ಮೊನ್ನೆ ಆದಿತ್ಯವಾರ (೨೯-೧೨-೨೦೧೩) ‘ವಿಭಿನ್ನ ಮಂಗಳೂರು ಶ್ರೀರಾಮಕೃಷ್ಣ ಮಠದ ಸಹಯೋಗದಲ್ಲಿ ವ್ಯವಸ್ಥೆ ಮಾಡಿದ್ದ ಐದನೆಯ ವರ್ಷದ ಯಕ್ಷದರ್ಪಣ ಕಾರ್ಯಕ್ರಮಕ್ಕೆ ನಾನು, ದೇವಕಿ ಕಾಲು ಗಂಟೆ ಮೊದಲೇ ಹೋಗಿದ್ದೆವು. ವಾಹನವನ್ನು ತಂಗುದಾಣದಲ್ಲಿ ಇಡುವ ಮೊದಲು ದೇವಕಿಯನ್ನಿಳಿಸಲು ನಾನು ಸಭಾಭವನದ ಎದುರು ನಿಲ್ಲಿಸಿದಾಗ, ಆಶ್ರಮದ ಪ್ರಶಾಂತತೆ ಮತ್ತು ಶುಚಿಯನ್ನು ಮೆಚ್ಚಿಕೊಳ್ಳುವಂತೆ ಅಲ್ಲೇ ದಾರಿಗೆ ಅಂಚು ಕಟ್ಟಿದ್ದ ಕಲ್ಲಿನ ಮೇಲೆ ಕುಳಿತಿದ್ದರು ಬಿ. ರಾಮಭಟ್ಟರು. ನನ್ನನ್ನು ಗುರುತಿಸಿದ್ದೇ ಮುಖ ತುಂಬ ನಗು ತುಂಬಿ, ವೀಳ್ಯರಾಗರಂಜಿತ ಬಾಯರಳಿಸಿ ದೊಡ್ಡ ನಮಸ್ಕಾರ ಹೇಳುತ್ತ ಏಳತೊಡಗಿದ್ದರು. ಇಲ್ಲ, ಇಲ್ಲ ಕುಳಿತಿರಿ. ತಂಗುದಾಣದಲ್ಲಿ ರಥ ಬಿಟ್ಟು ಬರುತ್ತೇನೆ ಎಂದೆ. ಹಾಗೆ ನಾನು ಮತ್ತೆ ಬರುವಾಗ ಎಂದಿನಂತೆ ಶ್ವೇತ ಶುಭ್ರವಸನಧಾರಿಯಾಗಿದ್ದ ರಾಮ ಭಟ್ಟರು ಪ್ರಾಯ ಎಪ್ಪತ್ನಾಲ್ಕಾದರೂ ಯಾವ ದೈಹಿಕ ಬಳಲಿಕೆ ಇಲ್ಲದಂತೆ, ನನಗಿಂತ ಹನ್ನೆರಡು ವರ್ಷಕ್ಕೆ ಹಿರಿಯರಾದರೂ ಯಾವ ಮಾನಸಿಕ ತಡೆಗಳೂ ಇಲ್ಲದೆ ಪ್ರೀತಿ ಸಂಭ್ರಮವೇ ಮೂರ್ತಿವೆತ್ತಂತೆ ನಾಲ್ಕು ಹೆಜ್ಜೆ ನನ್ನತ್ತಲೇ ಧಾವಿಸಿ ಬಂದು ಎರಡೂ ಕೈ ತೆರೆದು ಸ್ವಾಗತಿಸಿದರು. ಈಗ ಸುಮಾರು ಹತ್ತು ವರ್ಷದ ಹಿಂದೆ ಮೊದಲ ಬಾರಿಗೆ ನನಗೆ ಇವರ ಪರಿಚಯವಾದಲ್ಲಿಂದ ಇವರು ಬದಲಲೇ ಇಲ್ಲವೋ ಎನ್ನುವ ರೂಪ ಅವರದು. ಅದೇ ಕುಳ್ಳು, ತೆಳ್ಳು, ದೃಢ ದೇಹ. ಕನ್ನಡಕದ ಹಿಂದೆ ‘ಇಂದು ಕಂಡೆ ಎಂಬ ಪ್ರೀತಿ ಸೂಸುವ ಕಣ್ಣು. ಒತ್ತಿ ಬಾಚಿದ (ಪ್ರಾಯ ಸಹಜವಾಗಿ ತುಸು ವಿರಳವೇ ಆದರೂ) ಎಣ್ಣೆ ಹೊಳಪಿನ ಬಿಳಿ ಕೂದಲು, ಒತ್ತು ಕೊಟ್ಟಂತೆ ನೊಸಲಿಗೇರಿದ ಗಂಧ, ಕುಂಕುಮದ ಬೊಟ್ಟು. ಅವರಿಗೆ ಅವಸರವಿಲ್ಲ, ಆದರೆ ಬಂದಷ್ಟೂ ಮಾತು ಕಟ್ಟೆ ತುಂಬಿದ ಹರಿವಿನಂತೆ ವಿಚಾರಪೂರ್ಣ, ಸ್ಪಷ್ಟ. ಎಷ್ಟು ಸಮಯವಾಯ್ತು ನಿಮ್ಮನ್ನು ಕಂಡು. (ಹೌದು, ನನ್ನಂಗಡಿ ಮುಚ್ಚಿದ ಮೇಲೆ ಕಂಡಂತಿಲ್ಲ – ನಾನೂ ನೆನಪಿಸಿಕೊಳ್ಳುತ್ತಿದ್ದೆ.) ನಿಮ್ಮ ಅಂಗಡಿಯತ್ತ ಹೋಗಲೇ ಇಲ್ಲ. ಪುಸ್ತಕ ಬೇಡವೆಂದಲ್ಲ, ಅಲ್ಲಿ ನೀವಿಲ್ಲವಲ್ಲ. (ಇಂಥವರಿಗೆಲ್ಲ ಅಲ್ಲಿ ಮುಂದುವರಿದಿರುವುದೂ ಪುಸ್ತಕದಂಗಡಿಯೇ ಎನ್ನುವ ನನ್ನ ಮಾತು ಪಥ್ಯವಾಗುವುದೇ ಇಲ್ಲ!)

‘ನೃತ್ಯಲೋಕದ ಕರ್ತೃ, ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಕೆ. ಮುರಳೀಧರರಾಯರು ಒಂಟಿ ಜೀವ. ಸುಮಾರು ಏಳು ದಶಕಗಳ ಪರಿವ್ರಾಜಕತ್ವದ ಕೊನೆಗೆ ಮಂಗಳೂರಿನಲ್ಲಿ ಸ್ವತಂತ್ರವಾಗಿ ನೆಲೆಸುವ ಮನ ಮಾಡಿದ್ದರು. ಆದರೆ ಬೇಗನೆ ಪ್ರಾಯ ಸಹಜವಾದ ದೈಹಿಕ ಮಿತಿಗಳು ಅವರನ್ನು ನಿತ್ಯಕರ್ಮಗಳಿಗೆ ಅನ್ಯ ಆಶ್ರಯ ಅವಲಂಬಿಸುವಂತೆ ಒತ್ತಾಯಿಸಿತು. ಹಾಗೆ ಅವರಿಗೆ ಬಹುಕಾಲ ಒದಗಿದ ಒಂದು ನೆಲೆ ಇದೇ ರಾಮ ಭಟ್ಟರ ಮನೆ. ಲೆಕ್ಕಕ್ಕೆ ಭಟ್ಟರ ಸೊಸೆ ನಾಟ್ಯವಿದುಷಿ ವಿದ್ಯಾಶ್ರೀ – ಎರಡನೇ ಮಗ ರಾಧಾಕೃಷ್ಣರ ಪತ್ನಿ, ಸ್ವತಃ ಮುರಳೀಧರರಾಯರ ಶಿಷ್ಯೆ ಅವರನ್ನು ಆ ಮನೆಗೆ ಕರೆಸಿಕೊಂಡಿದ್ದರು. ಆದರೆ ಹೆಚ್ಚುಕಡಿಮೆ ಸಮಕಾಲೀನರೂ ಕುಟುಂಬದ ಹಿರಿಯರೂ ಇನ್ನೂ ಮುಖ್ಯವಾಗಿ ಅಸಾಧ್ಯ ಓದಿನ ಹಂಬಲದ ರಾಮಭಟ್ಟರ ಸಖ್ಯ ಸಿಕ್ಕಿದ್ದು ಮುರಳೀಧರರಾಯರಿಗೆ ಹೆಚ್ಚಿನ ಲಾಭವೇ ಆಗಿತ್ತು. ಆ ಕಾಲದಲ್ಲಿ ರಾಯರೇ ಭಟ್ಟರನ್ನು ನನ್ನಂಗಡಿಗೆ ಕರೆತಂದು ಪರಿಚಯಿಸಿದ್ದರು.

ರಾಮ ಭಟ್ಟರಿಗೆ ಒಂದೆರಡು ತಿಂಗಳಿಗೊಮ್ಮೆ ನನ್ನ ಪುಸ್ತಕದಂಗಡಿ ಭೇಟಿ ಒಂದು ಘನ ಪ್ರಸಂಗ; ಹೀಗೇ ಹಾಯುವಾಗ ಹೊಕ್ಕು ಹೊರಡುವ ತೋರಿಕೆಯಲ್ಲ (ಬಲ್ಲಿರೇನಯ್ಯಾ?). ಪುಸ್ತಕಕ್ಕಾಗಿ ಅವರು ತರುತ್ತಿದ್ದ ಖಾಲಿಚೀಲ ನನ್ನೆದುರು ಬಿಟ್ಟು, ಕೆಲವು ಮಾತುಗಳಲ್ಲಿ ಹಿಂದಿನ ಖರೀದಿಯ ಪುಸ್ತಕಗಳ ಸೂಕ್ಷ್ಮ ಅವಲೋಕನ ಕೊಡುತ್ತಿದ್ದರು (ಹೇಳುವಂಥದ್ದು ತುಂಬಾ ಇದೆ). ಮತ್ತೆ ಚೀಟಿ ತೆಗೆದು, ಇಂದಿನ ಪುಸ್ತಕ ಖರೀದಿ ಆಶಯಗಳ ಎರಡು ಮಾತು ಹೇಳಿ, ನೇರ ಪುರಾಣಗಳ ಕಪಾಟಿಗೆ ನಡೆಯುತ್ತಿದ್ದರು (ಬಂದಂಥಾ ಕಾರ್ಯ). ಅಲ್ಲಿಂದಲೇ ಕಾವ್ಯ, ಕಾದಂಬರಿ, ವಿಮರ್ಶೆಗಳ ಕಪಾಟುಗಳಿಗೆ (ರಸ, ಭಾವಗಳು) ಬದಲುತ್ತಾ ಸಾಕಷ್ಟು ಕೈ, ಕಣ್ಣು ಆಡಿಸಿದರಷ್ಟೇ ತೃಪ್ತಿ. ಅಲ್ಲಿ ಒದಗುತ್ತಿದ್ದ ನನ್ನ ಸಹಾಯಕ ಶಾಂತಾರಾಮನಲ್ಲಿ ಸಣ್ಣಪುಟ್ಟ ಮಾತಾಡುವುದಿತ್ತು. ಆದರೆ ನಡುನಡುವೆ ನನ್ನಲ್ಲಿಗೆ ಬಂದು, ನನ್ನ ಬಿಡುವು ನೋಡಿಕೊಂಡು (ಭಾಗವತನೊಡನೆ ಸಂವಾದ?) ಯಾವುದೋ ವಿಚಾರದ ಹೊಳವು, ರಸಪ್ರಸಂಗವೊಂದರ ತುಣುಕು, ಹಳೆಯ ಸಂವಾದಕ್ಕೆ ಸಿಕ್ಕ ಹೊಸ ಉದಾಹರಣೆಯ ವಿಸ್ತರಣೆ ನಡೆಸುವುದಿತ್ತು. ಕೊನೆಯಲ್ಲಿ ಅವರ ಹೊರುವ ತಾಕತ್ತಿನ ಮೇಲೆ ಪುಟ್ಟ ಗಂಟಿಗೆ ಕಡಿಮೆಯಾಗದಷ್ಟು ಪುಸ್ತಕಗಳ ಆಯ್ಕೆ ಮುಗಿಸುತ್ತಿದ್ದರು. ಹಣಕಾಸಿನಲ್ಲೂ ಚೊಕ್ಕ. ನಾನು ಬಿಲ್ವಿದ್ಯೆಗಿಳಿಯುವ ಮುನ್ನ ಭಟ್ಟರು ತಮ್ಮ ತುಣೀರ (ತಂದ ಹಣ) ಅಕ್ಷಯವಲ್ಲ, ಇಷ್ಟೇ ಇಂದಿನ ಮಿತಿ (ರೂ ಒಂದು ಸಾವಿರಕ್ಕೆ ಕಡಿಮೆಯಿಲ್ಲದಂತೆ) ಎಂದು ಒಪ್ಪಿಸಿಕೊಳ್ಳುತ್ತಿದ್ದರು. ಹಾಗೆಂದು ಎಂದೂ ನನ್ನ ವೃತ್ತಿಗೆ ಹೊರೆಯಾಗುವಂತೆ ಚೌಕಾಸಿ ನಡೆಸಿದ್ದಿಲ್ಲ, ಸಾಲ ಬರೆಸಿ ನಾಳೆಯ ಊಟಕ್ಕೆ ಕೈ ಹಾಕಿದವರಂತು ಅಲ್ಲವೇ ಅಲ್ಲ. ಅಂದಿನ ಆದ್ಯತೆ, ಮುಂದಿನ ಸಾಧ್ಯತೆಗಳನ್ನು ಸರಿಯಾಗಿ ನಿರ್ಧರಿಸಿ, ಆರಿಸಿದ್ದು ಹೆಚ್ಚಾದರೆ ಕೆಲವು ಬಿಟ್ಟು, ಕಡಿಮೆಯಾದರೆ ಮತ್ತೊಂದೆರಡು ಸೇರಿಸಿ, ಪೂರ್ಣ ಪಾವತಿಕೊಟ್ಟೇ ಪುಸ್ತಕ ಹೊತ್ತು ನಡೆಯುತ್ತಿದ್ದರು.

ಅಂಗಡಿಯಲ್ಲಿ ವಿದಾಯಕ್ಕೆ ಮುನ್ನ ರಾಮ ಭಟ್ಟರು ಪ್ರತಿಬಾರಿಯೂ ಹೇಳುವುದಿತ್ತು ನೀವು ಸಪತ್ನೀಕರಾಗಿ ಒಮ್ಮೆ ನಮ್ಮನೆಗೆ ಬರಬೇಕು. . . ಮಾತಿನುಪಚಾರಕ್ಕಲ್ಲ – ವಿಳಾಸ, ಬಸ್ ವಿವರ ಎಲ್ಲ ಕೊಟ್ಟೇ ಕರೆಯುತ್ತಿದ್ದರು. ನನ್ನ ನೆನಪು ಸರಿಯಿದ್ದರೆ ಮೊದಲು ಮಂಗಳೂರಿನ ಹೊರವಲಯದಲ್ಲೆಲ್ಲೋ ತೋಟದ ಮನೆಯಲ್ಲೇ ಇದ್ದರು. ಆ ಮೇಲೆ ವ್ಯಾವಹಾರಿಕ ಅನುಕೂಲಕ್ಕಾಗಿಯೋ ಏನೋ ಅವರ ಒಬ್ಬ ಮಗ ಮಂಗಳೂರಿನಲ್ಲೇ ಮನೆ ಕಟ್ಟಿಸಿ ನೆಲೆ ನಿಂತರು. ಒಟ್ಟಾರೆ ರಾಮಭಟ್ಟರ ವಾಸ್ತವ್ಯ ತುಸು ಆಚೀಚೆ ಆಗುತ್ತಿದ್ದಿರಬೇಕು. ಆಗೆಲ್ಲ ನನಗೆ ಬದಲಿ ಪತ್ತೆಯನ್ನು ಮರೆಯದ ಕೊಟ್ಟು ಅವರ ಆಮಂತ್ರಣದ ಪ್ರಾಮಾಣಿಕತೆಯನ್ನು ಶ್ರುತಪಡಿಸುತ್ತಿದ್ದರು. (ಹೀಗೇ ಊರು, ಪರವೂರಿನ ಕೆಲವರೂ ಆಗೊಮ್ಮೆ ಈಗೊಮ್ಮೆ ಪ್ರಾಮಾಣಿಕವಾಗಿಯೇ ಆಮಂತ್ರಿಸುವುದಿತ್ತು. ಆದರೆ ಸ್ವಭಾವತಃ ನನಗೆ ಯಾರದೇ ಮನೆಗೆ ಸ್ಪಷ್ಟ ಕೆಲಸವಿಲ್ಲದೆ, ಲೋಕಾಭಿರಾಮವಾಗಿ ಮಾತಾಡಲು ಹೋಗುವುದೆಂದರೆ ಯಾಕೋ ಸಂಕೋಚ ಕಾಡುತ್ತಿತ್ತು; ಹೋದವನಲ್ಲ.) ಹೆಚ್ಚು ಕಡಿಮೆ ಎರಡು ವರ್ಷದ ಮೇಲೆ ಭೇಟಿ, ಮಾತಿಗೆ ಮೊನ್ನೆ ಸಿಕ್ಕಾಗಂತೂ ಆಮಂತ್ರಣಕ್ಕೆ ಒತ್ತಾಯವೂ ಸೇರಿಕೊಂಡಿತ್ತು. ಭಟ್ಟರು ನಮ್ಮ ಜಂಟಿ ಸೈಕಲ್ ಸವಾರಿಯನ್ನು ಅವರ ಮನೆಯ ಆಸುಪಾಸಿನಲ್ಲಿ ಒಂದೆರಡು ಬಾರಿ ಕಂಡದ್ದನ್ನು ಸ್ಮರಿಸಿಕೊಂಡೇ ಕೇಳಿದರು ಎಂದು ಬರುತ್ತೀರಿ ನಮ್ಮನೆಗೆ? ಈಗ ಅಂಗಡಿಯ ಸಮಯದ ಕಟ್ಟುಪಾಡೂ ಇಲ್ಲ. ಒಂದು ಫೋನು ಮಾಡಿ ಬನ್ನಿ. ಅವರ ಸಮಾಧಾನಕ್ಕಾಗಿ ಮತ್ತೆ ನಾವು ಸುತ್ತುವ ಯಾವ ವಲಯದಲ್ಲಿ ಅವರ ಮನೆಯುಂಟೆಂದು ತಿಳಿಯುವ ಕುತೂಹಲದಲ್ಲಿ ವಿವರ ಕೇಳಿದೆ. ಕಾವೂರು ಸರ್ಕಲ್ಲಿನಿಂದ ಕೂಳೂರು ಕಡೆಗೆ ಹೋಗುವ ದಾರಿಯಲ್ಲಿ ಎರಡನೇ ಬಸ್ಟಾಪ್ ನಮ್ಮದು. ಅಲ್ಲಿ ಬಲ ದಾರಿಯಲ್ಲಿ ಯಾರನ್ನಾದರೂ ‘ಭಟ್ಟರ ಮನೆ ಎಂದು ವಿಚಾರಿಸಿದರೆ ಸಾಕು ಎಂದು ಸಾಕಷ್ಟು ಉತ್ಸಾಹದಲ್ಲೇ ವಿವರಿಸಿದ್ದರು.

ರಾಮ ಭಟ್ಟರ ವಿಸ್ತಾರ ಓದಿಗೆ, ಅನುಭವಕ್ಕೆ ಒಂದು ಸಣ್ಣ ಅಭಿವ್ಯಕ್ತಿಯ ಕಿಂಡಿ – ತಾಳಮದ್ದಳೆಯಲ್ಲಿ ಅರ್ಥದಾರಿಕೆ. ಬಹು ಕಾಲದಿಂದ ಇವರು ಶರವು ದೇವಸ್ಥಾನ ಮತ್ತು ಕಾಟಿಪಳ್ಳದ ಮಾರಿಗುಡಿಗಳಲ್ಲಿ ನಡೆಯುತ್ತಿದ್ದ ಹವ್ಯಾಸಿ ತಾಳಮದ್ದಳೆ ಅಭ್ಯಾಸ ಕೂಟಗಳಲ್ಲಿ ಖಾಯಂ ಭಾಗಿ ಮತ್ತು ಸಂಪನ್ಮೂಲ ವ್ಯಕ್ತಿ. ಅವರು ನನ್ನಂಗಡಿಗೆ ಬಂದಾಗ ನಾನು ಎಂಥದ್ದೇ ಆಕರ್ಷಕ ಕಲಾಪವನ್ನು ಅವರೆದುರು ಬಿತ್ತರಿಸಿದರೂ ಹಾಂ ಆದಿತ್ಯವಾರ ಸಂಜೆಯೋ? ಇಲ್ಲ, ನಾನು ಶರವು ಕೂಟಕ್ಕೆ ಹೋಗಲೇಬೇಕು ಎನ್ನುವಷ್ಟು ನಿಷ್ಠೆ. ಅವರ ಪ್ರದರ್ಶನದ ಜಾಣ್ಮೆಯನ್ನು ಕಾಣುವ ಅವಕಾಶ ನನಗೆ ಬಂದದ್ದಿಲ್ಲ. ಆದರೆ ಓದಿನ ಹರಹು, ನಿತ್ಯಮಾತಿನಲ್ಲೂ ಇದ್ದ ಔಚಿತ್ಯ ಜ್ಞಾನ ಖಂಡಿತವಾಗಿಯೂ ಅವರನ್ನು ಒಳ್ಳೇ ಅರ್ಥದಾರಿಯನ್ನಾಗಿಸಿದ್ದಿರಲೇಬೇಕು. ಮತ್ತು ಬಹುಶಃ ಅದೇ ಔಚಿತ್ಯಜ್ಞಾನ ಅವರನ್ನು ಅವಕಾಶಗಳ ಬೆನ್ನು ಹತ್ತದ, ಪ್ರಚಾರದ ಪ್ರವಾಹಕ್ಕೆ ಅಡಿಮಗುಚದ, ಪ್ರಾಥಮಿಕವಾಗಿ ಕಲೆ ಸ್ವಾಂತಸುಖಾಯ ಎಂದು ನಂಬಿ ನಡೆಯುವ ವಿನಯ ಕಲಿಸಿದ್ದೂ ಇರಬೇಕು. ಅರ್ಥದಾರಿಯಾಗಿ ಭಾರಿ ಪ್ರಚಾರಕ್ಕೆ ಬರದಿದ್ದರೂ ತರುಣ ಅರ್ಥದಾರಿಗಳು ಬೆಳೆಯುವ ಚಂದ ನೋಡುತ್ತ, ಕಿರಿಯರ ಸಹಯೋಗದಲ್ಲಿ ತನ್ನ ವಿಷಯ ಸಂಪತ್ತಿಗೆ ವರ್ತಮಾನದ ಹೊಳಪು ಕೊಡುತ್ತ ಹೆಚ್ಚು ಅರ್ಥಪೂರ್ಣವಾದವರು ರಾಮ ಭಟ್ಟರು. ಅದೇ ವಿಶ್ವಾಸದಲ್ಲಿ ಅವರು ಕಿರಿಯನಾದ ನನ್ನನ್ನೂ ಸದಾ ಕಂಡಿದ್ದರು.

ರಾಮಕೃಷ್ಣ ಮಠದಲ್ಲಿ ನಾವು ಸುಮಾರು ಎಂಟು ಗಂಟೆಯುದ್ದಕ್ಕೆ ಜೊತೆಯಲ್ಲೇ ಕುಳಿತು (ಮುಖ್ಯವಾಗಿ ಬಡಗು ತಿಟ್ಟಿನ) ಶ್ರೀಕೃಷ್ಣಲೀಲಾ ನೋಡಿದೆವು. ಪ್ರದರ್ಶನದ ಅವಧಿಯಲ್ಲಿ ಒಮ್ಮೆಯೂ ಅಸಂಬಂಧಿತ ಪಟ್ಟಾಂಗಕ್ಕೆ ಅವರು ಮಾತು ತೆಗೆದದ್ದೇ ಇಲ್ಲ. ಮತ್ತು ಪ್ರದರ್ಶನದ ಕುರಿತೂ ಅವರು ತಮ್ಮ ಅನುಭವದ ಹಿರಿಮೆಯಲ್ಲಿ ನಮ್ಮ ಪ್ರೇಕ್ಷಣೆಯ ಸ್ವಾತಂತ್ರ್ಯಕ್ಕೆ ಅಡ್ಡಿ ತಂದದ್ದೂ ಇಲ್ಲ. ಆದರೆ ಕಲಾವಿದರ ಪರಿಶ್ರಮವನ್ನು ಮೆಚ್ಚಿಕೊಳ್ಳುವಲ್ಲಿ ಆಗೀಗ ಒಂದೊಂದು ಮಾತು ಮಾತ್ರ ಬಂದದ್ದಿತ್ತು. ರಾತ್ರಿ ಏಳೂವರೆ-ಎಂಟರ ಸುಮಾರಿಗೆ ಒಮ್ಮೆ ಹೀಗೇ ವಿಚಾರಿಸಿದರು ನೀವು ಮನೆಗೆ ಹೋಗುವುದು ಯಾವ ದಾರಿ? ನಿಮ್ಮ ಜೊತೆಗೆ ಇನ್ನೂ ಯಾರಾದರೂ ಸೇರಿಕೊಳ್ಳುವವರಿದ್ದಾರಾ? ಇಲ್ಲ, ಕಾರಿನಲ್ಲಿ ನಾವಿಬ್ಬರೇ. ದಾರಿ ಅದೇ ಮೈದಾನ, ಜ್ಯೋತಿ, ಬಂಟರ ಹಾಸ್ಟೆಲ್… ಎನ್ನುವುದರೊಳಗೆ ಮಾತು ತೇಲಿಸಿದ್ದರು. ನಾನು ಬರಿದೇ ಅಂದಾಜಿಸಿದ್ದೆ – ಆಟ ಮುಗಿಯುವಾಗ ಇವರ ಕಾವೂರಿನ ದೂರಕ್ಕೆ ಮಂಗಳಾದೇವಿಯಿಂದ ಸಿಟಿ ಬಸ್ ಸಿಗದೇ ಇರಬಹುದು. ಆದರೆ ನೆಹರೂ ಮೈದಾನದ ಅಂಚಿನಿಂದ ಕಾವೂರಿನತ್ತ ಹೋಗುವ ನೇರ ಸಿಟಿ ಬಸ್ ಇವರಿಗೆ ಗೊತ್ತಿರುತ್ತದೆ. ಅದಕ್ಕೇ ನಾವು ಹತ್ತಿಸಿದರಾಯ್ತು. ಹಾಗೇನೂ ಸಿಗದಿದ್ದರೆ, ಮೂರು ನಾಲ್ಕು ಕಿಮೀ ದೂರದ ಕಾವೂರಿಗೇ ಬಿಟ್ಟು ಬರುವುದೇನೂ ಸಮಸ್ಯೆಯಲ್ಲ. ಆದರೆ ತುಸು ಹೊತ್ತಿನಲ್ಲೇ ರಾಮ ಭಟ್ಟರು ದಾಕ್ಷಿಣ್ಯ ಕಳಚಿಕೊಂಡವರಂತೆ ಉದ್ಗಾರ ತೆಗೆದಿದ್ದರು ಓ (ಮಗ) ರಾಧಾಕೃಷ್ಣ ಬಂದಿದ್ದಾನೆ. ಮನೆಗೆ ಹೋಗಲು ಧೈರ್ಯವಾಯ್ತು. ನಾನು ಮನಸ್ಸಿನಲ್ಲೇ ತಿದ್ದುಪಡಿ ಹಾಕಿಕೊಂಡೆ ಆಯ್ತು ಈ ರಾತ್ರಿ ಮನೆಗೆ ಬಿಡುವ ನೆಪದಲ್ಲಿ ಅವರ ಮನೆ ನೋಡಿಬಿಡುವ ಅವಕಾಶ ತಪ್ಪಿತು. ಇನ್ನು ನಾಳೆಯೋ ನಾಡಿದ್ದೋ ಅತ್ತ ಸಂಜೆಯ ಸೈಕಲ್ ಸವಾರಿಗೆ ಹೋದಾಗ ಹೊರಗಿಂದ ಹೊರಗೇ ನೋಡಿಕೊಳ್ಳುತ್ತೇನೆ. ಆದರೆ…

ಗುರುವಾರದ ವಿಜಯ ಕರ್ನಾಟಕದಲ್ಲಿ ಕಪ್ಪುಗೀಟಿನ ಅಂಕಣದೊಳಗೆ ರಾಮ ಭಟ್ಟರ ಚಿತ್ರ ಪ್ರಕಟವಾಗಿತ್ತು. ಟಿಪ್ಪಣಿ ಅನಿವಾರ್ಯವನ್ನು ಸಾರಿತ್ತು. ‘ಯಕ್ಷಗಾನದ ಹಿರಿಯ ಅರ್ಥದಾರಿಗಳು, ಪ್ರಸಂಗಕರ್ತರು ಆಗಿದ್ದ ಬಿ. ರಾಮ ಭಟ್ (೭೪) ತೀವ್ರ ಹೃದಯಾಘಾತದಿಂದ ನಿಧನರಾದರು. ಶೇಣಿ, ಪೆರ್ಲರ ಸಮಕಾಲೀನರಾದ ಇವರು ಶರವು ದೇವಸ್ಥಾನ, ಪ್ರತಿಷ್ಠಿತ ತಾಳಮದ್ದಳೆ ಕೂಟಗಳಲ್ಲಿ ಸಕ್ರಿಯವಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.’ ನಾನಿನ್ನೂ ನೋಡದ ಅವರ ಮನೆಗೆ ದೂರವಾಣಿಸಿದೆ. ಹಿರಿಯ ಮಗ – ಉದಯಶಂಕರ ಭಟ್ಟ, ವಿಷಾದ ವಾರ್ತೆಯನ್ನು ವಿಶದ ಪಡಿಸಿದರು. ಆದಿತ್ಯವಾರ ಸ್ವಸ್ಥವಾಗಿ ತಂದೆಯವರು ಆಟ ಅನುಭವಿಸಿದಾಗ ಒತ್ತಿನಲ್ಲಿ ನೀವಿದ್ದದ್ದೂ ನಾನು ನೋಡಿದ್ದೆ. ಸೋಮವಾರ ಕಡಬದಲ್ಲಿ, ನಮ್ಮ ಸಂಬಂಧಿಕರಲ್ಲಿಗಾಗಮಿಸಿದ್ದ ಗುರುದರ್ಶನಕ್ಕಾಗಿ (ಶ್ರೀ ರಾಘವೇಶ್ವರತೀರ್ಥರು), ನಾವೆಲ್ಲ ಒಟ್ಟಾಗಿಯೇ ಹೋಗಿದ್ದೆವು. ಅಲ್ಲಿನ ಕಲಾಪಗಳು ಮುಗಿದ ಮೇಲೆ ತಂದೆಯವರು ಸ್ವಾಮಿಗಳನ್ನನುಸರಿಸಿ ಸುಬ್ರಹ್ಮಣ್ಯಕ್ಕೂ ಹೋಗುವ ಉತ್ಸಾಹ ತೋರಿಸಿದರು. ನಾನು ಅವರನ್ನು ಅಲ್ಲೇ ಬಿಟ್ಟು, ಅನ್ಯ ಕಾರ್ಯಾರ್ಥ ಉಪ್ಪಿನಂಗಡಿಗೆ ಹೋದೆ. ಅಲ್ಲಿಗೆ ಚರವಾಣಿ ಸುದ್ದಿ ಬಂತು – ತಂದೆ ಎಲ್ಲ ಊರುಗಳ ಆಚೆಗೆ ಹೋಗಿಬಿಟ್ಟಿದ್ದರು.

ಎರಡು ವರ್ಷದ ಹಿಂದೆ ನಾನು ಅಂಗಡಿ ಮುಚ್ಚುವ ಘೋಷಣೆ ಮಾಡಿದ ಕಾಲಕ್ಕೆ ಊಹೆಗೆ ನಿಲುಕದಷ್ಟು ವೈವಿಧ್ಯಮಯ ಜನಪ್ರೀತಿ ನನಗೆ ಹರಿದು ಬಂದಿತ್ತು. ಆ ದಿನಗಳಲ್ಲಿ ರಾಮ ಭಟ್ಟರೂ ಕಡೆಯ ಬಾರಿಗೆ ಎಂಬಂತೆ ಅಂಗಡಿಗೆ ಬಂದಿದ್ದರು. ಎಂದಿನ ಮಾತು, ಖರೀದಿ ಎಲ್ಲ ಮುಗಿದ ಮೇಲೆ ಮೂರು ಹಾಳೆಗಳುದ್ದಕ್ಕೆ ಅವರು ರಚಿಸಿ, ಬರೆದು ತಂದಿದ್ದ ‘ವಿದಾಯ ಕಾವ್ಯ ಕೊಟ್ಟರು. ಅದರ ಮೊದಲ ಎರಡು ಪುಟಗಳುದ್ದಕ್ಕೆ ಭಾಮಿನಿ ಷಟ್ಪದಿಯ ಎಂಟು ಕಾವ್ಯ ಖಂಡಗಳಿದ್ದುವು. ಪ್ರತಿ ಖಂಡದ ಆದ್ಯಕ್ಷರಗಳು ಜೋಡಿದರೆ ನನ್ನ ಹೆಸರು ಮೂಡುವಂತೆ ಚಮತ್ಕಾರವನ್ನೂ ಮಾಡಿದ್ದರು. ಅದನ್ನು ಓದುವಾಗ ಪುಟ ಮಗುಚುವಲ್ಲಿ ತೊಂದರೆ ಬಾರದಂತೆ ಬಲ ಮೂಲೆಗೆ ಗುಂಡು ಸೂಜಿ ಚುಚ್ಚಿ ಸಜ್ಜುಪಡಿಸಿದ್ದರು. ಬಹುಶಃ ಅವರ ಮನಸ್ಸಿಗೆ ತೃಪ್ತಿಯಾಗಿರಲಾರದು. ಮತ್ತೆ ಇನ್ನೊಂದೇ ಬಿಳಿಹಾಳೆ ಹಿಡಿದು ವನಮಾಲೀ ವೃತ್ತದಲ್ಲಿ ಐದು ಕಾವ್ಯಖಂಡಗಳನ್ನು ಬರೆದು ಕೊನೆಗೀಟೆಳೆದರು. ಊಹೂಂ ಇಲ್ಲ, ಉಳಿದ ಖಾಲಿ ಭಾಗದಲ್ಲಿ ಮೂರನೆಯದೇ ಒಂದು ಖಂಡ ಬರೆದು, ತಂದಿದ್ದರು. ಎಲ್ಲದರ ಪ್ರಧಾನಶ್ರುತಿ ಪ್ರೀತಿ ಮತ್ತು ಶುಭ ಹಾರೈಕೆ (ಭಟ್ಟರ ಪೂರ್ಣ ಕಾವ್ಯಕ್ಕೆ ಇಲ್ಲಿ ಚಿಟಿಕೆಹೊಡೆಯಿರಿ) ಈಗ ನನಗೂ ರಾಮ ಭಟ್ಟರಂತೆಯೇ ಭಾವತರಂಗಗಳು ಕಾಡುತ್ತಿವೆ – ಅವರ ಬಯಕೆಯಂತೆ ಒಮ್ಮೆಯೂ ಅವರ ಮನೆಗೆ ಹೋಗಿ ಅವರಿಗೆ ಸಂತೋಷ ಕೊಡಲಿಲ್ಲವಲ್ಲ.

ನನಗೆ ಗೊತ್ತೇ ಇರಲಿಲ್ಲ; ವಿನಾಕಾರಣ ಪ್ರೀತಿ ಕೊಟ್ಟವರ ಕನಿಷ್ಠ ಆರೋಗ್ಯವನ್ನೂ ನಾನು ವಿಚಾರಿಸಿದ್ದಿಲ್ಲ. ನನ್ನ ಮಾನಸಿಕ ಹದದಲ್ಲಿ, ರಾಮ ಭಟ್ಟರ (ಅಥವಾ ಯಾರದ್ದೇ ಆದರೂ) ದೇಹ ಮತ್ತು ಆತ್ಮಗಳನ್ನು ಪ್ರತ್ಯೇಕಿಸಿ ನೋಡಲಾರೆ. ಹಾಗಾಗಿ ಪೂರ್ಣ ವಿರಮಿಸಿದವರಿಗೆ ಸಾರ್ವಜನಿಕದಲ್ಲಿ ಸದ್ಗತಿ, ಶಾಂತಿ ಕೋರುವುದಾಗಲೀ ಅವರ ಬಿಂಬಕ್ಕೆ ನಾಲ್ಕು ಹೂಚೆಲ್ಲಿ ‘ಗೌರವ ಸಲ್ಲಿಸುವುದನ್ನಾಗಲೀ ನಂಬುವುದಿಲ್ಲ. ಅಗಲಿದ ಚೇತನವನ್ನು ನಾನು ಕಂಡಷ್ಟು ಸ್ಮರಿಸುವ ಮೂಲಕ ಮನಸ್ಸಿಗೆ ಮತ್ತೆ ತಂದುಕೊಂಡು, ನನ್ನ (/ಮ್ಮ) ಬಾಳನ್ನು ಸರಿಪಡಿಸಿಕೊಳ್ಳುವುದಷ್ಟೇ ಅರ್ಥಪೂರ್ಣ ಎಂದು ನಂಬಿದ್ದೇನೆ. ಭಟ್ಟರು ಈ ಮೊದಲೂ ಹೇಳಿದ್ದರು, ಮೊನ್ನೆ ಆಟದಂದೂ ನೆನಪಿಸಿದರು ಅಂಗಡಿ ಮುಚ್ಚಿದರೂ ನನಗೆ ನೀವು ಅತ್ರಿಯೇ! ಈಗ ನನಗೂ ಹೇಳುವಂತಾಗಿದೆ – ದೇಹತಃ ಇದ್ದರೂ ಇಲ್ಲದಿದ್ದರೂ ನನ್ನ ಲೆಕ್ಕಕ್ಕೆ ಹಲವು ಸರಳ ಜೀವನ ಮೌಲ್ಯಗಳು ಬಿ. ರಾಮ ಭಟ್ಟ.