ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೈದು
ಅಧ್ಯಾಯ ೭೬ (ಮೂಲದಲ್ಲಿ ೪೮)

ನಡೆದು ಬಂದ ಹಾದಿಯನ್ನು ವರ್ತಮಾನದ (೨೦೦೬) ಅನುಕೂಲ ಮಂಚಿಕೆಯಿಂದ ಸಿಂಹಾವಲೋಕಿಸುವಾಗ ವ್ಯಕ್ತಿಯ ಬಾಳಿನ ತಳದಲ್ಲಿ ಹೇಗೆ ಕಾಲ ಮತ್ತು ಪರಿಸರ ನಿರಂತರ ಭಾಗಿಗಳಾಗಿರುವುವೆಂಬುದನ್ನು ಕಂಡು ಅಚ್ಚರಿಪಡುತ್ತೇನೆ. ಆತನ ತಂದೆ ತಾಯಿ, ಜನನಸ್ಥಳ ಅಥವಾ ಕಾಲಗಳ ಆಯ್ಕೆ ಕುರಿತಂತೆ ಆತನಿಗೇನೂ ಸ್ವಾತಂತ್ರ್ಯವಿಲ್ಲ. ಅದು ನಿಸರ್ಗದ ಅಭೇದ್ಯ ರಹಸ್ಯಗಳ ಪೈಕಿ ಒಂದು. ಹುಟ್ಟಿದ ಬಳಿಕ ಅವನ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಭಾವಗಳು ಐದು: ಗೃಹಪರಿಸರ, ಶಿಕ್ಷಣ, ಸ್ಥಳೀಯ ಸಂಸ್ಕೃತಿ, ಅಲ್ಲಿಯ ಪ್ರಾಕೃತಿಕ ಸನ್ನಿವೇಶಗಳು ಮತ್ತು ಸಮಕಾಲೀನತೆ. ನನ್ನ ಬಾಳಪಯಣದಲ್ಲಿ ಇವುಗಳ ಕೊಡುಗೆಗಳೇನೆಂಬುದು ಓದುಗರಿಗೆ ಈಗಾಗಲೇ ವೇದ್ಯವಾಗಿರಬಹುದು. ವ್ಯಕ್ತಿತ್ವರೂಪಣೆಯಲ್ಲಿ ಇವು ಎಂಥ ಸಂಕೀರ್ಣ ಪಾತ್ರ ವಹಿಸಿದೆ ಮತ್ತು ವಹಿಸುತ್ತಿವೆ ಎಂಬುದನ್ನು ವಿಶ್ಲೇಷಿಸುವಾಗ ಆಶ್ಚರ್ಯವಾಗುತ್ತದೆ. ಇದು ಪಲಾಯನವಾದವಲ್ಲ ಅಥವಾ ಉತ್ತರ ಕುಮಾರ ಮನೋಭಾವವೂ ಅಲ್ಲ. ಏಕೆಂದರೆ ಮೊದಲಿನದು ವರ್ತಮಾನವಿಮುಖಿ, ಎರಡನೆಯದಾದರೋ ಅದರ ನೆಲೆ ಗಾಳಿಗೋಪುರ. ನನ್ನದು ಇಂಥ ಬದುಕಲ್ಲ. ಭೂತದಿಂದ ಸತ್ತ್ವ ಹೀರಿ ವರ್ತಮಾನದಲ್ಲಿ ಪೂರ್ಣತನ್ಮಯನಾಗಿ ಬಾಳಿ ಭವಿಷ್ಯದತ್ತ ದೃಷ್ಟಿ ಹಾಯಿಸುವ ಸಂತೃಪ್ತ ಜೀವನ.

ವಾಸ್ತವವಾಗಿ ಮೇಲಿನ ಐದು ಪ್ರಭಾವಗಳು ನನ್ನ ಬಾಳಿಗೆ ಅನುಕ್ರಮವಾಗಿ ಊಡಿರುವ ಸತ್ತ್ವಗಳಿವು: ಉದಾರ ಜೀವನದೃಷ್ಟಿ, ಜ್ಞಾನದಾಹ, ವಸುಧೈವ ಕುಟುಂಬಕಂ ಮನೋಧರ್ಮ, ಸವಾಲನ್ನು ಎದುರಿಸುವ ಛಲ ಮತ್ತು ವರ್ತಮಾನದಲ್ಲಿ ಪರಿಪೂರ್ಣ ಮಗ್ನತೆಯ ಜೊತೆಗೆ ಭವಿಷ್ಯರೂಪಣೆಯ ಚಿಂತನೆ ಮತ್ತು ಅನುಷ್ಠಾನ. ಹಾಗಾದರೆ ಆಯಾ ಗಳಿಗೆ ನನ್ನ ಪಾತ್ರವೇನು? ದೃಢ ನಿರ್ಧಾರ ತಳೆದು ಅದನ್ನು ಅನುಷ್ಠಾನಗೊಳಿಸುವುದರಲ್ಲಿ ಈ ನನ್ನತನವನ್ನು ಗುರುತಿಸಬಹುದು. “ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ, ಭಾವಿಸಾ ಸೂತ್ರಗಳ” (ಡಿವಿಜಿ) ಮತ್ತು “ನೆಯ್ದಾಳುತಿದೆ ಜಗವನೊಂದತಿ ವಿರಾಣ್‌ಮನಂ ಸೂಕ್ಷ್ಮಾತಿಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ ಜೀವಿಗಳ್ಗಿಚ್ಚೆಯಾ ಸ್ವಾತಂತ್ರ್ಯ ಭಾವಮಂ ನೀಡಿ” (ಕುವೆಂಪು) ಎಂಬ ಚಿಂತನೆಗಳನ್ನು ಗಮನಿಸಬೇಕು. ಭಗವದ್ಗೀತೆಯ “ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್” ಉಕ್ತಿಯ ಧ್ವನ್ಯರ್ಥವಾದರೂ ಇದೇ. “ಇರಬೇಕು, ಇರಬೇಕು, ಇರದೆ ಇರಬೇಕು” ಎಂದು ಹಾಡಿದ್ದಾರೆ ಪುರಂದರದಾಸರು.

ಪ್ರಚಲಿತ ಸನ್ನಿವೇಶಗಳ ಕಾರಣವಾಗಿ ವಿಶ್ವಕೋಶದಲ್ಲಿಯ ನನ್ನ ಕೆಲಸ ಏಕಕಾಲದದಲ್ಲಿ ನಾಲ್ಕು ಕವಲುಗಳಲ್ಲಿ ಸಾಗುತ್ತಿತ್ತು (೧೯೮೬ರ ತನಕ): ಆಹ್ವಾನಿತ ಲೇಖನಗಳ ಸಂಪಾದನೆ ಮತ್ತು ಶಿಷ್ಟೀಕರಣ, ನೂತನ ವಿಷಯಗಳ ಮತ್ತು ನವ ಲೇಖಕರ ಪತ್ತೆ, ಮುದ್ರಣದ ಉಸ್ತುವಾರಿ ಮತ್ತು ಸ್ವಂತ ಜ್ಞಾನಕ್ಷಿತಿಜದ ವಿಸ್ತರಣೆ. ಇಂಥ ಉಲ್ಲಾಸದಾಯಕ ಜ್ಞಾನಪರಿವ್ರಜನ ಕಾರ್ಯದಲ್ಲಿ ಗಾಢ ಮಗ್ನನಾಗಿದ್ದಾಗ ಕನ್ನಡದ ಅನೇಕ ಹೊಸ ಕೆಲಸಗಳು ನನ್ನನ್ನು ಅರಸಿ ಬರುತ್ತಿದ್ದುವು. ಇವು ನೇರ ವಿಶ್ವಕೋಶಕ್ಕೆ ಸಂಬಂಧಿಸಿದವಲ್ಲ. ಆ ಪೈಕಿ ಕೆಲವು ಮುಖ್ಯವಾದವನ್ನು ಇಲ್ಲಿ ನಿರೂಪಿಸುತ್ತೇನೆ.

ಒಂದನೆಯದು, ಬೆಂಗಳೂರಿನ ಐಬಿಎಚ್ ಪ್ರಕಾಶನ ೧೯೭೩ರ ಸುಮಾರಿಗೆ ಅನಿರೀಕ್ಷಿತವಾಗಿ ನನಗೊಪ್ಪಿಸಿದ ಒಂದು ಅನುವಾದ ಕಾರ್ಯ. ಮೆಗ್ರಾಹಿಲ್ ಸಂಸ್ಥೆ ಅದೇ ಹಿಂದೆ ಇಂಗ್ಲಿಷಿನಲ್ಲಿ ಮಕ್ಕಳಿಗಾಗಿ ಪ್ರಕಟಿಸಿದ್ದ Basi Science series ಮಾಲೆಯ ೧೬ ಕ್ರಿರು ಹೊತ್ತಗೆಗಳ ಪೈಕಿ ಒಂದರ ಅನುವಾದ. ವರ್ಣಮಯ ಚಿತ್ರಗಳು, ಆಕರ್ಷಕ ನಿರೂಪಣೆ ಮತ್ತು ಸಿಂಗಪುರದಲ್ಲಿ ಮಾಡಿದ ಸುಂದರ ಮುದ್ರಣ – ಇವೆಲ್ಲ ಬೆಸುಗೆಗೊಂಡಿದ್ದ ಈ ಮಾಲೆ ಒಂದು ಅಪೂರ್ವ ಶಿಲ್ಪದಂತಿತ್ತು. ನನಗೆ ವಹಿಸಿದ್ದ ಕಾರ್ಯವನ್ನು ಶೀಘ್ರವಾಗಿ ಪೂರೈಸಿ ಹಸ್ತಪ್ರತಿಯನ್ನು ಅವರಿಗೆ ರವಾನಿಸುತ್ತ ಒಂದು ಸೂಚನೆ ಸೆರಿಸಿದೆ, “ಈ ಹದಿನಾರೂ ಅನುವಾದಗಳಲ್ಲಿ ಬಳಸಿರುವ ಪಾರಿಭಾಷಿಕ ಪದಗಳಲ್ಲು ಏಕರೂಪತೆ ತರುವುದು ಅಗತ್ಯ. ಇದಕ್ಕೆ ನೀವು ಬೆಂಗಳೂರಿನಲ್ಲಿರುವ ಯಾರಾದರೂ ತಜ್ಞರ ನೆರವು ಪಡೆಯುವುದು ಅಪೇಕ್ಷಣೀಯ. ಉದಾಹರಣೆಗೆ heat, temperature, force, energy ಮುಂತಾದ ಪಾರಿಭಾಷಿಕ ಪದಗಳು ಕನ್ನಡದಲ್ಲಿ ಉಷ್ಣ, ಉಷ್ಣತೆ, ಬಲ, ಶಕ್ತಿ ಎಂದೇ ಇರತಕ್ಕದ್ದು, ಇದು ವಿಶ್ವಕೋಶದಲ್ಲಿ ನಾವು ಕಡ್ಡಾಯವಾಗಿ ಅನುಸರಿಸುವ ನೀತಿ.”

ಮರುವಾರ ಐಬಿಎಚ್‌ನ ಪಿ.ಎನ್. ಕಾಮತ್ ಮತ್ತು ಜಿ.ಕೆ. ಅನಂತರಾಮ್ ಮೈಸೂರಿಗೆ ಬಂದು ಆ ತನಕ ಅವರು ಮಾಡಿಸಿದ್ದ ೧೦ ಅನುವಾದಗಳನ್ನೂ ನನಗೆ ಪರಿಷ್ಕರಣೆಯ ಸಲುವಾಗಿ ಕೊಟ್ಟರು. ಉಳಿದಿದ್ದ ಆರು ಹೊತ್ತಗೆಗಳ ವಿಲೆವಾರಿಯನ್ನು ಪೂರ್ಣವಾಗಿ ನನಗೆ ಒಪ್ಪಿಸಿದರು ಕೂಡ. ಆ ಪೈಕಿ ಎರಡು ಅನುವಾದಗಳನ್ನು ಸ್ವತಃ ಶಿವರಾಮ ಕಾರಂತರೇ ಸ್ವಹಸ್ತ ಮಾಡಿದ್ದರು. ಉಳಿದೆಲ್ಲ ಶಿಕ್ಷಣ ಇಲಾಖೆಯ ಅನಾಮಧೇಯರು ಮಾಡಿದ್ದ ಭಾಷಾಂತರಗಳು. ಅನುವಾದ ಕ್ರಿಯೆಗೂ ಪರಿಷ್ಕರಣ ಕಾರ್ಯಕ್ಕೂ ಪ್ರಕಾಶಕರು ಧಾರಾಳವಾಗಿ ಸಂಭಾವನೆ ಪಾವತಿಸುತ್ತಿದ್ದರು.

ಪರಿಷ್ಕರಣಾ ಕಾರ್ಯದ ವೇಳೆ ನಾನು ಕಂಡದ್ದೇನು? ಬೇಕಾಬಿಟ್ಟಿ ಗೀಚಿದ ಕನ್ನಡ ಲಿಪಿಯಲ್ಲಿದ್ದ ಕಡತಗಳು! ಕಾರಂತರೂ ಇದಕ್ಕೆ ಅಪವಾದವಾಗಿರಲಿಲ್ಲ. ಯಾರಿಗೂ ಮೂಲ ಪರಿಕಲ್ಪನೆಯೇ ಅರ್ಥವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಂದಮೇಲೆ ನನ್ನ ಹೊಣೆ ಏನು? ಕನ್ನಡದಲ್ಲಿ ಇಂಥ ಸುಂದರ ಮಾಲೆ ಬರಲೇಬೇಕೆಂದು ನಿರ್ಧರಿಸಿ ಇಡೀ ಕೆಲಸವನ್ನು ನಾನೆ ಮುಗಿಸಿದೆ ಮತ್ತು ಆಯಾ ಅನುವಾದಕರ ಹೆಸರುಗಳಲ್ಲಿ ಅವನ್ನು ಪ್ರಕಟಿಸಲು ಶಿಫಾರಸು ಮಾಡಿದೆ. ಮುಂದೆ ಯಥಾ ಕಾಲದಲ್ಲಿ ಇಡೀ ಮಾಲೆ ಬೆಳಕು ಕಂಡಿತು. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅದರ ವಿಮರ್ಶೆಯೂ ಪ್ರಕಟವಾಯಿತು. ಅದರಲ್ಲಿ ಎದ್ದು ಕಂಡ ಒಂದು ಅಂಶ: “ಕಾರಂತರ ಅನುವಾದ ಸರಳ ಸುಂದರವಾಗಿದೆ, ಹೀಗಲ್ಲದೇ ಜಿ.ಟಿ. ನಾರಾಯಣ ರಾಯರದು ವೃಥಾ ಕ್ಲಿಷ್ಟವಾಗಿದೆ.” ವಿಮರ್ಶಕರು ಅನುವಾದಕರ ಹೆಸರಿಗೆ ಮಾರುಹೋಗಿದ್ದರೆಂಬುದು ಸ್ಪಷ್ಟ! ಏಕೆಂದರೆ ಉಭಯ ಕೃತಿಗಳೂ ತಳದಲ್ಲಿ ನನ್ನ ಅನುವಾದಗಳೇ!

ಎರಡನೆಯದು, ಅದೇ ಪ್ರಕಾಶನದ ‘ವಿಜ್ಞಾನಪರಿಚಯ’ ಮಾಲಿಕೆಯ ಪ್ರಧಾನ ಸಂಪಾದಕತ್ವ, ಇಂಗ್ಲಿಷಿನಲ್ಲಿ Understanding Science ಮಾಲಿಕೆ ಆಧುನಿಕ ವಿಜ್ಞಾನದ ಇತಿಹಾಸವನ್ನು ಮಕ್ಕಳಿಗೆ ಸರಳವಾಗಿ ಚಿತ್ರಸಹಿತ ವಿವರಿಸುವ ಒಂದು ಸಾರ್ಥಕ ಸಾಹಸ. ಇಂಗ್ಲೆಂಡಿನಲ್ಲಿಯ ವಿಖ್ಯಾತ ವಿಜ್ಞಾನಿಗಳ ಒಂದು ತಂಡ ಈ ೧೪೪ ಪುಟ್ಟ ಪುಟ್ಟ ಹೊತ್ತಗೆಗಳನ್ನು ಯೋಜಿಸಿ ಆಕರ್ಷಕವಾಗಿ ಪ್ರಕಟಿಸಿತ್ತು. ಈ ಮಾಲಿಕೆಯ ಕನ್ನಡ ಅವತರಣಿಕೆಯನ್ನು ಪ್ರಕಟಿಸುವುದು ಐಬಿಎಚ್‌ನವರ ಉದ್ದೇಶ. ನಿಜಕ್ಕೂ ಇದೊಂದು ಸವಾಲು. ಜೊತೆಗೆ ಈ ಕೆಲಸಕ್ಕೆ ಅವರು ಗೊತ್ತು ಮಾಡಿದ್ದ ಸಂಭಾವನೆ ತುಂಬ ಉದಾರವೂ ಆಗಿತ್ತು.

ಹೀಗೆ ಅಯಾಚಿತವಾಗಿಯೂ ಅನಿರೀಕ್ಷಿತವಾಗಿಯೂ ಈ ಸುವರ್ಣಾವಕಾಶ ನನಗೆ ಒದಗಿಬಂತು. ಇಂಥ ಎಲ್ಲ ಸಂದರ್ಭಗಳಲ್ಲಿಯೂ ನನ್ನ ಚಿಂತನೆ ಹರಿಯುವುದು ಸಮಾನ ಮನೋಧರ್ಮಿಗಳ ತಂಡ ಕಟ್ಟಿ ಕೆಲಸ ನಿರ್ವಹಿಸುವುದೇ ಹೊರತು ನಾನೊಬ್ಬನೇ ಮಾಡುವುದು ಅಲ್ಲ, ಎಂದೂ ಅಲ್ಲ, ನನ್ನ ಕಾರ್ಯನೀತಿ:

ಕಾರ್ಯಮಂಥನದಲ್ಲಿ ಗರಳಬರೆ ಕೊರಳಿನಲಿ
ಧೈರ್ಯದಿಂ ಧರಿಸುವಾ ಶಿವನಾಗು, ಸುಧೆಯೊಸರೆ
ಸ್ಥೈರ್ಯದಿಂ ಹಂಚು ಮೋಹಿನಿಯಂತೆ ಮನುಕುಲಕೆ
ಆರ್ಯತ್ವಮಿದು ಕಣಾ ಬದುಕಿನಲಿ ಅತ್ರಿಸೂನು

ಈ ಕೆಲಸವನ್ನು ಸಮರ್ಥವಾಗಿಯೂ ನಿಶ್ಚಿತ ವೇಳಾಪಟ್ಟಿಗೆ ಅನುಗುಣವಾಗಿಯೂ ಪೂರೈಸಲು ನಾಲ್ವರು ಹಿರಿಯ ಸಮಕಾಲೀನ ಕನ್ನಡ ವಿಜ್ಞಾನ ಲೇಖಕರ ಸಮಿತಿಯನ್ನು ರಚಿಸಿಕೊಂಡೆ. ಪ್ರತಿಯೊಬ್ಬರೂ ಅವರವರಿಗೆ ನಿಗದಿ ಮಾಡಿದ ಭಾಗವನ್ನು ಅನುವಾದಿಸಿ ನನಗೆ ಕೊಡಬೇಕು. ನಾನು ಎಲ್ಲವನ್ನೂ ಕ್ರೋಢೀಕರಿಸಿ, ಪರಿಷ್ಕರಿಸಿ ಮುದ್ರಣಕ್ಕೆ ಅಣಿಮಾಡಿ ವಾಸ್ತವ ಮುದ್ರಣ ಕಾರ್ಯದ ಉಸ್ತುವಾರಿಯನ್ನೂ ನೋಡಿಕೊಳ್ಳಬೇಕು. ಪ್ರಕಾಶಕರಿಂದ ನಾವು ಐವರಿಗೂ ಸಮವಾಗಿ ಸಂಭಾವನೆ ದೊರೆಯಬೇಕು – ಇಷ್ಟು ಏರ್ಪಾಡು ಮಾಡಿ ಮುಂದುವರಿದೆ.

ಅನುವಾದಿತ ಹಸ್ತಪ್ರತಿಗಳು ಕೈ ಸೇರಿದಾಗ ಈ ಹೊಣೆಯ ಒಂದು ಹೊಸ ಆಯಾಮ ಗೋಚರಿಸಿತು: ಇಬ್ಬರು ‘ತಜ್ಞ’ ಹಿರಿಯ ಲೇಖಕರ ಅನುವಾದಗಳು ಅಬದ್ಧವಾಗಿದ್ದುವು! ಒಂದೋ ಮೂಲ ಸರಳ ಇಂಗ್ಲಿಷ್ ಇವರಿಗೆ ಅರ್ಥವಾಗಿರಲಿಲ್ಲ, ಇಲ್ಲವೇ, ಕನ್ನಡ ವಾಕ್ಯಗಳ ರಚನೆ ಪೂರ್ತಿ ಪರಕೀಯವಾಗಿದ್ದುವು ಅಥವಾ ಉಡಾಫೆಯಿಂದ ಬೇಕಾಬಿಟ್ಟಿ ಗೀಚಿದ್ದರು. ಸಮಸ್ತ ವಂಚನೆಗಳ ಪೈಕಿ ಬೌದ್ಧಿಕ ವಂಚನೆ ಅತಿ ಹೇಯವಾದದ್ದು ಮತ್ತು ನಿಕೃಷ್ಟವಾದದ್ದು. “ತೋರಮಾಣಿಕವೆಂದು ಪಿಡಿದೊಡೆ ಭೂರಿ ಕೆಂಡವಿದಾಯಿತೆಂದು” ಪರಿತಪಿಸುತ್ತ ನಾನೇ ಅವನ್ನು ಪುನಾರಚಿಸಿ ಆಯಾ ಅನುವಾದಕರಿಗೆ ಒಪ್ಪಿಸಿದೆ. ಒಬ್ಬರು “ಈ ಕೆಲಸ ನನ್ನಿಂದ ಅಸಾಧ್ಯ” ಎಂದು ಪ್ರಾಮಾಣಿಕವಾಗಿ ನುಡಿದು ನಮ್ಮ ತಂಡ ಬಿಟ್ಟರು. ಇನ್ನೊಬ್ಬರು “ನೋಡಿ, ನನಗೆ ಪುರಸೊತ್ತೇ ಇರಲಿಲ್ಲ, ನನ್ನ ಮಗಳ ಹತ್ತಿರ ಅನುವಾದ ಮಾಡಿಸಿ ನಾನದನ್ನು ಸೂಕ್ಷ್ಮವಾಗಿ ತಪಾಸಿಸಿ ನೇರ್ಪುಗೊಳಿಸಿದ್ದೇನೆ. ಕನ್ನಡಕ್ಕೆ ಇಷ್ಟು ಸಾಕು” ಎಂದು ದಾರ್ಷ್ಟ್ಯದ ನುಡಿ ಆಡಿದರು. “ಸ್ವಾಮೀ! ಪ್ರಕಾಶಕರು ಸಂಭಾವನೆ ಕೊಡುವುದು ನಿಮ್ಮ ಅನುಭವಕ್ಕೆ ಮತ್ತು ಅರಿವಿಗೆ ಹೊರತು ನಿಮ್ಮ ಮಗಳದಕ್ಕಲ್ಲ” ಎಂದು ಖಾರವಾಗಿ ಉತ್ತರಿಸಿದೆ. ನಿಗದಿಯಾದ ಸಂಭಾವನೆಯನ್ನು ಇಬ್ಬರಿಗೂ ಪಾವತಿಸಿ ಅವರ ಸಾಹಚರ್ಯದಿಂದ ಮುಕ್ತನಾದೆ.

ಯಥಾ ಕಾಲದಲ್ಲಿ ‘ವಿಜ್ಞಾನಪರಿಚಯ’ ಮಾಲಿಕೆಯ ಮೊದಲ ೫ ಸಂಚಿಕೆಗಳು ಪ್ರಕಟವಾದುವು, ಇನ್ನೂ ೭ ಮುದ್ರಣದ ವಿವಿಧ ಹಂತಗಳಲ್ಲಿದ್ದುವು. ಐಬಿಎಚ್ ಪ್ರಕಾಶನ ಈ ಐದನ್ನು ಸರ್ಕಾರಕ್ಕೆ ಮಾದರಿ ಸಂಚಿಕೆಗಳಾಗಿ ಒಪ್ಪಿಸಿತು. ಮತ್ತು ಎಲ್ಲ ೧೪೪ ಸಂಚಿಕೆಗಳನ್ನೂ ಅವು ಪ್ರಕಟವಾದಂತೆ ಸರಕಾರ ಸಗಟು ಖರೀದಿಸಬೇಕೆಂದು ಪ್ರಾರ್ಥಿಸಿತು ಕೂಡ. ಸರಿ, ಇದನ್ನು ಪರಿಶೀಲಿಸಲು ಮಾಮೂಲಿನಂತೆ ಸರ್ಕಾರ ಒಂದು ಸಮಿತಿಯನ್ನು ರಚಿಸಿತು. ಇದರ ತೀರ್ಮಾನ ಆಘಾತಕಾರಿಯಾಗಿತ್ತು; ಇಂಥ ಅನುವಾದಿತ ಕೃತಿಗಳ ಬದಲು ಕನ್ನಡದಲ್ಲೇ ಸ್ವತಂತ್ರವಾಗಿ ವಿಜ್ಞಾನ ಪುಸ್ತಕಗಳನ್ನು ತಜ್ಞರಿಂದ ಬರೆಸಿ ಪ್ರಕಟಿಸುವುದು ಉತ್ತಮವೆಂದು ಸಮಿತಿ ಅಭಿಪ್ರಾಯಪಟ್ಟದ್ದರಿಂದ ‘ವಿಜ್ಞಾನಪರಿಚಯ’ ಯೋಜನೆ ಅಲ್ಲಿಗೇ ತಣ್ಣಗಾಯಿತು. ಇದರ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ನನ್ನ ವಿರುದ್ಧ ಹಲವು ಪಟ್ಟಭದ್ರರ ಮಾತ್ಸರ್ಯ ಪ್ರಧಾನ ಪಾತ್ರ ವಹಿಸಿತ್ತೆಂದು ಮುಂದೊಂದು ದಿನ ನನ್ನ ಅರಿವಿಗೆ ಬಂದಾಗ ನನ್ನ ಆಸರೆ ಪುರಂದರದಾಸರು:

ನಿಂದಕರಿರಬೇಕಿರಬೇಕು |
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ ||
ಅಂದಂದು ಮಾಡಿದ ಪಾಪವೆಂಬ ಮಲ
ತಿಂದುಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿದ ಪುಣ್ಯವನೊಯ್ಯುವರಯ್ಯ ||
ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ ||
ದುರುಳ ಜನಂಗಳು ಚಿರಕಾಲವಿರುವಂತೆ
ಕರವ ಮುಗಿದು ವರವ ಬೇಡುವೆನು
ಪರಿಪರಿ ತಮಸಿಗೆ ಗುರಿಯಹರಲ್ಲದೆ
ಪರಮದಯಾನಿಧೆ ಪುರಂದರವಿಠಲ ||

ಮೂರನೆಯದು, ಮತ್ತೆ ಐಬಿಎಚ್ ಪ್ರಕಾಶನದ ಕಾಮತ್ ಮತ್ತು ಅನಂತರಾಮ್ ಛಲಬಿಡದ ವಿಕ್ರಮನಂತೆ ನನ್ನ ಬಳಿಗೇ ಬಂದು, “ನಾವೇ ಸ್ವತಂತ್ರವಾಗಿ ಕನ್ನಡದಲ್ಲಿ ಒಂದು ವಿಜ್ಞಾನಮಾಲಿಕೆಯನ್ನು ಪ್ರಕಟಿಸೋಣ. ಆಗಾದರೂ ಸರ್ಕಾರ ನಮ್ಮ ಪ್ರಯತ್ನಕ್ಕೆ ಮನ್ನಣೆ ಕೊಟ್ಟು ಸಾಕಷ್ಟು ಹಿರಿ ಸಂಖ್ಯೆಯಲ್ಲಿ ಪ್ರತಿಗಳನ್ನು ಖರೀದಿಸಬಹುದು. ನೀವೇ ಈ ಯೋಜನೆಯ ರೂವಾರಿ ಮತ್ತು ನಿರ್ವಾಹಕರಾಗಬೇಕು.” ಕನ್ನಡದಲ್ಲಿ ವಿಜ್ಞಾನ ವಾಙ್ಮಯ ನಿರ್ಮಾಣ! ಪ್ರಕಾಶನದ ಹೊಣೆ ನನಗಿಲ್ಲ, ಬದಲು, ಬೌದ್ಧಿಕ ಧುರೀಣತ್ವ ನನ್ನದು. ಬೇರೇನು ಬೇಕು ನನಗೆ? ಸರಿ, ನನ್ನ ಪ್ರಧಾನ ಸಂಪಾದಕತ್ವದಲ್ಲಿ ಜೆ. ಆರ್. ಲಕ್ಷ್ಮಣರಾವ್ (ರಸಾಯನ ವಿಜ್ಞಾನ), ಕೆ.ಬಿ. ಸದಾನಂದ (ಸಸ್ಯ ವಿಜ್ಞಾನ), ಅಡ್ಯನಡ್ಕ ಕೃಷ್ಣ ಭಟ್ಟ (ಭೌತವಿಜ್ಞಾನ) ಮತ್ತು ಕೆ.ಎಸ್. ನಿಸಾರ್ ಅಹಮದ್ (ಭೂವಿಜ್ಞಾನ) ಇಷ್ಟು ಮಂದಿ ವಿಷಯತಜ್ಞ-ಕನ್ನಡ-ವಿಜ್ಞಾನ ಲೇಖಕರ ಮೂಲ ಸಮಿತಿ ರಚಿಸಿ ಇವರೊಡನೆ ಸಮಾಲೋಚಿಸಿ ಈ ಕೆಲಸ ತೊಡಗಿದೆ. ಒಬ್ಬೊಬ್ಬರಿಗೆ ಅವರವರು ಇಷ್ಟಪಟ್ಟು ಆಯ್ದ ವಿಷಯ ಕುರಿತು ಹಸ್ತಪ್ರತಿ ರಚಿಸಲು ಹೇಳಿದ್ದಾಯಿತು. ಇತರ ಲೇಖಕರ ಯಾದಿಯನ್ನೂ ತಯಾರಿಸಿ ಕೆಲವರಿಗೆ ಕೋರಿಕೆ ಕಾಗದ ಕಳಿಸಿದ್ದೂ ಆಯಿತು.

ಮೊದಲು ಬಂದ ಹಸ್ತ ಪ್ರತಿಗಳು ನಿಸಾರರ ‘ಹಕ್ಕಿಗಳು’, ಅಡ್ಯನಡ್ಕರ ‘ಮನುಷ್ಯನ ಕತೆ’ ಮತ್ತು ನನ್ನ ‘ಆಕಾಶದ ಅದ್ಭುತಗಳು.’ ಇವನ್ನು ನೇರ್ಪುಗೊಳಿಸಿ ಯುಕ್ತ ಚಿತ್ರಗಳನ್ನು ಅಳವಡಿಸಿ ಕಲಾವಿದರಿಂದ ಕುಂಚಿಸಿ ಮುದ್ರಣಕ್ಕೆ ಅಣಿಗೊಳಿಸುವ ವೇಳೆಗೆ ಹಲವು ತಿಂಗಳುಗಳೇ ಉರುಳಿದ್ದುವು. ಈ ಮಾಲಿಕೆಗೆ ‘ವಿಜ್ಞಾನ ನೋಡು ಕಲಿ’ ಎಂಬ ಶೀರ್ಷಿಕೆ ಕೊಟ್ಟೆವು. ನಿಸಾರರ ಹಾಗೂ ಅಡ್ಯನಡ್ಕರ ಹಸ್ತಪ್ರತಿಗಳನ್ನು ಪರಿಷ್ಕರಿಸಿ ಅವರ ಒಪ್ಪಿಗೆಗಾಗಿ ಕಳಿಸಿದೆ. ಅಡ್ಯನಡ್ಕರು ನನ್ನ ವಿಧಾನವನ್ನು ಮೆಚ್ಚಿ ಒಂದೆರಡು ಉಪಯುಕ್ತ ಸಲಹೆಗಳನ್ನೂ ನೀಡಿದರು. ಆದರೆ ನಮ್ಮ ಕವಿಮಿತ್ರ ನಿಸಾರರು ರೇಗಿದರು, “ನನ್ನ ಶೈಲಿಯನ್ನೇ ನೀವು ಕೆಡಿಸಿಬಿಟ್ಟಿದ್ದೀರಿ” ಎಂದು ಖಾರವಾಗಿ ಬರೆದರು.
ನಾನು ವಿವರಿಸಿದೆ, “ಈ ಮಾಲಿಕೆಯಲ್ಲಿ ವೈಯಕ್ತಿಕ ಲೇಖಕತ್ವ ಮಾತ್ರ ಸಿಂಧು, ವಿಷಯ ಸ್ಪಷ್ಟತೆಗೆ ಆಯಾ ಲೇಖಕರೇ ಹೊಣೆ. ಆದರೆ ಶೈಲಿ ಕುರಿತಂತೆ ಪ್ರಧಾನ ಸಂಪಾದಕನಾದ ನನ್ನ ನಿರ್ಧಾರವೇ ಅಂತಿಮ. ಸದ್ಯ ನಾನು ಸಂಪಾದಿಸಿ ಸಿದ್ಧಪಡಿಸಿರುವ ನಿಮ್ಮ ಹಸ್ತಪ್ರತಿಯ ಹೂರಣದಲ್ಲೇನಾದರೂ ದೋಷ ಹಣುಕಿದ್ದರೆ ಅಥವಾ ಅದಕ್ಕೆ ಹೆಚ್ಚಿನ ಮಾಹಿತಿ ಏನನ್ನಾದರೂ ಸೇರಿಸಬೇಕಾಗಿದ್ದರೆ ಅವಶ್ಯ ತಿಳಿಸಿ, ಉಳಿದುದನ್ನು ನನಗೆ ಬಿಡಿ.” ಅರ್ಧ ಮನಸ್ಸಿನಿಂದ ಒಪ್ಪಿದರು.

ಮೊದಲ ಕಂತಿನಲ್ಲಿ ನಾಲ್ಕು ಪುಸ್ತಕಗಳನ್ನು ಹೊರತರಲು ಮುಂದಾದೆವು: ‘ಆಕಾಶದ ಅದ್ಭುತಗಳು,’ ‘ಮನುಷ್ಯನ ಕತೆ’, ‘ಹಕ್ಕಿಗಳು’ ಮತ್ತು ‘ಕೀಟಗಳು’ (ಹಾ.ಬ. ದೇವರಾಜ ಸರ್ಕಾರ್). [ಮೊದಲ ಎರಡು ಪುಸ್ತಕಗಳ ಪೂರ್ಣ ಉಚಿತ ವಿ-ಆವೃತ್ತಿ ಇದೇ ಜಾಲತಾಣದಲ್ಲಿ ಮೇಲಂಚಿನಲ್ಲಿ ಕಾಣಿಸಿರುವ ಪುಸ್ತಕ ವಿಭಾಗದಲ್ಲಿ ಲಭ್ಯ. ನಿಸಾರ್ ಅಹಮದರನ್ನು ‘ಹಕ್ಕಿಗಳು’ ಪುಸ್ತಕದ ಕುರಿತು ಸಂಪರ್ಕಿಸಿದ್ದೆ; ಅವರು ಉತ್ತರಿಸಲೇ ಇಲ್ಲ – ಅವ] ಈ ಕೆಲಸ ಭರದಿಂದ ಮುಂದುವರಿಯುತ್ತಿದ್ದಂತೆ ಇವೆಲ್ಲವುಗಳ ಇಂಗ್ಲಿಷ್ ಅವತರಣಿಕೆಗಳನ್ನೂ ಜೊತೆಯಲ್ಲೇ ಪ್ರಕಟಿಸಬೇಕೆಂದು ಪ್ರಕಾಶಕರು ನಿರ್ಧರಿಸಿ ಇದರ ಹೊಣೆಯನ್ನು ಕೂಡ ನನಗೆ ವಹಿಸಿದರು.

ಪರಕೀಯ ಭಾಷೆಯಲ್ಲಿ ಸೃಜನಶೀಲ ವಾಙ್ಮಯ ರಚನೆ ನಾವು ನಾಲ್ವರಿಗೂ ಅಸಾಧ್ಯ, ಆ ಭಾಷೆಗೆ ಅನುವಾದ ಕಾರ್ಯವೂ ಅಷ್ಟೆ. ಇದಕ್ಕೊಂದು ಉಪಾಯ ಹೂಡಿದೆ: ಆಯಾ ಲೇಖಕರಿಗೆ ಅವರವರ ಕನ್ನಡ ಹಸ್ತಪ್ರತಿಗಳ ಇಂಗ್ಲಿಷ್ ಅವತರಣಿಕೆಗಳನ್ನು ಸಿದ್ಧಪಡಿಸಿ ಕೊಡಲು ಸೂಚಿಸಿದೆ. ಹೀಗೆ ಬಂದವನ್ನು ಮೊದಲ ಹಂತದಲ್ಲಿ ನಾನೇ ಪರಿಷ್ಕರಿಸಿದೆ. ಆದರೆ ಈ ಇಂಗ್ಲಿಷ್ ರೂಪ ನಿರ್ಜೀವ ಪದಗಳ ಕೊರಡಾಗಿತ್ತು, ವಿಷಯ ನಿರೂಪಣೆ ಸ್ಫುಟವಾಗಿದ್ದರೂ ಶೈಲಿ ವ್ಯಾಕರಣಬದ್ಧವಾಗಿದ್ದರೂ ಸೃಜನಶೀಲತೆಯ ಮಾಂತ್ರಿಕ ಅಥವಾ ಸಂಜೀವಿನೀ ಸ್ಪರ್ಶ ಇದಕ್ಕೆ ಲಭಿಸಿರಲಿಲ್ಲವೆಂಬ ಅಂಶ ಎದ್ದು ಕಾಣುತ್ತಿತ್ತು. ಅದು ನನ್ನ ಮಿತಿ ಕೂಡ.

ಬಸವಣ್ಣನವರು ನೀಡಿರುವ ಭರವಸೆ ನೆನಸಿಕೊಂಡೆ, “ನೀನೊಲಿದರೆ ಕೊರಡು ಕೊನರುವುದಯ್ಯಾ.” ಆದರೆ ಆ ‘ನೀನು’ ಎಲ್ಲಿರುವನು, ‘ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ, ಎಲ್ಲಿ ಭಕ್ತರು ಕರೆದಲ್ಲೆ ಬಂದೊದಗುವನು’ ಎಂದು ಪುರಂದರದಾಸರು ಆಶ್ವಾಸಿಸಿರುವರಲ್ಲವೇ?

ಎಚ್.ಜಿ. ಸೂರ್ಯನಾರಾಯಣರಾಯರು ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಸಂಗತಿಯನ್ನು ಹಿಂದೆ ಹೇಳಿದ್ದೇನೆ. ಅವರೀಗ ಮೈಸೂರಿಗೆ ಬಂದು ವಿಶ್ವವಿದ್ಯಾನಿಲಯದ ಇಂಗ್ಲಿಷ್ – ಕನ್ನಡ ನಿಘಂಟು ವಿಭಾಗದಲ್ಲೊಬ್ಬ ಸಂಪಾದಕರಾಗಿದ್ದರು. ಉಭಯ ಭಾಷೆಗಳಲ್ಲಿಯೂ ಅವರಿಗಿದ್ದ ಸೃಜನಶೀಲ ಪ್ರಭುತ್ವ ಬಲು ಎತ್ತರದ ಮಟ್ಟದ್ದೆಂಬ ಅರಿವು ನನಗಿತ್ತು. ಅವರನ್ನು ಒಲಿಸಿ ನಾಲ್ಕೂ ಇಂಗ್ಲಿಷ್ ಹಸ್ತಪ್ರತಿಗಳಿಗೆ ‘ಮಾಂತ್ರಿಕ ಸ್ಪರ್ಷ’ ನೀಡಲೆಂದು ಅವರಿಗೊಪ್ಪಿಸಿದೆ (ಮುಂದೆ ಅಧ್ಯಾಯ ೮೩ನ್ನೂ ನೋಡಬಹುದು).
“ಒಂದೂ ತಪ್ಪಿಲ್ಲ, ಪರಿಪೂರ್ಣವಾಗಿದೆ” ಎಂಬ ಅಯಾಚಿತ ಮುಕ್ತ ಶಿಫಾರಸು ಸಹಿತ ಅವರು ಅವನ್ನು ಮರಳಿಸಿದರು. ಹೌದು ವ್ಯಾಕರಣ, ನುಡಿಕಟ್ಟುಗಳ ಪ್ರಯೋಗ, ಪದಗಳ ಅಳವಡಿಕೆ ಮುಂತಾದವೆಲ್ಲವೂ ಸರಿಯಾಗಿದ್ದರೂ ಜೀವಕಳೆ ಲಕಲಕಿಸುತ್ತಿಲ್ಲವೆಂಬ ಸಂಗತಿಯನ್ನು ಮುಖತಃ ವಿವರಿಸಿದೆ. ಶಸ್ತ್ರಕ್ರಿಯೆ ಯಶಸ್ವಿಯಾದರೂ ರೋಗಿ ಮೃತನಾದಂಥ ಪರಿಸ್ಥಿತಿ! ಗದ್ಯಲಯಕ್ಕೂ ಶ್ರವಣಸುಖಕ್ಕೂ ಸಂಬಂಧಿಸಿದ ಸೂಕ್ಷ್ಮವಿದು. “ನಾವಿಬ್ಬರೂ ಒಟ್ಟಿಗೆ ಕುಳಿತು ಮಾಡಬೇಕಾದ ಕೆಲಸವಿದು” ಎಂದು ತೀರ್ಮಾನಿಸಿದೆವು. ಸಂಗೀತಬೋಧನೆ ಮತ್ತು ಕಲಿಕೆಗಳಲ್ಲಿ ಕಿವಿಗಳ ಪಾತ್ರ ಎಷ್ಟು ಮಹತ್ತ್ವದ್ದು ಎಂಬುದು ನನಗೆ ಆ ಬೈಠಕ್ಕುಗಳಲ್ಲಿ ಚೆನ್ನಾಗಿ ಮನದಟ್ಟಾಯಿತು.

ಹೀಗೆ ಮುಂದೆ ಮುಂದೆ ಸಾಗಿ ೧೯೭೬ರ ವೇಳೆಗೆ ಕನ್ನಡ ಹಾಗೂ ಇಂಗ್ಲಿಷ್ ಹಸ್ತ ಪ್ರತಿಗಳೆರಡನ್ನೂ ಮುದ್ರಣಕ್ಕೆ ಸಿದ್ಧಪಡಿಸಿದೆವು. ಈ ಮಾಲಿಕೆಗೊಂದು ಹೆಸರಿಡಬೇಕು ಮತ್ತು ಎಲ್ಲ ಹೊತ್ತಗೆಗಳಿಗೂ ಸಾಮಾನ್ಯವಾಗಿರುವ ಒಂದು ಕಿರುಮುನ್ನುಡಿ ಇರಬೇಕೆಂದು ಪ್ರಕಾಶಕರು ಸೂಚಿಸಿದರು. ಮಾಲಿಕೆಗೆ ‘ವಿಜ್ಞಾನ ನೋಡು ಕಲಿ’ ಎಂಬ ಹೆಸರಿತ್ತೆವು. ಕಿರು ಮುನ್ನುಡಿಯ ಒಕ್ಕಣೆ: “ವಿಜ್ಞಾನ ನೋಡು ಕಲಿ ಪುಸ್ತಕ ಮಾಲೆಯಲ್ಲಿ ಹೆಸರೇ ಸೂಚಿಸುವಂತೆ ನೋಡುವುದು ಮೊದಲು, ಕಲಿಯುವುದು ಬಳಿಕ.
“ಪ್ರಪಂಚವೇ ಚೆಲುವಿನ ಬೀಡು. ಇನ್ನು ಮಗುವೋ ಮೈವೆತ್ತ ಚೆಲುವು. ಮಗುವಿನ ಒಳಗೂ ಹೊರಗೂ ಇರುವ ಚೆಲುವೇನು, ಅದರ ತಳದಲ್ಲಿರುವ ಕ್ರಮವೇನು, ಹಿನ್ನೆಲೆಯಲ್ಲಿ ಹುದುಗಿರುವ ಕಾರಣವೇನು – ಇವುಗಳತ್ತ ಮಗುವಿನ ಲಕ್ಷ್ಯ ಸೆಳೆಯುವುದು ಇಲ್ಲಿಯ ಉದ್ದೇಶ. ಎಂದೇ ಚಿತ್ರಗಳಿಗೆ ಇಲ್ಲಿ ಪ್ರಾಮುಖ್ಯ.
“ಇಲ್ಲಿಯ ಯಾವುದೇ ಚಿತ್ರವನ್ನು ಮಗು ಗಮನಿಸಿದಾಗ ಅದರ ಮನಸ್ಸಿನಲ್ಲಿ ಮಿಂಚುವ ಭಾವನೆಗಳೇನು? ಬದುಕಿನಲ್ಲಿ ಮಗು ಕಂಡು ಅಚ್ಚರಿಗೊಂಡ ನೋಟಗಳು ಹಲವಾರು. ಅವುಗಳ ಪೈಕಿ ಯಾವುದೋ ಒಂದನ್ನು ಅದು ಇಲ್ಲಿ ಗುರುತಿಸಬಹುದು. ಅಥವಾ ಹೇಳುವಂಥ ಕಾರಣವೇನೂ ಇಲ್ಲದೆ ಅಲ್ಲಿಯ ಯಾವುದೋ ಅನುಭವವನ್ನು ಇಲ್ಲಿಯ ಒಂದು ಚಿತ್ರ ಅದರ ನೆನಪಿಗೆ ತರಬಹುದು. ಈ ತೆರನಾಗಿ ಮಗುವಿನ ವಿಶೇಷ ಪ್ರಯತ್ನವಿಲ್ಲದೆ ಅದರ ಕುತೂಹಲವನ್ನು ಪ್ರೇರಿಸುವುದು ಮೊದಲ ಹಂತ. ಮತ್ತೆ ಅದಕ್ಕೆ ಪೋಷಕವಾಗಿ ಬರವಣಿಗೆಯಲ್ಲಿ ವಿಷಯವನ್ನು ನಿರೂಪಿಸುವುದು ಎರಡನೆಯ ಹಂತ.
“ಗೊತ್ತಿರುವ ‘ಇಲ್ಲಿ’ಂದ ಗೊತ್ತಿಲ್ಲದ ‘ಅಲ್ಲಿ’ಗೆ ಮಗುವನ್ನು ಅದರ ಅರಿವಿಗೆ ಬಾರದಂತೆ ಒಯ್ಯುವುದೇ ಮಾತಿನಲ್ಲಿ ಹುದುಗಿರುವ ಮೋಡಿ. ಇದಕ್ಕಾಗಿ ನಮ್ಮ ಸಂಸ್ಕೃತಿಯ ಕತೆ ಕಲ್ಪನೆ ಪ್ರತೀಕಗಳನ್ನು ಅರ್ಥವತ್ತಾಗಿ ಬಳಸಿಕೊಂಡಿದೆ. ಜ್ಞಾನ ಹೊಸ ಸೀಮೆಗಳಿಗೆ ನೆಗೆದಂತೆ ಭಾಷೆ ಅದರೊಂದಿಗೆ ಸಮಶ್ರುತಿ ಸಮಲಯದಲ್ಲಿ ಮಿಡಿಯಲೇಬೇಕು ಎಂಬುದನ್ನು ಗಮನಿಸಿ ಹದವರಿತು ಹೊಸ ಪದಗಳಿಗೆ ಇಲ್ಲಿ ವಿವರಣೆಯೊಂದಿಗೆ ಪ್ರವೇಶ ನೀಡಿದೆ.
“ಹೀಗೆ ಚಿತ್ರ – ಭಾಷೆ ಸಮನ್ವಯದಿಂದ ಈ ಮಾಲೆ ಮೈದಳೆದಿದೆ. ಸಾಂಪ್ರದಾಯಿಕ ಪಠ್ಯ ಮತ್ತು ಉಪಪಠ್ಯ ಪುಸ್ತಕಗಳಲ್ಲಿ ಮಗುವಿಗೆ ದೊರೆಯದ ಮಾಹಿತಿಗಳು ಅತ್ಯಂತ ಸುಲಭ ಹಾಗೂ ರೋಚಕ ರೂಪದಲ್ಲಿ ಇಲ್ಲಿ ದೊರೆಯುತ್ತವೆ.
“ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ನೋಡಿ ಕಲಿಯಲು, ಓದಿ ತಿಳಿಯಲು ಮತ್ತು ಮಾಡಿ ನೋಡಲು ಸಾಕಷ್ಟು ಖಚಿತ ಮತ್ತು ಆಕರ್ಷಕ ಪುಸ್ತಕಗಳು ಕನ್ನಡಲ್ಲಿ ಇಲ್ಲ. ಹೀಗಾಗಿ ಕನ್ನಡ ಮಕ್ಕಳ ವಿದ್ಯಾಭ್ಯಾಸ ಅಷ್ಟರ ಮಟ್ಟಿಗೆ ವೃಥಾ ಬರಡಾಗಿದೆ. ಈ ಕೊರತೆಯನ್ನು ತುಂಬಲು ಸ್ವಲ್ಪ ಮಟ್ಟಿಗಾದರೂ ವಿಜ್ಞಾನ ನೋಡು ಕಲಿ ಮಾಲೆಯ ಪುಸ್ತಕಗಳು ನೆರವಾಗಬಹುದೆಂದು ಆಶಿಸುತ್ತೇವೆ.”

ಪ್ರಕಾಶಕರು ಈ ನಾಲ್ಕೂ ಶೀರ್ಷಿಕೆಯನ್ನು ಕೇಂದ್ರ ಸರಕಾರದ ಎನ್ಸಿಯೀಯಾರ್ಟಿಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗೂ ಕಳಿಸಿದರು. ಮೊದಲಿನದರ ಬಹುಮಾನ ನಿಸಾರರ ‘ಹಕ್ಕಿಗಳು’ ಪುಸ್ತಕಕ್ಕೂ ಎರಡನೆಯದರದು ಅಡ್ಯನಡ್ಕರ ‘ಮನುಷ್ಯನ ಕತೆ’ ಪುಸ್ತಕಕ್ಕೂ ಬಂದು ‘ವಿಜ್ಞಾನ ನೋಡು ಕಲಿ’ ಮಾಲಿಕೆಗೆ ಭಾರೀ ಹೆಸರು ಬಂದಿತು. ಇಂತಿದ್ದರೂ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಕಣ್ತೆರೆಯಲಿಲ್ಲ. ಪ್ರಕಾಶಕರಿಗೆ ಸಗಟು ಖರೀದಿ ಆದೇಶ ಬರಲಿಲ್ಲ, ಸಹಾಯಧನವಂತೂ ದೊರೆಯಲೇ ಇಲ್ಲ.

ಏಕೆ? ಉನ್ನತ ಬೌದ್ಧಿಕ ವಲಯಗಳಲ್ಲಿ ನನ್ನ ಹೆಸರಿನ ಮತ್ತು ಶೈಲಿಯ ಸುತ್ತ ಮುಸುಕಿದ್ದ ‘ತಿರಸ್ಕಾರ’ ಭಾವನೆ ಎಂಬುದು ಕ್ರಮೇಣ ಪರೋಕ್ಷವಾಗಿ ನನ್ನ ಅರಿವಿಗೆ ಬಂದಾಗ ನಾನೆಂದೆ, “ಮನಸ್ಸಾಕ್ಷಿಯ ಲಕ್ಷ್ಮಣ ರೇಖೆಯನ್ನು ಉತ್ಕ್ರಮಿಸಿ ಗಳಿಸುವ ರಾವಣವಿಜಯ ನನಗೆ ಬೇಡ. ಬದಲು ಮಾಯಾಮೃಗದ ಮೊಗವಾಡವನ್ನು ಭೇದಿಸಿದ ಶ್ರೀರಾಮ ಮಾರ್ಗ ನನಗೆ ಯಾವಾಗಲೂ ಪ್ರಿಯ.”

ಕನ್ನಡದ ಅಭಿವರ್ಧನೆಯಲ್ಲಿ ವಿಶ್ವಕೋಶಗಳ ಪಾತ್ರ
ಅಧ್ಯಾಯ ೭೭ (ಮೂಲದಲ್ಲಿ ೪೯)

‘ಕನ್ನಡ ಭಾಷಾ ಅಭಿವೃದ್ಧಿಯ ಸಮೀಕ್ಷಾ ಪ್ರಕಾಶನ, ಬೆಂಗಳೂರು’ ಎಲ್.ಎಸ್ ಶೇಷಗಿರಿರಾಯರ ಪ್ರಧಾನ ಸಂಪಾದಕತ್ವದಲ್ಲಿ ‘ಕನ್ನಡದ ಅಳಿವು-ಉಳಿವು’ ಎಂಬ ಆಕರ ಗ್ರಂಥವನ್ನು ೧೯೮೫ರಲ್ಲಿ ಪ್ರಕಟಿಸಿತು. ಅದರಲ್ಲಿ ‘ಕನ್ನಡದ ಅಭಿವರ್ಧನೆಯಲ್ಲಿ ವಿಶ್ವಕೋಶಗಳ ಕೊಡುಗೆ’ ಎಂಬ ನನ್ನ ಲೇಖನ ಪ್ರಕಟವಾಗಿದೆ. ಅದರ ಉದ್ಧೃತ ಪಾಠವನ್ನಿಲ್ಲಿ ಪ್ರಕಟಿಸಿದೆ.

“ಜ್ಞಾನದ ವಿವಿಧ ಶಾಖೆಗಳನ್ನು ವ್ಯಾಪಕವಾಗಿ ವಿವೇಚಿಸುವ ಮತ್ತು ಸಾಮಾನ್ಯವಾಗಿ, ಬಿಡಿ ಲೇಖನಗಳನ್ನು ಅಕಾರಾದಿಯಾಗಿ ಒಳಗೊಂಡಿರುವ ಜ್ಞಾನಭಂಡಾರವೇ ವಿಶ್ವಕೋಶ.” ಇದು ವೆಬ್ಸ್‌ಟರ್ ನಿಘಂಟು encyclopaedia ಪದಕ್ಕೆ ನೀಡಿರುವ ವ್ಯಾಖ್ಯೆ. ಇದಕ್ಕೆ ಸಮಾನಾರ್ಥಕವಾಗಿ ಕನ್ನಡದಲ್ಲಿ ‘ವಿಶ್ವಕೋಶ’ ಎಂಬ ಪದ ಬಳಸುತ್ತಿದ್ದೇವೆ.

ಪದಗಳಿಂದ ನಿಘಂಟು ಹೇಗೋ ಲೇಖನಗಳಿಂದ ವಿಶ್ವಕೋಶ ಹಾಗೆ, ಪದ ಮತ್ತು ಲೇಖನ ಎರಡೂ ಜೀವನಾನುಭವವೆಂಬ ಕುಲುಮೆಯಲ್ಲಿ ಪಾಕಗೊಂಡು ಪರಿಸರ ಮತ್ತು ಆವಶ್ಯಕತೆಗಳಿಗೆ ಅನುಗುಣವಾಗಿ ಸಿದ್ಧವಾಗುವ ವಸ್ತುಗಳು. ಎಲ್ಲಿ ಜನಜೀವನ ಸಮೃದ್ಧವಾಗಿರುವುದೋ ಎಲ್ಲಿ ಅದರ ಅನುಭವದ ಅಭಿವ್ಯಕ್ತಿಗೆ ಯೋಗ್ಯ ಪರಿಸರ ಒದಗಿರುವುದೋ ಮತ್ತು ಎಲ್ಲಿ ಇಂಥ ಅಭಿವ್ಯಕ್ತಿ ಪ್ರಚಲಿತ ಆವಶ್ಯಕತೆಗಳನ್ನು ಪೂರೈಸುವುದೋ ಅಲ್ಲಿ ಭಾಷೆ ಸರ್ವಾಂಗ ಸುಂದರವಾಗಿ ಅರಳುತ್ತದೆ. ಹೀಗೆ ಸಂಚಯನವಾಗುವ ಭಾಷಾಶಯದಿಂದ (reservoir) ನಿಘಂಟು ಹಾಗೂ ವಿಶ್ವಕೋಶ ರಚನೆಗೆ ವಿಪುಳ ಮೂಲ ಸಾಮಗ್ರಿ ಒದಗುತ್ತದೆ.

ನಿಘಂಟುಕಾರ ಪರಬ್ರಹ್ಮ ಅಲ್ಲ, ಪದದ ಅರ್ಥ ನಿರ್ಣಯಿಸುವ ತಜ್ಞ. ಹಾಗೆಯೇ ವಿಶ್ವಕೋಶಕಾರ ಜ್ಞಾನಬ್ರಹ್ಮ ಅಲ್ಲ, ಜ್ಞಾನದ ವ್ಯಾಖ್ಯಾನ ಮಂಡಿಸುವ ಪರಿಣತ. ವಿಕಾಸದ ಆದ್ಯತಾ ಶ್ರೇಣಿಯಲ್ಲಿ ನಿಘಂಟು ಮೊದಲು, ವಿಶ್ವಕೋಶ ತರುವಾಯ. ಉಪಯೋಗದ ದೃಷ್ಟಿಯಲ್ಲಿ ಇವುಗಳ ಪಾತ್ರ ವಿಭಿನ್ನವಾದರೂ ಒಂದು ಇನ್ನೊಂದರ ಸೀಮೆಗೆ ಅಧಿವ್ಯಾಪಿಸುವುದು ವಿರಳವಲ್ಲ. ಉದಾಹರಣೆಗೆ ನಿಘಂಟಿನಲ್ಲಿ ಪದದ ಅರ್ಥ ಪ್ರಾಶಸ್ತ್ಯ. ಇದು ಒಂದು ಪದದಲ್ಲಿರಬಹುದು ಅಥವಾ ವಿವರಣಾತ್ಮಕವಾಗಿರಬಹುದು. ವಿಶ್ವಕೋಶದಲ್ಲಾದರೋ ಶೀರ್ಷಿಕೆಯ ವ್ಯಾಖ್ಯೆ ಮತ್ತು ಈ ವ್ಯಾಖ್ಯೆ ಮೈದಳೆಯಲು ಕಾರಣವಾದ ಜ್ಞಾನದ ವಿವರಣೆಗೆ ಪ್ರಾಮುಖ್ಯ; ಪದದ ಅರ್ಥ ಮತ್ತು ವ್ಯುತ್ಪತ್ತಿ ಕುರಿತ ವಿವರಣೆ ಆನುಷಂಗಿಕ.

Radioactivity ಎನ್ನುವ ಪದವನ್ನು ಈ ಎರಡು ನಿಟ್ಟಿನಿಂದ ಪರಿಶೀಲಿಸೋಣ. Webster’s New seventh Dictionaryಯಲ್ಲಿರುವ ಅರ್ಥ: “the property possessed by some elements (as uranium) of spontaneously emitting alpha or beta rays and sometimes also gamma rays by the disintegration of the nuclei of atoms.”

Van Nostrand’s Scientific Encyclopaediaದಲ್ಲಿರುವ ವಿಸ್ತಾರ ಲೇಖನದ ಮೊದಲ ಕೆಲವು ಸಾಲುಗಳು: “The term radioactivity is used to denote the spontaneous disintegration of the nucleus of an atom with the emission of corpuscular or electromagnetic radiation. The phenomenon of radioactivity was discovered by Becquerel in 1896 by the exposure producing effect on a photographic plate by pitchblende (uranium containing mineral) while wrapped in black paper in the dark”.

ವಿಜ್ಞಾನದ ನೂತನಾವಿಷ್ಕಾರಗಳು – ಉದಾಹರಣೆಗೆ radioactivityಯ ಪತ್ತೆ – ಆದಾಗ ಐತಿಹಾಸಿಕ ಕಾರಣಗಳಿಂದಾಗಿ ಇಂಗ್ಲಿಷ್ ಭಾಷೆ ಅವುಗಳಿಗೆ ಸ್ಪಂದಿಸುವುದು ಅನಿವಾರ್ಯವಾಯಿತು. ಅಂಥ ಹಲವಾರು ಸಂದರ್ಭಗಳಲ್ಲಿ ರೂಢಿಯ ಪದಗಳೇ ಹೊಸ ಅರ್ಥ ಮೈಗೂಡಿಸಿಕೊಂಡು ಹೊಸಮುಖ ಪ್ರದರ್ಶಿಸುವುದನ್ನು ಕಾಣುತ್ತೇವೆ. ಇದು ಸಾಧ್ಯವಾಗದಿದ್ದಲ್ಲಿ ಹೊಸ ಪದ ಟಂಕಿಸಲ್ಪಟ್ಟಿರುವುದನ್ನು ಗಮನಿಸುತ್ತೇವೆ. ಈ ಮೇಲಿನ ಉದಾಹರಣೆಯಲ್ಲಿ Disintegration ಎಂಬುದು ಹಳೆಯ ಪದ ಹೊಸ ಪಾರಿಭಾಷಿಕ ಮುಖ. Radioactivity ಹೀಗಲ್ಲ, ನೂತನ ಸೃಷ್ಟಿ: radio ಎನ್ನುವ ಪೂರ್ವಪ್ರತ್ಯಯ activity ಎನ್ನುವ ರೂಢಾರ್ಥವಿರುವ ನಾಮಪದದ ಜೊತೆ ಸಂಲಗ್ನಗೊಂಡು ಸೃಷ್ಟಿಯಾದ ಸಂಯುಕ್ತಪದ. ಫ್ರೆಂಚ್ ಭಾಶೆಯಲ್ಲಿ radio – ಎಂಬುದು radius ಪದದಿಂದ ನಿಷ್ಪನ್ನವಾಗಿದೆ. ಅರ್ಥ radial ಅಥವಾ radially (ಕಿರಣ ಸದೃಶವಾಗಿ).

ಮುಂದೆ ಇವೇ ಪದಗಳು ವಿಜ್ಞಾನದ ವಿಶಿಷ್ಟ ವಲಯದಿಂದ ಹೊರಜಿನುಗಿ ಸಾಮಾನ್ಯ ಭಾಷೆಯಲ್ಲಿ ಬಳಕೆಯಾಗಿ ಇದಕ್ಕೆ ವಿಶೇಷ ಅರ್ಥಸ್ಫುಟತೆಯನ್ನೂ ಭಾವ ಸೌರಭವನ್ನೂ ಪೂಸಿ ಸಮಗ್ರ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು ಅಪರೂಪವಲ್ಲ: 1. The entropy of the gathering increased steeply resulting in total disarray. 2. He is always at the receiving end only, like a Black Hole. ಈ ಉದಾಹರಣೆಗಳಲ್ಲಿಯ Entropy ಮತ್ತು Black Hole ಪದಗಳು ಸಾಹಿತ್ಯ ರಂಗಕ್ಕೆ ವಿಜ್ಞಾನಕ್ಷೇತ್ರದ ಕೊಡುಗೆಗಳು. ಸಾಹಿತ್ಯ ಮತ್ತು ಶಾಸ್ತ್ರ ಪರಸ್ಪರ ಪೂರಕ ಪೋಷಕವಾಗಿ ಅಭಿವರ್ಧಿಸುವುದು ಜೀವಂತ ಮತ್ತು ಸ್ವತಂತ್ರ ಜನಾಂಗದ ಲಕ್ಷಣ. ವಿಶ್ವಕೋಶ ಈ ಕ್ರಿಯೆಯ ಒಂದು ಮುಖ್ಯ ಪರಿಕರ.

ಜ್ಞಾನ ಬಹುಶಾಖೆಗಳಲ್ಲಿ ನಿರಂತರವಾಗಿ ಪ್ರವರ್ಧಿಸುತ್ತಿರುವಾಗ ಅದರ ವ್ಯವಸ್ಥಿತ ಕ್ರೋಢೀಕರಣ ಜರೂರಿನ ಅಗತ್ಯ. ವಿಶ್ವಕೋಶ ಮಾಡುವುದಾದರೂ ಈ ಕೆಲಸವನ್ನೇ. ರಾಜ್ಯ ಶಾಸ್ತ್ರದಲ್ಲಿ ಸಂಶೋಧನೆಗೈಯ್ಯುತ್ತಿರುವ ವಿದ್ವಾಂಸರಿಗೆ ಇತಿಹಾಸ ಇಲ್ಲವೇ ಅರ್ಥಶಾಸ್ತ್ರ ಕುರಿತಂತೆ ಎದುರಾಗುವ ಸಂದೇಹ ಪರಿಹಾರಕ್ಕೆ ಆತ ಆಯಾ ಪ್ರಕಾರಗಳಲ್ಲಿಯ ಅಸಂಖ್ಯ ಮತ್ತು ಅನೇಕ ವೇಳೆ ಅಲಭ್ಯ ಗ್ರಂಥಗಳ ಶೋಧನೆಯಲ್ಲಿ ತಡಕಾಡುವುದಕ್ಕಿಂತ ವಿಶ್ವಕೋಶದಲ್ಲಿಯ ಸಂಕ್ಷಿಪ್ತ ಮತ್ತು ಸುಲಭಲಭ್ಯ ಲೇಖನಗಳನ್ನು ಪರಾಂಬರಿಸುವುದು ಅಧಿಕ ವ್ಯಾವಹಾರಿಕ. ವಿಶ್ವಕೋಶ ಮತ್ತು ನಿಘಂಟು ಯಾವುದೇ ಭಾಷೆಯ ಸಹಜ ವಿಕಾಸ ಪಥದಲ್ಲಿ ಒದಗುವ ಪಕ್ವ ಫಲಗಳು. ಆ ಭಾಷೆಯ ಪ್ರಬುದ್ಧತೆಯನ್ನು ಒರೆಗೆ ಹಚ್ಚಲು ದೊರೆಯುವ ನಿಕಷಗಳು. ಮುಂದೆ ಇವು ಅದೇ ಭಾಷೆಯ ಅಭಿವರ್ಧನೆಯ ಹಾದಿಯಲ್ಲಿ ಆಕರ ಗ್ರಂಥಗಳೂ ಶಿಷ್ಟತಾಮಾನಕಗಳೂ ಭವಿಷ್ಯ ಮಾರ್ಗಸೂಚಕಗಳೂ ಆಗಿ ಕಾರ್ಯನಿರ್ವಹಿಸುತ್ತವೆ.

ಕನ್ನಡವನ್ನೂ ಒಳಗೊಂಡಂತೆ ಭಾರತದ ಯಾವ ಭಾಷೆಯೂ ಆಧುನಿಕ ಶಾಸ್ತ್ರಗಳ ಸಹಜ ಸಂವಹನ ಮಾಧ್ಯಮಗಳಾಗಿ ವಿಕಸಿಸಿರುವುದಿಲ್ಲ. ಇಲ್ಲಿ ನಡೆಯುತ್ತಿರುವ ಕ್ರಿಯೆ ಇದು: ವಿದ್ವಾಂಸರು ಇಂಗ್ಲಿಷಿನಲ್ಲಿ ಕಲಿಯುತ್ತಾರೆ, ಚಿಂತಿಸುತ್ತಾರೆ, ಸಂಶೋಧಿಸುತ್ತಾರೆ, ಬೋಧಿಸುತ್ತಾರೆ ಮತ್ತು ಬರೆಯುತ್ತಾರೆ. ಇನ್ನು ದೇಶೀಯ ಭಾಷೆಯಲ್ಲಿ ಹೇಳಬೇಕಾಗಿ ಅಥವಾ ಬರೆಯಬೇಕಾಗಿ ಬಂದಾಗ ಆಕರ ವಸ್ತುವಿಗೆ ಇಂಗ್ಲಿಷ್ ಗ್ರಂಥಗಳನ್ನು ಆಶ್ರಯಿಸುತ್ತಾರೆ. ಐರೋಪ್ಯ ರಾಷ್ಟ್ರಗಳಲ್ಲಿ ಜ್ಞಾನವಿಕಸನವೂ ಭಾಷಾಸ್ಪಂದನವೂ ಸಮಗತಿಯಲ್ಲಿದ್ದರೆ ಭಾರತೀಯ ರಾಜ್ಯಗಳಲ್ಲಿ ಪರಿಸ್ಥಿತಿ ತದ್ವಿರುದ್ದ. ನಮ್ಮ ಭಾಷೆಗಳಿಗೆ ಆಧುನಿಕ ವಿಜ್ಞಾನದ ಸಂವಹನಮಾಧ್ಯಮಗಳಾಗಿ ಸ್ಪಂದಿಸಲು ಅವಕಾಶ ಒದಗಲಿಲ್ಲ. ಇದರ ಕಾರಣವನ್ನು ದೇಶದ ಇತಿಹಾಸದಲ್ಲಿ ಕಾಣಬೇಕೇ ವಿನಾ ಆಯಾ ಭಾಷೆಯ ಸಾಮರ್ಥ್ಯ ದೌರ್ಬಲ್ಯಗಳಲ್ಲಿ ಅಲ್ಲ. ಒಂದು ಭಾಷೆಯ ಸಾಮರ್ಥ್ಯ ಅದರ ಬಳಕೆಯನ್ನು ಅವಲಂಬಿಸಿದೆ. ಇದು ಹಾಗಿರಲಿ. ಯಾವುದೇ ಭಾರತೀಯ ಭಾಷೆ ಕುರಿತಂತೆ ನಿಘಂಟನ್ನಾಗಲೀ ವಿಶ್ವಕೋಶವನ್ನಾಗಲೀ ಆ ಭಾಷೆಯ ‘ಸಹಜ ವಿಕಾಸ ಪಥದಲ್ಲಿ ಒದಗುವ ಪಕ್ವಫಲಗಳು’ ಎನ್ನುವಂತಿಲ್ಲ. ಇವು ಕೃತಕವಾಗಿ ಸಂಶ್ಲೇಷಿತವಾದ ಪ್ರತಿಷ್ಠಾಸೂಚಕಗಳು ಎಂದು ಹೇಳುವುದೇ ಹೆಚ್ಚು ಯುಕ್ತ. ಏಕೆಂದರೆ ಇವು ಕನ್ನಡದಲ್ಲಿ ಬಹುಸಂಖ್ಯಾತ ವಾಚಕರ ಅನಿವಾರ್ಯ ಒಡನಾಡಿಗಳಾಗಿಲ್ಲ.

ಈಗ ಕನ್ನಡದಲ್ಲಿ ವಿಶ್ವಕೋಶಗಳು ಹೇಗೆ ಮೈದಳೆದುವು ಎಂಬುದನ್ನು ಪರಿಶೀಲಿಸೋಣ. ಇಲ್ಲಿಯ ಅಧ್ಯನೋದ್ದೇಶಕ್ಕೆ ‘ವಿಶ್ವಕೋಶ’ ಪದದ ಅರ್ಥವನ್ನು ತುಸು ಸಡಿಲಗೊಳಿಸಿ ‘ಜ್ಞಾನದ ವಿವಿಧ ಶಾಖೆಗಳನ್ನು ಸೀಮಿತವಾಗಿಯಾದರೂ ವಿವೇಚಿಸುವ ಬಿಡಿ ಲೇಖನಗಳ ಸಮುಚ್ಚಯವೇ ವಿಶ್ವಕೋಶ’ ಎಂದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಹೊಸ ವ್ಯಾಖ್ಯೆಯ ಪರಿಧಿಯೊಳಗೆ ಬರುವ ಕನ್ನಡ ವಿಶ್ವಕೋಶಗಳು ಐದು:

೧. ಶಿವರಾಮಕಾರಂತರು ರಚಿಸಿದ ‘ಬಾಲ ಪ್ರಪಂಚ’ದ ಮೂರು ಸಂಪುಟಗಳು, ೧೯೩೬, ೧೮೦೦ ಪುಟಗಳು.
೨. ಶಿವರಾಮಕಾರಂತರು ರಚಿಸಿದ ‘ವಿಜ್ಞಾನ ಪ್ರಪಂಚ’ದ ನಾಲ್ಕು ಸಂಪುಟಗಳು, ೧೯೫೯-೬೪, ೧೯೬೪ ಪುಟಗಳು.
೩. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ಹದಿನಾಲ್ಕು ಸಂಪುಟಗಳ ‘ಕನ್ನಡ ವಿಶ್ವಕೋಶ’ ಯೋಜನೆಯಲ್ಲಿ ಈಗ ಪ್ರಕಟವಾಗಿರುವ ಹನ್ನೊಂದು ಸಂಪುಟಗಳು, ೧೯೬೯-೮೪, ೧೦೫೦೨ ಪುಟಗಳು [ಪ್ರಸ್ತುತ ಭಾಗ ಲೇಖಕನೇ ೧೯೮೪ರ ಸುಮಾರಿಗೆ ಬರೆದ ಲೇಖನವೊಂದರ ಯಥಾಪ್ರತಿ. ಆದರೆ ಅದನ್ನು ಆತ್ಮಕಥೆಯಲ್ಲಿ ಸೇರಿಸಿಕೊಳ್ಳುವಾಗ (೨೦೦೬) ನಮೂದುಗಳನ್ನು ಪರಿಷ್ಕರಣಗೊಳಿಸುವಲ್ಲಿ ಲೇಖಕ ಮರೆತಿರಬೇಕು. ನನ್ನ ಮಿತಿಯಲ್ಲಿ ಸಣ್ಣ ತಿದ್ದುಪಡಿ: ವಿಶ್ವಕೋಶ ೨೦೦೪ರಲ್ಲಿ ಸಂಪೂರ್ಣಗೊಂಡಿದೆ. ಒಟ್ಟು ಪುಟಗಳು ೧೩,೭೬೯ – ಅವ]
೪. ಬೆಂಗಳೂರು ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ನಿಯಮಿತದಿಂದ ಪ್ರಕಟವಾಗಿರುವ ‘ಜ್ಞಾನಗಂಗೋತ್ರಿ’ಯ (ಕಿರಿಯರ ವಿಶ್ವಕೋಶ) ಏಳು ಸಂಪುಟಗಳು, ೧೯೭೦-೭೪, ೪೯೯೧ ಪುಟಗಳು.
೫. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ಮೂವತ್ತು ಸಂಪುಟಗಳ ‘ಕನ್ನಡ ವಿಷಯ ವಿಶ್ವಕೋಶ’ ಯೋಜನೆಯಲ್ಲಿ ಪ್ರಕಟವಾಗಿರುವ (೧೯೭೯) ‘ಕರ್ನಾಟಕ’ ಸಂಪುಟ, ೧೬೯೮ ಪುಟಗಳು.

‘ಬಾಲಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ ಹಲವಾರು ಸಚಿತ್ರ ಲೇಖನಗಳ ಸಮುಚ್ಚಯಗಳು. ಲೇಖನಗಳನ್ನು ವಿಷಯ ವೈವಿಧ್ಯಾನುಸಾರ ಅಧ್ಯಾಯಗಳಲ್ಲಿ ಅಳವಡಿಸಲಾಗಿದೆ. ಎಳೆಯ ಮಕ್ಕಳಿಗೆ ಪ್ರಪಂಚ ಜ್ಞಾನ ಪರಿಚಯಿಸಿ ಕೊಡುವುದು ‘ಬಾಲಪ್ರಪಂಚ’ದ ಉದ್ದೇಶ. ಬೆಳೆದ ಮಕ್ಕಳಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರವಿದ್ಯೆಯ ವಿವಿಧ ಮುಖಗಳನ್ನು ತೋರಿಸುವ ಪ್ರಯತ್ನ ‘ವಿಜ್ಞಾನ ಪ್ರಪಂಚ.’ ಈ ಎಲ್ಲ ಗ್ರಂಥಗಳೂ ವಿವರಣಾತ್ಮಕ ಜನಪ್ರಿಯ ಶೈಲಿಯಲ್ಲಿ ರಚಿತವಾಗಿವೆ.

ಕನ್ನಡದಲ್ಲಿ ವಿಶ್ವಕೋಶ ರಚನೆ ತೊಡಗುವಾಗ ಎದುರಾಗುವ ಮುಖ್ಯ ಸಮಸ್ಯೆಗಳಿವು: ೧. ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ನಿರೂಪಿಸುವುದು ಹೇಗೆ? ೨. ನಿರೂಪಣೆಯನ್ನು ತಾರ್ಕಿಕವಾಗಿಯೂ ಆಕರ್ಷಕವಾಗಿಯೂ ಅಳವಡಿಸುವುದು ಹೇಗೆ? ೩. ಪಾರಿಭಾಷಿಕ ಪದಗಳ ಮತ್ತು ಪದಪುಂಜಗಳ ಸಷ್ಟಿ ಮತ್ತು ಬಳಕೆ ಕುರಿತು ಅನುಸರಿಸಬೇಕಾದ ವಿಧಿ ನಿಯಮಗಳೇನು? ೪. ಚಿತ್ರ-ನಿರೂಪಣೆ ಸಂವಾದಿತ್ವ ಮತ್ತು ಮುದ್ರಣದಲ್ಲಿ ಶಿಷ್ಟತೆ ಕಾಪಾಡಲು ಅನುಸರಿಸಬೇಕಾದ ಕ್ರಮವೇನು?

ಇಂಥ ಯಾವ ಸಮಸ್ಯೆಯೂ ಕಾರಂತರನ್ನು ವಿಶೇಷವಾಗಿ ಬಾಧಿಸಿರುವಂತೆ ತೋರುವುದಿಲ್ಲ. ಬಿಡಿ ವಿವರಗಳಲ್ಲಿ ತಲೆಕೆಡಿಸಿಕೊಳ್ಳದೆ ಗಡಿಬಿಡಿಯಿಂದ ಗುರಿ ಸಾಧಿಸುವುದು ಅವರ ಧ್ಯೇಯವಾಗಿರುವಂತೆ ತೋರುತ್ತದೆ. ದೈತ್ಯ ತ್ರಾಣ, ಅಮಿತ ಉತ್ಸಾಹ, ಆದರೆ ಅಸಮರ್ಪಕ ನಿರ್ವಹಣಾ ಕೌಶಲ ಮತ್ತು ಬಿಡಿ ವಿವರಗಳತ್ತ ದಿವ್ಯ ನಿರ್ಲಕ್ಷ್ಯ ಈ ಕೃತಿಕಾರರ ಲಕ್ಷಣಗಳು. ಕಾರಂತರು ಇಂಗ್ಲಿಷ್ ಭಾಷೆಯಲ್ಲಿ ತಮಗೆ ದೊರೆತ ಜನಪ್ರಿಯ ಗ್ರಂಥಗಳನ್ನು ಓದಿ ತಾವು ಗ್ರಹಿಸಿದಷ್ಟನ್ನು ಕನ್ನಡಕ್ಕೆ ಇಳಿಸಿದರೆ ಸಾಕೆಂಬ ಧೋರಣೆಯಿಂದ ಈ ಕೆಲಸ ತೊಡಗಿರುವಂತೆ ಭಾಸವಾಗುತ್ತದೆ. ಇಂಥ ನಿಲವು ಖಂಡಿತ ಅಪಾಯಕಾರಿ. ಏಕೆಂದರೆ ಜನಪ್ರಿಯ ಗ್ರಂಥವಾಚನ ಓದುಗನಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಕುದುರಿಸೀತೇ ವಿನಾ ಅದರ ಪರಿಕಲ್ಪನೆಗಳ ಹೂರಣಕ್ಕೆ ಎಂದೂ ಪ್ರವೇಶ ಒದಗಿಸದು. ಈ ಪ್ರವೇಶ ಗಳಿಸಲು ಆತ ತಾಂತ್ರಿಕ ಭಾಷೆಯಲ್ಲಿ ರಚಿತವಾಗಿರುವ ಆಕರ ಗ್ರಂಥಗಳನ್ನು ಅಭ್ಯಸಿಸುವುದು ಅಗತ್ಯ. ಕೈಗಂಬ ಗುರಿ ತೋರಿಸೀತೇ ಹೊರತು ತಾನೇ ಗುರಿ ಆಗದು. ಎರಡನೆಯದಾಗಿ, ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಸೃಷ್ಟೀಕರಿಸಲು ಜನಪ್ರಿಯ ಲೇಖಕ ಹಲವಾರು ರೂಪಕಗಳನ್ನೋ ಸಾಮ್ಯಗಳನ್ನೋ ಬಳಸುವುದುಂಟು – ಒಂದು ಬಗೆಯ ವ್ಯಾಪಾರ ತಂತ್ರವಿದು. ಓದುಗ ಇವನ್ನು ಹಿಗ್ಗಲಿಸಿ – ಅಂದರೆ ಸಂದರ್ಭದ ಸರಹದ್ದಿನಿಂತ ಹೊರಕ್ಕೆ ಇವುಗಳ ಅನ್ವಯವನ್ನು ವಿಸ್ತರಿಸಿ – ಅಪಕಲ್ಪನೆಗಳನ್ನು ರೂಪಿಸಿಕೊಳ್ಳುವ ಅಪಾಯವಿದೆ. ಮೂರನೆಯದಾಗಿ, ಇಂಗ್ಲಿಷ್ ಮಾತೃಭಾಷೆ ಅಲ್ಲದ ನಾವು ಅದರ ಎಲ್ಲ ನವುರು ನಯಗಳನ್ನೂ ಪೂರ್ತಿ ಗ್ರಹಿಸಿ ಮೂಲ ಭಾವನೆಗಳನ್ನು ಸ್ಪಷ್ಟವಾಗಿ ಅರಿಯುತ್ತೇವೆಂದು ಭಾವಿಸುವುದು ತಪ್ಪು. ಈ ಭಾವನೆ ಆಧರಿಸಿ ಕನ್ನಡಲ್ಲಿ ವಿಶ್ವಕೋಶ ರಚನೆಗೆ ಇಳಿದುದಾದರೆ ಇಂಥ ಕೃತಿ ಓದುಗನಿಗೆ ಅಸ್ಪಷ್ಟವೂ ಪರಕೀಯವೂ ಆಗುತ್ತದೆ, ಮಿಗಿಲಾಗಿ ತಪ್ಪು ಮಾಹಿತಿಗಳನ್ನು ಊಡುತ್ತದೆ ಕೂಡ. ನಾಲ್ಕನೆಯದಾಗಿ, ಇಂಗ್ಲಿಷಿನಲ್ಲಿರುವ ಜನಪ್ರಿಯ ಗ್ರಂಥಗಳ ಲೇಖಕರು ಆಯಾ ಕ್ಷೇತ್ರದಲ್ಲಿಯ ತಜ್ಞರು. ಇವರು ತಾಕತ್ತಿನ ತಾಣದಿಂದ ತೊಡಗಿ ತಮ್ಮ ಓದುಗರಿಗೆ ಬೇಕಾದುದನ್ನು ಯೋಚಿಸಿ ನಿರ್ವಹಿಸಬಲ್ಲ ಸಮರ್ಥರು. ಇಂಥವರು ತಯಾರಿಸಿದ ಲೇಖನಗಳಿಗೆ ಶಿಷ್ಟ ಹಾಗೂ ಆಕರ್ಷಕ ರೂಪವೀಯಲು ಭಾಷಾ ಪರಿಣತರು ಇವನ್ನು ಸಂಸ್ಕರಿಸುತ್ತಾರೆ. ಕನ್ನಡದಲ್ಲಿ ಜನಪ್ರಿಯ ಗ್ರಂಥ ರಚಿಸುವ ಲೇಖಕ ಸಹ ಇದೇ ವಿಧಾನ ಅನುಸರಿಸದಿದ್ದರೆ ಆತನ ಲೇಖನ ಮೂಲ ಇಂಗ್ಲಿಷ್ ಲೇಖನದ ದುರ್ಬಲ ಇಂಗಾಲ ಪ್ರತಿ ಆಗುವುದು ಕಂಡಂತೆಯೇ ಇದೆ.

ಕಾರಂತರ ಈ ಕೃತಿಗಳ ಮೂಲಭೂತ ದೌರ್ಬಲ್ಯವಿರುವುದು ಇಲ್ಲಿ: ಇವು ತಾಕತ್ತಿನ ತಾಣದಿಂದ ಬರೆದ ಕೃತಿಗಳಲ್ಲ. ಇನ್ನು ಭಾಷಾಪ್ರಯೋಗ ಕುರಿತಂತೆ ದಿವ್ಯ ನಿರ್ಲಕ್ಷ್ಯ ಧೋರಣೆ ಇವರ ಜಾಯಮಾನವೋ ಎನ್ನಿಸುತ್ತದೆ. ಈ ಸಂಗತಿ ಸ್ಪಷ್ಟವಾಗಲು ಪ್ರಸಕ್ತ ಲೇಖನದಲ್ಲಿ ಬರೆದಿರುವ radioactivity ಕುರಿತ (ಇಂಗ್ಲಿಷ್ ವಿಶ್ವಕೋಶದ) ವಿವರಣೆಯನ್ನು ಮೊದಲು ಓದಿ ಬಳಿಕ ಕಾರಂತರು ಬರೆದಿರುವ ವಿವರಣೆ ಓದಬೇಕು.

“ರೇಡಿಯೋ ವಿಸರಣ: ಒಂದು ಧಾತುವಿನ ಎರಡು ಮೂರು ಪರಮಾಣು ರೂಪಗಳು ಬೆರೆತು ಸಿಗುತ್ತವೆಂಬುದು ನಿಜವಾದರೂ ಅವುಗಳಲ್ಲಿ ಒಂದು ಮಾತ್ರ ಸ್ಥಿರವಾದ ರೂಪ. ಉಳಿದವುಗಳಲ್ಲಿ ಲೆಕ್ಕಕ್ಕಿಂತ ತುಸು ಹೆಚ್ಚಿನ ವಿದ್ಯುಚ್ಛಕ್ತಿಯ ಗುಣ ಸೇರಿಕೊಂಡಿದ್ದು, ಅಂಥ ಪರಮಾಣುಗಳು, ತಮ್ಮ ಅಧಿಕಶಕ್ತಿಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತವೆ. ಅದಕ್ಕಾಗಿ ಕೆಲವು ಕಣಗಳನ್ನು ಸಿಡಿದುಕೊಂಡು ಅವು ಸ್ಥಿರ ರೂಪಕ್ಕೆ ಬರಲು ಪ್ರಯತ್ನಿಸುತ್ತವಂತೆ. ಇಂತಹ ಪ್ರಯತ್ನದಲ್ಲಿ ಅದರಿಂದ ಇಲೆಕ್ಟ್ರಾನ್, ಕ್ಷ-ಕಿರಣ, ಗಾಮ ಕಿರಣ ಮೊದಲಾದ ಶಕ್ತಿಕಣಗಳು ವಿಸರಣಗೊಳ್ಳುತ್ತವೆ. ಫ್ರಾನ್ಸ್ ದೇಶದಲ್ಲಿ ಕಳೆದ ಶತಮಾನದಲ್ಲಿ ‘ಕ್ಯೂರಿ’ ದಂಪತಿಗಳು ರೇಡಿಯಮ್ ಎಂಬ ಹೊಸ ಧಾತುವನ್ನು ಕಂಡುಹಿಡಿದರು. ಅದು ತೀರ ಅಸ್ಥಿರ ಸ್ವಭಾವದ್ದು. ಅದು ತನ್ನ ಚೈತನ್ಯವನ್ನು ಹೊರಕ್ಕೆ ಸಿಡಿದುಕೊಳ್ಳುತ್ತಲೇ ಇದ್ದು ಕಾಲಾಂತರದಲ್ಲಿ ಇನ್ನೊಂದೇ ಧಾತುವಾಗಿ ಮಾರ್ಪಡುತ್ತದೆ . . . ಹೀಗೆ ಒಂದು ಧಾತು ರೂಪವು, ತನ್ನ ಅರ್ಧದಷ್ಟು ಅಂಶ, ಬದಲುಗೊಳ್ಳುತ ಹೋಗಿ ಇನ್ನೊಂದು ಧಾತು ರೂಪವಾಗಲು ಎಷ್ಟು ಕಾಲ ಹಿಡಿಯುತ್ತದೆ ಎಂಬುದನ್ನು ಕೋಷ್ಟಕದಲ್ಲಿ ತಿಳಿಸಿದೆ. ಕಟ್ಟಕೊನೆಯಲ್ಲಿ ಸೀಸವಾಗಿ ಪರಿವರ್ತನೆಗೊಂಡದ್ದು ಹಾಗೆ ಸೀಸವಾಗಿಯೇ ಉಳಿಯುತ್ತದೆ. ಅಲ್ಲಿಯ ತನಕವೂ ಶಕ್ತಿಯ ಕಣಗಳನ್ನು ಹೊರಕ್ಕೆ ಸಿಡಿಯುತ್ತಲೇ ಇರುವ ಗುಣವನ್ನು ರೇಡಿಯೋ ವಿಸರಣ ಎನ್ನುತ್ತಾರೆ.” (ವಿಜ್ಞಾನ ಪ್ರಪಂಚ – ೧, ಈ ಜಗತ್ತು, ಪುಟ ೭೨-೭೩)

ಇಲ್ಲಿ radioactivity ಎನ್ನುವ ನೈಸರ್ಗಿಕ ವಿದ್ಯಮಾನದ ಬಗೆಗೆ ನಮ್ಮಲ್ಲಿ ನಿರ್ದಿಷ್ಟ ಚಿತ್ರ ಮೂಡದಿರುವುದರ ಮುಖ್ಯ ಕಾರಣಗಳು ನಾಲ್ಕು: ಸ್ವತಃ ಲೇಖಕರಿಗೆ ಈ ಪರಿಕಲ್ಪನೆ ಸ್ಪಷ್ಟವಾಗಿಲ್ಲದಿರುವುದು; ಈ ಶೋಧದ ಇತಿಹಾಸವನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು; ನಿರೂಪಣೆಯಲ್ಲಿ ಕಾರ್ಯಕಾರಣ ಸಂಬಂಧವಿಲ್ಲದಿರುವುದು; ಭಾಷೆ ತೀರ ಪೇಲವ (journalese) ಮತ್ತು ದೋಷಪೂರಿತವಾಗಿರುವುದು.

ಹಾಗಾದರೆ radioactivityಯ ಸರಿಯಾದ ವಿವರಣೆ ಏನು? ಈ ಪದದ ಕನ್ನಡ ರೂಪ ‘ವಿಕಿರಣಪಟುತ್ವ’ – ಕೇಂದ್ರ ಅಥವಾ ಬೀಜದಿಂದ ಶಕ್ತಿಕಿರಣಗಳು ಸೂಸುವ ಚಟುವಟಿಕೆ ಎಂದರ್ಥ. ಆದ್ದರಿಂದ radiation ಎಂಬುದು ‘ವಿಕಿರಣ’ ಆಗುತ್ತದೆ. (ರೇಡಿಯೋ ವಿಸರಣ ಹೇಗೆ ಅಸಮರ್ಪಕ ಎಂಬುದನ್ನು ಗಮನಿಸಬೇಕು.)

“ವಿಕಿರಣ ಪಟುತ್ವ: ಪರಮಾಣುವಿನ ಬೀಜ ಕಣರೂಪೀಯ ಅಥವಾ ವಿದ್ಯುತ್ಕಾಂತೀಯ ವಿಕಿರಣವನ್ನು ಉತ್ಸರ್ಜಿಸುತ್ತ ಸ್ವಯಮೇವ ಅಪಘಟನೆಗೆ ಈಡಾಗುವ ನೈಸರ್ಗಿಕ ವಿದ್ಯಮಾನ. ರಂಟ್ಜನ್ ೧೮೯೫ರಲ್ಲಿ ಎಕ್ಸ್ ಕಿರಣಗಳನ್ನು ಆವಿಷ್ಕರಿಸಿದ. ಸಾಮಾನ್ಯ ಬೆಳಕಿಗೆ ಖಚಿತವಾಗಿ ಅಪಾರದರ್ಶಕವಾಗಿದ್ದ ಹಲಗೆ ಗೋಡೆ ಮುಂತಾದವನ್ನು ‘ಕತ್ತರಿಸಿ’ ಸಾಗುತ್ತಿದ್ದ ಈ ಶಕ್ತಿ ವಿಶೇಷದ ಗುಣಗಳಿಂದ ಆಕರ್ಷಿತನಾದ ಬೆಕೆರಲ್ ಈ ವಿಶಿಷ್ಟ ಗುಣಾವಿಷ್ಟ ರಾಸಾಯನಿಕದ ಶೋಧದಲ್ಲಿ ನಿರತನಾದ. ಯುರೇನಿಯಮ್ಮಿನ ಅದುರಾದ ಪಿಚ್‌ಬ್ಲೆಂಡ್ ಎಂಬ ಖನಿಜವನ್ನು ಈತ ತನ್ನ ಸಂಶೋಧನೆಗೆ ಆಯ್ದು ಅದರ ಮೇಲೆ ನೇರ ಬಿಸಿಲಿನಲ್ಲಿ ಕೆಲವು ಪ್ರಯೋಗ ಮಾಡಿದ. ಬಿಸಿಲಿನಿಂದ ಶಕ್ತಿಯನ್ನು – ಸ್ಪಂಜ್ ನೀರನ್ನು ಹೀರುವಂತೆ – ಹೀರಿಕೊಂಡ ಪಿಚ್‌ಬ್ಲೆಂಡ್ ಮುಂದೆ ತಂತಾನೇ ಅದನ್ನು ಹೊರ ಸೂಸುವುದಾಗಿರಬಹುದೆಂಬುದು ಈತನ ಊಹೆ. ಆದರೆ ಈ ದಿಶೆಯಲ್ಲಿ ಗಮನಾರ್ಹ ಪುರಾವೆ ದೊರೆಯದ್ದರಿಂದ ಈ ಖನಿಜದ ಹರಳುಗಳನ್ನು ಮೇಜದ ಖಾನೆಯೊಳಗೆ ನಿರ್ಲಕ್ಷ್ಯ ಭಾವದಿಂದ ತುರುಕಿದ – ಎಸೆಯಲು ಮನ ಒಪ್ಪದ್ದರಿಂದ. ಅದೇ ಖಾನೆಯೊಳಗೆ ಒಂದಿಷ್ಟು ಛಾಯಾಗ್ರಾಹಕ ಫಲಕಗಳೂ ಇದ್ದುವು. ಇವನ್ನು ದಪ್ಪ ಕಪ್ಪು ಕಾಗದದಿಂದ ಭದ್ರವಾಗಿ ಕಟ್ಟಲಾಗಿತ್ತು. ಹೀಗಾಗಿ ತುಣುಕು ಬೆಳಕು ಕೂಡ ಇವನ್ನು ಸೋಂಕುವಂತಿರಲಿಲ್ಲ. ಕೆಲವು ದಿನಗಳ ತರುವಾಯ ಬೆಕೆರಲ್ ಈ ಫಲಕಗಳನ್ನು ಉಪಯೋಗಿಸಲೆಂದು ಹೊರ ತೆಗೆದಾಗ ಇವು ವಿನಾಕಾರಣ ಮಬ್ಬಾಗಿದ್ದುದನ್ನು ಕಂಡು ಚಕಿತನಾದ – ನೇರ ಬೆಳಕಿಗೆ ಒಡ್ಡಲ್ಪಟ್ಟಂಥ ಪರಿಸ್ಥಿತಿ! ಬೆಳಕಿಗೆ ಸದೃಶವಾದ ಗುಣವಿರುವ ಶಕ್ತಿ ಪಿಚ್‌ಬ್ಲೆಂಡಿನಲ್ಲಿ ನಿಹಿತವಾಗಿರಬಹುದೆಂದೂ ಇದು ತಂತಾನೇ ಸಿಡಿದು ಬೆಳಕಿಗೆ ಅಪಾರದರ್ಶಕ ಕವಚಗಳನ್ನು ಎಕ್ಸ್ ಕಿರಣಗಳೋಪಾದಿಯಲ್ಲಿ ಕತ್ತರಿಸಿ ಸಾಗಿರಬಹುದೆಂದೂ ಈತ ತರ್ಕಿಸಿದ (೧೮೯೬). ಈ ವಿಶಿಷ್ಟ ವಿದ್ಯಮಾನಕ್ಕೆ ಮೇರಿ ಕ್ಯೂರಿ ವಿಕಿರಣಪಟುತ್ವ ಎಂಬ ಹೆಸರಿತ್ತಳು. ಅದುರಿನಿಂದ ವಿಕಿರಣ, ಒಣಗಿದ ಔಡಲಕಾಯಿ ಬಿರಿದಾಗ ಬೀಜಗಳು ರಟ್ಟುವಂತೆ, ಸಿಡಿಯುವುದರ ರಹಸ್ಯ ಶೋಧನೆಗೆ ಇಳಿದ ಈಕೆ ಟನ್ ತೂಕದ ರದ್ದಿ ಅದುರನ್ನು ಶುದ್ಧೀಕರಿಸಿ ಗ್ರಾಮ್ ತೂಕದ ತೀವ್ರ ವಿಕಿರಣಪಟು ಧಾತುವನ್ನು ಉದ್ಧರಿಸಿದಳು (೧೮೯೮). ಇದೇ ರೇಡಿಯಮ್. ನಿಸರ್ಗದ ಅನರ್ಘ್ಯ ನಿಧಿಗೆ – ಪರಮಾಣು ಗರ್ಭದಲ್ಲಿ ಬಲವದ್ಬಂಧಿತವಾಗಿ ಕುಳಿತಿರುವ ಅಗಾಧ ಶಕ್ತಿಗೆ – ಹೀಗೆ ಇಣುಕುನೋಟ ಲಭಿಸಿತು.”

ಆದ್ದರಿಂದ ಕಾರಂತರ (ಮೇಲೆ ಉಲ್ಲೇಖಿಸಿರುವ) ಕೃತಿಗಳು ಕನ್ನಡದ ಅಭಿವರ್ಧನೆಗೆ ನೀಡಿರುವ ಕೊಡುಗೆ ಬಹುತೇಕ ನಿಷೇಧಾತ್ಮಕ: ವಿಶ್ವಕೋಶ ಹೇಗೆ ಇರಬಾರದು ಅಥವಾ ಅದನ್ನು ಹೇಗೆ ರಚಿಸಬಾರದು ಎನ್ನುವುದಕ್ಕೆ ನಿದರ್ಶನ. ವಾಸ್ತವವಾಗಿ ವರ್ತಮಾನ ಯುಗದಲ್ಲಿ ಯಾವ ವಿಶ್ವಕೋಶವೂ ಏಕವ್ಯಕ್ತಿ ಸಾಹಸವಾಗಿರುವುದು ಅಸಾಧ್ಯ. ಜ್ಞಾನದ ವಿವಿಧ ಪ್ರಕಾರಗಳು ಅಸಂಖ್ಯ ಸಂಶೋಧಕರ ಅವಿಚ್ಛಿನ್ನ ಚಿಂತನೆಗಳ ವಿಶಿಷ್ಟ ಫಲಗಳು. ಅಂದ ಮೇಲೆ ಇವುಗಳ ಗ್ರಾಂಥಿಕ ಪ್ರತಿಬಿಂಬವಾದ ವಿಶ್ವಕೋಶ ಸಹಜವಾಗಿಯೇ ವಿವಿಧ ಪರಿಣತ ಪರಿಪಕ್ವ ಲೇಖನಗಳ ಸಂಕೀರ್ಣವಾಗಿ ಇರತಕ್ಕದ್ದೆಂಬುದು ಸ್ವತಸ್ಸಿದ್ಧ. ಈ ದೃಷ್ಟಿಯಲ್ಲಿ ಸದ್ಯಕ್ಕೆ ಕನ್ನದದಲ್ಲಿ ‘ಕನ್ನಡ ವಿಶ್ವಕೋಶ’, ‘ಜ್ಞಾನಗಂಗೋತ್ರಿ’ ಮತ್ತು ‘ವಿಷಯ ವಿಶ್ವಕೋಶ’ ಮಾತ್ರ ಪರಿಶೀಲನಾರ್ಹ ಕೃತಿಗಳು.

ಈ ಮೂರೂ ವಿಶ್ವಕೋಶಗಳ ವ್ಯವಸ್ಥಾಪನೆ ಕುರಿತ ಸ್ಥೂಲವಿವರಗಳನ್ನು ಅಧ್ಯಾಯ ೭೦ರಲ್ಲಿ ನೋಡಬಹುದು. ಒಟ್ಟಾಗಿ ಕನ್ನಡದ ಅಭಿವರ್ಧನೆಯಲ್ಲಿ ವಿಶ್ವಕೋಶಗಳು ವಹಿಸಿರುವ ಪಾತ್ರವೇನೆಂಬುದನ್ನು ಈಗ ಪರಿಶೀಲಿಸೋಣ.

೧. ಕನ್ನಡದಲ್ಲಿ ಶಾಸ್ತ್ರೀಯ ವಿಚಾರ ನಿರೂಪಣೆಗೆ ಶಿಷ್ಟವಿಧಾನದ ರೂಪಣೆ. ಆಧುನಿಕ ವಿಷಯಗಳನ್ನು ಕುರಿತಂತೆ ಬಹುತೇಕ ವಿವರಣಾತ್ಮಕವಾಗಿ ಇಲ್ಲವೇ ಅಳ್ಳಕವಾಗಿ ಇರುತ್ತಿದ್ದ ಕನ್ನಡ ಭಾಷೆಗೆ ಈ ವಿಶ್ವಕೋಶಗಳು ಖಚಿತತೆಯನ್ನೂ ಅಡಕತನವನ್ನೂ ಒದಗಿಸಿಕೊಟ್ಟಿವೆ. ಉದಾಹರಣೆಗೆ ‘ಕನ್ನಡ ವಿಶ್ವಕೋಶ’ದಲ್ಲಿ ‘ಬೆರಳಚ್ಚು ಯಂತ್ರದ’ ಲೇಖನ ಆರಂಭವಾಗುವುದು ಹೀಗೆ:
“ಕೀಲಿಮಣೆಯಲ್ಲಿ ಅಳವಡಿಸಿರುವ ಅಕ್ಷರಕೀಲಿಗಳನ್ನು ಬೆರಳುಗಳಿಂದ ಒತ್ತಿದಾಗ ಅನುರೂಪ ಉಕ್ಕಿನ ಮೊಳೆಗಳು ತಮ್ಮ ನೆಲೆಗಳಿಂದ ಸನ್ನೆ ತತ್ತ್ವಾನುಸಾರ ಎದ್ದು ಶಾಯಿ ಪಟ್ಟಿಯ ಮೇಲೆ ಬಡಿದು ಇದರ ಅಡಿಯಲ್ಲಿರುವ ಕಾಗದ ಸುರುಳಿಯ ಮೇಲೆ ಮುದ್ರಣಾಕ್ಷರಸದೃಶ ಅಕ್ಷರಗಳನ್ನು ಪಡಿಮೂಡಿಸುವ ಸಲಕರಣೆ ಅಥವಾ ಯಂತ್ರ (ಟೈಪ್‌ರೈಟರ್).”
‘ಜ್ಞಾನಗಂಗೋತ್ರಿ’ಯಲ್ಲಿ ‘ಹಣ’ ಲೇಖನದ ಮೊದಲ ಕೆಲವು ಸಾಲುಗಳಿವು: “ಹುಡುಗನಿಗೆ ಪುಸ್ತಕಬೇಕು. ಕೊಳ್ಳಲು ಅಂಗಡಿಯವರಿಗೆ ಹಣ ಕೊಡಬೇಕು. ಹಣ ಕೊಡದಿದ್ದರೆ ಪುಸ್ತಕವಿಲ್ಲ. ಒಂದು ವಸ್ತು ಕೊಟ್ಟು ಇನ್ನೊಂದು ಕೊಳ್ಳುವುದು ವಿನಿಮಯ. ಹಣ ನಮ್ಮ ಕೈಯಲ್ಲಿದ್ದರೆ ಯಾವ ಪದಾರ್ಥದ ಜತೆ ಆದರೂ ಅದನ್ನು ವಿನಿಮಯ ಮಾಡಿಕೊಳ್ಳಬಹುದು. ನಾವು ಇನ್ನೊಬ್ಬರಿಗಾಗಿ ಕೆಲಸ ಮಾಡಿದರೆ ಆಗ ಅವರು ಹಣ ಕೊಡುತ್ತಾರೆ. ನಾವು ಕೆಲಸ ಮಾಡುವುದು ‘ದುಡಿಮೆ’. ದುಡಿಮೆಯನ್ನು ‘ಮಾರಿದರೆ’ ಹಣ ಸಿಗುತ್ತದೆ.”
‘ಕರ್ನಾಟಕ ವಿಷಯ ವಿಶ್ವಕೋಶ’ದಲ್ಲಿ ‘ಪಟ್ಟದ ಕಲ್ಲು’ ಲೇಖನದ ಮೊದಲ ಪರಿಚ್ಛೇದ ಹೀಗಿದೆ: “ಬಾದಾಮಿ ತಾಲ್ಲೂಕಿನಲ್ಲಿ ಬಾದಾಮಿಯಿಂದ ಪೂರ್ವಕ್ಕೆ ೨೨ ಕಿಮೀ ದೂರದಲ್ಲಿ ಮಲಪ್ರಭಾ ನದಿಯ ಎಡದಡದಲ್ಲಿರುವ ಗ್ರಾಮ. ಹಿಂದೆ ಕಿಸುವೊಳಲ್, ಪಟ್ಟದ ಕಿಸುವೊಳಲ್ ಎಂದು ಪ್ರಸಿದ್ಧವಾಗಿದ್ದ ಐತಿಹಾಸಿಕ ಸ್ಥಳ. ಇಲ್ಲಿರುವ ಬಾದಾಮಿಯ ಚಾಳುಕ್ಯ ಕಾಲದ ದೇವಾಲಯಗಳಿಂದ ಈಗ ಪ್ರಾಮುಖ್ಯ ಪಡೆದಿದ್ದು ಪ್ರವಾಸೀ ಕೇಂದ್ರವಾಗಿ ಬೆಳೆಯುತ್ತಿದೆ.”

೨. ಯಾವುದೇ ವಿಷಯವನ್ನು ಅದು ಎಷ್ಟೇ ಆಧುನಿಕವಾಗಿರಲಿ, ಎಷ್ಟೇ ತಾಂತ್ರಿಕವಾಗಿರಲಿ – ಕನ್ನಡದಲ್ಲಿ ಇಂಗ್ಲಿಷಿನಷ್ಟೇ ಸಮರ್ಥವಾಗಿ ನಿರೂಪಿಸುವುದು ಸಾಧ್ಯ ಎಂಬುದಕ್ಕೆ ಪ್ರತ್ಯಕ್ಷ ಪುರಾವೆ. ಉದಾಹರಣೆಗೆ ‘ಕನ್ನಡ ವಿಶ್ವಕೋಶ’ದಲ್ಲಿ ‘ಪಾರ್ಸೆಕ್’ ಲೇಖನ ಗಮನಿಸಬಹುದು:
“ನಕ್ಷತ್ರ ದೂರಗಳನ್ನು ಅಳೆಯಲು ಬಳಸುವ ಏಕಮಾನ. ಇಂಗ್ಲಿಷಿನ ‘ಪ್ಯಾರಲ್ಯಾಕ್ಸ್’ (ದಿಗಂತರ) ಮತ್ತು ಸೆಕೆಂಡ್ (೧ ಕೋನದ ೩೬೦೦ನೆಯ ೧ ಅಂಶ) ಪದಗಳ ಸಮುಚ್ಚಯದಿಂದ ಪಾರ್ಸೆಕ್ ಪದ ವ್ಯುತ್ಪನ್ನವಾಗಿದೆ. . . ಭೂಕಕಕ್ಷೆಯ ಸರಾಸರಿ ತ್ರಿಜ್ಯವನ್ನು (೧ ಖಗೋಳಮಾನ) ಆಧಾರ ರೇಖೆಯಾಗಿ ಇರಿಸಿಕೊಂಡು ನಕ್ಷತ್ರಗಳ ದಿಗಂತರಗಳನ್ನು – ಈ ತ್ರಿಜ್ಯ ನಕ್ಷತ್ರಗಳಲ್ಲಿ ರಚಿಸುವ ಕೋನಗಳು – ಅಳೆಯಲಾಗಿದೆ. ದಿಗಂತರ ೧ ಇರುವ ನಕ್ಷತ್ರ ಭೂಮಿಯಿಂದ ೧ ಪಾರ್ಸೆಕ್ ದೂರದಲ್ಲಿದೆ ಎನ್ನುತ್ತೇವೆ.

೩. ರೂಢಪದಗಳಿಗೆ ಹೊಸ ಪಾರಿಭಾಷಿಕಾರ್ಥ ನೀಡಿಕೆ ಮತ್ತು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಪಾರಿಭಾಷಿಕ ಪದಗಳ ಸೃಷ್ಟಿ. ಉದಾಹರಣೆಗೆ ಈ ಮುಂದಿನ ವಿವಿಕ್ತ ವಾಕ್ಯಗಳನ್ನು ಗಮನಿಸಬೇಕು:
ಭೂಮಿ ಅಲ್ಲಿ ಮಡಿಕೆಯಾಗಿ (fold) ಹರಡಿಹೋಗಿತ್ತು. ಕಣಿವೆಯ ವಾಟ (gradient) ಕಡಿದಾಗಿತ್ತು. ಬೆಳಕು (light) ವಿದ್ಯುತ್ಕಾಂತ ಶಕ್ತಿಯ (electromagnetic energy) ಒಂದು ರೂಪ. (ಇಲ್ಲಿ ರೂಢ ಪದಗಳು ಪಾರಿಭಾಷಿಕಾರ್ಥಗಳಲ್ಲಿ ಪ್ರಯೋಗವಾಗಿವೆ.)
ಕೃಷ್ಣ ವಿವರದ (Black hole) ವಿಮೋಚನಾವೇಗ (escape velocity) ಬೆಳಕಿನ ವೇಗಕ್ಕಿಂತ ಅಧಿಕ. ಹೀಗಾಗಿ ಕೃಷ್ಣ ವಿವರದಿಂದ ಯಾವ ಬಗೆಯ ವಿಕಿರಣವೂ (radiation) ಹೊರಸೂಸದು. ಕಬ್ಬಿಣಕ್ಕೆ ತುಕ್ಕು ಹಿಡಿಯುವುದು ರಾಸಾಯನಿಕವಾಗಿ ಉತ್ಕರ್ಷಣ (oxidation) ಕ್ರಿಯೆಗೆ ಸಮಾನ. ಗುರುತ್ವ ವೇಗೋತ್ಕರ್ಷದ (acceleration due to gravity) ಬೆಲೆ ಸೆಕೆಂಡಿಗೆ ೯೮೧ ಸೆಮೀ. (ಇಲ್ಲಿ ನೂತನ ಪಾರಿಭಾಷಿಕ ಪದಗಳು ಪ್ರಯೋಗವಾಗಿವೆ.)
ಟ್ರಾನ್ಸಿಸ್ಟರ್, ಎಂಟ್ರೊಪಿ, ಪ್ಲಾಸ್ಮಾ, ಪ್ಯಾರಮೀಸಿಯಮ್ ಮುಂತಾದವು ಇಂಗ್ಲಿಷಿನಿಂದ ಲಿಪ್ಯಂತರಗೊಂಡು ಕನ್ನಡದ ಭಂಡಾರವನ್ನು ಶ್ರೀಮಂತಗೊಳಿಸಿರುವ ಪಾರಿಭಾಷಿಕ ಪದಗಳು.

೪. ಪದಗಳ ಅರ್ಥಗಳಲ್ಲಿ ಅಧಿಕ ನಿಖರತೆಯ ಸಾಧನೆ. ಉದಾಹರಣೆಗೆ ಇಂಗ್ಲಿಷಿನ discovery, invention, research, exploration, symbol, code, sign, signal, hardware, software ಪದಗಳು ಕನ್ನಡದಲ್ಲಿ ಅನುಕ್ರಮವಾಗಿ ಆವಿಷ್ಕಾರ, ಉಪಜ್ಞೆ, ಸಂಶೋಧನೆ, ಅನ್ವೇಷಣೆ, ಪ್ರತೀಕ, ಸಂಕೇತ, ಚಿಹ್ನೆ, ಸಂಜ್ಞೆ, ಯಂತ್ರಾಂಶ, ತಂತ್ರಾಂಶ ಎಂಬ ನಿರ್ದಿಷ್ಟ ಪದಗಳಿಂದ ಸೂಚಿತವಾಗಿರುವುದು ವಿಶ್ವಕೋಶಗಳ ಕೊಡುಗೆ. ಮೊದಲ ನಾಲ್ಕು ಇಂಗ್ಲಿಷ್ ಪದಗಳಿಗೆ ಸಂವದಿಯಾಗಿ ‘ಕಂಡುಹಿಡಿ’ಯನ್ನೂ ತದನಂತರದ ನಾಲ್ಕು ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ‘ಸಂಕೇತ’ವನ್ನೂ ಕೊನೆಯ ಎರಡು ಪದಗಳಿಗೆ ಸಂವಾದಿಯಾಗಿ ‘ಗಡಸುಭಾಗ’ ಮತ್ತು ‘ಮೃದುಭಾಗ’ವನ್ನೂ ಬಳಸುವುದೇ ರೂಢಿ ಎಂಬುದನ್ನು ಗಮನಿಸಬೇಕು.

೫. ಭಾಷಾಸಂಸ್ಕರಣಕ್ರಿಯೆ ಎಂಬ ಶಿಸ್ತಿನ ಸ್ಥಾಪನೆ. ಹತ್ತು ಜನ ವಿದ್ವಾಂಸರು ವಿಷಯಗಳ ಮೇಲೆ ಹತ್ತು ವಿವಿಧ ಶೈಲಿಗಳಲ್ಲಿ ಉತ್ಕೃಷ್ಟ ಲೇಖನಗಳನ್ನು ಬರೆದಿರುವರೆಂದು ಭಾವಿಸೋಣ. ಇವನ್ನು ಒಂದೇ ಗ್ರಂಥದ ಒಳಗೆ ಅಳವಡಿಸುವುದು ನಮ್ಮ ಉದ್ದೇಶವಾದರೆ ಭಾಷಾಸಂಸ್ಕರಣಕ್ರಿಯೆ (vetting) ಇಲ್ಲಿ ಆಗಲೇಬೇಕಾದ ಅಗತ್ಯವಿಧಿ. ಸಂಪಾದನ ಕ್ರಿಯೆಯ ಮುಖ್ಯ ಅಂಗವಿದು. ಇದರ ಫಲವೇ ವಿಶ್ವಕೋಶದ ‘ವ್ಯಕ್ತಿತ್ವ’ – ಬಿಡಿ ಲೇಖಕರ ಅಥವಾ ಸಂಪಾದಕರ ವಿವಿಕ್ತ ವ್ಯಕ್ತಿತ್ವಗಳಿಂದ ಸಾಧಿಸಿರುವ ವಿಶಿಷ್ಟ ಏಕತ್ವ.

೬. ಸಮರ್ಥ ಲೇಖಕ ವೃಂದದ ಸೃಷ್ಟಿ.

೭. ಮುದ್ರಣ ಮತ್ತು ಚಿತ್ರವಿನ್ಯಾಸಗಳಲ್ಲಿ ಸಾಧಿಸಿರುವ ಶಿಷ್ಟತೆ.

೮. ಆಧುನಿಕ ಚಿಂತನೆಗಳಿಗೆ ನೇರ ಪ್ರವೇಶ. ಆಸಕ್ತ ವಾಚಕರಿಗೆ ಎಲ್ಲ ವಿಷಯಗಳಿಗೂ ಈ ಸಂಪುಟಗಳಲ್ಲಿ ಮಾತೃಭಾಷೆಯ ಸುಲಭ ಮಾಧ್ಯಮದ ಮೂಲಕ Encyclopaedia Britanicaದ ಅಥವಾ ಇತರ ಯಾವುದೇ ಇಂಗ್ಲಿಷ್ ವಿಶ್ವಕೋಶದ ಜೊತೆ ಹೋಲಿಸುವಾಗ ಊಹಾತೀತ ಅಗ್ಗ ಬೆಲೆಯಲ್ಲಿ ಒದಗುವುದೊಂದು ವಿಶೇಷ ಸೌಕರ್ಯ.

ಜ್ಞಾನದ ಸಂತತ ಪ್ರವಾಹದಲ್ಲಿ ವಿಶ್ವಕೋಶಗಳು ಅಣೆಕಟ್ಟುಗಳ ಪಾತ್ರ ನಿರ್ವಹಿಸುತ್ತವೆ. ಆಲ್ಲಿಯ ತನಕ ಹಲವು ಹನ್ನೊಂದು ಮೂಲಗಳಿಂದ ಹರಿದು ಬಂದಿರುವ ಜ್ಞಾನವನ್ನು ಒಂದೆಡೆ ಸಂಗ್ರಹಿಸಿ ಉಪಯುಕ್ತ ಕಾರ್ಯಗಳಿಗೆ ಒದಗಿಸುವ ರಚನಾತ್ಮಕ ಕಾರ್ಯವಿದು. ಇವನ್ನು ಜನ ವ್ಯಾಪಕವಾಗಿ ಉಪಯೋಗಿಸಿದರೆ, ಹೀಗೆ ಲಭಿಸಿದ ಅನುಭವದಿಂದ ಹೊಸದನ್ನು ನಿರ್ಮಿಸುವುದು ಸಾಧ್ಯ. ಇಲ್ಲವಾದರೆ ಇವು ನಿಂತು ನಾರುತ್ತವೆ. ಸದ್ಯ ಕನ್ನಡದಲ್ಲಿ ವಿಶ್ವಕೋಶ ನಿರ್ಮಾಣಕ್ಕೆ ಬುನಾದಿ ಪೂರ್ಣವಾಗಿದೆ. ಇದರ ಮೇಲೆ ಭವಿಷ್ಯದಲ್ಲಿ ಎಂಥ ಸೌಧ ನಿರ್ಮಿಸಲ್ಪಪಡುವುದೆಂಬುದು ಜನಜೀವನದ ಆಶೋತ್ತರಗಳನ್ನು ಅವಲಂಬಿಸಿದೆ.

೨೦೦೬ರಲ್ಲಿ ಸೇರಿಸಿದುದು: ಕನ್ನಡದ ಭವಿಷ್ಯ ಕುರಿತೇ ಸಂದೇಹ ಮೂಡಿರುವ ವರ್ತಮಾನ ದಿನಗಳಲ್ಲಿ ವಿಶ್ವಕೋಶ ನಿರ್ಮಾಣಕ್ಕೆ ಸಮರ್ಥ ಮತ್ತು ಬದ್ಧ ಕಾರ್ಯಕರ್ತರು ಲಭಿಸುತ್ತಿಲ್ಲ. ಜನರ ಹಾಗೂ ಸರ್ಕಾರದ ದೃಷ್ಟಿ ಧೋರಣೆಗಳು ವಿಕೃತಗೊಂಡಿರುವುದೆ ಇದರ ಕಾರಣ. ಇಂತಹಲ್ಲಿ ವಿಶ್ವಕೋಶದ ಭವಿಷ್ಯ ಖಂಡಿತ ಉಜ್ವಲವಾಗಿಲ್ಲ ಎಂದು ವಿಷಾದ ಸಹಿತ ಹೇಳಬೇಕಾಗಿದೆ.

(ಮುಂದುವರಿಯಲಿದೆ)