ಅಧ್ಯಾಯ ಒಂಬತ್ತು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹನ್ನೊಂದನೇ ಕಂತು

ಮಾರ್ಚಿ ತಿಂಗಳ ಮಧ್ಯದಲ್ಲಿ ನನ್ನ ಜನ್ಮದಿನ ಬರುತ್ತದೆ. ಬ್ಲಂಡರ್ಸ್ಟನ್ನಿನಿಂದ ನಮ್ಮ ಶಾಲೆಗೆ ಬಂದು ಸಾಧಾರಣ ಎರಡೂ ತಿಂಗಳಾಗಿರಬಹುದು – ಅಂಥ ಒಂದು ದಿನ ನಾವೆಲ್ಲರೂ ನಮ್ಮ ನಮ್ಮ ಕ್ಲಾಸುಗಳಲ್ಲಿ ಕುಳಿತಿದ್ದೆವು. ಹಗಲಿನ ಬೆಳಕು ಸಾಕಾಗದೇ ಮಯಣದ ಬತ್ತಿಗಳನ್ನು ಹೊತ್ತಿಸಿಟ್ಟುಕೊಂಡಿದ್ದೆವು. ಚಳಿಯಿಂದ ಬಾಲಕರು ಕಷ್ಟಪಡುತ್ತಾ, ಬಟ್ಟೆಯಿಂದ ತಮ್ಮ ಮೈಮುಚ್ಚದಿದ್ದ ಭಾಗವನ್ನು ಕೈಯಿಂದ ತಿಕ್ಕಿ, ತೀಡಿ ಬಿಸಿ ಮಾಡಿಕೊಳ್ಳುತ್ತಿದ್ದರು.

ಹೀಗೆ ನಾವು ನಮ್ಮ ನಮ್ಮ ಕ್ಲಾಸುಗಳಲ್ಲಿದ್ದಾಗ ಮಿ. ಶಾರ್ಪರು ಬಂದು ನಾನು ಮಿ. ಕ್ರೀಕಲರ ಬೈಠಖಾನೆಗೆ ಹೋಗಬೇಕೆಂದು ತಿಳಿಸಿದರು. ಮಿ. ಕ್ರೀಕಲರ ಬೈಠಖಾನೆಗೆ ಹೋಗುವುದೆಂದರೆ ಒಂದು ಅಪೂರ್ವವಾದ ಗೌರವವಾಗಿತ್ತು. ನನ್ನನ್ನು ನೋಡಲು ಯಾರ್ಮತ್ತಿನಿಂದ ಮಿ. ಪೆಗಟಿಯೋ ಹೇಮನೋ ಯಾರಾದರೂ ಬಂದಿರಬಹುದೆಂದು ಊಹಿಸಿಕೊಂಡು ಉತ್ಸಾಹದಿಂದ ಅಲ್ಲಿಗೆ ಹೋದೆ. ನನ್ನ ಜತೆಯಲ್ಲಿ ಮಿ. ಶಾರ್ಪರು ನಾನು ಅವಸರದಿಂದ ಹೋಗುವ ಅಗತ್ಯವಿಲ್ಲವೆಂದು ಮೆಲ್ಲಗೆ ಸೂಚನೆಯಿತ್ತರು. ಅವರ ಮಾತುಗಳ ಕ್ರಮ, ಸ್ವರ, ಅಥವಾ ಅವರ ಮುಖವನ್ನು ಗಮನವಿಟ್ಟು ನೋಡಿದ್ದಾಗಿದ್ದರೆ ನನ್ನ ಉತ್ಸಾಹ ಕಡಿಮೆಯಾಗುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. ಆದರೆ ನನ್ನ ಅಂತರಂಗ ದೃಷ್ಟಿಯಿಂದ ನಾನು ಮಿ. ಪೆಗಟಿಯನ್ನೇ ಕಾಣುತ್ತಿದ್ದುದರಿಂದ ಶಾರ್ಪರ ಸ್ವರ, ಮುಖ, ಮೊದಲಾದುವುಗಳನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ.

ಮಿ. ಕ್ರೀಕಲರು ಒಂದು ಸಿಗಾರನ್ನು ಸೇದುತ್ತಾ, ಪತ್ರಿಕೆಯನ್ನು ಓದಿಕೊಂಡು ಕುಳಿತಿದ್ದರು. ಅವರ ಸಮೀಪದಲ್ಲಿ ಅವರ ಪತ್ನಿ ಕೈಯ್ಯಲ್ಲೊಂದು ಪತ್ರವನ್ನು ಹಿಡಿದುಕೊಂಡು ಕುಳಿತಿದ್ದಳು. ನಾನು ಅಲ್ಲಿಗೆ ತಲುಪಿದ ಕೂಡಲೇ ಅವರು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಒಂದು ಸೋಫಾದ ಮೇಲೆ ಕುಳ್ಳಿರಿಸಿದರು. ಅವರೂ ನನ್ನ ಸಮೀಪದಲ್ಲೇ ಕುಳಿತರು. ಈ ತೆರನಾದ ವಿಶೇಷವಾದ ಮರ್ಯಾದೆಗಳನ್ನು ಕಂಡು ನನಗೆ ದಿಗಿಲುಂಟಾಯಿತು. ಮಿಸೆಸ್ ಕ್ರೀಕಲರು ಬಹು ಕರುಣೆಯಿಂದ ನನ್ನನ್ನು ನೋಡುತ್ತಾ ಅಂದರು – “ನೀನು ಮನೆ ಬಿಡುವಾಗ ಅಲ್ಲಿ ಎಲ್ಲರೂ ಕ್ಷೇಮದಲ್ಲಿದ್ದರು ತಾನೆ?” “ಹೌದು, ಇದ್ದರು.” “ನಿನ್ನ ತಾಯಿಯೂ ಕ್ಷೇಮದಲ್ಲಿದ್ದರಷ್ಟೆ?… ಆ ವಿಷಯ ಇರಲಿ – ಪ್ರಪಂಚದ ಅನುಭವವನ್ನು ನೋಡಿದರೆ ಯಾವುದೂ ಸ್ಥಿರವಲ್ಲ. ಇಂದು ಇದ್ದವರು ನಾಳೆ ಇಲ್ಲ. ನಾಳೆ ಇದ್ದವರು ಮತ್ತೆ ಯಾವಾಗ ಇಲ್ಲದೆ ಅಗುವರೋ, ಆ ದೇವನೇ ಬಲ್ಲ. ಈ ಅನುಭವವಾದರೋ ಒಬ್ಬೊಬ್ಬರಿಗೆ ಒಂದೊಂದು ಸಮಯದಲ್ಲಿ ಬರುತ್ತದೆ. ಕೆಲವರಿಗೆ ಬಾಲ್ಯದಲ್ಲಿ – ಕೆಲವರಿಗೆ ವೃದ್ಧಾಪ್ಯದಲ್ಲಿ – ಇನ್ನೂ ಕೆಲವರಿಗೆ ಸದಾ ಬರುತ್ತಿರುತ್ತದೆ.”

ಈ ಮಾತುಗಳನ್ನು ನಾನು ಕುತೂಹಲದಿಂದಲೂ, ಸ್ವಲ್ಪ ಭಯದಿಂದಲೂ ಆಲಿಸಿ ಕೇಳುತ್ತಿದ್ದೆ. ಮಿಸೆಸ್ ಕ್ರೀಕಲರು ಮುಂದುವರಿಸಿದರು – “ನಿನ್ನ ತಾಯಿಗೆ ಸೌಖ್ಯವಿಲ್ಲವೆಂದು ವರ್ತಮಾನ” ಅಂದರು. ಇದ್ದಕ್ಕಿದ್ದ ಹಾಗೆಯೇ ಮಿಸೆಸ್ ಕ್ರೀಕಲರು ನೀರಿನಲ್ಲಿ ತೊಯ್ದು ತೇಲಿದಂತೆ ತೋರಿದರು. “ನಿನ್ನ ತಾಯಿಗೆ ಪ್ರಾಣಾಪತ್ತೆಂದು ಪತ್ರ ಬಂದಿದೆ” ಅಂದರು. ನನಗೆ ಎಲ್ಲವೂ ಅರ್ಥವಾಯಿತು, ಅಳಲಾರಂಭಿಸಿದೆನು. “ನಿನ್ನ ತಾಯಿ ಮೃತಪಟ್ಟಿದ್ದಾಳೆ” ಅಂದರು ಕ್ರೀಕಲರ ಪತ್ನಿ. ನಾನು ಬಿಕ್ಕಿ ಬಿಕ್ಕಿ ಅತ್ತೆನು. ಆ ದಿನ ಹಗಲೆಲ್ಲಾ ಅಲ್ಲೇ ಇದ್ದೆನು. ನನ್ನ ಸಹಪಾಠಿಗಳು ಸ್ವಲ್ಪ ದೂರದಲ್ಲಿ ನಿಂತು ನನ್ನನ್ನು ತುಂಬಾ ನೋಡುತ್ತಾ, ಮೌನವಾಗಿ ಅಲ್ಲಿಂದ ಹಿಂದೆ ಸರಿಯುತ್ತಿದ್ದರು. ಆ ದಿನ ರಾತ್ರಿ ನಮ್ಮ ಕಥಾಕಾಲಕ್ಷೇಪವಿರಲಿಲ್ಲ. ನಾನು ಮರುದಿನ ಶಾಲೆಯಿಂದ ಮನೆಗೆ ಕಳುಹಿಸಲ್ಪಟ್ಟೆನು. ನಾನು ಪುನಃ ಆ ಶಾಲೆಗೆ ಹೋಗುವುದಿಲ್ಲವೆಂದು ನನಗೆ ಆಗ ಗೊತ್ತಿರಲಿಲ್ಲ. ನನ್ನ ಸವಾರಿ ಬಂಡಿಯಲ್ಲಾಯ್ತು. ರಾತ್ರಿ ಬಂಡಿಯನ್ನೇರಿ ಬೆಳಗ್ಗೆ ಯಾರ್ಮತ್ತಿಗೆ ತಲುಪಿದೆನು ನನ್ನನ್ನು ಯಾರ್ಮತ್ತಿನ ಒಂದು ಅಂಗಡಿ ಎದುರು ಕರೆದುಕೊಂಡು ಹೋಗಿ ಬಿಟ್ಟರು. ನಾನು ಬಂದದ್ದು ತಿಳಿದ ಕೂಡಲೇ ಅಂಗಡಿಯೊಳಗಿನಿಂದ ಸ್ಥೂಲದೇಹಿ ಮುದುಕರೊಬ್ಬರು ಹೊರಬಂದು – “ಸರ್, ಡೇವಿಡ್ ಕಾಪರ್ ಫೀಲ್ಡ್ ಅಂದರೆ ತಾವೇ ತಾನೆ” ಎಂದು ಕೇಳಿದರು. “ಹೌದು” ಅಂದೆನು. “ತಮಗೆ ಕೆಲವು ಸಾಹಿತ್ಯಗಳನ್ನೊದಗಿಸಿ ತಮ್ಮನ್ನು ಬ್ಲಂಡರ್ಸ್ಟನ್ನಿಗೆ ಕರೆದುಕೊಂಡು ಹೋಗಲು ನನಗೆ ಅಪ್ಪಣೆಯಾಗಿದೆ” ಅಂದರು ಆ ಮುದುಕರು.

ಮುದುಕರ ಹೆಸರು ಮಿ. ಓಮರ್ ಎಂದು ತಿಳಿದೆ. ಅವರು ಶವಸಂಸ್ಕಾರದ ಸಾಹಿತ್ಯಗಳನ್ನೊದಗಿಸುವ ಡಿಪೋ ಮೇನೇಜರರು, ಜವಳಿ ವ್ಯಾಪಾರಿ ಮತ್ತೂ ದರ್ಜಿಯೂ ಆಗಿದ್ದರು. ಅವರ ಅಂಗಡಿಯ ಬಾಗಿಲ ಮೇಲೆ ಒಂದು ಉದ್ದದ ಹಲಗೆಯಲ್ಲಿ ಈ ಮುಂದಿನಂತೆ ದೊಡ್ಡ, ಚಂದದ, ಅಕ್ಷರಗಳಲ್ಲಿ ಪ್ರಕಟಣೆ ಬರೆದಿದ್ದರು:- “ಓಮರ್ – ಬಟ್ಟೆ ವ್ಯಾಪಾರಿ, ದರ್ಜಿ, ಚಿಲ್ಲರೆ ವ್ಯಾಪಾರಿ, ಮತ್ತೂ ಶವಸಂಸ್ಕಾರದ ಸಾಹಿತ್ಯ ವ್ಯಾಪಾರಿ.”

ಒಂದೂವರೆ ಘಂಟೆಯೊಳಗೆ ನನ್ನ ಕೆಲಸವನ್ನು ಪೂರೈಸಿ, ನನ್ನನ್ನು ಕರೆದುಕೊಂಡು ಬ್ಲಂಡರ್ಸ್ಟನ್ನಿಗೆ ಹೋಗುವುದಾಗಿ ಭರವಸೆಯಿತ್ತರು. ಅನಂತರ ನನ್ನ ಉದ್ದ, ದಪ್ಪ ಮೊದಲಾದ ಅಳತೆ ತೆಗೆದರು. ಅವರ ಅಂಗಡಿಯಲ್ಲಿ ತುಂಬಾ ಬಟ್ಟೆಯಿತ್ತು. ಒಂದು ಕಡೆ ಒಬ್ಬಳು ಸುಂದರ ಯುವತಿ ಕರಿ ಬಟ್ಟೆಯ ರಾಶಿಯನ್ನು ತನ್ನೆದುರು ಹಾಕಿಕೊಂಡು ಹೊಲೆಯುತ್ತಿದ್ದಳು. ಅಂಗಡಿಯ ಹಿಂಬದಿಯಿಂದ ತಾಳಹೊಡೆದಂತೆ, ಕ್ರಮವಾಗಿ, ರೇಟ್-ಟೇಟ್-ಟೇಟ್, ರೇಟ್-ಟೇಟ್-ಟೇಟ್ ಎಂದು ಶಬ್ದ ಕೇಳಿಬರುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಸುಲಕ್ಷಣನಾಗಿದ್ದ ಯುವಕನೊಬ್ಬನು ಅಂಗಡಿಯ ಹಿಂದಿನಿಂದ ಬಂದು ಓಮರರ ಹತ್ತಿರ – “ಆಯ್ತು” ಅಂದನು. “ಸರಿ, ಬಟ್ಟೆಯೂ ಆಗುತ್ತಾ ಬಂತು” ಅಂದರು ಓಮರ್.

“ನನ್ನ ಕೆಲಸವನ್ನು ಬೇಗನೆ ಮುಗಿಸಿದರೆ ನಾನೂ ಮಿನ್ನಿಯೂ ನಿಮ್ಮ ಜತೆಯಲ್ಲಿ ಬರಬಹುದೆಂದು ನೀವು ಹೇಳಿದ್ದರಲ್ಲಾ ಹಾಗಾಗಿ ಕೆಲಸವನ್ನು ಬೇಗ ಮಾಡಿದ್ದೇನೆ – ನಾಜೂಕಾಗಿಯೂ ಮಾಡಿದ್ದೇನೆ” ಅಂದ ಯುವಕ. ಯುವಕನ ಹೆಸರು ಜೋರಂ ಎಂದು ಅವರ ಮಾತುಗಳಿಂದ ತಿಳಿದೆನು. ಮಿನ್ನಿ ಎಂಬವಳು ಓಮರರ ಮಗಳು – ಅವಳೇ ನಾನು ಮೊದಲು ಕಂಡ – ಹೊಲಿಗೆ ಕೆಲಸದ – ಸುಂದರ ಯುವತಿ. ಓಮರ್ ಮತ್ತು ಜೋರಂರು ಅಂಗಡಿಯ ಹಿಂಬದಿಗೆ ಹೋಗಿ ಕೆಲಸವನ್ನು ನೋಡಿಕೊಂಡು ಬಂದರು. ಅನಂತರ ಓಮರರು ನನ್ನನ್ನು ನೋಡಿ ಅಂದರು – “ಸರ್, ತಮ್ಮ ಸಂಬಂಧ ನಮಗೆ ಮೊದಲಿನಿಂದಲೂ ಇದೆ.” “ಅದು ಹೇಗೆ?” ಎಂದು ನಾನು ಕೇಳಬೇಕಾಯಿತು. “ತಮ್ಮ ತಂದೆಯವರ ಬಗ್ಗೆ ಕಾಫಿನ್ ಮಾಡಿದ್ದೂ ನಾನು. ಅನಂತರ ಉತ್ತರಕ್ರಿಯೆಗೆ ಬಟ್ಟೆ ತಯಾರಿಸಿದ್ದೂ ನಾನೇ” ಅಂದರು. “ಮತ್ತೆ?” ಎಂದು ನಾನು ಮನಸ್ಸಿನಲ್ಲೇ ಗ್ರಹಿಸುತ್ತಿದ್ದಾಗ ಅವರು ನನ್ನ ಮುಖ ನೋಡಿ ಅರ್ಥ ಮಾಡಿಕೊಂಡು – “ಈಗ ತಮ್ಮ ಮಾತೃಶ್ರೀಯವರ ಮತ್ತು ತಮ್ಮನವರ ಬಗ್ಗೆ ಎಲ್ಲಾ ಕೆಲಸವೂ ನಮ್ಮದೇ” ಅಂದರು.

ಓಮರರು ಸ್ಥೂಲಕಾಯರಾಗಿದ್ದುದರಿಂದಲೂ, ಖಾಸಶ್ವಾಸಖಾಯಿಲೆಯುಳ್ಳವರು ಆಗಿದ್ದುದರಿಂದಲೂ ಇಷ್ಟು ಮಾತಾಡಿದ್ದೇ ಅವರಿಗೆ ಶ್ರಮವಾಗಿರಬೇಕು. ಅವರು ಉಬ್ಬಸಬಿಡುತ್ತಾ, ಕೆಮ್ಮ ತೊಡಗಿದರು. ನನ್ನ ತಾಯಿ ಮತ್ತು ತಮ್ಮನೂ ಮೃತಪಟ್ಟಿರುವ ವಿಷಯ ಪುನಃ ಕೇಳಿದ್ದರಿಂದ ನನಗೆ ದುಃಖ ಬಂದು ನಾನು ಅತ್ತೆನು. “ತಮ್ಮ ತಂದೆಯವರ ಉದ್ದ ಐದೂಮುಕ್ಕಾಲು ಅಡಿ, ಅರೆ ಇಂಚು ಸರ್. ನಾನು ಮಾತ್ರ ಆರಡಿ ಉದ್ದವೇ ಮಾಡಿದೆ – ಅದಕ್ಕೆ ಬೇಸರವಿಲ್ಲ” ಅಂದರು ಓಮರರು. ಅಷ್ಟರಲ್ಲಿ ಕೆಲಸ ಪೂರೈಸಿದ್ದ ಕಾಫಿನ್ ಮತ್ತು ಬಟ್ಟೆಗಳನ್ನು ನಮ್ಮೆದುರು ತಂದಿಟ್ಟರು. ಕಾಫಿನ್ ಮತ್ತು ಬಟ್ಟೆಗಳನ್ನು ಬಂಡಿಯೊಳಗಿಟ್ಟುಕೊಂಡು, ಮಿನ್ನಿ, ಜೋರಾಂ ನಾನೂ ಬಂಡಿಯನ್ನೇರಿದೆವು. ಓಮರರು ಮುಂದೆ ಕುಳಿತು ಬಂಡಿ ಹೊಡೆಯಲಾರಂಭಿಸಿದರು.

ಜೋರಂನು ಓಮರರ ಕೆಲಸದವನಾಗಿದ್ದನು. ಆದರೆ ಅವನ ಕೆಲಸದ ಯೋಗ್ಯತೆಗಳ ಕಾರಣವಾಗಿ ಅವನನ್ನು ಓಮರರು ತನ್ನ ಜತೆಗಾರನಂತೆಯೇ ಕಾಣುತ್ತಿದ್ದರು. ಮಿನ್ನಿಯೂ ಜೋರಾಂನೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅವರು ತಮ್ಮೊಳಗೆ ಮುಂದೆ ವಿವಾಹ ನಡೆಯುವುದೆಂಬ ನಿಶ್ಚಯದಿಂದ ಮತ್ತು ಇದಕ್ಕೆ ಓಮರರ ಒಪ್ಪಿಗೆಯಿದ್ದುದರಿಂದ, ಈಗ ನಲ್ಲ ನಲ್ಲೆಯರಾಗಿ ವರ್ತಿಸುತ್ತಿದ್ದರು.

ಓಮರರ ಜೀವನ ತತ್ವವೇ ಹರ್ಷಚಿತ್ತತೆಯಾಗಿತ್ತು. ಮನುಷ್ಯ ಸದಾ ಹರ್ಷಚಿತ್ತನಾಗಿರಬೇಕೆಂಬುದನ್ನು ಅವರು ಅವರ ನಡೆ ನುಡಿಗಳಿಂದ ಮಾತ್ರವಲ್ಲ, ತಮ್ಮ ಖಾಸಶ್ವಾಸದ ಖಾಯಿಲವನ್ನೂ, ಸ್ಥೂಲದೇಹದ ಕಷ್ಟಗಳನ್ನೂ ಎದುರಿಸಿಯೂ ತೋರಿಸುತ್ತಿದ್ದರು. ಜೋರಾಂ ಮತ್ತು ಮಿನ್ನಿಯರು ಬಂಡಿಯೊಳಗೆ ಪರಸ್ಪರ ಆಲಿಂಗಿಸಿಕೊಂಡು, ಮುತ್ತಿಟ್ಟುಕೊಂಡು ಸಾಗುತ್ತಿದ್ದರು – ನಾನೊಬ್ಬ ಪರಕೀಯನಿದ್ದೆನೆಂಬುದನ್ನು ಗಮನಿಸುತ್ತಲೇ ಇರಲಿಲ್ಲ.

ನಮ್ಮ ಬಂಡಿ ಮನೆಗೆ ಸಮೀಪವಾದಂತೆ ನನಗೆ ಅಳು ಬರತೊಡಗಿತು. ನಾವು ಮನೆಗೆ ತಲಪುವ ಮೊದಲೇ ಪೆಗಟಿ ಬಂದು ನನ್ನನ್ನು ಅಪ್ಪಿಕೊಂಡು ಅತ್ತಳು. ಮನೆಯ ಕಿಟಕಿಗಳನ್ನೆಲ್ಲ ಮುಚ್ಚಿದ್ದರು. ನನ್ನಮ್ಮ ಅಲ್ಲಿಲ್ಲದುದರಿಂದ ಆ ಮನೆ ಕಣ್ಣಿಲ್ಲದ ಮುಖದಂತೆ ಕಂಡಿತು. ನಮ್ಮ ಮತ್ತು ಪೆಗಟಿಯ ಅಳುವಿನ ಶಬ್ದ ಹೊರತಾಗಿ ಅಲ್ಲಿ ಮತ್ತೆ ಯಾವ ಶಬ್ದವೂ ಇರಲಿಲ್ಲ. ಮನೆಯೊಳಗೆ ಮಿ. ಮರ್ಡ್ಸ್ಟನ್ ಮತ್ತು ಅವರ ತಂಗಿ ಇದ್ದರು. ನಾನು ಬರುವಾಗ ನನ್ನ ಬಟ್ಟೆ ಬರೆಗಳನ್ನೆಲ್ಲ ಶಾಲೆಯಿಂದ ತಂದಿರುವೆನೋ ಎಂದು ಮಿಸ್ ಮರ್ಡ್ಸ್ಟನ್ನಳು ಕೇಳಿದಳು. ನಾನು ಅವನ್ನೆಲ್ಲ ತಂದಿರುವ ಸಂಗತಿಯನ್ನು ತಿಳಿಸಿದೆನು. ಮತ್ತೆ ಓಮರರ ಅಂಗಡಿಯಿಂದ ತರಬೇಕಾಗಿದ್ದ ಸಾಮಾನು, ಬಟ್ಟೆ ಮೊದಲಾದುವನ್ನೆಲ್ಲ ತಂದಿರುವೆನೋ ಎಂದೂ ವಿಚಾರಿಸಿದಳು. ಅವೂ ಬಂದಿರುವುದಾಗಿ ತಿಳಿಸಿದೆನು.

ಆ ದಿನ ರಾತ್ರಿ ಪೆಗಟಿ ನನ್ನನ್ನು ನನ್ನಮ್ಮನ ಕೋಣೆಗೆ ಕರೆದುಕೊಂಡು ಹೋಗಿ ಅಮ್ಮನ ಮತ್ತು ತಮ್ಮನ ಶವಗಳನ್ನು ತೋರಿಸಿದಳು. ಶುಭ್ರವಾದ ಬಿಳಿ ವಸ್ತ್ರದಲ್ಲಿ ಅಮ್ಮನನ್ನೂ, ತಮ್ಮನನ್ನೂ ಸುತ್ತಿ ಮಲಗಿಸಿದ್ದರು. ಪೆಗಟಿ ಶವಕ್ಕೆ ಮುಚ್ಚಿದ್ದ ಬಿಳಿ ಬಟ್ಟೆಯನ್ನೆಳೆದು ಅಮ್ಮನ ಮುಖವನ್ನು ಪೂರ್ಣ ತೋರಿಸುವ ಮೊದಲೇ ಅವಳ ಕೈಯನ್ನು ಎಳೆದು ಹಿಡಿದುಕೊಂಡು ಅಳಲು ಪ್ರಾರಂಭಿಸಿದೆನು.

ಶವ ಸಂಸ್ಕಾರಕ್ಕೆ ಡಾ ಚಿಲ್ಲಿಪ್ಪರೂ ಬಂದಿದ್ದರು. ಮರುದಿನ ಬೆಳಗ್ಗೆ ಸಂಪ್ರದಾಯ ಪ್ರಕಾರ ನಾವೆಲ್ಲರೂ ಶ್ಮಶಾನಕ್ಕೆ ಹೋದೆವು. ಓಮರರ ಕಡೆಯವರು ಶವದ ಪೆಟ್ಟಿಗೆಯನ್ನು ಹೊತ್ತುಕೊಂಡು ಮೆಲ್ಲ ಮೆಲ್ಲಗೆ ಸಾಗಿದರು – ಅಂಗಳ, ಗೇಟು, ಎಲ್ಮ್ ಮರಗಳನ್ನು ದಾಟಿ ಇಗರ್ಜಿ ಕಂಪೌಂಡಿಗೆ ತಲುಪಿದೆವು. ನನ್ನ ತಂದೆಯ ಗೋರಿಯ ಬಳಿ ಶವವನ್ನಿಟ್ಟರು. ಶವವನ್ನು ಇಳಿಸಿ ಮುಚ್ಚಬೇಕಾಗಿದ್ದ ಗುಂಡಿಯ ಸುತ್ತಲೂ ನಾವೆಲ್ಲ ನಿಂತೆವು. ಅಲ್ಲಿನ ನಿಶ್ಶಬ್ದತೆ ನನಗೆ ಸದಾ ಜ್ಞಾಪಕದಲ್ಲಿ ಉಳಿದಿದೆ. ನಾವು ಉಸಿರಾಡುವ ಶಬ್ದವೇ ಒಂದು ಗಲಭೆಯಂತೆ ನಮಗೆ ಭಾಸವಾಗುತ್ತಿತ್ತು. ಈ ನಿಶ್ಶಬ್ದತೆಯನ್ನು ಭೇದಿಸಿ ಇಗರ್ಜಿಯ ಗುರುಗಳು, ಸ್ಪಷ್ಟವಾದ ಶಬ್ದಗಳಿಂದ – “ಜನ್ಮ ಮೃತ್ಯು ಜರಾತೀತನು ನಾನು” ಎಂದು ಪ್ರಾರಂಭಿಸುತ್ತಾ ಕೆಲವು ಧರ್ಮವಚನಗಳನ್ನು ಗಂಭೀರವಾಗಿ ನುಡಿದರು. ಈ ವಚನಗಳು ನಡೆಯುತ್ತಿದ್ದಂತೆಯೇ ಶವದ ಪೆಟ್ಟಿಗೆಯನ್ನು ಕ್ರಮವಾಗಿ ಕೆಳಗೆ ಇಳಿಸಿದರು. ಅನಂತರ ಮಣ್ಣು ಮುಚ್ಚಿ ನಾವು ಹಿಂತಿರುಗಿದೆವು.

“ಜನ್ಮ ಮೃತ್ಯು ಜರಾತೀತನು ನಾನು” ಎಂಬ ಗುರುಗಳ ಗಂಭೀರ ನುಡಿ ಈಗಲೂ ನನಗೆ ಕೇಳಿಸುತ್ತಿರುವಂತೆ ತೋರುತ್ತದೆ. ಆ ದಿನದ ಸೂರ್ಯಪ್ರಕಾಶವೇ ಮಸಕಾಗಿತ್ತು. ಆ ದಿನವೇ ಇತರ ದಿನಗಳಿಂದ ಒಂದು ವಿಧದ್ದಾಗಿ ಈಗಲೂ ಭಾಸವಾಗುತ್ತದೆ. ನನ್ನ ತಾಯಿಯ ರಕ್ತ ಸಂಬಂಧಿಕರಾಗಿ ನಾವು ಈ ರೀತಿ ದುಃಖವನ್ನು ಅನುಭವಿಸುತ್ತಿದ್ದಾಗಲೇ, ಅವಳ ಪ್ರೇಮದ ಸಖಿಯಾಗಿ, ಕೆಲಸದ ಆಳಾಗಿ, ಅಂತಿಮ ಕಾಲದಲ್ಲೂ ಅವಳ ಸಮೀಪದಲ್ಲಿದ್ದ ಪೆಗಟಿ ನಮಗಿಂತ ಸ್ವಲ್ಪ ದೂರದಲ್ಲಿ ನಿಂತು ಎಡೆಬಿಡದೆ ಅಳುತ್ತಿದ್ದಳು. ಇದೇ ಸಮಯದಲ್ಲಿ ನನ್ನ ಸಮೀಪದಲ್ಲಿದ್ದ ಜೋರಾಂನು ಸ್ವಲ್ಪ ದೂರದಲ್ಲಿದ ಮಿನ್ನಿಯನ್ನು ನೋಡಿ ಕಣ್ಣು ಸನ್ನೆಯಿಂದಲೇ ಪ್ರಣಯ ಸಂಭಾಷಣೆಗೈಯ್ಯುತ್ತಿದ್ದನು.

ಅಂದು ರಾತ್ರಿ ಪೆಗಟಿ ಅಮ್ಮನ ಕಡೇ ದಿನಗಳ ವೃತ್ತಾಂತವನ್ನೆಲ್ಲ ನನಗೆ ತಿಳಿಸಿದಳು. ನನ್ನ ತಮ್ಮ ಜನಿಸಿದಂದಿನಿಂದಲೇ ನನ್ನಮ್ಮನಿಗೆ ಸದಾ ಖಾಯಿಲೆಯಿತ್ತು. ದೇಹಸುಖ ಕಡಿಮೆಯಾಗುತ್ತಾ, ನಿತ್ರಾಣ ಹೆಚ್ಚುತ್ತಾ ಬಂದ ಹಾಗೆಲ್ಲಾ ಅವಳು ಗಂಡನನ್ನೂ , ಗಂಡನ ತಂಗಿಯನ್ನೂ ಹೆಚ್ಚೆಚ್ಚು ಪ್ರೀತಿಸುತ್ತಾ, ಆಶ್ರಯಿಸುತ್ತಾ ಬಂದಳಂತೆ. ಅಶಕ್ತತೆಯಿಂದ ಅನ್ಯಾಶ್ರಯವನ್ನು ಆದರಿಸುತ್ತಾ, ಅವರೆಲ್ಲರಿಗೂ ಹೆದರುತ್ತಾ, ಕೊನೆಗೆ ತನ್ನ ದೇಹವನ್ನು ಮಾತ್ರ ತನ್ನ ವಶದಲ್ಲಿಟ್ಟುಕೊಂಡು, ಬುದ್ಧಿ, ಮನಸ್ಸನ್ನೆಲ್ಲ ಮಿಸ್ ಜೇನ್ ಮರ್ಡ್ಸ್ಟನ್ನಳಿಗೆ ಕೊಟ್ಟು ಬಿಟ್ಟಿದ್ದಳೆಂದು ಪೆಗಟಿ ತಿಳಿಸಿದಳು.

ಕೊನೆಯ ದಿನ ಪೆಗಟಿ ಒಂದರೆಕ್ಷಣ ಸಹ ತಾಯಿಯನ್ನು ಬಿಟ್ಟಿರದೆ ಕಾದು ಕುಳಿತಿದ್ದಳಂತೆ. ಪ್ರಾಣ ಹೋಗುವ ಮೊದಲು ತಾಯಿ ಪೆಗಟಿಯನ್ನು ಕರೆದು – “ಪೆಗಟಿ, ಸ್ವಲ್ಪ ಬಾಯಾರಿಕೆ ಕೊಡು” ಅಂದಳು. ಪೆಗಟಿ ಬಾಯಾರಿಕೆಯನ್ನಿತ್ತಳು. “ನೀನು ದೂರ ನಿಂತಿರುವುದೇಕೆ – ಹತ್ತಿರ ಬಂದು ಕುಳಿತುಕೋ,” ಅಂದಳಂತೆ. ಪೆಗಟಿ ನಿಜವಾಗಿಯೂ ತಾಯಿಯ ಬಹು ಸಮೀಪದಲ್ಲೇ ಇದ್ದಿದ್ದರೂ ಅವಳಿಗೆ ಪೆಗಟಿ ದೂರವಿದ್ದಂತೆ ಕಂಡಿರಬೇಕು. ಪೆಗಟಿ ಸ್ವಲ್ಪ ಅಲುಗಾಡಿ ಬಿಟ್ಟು ತಾಯಿಯ ಮುಖದೆದುರು ಕುಳಿತಳು. “ಡೇವಿಯನ್ನು ಇನ್ನೊಮ್ಮೆ ನೋಡುವುದಿಲ್ಲವೆಂದು ಆ ದಿನವೇ ತಿಳಿದೆ, ಪೆಗಟೀ. ನಾನು ಸಾಯುವೆನು. ನಾನು ಡೇವಿಯನ್ನು ಹರಸಿದ್ದೇನೆ ಪೆಗಟಿ – ಸಾವಿರ ಸರ್ತಿ ಹರಸಿದ್ದೇನೆ, ತಿಳಿಸಿಬಿಡು” ಅಂದಳಂತೆ.

ಪೆಗಟಿ ತಾಯಿಯ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಆದರಿಸಿ ಕುಳಿತಳಂತೆ. ತಾಯಿ ಪುನಃ ಮಾತಾಡುತ್ತಾ – “ನನ್ನ ಮಗು ಸತ್ತರೆ ಅದನ್ನು ನನ್ನ ತೋಳುಗಳ ಮೇಲಿಟ್ಟು ಮುಚ್ಚಬೇಕು, ಪೆಗಟೀ” ಅಂದಳಂತೆ ಅಮ್ಮ. ಪೆಗಟಿಗೆ ಉತ್ತರ ಹೊರಡದೆ ಅಳುವೇ ಬಂತು. ಪೆಗಟಿಯ ತೊಡೆಯಲ್ಲೇ ಅಮ್ಮನು ಆಖೈರು ಮಾತಾಡಿ ಮೃತಪಟ್ಟಳಂತೆ. ಪೆಗಟಿ ಈ ವಿಷಯಗಳನ್ನೆಲ್ಲ ಸ್ವಲ್ಪ ಸ್ವಲ್ಪವಾಗಿ ಗದ್ಗದ ಕಂಠದಿಂದ ತಿಳಿಸಿದಳು. ಅಂದಿನ ದುಃಖದಲ್ಲಿ ಆಗಿನ ಪ್ರಜ್ಞೆಯೇ ನನ್ನಿಂದ ಮಾಯವಾಯಿತು. ನನ್ನ ಮನಸ್ಸು ನಮ್ಮ ಹಿಂದಿನ ದಿನಗಳಿಗೆ ಹಠಾತ್ತಾಗಿ ಪ್ರವೇಶಿಸಿ ನಾನೂ, ನನ್ನಮ್ಮ ಮತ್ತು ಪೆಗಟಿ ಆ ಬೈಠಖಾನೆಯಲ್ಲಿದ್ದ ಚಿತ್ರಗಳನ್ನು ಮಾತ್ರ ನನ್ನೆದುರಿಟ್ಟಿತು. ಮೃತಳಾಗಿ ಮಾಯವಾಗಿದ್ದ ನನ್ನ ತಾಯಿ ಒಮ್ಮೆಗೆ ಕಾಲವನ್ನೇ ವಂಚಿಸಿ, ಹಿಂದೆ ಬೈಠಖಾನೆಯಲ್ಲಿ ಮುಂಗುರುಳನ್ನು ಬೆರಳಿಗೆ ಸುತ್ತುತ್ತಾ ಪದ ಹೇಳುತ್ತಿದ್ದ ಸುಂದರ ರೂಪದಲ್ಲೇ ನನ್ನ ಕಣ್ಣೆದುರು ನಿಂತಿದ್ದಳು.

ಸಮಾಧಿಯಲ್ಲಿ ಮಲಗಿದ್ದ ತಾಯಿ ನನ್ನ ಬಾಲ್ಯದ ಮುದ್ದು ತಾಯಿ. ಅವಳ ತೋಳಿನ ಮೇಲೆ ಅಡಗಿ ಮಲಗಿರುವ ಆ ಚಿಕ್ಕ ಮಗುವೇ – ಹಿಂದೆ ಮಗುವಾಗಿ ನಲಿದಿದ್ದ – ನಾನು ನನ್ನ ಬಾಲ್ಯ ಜೀವನದ ಸುಖ ಸಂತೋಷಗಳ ಸಮಸ್ತ ಭಂಡಾರವೇ ಆ ಗೋರಿಯಲ್ಲಿ ಮಲಗಿ ಶಾಶ್ವತವಾಗಿ ಮರೆಯಾಯಿತು.

(ಮುಂದುವರಿಯಲಿದೆ)