(ಕೊಡಗಿನ ಸುಮಗಳು – ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ – ಧಾರಾವಾಹಿಯಾಗುತ್ತಿರುವಲ್ಲಿ ಇದು… ಒಂಬತ್ತನೇ ಸಣ್ಣ ಕತೆ – ೧೯೫೨)

ಗುರುಬಸವನ ಮೇಲೆ ಪಣ್ಯ ಗ್ರಾಮನಿವಾಸಿಗಳಿಗೆಲ್ಲ ಅತುಲವಾದ ಭಕ್ತಿ ಗೌರವ. ಅವನ ನಿಜವಾದ ಹೆಸರು ಬಸವಯ್ಯ ಎಂದಿದ್ದರೂ ಗ್ರಾಮಸ್ಥರು ಅವನಲ್ಲಿ ತಮಗಿದ್ದ ಅಭಿಮಾನ ಮರ್ಯಾದೆಗಳ ಕುರುಹಾಗಿ ಅವನನ್ನು ಗುರುಬಸವಯ್ಯ ಎಂದು ಕರೆಯುತ್ತಿದ್ದರು. ಗುರುಬಸವಯ್ಯನು ಪಣ್ಯಗ್ರಾಮದಲ್ಲಿ ಗಣ್ಯ ವ್ಯಕ್ತಿಯಾಗಿದ್ದನು. ಅವನ ಅಖಂಡ ಏಕಾಂಗೀ ಜೀವನದಲ್ಲಿ ಗ್ರಾಮಸ್ಥರೆಲ್ಲರೂ, ಹಿರಿಯರು ಕಿರಿಯರು ಎನ್ನುವ ವ್ಯತ್ಯಾಸವಿಲ್ಲದೆ, ಅವನು ಬಂಧುಗಳಾಗಿದ್ದರು, ಬಳಗವಾಗಿದ್ದರು. ಅವನಿಗೆ ಮದುವೆಯಾಗಿದ್ದಿತೋ ಇಲ್ಲವೋ, ಅವನಿಗೆ ಆಪ್ತ ಬಂಧುಗಳು ಇರುವರೋ ಇಲ್ಲವೋ ಯಾರಿಗೂ ತಿಳಿದಿರಲಿಲ್ಲ. ಅಂದರೆ ಅವನು ಪಣ್ಯ ಗ್ರಾಮದಲ್ಲಿ ಹುಟ್ಟಿ ಬೆಳೆದವನಾಗಿರಲಿಲ್ಲ. ಏಕಾಂಗಿಯಾಗಿ ಶಿವಧ್ಯಾನದಿಂದ ಜಂಗಮರಂತೆ ದೇಶಪರ್ಯಟನ ಮಾಡುತ್ತಿದ್ದ ಅವನು ಅಲ್ಲಿ ಬಂದು ನೆಲಸಿದನು. ನೆಲಸಿದವನು ಎನ್ನುವುದಕ್ಕಿಂತಲೂ ಶಿವನು ಅವನನ್ನು ಅಲ್ಲಿಯೇ ಉಳಿಯುವಂತೆ ಪ್ರೇರಣೆಯಿತ್ತನು ಎನ್ನುವುದು ಹೆಚ್ಚು ವಾಸ್ತವಿಕವಾಗುವುದು.ಗುರುಬಸವನೇ ಒಂದು ಸಲ ಆ ಅನುಭವವನ್ನು ಹೇಳಿದ್ದನು, ಅವನು ಪರಮೇಶ್ವರನ ಧ್ಯಾನಾಸಕ್ತನಾಗಿ ದೇಶದ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ ಶಿವಶರಣರ ದರ್ಶನ ಸೇವೆಗಳಲ್ಲಿ ಆಯುಷ್ಯ ಸವೆಯುತ್ತಿದ್ದನು. ಮೈಸೂರು ಸಂಸ್ಥಾನದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಮುಂದೆ ಭಗವಂತನ ಪುತ್ರ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆ ಆಶೀರ್ವಾದ ಪಡೆಯಲೆಂದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಯಮಾಡಿಸಿದನು. ಅಲ್ಲಿಂದ ಮುಂದೆ ಘಟ್ಟವನ್ನೇರಿ ಕೊಡಗು ಸಂಸ್ಥಾನವನ್ನು ತಲಪಿದನು. ಈ ಪುಣ್ಯಭೂಮಿಯನ್ನು ಆಗ ದೊಡ್ಡ ವೀರರಾಜನು ಆಳುತ್ತಿದ್ದನು. ರಾಜಕುಲ ಶಿವಭಕ್ತರ ಪಂಗಡವಾಗಿದ್ದಿತು. ಶಂಕರ ಕಿಂಕರರು ಯಾರೂ ಕೊಡಗು ದೇಶಕ್ಕೆ ಬರದೇ ರಾಜದರ್ಶನ ಮಾಡದೇ ಹೋಗುತ್ತಿರಲಿಲ್ಲ. ಹಾಗೆ ಬಸವಯ್ಯನು ಕೊಡಗು ದೇಶಕ್ಕೆ ಏರಿ ಬಂದನು, ಬರುತ್ತಿದ್ದಂತೆಯೇ – ರಾಜಧಾನಿ ಮಡಿಕೇರಿ ತಲುಪುವ ಮೊದಲೇ – ಬಸವಯ್ಯನನ್ನು ಅಧಿಕ ತೃಷ್ಣೆಯೂ ಹಸಿವೂ ಬಾಧಿಸಿದುವು. ನಿರಾಹಾರ, ಕಠಿಣ ಪ್ರಯಾಣದ ಆಯಾಸ. ಬೋಳು ಗುಡ್ಡೆಯ ಮೇಲೆ ಬೇಸಗೆಯ ಮಧ್ಯಾಹ್ನ ಕಾಲ ಅವನು ನಡೆಯುತ್ತಿದ್ದನು. ಮುಂದೆ ಒಂದು ಹೆಜ್ಜೆಯನ್ನೂ ಇಡಲಾಗಲಿಲ್ಲ.

ಶಿವನೇ! ಈ ದೀನನ ಸೇವೆ ಸಾಕಾಯಿತೇ ನಿನಗೆ? ಎಂದು ಮೊರೆಯಿಟ್ಟನು. ಹಾಗೆಯೇ ಅಲ್ಲಿಯೇ ನೆಲದ ಮೇಲೆ ಕುಳಿತು ಬಸವಳಿದು ಮಲಗಿದನು.
ಬಸವಯ್ಯನಿಗೆ ಕನಸು. ಸುಂದರ ಸುಖಕರ ಮಂಗಳ ಸ್ವಪ್ನ. ಸಾಕ್ಷಾತ್ ಕೈಲಾಸಪತಿಯು ಜಟೆಯಿಂದ ಪ್ರವಹಿಸುವ ಗಂಗಾತೀರ್ಥವನ್ನು ತನ್ನ ಬೊಗಸೆಯಿಂದ ಬಸವಯ್ಯನ ಬಾಯಿಗೆ ಧಾರೆಯೆರೆಯುತ್ತಿದ್ದಾನೆ. ಭಕ್ತನಲ್ಲಿ ನವಶಕ್ತಿ ಉದಯಿಸಿತು. ಹರ್ಷಭಕ್ತಿಪುಳಕಿತನಾಗಿ ಪ್ರಭುವಿಗೆ ನಮಸ್ಕರಿಸುತ್ತಾನೆ. ಪಾದಧೂಳಿಯನ್ನು ತನ್ನ ಶಿರಸ್ಸಿನ ಮೇಲೆ ಹರಡಿಕೊಂಡು ಕಣ್ಣುಗಳಿಗೆ ಸ್ಪರ್ಶಿಸಿಕೊಳ್ಳುತ್ತಾನೆ.
ಭಕ್ತನೇ ! ನೀನಿನ್ನು ನನ್ನನ್ನು ಊರೂರಿನಲ್ಲಿ ಅಲೆದು ಅರಸಬೇಕಾಗಿಲ್ಲ. ಈ ಗ್ರಾಮದಲ್ಲಿಯೇ ನೆಲಸು. ಇಲ್ಲಿಯ ಸರಳ ಜನರ ಸೇವೆಯನ್ನು ನೀನು ಮಾಡು. ಅದೇ ನನ್ನ ಸೇವೆಯಾಗುವುದು ಎಂದು ಪರಶಿವನು ಹರಸಿದನು.
ಆನಂದೋತ್ಸಾಹವಿದ್ಯುತ್ಸಂಚಾರದಿಂದ ಬಸವಯ್ಯನಲ್ಲಿದ್ದ ಉಕ್ಕು ಆಯಸ್ಕಾಂತವಾಯಿತು. ಅವನಲ್ಲಿ ದಿವ್ಯ ಪ್ರಭೆ ಮಿನುಗಿತು. ಬಸವಯ್ಯನು ಕಣ್ತೆರೆದು ಏಳುವಾಗ ದೂರದಲ್ಲಿ, ಬಹುದೂರದಲ್ಲಿ ಕೆಂಜೆಡೆಯ ಶಿವನು ಸೂರ್ಯಸ್ವರೂಪಿಯಾಗಿ ಪಶ್ಚಿಮದಿಗಭಿಮುಖಿಯಾಗಿ ಸಾಗುತ್ತಿದ್ದನು. ಒಂದರ ಮೇಲೊಂದು ಮೆಟ್ಟಲು ಮೆಟ್ಟಲಾಗಿ ಏರಿ ಹೋಗುತ್ತಿದ್ದ ಹಸುರು ಬಣ್ಣ ಮೆತ್ತಿದಂತಿದ್ದ ಬೆಟ್ಟಗಳು ಆ ಭಗವತ್ಸ್ವರೂಪನಿಗೆ ಸಂಧ್ಯಾ ಸಮಯದ ಅರ್ಘ್ಯವನ್ನು ಅರ್ಪಿಸುತ್ತಿದ್ದುವು. ತಂಗಾಳಿ ಮೃದುವಾಗಿ ಹಿತಕರವಾಗಿ ತೀಡಿದುದು. ಆ ನವಪ್ರಭೆಯಲ್ಲಿ ಆ ಚೈತನ್ಯಮಯ ವಾತಾವರಣದಲ್ಲಿ ತಾದಾತ್ಮ್ಯವನ್ನು ಹೊಂದಿ ಬಸವಯ್ಯನು ಭಗವಂತಸ್ವರೂಪದಲ್ಲಿ ಲೀನನಾದನು. ಸಮಾಧಿ ಹೊಂದಿದನು. ಸುಂದರ ಸನ್ನಿವೇಶದಲ್ಲಿ ಐಕ್ಯರಾಗುವವರೇ ಮಹಾನುಭಾವರು, ಸರಳ ಹೃದಯಿಗಳು.

ಚೈತನ್ಯದ ಕಡಲಿನಲ್ಲಿ ಮಿಂದು ಏಳುವಾಗ ಬಸವಯ್ಯನಿಗೆ ನವೋತ್ಸಾಹ ಮೂಡಿಬಂದಿದ್ದಿತು. ಸಂಧ್ಯಾಗಾನವನ್ನು ಹಾಡುತ್ತಿದ್ದ ವಿಹಂಗಮಗಳು ಮಾಯವಾದಂತೆ, ಪ್ರಕೃತಿದೇವಿಗೆ ರಾತ್ರಿಯಲ್ಲಿ ದಿಗ್ದರ್ಶಕಗಳೂ ರಕ್ಷಕಗಳೂ ಆಗಿರುವ ನಕ್ಷತ್ರಮಣಿಗಳು ಒಂದೊಂದಾಗಿ ಮೂಡಿದಂತೆ ಬಸವಯ್ಯನು ಎದ್ದು ಶಿವಧ್ಯಾನ ಮಾಡುತ್ತ ಮುಂದೆ ಸಾಗಿದನು. ಪಣ್ಯಗ್ರಾಮದಲ್ಲಿ ಅವನಿಗೆ ವಸತಿ ದೊರೆಯಲು ಕಷ್ಟವಾಗಲಿಲ್ಲ. ಭಕ್ತರಿಗೆ ಪರಮಾತ್ಮನು ಮಾರ್ಗವನ್ನು ತೆರೆದಿಡುತ್ತಾನೆ. ಅಂದಿನಿಂದ ಬಸವಯ್ಯನು ಪಣ್ಯದ ಗುರುಬಸವನಾದನು. ಗುರುಬಸವನಿಗೆ ಪ್ರಚಾರದ ಆಸೆಯಿರಲಿಲ್ಲ. ರಾಜನ ಕೃಪೆಯ ಅವಶ್ಯಕತೆಯಿರಲಿಲ್ಲ. ಹಾಗಾಗಿ ಅವನ ಇರುವು ಶಿವಭಕ್ತ ವೀರರಾಜನಿಗೆ ತಿಳಿಯಲೇ ಇಲ್ಲ. ತಿಳಿದಿದ್ದರೆ ಈ ಭಕ್ತನ ಏಕಾಂತತೆಗೆ ಬಹುಶಃ ಭಂಗಬರುತ್ತಿದ್ದಿತೋ ಏನೋ!

ಪಣ್ಯಗ್ರಾಮದಲ್ಲಿ ಒಂದು ಕಿರುತೊರೆಯ ದಡದಲ್ಲಿ ಬಸವಯ್ಯನ ಕುಟೀರವು ಎದ್ದಿತು. ಸಮೀಪದಲ್ಲೇ ಒಂದು ಆಲದ ಸಸಿ. ಅದರ ನೆರಳಿನಲ್ಲಿ ಶಿವಮಂದಿರ. ತೊರೆಯಲ್ಲಿ ನೀರು ಸದಾ ಸಮೃದ್ಧ. ಭಕ್ತರಲ್ಲಿ ಶಿವಭಕ್ತಿ ಅಪಾರ, ಶುಭ್ರವಾದ ಶುದ್ಧವಾದ ಸಲಿಲ ಬುಳುಬುಳನೆ ಹರಿದುಹೋಗುವ ಸೊಬಗು ಅವರ್ಣನೀಯ. ಶಿವಂ ಸುಂದರಂ. ಅದರಲ್ಲಿ ಮಿಂದು ಸೂರ್ಯನಾರಾಯಣನಿಗೆ ಅರ್ಘ್ಯವಿತ್ತು ಮುಂದೆ ಪರ್ಣಕುಟೀರ ನಿವಾಸಿ ಕೈಲಾಸಪತಿಯನ್ನು ಅರ್ಚಿಸಲು ಬಸವಯ್ಯನು ಸಾಗಿದನೆಂದರೆ ಶಿವನೇ ಈ ರೂಪದಲ್ಲಿ ನಡೆಯುತ್ತಿರುವನೋ ಎಂದು ಜನರಿಗೆ ಅನ್ನಿಸುತ್ತಿತ್ತು: ದೀರ್ಘವಾದ ಜಟೆ, ವಿಶಾಲವಾದ ನೊಸಲಿನ ಮೇಲೆ ತ್ರಿಪುಂಡ್ರಧಾರಣೆ, ದೇಹದ ಮೇಲೆಯೂ ಅಲ್ಲಲ್ಲಿ ಶೋಭಿಸುತ್ತಿರುವ ವಿಭೂತಿಯ ಪವಿತ್ರ ರೇಖೆಗಳು. ಪ್ರತಿದಿನವೂ ದೇವರ ಮಂಗಳಾರತಿ ಸಮಯದಲ್ಲಿ ಅಲ್ಲಿಗೆ ಬಂದು ದೇವರ ದಿವ್ಯಜ್ಯೋತಿಯಿಂದ ಬೆಳಗಿಸಲ್ಪಟ್ಟು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಿ ಸಾಗುವುದು ಆ ಹಳ್ಳಿಗರ ಪರಿಪಾಠವಾಯಿತು. ಬಸವಯ್ಯನಾದರೂ ಭಗವಂತನ ರೂಪವನ್ನೇ ಆ ಭಕ್ತರಲ್ಲಿ ಕಾಣುತ್ತ ತನ್ನ ಕಾರ್ಯವನ್ನು ಭಕ್ತಿಯಿಂದಲೂ ಶ್ರದ್ಧೆಯಿಂದಲೂ ನೆರವೇರಿಸುತ್ತಿದ್ದನು.

ಪುರುಷರೂಪದಿಂದ ಪುಣ್ಯವೀ ಪಣ್ಯಗ್ರಾಮಕ್ಕೆ ಬಂದು ನೆಲಸಿದೆ ಎಂದು ಬಸವಯ್ಯನ ಆಗಮನಾನಂತರ ಗ್ರಾಮಸ್ಥರು ಸ್ಪಷ್ಟವಾಗಿ ಹೇಳುತ್ತಿದ್ದರು. ಅಂದಿನಿಂದ ಅವರ ದನ ಎಮ್ಮೆಗಳನ್ನು ಹುಲಿಗಳು ಹಿಡಿದುದಾಗಲೀ, ಅಕಾಲ ಮೃತ್ಯುವಿಗೆ ಅಲ್ಲಿ ಯಾರಾದರೂ ತುತ್ತಾದುದಾಗಲೀ, ಅತಿವೃಷ್ಟಿಯಿಂದ ಬೆಳೆಗಳಿಗೆ ಮನೆಗಳಿಗೆ ನಾಶವುಂಟಾದುದಾಗಲೀ ಇರಲಿಲ್ಲ. ಸಸ್ಯ ಸಮೃದ್ಧಿಯಾಗಿ ಪೈರು ಪುಷ್ಕಳವಾಗಿ ಜನರು ಹರ್ಷಾನಂದಭರಿತರಾದರು. ಗುರುಬಸವನು ದೇವಭಕ್ತನಾಗಿದ್ದಂತೆಯೇ ಕಾಯಕಷ್ಟವನ್ನು ಅರಿತವನೂ ಆಗಿದ್ದನು. ಆಲದ ಮರದಡಿಯಲ್ಲಿ ಕಾಣುತ್ತಿದ್ದ ಪರಮೇಶ್ವರನನ್ನು ಅವನು ಭೂಮಿಯಲ್ಲಿಯೂ ಜನರಲ್ಲಿಯೂ ದನಗಳಲ್ಲಿಯೂ ಕಾಣುತ್ತಿದ್ದನು, ಇಂತಹ ಪುಣ್ಯಪುರುಷನ ಸಾನ್ನಿಧ್ಯ ಲಭಿಸಿ ಪಣ್ಯಗ್ರಾಮವು ವರ್ಧಿಸತೊಡಗಿತು. ಪುಣ್ಯಪುರುಷರ ಸಂಗವೇ ಸಂಸ್ಕೃತಿಯ ಆರಾಧನೆ, ಅದೇ ಸದ್ವಿದ್ಯಾಭ್ಯಾಸ.

ಗುರುಬಸವನು ಆ ಭೂಮಿಯಲ್ಲಿ ನಡೆದಂತೆಯೇ ಜನರು ಅವನಿಗೆ ಸಾಕ್ಷಾತ್ ಪರಮಶಿವನೇ ದಯಮಾಡಿಸುತ್ತಿರುವನು ಎಂದು ಭಕ್ತ್ಯಭಿಮಾನಗಳಿಂದ ಅಭಿವಂದಿಸುತ್ತಿದ್ದರು. ಅವನು ಹೋದ ಮನೆ ಪುಣ್ಯವಂತರ ಬೀಡಾಗುತ್ತಿತ್ತು, ಅವನು ಮಾತಾಡಿದ ವ್ಯಕ್ತಿಯಲ್ಲಿ ಹುಮ್ಮಸ್ಸು ಉಕ್ಕುತ್ತಿತ್ತು. ಅವನು ಸಂದರ್ಶಿಸದ ಮನೆ ಮತಾಡದ ವ್ಯಕ್ತಿ ಗ್ರಾಮದಲ್ಲಿಯೇ ಇರಲಿಲ್ಲ.

ಗುರುಬಸವನ ಕಾರ್ಯಕ್ಷೇತ್ರ ಪಣ್ಯಗ್ರಾಮಕ್ಕೇ ಸೀಮಿತವಾಗಿರಲಿಲ್ಲ.
ಒಂದು ಸಾಯಂಕಾಲ. ಅವನು ಪಶ್ಚಿಮ ಘಟ್ಟಗಳ ಕಡೆಗೆ ದೃಷ್ಟಿಯನ್ನು ಬೀರಿ ಹಾಗೆಯೇ ಮುಂದೆ ಮುಂದೆ ನಡೆದನು. ಸುಬ್ರಹ್ಮಣ್ಯ ಕ್ಷೇತ್ರಾಭಿಮುಖವಾಗಿ ಸಾಗಿದನು. ಸಂಜೆಯ ಬೆಳಕಿನ ಚಿನ್ನದ ಹೊನಲು ಅಲ್ಲೆಲ್ಲ ತುಂಬಿ ಪ್ರವಹಿಸುತ್ತಿದ್ದಿತು. ತೇಲುತ್ತಿದ್ದ ಎರಡು ದೊಡ್ಡ ಬಿಳಿಯ ಮೋಡಗಳಿಗೆ ಮಿರಮಿರನೆ ಮಿರುಗುವ ಬೆಳ್ಳಿಯ ಅಂಚನ್ನು ಕಲಾವಿದ ಸೂರ್ಯನು ಕಿರಣ ಕುಂಚಗಳಿಂದ ಬಿಡಿಸಿದ್ದನು. ಗಿರಿಶಿಖರಗಳಿಗೆ ನವಕಾಂತಿಯನ್ನು ಬೀರಿದ್ದನು. ಭಗವಂತನ ಲೀಲೆಯಲ್ಲಿ ಮೈಮರೆತು ಗುರುಬಸವ ಸಾಗುತ್ತಿದ್ದ ಹಾಗೆಯೇ ಅವನ ಏಕಾಗ್ರತೆಗೆ ಭಂಗಬಂದಿತು. ದೂರದಲ್ಲಿ ದಿಗಂತದ ಸಮೀಪದಲ್ಲಿ ದೊಡ್ಡದಾಗಿ ಗಲಭೆ ಕೇಳಿಸಲಾರಂಭಿಸಿತು.

ಹೋಯ್ ಹೊಡಿ ಬಾರೋ….. ಎಂದು ಮುಂತಾದ ಕೆಲವು ಶಬ್ದಗಳು ಮಾತ್ರ ಆ ಮಹಾ ಗಲಭೆಯಲ್ಲಿ ಸ್ಪಷ್ಟವಾಗುತ್ತಿದ್ದುವು. ಗುರುಬಸವನು ಕುತೂಹಲ ದೃಷ್ಟಿಯಿಂದ ಆ ಕಡೆಗೆ ನೋಡಿದನು. ಕಪ್ಪಾಗಿ ಭಯಂಕರವಾಗಿ ದಟ್ಟವಾಗಿ ಹೊಗೆಯು ಮೇಲೇರುತ್ತಿದ್ದುದನ್ನು ಕಂಡನು. ಸುಳಿ ಸುಳಿಯಾಗಿ ತೆರೆ ತೆರೆಯಾಗಿ ವಿಸ್ತಾರವಾಗಿ ವ್ಯಾಪಿಸುತ್ತ ಮೇಲೆ ಮೇಲೆ ಸಾಗುತ್ತಿದ್ದ ಆ ಧೂಮಸಮೂಹವನ್ನು ನೋಡಿ ಕೂಡಲೇ ಏನೋ ಅನಾಹುತ ಸಂಭವಿಸಿದೆ ಎಂದು ಶಿವಭಕ್ತನು ನಿಶ್ಚಯಿಸಿದನು. ಆ ಕಡೆಗೆ ತೀವ್ರಗತಿಯಿಂದ ಓಡಿದನು. ಓಡಿ ಓಡಿ ಅಲ್ಲಿಗೆ ತಲುಪಿದನು. ನೋಡುವುದೇನನ್ನು? ಒಂದು ಹುಲ್ಲು ಮನೆಗೆ ಬೆಂಕಿಯು ಬಿದ್ದಿದೆ, ಸಾರ್ವತ್ರಿಕವಾಗಿ ವ್ಯಾಪಿಸಿರುವ ಅಗ್ನಿ ಪೂರ್ಣಾಹುತಿಯನ್ನು ತೆಗೆದುಕೊಳ್ಳತೊಡಗಿದೆ. ಬಿದಿರು ಗಳಗಳು ಚಿಟಿಲ್ ಚಿಟಲ್ಲನೆ ಸಿಡಿದು ಒಡೆದು ಮೇಲೆ ಹಾರಿ ಅಗ್ನಿಜಿಹ್ವೆಯಿಂದ ಸೆಳೆಯಲ್ಪಟ್ಟು ಅಲ್ಲಿಯೇ ಬಿದ್ದು ಉರಿದು ಭಸ್ಮವಾಗುತ್ತಿವೆ. ಮಾಡಿಗೆ ಹೊದೆಸಿದ ಹುಲ್ಲು ಞರ ಞರನೆ ಹೊತ್ತಿ ಬೂದಿಯಾಗುತ್ತಿದೆ. ಜನರ ಕೂಗೇ ಕೂಗು. ಬೇಸಗೆಯ ದಿನಗಳು. ನೀರನ್ನು ತಂದು ಸುರಿಯುವುದು ಎಲ್ಲಿಂದ? ಬಾವಿಯಿಂದ ಸೇದಿ ಸೇದಿ ಕೈಯ್ಯಿಂದ ಕೈಗೆ ಬಿಂದಿಗೆಗಳನ್ನು ಸಾಗಿಸಿ ನೀರನ್ನು ಸುರಿದರು. ಆದರೆ ಎಲ್ಲಿಗೆ? ಸರ್ವವನ್ನೂ ಲೇಲಿಹ್ಯಮಾನವಾಗಿ ಸ್ವಾಹಾ ಮಾಡುತ್ತಿರುವ ಅಗ್ನಿ ರಾಕ್ಷಸನಿಗೆ ಆ ಬಿಂದಿಗೆ ನೀರು ಲೆಕ್ಕವೇ ಇರಲಿಲ್ಲ. ಆದರೂ ಸುರಿದರು. ಬಾಳೆಯ ಮರಗಳನ್ನು ಕಡಿಕಡಿದು ಬೆಂಕಿಯ ಮೇಲೆ ಬಿಸಾಡಿದರು, ಅರಿವೆಗಳನ್ನೂ ಮತ್ತೇನೇನು ದೊರೆಯಿತೋ ಅವುಗಳೆಲ್ಲವನ್ನೂ ನೀರಿನಲ್ಲಿ ಒದ್ದೆಮಾಡಿ ಮೇಲೆಸೆದರು. ಮಣ್ಣನ್ನು ಅಗೆದಗೆದು ಬೆಂಕಿಯ ಮೇಲೆರಚಿದರು. ಯಾರಿಗೂ ಏನು ಕೆಲಸ ಮಾಡುತ್ತ ಇರುವೆವೆನ್ನುವ ಪರಿವೆಯಿರಲಿಲ್ಲ. ಆ ದುರ್ಧರ ಕಠಿಣ ಪ್ರಸಂಗದಲ್ಲಿ ಒಂದು ರೀತಿಯ ಭಯಂಕರ ರುದ್ರೋತ್ಸಾಹದಿಂದ ಪ್ರೇರಿತವಾಗಿ ತೀವ್ರಗತಿಯಿಂದ ಕಾರ್ಯವನ್ನು ಮುಂದುವರಿಸುತ್ತಿದ್ದರು.

ಗುರುಬಸವನಿಗೆ ಶಿವನ ತಾಂಡವ ನೃತ್ಯ ಕಂಡು ಗಂಟಲು ಉಬ್ಬಿ ಬಂದಿತು. ಹೊಟ್ಟೆಯಲ್ಲಿ ಬೆಂಕಿಯು ಉರಿದಂತೆ ಆಯಿತು.
ಓ ಪರಮೇಶ್ವರನೇ ಈ ರೀತಿಯಲ್ಲೂ ನೀನು ಭಕ್ತರನ್ನು ಪರೀಕ್ಷಿಸುವುದೇ? ನಿನ್ನ ಲೀಲೆಯನ್ನು ಕಂಡವರು ಯಾರೋ? ಎಂದು ಮನಸ್ಸಿನಲ್ಲಿಯೇ ದೇವರಲ್ಲಿ ಮೊರೆಯಿಟ್ಟನು.
ಕರ್ತವ್ಯ ಮೊದಲು.
ಮನೆಯೊಳಗೆ ಯಾರಾದರೂ ಇರುವರೇ? ಇದು ಗುರುಬಸವನ ಮೊದಲಿನ ಪ್ರಶ್ನೆ.
ಈ ಒಂದು ಆಗಂತುಕ ವ್ಯಕ್ತಿಯ ವಿಚಿತ್ರ ಸ್ವರೂಪ, ಅಪರಿಚಿತ ಮುಖ. ಪ್ರಶ್ನೆಯ ಗಂಭೀರತೆ ಇವುಗಳಿಂದ ನೀರು ಸುರಿಯುತ್ತಿದ್ದವರು ಕೆಲವರು ನಿಂತು ಏನೆಂದು ಮರುಪ್ರಶ್ನೆ ಹಾಕಿದರು.
ಈ ಉರಿಯುತ್ತಿರುವ ಮನೆಯೊಳಗೆ ಜನರು ಇದ್ದಾರೋ? ಎಂದು ಪುನಃ ಗುರುಬಸವನು ಕೇಳಿದನು.
ಆ ಹೆಂಗಸಿನ ಸಣ್ಣ ಮಗು ಉಂಟಂತೆ. ಆದರೆ ನಮಗೆ ಯಾರಿಗೂ ಈ ಬೆಂಕಿಯ ಒಳಗೆ ನುಗ್ಗಿ ಅದನ್ನು ಹೊರಗೆ ತರಲು ಆಗಲಿಲ್ಲ ಎಂದರು ಹತ್ತೆಂಟು ಜನರು ಒಟ್ಟಿಗೆ.
ಮಾತು ಮುಗಿಯುವ ಮೊದಲೇ ಗುರುಬಸವನು ಮುನ್ನುಗ್ಗಿ ಆ ಅಗ್ನಿ ಕುಂಡಕ್ಕೆ ದುಮುಕಿಬಿಟ್ಟಿದ್ದನು. ಅಲ್ಲಿದ್ದ ಜನರು ಇವನಿಗೇನು ಮರುಳೇ ಎಂದು ದಿಗ್ಭ್ರಾಂತರಾಗಿ ನೋಡಿದರು. ಕೆಲವರು ಅವನನ್ನು ಹಿಡಿದೆಳೆಯಲೂ ಹೋದರು. ಆದರೆ ಅಷ್ಟರಲ್ಲಿಯೇ ಅವನು ಮನೆಯನ್ನು ಆ ಅಗ್ನಿರಾಶಿಯನ್ನು ಪ್ರವೇಶಿಸಿಯಾಗಿದ್ದಿತು.

ಬೆಂಕಿಯ ಪ್ರಾರಂಭ ಸ್ಥಿತಿಯಲ್ಲಿಯೇ ನಮಗೆ ನುಗ್ಗಲಾಗಲಿಲ್ಲ. ಈಗ ಇವನೊಬ್ಬ ಅವಿವೇಕಿ ಸಾಗಿದ. ಸರಿ, ಒಂದು ಸಣ್ಣ ಜೀವದ ಜತೆಗೆ ಇನ್ನೊಂದು ದೊಡ್ಡ ಜೀವ ಎಂದು ಉದ್ಗಾರವೆಳೆದನು ಒಬ್ಬ ಕೊಡಪಾನ ಹೊತ್ತವನು.
ಮುದುಕರೂ ಹುಚ್ಚರೂ ಮಕ್ಕಳೂ ಒಂದೇ ಎಂದು ಹೇಳಿಕೆಯಿದೆ. ಈಗ ಹೋದವನು ಮುದುಕನೂ ಹೌದು ಹುಚ್ಚನೂ ಹೌದು. ಒಳಗೆ ಮಗುವಿದೆ ಅಂತೂ ಇವರಿಗೆ ಅಗ್ನಿಸಮಾಧಿ. ನಮಗೆ ಸುಡುವ ತಾಪತ್ರಯವಿಲ್ಲ ಎಂದು ಆ ಭೀಕರ ಸನ್ನಿವೇಶದಲ್ಲಿಯೂ ಒಂದು ನಗುವಿನ ರೇಖೆಯನ್ನು ಇನ್ನೊಬ್ಬನು ತರಲು ಪ್ರಯತ್ನಿಸಿ ವಿಫಲನಾದನು.
ಇವರ ಮಾತು ಮರುಮಾತು ಮುಗಿಯುವ ಮೊದಲೇ ಗುರುಬಸವನು ಎಷ್ಟು ರಭಸದಿಂದ ಅಗ್ನಿಗರ್ಭಕ್ಕೆ ದುಮುಕಿದ್ದನೋ ಅಷ್ಟೇ ರಭಸದಿಂದ ಹಿಂದಕ್ಕೆ ನೆಗೆದಿದ್ದನು. ಮಗುವು, ಒಂದು ವರ್ಷದ ಗಂಡು ಮಗುವು, ಅವನ ಕೈಯಲ್ಲಿ ಸುಖವಾಗಿ ಮಲಗಿಕೊಂಡಿತ್ತು. ಅಗ್ನಿಪೂತನಾದ ಈ ಮಹಾನುಭಾವನನ್ನು ಎಲ್ಲರೂ ಆ ಕ್ಷಣ ಆವರಿಸಿದರು. ಯಾರು ಅವನನ್ನು ಆ ಹಿಂದಿನ ಗಳಿಗೆಯಲ್ಲಿ ಮರುಳನೆಂದು ಕೊಂಕುನುಡಿ ನುಡಿದಿದ್ದರೋ ಅವರೆಲ್ಲ ಅತ್ಯಧಿಕ ಅಭಿಮಾನ ಗೌರವ ಮರ್ಯಾದೆಗಳಿಂದ ಈ ವೃದ್ಧನನ್ನು ಆವರಿಸಿದರು. ಹೊಸಬನು ಮನೆಯೊಳಗೆ ಹಾರಿದುದೂ ಅಲ್ಲಿಂದ ಹೊರಗೆ ಬಂದುದೂ ಎಲ್ಲರಿಗೂ ಕಂಡಿದ್ದಿತು. ಅಂತಹ ರುದ್ರಪ್ರಸಂಗದಲ್ಲಿಯೂ ಈ ಸಂತೋಷದ ಗಳಿಗೆಯು ಬಂದಾಗ ಎಲ್ಲರೂ ಅವರವರ ಕೆಲಸ ಮರೆತು ಬಂದು ಮುದುಕಯ್ಯನ ಸುತ್ತಲೂ ಮುತ್ತಿದರು. ಮಗುವಿಗೆ ಎಚ್ಚರವಾಯಿತು. ಅದು ಕೈಕಾಲು ಬಡಿದುಕೊಂಡು ವೇ ವೇ ವೇ ಎಂದು ಅಳುತ್ತಿತ್ತು. ಅಗ್ನಿಯು, ತನ್ನ ಗ್ರಾಸವನ್ನು ಇತರರು ಅಪಹರಿಸಿದರೆಂದು ಕೋಪಾನಲದಿಂದ ಇನ್ನಷ್ಟು ಪ್ರಜ್ವಲಿಸಿ ಸಿಡಿಮಿಡಿಗೊಂಡು ಭಯಂಕರವಾಗಿ ಉರಿಯಲಾರಂಭಿಸಿತು. ಗುರು ಬಸವ ಮಗುವನ್ನು ಮೃದುವಾಗಿ ಎತ್ತಿಕೊಂಡು ಸಮಾಧಾನಪಡಿಸುತ್ತ ಆ ಶಾಖ ಉರಿಗಳಿಂದ ದೂರಹೋಗಲು ಮುಂದಾದನು. ಅವನ ಹರಕು ಬಟ್ಟೆಯಲಿದ್ದ ಬೆಂಕಿಯ ಕಿಡಿಗಳನ್ನು ಹಿಂಬಾಲಕರು ಹಿಡಿದು ಆರಿಸಿದರು. ಮಗು ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿ ಹೊಸಬನನ್ನು ನೋಡಿ ಹೆದರಿ ಇನ್ನೂ ಗಟ್ಟಿಯಾಗಿ ಚೀರಿತು: ಕೈಕಾಲು ಬಡಿದು ಬಡಿದು ಕೂಗಿತು.
ಶಿವ, ನೀನು ಹೆದರಬೇಡ ಎಂದು ಗುರುಬಸವನು ಅದನ್ನು ಸಮಾಧಾನಪಡಿಸಲು ತೊಡಗಿದನು.

ಮನೆಗೆ ಬೆಂಕಿಬಿದ್ದಾಗ ಆಗದಿದ್ದ ದುಃಖ ಉದ್ವೇಗ ಉಮ್ಮಳ ಗೌರಾಂಗನೆಗೆ ತನ್ನ ಪುಟ್ಟ ಕಂದಮ್ಮನು ಉಳಿಯುವುದಿಲ್ಲ ಎಂದು ತಿಳಿದಾಗ ಆಯಿತು. ಬೆಂಕಿಬಿದ್ದಾಗ ಅವಳು ಹಟ್ಟಿಯಲ್ಲಿದ್ದಳು. ಯಾರೋ ಮನೆಗೆ ಬೆಂಕಿಬಿದ್ದಿತು ಎಂದು ಕೂಗಿ ಹೇಳಿದಾಗ ಅವಳು ಧಾವಿಸಿಬಂದಳು. ಆಗಲೇ ಬೆಂಕಿಯು ಪರಾಕಾಷ್ಠೆಯನ್ನು ಮುಟ್ಟುವುದರಲ್ಲಿತ್ತು.
ನನ್ನ ಮಗನನ್ನು ರಕ್ಷಿಸಿ ರಕ್ಷಿಸಿ ಎಂದು ಅವಳು ಮೊರೆಯಿಟ್ಟಳು. ತಾನೇ ಬೆಂಕಿಯನ್ನು ಭೇದಿಸಿ ಮುನ್ನುಗ್ಗಲು ಧಾವಿಸಿದಳು. ಆದರೆ ಅಲ್ಲಿ ಸೇರಿದ್ದ ಜನ ಅವಳನ್ನು ಹೋಗಗೊಡಲಿಲ್ಲ. ಹಿಡಿದು ಹಿಂದೆ ಕೂರಿಸಿದರು. ಕೆಲವು ಗಂಡಸರು ಮನೆಯೊಳಗೆ ನುಗ್ಗಲು ಹಾರಿದರು. ಆದರೆ ಅಗ್ನಿರಾಕ್ಷಸನ ಪ್ರಹಾರಗಳಿಂದ ಜರ್ಜರಿತವಾಗಿ ಹಿಂದೆ ನೆಗೆದರು. ಮಗುವು ಉಳಿಯುವುದಿಲ್ಲ ಎಂದು ತಿಳಿದಿದ್ದ ಗೌರಾಂಗನೆಗೆ ಅಷ್ಟರಲ್ಲಿಯೇ ಮೂರ್ಛೆಯು ಬಂದಿದ್ದಿತು. ಮಗುವಿಗೆ ಅಂತಹ ಅಪಮೃತ್ಯು. ಅದನ್ನುಳಿದ ಆ ತಾಯಿ ಜೀವ ಆ ಒಂಟಿ ಜೀವ ಹೇಗೆ ಉಳಿಯಬಲ್ಲದು?

ಬೆಂಕಿಯ ಶಾಖ ಮತ್ತು ಸನ್ನಿವೇಶದ ಕಾವು ಸಾಯಂಕಾಲದ ತಂಗಾಳಿ ಮತ್ತು ಗೌರಾಂಗನೆಯ ಮಗು ಬದುಕಿ ಉಳಿದ ಸಂತೋಷಗಳಿಂದ ಕೊನೆಗಂಡುವು. ಮಗುವಿನ ರೋದನ ಮಾತ್ರ ಏರುತ್ತಿದ್ದಿತು.
ಈ ಮಗುವಿನ ತಾಯಿ ತಂದೆಗಳೆಲ್ಲಿ? ಎಂದು ಗುರುಬಸವನು ಜನರನ್ನು ಪ್ರಶ್ನಸಿದನು. ಈಗಾಗಲೇ ಅವನು ಆ ಜನರ ದೃಷ್ಟಿಯಲ್ಲಿ ಮಹಾಮಹಿಮಾನ್ವಿತ ಪುರುಷನಾಗಿದ್ದನು. ನೆರೆ ಗ್ರಾಮದಲ್ಲಿ ಒಂದೆರಡು ಸಲ ಅವನನ್ನು ನೋಡಿ ಅರಿತಿದ್ದ ಕೆಲವರಂತೂ ಗುರುಬಸವ ಮಹಿಮೆಯನ್ನು ಅಧಿಕಾಧಿಕವಾಗಿ ವರ್ಣಿಸಿ ಅವನ ಸ್ಥಾನವನ್ನು ಇತರರ ದೃಷ್ಟಿಯಲ್ಲಿ ಮಹೌನ್ನತ್ಯಕ್ಕೆ ಕೊಂಡೊಯ್ದರು.

ಮಗುವಿನ ತಾಯಿಯನ್ನು ಕರೆದುಕೊಂಡು ಬರಲು ಕೆಲವರು ಓಡಿದರು. ಹೆಂಗುಸರ ಶೈತ್ಯೋಪಚಾರದಿಂದ ಗೌರಾಂಗನೆಯು ಆಗಲೇ ಮೂರ್ಛೆಯಿಂದ ಜಾಗ್ರತಾವಸ್ಥೆಗೆ ಬಂದಿದ್ದಳು. ಆದರೆ ಅವಳ ಹಂಬಲ ಒಂದೇ ನನ್ನ ಕಂದಮ್ಮನೆಲ್ಲಿ? ಎಂದು. ಹೀಗೆ ಹಲಬುತ್ತಿದ್ದಾಗಲೇ ಅವಳ ಪುಟ್ಟ ಮಗುವಿನ ಕೂಗಿನ ಪ್ರೀತಿಯ ಕರೆ ಅವಳಿಗೆ ಬಂದಿತು. ಅವಳನ್ನು ಕರೆದುಕೊಂಡು ಹೋಗಲು ಬಂದವರು ಅವಳಿಗೆ ಆ ಮಗು ಬದುಕಿ ಉಳಿದಿರುವ ಆನಂದದ ಸುದ್ದಿಯನ್ನು ತಿಳಿಸಿದಾಗ ಅವಳಿಗಾದ ಸಂತೋಷ ಕೃತಜ್ಞತೆ ಅಪಾರ. ಗಾಳಿಯಲ್ಲಿ ತೇಲಿ ಸಾಯಂಕಾಲದ ಮಂದಪ್ರಕಾಶದಲ್ಲಿ ಪಸರಿಸಿ ಅವಳು ಗುರುಬಸವ ಸನ್ನಿಧಾನಕ್ಕೆ ತಲುಪಿದಳು. ಮಗುವು ತನ್ನ ಪುಟ್ಟ ಪುಷ್ಟಿಯಾದ ಕೈಗಳನ್ನು ಚಾಚಿ ಚಾಚಿ ಅವಳನ್ನು ಸ್ವಾಗತಿಸಿತು. ಕಾಲುಗಳನ್ನು ಬಡಿದ ರಭಸದಲ್ಲಿ ಅದು ಗುರುಬಸವನ ಕೈಯಿಂದ ಜಾರಿ ಬಿದ್ದುಹೋಗುತ್ತಿತ್ತು. ಅದುವರೆಗೆ ಒಂದೇ ಶುತ್ರಿಯಲ್ಲಿದ್ದ ಅದರ ಅಳು ಈಗ ದೂರಿಡುವ ರಾಗವಾಯಿತು. ಅದು ನಲಿವಿನ ವರಿಸೆಯಾಯಿತು. ಕಣ್ಣಿನಲ್ಲಿ ನೀರೊಸರದ ಕೂಗಾಯಿತು. ತಾಯಿಯ ಕೈಗಳನ್ನು ಮಗು ಸೇರಿ ಉಲಿದು ಅವಳ ಹೆಗಲಿನಿಂದ ಇತರರನ್ನು ಇಣುಕಿ ನೋಡಿ ದಂತವಿಹೀನ ನಗುವನ್ನು ಪ್ರದರ್ಶಿಸಿತು. ಪುನಃ ಪುನಃ ತಾಯಿಯ ಹೆಗಲಿಗೆ ಕೈಗಳನ್ನು ಬಡಿದು ಬಡಿದು ತನ್ನ ಹರ್ಷವನ್ನು ವ್ಯಕ್ತಪಡಿಸಿತು.
ಅಮ್ಮಾ, ನಿಮ್ಮ ಮಗುವನ್ನು ಉಳಿಸಿದ ಮಹಾನುಭಾವರು ಇವರೇ ಎಂದು ಹತ್ತಿರದವರು ಹೇಳಿದಾಗ ಮಗುವು ಗುರುಬಸವನ ಕಡೆಗೆ ತಿರುಗಿ ಕೈಚಾಚಿತು.
ಅವನು ಅದರ ಕೈಯ್ಯನ್ನು ಹಿಡಿದು ಏನು ಪುಟ್ಟಂಬೆ! ಬರುತ್ತೀಯಾ? ಎಂದು ಕೈಚಾಚಿದಾಗ ಅದು ಚುಳ್ಳನೆ ತಿರುಗಿ ತಾಯಿಯ ಹೆಗಲ ಮೇಲೆ ಮುಖವಿಟ್ಟು ಕೈಗಳಿಂದ ಬಲವಾಗಿ ಚಟಪಟನೆ ಅವಳಿಗೆ ಹೊಡೆಯಿತು.

ಗೌರಾಂಗನೆಗೆ ಆ ಪರಿಚಯ ಅಗತ್ಯವಿರಲಿಲ್ಲ, ಆಗಿನ ಪ್ರಸಂಗದಲ್ಲಿ ಅವಳ ಕೃತಜ್ಞತಾಪೂರ್ಣ ಮನಸ್ಸು ಗುರುಬಸವನ ಸತ್ಕೃತ್ಯವನ್ನು ಗ್ರಹಿಸಿದ್ದಿತು. ಮಗುವನ್ನೆತ್ತಿಕೊಂಡೇ ಅವಳು ವೃದ್ಧ ಗುರುಬಸವನ ಪಾದಾರವಿಂದಗಳನ್ನು ಮುಟ್ಟಿ ನಮಸ್ಕರಿಸಿದಳು. ಅವಳ ಕಣ್ಣುಗಳಿಂದ ಜಗುಳಿದ ಬಾಷ್ಪಾಂಬುವೇ ಆ ಪುಣ್ಯ ಪಾದಯುಗಳನ್ನು ತೊಳೆಯುವ ಜಲವಾಯಿತು. ಅಮಂಗಳಕರವಾದ ಸಂಧ್ಯೆಯು ಮಂಗಳಕರವಾಗಿ ಕೊನೆಗೊಂಡಿತು. ತಾಯಿಯ ಹೃದಯ ಪಾತ್ರೆಯಲ್ಲಿ ಕೃತಜ್ಞತಾಸಲಿಲವು ತುಂಬಿ ಪ್ರವಹಿಸಲಾರಂಭಿಸಿತು.

ಗುರುಬಸವನು ಗೌರಾಂಗನೆ ಯೋಗಕ್ಷೇಮವನ್ನು ವಿಚಾರಿಸಿದನು. ಆ ಎಳೆ ಹರೆಯದ ಸಾಧ್ವಿಯ ಬಾಯಿಯಿಂದ ಗುರುವರ್ಯನಿಗೆ ತಿಳಿದ ವಿಷಯವಿಷ್ಟು: ಅವಳು ಶಿವಭಕ್ತರ ಕುಟುಂಬಕ್ಕೆ ಸೇರಿದವಳು. ಅನಾಥೆ. ಚಿಕ್ಕಂದಿನಲ್ಲಿಯೇ ಜನ್ಮದಾತರು ತೀರಿಹೋಗಿದ್ದರು. ದೂರದ ಸಂಬಂಧಿಕರಲ್ಲಿ ಬೆಳೆದಳು. ವಿವಾಹಯೋಗ್ಯ ಪ್ರಾಯದಲ್ಲಿ ಸತ್ಕುಲ ಪ್ರಸೂತ ದೇವಭಕ್ತನೊಬ್ಬನೊಡನೆ ಆಕೆಯ ವಿವಾಹವಾಗಿತ್ತು. ಅದು ನಡೆದುದು ಈಗ ಮೂರು ವರ್ಷಗಳ ಹಿಂದೆ. ಅಂದಿನಿಂದ ಗಂಡನೂ ಹೆಂಡತಿಯೂ ವ್ಯವಸಾಯದಲ್ಲಿ ತನ್ಮಯರಾಗಿ ತಮ್ಮ ಸಂಸಾರ ಜೀವನವನ್ನು ಸುಖಸಂತೋಷಗಳಿಂದ ನಡೆಸುತ್ತಿದ್ದರು. ಅವರಿಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಶಂಕರನು ಸಕಲ ಸೌಭಾಗ್ಯಗಳನ್ನು ಅವರಿಗೆ ಅವರಿಗೆ ದಯಪಾಲಿಸಿದ್ದನು. ಮುಂದೆ ಗೌರಾಂಗನೆಗೆ ಬಯಕೆಯುಂಟಾಯಿತು. ಗಂಡ ಹೆಂಡಿರು ಶಿವನನ್ನು ಆರಾಧಿಸಿದರು. ಪತ್ನಿಯು ತನಗೆ ಹೆಜ್ಜೇನಿನ ಎರಿಯನ್ನು ತಿನ್ನಬೇಕೆನ್ನುವ ತನ್ನ ಅಭಿಲಾಷೆಯನ್ನು ಪ್ರಾಣಪ್ರಿಯನೊಡನೆ ವ್ಯಕ್ತಿಪಡಿಸಿದಳು. ಅವನು ಆ ರಾತ್ರಿಯೇ ಕಾಡಿನೆಡೆಗೆ ನಡೆದನು. ದೊಡ್ಡ ಒಂದು ಮರದ ಎತ್ತರದ ಕೊಂಬೆಯಲ್ಲಿ ಹೆಜ್ಜೇನಿನ ಗೂಡು ಇದ್ದಿತು. ಮರವನ್ನು ಹತ್ತಿ ಬೆಂಕಿಯ ಹೊಗೆಯನ್ನು ಗೂಡಿಗೆ ಬೀರಿದನು. ಜೇನ್ದುಮ್ಬಿಗಳು ಸಿಕ್ಕಾಬಟ್ಟೆ ಹಾರಿ ಹೋದುವು.

ಹಲವಾರು ಭೃಂಗಗಳು ಸತ್ತುಹೋದವು. ಆ ಕೊಂಬೆಯಲ್ಲಿ ಅವನು ಮುಂದೆ ಸಾಗಿದನು. ಜೇನುಗೂಡಿಗೆ ಕೈಹಾಕಿ ಎರಿಗಳನ್ನು ಕೊಯ್ಯುತ್ತಿದ್ದ ಹಾಗೆಯೇ ಅವಳ ಮಾಂಗಲ್ಯ ಬಿರಿಯಿತು. ಗೌರಾಂಗನೆಯ ಗಂಡ ಮರುನಿಮಿಷ ನೆಲದ ಮೇಲೆ ಪಾತಾಳದ ಗಹ್ವರೆಯಲ್ಲಿ ಕೆಡೆದು ಬಿದ್ದಿದ್ದನು. ಮರದ ಶಾಖೆಯು ತುಂಡಾಗಿದ್ದಿತು. ಪತ್ನಿಯ ಇಚ್ಛೆಯನ್ನು ಪೂರ್ತಿಗೊಳಿಸುವ ಉತ್ಸಾಹದಲ್ಲಿ ಅವನು ಕೊಂಬೆಯ ಮಿತಿಯನ್ನು ಲಕ್ಷಿಸಿರಲಿಲ್ಲ. ಅದು ಅವನ ಜೀವವನ್ನೇ ಹಿಂಡಿದ್ದಿತು. ಹೀಗೆ ಅಪಮೃತ್ಯವಿಗೊಳಗಾದ ಪತಿಯ ಪವಿತ್ರ ಸ್ಮಾರಕವಾಗಿ ಅವಳ ಪಾಲಿಗೆ ಉಳಿದಿದ್ದುದು ಆರು ತಿಂಗಳ ಅನಂತರ ಜನಿಸಿದ ಆ ಗಂಡು ಮಗು. ಆ ಮಗುವನ್ನು ಅವಳಿಗೆ ಮೃತ್ಯುವಿನ ಕರಾಳದಂಷ್ಟ್ರದಿಂದ ರಕ್ಷಿಸಿ ಕೊಟ್ಟ ಗುರುಬಸವನನ್ನು ಅವಳು ಹೃದಯ ತುಂಬಿ ಅಭಿವಂದಿಸಿದಳು.

ಗೌರಾಂಗನೆಯ ಜೀವನ ಚರಿತ್ರೆಯನ್ನು ಕೇಳಿದ. ಗುರುಬಸವನಿಗೆ ಕರುಣೆಯು ತುಂಬಿ ಬಂದಿತು. ಪರಮಾತ್ಮನು ಜೀವಿಗಳಿಗೇಕಿಷ್ಟು ಕಷ್ಟ ಕೊಡುವನೋ ಎಂದು ಆ ಕ್ಷಣ ಅವನ ಮನಸ್ಸಿನಲ್ಲಿ ಪ್ರಶ್ನೆಯು ಮೂಡಿತು. ಮರುಕ್ಷಣ ಎಲ್ಲವೂ ನಿನ್ನ ಲೀಲೆ. ಇಲ್ಲವಾದರೆ ಈ ಹಸುಳೆಯನ್ನು ನಾನು ರಕ್ಷಿಸಿಕೊಡುತ್ತಿದ್ದೆನೇ? ಶಿವನೇ ನನ್ನ ದೇಹದಲ್ಲಿ ಆಗ ಪ್ರವೇಶಿಸಿದ್ದುದರಿಂದ ಹೀಗಾಯಿತು ಎಂದೂ ಹೇಳಿಕೊಂಡನು. ಮುಂದೇನು? ಗೌರಾಂಗನೆಗೆ ದಿಕ್ಕು ಯಾರೂ ಇಲ್ಲ. ಇದ್ದ ಮನೆಯು ಉರಿದು ಹೋಯಿತು. ಅವಳು ಎಲ್ಲಿರಬೇಕು? ಯಾರಲ್ಲಿಗೆ ಹೋಗಬೇಕು? ತರುಣಪ್ರಾಯದ ಸ್ತ್ರೀ. ಹಾಗೆ ಎಲ್ಲಿ ಬೇಕಾದರೂ ಇರುವಂತೆ ಇಲ್ಲ. ಗುರುಬಸವನಿಗೆ ಈಶ್ವರನು ದಾರಿ ತೋರಿಸಿದನು. ಆ ನಕ್ಷತ್ರಗಳ ಸಾಕ್ಷಿಯಾಗಿ, ಆ ಪ್ರಕೃತಿ ದೇವಿಯ ಸಾಕ್ಷಿಯಾಗಿ, ಆ ಶಿಶುಹೃದಯಿ ಗ್ರಾಮಸ್ಥರ ನೇತೃತ್ವದಲ್ಲಿ ಅವನು ಗೌರಾಂಗನೆಯನ್ನು ಮಗಳಾಗಿ ಪರಿಗ್ರಹಿಸಿದನು.

ಭಗವಂತನು ನನಗೆ ಏನೂ ಕಡಿಮೆ ಮಾಡಲಿಲ್ಲ. ನೀನೂ ಅವನ ಸೇವೆಯಲ್ಲಿ ಮತ್ತು ಈ ಪುಟ್ಟ ದೇವರ ರಕ್ಷಣೆಯಲ್ಲಿ ಉಳಿದ ಆಯುಷ್ಯವನ್ನು ಸದ್ವಿನಿಯೋಗ ಮಾಡು. ನನ್ನ ಗುಡಿಸಲಿನಲ್ಲಿ ಇರು ಎಂದು ಗುರುಬಸವನು ನುಡಿದನು. ಅದು ಸಾಕ್ಷಾತ್ ಈಶ್ವರನ ಆಜ್ಞೆ ಎಂದು ಗೌರಾಂಗನೆಯು ಆ ವಾಕ್ಯಗಳನ್ನು ಶಿರಸಾವಹಿಸಿದಳು.

ಆ ರಾತ್ರಿ ಗುರುಬಸವನು ಈ ಮಗಳು ಮೊಮ್ಮಗನೊಡನೆ ಪಣ್ಯಕ್ಕೆ ಮರಳಿದಾಗ ಅಲ್ಲಿ ಅವನಿಗೆ ಸಂಭ್ರಮವಾದ ಸ್ವಾಗತ ಸಿದ್ಧವಾಗಿತ್ತು : ಗುರುಬಸವನ ಸಾಹಸೋದ್ಯಮವು ಆಗಲೇ ಆ ಗ್ರಾಮನಿವಾಸಿಗಳಿಗೆ ತಿಳಿದಿತ್ತು. ಸಕಲರೂ ಈ ನೂತನ ಪರಿವಾರವನ್ನು ಸಂತೋಷದಿಂದ ಎದುರ್ಗೊಂಡರು. ಮಹಾವಿಜೃಂಭಣೆಯಿಂದ ಆ ರಾತ್ರಿಯಿಡೀ ಶಿವಾರ್ಚನೆ ಪೂಜೆಗಳು ನಡೆದುವು.
ತಂದೆ ತಾಯಿಯು ನೀವೆ ಶಿವ
ಬಂಧುಬಳಗವು ನೀವೆ ಶಿವ
ಎಂದು ಹಳ್ಳಿಯ ಜನರು ಶಿವಸ್ತುತಿಯನ್ನು ಭಜಿಸಿದಾಗ ಗುರುಬಸವನು ಶಿವೋಹಂ ಶಿವೋಹಂ ಎಂದು ಜಪಿಸುತ್ತಿದ್ದನು.

ಈ ಮೇಳದಲ್ಲಿ ಗೌರಾಂಗನೆಯು ಏಕ ಮನಸ್ಸಿನಿಂದ ಭಾಗಿಯಾಗಿದ್ದಳು. ಮೊದಲೇ ಸಂಗೀತಗಾರ್ತಿ, ಸಂಗೀತಪ್ರೇಮಿಯಾಗಿದ್ದ ಅವಳ ಮಧುರ ಕಂಠಕ್ಕೆ ಈಗ ಶೋಭೆ ಬಂದಿತು. ಅವಳ ಸುಪ್ತ ಪ್ರತಿಭೆ ಕುದುರಿತು. ಹಾಡುತ್ತಿದ್ದಂತೆಯೇ ಅವಳು ಭಾವಪರವಶಳಾದಳು. ಉಳಿದವರು ತಮ್ಮ ಭಜನೆಯನ್ನು ಮರೆತರು. ಅವಳ ಸ್ವರ್ಗೀಯ ಕಂಠದಿಂದ ಹೊರ ಹೊಮ್ಮುತ್ತಿದ್ದ ಶಿವಸ್ತುತಿಯ ಹಾಡುಗಳನ್ನು ಆಲಿಸುತ್ತ ತನ್ಮಯತೆ ಹೊಂದಿದ್ದರು.
ಗಂಗಾ ತಾಯಿಯ ಜಡೆಯಲಿ ಧರಿಸಿದ
ಮಂಗಳ ಬೀರುವ ಶಿವನಿಗೆ ನಮಿಸೋ
ಎಂದು ಅವಳು ಪಲ್ಲವಿ ಕೂಡಿಸಿದಾಗ ಪರಮಶಿವನೇ ಅಲ್ಲಿಗೆ ಇಳಿದು ಬಂದಂತೆ ಜನರು ಭಾವಿಸಿದರು. ಜನರ ಧ್ವನಿ
ಶಂಭೋ ಶಂಕರ ಸಾಂಬ ಶಿವಾ
ಹರ ಹರ ಶಂಕರ ಸಾಂಬ ಶಿವಾ
– ಬೆಟ್ಟ ಕಾಡು ಕಂದರಗಳಲ್ಲೆಲ್ಲ ವ್ಯಾಪಿಸಿ ಅನುರಣಿತವಾಯಿತು.

ಗುರುಬಸವ ಅವನ ಮಗಳು ಗೌರಿ ಅವಳ ಮಗ ಶಿವ ಇವರು ಹಳ್ಳಿಯ ಕೇಂದ್ರವಾಗಿ ಹಳ್ಳಿಯ ಜೀವವಾಗಿ ಹಳ್ಳಿಯ ಸಾರಸರ್ವಸ್ವವಾಗಿದ್ದರು. ಅವರು ಆ ಹಳ್ಳಿಯ ಸೇವೆಯನ್ನು ಸಂಪೂರ್ಣ ಶ್ರದ್ಧೆ ವಿಶ್ವಾಸದಿಂದ ನೆರೆವೇರಿಸುತ್ತಿದ್ದರು. ತುಂಟ ಅಣುಗ ಶಿವನಿಗೆ ಅಜ್ಜನ ಮೇಲೆ ಅಧಿಕ ವ್ಯಾತ್ಸಲ್ಯ. ಶಿವನನ್ನು ನೋಡಿದಷ್ಟೂ ಗುರುಬಸವನಿಗೆ ತೃಪ್ತಿಯಿಲ್ಲ. ಅವನನ್ನು ಎತ್ತಿಕೊಂಡು ಕಾಡು ಕಾಡು ಅಲೆದು ಹಣ್ಣುಗಳನ್ನು ಕೊಯ್ದು ಆರಿಸಿಕೊಡುವನು. ವಾರಕ್ಕೊಮ್ಮೆಯಾದರೂ ತಾನೇ ಅವನನ್ನು ಮೀಯಿಸುವನು. ಶಿವಾ ಎಂದು ಕರೆದಾಗ ಅವನು ತಾಯಿಯ ಮಡಿಲಿನಿಂದಲೂ ಎದ್ದು ಓಡಿ ಬರುತ್ತಿದ್ದನು. ಆಗ ಗುರುಬಸವನಿಗೆ ತಾನೆಲ್ಲಿದ್ದೇನೆ ಎಂದೇ ಮರೆತುಹೋಗುತ್ತಿತ್ತು. ಅಜ್ಜನ ಹೆಲಗಮೇಲೆ ಒಂದೊಂದು ಕಾಲನ್ನು ಒಂದೊಂದು ಕಡೆ ಹಾಕಿಕೊಂಡು ಕುಳಿತು ತಲೆಯನ್ನು ಹೊಡೆದು ಜುಟ್ಟನ್ನು ಎಳೆದು ಹೇಯ್ ಚುಜುರೆ ಹೇಯ್ ಎಂದು ಅಬ್ಬರಿಸುವನು. ಆ ಕೂಡಲೇ ಆ ಕುದುರೆಯು ಜೋರು ಜೋರಾಗಿ ನಡೆಯುತ್ತಿತ್ತು.

ಶಿವಾ ! ನಿಂಗೇನು ಬೇಕೋ? ಅಜ್ಜನ ಪ್ರಶ್ನೆ.
ಕಿಚ್ಚಞ್ಞ ಅಜ್ಜ! ಎಂದು ಅವನು ಹೇಳಿದಾಗ ಗುರುಬಸವನು ಕಾಡು ಕಾಡು ಅಲೆದು ಹುಡುಕಿ ಕಿತ್ತಳೆ ಹಣ್ಣುಗಳನ್ನು ಆ ಹುಡುಗನಿಗೆ ತಂದುಕೊಡುವನು. ಆದರೆ ಹುಳಿ ಸೋಳೆಗಳನ್ನು ತಿಂದು ಮಗು ಬಾಯಿ ಚಪ್ಪರಿಸುವಾಗ ಅಜ್ಜನಿಗೆ ಅಮಿತಾನಂದವಾಗುವುದು. ಞಞ್ಞಞ್ಞ ಹೊಚ್ಕೊಂಡು ಜೋಜು ಓಜಜ್ಜಾ! ಎಂದು ಮಗುವೆಂದರೆ ಗುರುಬಸವನಿಗೆ ತನ್ನ ಪ್ರಾಯವೇ ಮರೆತುಹೋಗುವುದು. ಅವನು ಪಣ್ಯದ ಬಯಲಿನಲ್ಲಿ ಓಡುವನು. ಶಂಕರನೇ ಈ ಮಗುವಿನ ರೂಪದಿಂದ ಭಕ್ತನ ಸೇವೆಯನ್ನು ಹೀಗೆ ಪಡೆಯುತ್ತಿರುವನೆಂದು ಗುರುಬಸವನು ತಿಳಿದಿದ್ದನು. ಮಗುವೇ ಈಶ್ವರ ತಾನು ನಂದಿ ಎಂದು ಅವನು ನಂಬಿದ್ದನು.

ಒಂದು ದಿನ ನಡುಹಗಲು. ದನಕಾಯುವ ಹುಡುಗರು ಎಲ್ಲೆಲ್ಲಿಯೂ ಪೊದೆಗಳನ್ನು ಸೋಮವಾರದ ಹಣ್ಣು, ಗೊಟ್ಟೆ ಹಣ್ಣು, ಮಜ್ಜಿಗೆ ಹಣ್ಣು ಮುಂತಾದವುಗಳಿಗಾಗಿ ಅರಸುತ್ತಿದ್ದರು. ಪ್ರತಿಯೊಂದು ಪೊದೆಯೂ ಅವರ ದೃಷ್ಟಿಯಿಂದ ಒಂದು ಶತ್ರುರಾಜ್ಯ. ಅದರ ಮೇಲೆ ಇವರು ಧಾಳಿ ಮಾಡಿ ಅದನ್ನು ಸೋಲಿಸುವುದು, ಧಾಳಿ ಮಾಡಲು ಹೋಗುವವರಂತೆ ಇವರು ನಟಿಸುತ್ತಿದ್ದರು. ಹಾಗೆ ಸೋತ ರಾಜ್ಯ ಇವರಿಗೆ ಕಪ್ಪ ಕಾಣಿಕೆಯನ್ನು ನೀಡಿ ಕಳುಹಿಸಬೇಕಾಗಿತ್ತು. ಈ ಕಪ್ಪ ಕಾಣಿಕೆಗಳೇ ಅವರು ತಿನ್ನುತ್ತಿದ್ದ ಹಣ್ಣುಗಳು. ಇಂತಹ ಧಾಳಿ ಮಾಡುತ್ತಿದ್ದಾಗ ಕೆಲವು ರಾಜ್ಯಗಳಲ್ಲಿ ಅಡಗಿರುತ್ತಿದ್ದ ಮೊಲ ಕಂದಿಲಿಗಳು ಹೆದರಿ ನೆಗೆದು ಓಡಿಬಿಡುತ್ತಿದ್ದವು. ಹಸುರು ಹಾವುಗಳು ಗಾಬರಿಯಿಂದ ಅಡರುಗಳಿಗೆ ನೇತುಕೊಂಡು ಹಿಂದೆ ಮುಂದೆ ಓಲಾಡುತ್ತಿದ್ದುವು. ಅವಗಳ ಮೈಯ್ಯ ಮೇಲೆ ಆಗ ಕಡುಹಸುರಿನ ಗುಳ್ಳೆಗಳು ಏಳುತ್ತಿದ್ದುವು. ಇವರ ಈ ಆಕ್ರಮಣ ನಡೆದಂತೆ ದನಗಳು ಆ ಕಡೆ ತಮ್ಮದೇ ಆಕ್ರಮಣ – ತೋಟ ಗದ್ದೆಗಳಿಗೆ ಆಕ್ರಮ ಪ್ರವೇಶ – ಮಾಡುತ್ತಿದ್ದುವು. ಅಷ್ಟರಲ್ಲಿ ಹುಡುಗರು ತಮ್ಮ ಹಣ್ಣುಗಳ ಬೇಟೆಯನ್ನು ಬಿಟ್ಟು ಇತ್ತಕಡೆ ಓಹೋಹೋ ಹೈ ಹೈ ಎಂದು ಅಬ್ಬರಿಸುತ್ತ ಓಡುತ್ತಿದ್ದರು.

ಈ ರೀತಿ ನಡೆಯುತ್ತಿದಾಗ ಒಬ್ಬ ಹುಡುಗನು ಯಾವುದೋ ಪೊದರಿನೆಡೆಯಲ್ಲಿ ತರಗಲೆಗಳ ಮಧ್ಯೆ ಹೊಳೆಯುವ ಒಂದು ವಸ್ತುವನ್ನು ನೋಡಿದನು ನೆಲದಿಂದ ಒಂದುಗುಲ ಮಾತ್ರ ಮೇಲೆ ಕಾಣುತ್ತಿದ್ದ ನೂತನ ವಸ್ತು ಆ ಎಲೆಗಳ ಮೇಲೆಲ್ಲ ಬೆಳಕು ಬೀರುವಷ್ಟು ಪ್ರಕಾಶಯುತವಾಗಿದ್ದಿತು. ಹುಡುಗನು ಅದನ್ನು ಕೆದರಿದನು- ಅದು ಗಡಸಾಗಿದ್ದಿತು. ಅವನು ಕೂಡಲೇ ಸಂತೋಷಾಶ್ಚರ್ಯಗಳಿಂದ ಇತರರನ್ನು ಕೂಗಿ ಕರೆದನು ಅವರೆಲ್ಲರೂ ಓಡಿ ಓಡಿ ಬಂದರು. ಬಂದವರೆಲ್ಲರೂ ಸೇರಿ ಮಣ್ಣನ್ನು ಕೆರೆದು ಕತ್ತಿಯಿಂದ ಒಕ್ಕಿ ಹೊರಗೆ ತೆಗೆದರು. ಹಾಗೆ ಮಣ್ಣನ್ನು ಬಗೆದಂತೆಯೇ ಆ ವಸ್ತುವು ನೆಲದೊಳಗೆ ಆಳವಾಗಿ ಹುಗಿದುಕೊಂಡಿದ್ದಂತೆ ತೋರಿತು. ಅಧಿಕ ಕುತೂಹಲಪೂರಿತರಾದ ಹುಡುಗರು ಲಗುಬಗೆಯಿಂದ ಮಣ್ಣನ್ನು ಅಗೆದು ತೆಗೆದು ಆ ಸುಂದರ ವಸ್ತುವನ್ನು ನೆಲದಿಂದ ಹೊರಗೆ ಸೆಳೆದೇ ಬಿಟ್ಟರು. ಅವರು ಅದನ್ನು ನೆಲದಿಂದ, ಆ ಗುಂಡಿಯಿಂದ ಹೊರಗೆಳೆದಾಗ ಅದರ ಹೊಳಪು ಮಾಯವಾಗಿಹೋಯಿತು. ಅದೊಂದು ಕಪ್ಪಾಗಿ ತುಕ್ಕು ಹಿಡಿದಂತಹ ಖಡ್ಗದಂತೆ ಇದ್ದಿತು. ಅದರ ಪ್ರಕಾಶವೇನಾಯಿತೆಂದು ಅದು ಹೇಗೆ ಮಾಯವಾಗಿ ಹೋಯಿತೆಂದು ಹುಡುಗರಿಗೆ ವಿಸ್ಮಯವಾಯಿತು. ಹುಡುಗರು ತಮ್ಮೊಳಗೆಯೇ  ನೋಡುವ ನೋಡುವ ಎಂದು ಆ ಕತ್ತಿಯನ್ನು ಎಳೆದಾಡಿದರು. ಬಾಳುಕತ್ತಿಯು ಜಾರಿಬಿದ್ದಿತು. ಹಾಗೆ ನೆಲಕ್ಕೆ ಬಿದ್ದ ಕತ್ತಿಯ ರೂಪ  ಆ ಕ್ಷಣವೇ ಮಾರ್ಪಾಡಾಯಿತು.

ಅದು ಪುನಃ ಪಳಪಳನೆ ಹೊಳೆಯಲಾರಂಭಿಸಿತು. ಹುಡುಗರೆಲ್ಲರೂ ಅದನ್ನು ಎತ್ತಲೆಂದು ಮುಂದೆ ಬಗ್ಗಿದರು. ಒಬ್ಬನು ಅದನ್ನು ನೆಲದಿಂದ ಮೇಲೆ ತೆಗೆದನು. ಕೂಡಲೇ ಅದರ ಹೊಳಪು ಅಳಿಯಿತು. ಇದೇನಾಶ್ಚರ್ಯವೆಂದು ಅವರು ಪುನಃ ಕತ್ತಿಯನ್ನು ನೆಲದ ಮೇಲೆ ಹಾಕಿದರು – ಪ್ರಭೆಯು ಪ್ರಜ್ವಲಿಸಿತು. ಹೀಗೆ ಅವರು ಆ ಕತ್ತಿಯನ್ನು ನೆಲದ ಮೇಲಿಡುವುದು ತೆಗೆಯುವುದು ಮಾಡಿ ಮಾಡಿ ಅದರ ಪ್ರಕಾಶ ಮಿಂಚುವುದು ಮಾಯವಾಗುವುದು ನೋಡಿ ನೋಡಿ ಬೆಕ್ಕಸಬೆರೆಗಾದರು. ತಮ್ಮ ನೂತರ ಸಂಶೋಧನೆಯ ಕುರಿತು ಹಿರಿಯರಿಗೆ ಅರುಹಲೆಂದು ಅವರೆಲ್ಲರೂ ಹಳ್ಳಿಯ ಕಡೆಗೆ ಸಾಗಿದರು. ವಿಷಯ ಪ್ರಚಾರವಾದೊಡನೆಯೇ ಅಲ್ಲಿ ಗ್ರಾಮಸ್ಥರ ಸಂತೆ ಸೇರಿತು. ಪ್ರತಿಯೊಂದು ವ್ಯಕ್ತಿಯೂ ಆ ಕತ್ತಿಯನ್ನು ಹಿಡಿಯುವುದು ನೆಲದ ಮೇಲಿಡುವುದೂ ಹೀಗೆ ಕ್ರಮಾನುಗತವಾಗಿ ಮಾಡಿ ನೋಡಿ ಅದೃಷ್ಟ ಪರೀಕ್ಷೆ ಮಾಡಲಾಯಿತು. ಕತ್ತಿಯು ಮೊದಲಿನಂತೆಯೇ ವರ್ತಿಸುತ್ತಿತ್ತು…. ನೆಲದ ಮೇಲಿರುವಾಗ ಮೆರಗು, ಮೇಲೆತ್ತಿದಾಗ ಕಪ್ಪು ಕಬ್ಬಿಣ. ಗುರುದೇವನಿಗೆ ಸುದ್ದಿಹೋಯಿತು – ಇಲ್ಲ ಅವನಲ್ಲಿಗೆ ಕತ್ತಿಯನ್ನು ತೆಗೆದುಕೊಂಡು ಹೋದರು. ಗುರುಬಸವನು ಕತ್ತಿಯನ್ನು ಹಿಡಿದು ನೋಡಿದನು. ಕರಿಕಬ್ಬಿಣ, ಸಾದಾ ಕತ್ತು. ಅದನ್ನು ನೆಲದ ಮೇಲಿಟ್ಟನು. ಆ ದೇದೀಪ್ಯಮಾನ ಪ್ರಕಾಶದಿಂದ ವಿಸ್ಮಯಭರಿತನಾದನು. ಖಡ್ಗವನ್ನು ಮೇಲೆತ್ತಿ ಸೂಕ್ಷ್ಮವಾಗಿ ಪರೀಕ್ಷಿಸಿದನು. ಅದರ ಹಿಡಿಯಲ್ಲಿದ್ದ ಕೆತ್ತನೆಯ ಕೆಲಸ ಅದರ ಎರಕ ಎಲ್ಲವೂ ಪರಿಷ್ಕಾರವಾಗಿದ್ದುವು. ಅದರ ಅಲಗು ಹರಿತವಾಗಿದ್ದಿತು. ಖಡ್ಗವನ್ನು ಚೆನ್ನಾಗಿ ತೊಳೆದು ತರುವಂತೆ ಹೇಳಿದನು. ಒಬ್ಬನು ಅದನ್ನು ಅಲ್ಲಿಯ ತೊರೆಯಲ್ಲಿ ಚೊಕ್ಕಟವಾಗಿ ತೊಳೆದು ತಂದನು. ಅಂಟಿಕೊಂಡಿದ್ದ ಮಣ್ಣು ಹಾಮಾಸು ಎಲ್ಲ ಹೋದುವು. ಆದರೂ ಖಡ್ಗವು ಮೊದಲಿನಂತೆಯೇ – ಹೊಳೆತವಿಲ್ಲ. ಗುರುಬಸವನು ಖಡ್ಗದ ಹಿಡಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ಅದರಲ್ಲಿ ಚಂದ್ರವರ್ಮ ಎಂದು ಚಿಕ್ಕ ಅಕ್ಷರಗಳಲ್ಲಿ ಕೆತ್ತಿಕೊಂಡಿದ್ದುದನ್ನು ನೋಡಿ ರೋಮಾಂಚನ ಹೊಂದಿದನು. ಕೊಡಗು ಸಂಸ್ಥಾನವನ್ನು ಸಂಸ್ಥಾಪಿಸಿದವನು ಎಂದು ಖ್ಯಾತಿವೆತ್ತ, ಕೇರಳ ಮತ್ತು ತೌಳವ ರಾಜ್ಯಗಳ ಅಧಿಪತಿಯಾಗಿ ಮೆರೆದಿದ್ದ ಧರ್ಮಾತ್ಮ ವೀರಚಕ್ರವರ್ತಿ ಚಂದ್ರವರ್ಮನ ಖಡ್ಗವೇ ಇದು ಎಂದು ಆನಂದದಿಂದ ತುಂದಿಲನಾದನು.

ಇದು  ಮಹಾಪುರುಷ ಮಹಾತ್ಮ ಚಂದ್ರವರ್ಮನ ಖಡ್ಗ. ಹಾಗಾಗಿ ಇದಕ್ಕೆ ಇಂತಹ ಮಹಿಮೆ. ಪಾಮರರ ಕೈಯ್ಯಲ್ಲಿ ಇದು ಕಪ್ಪಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ಗುರುಬಸವನು ತನ್ನ ನಿರ್ಧಾರವನ್ನು ಸಾರಿದನು.

ಚಂದ್ರವರ್ಮನ ಪವಿತ್ರ ನಾಮೋಚ್ಚಾರಣೆಯಿಂದ ಜನರೆಲ್ಲರೂ ಹರ್ಷ ಪುಳಕಿತರಾದರು.

ಈ ಪವಿತ್ರ ಖಡ್ಗ ಶಿವಮಂದಿರದಲ್ಲಿಯೇ ಇರಲು ಯೋಗ್ಯವಾದುದು. ಇದಕ್ಕೂ ನಾಮ ಪೂಜೆ ನೈವೇದ್ಯಗಳನ್ನು ಸಲ್ಲಿಸಬೇಕು ಎಂದು ಗ್ರಾಮದ ಮುಖಂಡನಾದ – ಪಟೇಲನು ವಿಧಿಸಿದನು. ಸಕಲರೂ ಈ ಮಾತಿಗೆ ತಮ್ಮ ಸಮ್ಮತಿಯನ್ನು ಹೃತ್ಪೂರ್ವಕವಾಗಿ ಸೂಚಿಸಿದರು.

ಚಂದ್ರವರ್ಮನ ಖಡ್ಗ ಶಿವಮಂದಿರದಲ್ಲಿ ಪ್ರತಿಷ್ಠಾಪಿತವಾಯಿತು. ಈ ವಿಚಿತ್ರ ವಿಸ್ಮಯಕಾರಕ ಖಡ್ಗದ ರಹಸ್ಯ ಗೂಢವಾಗಿ ಉಳಿಯಿತು. ದಿನನಿತ್ಯ ಗುರುಬಸವನು ಅಭಿಷೇಕಕ್ಕಾಗಿ ಅದನ್ನು ತೆಗೆದಾಗ ಅದು ಕಪ್ಪಾಗುತ್ತಿದ್ದಿತು. ಸ್ವಸ್ಥಾನ ಪ್ರತಿಷ್ಠಾಪನೆ ಯಾದೊಡನೆ ಮೊದಲಿನಂತೆಯೇ ಹೊಳಪಿನಿಂದ ಕೂಡಿ ಆ ಮಂದಿರವನ್ನು ಬೆಳಗುತ್ತಿತ್ತು.

ಗೌರಾಂಗನೆಯ ಹಾಡುಗಾರಿಕೆಯು ಪಣ್ಯಗ್ರಾಮದಲ್ಲಿ ಎಲ್ಲವರನ್ನೂ ಮರುಳುಗೊಳಿಸಿತ್ತು. ಅಲ್ಲದೇ ಅವಳ ಸಂಬಂಧವಾಗಿ ನೆರೆಯ ಗ್ರಾಮದವರಿಗೂ ಪಣ್ಯದವರಿಗೂ ನಿಕಟಸ್ನೇಹ ಬಳಕೆಗಳು ಬೆಳೆದುವು. ಅಲ್ಲಿಂದ ಹಲವಾರು ಮಂದಿ ಭಕ್ತರು ಆಗಾಗ ಗುರುಬಸವ ಶಿವಪೂಜೆಗೆ ಬಂದು ಸೇವೆಯರ್ಪಿಸಿ ಗೌರಾಂಗನೆಯ ಸಂಗೀತ ಶ್ರವಣಾನಂದವನ್ನು ಅನುಭವಿಸಿ ಕೃತಾರ್ಥರಾಗಿ ಮರಳುತ್ತಿದ್ದರು. ಗೌರಾಂಗನೆಯ ಕಂಠಮಾಧುರ್ಯ ಅದ್ಭುತವಾಗಿದ್ದಿತು. ಅವಳು ಹಾಡುವಾಗ ಸರಸ್ವತಿಯೇ ಅವಳ ಜಿಹ್ವೆಯಲ್ಲಿ ಅವತರಿಸಿರುವಳು ಎಂದು ಭಕ್ತರು ಭಾವಿಸುತ್ತಿದ್ದರು. ಅವಳು ಕಾಲಭೈರವನ ತಾಂಡವ ನೃತ್ಯದ ವರ್ಣನೆಯನ್ನು ಹಾಡುವಾಗ ಭಕ್ತರು ಅಲ್ಲಿ ರುದ್ರನನ್ನು ಕಾಣುತ್ತಿದ್ದರು. ತಲೆದೂಗುತ್ತಿದ್ದರು.

ತಾಂಡವ ನೃತ್ಯವಾಡಿದ ಶಂಕರ

ಚಂಡ ಪ್ರಚಂಡನು ರುದ್ರಭಯಂಕರ

ತ ದ್ಧಿ ತ್ತೊಂ ನ್ನಂ

ತಳಾಂಗು ತರಿಕಿಟ ತಕಧಿಮಿ ತರಿಕಿಟ

ಎಂದು ಮುಂತಾಗಿ ವರ್ಣಿಸಿ ರಾಗವೆಳೆದಾಗ ಅವರು ಕಂಡದ್ದು ಗೌರಾಂಗನೆಯನ್ನಲ್ಲ. ಗುರುಬಸವನಲ್ಲ – ಫಣಿನೇತ್ರನನ್ನು, ಹಾಗೆಯೇ ಮುಂದುವರಿಸುತ್ತ

-ನಂದಿವಾಹನ ನೀಲ ಕಂಠ

ಶಂಭೊ ಶಂಕರ ದೇವ ಪೊರೆಯೊ

– ಎಂದೆನ್ನುವಾಗ ಆ ಕಾಲರುದ್ರನು ಆ ಭಯಂಕರ ರೂಪಿಯು ಸೌಮ್ಯ ಸ್ವರೂಪದಿಂದ ಶಂಕರನಾಗಿ ಶುಭಕರನಾಗಿ ಅವರ ಮುಂದೆ ಮಂದಹಾಸ ಬೀರುತ್ತಿದ್ದನು.

ಶಂಕರ ಶುಭಕರ ಪಾರ್ವತಿ ರಮಣಾ

ಕಿಂಕರ ಜನವಾ ಪೂರೆಯುವ ದೇವಾ

ಗೌರಾಂಗನೆಗೆ ತಾನು ಏನು ಹಾಡುತ್ತಿರುವೆನ್ನೆನ್ನುವುದರ ಪರಿವೆಯಿಲ್ಲದೇ ಆ ಸಂಗೀತಾಮೃತವಾಹಿನಿಯಲ್ಲಿ ಒಂದಾಗಿ ಹರಿಯುತ್ತಿದ್ದಳು. ಅವಳು ಹಾಡುತ್ತಿದ್ದಂತೆಯೇ ರಾಗಗಳೂ ಹಾಡುಗಳೂ ಅವಳಿಗೆ ತಾವಾಗಿಯೇ ಒಲಿದು ಬರುತ್ತಿದ್ದಂತೆ ಭಾಸವಾಗುತ್ತಿತ್ತು. ಇಂತಹ ದಿವ್ಯ ಸಂಗೀತ, ಈ ಮಹಾಭಕ್ತರ ಕುಟುಂಬ, ಜತೆಗೆ ಅತ್ಯಾಶ್ಚರ್ಯಕರವಾದ ಚಂದ್ರವರ್ಮನ ಖಡ್ಗ- ಈ ವಿಷಯಗಳು, ರಸದ ಗಟ್ಟಿಗಳು ಎಷ್ಟು ದಿನ ಪಣ್ಯದಲ್ಲಿಯೇ ಉಳಿಯಬಹುದು? ಸೂರ್ಯ ಪ್ರಭೆಯನ್ನು ಗೂಡಿನಲ್ಲಿ ಅಡಗಿಸುವುದು ಅಸಾಧ್ಯ. ಪಣ್ಯದ ಪರಿಮಳದ ಗಾಳಿಯು ಮಡಿಕೇರಿಗೆ ಬೀಸಿತು.

ಮಡಿಕೇರಿಯಿಂದ ಪಣ್ಯಕ್ಕೆ ಕೇವಲ ನಾಲ್ಕು ಮೈಲು ದೂರ. ಹಿಂದಿನ ಕಾಲದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನಸಂಚಾರ ಕಡಿಮೆ. ಆದರೂ ಮಡಿಕೇರಿಯಿಂದ ಬಹಳ ಮಂದಿ ಜನರು – ಭಕ್ತರಾಗಿಯೋ ಉತ್ಸುಕತೆಯಿಂದ ಕೂಡಿದವರಾಗಿಯೋ, ಖಡ್ಗವನ್ನು ನೋಡಲೆಂದೋ – ಗುರುಬಸವಯ್ಯನ ಆಶ್ರಮವನ್ನು  ಸಂದರ್ಶಿಸತೊಡಗಿದರು. ಬಂದವರೆಲ್ಲರೂ ಗುರುಬಸವನ ಪುಣ್ಯಭೂಮಿಯಲ್ಲಿ ಒಂದು ಪೂಜೆಗಾದರೂ ತಂಗಿದ್ದು ಭಕ್ತರಸಪೂರಿತರಾಗಿ ಮರಳುತ್ತಿದ್ದರು. ಅವರೆಲ್ಲರೂ ಚಂದ್ರವರ್ಮನ ಖಡ್ಗವನ್ನು ಹಿಡಿದು ನೋಡಿ ಅದರ ವೈಚಿತ್ರ್ಯಕ್ಕೆ ಬೆರಗಾಗುತ್ತಿದ್ದರು. ಗೌರಾಂಗನೆಯ ಭಜನೆಯ ಗೀತೆಗಳಿಂದ ಮುಗ್ಧರಾಗಿ ಹೋಗುತ್ತಿದ್ದರು.

ಹೀಗೆ ಬಂದು ಹೋದವರಲ್ಲಿ ಒಬ್ಬ ತೇಜಸ್ವಿ ದೃಢಕಾಯದ ಯುವಕನೂ ಇದ್ದನು. ಜನರ ಮಧ್ಯೆ ಮುಂದೆ ನುಗ್ಗಿ ಖಡ್ಗವನ್ನು ಹಿಡಿದು ನೋಡುವ ಪ್ರಯತ್ನವನ್ನು ಅವನೇನೂ ಮಾಡಲಿಲ್ಲ. ಆ ಸಮಯದಲ್ಲಿ ಕೊಡಗು ದೇಶದ ರಾಜಕಾರಣದಲ್ಲಿ ಹಲವಾರು ವ್ಯತ್ಯಾಸಗಳು ತಲೆದೋರಿದ್ದುವು. ದೊಡ್ಡ ವೀರರಾಜನು ಇನ್ನೂ ಯೌವ್ವನದಲ್ಲಿಯೇ ಶಿವಾಧೀನನಾಗಿದ್ದನು. ಅವನ ಮಗ ಲಿಂಗರಾಜ ಕೇವಲ ಎಳೆಯ ತರುಣನು. ಆದರೂ ಅವನು ದಕ್ಷನಾಗಿದ್ದುದರಿಂದ ತಂದೆಯ ಮರಣಾನಂತರ ಸ್ವಾತಂತ್ರ್ಯ ಸಾರಿದ್ದ ಸಾಮಂತ ರಾಜರನ್ನು ಸದೆಬಡಿದು ಕೊಡಗು ರಾಜರ ರಾಜ್ಯವನ್ನು ಪುನಃಸ್ಥಾಪಿಸಿದ್ದನು. ಇಂತಹ ತರುಣ ಪ್ರಭುವಿನ ಮೇಲೆ ಕೊಡಗರ ಪ್ರೀತ್ಯಾದರಗಳು ಹೆಚ್ಚಾಗಿ ಬೆಳೆದುವು. ಯೋಗ್ಯ ಪ್ರಭುವಾದ ಲಿಂಗರಾಜನಿಗೆ ಪ್ರತಿ ಗ್ರಾಮದವರೂ ತಮ್ಮ ನಜರನ್ನು ಭಕ್ತಿಪೂರ್ವಕವಾಗಿ ಅರ್ಪಿಸಿ ಅವನಿಗೆ ವಿಧೇಯತೆಯನ್ನೂ ನಮ್ರತೆಯನ್ನೂ ಸಾರಿ ಯೋಗ್ಯ ಸನ್ಮಾನ ಪಡೆದು ಮರಳುತ್ತಿದ್ದರು. ಹೀಗೆ ನಜರೊಪ್ಪಿಸುವಾಗ ಕಾಣಿಕೆಯೊಡನೆ ವಿಶೇಷವಾದ ವಸ್ತುವನ್ನೋ ಪದಾರ್ಥವನ್ನೋ ರಾಜನಿಗೆ ಅರ್ಪಿಸುವುದು ರೂಢಿಯಾಗಿತ್ತು. ನಾಪೋಕ್ಲು ಗ್ರಾಮದವರು ಜರಿಪತ್ತಲವನ್ನು ನೀಡಿದರೆ ಮದೆನಾಡಿನವರು ಸೊಗಸಾದ  ರತ್ನಗಂಬಳಿಯನ್ನು ಕೊಟ್ಟಿದ್ದರು. ಪೊನ್ನಂಪೇಟೆಯವರು ರತ್ನಖಚಿತವಾದ ಒಂದು ಕಿರಿಯ ಸಿಂಹಾಸನವನ್ನು ನಿವೇದಿಸಿದ್ದರು. ಪಣ್ಯಗ್ರಾಮದ ಪಟೇಲನನು ಆ ಗ್ರಾಮದ ಮುಖಂಡನಾಗಿ ರಾಜನ ದರ್ಬಾರಿಗೆ ಸಾಗಿದನು. ಚಂದ್ರವರ್ಮನ ಖಡ್ಗವನ್ನೇ ಆ ಶುಭ ಸಂದರ್ಭದಲ್ಲಿ ರಾಜನಿಗೆ ಅರ್ಪಿಸುವುದು ಉಚಿತ, ಮರ್ಯಾದೆ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು. ಗುರುಬಸವನು ಆ ಖಡ್ಗವನ್ನು ಪಟೇಲನಿಗೆ ಕೊಟ್ಟಿದ್ದನು.

ರಾಜಾಸ್ಥಾನದಲ್ಲಿ ಸಂಪ್ರದಾಯದ ಬಿನ್ನವತ್ತಳೆ ಮರ್ಯಾದೆಗಳು ಮುಗಿದ ಬಳಿಕ ಪಟೇಲನು ಒರೆಯಿಂದ ಈ ನೂತನ ಖಡ್ಗವನ್ನು ತೆಗೆದು ಲಿಂಗರಾಜನ ಪಾದತಲದಲ್ಲಿಡಲು ಕೈನೀಡಿದನು.

ನಿಲ್ಲಿ ಪಟೇಲರೇ! ಈ ಖಡ್ಗದ ಹೆಸರೇನು? ರಾಜನ ಪ್ರಶ್ನೆ.

ಇದೊಂದು ಮಹಾಮಹಿಮೆ, ವಿಶೇಷತೆ ಇರುವ ಖಡ್ಗ ಪ್ರಭುಗಳೇ. ಇದರ ಹೆಸರು ಹಿರಿಮೆಯಿರುವಂತಹದು – ಚಂದ್ರವರ್ಮನ ಖಡ್ಗವೆಂದರೆ ಇದೇ ಮಹಾರಾಜರೇ!

ನೆಲದಲ್ಲಿಟ್ಟರೆ ಹೊಳೆಯುವ, ಕೈಯಲ್ಲಿ ಹಿಡಿದರೆ ಹೊಳೆಯದಿರುವ ಖಡ್ಗವಿದಲ್ಲವೇ?

ಪ್ರಭುಗಳು ಯಥಾರ್ಥವನ್ನೇ ನುಡಿಯುತ್ತಿರುವರು.

ಇಂತಹ ಪವಿತ್ರ ಖಡ್ಗವನ್ನು ಇಟ್ಟುಕೊಳ್ಳಲು ನಾನು ಯೋಗ್ಯನಲ್ಲ. ಪಟೇಲರೇ! ಇದು ಅಲ್ಲಿಯೇ ಶಿವಮಂದಿರದಲ್ಲಿರಲಿ ಎಂದು ವಿನಯದಿಂದ ರಾಜನು ಆಜ್ಞಾಪಿಸಿದನು.

ಪಟೇಲನು ರಾಜಾಜ್ಞೆಯನ್ನು ಶಿರಸಾವಹಿಸಿ ಹಿಂದೆ ತೆರಳಿದನು. ಕುಟೀರದ ಬೆಳಕು, ಗ್ರಾಮದ ಜ್ಯೋತಿ ಹಿಂದೆ ಬಂದಿತು. ಅದು ರಾಜಾಸ್ಥಾನವನ್ನು ಅಲಂಕರಿಸಿದ್ದರೆ ಯಾರಿಗೂ ಬೇಸರವಾಗುತ್ತಿರಲಿಲ್ಲ. ಆದರೆ ಈಗ ಆ ಪವಿತ್ರ ಖಡ್ಗ ಯಥಾಸ್ಥಾನ ಪ್ರತಿಷ್ಠಾಪಿತವಾದಾಗ ಗ್ರಾಮದ ಸಕಲರಿಗೂ ಪರಮ ಸಂತೋಷವಾಯಿತು. ಐದು ವರ್ಷದ ಶಿವನು ನಲಿದ. ನಲಿದು ಕೇಕೆ ಹಾಕಿದ.

ದಿನಗಳು ಪ್ರಚಂಡ ವೇಗದಿಂದ ಗತಿಸಿದುವು. ಮಳೆಗಾಲ ಕಳೆದು ಚಳಿಗಾಲ ಬಂದಿತು. ನೀರು ಸುರಿಸಿದ ಮೋಡಗಳು ಬೆಳ್ಳಗಾಗಿ ತೆಳ್ಳಗಾಗಿ ಹಾಗೆಯೇ ಮರೆಯಾದುವು. ಹಸುರುಹಚ್ಚಡ ದಟ್ಟವಾಗಿ ವ್ಯಾಪಿಸಿತು. ಆ ಸಮಯದಲ್ಲಿ ಲಿಂಗರಾಜನ ಸೈನಿಕರು ಪಣ್ಯಗ್ರಾಮದ ಸಮೀಪದಲ್ಲಿ ಕವಾಯತು ವ್ಯಾಯಾಮಗಳಿಗಾಗಿ ಪಾಳೆಯ ಬಿಟ್ಟರು. ಅಲ್ಲಿಯ ವಿಶಾಲವಾದ ಬಯಲಿನಲ್ಲಿ ಅದರ ಅಂಚಿನ ಕಾಡುಬೆಟ್ಟಗಳಲ್ಲಿ ಅವರಿಗೆ ಬೇಕಾದಂತಹ ಯುದ್ಧದ ವ್ಯಾಯಾಮಗಳನ್ನು ಮಾಡಲು ಎಡೆಯಿದ್ದಿತು. ಹಾಗೆ ಶಿಕ್ಷಣವು ಕೆಲವು ವಾರಗಳವರೆಗೆ ಸಾಗಿತು. ಸೈನಿಕರಲ್ಲಿ ಕೆಲವರು ಬಿಡುವೇಳೆಯಲ್ಲಿ ಗುರುಬಸವನ ಆಶ್ರಮಕ್ಕೆ ಬಂದು ದೇವರ ಪೂಜೆ ಭಜನೆಗಳಲ್ಲಿ ಭಾಗಿಗಳಾಗಿ ಮರಳುತ್ತಿದ್ದರು. ಗೌರಾಂಗನೆಯ ಸಂಗೀತವು ಸದಾ ಅವರ ಕರ್ಣಕುಹರಗಳಲ್ಲಿ ಅನುರಣಿತವಾಗುತ್ತಿದ್ದಿತು. ಹೀಗೆ ಸೈನಿಕರಿಂದ ಕ್ರಮೇಣ ಅಧಿಕಾರಗಳವರೆಗೂ ಅವಳ ಗಾನಮಹಿಮೆಯು ವ್ಯಾಪಿಸಿತು.

ಶಿಬಿರದ ಕೊನೆಯ ದಿವಸ. ಸೈನಿಕರಲ್ಲಿ ಸಂತೋಷವೇ ಸಂತೋಷ. ಆ ದಿನ ಮುಗಿದರೆ ಮೂರು ತಿಂಗಳಿನ ಅವರ ದೀರ್ಘ ಏಕಾಂತವಾಸ ಮುಗಿದು ಮತ್ತೆ ಅವರು ಸಂಸಾರವಂದಿಗರಾಬಹುದು. ಆ ದಿನವನ್ನು ಅತಿ ವೈಭವದಿಂದ ವಿಜೃಂಭಣೆಯಿಂದ ನೆರವೇರಿಸಬೇಕೆಂದು ಮೊದಲೇ ನಿಶ್ಚಯವಾಗಿತ್ತು. ಲಿಂಗರಾಜನೇ ಅಂದಿನ ಸಾಯಂಕಾಲ ಅಲ್ಲಿಗೆ ದಯಮಾಡಿಸಿ ಸೈನಿಕರ ಪ್ರಣಾಮ ಮರ್ಯಾದೆ ಸ್ವೀಕರಿಸುವೆನೆಂದು ಮೊದಲು ವದಂತಿಯಿತ್ತು. ಆದರೆ ಅವನಿಗೆ ಬೇರೇನೋ ತ್ವರಿತದ ರಾಜಕಾರಣವಿದ್ದುದಿಂದ ಮಡಿಕೇರಿಯಿಂದ ಹೊರಗೆ ಹೊರಡಲೇ ಆಗಲಿಲ್ಲ.

ಇಂತಹ ಮಹಾದಿನದಂದು ಸಂಗೀತಗಾರ್ತಿ ಗೌರಾಂಗನೆಯನ್ನು ಕರೆಸಬೇಕೆಂದೂ, ಅವಳ ಹಾಡನ್ನು ಕೇಳಿ ಆನಂದಿಸಬೇಕೆಂದೂ ಶಿಬಿರಾಧಿಪತಿಯು ನಿಶ್ಚಯಿಸಿದನು. ಅಧಿಪತಿಯ ಪರವಾಗಿ ವಿನಯಪೂರ್ವಕ ಪ್ರಣಾಮ ಮತ್ತು ಆಮಂತ್ರಣ ಗೌರಾಂಗನೆಗೆ ಮೊದಲಾಗಿಯೇ ಬಂದಿತು.

ನಾನು ದೇವರ ಸನ್ನಿಧಾನದಲ್ಲಿ ಮಾತ್ರ ಹಾಡುವುದು, ಬೇರೆಲ್ಲಿಯೂ ಹಾಡುವುದಿಲ್ಲ. ಇಲ್ಲಿಂದ ಎಲ್ಲಿಗೂ ಕದಲುವುದೂ ಇಲ್ಲ ಎಂದು ಅವಳು ನಿರ್ಧಾರಪೂರ್ವಕವಾಗಿ ಹೇಳಿಕಳುಹಿಸಿದಳು.

ಅಧಿಕಾರಿಯು ಈ ಮಾತನ್ನು ಕೇಳಿ ತಾನೇ ಸ್ವತಃ ಒಂದು ಅವಳನ್ನು ಪರಿಪರಿಯಾಗಿ ಪ್ರಾರ್ಥಿಸಿದನು.

ಅಲ್ಲಿಯೂ ದೇವರ ನಾಮಸಂಕೀರ್ತನೆ ಮಾಡಿ ತಾಯೀ ಎಂದು ಅವನೆಂದಾಗ, ಪ್ರಾಯಶಃ ಅವನ ವಿನಯ ಸೌಜನ್ಯಗಳಿಗೆ ಮಾರುಹೋಗಿ ಗೌರಾಂಗನೆಯು ಒಪ್ಪುತ್ತಿದ್ದಳೋ ಏನೋ! ಆದರೆ ಗುರುಬಸವನು ಆಗ ಸ್ಪಷ್ಟವಾಗಿ ಖಂಡಿತವಾಗಿ ಹೇಳಿದನು, ಏನು ಗೌರಿ? ನಿನಗೆ ಅಲ್ಲಿಗೆ ಹೋಗುವ ಮನಸ್ಸೆ? ನಿನಗೇಕೆ ಈ ದುರ್ಬುದ್ಧಿಯನ್ನು ಕೊಟ್ಟನೋ ಭಗವಂತ.

ಗೌರಾಂಗನೆಯು ತಾನು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಯೇ ಬಿಟ್ಟಳು. ಸೈನಿಕರ ನಾಯಕನು ಹತಾಶನಾಗಿ ಸ್ವಲ್ಪ ಮಟ್ಟಿಗೆ ಅಪಮಾನಿತನಾಗಿ ಹಿಂತಿರುಗಿದನು. ತಾನೊಬ್ಬ ರಾಜನ ಬಲಗೈ ಬಂಟನೆಂದಿರುವಾಗ ಈ ಮಹಾಸೇನೆಯ ಅಧಿಪತಿಯಾಗಿರುವಾಗ ತನಗೆ ಇಂತಹ ಮಾತು. ತಾನು ದಾರಿ ಬಿಟ್ಟು ಹೋಗಿ ಅವರನ್ನು ಪ್ರಾರ್ಥಿಸಿಕೊಂಡರೂ ಅಪಮಾನಕರವಾದ ಬಿರುನುಡಿ. ಸೇನಾನಿಯಲ್ಲಿ ಹತಾಶೆಯು ಅಪಮಾನರೋಷಗಳಾಗಿ ಪರಿವರ್ತನೆಗೊಂಡಿತು. ಅವನು ಹೇಗಾದರೂ, ಬಲಾತ್ಕಾರದಿಂದಾದರೂ, ಗೌರಾಂಗನೆಯನ್ನು ಹಿಡಿದು ತರಿಸಿ ಹಾಡಿಸುವುದು ನಿಶ್ಚಯ ಎಂದುಕೊಂಡನು. ಕೂಡಲೇ ಅವನ ಸೈನಿಕರು ಹತ್ತುಮಂದಿ ಸಶಸ್ತ್ರಯೋಧರು ಆ ಅಬಲೆಯನ್ನು ಹಿಡಿದು ತರಲು ಗುರುಬಸವನ ಕುಟೀರದೆಡೆಗೆ ಧಾವಿಸಿದರು.

ನಾನು ಬರಲಾರೆ ನಾನು ಬರಲಾರೆ ಎಂದು ಆ ಸಾಧ್ವಿಯು ಮೊರೆಯಿಟ್ಟಳು.

ಗುರುಬಸವನು ಶಿವನನ್ನು ನಡೆಸಿಕೊಂಡು ದೂರವೆಲ್ಲಿಯೋ ಹೋಗಿದ್ದನು. ಗೌರಾಂಗನೆಯನ್ನು ಸೆರೆಯಾಗಿ ಹಿಡಿದುಕೊಂಡು ಸೈನಿಕರು ತೆರಳಿಯೇ ಬಿಟ್ಟರು. ಅಬಲೆಯ ವಿರುದ್ಧ ಸಶಸ್ತ್ರ ಸೈನಿಕರ ಪ್ರತಾಪ – ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ! ಆದರೆ ಅವಳನ್ನು ಮರ್ಯಾದೆಯಿಂದ ನಡೆಸಿಕೊಂಡರು. ಸೇನಾನಾಯಕನು ಅವಳಿಗೆ ಗೌರವವಿತ್ತು ತಮ್ಮ ಅನಿವಾರ್ಯ ಅಕೃತ್ಯಕ್ಕಾಗಿ ಕ್ಷಮಾಯಾಚನೆ ಮಾಡಿದನು.

ದೇವರನ್ನು ಕದ್ದು ತರುವುದು ಪಾಪಕರವಲ್ಲ. ಆ ಉದ್ದೇಶದಿಂದ ನಾವು ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದೇವೆ ತಾಯೀ! ನೀವು ಕೋಪಿಸಬಾರದು. ನಿಮ್ಮ ದೇವರ ನಾಮಗಳಿಂದ ನಮ್ಮನ್ನು ಅನುಗ್ರಹಿಸಬೇಕು ಎಂದು ಬಲು ವಿನಯದಿಂದ ನುಡಿದ ಸೇನಾನಿಯ ನುಡಿಗಳನ್ನು ತಿರಸ್ಕರಿಸುವುದು ಗೌರಾಂಗನೆಗೆ ಆಗದ ಮಾತಾಯಿತು. ದೇವರ ಗುಣಗಾನ ಪ್ರಾರಂಭವಾಯಿತು. ಅವಳು ಎಷ್ಟು ಹೊತ್ತು ಹಾಡಿದಳೋ ಯಾರಿಗೂ ತಿಳಿಯಲಿಲ್ಲ. ಕಾಲಾತೀತವಾದ ಸಂಗೀತ ಆ ಪ್ರದೇಶವಿಡೀ ವ್ಯಾಪಿಸಿ ಸರ್ವವೂ ಶಿವಮಯವಾಗಿದ್ದಿತು.

ಶಿವನಾಮಸ್ಮರಣೆ ಮಾಡೋ

ಭವ ಬಂಧನವ ತೊಡೆದು ಹಾಕೋ

ಎನ್ನುವ ಕೊನೆಯ ಗೀತ ಹಾಡಿದಾಗಲಂತೂ ಸೈನಿಕರು ಶಿವನಾಮವನ್ನೇ ಜಪಿಸುತ್ತಿದ್ದರು. ಸೈನಿಕರಲ್ಲಿ, ಜನರಲ್ಲಿದ್ದಂತೆ, ದೇವಭಕ್ತಿ ನೀತಿ ಮುಂತಾದ ಸದ್ಗುಣಗಳು ಭರಿತವಾಗಿದ್ದ ಕಾಲವದು. ಹಾಗಾದುದರಿಂದ ಇಂತಹ ಸಂಗೀತ ಅವರಿಗೆ ಬಲು ಮೆಚ್ಚಿಕೆಯಾಗಿದ್ದಿತು.

ಸಂಗೀತ ಮುಗಿಯುವಾಗ ಆ ಭಾವಸಮಾಧಿಯಿಂದ ಸೈನಿಕರು ತಿಳಿದೇಳುವಾಗ ಗೌರಾಂಗನೆಯು ಪುನಃ ಭೂಲೋಕಕ್ಕೆ ಶಂಕರಪಾದತಲದಿಂದ ಮರಳುವಾಗ ಪೂರ್ವ ದಿಗಂತದಲ್ಲಿ ನವ ಅರುಣೋದಯವಾಗುತ್ತಿತ್ತು. ಈ ಸಂಗೀತ ಸ್ರೋತಸ್ಸು ದಿಗ್ದಿಗಂತಗಳಲ್ಲಿ ಹರಿದು ಪಸರಿಸಿ ಅಲ್ಲೆಲ್ಲ ಮಂಗಳಕರ ರಾಗವು ಮಿಡಿಯುತ್ತಿದ್ದಿತು. ಪಕ್ಷಿಗಳ ಗಾನ, ಬೆಳಕಿನ ವೈಭವ; ಸೂರ್ಯದೇವನು ಆನಂದಪುಳಕಿತನಾಗಿ ಚೈತನ್ಯಭರಿತನಾಗಿ ಮೇಲೆದ್ದು ಬಂದನು. ಸೇನಾಧಿಪತಿಯು ತಾನೇ ಸ್ವತಃ ಗೌರಾಂಗನೆಯನ್ನು ಗುರುಬಸವನ ಆಶ್ರಮದವರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವಳನ್ನು ಬಿಟ್ಟು ಮರಳಿದನು.

ಗೌರಾಂಗನೆಯ  ಆಗಿನ ಮನಃಸ್ಥಿತಿಯು ಹೇಗಿದ್ದಿರಬಹುದು? ಗುರುಬಸವನ ಕಟ್ಟಾಣತಿಯ ವಿರುದ್ಧ ಅವಳು ಶಿಬಿರಕ್ಕೆ ಹೋಗಿದ್ದಳು. ಆಜ್ಞೋಲ್ಲಂಘನೆಯನ್ನು ಅವಳು ಮಾಡಿದ್ದಿಲ್ಲವಾದರೂ ಫಲಿತಾಂಶವು ಹಾಗಾಗಿದ್ದಿತು. ಅವಳ ಒಪ್ಪಿಗೆಯಿಲ್ಲದೇ ಅವಳನ್ನು ಅಲ್ಲಿಗೆ ಒಯ್ದಿದ್ದರು. ಈಗ ಗುರುವಿನ ಮುಖವನ್ನು ಹೇಗೆ ನೋಡುವುದು? ಮಗನು ಎಲ್ಲಿ? ರಾತ್ರಿ ತಾಯಿಯನ್ನು ಕಾಣದೇ ಎಷ್ಟು ಹಲುಬುತ್ತಿದ್ದನೋ?

ಶಿವಾ ! ಚಿಕ್ಕಪ್ಪಾ! ಎಂದು ಕರೆಯುತ್ತ ಅವಳು ಕುಟೀರದೊಳಗೆ ಪ್ರವೇಶಿಸಿದಳು. ಸ್ವಲ್ಪ ಹೆದರಿಕೆಯಿಂದಲೇ ಕಾಲಿಟ್ಟಳು. ಗುರುಬಸವನು ಸ್ನಾನ ಮಾಡಿ ಮರಳಿರುವ ಹೊತ್ತದು. ಒಳಗಿನಿಂದ ಅವನ ಧ್ವನಿಯು ಗುಡುಗಿತು.

ನಿನಗಿಲ್ಲಿ ಪ್ರವೇಶವಿಲ್ಲ. ಸ್ವಚ್ಛಂದ ಸ್ತ್ರೀ! ನೀನು ಎಲ್ಲಿಗೆ ಬೇಕಾದರೂ ಹೋಗು.

ಶಿವನು ಪ್ರೀತಿ ತುಂಬಿದ ರೋದನ ಧ್ವನಿಯಿಂದ ಅಮ್ಮಾ ಅಮ್ಮಾ ಎಂದು ಕರೆಯುತ್ತ ಓಡಿಬರಲು ಹೊರಟನು. ಅಜ್ಜನು ಅವನನ್ನು ಬಿಗಿಯಾಗಿ ಹಿಡಿದುಕೊಂಡು ಎದ್ದುಬಂದನು.

ನನ್ನ ಆಜ್ಞೆಯನ್ನು ನೀನು ಉಲ್ಲಂಘಿಸಿ ನಾನಿಲ್ಲಿ ಇಲ್ಲದಾಗ ಹೋದೆ. ನಿನ್ನಿಷ್ಟ ಬಂದಾಗ ಹೋದೆ. ರಾತ್ರಿಯೆಲ್ಲ ಹೋಗಿದ್ದೆ. ಎಲ್ಲಿಗೆ ಹೋಗಿದ್ದೆ? ಶಿಬಿರಕ್ಕಲ್ಲವೆ?

ಆದರೆ ನಾನಾಗಿಯೇ ಹೋಗಲಿಲ್ಲ.

ಮತ್ತೆ ನೀನಾಗಿಯೇ ಹೋಗದೆ ಅವರೇನು ನಿನ್ನನ್ನು ಎಳೆದುಕೊಂಡು ಹೋಗಲು ನೀನೇನು ಮಗುವೆ?

ನನ್ನದು ತಪ್ಪಿಲ್ಲ ಚಿಕ್ಕಪ್ಪ.

ಅಮ್ಮಾ ಅಮ್ಮಾ ಎಂದು ಶಿವನು ಎಳೆದಾಡಹೊರಟನು.

ಹುಡುಗನಿಗೆ ರಾತ್ರಿಯಿಡೀ ತಾಯಿಯನ್ನು ಕಾಣದೆ ಮರುದಿನ ಕಂಡಾಗ ಮೇರೆ ಮೀರುವ ಸಂತೋಷವಾಗಿತ್ತು. ತಾಯಿಯ ಕಡೆಗೆ ಧಾವಿಸಿದನು – ಅಜ್ಜನನ್ನು ಬಲವಾಗಿ ಹಿಡಿದು ಎಳೆದನು. ಆದರೆ ಅಜ್ಜನ ಹಿಡಿತ ಇನ್ನೂ ಶಿಥಿಲವಾಗಿರಲಿಲ್ಲ. ಗೌರಾಂಗನೆಯ ಕಣ್ಣುಗಳಲ್ಲಿ ನೀರು ತುಂಬಿ ಜಾರಿತು. ಅವಳು ಏನೂ ಹೇಳಲಿಲ್ಲ. ಅಧೋವದನೆಯಾದಳು.

ನಿನಗಿನ್ನಿಲ್ಲಿ ಪ್ರವೇಶವಿಲ್ಲ. ಎಲ್ಲಿಗೆ ಬೇಕಾದರೂ ಹೋಗು. ನಿನ್ನ ಸಂಗೀತ ಪ್ರದರ್ಶನಮಾಡು ಎಂದು ಗುಡುಗಿದನು. ಗುಡಿಸಲಿನ ಕದವನ್ನು ಅವಳ ಮುಖದ ಮೇಲೆಯೇ ಬಡಿದನು. ಹುಡುಗನು ತಾಯಿಯ ಸಾಮೀಪ್ಯಕ್ಕಾಗಿ ಹೊಡೆದಾಡಿದನು ಅತ್ತನು. ನಿರಪರಾಧಿ, ಅಪಮಾನಿತ ಸ್ತ್ರೀ. ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಘೋರ ಶಿಕ್ಷೆ. ಸೌಮ್ಯ ಮೂರ್ತಿ ಗುರುಬಸವನಲ್ಲಿ ಎಂತಹ ಕಠೋರತೆ, ನಿಷ್ಕರುಣೆ ? ಶಂಕರನು ಭಯಂಕರನಾದ, ಗೌರಾಂಗನೆಗೆ ಭಯಂಕರಾಘಾತ, ವಿಧವೆ, ಪುತ್ರಸುಖವಂಚಿತೆ. ನಿರ್ಗತಿಕ ಸ್ತ್ರೀ, ನಿಲ್ಲಲು ಎಡೆಯಿಲ್ಲ. ಆದರೆ ಮನಸ್ಸು ಹೃದಯ ದೇಹ ಪರಿಶುದ್ಧವಾಗಿವೆ. ಸಾತ್ತ್ವಿಕ ಗುಣದಿಂದ ಅಧಿಕ ಮನೋದಾರ್ಢ್ಯ ಸಾಮರ್ಥ್ಯ ಇರುವ ಹೆಂಗಸು ಅವಳಾಗಿದ್ದಳು. ಸತ್ತ್ವ ಪರೀಕ್ಷೆ ನಡೆಯುತ್ತಿದೆ. ಶಿವನ ಲೀಲೆ ಮರೆಯಲಿ.

ಗೌರಾಂಗನೆಯು ದೃಢ ನಿರ್ಧಾರದಿಂದ ಅಲ್ಲಿಂದ ಸಾಗಿಯೇ ಬಿಟ್ಟಳು. ದೂರ  ದೂರ ಹೋಗಿಯೇ ಬಿಟ್ಟಳು. ಆ ನಿರ್ಧಾರಪೂರ್ವಕವಾದ ನಡಿಗೆಯಲ್ಲಿ ಅವಳ ಕಾಲುಗಳಿಗೆ ಮುಳ್ಳು ಚುಚ್ಚಿದಂತಾಗುತ್ತಿದ್ದುದು ಮಗನ ಅಮ್ಮಾ ಅಮ್ಮಾ ಕರೆ. ಆದರೆ ಅದೇ ಮಗನ ಉಜ್ಜ್ವಲ ಭವಿಷ್ಯದ ಹಂಬಲವೇ ಅವಳಿಗೆ ಧೈರ್ಯವನ್ನೂ ಶಕ್ತಿಯನ್ನೂ ನೀಡುತ್ತಿದ್ದಿತು. ಗೌರಾಂಗನೆಯು ದೂರ ಹೋದಳು. ಪಣ್ಯದ ಚಿರ ಪರಿಚಿತ ಗಿಡಮರಗಳು ದನಕರುಗಳು ದನ ಕಾಯುವ ಹುಡುಗರು ಎಲ್ಲರೂ ಎಲ್ಲರೂ ಮೌನವಾಗಿ ನಿಂತು ಅವಳ ನಿರ್ಗಮನವನ್ನೇ ನಿಟ್ಟಿಸಿದವು, ನಿಟ್ಟಿಸಿದರು.

ವಜ್ರದೃಢ ಮನಸ್ಸಿನಿಂದ ಅವಳು ಮುಂದೆ ನಡೆದಳು, ನಿರ್ದಿಷ್ಟವಾದ ಗುರಿಯನ್ನು ಸೇರಿ ನೂತನ ಸಾಹಸ ಕಾರ್ಯದಲ್ಲಿ ಉದ್ಯುಕ್ತಳಾದಳು – ರಾಜಧಾನಿ ಮಡಿಕೇರಿಯನ್ನು ಸೇರಿದಳು. ಅಲ್ಲಿಯ ಶಿವಮಂದಿರದಲ್ಲಿ ಅವಳು ನೆಲಸಿದಳು. ಸುಂದರ ಸೌಸವಪೂರಿತ ಪುಷ್ಪ ಎಲ್ಲಿದ್ದರೂ ಭಕ್ತಭೃಂಗಗಳು ಅರಸಿ ಬರುವುವು. ಗೌರಾಂಗನೆಯ ಗಾನವಾಹಿನಿ ಶಿವಮಂದಿರಲ್ಲಿ ತುಂಬಿ ಹರಿಯಿತು. ಆ ಕಾವೇರಿ ನದಿಯಲ್ಲಿ ಮಿಂದು ಭಕ್ತರು ಕೃತಾರ್ಥರಾದರು. ಅಂದಿನಿಂದ ಶಿವಮಂದಿರಕ್ಕೆ ಖ್ಯಾತಿ ಕಳೆ ಏರಿದುವು. ಆಗಮಿಸುವ ಭಕ್ತ ಸಮೂಹ ಏರುತ್ತಿದ್ದಿತು. ಪಣ್ಯದ ಆಶ್ರಮದ ಭಕ್ತೆಯು ಇಲ್ಲಿಗೆ ಬಂದು ನೆಲಸಿರುವುದು ಮಡಿಕೇರಿಯ ಭಾಗ್ಯ ಎಂದುಕೊಂಡರು ಭಕ್ತಾದಿಗಳು.

ಗೌರಾಂಗನೆಯ ಪ್ರತಿಭೆ, ಸಂಗೀತ ಕಲೆಯಲ್ಲಿ ಪರಿಶ್ರಮ, ಕಂಠ ಮಾಧುರ್ಯ, ಭಕ್ತಿಗಳು ಲಿಂಗರಾಜನ ಗಮನಕ್ಕೆ ಶೀಘ್ರವಾಗಿ ಬಂದುವು. ಹಿಂದೊಮ್ಮೆ ವೇಷಪಲ್ಲಟನ ಮಾಡಿ ಅವನು ಪಣ್ಯಾಶ್ರಮಕ್ಕೆ ಹೋಗಿ ಈ ರಮಣೀಮಣಿಯ ಸಂಗೀತ ಶ್ರವಣ ಮಾಡಿದ್ದನು. ಗುಣಪಕ್ಷಪಾತಿ ರಾಜನಿಗೆ ಅವಳ ಯೋಗ್ಯತೆ ಅರಿಯಲು ಸಮಯ ಬೇಕಾಗಿರಲಿಲ್ಲ. ಒಂದು ದಿನ ಅವಳಿಗೆ ರಾಜಾಸ್ಥಾನಕ್ಕೆ ಬರಬೇಕೆಂದು ಆಮಂತ್ರಣವು ಬಂದಿತು. ಲಿಂಗರಾಜನೇ ಸ್ವತಃ ಪತ್ರವನ್ನು ಬರೆದು ಮಂತ್ರಿಯ ಕೈಯ್ಯಲ್ಲಿ ಅದನ್ನು ಗೌರಾಂಗನೆಗೆ ಕಳುಹಿಸಿದ್ದನು. ಅವಳು ಸಂತೋಷದಿಂದ ಆಹ್ವಾನವನ್ನು ಮನ್ನಿಸಿದಳು. ಮರುದಿನ ರಾಜಸಭೆಯಲ್ಲಿ ಗೌರಾಂಗನೆಯ ಸಂಗೀತ. ಆ ದಿನ ಅವಳ ಸಂಗೀತದ ಮಟ್ಟ ಪರಮೋತ್ಕೃಷ್ಟವಾಗಿತ್ತು. ಅಪೂರ್ವವಾದ  ಅದ್ಭುತವಾದ ಕಲಾಕೌಶಲ್ಯದಿಂದ, ಪ್ರತಿಭೆಯಿಂದ, ಶ್ರೀಕಂಠದಿಂದ ಸಂಗೀತ ಹಾಡಿ ಸಭಿಕರನ್ನು ರಂಜಿಸಿದಳು. ದೈವಿಕವಾದ ಒಂದು ಪ್ರಭಾವಕ್ಕೆ ಅವಳು ವಶಳಾಗಿ ಅದರಲ್ಲಿ ತಾದಾತ್ಮ್ಯಹೊಂದಿ ಹಾಡುತ್ತಿದ್ದಂತೆ ತೋರಿತು. ಹಾಡಿದಳು ಎನ್ನುವುದಕ್ಕಿಂತಲೂ ಆ ದೈವಿಕ ಶಕ್ತಿ ಅವಳ ಮುಖಾಂತರ ಸಂಗೀತ ಸ್ರೋತಸ್ಸನ್ನು ಪ್ರವಹಿಸುವಂತೆ ಮಾಡಿತು ಎನ್ನುವುದೇ ಹೆಚ್ಚು ಸಮಂಜಸ. ಪ್ರತಿಹಾಡೂ ಶಿವನ ಪರವಾದುದೇ. ಸಿಂಹಾಸನರೂಢನಾಗಿದ್ದ ರಾಜನು ಸಂಗೀತ ಶ್ರವಣವನ್ನು ಇನ್ನೂ ಚೆನ್ನಾಗಿ ಮಾಡಲು ಅಲ್ಲಿಂದ ಕೆಳಗಿಳಿದು ಸಭಿಕರ ಜತೆಯಲ್ಲಿ ಮಂಡಿಸಿದನು. ಶಿವಧ್ಯಾನವಾಗುವಾಗ ರಾಜ ಪ್ರಜೆಯೆನ್ನುವ  ಭೇದವಿದೆಯೆ? ಎಲ್ಲರೂ ಶಿವನಲ್ಲಿ ಐಕ್ಯವಾಗಿದ್ದರು. ಶಿವನೆಂದರೆ ಸಂಗೀತ, ಸಂಗೀತವೆಂದರೆ ಶಿವ. ಗಾನಪ್ರಿಯ ಶಂಕರನನ್ನು ಗೌರಾಂಗನೆಯು ಗಾನಾರಾಧನೆ ಮಾಡಿ ಮೆಚ್ಚಿಸಿದಳು, ಒಲಿಸಿದಳು. ಸಂಗೀತ ಮಂದಾನಿಲವು ಕೈಲಾಸಗಿರಿ ಶಿಖರವೇರಿ ಅಲ್ಲಿಯ ಕಂಪನ್ನೊಳಗೊಂಡು ಮರಳಿತು. ಸದಾಶಿವನಿಗೆ ಮಂಗಳ ಹಾಡಿ ಆ ಮಹಾಸಭೆಯನ್ನು ಮುಕ್ತಾಯಗೊಳಿಸುವಾಗ ರಾಜನ ಮತ್ತು ಸಭಾಸದರ ಸಂತೋಷ ಜಯಘೋಷದಿಂದ ಅರಮನೆಯು ಬಿರಿಯುವಂತಾಯಿತು.

ಲಿಂಗರಾಜನನು ಧನ್ಯನಾದನು. ಶ್ರೋತೃಗಳು ಆನಂದಭರಿತರಾದರು. ಅರಮನೆಯು ಪವಿತ್ರವಾಯಿತು.
ಮಹಾಸಾಧ್ವಿಯೇ ! ಭಕ್ತ ಶಿರೋಮಣಿಯೇ! ಗಾನ ಕಲಾನಿಧಿಯೇ! ನಿನಗೇನು ಬಹುಮಾನವನ್ನು ಕೊಟ್ಟರೂ ಅದು ಅತ್ಯಲ್ಪ. ಪರಮೇಶ್ವರಿಗೆ ನಾವೇನು ತಾನೇ ಕೊಟ್ಟೇವು? ಅದು ಅವನಿಗೆ ಬೇಕಾಗಿದೆಯೇ? ಆದರೆ ನಮ್ಮ ಆತ್ಮ ತೃಪ್ತಿಗಾಗಿ ನಮಗೆ ಅತಿಪ್ರಿಯವಾದುದನ್ನು ಅವನಿಗೆ ಅರ್ಪಿಸುತ್ತೇವೆ. ಇಂತಹ ವಿನೀತ ಭಾವನೆಯಿಂದ ನಾನು ಪ್ರಶ್ನಿಸುತ್ತಿದ್ದೇನೆ. ನಿನಗೇನು ಬಹುಮಾನವನ್ನು ನಾನು ಕೊಡಲಿ ? ಹೇಳಬೇಕು.
ಗೌರಾಂಗನೆಯು ಎದ್ದು ನಿಂತು ಮಹಾರಾಜರೇ! ನಿಮ್ಮ ಪ್ರಶ್ನೆಗೆ ನಾನು ಕೃತಜ್ಞಳಾಗಿದ್ದೇನೆ. ನಾನು ಮಹಾರಾಜರಿಂದ ಬಹುಮಾನ ಸ್ವೀಕರಿಸುವುದು ಭಾಗ್ಯವೆಂದು ತಿಳಿದುಕೊಂಡಿದ್ದೇನೆ. ಏಕೆಂದರೆ ತಾವು ಶಿವಸ್ವರೂಪರು. ನಾನು ಅಪೇಕ್ಷಿಸುವ ಉಡುಗೊರೆಯನ್ನು ಸಾರ್ವಜನಿಕ ಎದುರು ಅರುಹಲು ಇಷ್ಟಪಡುವುದಿಲ್ಲ. ತಾವೂ ನಾನೂ ಇರುವಾಗ ಅದನ್ನು ಬಿನ್ನವಿಸಿಕೊಳ್ಳುತ್ತೇನೆ ಎಂದು ಹೇಳಿದಳು.

ಲಿಂಗರಾಜನ ಇಂಗಿತವರಿತು ಜನರೆಲ್ಲರೂ ರಾಜನಿಗೂ ಗೌರಾಂಗನೆಗೂ ಪ್ರಣಾಮವರ್ಪಿಸಿ ತೆರಳಿದರು. ಈಗ ಉಳಿದವರು ರಾಜ ಮತ್ತು ಗೌರಾಂಗನೆ. ಸೇವಕರೂ ಸಮೀದಲ್ಲಿರಲಿಲ್ಲ. ಗೌರಾಂಗನೆಯು ಖಂಡಿತವಾಣಿಯಲ್ಲಿ ಲಿಂಗರಾಜನ ಸೈನಿಕರ ಅಕೃತ್ಯದಿಂದ ಅವಳಿಗೆ ಒದಗಿದ ವಿಪತ್ಪರಂಪರೆಯನ್ನು ವಿವರಿಸಿದಳು.
ಮಹಾರಾಜರೇ ! ನಿರಪರಾಧಿಯಾದ ನನಗೆ ಇಂತಹ ದುರವಸ್ಥೆ ತಪ್ಪು ಯಾರದು?
ಸಾಧ್ವಿಯೇ! ನೀನು ಹೇಳಿದುದು ಅರ್ಥವಾಯಿತು. ತಪ್ಪು ನನ್ನ ಸೈನಿಕರದು. ಆದರೆ ಅಂತ್ಯದಲ್ಲಿ ಅವರ ತಪ್ಪು ಒಪ್ಪುಗಳಿಗೆ ನಾನೇ ಹೊಣೆಗಾರನು. ನಿನಗೆ ನನ್ನಿಂದ ಮಹಾಪರಾಧವಾಗಿದೆಯೆಂದು ಒಪ್ಪುತ್ತೇನೆ. ಅದಕ್ಕೇನು ಪರಿಹಾರ ಬೇಕಾದರೂ ಕೊಡುತ್ತೇನೆ.
ಏನು ಬೇಕಾದರೂ ಕೊಡುವಿರಾ ಪ್ರಭುಗಳೇ?
ಖಂಡಿತವಾಗಿಯೂ ಲಿಂಗರಾಜನ ಮಾತಿಗೆ ಎರಡಿಲ್ಲ.
ಹಾಗಾದರೆ ಪಣ್ಯದ ಗುರುಬಸವಯ್ಯನವರಿಗೆ ಈಗಲೇ ವಿನಂತಿ ಕಳುಹಿಸಿ – ಅವರು ನನ್ನ ಮಗನೊಡನೆ ಚಂದ್ರವರ್ಮನ ಖಡ್ಗವನ್ನು ತೆಗೆದುಕೊಂಡು ಇಲ್ಲಿಗೆ ಬರಬೇಕೆಂದು. ನಾನಿಲ್ಲಿರುವ ವಿಷಯ ತಿಳಿಸಬೇಡಿ. ಅವರು ಬಂದ ಮೇಲೆ ನನಗೇನು ಪರಿಹಾರಬೇಕೆಂದು ಅರುಹುವೆನು ಮಹಾರಾಜರೇ.

ಮಾತು ನಡೆದಾಗ ಮಧ್ಯರಾತ್ರಿಯು ಮೀರಿದ್ದಿತು. ರಾಜನು ಕೂಡಲೇ ಚಾರರನ್ನು ಪಣ್ಯಾಶ್ರಮಕ್ಕೆ ಕಳುಹಿಸಿದನು. ಗೌರಾಂಗನೆಯೂ ರಾಜನೂ ಅಲ್ಲಿಯೇ ಕುಳಿತಿದ್ದರು. ಮಾತಿಲ್ಲ. ಕೆಲವು ಗಂಟೆಗಳ ಅನಂತರ, ಅರುಣೋದಯ ಕಾಲ. ಗುರುಬಸವಯ್ಯನವರು ಬಂದಿರುವರು ಎಂದು ಸೇವಕರಿಂದ ಸುದ್ದಿ ಬಂದಿತು.

ರಾಜ ವಿನಂತಿಯ ಅರ್ಥ ಗುರುಬಸವಯ್ಯನಿಗೆ ಆಗಿರಲಿಲ್ಲ. ದೇವರ ಅವತಾರ ರಾಜನ ಆಜ್ಞೆಯನ್ನು ಮನ್ನಿಸಿ ಅವನು ಶಿವನೊಡಗೂಡಿ ಬಂದಿದ್ದನು. ಚಂದ್ರವರ್ಮನ ಖಡ್ಗ ಅವನ ಕೈಯಲ್ಲಿ ಕಪ್ಪಾಗಿ ತೋರುತ್ತಿದ್ದಿತು, ಅರ್ಧ ನಿದ್ರೆಯಲ್ಲಿದ್ದ ಶಿವನು ಅಜ್ಜನ ಹೆಗಲ ಮೇಲೆ ಒರಗಿ ನಿದ್ರಿಸುತ್ತಿದ್ದನು. ರಾಜನ ಆಸ್ಥಾನ. ಗುರುಬಸವಯ್ಯನು ಗೌರಾಂಗನೆಯನ್ನು ಗುರುತಿಸಿದನು. ಆದರೆ ಮುಖದಲ್ಲಿ ಯಾವ ಪರಿವರ್ತನೆಯೂ ಕಾಣಲಿಲ್ಲ. ಗೌರಾಂಗನೆಯು ಮೌನವನ್ನು ಭೇದಿಸಿದಳು. ಮಹಾರಾಜರೇ! ಈ ಖಡ್ಗದ ಯೋಗ್ಯತೆ ತಮಗೆ ಗೊತ್ತಿದೆಯೇ?
ಚೆನ್ನಾಗಿ ಗೊತ್ತಿದೆ, ತಾಯೀ!
ಈಗ ನನಗೆ ಬೇಕಾಗಿರುವ ಪರಿಹಾರ ನಿಮ್ಮ ಜೀವ – ನಿಮ್ಮ ಜೀವ ನನಗೆ ಬೇಕು. ನೀವು ಈ ಖಡ್ಗದಿಂದ ನಿಮ್ಮನ್ನು ಸಂಹರಿಸಿಕೊಳ್ಳಬೇಕು.
ಗೌರೀ! ಏನು ಮಾತು, ಏನು ಮಾತು? ಎಂದನು ಗುರುಬಸವ.
ನಾನು ಸ್ವಚ್ಛಂದ ಸ್ತ್ರೀ. ಅದು ನನ್ನ ಇಷ್ಟ ಎಂದಳು ದೃಢವಾಗಿ.
ಪರಮಸಂತೋಷದಿಂದ ನಿನ್ನ ಕೋರಿಕೆಯನ್ನು ನೆರವೇರಿಸುತ್ತೇನೆ. ಶಿವಾರ್ಪಣೆಯಾಗಲಿ ಈ ಜೀವ ಎಂದು ರಾಜನು ಚಂದ್ರವರ್ಮನ ಖಡ್ಗವನ್ನು ಗುರುಬಸವಯ್ಯನ ಕೈಯಿಂದ ಸೆಳೆದುಕೊಂಡನು. ನೀರವ. ರಾಜನು ಶಿವಧ್ಯಾನ ಮಾಡಿ ಖಡ್ಗವನ್ನು ಭಕ್ತಿಯಿಂದ ಪೂಜಿಸಿದನು. ದೃಷ್ಟಿ ಕೈಲಾಸಪರ್ವತದೆಡೆಗೆ.

ಖಡ್ಗವನ್ನು ಹಿರಿದು ಕಂಠವನ್ನು ಇರಿದುಕೊಳ್ಳಲು ಹಿಂದೆ ಬೀಸುವಾಗಲೇ ಆ ಪವಿತ್ರ ಖಡ್ಗವು ಮಹಾಪ್ರಕಾಶದಿಂದ ಪ್ರಜ್ಜ್ವಲಿಸಿತು! ರಾಜಮಂದಿರವಿಡೀ ಶತಕೋಟಿ ಸೂರ್ಯಪ್ರಭೆಯಿಂದ ದೇದೀಪ್ಯಮಾನವಾಯಿತು. ಗೌರಾಂಗನೆಯು ಆಗಲೇ – ರಾಜನ ಕುತ್ತಿಗೆಯ ಮೇಲೆ ಖಡ್ಗದ ಅಲಗು ಬೀಳುವ ಮೊದಲೇ – ಮುಂದೆ ಧಾವಿಸಿ ರಾಜನ ಕೈಗಳನ್ನು ಬಲವಾಗಿ ಹಿಡಿದು ಖಡ್ಗದ ಪ್ರಹಾರವನ್ನು ತಪ್ಪಿಸಿದಳು, ಮಹಾರಾಜರೇ ನಿಲ್ಲಿ ನಿಲ್ಲಿ ಎಂದು ಅವಳು ಕೂಗಿದಳು.
ಏನು ಸಾಧ್ವೀ! ನಾನು ಜೀವ ಅರ್ಪಿಸುವ ಕ್ರಮ ನಿನಗೆ ಸರಿದೋರಲಿಲ್ಲವೇ?
ರಾಜಕರದಲ್ಲಿದ್ದ ಚಂದ್ರವರ್ಮನ ಕರವಾಲವು ಉಜ್ಜ್ವಲ ಪ್ರಭೆಯಿಂದ ಜ್ವಲಿಸುತ್ತಲೇ ಇದ್ದಿತು.
ರಾಜಾ! ಮಹಾನುಭಾವ! ಎಂದು ಉದ್ಗಾರವೆಳೆದನು ಗುರುಬಸವಯ್ಯ.
ನನಗೆ ಪರಿಹಾರ ದೊರೆಯಿತು ಸತ್ಯಸಂಧ ಮಹಾರಾಜರೇ ಎಂದು ಪರಮ ಸಂತೋಷದಿಂದ ಗೌರಾಂಗನೆಯು ನುಡಿದಳು.
ತಂದೆ ತಾಯಿಯು ನೀವೆ ಶಿವಾ
ಬಂಧು ಬಳಗವು ನೀವೆ ಶಿವಾ
ಎಂದು ಅವಳು ಶಿವಗೀತೆಯನ್ನು ಅನನ್ಯ ಭಕ್ತಿಯಿಂದ ಹಾಡತೊಡಗಿದಳು. ಈ ಸುಮುಹೂರ್ತದಲ್ಲಿ ನಿದ್ರೆಯಿಂದೆದ್ದ ಪುಟ್ಟ ಶಿವನು ತಾಯಿಯನ್ನು ಗುರುತಿಸಿ ಅವಳ ತೊಡೆಯನ್ನೇರಿ ತಾಳಹಾಕಲು ತೊಡಗಿದನು. ಗುರುಬಸವಯ್ಯನ ನೇತ್ರದಿಂದ ಆನಂದಬಾಷ್ಪಗಳು ಉದುರಿದುವು. ಲಿಂಗರಾಜನ ಉತ್ತಮ ಕರವನ್ನಲಂಕರಿಸಿದ್ದ ಪವಿತ್ರಕರವಾಲವು ದಿವ್ಯಾತುಳ ಕಾಂತಿಯಿಂದ ಸಕಲರ ಮೇಲೆಯೂ ಜ್ಞಾನಪ್ರಭೆಯನ್ನು ಬೀರಿತು.
೧೯೫೨

ಪ್ರೇಮಚಂದರ ವಿಕ್ರಮಾದಿತ್ಯನ ಖಡ್ಗ ಕಥೆಯ ಭಾವಾಂತರಣ.