ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ನಾಲ್ಕು
ಅಧ್ಯಾಯ ೭೪ (ಮೂಲದಲ್ಲಿ ೪೬)

ಐದನೆಯ ಸಂಪುಟದಲ್ಲಿ (೧೯೭೪ರಲ್ಲಿ ಪ್ರಕಟವಾಯಿತು) ‘ಗಣಕ’ ಲೇಖನವೂ ಸೇರಿರಬೇಕೆಂಬುದು ನಮ್ಮ ಯೋಜನೆ. ಅಂದು ಮೈಸೂರಿನ ಯಾವ ಕಾಲೇಜಿಗೂ ಗಣಕ ಬಂದಿರಲಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲೇನೋ ಗಣಕಪಾಠಗಳು ನಡೆಯುತ್ತಿದ್ದುವು – ಎಲ್ಲವೂ ಸೈದ್ಧಾಂತಿಕ ಮಟ್ಟದಲ್ಲಿ! ನಮ್ಮ ಎರಡನೆಯ ಮಗ ಆನಂದ ಸ್ವಂತ ಯೋಗ್ಯತೆ ಆಸಕ್ತಿಗಳಿಂದ ಮೈಸೂರಿನ ಜೆ.ಸಿ. ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು (ಡೊನೇಶನ್ ಹಾವಳಿ ಶುರುವಾಗಿರದ ದಿನಗಳವು) ಬಿ.ಇ. (ಗಣಕ) ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಗಳಿಸಿ ಉತ್ತೀರ್ಣನಾದ (೧೯೮೦). ಇವನಾದರೂ ವಾಸ್ತವ ಗಣಕದೊಡನೆ ವ್ಯವಹಾರ ತೊಡಗಿದ್ದು ದೂರದ ಅಸ್ಸಾಮಿನಲ್ಲಿ ಕಂಪ್ಯೂಟರ್ ಎಂಜಿನಿಯರ್ ವೃತ್ತಿ ಸೇರಿದಾಗ ಮಾತ್ರ (೧೯೮೧).

೧೯೭೦ರ ದಶಕದಲ್ಲಿ ನಮ್ಮ ವಿಶ್ವಕೋಶಕ್ಕೆ ‘ಗಣಕ’ ಲೇಖನವನ್ನು ಕನ್ನಡದಲ್ಲಿ ಬರೆದುಕೊಡಬಲ್ಲ ವಿಷಯ-ಭಾಷಾತಜ್ಞ ಯಾರು, ಎಲ್ಲಿದ್ದಾರೆ? ಆಗ ಮುಂಬಯಿಯ ತಾತಾ ಮೂಲಭೂತ ವಿಜ್ಞಾನ ಸಂಸ್ಥೆಯಲ್ಲಿ (Tata Institute of Fundamental Research) ಗ್ರಂಥಪಾಲರಾಗಿದ್ದ ಕನ್ನಡದ ಡಿಂಗರಿಗ ಶ್ರೀನಿವಾಸ ಹಾವನೂರರಿಗೆ ಕಾಗದ ಬರೆದು ಇಂಥ ಒಬ್ಬ ವಿದ್ವಾಂಸರ ನೆರವನ್ನು ನಮಗೆ ಒದಗಿಸಿಕೊಡಬೇಕೆಂದು ಪ್ರಾರ್ಥಿಸಿದೆ. ಅಲ್ಲಿಯೇ ಗಣಕ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕನ್ನಡಿಗ ಎನ್. ಶೇಷಗಿರಿಯವರಿಂದ ಈ ಪ್ರೀತಿಯ ಕೆಲಸ ಮಾಡಿಸಿಕೊಡುವುದಾಗಿ ಅವರಿಂದ ಆಶ್ವಾಸನೆ ಬಂತು.

ಕೆಲವೇ ದಿನಗಳಲ್ಲಿ ಶೇಷಗಿರಿಯವರಿಂದ ನಮಗೆ ಬಂದ ಕಾಗದದ ಪ್ರಕಾರ ಅವರು ಕನ್ನಡದಲ್ಲಿ ನಿರೂಪಿಸಲು ಪ್ರಯತ್ನಿಸಿ ಸೋತುದರಿಂದ ಇಂಗ್ಲಿಷಿನಲ್ಲಿ ಬರೆಯಲು ನಮ್ಮ ಒಪ್ಪಿಗೆ ಕೇಳಿದರು. ಮೂಲದ್ರವ್ಯ ಗಟ್ಟಿಯಾಗಿದ್ದರೆ ಅನುವಾದ ತೀರ ಸುಲಭವೆಂದು ಅನುಭವದಿಂದ ಕಲಿತಿದ್ದೆ. ನಮ್ಮ ಸಮ್ಮತಿ ಸೂಚಿಸಿದೆವು. ಇಂಗ್ಲಿಷ್ ಲೇಖನ ಕೈಸೇರುವ ವೇಳೆಗೆ ಐದನೆಯ ಸಂಪುಟದ ಪೂರ್ವಾರ್ಧ ಮುದ್ರಣವಾಗಿತ್ತು. ನನಗೆ ಒಂದಿಷ್ಟೂ ಬಿಡುವಿಲ್ಲದುದರಿಂದ ಅದನ್ನು ಅನುವಾದಿಸಲು ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರೊಬ್ಬರಿಗೆ ಒಪ್ಪಿಸಿದೆವು. ಇವರು ಕನ್ನಡದಲ್ಲಿ ವಿಜ್ಞಾನ ಗ್ರಂಥಕರ್ತರು ಮತ್ತು ನಮ್ಮ ಸಮಾಲೋಚಕರು ಕೂಡ. ಕೇವಲ ಒಂದು ವಾರದಲ್ಲಿ ಈ ಕೆಲಸ ಮುಗಿಸಿ ಇಂಗ್ಲಿಷ್ ಮೂಲ ಮತ್ತು ಕನ್ನಡ ಅನುವಾದ ಎರಡನ್ನೂ ನಮಗೆ ಮರಳಿಸಿದರು. ಒಡನೆ ಅನುವಾದಿತ ಲೇಖನವನ್ನು ಬೆರಳಚ್ಚು ಮಾಡಿಸಿದ್ದೂ ಆಯಿತು.
ನಾಯಕರೆಂದರು, “ಇದನ್ನೇ ಮುದ್ರಣಾಲಯಕ್ಕೆ ರವಾನಿಸಿ. ಮುಂದೆ ಕರಡುಪ್ರತಿ ಬಂದಾಗ ಅದನ್ನು ಸಂಪಾದಕೀಯ ಪರಿಷ್ಕರಣಕ್ಕೆ ಒಳಪಡಿಸಬಹುದು. ಹೇಗಿದ್ದರೂ ಆ ಭಾಷಾಂತರಕಾರರು ಈ ಕೆಲಸದಲ್ಲಿ ನುರಿತವರಲ್ಲವೇ? ಪ್ರಸ್ತುತ ನಾಲ್ಕನೆಯ ಸಂಪಟದ ಕೊನೆಯ ಲೇಖನವಾಗಿ ‘ಗಣಕ’ ಬರಲಿ.”
“ಆ ಧೈರ್ಯ ನನಗಿಲ್ಲ. ಒಮ್ಮೆಯಾದರೂ ಇದರ ಮೇಲೆ ನಾನು ಕಣ್ಣಾಡಿಸಲೇಬೇಕು. ಅಂತಿಮವಾಗಿ ನನ್ನ ಶಿಲುಬೆಯನ್ನು ನಾನೇ ಹೊರಬೇಕಲ್ಲವೇ?”

ಅನುವಾದವನ್ನು ಓದುತ್ತ ಹೋದಂತೆ ‘ಗಣಕಕ್ಕೆ ಉಪದೇಶ,’ ‘ರಾಜ್ಯಪಾಲರು ಈ ಯಂತ್ರದಲ್ಲಿ ಅಭಿನಯಿಸುವ ಪಾತ್ರ’ ಮಂತಾದ ಅನೇಕ ನುಡಿಮುತ್ತುಗಳನ್ನು ಕಂಡು ದಂಗುಬಡಿದು ಸಂವಾದೀ ಇಂಗ್ಲಿಷ್ ವಾಕ್ಯಗಳತ್ತ ಗಮನ ಹರಿಸಿದೆ. ಅವು ಅನುಕ್ರಮವಾಗಿ ‘instruction to the computer’ ಮತ್ತು ‘the role played by the governor in this machine’ ಆಗಿದ್ದುವು! ಮೂಲದಲ್ಲಿಯ instruction ಅನುವಾದದಲ್ಲಿ ‘ಉಪದೇಶ,’ role played ‘ಅಭಿನಯಿಸುವ ಪಾತ್ರ’ ಮತ್ತು governor ‘ರಾಜ್ಯಪಾಲ’ ಎಂಬ ವಿಕೃತರೂಪಗಳಲ್ಲಿ ನನ್ನನ್ನು ಅಣಕಿಸುತ್ತಿದ್ದುವು. ಪ್ರಕೃತ ಸಂದರ್ಭದಲ್ಲಿ ಸರಿಯಾದ ರೂಪಗಳು ‘ಸೂಚನೆ ಅಥವಾ ನಿರ್ದೇಶನ,’ ‘ನಿರ್ವಹಿಸುವ ಪಾತ್ರ/ಕಾರ್ಯ’ ಮತ್ತು ‘ಗತಿನಿಯಂತ್ರಕ’ ಎಂದಾಗಬೇಕು. ಇನ್ನು ಇತರ ಲೋಪದೋಷಗಳು ಅಸಂಖ್ಯ.

ನಾಯಕರಿಗೆಂದೆ, “ಈ ದೀರ್ಘ ಇಂಗ್ಲಿಷ್ ಲೇಖನ ಸ್ಪಷ್ಟವೂ ಆಕರ್ಷಕವೂ ಆಗಿದೆ. ಆದರೆ ಭಾಷಾಂತರ ಅಧ್ವಾನವಾಗಿದೆ. ನಾನೇ ಇದರ ಅನುವಾದ ಮಾಡಿ, ಮೂಲ ಲೇಖಕರಿಗೆ ಕಳಿಸಿ ಅವರ ಮನ್ನಣೆ ಪಡೆದು ಮತ್ತೆ ಮುದ್ರಣಕ್ಕೆ ಸಿದ್ಧಪಡಿಸುವುದೊಂದೇ ಮಾರ್ಗ. ಇದರ ಅರ್ಥ ‘ಗಣಕ’ ಲೇಖನವನ್ನು ಪ್ರಕೃತ ಐದನೆಯ ಸಂಪುಟದಲ್ಲಿ ಕೊನೆಯ ಲೇಖನವಾಗಿ ಅಳವಡಿಸುವುದು ಕೂಡ ಅಸಾಧ್ಯ. ಆ ಕೊರತೆಯನ್ನು ಇತರ ಲೇಖನಗಳಿಂದ ತುಂಬೋಣ.”

‘ಗಣಕ’ ಆರನೆಯ ಸಂಪುಟದ ಮೊದಲ ಲೇಖನವಾಗಿ ಪ್ರಕಟವಾಯಿತು. (ಐದನೆಯ ಸಂಪುಟದ ಪ್ರಕಟಣ ದಿನಾಂಕ ೨೫-೧೧-೧೯೭೨, ಆರನೆಯದರದು ೨-೧-೧೯೭೫.) ಲೇಖನದ ಮೊದಲ ವಾಕ್ಯ: “ಗಣಕ: ಮಾಹಿತಿಯನ್ನು ಪಡೆಯುವ, ಪ್ರಕ್ರಮಿಸುವ ಮತ್ತು ನೀಡುವ ಸ್ವಯಂಚಲಿ ಉಪಕರಣ (ಕಂಪ್ಯೂಟರ್).” ಹದಿನಾಲ್ಕು ಪರಸ್ಪರ ಪೂರಕ ಭಾಗಗಳಲ್ಲಿ ಈ ಸಚಿತ್ರ ಲೇಖನ ಸ್ವಯಂಪೂರ್ಣವಾಗಿದೆ. ಇದರ ವ್ಯಾಪ್ತಿ ೩೦+ ಮುದ್ರಿತ ಪುಟಗಳು. ಮೊದಲ ಬಾರಿಗೆ ಇದರಲ್ಲಿ programme, hardware, software ಎಂಬ ಪಾರಿಭಾಷಿಕ ಪದಗಳಿಗೆ ‘ಕ್ರಮವಿಧಿ,’ ‘ಯಾಂತ್ರಿಕಾಂಶ (ಯಂತ್ರಾಂಶ),’ ‘ತಾಂತ್ರಿಕಾಂಶ (ತಂತ್ರಾಂಶ)’ ಎಂಬ ಸಮಾನಾರ್ಥಕಗಳ ಬಳಕೆ ಆಗಿದೆ. ಭಾಷೆಗೆ ಅಭಿವ್ಯಕ್ತಿಯ ನೂತನಾಯಾಮಗಳನ್ನು ಕೊಡುವ ಇಂಥ ಸಂದರ್ಭಗಳಲ್ಲಿ ಸಂಪಾದಕನ ಜವಾಬುದಾರಿಕೆ ಎಷ್ಟು ಗುರುತರವಾದದ್ದು ಎಂಬುದಕ್ಕೆ ಇದೊಂದು ನಿದರ್ಶನ. ಇಂಥ ಎಲ್ಲ ಸಮಸ್ಯೆಗಳು ನಮ್ಮ ಅದಟನ್ನೂ ಪರಿಣತಿಯನ್ನೂ ಕ್ಷಣ ಕ್ಷಣ ಒರೆಗೆ ಹಚ್ಚುತ್ತಿದ್ದ ಸವಾಲುಗಳಾಗಿದ್ದುವು.

ಇನ್ನೊಮ್ಮೆ ನಮ್ಮ ಸಹಾಯಕರೊಬ್ಬರು ಸಂಪಾದಿಸಿದ್ದ ‘ಗೆಲಿಲಿಯೊ ಗೆಲಿಲೀ’ ಲೇಖನ ಇದರ ಅಂತಿಮ ರೂಪದಲ್ಲಿ ನನ್ನ ಮೇಜಕ್ಕೆ ಬಂತು. ಓದದೇ ಅದರ ಮೇಲೆ ಚುಟುಕು ದಸ್ಕತ್ತು ಗುಜರಾಯಿಸಿ ಆಗಲೇ ಅದನ್ನು ಮುದ್ರಣಕ್ಕೆ ಹೊತ್ತು ಹಾಕಬಹುದಿತ್ತು. ಆದರೆ ಅಂತಿಮವಾಗಿ ನನ್ನ ಶಿಲುಬೆಯನ್ನು ನಾನೇ ಹೊರಬೇಕಲ್ಲವೇ? ಎಚ್ಚರಿಕೆಯಿಂದ ತಪಾಸಿಸುತ್ತ ಹೋದಂತೆ “ಈತ [ಗೆಲಿಲಿಯೊ] ಚರ್ಚ್ ಎಂಬಾತನೊಡನೆ ವಾದಮಾಡಿ ವಿಜ್ಞಾನ ವಿಷಯಗಳಲ್ಲಿ ಅವನ ಹಸ್ತಕ್ಷೇಪವನ್ನು ವಿರೋಧಿಸಿದ” ಎಂಬ ವಾಕ್ಯ ನನ್ನ ವಿಶೇಷ ಲಕ್ಷ್ಯ ಸೆಳೆಯಿತು. ಮೊದಲ ಪ್ರತಿಕ್ರಿಯೆ, “ಹಾಗಾದರೆ ಆ ಚರ್ಚ್ ಒಬ್ಬ ಗೆಲಿಲಿಯೊ-ಸಮಾನ ಮೇಧಾವಿ ಆಗಿರಬೇಕು, ಇಂಥವನ ಬಗ್ಗೆ ಒಂದು ಪ್ರತ್ಯೇಕ ಲೇಖನ ವಿಶ್ವಕೋಶದಲ್ಲಿರಬೇಕು” ಎಂದು ಭಾವಿಸಿ ಕಡತಗಳನ್ನೂ ಆಕರ ಗ್ರಂಥಗಳನ್ನೂ ಪರಿಶೀಲಿಸಿದೆ. ಅಂಥ ಒಬ್ಬ ಗಣ್ಯನ ಪತ್ತೆ ಆಗಲಿಲ್ಲ. ಆಗ ಸಹಾಯಕ ಸಂಪಾದಕರನ್ನೇ ‘ಚರ್ಚ್’ ಬಗ್ಗೆ ಮಾಹಿತಿ ಕೇಳಿದೆ. ಅವರೊಂದು ಆಕರ ಗ್ರಂಥದಲ್ಲಿ ಆ ಲೇಖನದ ಇಂಗ್ಲಿಷ್ ಮೂಲವನ್ನು ತೋರಿಸಿದರು. ಅಲ್ಲೇನಿತ್ತು ಗೊತ್ತೇ? He [Galileo] effectively opposed Church’s intervention in scientific matters.
“ಸ್ವಾಮೀ! ಇಲ್ಲಿ Church ಪದ religion ಪದವನ್ನು ಸೂಚಿಸುವುದೇ ಹೊರತು ಒಬ್ಬ ವ್ಯಕ್ತಿಯನ್ನಲ್ಲ” ಎಂದೆ.
ಅವರ ವಾದ, “ಹಾಗಾದರೆ Church’s ಎಂಬ ಅಧಿಸರ್ಗದ (ಅಪಾಸ್ಟ್ರಪಿ಼) ಬಳಕೆ ಏಕೆ? ವ್ಯಕ್ತಿನಾಮಗಳಲ್ಲಿ ಮಾತ್ರ ಅದರ ಬಳಕೆ ಅಲ್ಲವೇ?”
ವಿಜ್ಞಾನದಲ್ಲಿ ಒಬ್ಬ ಸ್ನಾತಕೋತ್ತರ ಪದವೀಧರನ ಈ (ಕು-)ವಾದ ನನಗೆ ಸಾಕ್ರೆಟೀಸನ ಉಕ್ತಿ ನೆನಪಿಗೆ ತಂದಿತು, “ತಿಳಿದಿಲ್ಲವೆಂದು ತಿಳಿದಾತ ತಿಳಿದಾತ, ತಿಳಿದಿದೆಯೆಂದು ತಿಳಿದಾತ ತಿಳಿದಾತನಲ್ಲ.” ಆದರೆ ಅದನ್ನು ಉಚ್ಚರಿಸಲಿಲ್ಲ.

ಒಮ್ಮೆ ಕರ್ನಾಟಕ ವಿಶ್ವವಿದ್ಯಾಲಯದಿಂದ ನನಗೊಂದು ಭಾಂಗಿ ಬಂತು. ಅದಕ್ಕೆ ಲಗತ್ತಿಸಿದ ಅಧಿಕೃತ ಪತ್ರದ ಸಾರ: “Why am I like Dad? ಎಂಬ ಇಂಗ್ಲಿಷ್ ಜನಪ್ರಿಯ ವಿಜ್ಞಾನ ಪುಸ್ತಕದ ಕನ್ನಡಾನುವಾದವನ್ನು (‘ನಾನೇಕೆ ಅಪ್ಪನಂತೆ?’) ಲಗತ್ತಿಸಿದೆ. ಇದು ಮುದ್ರಣಕ್ಕೆ ಯೋಗ್ಯವಾಗಿದೆ ಎಂಬ ಶಿಫಾರಸು ನಿಮ್ಮಂಥ ತಜ್ಞರಿಂದ ನಮಗೆ ಅವಶ್ಯ ಬೇಕು. ಇದರ ಅನುವಾದಕರೊಬ್ಬ ಸಮರ್ಥ ವಿಜ್ಞಾನಲೇಖಕ. ಆದ್ದರಿಂದ ಈ ಕೆಲಸ ನಿಮಗೆ ಹೆಚ್ಚೇನೂ ಭಾರವಾಗದು. ಈ ಸೇವೆಗೆ ಪ್ರತಿಫಲವಾಗಿ ನಿಮಗೆ ಮೂಲಗ್ರಂಥದ ೧೦೦ (ಒಂದು ನೂರು) ಪದಗಳಿಗೆ ರೂ ೩ರಂತೆ (ಮೂರು) ಸಂಭಾವನೆ ಪಾವತಿಸಲಾಗುವುದು.”

ಆ ಕ್ಷಣ ಮೂರು ಅನುಮಾನಗಳು ನನ್ನಲ್ಲಿ ಮೂಡಿದುವು: ಸಂಭಾವನೆಯ ಮೊತ್ತ ತೀರ ಹೆಚ್ಚು, ನಾನೊಂದು ಸ್ಥೂಲ ಗಣನೆ ಮಾಡಿ ನೋಡಿದೆ, ಅದು ಸುಮಾರು ರೂ ೧೩೦೦ ಆಗಿತ್ತು; ಅನುವಾದಿತ ಕೃತಿಯೇ ಅನುವಾದಕರ ಯೋಗ್ಯತೆಯ ಒರೆಗಲ್ಲು, ಬೇರಾವುವೇ ವಿಶೇಷಣಗಳಲ್ಲ, ಇಂತಿರುವಲ್ಲಿ ವಿಶ್ವವಿದ್ಯಾಲಯವೇಕೆ ಅನುವಾದಕರ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಶಿಫಾರಸು ಸೇರಿಸಬೇಕು? ಇಲ್ಲೇನೋ ಮರಸು ಕುಳಿತಿರಬಹುದು; ಆ ಅಧಿಕಾರಿಗಳಿಗೆ ಎಲ್ಲ ರೀತಿಗಳಲ್ಲಿಯೂ ನಾನೊಬ್ಬ ‘ಬೇರವ,’ ಹೀಗಿರುವಾಗ ನನ್ನನ್ನೇ ಆಯ್ದಿರುವುದರಲ್ಲೇನೋ ಹುನ್ನಾರ ಹುದುಗಿರಬಹುದು. ಎಚ್ಚರ ಮನವೇ, ಎಚ್ಚರೆಚ್ಚರ! ಒಡನೆ ಒಪ್ಪಿಗೆ ಪತ್ರ ರವಾನಿಸಿದೆ. ಇಂಗ್ಲಿಷ್ ಮೂಲವನ್ನು ಹಿಂದೆಂದೋ ಖರೀದಿಸಿ ಓದಿ ಮೆಚ್ಚಿದ್ದೆ. ತಳಿವಿಜ್ಞಾನಕ್ಕೆ (genetics) ಸಂಬಂಧಿಸಿದ ಪುಸ್ತಕವದು.

ಪ್ರತಿ ಸಂಜೆ ಕಚೇರಿ ವೇಳೆ ಮುಗಿದ ಬಳಿಕ ೧ ಗಂಟೆ ಕಾಲ ಮೊದಲು ಅನುವಾದಿತ ಕೃತಿಯನ್ನು ಓದತೊಡಗಿದೆ. ಕೇವಲ ಮೂರು, ನಾಲ್ಕು ಬೈಠಕ್‌ಗಳಲ್ಲಿಯೇ ಸಾಕಷ್ಟು ದೋಷಗಳು ಅದರಲ್ಲಿ ಹುದುಗಿದ್ದುದು ಎದ್ದುಕಂಡುವು. ಇವು ವ್ಯಾಪಕವಾಗಿ ವ್ಯಾಕರಣಸ್ಖಾಲಿತ್ಯ, ಕನ್ನಡಕ್ಕೆ ಅಸಹಜ ವಾಕ್ಯಬಂಧ ಮತ್ತು ಅರ್ಥ ಸಂದಿಗ್ಧತೆ. ಮೂಲದೊಡನೆ ಹೋಲಿಸಿ ನೋಡಿದಾಗ ಅನುವಾದಕರ ವಿಷಯಜ್ಞಾನ ಮತ್ತು ಉಭಯ ಭಾಷಾಪ್ರಾವೀಣ್ಯಗಳ ಬಗ್ಗೆ ತೀವ್ರ ಸಂದೇಹ ಮೊಳೆಯಿತು. ಹೀಗೆ ಸ್ಥಾಲೀಪುಲಾಕನ್ಯಾಯ ವಿಧಾನದಿಂದಲೇ ಈ ಕೃತಿ ಪ್ರಕಟಣೆಗೆ ಅನರ್ಹವಾಗಿದೆಯೆಂದು ತೀರ್ಮಾನಿಸಬಹುದಿತ್ತು. ಆದರೆ ಇದು ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಪ್ರಕಟಣೆಯಾಗಿ ಹೊರಬರಲಿದೆ, ಆದ್ದರಿಂದ ಇದನ್ನು ಸಾದ್ಯವಾಗುವಷ್ಟು ತಿದ್ದಿ ಶುದ್ಧೀಕರಿಸಿ ಮರುನಕಲುಮಾಡಿ ಪುನಃ ನನಗೆ ಕಳಿಸಿರೆಂಬ ಸೂಚನೆ ಸಹಿತ ಅವರಿಗೆ ಮರಳಿಸೋಣವೆಂಬ ನಿಲವು ತಳೆದೆ. ಈ ಪ್ರಕಾರ ನನ್ನ ಮುಸ್ಸಂಜೆಯ ಕೆಂಪು-ಶಾಯಿ-ಕಸರತ್ತು ಹಸ್ತಪ್ರತಿಯ ಮೇಲೆಯೇ ಮುಂದುವರಿಯಿತು. ಅವಶ್ಯವಿದ್ದಲ್ಲೆಲ್ಲ ಎಡಗಡೆಯ ಖಾಲಿ ಪುಟಗಳಲ್ಲಿ ಹೊಸ ಪಾಠವನ್ನೇ ಬರೆಯುತ್ತಲೂ ಇದ್ದೆ. ಸುಮಾರು ೪೫ ಸಂಜೆಗಳು ಸಂದುವು, ಅಷ್ಟೇ ಪುಟಗಳ ಸ್ಥೂಲ ಪರಿಷ್ಕರಣವೂ ಮುಗಿದಿತ್ತು. ಅಷ್ಟರಲ್ಲಿ ನನ್ನ ಕಷ್ಟಗಳಿಗೆ ಕಳಶಪ್ರಾಯವಾಗಿ ಈ ವಾಕ್ಯ ಎದುರಾಯಿತು, “ನೀಳಕಾಯದ ಮೆಂಡಲ್ಲನು ಆ ಬೇಸಗೆ ಇಡೀ ಹೂವಿನ ಹಾಸಿಗೆಗಳಲ್ಲಿ ಕಾಲ ಕಳೆದನು….” ಸಂವಾದೀ ಇಂಗ್ಲಿಷ್ ರೂಪ ಹೀಗಿತ್ತು, “All summer long Mendel spent his time in the flower beds…” ನನ್ನ ಸಹನೆಯ ಕುಂಭ ಒಡೆದಿತ್ತು. ಸುದೀರ್ಘ ಸೋದಾಹರಣಾ ಟಿಪ್ಪಣಿ ಬರೆದು ಪ್ರಸ್ತುತ ಅನುವಾದ ಕೃತಿ ಪ್ರಕಟಣೆಗೆ ಸರ್ವಥಾ ಅರ್ಹವಲ್ಲ, ಅಷ್ಟೇ ಅಲ್ಲ, ಇದು ಈ ಲೇಖಕರ ಅಳವಿಗೆ ಮೀರಿದ ಕೆಲಸ ಎಂಬ ಖಚಿತ ಷರಾ ಸೇರಿಸಿ ಇಡೀ ಜೊಂಪೆಯನ್ನು ವಿಶ್ವವಿದ್ಯಾಲಯಕ್ಕೆ ಮರಳಿಸಿದೆ.

ತಿಂಗಳೊಂದಾದರೂ ಅವರಿಂದ ಪ್ರತಿಕ್ರಿಯೆ ಇಲ್ಲ. ಇಂಥ ಸನ್ನಿವೇಶಗಳಲ್ಲಿ ವಾರಕ್ಕೊಂದು ನೆನಪಿನ ಕಾರ್ಡ್ ಬರೆದು ಸಂಬಂಧಿಸಿದವರಿಗೆ ಎಚ್ಚರ ನೀಡುವುದು ನನ್ನ ಅಭ್ಯಾಸ. ಎರಡು ತಿಂಗಳು ಸಂದಾಗಲೂ ಅದೇ ಪರಿಸ್ಥಿತಿ. ಆಗ ನಾನು ನೇರ ಕುಲಪತಿಗಳ ಹೆಸರಿಗೇ ಸವಿವರ ಕಾಗದ ಬರೆದು ನನಗೆ ಸಲ್ಲಬೇಕಾದ ಸಂಭಾವನೆಯ ಬಿಲ್‌ನ್ನೂ ಲಗತ್ತಿಸಿ ಕಳಿಸಿದೆ. ಆಗಲೂ ದಿವ್ಯ ಮೌನ. ಮತ್ತೊಂದು ತಿಂಗಳುರುಳುವಾಗ ಸರ್ಕಾರದ ಶಿಕ್ಷಣಮಂತ್ರಿಯವರಿಗೆ (ವಿಶ್ವವಿದ್ಯಾಲಯದ ಉಪಕುಲಾಧಿಪತಿ) ದಫ್ತರದ ಪೂರ್ತಿ ಮಾಹಿತಿಯನ್ನು ರವಾನಿಸಿ ಎಚ್ಚರಿಕೆಯ ನುಡಿಯನ್ನೂ ಸೇರಿಸಿದೆ: ಎಂದೋ ನಾನು ನ್ಯಾಯಾಲಯದ ಮುಂದೆ ಈ ವ್ಯಾಜ್ಯವನ್ನು ಮಂಡಿಸಬಹುದಿತ್ತು, ಅದರೆ ಸ್ವತಃ ಒಂದು ವಿಶ್ವವಿದ್ಯಾಲಯದ ನೌಕರನಾಗಿರುವ ನಾನು ಸೋದರ ಸಂಸ್ಥೆಯೊಂದರ ವಿರುದ್ಧ ಕೋರ್ಟ್ ಕಟ್ಟೆ ಹತ್ತಬಾರದೆಂಬ ಸಭ್ಯನೀತಿಗೆ ಶರಣಾಗಿ ಹಾಗೆ ಮಾಡಿಲ್ಲ; ಇನ್ನು ೪ ವಾರಗಳ ಒಳಗೆ ನನಗೇನಾದರೂ ಮಾಹಿತಿ ಬರದಿದ್ದರೆ ವಿಧಿ ಇಲ್ಲದೆ ನಾನು ನ್ಯಾಯಾಲಯದಲ್ಲಿ ದಾವೆ ಹೂಡುತ್ತೇನೆ.

ಕೊನೆಗೂ ವಿಶ್ವವಿದ್ಯಾಲಯದ ಕುಲಪತಿಯವರಿಂದ ನನ್ನ ಸಂಭಾವನೆಯನ್ನು ಮೂಲ ಷರತ್ತಿನ ಅನುಸಾರ ಸದ್ಯವೇ ಫೈಸಲ್ ಮಾಡಲಾಗುವುದೆಂಬ ಆಶ್ವಾಸನೆಯೇನೋ ಬಂತು. ಹಣ ಬರಲಿಲ್ಲ. ಪುನರಪಿ ನೆನಪಿನೋಲೆಗಳು! ಕೊನೆಗೂ ಸಂಬಂಧಿಸಿದ ಅಧಿಕಾರಿಯಿಂದ ಬಂದ ಉತ್ತರವೇನು ಗೊತ್ತೇ? ಅದರ ಸಾರಾಂಶ, “ಮೂಲ ಷರತ್ತಿನಲ್ಲಿ ‘೧೦೦೦ ಪದಗಳಿಗೆ ರೂ ೩’ ಎಂದು ಇರಬೇಕಾದದ್ದು ಗುಮಾಸ್ತನ ಕಣ್ತಪ್ಪಿನಿಂದಾಗಿ ‘೧೦೦ ಪದಗಳಿಗೆ ರೂ ೩’ ಎಂದಾಗಿದೆ. ನೀವು ಒತ್ತಾಯಿಸಿದರೆ ಈ ಅಧಿಕ ಮೊತ್ತವನ್ನು ಆತ ತೆರಬೇಕಾಗುತ್ತದೆ.”
ಅಧಿಕಾರಿಯ ಅದಕ್ಷತೆಗೆ ಛೀಮಾರಿ ಹಾಕುತ್ತ ಆ ತಪ್ಪೊಪ್ಪಿಗೆಯನ್ನು ಮನ್ನಿಸಿದೆ, ಮತ್ತು ಶೇಕಡಾ ೧೦ಕ್ಕೆ ಇಳಿಸಿದ ಸಂಭಾವನೆಯನ್ನು ಪಡೆಯಲು ಸಮ್ಮತಿ ಸೂಚಿಸಿದೆ. ಮತ್ತೆ ಕೆಲವು ವಾರಗಳಲ್ಲಿ ಆ ಚೆಕ್ ಬಂತು, ನಿಜ. ಆದರೆ ಪ್ರಕರಣ ಮುಗಿಯಲಿಲ್ಲ? ಮೊದಲು ಹಣವಾಗಿ ಕಾಡಿದ ಮಾಯೆ ಈಗ ಕೀರ್ತಿಯಾಗಿ ಕಾಡಿತ್ತು ನೋಡಾ!

ಸುಮಾರು ೨ ವರ್ಷಗಳು ಕಳೆದುವು. ಮೈಸೂರು ವಿಶ್ವವಿದ್ಯಾನಿಲಯದ ‘ವಿಜ್ಞಾನ ಕರ್ನಾಟಕ’ವೆಂಬ ಪ್ರತಿಷ್ಠಿತ ತ್ರೈಮಾಸಿಕದ ಸಂಪಾದಕರು ನನ್ನ ಕೊಠಡಿಗೆ ಬಂದು, “ಈ ಜನಪ್ರಿಯ ಕನ್ನಡ ವಿಜ್ಞಾನಕೃತಿಯ ವಿಮರ್ಶೆಯನ್ನು ದಯವಿಟ್ಟು ನೀವು ಮಾಡಿಕೊಡಬೇಕು” ಎಂದರು. ಖುಷಿಯಿಂದ ಅದನ್ನು ಕೈಗೆತ್ತಿಕೊಂಡೆ, ಶೀರ್ಷಿಕೆ ನೋಡಿದಾಗ ಕುಸಿದುಹೋದೆ: ಅದು ‘ನಾನೇಕೆ ಅಪ್ಪನಂತೆ?’ ಅದೇ ಹಿಂದಿನ ಅನುವಾದಕರ ಹೆಸರಿನಲ್ಲೇ ಇದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿ ಹೊರಬಂದಿದೆ. ಮೊದಲ ಕೆಲವು ಪುಟಗಳ ಮೇಲೆ ಕಣ್ಣಾಡಿಸಿದೆ: ನನ್ನವೇ ವಾಕ್ಯಗಳು; ನಾನು ತಿದ್ದುವುದನ್ನು ನಿಲ್ಲಿಸಿದಲ್ಲಿಂದ ಮುಂದಕ್ಕೆ ಅವರವೇ ಅರ್ಥಹೀನ ಅವಾಕ್ಯಗಳು!

ಈ ಮೋಸ ಕಂಡು ನನಗೆ ಜುಗುಪ್ಸೆಯಾಯಿತು. ಸಮಗ್ರ ಪೂರ್ವ ಕತೆಯನ್ನು ಸಂಪಾದಕರಿಗೆ ವಿವರಿಸಿ ಹೇಳಿದೆ, “ಪ್ರಸಕ್ತ ಪುಸ್ತಕದ ವಿಮರ್ಶೆ ನಾನು ಬರೆದುದಾದರೆ ಕೊಳೆಬಟ್ಟೆಯ ದುರ್ವಾಸನೆಯನ್ನು ಲೋಕಕ್ಕೆ ಹರಡಲೇಬೇಕಾಗುತ್ತದೆ. ಈಗಾಗಲೇ ನನ್ನ ಅಪೇಕ್ಷೆ ಅಥವಾ ಇಚ್ಛೆ ಇಲ್ಲದೆ ಸಾಕಷ್ಟು ಕೊಳೆ ನನಗಂಟಿದೆ. ಈಗ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸ ನನಗಿಷ್ಟವಿಲ್ಲ.” ಅವರು ಹೋದರು? ಇಲ್ಲ!

ಮತ್ತೆ ಹಲವು ತಿಂಗಳುಗಳು ಸಂದುವು. ಪ್ರಧಾನ ಸಂಪಾದಕ ಹಾಮಾನಾರಿಂದ ದೂರವಾಣಿ ಕರೆ, “ಏನು ಸಾರ್! ‘ನಾನೇಕೆ ಅಪ್ಪನಂತೆ?’ ಪುಸ್ತಕದ ಇಡೀ ಕತೆಯನ್ನು ನೀವು ಆಗಾಗಲೇ ನನಗೆ ಹೇಳುತ್ತಿದ್ದಿರಿ. ಅದು ಪ್ರಕಟಣೆಗೆ ನಾಲಾಯಕ್ಕೆಂದು ಶಿಫಾರಸು ಕೂಡ ಮಾಡಿದ್ದಿರಿ. ಈ ಸಲದ ‘ವಿಜ್ಞಾನ ಕರ್ನಾಟಕ’ ಸಂಚಿಕೆ ನೋಡಿದಿರಾ? ಅದೊಂದು ಉತ್ಕೃಷ್ಟ ಅನುವಾದವೆಂಬ ವಿಮರ್ಶೆ ಪ್ರಕಟವಾಗಿದೆ!”
“ಆ ವಿಮರ್ಶಕ ಖಂಡಿತ ಅದನ್ನು ಓದದೇ ಬರೆದಿದ್ದಾರೆ. ಅದರ ಶೀರ್ಷಿಕೆ, ಅನುವಾದಕರ ನಾಮ ಮತ್ತು ಪ್ರಕಾಶಕರ ಪ್ರತಿಷ್ಠೆ ಇಲ್ಲಿ ನಿರ್ಣಾಯಕ ಪಾತ್ರ ವಹಿಸಿರಬೇಕು” ಎಂದು ಒದರಿದೆ.
ವಿಮರ್ಶೆ ಬರೆದವರು ಕನ್ನಡದ ಒಬ್ಬ ಹಿರಿಯ ಮತ್ತು ಹೆಸರಾಂತ ವಿಜ್ಞಾನ ಲೇಖಕರು. ಅಂದೇ ಅವರನ್ನು ಭೇಟಿಮಾಡಿ, “ಇಡೀ ಪ್ರಕರಣವನ್ನು ನಾನು ನಿಮಗೆ ಆಗಿಂದಾಗಲೇ ವರದಿಮಾಡುತ್ತ ಬಂದಿದ್ದೇನೆ. ಈಗ ನಮಗೆಲ್ಲ ಗುರುಸ್ಥಾನದಲ್ಲಿರುವ ನೀವೇ ಈ ಪುಸ್ತಕಕ್ಕೆ ಇಂಥ ಶಿಫಾರಸು ಕೊಟ್ಟಿರುವಿರೆಂದ ಬಳಿಕ ನನ್ನ ಅಭಿಪ್ರಾಯಗಳೆಲ್ಲವೂ ತಪ್ಪೆಂಬುದು ಸ್ಪಷ್ಟ. ನಾನೆಲ್ಲಿ ಎಡವಿದ್ದೇನೆ? ದಯವಿಟ್ಟು ಸ್ಪಷ್ಟೀಕರಿಸಬೇಕು.”
ಆ ಗಳಿಗೆ ಆ ಮಹಾಶಯರು ವಿವರ್ಣರಾಗಿ ಅಸಂಬದ್ಧ, ಅತಾರ್ಕಿಕ ಮತ್ತು ಅಪ್ರಬುದ್ಧ ವಿವರಣೆಗೆ ಶರಣಾದ ಪರಿ ನನ್ನಲ್ಲಿ ಮರುಕ ಹುಟ್ಟಿಸಿತು. ಸಾರವಿಷ್ಟು, “ಮೂಲ ಇಂಗ್ಲಿಷ್ ಚೆನ್ನಾಗಿದೆ. ಅನುವಾದಕರ ಅರ್ಹತೆ ಬಗ್ಗೆ ನನಗೆ ಪೂರ್ಣ ಭರವಸೆ ಇದೆ. ಮೊದಲ ಹತ್ತಾರು ಪುಟಗಳ ಮೇಲೆ ದೃಷ್ಟಿಹಾಯಿಸಿದೆ. ಸಲೀಸಾಗಿ ಓದಿಸಿಕೊಂಡು ಹೋದುವು. ಇತ್ತ ಮುದ್ರಣಾಲಯದವರು ಅವಸರ ಮಾಡತೊಡಗಿದರು…” ಅವೈಚಾರಿಕ ಹೂರಣವನ್ನು ವೈಚಾರಿಕ ತೋರಣದಿಂದ ತರ್ಕದ ಮೂಲಕ ಕೃತಕವಾಗಿ ಸಿಂಗರಿಸುವ ಈ ಮಾಮೂಲೀ ರಾಜಕೀಯ ಚಮತ್ಕಾರ ನನ್ನಲ್ಲಿ ಅಸಹ್ಯ ಹುಟ್ಟಿಸಿತು. ಮುಂದಿನ ಮಾತುಕತೆ ವಾದವಿವರಣೆಗಳನ್ನು ಅಲ್ಲಿಗೇ ಕೈದುಮಾಡಿ ಈ ದುಸ್ಸ್ವಪ್ನಕ್ಕೆ (ಅ)ಮಂಗಳ ಹಾಡಿದೆ:
ನಿನಗೆ ನೀನೇ ಗೆಳೆಯಾ! ನಿನಗೆ ನೀನೇ! ಅವರಿವರ ನಂಬುಗೆಯ ಮಳಲರಾಶಿಯ ಮೇಲೆ ಕಟ್ಟದಿರು ಮನೆಯಾ! – (ಅಡಿಗ)
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ – (ಗೀತಾ)
ಆತ್ಮಬಲದಿಂದೆ ತನ್ನಾತ್ಮವನು ಉದ್ಧರಿಸಿ-
ಕೊಳಬೇಕು, ತನ್ನಾತ್ಮವನು ನಶಿಸಗೊಡದೆ
ಇರಬೇಕು, ಆತ್ಮವೇ ಆತ್ಮನೋರಗೆ ಬಂಧು,
ಆತ್ಮವೇ ಹಗೆಯಾತ್ಮಕರಿತುಕೊಳು ಬಿಡದೆ – (ವಿಜಯಿನಿ)

ಕನ್ನಡದಲ್ಲಿ ಜನಪ್ರಿಯ ವಿಜ್ಞಾನ: ವಸ್ತು, ಶೈಲಿ, ವಿನ್ಯಾಸ
ಅಧ್ಯಾಯ ೭೫ (ಮೂಲದಲ್ಲಿ ೪೭)

ಜನಪ್ರಿಯ ವಿಜ್ಞಾನ ಎಂದರೇನು? ವಿಜ್ಞಾನದ ಪರಿಕಲ್ಪನೆ (concept) ಒಂದೇ. ಅದನ್ನು ನಿರೂಪಿಸುವ ವಿಧಾನ ಅನುಸರಿಸಿ ಎರಡು ಮುಖ್ಯ ಮುಖಗಳು ಪ್ರಕಟವಾಗುತ್ತವೆ: ತಾಂತ್ರಿಕ ಮುಖ, ಜನಪ್ರಿಯ ಮುಖ. ಸಂಶೋಧನ ನಿಬಂಧಗಳು, ಆಕರ ಗ್ರಂಥಗಳು, ಪಠ್ಯಪುಸ್ತಕಗಳು ಮತ್ತು ತಂತ್ರಕುಶಲಿಯ ಕೈಪಿಡಿಗಳು ಎಂಬ ನಾಲ್ಕು ಪ್ರಕಾರಗಳು ಬೇರೆ ಬೇರೆ ಸ್ತರಗಳಲ್ಲಿ ತಾಂತ್ರಿಕ ಮುಖವನ್ನು ಪ್ರತಿನಿಧಿಸುತ್ತವೆ. ಆಯಾ ವಿಷಯದಲ್ಲಿ ಆಸಕ್ತರಾಗಿ ಅದರ ತಾಂತ್ರಿಕ ಭಾಷೆಯನ್ನು ಪೂರ್ಣ ಬುದ್ಧಿಗತ ಮಾಡಿಕೊಂಡ ಪರಿಣತರಿಗೆ ಮಾತ್ರ ಇಲ್ಲಿ ಪ್ರವೇಶ.

ಜನಪ್ರಿಯ ಮುಖ ಮೇಲಿನ ನಾಲ್ಕು ಪ್ರಕಾರಗಳಿಗಿಂತ ಭಿನ್ನವಾಗಿದ್ದು ಇದರಲ್ಲಿ ಸರ್ವರಿಗೂ ಪ್ರವೇಶವಿದೆ. ಇದರ ತಾಯಿ ಬೇರು ಸಂಶೋಧನ ನಿಬಂಧಗಳಲ್ಲಿಯೂ ಆಕರ ಗ್ರಂಥಗಳಲ್ಲಿಯೂ ಭದ್ರವಾಗಿ ತಳವೂರಿದ್ದು ಕೊಂಬೆಗಳು ಹಲವು ಗಾತ್ರಗಳಲ್ಲಿ ಮತ್ತು ದಿಶೆಗಳಲ್ಲಿ ಕವಲೊಡೆದಿರುತ್ತವೆ. ಇದರಲ್ಲಿ ಮಾಹಿತಿ ಇದೆ, ಶೈಲಿಯ ಹೊಳಹುಗಳಿವೆ. ಕಲ್ಪನೆಯ ವಾಯುಯಾನಕ್ಕೆ ಅವಕಾಶವಿದೆ. ವಿಜ್ಞಾನ ಪರಿಕಲ್ಪನೆಗಳ ಇತಿಹಾಸವಿದೆ. ಕತೆ ಆಖ್ಯಾನಕಗಳು ಮತ್ತು ವಿಜ್ಞಾನಿಗಳ ಜೀವನ ಚರಿತ್ರೆಗಳು ಇದರ ಅವಿಭಾಜ್ಯ ಅಂಗ.

ಪ್ರತೀಕ (symbol), ಚಿಹ್ನೆ (sign), ಫಲನ (function), ಸಮೀಕರಣ (equation) ಮುಂತಾದ ತಾಂತ್ರಿಕ ಭಾಷಾ ಪರಿಕರಗಳನ್ನು ಕನಿಷ್ಠ ಪ್ರಮಾಣದಲ್ಲಿ ಉಪಯೋಗಿಸುತ್ತ, ಬದಲಾಗಿ, ವಿವರಣಾತ್ಮಕ ಹಾಗೂ ಚಿತ್ರಾತ್ಮಕ ಭಾಷೆಯನ್ನು ಆವಶ್ಯಕತೆಗೆ ತಕ್ಕಂತೆ ಬಳಸುತ್ತ ವಿಜ್ಞಾನದ ಪರಿಕಲ್ಪನೆಗಳನ್ನು ಜನಸಾಮಾನ್ಯರಿಗೆ – ವಿಜ್ಞಾನದ ತಾಂತ್ರಿಕ ಮುಖದ ಪರಿಚಯವಿಲ್ಲದವರಿಗೆ ಎಂಬ ಅರ್ಥದಲ್ಲಿ – ಸಂವಹನಿಸುವುದು ಇಲ್ಲಿಯ ತಂತ್ರ. ಉದಾಹರಣೆಗೆ, ಭೌತವಿಜ್ಞಾನದ ತಾಂತ್ರಿಕ ಮುಖದ ಪರಿಚವಿರುವಾತನಿಗೆ pv = c ಸಮೀಕರಣ ಕರತಲಾಮಲಕದಷ್ಟು ಸುಸ್ಪಷ್ಟ. ಈ ಪರಿಕಲ್ಪನೆಯನ್ನು ಜನಪ್ರಿಯ ಧಾಟಿಯಲ್ಲಿ ನಿರೂಪಿಸಿದರೆ ಅದು ಹೀಗಿರುತ್ತದೆ:
ಉಷ್ಣತೆ ಸ್ಥಿರವಾಗಿರುವಾಗ ಯಾವುದೇ ಅನಿಲದ ಸಂಮರ್ದ (p) ಮತ್ತು ಘನಗಾತ್ರ (v) ಇವೆರಡರ ಗುಣಲಬ್ಧ (p’v) ಒಂದು ನಿಯತಾಂಕ (c), ಪ್ರತೀಕಗಳಲ್ಲಿ pv=c. ಇಲ್ಲಿ ವಾಚಕನಿಗೆ ಉಷ್ಣತೆ, ಅನಿಲ ಮುಂತಾದ ಪಾರಿಭಾಷಿಕ ಪದಗಳ ಅರ್ಥ ತಿಳಿದಿದೆ ಎಂದು ಭಾವಿಸಿದೆ. ಇಲ್ಲವಾದರೆ ನಿರೂಪಣೆ ಇನ್ನಷ್ಟು ವಿವರಣಾತ್ಮಕವಾಗಿ ಇರಬೇಕಾಗುತ್ತದೆ.
ಇವು ಮೂರು: ಪರಿಕಲ್ಪನೆಯಲ್ಲಿ ಸ್ಪಷ್ಟತೆ, ಶೈಲಿಯಲ್ಲಿ ಪರಿಶುದ್ಧತೆ, ನಿರೂಪಣೆಯಲ್ಲಿ ಆಕರ್ಷಕತೆ. ಉದಾಹರಣೆಗೆ ಕಾರ್ಲ್ ಸಗಾನ್ ಬರೆದಿರುವ Cosmos ಗ್ರಂಥದಿಂದ ಆಯ್ದ ಈ ಪರಿಚ್ಛೇದ ಗಮನಿಸಿ:
The Earth is a place. It is by no means the only place. It is not even a typical place. No planet or star or galaxy can be typical, because the Cosmos is mostly empty. The only typical place is within the vast, cold, universal vacuum, the everlasting night of intergalactic space, a place so strange and desolate that, by comparison, planets and stars and galaxies seem achingly rare and lovely. If we were to be randomly inserted into the Cosmos, the chance that we would find ourselves on or near a planet would be less than one in a billion trillion trillion 1033

ಇದರ ಭಾವಾನುವಾದ: “ಭೂಮಿ ಒಂದು ನೆಲೆ ನಿಜ. ಇದು ಏಕೈಕ ನೆಲೆ ಏನೂ ಖಂಡಿತ ಅಲ್ಲ. ಕೊನೆಗೆ, ಇದೊಂದು ಪ್ರರೂಪೀ ನೆಲೆ ಕೂಡ ಅಲ್ಲ. ಯಾವುದೇ ಗ್ರಹ, ನಕ್ಷತ್ರ ಅಥವಾ ಬ್ರಹ್ಮಾಂಡ ಈ ಅರ್ಹತೆ ಪಡೆಯದು. ಏಕೆಂದರೆ ವಿಶ್ವ ಬಹುತೇಕ ಶೂನ್ಯ. ಒಂದೇ ಒಂದು ಪ್ರರೂಪೀ ನೆಲೆ ಎಲ್ಲಿದೆ ಗೊತ್ತೇ? ಅಂತರಬ್ರಹ್ಮಾಂಡೀಯ ಆಕಾಶದ ಚಿರಂತನ ರಾತ್ರಿ ದಟ್ಟೈಸಿರುವ ವಿಶಾಲ ಶೀತಲ ಸರ್ವವ್ಯಾಪೀ ಶೂನ್ಯದಲ್ಲಿ. ಅದೆಂಥ ವಿಚಿತ್ರ ಮತ್ತು ಬಂಜರು ಸ್ಥಳ ಎಂದರೆ ಅದರೊಂದಿಗೆ ಹೋಲಿಸಿದಾಗ, ಗ್ರಹ, ನಕ್ಷತ್ರ ಬ್ರಹ್ಮಾಂಡಗಳು ನಮಗೆ ವೇದನೆ ತರುವಷ್ಟರ ಮಟ್ಟಿಗೆ ವಿರಳ ಮತ್ತು ಸುಂದರ ಎಂದು ಭಾಸವಾಗುತ್ತವೆ. ನಮ್ಮನ್ನೇನಾದರೂ ವಿಶ್ವದೊಳಕ್ಕೆ ಯಾದೃಚ್ಛಿಕವಾಗಿ ಎಸೆದುಬಿಟ್ಟದ್ದಾದರೆ ನಾವು ಯಾವುದೇ ಗ್ರಹದ ಮೇಲೆ ಅಥವಾ ಅದರ ಸನಿಹದಲ್ಲಿ ಬೀಳುವ ಸಂಭಾವ್ಯತೆ ಎಷ್ಟು? ಅದು ಬಿಲಿಯನ್ ಟ್ರಿಲಿಯನ್ ಟ್ರಿಲಿಯನ್ನಿನಲ್ಲಿ ೧೦೩೩ ೧ರ ಬಲಕ್ಕೆ ೩೩ ಸೊನ್ನೆ ಬರೆದಾಗ ದೊರೆಯುವ ಸಂಖ್ಯೆ) ಒಂದಕ್ಕಿಂತಲೂ ಕಡಿಮೆ.”

ವಾಙ್ಮಯ ಸೃಷ್ಟಿ ಸಮಸ್ಯೆಗಳು: ಆಧುನಿಕ ವಿಜ್ಞಾನದ ಸಂವಹನ ಮಾಧ್ಯಮವಾಗಿ ಸಹಜ ವಿಕಾಸ ಪ್ರಕ್ರಿಯೆಗೆ ಒಳಪಟ್ಟಿರದ ಕನ್ನಡದಲ್ಲಿ ವಿಜ್ಞಾನವಾಙ್ಮಯವನ್ನು ಸೃಷ್ಟಿಸುವಾಗ ಎರಡು ಬಗೆಯ ಸಮಸ್ಯೆಗಳು ಉದ್ಭವಿಸುತ್ತವೆ: ವ್ಯಕ್ತಿಮೂಲ, ಕೃತಿಮೂಲ.

ಮೊದಲನೆಯದು – ವ್ಯಕ್ತಿಮೂಲ ಸಮಸ್ಯೆಗಳು: ನಿಜ ಅರ್ಹತೆ ಅಥವಾ ಯೋಗ್ಯತೆ ಇರದ ವ್ಯಕ್ತಿ ಈ ಕೆಲಸಕ್ಕೆ ಕೈ ಹಾಕಿದಾಗ ಇವು ವಿಶೇಷವಾಗಿ ತಲೆದೋರುತ್ತವೆ. ಆದ್ದರಿಂದ ವಿಜ್ಞಾನ ವಾಙ್ಮಯ ಸೃಷ್ಟಿಸುವವರಲ್ಲಿ ಇರಬೇಕಾದ ಗುಣಗಳು ಏನು ಎನ್ನುವುದನ್ನು ಮೊದಲು ನೋಡೋಣ. ಇವು ಮುಖ್ಯವಾಗಿ ಮೂರು: ೧. ವಿಷಯ ಪ್ರಭುತ್ವ: ವಿಷಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಇದರ ಎತ್ತರ, ಬಿತ್ತರ ಅರಿತವ ಮಾತ್ರ ತನ್ನ ಓದುಗರ ಮಟ್ಟ ಅನುಲಕ್ಷಿಸಿ ಎಷ್ಟು ಮತ್ತು ಹೇಗೆ ಹೇಳಬೇಕು ಎಂಬ ವಿವರಗಳ ಬಗ್ಗೆ ಖಚಿತ ನಿಲವು ತಳೆಯಬಲ್ಲ. ಉದಾಹರಣೆಗೆ ಜನಪ್ರಿಯ ಸಾಪ್ತಾಹಿಕವೊಂದಕ್ಕೆ ‘ಬೆಳಕು’ ಎಂಬ ವಿಷಯ ಕುರಿತು ಐದು ಪುಟಗಳ ಲೇಖನ ಬರೆಯುವುದು ನಮ್ಮ ಉದ್ದೇಶವೆಂದು ಭಾವಿಸೋಣ. ಈ ಲೇಖನದಲ್ಲಿ ಬೆಳಕಿನ ಶಕ್ತಿ ಸ್ವರೂಪ, ವೇಗ ವೈಚಿತ್ರ್ಯ, ಮಾಧ್ಯಮರಹಿತ ಚಲನೆ ಮುಂತಾದ ಗುಣಗಳನ್ನು ವಿವರಿಸುವುದು ಎಷ್ಟು ಮುಖ್ಯವೋ ಕಣ-ತರಂಗ ದ್ವೈತ ವಿಚಾರ, ರೋಹಿತ ವೈಶಿಷ್ಟ್ಯ, ಫೋಟಾನಿನ ತೂಕ ಮುಂತಾದ ಬಿಡಿ ವಿವರಗಳನ್ನು ಬಿಡುವುದು ಕೂಡ ಅಷ್ಟೇ ಮುಖ್ಯ. ತಾಕತ್ತಿನ ತಾಣದಿಂದ ಬರೆಯಲು ಸಮರ್ಥನಾದವನಿಗೆ ಮಾತ್ರ ಎಷ್ಟು ಇಡುವುದು, ಎಷ್ಟು ಬಿಡುವುದು ಎಂಬ ತಾರತಮ್ಯ ವಿವೇಕವಿರುತ್ತದೆ. ಇಂಥವನ ಬರವಣಿಗೆಯಲ್ಲಿ ವಿಜ್ಞಾನದ ಪರಿಕಲ್ಪನೆ ಸ್ಪಷ್ಟವಾಗಿ ರೂಪಗೊಂಡಿರುವುದನ್ನು ಕಾಣಬಹುದು. ಈ ಅದಟು ಇಲ್ಲದಾತನ ಲೇಖನ ಬರಿದೆ ಜಾಳು ಜಾಳು. ಇದರಲ್ಲಿಯ ಜ್ಞಾನಶೂನ್ಯತೆಯ ತೆರಪನ್ನು ಅಕ್ರಿಯಾತ್ಮಕ ಪದಗಳ ದಂಡು ಆಕ್ರಮಿಸುತ್ತದೆ. ದುರ್ಬಲ ನೆಲೆಯಿಂದ ಲೇಖನ ಬರೆಯತಕ್ಕದ್ದಲ್ಲ.

೨. ಭಾಷಾಪರಿಣತಿ: ಜನಪ್ರಿಯ ವಿಜ್ಞಾನ ಕರ್ತೃವಿಗೆ ಭಾಷೆಯ ಮೇಲೆ ಸಾಹಿತ್ಯದಲ್ಲಿಯ ಒಬ್ಬ ಸೃಜನಶೀಲ ಲೇಖಕನಿಗಿರುವುದಕ್ಕಿಂತ ಹೆಚ್ಚಿನ ಪ್ರಭುತ್ವವಿರಬೇಕು. ಏಕೆಂದರೆ ಈ ಎರಡನೆಯವ ತನ್ನ ಅನುಭವದ ಅಭಿವ್ಯಕ್ತಿಗೆ ಲಭ್ಯ ಪದಗಳ ಬಂಡವಾಳ ಅವಲಂಬಿಸಿದರೆ ಸಾಕು: ನೆಲದಿಂದ ಉಪಯುಕ್ತ ಮಣ್ಣು ಬಗೆದು ಹದಕೊಟ್ಟು ತರಾವರಿ ಮಡಿಕೆ ಕುಡಿಕೆ ತಯಾರಿಸುವ ಕುಂಬಾರನ ಕೆಲಸದಂತೆ ಇವನದು. ಇಲ್ಲಿ ಅನುಭವ ಮತ್ತು ಪ್ರತಿಭೆ ಪ್ರಧಾನ. ಮೂಕಶೋಕ ಗೇಯ ಶ್ಲೋಕವಾದಾಗ ಆದಿಕವಿ ಹೊಸ ಪದ ಸೃಷ್ಟಿಸಲಿಲ್ಲ, ಲಭ್ಯ ಪದಗಳಿಗೆ ಹೊಸ ಅರ್ಥ ತುಂಬಿದ, ಆಮ್ಲಜನಕ ಊದಿದ. ಜನಪ್ರಿಯ ವಾಙ್ಮಯದ ಕರ್ತೃವಾದರೋ ಈ ಕೆಲಸದ ಜೊತೆಗೆ ಹೊಸ ಪದಗಳನ್ನು ಟಂಕಿಸಿ ಅಮೂರ್ತ ವೈಜ್ಞಾನಿಕ ಪರಿಕಲ್ಪನೆಗೆ ಮೂರ್ತ ಭಾಷಾರೂಪ ಕೂಡ ಕೊಡಬೇಕಾಗುತ್ತದೆ. ಉದಾಹರಣೆಗೆ ಈ ಎರಡು ನಿದರ್ಶನಗಳನ್ನು ಗಮನಿಸಿ:
ಚಂದ್ರನ ಮೇಲೆ ಮೊತ್ತಮೊದಲು ಕಾಲಿಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಉದ್ಗರಿಸಿದ ನುಡಿ, “ಇದು ಒಬ್ಬ ವ್ಯಕ್ತಿಗೆ ಬಲು ಪುಟ್ಟ ಹೆಜ್ಜೆ, ಆದರೆ ಮನುಕುಲಕ್ಕೆ ಹನುಮಂತ ಲಂಘನ.” ಇಲ್ಲಿ giant leap for mankind ಇಂಗ್ಲಿಷ್ ಪದ ಸಮುಚ್ಚಯದ ಮಥಿತಾರ್ಥವನ್ನು ಅರುಹುವ ಕನ್ನಡದ ‘ಮನುಕುಲಕ್ಕೆ ಹನುಮಂತ ಲಂಘನ’ ಸೃಜನಶೀಲ ಬರವಣಿಗೆಗೆ ನಿದರ್ಶನ. ‘ದೈತ್ಯ ದಾಪು’ ಏಕಾಗಬಾರದು ಎಂಬ ಸಂದೇಹ ಮೂಡಬಹುದು. ‘ಹನುಮಂತ’ ಪ್ರತೀಕಿಸುವ ಅನ್ವೇಷಕ ಕುತೂಹಲ ‘ದೈತ್ಯ’ದಲ್ಲಿ ಪ್ರಕಟವಾಗುವುದಿಲ್ಲ. ಈ ಪದ ಒಂದು ತೆರನಾದ ರಾಕ್ಷಸ ಅಥವಾ ತಾಮಸ ಗುಣಸೂಚಕ ಎಂಬುದನ್ನೂ ಗಮನಿಸಬೇಕು.
“ಏಕಾಣುಜೀವಿ ಒಡೆದು ಎರಡಾಗುವ ಪ್ರಕ್ರಿಯೆಗೆ ವಿದಳನ ಎಂದು ಹೆಸರು.” ಇಲ್ಲಿ ಏಕಾಣುಜೀವಿ bacterium, ಪ್ರಕ್ರಿಯೆ process ಮತ್ತು ವಿದಳನ fission ಪದಗಳನ್ನು ಸೂಚಿಸುತ್ತವೆ. ಪರಮಾಣುಬೀಜ (nuclear of an atom) ಒಡೆಯುವ ಪ್ರಕ್ರಿಯೆಗೆ fission (ವಿದಳನ) ಎಂಬ ಪದ ಬಂದದ್ದು ಈ ಮೂಲದಿಂದಲೇ. ‘ಏಕಾಣುಜೀವಿ’ ಮತ್ತು ‘ವಿದಳನ’ ನೂತನ ಸೃಷ್ಟಿಗಳು.

ಆದ್ದರಿಂದ ಜನಪ್ರಿಯ ವಾಙ್ಮಯಕರ್ತೃವಿಗೆ ಅನುಭವ ಮತ್ತು ಪ್ರತಿಭೆ ಜೊತೆಗೆ ಭಾಷಾಜ್ಞಾನ ಮತ್ತು ವ್ಯಾಕರಣ ನಿರ್ಣಯ ಅತ್ಯಂತ ಅವಶ್ಯ ಪರಿಕರಗಳು. ಇವುಗಳ ಅಭಾವದಲ್ಲಿ ‘ಎಂಡೋಕ್ರೈನ್’ ಪದ ಕನ್ನಡದಲ್ಲಿ ‘ಒಳಸುರಿಕ’ವೆಂದೂ (‘ಅಂತಸ್ಸ್ರಾವೀ’ ಆಗಬೇಕು) instructions to computer ‘ಗಣಕಕ್ಕೆ ಉಪದೇಶಗಳು’ (‘ಗಣಕಕ್ಕೆ ನಿರ್ದೇಶನಗಳು’ ಆಗಬೇಕು.) ಎಂದೂ ವಿಕೃತ ರೂಪವನ್ನು ಪಡೆಯುತ್ತವೆ. ವಾಕ್ಯರಚನೆಯಂತೂ ತೀರ ಅಕನ್ನಡ ಮತ್ತು ಅಸ್ಪಷ್ಟವಾಗಿರುತ್ತದೆ. ಉದ್ದೇಶಪೂರ್ವಕ ಕೃಷಿಮಾಡಿದ ವಿನಾ ಭಾಷಾಪ್ರಭುತ್ವ ಲಭಿಸದು.

೩. ಕಾರ್ಯಶ್ರದ್ಧೆ: ಜನಪ್ರಿಯ ವಾಙ್ಮಯ ಕರ್ತೃವಿಗೆ ತನ್ನ ಕಾರ್ಯದ ಬಗ್ಗೆ ಧರ್ಮ ಪ್ರಚಾರಕನ ಅಚಲ ವಿಶ್ವಾಸ ಮತ್ತು ನಿಷ್ಠೆ ಅಗತ್ಯ. ವಿಜ್ಞಾನ ವಿಷಯಗಳಲ್ಲಿ ಉತ್ತಮ ಪಾಂಡಿತ್ಯವಿರುವ ಮತ್ತು ಕನ್ನಡ ಭಾಷೆಯಲ್ಲಿ ವಿಶೇಷ ಪ್ರಾವೀಣ್ಯವಿರುವ ಅನೇಕ ಮಂದಿ ವಿದ್ವಾಂಸರಿದ್ದಾರೆ. ಆದರೆ ಜನಪ್ರಿಯ ವಾಙ್ಮಯ ನಿರ್ಮಾಣ ಕುರಿತಂತೆ ಇವರು ಏನೋ ಒಂದು ತರಹದ ಕೀಳರಿಮೆಯಿಂದ ಇಲ್ಲವೇ ವಿಜ್ಞಾನ ಭಾರತಿಗೆ ಎಲ್ಲಿ ಮೈಲಿಗೆಯಾಗಿ ಬಿಡುವುದೋ ಎನ್ನುವ ಆತಂಕ ಭಾವದಿಂದ ಬಾಧಿತರಾಗಿರುವಂತೆ ತೋರುತ್ತದೆ. ಪ್ರಪಂಚ ಭಾಷೆಯಾದ ಇಂಗ್ಲಿಷಿನಲ್ಲಿ ಇವರು ಜನಪ್ರಿಯ ವಾಙ್ಮಯ ರಚಿಸಿ ಯಶಸ್ವಿಗಳಾಗಲಾರರು. ಕನ್ನಡದಲ್ಲಿ ಸೃಷ್ಟಿಸಿ ಜ್ಞಾನದಾನಗೈದು ಕೃತಕೃತ್ಯರಾಗಬಲ್ಲರು. ಇದಕ್ಕೆ ಛಲ ಬೇಕು, ಈ ಮಾಧ್ಯಮ ಕುರಿತು ನಂಬಿಕೆ ಬೇಕು.

ಹೀಗೆ ತ್ರಿಗುಣಾವಿಷ್ಟ ಲೇಖಕನಾದವ ಜನಪ್ರಿಯ ವಾಙ್ಮಯ ರಚಿಸಿದಾಗ ಅದು ಉದ್ದಿಷ್ಟ ಮತ್ತು ಆಸಕ್ತ ವಾಚಕರನ್ನು ತಲಪುತ್ತದೆ. ಅದರ ವಚನ ಅವರ ಜ್ಞಾನ ಮಟ್ಟವನ್ನು ಎತ್ತರಿಸುತ್ತದೆ ಮತ್ತು ಅವರ ಪೈಕಿ ಕೆಲವರ ಭವಿಷ್ಯವನ್ನಾದರೂ ಬದಲಾಯಿಸುತ್ತದೆ. ಓದುಗನಲ್ಲಿ ಕುತೂಹಲ ಮತ್ತು ತಾಳ್ಮೆ ಇಲ್ಲದಿದ್ದರೆ ಅಥವಾ ಆತ ಪೂರ್ವಗ್ರಹ ಪೀಡಿತನಾಗಿದ್ದರೆ ಲೇಖಕನ ಎಲ್ಲ ಪ್ರಾಮಾಣಿಕ ಪ್ರಯತ್ನಗಳೂ ನಿಷ್ಪಲ ಎಂಬುದು ಕಂಡಂತೆಯೇ ಇದೆ.

ಎರಡನೆಯದು: ಕೃತಿಮೂಲ ಸಮಸ್ಯೆಗಳು: ಜನಪ್ರಿಯ ವಾಙ್ಮಯ ಕರ್ತೃವಿನಲ್ಲಿ ವಿಷಯ ಪ್ರಭುತ್ವ, ಭಾಷಾ ಪರಿಣತಿ ಅಥವಾ ಕಾರ್ಯಶ್ರದ್ಧೆ ಇಲ್ಲವಾದರೆ ವ್ಯಕ್ತಿಮೂಲ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಲ್ಲದೆ ಈ ಎಲ್ಲ ಗುಣಗಳಿಂದ ಪರಿಪ್ಲುತನಾಗಿರುವ ಒಬ್ಬ ಲೇಖಕ ವಾಸ್ತವ ನಿರ್ಮಾಣ ಕಾರ್ಯದಲ್ಲಿ ಉದ್ಯುಕ್ತನಾದಾಗ ಎದುರಿಸುವ ಸಮಸ್ಯೆಗಳಿಗೆ ಕೃತಿಮೂಲ ಸಮಸ್ಯೆಗಳೆಂದು ಹೆಸರು. ಇವು ಲೇಖನದ ತಂತ್ರ ಮತ್ತು ಕಲೆಗಾರಿಕೆಗೆ ಸಂಬಂಧಿಸಿದುವು. ಇವನ್ನು ಮುಂದಿನ ಎಂಟು ಪರಿಚ್ಛೇದಗಳಲ್ಲಿ ಚರ್ಚಿಸಿದೆ.

ವಿಷಯದ ಆಯ್ಕೆ: ಯಾವ ವಿಷಯದ ಮೇಲೆ ಬರೆಯಬೇಕು ಎನ್ನುವುದನ್ನು ಮೊದಲು ನಿರ್ಣಯಿಸಬೇಕು. ಈ ನಿರ್ಣಯ ಸಾಧಾರಣವಾಗಿ ಲೇಖಕನ ವರ್ತಮಾನ ಜ್ಞಾನವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಯಾವುದೋ ವೃತ್ತಪತ್ರಿಕೆಯಲ್ಲಿ SETI – Search for Extraterrestrial Intelligence ಬಗೆಗಿನ ಒಂದು ಲೇಖನ ಓದಿದಾಗ ಈ ವಿಷಯ ಕುರಿತು ಕನ್ನಡಲ್ಲಿ ಬರೆಯಲು ನನಗೆ ಸ್ಫೂರ್ತಿ ಬಂದಿತು. ಆ ಗಳಿಗೆ ನನ್ನ ತಲೆಯಲ್ಲಿ ತುಂಬಿದ್ದುದು ಉತ್ಸಾಹದ ನೊರೆ ಬುರುಗು ಮಾತ್ರ. ಮಾಹಿತಿಯ ಗಟ್ಟಿ ಕಾಳು ಅಲ್ಲ.

ಮಾಹಿತಿ ಸಂಗ್ರಹ: ನಾನು ಓದಿದ ಲೇಖನ ತೀರ ಮೇಲು ಹೊದಿಕೆಯ ಮಾಹಿತಿಗಳನ್ನು ಮಾತ್ರ ಒಳಗೊಂಡಿದ್ದುದರಿಂದ ಅದನ್ನು ಜ್ಞಾನಸೀಮೆಯತ್ತ ಗುರಿಹಿಡಿದ ಕೈಮರವೆಂದು ಪರಿಗಣಿಸಬಹುದಿತ್ತೇ ವಿನಾ ಅಲ್ಲಿಗೆ ಸಾಗಲು ನೀಡಿದ ರಹದಾರಿ ಎಂದಲ್ಲ. ಹೀಗಾಗಿ ಆಳವಾಗಿ ಮತ್ತು ಸವಿವರವಾಗಿ ಅಧಿಕೃತ ಮಾಹಿತಿ ಸಂಗ್ರಹಿಸುವುದು ಅನಿವಾರ್ಯವಾಯಿತು. ಈ ಕೆಲಸವನ್ನು ನಾನು ಸಾಧಾರಣವಾಗಿ ಮೂರು ಹಂತಗಳಲ್ಲಿ ನಡೆಸುತ್ತೇನೆ: (ಅ) ಆಕರ ಗ್ರಂಥ, ಪ್ರಬಂಧ ಮತ್ತು ವಿಜ್ಞಾನ ನಿಯತಕಾಲಿಕೆಗಳನ್ನು ಅಧ್ಯಯನಗೈದು ವಿಷಯ ಸಂಗ್ರಹ (ಆ) ಈ ವಿಷಯ ಕುರಿತು ತಜ್ಞರ ಜೊತೆ ಚರ್ಚೆ, ಮಿತ್ರರ ಜೊತೆ ಸಂವಾದ ಯಾರೂ ದೊರೆಯದಾಗ ಏಕಪಾತ್ರಾಭಿನಯ! (ಇ) ಈ ಪ್ರಕ್ರಿಯೆಯ ವೇಳೆ ಲೇಖನದ ಹೂರಣ ಕುರಿತಂತೆ ಅಸ್ಪಷ್ಟ ಮಾನಸಿಕ ಪ್ರತಿರೂಪ (mental model) ಮೈದಳೆದಿರುತ್ತದೆ. ಇದು ಲೇಖನದ ಜೀವಾಳ, ಅಮೂರ್ತ ಶರೀರಿ, ಭಾವಜೀವಿ. ಸಂಗೀತವಿದರ ಪರಿಭಾಷೆಯಲ್ಲಿ ಹಾಡಿನ ಧಾಟಿ.

ಲಿಖಿತ ರೂಪ: ಜೀವಕ್ಕೆ ದೇಹ, ಹಾಡಿನ ಧಾಟಿಗೆ ಸಾಹಿತ್ಯ, ಮತ್ತು ಭಾವದ ಬೀಸಿಗೆ ಕಾವ್ಯ ಹೇಗೋ ಹಾಗೆ ಮಾನಸಿಕ ಪ್ರತಿರೂಪಕ್ಕೆ ಲಿಖಿತ ರೂಪ. ಇದನ್ನು ಪಡೆಯುವುದು ಪುನಸ್ಸೃಷ್ಟಿಗೆ ಸಮಾನ ಕ್ರಿಯೆ. ಬಹುತೇಕ ಸಂದರ್ಭಗಳಲ್ಲಿ ಮೊದಲನೆಯ ವಾಕ್ಯದ ನಿರೂಪಣೆಯೇ ಸಾಕಷ್ಟು ಶ್ರಮ ಮತ್ತು ಚಿಂತನೆ ಬೇಡುತ್ತದೆ: ಭಾವದ ತೀವ್ರತೆಗೆ ಅನುಗುಣವಾಗಿ ಭಾಷೆ ಸ್ಪಂದಿಸದಿರುವುದೇ ಇದರ ಕಾರಣ.

ಶುದ್ಧೀಕರಣ: ಅನೇಕ ಬಾರಿ ತಿದ್ದಿ ಮರುಬರೆದು ಪೂರ್ತಿಗೊಳಿಸಿದ ಕರಡನ್ನು ನಿಷ್ಠುರ ಸಂಪಾದನ (editing) ಮತ್ತು ಸಂಸ್ಕರಣ (vetting) ಪ್ರಕ್ರಿಯೆಗಳಿಗೆ ಒಳಪಡಿಸಬೇಕು. ಈ ಹಂತದಲ್ಲಿ ಲೇಖಕನ ವಿಮರ್ಶಾಪ್ರಜ್ಞೆ (ಹಿಂದಿನ ಹಂತದಲ್ಲಿ ಸೃಜನಶೀಲ ಪ್ರಜ್ಞೆ) ಜಾಗೃತವಾಗಿದ್ದು ಜಳ್ಳನ್ನು ತೂರಿ ಕಾಳನ್ನು ಮಾತ್ರ ಉಳಿಯಗೊಟ್ಟಿರುತ್ತದೆ. ಹೀಗೆ ದೊರೆಯುವುದೇ ಸಿದ್ಧ ಅಥವಾ ಅಂತಿಮ ಪ್ರತಿ. ‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ’ಯವನ ಗೋತ್ರಜರು ಖಾತ್ರಿ ಇಲ್ಲಿ ಸಲ್ಲುವುದಿಲ್ಲ. ಸಂಗೀತವಿದನಿಗೆ ಸ್ವರಸ್ಥಾನದಂತೆ ಲೇಖಕನಿಗೆ ಪದಸ್ಥಾನ. ಈ ಜ್ಞಾನ ನಿರಂತರ ಅಧ್ಯಯನ ಚಿಂತನ ಮತ್ತು ಕೃಷಿಯಿಂದ ಮಾತ್ರ ಲಭ್ಯವಾಗುತ್ತದೆ – ಕೇವಲ ಕನ್ನಡ ತಾಯಿನುಡಿಯಾದ್ದರಿಂದ ಅಥವಾ ಅದರಲ್ಲಿ ಒಂದಿಷ್ಟು ಬರಹ ಮಾಡಿದ್ದರಿಂದ ತಂತಾನೇ ಸಿದ್ಧಿಸುವುದಿಲ್ಲ.

ಪಾರಿಭಾಷಿಕ ಪದಗಳು: ಏಕರೂಪದ ಪಾರಿಭಾಷಿಕ ಪದಗಳ ಕೊರತೆಯೇ ಕನ್ನಡದಲ್ಲಿ ವಿಜ್ಞಾನ ವಾಙ್ಮಯ ಅಭಿವರ್ಧನೆಯಾಗದಿರುವುದರ ಕಾರಣ ಎಂಬುದಾಗಿ ‘ತಜ್ಞ’ರು ಸಭೆ ಸಮಾರಂಭಗಳಲ್ಲಿ ತಾರ ಸ್ಥಾಯಿಯಲ್ಲಿ ಗರ್ಜಿಸಿ ‘ಅಪ್ಪಣೆ’ ಕೊಡಿಸುವುದುಂಟು. ನೀರಿಗೆ ಎಂದೂ ಇಳಿಯದೇ ಈಜುವಿಕೆಯ ಸಮಸ್ಯೆಗಳನ್ನು ವಿವರಿಸುವ (ಮತ್ತು ಆ ಕಾರಣದಿಂದ ಈಜುವಿಕೆ ಅಪ್ರಾಯೋಗಿಕವೆಂದು ತೀರ್ಮಾನಿಸುವ) ಶುಷ್ಕ ವಾದಕ್ಕೆ ಸಮಾನವಾದದ್ದಿದು. ಈ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರ ಅನುಭವ ಸುಸ್ಪಷ್ಟವಾಗಿದೆ: ಪಾರಿಭಾಷಿಕ ಪದಗಳ ಕೊರತೆ ಒಂದು ಸಮಸ್ಯೆಯೇ ಅಲ್ಲ. ಶ್ರದ್ಧೆಯಿಂದ ದುಡಿಯಬಲ್ಲ ತಜ್ಞರ ಅಭಾವವೇ ಇಲ್ಲಿಯ ನಿಜವಾದ ಸಮಸ್ಯೆ.

ಭಾಷೆಯ ಕಾರ್ಯ: ಆಸಕ್ತ ವಾಚಕನಿಗೆ ವಿಷಯವನ್ನು ಸ್ಪಷ್ಟವಾಗಿಯೂ ಆಕರ್ಷಕವಾಗಿಯೂ ತಿಳಿಯಪಡಿಸಬೇಕಾದದ್ದು ಭಾಷೆಯ ಕಾರ್ಯ. ಈ ದಿಶೆಯಲ್ಲಿ ಕತೆ, ಕಾದಂಬರಿ, ಲಲಿತ ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳ ಲೇಖಕರ ಜವಾಬುದಾರಿಕೆಗಿಂತ ತೀರ ಹೆಚ್ಚಿನದು ವಿಜ್ಞಾನ ವಾಙ್ಮಯ ಲೇಖಕರದು. ಸಾಧಾರಣವಾಗಿ ಈ ದಿನಗಳಲ್ಲಿ ಒಬ್ಬ ವಿಜ್ಞಾನ ಲೇಖಕನನ್ನು ಎದುರಿಸುವ ಪ್ರಶ್ನೆಗಳಿವು: ಲೇಖನ ಸರಳವಾಗಿರಬೇಕು, ಸ್ಪಷ್ಟವಾಗಿರಬೇಕು, ಕಠಿಣ ಪದಗಳಾಗಲೀ ಸಂಕೀರ್ಣ ವಾಕ್ಯಗಳಾಗಲೀ ಇರಬಾರದು ಇತ್ಯಾದಿ. ವೇದಿಕೆಯ ಮೇಲಿಂದ ಈ ಮಾತು ಆಡುವಾಗ ಅಪ್ಯಾಯಮಾನವಾಗಿರುತ್ತದೆ. ಯಾವುದೋ ಲೇಖನದಿಂದ ಸಂದರ್ಭಾನುಚಿತವಾಗಿ ಆಯ್ದು ಕೆಲವೊಂದು ಪದಗಳನ್ನೋ ವಾಕ್ಯಗಳನ್ನೋ ಉದಾಹರಿಸಿ ಗೇಲಿ ಮಾಡುವಾಗ ‘ಅಜ್ಞಾತ ಜ್ಞಾನಶತ್ರು’ವಿನ ಎದುರು ಎಸೆದ ಈ ವಾಗ್ಬಾಣಗಳು ಕೇಳಲು ಮೋಹಕವಾಗಿರುತ್ತವೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ.

ಯಾವ ಪ್ರಜ್ಞಾವಂತ ಲೇಖಕನೂ ತನ್ನ ಲೇಖನ ಉದ್ದಿಷ್ಟ ವಾಚಕರಿಗೆ ಅಗ್ರಾಹ್ಯವಾಗಬೇಕೆಂದು ಖಂಡಿತ ಬಯಸಲಾರ. ತನ್ನ ವಿಷಯ ಪ್ರೌಢಿಮೆಯನ್ನಾಗಲೀ ಭಾಷಾ ಪಾಂದಿತ್ಯವನ್ನಾಗಲೀ ಪ್ರದರ್ಶಿಸುವ ಮಾಧ್ಯಮ ಅದಾಗಬೇಕೆಂದು ಆಶಿಸಲಾರ. ಯಾವ ರೀತಿಯಲ್ಲಿ, ಏನು ವರಿಸೆ ಪ್ರಯೋಗಿಸಿ, ಒಲ್ಲದ ಓದುಗನನ್ನು ತನ್ನ ಕಡೆಗೆ ಸೆಳೆಯಲು ಸಾಧ್ಯವಾದೀತು ಎಂಬುದೇ ಅವನ ನಿಜ ಕಾಳಜಿ. ಈಗ ಸುಮಾರು ನಾಲ್ಕೈದು ದಶಕಗಳಿಂದ ಈ ಕೆಲಸದಲ್ಲಿ (ಕನ್ನಡ ವಾಙ್ಮಯ ರಚನೆ) ಇಂಥ ಕಾಳಜಿಯಿಂದ ಕೆಲಸ ಮಾಡುತ್ತಿರುವ ನನ್ನ ಅನುಭವವನ್ನು ‘ಐನ್ಸ್‌ಟೈನ್ ಬಾಳಿದರಿಲ್ಲಿ’ (ಮೂರನೆಯ ಆವೃತ್ತಿ ೨೦೦೦, ಬೆಲೆ ರೂ ೫೫. ಕೆಲವೇ ಪ್ರತಿಗಳು ಉಳಿದಿವೆ. ವಿವರಗಳಿಗೆ ಜಾಲತಾಣದ ಮೇಲಿರುವ ಪುಸ್ತಕ ವಿಭಾಗ ತೆರೆದು ನೋಡಿ.) ಪುಸ್ತಕದ ‘ನನ್ನ ನುಡಿ’ಯಲ್ಲಿ ಸಂಗ್ರಹಿಸಿದ್ದೇನೆ. ಉದ್ಧೃತಾಂಶ:
“. . . ಕನ್ನಡದಲ್ಲಿ ಜನಪ್ರಿಯ ವಿಜ್ಞಾನದ ಮಟ್ಟ ಮತ್ತು ಧಾಟಿ. . . ಹೇಗಿರಬೇಕು? ಇದಕ್ಕೆ ಉತ್ತರ ಅರಸುವಾತ ಸಹಜವಾಗಿ ಕನ್ನಡದಲ್ಲಿ ಈ ವಾಙ್ಮಯದ ವಿಕಾಸವನ್ನು ಎಚ್ಚರಿಕೆಯಿಂದ ಗಮನಿಸಿ ತನ್ನ ಹಾದಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ.

“ಈ (೨೦ನೆಯ) ಶತಮಾನದ ಮೊದಲ ಎರಡು ಮೂರು ದಶಕಗಳಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪ ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್ ಹಾದಿ ಕಡಿದು, ಹಿಲಾಲು ಹಿಡಿದು ಮುನ್ನಡೆದಿದ್ದರು. ತರುವಾಯದ ದಿನಗಳಲ್ಲಿ ಜಿ. ಹನುಮಂತ ರಾವ್, ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ ಮತ್ತು ವಿಶೇಷವಾಗಿ ಆರ್.ಎಲ್. ನರಸಿಂಹಯ್ಯ ಇನ್ನಷ್ಟು ಮುಂದೆ ಸಾಗಿ ಹೊಸ ಹರವುಗಳನ್ನು ಗುರುತಿಸಿದ್ದರು. ಹೀಗೆ ೧೯೫೦ರ ದಶಕ ಮುಗಿಯುವ ವೇಳೆಗೆ ವಿಜ್ಞಾನ ವಾಙ್ಮಯಕ್ಕೆ ಖಚಿತವಾಗಿ ಒಂದು ವ್ಯಕ್ತಿತ್ವ ಪ್ರಾಪ್ತವಾಗಿತ್ತು. ನಮ್ಮ ಸಾರಸ್ವತ ಸಂಪತ್ತಿನಿಂದ ಪೋಷಿತವಾದ ಮತ್ತು ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾದ ಪರಿಪುಷ್ಟ ಕನ್ನಡದಲ್ಲಿ ಆಧುನಿಕ ವಿಜ್ಞಾನ ಪರಿಕಲ್ಪನೆಗಳ ನಿರೂಪಣೆ. ಇಂಥ ಸತ್ತ್ವಪೂರ್ಣ ಶೈಲಿಯ ಉತ್ಕೃಷ್ಟ ನಿದರ್ಶನವನ್ನು ಆರ್.ಎಲ್. ನರಸಿಂಹಯ್ಯನವರ ಬರವಣಿಗೆಗಳಲ್ಲಿ ಕಾಣುತ್ತೇವೆ. ಹೇಳಬೇಕಾದ ವಿಷಯದ (ಅಂದರೆ ವಿಜ್ಞಾನದ) ಮೇಲೆಯೂ ನಿರೂಪಣಾ ಮಾಧ್ಯಮದ (ಅಂದರೆ ಕನ್ನಡ) ಮೇಲೆಯೂ ಪೂರ್ಣ ಪ್ರಭುತ್ವದಿಂದ ಸಿದ್ಧಿಸಿದ ಭಾವ-ಭಾಷೆ ಮಧುರ ಬಾಂಧವ್ಯವಿದು, ರಸಪಾಕವಿದು. ಆರ್.ಎಲ್.ಎನ್ – ತರುವಾಯದ ದಿನಗಳಲ್ಲಿ ವಿಜ್ಞಾನ ವಾಙ್ಮಯ ಅನುಸರಿಸಿದ ಹಾದಿಯಿಂದ ನಾವು ಕಲಿಯಬಹುದಾದ ಪಾಠ ಬಹುತೇಕ ನಿಷೇಧಾತ್ಮಕವಾದದ್ದು: ಭಾವ-ಭಾಷೆ ಬಾಂಧವ್ಯದ ಎರಕ ಒಡೆದು ಹೋದರೆ ವಾಙ್ಮಯದ ಗತಿ ಏನಾದೀತೆಂಬುದಕ್ಕೆ ವಿಪುಲ ನಿದರ್ಶನಗಳನ್ನು ಅಲ್ಲಿ ಕಾಣಬಹುದು. ಖಚಿತವಲ್ಲದ ವಿಷಯವನ್ನು, ಅಡಕವಲ್ಲದ ಕನ್ನಡದಲ್ಲಿ ಗೀಚಿ, ಅಂಥ ಬರವಣಿಗೆಯನ್ನು ಸರಳ, ಸುಂದರ ನಿರೂಪಣೆ ಎಂದು ಭ್ರಮಿಸುವ ಈ ಮಾರ್ಗ ಸರ್ವಥಾ ಅನುಸರಣೀಯವಲ್ಲ, ಅನುಕರಣೀಯವಂತೂ ಅಲ್ಲವೇ ಅಲ್ಲ ಎಂಬುದು ಕಂಡಂತೆಯೇ ಇದೆ.”

ಭಾಷೆಯಲ್ಲಿ ಕ್ಲಿಷ್ಟತೆ, ಸರಳತೆ ಎಂಬವು ವಾಚಕನ ಭಾಷಾಜ್ಞಾನವನ್ನು ಅವಲಂಬಿಸಿವೆ: ಸಾಪೇಕ್ಷತಾ ಸಿದ್ಧಾಂತ ಕುರಿತ ಲೇಖನ ಒಬ್ಬ ಓದುಗನಿಗೆ ಕಡು ಕಷ್ಟ ಎನ್ನಿಸಬಹುದು. ಅದೇ ಓದುಗನಿಗೆ ಸಸ್ಯಗಳನ್ನು ಕುರಿತ ಒಂದು ಲೇಖನ ಅತಿ ಸರಳ ಎನ್ನಿಸಬಹುದು. ಈ ಕ್ಲಿಷ್ಟತೆ – ಸರಳತೆ ಕಾರಣವನ್ನು ಆಯಾ ವಿಷಯಗಳಲ್ಲಿ ಕಾಣಬೇಕೇ ಹೊರತು ಆಯಾ ಲೇಖನಗಳ ಭಾಷೆಯಲ್ಲಿ ಅಲ್ಲ.

ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ: ವಿಜ್ಞಾನದ ಆಧುನಿಕ ಪರಿಕಲ್ಪನೆಗಳಿಗೆ ಪ್ರವೇಶ ಪಡೆಯಲು ನಾವು ಇಂಗ್ಲಿಷಿಗೆ ಶರಣುಹೋಗುವುದು ಅನಿವಾರ್ಯವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವುದು ಅವಶ್ಯವಾಗುತ್ತದೆ. ಈ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ-ಪರಿಹಾರ-ವಿಧಾನಗಳನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗುತ್ತದೆ (ನೋಡಿ ಹಿಂದಿನ ಅಧ್ಯಾಯ). ಮೂಲ ಭಾಷೆಯಲ್ಲಿ ಅಡಕವಾಗಿರುವ ಪರಿಕಲ್ಪನೆಯನ್ನು ಲಕ್ಷ್ಯ ಭಾಷೆಯಲ್ಲಿ ಅಷ್ಟೇ ಆಕರ್ಷಕವಾಗಿ ನಿರೂಪಿಸುವ ಪುನಸ್ಸೃಷ್ಟಿ ಕ್ರಿಯೆ ಇದು. ಕನ್ನಡದ ಶೈಲಿಯಲ್ಲಿ ಇಂಗ್ಲಿಷಿನ ಮೂರಿ ಹೊಡೆಯದಂತೆ ಎಚ್ಚರಿಕೆ ವಹಿಸುವುದು ಜರೂರಿನ ಅಗತ್ಯ.

ಶೈಲಿ: ‘ತರಂಗ’ ಸಾಪ್ತಾಹಿಕದ ಮೊದಲ ಸಂಪಾದಕ ಸಂತೋಷಕುಮಾರ ಗುಲ್ವಾಡಿಯವರಿಂದ ಬಂದ ಕೋರಿಕೆ ಪ್ರಕಾರ ಅವರಿಗೆ ನಾನೊಂದು ಜನಪ್ರಿಯ ವಿಜ್ಞಾನ ಲೇಖನ ಬರೆದು ಕಳಿಸಿದೆ. ಸುದೀರ್ಘ ಕಾಲ ಅದು ಪ್ರಕಟವಾಗಲಿಲ್ಲ. “ಯಾವ ಮುಜುಗರವೂ ಇಲ್ಲದೇ ಅದನ್ನು ಹಿಂತಿರುಗಿಸಿ” ಎಂದು ಪದೇ ಪದೇ ಬರೆದೆ; ಪ್ರತಿಕ್ರಿಯೆ ಶೂನ್ಯ. ಮುಂದೊಂದು ದಿನ ನಾನು ಉಡುಪಿಗೆ ಹೋಗಿದ್ದಾಗ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದೆ, “ನನ್ನ ಲೇಖನದ ಅವಸ್ಥೆ ಏನು?”
“ಅದು ತುಸು ಕಠಿಣವಾಗಿದೆಯಲ್ಲ?”
“ನೀವು ಸಾವಕಾಶವಾಗಿ ಓದಿ ನೋಡಿದಿರಾ?”
“ಮೇಲಿಂದ ಮೇಲೆ ಓದಿದಾಗ ಹಾಗನ್ನಿಸಿತು.”
“ಅದರ ಬಗ್ಗೆ ಇನ್ನು ವಾದ ಬೇಡ, ಅದನ್ನು ನೇರ ವಾಪಾಸು ಮಾಡಿ.”
“ಅವಸರ ಮಾಡಬೇಡಿ. ನೀವೇಕೆ ಶಿವರಾಮ ಕಾರಂತರ ಹಾಗೆ ಸರಳವಾಗಿ ಬರೆಯುವುದಿಲ್ಲ?”
“ಕಲಗಚ್ಚು ಅತಿ ಸರಳ. ಕುಂಕುಮಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ. ನಿಮಗೆ ಕಲಗಚ್ಚು ಪ್ರಿಯವಾದರೆ ಧಾರಾಳವಾಗಿ ಅದನ್ನು ಕುಡಿಯಿರಿ.”
“ಕೋಪ ಮಾಡಬೇಡಿ. ನಿಮ್ಮ ಶೈಲಿಯಲ್ಲಿ ಸ್ವಲ್ಪ ಅವರಂತೆ. . .”
“ನೋಡಿ, ನಿಸರ್ಗ ನನ್ನನ್ನು ನಾನಾಗಿ ಮಾಡಿದೆ, ಅವರನ್ನು ಅವರಾಗಿ ಮಾಡಿದೆ. ನಾನು ನಾನೇ ಅವರು ಅವರೇ.”
ಮೋಝಾರ್ಟ್ (ಪಾಶ್ಚಾತ್ಯ ವಾಗ್ಗೇಯಕಾರ) ಬರೆದಿದ್ದಾನೆ: “But why my productions take from my hand that particular form and style that makes them Mozartish and different from the works of other composers, is probably owing to the same cause which renders my nose so large or so aquiline, or in short, makes it Mosart’s and different from those of other people. For, I really do not study or aim at any originality.
ಅನುವಾದ: “ಆದರೆ ನನ್ನ ಕೃತಿಗಳು ನನ್ನಿಂದ ಆ ವಿಶಿಷ್ಟ ರೂಪವನ್ನೂ ಶೈಲಿಯನ್ನೂ ಪಡೆದು ಮೋಝಾರ್ಟ್ ಛಾಪು ಪ್ರದರ್ಶಿಸುವುದೇಕೆ? ಇತರ ವಾಗ್ಗೇಯಕಾರರ ಕೃತಿಗಳಿಗಿಂತ ಇವು ವಿಭಿನ್ನವಾಗಿರುವುದೇಕೆ? ಇದರ ಕಾರಣವನ್ನು ಪ್ರಾಯಶಃ ನನ್ನ ಮೂಗು ಇಷ್ಟೊಂದು ದೊಡ್ಡದಾಗಿರುವುದರಲ್ಲಿ ಅಥವಾ ಗೃಧ್ರನಾಸಿಕವಾಗಿರುವುದರಲ್ಲಿ – ಅಂದರೆ ಸಂಕ್ಷೇಪವಾಗಿ, ಅದು ಇತರ ನಾಸಿಕಗಳಿಗಿಂತ ಬೇರೆಯದಾಗಿದ್ದು ಮೊಝಾರ್ಟನದಾಗಿರುವುದರಲ್ಲಿ – ಕಾಣಬೇಕಾಗುತ್ತದೆ. ಏಕೆಂದರೆ ನಿಜಕ್ಕೂ ನಾನು ಯಾವುದೇ ಸ್ವಂತತ್ವಕ್ಕಾಗಿ ಅಭ್ಯಾಸ ಮಾಡುವುದಿಲ್ಲ, ಅದು ನನ್ನ ಉದ್ದೇಶವೂ ಅಲ್ಲ.” ನಿಜ, style is the man – ವ್ಯಕ್ತಿಯ ಶೀಲವೇ ಆತನ ಶೈಲಿ.
“If God hade a different plan, He would have created a different man” – ಗಯಟೆ ಹೇಳಿದ ಮಾತು – ಭಗವಂತನಿಗೆ ಬೇರೆ ಒಂದು ಯುಕ್ತಿ ಇದ್ದಿದ್ದರೆ ಆತ ಬೇರೆ ಒಬ್ಬ ವ್ಯಕ್ತಿಯನ್ನು ಸೃಷ್ಟಿಸಿರುತ್ತಿದ್ದ.

ನನ್ನ ಕಾರ್ಯವಿಧಾನ: ಇಂಗ್ಲಿಷಿನಲ್ಲಿ ಒಂದು ಉತ್ಕೃಷ್ಟ ವಿಜ್ಞಾನ ಲೇಖನ ಓದಿದಾಗ ಅದರ ಪರಿಕಲ್ಪನಾತ್ಮಕ ಸ್ಪಷ್ಟತೆಯ ಜೊತೆಗೆ ಭಾಷಾ ಸೌಂದರ್ಯಕ್ಕೂ ಮಾರುಹೋಗುತ್ತೇನೆ. ಎರಡು ಉದಾಹರಣೆ ನೋಡಿ:
“It is all very well to equate combustion and respiration and to look at the human being as a bonfire, fanned by oxygen and producing carbon dioxide. Yet there is no hiding the very important differences that exist between a living being and a bonfire (Isaac Asimov in Life and Energy).
“ದಹನವನ್ನೂ ಉಸಿರಾಟವನ್ನೂ ಸಮೀಕರಿಸುವುದು ಮತ್ತು ಮನುಷ್ಯ ಎಂದರೆ ಆಕ್ಸಿಜನ್ನನ್ನು ಊದಿದಾಗ ಕಾರ್ಬನ್ ಡೈಆಕ್ಸೈಡನ್ನು ಉಗುಳುವ ಒಂದು ಹೋಮಾಗ್ನಿ ಎಂದು ಭಾವಿಸುವುದು ಎಲ್ಲ ಚೆನ್ನ. ಹೀಗಿದ್ದರೂ ಜೀವಂತ ವ್ಯಕ್ತಿ ಮತ್ತು ಮೃತ ಹೋಮಾಗ್ನಿ ನಡುವೆ ಎದ್ದು ತೋರುವ ಅತಿಮುಖ್ಯ ವ್ಯತ್ಯಾಸಗಳನ್ನು ಮರೆಮಾಡುವಂತಿಲ್ಲ.”
“It is ironic that one of the great spectacles of terrestrial nature, the light of aurora shimmering in the night sky, is a cue to the character of the earth’s hidden and enigmatic core. . . Indirect evidence indicates that it is an iron alloy, solid towards the center but otherwise liquid. It is the turbulent flow of the liquid that generates the earth’s magnetic field. (Scientific American September 1983)
“ಇರುಳ ಬಾನಿನಲ್ಲಿ ಮಿನುಗುವ ಮತ್ತು ಭೂಮಿಯಲ್ಲಿ ಕಾಣಬರುವ ಮಹಾದೃಶ್ಯಗಳ ಪೈಕಿ ಒಂದಾಗಿರುವ ಧ್ರುವಪ್ರಭೆ ಭೂಮ್ಯಂತರಾಳದಲ್ಲಿ ಹುದುಗಿರುವ ಸಮಸ್ಯಾತ್ಮಕ ತಿರುಳಿನ ಸ್ವಭಾವವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿರುವುದು ನಿಜಕ್ಕೂ ಚೋದ್ಯದ ಸಂಗತಿ. . . ಪರೋಕ್ಷ ಪುರಾವೆ ಪ್ರಕಾರ ಈ ತಿರುಳು ಕಬ್ಬಿಣದ ಮಿಶ್ರಲೋಹ: ಕೇಂದ್ರದೆಡೆಗೆ ಘನವಾಗಿದ್ದು ಒಟ್ಟಾರೆ ದ್ರವ ಪದಾರ್ಥ ಎಂಬುದನ್ನು ಸೂಚಿಸುತ್ತದೆ. ಈ ದ್ರವದ ಅಲ್ಲೋಲಕಲ್ಲೋಲ ಪ್ರವಾಹದ ಕಾರಣವಾಗಿ ಭೂಕಾಂತಕ್ಷೇತ್ರ ಮೈದಳೆದಿದೆ.”

ನನ್ನ ಲೇಖನಗಳಲ್ಲಿ ನಾನು ಪರಿಕಲ್ಪನಾತ್ಮಕ ಸ್ಪಷ್ಟತೆ ಮತ್ತು ಮಾಹಿತಿಗಳ ಪರಿಪೋಷಣೆ ಕಡೆ ಆದ್ಯ ಗಮನ ಹರಿಸುತ್ತಿರುವಾಗಲೇ ಭಾಷಾ ಸೌಂದರ್ಯದ ಕಡೆಗೂ ಅಷ್ಟೇ ಲಕ್ಷ್ಯ ಹರಿಸುತ್ತೇನೆ. ಉದಾಹರಣೆಗೆ –
Scientific American March 1981 Rubik’s Cube ಲೇಖನದ ಆರಂಭ ವಾಕ್ಯಗಳು ಹೀಗಿವೆ: Cubitis magikia, n, A severe mental disorder accompanied by itching of finger tips that can be relieved only by prolonged contact with a multicoloured cube originating in Hungary and Japan. Symptoms often last for months. Highly contagious. What this stuffy medical dictionary entry fails to mention is that contct with multicoloured cube not only cures the itchness but also causes it. Further more, it fails to point out that the affection can be highly pleasurable.

ಈ ಬರವಣಿಗೆಯಲ್ಲಿಯ ಶ್ರೀಮದ್ಗಾಂಭೀರ್ಯಯುತ ಹಾಸ್ಯ ರೂಬಿಕ್ ಘನಾಕೃತಿಯಂತೆಯೇ ತೀವ್ರ ಸಾಂಕ್ರಾಮಿಕವಾಗಿದೆ. ಇದರಿಂದ ಸ್ಫೂರ್ತಿ ಹೀರಿದ ನಾನು ‘ಅದ್ಭುತ ಸರ್ವವ್ಯಾಪಿ ಸವರ್ಣ ಘನಾಕೃತಿ ಸ್ಪರ್ಶವ್ಯಾಧಿ’ ಎಂಬ ಶೀರ್ಶಿಕೆಯ ಅಡಿಯಲ್ಲಿ ಒಂದು ಲೇಖನ ಬರೆದೆ. ಅದರ ಮೊದಲ ಎರಡು ಪರಿಚ್ಛೇದಗಳನ್ನು ಇಲ್ಲಿ ಉದ್ಧರಿಸಿದ್ದೇನೆ.

“ನವೀನ ಪರಿಷ್ಕೃತ ಆಯುರ್ವೇದ ವೈದ್ಯ ಅನಿಘಂಟಿನಲ್ಲಿ ಈ ನೂತನ ಸ್ಪರ್ಶವ್ಯಾಧಿಯ ಬಗ್ಗೆ ಇರಬಹುದಾದ ವ್ಯಾಖ್ಯಾನ: ‘ಸಂಸ್ಕೃತ’, ನಾಮಪದ, ಒಂದು ಬಗೆಯ ತೀವ್ರ ಮಾನಸಿಕ ಸಂಕ್ಷೋಭೆ. ಬೆರಳ ಕೊನೆಗಳಲ್ಲಿ ನವೆ ಉಂಟಾಗುವುದು ಇದರ ಲಕ್ಷಣ. ಚಿಹ್ನೆಗಳು ತಿಂಗಳುಗಟ್ಟಲೆ ಮರುಕಳಿಸುತ್ತಿರುವುವು. ಅತಿ ಸಾಂಕ್ರಾಮಿಕ. ಹಂಗರಿ ಮತ್ತು ಜಪಾನ್ ದೇಶಗಳಲ್ಲಿ ಉಗಮಿಸಿ ಪ್ರಪಂಚದಾದ್ಯಂತ ವ್ಯಾಪಿಸಿರುವ ಬಹುವರ್ಣ ಘನಾಕೃತಿಯ ಜೊತೆ ಸುದೀರ್ಘ ಕಾಲ ಸಂಸ್ಪರ್ಶ ಹೊಂದುವುದರಿಂದ ಶಮನ. ಈ ತಿಲಕಾಷ್ಠ ಮಹಿಷಬಂಧನ – ವ್ಯಾಖ್ಯಾನ ತಿಳಿಸದಿರುವ ಸಂಗತಿ ಒಂದುಂಟು: ಬಹುವರ್ಣ ಘನಾಕೃತಿಯೊಂದಿಗಿನ ಸಂಸ್ಪರ್ಶ ನವೆಗೆ ಚಿಕಿತ್ಸೆ ಮಾತ್ರವಲ್ಲ, ಕಾರಣವೂ ಹೌದು! ಅಲ್ಲದೆ ಈ ವ್ಯಾಧಿ ಅತ್ಯಂತ ಉಲ್ಲಾಸದಾಯಕವೂ ಆಗಬಹುದು.

“ಗಣಿತ ವಿದ್ಯಾರ್ಥಿಯಾದ ನಾನು ರೂಬಿಕ್ ಘನಾಕೃತಿಯ ಬಗ್ಗೆ ಮೂರು ವಿಶ್ವಾಸಾರ್ಹ ಲೇಖನ ಓದಿದ್ದೆ. ಆದರೆ ಆಸಕ್ತಿ ಕುದುರಿರಲಿಲ್ಲ. ಏಕೆಂದರೆ ಚಿತ್ರ ಮತ್ತು ನಿರೂಪಣೆ ಎಷ್ಟೇ ಆಕರ್ಷಕ ಮತ್ತು ಸ್ಪಷ್ಟ ಆಗಿದ್ದರೂ ಅವು ವಸ್ತುವಿನ ಜೊತೆ ಪತ್ಯಕ್ಷ ಒಡನಾಟ ಗಳಿಸುವ ಅನುಭವಕ್ಕೆ ಸರಿಸಾಟಿ ಎನಿಸವು. ಹೆಚ್ಚೆಂದರೆ ಸರಿದಾರಿ ತೋರಿಸುವ ಕೈಮರ ಆಗಬಲ್ಲವು, ಅಷ್ಟೆ. ಆದ್ದರಿಂದ ರೂಬಿಕ್ ಘನಾಕೃತಿಯಾದರೂ ಅಮೆರಿಕದವರ ಎಂದಿನ ಮಾರುಕಟ್ಟೆ ದೊಂಬರಲಾಗದ ಇನ್ನೂ ಒಂದು ವರಿಸೆ ಎಂಬ ಮಾಮೂಲಿ ‘ಭಾರತೀಯ ಶೂನ್ಯವಾದ’ ದೃಷ್ಟಿಯಿಂದ ಆ ಲೇಖನಗಳ ಹೂರಣ ಸವಿಯಲು ನಿರಾಕರಿಸಿದ್ದೆ.”

ಪದಗಳ ಬಳಕೆಯ ಬಗ್ಗೆ ನಾನು ವಿಶೇಷ ಲಕ್ಷ್ಯ ಹರಿಸುತ್ತೇನೆ. ಪ್ರತಿಯೊಂದು ಲೇಖನವೂ ಒಂದು ವಾಗ್ಗೇಯಕೃತಿಯಂತೆ ಪರಿಪೂರ್ಣ ಕಲಾಪ್ರಕಾರವಾಗಿರಬೇಕೆಂಬುದು ನನ್ನ ನಿಲವು. ಅದರಲ್ಲಿ ಅರ್ಥ – ಭಾಷೆ – ಲಯ ಅಖಂಡಪಾಕವಾಗಿ ಎರಕಗೊಂಡಿರಬೇಕು. ಇದನ್ನು ಸಾಧಿಸಲು ನಾನು ಪ್ರತಿಯೊಂದು ಲೇಖನವನ್ನೂ ಅನೇಕ ಬಾರಿ ಬರೆದು ತಿದ್ದಿ ರೂಪಿಸಿ ಪುನಾರೂಪಿಸುತ್ತೇನೆ – ಸಂಗೀತಗಾರ ಕೃತಿಯನ್ನು ಅಭ್ಯಾಸ ಮಾಡುವಂತೆ; ಕಿರಿದರೊಳ್ ಪಿರಿದರ್ಥ ಸಾಧಿಸಲು ಹೆಣಗುತ್ತೇನೆ. ಬರೆದುದನ್ನು ಗಟ್ಟಿಯಾಗಿ ಓದಿ ಗದ್ಯಲಯ ಶುದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತೇನೆ.

ವಾಙ್ಮಯ ರಚನೆಗೆ ಅಷ್ಟ ಸೂತ್ರಗಳು: ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯ ರಚಿಸಲು ಆಸಕ್ತರಾದವರು ಈ ಮುಂದಿನ ಅಷ್ಟ ಸೂತ್ರಗಳನ್ನು ನಿಷ್ಠೆಯಿಂದ ಪಾಲಿಸುವುದು ಜರೂರಿನ ಅಗತ್ಯ:
೧. ಆಕರಗ್ರಂಥಗಳನ್ನೂ ತಾಂತ್ರಿಕ ಲೇಖನಗಳನ್ನೂ ಇಂಗ್ಲಿಷಿನಲ್ಲಿ ಓದಿ ಪರಿಕಲ್ಪನಾತ್ಮಕ ಸ್ಪಷ್ಟತೆ ಗಳಿಸಿಕೊಳ್ಳಬೇಕು.
೨. ಉದ್ದಿಷ್ಟ ವಾಚಕರ ಬೌದ್ಧಿಕಮಟ್ಟ ಗಮನಿಸಿ ಲೇಖನದ ಆಲೇಖ್ಯವನ್ನು ತಯಾರಿಸಬೇಕು.
೩. ಕನ್ನಡದಲ್ಲಿ ಯೋಚಿಸಿ – ಸಾಧ್ಯವಾದರೆ ಚರ್ಚಿಸಿ ಮತ್ತು ಭಾಷಣ ನೀಡಿ – ಲೇಖನ ಬರೆಯಬೇಕು. ಸ್ವಂತ ಪ್ರಯೋಗ, ಗಣನೆ ಇತ್ಯಾದಿ ಮಾಡುವುದು ಅಪೇಕ್ಷಣೀಯ.
೪. ಪೂರ್ತಿ ಲೇಖನವನ್ನು ಗಟ್ಟಿಯಾಗಿ ಓದುತ್ತ ಐದಾರು ಸಲ ತಿದ್ದಿ ನಕಲು ಮಾಡಬೇಕು.
೫. ಭಾಷೆಯನ್ನು ಸ್ಪಷ್ಟ, ಶುದ್ಧ ಮತ್ತು ಆಕರ್ಷಕವಾಗಿಸಲು ಸರ್ವ ಪ್ರಯತ್ನ ಮಾಡಬೇಕು.
೬. ಸ್ವಂತ ಶೈಲಿ ರೂಪಿಸಿಕೊಳ್ಳಬೇಕು. ಯಾರದೇ ಇಂಗಾಲ ಪ್ರತಿ ಆಗಬಾರದು.
೭. ಲೇಖನದಲ್ಲಿ ಪದ, ವಾಕ್ಯ, ರೂಪಕ, ಉಲ್ಲೇಖ, ಚಿತ್ರ ಮುಂತಾದವುಗಳಿಗೆ ನಿರ್ದಿಷ್ಟ ಕ್ರಿಯಾಪಾತ್ರವಿದೆ. ಕ್ರಿಯಾಪಾತ್ರವಿಲ್ಲದ್ದು ನಿಸರ್ಗದಲ್ಲಿ – ಆದ್ದರಿಂದ ಜೀವನದಲ್ಲಿ – ನಶಿಸಿ ಹೋಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
೮. ಭಾಷಾಸೌಂದರ್ಯದ ಬಗ್ಗೆ ಯಾರಿಂದಲೇ ಯಾವುದೇ ಬಗೆಯ ಟೀಕೆ ಬಂದರೂ ಲೆಕ್ಕಿಸಬೇಕಾಗಿಲ್ಲ. ಪ್ರಸಿದ್ಧ ಗಣಿತವಿದ ಆನ್ರೀ ಪ್ವಾನ್ಕ್ವಾರೇ ಬರೆದಿರುವ ಈ ನುಡಿಗಳನ್ನು ಗಮನಿಸಿ:
The Scientist does note study nature because it is useful; he studies it because he delights in it, and he delights in it because it is beautiful. If nature were not beautiful, it would not be worth knowing and if nature were not worth knowing, life would note be worth living. Of course I do not here speak of that beauty that strikes the senses, the beauty of qualities and appearances; not that I undervalue such beauty, far from it, but it has nothing to do with science; I mean that profounder beauty which comes from the harmonious order of the parts, and which a pure intelligence can grasp.

“ನಿಸರ್ಗ ಪ್ರಯೋಜನಕಾರಿ ಎಂಬುದಕ್ಕಾಗಿ ವಿಜ್ಞಾನಿ ಅದನ್ನು ಅಧ್ಯಯನಗೈಯುವುದಿಲ್ಲ. ಅವನು ಅಧ್ಯಯನಗೈಯುವುದು ಅದರಲ್ಲಿ ಅವನಿಗೆ ಆನಂದ ಲಭಿಸುವುದರಿಂದ. ಅದರಲ್ಲಿ ಅವನಿಗೆ ಆನಂದ ಲಭಿಸುವುದು ಅದು ಸುಂದರವಾಗಿರುವುದರಿಂದ. ನಿಸರ್ಗ ಸುಂದರವಾಗಿರದಿದ್ದರೆ ಅದನ್ನು ತಿಳಿಯುವುದು ನಿಷ್ಪ್ರಯೋಜಕವಾಗಿರುತ್ತಿತ್ತು. ಇಂದ್ರಿಯಗಳಿಗೆ ಎದ್ದು ಕಾಣುವ ಸೌಂದರ್ಯವನ್ನು – ಅಂದರೆ ಗುಣಗಳ ಮತ್ತು ತೋರಿಕೆಗಳ (ಬಾಹ್ಯ) ಸೌಂದರ್ಯವನ್ನು – ನಾನಿಲ್ಲಿ ಪ್ರಸ್ತಾವಿಸುತ್ತಿಲ್ಲ ಎಂಬುದು ಸ್ಪಷ್ಟ. ಆ ಸೌಂದರ್ಯನ್ನು ಕಡೆಗಣಿಸುವೆನೆಂದಲ್ಲ, ಅದೆಂದೂ ಅನ್ನ ಉದ್ದೇಶ ಅಲ್ಲ. ಆದರೆ ಅದಕ್ಕೆ ವಿಜ್ಞಾನದ ಜೊತೆ ಏನೂ ವ್ಯವಹಾರವಿಲ್ಲ. ಬದಲು ನನ್ನ ಮನಸ್ಸಿನಲ್ಲಿರುವುದು ಭಾಗಗಳ ಸುಸಂಗತ ಮೇಳನದಿಂದ ಲಭಿಸುವ ಮತ್ತು ಶುದ್ಧ ಪ್ರತಿಭೆ ಗ್ರಹಿಸುವ ಆ ಗಭೀರ ಸೌಂದರ್ಯ.”

ಲೇಖಕರಿಗೆ ಈ ನಿರೂಪಣೆ ನೀಡುವ ಸಂದೇಶ ಸ್ಪಷ್ಟ: ಲೇಖನ ವ್ಯವಸಾಯ ಕೊಡುವ ಶುದ್ಧ ಬೌದ್ಧಿಕ ಆನಂದಕ್ಕಾಗಿ – ಭಾವನಾ ವಿಹಾರಿಗಳಾಗಿದ್ದು ಪದಗಳ ಮೂರ್ತ ಪ್ರಪಂಚಕ್ಕೆ ಅವತರಿಸುವಾಗ ಒದಗುವ ಶುದ್ಧ ಸಂತೃಪ್ತಿಗಾಗಿ – ಈ ಕ್ರಿಯೆಯಲ್ಲಿ ಉದ್ಯುಕ್ತರಾಗಬೇಕು, ಬೇರೆ ಯಾವುದೇ ಐಹಿಕ ಲಾಭ ಅಥವಾ ಪ್ರಯೋಜನಗಳ ದೃಷ್ಟಿಯಿಂದ ಅಲ್ಲ.

ಸಮಾರೋಪ: ಪ್ರಸಕ್ತ ಪ್ರಬಂಧದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯವನ್ನು ಅಭ್ಯಾಸದ ದೃಷ್ಟಿಯಿಂದ ವಸ್ತು (ವಿಷಯ ಅಥವಾ ಪರಿಕಲ್ಪನೆ), ಶೈಲಿ (ಭಾಷೆ) ಮತ್ತು ವಿನ್ಯಾಸ (ಆಕರ್ಷಕತೆ) ಎಂಬ ವಿಭಾಗಗಳಲ್ಲಿ ಪರಿಶೀಲಿಸಲಾಗಿದೆ. ಒಂದು ಪರಿಪೂರ್ಣ ಕೃತಿಯಲ್ಲಿ ಇವೆಲ್ಲವೂ ಯುಕ್ತ ಪ್ರಮಾಣದಲ್ಲಿ ಎರಕಗೊಂಡಿದ್ದು ಅದರ ಒಟ್ಟಂದವನ್ನು ವರ್ಧಿಸುತ್ತದೆ. ಲೇಖಕ ಈ ಸೂಕ್ಷ್ಮವನ್ನು ಗ್ರಹಿಸಿ ಕ್ರಿಯೋದ್ಯುಕ್ತನಾದಾಗ ಆತನಿಗೆ ತಾನು ಸಾಗಬೇಕಾದ ಪಥ ತಾನಾಗಿಯೇ ಹೊಳೆಯುತ್ತದೆ. ಇದೊಂದು ತೆರನಾದ ಸಂಶೋಧನೆ; ಸ್ವಂತ ವ್ಯಕ್ತಿತ್ವದ ವಿಸ್ತರಣ ಸಾಧ್ಯತೆಗಳನ್ನು ಕಂಡು ಕೊಳ್ಳುವ ಕೆಲಸ. ಎಂದೇ ಅತ್ಯಂತ ಉಲ್ಲಾಸದಾಯಕ ಕಾರ್ಯ.

(ಮುಂದುವರಿಯಲಿದೆ)