(ಆರನೇ ಸಣ್ಣ ಕತೆ -೧೯೪೬)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಅದರ ವಿ-ಧಾರಾವಾಹಿಯಲ್ಲಿ ಇದು ಆರನೇ ಗುಟುಕು. ಆಸಕ್ತರು ಹಿಂದಿನ ಐದೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ. – ಅಶೋಕವರ್ಧನ]

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು? – ಕವಿಶಿಷ್ಯ.
ಮಡಿಕೇರಿಯಿಂದ ಐದು ಮೈಲು ದೂರದಲ್ಲಿ ಹುಲಿತಾಳವೆನ್ನುವ ಒಂದು ಹಳ್ಳಿಯಿದೆ. ಪ್ರತಿಯೊಂದು ಪ್ರಖ್ಯಾತ ಸ್ಥಳದ ಹಿನ್ನೆಲೆಯಲ್ಲಿಯೂ ಒಂದು ಸ್ಥಳ ಪುರಾಣವಿರುವಂತೆ ಇದರ ಹಿನ್ನೆಲೆಯಲ್ಲಿಯೂ ಒಂದು ದಂತ ಕಥೆಯಿದೆ. ಎಲ್ಲಾ ಹಳ್ಳಿಗಳಿಗೂ ಬೀಡುಗಳಿಗೂ ಈ ರೀತಿಯ ಇತಿಹಾಸಗಳಿದ್ದರೂ ಅವೆಲ್ಲ ಸಾಕಷ್ಟು ಪ್ರಚಾರವಿಲ್ಲದೆ, ಕೇಳುವವರಿಲ್ಲದೆ ಪ್ರಕಾಶಕ್ಕೆ ಬರುವುದಿಲ್ಲ. ಹುಲಿತಾಳವನ್ನು ಹುಲಿಯು ತಾಳ ಹಾಕುವ ಸ್ಥಳವೆಂದು ಕೆಲವರು ವಿವರಿಸಿದರೆ, ಅದು ಹುಲ್‌ತಆಳ ಅಂದರೆ ಆಳವಾಗಿ ಹುಲ್ಲು ಬೆಳೆದಿರುವ ಸ್ಥಳವೆಂದು ಇನ್ನು ಕೆಲವರು ಅರ್ಥ ಮಾಡುವರು. ಇದೊಂದೂ ಸರಿಯಲ್ಲ, ಬೇರೇನೋ ನಿಗೂಢಾರ್ಥ ಇದರಲ್ಲಿರಬೇಕು ಅಥವಾ ಅರ್ಥವಿಹೀನವಾದ ಅನೇಕ ಶಬ್ದಗಳಂತೆಯೇ ಇದೂ ಒಂದು ಎಂದು ಹಲವರು ತಿಳಿಯುವರು. ಮಡಿಕೇರಿಯೇ ಕಾಡು; ಇನ್ನು ಅದರ ಸಮೀಪದ ಹಳ್ಳಿಯೆಂದರೆ ಅದು ಗೊಂಡಾರಣ್ಯವೆಂದೇ ತಿಳಿಯಬೇಕು. ಈ ಮಹಾರಣ್ಯದ ಮಧ್ಯೆ ಮನುಷ್ಯ ನಿರ್ಮಿತವಾದ ಗದ್ದೆ ಬಯಲುಗಳು ಅಂಚಿನಲ್ಲಿ ಅಲ್ಲಲ್ಲಿ ದೂರದೂರದಲ್ಲಿ ಒಂದೆರಡು ಗುಡಿಸಲುಗಳು ಇವೆ. ಇವುಗಳೇ ಈ ಹಳ್ಳಿಯ ಮುಖ್ಯ ಮಾರ್ಗಗಳು ಮತ್ತು ಜನವಸತಿಯ ನೆಲೆಗಳು. ಕೆಲವು ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಒಂದು ಮದುವೆ ನಡೆಯಿತು. ಅದಕ್ಕೆ ಹೋಗಿದ್ದಾಗ ಹುಲಿತಾಳದ ವಿಷಯದಲ್ಲಿ ನನ್ನ ಉತ್ಸಾಹ ಕೆದರಿತು. ಮಂಟಪದಲ್ಲಿ ಕುಳಿತಿದ್ದ ಒಬ್ಬ ವೃದ್ಧ ಮಹಾಶಯರನ್ನು, ಆ ಸ್ಥಳಕ್ಕೆ ಸಂಬಂಧಿಸಿದವರನ್ನು, ಇದರ ಕುರಿತು ಪ್ರಶ್ನಿಸಿದೆ. ಅವರೆಂದರು, ಊಟವಾಗ್ಲಿ; ಆ ಮೇಲೆ ಒಂದು ಜಾಗಕ್ಕೆ ಹೋಗೋಣ. ಅಲ್ಲಿ ಕಥೆ ಹೇಳುವೆನು. ಇದು ನನ್ನ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ಮಾತು ಬೇರೆ ಕಡೆಗೆ ಹರಿಯಿತು.

ಭೋಜನಾನಂತರ ಆ ಮುದುಕರ ಮುಂದಾಳುತನದಲ್ಲಿ ನಾನೂ ನನ್ನ ಕೆಲವು ಗೆಳೆಯರೂ ಮದುವೆ ಮನೆಯಿಂದ ಹೊರಟೆವು. ಗದ್ದೆಗೆ ಇಳಿದು ಕರೆಯ ಹುಲ್ಲುಗಾವಲನ್ನು ಏರಿ ಮುಂದೆ ನಡೆದೆವು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಕಾಡು ನಿಬಿಡವಾಯಿತು. ಅದರ ಮಧ್ಯೆ ದನಗಳು ನಡೆದು ನಡೆದು ಮಾಡಿದ ಜಾಡಿನಲ್ಲಿ ಮುಂದುವರಿದೆವು. ಏಪ್ರಿಲ್ ತಿಂಗಳಿನ ಸುಡುವ ಬಿಸಿಲು. ಮರಗಳ ಮರೆಯಿಂದ ಸೂರ್ಯಕಿರಣಗಳು ಬಂದು ನಮ್ಮನ್ನು ಕುಕ್ಕುತ್ತಿದ್ದುವು. ಈ ಕಿರಣಾನುಭವ ತರಣಿದರ್ಶನಕ್ಕಿಂತ ಹಿತಕರವಾಗಿತ್ತು. ಇಡೀ ಕಾಡು ನಿಶ್ಶಬ್ದ, ನಮ್ಮ ನಡಿಗೆಯ ಶಬ್ದ, ತರಗೆಲೆಗಳ ಚರಗುಟ್ಟುವಿಕೆ ಅಲ್ಲದೆ ಬೇರೇನೂ ಇಲ್ಲ. ಇಲ್ಲವೆನ್ನುವಂತೆಯೂ ಇಲ್ಲ – ಅಪರೂಪಕ್ಕೆ ಒಂದು ಮರಕುಟ್ಟಿಗನ ಹಕ್ಕಿ ಕುಂಬು ಮರವನ್ನು ಕುಟ್ಟುವ ಸದ್ದೋ, ಒಂದು ಜೀರುಂಡೆಯು ಜೀರುವ ಸದ್ದೋ ಕೇಳಿಸುತ್ತಿತ್ತು. ವಿಶಿಷ್ಟ ಗಾಂಭೀರ್ಯ ಅಲ್ಲೆಲ್ಲ ಹಬ್ಬಿ ವ್ಯಾಪಿಸಿತ್ತು. ನಾವು ಮದುವೆಯ ಮನೆಯಿಂದ ಅರ್ಧ ಗಂಟೆಯ ದೂರವನ್ನು ಗಮಿಸಿದ್ದೆವು. ಆಗ ದೂರದಲ್ಲಿ ಒಂದು ಪಾಳುಬಿದ್ದ ಮನೆಯ ದಳ ಕಂಡ ಹಾಗಾಯಿತು.

ಹತ್ತಿರ ಸರಿದಂತೆ ಅದೊಂದು ಕಲ್ಲು ಕಟ್ಟಿದ ಪಾಯ, ಅದರ ಮೇಲೆ ಏನೋ ಒಂದು ಕಲ್ಲಿನ ವಿಗ್ರಹವಿದೆ ಎಂದು ವಿವರ ತಿಳಿಯಿತು. ಮರುನಿಮಿಷದಲ್ಲಿ ದಳದ ಮೇಲೇರಿದ್ದೆವು. ಆ ವಿಗ್ರಹ ಹುಲಿಯದು. ಸುತ್ತಲೂ ನಿಬಿಡವಾಗಿ ಬೆಳೆದಿರುವ ದೊಡ್ಡ ದೊಡ್ಡ ಮರಗಳು. ಈ ದಳದ ಬುಡದಿಂದಲೂ ಒಂದು ದೊಡ್ಡ ಮರ ಬೆಳೆದು ಆಕಾಶದಲ್ಲಿ ವ್ಯಾಪಿಸಿದೆ. ದಳದ ಮೇಲೆ ಹುಲಿಯ ವಿಗ್ರಹವನ್ನಿಡಲಾಗಿದೆ. ಅದು ಹುಲಿಯೆಂದು ನಮಗೆ ಸುಲಭವಾಗಿ ತಿಳಿಯಿತಾದರೂ ಬೇರೆ ಯಾವ ವಿಶೇಷ ಸೌಂದರ್ಯವೂ ಅದರಲ್ಲಿರಲಿಲ್ಲ. ಜಕಣಾಚಾರಿಯ ವರದಹಸ್ತಸ್ಪರ್ಷ ಅದಕ್ಕಿರಲಿಲ್ಲ. ತಾಜಮಹಲಿನ ನಾಜೂಕು ಅಲ್ಲಿ ಶೂನ್ಯ. ಆದರೂ ಹಳ್ಳಿಗರ ಮುಗ್ದ ಹಾಡಿನಂತೆ ಸುಂದರ ಜೀವನದಂತೆ ಅದು ಸರಳವಾಗಿತ್ತು. ಯಾರೋ ಒಬ್ಬ ಪುಣ್ಯಾತ್ಮನಿಗೆ ಏನೋ ಒಂದು ಕಾರಣದಿಂದ ಹುಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಬೇಕೆಂದಾಗಿರಬಹುದು. ಅವನ ಉದ್ದೇಶಕ್ಕೆ ಏನಾದರೂ ಕಾರಣ ಇದ್ದಿರಲೇಬೇಕು. ಅದು ಇಲ್ಲಿ ರೂಪುವಡೆದಿದೆ. ತುಂಬು ಹೃದಯದಿಂದ ಅವನಿದನ್ನು ಮಾಡಿಸಿದ್ದನಾಗಿರಬಹುದಾದರೂ ಆ ಕಾಲದ ಶಿಲ್ಪಕಲೆಯು ಇಷ್ಟನ್ನೇ ಕಡೆಯಲು ಶಕ್ಯವುಳ್ಳದ್ದಾಗಿರಬೇಕು. ಅದು ಹೇಗೂ ಇರಲಿ, ಹುಲಿತಾಳದಲ್ಲಿ ಕಾಡಿನ ಮಧ್ಯೆ ಈ ಹುಲಿಯ ವಿಗ್ರಹ ಇವುಗಳಲ್ಲಿ ಏನೋ ಕುತೂಹಲಜನಕವಾದ ಸಂಬಂಧವಿರಬೇಕು ಎಂದು ನಮಗನ್ನಿಸಿತು. ಮುದುಕರು ಆಗಲೇ ಬಾಯ್ತೆರೆದಿದ್ದರು. ಕಥೆಯನ್ನು ಪ್ರಾರಂಭಿಸಲೇ? ನಮಗೆ ಬೇಕಾದದ್ದೂ ಅದೇ. ಸಂತೋಷದಿಂದ ಅಲ್ಲಿಯೇ ಕುಳಿತುಕೊಂಡೆವು.

* * * * * * *

ಆರೇಳು ವರ್ಷದ ಹುಡುಗ ಗಣಪತಿಯು ದನಕಾಯುತ್ತ ಬಯಲಿನಲ್ಲಿ ಅಲೆಯುತ್ತಿದ್ದನು. ಮಾರ್ಗಶಿರ ಮಾಸವಾದುದರಿಂದ ಆಗ ಗದ್ದೆಗಳಲ್ಲಿ ಪೈರು ಹಣ್ಣಾಗುತ್ತಿರುವ ಸಮಯ. ದನಗಳ ಮೇಲೆ ಸಾಕಷ್ಟು ಎಚ್ಚರವಿಲ್ಲದಿದ್ದರೆ ಅವು ಗದ್ದೆಗಳಿಗೆ ನುಗ್ಗಿ ಸೂರೆಮಾಡುವುವು. ಬಯಲಿನಲ್ಲಿ ಬೇಕಾದಷ್ಟು ಹುಲ್ಲಿದೆ. ಬಿಸಿಲಾಯಿತೆಂದರೆ ಕರೆಯಲ್ಲಿ ಮರಗಳ ನೆರಳಿದೆ. ಹೇಮಂತ ಋತುವಿನಲ್ಲಿ ಕೊಡಗಿನಲ್ಲಿ ಸೆಕೆಯೆಲ್ಲಿಂದ ಬಂತು? ಎಮ್ಮೆ ದನಗಳು ನಿಶ್ಚಿಂತೆಯಿಂದ ಅಲೆಯುತ್ತಿದ್ದುವು. ಕೆಲವು ಮೇದುಮೇದು ತೃಪ್ತಿಯಿಂದ ನೆರಳಿನಲ್ಲಿ ಮಲಗಿ ಅರ್ಧ ಕಣ್ಣುಮುಚ್ಚಿಕೊಂಡು ಮೆಲುಕು ಹಾಕುತಿದ್ದುವು. ಒಮ್ಮೊಮ್ಮೆ ಕಿವಿಗಳನ್ನು ಪಟಪಟನೆ ಬಡಿದು ಮೈಮೇಲೆ ಎರಗಿದ ನೊಣಗಳನ್ನು ಓಡಿಸುತ್ತಿದ್ದುವು. ಮೇಯುತ್ತಿದ್ದ ದನಗಳ ಕುತ್ತಿಗೆಗೆ ಕಟ್ಟಿದ್ದ ಮರದ ತಟ್ಟೆಗಳು ತಟಪಟವೆಂದು ತಾಳ ಗತಿಯ ಹಂಗುತೊರೆದು ಶಬ್ದ ಮಾಡುತ್ತಿದ್ದುವು. ಎಳೆಗರುಗಳ ಕೊರಳುಗಳಿಗೆ ಕಟ್ಟಿದ್ದ ಕಿರುಗಂಟೆಗಳು ಮಧುರವಾಗಿ ಕಿಣಿಕಿಣಿ ಎಂದು ಶ್ರುತಿ ಮಾಡುತ್ತಿದ್ದುವು. ಅಲೆದ ಗಣಪತಿಯು ಒಂದು ಮರವನ್ನು ಹತ್ತಿ ಹಕ್ಕಿಯ ಮೊಟ್ಟೆಗಳನ್ನು ಹಿಡಿಯುವ ಸಾಹಸದಲ್ಲಿ ಉದ್ಯುಕ್ತನಾದನು.

ಕೊಂಬೆಯನ್ನು ಸರಸರನೆ ಏರಿ ಹಕ್ಕಿಯ ಗೂಡಿನ ಹತ್ತಿರ ತಲಪಿದನು. ತಾಯಿ ಹಕ್ಕಿಯು ಭಯದಿಂದ ಚೀತ್ಕಾರಮಾಡುತ್ತ ಹಾರಿ ಹೋಗಿ ಸುತ್ತಲೂ ಸುತ್ತತೊಡಗಿತು. ಅಷ್ಟರಲ್ಲಿಯೇ ಅವನ ಲಕ್ಷ್ಯವನ್ನು ನವಧ್ವನಿಯೊಂದು ಸೆಳೆಯಿತು. ಗುರ್ ಗುರ್ ಗುರ್ ಎಂದು ಕಾಡಿನ ಒಳಗಿನಿಂದ ಕೇಳಿಸಿದ ಹಾಗಾಯಿತು. ಆ ಭಾಗದಲ್ಲಿ ಮಲಗಿದ್ದ, ಮೇಯುತ್ತಿದ್ದ ದನಗಳು ಕಿವಿ ನಿಗುರಿಸಿದುವು; ಕೆಲವು ಎದ್ದುವು. ಗುರ್ ಗುರ್ ಗುರ್ ಹುಡುಗನೂ ಕಿವಿಗೊಟ್ಟು ಆಲಿಸಿದನು. ಹಸುಗಳು ಅಲ್ಲಿಂದ ದೂರಕ್ಕೆ ಓಡಿ ಗಾಬರಿಯಿಂದ ಆ ದಿಕ್ಕನ್ನೇ ನೋಡುತ್ತಿದ್ದುವು. ಪುನಃ ಗುರ್ ಗುರ್ ಗುರ್ ಎಂದು ಜೋರಾಗಿಯೇ ಕೇಳಿಸಿತು. ಇದೇನೋ ಹೊಸ ಸ್ವರ ಕೇಳಿಸುತ್ತಿದೆ, ನೋಡಿ ಬರೋಣವೆಂದು ಕುತೂಹಲಪೂರಿತ ಗಣಪತಿಯು ಮರದಿಂದ ಜಿಗಿದು ಆ ಕಡೆಗೆ ಓಡಿದನು. ಗುರ್ ಗುರ್ ಶಬ್ದ ಕೇಳಿಸುತ್ತಲೇ ಇತ್ತು. ಆ ಧ್ವನಿಯು ಬಂದೆಡೆಗೆ ಅಂದಾಜಿನಿಂದ ನಡೆದನು.

ಹುಡುಗನಿಗೆ ಆಶ್ಚರ್ಯವೇ ಆಶ್ಚರ್ಯ! ಅವನು ಅದುವರೆಗೂ ನೋಡಿರದಿದ್ದ ಒಂದು ದೃಶ್ಯ ಅಲ್ಲಿ ಕಣ್ಣಿಗೆ ಬಿತ್ತು. ದೊಡ್ಡ ಮರದಿಂದ ಮಾಡಿದ ಗಾಡಿಯ ಮೇಲುಭಾಗ ಮಾತ್ರವಿದೆ. ಚಕ್ರಗಳು ಅರ್ಧಾಂಶ ಮಣ್ಣಿನಲ್ಲಿ ಹೂತುಹೋಗಿವೆ. ಎತ್ತುಗಳಿಲ್ಲ. ಇದರ ಮೂಕಿ ಭಾಗದಲ್ಲಿ ಕಬ್ಬಿಣದ ಸರಳುಗಳಿಂದ ಮಾಡಿದ ಕಟಕಟೆಯ ಬಾಗಿಲು ಇದೆ, ಮೇಲೆ ಮಾಡು. ಇಡೀ ಗಾಡಿಯ ಮೇಲೆ ನಾನಾ ವಿಧದ ಹಂಬುಗಳು ಹಬ್ಬಿ ಬೆಳೆದಿವೆ. ಮರಗಳ ಅಡಿಯಲ್ಲಿ ಆ ನೆರಳಿನಲ್ಲಿ ನೋಡುವಾಗ ಗಾಡಿಯು ಅಲ್ಲಿಯೇ ಹುಟ್ಟಿ ಬೆಳೆಯಿತೋ ಎಂಬಂತೆ ತೋರುವುದು. ಅದರ ಒಳಗಿನಿಂದ ಗುರ್ ಗುರ್ ಶಬ್ದ ಹೊರಡುತ್ತಿತ್ತು. ಗಣಪತಿಯು ಮೂಕಿಯ ಮೇಲೆ ಕಟಕಟೆಯ ಹೊರಗೆ ನಿಂತು ಇಣುಕಿದನು, ಬಾಗಿಲ ಒಳಗೆ ಏನಿದೆಯೆಂದು ನೋಡಿದನು. ಒಂದು ದೊಡ್ಡ ನಾಯಿಯು ಅದರೊಳಗೆ ಆ ಸಣ್ಣ ಜಾಗದಲ್ಲಿ ವಿಶ್ರಾಂತಿಯಿಲ್ಲದೆ ಹಿಂದಕ್ಕೂ ಮುಂದಕ್ಕೂ ಅಲೆಯುತ್ತಿದೆ. ಗುರ್ ಗುರ್ ಎಂದು ಕೂಗುತ್ತಿದೆ. ಆ ನೆರಳಿನಲ್ಲಿ ಅದರ ಮೈ ಬಣ್ಣ ಸ್ಪಷ್ಟವಾಗುವುದಿಲ್ಲ. ಅಂತೂ ನಾಯಿಯನ್ನು ಅದರೊಳಗೆ ಕೂಡಿಹಾಕಿದುದು ನಿಶ್ಚಯ. ಪ್ರಾಣಿಯು ಗಣಪತಿಯನ್ನು ನೋಡಿ ಕಟಕಟೆಯ ಹತ್ತಿರ ಬಂದು ಅದನ್ನು ಕಡಿಯಿತು. ಅದು ಕಟಪಟನೆ ಸದ್ದು ಮಾಡಿತು. ಮತ್ತೆ ಅವನನ್ನೇ ದುರುಗುಟ್ಟಿ ನೋಡುತ್ತ ಗುರ್ ಗುರ್ ಎಂದಿತು. ಹಿಂದೆ ಓಡಿತು, ಮುಂದೆ ಬಂದಿತು. ಪುನಃ ಗಣಪತಿಯನ್ನು ನೇರವಾಗಿ ದೃಷ್ಟಿಸಿತು. ಇದೇನು ಈ ನಾಯಿ ಈ ರೀತಿ ಸಿಕ್ಕಿಬಿದ್ದಿದೆ ಎಂದು ಆ ಎಳೆ ಅಣುಗನಿಗೆ ತಿಳಿಯಲಾರದು. ಅವನು ಮೂಕಿಯಿಂದ ಮೂಂದೆ ನಡೆದು ಬಾ ಬಾ ದೂವೋ ದೂವೋ ಎಂದು ಕೈ ಚಾಚಿದನು.

ನಾಯಿಯು ನಾಲಗೆ ನೀಡಿ ಇವನ ಕೈ ನೆಕ್ಕಿತು. ಕಂದು ಬಣ್ಣದ ಈ ತರಹದ ನಾಯಿಯನ್ನು ಅದುವರೆಗೂ ಅವನು ನೋಡಿರಲಿಲ್ಲ. ಅದನ್ನು ಸೆರೆಯಿಂದ ಬಿಡಿಸಿ ಕರೆದುಕೊಂದು ಹೋಗಬೇಕೆಂದು ಮನಸ್ಸಾಯಿತು. ಕೂಡಲೆ ಕಬ್ಬಿಣದ ಬಾಗಿಲನ್ನು ಎಳೆದು ನೂಕಿ ತೆರೆದೇ ಬಿಟ್ಟನು. ನಾಯಿಯು ರಭಸದಿಂದ ಹೊರಗೆ ದುಮುಕಿತು. ಆ ವೇಗಕ್ಕೆ ಗಣಪತಿಯು ನೆಲದ ಮೇಲೆ ಉರುಳಿದನು, ತತ್‌ಕ್ಷಣವೇ ಎದ್ದು ದೂವೋ ದೂವೋ ಬಾ ಬಾ ಎಂದು ಅದನ್ನು ಹಿಂಬಾಲಿಸಿದನು. ಓಡುತ್ತಿದ್ದ ನಾಯಿಗೆ ಏನಾಯಿತೊ, ಅದು ಫಕ್ಕನೆ ಹಿಂತಿರುಗಿ ಗಣಪತಿಯ ಕಡೆಗೆ ಸೀದಾ ಬಂದಿತು. ಗುರ್ ಗುರ್ ಕುಂಯ್ ಎನ್ನುತ್ತ ಅವನನ್ನು ಮೂಸಿ ನೋಡಿ ನೆಕ್ಕಿ ಮತ್ತೆ ಓಡಿಹೋಯಿತು. ಗಣಪತಿಯು ಪುನಃ ಅದರ ಹಿಂದೆ ಓಡಿದನು. ಬಾ ಬಾ ಎಂದು ಕರೆದನು. ಆದರೆ ಆ ದೊಡ್ಡ ನಾಯಿಯು ಮತ್ತೆಲ್ಲಿಯೂ ಕಾಣಸಿಗಲಿಲ್ಲ. ಹತಾಶನಾಗಿ ಹಿಂದಕ್ಕೆ ದನ ಕಾಯಲು ಹೋದನು.

ಗಣಪತಿಯ ಆಶ್ಚರ್ಯಕ್ಕೆ ಮೇರೆ ಇರಲಿಲ್ಲ. ಕಾಡಿನಲ್ಲಿ ಬೆಳೆದಿರುವಂತಹ ಗಾಡಿಯೊಳಗೆ ದೊಡ್ಡದೊಂದು ನಾಯಿ. ಅದು ಹಾಗೇಕೆ ಅಲ್ಲಿ ಇದ್ದಿರಬಹುದು? ಮತ್ತು ಹಾಗೇಕೆ ಓಡಿಹೋಯಿತು? ಪುನಃ ಹಿಂತಿರುಗಿಬರಬಹುದೇ? ಮತ್ತೆ ಅದನ್ನು ನೋಡಬಹುದೇ? ಅದರ ವಿಷಯದಲ್ಲಿ ಈ ಹುಡುಗನಿಗೆ ಕುತೂಹಲವು ಹೆಚ್ಚಾಯಿತು. ಅದನ್ನು ಮತ್ತೊಮ್ಮೆ ನೋಡಬೇಕೆಂದು ಬಯಸಿದನು. ಸಾಯಂಕಾಲ ಅದೇ ಸ್ಥಳಕ್ಕೆ ಹೋಗಿ ಗುರ್ ಗುರ್ ಎಂದು ಅನುಕರಣೆ ಮಾಡಿದನು. ಬಾ ಬಾ ಎಂದು ಕರೆದನು. ಅದು ಹೋದ ದಿಕ್ಕಿನಲ್ಲಿಯೇ ಸಾಗಿದನು. ಆದರೆ ದೊಡ್ಡ ನಾಯಿಯು ಎಲ್ಲಿಯೂ ಇಲ್ಲ. ಅವನು ಹತಾಶನಾಗಲಿಲ್ಲ. ಇನ್ನೊಮ್ಮೆ ಆ ಚಂದದ ನಾಯಿಯನ್ನು ನೋಡಬೇಕೆಂದು ಬಯಸಿ ಪ್ರತಿದಿನವೂ ದನಗಳನ್ನು ಮೇಯಲು ಬಿಟ್ಟು ಕಾಡಿನಲ್ಲಿ ಅಲೆಯುವನು. ಗುರ್ ಗುರ್ ಎಂದು ಎಲ್ಲಿ ಹೇಳಿದರೂ ನಾಯಿಯು ಮಾತ್ರ ಕಾಣುವುದಿಲ್ಲ. ಹೀಗೆ ಒಂದು ತಿಂಗಳು ಸಂದಿರಬಹುದು. ಗಣಪತಿಯು ಎಂದಿನಂತೆ ಕಾಡಿನಲ್ಲಿ ಅಲೆಯುತ್ತಿದ್ದನು. ಆಗ ಫಕ್ಕನೆ ಸಮೀಪದಿಂದ ಅವನಿಗೆ ಪರಿಚಿತ ಸ್ವರ, ಯಾವ ಸ್ವರವನ್ನು ಅವನು ಈ ಒಂದು ತಿಂಗಳಿನಿಂದ ಕೇಳಲು ಹಾರೈಸುತ್ತಿದನೋ ಅದು. ಕೇಳಿ ಬೆಚ್ಚಿಬಿದ್ದನು. ಬಾ ಬಾ ಎಂದು ಅವನು ಸಂತೋಷದಿಂದ ಕರೆದನು. ಪೊದರಿನೆಡೆಯಿಂದ ನೆಗೆದು ಬಂದಿತು ನಾಯಿ.

ಅದರ ಮೈದಡವಿದನು, ಬೆನ್ನನ್ನು ಸವರಿದನು. ದೊಡ್ಡ ನಾಯಿಯು ಅವನೊಡನೆ ಆಟವಾಡಿತು. ಅವನ ಮೈಯನ್ನು ನೆಕ್ಕಿತು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಕಿವಿನಿಗುರಿಸಿ ಓಡಿ ಹೋಯಿತು. ದೂರದಲ್ಲಿ ಯಾರೋ ಮಾತಾಡುವ ಸದ್ದು ಕೇಳಿಸುತ್ತಿತ್ತು. ಗಣಪತಿಯು ತುಂಬ ಸಂತೋಷದಿಂದ ಮನೆಗೆ ಮರಳಿದನು. ಅಂದಿನಿಂದ ಪ್ರತಿ ದಿನವೂ ನಾಯಿಯ ಮತ್ತು ಗಣಪತಿಯ ಭೆಟ್ಟಿ ಕಾಡಿನಲ್ಲಿ ಎಲ್ಲಿಯಾದರೂ ಆಗುತ್ತಿತ್ತು. ನಂಬಲಾಗದಷ್ಟು ಮೈತ್ರಿ ಪ್ರೀತಿ ಅವರಲ್ಲಿ ಬೆಳೆದುವು. ಒಬ್ಬ ಹುಡುಗ, ಕೋಮಲ ಸ್ವಭಾವದವನು. ಎಳೆಯ ಮನಸ್ಸು ಆದ್ದರಿಂದ ಪವಿತ್ರ. ಇನ್ನೊಂದು ಮೂಕ ಪ್ರಾಣಿ. ಅದೂ ಸಹಾ ಎಳೆಯ ಪ್ರಾಯದ್ದು. ವನ್ಯಮೃಗವಾದರೂ ಕೃತಜ್ಞತೆಯಿಲ್ಲದಷ್ಟು ಹೀನ ಸ್ವಭಾವದ್ದಲ್ಲ. ಇವರಲ್ಲಿ ಸಾಮಾನ್ಯವಾದದ್ದೇನು, ಸಾಮಾನ್ಯವಲ್ಲದ್ದೇನು? ಪರಸ್ಪರ ಮಾತುಕತೆ ಇಲ್ಲ. ಆದರೆ ಸ್ನೇಹ ಬೆಳೆಯಿತು. ಮನಸ್ಸು ಮನಸ್ಸನ್ನು ಅವುಗಳ ಅರಿವಿಲ್ಲದೇ ಅರಿತವು, ಹೃದಯದಿಂದ ಹೃದಯಕ್ಕೆ ಎರಕವಾಯಿತು. ಗಣಪತಿಯು ಮನೆಯಿಂದ ರೊಟ್ಟಿ ದೋಸೆಗಳನ್ನು ತಂದು ಮಿತ್ರನಿಗೆ ಕೊಡುವನು. ಒಂದೇ ತುತ್ತಿಗೆ ಅವನ್ನು ಅದು ಗಬಕ್ಕನೆ ನುಂಗುವುದು.

ಮರದಿಂದ ಹಣ್ಣುಗಳನ್ನು ಕೊಯ್ದು ಕೊಟ್ಟರೆ ಅವನ್ನು ಮೂಸಿ ಹಾಗೆಯೇ ಬಿಟ್ಟುಬಿಡುವುದು. ತಿನ್ನು ತಿನ್ನು ಎಂದು ಅದರ ಬಾಯಿ ಬಿಡಿಸಿ ಹಾಕುವನು. ಆದರೆ ಅದು ಉಗುಳುವುದು. ಓಹೋ ನಿನಗೆ ಇದು ಸೇರುವುದಿಲ್ಲವೋ ಎಂದು ತಮಾಷೆ ಮಾಡುವನು. ಮತ್ತೆ ಅದರ ಬೆನ್ನ ಮೇಲೆ ಕುಳಿತು ಹೋಗು ನಾಯಿ, ನನ್ನನ್ನು ಹೊತ್ತುಕೊಂಡು ಎಂದು ಚಪ್ಪರಿಸುವನು. ಅದು ಅವನನ್ನು ಹೊತ್ತುಕೊಂಡು ಕಾಡಿನಲ್ಲೆಲ್ಲ ಅಲೆಯುವುದು. ಆಗೇನಾದರೂ ಯಾರಾದರೂ ಮಾತಾಡುವ ಶಬ್ದ ಕೇಳಿಸಿದರೆ, ಮತ್ತೇನಾದರೂ ಸಂಶಯ ಬಂದರೆ ನಾಯಿಯು ಫಕ್ಕನೆ ಓಡಿ ಮಾಯವಾಗಿಬಿಡುತ್ತಿತ್ತು. ಈ ಪ್ರಾಣಿಗೆ ಇಷ್ಟೊಂದು ಹೆದರಿಕೆಯೇನು ಎಂದು ಗಣಪತಿಗೆ ಆಶ್ಚರ್ಯವಾಗುತಿತ್ತು.

ಹೀಗೆ ಅನೇಕ ವರ್ಷಗಳು ಸಂದುವು. ಗಣಪತಿಯೂ ಹುಲಿಯೂ ಬೆಳೆದರು. ಈಗ ಅವನಿಗೆ ಚೆನ್ನಾಗಿ ತಿಳಿದಿತ್ತು: ತನ್ನ ಮಿತ್ರ ಹುಲಿ, ಕ್ರೂರ ಪ್ರಾಣಿ ಎಂದು. ಹಿಂದಿನ ಘಟನೆಗಳೆಲ್ಲವೂ ಅವನ ಸ್ಮರಣೆಯಲ್ಲಿದ್ದುದರಿಂದ ಇದು ಹೀಗೆಯೇ ಇರಲಿ ಎಂದುಕೊಂಡಿದ್ದನು. ಅದುವರೆಗೆ, ಕಾಡಿನಲ್ಲಿರುವ ಒಂದು ನಾಯಿ, ಏನು ಮಹಾ ವಿಶೇಷವೆಂದು ಯಾರಿಗೂ ಈ ಮೈತ್ರಿ ವಿಷಯ ತಿಳಿಸದೆ ಇದ್ದ ಅವನು ಈಗ ಅದನ್ನು ಸಹಜವಾಗಿ ಗುಟ್ಟು ಮಾಡಿದನು. ಅಂತಹ ಅದ್ಭುತ ವಿಷಯ, ಇದು ಹೆಮ್ಮೆಯ ಸಂಗತಿ ಆದರೆ ಹೇಳಿಕೊಳ್ಳುವಂಥದ್ದಲ್ಲ. ಹುಲಿಗೆ ಯಾರಾದರೂ ಅಪಾಯವನ್ನುಂಟುಮಾಡಿದರೆ? ದನ ಕಾಯುವ ವೃತ್ತಿಯಿಂದ ಈಗ ಅವನಿಗೆ ಮುಂದಿನ ದೊಡ್ಡ ಹುದ್ದೆಗೆ ವರ್ಗವಾಗಿತ್ತು. ಗದ್ದೆ ತೋಟಗಳ ಕೆಲಸ ಅವನ ಪಾಲಿಗೆ ಬಿದ್ದಿತ್ತು. ತಂದೆಯು ಕೆಲವು ವರ್ಷಗಳ ಹಿಂದೆ ತೀರಿಹೋಗಿದ್ದುದರಿಂದ ಸಂಸಾರ ಭಾರವನ್ನು ಹಿರಿಯ ಮಗನು ಹೊರಬೇಕಾಗಿತ್ತು. ತಾಯಿ, ತಮ್ಮಂದಿರು ಮತ್ತು ತಂಗಿಯಂದಿರನ್ನು ಗಣಪತಿಯು ಸಾಕಬೇಕಾಯಿತು. ಯಾವ ಕೆಲಸವೇ ಇರಲಿ, ಸಂಜೆಯ ವೇಳೆ ಗಣಪತಿಯು ಕಾಡಿಗೆ ಓಡುತ್ತಿದ್ದನು. ಸ್ನೇಹಿತನ ಭೆಟ್ಟಿಗೆ. ಹುಲಿಯೊಡನೆ ಚಕ್ಕಂದವಾಡಿ ಮರಳುತ್ತಿದ್ದನು. ಈ ಹದಿನೈದು ವರ್ಷಗಳಲ್ಲಿ ಅದು ಅವನ ನಿತ್ಯದ ಪರಿಪಾಠವಾಯಿತು. ಗಣಪತಿಯೊಡನೆ ಮಾತ್ರ ಅದು ಹಿಂದಿನ ಮರಿಯೇ. ಒಂದು ದಿವಸ ಎಂದಿನಂತೆ ಗಣಪತಿಯು ಕಾಡಿಗೆ ಹೋಗಿ ನೋಡುತ್ತಾನೆ. ಹುಲಿಯ ಜತೆಯಲ್ಲಿ ಮೂರು ಮರಿಗಳು ಬರುತ್ತಿವೆ. ತಾಯಿ ಹುಲಿಯು ಅವನ್ನು ಪ್ರೀತಿಯಿಂದ ನೆಕ್ಕುತ್ತ ಇವನೆಡೆಗೆ ಕರೆದುಕೊಂಡು ಬಂದಿತು.

ಗಣಪತಿಗೆ ಬಹು ಸಂತೋಷ, ಸಂಭ್ರಮ. ತನ್ನ ಸಮೀಪದವರಲ್ಲಿ ಜನನೋತ್ಸವವಾದಷ್ಟು ಆನಂದವಾಯಿತು. ಆ ಪುಟ್ಟು ಮುದ್ದು ಮರಿಗಳನ್ನು ಎತ್ತಿಕೊಂಡು ಮುದ್ದಾಡಿದನು. ಗಣಪತಿಯ ಸ್ನೇಹಿತರ ಬಳಗದಲ್ಲಿ ಆ ಮೂರು ಮರಿಗಳೂ ಸೇರಿದುವು. ದಿನದಿನವೂ ಹೋಗುವಾಗ ತಿಂಡಿಯನ್ನೋ ಕಾಡುಪ್ರಾಣಿಗಳ ಮಾಂಸವನ್ನೋ ತೆಗೆದುಕೊಂಡು ಹೋಗಿ ಆ ಮರಿಗಳಿಗೆ ತಿನ್ನಿಸುವನು. ತಾಯಿ ಹುಲಿಯು ಬಹು ಎಚ್ಚರಿಕೆಯಿಂದ ಸುತ್ತಲೂ ಗಸ್ತು ತಿರುಗುವುದು. ಗಣಪತಿಯು ಹುಲಿಯ ಮರಿಗಳಿಗೆ ಚಿಕ್ಕಪ್ಪನಾದನು. ಈ ಹೊಂದಿಕೆಗಳನ್ನು, ಸಂಬಂಧಗಳನ್ನು ಎಲ್ಲ ಆಲೋಚಿಸಿ, ಚಿಂತಿಸಿ ವಿಸ್ಮಿತನಾಗುವನು. ಕ್ರೂರ ಜಂತುಗಳಲ್ಲಿ ಈ ರೀತಿಯ ಒಂದು ವಿಶ್ವಾಸ ಇರುವುದು ಸಾಧ್ಯವೇ? ಮನುಷ್ಯರಲ್ಲಿಯ ಕೃತಘ್ನತೆಯನ್ನು ನೆನೆದುಕೊಂಡರೆ ಈ ಪ್ರಾಣಿಯು ಎಷ್ಟು ಉದಾತ್ತವಾದುದು ಮರ್ಯಾದೆಯುಳ್ಳದ್ದು ಎಂದು ಅವನಿಗೆ ತೋರುವುದು. ಈ ಹುಲಿ ನಿಜವಾಗಿಯೂ ಘನತೆ ಇರುವ ಪ್ರಾಣಿ.

ಗಣಪತಿಗೆ ತಾರುಣ್ಯ, ಬಲಿಷ್ಟನಾಗಿ ಬೆಳೆದಿದ್ದಾನೆ. ಅವನಿಗೆ ಮದುವೆ ಮಾಡಿಸಬೇಕೆಂದು ತಾಯಿಗೆ ಆಸೆ. ಅಲ್ಲೇ ಮೂರು ಮನೆ ಆ ಕಡೆ ಇರುವ ಬೆಳ್ಯಪ್ಪನ ಮಗಳು ಅಕ್ಕವ್ವನ ಕೈಹಿಡಿಯಬೇಕೆಂದು ಗಣಪತಿಯ ಬಯಕೆ. ಹುಡುಗಿ ಚಟುವಟಿಕೆಯುಳ್ಳವಳು, ಕಷ್ಟವರಿತವಳು, ಲಕ್ಷಣವಂತೆ. ಬಡವರ ಕುಟುಂಬದವಳಾದುದರಿಂದ ಗಣಪತಿಯನ್ನು ವಿವಾಹವಾಗುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಒಂದೇ ಹಳ್ಳಿಯವರು, ಸಮೀಪದವರು. ಒಟ್ಟಿಗೆ ಆಡಿ ಬೆಳೆದುಬಂದವರು. ಹುಡುಗಿಯೂ ಗಣಪತಿಯನ್ನು ಮದುವೆಯಾಗಲು ಬಯಸಿದ್ದಳು. ಅವಳ ತಂದೆತಾಯಿಯರಿಗೆ ಈ ಸಂಬಂಧದಲ್ಲಿ ಇಷ್ಟವಿತ್ತು, ಸಂತೋಷವಿತ್ತು. ಆದರೆ ಮಧ್ಯೆ ಆ ಗ್ರಾಮದ ಪಟೇಲನ ಮಗನು ಚೆಲುವೆ ಅಕ್ಕವ್ವನನ್ನು ನೋಡಿ ತಾನು ಆಕೆಯನ್ನೇ ಮದುವೆಯಾಗುವುದೆಂದು ನಿಶ್ಚೈಸಿದನು. ತಂದೆಗೆ ತನ್ನ ಅಭಿಪ್ರಾಯವನ್ನು ತಿಳಿಸಿದನು. ಮಗನ ಇಷ್ಟ ತಂದೆಗೆ ಪ್ರಿಯ. ಪಟೇಲನು ಸಂಧಾನಮಾಡಲು ಹೋದನು. ಬೆಳ್ಯಪ್ಪನು ಈ ಮೊದಲೇ ಆಗಿರುವ ಮಾತುಕತೆಗಳನ್ನೂ ನಿಶ್ಚಯವನ್ನೂ ವಿವರಿಸಿ ಹೇಳಿದನು. ಪಟೇಲನ ಕುಲದೊಡನೆ ಸಂಬಂಧವೆಸಗುವುದು ತನಗೆ ಇಷ್ಟವೆಂದೂ ಅವನು ಸೂಚಿಸದಿರಲಿಲ್ಲ.

ಪಟೇಲನು ಹೊರಡುತ್ತ ಹೇಳಿದ್ದನು, ನೋಡಿ ಬೆಳ್ಯಪ್ಪ ಗೌಡರೇ! ಮದುವೆಯ ವಿಷಯದಲ್ಲಿ ಮಾತು, ಭಾಷೆ ಎಂದಿಟ್ಟುಕೊಳ್ಳಬಾರದು. ನಾನಾಗಿಯೇ ಬಂದಿದ್ದೇನೆ – ನನ್ನ ಮಗನಿಗೆ ಹೆಣ್ಣು ಕೇಳಲು, ಇಲ್ಲವೆನ್ನಬೇಡಿ. ಆಲೋಚನೆ ಮಾಡಿ. ಏತನ್ಮಧ್ಯೆ ಈ ನೆಂಟಸ್ತಿಕೆ ಮಾಡದಿರಲು ಸಾಧ್ಯವಾಗುವಂತೆ ನಾನು ಮಗನಿಗೆ ಬುದ್ಧಿ ಹೇಳುತ್ತೇನೆ, ನೋಡೋಣ.

ಬೆಳ್ಯಪ್ಪನ ಅರ್ಧ ಮನಸ್ಸು ಮುದುರಿತು. ಪಟೇಲನು ಹೋದವನು ಮಗನ ಮನಸ್ಸು ಬದಲುಮಾಡಿದರೆ? ಪುನಃ ಈ ಪ್ರಸ್ತಾಪವನ್ನು ಎತ್ತದಿದ್ದರೆ? ಆಗಲೇ ಮಾತುಕೊಡಬೇಕಾಗಿತ್ತು. ಮರೆಯಾಲಿಸಿ ಕೇಳಿದ ಅಕ್ಕವ್ವನು ಸಿಡುಕಾಡಿದಳು.
ಪಟೇಲನ ಮಗ, ಆ ಮಂಗನ ಮುಸುಡಿನವನನ್ನು ಮದುವೆಯಾಗುವುದಕ್ಕಿಂತ ಬಾವಿ ಹಾರಿ ಸಾಯುವುದು ಲೇಸು ಎಂದು ಸ್ಪಷ್ಟವಾಗಿ ಹೇಳಿದಳು.
ತಾಯಿ ತಂದೆ – ಪಟೇಲನ ಹಣಕ್ಕೆ, ದರ್ಪಕ್ಕೆ ಮನಸೋತವರು ಬೋಧಿಸಿದರು. ಹೆಣ್ಣು ಹೆತ್ತವರು ಎಚ್ಚರಿಕೆಯಿಂದಿರಬೇಕು. ಅದರಲ್ಲಿಯೂ ಹುಡುಗಿಯಂತೂ ಇನ್ನೂ ಜಾಗರೂಕಳಾಗಿರಬೇಕು ಎಂದರು.

ಪಟೇಲನ ವಂಶದ ಹಿರಿಮೆಗಳನ್ನೂ ಅವನ ಮಗನ ಗುಣಗಳನ್ನೂ ಹೊಗಳಿದರು. ಗಣಪತಿಯ ದಾರಿದ್ರ್ಯವನ್ನು ತೆಗಳಿದರು. ಆದರೆ ಅಕ್ಕವ್ವನು ಕದಲಲಿಲ್ಲ. ಇತ್ತಲಾಗಿ ಪಟೇಲನ ಮಗ ಹಿಡಿದ ಹಠ ಬಿಡಲಿಲ್ಲ. ತನಗೆ ಅಕ್ಕವ್ವನನ್ನು ಮದುವೆಮಾಡದಿದ್ದರೆ ತಾನು ಜೀವದಿಂದಿರುವುದಿಲ್ಲವೆಂದು ಅವನು ರಂಪ ಎಬ್ಬಿಸಿದನು. ಪಟೇಲನು ಮರುದಿವಸ ಬಂದು ವಿಷಯವನ್ನು ವಿವರಿಸಿದನು. ಮದುವೆ ಬೇಗ ಆಗಬೇಕೆಂದು ಒತ್ತಾಯ ಪಡಿಸಿದನು. ಹುಡುಗಿಯ ಅಭ್ಯಂತರವನ್ನು ಬೆಳ್ಯಪ್ಪನು ಹೆದರಿ ಹೆದರಿ ಹೇಳಿದನು. ಪಟೇಲನು ತಾತ್ಸಾರದಿಂದ ಅದೆಲ್ಲ ಹುಡುಗಿಯರು ಮದುವೆಯ ಮೊದಲು ಹೂಡುವ ಆಟ. ಮದುವೆಯಾಗಲಿ, ಮತ್ತೆ ಎಲ್ಲ ಸರಿಯಾಗುವುದು ಎಂದು ಮಾತು ಹಾರಿಸಿದನು. ಲಗ್ನ ಬೇಗನೆ ಇಡಬೇಕೆಂದು ಊರ ಪ್ರಮುಖ, ಧನಿಕ ಪಟೇಲನು ಹೇಳಿ ಹೊರಟು ಹೋದನು. ಹುಡುಗಿಯ ಕತ್ತು ಕೊಯ್ಯಲು ತಂದೆ ತಾಯಿಯರು ಸಿದ್ಧರಾದರು.

ಗಣಪತಿಗೆ ಸಂಗತಿ ಅರಿಯಲು ತಡವಾಗಲಿಲ್ಲ. ಪಟೇಲನು ಅಲ್ಲಿಗೆ ಹೋದಾಗಲೇ ಅವನಿಗೆ ಸಂಶಯ ಬಂದಿತ್ತು. ಮತ್ತೆ ಎಲ್ಲವೂ ಸ್ಪಷ್ಟವಾಯಿತು. ಪಟೇಲನು ಹಳ್ಳಿಯಲ್ಲಿ ಪ್ರಬಲನು, ಹಣವಿರುವವನು. ಅವನ ಮಗನ ವಿರುದ್ಧ ಸೆಣಸಾಟ ಹೇಗೆ? ದೃಷ್ಟಿ ಬುದ್ಧಿ ಮಂಕಾದುವು. ಮುಂದೇನು ಮಾಡುವುದೆಂದು ತಿಳಿಯಲಿಲ್ಲ. ತಾಯಿ ಹೇಳಿದಳು ಬಡವರ ಭಾಗ್ಯ ಇಷ್ಟೆ. ಇನ್ನೇನು ಮಾಡುವುದು?

ಗಣಪತಿಯು ಉದ್ವಿಗ್ನತೆಯಿಂದ ಕಾಡಿಗೆ ಹೋದನು, ಹುಚ್ಚನಂತೆ ಅಲೆದನು. ಮುಂಗಾಣದೆ ಕಾಲುಗಳು ಒಯ್ದಲ್ಲಿಗೆ ಹೋದನು. ಅಷ್ಟರಲ್ಲಿ ಹುಲಿಯ ಬಳಗ ಎದುರುಬಂದಿತು. ತಾಯಿ ಹುಲಿಯು ಗಣಪತಿಯ ಕಾಲನ್ನು ನೆಕ್ಕಿತು, ಮರಿಗಳು ಸುತ್ತಲೂ ಹಾರಿ ಹಾರಿ ಕುಣಿದವು. ಆದರೆ ಗಣಪತಿಯು ಒಂದು ಕಲ್ಲಿನ ಮೇಲೆ ತಲೆಗೆ ಕೈಕೊಟ್ಟು ಕುಳಿತನು. ತಾಯಿ ಹುಲಿಯ ಮೊಲೆ ಹಾಲನ್ನು ಕುಡಿಯಲು ಮರಿಗಳು ನುಗ್ಗಿದುವು. ಒಂದು ಮರಿಯು ಹಿಂದೆ ಉಳಿಯಿತು. ಅದು ಮತ್ತೊಂದನ್ನು ಕಚ್ಚಿ ಎಳೆದು ಅದರ ಸ್ಥಾನವನ್ನು ಆಕ್ರಮಿಸಿತು. ಆ ಮರಿಯು ಇನ್ನೊಂದು ಕಡೆಯಿಂದ ನುಗ್ಗಿತು. ತಾಯಿ ಹುಲಿಯು ಮರಿಗಳ ಗುದ್ದಾಟದಲ್ಲಿ ಅತ್ತಿತ್ತ ಸುತ್ತುತ್ತಿತ್ತು. ಈ ದೃಶ್ಯವನ್ನು ನೋಡಿದ ಗಣಪತಿಗೆ ಫಕ್ಕನೆ ಒಂದು ಭಾವನೆಯು ಸ್ಫುರಿಸಿತು. ಆ ಮಹಾ ಕಾಳರಾತ್ರಿಯ ನಡುವೆ ಒಂದು ಆಶಾಕಿರಣ ಮೂಡಿದ ಹಾಗಾಯಿತು. ಉತ್ಸಾಹದಿಂದ ಎದ್ದನು. ಹುಲಿಯ ಮೈ ಸವರಿದನು. ಅದು ಬಾಯಿಯನ್ನು ನವೆಯಿತು, ಬಾಲವನ್ನು ಅಲ್ಲಾಡಿಸಿತು. ಕೂಡಲೇ ಗಣಪತಿಯು ಮನೆಗೆ ಓಡಿದನು. ಇಲ್ಲ, ಗಾಳಿಯಲ್ಲಿ ತೇಲಿದನು. ತಾಯಿಯನ್ನು ಕರೆದು ಒಂದು ಮಾತು ಹೇಳಿದನು. ಇದನ್ನು ಕೇಳಿ ಅವಳು ಹೆದರಿದಳು, ಹಿಂಜರಿದಳು.
ಅದು ಸಾಧ್ಯವೇ?
ಅಮ್ಮಾ, ನನ್ನ ವಿಷಯದಲ್ಲಿ ನೀನು ಸಂದೇಹಪಡಬೇಡ. ನೀನು ಈ ಕ್ಷಣವೇ ಧೈರ್ಯದಿಂದ ಹೋಗಿ ಹೇಳು, ಆಗುವುದು.

ಮಗನ ಮೇಲಿನ ಮೋಹದಿಂದ ಮುದಿ ತಾಯಿಯು ಬೆಳ್ಯಪ್ಪನ ಮನೆಗೆ ಹೋದಳು. ಲೋಕವ್ಯವಹಾರ ಮಾತಾಡುತ್ತ ಸಂದರ್ಭವೊದಗಿಸಿಕೊಂಡು ಅಕ್ಕವ್ವನಲ್ಲಿ ಗಣಪತಿಯು ಸೂಚಿಸಿದ ವಿಷಯವನ್ನು ಹೇಳಿದಳು. ಅನಂತರ ಹಿಂದಿರುಗಿದಳು. ಗಣಪತಿಯು ಆತುರದಿಂದ ತಾಯಿಯ ಬರವನ್ನು ಕಾದಿದ್ದನು. ಅವಳು ಹೋದ ಕಾರ್ಯದ ಫಲಿತಾಂಶವನ್ನು ತಿಳಿಯಲು ಬಯಸುತ್ತಿದ್ದನು. ಅಕ್ಕವ್ವನ ಸ್ಥಿತಿಯನ್ನು ಕೇಳಬೇಕೆಂದು ಅವನಿಗೆ ಆಸೆ. ಆದರೆ ಬಾಯಿಬಿಡಲು ನಾಚಿಕೆ. ತಾನು ಜಯಶೀಲನಾಗುವುದು ನಿಶ್ಚಯವೆಂದು ಅವನ ನಂಬಿಕೆ. ತಾಯಿ ತಾನು ಹೇಳಿದ ಕೆಲಸವನ್ನು ಮುಗಿಸಿಬಂದಳು. ಅವಳು ಹೇಳಿದುದಷ್ಟನ್ನು ಕಿವಿಯರಳಿಸಿ ಕೇಳಿ, ಅದನ್ನೇ ಉಬ್ಬಿಸಿ ಉಬ್ಬಿಸಿ ಸಂತೋಷಪಟ್ಟನು. ಭವಿಷ್ಯವನ್ನು ನೆನೆದು ನೆನೆದು ಹಿಗ್ಗಿದನು.

ಬೆಳ್ಯಪ್ಪನ ಮನೆಯಲ್ಲಿ ಏನೆಲ್ಲ ನಡೆಯಿತೋ! ಮರುದಿನ ಬೆಳಿಗ್ಗೆಯೇ ಅವನು ಪಟೇಲನ ಮನೆಗೆ ಓಡಿದನು. ವೀಳ್ಯವನ್ನು ಜಗಿಯುತ್ತ ಪಟೇಲರು ಜಗಲಿಯಲ್ಲಿ ಮಂಡಿಸಿದ್ದನು. ಪರಸ್ಪರ ನಮಸ್ಕಾರಗಳಾದನಂತರ ಏನು ಇಷ್ಟು ಬೇಗ ಬಂದಿರಿ? ಎಂದು ಪಟೇಲನು ಪ್ರಶ್ನಿಸಿದನು.
ಅಲ್ಲ ನೋಡಿ, ನಾವು ನಿನ್ನೆ ಮಾತಾಡಿದ್ದು, ನನ್ನ ಮಗಳು ಹೇಳುತ್ತಾಳೆ – ಅವಳದ್ದೊಂದು ಹರಕೆ ಉಂಟಂತೆ.
ಕಾರ್ಯಪ್ಪನು ಹೊರಗೆ ಬಂದನು – ಏನದು? ನಾವದನ್ನು ನಡೆಸುತ್ತೇವೆ.
ನಿಮಗೆಲ್ಲ ಅದೊಂದು ಕಷ್ಟದ ಸಂಗತಿಯೇ ಅಲ್ಲ. ಆದರೂ. . . .
ಅದು ಏನಾದರೂ ಆಗಲಿ, ಹೇಳಿ ಎಂದು ಕಾರ್ಯಪ್ಪನು ಹೇಳಿದನು.
ಅದು ಅವಳು ನಮ್ಮ ಗ್ರಾಮದ ಚೌಂಡಿ ಭೂತಕ್ಕೆ ಒಂದು ಹರಕೆ ಹೇಳಿಕೊಂಡಿದ್ದಾಳಂತೆ. ಹುಲಿಯ ಹಾಲು ಒಂದು ಪಾವು ಎರೆಯುತ್ತೇನೆ. ಮತ್ತೆ ಮದುವೆಯಾಗುತ್ತೇನೆ ಎಂದು…
ಓಹೋ ಇಷ್ಟೇ ತಾನೇ!
ಹೌದು! ಅವಳಿಗೆ ಹುಲಿಯ ಹಾಲನ್ನು ತಂದುಕೊಟ್ಟರೆ ಅವನನ್ನು ಮದುವೆಯಾಗುತ್ತಾಳಂತೆ. ನಿನ್ನೆ ಹೇಳಲಿಕ್ಕೆ ಮರೆತುಹೋಯ್ತು. ಅದಕ್ಕೆ ಈಗ ಓಡಿ ಬಂದೆ.
ಹುಲಿಯ ಹಾಲಲ್ಲ, ಸಿಂಹದ ಹಾಲು ಬೇಕಾದರೂ ನಾನು ತಂದು ಕೊಡುತ್ತೇನೆ ಎಂದು ಅಬ್ಬರಿಸಿದನು ಮದುವೆಯ ಗಂಡು ಕಾರ್ಯಪ್ಪ.

ಪಟೇಲನು ಮಗನ ಸಾಹಸೋಕ್ತಿಯನ್ನು ಮೆಚ್ಚಿದನಾದರೂ ಮನಸ್ಸಿನಲ್ಲಿ ಅಳುಕದಿರಲಿಲ್ಲ.
ಈ ಗಣಪತಿ ಇದ್ದಾನಲ್ಲ. ಅವನು ತಾನೂ ತಂದುಕೊಡುತ್ತೇನೆಂದು ಹೊರಟಿದ್ದಾನಂತೆ. ಆದ್ದರಿಂದ ನೀವು ಬೇಗನೆ ತಂದುಕೊಡಬೇಕು.
ಈಗಲೇ ಹೊರಟೆ
ಅದು ಸರಿ! ನಿಮಗೆಲ್ಲಾ ಇದೊಂದು ಕಷ್ಟವೇ!

ಕಾರ್ಯಪ್ಪನು ಕಾಡಿಗೆ ಹೊರಟನು. ಬೆಳ್ಯಪ್ಪನು ಸಂತೋಷದಿಂದ ಮನೆಗೆ ಹಿಂತಿರುಗಿದನು. ಉತ್ಸಾಹದ ಬಿಸಿ ಕಾಡಿನ ತಂಪಿನಲ್ಲಿ ಆರಿದಾಗ ಕಾರ್ಯಪ್ಪನಿಗೆ ತಾನು ಒಪ್ಪಿದ ಕಾರ್ಯದ ಗುರುತ್ವ ಅರಿವಾಯಿತು. ಹುಲಿಯ ಹಾಲು, ಹುಲಿಯ ಹಾಲು! ಜೀವವಿರುವಾಗಲೇ ಮರಿಯಿರುವ ಹುಲಿಯನ್ನು ಕರೆಯಬೇಕು. ಆಲೋಚಿಸಲೂ ಹೆದರಿಕೆಯಾಗುವುದು. ಹುಲಿಯನ್ನು ಕೊಂದು ಹಾಲು ಕರೆಯುವುದು ಸಾಧ್ಯವಿಲ್ಲ. ಹುಡುಗಿ ಮಹಾ ಮೂರ್ಖೆಯಾಗಿರಬೇಕು. ಇಲ್ಲವೆ ತನ್ನನ್ನು ವಂಚಿಸಲು ಅವಮಾನ ಪಡಿಸಲು ಇವರೆಲ್ಲರೂ ಸೇರಿ ಒಳಸಂಚು ಹೂಡಿದ್ದಾಗಿರಬೇಕು. ಹುಲಿಯನ್ನು ಕರೆಯುವುದಂದರೇನು, ಹಸುವನ್ನು ಕರೆದಂತೆಯೇ? ಗಣಪತಿಯನ್ನು ನೆನೆದು ಹಲ್ಲು ಕಡಿದನು. ಆ ಶತದಡ್ಡ ಹೇಗೆ ಕರೆಯುತ್ತಾನೋ ನೋಡೋಣವೆಂದುಕೊಳ್ಳುತ್ತಾ ಔಡು ಕಚ್ಚುತ್ತಾ ಹಿಂತಿರುಗಿದನು.

ತಂದೆ ಕೆಣಕಿದನು, ಹೋಗುವಾಗಲೇ ಬರಿಕೈಯಿಂದ ಹಿಂತಿರುಗುವೆ ಎಂದು ನಾನು ಅರಿತಿದ್ದೆ.
ಇದೆಲ್ಲ ನಿಮ್ಮದು ಒಳಸಂಚು. ನನ್ನನ್ನು ಹೀಗೇಕೆ. . . .
ನೋಡು ಕಾರ್ಯಪ್ಪಾ! ನಿನ್ನನ್ನು ಮೋಸಹೂಡಲು ಹೂಡಿದ ಆಟವಾಗಿರಬೇಕು. ಇದರಲ್ಲಿ ಏನೋ ಕೃತ್ರಿಮವಿರಬೇಕು. ನಾವು ಏನಾದರೂ ಕಪಟ ಮಾರ್ಗದಿಂದ ಇದನ್ನು ಉತ್ತರಿಸಬೇಕು.
ಹಾಗೆಂದರೆ?
ನಾನು ಯೋಚಿಸಿದ್ದೇನೆ. ನೋಡು! ಹುಲಿಯ ಹಾಲನ್ನು ನೋಡಿದವರು, ಕರೆದವರಂತೂ ಇರಲಿ ಯಾರೂ ಇಲ್ಲ. ಹಸುವಿನ ಹಾಲಿಗೆ ಸ್ವಲ್ಪ ನೀರು ಹಾಕಿ, ವಾಸನೆ ಬದಲಾಗಲು ಬೇರೇನಾದರೂ ಬೆರೆಸಿ ಇದೇ ಹುಲಿಯ ಹಾಲೆಂದು ಕೊಡುವುದು. ಅದನ್ನು ಅಲ್ಲವೆಂದು ಹೇಳಲು ಯಾರಿಗೆ ಹೇಗೆ ಸಾಧ್ಯ?
ಆ ಗಣಪತಿಯೂ ಇದೇ ರೀತಿ ಮಾಡಿದರೆ?
ಆ ದರಿದ್ರನ ಮಾತನ್ನು ಯಾರು ನಂಬುತ್ತಾರೆ? ನಿನಗೇನೋ ಹುಚ್ಚು. ನಾಳೆ ಬೆಳಗ್ಗೆಯೇ ನಾವು ಹುಲಿಯ ಹಾಲನ್ನು ಕೊಡೋಣ!

ಮಗನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ತಂದೆಗೂ ತೃಪ್ತಿಯಾಯಿತು. ಮರುದಿವಸ ಬೆಳಗ್ಗೆಯೇ ಕಾರ್ಯಪ್ಪನು ಒಬ್ಬ ಆಳಿನ ತಲೆಯಲ್ಲಿ ಒಂದು ತಂಬಿಗೆ ಹುಲಿಯ ಹಾಲನ್ನು ಹೊರಿಸಿಕೊಂಡು ಬೆಳ್ಯಪ್ಪನಲ್ಲಿಗೆ ಹೊರಟನು. ಹುಲಿಯ ಹಾಲನ್ನು ಕರೆದ ಸಂಗತಿಯನ್ನು ಅರಿತ ಪ್ರತಿಯೊಬ್ಬನೂ ಕಾರ್ಯಪ್ಪನನ್ನು ಹೊಗಳುವವನೇ. ಅವರೆಲ್ಲರೂ ಇವನ ಸಾಹಸವನ್ನು ಮೆಚ್ಚುತ್ತ ಹಿಂದೆ ನಡೆದರು. ಪಟೇಲನ ಮಗ, ತರುಣ, ಹುಲಿಯ ಹಾಲನ್ನು ಕರೆದುತಂದವನು, ನಿಜವಾಗಿಯೂ ಲೋಕೈಕವೀರ ಎಂದು ಪ್ರಶಂಸಿಸಿದರು. ಈ ಮೆರವಣಿಗೆಯ ಸಹಿತವಾಗಿ ಕಾರ್ಯಪ್ಪನು ಹುಡುಗಿಯ ಮನೆ ತಲಪಿ, ಬೆಳ್ಯಪ್ಪನಿಗೆ ನಮಸ್ಕರಿಸಿ, ಠೀವಿಯಿಂದ ಆ ಹಾಲನ್ನು ಅವನಿಗೆ ಒಪ್ಪಿಸಿದರು. ಎಲ್ಲರೂ ಪಡಸಾಲೆಯಲ್ಲಿ ಕುಳಿತರು. ಬೆಳ್ಯಪ್ಪನಿಗೆ ತುಂಬ ಸಂತೋಷ. ಕಾರ್ಯಪ್ಪನನ್ನು ಬಹುವಾಗಿ ಅಭಿನಂದಿಸಿದನು. ಅಷ್ಟರಲ್ಲಿಯೇ ರಾಗದಲ್ಲಿ ಅಪಸ್ವರ ಮಿಡಿದಂತೆ, ಗಣಪತಿಯೂ ಅಲ್ಲಿಗೆ ಬಂದನು. ಅವನೂ ಒಂದು ಚಂಬಿನಲ್ಲಿ ಹಾಲನ್ನು ತಂದಿದ್ದನು. ಕಾರ್ಯಪ್ಪನ ಕಣ್ಣಿನಿದ ಮಿಂಚು ಚಿಮ್ಮಿತು. ಗಣಪತಿಯು ಅವನನ್ನು ನೋಡಿ ತಿರಸ್ಕಾರದ ನಗು ಬೀರಿದನು.

ಇಕೊಳ್ಳಿ ಹುಲಿಯ ಹಾಲು ಎಂದು ಬೆಳ್ಯಪ್ಪನಿಗೆ ಗಣಪತಿಯು ಆ ತಂಬಿಗೆಯನ್ನು ವಿನಯಪೂರ್ವಕವಾಗಿ ಕೊಟ್ಟನು.
ನಾನು ಮೊದಲು ಹುಲಿಯ ಹಾಲು ತಂದದ್ದು. ನಿನ್ನದು ಹುಲಿಯ ಹಾಲೇ ಅಲ್ಲ ಕಾರ್ಯಪ್ಪನ ರೋಷದ ಮಾತು.
ಉಳಿದವರು ಹೌದು, ಹೌದು!
ಗಣಪತಿ ನಿನ್ನದು ಹುಲಿಯ ಹಾಲೆನ್ನಲು ಏನು ಆಧಾರ?
ನನ್ನ ಮಾತು. ನನ್ನ ತಂದೆ ಗ್ರಾಮದ ಪಟೇಲರ ಮಾತು. ನಿನ್ನಂತಹ ಅಲ್ಪನನ್ನು ನಂಬಿಸಿ ಆಗಬೇಕಾದದ್ದೇನು? ಅಬ್ಬಬ್ಬ! ಎಂತಹ ಕಷ್ಟಗಳನ್ನು ಎದುರಿಸಿ ನಾನಿದನ್ನು ತಂದಿದ್ದೇನೆ!
ಕಾರ್ಯಪ್ಪಾ! ಸುಮ್ಮನೆ ಹಾರಿಬೀಳಬೇಡ. ನೀನು ಹಾಗೆಲ್ಲ ಅಬ್ಬರಿಸಿದರೆ ಹುಲಿಯ ಹಾಲು ತಂದಂತಾಗಲಿಲ್ಲ. ಇದು ಚೌಂಡಿಗೆ ಎರೆಯಲು ಇರುವ ಹಾಲು, ಗೊತ್ತಾಯಿತೆ?
ಅದರಿಂದ ಏನಾಗಬೇಕು?
ನೀನು ದೇವಿಯ ಮುಂದೆ ‘ಇದು ಹುಲಿಯ ಹಾಲು. ನಾನೇ ಕರೆದು ತಂದದ್ದು ಎಂದು ಹೇಳಿ ಇಟ್ಟುಬಿಡು. ಮತ್ತೆ ನೀನು…
ಅದೇನು ಮಹಾ ಇದ್ದುದನ್ನು ಹೇಳಲು! ಎಂದು ಸೇರಿದವರೆಲ್ಲರೂ ಕೂಗಿದರು, ಹುರಿದುಂಬಿಸಿದರು.
ಮತ್ತೆ ನೀನು ಅಕ್ಕವ್ವನ ಕೈಹಿಡಿಯಲು ಯೋಗ್ಯನಾಗುವೆ. ನಾನು ಅಡ್ಡಿಮಾಡುವುದಿಲ್ಲ.
ಚೌಂಡಿಯ ಹೆಸರಿನಿಂದ ಎದೆಯು ಡವಡವನೆ ಹೊಡೆದರೂ ಆ ಒಂದು ಗಳಿಗೆಯ ಉತ್ಸಾಹದಲ್ಲಿ ಕಾರ್ಯಪ್ಪನು ಆಗಲಿ ಎಂದು ಬಿಟ್ಟನು. ಎಲ್ಲರೂ ಆಗಲೇ ಚೌಂಡಿಯ ಗುಡಿಯ ಕಡೆಗೆ ಹೊರಟರು. ಕಾರ್ಯಪ್ಪನ ಕಾಲುಗಳು ಮುಂದೆ ಹೋಗಲೊಲ್ಲವು. ಕರುಳು ಗಂಟು ಹಾಕಿದ ಹಾಗಾಯಿತು. ಮುಖ ಕಳೆಗೆಟ್ಟಿತು. ತುಟಿಗಳು ಅದುರಿದುವು. ಬಾಯಿಯಲ್ಲಿ ನೀರು ಆರಿತು. ಆದರೂ ಬೇರೆಯವರ ಜತೆಯಲ್ಲಿ, ಹೊಗಳುಭಟರ ನಡುವಿನಲ್ಲಿ ಹೇಗೋ ನಡೆದನು. ಗುಡಿಯ ಮುಂದೆ ಹೋಗುವಾಗ ವಿಶ್ವಪ್ರಯತ್ನದಿಂದ ಪುನಃ ಧೈರ್ಯ ತಳೆದನು. ಇದು ಹುಲಿಯ ಹಾಲು, ನಾನೇ ನಾನೇ ಖಂಡಿತವಾಗಿಯೂ ನಾನೇ ಕರೆದ ಹುಲಿಯ ಹಾಲು ಇದು ಎಂದು ಅನೇಕ ಸಲ ಅನೇಕ ವಿಧವಾಗಿ ಹೇಳಿಕೊಂಡನು. ಅದು ನಿಜವೆಂದೇ ನಂಬಿದನು. ಗುಡಿಯ ಮುಂದೆ ಎಲ್ಲರೂ ನಿಂತರು. ಒಳಗೆ ಕಲ್ಲಿನ ಕಾಳಿಯ ವಿಗ್ರಹ ಭಕ್ತಿ, ಭಯ ಪ್ರೇರಕವಾಗಿ ನಿಂತಿದೆ.
ಸರಿ ಗೌಡರೇ! ನಿಮ್ಮ ಸಾಹಸವನ್ನು ದೇವಿಯ ಮುಂದೆ ಆಡಿ ತೋರಿಸಿಬಿಡಿ
ಎಂದು ಭಟನೊಬ್ಬ ಸೂಚಿಸಿದನು.
ಕಾರ್ಯಪ್ಪನು ತಂಬಿಗೆ ಹಿಡಿದು ಎತ್ತಿದನೋ ಇಲ್ಲವೋ! ಎಲ್ಲ ಕಡೆಗಳಿಂದಲೂ ವಿಕಾರ ಕರಾಳ ಭೈರವ ಮೂರ್ತಿ ಕಾಳಿಯು ಅವನನ್ನು ನುಂಗಲು ಕೋರೆದಾಡೆಗಳನ್ನು ಚಾಚಿ, ಬಾಯನ್ನು ಕಳೆದು ಬಂದಳು. ತಂಬಿಗೆಯ ಒಳಗಿನಿಂದ ಅವಳು ಅವನನ್ನು ದಹಿಸುವಂತೆ ನೋಡಿದಳು. ವಿಗ್ರಹವು ತಕಪಕನೆ ಕುಣಿಕುಣಿದು ಅವನ ತಲೆಯ ಮೇಲಕ್ಕೆ ನೆಗೆಯಿತು. ಕಾರ್ಯಪ್ಪನಿಗೆ ಕಣ್ಣು ಕತ್ತಲೆ ಹೋಯಿತು.

ಅಯ್ಯೋ ಇದು ಹುಲಿಯ ಹಾಲಲ್ಲ. ಹುಲಿಯ ಹಾಲು ಅಲ್ಲವೇ ಅಲ್ಲ. ನಾನು ಮೋಸಮಾಡಿದೆ. ಕಾಳೀದೇವೀ ನನ್ನನ್ನು ರಕ್ಷಿಸು ರಕ್ಷಿಸು ಎಂದು ಘೋರವಾಗಿ ಅರಚುತ್ತ ಮೂರ್ಛಾಕ್ರಾಂತನಾಗಿ ಅಲ್ಲಿ ದೊಪ್ಪನೆ ಬಿದ್ದುಬಿಟ್ಟನು. ಹಾಲು ಚೆಲ್ಲಿಹೋಯಿತು. ಜನರು ಸ್ತಬ್ದರಾದರು. ಏನು ಮಾಡುವುದೆಂದು ಯಾರಿಗೂ ತಿಳಿಯಲಿಲ್ಲ. ಚೌಂಡಿಯು ಬಹಳ ಪ್ರತಾಪಶಾಲಿಯಾದ ದೈವವೆಂದು ಜನರಿಗೆ ನಂಬಿಕೆಯಿತ್ತು. ಆದ್ದರಿಂದ ಕಾರ್ಯಪ್ಪನು ಮಾಡಿದುದು ಮೋಸ, ಹೇಳಿದುದು ಸುಳ್ಳು ಎಂದು ಅವರಿಗೆ ನಿಶ್ಚಯವಾಯಿತು. ಅವನ ಮುಖಕ್ಕೆ ತಣ್ಣೀರೆರಚಿದರು, ಗಾಳಿಬೀಸಿದರು. ಗುಜುಗುಜು ಎಂದು ಮಾತಾಡಿದರು.

ಇನ್ನು ಗಣಪತಿಗೆ ಮಾತ್ರ ಇದು ಸಾಧ್ಯವಾವುಗುವುದೇ? ನೀನು ಪ್ರಮಾಣ ಮಾಡಬೇಕಲ್ಲ ಎಂದು ಗಣಪತಿಯನ್ನು ಮುಂದೆ ನೂಕಿದರು.
ಅವನು ಗಂಭೀರವಾಗಿ ಮುಂದೆ ನಡೆದು ಭಕ್ತಿಯಿಂದ ದೇವಿಗೆ ನಮಸ್ಕರಿಸಿ ತಾಯೀ ಚೌಂಡಿದೇವಿ, ಇದು ನಾನೇ ನಿನ್ನೆ ಸಾಯಂಕಾಲ ಕರೆದು ತಂದ ಹುಲಿಯ ಹಾಲು. ಇದನ್ನು ಸ್ವೀಕರಿಸು ಎಂದು ನುಡಿದು ಆ ಚಂಬನ್ನು ದೇವಿಯ ಮುಂದೆ ಇರಿಸಿ ಮರಳಿದನು.

ದೇವಿಯು ತೃಪ್ತಳಾದಳೋ ಎಂಬಂತೆ ದೀಪವು ಒಮ್ಮೆ ದೊಡ್ಡದಾಗಿ ಉರಿಯಿತು. ಗಾಳಿಯು ಮೃದುವಾಗಿ ತೀಡಿತು. ಶೂರ ಶೂರ! ಎಂತಹ ಧೈರ್ಯಶಾಲಿ! ಎಂದು ಜನರು ಅವನಿಗೆ ಮರ್ಯಾದೆಮಾಡಿದರು. ಅವನನ್ನು ಬಹಳವಾಗಿ ಶ್ಲಾಘಿಸಿದರು. ಮೇಲಕ್ಕೆತ್ತಿ ಗುಡಿಯ ಮುಂದೆ ಮೆರವಣಿಗೆ ಮಾಡಿದರು. ಗಣಪತಿಯದೂ ಏಕೆ ಮೋಸವಾಗಿರಬಾರದು ಎಂದು ಒಬ್ಬಿಬ್ಬರಿಗೆ ಸಂದೇಹ ಬಂದರೂ ದೇವಿಯ ಪ್ರತಾಪವನ್ನು ಅವರು ಹಿಂದೆಷ್ಟೋ ಸಲ ಸ್ವತಃ ಕಂಡಿದ್ದುದರಿಂದ ಆ ಶಂಕೆ ನಿರ್ಮೂಲವಾಯಿತು. ಸಕಲರೂ ಗಣಪತಿಯನ್ನು ಮೆಚ್ಚಿದರು.

ಗಣಪತಿಗೂ ಅಕ್ಕವ್ವನಿಗೂ ಮದುವೆ ನಡೆಯಿತು. ಅವನ ಮನೆಯಲ್ಲಿ ಜನ ಹೆಚ್ಚಾದರು. ಹೀಗಾಗಿ ಜೀವನ ನಡೆಸುವುದು ಕಷ್ಟವಾಯಿತು. ಆದ್ದರಿಂದ ಗಣಪತಿಯು ಮಡಿಕೇರಿಯನ್ನು ಸೇರಿ ರಾಜನ ಸೈನ್ಯದಲ್ಲಿ ಸಿಪಾಯಿಯಾಗಿ ಕೆಲಸ ಸಂಪಾದಿಸಿದನು. ಅವನ ತಮ್ಮಂದಿರೆಲ್ಲರೂ ದೊಡ್ಡವರಾಗಿದ್ದುದರಿಂದ ಗದ್ದೆ ಕೆಲಸದ ಗೊಡವೆ ಅವನಿಗಿರಲಿಲ್ಲ. ಅಲ್ಲದೆ ಮಡಿಕೇರಿಯು ಕೇವಲ ಐದು ಮೈಲುಗಳ ದೂರದಲ್ಲಿದ್ದುದರಿಂದ ವಾರಕ್ಕೊಂದಾವರ್ತಿ ಮನೆಗೆ ಹೋಗಿ ಹಿಂತಿರುಗಬಹುದಿತ್ತು. ಇದರಿಂದ ಅವನಿಗೆ ಒಂದು ತೊಂದರೆಯಾಯಿತು: ಅನೇಕ ವರ್ಷಗಳಿಂದ ಅನುದಿನವೂ ನಡೆದುಬಂದ ಹುಲಿಯ ಸಾಹಚರ್ಯ ಅಪರೂಪವಾಯಿತು. ಕಾರಣಾಂತರಗಳಿಂದ ವ್ಯಕ್ತಿ ಇನ್ನೂ ಹೆಚ್ಚಿನ ನಿಕಟ ಸಂಬಂಧಗಳನ್ನು ತೊರೆದು ಹೋಗಬೇಕಾಗುವುದು. ಪ್ರಾರಂಭದಲ್ಲಿ ಗಣಪತಿಗೆ ಬಹಳ ದುಃಖವಾಯಿತು. ಮತ್ತೆ ಸಮಾಧಾನ ಪಡೆದನು – ವಾರಕ್ಕೊಂದು ಸಲ ಹಿಂತಿರುಗುವಾಗ ಹುಲಿಯನ್ನೂ ಅದರ ಮರಿಗಳನ್ನೂ ಮುದ್ದಾಡಿ ಬರಬಹುದಲ್ಲ ಎಂದು. ಇದು ಹೀಗೆಯೇ ನಡೆಯಿತು. ಮುಸ್ಸಂಜೆಯ ಹೊತ್ತಿನಲ್ಲಿ ಅವನು ಆ ದಾರಿಯಲ್ಲಿ ಬರುವನು. ಆಗ ಹುಲಿಯು ಅದರ ಮರಿಗಳೂ ಎದುರಾಗುವುವು. ಅವನು ಅವನ್ನು ಎತ್ತಿ ಪ್ರೀತಿಯಿಂದ ಮೈದಡಹುವನು. ಮಾಂಸದ ತುಣುಕುಗಳನ್ನು ತಿನ್ನಲು ಕೊಡುವನು. ಮರುದಿನ ಪುನಃ ಬಂದು ಅವುಗಳೊಡನೆ ಆಟವಾಡುವನು. ಅದರ ಮಾರಣೆ ದಿವಸ ನಸುಕಿನಲ್ಲಿ ಮಡಿಕೇರಿಗೆ ಮರಳುವಾಗ ಇನ್ನೊಮ್ಮೆ ಚಕ್ಕಂದವಾಡಿ ಸಾಗುವನು. ಈ ರೀತಿಯಲ್ಲಿ ಅನೇಕ ವಾರ ನಡೆಯಿತು. ತಾಯಿ ಹುಲಿಗೂ ಅದರ ಮರಿಗಳಿಗೂ ಇದು ಅಭ್ಯಾಸವಾಗಿ ಹೋಯಿತು. ಪ್ರತಿ ವಾರವೂ ಒಂದು ಅವ್ಯಕ್ತ ಶಕ್ತಿಯಿಂದ ಪ್ರೇರಿತವಾಗಿ ಹುಲಿಯು ಗಣಪತಿಯನ್ನು ಸ್ವಾಗತಿಸಲು ಕಾದು ಕುಳಿತಿರುವುದು. ಅವನು ಬಂದಾಗ ಪೊದರಿನೆಡೆಯಿಂದ ನೆಗೆಯುವುದು. ಆಗ ಮನೆಯು ಬಂದಿತು, ತನ್ನವರು ಬಂದರು ಎನ್ನುವ ಸಂತೋಷ ಗಣಪತಿಯಲ್ಲಿ ಮಿಂಚುತ್ತಿತ್ತು. ಪರಿಚಿತ ಆವರಣ, ಪರಿಚಿತ ಜೀವಿಗಳು ಇವು ಅಲ್ಲದೆ ಮನೆಯೆಂದರೆ ಬೇರೆ ಏನು?

ಕಾರ್ಯಪ್ಪನಿಗೆ ಅವಮಾನ ವಿಪರೀತವಾಯಿತು, ಅಸಹನೀಯವಾಯಿತು. ಗಣಪತಿಯು ಮೊದಲೇ ಸಿದ್ಧಮಾಡಿ ಧೈರ್ಯದಿಂದ ದೇವಿಯ ಮುಂದೆ ಸುಳ್ಳು ಹೇಳಿದನು ಎಂದು ಊಹಿಸಿದನು. ಹುಲಿಯ ಹಾಲನ್ನು ಅವನು ಕರೆದಿರುವುದು ಸಾಧ್ಯವಲ್ಲದ ಮಾತು. ಆದರೆ ತನ್ನನ್ನು ಆ ರೀತಿ ಬೆದರಿಸಿದ ಚೌಂಡಿ, ಸುಳ್ಳು ಹೇಳಿದ ಗಣಪತಿಯನ್ನು ಸುಮ್ಮನೆ ಹೇಗೆ ಬಿಟ್ಟಳು? ಇದೆಲ್ಲ ಮೋಸವೇ ಇರಬೇಕು. ಗಣಪತಿಯು ಮೊದಲೇ ಹೆಣೆದ ಕಪಟಜಾಲವಿರಬೇಕು. ತನ್ನ ವಿರುದ್ಧ ಮಾಟಮಾಡಿರಬೇಕು. ಇಂತಹ ವೈರಿಯನ್ನು ಕೊಂದು ಹಗೆತನ ತೀರಿಸಿಕೊಳ್ಳಬೇಕು. ಮೋಸಗಾರನನ್ನು ಮೋಸದಿಂದ ಹತಮಾಡಬೇಕು. ಆಗ ದಿಕ್ಕಿಲ್ಲದ ಅವನ ಹೆಂಡತಿ ತನ್ನನ್ನು ಕೂಡಾವಳಿಯಾಗುವಳು. ಈ ರೀತಿ ಮನಸ್ಸು ಸೂಚಿಸಿದುದೇ ತಡ, ಅದು ಹಾಗೆಯೇ ಆಗುವುದು, ಆಗಿಹೋಯಿತು ಎಂದು ದೃಢವಾಗಿ ನಂಬಿದನು. ಇತ್ತಲಾಗಿ ಪಟೇಲನಿಗೂ ಅಪಮಾನದ ಉರಿ ಬಲವಾಗಿ ತಗಲಿತು. ಈ ವಿಷಯದಲ್ಲಿ ಅವನು ಬಹುವಾಗಿ ಪರಿತಪಿಸಿದನು. ಆದರೆ ಇನ್ನೇನು ಮಾಡುವುದು? ಆದದ್ದು ಆಗಿಹೋಯಿತು. ಮಗನಿಗೆ ಬೇರೇ ಎಡೆಯಿಂದ ಐಶ್ವರ್ಯವಂತರಲ್ಲಿಂದ ಹುಡುಗಿ ತರಬಹುದೆಂದು ಅವನು ಯೋಚಿಸಿದನು. ಕಾರ್ಯಪ್ಪನಿಗೆ ಇದೊಂದೂ ರುಚಿಸಲಿಲ್ಲ. ತನ್ನ ನಿಶ್ಚಯವನ್ನು ತಂದೆಯ ಮುಂದೆ ಹೇಳಿಯೇ ಬಿಟ್ಟನು.

ಚೌಂಡಿಯ ದಯೆ ಗಣಪತಿಯ ಮೇಲೆ ಇದೆಯೆಂದು ತೋರುವುದು. ದೇವಿಯ ಇಚ್ಛೆಯ ವಿರುದ್ಧ ಹೋಗಬೇಡ ಮಗನೇ ಎಂದನು ಪಟೇಲ.
ಕಾರ್ಯಪ್ಪನು ಕೇಳಲಿಲ್ಲ. ಗಣಪತಿಯನ್ನು ಕೊಂದೇ ಹಗೆ ತೀರಿಸಬೇಕೆಂದು ನಿರ್ಧರಿಸಿದನು. ಮೂರ್ಖನಿಗೆ ಹಿಡಿದ ಪಟ್ಟು ಕುತ್ತಿಗೆಯ ಉರುಳಾಗುವುದು ಜೀವನ ನಿಯಮ.

ಎಂದಿನಂತೆ ಒಂದು ಸಂಜೆ, ಗಣಪತಿಯು ಹಳ್ಳಿಯ ಸಮೀಪದ ಕಾಡಿನಲ್ಲಿ ಬರುತ್ತಿದ್ದನು. ಇಷ್ಟರಲ್ಲಿಯೇ ಅವನಿಗೆ ಚಿರಸ್ನೇಹಿತರು – ಹುಲಿಯೂ ಅದರ ಮರಿಗಳೂ ಎದುರಾಗಬೇಕಾಗಿತ್ತು. ಇನ್ನೂ ಬರಲಿಲ್ಲ! ಇದೇನು? ಅವಕ್ಕೇನಾದರೂ ಅಪಾಯ ಸಂಭವಿಸಿರಬಹುದೇ? ಗುರ್ ಗುರ್ ಬಾ ಬಾ ಎಂದು ಕರೆದನು. ಕಿವಿಗೊಟ್ಟು ಆಲಿಸಿದನು. ಆದರೆ ಹುಲಿಯ ಮೂರಿಯೂ ಇಲ್ಲ, ಸದ್ದಿಲ್ಲ. ಕಾತ್ತಲೆಯಿಂದ ಕಾಡು ಮಯಮಯ ಅನ್ನುವಂತಿತ್ತು. ಗಣಪತಿಯ ಮನಸ್ಸಿನಲ್ಲಿಯೂ ಕತ್ತಲೆ ಕವಿಯಿತು. ಮುಂದೆ ಕಾಡು ಮುಗಿಯಲು ಇನ್ನೂ ದೂರವಿದೆಯಷ್ಟೆ. ಅಷ್ಟರಲ್ಲಿ ಬಂದೀತು ಎಂದು ಆಸೆ. ಆದರೆ ಯಾವಾಗಲೂ ಭೆಟ್ಟಿಯಾಗುವ ಸ್ಥಳ ಬಹಳ ಹಿಂದೆ ಉಳಿಯಿತು. ತಾನು ಕರೆದರೂ ಅದರ ಸುಳಿವಿಲ್ಲ. ಆದ್ದರಿಂದ ಅದಕ್ಕೆ ಅಪಘಾತ ಸಂಭವಿಸಿರಬೇಕೆಂದು ಅಂಜಿಕೆಯಾಯಿತು. ತಾಯಿಗೇನಾಯಿತೋ ಯಾರು ಇರಿದು ಕೊಂದರೋ ಮರಿಗಳಿಗೇನಾಯಿತೋ ಎಲ್ಲಿಗೆ ಓಡಿಹೋದವೋ, ಪಾಪ ಎಂದು ಯೋಚಿಸುತ್ತಿದ್ದಂತೆಯೇ ಗಣಪತಿಯ ದುಃಖ ಕೋಡಿಬಿರಿಯಿತು. ಮುಂದೆ ನಡೆಯಲಾಗದೆ ಅಲ್ಲಿಯೇ ಕುಸಿದು ಕುಳಿತನು. ಬಾ ಬಾ ಗುರ್ ಗುರ್ ಎಂದು ಪುನಃ ದುಃಖ ಧ್ವನಿಗಳಿಂದ ಕೂಗಿದನು.

ಬರಬೇಕೋ ಬಂದೆ, ಬಂದೆ ನೋಡು ಎಂದು ಪೊದರುಗಳೆಡೆಯಿಂದ ಮೂವರು ಖಡ್ಗಗಳನ್ನು ಹಿರಿದು ಹಾರಿದರು. ಗಣಪತಿಯನ್ನು ಇರಿಯಲು ಅವನೆಡೆಗೆ ಚಿಮ್ಮಿದರು. ಅಪಾಯವೇನೊಂದನ್ನೂ ನಿರೀಕ್ಷಿಸದ ದುಃಖಿ, ಎದ್ದುನಿಂತು ಕರವಾಲವನ್ನು ಒರೆಯಿಂದ ಎಳೆಯುವ ಮೊದಲೇ ಅವರು ಅವನ ಮೈಮೇಲೆ ಏರಿ ಖಡ್ಗ ಬೀಸಿದರು. ಆಗಲೇ ವಿದ್ಯುದ್ವೇಗದಿಂದ ಮೂರುನಾಲ್ಕು ಹುಲಿಗಳು ಅವರ ಮೇಲೆ ನೆಗೆದುವು. ಮೂರು ಜನ ಶತ್ರುಗಳನ್ನೂ ಹಠಾತ್ತಾಗಿ ಕೆಡಹಿದುವು. ಭಯಭ್ರಾಂತರಾದ ಅವರು ಹುಲಿಗಳೊಡನೆ ಕಾದಾಡಲು ಮೇಲೆದ್ದರು. ಖಡ್ಗಗಳಿಂದ ಅವನ್ನು ಇರಿದರು. ಇಷ್ಟರಲ್ಲಿ ಚೇತರಿಸಿಕೊಂಡೆದ್ದ ಗಣಪತಿಯು ಶತ್ರುಗಳ ಮೇಲೇರಿ ನಿಮಿಷಮಾತ್ರದಲ್ಲಿ ಅವರನ್ನು ಉರುಳಿಸಿದನು. ಅಕಸ್ಮಾತ್ ಸಂಭವಿಸಿದ ಈ ದುರ್ಘಟನೆಯಿಂದ ಅವನು ಭಯಗೊಂಡು, ಇನ್ನು ಏನು ಅಪಾಯ ಕಾದಿದೆಯೋ ಎಂದು ತಿಳಿಯದೆ ಮನೆಯವರನ್ನೂ ಕೂಗಿ ಕರೆದನು. ಪ್ರತಿ ವಾರವೂ ಈಗಾಗಲೇ ಮನೆಯನ್ನು ಸೇರುತ್ತಿದ್ದ ಗಣಪತಿಯು ಈ ರಾತ್ರಿ ಇನ್ನೂ ಏಕೆ ಬರಲಿಲ್ಲವೆಂದು ಅವರೆಲ್ಲರೂ ಆತುರದಿಂದ ಎದುರು ನೋಡುತ್ತಿದ್ದರು. ಈ ಧ್ವನಿ ಕೇಳಿ ಹೆದರಿ, ಏನು ಅಪಾಯ ಸಂಭವಿಸಿತೊ ಎಂದು ನಡುಗಿ, ಕೂಡಲೇ ದೊಂದಿಗಳನ್ನೂ ದೊಣ್ಣೆ ಕತ್ತಿಗಳನ್ನೂ ಹಿಡಿದುಕೊಂಡು ಶಬ್ದ ಬಂದಲ್ಲಿಗೆ ಧಾವಿಸಿದರು.

ಗಣಪತಿಗೆ ಒಂದೆರಡು ಸಣ್ಣ ಗಾಯಗಳ ಹೊರತು ಬೇರೇನೂ ಆಗಿರಲಿಲ್ಲ. ದೊಡ್ಡ ಹುಲಿಯು ಅಲ್ಲಿ ತಲೆ ಅಡ್ಡ ಚಾಚಿ ಬಿದ್ದುಕೊಂಡಿದೆ. ಅದರ ಬೆನ್ನು ಸವರಿದನು. ಗುರ್ ಗುರ್ ಎಂದು ಕರೆದನು. ಆದರೆ ಸದ್ದಿಲ್ಲ. ಮೂಗಿನ ಹೊಳ್ಳೆಗಳ ಹತ್ತಿರ ಕೈ ಹಿಡಿದು ನೋಡಿದನು. ಉಸಿರಿನ ಛಾಯೆ ಇಲ್ಲ. ಅಥವಾ ಸ್ವಲ್ಪ ಇದೆಯೋ ಎಂದು ಭ್ರಮೆಯಾಯಿತು. ಹತ್ತಿರದಲ್ಲಿ ಒಂದು ಮರಿ ಹುಲಿಯೂ ಮಲಗಿದೆ. ಶತ್ರುಗಳು ಸದ್ದಿಲ್ಲದೆ ಕೆಡೆದಿದ್ದಾರೆ. ಉಳಿದ ಮರಿ ಹುಲಿಗಳು ವಿಕಾರವಾಗಿ ಊಳಿಡುತ್ತ ಸುತ್ತು ಸುತ್ತು ತಿರುಗುತ್ತಿವೆ. ಗಣಪತಿಗೆ ಶೋಕ ಉಕ್ಕಿಬಂದಿತು. ಸೊಡರುಗಳ ಬೆಳಕಿನಲ್ಲಿ ಎಲ್ಲವೂ ಸ್ಪಷ್ಟವಾಯಿತು. ಗಣಪತಿಯ ಪ್ರಾಣಮಿತ್ರರು – ತಾಯಿ ಹುಲಿ ಮತ್ತು ಅದರ ಒಂದು ಮರಿ – ರಕ್ತದಲ್ಲಿ ಜಳಕವಾಡಿ ಸತ್ತುಬಿದ್ದಿರುವುವು. ಅವುಗಳ ಮೈಗಳಲ್ಲಿಯ ಅಸಂಖ್ಯಾತ ಗಾಯಗಳು ಇನ್ನೂ ನೆತ್ತರನ್ನು ಸೂಸುತ್ತಿವೆ. ಅಯ್ಯೋ ಎಂದು ಅಳುತ್ತಿವೆ. ತಾಯಿ ಹುಲಿಯು ಶಾಂತವಾಗಿದೆ, ತೃಪ್ತಿಯನ್ನು ಹೊಂದಿದೆ, ಸ್ಥಿರತೆಯನ್ನೈದಿದೆ. ಈ ಕಡೆಯಲ್ಲಿ ಸ್ವರ್ಗಶಿಖರದಿಂದ ನರಕಕೂಪಕ್ಕೆ ನೆಗೆತ. ಕಾರ್ಯಪ್ಪನೂ ಅವನ ಸಂಗಡಿಗರೂ ದುರ್ಗತಿಯನ್ನು ಹೊಂದಿದ್ದಾರೆ. ಅವರು ತಮ್ಮ ಅಪವಿತ್ರ, ಪಾಪಕಲುಷಿತ ಮುಖಗಳನ್ನು ತರಗೆಲೆಗಳ ಅಡರುಗಳ ಮರೆಯಲ್ಲಿ ಹುದುಗಿಸಿ ಉರುಳಿದ್ದಾರೆ. ಗಣಪತಿಯು ಬಹುವಾಗಿ ಪರಿತಪಿಸಿದನು. ತಾಯಿ ಹುಲಿಯ ತಲೆಯ ಮೇಲೆ ತಲೆಯಿಟ್ಟು ಮೂಕಾಶ್ರು ಪ್ರವಾಹದಿಂದ ಅದಕ್ಕೆ ತರ್ಪಣವಿತ್ತನು. ಮರಿ ಹುಲಿಯ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಮೈ ಸವರಿದನು. ಆದರೆ ಅದು ಮೌನ. ಮೊದಲಿನಂತೆ ಬಾಲವಲ್ಲಾಡಿಸುವುದಿಲ್ಲ, ಪ್ರೀತಿಯಿಂದ ಮೈ ಮೇಲೆ ನೆಗೆಯುವುದಿಲ್ಲ. ಭೀಕರವಾದ ಬಿರುಗಾಳಿಗೆ ಹಡಗೊಡೆದು ಸಮುದ್ರ ಜಲದ ಪಾಲಾದವನ ಹಾಗಾಯಿತು ಗಣಪತಿಯ ಸ್ಥಿತಿ. ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಹಲುಬಿದನು. ದುಃಖ ತಡೆಯಲಾರದೇ ಪ್ರಜ್ಞೆ ತಪ್ಪಿ ಉರುಳಿದನು. ಅವನನ್ನು ಮನೆಗೆ ಸಾಗಿಸಿದರು, ಶೈತ್ಯೋಪಚಾರ ಮಾಡಿದರು. ಗಣಪತಿಯ ಮನೆಯವರಿಗೆ ಆಶ್ಚರ್ಯ, ಭಯ, ಸಂತೋಷ, ಕುತೂಹಲ ಸಕಲ ಭಾವನೆಗಳ ಮಿಶ್ರಣ.
ಕಾಳರಾತ್ರಿಯ ಕರಾಳತೆ ಸಾಂದ್ರೀಕರಿಸಿತು.

*** ***

ಮತ್ತೆ ನೋಡಿ, ಅದು ನಡೆದುದು ಈ ಸ್ಥಳದಲ್ಲಿಯಂತೆ. ಕೃತಜ್ಞತೆಯಿಂದ, ಪ್ರೇಮದಿಂದ ಗಣಪತಿಯು ಹುಲಿಯ ವಿಗ್ರಹವನ್ನು ಕಡೆಯಿಸಿ ಇಲ್ಲಿ ಪ್ರತಿಷ್ಠಾಪಿಸಿದನಂತೆ, ಈ ಸ್ಥಳವನ್ನು ಹುಲಿತಾಳವೆಂದು ಅವನು ಕರೆದನು. ಪ್ರತಿದಿನವೂ ಅವನು ಇಲ್ಲಿಗೆ ಬಂದು ಹಾಲೆರೆದು ಭಾಷ್ಪಾಂಜಲಿ ನಿವೇದಿಸಿ ಮರಳುತ್ತಿದ್ದನಂತೆ. ಈಗ ಈ ಗ್ರಾಮದ ಹೆಸರೇ ಹುಲಿತಾಳವೆಂದಾಗಿದೆ.