ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ, ಮುಖಪುಸ್ತಕದಲ್ಲಿ `ಲಾಯಕ್’ಗಳ (ಲೈಕ್ಸ್) ಏರುಜ್ವರ! ನಡುವೆ ಸುಳಿವ ಮೆಲು ಮಾರುತನಂತೆ ಸಿಎನ್ನಾರ್, ಅನಂತಮೂರ್ತಿ, ವಿವೇಕ ರೈ, ವೈದೇಹಿ ಮುಂತಾದ ಹಿರಿಯರು ಸ್ವಾನುಭವದ ನೆಲೆಯಿಂದ ಶಿವಮೊಗ್ಗ ಕರ್ನಾಟಕ ಸಂಘದ ಘನತೆ ಬಗ್ಗೆ ಹೇಳಿದರು, ನನ್ನ ಒಪ್ಪಿಗೆಯನ್ನು ಸಮರ್ಥಿಸಿದರು. ಸಾರ್ವಜನಿಕ ರಂಗದಲ್ಲಿ ಗಟ್ಟಿಯಾಗಿ ಉಳಿದು ಬಂದ ಯಾವುದೇ ಸಂಸ್ಥೆಯನ್ನು ಹುಟ್ಟುಹಾಕಿ, ಮೊದಲ ನಡೆ ಕಲಿಸಿದವರು ಹೆಚ್ಚಾಗಿ ದ್ರಷ್ಟಾರರೇ ಇರುತ್ತಾರೆ. ಆದರೆ ಮುಂದುವರಿದಂತೆ, ಪಾಲು ಕೊಡುವವರಿಗಿಂತ, ಕಡಿಯುವವರ ಸಂಖ್ಯೆ ದೊಡ್ಡದು. ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಬಂದ ಮೇಲೆ ಘಂಟಾಘೋಷವಾಗಿ ಹೇಳಬಲ್ಲೆ – ಇದಕ್ಕೆ ಅಪವಾದ ೮೩ ವರ್ಷಗಳ ಹಿರಿಯ ಶಿವಮೊಗ್ಗ ಕರ್ನಾಟಕ ಸಂಘ. ಶಿವಮೊಗ್ಗ ಪೇಟೆಯಿಂದ ತುಸು ಹೊರಗಿನ ಕ್ಷೇತ್ರ ಕೂಡಲಿ. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಹರಿದು, ಅರಿತು ಬಳಸಿದರೆ ನಾಗರಿಕತೆಗೆ ಒಳಿತನ್ನೇ ಮಾಡುತ್ತ ಬಂದ ತುಂಗಾ ಮತ್ತು ಭದ್ರಾ ನದಿಗಳು, ಮತ್ತಷ್ಟೂ ಜೀವ ನೆಮ್ಮದಿಗೆ ಇಲ್ಲಿ ಕೂಡಿ ಮುಂದುವರಿಯುತ್ತವೆ. ಶಿವಮೊಗ್ಗ ಕರ್ನಾಟಕ ಸಂಘವೂ ಕೂಡಲಿ; ಒಳ್ಳೇ ಇತಿಹಾಸದೊಂದಿಗೆ ಒಳ್ಳೇ ವರ್ತಮಾನದ ಸಂಗಮ.
ನನಗೆ ಬಹುಮಾನ ಘೋಷಣೆಯ ಕುರಿತ ದೂರವಾಣಿ ಸಂದೇಶ, ಹಿಂಬಾಲಿಸಿದ ಪತ್ರ, ಸುಮಾರು ಹತ್ತು ದಿನವಿದ್ದಂತೆ ನಮ್ಮ (ಹೆಂಡತಿ ದೇವಕಿ ಸಹಿತ) ಪ್ರಯಾಣ ಮತ್ತು ವಾಸ್ತವ್ಯದ ವಿಚಾರಣೆ, ವಾರವಿದ್ದಂತೆ ಮುದ್ರಿತ ಆಮಂತ್ರಣದೊಡನೆ ಅವರು ಯೋಜಿಸಿದ ವಾಸ್ತವ್ಯದ ವಿವರಗಳು ಮತ್ತು ಕೊನೆಯಲ್ಲಿ ಮೂರು ದಿನವಿದ್ದಂತೆ ದೂರವಾಣಿಸಿ ಅವೆಲ್ಲ ಮುಟ್ಟಿದ್ದು ಮತ್ತು ನನ್ನ ಬರವನ್ನು ಖಾತ್ರಿಪಡಿಸಿಕೊಂಡ ಕ್ರಮ ಶಿಸ್ತಿನ ಸಿಪಾಯಿಯ ಮೆಲು ನಗೆಯಂತಿತ್ತು. ಬಸ್ಸಿಳಿದಲ್ಲಿಂದ ಮೂರು ಮಿನಿಟಿಗೆ ಹೋಟೆಲ್, ಮತ್ತಲ್ಲಿಂದ ಐದು ಮಿನಿಟಿಗೆ ಕರ್ನಾಟಕ ಸಂಘ. ಯೋಜನೆಯಂತೆ ಸಂಜೆ ನಾಲ್ಕಕ್ಕೆ ಪುರಸ್ಕೃತರೊಡನೆ ಸಂವಾದ. ಆ ಸಂಜೆ ಸಮಯ ನಾಲ್ಕರ ಗಡಿ ದಾಟಲು, ಸಂಘದಲ್ಲಿನ `ಪುರಸ್ಕೃತರೊಡನೆ ಸಂವಾದ’ ಕಲಾಪದ ಆರಂಭವನ್ನು ಕಾದಿತ್ತು!
ಅದ್ದೂರಿ, ಅಬ್ಬರ, ಮೇರೆವರಿವ ಪ್ರೀತಿ ಮುಂತಾದ ಒಯ್ಲಿನಲ್ಲಿ ಔಚಿತ್ಯ ಕೊಚ್ಚಿಹೋಗುವುದನ್ನೂ ವ್ಯತಿರಿಕ್ತವಾಗಿ ವಾರದ ಸಂತೆಯಂತೆ ಗದ್ದಲ ಗೊಂದಲಗಳ ಕಂಪದಲ್ಲಿ ಕಲಾಪವೇ ಮುಳುಗಿ ಹೋಗುವುದನ್ನೂ ನಾವೆಲ್ಲ ಕಾಣದ್ದೇನಲ್ಲ. ಹಾಗೆ ಜಡ್ಡುಗಟ್ಟಿದ ಮನಸ್ಸಿನಲ್ಲೇ ಒಟ್ಟು ಸಭೆಗೆ ಬರಲು ಉತ್ಸಾಹ ತೋರಿದ್ದ ನನ್ನ ಮಿತ್ರರಿಗೆಲ್ಲಾ “ನಾನು ಹೋಗುವುದು ಅನಿವಾರ್ಯ. ನಿಮ್ಮನ್ನು `ಬನ್ನಿ’ ಎಂದು ಖಂಡಿತಾ ಹೇಳುವುದಿಲ್ಲ” ಎಂದೇ ಹೇಳಿದ್ದೆ. ಬೆಂಗಳೂರಿನಿಂದ ಮಗ ಸೊಸೆ ಬರುವುದನ್ನಂತೂ ಹಿಂದಿನ ರಾತ್ರಿಯವರೆಗೂ ನಿರುತ್ತೇಜಿಸಿದ್ದೆ. ಅದೇ ಧಾಟಿಯನ್ನು ನನ್ನ ಲೇಖನದಲ್ಲೂ ದಾಖಲಿಸಿದ್ದೆ. ಆದರೆ ಸಂವಾದ ಕಲಾಪ, ಮುಂದುವರಿದ ಪುರಸ್ಕಾರ ಸಮಾರಂಭ ನನ್ನ ಮಾತನ್ನು ಹುಸಿಗೊಳಿಸಿದ್ದಕ್ಕೆ, ಇಂದು ನನಗೆ ಸಂತೋಷವಿದೆ.
ಸಂವಾದದ ನಿರ್ವಾಹಕ – ಸರ್ಜಾಶಂಕರ ಹರಳೀಮಠ, ಗಟ್ಟಿ `ಮನೆಗೆಲಸ’ ಮಾಡಿದ್ದರು. ಸುಮಾರು ಎರಡು ತಿಂಗಳ ಮೊದಲೇ ಸಂಘ ಸಾಹಿತ್ಯದ ಹನ್ನೆರಡು ಪ್ರಕಾರಗಳಲ್ಲಿ ಸ್ಪರ್ಧೆಗೆ ಪುಸ್ತಕಗಳನ್ನು ಆಹ್ವಾನಿಸಿತ್ತು. ಬಂದ ಕೃತಿಗಳನ್ನು ಪ್ರಕಾರವೊಂದಕ್ಕೆ ತಲಾ ಇಬ್ಬರಂತೆ ಸಮರ್ಥ ತೀರ್ಪುಗಾರರ ವಶಕ್ಕೊಪ್ಪಿಸಿ, ಸಕಾಲದಲ್ಲಿ ವಿವರಣೆ ಸಹಿತವಾದ ತೀರ್ಪೂ ಪಡೆದಿತ್ತು. (ನನ್ನ ಪುಸ್ತಕಕ್ಕೆ ಬಂದಿದ್ದ ವಿವರಣೆಯನ್ನು ಹಿಂದಿನ ಲೇಖನದಲ್ಲಿ ಹಾಕಿರುವುದನ್ನು ಆಸಕ್ತರು ಇನ್ನೊಮ್ಮೆ ನೋಡಿಕೊಳ್ಳಬಹುದು.) ಸರ್ಜಾ ಶಂಕರ್ ಸಂವಾದ ಸಭೆಗೆ ಸಾಮಾನ್ಯ ಸಾಹಿತ್ಯಾಸಕ್ತರೊಡನೆ ಬಹುತೇಕ ತೀರ್ಪುಗಾರರೂ ಭಾಗವಹಿಸುವಂತೆ ಮತ್ತು ಆದ್ಯತೆಯಲ್ಲಿ ಪ್ರಶ್ನಿಸುವಂತೆ ಅವಕಾಶ ಕಲ್ಪಿಸಿದ್ದರು. ಒಟ್ಟು ಕಲಾಪ ಒಂದು ಗಂಟೆಯ ಅವಧಿಯದು. ಪ್ರತಿ ಪುರಸ್ಕೃತನಿಗೆ ಸರದಿಯಲ್ಲಿ ಐದು ಮಿನಿಟು ಮೀಸಲಿತ್ತು. ಕಡಿಮೆ ಮಾತಾಡಿದವರ ಸಮಯ ಹೆಚ್ಚಿದ್ದವರಲ್ಲಿ ಬಳಸಿ ಹೋಗಿ ಒಂದು ಗಂಟೆ ಸ್ವಾರಸ್ಯಪೂರ್ಣವಾಗಿಯೇ ತುಂಬಿ ಬಂತು.
ವೃತ್ತಿ ವರದಿಗಾತಿ ಸುಶೀಲಾ ಡೋಣೂರರಿಗೆ ಕುತೂಹಲದ ವಸ್ತು ಸಿಕ್ಕಾಗ ವರದಿ ಮಾಡಲೇ ಕಥಾವಲ್ಲರಿ ಹಬ್ಬಿಸಲೇ ಎಂಬ ಗೊಂದಲ. ಸ್ನೇಹಿತರ ಸಲಹೆಯಂತೆ ಅದನ್ನವರು ಮನದಪಾಕದಲ್ಲಿ ಸಹಜ ವಿಕಾಸಕ್ಕೆ ಒಡ್ಡಿಕೊಂಡಾಗ, `ನ್ಯಾನ್ಸಿ’ ಕಾದಂಬರಿಯೇ ಆಗಿತ್ತು; ಅದಕ್ಕಿಲ್ಲಿ ಕುವೆಂಪು ಹೆಸರಿನ ಶ್ರೇಷ್ಠ ಕಾದಂಬರಿಯ ಪುರಸ್ಕಾರ ಬಂದಿತ್ತು. ಆರ್.ಪಿ. ಹೆಗಡೆಯವರ ಬಹುಶ್ರುತ ಭಾಷಾ ಹಾಗೂ ಸಾಹಿತ್ಯ ಪ್ರೀತಿಗೆ ಸಾಕ್ಷಿ ಅವರು ಕನ್ನಡಿಸಿದ ಚಿತ್ರಾ ಮುದ್ಗಲ್ ಕತೆಗಳು – `ಆದಿ-ಅನಾದಿ’. ಮುಂದೆ ಪುರಸ್ಕಾರ ಸಭೆಯ ಅಧ್ಯಕ್ಷೀಯ ಭಾಷಣ ಮಾಡುತ್ತಾ ಶ್ರೀಮತಿ ವಿಜಯಾ ಶ್ರೀಧರ ಅಂತೂ ಇದಕ್ಕೆ “ಸ್ವತಂತ್ರ ಕೃತಿಯ ಸ್ವಾದವೇ ಉಂಟು” ಎಂದಿದ್ದರು. ಇದು ವಿಜಯಾರ ಅಧ್ಯಕ್ಷ ಪದವಿಗೆ ಸಾರ್ಥಕ್ಯ ತರುವುದರೊಂದಿಗೆ ಅನುವಾದದ ಹೆಚ್ಚುಗಾರಿಕೆಗೆ ಸಂದ ವಿಶೇಷ ಗೌರವ. ಕಾಳಿದಾಸ, ಭಾಸ ಮುಂತಾದವರ ಮಹಾಸಂಪುಟಗಳನ್ನೇ ಕನ್ನಡಿಸಿ ಭಾಷೆಯನ್ನು ಸಮೃದ್ಧಗೊಳಿಸಿದ ಎಸ್.ವಿ. ಪರಮೇಶ್ವರ ಭಟ್ಟರ ಹೆಸರಿನ ಪುರಸ್ಕಾರ ಭಾಜನರಾದ ಆರ್.ಪಿ. ಹೆಗಡೆಯವರ ಬಲು ದೊಡ್ಡ ಸಮರ್ಥನೆಯೂ ಹೌದು.
ಪಿ. ಲಂಕೇಶ್ ಹೆಸರಿನ `ಮುಸ್ಲಿಂ ಸಾಹಿತಿ’ ಪುರಸ್ಕಾರ ಭಾಜನರಾದ ಅಲ್ಲಾಗಿರಿರಾಜ್ ಕನಕಗಿರಿ ವಿಶಾಲಾರ್ಥದಲ್ಲಿ ಮುಸಲ್ಮಾನ ಮತಕ್ಕೂ ಮೀರಿದವರು ಎನ್ನುವುದು ಸಂವಾದದ ಕ್ಷಣಗಳಲ್ಲಿ ಬೆಳಕಿಗೆ ಬಂದಾಗ ಉಂಟಾದ ಸಭಾರೋಮಾಂಚನಕ್ಕೆ ಸಾಕ್ಷಿ – ಬಿದ್ದ ಚಪ್ಪಾಳೆ. ಮುಸ್ಲಿಂ ಮೂಲದ ಅಲ್ಲಾಸಾಬ್ ಓರಗೆಯ ಗಿರಿ ಹಾಗೂ ಗುರುರಾಜರ ಹೆಸರ ತುಣುಕುಗಳನ್ನು ಕಾವ್ಯನಾಮಕ್ಕೆ ಹಚ್ಚಿಕೊಂಡದ್ದಕ್ಕೇ ಇಂದು ಅಲ್ಲಾಗಿರಿರಾಜ್! ಅನಾಥಾಲಾಯದ ಲಕ್ಷ್ಮಿ, ಇಂದು ಇವರ ಗೃಹಲಕ್ಷ್ಮಿ ಮತ್ತು ಸರ್ವಧರ್ಮ ಸೂಚಕ ಹೆಸರುಗಳ ಇವರೆರಡು ಮಕ್ಕಳ ತಾಯಿ. (ಕ್ಷಮಿಸಿ, ಮಕ್ಕಳ ಹೆಸರು ಮರೆತಿದ್ದೇನೆ. ಗೆಳೆಯ ಐಕೆ ಬೊಳುವಾರು ತನ್ನ ಮಗನನ್ನು `ಕಬೀರ್ ಮಾನವ’ ಎಂದೇ ಹೆಸರಿಸಿದ್ದು ಇಲ್ಲಿ ತುಂಬಾ ನೆನಪಿಗೆ ಬಂತು.) ನನಗೆ ಸಭೆಯಲ್ಲಿ ಕೇಳಿದ ಇವರ ಒಂದೆರಡು ಅನುಭಾವಗೀತೆಗಳು, ಪುರಸ್ಕಾರದ ಹೆಸರಿನ ಲಂಕೇಶರ ನೀಲು ಪದ್ಯಗಳಿಗೆ ಸಂವಾದಿಯಾಗಿಯೇ ಕೇಳಿಸಿತ್ತು.
ಆಮಂತ್ರಣ ಪತ್ರಿಕೆ ಬಂದಂದೇ ದೇವಕಿ ಅದರ ಮೇಲೆ ಕಣ್ಣಾಡಿಸುತ್ತ “ಓ ಆಶಾಬೆನಕಪ್ಪ ಇದ್ದಾರೆ!!” ಪ್ರಜಾವಾಣಿಯಲ್ಲಿನ ಅವರ ಅಂಕಣ ಬರಹ – `ಅಂತಃಕರಣ’ದ ಬಹುದೊಡ್ಡ ಅಭಿಮಾನಿ ಈಕೆ. ಅದೇ ಅಂಕಣ ಸಂಕಲನಕ್ಕೆ ಇಲ್ಲಿ ಪುರಸ್ಕಾರ ಸಲ್ಲುತ್ತಿರುವಾಗ ಇದೇ ಮೊದಲು ಅವರನ್ನು ಭೇಟಿ ಮಾಡಿ, ಮಾತಾಡಿಸುವ ಸಂತೋಷವನ್ನೂ ನೆನೆದೇ ದೇವಕಿ ಸಂಭ್ರಮಿಸಿದ್ದಳು. ಸಂವಾದ ಸಭೆಯಲ್ಲಿ ಪ್ರಶ್ನಕಾರರು ಅವರಿಗೆ ದೊರಕಿದ ಡಾ| ಹೆಚ್.ಡಿ. ಚಂದ್ರಪ್ಪ ಗೌಡ ವೈದ್ಯಕೀಯ ಪ್ರಶಸ್ತಿಯನ್ನು ನಿರ್ವಿವಾದವಾಗಿಯೇ ಸಮರ್ಥಿಸಿದರು. ಆದರೆ ಜತೆಗೇ ಪಟ್ಟಿ ಮಾಡಿ ತಂದಿದ್ದ ಅಚ್ಚಿನಮನೆಯ ಅವಾಂತರಗಳು ಮಾತ್ರ ಪ್ರಕಾಶಕರ ನಿರ್ಲಕ್ಷ್ಯದ ದ್ಯೋತಕ ಮತ್ತು ವಿಷಾದನೀಯ.
ಮೂಲಭೂತ ವಿಜ್ಞಾನಗಳಲ್ಲಿ ಒಂದಾದ ಖಭೌತ ವಿಜ್ಞಾನ ಮತ್ತು ತತ್ಸಂಬಂಧೀ ಆಕಾಶವೀಕ್ಷಣೆ ಇಂದು ಹೆಸರಿಗೇ ಕಳಂಕವಾದ ವಿಶ್ವವಿದ್ಯಾಲಯಗಳ ಕಲಿಕಾ ಪಟ್ಟಿಯಿಂದಲೇ ಸೋರಿ ಹೋಗಿದೆ. ಆರ್.ಎಲ್. ನರಸಿಂಹಯ್ಯನವರಿಂದ ರಿಕ್ತಗೊಂಡ ಕನ್ನಡ `ನಭೋಮಂಡಲ’ವನ್ನು ನನ್ನ ತಂದೆ ಜಿಟಿನಾ ಸ್ವಲ್ಪ ಮಟ್ಟಿಗೆ ಆಳುತ್ತಾ ಅಸ್ತ-ರೇಖೆಯೆಡೆಗೆ ಜಾರುತ್ತಿದ್ದ ಕಾಲದಲ್ಲಿ, ದಿಗಂತದಲ್ಲಿ ಮೊಳೆತ ತಾರೆ ಡಾ| ಬಿ.ಎಸ್. ಶೈಲಜ. ಇಂದು ಅವರು ಬೆಂಗಳೂರಿನ ತಾರಾಲಯದ ವಿಜ್ಞಾನಿ ಪದದಲ್ಲಿ ವೃತ್ತಿ ನೆಪಕ್ಕಷ್ಟೇ ಉಳಿಯದೆ, ಕನ್ನಡಾಗಸದಲ್ಲೂ ನಿಯತ ಆವರ್ತನದ ಧೂಮಕೇತುವಿನಂತೆ ಹೊಸ ವಿಚಾರಗಳ ಬಿತ್ತನೆ ನಡೆಸುತ್ತಲೇ ಇದ್ದಾರೆ. ಬಹುಶಃ ಅದಕ್ಕೆ ಅವರ `ಬಾಲಂಕೃತ ಚುಕ್ಕಿ ಧೂಮಕೇತು’ ಕೃತಿಗೇ ಸಂಘದ ಪ್ರಾತಃಸ್ಮರಣೀಯ ದಾನಿ ಹಸೂಡಿ ವೆಂಕಟಶಾಸ್ತ್ರಿಗಳ ಹೆಸರಿನ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ನೀನಾಸಂನ ಆ ಒಂದು ತಿರುಗಾಟದಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡ, ಅದಕ್ಕೂ ಮಿಕ್ಕು ವೃತ್ತಿಪರ ನಾಟಕ ರಂಗದಲ್ಲಿ ಕನ್ನಡ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಬಹುಸ್ತುತವಾದ ಮತ್ತೂ ಸ್ಮರಣೀಯವಾಗಿಯೇ ಉಳಿದ ಸದಾಶಿವರಾವ್ ಗರುಡರ ಮೊಮ್ಮಗನೆಂಬ ಖ್ಯಾತಿಗೆ ಮೆರುಗನ್ನಿತ್ತ ಪ್ರಕಾಶ ಗರುಡರ ಕೃತಿ – ಬೆತ್ತಲಾಟ. ಇದಕ್ಕೆ ಕೆವಿ ಸುಬ್ಬಣ್ಣ ಹೆಸರಿನದೇ ನಾಟಕ ವಿಭಾಗದ ಪ್ರಶಸ್ತಿ ಬಂದದ್ದು ಪ್ರಶಸ್ತವೇ ಇತ್ತು.
ಹೀಗೇ ಎಂಕೆ. ಇಂದಿರಾ ಹೆಸರಿನ ಮಹಿಳಾ ಲೇಖಕ ವಿಭಾಗದ ಪುರಸ್ಕೃತ ಕೃತಿ – ಸಾಸಿವೆ ತಂದವಳು, ಇದರ ಲೇಖಕಿ ಬಿ.ವಿ ಭಾರತಿ, ಹಾಮಾ ನಾಯಕ ಹೆಸರಿನ ಅಂಕಣ ಬರಹ ವಿಭಾಗದ ಪುರಸ್ಕೃತ ಕೃತಿ – ತೇಜಸ್ವಿ ಬದುಕಿದ್ದಾರೆ, ಇದರ ಲೇಖಕ ಕೀರ್ತಿ ಕೋಲ್ಗಾರ್, ಯು. ಆರ್ ಅನಂತಮೂರ್ತಿ ಹೆಸರಿನ ಸಣ್ಣ ಕತಾ ವಿಭಾಗದ ಪುರಸ್ಕೃತ ಕೃತಿ – ಮಾಯಾಕೋಲಾಹಲ, ಇದರ ಲೇಖಕ ಮೌನೀಶ ಬಡಿಗೇರ, ಕೊನೆಯದಾಗಿ ನಾ ಡಿಸೋಜಾ ಹೆಸರಿನ ಮಕ್ಕಳ ಸಾಹಿತ್ಯವಿಭಾಗದ ಪುರಸ್ಕೃತ ಕೃತಿ – ಹಾರದಿರಲಿ ಪ್ರಾಣಪಕ್ಷಿ, ಇದರ ಲೇಖಕ ಹ.ಸ. ಬ್ಯಾಕೋಡರಿಗೂ ತಂತಮ್ಮ ಕೃತಿಯಿಂದಲೂ ಹೊರಗೆ ಸಾಹಿತ್ಯಾಭಿಮಾನಿಗಳೊಡನೆ ಸಂವಾದಿಸುವ ಅವಕಾಶ ಚೆನ್ನಾಗಿಯೇ ಸಂದಿತು. ನಾನೂ ಅಲ್ಲಿ `ಪರೀಕ್ಷೆ’ಗೊಳಪಟ್ಟಿದ್ದೆ. ಆದರೆ ಔಪಚಾರಿಕ ಭಾಷಣ, ಸಂವಾದಗಳಲ್ಲಿ ಚತುರನಲ್ಲದ ಮಿತಿಯಲ್ಲಿ ಚಡಪಡಿಸಿ, ಉಳಿದಂತೆ ಇತರರ ಸ್ವಾರಸ್ಯಪೂರ್ಣ ಸಂವಾದಗಳನ್ನು ಗ್ರಹಿಸುವಲ್ಲಿ, ಹಾಗಾಗಿ ಇಲ್ಲಿ ದಾಖಲಿಸುವಲ್ಲಿ ಸೋತಿದ್ದೇನೆ – ಕ್ಷಮಿಸಿ. ನನ್ನನ್ನು ಸ್ವತಃ ಸರ್ಜಾ ಶಂಕರರೇ ಪ್ರಶ್ನಿಸಿದ್ದರು. ಸ್ವಾನುಭವವನ್ನು ಸಾರ್ವಜನಿಕ ಉಪಯುಕ್ತತೆಯ ಮಾಧ್ಯಮದಲ್ಲಿ ದಾಖಲಿಸುವುದರೊಡನೆ, ಓದುಗರನ್ನು ವಿವಿಧ ಸ್ತರಗಳಲ್ಲಾದರೂ ಕ್ರಿಯಾಶೀಲರಾಗಲು ಪ್ರೇರಣೆ ಕೊಡುವ ಜವಾಬ್ದಾರಿಯನ್ನು ಮೇಳೈಸಿಕೊಂಡವ ನಾನೆಂದು ನಿವೇದಿಸಿಕೊಂಡೆ.
ಕರ್ನಾಟಕ ಸಂಘ ತನ್ನ ಮುಖವಾಣಿಯಾಗಿ `ಮಾಹಿತಿ’ ಎಂಬ ತ್ರೈಮಾಸಿಕ ವಾರ್ತಾಪತ್ರವನ್ನು (ಬಹುಶಃ) ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಅದಕ್ಕೆ `ನವಿಲು ಹೆಜ್ಜೆ’ ಎಂಬ ಹೊಸ ಅರ್ಥಪೂರ್ಣ ಹೆಸರನ್ನಿತ್ತು, ಸಂಘದ ಕಲಾಪಗಳ ಸಮರ್ಥ ಪ್ರತಿಬಿಂಬವಾಗುವಂತೆ ಉನ್ನತೀಕರಣಕ್ಕೊಳಪಡಿಸಿದವರು ಇಂದಿನ ಸಂಪಾದಕ ಸರ್ಜಾಶಂಕರ ಹರಳೀಮಠ. ಪುರಸ್ಕಾರ ಪ್ರದಾನದ ಸಂದರ್ಭದಲ್ಲೇ ಪ್ರಕಟಗೊಂಡ ಈ ನಾಲ್ಕನೇ ಸಂಪುಟದ ಎರಡು ಅವಧಿಯ ಸಂಯುಕ್ತ ಸಂಚಿಕೆಯ ಕೊನೆ ಭಾಗದ ಒಂದೊಂದು ಪುಟ ಒಬ್ಬೊಬ್ಬ ಪುರಸ್ಕೃತನನ್ನೂ ಚುಟುಕಾಗಿ, ಪ್ರಾತಿನಿಧಿಕವಾಗಿ ಪರಿಚಯಿಸುತ್ತದೆ. ಅದೇ ನಿಖರತೆಯಲ್ಲಿ ಸಮಾರಂಭ ಹನ್ನೆರಡೂ ಮಂದಿಯನ್ನು ಸಭೆಗೆ ಪರಿಚಯಿಸಿತು. ಸಭೆಗೆ ಅತಿಥಿಯಾಗಿ ಬಂದಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ – ಬಂಜಗೆರೆ ಜಯಪ್ರಕಾಶ, ಸಂಘದ ಹಾಗೂ ಸಭೆಯ ಅಧ್ಯಕ್ಷತೆಯನ್ನೂ ವಹಿಸಿದ್ದ ವಿಜಯ ಶ್ರೀಧರ, ನಿರ್ವಹಣಕಾರ ಕೆ.ಜಿ. ವೆಂಕಟೇಶ್, ಸಂಘದ ಗೌರವ ಕಾರ್ಯದರ್ಶಿ ಎಚ್.ಎಸ್. ನಾಗಭೂಷಣ ಮತ್ತು ಸಹಕಾರ್ಯದರ್ಶಿ ಎಚ್.ಎನ್. ಶ್ರೀಲಕ್ಷ್ಮಿ ವೇದಿಕೆಯಲ್ಲಿದ್ದು ಪುರಸ್ಕಾರ ಪ್ರದಾನವನ್ನು ಚಂದಗಾಣಿಸಿದರು. ಪುರಸ್ಕೃತರ ಪರವಾಗಿ ಏಕೈಕ ಪ್ರತಿನಿಧಿಯಂತೆ ಸುಶೀಲಾ ಡೋಣೂರ ಔಪಚಾರಿಕ ಕೃತಜ್ಞತಾ ಮಾತುಗಳನ್ನೇ ಆಡಿದರೂ ಅದು ನಿಜ ಮೆಚ್ಚುಗೆ ಸೂಸುತ್ತಿತ್ತು.
ಪ್ರಶಸ್ತಿ, ಪುರಸ್ಕಾರಗಳನ್ನು ಮನ್ನಿಸುವ ಕುರಿತು ನಾನು ನನ್ನ ಪತ್ರ ಹಾಗೂ ಲೇಖನದ ಮೂಲಕ ಪಸರಿಸಿದ್ದ ಗೊಂದಲವನ್ನು ಸಾರ್ವಜನಿಕದಲ್ಲಿ ತಿಳಿಗೊಳಿಸಲು ನಾಲ್ಕು ಮಾತಿನ ಅವಕಾಶ ಕೋರಿದ್ದೆ. ನಿರ್ವಾಹಕರು ಇನ್ನೋರ್ವ ಪುರಸ್ಕೃತವೇದಿಕೆಯ ಮೇಲಿನ ನ ನೆಲೆಯಲ್ಲಿ ಕೊಟ್ಟರು. ನಾನು ಬರೆದೇ ಒಯ್ದಿದ್ದ ಮಾತುಗಳನ್ನು ಓದಿದೆ. ಅದರ ಪೂರ್ಣ ಪಾಠ:
ಮಿತ್ರರೇ,
ಕುಕ್ಕೆಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ ಘೋಷಣೆಗೆ ಪ್ರಥಮ ಪ್ರತಿಕ್ರಿಯೆಯಾಗಿಯೇ ನಾನು ಕರ್ನಾಟಕ ಸಂಘಕ್ಕೆ ಬರೆದ ಪತ್ರದಲ್ಲೂ ಹೇಳಿಕೊಂಡಂತೆ, ನಾನು ಪ್ರಶಸ್ತಿ, ಬಹುಮಾನಗಳಿಗೆ ಪ್ರಯತ್ನಿಸಿದವನೇ ಅಲ್ಲ. ಕೆಲವೇ ಕೆಲವು ಬರಬಹುದೆಂಬ ಸೂಚನೆಯಿದ್ದವನ್ನೂ ಪ್ರಚಾರದ ತೀಟೆಯಿಲ್ಲದೆ ನಿರಾಕರಿಸಿದ್ದೇನೆ. ಹಾಗಿದ್ದೂ ಇದನ್ನು ಒಪ್ಪಿಕೊಂಡದ್ದು ಮತ್ತು ಮುಂದಿನ ಕ್ರಮದ ಕುರಿತು ನಾಲ್ಕೇ ನಾಲ್ಕು ಮಾತುಗಳು:
1. ಪ್ರಸ್ತುತ ಬಹುಮಾನ ಸ್ಪರ್ಧೆಯ ಫಲಿತಾಂಶದ ಘೋಷಣೆಯವರೆಗೂ ನನಗೆ ಹೀಗೊಂದು ಅವಕಾಶ ಉಂಟು, ಅದಕ್ಕೆ ನನ್ನ ಅಭ್ಯರ್ಥಿತನ ಪುಸ್ತಕದ ಪ್ರಕಾಶಕ ನ. ರವಿ ಕುಮಾರರಿಂದ ಹೋಗಿದೆ ಇತ್ಯಾದಿಯೂ ನನಗೆ ತಿಳಿದಿರಲಿಲ್ಲ. ಬಹುಮಾನ ಘೋಷಣೆಯನಂತರ ಶಿವಮೊಗ್ಗ ಕರ್ನಾಟಕ ಸಂಘದ ಚಾರಿತ್ರ್ಯ – ಅಂದರೆ, ಬಹಳ ಮುಖ್ಯವಾಗಿ, ಸರಕಾರೀ ಪೋಷಣೆಯನ್ನು ಧಿಕ್ಕರಿಸಿ ಜನಪೋಷಣೆಯನ್ನೇ ನೆಚ್ಚಿ ೮೪ ವರ್ಷಗಳಿಗೂ ಮಿಕ್ಕು ದೃಢವಾಗಿ ನಿಂತು, ಮುಂದುವರಿಯುವ ಛಲ ತಿಳಿದು, ಸಂತೋಷದಿಂದ ಒಪ್ಪಿಕೊಂಡೆ.
2. ಕುಮಾರ ಪರ್ವತದ ಸುತ್ತಮುತ್ತ – ನನ್ನ ಅನುಭವಗಳ ಸಂಕಲನ. ಆದರೆ ರಮ್ಯ ಸಾಹಸಕಥನ ಅಥವಾ ಆತ್ಮಕಥಾನಕವಾಗದ ರೀತಿಯಲ್ಲಿ ವನ್ಯವಲಯದ ಸಮಸ್ಯೆ, ಉಳಿವಿನ ಹೋರಾಟದ ಧ್ವನಿಯಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಪ್ರೇರಣೆ ಪಡೆದು, ಅನುಸರಿಸಿ ಬೆಳೆಯಬಲ್ಲವರಿಗೆ ಮಾರ್ಗದರ್ಶಿಯಾಗುವಂತೆಯೂ ಶ್ರಮಿಸಿದ್ದೇನೆ. ಬಹುಮಾನ ಈ ಕೃತಿಗೆ ಕಲ್ಪಿಸುವ ಪ್ರಭಾವಲಯ, ಇದು ಪ್ರತಿನಿಧಿಸುವ ಪಾರಿಸರಿಕ ವಿಚಾರ – ಅಂದರೆ, ವನ್ಯ ಪರಿಸರ ಜಾಗೃತಿಯ ಪ್ರಚಾರಕ್ಕೆ ಸಿಕ್ಕ ದೊಡ್ಡ ಅವಕಾಶ ಎಂದೂ ಕಂಡುದರಿಂದ ಒಪ್ಪಿಕೊಂಡಿದ್ದೇನೆ. ಆದರೆ…
3. ಮೂವತ್ತಾರು ವರ್ಷಗಳುದ್ದಕ್ಕೆ ಪುಸ್ತಕೋದ್ಯಮವನ್ನು ಬುದ್ಧಿಪೂರ್ವಕವಾಗಿ – ಸ್ಪಷ್ಟವಾಗಿ ಹೇಳುವುದಿದ್ದರೆ, ಕೇವಲ ಹೊಟ್ಟೆಪಾಡಿಗೆಂಬಂತೆ ಅಲ್ಲ, – ತತ್ವ, ಆದರ್ಶಗಳ ಚೌಕಟ್ಟಿನಲ್ಲೇ ನಡೆಸಿ, ಯಶಸ್ಸು ಕಂಡು ನಿವೃತ್ತನಾದವನು ನಾನು. ಗಮನಿಸಿ, ನಾನು ದಿವಾಳಿಯಾದವನಲ್ಲ; ಆರ್ಥಿಕ ನೆಲೆಯಲ್ಲಿ ತೃಪ್ತನಾಗಿಯೇ ನಿವೃತ್ತನಾದವ. ಹಾಗಾಗಿ ಸಂಘದ ಆತಿಥ್ಯವನ್ನು ನಾನು ಒಪ್ಪಿಕೊಂಡರೂ ಪುಸ್ತಕಕ್ಕೆ ಬರುತ್ತಿರುವ ಬಹುಮಾನದ ಹಣವನ್ನು ಸವಿನಯ ಸಂಘಕ್ಕೇ ಮರಳಿಸುತ್ತಿದ್ದೇನೆ.
4. ನನಗಿಂತ ಅನುಭವದಲ್ಲಿ ಅನೇಕ ಹಿರಿಯರು ಇಲ್ಲಿ ವೇದಿಕೆಯ ಮೇಲೇ ಮಾತಾಡಬಹುದಾದ್ದರಿಂದ ದೀರ್ಘ ಭಾಷಣಕ್ಕೆ ಇದು ಸಮಯವಲ್ಲ. ಅದನ್ನು ಮುಂದಾಗಿಯೇ ಅಂದಾಜಿಸಿ, ನನ್ನ ಸವಿವರ ಪ್ರತಿಕ್ರಿಯೆಯನ್ನು ನಿನ್ನೆಯೇ ನನ್ನ ಜಾಲತಾಣ ಅಥವಾ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಆಸಕ್ತರು ಎಂದೂ ಅಂತರ್ಜಾಲದಲ್ಲಿ ನನ್ನ ಜಾಲತಾಣಕ್ಕೆ ಭೇಟಿ ಕೊಟ್ಟು ಓದಿಕೊಳ್ಳಬಹುದು, ಚರ್ಚಿಸಬಹುದು, ಬಳಸಿಕೊಳ್ಳಬಹುದು ಎಂದು ಮನವಿ ಮಾಡುತ್ತೇನೆ. ನನ್ನ ಜಾಲತಾಣದ ವಿಳಾಸ: www.athreebook.com
ಅಯಾಚಿತವಾಗಿ ಈ ಬಹುಮಾನವನ್ನು ನನ್ನ ಪುಸ್ತಕಕ್ಕೆ ಕೊಡಮಾಡಿದ, ನನ್ನ ಕುರಿತು ಮಾತುಗಳನ್ನಾಡಿದ ಮತ್ತು ಇದಕ್ಕೆ ಸಾಕ್ಷಿಯಾಗಿ ಬಂದ ನಿಮಗೆಲ್ಲರಿಗೂ ವಂದನೆಗಳು. ಇಂಥ ಸಂದರ್ಭಗಳಲ್ಲಿ ನನ್ನ ತಂದೆ – ಜಿ.ಟಿ. ನಾರಾಯಣ ರಾವ್, ಉದ್ಧರಿಸುತ್ತಿದ್ದ ಮಾತುಗಳನ್ನೇ ನೆನೆಸಿಕೊಳ್ಳುತ್ತೇನೆ – ಈ ಬಹುಮಾನ ನಾನು ತಪ್ಪು ದಾರಿಯಲ್ಲಿ ಸಾಗಿಲ್ಲ ಎನ್ನುವುದನ್ನು ಸಮರ್ಥಿಸಿದೆ.ನಮಸ್ಕಾರ
ಕರ್ನಾಟಕ ಸಂಘದ ಪುರಸ್ಕಾರ ಪ್ರದಾನದಲ್ಲಿ ಸರಳತೆಯೊಡನೆ ಉಪಯುಕ್ತತೆಯನ್ನು ತುಂಬ ಹಿತವಾಗಿ ಸಂಯೋಜಿಸಿದ್ದರು. ಇಲ್ಲಿ ನನ್ನ ಲಕ್ಷ್ಯ ವೇದಿಕೆಯ ಅಲಂಕಾರ, ಕೊಟ್ಟ ಹಾರ-ಹಣ್ಣು, ಪ್ರಶಸ್ತಿಪತ್ರ ಮುಂತಾದ ಪರಿಕರಗಳ ಕುರಿತದ್ದಲ್ಲ; ಸಾರ್ವಜನಿಕ ತಾಳ್ಮೆಯನ್ನು ಪರೀಕ್ಷಿಸುವ ಕಲಾಪಗಳದ್ದು. ಮೂರು ಸಾಲಿನ ಆಸನ ವ್ಯವಸ್ಥೆಯಲ್ಲಿ ಹಿಂದಿನೆರಡು ಪುರಸ್ಕೃತರದ್ದು. ಮುಂದಿನ ಸಾಲಿನ ಎಡ ಕೊನೆಯಲ್ಲಿ ಕುಳಿತವ ನಿರ್ವಾಹಕ – ವೆಂಕಟೇಶ್. ಅವರು ಪುರಸ್ಕಾರದ ಹೆಸರು ಮತ್ತು ಸಾಹಿತ್ಯ ಪ್ರಕಾರದೊಡನೆ ಒಂದೊಂದೇ ಕೃತಿಕಾರನನ್ನು ವೇದಿಕೆಗೆ ಆಹ್ವಾನಿಸಿದರು, ಪುರಸ್ಕಾರ ಪ್ರದಾನ ಕಾಲದಲ್ಲಿ ಕೃತಿ, ಕೃತಿಕಾರನ ಸೂಕ್ಷ್ಮ ಪರಿಚಯ ಕೊಟ್ಟರು. ಉಳಿದಂತೆ ನಿರ್ವಹಣೆಯ ಒಂದೊಂದೇ ನುಡಿ ಪೋಣಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಮುಂದಿನ ಸಾಲಿನ ಐವರಲ್ಲಿ ಬಲಕೊನೆಯವರಾಗಿ ಕುಳಿತವರು ಸಂಘದ ಸಹ ಕಾರ್ಯದರ್ಶಿ – ಹೆಚ್.ಎನ್. ಶ್ರೀಲಕ್ಷ್ಮಿ. ಇವರು ಮೊದಲಲ್ಲಿ ವೇದಿಕೆಗೆ ಬರುತ್ತಿದ್ದವರಿಗೆ ಮೆಟ್ಟಿಲ ಕೊನೆಯಲ್ಲಿ ಒಂದು ಹೂ ಕೊಟ್ಟು ಸೂಕ್ತ ಆಸನದತ್ತ ನಿರ್ದೇಶಿಸಿದರು. ಉಳಿದಂತೆ ಸಮ್ಮಾನದ ಸಂದರ್ಭದಲ್ಲಿ ಮೌನ ಸಹಕಾರಿ. ಬಲಕೊನೆಯಿಂದ ಎರಡನೆಯವರಾಗಿ ಕುಳಿತ ಗೌ. ಕಾರ್ಯದರ್ಶಿ – ಎಚ್.ಎಸ್. ನಾಗಭೂಷಣರದ್ದು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳ ಹೊಣೆ. ಪುರಸ್ಕಾರ ಸಭೆಯಲ್ಲಿ ರಾಜ್ಯಾದ್ಯಂತ ಸಭಿಕರಿದ್ದುದರಿಂದ ಕೆಲವು ಮಾತುಗಳಲ್ಲಿ ಸಂಘವನ್ನು ಅವರಿಗೆ ಪರಿಚಯಿಸುವ ಹೊಣೆ ಆ ಮಾತುಗಳಲ್ಲಿತ್ತು. ಉಳಿದಂತೆ ಸಂಘದ ದಿಟ್ಟ ಮತ್ತು ಪ್ರಾಮಾಣಿಕ ಧೋರಣೆಯನ್ನು ಸಮರ್ಥಿಸುವಂತೆ ಪುರಸ್ಕಾರ ಕಲಾಪದ ಹಿನ್ನೆಲೆಯನ್ನೇ ಸೂಕ್ಷ್ಮದಲ್ಲಿ ಇವರು ಮಾಡಿಕೊಟ್ಟರು.
ವೇದಿಕೆಯ ಮೇಲಿನ ಏಕೈಕ ಅತಿಥಿಯಾಗಿಯೂ ಸಂಘಕ್ಕೆ ಪ್ರಜಾ ಸರಕಾರದ ಏಕಮಾತ್ರ ಅನುಮೋದಕನಾಗಿಯೂ ಭಾಗವಹಿಸಿದವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ – ಬಂಜಗೆರೆ ಜಯಪ್ರಕಾಶ. ನನ್ನ ಲೆಕ್ಕಕ್ಕೆ, ಪದನಿಮಿತ್ತದಿಂದ ಆಹ್ವಾನಿತರಾದ ಇವರು ನೂರೆಂಟು ಸರಕಾರೀ ಪ್ರಶಸ್ತಿಗಳನ್ನು ಶಿವಮೊಗ್ಗ ಕನ್ನಡ ಸಂಘದ ಒರೆಗಲ್ಲಿಗೆ ಉಜ್ಜಿ ನೋಡಬೇಕಿತ್ತು. ಕನಿಷ್ಠ ಸರಿಸುಮಾರು ಇಂಥದ್ದೇ ಜವಾಬ್ದಾರಿಯನ್ನು ಪೂರೈಸಲಿರುವ ಸಾರ್ವಜನಿಕ ಸಂಸ್ಥೆಯ ವರಿಷ್ಠನಾಗಿ ಆತ್ಮಾವಲೋಕನವನ್ನಾದರೂ ಮಾಡಿಕೊಳ್ಳಬಹುದಿತ್ತು. ಬದಲು ಸ್ವಚ್ಛ, ಸ್ವಾಯತ್ತ ಪರಂಪರೆಗಳ ದೃಢ ನೆಲದಲ್ಲಿ ನಡೆದು ಬಂದವರಿಗೆ, ಅನನುಭವಿ ಅನುಗ್ರಹದ ನುಡಿ ಕೊಟ್ಟಂತನ್ನಿಸಿತು; ಧೋರಣೆ ನನಗೆ ಹಿಡಿಸಲಿಲ್ಲ. ಕ.ಪು.ಪ್ರಾ ರೂಪುಗೊಳ್ಳುವ ಮೊದಲಿನ ಕಮ್ಮಟದಿಂದ ಅದರ ಈಚಿನ `ಪುಸ್ತಕ ನೀತಿ’ಯವರೆಗೂ ನಿಕಟವಾಗಿ ಪರಿಚಯವುಳಿಸಿಕೊಂಡ ನನಗೆ ಆ ಪೀಠದಿಂದ (ವ್ಯಕ್ತಿಯ ಬಗ್ಗೆ ನಾನು ತಿಳಿದವನಲ್ಲ) ಇನ್ನೂ ಹೆಚ್ಚಿನ ನಿರೀಕ್ಷೆಯೂ ನನಗೆ ಇರಲಿಲ್ಲ.
ಸಾಮಾನ್ಯವಾಗಿ ಅಧ್ಯಕ್ಷೀಯ ನುಡಿಗಳು ಮುನ್ನಿನ ಎಲ್ಲಾ ಮಾತುಗಾರರ ಸಂಕ್ಷಿಪ್ತ ಮೆಚ್ಚು-ವರದಿ ಹಾಗೂ ವಿಸ್ತರಣೆಯಾಗಿರುತ್ತದೆ. ಅವರೇನಾದರೂ `ವೃತ್ತಿಪರ’ ರಾಜಕಾರಣಿಯಾದರೆ ಅಧ್ವಾನ ಕಟ್ಟಿಟ್ಟ ಬುತ್ತಿ. ಮೊದಲಿಗೆ ಔಪಚಾರಿಕ `ಅವರೇ ಗಿವರೇ’ ತಿನ್ನಿಸಿ, ಕೃಪಾದೃಷ್ಟಿಯಲ್ಲಿ ಕಾರ್ಯಕ್ರಮದ ಕುರಿತು ನಾಲ್ಕು ತೀರಾ ಜಾಳುನುಡಿಗಳನ್ನು ಎಸೆದು ಬಿಡುತ್ತಾರೆ. ಮುಖ್ಯ ಸಮಯವನ್ನು ವೈಯಕ್ತಿಕ ತೀಟೆಗೆ ಬಳಸಿಕೊಳ್ಳುತ್ತಾರೆ. ಸಮಾರಂಭದ ವೈಶಿಷ್ಟ್ಯವನ್ನು ಮುಂದಾಗಿ ಮನಗಂಡು, ಅಧಿಕಾರ ಅನುಮತಿಸುವ ಬಲದಲ್ಲೇ ಆ ಕುರಿತು ಸಮರ್ಥರಿಂದ ಭಾಷಣವನ್ನು ಬರೆಸಿಕೊಂಡು ಬಂದು, ತಮ್ಮದೇ ಎಂಬಂತೆ ಓದುವುದಿರಲಿ, ಕನಿಷ್ಠ ಕೇಳಿಕೊಂಡಾದರೂ ಬಂದು ನುಡಿಯುತ್ತಿದ್ದ ದಿನಗಳು ಈಗ ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಬಹುದಷ್ಟೆ. ಆದರೆ…
ಶಿವಮೊಗ್ಗ ಕರ್ನಾಟಕಸ ಸಂಘದ ಅಧ್ಯಕ್ಷರೂ ಸಭಾಧ್ಯಕ್ಷರೂ ಆದ ವಿಜಯಾ ಶ್ರೀಧರ ನಾನೀವರೆಗೆ ಎಲ್ಲೂ ಕೇಳದ ವೈಶಿಷ್ಟ್ಯ ಮೆರೆದರು ಮತ್ತು ಆ ಸ್ಥಾನಕ್ಕೆ ಹೊಸ ಎತ್ತರವನ್ನು ಕಲ್ಪಿಸಿದರು. ವಿಜಯಾ ಮೊದಲು ಔಪಚಾರಿಕ ಮಿತಿಯಲ್ಲಷ್ಟೇ ಅತಿಥಿಯ ಮಾತಿಗೆ ಪ್ರತಿಕ್ರಿಯಿಸಿದರು. ಹಿಂಬಾಲಿಸಿದಂತೆ ಒಟ್ಟು ಕಲಾಪದ ಔಚಿತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಹನ್ನೆರಡೂ ಪುರಸ್ಕೃತ ಕೃತಿಗಳ ಕುರಿತು ಪ್ರತ್ಯೇಕ ಪ್ರತ್ಯೇಕವಾಗಿ ಅನುಭವಿಸಿ ನುಡಿದ ಮಾತುಗಳು ಬಹಳ ಬೆಲೆಯುಳ್ಳವು ಎಂದೇ ನನಗನ್ನಿಸಿತು. ಒಟ್ಟು ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಂಘದ ಕಾಳಜಿಗೆ ಇವರು ಸಮರ್ಥ ನಾಯಕಿಯಾಗಿದ್ದರು. ಮೊದಲು ನಡೆದ ಸಂವಾದ ಸಭೆಯಲ್ಲಿ ಸಭಿಕರ ನಡುವೆಯೇ ಕುಳಿತು ವಿಜಯಾ ಪಾಲ್ಗೊಂಡ ವೈಖರಿ, ಎಲ್ಲ ಮುಗಿದ ಮೇಲೆ ಹೀಗೇ ಇವರಿಗೆದುರಾಗುತ್ತಿದ್ದ ಪ್ರತಿ ಪುರಸ್ಕೃತರನ್ನು ಇವರು (ಎಲ್ಲ ಪದಾಧಿಕಾರಿಗಳೂ) ನಡೆಸಿಕೊಳ್ಳುತ್ತಿದ್ದ ಆತ್ಮೀಯತೆಗಳನ್ನೆಲ್ಲಾ ಇಂದು ವಿರಾಮದಲ್ಲಿ ಬಗೆಗಣ್ಣಿಗೆ ತಂದುಕೊಳ್ಳುವಾಗ, ಅವರ ಅಧ್ಯಕ್ಷೀಯ ನುಡಿಗಳಿಗೆ ತೂಕ ಇನ್ನೊಂದೇ ಪಟ್ಟು ಹೆಚ್ಚುತ್ತದೆ! (ಸಭೆ ಮುಗಿದ ಮೇಲೆ ನಾನು ಸಂಘದ ಕಛೇರಿಯಲ್ಲಿ ಇತರ ಪುರಸ್ಕೃತರೊಡನೆ ಲೆಕ್ಕಪತ್ರಗಳಿಗೆ ರುಜು ಕೊಡಲು ನಿಂತಿದ್ದಲ್ಲಿ ವಿವಿಧ ಜವಾಬ್ದಾರಿ ಪೂರೈಸುತ್ತಿದ್ದ ಇತರ ಪದಾಧಿಕಾರಿಗಳೊಡನೆ ವಿಜಯಾ ಕೂಡಾ ಭಾಗಿಯಾಗಿದ್ದರು. ಆಗ ವಿಜಯಾ ನನ್ನ ಕೃತಿಯ ಬಗ್ಗೆ ಇನ್ನಷ್ಟು ಹೇಳಲು ಇದ್ದ ಆದರೆ ಸಭೆಯ ಸಮಯಮಿತಿಗೆ ಅಡ್ಡಿಯಾದೀತೆಂದು ಉಳಿಸಿಕೊಂಡ ಮಾತುಗಳನ್ನು ಆಡಿ ಬೆರಗುಗೊಳಿಸಿದ್ದರು!)
ಆ ರಾತ್ರಿಯನ್ನು ನಾವು ಸಂಘದ (ಹೋಟೆಲ್) ಆತಿಥ್ಯದಲ್ಲೇ ಕಳೆದೆವು. ಬೆಳಗ್ಗೆ ಗೆಳೆಯ ರತ್ನಾಕರ ಉಪಾಧ್ಯರ ಉಪಚಾರದಲ್ಲಿ ಕೂಡಲಿ ನೋಡಲು ಹೋಗಿದ್ದೆವು. ಹಳ್ಳಿಯ ಓಣಿ ಕಳೆಯುತ್ತಿದ್ದಂತೆ ಮೊದಲು ಶಂಕರ ಮಠ, ಅನಂತರ ಮಾಧ್ವ ಮಠ, ಉಗ್ರ ನರಸಿಂಹನ ದೇವಳ, ಕೊನೆಯಲ್ಲೊಂದು ಅರಳಿ ಕಟ್ಟೆ. ಹಳ್ಳಿಯಿಂದ ಹಿಡಿದು ನದಿ ಪಾತಳಿಯವರೆಗೂ ಭಿನ್ನವಾದ ವಿಗ್ರಹಗಳ ಸಂತೆ, ತತ್ಕಾಲೀನ ಅಭಿವೃದ್ಧಿ ಮತ್ತು ಸ್ವಾರ್ಥಮೂಲ ಅನುಕೂಲಗಳ ಅನರ್ಥಗಳು, ಮತೀಯಪುರುಷರ ಹೂಳುಗಟ್ಟೆ, `ದೈವೀ ಕಲಾಪ’ಗಳ ಹೋಮಗಟ್ಟೆ, ಅಸ್ತಿ ವಿಸರ್ಜನೆಯ ಮಡಿಕೆ ಕುಡಿಕೆಗಳು, ಬಟ್ಟೆ ಬಳೆ ನಿರ್ಮಾಲ್ಯದ ಕಸಗಳು, ಹೋಮ ಭೋಜನಗಳ ಉಳಿಕೆ ಪಳಿಕೆಗಳು ಸರ್ವವ್ಯಾಪಿಯಾಗಿದ್ದುವು. ಆದರೂ ದಟ್ಟ ಮಲೆಯಲ್ಲಿ ಹುಟ್ಟಿ, ಓಟದ ಉದ್ದಕ್ಕೆ ನಾಗರಿಕತೆ ಹೇರಿದ್ದನ್ನೆಲ್ಲ ಸಹಿಸಿ, ವಿರಳ ಮಳೆಯಿಂದ ಸೊರಗಿ ಅಲ್ಲಿ ಕಾಣಿಸಿದ ನದಿಗಳೆರಡು ಸಂಗಮದ ಸಂಭ್ರಮದಲ್ಲಿ ಎಲ್ಲ ತೊಳೆದಿಟ್ಟು ಮತ್ತೂ ಹೆಚ್ಚಿನ ಜೀವಪೋಷಣ ಔದಾರ್ಯಕ್ಕಾಗಿ ತುಂಗಭದ್ರೆಯಾಗಿ ಮುಂದುವರಿದಿತ್ತು! ನನ್ನ ಬಗೆಗಣ್ಣಿಗೆ ಶಿವಮೊಗ್ಗ ಕರ್ನಾಟಕ ಸಂಘ ತುಂಗಭದ್ರೆಯೂ ಹೌದೆನ್ನಿಸಿತ್ತು!
ಸಂತೋಷವಾಯಿತು.
ಅಭಿನಂದನೆಗಳು
ತತ್ ಕ್ಷಣದ ಪ್ರತಿಕ್ರಿಯೆ: ನಾನು ನೀವಾಗಿದ್ದಿದ್ದರೆ, ಬಹುಮಾನದ ಹಣ ಹಿಂತಿರುಗಿಸುತ್ತಿದ್ದೆನೋ ಇಲ್ಲವೋ, (ಚಿಣ್ಣಪ್ಪ ನಿಸ್ಸಂಶಯವಾಗಿ ಮಾಡುವುದು ನಿಮ್ಮ ಹಾಗೆಯೇ), ಬಹುಶಃ ಆ ಮೊತ್ತಕ್ಕೆ ಸಮಾನವಾಗಿಯೋ ಹೆಚ್ಚೋ, ಜಿಟಿನಾ ಅವರ ಪುಸ್ತಕಗಳನ್ನು ಸಂಘಕ್ಕೆ ಕೊಟ್ಟು ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಲು ಉಪಯೋಗಿಸುವಂತೆ ಹೇಳುತ್ತಿದ್ದೆನೆಂದು ತೋರುತ್ತದೆ. ಹೇಗೂ ಇರಲಿ,ನಿಮ್ಮ ಧೋರಣೆ ಇಷ್ಟವಾಗುವಂಥದು.-
Samarambhada chokka vivara, prashasthi puraskritharellarannu, avara krithigalannu uddharisi, jothege Shivamogga Karnataka Sanghada adarsha kalapagala bagge bareda moulika mathugala ee lekhana mana thumbithu. Prashasthi puraskritharellarige, haagau ee manasparshi vivara needida lekhakarige mathomme abhinandanegalu.
Prashasti puraskaragalige arji haki labi nadesuvara sanke endu adhika…prashasthi purakaragalige tale kedisikollade Kayakave kailasa vemba nimmanta amoolya ratna namage sikkiruvudu namma bhagyave sari….
ಆ ನಾಲ್ಕು ಮಾತುಗಳಿಗೆ ಚಿನ್ನದಂತಹ ಹೊಳಪು ಇದೆ , ವಜ್ರದಷ್ಟು ಗಟ್ಟಿತನ ಇದೆ , ಮತ್ತೊಮ್ಮೆ ಕೇಳುವಂತಿದೆ . ಮನೋಹರ ಉಪಾಧ್ಯ
ಯೋಗ್ಯ ಸಂಸ್ಥೆಯಿಂದ ನೀಡಲ್ಪಟ್ಟ ಯೋಗ್ಯ ಪ್ರಶಸ್ತಿ ನಿಮ್ಮದಾಗಿದೆ. ಯೋಗ್ಯ ನಿರ್ಧಾರ ಕೈಗೊಂಡು, ಯೋಗ್ಯರೀತಿಯಲ್ಲಿಯೇ ಮಾತನಾಡಿ ತಾವು ಎಲ್ಲಾ ವಿಷಯದಲ್ಲೂ ಯೋಗ್ಯರೆಂದು ತೋರಿಸಿಕೊಟ್ಟಿದ್ದೀರಿ. ಅಭಿನಂದನೆಗಳು. ಗಿರೀಶ್, ಬಜ್ಪೆ
ನಿಮಗೆ ಪ್ರಶಸ್ತಿ ಸಂದಿರುವುದು ಆ ಪ್ರಶಸ್ತಿಗೆ ಮತ್ತಷ್ಟೂ ಮೌಲ್ಯ, ಮೆರಗು ನೀಡಿದೆ ಎಂಬುದು ನನ್ನ ಅಭಿಪ್ರಾಯ… ಅಭಿನಂದನೆ…
ಪ್ರಿತಿಯ ಅಶೋಕ ವರ್ಧನ ಅವರಿಗೆ. ನಮಸ್ಕಾರ. ಮತ್ತೊಮ್ಮೆ ಅಭಿನಂದನೆಗಳು. ಪ್ರಶಸ್ತಿ ಬಂದ ಕಾರಣಕ್ಕೋ ನಿಮ್ಮ ಅಭಿಮಾನಿಗಳು ಹೆಚ್ಚುತ್ತಿರುವ ಕಾರಣಕ್ಕೂ ಗೊತ್ತಿಲ್ಲ ಪುಸ್ತಕದ ಅಂಗಡಿಗಳಿಂದ ಸಣ್ನ ಪ್ರಮಾಣದಲ್ಲಿ ಪುಸ್ತಕಕ್ಕೆ ಬೇಡಿಕೆ ಬರುತ್ತಿದೆ.ಕುಂಆರ ಪರ್ವತದ ಚಾರಣ ಮಾಡಬೇಕೆಂದು ಜೀವನದ ಆಸೆಗಳಲ್ಲಿ ಒಂದನ್ನಾಗಿಸಿಕೊಂಡವರು ಮತ್ತು ಮಾಡಬೇಕೆಂದುಕೊಂಡವರು ಮಾಡಳಾಗದವರು ಈ ಪುಸ್ತಕ ಓದಿ ತೃಪ್ತರಾಗಿದ್ದಾರೆ. ಹಲವರು ಹೋಗಿ ಬರಲೂ ಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಪುಸ್ತಕದ ಮೂಲಕ ಕುಮಾರ ಪರ್ವತದ ನೆಪದಲ್ಲಿ ಅನೇಕ ಪರಿಸರ ಸಂಬಂಧಿ ವಿಚಾರಗಳು, ವ್ಯವಸ್ಥೆಯ ಕುರಿತ ನಿಮ್ಮ ನಿಲುವುಗಳು, ನೋಟಗಳು ಇಲ್ಲಿ ವ್ಯಕ್ತವಾಗಿವೆ. ಇದು ನಿಜವಾದ ನೆಲೆಯಲ್ಲಿ ಪುಸ್ತಕದ ಸಾರ್ಥಕ್ಯ ಅಲ್ಲವೇ?
ashoka vardhanare samarambhada lekhana thumba acchukattu….samarambhadanthene…adhyakshini vijayashreedhar thumba balance personality….nimage chennagi kanisiddare….
Prashasthi bandiruvudu hemmeya vishaya.Your humility is admirable.
ನಿಮ್ಮ ಬ್ಲೊಗನ್ನು ಕುತೂಹಲದಿಂದ ಓದುತ್ತಿದ್ದೇನೆ ಫ್ರಶಸ್ತಿ ಪ್ರದಾನ ಮತ್ತು ಸಂವಾದಕ್ಕೆ ಸಹ ಬಂದಿದ್ದೆ. ಶಿವಮೊಗ್ಗ ಕರ್ನಾಟಕ ಸಂಘ ಮತ್ತು ಕೂಡಲಿ,ತುಂಗೆ ಎಲ್ಲವೂ ನಿಮಗೆ ಸಂತೋಷ ಕೊಟ್ಟದ್ದು ಸಂತೋಷ. ನೀವು ಎಲ್ಲ ಪ್ರಶಸ್ತಿ ಪುರಸ್ಕೃತರ ಬಗ್ಗೆ ಬರೆದದ್ದು ಮತ್ತು ನವಿಲು ಹೆಜ್ಜೆಯನ್ನು ಜಾಲತಾಣದಲ್ಲಿ ಕಾಣಿನಿಸಿರುವುದು ಅಭಿನಂದನೆಗಳು.ನಿಮ್ಮ ವೈಚಾರಿಕ ಗುಣಗ್ರಾಹಿತ್ವಕ್ಕೆ ಮತ್ತು ಔದಾರ್ಯಕ್ಕೂ ಅಭಿನಂದನೆಗಳು
ಈ ಪುರಸ್ಕಾರದ ಮುನ್ನೆಲೆಯಲ್ಲಿ ಗೆಳೆಯ ರಿಚಾರ್ಡ್ ಲಸ್ರಾದೋ ನನ್ನ ಕುರಿತು ಇಂಗ್ಲಿಷಿನಲ್ಲಿ ಬರೆದ ಅನನ್ಯ ಲೇಖನ – The 'Athree' Man with Allergy for Awards Gets Honoured, but Proves a Point! ಇದನ್ನು ಆಸಕ್ತರು ಓದಲು ಈ ಸೇತು ಬಳಸಬಹುದು: http://www.mangalorean.com/news.php?newstype=broadcast&broadcastid=496248
ಶ್ರೀಯುತ ಅಶೋಕವರ್ಧನರಿಗೆ ನಮಸ್ಕಾರಗಳು.ಕರ್ನಾಟಕ ಸಂಘದ ಪುಸ್ತಕ ಬಹುಮಾನ ಪ್ರದಾನ ಮತ್ತು ಅದಕ್ಕೂ ಪೂರ್ವದಲ್ಲಿ ನಡೆದ ಬಹುಮಾನಿತ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಸಮಗ್ರವಾಗಿ ತಮ್ಮ ಲೇಖನದಲ್ಲಿ ತಂದಿದ್ದೀರಿ. ನೀವು ಸಮ್ಮತಿಸಿದರೆ ದಿನ ನವಿಲು ಹೆಜ್ಜೆ ಸಂಚಿಕೆಯಲ್ಲಿ ಇದನ್ನೇ ಬಳಸಿಕೊಳ್ಳಲು ಬಯಸಿದ್ದೇನೆ. ಪುಟದ ಮಿತಿ ಇರುವುದರಿಂದ ಒಂದಷ್ಟು ಎಡಿಟಿಂಗ್ ಮಾಡಬೇಕಾಗಬಹುದು. ಕರ್ನಾಟಕ ಸಂಘದ ಬಗಗಿನ ನಿಮ್ಮ ಪ್ರೀತಿಗೆ ಕ್ರುತಜ್ಞತೆಗಳು.ಸರ್ಜಾಶಂಕರ ಹರಳಿಮಠಸಂಪಾದಕ, ನವಿಲು ಹೆಜ್ಜೆಕರ್ನಾಟಕ ಸಂಘ ಶಿವಮೊಗ್ಗ