“೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು ಎಂಬ ಲಕ್ಷ್ಯ ಇರುವುದು ತಪ್ಪಲ್ಲ. ಶಾಲೆಯಲ್ಲಿ (ಬೆಂಗಳೂರು ಹೈಸ್ಕೂಲು) ಕೊನೆಯ ವರ್ಷ ಎನ್ನುವಾಗ ಏನೋ ಕೋಡು. ನನ್ನ ಕಾಲದಲ್ಲಿ ಪದವಿಪೂರ್ವ ಕಲಿಕೆ ಒಂದೇ ವರ್ಷವಿತ್ತು ಮತ್ತು ಅದು ಬೆಂಗಳೂರಿನ ಸರಕಾರೀ ಪ್ರಥಮ ದರ್ಜೆ ಕಾಲೇಜಿನ (ಆ ಕಾಲದ ಗ್ಯಾಸ್ ಕಾಲೇಜು ಅರ್ಥಾತ್ ಗವರ್ನಮೆಂಟ್ ಸೈನ್ಸ್ ಅಂಡ್ ಆರ್ಟ್ಸ್ ಕಾಲೇಜು!) ಭಾಗವಾಗಿಯೇ ಇದ್ದುದರಿಂದ ಬಚ್ಚಾಗಳಾಗಿಯೇ ಇದ್ದೆವು! ಆದರೆ ಮೈಸೂರಿನ ಮಹಾರಾಜಾಕ್ಕೆ ಬಂದಾಗ ಕಾಲೇಜ್ ಫೈನಲ್ ಇಯರ್ ಎನ್ನುವ ಹಂತದಲ್ಲಿ ಒಂದು ಗತ್ತು, ಕಲಿತು ಮುಗಿಯಿತು ಎನ್ನುವ ಭಾವ ತುಳುಕುತ್ತಿತ್ತು. ಅದೇ ಸ್ನಾತಕೋತ್ತರ ಕೇಂದ್ರ ಸೇರಿ ಶಿಖರ ಸಮೀಪಿಸುವಾಗ, ಅಂದರೆ ಡಬ್ಬಲ್ ಗ್ರಾಜುಯೇಟ್, ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆ ಎನ್ನುವ ಮನೋಸ್ಥಿತಿ ಹೆಚ್ಚು ಅಮಲಿನದು! ಆದರೆ ಅದು ಕಳೆದ ಮೇಲೆ ನಿಜ ಜೀವನರಂಗದ ಅಥವಾ ವೃತ್ತಿ ರಂಗದ ಶಿಖರಗಳು ಅನಾವರಣಗೊಳ್ಳತೊಡಗುತ್ತವೆ; ಅದುವರೆಗೆ ಗುಡ್ಡಕ್ಕೆ ಗುಡ್ಡ ಅಡ್ಡ! ವಿದ್ಯಾರ್ಥಿ ದೆಸೆಯ ಕಲಿಕೆಯೆಲ್ಲಾ ಬರಿಯ ಪ್ರವೇಶದ್ವಾರದ ಅಲಂಕಾರ. ಜೀವನದ ಹರಹಿನಲ್ಲಿ ವಿದ್ಯಾರ್ಥಿಜೀವನದ ಕಲಿಕೆ ಪುಟ್ಟ ಸಲಕರಣೆ ಮಾತ್ರ. ನೇರ ಬಳಸಿ (ಅಧ್ಯಾಪನ, ಸಂಶೋಧನೆ ಇತ್ಯಾದಿ) ಹೆಚ್ಚಿನದನ್ನು ಗಳಿಸಬಹುದು, ಬಿಟ್ಟಂತೆ ಕಂಡರೂ ಪರೋಕ್ಷ ಸಂಸ್ಕಾರದ ಬಲದಲ್ಲಿ ಯಶಸ್ವಿಯೂ ಆಗಬಹುದು. ನನ್ನ ವೃತ್ತಿ ರಂಗದ ಬಳಕೆಯಲ್ಲಿ ಎಂಎ ಇಂಗ್ಲಿಷ್‌ಗೆ ವಿಶೇಷ ಸ್ಥಾನವೇನೂ ಇರಲಿಲ್ಲ. ಹಾಗಾಗಿ ಇಲ್ಲಿ ಮಾತೃಸಂಸ್ಥೆಯ (ಅಲ್ಮಾಮೇಟರ್) ಮರ್ಯಾದೆಗೂ ನಾಲ್ಕು ತೊಟ್ಟು ಹಾಲು ಕೊಡದ ಗೊಡ್ಡು ಎಮ್ಮೆ. ಬಳಕೆ ತಪ್ಪಿದ ಇಂಗ್ಲಿಷಿನಲ್ಲಿ ಭಾವವಿಸ್ತರಣೆಗಿಳಿಯುವ ಬದಲು ಕನ್ನಡದಲ್ಲೇ ನಿಮ್ಮನ್ನು ಬೋರುತ್ತೇನೆ.”

ಮೈಸೂರು ವಿವಿನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವಾರದ ಸಾಹಿತ್ಯ ಕೂಟದಲ್ಲಿ (ಲಿಟರರಿ ಕ್ಲಬ್ಬಿನ ಕಲಾಪ) ಅಂದು (೫-೨-೧೪ರ ಬುಧವಾರ) ನಾನು – ಗಣ್ಯ ಅತಿಥಿಯಾಗಿ, ಹೀಗೆ ಮಾತಿಗಿಳಿದಿದ್ದೆ. ಕಳೆದ ವಾರ ನಾನು ಇಲ್ಲಿ ಬರೆದುಕೊಂಡಂತೆ, ಸುಮ್ಮನೇ ಸುತ್ತಾಡುತ್ತ ವಿಭಾಗಕ್ಕೆ ಮೂಗು ತೂರಿದ್ದ ನನ್ನನ್ನು ವಿಭಾಗ ಮುಖ್ಯಸ್ಥ ಮಹದೇವ್ “ನಿಮ್ಮ ಪರಿಚಯ?” ಎಂದು ಕೇಳಿದ್ದರಷ್ಟೆ. ನಾನು ಎರಡೇ ಮಾತಿನಲ್ಲಿ “ಇಲ್ಲಿನ ಹಳೇ ವಿದ್ಯಾರ್ಥಿ, ಸದ್ಯ ಮಂಗಳೂರಿನ ನಿವೃತ್ತ ಪುಸ್ತಕ ವ್ಯಾಪಾರಿ” ಎಂದೇ ಪರಿಚಯಿಸಿಕೊಂಡೆ. ಕೂಡಲೇ ಅವರು “ನಾಳೆ ಅಪರಾಹ್ನ ಬಿಡುವಾಗಿದ್ದೀರಾ?” ಎಂದು ಕೇಳಿದರು. ನಾನು ಅಪಾಯದ ಸೂಚನೆಯನ್ನೇನೂ ಕಾಣದೆ “ಹಾಂ, ನಾಡಿದ್ದು ಬೆಳಿಗ್ಗೆ ಮಂಗಳೂರಿಗೆ ಮರಳುವ ಅಂದಾಜು” ಎಂದೆ. ಅವರು ನನ್ನಲ್ಲೇನೂ ನುಡಿಯದೆ, ಚರವಾಣಿ ಎತ್ತಿ ಅದ್ಯಾರನ್ನೋ ಸಂಪರ್ಕಿಸಿದರು. ಆದರೆ ಸ್ವರಭಾರದಲ್ಲಿ ಅತ್ತ ಆದೇಶ, ಹೊರಗಿನಿಂದ ಕೇಳುವ ನನ್ನತ್ತ ಮುಗಿದ ಮಾತು ಎನ್ನುವಂತೆ “ನಾಳೆ ನಮ್ಮ ಲಿಟರರಿ ಕ್ಲಬ್ ಮೀಟಿಗೆ ಮುಖ್ಯ ಅತಿಥಿ ನಮ್ಮದೇ ವಿಭಾಗದ ನಾಲ್ಕು ದಶಕಗಳ ಹಳೆಯ ವಿದ್ಯಾರ್ಥಿ ಸಿಕ್ಕಿದ್ದಾರೆ, ಬರ್ತಾರೆ. ತಯಾರಿ ನಡೆಸಿ” ಎಂದೇ ಬಿಟ್ಟರು. ನಮ್ಮ ಕಾಲದಲ್ಲಿ ಪ್ರತಿ ಬುಧವಾರ ಅಪರಾಹ್ನ ಎರಡೂ ವರ್ಷದ ವಿದ್ಯಾರ್ಥಿಗಳು ಸೇರಿ ಓರ್ವ ಗಣ್ಯ ಅಥವಾ ಒಂದು ವಿಷಯದ ಬಗ್ಗೆ ಗಂಭೀರ ವಿಚಾರ ಮಂಥನ ನಡೆಯುತ್ತಿತ್ತು. ಇದರಲ್ಲಿ ಎಲ್ಲ ಅಧ್ಯಾಪಕರೂ ಪ್ರೇಕ್ಷಕರಾಗಿ ಬಂದು, ಆವಶ್ಯಕತೆ ಬಂದಾಗ ಚರ್ಚೆಯಲ್ಲೂ ಪಾಲುಗೊಂಡು ಕೂಟದ ಗಾಂಭೀರ್ಯ ಹೆಚ್ಚಿಸುತ್ತಿದ್ದರು. ಮಹದೇವ್ ಅವರು ಹೇಳಿದಂತೆ, ನನ್ನ ಕಾಲಕ್ಕೂ ಬಹಳ ಹಿಂದೆ, ಅಂದರೆ ಎಸ್.ವಿ ರಂಗಣ್ಣನವರ ಕಾಲದಿಂದಲೂ ಇದು ವಿಭಾಗದ ಸತ್ಸಂಪ್ರದಾಯವಾಗಿಯೇ ನಡೆಕೊಂಡು ಬಂದ ಕಲಾಪವಂತೆ. ಹಾಗೇ ಆ ವಾರದ ಕಲಾಪಕ್ಕೆ ವಿದ್ಯಾರ್ಥಿ ಕಾರ್ಯದರ್ಶಿ ಯಾರ್ಯಾರನ್ನೋ ಸಂಪರ್ಕಿಸಿ ಸೋತಿದ್ದರಂತೆ. ಅಯಾಚಿತವಾಗಿ ನಾನು ಸಿಕ್ಕಿಬಿದ್ದಿದ್ದೆ. ನಾನು ನೇರ ಕಲಿಕೆಗೆ ತಕ್ಕ ಅಧ್ಯಾಪನ ಸಂಶೋಧನ ನಡೆಸಲಿಲ್ಲವಾದರೂ ಒಲವಿನಿಂದ ಪುಸ್ತಕ ವ್ಯಾಪಾರಿ; ಸಾಹಿತ್ಯ ಪರಿಚಾರಕ. ಗೊಡ್ಡೆಮ್ಮೆ ಎಂದೇ ಪರಿಚಯಿಸಿಕೊಂಡರೂ ಸಣ್ಣ ಮಟ್ಟಿನ ಲೇಖಕ. ಮೇಲಿಂದ ಹವ್ಯಾಸಿ ಚಾರಣಿಗ, ಪರಿಸರಪ್ರಿಯ ಎಂದದ್ದೆಲ್ಲಾ ಮಹದೇವ್ ಅವರಿಗೆ ಗುಣಾತ್ಮಕವಾಗಿಯೇ ಕೇಳಿಸಿದ ತಪ್ಪಿಗೆ ಆತ್ಮಕಥನ ನಡೆಸಲೇಬೇಕಾಯ್ತು!

ನಾಲ್ಕೈದು ಅಧ್ಯಾಪಕರು, ಎರಡೂ ವರ್ಷಗಳಿಂದ ಕೂಡಿ ಐವತ್ತಕ್ಕೂ ಮಿಕ್ಕ ‘ಕುತೂಹಲಗಳು ಅಂದು ನನ್ನ ಲಕ್ಷ್ಯ. ವಿಭಾಗದ ಏಕೈಕ ವಿದೇಶೀಮೂಲದ ವಿದ್ಯಾರ್ಥಿಯೊಬ್ಬ ನನಗೆ ‘ಪ್ರೊಫೆಸರ್ ಪದವಿಯನ್ನೇ ಕೊಟ್ಟು ಸಭೆಗೆ ಪರಿಚಯಿಸಿದ! ಅವನನ್ನುಳಿದು ಉಳಿದೆಲ್ಲ ವಿದ್ಯಾರ್ಥಿಗಳಿಗೂ ಕನ್ನಡ ಪರಿಚಿತವೇ ಆದ್ದರಿಂದ ನನ್ನ ಕನ್ನಡ ಲಹರಿಗೇನೂ ತಡೆಯುಂಟಾಗಲಿಲ್ಲ. ಔಪಚಾರಿಕ ಭಾಷಣಗಳಿಗೆ ದೂರನಾದ ನಾನು ಸ್ವಲ್ಪ ಮಾತಾಡಿ, ಪ್ರಶ್ನೋತ್ತರಗಳಲ್ಲಿ ನನ್ನ ತಿಳಿವನ್ನು ಹಂಚಿಕೊಳ್ಳುವ ಪ್ರಯತ್ನ ಸುಮಾರು ಒಂದೂವರೆ ಗಂಟೆಯುದ್ದಕ್ಕೆ ಮಾಡಿದೆ. ಅಲ್ಲಿನ ಮಾತಿನ ಅವ್ಯವಸ್ಥೆಯನ್ನು ಈಗ ಪರಿಷ್ಕರಿಸಿ ವಿಸ್ತೃತ ಓದುಗ ವೃಂದಕ್ಕೆ ಪ್ರಸ್ತುತಪಡಿಸುತ್ತಿದ್ದೇನೆ.

ಈ ನಲ್ವತ್ತು ವರ್ಷಗಳುದ್ದಕ್ಕೂ ನನ್ನನ್ನು ಹಲವರು ಕೇಳುವ ದೊಡ್ಡ ಪ್ರಶ್ನೆ, ನೀವು ಯಾಕೆ ಅಧ್ಯಾಪಕರಾಗಲಿಲ್ಲ? ನಾನು ಮಹಾರಾಜಾ ಕಾಲೇಜಿನಲ್ಲಿದ್ದಾಗಲೇ ಅಧ್ಯಾಪನ ವೃತ್ತಿಯಲ್ಲಿ ಜೊಳ್ಳಿನ ಬೆರಕೆ ತೀವ್ರವಾಗಿಯೇ ಶುರುವಾಗಿತ್ತು. (ಅಂದು ಬಹುತೇಕ ಅಧ್ಯಾಪಕರು ನಿಸ್ಸಂದೇಹವಾಗಿ ಒಳ್ಳೆಯವರೇ ಇದ್ದರು.) ನನ್ನ ಅನ್ಯ ಆಸಕ್ತಿಗಳ ಒಯ್ಲಿನಲ್ಲಿ ನಾನೂ ಮುಂದಿನ ಅನೇಕ ತಲೆಮಾರುಗಳಿಗೆ ಒಬ್ಬ ಕಳಪೆ ಅಧ್ಯಾಪಕನಾಗುವ ಅಪಾಯ ಕಂಡೆ. ಸಹಜವಾಗಿ ಶಿಕ್ಷಕ ವೃತ್ತಿ ನನಗಲ್ಲ ಎಂದು ನಿರ್ಧರಿಸಿದ್ದೆ. ನನ್ನ ತಂದೆ ಬಯಸಿ ಪಡೆದು, ಗೌರವ ಹೆಚ್ಚಿಸಿದ, ಅಧ್ಯಾಪನ ವೃತ್ತಿಗೆ ನಾನೂ ಶ್ರಮಿಸಬಹುದಿತ್ತಲ್ಲಾ ಎನ್ನುವುದಕ್ಕೆ ಸ್ವಲ್ಪ ನನ್ನ ವಿದ್ಯಾವಿಕಾಸವನ್ನು ಹೇಳುವುದು ಅನಿವಾರ್ಯ.

ಪ್ರಾಥಮಿಕ ತರಗತಿಗಳಲ್ಲಿ ನಾನು ಗಣಿತ ಮೇಷ್ಟ್ರ ಮಗನೆಂಬ ಖ್ಯಾತಿಯಲ್ಲೇ ಗಣಿತದಲ್ಲಿ ಅಂಕಗಳನ್ನು ನೂರಕ್ಕೆ ನೂರು ಪಡೆದು ಮೂಗು ಮೇಲೆತ್ತಿ ನಡೆದವ. ಆರು ಏಳನೇ ತರಗತಿಗಳಿಗಾಗುವಾಗ ಗಣಿತ ಪಾಠಗಳು ನನಗೆ ಯಾಕೋ ಜಿಡುಕಾಗತೊಡಗಿತ್ತು. ಆದರೆ ನನ್ನ ಲೆಕ್ಕಕ್ಕೆ ಗಣಿತ ಮೇಷ್ಟ್ರು (ಮಿಲಿಟರಿ ತರಬೇತಿಯನ್ನೂ ಪಡೆದವರಾದ್ದರಿಂದ?) ಮನೆಯಲ್ಲಿ ಶಿಸ್ತಿನ ಮೂರ್ತಿ ಮಾತ್ರ. ಮಡಿಕೇರಿ ಮನೆಯಲ್ಲಿ ಯಾವುದೋ ಲೆಕ್ಕ ಬಗೆಹರಿಸಿಕೊಳ್ಳಲು (ಐದನೇ ತರಗತಿಯಿದ್ದಿರಬೇಕು) ತಂದೆಯ ಬಳಿ ನಾನು ಪುಸ್ತಕ ಹಿಡಿದು ನಾನು ನಿಂತದ್ದು, ಅವರದನ್ನು ಬಾಯಿಲೆಕ್ಕದಲ್ಲಿ ಪರಿಹರಿಸಿದಾಗ ನನಗರ್ಥವಾಗಲಿಲ್ಲ ಎಂದದ್ದಕ್ಕೆ ನನ್ನದು ಅಶ್ರದ್ಧೆಯೆಂದೇ ಅಸಮಾಧಾನಗೊಂಡದ್ದು ಮನಸ್ಸಿನಲ್ಲಿ ಮಾಸದ ಚಿತ್ರವಾಗಿಯೇ ಉಳಿದಿದೆ. ಹಾಗಾಗಿಯೋ ಏನೋ ಪ್ರೌಢಶಾಲಾ ಹಂತದಲ್ಲಿ ಸಾಮಾನ್ಯರ ತಿಳುವಳಿಕೆಯಂತೆ ನಾನೂ ಗಣಿತ ಕಠಿಣ ಎನ್ನುವವರ ಸಾಲಿಗೇ ಸೇರಿಹೋಗಿದ್ದೆ. [ನಾನಿದನ್ನು ಆರೋಪದ ಧ್ವನಿಯಲ್ಲಿ ಹೇಳುತ್ತಿಲ್ಲ. ತಂದೆ ನಮ್ಮೂವರ ಆಯ್ಕಾ ಸ್ವಾತಂತ್ರ್ಯವನ್ನು ಎಂದೂ ನಿರ್ದೇಶಿಸಿದವರಲ್ಲ, ತಪ್ಪು ಹುಡುಕಿ ಬಂದವರೂ ಅಲ್ಲ. ನಾವು ಆಯ್ದುಕೊಂಡದ್ದನ್ನು ಸ್ವಂತ ಪರಿಶ್ರಮದಲ್ಲಿ ಸಾಧಿಸಬೇಕೆಂದು ಮಾತ್ರ ನಿರೀಕ್ಷಿಸಿದವರು. ಅಲ್ಲದೆ, ಅವರೇ ಆತ್ಮಕಥೆಯಲ್ಲಿ ಪರೋಕ್ಷವಾಗಿ ತಪ್ಪೊಪ್ಪಿಕೊಂಡಂತೆ, ನನ್ನ ಕಾಲಕ್ಕೆ ಅವರ ‘ಅಪ್ಪತನ ನನ್ನ ಪ್ರಾಯದಷ್ಟೇ ಎಳಸು; ವಿಕಸನದ ಸ್ಥಿತಿ. ಅದೇ ನನ್ನ ತಮ್ಮಂದಿರ ಕಾಲಕ್ಕಾಗುವಾಗ ತಂದೆ ಸುಮಾರು ಎರಡು ದಶಕಕ್ಕೂ ಮಿಕ್ಕು ಮಾಗಿದ್ದರು. ಆನಂದನಿಗೆ (ನನಗಿಂತ ಐದು ವರ್ಷಗಳಿಗೆ ಕಿರಿಯ. ಸದ್ಯ ಇವನು ಗಣಕತಂತ್ರಜ್ಞನಾಗಿ ಅಮೆರಿಕನಿವಾಸಿ) ಇಂಜಿನಿಯರಿಂಗ್, ಅನಂತನಿಗೆ (ನನಗಿಂತ ಏಳು ವರ್ಷಗಳಿಗೆ ಕಿರಿಯ. ಮೈಸೂರಿನಲ್ಲೇ ಸ್ವತಂತ್ರವಾಗಿ ಆಡಿಟರ್) ವಾಣಿಜ್ಯಶಾಸ್ತ್ರದ ಗಣಿತಭಾಗಗಳಲ್ಲಿ ಸಮಸ್ಯೆ ಬಂದಾಗ ತಂದೆ ಮನೆಯಲ್ಲೇ ಉದಾರವಾಗಿ ಹೇಳಿಕೊಟ್ಟರು. ಇನ್ನೂ ಸರಿಯಾಗಿ ಹೇಳುವುದಾದರೆ ಮನೆಯಲ್ಲೇ ಮಡಿಚುವ ಕರಿಹಲಗೆ ನೇತು ಹಾಕಿ, ತಮ್ಮಂದಿರೊಡನೆ ಅವರ ಆಸಕ್ತ ಮಿತ್ರರನ್ನೂ ಈ ಉಚಿತ ಸತ್ರಕ್ಕೆ ಸೇರಿಸಿ ಸಂಜೆ ನಿಗದಿತ ಅವಧಿಗಳಲ್ಲಿ ಮನೆಯನ್ನೇ ಪಾಠಶಾಲೆ ಮಾಡಿದ್ದರು. ನೆನಪಿರಲಿ: ಮೇಲು ಆದಾಯದ ಉಪವೃತ್ತಿಯಾಗಿ ಮನೆಪಾಠವನ್ನು ತಂದೆ ಎಂದೂ ನಡೆಸಿದವರಲ್ಲ; ಕಟುವಾಗಿ ನಿಂದಿಸಿದವರು!]

೧೯೬೦ರ ದಶಕದಲ್ಲಿ ಪ್ರೌಢಶಾಲೆಯ ಎರಡನೇ ವರ್ಷದಲ್ಲಿ, ಅಂದರೆ ಒಂಬತ್ತನೇ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಮೂರು ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳಬೇಕಿತ್ತು. ನಾನು ಯಾವ ವಿಶೇಷ ಅಂತಃಬೋಧೆ ಇಲ್ಲದಿದ್ದರೂ ನನ್ನ ತಿಳಿವಿನಂತೆ ಗಣಿತ ಕೋಟಲೆಗಳು ಬಾರದ ವೈದ್ಯವೃತ್ತಿಯ ಲಕ್ಷ್ಯ ಕಟ್ಟಿಕೊಂಡೆ; ಪೀಸೀಬೀ (ಭೌತ, ರಸಾಯನ ಹಾಗೂ ಜೀವ ವಿಜ್ಞಾನ) ನನ್ನ ಐಚ್ಛಿಕ ವಿಷಯಗಳು. ಎಸ್ಸೆಸ್ಸೆಲ್ಸಿಯಲ್ಲಿ ಭೌತಶಾಸ್ತ್ರದ ಗಣಿತದ ಹೊಸ್ತಿಲು ಕಾಲ್ತೊಡರಿದರೂ ಹೇಗೋ ಅತ್ತಬಿದ್ದೆ. ಪದವಿಪೂರ್ವ ಕಾಲೇಜಿಗೆ ಸೇರುವಾಗ ಭೌತಶಾಸ್ತ್ರವನ್ನೇ ಬಿಟ್ಟು, ಸೀಬೀಜೆಡ್‌ಗೆ (ರಸಾಯನ, ಸಸ್ಯ ಹಾಗೂ ಪ್ರಾಣಿ ವಿಜ್ಞಾನ) ಪಕ್ಷಾಂತರ ಮಾಡಿದೆ. ಅಲ್ಲಿ ರಸಾಯನಶಾಸ್ತ್ರದ ಲೆಕ್ಕಾಚಾರ ಪಟ್ಟು ಹಾಕಿತು, ಡುಮ್ಕಿ ಹೊಡೆದೆ; ಪಂಡಿತಪುತ್ರ! ಮರು ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಸ್ನಾತಕ ಓದಿಗೆ ಬಂದಾಗ ನನ್ನಲ್ಲಿ ‘ಗಣಿತವಿಲ್ಲದೆ ವಿಜ್ಞಾನವಿಲ್ಲ’ ಎಂಬ ಅರಿವು ಬೆಳೆದಿತ್ತು. ಹಾಗಾಗಿ ವೈದ್ಯನಾಗುವ ಆಸೆ ಬಿಟ್ಟು, ಬರೆಯುವ ಅಲ್ಪಸ್ವಲ್ಪ ಚಟಕ್ಕೆ ಪುಟ ಕೊಟ್ಟು, ಭಯಂಕರ ಪತ್ರಕರ್ತನಾಗಬೇಕೆಂಬ ಯೋಚನೆ ಬಂತು. ತಂದೆ ‘ದ ಹಿಂದೂ’ ಪತ್ರಿಕೆಯ ಭಕ್ತ. ಅಲ್ಲಿನ ಜಿ.ಕೆ ರೆಡ್ಡಿ, ಆರ್ಟ್ ಬುಷ್ವಾಲ್ಡ್ ಮುಂತಾದ ಲೇಖಕರ ಹೆಸರುಗಳನ್ನು, ಅವರ ಭಾಷಾ ಪ್ರೌಢಿಮೆಯನ್ನೂ (ಅನ್ಯರಲ್ಲಿ) ಹೊಗಳುತ್ತಿದ್ದದ್ದು ಕೇಳಿ ಉಭಯ ಭಾಷಾ ವಿಷಯಗಳನ್ನೇ (ಇಂಗ್ಲಿಷ್ ಮತ್ತು ಕನ್ನಡ) ಐಚ್ಛಿಕವಾಗಿ ತೆಗೆದುಕೊಂಡೆ. ನಾನು ಸೇರಿದ ಮಹಾರಾಜಾ ಕಾಲೇಜಿನಲ್ಲೇ ಪತ್ರಿಕೋದ್ಯಮ ಶಾಸ್ತ್ರವೇ ಇತ್ತೆಂದು ನನಗೆ ತಿಳಿಯುವಾಗ ತಡವಾಗಿತ್ತು. ಬಾಲ್ಯದಿಂದ ಮೈಗೂಡಿ ಪದವಿಪೂರ್ವ ತರಗತಿಯಿಂದ ಅಧಿಕೃತವಾಗಿ ಹಿಡಿದ ಎನ್ಸಿಸಿ ಚಟುವಟಿಕೆಗಳು, ವಾರಾಂತ್ಯ ಮತ್ತು ರಜಾದಿನಗಳಲ್ಲಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಕಲಾಪಗಳು ಗಾಢವಾಗಿ ಪ್ರಭಾವಿಸಿ, ಒಂದು ಹಂತದಲ್ಲಿ ಭಾರತೀಯ ಸೈನ್ಯದತ್ತ ಮುಖಮಾಡಿದ್ದೆ.

ಸ್ನಾತಕಪದವಿಯ ಪ್ರಥಮ ವರ್ಷದಲ್ಲಿರುವಾಗಲೇ ಸೈನ್ಯಾಧಿಕಾರಿಯ ಸವಲತ್ತು ಅನುಭವಿಸುತ್ತ ಓದು ಪೂರ್ಣಗೊಳಿಸಲು ಅವಕಾಶಕೊಡುವ ಓಟೀಯುಗೆ (ಆಫೀಸರ್ಸ್ ಟ್ರೈನಿಂಗ್ ಯೂನಿಟ್) ಮೈಸೂರು, ಬೆಂಗಳೂರು ಹಂತದ ಪರೀಕ್ಷೆಗಳಲ್ಲಿ ಉತ್ತಮ ಅಭ್ಯರ್ಥಿಯಾಗಿಯೇ ಮುಂದುವರಿದೆ. ಅಂತಿಮವಾಗಿ ಜಬ್ಬಲ್ ಪುರದ ಐದು ದಿನಗಳ ಕಟು ಪರೀಕ್ಷೆಯಲ್ಲಿ ಓಯೆಲ್ಕ್ಯೂ (ಆಫೀಸರ್ ಲೈಕ್ ಕ್ವಾಲಿಟಿ!) ಕಡಿಮೆಯೆನ್ನಿಸಿಕೊಂಡು ಸೋತೆ. ಸ್ನಾತಕ ಪದವಿಯ ಅಂತಿಮ ವರ್ಷಕ್ಕಾಗುವಾಗ ಐಪಿಎಸ್ ಮಾಡಿ ಪೋಲಿಸ್ ಅಧಿಕಾರಿಯಾದರೂ ಆಗುತ್ತೇನೆ ಎಂದು ಅರ್ಜಿ ಗುಜರಾಯಿಸಿ ರುಸುಮು ತುಂಬಿದ್ದೆ. ಪರೀಕ್ಷೆ ಬರೆಯುವ ಕಾಲಕ್ಕೆ ಭ್ರಮನಿರಸನ ಜೊತೆಗೆ, ಅನ್ಯ ಸ್ಪಷ್ಟಗುರಿಯನ್ನೂ ಕಂಡುಕೊಂಡಿದ್ದೆ! ಈ ಎಲ್ಲ ಹಂತದಲ್ಲೂ ತಾಪೇದಾರಿಯ, ಅಂದರೆ ಇನ್ನೊಬ್ಬರ ಮರ್ಜಿ ಅನುಸರಿಸುವ ಪಾರತಂತ್ರ್ಯದ ವೃತ್ತಿಯ ಕುರಿತು ತಿರಸ್ಕಾರ ಬೆಳೆಯುತ್ತಲೇ ಇತ್ತು. ಹಾಗಾಗಿ ವಿದ್ಯಾರ್ಥಿಜೀವನದ ಕೊನೆಯ ಹಂತದಲ್ಲಿ ನಾನು ಉದ್ದಕ್ಕೂ ಯೋಚಿಸದೇ ಇದ್ದ ಸ್ವೋದ್ಯೋಗ – ಪುಸ್ತಕ ಮಾರಾಟ, ಇದನ್ನೇ ಒಂದು ಸಾಹಸವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡೆ.

ಎನ್ಸಿಸಿ ಮತ್ತು ಪರ್ವತಾರೋಹಣಗಳಿಂದ ನನಗೆ ಸ್ಪರ್ಧಾರಹಿತ ಸಾಹಸ ಕ್ರೀಡೆಗಳಲ್ಲಿ ಸದಾ ಒಲವು ಹೆಚ್ಚಿತ್ತು. ಸಹಜವಾಗಿ ಪ್ರಥಮ ಎಂಎ ಪರೀಕ್ಷೆ ಮುಗಿದ ಮರುದಿನವೇ ಸೈಕಲ್ಲೇರಿ ಕರ್ನಾಟಕ ಪ್ರವಾಸ ನಡೆಸಬೇಕೆಂದು ಹೊಳಹು ಹಾಕಿದ್ದೆ. ಆದರೆ ಅದು ಮಾಗುವ ಮುನ್ನವೆ ನಮ್ಮ ಕುಟುಂಬ ಮಿತ್ರ, ಹಿರಿಯ ಕನ್ನಡ ಪ್ರಕಾಶಕ ಡಿ.ವಿ.ಕೆ ಮೂರ್ತಿಯವರು ಮುಂಬೈ ನೋಡು, ಕನ್ನಡ ಪುಸ್ತಕ ಮನೆಮನೆಗೆ ಮಾರು ಎಂದೊಂದು ಹೊಸ ಎರೆ ಕೊಟ್ಟರು.

ಊರು ತಿರುಗುವ ಹುಚ್ಚು ಸೇರಿ ನಾನು ಒಪ್ಪಿಕೊಂಡೆ. ಅಲ್ಲಿ ಅಪಾರ ಯಶಸ್ಸನ್ನೂ ಕಂಡೆ. ಅದರ ಮುಂದುವರಿಕೆಯಾಗಿ ಸ್ನಾತಕೋತ್ತರದ ಉಳಿದ ಓದಿನ ಉದ್ದಕ್ಕೂ ಆ ಕಾಲದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಅಂಚೆ ದ್ವಾರಾ ಪುಸ್ತಕ ವ್ಯಾಪಾರವನ್ನು ನಡೆಸಿದೆ. ಎಂಎ ಪರೀಕ್ಷೆ ಮುಗಿಯುತ್ತಿದ್ದಂತೆ ಐಪಿಎಸ್ ಪರೀಕ್ಷೆಯ ಸಿದ್ಧತೆಯನ್ನೂ ಕಡೆಗಣಿಸಿ (ಹಣ ಕಟ್ಟಿದ್ದ ತಪ್ಪಿಗೆ ಮೇ-ಜೂನ್ ತಿಂಗಳಲ್ಲೆಲ್ಲೋ ನಡೆದ ಪರೀಕ್ಷೆಗೆ ಹಾಜರಿ ಹಾಕಿದ್ದಷ್ಟೇ ಬಂತು) ೧೯೭೫ರ ಅಕ್ಟೋಬರಿನಲ್ಲಿ ಮಂಗಳೂರಿನ ಪುಸ್ತಕ ವ್ಯಾಪಾರಿಯೇ ಆಗಿಬಿಟ್ಟೆ!

ಬೀಯೇವರೆಗಿನ ನಿರೀಕ್ಷೆಗಳು ಸರಿ, ಇಂಗ್ಲಿಷ್ ಎಂಎಯೇ ಯಾಕೆ (ಕನ್ನಡ, ಪತ್ರಿಕೋದ್ಯಮಗಳನ್ನು ಆಯ್ದುಕೊಳ್ಳಬಹುದಿತ್ತಲ್ಲಾ? ನೇರ ವೃತ್ತಿರಂಗಕ್ಕೇ ಇಳಿಯಬಹುದಿತ್ತಲ್ಲಾ? ಎಂದಿತ್ಯಾದಿ), ಪ್ರಶ್ನಿಸಿಕೊಂಡರೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆ ಪ್ರಾಯದ ನನ್ನ ಮನೋಸ್ಥಿತಿ ಕಾರಣವಿರಬಹುದು. ಸೈಕಲ್ಲೇರಿ ಕೊಡಗು ದಿಗ್ವಿಜಯ ಮುಗಿಸಿ ಬಂದ ಹೊಸತರಲ್ಲೇ ಬೀಯೆ ಫಲಿತಾಂಶವೂ ಬಂದಿತ್ತು. ನನ್ನ ಬಹುತೇಕ ಸಹಪಾಠಿಗಳು ಅಥವಾ ‘ಮಂದೆ’ ಮಾನಸಗಂಗೋತ್ರಿಯತ್ತ ನಡೆದಿತ್ತು. ಈ ‘ಕುರಿ’ಯೂ ಇಂಗ್ಲಿಷ್, ಕನ್ನಡ ಸ್ನಾತಕೋತ್ತರ ತರಗತಿಗಳಿಗೆ ಯಾಂತ್ರಿಕವಾಗಿ ಅರ್ಜಿ ಗುಜರಾಯಿಸಿತು. ಮೊದಲು ಇಂಗ್ಲಿಷಿನಿಂದ ‘ಸೇರಿಕೋ’ ಕರೆ ಬಂತು. ಎರಡು ವಾರ ತಡವಾಗಿ ಕನ್ನಡದ ಕರೆ ಬರುವಾಗ ಕುರಿ ಇಂಗ್ಲಿಷ್ ರೊಪ್ಪಕ್ಕೆ ಬಿದ್ದಿತ್ತು, ಅಷ್ಟೆ!

ಮಾನಸಗಂಗೋತ್ರಿ ದಿನಗಳನ್ನು (ಎರಡು ವರ್ಷ) ನಾನು ತುಂಬ ಹಗುರವಾಗಿಯೇ ಪೂರೈಸಿದೆ. ಅದಕ್ಕೆ ಸಣ್ಣ ಕಾರಣ ಸುಲಭದಲ್ಲಿ ವಿಚಲಿತಗೊಳ್ಳದ ನನ್ನ ಮನೋಸ್ಥಿತಿ. ಮತ್ತೆ ಈಗ ನಲ್ವತ್ತು ವರ್ಷಗಳ ಅಂತರದಲ್ಲಿ ನಿಂತು ನಿರ್ಮಮವಾಗಿ ನೋಡುವಾಗ ಇನ್ನೂ ಕೆಲವು ಕಾರಣಗಳು ನನ್ನ ಮಟ್ಟಿಗೆ ಸ್ಪಷ್ಟವಾಗುತ್ತವೆ. ಇವು ಸಾರ್ವತ್ರಿಕ ಸತ್ಯವೆಂಬ ಹಠ (ಉಳಿದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ) ಖಂಡಿತ ನನ್ನದಲ್ಲ.

ಮೊದಲೇ ಹೇಳಿದಂತೆ ನನ್ನ ಲಕ್ಷ್ಯದಲ್ಲಿ ಅಧ್ಯಾಪನ ವೃತ್ತಿಯೇ ಇರಲಿಲ್ಲ. ದೈಹಿಕ ಹಾಜರಿಯೊಡನೆ ಎರಡು ವರ್ಷವನ್ನು ಇಲ್ಲಿ ಪೂರೈಸಿದವರನ್ನು ನಪಾಸು ಮಾಡುವುದಿಲ್ಲ ಎಂಬ ಅಘೋಷಿತ ಆದರೆ ಖಚಿತ ನಿಯಮ ನನ್ನ ಓದಿನ ಆಸಕ್ತಿಯನ್ನು ಮೊದಲು ಕುಗ್ಗಿಸಿತು. ಯಾವುದೇ ಪಠ್ಯದ ಓದಿಗೆ ಪರಿಣಾಮಕಾರಿ ಪ್ರವೇಶ, ಉತ್ತೇಜನ ಒದಗಿಸುವ ಅಧ್ಯಾಪಕರು ಕಡಿಮೆಯಿದ್ದರು. ತರಗತಿಯ ವ್ಯಾಖ್ಯಾನಗಳನ್ನು ಕೇಳುತ್ತ ಮುಂದೆಂದೋ ಬರಬಹುದಾದ ಪರೀಕ್ಷೆಗಾಗಿ ಟಿಪ್ಪಣಿಗಳನ್ನು ಮಾಡುವುದಾಗಲೀ ನೀರಸ ಉಲ್ಲೇಖಗಳ ಸುಳುಹು ಹಿಡಿದು ಗ್ರಂಥಾಲಯದಲ್ಲಿ ದಿನಗಟ್ಟಳೆ ಕುಳಿತು ನಕಲು ಮಾಡುವುದಾಗಲೀ ನನಗೆ ಹಿಡಿಸಲೇ ಇಲ್ಲ. ಸಹಪಾಠಿಗಳು ಭಾರೀ ಶ್ರಮದಿಂದ ತಯಾರಿಸುತ್ತಿದ್ದ, ತರಗತಿ ಅಥವಾ ವಾರದ ಸಾಹಿತ್ಯ ಕೂಟಗಳಲ್ಲಿ ಮಂಡಿಸುತ್ತಿದ್ದ ಪ್ರಬಂಧಗಳನ್ನು ನೋಡಿದಾಗ ಅದರಲ್ಲಿ ಪೂರಕವಾಗಿ ಸೇರುತ್ತಿದ್ದ ಅವರಿವರ ನೂರೆಂಟು ಉಲ್ಲೇಖಗಳು (ಆಕರ ಗ್ರಂಥಗಳ ಪಟ್ಟಿ) ನನಗೆಂದೂ ಜೀರ್ಣವಾಗಲೇ ಇಲ್ಲ. ಸ್ನಾತಕೋತ್ತರ ಗ್ರಂಥಾಲಯದ ಕನ್ನಡ ಭಾಷೆಯ ಅದರಲ್ಲೂ ಮುಖ್ಯವಾಗಿ ಕಾದಂಬರಿ ವಿಭಾಗದಲ್ಲಿ ಮತ್ತು ಸಾಮಾನ್ಯ ಇಂಗ್ಲಿಷ್‌ನಲ್ಲಿ ಮೃಗಯಾ ಸಾಹಿತ್ಯ, ಪರ್ವತಾರೋಹಣ ಮತ್ತು ಸಂಬಂಧಿಸಿದ ಸಾಹಸೀ ವಿಭಾಗಗಳ ಪುಸ್ತಕಗಳನ್ನಷ್ಟೇ ನಾನು ಹುಡುಕಿ ಓದುತ್ತಿದ್ದೆ.

ಅಧ್ಯಾಪಕರುಗಳು ಆಗೀಗ ನಮ್ಮಿಂದ ಕೆಲವು ವಿಷಯಗಳ ಮೇಲೆ ಪ್ರಬಂಧಗಳನ್ನು ಕೇಳುವುದಿತ್ತು. ಅಲ್ಲೆಲ್ಲಾ ನಾನು ಉಡಾಫೆ ಹೊಡೆದದ್ದೇ ಹೆಚ್ಚು. ಇಂಥಾ ಸನ್ನಿವೇಶದಲ್ಲೊಮ್ಮೆ, ತನ್ನ ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರುತ್ತಿದ್ದ ಬಿ. ದಾಮೋದರ ರಾವ್ ನನ್ನನ್ನು ಅವರ ಕೋಣೆಗೆ ಕರೆಸಿಕೊಂಡರು. “ನೀವು ಏನೂ ಪ್ರಬಂಧ ಕೊಟ್ಟಿಲ್ಲ. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನಕ್ಕೆ ನಮಗೇನಾದರೂ ಆಧಾರ ಬೇಕಲ್ಲ. ಏನಾದರೂ ಬರೆದು ಕೊಡಿ” ಎಂದು ಅವರು ಕೇಳಿಕೊಂಡ ಪರಿ ನಾನೆಂದೂ ಮರೆಯಲಾರೆ. ಆಗ ಯಾವುದೇ ಇತರ ವಿಮರ್ಶಕರನ್ನು (ನೋಡಿದರಲ್ಲವೇ) ಉಲ್ಲೇಖಿಸದೆ, ಬಹುಶಃ ಮುಲ್ಕ್‌ರಾಜ್ ಆನಂದರ ಅನ್‌ಟಚಬಲ್ ಕಾದಂಬರಿಯ ಮೇಲೆ ಮೂರೋ ನಾಲ್ಕೋ ಪುಟ ಪ್ರಬಂಧರೂಪದಲ್ಲಿ ನಾನೇನೋ ಬರೆದುಕೊಟ್ಟಿದ್ದೆ! (ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಘಟನೆ ಅಣ್ಣಯ್ಯಗೌಡರದ್ದು ಮುಂದೆ ಹೇಳುತ್ತೇನೆ.) ಎಲ್ಲೋ ಯಾರೋ ಹೇಳಿದ ಮಾತು ನೆನಪಾಗುತ್ತದೆ – “ನನಗೆ ಗುರುತ್ವವನ್ನು ಕೊಟ್ಟ ಶಿಷ್ಯನೇ ನಿನಗೆ ನಮನ.” ನನ್ನ ಮಟ್ಟಿಗೆ ಈ ಮಾತನ್ನು ನಡವಳಿಕೆಯಲ್ಲಿ ತೋರಿಸಿಕೊಟ್ಟ ಏಕೈಕ ವ್ಯಕ್ತಿ – ಬಿ. ದಾಮೋದರ ರಾವ್.

ನಾನು ಸಾಹಿತ್ಯ ಎಂಎಗೆ ಸೇರಿದ್ದಕ್ಕೆ ಸಾಕ್ಷಿಯಾಗಿ ಮಾರುಕಟ್ಟೆಯಲ್ಲಿ ಲಭ್ಯ ಎಲ್ಲ ಪಠ್ಯಗಳನ್ನು ಕೊಳ್ಳುತ್ತಿದ್ದೆ. ಆದರೆ ಅವು ನನ್ನ ಪರೀಕ್ಷೆಗೆ ಸಾಧನಗಳೆಂಬ ಗ್ರಹಿಕೆಯೇ ನನ್ನಲ್ಲಿ ಒಗ್ಗದಿಕೆ ಮೂಡಿಸಿದ್ದಕ್ಕೋ ಏನೋ ನಾನು ಹೆಚ್ಚಿನವನ್ನು ಪುಟ ತಿರುಗಿಸಿಯೂ ನೋಡಲಿಲ್ಲ! ಅದರಲ್ಲಿನ ಬಹುಶಃ ಎಲ್ಲಾ ಕಾದಂಬರಿಗಳನ್ನು ನನ್ನ ತಮ್ಮ ಆನಂದ ಬರಿಯ ಓದಿನ ಸಂತೋಷಕ್ಕಾಗಿ ಓದಿ ಮುಗಿಸಿದ್ದ. (ಅದರಿಂದ ಅವನೇ ಒಂದು ಸೂತ್ರವನ್ನೂ ಹೇಳುತ್ತಿದ್ದ: ಯಾವುದೇ ಪುಸ್ತಕವನ್ನು ಕೊಲ್ಲಬೇಕೆಂದರೆ ಅದನ್ನು ಪಠ್ಯ ಮಾಡಿ!) ನನ್ನ ಓದಿನ ನಿರಾಸಕ್ತಿಯ ವಿಚಾರವಾಗಿ ಸಿಡಿಎನ್ (ವಿಭಾಗ ಮುಖ್ಯಸ್ಥ, ಸಿ.ಡಿ. ನರಸಿಂಹಯ್ಯ) ತರಗತಿಯ ಘಟನೆಯೊಂದು ನೆನಪಾಗುತ್ತದೆ. ಅವರೊಮ್ಮೆ ನಮ್ಮ ಐಚ್ಛಿಕ ವಿಭಾಗದಲ್ಲಿ (ಎರಡಿದ್ದವು. ನಮ್ಮದು ಕಾಮನ್‌ವೆಲ್ತ್ ಲಿಟರೇಚರ್ – ಅಲ್ಪ ಸಂಖ್ಯಾತರ ಬಳಗ. ಇನ್ನೊಂದು ಯುರೋಪಿಯನ್ ಕ್ಲಾಸಿಕ್ಸ್) ಯಾವುದೋ ಕಾದಂಬರಿಯನ್ನು ಓದಿ ಸಜ್ಜಾಗಲು ವಾರದ ಮುನ್ಸೂಚನೆ ಕೊಟ್ಟಿದ್ದರು.

ನಾವು ತರಗತಿಯಲ್ಲಿ ಆರೇಳು ಮಂದಿಯಿದ್ದಿರಬೇಕು. ಅಂದು ಪಾಠ ಶುರು ಮಾಡುವ ಮೊದಲು ಅನಿರೀಕ್ಷಿತವಾಗಿ ಪ್ರತಿಯೊಬ್ಬರನ್ನು ಪಠ್ಯ ಓದಿದ್ದೀರಾ ಎಂದು ಪ್ರಶ್ನಿಸತೊಡಗಿದರು. ನನ್ನ ನೆನಪು ಸರಿಯಾದರೆ, ನಾನೊಬ್ಬನೇ ಇಲ್ಲ ಎಂದವನು. ಅವರು ಸಹಾನುಭೂತಿಪರವಾಗಿ ಯಾಕೆ ಎಂದು ವಿಚಾರಿಸಿದರು. ನಾನು ಮುಜುಗರದಲ್ಲೇ ಆಸಕ್ತಿ ಕುದುರಲಿಲ್ಲ, ಪುಟ ಮುಂದುವರಿದಂತೆ ಹಿಂದಿನದು ಮರವೆಗೆ ಸಲ್ಲುತ್ತಿತ್ತು ಎಂದೆ. ನನ್ನ ಪ್ರಾಮಾಣಿಕತೆಯನ್ನು ಮೆಚ್ಚಿದರೋ ಆತ್ಮಾವಲೋಕನ ಮಾಡಿಕೊಂಡರೋ ನಾ ಹೇಳಲಾರೆ. ಆದರೆ ಒಂದಿಷ್ಟೂ ಕೆರಳದೆ ಹೊಸ ಪುಸ್ತಕವನ್ನು ಪಳಗಿಸುವ ಕೆಲವು ಕಿವಿಮಾತುಗಳನ್ನು ಎಲ್ಲರನ್ನೂ ಉದ್ದೇಶಿಸಿಯೆ ಹೇಳಿದ್ದರು. ಈ ಪರಸ್ಪರ ತಿಳಿದು ನಡೆಯುವ ಧೈರ್ಯವೋ ಕಾಳಜಿಯೋ ಬಹುತೇಕ ಅಧ್ಯಾಪಕರಲ್ಲಿರಲೇ ಇಲ್ಲ. ಆ ಲೆಕ್ಕದಲ್ಲಿ ನಾನು ಇಂದಿಗೂ ಕೃತಜ್ಞತಾಪೂರ್ವಕವಾಗಿ ನೆನೆಯುವುದು ಪ್ರಥಮ ವರ್ಷದಲ್ಲಿ ಮಾತ್ರ ಸಿಕ್ಕ ಎ.ಕೆ.ಚಂದಾ (ಬಂಗಾಳಿ ಮೂಲದವರು) ಮತ್ತು ಎರಡೂ ವರ್ಷ ಸಿಕ್ಕಿದ ಬಿ. ದಾಮೋದರ ರಾವ್. (ಮಹಾಭಾರತದಲ್ಲಿ ನೆನೆಯುವುದಿದ್ದರೆ ಕರ್ಣನೊಬ್ಬನೇ, ಬೇರಾರನ್ನೂ ಅಲ್ಲ ಎನ್ನುವ ರೀತಿ!)

ಆಂತರಿಕ ಮೌಲ್ಯ ಮಾಪನಕ್ಕೆಂದೇ ಅಣ್ಣಯ್ಯ ಗೌಡರು ಒಮ್ಮೆ ಎಲ್ಲರಿಗೂ ಶೇಕ್ಸ್ ಪಿಯರನ ಮೇಲೆ ಏನೋ ಒಂದು ಬರೆದು ಕೊಡಲು ತಿಳಿಸಿದ್ದರು. ಅನಂತರ ತರಗತಿ ಮುಗಿದು ಹೋಗುವಾಗ ನನ್ನನ್ನಷ್ಟೇ ಉದ್ದೇಶಿಸಿ, ಬಿಡುವಿನಲ್ಲಿ ಅವರನ್ನು ಕಾಣಲು ಸೂಚಿಸಿದರು. ಬಿಡುವಾದಾಗ ಅವರ ಕೊಠಡಿಗೆ ಹೋದೆ. ಅವರ ವಿದ್ವತ್ತು, ನಡವಳಿಕೆ ಬಗ್ಗೆ ನಮ್ಮಲ್ಲಿ ಬಹುಮಂದಿಗೆ ಆದರವಿರಲಿಲ್ಲ. ಅವರು ‘ಶೇಕ್ಸ್ಪಿಯರಿನ್ ಸ್ಕಾಲರ್’ ಎಂದೇ (ಅಧಿಕೃತ ವಲಯಗಳಲ್ಲಿ) ಖ್ಯಾತರಾಗಿದ್ದರೂ ತರಗತಿಯಲ್ಲಿ ಅವರು ಶೇಕ್ಸ್ಪಿಯರ್ ನಾಡಿನ ವೈಯಕ್ತಿಕ ಭೇಟಿಯ ಅನುಪಯುಕ್ತ ಉಲ್ಲೇಖಗಳಿಗಷ್ಟೇ ಹೆಸರುವಾಸಿಯಾಗಿದ್ದರು. ಅವರ ವೇಷಭೂಷಣ, ಮಾತಿನ ವರಿಸೆಗಳೆಲ್ಲ ನಿಜವ್ಯಕ್ತಿಯನ್ನು ಮರೆಮಾಡುವ ಸಾಧನಗಳಾಗಿಯೇ ಕಾಣುತ್ತಿದ್ದದ್ದಕ್ಕೋ ಏನೋ ವಿದ್ಯಾರ್ಥಿ ವಲಯದಲ್ಲಿ ಅವರ ಕುರಿತು ಗೌರವಕ್ಕಿಂಥ ನಗೆಚಾಟಿಕೆಗಳೇ ಜಾಸ್ತಿಯಿತ್ತು. (ಒಂದು ಉದಾಹರಣೆ: ಅವರು ಕೋಣೆಯೊಳಗಿದ್ದರೂ ಬಾಗಿಲು ಯಾವತ್ತೂ ಮರೆ ಮಾಡಿಕೊಳ್ಳುತ್ತಿದ್ದರು. ಬಾಗಿಲ ಮೇಲೆ ‘ನಾಕ್ ಅಂಡ್ ಎಂಟರ್’ ಎಂದೊಂದು ಫಲಕ ಇರುತ್ತಿತ್ತು. ಪ್ರೊಫೆಸರರ ಬಗ್ಗೆ ‘ಪ್ರೀತಿ’ ಹೆಚ್ಚಾದವರೆಲ್ಲ ಆ ಫಲಕವನ್ನು ‘ಎಂಟರ್ ಅಂಡ್ ನಾಕ್’ ಎಂದೇ ಓದಿ ತೃಪ್ತರಾಗುತ್ತಿದ್ದರು!

ಅದೇನೇ ಇರಲಿ, ಆ ಮಧ್ಯಾಹ್ನ ನಾನವರ ಬಾಗಿಲನ್ನು ನಾಕ್ ಮಾಡಿಯೇ ಎಂಟ್ರಿ ಕೊಟ್ಟೆ. ಆಶ್ಚರ್ಯಕರವಾಗಿ ಹಸನ್ಮುಖಿಗಳಾಗಿ “ಐ ಸೇ ಸಿಟ್ ಡವ್ನ್” ಎಂದರು.
“ಕುವೆಂಪು ಕಾದಂಬರಿಗಳನ್ನು ಓದಿದ್ದೀರೇನ್ರೀ” ಎಂದು ವಿಚಾರಿಸಿದರು. ಬಹುಶಃ ಗ್ರಂಥಾಲಯದಲ್ಲಿ ನನ್ನ ಕನ್ನಡ ವಿಭಾಗದ ಚಟುವಟಿಕೆಯನ್ನು ಅವರು ಸರಿಯಾಗಿಯೇ ಗಮನಿಸಿದ್ದಿರಬೇಕು.
“ಹೌದು” ಎಂದೆ.
“ಅವುಗಳ ಕುರಿತು ವಿಮರ್ಶಾ ಟಿಪ್ಪಣಿಗಳನ್ನು ಮಾಡಿರಬೇಕಲ್ಲಾ? ತಂದು ಕೊಡಿ” ಆದೇಶ ಕೊಟ್ಟರು.
“ಹಿಂದೆ ಓದಿದ್ದು, ಟಿಪ್ಪಣಿ ಮಾಡಿಲ್ಲ, ಈಗ ನೆನಪಿಲ್ಲ…” ಎಂದೆಲ್ಲ ಜಾರಿಕೊಳ್ಳಲು ದಾರಿ ಹುಡುಕುತ್ತ ಬಂದೆ.
“ಒಂದು ವಾರ ಅವಕಾಶ ಮಾಡಿಕೊಂಡು ಹೊಸದಾಗಿ ನೋಡಿ, ಮಾಡಿಕೊಡ್ರಿ” ಎಂದರು.
“ನನ್ನಲ್ಲಿ ಪುಸ್ತಕವಿಲ್ಲ ಸಾರ್.”
“ಹೋಗ್ರೀ ಪಾಟೀಲ್ (ಮುಖ್ಯ ಗ್ರಂಥಪಾಲ) ಕೇಳ್ರೀ ನಾನೇಳಿದ್ದೂಂತ ಹೇಳ್ರಿ.”
ಪ್ರಬಂಧ ಬರೆಯುವುದನ್ನು ತಪ್ಪಿಸುವುದರಲ್ಲಿ ಬುದ್ಧಿವಂತನಾದ ನಾನು ಹೊಸ ಪಟ್ಟು ಹಾಕಿದೆ “ನಿಮ್ಮದೇ ಶೇಕ್ಸ್ಪಿಯರ್ ಅಸೈನ್ಮೆಂಟ್ ಉಂಟಲ್ಲಾ ಸಾರ್.”
“ಅದ್ ಬಿಟ್ ಇದ್ ಮಾಡೋಗ್ರೀ” ಗುಡುಗಿದರು. ಗೋಣಾಡಿಸಿ ಬಂದವನು ಎರಡನ್ನೂ ಮರೆತು ಆರಾಮವಾಗಿದ್ದೆ. ಹತ್ತು ದಿನಗಳ ಮೇಲೆ ನನಗೆ ಪುನಃ ಬುಲಾವ್ ಬಂತು, ಹೋದೆ.
“ಕುವೆಂಪು ಎಲ್ರೀ?” ಹಕ್ಕಿನ ಪ್ರಶ್ನೆ ಇದ್ದ ಹಾಗಿತ್ತು.
ತಲೆಯೊಳಗೇ ‘ವಾಣೀವಿಲಾಸಪುರಂ’ ಎಂದು ಉತ್ತರ ಸಟ್ಟಂತ ಮೊಳೆತರೂ ಮೆಟ್ಟಿದೆ. “ಲೈಬ್ರೆರಿಯಲ್ಲಿ ಎರಡು ಇಶ್ಯೂ ಆಗಿದೆಯಂತೆ, ಸಿಕ್ಲಿಲ್ಲ ಸಾರ್” ರೈಲು ಬಿಟ್ಟೆ.
“ಸ್ಟುಪಿಡ್! ಸರ್ಯಾಗಿ ಒಂದ್ ಕೆಲ್ಸಾ ಮಾಡಕ್ ಬರಲ್ಲಾ, ಗೆಡೌಟ್” ಎಂದರು. ಒಳಗೊಳಗೆ ನಗುತ್ತಾ ಶೇಕ್ಸ್ಪಿಯರ್ ಅಸೈನ್ಮೆಂಟೂ ತಪ್ಪಿದ್ದಕ್ಕೆ ಸಂತೋಷಪಡುತ್ತಾ ಬಂದೆ. ಕೆಲವು ತಿಂಗಳ ಬಳಿಕ ನಮ್ಮನೆಯಲ್ಲಿ ಹೊಸದಾಗಿ ಬಿಡುಗಡೆಗೊಂಡ ಕುವೆಂಪು ಅಭಿನಂದನ ಗ್ರಂಥ ಕಂಡಾಗ, ಪುಟ ಮಗುಚುತ್ತಾ ಹೋದೆ. (ಬಹುಶಃ ಸಹ್ಯಾದ್ರಿ ಇರಬೇಕು. ನನ್ನ ತಂದೆಯ ಲೇಖನ – ರಾಮಾಯಣ ದರ್ಶನಂನಲ್ಲಿ ಬಂದ ವೈಜ್ಞಾನಿಕ ಅಂಶ, ಇತ್ತು. ಈ ಲೇಖನ ಅನಂತರ ತಂದೆಯದೇ ‘ಕುವೆಂಪು ದರ್ಶನ ಸಂದರ್ಶನ’ ಸಂಕಲನದಲ್ಲೂ ಸೇರಿದೆ. ಸದ್ಯ ಮುದ್ರಣದಲ್ಲಿಲ್ಲ.) ಕುವೆಂಪು ಅವರ ಯಾವುದೋ ಬರಹದ ಮೇಲೆ ಅಣ್ಣಯ್ಯ ಗೌಡರ ಹೆಸರಿನಲ್ಲಿ ವಿದ್ವತ್ಪೂರ್ಣ ಲೇಖನ ಅದರಲ್ಲಿತ್ತು! (ಅದನ್ನು ನಿಜವಾಗಿ ಯಾರು ಬರೆದಿರಬಹುದೆಂದು ನನಗಿಂದಿಗೂ ತಿಳಿದಿಲ್ಲ!!)

ನನ್ನ ವ್ಯಾಪಾರೀ ದಿನಗಳಲ್ಲಿ ‘ಸೀತಾಯಣ ಖ್ಯಾತಿಯಿಂದ ಪೋಲಂಕಿ ಎಂದೇ ಪ್ರಸಿದ್ಧರಾದ ಪಿ. ರಾಮಮೂರ್ತಿ ನನಗೆ ಎರಡೂ ವರ್ಷಗಳಲ್ಲಿ ಪಾಠಕ್ಕಿದ್ದರು. ಅವರ ಉಚ್ಚಾರಣಾ ವೈಖರಿ, ತರಗತಿಯೊಳಗಿನ ಓಡಾಟದಲ್ಲಿನ ಬಾಗುಬಳಕುಗಳ ವಿಚಿತ್ರವಷ್ಟೇ ಇಂದು ನನ್ನ ನೆನಪಿನಲ್ಲುಳಿದಿದೆ. ನಾನು ಕೆಲವು ತಿಂಗಳ ಹಿಂದೆ ಇಲ್ಲೇ ಮಹಾರಾಜಾ ಕಾಲೇಜಿನ ನೆನಪುಗಳನ್ನು ದಾಖಲಿಸಿದ್ದನ್ನು ನೀವು ಗಮನಿಸಿದ್ದೀರಿ. ಆ ಹೊಸತರಲ್ಲೇ ನನ್ನೊಬ್ಬ ಸಹಪಾಠಿ ಲತಾ ಬಿಡ್ಡಪ್ಪ ಅಲ್ಲಿ ತನ್ನ ವೃತ್ತಿ ಜೀವನ ಮುಗಿಸಿ ನಿವೃತ್ತರಾದರೆಂದು ತಿಳಿಯಿತು. ಆಗ ಅವರಿಗೆ ನಾನು ಸಾಂದರ್ಭಿಕವಾಗಿ ಬರೆದ ಪತ್ರದಲ್ಲಿ ರಾಮಮೂರ್ತಿಯವರ ಸಂಬೋಧನಾ ಶೈಲಿಯನ್ನೇ ತಮಾಷೆಗಾಗಿ ಅನುಕರಿಸಿದ್ದೆ “ಲ್ಲತ್ಃಅ ಬಿಡ್ಡಪ್ಃಅ!”

ಯು.ಆರ್. ಅನಂತಮೂರ್ತಿಯವರು ನಾನಿದ್ದ ಅವಧಿಯ ಉದ್ದಕ್ಕೂ ಯಾವುದೋ ಸಂಶೋಧನಾ ಸೌಲಭ್ಯದಲ್ಲಿ ರಜೆಯಲ್ಲಿದ್ದರು. ಬಹುಶಃ ಆ ಅವಧಿಯ ಪ್ರಮುಖ ಉತ್ಪನ್ನ ಭಾರತೀಪುರ ಕಾದಂಬರಿ. ತುಂಬಾ ಜನರು ಅವರ ಖ್ಯಾತಿಛತ್ರಿಯ ಅಡಿಯಲ್ಲಿ ನನ್ನನ್ನೂ ಇಟ್ಟು, ಅವರ ಶಿಷ್ಯನೆಂದು ನೆನೆದು ಗೌರವಿಸುವುದಿದೆ. ನಾನು ಸಹಜವಾಗಿ ನಿರಾಕರಿಸುವುದು ಇದ್ದದ್ದೇ.

Post Graduate Department of English – 1971-73 Batch & with the previous M.A. students of the Batch 1972 – 74, University of Mysore, Manasa Gangotri Campus

ಪಾಠಪಟ್ಟಿಯ ಓದು, ಸಾಂಪ್ರದಾಯಿಕವಾಗಿ ಬುಧವಾರದ್ದೋ ಇನ್ನು ಕೆಲವೇ ‘ಗಂಭೀರ’ ಸಾಹಿತ್ಯದ್ದೋ ಕಲಾಪದಿಂದ ಹೊರಗೆ ನಮ್ಮ ಜ್ಞಾನವಿಸ್ತರಣೆಯ ಚಟುವಟಿಕೆ ಇಲಾಖೆಯಲ್ಲಿ ನಡೆದದ್ದು ನನ್ನ ನೆನಪಿನಲ್ಲಿಲ್ಲ. ಅಲ್ಲಿನ ಸುಮಾರು ಐವತ್ತರವತ್ತು ಮಂದಿಯ (ಎರಡು ವರ್ಷ ಸೇರಿ) ಪ್ರಥಮ ಆದ್ಯತೆ ಇಂಗ್ಲಿಷ್ ಸರಿ. ಆದರೆ ಮತ್ತಿನ ಎಲ್ಲಾ ವಿಚಾರಗಳಲ್ಲೂ ಐವತ್ತರವತ್ತು ವಿಭಿನ್ನ ಸ್ವರೂಪದವೇ ಸರಿ. ಆ ವೈವಿಧ್ಯದ ಪೋಷಣೆ ಪ್ರಥಮಾದ್ಯತೆಗೆ ಪೂರಕವಾಗಿರಬೇಕು ಎಂಬ ಕಲ್ಪನೆ ಸಾಧಾರಣವಾಗಿ ನಮ್ಮೆಲ್ಲ ಉನ್ನತ ವಿದ್ಯಾ ಕೇಂದ್ರಗಳ ಆಶಯಗಳಲ್ಲಿ ಮಾತ್ರ ಇರುತ್ತದೆ, ಅನುಷ್ಠಾನದಲ್ಲಿ ಅಲ್ಲ. ನಮ್ಮ ಇಂಗ್ಲಿಷ್ ವಿಭಾಗ ಅದಕ್ಕೆ ಹೊರತಲ್ಲ.

ಇಷ್ಟು ದೂರದ ನೆನಪಿನಲ್ಲೂ ನಾನು ಗಾಯತ್ರಿ, ತಾರಾ ಬೆಳ್ಯಪ್ಪ, ಶ್ರೀನಿವಾಸ್, ಹನುಮೇಗೌಡ ಮುಂತಾದ ಹಾಡುಗಾರರು, ಶರಣಪ್ಪನಂಥ ನಟನಾಚತುರ, ಅಶೋಕ ಕುಲಕರ್ಣಿಯಂಥ ಕನ್ನಡ ಸಾಹಿತ್ಯಾಸಕ್ತ, ರಾಮಮೂರ್ತಿಯಂಥ ಸಮಾಜಸೇವಕ, ನಿರ್ಮಲಾ ಪ್ಯಾಟ್ರಿಕ್ ಮತ್ತು ನನ್ನ ಪರ್ವತಾರೋಹಣದಂತೆ ಹಲವು ಕ್ರೀಡಾಸಕ್ತರನ್ನೆಲ್ಲಾ ಮನಸ್ಸಿನ ಪರದೆಯ ಮೇಲೆ ಕಾಣಬಲ್ಲೆ. ಆದರೆ ಆ ವರ್ಣವೈವಿಧ್ಯವನ್ನು ಅವಗಣಿಸಿ, ಪಾಠಪಟ್ಟಿಯ ಚೌಕಟ್ಟೊಂದನ್ನೇ ಅವಲಂಬಿಸಿದ ಎಂಎ ನನ್ನ ಲೆಕ್ಕಕ್ಕೆ ಬರಿಯ ಕಾಲಹರಣವಾಗಿ ಹೋಯ್ತು. ಏಕಬೆಳೆ ಎನ್ನುವ ಕಲ್ಪನೆ ಎಲ್ಲಿದ್ದರೂ ಪ್ರಕೃತಿವಿರೋಧಿ.

ಅಂತಿಮ ಎಂಎ ಲಿಖಿತ ಪರೀಕ್ಷಾನಂತರ ನನಗುಳಿದದ್ದು ಒಂದು ಲಕ್ಷ್ಯ, ಎರಡು ಕರ್ಮ! ಮಂಗಳೂರಿನಲ್ಲಿ ಪುಸ್ತಕದ ಅಂಗಡಿ ತೆರೆಯಲು ಬಾಡಿಗೆ ಕೋಣೆ ಹುಡುಕುವುದು ಮತ್ತು ಅಂಗಡಿಗೆ ಪೂರಕವಾಗಿ ದಕ ಜಿಲ್ಲೆಯೊಳಗೆ ವ್ಯಾಪಾರ ಸಂಬಂಧಗಳನ್ನು ಕುದುರಿಸುವುದು ಪರಮ ಲಕ್ಷ್ಯ. ಇಂಗ್ಲಿಷ್ ವಿಭಾಗದಿಂದ ಕರೆ ಬಂದಾಗ ಮೌಖಿಕ ಪರೀಕ್ಷೆಗೂ ಯೂಪಿಎಸ್ಸಿಯಿಂದ ಕರೆ ಬಂದಾಗ ಐಪಿಎಸ್ ಪರೀಕ್ಷೆಗೂ ಹಾಜರಾತಿ ಹಾಕುವುದು ಸಂಚಿತ ಖರ್ಮ! ಆ ಬಿಡುವಿನಲ್ಲಿ ಮಡಿಕೇರಿಯಿಂದ ಸುಬ್ರಹ್ಮಣ್ಯಕ್ಕೆ ಘಟ್ಟವಿಳಿಯುವ ದೀರ್ಘ ನಡಿಗೆ, ಕುಮಾರ ಪರ್ವತದ ಸಮೃದ್ಧ ಹವೆ, ಕುದುರೆಮುಖದ ಅನನ್ಯ ಹಸಿರಿನ ಹರಹುಗಳನ್ನೆಲ್ಲ ಅನುಭವದಲ್ಲಿ ನನ್ನದಾಗಿಸಿಕೊಂಡಿದ್ದೆ. ಮೌಖಿಕ ಪರೀಕ್ಷೆಯ ದಿನ ಬಂದಾಗ ಕೈಬೀಸಿಕೊಂಡೇ ವಿಭಾಗಕ್ಕೆ ಹೋಗಿದ್ದೆ. ಏನೇನೋ ಟಿಪ್ಪಣಿ, ಪುಸ್ತಕದಲ್ಲಿ ಕಳೆದುಹೋಗಿ ನಗೆಮಾಡಲೂ ಮರೆತುಹೋದ ಹಲವು ಸಹಪಾಠಿಗಳು ಓಣಿಯುದ್ದಕ್ಕೆ ಸಿಕ್ಕರು.

ವಿಭಾಗ ಮುಖ್ಯಸ್ಥರ ಕೊಠಡಿಯಿಂದ ಸರದಿಯಲ್ಲಿ ಕರೆ ಬಂದವರಿಗೆ ಪಿಸುನುಡಿಯ ಶುಭಾಶಯ ಕೊಡುವವರ, ಮುಗಿಸಿ ಹೊರಬರುವವರಲ್ಲಿ ‘ಹವಾಮಾನ’ ವಿಚಾರಣೆ ನಡೆಸುವವರ ಆತಂಕಗಳು ನನಗರ್ಥವೇ ಆಗಲಿಲ್ಲ. ಪರೀಕ್ಷೆ ಮುಗಿಸಿಕೊಂಡವರಲ್ಲಿ ವಿಜಯ ಸಾಧಿಸಿದ ಕಳೆಗಿಂತ ಕಳವಳದ ಕಾವಳವೇ ಹೆಚ್ಚಿದ್ದಂತಿತ್ತು. (ಒಂದಿಬ್ಬರು ಕಣ್ಣೀರಿಕ್ಕುತ್ತ ಬಾಲ್ಕನಿಯಿಂದ ಕೆಳಗೆ ಹಾರಿಬಿಡಬೇಕನ್ನಿಸುತ್ತೆ ಎಂಬರ್ಥದ ಮಾತಾಡಿದ್ದೂ ಸ್ಪಷ್ಟ ನೆನಪಿದೆ) ಸರದಿಯಲ್ಲಿ ನನಗೂ ಕರೆ ಬಂತು. ಮಹಾರಾಜಾ ಕಾಲೇಜಿನಲ್ಲಿ ನನಗಿದ್ದ ತೆಳು ಮೀಸೆ ಮಾನಸಗಂಗೋತ್ರಿಗಾಗುವಾಗ ಹುರಿಗಟ್ಟಿತ್ತು. ನಿರುಮ್ಮಳವಾಗಿಯೇ ಒಳಗೆ ಹೋಗಿದ್ದೆ. ಸಿಡಿಎನ್ ಮತ್ತು ಅಣ್ಣೇ ಗೌಡರು ವಿಭಾಗದವರೇ. ಹೊರಗಿನವರಾಗಿ ಬಂದವರು ಆಶ್ಚರ್ಯಕರವಾಗಿ ಮಹಾರಾಜಾದ (ಅಲ್ಲಿ ನನಗೆ ಪ್ರಿಯ ಗುರುಗಳೇ ಆಗಿದ್ದ) ಸಿಡಿ ಗೋವಿಂದರಾವ್. ಸಿಡಿಜಿ ನನ್ನನ್ನು ಕಂಡ ಕೂಡಲೇ ತುಂಟ ನಗು ಬೀರುತ್ತ ಉದ್ಗರಿಸಿದರು “ಪರವಾಗಿಲ್ಲ, ಸ್ನಾತಕೋತ್ತರ ವಿಭಾಗದಲ್ಲಿ ನಿನ್ನ ಮೀಸೆ ಹುರಿಗಟ್ಟಿಯೇ ಇದೆ!” (ವಿವಿನಿಲಯದ ರಾಜಕಾರಣದ ಹೊಲಸು ಸುಳಿಗಳಲ್ಲಿ ಪ್ರಖರ ವಿದ್ವಾಂಸರಾದ ಸಿಡಿಜಿ, ಎಸ್. ಅನಂತನಾರಾಯಣರಂಥವರು ಸ್ನಾತಕೋತ್ತರ ಕೇಂದ್ರವಿರಲಿ, ಮಹೋಪಾಧ್ಯಾಯ ಅರ್ಥಾತ್ ಪ್ರೊಫೆಸರ್ ಅಂತಸ್ತಿಗೂ ಏರದೇ ನಿವೃತ್ತಿ ಸಮೀಪಿಸುತ್ತಿದ್ದುದು ಸಾರ್ವಜನಿಕ ಗುಟ್ಟು) ನನ್ನ ಅರೆಬರೆ ಉತ್ತರ ಪತ್ರಿಕೆ ಪರೀಕ್ಷಕರ ಕೈಯಲ್ಲಿತ್ತು. ನನ್ನ ಎರಡು ವರ್ಷದ ಉಡಾಫೆಗಳೆಲ್ಲ (ತೋರಿಕೆಯ ಮಟ್ಟದಲ್ಲಿ ನಾನೆಂದೂ ಬಂಡಾಯಗಾರನಾಗಿರಲಿಲ್ಲ, ಅವಿಧೇಯತೆ ನನ್ನ ಜಾಯಮಾನದಲ್ಲೇ ಇರಲಿಲ್ಲ!) ಪ್ರೊಫೆಸರುಗಳಿಗೆ ತಿಳಿಯದ್ದೇನಲ್ಲ. ಆದರೆ ಅವರು ಪಾಠದ ಕುರಿತು ನನ್ನನ್ನು ಏನೂ ಕೇಳಲೇ ಇಲ್ಲ. ಬದಲು ನಗೆ ಮುಂದುವರಿಯುವಂತೆ ಇನ್ನೊಂದೆರಡು ಲಘು ಮಾತಾಡಿ ಕಳಿಸಿಕೊಟ್ಟಿದ್ದರು; ಜೀನು, ಕಡಿವಾಣ ನೆಚ್ಚದ ಕುದುರೆಯನ್ನು ಬಯಲಿಗಟ್ಟಿದಂತೆ! ಎರಡು ವರ್ಷದ ಉದ್ದಕ್ಕೆ ತಡೆಬೇಲಿಯೊಳಗೆ ಕೂಡಿ, ಬಾಲ ಮುರಿದು, ಪಕ್ಕೆ ತಿವಿದು ಕಂಬುಳಕ್ಕೆ ಇಳಿಸಿದ ಕೋಣನಂತೆ; ಜಲ್ಲಿಕಟ್ಟಿಗೆ ಬಿಟ್ಟ ಹೋರಿಯಂತೆ.

(ಮುಂದುವರಿಯಲಿದೆ)

[ಸ್ನಾತಕೋತ್ತರ ಓದಿನ ವೇಳೆ ನನಗೆ ಜೀವನಾಸಕ್ತಿ ಉಳಿಸಿದ ಪಠ್ಯೇತರ ಚಟುವಟಿಕೆಗಳ ಕುರಿತ ಇನ್ನೊಂದು ಕಂತನ್ನು ಇನ್ನೊಂದು ವಾರಕ್ಕೆ ಉಳಿಸಿದ್ದೇನೆ, ಕ್ಷಮೆಯಿರಲಿ. ಇಲ್ಲಿ ಬಳಸಿದ ಹಳಗಾಲದ ಚಿತ್ರಗಳಲ್ಲಿ ಗ್ರೂಪ್ ಫೋಟೋ ಕ್ರುಪೆ: ಗೆಳೆಯ ಎಸ್. ನಾಗನಾಥ್. ಉಳಿದೆಲ್ಲ ಚಿತ್ರಗಳು ನನ್ನ ಆ ಕಾಲದ ಆಲ್ಬಂನಿಂದ. ನನ್ನೆಲ್ಲ ಸಹಪಾಠಿಗಳು ಮತ್ತು ಇಂಗ್ಲಿಷ್ ವಿಭಾಗದ ಹಳೆಯ ವಿದ್ಯಾರ್ಥಿ ಮಿತ್ರರಿಂದ ವಿಸ್ತ್ರುತ ಪ್ರತಿಕ್ರಿಯಾ ಲೇಖನಗಳನ್ನೇ ಕಾಯುತ್ತಿರುತ್ತೇನೆ – ಮರೆಯಬೇಡಿ]