ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಅಂತಿಮ ಮತ್ತು ನಲ್ವತ್ತೊಂದನೇ ಕಂತು
ಅಧ್ಯಾಯ ೯೨ (ಮೂಲದಲ್ಲಿ ೬೩)

ಪ್ರೌಢಶಾಲೆಯ ಎಲ್ಲ ತರಗತಿಗಳಲ್ಲಿಯೂ ನಾನು ಪ್ರಥಮಸ್ಥಾನವನ್ನೇ ಗಳಿಸುತ್ತಿದ್ದರೂ ಪರೀಕ್ಷೆ ಬರೆಯಲು ನನಗೆ ನಿಗದಿಯಾಗುತ್ತಿದ್ದ ಸ್ಥಳ ಮಾತ್ರ ಎಲ್ಲಿಯೋ ಮೂಲೆಯಲ್ಲಿದ್ದ ಒಂದು ಇಕ್ಕಟ್ಟು ಕೊಠಡಿ. ಎಂದೂ ಶಾಲೆಯ ಆ ಭವ್ಯ ಸಭಾಂಗಣವಲ್ಲ. ಕಾರಣ? ತೀರ ಕ್ಷುದ್ರ, ಆದರೂ ನನ್ನ ಯುವ ಮನಸ್ಸು ಇದನ್ನು ಹಾಗೆಂದು ಒಪ್ಪುವ ಪಕ್ವತೆ ಗಳಿಸಿರಲಿಲ್ಲ. ಇಂಗ್ಲಿಷ್ ವರ್ಣಮಾಲೆ ಪ್ರಕಾರ ವಿದ್ಯಾರ್ಥಿಗಳ ಹೆಸರುಗಳನ್ನು ಅಳವಡಿಸಿ ಸ್ಥಳ ನಿಗದಿಸುತ್ತಿದ್ದರು. ಎ – ಯಿಂದ ಸುಮಾರು ಎಲ್ – ವರೆಗಿನ ಅಕ್ಷರಗಳಿಂದ ಆರಂಭವಾಗುವ ಹೆಸರುಗಳಿದ್ದವರಿಗೆ ಸಭಾಂಗಣದಲ್ಲಿ ಸ್ಥಾನ, ಮುಂದಿನವರಿಗೆ ಎಲ್ಲೆಲ್ಲಾದರೂ! ನನ್ನ ಹೆಸರು ಅಭಿಜಿತ್ ಅಥವಾ ಅಚ್ಯುತ ಎಂದಿರಬಾರದಿತ್ತೇ ಎಂದು ಪರಿತಪಿಸಿದ್ದಿತ್ತು.

ತರುವಾಯದ ವರ್ಷಗಳಲ್ಲಿ ಕಾಲೇಜ್ ಅಧ್ಯಯನದ ವೇಳೆ, ಅಂತೆಯೇ ವಿವಿಧ ಸಂದರ್ಶನಗಳಿಗೆ ಹಾಜರಾದಾಗ, ವಿಮಾನ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ನನ್ನ ಸರದಿಗಾಗಿ ಕಣ್ಣು ಕಿವಿ ಅರಳಿಸಿ ನಿಂತಿರುತ್ತಿದ್ದಾಗ ಈ ಎನ್ – ಪೀಡೆ ನನ್ನನ್ನು ಅತಿಯಾಗಿ ಬಾಧಿಸುತ್ತಿತ್ತು: ಒಂದು ಹಗಲಿಡೀ ಕಾದರೂ ಎಲ್ – ನಿಂದ ಮುಂದಿನವರಿಗೆ ಅವಕಾಶ ಒದಗುತ್ತಲೇ ಇಲ್ಲ. ಉದಾಹರಣೆಗೆ, ಮದರಾಸು ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತ ಟ್ಯೂಟರ್ (೧೯೪೭-೪೯) ಆಗಿದ್ದಾಗ ಭಾರತೀಯ ವಾಯುಪಡೆಯ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಮದ್ರಾಸಿನಲ್ಲಿಯ ಪ್ರಾರಂಭಿಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಮುಂದೆ ಡೆಹ್ರಾಡೂನಿನ ಸೇನಾಶಿಕ್ಷಣ ಕೇಂದ್ರದಲ್ಲಿ ನಾಲ್ಕು ದಿನಗಳ ಅಂತಿಮ ಪರೀಕ್ಷೆ-ತಪಾಸಣೆ-ಮೌಖಿಕ ಭೇಟಿಗಳಿಗೆ ಹಾಜರಾದೆ. ಇಲ್ಲೆಲ್ಲ ಈ ಎನ್ – ಭಾರದ ಕಾರಣವಾಗಿ ನನ್ನ ಸರದಿ ಬರುವಷ್ಟರಲ್ಲಿ ಪರೀಕ್ಷಕರೆಲ್ಲ ಸೋತು ಸುಣ್ಣಾಗಿ ಕಾಟಾಚಾರಕ್ಕೆ ಅದನ್ನು ಹೇಗೋ ಮುಗಿಸುತ್ತಿದ್ದರೆಂಬ ಭಾವನೆ ನನ್ನನ್ನು ಪ್ರಬಲವಾಗಿ ಕಾಡತೊಡಗಿತು. ಅಲ್ಲಿ ಆಯ್ಕೆ ಆಗಲಿಲ್ಲ ಎಂಬ ಸಂಗತಿ ಈಗ ಅಪ್ರಸ್ತುತ! ಹೆಸರಲ್ಲೇನಿದೆ? ಗುಲಾಬಿ ಹೂವನ್ನು ಬೇರೆ ಯಾವ ಹೆಸರಿಂದ ಕರೆದರೂ ಅದರ ಪರಿಮಳಕ್ಕೇನಾದರೂ ಊನ ತಟ್ಟೀತೇ ಎಂಬ ಶೇಕ್ಸ್‌ಪಿಯರ್ ವಾಣಿ ನನ್ನ ವಿಚಾರದಲ್ಲಿ ಹುಸಿಯಾಗಿತ್ತು!

ಅಂಥ ಒಂದು ಹತಾಶ ಸಂದರ್ಭದಲ್ಲಿ ನನ್ನೊಳಗೊಂದು ಹೊಸ ಚಿಂತನೆ ಛಳುಕಿತು: ನಾನೇನಾದರೂ ಮದುವೆಯಾಗಿ ಮಕ್ಕಳನ್ನು ಪಡೆದುದಾದರೆ ಅವರಿಗೆ ಎ – ಇಂದ ಅಂತೆಯೇ ಕನ್ನಡದಲ್ಲಿ ಅ – ದಿಂದ ತೊಡಗುವ ಹೆಸರುಗಳನ್ನೇ ಇಡಬೇಕು. ಲಕ್ಷ್ಮಿಯೂ ನಾನೂ ಯೋಚಿಸಿ ಹುಟ್ಟಲಿರುವ ನಮ್ಮ ಮಗುವಿಗೆ ಅಶೋಕ ಅಥವಾ ಅನೂರಾಧಾ ಎಂಬ ಹೆಸರಿಡಬೇಕೆಂದು ನಿರ್ಧರಿಸಿದೆವು. ನಮ್ಮ ಮೊದಲ ಮಗು ಗಂಡು, ೧೯೫೨ರಲ್ಲಿ ಜನನ. ಆ ದಿನಗಳಂದು ರಾಷ್ಟ್ರಾದ್ಯಂತ ‘ಅಶೋಕಚಕ್ರ, ಅಶೋಕ ಸ್ತಂಭ’ ಮುಂತಾದ ಅಶೋಕ ಚಕ್ರವರ್ತಿಯ ದಿವ್ಯ ನಾಮಾವಳಿಗಳು ಅನುರಣಿಸುತ್ತಿದ್ದುವು. ಹೀಗೆ ಆತನಿಗೆ ಅಶೋಕನೆಂಬ ಹೆಸರಿಟ್ಟೆವು. ಅಂದಿನ ಸಂಪ್ರದಾಯದ ಪ್ರಕಾರ ಅವನನ್ನು ತಿಮ್ಮಪ್ಪಯ್ಯ (ನನ್ನಪ್ಪನ ಹೆಸರು) ಇಲ್ಲವೇ ತಿರುಮಲೇಶ್ವರನೆಂದು ನಾಮಕರಿಸಬೇಕಿತ್ತು. ಹೀಗೆ ಮಾಡದೇ ನಾವು ಹಿರಿಯರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಮುಂದಿನ ಮಕ್ಕಳನ್ನು ಆನಂದ (೧೯೫೭) ಮತ್ತು ಅನಂತ (೧೯೫೯) ಎಂದು ಹೆಸರಿಸಿದೆವು. ಅಶೋಕನನ್ನು ಶಾಲೆಗೆ ಸೇರಿಸುವಾಗ ಈ ಹೆಸರಿಗೊಂದು ‘ಬಾಲ’ ಇರಲೇಬೇಕೆಂದು ಉಪಾಧ್ಯಾಯರು ಒತ್ತಾಯಿಸಿದರು. ಅದು ‘ರಾವ್’ ಅಥವಾ ‘ಭಟ್’ ಎಂದಿದ್ದರೆ ಜಾತಿಸೂಚಕವಾಗುತ್ತದೆ, ಬದಲು ‘ವರ್ಧನ’ ಎಂದಾದರೆ ಈ ಅಭ್ಯಂತರವಿರದೆಂದು ಬಗೆದು ಹಾಗೆ ಮಾಡಿದೆ. ಹೀಗೆ ನಮ್ಮ ಮೂವರು ಮಕ್ಕಳೂ ವರ್ಧನ ಸಹೋದರರಾದರು!

ಮೈಸೂರಿನಲ್ಲಿ ಸ್ವಂತ ಮನೆ ಖರೀದಿಸಿದಾಗ (೧೯೭೧) ಇದಕ್ಕೊಂದು ಹೆಸರು ಕೊಡಬೇಕು. ಅದರಲ್ಲಿ ಈ ಮೂವರ ಹೆಸರುಗಳೂ ಸೂಚಿತವಾಗಿರಬೇಕು ಎಂದು ಯೋಚಿಸಿ ಹಿರಿಯವನಿಗೆ ಈ ಜವಾಬುದಾರಿಕೆ ವಹಿಸಿದೆ. ಇವನ ಸೂಚನೆಯ ಫಲವೇ ‘ಅತ್ರಿ’. ಇಂಗ್ಲಿಷಿನಲ್ಲಿ ಇದು A-three, ಸರಳವಾಗಿ Athree!

ಹುಟ್ಟಿನ ಆಕಸ್ಮಿಕತೆಯಿಂದ ನನಗೆ ಒದಗಿದ ಜಾತಿ ಹಣೆಪಟ್ಟಿ ವಿದ್ಯಾರ್ಥಿ ಜೀವನದಲ್ಲಿಯೂ ತರುವಾಯದ ವೃತ್ತಿಜೀವನದಲ್ಲಿಯೂ ನನ್ನನ್ನು ಆಗಾಗ ಬಾಧಿಸಿ ಅಂತರ್ಮುಖಿಯನ್ನಾಗಿಸಿದ್ದಿತ್ತು. ಇದರಿಂದ ನನ್ನ ಜೀವನದೃಷ್ಟಿಯಲ್ಲಿ ಹಲವಾರು ಧೋರಣೆಗಳು ಕ್ರಮೇಣ ಹೆಪ್ಪುಗಟ್ಟಿದುವು: ಸಾರ್ವಜನಿಕ ಜೀವನದಲ್ಲಿ ಎಲ್ಲಿಯೂ ಜಾತಿ, ಧರ್ಮ, ನಂಬಿಕೆ ಮುಂತಾದ ಜ್ಞಾತೃನಿಷ್ಠ (subjective) ಸಂಗತಿಗಳು ನುಸುಳದಂತೆ ನಾನು ಸದಾ ಜಾಗರೂಕನಾಗಿರತಕ್ಕದ್ದು: ಗುಣ ಅಥವಾ ಯೋಗ್ಯತೆಯೊಂದನ್ನೇ ಪರಿಗಣಿಸತಕ್ಕದ್ದು; ಮಕ್ಕಳನ್ನು ಅವರವರ ಒಲವು ಸ್ವಭಾವಗಳಿಗೆ ಅನುಗುಣವಾಗಿ ಮುಕ್ತ ವಾತಾವರಣದಲ್ಲಿ ಅರಳಲು ಅವಕಾಶ ಒದಗಿಸಬೇಕೇ ಹೊರತು ಸಾಚೆಸಿದ್ಧ (stereotyped) ಪದಾರ್ಥಗಳಾಗಿ ತಯಾರಿಸತಕ್ಕದ್ದಲ್ಲ; ವ್ಯಕ್ತಿತ್ವ ವಿಕಾಸಕ್ಕೆ ಸ್ವತಂತ್ರ ವೃತ್ತಿಯೇ ಸರ್ವಶ್ರೇಷ್ಠ, ತಾಬೇದಾರಿಕೆ ಎಂದೂ ಅಲ್ಲ; ಮೊದಲು ಬ್ಯಾಂಕಿನಲ್ಲಿಯೂ ಮುಂದೆ ಕಾಲೇಜು, ಎನ್ಸಿಸಿಗಳಲ್ಲಿಯೂ ಕೊನೆಗೆ ವಿಶ್ವವಿದ್ಯಾಲಯದಲ್ಲಿಯೂ ನಾನಿದ್ದುದು ತಾಬೆದಾರನಾಗಿಯೇ, ಅಲ್ಲೆಲ್ಲ ಹಲವಾರು ಅನಾವಶ್ಯಕ ಪ್ರತಿಬಂಧಕಗಳ ನಡುವೆ ನಾನು ಕೆಲಸ ಮಾಡುತ್ತ ನನ್ನತನ ಉಳಿಸಿಕೊಳ್ಳಲು ಹೆಣಗಬೇಕಾಗಿತ್ತು. ಆದ್ದರಿಂದ ನಮ್ಮ ಮಕ್ಕಳಾದರೂ ಸ್ವತಂತ್ರ ವೃತ್ತಿ ಅನುಸರಿಸುವಂತೆ ಅವರಿಗೆ ಆರಂಭದಿಂದಲೇ ಪ್ರೇರಣೆ ಕೊಡತಕ್ಕದ್ದು. ಈ ಪ್ರಯೋಗದ ವೇಳೆ ನನಗೊಂದು ಸೂತ್ರ ಮನವರಿಕೆಯಾಯಿತು. “ನಿಮ್ಮ ವಂಶದ ಕುಡಿ ನರವ್ಯಾಘ್ರನಾಗಬೇಕೆಂದು ನೀವು ಬಯಸಿದರೆ, ನೀವು ಕನಿಷ್ಠ ನರಶೃಗಾಲವಾದರೂ ಆಗಿರಬಾರದು.” ನಾವಂತೂ ಎಂದೂ ನರಿಮಾನವರಾಗಲಿಲ್ಲ ಎಂಬ ತೃಪ್ತಿ ನಮಗಿದೆ.

ಹೀಗೆ ‘ಪ್ರವರ್ಧಿಸಿದ’ ವರ್ಧನ ಸಹೋದರರಲ್ಲಿ ಹಿರಿಯನ ಒಲವಿಗೆ ಸಮೃದ್ಧ ಲಾಲನೆ-ಪಾಲನೆ-ಪೋಷಣೆಯನ್ನು ಡಿ.ವಿ.ಕೆ ಮೂರ್ತಿಯವರು ಊಡಿದರು. ನನ್ನದೇ ಪ್ರಾಯದ ಇವರು ಕರ್ನಾಟಕದ ಪ್ರಸಿದ್ಧ ಗ್ರಂಥ ಪ್ರಕಾಶಕರು, ವಿತರಣಕಾರರು. ಜೊತೆಗೆ ಪ್ರಖರ ಚಿಂತಕರು ಕೂಡ. ಐಎಎಸ್ ಮುಂತಾದ ತೋರ ವೇತನದ ಮತ್ತು ಹಿರಿ ಅಧಿಕಾರದ ಅಮಲಿನಿಂದ (ಸಕಲ ಅರ್ಹತೆಗಳಿದ್ದರೂ) ಎಂದೂ ಆಕರ್ಷಿತರಾಗದೇ ತಮ್ಮ ಪ್ರವೃತ್ತಿಗನುಗುಣವಾಗಿ ಸ್ವತಂತ್ರ ವೃತ್ತಿ ಆಯ್ದು ಅದರಲ್ಲಿ ಯಶಸ್ಸು ಸಾಧಿಸಿದವರು, ಇತರರಿಗೆ ಆ ತೆರನಾಗಿ ಬೆಳೆಯಲು ಅವಕಾಶ ಒದಗಿಸಿಕೊಡುತ್ತಿರುವವರು ಕೂಡ. ಮಡಿಕೇರಿ ದಿನಗಳಲ್ಲಿ ನಾನು ಸಹಕಾರ ಸಂಘ ನಡೆಸುತ್ತಿದ್ದಾಗ ಅದರ ಕಾರಣವಾಗಿ ನನಗೆ ಇವರ ಸಂಪರ್ಕ ಒದಗಿ ಕ್ರಮೇಣ ಇಂದು ಕುಟುಂಬ ಬಾಂಧವ್ಯವೇ ಆದುದು ನನ್ನ ಬಾಳಿನ ಒಂದು ರಮ್ಯ ಅಧ್ಯಾಯ.

ಇನ್ನು ನನ್ನ ಶಾಲಾದಿನಗಳಲ್ಲಿ ಮಡಿಕೇರಿಗೆ ದೂರದ ಧಾರವಾಡದಿಂದ ಮನೋಹರ ಗ್ರಂಥ ಮಾಲೆಯ ಉತ್ಕೃಷ್ಟ ಪುಸ್ತಕಗಳನ್ನು ಹೊತ್ತು ತಂದು ಹಳ್ಳಿ ಹಳ್ಳಿ ಮನೆ ಮನೆಗಳಿಗೆ ಭೇಟಿಯಿತ್ತು ಕೃತಾರ್ಥರಾಗುತ್ತಿದ್ದ ದ.ಬಾ. ಕುಲಕರ್ಣಿಯವರ ಶೈಲಿ ನನ್ನ ಮೇಲೆ ತುಂಬ ಪರಿಣಾಮ ಬೀರಿತ್ತು. ಹೀಗೆ ದಬಾಕು, ಸಹಕಾರ ಸಂಘ ಮತ್ತು ಡಿವಿಕೆ ಎಂಬ ಮೂರು ಪ್ರಭಾವಗಳು ಬೆಸುಗೆಗೊಂಡು ಅಶೋಕನ ಭವಿಷ್ಯಕ್ಕೆ ನಾಂದಿ ಹಾಡಿದುವು: ಸ್ವತಂತ್ರ ಪುಸ್ತಕ ವ್ಯಾಪಾರ – ಮೈಸೂರಿನ ಗೀತಾ ಬುಕ್ ಹೌಸ್ ಮಾದರಿಯಲ್ಲಿ. ಆತ ಶೈಕ್ಷಣಿಕವಾಗಿ ಇಂಗ್ಲಿಷ್ ಎಂಎ ಪದವೀಧರ, ಎನ್ಸಿಸಿ ಶಿಕ್ಷಿತ ಇತ್ಯಾದಿ.

ಮುಂದೆ ಅಶೋಕ ಮಂಗಳೂರಿನಲ್ಲಿ ಸ್ವಂತ ಪುಸ್ತಕ ಮಳಿಗೆ ತೆರೆದಾಗ (೧೯೭೫) ಅದಕ್ಕೊಂದು ಹೆಸರು ಕೊಡಬೇಕಾಯಿತು. ಅವನೇ ಯೋಚಿಸಿ ಅದನ್ನು Athree Book Centre (ABC) ಅತ್ರಿ ಬುಕ್ ಸೆಂಟರ್ ಎಂದು ನಾಮಕರಿಸಿದ. ಇದರ ಸಾಹಸಗಾಥೆ (ನೋಡಿ: ಅವನೇ ಬರೆದಿರುವ ‘ಪುಸ್ತಕ ಮಾರಾಟ ಹೋರಾಟ’) ಮೂರು ಸಾರ್ವಕಾಲಿಕ ಉನ್ನತ ಮೌಲ್ಯಗಳನ್ನು ಶ್ರುತಪಡಿಸಿದೆ: ೧ ಪ್ರಾಮಾಣಿಕ ಗ್ರಾಹಕ ಸೇವೆ ಎಂದೂ ವಿಫಲವಾಗದು. ೨ ತಾತ್‌ಕ್ಷಣಿಕ ಲಾಭದ ದುರಾಶೆ ಬಿಟ್ಟು ದೀರ್ಘಕಾಲಿಕ ಮೌಲ್ಯಾನುಶೀಲನೆ ಮಾಡಿದಾತ ಎಂದೂ ಎಲ್ಲಿಯೂ ಸೋಲಲಾರ. ೩. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಕರ್ಣ ಏಕಾಗ್ರತೆ, ಅರ್ಜುನ ಲಕ್ಷ್ಯ, ಭಗೀರಥ ಸಾಹಸ ಮತ್ತು ನಚಿಕೇತಪ್ರಯತ್ನ ಹೂಡಿದಾತ ಸದಾ ಶಿಖರಗಾಮಿಯಾಗಿಯೇ ಇರುತ್ತಾನೆ.

ಅಶೋಕನ ಪತ್ನಿ ದೇವಕಿ. ನಮ್ಮ ಕುಟುಂಬದ ಜೀವನಧರ್ಮವನ್ನೇ ತಮ್ಮದೇ ಶೈಲಿಯಲ್ಲಿ ಪಾಲಿಸುತ್ತ ಬಂದಿರುವ ಕೃಷಿಕ ಕೊಂದ್ಲಕಾನ ಕೃಷ್ಣ ಭಟ್ಟ – ಇಂದಿರಾ ದಂಪತಿಗಳ ಮಗಳಿವಳು. ಇವರ ಏಕೈಕ ಪುತ್ರ ಅಭಯಸಿಂಹ (೧೯೮೧). ಇವನೀಗ ಪುಣೆಯ Film and television institute of India (FTII) ಪದವೀಧರನಾಗಿ ಪರಿಸರ ಮತ್ತು ಜನಜೀವನ ಸಂಬಂಧೀ ಸಾಕ್ಷ್ಯಚಿತ್ರಗಳ ನಿರ್ಮಾಣ ಪ್ರಪಂಚವನ್ನು ನನವೋನ್ಮೇಷಶಾಲಿತ್ವ ಸಹಿತ ಪ್ರವೇಶಿಸುತ್ತಿದ್ದಾನೆ.

ಅತ್ರಿ ಮಧ್ಯಮನಾದ ಆನಂದ ಸ್ವಂತಾಸಕ್ತಿಯಿಂದ ಎಂಜಿನಿಯರಿಂಗ್ (ಬಿಇ) ಓದಿ ಅಸ್ಸಾಮ್, ರಾಜಸ್ಥಾನ ಮತತು ಬೆಂಗಳೂರಿನಲ್ಲಿ ‘ತಾಬೆದಾರಿಕೆ’ ಮಾಡಿ ೧೯೯೦ರಿಂದೀಚೆಗೆ ಅಮೆರಿಕ ನಿವಾಸಿಯಾಗಿದ್ದಾನೆ. ಇಂಟೆಲ್ ಸಂಸ್ಥೆಯಲ್ಲಿ ಇವನು ತಂತ್ರಾಂಶ ಎಂಜಿನಿಯರ್ (software engineer). ತಾನು ಭಾರತದಲ್ಲಿಯೇ ಉಳಿದಿದ್ದು ಗಣಿತದಲ್ಲಿ ಉನ್ನತ ಸಾಧನೆ ಮಾಡದಿದ್ದುದು ತಪ್ಪಾಯಿತೆಂಬ ಭಾವನೆ ಇವನನ್ನು ಸದಾ ಕಾಡುತ್ತಿದೆ. ಹೀಗಾಗಿ ತನ್ನ ಮಕ್ಕಳಿಗೆ – ಅನರ್ಘ್ಯ (೧೯೮೮) ಮತ್ತು ಐಶ್ವರ್ಯ (೧೯೯೪) – ಆರಂಭದಿಂದಲೂ ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳಲ್ಲಿ ಯುಕ್ತ ಶಿಕ್ಷಣ ಮತ್ತು ಗಣಿತ ಪ್ರಾವೀಣ್ಯದತ್ತ ಸಮರ್ಪಕ ಪ್ರೇರಣೆ ಪ್ರೋತ್ಸಾಹ ಒದಗಿಸುತ್ತ ಬಂದಿದ್ದಾನೆ. ಫಲ? ಇವನ ಹಿರಿ ಮಗಳು ಅನರ್ಘ್ಯ ಈಗ ಜಗತ್ಪ್ರಸಿದ್ಧ ಗಣಿತ ಶಿಕ್ಷಣ ಕೇಂದ್ರ Stanford Universityಯನ್ನು ಸ್ವಂತ ಯೋಗ್ಯತೆಯಿಂದ ಪ್ರವೇಶಿಸಿದ್ದಾಳೆ.

ಆನಂದನ ಪತ್ನಿ ಜಯಶ್ರೀ. ಈಕೆ ಉಡುಪಿಯ ಹಿರಿಯ ವಕೀಲ ಬಳಕ ಕೃಷ್ಣ ಭಟ್ಟ-ಸುಮತಿ ದಂಪತಿಗಳ ಪುತ್ರಿ. ತಮ್ಮ ಮಕ್ಕಳ ಸರ್ವಾಂಗ ಸುಂದರ ಅಭಿವರ್ಧನೆಯಲ್ಲಿ ಈಕೆಯ ಪಾತ್ರ ಆನಂದನದಕ್ಕಿಂತ ಒಂದು ಮೆಟ್ಟಿಲು ಹೆಚ್ಚೇ – ಅವನು ತಂತ್ರಾಂಶ (software) ಒದಗಿಸುತ್ತಾನೆ, ಇವಳೋ ಇದಕ್ಕೆ ಯುಕ್ತ ಯಂತ್ರಾಂಶ (hardware) ರಚಿಸಿ ಈ ಮಾನವ ಗಣಕಗಳ (computers) ವಿಕಾಸವನ್ನು ಸಾಧಿಸುತ್ತಿದ್ದಾಳೆ.

ಶಾಲಾ ವಿದ್ಯಾರ್ಥಿಯಾಗಿದ್ದ ಅನಂತನ ಒಲವು ನನ್ನಪ್ಪನ ವೃತ್ತಿ (ಸಹಕಾರ ಸಂಘಗಳ) ಲೆಕ್ಕಪತ್ರ ತಪಾಸಣೆಯತ್ತ ಹೊರಳಿದುದನ್ನು ಕಂಡೆ. ಹೀಗೆ ಇವನು ಬಿಕಾಮ್ ಓದಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ನಮ್ಮೊಂದಿಗೆ ನೆಲಸಿದ್ದಾನೆ. ಇವನ ಪತ್ನಿ ರುಕ್ಮಿಣಿಮಾಲಾ. ಇವಳು ಕೂಡ ಕೃಷಿಕ ಒಡಿಯೂರು ಕೃಷ್ಣಭಟ್ಟ-ಭಾರತೀ ದಂಪತಿಗಳ ಮಗಳು. ಇವರ ಏಕೈಕ ಪುತ್ರಿ ಅಕ್ಷರಿ (೧೯೮೮). ಇವಳೀಗ ಬಿಕಾಮ್ ವಿದ್ಯಾರ್ಥಿನಿ, ತಂದೆಯ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾಳೆ. ಅಂದ ಹಾಗೆ ಅನಂತ-ರುಕ್ಮಿಣಿಯರ ಮದುವೆ ಮುಗಿಸಿ ಈ ಯುವದಂಪತಿಗಳು ನಮ್ಮ ಮನೆ (ಮೈಸೂರು ಅತ್ರಿ) ತುಂಬಿದಾಗ ನಾವು, ವೃದ್ಧದಂಪತಿಗಳು, ಅವರೆದುರು ಎರಡು ಆಯ್ಕೆಗಳನ್ನಿಟ್ಟೆವು: ಸ್ವತಂತ್ರ ಬಿಡಾರ ಹೂಡಲು ಅವರು ಇಚ್ಛಿಸಿದರೆ ಅದನ್ನು ಬೆಂಬಲಿಸುತ್ತೇವೆ, ನಮ್ಮ ಜೊತೆಯಲ್ಲೇ ಇರಲು ಅಪೇಕ್ಷಿಸಿದರೆ ಖಂಡಿತವಾಗಿಯೂ ಸ್ವಾಗತಿಸುತ್ತೇವೆ. ಪ್ರೀತಿಯಿಂದಲೇ ಅವರು ಎರಡನೆಯದನ್ನು ಆಯ್ದು ನಮಗೆ ಈ ಇಳಿವಯಸ್ಸಿನಲ್ಲಿ ಸಂತೋಷ ಸಂತೃಪ್ತಿ ಮತ್ತು ಕೃತಾರ್ಥತೆ ತಂದುಕೊಡುತ್ತಿದ್ದಾರೆ. ದಾಸವಾಣಿ ನೆನಪಾಗುತ್ತದೆ, “ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ!”

ನಮ್ಮ ಮೂವರು ಬೀಗರೂ ಕೃಷ್ಣ ಭಟ್ಟರೇ ಆಗಿರುವುದು ಕೇವಲ ಆಕಸ್ಮಿಕ, ಆದರೆ ನಾಲ್ವರು ಮೊಮ್ಮಕ್ಕಳೆಲ್ಲರ ಹೆಸರುಗಳು ಎ-ಯಿಂದ ಆರಂಭವಾಗುವುದು ಅವರವರ ತಂದೆ ತಾಯಿಯರ ಅಪೇಕ್ಷೆಯಿಂದಲೇ. ಇನ್ನು ಮಕ್ಕಳ ಮದುವೆ ಸಂದರ್ಭದಲ್ಲಿ ನಾವು ತಳೆದ ಸ್ಪಷ್ಟ ನಿಲವು ಇದು: ಅವರೇ ಯಾರನ್ನಾದರೂ ಆ ಮುನ್ನ ಇಚ್ಛೆಪಟ್ಟಿದ್ದರೆ ಜಾತಿ, ಕುಲ, ಗೋತ್ರ, ಅಂತಸ್ತು ಮುಂತಾದವನ್ನು ಪರಿಗಣಿಸದೆ ಆ ಇಚ್ಛೆಯನ್ನು ಯೋಗ್ಯವಾಗಿ ಪೂರೈಸುವುದು ಮಾತ್ರ ನಮ್ಮ ಹೊಣೆ. ಹೀಗಲ್ಲದೇ ನಾವು (ತಂದೆ ತಾಯಿಯರು) ಆಯಬೇಕೆಂಬುದು ಮಕ್ಕಳ ಅಪೇಕ್ಷೆಯಾದರೆ ಇವರ ನಿರೀಕ್ಷಾನುಸಾರ ಮುಂದುವರಿಯುವುದು. ಜಾತಕಾದಿ ಅವೈಜ್ಞಾನಿಕ ದಾಖಲೆಗಳಿಲ್ಲಿ ಪೂರ್ಣ ವರ್ಜ್ಯ. ನೋಂದಾಯಿತ ಮದುವೆಗೆ ಆದ್ಯತೆ. ಇನ್ನು ಹೆಣ್ಣಿನವರು ಸಾಂಪ್ರದಾಯಿಕ ವಿವಾಹ ಮಾಡಬೇಕೆಂದು ಆಶಿಸಿದರೆ ಅದನ್ನು ಅತ್ಯಂತ ಸರಳವಾಗಿ ಯಾವುದೇ ದಕ್ಷಿಣೆ-ಪ್ರದಕ್ಷಿಣೆ-ನಿರೀಕ್ಷಣೆ ಕೋಲಾಹಲಗಳಿಲ್ಲದೆ ನಿರ್ವಹಿಸಬೇಕು. ನಮ್ಮೆಲ್ಲ ಮಕ್ಕಳೂ ಹೇಳಿದ್ದು ಒಂದೇ, “ಅಮ್ಮನ ಮಾದರಿ ಗೃಹಿಣಿ-ಮಡದಿ ಸಾಕು; ಹುಡುಗಿ-ಹುಡುಗರ ಪರಸ್ಪರ ಸಮ್ಮತಿಯಿಂದ ಮಾತ್ರ ಈ ಮದುವೆಯನ್ನು ಸರಳವಾಗಿ ಮಾಡಬೇಕು. ಉಡುಗೊರೆ, ವರದಕ್ಷಿಣೆ, ಭೂರಿಭೋಜನ ಮುಂತಾದ ಆಡಂಬರಗಳಿಗೆ ಅವಕಾಶ ಕೊಡಕೂಡದು.” ಇದೇ ಪ್ರಕಾರ ಅಶೋಕ-ದೇವಕಿ, ಆನಂದ-ಜಯಶ್ರೀ ಮತ್ತು ಅನಂತ-ರುಕ್ಮಿಣಿಮಾಲಾ ಆಯಾ ಕಾಲದಲ್ಲಿ ದಂಪತಿಗಳಾಗಿ ನಮ್ಮ ಮನ, ಮನೆ, ದಿನ ಮತ್ತು ಕುಲಗಳನ್ನು ಬೆಳಗುತ್ತಿದ್ದಾರೆ.

ಸಮಾರೋಪ
ಅಧ್ಯಾಯ ೯೩ (ಮೂಲದಲ್ಲಿ ೬೪)

‘ಮುಗಿಯದ ಪಯಣ’ಕ್ಕೆ ಮುಕ್ತಾಯವಿಲ್ಲ, ಆದರೆ ಬರೆಹಕ್ಕೆ ಹೀಗಲ್ಲ. ಅದು ನಾಗಾಲೋಟ, ವರ್ತಮಾನಸ್ಯಂದಿ, ನಿರಂತರ ಹೊಸ ನೋಟಗಳನ್ನು ಬೀರುವ ಮತ್ತು ಹೊಸ ಪ್ರತಿಕ್ರಿಯೆಗಳನ್ನು ಬೇಡುವ ಚಲಚ್ಚಿತ್ರ. ಇದು? ಸಂದ ಘಟನೆಗಳನ್ನು ಸಾವಕಾಶವಾಗಿಯೂ ಸಾವಧಾನವಾಗಿಯೂ ವಿವೇಚನೆಯ ಜರಡಿಯಲ್ಲಿ ಸೋಸಿ ಕಾಳುಗಳನ್ನು ಆಯ್ದು ದಾಖಲಿಸುವ ಆಮೆ ನಡೆ. ವ್ಯಕ್ತಿಯ ಮರಣದೊಳಗೆ ಆತನ ಪಯಣ ಮುಗಿಯುತ್ತದೆ. ಆದರೆ ಆಯ್ಕೆ ಮಾಡಿದ ಅದರ ದಾಖಲೆ ಆ ಮೊದಲೇ ಕೊನೆ ಕಾಣಬೇಕಾದದ್ದು ಅನಿವಾರ್ಯ. ಎಂದೆ ಪ್ರಸ್ತುತ ಅಧ್ಯಾಯಕ್ಕೆ ‘ಸಮಾರೋಪ’ವೆಂಬ ಹೆಸರು. ಈ ಪುಸ್ತಕದಲ್ಲಿ ದಾಖಲಿಸಿರದ ಅಥವಾ ಆನುಷಂಗಿಕವಾಗಿ ಉಲ್ಲೇಖಿಸಿರುವ ಹಲವಾರು ಘಟನೆಗಳನ್ನು ನನ್ನ ಇತರ ಕೃತಿಗಳಲ್ಲಿಯೂ ಬಿಡಿ ಲೇಖನಗಳಲ್ಲಿಯೂ – ಮುಖ್ಯವಾಗಿ, ಎನ್ಸಿಸಿ ದಿನಗಳು, ಸವಾಲನ್ನು ಎದುರಿಸುವ ಛಲ, ಶ್ರುತಗಾನ, ಐನ್ಸ್‌ಟೈನ್ ಬಾಳಿದರಿಲ್ಲಿ, ಆಲ್ಬರ್ಟ್ ಐನ್ಸ್‌ಟೈನ್ ಮಾನವೀಯ ಮುಖ, ಸುಬ್ರಹ್ಮಣ್ಯನ್ ಚಂದ್ರಶೇಖರ್, ಸಪ್ತಸಾಗರದಾಚೆಯೆಲ್ಲೋ. . . ಸಂಗೀತ ರಸನಿಮಿಷಗಳು ಇತ್ಯಾದಿ – ನೋಡಬಹುದು.

ಇಳಿವಯಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ಏಳು ಬಗೆಯ ಪೀಡೆಗಳು ಬಾಧಿಸಬಹುದೆಂದು ಅನುಭವದಿಂದ ಅರಿತಿದ್ದೇನೆ: ಆರ್ಥಿಕ ಪರಾವಲಂಬನೆ, ಅನಾರೋಗ್ಯ, ಜೀವನಸಂಗಾತಿಯ ವಿನಷ್ಟ, ಸಾಂಸಾರಿಕ ಅಸಾಮರಸ್ಯ, ಮಕ್ಕಳಿಂದ/ ಸೊಸೆಯರಿಂದ/ ಅಳಿಯಂದಿರಿಂದ ನಿರಂತರ ತೊಂದರೆ, ವೃತ್ತಿ ಹಾಗೂ ಪ್ರವೃತ್ತಿ ಪೋಷಕಗಳಿಲ್ಲದೆ ಮನಸ್ಸು ಜಡವಾಗುವುದು, ಸಾಮಾಜಿಕವಾಗಿ ಸೋತಿರುವುದು ಅಥವಾ ವಿನಾ ಕಾರಣ ಖಿನ್ನತೆ ಆವರಿಸಿರುವುದು. ನಮ್ಮ ಅದೃಷ್ಟ: ಇಂಥ ಯಾವುದೇ ಬಾಧೆ ನಮಗೆ ತಟ್ಟಿಲ್ಲ, ತಟ್ಟುವಂತೆಯೂ ಇಲ್ಲ – ೨೦೦೦ದಿಂದೀಚೆಗೆ ಅನಾರೋಗ್ಯವೊಂದರ ಹೊರತಾಗಿ, ಇದಾದರೂ ನನ್ನ ಅಥವಾ ಮಡದಿಯ ತಪ್ಪಿನ ಫಲವಲ್ಲ.

ನಮ್ಮಿಬ್ಬರದೂ ಆರೋಗ್ಯ ಸುಸ್ಥಿತಿಯಲ್ಲಿಲ್ಲ. ಆದರೆ ಭಾವತೀವ್ರತೆ, ಹೃದಯ ಸಂಪನ್ನತೆ ಮತ್ತು ಸ್ಮರಣ ಸಾಮರ್ಥ್ಯ ಮೊದಲಿನಂತೆಯೇ ಇವೆ. ಒಟ್ಟಾರೆ ಬದುಕು ನಮಗೆ ಸದಾ ಒಳ್ಳೆಯದನ್ನೇ ಮಾಡಿದೆ ಎಂಬ ಪೂರ್ಣ ತೃಪ್ತಿ ಇದೆ. ಇದರ ರಹಸ್ಯವೇನೆಂದು ನನ್ನನ್ನು ನಾನು ಪ್ರಶ್ನಿಸಿಕೊಂಡರೆ – ಜಾತಕ, ಪೂರ್ವಜನ್ಮ, ಅದೃಷ್ಟ, ದೈವಿಕ ಬಲ ಮುಂತಾದ ಅಸ್ಪಷ್ಟ ಅವೈಚಾರಿಕ ಪ್ರಭಾವ ಯಾವುದರಲ್ಲಿಯೂ ನಂಬಿಕೆ ಇರದ – ನನಗೆ ಹೊಳೆಯುವ ಉತ್ತರ ಒಂದೇ:
ಗೋಪಾಲಕೃಷ್ಣ ಅಡಿಗರ ಅಮರ ವಾಣಿಯಲ್ಲಿ –
ನಿನಗೆ ನೀನೇ ಗೆಳೆಯ, ನಿನಗೆ ನೀನೇ!
ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ ಗೆಳೆಯ, ನಿನಗೆ ನೀನೇ! ||
ಬಾಳ ಕಾಳೆಗದಲ್ಲಿ ಏಕಾಂಗಿ ವೀರ!
ನೇಹನಲುಮೆಗಳೆದೆಗೆ ಬರಿಯ ಆಹಾರ;
ನಿನ್ನ ಅಂತಃಸತ್ತ್ವ ಆಧಾರ!
ಉಳಿದೆಲ್ಲವೂ ಬೆಸಕೆ ಬರೆದ ಸಿಂಗಾರ!
ನಿನ್ನಾತ್ಮದಿದಿರು ನೀನಿಂತಿರುವ ವೇಳೆ,
ಆತ್ಮಸಾಕ್ಷಿಗೆ ಸಾಕ್ಷಿಗುಡುತಲಿರೆ ಬಾಳೆ;
ಮೃತ್ಯುವಿನ ಹಿಡಿತ ಬಿಗಿಯಾಗುತಿರೆ, ಮೇಲೆ
ಕಿರುತಾರೆಯೊಂದು ಓರಗೆಯ ಕೋರೆ,
ನಿನಗೆ ನೀನೇ, ಗೆಳೆಯ, ನಿನಗೆ ನೀನೇ! ||
** ** **
ಅಪರಿಗ್ರಹದೊಳುಂಟು ಸಂತೃಪ್ತಿ ಸಂತೋಷ
ಸ್ವಪರಿಗ್ರಹದಲಿಲ್ಲ ನಿರ್ಮೋಹ ನಿರಸೂಯೆ
ನೃಪನಾತ ಧಾರಿಣಿಗೆ ಕೃಪನೀತ ಕೌರವಗೆ
ತಪನ ಪ್ರಕಾಶದೋಲ್ ಬಾಳೆಲೋ ಅತ್ರಿಸೂನು ||

ನಾವಿಬ್ಬರೂ ಸ್ವಂತ ಇಷ್ಟದಿಂದ ನಮ್ಮ ದೇಹಗಳನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾನವಿತ್ತಿದ್ದೇವೆ; ನಮ್ಮ ಮರಣವಾರ್ತೆಯನ್ನು ಬಿತ್ತರಿಸಬಾರದೆಂದೂ ಮರಣಾನಂತರ ಕರ್ಮಾಂತರಾದಿ ಅಪರಕ್ರಿಯೆಗಳನ್ನಾಗಲೀ ವಾರ್ಷಿಕ ತಿಥಿಗಳನ್ನಾಗಲೀ ಮಾಡಬಾರದೆಂದೂ ಮಕ್ಕಳಿಗೆ ಲಿಖಿತ ನಿರ್ದೇಶವಿತ್ತಿದ್ದೇವೆ. ಸದಾ ವರ್ತಮಾನದಲ್ಲಿ ಪ್ರೀತಿ- ನೀತಿಯುತವಾಗಿ ಬಾಳುವಾತ ನಿತ್ಯ ಸುಖಿ ಎಂಬುದನ್ನು ಬದುಕು ನನಗೆ ಕಲಿಸಿದೆ. ಎಂದೇ ನನ್ನ ಬಾಳಿನ ಆಧಾರಶ್ರುತಿ –

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ||

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು
ಕತ್ತಲೆಯ ಮೊಡಕು ಮೂಲೆಗಳ ಸೇರದಿರು
ಭಾಸ್ಕರನನುಗ್ರಹವೆ ನೂತ್ನ ಜೀವನ ಸತ್ವ
ಮೃತ್ಯು ನಿನಗಲ್ಪತೆಯೊ ಮಂಕುತಿಮ್ಮ ||

ಚರಮಗೀತೆ:
ಸಾವು? ಜೀವನಯಾನವೈದಲಿಹ ಕಟ್ಟಕಡೆ
ರೇವು! ಸುಂದರ ಸುಖದ ಸಂತೃಪ್ತ ಸಂಪನ್ನ
ಠಾವು! ಪೀಳಿಗೆ ವರ್ಧಿಸಲು ವ್ಯಕ್ತಿ ಮುಡಿಪಿಡುವ
ಠೇವು – ತಿಳಿ ಜೀವಸಾತತ್ಯವಿದು ಅತ್ರಿಸೂನು ||

ಅತ್ರಿಸೂನೆಂಬಾತ ಮಂಕುತಿಮ್ಮನಿಗೇನು
ಪುತ್ರನೇ, ಭ್ರಾತೃವೇ, ಕುಲಜನೇ, ನಕಲಿಯೇ?
ಚಿತ್ರಭಾನುವು ತಿಮ್ಮ, ಬರಿಕಿರಿ ಸೊಡರು ಸೂನು
ಶತುರ್ಗಳುಭಯರುಂ ತಮಂಧಕ್ಕೆ ಅತ್ರಿಸೂನು

-‘ಮುಗಿಯದ ಪಯಣ’ ಇಲ್ಲಿಗೆ ಮುಗಿದುದು-

ಒಂದು ತೆರನ ಸಂಪಾದಕೀಯ…
-ಅಶೋಕವರ್ಧನ

‘ಮುಗಿಯದ ಪಯಣ’ದ ಧಾರಾವಾಹಿ ೨೦೧೨ರ ಫೆಬ್ರುವರಿ ಹನ್ನೆರಡರಂದು ವಾರಕ್ಕೊಂದು ಕಂತಿನಂತೆ ತೊಡಗಿ, ನಲ್ವತ್ತೊಂದು ಕಂತುಗಳಲ್ಲಿ ಹರಿದು, ಈಗ ಮುಗಿದ ಮತ್ತು ವಿ-ಪುಸ್ತಕಕ್ಕೆ ಉತ್ತಾರಣೆಗೊಳ್ಳುವ ಸಂದರ್ಭ. ಧಾರಾವಾಹಿಯಲ್ಲಿ ಮೂಲ ಅಧ್ಯಾಯಗಳನ್ನು ಒಡೆಯದೆ, ಪ್ರತಿ ಕಂತಿನಲ್ಲಿ ಕನಿಷ್ಠ ಸುಮಾರು ಇಪ್ಪತ್ತು ಪುಟಗಳ ಓದವಕಾಶವನ್ನು ಕೊಡಬೇಕೆಂದು ನಾನು ಅಂದಾಜಿಸಿದ್ದೆ. ಆದರೆ ಇಲ್ಲೇ ಕೆಳಗೆ ಕಾಣಿಸಿದ ಕಾರಣಗಳಿಗಾಗಿ ಅಧ್ಯಾಯಗಳನ್ನು ಹೆಚ್ಚಿಸುವುದು ಅನಿವಾರ್ಯವಾಯಿತು. ಹಾಗೆಂದು ಮೂಲ ಬರವಣಿಗೆಯಲ್ಲಿ ಎಲ್ಲೂ ನಾನು ಹಸ್ತಕ್ಷೇಪ ಮಾಡಿಲ್ಲ. ಅನಿವಾರ್ಯವಾಗಿ ಟಿಪ್ಪಣಿಸಿದ್ದಿದ್ದರೂ ನನ್ನ ಜಾಲತಾಣದ ಇತರ ಬರೆಹಗಳಲ್ಲಿ ಕಾಣಿಸಿದಂತೆ […ಅ.ವ] ಹೀಗೆ ದೊಡ್ಡ ಕಂಸಗಳ ನಡುವೆ ನನ್ನ ಹೆಸರು ನಮೂದಿಸಿಯೇ ಮಾಡಿದ್ದೇನೆ.

ಜಿಟಿನಾರಿಗೆ (ಮಗ ಹಾಗೂ ಪ್ರಕಾಶಕನಾಗಿ ನನ್ನ ತಿಳುವಳಿಕೆ) ಆತ್ಮಕತೆ ಬರೆಯುವಲ್ಲಿ ಎರಡು ಹಿಂಜರಿಕೆಗಳಿತ್ತು. ಮೊದಲನೆಯದು ಮತ್ತು ಬಲವತ್ತರವಾದದ್ದನ್ನು ಅವರೇ ಅರಿಕೆಯಲ್ಲಿ ಸಾಕಷ್ಟು ದೀರ್ಘವಾಗಿ, ಉದಾಹರಣೆಗಳ ಸಹಿತ ಚರ್ಚಿಸಿದ್ದಾರೆ; ನೀವೇ ಓದಿಕೊಳ್ಳಿ. ಎರಡನೆಯದ್ದು ನನ್ನ ಅಂದಾಜು. ಹಾಗಾಗಿ ತುಸು ವಿವರಣೆ ಸಹಿತ ಪ್ರಸ್ತುತಿ:

ತಂದೆ ಆತ್ಮಕತೆಗೆ ಇಳಿಯುವುದಕ್ಕಿಂತ ಒಂದೆರಡು ವರ್ಷಕ್ಕೂ ಮೊದಲೇ ನಾನವರಲ್ಲಿ ‘ನಕ್ಷತ್ರ ವೀಕ್ಷಣೆ’ ಪುಸ್ತಕದ ಮರುಮುದ್ರಿಸುವ ಆವಶ್ಯಕತೆಯನ್ನು ತಿಳಿಸಿದ್ದೆ. ತಂದೆ ವಿಜ್ಞಾನಸಾಹಿತ್ಯದ ಬರಿಯ ಮರುಮುದ್ರಣವನ್ನು ಎಂದೂ ಒಪ್ಪಿದವರಲ್ಲ. ಪ್ರತಿ ಮರುಮುದ್ರಣದ ಹಂತದಲ್ಲಿ ಕಾಲಾನುಗುಣವಾಗಿ ವಿಷಯವನ್ನು ಪರಿಷ್ಕರಿಸಲೇ ಬೇಕು ಎಂದು ನಂಬಿದ್ದರು ಮತ್ತು ಉಗ್ರವಾಗಿ ಪ್ರತಿಪಾದಿಸುತ್ತಿದ್ದರು. ಸಹಜವಾಗಿ ನನ್ನ ‘ಮರುಮುದ್ರಣ’ ಯೋಚನೆಯನ್ನು ಚಿಗುರಿನಲ್ಲೇ ಚಿವುಟಿದರು. “ಖಗೋಳ ವಿಜ್ಞಾನದ ನೂತನ ‘ಪಠ್ಯ’ವನ್ನೇ ಬರೆಯಬೇಕು. ಆದರೆ, ನಾನಲ್ಲ! ವಯೋಸಹಜವಾದ ಬಳಲಿಕೆಯಲ್ಲಿ ವಿಸ್ತೃತ ಕೃತಿಯೊಂದನ್ನು ಈಗ ರಚಿಸುವುದು ನನಗಸಾಧ್ಯ.” [ಮುಂದುವರಿದು “ನೋಡುವ, ಶಿಷ್ಯ ಗೋವಿಂದನನ್ನು (ಪ್ರೊ| ಎ.ವಿ. ಗೋವಿಂದರಾವ್) ಒಪ್ಪಿಸುತ್ತೇನೆ” ಎಂದಿದ್ದರು ಮತ್ತು ಒಪ್ಪಿಸಿದರು. ಆದರೆ ಆ ಪುಸ್ತಕ ನೋಡಲು ತಂದೆ ಉಳಿಯಲಿಲ್ಲ. ಗೋವಿಂದರಾಯರು ‘ತಾರಾವಲೋಕನ’ ಬರೆದು ಕೊಟ್ಟರು, ನಾನು ಪ್ರಕಟಿಸಿದ್ದೂ ಆಯ್ತು, ಮಾರಿ ಮುಗಿಸಿದ್ದೂ ಆಯ್ತು! ಈಚೆಗೆ ಗೋವಿಂದರಾಯರು ಅದನ್ನು ಅಂತರ್ಜಾಲದಲ್ಲಿ ವಿ-ಪುಸ್ತಕವಾಗಿ ಒದಗಿಸುತ್ತೇನೆ ಎಂದಿದ್ದಾರೆ. ಎವಿಜಿ ಗುರುವಿಗೆ ತಕ್ಕ ಶಿಷ್ಯ – ಯಥಾಪ್ರತಿ ಕೊಡಲಾರರು, ಪರಿಷ್ಕರಿಸುತ್ತಿರಬೇಕು. ಕಾದು ನೋಡಿ.]

ನಾವು – ಆತ್ಮೀಯರು (ಮನೆಯವರು ಮತ್ತು ಅಭಿಮಾನಿಗಳು), ಜಿಟಿನಾರ ಮೇಲೆ ಆತ್ಮಕತೆಗೆ ಒತ್ತಡ ಹೇರಿದೆವು. ಇದಕ್ಕೆ ವಿಜ್ಞಾನಸಾಹಿತ್ಯದ ಆಯಾಮಗಳಿಲ್ಲ, ಸುಲಭ ಎನ್ನುವುದು ನಮ್ಮ ತರ್ಕ. ತಂದೆ ‘ಮುಗಿಯದ ಪಯಣ’ವನ್ನೇನೋ ಮಾಡಿಕೊಟ್ಟರು. ಎಂದಿನಂತೆ ನಮ್ಮ ಆಪ್ತರಾದ ಶ್ರೀ ರಾ. ಮೋಹನಮೂರ್ತಿಯವರೇ ತಮ್ಮ ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್ಸಿನಲ್ಲಿ ಮುದ್ರಿಸಿ ಕೊಟ್ಟಿದ್ದರು. ಆ ಎಲ್ಲ ಪ್ರತಿಗಳು ಮುಗಿಯುವ ಕಾಲಕ್ಕೆ ನಾನು ಮುದ್ರಿತ ಪುಸ್ತಕಗಳಿಂದಲೇ (ಸಾಹಿತ್ಯದಿಂದಲ್ಲ – ಗಮನಿಸಿ) ದೂರಸರಿದಿದ್ದೆ. ಸಹಜವಾಗಿ ಮೋಹನಮೂರ್ತಿಯವರ ಗಣಕದಲ್ಲಿದ್ದ ‘ಸಾಫ್ಟ್ ಕಾಪಿ’ ಒದಗುತ್ತದೆಂಬ ವಿಶ್ವಾಸದಲ್ಲಿ ನಾನು ಇಲ್ಲಿ ‘ಮುಗಿಯದ ಪಯಣ’ವನ್ನು ಧಾರಾವಾಹಿ ಘೋಷಿಸಿಕೊಂಡೆ. ಆದರೆ ಅವರ ಗಣಕ ಕೆಟ್ಟುಹೋಗಿ ನನಗೇನೂ ದಕ್ಕಲಿಲ್ಲ. ಆಗ ರುಕ್ಮಿಣಿಮಾಲಾ (ನನ್ನ ತಮ್ಮನ ಹೆಂಡತಿ) – ತಂದೆಯ ಎಲ್ಲಾ ಗಣಕ ಚಟುವಟಿಕೆಗಳಿಗೆ ಏಕಮಾತ್ರ ನಿರ್ವಾಹಕಿ, ಸಹಾಯಕ್ಕೆ ಒದಗಿದಳು. ಮೈಸೂರು ಮನೆಯ ಗಣಕದಲ್ಲಿ ತಂದೆ ಬೆರಳಚ್ಚಿಸಿಟ್ಟಿದ್ದ ‘ಮುಗಿಯದ ಪಯಣ’ದ ಅಷ್ಟೂ ಕಡತವನ್ನು ಕಳಿಸಿಕೊಟ್ಟಳು. ಆದರೆ ಅದನ್ನು ನೋಡುವಾಗ ತಂದೆಗೆ ಈ ‘ಪುಸ್ತಕ ಪಯಣ’ವೂ ಅಷ್ಟೇನೂ ಸುಲಲಿತವಾಗಲಿಲ್ಲ; ತಂದೆಗೆ ದೊಡ್ಡ ಕೃತಿರಚನೆಗಿದ್ದ ಹಿಂಜರಿಕೆಗೆ ಆಧಾರವನ್ನು ಕಂಡುಕೊಂಡೆ! (ಮೊದಲು ನಾನಿನದನ್ನು ವಿವರಗಳಲ್ಲಿ ಓದಿರಲಿಲ್ಲ!!)

‘ಎನ್‌ಸಿಸಿ ದಿನಗಳು’ – ತಂದೆಯ ಆತ್ಮಕಥಾನಕದ ಒಂದು ಬಲು ಮುಖ್ಯ ಭಾಗವೂ ಹೌದು, ಅತ್ಯಂತ ಮನೋಹರವೂ ಶಕ್ತವೂ ಆದ ಲಲಿತ ಬರಹವೂ ಹೌದು. ‘ಮುಗಿಯದ ಪಯಣ’ದಲ್ಲಿ ಆ ಲಯ ಇದೆ ಆದರೆ ವಿಸ್ತರಿಸುವ ತಾಳ್ಮೆ (ಅವರೇ ಹೇಳಿಕೊಂಡಂತೆ ಶಕ್ತಿ) ಉಳಿದಿರಲಿಲ್ಲ. ವರ್ಷಾನುಕ್ರಮದಲ್ಲಿ ಸ್ವಲ್ಪ ಬರೆದು, ಉಳಿದಂತೆ ವಿವಿಧ ಕಾಲಘಟ್ಟಗಳಲ್ಲಿ ತಾನೇ ಬರೆದ ಹಲವು ಬಿಡಿ ಬರಹಗಳನ್ನು ಕತ್ತರಿಸಿ, ಸೇರಿಸಿ (ಗಣಕ ಭಾಷೆಯಲ್ಲಿ ಹೇಳುವುದಿದ್ದರೆ ಕಟ್ ಅಂಡ್ ಪೇಸ್ಟ್) ಕೇವಲ ಪರಸ್ಪರ ಸಂಪರ್ಕ ಮಾತುಗಳನ್ನಷ್ಟೇ ಬರೆದು ಕೈತೊಳೆದುಕೊಂಡಿದ್ದಾರೆ. ವಾಸ್ತವವಾಗಿ ತಂದೆಯ ಗಣಕ-ಪ್ರತಿಯಲ್ಲಿ “…ಪುಸ್ತಕದ (ಅಥವಾ ಲೇಖನದ) ಗುರುತಿಸಿದ ಭಾಗಗಳನ್ನು ತುಂಬಿ” ಎಂಬ ‘ಮುದ್ರಕನಿಗೆ ಸೂಚನೆ’ಗಳು ಹೇರಳವಿದ್ದುವು. ಅಂದು ಮುದ್ರಕರಿಗೆ ತಂದೆ ಒದಗಿಸಿದ್ದಿರಬಹುದಾದ ‘ಮೂಲ’ಗಳು ಇಂದು ನನಗೆ ಅಲಭ್ಯವಾದ್ದರಿಂದ ನಾನು ಇಲ್ಲಿ ಅವುಗಳ ವಿವರಗಳನ್ನು ಕೊಡಲಾರೆ ಮತ್ತು ಅಷ್ಟನ್ನೂ ನಾನು ಮೊದಲ ಮುದ್ರಣದ ‘ಮುಗಿಯದ ಪಯಣ’ದಿಂದ ಹೊಸದಾಗಿ ಬೆರಳಚ್ಚಿಸಿದ್ದೇನೆ. ಆಗ ಪುಸ್ತಕದ ಒಟ್ಟಂದಕ್ಕೆ ಒಪ್ಪದ ಕೆಲವು ಕೊರತೆಗಳು (ತಪ್ಪಲ್ಲ), ಕೆಲವು ಅನಾವಶ್ಯಕ ಮರು ಉಲ್ಲೇಖಗಳು ಕಾಣಿಸಿದವು. ಅವನ್ನೇ ನಾನು ‘ಎರಡನೇ ಹಿಂಜರಿಕೆ’ ಎಂದು ಗುರುತಿಸುತ್ತೇನೆ. ನಾನಿಲ್ಲಿ ಅವರ ಬರಹದ ಮೌಲ್ಯಮಾಪನ ಮಾಡುತ್ತಿರುವುದಲ್ಲ, ಅವರದೇ ಆದರ್ಶದ ಎದುರು ಕಾಲ-ಪ್ರಭಾವ ಎಷ್ಟು ನಿಷ್ಕರುಣಿ ಎಂದು ಮಾತ್ರ ದಾಖಲಿಸುತ್ತಿದ್ದೇನೆ.

ಕುದುರೆಮುಖದೆಡೆಗೆ ಮಾತ್ರ ಮೊದಲು ಸ್ವತಂತ್ರ ಪುಸ್ತಕವಾಗಿಯೇ ಬರೆಯಲ್ಪಟ್ಟಿತ್ತು. ಉಳಿದಂತೆ ವಿವಿಧ ಕಾಲಘಟ್ಟಗಳಲ್ಲಿ ಸಾಮಯಿಕವಾಗಿ ಬಂದ ಕಾಲೇಜು ಸಹಕಾರ ಸಂಘ ಅನುಭವ, ಸಿಎನೆಸ್ ಮೊದಲಾದವರ ಜೀವನ ವೃತ್ತಗಳು, ಸ್ಮರಣಾದಿ ಲೇಖನಗಳು ಯಥಾವತ್ತು (ಹೌದು, ಪರಿಷ್ಕರಣೆ ಇಲ್ಲದೆ) ಸೇರಿ ಹೋಗಿವೆ. ಅವುಗಳ ಪರಿಷ್ಕರಣೆ ತುಂಬ ದೊಡ್ಡ ಕೆಲಸ ಮತ್ತು ಅಷ್ಟೇನೂ ತುರ್ತಿನದ್ದಲ್ಲ ಎಂದು ಕಂಡದ್ದರಿಂದ ನಾನು ವಹಿಸಿಕೊಂಡಿಲ್ಲ. ಆದರೆ ಸುಮಾರು ಒಂದು ನೂರು ಮುದ್ರಿತ ಪುಟಗಳಿಗೆ ಚಾಚಿಕೊಳ್ಳುವ ಅಧ್ಯಾಯ ೩೨ – ಭೌತ ಶಿಖರಾರೋಹಣ, ಅಂದರೆ ಮೂಲದಲ್ಲಿ ‘ಕುದುರೆಮುಖದೆಡೆಗೆ’ ಎಂಬ ಇಡಿಯ ಪುಸ್ತಕ ಬಂದಿದೆ. ನಾನು ಅಲ್ಲಿ ತಂದೆಯೇ ಮಾಡಿದ್ದ ಮೂಲ ಅಧ್ಯಾಯ ಕ್ರಮಗಳನ್ನು ಇಲ್ಲಿ ಪುನಃ ಸ್ಥಾಪಿಸಿದ್ದೇನೆ. ಮತ್ತಂತದ್ದೇ ಇನ್ನೊಂದೆರಡು ಸನ್ನಿವೇಶಗಳಲ್ಲಿ ಮೂಲ ಬರೆಹ ಉಪಶೀರ್ಷಿಕೆಗಳ ಅಗತ್ಯ ಬಾರದ ದೀರ್ಘ ಲೇಖನಗಳಾಗಿದ್ದುವು. ಅವನ್ನು ಸಣ್ಣ ಅಧ್ಯಾಯಗಳನ್ನಾಗಿ ಗುರುತಿಸಿ ಒಡೆದು, ಯುಕ್ತ ಶೀರ್ಷಿಕೆ ಕೊಡುವಲ್ಲಿ ಸ್ವಾತಂತ್ರ್ಯವಹಿಸಿದ್ದೇನೆ. ಹಾಗಾಗಿ ಮೂಲದಲ್ಲಿದ್ದ ೬೪ ಅಧ್ಯಾಯಗಳು ಇಲ್ಲಿ ೯೩ರ ಹಿರಿ ಸಂಖ್ಯೆ ತೋರಿಸುತ್ತವೆ. ಆದರೆ ಬರೆಹದಲ್ಲಿ ಏನೂ ಬದಲಾಗಿಲ್ಲ ಎಂದು ಸ್ಪಷ್ಟೀಕರಿಸಬಯಸುತ್ತೇನೆ. ಮುಗಿಯದ ಪಯಣದ ಧಾರಾವಾಹಿಯ ವಾರದ ಕಂತುಗಳಿಗೆ ತುಸು ಚಿತ್ರಗಳ ರಮ್ಯತೆಯನ್ನೂ ಸೇರಿಸುವ ಉದ್ದೇಶಕ್ಕಾಗಿ ಸುಲಭ ಸಂಪರ್ಕದ ಮೂಲಗಳಿಂದ ದಕ್ಕಿದ ಒಂದಷ್ಟು ಚಿತ್ರಗಳನ್ನು ಹಂಚಿ ಹಾಕುತ್ತಲೇ ಬಂದೆ. ಈಗ ಪುಸ್ತಕ ರೂಪದಲ್ಲೂ ಬಳಸಿಕೊಳ್ಳುತ್ತಿದ್ದೇನೆ. ಅವುಗಳಲ್ಲಿನ ‘ಪಾತ್ರಧಾರಿ’ಗಳ ಪಟ್ಟಿ, ‘ಚಿತ್ರಗ್ರಾಹಿ’ಗಳ ಕೃಪೆಯನ್ನೆಲ್ಲ ದಾಖಲಿಸುವಷ್ಟು ಶಕ್ತಿ ನನಗಿಲ್ಲವಾದ್ದರಿಂದ ಸವಿನಯ ಓದುಗರ ಕಲ್ಪನೆಗೇ ಬಿಟ್ಟಿದ್ದೇನೆ; ದಾರ್ಷ್ಟ್ಯ ಖಂಡಿತಾ ಅಲ್ಲ.

ಎಂದಿನಂತೆ ನನ್ನ ಜಾಲತಾಣವನ್ನೆಷ್ಟೋ ಅಷ್ಟೇ ಪ್ರೀತಿ ಮತ್ತು ಸಾಮರ್ಥ್ಯಗಳಿಂದ ಮುಗಿಯದ ಪಯಣದ ವಿ-ಪುಸ್ತಕವನ್ನೂ ಮಗ ಅಭಯಸಿಂಹ ಈಗ ನಿಮ್ಮ ಉಚಿತ ಸಂಗ್ರಹಕ್ಕೆ ಇಲ್ಲಿ ಪ್ರಸ್ತುತಪಡಿಸಿದ್ದಾನೆ. ಅವನಿಗೆ ಕೃತಜ್ಞತೆ ಹೇಳುವ ಕೃತಕತೆ ಬಿಟ್ಟು ಶುಭಾಶಯದೊಂದಿಗೆ ವಿರಮಿಸುತ್ತೇನೆ.

ಶುಭವಂದನೆಗಳು