(ಕೊಡಗಿನ ಸುಮಗಳು ಸಂಕಲನದ ಮೂರನೇ ಸಣ್ಣ ಕತೆ -೧೯೪೫)
ಜಿ.ಟಿ ನಾರಾಯಣ ರಾವ್
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೫ರಲ್ಲಿ ಬರೆದ ಕತೆಯಿದು. ಈ ಹಿಂದೆ ಹೇಳಿದಂತೆ ೧೯೯೩ರಲ್ಲಿ ಇವರ ಸಮಗ್ರ ಕತಾಸಂಕಲನವಾಗಿ ನಾನೇ ಪ್ರಕಟಿಸಿದ ಕೊಡಗಿನ ಸುಮಗಳಲ್ಲಿ ಇದು ಮೂರನೇ ಕತೆ. (ಹಿಂದಿನೆರಡನ್ನು ಓದದವರಿಗೆ ಇಲ್ಲಿದೆ ಸೇತು) ಮುಂದೆ ಹೀಗೇ ಹನ್ನೆರಡರಲ್ಲಿ ಉಳಿದವನ್ನು ಹೀಗೇ ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ – ಅಶೋಕವರ್ಧನ]
ಲೇಖಕನ ಅರಿಕೆಯ ಮುಂದುವರಿದ ಮಾತುಗಳು
[ನನ್ನ ದೃಷ್ಟಿ ಮತ್ತು ಶೈಲಿವಿಕಾಸ? ಪ್ರಸಕ್ತ ಸಂಕಲನ ಮುದ್ರಣಗೊಳ್ಳುತ್ತಿರುವಾಗ ಅನಿವಾರ್ಯವಾಗಿ ನಾನು ಮುದ್ರಣ ಕರಡುಗಳನ್ನು ಮತ್ತೆ ಮತ್ತೆ ಓದಬೇಕಾಯಿತು. ‘ಕೈಕೊಡದ ಹಿಲ್‌ಮ್ಯಾನ್’ [೧೯೬೭ರಲ್ಲಿ ಬರೆದ ಇದನ್ನು ಮುಂದೆ ತಂದೆಯೇ ಆತ್ಮಕಥೆಯಲ್ಲಿ ಸಹಜ ಸ್ಥಾನ ಕೊಟ್ಟಿರುವುದರಿಂದ ಮತ್ತೆ ಕೊಡಗಿನ ಸುಮಗಳು ಸಂಕಲನದಲ್ಲಿ ಸೇರಿಸುತ್ತಿಲ್ಲ – ಅ.ವ] ಎಂಬ ವಾಸ್ತವ ಅನುಭವವನ್ನು ಮೆಲುಕು ಹಾಕಬೇಕಾಯಿತು. ಅಂದಿನ ಕಲ್ಪನೆ ‘ಶಂಭುವಿನ ಕಥೆ’ಯನ್ನು, ಮೂಲಪ್ರತಿ ಎಲ್ಲಿಯೂ ದೊರೆಯದ್ದರಿಂದ ಅಥವಾ ಅದನ್ನು ‘ಉತ್ಖನಿಸುವ’ ದಿಶೆಯಲ್ಲಿ ನನ್ನ ಪ್ರಯತ್ನ ಸಾಕಾಗದ್ದರಿಂದ, ಇಂದಿನ ಶೈಲಿಯಲ್ಲಿ ಪುನರ್ನಿರೂಪಿಸಬೇಕಾಯಿತು. ದೇಶ ಕಾಲಗಳಲ್ಲಿ ಒಬ್ಬ ಲೇಖಕ ಸಾಕಷ್ಟು ಹಿರಿದೂರ ಗಮಿಸಿ, ನಡೆದು ಬಂದ ಜಾಡನ್ನು ಸಿಂಹಾವಲೋಕಿಸಿದಾಗ ಆತನ ದೃಷ್ಟಿ ತಕ್ಕಷ್ಟು ಜ್ಞೇಯನಿಷ್ಠತೆ ಅಥವಾ ನಿರಪೇಕ್ಷತೆ ಗಳಿಸಿರುವುದೆಂದು ಭಾವಿಸಿದ್ದೇನೆ. ಇಂಥ ಒಂದು ಎಕ್ಸ್ ಕಿರಣ ದೃಷ್ಟಿಯಿಂದ ನನ್ನ ‘ಅಂದ’ನ್ನು ಅದೇ ನನ್ನ ‘ಇಂದಿ’ನಿಂದ ಸರ್ವೇಕ್ಷಿಸಿದಾಗ ನನಗೆ ಗೋಚರಿಸುವ ಕಂಕಾಲಗಳು ಎರಡು ಮಾತ್ರ: ೧. ಜೀವನದೃಷ್ಟಿ ಖಂಡಿತ ಬದಲಾಗಿಲ್ಲ: ನೈತಿಕತೆಯುಳಿದ ಜೀವನ ಜೀವನವಲ್ಲ. ಕರ್ತವ್ಯಪಾಲನೆಯೇ ಜೀವನ. ನಿಸರ್ಗದೂರ ಜೀವನ ಮರುಭೂಮಿಯ ಮರೀಚಿಕೆ. ನಂಬಿದ್ದನ್ನು ಮಾಡು, ಮಾಡುವುದರಲ್ಲಿ ನಂಬಿಕೆ ಇಡು. ಸದಾ ಜ್ಞಾನಕೈಲಾಸಾರೋಹಿಯಾಗಿರು, ಎಂದೂ ಅದರ ತಳದಲ್ಲಿ ನಿಂತ ರಾವಣನಾಗದಿರು. ೨. ನಿರೂಪಣೆ, ಪದಪ್ರಯೋಗ, ಶೈಲಿ ಮುಂತಾದ ತಾಂತ್ರಿಕ ವಿವರಗಳಲ್ಲಿ ಅಪಾರ ಕಲಾವಂತಿಕೆಯನ್ನೂ ಅಧಿಕ ಮಿತವ್ಯಯವನ್ನೂ ಸಾಧಿಸಬೇಕಾಗಿತ್ತು, ಸಾಧಿಸಬಹುದಾಗಿತ್ತು – ಆದರೆ ಸಾಧಿಸಲಾಗಲಿಲ್ಲ. (ಮುಂದುವರಿಯಲಿದೆ)]
ಬಹಳ ಹಿಂದೆ ಕೊಡಗು ರಾಜರ ಆಳ್ವಿಕೆಯ ಕಾಲದಲ್ಲಿ ಕೊಡವರ ಪೂವಯ್ಯನೆಂಬವನು ಅದ್ವಿತೀಯ ಶೌರ್ಯ ಪ್ರದರ್ಶನ ಮಾಡಿದುದಕ್ಕೆ ಉಂಬಳಿಯಾಗಿ ರಾಜನು ಅಗ್ನಿಕುಂಡದ ಪ್ರದೇಶವನ್ನು ಅವನಿಗೆ ಕೊಟ್ಟಿದ್ದನು. ಸೈನ್ಯದಿಂದ ನಿವೃತ್ತನಾದ ಮೇಲೆ, ಈ ನಿರ್ಜನ ಭಯಂಕರ ಪ್ರದೇಶದಲ್ಲಿಯೇ ನೆಲಸುವ ನಿಶ್ಚಯದಿಂದ ಪೂವಯ್ಯನು ಹೆಂಡತಿ ಮಗನೊಡನೆ ಅಲ್ಲಿಗೆ ಹೋದನು. ಗೇಣಗಲ ಭೂಮಿಯಿಂದಲೂ ಹೊನ್ನಮಳೆ ಕರೆಸಬಹುದೆಂದು ಅವನ ನಂಬಿಕೆಯಾಗಿತ್ತು. ಪೂವಯ್ಯನು ಬಡತನದಲ್ಲಿಯೇ ಬೆಳೆದು ಬಂದುದರಿಂದ ದೈಹಿಕ ಕಷ್ಟಗಳಿಗೆ ಹಿಂಜರಿಯುತ್ತಿರಲಿಲ್ಲ. ಅವನಿಗೆ ಪ್ರಾಯವೂ ಬಹಳವಾಗಿರಲಿಲ್ಲ. ಪ್ರಾಯದ ಒಬ್ಬ ಗಂಡು ಮಗನೂ ಇದ್ದನು. ಇವರು ಆಯಕಟ್ಟು ಪ್ರದೇಶವನ್ನು ಆರಿಸಿಕೊಂಡು ಅಲ್ಲಿ ವಾಸಿಸಲು ಒಂದು ಮನೆಯನ್ನು ಕಟ್ಟಿದರು. ಮತ್ತೆ ದನಕರುಗಳನ್ನು ಅಲ್ಲಿಗೆ ಸಾಗಿಸಿ ಗದ್ದೆ ಮಾಡಲು ಪ್ರಾರಂಭಿಸಿದರು. ಹೊಸತಾಗಿ ಗದ್ದೆಯನ್ನಾಗಲೀ ತೋಟವನ್ನಾಗಲೀ ಮಾಡುವುದು ಸಾಮಾನ್ಯದ ಕೆಲಸವಲ್ಲ. ಪ್ರಾರಂಭದಲ್ಲಿ ಇಲ್ಲಿ ಒಂದು ಕದನವೇ ನಡೆಯಿತು. ಸೈನ್ಯದಲ್ಲಿ ಶೌರ್ಯ ಪ್ರದರ್ಶನ ಮಾಡಿದ ಪೂವಯ್ಯನ ಸತ್ತ್ವಪರೀಕ್ಷೆ ಇಲ್ಲಿ ಆಯಿತು. ದಿನನಿತ್ಯ ನಿಸರ್ಗದೊಡನೆ ಹೋರಾಡಿ, ಕಾದಾಡಿ ಅವನಿಗೆ ಸಾಕಾಯಿತು. ವಿಘ್ನಗಳು ಒಂದೆರಡೇ?
ಗೊಂಡಾರಣ್ಯ, ಸುತ್ತಲೂ ಬೆಟ್ಟಗಳು. ಮಧ್ಯೆ ಇವರ ವಸತಿ ಮಾತ್ರ. ನಡು ಹಗಲಿನಲ್ಲಿಯೇ ಮನೆ ಸೂರೆ ಹೋದರೂ ಬೆಂದು ಹೋದರೂ ನೋಡುವವರಿಲ್ಲ, ಕೇಳುವವರಿಲ್ಲ. ಹುಲಿಗಳು ಆನೆಗಳು ಇತರ ಕ್ರೂರ ಮೃಗಗಳು ಅಸಂಖ್ಯಾತ. ಕೊಟ್ಟಿಗೆಯಿಂದಲೇ ದನಗಳನ್ನು ಹಾರಿಸಿಕೊಂಡು ಹೋಗುವ ಹುಲಿಗಳು. ಮೇಯಲಿಕ್ಕೆ ಹಗಲಿನಲ್ಲಿಯೂ ದನಗಳನ್ನು ನಿಶ್ಚಿಂತೆಯಿಂದ ಹೊಡೆಯುವಂತಿಲ್ಲ. ಸದಾ ಯಾರಾದರೂ ಜೊತೆಯಲ್ಲಿ ಪಹರೆ ಇರಬೇಕು. ಕೋಳಿಗಳನ್ನೂ ಹಂದಿಮರಿಗಳನ್ನೂ ಮಧ್ಯಾಹ್ನದ ಹೊತ್ತಿನಲ್ಲಿಯೇ ಕದ್ದುಕೊಂಡು ಹೋಗುವ ನರಿಗಳು, ನಾಯಿಗಳನ್ನು ಮಲಗಿದಲ್ಲಿಂದಲೇ ಜಾರಿಸಿ ಕೊಂಡು ಹೋಗುವ ನಾಯಿಹುಲಿಗಳು, ಇವನ್ನೆಲ್ಲ ಎದುರಿಸಿ ನಿಂತರೆ ಮತ್ತೆ ಪ್ರಕೃತಿಯ ಪೆಟ್ಟು ಬೇರೆ ತೆರನಾಗಿಯೇ ಬೀಳುವುದು: ಜ್ವರವೋ ಶೀತವೋ ಇತರ ಖಾಯಿಲೆಯೋ. ಈ ವರ್ಷ ಮಾಡಿದ ಹೊಸಗದ್ದೆಗೆ ಮಳೆಗಾಲದಲ್ಲಿ ವಿಪರೀತ ನೀರು ಹರಿದು ಬಂದು ಜೊತೆಯಲ್ಲಿ ಮಣ್ಣೂ ತುಂಬಿ ಮಾಡಿದ ಶ್ರಮವೆಲ್ಲ ವ್ಯರ್ಥವಾಗುವುದು. ಒಂದು ಸಣ್ಣ ಬಾಳೆ ಅಥವಾ ಕಬ್ಬಿನ ತೋಟವನ್ನು ಮಾಡಿದರೆ ಅದು ಬೆಳೆದು ಮೇಲೆ ಬರುವ ಮೊದಲೇ ಕಾಡುಕೋಣ, ಕಾಡು ಹಂದಿ ಅಥವಾ ಆನೆಯ ಬಾಯಿಗೆ ತುತ್ತು. ಆದರೂ ಶೂರ ಪೂವಯ್ಯ, ಅವನ ಮಗ ಧೀರ ಬೋಪಯ್ಯ ಹೆದರಲಿಲ್ಲ, ಅಳುಕಲಿಲ್ಲ. ಕೆಲಸದ ಆಳುಗಳನ್ನು ಕಟ್ಟಿಕೊಂಡು ದುಡಿದರು. ಬಿಲ್ಲು, ಬಾಣ, ಕತ್ತಿ ಭರ್ಚಿಗಳಿಂದ ಕ್ರೂರ ಮೃಗಗಳನ್ನು ಅಟ್ಟಿದರು. ಕಾಡನ್ನು ನಾಡು ಮಾಡಲು ಬದ್ಧ ಕಂಕಣರಾದರು.
ಕೆಲಸ ಮಾಡುವುದಾದರೆ ಎಂದೆಂದೂ ಮುಗಿಯದಷ್ಟು ಸ್ಥಳವಿತ್ತು. ಅಗ್ನಿಕುಂಡವು ಎರಡು ಮೂರು ಬೆಟ್ಟಗಳಿಂದ ಆವೃತವಾದ, ತಗ್ಗಾದ, ವಿಸ್ತಾರವಾದ ಪ್ರದೇಶ. ಅಲ್ಲಿ ನೀರು ವಿಪುಲ, ಎಂತಹ ಬೇಸಗೆಯಲ್ಲಿಯೂ ಸಮೃದ್ಧಿ. ಕಾಡುಗಳು ಶತಮಾನಗಳಿಂದ ಬೆಳೆದು ಸೊಕ್ಕಿ ನಿಂತಿವೆ. ಪೂವಯ್ಯನಿಗೆ ಈ ಸ್ಥಳವು ಉಂಬಳಿ ದೊರೆಯಿತೆಂದಾಗ ನಕ್ಕವರೇ ಹಾಸ್ಯ ಮಾಡಿದವರೇ ಹೆಚ್ಚು. “ರಾಜನಿಗೆ ಆಸೆ; ಚಿನ್ನ, ಫಲವತ್ತಾದ ಭೂಮಿ ಮುಂತಾದವನ್ನು ಕೊಡದೇ ಆ ಗೊಂಡಾರಣ್ಯವನ್ನು ಕೊಟ್ಟಿದ್ದಾನೆ” ಎಂದು ಗೇಲಿ ಮಾಡಿದರು. “ಅಲ್ಲಿಗೆ, ಆ ಕೊಂಪೆಗೆ, ಹೋಗಿ ನೆಲಸುವ ಮೂರ್ಖತನವೇ ಈ ಪೂವಯ್ಯನಿಗೆ” ಎಂದರು ಹಲವರು. “ಯುದ್ಧದಲ್ಲಿ ಶೌರ್ಯ ಪ್ರದರ್ಶನ ಮಾಡಲು ಮಿದುಳು ಬೇಕಾಗಿಲ್ಲ. ಇಲ್ಲವಾದರೆ ಆ ಕಾಡಿನ ನಡುವೆ ಯಾರಾದರೂ ಹೋಗಿ ನೆಲಸುವರೇ ಈ ಪ್ರಾಯದಲ್ಲಿ?” ಎಂದರು ಉಳಿದವರು. ಆದರೆ ಗೇಣಗಲ ಭೂಮಿಯೂ ಸರಿಯಾಗಿ ಉತ್ತು ಬಿತ್ತಲ್ಲಿ ರಾಶಿ ಹೊನ್ನು ಸುರಿಸುವ ಸ್ಥಳವಾಗಬೇಕೆಂಬುದು ಪೂವಯ್ಯನ ದೃಢವಾದ ನಂಬಿಕೆ. ಅವನ ಹೆಂಡತಿಯು ಯಾವ ಕಷ್ಟಕ್ಕೂ ಹೆದರದ ಕೊಡಗಿನ ವೀರಾಂಗನೆಯಾಗಿದ್ದಳು. ಮಗ ಬೋಪಯ್ಯನಂತೂ ಅಧಿಕೋತ್ಸಾಹದಿಂದ ಈ ನವೋದ್ಯಮದಲ್ಲಿ ಧುಮುಕಿದನು. ಹೀಗೆ ಈ ಮೂವರ ಪ್ರಥಮ ಪ್ರಯತ್ನದಿಂದಲೂ ಅತುಲ ವಿಶ್ವಾಸದಿಂದಲೂ ಅಗ್ನಿಕುಂಡದ ಮಹಾರಣ್ಯವು ಉಸಿರಾಡತೊಡಗಿತು. ಆ ಕತ್ತಲೆಯ ಮನೆಗೆ ಇವರ ಕುಟೀರವೇ ಮಣಿದೀಪವಾಯಿತು. ಜನತೀರ್ಥವಿಲ್ಲದೇ ಬತ್ತಿದ ಆ ಅಗ್ನಿಕುಂಡ ಸರೋವರಕ್ಕೆ ಇವರ ಆಗಮನದಿಂದ ನವಜಲವೊದವಿದಂತಾಯಿತು. ಶ್ಮಶಾನಸದೃಶ ಕಾಂತಾರದಲ್ಲಿ ಜೀವಕಳೆ ಸ್ಪಂದಿಸತೊಡಗಿತು. ಕಾಡು ನಾಡಾಯಿತು. ಭೀಕರತೆ ಅಳಿಯುತ್ತಾ ಸೌಂದರ್ಯವು ನೆಲೆಬಿಟ್ಟಿತು.
ಪೂವಯ್ಯನ ಆಶಯ ಮಹತ್ತಾಗಿತ್ತು. ಅವನಿಗೆ ಎದುರಾದ ಕಷ್ಟಗಳು ಅಮಿತ. ಆದರೆ ಅವನ ಉತ್ಸಾಹವೂ ಅಮಿತ. ಇಡೀ ಅಗ್ನಿಕುಂಡವನ್ನೇ ವಾಸಯೋಗ್ಯವಾಗಿ ಮಾಡಿ ಅಲ್ಲಿ ವಿಸ್ತರವಾದ ಗದ್ದೆಗಳನ್ನೂ ಕಿತ್ತಳೆ, ಕಾಫಿ ಮುಂತಾದ ತೋಟಗಳನ್ನೂ ಮಾಡಬೇಕು ಎಂಬುದು ಅವನ ಕನಸು. ಪ್ರಕೃತಿಯೊಂದಿಗಿನ ದಿನದ ಹೋರಾಟ ಮುಗಿದನಂತರ ಮನೆಯ ಸಮೀಪದ ದಿಬ್ಬದ ಮೇಲೆ ಅವನು ಮಗನೊಡನೆ ಹೋಗಿ ಕುಳಿತು ಚಿತ್ರಗಳನ್ನು ಕಟ್ಟುವುದರಲ್ಲಿ ತುಂಬಾ ಸಂತೋಷ ಪಡುತ್ತಿದ್ದನು. ಸುತ್ತಲೂ ಸಸ್ಯಶ್ಯಾಮಲ ಪುಣ್ಯಭೂಮಿ. ಸಂಜೆಯ ನೇಸರು ಮರಗಿಡಗಳ ನಡುವೆ ಅವಿತು ಅವಿತು ಇಳಿಯುತ್ತಿರುವನು. ಆಯಾಸ ಪರಿಹಾರಕ ನವೋತ್ತೇಜಕ ಸಮೀರನು ಮಂದವಾಗಿ ತೀಡುತ್ತಿರುವನು. ಕೆಳಗೆ ನೋಡಿದಲ್ಲಿ ಕಣ್ಣಿಗೆ ಹಬ್ಬವಾಗುವಂತೆ, ಸುವರ್ಣ ವರ್ಷ ಕರೆಯುವಂತೆ ಅವರ ದುಡಿಮೆಯ ಫಲಿತಾಂಶವಾದ ಅದರ ಪ್ರತೀಕವಾದ ಗದ್ದೆಗಳು, ತಿದ್ದಿದ ತೋಡುಗಳು, ಗೊನೆಯಿಟ್ಟು ಬಾಗಿ ನಿಂತಿರುವ ಬಾಳೆಯ ಮರಗಳು ಇವೆಲ್ಲ ರಾರಾಜಿಸುತ್ತಿರುವುವು. ಇವರ ಗುಡಿಸಲು ಹಸುರು ಸಮುದ್ರ ಮಧ್ಯದ ದ್ವೀಪದಂತೆ, ಸರಸ್ಸಿನಲ್ಲಿ ತೇಲುವ ಅರಸಂಚೆಯಂತೆ ಕಂಗೊಳಿಸುತ್ತಿರುವುದು. ಆ ಗದ್ದೆಯ ಎಡಗಡೆಗೆ ನಿಸರ್ಗದ ಸೈನಿಕರು – ನಿಬಿಡ ತರುನಿಚಯಗಳು – ಆಜ್ಞೆ ಕೊಟ್ಟೊಡನೆಯೇ ಮುನ್ನಡೆದು ಧಾಳಿ ಮಾಡಲು ಸಿದ್ಧರಾಗಿ ನಿಂತಂತೆ ಕಿಕ್ಕಿರಿದು ಬೆಳೆದಿರುವುವು.
“ನೋಡು ಬೋಪೂ, ನನಗೆ ಪ್ರಾಯವಾಗುತ್ತಾ ಬಂದಿತು. ಆದರೆ ನೀನು ಈ ಕಾರ್ಯವನ್ನು ಮುಂದುವರಿಸಬೇಕು. ಭೂಮಿತಾಯಿಗೆ ನೋವು ಮಾಡದೇ ಅವಳಿಗೆ ವಿಧೇಯನಾಗಿ ಹೊಂದಿಕೊಂಡು ನಡೆಯಬೇಕು. ಈ ಕಣಿವೆಯು ಯಾಲಕ್ಕಿ ತೋಟಕ್ಕೆ ಅತ್ಯುತ್ಕೃಷ್ಟವಾದುದು. ಮತ್ತೆ ಆ ಬೆಟ್ಟದಲ್ಲಿ ಕಾಫಿಯನ್ನು ಹಾಕಬಹುದು. ಆ ಗದ್ದೆಗಳ ಅಂಚಿನ ಕಾಡನ್ನು ಸವರಿದರೆ ಸೊಗಸಾದ, ದೊಡ್ಡದಾದ ಕಿತ್ತಳೇ ತೋಟವನ್ನು ಬೆಳೆಸಬಹುದು. ಈ ಭಾಗದಲ್ಲೆಲ್ಲ ಒಕ್ಕಲುಗಳಿಗೆ ಮನೆಗಳನ್ನು ಕಟ್ಟಿಸಬಹುದು. ಆಗ ನಮ್ಮ ಮನೆ ನೋಡು, ನಾವು ಕುಳಿತಿರುವ ಈ ಸ್ಥಳದಲ್ಲಿಯೇ ಕಟ್ಟಲ್ಪಡಬೇಕು. ಇಲ್ಲಿ ನೀರಿಗೇನೂ ತೊಂದರೆಯಿಲ್ಲ. ಗಾಳಿ ಬೆಳಕು ಯಥೇಚ್ಛ. ಅಲ್ಲದೇ ಈ ಎಲ್ಲಾ ತೋಟ, ಗದ್ದೆಗಳನ್ನು ಇಲ್ಲಿಂದಲೇ ನೋಡಿ ಆನಂದ ಪಡೆಯಬಹುದು. ಆದರೆ ನಾವು ದುಡಿಯಬೇಕು. ಎಷ್ಟೇ ಧನಿಕರಾದರೂ ದುಡಿದು ಅದನ್ನು ಅನುಭವಿಸುವುದರಲ್ಲಿಯೇ ನಿಜವಾದ ಆನಂದ” ಎಂದು ಮುಂತಾಗಿ ಹೇಳುವನು.
ಬೋಪಯ್ಯನಿಗೆ ಬಡವರ ಮನೆಯಿಂದ, ಕಷ್ಟವರಿತರವರ ಕುಟುಂಬದಿಂದ ಹೆಣ್ಣು ತಂದು ಮದುವೆಯಾಯಿತು. ದೊಡ್ಡವರು ಯಾರೂ ಅಲ್ಲಿಗೆ ಆ ಕಾಡಿನ ನಡುವಿಗೆ ತಮ್ಮ ಬಣ್ಣದ ಬೀಸಣಿಗೆಗಳಂತಹ ಹೆಣ್ಣು ಮಕ್ಕಳನ್ನು ಕೊಡಲು ಒಪ್ಪುತ್ತಿರಲಿಲ್ಲ. ಪ್ರಾಯಕಾಲದಲ್ಲಿಯೇ ಅಲ್ಲಿ ನೆಲಸಿ, ತಂದೆಯಿಂದ ವ್ಯವಸಾಯದ ಸಂಪೂರ್ಣ ಅನುಭವವನ್ನು ಪಡೆದ ಬಲಿಷ್ಠ ಕಾಯದ ಬೋಪಯ್ಯನಿಗೆ ಯೋಗ್ಯೆಯಾದ ಸಹಧರ್ಮಿಣಿಯೇ ದೊರೆತಳು. ಮೂರು ಜನರ ಮನೆಗೆ ನಾಲ್ಕನೆಯವಳು ಬಂದು ಆ ಮನೆಯನ್ನೂ ಕಾಡನ್ನೂ ಬೆಳಗಿದಳು. ಇಷ್ಟರಲ್ಲಿಯೇ ಅಲ್ಲಿಗೆ ಒಂದೆರಡು ಸಂಸಾರಗಳು ಒಕ್ಕಲುಗಳಾಗಿ ಬಂದು ನೆಲಸಿದವು. ಮಲೆಯಾಳದಿಂದ ಅನ್ನವಿಲ್ಲದೆ ಅಲ್ಲಿಗೆ ಬಂದು ಸೇರಿದ ಅಪ್ಪುನಾಯರನೆಂಬವನು ಅವರಲ್ಲಿ ಮುಖ್ಯನಾದವನು. ಅವನೂ ಅವನ ಆರು ವರ್ಷದ ಮಗನೂ ಅಲ್ಲಿಗೆ ಬಂದ ಸಂಗತಿ ವಿಚಿತ್ರವೇ ಇದೆ. ಮಲೆಯಾಳದಲ್ಲಿ ಮಾರಿ ರೋಗ ಬಂದಾಗ, ಬೇಸಾಯಗಾರ ಅಪ್ಪು ನಾಯರನು ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಂಡನು. ಉಳಿದವನು ಆರು ವರ್ಷದ ಮಗನೊಬ್ಬನೇ, ಅಲ್ಲಿ ಇನ್ನು ಉಳಿದರೆ ಉಳಿಗಾಲವಿಲ್ಲವೆಂದು ಬಗೆದು ಕಣ್ಣಾನೂರು ಮಾರ್ಗವಾಗಿ ಕೊಡಗಿನ ಗಡಿಯನ್ನು ಸೇರಿದನು. ಅಲ್ಲಿ ಎಲ್ಲಿಯಾದರೂ ಹೋಗಿ ಯಾರ ಒಕ್ಕಲಾಗಿಯಾದರೂ ಸೇರೋಣವೆಂದು. ಒಂದು ರಾತ್ರಿ ನಿದ್ರೆಯಲ್ಲಿ ಇವನಿಗೆ ಒಂದು ಸ್ಥಳ ಬಹಳ ಸ್ಪಷ್ಟವಾಗಿ ಕಂಡಿತಂತೆ. ಅಲ್ಲಿಗೆ ಹೋಗಿ ಸೇರು ಎನ್ನುವಂತೆ ಯಾವುದೋ ಒಂದು ಶಕ್ತಿ ಪ್ರೇರಣೆ ನೀಡಿತಂತೆ. ಅಲ್ಲಿಗೆ ಹೋಗುವ ದಾರಿಯು ಅವನಿಗೆ ಸ್ಪಷ್ಟವಾಗಿ ಕಂಡಿತಂತೆ. ಇದೇನು ಅದ್ಭುತ! ತಾನು ಕಂಡಿರದ, ಕೇಳಿರದ ಸ್ಥಳವೊಂದು ಅದಕ್ಕೆ ಹೋಗಲಿರುವ ದಾರಿಯೂ ಕಣ್ಣ ಮುಂದೆ ವಿವರವಾಗಿ ತೋರುತ್ತಿದೆ. ಹಾಗಾದರೆ ದೇವರ ಇಷ್ಟದಂತೆಯೇ ನಡೆಯಬೇಕು. ಅಲ್ಲಿಗೆ ಹೋಗಬೇಕು ಎಂದು ಕನಸಿನಲ್ಲಿ ಕಂಡ ದಾರಿಯಲ್ಲಿ ಮಗನನ್ನು ಕರೆದುಕೊಂಡು ಮುಂದುವರಿದನು. ಹೋಗಿ ತಲಪಿದುದೇ ಅಗ್ನಿಕುಂಡಕ್ಕಾಗಿತ್ತು. ಪೂವಯ್ಯನಿಗೆ ನಮಸ್ಕರಿಸಿ, ಅಪ್ಪು ನಾಯರನು ತಾನು ಕಂಡ ಸ್ವಪ್ನವನ್ನು ವಿವರಿಸಿದನು. ಈ ಒಂದು ಅಮಾನುಷಕತೆಯನ್ನು ಕೇಳಿ ಪೂವಯ್ಯನಿಗೆ ವಿಸ್ಮಯವಾಯಿತು. ಕಾವೇರಿ ಮಾತೆಯ ಒಲವು ತನ್ನ ಕಡೆಗಿದೆ, ಇಲ್ಲದಿದ್ದರೆ ಅಯಾಚಿತವಾಗಿ ಆ ಶಕ್ತಿ ಹೀಗೆ ಒಬ್ಬನನ್ನು ಇಲ್ಲಿಗೆ ಹೋಗು ಎಂದು ಪ್ರೇರೇಪಿಸುವುದು ಹೇಗೆ ಎಂದು ಅವನು ಯೋಚಿಸಿದನು. ಅಪ್ಪು ನಾಯರನೂ ಅವನ ಮಗ ಕೇಳುವೂ ಅಲ್ಲಿ ನೆಲಸಿದರು ದುಡಿಮೆಗಾಗಿ. ಅಪ್ಪುವು ಧನಿಯ ವಿಶ್ವಾಸಕ್ಕೆ ಪಾತ್ರನಾಗಿದ್ದನು. ಹೊಸ ಹುರುಪಿನಿಂದ ತನ್ನ ಸ್ಥಳವೆಂಬ ಅಭಿಮಾನದಿಂದ ಅವನು ಅಲ್ಲಿ ಗೆಯ್ಯಹೊರಟನು. ಪೂವಯ್ಯ, ಬೋಪಯ್ಯ ಅಗ್ನಿಕುಂಡದ ನಿರ್ಮಾಪಕರು ಎಂದರೆ ಅಪ್ಪುನಾಯರನು ಅದಕ್ಕೆ ರೂಪ ಲಾವಣ್ಯಗಳನ್ನು ಇತ್ತವನು ಎನ್ನಬೇಕು. ಈ ವಜ್ರವನ್ನು ಖನಿಗಿಂದ ತೆಗೆದವರು ಅವರಾದರೆ ಇದನ್ನು ಕಂಡರಸಿ ಹೊಳಪನ್ನಿತ್ತವನು ಅಪ್ಪು ನಾಯರನು. ಪೂವಯ್ಯ, ಬೋಪಯ್ಯ ಅಪ್ಪು ಈ ಮೂವರ ಸತತ ಪರಿಶ್ರಮದಿಂದ ಅಗ್ನಿಕುಂಡದ ಭೀಕರ ಅರಣ್ಯವು ಸುಂದರ ನಂದನವನದಂತೆ ಅರಳಿ ಕಂಗೊಳಿಸಲಾರಂಭಿಸಿತು.
ಎಲ್ಲವೂ ಹೀಗೆಯೇ ನಡೆಯುತ್ತಿದ್ದಂತೆ ಎಷ್ಟು ಚೆನ್ನಾಗಿರುತ್ತಿತ್ತು. ಸರ್ವವನ್ನೂ ನುಂಗುವ ಕಾಲನು ಪೂವಯ್ಯನನ್ನೂ ನುಂಗಿದನು. ಆದರೆ ಅವನ ಪ್ರಯತ್ನ ಸರ್ವಸ್ವವನ್ನೂ ಅವನ ಯಶಃಶರೀರವನ್ನೂ ಮಾತ್ರ ಸ್ವಾಹಾಕರಿಸಲಾಗಲಿಲ್ಲ. ಉಳಿದಿಬ್ಬರೂ – ಬೋಪಯ್ಯ, ಅಪ್ಪು – ಮಹತ್ಕಾರ್ಯವನ್ನು ಮುಂದುವರಿಸಿದರು. ಪೂವಯ್ಯನ ಮಹತ್ವಾಕಾಂಕ್ಷೆಯನ್ನು, ಕನಸನ್ನು ತನ್ನ ಕಾಲದಲ್ಲಿಯಾದರೂ ನನಸು ಮಾಡಬೇಕು, ನೆರವೇರಿಸಬೇಕು. ಇದೇ ಮೃತನ ಆತ್ಮಕ್ಕೆ ಶಾಂತಿಯನ್ನೀಯಬಲ್ಲುದು ಎಂಬುದು ಬೋಪಯ್ಯನ ದೃಢ ನಂಬಿಕೆ. ಅವರಿಗೆ ಯಾವಾಗಲೂ ತೊಂದರೆಯಿದ್ದುದು ಜನಬಲ. ಕಾಡಿಗೆ ಯಾರೂ ಬರಲೊಪ್ಪಲಾರರು. ಆದರೆ ಕಾಲವೂ ಬದಲಾಗುವುದಷ್ಟೆ? ಮುಂದೆ ಬ್ರಿಟಿಶರು ಕೊಡಗನ್ನು ಆಕ್ರಮಿಸಿ ವಶಪಡಿಸಿಕೊಂಡಾಗ, ನೆರೆ ಊರಿನಿಂದ ಜನರು ಬಂದು ಕೊಡಗಿನಲ್ಲಿ ನೆಲಸಿದರು. ಅಗ್ನಿಕುಂಡಕ್ಕೆ, ಇದೊಂದು ಹೊಸ ಸ್ಥಳ, ನೋಡೋಣವೆಂದು ವಲಸೆ ಹೋದರು. ಬೋಪಯ್ಯನು ಬಂದವರಿಗೆಲ್ಲ ಗುಡಿಸಲನ್ನೂ ಕೆಲಸವನ್ನೂ ಒದಗಿಸುತ್ತಿದ್ದನು. ಆ ವಿಸ್ತಾರ ಪ್ರದೇಶವನ್ನು ರೂಪಿಸಲು ಹೊರಟನು. ಅಪ್ಪು ನಾಯರನಂತೂ ಸತತ ಉತ್ಸಾಹದ ಬುಗ್ಗೆಯಾಗಿದ್ದನು.
ಪೂವಯ್ಯನ ಅನೇಕ ಆಶಯಗಳು ಕೈಗೂಡಿದುವು. ಬೋಪಯ್ಯನಿಗೆ ಐವತ್ತು ವರ್ಷ ಪ್ರಾಯ ದಾಟುವ ವೇಳೆಯಲ್ಲಿ ಕಾಫಿತೋಟವು ವಿಶಾಲವಾಗಿ ಹುಲುಸಾಗಿ ಮೇಲೆ ಬರುತ್ತಿತ್ತು. ಈ ಭಾಗದ ಕಣಿವೆಯಲ್ಲಿ, ತಂಪಾದ ತಗ್ಗಿನಲ್ಲಿ ಯಾಲಕ್ಕಿ ಗಿಡಗಳು ತಲೆಯೆತ್ತಿ ಸುಗಂಧವನ್ನು ಬೀರುತ್ತಿದ್ದುವು. ವರ್ಷಕ್ಕೆ ಒಂದು ಸಾವಿರ ಬಟ್ಟಿ ಬತ್ತ ಬೆಳೆಯುವಷ್ಟು ಗದ್ದೆಯೂ ರೂಪಿತವಾಗಿತ್ತು. ಈ ಗದ್ದೆ, ತೋಟಗಳೆಲ್ಲವನ್ನೂ ನೋಡಿಕೊಳ್ಳಲು ಸಾಗುವಳಿ ಮಾಡಲು ಸಾಕಾಗುವಷ್ಟು ಒಕ್ಕಲುಗಳು ಅಲ್ಲಿ ನೆಲೆವಿಟ್ಟಿದ್ದರು. ಅವರಿಗಾಗಿ ಬೇರೆ ಬೇರೆ ಭಾಗಗಳಲ್ಲಿ ಗುಡಿಸಲುಗಳು ತಲೆಯೆತ್ತಿದ್ದುವು. ಸಂದರ್ಭವೊದಗಿದಂತೆ ಬೋಪಯ್ಯನು ತೋಟಗಳನ್ನು ವಿಸ್ತಾರಪಡಿಸುತ್ತಿದ್ದನು. ಈ ರೀತಿ ಅಗ್ನಿಕುಂಡವು ಸರ್ವತೋಮುಖವಾಗಿ ಬೆಳೆಯುತ್ತಿತ್ತು. ಭಯಂಕರ ರುದ್ರ ಕಾನನವು ತೋಟಗಳಿಂದಲೂ ಸೊಕ್ಕಿ ಬೆಳೆದು ನಿಂತಿರುವ ಪೈರಿನಿಂದ ತಲೆ ಬಾಗುವ ಬತ್ತದ ತೆನೆಗಳಿಂದಲೂ ಸಂತೃಪ್ತ ಜನಗಳಿಂದಲೂ ಕೂಡಿ ಒಂದು ಸ್ವರ್ಗದಂತೆಯೇ ಇತ್ತು. ಸಂತೋಷ ಸಂತೃಪ್ತಿಗಳು ಅಲ್ಲಿ ಮನೆ ಮಾಡಿದ್ದುವು. ಹಾಗೆಂದು ಬೋಪಯ್ಯನಾಗಲೀ ಅವನ ಅನಂತರದ ಅವನ ಮಕ್ಕಳಾಗಲೀ ಸ್ವತಃ ದುಡಿಯುವುದನ್ನು ಬಿಡಲೇ ಇಲ್ಲ. ಪೂವಯ್ಯನು ಬೋಧಿಸಿದ ವೇದ ಮಂತ್ರ: “ಎಷ್ಟೇ ಧನಿಕನಾದರೂ ದುಡಿದು ಅದನ್ನು ಅನುಭವಿಸುವುದರಲ್ಲಿಯೇ ನಿಜವಾದ ಆನಂದ” ಬೋಪಯ್ಯನು ಅವನ ಮಕ್ಕಳಿಗೂ ಬೋಧಿಸಿದನು. ಇತ್ತ ಅಪ್ಪು ನಾಯರನ ವಂಶಜರೂ ಅಗ್ನಿಕುಂಡದ ಒಡೆಯರಿಗೆ ವಿಧೇಯರಾಗಿಯೇ ನಿಂತರು. ಹೀಗೆ ಈ ಎರಡು ಮೂಲಪುರುಷರ ಸಂತತಿಗಳು – ಒಂದು ಪೂವಯ್ಯನದು ಮತ್ತೊಂದು ಅಪ್ಪು ನಾಯರನದು, ಒಂದಕ್ಕೊಂದು ಹೊಂದಿಕೊಂಡು, ಬಳ್ಳಿಗಳಂತೆ ಹೆಣೆದುಕೊಂಡು ಅಗ್ನಿಕುಂಡದಲ್ಲಿ ಬೆಳೆದುವು. ಈ ರೀತಿಯ ಅನ್ಯೋನ್ಯತೆಯಲ್ಲಿ ಆತ್ಮೀಯತೆಯಲ್ಲಿ ಎರಡು ಮೂರು ತಲೆಮಾರುಗಳು ಕಳೆದುಹೋದುವು.
ಬೋಪಯ್ಯನ ಸಂತತಿಯವರು ಕೆಲವರು ಮಕ್ಕಳಿಲ್ಲದೇ ತೀರಿಹೋದರು. ಮತ್ತೆ ಕೆಲವರು ಕಾರಣಾಂತರಗಳಿಂದ ಊರು ಬಿಟ್ಟು ಹೊರಟುಹೋದರು. ಹೀಗಾಗಿ ನಾಲ್ಕನೆಯ ತಲೆಯವನು ಒಬ್ಬನೇ ಅಗ್ನಿಕುಂಡದ ಗದ್ದುಗೆಯನ್ನೇರಿದನು. ಇವನ ಹೆಸರು ಗಣಪತಿ. ಇವನು ೧೯೨೦ರಲ್ಲಿ ಅಗ್ನಿಕುಂಡದ ಗದ್ದುಗೆಯನ್ನೇರಿದನು. ಅಗ್ನಿಕುಂಡವೀಗ ಸಂಪತ್ತಿನ ಮಳೆಯನ್ನು ಕರೆಯುತ್ತಿತ್ತು. ಮೂಲಪುರುಷ ಪೂವಯ್ಯನು ಕನಸು ಕಂಡ ಉನ್ನತ ಸ್ಥಳದಲ್ಲಿ ಗಣಪತಿಯ ತಂದೆಯು ಪ್ರಶಸ್ತ ಸೌಧವನ್ನು ಕಟ್ಟಿಸಿದ್ದನು. ಮನೆಯವರೆಗೆ ಗಾಡಿ ಹೋಗಲು ಏರ್ಪಾಡಾಗಿತ್ತು. ಹುಲ್ಲಿನ ಜೋಪಡಿಗಳೆಲ್ಲವೂ ಮಂಗಳೂರು ಹಂಚು ಹೊದೆಸಿದ ಮನೆಗಳಾಗಿದ್ದುವು. ಅಗ್ನಿಕುಂಡದ ಗೊಂಡಾರಣ್ಯವು ಈಗ ಅಗ್ನಿಕುಂಡ ಎಸ್ಟೇಟ್ ಎಂಬ ವಿಲಾಯಿತೀ ನಾಮಧೇಯದಿಂದ ಮೆರೆಯುತ್ತಿತ್ತು. ಕೊಡಗಿನ ಚೀಫ್ ಕಮಿಷನರ್ ಮುಂತಾದ ಧೊರೆಗಳು ಎಸ್ಟೇಟ್ ವರೆಗೆ ಸವಾರಿಗೈದು ಆದರೋಪಚಾರಗಳನ್ನು ಹೊಂದಿಕೊಂಡು, ತಮ್ಮ ಪಾದ(ಶೂ) ಧೂಳಿಯಿಂದ ಅಲ್ಲಿಯ ಸ್ಥಳವನ್ನು ಪಾವನಗೊಳಿಸಿ, ತಮ್ಮ ಶ್ವೇತ, ವರದ ಹಸ್ತದಿಂದ ಹರಸಿ ಮರಳುತ್ತಿದ್ದರು.
ಆ ತಾನೇ ನವಸಂಸ್ಕೃತಿಯ ಪ್ರತೀಕವಾದ ಆಂಗ್ಲ ವಿದ್ಯಾಭ್ಯಾಸ ಕೊಡಗಿನಲ್ಲಿಯೂ ಹಬ್ಬುತ್ತಿತ್ತು. ಮಡಿಕೇರಿಯಲ್ಲಿ ಮಾತ್ರ ಒಂದು ಇಂಗ್ಲಿಷ್ ಕಲಿಸುವ ಹೈಸ್ಕೂಲ್ ಇತ್ತು. ಕೊಡವರು ತುಂಬ ಆಸಕ್ತಿಯಿಂದ ಸಾಹೇಬೀ ಜನರ ಮರ್ಜಿಯನ್ನು ಅಭ್ಯಸಿಸತೊಡಗಿದ್ದರು. ಫರಂಗಿಯವರ ಜರ್ಬು, ಪೋಷಾಕು, ದೌಲತ್ ಇವನ್ನೆಲ್ಲ ನೋಡಿ ಗಣಪತಿಗೆ ತನ್ನ ಮಗನಿಗೂ ಆ ವಿದ್ಯಾಭ್ಯಾಸ ಕೊಡಿಸಬೇಕೆಂದು ಆಸೆಯಾಯಿತು. ಹೀಗಾಗಿ ಮಡಿಕೇರಿಯಲ್ಲಿ ಮರಿ ಧನಿಗೆ ಒಂದು ಚಿಕ್ಕ ಬಂಗ್ಲೆಯನ್ನು ಕಟ್ಟಿಸಿಕೊಟ್ಟು ಅಲ್ಲಿ ಊಟ ವಸತಿಗೆ ಏರ್ಪಾಡು ಮಾಡಿಸಿ ಶಾಲೆಗೆ ಕಳುಹಿಸಲು ಪ್ರಾರಂಭಿಸಿದನು. ಮರಿ ಧನಿ ಪೂವಯ್ಯನು ಬಿಗಿಯಾದ ಚಡ್ಡಿ ಕೋಟು ಧರಿಸಿ ಕಾಲಿಗೆ ಪಾದರಕ್ಷೆ ತಾಗಿಸಿ ತಲೆಗೆ ತೊಪ್ಪಿ ತೊಡಿಸಿ ಶಾಲೆಗೆ ಹೋಗಿ ಬರುವ ಠೀವಿಯೇ ಠೀವಿ. ಅವನಿಗೆ ಹೋಗುವಾಗ ಪುಸ್ತಕ ಹಿಡಿದುಕೊಳ್ಳಲು ಒಬ್ಬ ಮಲಯಾಳೀ ಹುಡುಗ – ಇವನು ಅಪ್ಪುವಿನ ವಂಶಜ. ಮನೆಯಲ್ಲಿಯ ವ್ಯವಹಾರ ನೋಡಿಕೊಳ್ಳಲು ಈ ಹುಡುಗನ ತಂದೆ ಗೋಪಾಲ. ಗೋಪಾಲನಿಗೆ ನಡುಹರಯ ಮೀರಿತ್ತು. ಇವನಿಗೆ ಧನಿಯ ವಂಶದವರಲ್ಲಿ ಅಪಾರ ಭಕ್ತಿ, ವಿಶ್ವಾಸ. ಇವನೂ ಗಣಪತಿಯೂ ಸಾಮಾನ್ಯ ಒಂದೇ ಪ್ರಾಯದವರು. ಅಪ್ಪುನಾಯರನ ಕುಲದಲ್ಲಿ ಅಗ್ನಿಕುಂಡದಲ್ಲಿ ಉಳಿದವನು ಇವನೊಬ್ಬನೆ. ಉಳಿದವರು ಅಡ್ಡ ಹಾದಿ ಹಿಡಿದುದರಿಂದ ಅಲ್ಲಿ ನಿಲ್ಲಲ್ಲಾಗದೇ ಜಾರಬೇಕಾಯಿತು. ಗೋಪಾಲ ಮಾತ್ರ ಸಂಪೂರ್ಣ ವಿಶ್ವಾಸ ನಂಬಿಕೆಗಳಿಗೆ ಪಾತ್ರನಾಗಿ, ವಿಧೇಯನಾಗಿಯೇ ಇದ್ದುದರಿಂದ, ತೀಕ್ಷ್ಣಮತಿ ಗಣಪತಿಯು ಪೇಟೆಯಲ್ಲಿಯ ತನ್ನ ಮನೆಯಲ್ಲಿ ಅವನನ್ನೇ ಇರಲು ನೇಮಿಸಿದನು. ಗೋಪಾಲನು ತನ್ನ ಮರಿಧನಿ ಪೂವಯ್ಯನನ್ನು ಗೌರವದಿಂದ, ಮಮತೆಯಿಂದ, ಭಕ್ತಿಯಿಂದ ಕಾಣುತ್ತಿದ್ದನು. ತಿಂಗಳಿಗೊಂದು ಸಲ ಗಣಪತಿಯು ಬಂದು ಮಗನ ಅಭಿವೃದ್ಧಿಯನ್ನು ನೋಡಿ ಹಿಗ್ಗಿ ಹೋಗುತ್ತಿದ್ದನು. ಮನೆಯಲ್ಲಿ ಬೇರೆ ಯಾರೂ ಸಂಬಂಧಿಕರು ಇಲ್ಲದ ಗಣಪತಿಗೆ ಪೂವಯ್ಯನೇ ಜೀವನ ಸರ್ವಸ್ವನಾಗಿದ್ದನು. ಮಗನು ಇಜಾರು ಹಾಕಿ, ಕೋಟು ಹೇಟು ಧರಿಸಿ ಇಂಗ್ಲಿಷನ್ನು ಲಟಪಟನೆ ಚಟಾಯಿಸುವ ದಿನಗಳನ್ನು ಹಾರೈಸಿ ತಂದೆ ರೋಮಾಂಚನ ಹೊಂದುತ್ತಿದ್ದನು.
ಆದರೆ ಮರಿ ಧನಿಯು ಮಾತ್ರ ಆಂಗ್ಲ ವಿದ್ಯೆಗಿಂತಲೂ ಅದರ ದುರ್ಗಂಧವನ್ನು ಹೆಚ್ಚು ಸೇವಿಸುತ್ತಿದ್ದಂತೆ ತೋರಿತು. ಹಣವಿರುವವನಿಗೆ ಬುದ್ಧಿ ಬಲಿಯದಿರುವವನಿಗೆ ತಪ್ಪು ದಾರಿಯು ಸುಲಭದಲ್ಲಿ ಸಿಕ್ಕುವುದು; ದುಷ್ಟರ ಸಂಗ ಶೀಘ್ರವಾಗಿ ಆಗುವುದು. ಪೂವಯ್ಯನು ತಂದೆಯ ಊಹೆಯಂತೆ ಪ್ರವರ್ಧಮಾನಕ್ಕೆ ಬರಲಿಲ್ಲ. ಹತ್ತು ವರ್ಷಗಳ ಮಡಿಕೇರಿಯ ವಾಸ ಅವನನ್ನು ಲೋವರ್ ಸೆಕೆಂಡರಿ ದಾಟಿಸಲಿಲ್ಲ ಆದರೆ ತಂದೆ ತಾಯಿಗಳ ವಾತ್ಸಲ್ಯದ ಮನಸ್ಸು ಮಕ್ಕಳ ವಿಷಯದಲ್ಲಿ ಕುಸುಮಕೋಮಲ. ಮಕ್ಕಳು ಏನೇ ಮಾಡಿದರೂ ಬಹುಶಃ ಆ ಪ್ರಾಯದಲ್ಲಿ ಹಾಗೆ ಮಾಡುವರೋ ಏನೋ. ಬಹುಶಃ ನಮ್ಮಲ್ಲಿಯೇ ತಪ್ಪು ಇರುವುದೋ ಏನೋ. ಬಹುಶಃ ನಮಗೆ ಮಾತ್ರ ಹೀಗೆ ಕಾಣುವುದಾಗಿರಬೇಕು ಎಂದು ಮುಂತಾಗಿ ಸಮಾಧಾನಪಟ್ಟುಕೊಳ್ಳುತ್ತಾರೆ. ಹದಿನೆಂಟರ ಗಡಿಯನ್ನು ಪೂವಯ್ಯ ದಾಟಿದ. ಇದೇ ಸಂದರ್ಭದಲ್ಲಿ ದುರ್ದೈವವಶಾತ್ ಗಣಪತಿಯು ಹಠಾತ್ತಾಗಿ ನಾಲ್ಕು ದಿನಗಳ ಜ್ವರದಿಂದ ತೀರಿಹೋದನು. ಪೂವಯ್ಯನ ಭವಿಷ್ಯದ ಹೊಂಗನಸುಗಳು ಮಾಯವಾದುವು. ತಾಯಿಯನ್ನು ಮೊದಲೇ ಕಳೆದುಕೊಂಡ ಅವನು ಬಂಧುಗಳಿಲ್ಲದ ಮನೆಗೆ ಹೋಗಿ ಕಣ್ಣೀರುಗರೆದನು. “ಆಂಗ್ಲ ಭಾಷೆಯಲ್ಲಿ ಒಳ್ಳೆಯ ಪಂಡಿತನಾಗು ಮಗನೇ” ಎಂದು ಗಣಪತಿಯು ಬೋಧತಪ್ಪುವ ಮೊದಲೇ ಹೇಳಿದುದು ಅವನ ಮನಸ್ಸಿನಲ್ಲಿ ನಾಟಿತ್ತು. ಗೋಪಾಲನು ಇತರ ಒಕ್ಕಲುಗಳು ಎಲ್ಲರೂ ಚಿನ್ನದಂತಹ ಧನಿಯನ್ನು ಕಳೆದುಕೊಂಡೆವಲ್ಲ ಎಂದು ದುಃಖಿಸಿದರು. ಕೆಲವು ವಾರಗಳು ಹೀಗೆಯೇ ಸಂದುವು. ಮತ್ತೆ ಆಂಗ್ಲ ಭಾಷಾ ಪಾರಂಗತನಾಗಲು ಪೂವಯ್ಯನು ಬೆಂಗಳೂರಿಗೆ ಹೋಗುವ ನಿರ್ಧಾರದಿಂದ ಹೊರಟನು. ಮಡಿಕೇರಿಯ ಪಂಡಿತರು ಪ್ರಯೋಜನವಿಲ್ಲ ಎಂದು ಅವನ ನಂಬಿಕೆಯಾಗಿತ್ತು. ಮರಿಧನಿಯ ವಿಶೇಷ ಪರಿಚಯವಿಲ್ಲದ ಒಕ್ಕಲುಗಳೆಲ್ಲರೂ ಇವನ ಕಾರಭಾರವನ್ನು ನೋಡಬೇಕೆಂದು ಉತ್ಸುಕತೆಯಿಂದ ಇದ್ದರೆ ಇವನು ಸೀದಾ ಬೆಂಗಳೂರಿಗೆ ತೆರಳಿದನು. “ಇನ್ನು ಇಲ್ಲಿಯೇ ನೆಲಸುವ, ಅಲ್ಲಿಗೆ ಹೋಗಿ ಏನು ಮಾಡುವುದು ಧನಿಗಳೇ?” ಎಂದು ಗೋಪಾಲನು ಬುದ್ಧಿವಾದ ಹೇಳಿದರೂ ಪ್ರಾಯದ ಅಮಲಿನಲ್ಲಿ ಪೂವಯ್ಯನು ಕೇಳಲಿಲ್ಲ. “ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳಬೇಕು. ನನಗೆ ಬೇಕಾದಷ್ಟು ಹಣವನ್ನು ಕಳಿಸಿಕೊಡಬೇಕು” ಎಂಬುದೇ ಪೂವಯ್ಯನ ಅಪ್ಪಣೆ ಗೋಪಾಲನಿಗೆ. ಐವತ್ತು ಪ್ರಾಯ ಮೀರಿದ ಗೋಪಾಲನು ಮರುಮಾತಿಲ್ಲದೇ ಸಮ್ಮತಿಯಿಲ್ಲದಿದ್ದರೂ ಈ ಆಜ್ಞೆಯನ್ನು ಒಪ್ಪಿಕೊಂಡನು.
ಬೆಂಗಳೂರಿಗೆ ಹೋದ ಪೂವಯ್ಯನು ಏನು ಮಾಡಿದನೋ ಅಂತೂ ಅವನಿಂದ ಆಗಾಗ ೧೦೦ – ೨೦೦ ರೂಪಾಯಿಗಳನ್ನು ಕಳಿಸಲು ಗೋಪಾಲನಿಗೆ ಹುಕುಂ ಬರುತ್ತಿತ್ತು. ಅವನು ಮೌನವಾಗಿ ಈ ಆಜ್ಞೆಯನ್ನು ಪಾಲಿಸುತ್ತಿದ್ದನು. ಆದರೂ ಅವನಿಗೆ ಪ್ರತಿಸಲವೂ ಹಣವನ್ನು ಕಳಿಸುವಾಗ, ಹಿಂದಿನ ಧನಿ ಗಣಪತಿ “ಗೋಪಾಲ ಪೂವನನ್ನು ಹೂವಿನ ಹಾಗೆ ನೋಡಿಕೋ” ಎಂದ ಮಾತು ನೆನಪಿಗೆ ಬರುತ್ತಿತ್ತು. “ಮನೆಗೆ ಒಂದು ಸಲವಾದರೂ ಪಾದ ಬೆಳೇಸುವ ಕೃಪೆ ಮಾಡಬೇಕು. ಒಕ್ಕಲುಗಳೆಲ್ಲ ತಮ್ಮನ್ನು ನೋಡಬೇಕೆಂದು ಆತುರದಿಂದ ಇದ್ದಾರೆ” ಎಂದು ಏನು ಬರೆದರೂ ಪೂವಯ್ಯನ ಉತ್ತರವಿಲ್ಲ. ಬೇಕಾಗುವ ಹಣ ಮಾತ್ರ ಏರುತ್ತಲೇ ಇತ್ತು. ಒಂದು ವರ್ಷವಾಯಿತು, ಎರಡು ವರ್ಷಗಳಾದುವು. ಪೂವಯ್ಯನು ಈಗಾಗಲೇ ೧೦,೦೦೦ ರೂಪಾಯಿಗಳನ್ನು ಹುಡಿ ಮಾಡಿದ್ದನು. ಲೆಕ್ಕವನ್ನು ನೋಡಿದ ಗೋಪಾಲನಿಗೆ ಮೈ ಬೆವರಿತು. ಏನೋ ಅನಾಹುತವಾಗುತ್ತಿದೆ. ಧನಿ ಕೆಟ್ಟ ಹಾದಿ ಹಿಡಿದಿರಬಹುದೇ? ಈ ಸಲ ಹಣ ಮಾತ್ರ ಖಂಡಿತ ಕಳಿಸಬಾರದು. ಅವರೇ ಇಲ್ಲಿಗೆ ಬರಲಿ ಎಂದು ಅವನು ದೃಢ ನಿಶ್ಚಯ ಮಾಡಿದನು. ತೋಟದ ಒಕ್ಕಲುಗಳು ಧನಿಯು ಇಲ್ಲದೇ ಇರುವಾಗ ಕೋಡು ಬಂದು ಗೋಪಾಲನ ಮಾತನ್ನು ಕೇಳದಂತೆ ಆಗಿದ್ದರು. ಗೋಪಾಲನು ಹೇಳುವುದೊಂದು ಅವರು ಮಾಡುವುದೊಂದು. ಗೇಣಿಯೆಷ್ಟೋ ಬಾಕಿ. ಹೀಗಾಗಿ ಹುಟ್ಟುವಳಿ ಇಳಿಯಲಾರಂಭಿಸಿತ್ತು.
ಸರಿ, ಎಂದಿನಂತೆ ಒಂದು ವಾರದಲ್ಲಿ ೨೦೦ ರೂಪಾಯಿಗಳಿಗೆ ಧನಿಯಿಂದ ಕಾಗದ ಬಂದಿತು. ಗೋಪಾಲನು ಮೊದಲೇ ನಿಶ್ಚಯಿಸಿದಂತೆ ಉತ್ತರ ಬರೆಯದೇ ಹಣ ಕಳಿಸದೇ ಕುಳಿತು ಬಿಟ್ಟನು. ಮತ್ತೆ ಒಂದರ ಬೆನ್ನ ಹಿಂದೆ ಇನ್ನೊಂದೆಂಬಂತೆ ಎರಡು ಪತ್ರಗಳು ಬಂದುವು. ಆದರೂ ಗೋಪಾಲನು ಚಲಿಸಲಿಲ್ಲ. ಮುಂದಿನ ಒಂದು ವಾರದಲ್ಲಿಯೇ ಪೂವಯ್ಯನು ಅಗ್ನಿಕುಂಡಕ್ಕೆ ಧಾವಿಸಿ ಬಂದನು. ಮೊದಲಿನ ಸುಂದರ ಬಲಿಷ್ಠ ರೂಪ ಈಗ ಪ್ರೇತ ಕಳೆಗೆ ಎಡೆ ಕೊಟ್ಟಿತ್ತು. ಗೋಪಾಲನಿಗೇ ಮೊದಲು ಅವನನ್ನು ಗುರುತಿಸಲಾಗಲಿಲ್ಲ. ಹೇಟ್, ಬೂಟ್, ಸಿಗಾರ್ ಇವುಗಳಿಂದಲೂ ಅದೇ ಜಾತಿಯ ಸ್ನೇಹಿತ ಸ್ನೇಹಿತೆಯರಿಂದಲೂ ಒಡಗೂಡಿ ಬಂದ ಪೂವಯ್ಯನ ಪರಿವಾರ ಯಮದೂತರಂತೆ ಒಕ್ಕಲುಗಳಿಗೆಲ್ಲ ಕಾಣಿಸಿಕೊಂಡಿತು. ಅವರಿಗೆಲ್ಲ ದಿಗ್ಭ್ರಮೆಯಾಯಿತು. ಬಂದೊಡನೆಯೇ ಗೋಪಾಲನಿಗೆ ಮನಬಂದಂತೆ ಬೈದು “ಮೂರ್ಖ, ನಿನಗೆ ಮೂರು ಪತ್ರ ಬರೆದರೂ ಹಣ ಕಳಿಸಲು ಸೊಕ್ಕೇ? ನಿನ್ನಪ್ಪ ಮಾಡಿಟ್ಟ ಹಣವೇ? ನಾನಿಲ್ಲವೆಂದು ಎಷ್ಟೆಲ್ಲ ತಿಂದು ತೇಗಿ ಹಾಳು ಮಾಡಿದೆಯೋ? ಇನ್ನು ನೀನಿಲ್ಲಿರಬೇಡ, ನಡೆ” ಎಂದು ಪೂವಯ್ಯನ ಆರ್ಡರ್ ಆಯಿತು. ಮತ್ತೆ ಇಂಗ್ಲಿಷಿನಲ್ಲಿ ಸ್ನೇಹಿತರೊಡನೆ ಮಾತು ನಡೆಯಿತು. ಕಟ್ಟಡ ಹಾರುವಂತೆ ಅವರು ಹಾರಿ ಹಾರಿ ನಗುತ್ತಿದ್ದರು. ಮತ್ತೇನು ನಡೆಯಿತೋ ತಿಳಿಯದು, ಮರುದಿವಸ ಒಬ್ಬ ಕರಿ ಧೊರೆಯ ಹೊರತು ಎಲ್ಲರೂ ಅಲ್ಲಿಂದ ಹಿಂದೆ ಹೊರಟರು. ಪೂವಯ್ಯನೂ ಹೊರಟು ಹೋದ. ಗೋಪಾಲನು ಆ ಹಿರಿಯರ ಬಂಗ್ಲೆಯಿಂದ ಹೊರದೂಡಲ್ಪಟ್ಟವನಾಗಿ ತೋಟದ ಒಕ್ಕಲುಗಳಲ್ಲಿ ಹೋಗಿ ಸೇರಿಕೊಂಡನು. ಜನ್ಮ ಕೊಟ್ಟು ಅನ್ನವಿತ್ತ ಆ ಸ್ಥಳದ ಋಣವನ್ನು ತೀರಿಸಲು ದುಡಿಯುತ್ತಿದ್ದನು. ಆದರೆ ಈಗ ಮೊದಲಿನ ಉತ್ಸಾಹವಿಲ್ಲ. ಹೊಂದಿಕೊಂಡು ಬಂದ ಬಳ್ಳಿಗಳು ಈಗ ಬೇರೆಯಾದುವು. ಒಂದು ಕತ್ತಲೆಯ ಹಾದಿಯನ್ನು ಹಿಡಿಯಿತು, ಇನ್ನೊಂದು ಮುರುಟಿತು. ಗೋಪಾಲನ ಮಗ ಮಡಿಕೇರಿಯ ಸರಕಾರಿ ಖಚೇರಿಯಲ್ಲಿ ಜವಾನನಾಗಿ ಸೇರಿಕೊಂಡನು.
ಹೊಸ ಕರಿಧೊರೆ ಅಗ್ನಿಕುಂಡದ ಮೆನೇಜರಂತೆ. ಅವನ ನಾಯಕಸಾನಿಯರು, ಇವರ ಹೊಲಸು ಶೃಂಗಾರ, ಆಳುಗಳಲ್ಲಿ ಇವರ ಕಠಿಣತೆ, ನಿರ್ದಾಕ್ಷಿಣ್ಯ ವರ್ತನೆ ಇವುಗಳಿಂದ ಒಕ್ಕಲುಗಳೆಲ್ಲ ಬಹಳ ರೋಸಿ ಹೋದರು, ನೊಂದರು, ಸಿಟ್ಟಿಗೆದ್ದರು. ಮತ್ತೆ ಹಣಕಾಸಿನ ವಹಿವಾಟು ಏನಾಯಿತೆಂದು ಗೊತ್ತಿಲ್ಲ. ಆದರೆ ಒಂದು ತಿಂಗಳಿಗೊಂದು ಸಲ ಪೂವಯ್ಯನ ಹಾಜರಿ ಇರುತ್ತಿತ್ತು. ಪ್ರತಿಸಲವೂ ಸಿಗಾರಿನ ಕೃಷ್ಣ ಧೂಮದಿಂದಲೂ ಕರಿ ಬಿಳಿ ಸ್ನೇಹಿತ ಸ್ನೇಹಿತೆಯರಿಂದಲೂ ಆವೃತನಾಗಿರುತ್ತಿದ್ದನು. ಕಾರಿನಲ್ಲಿಯೇ ಇವರು ಅಲ್ಲಿಗೆ ಬಂದು ಹೋಗುವುದು. ಕೆಲವು ವರ್ಷಗಳಲ್ಲಿಯೇ ಅನೇಕ ಕಾಡುಗಳನ್ನು ಕಡಿದು ಮರಗಳನ್ನು ಲಾರಿಗಟ್ಟಳೆ ಸಾಗಿಸಿದರು. ಒಂದು ಸಲ ಪೂವಯ್ಯ ಬಂದವನು ಅವನ ಪರಿವಾರ ಸಮೇತ ಬಂಗ್ಲೆಯ ಹಿಂದಿರುವ ಬೆಟ್ಟವನ್ನು (ಇಲ್ಲಿ ಗೊಂಡಾರಣ್ಯ) ಏರಿ ಹೋದರು. ಮತ್ತೆ ಸ್ವಲ್ಪ ಹೊತ್ತಿನ ಅನಂತರ ಹಿಂತಿರುಗಿದರು. ಮುಂದೆ ಒಂದು ವಾರದಲ್ಲಿಯೇ ಮರ ಕೊಯ್ಯುವವರು, ಹೊರುವವರು, ಆಳುಗಳು ಮುಂತಾದವರ ಒಂದು ಸೈನ್ಯವೇ ಆ ಕಾಡನ್ನು ಧಾಳಿಮಾಡಿತು. ಲಾರಿಗಳೂ ಒಂದರ ಹಿಂದೆ ಇನ್ನೊಂದು ಭುಸುಗುಟ್ಟುತ್ತ ಬಂದುವು. ಅನೇಕ ಶತಮಾನಗಳಿಂದ ಬೆಳೆದು ಬಂದ ಇಡೀ ಕಾಡು ಎರಡು ವರ್ಷಗಳಲ್ಲಿಯೇ ಬೋಳಾಯಿತು, ಸೂರೆಯಾಯಿತು, ನಿಸರ್ಗ ಬರಡಾಯಿತು. ಮರದ ತೊಲೆಗಳನ್ನು ನೋಡಿ ಪ್ರತಿ ಒಕ್ಕಲೂ ಸುಯ್ಯಿಗುಟ್ಟುವವನೇ. ಗೋಪಾಲನು ಮೂಕಾಶ್ರುಗಳನ್ನು ಸುರಿಸಿದುದು ಸುರಿಸಿದುದೇ. ಒಂದೊಂದು ವೃಕ್ಷವೂ ಚಟಚಟಾರನೆ ಉರುಳಿಬಿದ್ದಂತೆ ಹಳಬರಿಗೆಲ್ಲ ಉಸಿರು ಕಟ್ಟಿದಂತೆ, ಬೆಂಕಿಯನ್ನು ಮೈಮೇಲೆ ಸುರಿದಂತೆ ಆಗುತ್ತಿತ್ತು. ಬೆಂಕಿಯ ಹೊಗೆ, ಧೂಳು ಆಕಾಶದವರೆಗೆ ಏರುತ್ತಿದ್ದುವು. ಮಧ್ಯಾಹ್ನದ ಸೂರ್ಯನೂ ಈ ಅನ್ಯಾಯ ವಸನದಿಂದ ಆಚ್ಛಾದಿತನಾಗಿ ಮಬ್ಬಾಗುತ್ತಿದ್ದನು. ಆದರೆ ಪ್ರಕೃತಿಯ ಕೊಲೆ – ಸ್ಟೀಮ್ ರೋಲ್ಲರ್ ಕ್ರಮವಾಗಿ ರಸ್ತೆಯ ಎಲ್ಲ ಕಲ್ಲುಗಳನ್ನೂ ಹುಡಿ ಮಾಡಿ ಸಮ ಮಾಡುವಂತೆ ದಬ್ಬಾಳಿಕೆಯು ನಡೆಯಿತು. ಬೇಸಿಗೆ ಕಾಲದಲ್ಲಿಯೂ ತಂಪಾಗಿ ಹಿತಕರವಾಗಿ ಇರುತ್ತಿದ್ದ ಅಗ್ನಿಕುಂಡವು ಸೆಕೆಯ ಠಾವಾಯಿತು. ಅಗ್ನಿಯೇ ಉರಿಯುತ್ತಿರುವನೋ ಎಂದಾಯಿತು. ಬುಡದ ಕಣಿವೆಯಲ್ಲಿನ ಯಾಲಕ್ಕಿ ಪೈರುಗಳು ಒಣಗಿದುವು. ಕಾಫಿಯ ಗಿಡಗಳು ನೆರಳಿಲ್ಲದೇ ಸಾಯತೊಡಗಿದುವು. ವನ್ಯಜಂತುಗಳ ಲೂಟಿ ಹೇರಳವಾಯಿತು. ಅವುಗಳಿಗೆ ವಾಸಸ್ಥಾನವಿಲ್ಲದೆ ನಿತ್ಯವೂ ನೆಟ್ಟು ಬೆಳೆಸಿದ ತೋಟಗಳಿಗೆ ನುಗ್ಗಿ ವಿಪರೀತ ಹಾನಿಮಾಡಲಾರಂಭಿಸಿದುವು. ಎಂದೂ ಆರದೇ ಇದ್ದ ಬಾವಿಗಳು, ತೋಡುಗಳು ಮಾರ್ಚ್ ತಿಂಗಳ ಅಂತ್ಯಕ್ಕಾಗುವಾಗ ನೀರಿನ ಪಸೆಯೂ ಇಲ್ಲದೆ ಧೂಳೆಬ್ಬಿಸುತ್ತಿದ್ದುವು. ಅಗ್ನಿಕುಂಡದ ದೊಡ್ಡ ಬೆಟ್ಟ ಬೋಳಾಯಿತು, ಸಾಣೆ ಹೋದವರ ಮಂಡೆಯಂತಾಯಿತು. ಧೂಳು ಹಾರಿಸುತ್ತ ಹಾಳು ಕರೆಯಿತು. ಪ್ರಕೃತಿಯೊಡನೆ ಅನಾವಶ್ಯಕವಾಗಿ ಕದನವೆಸಗಿ ನಿಷ್ಠುರವನ್ನು ಕಟ್ಟಿಕೊಂಡನು ಪೂವಯ್ಯ. ಹಣಕಾಸಿಗಾಗಿ ಮಿತಿಯಿಲ್ಲದೆ ದುರ್ವ್ಯಸನಗಳಿಗಾಗಿ ನಿಸರ್ಗದ ದ್ವೇಷ ಸಂಪಾದಿಸಿದನು; ಬೊಕ್ಕಸವನ್ನು ಬರಿದು ಮಾಡಿದನು. ಆದರೂ ಅವನ ಹಸಿವೆ ಹಿಂಗಲಿಲ್ಲ. ಕುಳಿತು ತಿನ್ನುವವನಿಗೆ ಕೊಪ್ಪರಿಗೆ ಹೊನ್ನು ಸಾಲದು. ಇದು ಕುಳಿತು ತಿನ್ನುವುದೂ ಅಲ್ಲ! ಓಡಾಡುತ್ತ ಹಣ ಚೆಲ್ಲುವುದು, ದುರ್ವ್ಯಯ ಮಾಡುವುದು. ಈ ತರಹದವನಿಗೆ ಕುಬೇರನ ಭಂಡಾರವೂ ಸಾಲದು.
ಪೂವಯ್ಯನ ದುಷ್ಕಾರ್ಯಗಳಿಗೆ ಹಣ ಹೇಗೂ ಸಾಕಾಗಲಿಲ್ಲ. ಈ ಕೊಪ್ಪರಿಗೆಯೂ ಬರಿದಾಯಿತು. ಪೂರಾ ಹಣ ಅವನಿಗೆ ದೊರೆಯಲಿಲ್ಲ. ಅವನ ಹಿಂಬಾಲಕರು ಅದನ್ನು ಗಾಳಿಸಿಯೇ ಅವನಿಗೆ ಹಣವನ್ನು ಕೊಟ್ಟರು. ಇನ್ನು ಕೊನೆಗೆ ಅವನಿಗೆ ಉಳಿದಿರುವುದು ಒಂದೇ ಮಾರ್ಗ – ಅಗ್ನಿಕುಂಡವನ್ನೇ ವಿಕ್ರಯಿಸುವುದು. ಈ ವಿಷಯವನ್ನು ಅವನು ಈಗ ಒಂಬತ್ತು ವರ್ಷಗಳ ಹಿಂದೆಯೇ ಜಾಹೀರಾತು ಮಾಡಿದ್ದನು. ಪೂವಯ್ಯನ ಅವನತಿಯನ್ನು ನೋಡುತ್ತಿದ್ದ ಸ್ಥಳಿಕರು ಇದು ಹೀಗೆಯೇ ಪರ್ಯವಸಾಯಿಯಾಗಬೇಕು ಎಂದು ನಿಟ್ಟುಸಿರ್ಗರೆದರು. ಆದರೆ ಅಂತ್ಯವು ಅತಿ ಭಯಂಕರವಾಗಿ ಹಿಂದೆಂದೂ ಕೇಳದಂತೆ ನಡೆದು ಹೋಯಿತು. ಅಗ್ನಿಕುಂಡದ ಮಾರಾಟದ ವಿಷಯವನ್ನು ತಿಳಿದು ಒಕ್ಕಲುಗಳು ಕೆಲವರು ದುಃಖಿಸಿದರು. ಕೆಲವರು ಈ ನಿರಂಕುಶ ಪ್ರಭುತ್ವ ಅಳಿದು ಹೊಸತು ಯಾವುದೇ ಆದರೂ ಬಂದೀತಲ್ಲ ಎಂದು ಕುತೂಹಲದಿಂದಿದ್ದರು. ಉಳಿದವರು ಯಾರು ಬಂದರೂ ತಮಗೆ ದುಡಿಯುವುದು ತಪ್ಪಿದ್ದಲ್ಲ, ಏನು ಬೇಕಾದರೂ ಆಗಲಿ ಎಂದು ನಿರುತ್ಸಾಹದಿಂದ ಇದ್ದರು. ಇವರೆಲ್ಲರಿಗಿಂತಲೂ ಹೆಚ್ಚಿನ ದುಃಖ ಗೋಪಾಲನಿಗೆ. ಅಗ್ನಿಕುಂಡದ ಮಾರಾಟದ ವಿಷಯ ತಿಳಿದೊಡನೆಯೇ ಅವನು ಗೋಳಾಡಿದನು. ಮುದುಕನಾಗಿ ತ್ರಾಣವಿಲ್ಲದೆ ಬೇರೆಯವರಲ್ಲಿ, ಹಂಗಿಗನಾಗಿ ಇದ್ದವನು ತಾನು ಇನ್ನು ಬದುಕಬಹುದೇ ಎಂದು ಬಹುವಾಗಿ ಕೊರಗಿದನು. ಆದರೆ ವಿಧಿ ಲಿಖಿತ ಬೇರೇ ಇತ್ತು.
ಮುಂದಿನ ಜುಲೈ ತಿಂಗಳ ಮಧ್ಯಭಾಗದಲ್ಲಿ ಜಡಿಮಳೆಯ ಸಮಯದಲ್ಲಿ ಒಂದು ಕಾರು ನಾಪೋಕ್ಲಿಗಾಗಿ ಓಡಿತು. ಅದರಲ್ಲಿ ಪೂವಯ್ಯ ಮತ್ತು ಯಾರೋ ಬಿಳಿಯರು ಇದ್ದರು. ಬಹುಶಃ ಅಗ್ನಿಕುಂಡವನ್ನು ನೋಡಲು ಹೋಗುವವರಾಗಿರಬಹುದೆಂದು ನಾಪೋಕ್ಲು ಷಹರಿನ ನಾಗರಿಕರು ನಿಶ್ಚೈಸಿದರು. ಆ ಹೊನ್ನಿನ ಗಣಿಯನ್ನು ಕೊಳ್ಳುವವರು ವಿಲಾಯಿತಿಯಿಂದ ಬಂದವರೇ ಆಗಬೇಕಷ್ಟೇ ಎಂದು ಅವರು ಮಾತಾಡಿಕೊಂಡರು. ನಿಜವಾಗಿಯೂ ಆ ಫರಂಗಿಯವರು ಅಗ್ನಿಕುಂಡದ ಕ್ರಯಚೀಟಿಗಾಗಿ ಅಲ್ಲಿಗೆ ಹೋದವರು. ಕತ್ತಲೆ ಕಟ್ಟಿಕೊಂಡು ಎಡೆಯಿಲ್ಲದೇ ಮಳೆ ಸುರಿಯುತ್ತಿತ್ತು. ಅವರೆಲ್ಲರೂ ಆ ಸಾಯಂಕಾಲ ಬಂಗ್ಲೆಯಲ್ಲಿ ಬೀಡು ಬಿಟ್ಟರು. ಮರು ದಿವಸ ಮಳೆಯಲ್ಲಿಯೇ ಎಸ್ಟೇಟನ್ನು ನೋಡಿ ೫೦೦೦೦ ರೂಪಾಯಿಗಳಿಗೆ ತಮ್ಮ ಸಮ್ಮತಿಯನ್ನು ಸೂಚಿಸಿದರು. ಗೋಪಾಲನು ಕೊನೆಯಸಲವೆಂದು ಧೈರ್ಯ ಮಾಡಿ ಬಂಗ್ಲೆಗೆ ನಡೆಯಲಾರದೇ ನಡೆದು ಹೋದನು. ಅವರು ಆಗ ಕ್ರಯಚೀಟಿನ ವಿಲೆವಾರಿಯಲ್ಲಿದ್ದರು. “ಧನಿಗಳೇ ಈ ಮುತ್ತಿನಂತಹ ಸ್ಥಳವನ್ನು ಮಾರಬೇಡಿ, ಮಾರಬೇಡಿ” ಎಂದು ಅತ್ತನು. ಅವನನ್ನು ಅನಿಷ್ಟ, ವಂಚಕನೆಂದು ಬೈದು ಆ ಸ್ಥಳದಿಂದಲೇ ನೂಕಿಸಿದನು ಪೂವಯ್ಯ. ದುಃಖಿಸುತ್ತ ಗೋಪಾಲನು ಅಲ್ಲಿಂದ ಹಿಂತಿರುಗಿದನು. ಆ ಬಂಗ್ಲೆಯ ಹತ್ತಿರವೆಲ್ಲಿಯೂ ಅವನ ಗಾಳಿ ಕೂಡ ಸೋಂಕ ಕೂಡದೆಂದು ಪೂವಯ್ಯನ ಆಜ್ಞೆಯಾಯಿತು. ಮತ್ತೆ ಕ್ರಯಚೀಟು ಮುಂದುವರಿಯಿತು. ಅಗ್ನಿಕುಂಡವು, ನಿರ್ಜನಪ್ರದೇಶದಲ್ಲಿ ನಿರ್ಮಿತವಾದ ಆ ಪುಣ್ಯಭೂಮಿಯು, ಮೂಲ ಪುರುಷ ಪೂವಯ್ಯನ ಅಭಿಮಾನದ ಹೆಗ್ಗುರುತಾದ ಆ ಸಸ್ಯ ಶ್ಯಾಮಲ ನಂದನವನವು ಮ್ಲೇಚ್ಛರ ಕೈಗೆ ದಾಟಿತು. ಭೀಕರ ಕಾನನಾಂತರದಲ್ಲಿ ಉದ್ಯಾನವನವನ್ನು ಸೃಜಿಸಿದ, ವಿಶಾಲ ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪವನ್ನು ನಿರ್ಮಿಸಿದ, ಮರುಭೂಮಿಯ ನಡುವೆ ತಂಪಾದ ಫಲವತ್ಪ್ರದೇಶವನ್ನು ವಿರಚಿಸಿದ ಆ ಪೂವಯ್ಯನೆಲ್ಲಿ? ಒಂದು ನಿಮಿಷದಲ್ಲಿ ಅದನ್ನೆಲ್ಲ ಹಾಳು ಮಾಡಿದ ಈ ಮೂರ್ಖ ಪೂವಯ್ಯನೆಲ್ಲಿ? ಅಗ್ನಿಕುಂಡವನ್ನು ಮಾರಿದ ಸಮಾರಂಭವನ್ನು ಅದರ ಪೂರ್ಣಾಹುತಿಯ ಪ್ರಸಾದ ಸ್ವೀಕಾರವನ್ನು ವಿಜೃಂಭಣೆಯಿಂದಲೇ ನೆರವೇರಿಸಲು ಪೂವಯ್ಯ, ಧೊರೆಗಳು ಮೆನೇಜರ್, ನಾಯಕಸಾನಿಯರು ಎಲ್ಲರೂ ಹೊರಟರು. ಹೊರಗೆ ನೋಡುವಂತೆ ಸಹ ಇಲ್ಲ. ಈ ಅನ್ಯಾಯ ನೋಡಲಾರದೆ ಎಂಬಂತೆ ವಿಪರೀತ ಮಳೆಯು ಸುರಿಯುತ್ತಿತ್ತು. ಬಾನು ಹರಿಯಿತೋ ಸಮುದ್ರ ಗಗನಕ್ಕೆ ನೆಗೆದು ಅಲ್ಲಿಂದ ಭೂಮಿಯ ಮೇಲೆ ತುಳುಕಿತೋ ಎಂಬಂತೆ ನಿರರ್ಗಳ ವರ್ಷದ ಮುಸಲಾಘಾತವು ನಡೆಯಿತು. ಹೀಗಾಗಿ ಇವರ ಅಟ್ಟಹಾಸ, ಆನಂದ ಸಂಭ್ರಮಗಳು ಆ ಬಂಗ್ಲೆಗೇ ಪರಿಮಿತವಾದುವು. ಹೊರಗಿನವರಿಗೆ ಯಾರಿಗೂ ಇವರ ಅಬ್ಬರ ಬೊಬ್ಬೆಗಳು ಮಳೆಯ ದೆಸೆಯಿಂದ ಕೇಳುತ್ತಿರಲಿಲ್ಲ. ವಿದೇಶೀ ಪಾನೀಯಗಳು, ವಿದೇಶೀ ಡಬ್ಬಾ ತಿಂಡಿಗಳು ಖರ್ಚಾದುದಕ್ಕೆ ಲೆಕ್ಕವೇ ಇಲ್ಲ. ಸಿಗಾರ್, ಸಿಗರೇಟ್ ಇವುಗಳ ಬೂದಿಯೇ ಬೆಟ್ಟದಷ್ಟಾಯಿತು. ಇಸ್ಪೀಟ್, ಡ್ಯಾನ್ಸ್ ಎಲ್ಲವೂ ಮೆರೆದುವು. ಹೊರಗೆ ಮಳೆಗಾಳಿಗಳ ತೀಕ್ಷ್ಣತೆ ಪ್ರತಾಪ ನಿಮಿಷ ನಿಮಿಷಕ್ಕೆ ಏರುತ್ತಲೇ ಇದ್ದುವು. ಅಷ್ಟರಲ್ಲಿಯೇ ಭೋ ಎಂದು ವಿಕಟವಾಗಿ ಧಮನಿಗಳು ಬಿರಿಯುವಂತೆ ತಲೆಬುರುಡೆಯೇ ಒಡೆಯುವಂತೆ ಶಬ್ದ ಕೇಳಿಸಿತು. ಏನೆಂದು ಯಾರಿಗೂ ತಿಳಿಯಲಿಲ್ಲ. ಸುರಾಪಾನದ ಅಮಲಿನಲ್ಲಿದ್ದರೂ ಬಡಿದೆಬ್ಬಿಸಿದವರಂತಾಗಿ ಅವರು ಏನಾಯಿತು ಎಂದು ತಿಳಿಯಲಾರದೇ ದಿಕ್ಕು ಕಾಣದವರಾದರು. ಅವರಿಗೆ ಉಸಿರು ಕಟ್ಟುವಂತಾಯಿತು. ಬಂಗ್ಲೆಯೊಳಗೇ ಸಿಕ್ಕಿದ ಕಡೆಗೆ ಓಡಿ ಬಾಗಿಲು ತೆರೆಯಲು ಎಳೆದರು. ಅಷ್ಟರಲ್ಲಿಯೇ ಅವರೆಲ್ಲರನ್ನೂ ಅವರ ಬಂಗ್ಲೆಯನ್ನೂ ನುಂಗಿಕೊಂಡು ಬೆಟ್ಟವು ಉರುಳಿತು. ಈ ತೀಕ್ಷ್ಣ ಶಬ್ದ ಹಿಂದೆಂದೂ ಕೇಳಿಸದಂತಹ ಗಡಸಿನಿಂದ, ಕಠಿಣತೆಯಿಂದ, ವಿಕಟತೆಯಿಂದ ಅನೇಕ ಮೈಲುಗಳವರೆಗೆ ಮೊಳಗಿ ಅನುರಣಿತವಾಯಿತು. ನಾಪೋಕ್ಲು, ಕಕ್ಕಬೆ ಪೇಟೆಯವರೂ ಸಮೀಪದ ಗ್ರಾಮವಾಸಿಗಳೂ ಎಲ್ಲಿ ಪ್ರಳಯ ಸಂಭವಿಸಿತೋ ಏನು ಉತ್ಪಾತವಾಯಿತೋ ಎಂದು ಆ ಅಪರಾತ್ರಿಯಲ್ಲಿ ಹೊರಗೆ ಓಡಿದರು. ಅಗ್ನಿಕುಂಡದ ಒಕ್ಕಲುಗಳು ಗುಡಿಸಲುಗಳಿಂದೆದ್ದು, ಏನಾಯಿತೆಂದು ಗೊತ್ತಾಗದೇ ಏನು ಮಾಡುವುದೆಂದು ತಿಳಿಯದೇ ಜೀವದಾಸೆಗಾಗಿ ಮಕ್ಕಳು ಮರಿಗಳನ್ನು ಎತ್ತಿಕೊಂಡು ಆ ಸಿಕ್ಕಾಬಟ್ಟೆ ಮಳೆಯಲ್ಲಿ ಅಮಾವಾಸ್ಯೆಯಂತಹ ರಾತ್ರಿಯಲ್ಲಿ ಓಡಿದರು. ಅನೇಕರನ್ನು ವಿಲಯರುದ್ರನು ಪುರುಷಾಮೃಗದ ವೇಗದಿಂದ ಬೆನ್ನಟ್ಟಿ ಮುಗಿಸಿಬಿಟ್ಟನು. ಆ ರುದ್ರಭಯಂಕರ ಕಾಳರಾತ್ರಿಯ ಕ್ರೂರ ದಂಷ್ಟ್ರಗಳಿಂದ ಪಾರಾಗಿ ಉಳಿದವರು ಈಗಲೂ ಆ ಸನ್ನಿವೇಶವನ್ನು ವರ್ಣಿಸುವಾಗ ನಡುಗುತ್ತಾರೆ.
ಬೆಳಗಾದ ಮೇಲೆ ನೋಡುವುದೇನನ್ನು? ಅಗ್ನಿಕುಂಡದ ಗಿರಿಶಿಖರವೇ ಕಳಚಿ ಅದರ ಅರ್ಧ ಮೈಯನ್ನು ಕೆತ್ತಿಕೊಂಡೇ ನೆಲಸಮವಾಗಿತ್ತು. ಬಂಗ್ಲೆ, ಕಾಫಿ ಯಾಲಕ್ಕಿ ತೋಟಗಳು, ಎಷ್ಟೋ ಒಕ್ಕಲು ಮನೆಗಳು, ಗದ್ದೆ ಎಲ್ಲವೂ ಈ ಮಣ್ಣಿನ ರಾಶಿಯ ಗರ್ಭದೊಳಗೆ! ಆ ಬೆಟ್ಟದ ಉಳಿದ ಭಾಗವು ಏರು ತಗ್ಗಾಗಿ ರಕ್ತವರ್ಣದಿಂದ ಭಯೋತ್ಪಾದಕವಾಗಿತ್ತು. ಕೆಸರು ನೀರು ಹರಿದು ಹರಿದು ಎಲ್ಲ ಕಡೆಯಲ್ಲೂ ಕೆಂಪು. ದಿಗಂತವು ರಕ್ತರಾಗದಿಂದ ಇದೇ ಕೆನ್ನೀರು ಅಲ್ಲಿಗೆ ಸಿಡಿಯಿತೋ ಎಂಬಂತೆ ಇತ್ತು. ಸಿಕ್ಕಾಬಟ್ಟೆ ಮರಗಳು ಬಿದ್ದಿದ್ದುವು. ಭಾರಿ ಭಾರಿ ಬಂಡೆಗಳು ಬುಡ ಕಳಚಿ ನೂರಿನ್ನೂರು ಗಜ ದೂರ ಉರುಳಿ ನೆಲಕಚ್ಚಿದ್ದುವು. ಅಳಿದುಳಿದ ಒಕ್ಕಲುಗಳೆಲ್ಲ ನೀರವ. ಗೋಪಾಲನು ಮಾತ್ರ “ಅಯ್ಯೋ ನನ್ನನ್ನು ತೆಗೆದುಕೊಂಡು ಹೋಗದೆ ಇಂತಹ ಅನ್ಯಾಯ ಮಾಡಿದೆಯಾ ದೇವರೇ” ಎಂದು ಅಳುತ್ತ ಈ ದೃಶ್ಯವನ್ನು ನೋಡಲಾರದೇ ಕುಕ್ಕರಿಸಿದನು. ಬೇರೆಯವರು ಅವನನ್ನು ಅಲ್ಲಿಂದ ದೂರ ಸಾಗಿಸಿದರು. ಮಳೆ ಮಾತ್ರ ಇದೊಂದೂ ತಿಳಿಯದಂತೆ ಅಥವಾ ಇನ್ನೂ ಹಗೆತನ ಉಳಿದಿರುವಂತೆ ದ್ವಿಗುಣಿತ ರಭಸದಿಂದ ಬಡಿಯತೊಡಗಿತ್ತು. “ನನ್ನ ಒಡಲಿಗೆ ಘಾಸಿಮಾಡಿದುದಕ್ಕೆ ನೋಡು ಪ್ರತಿಫಲ” ಎಂದು ಆ ಕೆಂಪು ಮೈ ಗಹಗಹಿಸಿ ನಗುವಂತೆ ಕಾಣುತ್ತಿತ್ತು.
ಸಿಡಿಲು ಹೊಡೆವೊಡೆ ಹಿಡಿದ ಕೊಡೆ ಕಾವುವೇ
ಮುನಿದು ಪೊಡವಿನುಂಗುವಡೆ ಮನೆ ತಾಂಗುವುದೆ
ಕವಿದು ಹೆಗ್ಗಡಲುಕ್ಕಿ ಜಗವ ಮೊಗೆವಡೆ ಮೆಳೆಗಳಡ್ಡ ಬಹವೇ…
– ರಾಘವಾಂಕ