“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ ಕಲಿಕೆಯ ಪರೀಕ್ಷಾರಂಗ. ಮಾಧೂನಾಯ್ಕರದ್ದು ದೈಹಿಕ ಕಾರಣಗಳಿಗಾಗಿ ನಿವೃತ್ತನಾದ ಹಿರಿಯ ಯಕ್ಷ-ಕಲಾವಿದನ ಪಾತ್ರ. ಈ ಪಾತ್ರದ ಉತ್ತರಾಧಿಕಾರಿಯಾಗಿ ಹೊಳೆದ ಯುವಮಿಂಚಿನ ನಿರ್ವಹಣೆ – ಉಡುಪಿಯ ಯಕ್ಷಗಾನ ಕೇಂದ್ರದ ಪರಮಗುರು ಬನ್ನಂಜೆ ಸಂಜೀವ ಸುವರ್ಣರದ್ದು. ಹೊಸ ತಲೆಮಾರಿನ ಆಟಗಳ ಬಗ್ಗೆ ಹೇವರಿಕೆಯಿಂದ ಯಕ್ಷ-ವೀಕ್ಷಣಾ ಸನ್ಯಾಸವನ್ನು ಪರಿಗ್ರಹಿಸಿದ್ದ `ಮಾಧೂನಾಯ್ಕ’ರಿಗೆ `ಸಂಜೀವಸುವರ್ಣ’ರಿಂದ ತನ್ನ ಪಾತ್ರಪೋಷಣೆಯನ್ನು ನೋಡಲು ಸವಿನಯ ಆಮಂತ್ರಣ ಬಂದಿತ್ತು. ಆಗ ಬಿಟ್ಟರೂ ಬಿಡಲಾಗದ ಕಲಾಮೋಹದಲ್ಲಿ ಉದ್ಗರಿಸಬೇಕಿದ್ದ ನುಡಿಗಳವು. (ನಾನಿಲ್ಲಿ ಆ ಕತೆ ವಿಸ್ತರಿಸುವುದಿಲ್ಲ, ಇಲ್ಲಿ ಚಿಟಿಕೆ ಹೊಡೆದು ಅವಶ್ಯ ಆ ಕಿರು ಚಿತ್ರವನ್ನೇ ಹಿಂದೆ ಬೆಳ್ಳಿತೆರೆಯ ಮೇಲೆ ಎಂದನ್ನುತ್ತಿದ್ದಂತೆ ನಿಮ್ಮ ಗಣಕದ ಕರಿತೆರೆಯ ಮೇಲೆ ನೋಡಿರಿ, ಆನಂದಿಸಿರಿ, ಸಾಲಿಗ್ರಾಮದ ಮಕ್ಕಳಮೇಳ ಕಾಲದ ನಿರಾಶರಾಗದಿರಿ!!) ಶಿವಮೊಗ್ಗದ ಗೆಳೆಯ ಡಾ| ರತ್ನಾಕರ ಉಪಾಧ್ಯ (ಅವರ ದೊಡ್ಡಣ್ಣ) ಮಂಟಪ ಪ್ರಭಾಕರ ಉಪಾಧ್ಯರ ಮೂರು ಪಾತ್ರ ಪ್ರಧಾನವಾದ `ಮಂಟಪ ತ್ರಿವಳಿ’ – ಮೂರು ದಿನಗಳ ಯಕ್ಷಗಾನ ಪ್ರದರ್ಶನ (ಜೂನ್ ೨೦ ರಿಂದ ೨೨, ೨೦೧೪), ವ್ಯವಸ್ಥೆ ಮಾಡಿ ಆಮಂತ್ರಣ ಕಳಿಸಿದಾಗ ಮತ್ತು ಮಂಗಳೂರಿನಲ್ಲೇ ಇರುವ ಡಾ| ಮನೋಹರ ಉಪಾಧ್ಯ (ಅವರ ಕಿರಿತಮ್ಮ) ಒಂದು ಪ್ರದರ್ಶನಕ್ಕಾದರೂ ಪ್ರೀತಿಯ ಕರ್ತವ್ಯವಾಗಿ ಹೋಗಿಬರಲಿದ್ದವರು ಅಷ್ಟೇ ವಿಶ್ವಾಸದಿಂದ ನನ್ನನ್ನು ಜತೆ ಸೇರಿಸಿಕೊಳ್ಳಲು ಒತ್ತಾಯಿಸಿದಾಗ ನನಗೆ ಬಂದ ಮಾತಾದರೂ ಅದೇ – “ಬರ್ತೇನೆ, ಆಟ ನೋಡದೆ ಬಹಳ ದಿನಗಳಾಯ್ತು!”

ಅಲ್ಲದಿದ್ದರೂ `ಮಂಟಪ ತ್ರಿವಳಿ’ ನನಗೆ ಪರಮಾಪ್ತ. ನಾನಿಲ್ಲಿ ಯಕ್ಷಗಾನ ಪ್ರದರ್ಶನಗಳ ಮಾತಾಡುತ್ತಿಲ್ಲ, ಸೋದರರಾದ ಮಂಟಪ ಪ್ರಭಾಕರ, ರತ್ನಾಕರ ಮತ್ತು ಮನೋಹರ ಉಪಾಧ್ಯರ ಬಗ್ಗೆ ಹೇಳುತ್ತಿದ್ದೇನೆ! ಈ ಮೂವರೂ ಅನ್ಯ ವೃತ್ತಿರಂಗಗಳಲ್ಲಿ ದೃಢವಾದ ಹೆಜ್ಜೆಯಿಟ್ಟು, ಆರ್ಥಿಕವಾಗಿ ಸ್ವಯಂಪೂರ್ಣರಾಗಿ, ಯಕ್ಷಗಾನವನ್ನು ಕಲೆಗಾಗಿ ಕಲೆ ಎಂದೇ ನಡೆಸಿಕೊಳ್ಳುತ್ತಿರುವವರು. ಪ್ರಭಾಕರ ರಂಗದ ಮೇಲೆ ತೀವ್ರವಾಗಿ ತೊಡಗಿಕೊಂಡವರು. ಉಳಿದಿಬ್ಬರು ಅದೇ ಮಟ್ಟದಲ್ಲಿ ಅಲ್ಲದಿದ್ದರೂ – ರತ್ನಾಕರ ಸಂಘಟನೆಯ ನೆಲೆಯಲ್ಲಿ ಮತ್ತು ಮನೋಹರ ದಾಖಲೀಕರಣದ ಸೂಕ್ಷ್ಮಗಳಲ್ಲಿ ಸಾಕಷ್ಟು ಕೆಲಸ ಮಾಡಿರುವುದೂ ಕೇವಲ ಕಲಾಪ್ರೀತಿಗಾಗಿ. ಈ ಮಂಟಪ ತ್ರಿವಳಿಗೆ ತಮ್ಮ ಕಲಾಸೇವೆಯ ವ್ರತ ಇತರ ವೃತ್ತಿನಿರತರ ಶೋಷಣೆಯ ಫಲವಾಗಬಾರದೆಂಬ ಎಚ್ಚರ, ತಮ್ಮ ಕೀರ್ತಿಪತಾಕೆಗೆ ನೆಪವಾಗಬಾರದೆಂಬ ವಿನಯ, ಪರೋಕ್ಷವಾಗಿಯೂ ತಮ್ಮ ಆರ್ಥಿಕತೆಗೆ ಮೂಲವಲ್ಲವೆಂಬ ಸ್ಪಷ್ಟ ಕಲ್ಪನೆಯಿದೆ.

ಸಾಲಿಗ್ರಾಮದ ಕೊಂಪೆಯಲ್ಲಿದ್ದ ಪ್ರಭಾಕರ ಉಪಾಧ್ಯ ಮೊದಲ ದಿನಗಳಲ್ಲಿ ಯಕ್ಷಗಾನವನ್ನು ವೃತ್ತಿಯಾಗಿಯೇ ಸ್ವೀಕರಿಸಿದವರು. (ಅವರೇ ಹೇಳಿದ ಮಾತು: “ಆ ಕಾಲದಲ್ಲಿ ನಮಗೆ ಉಡುಪಿಗೆ ಹೋಗುವುದೆಂದರೆ ಇಂದು ಬೆಂಗಳೂರು ದಿಲ್ಲಿಗೆ ಹೋದ ಹಾಗೆ!”) ಆದರೆ ಅದರ ಪ್ರಾವೀಣ್ಯ ಎಷ್ಟು ಹೆಚ್ಚಿದರೂ ತನ್ನ (ಮತ್ತು ತನ್ನನ್ನು ನಂಬಿದವರ) ಜೀವನ ಹಾಗೂ ಕಲಾ ಮಹತ್ತ್ವಾಕಾಂಕ್ಷೆಗಳಿಗೆ ಸಾಟಿಯಾಗದೆಂದು ಕಂಡಿತ್ತು. ಆಗ ಮೇಳದಿಂದ ಹೊರಬಂದು, ಅನ್ಯ ಸ್ವೋದ್ಯೋಗದಲ್ಲಿ `ಸೊಕ್ಕಿ’ ಕಲಾಪ್ರೀತಿಯನ್ನು ಗುಣೈಕ ನಿಷ್ಠೆಯಲ್ಲಿ ಪೋಷಿಸುತ್ತ ಬಂದವರು. ಹಾಗೆಂದು ತನ್ನ ಕಲಿಕೆ ವರ್ತಮಾನದ ವೃತ್ತಿರಂಗದಿಂದ ಪ್ರತ್ಯೇಕ ಉಳಿಯದಂತೆ ಆಗೀಗ ಯಕ್ಷ-ಮೇಳ ಅಥವಾ ವಿಶೇಷ ಕೂಟಗಳನ್ನು ನಿರಾಕರಿಸದೆ ಭಾಗಿಯಾಗುತ್ತಲೂ ಬಂದವರು. ಸಂಶೋಧನೆ, ಚಿಂತನೆಗಳ ಎರಕವಾಗಿ ಯಕ್ಷಗಾನಾಧಾರಿತವಾಗಿ ನಡೆಯುವ ಯಾವುದೇ ಪ್ರಯೋಗ-ಪ್ರದರ್ಶನಗಳಿಗೆ ಪ್ರಭಾಕರ ತೆರೆದುಕೊಂಡೇ ಇರುತ್ತಾರೆ, ಕಲಾಪಗಳಿಗೆ ಪ್ರಚಾರ ಬಯಸದ ದಾನಿಯಾಗಿಯೂ ಬೆಳೆದಿದ್ದಾರೆ. ಅದು ಅಷ್ಟಾವಧಾನದ ಅಂಗವಾದ ಯಕ್ಷಾಭಿನಯ, ಏಕವ್ಯಕ್ತಿ ಪ್ರಯೋಗವಾದ ಭಾಮಿನಿ, ದಾಖಲೀಕರಣ, ಪ್ರಾತ್ಯಕ್ಷಿಕೆಗಳೇ ಇರಬಹುದು – ಪ್ರಭಾಕರ ಉಪಾಧ್ಯರು ಸಂಭಾವನಾರಹಿತವಾಗಿ, ಪೂರ್ಣ ನಿಷ್ಠೆಯಿಂದ ಸ್ತ್ರೀಪಾತ್ರ ನಿರ್ವಹಣೆ ನಡೆಸುತ್ತಾರೆ. ಹೀಗೆ ಮಾಡುವಾಗ `ತಿಟ್ಟು ಬೇಧದ ಕಲಬೆರಕೆ’, `ಸಂಪ್ರದಾಯ ವಿರೋಧೀ’ `ಯಕ್ಷಗಾನವೇ ಅಲ್ಲ’ ಎಂದಿತ್ಯಾದಿ ಆರೋಪಗಳಿಗೆ ಗುರಿಯಾದದ್ದಿದೆ. ಅಲ್ಲೆಲ್ಲ ಅಂಧಾಭಿಮಾನ ಬಿಟ್ಟು, ನೇರ ಮುಖ ಕೊಟ್ಟು ಮಾತಾಡುವವರಿಗೆ ಇವರು ಸಮಜಾಯಿಷಿ ಕೊಡಲು ಹೆಣಗಿದ್ದಿದೆ. ಆಗ ಇವರ ವಕಾಲತ್ತು ಏನಿದ್ದರೂ ತನ್ನ ಪ್ರದರ್ಶನದ ರಕ್ಷಣೆಗಲ್ಲ, ಅದು ಲಕ್ಷಿಸಿದ ಉನ್ನತ ಮೌಲ್ಯಗಳಿಗೆ ಮಾತ್ರ. ಅನಿವಾರ್ಯವಾದಾಗ (ನಾಯಿ ಬೊಗಳುತ್ತಿದ್ದಂತೆ) ತೇರು ಅದರದೇ ಅಬ್ಬರದಲ್ಲಿ ಸಾಗಿದ್ದೂ ಇದೆ.

ಬಹುಖ್ಯಾತಿ ಮತ್ತು ಗುಣಮಟ್ಟಕ್ಕೆ ಬೆಂಗಳೂರಿನಲ್ಲೆಲ್ಲ ಹೆಸರಾದ `ಮಂಟಪ ಐಸ್ಕ್ರೀಮ್’ ಪ್ರಭಾಕರ ಉಪಾಧ್ಯರ ವೃತ್ತಿರಂಗ ಮತ್ತು ಆರ್ಥಿಕ ಸ್ವಾಯತ್ತತೆಯ ಗುಟ್ಟು. ಯಕ್ಷ-ಪ್ರದರ್ಶನ ಮತ್ತು ಇವರದೇ ಪ್ರದರ್ಶನಗಳ ವಿಡಿಯೋ ಚಿತ್ರ ಮಾರಾಟಗಳಿಂದ ಒದಗಿದ ಎಲ್ಲಾ ಹಣವನ್ನಿವರು (ಇವರ ಏಕವ್ಯಕ್ತಿ ತಂಡದಲ್ಲಿ ಹಿಮ್ಮೇಳಾದಿ ಸಹೋದ್ಯೋಗಿಗಳಿಗೆ ಇತರ ಸಮಕಾಲೀನ ಯಕ್ಷ-ಕಲಾವಿದರಿಗೆ ಸಲ್ಲುವ ಸಂಭಾವನೆ, ಸವಲತ್ತುಗಳನ್ನು ಒದಗಿಸಿ) ತನಗೆ ಸಂಸ್ಕಾರ ಮತ್ತು ಖ್ಯಾತಿಯನ್ನು ಕೊಟ್ಟ ಯಕ್ಷಗಾನದ ಉಳಿವು ಬೆಳವಣಿಗೆಗಳಿಗೆ ವಿನಿಯೋಗಿಸುತ್ತಲೇ ಬಂದಿರುವ ಏಕವ್ಯಕ್ತಿಯೂ ಮಂಟಪ ಪ್ರಭಾಕರ ಉಪಾಧ್ಯ ಎಂದರೆ ಖಂಡಿತಾ ತಪ್ಪಾಗಲಾರದು. ಮತ್ತಿದಕ್ಕೆ ಉಡುಪಿಯ ಮೂರೂ ಖ್ಯಾತ ಯಕ್ಷ-ಸಂಘಟನೆಗಳು – ೧. ತಿಟ್ಟು ಬೇಧವಿಲ್ಲದ ಯಕ್ಷಗಾನ ಕಲಾವಿದರ ಹಿತರಕ್ಷಣೆಗೆ ಅದ್ವಿತೀಯ ಕೆಲಸ ನಡೆಸುತ್ತಲೇ ಬಂದಿರುವ ಯಕ್ಷಗಾನ ಕಲಾರಂಗ, ೨. ಉಡುಪಿ ಜಿಲ್ಲೆಯ ಶಾಲಾ ಮಕ್ಕಳಿಗೆ ಉಚಿತ ಯಕ್ಷ-ಶಿಕ್ಷಣ ಮತ್ತು ಪ್ರದರ್ಶನಾವಕಾಶ ಒದಗಿಸುವ ಯಕ್ಷ ಶಿಕ್ಷಣ ಟ್ರಸ್ಟ್ ಮತ್ತು ೩. ಎಂಜಿಎಂ ಕಾಲೇಜಿನ ಆಶ್ರಯದಲ್ಲಿ ನಭೂತೋ ಎನ್ನುವಂತೆ ಬೆಳೆದು ನಿಂತಿರುವ ಯಕ್ಷಗಾನ ಕೇಂದ್ರ, ಇವುಗಳು ಧಾರಾಳ ಸಾಕ್ಷಿ ನುಡಿಯಬಲ್ಲವು.

ರಾತ್ರಿ ಎಲ್ಲಾ ಪ್ರದರ್ಶನ, ಹಗಲೆಲ್ಲಾ ನಿದ್ದೆ – ಯಕ್ಷಗಾನ ಇದ್ದದ್ದೇ ಹಾಗೆ. ಮಳೆಗಾಲದಲ್ಲಿ ಮೇಳದ ಬಂಧವಿಲ್ಲದ ಕೂಟಗಳು ಭವನಗಳೊಳಗೆ ವಿಕಸಿಸುತ್ತಿದ್ದಂತೆ ಹಗಲಿನ ಆಟಗಳು, ಸೀಮಿತಾವಧಿಯ ಪ್ರದರ್ಶನಗಳೂ ಹೆಚ್ಚಿದ್ದೂ ಇಂದು ಹೊಸ ವಿಷಯವಾಗಿ ಉಳಿದಿಲ್ಲ. ಆದರೆ ಇವೆಲ್ಲವುಗಳ ಸಾರ ತೆಗೆದು, ಒಂದೇ ವೇದಿಕೆಗೆ ಒಂದೇ ಪ್ರದರ್ಶನಕ್ಕೆ ತಂದು, ಒಟ್ಟು ಪ್ರದರ್ಶನಾವಧಿಯನ್ನು ದ್ವಿಗುಣಗೊಳಿಸಿ – ಹೌದು, ಅಕ್ಷರಶಃ ಇಪ್ಪತ್ನಾಲ್ಕು ಗಂಟೆಗೆ ವಿಸ್ತರಿಸಿದ ಪ್ರಯೋಗಗಳನ್ನು (೨೦೦೩ರಲ್ಲಿ ಕಲ್ಯಾಣ ಪ್ರಸಂಗಗಳ ಸಂಕಲನ – ಕಲ್ಯಾಣೋತ್ಸವ ಮತ್ತು ೨೦೦೭ರಲ್ಲಿ ಹಾಗೇ ಕಾಳಗೋತ್ಸವ), ಅದೂ ಸಾಮಾನ್ಯವಾಗಿ ಯಕ್ಷವಲಯವೆಂದೇ ಪರಿಗಣಿತವಾಗುವ ಕರಾವಳಿ ಮೀರಿ, ಶಿವಮೊಗ್ಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಮುಟ್ಟಿಸಿದ ಖ್ಯಾತಿಯಲ್ಲಿ ಅಭ್ಯುದಯ (ರಿ) ಸಂಸ್ಥೆಯ ಲಕ್ಷ್ಮೀನಾರಾಯಣ ಕಾಶಿಯವರಿಗೆ ಸಮಭುಜದ ಪಾಲುಗಾರ ಡಾ| ಮಂಟಪ ರತ್ನಾಕರ ಉಪಾಧ್ಯ. ಸ್ವಪ್ರಚಾರ, ಆದಾಯದ ಕಿಂಚಿತ್ ಆಶಯವೂ ಇಲ್ಲದೆ ತೊಡಗುವ ಇವರಲ್ಲಿನ ಚಿಂತನೆ, ಶ್ರಮ ಮತ್ತು ಅಪಾರ ಹಣಕ್ಕೆ ಒಂದೇ ಲಕ್ಷ್ಯ ಜ್ಞಾನಮುಖೇನ ಸಮಾಜಸೇವೆ.

ಸಾಮಾನ್ಯ ಪುಸ್ತಕದಂಗಡಿ ಮಾಲಿಕ ನಾನು, ಖಾಸಗಿ ಗೋ-ಡಾಕ್ಟ್ರು ಮನೋಹರ ಉಪಾಧ್ಯ – ಇಬ್ಬರನ್ನು ಬಂಧಿಸಿದ ಎಳೆ ಯಕ್ಷಗಾನ. ಬಹುಶಃ ಅವರು ಪುರಭವನದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಸಂಘಟಿಸಿಕೊಟ್ಟ ಯಕ್ಷಗಾನ ಗಾನವೈಭವ. ಮುಂದೊಂದು ದಿನ ಮನೋಹರ್ ಹೊಸ ಮನೆ – ಮಧ್ಯಮಾವತಿ ಮತ್ತು ಚಿಕಿತ್ಸಾ ಕುಟೀರ – ಋತುಪರ್ಣ ಕಟ್ಟಿಸಿದರು. ಅವು ಅನುಕೂಲ, ಪರಿಸರ ಮತ್ತು ಕಲಾ ಪ್ರೇಮಗಳ ಸಂಗಮವೇ ಆಗಿತ್ತು. ಸಹಜವಾಗಿ ಅದರ ಪ್ರಾರಂಭವನ್ನು ಮನೋಹರ್ ಒಳ್ಳೆಯ ಯಕ್ಷಗಾನ ಕೂಟ ನಡೆಸುವುದರೊಂದಿಗೇ ಮಾಡಿದ್ದರು. ನನಗೆ ಭಾಗವಹಿಸಲು ಸಮಯಾನುಕೂಲವಾಗದಿದ್ದರೂ ಭಾವಬಂಧ ಬಲಿಯಿತು. ಮುಂದುವರಿದ ದಿನಗಳ ಇವರ ಸಾಹಿತ್ಯ ಮತ್ತು ಯಕ್ಷಗಾನ ಸಂಬಂಧಪಟ್ಟ ಕಲಾಪಗಳು ಅಸಂಖ್ಯ. ಅವು ಸಾರ್ವಜನಿಕ ವೇದಿಕೆಯಲ್ಲಷ್ಟೇ ನಡೆದವೂ ಅಲ್ಲ. ಮತ್ತವುಗಳನ್ನು ಪಟ್ಟಿ ಮಾಡಲೂ ನಾನು ಹೊರಡುತ್ತಿಲ್ಲ (ಅಂಥ ಪಟ್ಟಿ ಸ್ವತಃ ಮನೋಹರ ಉಪಾಧ್ಯರೇ ಇಡುವವರಲ್ಲ). ಆದರೆ ಅವರ ಗುಣಪಕ್ಷಪಾತವನ್ನು ಎತ್ತಿ ಆಡುವ ಅನಿವಾರ್ಯತೆಗೆ ಎಲ್ಲೂ ಕಾಣದ ಒಂದೆರಡು ಕಲಾಪಗಳನ್ನಾದರೂ ನಾನಿಲ್ಲಿ ಸೂಕ್ಷ್ಮವಾಗಿ ಹೇಳಲೇಬೇಕು.

ಸಾಲಿಗ್ರಾಮದ ಮಕ್ಕಳಮೇಳ ಕಾಲದ ಅನಿವಾರ್ಯತೆಯಲ್ಲಿ (ಮಕ್ಕಳು ಪ್ರೌಢರಾಗುತ್ತಾರಲ್ಲ!) ವರ್ಷಾವರ್ಷ ಕಳಚುತ್ತಿದ್ದರೂ ಅದನ್ನು ಹಿಂಗದ ಉತ್ಸಾಹದಲ್ಲಿ ಮತ್ತೆ ಮತ್ತೆ ಕಟ್ಟಿ ರಂಗಕ್ಕೇರಿಸುತ್ತಲೇ ಬಂದವರಲ್ಲಿ ಬಹುಮುಖ್ಯರು – ಪಟೇಲರ ಮನೆಯ ಶ್ರೀಧರ ಹಂದೆ. ವೇದಿಕೆಯೆದುರು ಗೂಟ ಊರಿ, ಪ್ರದರ್ಶನವನ್ನು ವಿಡಿಯೋ ಮಾಡಿಯೋ ಸೂಊಊಪರ್ ಸ್ಥಿರಚಿತ್ರಗಳನ್ನು ದಾಖಲು ಮಾಡಿ, `ಮಾಲು’ ಮಾಡಿಕೊಳ್ಳುವವರು ಎಷ್ಟೂ ಸಿಕ್ಕುತ್ತಾರೆ. ಆದರೆ ಸಂಘಟನೆಯ ಹಿಂದಿನ ಒಟ್ಟು ಹಂದೆಯವರ ಕುಟುಂಬದ ಯಕ್ಷ-ಪ್ರೀತಿ, ಶ್ರಮಗಳನ್ನು ಒಮ್ಮೆಗಾದರೂ ಒಂದು ಸಾರ್ಥಕ ದಾಖಲೀಕರಣಕ್ಕೊಳಪಡಿಸುವ ಮತ್ತು ಸ್ವಂತ ಖರ್ಚಿನಲ್ಲಿ ಆಗಮಾಡಿಸಿದವರು ಮನೋಹರ ಉಪಾಧ್ಯರು.

ನಾನು `ಅಭಯಾರಣ್ಯ’ದಲ್ಲಿ ಮೊದಲ ದೀವಟಿಗೆ ಯಕ್ಷ-ಪ್ರದರ್ಶನ ಮತ್ತು ಕೆಲವು ಕಲಾಪಗಳನ್ನು ಸಂಘಟಿಸಿದ್ದೆ. ಅದರ ಒಂದು ದೊಡ್ಡ ಕಲಾಪವನ್ನು ನಡೆಸಲಿದ್ದವರು ಶತಾವಧಾನಿ ಗಣೇಶ. ಇವರನ್ನು ಬೆಂಗಳೂರು ಬಸ್ಸಿನಿಂದಿಳಿಸಿಕೊಂಡಲ್ಲಿಂದ ಓಡಾಟ, ಆತಿಥ್ಯ ನೋಡಿಕೊಂಡು ಮರಳಿ ಬಸ್ಸಿಗೆ ಮನೋಹರವಾಗಿಯೇ ಬಿಟ್ಟವರು ಇದೇ ಉಪಾಧ್ಯರು. ಶ್ರೀಧರ ಹಂದೆಯವರು ಬಾಲಾಪ್ಯ ಪ್ರಭಾವಿಸಿದ ಊರಿನವರೇ ಆಯ್ತು, ಗಣೇಶರೋ ತುಂಬಾ ಸರಳ ಮತ್ತು ಸ್ನೇಹಜೀವಿ ಎಂದೆಲ್ಲಾ ಕಾರಣಕ್ಕೆ ಹಗುರವಾಗಿರಬೇಕು ಎಂದು ಯಾರಾದರೂ ವಿಶ್ಲೇಷಿಸಿದರೆ ತಪ್ಪಿಲ್ಲ. ಆದರೆ ಖಿಲವಾಗುತ್ತಿರುವ ಕರ್ಕಿಶೈಲಿ ಯಕ್ಷಗಾನ, ದೀವಟಿಗೆ ಬೆಳಕಿನಲ್ಲಿ ಒಂದೊಂದು ತೆಂಕು ಮತ್ತು ಬಡಗು ತಿಟ್ಟಿನ ಸಾಕಷ್ಟು ಪುನರುಜ್ಜೀವಿತ ಯಕ್ಷ ಆಖ್ಯಾನಗಳನ್ನು ದಾಖಲೀಕರಣಗೊಳಿಸುವ ಯೋಜನೆ, ಸಾಹಸ ಮತ್ತು ಬಹುದೊಡ್ಡ ಆರ್ಥಿಕ ಪಾಲುದಾರಿಕೆ ಮನೋಹರ ಉಪಾಧ್ಯರದ್ದೇ. (ಅಭಯ ಮತ್ತು ನನ್ನ ಸಹಕಾರಗಳೇನಿದ್ದರೂ ನಮಗೆ ಯೋಜನೆಯಲ್ಲಿ ಪೂರ್ಣ ಸಹಮತವಿದ್ದುದರಿಂದ ಅನುಸರಣೆಯವು ಮತ್ತು ತೀರಾ ಸಣ್ಣ ಆರ್ಥಿಕ ಮಟ್ಟದ್ದುಮಾತ್ರ.) ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ, ಆದಿತ್ಯವಾರಗಳಂದೂ ಅರ್ಧ ದಿನ ಇದ್ದಲ್ಲಿ ಹೋದಲ್ಲಿ (ಚರವಾಣಿ), ನಮ್ಮ ಭಾಷೆಯಲ್ಲಿ ಹೇಳುವುದಾದರೆ ಕಾಡುವ ಜಾನುವಾರು ಸಂಕಷ್ಟಗಳನ್ನು, ನಗುಮುಖದಿಂದಲೇ ಆದರೆ ಗಹನವಾಗಿಯೇ ಪರಿಹರಿಸುತ್ತಲೇ ಈ ಯಕ್ಷಗಾನ, ಸೇವೆ ಎಂದು ಹೊಡಚಾಡುವ ಸಂಗತಿ ನಿಜಕ್ಕೂ ಅಸಾಮಾನ್ಯ.

“ಹ್ವಾಯ್ ರತ್ನಾಕರಣ್ಣಯ್ಯನ ಅಹೋರಾತ್ರಿಗೆ ಹೋಪನಾ” ಎಂದೆರಡು ಬಾರಿಯೂ ತನ್ನ ಆಟ ನೋಡುವ ಚಟ ತೀರಿಸಿಕೊಳ್ಳುವುದರೊಂದಿಗೆ ನಮ್ಮ ಮಿತ್ರ ಮಂಡಲಿಗೂ ಶಿವಮೊಗ್ಗಕ್ಕೆ ಹೋಗಿ, ನೋಡಿ ಬರುವ ಅವಕಾಶ ಬಹಳ ಸುಲಭ ಮಾಡಿದವರು ಮನೋಹರರೇ. ಹಾಗೇ ಆಯ್ತು ಈ ಬಾರಿಯೂ. ರತ್ನಾಕರರೇನೋ ಗಟ್ಟಿ ಆಮಂತ್ರಣ ಕಳಿಸಿ, ಮಿಂಚಂಚೆಯಲ್ಲಿ ಪ್ರತ್ಯೇಕ ಹೇಳಿಕೆ ಮಾಡಿ ಮಂಟಪ ತ್ರಿವಳಿ – ಯಕ್ಷ ಪ್ರದರ್ಶನಕ್ಕೆ ನನ್ನ ನಿರೀಕ್ಷೆಯಲ್ಲಿದ್ದರು. ಆದರೆ ಮೂರು ದಿನವೂ ಕೇವಲ ಸಂಜೆ ಆರರಿಂದ ಹತ್ತು ಗಂಟೆಯವರೆಗಿನ ಪ್ರದರ್ಶನಕ್ಕೆ ಅದೂ ಮಳೆಗಾಲದಲ್ಲಿ ಮಂಗಳೂರಿನ ದೂರದಿಂದ ಹೇಗೆ ಹೋಗಿ ಬರಲೀಂತ ಉದಾಸೀನನಾಗಿದ್ದೆ. ಆದರೆ ಮನೋಹರ ಹಿಡಿದುಕೊಂಡರು. ಒಂದು ದಿನಕ್ಕಾದರೂ ಹೋಗಿ ಬರುವಾಂದರು, ನಾನು ಸೈ ಎಂದೆ. ಅವರು ಇವರೆಂದರೂ ಕಾರಿಗೆ ಜನ ನಾವಿಬ್ಬರೇ ಉಳಿದೆವು. ನಮ್ಮ ಅದೃಷ್ಟಕ್ಕೆ (ಖಂಡಿತವಾಗಿಯೂ ಊರಿನದ್ದಲ್ಲ) ಮಳೆಯ ಅಬ್ಬರ ಇರಲೇ ಇಲ್ಲ. ಶುಕ್ರವಾರ ಅಪರಾಹ್ನ ಒಂದು ಗಂಟೆಗೆ ಮಂಗಳೂರು ಬಿಟ್ಟವರು ಸಂಜೆ ಐದೂವರೆಗೆ ಶಿವಮೊಗ್ಗ. ಪ್ರದರ್ಶನ ಗಡಿಯಾರದ ನಿಖರತೆಯಲ್ಲಿ ಆರು ಗಂಟೆಗೆ ದೀಪೋಜ್ವಲನ ಕಂಡಿತು. ಅದರಿಂದಾಚೆಗೆ `ಬಿಟ್ಟಿ ಬಂದು’ ಸಭಾಭವನ ತುಂಬಿದ್ದಾರೆಂಬಂತೆ, ಪ್ರೇಕ್ಷಕರಿಗೆ ಯಾವುದೇ ಔಪಚಾರಿಕ ಸಭಾ ಕಲಾಪಗಳ ಹೊರೆಯಿಲ್ಲದಂತೆ `ಸಾವಿತ್ರೀ ಸತ್ಯವಾನ’ರಿಗೆ ರಂಗ ತೆರವಾಯ್ತು.

ಪ್ರತಿ ಪ್ರದರ್ಶನವೂ ನಿಜದಲ್ಲಿ ಹೊಸತೇ ಪ್ರಯೋಗ ಎಂಬರ್ಥದ ಖ್ಯಾತ ನಾಟಕಕಾರರ (ಬಿವಿ ಕಾರಂತರಿರಬೇಕು) ಮಾತಿಗೊಂದು ಸುಂದರ ಸಮರ್ಥನೆ ಶಿವಮೊಗ್ಗದ ಮಂಟಪ ತ್ರಿವಳಿಯ ಮೊದಲ ಯಕ್ಷ-ಪ್ರದರ್ಶನ – ಸಾವಿತ್ರೀ ಸತ್ಯವಾನದಲ್ಲೂ ಸಿಕ್ಕಿತು. ಯಕ್ಷಗಾನ ವೃತ್ತಿರಂಗದಲ್ಲಿ ಇಲ್ಲದ, ಹವ್ಯಾಸೀ ಕೂಟಗಳಲ್ಲೂ ಅಪೂರ್ವಕ್ಕೆ ಸಿಕ್ಕರೂ ಬಹುತೇಕ ರಿಯಾಯಿತಿಯೊಡನೆಯೇ ಮೆಚ್ಚಬೇಕಾಗುವ ಸ್ತ್ರೀಯಿಂದ ಪುರುಷವೇಶಕ್ಕಿಲ್ಲಿ ಅಪವಾದ ಒದಗಿಸಿದವರು ಸತ್ಯವಾನ್ ಪಾತ್ರಧಾರಿ – ಸೌಮ್ಯ ಅರುಣ್ (ತೆಂಕು ತಿಟ್ಟಿನ ವಿದ್ಯಾ ಕೋಳ್ಯೂರು, ನಾನು ಹೀಗೇ ನೋಡಿದ ಇನ್ನೊಂದು ಅಪವಾದ, ಇಲ್ಲಿ ಅವಶ್ಯ ಉಲ್ಲೇಖನಾರ್ಹ). ಈ ಹಿಂದೆ, ಪ್ರಭಾಕರ ಉಪಾಧ್ಯರ ಸ್ತ್ರೀ ವೇಷಕ್ಕೆ ಸರಿದೊರೆಯಾಗಿ ಪುರುಷವೇಶದಲ್ಲಿ ವಿಖ್ಯಾತ ಭರತನಾಟ್ಯ ಪಟು – ಸುಂದರಿ ಸಂತಾನಮ್, ಯಕ್ಷನಡೆಗಳನ್ನು ಕಲಿತು ಜೊತೆಗೊಟ್ಟ ಪ್ರಯೋಗ ನನಗೆ ವಿಡಿಯೋದಲ್ಲಷ್ಟೇ ನೋಡಲು ಸಿಕ್ಕಿತ್ತು. ಆದರೆ ಅದು ಪರಿಪೂರ್ಣ ಯಕ್ಷಗಾನವಾಗುವಲ್ಲಿ ಮಾತಿನ ಕೊರತೆ ಅನುಭವಿಸಿತ್ತು; ಕೇವಲ ಯಕ್ಷ ನಾಟ್ಯ ರೂಪಕವಾಗಿತ್ತು. ಸೌಮ್ಯ ಅರುಣ್ ಚೌಕಿಯಲ್ಲಿ ಯಾರೋ ವೇಷ ಕಟ್ಟಿಬಿಟ್ಟ ಸುಂದರ ಗೊಂಬೆಯಲ್ಲ, ಈಕೆಯ ನಡೆಯ ಖಾಚಿತ್ಯ, ಭಾವದ ಅಭಿವ್ಯಕ್ತಿ, ಅಭಿನಯದ ಸೌಂದರ್ಯ, ಮಾತಿನ ಸಂಪತ್ತು ಮತ್ತು ಔಚಿತ್ಯ ಒಂದೊಂದೂ ಅನನ್ಯವಾಗಿತ್ತು. ಹೋಲಿಕೆ ತಪ್ಪಾದರೂ ಹೇಳಿಬಿಡುತ್ತೇನೆ – ಯಾವುದೇ ಖ್ಯಾತ ಪುರುಷವೇಷಧಾರಿಗೆ ಕಡಿಮೆಯದ್ದಾಗಿರಲಿಲ್ಲ. ಮೊದಲು ಅಪರಿಚಿತ ಸಾವಿತ್ರಿಯ ಪ್ರವೇಶದೊಡನೆ ವನ್ಯ ಪರಿಸರದಲ್ಲಾದ ಉತ್ತಮಿಕೆಯನ್ನು ಗುರುತಿಸುವ ಪರಿ, ಮರ್ಯಾದಾಪುರುಷನ ಮಿತಿ ಕಡಿಯದಂತೆ ಸಾವಿತ್ರಿಯೊಡನೆ ಸಂವಾದ, ದಾಂಪತ್ಯ ಬಂಧನದಲ್ಲಿ ನಿತ್ಯ ವನಸಂಚಾರಕ್ಕೆ ಸಾವಿತ್ರಿಯನ್ನು ನಿರಾಕರಿಸುವ ಕ್ರಮ ಮತ್ತು ಕೊನೆಯಲ್ಲಿ ಸಾವಿತ್ರಿಯೊಡನೆ ವನಸೌಂದರ್ಯಕ್ಕೆ ಸಂಭ್ರಮಿಸುವ ಉದ್ದಕ್ಕೂ ಪ್ರದರ್ಶನ ಎಲ್ಲೂ ಮೆಲು-ನಡೆಯ ಪ್ರಸಂಗ ಎಂದನ್ನಿಸಲೇ ಇಲ್ಲ. ಇದು ನನ್ನೊಬ್ಬನ ಭಾವನೆ ಅಲ್ಲ ಎನ್ನುವಂತೆ ಬಹುತೇಕ ತುಂಬಿದ ಭವನದ ಹರ್ಷೋದ್ಗಾರವೂ ಸಾಕ್ಷಿ ನುಡಿಯುತ್ತಿತ್ತು.

ಮಂಟಪ ಪ್ರಭಾಕರ ಉಪಾಧ್ಯರಿಗೆ ಸೌಮ್ಯ ಜೋಡಿ ಇದೇನು ಮೊದಲಲ್ಲವಂತೆ. ಸ್ವತಃ ಎರಡು ಪ್ರಾಯಪ್ರಬುದ್ಧ ಮಗಳಂದಿರ ಪುರುಷವೇಶವೇ ಮೊದಲಾಗಿ ಅಸಂಖ್ಯ ಸ್ತ್ರೀ-ಪುರುಷವೇಶಗಳೊಡನೆ ಪ್ರಯೋಗಗಳಿಗೆ ಒಡ್ಡಿಕೊಂಡು ಯಶಸ್ಸು ಕಂಡವರೇ ಇವರು. ಆದರಿಲ್ಲಿ ಪ್ರಸಂಗದ ನಡೆಯೇ ಸಾವಿತ್ರಿಯ ಪಾತ್ರವನ್ನು ಸಾಂಪ್ರದಾಯಿಕ ಸ್ತ್ರೀಪಾತ್ರದ ಮಿತಿಯಲ್ಲಿ ಕಾಣಲು ಅವಕಾಶ ಕೊಡುವುದಿಲ್ಲ. ಸತ್ಯವಾನ ವಿನಮ್ರನಾಗಿರುವಾಗ ಈಕೆ ಪ್ರೇಮ ಭಿಕ್ಷೆಯಲ್ಲ, ದಾಂಪತ್ಯದ ಇಚ್ಛೆಯನ್ನು ಮುಂದಿಡುತ್ತಾಳೆ. ಅದು ಬದ್ಧವಾಗಿ ಸತ್ಯವಾನ ಸಂಭ್ರಮಿಸುವ ಕಾಲದಲ್ಲಿ ಸಾವಿತ್ರಿ ಆತನಿಗೆ ತಿಳಿಯದ ಆತನದೇ ಮರಣದ ಭಯ ಸಾವಿತ್ರಿಯನ್ನು ಆವರಿಸಿರುತ್ತದೆ. ವ್ರತಬದ್ಧಳಾಗಿ ನಿಶ್ಶಕ್ತಳಾದ ಸಾವಿತ್ರಿಯನ್ನು ಸತ್ಯವಾನ ವನಕ್ಕೊಯ್ಯಲು ನಿರಾಕರಿಸಿದಾಗ ಅಕ್ಷರಶಃ ಪತಿವ್ರತಾ ನಿಷ್ಠೆ ವಿನಾ ಕಾರಣ ಹಠದಂತೆ ಹೊಮ್ಮುತ್ತದೆ. ಸತ್ಯವಾನ ವನದಲ್ಲಿ ಸಂಭ್ರಮಿಸುವಾಗ ಸಾವಿತ್ರಿ ವಿಪತ್ತಿನ ಕ್ಷಣಗಣನೆಯಲ್ಲಿದ್ದರೂ ಆತನಲ್ಲಿ ತೋರಿಸಲಾಗದ ಶೋಕೋತ್ಕಂಠಿತೆಯಾಗುತ್ತಾಳೆ.

ಯಮನೇ ಪ್ರತ್ಯಕ್ಷವಾದಾಗ ಈಕೆ `ಕಾಲ’ದ ಎದುರೀಜುವ ಛಲಗಾತಿ; ಕಥಾ `ನಾಯಕ’ಳೇ ಆಗುತ್ತಾಳೆ. ಮದ್ದಳೆಯ ಬಲ ಕರ್ಣದ ಅಸಂಖ್ಯ ನುಡಿಸಾಣಿಕೆಗಳಿಗೆ ಮಿತ ಎಡಕರ್ಣದ ಒತ್ತುಗಳು ಸಾಂಗತ್ಯ ಮೂಡಿಸುವ ಪರಿಯಲ್ಲಿ ಸೌಮ್ಯರ ಸತ್ಯವಾನನಿಗೆ ಉಪಾಧ್ಯರ ಸಾವಿತ್ರಿ ಸೇರಿ ನಿಸ್ಸಂದೇಹವಾಗಿ ಪ್ರದರ್ಶನ ಅತೀವ ಯಶಸ್ಸನ್ನೇ ಕಂಡಿತು.

ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆಯ ರಾಗರಸಧಾರೆಗೆ ಎಂದಿನಂತೆ ಎ.ಪಿ.ಪಾಠಕ್ – ಮದ್ದಳೆ ಹಾಗೂ ಗಣೇಶ್ ಗಾವ್ಕರ್ – ಚಂಡೆಗಳಲ್ಲಿ, ದ್ರಾಕ್ಷೆ ಗೋಡಂಬಿಗಳಾಗಿ ಸೇರಿ ಬಂದರು. (ಮಂಟಪರ ಸೆಟ್ ಎಂಬಷ್ಟು ಅಚ್ಚೊತ್ತಿದ್ದ ಚಂಡೆಗಾರ ಯಾಜಿಯವರ ಕೊರತೆ ಕಾಡಲಿಲ್ಲ ಎನ್ನುವುದು ಗಾವ್ಕರರಿಗೆ ಪ್ರಶಸ್ತಿ!). ಎಷ್ಟೇ ಸಾಂಪ್ರದಾಯಿಕ ಹೊತ್ತು, ಗೊತ್ತುಗಳನ್ನು (ವೇದಿಕೆ) ನಿರಾಕರಿಸಿದರೂ ಪ್ರಸಂಗ ಪ್ರವೇಶಕ್ಕೆ ಚುಟುಕಾದರೂ ಪೂರ್ವ ರಂಗವಿದ್ದರೆ ಒಟ್ಟಂದದ ಕಳೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಅದರಲ್ಲಿ ಪೀಠಿಕಾ ಸ್ತ್ರೀ ವೇಷ ಅಚ್ಚುಕಟ್ಟಾಗಿಯೇ ಇತ್ತು. ಆದರೆ ಬಾಲಗೋಪಾಲನಾಗಿ ಮೆರೆದ ಪುಟ್ಟ ಹುಡುಗಿ ಚಿತ್ಕಲಾ ತುಂಗಳ (ಬೆಂಗಳೂರಿನಲ್ಲಿ ಯಕ್ಷಗುರು ಯಾರೆಂದು ಕೇಳಿದ್ದೀರಿ, ಎಂದೇ ಖ್ಯಾತರಾದ ಕೃಷ್ಣಮೂರ್ತಿ ತುಂಗರ ಶಿಷ್ಯೆ, ಮಗಳೂ ಹೌದು) ಹಸನ್ಮುಖ, ನಿರ್ಭಿಡೆಯ ನಾಟ್ಯದ ಕುರಿತು ಒಂದು ಮಾತು ಎತ್ತಿ ಆಡಲೇಬೇಕು.

ಮುಂದುವರಿದ ಒಡ್ಡೋಲಗದಲ್ಲೂ ಚಿತ್ಕಲಾ ಭಾಗಿಯಾಗಿ ಯಾವ ಪ್ರೌಢ ವೇಷಧಾರಿಗೂ ಎರಡನೆಯದಾಗದ ಛಾತಿ ತೋರಿದಳು. ಅಲ್ಲಿನ ಔಪಚಾರಿಕ ಮಾತುಗಳಲ್ಲಿ ಆಕೆಯ ಪ್ರಾಯ ಸಹಜವಾದ ಕೀಚಲು ಧ್ವನಿಯ ಹೂಂಗುಟ್ಟುವಿಕೆ ಒಮ್ಮೆಗೆ ತಮಾಷೆಯಾಗಿ ಕೇಳಿದರೂ ಪಾತ್ರ ತನ್ಮಯತೆಗೆ ಮೆರುಗು ಕೊಡುವಂತೆಯೇ ಇತ್ತು; ಸಂತೋಷಭರದಲ್ಲಿ ಆಕೆಯನ್ನು ಅಕ್ಷರಶಃ ಎತ್ತಿ ಆಡಿಸುವಂತಿತ್ತು!

ಪ್ರದರ್ಶನ ಮುಗಿದ ಕೂಡಲೇ ರಾತೋರಾತ್ರಿ ನಾವು ವಾಪಾಸು ಹೊರಟೆವು. ಮುಂದಿನೆರಡು ಸಂಜೆಗಳಿಗೋಸ್ಕರ ಹಗಲನ್ನು ವ್ಯರ್ಥಗೊಳಿಸುವ ಶ್ರೀಮಂತಿಕೆ ನಮ್ಮಿಬ್ಬರಲ್ಲೂ ಇರಲಿಲ್ಲ. ಶಿವಮೊಗ್ಗಕ್ಕೆ ಹೋಗುವ ದಾರಿಯಲ್ಲಿ, ಸಂಜೆ ಆಗುಂಬೆ ಘಾಟಿ ಏರುವಾಗ ಭರ್ಜರಿ ಮಳೆ, ತುಸು ಮುಂದೆ ಪೇಟೆ ಹಾಯುವಾಗ ದಟ್ಟ ಮಂಜು ನಮ್ಮನ್ನು ಕಂಗೆಡಿಸಿತ್ತು. ಸಮಯಕ್ಕೆ ಮುಟ್ಟಿಯೇವಾ ಪ್ರದರ್ಶನ – ಕಾಲದ ನಿರೀಕ್ಷೆಗಳಿಗೆ ಸರಿಯಾಗಿ ಕಳೆಗಟ್ಟೀತಾ ಮಂಗಳೂರಿಗೆ ಸುಕ್ಷೇಮವಾಗಿ ಮರಳುವಲ್ಲಿ ಹೊತ್ತಿನ ಹೊಂಚು (ಅಪರಾತ್ರಿ, ದಟ್ಟ ಮಂಜು, ಜಡಿ ಮಳೆ ಇತ್ಯಾದಿ) ಹೇಗಿದೆಯೋ ಎಂಬೆಲ್ಲ ಅನಿಶ್ಚಿತತೆಗಳು ಕಾಡುತ್ತಲೇ ಇದ್ದುವು. ತಮಾಷೆ ಎಂದರೆ ಸಾವಿತ್ರೀ ಸತ್ಯವಾನ ಪ್ರಸಂಗದ ನಿಜ ತಿರುವಿಗೂ ಕಾಲವೇ ಮೂರ್ತಿಮತ್ತಾಗಿ ಅರ್ಥಾತ್ ಸಾಕ್ಷಾತ್ ಯಮಧರ್ಮನೇ (ಪಾತ್ರಧಾರಿ ಥಂಡಿಮನೆ ಶ್ರೀಪಾದ ಹೆಗಡೆ) ಪ್ರವೇಶಿಸಬೇಕಾಗಿತ್ತು. ಅವನ ಅದ್ಭುತ ನಡೆ, ಭಯಾನಕ ರೂಪ, ಗತ್ತು ಗೈರತ್ತುಗಳೊಡನೆಯೂ ಗುಣಗ್ರಾಹಿತ್ವ ಸಾವಿತ್ರಿಯ ವಿಜಯವನ್ನೂ ಪ್ರೇಕ್ಷಕರ ಮನಸ್ಸಲ್ಲಿ ಪ್ರಸಂಗದ ಯಶಸ್ಸನ್ನೂ ಸ್ಥಾಪಿಸಿತು. ಬಹುಶಃ ಅಂಥ ಪ್ರದರ್ಶನ ಕೊಟ್ಟ ಪ್ರಸನ್ನತೆಗೆ ಪೂರಕವಾಗಿ ನಮ್ಮ ಪ್ರಯಾಣವೂ ನಿರಾತಂಕವಾಗಿ ಸಾಗಿತು. ದಾರಿಗೆ ಅಂಚುಗಟ್ಟಿದಂತೆ ತುಂಬಿ ನಿಂತ ಗಾಜನೂರು ಅಣೆಕಟ್ಟೆಯ ಹಿನ್ನೀರು, ಪ್ರತಿ ಕಿಮೀ ಕಲ್ಲು, ಹಿಂಬೀಳುವ ಹಳ್ಳಿ, ಊರುಗಳೆಲ್ಲಾ ನಮಗೆ ಮಂಗಳೂರು ಎಷ್ಟು ಹತ್ತಿರವೆಂದಷ್ಟೇ ಸಾರುತ್ತಿದ್ದುವು; ದೂರವನ್ನು ಹೇಳುತ್ತಿರಲಿಲ್ಲ!

ಮಂಟಪ ತ್ರಿವಳಿಯಲ್ಲಿ ಎರಡು ಬಾಕಿಯುಳಿಯಿತು ಎನ್ನುವುದಕ್ಕಿಂತಲೂ ಸಾವಿತ್ರ ಸತ್ಯವಾನ್ ನೋಡಿದ ಸಂತೋಷ ಗಟ್ಟಿಯಾಯಿತು.