ಮನೆ ಮನೆಯಲ್ಲಿ ಜೈವಿಕ ಅನಿಲ ಸ್ಥಾವರ!
– ಜಿ.ಎ. ದೇವಕಿ

ಬೆಂಗಳೂರೇನು ಊರೂರೂ ಹಳ್ಳೀಮೂಲೆಯೂ ಇಂದು ಕಸದ ಕೊಂಪೆಯಾಗಿದೆ, ಕೊಳೆತು ನಾರುತ್ತಿದೆ. ಪರಿಸರ ಪ್ರೇಮದ ಪ್ರಾಥಮಿಕ ಪಾಠಗಳನ್ನು ಕಂಠಪಾಠ ಮಾಡಿದ ಹೆಚ್ಚಿನವರೂ ಕೈ ಬೀಸಿಕೊಂಡೇ ಮಾಲ್ ಮೋರ್ಗಳಿಗೆ ಹೋಗಿ “ಪ್ಲ್ಯಾಸ್ಟಿಕ್ ನಿಷೇಧಿಸಬೇಕು” ಎಂದು ಇತರರೊಡನೆ ಗಂಭೀರವಾಗಿಯೇ ಮಾತಾಡಿಕೊಳ್ಳುತ್ತೇವೆ. (“ಅಯ್ಯೋ ಮರೆತೇ ಹೋಯ್ತು” ಎಂದು ಶೋಕನೀಯ ಉದ್ಗಾರ ತೆಗೆದು) ಮತ್ತೆ ಒಂದು ದಿನದ ಅನಿವಾರ್ಯತೆಗೆ ಎಂಬಂತೆ, ಕೈಯ್ಯಲ್ಲಿ ನಾಲ್ಕೈದು ಪ್ಲ್ಯಾಸ್ಟಿಕ್ ಜೋಳಿಗೆ (ದಂಡ ಕೊಟ್ಟು ಕೊಂಡೇ) ನೇಲಿಸಿಕೊಂಡು, ತುಂಬಾ ಪ್ರೀ ಪ್ಯಾಕ್ಡ್ ಸಾಮಾನು ಇಪ್ಪತ್ತೆಂಟು ತುಂಬಿ ತರುವುದು ನಡೆದೇ ಇದೆ. ಮರು ದಿನ ಬೆಳಗ್ಗೆ ಆ ಎಲ್ಲಾ ಚೀಲ, ಪ್ಯಾಕಿಂಗ್ ಕಸಗಳ ಒಳಗೆ ಇನ್ನಷ್ಟು ತೂಕದ ಹಾಳಮೂಳ (ಕಾಫಿ ಚಾ ಚರಟು, ಮಾವಿನ ಸಿಪ್ಪೆ, ಹಲಸಿನ ರೆಚ್ಚೆ, ಬೆಂಡೆ ತೊಟ್ಟು, ಕೊತ್ತೊಂಬ್ರಿ ದಂಟು, ಕೆಟ್ಟ ತರಕಾರಿ, ಹಳಸಿದ ಅನ್ನ, ಸಾಂಬಾರು, ಪಲ್ಯ ಇತ್ಯಾದಿ ಇತ್ಯಾದಿ) ತುಂಬುತ್ತೇವೆ. ಬರದ ನಗರಸಭೆಯ ಕಸ-ಸಂಗ್ರಹಣಾ ಗಾಡಿಗಷ್ಟು ಶಾಪ. ಮತ್ತೆ ಪಕ್ಕದಲ್ಲೆಲ್ಲೂ ಖಾಲೀ ನಿವೇಶನಗಳು ಸಿಕ್ಕದ ಸಂಕಟಕ್ಕೆ ಕೆಲವರಾದರೂ ಕಸತೊಟ್ಟಿಯನ್ನು ಹುಡುಕಿ ಹೋಗುವುದು ಇದೆ. ಅದೂ ಸಿಗದಿದ್ದರೆ ಕರದಾತನ ಗರ್ವದಲ್ಲಿ (ಮತ್ತೆ ನಾವು ಟ್ಯಾಕ್ಸ್ ಕೊಡೋದಿಲ್ವಾ ಸ್ವಾಮೀ!) ಸ್ಥಳೀಯ ಆಡಳಿತದ ಬೇಜವಾಬ್ದಾರಿಯನ್ನು ಮತ್ತಷ್ಟು ಆರಿಸಿದ ಆಣಿಮುತ್ತುಗಳಲ್ಲಿ ಹಳಿಯುತ್ತೇವೆ. ಪ್ರತಿಭಟನೆಯ ಕ್ರಮವೋ ಎಂಬಂತೆ ಎಲ್ಲಂದರಲ್ಲಿ ಎಸೆದುಬಿಡುತ್ತೇವೆ. ಮತ್ತೆ `ಫ್ರೆಶ್’ ತರಕಾರಿ-ಜೀನಸಿಗೂ `ಹೈಜಿನಿಕ್ ಪ್ರೆಸೆಂಟೇಶನ್-ಪ್ಯಾಕಿಂಗಿಗೂ’ ಮಾಲ್-ಮೋರ್ಗಳ ದಾರಿಹಿಡಿಯುತ್ತೇವೆ. ಪ್ಲ್ಯಾಸ್ಟಿಕ್ಕಾದಿ ಅಜೈವಿಕ ಕಸಗಳು ಸುಲಭದಲ್ಲಿ ನಶಿಸುವುದಿಲ್ಲ, ಪರಿಸರವನ್ನು ವಿಷಮಯ ಮಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವು ಕಾಯಿಲೆ ಮೂಲವಲ್ಲ ಮತ್ತೂ ಹೋಲಿಕೆಯಲ್ಲಿ ಭಾರೀ ಹೊರೆಯೂ ಅಲ್ಲ! ಕಾಣುವಂತೆ `ತಂದು-ಎಸೆಯುವ-ಕಸ’ದ ಒಳಗೆ ತುಂಬಾ ಕಾಣದ ಮತ್ತು ಪ್ರತಿಕ್ಷಣಕ್ಕೂ ಕೊಳೆತು ನಾಗರಿಕ ವ್ಯವಸ್ಥೆಗೆ ಕೆಟ್ಟದ್ದಾದ ವಾಸನೆ, ಕಾಯಿಲೆಗಳನ್ನು ಉಂಟುಮಾಡುವ ಜೈವಿಕ ಸಾಮಗ್ರಿಗಳ ಮೊತ್ತ ನಿಜದಲ್ಲಿ ಅಗಾಧ. ಎಲ್ಲಕ್ಕೂ ಮುಖ್ಯವಾಗಿ ಅದನ್ನು ವಿಲೇವಾರಿ ಮಾಡುವ ಮತ್ತು ಅದನ್ನು ನಿವಾರಿಸುವಲ್ಲಿ ಮನೆಮನೆಯ ಜವಾಬ್ದಾರಿ (ನಗರಾಡಳಿತದ್ದಲ್ಲ!) ಬಹು ದೊಡ್ಡದು ಎನ್ನುವುದನ್ನು ಗುಣಾತ್ಮಕವಾಗಿ ತಿಳಿಸುವ ಸಣ್ಣ ಮಟ್ಟದ ಸ್ವಾನುಭವನ್ನು ತಿಳಿಸುವ ಪ್ರಯತ್ನ ನನ್ನದು.

ಎಲ್ಲಂದರಲ್ಲಿ ಬರುವುದು ಕೊಳೆತ ವಾಸನೆಯಲ್ಲ – ನಮಗವಶ್ಯವಾದರೂ ಅಜ್ಞಾನದಿಂದ ವ್ಯರ್ಥವಾಗುತ್ತಿರುವ ಇಂಧನ. ರಾಶಿ ಬೀಳುತ್ತಿರುವುದು ರೋಗರುಜಿನಗಳ ಉತ್ಪನ್ನಕ್ಷೇತ್ರವಲ್ಲ – ಅಮೂಲ್ಯ ಗೊಬ್ಬರ. ಈ ಮಾತುಗಳನ್ನು ನಿಜ ಮಾಡಿಕೊಡುವ ತುಂಬ ಸರಳ ವ್ಯವಸ್ಥೆ – ಜೈವಿಕ ಅನಿಲ ಸ್ಥಾವರ. ನನ್ನ ತವರ್ಮನೆ ಸೇರಿದಂತೆ ಹೆಚ್ಚಿನೆಲ್ಲ ಕೃಷಿಕ ಸಂಬಂಧಿಕರಲ್ಲೂ ಗೊಬ್ಬರ ಅನಿಲ ಸ್ಥಾವರವನ್ನು ಅದರ ಅಪಾರ ಅನುಕೂಲಗಳನ್ನು ನಾನು ಕಾಣದವಳೇನೂ ಅಲ್ಲ. ಆದರೆ ಆ ಮಹಾ ಜೀರ್ಣಾಂಗ, ಹೆಚ್ಚುಕಡಿಮೆ ದೊಡ್ಡ ಮೊತ್ತದ ಸೆಗಣಿಗಷ್ಟೇ ಸೀಮಿತ. ದಶಕದ ಹಿಂದೆಯೇ ಕೊಣಾಜೆಯಲ್ಲಿ ನಮ್ಮ ಮಿತ್ರರೇ ಆದ ಅಧ್ಯಾಪಕ ದಂಪತಿ ಹೊಸ ಮನೆ ಕಟ್ಟಿಸ ತೊಡಗಿದ್ದರು. ಆ ವಠಾರಗಳಲ್ಲಿ ಭೂಗತ ಕೊಳಚೆ ಕೊಳವೆ ಸಂಪರ್ಕವಿಲ್ಲ; ಪ್ರತಿ ಮನೆಗೊಂದು ಪಾಯಖಾನೆ ಗುಂಡಿ ಕಡ್ಡಾಯ. ಆಗ ನಮ್ಮ ಗೆಳೆಯರು ಬರಿದೇ ಹೂಳುವ ಯೋಚನೆ ಬಿಟ್ಟು, ಪಕ್ಕಾ ಕಾಂಕ್ರೀಟಿನ ಎರಡೋ ಮೂರೋ ಅಂಕಣದ `ಜೀರ್ಣಾಂಗ’ ವ್ಯವಸ್ಥೆ ಮಾಡಿಕೊಂಡರು. ಇದು ಅವರ ಬಾವಿ ನೀರನ್ನು ಶುದ್ಧವಾಗುಳಿಸುವುದರೊಡನೆ, ಅಂಗಳದ ಹೂ ಹಣ್ಣು ತರಕಾರಿಗಳಿಗೆ ನಿಯತವಾಗಿ ಒಳ್ಳೆಯ ಗೊಬ್ಬರವನ್ನು ಇಂದಿಗೂ ಕೊಡುತ್ತಲೇ ಇದೆ.

ಅದೇನೋ ಮೂರು ಮಡಕೆ ವಿಧಾನ, ಗಟ್ಟಿ ಪ್ಲ್ಯಾಸ್ಟಿಕ್ ಡಬ್ಬಗಳಲ್ಲಿ ಅದೇನೋ ರಾಸಾಯನಿಕ ಪರಿವರ್ತಕಗಳು ಹೀಗೇ ಅಡುಗೆಮನೆ ಕಸವನ್ನು ರಸವಾಗಿ ಮಾಡುವುದೂ ಭಾರೀ ಪ್ರಚಾರದಲ್ಲಿದೆ. ಆದರೆ ಅವನ್ನೆಲ್ಲ ಮೀರಿದ ತಾಕತ್ತು, ಸರಳತೆ ಎಲ್ಲಕ್ಕೂ ಮಿಗಿಲಾಗಿ ಸ್ಪಷ್ಟ ಲಾಭದಲ್ಲಿ ಕಸದಿಂದ ರಸ ಮಾಡುವ ವ್ಯವಸ್ಥೆ – ಜೈವಿಕ ಅನಿಲ ಸ್ಥಾವರ. ತತ್ತ್ವದಲ್ಲಿ ಇದು ಗೊಬ್ಬರ ಅನಿಲ ಸ್ಥಾವರದಿಂದೇನೂ ಭಿನ್ನವಲ್ಲ. ಅದಕ್ಕೆ ನೆಲ ಬೇಕು, ಸಿಮೆಂಟು ಕಬ್ಬಿಣ (ಅಥವಾ ಫೈಬರ್ ಗ್ಲಾಸ್) ಅನಿಲವೇ ಮುಂತಾದ ವಿಭಿನ್ನ ಪರಿಣತರನ್ನು ಸಂಯೋಜಿಸಬೇಕು. ಆದರೆ ನಾವು ಅಳವಡಿಸಿದ ಜೈವಿಕ ಅನಿಲ ವ್ಯವಸ್ಥೆ ಎಂದರೆ, ಹೆಚ್ಚು ಕಡಿಮೆ ಕಡ್ಲೆ ತಿಂದು ನೀರು ಕುಡಿದಷ್ಟು ಸರಳ, ಸ್ವಚ್ಛ!

ಅಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸುಶೀಲೇಂದ್ರ ಕುಡುಪಾಡಿಯವರು ಮಂಗಳೂರಿನಲ್ಲೇ ಇದ್ದ ಜೈವಿಕ ಅನಿಲ ಸ್ಥಾವರ ತಯಾರಕ – ಶ್ರೀಕೇಶರ ಕುರಿತ ಲೇಖನ ನೋಡಿದ್ದೇ ನಮಗೆ `ಪ್ರಥಮ ದರ್ಶನದಲ್ಲೇ ಪ್ರೇಮ’ ಸ್ಫುರಿಸಿದ ಹಾಗೇ ಆಗಿತ್ತು. ನಾವು ಶ್ರೀಕೇಶರನ್ನು ಚರವಾಣಿ ಮೂಲಕ ಸಂಪರ್ಕಿಸಿ, ಶಕ್ತಿನಗರದಲ್ಲೇ ಇರುವ ಅವರ ಪುಟ್ಟ ಉತ್ಪಾದನಾ ಕೊಟ್ಟಿಗೆಗೆ (IZON the eco-holic – ಉದ್ಯಮದ ಹೆಸರು. ಸಂಪರ್ಕ ಸಂಖ್ಯೆ ೯೪೮೦೪೩೯೫೨೪) ಹೋಗಿ ನೋಡಿ, ಒಂದು ಸ್ಥಾವರಕ್ಕೆ ಬೇಡಿಕೆ ಮಂಡಿಸಿಯೇ ಬಿಟ್ಟೆವು. ಮರುದಿನವೇ ಪುಟ್ಟ ಟೆಂಪೋ ಬೆನ್ನೇರಿ ಸಲಕರಣೆಗಳು, ಮತ್ತೆರಡೇ ದಿನಗಳಲ್ಲಿ ಅದರ ಪ್ರಾಥಮಿಕ ಚಾಲನಾ ಕೆಲಸಗಳೂ ಮುಗಿದು, ತತ್ಫಲವಾಗಿ ಸುಮಾರು ಏಳೆಂಟನೆ ದಿನಕ್ಕೇ ನಮ್ಮ ಕುಕ್ಕರ್ ಬಿಗಿಲೂದಿದ್ದೂ ಆಯ್ತು. ಬಿಗಿಲು ಒಂದು ಅಡುಗೆಯ ಸಮಾಪ್ತಿಯಲ್ಲ, ಒಂದು ಪುಟ್ಟ ಯಶೋಗಾಥೆಯ ಪ್ರಾರಂಭ!

ಫೈಬರ್ ಗ್ಲಾಸಿನ ತಯಾರಿಯ, ಅರ್ಧಕ್ಕೆ ಕತ್ತರಿಸಿದಂತಿರುವ ಎರಡು ಡ್ರಂಗಳೇ ಸ್ಥಾವರ. ಇದರಲ್ಲಿ ತುಸು ದೊಡ್ಡ ಡ್ರಂ ಎರಡು ಪದರದ್ದು, ಕೆಳಗೆ ಕೂರುತ್ತದೆ; ಡೈಜೆಸ್ಟರ್ ಅಥವಾ ಜೀರ್ಣಕ. ಇದರ ತೆಳುವಿನ ಹೊರ ಪದರದಲ್ಲಿ ಕವುಚಿ ಕೂರುವ ಇನ್ನೊಂದು ಡ್ರಂ ವಾಸ್ತವದಲ್ಲಿ ಅನಿಲಕ್ಕೇ ಮೀಸಲು. ಕೆಳ ಡ್ರಮ್ಮಿನ (ಜೀರ್ಣಕ) ಒಳ ಅವರಣ ಅಂದರೆ `ದೊಡ್ಡ ಹೊಟ್ಟೆ’ಯಲ್ಲಿ ಕೊಳೆ-ಕಸಕ್ಕೆ ಜಾಗವಾದರೆ ಹೊರ ಆವರಣದಲ್ಲಿ ಶುದ್ಧ ನೀರು ತುಂಬಿರುತ್ತದೆ. ಜೀರ್ಣಕದ ಎರಡು ತದ್ವಿರುದ್ಧದ ಮೇಲಿನಂಚಿನಲ್ಲೇ ಎರಡು ಬಾಯಿ ಇದೆ. ಅವೆರಡೂ ಜೀರ್ಣಕದ ಒಳ ಆವರಣವನ್ನು ತಳ ಮಟ್ಟದಲ್ಲಿ ಸಂಪರ್ಕಿಸುತ್ತವೆ. ಅದರಲ್ಲಿ ತುಸು ಎತ್ತರದ ಮತ್ತು ದೊಡ್ಡ ಬಾಯಿಯ ಒಡ್ಡಿಕೆಯಲ್ಲಿ ಒಳಸುರಿ ತುಂಬಬೇಕು. ಇನ್ನೊಂದು ತುಸು ತಗ್ಗಿನಲ್ಲಿರುವ ಕೇವಲ ತೆರವು – ವಾಸನೆ ಕಳೆದು ದ್ರವರೂಪದಲ್ಲಿ ಹೊರ ಹರಿಯುವ ಶುದ್ಧ ಗೊಬ್ಬರಕ್ಕೆ ದಾರಿ. ಜೀರ್ಣಕದೊಳಗೆ ಸೂಕ್ಷ್ಮಾಣುಗಳ ಚಟುವಟಿಕೆಯಿಂದ ಮಿಥೇನ್ ಅನಿಲ ಬಿಡುಗಡೆಗೊಳ್ಳುತ್ತದೆ. ಅದು ಕೆಳ ಡ್ರಮ್ಮಿನ ಹೊರ ಆವರಣದಲ್ಲಿ ಅಂದರೆ, ಶುದ್ಧ ನೀರಿನಲ್ಲಿ ತೇಲುವ ಡ್ರಂ ಅಥವಾ ಗುಮ್ಮಟದಲ್ಲಿ ತುಂಬಿಕೊಳ್ಳುತ್ತದೆ. ಗುಮ್ಮಟದ ಭಾರಕ್ಕೆ ಸಾಂದ್ರಗೊಂಡ ಅನಿಲ ಅದರ ಮೇಲಂಚಿನಲ್ಲಿ ಕೊಟ್ಟ ಕೊಳವೆಯ ಮೂಲಕ ಒಲೆಗೆ (ದೀಪಕ್ಕೂ ಬಳಸಬಹುದು) ರವಾನೆಯಾಗುತ್ತದೆ. ಪ್ರತಿ ಸ್ಥಾವರದ ಸೂಕ್ಷ್ಮಾಣು ನಾಂದಿಗೆ ಶ್ರೀಕೇಶ್ ಸೆಗಣಿಯನ್ನು (ಸುಮಾರು ಹತ್ತು ಬಕೆಟ್) ಬಳಸುತ್ತಾರೆ. ಮತ್ತೆ ಮುಂದುವರಿಕೆ ನಮಗೆ ಬಿಟ್ಟದ್ದು.

ಶ್ರೀಕೇಶ್ ಮತ್ತು ಬಳಗ ನಮ್ಮ ಹಿತ್ತಿಲಿನ ನೆಲವನ್ನು ಕಣ್ಣಂದಾಜಿನ ಸಪಾಟು ಮಾಡಿ ಸ್ಥಾವರವನ್ನು ಇಟ್ಟುಕೊಟ್ಟರು. ನಾವು ಏಪ್ರಿಲ್ ೯ನೇ (೨೦೧೪) ತಾರೀಕಿನಿಂದ ಜೈವಿಕ ಅನಿಲ ಉಪಯೋಗಿಸುತ್ತಿದ್ದೇವೆ. ಚೆನ್ನಾಗಿ ಬಿಸಿಲಿದ್ದರೆ ಐದು ದಿನ, ಇಲ್ಲವಾದರೆ ಏಳರಿಂದ ಹತ್ತು ದಿನಗಳಲ್ಲಿ ಅನಿಲ ಉಪಯೋಗಕ್ಕೆ ಪ್ರಾರಂಭ. ಆ ಮೇಲೆ ನಮ್ಮ ಅಡುಗೆಮನೆ ತ್ಯಾಜ್ಯಗಳೆಲ್ಲವೂ ಇದಕ್ಕೆ ಒಳಸುರಿ. ದಿನಕ್ಕೆ ಸುಮಾರು ಒಂದೂವರೆ ಕಿಲೋದಿಂದ ಆರು ಕಿಲೋ ಘನ ಮತ್ತು ಸುಮಾರು ಹತ್ತು ಲೀಟರಿನವರೆಗೆ ದ್ರವ (ನೀರು, ಗಂಜಿ ಇತ್ಯಾದಿ) ಇದರ ಸಾಮರ್ಥ್ಯ. ನಿಂಬೆ ಕುಟುಂಬದ ಕಸ ಮಾತ್ರ (ಮೋಸುಂಬಿ, ಕಿತ್ತಳೆ ಇತ್ಯಾದಿ ಸಿಟ್ರಿಕ್ ಆಮ್ಲಯುಕ್ತ ಸಸ್ಯೋತ್ಪನ್ನ ಸಂರಕ್ಷಕಗಳಂತೆ ಕೆಲಸ ಮಾಡುವುದರಿಂದ ಸೂಕ್ಷ್ಮಾಣುಜೀವಿಗಳ ಕ್ರಿಯೆ ನಿಲ್ಲುತ್ತದೆ) ಇದಕ್ಕೆ ವರ್ಜ್ಯ. ಹಾಗೇ ಸುಲಭದಲ್ಲಿ ಕೊಳೆಯಲಾರದ ಬೀಜ, ಗೊರಟು, ಕರಟ, ನಾರು, ತರಗೆಲೆ, ಮೊಟ್ಟೆ ಸಿಪ್ಪೆ, ಮೂಳೆ ಮುಂತಾದ ನಮ್ಮ ಸಾಮಾನ್ಯ ಜ್ಞಾನಕ್ಕೆ ನಿಲುಕುವಂತವನ್ನು ಇದಕ್ಕೆ ಹಾಕಬಾರದು. ನೀರಿನಲ್ಲಿ ತೇಲುವ ಇದರ ಸಂಗ್ರಹ ಗುಮ್ಮಟ ಅನಿಲ ತುಂಬಿದಂತೆ ಮೇಲೇಳುತ್ತದೆ. ಇದರ ನೆತ್ತಿಯಲ್ಲಿಟ್ಟ ತೂಕದ ಕಲ್ಲು ಒಳಗಿನ ಅನಿಲಕ್ಕೆ ಹೆಚ್ಚಿನ ಒತ್ತಡ ಕೊಡುತ್ತದೆ. ಸಹಜವಾಗಿ ಒಲೆಯ ಜ್ವಾಲೆಯ ತೀವ್ರತೆ ಬದಲುತ್ತದೆ. ನಾವು ಬಳಸದೇ ಅನಿಲ ಗುಮ್ಮಟದ ಸಾಮರ್ಥ್ಯ ಮೀರಿದ್ದೇ ಆದರೆ ಅದು ಹೊರ ಆವರಣದ ನೀರಿನಲ್ಲಿ ಗುಳ್ಳೆಗಳಾಗಿ ತಪ್ಪಿಸಿಕೊಳ್ಳುತ್ತವೆ. ಅದರಿಂದ ಯಾವ ಅಪಾಯವೂ ಇಲ್ಲ. ಒಳಗೆ ತ್ಯಾಜ್ಯಗಳು ಜೀರ್ಣವಾಗಿ ಅನಿಲ ಕಳಚಿಕೊಂಡಂತೆ, ಹಗುರವಾಗಿ ಒತ್ತಡದಲ್ಲಿ ಇನ್ನೊಂದು ಬದಿಯ ಕೊಳವೆಯಲ್ಲಿ ಸಾವಯವ ಗೊಬ್ಬರದಂತೆ ಹೊರ ಹರಿಯುತ್ತವೆ. ಆಗೊಮ್ಮೆ ಈಗೊಮ್ಮೆ ಇದರಲ್ಲಿ ತಯಾರಾಗುವ ಮಿಥೇನ್ ಅನಿಲದ ವಾಸನೆ ಬರುವುದಿದೆಯಾದರೂ ತುಂಬಾ ಹೊತ್ತಿರುವುದಿಲ್ಲ. ನಾವು ತ್ಯಾಜ್ಯ ಬೇರ್ಪಡಿಸುವಲ್ಲೇ ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯಗಳನ್ನು ಎರಡು ಪ್ರತ್ಯೇಕ ಬಕೆಟ್ ಅಥವಾ ಬುಟ್ಟಿ ಇಟ್ಟು ಸಂಗ್ರಹಿಸುವ ಪೂರ್ವ ತಯಾರಿ ಮಾಡಿಕೊಂಡರೆ ಮತ್ತೆ ಕಷ್ಟವಾಗುವುದೇ ಇಲ್ಲ. ಈ ಮನೋಭೂಮಿಕೆ ಈ ಕಾಲಮಾನಕ್ಕೆ ಅನಿವಾರ್ಯ ಕೂಡ.

ನಮ್ಮನೆಯಲ್ಲಿ ನಿತ್ಯಕ್ಕೆ ನಾವಿಬ್ಬರೇ ಆಗಿ ತೋರನೋಟಕ್ಕೆ ಕಸದ ಉತ್ಪತ್ತಿ ತುಂಬಾ ಕಡಿಮೆ. ಆದರೆ ನಮಗಿಲ್ಲಿ ಬಹು ಸಹಕಾರದ ಮೂವರು ನೆರೆಯವರಿದ್ದಾರೆ. (ಒಬ್ಬರು ಒತ್ತಿನ ವಸತಿ ಸಮೂಹದ ಎರಡನೇ ಮಾಳಿಗೆಯವರು. ಅವರಲ್ಲಿಂದ ನಮ್ಮಂಗಳಕ್ಕೆ ನಿತ್ಯ ಕಸದ ಡಬ್ಬಿ ಎಳೆಯಲು ನಾವು ಹಗ್ಗದ ವ್ಯವಸ್ಥೆ ಮಾಡಿಕೊಂಡಿರುವುದನ್ನು ಚಿತ್ರದಲ್ಲಿ ಗಮನಿಸಿ!) ಅವರಲ್ಲಿ ಕೆಲವರು ಹಲಸಿನ ಸಿಪ್ಪೆ, ಬಚ್ಚಂಗಾಯಿ ಓಡು ಇಂಥವನ್ನು ನಮ್ಮ ಸ್ಥಾವರದ ಒಳಸುರಿ ಬಾಯಿ ಕಟ್ಟದಂತೆ ಸಣ್ಣ ಸಣ್ಣ ಚೂರೂ ಮಾಡಿಯೇ ಕೊಡುತ್ತಾರೆ. ಮರೆಯುವ ಮುನ್ನ ಸಣ್ಣದೊಂದು ಮಾತನ್ನೂ ಇಲ್ಲೇ ಹೇಳಿಬಿಡುತ್ತೇನೆ. ಎರಡೂ ಡ್ರಂಗಳ ನಡುವೆಯಿರುವ ಶುದ್ಧ ನೀರಿನ ಅಂಕಣದಲ್ಲಿ ಮೊದಲ ಏಳೆಂಟು ದಿನಗಳಲ್ಲೇ ಸೊಳ್ಳೆಯ ಚಟುವಟಿಕೆ ಗಮನಿಸಿದೆವು. ಅನನುಭವದಲ್ಲಿ ಕೂಡಲೇ ಆ ನೀರಿಗೆ ತುಸು ಸೀಮೆ ಎಣ್ಣೆ ಹಾಕಿ ನಿರ್ಮೂಲವೇನೋ ಮಾಡಿದೆವು. ಆದರೆ ಅನಂತರದ ದಿನಗಳಲ್ಲಿ ಶ್ರೀಕೇಶರೇ ನಮಗೆ ಉಚಿತವಾಗಿ ಆರೆಂಟು ಗಪ್ಪಿ ಮೀನುಗಳನ್ನು ತಂದು ಕೊಟ್ಟರು. ನಾವು ಆ ಅಂಕಣವನ್ನು ಮತ್ತೆ ಶುದ್ಧ ನೀರಿನದ್ದೇ ಮಾಡಿ ಮೀನು ಬಿಟ್ಟ ಮೇಲೆ ಜೀವಸ್ನೇಹಿಯೂ ಆಗಿ ನಿಶ್ಚಿಂತರಾದೆವು! ನಮಗೆ ಅನಿಲ, ಗೊಬ್ಬರದ ಉತ್ಪಾದನೆಯೊಡನೆ ಮೀನ್ಮನೆಯ ಸಂಭ್ರಮವೂ ಸೇರಿಕೊಂಡಿದೆ.

ನಮ್ಮ ಘಟಕದಲ್ಲಿ ಸೆಗಣಿಯ ಬಲವಿರುವವರೆಗೆ ಅದೂ ಬಿಸಿಲ ದಿನಗಳಲ್ಲಿ, ದಿನಕ್ಕೆ ಸರಾಸರಿ ಆರು ಗಂಟೆಗಳ ಕಾಲ ಉರಿಸುವಷ್ಟು ಅನಿಲ ಉತ್ಪತ್ತಿ ಆಗುತ್ತಿತ್ತು. ಮಳೆಗಾಲದಲ್ಲಿ ಜೈವಿಕ ಪ್ರಕ್ರಿಯೆ ನಿಧಾನವಾದ್ದಕ್ಕೆ ಉತ್ಪತ್ತಿ ತುಸು ಕಡಿಮೆ. ಎಲ್.ಪಿ.ಜಿ ಅಥವಾ ಪೆಟ್ರೋ ಗ್ಯಾಸಿನ ಹೋಲಿಕೆಯಲ್ಲಿ ಜೈವಿಕ ಅನಿಲ ನೀಲಜ್ವಾಲೆಯನ್ನೇ ಕೊಟ್ಟರೂ ತೀವ್ರತೆ ತುಂಬಾ ಕಡಿಮೆ. ನಾವು ಸ್ವತಂತ್ರವಾಗಿ ಗುಮ್ಮಟದ ಮೇಲಿನ ತೂಕವನ್ನು (ಕಲ್ಲು ಹೇರಿ!) ಹೆಚ್ಚಿಸಿ ಕೆಲಸಮಯ ಸರಿದೂಗಿಸಿಕೊಂಡಿದ್ದೆವಾದರೂ ಸ್ಥಾವರದ ಸಾಮರ್ಥ್ಯದ ಮಿತಿಯಲ್ಲಿ ಅದು ಸರಿಯಲ್ಲ ಎಂದು ಅರಿವಾದ ಮೇಲೆ ಹಿಂದೆ ಸರಿದೆವು. ಅವಸರದ ತಯಾರಿಗಳಿಗೆ, ದೋಸೆ ರೊಟ್ಟಿಯಂಥ ತೀವ್ರ ಪಾಕಗಳಿಗೆ ಈ ಅನಿಲದ ಉರಿ ಸಾಕಾಗದು ಅನ್ನಿಸಬಹುದು. ಆದರೆ ಕುಕ್ಕರ್, ದೀರ್ಘ ಕುದಿಯ ಯಾವುದೇ ಪಾಕಗಳಿಗೆಲ್ಲಾ ಇದು ಹೇಳಿ ಮಾಡಿಸಿದ್ದು; ಪಾತ್ರೆಯ ಅಡಿಹಿಡಿಯದಂತೆ ಆಗಿಂದಾಗ್ಗೆ ಕಲಕುವ, ಉಕ್ಕಿ ನಷ್ಟವಾಗುವ ಹೆದರಿಕೆಗಳಿಲ್ಲದೆ ಬಳಸಬಹುದು. ಮತಾಚಾರಗಳ ಸುಳಿಯಲ್ಲಂತೂ ಇದಕ್ಕೆ ಗೊಬ್ಬರ ಅನಿಲ ಸ್ಥಾವರದ್ದೇ ಮರ್ಯಾದೆ ಸಲ್ಲುತ್ತದೆಂದು ಶ್ರೀಕೇಶ್ ತಿಳಿಸಿದಾಗ ನಮಗೆ ನಗುವಿನ ಸ್ಫೋಟ ಅನೈಚ್ಚಿಕವಾಗಿ ಬಂದಿತ್ತು. ಅದ್ಯಾವುದೋ ಒಂದು ಮನೆಯಲ್ಲಿ ನಿತ್ಯ ದೈವಕ್ಕೆ ನೈವೇದ್ಯಕ್ಕಾಗಿ ಸೌದೆ ಒಲೆ ಉಳಿಸಿಕೊಂಡು ಒದ್ದಾಡುತ್ತಿದ್ದರಂತೆ. (ಎಲ್.ಪಿ.ಜಿ ಮೈಲಿಗೆ!) ಆದರೆ ಸೆಗಣಿ ಮೂಲದ ಜೈವಿಕ ಅನಿಲ ಅವರಿಗೆ ದೇವರದೇ ವರದಾನ!

ಜೈವಿಕ ಅನಿಲ ಸ್ಥಾವರಕ್ಕೆ ಅಂಗಳದಲ್ಲೇ ಜಾಗ ಬೇಕೆಂದಿಲ್ಲ. ಪುಟ್ಟ ಸ್ವತಂತ್ರ ಮನೆಯವರು ತಾರಸಿಗಳ ಮೇಲೂ ಧಾರಾಳ ಇಟ್ಟು ಬಳಸಬಹುದು. ಅದೂ ಸಾಧ್ಯವಿಲ್ಲದವರು ನೆರೆಕರೆಯಲ್ಲಿ ಅನುಕೂಲ ಇರುವವರಿಗೆ ಪ್ರೇರಣೆ ಕೊಟ್ಟು, (ಅಗತ್ಯವಿದ್ದರೆ ಸ್ವಲ್ಪ ಹಣದ ಸಹಾಯವನ್ನೂ ಕೊಟ್ಟು) ಅಳವಡಿಸುವಂತೆ ಮಾಡಿ, ಕನಿಷ್ಠ ತಮ್ಮ ಜೈವಿಕ ತ್ಯಾಜ್ಯಕ್ಕೆ ಖಾಯಂ ವಿಲೇವಾರಿ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳಬಹುದು. ನಗರಸಭೆಯ ವ್ಯಾನಿಗೆ ಪ್ರತಿ ತಿಂಗಳೂ ಸುಮಾರು ಮೂವತ್ತು ರೂಪಾಯಿಯವರೆಗೆ ಹಣಕೊಟ್ಟು, ಅದು ಬರದ ಕಾಲದಲ್ಲಿ ಎದುರು ಬಾಗಿಲಿನಲ್ಲೇ ಕೊಳೆ ತುಂಬಿಕೊಳ್ಳುವ, ಕಾಗೆ ನಾಯಿ ಕಿತ್ತಾಡಿದರೆ ಊರಿಗೆಲ್ಲಾ ಹೇಸಿಗೆಯನ್ನು ಪ್ರಸರಿಸುವ ಅನಿಷ್ಟವಾದರೂ ನಿವಾರಿಸಬಹುದು. ಅನ್ಯರ ಕೊಳೆ ತೆಗೆದುಕೊಳ್ಳುವ ಘಟಕದ ನಿರ್ವಾಹಕರಿಗೆ ದಕ್ಕುವ ಅನಿಲ ಹಾಗೂ ಕಳಿತ ಗೊಬ್ಬರ ಖಂಡಿತಕ್ಕೂ ಸಣ್ಣದಲ್ಲದ ಸಂಭಾವನೆ. ನನ್ನ ಅನುಭವ ಪ್ರಕಾರ ಪಕ್ಕಾ ನಗರವಾಸಿಗಳ ನಾಲ್ಕು ಮನೆಗೊಂದು ಅನಿಲ ಘಟಕ ಬೇಕು. ಹಾಗೆ ಸಂಗ್ರಹಿಸುವವರಿಗೆ ಹೊರೆಯಾಗದಂತೆ ಕೊಳೆ ತ್ಯಾಜ್ಯವನ್ನು ಶುದ್ಧವಾಗಿ (ಮೇಲೆ ನಿಷೇಧಿಸಿದ ವಸ್ತುಗಳಲ್ಲದೆ ಪ್ಲ್ಯಾಸ್ಟಿಕ್, ಗಾಜು ಮುಂತಾದವೂ ಸೇರದಂತೆ) ಕೊಡುವುದು ಇತರರ ಧರ್ಮವಾಗಬೇಕು. ವಸತಿ ಸಮೂಹಗಳಲ್ಲಿ ಇಂದು ಸೌರಶಕ್ತಿ, ಮಳೆನೀರು ಸಂಗ್ರಹಗಳೆಲ್ಲ ಕಡ್ಡಾಯವಾಗುತ್ತಿರುವಂತೆ (ಕಸದ ಮೊತ್ತ ನೋಡಿಕೊಂಡು) ಒಂದೋ ಎರಡೋ ಜೈವಿಕ ಅನಿಲ ಘಟಕವನ್ನೂ ಕಡ್ಡಾಯ ಮಾಡುವುದಾಗಬೇಕು. ಕನಿಷ್ಠ ವಠಾರದ ಕಾವಲುಗಾರನ ಮನೆ ಬಳಕೆಗಾದರೂ ಉಚಿತ ಅನಿಲವನ್ನು ಇದು ಪೂರೈಸಬಲ್ಲುದು. ಇವುಗಳ ಗೊಬ್ಬರದ ಬಳಕೆ ಅಸಾಧ್ಯವೇ ಆದ ಸನ್ನಿವೇಶಗಳಲ್ಲಿ ನಮ್ಮ ಕೊಳಚೆ ನೀರಿನ ವ್ಯವಸ್ಥೆಯನ್ನು ಯಾವುದೇ ಅಪರಾಧೀ ಭಾವ ಇಲ್ಲದೆ ಬಳಸಿಕೊಳ್ಳಬಹುದು.

ನಾವು ಕೊಳ್ಳುವ ಕಾಲಕ್ಕೆ ಇಂಥಾ ಒಂದು ಘಟಕದ ಬೆಲೆ ರೂ ೨೫,೦೦೦ ಮಾತ್ರ. ಇದರಲ್ಲಿ ಸಾಗಣೆ, ಜೋಡಣೆ, ಸೆಗಣಿ ಸಹಿತ ಚಾಲನೆಗಳೆಲ್ಲಾ ಬಂತು. ಇಷ್ಟಾಗಿಯೂ ಬೆಲೆ ಹೆಚ್ಚಾಯಿತು, ಸರಕಾರ ಸಹಾಯ ಕೊಡಬೇಕು, ಅಥವಾ ಮನೆ ತೆರಿಗೆಯಲ್ಲಾದರೂ ಕಡಿತ ಕೊಡಬೇಕು ಎನ್ನುವ ಮಾತುಗಳನ್ನು ನಾನು ಕೇಳಿದ್ದೇನೆ. (ಶ್ರೀಕೇಶ್ ಅದಕ್ಕಾಗಿ ಓಡಾಡುತ್ತಿದ್ದೇನೆಂದೂ ತಿಳಿಸಿದ್ದರು.) ಸೌರಫಲಕಗಳನ್ನು ಅಳವಡಿಸಿಕೊಂಡವರಿಗೆ ವಿದ್ಯುಚ್ಛಕ್ತಿ ದರದಲ್ಲಿ ರಿಯಾಯ್ತಿ ಲಭಿಸುವುದು ನಾವು ತಿಳಿದದ್ದೇ ಇದೆ. ಅಲ್ಲಿನ ಸಮೀಕರಣ ನೇರ – ಸೌರಶಕ್ತಿ ಬಳಕೆಯಾದಷ್ಟೂ ವಿದ್ಯುತ್ ಉತ್ಪಾದನಾ ಒತ್ತಡ ಇಳಿಯುತ್ತದೆ. ಆದರೆ ಇಲ್ಲಿನ ಲಾಭಗಳಿಗೆ ಹಲವು ಮುಖ. ಅಡುಗೆ ಅನಿಲ, ಸಾವಯವ ಗೊಬ್ಬರ, ಕಸ ವಿಲೇವಾರಿ (ಇದಕ್ಕೆ ಸಾಮಾಜಿಕ ಮುಖವೂ ಇದೆ) ಸ್ವಸ್ಥ ಪರಿಸರಗಳಲ್ಲೆಲ್ಲ ನಾವು ಬಹು ದೊಡ್ಡ ಸ್ವಾವಲಂಬಿಗಳಾಗುವುದು ಖಂಡಿತವಾಗಿಯೂ ಸಣ್ಣ ವಿಚಾರವಲ್ಲ. ನಿರ್ವಹಣ ವೆಚ್ಚದಲ್ಲಂತೂ ಸೌರ ವಿಚಾರಕ್ಕೆ ಹೋಲಿಸಿದರೆ ಇದರದ್ದು ನಿಸ್ಸಂದೇಹವಾಗಿ ಶೂನ್ಯ. ಹಾಗಾಗಿ ಸರಕಾರೀ ಸವಲತ್ತುಗಳ ದಾರಿ ಕಾಯದೇ ಸಾರ್ವಜನಿಕರು ಇದನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದೇ ನನಗನಿಸುತ್ತದೆ.

ಅಪ್ಪಟ ಮಂಗಳೂರಿನ ಶ್ರೀಕೇಶ ತನ್ನ ಮೊದಲ ಏಳೆಂಟು ವರ್ಷಗಳ ದುಡಿಮೆಯನ್ನು ಕೇರಳದಲ್ಲಿ ಇಂಥದ್ದೇ ಜೈವಿಕ ತಂತ್ರಜ್ಞಾನದ ಕೇಂದ್ರ ಒಂದರಲ್ಲಿ ನಡೆಸಿದ್ದರು. ಆ ಅನುಭವದ ಬಲದಲ್ಲಿ ತೀರಾ ಈಚೆಗೆ ಸ್ವಂತ ನೆಲಕ್ಕೆ ಬಂದು, ಸಣ್ಣದಾಗಿ ಸ್ವತಂತ್ರರಾಗುತ್ತಿದ್ದಾರೆ. ನಾವು ಇವರಿಗೆ ನಲ್ವತ್ತನೇ ಗಿರಾಕಿ ಮಾತ್ರ. ಆದರೆ ಇವರ ಗಿರಾಕಿ ವಲಯ ಕಾಸರಗೋಡು, ಜೋಡುಮಾರ್ಗ, ಉಡುಪಿಗಳ ವಿಸ್ತಾರವನ್ನು ಈಗಲೇ ಪಡೆದಿದೆ. ಗೃಹ ಬಳಕೆಗೆ ಇವರ ಸದ್ಯದ ೧.೩ ಮೀಟರ್ ವ್ಯಾಸದ ಪುಟ್ಟ ಘಟಕ ಸರಿಯಾಗಿಯೇ ಇದೆ. ಆದರೆ ಇವರ ಬತ್ತಳಿಕೆಯಲ್ಲಿ ನಿತ್ಯ ಸಂತರ್ಪಣೆ ಇರುವ ಮಠ, ದೇವಸ್ಥಾನ, ಹೋಟೆಲು, ಮದುವೆ ಮಂದಿರಗಳಿಗೆಲ್ಲಾ ಒದಗಿ ಬರುವ ದೊಡ್ಡ ಘಟಕಗಳೂ ಇವೆ. ಆದರೆ ನಮಗೆ ತಿಳಿದಂತೆ ಇಲ್ಲಿನ ಯಾವುದೇ ದೊಡ್ಡ ಕೊಳೆ-ಕಸ ಉತ್ಪಾದಕನೂ ಈ ನಿಟ್ಟಿನಲ್ಲಿ ಯೋಚಿಸಿದಂತಿಲ್ಲ. ಐಡಿಯಲ್ ಐಸ್ಕ್ರೀಮಿನವರು ನೇರ ಶ್ರೀಕೇಶರನ್ನು ಸಂಪರ್ಕಿಸಿದ್ದಾರೆ. ನಮ್ಮ ಸಂಪರ್ಕದಲ್ಲಿರುವ ಉಡ್ ಲ್ಯಾಂಡ್ಸ್ ಹೋಟೆಲಿನವರು (ಇವರಲ್ಲಿ ನಿತ್ಯದ ಕೊಳೆ-ಕಸ ಐದುನೂರು ಕೇಜಿಯನ್ನು ಮಿಕ್ಕುವುದಿದೆಯಂತೆ!) ತೀವ್ರ ಆಸಕ್ತಿ ತೋರಿದ್ದಾರೆ. ಮನೆ ಮನೆಗಳಂತೆ ಮಂದಿ ಮನಗಳೂ ಜೈವಿಕ ಅನಿಲ ಸ್ಥಾವರಗಳಿಗೆ ಮಾರ್ಪಾಡಾದರೆ ಮಂಗಳೂರಿನ ಭಾಗ್ಯಕ್ಕೇನನ್ನೋಣ!