ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು ಯೋಜನೆಗಳನ್ನು ಹೊಸೆಯುವಾಗ ಇರುವುದು ಏನು ಮತ್ತು ಎಷ್ಟು ಎಂದು ತಿಳಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇರುವುದು ನಾಶವಾಗುತ್ತಿದೆ, ಬರುವುದು ಕ್ಷಣಿಕ ಮತ್ತು ದುರ್ಬಲವಾಗುತ್ತಿದೆ. ಆಡಳಿತ ಕೊಡಬೇಕಾದವರು ಯೋಜಕರ ಮುಖವಾಡ ತೊಟ್ಟಿದ್ದಾರೆ. ಯೋಜಿಸಬೇಕಾದ ನಿಜ ಪರಿಣತರು ಅವರ ತಪ್ಪುಗಳಿಗೆ ಸಮಜಾಯಿಷಿ ಹುಡುಕುವವರಾಗುತ್ತಿದ್ದಾರೆ. ನಮ್ಮ ಸುತ್ತುಮುತ್ತಿನ ಕುದುರೆಮುಖ ಗಣಿಗಾರಿಕೆ, ಎಂಆರ್‌ಪೀಯೆಲ್, ವಿಶೇಷ ಆರ್ಥಿಕ ವಲಯ, ಪಡುಬಿದ್ರೆಯ ಉಷ್ಣ ವಿದ್ಯುತ್ ಸ್ಥಾವರ, ಕೈಗಾ ಮುಂತಾದವೆಲ್ಲಾ ಸರಕಾರದ ಸಹಯೋಗದಲ್ಲೇ ಆಗುತ್ತಿರುವ ಅನಾಚಾರಗಳು. ಇನ್ನು ಸರಕಾರದ್ದೇ ಇಲಾಖೆಗಳ ಒಂದೊಂದು ಕರ್ಮಕಾಂಡವೂ ಸಾಮಾನ್ಯ ಬುದ್ಧಿಗೆ ಗ್ರಾಹ್ಯವಾಗದ ಒಂದೊಂದು ವಿಶ್ವ(ವಿ)ರೂಪ! (ಮಾಜೀ ಲೋಕಾಯುಕ್ತರುಗಳ ಮಾತಷ್ಟೇ ಸಾಕು.) ಈ ಮರಣಾಂತಿಕ ಹೂಳಿನ ನಡುವೆಯೂ ಸ್ವಂತ ಉಮೇದಿನೊಡನೆ, ದೇಶದ ನಿಯಮಗಳಿಗನುಸಾರವಾಗಿ ಸಂಶೋಧನಾವ್ರತವನ್ನು ನಡೆಸುವ ಕೆಲವರಾದರೂ ನಮ್ಮ ನಡುವೆಯಿರುವುದಕ್ಕೇ ಸಮಾಜ ಇಂದು ಎಲ್ಲ ಕಳೆದುಕೊಂಡ ಸ್ಥಿತಿ ಮುಟ್ಟಿಲ್ಲ. ಹಳಗಾಲದವರು ಹೇಳುವಂತೆ, ಮಳೆಬೆಳೆ ಕಾಲಕಾಲಕ್ಕೆ ಆಗುತ್ತಿದೆ!

ಸಂಶೋಧನಾವ್ರತದ ಅನಂತ ಅಸುಷ್ಠಾನಗಳಲ್ಲಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಒಂದನ್ನು ನಡೆಸುತ್ತಿರುವ ನನ್ನ ಕೆಲವು ಕಿರಿಯ ಮಿತ್ರರು, “ನೋಡಬನ್ನಿ” ಎಂದಾಗ ನನಗೆ ತಡೆಯಲಿಲ್ಲ. ನನಗಿಂತ ಒಂದು ಕೈ ಹೆಚ್ಚೇ ಉತ್ಸುಕರಾದ ಸುಂದರರಾಯರು ಜೊತೆಗೊಟ್ಟರು. ಸೋಮವಾರ ಬೆಳಿಗ್ಗೆ ನಾವು ಬೈಕೇರಿ ಶಿರಾಡಿ ಘಾಟೀ ದಾರಿ ಹಿಡಿದೆವು. ಈಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ‘ಕೆಟ್ಟು ಕೆರ ಹಿಡಿಯುವುದು’, ಜನಪ್ರತಿನಿಧಿಗಳು ಅನ್ಯಗ್ರಹ ವಾಸಿಗಳಂತೆ ‘ವೈಮಾನಿಕ ಸಮೀಕ್ಷೆ’ ನಡೆಸುವುದು, ‘ಶಾಶ್ವತ’ ಪರಿಹಾರಕ್ಕೆ ಚತುಷ್ಪಥ, ಕಾಂಕ್ರಿಟೀಕರಣ, ಬೆಂಗಳೂರಿಗೇ ಭೂಗತ ಮಾರ್ಗದವರೆಗೆ ಆಶ್ವಾಸನೆ ಇತ್ಯಾದಿ ಕುದಿಬಿಂದಿಗೇರುವುದೂ ಕೇಳಿದ್ದೇವೆ. ಮತ್ತೆ ಬರಿಯ ತೇಪೆಗೂ ‘ಪವಾಡ ಸದೃಶ’ವಾಗಿ ಮಾಧ್ಯಮಗಳಲ್ಲಿ ಮಿಂಚುವುದೂ ಕಂಡಿದ್ದೇವೆ. ಈ ಸಾಲಿನ ಪವಾಡಪುರುಷ ಓಸ್ಕರ್ ಫೆರ್ನಾಂಡೀಸ್ ಎಂದು ನಾನು ನನ್ನ ಸುಸ್ಥಿತಿಯ ‘ಕುದುರೆ’ಯ (ಸುಪರ್ ಹೊಂಡಾ ೧೨೫ ಬೈಕ್) ಕಿವಿಯಲ್ಲಿ ಹೇಳಿದೆ. ಆದರೆ ಅದು ಮಾತ್ರ ಪವಾಡ ಭಂಜಕ ನರೇಂದ್ರ ನಾಯಕರ ಹಾಗೆ ಉದ್ದಕ್ಕೂ “ಇದು ಬರಿಯ ಕಣ್ಕಟ್ಟು, ದೇರ್ ಈಸ್ ನೋ ಮಿರಕಲ್” ಎಂದು ರಗಳೆ ಮಾಡುತ್ತಲೇ ಇತ್ತು. ಅನುದಾನ, ವಿನಿಯೋಗಗಳಷ್ಟೇ ಲಕ್ಷ್ಯವಾಗಿ ಫಲಿತಾಂಶ ಶೂನ್ಯವಾದ ಸ್ಥಿತಿಯಲ್ಲಿ ನಾವಿನ್ನೊಮ್ಮೆ ಮತಗಟ್ಟೆಗೆ ಹೋಗಬೇಕಾಗಿದೆ. ನಾನು ಹೆಚ್ಚು ಹೇಳುವುದಿಲ್ಲ. (ಸಂಸದನ ಅನುದಾನವನ್ನು ಪೂರ್ಣ ವಿನಿಯೋಗಿಸಿದ್ದೇ ನಳಿನಕುಮಾರ್ ಕಟೀಲರಿಗೆ ಮತ್ತೆ ಆರಿಸಿಬರಲು ಅರ್ಹತೆಯಂತೆ!!)

ರಿಪೇರಿ ಕೆಲಸದ ಕಂತ್ರಾಟುದಾರನ ಬಿಲ್ ಪರಿಣತರಿಬ್ಬರು ಅಳತೆಪಟ್ಟಿ, ಟಿಪ್ಪಣಿ ಪುಸ್ತಕ ಹಿಡಿದುಕೊಂಡು ಪ್ರತಿ ತೇಪೆಯ ಅಳತೆ ತೆಗೆಯುತ್ತಿದ್ದರು. ಸಾರ್ವಜನಿಕ ಕಾಮಗಾರಿಗಳ ಅಲ್ಪಸ್ವಲ್ಪ ಪರಿಚಯದಲ್ಲಿ ಹೇಳಬಲ್ಲೆ, ಪವಾಡ ಘಟಿಸುವುದಿದ್ದರೆ ಇಲ್ಲಿ ಖಂಡಿತ ಸಾಧ್ಯ. ಅದೇನೇ ಇರಲಿ, ಇವರ ಕೆಲಸ ಮಾತ್ರ ವೈಯಕ್ತಿಕ ಮಟ್ಟದಲ್ಲಿ ತುಂಬ ಅಪಾಯಕಾರಿ. ಇಳಿಜಾರಿನಲ್ಲಿ ಒಮ್ಮೊಮ್ಮೆ ನಿರಂತರವಾಗಿ ಬರುವ ಮೂರರಿಂದ ಆರುಸಾಲು ಚಕ್ರದವರೆಗಿನ ಭಾರೀ ಲಾರಿಗಳಿಂದ ಹಿಡಿದು, ಮಿಂಚುಳ್ಳಿಗಳಂಥ ಕಾರಿನವರೆಗೆ ಯಾರು ಕಣ್ತಪ್ಪಿದರೂ ಇವರು ಎಡವಿದರೂ ಜೀವಹಾನಿ ನಿಶ್ಚಿತ. [ತಮಾಷೆ ಎಂದರೆ ಮೇಲೆ ಉಲ್ಲೇಖಿಸಿದ ಮೌಢ್ಯಕಂಟಕ ನರೇಂದ್ರ ನಾಯಕರು ಹಿಂದೆ ತೀವ್ರವಾಗಿ ಬಳಕೆದಾರರ ವಕಾಲತ್ತೂ ವಹಿಸುತ್ತಿದ್ದರು. ಆಗ ಕೆಲವು ಮಳೆಗಾಲಗಳಲ್ಲಿ ಅವರು ಮಂಗಳೂರು ನಗರದ ಬೀದಿಬೀದಿಗಳಲ್ಲಿ ಪಟ್ಟಿಪುಸ್ತಕ ಹಿಡಿದು ಹೀಗೆ ಅಲೆದದ್ದು ನೋಡಿದ್ದೇನೆ. ಆದರೆ ಲಕ್ಷ್ಯ ಮಾತ್ರ ಬೇರೆ. ಸಾರ್ವಜನಿಕರಿಗೆ ‘ಹೊಂಡ ಗುರುತಿಸಿ ಸ್ಪರ್ಧೆ ಮಾಡಿ, ಬಂದ ಅಭ್ಯರ್ಥಿಪತ್ರಗಳನ್ನು ಹಿಡಿದುಕೊಂಡು ಸ್ವತಃ ಇವರೇ ಮಾರ್ಗಗಳಲ್ಲಿ ಲೆಕ್ಕ ತಪಾಸಣೆ ಮಾಡಿ, ಅವುಗಳಲ್ಲಿ ತುಂಬಿದ ವರ್ಣರಂಜಿತ ಮತ್ತು ಸುಗಂಧಿತ ನೀರ ಅಳತೆ, ವಿವರಣೆಗಳ ಸಹಿತ ಸಾರ್ವಜನಿಕ ಮಾಧ್ಯಮಗಳಿಗೆ ಸುದ್ದಿಯಾಗಿ ಕೊಟ್ಟು ಮಂಗಳೂರು ಮಹಾನರಕಸಭೆಯನ್ನು ವಿಡಂಬಿಸುತ್ತಿದ್ದರು, ಪರೋಕ್ಷವಾಗಿ ತೇಪೆಯಾದರೂ ಹಾಕಲು ಬಲವತ್ತರವಾದ ಪ್ರೇರಕರಾಗುತ್ತಿದ್ದರು.]

ಸಕಲೇಶಪುರಕ್ಕಿಂತಲೂ ಸುಮಾರು ಹತ್ತು ಕಿಮೀ ಮೊದಲೇ ಸಿಗುವ ಮಾರನಹಳ್ಳಿ ಕವಲಿನಲ್ಲಿ ನಾವು ಎಡಕ್ಕೆ ಹೊರಳಿದೆವು. ಇದು ಹಿಂದೆ – ಮೊದಲ ಕಂತಿನಲ್ಲಿ ಹೇಳಿದಂತೆ, ನಾವು ಹಾನಬಾಳಿನವರೆಗೂ ಹೋಗಿಬಂದ ದಾರಿಯೇ. ಹೆದ್ದಾರಿಯ ತೇಪೆಯಾದರೋ ನುಣ್ಣನೆಯ ಮುಖದ ಮೇಲೆದ್ದ ಮೊಡವೆಗಳು. ಆದರೆ ಇಲ್ಲಿ ಜಾರುಜಲ್ಲಿ, ಹೂಳುಹೊಯಿಗೆ ಸ್ಥಿತಿಯ ನಡುವಣ ಉಸಿರು ಬಿಡಿಸಿಕೊಳ್ಳುವ ತಾಣ ತುಸು ಡಾಮರು! ಕಾಫಿ ತೋಟದ ನಡುವಣ ಈ ಸಪುರ ಬಳಕು ದಾರಿಯಲ್ಲಿ ನಾವು ಹದಿಮೂರು ಕಿಮೀ ಸಾಗಿದೆವು. ಅಲ್ಲಿನ ಬಲ ಕವಲಿನ ಕಾಂಕ್ರೀಟ್ ರಸ್ತೆ ಹಾನಬಾಳು ಮತ್ತು ಸಕಲೇಶಪುರಕ್ಕೂ ಒಳದಾರಿ. ನಾವು ಎಡದ ಕವಲು ಹಿಡಿದು ಎರಡು ಕಿಮೀ ಸಾಗಿ ನಿಂತದ್ದು ಮೂರ್ನಾಲ್ಕು ಅಂಗಡಿ, ಒಂದೆರಡು ಹೋಟ್ಲು, ವಾರಕ್ಕೆರಡೇ ಬಾರಿ ಕೆಲಸ ಮಾಡುವ ಬ್ಯಾಂಕ್ ಶಾಖೆ ಮತ್ತು ಕೆಲವು ಮನೆಸಾಲಿನ ಪುಟ್ಟ ಪೇಟೆಯ ಕೊನೆ. ಅಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಚೊಕ್ಕ ಡಾಮರು ಹಾಕಿದ ವಾಹನ ತಂಗುನೆಲ, ಆಚೆ ಎರಡಾಳೆತ್ತರಕ್ಕೆ ಬಲವಾದ ಮುಳ್ಳ ತಂತಿಯ ಆವರಣದೊಡನೆ ಭದ್ರ ತಪಾಸಣಾ ಠಾಣೆಯ ವ್ಯವಸ್ಥೆ, ನಡುವೆಯೊಂದು ಬಲವಾದ ಗೇಟು. ಗೇಟಿನ ಒಳಬದಿಯಲ್ಲಿ ಪುಟ್ಟ ಕಟ್ಟಡ – ಪಹರೆದಾರರ ವಸತಿ-ಕಛೇರಿ. ಒತ್ತಿಗೆ ತುರ್ತು ಸ್ಥಿತಿಗೊದಗುವಂತೆ ಭಾರೀ ಡೀಜೆಲ್ ವಿದ್ಯುಜ್ಜನಕ, ಮೈಕ್ರೋವೇವ್ ಟವರ್. ಇವೆಲ್ಲವನ್ನು ಸುತ್ತುವರಿದಂತೆ ಕಲ್ಲೆದ್ದು, ಸುಟ್ಟಹುಲ್ಲಿನ ಗುತ್ತಿಗಳಿರಬೇಕಾದ ಬೆಟ್ಟಮೈಯಲ್ಲಿ ಮೊಡವೆ ಮುಖಕ್ಕೆ ಲೆಪ್ಪದ ಚಂದ ಕೊಟ್ಟಂತೆ ಪುಟ್ಟ ಲಾನ್, ಹೂದೋಟ. ಹಿತ್ತಲಿನ ಕಣಿವೆ ಮೀರಿ ದಿಟ್ಟಿ ಹರಿದರಂತೂ ವಿಸ್ತರಿಸುತ್ತದೆ ಹೊಸದೇ ಲೋಕ.

ಪಶ್ಚಿಮ ಘಟ್ಟ ದಕ್ಷಿಣೋತ್ತರಕ್ಕೆ ಚಾಚಿದೆ, ಎಂದು ಸರಳವಾಗಿ ಹೇಳುವಾಗ ಒಂದು ರೇಖೆಯ ಕಲ್ಪನೆಯಷ್ಟೇ ಬರಬಹುದು. ಆದರೆ ವಾಸ್ತವದಲ್ಲಿ ಇದು ಕಿಲೋಮೀಟರ್ ಗಟ್ಟಳೆಯಲ್ಲಿ ಪೂರ್ವಪಶ್ಚಿಮಕ್ಕೂ ವ್ಯಾಪಿಸಿದ ಅಸಂಖ್ಯ ಏಳುಬೀಳುಗಳ ಸಮೂಹ. ದಿಕ್ಕರಿವಿಲ್ಲದೆ ಇದನ್ನು ಹೊಕ್ಕವರು ಚಕ್ರವ್ಯೂಹದ ಅಭಿಮನ್ಯುಗಳು; ಕಳೆದು ಹೋಗುವುದು ನಿಶ್ಚಿತ (ಆಗೀಗ ನಾಶವಾದವರ ವರದಿಗಳನ್ನು ನೆನಪಿಸಿಕೊಳ್ಳಿ). ಅದರ ಅತ್ಯುನ್ನತ ಶೃಂಗಸಾಲನ್ನಷ್ಟೇ ಪರಿಗಣಿಸಿದಾಗ ಪೂರ್ವಭಾಗದಲ್ಲಿ, ಅಂದರೆ ಪ್ರಸ್ತುತ ಸಕಲೇಶಪುರ ವಲಯದಲ್ಲಿ ಸುಮಾರು ಏಳೂವರೆ ಸಾವಿರ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಏಕಮಾಲಿಕತ್ವದ ಕೃಷಿಭೂಮಿ ಇಲ್ಲಿ ನಮ್ಮೆದುರು ಹರಡಿತ್ತು; ಬ್ರಿಟಿಷರ ಕಾಲದಲ್ಲಿ ತೊಡಗಿ, ಸದ್ಯ ಪ್ಯಾರೀ ಕಂಪೆನಿಯ ಆಸ್ತಿಯಾಗಿರುವ ಇದು ಕಾಡುಮನೆ ಟೀ ಎಸ್ಟೇಟ್!

ಬೆಟ್ಟ, ತೊರೆ, ಕಾಡು, ಕೃಷಿ ಮತ್ತು ಹೆಚ್ಚು ಕಡಿಮೆ ಸ್ವಯಂಪೂರ್ಣ ನಾಗರಿಕತೆಯೂ ಕಾಡುಮನೆ ಎಸ್ಟೇಟಿಗೆ ಒಂದೆರಡು ಶತಮಾನಗಳಿಂದಲೇ ರೂಢಿಸಿದಂತಿವೆ. ಕಿಲೋಮೀಟರ್ ಗಟ್ಟಳೆ ರಸ್ತೆಗಳು (ಡಾಮರು, ಕಲ್ಲು ಜಡಿದದ್ದು, ಕಚ್ಚಾ ಮಣ್ಣಿನದ್ದೂ ಅಲ್ಲದೆ ಅಸಂಖ್ಯ ಸವಕಲು ಜಾಡುಗಳೂ ಇವೆ), ವಿವಿಧ ವಲಯಗಳಲ್ಲಿ ಕೂಲಿಕಾರರ (ಬಹ್ವಂಶ ಮೂರು ನಾಲ್ಕು ತಲೆಮಾರುಗಳಿಂದ ಮುಂದುವರಿದ ಅಪ್ಪಟ ತಮಿಳರು. ಈಚೆಗೆ ಅಸ್ಸಾಂನಿಂದಲೂ ಕೂಲಿಕಾರರು ಬಂದಿದ್ದಾರಂತೆ) ವಸತಿಸಾಲುಗಳು, ಭಾರೀ ಚಾ ಕಾರ್ಖಾನೆ ಸಹಿತ ಆಡಳಿತ ಕಟ್ಟಡಗಳು, (ತಮಿಳು) ಶಾಲೆ, ಆಸ್ಪತ್ರೆ, ಸಾರ್ವಜನಿಕ ಅಗತ್ಯಗಳಿಗೆ ಒದಗುವ ಕ್ಯಾಂಟೀನ್, ಅಂಗಡಿಮಳಿಗೆಗಳು, ಇಗರ್ಜಿ, ಮಂದಿರ, ಐಶರಾಮೀ ಪ್ರವಾಸಧಾಮದವರೆಗೆ ಎಲ್ಲವನ್ನು ಆವರಿಸಿಕೊಂಡ ಈ ವ್ಯವಸ್ಥೆಯ ಪ್ರಧಾನ ಶ್ರುತಿ ಚಾ.

ಇಲ್ಲಿ ಕಾಡುಮನೆ ಗೇಟ್, ಅಲ್ಲಿ (ನಮ್ಮದು) ಬಿಸಿಲೆ ಗೇಟ್ – ಎರಡರ ಉದ್ದೇಶವೂ ಹಸಿರಿನಾವರಣದ ರಕ್ಷಣೆಯೇ ಆದರೂ ಅದೆಷ್ಟು ಭಿನ್ನ! ಕಾಡುಮನೆ ಪ್ರಕೃತಿಯ ಮೇಲೆ ಹೇರಿದ ನಾಗರಿಕ ಸ್ಥಿತಿಯನ್ನೂ ಬಿಸಿಲೆ ಶುದ್ಧ ವನ್ಯ ಸ್ಥಿತಿಯನ್ನೂ ಕಾಪಾಡುವುದು ಉದ್ದೇಶ. ಸಹಜವಾಗಿ ಬಿಸಿಲೆ ಗೇಟಿನಲ್ಲಿಲ್ಲದ ಖಾಸಗಿತನ, ಬಿಗಿ ಕಾಡುಮನೆಯಲ್ಲಿತ್ತು. (ಕಾಡೂ ವೇಸ್ಟ್ ಎಂದು ಭಾವಿಸುವ ಎಷ್ಟೂ ಪುಡಾರಿ, ಅಧಿಕಾರಿಗಳನ್ನು ನಾವು ಕಾಣುತ್ತಲೇ ಇದ್ದೇವೆ, ಬಿಡಿ.) ದ್ವಾರಪಾಲಕ – ರಾಜ್ಕುಮಾರ್, ಸ್ನೇಹಶೀಲ ವ್ಯಕ್ತಿ. ಆದರೆ ತೋಟದ ಆಡಳಿತದಿಂದ ಅನುಮತಿ ಪತ್ರ, ಅಲ್ಲವಾದರೂ ಕನಿಷ್ಠ ನಮ್ಮ ಗೆಳೆಯರಿಂದ ಬಾಯಿಮಾತಿನ ಸೂಚನೆಯಾದರೂ ಇಲ್ಲದೆ ನಮ್ಮನ್ನು ಒಳಗೆ ಬಿಡಲು ಒಪ್ಪಲಿಲ್ಲ. ಆತ ನಮ್ಮನ್ನು ಕಾವಲುಮನೆಯ ಹಿತ್ತಿಲಿಗೊಯ್ದು ದೂರದ ಬೆಟ್ಟ ಸಾಲು ತೋರಿದ. ಅದರಾಚಿನ ಇನ್ನೊಂದೇ ಕಣಿವೆಯೂ ನಮ್ಮ ಕಂಪೆನಿಯದೇ ನೆಲ. ಅಲ್ಲಿ ನಿಮ್ಮ ಗೆಳೆಯರ ವಸತಿ ಮತ್ತು ಸಮೀಕ್ಷೆ ಕೆಲಸಗಳು ನಡೆಯುತ್ತಿರುತ್ತವೆ. ಅಲ್ಲಿಗೆ ದೂರವಾಣಿಯ ಭೂಸಂಪರ್ಕ ಇಲ್ಲ. ಇಷ್ಟೆತ್ತರದ ಟವರಿದ್ದೂ ಅಲ್ಲಿ ಚರವಾಣಿ ಸಂಪರ್ಕ ಭಾರೀ ಕಷ್ಟ. ನಾನು ಟ್ರೈ ಮಾಡ್ತೇನೆ, ನೀವೂ ನೋಡಿ ಅಂದುಬಿಟ್ಟ. ಮತ್ತೆ ಮತ್ತೆ ಚರವಾಣಿ ಪ್ರಯತ್ನ ಮಾಡುತ್ತ, ಅದೃಷ್ಟವನ್ನು ಕಾಯುವುದೊಂದೇ ನಮಗುಳಿದ ದಾರಿ.

ಅಶೋಕವನದ ಅದ್ವಿತೀಯ ಕಪ್ಪೆ ಶಿಬಿರದ ಭಾಗಿಗಳಲ್ಲಿ ಬೆಂಗಳೂರಿನಿಂದ ಬಂದಿದ್ದ ಅನೂಪ್ ಮತ್ತು ಸುಮನ್ ಅಲ್ಲಿನ ಪರಿಸರದ ಮೇಲೆ ಹೆಚ್ಚಿನ ಆಸಕ್ತಿ ತೋರಿದರು. ಅವರು ಆ ಮಳೆಗಾಲದ ಕೊನೆಯಲ್ಲೇ (ಸೆಪ್ಟೆಂಬರ್- ಅಕ್ಟೋಬರ್) ಸಂಶೋಧನಾರ್ಥ ಬಿಸಿಲೆ ವಲಯದ ಎಲ್ಲ ಜಲಮೂಲಗಳಿಗಿಳಿಯುವ ಮಾತು ನನ್ನಲ್ಲಿ ಹೇಳಿದರು. ಬಯಲುಸೀಮೆಯವರಿಗೆ ಇಲ್ಲಿನ ಝರಿ, ತೊರೆಗಳ ಮಳೆಗಾಲದ ಸೊಕ್ಕು ಹೇಳಿ ನಿರುತ್ತೇಜಿಸಿದೆ. “ತುಸು ಕಡಿಮೆಯಾದ ಮೇಲೆ ಬನ್ನಿ, ನಾನೂ ಸೇರಿಕೊಳ್ಳುತ್ತೇನೆ” ಎಂದೆ, ಅದಕ್ಕೊಪ್ಪಿದರು. ಈ ವರ್ಷ ಮಳೆಗಾಲ ತುಸು ಉದ್ದಕ್ಕೇ ಎಳೆಯಿತು. ಅದರ ಕೊನೆಯಲ್ಲಿ ಅನೂಪ್, ಸುಮನ್ ಏನೇನೋ ಪೂರ್ವಭಾವೀ ಸಿದ್ಧತೆಗಳಿಗಾಗಿ ಮಂಗಳೂರಿಗೆ ಬಂದರು, ನನ್ನಲ್ಲೂ ಚರ್ಚಿಸಿದರು. ಸುಮಾರು ಒಂದು ತಿಂಗಳ ಹಿಂದೆ ಬಿಸಿಲೆ ವಲಯದಲ್ಲೇ ಕ್ಷೇತ್ರಕಾರ್ಯಕ್ಕೆ ಇಳಿದೇಬಿಟ್ಟರು. ಆಗ ನನಗೆ ಸೂಚನೆ ಕಳಿಸಿ, ಜೊತೆಗೊಡಲು ಆಹ್ವಾನಿಸಿದರು. ನಾನು ದಿನ ಹೊಂದಿಸುವುದರಲ್ಲೇ ಕಳೆದುಹೋಗಿದ್ದೆ.

ಆ ಒಂದು ಬೆಳಿಗ್ಗೆ ನಾನು ಅಂತರ್ಜಾಲ ಸಂಪರ್ಕದ ಅವ್ಯವಸ್ಥೆಯ ಬಗ್ಗೆ ಗೊಣಗುತ್ತಿದ್ದಾಗ, ಅನೂಪ್ ಕರೆ ಬಂತು. ನಮಗೆ ನೆಟ್ ಬೇಕಾಗಿತ್ತು! ನೈಟ್ ಬಸ್ಸಲ್ಲಿ ನಾನೂ ಜಗ್ಗನೂ (ಅವರ ಬಿಸಿಲೆ ಹಳ್ಳಿಯ ಸಹಾಯಕ) ಬಂದವರೇ ಸೀದಾ ಬಂದರಿನ ಅಂಗಡಿ ಬಾಗಿಲು ತೆರೆಯೋದನ್ನ ಕಾಯ್ತಾ ಇದ್ದೀವಿ. ನಾನವರನ್ನು ಸೇರಿಕೊಂಡೆ. ಸದ್ಯ ಇವರ ಸಂಶೋಧನಾ ವಿಷಯ ಕಪ್ಪೆಯಲ್ಲ, ಮೀನು. ಬೆಸ್ತರ ಬಲೆ ಸೇರಿದಂತೆ ಯಾವುದೇ ಸಾಂಪ್ರದಾಯಿಕ ಸಾಧನಗಳಲ್ಲಿ ಮೀನು ಸಜೀವ ಸಿಗಬೇಕೆಂದಿಲ್ಲ, ಘಾಸಿಗೊಂಡರೆ ಬೇಸರವೂ ಇಲ್ಲ. ಆದರೆ ಇವರ ಸಮೀಕ್ಷೆಗೆ ಸಜೀವ ಮತ್ತು ಶುದ್ಧ ಮಾದರಿಗಳನ್ನು ಹಿಡಿಯುವ ಬಲೆಯೇ ಬೇಕಿತ್ತು. ಖ್ಯಾತ ವ್ಯಾಪಾರಿ ಸಿಕ್ವೇರಾರು ನಾಕೆಂಟು ದಿನಗಳಲ್ಲಿ ಅಂಥಾ ಒಂದನ್ನು ತಯಾರಿಸಿಕೊಡುವ ಆಶ್ವಾಸನೆ ಕೊಟ್ಟರು. ಆಮೇಲೆ ಅನೂಪರಿಗೆ ಕಾಯುವುದಲ್ಲದೇ ಬೇರೇನೂ ದಾರಿಯಿರಲಿಲ್ಲ!

ಕಾಡುಮನೆ ಗೇಟಿನ ಹೊರಗೆ ಹೊಡೆಯಲು ನೊಣವೂ ಇಲ್ಲದ ಪುಟ್ಕೋಸೀ ಹೋಟೆಲಲ್ಲಿ ನಾನು, ರಾಯರು ಚಾ ಕುಡಿದೆವು. ಎದುರು ಬದಿಯ ಪುಟ್ಟ ಬೋಳು ಗುಡ್ಡೆಯ ನೆತ್ತಿ ಏರಿ ಕಾಡುಮನೆ ವ್ಯವಸ್ಥೆಯ ವಿಹಂಗಮ ನೋಟ ಅನುಭವಿಸುತ್ತ ಕುಳಿತೆವು. ಕೆಳಗಿನ ಸುವಿಸ್ತಾರ ಬೋಗುಣಿಯಲ್ಲಿ ಕಾರ್ಖಾನೆ, ಇಗರ್ಜಿ, ದೇವಾಲಯ, ವಸತಿ ಸಾಲುಗಳೇ ಮೊದಲಾದ ಕಟ್ಟಡಗಳು ಎದ್ದು ಕಾಣುತ್ತಿದ್ದುವು. ಉಳಿದಂತೆ ಎಲ್ಲವನ್ನು ಸುತ್ತುವರಿದಂತೆ, ಕಣ್ಣೆಟಕುವವರೆಗೂ ಪ್ರಕೃತಿಯೇ ಬೆಳೆಸಿಕೊಂಡ ಕಾಡಿನ ಕಂಬಳಿಕುಪ್ಪೆ ಕಿತ್ತುಕೊಂಡು, ಗಿಡದಂತಿರುವ ಗುಜ್ಜಾರಿ (ಒಂದೇ ಎತ್ತರದ) ಚಾ-ಮರಗಳನ್ನು ಅರ್ಥಾತ್ ಟೀ-ಶರ್ಟನ್ನು ನಾಗರಿಕತೆ ತೊಡಿಸಿತ್ತು. ಪ್ರಾಕೃತಿಕ ಏರಿಳಿತಗಳಿಗೆಲ್ಲಾ ಅಪ್ಪಟ ಹಸಿರು ಇಂಟರ್ಲಾಕ್ ಹಾಕಿದಂತೆ ಚಾ ತೋಟ ಕಂಗೊಳಿಸುತ್ತಿತ್ತು. ಬೋಗುಣಿಯ ಎದುರು ಅಂಚಿನ ಶಿಖರದೆತ್ತರದಲ್ಲಿ ಮಾತ್ರ ಸ್ವಲ್ಪ ವನ್ಯ ಹಸಿರು ಹಾಗೇ ಉಳಿದಂತೆ ತೋರುತ್ತಿತ್ತು. (ಬಹುಶಃ ಆ ಎತ್ತರದಲ್ಲಿ ಬಡಿಯುವ ಮಳೆಯಮಾರುತಗಳನ್ನು ಚಾಮರಗಳು ತಾಳಲಾರವೆಂದಿರಬೇಕು.)

ಗಂಟೆ ಒಂದಾದರೂ ಅನೂಪ್ ಅಥವಾ ರಾಜ್ಕುಮಾರ್ ನಮ್ಮನ್ನು ಕರೆಸಿಕೊಳ್ಳುವಂತೆ ಕಾಣಲಿಲ್ಲ. ನಾವಿನ್ನೇನು ಸಕಲೇಶಪುರಕ್ಕೆ ಹೋಗಿ ಊಟಮಾಡಿ ನಮ್ಮ ದಾರಿ ಹುಡುಕಿಕೊಳ್ಳುವುದೆಂಬ ಯೋಚನೆ ಬಲಿಯುತ್ತಿದ್ದಂತೆ, ಒಂದು ಕಾರು ಗೇಟಿನಿಂದ ಹೊರಗೆ ಬಂದು ನಿಂತಿತು. ನಮ್ಮ ಆಶ್ಚರ್ಯಕ್ಕೆ ಅದರಿಂದಿಳಿದ ಓರ್ವ ಗಂಡಸು ಗುಡ್ಡದ ಮೇಲೆ ಕುಳಿತ ನಮ್ಮತ್ತ ಕೈಬೀಸಿ ಕರೆಯುವುದೂ ಕಾಣಿಸಿತು. ಸರಬರ ಇಳಿದೇ ಬಿಟ್ಟೆವು. ರಾಜ್ಕುಮಾರ್ ನಮಗೆ ಮೊದಲೇ ತಿಳಿಸಿದ್ದಂತೆ, ಅವರು ಹಿಂದಿನ ದಿನವೇ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಸುಮನ್ ತಂದೆ. ಕಾರಿನಲ್ಲಿ ಸುಮನ್ ತಾಯಿ ಮತ್ತು ಗೆಳತಿ ಕೂಡಾ ಇದ್ದರು. ಅನೂಪ್ ಲೋಕಾಭಿರಾಮ ಮಾತಿನಲ್ಲಿ ಅವರಿಗೂ ನಮ್ಮ ಬರೋಣವನ್ನು ತಿಳಿಸಿದ್ದಕ್ಕೆ, ಇಲ್ಲಿ ಬಂದಾಗ, ರಾಜ್ಕುಮಾರ್ ಹೇಳಿದ್ದಕ್ಕೆ ಕರೆದು ಮಾತಾಡಿಸಿದ್ದರು. ಅವರೇನೋ ಸುಮನಾದಿಗಳಿಗೆ ಸರಿಯಾಗಿ ವಿದಾಯ ಹೇಳಿಯೇ ಬೆಂಗಳೂರಿಗೆ ಹೊರಟಿದ್ದರು. ಆದರೆ ನಮ್ಮ ಪಾಡು ಕೇಳಿ ವಿಷಾದಿಸಿ, ಈಗ ಹತ್ತು ಮಿನಿಟಿನ ಹಿಂದೆ, ಇಲ್ಲೇ ಕೆಳಗಿನವರೆಗೆ ತಮಗೆ ಸರಿ ದಾರಿ ತೋರಲು ಬಂದ ಅನೂಪ್ ಸಂಪರ್ಕಕ್ಕೆ ಸಿಕ್ಕಿಯಾನು ಎಂದು ಪರಡುತ್ತಲೇ ಇದ್ದರು. ಅನೂಪ್ ಮಾತ್ರ ಅಷ್ಟರಲ್ಲೇ ‘ವ್ಯಾಪ್ತಿ ಪ್ರದೇಶ’ದ ಹೊರಗೆ ಹೋಗಿದ್ದರು.

“ಏ ಸಿಗ್ನಲ್ ವೀಕಿದೆ ಕಣೋ. ನಾವು ಬೆಂಗ್ರೆಂಥ ಒಂದು ಬ್ಯಾಕ್ ವಾಟರ್ ಏರಿಯಾದಲ್ಲಿದ್ದೀವಿ, ಮತ್ತೆ ಕಾಂಟಾಕ್ಟ್ ಮಾಡ್ತೀನಿ” ಅಂತ ಅನೂಪ್ ಚರವಾಣಿ ಕರೆ ಮುಗಿಸಿದರು. ಬಲೆ ಕೊಳ್ಳುವುದರೊಡನೆ ಸಂಜೆ ನಿರೇನ್ ಭೇಟಿಯೂ ಅಂದು ಅವರ ಮಂಗಳೂರು ಭೇಟಿ ಕಾರ್ಯಕ್ರಮ ಪಟ್ಟಿಯಲ್ಲಿತ್ತು. ಅವರ ಬಿಡು ಸಮಯ ಲಾಭವಾಗುವಂತೆ ನಾನು ಅವರನ್ನು ಬೆಂಗರೆಗೊಯ್ದಿದ್ದೆ. ಅಲ್ಲಿನೊಂದು ಹಿನ್ನೀರ ನಾಲೆಯಲ್ಲಿನ ಬೆಸ್ತರ ಚಟುವಟಿಕೆಗಳು ನಮ್ಮ ಗಮನ ಸೆಳೆದುವು. ಕಡಲಲ್ಲಿ ಇಳಿತದ ಸಮಯ. ಭರತ ಕಾಲದಲ್ಲಿ ನಾಲೆಯುದ್ದಕ್ಕೆ ಹಿನ್ನೀರು ದಂಡೆಯಿಂದ ದಂಡೆಗೆ ತುಂಬುತ್ತದೆ. ಆಗ ಅದು ಕಿಸುಗಾಲ ಕಾಂಡ್ಲಾ (ಮ್ಯಾಂಗ್ರೋವ್) ಗಿಡಗಳೆಡೆಯಲ್ಲಿ ತಂದು ತುಂಬುವ ಮತ್ತು ಹಾಗೇ ಜಾಗೃತಗೊಳಿಸಿದ ಹಲವು ಬಗೆಯ ಜಲಚರಗಳ ಬೇಟೆಯಲ್ಲಿ ಕೆಲವರು ನಿರತರಾಗಿದ್ದರು. ನಮಗೆ ಅವನ್ನು ಹತ್ತಿರದಿಂದ ನೋಡುವ ಆಸೆ. ನಸುಕು ಹರಿಯುವ ಮುನ್ನದಿಂದ ಬಿಸಿಲೇರುವವರೆಗೂ ಕೆಸರು, ಚಳಿಯೆಂದು ಲೆಕ್ಕಿಸದೇ ಸೊಂಟಮಟ್ಟ ಕಂಠಮಟ್ಟದ ನೀರಿನಲ್ಲೇ ಹೆಜ್ಜೆ ಗಟ್ಟಿ ಮಾಡುತ್ತ ಸುತ್ತುವ, ಮುಳುಗೇಳುವ, ಪುಟ್ಟ ಓಡದಲ್ಲಿ ಕುಳಿತು ಬಲೆ ಬೀಸೆಳೆಯುವ ಮಂದಿ ಹಲವರಿದ್ದರು. ಅನೂಪ್‌ಗೆ ಅವರನ್ನು ಮಾತಾಡಿಸುವ, ಕೊಳ್ಳೆಯನ್ನು ನೋಡುವ ಚಪಲ. ಆದರೆ ದೂಳುಹೊತ್ತ ಮುಳ್ಳ ಕಂಟಿಗಳ ನಡುವಣ ಸವಕಲು ಜಾಡು ಹಿಡಿದರೆ ಹೆಜ್ಜೆಗೆ ನೂರು ನಾಗರಿಕ ಕಸ, ಕೊಚ್ಚೆ. ನಗರದ ಸಾಮೀಪ್ಯ ಮತ್ತು ಒಟ್ಟಾರೆ ನಮ್ಮ ಜಲಮೂಲಗಳ ಬಗೆಗಿನ ಅವಹೇಳನ ಬುದ್ಧಿಯ ಪುಣ್ಯಫಲ ಅಲ್ಲಿ ಯಥೇಚ್ಛವಾಗಿ ಹರಡಿತ್ತು. ನೀರನ್ನು ಸಮೀಪಿಸಿದಂತೆ ಅಲ್ಲಿನ ಕೊಳಚೆಯ ದಟ್ಟಣೆ ಕಂಡು ನಮಗೆ ನೀರು ಮುಟ್ಟುವ ಧೈರ್ಯವೇ ಬರಲಿಲ್ಲ. ಅಲ್ಲೇ ಬೆವರುತ್ತ ನಿಂತಂತೆ, ನಮ್ಮ ಅದೃಷ್ಟಕ್ಕೆ ಕೇವಲ ಲಂಗೋಟಿ ಧರಿಸಿದವನೊಬ್ಬ ತನ್ನ ಅಂದಿನ ಕೊಳ್ಳೆ ತುಂಬಿದ ಚರಿಗೆ ಹಿಡಿದು ಉಹ್ ಚಳಿ ಚಳಿ ಎನ್ನುತ್ತ ಬಂದ. ಆದರೆ ಪಾಪ, ನಮ್ಮ ಕುತೂಹಲವನ್ನು ಹುಸಿ ಮಾಡದೇ ಚರಿಗೆಯ ತಳದಲ್ಲಿದ್ದ ಸ್ವಲ್ಪೇ ಕೊಳ್ಳೆಯನ್ನು ತಾಳ್ಮೆಯಲ್ಲಿ ತೋರಿದ. ದಿನದ ಅಡುಗೆಗೋ ಸಮೀಪದ ಪೇಟೆಯಲ್ಲಿ ನಾಲ್ಕು ಕಾಸಿಗೆ ಮಾರಲೋ ಆತ ಒಂದಷ್ಟು ಮೀನು, ಏಡಿ, ಸಿಗಡಿ, ಚಿಪ್ಪೇನೋ ಸಂಗ್ರಹಿಸಿದ್ದ. ಆದರೆ ದಿನವೂ ಗಂಟೆಗಟ್ಟಳೆ ಆತನನ್ನು ಆವರಿಸುವ (ತುಸು ಹೊಟ್ಟೆಯನ್ನೂ ಸೇರುವ) ಆ ನೀರು, ಆ ಉತ್ಪತ್ತಿ ಆತನ ಮೇಲೆ ಮತ್ತು ಅದನ್ನು ಉಂಡವರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ತಲೆಬಿಸಿ ಮಾಡಿಕೊಳ್ಳುತ್ತ ಮರಳಿದೆವು.

ಅದಾಗಿ ಸುಮಾರು ಹದಿನೈದು ದಿನಗಳ ಮೇಲೆ, ಅಂದರೆ ಶನಿವಾರ ಅನೂಪ್ ಚರವಾಣಿಗೆ ಸಿಕ್ಕಾಗ ನಾವಿಬ್ಬರು ಸೋಮವಾರ ಬಿಸಿಲೆಗೆ ಹೊರಡುವ ಸುದ್ದಿ ಕೊಟ್ಟೆ. ಆತ ತಾವೀಗ ಬಿಸಿಲೆಯಲ್ಲಿಲ್ಲ, ಕಾಡುಮನೆಯಲ್ಲಿರುವುದರಿಂದ ಅಲ್ಲಿಗೇ ಬನ್ನಿ ಎಂದುದರಿಂದ ಹಾಗೇ ಮಾಡಿದ್ದೆವು. ಆದರೆ ಇಲ್ಲಿನ ಅನಿರ್ದಿಷ್ಟ ಸಂಪರ್ಕಶೂನ್ಯತೆ ನಮ್ಮ ತಾಳ್ಮೆಯನ್ನು ಪೂರ್ಣ ಮುಗಿಸಿತ್ತು. ನಾವಿದ್ದಷ್ಟು ಹೊತ್ತಿನಲ್ಲಿ ಸರಕಾರೀ ಬಸ್ ಬಂದು ಒಳಗೆ ಹೋಯ್ತು, ತುಸು ತಡೆದು ವಾಪಾಸೂ ಸಕಲೇಶಪುರದತ್ತ ಹೋಯ್ತು. ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಒದಗಿಸುವ ಲಾರಿ, ಜೀಪುಗಳೂ ಬಂದವು, ಹೋದವು. ಅವರು, ಇವರು ವಿಹಾರಧಾಮದ ‘ಅತಿಥಿಗಳೂ ಎಂದು ನಾವಿದ್ದಷ್ಟು ಹೊತ್ತು ಹತ್ತತ್ತು ಬಾರಿ ಗೇಟು ತೆರೆಯಿತು, ಮುಚ್ಚಿತು – ನಮಗೆ ಮಾತ್ರ ಮುಚ್ಚಿಯೇ ಇತ್ತೆಂದು ರೋಸಿ ಹೋಗುವಾಗ ರಾಜ್ಕುಮಾರ್ ಕರುಣೆದೋರಿದ. ಬೈಕ್, ಚೀಲಗಳನ್ನೆಲ್ಲ ಅಲ್ಲೇ ಬಿಟ್ಟು, ಸುಮಾರು ಅರ್ಧ ಕಿಮೀ ಒಳಗಿದ್ದ ಪೇಟೆಗೆ ನಡೆದು ಹೋಗಿ ಅಲ್ಲಿದ್ದ ಏಕೈಕ ಕ್ಯಾಂಟೀನಿನಲ್ಲಿ ಊಟ ಮಾಡಿ ಬಂದೆವು. ಮತ್ತೆ ರಾಜ್ಕುಮಾರ್ ಇನ್ನೊಂದು ಹಂತ ಏರಿ, ನನಗೊಬ್ಬನಿಗೇ ಬೈಕ್ ಹಿಡಿದು ಚಾ ಕಾರ್ಖಾನೆಯವರೆಗೆ ಹೋಗಿ ಕಂಪೆನಿಯ ಮ್ಯಾನೇಜರರನ್ನು ಖುದ್ದು ಮಾತಾಡಿಸಿ, ಅನುಮತಿ ಕೋರಲು ಒಂದು ಅವಕಾಶ ಕಲ್ಪಿಸಿದ. ಸರಿ, ನಾನು ಹೋದೆ.

ಕ್ಯಾಂಟೀನ್ ದಾಟಿ, ಹಳಗಾಲದ ಬಲವಾದ ಮರದ ಮೋಪು, ರೀಪು ಹಾಸಿದ ಸೇತುವೆಯ ಮೇಲೆ ಕಾಡುಮನೆ ಹಳ್ಳ ದಾಟಿದೆ. (ಎತ್ತಿನಹೊಳೆ ಯೋಜನೆಯಲ್ಲಿ ಎರಡು ಅಣೆಕಟ್ಟುಗಳು ಇದೇ ಹೊಳೆಯನ್ನು ಯಾವುದೋ ಹಂತದಲ್ಲಿ ಅಟಕಾಯಿಸಲಿದೆ ಎಂದು ನೆನಪಾಗದಿರಲಿಲ್ಲ.) ಚಾ ಕಾರ್ಖಾನೆಯಿದ್ದ ಪುಟ್ಟ ಗುಡ್ಡೆಯೊಂದನ್ನು ಮುಕ್ಕಾಲು ಬಳಸುತ್ತಲೇ ಗುಡ್ಡೆ ಏರಿ, ಕಛೇರಿ ತಲಪಿದೆ. ಅಲ್ಲಿ ನನ್ನ ನಿರೀಕ್ಷೆಗೆ ವಿರುದ್ಧವಾಗಿ, ಇನ್ನೂ ಹುಡುಗ ಪ್ರಾಯದ ಮ್ಯಾನೇಜರ್ – ಕಾರ್ಯಪ್ಪ ಭೇಟಿಯಾದರು. ಅವರ ಕೊಡವ ಹೆಸರಿನಿಂದ ಪ್ರೇರಣೆ ಪಡೆದು ನಾನು ನನ್ನ ಮಡಿಕೇರಿ ಪ್ರವರ ಬೆಳೆಸಿದೆ. ಏನಾಶ್ಚರ್ಯ, ಕುಟುಂಬ ಮೂಲದಲ್ಲಿ ಅವರಜ್ಜನೂ ನನ್ನಜ್ಜನೂ ಒಂದೇ ಗ್ರಾಮದವರು! ಮತ್ತೂ ದೊಡ್ಡದು ಅವರಪ್ಪ – ಸೇನೆಯ ನಿವೃತ್ತ ಕರ್ನಲ್, ಮಾದಪ್ಪನವರು ನನ್ನ ತಂದೆಯ ಪರೋಕ್ಷ ಶಿಷ್ಯ! (ಮೈಸೂರಿನಲ್ಲಿರುವ ಅವರನ್ನು ಸ್ವತಃ ಕಾರ್ಯಪ್ಪ ದೂರವಾಣಿಸಿ, ನನಗೂ ಮಾತಾಡಲು ಕೊಟ್ಟು ಪರಸ್ಪರ ಸಂತೋಷ ವೃದ್ಧಿಸಿದರು.) ಮತ್ತೆ ಅನುಮತಿ ಗಿನುಮತಿಯ ಔಪಚಾರಿಕತೆಗಳನ್ನು ಬದಿಗೊತ್ತಿ ಸುಂದರರಾಯರನ್ನೂ ಕರೆಸಿಕೊಂಡರು. ಕಾರ್ಯಪ್ಪ ಸ್ವತಃ ತನ್ನ ಬೈಕೇರಿ ನಮಗೆ ಅನೂಪನ ಕಾರ್ಯಕ್ಷೇತ್ರದತ್ತ ಮಾರ್ಗದರ್ಶನಕ್ಕಿಳಿದರು. ನಮ್ಮ ಎರಡೂಮುಕ್ಕಾಲು ಗಂಟೆಯ ಗೇಟಿನ ತಪಸ್ಸು ಫಲಪ್ರದವಾಗಿತ್ತು.

ಕಾರ್ಯಪ್ಪ ಸುಮಾರು ನಾಲ್ಕು ಕಿಮೀ ಉದ್ದಕ್ಕೆ ಚಾ ಹರಹುಗಳ ನಡುವೆ ಹಾವಾಡುವ ಡಾಮರು ದಾರಿಯಲ್ಲಿ ನಮ್ಮನ್ನು ಒಯ್ದರು. ಇನ್ನೊಂದು ದೊಡ್ಡ ತೊರೆ ಸಿಕ್ಕಲ್ಲಿಗೆ, ಹಳಗಾಲದ ಮತ್ತೊಂದೇ ಸೇತುವೆಗೆ ಡಾಮರು ಮುಗಿದಿತ್ತು. ಅಲ್ಲಿಗೆ ನಮ್ಮ ಹುಡುಕಾಟವೂ ಮುಗಿಯುವಂತೆ ಮಿತ್ರರ ಎರಡು ಬೈಕ್‌ಗಳು ರಸ್ತೆಯಂಚಿನಲ್ಲಿ ನಿಂತಿದ್ದುವು. ತುಸು ಆಚೆಗೆ ಆ ವಲಯದ ಕೂಲಿಗಳ ವಸತಿ ಸಾಲು. ಅದರ ಜಲನಿಧಿಗೆ ನೀರು ಪಂಪು ಮಾಡುತ್ತಿದ್ದ ವಿಜಯಕುಮಾರ್ ಎಂಬ ತರುಣ ಈಚೆ ಬಂದು ಮ್ಯಾನೇಜರ್ಗೆ ಸಲಾಂ ಕೊಟ್ಟ. ವಿಚಾರಿಸುವಾಗ, ನಮ್ಮ ಮಿತ್ರರು ಬೆಳಿಗ್ಗೆಯೇ ಬಂದು ಇದೇ ತೊರೆಗುಂಟ ಹೋಗಿದ್ದಾರೆ. ಒಂದು ಗಂಟೆ ಹೊತ್ತಿಗೆ ಒಬ್ಬಾತ ಮಾತ್ರ ಬೈಕೇರಿ ಎಲ್ಲೋ ಹೋಗಿ ಬಂದ ಹಾಗಿತ್ತು. (ಅನೂಪ್ ಸುಮನ್ ಪೋಷಕರಿಗೆ ದಾರಿ ತೋರಿಸಿ ಮರಳಿದ್ದಿರಬೇಕು.) ನಾವೂ ಬೈಕ್ ಅಲ್ಲೇ ಬಿಟ್ಟು, ನಮ್ಮಷ್ಟಕ್ಕೆ ಮಿತ್ರರನ್ನು ಹುಡುಕಿಕೊಳ್ಳುವ ಉತ್ಸಾಹದಲ್ಲೇ ಇದ್ದೆವು. ಆದರೆ ಕಾರ್ಯಪ್ಪ ವಿಜಯಕುಮಾರನನ್ನು ನಮಗೆ ಮಾರ್ಗದರ್ಶಿಯಾಗಿ ಹಚ್ಚಿ ವಾಪಾಸಾದರು.

ಪಶ್ಚಿಮಘಟ್ಟದಲ್ಲಿ ಕುದುರೆಮುಖ ಹಾಗೂ ಪುಷ್ಪಗಿರಿ ವನಧಾಮಗಳ ನಡುವೆ, ಅಂದರೆ ಇನ್ನೂ ಕೃಷಿ, ಅಭಿವೃದ್ಧಿಗಳ ಎಡೆಯಲ್ಲಿ ಪ್ರಾಕೃತಿಕವಾಗಿ ಉಳಿದುಕೊಂಡ ಜಲಮೂಲಗಳ ಮತ್ಸ್ಯ ಸಂಪತ್ತು ಮತ್ತು ಅವುಗಳ ಜಲಪರಿಸರ ನಮ್ಮ ಮಿತ್ರರ ಸಮೀಕ್ಷೆಯ ಪ್ರಧಾನ ಲಕ್ಷ್ಯ. (ಅಭಿವೃದ್ಧಿಯ ಕೊಳಕು ಕೈ ಕೆಡಿಸುವುದೂ ಇದನ್ನೇ.) ಅದಕ್ಕಾಗಿ ಅರಣ್ಯ ಇಲಾಖೆ ಹಾಗೂ ಖಾಸಗಿ ಜಮೀನು ಮಾಲಿಕರುಗಳಿಂದ ವಿವಿಧ ಅನುಮತಿ ಪತ್ರಗಳನ್ನು ಮಾಡಿಸಿಕೊಳ್ಳ ತೊಡಗಿದರು. ಆಗ ಕೆಲಸಕ್ಕೆ ಮೊದಲು ಒಲಿದದ್ದು ಬಿಸಿಲೆ. ಅನೂಪ್, ಸುಮನ್ ಅಲ್ಲಿ ಕೆಲವು ಸಮಯ ಕೆಲಸ ಮಾಡುತ್ತಿದ್ದಂತೆ ಹಿಂಬಾಲಿಸಿ ಬಂತು ಕಾಡುಮನೆಯ ಅನುಮತಿ. ಆಗ ಇನ್ನೋರ್ವ ಮಿತ್ರ (ಕಪ್ಪೆ ಶಿಬಿರ ಭಾಗಿ) ಶಿಶಿರ್‌ಗೆ ಬಿಸಿಲೆ ಕೆಲಸ ಮುಂದುವರಿಸಲು ಬಿಟ್ಟು ಇವರಿಬ್ಬರು ಕಾಡುಮನೆಗೆ ಬಂದಿದ್ದರು. ಹಾಗೇ ಹೆಚ್ಚುವರಿ ಸಮೀಕ್ಷಕನಾಗಿ ಇನ್ನೋರ್ವ ಗೆಳೆಯ ಸಿದ್ಧಾರ್ಥ್ ಇವರಲ್ಲಿಗೆ ಬಂದು ಸೇರಿಕೊಂಡಿದ್ದ.

ವಿಜಯಕುಮಾರ್ ಮೊದಲು ಕೂಗು ಹಾಕಿ ನೋಡಿದ. ಅನೂಪ್ ಬಳಗದ ಪ್ರತಿಕೂಗೇನೂ ಕೇಳಿಸಲಿಲ್ಲ. ಹಾಗಾಗಿ ತೊರೆಗಿಳಿದು ವಿಳಂಬಿಸುವುದು ಬೇಡವೆಂದು, ತುಸು ಮೇಲೆ, ನಡಿಗೆಗೆ ಹಸನಾಗಿಯೇ ಇದ್ದ ಕಚ್ಚಾದಾರಿಯಲ್ಲೇ ಒಯ್ದ. ಆಗೀಗ ಕೂಗು ಹಾಕುತ್ತಾ ಅಲ್ಲಿಲ್ಲಿ ತೊರೆ ಪಾತ್ರೆಗೇ ಇಳಿದು ನೋಡುತ್ತಾ ತೊರೆಯ ಮುಂದಿನೊಂದು ಸಂಗಮದವರೆಗೂ ಚುರುಕಾಗಿಯೇ ಹೋದೆವು. ಮರುಕೂಗು, ತೊರೆಯ ಪಾತ್ರೆಯಲ್ಲಿ ಗೆಳೆಯರು ಓಡಾಡಿದ ಹೆಜ್ಜೆಗುರುತಿನ ಕುರುಹು ಸಿಗದೇ ಹುಡುಕಾಟ ವಿಸ್ತರಿಸುತ್ತಲೇ ಇದ್ದೆವು.

ಕಾಡುಮನೆ ಚಾ ತೋಟಕ್ಕೆ ಖ್ಯಾತವಾದರೂ ಒಂದು ಕಾಲದಲ್ಲಿ ಇಲ್ಲೂ ಸಾಕಷ್ಟು ಕಾಫಿಹೂವಿನ ಪರಿಮಳವೂ ಒಳ್ಳೆಮೆಣಸಿನ ಘಾಟೂ ಹೊಡೆಯುತ್ತಿತ್ತಂತೆ. ಆದರೆ ಇಂದು ಸಾರ್ವತ್ರಿಕ ಸಮಸ್ಯೆಯಾಗಿರುವ ಕೂಲಿಕಾರರ ಅಭಾವದಲ್ಲಿ ಚಾ ತೋಟ ಮಾತ್ರ ಊರ್ಜಿತಲ್ಲುಳಿದಿದೆಯಂತೆ. ಬಹುಶಃ ಹಾಳುಬಿಟ್ಟ ಕಾಫಿ ಮತ್ತಿತರ ಕೃಷಿಭೂಮಿ (ನಮಗೆ ಕಾಣಲು ಸಿಗಲಿಲ್ಲ) ಅಲ್ಲದೆ ಕಾಡುಮನೆ ವ್ಯಾಪ್ತಿಯೊಳಗೆ ಬರುವ ವನ್ಯಸಂಪತ್ತು (ವನ್ಯವೆಂದರೆ ಬರಿಯ ಸಸ್ಯವಲ್ಲ, ಪ್ರಾಕೃತಿಕ ಪರಿಸರದೊಳಗಿನ ಎಲ್ಲಾ ಜೀವಾಜೀವಗಳು ಎನ್ನುವುದು ಮರೆಯಬೇಡಿ) ಡಾಮರುದಾರಿ ಮುಗಿದು ನಾವು ನಿಂತಲ್ಲಿಂದ ಮುಂದೆ ವ್ಯಾಪಿಸಿರಬೇಕು. ತೊರೆಯಲ್ಲಿ ನೀರು ವಿಶೇಷವಿರಲಿಲ್ಲವಾದರೂ ಪಾತ್ರೆ ಸಾಕಷ್ಟು ವಿಸ್ತಾರವಾಗಿಯೇ ಇತ್ತು. ಜಲಧಾರೆಯ ಸಾಮೀಪ್ಯದಲ್ಲಿ ವಾಟೆಯ ದಟ್ಟಣೆ, ದೂರಸರಿದಂತೆ ಸಹಜ ಮರ ಪೊದರುಗಳ ಕಾಡೇನೋ ಇತ್ತು. ಆದರೆ ಪ್ರಾಚೀನತೆಯನ್ನು ಸಾರುವ ಭಾರೀ ಮರಗಳಾಗಲೀ ನಾಗರಿಕ ಬಳಕೆಯನ್ನು ನಿರಾಕರಿಸುವಷ್ಟು ಹಸುರಿನ ದಟ್ಟಣೆಯಾಗಲೀ ಇರಲಿಲ್ಲ. ಎರಡು ದಿನದ ಹಿಂದೆ ಅಲ್ಲಿ ಭಾರೀ ಮಳೆಯಾಗಿದ್ದುದರಿಂದ ತೊರೆ ಪಾತ್ರೆಯಲ್ಲಿ ಸಣ್ಣದಾಗಿ ಜಿಗಣೆಗಳೂ ಚಿಗುರಿಕೊಂಡಿದ್ದುವು.

ತೊರೆ ಎಡಕ್ಕುಳಿಸಿದಂತೆ ಸಾಗುತ್ತಿದ್ದ ಕಚ್ಚಾದಾರಿಯ ಬಲಬದಿಯ ಗುಡ್ಡೆಗಳಲ್ಲಿ ಅಕೇಸಿಯಾ ನಾಟಿಯಾದದ್ದೂ ಬೆಂಕಿ ಬಿದ್ದು ನಾಶವಾದದ್ದೂ ಕಾಣುತ್ತಿತ್ತು. ಸುಮಾರು ಒಂದು ಗಂಟೆಯ ಚಾರಣಾನಂತರ ಮುಖ್ಯ ತೊರೆಯೊಂದರ ಸಂಗಮಸ್ಥಾನಕ್ಕೆ ಮುಂದುವರಿಯುವುದನ್ನು ನಿಲ್ಲಿಸಿದೆವು. ಅಲ್ಲಿ ಪ್ರತ್ಯೇಕವಾಗಿ ಎರಡು ಕಡೆ ಯಾವುವೋ ಗೊರಸಿನ ಪ್ರಾಣಿಗಳನ್ನು ಯಾವುವೋ ಮಾಂಸಾಹಾರಿ ಪ್ರಾಣಿಗಳು ತಿಂದುಬಿಟ್ಟ ಅವಶೇಷಗಳು ಕಾಣಸಿಕ್ಕವು. ವಿಜಯಕುಮಾರ್ ಆಗೀಗ ಆನೆ ದರ್ಶನವಾಗುತ್ತದೆ. ಕಳೆದ ವರ್ಷ ಒಬ್ಬ ಕೂಲಿಯವನನ್ನೂ ಕೊಂದು ಹಾಕಿದೆ ಎಂದೇ ಹೇಳಿದ. ಆದರೆ ಉದ್ದಕ್ಕೂ ನಮಗೆ ಸಿಕ್ಕ ಆನೆಯ ಕುರುಹುಗಳು (ಮುಖ್ಯವಾಗಿ ಲದ್ದಿಮುದ್ದೆಗಳು ಮತ್ತು ವಾಟೆ ಹಿಂಡಲಿನ ಹುಡಿ ಮಾಡಿದ ದೃಶ್ಯ) ತುಂಬ ಹಳೆಯವೇ ಆಗಿದ್ದುವು.

ಸಂಜೆಗತ್ತಲು ಒತ್ತುತ್ತಿತ್ತು. ಮತ್ತೆ ಮಳೆಯಾಗುವ ಸೂಚನೆಗಳೂ ಸಾಕಷ್ಟಿದ್ದುದರಿಂದ ನಾವು ವಾಪಾಸು ಹೊರಟೆವು. ಗೆಳೆಯರಾದರೂ ಇದನ್ನು ಮೀರಿದ ದೂರಕ್ಕೆ ಹೊಗುವುದು ಅಸಾಧ್ಯವೆಂದೇ ಕಂಡದ್ದರಿಂದ ಈ ಬಾರಿ ಪೂರ್ತಿ ತೊರೆಯಲ್ಲೇ ನಡೆಯುತ್ತ ಬಂದೆವು. ಅದು ನಿಜವೂ ಆಗಿ, ಬಹುಬೇಗನೇ ಅವರನ್ನು ಕಂಡದ್ದೂ ಆಯ್ತು. ಗೆಳೆಯರು ತೊರೆಯ ಜಾಲಾಟದಲ್ಲಿ ನಿರತರಾಗಿದ್ದರು. ತೊರೆಯ ಕಲರವದ ಸಾಮೀಪ್ಯದಲ್ಲಿ ಅವರಿಗೆ ನಮ್ಮ ಕೂಗು ಕೇಳಿಸಿಯೇ ಇರಲಿಲ್ಲ. ಅನೂಪರನ್ನು ಕಾಣುತ್ತಿದ್ದಂತೆ ನನಗೆ ಹುಸಿಕೋಪ ಕೆಂಡಾಮಂಡಲವಾಗಿ ಕೆರಳಿ, ರಾಜದ್ರೋಹಿಗೆ ನೀರಿಲ್ಲದ ಜಾಗದಲ್ಲಿ ತತುಕ್ಷಣವೇ ತಲೆದಂಡವನ್ನೇ ಘೋಷಿಸಿದೆ. (ಅಲ್ಲಿ ತೊರೆಯಿದ್ದುದರಿಂದ ನನ್ನ ಶಿಕ್ಷೆ ಜ್ಯಾರಿಯಾಗಲೇ ಇಲ್ಲ!) ಅನೂಪ್ ನಿತ್ಯದ ಕೆಲಸ, ಸುಮನ್ ತಂದೆ ತಾಯಿಯರ ಭೇಟಿ ಮತ್ತು ಒಂದು ದಿನದ ಒಡನಾಟ, ಕೊನೆಯಲ್ಲಿ ಬೀಳ್ಕೊಡುಗೆಗಳ ಉದ್ದಕ್ಕು ನನ್ನ ಬರೋಣವನ್ನೂ ಸಂಭ್ರಮದಲ್ಲಿ ಹೇಳಿಕೊಳ್ಳುತ್ತಿದ್ದರಂತೆ. ಸುಮನ್ ಮುಗ್ದವಾಗಿ ಈ ಕಾಡುಮೂಲೆಗೆ ಅವರು ಹೇಗೆ ಬಂದಾರು ಎಂದಾಗೆಲ್ಲ ಅನೂಪ್ ‘ಅಶೋಕ-ಮಹಿಮೆ ಅಪಾರ’ ಎಂದೇ ಕೊಂಡಾಡಿದ್ದರಂತೆ. ಆದರೆ ತಾನು ಅನುಮತಿ ಮಾಡಿಸಿಕೊಡಬೇಕು, ಮಾರ್ಗದರ್ಶನ ನೀಡಬೇಕು, ಚರವಾಣಿಯೋ ಇನ್ನೊಂದೋ ಸಂಪರ್ಕ ವ್ಯವಸ್ಥೆ ಆ ಬೆಟ್ಟದ ಕಿಬ್ಬಿಗೆ ಇಲ್ಲ ಎಂಬಿತ್ಯಾದಿ ಕನಿಷ್ಠಾವಶ್ಯಕತೆಗಳನ್ನು ಯೋಚಿಸಿಯೇ ಇರಲಿಲ್ಲ! ಲಾರಿ ತುಂಬಾ ಸಾರಿ, ಅಗತ್ಯಕ್ಕೂ ಹೆಚ್ಚಿಗೆ “ಗ್ಲ್ಯಾಡ್ ಟು ಹ್ಯಾವ್ ಯೂ”ಗಳ ವಿನಿಮಯವಾದ ಮೇಲೆ ಎಲ್ಲರು ಸಮಾಧಾನರಾಗಿ, ಕೆಲಸಕ್ಕೆ ಮರಳಿದೆವು.

ಅನೂಪ್ ಕಲಿತದ್ದು ಎಂಜಿನಿಯರಿಂಗ್, ಸಹಜ ತುಡಿತ ಜೀವಲೋಕದ್ದು. ಪರಿಸ್ಥಿತಿಯನ್ನು ಹಳಿದುಕೊಂಡು ಐಶಾರಾಮಗಳ ಅಮಲು ಸ್ವೀಕರಿಸದೇ ಮತ್ತೆ ವಿದ್ಯಾರ್ಥಿತನ ಬಯಸಿದರು. ಉಲ್ಲಾಸ್ ಕಾರಂತ್ ಆದಿಯಾಗಿ (ಮುಖ್ಯವಾಗಿ) ನಮ್ಮ ದೇಶದ ವನ್ಯವಿಜ್ಞಾನಿಗಳೇ ಬೆಂಗಳೂರು ಕೇಂದ್ರಿತವಾಗಿ ಎರಡು ವರ್ಷಕ್ಕೊಮ್ಮೆ ಮಾತ್ರ, ಅದೂ ಅಪ್ಪಟ ಯೋಗ್ಯತಾವಂತರನ್ನಷ್ಟೇ ಆಯ್ದು ನಡೆಸುವ ವನ್ಯಜೀವವಿಜ್ಞಾನದ ಉನ್ನತ ಪದವಿಯನ್ನು ಅನೂಪ್ ಸಿದ್ಧಿಸಿಕೊಂಡರು. ಮೂಲತಃ ಔಪಚಾರಿಕ ವಿಜ್ಞಾನ ಸ್ನಾತಕಿ (ಬಿಎಸ್ಸಿ) ಸುಮನ್. ಆದರೆ ಅಷ್ಟರಲ್ಲೇ ವನ್ಯಜೀವಿ ವಿಜ್ಞಾನದ ಒಲವು ಹೆಚ್ಚಿದ್ದಕ್ಕೆ ಅನೂಪರ ಸಹಪಾಠಿಯಾಗಿಯೇ ವಿಕಸಿಸಿದಾಕೆ. ಸಿದ್ಧಾರ್ಥ್ ಡೆಹ್ರಾಡೂನಿನ ವನ್ಯ ವಿಜ್ಞಾನ ಸಂಸ್ಥೆಯ ಉನ್ನತ ಪದವೀಧರ. ಈತನಿಗೆ ಸಸ್ಯಗಳ ಒಲವು ಒಂದು ಕೈ ಹೆಚ್ಚು ಎಂದೇ ಅನೂಪ್ ನಂಬಿಕೆ.

ಈ ಗೆಳೆಯರ ಬಳಗ (ಬಿಸಿಲೆಯ ಶಿಶಿರ್ ಕೂಡಾ ಸೇರಿದಂತೆ) ವನ್ಯ ಪದವಿಯನ್ನು ವೃತ್ತಿಭದ್ರತೆಗೆ ಪರವಾನಗಿಯಾಗಿ ಗಿಟ್ಟಿಸಿಕೊಂಡವರಲ್ಲ, ಹೆಚ್ಚಿನ ಸಂಶೋಧನೆ ಮತ್ತು ತಿಳುವಳಿಕೆಗೆ ರಹದಾರಿ ಎಂದು ಗಳಿಸಿಕೊಂಡವರು. ಸಹಜವಾಗಿ ಕೆಲಸಕ್ಕೆ ಬೇಕಾದ ವೈಜ್ಞಾನಿಕ ಸಲಕರಣೆಗಳೆಲ್ಲದರ ಜೊತೆಗೆ ಕಗ್ಗಾಡಮೂಲೆಯ ಊಟ ವಾಸಕ್ಕೆ ಬೇಕಾದ್ದೆಲ್ಲವನ್ನೂ ಹೇರಿಕೊಂಡು ಬಂದು ‘ಕಾಡುಮನೆ ಸೇರಿದ್ದರು! ತೋಟದವರ ಔದಾರ್ಯದಲ್ಲಿ ಅಲ್ಲೇನೋ ಭರ್ಜರಿ ಬಂಗ್ಲೆಯೇ ಸಿಕ್ಕಿದೆ. ಇಲ್ಲವಾದರೆ ಗುಡಾರ ಹೊಡೆದು, ಆತ್ಮರಕ್ಷಣೆ, ಪೋಷಣೆಗಳೊಂದಿಗೆ ನಿರ್ವಂಚನೆಯ ಸಮೀಕ್ಷೆ ನಡೆಸಬಲ್ಲ ಛಲ, ಧೀಮಂತಿಕೆ ಇವರ ಸೊತ್ತು. ಅವರ ಸಂಶೋಧನೆಯ ಪೂರ್ಣ ಆಯಾಮ, ಬೆಂಬಲಿಸಿದ ಮತ್ತು ಸಹಕರಿಸಿದ ಸಂಸ್ಥೆಗಳ ಬಗ್ಗೆ ಪ್ರಚಾರ ಸಾಹಿತ್ಯ ಬರೆಯುವುದು ನನ್ನ ಉದ್ದೇಶ ಖಂಡಿತಾ ಅಲ್ಲ. ನಮ್ಮ ತಿಳುವಳಿಕೆಯ ಮಿತಿಯೇ ಜ್ಞಾನದ ಪರಿಧಿ. ಕನಿಷ್ಠ ನೂರು ವರ್ಷದ ಹಿಂದಿನ ಸರ್ವೇಕ್ಷಣಾ ಜ್ಞಾನ ಸಿದ್ಧಪಡಿಸಿದ ನಕ್ಷೆಗಳ ನಮೂದುಗಳೇ ಸಾರ್ವಕಾಲಿಕ ಸತ್ಯ. ಹೀಗೆಲ್ಲಾ ವಂಚಿಸುವವರನ್ನು ನಗಣ್ಯ ಮಾಡುವ ಇಂದಿನ ಸತ್ಯದೆಡೆಗೆ ಈಜುವವರಿದ್ದಲ್ಲಿಗೆ ಹೋಗಿ ಒಂದು ಉತ್ತೇಜನಕಾರಿ ಶಿಳ್ಳೇ ಹಾಕುವುದು, ಒಂದು ಸಶಬ್ದ ಬೆನ್ನ ಚಪ್ಪರಿಕೆ, ಒಂದು ಪೂರ್ಣ ಗಂಟಲಿನ ಭಲೆ ಕೊಡುವುದಷ್ಟೇ ಈ ಬರೆಹದ ಆಶಯ. ಜಾಹೀರಾತೇ ಕೆಲಸವೆಂದು ಮೆರೆಯುತ್ತಿರುವವರ ನಡುವೆ (ಕದ್ದಾದರೂ ಸುದ್ದಿಗೆ ಬೀಳಬೇಕು!), ಅರ್ಥಪೂರ್ಣ ಸಮಾಜ ಸೇವೆ ಮಾಡುತ್ತಿರುವವರನ್ನು ಸಣ್ಣದಾಗಿಯಾದರೂ ಪರಿಚಯಿಸಬೇಕೆಂದು ಇಷ್ಟು ಬರೆದಿದ್ದೇನೆ. [ಜಿ.ಎಸ್. ಪರಮಶಿವಯ್ಯನವರಿಗೆ ಟೋಪೋಶೀಟ್ (ಸರ್ವೇಕ್ಷಣಾ ನಕ್ಷೆ) ಪರಿಣತ ಎನ್ನುವ ಇನ್ನೊಂದು ಖ್ಯಾತಿಯೂ ಇತ್ತು. ದುರಂತವೆಂದರೆ ಇವರ ನೀರಾವರಿ ತಜ್ಞತೆ ಟೋಪೋಶೀಟ್‌ಗಳಿಂದ ಹೊರಗೆ ಹರಿಯಲೇ ಇಲ್ಲ. ಅಂದಿನ ‘ವೇಸ್ಟ್ ಲ್ಯಾಂಡ್ಗಳು ಇಂದು ಶೋಲಾ ಕಾಡು ಎಂಬ ಅತ್ಯದ್ಭುತ ವ್ಯವಸ್ಥೆಯ ಬಹುಮುಖ್ಯ ಅಂಗ. ಅಂದಿನ ದುಷ್ಟಮೃಗ ಹುಲಿ ಇಂದು ಸ್ವಸ್ಥ ಜೀವ ಪಿರಮಿಡ್ಡಿನ ಸುಂದರ ಶೃಂಗ. ಅಂದಿನ ವಿಷಜಂತು ಹಾವು, ಕೊಳಕು ಕಪ್ಪೆ, ಯಃಕಶ್ಚಿತ್ ಗುಬ್ಬಚ್ಚಿ, ಕಾಗೆ, ಚಿಟ್ಟೆ, ಇರುವೆ ಎಂದು ಹೆಸರಿಸ ಹೊರಟರೆ ಮುಗಿಯದ ಪಟ್ಟಿಯ ಜೀವಾಜೀವಗಳಲ್ಲಿ ಒಂದು ನಶಿಸಿದರೂ ಇಂದು ಜೀವ ಸರಪಳಿಯ ಮುಖ್ಯ ಗೊಣಸೇ ಕಡಿದಂತೆ, ಮನುಷ್ಯನ ದೊಡ್ಡ ಹೆಜ್ಜೆ ಗೋರಿಯೆಡೆಗೆ ಜಾರಿದಂತೆ. ನಮ್ಮ ಕೆಲಸ ಅನ್ನಿ, ಜನಪ್ರಿಯ ಭಾಷೆಯಲ್ಲಿ ಹೋರಾಟ ಎಂದೇ ಹೇಳಿ, ಪರಮಶಿವಯ್ಯನಂಥ ಒಬ್ಬ ವ್ಯಕ್ತಿಯ ವಿರುದ್ಧ ಇರಲೇ ಇಲ್ಲ. ಮೇಲೆ ಹೆಸರಿಸಿದ ಪ್ರಾಕೃತಿಕ ದ್ರೋಹಗಳನ್ನು ಸಮರ್ಥಿಸಿದ ಆಡಳಿತಗಾರರು, ವಿಜ್ಞಾನಿಗಳನ್ನೇ ಉದ್ದೇಶಿಸಿತ್ತು. ದೊಂಬಿ, ಬೊಬ್ಬೆ ಅಲ್ಲ, ಕೇವಲ ಸತ್ಯಗಳ ಅನಾವರಣ]

ಮೊದಲೇ ಹೇಳಿದಂತೆ ಅನೂಪ್ ಬಳಗ ಮೀನುಗಳ ಸಮೀಕ್ಷೆ ನಡೆಸಿತ್ತು. ನೇತ್ರಾವತಿ ಜಲಾನಯನ ಪ್ರದೇಶದ ಪ್ರತಿ ತೊರೆಯ ವನ್ಯಸ್ಥಿತಿಯ ಉದ್ದಕ್ಕೂ ಪಶ್ಚಿಮ ಘಟ್ಟದ ವನ್ಯವನ್ನು ಉದ್ದೇಶಿಸಿದ ಸ್ವತಂತ್ರ ವೈಜ್ಞಾನಿಕ ಸಮೀಕ್ಷೆಯಲ್ಲಿ ಸದ್ಯ ಮತ್ಸ್ಯ ಪರಿಸರವನ್ನಷ್ಟೇ ಇವರು ಲಕ್ಷ್ಯವನ್ನಾಗಿಸಿಕೊಂಡಿದ್ದರು. ಅವರ ಬಿಡಾರದಲ್ಲಿ ಗೋಡೆಯ ಮೇಲೆ ಆ ವಲಯದ ಮುಖ್ಯ ತೊರೆಯಿಂದ ತೊಡಗಿ ಹೆಸರಿರುವ, ಇಲ್ಲದ ಪ್ರತಿ ತೊರೆಯ ಜಲಮೂಲದವರೆಗೆ ಜಾಡು ಗುರುತಿಸಿದ ಎರಡಾಳೆತ್ತರದ ನಕ್ಷೆ (ಉಪಗ್ರಹದ ಸಹಕಾರದಿಂದ ಮಾಡಿದ್ದು) ತಗುಲಿಸಿದ್ದರು. ಇವರು ಕ್ರಮವಾಗಿ ಒಂದೊಂದೇ ತೊರೆಯ ಸಮೀಕ್ಷೆ ಮುಗಿಸುತ್ತ ದಿನದ ಕೊನೆಗೆ ನಕ್ಷೆಯಲ್ಲೂ ಅನ್ಯ ಕ್ರಮಗಳಲ್ಲೂ ಗ್ರಹಿಸಿದ ವಿವರಗಳನ್ನು ದಾಖಲಿಸುತ್ತ ಬರುತ್ತಿದ್ದರು. ಸಂಕ್ಷಿಪ್ತವಾಗಿ ಆ ಸಂಜೆ ನಾವು ಕಂಡ ಅವರ ಕಲಾಪವನ್ನಷ್ಟೇ ಹೇಳುವುದಿದ್ದರೆ…

ತೊರೆಪಾತ್ರೆಗಿಳಿದಲ್ಲಿಂದ ಮೇಲೇರುವವರೆಗೆ ಹಿಡಿದ ಜಿಪಿಎಸ್ ಇವರ ಪಥ ವ್ಯಾಪ್ತಿಯಲ್ಲಿ ಕೊರತೆ ಬಾರದಂತೆ ನೋಡಿಕೊಳ್ಳುತ್ತದೆ. ಮತ್ತೆ ತೊರೆಯಲ್ಲೇ ನಡೆಯುತ್ತ, ಪ್ರತಿ ನೂರು ಮೀಟರಿಗೊಮ್ಮೆ ತಂಡ ಸಮೀಕ್ಷೆಗೆ ನಿಲ್ಲುತ್ತಿತ್ತು (ಬಲಿ ಹೊರಟ ಉತ್ಸವಮೂರ್ತಿಗೆ ಕಟ್ಟೆಪೂಜೆ ಇದ್ದ ಹಾಗೆ!). ಅಲ್ಲಿನ ಸುಮಾರು ಇಪ್ಪತ್ತು ಮೀಟರ್ ಜಲವಲಯದಲ್ಲಿ ಅಗತ್ಯವಿದ್ದಷ್ಟು ಬಾರಿ ಬಲೆ ಬಿಡಿಸಿ, ಒಬ್ಬಿಬ್ಬರು ಹಿಡಿದುಕೊಳ್ಳುತ್ತಿದ್ದರು. ಇತರರು ಅಲ್ಲೇ ಮೇಲಿನಿಂದ ಮೂಲೆಮೊಡಕುಗಳೆಲ್ಲವನ್ನು ತಡಕಿ ‘ಬೇಟೆ ಎಬ್ಬಿಸುತ್ತಿದ್ದರು. ನಾವು ಕಂಡಂತೆ ಕೊನೆಯಲ್ಲಿ, ಸಿದ್ಧಾರ್ಥ್ ಮತ್ತು ಸಹಾಯಕ ನೀರು ಸೋಸಿ ಬಲೆಯ ಅಂಚುಗಳನ್ನು ಎತ್ತಿದರು. ಮತ್ತೆ ಬಲೆಯ ತಳವನ್ನು ಆಗೀಗ ತುಸು ನೀರಿಗೆ ಒಡ್ಡುತ್ತಾ ಕಸ ಕಡ್ಡಿ ಬಿಟ್ಟು ಮೀನುಗಳನ್ನಷ್ಟೇ ಬಲೆಯಿಂದ ಹೆಕ್ಕುತ್ತಾ (ಜೀವಹಾನಿ, ಊನವಾಗದಂತೆ ಎಚ್ಚರದೊಡನೆ) ಮೀನಿನ ಹೆಸರು, ಗಾತ್ರ ಹೇಳುತ್ತ ಮತ್ತೆ ನೀರಿಗೆ ಬಿಡುತ್ತಿದ್ದರು. ಸುಮನ್ ಎಲ್ಲವನ್ನು ಸೂಕ್ತ ಟಿಪ್ಪಣಿ ಹಾಳೆಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದಳು. ಇದ್ ಭವಾನಿಯಾ. ಅದ್ ಸಾಮಾನ್ಯ ಜಲಪಾತದ ಎತ್ತರಕ್ಕೂನೂ ನೀರೆದ್ರು ಈಜು ಹೊಡ್ಯತ್ತೆ. ಈ ಬಣ್ಣ ಕಂಡ್ರೇ ಸಿಟಿ ಅಕ್ವೇರಿಯಮ್ ಕಲೆಕ್ಟರ್ಸ್‌ಗಳೇನಿಲ್ಲ ನೋಟುಗಳ ಲೆಕ್ಕಾನೇ ಮರ್ತ್ ಬಿಡ್ತಾರೆ… ಎಂದು ಬಿಟ್ಟು ಬಿಟ್ಟು ಅನೂಪ್ ವೀಕ್ಷಕ ವಿವರಣೆಯನ್ನು ನಮ್ಮ ತರಂಗಾಂತರಕ್ಕೆ ಪ್ರಸರಿಸುತ್ತಲೇ ಇದ್ದರು.

ಅನೂಪ್ ಅಲ್ಲೇ ವಾಟೆ ಹಿಂಡಿನೊಂದು ನೆರಳಿನಲ್ಲಿ ಹಡಪ ಬಿಚ್ಚಿಕೊಂಡು ನೀರಿನ ಪರೀಕ್ಷೆ ನಡೆಸುತ್ತಾ ಇದ್ದರು. ಏನೋ ಮಾಪಕವೊಂದನ್ನು ಹರಿನೀರಿನಲ್ಲಿ ಹಿಡಿದು ಅಂಕಿಗಳನ್ನು ದಾಖಲಿಸಿಕೊಂಡರು. ಆಗೊಮ್ಮೆ ಪ್ರಣಾಳಕ್ಕೆ ಬಿಡಬೇಕಾಗಿದ್ದ ಒಂದು ಹನಿ (೨ ಮಿಮೀ) ಆಮ್ಲವನ್ನು ತನ್ನ ಕೈಯಲ್ಲಿದ್ದ (ಕಲ್ಲು ಜಜ್ಜಿಯೋ ಮುಳ್ಳುಗೀರಿಯೋ ಆಗಿದ್ದ) ಗಾಯಕ್ಕೆ ಗುರಿತಪ್ಪಿ ಹಾಕಿಕೊಂಡು ಬೊಬ್ಬೆ ಹೊಡೆದದ್ದೂ ಆಯ್ತು. ಅವರು ದಡಬಡ ಧಾವಿಸಿ ಹೊಳೆನೀರಿನಲ್ಲಿ ಕೈ ಮುಳುಗಿಸಿ ಉಸ್ಸಪ್ಪಾ ಎನ್ನುವಾಗ ನಮಗೆ ಹೋದ ಜೀವ ಬಂದ ಹಾಗಾಗಿತ್ತು. (ಬಿಸಿಲೆಯಲ್ಲಿದ್ದ ಶಿಶಿರ್ ಪಿಪೆಟ್ಟಿನಲ್ಲಿ ಇದೇ ಆಮ್ಲವನ್ನು ಎಳೆಯುವಾಗ ಬಾಯಿಗೇ ಬಂದು, ಎರಡು ದಿನ ನಿರಾಹಾರ ಶಿಕ್ಷೆ ಅನುಭವಿಸಿದ್ದರಂತೆ!) ಇಲ್ಲಿ ಎಲ್ಲ ಮೀನಿನಂತೆ ನುಣ್ಣಗೆ, ನೀರಿನಂತೆ ಜಾರಿಕೆಯಲ್ಲ. ಕೊರಕಲು, ಮುಳ್ಳುಗಳಿಂದ ಕನಿಷ್ಠ ಗೀರುಗಾಯ, ಜಾರು ಗುದ್ದುಗಳ ಮೂಕನೋವು, ಬಾಗುಬಳಕು ನಡಿಗೆಯ ಸುಸ್ತು ದಿನಪೂರ್ತಿ ಇದ್ದದ್ದೇ. ದಿನದ ಬಹ್ವಂಶ ಶೀತಲ ನೀರಿನ ಒಡನಾಟದಿಂದ ಬಟ್ಟೆಯೂ ಸಾಕಷ್ಟು ಚಂಡಿಯಾಗುವುದರೊಂದಿಗೆ ಚಳಿ, ಜಿಗಣೆ, ದಿನಗಳು ಕಳೆದಂತೆ ಬೆರಳು ಸಂದಿ ಕರಗುವುದು ಇತ್ಯಾದಿ. ಇನ್ನು ತರಗೆಲೆ ಕಾಡು ದಾಟುವಾಗ ಚಿಗಟ ಹತ್ತಿದರಂತೂ ಮುಗಿಯಿತು, ದಿನಗಟ್ಟಲೆ (ರಾತ್ರಿ ನಿದ್ರೆಯಲ್ಲೂ) ತುರಿಸಿಕೊಳ್ಳಲು ಸಾಕಷ್ಟು ಕೆಲಸ ಇದ್ದದ್ದೇ.

ಹಗಲ ಬೆಳಕು ಸಾಕಷ್ಟು ಉಳಿದಂತೇ ನಾವು ಬೈಕ್ ಏನೋ ಸೇರಿಕೊಂಡೆವು. ಆದರೆ ಮತ್ತಿನ ದಾರಿಯದು ಹೇಳಹೋದರೆ ಪ್ರತ್ಯೇಕ ದೊಡ್ಡ ಕತೆ. ದಪ್ಪ ದಪ್ಪ ಕಾಡುಕಲ್ಲುಗಳನ್ನು ಒತ್ತೊತ್ತಾಗಿ ಜೋಡಿಸಿ, ಬಿಗಿ ಮಾಡಿದ್ದು ಜೀಪು ಲಾರಿಗಳಿಗೆ ಸರಿ. ಬೈಕ್ ಸವಾರಿ ಸಾಕೋ ಸಾಕು. ಅದರ ಎಡೆಯಲ್ಲಿ ಅನೂಪ್‌ಗೆ ತಡವಾಗಿ ಕಾಡುಮನೆಯ ಪ್ರೇಕ್ಷಣೀಯ ಸ್ಥಳ – ದೊರೆಗುಂಡಿ, ತೋರಿಸುವ ಉತ್ಸಾಹ. ಇನ್ನೇನು ವಾಸದ ಬಂಗ್ಲೆ ಸಮೀಪಿಸಿತೆನ್ನುವಾಗ ಮತ್ತೆ ವಾಪಾಸು ಎರಡು ಕಿಮೀ ಅದೇ ಕಚ್ಚಾ ಸವಾರಿ ಮಾಡಿ ನೋಡಿ ಬಂದೆವು. ನಿಬಿಡ ಕಾನನಾಂತರದಲ್ಲಿ ಕಡುಗಪ್ಪು ನೀರಿನಂತೆಯೇ ಭಾಸವಾಗುವ ಅಪ್ಪಟ ಕಾಡ ತೊರೆಯೊಂದರ ಆಳದ ಮಡು. ಅಂಚಿನಲ್ಲಿ ಕಾಡುಮನೆ ಪ್ರವಾಸಧಾಮದ ಅತಿಥಿಗಳಿಗೆ ಬೇಕಾದ ತತ್ಕಾಲೀನ ವ್ಯವಸ್ಥೆಗಳು.

ಸುಮಾರು ನಾಲ್ಕು ಕಿಮೀ ಕಚ್ಚಾ ದಾರಿಯ ಕೊನೆಯಲ್ಲಿನ ಬಂಗ್ಲೆ ಮಾತ್ರ ವನ್ಯ ಆಸಕ್ತಿಯವರಿಗೆ ತುಸು ಹೆಚ್ಚೇ ಅನ್ನುವಂತೆ ಅನುಕೂಲವಾಗಿತ್ತು. ವಿದ್ಯುತ್, ನಲ್ಲಿ ನೀರೆಲ್ಲ ಇದ್ದ ನಾಲ್ಕು ವಿಸ್ತಾರ ವಾಸಕೋಣೆಗಳಲ್ಲದೆ, ಭಾರಿ ನಡು, ಅಡುಗೆ, ದಾಸ್ತಾನು, ಊಟ, ಸ್ನಾನೇತ್ಯಾದಿ ಎಲ್ಲಕ್ಕೂ ಆಧುನಿಕ ಸವಲತ್ತುಗಳ ಕೋಣೆಗಳು. ಎರಡು ದಿನದ ಹಿಂದಿನ ಭೀಕರ ಮಳೆಯಿಂದ ಹೋಗಿದ್ದ ವಿದ್ಯುತ್ ಸಂಪರ್ಕ ಇನ್ನೂ ಬಂದಿರಲಿಲ್ಲವೆಂಬ ತತ್ಕಾಲೀನ ಕೊರತೆ ಬಿಟ್ಟರೆ ದೂರುವಂತದ್ದೇನೂ ಇರಲಿಲ್ಲ. ಅದುವರೆಗೆ ಕಾಡು, ತೊರೆ, ಮೀನು ನೋಡಿಕೊಂಡು ಲ್ಯಾಟಿನ್ ಇಂಗ್ಲಿಷ್ ಹೆಸರುಗಳನ್ನು ಹೇಳುತ್ತ, ಮಿಮೀ ಸೆಮೀಗಳಲ್ಲಿ ಲೆಕ್ಕ ಹಿಡಿಯುತ್ತಲಿದ್ದ ಯುವಕರು ಇಲ್ಲೀಗ ಹೊಸ ಪಾತ್ರವಹಿಸಿದ್ದರು. ಪಾತ್ರೆ ಪರಡಿ ನೋಡಿಕೊಂಡು ಲೋಟ ಚಾ ಕಾಸಿ ಕೊಟ್ಟರು, ನಂಚಿಕೊಳ್ಳಲು ಮುಷ್ಟಿ ಬಟಾಟೆ ಚಿಪ್ಸ್. ತರಕಾರಿ ಕೊಚ್ಚಿ, ಅನ್ನ ಠುಸ್ಸೆನಿಸಿ ಚಿಟಿಕೆ ಉಪ್ಪು, ಲಿಂಬೆ ಗಾತ್ರದ ಹುಳಿ, ಬೊಗಸೆಯಷ್ಟು ನೀರುಳ್ಳೀ… ಎನ್ನುತ್ತ ಕ್ಷೇತ್ರಕಾರ್ಯದ ಅದೇ ಉತ್ಸಾಹದಲ್ಲಿ ರಾತ್ರಿ ಹೊಟ್ಟೆಪಾಡು ಗಟ್ಟಿ ಮಾಡಿದರು. ಅಂಗಳದ ಮೂಲೆಯಲ್ಲಿ ಮೂರು ಕಲ್ಲಿನ ಸೌದೆ ಒಲೆ ಹೂಡಿ, ತಪಲೆ ನೀರು ಕಾಸಿ ಸ್ನಾನವೂ ಚೊಕ್ಕವಿತ್ತು. ಸಿದ್ಧಾರ್ಥನ ಗಿಟಾರ್ ತಂತಿ ಯಾಕೋ ಸಡಿಲು ಬಿದ್ದಿತ್ತು, ವಾಟೆಯಲ್ಲಿ ಕೊರೆದಿದ್ದ ಕೊಳಲು ಇನ್ನೂ ಶ್ರುತಿಬದ್ಧವಾಗಿರಲಿಲ್ಲದ್ದಕ್ಕೆ ಎಲ್ಲ ನಾಗರಿಕ ಮಾನದಲ್ಲಿ ಬೇಗನೇ ಸುಖನಿದ್ರೆಗೆ ಜಾರಿದೆವು. [ತಮಾಷೆ ಎಂದರೆ ಇಲ್ಲೂ ಬಿಸಿಲೆಯಲ್ಲೂ ಹಳ್ಳಿ ಹಿನ್ನೆಲೆ ಅಥವಾ ಗೃಹಕೃತ್ಯದ ತರಬೇತಿದ್ದವರು ಕಡಿಮೆ. ಮನೆಯಲ್ಲಿ ಚಾ ಕಾಸಿಯೂ ಗೊತ್ತಿರದವ ಇಲ್ಲೇನೋ ಕಲಗಚ್ಚು ಮಾಡಿದರೂ ಅದಕ್ಕೊಂದು ಸ್ವಾದ ಬರುತ್ತಿತ್ತು. ಕುಕ್ಕರಿನಲ್ಲಿ ಸಾಂಬಾರು ಮಾಡಿ ಅಡಿಸುಟ್ಟಾಗ ಪಾತ್ರೆ ಶುದ್ಧೀಕರಣದಲ್ಲಿ (ಬಿಸಿಲೆಯಲ್ಲಿ) ನತಾಶಾ ಹತಾಶಾಳಾದಾಗ ನಾನು ‘ಬುದ್ಧಿವಂತನಾಗಿದ್ದೆ! ಕಲ್ಲು ಹೂಡಿ ಬೆಂಕಿ ಎಬ್ಬಿಸ ಬೇಕಾದರೆ ಭಾರೀ ಕುಂಟೆಗೆ ಸೀಮೆಯೆಣ್ಣೆ ಸುರಿಯೋದಲ್ಲ, ಸಣ್ಣ ಕಡ್ಡಿ ಪುರುಳೆಯಿಂದ ವಿಕಸಿಸಬೇಕು ಎಂದು ಕತ್ತಲ ಅಂಗಳದಲ್ಲಿ ಕಾಡಿನ ಹಿನ್ನೆಲೆಯಲ್ಲಿ ಪೊದೆಗಡ್ಡದ ಸುಂದರರಾಯರು ಆಡದೇ ಮಾಡುತ್ತಿದ್ದಾಗ “ಹೊನ್ನಾಟ್ಲು ಹಳ್ಳಿಂದ ನಮ್ಮಾವ್ನೇ ಬಂದಂಗಿತ್ತು” ಎಂದೇ ಯೋಚಿಸಿರಬೇಕು ಅನೂಪ್ ಸಹಾಯಕ!]

ಮರುದಿನ ಬೆಳಗ್ಗಿನ ತಿಂಡಿ, ಮಧ್ಯಾಹ್ನಕ್ಕೆ ಬುತ್ತಿ ಮಾಡಿಕೊಂಡು ತಂಡ ಹೊಸದೊಂದೇ ತೊರೆಯತ್ತ ಸಾಗುತ್ತಿದ್ದಂತೆ ಅವರಿಗೆ ಮತ್ತೆ ಹೊರೆಯಾಗದಂತೆ ನಾವು ಬೀಳ್ಕೊಂಡೆವು. ಅಲ್ಲಿಗೆ ಬರುವಾಗಲೇ ಗುರುತಿಸಿಟ್ಟಿದ್ದ ಕಾಂಕ್ರೀಟ್ ರಸ್ತೆಯಲ್ಲಾಗಿ ಸಕಲೇಶಪುರ ತಲಪಿದೆವು. ಅಲ್ಲಿ ಎತ್ತಿನಹೊಳೆ ಯೋಜನೆಯ ಕಚೇರಿ ಹುಡುಕಿ, ವಿಚಾರಣೆ ನಡೆಸಿದ್ದು ಬೇರೊಂದೇ ಕತೆ. ಮತ್ತು ಅದರ ವಿವರಗಳನ್ನು ಕೊಡುವಲ್ಲಿ ಸುಂದರರಾಯರು ಸಮರ್ಥರಾದ್ದರಿಂದ ಅವರ ಜಾಲತಾಣ – www.sundararao.blogspot.comವನ್ನು ಅವಶ್ಯ ನೋಡುತ್ತಿರಿ; ಬರಲಿದೆ, ಬರಲಿದೆ!

ಸಕಲೇಶಪುರದಲ್ಲಿ ಊಟ ಮಾಡಿ, ನಮ್ಮ ಸವಾರಿ ಸುಮಾರು ಐವತ್ತೆರಡು ಕಿಮೀ ಅಂತರದ ಬಿಸಿಲೆಯತ್ತ ಹೊರಟಿತು. ಇಲ್ಲಿನ ದಾರಿಯ ದುಸ್ಥಿತಿಯನ್ನು ವಿವರಿಸಲು ನನ್ನಲ್ಲಿ ಶಬ್ದಗಳೇ ಇಲ್ಲ. ಅಲ್ಲಿ ನಮ್ಮ ಗೆಳೆಯರ ಬಳಗದ ಎರಡನೇ ಸಮೀಕ್ಷಾ ತಂಡ – ಶಿಶಿರ್ ಮತ್ತು ನತಾಶಾರನ್ನು ಸೇರಿಕೊಳ್ಳುವಾಗ ಮತ್ತೊಂದೇ ಸಂಜೆಯಾಗಿತ್ತು. ಕಾಡುಮನೆಯ ಕೃಷಿಕ್ಷೇತ್ರದ್ದು ಎಚ್ಚರದ ನಿರ್ಬಂಧವಾದರೆ ಬಿಸಿಲೆಯದು ನಿರ್ಲಕ್ಷ್ಯದ ಪರಮಾವಧಿಯದ್ದು ಎಂದರೆ ತಪ್ಪಾಗಲಾರದು. ಆ ದಿನ ನಮ್ಮ ಗೆಳೆಯರಿಗೆ ಏನೋ ರಾಸಾಯನಿಕ ಸಕಲೇಶಪುರದಿಂದ ಬರಬೇಕಿತ್ತು. ದಿನಕ್ಕೆರಡೋ ಮೂರೋ ಸರ್ಕಾರೀ ಬಸ್ಸಷ್ಟೇ ಸಂಚರಿಸುವ ಬಿಸಿಲೆಯಲ್ಲಿ, ಎಂದಿನಂತೇ ಸೀಮಿತ ಸ್ಥಳಗಳಲ್ಲಿ ಅದೂ ಕಷ್ಟದಿಂದ ಸಿಗುವ ಚರವಾಣಿ ಸಂಪರ್ಕದಲ್ಲಿ ಇವರು ಕೆಲಸ ಬಿಟ್ಟು, ಅದರ ದಾರಿ ಕಾದೇ ವ್ಯರ್ಥವಾಗಿದ್ದರು. ದಿನದ ಕೊನೆಯಲ್ಲಿ ನಮ್ಮ ಜೊತೆ ಸಿಕ್ಕ ಸಂತೋಷಕ್ಕೆ ಹೀಗೇ ಎರಡು ಗಂಟೆಯಷ್ಟು ಬರಿದೆ ಅಶೋಕವನ ಸುತ್ತಿ, ರಾತ್ರಿಗೆ ಸಂದೆವು. ಇವರಿಗೆ ಒಂದು ಸಣ್ಣ ಮನೆ ಬಾಡಿಗೆಗೆ ಸಿಕ್ಕಿತ್ತು. ಸೌಕರ್ಯಗಳೂ ಹಳ್ಳಿ ಪರಿಸರಕ್ಕೆ ಉತ್ತಮವೇ ಇತ್ತು. ಹಾಗಾಗಿ ನಮಗೂ ಸೇರಿದಂತೆ ಊಟ, ನಿದ್ರೆ ನಿಶ್ಚಿಂತವಾಗಿತ್ತು. ಬೆಳಗ್ಗೆ ಎಲ್ಲರು ತಿಂಡಿ ಮುಗಿಸಿ, ಅವರು ಬುತ್ತಿಯನ್ನೂ ಹಿಡಿದುಕೊಂಡಂತೆ ಬೈಕೇರಿದೆವು. ಸುಮಾರು ಹತ್ತು ಕಿಮೀ ಅಂತರದ ಅಡ್ಡ ಹೊಳೆಯಲ್ಲಿ ಬೈಕ್ ಬಿಟ್ಟು, ಕಾಡು ಸೇರಿದೆವು. ಅವರು ಅರ್ಧದಲ್ಲಿ ಉಳಿಸಿದ್ದ ಅಡ್ಡಹೊಳೆಯ ಮೇಲಿನ ಯಾವುದೋ ಒಂದು ಉಪೋಪ ಕವಲನ್ನು ಉದ್ದೇಶಿಸಿ ಸುಮಾರು ಎರಡು ಗಂಟೆಯ ಕಾಲ ಸವಕಲು ಜಾಡು ಅನುಸರಿಸಿದೆವು. (ಜಿಪಿಎಸ್ ಮತ್ತು ಸ್ಥಳಿಯ ಸಹಾಯಕರಿರುವುದರಿಂದ ಎಲ್ಲ ನಿಖರವಾಗಿತ್ತು, ಹೊತ್ತುಗಳೆಯುವ ಅಲೆದಾಟವೇನೂ ಇರಲಿಲ್ಲ) ಮತ್ತೆ ಅವರು ಕೆಲಸಕ್ಕಿಳಿಯುತ್ತಿದ್ದಂತೆ ನಾವು ಒಳ್ಳೆಯ ಚಾರಣಾನುಭವ ಮಾತ್ರ ಗಳಿಸಿಕೊಂಡ ಸಂತೋಷದಲ್ಲಿ ಮತ್ತಷ್ಟೇ ನಡೆದು ಬೈಕಿಗೆ ಮರಳಿದೆವು. ಸುಬ್ರಹ್ಮಣ್ಯದಲ್ಲಿ ಊಟ ಮುಗಿಸಿ ಮಂಗಳೂರಿಸಿದೆವು.

ಮೂರು ಹಗಲು, ಎರಡು ರಾತ್ರಿಯ ಈ ಅನುಭವದಲ್ಲಿ ಹೇಳದುಳಿದದ್ದು ಇನ್ನು ತುಂಬಾ ಇದೆ. ನನ್ನ ವಾರದ ಪುಟದ ಮಿತಿಗೂ ಕಾಲಕಾರಣವಾಗಿಯೂ ಅವನ್ನು ಇಲ್ಲಿ ವಿಸ್ತರಿಸುತ್ತಿಲ್ಲ. ಮುಂದೆ ಸಕಾಲಕ್ಕೆ ಹಂಚಿಕೊಳ್ಳುವ ಆಶ್ವಾಸನೆಯನ್ನಷ್ಟೇ ಕೊಟ್ಟು ವಿರಮಿಸುತ್ತೇನೆ.