, ಅಂತರ ಪ್ರಾಂತೀಯ ಮತ್ಸರಗಳು, ಜಾತಿ ಕಲಹಗಳು, ದೇಶದಲ್ಲಿ ಪ್ರಾಮಾಣಿಕತೆಗೆ ರಿಕ್ತತೆ – ಒಂದೇ ಎರಡೇ ರಾಮನ್ ವಿಚಾರದಾರೆ ಅಸಿಧಾರೆಯಂತೆ ಕತ್ತರಿಸುತ್ತ ಸಾಗಿತು. ಅವರ ಮುಖ ವಿಷಾದ ಛಾಯೆಯಿಂದ ಗಂಭೀರವಾಗಿತ್ತು. ಆಗಾಗ, “Do you see that, Sir? “Do you follow what I am saying, Sir?” ಎಂದು ಕೈಕೊಡಹಿ ಪ್ರಶ್ನೆ ಹಾಕುತ್ತಿದ್ದರು. ನಾನು ಯಥೋಚಿತವಾಗಿ “Yes Sir, I see that.” “Yes sir, I do follow what you say” ಎನ್ನುತ್ತಿದ್ದೆ.

ಭಾರತ ಸರಕಾರ ಕೆಲವು ವರ್ಷಗಳ ಹಿಂದೆ ಮಿತವ್ಯಯದ ಹೆಸರಿನಲ್ಲಿ ವಿಜ್ಞಾನರಂಗದ ಮೇಲೆ ಖೋತಾ ಕಣ್ಣನ್ನು ಹಾಯಿಸಿದಾಗ ರಾಮನ್ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿ ಸರಕಾರದ ಆ ಅವಿವೇಕ ಯೋಜನೆಯನ್ನು ಯಶಸ್ವಿಯಾಗಿ ವಿರೋಧಿಸಿದುದನ್ನು ಅವರ ನೆನಪಿಗೆ ತಂದೆ. ಅವರೇನೂ ಅನ್ನಲಿಲ್ಲ. ಮಾತಾಡುತ್ತ ಮಾತಾಡುತ್ತ ಉದ್ವೇಗದಿಂದ ಎದ್ದು ನಿಲ್ಲುತ್ತಿದ್ದರು, ಕೋಟಿನ ತೋಳುಗಳನ್ನು ಸರಿಪಡಿಸಿ ಪುನಃ ಕೂರುತ್ತಿದ್ದರು. “Yes Sir, I have spoken enough. But please don’t write all that” ಎಂದರು. ತಾವು ಹೇಳಿದ ವ್ಯಕ್ತಿಗಳ ಹೆಸರು, ನಿರೂಪಿಸಿದ ಹಲವಾರು ಕಹಿ ಘಟನೆಗಳ ವಿವರ ಎಲ್ಲಿಯೂ ಬರಬಾರದು. ಅವನ್ನೆಲ್ಲ ಎದುರಿಸಿ ಜಯಿಸಿ ತಾವೀಗ ಸ್ವತಂತ್ರರಾಗಿರುವಾಗ ಹಳೆಯ ಸಂಗತಿಗಳನ್ನು ಕುರಿತು ಯಾವ ವಿಧವಾದ ಚರ್ಚೆಗೂ ತಾವು ಸಿದ್ಧವಿಲ್ಲವೆಂದೂ ಹೇಳಿದರು. ಯಾವ ವಿದೇಶೀ ನೆರವೂ ಇಲ್ಲದೆ ಈ ಪ್ರಾಚೀನ ದೇಶ ಐನ್ಸ್‌ಟೈನರನ್ನೂ ಮೀರಿಸಬಲ್ಲ ಮೇಧಾವಿಗಳನ್ನು ಸೃಷ್ಟಿಸಬಲ್ಲದು ಎಂಬುದು ಅವರ ಅಚಲ ನಂಬಿಕೆ.

ಅವರಿಗೆ ದೊರೆತ ವಿವಿಧ ಪಾರಿತೋಷಿಕಗಳನ್ನು ನೋಡಲು ಅಪೇಕ್ಷಿಸಿದೆ. ರಾಮನ್ ಎದ್ದರು. ಆ ಕೊಠಡಿ, ಅದರೊಳಗಿನ ಇನ್ನೊಂದು ಕೊಠಡಿ, ಅವುಗಳಲ್ಲಿದ್ದ ಹಲವಾರು ಕಪಾಟುಗಳು ಎಲ್ಲವನ್ನೂ ತೆರೆದು ಪ್ರತಿಯೊಂದು ಪ್ರಶಸ್ತಿಯನ್ನೂ ಹೊರ ತೆಗೆದು ತೋರಿಸಿದರು. ಆದರೆ ಎಲ್ಲಿಯೂ ನನ್ನ ಸಹಾಯವನ್ನು ಅವರು ಪಡೆಯಲಿಲ್ಲ, ಮಾತ್ರವಲ್ಲ, ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು ಕೂಡ. ನನಗೆ ಕೆಲವು ಕಿರುಹೊತ್ತಗೆಗಳನ್ನೂ ಅವರು ರುಜುಹಾಕಿದ್ದ ಒಂದು ಛಾಯಾಚಿತ್ರವನ್ನೂ ಕೊಟ್ಟು, “ಇನ್ನು, ನೀವು ತೊಲಗಬಹುದು” (Now you may get out) ಎಂದು ಆತ್ಮೀಯವಾಗಿ ನುಡಿದರು.

“ನಾನು ಲೇಖನ ಬರೆದ ಮೇಲೆ ಅದನ್ನು ತಂದು ನಿಮಗೆ ಓದಿ ಹೇಳುತ್ತೇನೆ” ಎಂದೆ. “ಅಗತ್ಯವಿಲ್ಲ. ನನಗೆ ಕನ್ನಡ ಬರುವುದಿಲ್ಲ, ವೇಳೆಯೂ ಇಲ್ಲ.”

ನಾನು ಹೊರಗೆ ಬಂದಾಗ ಕತ್ತಲು ಕವಿದಿತ್ತು. ಇವರೇನು ಇನ್ನೂ ಮನೆಗೆ ಮರಳಲಿಲ್ಲ ಎಂದು ನೋಡಲು ಶ್ರೀಮತಿ ರಾಮನ್ ಅಲ್ಲಿಗೆ ಬಂದಿದ್ದರು. ಇನ್ನೊಬ್ಬ ಮಿತ್ರರ ಹೇಳಿಕೆಯಂತೆ ಪ್ರಯೋಗದಲ್ಲೋ ವಿವರಣೆಯಲ್ಲೋ ರಾಮನ್ ತನ್ಮಯರಾಗಿಬಿಟ್ಟರೆಂದರೆ ಅವರಿಗೆ ಕಾಲದ ಪರಿವೆಯೇ ಇರುತ್ತಿರಲಿಲ್ಲವಂತೆ. ಶ್ರೀಮತಿಯವರಂತೂ ಕಾಫಿ ಬಿಸಿ ಮಾಡಿ ಬಿಸಿ ಮಾಡಿ ಕಾಯುತ್ತಲೇ ಇರಬೇಕಂತೆ.

“ನನ್ನ ಈ ದೂರದರ್ಶಕ ನೋಡಿದ್ದೀರಾ? ಇನ್ನೊಮ್ಮೆ ಬನ್ನಿ ತೋರಿಸುತ್ತೇನೆ. ಯಾವಾಗ ಬೇಕಾದರೂ ಬನ್ನಿ” ಎಂದು ಹೇಳಿ ಅಂಗಳದ ಪಕ್ಕದ ದಾರಿಯಲ್ಲಿ ನನ್ನನ್ನು ಪುನಃ ಬೇಳ್ಕೊಟ್ಟರು. ಆ ವೃದ್ಧ ದಂಪತಿಗಳು ಅವರ ಮನೆಯೆಡೆಗೆ ಸಾಗುತ್ತಿದ್ದಂತೆ ರಾಮನ್ನರ ಬಿಳಿ ರುಮಾಲಿನ ಲಯವಿನ್ಯಾಸ ಅವರ ಚಲನೆಯ ಗತಿಯನ್ನು ಮಸಕು ಮಸಕಾಗಿ ಪ್ರತೀಕಿಸಿದಂತೆ ನನ್ನ ಮನದಲ್ಲಿ ಮೂಡಿದ ಭಾವವೇನು? ನಿಸಾರ್ ಅಹಮದ್ ಬರೆದಿರುವಂತೆ,

ಸಂದ ಜೀವನದೊಂದು ರೀತಿಯಂತೆ
ಸರಳ ಸದಭಿರುಚಿಯ ಖ್ಯಾತಿಯಂತೆ

ಲೇಖನ ತಯಾರಿಸಿದೆ. ಅವರ ಮತ್ತು ಅವರ ಪ್ರಯೋಗಮಂದಿರದ ಛಾಯಾಚಿತ್ರಗಳು ನನಗೆ ಬೇಕಾಗಿವೆ, ಫೊಟೋಗ್ರಾಫರ್ ಸಮೇತ ಬರುತ್ತೇನೆ ಎಂದು ಬೇಡಿದೆ. ೨ ಗಂಟೆಗೆ ಬರಲು ಆಣತಿಯಾಯಿತು. ನಾವು ಅವರ ಮಂದಿರ ತಲಪಿದ ವೇಳೆಯಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ ಅಲನ್ ರಾಬಿನ್ಸನ್, ಅವರ ಪತ್ನಿ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟಿನ ಡಾ| ಪಿ.ಎಲ್ ಭಾಟ್ನಗರ್ ಇವರೂ ಬಂದಿದ್ದರು. ನಮ್ಮೆಲ್ಲರನ್ನೂ ರಾಮನ್ ಅವರ ಪ್ರಯೋಗಮಂದಿರದ ಒಂದೊಂದು ಅಂಗುಲಕ್ಕೂ ಕರೆದೊಯ್ದು ಎಲ್ಲ ಬಿಡಿ ವಿವರಗಳನ್ನು ಉತ್ಸಾಹದಿಂದ ವಿವರಿಸಿದರು. ಒಂದೊಂದು ಕೋಣೆಯ ಒಂದೊಂದು ಕಪಾಟಿನ ಬೀಗವನ್ನೂ ಅವರೇ ತೆರೆಯಬೇಕು, ಅವರೇ ಮುಚ್ಚಬೇಕು. ನನ್ನ ನೆರವನ್ನು ಅವರು ಒಪ್ಪಲಾರರು, “ನಮ್ಮ ಕೆಲಸವನ್ನು ನಾವೇ ಮಾಡಬೇಕು” ಎಂದು ತುಂಟ ನಗುವಿನಿಂದ ಮಾತನ್ನು ತೇಲಿಸಿದರು. ಅತಿಥಿಗಳು ನಿರ್ಗಮಿಸಿದ ತರುವಾಯ ನನ್ನೊಡನೆ ಮಾತಾಡಲು ಕುಳಿತರು. ನಾನು ಬರೆದು ಸಿದ್ಧಪಡಿಸಿದ್ದ ಲೇಖನ ಓದಲೇ ಎಂದು ಕೇಳಿದಾಗ, “ನನಗೆ ಇದು ಅರ್ಥವಾಗದು. ನೀವೇನೂ ಬೈದು ಬರೆದಿರಲಾರಿರಿ” ಎಂದು ನಕ್ಕು, “ಲೇಡಿ ರಾಮನ್ನರಿಗೆ ಓದಿ ಹೇಳಿ, ಅವರಿಗೆ ಕನ್ನಡ ಅರ್ಥವಾಗುತ್ತದೆ” ಎಂದರು.

“ನಿಮ್ಮ ಈ ಪ್ರಯೋಗಮಂದಿರ ಏಕೆ ಖಾಲಿ ಇದೆ? ಸಂಶೋಧನೆ ಮಾಡಲು ಯಾರೂ ಮುಂಬರುವುದಿಲ್ಲವೇ” ಎಂದು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. ಅವರಿಗೆ ಬೇಸರವಾಯಿತೋ ಏನೋ. ಆದರೂ ಉತ್ತರಿಸಿದರು, “ನಮ್ಮ ತರುಣರಲ್ಲಿ ಶ್ರದ್ದೆ ಇಲ್ಲ. ಪರೀಕ್ಷೆ, ಉದ್ಯೋಗ, ವಿರಾಮ. ಹೆಚ್ಚೆಂದರೆ ವಿದೇಶಯಾನ, ಮರಳಿಕೆ, ಉದ್ಯೋಗ, ವಿರಾಮ. ಈ ವಿರಾಮ ನಮ್ಮ ದೇಶವನ್ನು ಕೊಲ್ಲುತ್ತಿರುವ ಮಹಾವ್ಯಾಧಿ.”

ಇದರ ವಿಚಾರವಾಗಿ ಲೇಡಿ ರಾಮನ್ ನನಗೊಂದು ವಿವರಣೆ ನೀಡಿದರು. “ಅವರನ್ನು ನೋಡಲು ಬರುತ್ತಿದ್ದವರಲ್ಲಿ ಬಹುಮಂದಿ ಇದೇ ಅಪ್ರಿಯ ಪ್ರಶ್ನೆ ಕೇಳುತ್ತಿದ್ದರು. ಆಗ ನಮ್ಮ ಯಜಮಾನರು ತುಂಬ ನೊಂದುಕೊಳ್ಳುತ್ತಿದ್ದರು. ಇಲ್ಲಿ ನಾನು ಬಂದಿರುವುದು ಏಕಾಂತದಲ್ಲಿ ಸ್ವತಂತ್ರವಾಗಿ ಸಂಶೋಧನೆ ನಡೆಸಲೆಂದು. ಈಗ ನಾನು ಶಿಷ್ಯರನ್ನು ಸ್ವೀಕರಿಸಿ ಅವರ ಜೊತೆ ಎಡೆಬಿಡದೆ ದುಡಿಯುವ ಸ್ಥಿತಿಯಲ್ಲಿದ್ದೇನೆಯೇ ಎಂದು ಅವರು ಹೇಳುತ್ತಿದ್ದುದಿತ್ತು.” ರಾಮನ್ನರೊಡನೆ ನನ್ನ ಮಾತು ಮುಂದುವರಿಯಿತು, “ನಿಮ್ಮ ಈ ಚಟುವಟಿಕೆಯ ಮತ್ತು ದೃಢ ಆರೋಗ್ಯದ ರಹಸ್ಯವೇನು?” “ನಾನು ಯೂರೋಪಿಗೆ ಹೋಗಲು ವೈದ್ಯಕೀಯವಾಗಿ ನಾಲಾಯಕ್ ಆಗಿದ್ದೆ ಒಂದು ಕಾಲದಲ್ಲಿ ಎಂದು ನಿಮಗೆ ಗೊತ್ತಿದೆಯಷ್ಟೆ! ಒಳ್ಳೇದೇ ಆಯಿತು ಬಿಡಿ. ಇಲ್ಲೇ ನನಗೆ ಸಂಶೋಧನೆ ಮುಂದುವರಿಸಲು ಸಾಧ್ಯವಾಯಿತು. ನಾನು ಆಹಾರ, ವಿಶ್ರಾಂತಿಗಳಲ್ಲಿ ಬಲು ಮಿತನಾಗಿದ್ದೇನೆ. ಹೊರಗೆ ಅಕಾಲದಲ್ಲಿ ಎಲ್ಲಿಯೂ ತಿನ್ನುವುದಿಲ್ಲ. ಇಷ್ಟೇ ನನ್ನ ಆರೋಗ್ಯದ ರಹಸ್ಯ.”

೧೯೬೯ರಲ್ಲಿ ನಡೆದ ಒಂದು ರಸಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು. ರಾಷ್ಟ್ರಪತಿ ಬೆಂಗಳೂರಿಗೆ ಆಗಮಿಸಿದಾಗ ಅವರ ಗೌರವಾರ್ಥ ರಾಜ್ಯಪಾಲರು ರಾತ್ರಿ ೮ ಗಂಟೆಗೆ ಭೋಜನ ಏರ್ಪಡಿಸಿದ್ದರು. ಪ್ರತಿಷ್ಠಿತ ಆಹ್ವಾನಿತರಲ್ಲಿ ರಾಮನ್ನರೂ ಒಬ್ಬರು. ಆದರೆ ಇವರು ಆ ಭೋಜನಕ್ಕೆ ಹೋಗಲಿಲ್ಲ. ರಾಜ್ಯಪಾಲರಿಗೆ ರಾಮನ್ನರೇ ಹೇಳಿದರು, “ನಾನು ೭.೩೦ ಗಂಟೆಗೆ ಮಲಗುವವನು. ನಿಮ್ಮ ಭೋಜನಕಾಲದಲ್ಲಿ ಗಾಢ ನಿದ್ರೆಯಲ್ಲಿದ್ದೆ ನೋಡಿ. ಆದ್ದರಿಂದ ಬರಲಿಲ್ಲ.” ನಾನು ಲೇಡಿ ರಾಮನ್ ಬಳಿ ಹೋದೆ. ಅವರು ನನ್ನ ಲೇಖನವನ್ನು ಓದಿಸಿ ಕೇಳಿ ಯುಕ್ತ ಸಲಹೆಗಳನ್ನು, ಹಲವಾರು ಕಡೆ ಕೆಲವೊಂದು ತಿದ್ದುಪಡಿಗಳನ್ನು, ಸೂಚಿಸಿ ಸಹಾಯ ನೀಡಿದರು. ಎಲ್ಲ ಮುಗಿದ ಮೇಲೆ, “ನೀವು ತುಂಬ ಶ್ರಮವಹಿಸಿದ್ದೀರಿ. ನನ್ನೊಡನೆ ಕಾಫಿ ತೆಗೆದುಕೊಳ್ಳಿ” ಎಂದು ಅವರೇ ಕಾಫಿ ತಯಾರಿಸಿಕೊಟ್ಟರು. ಅದನ್ನು ಸೇವಿಸಿ ಇನ್ನೇನು ಹೊರಡಬೇಕು ರಾಮನ್ ಬಂದರು, “ಓಹೋಹೋ ನೀವೇನು ನಮ್ಮ ಮನೆಯವರೇ ಆಗಿಬಿಟ್ಟಿರಲ್ಲವೇ” ಎಂದು ತಿಳಿನಗುವಿನ ಸವಿಹೊನಲು ಹರಿಸಿದರು.

೧೯೬೯ರ ಜೂನಿನಲ್ಲಿ ಮುದ್ರಿತ ಲೇಖನದ ನಕಲಿನೊಂದಿಗೆ ಅವರ ಮಂದಿರಕ್ಕೆ ಹೋದೆ. ಬೆಳಗ್ಗೆ ೭ ಗಂಟೆಗೆ ಮನೆಯಲ್ಲಿ ವಿಚಾರಿಸಿದಾಗ ಅವರು ವಾಯುವಿಹಾರಾರ್ಥ ತೋಟಕ್ಕೆ ಹೋಗಿದ್ದಾರೆಂದೂ ನಾನು ಅಲ್ಲಿಗೇ ಹೋಗಿ ಅವರನ್ನು ನೋಡಬಹುದೆಂದೂ ಶ್ರೀಮತಿ ರಾಮನ್ ಹೇಳಿದರು. ನಾನು ಹಾಗೆ ಮಾಡಲಿಲ್ಲ. ಮನೆ ಮುಂದಿನ ನೇರದಾರಿಯ ಅಂಚಿನಲ್ಲಿ ಅವರ ಆಗಮನವನ್ನು ಕಾದು ನಿಂತೆ. ದೂರದಲ್ಲಿ ಗಿಡ ಮರಗಳ ಅಡಿಯಲ್ಲಿ ಅವರು ನಿಂತು ನೋಡಿ ಮುಂದುವರಿಯುತ್ತಿದ್ದುದನ್ನು ಕಂಡೆ. ಹೀಗೆಯೇ ಸಾಕಷ್ಟು ಹೊತ್ತು ಕಳೆದು ಆ ತರುವಾಯ ನಾನು ನಿಂತಿದ್ದ ದಾರಿಗೆ ಬಂದು ಮನೆ ಕಡೆಗೆ ಅಂದರೆ ನನ್ನತ್ತ ನಡಯಲಾರಂಭಿಸಿದರು. ಬೋಳುತಲೆ, ಉಟ್ಟಿದ್ದ ಧೋತರದ ಬಿಳಿಸೆರಗು ಉದ್ದದ ನಿಲುವಂಗಿಯ ಅಂಚನ್ನು ದಾಟಿ ಸೂಸುತ್ತಿತ್ತು. ಕೈಯಲ್ಲಿ ಒಂದು ಬೆತ್ತ. ಸಾಕಷ್ಟು ಸಮೀಪ ಬಂದಾಗ ನಾನು ವಂದನೆ ಅರ್ಪಿಸಿದೆ. “Good morning, Sir! I think I recognize you” ಎಂದರು. ನಾನು ಸೂಕ್ಷ್ಮವಾಗಿ ಹಿಂದಿನ ಸನ್ನಿವೇಶವನ್ನು ವಿವರಿಸಿದೆ. ಒಂದು ವರ್ಷ ದಾಟಿಹೋಗಿತ್ತಷ್ಟೆ. ನಾನು ಬಂದಿದ್ದ ಉದ್ದೇಶವನ್ನು ವಿವರಿಸಿದೆ. ಹಿಡಿದಿದ್ದ ಮುದ್ರಿತ ಲೇಖನವನ್ನು ಅವರಿಗೆ ನೀಡಿದೆ.

“ಇದನ್ನು ಕೊಡಲೆಂದೇ ಇಲ್ಲಿವರೆಗೆ ಬಂದಿರಾ! ಅಂಚೆಯಲ್ಲಿ ಕಳಿಸಬಹುದಿತ್ತಲ್ಲ – ಆಗಲಿ, ನಾನು ನಿಮ್ಮೊಡನೆ ಸ್ವಲ್ಪ ಕಾಲ ಕಳೆಯಲು ಸಿದ್ಧನಿದ್ದೇನೆ. ಸಾಮಾನ್ಯವಾಗಿ ನಾನೀಗ ಮನೆಗೆ ಹೋಗಿ ಸ್ನಾನ ಉಪಾಹಾರ ತೀರಿಸಿ ಬರುವುದು ವಾಡಿಕೆ” ಎಂದವರೇ ಪ್ರಯೋಗಮಂದಿರದೆಡೆಗೆ ನಡೆಯತೊಡಗಿದರು. ನಾನು ಹಿಂಬಾಲಿಸಿದೆ. ಹಿಂದಿನಂತೆಯೇ ಎಲ್ಲ – ಅವರೇ ಕೊಠಡಿ ಕದ ತೆರೆದರು. ಕಿಟಕಿ ಪಡಿಗಳನ್ನೆಲ್ಲ ಬಿಡಿಸಿ ಕೊಣಿಕೆಗಳನ್ನು ಪೋಣಿಸಿದರು. ಮತ್ತೆ ತಮ್ಮ ಆಸನದೆಡೆಗೆ ಬಂದರು, ನನ್ನನ್ನು ಕೂರಹೇಳಿ ತಾವು ಕುಳಿತರು. “ಈಗ ನಿಷ್ಕೃಷ್ಟ ಗಂಟೆ ಎಷ್ಟು?” ಎಂದು ಪ್ರಶ್ನಿಸಿದರು. “೭.೩೫ ಎಂದು ನನ್ನ ವಾಚ್. . .” “ಹೌದು ಹೌದು – ಯಾವುದೇ ಎರಡು ವಾಚುಗಳು ಎರಡು ಹೆಂಗಳೆಯರಂತೆ. ಅವು ಎಂದೂ ಹೊಂದಿ ಇರಲಾರವು” ಎಂದು ದರಹಾಸ ಸೂಸಿದರು. ದೂರವಾಣಿ ವಿನಿಮಯ ಕೇಂದ್ರಕ್ಕೆ ದೂರವಾಣಿಸಿ, “ನೋಡಿ! ಆ ಮಹಿಳೆ ಹೇಳುತ್ತಾಳೆ ಈಗ ಗಂಟೆ ೭.೩೪” ಎಂದು ಲಘು ಹಾಸ್ಯ ಬೀರಿದರು. ಈ ಸಲ ನನ್ನಿಂದ ಲೇಖನವನ್ನು ಅಲ್ಲಲ್ಲಿ ಓದಿಸಿ ಕೇಳಿದರು. ಇಂಗ್ಲಿಷಿನಲ್ಲಿ ನಾನು ಅದನ್ನು ವಿವರಿಸಬೇಕಾಯಿತು. ಮುದ್ರಿತವಾಗಿದ್ದ ಚಿತ್ರಗಳನ್ನು ನೋಡಿ ಮಂದಸ್ಮಿತರಾದರು. “ಚೆನ್ನಾಗಿವೆ, ಇದು ನನ್ನ ಅಮೂಲ್ಯ ಸಂಗ್ರಹಗಳನ್ನು ಸೇರುತ್ತದೆ. ನಿಮ್ಮ ಹತ್ತಿರ ಇನ್ನೊಂದು ಪ್ರತಿ ಇದೆಯೇ?”

“ಇಲ್ಲಿ ಇಲ್ಲ. ಮೈಸೂರಿಗೆ ಮರಳಿದ ಮೇಲೆ ಕಳಿಸಬಲ್ಲೆ.” “ನೀವು ಬೆಂಗಳೂರಿನ ಒಂದು ಕಾಲೇಜಿನಲ್ಲಿದ್ದೀರೆಂದು ತಿಳಿದಿದ್ದೆ.” “ಕಳೆದ ವರ್ಷ ಇಲ್ಲಿದ್ದದ್ದು ಹೌದು. ಈಗೆರಡು ವಾರಗಳಿಂದ ಮೈಸೂರಿನಲ್ಲಿ ಬೇರೆ ಕೆಲಸದಲ್ಲಿದ್ದೇನೆ.” “ಲೇಡಿ ರಾಮನ್ ಇಂಥ ಪ್ರತಿಗಳನ್ನೆಲ್ಲ ಸಂಗ್ರಹಿಸಿಡುತ್ತಾರೆ. ಅವರಿಗಾಗಿ ಒಂದನ್ನು ಕಳಿಸಿಕೊಡಿ.”

ರಾಮನ್ನರ ಶಿಷ್ಯವಾತ್ಸಲ್ಯ ಅಪಾರ. ತಮ್ಮ ಎಲ್ಲ ಸಂಶೋಧನಪತ್ರಗಳಲ್ಲೂ ಎಲ್ಲ ಭಾಷಣಗಳಲ್ಲೂ ಅವರು ಸಹೋದ್ಯೋಗಿಗಳ ಹೆಸರುಗಳನ್ನು ಸ್ಮರಿಸದೇ ಎಂದೂ ಇರಲಾರರು. ರಾಮನ್ ತಮ್ಮ ಹೆಸರಿನ ಪರಿಣಾಮವನ್ನು ಮೊತ್ತಮೊದಲಾಗಿ ಸಾರ್ವಜನಿಕ ಸಭೆಯಲ್ಲಿ ಪ್ರಕಟಿಸಿದಾಗ (೧೬ ಮಾರ್ಚ್ ೧೯೨೮) ಕೊನೆಯಲ್ಲಿ ಆಡಿದ ಮಾತು, “. . . ಈ ಸಂಶೋಧನೆಯಲ್ಲಿ ಕೆ.ಎಸ್ ಕೃಷ್ಣನ್ ನೀಡಿದ ಅಮೂಲ್ಯ ಸಹಕಾರವನ್ನೂ ಎಸ್. ವೆಂಕಟೇಶ್ವರನ್ ನೀಡಿದ ನೆರವನ್ನೂ ನಾನು ಸ್ಮರಿಸಬೇಕು.” ರಾಮನ್ನರ ಪ್ರಮುಖ ಶಿಷ್ಯರಲ್ಲೊಬ್ಬರಾದ ಆರ್.ಎಸ್. ಕೃಷ್ಣನ್ ಹೀಗೆ ಬರೆದಿದ್ದಾರೆ (೧೯೫೩) “ಅವರ ವೈಯಕ್ತಿಕ ಕೊಡುಗೆಗಳೇ ಅತ್ಯಂತ ಗಮನಾರ್ಹವಾದರೂ ಅವರ ಹೆಚ್ಚಿನ ಯಶಸ್ಸನ್ನು ವಿದ್ಯಾರ್ಥಿಗಳ ಒಂದು ತಂಡಕ್ಕೇ ಸ್ಫೂರ್ತಿದಾಯಕವಾಗಿ ಭೌತ ವಿಜ್ಞಾನದ ಒಂದು ನಿರ್ದಿಷ್ಟ ಸಂಶೋಧನಾ ಶಾಲೆಯನ್ನು ಭಾರತದಲ್ಲಿ ನಿರ್ಮಿಸಿರುವುದರಲ್ಲಿ ಕಾಣಬಹುದು. ಈ ಹಿಂದಿನ ೩೫ ವರ್ಷಗಳಲ್ಲಿ ೧೫೦ಕ್ಕೂ ಮಿಕ್ಕಿದ ತರುಣರನ್ನು. . . ಗಣಿತಜ್ಞರು, ಭೌತವಿಜ್ಞಾನಿಗಳು, ರಸಾಯನ ವಿಜ್ಞಾನಿಗಳು ಮತ್ತು ಭೂಗರ್ಭ ವಿಜ್ಞಾನಿಗಳು – ಸಂಶೋಧನ ಕ್ಷೇತ್ರಕ್ಕೆ ರಾಮನ್ ಆವಾಹಿಸಿದ್ದಾರೆ – ತಮ್ಮ ಶಿಷ್ಯರ ಕಾರ್ಯದಲ್ಲಿ ಅವರಿಗೆ ಸದಾ ಅಪಾರ ಆಸಕ್ತಿ. ಸರಳ ಹಾಗೂ ನಿರಾಡಂಬರಿಗಳಾದ ಅವರು ಪ್ರಯೋಗಮಂದಿರದಲ್ಲಿ ಯಾವನೇ ಕೆಲಸಗಾರನಿಗೂ ಯಾವಾಗಲೂ ಸುಲಭವಾಗಿ ದೊರೆಯುತ್ತಾರೆ. . . ಶಿಷ್ಯರಿಗೆ ತಮ್ಮ ಗುರುವನ್ನು ಕುರಿತು ಇರುವ ಗೌರವ ಹಾಗೂ ಮೆಚ್ಚುಗೆಗಳಿಗೆ ಕಾರಣ ಶಿಷ್ಯನ ಭಾವನೆಗಳನ್ನು ಅಥವಾ ಸ್ವತಂತ್ರ ಚಿಂತನೆಯನ್ನು ನಿಷ್ಪಾಕ್ಷಿಕವಾಗಿ ಗುರುತಿಸಿ ಮುಕ್ತ ಕಂಠದಿಂದ ಪ್ರಶಂಸಿಸುವ ರಾಮನ್ನರ ಹಿರಿತನ. ಅವರು ಬಲು ಧಾರಾಳ ಮನಸ್ಕರು. ಮೂಲ ಸಂಶೋಧನೆಯ ಹಲವಾರು ಪರಿಚ್ಛೇದಗಳನ್ನೇ ಅವರು ತೆರೆದ ಮನಸಿನಿಂದ ಕೊಟ್ಟುಬಿಡುತ್ತಿದ್ದರು. ಕಡಿಮೆ ದರ್ಜೆಯ ಯಾವನೇ ವ್ಯಕ್ತಿ ಹೀಗೆ ಮಾಡಲಾರ.”

ಪ್ರತಿ ವರ್ಷವೂ ಗಾಂಧೀ ಜನ್ಮದಿವಸದಂದು (ಅಕ್ಟೋಬರ್ ೨) ರಾಮನ್ ಮಂದಿರದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯರಿಗೂ ಆಹ್ವಾನಿತ ಸಾರ್ವಜನಿಕರಿಗೂ ಜನಪ್ರಿಯ ವಿಜ್ಞಾನದ ಆಧುನಿಕ ವಿಷಯವೊಂದನ್ನು ಕುರಿತು ರಾಮನ್ ಭಾಷಣ ನೀಡುತ್ತಿದ್ದುದು ವಾಡಿಕೆ. ೧೯೭೦ ಅಕ್ಟೋಬರ್ ೨ರಂದು ಅವರು ಆಯ್ದುಕೊಂಡ ವಿಷಯ Cochlea and the perception of Sound. ಅತಿ ಸಂಕೀರ್ಣ ಹಾಗೂ ಆಧುನಿಕ ವಿಜ್ಞಾನ ಪರಿಕಲ್ಪನೆಗಳನ್ನು ಅತಿ ಸುಲಭವಾಗಿ ಮನೋಜ್ಞವಾಗಿ ಮತ್ತು ಲಘು ವಿನೋದ ಮಿಶ್ರಿತವಾಗಿ ಸರ್ವರಿಗೂ ಗ್ರಾಹ್ಯವಾಗುವಂತೆ ಅಭಿವ್ಯಕ್ತಿಸುವ ರಾಮನ್ – ಕೌಶಲವೇ ಈ ಭಾಷಣಗಳ ವೈಶಿಷ್ಟ್ಯ. ಸಂಶೋಧನೆಗಳು ಹೇಗೆ ಸುಲಭೋಪಕರಣಗಳಿಂದ ಸಾಧ್ಯವಾಗಬೇಕೆಂದು ಅವರು ನಂಬಿ ಆಚರಿಸುತ್ತಿದ್ದರೋ ಹಾಗೆ ಸಂಶೋಧನೆಗಳ ಫಲವಾದ ಸಿದ್ಧಾಂತ ನಿರೂಪಣೆಯೂ ಅಷ್ಟೇ ಸುಲಭವಾಗಿ ತಿಳಿಭಾಷೆಯಲ್ಲಿ ಆಗಬೇಕೆಂದು ನಂಬಿ ಅದರ ಮಾದರಿಯನ್ನು ತಾವೇ ಹಾಕಿಕೊಡುತ್ತಿದ್ದರು. ವಯಸ್ಸು ೮೨ರಲ್ಲಿ ಸಹ ಸುಹಾಸ ಪ್ರಜ್ಞೆಯನ್ನೂ ಕ್ಷಿಪ್ರ ಗ್ರಹಣ ಸಾಮರ್ಥ್ಯವನ್ನೂ ಉಳಿಸಿಕೊಂಡಿದ್ದುದೊಂದು ಇವರ ದೊಡ್ಡ ಆಸ್ತಿ.

ರಾಮನ್ನರ ಅಸಂಖ್ಯ ಭಾಷಣಗಳಿಂದ ಒಂದೆರಡು ಮಾದರಿಗಳನ್ನು ಆಯ್ದು ಇಲ್ಲಿ ಬರೆದಿದೆ: ೧೯೨೬ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಹೇಳಿದುದು, “. . . ನಾವಿಂದು ವೇದಕಾಲದಲ್ಲಿ ಜೀವಿಸುತ್ತಿಲ್ಲ. ಆಧುನಿಕ ಯುಗದಲ್ಲಿದ್ದೇವೆ. ಸಂಶೋಧನೆಯ ಯುಗದಲ್ಲಿದ್ದೇವೆ. ಕಲ್ಪನೆ ಹೊಸ ಹೊಸ ಕ್ಷೇತ್ರಗಳಲ್ಲಿ ವಿಹರಿಸಿ ಸಂಶೋಧನೆ ನಡೆಸಿ ನಿಸರ್ಗದ ನಿಗೂಢ ಸಮಸ್ಯೆಗಳನ್ನು ಬಗೆಹರಿಸುವ ದಾರಿಯಲ್ಲಿದ್ದೇವೆ. ವ್ಯಕ್ತಿಯ ಸಕಲ ಶಕ್ತಿಗಳೂ ಈ ದಾರಿಯಲ್ಲಿ ಕೇಂದ್ರೀಕೃತವಾಗಿವೆ. ಇಂಥ ಮಾನವ ಶಕ್ತಿಯ ಪ್ರವಾಹದ ವೇಳೆ ಭಾರತದಲ್ಲಿರುವ ನಾವು ದಂಡೆಯಲ್ಲಿ ನಿಂತು ಬೆರಗಾಗಿ ನೋಡುತ್ತಿರಬಾರದು. ಹೀಗೆ ನಿಂತರೆ ನಾವು ಅಸಮರ್ಥರು, ಗೂಡಿನಲ್ಲಿ ಬೀಗ ಹಾಕಿಸಿಟ್ಟುಕೊಳ್ಳಲು ಮಾತ್ರ ಯೋಗ್ಯರು ಎಂದು ಒಪ್ಪಿಕೊಂಡಂತೆ. ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅದು ನಮ್ಮ ಸರ್ವನಾಶ.”

ಇನ್ನೊಮ್ಮೆ ಹೀಗೆ ಹೇಳಿದರು, “ಸಂಶೋಧನೆ ಎಂದರೇನು? ಜ್ಞಾನದ ಅನ್ವೇಷಣೆ. ಆದ್ದರಿಂದ ವಿದ್ಯಾಭ್ಯಾಸದ ಪ್ರತಿ ಅಂಗದಲ್ಲಿಯೂ ಸಂಶೋಧನೆಗೆ ಪ್ರಥಮ ಸ್ಥಾನವಿರಬೇಕು. ಇಂದು ಜ್ಞಾನ ಎಂದರೆ ಗ್ರಂಥಗಳಿಗೆ ಸೀಮಿತವಾಗಿರುವ ಗತ ಜ್ಞಾನ ಅಲ್ಲ – ಅದು ಜೀವಂತವಾಗಿರುವ ಮತ್ತು ಸದಾ ವರ್ಧಿಸುತ್ತಿರುವ ಸತ್ತ್ವ.” ಸರ್ ಬಿರುದು (ನೈಟ್ ಪದವಿ) ಬಂದಾಗ (೧೯೨೯) ಅವರನ್ನು ಕೊಲ್ಕಟದಲ್ಲಿ ಸತ್ಕರಿಸಲಾಯಿತು. ಆ ಸಂದರ್ಭದಲ್ಲಿ ಅವರು ಹೇಳಿದ ಮಾತು, “ನಾನು ನನ್ನ ವಿಜ್ಞಾನ ಜೀವನವನ್ನು ಈಗ ತಾನೇ ಆರಂಭಿಸುತ್ತಿದ್ದೇನೆ. ಯಾವಾತ ವಿಜ್ಞಾನದಿಂದ ಕೀರ್ತಿ, ಧನಲಾಭ ಆಗುವುದೆಂದು ಆ ಕ್ಷೇತ್ರದಲ್ಲಿ ಕೆಲಸ ಮಾಡುವನೋ ಅವನಿಗೆ ಅವು ಬಿಸಿಲ್ಗುದುರೆಗಳಾಗುವುವು. ವಿಜ್ಞಾನವನ್ನು ವಿಜ್ಞಾನಕ್ಕಾಗಿಯೇ ಅಭ್ಯಸಿಸುವ ಅನ್ವೇಷಕನಿಗೆ ಮಾತ್ರ ವಿಜ್ಞಾನದ ಅಲಭ್ಯ ಫಲಗಳು ಲಭಿಸುವುವು. ಗೌರವ, ಕೀರ್ತಿ, ಪಾರಿತೋಷಿಕ ಮುಂತಾದವು ಆ ದಾರಿಯಲ್ಲಿ ದೊರೆಯಬಹುದಾದ ಕೇವಲ ಆಕಸ್ಮಿಕಗಳು.”

೧೯೨೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪದವೀಪ್ರದಾನ ಸಮಾರಂಭದಲ್ಲಿ ಹೇಳಿದ ಮಾತು, “ಬೌದ್ಧಿಕ ಮೌಲ್ಯಗಳನ್ನು ತಿಳಿಯುವುದರ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನೂ ಉನ್ನತ ಸಂಸ್ಕೃತಿ ಒಳಗೊಂಡಿದೆ. ಸುಸಂಕೃತ ವ್ಯಕ್ತಿಗೆ ಅರ್ಥಹೀನ ತತ್ತ್ವ, ಗೊಡ್ಡು ಸಿದ್ಧಾಂತ, ಕುರುಡುನಂಬಿಕೆಗಳಿಂದ ಏನೂ ಪ್ರಯೋಜನವಿಲ್ಲ. ದೇಶವನ್ನು ದುರ್ಬಲಗೊಳಿಸುವ ಮತೀಯ ವೈಷಮ್ಯ, ಜಾತೀಯ ಕಲಹ ಇವನ್ನು ಪುರಸ್ಕರಿಸುವ ನೆಲೆ ವಿಶ್ವವಿದ್ಯಾಲಯವಾದರೆ ಅದು ಜ್ಞಾನದ ದೇವಾಲಯವಾಗುವುದರ ಬದಲು ಅಜ್ಞಾನದ ಕ್ರಿಮಿಕೀಟಗಳನ್ನು ಉತ್ಪಾದಿಸುವ ಕೊಳಚೆಗುಂಡಿಯಾಗುವುದು. ವೈಯಕ್ತಿಕ ಯೋಗ್ಯತೆ, ಸಾಮರ್ಥ್ಯ, ಶೀಲ ಇವೇ ವಿಶ್ವವಿದ್ಯಾಲಯದಲ್ಲಿ ಜಯದೆಡೆಗೆ ರಹದಾರಿಯಾಗಬೇಕು. ವಿವಿಧ ಅಭಿಪ್ರಾಯ ಭಾವನೆಗಳ ಸಮನ್ವಯಕ್ಷೇತ್ರ ವಿಶ್ವವಿದ್ಯಾಲಯವಾಗಬೇಕು. ಪರಸ್ಪರ ಸೌಹಾರ್ದ, ಸಹಿಷ್ಣುತೆ ಇಲ್ಲಿರಬೇಕು. ನಮ್ಮ ವಿಶ್ವವಿದ್ಯಾಲಯಗಳು ಇಂಥ ಉದಾತ್ತ ಧ್ಯೇಯಗಳಿಂದ ಪ್ರೇರಿತವಾದರೆ ದೇಶದ ಸಮಸ್ಯೆಗಳನ್ನು ಪರಿಹರಿಸಲು ಅವು ಬೇರೆ ಎಲ್ಲ ಸಂಸ್ಥೆಗಳಿಗಿಂತಲೂ ಹೆಚ್ಚು ಸಮರ್ಥವಾಗಬಲ್ಲವು.”

ಒಂದು ಭಾಷಣದಲ್ಲಿ ರಾಮನ್ ಹೀಗೆಂದು ಹೇಳಿದ್ದಾರೆ “ಆವಿಷ್ಕಾರ (Discovery) ಎಂಬ ಪದವೇ ಒಂದು ನಾಟಕೀಯ ಹಾಗೂ ಉದ್ದೀಪಿತ ಘಟನೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಗದ್ದೆ ಉಳುವಾಗ ೫೦ ಕ್ಯಾರಟಿನ ವಜ್ರ ದೊರೆತರೆ ಹೇಗಾದೀತು, ಹಾಗೆ. ವಿಜ್ಞಾನದ ಇತಿಹಾಸದಲ್ಲಿ ಇಂಥ ನಾಟಕೀಯ ಆವಿಷ್ಕಾರಗಳಿಗೆ ವಿಪುಲ ಉದಾಹರಣೆಗಳಿವೆ. ಘಟನೆ ಜರಗಿದ ತತ್ಕ್ಷಣವೇ ಆ ವಿಜ್ಞಾನಿಯ ವೈಯಕ್ತಿಕ ವರ್ತನೆಯಲ್ಲಿ ಅದರ ನಾಟಕೀಯತೆಯೂ ಉದ್ದೀಪನೆಯೂ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿರುತ್ತವೆ.” ಆರ್ಕಿಮಿಡೀಸನ ಇತಿಹಾಸಪ್ರಸಿದ್ಧ ಉದ್ಗಾರ ‘ಯುರೀಕಾ’ವನ್ನು ಅವರು ಉದಾಹರಿಸಿದ್ದಾರೆ. ಅಂದ ಮಾತ್ರಕ್ಕೆ ಇಂಥ ಆವಿಷ್ಕಾರಗಳೇನೂ ಅಪಾತ್ರರಿಗೆ ಲಭಿಸಿದ ಆಕಸ್ಮಿಕಗಳಲ್ಲ.

“ಒಂದು ವೈಜ್ಞಾನಿಕ ಆವಿಷ್ಕಾರ ಆಕಸ್ಮಿಕ ಘಟನೆ ಎಂದೇ ಭಾವಿಸುವುದಾದರೆ ಅದು ಅರ್ಹ ವ್ಯಕ್ತಿಗಲ್ಲದೇ ಬೇರೆ ಯಾರಿಗೂ ಒದಗಿಬರುವುದಿಲ್ಲ. ಆದ್ದರಿಂದ ವೈಜ್ಞಾನಿಕ ಆವಿಷ್ಕಾರ ಆಕಸ್ಮಿಕವಲ್ಲ ಎಂಬುದು ಸ್ಪಷ್ಟ. ವಿಜ್ಞಾನದಲ್ಲಿ ಆವಿಷ್ಕರ್ತೃ ಸದಾ ಜ್ಞಾನ ಹಾಗೂ ಸತ್ಯಾನ್ವೇಷಿಯಾಗಿಯೇ ಇರುತ್ತಾನೆ. ತಾನು ಆಯ್ದ ಒಂದು ಕ್ಷೇತ್ರದಲ್ಲಿ ನಿಷ್ಠಾಪೂರ್ವಕ ದುಡಿಮೆಯಿಂದ ಸ್ಫೂರ್ತಿ ಪಡೆದು ಒಂದಲ್ಲ ಒಂದು ದಿವಸ ಎಳ್ಳಷ್ಟಾದರೂ ಹೊಸತನ್ನು ಕಂಡೇನು ಎಂಬ ವಿಶ್ವಾಸದಿಂದ ಮುಂದುವರಿಯುತ್ತಿರುವನು.” ವಿಜ್ಞಾನವೇ ತನ್ನ ಮತ ಎಂದು ಘೋಷಿಸಿ ಅದೇ ಧರ್ಮವನ್ನು ಕೊನೆ ಉಸಿರಿನ ತನಕವೂ ಪಾಲಿಸುತ್ತ ಬಂದಿದ್ದ ಈ ವಿಜ್ಞಾನಿಗೆ ದೇವರನ್ನು ಕುರಿತು ಏನು ಭಾವನೆ ಇತ್ತು? ೧೯೩೬ರಲ್ಲಿ ನಡೆದ ಒಂದು ಘಟನೆ ಟೆಂಡೂಲ್ಕರರ ‘ಮಹಾತ್ಮ’ ಗ್ರಂಥದ ನಾಲ್ಕನೆಯ ಸಂಪುಟದಲ್ಲಿ ವರದಿ ಆಗಿದೆ.

೧೯೩೬ರ ಮೇ ಮೂರನೆಯ ವಾರ. ಮಹಾತ್ಮಗಾಂಧಿ ನಂದಿಬೆಟ್ಟದ ಮೇಲೆ ವಿಶ್ರಾಂತಿ ಪಡೆಯಲು ತಂಗಿದ್ದಾರೆ. ಸ್ವಿಟ್ಸರ್‌ಲೆಂಡಿನ ಒಬ್ಬ ಕ್ರಿಶ್ಚಿಯನ್ ವಿಜ್ಞಾನಿಯನ್ನು ರಾಮನ್ ಮಹಾತ್ಮಾಜಿಯವರಿದ್ದಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಮಾತು ವಿಜ್ಞಾನದಿಂದ ಮತಗಳೆಡೆಗೆ ಹೊರಳಿದೆ. ಕ್ರಿಶ್ಚಿಯನ್ ಮತೀಯರು ತಮ್ಮ ಮತವನ್ನು ಕುರಿತು ತಾಳಿದ್ದ ಸರ್ವೋತ್ಕೃಷ್ಟತೆಯ ಮನೋಭಾವ ತಮಗೆ ಇನ್ನೂ ಅರ್ಥವಾಗಿಲ್ಲವೆಂದು ಸಕಾರಣವಾಗಿ ಗಾಂಧೀಜಿ ವಾದ ಮಂಡಿಸಿದ್ದಾರೆ. ಕ್ರಿಶ್ಚಿಯನ್ ವಿಜ್ಞಾನಿ ಗಾಂಧೀಜಿಗೆ ಒಂದು ಸವಾಲು ಹಾಕಿದ್ದಾರೆ, “ನಾವು ನೀವು ಒಂದಾಗುವುದು ಸಾಧ್ಯವಿಲ್ಲವೆಂದಾದರೆ ಏರುತ್ತಿರುವ ನಾಸ್ತಿಕತೆಯ ವಿರುದ್ಧವಾದರೂ ಒಟ್ಟಾಗಿ ಹೋರಾಡಬಹುದಲ್ಲ?” ಇಷ್ಟು ಹೊತ್ತು ತೆಪ್ಪಗೆ ಆಲಿಸುತ್ತಿದ್ದ ರಾಮನ್ ನುಡಿದಿದ್ದಾರೆ, “ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ದೇವರು ಇರುವುದಾದರೆ ಆತನನ್ನು ವಿಶ್ವದಲ್ಲಿ ನೋಡಲು ನಾವು ಹವಣಿಸಬೇಕು. ಅವನು ಅಲ್ಲಿ ಇಲ್ಲದಿದ್ದರೆ ಆತನ ಅರಸಿಕೆ ವ್ಯರ್ಥ ಶ್ರಮ. ಅನೇಕ ವಲಯಗಳಲ್ಲಿ ನನ್ನನ್ನೊಬ್ಬ ನಾಸ್ತಿಕ ಎಂದು ನೋಡುವುದಿದೆ. ಆದರೆ ನಾನು ಹಾಗಿಲ್ಲ. ಖಗೋಳ ವಿಜ್ಞಾನ ಹಾಗೂ ಭೌತವಿಜ್ಞಾನಗಳಲ್ಲಿ ದಿನೇ ದಿನೇ ಆಗುತ್ತಿರುವ ಆವಿಷ್ಕಾರಗಳು ದೇವರ ಅಸ್ತಿತ್ವದ ಪುನಃ ಪುನಃ ಅಭಿವ್ಯಕ್ತಿಗಳು ಎಂದು ನನ್ನ ನಂಬಿಕೆ. ಮಹಾತ್ಮಾಜಿಯವರೇ! ಮತಗಳು ಐಕ್ಯವನ್ನು ಸಾಧಿಸಲಾರವು. ಸಂಪೂರ್ಣ ಸಾಹಚರ್ಯೆಗೆ ವಿಜ್ಞಾನ ಅತ್ಯುತ್ಕೃಷ್ಟ ಸಂದರ್ಭವನ್ನು ಒದಗಿಸುತ್ತದೆ. ವಿಜ್ಞಾನದ ಎಲ್ಲ ವ್ಯಕ್ತಿಗಳೂ ಸಹೋದರರು.

“ಹಾಗಾದರೆ ವಿಲೋಮೋಕ್ತಿಯ ವಿಚಾರವೇನು?” ಗಾಂಧೀಜಿ ಮುಂದುವರಿಸುತ್ತ “ವಿಜ್ಞಾನದ ವ್ಯಕ್ತಿಗಳಲ್ಲದವರೆಲ್ಲ ಸಹೋದರರಲ್ಲ?” ಎಂದು ಕೇಳಿದರು. ತಮ್ಮ ವಾದ ತಮಗೇ ಮರುಕಳಿಸಿದ್ದು ರಾಮನ್ನರಿಗೆ ಗೊತ್ತಾಯಿತು, “ಆದರೆ ಎಲ್ಲರೂ ವಿಜ್ಞಾನದ ವ್ಯಕ್ತಿಗಳಾಗಬಹುದು” ಎಂದು ಪಡಿನುಡಿದರು. ರಾಮನ್ನರನ್ನು ಕುರಿತು ಪ್ರಚಲಿತವಿರುವ ಆಖ್ಯಾನಕಗಳು (anecdotes) ಅಸಂಖ್ಯ. ಅವುಗಳ ಪೈಕಿ ಅಧಿಕೃತ ಮೂಲಗಳಿಂದ ಸಂಪಾದಿಸಿದ ಕೆಲವನ್ನು ಇಲ್ಲಿ ಬರೆದಿದೆ. ಇಲ್ಲಿ ಅಂತರ್ಗತವಾಗಿರುವ ಭಾವ ಒಂದೇ – ವಿಜ್ಞಾನ ಅವರ ಮತ, ಕಡುನಿಷ್ಠೆ ಪಥ, ಸುಹಾಸ ಪ್ರಜ್ಞೆ ವ್ರತ, ಧ್ರುವತಾರೆ ಋತ.

ಇಸವಿ ೧೯೦೧. ಸ್ಥಳ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜ್. ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದ ಪ್ರೊ ಇ.ಎಚ್ ಇಲಿಯಟ್ ಒಬ್ಬ ಅಣುಗನನ್ನು ಕುರಿತು ಆಶ್ಚರ್ಯದಿಂದ ಪ್ರಶ್ನಿಸುತ್ತಿದ್ದಾರೆ, “ನೀನು ಬಿಎ ವಿದ್ಯಾರ್ಥಿ ಎಂಬುದು ನಿಜವೇ?” “ಹೌದು ಸಾರ್!” “ನಿನಗೆಷ್ಟು ವಯಸ್ಸು?” “ಹದಿಮೂರು ಸಾರ್!” ಆತ್ಮವಿಶ್ವಾಸದಿಂದ ಉತ್ತರವಿತ್ತರು ಭಾವೀ ಸರ್ ಸಿ.ವಿ ರಾಮನ್. ಕೆಲವು ವರ್ಷಗಳು ಸಂದಿವೆ (೧೯೦೭). ಕೊಲ್ಕಟ ರೇಲ್ವೇ ನಿಲ್ದಾಣದಲ್ಲಿ ಪ್ರತಿಷ್ಠಿತ ಅಧಿಕಾರಿಗಳ ಒಂದು ಗುಂಪು ನಿಂತಿದೆ. ಅವರು ಹಿಡಿದಿರುವ ಹಾರತುರಾಯಿಗಳನ್ನು ನೋಡಿದರೆ ಉಚ್ಚ ಅಧಿಕಾರಿಯೊಬ್ಬನನ್ನು ನಿರೀಕ್ಷಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಮದ್ರಾಸಿನಿಂದ ಬರಬೇಕಾಗಿದ್ದ ಬಂಡಿ ಬಂದಿತು. ಅಧಿಕಾರಿಗಳು ಪ್ರಥಮ ದರ್ಜೆಯ ಡಬ್ಬಿ ಅರಸಿ ಓಡಿದರು. ಆದರೆ ತಾವು ಕಲ್ಪಿಸಿಕೊಂಡಿದ್ದಂಥ ಉಚ್ಚ ಅಧಿಕಾರಿ ಯಾರೂ ಅದರಿಂದ ಇಳಿದಂತೆ ತೋರಲಿಲ್ಲ; ಹತಾಶರಾದರು. ಅದೇ ಡಬ್ಬಿಯಿಂದ ಪುಸ್ತಕಗಳ ಗಂಟು ಸಮೇತ ಆಗತಾನೇ ಇಳಿಯುತ್ತಿದ್ದ ತರುಣನನ್ನು ಕೇಳಿದರು. “ಶ್ರೀ ಸಿ.ವಿ ರಾಮನ್ ಎನ್ನುವ ಅಧಿಕಾರಿ ಈ ಡಬ್ಬಿಯಲ್ಲಿ ಬಂದಿರುವರೇ?” “ನಾನೇ ಅವನು!”

೧೯೩೦ರಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿದಾಗ ರಂಗೂನಿನಲ್ಲಿ ರಾಮನ್ನರನ್ನು ಗೌರವಿಸಲಾಯಿತು. ಆ ಸಂದರ್ಭದಲ್ಲಿ ಅವರು ಹೇಳಿದ ಒಂದು ಮಾತು, “ನಮ್ಮ ಹಲವಾರು ತರುಣರು ಇಂಗ್ಲೆಂಡಿಗೆ ಐಸಿಎಸ್, ಬ್ಯಾರಿಸ್ಟರ್ ಅಥವಾ ಬೇರಾವುದಾದರೂ ಉನ್ನತ ಪದವಿಗಳಿಸಲು ಹೋಗುತ್ತಾರೆ. ಸಾಮಾನ್ಯವಾಗಿ ಅವರು ವಿಫಲರಾಗುತ್ತಾರೆ. ಆದರೂ ಬಹು ಸಂದರ್ಭಗಳಲ್ಲಿ ಅವರು ತಮ್ಮ LLDಯನ್ನೇನೋ ಚೆನ್ನಾಗಿಯೇ ಸಂಪಾದಿಸಿರುತ್ತಾರೆ,” ರಾಮನ್ ನಿಧಾನಿಸಿದರು. ಸಭೆ ಇದು ಹೇಗೆ ಸಾಧ್ಯ ಎಂದು ಚಿಂತಿಸುತ್ತಿತ್ತು, ಮಾತು ಮುಂದುವರಿಯಿತು. “LLD ಎಂದರೆ ನನ್ನ ಅರ್ಥ Land Lady’s Daughter!”

ಕೊಲ್ಕಟ ನಗರದಲ್ಲಿ ಪ್ರಯೋಗಶೀಲ ರಾಮನ್ ಸಿಂಹದಾಪುಗಳನ್ನು ಇಟ್ಟು ನಡೆಯುತ್ತಿದ್ದ ದಿವಸಗಳು. ಒಂದು ರಾತ್ರಿ ಅವರಿಗೆ ಯಾವುದೋ ವೈಜ್ಞಾನಿಕ ಸಮಸ್ಯೆ ಗಾಢವಾಗಿ ಅಂಟಿಕೊಂಡಿತು. ಮನೆ, ಊಟ, ನಿದ್ರೆ ಮರೆತು ಅದರ ಪರಿಹಾರಾನ್ವೇಷಣೆಯಲ್ಲಿಯೇ ಪ್ರಯೋಗಮಂದಿರದಲ್ಲಿ ರಾತ್ರಿಯ ಬಹು ಭಾಗ ಕಳೆದರು. ತಡವಾಗಿ ಮನೆಗೆ ಮರಳಿದಾಗ ಕಂಡದ್ದೇನು? ಅವರ ತರುಣ ಪತ್ನಿ ತಾನೂ ಊಟ ನಿದ್ರೆ ಮಾಡದೆ ಪತಿಯ ಬರವನ್ನು ಕಾದು ಕುಳಿತಿದ್ದರು. ರಾಮನ್ನರಿಗೆ ತತ್‌ಕ್ಷಣ ಸ್ಫೋಟಿಸಿದ್ದು ಅಸಹನೆ, ಕೂಗಾಡಿದರು. ಅಪರಾತ್ರಿಯ ಈ ರಂಪ ಕೇಳಿ ನೆರೆಕರೆಯವರು ಓಡಿ ಬಂದು ದಂಪತಿಗಳ ಸಾತ್ತ್ವಿಕ ಕೋಪವನ್ನು ಶಮನಿಸಿದರು.

ಎಸ್.ಆರ್ ರಂಗನಾಥನ್ ಮದ್ರಾಸು ವಿಶ್ವವಿದ್ಯಾಲಯದ ಗ್ರಂಥಾಲಯ ಮುಖ್ಯರಾಗಿದ್ದಾಗ ರಾಮನ್ ಅಲ್ಲೊಂದು ಉಪನ್ಯಾಸ ಕೊಟ್ಟರು. ವಿಷಯ ‘ಗ್ರಂಥಾಲಯ ಅದರ ಉಪಯೋಗಗಳು.’ ಭಾಷಣ ಪ್ರಾರಂಭ ಮಾಡಿದ ಬಗೆ ಹೀಗಿತ್ತು, “ಎರಡು ವರ್ಷಗಳ ಹಿಂದೆ ಬೇರೆ ಒಂದು ಸ್ಥಳದಲ್ಲಿ ಒಮ್ಮೆ ವಿನೋದಕ್ಕಾಗಿ ಒಂದು ಮಾತು ಹೇಳಿದೆ ‘೫,೦೦,೦೦೦ ಪುಸ್ತಕಗಳನ್ನು ಓದುವುದೆಂದರೆ ಅದೆಂಥ ತಲೆ ನೋವು ಎಂಬುದನ್ನು ಕಲ್ಪಿಸಿಕೊಳ್ಳಿ.’ ಅದೇ ಧಾಟಿಯಲ್ಲಿ ಮುಂದುವರಿಸುತ್ತ ‘ಗ್ರಂಥಾಲಯಗಳನ್ನು ಆಗಾಗ ಸುಟ್ಟು ಹಾಕುವುದೊಂದೇ ಜ್ಞಾನವರ್ಧನೆಯ ಅತ್ಯುತ್ತಮ ಮಾರ್ಗ’ ಎಂದು ಸಹ ಸೂಚಿಸಿದೆ. ಸ್ಥಳೀಯ ನಗೆ ಪತ್ರಿಕೆಗಳು ಈ ಸೂಚನೆಯನ್ನು ಚೆನ್ನಾಗಿಯೇ ಸ್ವೀಕರಿಸಿದುವು. ಮುಂದೆ ಕೆಲವೇ ದಿವಸಗಳಲ್ಲಿ ಲೇಡಿ ರಾಮನ್ ನನಗೆ ಇಂಥ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಣಕುಚಿತ್ರವನ್ನು ತೋರಿಸಿದರು. ಅದರಲ್ಲಿ ನನ್ನನ್ನು ಒಬ್ಬ ಪಂಜು ದಾಳಿಗಾರನನ್ನಾಗಿ ಕಾಣಿಸಿದ್ದರು. ನಾನು ಕೈಯಲ್ಲಿ ಉರಿಯುವ ದೊಂದಿ ಹಿಡಿದು ಇದೇ ಗ್ರಂಥ ಭಂಡಾರವನ್ನು ಸುಡಲು ಧಾವಿಸುತ್ತಿದ್ದೆ. ಈ ತಮಾಷೆ ನೋಡಲು ಮಕ್ಕಳ ಒಂದು ಪಡೆಯೇ ಕೆಲೆಕೆಲೆಯುತ್ತ ನನ್ನನ್ನು ಹಿಂಬಾಲಿಸುತ್ತಿತ್ತು. ಎಸ್.ಆರ್ ರಂಗನಾಥನ್ ನನ್ನ ಎದುರು ಮಂಡಿಯೂರಿ ನಿಂತು ಹಾಗೆ ಮಾಡಬಾರದಾಗಿ ಅಂಗಲಾಚಿ ಬೇಡುತ್ತಿದ್ದರು. ಈಗ ಅದೇ ನಾನು ಗ್ರಂಥಾಲಯಗಳ ಸರ್ವೋತ್ಕೃಷ್ಟತೆಯನ್ನು ಕುರಿತು ನಿಮ್ಮೆದುರು ಮಾತಾಡಲು ನಿಂತಿದ್ದೇನೆ! ಯಾವ ಮೋರೆಯಿಂದ ಆರಂಭಿಸಲಿ?”

ಚೆನ್ನೈಯಲ್ಲಿ ಪ್ರತಿಷ್ಠಿತರ ಒಂದು ಸಭೆ (೧೯೩೯). ಸೈಕ್ಲೊಟ್ರೋನ್ ವಿಷಯ ರಾಮನ್ನರ ಭಾಷಣ. ಈ ಸಾಧನ ಏನೆಂದು ವಿವರಿಸುವ ಅಧಿಕೋತ್ಸಾಹದಲ್ಲಿ ಇವರು ಎದುರಿನ ಸಾಲಿನಲ್ಲಿ ಮಂಡಿಸಿದ್ದ ಹಿರಿಯ ವ್ಯಕ್ತಿಯೊಬ್ಬರ ಊರುಗೋಲನ್ನು ಸೆಳೆದುಕೊಂಡರು. ಅದನ್ನು ತಮ್ಮ ತಲೆಯ ಮೇಲೆ ಗಿರಗಿರನೆ ತಿರುಗಿಸುತ್ತ ಹೀಗೆಂದರು, “ಈಗ ನೋಡಿ ಮಹಾಶಯರೇ! ನಾನು ಈ ಕೋಲನ್ನು ಕೈಬಿಟ್ಟರೆ ಅದು ನಿಮ್ಮಲ್ಲಿ ಹಲವಾರು ಮಂದಿಯ ಮಂಡೆ ಒಡೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಾನು ಹಾಗೆ ಮಾಡುವುದಿಲ್ಲ ಎಂದಿಟ್ಟುಕೊಳ್ಳಿ. ಸೈಕ್ಲೊಟ್ರೋನ್ ಕೆಲಸ ಮಾಡುವ ವಿಧಾನ ಹೀಗೆ!”

ಎಚ್.ಜೆ ಭಾಭಾ ರಾಮನ್ನರ ಶಿಷ್ಯ. ತಾವೇ ರಂಗಿಸಿದ್ದ ರಾಮನ್ ತೈಲಚಿತ್ರವನ್ನು ಅವರು ತಮ್ಮ ಗುರುಗಳಿಗೆ ಕೊಟ್ಟರು. ಅದನ್ನು ರಾಮನ್ ಬಲು ಮೆಚ್ಚುಗೆಯಿಂದ ನೋಡುತ್ತಿದ್ದಂತೆ ಭಾಭಾ ಹೇಳಿದರು, “ಒಬ್ಬ ವಿಜ್ಞಾನಿಯಿಂದ ಇನ್ನೊಬ್ಬ ವಿಜ್ಞಾನಿಯ ಚಿತ್ರವಿದು.” ಕೂಡಲೇ ಬಂತು ರಾಮನ್ ವಾಣಿ “ಅಲ್ಲ ಅಲ್ಲ – ಒಬ್ಬ ಕಲಾವಿದನಿಂದ ಇನ್ನೊಬ್ಬ ಕಲಾವಿದನ ಕುಂಚನ.” ಒಂದು ಕಡೆ ರಾಮನ್ ಹೇಳಿದ್ದಾರೆ, “ಬೌದ್ಧಿಕ ಸೌಂದರ್ಯವೇ ಶ್ರೇಷ್ಠತಮ ಸೌಂದರ್ಯ. ನಿಸರ್ಗ ನಿರೂಪಣೆಗೋಸ್ಕರವೇ ಮೀಸಲಾಗಿರುವ ಮನುಷ್ಯನ ಸೌಂದರ್ಯ ಹಾಗೂ ಬುದ್ಧಿಕ್ರಿಯೆಗಳ ಬೆಸುಗೆಯೇ ವಿಜ್ಞಾನ. ಆದ್ದರಿಂದ ಇದು ಪರಮೋತ್ಕೃಷ್ಟ ಸೃಜನಶೀಲ ಕಲೆ.”

ದಂತಗೋಪುರಗಳಲ್ಲಿ ಸೀಮಿತರಾಗಿರುವ ವಿಜ್ಞಾನಿಗಳು ಮಣ್ಣಿನ ಲೋಕಕ್ಕೆ ಇಳಿಯಬೇಕೆಂದು ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಒಮ್ಮೆ ಕರೆ ನೀಡಿದರು. ಇದನ್ನು ಖಂಡಿಸುತ್ತ ರಾಮನ್ ಹೇಳಿದರು, “ವಾಸ್ತವವಾಗಿ ದಂತಗೋಪುರಗಳಲ್ಲಿರುವವರೇ ಗಮನಾರ್ಹರು. ಅವರೇ ಮಣ್ಣಿನ ಸಾರ. ಮಾನವ ಜನಾಂಗದ ಉಳಿವು ಹಾಗೂ ಪ್ರಗತಿ ಅವರನ್ನೇ ಅವಲಂಬಿಸಿದೆ.” ತಮಗೆ ಈ ಟೀಕೆಯಿಂದ ಖಂಡಿತವಾಗಿಯೂ ಅಸಮಾಧಾನವಾಗಲಿಲ್ಲವೆಂದು ನೆಹರೂ ಆಶ್ವಾಸಿಸಿದರೆಂದು ರಾಮನ್ ಮುಂದೊಂದು ದಿವಸ ಹೇಳಿದರು.

ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಗಳಿಗೆ ರಾಮನ್ ಹೋಗುತ್ತಿರಲಿಲ್ಲ. ರಾಮನಿಲ್ಲದ ರಾಮಾಯಣ ಉಂಟೇ? ಈ ವಿಷಯವನ್ನು ವಿ.ಟಿ ಶ್ರೀನಿವಾಸನ್ ಎಂಬವರು ರಾಮನ್ನರ ಗಮನಕ್ಕೆ ತಂದಾಗ ಇವರ ಉತ್ತರ, “ಸೈನ್ಸ್ ಕಾಂಗ್ರೆಸ್ಸುಗಳನ್ನು ರಾಜಕಾರಣಿಗಳು ಉದ್ಘಾಟನೆ ಮಾಡುವಂಥ ಬೇರೆ ಯಾವುದೇ ದೇಶದ ಉದಾಹರಣೆಯನ್ನು ನೀವು ನನಗೆ ಹೇಳಬಲ್ಲಿರಾ? ಹದಿನೇಳು ವರ್ಷಗಳಿಂದಲೂ, ಪ್ರತಿ ವರ್ಷವೂ ಅವಿಚ್ಛಿನ್ನವಾಗಿ, ಅದನ್ನು ಉದ್ಘಾಟಿಸಲು ಭಾರತದ ಪ್ರಧಾನಮಂತ್ರಿಯೊಬ್ಬರನ್ನು ಮಾತ್ರ ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ವ್ಯವಸ್ಥಾಪಕರು ಯೋಚಿಸಬಲ್ಲವರಾಗಿದ್ದಾರೆ. ಮತ್ತೆ ಈಗ ಅವರ ಮಗಳನ್ನು ಆಹ್ವಾನಿಸಿದ್ದಾರೆ. ಆತ್ಮಾಭಿಮಾನ ಇರುವ ವಿಜ್ಞಾನಿಗಳು ಹೇಗೆ ತಾನೇ ಸೈನ್ಸ್ ಕಾಂಗ್ರೆಸ್ಸಿನಲ್ಲಿ ರಾಜಕಾರಣಿಗಳು ಗಳಹುವ ಪೊಳ್ಳುಮಾತುಗಳನ್ನು ಕೇಳಿಕೊಂಡಿರುವರು ಎಂಬುದು ನನಗೆ ಅರ್ಥವಾಗುವುದಿಲ್ಲ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ಸಿನ ಪ್ರಾರಂಭಕ್ಕೆ ಇದೊಂದು ಪ್ರೇರಣೆ ಆಗಿತ್ತು.”

Philosophy of vision ಎಂಬ ಅವರ ಈಚಿನ (೧೯೬೮) ಪುಸ್ತಕವನ್ನು ಕುರಿತು ವಿ.ಟಿ ಶ್ರೀನಿವಾಸನ್ನರೊಡನೆ ರಾಮನ್ ಹೇಳಿದ ಮಾತು, “ಈ ಪುಸ್ತಕದಲ್ಲಿ ನಿರೂಪಿತವಾಗಿರುವ ಆವಿಷ್ಕಾರಗಳು ಯುಗಪ್ರವರ್ತಕ ಸ್ವಭಾವದಿಂದ ಕೂಡಿವೆ. ಆದರೆ ಇವನ್ನು ಗ್ರಹಿಸಲು ನೊಬೆಲ್ ಪಾರಿತೋಷಿಕ ಸಮಿತಿಗೆ ಇನ್ನೊಂದು ಇಪ್ಪತ್ತು ವರ್ಷಗಳ ಕಾಲಾವಧಿಯೇ ಬೇಕಾದೀತು. ಆಗ ನಾನು ಬದುಕಿರುವುದಿಲ್ಲ.”

ರಾಮನ್ ಉತ್ತಮ ಪುಸ್ತಕ ಪ್ರಿಯರು. ವಿಜ್ಞಾನೇತರ ಪುಸ್ತಕಗಳಲ್ಲೂ ಅವರ ಆಸಕ್ತಿ ಅಪಾರವಾಗಿತ್ತು. ಸ್ಟೀವನ್ಸನ್ (ಕಿಡ್‌ನ್ಯಾಪ್ಡ್), ಎಡ್ವಿನ್ ಅರ್ನಾಲ್ಡ್ (ಲೈಟ್ ಆಫ್ ಏಸ್ಯಾ), ಮಾರ್ಟಿನ್ ಮತ್ತು ಲೂಕಾಸ್ (ಪ್ರವಾಸ ಗ್ರಂಥಗಳು) ಮೊದಲಾದವರು ರಾಮನ್ನರ ನೆಚ್ಚಿನ ಸಾಹಿತಿಗಳು. ಸಂಗೀತಪ್ರೇಮಿಗಳಾದ ರಾಮನ್ ಒಮ್ಮೆ ಹೇಳಿದರು, “ನನಗೆ ದೀರ್ಘ ಕಾಲ ಬದುಕಬೇಕೆಂದು ಹಂಬಲವಿದೆ – ನಾನು ಕೇಳಬೇಕೆಂದಿರುವ ಎಲ್ಲ ಸಂಗೀತವನ್ನು ಇನ್ನೂ ಆಲಿಸಿರುವುದಿಲ್ಲ.”

ಫೆಬ್ರುವರಿ ೧೯೭೦ರಲ್ಲಿ ಎಂ.ಎನ್ ರುದ್ರಬಸವರಾಜ್ ಎಂಬವರಿಗೆ ಅಕಸ್ಮಾತ್ತಾಗಿ ರಾಮನ್ನರ ಪ್ರಥಮ ಭೇಟಿ ಬೆಂಗಳೂರಿನ ಒಂದು ಅಂಗಡಿಯಲ್ಲಿ ಆಯಿತು. ಮಾತು ಮುಂದುವರಿದಾಗ ರಾಮನ್ ಹೇಳಿದರು, “ನನಗೆ ಈಗಲೇ ಸಾಯಲು ಇಷ್ಟವಿಲ್ಲ. ಇನ್ನೂ ಕೆಲವು ವರ್ಷ ಬದುಕಬೇಕೆಂಬ ಆಸೆ ಇದೆ.” ರುದ್ರಬಸವರಾಜ್, “ತಾವು ವಿಜ್ಞಾನಪ್ರಪಂಚಕ್ಕೆ ನೀಡಬೇಕಾಗಿರುವ ಕೊಡುಗೆ ಇನ್ನೂ ಬೇಕಾದಷ್ಟಿದೆ, ಸಾರ್ ಮತ್ತು. . .” ರಾಮನ್ನರ ಚಟುವಟಿಕೆಯನ್ನು ಮೆಚ್ಚುತ್ತ ನುಡಿದರು. “ಅಲ್ಲಲ್ಲ ಅದಕ್ಕಾಗಿ ಅಲ್ಲ” ಎಂದು ತನ್ನ ಭುಜ ಕುಲುಕಿ ಹೇಳಿದರು, “ಭಾರತ ಸರಕಾರ ನನ್ನ ರಾಷ್ಟ್ರೀಯ ಪ್ರಾಧ್ಯಾಪಕತ್ವವನ್ನು ಇನ್ನೊಂದು ಅವಧಿಯ ತನಕ ಮುಂದುವರಿಸಿದೆ. ಆ ತನಕ ನನಗೆ ಬದುಕಬೇಕೆಂದಿದೆ. ನನಗೆ ಈಗಲೇ ಸಾಯಲು ಏಕೆ ಇಷ್ಟವಿಲ್ಲ ಎಂಬುದು ನಿಮಗೆ ಈಗ ತಿಳಿಯಿತೇ?” ೧೯೭೦ರ ಗಾಂಧೀಜಿ ಜನ್ಮದಿವಸ ಭಾಷಣದಲ್ಲಿ ರಾಮನ್, “ಇದು ಬಹುಶಃ ಈ ಮಾಲೆಯಲ್ಲಿ ನನ್ನ ಕೊನೆಯ ಭಾಷಣ” ಎಂದು ಹೇಳಿದರೆಂದು ವರದಿ ಆಗಿದೆ. ೧೯೭೦ರ ನವೆಂಬರ್ ೫ರ ದೈನಿಕಗಳಲ್ಲಿ ಬಂದ ಒಂದು ಚುಟುಕು ಸುದ್ದಿ ಪ್ರಪಂಚದ ಲಕ್ಷ್ಯವನ್ನು ಬೇರೆ ಒಂದು ಕಾರಣಕ್ಕಾಗಿ ಬೆಂಗಳೂರಿನೆಡೆಗೆ ಸೆಳೆಯಿತು: “ಮೂರು ದಿವಸಗಳ ಹಿಂದೆ ಸಿ.ವಿ. ರಾಮನ್ನರಿಗೆ (೮೨) ಲಘು ಹೃದಯಾಘಾತವಾಯಿತು. ಅವರೀಗ ನಗರದ ಒಂದು ವೈದ್ಯಚಿಕಿತ್ಸಕ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.”

ಅವರ ಹುಟ್ಟುಹಬ್ಬ ಅದೇ ತಿಂಗಳ ೭ರಂದು. ಆದ್ದರಿಂದ ಆ ಮೊದಲೇ ಕೆಲವು ಪತ್ರಿಕಾ ಪ್ರತಿನಿಧಿಗಳು ರಾಮನ್ನರನ್ನು ಸಂದರ್ಶಿಸಿ ಸಂದೇಶಯಾಚನೆ ಮಾಡಿದ್ದರು. “ವಿಜ್ಞಾನವೇ ನನ್ನ ಮತ. ಕೊನೆಯತನಕವೂ ಅದನ್ನೇ ನಾನು ಪಾಲಿಸುವವ – ಭಾರತೀಯ ವಿಜ್ಞಾನಿಗಳಿಗೆ ತಮ್ಮ ಸಂಶೋಧನೆಗಳನ್ನು ಮುಂದುವರಿಸಲು ಸಾಕಷ್ಟು ಸೌಕರ್ಯಗಳಿಲ್ಲವೆಂಬುದನ್ನು ಒಪ್ಪಲಾರೆ” ಎಂದು ತಮ್ಮ ಮೇಜದ ಸೆಳೆಖಾನೆ ಎಳೆದು ಅದರಿಂದ ಪುಟ್ಟ ಪೆಟ್ಟಿಗೆಯನ್ನು ಹೊರತೆಗೆದು ತೋರಿಸುತ್ತ, “ನೋಡಿ – ಇದಿಷ್ಟೇ ನನ್ನ ಹತ್ಯಾರು” ಎಂದರು. “ನನ್ನ ಆಜನ್ಮ ಸಂಶೋಧನ ಕಾರ್ಯವಾದ ಬೆಳಕಿನ ಸಿದ್ಧಾಂತ ಹಾಗೂ ಬಣ್ಣಗಳು – ಇವನ್ನು ಮುಂದುವರಿಸಲು ಇಲ್ಲಿಯ ಸ್ವಾತಂತ್ರ್ಯ ನನಗೆ ಬಲು ಪ್ರಿಯವಾಗಿದೆ.”

ಎಂಬತ್ತಮೂರನೆಯ ಹುಟ್ಟು ಹಬ್ಬದಂದು, ೭ ನವಂಬರ್ ೧೯೭೦, ತುಂಬು ಪ್ರಾಯದ ಈ ನಿಷ್ಠಾವಂತ ವಿಜ್ಞಾನಿ ಪೂರ್ಣ ಗುಣಮುಖರಾಗಿದ್ದರು. ಪ್ರಪಂಚಕ್ಕೆ ಈ ಕ್ಷಿಪ್ರ ಮರುಗಳಿಕೆ ಎಷ್ಟು ವಿಸ್ಮಯಕಾರಿಯಾಗಿತ್ತೋ ಅಷ್ಟೇ ಸಂತೋಷದಾಯಕವೂ ಆಗಿತ್ತು. ಚಿಕಿತ್ಸಕ ಕೇಂದ್ರದ (ಸೇಂಟ್ ಮಾರ್ತಾಸ್ ಹಾಸ್ಪಿಟಲ್) ವೈದ್ಯ ವೃಂದ ಈ ದ್ವಿಗುಣಿತ ಶುಭದಿವಸವನ್ನು ಸಂಭ್ರಮದಿಂದ ಆಚರಿಸಬೇಕು, ರಾಮನ್ನರಿಗೆ ಬಲುಪ್ರಿಯವಾದ ಹೂಗಳಿಂದ ಅವರ ಕೊಠಡಿಯನ್ನು ಸಿಂಗರಿಸಿ, ಅವರಿಗೆ ಪುಷ್ಪಗುಚ್ಛಗಳನ್ನು ತಮ್ಮ ಶುಭಕಾಮನೆಗಳ ಪ್ರತೀಕವಾಗಿ ಅರ್ಪಿಸಬೇಕು ಎಂದೆಲ್ಲ ಯೋಜನೆ ಹಮ್ಮಿಕೊಂಡಿತ್ತು. ಇದನ್ನು ತಿಳಿದ ರಾಮನ್ (ಇವರಿಗೆ ಹುಟ್ಟು ಹಬ್ಬದ ಆಚರಣೆಯನ್ನು ಕುರಿತು ಏನೂ ನಂಬಿಕೆ ಇರಲಿಲ್ಲ) ವೈದ್ಯರ ಮೇಲೆ ಸಾತ್ತ್ವಿಕ ಕ್ರೋಧ ತಳೆದರು, “ಅವನ್ನು ಇರುವಲ್ಲೇ ಬಿಟ್ಟುಬಿಡಿ. ಹೂಗಳನ್ನು ಕೀಳದೇ ಅವುಗಳ ಚೆಲುವನ್ನು ನೀವು ಸವಿಯಬಹುದು.” ಸಭೆ ಸಮಾರಂಭಗಳಲ್ಲಿ ರಾಮನ್ನರಿಗೆ ಪುಷ್ಪಹಾರ ತೊಡಿಸಿದಾಗ ಅವರದನ್ನು ಕತ್ತಿನಿಂದ ತೆಗೆದಿಡುವ ಸಂಪ್ರದಾಯವನ್ನು ಪಾಲಿಸುತ್ತಿರಲಿಲ್ಲ.

ಎಂಬತ್ತಮೂರನೆಯ ವಸಂತದಲ್ಲಿ ಪಾದಾರ್ಪಣೆ ಮಾಡಿದ ಆರೋಗ್ಯವಂತ ರಾಮನ್ ಸ್ವಧಾಮಕ್ಕೆ ನವಂಬರ್ ೮ರಂದು ಮರಳಿದರು. ಆದರೆ ಈ ಹಣತೆಯಲ್ಲಿ ಎಣ್ಣೆ ತೀರುತ್ತ ಬಂದಿತ್ತು. ೨೦ರ ಬೆಳಗ್ಗೆ ಹಠಾತ್ತಾಗಿ ಅವರ ಪರಿಸ್ಥಿತಿ ಉಲ್ಬಣಗೊಂಡಿತು. ಆದರೆ ಅಷ್ಟೇ ಚುರುಕಾಗಿ ಅಂದು ರಾತ್ರಿಯಾಗುವಾಗ ಚೇತರಿಸಿಕೊಂಡಿದ್ದರು. ಈ ವೇಳೆಗೆ ಅವರ ಎರಡನೆಯ ಮಗ ವಿ. ರಾಧಾಕೃಷ್ಣನ್ ಆಸ್ಟ್ರೇಲಿಯಾದಿಂದ ಬಂದು ತಂದೆ ತಾಯಿಯರೊಡನೆ ಸೇರಿದ್ದರು. ರಾಮನ್ ಮಾತಾಡಿದರು. ಮಾತಾಡಿದ ವಿಷಯ ವಿಜ್ಞಾನ, ಗಾಂಧಿ, ಏಸುಕ್ರಿಸ್ತ ಮತ್ತು ಸತ್ಯ. ತೋರಿಕೆಗೆ ಇವು ವಿಭಿನ್ನವೆಂದು ಭಾಸವಾದರೂ ಇವುಗಳ ಮೂಲ ಅಮೂರ್ತ ಗುಣ ಒಂದೇ – ಸತ್ಯ. ಈ ಸತ್ಯಾನ್ವೇಷಕ ವಿಜ್ಞಾನಿ ಮರುದಿನ, ೨೧ ನವೆಂಬರ್ ೧೯೭೦, ಮುಂಜಾನೆ ೭.೨೭ ಗಂಟೆಗೆ ಚಿರಂತನ ಸತ್ಯದಲ್ಲಿ ಲೀನವಾಗಿ ಹೋದರು. ಭಾರತೀಯ ವಿಜ್ಞಾನ ನವೋದಯದ ನಿರ್ಮಾಪಕ ಮತ್ತು ನಾಯಕನ ಭಸ್ಮಾವಶೇಷ ರಾಮನ್ ಮಂದಿರದ ನಿಸರ್ಗದ ಚಿಲುಮೆಯಲ್ಲಿ ಅಂದೇ ಸಾಯಂಕಾಲ ವಿಲೀನವಾಗಿ ಹೋಯಿತು.

ಇನ್ನೂ ರಾಮನ್ ಯುಗದ ಸಂಜೆಗೆಂಪಿನಲ್ಲೇ ಇರುವ ೨೧ನೆಯ ಶತಮಾನದ ಭಾರತೀಯರು ಈ ಮಹಾವಿಜ್ಞಾನಿಯ ಕೊಡುಗೆಯ ಪೂರ್ಣ ಮೌಲ್ಯಮಾಪನ ಮಾಡಲಾರರು. ಆದರೆ ಅವರ ಜೀವನದರ್ಶನದ ಕೆಲವು ಪ್ರಮುಖ ಸೂತ್ರಗಳನ್ನು ಗುರುತಿಸುವುದು ಅಪ್ರಕೃತವಾಗದು: ರಾಮನ್ ಮತ್ತು ರಾಮನ್ ಆಧುನಿಕ ಭಾರತ ವಿಜ್ಞಾನದ ಶ್ರೇಷ್ಠ ಪ್ರತೀಕಗಳು. ಅತೀತ ನಿಷ್ಠೆಯಿರದೆ ಯಾವ ಮಹಾಸಾಧನೆಯೂ ಸಿದ್ಧಿಸದು. ಬೌದ್ಧಿಕವಾಗಿ ಯಾವ ಭಾರತೀಯ ವಿಜ್ಞಾನಿಯೂ ಪ್ರಪಂಚದ ಇತರ ಯಾವುದೇ ಜನಾಂಗದ ವಿಜ್ಞಾನಿಯ ಎದುರು ತಲೆ ತಗ್ಗಿಸಬೇಕಾಗಿಲ್ಲ. ಕುತೂಹಲಭರಿತ ನಿಸರ್ಗಾನ್ವೇಷಣೆ ಮಾತ್ರ ವಿಶ್ವರಹಸ್ಯಗಳನ್ನು ಆವಿಷ್ಕರಿಸಬಲ್ಲದು.

ವಿಜ್ಞಾನ ಗಮನದಲಿ ವಿಶ್ವವೇ ಚಿರನಿಕಷ
ಪ್ರಾಜ್ಞಮತಿ ಸೃಷ್ಟಿನಿಯಮಾನ್ವೇಷಣೆಯ ಮಹಾ
ಯಜ್ಞದಲಿ ತಾದಾತ್ಮ್ಯವೈದಿರೆ ಸ್ಫುರಿಸುವಾ
ಅಜ್ಞೇಯತೆಯ ಮಿನುಗು ವಿಜ್ಞಾನ ಅತ್ರಿಸೂನು.

(ಮುಂದುವರಿಯಲಿದೆ)