ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ನಲ್ವತ್ತು
ಅಧ್ಯಾಯ ೯೧ (ಮೂಲದಲ್ಲಿ ೬೨ರ ಭಾಗ)
ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು – ಮಂಜೇಶ್ವರ

ಪೀಠಿಕೆ
ನಲವತ್ತಮೂರು ವರ್ಷಗಳ ಹಿಂದೆ (೧೯೬೩) ಕೊಡಗಿನಿಂದ ಭೌತಿಕವಾಗಿ ದೂರಹೋದ ಒಬ್ಬ ಸಾಮಾನ್ಯನನ್ನು ಇಂದಿನ ಸ್ಥಳೀಯ ಚೇತನಗಳು ಗುರುತಿಸಿ ಗೌರವಿಸುತ್ತಿರುವುದು ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ಅನುಭವ. ಇಲ್ಲಿಯ ಸಹೃದಯ ಬಂಧುಗಳ ಔದಾರ್ಯಕ್ಕೆ ಕೃತಜ್ಞತೆಯಿಂದ ಶಿರಬಾಗಿ ಈ ಗಳಿಗೆಯಲ್ಲಿ ನನ್ನ ಮನದೊಳಗೆ ಮಿಡಿಯುತ್ತಿರುವ ಭಾವವನ್ನು ಅಭಿವ್ಯಕ್ತಿಸಲು ಮುಂದಿನ ಸಾಲುಗಳನ್ನು ವಾಚಿಸ ಬಯಸುತ್ತೇನೆ:

ಔದಾರ್ಯ ಸಹಜ ಗುಣ, ಅಭಿವ್ಯಕ್ತಿ ಪರಮ ಗುಣ
ಸೋದರತೆಯಂ ಪ್ರೇರಿಸುವ ದೇವ ಲಕ್ಷಣವೊ!
ನಾದುತಿರೆ ಬಾಳೆಂಬ ಚೂರ್ಣವನು ಕಾಯಕದಿ
ಬುದ್ಬುದಿಪ ಪೀಯೂಷಸಾರವದು ಅತ್ರಿಸೂನು

ವ್ಯಕ್ತಿಯ ತಂದೆ ತಾಯಿಯರ ಅಥವಾ ಜನನ ಸ್ಥಳದ ಆಯ್ಕೆ ಕುರಿತಂತೆ ಆತನಿಗೇನೂ ಸ್ವಾತಂತ್ರ್ಯವಿಲ್ಲ. ಅದು ನಿಸರ್ಗದ ಅಭೇದ್ಯ ರಹಸ್ಯಗಳ ಪೈಕಿ ಒಂದು. ಹುಟ್ಟಿದ ಬಳಿಕ ಆತನ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಭಾವಗಳು ಐದು: ಗೃಹಪರಿಸರ, ಶಿಕ್ಷಣ, ಸ್ಥಳೀಯ ಸಂಸ್ಕೃತಿ, ನಿಸರ್ಗ ಮತ್ತು ಸಮಕಾಲೀನತೆ.

ವ್ಯಕ್ತಿತ್ವದ ಪಂಚ ಧಾತುಗಳು

೧ ಗೃಹಪರಿಸರ. ತಂದೆ ಜಿ.ಎನ್. ತಿಮ್ಮಪ್ಪಯ್ಯ ಸಹಕಾರೀ ಇಲಾಖೆಯಲ್ಲಿ ಪರಿವೀಕ್ಷಕರು, ತಾಯಿ ವೆಂಕಟಲಕ್ಷ್ಮಮ್ಮ ಗೃಹಿಣಿ. ಇವರ ಒಬ್ಬ ಮಗನಾಗಿ ದಿನಾಂಕ ೩೦-೧-೧೯೨೬ರಂದು ಜನಿಸಿದೆ. ಮಧ್ಯಮವರ್ಗದ ಅವಿಭಕ್ತ ಕುಟುಂಬ. ಕರ್ಮಠ ಬ್ರಾಹ್ಮಣ ಸಂಪ್ರದಾಯವಾದರೂ ಜಾತಿ, ಮತ, ಕುಲ, ಗೋತ್ರ ಮುಂತಾದ ಯಾವುದೇ ಮನುಷ್ಯಕೃತ ದಿಗ್ಬಂಧನಗಳನ್ನು ಮೀರಿ ಎಲ್ಲರನ್ನೂ ಪ್ರೀತಿಸಿ ಯಥಾಶಕ್ತಿ ಆದರಿಸಿ ಉಪಚರಿಸುವ ಮನೋಧರ್ಮ, ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ truly secular. ನಾನು ಕಣ್ತೆರೆಯುತ್ತಿದ್ದ ದಿನಗಳಂದು ನಮ್ಮ ಮನೆಯೊಂದು ಅನ್ನ ಸತ್ರವೇ ಆಗಿತ್ತು. ಮುತ್ತಜ್ಜ (ಹಿರಿಯ) ಎ.ಪಿ. ಸುಬ್ಬಯ್ಯ (ಆಗಲೇ ೮೦ನ್ನು ದಾಟಿದ್ದರು) ವೇದಪಾರಂಗತ, ಅಜ್ಜಿ ದೇವಮ್ಮ ಶಾಸ್ತ್ರೀಯ ಸಂಗೀತ ನಿಷ್ಣಾತೆ, ತಾಯಿ ಕನ್ನಡ ಸಾಹಿತ್ಯಾಸಕ್ತೆ, ತಂದೆ ಸಂಗೀತಪ್ರಿಯ, ಚಿಕ್ಕಪ್ಪ ಜಿ.ಎನ್. ರಾಮಚಂದ್ರರಾವ್ ನಿರಂತರ ಪ್ರಯೋಗಶೀಲ ವಿಚಾರಮತಿ. ಇನ್ನು ತಾಯಿಯ ತವರಿನಲ್ಲಿ (ಪುತ್ತೂರು) ಸೋದರಮಾವ (ಕಿರಿಯ) ಎ.ಪಿ. ಸುಬ್ಬಯ್ಯ ಬಹುಶ್ರುತ ಮತ್ತು ಬಹ್ವಾಸಕ್ತಿಯ ಕೃಷಿಕ ಮತ್ತು ಸಾಹಿತಿ.

೨ ಶಿಕ್ಷಣ. ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ (ಇಂದು ಸರಕಾರೀ ಪದವಿಪೂರ್ವ ಕಾಲೇಜಿರುವ ನಿವೇಶನ) ನಾನು ಬಾಲಶಿಕ್ಷೆಯಿಂದ (ಕೆಜಿ) ಎಸ್ಸೆಸೆಲ್ಸಿವರೆಗೆ ೧೧ ವರ್ಷ ಪರ್ಯಂತ ಓದಿದೆ. ಪ್ರಾಚೀನ ಗುರುಕುಲವನ್ನು ನೆನಪಿಗೆ ತರುವಂತಿತ್ತು ಅಲ್ಲಿಯ ಪರಿಸರ, ಪಾಠಕ್ರಮ ಮತ್ತು ಜ್ಞಾನದಾಸೋಹ. ಶಿಕ್ಷಣ ವಿಧಾನ ಈ ಮುಂದಿನ ಋಷಿವಾಕ್ಯಕ್ಕೆ ಬರೆದ ಭಾಷ್ಯವಾಗಿತ್ತು:

ವಿಶ್ವಗರ್ಭಿತ ಸತ್ಯ ಕಂಡವನು ನೈಜ ಋಷಿ
ಋಷಿ ಕಂಡ ಸತ್ಯಕ್ಕೆ ವ್ಯಾಖ್ಯಾನ ಬರೆವಾತ ಆಚಾರ್ಯ
ಆಚಾರ್ಯ ಸೂಕ್ತಿಗಳ ಬೋಧಕನು ಶ್ರೇಷ್ಠ ಗುರು
ಗುರುಬೋಧನೆಗೆ ಪಾತ್ರನಾದವನು ಪ್ರಿಯ ಶಿಷ್ಯ
ಶಿಷ್ಯ ಋಷಿಯಾಗುವುದು ಋಜುವಿದ್ಯೆ

ಇಂಥ ಉನ್ನತ ಪರಿಸರದಲ್ಲಿ ಮತ್ತು ಉತ್ಕೃಷ್ಟ ಮಟ್ಟದಲ್ಲಿ ವಿದ್ಯಾಭ್ಯಾಸ. ಅಂದು ನನ್ನ ಮೇಲೆ ವಿಶೇಷ ಪ್ರಭಾವ ಬೀರಿ ಭವಿಷ್ಯವನ್ನು ಟಂಕಿಸಿದವರು ಮುಖ್ಯವಾಗಿ ಐದು ಮಂದಿ ಪ್ರಾತಃಸ್ಮರಣೀಯರು: ಜಿ.ಎಸ್. ಕೇಶವಾಚಾರ್ಯ (ಕನ್ನಡ), ಎ.ಪಿ. ಶ್ರೀನಿವಾಸರಾವ್ (ವಿಜ್ಞಾನ), ಆರ್. ಹರಿ ಶೆಣೈ (ಗಣಿತ), ಪಿ.ಸಿ. ಉತ್ತಯ್ಯ (ಇಂಗ್ಲಿಷ್) ಮತ್ತು ಒಂದನೆಯ ಮಹಾಯುದ್ಧದ ಯೋಧ ಬಿ.ಎಂ. ಬಿದ್ದಯ್ಯ (ಕವಾಯತಿ). ಶಿಕ್ಷಣ ಮಾಧ್ಯಮ ಪ್ರೌಢಶಾಲಾಮಟ್ಟದವರೆಗೆ (ಅಂದರೆ ಮೊದಲ ೮ ವರ್ಷ ಪರ್ಯಂತ) ಕನ್ನಡ, ಪ್ರೌಢಶಾಲೆಯಲ್ಲಿ (ಕೊನೆಯ ೩ ವರ್ಷ) ಇಂಗ್ಲಿಷ್. ಇಂಗ್ಲಿಷ್ ಭಾಷಾಪಾಠ ಮೂರನೆಯ ತರಗತಿಯಲ್ಲಿ ಮೊದಲ ಬಾರಿಗೆ ಆರಂಭವಾಯಿತು. ಪಾಠ ಪುಸ್ತಕಗಳು ಉತ್ತಮ ಗುಣ ಮಟ್ಟದವು. ಉಪಾಧ್ಯಾಯರೆಲ್ಲರೂ ನಿಷ್ಠೆಯಿಂದ ನಮಗೆ ವಿದ್ಯೆ ಬೋಧಿಸಿದರು. ಹೀಗೆ ಮನೆ ಮತ್ತು ಶಾಲೆ ಒಟ್ಟಾಗಿ ನನ್ನಲ್ಲಿ ಸಂಗೀತ ಪ್ರೇಮವನ್ನೂ ಸಾಹಿತ್ಯ ಪ್ರೀತಿಯನ್ನೂ ವಿಜ್ಞಾನಾಸಕ್ತಿಯನ್ನೂ ಬಿತ್ತಿದುವು. ಎಂದೇ ವಯಸ್ಸು ೭೦ ತುಂಬಿದಾಗ ಬರೆದೆ, “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ.”

ಆ ಸುಮಾರಿಗೆ, ಪ್ರಾಯಶಃ ೧೯೩೨ರಲ್ಲಿ, ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಜರಗಿತು. ನಾನಾಗ ಕೇವಲ ೬ ವರ್ಷದ ಹುಡುಗ. ಡಿ.ವಿ. ಗುಂಡಪ್ಪನವರು ಸಮ್ಮೇಳನಾಧ್ಯಕ್ಷರು. ಯುವ ಕವಿ ಕುವೆಂಪು ತಮ್ಮ ನವ ಭಾವದ, ಹೊಸ ಧಾಟಿಯ, ಚಿರ ನೂತನ ಕವನಗಳನ್ನು ಹಾಡಿ ಕಿಂದರಿಜೋಗಿಯ ಮೋಡಿಯನ್ನು ಇಡೀ ಸಭೆಯ ಮೇಲೆ ಬೀರಿದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ: ಮೈನವಿರೆದ್ದಿತು, ಮಿಂಚಿನ ಹೊಳೆ ತುಳುಕಾಡಿದುದು! ಆ ಕವನಗಳು ಅಂದು ನನಗೆ ಅರ್ಥವಾಗದಿದ್ದರೂ ಅವು ನೀಡಿದ ಪ್ರೇರಣೆ ನನ್ನ ಎದುರೊಂದು ಆದರ್ಶ ಬಿಂಬಿಸಿತ್ತು: “ನುಡಿದರೆ ಮುತ್ತಿನ ಹಾರದಂತಿರಬೇಕು,” ಅಂದರೆ ಕುವೆಂಪು ಅವರ ಅಸ್ಖಲಿತ ಶೈಲಿಯಲ್ಲಿರಬೇಕು. ಈ ಕನಸು ಮುಂದೆ ೧೯೬೯ರಲ್ಲಿ ಕವಿವರೇಣ್ಯರ ಮೂಲಕವೇ ನನಸಾದ್ದೊಂದು ವಿಸ್ಮಯ. ‘ಕುವೆಂಪು ದರ್ಶನ ಸಂದರ್ಶನ’ (೨೦೦೪) ಎಂಬ ಪುಸ್ತಕದಲ್ಲಿ ಇದನ್ನು ಚಿತ್ರಿಸಿದ್ದೇನೆ.

೩ ಸ್ಥಳೀಯ ಸಂಸ್ಕೃತಿ. ಅಂದು ಕೊಡಗು ಭೌಗೋಲಿಕವಾಗಿ ಮಾತ್ರವಲ್ಲ, ಆಡಳಿತ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯ ಕುರಿತಂತೆ ಕೂಡ ಒಂದು ವಿಸ್ತೃತ ಗ್ರಾಮವಾಗಿತ್ತು. ಪಂಜೆ ಮಂಗೇಶರಾಯರ (ಇವರು ಸೆಂಟ್ರಲ್ ಹೈಸ್ಕೂಲಿನ ಪ್ರಥಮ ಭಾರತೀಯ ಮುಖ್ಯೋಪಾಧ್ಯಾಯರು) ಅಮರ ನುಡಿಗಳಲ್ಲಿ ಇದು ಬಿಂಬಿತವಾಗಿದೆ:
ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?

ಸುಮ್ಮನಿತ್ತರೊ ದಟ್ಟಿ ಕುಪ್ಪಸ? ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರಹೊಮ್ಮಲಿ!
ಅಮ್ಮೆ ಹಾಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ!
ನಮ್ಮ ಕೊಡಗಿದು ಬಾಳಲಿ!

ಕೊಡಗಿನ ವೈಶಿಷ್ಟ್ಯ ಏನು! ಪುನಃ ಪಂಜೆಯವರ ನುಡಿಗಳಲ್ಲಿ ‘ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶ,’ ‘ಇದು ಅಗಸ್ತ್ಯನ ತಪದ ಮಣೆ ಕಾವೇರಿ ತಾಯ ತವರ್ಮನೆ.’ ಪ್ರಾಮಾಣಿಕ ವ್ಯವಹಾರ, ದಾನಧರ್ಮ ಪರಂಪರೆ, ಕಷ್ಟ ಸಹಿಷ್ಣುತೆ, ಅನ್ಯೋನ್ಯ ಪ್ರೀತಿ ವಿಶ್ವಾಸ ಮುಂತಾದ ಸದ್ಗುಣಗಳು ಅಂದಿನ ಜೀವನದ ಪ್ರಮುಖ ರೇಖೆಗಳಾಗಿದ್ದುವು. ಡಿವಿಜಿಯವರ ನುಡಿಗಳಲ್ಲಿ,

ಗಿರಿಗಳ ಕಂದರಗಳ ನಿ-
ರ್ಝರಗಳ ವಿಪಿನಗಳ ವಕ್ರಪಥಗಳ ದರ ಸುಂ-
ದರ ಶಮಕರ ರೂಪಂಗಳ-
ನರಿವೊಡೆ ನೀಂ ನಡೆದು ನೋಡು ಕೊಡಗಿನ ಬೆಡಗಂ

ಇದನ್ನು ಕೇಳಿದ ಶಿವರಾಮ ಕಾರಂತರು ಒಡನೆ ಉದ್ಗರಿಸಿದರಂತೆ, “ಒಡೆದು ನೋಡು ನೀಂ ಕೊಡಗಿನ ಕಡುಬಂ!” ಎರಡೂ ನಿಜ. ಬಾಳೆ ಎಲೆಯ ಸುರುಳಿ ಒಳಕ್ಕೆ ಹಿಟ್ಟು ಹೊಯ್ದು ಹಬೆಯಲ್ಲಿ ಬೇಯಿಸಿ ಬಡಿಸುತ್ತಿದ್ದ ಕಡುಬಿನ ಒಂದೊಂದು ತುಣುಕೂ ಸಾಕ್ಷಾತ್ ಭೀಮನ ಗದೆಯೇ! ಕೊಡಗಿನವರ ಬಾಳ ಹಿರಿಮೆಗೆ ಹಿಡಿದ ಕನ್ನಡಿ ಡಿವಿಜಿಯವರ ಈ ಸಾಲುಗಳು:

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ವಿಧಿ ಕಷ್ಟಗಳ ಮಳೆಯ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

ಅಲ್ಲಿಯ ತನಕ ಗುಪ್ತವಾಗಿ ಪ್ರವಹಿಸುತ್ತಿದ್ದ ಕೊಡಗಿನ ಸಾಂಸ್ಕೃತಿಕ ಅಂತರಗಂಗೆ ಸಾಂಸ್ಥಿಕ ರೂಪ ಪಡೆದು ಪ್ರಕಟವಾಗಲು ಆ ಸಮ್ಮೇಳನ ಮುಖ್ಯ ಕಾರಣವಾಯಿತೆಂದು ಭಾವಿಸಿದ್ದೇನೆ: ಕೊಡಗು ಕರ್ನಾಟಕ ಸಂಘ ಮೈದಳೆಯಿತು, ಮೈ.ಶೇ. ಅನಂತಪದ್ಮನಾಭರಾವ್, ಜಿ.ಎಸ್. ಕೇಶವಾಚಾರ್, ಬಿ.ಡಿ. ಗಣಪತಿ. ಚೆಕ್ಕೆರ ಅಪ್ಪಯ್ಯ, ಕಟ್ಟಿಗೆ ಸುಬ್ರಾಯ ಮೊದಲಾದ ಯುವ ಪ್ರತಿಭೆಗಳು ರಂಗ ಪ್ರವೇಶಿಸಿದುವು.

ಸ್ವತಃ ಗಮಕಿ ಮತ್ತು ಕವಿಯಾಗಿದ್ದ ಮೈಶೇಯವರು ಅಂದು ಬಾರಿಸಿದ ಕನ್ನಡ ಡಿಂಡಿಮ ಅಪೂರ್ವವಾದದ್ದು. ಶ್ರೀಯುತರು ನನ್ನ ತಂದೆಯವರ ಸಹಪಾಠಿ, ಸರ್ಕಾರೀ ನೌಕರ, ದೊಡ್ಡ ಸಂಸಾರ, ನೂರಾರು ಆಸಕ್ತಿ, ಎಂದೂ ಹಿಂಗದ, ಬದಲು ಸದಾ ವರ್ಧಿಸುತ್ತಿದ್ದ, ಉತ್ಸಾಹ. ಮನೆಯಲ್ಲೇ ಮುಂಜಾನೆ ಮತ್ತು ಸಂಜೆ ಗಮಕ ಶಿಕ್ಷಣವಿತ್ತು “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗು”ವ ಮೋಡಿಯನ್ನು ಶ್ರೋತೃಗಳ ಮೇಲೆ ಬೀರುತ್ತಿದ್ದ ಕನ್ನಡದ ಡಿಂಗರಿಗರು. ಇವರ ಮನೆಯಲ್ಲೇ ಕರ್ನಾಟಕ ಸಂಘದ ಗ್ರಂಥ ಭಂಡಾರವೂ ಇತ್ತು. ಇದರಿಂದ ಓದಲು ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದ ನನ್ನ ಮೇಲೆ ಮೈಶೇಯವರು ಬೀರಿದ ಪ್ರಭಾವ ಅವರ್ಣನೀಯ. ಪ್ರಾಯಶಃ ಹನ್ನೆರಡರ ಹರೆಯದ ನಾನು ಆ ತನಕ ಹುಚ್ಚಾಬಟ್ಟೆ ಗೀಚಿದ್ದ ಪದ್ಯಗಳನ್ನೊಮ್ಮೆ ನೋಡಿದ ಇವರು ನನಗೆ ಛಂದಶ್ಶಾಸ್ತ್ರವನ್ನು ಬೋಧಿಸಿ ನನ್ನ ಹುಚ್ಚು ಹೊನಲಿಗೊಂದು ಹಾದಿ ಕಾಣಿಸಿದರು. ಅಂದು ನಾನು ‘ಕನ್ನಡ ಕುವರ’ ಎಂಬ ಗುಪ್ತನಾಮದಿಂದ ಅಸಂಖ್ಯ ಕವನಗಳನ್ನು ಬರೆದು, ಅವು ಪತ್ರಿಕೆಗಳಲ್ಲಿ ಪ್ರಕಟವೂ ಆದುವು. ಹೆಚ್ಚಿನವು ಕುಮಾರವ್ಯಾಸ ಇಲ್ಲವೇ ಕುವೆಂಪು ಅವರ ಅನುಕರಣೆಗಳು! ಹೀಗೆ ಮೈಶೇಯವರು ನನ್ನ ಪರೋಕ್ಷ ಗುರುಗಳು.

ಇನ್ನು ಕೇಶವಾಚಾರ್ಯರಂತೂ ನನ್ನ ವಿದ್ಯಾಗುರುಗಳು. ಗಣಪತಿಯವರ ‘ಕೊಡಗು’ ವಾರಪತ್ರಿಕೆಯ ಉಪಸಂಪಾದಕ, ತತ್ತ್ವಶಾಸ್ತ್ರಜ್ಞ, ಉತ್ತಮ ಲೇಖಕ ಮತ್ತು ವಾಗ್ಮಿ. ಇವರು ನನ್ನ ಹುಚ್ಚು ಬರೆಹಗಳನ್ನು ನೇರ್ಪುಗೊಳಿಸಿ ತಮ್ಮ ಪತ್ರಿಕೆಯಲ್ಲಿ ಮುದ್ರಿಸಿ ನನ್ನನ್ನು ಪ್ರೋತ್ಸಾಹಿಸಿದರು. ಸಂಗೀತವೆನ್ನುಸಿರು ಎಂದೆ. ‘ಕೂರ್ಗ್ ಸ್ಟಾರ್’ ಬಿರುದಾಂಕಿತ ಚೆಕ್ಕೆರ ಅಪ್ಪಯ್ಯ ಮತ್ತು ಗಮಕಿ ಹಾಗೂ ಹರಿಕಥಾಪ್ರವೀಣ ಸುಬ್ರಾಯರು ನನ್ನ ಸಂಗೀತಾಸಕ್ತಿಗೆ ಸಾಕಷ್ಟು ಪೋಷಣೆಯಿತ್ತ ಮಹಾನುಭಾವರು. ಆಂಜನೇಯನ ಗುಡಿ ಮತ್ತು ವೇದಾಂತ ಸಂಘ ಅಂದು ಮಡಿಕೇರಿಯ, ವ್ಯಾಪಕವಾಗಿ ಕೊಡಗಿನ ಕೂಡ, ಸಾಂಸ್ಕೃತಿಕ ಚಟುವಟಿಕೆಗಳ ಜೇನುಗೂಡುಗಳಾಗಿದ್ದುವು.

ಬಿಎಂಶ್ರೀ, ಮಾಸ್ತಿ, ವಿಸೀ, ಕಾರಂತ, ಗೊರೂರು, ವೆಂಕಟರಾಮಯ್ಯ, ರಾಜರತ್ನಂ, ಮುಳಿಯ, ಕಡೆಂಗೋಡ್ಲು, ರಾಶಿ, ವೆಂಕಟರಾಮಪ್ಪ, ಪರಮೇಶ್ವರ ಭಟ್ಟ, ಕಸ್ತೂರಿ ಮೊದಲಾದ ಉದ್ದಾಮ ಪಂಡಿತ-ವಾಗ್ಮಿಗಳ ಉಪನ್ಯಾಸಗಳು, ಬೇಲೂರು ಕೇಶವದಾಸ ಮತ್ತು ಕೃಷ್ಣಗಿರಿ ಕೃಷ್ಣರಾಯರ ಗಮಕವಾಚನ-ಪ್ರವಚನಗಳು, ಆಗ ಈಗ ಏರ್ಪಾಡಾಗುತ್ತಿದ್ದ ಶಾಸ್ತ್ರೀಯ ಸಂಗೀತ ಬೈಠಕ್ಕುಗಳು, ಸ್ವಾತಂತ್ರ್ಯಾಂದೋಳನ ಸಂಬಂಧವಾದ ಸಭ್ಯ ಭಾಷಣಗಳು ಮುಂತಾದವು ಅಂದು ಮಡಿಕೇರಿಯ ನೈಸರ್ಗಿಕ ಸೌಂದರ್ಯಕ್ಕೆ ತೊಡಿಸಿದ ಚೆಲುವಾದ ಒಡವೆಗಳಾಗಿದ್ದುವು. ಇಂಥ ಪರಿಸರದಲ್ಲಿಯ ಜೇನನ್ನು ಯಥೇಚ್ಛವಾಗಿ ಸವಿದು ಸುಪುಷ್ಟನಾಗುವ ಭಾಗ್ಯ ನನ್ನದಾಗಿತ್ತು.

೪ ನಿಸರ್ಗ. ಕೊಡಗಿನ ಬೆಟ್ಟ ಕಾಡುಗಳು, ಕಣಿವೆ ತೆಮರುಗಳು, ಗದ್ದೆ ತೋಟಗಳು, ಕೆರೆ ತೊರೆ ಹೊಳೆಗಳು ಮುಂತಾದವು ಮಂಜೇಶ್ವರದ ‘ಕನ್ನಡಿಗರ ತಾಯಿ’ ಹಾಡನ್ನು ನೆನಪಿಗೆ ತರುತ್ತವೆ. ಆಯ್ದ ಕೆಲವು ಸಾಲುಗಳು:

ಹಣ್ಣನೀವ ಕಾಯನೀವ ಪರಿಪರಿಯ ಮರಗಳೊ
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ
ಅಲೆಯ ಮಲೆಯ ಗಾಳಿಯೊ
ಖಗಮೃಗೋರಗಾಳಿಯೊ
ನದಿನಗರನಗಾಳಿಯೊ
ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

ಇಲ್ಲಿಯ ಋತುಗಳು ಕೇವಲ ಎರಡು: ಮಳೆಗಾಲ, ಚಳಿಗಾಲ! ಮನೆ ಹಿಂದೆ ಮುಂದೆ ಗುಡ್ಡೆ ಅಥವಾ ಕೊರಕಲು, ಸುತ್ತಲೂ ಬಾನತ್ತ ಚಾಚಿರುವ ಬೆಟ್ಟಗಳ ಸಾಲು. ಇಂಥ ನೈಸರ್ಗಿಕ ಪರಿಸರದಲ್ಲಿಯ ಬಾಳ್ವೆ, ಆಧುನಿಕ ಸೌಕರ್ಯಗಳಿರದಿದ್ದ ಆ ದಿನಗಳಂದು, ಸಮಾಜದ ಎದುರೊಡ್ಡಿದ ಸವಾಲು ಇಲ್ಲಿಯ ಜನರ ಜೀನ್‌ಗಳಲ್ಲಿ ವಿಶಿಷ್ಟ ಛಾಪು ಒತ್ತಿದೆ. ಸವಾಲನ್ನು ಎದುರಿಸುವ ಛಲ, ಸಮೃದ್ಧ ಸಹಜೀವನ ಮತ್ತು ಅಪಾರ ನಿಸರ್ಗ ಪ್ರೇಮ ಇದರ ಮುಖ್ಯ ಗುಣಗಳು. ಕೊಡಗಿನಲ್ಲಿ ಬಾಳಿದವನು ಎಲ್ಲಿಯೂ ಬಾಳಿಯಾನು ಎಂಬ ನಾಣ್ಣುಡಿಯ ಹಿನ್ನೆಲೆ ಈ ಗುಣಗಳಲ್ಲಿದೆ. “ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ: ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ” (ಬಸವಣ್ಣ).

೫ ಸಮಕಾಲೀನತೆ. ದಾಸರಾಷ್ಟ್ರವಾಗಿದ್ದ ಭಾರತ ಅಂದು – ೧೯೩೦ರ ದಶಕದಲ್ಲಿ – ಸುದೀರ್ಘ ಮಂಪರು ತೊರೆದು ಸ್ವತಂತ್ರವಾಗುವ ಸನ್ನಾಹದಲ್ಲಿತ್ತು. ಗಾಂಧೀಜಿಯವರ ದರ್ಶನ ಇಲ್ಲಿಯೇ ರಾಜಾಸೀಟಿನ ಮೈದಾನದಲ್ಲಿ (ಈಗ ಅಲ್ಲಿ ಗಾಂಧೀ ಮಂಟಪವಿದೆ) ನಮಗಾಯಿತು. ಪಂದ್ಯಂಡ ಬೆಳ್ಯಪ್ಪ, ಬಿ.ಕೆ. ನಂಜುಂಡೇಶ್ವರ, ಸಿ.ಎಂ. ಪೂಣಚ್ಚ, ಕೊಳ್ಳಿಮಾಡ ಕರುಂಬಯ್ಯ ಮೊದಲಾದವರ ಹಿರಿತನದಲ್ಲಿ ಸ್ವಾತಂತ್ರ್ಯ ಚಳುವಳಿ ‘ಆಕುಟ್ಟ ಕೊಡ್ಲೀಪೇಟೆ’ ಹಬ್ಬಿತು. ಎಳೆಯರಾದ ನಾವು ನಾಳಿನ ಆ ಹೊಂಗನಸು ಕಾಣುತ್ತ ಇಂದಿನ ಬವಣೆಗಳನ್ನು ಮರೆತೆವು. ಕ್ರೂರ ಹಿರಣ್ಯನ ಎದುರು ಸೆಟೆದು ನಿಲ್ಲುವ ಬಾಲಕ ಪ್ರಹ್ಲಾದನ ಅದಟು ನಮ್ಮ ವ್ಯಕ್ತಿತ್ವದ ಒಂದು ಭಾಗವಾಯಿತು.

ಸಂಕ್ಷೇಪವಾಗಿ ಹೇಳುವುದಾದರೆ, ಪರಿಸರದ ಶಿಸುವಾದ ವ್ಯಕ್ತಿ ಲಭ್ಯ ಅವಕಾಶಗಳನ್ನು ಕೆಚ್ಚಿನಿಂದ ಸ್ವೀಕರಿಸಿ ಧರ್ಮನಿಷ್ಠವಾಗಿ ವಿನಯ ಮಾರ್ಗದಲ್ಲಿ ಮುನ್ನಡೆಯುವುದರಲ್ಲೇ ಆತನ ಮತ್ತು ಸಮಾಜದ ಪ್ರಗತಿ ಇದೆ ಎಂಬುದು ನನ್ನ ಅನುಭವ.

ಆ ದಿನಗಳಂದು ಕೊಡಗಿನಲ್ಲಿ ಸಾಹಿತ್ಯ ದೀವಟಿಗೆಯನ್ನು ಪ್ರೀತಿಯಿಂದ ಮೇಲೆತ್ತಿ ಬೆಳಕು ಬೀರಿ ಕೊಡಗಿಗೆ ಹೆಸರು ತಂದಿದ್ದ ಇತರರ ಹೆಸರುಗಳನ್ನು (ಇವರೆಲ್ಲರೂ ನನಗಿಂತ ಎಷ್ಟೋ ಹಿರಿಯರು) ನೆನಪಿನಿಂದ ಉಲ್ಲೇಖಿಸ ಬಯಸುತ್ತೇನೆ: ‘ಪಟ್ಟೋಲೆ ಪಳಮೆ’ ಖ್ಯಾತಿಯ ನಡಿಕೇರಿಯಂಡ ಚಿಣ್ಣಪ್ಪ, ಕೊಡವ ಭಾಷೆಯಲ್ಲಿ ನಾಟಕ ರಚಿಸಿದ ಹರದಾಸ ಅಪ್ಪಚೆಟ್ಟೋಳಂಡ ಅಪ್ಪಚ್ಚ ಕವಿ, ಆಶುಕವಿ – ಗಾಯಕ ವೆಂಕಟಾದ್ರಿ ಶ್ಯಾಮರಾಯ, ಕತೆಗಾರ್ತಿ ಕೋಟೇರ ಪದ್ಮಾವತಿ ಚಿಣ್ಣಪ್ಪ, ಕತೆಗಾರ್ತಿ ಕೊಡಗಿನ ಗೌರಮ್ಮ, ಕಾದಂಬರಿಕಾರ ಭಾರತೀಸುತ, ಇತಿಹಾಸ ಸಂಶೋಧಕ ಡಿ.ಎನ್. ಕೃಷ್ಣಯ್ಯ, ಬಹುಶ್ರುತ ವಿದ್ವಾಂಸ – ಲೇಖಕ ಐ.ಮಾ. ಮುತ್ತಣ್ಣ, ನನಗೆ ಪ್ರಥಮವಾಗಿ ಕನ್ನಡ ಕಲಿಸಿ ಬರವಣಿಗೆಯ ಹುಚ್ಚು ಹಿಡಿಸಿದ ಗುರು-ಲೇಖಕ ಎನ್.ಎಸ್. ರಾಮಚಂದ್ರ, ಪ್ರೌಢಶಾಲೆಯ ಮಟ್ಟದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಮೇಲೆ ಪಠ್ಯಪುಸ್ತಕಗಳನ್ನು ಬರೆದು, ಬರೆಸಿ ಮತ್ತು ಸಂಪಾದಿಸಿ ಪ್ರಕಟಿಸಿದ ಎಂ.ಎಸ್. ಸುಬ್ರಾಯ ಮೊದಲಾದವರು ಕಟ್ಟಿದ ಪಂಚಾಂಗವೇನೂ ಸಾಮಾನ್ಯವಾದದ್ದಲ್ಲ. ಇದರ ಮೇಲೆ ನಿಂತ ಅನೇಕ ಪ್ರತಿಭಾನ್ವಿತರ ಪೈಕಿ “ಎನಗಿಂತ ಕಿರಿಯರಿಲ್ಲ” ಎಂಬ ಅರಿವು ನನಗುಂಟು.

ನನ್ನ ಈ ನಿವೇದನ ಭಾವಕ್ಕೆ ಕವಿ ಜಿ.ಎಸ್. ಶಿವರುದ್ರಪ್ಪನವರು (ನನ್ನದೇ ವಯಸ್ಸು) ತಮ್ಮ ‘ಶ್ರೀ ಕುವೆಂಪು ಅವರಿಗೆ’ – ಕವನದಲ್ಲಿ ಚೆಲುವಾದ ನುಡಿಯೊಡಲನಿತ್ತಿದ್ದಾರೆ:
ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ

ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ!
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ,
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸಹುಟ್ಟುಗಳ ಹಾಕುತ್ತ.

ಮುಂದಿನ ಪಯಣ

ಹೀಗೆ ನನಗೆ ಅಯಾಚಿತವಾಗಿ ಲಭಿಸಿದ ಬುತ್ತಿ ಮತ್ತು ನನ್ನೆದುರು ತೆರೆದುಕೊಂಡಿದ್ದ ಹರವುಗಳನ್ನು ಬಳಸಿಕೊಂಡು ಮುನ್ನಡೆದೆ, ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮುನ್ನಡೆಸಲ್ಪಟ್ಟೆ. ಕಾಲೇಜ್ ವಿದ್ಯಾಭ್ಯಾಸ ೧೯೪೨ರಿಂದ ೧೯೪೭ರ ತನಕ ಮಂಗಳೂರು ಮತ್ತು ಮದ್ರಾಸು ನಗರಗಳಲ್ಲಾಯಿತು. ಗಣಿತ ಎಂಎ ಪದವೀಧರನೂ ಆದೆ. ಮುಂದೇನು? ನಿರುದ್ಯೋಗ ಭೂತ ದೇಶವನ್ನೇ ಕಾಡುತ್ತಿದ್ದ ಹತಾಶ ದಿನಗಳವು, ಎರಡನೆಯ ಮಹಾಯುದ್ಧ ಕೊನೆಗೊಂಡ ನೋವಿನ ದಿನಗಳವು, ಕೋಮು ಗಲಭೆಯ ಚೀತ್ಕಾರದ ದಿನಗಳವು. ಆದರೂ ಸ್ವಾತಂತ್ರ್ಯದ ಅರುಣೋದಯವನ್ನು ಸಾರುತ್ತಿದ್ದ ಭರವಸೆಯ ದಿನಗಳೂ ಅವಾಗಿದ್ದುವು.

ತಿರುಕರಿಗೆ ಆಯ್ಕೆ ಹಕ್ಕಿಲ್ಲ – ಇದು ಅಂದಿನ ಎಲ್ಲ ಪದವೀಧರರ ಪರಿಸ್ಥಿತಿ. ಮೊದಲು ಬ್ಯಾಂಕ್ ಗುಮಾಸ್ತಿಕೆ, ಎರಡೇ ತಿಂಗಳಲ್ಲಿ ಅಲ್ಲಿಂದ ಬರಖಾಸ್ತು, ಕಾಲೇಜ್ ಟ್ಯೂಟರ್ ಕೆಲಸ – ಎರಡೂ ಮದ್ರಾಸಿನಲ್ಲೇ. ನನ್ನ ಸಂಗೀತ ಮತ್ತು ಸಾಹಿತ್ಯ ಪ್ರೇಮ ನನ್ನನ್ನು ಮದ್ರಾಸಿಗೆ ಬಲವಾಗಿ ಕಟ್ಟಿಹಾಕಿದ್ದುವು. ಆ ಐದು ವರ್ಷಗಳ ಅವಧಿಯಲ್ಲಿ, ೧೯೪೪-೪೯, ನನ್ನ ಸುಪ್ತ ಸಾಮರ್ಥ್ಯಕ್ಕೆ ಅರಳಲು ಒದಗಿದ ಅವಕಾಶಗಳು ಅಸಂಖ್ಯ. ಪ್ರಚಂಡ ಧೀಮಂತರಾಗಿದ್ದ ಬಾಗಲೋಡಿ ದೇವರಾಯ, ಕುಶಿ ಹರಿದಾಸ ಭಟ್ಟ, ಸೇವ ನಮಿರಾಜಮಲ್ಲ (ಇವರೆಲ್ಲರೂ ಸಮಕಾಲೀನ ವಿದ್ಯಾರ್ಥಿಗಳು) ಮೊದಲಾದವರ ಸಾಹಚರ್ಯದಲ್ಲಿ ನನ್ನ ಜ್ಞಾನಕ್ಷಿತಿಜ ವಿಸ್ತರಿಸಿತು ಮತ್ತು ಅಭಿವ್ಯಕ್ತಿ ಶೈಲಿ ಮೊನಚುಗೊಂಡಿತು. ನಾನು ಕವಿಯಲ್ಲ ಎಂಬ ಅರಿವು ಮೂಡಿತು. ಸಣ್ಣ ಕತೆ ಬರೆದೆ. ಅವು ಅಂದಿನ ಪ್ರಸಿದ್ಧ ಮಾಸ ಪತ್ರಿಕೆಗಳಾಗಿದ್ದ ‘ಜೀವನ’, ‘ಜಯಂತಿ’, ‘ಜಯಕರ್ನಾಟಕ’ ಮುಂತಾದವುಗಳಲ್ಲಿ ಪ್ರಕಟವಾದುವು.

ಮುಂದೆ ೧೯೪೯-೫೩ ಅವಧಿಯಲ್ಲಿ ಉಪನ್ಯಾಸಕ ಹುದ್ದೆಗೆ ಬಡ್ತಿ ಪಡೆದು ಮಂಗಳೂರು ನಿವಾಸಿಯಾದೆ. ಅಲ್ಲಿದ್ದಾಗ ನನ್ನ ಎರಡು ಕಥಾಸಂಕಲನಗಳು – ‘ವನಸುಮ’ (೧೯೫೧) ಮತ್ತು ‘ಕೊಡಗಿನ ಕತೆಗಳು’ (೧೯೫೩) – ಪ್ರಕಟವಾಗಿ ನನಗೆ ಸಾಕಷ್ಟು ಪ್ರಸಿದ್ಧಿ ಪ್ರಚಾರ ತಂದು ಕೊಟ್ಟವು. ಆದರೆ ಆ ವೇಳೆಗೆ ನಾನು ಎರಡನೆಯ ಭ್ರಮನಿರಸನಕ್ಕೆ ಒಳಗಾಗಿದ್ದೆ: ನಾನು ಕತೆಗಾರನೂ ಅಲ್ಲ!

ಇಂಗ್ಲಿಷಿನಲ್ಲಿದ್ದ ಜನಪ್ರಿಯ ವಿಜ್ಞಾನ ಗ್ರಂಥಗಳನ್ನು ಓದಿ, ಮನನ ಮಾಡಿ, ಕನ್ನಡದಲ್ಲಿ ಅದೇ ಶೈಲಿಯ ಲೇಖನ ರಚನೆಗೆ ಮುಂದಾದೆ. ಈ ಅನನ್ವೇಷಿತ ಮತ್ತು ಅಪರಿಚಿತ ಕನ್ನೆ ನೆಲದಲ್ಲಿ ಅಂದು ನನಗೆ ಸ್ಫೂರ್ತಿ ಲಭಿಸಿದ್ದು ಕನ್ನಡದಲ್ಲಿ ಆಧುನಿಕ ವಿಜ್ಞಾನವಾಙ್ಮಯದ ಅಗ್ರಮಾನ್ಯ ಹರಿಕಾರ ಆರ್.ಎಲ್. ನರಸಿಂಹಯ್ಯನವರ ಲೇಖನ ಮತ್ತು ಕೃತಿಗಳಿಂದ. ಈ ನಿಟ್ಟಿನಲ್ಲಿ ಶಿವರಾಮ ಕಾರಂತರ ಪ್ರಯೋಗಗಳಿಂದಲೂ ಇವರ ಅಗ್ರಜ ಕೋಟ ಲಕ್ಷ್ಮೀನಾರಾಯಣ ಕಾರಂತರು ಬರೆದಿದ್ದ ವಿಜ್ಞಾನ ಪಠ್ಯ ಪುಸ್ತಾಕಗಳಿಂದಲೂ ರಚನೆಯ ತಂತ್ರ ಗ್ರಹಿಸಿದೆ: ಇಂಗ್ಲಿಷ್ ಕೃತಿಯೊಂದನ್ನು ಓದಿದ ಸಾಮಾನ್ಯ ವಾಚಕನಿಗೆ ದೊರೆಯುವಷ್ಟೇ ಸಂತೃಪ್ತಿ ಅದೇ ವಿಷಯ ಕುರಿತಂತೆ ಕನ್ನಡ ಲೇಖನ ಓದುವಾತನಿಗೂ ಲಭಿಸುವಂತೆ ನನ್ನ ಶೈಲಿ ಇರಬೇಕೆಂಬುದು ಉದ್ದೇಶ. ಅಂದರೆ, ಇಂಥ ಒಂದು ಲೇಖನದಲ್ಲಿ ವಿಜ್ಞಾನ ಪರಿಕಲ್ಪನೆ ಸ್ಪಷ್ಟವಾಗಿರತಕ್ಕದ್ದು, ಇದನ್ನು ಸಂವಹನಿಸುವ ಕನ್ನಡ ಸೃಜನಶೀಲವಾಗಿರತಕ್ಕದ್ದು ಮತ್ತು ಸಮಗ್ರ ನಿರೂಪಣೆ ಉತ್ಸಾಹಪೂರ್ಣವಾಗಿರತಕ್ಕದ್ದು. ೧೯೫೦ರ ಸುಮಾರಿಗೆ ನಾನು ಅಂಜಿ ಅಳುಕಿ, ತುಸು ಭಂಡಗೆಟ್ಟು ಕೂಡ, ಬರೆದ ಮೊದಲ ಕನ್ನಡ ವಿಜ್ಞಾನ ಲೇಖನಕ್ಕೆ ಓದುಗರಿಂದ ದೊರೆತ ಮನ್ನಣೆ, ನನ್ನ ಋಜು ಅಭಿವ್ಯಕ್ತಿ ಮಾಧ್ಯಮ ಕನ್ನಡ ಜನಪ್ರಿಯ ವಿಜ್ಞಾನ ವಾಙ್ಮಯದಲ್ಲಿದೆ ಎಂಬ ಸತ್ಯ ಸಂಗತಿಯನ್ನು ಕಾಣಿಸಿತು. ಉಳಿದದ್ದು ಈಗ ಇತಿಹಾಸ. “ಕನ್ನಡಕ್ಕಾಗಿ ಕೈಯೆತ್ತು, ಕಲ್ಪವೃಕ್ಷವಾಗುತ್ತದೆ” ಎಂದರು ಕುವೆಂಪು. ಇದು ಎಂಥ ಪ್ರವಾದಿವಾಣಿ ಎಂಬುದನ್ನು ನನ್ನ ಜೀವನ ಪೂರ್ತಿ ಅನುಭವಿಸಿ ಹರ್ಷಿಸಿದ್ದೇನೆ. ಇಲ್ಲಿ ಇಂದು ನಿಂತಿರುವ ಸೌಭಾಗ್ಯವೂ ಇದಕ್ಕೊಂದು ನಿದರ್ಶನ. ಎಲ್ಲ ಪ್ರಶಸ್ತಿ ಪುರಸ್ಕಾರಗಳ ಪೈಕಿ ತಾಯಿನೆಲದಲ್ಲಿ ದೊರೆಯುವ ಮನ್ನಣೆಗೆ ಅತಿಶಯ ಮಹತ್ತ್ವ ಉಂಟು: ತವರೇ ಪುಷ್ಪಿಸಿ ಕಂದಗೆ ತೊಡಿಸುತ ಹರಸುವ ಹಾರವದು.

ಸವಾಲನ್ನು ಎದುರಿಸುವ ಛಲ
೧೯೫೨ನೆಯ ಇಸವಿ. ಆಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತೋಪನ್ಯಾಸಕ. ನನ್ನ ಅಪೇಕ್ಷೆ ನಿರೀಕ್ಷೆ ಅಥವಾ ಒಲವು ಇಲ್ಲದೇ ಸೇನಾಶಿಕ್ಷಣಕ್ಕೆ ತಳ್ಳಲ್ಪಟ್ಟೆ. ಅದಾಗ ತಾನೇ ನಮ್ಮ ಕಾಲೇಜಿನಲ್ಲಿ ಪ್ರಾರಂಭಿಸಲಿದ್ದ ಎನ್ಸಿಸಿ ದಳಕ್ಕೆ ನನ್ನನ್ನು ಮುಖ್ಯಸ್ಥನನ್ನಾಗಿ ಆಯ್ದಿದ್ದರು. ತತ್ಸಂಬಂಧವಾಗಿ ನಾನು ಮದ್ರಾಸು ರೆಜಿಮೆಂಟಲ್ ಸೆಂಟರ್, ವೆಲ್ಲಿಂಗ್ಟನ್, ನೀಲಗಿರಿಯಲ್ಲಿ ಮೂರು ತಿಂಗಳ ಪರ್ಯಂತ ಸೇನಾಶಿಕ್ಷಣ ಪಡೆಯಲು ನಿಯೋಜಿತನಾದೆ. ಜನರಲ್‌ಗಳ ತೂಗುತೊಟ್ಟಿಲೆಂದು ಪ್ರಸಿದ್ಧವಾಗಿರುವ ಈ ನಾಡಿನವನಾದ ನನ್ನಲ್ಲಿ ಅಂಥ ಗುಣವೇನಾದರೂ ಇತ್ತೇ? ನಾನು ಕಟ್ಟಾ ಸಸ್ಯಾಹಾರಿ, ಸಾಮೂಹಿಕ ಕ್ರೀಡೆಗಳಲ್ಲಿ ಭಾಗವಹಿಸಿದವನಲ್ಲ, ಬೌದ್ಧಿಕ ವಲಯದಲ್ಲಿ ಒಂಟಿ ಪಯಣಿಗ. ಹಾಗಾದರೆ ಆ ಪರಕೀಯ ಕ್ಷೇತ್ರದಲ್ಲಿರಲು ನನ್ನ ಅರ್ಹತೆ ಏನು?

ಅದು ಬೆಳಕಿಗೆ ಬಂದುದು ಪೆರೇಡ್ ಗ್ರೌಂಡಿನಲ್ಲಿ – ಖುದ್ದು ನನಗೇ ಸೋಜಿಗವಾಗುವಂತೆ. ಅಲ್ಲಿಯ ಬೆಟ್ಟಗುಡ್ಡಗಳ ಹರವಿನಲ್ಲಿ, ಮೈಕೊರೆವ ಕುಳಿರಿನಲ್ಲಿ, ಎದುರಾಗುತ್ತಿದ್ದ ಸವಾಲುಗಳಲ್ಲಿ ಮತ್ತು ಸಾಮೂಹಿಕ ಕವಾಯತಿ ಸ್ಪರ್ಧೆಗಳಲ್ಲಿ ನನ್ನೊಳಗೆ ಸುಪ್ತವಾಗಿದ್ದ ಕೊಡಗುತನ ನನಗೆ ತಿಳಿಯದಂತೆಯೆ ಕುಮ್ಮಕ್ಕು ಕೊಟ್ಟಿತು. ಕುವೆಂಪು ನುಡಿಗಳಲ್ಲಿ –

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ

ಮುಂದಿನ ೧೭ ವರ್ಷ ಕಾಲ (೧೯೬೯ರ ತನಕ) ನಾನು ಎನ್ಸಿಸಿ ಅಧಿಕಾರಿಯಾಗಿ ಮಾಡಿದ ಪ್ರಯೋಗಗಳನ್ನೂ ಗಳಿಸಿದ ಅನುಭವವನ್ನೂ ‘ಎನ್ಸಿಸಿ ದಿನಗಳು’ ಮತ್ತು ‘ಸವಾಲನ್ನು ಎದುರಿಸುವ ಛಲ’ ಎಂಬ ಪುಸ್ತಕಗಳಲ್ಲಿ ವಿವರಿಸಿದ್ದೇನೆ.

ಕೊಡಗಿನ ನೆಲ, ಜಲ, ಗಾಳಿ, ಬಾನು ಮತ್ತು ಸಂಸ್ಕೃತಿ ಹೇಗೆ ಇಲ್ಲಿಯ ಮಕ್ಕಳಲ್ಲಿ ಸವಾಲನ್ನು ಎದುರಿಸುವ ಛಲವನ್ನು ಹುಟ್ಟಿನಿಂದಲೇ ಗರ್ಭಿಸಿಟ್ಟಿರುತ್ತದೆ ಎನ್ನುವುದನ್ನು ವಿಶದೀಕರಿಸಲು ಈ ಅಂಶವನ್ನಿಲ್ಲಿ ಪ್ರಸ್ತಾವಿಸಿದ್ದೇನೆ ಅಷ್ಟೆ.

ಕನ್ನಡದ ಸ್ಥಿತಿ ಗತಿ

೧ ವರ್ತಮಾನ ಸ್ಥಿತಿ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅನಂತರ (೧೯೪೭), ಅಲ್ಲಿಯೂ ಕರ್ನಾಟಕ ಏಕೀಕರಣವಾದ ಬಳಿಕ, ಕನ್ನಡ ಸರ್ವಾಂಗ ಸುಂದರವಾಗಿ ಎಲ್ಲ ಜ್ಞಾನ ವಿಜ್ಞಾನ ಪ್ರಕಾರಗಳ ಸಮರ್ಥ ಸಂವಹನ ಮಾಧ್ಯಮವಾಗಿ ಅಭಿವರ್ಧಿಸಿತು. ವಿಜ್ಞಾನ ಕ್ಷೇತ್ರ ಕುರಿತು ಹೇಳುವುದಾದರೆ ಯಾವುದೇ ಅತ್ಯಾಧುನಿಕ ಸಂಕೀರ್ಣ ಪರಿಕಲ್ಪನೆಯನ್ನೂ ಇದರಲ್ಲಿ ಮೂಲ ಇಂಗ್ಲಿಷಿನಲ್ಲಿಯಷ್ಟೇ ಖಚಿತವಾಗಿ, ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ನಿರೂಪಿಸುವುದು ಸಾಧ್ಯವೆಂಬುದನ್ನು ತೋರಿಸಿಕೊಟ್ಟಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಪ್ರಕಟಿಸಿದ ಆಕರ ಗ್ರಂಥಗಳು, ಪಠ್ಯ ಪುಸ್ತಕಗಳು ಮತ್ತು ಜನಪ್ರಿಯ ಕೃತಿಗಳು, ಆರ್.ಎಲ್. ನರಸಿಂಹಯ್ಯ, ಸಿ.ಎನ್. ಶ್ರೀನಿವಾಸಯ್ಯಂಗಾರ್, ಯು.ಎಲ್. ಆಚಾರ್ಯ, ಜೆ.ಆರ್. ಲಕ್ಷ್ಮಣ ರಾವ್, ಅಡ್ಯನಡ್ಕ ಕೃಷ್ಣ ಭಟ್ಟ, ಅನುಪಮಾ ನಿರಂಜನ ಮೊದಲಾದ ಹಿರಿಯರ ಕೊಡುಗೆಗಳು. ಶಿವರಾಮ ಕಾರಂತರ ‘ಬಾಲಪ್ರಪಂಚ’ದ ಒಟ್ಟು ೧೮೦೦ ಪುಟಗಳ ಮೂರು ಸಂಪುಟಗಳು (೧೯೩೬), ‘ವಿಜ್ಞಾನ ಪ್ರಪಂಚದ’ ಒಟ್ಟು ೧೯೬೪ ಪುಟಗಳ ನಾಲ್ಕು ಸಂಪುಟಗಳು (೧೯೫೯-೬೪), ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ‘ಜ್ಞಾನ ಗಂಗೋತ್ರಿ’ಯ ಒಟ್ಟು ೪೯೯೧ ಪುಟಗಳ ಏಳು ಸಂಪುಟಗಳು (೧೯೭೦-೭೪) ಮತ್ತು ಕಳಶಪ್ರಾಯವಾಗಿ ಮೈಸೂರು ವಿಶ್ವವಿದ್ಯಾನಿಲಯ ೧೯೬೯ರಿಂದ ಅನಿಯತಕಾಲಿಕವಾಗಿ ಪ್ರಕಟಿಸುತ್ತಿರುವ ‘ಕನ್ನಡ ವಿಶ್ವಕೋಶ’ದ ೧೪ ಸಂಪುಟಗಳು (ಪ್ರತಿಯೊಂದೂ ಸರಾಸರಿ ೧೦೦೦ ಪುಟಗಳ ಗ್ರಂಥ), ‘ವಿಷಯ ವಿಶ್ವಕೋಶ’ದ ೩೦ ಸಂಪುಟಗಳ ಯೋಜನೆ (ಸದ್ಯಕ್ಕೆ ಒಂದು ಪ್ರಕಟವಾಗಿದೆ, ಇನ್ನೆರಡು ಸದ್ಯವೇ ಹೊರಬರಲಿವೆ.) ಕನ್ನಡದ ಶ್ರೀಮಂತಿಕೆಯನ್ನು ಎತ್ತಿ ಕಾಣಿಸುತ್ತಿವೆ. ನಮ್ಮ ರಾಜ್ಯದ ಇತರ ವಿಶ್ವವಿದ್ಯಾಲಯಗಳೂ ಈ ದಿಶೆಯಲ್ಲಿ ಕಾರ್ಯತತ್ಪರವಾಗಿವೆ. ಶಿವರಾಮ ಕಾರಂತರ ಗೌರವ ಸಹಾಯಕನಾಗಿ, ‘ಜ್ಞಾನಗಂಗೋತ್ರಿ’ಯ ಸಂಪಾದಕಮಂಡಲಿ ಸದಸ್ಯನಾಗಿ ಮತ್ತು ‘ಕನ್ನಡ ವಿಶ್ವಕೋಶ’ದ ವಿಜ್ಞಾನ-ಮತ್ತು-ಕಾರ್ಯನಿರ್ವಾಹಕ ಸಂಪಾದಕನಾಗಿ ಈ ಎಲ್ಲ ಯೋಜನೆಗಳಲ್ಲಿಯೂ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿತ್ತು. ನವಕರ್ನಾಟಕ ಪ್ರಕಾಶನದ ಪ್ರತಿಷ್ಠಿತ ಕೃತಿ ‘ಕನ್ನಡ ವಿಜ್ಞಾನ ಪದವಿವರಣ ಕೋಶ’ (೨೦೦೧) ಪಾರಿಭಾಷಿಕ ಪದಗಳ ಶಿಷ್ಟೀಕರಣಕ್ಕೆ ನೀಡಿರುವ ಚಾಲನೆ ಗಮನಾರ್ಹವಾಗಿದೆ. ಇದರ ಪ್ರಧಾನ ಸಂಪಾದಕನಾಗುವ ಗೌರವ ನನಗೆ ಸಂದಿತ್ತು.

ಇವೆಲ್ಲ ಅನುಭವಗಳ ಸಾರವಿಷ್ಟು: ಜ್ಞಾನ-ವಿಜ್ಞಾನಗಳಲ್ಲಿಯ ಸರ್ವ ಪ್ರಕಾರಗಳ ಅಭಿವ್ಯಕ್ತಿಗೆ ಇಂದು ಇಂಗ್ಲಿಷಿನಷ್ಟೇ ಸಮರ್ಥ ಮಾಧ್ಯಮವಾಗಿದೆ ನಮ್ಮ “ಸುಲಿದ ಬಾಳೆಯ ಹಣ್ಣಿನಂದದ” ಕನ್ನಡ. ಇಂತಿದ್ದರೂ ವ್ಯಾವಹಾರಿಕವಾಗಿ ಕನ್ನಡದ ವರ್ತಮಾನ ಸ್ಥಿತಿ ಹೇಗಿದೆ? ಒಂದೇ ಪದದಲ್ಲಿ ಹೇಳುವುದಾದರೆ ಅದು ಶೋಚನೀಯ. ಏಕೆ? ಕನ್ನಡಿಗರ ಅಭಿಮಾನ ಶೂನ್ಯತೆ, ಸರ್ಕಾರದ ಸಂಕಲ್ಪರಾಹಿತ್ಯ, ಐಟಿಬಿಟಿ ಇತ್ಯಾದಿ ವಿತ್ತಾಕರ್ಷಕ ಹುದ್ದೆಗಳ ಆಮಿಷ ಮುಂತಾದವುಗಳ ಸಂಯುಕ್ತ ತಾಡನೆಯ ವಿಷಫಲವಿದು. ಆದ್ದರಿಂದ ಕನ್ನಡ ವಿಜ್ಞಾನ ವಾಙ್ಮಯದ ಹಾಗಿರಲಿ, ಸಾಕ್ಷಾತ್ ಕನ್ನಡದ ಭವಿಷ್ಯವೇ ಇಂದು ಡೋಲಾಯಮಾನವಾಗಿದೆ: ಪರಿಕರಗಳು ಸಮೃದ್ಧವಾಗಿವೆ, ಬಾಣಸಿಗರಿಲ್ಲ; ತಯಾರಾಗಿರುವ ಅಡುಗೆ ಸವಿಯಲು ಬಾಯಿಗಳಿಲ್ಲ; ಉಂಡರೂ ಆ ವ್ಯಕ್ತಿಗೆ ಪ್ರಯೋಜನವಾಗುವ ಪರಿಸರವಿಲ್ಲ. ವಾಣಿಜ್ಯದ ಪರಿಭಾಷೆಯಲ್ಲಿ ಹೇಳುವುದಾದರೆ ಅಂಗಡಿಯ ಬಡುಗಳಲ್ಲಿ ಮಾಲುಗಳು ತುಂಬಿ ತುಳುಕುತ್ತಿವೆ, ದರ ಅಗ್ಗವಾಗಿದೆ, ಮಾರಾಟ ಸೇವೆ ಉತ್ತಮವಾಗಿದೆ, ಆದರೆ ಗಿರಾಕಿಗಳಿಲ್ಲ.

೨ ರೋಗನಿದಾನ. ಹೀಗೇಕೆ? ರಾಜ್ಯದಲ್ಲಿ ಕನಿಷ್ಠ ಎಸ್ಸೆಸೆಲ್ಸಿ ತನಕ ಶಿಕ್ಷಣ ಮಾಧ್ಯಮ ಮತ್ತು ಆಡಳಿತಭಾಷೆ ಕನ್ನಡವಾದ ಹೊರತು ಪರಿಸ್ಥಿತಿ ಸುಧಾರಿಸದು. ಮಾತ್ರವಲ್ಲ, ಕಾಲ ಸಂದಂತೆ ವಿಕೋಪಿಸುತ್ತದೆ ಕೂಡ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ, ಸಕಲ ಆಧುನಿಕ ಜ್ಞಾನಪ್ರಕಾರಗಳಿಗೂ ಸುಲಭ ಪ್ರವೇಶ ಒದಗಿಸುವ ಕೀಲಿಕೈ. ಇದರಲ್ಲಿ ಶಿಕ್ಷಣ ಪಡೆದವರಿಗೆ ಪ್ರಪಂಚಾದ್ಯಂತ ಉದ್ಯೋಗ ಮತ್ತು ವ್ಯವಹಾರಾವಕಾಶಗಳಿವೆ. ಇಂಥ ನೇರ ದಾರಿ ಬಿಟ್ಟು ಇನ್ನೂ ಅಡುಗೇಮನೆಯಿಂದ ಹೊರಬಂದಿರದ ಕನ್ನಡವನ್ನು ಈ ಕೆಲಸಕ್ಕೆ ನಿಯೋಜಿಸಿದ್ದಾದರೆ ನಮ್ಮ ದೇಶ ತೀರ ಹಿಂದೆ ಬೀಳುವುದು ಶತಸ್ಸಿದ್ಧ ಎಂಬ ಶುಷ್ಕ ತರ್ಕವನ್ನು ಅಸಂಖ್ಯ ವೇದಿಕೆಗಳಲ್ಲಿ ಕನ್ನಡಿಗರಿಂದಲೇ ಕೇಳಿ ಕೇಳಿ ನನ್ನಂತೆ ಈ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಮಗ್ನರಾಗಿರುವ ಲೇಖಕರೆಲ್ಲರಿಗೂ ತಲೆಚಿಟ್ಟು ಹಿಡಿದುಹೋಗಿದೆ.

ಎರಡನೆಯ ಮಹಾಯುದ್ಧಾಂತ್ಯದಲ್ಲಿ ನೆಲಕಚ್ಚಿದ್ದ ಜಪಾನ್ ಇಂದು ಅಮೆರಿಕ, ಇಂಗ್ಲೆಂಡ್ ಮುಂತಾದ ಮುಂದುವರಿದ ರಾಷ್ಟ್ರಗಳ ಜೊತೆ ಶಿಕ್ಷಣ ಮತ್ತು ವಾಣಿಜ್ಯ ರಂಗಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸುತ್ತಿರುವುದು ಸರಿಯಷ್ಟೆ. ಅಲ್ಲಿಯ ಶಿಕ್ಷಣ ಮಾಧ್ಯಮ ಜಪಾನೀ ಭಾಷೆ, ಇಂಗ್ಲಿಷ್ ಅಲ್ಲ! ಜನರಲ್ಲಿ ಅಸ್ಮಿತೆ ಅಂದರೆ ಸ್ವಾಭಿಮಾನ ವರ್ಧಿಸುವಂತೆ ಬಾಲ್ಯದಿಂದಲೇ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುವುದೊಂದೇ ಶ್ರೀಸಾಮಾನ್ಯ ಮಾಡಬಹುದಾದ ಕೆಲಸ. ಪ್ರಕೃತ ಸಮ್ಮೇಳನ ಈ ದಿಶೆಯಲ್ಲೊಂದು ದಿಟ್ಟ ಹೆಜ್ಜೆ.

೩ ಪರಿಹಾರ. ಹಾಗಾದರೆ ನಾವೇನು ಮಾಡಬೇಕು? ಕರ್ನಾಟಕ ಸರ್ವತ್ರ ಕನ್ನಡವನ್ನು ಆಡಳಿತ ಮತ್ತು ಶಿಕ್ಷಣ ಮಾಧ್ಯಮವಾಗಿ ಘೋಷಿಸಿ ಅನುಷ್ಠಾನಿಸುವಂತೆ ಸರ್ಕಾರವನ್ನು ಒತ್ತಾಯಪಡಿಸಬೇಕು, ಜೊತೆಯಲ್ಲೇ ನಾವು ಕನ್ನಡವನ್ನು ಸ್ವಸಂತೋಷದಿಂದ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಸಂವಹನ ಮಾಧ್ಯಮವಾಗಿ ಬಳಸಲು ಮುಂದಾಗಬೇಕು. ಕನ್ನಡ ಪುಸ್ತಕಗಳನ್ನು ಕೊಂಡು, ಓದಿ, ಮನನ ಮಾಡಿ ಅದರಲ್ಲಿ ನುಡಿಯಲು ಮತ್ತು ಬರೆಯಲು ಮುಂದಾಗಬೇಕು.

ಮಹಾಕವಿ ವಿಲಿಯಮ್ ಶೇಕ್ಸ್‌ಪಿಯರ್ (೧೫೬೪-೧೬೧೬), ಮಹಾವಿಜ್ಞಾನಿ ಮೈಖೇಲ್ ಫ್ಯಾರಡೇ (೧೭೯೧-೧೮೬೭) ಮೊದಲಾದ ಯುಗಪ್ರವರ್ತಕ ಚಿಂತನಶೀಲರು ತಮ್ಮ ತಮ್ಮ ಸೃಜನಶೀಲ ಕೃತಿಗಳನ್ನು ಮಾತೃಭಾಷೆ ಇಂಗ್ಲಿಷಿನಲ್ಲಿ ಅಭಿವ್ಯಕ್ತಿಸಲು ತೊಡಗುವ ತನಕ – ಅಂದರೆ ಸ್ಥೂಲವಾಗಿ ಕೇವಲ ಮೂರು ಶತಮಾನಗಳ ಹಿಂದೆ – ಆ ಭಾಷೆ ಕುಲೀನ ಮಂದಿಯ ವ್ಯವಹಾರ ಕ್ಷೇತ್ರವನ್ನು ಪ್ರವೇಶಿಸಿರಲಿಲ್ಲ, ‘ಅಸ್ಪೃಶ್ಯ’ವಾಗಿತ್ತು. ೯ನೆಯ ಶತಮಾನದಷ್ಟು ಪ್ರಾಚೀನದಲ್ಲೇ ಶ್ರೇಷ್ಠ ಕಾವ್ಯಗಳಿಗೆ ಮಾಧ್ಯಮವಾಗಿದ್ದ ಕನ್ನಡ (ನೃಪತುಂಗನ ‘ಕವಿರಾಜಮಾರ್ಗ’) ಇಂದು ಕರ್ನಾಟಕದಲ್ಲಿಯೇ ‘ಅಸ್ಪೃಶ್ಯ’ವಾಗಿರುವುದರ ಮುಖ್ಯ ಕಾರಣ ನಮ್ಮ ಸರ್ಕಾರದ ಮತ್ತು ಕುಲೀನರ ದಿವ್ಯ ನಿರ್ಲಕ್ಷ್ಯ ಹಾಗೂ ಘೋರ ಅವಜ್ಞೆಯ ಫಲವೆನ್ನದೆ ವಿಧಿಯಿಲ್ಲ. ಈ ಅನುಭವಜನ್ಯ ಮಾತಿನ ಧ್ವನಿ ಇದು: ಚಲಾವಣೆಗೆ ಬರದ ನಾಣ್ಯ ಸಂಪತ್ತನ್ನು ಉತ್ಪಾದಿಸಲಾರದು. ಇದು ಇಂದಿನ ಕನ್ನಡದ ಪರಿಸ್ಥಿತಿ. ಖಜಾನೆ ಭರ್ತಿ, ಆದರೆ ಮಾರುಕಟ್ಟೆ ನಾಸ್ತಿ! ಇಂಗ್ಲಿಷನ್ನು ಕಡೆಗಣಿಸಿ ಅಥವಾ ತಿರಸ್ಕರಿಸಿ ಕನ್ನಡವನ್ನು ಕಟ್ಟಿ ಎಂಬ ಖಂಡನವಾದ ನನ್ನದಲ್ಲ, ಅದೆಂದೂ ನನ್ನ ಉದ್ದೇಶವಲ್ಲ. ಅದು ಆಕಾಶಕ್ಕೆ ತೆರೆದಿರುವ ಹೆಬ್ಬಾಗಿಲು, ಕನ್ನಡವಾದರೋ ನಮ್ಮ ಅಂಗಳ, ತೋಟ, ಬಯಲುಗಳನ್ನು ನೇರ ಕಾಣಿಸುವ ಗವಾಕ್ಷಿ ಮತ್ತು ಕದ. ಎರಡೂ ವಿಶಾಲವಾಗಿ ತೆರೆದಿರುವಾಗ ಮಾತ್ರ ಜ್ಞಾನಪ್ರಕಾಶ ನಮ್ಮ ಅಂತರಂಗ ಬಹಿರಂಗಗಳನ್ನು ಉದ್ದೀಪಿಸಬಲ್ಲುದು.

ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರ ಈ ಹೇಳಿಕೆ ದಿನಾಂಕ ೨೧-೪-೨೦೦೬ರ ‘ಪ್ರಜಾವಾಣಿ’ಯಲ್ಲಿ ವರದಿ ಆಗಿದೆ: “ಪ್ರಸಕ್ತ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. . . . ಇಂಗ್ಲಿಷ್ ಲಾಬಿಗೆ ಸರ್ಕಾರ ಮಣಿಯುವುದಿಲ್ಲ.” ಇಂಥ ಭರವಸೆಗಳನ್ನು ಹಿಂದೆಯೂ ಕೇಳಿ ಮನಸ್ಸು ರೋಸಿಹೋಗಿದೆ. ಕಾರಣ, ನಿರ್ವಹಣೆ ಹಂತದಲ್ಲಿ ಇದು ನೆರವೇರದಂತೆ ಸಾಕಷ್ಟು ಮೊಸಳೆ ತಿಮಿಂಗಿಲಗಳು ಗುಟ್ಟಾಗಿ ವರ್ತಿಸುತ್ತಲೇ ಇರುತ್ತವೆ. ಪರಿಹಾರ ಒಂದೇ: ತಮಿಳು, ತೆಲುಗು, ಬಂಗಾಳಿ, ಮರಾಠಿ, ಮಲೆಯಾಳಂ, ಕೊಡವ, ತುಳು ಮೊದಲಾದ ಭಾಷಾನುಯಾಯಿಗಳಿಗೆ ತಮ್ಮ ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಮತ್ತು ಪ್ರೀತಿ ಇರುವ ಮಟ್ಟದಲ್ಲೇ ನಮಗೂ ಕನ್ನಡ ನೆಲ, ನುಡಿ ಮತ್ತು ಸಾರಗಳ ಬಗ್ಗೆ ಇರುವಂತಾಗಬೇಕು. ಈ ದಿಶೆಯಲ್ಲಿ ನಾವೆಲ್ಲರೂ ಕೂಡಿ ಚಿಂತಿಸಬೇಕು, ನಡೆಯಬೇಕು ಮತ್ತು ಗುರಿ ಸಾಧಿಸಬೇಕು.

ನಾವು ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಲೇಬೇಕು. ನನ್ನದೇ ಅನುಭವ ಕೇಳಿ. ವಿಜ್ಞಾನದ ಮುಂಚೂಣಿ ಸಂಶೋಧನ ರಂಗಗಳ ಪೈಕಿ ಒಂದಾಗಿರುವ ‘ಸಾಪೇಕ್ಷತಾ ಸಿದ್ಧಾಂತ’ ಅಥವಾ ‘ಖಭೌತವಿಜ್ಞಾನ’ ವಿಷಯಗಳನ್ನು ಕನ್ನಡದಲ್ಲಿ ನಿರೂಪಿಸುವುದು ‘ಕನ್ನದ ವಿಶ್ವಕೋಶ’ದಲ್ಲಿಯ ನನಗೂ ನನ್ನ ಸಹಕಾರ್ಯಕರ್ತರಿಗೂ ಸಾಧ್ಯವಾಗಿರುವುದು ಹೇಗೆ? ಉಭಯ ಭಾಷೆಗಳನ್ನು ನಾವು ಪ್ರೀತಿಸಿ ಅವುಗಳಲ್ಲಿ ಪ್ರಯೋಗಶಾಲಿಗಳಾಗಿರುವುದರಿಂದ ಇದು ಕೈಗೂಡಿದೆ. ಮುಖ್ಯವಾಗಿ ಆತ್ಮಾಭಿಮಾನ, ದೃಢ ಸಂಕಲ್ಪ ಮತ್ತು ಸಮರ್ಥ ನಿರ್ವಹಣೆ ಒಂದುಗೂಡಬೇಕು. ಪ್ರಸಕ್ತ ಸಮ್ಮೇಳನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನನ್ನ ವಿನಂತಿ. ತಾಯಿನುಡಿಯನ್ನು ಕಡೆಗಣಿಸಿ ಪರನುಡಿಗೆ ಶರಣಾದವನಿಗೆ ಇದು ದಕ್ಕದು, ಇದು ಉಳಿಯದು. ಹೀಗಲ್ಲದೇ ತಾಯಿನುಡಿಯನ್ನು ಪ್ರೀತಿಸುತ್ತ ಪರನುಡಿಯನ್ನು ಕಲಿಯುವಾತನಿಗೆ ಅದು ಒಲಿಯುವುದು, ಇದು ಹರಸುವುದು! ಮೊದಲನೆಯ ಸಂದರ್ಭದಲ್ಲಿ ಉಭಯ ನಷ್ಟ, ಎರಡನೆಯದರಲ್ಲಿ ಉಭಯ ಲಾಭ.

ಕನ್ನಡ ಪುಸ್ತಕಗಳ ಮಾರಾಟ

ಇಂದು ಕನ್ನಡ ಪುಸ್ತಕ ಮತ್ತು ಲೇಖನಗಳ ‘ಉತ್ಪಾದನೆ’ (ಬೇಕೆಂದೇ ಈ ವಾಣಿಜ್ಯ ಪರಿಭಾಷೆ ಬಳಸಿದ್ದೇನೆ) ಭೂರಿಯಾಗಿದೆ. ಆದರೆ ಆ ಮಟ್ಟದಲ್ಲಿ ಇವುಗಳ ಹೂರಣ ಮತ್ತು ಕನ್ನಡದ ಸಂವಹನ ಕೌಶಲ ಅಭಿವರ್ಧಿಸಿದೆಯೇ ಎಂದು ಚಿಕಿತ್ಸಕವಾಗಿ ಪರಿಶೀಲಿಸಿದರೆ ದೊರೆಯುವ ಉತ್ತರ ನಿರಾಶಾದಾಯಕ. ‘ಉದಯವಾಣಿ’ ದೈನಿಕದ ದಿನಾಂಕ ೨೩-೪-೨೦೦೬ರ ಸಂಚಿಕೆಯಲ್ಲಿ ‘ವಿಶ್ವ ಪುಸ್ತಕ ದಿನ: ಕನ್ನಡ ಮೌಲ್ಯಮಾಪನ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಲೇಖನ ವಾಸ್ತವತೆಗೆ ಹಿಡಿದಿರುವ ಕನ್ನಡಿ. ಉದ್ಧೃತಾಂಶ: “ಲಂಕೇಶ್ ಪತ್ರಿಕೆ’ಯ ಯಶಸ್ಸಿನಿಂದ ತೊಡಗಿ ಕನ್ನಡದಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯರಚನೆ ಒಂದು ಅನಾರೋಗ್ಯಕರ ಒಪ್ಪಂದ ಮಾಡಿಕೊಂಡಂತಿವೆ. ವಿಮರ್ಶೆ, ವೈಚಾರಿಕತೆಗಳು ಬಿಡಿ, ಸರ್ಜನಶೀಲ ಸಾಹಿತ್ಯವೂ ವಸ್ತುನಿಷ್ಠತೆಗಿಂತಲೂ ಸನ್ನಿವೇಶದ ಅವಸರಕ್ಕೆ, ಕ್ಷಣಿಕ ಬೆಡಗಿಗೆ ದುಡಿದು ಒಂದು ಓದಿಗೇ ಜೀವ ಕಳೆದುಕೊಳ್ಳುತ್ತಿವೆ. ನಾಲ್ಕು ದಿನ ಯಾವ್ಯಾವ ಪುಸ್ತಕಕ್ಕೋ ಮುನ್ನುಡಿ ಬರೆದವನು ಐದನೇ ದಿನ ತನ್ನ ಮುನ್ನುಡಿ ಸಂಕಲನ ಪ್ರಕಟಿಸುವಂತಾಗುವುದು ಇದರ ಮುಖ್ಯಲಕ್ಷಣ. ಗೋಷ್ಠಿಯಿಂದ ಗೋಷ್ಠಿಗೆ, ವಿಶೇಷ ಸಂಚಿಕೆಯಿಂದ ವಿಶೇಷ ಸಂಚಿಕೆಗೆ ಹಾರುವ ಕವಿಯ ಸಂಕಲನಗಳು, ಕಮ್ಮಟ ಸಮ್ಮೇಳನಗಳ ಪ್ರಬಂಧ ಒಕ್ಕಟ್ಟುಗಳು, ಕಥಾ-ಕಾದಂಬರಿ ಸ್ಪರ್ಧೆ, ವಿವಿಧ ವಿಷಯಕ ಪ್ರಶಸ್ತಿ, ನಿಧಿ, ಬಹುಮಾನ ಮುಂತಾದವುಗಳಿಂದ ಪ್ರಚೋದಿತ (ಮತ್ತು ಅಂಥವುಗಳಲ್ಲಿ ವಿಜೇತವೂ ಆಗಿರಬಹುದಾದರೂ ಅದು ಗುಣಸೂಚಕವಾಗಿರಬೇಕಾಗಿಲ್ಲ; ಪ್ರವೇಶಪತ್ರಗಳ ಮಿತಿನಿರ್ದೇಶಕವಾಗಿರಬಹುದು) ಕೃತಿಗಳು ಭರಪೂರ ಹರಿದಿವೆ. ಅಧಿಕಾರಾವಧಿಯ ಮುಕ್ತಾಯದ ಕಾಲಕ್ಕೆ ಸಾಧನೆಗಳ ಪಟ್ಟಿ ಬೆಳೆಸಲು ಓರ್ವ ಅಧ್ಯಕ್ಷ ತುರ್ತಾಗಿ ತಂದ ಅಸಂಖ್ಯ ಪ್ರಕಟಣೆಗಳು, ಕುವೆಂಪು ಜನ್ಮ ಶತಾಬ್ದಿಯ ವೇಳೆಗೆ ಓರ್ವ ಪ್ರಕಾಶಕ ಒಮ್ಮೆಗೇ ನೂರು ಪ್ರಕಟಣೆಗಳನ್ನು ಚಚ್ಚಿಹಾಕಿದ್ದು ಇಲ್ಲಿ ಉಲ್ಲೇಖನಾರ್ಹ. ಇಂಥಲ್ಲೂ ಲೇಖಕನ ಸ್ಥಾನ ಮಾನಗಳು, ಪ್ರಕಾಶಕನ ಸಂಪರ್ಕಗಳು ಪುಸ್ತಕಗಳ ವ್ಯಾಪಾರೀ ಯಶಸ್ಸನ್ನು ನಿರ್ಧರಿಸುವುದುಂಟು. ಹಾಗಾಗಿ ಮುದ್ರಿತ ಪ್ರತಿಗಳು ಮುಗಿದಿವೆ ಅಥವಾ ಮರುಮುದ್ರಣ ಕಂಡಿವೆ ಎಂದ ಮಾತ್ರಕ್ಕೆ ಅವು ಘನ ಕೃತಿಗಳೇ ಆಗಿರಬೇಕೆಂದಿಲ್ಲ.”

ಕನ್ನಡ ಕೃತಿಗಳ ಸಂಖ್ಯಾಮಹಾಪೂರ, ಆದರೆ ಸರಾಸರಿ ಗುಣಮಟ್ಟ ಕುಸಿತ ಕುರಿತಂತೆ ಬರೆದಿರುವ ತ್ರಿಪದಿ ಗಮನಿಸಿ (ಸರ್ವಜ್ಞನ ಕ್ಷಮೆಕೋರಿ)
ಅಚ್ಚು ಸಾಲೆಗಳುಂಟು ವೆಚ್ಚಕ್ಕೆ ಹೊನ್ನುಂಟು
ಮೆಚ್ಚಿ ಹೊಗಳುವ ವಂದಿಮಾಗಧರ ದಂಡುಂಟು
ಹಚ್ಚು ಸ್ವರ್ಗಕ್ಕೆ ಕಿಚ್ಚು ಕಾವ್ಯಜ್ಞ

ಕನ್ನಡದ ಗುಣಮಟ್ಟ ಕುಸಿಯುವಲ್ಲಿ ಗ್ರಂಥಗಳ ಸಗಟು ಖರೀದಿ, ಅಕಾಡೆಮಿಗಳ ಮತ್ತು ಪ್ರಾಧಿಕಾರಗಳ ಸಹಾಯಧನವೆಂಬ ಮರೀಚಿಕೆ, ಪ್ರಸಿದ್ಧ (?) ಲೇಖಕನ ಸಮಗ್ರ ಕೃತಿ ಪ್ರಕಟಣೆ ಮುಂತಾದ (ಧೃತ) ರಾಷ್ಟ್ರೀಕೃತ ನೀತಿಯ (ದುಷ್) ಪಾತ್ರ ಗಮನಾರ್ಹ. ನಾನು ವಿಶ್ವವಿದ್ಯಾಲಯ ಪಠ್ಯಪುಸ್ತಕ ಪ್ರಕಾಶನ, ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸರ್ಕಾರ ಕೃಪಾಪೋಷಿತ ಸಂಸ್ಥೆಗಳ ಸದಸ್ಯನಾಗಿದ್ದಾಗ ಗಳಿಸಿದ ಅನುಭವವಿದು. ಜನರ ಸರಾಸರಿ ನೈತಿಕ ಮಟ್ಟ ತೀವ್ರವಾಗಿ ಕುಸಿದಿರುವ ಈ ದಿನಗಳಲ್ಲಿ ಪ್ರತಿಯೊಂದು ಘನೋದ್ದೇಶಿತ ಯೋಜನೆಯೂ ಭ್ರಷ್ಟಾಚಾರದ ಮಡುವಿನಲ್ಲಿ ಸಿಕ್ಕಿಹಾಕಿಕೊಂಡು ನವೆದು ನಶಿಸುವುದೊಂದು ವಿಪರ್ಯಾಸ.

ಕನ್ನಡದಲ್ಲಿ ವಿಜ್ಞಾನ ವಾಙ್ಮಯ

ಆಧುನಿಕ ಕನ್ನಡ ವಿಜ್ಞಾನ ವಾಙ್ಮಯದ ಪಿತಾಮಹರೆಂದೇ ಖ್ಯಾತರಾದ ಆರ್.ಎಲ್. ನರಸಿಂಹಯ್ಯನವರು ೪೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (ಕಾರವಾರ, ೧೯೬೫) ಈ ವಿಚಾರ ಕುರಿತಂತೆ ತುಸು ಲಘುವಾಗಿ ಆದರೆ ವೇದನೆ ಸಹಿತ ನೀಡಿದ ಉಪಮೆ ನೆನಪಿಗೆ ಬರುತ್ತದೆ. ‘ಐಸ್ಲೆಂಡಿನ ಸರ್ಪಗಳು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಬೇಕಾಗಿದ್ದ ಒಬ್ಬ ಪ್ರಾಣಿವಿಜ್ಞಾನ ಸಂಶೋಧಕ, “ಮಹನೀಯರೇ ಐಸ್ಲೆಂಡಿನಲ್ಲಿ ಹಾವುಗಳಿಲ್ಲವಾದ್ದರಿಂದ ಇದರ ಬಗ್ಗೆ ನಾನಿನ್ನೇನನ್ನೂ ಹೇಳಬೇಕಾಗಿಲ್ಲ” ಎಂದುಸುರಿ ಹಾಯಾಗಿ ಕುಳಿತುಬಿಟ್ಟನಂತೆ! ಸಂಖ್ಯಾ ದೃಷ್ಟಿಯಿಂದ ಹೇಳುವುದಾದರೆ ಇಂದಿನ ಪರಿಸ್ಥಿತಿ ಹಾಗಿಲ್ಲ, ತುಂಬ ಸುಧಾರಿಸಿದೆ. ಆದರೆ ಗುಣಾತ್ಮಕವಾಗಿ ಅದೇ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲವೆಂದು ವಿಷಾದಪೂರ್ವಕವಾಗಿ ಹೇಳಬೇಕಾಗುತ್ತದೆ. ಕಾರಣವೇನು? ಮೂಲತಃ, ಈ ಕ್ಷೇತ್ರ ನಮ್ಮ ಯುವಧೀಮಂತರಿಗೆ ಎಳ್ಳಷ್ಟೂ ಆಕರ್ಷಣೀಯವಾಗಿಲ್ಲ; ಕನ್ನಡ ವಿಜ್ಞಾನ ವಾಙ್ಮಯಕ್ಕೆ ಬೇಡಿಕೆ ಇಲ್ಲ; ಇದರಲ್ಲಿ ಕೆಲಸಮಾಡಿಯೇ ತೀರುತ್ತೇನೆಂದು ಪಣತೊಟ್ಟು ಕಳಕ್ಕಿಳಿದರೆ ಸಮಾನಮನಸ್ಕ ಕಾರ್ಯಕರ್ತರು ಸಿಕ್ಕುವುದಿಲ್ಲ. ‘ಕನ್ನಡ ವಿಶ್ವಕೋಶ’ದ ವಿಜ್ಞಾನ ಸಂಪಾದಕನಾಗಿದ್ದ ನನ್ನ ಕಾರ್ಯಾನುಭವವಿದು. ಪರಿಹಾರವೇನೆಂಬುದನ್ನು ಪ್ರತ್ಯೇಕವಾಗಿ ಚರ್ಚಿಸಿದ್ದೇನೆ.

ಕನ್ನಡಕ್ಕೆ ಅಭಿಜಾತ ಅಂತಸ್ತು

ಕನ್ನಡ ಅಭಿಜಾತ ಭಾಷೆಯೇ ಅಲ್ಲವೇ (‘ಅಭಿಜಾತ’ ಕ್ಕೆ ‘ಶಾಸ್ತ್ರೀಯ’ ಎಂಬ ತಪ್ಪು ಪದ ಬಳಕೆಗೆ ಬಂದಿದೆ) ಎಂಬುದು ತೀವ್ರ ಚರ್ಚಾವಿಷಯ. ಇದು ಸಕಾರಣವಾಗಿ ಕನ್ನಡಿಗರಲ್ಲಿ ಸಾಕಷ್ಟು ಭಾವೋದ್ರೇಕಕ್ಕೂ ಕಾರಣವಾಗಿದೆ. ಯಾವುದೇ ಮಾನದಂಡ ಬಳಸಿದರೂ ಕನ್ನಡ ಎಲ್ಲ ರೀತಿಗಳಲ್ಲಿಯೂ ಅಭಿಜಾತ ಪಟ್ಟ ಪಡೆಯಲು ಅರ್ಹವಾಗಿದೆ. ಇದನ್ನು ಅಧಿಕೃತವಾಗಿ ಘೋಷಿಸಬೇಕಾದ ಹೊಣೆ ಕೇಂದ್ರ ಸರ್ಕಾರದ್ದು. ಹಾಗೆ ಮಾಡಿದ್ದಾದರೆ ಅಖಿಲ ಭಾರತ ಮಟ್ಟದಲ್ಲಿ ಕನ್ನಡದ ಅಂತಸ್ತು ಏರುವುದರ ಜೊತೆಗೆ ಇದರ ಸರ್ವಾಂಗ ಸುಂದರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಮೃದ್ಧ ಆರ್ಥಿಕ ಸಹಾಯವೂ ಲಭಿಸಲಿದೆ. ಸಾಧ್ಯವಾದರೆ ಈ ಬಗ್ಗೆ ಒಂದು ಪ್ರತ್ಯೇಕ ವಿಚಾರಗೋಷ್ಠಿ ಏರ್ಪಡಿಸಿ ಯುಕ್ತ ಠರಾವನ್ನು ಅಂಗೀಕರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಿಳಿಯಪಡಿಸುವುದು ಜರೂರಿನ ಅಗತ್ಯ. ಮಗು ಅಳದಿದ್ದರೆ ಖುದ್ದು ತಾಯಿಯೇ ಹಾಲೂಡಲು ಮುಂಬರುವುದಿಲ್ಲ ಅಲ್ಲವೇ?

ಕರ್ನಾಟಕ ರಾಜ್ಯದ ವ್ಯಾಪ್ತಿ

ಮಹಾಜನ ವರದಿಯನ್ನು ಈಗಲಾದರೂ ತದ್ವತ್ತಾಗಿ ಅನುಷ್ಠಾನಿಸುವಂತೆ ಮತ್ತು ರಾಜ್ಯದ ವ್ಯಾಪ್ತಿಯನ್ನು ಅಂತಿಮವಾಗಿ ತೀರ್ಮಾನಿಸುವಂತೆ ನಾವೆಲ್ಲರೂ ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕರ್ನಾಟಕದಲ್ಲಿಯ ಎಲ್ಲ ಭಾಷೆಗಳೂ ಸಹೃದಯ ಪರಿಸರದಲ್ಲಿ ತಮ್ಮ ತಮ್ಮ ಬೆಳೆವಣಿಗೆ ಕಂಡುಕೊಳ್ಳುವುದೊಂದೇ ಸರಿಯಾದ ಪ್ರಾಯೋಗಿಕ ಮಾರ್ಗ. ಈ ವಿಷಯದ ಮೇಲೆ ಕೂಡ ಪ್ರತ್ಯೇಕ ಗೋಷ್ಠಿ ಏರ್ಪಡಿಸುವುದು ಅಪೇಕ್ಷಣೀಯ.

ಕೊಡಗಿನಲ್ಲಿ ಕನ್ನಡ

ಉತ್ತರ ಕನ್ನಡದ ರಾಮಕೃಷ್ಣ ಜೋಶಿ ಎನ್ನುವವರು (ಇವರು ಡಾಕ್ಟೊರೇಟ್ ಪದವೀಧರರು, ನಿವೃತ್ತ ಕನ್ನಡ ಅಧ್ಯಾಪಕರು, ಉತ್ತಮ ಚಿಂತಕರು ಮತ್ತು ಮೈಸೂರು ನಿವಾಸಿಗಳು) ಇದೇ ದಿನಾಂಕ ೧೮ರಂದು ನನಗೆ ಬರೆದಿರುವ ಪತ್ರದಿಂದ ಎರಡು ಸಾಲುಗಳನ್ನು ಉಲ್ಲೇಖಿಸಬಯಸುತ್ತೇನೆ: “ನಾನು ೧೯೬೮ರಿಂದ ೧೯೭೬ರವರೆಗೆ ವಿರಾಜಪೇಟೆಯ ಬಿ. ಶೆಟ್ಟಿಗೇರಿ ಎಂಬಲ್ಲಿಯ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತನಾಗಿ ಕಾರ್ಯ ನಿರ್ವಹಿಸಿದ್ದೆ. ಕುಗ್ರಾಮವಾದ ಅಲ್ಲೂ ಎಸ್ಸೆಸೆಲ್ಸಿಯಲ್ಲಿ ಕನ್ನಡದಲ್ಲಿ ಶೇಕಡಾ ೯೫ಕ್ಕಿಂತ ಹೆಚ್ಚಿನ ಮಕ್ಕಳು ತೇರ್ಗಡೆಯಾಗುತ್ತಿದ್ದರು. ಅದೇ ನಾನು [ಮೈಸೂರಿನ] ಫಿಲೊಮಿನಾ ಶಾಲೆಗೆ ಬಂದ ಮೇಲೆ ಶೇಕಡಾ ೮೦ ಫಲಿತಾಂಶ ದಾಟಿಸಲಾಗಲಿಲ್ಲ. ಅಂದರೆ ಕೊಡಗಿನ ಮಕ್ಕಳು ಕನ್ನಡದಲ್ಲಿ ಆಸಕ್ತಿ ಇರುವವರೂ ಶುದ್ಧ ಉಚ್ಚಾರಣೆಯವರೂ ವಿಶಿಷ್ಟವಾದ ಜೀವನಾನುಭವ ಉಳ್ಳವರೂ ಗುರುಗಳಿಗೆ ಗೌರವ ಕೊಡುವವರೂ ಆಗಿದ್ದರು. ಆದರೆ ಮನೆಯಲ್ಲಿ, ತೋಟದಲ್ಲಿ, ಗದ್ದೆಯಲ್ಲಿ, ಹಬ್ಬಹುಣ್ಣಿಮೆಯಲ್ಲಿ ಕನ್ನಡ ಭಾಷೆಯ ಬಳಕೆ ಕೊಡವರಲ್ಲಿ ಇಲ್ಲದುದರಿಂದ ಅವರಿಂದ ಸೃಜನಶೀಲ ಬರವಣಿಗೆ ಅಷ್ಟಾಗಿ ಬರಲಿಲ್ಲ.”

ಈ ಕೊನೆಯ ವಾಕ್ಯಕ್ಕೆ ನಾನೊಂದು ಷರಾ ಸೇರಿಸಲು ಇಚ್ಛಿಸುತ್ತೇನೆ: ತುಸುಕಾಲ ‘ಕೊಡಗು’ ವಾರಪತ್ರಿಕೆಯ ಸಂಪಾದಕರಾಗಿದ್ದ ಸಿ.ಎಂ. ಪೂಣಚ್ಚ (ಮುಂದೆ ಕೊಡಗು ರಾಜ್ಯದ ಮುಖ್ಯಮಂತ್ರಿ), ದೀರ್ಘಕಾಲ ಸಂಪಾದಕರಾಗಿದ್ದ ಬಿ.ಡಿ. ಗಣಪತಿ, ಇವರ ತಮ್ಮ ಬಿ.ಡಿ. ಸುಬ್ಬಯ್ಯ, ಬಿಟ್ಟಿಯಂಡ ದೇವಕಿಯಮ್ಮ, ಪದ್ಮಾವತಿ ರಸ್ತೋಗಿ, ಐ.ಮಾ. ಮುತ್ತಣ್ಣ, ಬಿ.ಎಸ್. ಕುಶಾಲಪ್ಪ, ಕಲಿಯಾಟಂಡ ಬಿ. ಗಣಪತಿ ಮೊದಲಾದವರ ಮನೆ ಮಾತು ಕೊಡವ ಭಾಷೆ, ಆದರೆ ಇವರೆಲ್ಲರ ಸೃಜನಶೀಲ ಭಾವನೆಗಳ ಹಾಗೂ ಉಪನ್ಯಾಸಗಳ ಸಂವಹನ ಭಾಷೆ ಕನ್ನಡವೆಂಬುದನ್ನು ಸ್ವತಃ ಕಂಡು ಕೇಳಿ ಮತ್ತು ಓದಿ ಅರಿತಿದ್ದೇನೆ. ಕೆ. ಕುಶಾಲಪ್ಪ ಗೌಡರ ಮನೆಮಾತು ಅರೆಗನ್ನಡ. ಇವರು ಮದ್ರಾಸು ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದಲ್ಲಿ ಡಾಕ್ಟೊರೇಟ್ ಪದವಿ ಗಳಿಸಿದರು. ಕನ್ನಡದಲ್ಲಿ ಕವಿ ಮತ್ತು ಲೇಖಕ, ಅಂತೆಯೇ ನನ್ನ ಸಹಪಾಠಿ ಎಂ.ಬಿ. ಶಿವರಾಯ ಮತ್ತು ಈಚೆಗೆ ಬೆಳಕಿಗೆ ಬಂದಿರುವ ಬಿ.ಆರ್. ಜೋಯಪ್ಪ ಎಂಬ ಯುವ ಬರೆಹಗಾರ (ಉಭಯರದೂ ಮನೆಮಾತು ಅರೆಗನ್ನಡ) ಕನ್ನಡದಲ್ಲಿ ಒಳ್ಳೆಯ ಸೃಜನಶೀಲ ಲೇಖಕರು. ಕನ್ನಡದ ಉದ್ದಾಮ ಲೇಖಕ ವಿ.ಎಸ್. ರಾಮಕೃಷ್ಣ ಮತ್ತು ಮುಂಚೂಣಿ ಲೇಖಕ-ಪತ್ರಕರ್ತ-ಗಮಕಿ ಬಿ.ಎಸ್. ಗೋಪಾಲಕೃಷ್ಣ ಮೊದಲಾದವರ ತಾಯಿನುಡಿ ತುಳು. ಕನ್ನಡ ಪ್ರಾಧ್ಯಾಪಕ ಕೂವರ್ಕೊಲ್ಲಿ ಕರುಣಾಕರನ್ ಅವರ ಮನೆಮಾತು ಮಲೆಯಾಳಂ. ನನ್ನ ಬಾಲ್ಯದ ದಿನಗಳಂದು ಯಂತ್ರ ರಿಪೇರಿಗಳಲ್ಲಿ ಅಡಿಸನ್ ಎಂದೇ ಜನಪ್ರಿಯರಾಗಿದ್ದ ಆದಮ್ ಸಾಬರ ಬಾಯಿಯಿಂದ ಮಾತುಮಾತಿಗೆ ಸರ್ವಜ್ಞನ ನುಡಿ ಅಥವಾ ಬಸವಣ್ಣನ ವಚನ ಮಿಡಿಯುತ್ತಿದ್ದುದು ಈಗಲೂ ನೆನಪಿನಲ್ಲಿದೆ. ಕೊಡಗಿನಲ್ಲಿ ಕನ್ನಡ ಕಟ್ಟಿ ಬೆಳೆಸಿದವರ ಸಾಲಿನಲ್ಲಿ ಕೆ. ಸಚ್ಚಿದಾನಂದಯ್ಯ (ಚಿರಂತನ), ಎನ್. ಮಹಾಬಲೇಶ್ವರ ಭಟ್ಟ, ಯದುರ್ಕಳ ಶಂಕರನಾರಾಯಣ ಭಟ್ಟ, ಭಾರತೀಸುತ, ಕೆ.ಪಿ. ಬಾಲಸುಬ್ರಹ್ಮಣ್ಯ; ಕಾಲೇಜು ಅಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿ ರಾವ್, ಎನ್. ಸುಬ್ರಹ್ಮಣ್ಯಂ ಮತ್ತು ಕೆ. ರಾಮಕೃಷ್ಣ ಉಡುಪ; ಎಂ.ಬಿ. ಅಪ್ಪಯ್ಯ ಮತ್ತು ಸಿ.ಎಸ್. ಪೊನ್ನಪ್ಪ (ಈ ಇಬ್ಬರು ಮಹನೀಯರು ಒಬ್ಬರಾದನಂತರ ಇನ್ನೊಬ್ಬರು ‘ಕೊಡಗು ಸಹಕಾರ ಬಂಧು’ ಮಾಸಿಕದ ಸಂಪಾದಕರಾಗಿದ್ದರು), ‘ಲೋಕರಹಸ್ಯ’ ಮಾಸ ಪತ್ರಿಕೆ (ವಿರಾಜಪೇಟೆಯ ಜಿ.ಎಚ್ ಹೌಸ್ ಪ್ರೆಸ್), ‘ಸತ್ಯಾರ್ಥಿ’ ಮಾಸಪತ್ರಿಕೆ (ಪೊನ್ನಂಪೇಟೆ), ‘ಕೊಡಗು’ ದೈನಿಕ, ‘ಶಕ್ತಿ’ ದೈನಿಕ, ‘ನಂದಾದೀಪ’ ಮಾಸಪತ್ರಿಕೆ ಮುಂತಾದ ವ್ಯಕ್ತಿಗಳ ಹಾಗೂ ಪತ್ರಿಕೆಗಳ ಸೇವೆ ಗಮನಾರ್ಹ. ನನ್ನ ನೆನಪು ಮಸಕಾಗಿದೆ, ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವ್ಯಾಪಕ ಸಂಶೋಧನೆ ಕೈಗೊಳ್ಳಬೇಕೆಂದು ನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.

ಇವೆಲ್ಲ ನಿದರ್ಶನಗಳ ಸಾರವಿಷ್ಟು: ಕೊಡಗಿನಲ್ಲಿ ಕನ್ನಡ ಕಾವೇರಿಯ ಉಪನದಿಗಳು ಕೊಡವ, ಅರೆಗನ್ನಡ, ಉರ್ದು, ತುಳು, ಮಲೆಯಾಳಂ ಮುಂತಾದ ಸ್ಥಳೀಯ ನಿವಾಸಿಗಳ ಮನೆಮಾತುಗಳು. ಅಂದಿನ ಅಂಥ ಸಾಮರಸ್ಯ ಇಂದು – ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವದ ಪರ್ವಕಾಲದಲ್ಲಿ – ಉಳಿದಿಲ್ಲ ಎನ್ನುವುದು ವಿಷಾದದ ಸಂಗತಿ.

ಸಮಾರೋಪ

ತಾವೆಲ್ಲರೂ ಮನನ ಮಾಡಿ ಯುಕ್ತ ನಿರ್ಧಾರ ತಳೆದು ತದನುಸಾರ ವರ್ತಿಸಲು ನಾನು ತಮ್ಮ ಮುಂದೆ ಈ ಹತ್ತು ಪ್ರತಿಜ್ಞೆಗಳನ್ನು ನಿವೇದಿಸಬಯಸುತ್ತೇನೆ:
೧ ಕನ್ನಡವನ್ನು ವ್ಯಾಕರಣಬದ್ಧವಾಗಿ ಮತ್ತು ಅರ್ಥಶುದ್ಧವಾಗಿ ಕಲಿತು ಸಾರ್ವಜನಿಕ ವ್ಯವಹಾರಗಳಲ್ಲಿ ಪ್ರಯೋಗಿಸುತ್ತೇನೆ.
೨ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ಯನ್ನು ಮನಃಪೂರ್ವಕವಾಗಿ ಪ್ರೀತಿಸಿ ಗೌರವಿಸುತ್ತೇನೆ.
೩ ಕನ್ನಡದಲ್ಲಿ ಪ್ರಕಟವಾಗಿರುವ ಅಭಿಜಾತ ಕೃತಿಗಳನ್ನು – ಕುಮಾರವ್ಯಾಸ, ವಚನ ಮತ್ತು ಹರಿದಾಸ ವಾಙ್ಮಯ, ರಾಮಾಯಣ, ಮಹಾಭಾರತಾದಿ ಗ್ರಂಥಗಳು ಇತ್ಯಾದಿ ಅಭ್ಯಸಿಸುತ್ತೇನೆ.
೪ ಸೋದರ ಭಾಷೆಗಳಲ್ಲಿಯ ಶ್ರೇಷ್ಠ ಗ್ರಂಥಗಳ ಸಾರ ಗ್ರಹಿಸುತ್ತ ಪ್ರಯತ್ನಶೀಲನಾಗುತ್ತೇನೆ.
೫ ಇಂಗ್ಲಿಷನ್ನು ಇಷ್ಟೇ ನಿಷ್ಠೆಯಿಂದ ಕಲಿತು ಅದರಲ್ಲಿಯೂ ಪ್ರಾವೀಣ್ಯ ಗಳಿಸುತ್ತೇನೆ.
೬ ಕನ್ನಡ ಸಂಸ್ಕೃತಿಯನ್ನು ರಕ್ಷಿಸಿ ಪೋಷಿಸಿ ಬೆಳೆಸಲು ಬದ್ಧನಾಗಿದ್ದೇನೆ.
೭ ಕನ್ನಡ ಪತ್ರಿಕೆಗಳನ್ನೂ ಪುಸ್ತಕಗಳನ್ನೂ ಖರೀದಿಸಿ ಓದುತ್ತೇನೆ.
೮ ಸಾರ್ವಜನಿಕ ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸುತ್ತೇನೆ.
೯ ನಾವೆಲ್ಲರೂ ಒಂದೇ, ನಾವು ಕನ್ನಡಿಗರು ಎಂಬ ಭಾವದಿಂದ ಸದಾ ಉದ್ದೀಪಿತನಾಗಿರುತ್ತೇನೆ.
೧೦ “ಎಲ್ಲಾದರೂ ಇರು, ಎಂತಾದರೂ ಇರು, ಕನ್ನಡವಾಗಿರು” ಎಂಬ ಕುವೆಂಪುವಾಣಿಗೆ ಬದ್ಧನಾಗಿರುತ್ತೇನೆ.

ಸಮಾರೋಪವಾಗಿ ಮಂಜೇಶ್ವರ ಗೋವಿಂದ ಪೈಗಳ ‘ಕನ್ನಡದ ಮೊರೆ’ ಎಂಬ ಲೇಖನ ಸಂಕಲನದಿಂದ ಇದೇ ಶೀರ್ಷಿಕೆಯ ಪ್ರಬಂಧದ ಕೊನೆಯ ಪರಿಚ್ಛೇದವನ್ನು ಉಲ್ಲೇಖಿಸ ಬಯಸುತ್ತೇನೆ: “ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕುತಾಯಿ, ನನ್ನನ್ನು ಸಾಕಿದ ದಾಯಿ. ಕೊಂಕಣಿಯಲ್ಲಿ ಹೆಸರಿಗೆ ತಕ್ಕ ಸಾಹಿತ್ಯವಿದ್ದರೆ ಸಾಕಿತ್ತು, ಫ್ರಾನ್ಸ್ ದೇಶದ ಪ್ರೊವಾಂಸ್ ಎಂಬ ತೆಂಕಣ ಜಿಲ್ಲೆಯವನಾದ ಫ್ರೆಡರಿಕ್ ಮಿಸ್ತ್ರಾಲ್ ಎಂಬ ಕವಿ ಫ್ರೆಂಚ್ ಭಾಷೆಯಲ್ಲಿ ವಿಪುಲವೂ ಜಗದ್ವಿಖ್ಯಾತವೂ ಆದ ಸಾಹಿತ್ಯವಿದ್ದರೂ ಅದರಲ್ಲಿ ರಚಿಸದೆ ಅದರಿಂದ ಭಿನ್ನವಾದ ತನ್ನ ತಾಯಿನುಡಿಯಾದ ಪ್ರೊವೆಂಸಾಲ್ ಭಾಷೆಯಲ್ಲಿ ತಾನೆ ತನ್ನ ಕೃತಿಗಳನ್ನು ರಚಿಸಿದಂತೆ, ನಾನೂ ನನ್ನ ತಾಯ್ನುಡಿಯಲ್ಲಿ ತಾನೆ ರಚಿಸುತ್ತಿದ್ದೆನೇನೋ. ಆದರೆ ತಾಯಿಯ ಮೊಲೆಯಲ್ಲಿ ಹಾಲಿಲ್ಲ, ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ಹಾಕಿದಳು. ಈ ದಾಯಿಯಾದರೆ ಪಯಸ್ವಿನಿ. ಎಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿಯೂ ಮತ್ತೂ ಬತ್ತದ, ದೇವರ ದಯದಿಂದ ಸರ್ವದಾ ಬತ್ತಬಾರದ, ಸದಾಸ್ನೇಹಿ. ತನ್ನ ಮೊಲೆಯನ್ನು ಆಕೆ ತಾಯಿಗೂ ಮಿಕ್ಕ ಅಳ್ತಿಯಿಂದ ನನಗೆ ಉಣಿಸಿದಳು. ಆಕೆಯ ಆ ಅಕ್ಕರೆ ಸಾಲವನ್ನು ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ. ತಾಯೀ, ನೀನು ನನ್ನಲ್ಲಿಟ್ಟ ಮಮತೆಗೂ ನಾನು ನಿನಗೆ ಸಲ್ಲಿಸುತ್ತಿರುವ ಪ್ರತಿ ಮಮತೆಗೂ ಸರ್ವಥಾ ಎಣೆಯಿಲ್ಲ. ನೀನು ನನಗೆ ತರುವಿ ಎಂದರೆ ಅಮೃತದಂಥಾ ಮೊಲೆಹಾಲು, ನಾನು ನಿನಗೆ ತರುವೆನೆಂದರೆ ನಿನ್ನ ಕಾಲುಂಗುಟವನ್ನು ಕೂಡ ತೊಳೆಯಸಾಲದ ಕಣ್ಣೀರು. ಬೇರೆ ಏನಿದೆ ನನ್ನಲ್ಲಿ? ಅವ್ವಾ, ಅದರಿಂದ ತಾನೆ ತೃಪ್ತಳಾಗು.”

ಮಂಜೇಶ್ವರರಂತಲ್ಲದೆ ನನ್ನ ಜನ್ಮದಾತೆ ಮತ್ತು ಶಿಕ್ಷಣಮಾತೆ ಎರಡೂ ಕನ್ನಡವಾಗಿದ್ದುದೊಂದು ಭಾಗ್ಯ. ನಿತ್ಯ ಜೀವನದಲ್ಲಿ ಕೊಡವ ಸಂಸ್ಕೃತಿಯನ್ನು ಉಸಿರಾಡಿದೆ. ‘ಪಟ್ಟೋಲೆ ಪಳಮೆ’ ಗ್ರಂಥವನ್ನು ವಿಶ್ವವಿದ್ಯಾನಿಲಯದಿಂದ ಪ್ರಕಾಶಿಸುವ ಸಂದರ್ಭದಲ್ಲಿ ಅಮೂಲಾಗ್ರ ಪಠಿಸಿ ಆ ಭಾಷೆಯ ಸೊಗಡನ್ನು ಹೀರುವ ಭಾಗ್ಯವೂ ಒದಗಿತು. ನಾನು ಇಂಗ್ಲಿಷನ್ನು ಕೇವಲ ಸಾಹಿತ್ಯವಾಗಿ ಓದಲಿಲ್ಲ, ಬದಲು ನನ್ನ ಅಧ್ಯಯನ ವಸ್ತುವಾದ ಗಣಿತ ವಿಜ್ಞಾನದಲ್ಲಿ ಪ್ರಾವೀಣ್ಯ ಗಳಿಸಲು ಅಭ್ಯಸಿಸಿದೆ, ಮತ್ತು ವೃತ್ತಿ ಜೀವನದಲ್ಲಿ ಅದರ ಮೂಲಕವೇ ವ್ಯವಹರಿಸಿದೆ. ಇದು ಮೂರನೆಯ ಭಾಗ್ಯ. ಪುರಂದರದಾಸರ ಜೊತೆ ದನಿಗೂಡಿಸಿ ಹಾಡುತ್ತೇನೆ, “ಇದುಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಕೊಡಗು ಮಾತೆಯ ಭಜನೆ ಪರಮ ಸುಖವಯ್ಯ.”

ಸಂಗೀತ, ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಯುಗಪುರುಷರ ಪ್ರತ್ಯಕ್ಷ ಸಂಪರ್ಕ ನನಗೊದಗಿತ್ತು. ನಿಮ್ಮೆಲ್ಲರ ಪ್ರೀತಿ ಅಭಿಮಾನಗಳ ಶಕ್ತಿಯುತ ಮಸೂರ ನನ್ನನ್ನು ನಿಮ್ಮ ದೃಷ್ಟಿಯಲ್ಲಿ ಎಷ್ಟೇ ಲಂಬಿಸಿ ಬಿಂಬಿಸಿದರೂ ಅಂಥವರ ಜೊತೆ ನನ್ನನ್ನು ಹೋಲಿಸಿಕೊಂಡಾಗ ಕೇವಲ ಸಾಮಾನ್ಯ ಬುದ್ಧಿಶಕ್ತಿಯ ನಾನು ಮೇಲೆ ವಿವರಿಸಿದ ತ್ರಿವಿಧ ಭಾಗ್ಯಧಾರೆಗಳಿಂದ ಪುನೀತನಾಗಿದ್ದೇನೆ. ಇದು ಸಾಧ್ಯವಾಗಿರುವುದು ನಾನು ಕೊಡಗಿನ ನೆಲದಲ್ಲಿ, ಕನ್ನಡದ ನೆಲೆಯಲ್ಲಿ ಮತ್ತು ಅಪಾರ ಸಂಸ್ಕೃತಿಯ ಹವೆಯಲ್ಲಿ ಜನಿಸಿ ಓದಿ ಬೆಳೆದುದರಿಂದ ಎಂಬ ಅರಿವು ನನಗುಂಟು. ಇಂಥ ಕೊಡಗಿನ ಋಣವನ್ನು ಎಂದಾದರೂ ತೀರಿಸಬಲ್ಲೆನೇ? ಸದಾ ಪ್ರಯತ್ನಶೀಲನಾಗಿರುತ್ತೇನೆ ಎಂದು ಮಾತ್ರ ಆಶ್ವಾಸಿಸಬಲ್ಲೆ ಅಷ್ಟೆ.

“ಜಮ್ಮ ಕೊಡಗಿದು ನಮ್ಮದು” ಎಂಬ ಗಟ್ಟಿ ನೆಲದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎನ್. ಮಹಾಬಲೇಶ್ವರಭಟ್, ಕಾರ್ಯಾಧ್ಯಕ್ಷ ಟಿ.ಪಿ ರಮೇಶ್, ಕಾರ್ಯದರ್ಶಿ ಬಿ.ಎ. ಶಂಸುದ್ದೀನ್ ಮತ್ತು ಇತರ ಎಲ್ಲ ಪದಾಧಿಕಾರಿಗಳಿಗೂ ಪರಿಷತ್ತಿನ ಸರ್ವ ಸದಸ್ಯರಿಗೂ ಕೊಡಗಿನ ಮಹಾಜನತೆಗೂ ಇಲ್ಲಿ ನೆರೆದಿರುವ ಸಮಸ್ತ ಸಭಾಸದರಿಗೂ ನನ್ನ ಜೊತೆ ಮೈಸೂರಿನಿಂದ ಬಂದಿರುವ ಬಂಧುಮಿತ್ರರಿಗೂ ಎದೆತುಂಬಿ ಕೃತಜ್ಞತೆ ಅರ್ಪಿಸುತ್ತೇನೆ.

ಇಂತಹ ಸುಂದರ ಪ್ರಾತಃಕಾಲದಲ್ಲಿ ಬದುಕಿರುವುದೊಂದು ಭಾಗ್ಯ. ಅಲ್ಲಿಯೂ ತಾಯಿ ನೆಲದಲ್ಲಿ ಮನ್ನಣೆ ಗಳಿಸಿರುವುದು ಪರಮ ಸೌಭಾಗ್ಯವೆಂದು ತಿಳಿದಿದ್ದೇನೆ. ಡಿವಿಜಿಯವರ ಅಮರವಾಣಿಗೆ ದನಿಗೂಡಿಸುತ್ತ ಮಂಗಳ ಹಾಡುತ್ತೇನೆ:

ಕಾನನದಿ ಮಲ್ಲಿಗೆಯು | ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ | ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ
ವನಸುಮದೊಲೆನ್ನ ಜೀ | ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ – ಹೇ ದೇವ!

ಪಂಪ ಕುವೆಂಪು ವರೇಣ್ಯರ
ಪೆಂಪಿನ ನುಡಿಗಳ ನಿವಾಸ ಕನ್ನಡ ದೇಶಂ
ಕಂಪಿಂ ಕತ್ತುರಿಯಾಗಿಹು-
ದಿಂಪಿಂ ಪಿಕದುಲಿಯಿದು ಸಿರಿಗನ್ನಡ ಗೆಲ್ಗೆ!

ಕಾವೇರಿ ಕಲಾಕ್ಷೇತ್ರ, ಮಡಿಕೇರಿ:: ಮೇ ೫ ಮತ್ತು ೬, ೨೦೦೬

(ಮುಂದುವರಿಯಲಿದೆ)