ಅಧ್ಯಾಯ ಹನ್ನೊಂದು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹದಿಮೂರನೇ ಕಂತು

The Wine Shop

ಎಂಥ ಹೊಸ ಪರಿಸ್ಥಿತಿ ನನಗೆ ಬಂದೊದಗಿದರೂ ಆಶ್ಚರ್ಯಪಡದಷ್ಟು ಪ್ರಪಂಚದ ಅನುಭವ ನನಗೆ ಈಗಾಗಲೇ ಬಂದಿದ್ದರೂ ಈಗ ನನಗೆ ಒದಗಿದ್ದ ಹೊಸ ಜೀವನ ವೃತ್ತಿ ಮಾತ್ರ ಒಂದು ಆಶ್ಚರ್ಯದ ಸಂಗತಿಯಾಗಿಯೇ ತೋರಿತು. ವಿಷಯಗಳನ್ನು ವಿಮರ್ಶೆಯಿಂದ ತಿಳಿಯುವಷ್ಟು ಬುದ್ಧಿಯಿದ್ದು, ದೇಹ ಮನಸ್ಸುಗಳಲ್ಲಿ ಚಟುವಟಿಕೆಯಿದ್ದು, ಇನ್ನೂ ಕೇವಲ ಹತ್ತು ವರ್ಷಗಳ ಪ್ರಾಯ ಪೂರೈಸದ ನಾನು, ಕಾಯಕಷ್ಟದ ದುಡಿಮೆಯಲ್ಲಿ ನಿರತನಾಗಬೇಕಾದ ಒಬ್ಬ ಕಾರ್ಮಿಕನಾಗಿ, ಲಂಡನ್ ನಗರದ ಮರ್‍ಡ್ಸ್ಟನ್ ಮತ್ತು ಗ್ರೀನ್ಬಿ ಕಂಪೆನಿಯಲ್ಲಿ ಸೇರಿಸಲ್ಪಟ್ಟ ಸಂಗತಿ ನನಗೆ ಬಹು ಆಶ್ಚರ್ಯದ್ದೇ ಆಗಿತ್ತು.

ಮರ್ಡ್ಸ್ಟನ್ ಮತ್ತು ಗ್ರೀನ್ಬಿ ಕಟ್ಟಡಗಳಿಗೆ ಸಾಧಾರಣ ಒಂದು ನೂರು ವರ್ಷಗಳಾದರೂ ಆಗಿರಬಹುದೆಂದು ನಾನು ಅಂದಾಜು ಕಟ್ಟಿದೆ. ಈ ಕಟ್ಟಡದ ಎಲ್ಲಾ ಭಾಗಗಳೂ ಜರ್ಝರಿತವಾಗಿದ್ದುವು. ಈ ಕಟ್ಟಡದ ಒಂದು ಭಾಗ ಸಮುದ್ರದ ಕಡೆಗೆ ಮುಂದುವರಿದಿದ್ದು, ಆ ಭಾಗದ ತುದಿಯಲ್ಲಿ ಒಂದು ಧಕ್ಕೆಯೂ ಇತ್ತು. ಸಮುದ್ರದ ಭರತ ಸಮಯಗಳಲ್ಲಿ ಈ ಧಕ್ಕೆಯ ಬದಿಗೆ ದೋಣಿಗಳು ಬಂದು ಕಾರ್ಖಾನೆಯ ಮಾಲುಗಳನ್ನು ತುಂಬಿಕೊಂಡು ಹೋಗುತ್ತಿದ್ದುವು. ಸಮುದ್ರ ಇಳಿದಾಗ ಧಕ್ಕೆಯ ಅಡಿಯಲ್ಲೂ, ಸುತ್ತಲೂ ಕೆಸರು, ಜಿಗುಟು ಮಣ್ಣು, ಮಣ್ಣಿನಲ್ಲಿ ಹೂತು ಹೋಗಿದ್ದ ಹರಕು ಪೆಟ್ಟಿಗೆಗಳು, ಕಸಕಡ್ದಿ ಮೊದಲಾದುವುಗಳು ಇರುತ್ತಿದ್ದುವು.

ಶತಮಾನಗಳಿಂದಲೇ ಕಸ ಗುಡಿಸದೆ ಉಳಿದಿದ್ದ, ಹಾಳು ಬಿದ್ದಿದ್ದ, ಕತ್ತಲೆಯ ಕೋಣೆಗಳೂ, ಕೆಲವೆಡೆ ಮುರಿದು ಬಿದ್ದಿದ್ದು ಕುಂಬಾಗಿ ಹೋಗಿದ್ದ ಮರದ ಕುಂಟೆಗಳೂ, ಹಗಲೇ ನಮಗೆ ಕಾಣುವಂತೆ ಮೂಲೆಯಿಂದ ಮೂಲೆಗೆ ಓಡುತ್ತಿದ್ದ ಇಲಿ, ಹೆಗ್ಗಣಗಳೂ ಈ ಕಟ್ಟಡದಲ್ಲಿದ್ದುವು. ನಮ್ಮ ಕಂಪೆನಿ ಈಸ್ಟ್ ಇಂಡೀಸ್, ಮತ್ತು ವೆಸ್ಟ್ ಇಂಡೀಸ್ ಮೊದಲಾದ ದೂರದ ದೇಶಗಳಿಗೆ ನಮ್ಮಲ್ಲಿ ತಯಾರಾದ ವೈನನ್ನು ಕಳುಹಿಸುತ್ತಿತ್ತು. ಈ ಕಂಪೆನಿಯಲ್ಲಿ ಬಾಟ್ಲಿ ತೊಳೆಯುವ ವಿಭಾಗಕ್ಕೆ ಮಿ. ಕ್ವಿನಿಯನ್ನರು ನನ್ನನ್ನು ಕರೆದುಕೊಂಡು ಹೋಗಿ, ಕೆಲಸಗಳನ್ನು ವಿವರಿಸಿ ಹೇಳಿ, ಕೆಲಸ ಮಾಡಲು ತೊಡಗಿಸಿದರು.

ನನ್ನ ವಿಭಾಗದಲ್ಲಿ ನನ್ನ ಸಮೇತವಾಗಿ ನಾಲ್ಕು ಜನ ಕೆಲಸದವರಿದ್ದೆವು. ನಮ್ಮ ಗುಂಪಿನ ಮುಖಂಡನ ಹೆಸರು ಮಿಕೆ ವಾಕರ್ ಎಂದು. ನೀಲವರ್ಣದ ಮಖಮಲ್ ಕುಲಾವಿಯನ್ನು ಧರಿಸಿ, ಲಂಡನ್ ನಗರದ ನಗರಸಭಾಧ್ಯಕ್ಷರ ಮೆರವಣಿಗೆಯಲ್ಲಿ ಪತಾಕೆಯನ್ನು ಹಿಡಿದು ನಡೆಯುವ ಮುಖ್ಯ ಮನುಷ್ಯನೇ ತನ್ನ ತಂದೆಯೆಂದು ಮಿಕೆ ವಾಕರನೇ ನನಗೆ ತಿಳಿಸಿದ್ದನು. ನಮ್ಮ ಜತೆಯ ಇನ್ನೊಬ್ಬ ಕೆಲಸಗಾರನ ಹೆಸರು `ಕೊಳೆತ ಬಟಾಟೆ’ ಎಂಬುದಾಗಿ ಮಿಕೆವಾಕರನು ನನಗೆ ತಿಳಿಸಿದನು. ಹೀಗೂ ಒಂದು ಹೆಸರಿರಬಹುದೇ ಎಂಬ ಸಂಶಯದಿಂದ ವಿಚಾರಿಸಿದಾಗ ಅವನ ಮುಖದ ಲಕ್ಷಣಕ್ಕಾಗಿ ಅವನನ್ನು ಹಾಗೆ ಕರೆಯದೆ ನಿರ್ವಾಹವಿಲ್ಲವೆಂದು ಮಿಕೆ ವಾಕರನು ಒಪ್ಪಿಕೊಂಡನು. ಇವನ ಕುಚೇಷ್ಟೆಯನ್ನು ಕಂಡು ನನಗೆ ಸ್ವಲ್ಪ ಹೆದರಿಕೆಯೇ ಆಯಿತು. ಅವನು ನನ್ನನ್ನೂ ಸಹ, ನಾಲ್ಕಾರು ದಿನಗಳಲ್ಲೇ ‘ಕುಲೀನ ಶಿಶು’ ಎಂದು ಕುಚೇಷ್ಟೆಯಿಂದ ಕರೆಯಲು ಪ್ರಾರಂಭಿಸಿದನು.

ಕುಪ್ಪಿಗಳನ್ನು ಬೆಳಕಿಗೆ ಹಿಡಿದು ನೋಡಿ, ಗೆರೆ, ಒಡಕು, ಮೊದಲಾದ ಕೊರತೆಗಳು ಇಲ್ಲದಿರುವುವುಗಳನ್ನು ಆರಿಸಿ ತೆಗೆದು, ತೊಳೆದು, ವೈನ್ ತುಂಬಿಸಿ, ಕಾರ್ಕ್ ಹಾಕಿ, ಅರಗಿನ ಮೊಹರು ಹಾಕಿ, ದೋಣಿಗೆ ಸಾಗಿಸಿಕೊಡುವುದೇ ನಮ್ಮ ಕೆಲಸವಾಗಿತ್ತು. ನಮ್ಮ ಕೆಲಸಗಳನ್ನು ಹೇಗೆ ಮಾಡುತ್ತಿದ್ದೇವೆಂದು ಮಿ. ಕ್ವಿನಿಯನ್ನರು ನಮ್ಮನ್ನು ಕಾಣುವಷ್ಟು ದೂರದಲ್ಲಿ ಒಂದು ಮೇಜಿನ ಎದುರು ಕುಳಿತು ನೋಡುತ್ತಾ, ತಮ್ಮ ಬರಹದ ಕೆಲಸವನ್ನು ಮಾಡುತ್ತಿದ್ದರು.

ಅವಿದ್ಯಾವಂತ, ಒರಟು, ದುಷ್ಟ ಬಾಲಕರೊಡನೆ ಕೂಡಿಕೊಂಡು ನಾನು ಕೆಲಸ ಮಾಡುತ್ತಿದ್ದಾಗ ನನಗಾಗುತ್ತಿದ್ದ ಹೃದ್ಗತ ವೇದನೆಯನ್ನು ನಾನು ಪೂರ್ಣ ವರ್ಣಿಸಲಾರೆನು. ನಾನು ಶಾಲೆಗೆ ಸೇರುವ ಮೊದಲಿನ ನನ್ನ ಬಾಲ್ಯದ ದಿನಗಳನ್ನೂ ಶಾಲೆಯಲ್ಲೇ ಆದರೂ ಟ್ರೇಡಲ್ಸ್, ಸ್ಟಿಯರ್ಫೋರ್ತ್ ಮೊದಲಾದವರ ಸಹವಾಸದಲ್ಲಿ ಶಾಲೆಗೆ ಹೋದ ದಿನಗಳನ್ನು ನೆನೆನೆದು ನನ್ನ ಅವಸ್ಥೆ ಇಷ್ಟೊಂದು ಹೀನತರದ್ದಾಯಿತಲ್ಲಾ ಎಂದು ದುಃಖಿಸುತ್ತಿದ್ದೆನು. ಈ ಅಂಧಕಾರಮಯ ಕೂಪದಲ್ಲಿ ದಿನಗಳು ದಾಟಿದಂತೆ ಮುಂದೆ ನಾನು ವಿದ್ಯೆ ಕಲಿತು, ಉತ್ತಮ ವೃತ್ತಿಗಳನ್ನು ಕೈಕೊಂಡು, ಸಮಾಜದ ಒಬ್ಬ ಗಣನೀಯ ವ್ಯಕ್ತಿಯಾಗಬೇಕು – ಆಗುವೆನು – ಎಂದು ಕಟ್ಟಿಕೊಂಡಿರುತ್ತಿದ್ದ ಯೋಚನಾ ಗೋಪುರಗಳೆಲ್ಲ ನುಚ್ಚು ನುರಿಯಾಗುತ್ತಾ ಮಾಯವಾದುವು. ನಾನೊಬ್ಬನೇ ಇದ್ದು ಕುಪ್ಪಿಗಳನ್ನು ತೊಳೆಯುತ್ತಿದ್ದಾಗ ತೊಳೆಯುವ ನೀರಿಗೆ ನನ್ನ ದುಃಖಾಶ್ರುಗಳನ್ನು ಬೆರೆಸಿಯೇ ತೊಳೆಯುತ್ತಿದ್ದೆನು. ಬಾಟ್ಲಿಗಳ ಒಡಕನ್ನು ಪರೀಕ್ಷಿಸುವಾಗ ನನ್ನ ಹೃದಯದ ಬಿರುಕು ಹಿರಿದಾಗುತ್ತಿದ್ದುದನ್ನು ಕಾಣುತ್ತಿದ್ದೆನು.

ನನ್ನ ಕೆಲಸದ ದಿನಗಳಲ್ಲಿ ನಾನು ವಾಸ ಮಾಡತಕ್ಕ ಮನೆಯನ್ನು ತೋರಿಸಿ, ಮನೆಯ ಯಜಮಾನನನ್ನು ಮಿ.ಕ್ವಿನಿಯನ್ನರು ಪರಿಚಯ ಮಾಡಿಕೊಟ್ಟರು. ನಾನು ಪ್ರಾಯದಲ್ಲಿ ಚಿಕ್ಕವೆನೆಂಬುದು ನಿಜವಾಗಿದ್ದಿದ್ದರೂ – ಅಥವಾ ದೇಹ ಸ್ಥಿತಿಯಲ್ಲೂ ಪುಟ್ಟವನಾಗಿಯೇ ಇರುತ್ತಿದ್ದರೂ – ವೃತ್ತಿಯ ದೃಷ್ಟಿಯಲ್ಲಿ ಒಬ್ಬ ಕಾರ್ಮಿಕನೇ ಎಂದು ಪರಿಗಣಿಸಲ್ಪಡುತ್ತಿದ್ದ ಕಾರಣವಾಗಿ, ಈ ವಿಧದ ಎಲ್ಲಾ ಕ್ರಮಗಳನ್ನು ಅನುಭವಗಳನ್ನೂ ನಾನು ಪಡೆಯಬೇಕಾಗಿದ್ದಿತು.

ನಾನು ವಾಸಮಾಡುತ್ತಿದ್ದ ಮನೆಯ ಯಜಮಾನನ ಪರಿಚಯವು ಬೆಳೆದಂತೆಲ್ಲ ಅವರಲ್ಲಿನ ಅನೇಕ ವಿಷಯಗಳನ್ನು ಅಶ್ಚರ್ಯವೆಂದೇ ತಿಳಿಯತೊಡಗಿದೆನು. ಯಜಮಾನರಿಗೆ ಸಾಧಾರಣ ಐವತ್ತು ವರ್ಷ ಪ್ರಾಯ ದಾಟಿರಬಹುದು. ಅವರು ಸ್ವಲ್ಪ ಕುಳ್ಳರು, ಸ್ಥೂಲಕಾಯರು. ಅವರ ತಲೆಯಲ್ಲಿ ಸ್ವಲ್ಪವೂ ಕೂದಲಿರಲಿಲ್ಲ. ಒಂದು ದಪ್ಪದ ಕೋಳಿಮೊಟ್ಟೆಗೆ ಕಣ್ಣು ಮೂಗು ಬಾಯಿಗಳು ಬೆಳೆದಂತೆ ಅವರು ತೋರುತ್ತಿದ್ದರು. ಅವರ ಮುಖದ ವೈಶಾಲ್ಯವು ದೇಹದ ಇತರ ಎಲ್ಲಾ ಭಾಗಗಳಿಗಿಂತ ಅಸ್ವಾಭಾವಿಕವಾಗಿ ಬೆಳೆದಿತ್ತು. ಅವರಿಗೆ ನ್ಯಾಯವಾಗಿ ಇರಬೇಕಾಗಿದ್ದ ಅಳತೆಯ ಮುಖವನ್ನು ಮಾತ್ರ ಭೂತ ಕನ್ನಡಿಯಿಂದ ನೋಡುತ್ತಾ, ಅವರನ್ನು ನೋಡಿದ್ದರೆ ಆಗುವಷ್ಟರ ಅಗಲದ ಮುಖ ಅವರದು. ಅವರು ಬಿಗಿಯಾದ ಇಜಾರನ್ನು ತೊಟ್ಟು, ಸ್ವಲ್ಪ ಹರಿದಿದ್ದ, ಬಡತನದ ಬೂಟ್ಸನ್ನು ಧರಿಸುತ್ತಿದ್ದರು. ಆದರೆ ಅವರ ದುಸ್ತಿನ ಗೌರವ, ವೈಶಿಷ್ಟ್ಯವೆಲ್ಲ ಅವರ ಶರ್ಟಿನ ಕಾಲರಿನಲ್ಲಿ ಕಂಡುಬರುತ್ತಿತ್ತು. ಆ ಕಾಲರು ಇತರ ಯಾರಿಗೂ ಇರದಷ್ಟು ಚೆನ್ನಾಗಿಯೂ ಭೂಷಣಪ್ರಾಯವಾಗಿಯೂ ಇದೆಯೆಂದು ಅವರು ಸದಾ ತಿಳಿದಿರುತ್ತಿದ್ದಂತೆ ಅದರ ಪ್ರದರ್ಶನ ಮಾಡುತ್ತಿದ್ದರು. ನೆಯ್ಗೆಯ ಅಲಂಕಾರಗಳಿಂದ ಕೂಡಿದ ಗೊಂಡೆಯಿದ್ದ ಠೀವಿಯ ಒಂದು ದೊಣ್ಣೆಯನ್ನು ಅವರು ಸದಾ ಹಿಡಿದುಕೊಂಡೇ ಇರುತ್ತಿದ್ದರು. ಈ ದೊಣ್ಣೆಯೂ ಅವರದೇ ಒಂದು ವೈಶಿಷ್ಟ್ಯವೆನ್ನುವಂತಿತ್ತು. ಇಷ್ಟೂ ಅಲ್ಲದ ಅವರ ಜೇಬಿನಿಂದ ಈಗಲೇ ಜಾರಿ ಹೊರಬೀಳಲಿದೆಯೆಂದು ತೋರಿಬರುತ್ತಿದ್ದ ಒಂದು ಕನ್ನಡಕದ ಅಂಶವೂ ಕಾಣಿಸುತ್ತಿತ್ತು – ಆ ಕನ್ನಡಕವನ್ನು ಕಣ್ಣಿಗೆ ಇಟ್ಟು ನೋಡಿದ್ದಾದರೆ ಅದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುತ್ತಿತ್ತೆಂದೂ, ಆ ಕನ್ನಡಕವು ಅಲಂಕಾರಕ್ಕಾಗಿ ಉಪಯೋಗಿಸಲಾಗುತ್ತಿತ್ತೆಂದೂ ನಾನು ಕೆಲವು ಸಮಯದನಂತರ ತಿಳಿದೆನು. ಅವರ ಹೆಸರು ಮಿ. ವಿಲ್ಕಿನ್ಸ್ ಮೈಕಾಬರ್ ಎಂಬುದಾಗಿ ಮಿ. ಕ್ವಿನಿಯನ್ನರು ತಿಳಿಸಿದರು.

ಮಿ. ಕ್ವಿನಿಯನ್ನರು ಮಿ. ಮೈಕಾಬರರ ಪರಿಚಯವನ್ನು ನನಗೆ ಮಾಡಿಕೊಟ್ಟ ಕೂಡಲೇ, ಮಿ. ಮೈಕಾಬರರು ಬಹು ಸಲಿಗೆಯಿಂದಲೇ ನನ್ನೊಡನೆ ಮಾತಾಡಲು ಪ್ರಾರಂಭಿಸಿದರು. ನನ್ನ ಯೋಗ ಕ್ಷೇಮವನ್ನು ಸಾಂಪ್ರದಾಯಿಕವಾಗಿ ವಿಚಾರಿಸಿದನಂತರ – “ಮಿ. ಕಾಪರ್ಫೀಲ್ಡ್, ಇಲ್ಲಿ ನಾನೊಬ್ಬ ಏಜಂಟನು. ನಮ್ಮ ನಿವಾಸವು ಆಧುನಿಕ ಬೇಬಿಲೋನಿನಂತಿರುವ ಈ ಲಂಡನ್ ಮಹಾನಗರದ ಒಂದು ಪ್ರಾಮುಖ್ಯ ವಿಭಾಗದಲ್ಲಿ ಉಪಸ್ಥಿತವಾಗಿದೆ. ನಿಮಗೆ ಈ ನಗರದ ಪರಿಚಯ ಭಾಗ್ಯವು ಪೂರ್ಣವಾಗುವ ಮೊದಲು ನಮ್ಮ ನಿವಾಸವನ್ನು ಕಂಡು ಹಿಡಿಯಲಾರಿರಿ. ಆದ್ದರಿಂದ ನಿಮಗೆ ಸಮಯಾನುಕೂಲವಿದ್ದಾಗ ನನಗೆ ತಿಳಿಸಿದರೆ ನಾನೇ ನಿಮ್ಮನ್ನು ನಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿ ತೋರಿಸುತ್ತೇನೆ” ಅಂದರು ಮಿ. ಮೈಕಾಬರರು.

ಆ ದಿನ ಸಂಜೆಗೇ ಅವರು ನನ್ನನ್ನು ಕರೆದುಕೊಂಡು ಹೋಗಿ ಅವರ ಮನೆಯನ್ನು ತೋರಿಸಿ ಕೊಟ್ಟರು. ವಿಂಡ್ಸರ್ ಟೆರೇಸಿನಲ್ಲಿ ಅವರ ಮನೆ. ತನ್ನ ದೊಣ್ಣೆಯನ್ನು ಕಂಕುಳಲ್ಲಿಟ್ಟುಕೊಂಡು, ಆ ಕಂಪೆನಿಯ ವಠಾರವನ್ನು ದಾಟಿದ ಮೇಲೆ ತಮ್ಮ ಅತ್ಮ ಸಂತೋಷಕ್ಕಾಗಿ ಚಿಕ್ಕ ಸ್ವರದಿಂದ ಏನನ್ನೋ ಹಾಡುತ್ತಾ, ಎದೆ ಮುಂದೆ ಮಾಡಿ, ನೆಟ್ಟನೆಯ ನಡಿಗೆಯಿಂದ ಮಿ. ಮೈಕಾಬರರು ನಡೆದುಹೋಗುತ್ತಿದ್ದ ಠೀವಿಯನ್ನು ನಾನು ಇನ್ನು ಯಾರಲ್ಲೂ ಕಂಡಿಲ್ಲ. ಮಿ. ಮೈಕಾಬರರ ಸಂಸಾರದ ಪರಿಚಯವನ್ನೂ ಇಲ್ಲೇ ಮಾಡಿಕೊಡುವುದು ನ್ಯಾಯವಿದೆ. ಆ ಪರಿಚಯ ಪೂರ್ಣವಾಗಲು ನನಗೆ ತುಂಬಾ ಸಮಯ ಬೇಕಾಗಿದ್ದಿದ್ದರೂ, ಅವುಗಳಲ್ಲಿ ಕೆಲವಂಶವನ್ನಾದರೂ ಈಗಲೇ ತಿಳಿಸುವುದು ಉತ್ತಮ. ಮಿ. ಮೈಕಾಬರರ ಹೆಂಡತಿ ಮಕ್ಕಳ ಸಮೇತರಾಗಿ ಆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದರು. ಕೊನೆಯವರಿಬ್ಬರು ಅವಳಿ-ಜವಳಿ ಮಕ್ಕಳು. ನಾನು ಅವರನ್ನು ಪ್ರಥಮವಾಗಿ ನೋಡುವಾಗ ಆ ಮಕ್ಕಳಿಗೆ ಒಂದು ವರ್ಷ ಪ್ರಾಯ ಪೂರ್ತಿಯಾಗಿರಲಿಲ್ಲ. ಆ ಮಕ್ಕಳಿಗೆ – ಒಂದಲ್ಲದಿದ್ದರೆ ಇನ್ನೊಂದಕ್ಕೆ – ತಾಯಿ ಸದಾ ಮೊಲೆ ಕೊಟ್ಟುಕೊಂಡೇ ಇರುತ್ತಿದ್ದಳು. ಅಂದರೆ ಇಬ್ಬರು ಮಕ್ಕಳನ್ನೂ ಬಿಟ್ಟು ತಾಯಿ ಒಂಟಿಯಾಗಿದ್ದುದನ್ನೇ ನಾನು ಕಂಡಿರುವುದಿಲ್ಲ. ಇವರ ಪರಿಚಯ ಬೆಳೆದ ಹಾಗೆಲ್ಲಾ ಅವರಿಬ್ಬರ ಗುಣವೂ ಒಂದೇ ತೆರನಾಗಿದ್ದುವೆಂದು ನಾನು ಕಂಡುಕೊಂಡೆನು. ಸುಖದುಃಖಗಳನ್ನು ಗಣಿಸುವುದರಲ್ಲಿ ಅವರಿಬ್ಬರೂ ಒಂದೇ ವಿಧವಾಗಿ ವರ್ತಿಸುತ್ತಿದ್ದರು. ಈ ಕಾರಣದಿಂದಲೂ, ಇನ್ನೂ ಅವರ ಇತರ ಸ್ವಾಭಾವಿಕ ಗುಣಗಳ ಕಾರಣದಿಂದಲೂ, ಅವರ ದಾಂಪತ್ಯ ಬಹು ಅಚ್ಚು ಮೆಚ್ಚಿನದಾಗಿತ್ತೆಂದು ನಾನು ಊಹಿಸಿಕೊಂಡೆನು.

ಮಿ. ಮೈಕಾಬರರಿಗೆ ಮೈ ತುಂಬಾ ಸಾಲವಿತ್ತು. ಸಾಲ ಕೊಟ್ಟವರು ಆಗಿಂದಾಗ್ಗೆ ಬಂದು ಅವರೊಡನೆ ಜಗಳವಾಡುತಿದ್ದರು, ಬೈಯ್ಯುತ್ತಿದ್ದರು, ಇನ್ನೂ ಕೆಲವು ವೇಳೆ ಹೊಡೆಯಲೂ ಪ್ರಯತ್ನಿಸುತ್ತಿದ್ದರು. ಇಷ್ಟೊಂದು ಕಷ್ಟದಲ್ಲೇ ಅವರು ಇದ್ದದ್ದಾದರೂ ಅವರು ಸದ ಶುಭಾಕಾಂಕ್ಷಿಗಳು, ಶುಭ ನಿರೀಕ್ಷಕರೂ, ಸುಲಭವಾಗಿ ಹರ್ಷಚಿತ್ತತೆಯಲ್ಲಿ ಸ್ವಾಸ್ಥ್ಯ ಪಡೆಯಬಲ್ಲವರೂ ಆಗಿದ್ದರು. ಅವರ ನಡೆ, ನುಡಿ, ವರ್ತನೆ, ಶಬ್ದಗಳ ಪ್ರಯೋಗ, ಉದಾಹರಣೆ – ಇವೆಲ್ಲವುಗಳೂ ಅವರದೇ ಒಂದು ವಿಶಿಷ್ಟತರದ್ದಾಗಿದ್ದುವು. ಆಡಂಬರದ ಶಬ್ದ ಪ್ರಯೋಗ, ಮಹಾ ಸಾಹಿತಿಗಳ ಮಾತಿನ ಕ್ರಮದ ವಾಕ್ಯರಚನೆ, ಬಹು ಸಣ್ಣ ವಿಷಯವನ್ನು ವರ್ಣಿಸುವಂಥ ವರ್ಣನೆ, ಇದರಲ್ಲೆಲ್ಲ ಅವರಿಗೆ ಬಹು ಇಷ್ಟ. ಘನಸ್ತಿಕೆ, ಸಂಸ್ಕೃತಿ ಎಲ್ಲವನ್ನೂ ತಾವು ತಿಳಿದು ಅನುಷ್ಠಾನಕ್ಕೆ ತಂದಿರುವವರಂತೆ ಇವರು ವರ್ತಿಸುತ್ತಿದ್ದರೂ, ಇವರಲ್ಲಿ ಅಹಂಭಾವವಿರಲಿಲ್ಲ. ಇವರು ಬಹು ಸರಳ ಸ್ವಭಾವದವರೂ, ನಿಷ್ಕಪಟಿಗಳು ಎಂದು ಈ ಎಲ್ಲ ಆಡಂಬರದ ನಡೆನುಡಿಗಳ ಜತೆಯಲ್ಲೇ ಕಂಡು ಬರುತ್ತಿದವು. ಕೆಲವೊಮ್ಮೆ ಇವರು ಚಿಕ್ಕ ವಿಷಯಕ್ಕಾಗಿ ದುಃಖಿಸಿ ಅಳುವುದೂ, ಆ ಅಳುವಿನ ಮಧ್ಯೆ ಏನಾದರೊಂದು ಚಿಕ್ಕ ಸಂತೋಷದ ಎಡೆ ಸಿಕ್ಕಿದ ಕೂಡಲೇ ಅದನ್ನೇ ಅಪ್ಪಿಕೊಂಡು ಆನಂದಾತಿಶಯದಲ್ಲಿ ತೇಲುವುದೂ ಇವರ ಸ್ವಭಾವ.

ಮಿ. ಕ್ವಿನಿಯನ್ನರ ಏರ್ಪಾಡಿನಂತೆ ನಾನು ಮಿ. ಮೈಕಾಬರರ ಮನೆಯ ಒಂದು ಚಿಕ್ಕ ಕೋಣೆಯನ್ನು ಮಾತ್ರ ನನ್ನದಾಗಿ ಉಪಯೋಗಿಸತೊಡಗಿದೆ. ಅವರ ಗೃಹಕೃತ್ಯ, ಸಂಸಾರ – ಈ ಎಲ್ಲವುಗಳನ್ನು ಕುರಿತು ನಾನು ಏನೂ ವಿಚಾರಿಸದಿದ್ದರೂ ಮಿ. ಮೈಕಾಬರ್ ಮತ್ತೂ ಅವರ ಪತ್ನಿ ನನ್ನೊಂದಿಗೆ ತಾವಾಗಿಯೇ ತಮ್ಮ ಕಷ್ಟ ಸುಖ, ಸಾಲ, ಮೂಲಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದರು. ಅವರಿಗೆ ತುಂಬಾ ಸಾಲವಿತ್ತೆಂದೂ ತಿಳಿದೆ. ಅಷ್ಟೊಂದು ಸಾಲವಿದ್ದರೂ ಆ ಸಾಲವೆಲ್ಲ ಸದ್ಯವೇ ಪರಿಹಾರವಾಗುವುದೆಂದೂ, ಅಂಥ ಪರಿಹಾರಕ್ಕೆ ಸಂಬಂಧಿಸಿದ ಪ್ರಸಂಗಗಳು ಈಗಾಗಲೇ ಗೋಚರಿಸುತ್ತಿದ್ದುವೆಂದೂ ಅವರು ಸದಾ ನಿರೀಕ್ಷಿಸುತ್ತಲೂ, ನಿರೀಕ್ಷಣೆ ಕಾರ್ಯಗತವಾಗುವುದೆಂದು ನಂಬುತ್ತಲೂ ಇರುತ್ತಿದ್ದರು.

ನನ್ನ ವೃತ್ತಿ ನನಗೆ ಜಿಗುಪ್ಸಿತವಾಗಿಯೇ ತೋರುತ್ತಿತ್ತು. ನನ್ನ ಜತೆ ಕೆಲಸಗಾರರ ಸಹವಾಸ, ನಡೆನುಡಿ ಯಾವುದೂ ನನಗೆ ಮೆಚ್ಚುತ್ತಿರಲಿಲ್ಲ. ನಾನೊಬ್ಬ ಕುಲೀನ ಮನೆಯವನು, ವಿದ್ಯಾವಂತ, ಎಂದು ಮೊದಲಾಗಿ ಜತೆಯವರು ಹಾಸ್ಯ ಮಾಡುತ್ತಿದರು – ಕೆಲವೊಮ್ಮೆ ನಿಷ್ಕಪಟ ಬುದ್ಧಿಯಿಂದಲೇ ನನ್ನನ್ನು ಸ್ವಲ್ಪ ಅವರಿಗಿಂತ ಉತ್ತಮನೆಂದೂ ಅವರು ಕಾಣುತ್ತಿದ್ದರು. ನಾನು ನನ್ನ ಜತೆ ಕೆಲಸಗಾರರಿಂದ ದೂರವಿರಲೋಸ್ಕರ ರಜೆಯಿದ್ದಾಗಲೆಲ್ಲ ಲಂಡನ್ ನಗರದ ಬೇರೆ ಬೇರೆ ಸ್ಥಳಗಳನ್ನೂ ಚರಿತ್ರಾರ್ಹವಾದ ಕಟ್ಟಡಗಳನ್ನೂ, ವಸ್ತುಪ್ರದರ್ಶನಗಳನ್ನೂ ನಡೆದು ಹೋಗಿ ನೋಡಿಬರುತ್ತಿದ್ದೆನು. ನನಗೆ ಸಿಕ್ಕಿದ ಸಂಬಳದಲ್ಲಿ ಸ್ವಲ್ಪ ಅಂಶವನ್ನು ಪ್ರಯತ್ನಪಟ್ಟು ಉಳಿಸಿಕೊಂಡು, ಸಾಧಾರಣವಾಗಿ, ಪ್ರತಿ ಆದಿತ್ಯವಾರ ಒಂದು ಹೋಟೆಲಿನಲ್ಲಿ ಮನಸ್ಸು ಬಂದಂತೆ ತಿಂಡಿ ಪಾನೀಯಗಳನ್ನು ತೆಗೆದುಕೊಂಡು – ಯಾರೋ ನನಗೊಂದು ಔತಣ ಕೊಟ್ಟಂತೆ – ಸಂತೋಷಪಟ್ಟುಕೊಳ್ಳುತ್ತಿದ್ದೆನು. ನನ್ನ ಜತೆ ಕೆಲಸಗಾರರಿಗೂ, ಮಿ. ಮೈಕಾಬರರ ಮನೆ ಕೆಲಸದ ಒಬ್ಬ ಚಿಕ್ಕ ಹುಡುಗಿಗೂ ಒಂದೆರಡು ಸರ್ತಿ – ಅವರನ್ನು ನನ್ನ ಜತೆಗೆ ಸೇರಿಸಿಕೊಂಡು – ಔತಣ ಕೊಟ್ಟದ್ದುಂಟು.

ಮಿ. ಮೈಕಾಬರರು ನನ್ನಲ್ಲಿ ಸಾಲ ಕೇಳುತ್ತಿರಲಿಲ್ಲ. ಆದರೂ ಒಂದೆರಡು ಸರ್ತಿ ಅವರ ಕಷ್ಟ ನೋಡಲಾರದೆ ನನ್ನಲ್ಲಿದ್ದ ಸ್ವಲ್ಪ ಹಣವನ್ನಾದರೂ ಅವರಿಗೆ ಸಾಲ ಕೊಟ್ಟದ್ದೂ ಉಂಟು. ಆದರೆ, ಅಂಥ ಸಾಲ ಪಡೆದ ಸಂತೋಷದಲ್ಲಿ ಮಿ. ಮೈಕಾಬರರು ಹಾಗೆ ಸಾಲ ಪಡೆದ ಹಣವನ್ನು ಪೂರಾ ಖರ್ಚುಮಾಡಿ ನನಗೆ ಔತಣ ಕೊಟ್ಟು ತಾವೂ ಔತಣಭಾಗಿಗಳಾಗಿ ಮೆರೆದು ಸಂತೋಷಪಡುವುದೂ ಇತ್ತು.

ನಾನು ಮಿ. ಮೈಕಾಬರರ ಮನೆ ಸೇರಿ ಒಂದೆರಡು ತಿಂಗಳಾಗುವುದರೊಳಗೆ ಅವರ ಚರಸ್ವತ್ತುಗಳೆಲ್ಲ ಮಾರಾಟವಾಗಿಯೋ ಅಡವಿಟ್ಟೋ ಮುಗಿದಿದ್ದುವು. ಅವರ ವಸ್ತುಗಳನ್ನು ಮಾರುವ, ಅಥವಾ ಅಡವು ಇಡುವ ವಹಿವಾಟಗಳಲ್ಲಿ ನಾನು ಅವರಿಗೆ ತುಂಬಾ ಸಹಾಯ ಮಾಡುತ್ತಿದೆನು. ಬಹಿರಂಗವಾಗಿ ಅವರೇ ಬೇಂಕುಗಳಿಗೆ ಹೋಗಿ ಅಡವು ಇಡಲಾರರಾಗಿದ್ದಾಗಲೆಲ್ಲ ನಾನೇ ಆ ಕೆಲಸವನ್ನು ಮಾಡಿಕೊಡುತ್ತಿದ್ದೆ. ಚಿಕ್ಕವನಾಗಿದ್ದ ನನ್ನನ್ನು ಕಂಡು ಬೇಂಕಿನವರು ತಮ್ಮ ತಮ್ಮೊಳಗೆ ಪಿಸುಮಾತುಗಳಿಂದ ನನ್ನನ್ನು ಕುರಿತು ಹಾಸ್ಯ ಮಾಡುತ್ತಿದ್ದರೆಂದೂ ನಾನು ಊಹಿಸುತ್ತೇನೆ.

ನಾನು ಒಂದು ದಿನ ಏಕಾಂತವಾಗಿ ಉಂಡು ತಿಂದು ಸುಖಿಸಬೇಕೆಂದು ದೂರದ ಒಂದು ಹೋಟೆಲಿಗೆ ಹೋಗಿ ಎರಡು ಶಿಲ್ಲಿಂಗ್ ಪೂರ್ತಿ ಹೋಟೆಲಿನವನಿಗೆ ಕೊಟ್ಟು ಆ ಹಣಕ್ಕೆಲ್ಲ ನನಗೆ ತಿಂಡಿ, ಪಾನೀಯಗಳನ್ನು ಕೊಡಬೇಕೆಂದು ಹೇಳಿದನು. ಹೋಟೆಲಿನವನು ಅಷ್ಟು ಹಣಕ್ಕೆ ತಕ್ಕವಾದ ತಿಂಡಿ ಪಾನೀಯಗಳನ್ನು ಮೇಜಿನ ಮೇಲಿಟ್ಟು, ನನ್ನ ವಶಕ್ಕೆ ಒಪ್ಪಿಸಿ ಹೋದನು. ನಾನು ತಿಂಡಿಗಳನ್ನು ತಿನ್ನುತ್ತಿದ್ದ ಹಾಗೆಯೇ ಹೋಟೆಲಿನವರು – ನನ್ನ ಆಡಂಬರದ ಕ್ರಮಗಳನ್ನೆಲ್ಲ ಕಂಡು ಆಶ್ಚರ್ಯಗೊಂಡು – ಅವನ ಹೆಂಡತಿಯೂ ನನ್ನನ್ನು ನೋಡಬೇಕೆಂದು ಅವಳನ್ನು ಕರೆದುಕೊಂಡು ಬಂದು ನನ್ನಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದನು. ನನ್ನನ್ನು ಕಂಡು ಹೋಟೆಲ್ ಮಾಲೀಕನ ಪತ್ನಿಗೆ ಬಹು ಕನಿಕರವುಂಟಾಗಿ ನನ್ನ ವೃತ್ತಿ, ತಂದೆ ತಾಯಿ, ಇತ್ಯಾದಿ ವಿಷಗಳನ್ನು ಕುರಿತು ಪ್ರೀತಿಯಿಂದ ವಿಚಾರಿಸಿದಳು. ನನ್ನ ಜೀವನ ಚರಿತ್ರೆಯನ್ನು ಸ್ವಲ್ಪ ಬದಲಾಯಿಸಿ, ಆದರೂ ಬಹುಮಟ್ಟಿಗೆ ಸತ್ಯಾಂಶವನ್ನು, ಅವಳಿಗೆ ತಿಳಿಸಿದೆನು. ಆ ಹೆಂಗುಸಿಗೆ ನನ್ನ ಮೇಲೆ ಕರುಣೆ ಉಂಟಾಗಿ ನಾನು ಕೊಟ್ಟಿದ್ದ ಹಣವನ್ನೆಲ್ಲ ನನಗೆ ವಾಪಸು ಕೊಟ್ಟು, ನನ್ನನ್ನು ತಬ್ಬಿ ಸಂತೋಷಪಟ್ಟು, ನಾನು ಒಳ್ಳೆಯವನಾಗಿ ಬಾಳಬೇಕೆಂದು ಹರಸಿ ಕಳುಹಿಸಿದಳು.

ದಿನಗಳು ದಾಟಿದ ಹಾಗೆಯೇ ಮಿ. ಮೈಕಾಬರರ ಸಾಲಗಳು ಹೆಚ್ಚುತ್ತಾ ಹೋದುವು. ಅವರ ಸಂಸಾರದ ನೆಮ್ಮದಿ ಕಡಿಮೆಯಾಯಿತು. ಕೊನೆಗೊಂದು ದಿನ ಸಾಲ ಕೊಟ್ಟವರ ಕಡೆಯಿಂದ ಅವರು ಕೈದು ಮಾಡಲ್ಪಟ್ಟು, ಸಿವಿಲ್ ಜೈಲಿಗೇ ಕಳುಹಿಸಲ್ಪಟ್ಟರು. ಹೀಗೆ ಅವರು ಕೆಲವು ಸಮಯ ಜೈಲಿನಲ್ಲೇ ಇದ್ದರು. ನಾನು ಒಂದು ದಿನ ಅವರನ್ನು ನೋಡಿ ಮಾತಾಡಿ ಬರಲೆಂದು ಜೈಲಿಗೇ ಹೋದೆನು. ಅಲ್ಲಿ ನನ್ನೊಡನೆ ಅವರ ದುಃಖಗಳನ್ನೆಲ್ಲ ಹೇಳಿಕೊಂಡರು. ಹೀಗೆ ಮಾತಾಡುತ್ತಾ ಅವರ ಅವಿವೇಕಗಳಿಗಾಗಿ ಪಶ್ಚಾತ್ತಾಪಪಟ್ಟುಕೊಂಡು, ನನ್ನ ಅನುಭವಕ್ಕಾಗಿ – “ನೋಡಿ ಮಿ. ಕಾಪರ್ಫೀಲ್ಡ್, ಒಬ್ಬನ ಒಂದು ವರ್ಷದ ಉತ್ಪತ್ತಿ ಇಪ್ಪತ್ತು ಪೌಂಡು ಇದ್ದು ಅವನು ಅದೇ ಒಂದು ವರ್ಷದಲ್ಲಿ ಹತ್ತೊಂಬತ್ತು ಪೌಂಡು, ಹತ್ತೊಂಬತ್ತು ಶಿಲಿಂಗ್, ಆರು ಪೆನ್ಸ್ ಖರ್ಚು ಮಾಡಿದರೆ – ಅವನು ಬದುಕುತ್ತಾನೆ, ಬಾಳುತ್ತಾನೆ. ಅದರ ಬದಲು ಇಪ್ಪತ್ತು ಪೌಂಡು ಒಂದು ಪೆನ್ಸ್ ಖರ್ಚು ಮಾಡಿದರೆ – ಅವನ ಬಾಳು ಬಾಳಲ್ಲ – ಅದು ಸಾವು!” ಎಂದಂದರು.

ಈ ಬೋಧನೆಯಾದ ನಂತರ ನನ್ನನ್ನು ಗೌರವಿಸಿ ಉಪಚರಿಸುವುದಕ್ಕಾಗಿ ನನ್ನಿಂದಲೇ ಒಂದು ಶಿಲಿಂಗ್ ಸಾಲ ತೆಗೆದುಕೊಂಡು ಆ ಹಣದಿಂದ ಹೋಟೆಲಿನಿಂದ ವಿಶೇಷದ ಊಟ ತರಿಸಿ ಉಂಡೆವು. ನಮಗೆ ಅಗತ್ಯ ಬಿದ್ದ ಚಮಚ, ಕತ್ತಿ ಮೊದಲಾದುವನ್ನು ಪಕ್ಕದ ಕೋಣೆಯಲ್ಲಿ ಅವರಂತೆಯೇ ಸಾಲಕ್ಕಾಗಿ ಜೈಲುವಾಸಿಯಾಗಿದ್ದ ಕೇಪ್ಟನ್ ಹಾಪ್ಕಿನ್ಸರಿಂದ ಎರವು ತಂದಿದ್ದರು. ಮಿ. ಮೈಕಾಬರರು ಜೈಲಿನಲ್ಲಿರುವಾಗ ಅವರ ಇನ್ನುಳಿದಿದ್ದ ಚರಸ್ವತ್ತುಗಳೆಲ್ಲ ಅವರ ಪತ್ನಿ ಮತ್ತೂ ಮಕ್ಕಳ ಜೀವನದ ಖರ್ಚಿಗಾಗಿ ಮಾರಿ ಮುಗಿದವು. ಕೊನೆಗೆ ಅವರಿಗೆ ಮನೆ ಬಾಡಿಗೆಗೆ ತಕ್ಕಷ್ಟೂ ಹಣವಿಲ್ಲದೆ ಅವರ ಹೆಂಡತಿ ಮಕ್ಕಳೂ ಸಹ ಬಂದು ಜೈಲಿನಲ್ಲೇ ವಾಸ ಮಾಡತೊಡಗಿದರು. [ವಿಶೇಷ ಸೂಚನೆ: ಆಗಿನ ಕಾಲದಲ್ಲಿ ಸಿವಿಲ್ ಜೈಲುಗಳಲ್ಲಿ ಹೆಂಡತಿ ಮಕ್ಕಳೂ ಸಹ ಸರಕಾರಕ್ಕೆ ಖರ್ಚು ತೆತ್ತು, ಖೈದಿಯಾಗಿದ್ದ ಗಂಡನ ಜತೆಯಲ್ಲಿರುವ ಕ್ರಮ, ಶಾಸನಗಳಿದ್ದುವು.] ಮಿ. ಮೈಕಾಬರರ ಮನೆ ಕೆಲಸದ ಹುಡುಗಿಯೂ, ನಾನೂ ಜೈಲಿನ ಸಮೀಪದಲ್ಲೇ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ವಾಸ ಮಾಡತೊಡಗಿದೆವು.

ಮಿ, ಮೈಕಾಬರರ ಹೆಂಡತಿ ಮಕ್ಕಳ ಪೋಷಣೆ ಖರ್ಚನ್ನೂ ಅವರ ದೂರದ ನೆಂಟರೊಬ್ಬರು ಸರಕಾರಕ್ಕೆ ತೆತ್ತು, ಅವರ ಸಂಸಾರ ಜೈಲಿನಲ್ಲಾದರೂ ತಕ್ಕಮಟ್ಟಿನ ಸುಖದಲ್ಲಿರುವ ಏರ್ಪಾಡನ್ನು ಮಾಡಿದ್ದರು. ಹೀಗೆ ಮಿ. ಮೈಕಾಬರರಿಗೆ ಜೀವನಕ್ಕಾಗಿ ದುಡಿಯುವ ಅಗತ್ಯ ಬೀಳದೆ, ಅವರ ಸ್ವಭಾವಕ್ಕೆ ಸರಿಯಾಗಿ ಜೈಲಿನೊಳಗಿದ್ದ ಎಲ್ಲಾ ಸಿವಿಲ್ ಖೈದಿಗಳನ್ನೂ ಕಂಡು, ಮಾತಾಡಿ, ಪರಿಚಯ ಮಾಡಿಕೊಂಡರು. ಜೈಲಿನಲ್ಲಿ ಆ ಮೊದಲೇ ಖೈದಿಗಳಿಗೊಂದು ಕ್ಲಬ್ ಇತ್ತು. ಮಿ. ಮೈಕಾಬರರ ವಾಕ್ಶಕ್ತಿ, ಸರಳ ಸ್ವಭಾವ, ಠೀವಿ ಮೊದಲಾದುವುಗಳ ಕಾರಣವಾಗಿ ಇವರನ್ನು ಆ ಕ್ಲಬ್ಬಿನ ಅಧ್ಯಕ್ಷರನ್ನಾಗಿ ಮಾಡಿಕೊಂಡರು. ಇದೇ ಸಮಯದಲ್ಲಿ ಸಾಲಗಾರರು ದಿವಾಳಿ ಅರ್ಜಿಯನ್ನು ಬರೆದುಕೊಂಡರೆ, ಅರ್ಜಿಯ ತನಿಖೆಯಿಂದ ಜೈಲಿನಿಂದ ಬಿಡುಗಡೆ ಹೊಂದಬಹುದೆಂಬ ಕಾನೂನು ಜಾರಿಗೆ ಬಂದಿದ್ದು, ಈ ಅಭಿಪ್ರಾಯವನ್ನು ಮಿ. ಮೈಕಾಬರರು ಎಲ್ಲ ಖೈದಿಗಳ ಪರವಾಗಿ ಎತ್ತಿ ಹಿಡಿದರು. ಇದರ ಕುರಿತಾಗಿ ಮಿ. ಮೈಕಾಬರರು ಒಂದು ಮನವಿಯನ್ನು ತಯಾರಿಸಿದರು.

ಮನವಿ ತಯಾರಾದ ಕೂಡಲೇ ಕ್ಲಬ್ಬಿನ ಖೈದಿಗಳೆಲ್ಲ ಮನವಿಗೆ ದಸ್ಕತ್ತು ಮಾಡಿದರು. ಕೇಪ್ಟನ್ ಹಾಪ್ಕಿನ್ಸರು ಮನವಿಯನ್ನು ಎಲ್ಲ ಖೈದಿ ಸಭಾಸದರ ಅನುಭವಕ್ಕಾಗಿ ಓದಿ ಹೇಳಿದರು. ಮನವಿಯ ರಚಯಿತರೇ ಮಿ. ಮೈಕಾಬರರಾಗಿದ್ದುದರಿಂದ, ಕೇಪ್ಟನ್ ಹಾಪ್ಕಿನ್ಸರು ಅದನ್ನು ಓದುವಾಗ ಮಿ. ಮೈಕಾಬರರು ಒಬ್ಬ ಕವಿ ತನ್ನ ಕಾವ್ಯದ ಪ್ರಶಂಸೆಯನ್ನು ಕೇಳಿ ಸಂತೋಷಿಸುವಂತೆ ಬಹು ಗಾಂಭೀರ್ಯದಿಂದ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಲ್ಲಿಂದಲೇ ಕೇಳಿ ಸಂತೋಷಿಸುತ್ತಿದ್ದರು. “ಜನಪ್ರತಿನಿಧಿಗಳ ಬೃಹತ್ ಸಭಾ ಸಮ್ಮುಖದಲ್ಲಿ – ವಿಶ್ವವಿಖ್ಯಾತಿಯುತ ಜನತಾ ಪಾರ್ಲಿಮೆಂಟಿನ ಸನ್ನಿಧಿಯಲ್ಲಿ – ಅತ್ಯಂತ ವಿನಮ್ರ ಸೇವಕರಾದ ಈ ಮುಂದೆ ದಸ್ಕತ್ತು ಮಾಡಿರುವ ನಾವುಗಳು –

“ಕೃಪಾಪೂರ್ಣ ಮಹಾರಾಜರ ದಿವ್ಯ ಸನ್ನಿಧಿಯಲ್ಲಿ ದುರ್ದೈವೀ ಪ್ರಜಾವೃಂದದ ಹೃತ್ಪೂರ್ಕವಾದ ವಿಜ್ಞಾಪನೆಗಳು” – ಮೊದಲಾದ ವಾಕ್ಯಗಳನ್ನು ಕೇಳುವಾಗ ಮಿ. ಮೈಕಾಬರರ ಮುಖದಲ್ಲಿ ಮಂದಹಾಸ ತೋರಿಬರುತ್ತಿತ್ತು. ತನ್ನ ಶಕ್ತಿ, ಪ್ರಭಾವಗಳ ಅರಿವು ಜನರಿಗೆ ಆಗಲಾದರೂ ಆಯಿತೇ ಎಂದು ಪ್ರಶ್ನಿಸುತ್ತಿರುವಂತೆಯೇ ಅವರ ದೇಹಮುಖಗಳನ್ನು ಮಾಡಿಕೊಂಡು ಮಿ. ಮೈಕಾಬರರು ಅಧ್ಯಕ್ಷಸ್ಥಾನದಲ್ಲಿ ಕುಳಿತಿದ್ದರು. ನಾನು ಈ ಸಭೆಯನ್ನು, ಇನ್ನೂ ಇಂಥಾ ದುಃಖಮಯ, ಚಮತ್ಕಾರಿಕ, ಹಾಸ್ಯಮಿಶ್ರಿತ ಕೂಟಗಳನ್ನು ಆಗಿಂದಾಗ್ಗೆ ನೋಡುತ್ತಿದ್ದೆನು. ನಾನು ಸಮಯವಿದ್ದಾಗಲೆಲ್ಲ ಆ ಮಹಾ ನಗರದಲ್ಲೆಲ್ಲ ಸಂಚರಿಸಿ, ನಗರದ ಪರಿಚಯವನ್ನು ಮಾಡಿಕೊಳ್ಳುತ್ತಿದ್ದೆನು. ಮಾತ್ರವಲ್ಲದೆ ಮಿ. ಮೈಕಾಬರರ ಕುಟುಂಬದಲ್ಲಿ ಕಲೆತು ಬೆರೆತು ಅವರ ಸಂಸಾರದ ಅನುಭವಗಳನ್ನು ತಿಳಿದುಕೊಳ್ಳುತ್ತಿದ್ದೆ. ಈ ಮಧ್ಯೆ ನನ್ನ ಜೀವನ ವೃತ್ತಿಯನ್ನು ಗ್ರಿನ್ಬಿ ಕಂಪೆನಿಯಲ್ಲಿ ಸಾಗಿಸುತ್ತಲೂ ಇದ್ದೆ. ಈ ಎಲ್ಲಾ ವಹಿವಾಟ, ಗೊಂದಲ, ಸಂಸರ್ಗಗಳಲ್ಲಿ ನಾನು ನನ್ನ ಪ್ರಾಯಕ್ಕೆ ಮೀರಿದ ರೀತಿಯಲ್ಲಿ ಬೆರೆತಿರುತ್ತಿದ್ದರೂ, ನನ್ನ ವ್ಯಕ್ತಿತ್ವವನ್ನು ಕಾಯ್ದುಕೊಂಡೇ ಇದ್ದೆ. ನನ್ನ ಜತೆಯವರೇ ನನ್ನನ್ನು ಇತರರೆಲ್ಲರಿಗಿಂತ ವಿಶಿಷ್ಟವಾದ ಗುಣ, ಅನುಭವ ಶಕ್ತಿ ಉಳ್ಳವನೆಂದು ಗ್ರಹಿಸಿಕೊಂಡಿದ್ದರು.

ಹಿಂದೆ ನಾನು ನಡೆದು, ನಡೆದು ರಸ್ತೆಯನ್ನು ಸವೆಯಿಸಿರುವ ಲಂಡನ್ ನಗರದ ಸೌತಾರ್ಕ್ ಮತ್ತು ಬ್ಲೇಕ್ಫೇರ್ಗಳ ಮಧ್ಯೆ ಈಗ ನಾನು ಹೋಗುವಾಗ ನನ್ನ ಹಿಂದಿನ ಕಾರ್ಯಗಳೆಲ್ಲ ನನ್ನೆದುರೇ ನಡೆಯುತ್ತಿರುವಂತೆ ನನಗೆ ತೋರುತ್ತದೆ. ಸಾತ್ವಿಕ ಗುಣವುಳ್ಳ, ಕಲ್ಪನಾಶೀಲನಾದ, ಎಳೆಯ ಪ್ರಾಯದ ಪೋರನೊಬ್ಬನು ತನ್ನ ದುಃಖಗಳ ಜತೆಯಲ್ಲಿ ಇತರರ ದುಃಖಗಳನ್ನು ಹೊತ್ತು, ಕಲ್ಪನಾಪ್ರಪಂಚದಲ್ಲಿ ಮಗ್ನನಾಗಿ ನಡೆದೂ ನಡೆದೂ ನನ್ನೆದುರೇ ಹೋಗುತ್ತಿರುವುದನ್ನು ನಾನು ಈಗಲೂ ಕಾಣಬಲ್ಲೆನು. ನನ್ನ ಬಾಲ್ಯದ ಅನುಭವಗಳನ್ನೆಲ್ಲ ಗ್ರಹಿಸಿದರೆ ನನಗೆ ಹೀಗೆ ಕಾಣುವುದೊಂದು ಆಶ್ಚರ್ಯವಲ್ಲ.

(ಮುಂದುವರಿಯಲಿದೆ)