(ಕೊಡಗಿನ ಸುಮಗಳು – ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ – ಧಾರಾವಾಹಿಯಾಗುತ್ತಿರುವಲ್ಲಿ ಇದು… ಹತ್ತನೇ ಸಣ್ಣ ಕತೆ – ೧೯೫೧)

ಸಿರಿಬಾಯಿ ವೀರರಾಜನಿಗೆ ಇಬ್ಬರು ಗಂಡು ಮಕ್ಕಳು: ಹಿರಿಯವನು ಬಸವರಾಜ, ಎರಡನೆಯವನು ಶಿವರಾಜ. ವೀರರಾಜನ ಆಳ್ವಿಕೆಯಲ್ಲಿ ಕೊಡಗು ಸಂಸ್ಥಾನವು ಬಹಳವಾಗಿ ವಿಸ್ತರಿಸಲ್ಪಟ್ಟಿತು. ಇಂತಹ ವಿಶಾಲ ರಾಷ್ಟ್ರದಲ್ಲಿ ಅವನು ಶಾಂತಿ ಸುವ್ಯವಸ್ಥೆಗಳನ್ನು ಸ್ಥಾಪಿಸಿದ್ದನು. ದಕ್ಷನಾದ ಪ್ರಭು ಈ ರಾಜ್ಯ ತನ್ನ ಅನಂತರವೂ ವಂಶಪಾರಂಪರ್ಯವಾಗಿ ಹೀಗೆಯೇ ಮುಂದುವರಿಯಬೇಕೆಂದು ಭಾವಿಸುವುದು ಸಹಜ. ವ್ಯಕ್ತಿಕೇಂದ್ರೀಕೃತವಾಗಿದ್ದ ಅಧಿಕಾರ, ದರ್ಪ ಹಾಗೆಯೇ ಸಾಗಬೇಕಾಗಿದ್ದರೆ ರಾಜಕುಮಾರರು ಸಮಾಧಿಕ ಯೋಗ್ಯತಾ ಸಂಪನ್ನರಾಗಿರಬೇಕು. ರಾಜಪುತ್ರತ್ವವೊಂದೇ ಸಿಂಹಾಸನವನ್ನು ದೊರಕಿಸಿ ಕೊಡುವುದಿಲ್ಲ – ಪ್ರಾಯಶಃಮುಂದಿನ ಕಾರ್ತಿಕ ಮಾಸ. ಮಳೆಯಳಿದು ಹೊಸಚಿಗುರು ದೊರಕಿಸಿಕೊಡುವುದು; ಆದರೆ ಅಲ್ಲಿಯೇ ಚಿರಕಾಲ ಮಂಡಿಸಿರುವ ಭದ್ರತೆಯನ್ನು ನೀಡುವುದಿಲ್ಲ. ಅಂತಹ ಯೋಗ್ಯತೆ ಸಿದ್ಧಿಸುವುದು ಬುದ್ಧಿಶಕ್ತಿ ಮತ್ತು ದೇಹಶಕ್ತಿಗಳ ಶ್ರೀಮಂತಿಕೆಯಿಂದ. ಇದನ್ನು ಚೆನ್ನಾಗಿ ಅರಿತಿದ್ದ ರಾಜನು ತನ್ನ ಕುಮಾರರಿಗೆ ಅತ್ಯುತ್ತಮವಾದ ಶರೀರ ಮತ್ತು ಬುದ್ಧಿ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದನು.

ರಾಜ ಪುತ್ರರು ಸಂಸ್ಕೃತ ಕನ್ನಡ ಸಾಹಿತ್ಯಗಳ ಸವಿಯುಂಡರು. ಕಾವ್ಯಗಳಲ್ಲಿ, ರಾಜ್ಯಭಾರ ಶಾಸ್ತ್ರದಲ್ಲಿ, ಪ್ರಜಾರಂಜನೆಯಲ್ಲಿ ಅವರಿಗೆ ಶಿಕ್ಷಣ ದೊರೆಯಿತು. ಪೂರಕ ಅಂಶವಾಗಿ ಅಂಗಸಾಧನೆಯಿಂದ, ವ್ಯಾಯಾಮಗಳಿಂದ ದೇಹಗಳನ್ನು ಪುಷ್ಟವನ್ನಾಗಿರಿಸಿದರು. ದೃಢಕಾಯರಾಗಿ ಆರೋಗ್ಯಸಂಪನ್ನತೆಯಿಂದ ಮೆರೆಯುವ ರಾಜಕುಮಾರರು ಅಶ್ವಿನಿದೇವತೆಗಳಂತೆ ಶೋಭಿಸಿದರು. ಯುದ್ಧ ಕಲೆ, ಚಾಣಕ್ಯತಂತ್ರ, ಶಶ್ತ್ರಾಸ್ತ್ರ ಪ್ರಯೋಗ ಮುಂತಾದವುಗಳಲ್ಲಿ ಅವರು ಪರಿಣಿತರಾದರು. ಹೀಗೆ ದಿನದಿಂದ ದಿನಕ್ಕೆ ವರ್ಧಿಸುತ್ತಿರುವ ವಂಶದ ಕುಡಿಗಳನ್ನು ನೋಡಿ ನೋಡಿ ವೀರರಾಜನಿಗೆ ಸಂತೋಷ ಉಕ್ಕುತ್ತಿತ್ತು. ಅವರ ಸಾಹಸ ಕಾರ್ಯಗಳನ್ನು ಸಾಹಿತ್ಯಾಭ್ಯಾಸವನ್ನು ಕೇಳಿ ಕೇಳಿ ರಾಜನು ಹರ್ಷ ಹೊಂದುತ್ತಿದ್ದನು. ಮಡಿಕೇರಿಯ ನಿವಾಸಿಗಳಿಗೆ ಈ ತರುಣೇಭದ್ವಯರನ್ನು ನಿತ್ಯವೂ ಕಾಣುವ ಭಾಗ್ಯ. ರಾಜನ ಸುಕೃತದಿಂದ ನಾಡಿನ ಸೌಭಾಗ್ಯದಿಂದ ಇಂತಹ ಯೋಗ್ಯ ರಾಜಕುಮಾರರು ಜನಿಸಿ ಅಭ್ಯುದಯ ಹೊಂದುತ್ತಿದ್ದಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದರು.

ಹಿರಿಯವನಾದ ಬಸವರಾಜನು ಪ್ರತಿಯೊಂದು ವಿಷಯದಲ್ಲಿಯೂ ತಮ್ಮನಿಗಿಂತ ಒಂದು ಹೆಜ್ಜೆ ಮುಂದೆ. ಅವನು ಇಟ್ಟ ಗುರಿ ಎಂದೆಂದಿಗೂ ತಪ್ಪದು. ಖಡ್ಗದಲ್ಲಿ ಅವನ ಹಸ್ತಲಾಘವದ ಮುಂದೆ ಬೇರೆಯವರದು ಬರಲಾರದು ಎಂದು ರಾಜಕುಮಾರರ ಶಸ್ತ್ರಾಸ್ತ್ರಾಚಾರ್ಯರೇ ಮುಕ್ತಕಂಠದಿಂದ ಹೊಗಳುತ್ತಿದ್ದರು. ಅವರು ಸಾಹಿತ್ಯಗುರುಗಳು ಬಸವರಾಜನ ಅಪೂರ್ವ ಮೇಧಾಶಕ್ತಿಯನ್ನು, ಕಾವ್ಯಗಳಲ್ಲಿಯ ಧ್ವನಿ ರಸಗಳ ಸೂಕ್ಷ್ಮತೆಯನ್ನು ಶೀಘ್ರವಾಗಿ ಗ್ರಹಿಸಿ ವಿವರಿಸುವ ಶಕ್ತಿಯನ್ನು ಅರಿತು ಅವನಿಗೆ ದಿನನಿತ್ಯ ಪ್ರೋತ್ಸಾಹವೀಯುತಿದ್ದರು. ಹಾಗೆಂದು ಶಿವರಾಜನು ಕಡಿಮೆಯೆಂದು ಅರ್ಥವಲ್ಲ. ಅಣ್ಣನಿಗೆ ಸಮಾನವಾಗಿ ಅವನೂ ಇದ್ದನು. ಆದರೂ ತಿಳಿದವರು, ಆಚಾರ್ಯದ್ವಯರೇ ಅನ್ನುತ್ತಿದ್ದಂತೆ, ಬಸವರಾಜನೇ ಒಂದು ತೂಕ ಮೇಲು. ವೀರರಾಜನಿಗೆ ಈ ಮಕ್ಕಳ ಅಭ್ಯುದಯವನ್ನು ಕಂಡು ಕೇಳಿ ಅಮಿತಾನಂದ. ನಾಡ ಕಣ್ಮಣಿಯಾಗಿದ್ದ ಮತ್ತು ಮುಂದಿನ ರಾಜನಾಗುವ ಬಸವರಾಜನ ಮೇಲೆ ರಾಜನದೂ ರಾಜ ಮಡದಿಯದೂ ವಾತ್ಸಲ್ಯ ಅಪಾರ.

ಬಸವರಾಜನ ಸ್ವಭಾವ ಬಲು ಕೋಮಲ. ಅವನು ಯುದ್ಧ ಕಲೆಯನ್ನು, ಶಸ್ತ್ರಪ್ರಯೋಗವನ್ನು ಅಭ್ಯಸಿಸುವಾಗ ಪ್ರತಿದಿನವೂ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದನು: ನಾನೆಂದೆಂದು ಜೀವಹತ್ಯೆಗೆ ಈ ವಿದ್ಯೆಯನ್ನು ಪ್ರಯೋಗಮಾಡುವಂತೆ ಆಗದಿರಲಿ ಎಂದು. ವಿದ್ಯೆಯನ್ನು ವಿದ್ಯೆಗಾಗಿ ಅವನು ಅಭ್ಯಸಿಸುತ್ತಿದ್ದನೇ ಹೊರತು ಅದರಿಂದ ಬೇರೆ ಏನಾದರೂ ಉಪಯೋಗವಾದೀತೆನ್ನುವ ಆಶಯದಿಂದಲ್ಲ. ಹಾಗೆ ಉಪಯೋಗ ದೊರೆತರೆ, ಅದು ಆಕಸ್ಮಿಕವಾಗಿರಬೇಕು ಎಂದು ಅವನು ತಿಳಿದಿದ್ದನು. ಕಾವ್ಯನೀತಿಶಾಸ್ತ್ರಗಳನ್ನು ಮನನ ಮಾಡಿ ಚಿಂತಿಸಿ ಅಧಿಕಾನುಭವ ಪಡೆಯುವುದರಲ್ಲಿ ಅವನಿಗೆ ಅಮಿತಾಸಕ್ತಿ. ಗುರುಹಿರಿಯರಲ್ಲಿಯೂ ದೇವರಲ್ಲಿಯೂ ಅಮಿತ ಶ್ರದ್ಧೆ ಮತ್ತು ಅವಿಚಲ ಭಕ್ತಿಪೂರಿತನಾದ ಬಸವರಾಜನು ಸೌಮ್ಯಮೂರ್ತಿಯಾಗಿದ್ದನು.

ಶಿವರಾಜನು ಸ್ವಲ್ಪ ಚಪಲಚಿತ್ತನೆಂದು ಹೇಳಬೇಕು. ಅವನು ದೇವರ ಕುರಿತಾಗಲೀ ಗುರುಹಿರಿಯರಲ್ಲಿ ಭಕ್ತಿ ಕುರಿತಾಗಲೀ ಎಂದೂ ಆಲೋಚಿಸಿದವನಲ್ಲ. ಕಲಿಯುತ್ತಿದ್ದ ವಿದ್ಯೆಯಲ್ಲಿ ಅವನಿಗೆ ಅಪಾರ ಆಸಕ್ತಿಯಿದ್ದಿತು. ಕಾವ್ಯಗಳಿಗಿಂತಲೂ ಅವನ ಒಲ್ಮೆ ದೈಹಿಕ ಸಾಧನೆಗಳ ಕಡೆಗೆ ಹೆಚ್ಚಾಗಿದ್ದಿತು, ವೈಭವ ದರ್ಪ ಮೆರೆತ ಇವನ್ನು ಅವನು ಬಲುವಾಗಿ ಮೆಚ್ಚಿದ್ದನು. ಅಣ್ಣತಮ್ಮಂದಿರು ಒಟ್ಟಾಗಿ ಹೋಗುತ್ತಿದ್ದಾಗ ಪ್ರಜೆಗಳು ವಿನಯದಿಂದ ಪ್ರಣಾಮವರ್ಪಿಸುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಅಣ್ಣನು ಅವರನ್ನು ಗಮನಿಸುತ್ತಿದ್ದುದು ವಿರಳ. ಆದರೆ ಶಿವರಾಜನು ಆಗೆಲ್ಲ ಸುತ್ತಲೂ ನಾಲ್ಕಾರು ಕಡೆಗೆ ಕಣ್ಣರಳಿಸಿ ನೋಡಿ ರಾಜಠೀವಿಯಿಂದ ವಂದನೆಗಳನ್ನು ಸ್ವೀಕರಿಸುತ್ತಿದ್ದನು. ವ್ಯಾಯಾಮ ಶಸ್ತ್ರಸಾಧನೆ ಇವುಗಳಲ್ಲಿ ಅಣ್ಣನಿಗಿಂತ ಒಂದಿಷ್ಟು ಹೆಚ್ಚಾಗಿಯೇ ತಮ್ಮನು ನಿರತನಾಗಿರುತ್ತಿದ್ದನು. ಆದರೂ ಬಸವರಾಜನಿಗೆ ದೊರೆಯುತ್ತಿದ್ದ ಪ್ರಶಂಸೆ ಇವನಿಗೆ ದೊರೆಯುತ್ತಿರಲಿಲ್ಲ. ಅಂತರ್ಮುಖಿಯಾಗಿರುತ್ತಿದ್ದ ಅಣ್ಣನಿಗೆ ಪ್ರಶಂಸೆಯಿಂದ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಬಹಿರ್ಮುಖಿಯಾಗಿ ಪ್ರಶಂಸಿಸಬೇಕು ಹೆಮ್ಮೆಪಡಬೇಕು ಎಂದಿರುತ್ತಿದ್ದ ಶಿವರಾಜನಿಗೆ ಅದು ದೊರೆಯುತ್ತಿರಲಿಲ್ಲ. ಎಳೆಪ್ರಾಯದ ಆ ರಾಜ ಕುಮಾರನಲ್ಲಿ ಇದರಿಂದ ಇನ್ನಷ್ಟು ಉತ್ಸಾಹ ಕೆದರುತ್ತಿತ್ತು. ಸ್ಪರ್ಧಾಮನೋಭಾವ ಕೆರಳುತ್ತಲೂ ಇತ್ತು.

ಹೀಗೆ ರಾಜಕುಮಾರರು, ಹಿರಿಯವನು ಭಾವಜೀವಿಯಾಗಿ, ಕಿರಿಯವನು ಬುದ್ಧಿಜೀವಿಯಾಗಿ, ವರ್ಧಿಸುತ್ತಿದ್ದರು. ಆಗ ಬಸವರಾಜನಿಗೆ ಹದಿನಾರು ವರ್ಷ, ಶಿವರಾಜನಿಗೆ ಹದಿನಾಲ್ಕು ವರ್ಷ ಪ್ರಾಯ ನಡೆಯುತ್ತಿದ್ದವು. ಒಂದು ದಿನ ಸಾಯಂಕಾಲದ ಹೊತ್ತಿಗೆ ಮದೆನಾಡಿನ ರೈತರಿಂದ ವೀರರಾಜನಿಗೆ ಒಂದು ಬಿನ್ನಹ ಬಂದಿತು – ಒಂದು ಭಯಂಕರಗಾತ್ರದ ಹೆಬ್ಬುಲಿಯು ಅನೇಕ ತಿಂಗಳುಗಳಿಂದ ಅವರ ಹಳ್ಳಿಯನ್ನು ಹನಮಾಡುತ್ತಿದೆ; ಹಲವಾರು ಮಂದಿ ನುರಿತ ಬೇಟೆಗಾರರು ಹುಲಿಯ ಪ್ರತಾಪದ ಎದುರು ತಮ್ಮ ಆಟ ಸಾಗದೇ ಹಿಂದೆ ಓಡಿದ್ದಾರೆ, ಹುಲಿಯು ನಾಶಮಾಡಿರುವ ಎಮ್ಮೆ ದನಗಳು ಅಸಂಖ್ಯಾತ. ಮಹಾರಾಜರು ಹೇಗಾದರೂ ಹುಲಿಯನ್ನು ಸಂಹರಿಸಿ ಗ್ರಾಮವನ್ನು ರಕ್ಷಿಸಬೇಕು – ಇಷ್ಟು ಆ ಬಿನ್ನಹದ ಸಾರ, ದೂರು ಬಂದ ವೇಳೆಯಲ್ಲಿ ಶಿವರಾಜನು ತಂದೆಯ ಸಮೀಪದಲ್ಲಿದ್ದನು. ಕೂಡಲೇ ತಾನು ಹೋಗಿ ಆ ಕ್ರೂರ ವ್ಯಾಘ್ರದ ವಿಚಾರಣೆ ಮಾಡುವುದಾಗಿ ಅತ್ಯುತ್ಸಾಹದಿಂದ ಅವನು ಹೇಳಿದನು.

ರಾಜನು ನಕ್ಕು ಅದೇನು ಹುಡುಗಾಟಿಕೆಯೇ? ನೀನಿನ್ನೂ ಮಗು ಎಂದನು.
ಶಿವರಾಜನ ಅಭಿಮಾನ ಭಂಗವಾಯಿತು.
ನಾನು ಪ್ರಾಯದಲ್ಲಿ ಸಣ್ಣವನಾದರೂ ನನ್ನ ಪ್ರತಾಪ ನೋಡಿ ಪಿತಾಜೀ ಎಂದನು.

ನಿನ್ನನ್ನು ಕಳುಹಿಸಿಕೊಡಲು ನಾನು ಸಿದ್ಧನಿಲ್ಲವಲ್ಲಪ್ಪ ಎಂದು ನಸು ನಗುತ್ತ ರಾಜನು ಮಗನ ತಲೆ ಸವರಿದನು. ಆದರೆ ಶಿವರಾಜನು ಸುಮ್ಮನಿರಲಿಲ್ಲ. ರಾಜನು ಆ ಕಡೆ ಹೋದೊಡನೆಯೇ ಇವನು ಆಯುಧಸಮೇತನಾಗಿ ಯಾರಿಗೂ ತಿಳಿಸದೆ ಕುದುರೆಯೇರಿ ಮದೆನಾಡಿಗೆ ಹೋಗಿಯೇ ಬಿಟ್ಟನು. ಕಾರ್ಗಾಲದ ಮೋಡ ನೀರು ತುಂಬಿ ಭಾರವಾಗಿ ಮಳೆಗರೆಯಲು ಗಳಿಗೆ ಕಾಯುವಂತೆ ಅವನ ಪೌರುಷವಿದ್ದಿತು. ದಿನನಿತ್ಯ ಗುರಿಹೊಡೆದು ದಣಿದಿದ್ದ ಅವನಿಗೆ ವೈವಿಧ್ಯ ಅಗತ್ಯವಾಗಿತ್ತು. ಈ ಸಾಹಸಮಯ ಸನ್ನಿವೇಶ ಹಸಿದವನಿಗೆ ಮೃಷ್ಟಾನ್ನ ದೊರಕಿದಂತಾಯಿತು. ಪ್ರಶಂಸೆಗಾಗಿ ಹಾತೊರೆಯುತ್ತಿದ್ದ ಅವನು ಕೂಡಲೇ ಮದೆನಾಡಿಗೆ ಧಾವಿಸಿದುದು ಆಶ್ಚರ್ಯವಲ್ಲ. ತಾನು ಹೋಗುವ ಮೊದಲೇ ಬೇರೆಯಾರಾದರೂ ಆ ಹೆಬ್ಬುಲಿಯನ್ನು ಕೊಂದು ತನ್ನ ಯಶಃಶ್ರೀಯನ್ನು ಅಪಹರಿಸಬಾರದಲ್ಲ ಎಂದು ದ್ವಿಗುಣಿತವೇಗದಿಂದ ದೌಡಾಯಿಸಿದನು.

ಶಿವರಾಜನಿಗೆ ಉತ್ಸಾಹವೆಷ್ಟಿದ್ದರೂ ಶಸ್ತ್ರಕಲೆಯಲ್ಲಿ ನೈಪುಣ್ಯವೆಷ್ಟಿದ್ದರೂ ಬೇಟೆಯಲ್ಲಿ ಅನುಭವ ಸಾಕಷ್ಟಿರಲಿಲ್ಲ. ಮರದ ಮೇಲಿನ ಮಾವಿನ ಹಣ್ಣಲ್ಲ ಹುಲಿಯ ಕಣ್ಣು, ನಿಶ್ಚಲವಾಗಿ ನಿಂತ ಮರದ ಕೊರಡಲ್ಲ ಹುಲಿಯ ಕೊರಳು. ಹುಲಿಯು ಹಾಗೆ ನೇರವಾಗಿ ಎದುರು ಸಿಕ್ಕುವುದೂ ಇಲ್ಲ; ಸಿಕ್ಕಿದರೂ ಅದನ್ನು ಕೊಲ್ಲುವುದು ಸುಲಭವೂ ಅಲ್ಲ ಅಪಾಯರಹಿತವೂ ಅಲ್ಲ. ಶಿವರಾಜನು ಮದೆನಾಡಿಗೆ ಹೋಗಿ ಒಂದು ಕುಟುಂಬದವರಲ್ಲಿ ವಿಚಾರಿಸಿದನು. ರಾಜ ಪುತ್ರನು ಆಗಮಿಸಿದನು ಎಂದು ಅವರು ಸಂಭ್ರಮದಿಂದ ಏನು ಹೇಳುವುದೆಂದು ತಿಳಿಯದೇ ಇದ್ದಾಗ ಅವನು ತನ್ನ ವಿಷಯವಾಗಿ ಅವರು ಏನೊಂದೂ ಮಾತನಾಡಕೂಡದೆಂದು ಕಟ್ಟಪ್ಪಣೆ ವಿಧಿಸಿದನು. ಹುಲಿಯು ಹಿಂದಿನ ರಾತ್ರಿ ಹೊಡೆದು ಕೊಂದುಹಾಕಿದ ಒಂದು ಕೋಣ ಅಲ್ಲಿಯೇ ಕಾಡಿನ ಮಧ್ಯೆ ಇದೆಯೆಂದೂ ಆ ರಾತ್ರಿ ಅದು ಅಲ್ಲಿಗೆ ಪುನಃ ಬರುವ ಸಂಭವವಿದೆಯೆಂದೂ ಶಿವರಾಜನು ತಿಳಿದನು.

ಬೆಳದಿಂಗಳ ರಾತ್ರಿ. ರಾಜಕುಮಾರನು ಇಬ್ಬರು ರೈತರನ್ನು ಜತೆಗೆ ಕರೆದುಕೊಂಡು ಹೋಗಿ ಪಹರೆ ಕುಳಿತನು. ಮದೆನಾಡಿನ ರುದ್ರವನಾಂತರದಲ್ಲಿ ಜೀರುಂಡೆಗಳ ಜೀರ್ ಶಬ್ದವೂ ಅಳಿಯಿತು. ಕತ್ತಲೆಯ ಮೊತ್ತವನ್ನು ಭೇದಿಸಲಾರದೆ ಕಳೆಗೆಟ್ಟು ಧೃತಿಗೆಟ್ಟು ಚಂದ್ರನು ಇಳಿಯಲು ತೊಡಗಿದನು. ಹುಲಿಯನ್ನು ಕಾದು ಕಾದು ಬೇಸತ್ತ ಮೂವರ ನಿಟ್ಟುಸಿರುಗಳು ತೀವ್ರವಾದುವು. ಆದರೂ ನಿರ್ವಾಹವಿಲ್ಲ. ಕೋಣನ ಶವ ರಾತ್ರಿಯ ಕಪ್ಪಿನಲ್ಲಿ ವಿಕರಾಳವಾಗಿ ವಿಕಾರಾಕಾರದಿಂದ ಕೆಡೆದುಕೊಂಡಿತ್ತು. ಮತ್ತೂ ಒಂದೆರಡು ನಿಟ್ಟುಸಿರು. ಆ ನಿಟ್ಟುಸಿರಿನ ಮೊತ್ತ ಮೈದಳೆದು ನಿರೀಕ್ಷೆಯೇ ರೂಪುವಡೆದು ಮುಂದೆ ಬಂದಿತು – ಮರುನಿಮಿಷ ಶಬ್ದರಹಿತವಾಗಿ ಬಂದಿತು ಕ್ರೂರವ್ಯಾಘ್ರ. ಆ ಕಡೆ ಈ ಕಡೆ ನೋಡಿ ಕಿವಿನಿಮಿರಿಸಿ ಬಿಸುಸುಯ್ದು ಕೋಣದ ಮಾಂಸದ ಮೇಲೆ ಬಾಯಿ ಹಾಕಿತು. ಮಾಂಸದ ತುಣುಕುಗಳನ್ನು ಕಚ್ಚಿ ಎಳೆಯುವುದರಲ್ಲಿ ಅದು ತನ್ಮಯತೆ ಹೊಂದಿದಾಕ್ಷಣ ರಾಜಕುಮಾರನು ಖಡ್ಗ ಝಳಪಿಸಿ ಹುಲಿಯ ಮೇಲೆ ದುಮ್ಮಿಕ್ಕಿದ್ದನು. ಅನುಭವಶೂನ್ಯ ಉತ್ಸಾಹ. ಮಾರ್ಗ ತಪ್ಪಿ ಹೋಯಿತು. ಖಡ್ಗದಿಂದ ಹುಲಿಯನ್ನು ಇರಿದನು. ಹುಲಿಯು ಭಯಂಕರವಾಗಿ ಕಾಂತಾರವು ನಡುಗುವಂತೆ ಗರ್ಜಿಸಿ ತನ್ನ ಶತ್ರುವನ್ನು ಕೈಯ್ಯಿಂದ ಹೊಡೆದು ನೆಲಕ್ಕಪ್ಪಳಿಸಿ ಓಡಿಹೋಯಿತು. ಶಿವರಾಜನು ಸಹಚರರು ಮುಂದೆ ಹಾರಿ ಹುಲಿಯನ್ನು ಇರಿಯದಿರುತ್ತಿದ್ದರೆ ಅದು ರಾಜಕುಮಾರನನ್ನು ಸಂಹರಿಸಿಯೇ ಬಿಡುತ್ತಿತ್ತು. ರಾಜಪುತ್ರನು ನೋವಿನಿಂದ ಮೂರ್ಛೆ ತಪ್ಪಿ ನೆಲದ ಮೇಲೆ ಕೆಡೆದನು. ಸೇವಕರು ಅವನನ್ನು ಮೃದುವಾಗಿ ಎತ್ತಿಕೊಂಡು ಅವರ ಮನೆಯೆಡೆಗೆ ಸಾಗಿದರು.

ಓಡಿಹೋದ ಹುಲಿಗೆ ಮುಂದಿನ ಮರದ ಮರೆಯಲ್ಲಿ ಯಮಧರ್ಮರಾಯನು ಕಾದು ಕುಳಿತಿದ್ದನು – ಇಲ್ಲ, ಅವನಾಗ ತಾನೇ ಬಸವರಾಜನ ರೂಪದಲ್ಲಿ ಅಲ್ಲಿಗೆ ಬಂದಿದ್ದನು. ಶಿವರಾಜನು ಮದೆನಾಡಿಗೆ ಧಾವಿಸಿದುದು ರಾಜನಿಗೆ ಸ್ವಲ್ಪ ಹೊತ್ತಿನಲ್ಲಿಯೇ ತಿಳಿಯಿತು. ಮಗನ ಈ ಅಚಾತುರ್ಯಕ್ಕೆ ಅವನು ನೊಂದು ಹೆದರಿ ಕೂಡಲೇ ಅವನ ರಕ್ಷಣೆಗಾಗಿ ಕೆಲವು ಸೈನಿಕರನ್ನು ಕಳುಹಿಸಿದನು. ಪ್ರಸಂಗದ ಗಂಭೀರತೆ ಅಪಾಯಗಳನ್ನರಿತು ಬಸವರಾಜನು ತಾನೂ ಹೋಗಲು ಮುಂದಾದನು. ರಾಜನು ಇದನ್ನು ಲಕ್ಷಿಸಲಿಲ್ಲ. ಬಸವರಾಜನ ಖಡ್ಗದ ಹೊಡೆತದಿಂದ, ತಮ್ಮನ ಹೊಡೆತದಿಂದ ಮುಗಿಯದ ಕಾರ್ಯ, ಮುಗಿದುಹೋಯಿತು. ಹುಲಿಯು ಸತ್ತುಹೋಯಿತು.

ಶಿವರಾಜನನ್ನು ಮಡಿಕೇರಿಗೆ ಸಾಗಿಸಿಕೊಂಡು ಹೋಗಿ ಉಪಚರಿಸಿದರು. ಅವನಿಗೆ ವಿಶೇಷಾಪಾಯವೇನೂ ಆಗಿರಲಿಲ್ಲ. ಅವನು ಶೀಘ್ರವಾಗಿ ಗುಣ ಹೊಂದಿದನು. ಆದರೆ ತನ್ನಿಂದ ಆಗದ ಕಾರ್ಯ ತನ್ನ ಅಣ್ಣನಿಂದ ನೆರವೇರಿತು ಎನ್ನುವ ಒಂದು ಅಪಮಾನ ಅವನ ಎಳೆಯ ಮಿದುಳನ್ನು ಕದಡಿದ್ದಿತು. ಹುಡುಗತನ ಹೋಗಿ ತಾರುಣ್ಯ ಉಪಯಿಸುವ ಕಾಲ. ಪ್ರಶಂಸೆ ಪ್ರಖ್ಯಾತಿಗಳಿಗಾಗಿ ಹಾತೊರೆಯುವ ಕಾಲ. ಸರ್ವರ ದೃಷ್ಟಿಯಲ್ಲಿ ಪ್ರತಾಪಶಾಲಿ ವೈಭವಶಾಲಿ ಎಂದು ಮೆರೆಯಬೇಕೆಂದು ಆಸೆಯಿರುವ ಕಾಲ. ಆ ಕಾಲದಲ್ಲಿ ಹುಲಿಯನ್ನು ಸಂಹರಿಸಲು ಹೋಗಿ ಅದರ ಪೆಟ್ಟಿಗೆ ಶಿವರಾಜನು ಉರುಳಿದನು. ಪರಾಜಿತನಾದನು; ಅಲ್ಲಿಗೇ ಮುಗಿಯಲಿಲ್ಲ. ಬಸವರಾಜನು ಹುಲಿಯನ್ನು ಕೊಂದಿದ್ದನು. ಈ ಘಟನೆಯಿಂದ ಹುಲಿಯಿಂದಾಗದ ಗಾಯ ಅಭಿಮಾನಿ ಶಿವರಾಜನಿಗಾಗಿದ್ದಿತು, ವ್ಯಾಘ್ರನಖಗಳ ಗಾಯವು ಗುಣವಾದಂತೆ ಅವನ ಮನಸ್ಸಿನ ಮೇಲೆ ಮೂಡಿದ ಗಾಯ ಬಲವಾಯಿತು.

ರಾಜನೂ ಗುರುಗಳೂ ಬಸವರಾಜನ ಪ್ರಶಂಸೆ ಮಾಡುತ್ತಿದ್ದಾಗ ಶಿವರಾಜನ ಮನಸ್ಸಿನ ಗಾಯ ಬಿರಿಯುವಂತಾಗುತ್ತಿತ್ತು. ಅವನಿಗೆ ಅವುಗಳ ನೋವು ಸಹಿಸಲಶಕ್ಯವಾಗುತ್ತಿತ್ತು. ರಾಜಪುತ್ರನಿಗೆ ಸಲ್ಲಬೇಕಾಗಿದ್ದ ಮನ್ನಣೆ ಮರ್ಯಾದೆಗಳು ಅವನಿಗೆ ಮೊದಲಿನಂತೆಯೇ ದೊರೆಯುತ್ತಿದ್ದುವು. ಆದರೆ ಮನಸ್ಸಿನ ಅಂತರಾಳದಲ್ಲಿ ಅವನಿಗೇನೋ ಒಂದು ಅತೃಪ್ತಿ ಅಸಮಾಧಾನ. ಇದೇ ಸಮಯದಲ್ಲಿ ಶಿವರಾಜನಿಗೆ ವೀರರಾಜನ ಅಧಿಕಾರಿಯೊಬ್ಬನ ಮಗ ದೇವಯ್ಯನಲ್ಲಿ ಮೈತ್ರಿಯು ಬೆಳೆಯುತ್ತಿತ್ತು. ದೇವಯ್ಯನು ಸೈನ್ಯದಲ್ಲಿ ಅಧಿಕಾರಿಯಾಗಿದ್ದನು. ಶಿವರಾಜನ ಎರಡರಷ್ಟು ಪ್ರಾಯ ಅವನಿಗಾಗಿದ್ದರೂ ಇವರಿಬ್ಬರಲ್ಲಿ ಬಳಕೆ ಸ್ನೇಹ ಹೆಚ್ಚು ಹೆಚ್ಚಾಗಿ ಬೆಳೆಯುತ್ತಿದ್ದುವು. ದೇವಯ್ಯನ ಸಂಗದಲ್ಲಿ ಕಿರಿಯ ರಾಜಕುಮಾರನಿಗೆ ಒಂದು ರೀತಿಯ ಸಮಾಧಾನ ದೊರೆಯುತ್ತಿದ್ದಿತು. ಇವರಿಬ್ಬರೂ ಕೂಡಿ ದೇಶಸಂಚಾರ ಮಾಡುತ್ತಿದ್ದರು. ಸೈನ್ಯದ ಕೆಲಸದಲ್ಲಿ ಬಿಡುವಿದ್ದಾಗ ದೇವಯ್ಯನೂ ಶಿವರಾಜನೂ ಬೇಟೆಗೆ ಅಥವಾ ವಾಯು ವಿಹಾರಾರ್ಥವಾಗಿ ಅಥವಾ ತಮ್ಮ ಶಸ್ತ್ರಲಾಘವವನ್ನು ಪರೀಕ್ಷಿಸಲೆಂದು ಹೋಗುತ್ತಿದ್ದರು.

ದೇವಯ್ಯನ ಕುಟಿಲ ಮತ್ತು ತೀಕ್ಷ್ಣಮತಿ, ಎಳೆಹರೆಯದ ಹದಿನಾರರ ಗಡಿಯನ್ನು ದಾಟುತ್ತಿದ್ದ ರಾಜಪುತ್ರನ ಮೇಲೆ ಸಹಜವಾಗಿಯೇ ಪ್ರಭಾವ ಬೀರುತ್ತಿತ್ತು. ಶಿವರಾಜನ ಮನಸ್ಸಿನ ಗಾಯಕ್ಕೆ ದೇವಯ್ಯನ ಮಾತಿನ ಲೇಪ ಸುಖಕರವಾದ ಪರಿಣಾಮಬೀರುತ್ತಿತ್ತು. ಇನ್ನೊಂದು ಸಂದರ್ಭದಲ್ಲಿ ಮಹಾರಾಜನ ದೃಷ್ಟಿಯಲ್ಲಿ ಬಸವರಾಜನು ಮನ್ನಣೆ ಪಡೆದನು. ಮಂತ್ರಿ ಶಿವರುದ್ರಪ್ಪನೂ ಬಸವರಾಜನನ್ನು ಎತ್ತಿ ಹೊಗಳಿ ಮಾತಾಡಿದನು. ಹಾಗೆಂದು ಅವರು ಶಿವರಾಜನನ್ನು ತೆಗಳಲಿಲ್ಲ; ತಿರಸ್ಕರಿಸಲಿಲ್ಲ. ಆ ಸಂದರ್ಭದಲ್ಲಿ ಶಿವರಾಜನ ಸುದ್ದಿ ಬರಲಿಲ್ಲ, ಅಷ್ಟೆ. ಆದರೆ ಶಿವರಾಜನ ಕಹಿಮಮನಸ್ಸು ಆ ಹೊಗಳಿಕೆಗೆ ಅಪಾರ್ಥ ಕಲ್ಪಿಸಿತು. ಗಾಸಿಗೊಂಡ, ದುಗುಡದಿಂದ ಭಾರವಾದ ಮನಸ್ಸಿಗೆ ಹಿತವಾಗುವಂತೆ ವಂಚನೆಯ ಮಾತುಗಳನ್ನು ನುಡಿದು ಶಾಶ್ವತವಾದ ಅಹಿತವನ್ನು ಸಾಧಿಸುವುದು ಸುಲಭ. ನಾಲ್ಕು ಸಮಾಧಾನ, ಸಹಾನುಭೂತಿಯುಕ್ತವಾದ ಸಾಂತ್ವನನುಡಿಗಳಿಂದ ದುಃಖದ ಆವೇಗ ಕಡಿಮೆಯಗುವುದು. ಹಾಗಲ್ಲದೆ ಭಾರವನ್ನುವರ್ಧಿಸುವಂತೆ ಮಾಡುವ ಉತ್ತೇಜನದ ಮಾತುಗಳಿಂದ ತಾತ್ಕಾಲಿವಾಗಿ ದುಗುಡವು ಉಪಶಮನವಾದಂತೆ ತೋರಿದರೂ ಅದು ವಾಸ್ತವವಲ್ಲ. ಆದರೆ ಮೊದಲನೆಯ ಮಾತಿಗಿಂತ ಎರಡನೆಯ ವಾದವೇ ಸರ್ವಸಾಧಾರಣವಾಗಿ ಹಿತಕರ ಎಂದೆನ್ನಿಸುವುದು. ವ್ಯಾಧಿಗ್ರಸ್ತನಿಗೆ ಔಷಧಿಗಿಂತಲೂ ಬಾಯಿಬಯಸಿದ ತಿಂಡಿಯೇ ಉತ್ತಮವೆನಿಸುವುದು. ಇಂತಹ ಸಂದರ್ಭವನ್ನೇ ಕಾಯುತ್ತಿದ್ದನು ದೇವಯ್ಯ. ಈ ತರದ ಸನ್ನಿವೇಶಕ್ಕಾಗಿ ಅವನು ಶಿವರಾಜನ್ನು ನಿಧಾನವಾಗಿಯಾದರೂ ಕ್ರಮಬದ್ಧವಾಗಿ ಸಿದ್ಧಪಡಿಸಿದ್ದನು.

ಮಂತ್ರಿ ಶಿವರುದ್ರಪ್ಪನಿಗೆ ಒಬ್ಬಳೇ ಒಬ್ಬಳು ಮಗಳಿದ್ದಳು. ಅವಳು ಪಾರ್ವತಿ. ಈ ಕುವರಿ ಸೌಂದರ್ಯದ ನಿಧಿಯಾಗಿದ್ದಳು. ಅದಕ್ಕಿಂತಲೂ ಹೆಚ್ಚಾಗಿ ಇವಳು ಸದ್ಗುಣಭರಿತೆಯಾಗಿ ಸಾತ್ತ್ವಿಕ ಗುಣದಿಂದ ಶೋಭಿಸುವ ರಮಣೀಮಣಿಯಾಗಿದ್ದಳು. ಸುಂದರಿ, ಗುಣಭರಿತೆ, ಅಮಾತ್ಯನಂದಿನಿ – ಯಾವುದಕ್ಕೆ ಕಡಿಮೆ? ಚಿನ್ನದ ಪುಷ್ಪ – ಸೌಸವಯುಕ್ತವಾದ ಪುಷ್ಪ ಯೋಗ್ಯತೆ, ಹಿರಿಮೆಯಿರುವ ಶ್ರೀಮಂತರನ್ನು ಸೇರುವುದೇ ವಿನಾ ಭಿಕಾರಿಗಳನ್ನಲ್ಲ. ಇಂತಹ ಚೆಲುವೆ ಪಾರ್ವತಿಗೂ ಬಸವರಾಜನಿಗೂ ಬೆಳೆದು ಬಂದಿತ್ತು ದಿವ್ಯ ಪ್ರೇಮ. ಚಿಕ್ಕಂದಿನಿಂದಲೂ ಪರಿಚಿತರಾಗಿ ಆಡಿ ಓಡಿ ಈ ಮೂವರೂ – ರಾಜಕುಮಾರರು ಮತ್ತು ಮಂತ್ರಿಸುತೆ – ಬೆಳೆದಿದ್ದರು. ಅವರು ಕೇವಲ ಚಿಕ್ಕವರಾಗಿರುವಾಗ, ಬಸವರಾಜನಿಗೆ ಹತ್ತು ವರ್ಷ ವಯಸ್ಸು, ಪಾರ್ವತಿ ಕೇವಲ ಐದು ವರ್ಷದ ಮಗು. ಮಕ್ಕಳು ಆಟದ ಸ್ವಯಂವರ ಏರ್ಪಡಿಸಿಕೊಂಡರು. ಪಾರ್ವತಿಯು ಶಿವರಾಜನನ್ನು ತಿರಸ್ಕರಿಸಿ ಬಸವರಾಜನಿಗೆ ಮಾಲೆ ಹಾಕಿದ್ದಳು. ಹೀಗೆ ಮದುವೆಯ ಆಟಗಳು ಎಷ್ಟೋ ಸಲ ನಡೆದಿದ್ದುವು. ಆಗೆಲ್ಲ ಪಾರ್ವತಿಯು ಬಸವರಾಜನ ಮಡದಿಯೆಂದೇ ಕರೆಯಲ್ಪಡುತ್ತಿದ್ದಳು. ಮಹಾರಾಜನಿಗೂ ಮಂತ್ರಿಗೂ ಅವರ ಸಹಧರ್ಮಿಣಿಯರಿಗೂ ಈ ಒಂದು ಬಳಕೆಯಿಂದ, ಹೊಂದಿಕೆಯಿಂದ ಅಪಾರಾನಂದ ಒದಗುತ್ತಿತ್ತು.

ನಮ್ಮ ಮೈತ್ರಿಯನ್ನು ಈ ರಕ್ತ ಸಂಬಂಧದಿಂದ ವೃದ್ಧಿಪಡಿಸಬೇಕು. ನೋಡು ಮಂತ್ರೀ! ಆ ಮಕ್ಕಳ ಸಂತೋಷ! ಎಂದು ಮಹಾರಾಜನು ಮಕ್ಕಳ ಮದುವೆಯಾಟ ನೋಡಿ ಸಂತೋಷಗೊಂಡು ಹೇಳಿದಾಗ ಮಂತ್ರಿಯು ಆನಂದ, ಕೃತಜ್ಞತಾಪೂರ್ವಕವಾದ ಸಮ್ಮತಿಯನ್ನು ವ್ಯಕ್ತಪಡಿಸಿದನು. ಹೀಗೆ ಬಸವರಾಜ ಪಾರ್ವತಿಯರ ಹುಡುಗತನದ ಸ್ನೇಹ ಬೆಳೆಯುತ್ತಿತ್ತು. ತಾರುಣ್ಯದ ಏರಿಕೆಯ ಕಾಲದಲ್ಲಿ ಇವರ ಆಟಗಳು ವಿನೋದಗಳು ದೂರವಾದವು. ಮೊದಲು ಸಹಜವಾಗಿರುತ್ತಿದ್ದ ಬಳಕೆಯು ಈಗ ನಾಚಿಕೆಯ ಪರದೆಯಿಂದ ಮರೆಯಾಯಿತು, ಕಲ್ಮಷರಹಿತವಾದ ಎಳೆಯತನದ ಸ್ನೇಹ ಪವಿತ್ರ ಪ್ರೇಮವಾಗಿ ಪರಿಣಮಿಸಿತು. ಮೊದಲಿನಂತೆ ಮಾತಿಲ್ಲ, ಚಕ್ಕಂದವಿಲ್ಲ, ಒಡನಾಟವಿಲ್ಲ. ಆದರೆ ಮೊದಲಿಗಿಂತಲೂ ಹೃದಯಗಳು ಸಮೀಪವಾಗಿದ್ದುವು. ಪ್ರೇಮಿಗಳು ಪರಸ್ಪರ ಮುಖದರ್ಶನದಿಂದಲೇ ಸ್ವರ್ಗಸುಖ ಪಡೆಯುತ್ತಿದ್ದರು.

ಈ ಬೆಳವಣಿಗೆಯಲ್ಲಿ ಶಿವರಾಜನು ಒಂದು ರಹಸ್ಯವನ್ನು ಅರಿತನು. ಅದು ಅವನ ಮಸ್ಸಿನ ಆಳದ ಆಳದಿಂದ ನಿಧಾನವಾಗಿ ಆದರೂ ಸ್ಪಷ್ಟವಾಗಿ ಮಿಡಿದ ಒಂದು ಅಪಸ್ವರ – ಅವನಿಗೆ ಪಾರ್ವತಿಯಲ್ಲಿ ಅಪಾರ ಅನುರಾಗ ಆವಿರ್ಭವಿಸಿತ್ತು. ಇದನ್ನು ಅರಿಯಬೇಕಾದರೆ ಈ ಅಪಸ್ವರದ ಅರ್ಥವಾಗಬೇಕಾದರೆ ಬಹಳಕಾಲ ಹಿಡಿಯಿತು. ಹುಲಿಯ ಪೆಟ್ಟಿನಿಂದ ಗಾಸಿಗೊಂಡು ಮಲಗಿದ್ದಾಗ ಹಾಡು ಸರಿಯಾಗಿ ಅರ್ಥವಾಯಿತು. ಆದರೆ ಅಲ್ಲಿಯೂ ಗಾಯ. ಬಸವರಾಜನನ್ನು ಒಲಿದ ಹೆಣ್ಣು ಅವಳು. ಮಹಾರಾಜನಿಗೂ ಇದು ಸಮ್ಮತ. ಇನ್ನೇನು ಕೆಲವು ವರ್ಷಗಳ ಮಾತು – ಮದುವೆಯು ನಡದೇ ಹೋಗುವುದು, ಅದು ಆಗದಂತೆ ತಡೆಯಬೇಕು. ಪಾರ್ವತಿಯನ್ನು ಪಡೆದು ಸುಖಜೀವನ ನಡೆಸಬೇಕು ಎಂದು ತರುಣನು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತಿದ್ದನು. ಈ ಎಲ್ಲ ಮಾನಸಿಕ ತುಮುಲಗಳ ಪರಿಣಾಮವಾಗಿ ಶಿವರಾಜನು ಅಣ್ಣನ ಸಾಮೀಪ್ಯವನ್ನು ದೂರಮಾಡತೊಡಗಿದನು. ಅವನನ್ನು ಹಳಿಯತೊಡಗಿದನು. ಅಣ್ಣನಿರುವಲ್ಲಿ ತಮ್ಮನಿದ್ದರೆ ತಮ್ಮನಿಗೆ ಗಲಿಬಿಲಿಯುಂಟಾಗುತ್ತಿತ್ತು, ಮನಸ್ಸಿನಲ್ಲಿ ಒಂದು ವಿಧದ ಕ್ಷೆಭೆಯೇಳುತ್ತಿತ್ತು.

ಶಿವರಾಜನ ಮನಸ್ಸಿನಲ್ಲಿ ಇಂತಹ ತುಮುಲ ತಳಮಳಿಸುತ್ತಿದ್ದ ಸಮಯದಲ್ಲಿ ಅವನಿಗೆ ಶಾಂತಿರಸವನ್ನೆರೆದವನು ದೇವಯ್ಯ. ದೇವಯ್ಯನಿಗೆ ಮೊದ ಮೊದಲು ಶಿವರಾಜನ ಕಳವಳ ತಿಳಿದಿರಲಿಲ್ಲ. ಆದರೂ ಅವನ ಸಂಗದಲ್ಲಿ ರಾಜಕುಮಾರನಿಗೆ ಒಂದು ವಿಧವಾದ ಸಮಾಧಾನವಾಗುತ್ತಿತ್ತು. ಹೀಗೆ ಕ್ರಮೇಣ ಬೆಳೆದ ಅವರ ಮೈತ್ರಿಯಲ್ಲಿ ಶಿವರಾಜನ ಮನಸ್ಸಿನ ಅಂತರಾಳದಲ್ಲಿದ್ದ ರಹಸ್ಯ ದೇವಯ್ಯನಿಗೆ ತಿಳಿಯಿತು. ಅಂತಹ ಅತೃಪ್ತಿಗೆ ಹಿತಕರವಾಗುವಂತಹ ಸಮಾಧಾನೋಕ್ತಿಗಳನ್ನು ದೇವಯ್ಯನು ಹೇಳಿ ರಾಜಕುಮಾರನ ಕ್ಷೆಭೆಯನ್ನು ಕಡಿಮೆಮಾಡಿದನು. ಪಾರ್ವತಿಯನ್ನು ಹೇಗಾದರೂ ಪಡೆದು, ಅಗತ್ಯವೆಂದೆನ್ನಿಸಿದರೆ ಊರುಬಿಟ್ಟು ಓಡಿಹೋಗಿಯಾದರೂ, ಜೀವನ ನಡೆಸುವುದು ಅತ್ಯವಶ್ಯ ಎಂದು ಶಿವರಾಜನು ಚಿಂತಿಸುತ್ತಿದ್ದನು. ದೇವಯ್ಯನೂ ಇವನೂ ಇದಕ್ಕೆ ಸರಿಯಾಗಿ ಹೊಂದುವ ಕುಹಕಮಾರ್ಗವನ್ನು ಚಿಂತಿಸುತ್ತಿದ್ದರು.

ವರ್ಷಗಳು ಭರದಿಂದ ಉರುಳಿದವು. ಬಸವರಾಜನು ಕೌಮಾರ್ಯ ಕಳೆದು ಯುವಕನಾಗಿದ್ದನು. ಅವನಿಗೆ ಇಪ್ಪತ್ತು ವರ್ಷಗಳು ತುಂಬಿದ್ದುವು. ಮುಂದಿನ ವಸಂತ ಋತುವಿನಲ್ಲಿ ಬಸವರಾಜ – ಪಾರ್ವತಿಯರ ವಿವಾಹವನ್ನು ನೆರವೇರಿಸಬೇಕೆಂದು ಮಹಾರಾಜನು ನಿರ್ಧರಿಸಿದ್ದನು. ಇದು ಎಲ್ಲರಿಗೂ ತಿಳಿದಿತ್ತು. ರಾಜಕುಮಾರನ ವಿವಾಹವನ್ನು ಪ್ರಜೆಗಳು, ಬಂಧುಗಳು, ಮಿತ್ರರು ಸಕಲರೂ ಸಂತೋಷದಿಂದ ಎದುರು ನೋಡುತಿದ್ದರು. ಮಳೆಗಾಲದ ದುರ್ಭರ ದಿವಸಗಳನ್ನು ಕಳೆಯುವಾಗ ಜನರಿಗೆ ಆ ಮುಂದಿನ, ರಾಜ್ಯದ ಸಂತೋಷದ ಹಬ್ಬವನ್ನು ನೆನೆದು ಉತ್ಸಾಹವು ಕುದುರುತ್ತಿತ್ತು. ಬಸವರಾಜನು ಪ್ರಜೆಗಳ ಪಾಲಿನ ಪೂರ್ಣ ದೇವತೆಯಾಗಿ ಅವರ ಪುಣ್ಯದ ಪ್ರತೀಕವಾಗಿದ್ದನು. ಅವನಾದರೂ ಆ ಹರ್ಷದಾಯಕ ದಿವಸಗಳನ್ನು ಅತ್ಯಂತ ಕುತೂಹಲಾನಂದಗಳಿಂದ ನಿರೀಕ್ಷಿಸುತ್ತಿದ್ದನು.

ಶಿವರಾಜನ ಮನಸ್ಸಿನ ಈರ್ಷ್ಯೆಯು ಮೇರೆ ಮೀರುವಂತಾಗಿತ್ತು. ಆದರೆ ಅದು ಅವನಿಗೂ ದೇವಯ್ಯನಿಗೂ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. ಬಸವರಾಜನು ಎಂದಿನಂತೆ ಹಿತನುಡಿಗಳಿಂದ ವಾತ್ಸಲ್ಯದಿಂದ ತಮ್ಮನನ್ನು ಮಾತಾಡಿಸುತ್ತಿದ್ದನು. ಆದರೆ ಅಣ್ಣನ ಸಮ್ಮುಖವನ್ನು ಏನಾದರೂ ಬಿರುನುಡಿದು ಮುಖಮುರಿದು ಇವನು ತಪ್ಪಿಸುತ್ತಿದ್ದನು. ತಮ್ಮನ ಈ ನೂತನ ವರ್ತನೆ ಬಸವರಾಜನಿಗೆ ಅರ್ಥವಾಗದ ಆಶ್ಚರ್ಯವನ್ನು ಒಡ್ಡುತ್ತಿದ್ದಿತು. ಆದರೆ ಅವನು ಅದರ ಗೊಡವೆಗೆ ಹೋಗುತ್ತಿರಲಿಲ್ಲ. ಚಿಕ್ಕಪ್ರಾಯದಲ್ಲಿ ಬೀಜರೂಪದಲ್ಲಿದ್ದ ಮತ್ಸರವು ಕ್ರಮೇಣ ಅಂಕುರಿಸಿ ಈಗ ಮರವಾಗಿ ಶಿವರಾಜನ ಮನಸ್ಸನ್ನಿಡೀ ಆಕ್ರಮಿಸಿದ್ದಿತು. ಆಗ ಅಸ್ಪಷ್ಟವಾಗಿದ್ದ ಕುಹಕಮಾರ್ಗ ಈಗ ಸುಸ್ಪಷ್ಟವಾಗಿದ್ದಿತು. ಇನ್ನುಳಿದಿರುವುದು ಕೇವಲ ಕೆಲವೇ ತಿಂಗಳು. ಆ ಮೊದಲೇ ತನ್ನ ಇಷ್ಟಪ್ರಾಪ್ತಿಯಾಗಬೇಕು. ಇಲ್ಲವಾದರೆ ಮತ್ತೆ ಅವನಿಗೂ ತನಗೂ ಒದಗುವ ಅಂತರ ಸ್ವರ್ಗನರಕಗಳ ಅಂತರ. ದೇವಯ್ಯನ ಮಂತ್ರಾಲೋಚನೆಯಿಂದ ಶಿವರಾಜನು ತನ್ನ ದುಷ್ಟವಾದ ಹಂಚಿಕೆಯನ್ನು ಮುಂದುವರಿಸಿದನು. ಕಾಲೋಚಿತವಾಗಿ ದೇವಯ್ಯನು ಇನ್ನೊಂದು ದುರ್ಭಾವನೆಯನ್ನೂ ಶಿವರಾಜನ ವ್ಯಾಧಿಗ್ರಸ್ತ ಮಿದುಳಿನಲ್ಲಿ ಬಿತ್ತಿದನು. ಶಿವರಾಜನು ರಾಜಕುಮಾರನಾಗಿದ್ದರೂ ಸರ್ವವಿಧದಲ್ಲಿಯೂ ರಾಜನಾಗಲು ಅರ್ಹತೆ ದಕ್ಷತೆಗಳಿರುವವನಾದರೂ ಅವನು ಎಂದೆಂದೂ ರಾಜನಾಗುವಂತೆ ಇಲ್ಲ. ಹಿರಿಯಣ್ಣನ ಪ್ರತಿನಿಧಿಯಾಗಿ ಎಲ್ಲಿಯಾದರೂ ಇರಬೇಕೇ ಹೊರತು ಸ್ವತಂತ್ರ ರಾಜನಾಗುವಂತೆ ಇಲ್ಲ. ತಂದೆಯೂ ಬದುಕಿರುವವರೆಗೆ ತಾನು ರಾಜಕುಮಾರನೆಂದಿರಬಹುದಷ್ಟೆ. ಅವನ ಅನಂತರ ತನಗೆ ವಿಪತ್ಪರಂಪರೆ ಕಾದಿದೆ ಎಂದು ಶಿವರಾಜನು ಚಿಂತಿಸುತ್ತ ಭಯಗೊಂಡನು. ಭಯವು ಬುದ್ಧಿಯನ್ನು ಕೆಡಿಸಿ ಮನಃಪಟಲದ ಮೇಲೆ ಇಲ್ಲಸಲ್ಲದ ಚಿತ್ರಗಳನ್ನು ಬಿಡಿಸಿತು. ಆ ಪ್ರಕಾರ ತಾನು ಸೆರೆಮನೆಯಲ್ಲಿ ಕೊಳೆಯುತ್ತಿರುವಂತೆಯೂ, ಅಣ್ಣನು ಕ್ರೂರವಾಗಿ ತನ್ನನ್ನು ಶಿಕ್ಷಿಸುತ್ತಿರುವಂತೆಯೂ ಕಂಡು ಹೆದರಿ ನಡುಗಿದನು. ಈ ಚಿತ್ರದ ರಚನೆಯಲ್ಲಿ ದೇವಯ್ಯನ ಹಸ್ತಲಾಘವ, ಕುಂಚಕೌಶಲ ಸಾಕಷ್ಟು ಇತ್ತೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಒಂದು ಕಡೆ ಈ ತರದ ಭಯಾನಕ ಚಿತ್ರ ಮನಸ್ಸನ್ನು ಮುದುಡಿಸಿದರೆ ಇನ್ನೊಂದು ಕಡೆ ಸುಂದರಿ ಪಾರ್ವತಿಯ ಸಹವಾಸಸುಖ ಸಿಂಹಾಸನಾರೋಹಣದ ಸ್ವರ್ಗಸುಖ ಇವುಗಳ ಸುಂದರಚಿತ್ರ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತಿತ್ತು. ಹೀಗೆ ಪರಸ್ಪರ ವಿರುದ್ಧ ಭಾವನೆಗಳ ಮುಷ್ಟಿಯುದ್ಧದಲ್ಲಿ ಶಿವರಾಜನು ನವೆಯುತ್ತಿದ್ದನು, ಕ್ಷೀಣಿಸುತ್ತಿದ್ದನು.

ಶಿವರಾಜ ದೇವಯ್ಯ ಇವರ ಕುತಂತ್ರ ಫಲಿಸುವಂತೆ ತೋರಿತು. ಗೌರೀವ್ರತದ ಶುಭಸಾಯಂಕಾಲ ಮಂತ್ರಿಸುತೆ ಆಪ್ತಜನ ಪರಿವೇಷ್ಟಿತೆಯಾಗಿ ಮಹಾಕಾಳಿಯ ದಿವ್ಯಮಂದಿರಕ್ಕೆ ಹೋಗಿ ದೇವಿಯನ್ನು ಪರಮಭಕ್ತಿಯಿಂದ ಪೂಜಿಸಿದಳು. ಇಷ್ಟಾರ್ಥಪ್ರಾಪ್ತಿಗಾಗಿ, ತನ್ನ ಪ್ರಾಣಪ್ರಿಯನ ಭಾವೀವಲ್ಲಭನ ಉತ್ಕರ್ಷೆಯಾಗಿ ಮಹಾಮಾಯೆಯನ್ನು ಅರ್ಚಿಸಿದಳು. ಪೂಜೆಯಲ್ಲಿ ದೋಷವಿದ್ದಿತೋ, ಕರ್ಮವು ಪರಿಶುದ್ಧವಾಗಿರಲಿಲ್ಲವೋ, ಭಕ್ತಿಯು ಸಂಪೂರ್ಣವಾಗಿರಲಿಲ್ಲವೋ ಪಾರ್ವತಿಯ ಬಲಗಣ್ಣು ಅದಿರಿತು. ಆರತಿಯ ಬೆಳಕು ಗಾಳಿ ನಂದಿ ಹೋಯಿತು. ಸಂತೋಷಸಗರದಲ್ಲಿ ಝಂಝಾವಾತವೇಳುವಂತೆ ತೋರಿತು. ಆದರೆ ದೇವಿಯ ಇಷ್ಟ ಹೇಗಿದೆಯೋ ಬಲ್ಲವರು ಯಾರು? ಹೊತ್ತು ಮೀರಿತು ಎಂದು ಅಮಾತ್ಯನಂದಿನಿ ಲಗುಬಗೆಯಿಂದ ಎದ್ದು ಹಿಂದೆ ಹೊರಡಲು ಅನುವಾದಳು. ಸಂಜೆಯ ಬೆಳಕು ಇನ್ನೂ ಮಂದವಾಗಿ ಪಸರಿಸಿಕೊಂಡಿತ್ತು. ಪಾರ್ವತಿಯೂ ಅವಳ ಪರಿವಾರವೂ ಹಿಂದೆ ಹೋಗುತ್ತಿದ್ದಾಗ ಫಕ್ಕನೆ ನಾಲ್ಕು ಜನ ಛದ್ಮವೇಷಿಗಳಾದ ಅಶ್ವಾರೋಹಿಗಳು ಅವರನ್ನು ಬಂದು ಮುತ್ತಿದರು. ಅವರಲ್ಲಿ ಒಬ್ಬನು ಪಾರ್ವತಿಯನ್ನು ಹಿಡಿದೆತ್ತಿ ತನ್ನ ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ದೌಡಾಯಿಸಿಕೊಂಡು ಓಡಿಯೇ ಹೋದನು. ಉಳಿದ ರಾವುತರು ಅವನ ಹಿಂದೆಯೇ ಧಾವಿಸಿದರು. ಈ ಆಕಸ್ಮಿಕ ಘಟನೆಯಿಂದ ಮಂಕುಬಡಿದ ಸಖಿಯರು ತಿಳಿದೇಳುವಾಗ ಅವರ ಪ್ರಾಣದಂತಿದ್ದ ಅವರ ಸಾರದಂತಿದ್ದ ಮಂತ್ರಿಪುತ್ರಿ ಅಲ್ಲಿ ಇರಲೇ ಇಲ್ಲ. ಯಾರಿಗೆ ಹೇಳುವುದು? ಏನು ಹೇಳುವುದು? ಮಹಾರಾಜನಿಗೂ ಮಂತ್ರಿಗೂ ದೂರು ತಲಪಲು ಹೆಚ್ಚು ವೇಳೆ ಹಿಡಿಯಲಿಲ್ಲ.

ಪಾರ್ವತಿಯನ್ನು ಅಪಹರಿಸಿಕೊಂಡು ಹೋದವನು ಶಿವರಾಜನೇ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಪ್ರಸಂಗದ ತೀವ್ರತೆಯ ಗಾಸಿಯಿಂದ ತಿಳಿದೆದ್ದು, ಬುದ್ಧಿ ಉದ್ವೇಗವನ್ನು ಹಿಮ್ಮೆಟ್ಟಿ ಮುಂದೆ ಬಂದು ನಿಂತಾಗ, ಪಾರ್ವತಿಗೆ ಆ ದುರ್ಘಟನೆಯ ಅರ್ಥ ಸಂಪೂರ್ಣವಾಗಿ ಆಯಿತು. ಕುದುರೆಯು ಪೂರ್ವದಿಗಭಿಮುಖವಾಗಿ ಓಡುತ್ತಲೇ ಇದ್ದಿತು. ಶಿವರಾಜನು ಅವಳನ್ನು ಬಲವಾಗಿ ಎಳೆದು ಹಿಡಿದಿದ್ದನು. ಅವನ ಆ ಬಲಿಷ್ಠ ಹಿಡಿತದಿಂದ ಬಿಡಿಸಿಕೊಳ್ಳಲು ತರಳೆಗೆ ಸಾಧ್ಯವಾಗಲಿಲ್ಲ. ಅವನನ್ನು ಆ ಲಂಪಟನನ್ನು ಆ ದುಷ್ಟನನ್ನು ಅವಳು ಬಹಳವಾಗಿ ಹಳಿದಳು. ಆದರೆ ಶಿವರಾಜನು ಮಾತನಾಡದೆ ತನ್ನ ಕರ್ತವ್ಯದಲ್ಲಿ – ಪಡೆದುದನ್ನು ದಕ್ಕಿಸಿಕೊಳ್ಳುವುದರಲ್ಲಿ – ಮಗ್ನನಾಗಿದ್ದನು. ಅನುಚರರು – ದೇವಯ್ಯ ಮತ್ತು ಸೈನಿಕರೀರ್ವರು – ಅವನ ಹಿಂದೆಯೇ ಧಾವಿಸುತ್ತಿದ್ದರು.

ಶತ್ರುಗಳು ಯಾರೋ ಮಂತ್ರಿಸುತೆಯನ್ನು ಅಪಹರಿಸಿರುವರೆನ್ನುವ ಕಾಳ್ಗಿಚ್ಚು ಸುದ್ದಿ ಭುಗಿಲ್ ಭುಗಿಲ್ ಎಂದು ಹಬ್ಬಿತು. ಬಸವರಾಜನು ಮನದನ್ನೆಯನ್ನು ರಕ್ಷಿಸಲು ಮುಂದಾದನು. ಇಪ್ಪತ್ತೈದು ಮಂದಿ ಸಶಸ್ತ್ರರಾವುತರಿಂದ ಪರಿವೃತನಾಗಿ ಅವನು ಧಾವಿಸಿದನು. ಆಗಂತುಕ ಕ್ರೂರಿಗಳು ಪೂರ್ವ ದಿಕ್ಕಿಗೆ ಜಿಗಿದಿದ್ದರೆಂದು ಬಸವರಾಜನಿಗೆ ಜನರಿಂದ ತಿಳಿದುದರಿಂದ ಆ ದಿಕ್ಕಿಗೇ ದೌಡಾಯಿಸಿದನು. ಸ್ತ್ರೀ ಅಪಹಾರಿಗಳ ಹಿಂದೆ ಈ ಪಡೆಯು ದ್ವಿಗುಣಿತ ವೇಗದಿಂದ ಓಡಿತು. ಸತ್ಕಾರ್ಯಕ್ಕೆ ದೇವರ ಬೆಂಬಲವಿರುವುದು. ಈ ಬೆಂಬಲ ಮನಸ್ಸಿನ ಉತ್ಸಾಹದಲ್ಲಿ, ದೇಹದ ಶಕ್ತಿಯಲ್ಲಿ, ಪ್ರಸಂಗಗಳ ಅನುಕೂಲತೆಯಲ್ಲಿ ಎದ್ದು ಕಾಣುವುದು. ದುಷ್ಕಾರ್ಯಕ್ಕೆ ವಿಘ್ನಗಳು ಅಮಿತ. ಅವುಗಳಲ್ಲಿ ಒಂದೇ ಒಂದು ವಿಘ್ನವನ್ನಾದರೂ ಕೃತಿಕಾರನು ಎದುರಿಸದಿದ್ದರೆ ಅದು ಅವನನ್ನು ನಾಶ ಮಾಡಿ ಬಿಡುವುದು.

ಶಿವರಾಜನ ಪರಿವಾರ ಬಸವರಾಜನ ಪಡೆಯಿಂದ ಶೀಘ್ರವಾಗಿ ಆವರಿಸಲ್ಪಟ್ಟಿತು. ಅವರು ನಾಲ್ಕು ಜನರು ಇವರು ಇಪ್ಪತ್ತಾರು ಜನರು. ಅವರದು ದುಷ್ಕಾರ್ಯ, ಇವರದು ಪವಿತ್ರ ಕರ್ತವ್ಯ. ನಾಲ್ಕು ಜನರೂ ಸೆರೆಸಿಕ್ಕಿದರು. ಪಾವರ್ತಿಯ ಬಸವರಾಜನ ಹೃನ್ಮಂದಿರದ ಆರಾಧನಾ ದೇವಿಯು, ಸುರಕ್ಷಿತಳಾದಳು. ಕತ್ತಲೆಯ ಮೊತ್ತ; ಚಂದ್ರನ ಮಂದಪ್ರಕಾಶವೂ ಮೋಡಗಳಿಂದಾಗಿ ಕಡಿಮೆಯಾಗಿತ್ತು. ಆದರೂ ಬಸವರಾಜನಿಗೆ ಶಿವರಾಜನನ್ನೂ ದೇವಯ್ಯನನ್ನೂ ಗುರುತಿಸಲು ತಡವಾಗಲಿಲ್ಲ. ಹಿರಿಯವನು ದಿಗ್ಭ್ರಾಂತನಾದನು. ಇಂತಹ ಹೀನ ಕಾರ್ಯದಲ್ಲಿ ಪ್ರವೃತ್ತನಾದವನು ತನ್ನ ಸಹೋದರ. ಸೈನಿಕರಿಂದ ಬಲವಾಗಿ ಹಿಡಿಯಲ್ಪಟ್ಟಿದ್ದ ಶಿವರಾಜ ನೆಲವನ್ನು ನೋಡುತ್ತಿದ್ದನು. ಪಾದಗಳು ತರಗೆಲೆಗಳನ್ನು ಕೆರೆಯುತ್ತಿದ್ದುವು. ದೇವಯ್ಯನು ದೂರದ ಬೆಟ್ಟದ ಅಂಚನ್ನು ನೋಡುತ್ತಿದ್ದನು. ಉಳಿದ ಸೈನಿಕರು ನೀರವ. ಏನು ಮಾತಾಡುವುದು ಹೇಗೆ ಮಾಡುವುದು? ಯಾರು ಮಾತು ಪ್ರಾರಂಭಿಸಬೇಕು? ಮುಂದೇನು? ಮೋಡಗಳು ಭರದಿಂದ ಚಂದ್ರನನ್ನು ನುಂಗಲು ಧಾವಿಸಿ ಮುಂದೆ ನುಗ್ಗಿದುವು. ಗಾಳಿಯ ಚಲನೆಯಿಲ್ಲ. ಗೂಬೆಯ ಘೂಕಾರ ಅಮಂಗಳ ವಚನ ನುಡಿಯಿತು.

ಔದಾರ್ಯದ ಮೂರ್ತಿ ಬಸವರಾಜ ನುಡಿದನು : ತಮ್ಮ! ಆದದ್ದು ಆಗಿಹೋಯಿತು. ನಿನ್ನನ್ನು ಕ್ಷಮಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹಿಂದೆ ಹೋಗೋಣ. ತಮ್ಮನು ಮಾತಾಡಲಿಲ್ಲ. ಈ ಸಂಗತಿ ಇಲ್ಲಿರುವ ನಮಗೆ ಮಾತ್ರ ತಿಳಿದಿದೆ. ಉಳಿದ ಯಾರಿಗೂ ಪಾರ್ವತಿಯನ್ನು ಅಪಹರಿಸಿದವನು ನೀನೆಂದು ಗೊತ್ತಿಲ್ಲ_ ಅಣ್ಣನು ಮುಂದುವರಿಸಿದನು – ನೀನು ನಾಲ್ಕುನಾಡಿಗೆ ಹೋಗಿದ್ದವನು ಅಲ್ಲಿಯೇ ಇರುವಿಯೆಂದು ತಂದೆಯವರಿಗೂ ಎಲ್ಲರಿಗೂ ನಂಬಿಕೆ. ನೀನು ಈಗಿಂದೀಗಲೇ ಅಲ್ಲಿಗೆ ಹೋಗು. ನಿಧಾನವಾಗಿ, ದಿನವೆಂಟು ಕಳೆದ ಮೇಲೆ, ಸಹಜವಾಗಿ ಮಡಿಕೇರಿಗೆ ಹೊರಟು ಬಾ. ನಿನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಬಾ. ಶಿವರಾಜನ ಉಸಿರು ತೀವ್ರವಾಗುತ್ತಿತ್ತು. ಪಾದಗಳು ಇನ್ನೂ ವೇಗದಿಂದ ನೆಲವನ್ನು ಕೆದಕುತ್ತಿದ್ದುವು. ದುರದೃಷ್ಟದಿಂದ ರಾಜಕುಲದ ಮರ್ಯಾದೆಯಿಲ್ಲಿ ಮಿಶ್ರವಾಗಿ ಹೋಗಿದೆ. ನಿಮ್ಮಲ್ಲಿ ಯಾರಿಂದಾದರೂ ಈ ಸುದ್ದಿ ಹೊರಗೆ ಬಂದರೆ ಅವರಿಗೆ ಮರಣ ಶಿಕ್ಷೆ, ತಿಳಿಯಿತೇ? ಬಸವರಾಜನ ಮಾತಿಗೆ ಸಕಲ ಸೈನಿಕರೂ ಸಮ್ಮತಿಯಿತ್ತರು, ಮತ್ತು ತಾವು ರಹಸ್ಯವನ್ನು ರಕ್ಷಿಸವುದಾಗಿ ಖಡ್ಗಗಳನ್ನು ಮುಟ್ಟಿ ಪ್ರತಿಜ್ಞೆಮಾಡಿದರು. ನೀವಿನ್ನು ಹೋಗಿ ಎಂದು ಶಿವರಾಜನ ಮೈದಡವಿ ಅವನನ್ನು ಪ್ರೇಮದಿಂದ ಬಸವರಾಜನು ಕಳುಹಿಸಿದನು. ಶಿವರಾಜನು ಕದಲಲೇ ಇಲ್ಲ. ಮನುಷ್ಯನ ಶಕ್ತಿಗಿಂತಲೂ ಮೇಲೇ ಅದೃಷ್ಟ ಶಕ್ತಿಯೆಂದೊಂದಿದೆ. ಅದೇ ನಮ್ಮನ್ನು ರಕ್ಷಿಸುವ ದೇವರು. ಆ ದೇವರ ಹೆಸರಿನಲ್ಲಿ ನೀನು ಸನ್ಮಾರ್ಗದಲ್ಲಿ ನಡೆಯುತ್ತಿರು ತಮ್ಮಾ! ಎಂದು ಬುದ್ಧಿ ಶ್ರೀಮಂತ ಬಸವರಾಜನು ಹಿತನುಡಿದನು ಅಲ್ಲಿಂದ ತೆರಳಿದನು. ಪಾರ್ವತಿಯನ್ನು ಅವನು ಕರೆದುಕೊಂಡು ಹೋದನು.

ಶಿವರಾಜನೂ ದೇವಯ್ಯನೂ ಅವರು ಹೋದ ಮೇಲೆ ಎಷ್ಟೋ ಹೊತ್ತು ಅಲ್ಲಿಯೇ ನಿಂತಿದ್ದರು. ಅವರ ಸಹಚರ ಸೈನಿಕರೂ ಹಾಗೆಯೇ ನಿಶ್ಚಲರಾಗಿದ್ದರು. ಮನಸ್ಸಿನ ಅಪಮಾನ, ದುಗುಡ ರಾತ್ರಿಯು ಏರಿದಂತೆ ಕಡಿಮೆಯಾದವು. ಶಿವರಾಜನು ಅರಣ್ಯವು ಬಿರಿಯುವಂತೆ ಗಹಗಹಿಸಿ ನಕ್ಕು ನೋಡಿದೆಯಾ ದೇವಯ್ಯ! ಅದೃಷ್ಟವನ್ನು ನಂಬಬೇಕಂತೆ! ನಮ್ಮ ಪ್ರಯತ್ನ ಸಾಕಾಗಲಿಲ್ಲ ಎಂದು ಈ ಘಟನೆ ತೋರಿಸುವುದೇ ಹೊರತು ಮನುಷ್ಯ ಶಕ್ತಿಯ ಅಲ್ಪತೆಯನ್ನಲ್ಲ.

ಹೌದು ರಾಜರೇ. ಈಚೆಗೆ ಎರಡು ವರ್ಷಗಳಿಂದ ದೇವಯ್ಯನು ಶಿವರಾಜನನ್ನು ರಾಜ ಎಂದೇ ಸಂಬೋಧಿಸುತ್ತಿದ್ದನು. ಇದರಿಂದ ಶಿವರಾಜನಿಗೆ ತುಂಬ ಸಂತೋಷವಾಗುತ್ತಿದ್ದಿತು. ಇನ್ನು ಮಡಿಕೇರಿಗೆ ನಾನು ಮರಳುವುದು ರಾಜನಾಗಿ, ನೀನು ನನ್ನ ಮಂತ್ರಿಯಾಗಿ. ಈ ಕ್ಷಮೆಯೆನ್ನುವ ಭಯಂಕರ ಅಪಮಾನದ ಸೇಡು ನಾನು ತೀರಿಸಿಕೊಂಡೇ ತೀರುವೆನು. ಹಾಗೆಯೇ ಸರಿ ರಾಜರೇ ದೇವಯ್ಯನು ಉಚಿತವಾಗಿ ಉತ್ತರಿಸಿದನು.

ಆದರೆ ಶಿವರಾಜನು ರಾಜನಾಗಿ ಮಡಿಕೇರಿಗೆ ಮರಳಲಿಲ್ಲ – ರಾಜಕುಮಾರನಾಗಿಯೇ, ಒಂದು ತಿಂಗಳಿನ ಅನಂತರ, ದೇವಯ್ಯನ ಸಮೇತ ಮರಳಿದನು. ಬೇರೇನೋ ದುರಾಲೋಚನೆಯಿಂದಲೋ ದೂರಾಲೋಚನೆಯಿಂದಲೋ ಹಿಂದಿನ ನಿರ್ಧಾರವನ್ನು ವ್ಯತ್ಯಸ್ತಪಡಿಸಿದ್ದನು. ದೇಶಸಂಚಾರಮಾಡಿ ಒಂದು ತಿಂಗಳ ಅನಂತರ ಮರಳಿದ ಕಿರಿಯಮಗನಿಗೆ ವೀರರಾಜನು ಸಂಭ್ರಮದ ಸ್ವಾಗತವಿತ್ತನು. ಬಸವರಾಜನು ಆ ಉತ್ಸವದಲ್ಲಿ ಪೂರ್ಣ ಮನಸ್ಸಿನಿಂದ ಭಾಗಿಯಾಗಿದ್ದನು. ಹಿಂದಿನ ದುರ್ಘಟನೆಯನ್ನು ಅವನು ಸಂಪೂರ್ಣವಾಗಿ ಮರೆತಂತೆ ವರ್ತಿಸಿದನು. ತಮ್ಮನನ್ನು ಅವನು ಅಂದೇ ಕ್ಷಮಿಸಿದ್ದನು. ಆದರೆ ಶಿವರಾಜನಿಗೆ ಅಣ್ಣನ ದೃಷ್ಟಿಯನ್ನು ಎದುರಿಸಲು ಧೈರ್ಯ ಬರಲಿಲ್ಲ. ಶಿವರಾಜನು ಮೊದಲಿಗಿಂತಲೂ ಹೆಚ್ಚು ಏಕಾಂತಪ್ರೇಮಿಯಾಗಿ ದೇವಯ್ಯನ ಸಂಗದಲ್ಲಿ ಇನ್ನಷ್ಟು ಸಮಯವನ್ನು ಕಳೆಯುತ್ತಿದ್ದನು.

ಮುಂದೆ ಹುತ್ತರಿಯು ಮುಗಿದು ಸುಗ್ಗಿಯ ಸಮಯವೂ ದಾಟಿತು. ವಸಂತಾಗಮನದಿಂದ ನಾಡಿಗೆ ನಾಡೇ ಹರ್ಷದ ಬೀಡಾಯಿತು. ಆ ಶುಭ ಕಾಲದಲ್ಲಿ ರಾಜಕುಮಾರ ಬಸವರಾಜನಿಗೂ ಮಂತ್ರಿಕುಮಾರಿ ಪಾರ್ವತಿಗೂ ವಿವಾಹವು ಮಹಾವೈಭವದಿಂದ ನೆರವೇರಿತು. ಪುಷ್ಪವು ದೇವಸನ್ನಿಧಿಯನ್ನು ಸೇರಿತು. ಸಂಸ್ಥಾನವಿಡೀ ಈ ಪಾಣಿಗ್ರಹಣ ಮಹೋತ್ಸವದಲ್ಲಿ ಭಾಗಿಯಾಗಿ ರಾಜದಂಪತಿಗಳ ಆನಂದದಲ್ಲಿ ಆನಂದ ಪಡೆಯಿತು. ಮಡಿಕೇರಿಯು ಸಿಂಗಾರದ ನಗರವಾಯಿತು. ಸಂತೋಷ ಸಂತೃಪ್ತಿಗಳು ತುಂಬಿ ತುಳುಕುವ ಪಟ್ಟಣವಾಯಿತು. ತರುಣ ರಾಜದಂಪತಿಗಳು ಅತ್ಯುಲ್ಲಾಸದಿಂದ, ಪರಮಸಂತೋಷದಿಂದ, ಆತ್ಮನಿವೇದನೆಯಿಂದ ಗೃಹಸ್ಥ ಜೀವನದಲ್ಲಿ ಅಡಿಯಿಟ್ಟರು.
ಶಿವರಾಜನು ಯಾಂತ್ರಿಕವಾಗಿ – ಎಷ್ಟು ಅಗತ್ಯವೋ ಅದಕ್ಕಿಂತಲೂ ಕಡಿಮೆಯಾಗಿ _ ಈ ಉತ್ಸವದಲ್ಲಿ ಭಾಗಿಯಾಗಿದ್ದನು.

ಆನಂದರಸದ ಚಷಕ ತುಂಬಿದ್ದಾಗಲೇ ಪರಮೇಶ್ವರನು ಮುನಿದನು, ಇಲ್ಲ ವೀರರಾಜನ ಮೇಲೆ ತನ್ನ ಅಧಿಕ ವಾತ್ಸಲ್ಯವನ್ನು ವ್ಯಕ್ತಪಡಿಸಿದನು. ಮುಂದಿನ ಮಳೆಗಾಲ, ಅಂದರೆ ದಕ್ಷಿಣಾಯನ ಪ್ರಾರಂಭವಾಗುವ ಪೂರ್ವದಲ್ಲಿ, ವೀರರಾಜನು ಶಿವಪಾದಪದ್ಮಗಳಲ್ಲಿ ಲೀನನಾಗಿದ್ದನು. ರಾಜ ಮಡದಿ ದೇವ ರಾಜಮ್ಮಣ್ಣಿಯು ಮೊದಲೇ ವ್ಯಾಧಿಗ್ರಸ್ತಳಾಗಿದ್ದವಳು ಪತಿವಿಯೋಗದಿಂದ ಎದೆಯೊಡೆದು ಹನ್ನೊಂದು ದಿನ ತುಂಬುವ ಮೊದಲೇ ಪತಿಪಾದ ಸನ್ನಿಧಿಯಲ್ಲಿ ಐಕ್ಯಳಾಗಿದ್ದಳು. ಅನಂತರದ ಕಾರ್ಯಕ್ರಮಗಳು ಯಥಾ ಯೋಗ್ಯವಾಗಿ ನಡೆದುವು. ರಾಜ್ಯದ ಕಾರ್ಯ ಸಾಗಲೇಬೇಕಾಗಿತ್ತು. ವ್ಯಕ್ತಿಕೇಂದ್ರೀಕೃತವಾಗಿದ್ದ ಆಡಳಿತೆಯಲ್ಲಿ ಸಾಮಂತರಾಜರ ವಿಧೇಯತೆ, ರಾಜ್ಯದಲ್ಲಿಯ ಸುವ್ಯವಸ್ಥೆ ಇವುಗಳನ್ನು ರಕ್ಷಿಸಲು ಸಿಂಹಾಸನವು ಒಂದು ಕ್ಷಣವೂ ಕ್ರಿಯಾಶೂನ್ಯವಾಗಿರಬಾರದು. ಅಂತರ್ಮುಖಿ ಬಸವರಾಜ, ಗೃಹಸ್ಥ ಜೀವನದ, ಸಂಸಾರದ ಸುಖದ ಮೊದಲಿನ ಸೋಪಾನದಲ್ಲಿಯೇ ಮಾತಾಪಿತೃವಿಯೋಗದಿಂದ ಕಳೆಗುಂದಿ ಜರ್ಜರಿತನಾಗಿ ಏನು ಕಾರ್ಯ ನಡೆಸಲೂ ತಿಳಿಯದವನಾದನು. ವೃದ್ಧಮಂತ್ರಿ ಶಿವರುದ್ರಪ್ಪನು ದಕ್ಷನಾಗಿದ್ದನು, ಆದರೆ ಮುಖ್ಯ ಸೂತ್ರವನ್ನು ರಾಜನೇ ಹಿಡಿಯಬೇಕು. ನವರಾಜನ ವಿಧಿಪೂರ್ವಕ ಪ್ರತಿಷ್ಠಾಪನೆ, ವಿಧ್ಯುಕ್ತ ಸಿಂಹಾಸನಾರೋಹಣವಾಗಲು ದಿವಂಗತರ ವರ್ಷಾಬ್ದಿಕ ಮುಗಿಯಬೇಕು. ಬಸವರಾಜನು ಶಿವರಾಜನನ್ನು ರಾಜ್ಯದ ರಕ್ಷಣೆ ಪರಿಪಾಲನೆ ಮಾಡಲು ನಿಯಮಿಸಿದನು. ಸಾಮರ್ಥ್ಯ ಮತ್ತು ಯೋಗ್ಯತೆಗಳಲ್ಲಿ ಶಿವರಾಜನು ಎಂದೂ ಕಡಿಮೆಯವನಾಗಿರಲಿಲ್ಲ.

ತಂದೆಯ ಮರಣಾನಂತರ ತಾನು ಸೆರೆಯ ಮನೆಯಲ್ಲಿ ಕೊಳೆಯುತ್ತಿರಬೇಕು ಎಂದು ಕೆಟ್ಟಕನಸು ಕಾಣುತ್ತಿದ್ದ ಶಿವರಾಜನು ಅಣ್ಣನ ಈ ಔದಾರ್ಯದ ಪುನರುಚ್ಚಾರಣೆಯಿಂದ ಸಂತೋಷಭರಿತನಾದನು. ಅಧಿಕಾರ ಮನುಷ್ಯನ ಬುದ್ಧಿಯನ್ನು ಮೋಹಗೊಳಿಸಿ ಕೆಡಿಸುವುದು. ಸರ್ವಾಧಿಕಾರ ಅವನ ಜ್ಞಾನವನ್ನೂ ವಿವೇಕಶಕ್ತಿಯನ್ನೂ ಸಂಪೂರ್ಣವಾಗಿ ನಾಶಪಡಿಸಿಬಿಡುವುದು. ದುಷ್ಟರ ಕೈಗೆ ಅಧಿಕಾರ ಬಂದರೆ ಹೀಗಾಗುವುದು. ಎರಡು ಸಲ ಶಿವರಾಜನ ಮನಸ್ಸಿಗೆ ಗಾಯವಾಗಿದ್ದಿತು. ದೇವಯ್ಯನ ಔಷಧಿಯ ಲೇಪನವಿಲ್ಲದಿದ್ದರೆ, ಮಂತ್ರಾಲೋಚನೆಯ ವಿಷರಸ ಊಡಿಸಲ್ಪಡದಿದ್ದಿದ್ದರೆ ಆ ಗಾಯಗಳು ಬಹುಶಃ ಮಾಯ್ದಿರುತ್ತಿದ್ದುವು. ಸಹೋದರರು ಚಿಕ್ಕಂದಿನಲ್ಲಿ ಇದ್ದಂತೆ ಅನ್ಯೋನ್ಯತೆಯಿಂದ ಬಾಳಿರುತ್ತಿದ್ದರು. ಆದರೆ ದೇವಯ್ಯನ ದಿಗಂತಸಮೀಪದ ಕನಸು ನನಸಾಗಬೇಕಾದರೆ ಶಿವರಾಜನೇ ರಾಜನಾಗಬೇಕು. ಕಾರ್ಯರಂಗದಲ್ಲಿ ರಾಜನಾಗಿದ್ದ ಶಿವರಾಜ ಅವನ ಮಂತ್ರಿ ದೇವಯ್ಯ ಇವರ ಮಂತ್ರಾಲೋಚನೆ ಗುಪ್ತಾಲೋಚನೆ ಕುಹಕಾಲೋಚನೆಗಳು ಅವ್ಯಾಹತವಾಗಿ ಮುಂದುವರಿದುವು.

ಮುಂದಿನ ಕಾರ್ತಿಕ ಮಾಸ. ಮಳೆಯಳಿದು ಹೊಸಚಿಗುರು ನವಹರ್ಷದಿಂದ ಸಲಕರನ್ನೂ ಚೇತನಮುಗ್ಧಗೊಳಿಸುತ್ತಿರುವ ಕಾಲ. ರಾಜ ದಂಪತಿಗಳು ನಾಲ್ಕುನಾಡು ಅರಮನೆಗೆ ಹೋಗಿ ಒಂದೆಂಟು ದಿನಗಳು ಅಲ್ಲಿ ಇದ್ದು ಬಂದರೆ ಪ್ರಜಾರಂಜನೆಯೂ ಆಗುವುದು; ಆ ದಿವ್ಯಪ್ರಕೃತಿಯ ರಸಮಯ ಸನ್ನಿಧಾನದಲ್ಲಿ ಬಸವರಾಜನು ಶಾಂತನಾಗಿ ಇದ್ದು ಮನಃಸ್ವಾಸ್ಥ್ಯವನ್ನು ಪಡೆದಂತೆಯೂ ಆಗುವುದು ಎಂದು ಶಿವರಾಜನು ಸೂಚಿಸಿದನು. ಬಸವರಾಜನಿಗೆ ತಮ್ಮನ ಮಾತು ಯುಕ್ತವೆಂದೆನಿಸಿತು. ಮುಂದೆ ಒಂದು ಶುಭದಿವಸ ರಾಜಪರಿವಾರ ನಾಲ್ಕುನಾಡು ಅರಮನೆಗೆ ತೆರಳಿತು. ತುಂಬಿ ಹರಿಯುತ್ತಿದ್ದ ಕಾವೇರೀ ನದಿಯನ್ನು ದೋಣಿಗಳ ಸಹಾಯದಿಂದ ದಾಟಿ ಮುಂದೆ ಸಾಗಿದರು. ಕಾಡುಗಳ ಮಧ್ಯೆ ಉನ್ನತ ಪ್ರದೇಶದಲ್ಲಿ ಸುಂದರವಾಗಿ ಗಂಭೀರವಾಗಿ ನಿಂತಿರುವ ಆ ಭವ್ಯ ರಾಜಮಂದಿರವನ್ನು ರಾಜದಂಪತಿಗಳು ಸೇರಿದರು. ತಡಿಯಂಡಮೋಳು ಪರ್ವತದ ಬುಡದಲ್ಲಿ ಅರಮನೆಯಿತ್ತು. ಅದರ ವಿಶಾಲವಾದ ಅಂಗಳದಲ್ಲಿ ನಿಂತು ದೃಷ್ಟಿಯನ್ನು ಮೇಲೆ ಚಾಚಿದರೆ ಆಕಾಶದ ಹಿನ್ನೆಲೆಯಲ್ಲಿ ಮಡಿಕೇರಿಯ ಬೆಟ್ಟದ ಅಂಚು ಸ್ಪಷ್ಟವಾಗಿ ತೋರುತ್ತಿದ್ದಿತು. ರಾಜನ ಆಜ್ಞೆಯಂತೆ ಅಲ್ಲಿ – ಬೆಟ್ಟದ ತುದಿಯಲ್ಲಿ – ಪ್ರತಿರಾತ್ರಿ ಝಾಮಝಾಮಕ್ಕೆ ಮಹಾಸ್ಫೋಟನೆಯನ್ನು ಮಾಡಿ ಬೆಂಕಿ ಉರಿಸುತ್ತಿದ್ದರು. ಇದರಿಂದ ದೂರದೂರದ ಹಳ್ಳಿಗಳ ಜನರಿಗೆಲ್ಲ ಕಾಲದ ಅರಿವಾಗುತ್ತಿತ್ತು. ರಾತ್ರಿಯ ಅಂತಹ ದೃಶ್ಯಗಳನ್ನು ನೋಡುತ್ತ ಅವುಗಳಿಗಿಂತ ಕೋಟಿ ಪಾಲು ಮಿಗಿಲಾದ ದೇವರ ದೀಪಗಳನ್ನು ವೀಕ್ಷಿಸುತ್ತ ಬಸವರಾಜನು ಅಲ್ಲಿ ಶಾಂತಿಯ ಆರಾಧನೆಯನ್ನು ಮಾಡುತ್ತಿದ್ದನು.

ರಾಜದಂಪತಿಗಳು ಅಲ್ಲಿ ಒಂದು ತಿಂಗಳು ಕಾಲ ಹೀಗೆ ಪ್ರಕೃತಿಯ ಆರಾಧನೆಯಲ್ಲಿ ಸಮಯವನ್ನು ಸದ್ವಿನಿಯೋಗ ಮಾಡಿದರು. ಅವರಿಗೆ ಅಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಮುಂದೆ ಬಸವರಾಜನು ಅಲ್ಲಿಂದ ಮಡಿಕೇರಿಗೆ ಹೊರಡುವ ಇಚ್ಛೆ ವ್ಯಕ್ತಪಡಿಸಿದನು. ಶಿವರಾಜನ ಅಪೇಕ್ಷೆ ಸ್ವಲ್ಪ ತಡವಾಗಿ ಅವರು ಬರಬಹುದು, ಸದ್ಯವೇ ಬಂದರೆ ಅವರಿಗೆ ತೊಂದರೆಯಾಗಬಹುದು ಎಂದಿತ್ತು. ಮತ್ತೆ ಕೆಲವು ದಿವಸಗಳ ಮೇಲೆ ಬಸವರಾಜನು ಹೊರಡಲುದ್ಯಕ್ತನಾದನು. ಆಗ ಮತ್ತೊಂದು ಎಡರನ್ನು ಎದುರಿಡಲಾಯಿತು. ಹೀಗೆಯೇ ಮತ್ತೆರಡು ತಿಂಗಳುಗಳು ಕಳೆಯುವಾಗ ಬಸವರಾಜನಿಗೆ ಸ್ಪಷ್ಟವಾಯಿತು – ತಾನು ಮತ್ತೆ ಮಡಿಕೇರಿಗೆ ಹೋಗುವಂತಿಲ್ಲ; ಇಲ್ಲಿ ಅರಮನೆಯಲ್ಲಿಯೇ ಪ್ರತಿಬಂಧಿತನಾಗಿದ್ದೇನೆ, ಎಂದು. ಅರಮನೆಯ ಭದ್ರವಾದ ಬಲು ಎತ್ತರವಾದ ಗೋಡೆಗಳ ಆವರಣದಿಂದ ಹೊರಗೆಹೋಗಲು ಅವರಿಗೆಡೆಯಿರಲಿಲ್ಲ. ತಮ್ಮನ ಮೋಸಕೃತ್ರಿಮತೆಗಳು ಬಸವರಾಜನಿಗೆ ವಿದಿತವಾದುವು ಸಹಾಯಹೀನ ಸಿಂಹಸಿಂಹಿಣಿಯರು ಕ್ರೋಧಾತಿಶಯದಿಂದ ಗರ್ಜಿಸಿದರು. ಆದರೆ ಅರಮನೆಯ ಗೋಡೆಗಳೂ ಪೌಳಿಯ ಗೋಡೆಗಳೂ ಅಲುಗಲಿಲ್ಲ. ಮುಂದೆರಡು ವಾರಗಳು ಮುಗಿದಾಗ ವೈಭವಪೂರಿತನಾಗಿ ದರ್ಪದಿಂದ ಗರ್ವದಿಂದ ಶಿವರಾಜನೇ ಅರಮನೆಗೆ ಬಂದನು.

ಹೇಗಿದ್ದೀರಿ ಅಣ್ಣನವರೇ ಅತ್ತಿಗೆಯವರೇ? ಶಿವರಾಜನು ಕೊಂಕು ನುಡಿದನು. ಬಸವರಾಜನ ಕೋಪವಳಿದಿತ್ತು. ಸಮಾಧಾನವಾಗಿಯೇ ಮಾತಾಡಿದನು. ತಮ್ಮಾ! ಬಾ ಕುಳಿತುಕೋ. ನಿನಗೇನು ರಾಜ್ಯಬೇಕೆಂದು ಆಸೆಯೇ? ಪಾರ್ವತಿಯು ಹಲ್ಕಡಿಯುತ್ತಿದ್ದಳು. ಪುರುಷ ಪ್ರಯತ್ನವೋ ಅದೃಷ್ಟವೋ ಮೇಲು? ಈಗ ನೋಡಣ್ಣಾ! ಶಿವರಾಜನು ಕಠೋರವಾಗಿ ಕಟುವಾಗಿ ನುಡಿದು ಕಟ್ಟಡವು ಬಿರಿಯುವಂತೆ ನಗಾಡಿ ಅಲ್ಲಿಂದ ತೆರಳಿದನು. ಹೋಗುವಾಗ ಇದೇ ನಮ್ಮೀರ್ವರ ಕೊನೆಯ ಸಂದರ್ಶನ ಎಂದು ಯಮದೂತಾಗಮನದ ಆಶ್ವಾಸನೆಯನ್ನು ಕೂಡ ಕೊಟ್ಟು ಹೋದನು. ಬಸವರಾಜನಿಗೆ ಈ ಮಾತು ಕೇಳಿಸಲಿಲ್ಲ. ಪಾರ್ವತಿಯು ಕೇಳಿ ಭಯ ವಿಹ್ವಲಳಾದಳು. ಗಂಡನಿಗೆ ವಿಷಯವನ್ನು ತಿಳಿಸಿದಳು. ಹಾಗೆ ಹೇಳಿರಲಾರನು. ಹೇಳಿದರೂ ದೇವರು ಅವನಿಗೆ ಒಳ್ಳೆಯ ಬುದ್ಧಿಯೀಯುವಂತೆ ಪ್ರಾರ್ಥಿಸೋಣ ಎಂದು ಹಿತನುಡಿದನು ಬಸವರಾಜ.

ಆ ರಾತ್ರಿ ಕಾಳರಾತ್ರಿ. ದುಷ್ಟರಾತ್ರಿ. ಮನುಷ್ಯನ ದೌಷ್ಟ್ಯವೆಲ್ಲವೂ ರೂಪುಗೊಂಡು ಕರ್ಕಶ ಕೃಷ್ಣವರ್ಣವನ್ನು ಬೀರಿದಂತೆ ಇದ್ದ ಭಯಂಕರ ರಾತ್ರಿ. ತಾರೆಗಳ ಮಿನುಗಿಲ್ಲ. ನಾಯಿಗಳ ದನಿಯಿಲ್ಲ. ಗೂಬೆಗಳ ಘೂಕಾರವೂ ಇಲ್ಲ. ಕಾಡಿಗೆ ಕಾಡೇ ಮೌನವಾಗಿ ಮುಖಮರೆಸಿಕೊಂಡಂತೆ ಇತ್ತು. ಕೃಷ್ಣಕಾರಸ್ತಾನವು ಕರಗಿ ಹರಿದಂತೆ ಕಗ್ಗತ್ತಲೆಯ ಮೊತ್ತ ಮಯಮಯವಾಗಿ ಬ್ರಹ್ಮಾಂಡವನ್ನೇ ನುಂಗಿ ಅರಗಿಸಿಕೊಂಡಿತ್ತು. ಒಂದು ಉಲ್ಕೆ ಮೋಡಗಳ ಎಡೆಯಲ್ಲಿ ಪ್ರಜ್ವಲಿಸಿ ಉರಿದುರಿದು ಆ ಭಯಂಕರತೆಗೆ ಬೀಭತ್ಸತೆಯನ್ನು ಬೀರಿ ದಕ್ಷಿಣ ದಿಗಭಿಮುಖವಾಗಿ ಜಗುಳಿಹೋಯಿತು. ಗೂಬೆಯೊಂದು ಅದನ್ನು ನೋಡಿ ಘೂಕಾರ ಮಾಡಿ ತಮೋಗರ್ಭದ ರುದ್ರಮೌನವನ್ನು ಭೇದಿಸಿ ಅದಕ್ಕಿನ್ನಷ್ಟು ಭಯವನ್ನು ಮೆತ್ತಿತ್ತು. ಈ ಅಪಸ್ವರ ಪರ್ವತ ಶ್ರೇಣಿಗಳಲ್ಲಿ ಕಾನನಾಂತರಗಳಲ್ಲಿ ತರಂಗ ತರಂಗವಾಗಿ ವ್ಯಾಪಿಸಿ ವಿಲಯರುದ್ರನ ತಾಂಡವ ನೃತ್ಯದ ಪದಹತಿಯಾಗಿ ಪರಿಣಮಿಸಿತು. ಸಾಂದ್ರತಮಸ್ಸು ಮತ್ತಷ್ಟು ಘನೀಭವಿಸಿ ಮಿಲಿಮಿಲಿಗುಟ್ಟಿತು.

ಮರುದಿನ ಬೆಳಗಾಯಿತು ವಿಧವೆ, ವಿರಹಿಣಿ, ರಾಜಮಡದಿ ಪಾರ್ವತಿ ಮೌನ ದುಃಖದಿಂದ ಅರಮನೆಯು ಕರಗುವಂತಾಯಿತು. ಅವಳಿಗೆ ದೇಹದ ಮೇಲೆ ಸ್ಮೃತಿಯಿರಲಿಲ್ಲ. ಮನದನ್ನನನ್ನು ಒಲಿದು ಬಂದವನನ್ನು ಕಳೆದುಕೊಂಡ ಆ ಜೀವ ಇನ್ನು ಬದುಕಿ ಮಾಡುವುದೇನು? ಆದರೆ ಜೀವ ಹೋಗಲೊಲ್ಲದು. ದಿನಗಳುರುಳಿದಂತೆ, ಅವಳ ಪ್ರಿಯ ಪತಿಗೂ ಅವಳಿಗೂ ಇದ್ದ ಅಂತರ ಹೆಚ್ಚು ಹೆಚ್ಚು ಆದಂತೆ, ಅವಳು ಉನ್ಮತ್ತಳಾಗುವಂತೆ ತೋರಿತು. ದಾಸಿಯರ ಉಪಚಾರ, ಸಹಾನುಭೂತಿ ನಿಷ್ಪ್ರಯೋಜನ. ಅವಳಿಗಂತಹ ಕಷ್ಟವನ್ನು ತಂದೊದಗಿಸಿದ ಸೌಂದರ್ಯ ಈಗ ಪ್ರೇತಕಳೆಗೆ ಎಡೆ ಕೊಟ್ಟಿದ್ದಿತು. ಪಾರ್ವತಿಯು ಈಗ ಎಲುಬಿನ ಗೂಡು, ಜೀವಚ್ಛವವಾಗಿದ್ದಳು. ಹತಭಾಗ್ಯೆಯ ದುಃಖವನ್ನು ಪರಮಾತ್ಮನೇ ಆಲಿಸಬೇಕಷ್ಟೆ.

ತಡಿಯಂಡಮೋಳುಗಿರಿಯ ಮೇಲೆ ವಿಹಾರಕ್ಕೆಂದು ಹೋಗಿದ್ದ ರಾಜ ದಂಪತಿಗಳ ಕಾಲು ಜಾರಿ ಅತಿ ಭೀಕರವಾದ ಆಳವಾದ ಕಂದರದಲ್ಲಿ ಬಿದ್ದು ದುರ್ಮರಣಕ್ಕೀಡಾದರೆನ್ನುವ ಭೀಷಣವಾರ್ತೆ ಮಡಿಕೇರಿಗೆ ಬಂದಿತು. ಶಿವರಾಜನ ಶೋಕದ ನಟನೆಯು ಸಮಯೋಚಿತವಾಗಿದ್ದಿತು. ಮಂತ್ರಿ ಶಿವರುದ್ರಪ್ಪನು ಮಗಳು ಅಳಿಯಂದಿರ ಈ ದುರ್ಮರಣಕ್ಕೆ ಅತಿಯಾಗಿ ದುಃಖಿಸಿದನು. ಅವನು ಉದ್ಯೋಗದಿಂದ ನಿವೃತ್ತನಾಗಲು ಅದೇ ಪೀಠಿಕೆಯಾಯಿತು. ಶಿವರಾಜನೂ ನೂತನಮಂತ್ರಿ ದೇವಯ್ಯನೂ ತಡಿಯಂಡಮೋಳುವಿನ ಭಯಂಕರ ಪ್ರಪಾತವನ್ನು ಪರೀಕ್ಷಿಸಿ ಮಕರಬಾಷ್ಪಗಳನ್ನು ಸುರಿಸಿದರು. ರಾಜದಂಪತಿಗಳ ಉತ್ತರಕ್ರಿಯೆಗಳನ್ನು ನಾಲ್ಕುನಾಡು ಅರಮನೆಯ ಸಮೀಪದ ಇಗ್ಗುತಪ್ಪ ಬೆಟ್ಟದಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಿವರಾಜನು ನೆರವೇರಿಸಿದನು. ಒಂದೇ ವರ್ಷದಲ್ಲಿ ಸಂಸ್ಥಾನದ ನಾಲ್ಕು ವಜ್ರಗಳನ್ನು ಕಳೆದುಕೊಂಡು ಪ್ರಜೆಗಳು ಶೋಕಸಮುದ್ರದಲ್ಲಿ ಮುಳುಗಿದರು. ಕಾಲವು ಮುಂದುವರಿಯಿತು. ಶಿವರಾಜನು ರಾಜನಾಗಿ ಅಭಿಷಿಕ್ತನಾದನು. ದೇವಯ್ಯನಿಗೆ ಮಂತ್ರಿಪದವಿಯು ಲಭಿಸಿತು. ರಾಜ್ಯಭಾರವು ಕಠಿಣ ದಕ್ಷತೆಯಿಂದ ಸಾಗಿತು.

ಪಾರ್ವತಿಯು ಮೊದಲನೆಯ ವಜ್ರಾಘಾತದಿಂದ ಪಾರಾದಳು. ಅವಳ ನಾಲ್ಕು ಜನ ಸೇವಕಿಯರು ಕರುಣೆಯಿಂದ ಭಕ್ತಿಯಿಂದ ಅವಳ ಸೇವೆ ಮಾಡಿದರು. ಶಿವರಾಜನೇ ಅವರನ್ನು ನೇಮಿಸಿದ್ದರೂ ಪಾರ್ವತಿಯ ಸದ್ಗುಣದಿಂದಲೋ ಅದೃಷ್ಟಶಕ್ತಿಯ ಪ್ರೇರಣೆಯಿಂದಲೋ ಅಥವ ಇವೆರಡರ ಹೊಂದಿಕೆಯಿಂದಲೋ ಆ ಸೇವಕಿಯರು ಅವಳಿಗೆ ಅತಿಪ್ರಿಯರಾಗಿದ್ದರು. ಅವಳ ದುಃಖದಲ್ಲಿ ಸಹಾನುಭೂತಿಯಿರುವವರಾಗಿದ್ದರು. ಪಾರ್ವತಿಯ ಮನಸ್ಸು ದಿನಗಳು ಕಳೆದಂತೆ ಸ್ತಿಮಿತಸ್ಥಿತಿಗೆ ಬರಲು ತೊಡಗಿತು. ಪತಿಯ ಭೌತಿಕ ಶರೀರ ನಾಶವಾಗಿದ್ದರೂ ಅವನ ಜೀವ ತನ್ನನ್ನು ಪ್ರವೇಶಿಸಿ ಮೊದಲಿಗಿಂತ ಧೈರ್ಯ ಸಹನೆ ಶಕ್ತಿ ನೀಡಿರುವಂತೆ ಅವಳಿಗೆ ಅನ್ನಿಸುತ್ತಿತ್ತು. ಶಿವರಾಜನಂತಹ ಘೋರ ಪಾತಕಿಯ ವಿರುದ್ಧ ಸೇಡಿಗಾಗಿ ಅವಳ ಹೃದಯ ಹಾತೊರೆಯುತ್ತಿತ್ತು. ಸಿಂಹಾಸನದ ಮೇಲೆ ಭದ್ರವಾಗಿ ಮಂಡಿಸಿರುವ ಮತ್ತು ಸಶಸ್ತ್ರ ಸೈನ್ಯದ ಬೆಂಬಲವಿರುವ ಶಿವರಾಜ – ಸೆರೆಮನೆಯಲ್ಲಿ ನರಳುತ್ತಿರುವ ಅಬಲೆ ಮತ್ತು ಭಯವಿಹ್ವಲೆ ಸ್ತ್ರೀ. ಯಾರು ಯಾರ ವಿರುದ್ಧ ಸೇಡು ತೀರಿಸಿಕೊಳ್ಳುವುದು? ಆದರೆ ಮನಃಶಕ್ತಿಯ ಮುಂದೆ ದೃಢನಿರ್ಧಾರದ ಮುಂದೆ ಸಿಂಹಾಸನಗಳೂ ಉರುಳಲೇಬೇಕು. ಯಾವುದೂ ಸ್ಥಿರವಲ್ಲ.

ಶಿವರಾಜನು ರಾಜನಾಗಿ ಎರಡು ವರ್ಷಗಳು ಸಂದುವು. ಈ ಅವಧಿಯಲ್ಲಿ ಅವನು ಹಲವಾರು ಸಲ ಪಾರ್ವತಿಯ ಮನಸ್ಸನ್ನು ಅರಿಯಲು ಪರೋಕ್ಷವಾಗಿ ಪ್ರಯತ್ನಿಸಿದ್ದನು. ಆದರೆ ಅಲ್ಲಿ ಅವನಿಗೆ ತಿಲಮಾತ್ರ ಪ್ರವೇಶವೂ ದೊರೆಯಲಿಲ್ಲ. ಅಲ್ಲದೇ ಅವನ ವಿರುದ್ಧ ದ್ವೇಷಾಗ್ನಿಯನ್ನೇ ಅವಳು ಕಾರುತ್ತಿದ್ದಳು. ಇನ್ನೂ ಮುಹೂರ್ತ ಪಕ್ವವಾಗಿಲ್ಲ ಎಂದು ಅವನು ಭಾವಿಸುತ್ತಿದ್ದನು. ಸೇವಕಿಯರಿಗೆ, ಹೇಗಾದರೂ ಮಾಡಿ ಅವಳು ತನ್ನನ್ನು ಒಲಿಯುವಂತೆ ಮಾಡಬೇಕು ಎಂದು ಅವನ ಆಜ್ಞೆಯಿದ್ದಿತು. ರಾಜನ ಎದುರು ಅವರು ಈ ಸೂಚನೆಗೆ ಒಪ್ಪುತ್ತಿದ್ದರೂ ಆ ಸಾಧ್ವೀಮಣಿಯ ಮುಂದೆ ಅದರ ಕುರಿತು ಮಾತನ್ನೇ ಆಡುತ್ತಿರಲಿಲ್ಲ. ಪಾರ್ವತಿಯು ದೇವರಧ್ಯಾನ ಪತಿಯ ಸ್ಮರಣೆಗಳಲ್ಲಿ ತುರಂಗವಾಸವನ್ನು ಕಳೆಯುತ್ತಿದ್ದಳು. ಅದೇ ಸಮಯದಲ್ಲಿ ಅವಳ ಮನಸ್ಸು ಕಾಲ ದಿಗಂತವನ್ನು ಸಮೀಕ್ಷಿಸುತ್ತಿದ್ದಿತು.

ಒಂದು ದಿನ ಸುಪ್ರಭಾತ. ಇನ್ನೂ ಸರಿಯಾಗಿ ಬೆಳಕು ಹರಿದಿರಲಿಲ್ಲ. ಎಂದಿನಂತೆ ರಾಜಮಡದಿಯ ಇಬ್ಬರು ಸೇವಕಿಯರು ಅವರ ಮನೆಗೆ ಹೋಗಲು ಮುಂದಾದರು. ಅರಮನೆಯ ಅಂಗಳಕ್ಕಿಳಿದು ಆ ಪ್ರಾಕಾರದಿಂದ ಹೊರಗೆ ಹೋಗಲು ಇದ್ದ ಒಂದೇ ಒಂದು ದ್ವಾರದ ಸಮೀಪ ಹೋದರು. ತುರಂಗದ ಪಾಲಕ ಹನುಮಯ್ಯ ಪುನಃ ಅವನ ಅನುರಾಗದ ನುಡಿಯನ್ನು ಉದುರಿಸಿದನು.

ಅದ್ಯಾಕೇ ಗೌರೀ ಹಾಂಗ್ಹೋಗ್ತಿಯಾ? ಏಟು ದಿವ್ಸ ನಾನಿನ್ನ ಕ್ರಿಪೆ ಕಾಯ್ಬೇಕೋ? ತಲೆಗಾಗಿ ಸೆರಗು ಹೊದೆದಿದ್ದ ಗೌರಿಯ ನಡೆಯಲ್ಲಿ ಹೊಸ ಚಂಚಲತೆ ಮೂಡಿತು. ಸೆರಗವನ್ನು ಇನ್ನೂ ಎಳೆದು ತಲೆಯನ್ನು ಹನುಮಯ್ಯನಿಂದ ದೂರ ತಿರುಗಿಸಿ ಹ್ಞೂ ಎಂದು ಹೇಳಿ ಸಾಗಿದಳು. ಸರಿಯಪ್ಪ ಯಾವಾಗ್ನೂ ಇವಂದೊಂದೇ ಮಾತು, ಸೊಪ್ಪ ಸುಮ್ಕಿರೋ! ಎಂದಳು ಜತೆಯ ಉಮ್ಮವ್ವ. ನೋಡ್ಗೌರಿ ಬ್ಯಾಕ್ನೆ ಮನಸ್ಮಾಡು ಎಂದು ಆಶೆಯ ದೃಷ್ಟಿಯಿಂದ ಹನುಮಯ್ಯ ಗೌರಿಯ ನಡೆಯನ್ನೇ ನೋಡುತ್ತಿದ್ದನು. ಈ ದಿನ ಇವ್ಳುಬಾಳ ಚಲ್ವೇನೂ ಚದ್ರೇನೂ ಆಗವ್ಳೆ ಎಂದೂ ಅವನು ಹೇಳಿಕೊಂಡನು. ಗೌರಿ ಹೋದಳು! ಗೌರಿಯೇನು ಪಾರ್ವತಿಯೇನು? ಹೆಸರಿನಲ್ಲೇನಿದೆ? ಗೌರಿಯ ಸೆರಗಿನ ಮರೆಯಲ್ಲಿ ಪಾರ್ವತಿಯು ನಿರ್ಗಮಿಸಿದಳು. ಹಕ್ಕಿಯು ಗೂಡಿನಿಂದ ಹಾರಿಹೋಯಿತು. ದ್ವಾರಪಾಲಕರು ದಿವಸಕ್ಕೆರಡು ಸಲ ಬದಲಾಗುತ್ತಿದ್ದರು. ಹನುಮಯ್ಯನ ಸರದಿ ಮುಗಿದು ಮುಂದಿನವನು ಬಂದಾಗ ಉಳಿದ ಸೇವಕಿಯರೂ ಅರಮನೆಯಿಂದ ಪಾರಾಗಿ ಹೋದರು.

ಮರುದಿನ ಬೆಳಗ್ಗೆ ಹನುಮಯ್ಯ ಗೌರಿಯ ದಾರಿ ಕಾದು ಕಾದು ಬೇಸತ್ತನು. ಮಧ್ಯಾಹ್ನವಾದರೂ ಅವಳ ಸುಳಿವಿಲ್ಲ, ಯಾರದೂ ಇಲ್ಲ. ಅವನು ಉದ್ವಿಗ್ನತೆಯಿಂದ ದ್ವಾರದ ಕದವನ್ನು ತನ್ನ ಹಿಂದೆ ಮುಚ್ಚಿ ಬೀಗ ಹಾಕಿಕೊಂಡು ಅರಮನೆಯ ಒಳಗೆ ಹೋಗಿ ಕರೆದನು, ಹುಡುಕಿದನು. ಆದರೆ ಹಾಳು ಅರಮನೆಯು ಅಣಕಿಸಿತು. ಅದರ ಗೋಡೆಗಳು ಅವನನ್ನು ಏಡಿಸುವಂತೆ ಗೊಂಗೊಂ ಎಂದುವು. ಹನುಮಯ್ಯನ ಮುಖ ಹನುಮಂತ ಚೇಷ್ಟೆಗಳನ್ನು ಪ್ರದರ್ಶಿಸಿತು. ಅರಮನೆಯು ಅವನನ್ನು ವಿಕಟವಾಗಿ ಛೇಡಿಸಿತು.
ಶಿವರಾಜನಿಗೆ ಸುದ್ದಿ ತಿಳಿದಾಗ ಸಾಯಂಕಾಲ ಮೀರಿದ್ದಿತು. ಅಂದರೆ ಆಗ ಹಕ್ಕಿಗೆ ಸ್ವಾತಂತ್ರ್ಯ ದೊರೆತು ಒಂದೂವರೆ ದಿವಸ ಮೀರಿಹೋಗಿದ್ದಿತು. ಪಾರ್ವತಿಯನ್ನು ಹುಡುಕಿಸಲು ಅವನು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಸನ್ಮಾರ್ಗದಲ್ಲಿದ್ದ ಅವಳನ್ನು ದೇವರು ರಕ್ಷಿಸಿದ್ದನು. ಹೋದರೆ ಹೋಗಲಿ, ತೊಲಗಿ ಹೋಗಲಿ ಎನ್ನುವ ಮನೋಭಾವದಿಂದ ಪಾರ್ವತಿಯ ಪ್ರಕರಣವನ್ನು ಶಿವರಾಜನು ತನ್ನ ಮನಸ್ಸಿನಲ್ಲಿ ಸಂಪೂರ್ಣವಾಗಿ ಮುಕ್ತಾಯಗೊಳಿಸಿದನು.

ಯೌವನದ ದುರಾಶೆ, ಆ ದುರಾಶೆಯ ಪರಿಣಾಮವಾಗಿ ಮಾಡಿಸಿದ ಬಸವರಾಜನ ಕೊಲೆ, ಪಾರ್ವತಿಯ ಮೇಲಿನ ದುಷ್ಟ ವ್ಯಾಮೋಹ – ಇವುಗಳ ಹೊರತು ಶಿವರಾಜನು ಯೋಗ್ಯನಾಗಿದ್ದನು. ಈ ದುರ್ಗುಣಗಳೇನೂ ಸಾಮಾನ್ಯವಲ್ಲ. ಆದರೆ ಹೇಗೋ ಕಾಲಾಂತರದಲ್ಲಿ ಶಿವರಾಜನು ಅವುಗಳನ್ನು ಮರೆತನು, ಮರೆಯುವುದು ಆವಶ್ಯಕವಾಯಿತು – ಬಸವರಾಜನು ಉಳಿದಿರಲಿಲ್ಲ, ಪಾರ್ವತಿಯು ಕಣ್ಮರೆಯಾಗಿದ್ದಳು, ಶಿವರಾಜನೇ ರಾಜನಾಗಿದ್ದನು. ಶಿವರಾಜನ ಜೀವನಗ್ರಂಥದ ಪ್ರಥಮಾಧ್ಯಾಯ ಹೀಗೆ ದೌಷ್ಟ್ಯದಿಂದ ಕ್ರೌರ್ಯದಿಂದ ಕೂಡಿದ್ದಿತು. ಆದರೆ ಹಿಂದಿನ ದಿನಗಳಲ್ಲಿ ಇಂತಹ ಕೊಲೆ ಪಿತೂರಿಗಳು ರಾಜಮನೆತನಗಳಲ್ಲಿ, ಶ್ರೀಮಂತರ ಕುಟುಂಬಗಳಲ್ಲಿ ಸ್ವಾಭಾವಿಕವಾಗಿದ್ದುವು. ರಾಜ್ಯಭಾರದಲ್ಲಿ ನಿರತನಾಗಿ ತನ್ಮಯನಾಗಿದ್ದ ಶಿವರಾಜನು ಉದಾರಿಯೂ ಯೋಗ್ಯನೂ ಆದ ಪ್ರಭು ಎಂದೆನ್ನಿಸಿಕೊಂಡನು. ಕೊಡಗು ಸಂಸ್ಥಾನವನ್ನು ಇನ್ನಷ್ಟು ಯೋಗ್ಯತೆಯಿಂದ ಆಳುತ್ತಿದ್ದನು. ಆತನ ಆಳ್ವಿಕೆಯಲ್ಲಿ ಪಿತೂರಿಗಾರರ, ರಾಜದ್ರೋಹಿಗಳ ಬೇಳೆ ಬೇಯುವಂತಿರಲಿಲ್ಲ, ನೆರೆ ರಾಜ್ಯಗಳ ರಾಜರು ಅವನ ಸ್ನೇಹ ಬೆಳೆಸಿಕೊಂಡರು. ವಾಣಿಜ್ಯ ವ್ಯಾಪಾರಗಳು ಸುಗಮವಾಗಿ ಸಾಗುತ್ತಿದ್ದುವು. ಕಳ್ಳರ ದರೋಡೆಗಾರರ ಆಟ ಕೊಡಗು ಸಂಸ್ಥಾನದಲ್ಲಿಯೇ ನಡೆಯುತ್ತಿರಲಿಲ್ಲ. ಸಮೃದ್ಧಿಯ ಬೀಡು ಕೊಡಗು ದೇಶವಾಯಿತು.

ಶಿವರಾಜನಿಗೆ ನೆಲದ ಹಂಬಲ ಎಂದೂ ಹಿಂಗುತ್ತಿರಲಿಲ್ಲ. ಅವನ ರಾಜ್ಯವು ಹೆಚ್ಚು ಹೆಚ್ಚು ವಿಸ್ತಾರವಾದಂತೆ, ಅವನಿಗೆ ಮಣಿಯುತ್ತಿದ್ದ ಸಾಮಂತ ಭೂಪಕೀಟಗಳು ಅಧಿಕ ಸಂಖ್ಯೆಯಲ್ಲಿ ಬೆಳೆದಂತೆ ಅವನ ದುರಾಶೆಯೂ ಹಿಗ್ಗುತ್ತಿತ್ತು. ವಿಶಾಲ ಕೊಡಗಿನ ಕನಸನ್ನು ಅವನು ಕಾಣುತ್ತಿದ್ದನು. ಕಾವೇರಿಯಿಂದಮಾನೇತ್ರಾವತಿವರಮಿರ್ದ ನಾಡದಾ ಕೊಡಗನ್ನು ಕಾವೇರಿಯಿಂದ ಮಾಗೋದಾವರಿವರೆಗೂ ವಿಸ್ತರಿಸಬೇಕೆಂದು ಅವನ ಉತ್ಕಟೇಚ್ಛೆಯಾಗಿದ್ದಿತು, ಇಂತಹ ಆಶಯವನ್ನು ಪ್ರತ್ಯಕ್ಷಗೊಳಿಸಲು ತಕ್ಕ ಸಾಮರ್ಥ್ಯ ತೋಳಬಲ್ಮೆ ರಣೋತ್ಸಾಹ ಸೈನ್ಯಬಲ ಎಲ್ಲವೂ ಅವನಲ್ಲಿದ್ದುವು.

ಪೂರ್ವ, ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕೊಡಗು ಸಂಸ್ಥಾನವು ಇನ್ನು ವ್ಯಾಪಿಸುವಂತಿರಲಿಲ್ಲ. ದಕ್ಷಿಣದ ಭಾಗದಲ್ಲಿದ್ದ ಮಲೆಯಾಳ ಪ್ರದೇಶವನ್ನು ಆಕ್ರಮಿಸಿ ಪಡುಕರಾವಳಿಯನ್ನು ಸ್ವಾಧೀನಪಡೆಯಬೇಕು ಎಂದು ರಾಜನು ನಿರ್ಧರಿಸಿದನು. ಮುಂದಿನ ಬೇಸಗೆಯಲ್ಲಿ ದಿಗ್ವಿಜಯ ಯಾತ್ರೆಯು ಹೊರಟಿತು. ಹತ್ತು ಸಾವಿರ ಸೈನಿಕರಿಂದ, ರಾವುತರಿಂದ, ಮಾವುತರಿಂದ ಪ್ರಬಲವಾದ ಮಹಾಸೇನೆಯು ಮಲೆಯಾಳದ ಕಡೆಗೆ ಸಾಗಿತು. ಆ ಸೈನಿಕರ ಕ್ರಮಬದ್ಧವಾದ ನಡಿಗೆಯಿಂದ, ಆ ನಡಿಗೆಯಿಂದ ಮೇಲೆದ್ದ ಧೂಳಿನಿಂದ, ಅದರ ಘೋಷದಿಂದ ಒಂದು ದೊಡ್ಡ ನದಿಯು ಪ್ರವಾಹದಲ್ಲಿ ಹರಿದು ಬರುತ್ತಿದೆಯೇ ಅದರ ತರಂಗಗಳು ಗಗನಾಭಿಮುಖವಾಗಿ ಚಾಚುತ್ತಿವೆಯೇ ಎಂದು ಜನರು ಭ್ರಮಿಸಿದರು. ಸೈನ್ಯವು ಸಾಗಿಹೋದ ಗ್ರಾಮಗಳ ಜನರೆಲ್ಲರೂ ರಾಜನಿಗೆ ಸ್ವಾಗತವನ್ನು ಬಯಸಿದರು. ವಿಜಯವನ್ನು ಪ್ರಾರ್ಥಿಸಿದರು. ಶ್ರೀಮಂಗಲನಾಡನ್ನು ದಾಟಿ ಸೇನೆಯು ಮುಂದುವರಿಯಿತು. ಸೈನಿಕರು ಆನಂದಘೋಷದಿಂದ ದಿಗ್ಭಿತ್ತಿಗಳು ಬಿರಿಯುವಂತಾದುವು. ಸಾಮಾನ್ಯ ಶತ್ರು ಈ ಘೋಷದಿಂದಲೇ ಹೆದರಿ ಶರಣಾಗತನಾಗುತ್ತಿದ್ದನು. ಆದರೆ ಮಲೆಯಾಳದ ಅರಸರು ಸಾಮಾನ್ಯರಾಗಿರಲಿಲ್ಲ. ಅಂತೆಯೇ ಶಿವರಾಜನು ಅಷ್ಟು ದೊಡ್ಡ ಸೈನ್ಯವನ್ನು ಅಷ್ಟು ಕ್ರಮದಿಂದ ಮುನ್ನಡೆಸಿ ಕರೆದುಕೊಂಡು ಹೋಗುತ್ತಿದ್ದುದಾಗಿತ್ತು.

ಮಲೆಯಾಲದ ಅರಸನು ಕೇರಳವರ್ಮರಾಮ. ಅವನು ಅಸಾಮಾನ್ಯ ವೀರನಾಗಿದ್ದನು. ಮೊದಲಿನಿಂದಲೂ ಕೊಡಗಿನ ಅರಸರಿಗೂ ಕೇರಳದ ಅರಸರಿಗೂ ವೈಮನಸ್ಸು ಬೆಳೆದು ಬಂದಿತ್ತು. ಆದರೆ ಕೇರಳ ದೇಶದ ವಿರುದ್ಧದ ಯುದ್ಧದಲ್ಲಿಯ ಕಠಿಣತೆಗಳನ್ನು ಅರಿತ ಕೊಡಗು ರಾಜರು ಆ ಕಡೆ ಹೋಗಿರಲಿಲ್ಲ. ಮಲೆಯಾಳದ ಅರಸರಲ್ಲಿ ಐಕಮತ್ಯ ಇಲ್ಲದಿದ್ದುದರಿಂದಲೂ, ಕೊಡಗು ದೇಶ ಬೆಟ್ಟಗುಡ್ಡ ಕಣಿವೆಗಳಿಂದ ಕೂಡಿದ್ದು ವರ್ಷದ ಆರು ತಿಂಗಳುಗಳಲ್ಲಿ ದುರ್ಗಮವಾಗಿದ್ದುದರಿಂದಲೂ ಅವರು ಈ ಕಡೆಗೆ ಯುದ್ಧಕ್ಕಾಗಿ ಮುಂದುವರಿದುಬರುತ್ತಿರಲಿಲ್ಲ. ಕಾಲಕ್ರಮೇಣ ವೈಮನಸ್ಸು ವರ್ಧಿಸುತ್ತಲೇ ಬಂದಿತ್ತು. ಗಡಿಯಲ್ಲಿ ಸಣ್ಣ ಪುಟ್ಟ, ಕದನಗಳು ಆಗಾಗ ನಡೆಯುತ್ತಿದ್ದುವು. ಮನಸ್ಸಿನ ಹುಳುಕು ಹೀಗೆ ಒಮ್ಮೊಮ್ಮೆ ಹೊರಗೆ ಬರುತ್ತಿದ್ದಿತು.

ಶಿವರಾಜನು ಕೊಡಗು ಸಂಸ್ಥಾನಾಧಿಪತಿ ಆದಾಗ ಕೇರಳವರ್ಮನು ಮಲೆಯಾಳದ ರಾಜನಾಗಿದ್ದನು. ಅವನು ಇಡಿಯ ಕೇರಳ ದೇಶವನ್ನು ಏಕಚ್ಛತ್ರಾಧಿಪತ್ಯದಲ್ಲಿ ತಂದಿದ್ದನು. ನೆರೆಯ ರಾಜರಿಗೆ ಎಂದೂ ಮಣಿಯದ ದಿಟ್ಟನೂ ಧೀರನೂ ಆಗಿದ್ದನು. ಇವನಿಗೆ ಶಿವರಾಜನ ಯುದ್ಧ ಯಾತ್ರೆಯು ಸ್ವಾಗತಾರ್ಹವಾದ ಆಮಂತ್ರಣವಾಯಿತು. ಇವನೂ ಸೈನ್ಯಗಳನ್ನು ಸಜ್ಜುಗೊಳಿಸಿದನು. ಮಲೆಯಾಳಿಗಳ ಶಕ್ತಿ ಸಾಮರ್ಥ್ಯಗಳನ್ನು ಈ ಕೊಡಗರಿಗೆ ತೋರಿಸಿಬಿಡಬೇಕು, ಅವರನ್ನು ಹಿಂದಕ್ಕೆ ಅಟ್ಟಿಬಿಡಬೇಕು, ಮಾತ್ರವಲ್ಲ ಅವರ ಬೆಂಬತ್ತಿ ಸಾಗಿ ಆ ದೇಶವನ್ನೂ ಆಕ್ರಮಿಸಿ ಬಿಡಬೇಕು ಎಂದು ಕೇರಳವರ್ಮನು ಬಗೆದಿದ್ದನು.

ಹೀಗೆ ಶಿವರಾಜನ ಸೈನ್ಯದ ಉತ್ಸಾಹವೇರುತ್ತ ಏರುತ್ತ ಮುಂದೆ ಮುಂದೆ ನಡೆದಂತೆ ಕೇರಳವರ್ಮನ ಅದಟೂ ಉಕ್ಕೇರುತ್ತಿದ್ದಿತು. ಎರಡು ಸೈನ್ಯಗಳಿಗೂ ವೈನಾಡಿನ ವಿಶಾಲವಾದ ಬಯಲಿನಲ್ಲಿ ಢಕ್ಕಾಢಿಕ್ಕಿಯಾಯಿತು. ಯುದ್ಧ ಕಹಳೆಯು ಮೊಳಗಿ ಮಹಾಹವ ತಾಂಡವಿಸಿತು. ಕೇರಳವರ್ಮನ ಪ್ರತಿರೋಧ ತೀಕ್ಷ್ಣವಾಗಿದ್ದಿತು. ಯುದ್ಧವು ಒಂದು ತಿಂಗಳ ಕಾಲ ಭೀಕರವಾಗಿ ಅತಿ ಭೀಷಣವಾಗಿ ನಡೆಯಿತು. ಇಂತಹ ಪ್ರಬಲ ಶತ್ರುವನ್ನು ಶಿವರಾಜನು ಅದುವರೆಗೆ ಎಲ್ಲಿಯೂ ಎದುರಿಸಿರಲಿಲ್ಲ. ಕೊಡಗುರಾಜನು ಕಡೆಯಲ್ಲಿ ಐದಾರು ಸಾವಿರ ಯೋಧರು ಈಗಾಗಲೇ ಹತರಾಗಿ ಹೋಗಿದ್ದರು. ನೂರಿನ್ನೂರು ಆನೆಗಳೂ ಸಾವಿರದಷ್ಟು ಕುದುರೆಗಳೂ ಮಡಿದಿದ್ದುವು, ಕೇರಳವರ್ಮನಿಗೆ ಇದರ ಇಮ್ಮಡಿ ನಷ್ಟವಾಗಿದ್ದಿತು ಮಡಿದ ಸೈನಿಕರ ಸ್ಥಾನಗಳನ್ನು ತುಂಬಲು ಹಿಂದಿನಿಂದ ಹೊಸ ಸೈನ್ಯ ಸಿದ್ಧವಾಗಿ ಬರುತ್ತಿತ್ತು. ನರಹತ್ಯೆ ಮಾತ್ರ ಅವ್ಯಾಹತವಾಗಿ ಸಾಗುತ್ತಿತ್ತು. ಕಾಲನ ಕ್ರೂರ ಚಕ್ರಪತಿ ಆವರ್ತನದಲ್ಲಿಯೂ ನೂರಾರು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿತ್ತು. ಒಂದು ತಿಂಗಳು ಮೀರಿದರೂ ವಿಜಯಶ್ರೀ ಯಾರಿಗೆ ಒಲಿಯುತ್ತಾಳೆ ಎಂಬುದು ಇತ್ಯರ್ಥವಾಗಿರಲಿಲ್ಲ. ರಣರಂಗಕ್ಕೆ ಅವಳ ಪ್ರವೇಶವೇ ಇನ್ನೂ ಆಗಿರಲಿಲ್ಲವೋ, ಅವಳ ಆವಾಹನೆಗೆ ತಕ್ಕಷ್ಟು ರಕ್ತಪ್ರವಾಹ ಹರಿದಿರಲಿಲ್ಲವೋ ಎಂದು ತೋರುತ್ತಿತ್ತು.

ಎರಡು ಪಕ್ಷಗಳಲ್ಲಿಯೂ ಉತ್ಸಾಹ ಜಗ್ಗಲಿಲ್ಲ. ಮಡಿದವರು ಮಡಿದರು. ನಶ್ವರ ದೇಹಗಳನ್ನು ತೊರೆದೆಸೆದು ವೀರಸ್ವರ್ಗದಲ್ಲಿ ಶಾಶ್ವತ ಶರೀರಗಳನ್ನು ಹೊಂದಿದರು. ಉಳಿದವರ ಪವಿತ್ರ ಕರ್ತವ್ಯ ಆ ಹೋದವರ ಸಮಾಧಿಗಳ ಮೇಲೆ ವಿಜಯದ ಪತಾಕೆಯನ್ನು ಸ್ಥಾಪಿಸುವುದು ಯುದ್ಧವು ಎಡೆಬಿಡದೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಪ್ರತಿದಿನವೂ ಭಯಂಕರವಾಗಿ ನಡೆಯಿತು. ಯಾವ ಇತ್ಯರ್ಥವೂ ಆಗದೆ ಮರಳಬೇಕಾಗುವುದೋ ಎಂದು ಶಿವರಾಜನು ಚಿಂತಾಕ್ರಾಂತನಾದರೆ ಶತ್ರುವಿನ ಬೆನ್ನಟ್ಟಿ ಹೋಗುವುದು ಅಶಕ್ಯ, ಆದರೆ ಅವನಿಗೆ ಶಾಶ್ವತವಾದ ಪಾಠ ಕಲಿಸಿ ಇನ್ನೆಂದೆಂದೂ ಈ ಕಡೆ ಇಣಿಕಿಯೂ ನೋಡದಂತೆ ಮಾಡಿಬಿಡಬೇಕೆಂದು ಕೇರಳವರ್ಮನು ಛಲತೊಟ್ಟಿದ್ದನು. ಕಾಳೆಗವು ಮರಣ ಕರ್ಕಶವಾಗಿ ರುದ್ರಭೀಷಣವಾಗಿ ಮುನ್ನಡೆಯಿತು.

ಯುದ್ಧರಂಗದಲ್ಲಿ ಗಾಯಗೊಂಡ ಸೈನಿಕರಿಗೆ ಸಾಯಲು ಬಿದ್ದಿದ್ದ ವೀರಯೋಧರಿಗೆ ಸಹಾಯಮಾಡಲು ಶಾಂತಿ ಶಿಬಿರದ ಮಹಿಳೆಯರು ಮುಂದಾಗುತ್ತಿದ್ದರು. ಅವರೆಲ್ಲರೂ ಸಂಸಾರಬಂಧನಮುಕ್ತೆಯರಾದ ವೀರವನಿತೆಯರು, ಕೇರಳದೇಶಿಯರ ಸಂಕೇತವಾದ ಸರಳ ಶುಭ್ರ ಶ್ವೇತ ವಸ್ತ್ರ ಧರಿಸಿಕೊಂಡು ಯುದ್ಧರಂಗದಲ್ಲಿ ನಿರ್ಭೀತಿಯಿಂದ ಅಡ್ಡಾಡುತ್ತಿದ್ದರು. ಯುದ್ಧ ಸಾಗುತ್ತಿದ್ದಂತೆ ಬಿದ್ದ ಸೈನಿಕರನ್ನು ಸಾಗಿಸಲು ಅವರು ಮುಂದೆ ಮುಂದೆ ಹೋಗುತ್ತಿದ್ದರು. ಆ ರಮಣೀಮಣಿಯರು ಹೀಗೆ ಹೋಗುವಾಗ ಉಭಯ ಪಾರ್ಶ್ವಗಳ ಸೈನಿಕರೂ ಅವರನ್ನು ಮರ್ಯಾದೆಯಿಂದ ಕಾಣುತ್ತಿದ್ದರು, ಭಗವಂತನ ದೂತರಂತೆ – ಅಂತಕನ ದೂತರಂತೆ ಅಲ್ಲ – ಅವರು ಮರಣೋನ್ಮುಖ ಸೈನಿಕರತ್ತ ಹೋಗಿ ಅವರನ್ನು ಯುದ್ಧರಂಗದಿಂದ ದೂರದ ಶಿಬಿರಕ್ಕೆ ಕೊಂಡೊಯ್ಯುತ್ತಿದ್ದರು. ನೆತ್ತರಿನ ಕಲೆಗಳಿಂದ ಇನ್ನಷ್ಟು ಕೆಂಪಾಗಿ ತೋರುತ್ತಿದ್ದ ಆ ಸ್ತ್ರೀಯರ ಶ್ವೇತಾಂಬರಗಳು ಸೈನಿಕರ ಮಧ್ಯೆ ಅಲೆದಾಡುತ್ತಿದ್ದಾಗ ಝಂಝಾವಾತದಿಂದ ಕ್ಷೆಭೆಗೊಂಡಿರುವ ಸರೋವರದ ಮೇಲೆ ತರಂಗಗಳೊಡನೆ ಒಂದಾಗಿ ಮೇಲೇರಿ ಕೆಳಗಿಳಿದು ಶಾಂತವಾಗಿ ತೇಲುವ ರಾಜ ಹಂಸಗಳನ್ನು ನೆನಪಿಗೆ ತರುತ್ತಿದ್ದುವು.

ಶಾಂತಿ ಶಿಬಿರದ ಸ್ವಯಂಸೇವಕಿಯರೆಲ್ಲರೂ ಕೇರಳ ಸ್ತ್ರೀಯರಾಗಿದ್ದರೂ ಅವರಿಗೆ ಕೇರಳವರ್ಮನ ಸೈನಿಕರು, ಶಿವರಾಜನ ಸೈನಿಕರು ಎನ್ನುವ ಭೇದವಿರಲಿಲ್ಲ. ಪರಮಾತ್ಮನ ದೃಷ್ಟಿಯಲ್ಲಿ ಈ ಭೇದವಿಲ್ಲ. ಅವರ ಈ ನಿಸ್ಪೃಹವರ್ತನೆಯಿಂದ ಅವರು ಉಭಯ ಪಕ್ಷಗಳ ಕೃತಜ್ಞತೆಗೂ ಪಾತ್ರರಾಗಿದ್ದರು. ಅತ್ಯಂತ ಅಪಾಯಕಾರಿಯಾದ ಅವರ ಕಾರ್ಯವನ್ನು ಸ್ವಾರ್ಥರಹಿತ ಸ್ತ್ರೀಯರಿಗೆ ಮಾತ್ರ ಸಾಧ್ಯವಾಗಬಹುದಾದ ದಿವ್ಯ ಮಾತೃಭಾವದಿಂದಲೂ ಪವಿತ್ರ ಪ್ರೇಮದಿಂದಲೂ ಅವರು ನೆರವೇರಿಸುತ್ತಿದ್ದರು. ಎಲ್ಲಿ ದಾರಿದ್ರ್ಯವಿದೆಯೋ ಎಲ್ಲಿ ದುಃಖವಿದೆಯೋ ಅಲ್ಲಿ ಶಾಂತಿ ಶಿಬಿರದ ಸ್ತ್ರೀಯರು ಸೇವೆಗಾಗಿ ಸಿದ್ಧರಾಗುತ್ತಿದ್ದರು. ಯುದ್ಧವು ಎಷ್ಟೇ ತಿರಸ್ಕೃತವಾದರೂ ಯುದ್ಧದ ವಿಷಯದಲ್ಲಿ ಮಾತ್ರ ಅವರ ಸಲಹೆಯನ್ನು ಯಾವ ರಾಜನೂ ಸ್ವೀಕರಿಸುತ್ತಿರಲಿಲ್ಲ. ಯುದ್ಧ ನಡೆಯುವಲ್ಲಿ ಅವರ ಪವಿತ್ರ ಕಾರ್ಯವಿದ್ದೇ ಇದೆ. ಈ ಉದಾರದೃಷ್ಟಿಯಿಂದ ಶಾಂತಿಶಿಬಿರವು ಯುದ್ಧರಂಗದ ಸಮೀಪ ಬೀಡು ಬಿಟ್ಟಿತ್ತು.

ಶಾಂತಿ ಶಿಬಿರದ ಅಧ್ಯಕ್ಷೆ, ಸಂಸ್ಥಾಪಿಕೆ ಮಹಾಮಾತೆಯೆಂದು ಎಲ್ಲರಿಗೂ ಗೊತ್ತಿತ್ತು. ಅದು ಅವಳ ಹೆಸರಲ್ಲ. ಮಾದೈ (ಮಹಾತಾಯಿ, ಮಾದಾಯಿ, ಮಾದೈ) ಎಂದು ಎಲ್ಲರೂ ಅವಳನ್ನು ಗೌರವ ಪ್ರೀತಿಗಳಿಂದ ಕರೆಯುತ್ತಿದ್ದರು. ಸ್ಥಿರತೆಯು, ಶಾಂತಿಯು, ಸಹನೆಯು, ಕರುಣೆಯ ಮೂರ್ತಿಯಾಗಿದ್ದ ಮಾದೈಯು ಆ ಶಿಬಿರದ ಜೀವನಾಡಿ, ಜೀವಾಳ. ಅವಳಿಂದ ರೂಪುಗೊಂಡುದು ಶಿಬಿರ. ಅವಳ ಮುಂದಾಳುತನದಲ್ಲಿ ಶಿಬಿರ ಅಂತಹ ಯೋಗ್ಯ ಕಾರ್ಯವನ್ನು ಅಷ್ಟು ಪರಿಷ್ಕಾರವಾಗಿ ನಿರ್ವಹಿಸುತ್ತಿದ್ದಿತು. ಸೈನಿಕರ ಶೌರ್ಯಧೈರ್ಯಗಳಿಂದ, ಬಿಲ್ಲುಬಾಣಗಳಿಂದ, ಖಡ್ಗ ಭರ್ಜಿಗಳಿಂದ ಆಗದ ಕಾರ್ಯವನ್ನು ಶಿಬಿರದ ಸ್ತ್ರೀಯರು ತಮ್ಮ ಸಾಂತ್ವನ ಕ್ರಿಯೆಗಳಿಂದ ನಿರ್ವಹಿಸುತ್ತಿದ್ದರು. ಸೈನಿಕರದು ನಾಶಕಾರ್ಯ. ಈ ಸ್ತ್ರೀಯರದು ರಚನಾತ್ಮಕ ಕಾರ್ಯ. ಮಾದೈಯು ಬಿಲ್ಲುಗಳಿಂದ ಚಿಮ್ಮುವ ಬಾಣಗಳಿಗಿಂತ ತೀವ್ರಗತಿಯಿಂದ ಉಭಯ ಕ್ಷೇತ್ರಗಳ ಮಧ್ಯೆ ಸಂಚರಿಸುತ್ತ ಶಿಬಿರದ ಕಾರ್ಯಗಳ್ನು ದಿಗ್ದರ್ಶಿಸುತ್ತಿದ್ದಳು. ಸಾಯುವ ಸೈನಿಕನಿಗೆ ಮಾದೈಯನ್ನು ಕಂಡರೆ ಸುಖಕರವಾದ ಸಾವು ಒದಗುತ್ತಿತ್ತು. ಎಂತಹ ವೇದನೆಯಿಂದ ನರಳುವ ಸೈನಿಕನಾದರೂ ಮಾದೈ ಬಂದು ಮೃದುವಾಗಿ ಮಾತಾಡಿ ಮೈದಡವಿದರೆ ಅವನು ಆ ನೋವನ್ನು ಮರೆತು ಹಸನ್ಮುಖಯಾಗುತ್ತಿದ್ದನು. ಆಕೆಯ ದಿವ್ಯ ಶರೀರವಿಡೀ ಸಹನೆ ಪ್ರೇಮಗಳಿಂದ ಕಡೆದು ಮಾಡಿದಂತಿತ್ತು.

ಶಾಂತಿ ಶಿಬಿರದ ಅಧ್ಯಕ್ಷೆಗೆ ಎರಡು ಬಣಗಳ ರಾಜರುಗಳವರೆಗೂ ಯಾವಾಗ ಬೇಕಾದರೂ ಪ್ರವೇಶವಿದ್ದಿತು; ಅವಳು ಈ ಯುದ್ಧವನ್ನು ನಿಲ್ಲಿಸಬೇಕೆಂದು ಕೇರಳವರ್ಮ ರಾಜನಿಗೂ ಶಿವರಾಜನಿಗೂ ಪರಿಪರಿಯಾಗಿ ಬೋಧಿಸಿದಳು. ಆದರೆ ಮನುಷ್ಯನ ಹಠವಿದೆಯಲ್ಲ, ಗಂಡಸುತನ ಎನ್ನುವ ದುರಭಿಮಾನ, ಯುದ್ಧವಿನ್ನೂ ಕ್ರೂರವಾಗಿ ಎಲ್ಲರಿಗೂ ಗರ ಬಡಿದಂತೆ ಸಾಗಿತು. ಒಂದು ತಿಂಗಳಿನ ಯುದ್ಧ ಈಗ ಎರಡು ತಿಂಗಳಾದರೂ ಕೊನೆಗೊಳ್ಳುವಂತೆ ತೋರಲಿಲ್ಲ. ಎರಡು ಸೈನ್ಯಗಳ ಮೃತರ ಸಂಖ್ಯೆ ಸೇರಿಸಿದರೆ ಅದು ಹತ್ತು ಸಾವಿರವನ್ನು ಮೀರುತ್ತಿತ್ತು. ಆದರೆ ವಿವೇಕೋದಯ ಯಾವ ರಾಜನಿಗೂ ಮೂಡಿದಂತೆ ತೋರಲಿಲ್ಲ. ದಿನದಿಂದ ದಿನಕ್ಕೆ ಯುದ್ಧ ಸುರಾಪಾನದಿಂದ ಅವರು ಹೆಚ್ಚು ಹೆಚ್ಚು ಉನ್ಮತ್ತರಾಗುತ್ತಿದ್ದರು.

ಒಂದು ದಿನ ಸಾಯಂಕಾಲ. ದಿನದ ಯುದ್ಧ ಮುಕ್ತಾಯವಾಗಲು ಇನ್ನು ಸ್ವಲ್ಪ ಹೊತ್ತು ಮಾತ್ರವಿತ್ತು. ಕೇರಳವರ್ಮನ ಸೈನ್ಯದ ಒಂದು ಪಡೆಯ ನಾಯಕನು ಶತ್ರುವಿನ ಬಾಣ ಎದೆಗೆ ತಗುಲಿ, ಕುದುರೆಯಿಂದ ಬಿದ್ದನು. ಬಿದ್ದವನ ಮೇಲೆ ಮತ್ತೆರಡು ಬಾಣಗಳು ಬಿದ್ದುವು. ಅವನಿಗೆ ಏಳಲಾಗಲಿಲ್ಲ. ಅಲ್ಲಿಗಾಗಿ ಹೋಗುತ್ತಿದ್ದ ಮಾದೈಯು ಅವನನ್ನು ಶಾಂತಿಶಿಬಿರಕ್ಕೆ ಸಾಗಿಸಲು ಏರ್ಪಾಡು ಮಾಡಿದಳು. ಅವನಿಗಿನ್ನೂ ಪ್ರಾಣಹೋಗಿರಲಿಲ್ಲ. ಆ ಪ್ರಾಣಾಂತಿಕ ವೇದನೆಯಲ್ಲಿ ಅವನು ಉಡಿಯಿಂದ ಏನನ್ನೋ ತೆಗೆದು ಮಾದೈಯ ಕೈಗೆ ಕೊಟ್ಟನು, ಬಾಯಿಯಿಂದ ಏನನ್ನೋ ಹೇಳಲು ತೊಡಗಿದನು ಕೇರಳವರ್ಮ ರಾಜರಿಗೆ…. ಎಂದು ಕೇಳಿಸಿತು, ಅಷ್ಟರಲ್ಲಿಯೇ ಅವನು ಮೃತಿಹೊಂದಿದ್ದನು. ಕೈಗೆ ದೊರೆತ ಕಾಗದದ ಸುರುಳಿಯನ್ನು ಮಾದೈಯು ಭದ್ರವಾಗಿ ಉಡಿಯಲ್ಲಿಟ್ಟುಕೊಂಡಳು. ಅಂದಿನ ಯುದ್ಧವು ಮುಗಿಯಿತು. ಆ ದಿನದ ಮಟ್ಟಿಗೆ ತಮ್ಮ ಆಯುಷ್ಯವು ಸ್ಥಿರವಾದುದಕ್ಕೆ ಸೈನಿಕರು ಸಂತೋಷದಿಂದ ತಮ್ಮ ತಮ್ಮ ಶಿಬಿರಗಳಿಗೆ ಮರಳಿದಳು.

ಸಾವಕಾಶವಾಗಿ ಮಾದೈಯು ಆ ಕಾಗದವನ್ನು ಓದಿದಳು. ಓದಿ ಸ್ವಲ್ಪ ಅಸ್ಥಿರಳಾದಳು. ಪುನಃ ಪುನಃ ಅದನ್ನು ಓದಿ ಸರಿಯಾಗಿ ಅರ್ಥವಿಸಿಕೊಂಡಳು. ಬಹಳ ಹೊತ್ತು ಚಿಂತಿಸಿ ಚಿಂತಿಸಿ ಕೊನೆಗೊಂದು ನಿರ್ಧಾರಕ್ಕೆ ಅವಳು ಬಂದಳು. ಮಾದೈಯು ಸೀದಾ ಶಿವರಾಜನ ಶಿಬಿರಕ್ಕೆ ಹೋದಳು. ಸೈನಿಕರೆಲ್ಲರೂ ಮಲಗಿ ನಿದ್ರಿಸುತ್ತಿದ್ದರು. ರಾಜನು ತನ್ನ ಸೇನಾಧಿಪತಿ ಅಧಿಕಾರಿಗಳೊಡನೆ ಮುಂದಿನ ದಿನದ ಕಾರ್ಯಕ್ರಮ ಮುಂತಾದವುಗಳನ್ನು ಚಿಂತಿಸುತ್ತಿದ್ದನು ಮಾದೈ ಬಂದ ಸುದ್ದಿ ಸೇವಕರಿಂದ ತಿಳಿದು ಅವಳನ್ನು ಒಳಗೆ ಕರೆಸಿಕೊಂಡನು. ಗೌರವದಿಂದ ಅವಳನ್ನು ಸ್ವಾಗತಿಸಿದನು. ನಿಮ್ಮೊಡನೆ ಏಕಾಂತವಾಗಿ ನಾಲ್ಕು ಮಾತಾಡತಕ್ಕದ್ದಿದೆ ಎಂದು ಮಾದೈಯು ಮಲೆಯಾಳೀ ಭಾಷೆಯಲ್ಲಿ ನುಡಿದಳು. ರಾಜನ ಬಳಗ ಅಲ್ಲಿಂದ ದೂರ ಸರಿಯಿತು. ಮಾದೈಯು ಮಲೆಯಾಳೀ ಭಾಷೆಯಲ್ಲಿಯೇ ಮುಂದುವರಿಸಿದಳು: ಮಹಾರಾಜರೇ! ನೀವು ಯಾಕೆ ಏನು ಎಂದು ಪ್ರಶ್ನಿಸಕೂಡದು. ನೀವು ಈ ರಾತ್ರಿ ನನ್ನನ್ನು ನಿಮ್ಮ ಮಂಚದ ಮೇಲೆ ಮಲಗಲು ಬಿಡಬೇಕು. ನೀವು ಬೇರೆ ಎಲ್ಲಿಯಾದರೂ ಹೋಗಿ ಮಲಗಿಕೊಳ್ಳಿ. ರಾಜನಿಗೆ ಆಶ್ವರ್ಯವಾಯಿತು. ಮಾದೈಯ ಮಾತಿನ ಧ್ವನಿಯ ಅರಿವಾಯಿತು. ಏಕೆ ತಾಯೇ! ಈ ರಾತ್ರಿ ಏನಾದರೂ ಅಪಾಯವಿದೆಯೇ? ಮಹಾರಾಜ ! ಏಕೆ ಏನು ಎನ್ನುವ ಪ್ರಶ್ನೆ ಬೇಡ. ಈ ರಾತ್ರಿ ನೀವು ಎಲ್ಲಿಗೆ ಬೇಕಾದರೂ ಹೋಗಿ. ನನಗೆ ನಿಮ್ಮ ಮಂಚದಲ್ಲಿ ಮಲಗಲು ಅಪ್ಪಣೆ ಕೊಡಿ. ಈ ವಿಷಯ ಬೇರೆ ಯಾರಿಗೂ ತಿಳಿಯಕೂಡದು.

ಸಾತ್ತ್ವಿಕ ಶಿರೋಮಣಿ. ಪವಿತ್ರ ಸ್ತ್ರೀ. ರಾಜನಿಗೆ ಮುಂದೆ ಮಾತಾಡಲು ಆಗಲಿಲ್ಲ. ಮಾದೈಯ ಕೋರಿಕೆ ಈಡೇರಿಸಲ್ಪಟ್ಟಿತು. ಶಿವರಾಜನ ಶಯ್ಯಾಗೃಹದ ಸುತ್ತಲೂ ಎಂದಿನಂತೆ ಪಹರೆಯವರಿದ್ದರು. ಆದರೆ ಮಾದೈ ಅದರೊಳಗೆ, ರಾಜನಿಲ್ಲ. ವಿಷಯವರಿತವರು ಅವರಿಬ್ಬರೇ. ರಹಸ್ಯವು ಅತಿಗೂಢವಾಗಿದ್ದಿತು.

ರಾತ್ರಿಯು ಮುಗಿಯಿತು. ಶಿವರಾಜನು ಎಂದಿನಂತೆ ಕೋಳಿ ಕೂಗುವಾಗ ಎದ್ದನು. ರಾತ್ರಿಯಲ್ಲಿ ಏನು ವಿಶೇಷ ಸಂಭವಿಸಿದೆಯೋ ಎಂದು ನೋಡಲು ಪರಿವಾರದೊಡಗೂಡಿ ದೀಪಗಳ ಸಮೇತ ಶಯ್ಯಾಗೃಹದೊಳಗೆ ಹೋದನು. ಅಲ್ಲಿಯ ರುದ್ರದೃಶ್ಯವನ್ನು ನೋಡಿ ಸ್ತಂಭೀತನಾದನು. ಒಂದು ಹೆಜ್ಜೆ ಹಿಮ್ಮೆಟ್ಟಿ ನಿಂತು ಹೋದನು. ಅವನ ಬಾಯಿಯಿಂದ ಮಾತು ಹೊರಡಲಿಲ್ಲ. ಹೃದಯ ತುಂಬಿ ಉಸಿರು ಕಟ್ಟುವಂತೆ ಆಯಿತು. ಕುತ್ತಿಗೆಯ ಗಳಗಳು ಬಿರಿಯುವಂತಾದವು. ಪರಿವಾರದವರು ಭಯಚಕಿತರಾಗಿ ಸಮಸ್ಯಾತ್ಮಕವಾಗಿ ಕೋಣೆಯನ್ನೇ ದೃಷ್ಟಿಸುತ್ತಿದ್ದರು. ಪಲ್ಲಂಗದ ಮೇಲೆ ಖಡ್ಗದ ಪ್ರಹಾರಗಳಿಂದ ಜರ್ಜರಿತಕಾಯಳಾಗಿ ರಕ್ತದ ಪ್ರವಾಹದಲ್ಲಿ ಮಾದೈಯು ಬಿದ್ದಿದ್ದಾಳೆ. ಅವಳ ಛಿನ್ನವಿಚ್ಛಿನ್ನ ಶರೀರ ಚಿರಶಾಂತವಾಗಿ ಕೆಡೆದು ಬಿದ್ದಿದೆ. ಇನ್ನು ಮಾದೈಯು ಶಾಂತಿಮಂತ್ರವನ್ನು ಪಠಿಸುವಂತಿಲ್ಲ. ಶಾಂತಿಶಿಬಿರಾಧ್ಯಕ್ಷತೆಯು ನಿತ್ಯ ಶಾಂತಿ ಶಿಬಿರದೆಡೆಗೆ ಸಾಗಿಹೋಗಿದ್ದಾಳೆ. ಅವಳ ದಿವ್ಯತನುವಿನ ಮೇಲಿನ ಪ್ರತಿಯೊಂದು ಗಾಯವೂ ತನ್ನ ದುಃಖದ ಕತೆಯನ್ನು ಹೇಳುವಂತೆ ಇನ್ನೂ ರಕ್ತವನ್ನು ಸ್ರವಿಸುತ್ತಿದ್ದಿತು. ಆ ಶ್ವೇತಾಂಬರ ರಕ್ತಸಿಂಚಿತವಾಗಿ ಮಲಿನವಾಗಿದ್ದಿತು. ಅವುಗಳ ಮಧ್ಯೆ ಅರ್ಧನಿಮೀಲಿತ ನಯನಗಳಿಂದ ನಭೋಮಂಡಲವನ್ನೀಕ್ಷಿಸುತ್ತ ಶಾಂತ ಮುಖಮುದ್ರೆಯಿಂದ ಮಾದೈ ಮಲಗಿದ್ದಳು. ಮಹಾತಾಯೀ! ಮಹಾತಾಯೀ! ನನ್ನ ಪ್ರಾಣವನ್ನುಳಿಸಿದ ಮಹಾತಾಯೀ ಎಂದು ಶಿವರಾಜನು ಆ ಪೂಜ್ಯಸ್ತ್ರೀಯ ಪಾದತಳದಲ್ಲಿ ಬಿದ್ದು ಹೊರಳಾಡಿದನು. ಪಲ್ಲಂಗದ ಸಮೀಪ ಕಾಲುಮಣೆಯ ಮೇಲಿದ್ದ ಪತ್ರವನ್ನು ಸೇನಾಧಿಪತಿಯು ರಾಜನಿಗೆ ತೆಗೆದುಕೊಟ್ಟನು. ಅದು ಕನ್ನಡದಲ್ಲಿತ್ತು, ಶಿವರಾಜನಿಗೆ ಬರೆಯಲ್ಪಟ್ಟಿತ್ತು!

ಶಿವರಾಜ ಈ ರಾತ್ರಿ ನಿನ್ನ ಸಂಹಾರವು ಗುಪ್ತರೀತಿಯಲ್ಲಿ ನಡೆಯುವುದೆಂದು ನನಗೆ ತಿಳಿಯಿತು. ನಾನಾಗಿಯೇ ನಿನ್ನ ವಿರುದ್ಧ ಸೇಡು ತಿರಿಸಿಕೊಳ್ಳಬೇಕೆಂದು ಬಹಳ ವರ್ಷ ಸರ್ಪದಂತೆ ಭುಸುಗುಟ್ಟುತ್ತಿದ್ದೆ. ಆದರೆ ಕ್ಷಮೆಯೇ ಸರ್ವಶ್ರೇಷ್ಠವೆಂದು ಅದನ್ನು ಮರೆತು ನೂತನ ಜನ್ಮವನ್ನು ಪ್ರಾರಂಭಿಸಿದೆ. ಈಗ ದೈವವೇ ನಿನಗೆ ಪ್ರತೀಕಾರ ಬಗೆದಿತ್ತು; ನನ್ನ ವೈರವನ್ನು ತೀರಿಸಲು ಸನ್ನಾಹ ಮಾಡಿತ್ತು. ನಾನು ಸುಮ್ಮನಿರಬಹುದಿತ್ತು; ಮನಸ್ಸು ಒಪ್ಪಲಿಲ್ಲ. ಕೊಡಗು ಸಂಸ್ಥಾನ ರಾಜರಹಿತವಾಗಿ ಕ್ಷೆಭೆಗೊಳಗಾಗಬಾರದು ಎಂದು ನಿರ್ಧರಿಸಿದೆ. ಇನ್ನಾದರೂ ಪರಮೇಶ್ವರನು ನಿನಗೆ ಸನ್ಮತಿ ನೀಡಲಿ. ಈ ಘೋರಯುದ್ಧವನ್ನು ನಿಲ್ಲಿಸಿ ಕೇರಳವರ್ಮನೊಡನೆ ಸಂಧಿಮಾಡಿಕೊಂಡು ಸ್ನೇಹದಿಂದ ಹಿಂದೆ ತೆರಳು. ಹಾಗೆ ಮಾಡಿದರೆ ಮಾತ್ರ ನನ್ನ ಪ್ರಿಯಪತಿಗೂ ನನಗೂ ಚಿರಶಾಂತಿ ಲಭಿಸುವುದು. ಅದೃಷ್ಟ ಶಕ್ತಿಯನ್ನು ಪರಮೋತ್ಕೃಷ್ಟ ಶಕ್ತಿಯೆಂದು ತಿಳಿದು ಆ ಶಕ್ತಿಯ ಆಗಾರ ಪರಮೇಶ್ವರನಲ್ಲಿ ಅಪಾರ ಭಕ್ತಿಯಿಟ್ಟು ಸನ್ಮಾರ್ಗಗಾಮಿಯಾಗಿ ಕ್ಷೇಮದಿಂದ ಪ್ರಜಾಪಾಲನೆ ಮಾಡು. ನಿಮಗೆಲ್ಲರಿಗೂ ಮಂಗಳವಾಗಲಿ.

ಪಾರ್ವತಿ (ಮಾದೈ) ಶಿವರಾಜನು ಅತಿ ದೀರ್ಘವಾದ ಉಸಿರನ್ನು ಸುಯ್ದನು. ನಯನೋದಕ ಧಾರೆಯು ಆ ಪರಮ ಪವಿತ್ರ ಪತ್ರಕ್ಕೆ ಅಭಿಷೇಕ ಮಾಡಿತು. ಉಭಯ ಪಕ್ಷಗಳ ಸೈನಿಕರೂ ರಾಜರೂ ಸಹಕರಿಸಿ ಮೈತ್ರಿಯಿಂದ – ಅದಕ್ಕಿಂತಲೂ ಹೆಚ್ಚು, ಸಮಾನದುಃಖದಿಂದ – ಕಲೆತು ಮಾದೈಯ ಮೃತಶರೀರಕ್ಕೆ ಅಗ್ನಿಸಂಸ್ಕಾರ ಮಾಡಿದರು. ಶಿವರಾಜನು ಬದುಕಿ ಉಳಿಯಲಿ. ಯುದ್ಧವು ನಿಂತು ಶಾಂತಿಯು ನೆಲೆಗೊಳ್ಳಲಿ ಎಂದು ಆತ್ಮಯಜ್ಞ ಮಾಡಿದ ಮಹಿಮಾನ್ವಿತ ದಿವ್ಯ ಪೂಜ್ಯ ಪವಿತ್ರ ಆದರ್ಶಸ್ತ್ರೀಯ ಚಿತಾಗ್ನಿ ಸಾಕ್ಷಿಯಾಗಿ ಶಿವರಾಜ ಕೇರಳವರ್ಮರಾಜರು ಕೊಡಗು ಕೇರಳ ಸಂಸ್ಥಾನಗಳ ನಡುವೆ ಸ್ನೇಹವನ್ನು ಸಂಸ್ಥಾಪಿಸಿದರು.
ಯುದ್ಧ ಮುಗಿದ ಆ ಮಂಗಳ ಮುಹೂರ್ತದಲ್ಲಿ ಯಶಃಕಾಯೆ ಮಾದೈ ತೇಜೋಶರೀರೆಯಾಗಿ ಬಿಳಿಮೋಡಗಳ ಬೆಳಕಿನ, ಗಿರಿಬನಗಳ, ಹಸುರಿನ ಕೆರೆತೊರೆಗಳ ಪ್ರಭೆಯ ರೂಪಿನಿಂದ ಬಂದು ಅವರನ್ನು ಹರಸಿದಂತೆ ತೋರಿತು. ಒಂದು ಹಿಂದೀ ಕತೆಯ ಛಾಯೆಯಿದೆ.