ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ಮೂರು
ಚಕ್ರವರ್ತಿಗಳು – ಸುತ್ತು ಹದಿನಾರು

ಆಗುಂಬೆ – ದಕ್ಷಿಣ ಭಾರತದ ಚಿರಾಪುಂಜಿ, ಎನ್ನುವುದೀಗ ಸವಕಲು ನಾಣ್ಯವೇ ಇರಬಹುದು. ಆದರೆ ಮಳೆಗದು ಗೊತ್ತಿಲ್ಲದೇ ದಾಖಲೆ ಪುಸ್ತಕದ ಹೊಸ ನಮೂದಿಗೆ ಹೋರುತ್ತಿದ್ದಂತಿತ್ತು. ಆಗುಂಬೆ ವಲಯ ಪ್ರವೇಶಿಸುತ್ತಿದ್ದ ನಮ್ಮ ಬೈಕ್ ಸೈನ್ಯವನ್ನು ಮಳೆ ನಿರ್ದಾಕ್ಷಿಣ್ಯವಾಗಿ (ದಾಕ್ಷಿಣ್ಯರಹಿತ ನೀರು?) ಸ್ವಾಗತಿಸಿತು. ಆಗುಂಬೆ ಪೇಟೆಯಲ್ಲಿ ಪ್ರೇಕ್ಷಣೀಯವೇನೂ ಇಲ್ಲ. ಆದರೆ ಅತಿ ಕಡಿಮೆ ಅಂತರದಲ್ಲಿ ಕರಾವಳಿ ವಲಯದಿಂದ ಘಟ್ಟ ಏರುವ ದಾರಿ, ಸೂರ್ಯಾಸ್ತ ದೃಶ್ಯ ವೀಕ್ಷಣೆ, ಒನಕೆ ಬರ್ಕಣ ಜೋಗಿಗುಂಡಿ ಅಬ್ಬಿಗಳು ಮುಂತಾದವೆಲ್ಲಾ ಪೇಟೆಯಿಂದ ಐದು-ಹತ್ತು ಕಿಮೀ ಸುತ್ತಳತೆಯಲ್ಲಿ ಹರಡಿವೆ. ಹಾಗೆಯೇ ಪೇಟೆಯಿಂದ ಕಾಗೆ ಹಾರಿದ ಲೆಕ್ಕ ತೆಗೆದರೆ, ಐದಾರು ಕಿಮೀ ಅಂತರದಲ್ಲಿರುವ ಅವಶ್ಯ ಪ್ರೇಕ್ಷಣೀಯ ಸ್ಥಳ ಕುಂದಾದ್ರಿ. ಆ ಶಿಖರಕ್ಕಿರುವ ವಾಹನಯೋಗ್ಯ ದಾರಿ ಮತ್ತು ಅಲ್ಲಿರುವ ಕಟ್ಟಡಗಳು ಎಷ್ಟು ಶಿಥಿಲವಾದರೂ ಒಂದು ರಾತ್ರಿಯ ಮಳೆಗಾಳಿಯಿಂದ ನಮಗೆ ರಕ್ಷಣೆಯಂತೂ ಅವಶ್ಯ ಕೊಡುತ್ತವೆ ಎಂದೇ ನಾನು ನಂಬಿದ್ದೆ. ಸಹಜವಾಗಿ ಆ ರಾತ್ರಿ ವಾಸಕ್ಕೆ ಅದನ್ನೇ ನಾವು ಆಯ್ದುಕೊಂಡಿದ್ದೆವು. ಆಗುಂಬೆ, ತೀರ್ಥಳ್ಳಿ ಮತ್ತು ಶೃಂಗೇರಿ ಎಂಬ ತ್ರಿಕೋನ ರಚಿಸಿದರೆ ನಡುವೆ ಎದ್ದು ಕಾಣುವ ಶುದ್ಧ ಶಿಲಾಮಯ ಶಿಖರ ಕುಂದಾದ್ರಿ. ಅದನ್ನು ಹಿಂದೊಮ್ಮೆ ನಾನು ಆಗುಂಬೆ-ತೀರ್ಥಳ್ಳಿಮಾರ್ಗದಿಂದ ಹೋಗಿ ನೋಡಿದ್ದು ಜಾಲತಾಣದ ಹೆಚ್ಚಿನ ಓದುಗರಿಗೆ ಗೊತ್ತೇ ಇದೆ.

ಈ ಸಲ ನಮ್ಮದು ಶೃಂಗೇರಿ ಬದಿಯ ಮಾರ್ಗ ಅರಸುವುದು ಅದೂ ಮಳೆಗಾಲದ ಇಳಿ ಸಂಜೆಯ ನಿರ್ಜನ ಮುಹೂರ್ತದಲ್ಲಿ ತುಸು ತ್ರಾಸದಾಯಕವೇ ಆಯ್ತು. ಶೃಂಗೇರಿ ಬಿಟ್ಟ ಸ್ವಲ್ಪ ಮುಂದೆಲ್ಲೋ ಸೇತುವೆ ಕುಸಿದು ದಾರಿ ಬಂದಾಗಿರುವುದು ತಿಳಿಯಿತು. ಅನಿವಾರ್ಯವಾಗಿ ಬದಲಿ ಮಣ್ಣು ದಾರಿ ಹಿಡಿದೆವು. ಅದೃಷ್ಟವಶಾತ್ ಅದು ಒಳದಾರಿಯಾಗಿಯೇ ಒದಗಿತು. ತೀರ್ಥಹಳ್ಳಿಯಿಂದ ಬರುತ್ತಿದ್ದ ಡಾಮರು ದಾರಿಯನ್ನು ನಿರೀಕ್ಷೆಗೂ ಮುನ್ನವೇ ತಲಪಿದೆವು. ಅಲ್ಲಿನ ಕೈಕಂಬವೇನೋ ಶಿಖರಕ್ಕೆ ನಾಲ್ಕೇ ಕಿಮೀ ಅಂತರ ಎಂದರೂ ಸವಾರಿ ಅಷ್ಟು ಹಗುರವಾಗಿರಲಿಲ್ಲ! ಮೊದಲ ಸುಮಾರು ಒಂದೂವರೆ ಕಿಮೀ ಅಗಲಕಿರಿದಾದ ಅಂಕುಡೊಂಕಿನ ಮಾರ್ಗ. ಮತ್ತೆ ಸುತ್ತ ಕಾಡು ಬಲಿದಂತೆ ನೇರ ಬೆಟ್ಟಕ್ಕೇ ಲಗ್ಗೆಯಿಟ್ಟಿತ್ತು ದಾರಿ. ಅದುವರೆಗೆ ಗಟ್ಟಿ ಸವಾರಿಗೆ ಇದ್ದ ಡಾಮರಿನ ಅವಶೇಷದ ಆಶ್ವಾಸನೆಯೂ ಆ ಮಾರ್ಗ ಕೊಡುತ್ತಿರಲಿಲ್ಲ. ಆದರೆ ಅಲ್ಲಿ ವಾಹನ ಬಳಕೆ ತೀರಾ ಕಡಿಮೆಯಿದ್ದುದರಿಂದ (ಇಲ್ಲವೇನೋ ಎನ್ನುವಷ್ಟು) ನೆಲಗಟ್ಟು, ದಾರಿಯ ಅಂಚುಗಳು ಸಾಕಷ್ಟು ಬಿಗಿಯಾಗೇ ಇದ್ದುವು. ಒಂದೆರಡು ಕಡೆ ಮೇಲಂಚಿನ ಮರಗಳು ದಾರಿಗಡ್ಡಲಾಗಿ ಧರಾಶಾಯಿಯಾಗಿದ್ದುವು.

ಅಂಥಲ್ಲಿ ನಾವು ದರೆಯ ಬದಿಗೆ ಸರಿದು, ಸಂದಿನಲ್ಲಿ ಹುಶಾರಾಗಿ ಬೈಕ್‌ನ್ನು ನೂಕಿ ದಾಟಿಸಿ ಮುಂದುವರಿದೆವು. ಕೆಲವೆಡೆಗಳಲ್ಲಿ ಮಳೆನೀರು ಕೊಚ್ಚಿ ತಂದ ತೆಳು ಕೆಸರು ನಮ್ಮ ಸ್ವಾಗತಕ್ಕೆ (?) ರತ್ನಗಂಬಳಿಯನ್ನೇ ಹಾಸಿದಂತೆ ದಪ್ಪ ಪಾಚಿ ಬೆಳೆಸಿ ಸುಂದರವಾಗಿ ಕಾಣುತ್ತಿತ್ತು. ಆದರೆ ಒಂದೊಂದು ಬೈಕ್ ನುಗ್ಗಿದಂತೆ `ರತ್ನಗಂಬಳಿ’ ಹರಿದು, ಚೂರುಗಳು ಹಾರುತ್ತಿದ್ದುವು. ನಮ್ಮ ಸವಾರಿಯೋ ತೂಫಾನಿಗೆ ಸಿಕ್ಕ ಬಡ ನಾವೆಯಂತಾಗಿತ್ತು. ದಾರಿಯ ಪೂರ್ಣ ಅಗಲವನ್ನು ಬಳಸುವಂತೆ ಹಾವಾಡುವುದೇನು, ಅಡ್ಡ ಮಲಗುವುದೇನು, ನೇರ ದಾರಿಯಲ್ಲಿ ಅನಿಯಂತ್ರಿತ ಹಿಮ್ಮುರಿ ತಿರುವು ತೆಗೆದೇ ನಿಲ್ಲುವುದೇನು!! ಒಂಟಿ ಸವಾರಿಯಲ್ಲಿ ಸುಧಾರಿಸಿಯೇವು ಎಂದು ಸಹವಾರರನ್ನು ಇಳಿಸುವುದು ಇದ್ದದ್ದೇ. ನಿಜ ಹಿಮ್ಮುರಿ ತಿರುವುಗಳ ತೀವ್ರತೆಯಲ್ಲಂತೂ ಸಹವಾರನ ನೂಕುಬಲವನ್ನು ಸೇರಿಸಿಕೊಂಡು ದಾರಿ ನಿಭಾಯಿಸುವುದು ಯಾರಿಗೂ ನಾಚಿಕೆಯ ವಿಷಯವಾಗಲೇ ಇಲ್ಲ. ಅಂತದ್ದರಲ್ಲಿ ಒಮ್ಮೆ ಪ್ರಸನ್ನನ ಬೈಕ್ ಏರಿದ್ದು ಹತ್ತಡಿಯಾದರೆ ಹಿಂಜಾರಿಳಿದದ್ದು ಇಪ್ಪತ್ತಡಿಯಾದದ್ದು, ನನ್ನ ಬೈಕ್ ಜಾರಿಕೆಯಲ್ಲಿ ಪೂರ್ಣ ಜಾಡು ಕಳೆದು ದರೆಬದಿಯ ಚರಂಡಿಯಲ್ಲಿ ಕರ್ಣರಥವಾದದ್ದು ವಿಶಿಷ್ಟ ಮತ್ತು ಹೇಳಲೇಬೇಕಾದ ಘಟನೆಗಳು. ಅಂದು ಅಲ್ಲಿನ ಕಾಡು, ಮೋಡ, ಮಳೆಗೆ ರೋಸಿಹೋಗಿ ಸೂರ್ಯ ಸಂಜೆ ನಾಲ್ಕಕ್ಕೇ ಅಸ್ತಮಿಸಿದಂತಿತ್ತು. ನಮಗೆ ಒದಗಿದ ಮಸುಕು ಬೆಳಕೇನಿದ್ದರೂ ಹಗಲಿನಿಂದ ಪಡೆದ ಕಡವೇ ಸರಿ ಎಂದುಕೊಳ್ಳುತ್ತಲೇ ಇದ್ದೆವು. ಆದರೆ ಎಲ್ಲ ಸರ್ಕಸ್ ಮುಗಿದು ಶಿಖರ ವಲಯದ `ಪ್ರವಾಸಿ ಬಂಗ್ಲೆ’ ತಲಪುವಾಗ ಗಂಟೆ ಏಳಾಗಿತ್ತು, ನಿಜ ಕಾವಳವೇ ಗಾಢವಾಗಿ ಕವಿದಿತ್ತು.

ಕುಂದಾದ್ರಿಯ ಸೇವಾಕರ್ತರೇನೋ ಕಗ್ಗಲ್ಲಿನ ಗೋಡೆ, ಸುಭದ್ರವೇ ಎನ್ನುವ ತಾರಸಿ ಕೊಟ್ಟು ಬಂಗ್ಲೆ ರಚಿಸಿದ್ದರು. ಮಳೆನಾಡಿಗೆ ಸಹಜವಾಗಿ ಎದುರು, ಹಿಂದಿನ ಬಾಗಿಲುಗಳನ್ನು ವಿಸ್ತಾರ ಜಗುಲಿಯ ಒಳಭಾಗಕ್ಕೇ ಕೊಟ್ಟು ರಕ್ಷಣೆಯನ್ನೂ ಮಾಡಿದ್ದರು. ಒಳಗೆ ವಾಸಕ್ಕೆ ಮೂರು ಕೋಣೆಗಳಲ್ಲದೆ, ಅಡುಗೆ, ಊಟ, ಕಕ್ಕಸ್ಸು, ಬಚ್ಚಲುಮನೆಗಳು, ವಿದ್ಯುತ್ ಸಂಪರ್ಕಗಳೆಂದು ಪರಿಷ್ಕಾರವಾಗಿಯೇ ಕಟ್ಟಿಸಿದ್ದರು. ಆದರೆ ಹವಾಮಾನದ ವೈಪರೀತ್ಯಕ್ಕೆ ನಿರ್ವಹಣೆಯ ವೈಫಲ್ಯ ಸೇರಿರಬೇಕು. ಮತ್ತದರ ದುರುಪಯೋಗ ಪಡೆದು ಬಂದ ಅಯೋಗ್ಯ ಪ್ರವಾಸಿಗಳ ದಾಂಧಲೆ ಅಂತಿಮ ಕ್ರಿಯೆ ಚೆನ್ನಾಗಿಯೇ ನಡೆಸಿದ್ದರು. ಹೆಚ್ಚಿನ ಕಿಟಕಿಯ ಕನ್ನಡಿಗಳು ಹುಡಿಯಾಗಿ ಚೆಲ್ಲಿದ್ದುವು, ಕೆಲವು ಪೂರ್ಣ ಪಡಿಯಗಳನ್ನೇ ಕಳೆದುಕೊಂಡಿದ್ದವು. ವಿದ್ಯುತ್ ಸಂಪರ್ಕದ ಬಲ್ಬ್ ಸ್ವಿಚ್ ವಯರುಗಳೆಲ್ಲ ಒಡ್ಡೊಡ್ಡಾಗಿ ಮಾಯವಾದ್ದಲ್ಲದೆ ಎಷ್ಟೋ ಕಡೆ ಆಧಾರವಾಗಿ ಕೊಟ್ಟ ಮರದ ಪಟ್ಟಿಗಳೂ ಕಿತ್ತು ಬಂದಿದ್ದುವು. ಹಾರು ಹೊಡೆದ ಕಿಂಡಿಗಳಲ್ಲಿ ಮಳೆರಾಯರ ಸಂಸಾರ ಮನೆಯಿಡೀ ಸಾಕಷ್ಟು ವಿಹರಿಸಿತ್ತು. ನೆಲದಲ್ಲಿ ತೇವ, ಕಸ, ಗೋಡೆಗಳ ಮೇಲೆ ಹೊಲಸು ಸಾಹಿತ್ಯ ಶೃಂಗೇರಿ ಬಿಟ್ಟು ಬಂದ ನಮ್ಮನ್ನು ಅಣಕಿಸುವಂತಿದ್ದುವು. ಪರಿಸ್ಥಿತಿಯ ಅನಿವಾರ್ಯತೆ ನಮಗೆ ಹೊಂದಾಣಿಕೆಯನ್ನು ಮಾತ್ರ ಉಳಿಸಿತ್ತು.

ಹಿತ್ತಿಲಿನ ಜಗುಲಿಯ ಮೇಲಕ್ಕೆ ಬೈಕುಗಳನ್ನು ಏರಿಸಿ ನಿಲ್ಲಿಸಿ ತಗ್ಗಿನ ಸೀರ್ಪನಿ ಹೊತ್ತ ಗಾಳಿಯ ಹೂಂಕಾರಕ್ಕೆ ತುಸು ಅಡ್ಡಿ ಮಾಡಿದೆವು. ಅಲ್ಲಿ ಮೊದಲಿಗೇ ಸಿಗುವ ಅಕ್ಕಪಕ್ಕದ ಎರಡು ಕೋಣೆಗಳು ಹಾಗೇ ಇನ್ನೊಂದು ಮಗ್ಗುಲಿನ ಕೋಣೆಗಳೂ ನಮಗೊದಗದಷ್ಟು ಹಾಳಾಗಿದ್ದವು. ಇದ್ದುದರಲ್ಲಿ ನಡುಕೋಣೆಯನ್ನು (ಅಥವಾ ಊಟದ ಮನೆ ಎನ್ನಿ) ಆಯ್ದು, ಕಸ ಬಳಿದೆವು. ಹೆಚ್ಚಿನ ಶುದ್ಧಕ್ಕೆ ನಮ್ಮಲ್ಲಿದ್ದ ಪ್ಲ್ಯಾಸ್ಟಿಕ್ ಶೀಟುಗಳನ್ನು ಹಾಸಿದೆವು. ಅಲ್ಲಿ ಉಳಿದಿದ್ದ ಬಾವು ಬಂದ ಎರಡು ಕದಗಳನ್ನೇ ಸಾವರಿಸಿ ನಿಲ್ಲಿಸಿದ್ದರಿಂದ ಒಳಗೆ ಗಾಳಿ ಹೊಡೆತವೂ ಕಡಿಮೆಯಾಯ್ತು. ಕೊನೆಯಲ್ಲಿ ಮೂಲೆಯಲ್ಲೊಂದು ಮೊಂಬತ್ತಿ ಹೊಚ್ಚಿಟ್ಟು `ಮನೆ’ ಬೆಳಗಿದೆವು.

ಅಡುಗೆ ಕೋಣೆಯ ಮೂಲೆಯಲ್ಲಿ ಸ್ವಲ್ಪ ಒಣ ಸೌದೆಯಿತ್ತು. ಎದುರು ಜಗುಲಿಯಲ್ಲಿ ನಾಲ್ಕೆಂಟು ಸೈಜುಗಲ್ಲುಗಳನ್ನು ಜೋಡಿಸಿ, ಮೇಲೆ ಶಿಬಿರಾಗ್ನಿ ಸ್ಥಳವನ್ನೇನೋ ಗಟ್ಟಿಮಾಡಿದೆವು. ಆದರೆ ವಾಯು ವರುಣರ ಲೀಲೆಯಲ್ಲಿ ಅಗ್ನಿ ನೆಲೆಸಲು ಮತ್ತು ಕಾಪಾಡಿಕೊಳ್ಳಲು ಸಮೀರ ಮತ್ತು ವಿಪಿ ನಾಯಕರು ಸಾಕ್ಷಾತ್ ನರನಾರಾಯಣರೇ ಆಗಬೇಕಿತ್ತು. ಪೂರಕ ವ್ಯವಸ್ಥೆಗೆ ಸುಂದರರಾಯರು, ರೋಹಿತ್ ಮಳೆಕೋಟು ಪುನಃ ಏರಿಸಿ, ಟಾರ್ಚ್ ಹಿಡಿದು ಅಂಗಳದ ಆಸುಪಾಸಿನ ಪೊದರು, ಕಾಡು ಶೋಧಿಸತೊಡಗಿದರು. ಪುರುಳೆ, ಕಾಡುಕುಂಟೆಗಳೊಂದಷ್ಟು ಜಗುಲಿಯಂಚಿನಲ್ಲಿ ಒಡ್ಡಿ, ಏಳುವ ಕಿಚ್ಚು ಕ್ರಮೇಣ ಇವುಗಳ ತೇವ ಕಳೆದು ರಾತ್ರಿಯಿಡೀ ನಮ್ಮನ್ನು ಬೆಚ್ಚಗಿರಿಸೀತು ಎಂದು ಆಶಿಸಿದರು. ಸಣ್ಣ ಕೈಕೊಡಲಿಯಲ್ಲಿ ಕುಂಟೆ ಸೀಳುವ ಸಾಹಸ ಕೇವಲ ಚಕ್ಕೆ ಸಂಗ್ರಹಕ್ಕೇ ಮುಗಿಯಿತು.

ಇಂಪೋರ್ಟೆಡ್, ೧೦೦% ವಾಟರ್ ಪ್ರೂಫ್ ಚೀಲ, ಪ್ಲ್ಯಾಸ್ಟಿಕ್ ಶೀಟುಗಳ ಬಂದೋಬಸ್ತು ಎಷ್ಟು ಮಾಡಿದ್ದರೂ ಹೆಚ್ಚಿನವರ ಗಂಟುಮೂಟೆಗಳೊಳಗೆ ನೀರು ಸೇರಿತ್ತು. ಪಕ್ಕದೆರಡು ಕೋಣೆಗಳಲ್ಲಿ ಹಗ್ಗ ಕಟ್ಟಿ ಹೆಚ್ಚಿನ ಚಂಡಿ ಬಟ್ಟೆಗಳನ್ನು ರಾತ್ರಿ ಕಳೆಯುವುದರಲ್ಲಿ ಸ್ವಲ್ಪವಾದರೂ ಆರಿಕೊಳ್ಳಲೆಂದು ಹರವಿದೆವು. ಸ್ವೆಟ್ಟರ್, ಮಂಗನತೊಪ್ಪಿ, ಹಾಸು-ಹೊದಿಕೆಗಳನ್ನು ಶಿಬಿರಾಗ್ನಿ ಎಂಬ ಭ್ರಮೆಗೆ ಒಡ್ಡಿ ಒಣಗಿಸಲು ಹೆಣಗಿದೆವು. ಕಿರು ಬೆಂಕಿ ನಾಚುತ್ತಲೇ ಸರದಿಯಲ್ಲಿ ಸುತ್ತ ಸುಳಿದು, ಎಲ್ಲರ ಮೂಗು ಕಣ್ಣಿಗೆ ಸಾಕಷ್ಟು ಹೊಗೆಯಾಡಿಸಿ, ನೀರಿಳಿಸಿ ಚಂಡಿ ಉರುವಲಿನೆಡೆಯಲ್ಲಿ ಅಡಗುವಾಟ ನಡೆಸಿತ್ತು. ನಮ್ಮ ತಂಡವೋ ಕೊಂಡ ಹಾಯುವ ಉತ್ಸಾಹಿಗಳಂತೆ ಹೂಹೂಕಾರ ಹಾಕುತ್ತ ಅದನ್ನು ಸುತ್ತುವರಿದು ಹಾಗೂ ಹೀಗೂ ಮೇಲೆಬ್ಬಿಸುವಾಗ ಗಂಟೆ ರಾತ್ರಿ ಒಂಬತ್ತಾಗಿತ್ತು. ಕೊಂಡದ ಮೂಲೆಯೊಂದರಲ್ಲಿ ನೆಲೆಗಾಣಿಸಿದ್ದ ಪಾತ್ರೆಯಲ್ಲಿನ ನೀರು ಅಷ್ಟರಲ್ಲಿ ನಾಯಕರ ಕರಾಮತ್ತಿನಲ್ಲಿ ಚಹಾ ರೂಪ ಪಡೆದಿತ್ತು. ಬುತ್ತಿಯೂಟ ಹೊಟ್ಟೆಗಿಳಿಸಿ, ಮೇಲೆ ಚಾ ಹೊಯ್ದಾಗ ಒಮ್ಮೆಗೆ ಎಲ್ಲರಿಗೂ ಅನಿಸಿರಬೇಕು ಇನ್ನೇತರ ಚಳಿ! ಯೋಜನೆಯಂತೆ ಒಂದಿಬ್ಬರು ಬೆಂಕಿಯ ಉಸ್ತುವಾರಿಗೆ ನಿಂತರೆ, ಉಳಿದವರು ಕೋಣೆಯೊಳ ಸೇರಿ, ಮುರುಕು ಬಾಗಿಲ ಮರೆಯಲ್ಲಿ, ಹೊದಿಕೆಗಳ ಆಳದಲ್ಲಿ ಮೈಮುದುರಿ ನಿದ್ರೆ ಹುಡುಕತೊಡಗಿದರು.

ದಟ್ಟ ಮೋಡದ ಬಿರುಸಿನ ಓಡಾಟ, ಕುಟ್ಟಿ ಹೊಡೆಯುವ ಮಳೆಯ ಆಟೋಪ ನಡೆದೇ ಇತ್ತು. ಸ್ವಲ್ಪೇ ಹೊತ್ತಿನಲ್ಲಿ ನಿದ್ರೆಯ ಜೋಮು, ಬೆಚ್ಚಗಿನ ಭ್ರಮೆ ಬಿರಿಯುತ್ತ ಬಂತು. ಬೆಂಕಿಯೆದುರು ಬಿಸಿಯಾಗಿದ್ದ ಹೊದಿಕೆಗಳಲ್ಲಿ ನೀರಾರಿರಲಿಲ್ಲ. ಬಲು ಬೇಗನೆ ಅವೆಲ್ಲ ಶೀತಲ ಪದರವಾಗಿ, ಪಾದ ಮೂಲದಿಂದ ಚಳಿ ಅಮರತೊಡಗಿತು. ಮೊಣಕಾಲು ಹೊಟ್ಟೆಗೆಳೆದು, ಕೈಗಳನ್ನು ತೊಡೆಸಂದಿಯಲ್ಲಿ ಹುಗಿದು, ರೆಪ್ಪೆಯೊಳಗೆ ನಿದ್ರೆ ಬಂಧಿಸಲು ಪ್ರಯತ್ನಿಸುತ್ತಿದ್ದಂತೆ ಚಳಿ ಹೊಟ್ಟೆ ಹೊಕ್ಕು ನಡುಗಿಸಿಬಿಟ್ಟಿತು. ಒಬ್ಬೊಬ್ಬರೇ ಎದ್ದು ಮತ್ತೆ ಬೆಂಕಿಯನ್ನು ಸುತ್ತುಗಟ್ಟಿದೆವು. ಎಲ್ಲ ಸುತ್ತುವರಿದು ನಿಲ್ಲುವಷ್ಟು ಜಗುಲಿಯೂ ಬೆಂಕಿಯೂ ದೊಡ್ಡದಿರಲಿಲ್ಲ. ಮತ್ತೆ ಪರಿಸರದ ಪರಿಣಾಮಕ್ಕೋ ಏನೋ ಇದ್ದ ಬೆಂಕಿಗೆ ಸಾಕಷ್ಟು ಶಾಖವೂ ಇರಲಿಲ್ಲ! ಅಂಚುಗಟ್ಟಿದ ಚಂಡಿ ಕೋಲು ಕೊದಂಟಿಗಳು ಚುಂಯ್ ಗುಟ್ಟುತ್ತ ನೀರು ಬಸಿಯುತ್ತಿದ್ದುವು. ಅವು ಆವಿಯಾಡಿಸಿ, ಹೊಗೆಯಾಡಿಸಿ, ನಾಲ್ಕು ಕೆನ್ನಾಲಗೆ ಚಾಚುವುದರೊಳಗೆ ಬುಸ್ಸ ಬೂದಿಯಾಗುತ್ತಿತ್ತು.

ಕುಕ್ಕರಗಾಲಿನಲ್ಲಿ ಸುತ್ತುಗಟ್ಟಿ ಕೂತ ಮಂದಿ ತೂಕಡಿಕೆಯಲ್ಲಿ ಮೈಮರೆಯದೆ ಮತ್ತಷ್ಟು ಚಂಡಿ ಸೌದೆ ಅಂಚಿನಿಂದ ಒತ್ತುತ್ತಲೂ, ಕೊಂಡವನ್ನು ಕುಟ್ಟಿ ಕೆದಕಿ ಒಟ್ಟುತ್ತಲೂ ಇರಬೇಕಾಗಿತ್ತು. ಮೈ ಬೆಚ್ಚಗಿಡುವಷ್ಟು ಬೆಂಕಿ ಒದಗದಿದ್ದರೂ ಅದನ್ನು ಜೀವಂತವಿಡುವಲ್ಲಿನ ನಮ್ಮ ಚಟುವಟಿಕೆಯೇ ತುಸು ಚಳಿ (ನಿದ್ರೆಯನ್ನೂ) ದೂರ ಮಾಡುತ್ತಿತ್ತು. ಚಟಪಟಾಯಿಸುವ ಕೋಲು, ಬುಸುಗುಟ್ಟುತ್ತ ಹೊಗೆ ಕಾರುವ ಗಂಟು, ಬುರ್ರನುರಿಯುವ ದಿಂಡು, ಧಗ್ಗನೆ ಅಗ್ನಿಶಿಖೆ ಚಿಮ್ಮುವ ಪುರುಳೆ, ಅಪರೂಪಕ್ಕೆ ಕೆಂಡದುಂಡೆಯಾಗುವ ದಿಮ್ಮಿ, ಬೂದಿಹಾರಿಸುವ ದರಗು ಎಂದು ತರಹೇವಾರಿ ಕ್ರಮವಾಗಿ ಪೇರುತ್ತ ಹೋದೆವು. ಹೆಸರಿಸಲು ಹೀಗೆ ವೈವಿಧ್ಯವಿದ್ದರೂ ಮೊತ್ತದಲ್ಲಿ ಲಭ್ಯ ಉರುವಲು ಧಾರಾಳವಿರಲಿಲ್ಲ. ಕಡಿದಾದ ಪರ್ವತ ಮೈಯ ಕಾಡನ್ನು ಮಳೆಯ ವಿಪರೀತದೊಡನೆ ಕೇವಲ ಮಿಣುಕು ದೀಪದ ಬಲದಲ್ಲಿ ನುಗ್ಗುವುದು ಸಾಧ್ಯವಿದ್ದಿದ್ದರೆ ಕೊರತೆಯೇನೂ ಆಗುತ್ತಿರಲಿಲ್ಲ. ಅದಕ್ಕಾದರೂ ಅನುಕೂಲವಾಗುವಂತೆ ದಿನದ ಬೆಳಕಾರುವುದರೊಳಗೆ ಬಾರದ ನಮ್ಮ ಅದೃಷ್ಟವನ್ನೇ ಹಳಿದುಕೊಂಡೆವು. ನಮಗಾಗಿ ಬೆಂಕಿಯೋ ಅದಕ್ಕಾಗಿ ನಾವೋ ಎನ್ನುವ ತರ್ಕ ಮೊಳೆಯದಷ್ಟು ತನ್ಮಯತೆಯಿಂದ ರಾತ್ರಿಯಿಡೀ ಅಗ್ನಿಕಾರ್ಯದಲ್ಲಿ ಹೆಚ್ಚು ಕಡಿಮೆ ಎಲ್ಲರೂ ನಿರತರಾಗಿದ್ದೆವು.

ದಿನದ ಬಳಲಿಕೆ, ನಿದ್ರೆಯೊತ್ತಡಗಳನ್ನು ಮರೆತು ಹೊಗೆಯ ಕಾಟಕ್ಕೆ ಹೊಂದಿಕೊಂಡು ಜ್ವಾಲೆ ಚಿಮ್ಮಿದಾಗ ಮೈಯುರಿಗೆ ಹಿಮ್ಮೆಟ್ಟಿ, ತಣಿದಾಗ ಮುನ್ನುಗ್ಗಿ ಕಳೆದ ದಿನದ ಶ್ರಮಕ್ಕೆ ವಿಶ್ರಾಂತಿ, ಬರುವ ದಿನದ ಚಟುವಟಿಕೆಗೆ ಶಕ್ತಿ ಎಂಬ ಎರಡು ಮುಖದ ಭ್ರಮೆಯನ್ನು ಪೋಷಿಸಿದ್ದೇ ಹೆಚ್ಚು. ಸಾಹಸಯಾನದ ಕೊನೆಯಲ್ಲಿ `ಅಪೂರ್ವ’ ಸೋದರರು ಎಂದೇ ಬಿರುದುಗಳಿಸಿದ ಪ್ರಸನ್ನ, ಪ್ರವೀಣ ಮತ್ತು ನಮ್ಮಿಬ್ಬರ ಒಣ-ಬಿಸಿ ಉಡುಪುಗಳ ರಾಶಿಯಲ್ಲಿ ಹುಗಿದುಹೋದ ಅಭಯ ಮಾತ್ರ ಕೋಣೆಯೊಳಗೆ ಗಟ್ಟಿ ನಿದ್ರೆ ಮಾಡಿದವರು. ಆಗೀಗ ಕೆಲವರು `ಇಷ್ಟು ಸಾಕು’ ಅನ್ನಿಸಿ ಒಳಕೋಣೆಗೆ ಸರಿದು ನಿದ್ರೆ ಕದಿಯುವ ಪ್ರಯತ್ನ ನಡೆಸಿದ್ದುಂಟು, ಐದೇ ಮಿನಿಟಿನಲ್ಲಿ ಸೋತು ಮರಳಿದ್ದೂ ಉಂಟು. ರಾತ್ರಿ ಟಿಕ್ಕಿದ ಪ್ರತಿ ಸೆಕೆಂಡಿನ ಲೆಕ್ಕಾ ಎಲ್ಲರಲ್ಲೂ ಇತ್ತು ಪಕ್ಕಾ!

ಚಾಪಾತ್ರೆ ಪ್ರತಿಷ್ಠಾಪನೆಯೊಡನೆ ಹೊಸಹಗಲಿನ ಸ್ವಾಗತ ನಡೆಸಿದೆವು. ಗಂಟಲಿಗೆ ಬ್ರೆಡ್ ಜ್ಯಾಮ್ ಮಾಡಿ, ಜಾರಿಸಲು ಚಾ ಹೊಯ್ದುಕೊಂಡೆವು. ನಿಮ್ಮ ಗಡಿಯಾರದ ಕಾಲಮಾನ ನಮಗೇನೂ ಲಗಾವಿಲ್ಲ ಎನ್ನುವಂತೆ ಕಾವಳ ಕವಿದೇ ಇತ್ತು, ಮಳೆಗಾಳಿಗಳ ಮಹಾಸಮ್ಮೇಳನ ಠರಾವು ಮಂಡನೆಯ ಅಧ್ವಾನದಲ್ಲಿತ್ತು! ಕಳೆದು ಹೋಗಬಹುದಾದ ವಿವರಗಳನ್ನು ಗ್ರಹಿಸುವ ಸಂಕಟ, ಡೆಡ್ ಲೈನ್ ಮೀರಲಾಗದ ಒತ್ತಡಗಳಲ್ಲಿ ಹೆಣಗುವ ಮಾಧ್ಯಮಮಿತ್ರರಂತೆ ನಾವು ಮುಂದುವರಿಯಲೇಬೇಕಿತ್ತು. ಕೋಟಗಟ್ಟಿದ ಮಳೆಕೋಟು, ತೊಪ್ಪಿಗಳನ್ನೇರಿಸಿ, ಪ್ರಾತರ್ವಿಧಿಗಳನ್ನು ಆಸುಪಾಸಿನ ಬಯಲಲ್ಲೇ ಮುಗಿಸಿ, ನಿಜನೆತ್ತಿಗೆ ನಡೆದೆವು. ಸಾವಕಾಶ ಏರುವ ಇಪ್ಪತ್ತು-ಮೂವತ್ತು ಮೆಟ್ಟಿಲು. ಮೋಡರಾಯರ ಪರಿವಾರ ಚಾತುರ್ಮಾಸ್ಯಕ್ಕೆ ಕುಂದಾದ್ರಿಯಲ್ಲಿ ಝಂಡಾ ಹೊಡೆದಿದ್ದಿರಬೇಕು. ಗಿಂಡಿಮಾಣಿ – ಗಾಳೀರಾಯರು, ಭಾರೀ ಕಾರುಬಾರಿನಲ್ಲಿದ್ದರು. ದಿನಮಣಿ ಮಾತ್ರ ಕಾಯಿಲೆ ಬಿದ್ದವನಂತೆ, ನಿಸ್ತೇಜನಾಗಿ, ಕಂಬಳಿ ಮುಸುಕೆಳೆದುಕೊಂಡು ಪೂರ್ವ ದಿಗಂತದಲ್ಲಿ ಇದ್ದೂ ಇಲ್ಲದಂತಿದ್ದ! ಕೆರೆ, ದೇವಸ್ಥಾನ, ಒತ್ತಿನ ಆಧುನಿಕ ಕಟ್ಟಡಗಳೆಲ್ಲ ನಾನು ಹಿಂದೆ ನೋಡಿದ್ದಕ್ಕಿಂತ ಶಿಥಿಲತೆಯಲ್ಲಿ ಬಡ್ತಿಪಡೆದಂತಿತ್ತು! ಒಂದೇ ವ್ಯತ್ಯಾಸ – ಅಧಿಕೃತ ಕೆರೆ, ಬಾವಿಯಲ್ಲದೆ ಆ ವಲಯದ ಪ್ರತಿ ತಗ್ಗು ತೆಮರೂ (ತಳದಲ್ಲೇನೇ ನಾಗರಿಕ ಕಸವಿದ್ದರೂ) ಸ್ಫಟಿಕ ನಿರ್ಮಲ ನೀರು ತುಂಬಿ ಕೋಡಿವರಿದಿತ್ತು. ಮೊದಲ ಬಾರಿಗೆ ಕುಂದಾದ್ರಿ ಏರಿದ್ದ ಮಿತ್ರರಿಗೆ ಬಂಡೆ ಶಿಖರದ ಆಳ ನಿರುಕಿಸುವುದು, ಆಗುಂಬೆ ವಲಯದ ವಿಹಂಗಮ ನೋಟ ದಕ್ಕುವುದು ಪುಸ್ತಕದ ಬದನೇಕಾಯಿ ಎಂದುಕೊಂಡು ಎಲ್ಲರೂ ಬೇಗನೆ ಬಂಗ್ಲೆಗೆ ಮರಳಿದೆವು.

ಶಿಬಿರಾಗ್ನಿ ನಂದಿಸಿ, ಜಗುಲಿ ಒಳಮನೆಗಳಿಂದ ನಮ್ಮ ಅವಶೇಷಗಳನ್ನಷ್ಟು ಚೊಕ್ಕ ಮಾಡಿ, ಗೋಡೆ ಸಾಹಿತ್ಯಕ್ಕೆ ನಮ್ಮದೇನೂ ದೇಣಿಗೆ ಕೊಡದೆ ಗುಳೆ ಕಿತ್ತೆವು. ಹಿಂದಿನ ರಾತ್ರಿ ಏರಿಬರುವಾಗ, ಇಳಿದು ನೂಕುಬಲ ಕೊಟ್ಟ ಜಾಗಗಳಲ್ಲಿ ಈಗ ಕುಳಿತರೆ ಜಾರಿ ಕುಸಿಯುವ ಲಾಭವಷ್ಟೇ ಗ್ರಹಿಸಿ, ಹೆಚ್ಚಿನ ಸಹವಾರರು ಬೆಟ್ಟವನ್ನು ಮುಂದಾಗಿ ನಡೆದೇ ಇಳಿದಿದ್ದರು. ಬೈಕುಗಳು ಅವರನ್ನೆಲ್ಲ ಕೂಡಿಸಿಕೊಂಡು ತಪ್ಪಲಿನ ಕೈಮರ ಸೇರುವಾಗ ನಮ್ಮ ಸಾಧನೆಯನ್ನು ಮೆಚ್ಚಿದವನಂತೆ ಶಿಖರವೇರಿದ ಸೂರ್ಯ ಮೋಡದ ಕಂಡಿ ತೆರೆದು ನಸುನಗೆ ಬೀರುತ್ತಿದ್ದ; ಬಿಸುಗದರ ಬಿಟ್ಟು ಶುಭ ಹಾರೈಸಿದ.

ತೀರ್ಥಹಳ್ಳಿ ದಾರಿ ಹಿಡಿದೆವು. ಊರಿಗೆ ಎಂಟು ಕಿಮೀ ಮೊದಲೇ ಸಿಗುವ ಎಡದ ಕವಲು, ನನ್ನ ನೆನಪಿನ ಕಡತದಲ್ಲೊಂದು ಪುಟ. ಮುಂದುವರಿಯುವ ಮುನ್ನ ಅದನ್ನೊಮ್ಮೆ ಮಗುಚಿ ನೋಡುವ ಆಸೆಯಲ್ಲಿ ತಂಡ ಆ ದಾರಿಯನ್ನನುಸರಿಸಿತು. ಅಂದು ನಾವು ವರಾಹಿ ವಿದ್ಯುತ್ ಯೋಜನಾ ಪ್ರದೇಶವನ್ನು ಸುತ್ತಿ ಹಾಗೇ ಮುಂದುವರಿದಿದ್ದೆವು. ಈಗ ಯೋಜನೆ ಪೂರ್ಣಗೊಂಡ ಕಾಲದಲ್ಲಿ ಏನು ದಕ್ಕೀತು ಎಂಬ ಕುತೂಹಲಕ್ಕೆ ಆರೇ ಕಿಮೀ ಅಂತರದಲ್ಲಿ ಸಣ್ಣ ಉತ್ತರ ಸಿಕ್ಕಿತು. ವರಾಹಿ ಯೋಜನೆಯ ದೊಡ್ಡ ಅಂಗವಾದ ಮಾಣಿ ಅಣೆಕಟ್ಟಿನ ಹಿನ್ನೀರು ದಾರಿ ನುಂಗಿತ್ತು. ಎಲ್ಲಿನದೋ ಕಾಲ್ಪನಿಕ ಕತ್ತಲನ್ನು ಹೋಗಲಾಡಿಸಲು ಇಲ್ಲಿನಷ್ಟೂ ವನ್ಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಶಾಶ್ವತ ಕತ್ತಲು ಬಡಿದಿತ್ತು. ದೊಡ್ಡ ಲಾಭದ ಹೆಸರಿನಲ್ಲಿ ಬೆಲೆಕಟ್ಟಲಾಗದ್ದನ್ನು ಸರ್ವಭಕ್ಷಕ ನೀರು ನುಂಗಿನೊಣೆದಿತ್ತು. ಯೋಜನಾಪೂರ್ವ ಬಾಣೆ, ಗುಡ್ಡೆಗಳು ದ್ವೀಪಗಳಾಗಿ, ಮುಕ್ತ ಹಳ್ಳಿಗಳೆಲ್ಲಾ (ಜಲ-) ಬಂಧೀಖಾನೆಗಳಾಗಿದ್ದುವು. ನಡೆದೋ ಸ್ವತಂತ್ರ ವಾಹನಗಳಲ್ಲೋ ಓಡಾಡುತ್ತಿದ್ದವರಿಗೀಗ ದಾರಿಗಳೇ ಇಲ್ಲ. ಕಾಲಸೂಚೀ ಸಾವ್ಕಾರೀ ಬಸ್ಸುಗಳಿಗಾಗಿದ್ದ (ಖಾಸಗಿ ಸಾರ್ವಜನಿಕ ಬಸ್ಸು) ನಿಲ್ದಾಣಗಳಲ್ಲಿ ಉಳಿದಷ್ಟು ಹರಕು ಚಪ್ಪರಗಳು ಇಂದು ದೋಣಿಗಟ್ಟೆಗಳು; ಅನಿಯತವಾಗಿ ಬಂದರೂ ಬರಬಹುದಾದ ಲಾಂಚ್ ಕಾದ `ಫಲಾನುಭವಿ’ಗಳು ಕೆಲವೊಮ್ಮೆ ದಿನಗಳನ್ನು ಮಿನಿಟುಗಳಂತೆ ಕಳೆಯುತ್ತಲೇ ಇರುತ್ತಾರೆ! ಆ ವಾತಾವರಣದಲ್ಲಿ ಮಡುಗಟ್ಟಿದ್ದ ಅನಾಥಪ್ರಜ್ಞೆ ನಮ್ಮನ್ನೂ ಕಾಡಿದ್ದರಿಂದ ದೋಣಿ ಸವಾರಿ, ದ್ವೀಪದರ್ಶನಗಳ ಯೋಚನೆ ಬಿಟ್ಟು, ತೀರ್ಥಳ್ಳಿ ದಾರಿಗೆ ಮರಳಿದೆವು.

ನಮ್ಮ ಎರಡನೇ ದಿನದ ಗುರಿ ಕೊಡಚಾದ್ರಿ ಶಿಖರವಾಸ. ತೀರ್ಥಳ್ಳಿಯಲ್ಲಿ ನಮ್ಮ ಹೊಟ್ಟೆಗೂ ಬೈಕಿನ ಹೊಟ್ಟೆಗೂ ಆಹಾರ ಕೊಟ್ಟು ಸಾಗರದ ದಾರಿ ಹಿಡಿದೆವು. ಸ್ವಲ್ಪದರಲ್ಲೇ ಎಡಮುರಿದು (ಬೊಬ್ಬಿ ಕ್ರಾಸ್), ಐತಿಹಾಸಿಕ ಖ್ಯಾತಿಯ ಕೌಲೇದುರ್ಗದ ಒತ್ತಿನಲ್ಲೇ ಸಾಗಿದೆವು. ನಮ್ಮ ತಂಡದಲ್ಲಿ ದುರ್ಗ ನೋಡದವರು ಕೆಲವರಿದ್ದರೂ ಅದು ಕಾಲ ಪ್ರಶಸ್ತವಲ್ಲವೆಂದು ಕಲಾಪ ಪಟ್ಟಿಯಲ್ಲೇ ಸೇರಿಸಿರಲಿಲ್ಲ. ನಮ್ಮ ಐತಿಹಾಸಿಕ ಅವಶೇಷಗಳನ್ನು ಸಂರಕ್ಷಿಸಬೇಕಾದ ಇಲಾಖೆ ಸರ್ವೇ ಸಾಮಾನ್ಯವಾಗಿ ಅಂಥಾ ಸ್ಥಳಗಳಲ್ಲಿ ತನ್ನೊಂದು ವಿಧಿನಿಷೇಧಗಳ ಬೋರ್ಡು ನಿಲ್ಲಿಸುವುದು ನಮಗೆ ತಿಳಿದೇ ಇದೆ. ಮತ್ತೆ ಆ ಬೋರ್ಡಿನ ಕಂಬ ಕುಂಬಾಗಿ ನೆಲಕ್ಕೊರಗಿದರೂ ರಕ್ಷಣೆ ತುಕ್ಕುಹಿಡಿದು ಗುಜರಿ ಸೇರಿದರೂ ಬರವಣಿಗೆ ಮುಕ್ಕಾಗಿ ಗೆದ್ದಲು ಬಿದ್ದರೂ ತಿರುಗಿ ನೋಡುವ ಕ್ರಮ ಇಲ್ಲ! ಅಂಥಾ ಸ್ಥಳಗಳಿಗೆ ಪ್ರೇಕ್ಷಕರ ಸಂದಣಿ ನಿರಂತರವಾಗಿ ಹೆಚ್ಚಿದ ಕೆಲವೆಡೆಗಳಲ್ಲಿ ವಸೂಲಿ ಪ್ರಧಾನವಾಗಿ ಸಾರ್ವಜನಿಕ ಸೌಕರ್ಯದ ಆದ್ಯತೆಯ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ತೆವಳುವುದು ಕ್ರಮ. (ಸಂಗ್ರಹ, ಸಂರಕ್ಷಣೆ, ಸಂಶೋಧನೆಗಳ ಸರಣಿಯಲ್ಲಿ ಕೊನೆಯದಾಗಬೇಕಾದ ಸಂಪಾದನೆ ಮುನ್ನುಗ್ಗಿದ್ದಕ್ಕೇ ಅಲ್ಲವೇ ಇಂದು ವಿಶ್ವಮಾನ್ಯತಾ ಪಟ್ಟಿಯಲ್ಲಿ ನಮ್ಮ ಪಶ್ಚಿಮಘಟ್ಟ ಬರುತ್ತದೆ ಎನ್ನುವಾಗ ನಮ್ಮ ಘನಸರಕಾರ ಎಡಗಾಲಿನಲ್ಲಿ ಒದ್ದದ್ದು!) ಹಾಗಾರಿ ಈ ವಿಷ ಸುಳಿಯ ಭಾಗವೇ ಆದ ಕೌಲೇದುರ್ಗದಲ್ಲಿ ನಾವೇನೂ ಉತ್ತಮವಾದ್ದನ್ನು ನಿರೀಕ್ಷಿಸುವಂತಿರಲಿಲ್ಲ.

ತೀರ್ಥಳ್ಳಿ-ನಗರದ ನಡುವಣ ಸಹಜ ದಾರಿಯನ್ನು ವರಾಹಿ ಯೋಜನೆ ನುಂಗಿದ ಮೇಲೆ ಪರ್ಯಾಯವಾಗಿ ಒದಗಿದ ಪ್ರಸ್ತುತ ದಾರಿ ಹೀನಮಾನವಾಗಿತ್ತು. ಅದರಲ್ಲೂ ಸುಮಾರು ಏಳೆಂಟು ಕಿಮೀ ಜಲ್ಲಿಕಿತ್ತ ಮಣ್ಣು ದಾರಿ. ಚಕ್ರ ಕಚ್ಚುವ ಗೊಸರು, ಆಳ ತಿಳಿಸದಂತೆ ಕೆರೆ ಕಟ್ಟಿನಿಂತ ಭಾರೀ ಹೊಂಡಗಳಿಗಿಂತ ಉತ್ತಮ ಎಂದು ಸಂತೋಷಪಟ್ಟುಕೊಂಡೇ ನಾವು ಮಧ್ಯಾಹ್ನದೂಟಕ್ಕೆ ಹೊಸನಗರದಲ್ಲಿದ್ದೆವು. ಮುಂದಿನದು ಕೊಲ್ಲೂರ ದಾರಿ. ಮೊದಮೊದಲು ಸ್ವಲ್ಪ ಕೃಷಿ, ಜನವಸತಿ ಕಾಣಿಸಿದರೂ ಮತ್ತೆ ಕಾಡೋ ಕಾಡು. ನಾವು ಪಶ್ಚಿಮ ಘಟ್ಟದ ಸಮೀಪಸ್ಥ ಮೇಲಿನ ವಲಯದಲ್ಲಿದ್ದೆವು. ಅಲ್ಲಿ ದಾರಿಯ ಎಡಕ್ಕೆ ಅನತಿ ದೂರದಲ್ಲಿ ಅನಾಕರ್ಷಣೀಯ ಗುಡ್ಡ ಸಾಲಿನಂತೆ ತೋರುತ್ತಿದ್ದುದೇ ಕರವಾಳಿ ವಲಯದ ದಿಗ್ಗಜ – ಕೊಡಚಾದ್ರಿ ಶ್ರೇಣಿ! ಹಾಗೆಂದು ಈ ಮೈಯಿಂದಲೇ ಹತ್ತಲು ಹೋದವನಿಗೆ ಗಾದೆ ಶ್ರುತವಾಗುತ್ತಿತ್ತು – ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ!

ಸಂಪೆಕಟ್ಟೆ ಮುರ್ಕಾಯಿಯಲ್ಲಿ ಮುಖ್ಯದಾರಿಯನ್ನು ಬಲಕ್ಕುಳಿಸಿ ಸಾಗಿದೆವು. ಮೂರು ಕಿಮೀ ಅಂತರದಲ್ಲಿ ಚಕ್ರಾ ಯೋಜನೆಯ ಭಾರೀ ಕಾಲುವೆ ಅಡ್ಡ ಹಾದಿತ್ತು. ಅದಕ್ಕಡ್ಡಲಾಗಿ ಒಂದು ಒಡ್ಡನ್ನು ರಚಿಸಿ ಅಗತ್ಯಕ್ಕೆ ತಕ್ಕಂತೆ ತೆರೆದು ಮುಚ್ಚಬಹುದಾದ ಎರಡು ಮೂರು ಬಾಗಿಲನ್ನೂ ಜೋಡಿಸಿದ್ದರು. ಎಡಕ್ಕೆ ಅನತಿ ದೂರದಲ್ಲಿ ಈ ಕಾಲುವೆಗೆ ಒಡ್ಡಿಕೊಂಡ ನಿಸ್ತರಂಗಿತ, ಹಸಿರುಗಟ್ಟಿದಂತೆ ತೋರುವ, ಬಲುವಿಸ್ತಾರಕ್ಕೆ ವ್ಯಾಪಿಸಿದ ಜಲಧಿ. ಕೆಲವು ಬಾಗಿಲು ತುಸು ತೆರೆದದ್ದಕ್ಕೆ ಬಲ ಕಾಲುವೆಯ ತಳದಲ್ಲಿ ಭಾರೀ ರೋಷದಿಂದಷ್ಟು ನೀರು ನುಗ್ಗುತ್ತಿತ್ತು. ಗಗನದಿಂದ ಧುಮುಕಿದ ಗಂಗೆಯ ಆಕ್ರೋಶವನ್ನು ಶಿವಜಟಾಜೂಟ ಹಣಿದಂತೆ, ಇಲ್ಲಿ ದೃಢವಾಗಿ ತಿರುಚಿ ಕಟ್ಟಿದ ಕಾಲುವೆ ಸುಧಾರಿಸುತ್ತಿತ್ತು. ಅಲ್ಲಿನ ಒಡ್ಡು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಸೇತುವೆಯೂ ಆಗಿತ್ತು.

ಚಕ್ರಾಯೋಜನೆಯ ವ್ಯವಸ್ಥೆ ಆ ದಿನಗಳಲ್ಲಿ ನಮಗೆ ಪೂರ್ತಿ ಅರ್ಥವಾಗಿರಲಿಲ್ಲ. ವಾಸ್ತವದಲ್ಲಿ ಚಕ್ರಾ ಎಂಬ ಸಣ್ಣ ನದಿ ಸ್ವತಂತ್ರವಾಗಿ ಘಟ್ಟ ಧುಮುಕಿ, ಕರಾವಳಿಯಲ್ಲಿ `ಹಳ್ಳಿಹೊಳೆ’ಯೇ (ಇದೊಂದು ಸ್ಥಳನಾಮವೂ ಹೌದು) ಆಗಿ, ಮುಂದುವರಿದಂತೆ ಸೌಪರ್ಣಿಕೆ, ವರಾಹಿಯರ ಗೆಳೆತನದಲ್ಲಿ ಪಡುಗಡಲಲ್ಲಿ ಲೀನವಾಗುತ್ತಿತ್ತು. ಆದರೆ ಶರಾವತಿಯನ್ನು ಅಡ್ಡಗಟ್ಟಿದ ಮಹಾಯೋಜನೆಗೆ ಪೂರಕ ನೀರಬಲ ಕೊಡಲು ಸುಮಾರು ನಾಲ್ಕು ದಶಕಗಳ ಹಿಂದೆಯೇ ಚಕ್ರಾ ನದಿಯನ್ನು ತಿರುಗಿಸಿದ್ದರು! ಘಟ್ಟದಂಚಿನಲ್ಲಿ ಅದರ ಸಹಜ ಪಾತ್ರೆಯಲ್ಲಿ ಭಾರೀ ಕಟ್ಟ ಹಾಕಿ, ಶರಾವತಿಯ ಹಿನ್ನೀರಿಗೆ ಕಾಲುವೆ ಕಡಿದಿದ್ದರು.

View Larger Map ಲಿಂಗನಮಕ್ಕಿಯ ಸಂಗ್ರಹ ದುರ್ಬಲವಾದಾಗ ಇಲ್ಲಿನ ಬಾಗಿಲು ತೆರೆದು, ಗುರುತ್ವಾಕರ್ಷಣಾ ಬಲದಲ್ಲೇ ನೀರು ಪೂರೈಸುತ್ತಾರಂತೆ. ಚಕ್ರಾ ಯೋಜನೆ ಪೂರೈಸಿದ ವರ್ಷ ೧೯೮೫. ಅಲ್ಲಿಂದ ಕನಿಷ್ಠ ಮೂವತ್ತು ವರ್ಷ ಮುಂದುವರಿದ ಸ್ಥಿತಿಯಲ್ಲಿ ಅಂದರೆ, ನೇತ್ರಾವತಿ ನದಿ ತಿರುವಿನ ಕರಾಳ ಕಾವಳದಲ್ಲಿ ನಿಂತ ನನಗೀಗ ಮೂಡುವ ಭಾವ ಒಂದೇ ತೀವ್ರ ವಿಷಾದ. ಚಕ್ರಾ ನದಿಯ ಜಲಾನಯನ ಪ್ರದೇಶವನ್ನು ಮುಳುಗಿಸಿ ಕೆಳಕಣಿವೆಯಲ್ಲಿ ಅವಲಂಬಿಸಿದ ಕೃಷಿ ಮತ್ತು ಸಾಮಾಜಿಕ ಅಗತ್ಯ ಸೇರಿದಂತೆ ಜೀವವೈವಿಧ್ಯವನ್ನು ಸೊರಗಿಸಿ ಅದೆಂಥ ಅಘೋಷಿತ ಶಾಪಕ್ಕೀಡುಮಾಡಿದ್ದರು. ಇಂದು ಒಂದು ನೇತ್ರಾವತಿ ಕಣಿವೆಯ ಜೀವನಾಡಿಯನ್ನೇ ಕುಲಗೆಡಿಸ ಹೊರಟ ನೀಚತನಕ್ಕೆ ಅಂದು ವನ್ಯವೇ ತಾನಾಗಿದ್ದ ಚಕ್ರಾ ಕಣಿವೆಯಲ್ಲಿ ನಡೆದ ಅನಾಚಾರ (ಬಹುತೇಕ ತಿಳಿಯದೆಯೂ ಇರಬಹುದು. ಆದರೆ ಇಂದು ನೇತ್ರಾವತಿಯಲ್ಲಿಬರಲಿರುವುದು ಶುದ್ಧ ಉಡಾಫೆ; ಬರ್ಬರ ಅತ್ಯಾಚಾರ!) ಖಂಡಿತವಾಗಿಯೂ ಸಣ್ಣದಲ್ಲ. ಇನ್ನು ಅಲ್ಲಿದ್ದಿರಬಹುದಾದ ತೀರಾ ತೆಳು ಜನವಸತಿಯಂತೂ `ಸಾಮಾಜಿಕ ನ್ಯಾಯ’ ಎಂಬ ಶಬ್ದವನ್ನೇ ಕೇಳಿರಲಾರದು!

ಅಂದು ದಿನ ಪೂರ್ತಿ ಒಣಹವೆಯೇನೋ ಇತ್ತು. ಆದರೆ ದಟ್ಟೈಸುತ್ತಿದ್ದ ಮೇಘಾವಳಿ ನಮ್ಮ ಓಟಕ್ಕೆ ಚುರುಕನ್ನೂ ಯುದ್ಧದ ಕಾವನ್ನೂ ಕೊಡುತ್ತಲೇ ಇತ್ತು. ಹಾಗಾಗಿ ಅದುವರೆಗೆ ನಾವು ಕೇಳರಿಯದ ಚಕ್ರಾಯೋಜನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದುವರಿದೆವು. ಸಂಪೆಕಟ್ಟೆ ಹಳ್ಳಿ ತಲಪುವಲ್ಲಿಗೆ ಡಾಮರು ದಾರಿ ಮುಗಿದಿತ್ತು. ಅಲ್ಲಿದ್ದ ಮಾರ್ಗಸೂಚಕ ಮೋಟುಗೋಡೆಯ ಗೀಚುಬರಹ, ಬಲದ ಹರಕು ದಾರಿಗೆ ಕೈಮಾಡಿ – ಕೊಡಚಾದ್ರಿ ೧೩ಕಿಮೀ, ಎಂದಿತು. ಅದರಲ್ಲಿ ಶುದ್ಧ ಏರುದಾರಿ ಕೊನೆಯ ನಾಲ್ಕೈದು ಕಿಮೀ ಮಾತ್ರ ಎಂದು ನಮಗೆ ತಿಳಿದಿದ್ದುದರಿಂದ ಉಲ್ಲಸಿತರಾಗಿಯೇ ಅತ್ತ ನುಗ್ಗಿದೆವು. ಆದರೆ ಸವಾಲು ನಾವೆಣಿಸಿದ್ದಕ್ಕಿಂತಲೂ ಮೊದಲೇ ಎದುರಾಯ್ತು. ಮುಷ್ಠಿಗಾತ್ರದ ಕಗ್ಗಲ್ಲ ಚೂರುಗಳನ್ನು ದಾರಿಗೆ ಹಾಸುವ ಕೆಲಸ ನಡೆದಿತ್ತು. ಅದನ್ನು ಜಗ್ಗಿ ಕೂರಿಸುವ ಯಂತ್ರ ಓಡಿರಲಿಲ್ಲ. ಸಾಗಣೆಯ ಲಾರಿಯವರೂ ಕೂಲಿಕಾರರೂ ಸಾರಿ ಹೇಳಿದರು ಇದೇ ಕಷ್ಟ, ಮುಂದೆ ಇನ್ನೂ ದೊಡ್ಡ ಬೋಲ್ಡ್ರೇ ಹಾಕಿದ್ದೇವೆ, ಭಾರೀ ಕಷ್ಟ. ಕೊನೆಯಲ್ಲಿ ಘಾಟೀ ದಾರಿಯಂತು ಮಳೆನೀರಲ್ಲಿ ಕೊರೆದು, ದರೆ ಕುಸಿದು, ಮರಬಿದ್ದು ಪರಮ ಕಷ್ಟ. ವ್ಯಾಖ್ಯಾನಕಾರರ ಬಗ್ಗೆ ಗೌರವದಲ್ಲೂ ನಮ್ಮ ಛಲ ಉಳಿಸಿಕೊಂಡು ಸಾಧ್ಯವಾದಷ್ಟು ಹೋಗ್ತೇವೆ, ಆಗಲಿಲ್ಲಾಂದ್ರೆ ಹಿಂದೆ ಬರ್ತೇವೆ ಎಂದು ಗೇರ್ ಇಳಿಸಿ, ಶಕ್ತಿಯೂಡಿದೆವು.

ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ ಸವಾರಿಸುಖಗಳನ್ನು ನಿಮ್ಮದಾಗಿಸಿಕೊಳ್ಳಲು ಕಾದಿರ್ತೀರಲ್ಲಾ ಮುಂದಿನ ಕಂತಿಗೆ?

(ಮುಂದುವರಿಯಲಿದೆ)