ಅಧ್ಯಾಯ ಹದಿನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹದಿನಾರನೇ ಕಂತು
ಮರುದಿನ ಬೆಳಗ್ಗೆ ಎದ್ದು ನಾನು ಊಟದ ಕೋಣೆಗೆ ಹೋಗುವಾಗ ಅತ್ತೆ ಬಹುವಾದ ಆಲೋಚನೆಯಲ್ಲಿ ಮಗ್ನಳಾಗಿ ಅಲ್ಲಿ ಕುಳಿತಿದ್ದಳು. ಆಲೋಚನೆಯಿಂದಲೇ ಅವಳು ಬಾಹ್ಯದ ವಿಷಯಗಳನ್ನು ಮರೆತು ಮೇಜಿನ ಮೇಲಿದ್ದ ಚಾ ಪಾತ್ರವನ್ನು ಮಗುಚಿ, ಮೇಜೆಲ್ಲಾ ಒದ್ದೆಯಾಗಿದ್ದುದೂ ಅವಳಿಗೆ ಗೊತ್ತಾಗಿರಲಿಲ್ಲ. ನನ್ನನ್ನು ಕುರಿತೇ ಅವಳು ಹಾಗೆ ಯೋಚಿಸುತ್ತಿರಬೇಕೆಂದು ನಾನು ಊಹಿಸಿದೆನು. ಅವಳ ಎದುರೇ ನಾನು ಕುಳಿತು ಊಟ ಮಾಡಿದರೂ ನನ್ನ ಕಡೆಗೇ ಅವಳು ನೋಡುತ್ತಿದ್ದರೂ ಅವಳು ನನ್ನನ್ನು ಗುರುತಿಸಲಿಲ್ಲವೆಂಬುದು ಖಂಡಿತ. ನಾನು ಮೇಜಿನ ಇನ್ನೊಂದು ಬದಿಯಲ್ಲಿ ಅವಳ ಎದುರೇ ಕುಳಿತಿದ್ದರೂ ಅವಳು ಮಾತ್ರ ನನ್ನನ್ನು ಅಲ್ಲಿದ್ದವನಂತೆ ಗ್ರಹಿಸದೆ, ನಾನು ಬ್ಲಂಡರ್ಸ್‍ಟನ್ನಿನಲ್ಲಿದ್ದಂತೆಯೂ ನನ್ನ ಚರಿತ್ರೆಯನ್ನೇ ಅವಳು ಪ್ರತ್ಯಕ್ಷ ನೋಡುತ್ತಿರುವಂತೆಯೂ ತೋರುತ್ತಿದ್ದಳು. ನನ್ನನ್ನೇ ಕುರಿತು ಅವಳು ಯಾವ ನಿರ್ಧಾರಕ್ಕೆ ಬರಬಹುದೆಂದು ನಾನು ಊಹಿಸಲು ಶಕ್ತನಾಗಿರಲಿಲ್ಲ. ನನ್ನ ಭವಿಷ್ಯವನ್ನು, ಅತ್ತೆಯ ದೀರ್ಘಾಲೋಚನೆಯನ್ನೂ ಗ್ರಹಿಸುತ್ತಾ ನಾನು ತಬ್ಬಿಬ್ಬಾಗಿ, ಚಾ ಕುಡಿಯುವಾಗ ಸೆರೆಸಿಕ್ಕಿ ಸ್ವಲ್ಪ ಕೆಮ್ಮಬೇಕಾಯಿತು. ಇದರಿಂದ ಅತ್ತೆ ಎಚ್ಚತ್ತು – “ಡೇವಿಡ್, ನಾನವರಿಗೆ ಪತ್ರ ಬರೆದಿದ್ದೇನೆ” ಅಂದಳು. “ಯಾರಿಗೆ?” ಎಂದು ನಾನು ಸ್ವಾಭಾವಿಕವಾಗಿ ಪ್ರಶ್ನಿಸಿದೆನಾದರೂ ಹಾಗೆ ಪತ್ರ ಬರೆದಿದ್ದುದು ಯಾರಿಗೆ ಎಂದು ಇಂಗಿತದಿಂದಲೇ ತಿಳಿದಿದ್ದೆ. ನಾನು `ಯಾರಿಗೆ’ ಎಂದು ಪೂರ್ತಿ ಅನ್ನುವ ಮೊದಲೇ. . .“ನಿನ್ನ ಚಿಕ್ಕ ತಂದೆಗೆ – ಆತ ಇಲ್ಲಿಗೆ ಬಂದು ನಮ್ಮ ನಮ್ಮ ಜವಾಬ್ದಾರಿಗಳನ್ನು ಸ್ಪಷ್ಟಗೊಳಿಸಿಕೊಳ್ಳಬೇಕೆಂದು ಅವನಿಗೆ ಪತ್ರ ಬರೆದಿರುತ್ತೇನೆ” ಎಂದು ಅತ್ತೆಯಂದಳು. “ನನ್ನನ್ನು ಅವರಿಗೆ ಒಪ್ಪಿಸಿಬಿಡುತ್ತೀರೇನು, ಅತ್ತೆ?” ಎಂದು ನಾನು ಹೆದರಿಕೆ ಮತ್ತೂ ದುಃಖದಿಂದ ಕೇಳಿದೆನು. “ಎಲ್ಲಾ ಅವರು ಬಂದನಂತರ ನಿಶ್ಚಯವಾಗಬೇಕು, ಅಷ್ಟೆ” ಎಂದಳು. ಈ ವರ್ತಮಾನವನ್ನು ಕೇಳಿ ನನಗೆ ಆದ ದುಃಖವೂ ಭಯವೂ ಅಷ್ಟಿಷ್ಟಲ್ಲ. ಅತ್ತೆ ಆ ದಿನವಿಡೀ ಮೌನವಾಗಿಯೇ ಇದ್ದಳು. ಆದರೆ, ಕ್ರಮೇಣವಾಗಿ, ದಿನ ಹೋದಂತೆ, ಅತ್ತೆ ಎಂದಿನ ಶಾಂತತೆಯನ್ನು ಪಡೆದು ನನ್ನೊಡನೆ ಮಾತಾಡತೊಡಗಿದಳು. ಹೀಗೆ ಮಾತಾಡುತ್ತಾ ಒಂದು ದಿನ ನನಗೆ ಅವರ ಮನೆಯಲ್ಲಿ – ನಮ್ಮೆಲ್ಲರ ಜತೆಗಾರರಾಗಿ – ಇದ್ದ ಮಿ. ಡಿಕ್ಕರ ಜೀವನ ಚರಿತ್ರೆಯ ಕೆಲವಂಶವನ್ನು ಹೇಳಿದಳು.
ಅವರ ಚರಿತ್ರೆ, ನಾನು ಕೇಳಿದ ಅಂಶ, ಹೀಗಿತ್ತು: ಮಿ. ಡಿಕ್ಕರಿಗೆ ಅವರ ತಂದೆಯವರ ಒಂದು ಉಯಿಲಿನ ಪ್ರಕಾರ ಹೇರಳ ಹಣ ಬರುವುದಿತ್ತಂತೆ. ಈ ಹಣವನ್ನು ತಾನು ಮಾತ್ರ ಪಡೆಯಬೇಕೆಂದು – ದುರುದ್ದೇಶದಿಂದ – ಅವರ ಖಾಸಾ ಅಣ್ಣ, ಮಿ. ಡಿಕ್ಕರು ಹುಚ್ಚರೆಂದು ಪ್ರಕಟಿಸಿ, ಕೆಲವು ದುಷ್ಟ ಸ್ನೇಹಿತರ ಸಹಾಯದಿಂದ, ಅವರನ್ನು ಹುಚ್ಚರ ಆಸ್ಪತ್ರೆಯಲ್ಲಿ ಇಡಿಸಿದ್ದನಂತೆ. ಮಿ. ಡಿಕ್ಕರು ಎಲ್ಲರಂತೆಯೇ ಬುದ್ಧಿಯುಳ್ಳವರಾಗಿದ್ದರೂ ಅವರ ಮೃದು ಮತ್ತು ಸರಳ ಸ್ವಭಾವದ ಕಾರಣವಾಗಿ, ಈ ಅನಿರೀಕ್ಷಿತ ವಿಶ್ವಾಸಘಾತುಕತೆಗೆ ಒಳಪಟ್ಟ ಘಟನೆಗಳಿಂದ ಸ್ವಲ್ಪ ಬುದ್ಧಿವಿಕಲ್ಪವನ್ನೇ ಪಡೆದರಂತೆ. ಅತ್ತೆ ಮಿ. ಡಿಕ್ಕರ ದೂರದ ಸಂಬಂಧಿಕಳಾಗಿದ್ದುದರಿಂದ ಈ ಕುತಂತ್ರ ಜಾಲದಿಂದ ಅವರನ್ನು ಬಿಡಿಸಿ, ತನ್ನ ಮನೆಗೆ ಕರೆತಂದು, ಮನೆಯವರಂತೆಯೇ ಪ್ರೇಮದಿಂದಲೂ ಮರ್ಯಾದೆಯಿಂದಲೂ ಸಾಕುತ್ತಿದ್ದಳು. ಮಿ. ಡಿಕ್ಕರ ನಿಜವಾದ ಹೆಸರು ಮಿ. ರಿಚಾರ್ಡ್ಸ್ ಬೇಬ್ಲಿ ಎಂದಾಗಿತ್ತು. ಆದರೆ, ತನ್ನ ಮನೆತನದ ಹೆಸರನ್ನು ಕೇಳಿದ ಕೂಡಲೇ ಅವರಿಗೆ ಬುದ್ಧಿಭ್ರಮಣೆಯುಂಟಾಗುವುದನ್ನು ಕಂಡು, ಅತ್ತೆ ಅವರಿಗೆ ಮಿ. ಡಿಕ್ಕ್ ಎಂದು ಹೆಸರು ಕೊಟ್ಟಿದ್ದರಂತೆ.
ಮಿ. ಡಿಕ್ಕರು ತನಗೆ ತನ್ನ ಕುಟುಂಬದವರಿಂದ ಆಗಿದ್ದ ಅನ್ಯಾಯವನ್ನು ಬರೆದು ಸರಕಾರಕ್ಕೆ ಒಂದು ಮನವಿಯ ರೂಪದಲ್ಲಿ ದೂರು ಕೊಡಬೇಕೆಂದು, ಮನವಿಯ ಬರವಣಿಗೆಯಲ್ಲಿ ನಿರಂತರವೂ ಮಗ್ನರಾಗಿರುತ್ತಿದ್ದರು. ಈಗ್ಗೆ ಹತ್ತು ವರ್ಷಗಳಿಂದಲೂ ತಯಾರಾಗುತ್ತಿದ್ದ ಮನವಿ ಈಗಲೂ ಅಪೂರ್ಣವಾಗಿಯೇ ಉಳಿದಿತ್ತು. ಮನವಿಯ ಮೂಲಕ ತಮ್ಮ ಕಷ್ಟ ಪರಿಹಾರವಾಗಬಹುದಾದ ಸಾಧ್ಯಾಸಾಧ್ಯತೆಯನ್ನು ತಿಳಿಯುವಷ್ಟು ಪೂರಾ ಅವರಿಗೆ ಬುದ್ಧಿಯಿಲ್ಲದಿದ್ದುದೇ ಈ ಅವಿಶ್ರಾಂತವಾದ ಮನವಿ ತಯಾರಿಕೆಗೆ ಕಾರಣವಾಗಿತ್ತಂತೆ. ಇಂಗ್ಲೆಂಡಿನ ಅರಸರಾಗಿದ್ದ ಎರಡನೆ ಚಾರ್ಲ್ಸ್‍ರ ತಲೆಯನ್ನು ಪ್ರಜೆಗಳು ಕಡಿದ ಕ್ರೂರ ಚರಿತ್ರೆ ಅವರ ಮೃದು ಮನಸ್ಸಿಗೆ ತುಂಬಾ ಉಪದ್ರವ ಕೊಡುತ್ತಿತ್ತು. ಅವರು ಮನವಿಯನ್ನು ಬರೆಯುತ್ತಿದ್ದಾಗ ಮಧ್ಯೆ ಮಧ್ಯೆ “ರಾಜರಾದ ಚಾರ್ಲ್ಸ್ರ ತಲೆ” ಎಂದೂ ಬರೆದುಬಿಡುತ್ತಿದ್ದರು. ಈ ತಪ್ಪನ್ನು ಕಂಡೊಡನೆ ಅವರು ಪುನಃ ಪ್ರಾರಂಭದಿಂದಲೇ ಮನವಿಯನ್ನು ಬರೆಯಲು ತೊಡಗುತ್ತಿದ್ದರು.
ಮಿ. ಡಿಕ್ಕರ ಈ ವಿಷಯವೆಲ್ಲ ಹೇಗಿದ್ದರೂ ಅತ್ತೆಯ ಮಟ್ಟಿಗೆ ಅವರು ಬಹು ಬುದ್ಧಿವಂತರೇ ಆಗಿದ್ದರು – ಅತ್ತೆ ಅವರನ್ನು ಆ ರೀತಿಯಾಗಿ ತಿಳಿದಿದ್ದಳು. ಮಿ. ಡಿಕ್ಕರ ಸರಳ ಮತ್ತು ನಿಷ್ಕಪಟ ಬುದ್ಧಿಯಿಂದ, ಅವರ ಮರ್ಮವನ್ನರಿತು ಪ್ರಶ್ನಿಸಿದ್ದಾದರೆ, ಎಂಥ ಸಮಸ್ಯೆಗೂ ಪರಿಹಾರಪ್ರದವಾದ ಸಲಹೆಗಳನ್ನು ಅವರು ಕೊಡಬಲ್ಲರೆಂಬುದು ಅತ್ತೆಯ ಪರಿಪೂರ್ಣ ನಂಬಿಕೆಯಾಗಿತ್ತು. ಆದ್ದರಿಂದಲೇ ಅತ್ತೆಯ ಎಲ್ಲಾ ಕೆಲಸಗಳಲ್ಲೂ ಮಿ. ಡಿಕ್ಕರು ಸಲಹೆಗಾರರಾಗಿ ವರ್ತಿಸುತ್ತಿದ್ದರು. ಈ ಚರಿತ್ರೆಯನ್ನೆಲ್ಲ ತಿಳಿದ ನಾನು ಒಂದಾವೃತ್ತಿ ಅವರ ಕೋಣೆಗೆ ಹೋದೆನು.
ಮಿ. ಡಿಕ್ಕರ ಉಪಯೋಗಕ್ಕಾಗಿಯೇ ಆ ಕೋಣೆಯನ್ನು ಕೊಡಲಾಗಿತ್ತು. ಅವರಿಗೆ ಬೇಕಾದಷ್ಟು ಕಾಗದ, ಶಾಯಿ, ಲೇಖನಿ ಮೊದಲಾದುವೆಲ್ಲ ಆ ಕೋಣೆಯಲ್ಲಿ ಸದಾ ಇರುತ್ತಿದ್ದುವು. ಆ ಕೋಣೆಯ ಒಂದು ಮೂಲೆಯಲ್ಲಿ ಒಂದು ದೊಡ್ಡ ಗಾಳೀಪಟವೂ ಇತ್ತು. ನಾನು ಆ ಕೋಣೆಯನ್ನು ಪ್ರವೇಶಿಸಿದಾಗ ಮಿ. ಡಿಕ್ಕರು ಏಕಾಗ್ರತೆಯಿಂದ ಬರೆಯುತ್ತಿದ್ದರು. ಅವರ ಗಮನ ನನ್ನ ಕಡೆಗೆ ಹರಿಯದಂತೆ ನೋಡಿಕೊಂಡು ನಾನು ಆ ಗಾಳೀಪಟವನ್ನು ಕುತೂಹಲದಿಂದ ಪರೀಕ್ಷಿಸಿದೆನು. ಮಿ. ಡಿಕ್ಕರು ಬರೆದಿದ್ದ ಮನವಿಗಳ ಅಪೂರ್ಣ ಪ್ರತಿಗಳಿಂದಲೇ ಆ ಗಾಳೀಪಟ ಮಾಡಲಾಗಿತ್ತು. ನಾನು ಅದನ್ನು ನೋಡುತ್ತಿದ್ದುದನ್ನು ಹೇಗೋ ಕಂಡು ಮಿ. ಡಿಕ್ಕರು ನನ್ನೊಡನೆ ಮಾತಾಡತೊಡಗಿದರು – “ಮಿ. ಕಾಪರ್ಫೀಲ್ಡ್, ಹೇಗಿದ್ದೀರಿ – ನಿದ್ರೆ ಬಂತೇ? ಅದಿರಲಿ, ನಿದ್ರೆಯು ಪ್ರತಿದಿನದ ಸ್ವಂತ ವಿಷಯವಾಯ್ತು – ನಿಮ್ಮ ಅನುಭವ ಪ್ರಕಾಶ ಪ್ರಪಂಚ ಹೇಗಿದೆ?” ಎಂದು ಅವರು ಕೇಳಿದರು. ನಾನು ಯಾವ ಉತ್ತರವನ್ನೂ ಕೊಡಲಾರದೆ ಅವರನ್ನೇ ನೋಡಿದೆ. ಅವರೇ ತಮ್ಮ ಮಾತನ್ನು ಮುಂದುವರಿಸಿದರು – “ನನ್ನ ಮಟ್ಟಿಗೆ ಪ್ರಪಂಚವೆಲ್ಲಾ ಹುಚ್ಚು; ಜನರಿಗೆ ಬುದ್ಧಿಯಿಲ್ಲದೆ ಏನೇನೋ ಗೊಂದಲಗಳಲ್ಲಿ ಸಿಕ್ಕಿ ಒದ್ದಾಡುತ್ತಾರೆ” ಎಂದು ಹೇಳಿ, ನಶ್ಯ ಸೇದಿ, ಪುನಃ ಕೇಳಿದರು – “ನೀವು ಶಾಲೆಗೆ ಹೋಗಿದ್ದೀರಾ?” “ಹೋಗಿದ್ದೇನೆ” ಅಂದೆನು ನಾನು. “ಹಾಗಾದರೆ, ನಿಮಗೆ ಗೊತ್ತಿದ್ದರೆ ತಿಳಿಸಿ – ಚಾರ್ಲ್ಸ್ ದೊರೆಯ ತಲೆಯನ್ನು ಕತ್ತರಿಸಿದ ತಾರೀಕು ಯಾವುದು?” ಎಂದು ಕೇಳಿದರು. “ಸಾವಿರದ ಆರುನೂರ ನಲವತ್ತೊಂಬತ್ತನೆ ಇಸವೀಂತ ಕಾಣುತ್ತದೆ” ಎಂದು ನಾನು ಉತ್ತರವಿತ್ತೆ. ಈ ಉತ್ತರದಿಂದ ಅವರಿಗೆ ಸಮಾಧಾನವಾಗಲಿಲ್ಲ. ನಾನು ಹೇಳಿದ್ದು ತಪ್ಪಾಗಿರಬಹುದೆಂಬಂತೆ ನನ್ನನ್ನು ನೋಡುತ್ತಾ ಲೇಖನಿಯ ತುದಿಯಿಂದ ತನ್ನ ತಲೆಯನ್ನು ತುರಿಸಿಕೊಳ್ಳುತ್ತಾ ಅವರಂದರು – “ನೀವು ಹೇಳಿದ ತಾರೀಕು ಪುಸ್ತಕಗಳಲ್ಲಿ ಇವೆ, ಸರಿ. ಆದರೆ, ನೋಡಿ ಅಷ್ಟೊಂದು ಹಿಂದಿನ ಕಾಲದಲ್ಲೇ ಆ ತಲೆಯನ್ನು ಕತ್ತರಿಸಿದ್ದಾಗಿದ್ದರೆ, ಆ ತಲೆಯೊಳಗಿದ್ದ ದುಃಖವನ್ನೆಲ್ಲಾ ನನ್ನ ತಲೆಯೊಳಗೆ ತುಂಬಿಸಿದ್ದು ಹೇಗೆ? ಸ್ವಲ್ಪ ಗ್ರಹಿಸಿ ನೋಡಿ!”
ನನಗೆ ಯಾವ ಸಮರ್ಪಕವಾದ ಉತ್ತರವೂ ಗೋಚರಿಸಲಿಲ್ಲ. ನಾನು ಮೌನವಾಗಿದ್ದುದನ್ನು ಕಂಡು ಅವರು ಅವರ ಗಾಳೀಪಟ, ಅದರ ಹಗ್ಗ, ಅದರಲ್ಲಿ ಬರೆದಂಟಿಸಿದ್ದ ಮನವಿ, ಆ ಮನವಿಯ ಮಧ್ಯವಿದ್ದ `ರಾಜರಾದ ಚಾರ್ಲ್ಸ್ರ ತಲೆ’ ಎಂಬ ಬರೆಹ ಎಲ್ಲವನ್ನೂ ತೋರಿಸಿ – “ಬೇಕಾದಷ್ಟು ಹಗ್ಗವಿದ್ದು ಗಾಳೀಪಟವನ್ನು ಹಾರಿಸಿದಾಗ ಅದು ಊರೂರಿಗೆಲ್ಲ ತೋರಿಬರುತ್ತದೆ. ಅದು ಎಷ್ಟೆಷ್ಟು ದೂರ, ಎಷ್ಟೆಷ್ಟು ಎತ್ತರ ಹಾರುತ್ತದೋ ಅಷ್ಟಷ್ಟೇ ಹೆಚ್ಚಾಗಿ ನನ್ನ ಮನವಿ ಪ್ರಚಾರಕ್ಕೆ ಬರುತ್ತದೆ. ಯಾವಾಗ್ಗೆ ಎಂದು ನಾನು ಈಗಲೇ ಹೇಳಲಾರೆನಾದರೂ ಈ ಗಾಳೀಪಟವನ್ನು ಹಾರಿಸುತ್ತಿದ್ದರೆ ಒಂದಲ್ಲದಿದ್ದರೆ ಒಂದು ದಿನ ನನ್ನ ಮನವಿಯು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ” ಎಂದು ಹೇಳಿದರು.
ಈ ಮಾತುಗಳನ್ನಾಡುವಾಗ ಅವರ ಮುಖ ಶಾಂತವಾಗಿತ್ತು. ಸಂತೋಷಭರಿತ ಗಾಂಭೀರ್ಯವೂ ಪೂಜ್ಯಭಾವವನ್ನು ಪ್ರಚೋದಿಸುವ ತೇಜಸ್ಸೂ ಆ ಮುಖದಲ್ಲಿತ್ತು. ಅವರ ಮುಖದ ಈ ಎಲ್ಲ ಲಕ್ಷಣಗಳೆದುರು ಈ ಎಲ್ಲ ಮಾತುಗಳು ಕೇವಲ ವಿನೋದಕ್ಕಾಗಿ ಆಡಿದವುಗಳು ಎಂಬಂತೆ ನನಗೆ ತೋರಿದುವು. ನಾವಿಬ್ಬರೂ – ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ – ನಗಾಡಿದೆವು. ಅನಂತರ ಅವರಿಗಾಗಿದ್ದ ಆನಂದಾತಿಶಯದಿಂದ ನಾವಿಬ್ಬರೂ ಆಜನ್ಮಾಂತ ಸ್ನೇಹಿತರಾಗಬೇಕೆಂದು ಅವರು ಅಂದರು – ಆ ಸ್ನೇಹದ ಪ್ರತಿಜ್ಞೆಗಾಗಿ ನನ್ನ ಕೈ ಹಿಡಿದು ಬಹು ಪ್ರೇಮದ, ಗೌರವದ, ಹಸ್ತ ಲಾಘವವನ್ನಿತ್ತರು.
ಹೀಗೆ ದಿನಗಳು ದಾಟಿದಂತೆ ನಾವಿಬ್ಬರು ಬಹು ಸ್ನೇಹಿತರೇ ಆಗಿಬಿಟ್ಟೆವು. ಅತ್ತೆ ನಮ್ಮಿಬರ ಹಿತೈಷಿಯಾಗಿದ್ದಳು. ಅತ್ತೆಯಲ್ಲಿ ನನಗಿದ್ದ ಅಂಜಿಕೆ ಮಾಯವಾಗುತ್ತಾ ಬಂದಿತು. ಅದರ ಅದಲು, ಪ್ರೀತಿಯೂ ಗೌರವವೂ ಹೆಚ್ಚುತ್ತ ಬಂದುವು. ಅನಾಥ ಮಿ. ಡಿಕ್ಕರ ರಕ್ಷಕಳಾಗಿರುವ ಅತ್ತೆ ನನ್ನ ಪಾಲಿಗೂ ಅಂಥ ರಕ್ಷಕಳಾಗಬಹುದೆಂದು ಧೈರ್ಯ ನನಗೆ ಉಂಟಾಯಿತು. ಒಂದು ದಿನ, ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನು ಜೇನೆಟ್ಟಳನ್ನು ಕಾಮುಕ ದೃಷ್ಟಿಯಿಂದ ನೋಡಿದನೆಂದು ಅತ್ತೆ ಆತನ ಕುರಿತು ಕೋಪಗೊಂಡದ್ದನ್ನು ಕಂಡ ಮೇಲಂತೂ ಅತ್ತೆಯ ಮೇಲಿನ ನನ್ನ ಗೌರವ ಮತ್ತಷ್ಟು ಹೆಚ್ಚಿತು.
ಹೀಗೆ ದಿನ ಕಳೆಯುತ್ತಿದ್ದಾಗ, ಒಂದು ದಿನ, ಊಟದ ಸಮಯದಲ್ಲಿ ಮಿ. ಮತ್ತು ಮಿಸ್ ಮರ್ಡ್ಸ್ಟನ್ನರು ಮರುದಿನ ಬರುವುದಾಗಿ ಅತ್ತೆ ನಮಗೆ ತಿಳಿಸಿದಳು. ಆ ಮರುದಿನ ಬಹು ಭಯಗ್ರಸ್ತನಾಗಿ, ಅವರು ಎಷ್ಟು ಹೊತ್ತಿಗೆ ಬರುವರೋ ಎಂದು ನಾನು ಆಲೋಚಿಸುತ್ತಾ ಅವರ ಬರೋಣವನ್ನು ಕಾದು ನೋಡುತ್ತಿದ್ದೆ. ಆ ದಿನ ಬರುವವರ ನಿರೀಕ್ಷೆಯಿಂದ ನಮ್ಮ ಮಧ್ಯಾಹ್ನದ ಊಟ ಮಾಡದೆ ರಸ್ತೆ ನೋಡುತ್ತಾ ನಾವು ನಮ್ಮ ಬೈಠಖಾನೆಯಲ್ಲಿದ್ದೆವು. ಅಷ್ಟರಲ್ಲಿ ಅತ್ತೆ ಹಠಾತ್ತಾಗಿ – “ಜೇನೆಟ್ ಕತ್ತೆಗಳು” ಎಂದು ಕೂಗಿದಳು. ಇಂದಿನ ಕತ್ತೆಗಳ ಸವಾರಿ ಹಿಂದೆಂದೂ ಆಗದಿದ್ದಷ್ಟು ಕಠಿಣತರದ್ದಿರಬೇಕೆಂದನ್ನುವಂತೆ ಅತ್ತೆಯ ಕೋಪವೂ ಬಹು ಉಗ್ರತರದ್ದೇ ಆಗಿತ್ತು. ರಸ್ತೆಯ ಕಡೆಗೆ ನಾನೂ ನೋಡಿದೆ. ಆಗಲೇ ಒಬ್ಬಳು ಹೆಂಗುಸು ಕತ್ತೆಯ ಮೇಲೆ ಕುಳಿತುಕೊಂಡು ಮೈದಾನದ ಮಧ್ಯಕ್ಕೆ ಬರುತ್ತಿದ್ದಳು. ನಾವು ನೋಡುತ್ತಿದ್ದ ಹಾಗೆಯೇ ಯಾರಿಗೂ ಅಂಜದವಳಂತೆ, ಭೀಕರ ಧೈರ್ಯದಿಂದ, ಆ ಹೆಂಗುಸು ಆ ಪವಿತ್ರ ಹಸುರು ಹುಲ್ಲುಗಾವಲ ನಡುವೆ ಕತ್ತೆಯಿಂದಿಳಿದು ನಿಂತಳು. ಅತ್ತೆ ಬಹು ಕೋಪದಿಂದ, ಆ ಹೆಂಗುಸನ್ನು ನೋಡುತ್ತ – “ನಡಿ ಅಲ್ಲಿಂದ – ತೊಲಗು, ಗಂಡುಬೀರಿ – ನಿನ್ನ ಸ್ವರೂಪ ನನ್ನೆದುರು ಅರೆಘಳಿಗೆ ಇರಕೂಡದು – ನಡೀ” ಎಂದು ಜೋರಾಗಿ ಗದರಿಸಿ ಕೂಗಿದಳು. ಇಷ್ಟರಲ್ಲಿ ನಾನು ಅತ್ತೆಯ ಸಮೀಪಕ್ಕೆ ಹೋಗಿ ಮೈದಾನದಲ್ಲಿ ನಿಂತಿದ್ದವಳು ಮಿಸ್ ಮರ್ಡ್ಸ್ಟನ್ನಳೆಂದು ತಿಳಿಸಿದೆ. ಆಗಲೇ ಕತ್ತೆಯ ಲಗಾಮನ್ನು ಹಿಡಿದುಕೊಂಡು ಮಿ. ಮರ್ಡ್ಸ್ಟನ್ನರೂ ಸಹ ತಂಗಿಯ ಸಮೀಪಕ್ಕೆ ಬಂದು ನಿಂತರು. ಮಿ. ಮರ್ಡ್ಸ್ಟನ್ನರೇ ಅವರೆಂದು ಅತ್ತೆಗೆ ನಾನು ತಿಳಿಸಿದರೂ –
“ನನ್ನ ಸ್ಥಳವನ್ನು ಯಾರು ಅತಿಕ್ರಮವಾಗಿ ಪ್ರವೇಶಿಸಿದರೂ ನಾನು ಸಹಿಸೆನು” ಎಂದಂದುಕೊಂಡು ಕೈ ಮುಷ್ಟಿ ಮಾಡಿ ತೋರಿಸುತ್ತಾ ಮೈದಾನದ ಕಡೆಗೆ ಓಡಿದಳು. ಅಲ್ಲಿಗೆ ತಲಪಿದ್ದೇ ತಡ ಮರ್ಡ್ಸ್ಟನ್ ದ್ವಯರನ್ನು ಸಿಕ್ಕಾಬಟ್ಟೇ ಬೈದಳು. ಜೇನೆಟ್ಟಳು ಕತ್ತೆಗಳ ಲಗಾಮನ್ನು ಹಿಡಿದು ಒಂದು ಕಡೆಗೆ ಎಳೆಯತೊಡಗಿದಳು. ತಮ್ಮ ಕತ್ತೆಗಳನ್ನು ನಡೆಸುವವರು ತಾವೇ ಎಂದನ್ನುತ್ತಾ ಮಿ. ಮರ್ಡ್ಸ್ಟನ್ನರು ಕತ್ತೆಗಳನ್ನು ಮತ್ತೊಂದು ಕಡೆಗೆ ಎಳೆದರು. ಅತ್ತೆಯ ಈ ವಿಧದ ಸನ್ನಿವೇಶಗಳಲ್ಲಿ ಸಂತೋಷಿಸುತ್ತಿದ್ದ ನೆರೆಕರೆಯ ಪೋಕರೀ ಬಾಲಕರು ಜತೆ ಸೇರಿ ಅತ್ತೆಯನ್ನು ನೋಡಿಕೊಂಡು ಕೈ ಚಪ್ಪಾಳೆ ತಟ್ಟಿದರು. ಈ ಗೌಜು ಗಲಭೆಗಳನ್ನು ನೋಡುತ್ತಿದ್ದ ಕತ್ತೆಗಳು ಯಾವ ವಿಷಯಗಳ ಅರ್ಥ ಮಾಡುವುದಕ್ಕಿಂತಲೂ ಮೊದಲು ತಮ್ಮ ನಿಲುವನ್ನು ಭದ್ರ ಮಾಡಿಕೊಳ್ಳುವುದು ಉತ್ತಮವೆಂದು ತಮ್ಮ ನಾಲ್ಕೂ ಕಾಲುಗಳನ್ನು ನಾಲ್ಕೂ ದಿಕ್ಕುಗಳಿಗೆ ನೀಡಿ, ಕದಲದೆ ನಿಂತುಬಿಟ್ಟವು. ಈ ವಿಧದಲ್ಲಿ ಅಲ್ಲಿ ಒಂದು ವಿಧದ ಯುದ್ಧವೇ ಕ್ಷಣಕಾಲ ನಡೆದು ಹೋಯಿತು. ಅತ್ತೆಗೆ ಕೋಪ ತಡೆಯಲಾಗದೆ ಕೈಗೆ ಸುಲಭದಲ್ಲಿ ಸಿಕ್ಕಿದ ಒಬ್ಬ ಹುಡುಗನ ಕಿವಿ ಹಿಡಿದು ತಿರುವಿದಳು. ಅಂತೂ ಕೊನೆಗೆ ಕತ್ತೆಗಳು ಮೈದಾನವನ್ನು ಬಿಟ್ಟೋಡಿದುವು – ಅತ್ತೆಗೆ ಜಯವೇ ಆಯಿತು.
ಅತ್ತೆ ಮೌನವಾಗಿ ಬಂದು ತನ್ನ ಬೈಠಖಾನೆಯಲ್ಲಿ ಗಂಭೀರ ಮುಖಮುದ್ರೆಯಿಂದ ಕುಳಿತಳು. ಅವಳ ಮೈ ಬೆವರಿಹೋಗಿತ್ತು. ಮುಖ ಕೆಂಪು ಕೆಂಪಾಗಿಹೋಗಿತ್ತು. ಮರ್ಡ್ಸ್ಟನ್ನ್‍ದ್ವಯರು ಮನೆಗೆ ಬಂದರು. ಜೇನೆಟ್ಟಳ ಮೂಲಕ ತಾವು ಬಂದಿದ್ದ ಸಂಗತಿಯನ್ನು ತಿಳಿಸಿದರು. ಇದೆಲ್ಲವನ್ನೂ ನೋಡುತ್ತಲೂ ಕೇಳುತ್ತಲೂ ಇದ್ದ ಅತ್ತೆ ಕ್ರಮಬದ್ಧವಾಗಿ ಬಂದವರ ಪರಿಚಯವನ್ನು ಜೇನೆಟ್ಟಳು ಮಾಡುವವರೆಗೂ ಯಾರ ಬರೋಣವನ್ನೂ ಗಮನಕ್ಕೆ ತರದೆ ಮೌನವಾಗಿ ಕುಳಿತಿದ್ದಳು. ಪರಿಚಯದ ಮಾತುಕಥೆಗಳು ಆದನಂತರ ಅತ್ತೆ ನನ್ನನ್ನು ಅದೇ ಬೈಠಖಾನೆಯ ಒಂದು ಮೂಲೆಯಲ್ಲಿ ನಿಲ್ಲಿಸಿ, ನಾನು ಓಡಿಹೋಗದಂತೆ ನನಗಡ್ಡವಾಗಿ ಕೆಲವು ಕುರ್ಚಿಗಳನ್ನಿಟ್ಟಳು. ಅತ್ತೆ ಅವಳ ಎತ್ತರದ ಕುರ್ಚಿಯಲ್ಲಿ ಕುಳಿತು ನಾನು ಮೂಲೆಯಲ್ಲಿದ್ದದ್ದನ್ನು ನೋಡುವಾಗ ನಾನೋರ್ವ ಕೈದಿಯಂತೆಯೂ ಅವಳು ಒಬ ಜಡ್ಜಳಂತೆಯೂ ತೋರುತ್ತಿದ್ದೆವು. ಒಳಗೆ ಬಂದ ಮರ್ಡ್ಸ್ಟನ್ನ್‍ದ್ವಯರು ನಿಂತುಕೊಂಡೇ ಇದ್ದರು. ಅವರನ್ನೆಲ್ಲ ನಾನು ನೋಡುತ್ತಲೂ ಅವರ ಮಾತುಗಳನ್ನು ಕೇಳುತ್ತಲೂ ಇದ್ದೆ.
ಅತ್ತೆ ತನ್ನ ಕುರ್ಚಿಯಲ್ಲಿ ಕುಳಿತೇ ವಿಚಾರಣೆಯನ್ನು ಪ್ರಾರಂಭಿಸಿದಳು – “ಬಂದದ್ದು ನೀವೆಂದು ನನಗೆ ಮೊದಲು ಗೊತ್ತಾಗಲಿಲ್ಲ. ಆದರೆ, ಯಾರೇ ಆ ಮೈದಾನಕ್ಕೆ ಬಂದರೂ ಆ ಸ್ಥಳದ ರಕ್ಷಣೆಯ ಏರ್ಪಾಡುಗಳು ಒಂದೇ ವಿಧದ್ದಾಗಿದೆ” ಎಂದು ಪೀಠಿಕಾ ರೂಪದ ಮಾತನ್ನಾಡಿ – “ಕೋಕಿಲ ನಿವಾಸದ ನನ್ನ ಅಳಿಯ ಡೇವಿಡ್ಡನ ಹೆಡ್ಡು ವಿಧವೆಯನ್ನು ಮದುವೆಯಾದವರು ನೀವೇಯೋ?” ಎಂದು ಕೇಳುತ್ತಾ ಆತ್ಮಗತವಾಗಿ, “ಕೋಕಿಲ ನಿವಾಸವಂತೆ – ಕೋಕಿಲ! – ಖಾಲಿಗೂಡಿರುವ ಸ್ಥಳಕ್ಕೆ!” ಎಂದು ಹೇಳಿಕೊಂಡಳು. “ಹೌದು” ಅಂದರು ಮಿ. ಮರ್ಡ್ಸ್ಟನ್ನರು. “ನೋಡಿ – ಹಸುಗೂಸಿನಂತಿದ್ದ ಆ ವಿಧವೆಯನ್ನು ನೀವು ಮದುವೆಯಾದುದರಲ್ಲಿ ಎಷ್ಟೊಂದು ಅನ್ಯಾಯ ಮಾಡಿರುವಿರೆಂದು ಗೊತ್ತಿದೆಯೇ?” ಅಂದರು ಅತ್ತೆ. “ಹಸುಗೂಸು ನಿಜ – ಅದರ ಫಲ – ಅನ್ಯಾಯವಾದುದು ನಮ್ಮಣ್ಣನಿಗೆ” ಅಂದಳು ಮಿಸ್ ಮರ್ಡ್ಸ್ಟನ್ನಳು.
“ನಿಮ್ಮಣ್ಣನ ಸಂದರ್ಭಕ್ಕೆ ನಿಮ್ಮ ಉತ್ತರ ಸರಿಯಾಗಲಿಲ್ಲ – ರೂಪ ಲಾವಣ್ಯಗಳಿಲ್ಲದ ನಿಮಗೂ ನನಗೂ ಚಿಕ್ಕ ಪ್ರಾಯದ ಸುಂದರಿ ಕ್ಲೇರಾಳ ವಿಷಯದಲ್ಲಿ ಹಾಗೆ, ಹೀಗೆ ಎಂದು ಅನುಭವ ಹೇಳಲು ಹಕ್ಕಿಲ್ಲ. ಅದರ ಬದಲು ಬುದ್ಧಿ, ಪ್ರಾಯ, ಲೋಕಾನುಭವವಿರಬೇಕಾದ ನಿಮ್ಮ ಅಣ್ಣ – ಕ್ಲೇರಾಳಿಗೆ ಬುದ್ಧಿಯಿಲ್ಲವೆಂದು ಗೊತ್ತಿದ್ದು – ಆ ಕಾರಣದಿಂದಲೇ – ಮದುವೆಯಾದದ್ದು ಬಹು ಅನ್ಯಾಯ” ಅಂದಳು ಅತ್ತೆ.
ಈ ಮಧ್ಯೆ ಅತ್ತೆ ಮಿ. ಡಿಕ್ಕರನ್ನು ಬರಮಾಡಿಕೊಂಡಿದ್ದಳು. ಮಿ. ಡಿಕ್ಕರಿಗೆ ಬಂದವರಿಬ್ಬರ ಪರಿಚಯವನ್ನು ಅತ್ತೆ ಸೂಕ್ಷ್ಮವಾಗಿ ಮಾಡಿಕೊಟ್ಟಳು. ಈ ಪರಿಚಯ ಮಾತುಗಳನಂತರ ಮಿ. ಮರ್ಡ್ಸ್ಟನ್ನರು ಅಂದರು – “ಮಿಸ್ ಟ್ರಾಟೂಡ್, ನಿಮ್ಮನ್ನು ಮುಖತಃ ಕಂಡು ಮಾತಾಡುವುದೇ ಉಚಿತವೆಂದು ನಾವು ಇಲ್ಲಿಗೆ ಬಂದಿದ್ದೇವೆ. ಹುಡುಗನ ಯೋಗ್ಯತೆಗೆ ತಕ್ಕುದಾದ ಕಸಬಿನಲ್ಲಿ ಅವನನ್ನು ಹಾಕಿದ್ದೆನು. ಅವನು ಅಲ್ಲಿಂದ ಹೇಳದೇ ಓಡಿ ಬಂದಿದ್ದಾನೆ. ಈ ಸಂದರ್ಭದಲ್ಲಿ ನನ್ನ ಕರ್ತವ್ಯಗಳ ನಿರ್ವಹಣೆಗಾಗಿ ಎರಡು ಮಾತು ನಿಮ್ಮಲ್ಲಿ ಆಡಲು ಬಂದಿದ್ದೇನೆ.” ಮಿ. ಮರ್ಡ್ಸ್ಟನ್ನರು ಅಷ್ಟು ಹೇಳುವಾಗಲೇ ತಂಗಿ – “ಡೇವಿಡ್ಡನ ಬುದ್ಧಿ, ಸ್ವರೂಪ, ಸ್ವಭಾವ ಎಲ್ಲವೂ ಒರಟು – ಮಹಾಮೂರ್ಖ – ತರ್ಕ, ಬೋಧನೆ, ಮೃದುವಚನಗಳಿಂದ ಸರಿಬಾರದಷ್ಟರ ಮೂರ್ಖ, ಅವನ ತಾಯಿಯಿದ್ದಾಗಲೇ ನಾವು ಪರೀಕ್ಷಿಸಿ ನೋಡಿ, ಸೋತು, ಅವನನ್ನು ಸರಿದಾರಿಗೆ ತರಲಾರದೆ, ಅವನ ಯೋಗ್ಯತೆಗೆ ತಕ್ಕಂಥ ಕಸಬಿನಲ್ಲಿ ಅವನನ್ನು ಸೇರಿಸಿದ್ದೇವೆ” ಎಂದಳು. “ಇಷ್ಟು ಚಿಕ್ಕ ಬಾಲಕನ ವಿಷಯದಲ್ಲಿ ಅಷ್ಟು ಕಠಿಣತರದ ಅಭಿಪ್ರಾಯ ತಾನೆ, ನಿಮ್ಮದು!” ಎಂದು ಅತ್ತೆ ಸ್ವಲ್ಪ ಕುಚೇಷ್ಟೆಯಾಗಿ ಮಾತಾಡಿದಳು. ಅದಕ್ಕೆ ಮಿ. ಮರ್ಡ್ಸ್ಟನ್ನರು –
“ಅವನ ಗುಣಗಳನ್ನು ನಾನು ಪೂರಾ ಬಲ್ಲೆ. ಆ ಗುಣಗಳಿಗೆ ತಕ್ಕದಾದ – ಮತ್ತು, ನನ್ನ ಹಣದ ಅನುಕೂಲಕ್ಕೆ ಸರಿಯಾದ – ಕಸಬಿನಲ್ಲಿ, ನನ್ನ ಸ್ನೇಹಿತರ ಸುಪರ್ದಿಯಲ್ಲಿ ಅವನನ್ನು ಬಿಟ್ಟಿದ್ದೆ. ಅಲ್ಲಿಂದ ಅವನು ಬೀದಿ ಭಿಕಾರಿಯಾಗಿ – ಚಿಂದಿ ಬಟ್ಟೆಯಲ್ಲಿ – ಪರಾರಿಯಾಗಿರುವನು. ಇಂಥವರಿಗೆಲ್ಲ ಆಶ್ರಯ ಕೊಡುವ ನಿಮ್ಮ ಜವಾಬ್ದಾರಿಯು ಎಷ್ಟಿದೆಯೆಂದು ಗೊತ್ತಿದೆಯೇ. ನಿಮಗೆ?” ಅಂದರು. “ಅವನ ಪೂರ್ಣ ಪರಿಚಯವಾದಾಗ ಮಾತ್ರ ಅಣ್ಣನವರ ಮಾತಿನ ಪೂರ್ಣ ಅರ್ಥ ನಿಮಗಾಗಬಹುದು, ತಿಳಿಯಿತೇ?” ಎಂದು ವ್ಯಂಗ್ಯವಾಗಿ ಮಿಸ್ ಜೇನ್ ಮರ್ಡ್ಸ್ಟನ್ನಳಂದಳು.
“ಈ ಉದ್ದುದ್ದದ ಭಾಷಣಗಳು ಹಾಗಿರಲಿ – ನಿಮ್ಮ ಮಗನಾಗಿದ್ದಿದ್ದರೆ ಅವನನ್ನು ಆ ಕೆಲಸಕ್ಕೆ ನೀವು ಕಳುಹಿಸುತ್ತಿದ್ದಿರೇನು?” ಎಂದು ಅತ್ತೆ ಪ್ರಶ್ನಿಸಿದಳು. “ಅಣ್ಣನ ಮಗನಿಗೆ ಅಂಥ ಹೀನ ಬುದ್ಧಿಯು ಬರುತ್ತಿರಲಿಲ್ಲ” ಅಂದಳು ಮಿಸ್ ಮರ್ಡ್ಸ್ಟನ್ನಳು. “ಹಾಗೋ? ಇರಲಿ, ಡೇವಿಡ್ಡನ ತಾಯಿ ಬದುಕಿದ್ದಿದ್ದರೆ ಅವನನ್ನು ಹಾಗೆ ಕಳುಹಿಸಲು ಬಿಡುತ್ತಿದ್ದಳೇನು? – ಇದಕ್ಕೆ ಉತ್ತರ ಕೊಡಿ.” “ಖಂಡಿತವಾಗಿಯೂ ಅವಳೂ ಸಹ ಅವನನ್ನು ಕಳುಹಿಸುತ್ತಿದ್ದಳು. ಅವನ ಗುಣ, ಸಂದರ್ಭಗಳನ್ನೆಲ್ಲ ನಾವು ವಿವರಿಸಿ, ಆಲೋಚಿಸಿ ನಡೆದದ್ದಾಗಿದ್ದರೆ, ಕ್ಲೇರಾಳೂ ಸಹ ಅವನನ್ನು ಆ ರೀತಿ ಕಳುಹಿಸುತ್ತಿದ್ದಳು” ಅಂದಳು ಮಿಸ್ ಮರ್ಡ್ಸ್ಟನ್ನಳು. “ಪಾಪ! ಅವಳು ಕಳುಹಿಸುತ್ತಿದ್ದಳಲ್ಲವೆ!” ಎಂದು, ಅವಳು ಎಂಬುದನ್ನು ಒತ್ತಿ ಹೇಳುತ್ತಾ – “ನಿಮ್ಮಿಬ್ಬರ ಶಿಸ್ತಿನ ಶಿಕ್ಷೆಯಿಂದ ಕ್ಲೇರಾಳ ವ್ಯಕ್ತಿತ್ವವನ್ನೇ ಅಪಹರಿಸಿ, ಮತ್ತೆ ಅವಳು ಕಳುಹಿಸುತ್ತಿದ್ದಳು – ಅವಳು ಎಂದನ್ನುವುದೆಲ್ಲ ಏನು ಚಂದವಪ್ಪಾ! ಇನ್ನು ನಿಮ್ಮ ಹಣದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದಿರಲ್ಲಾ, ಡೇವಿಡ್ಡನ ತಾಯಿಯ ಹೆಸರಿಗೆ ಬರುತ್ತಿದ್ದ – ಅವಳ ಮೊದಲಿನ ಗಂಡ ಇಟ್ಟಿದ್ದ – ವರ್ಷಾಸನದ ಹಣವೆಲ್ಲ ಏನಾಯಿತು? ಅವಳ ಮನೆ, ಹಿತ್ತಲು ಇವೆಲ್ಲಾ ಯಾರಿಗೆ ಸೇರಿವೆ?” ಎಂದು ಸ್ವಲ್ಪ ಕಠಿಣವಾಗಿಯೇ ಅತ್ತೆ ಪ್ರಶ್ನಿಸಿದಳು.
“ವರ್ಷಾಸನದ ಹಣ ಅವಳ ಮರಣದಿಂದ ಅಂತ್ಯವಾಯಿತು. ಅವಳ ಮನೆ, ಹಿತ್ತಲನ್ನೆಲ್ಲ ಅವಳಿಗೆ ಕುಷಿ ಬಂದಂತೆ ಅನುಭವಿಸುವ ಸ್ವಾತಂತ್ರ್ಯವನ್ನು ಅವಳ ಗಂಡನೇ ಉಯಿಲಿನಲ್ಲಿ ಕೊಟ್ಟಿದ್ದನಷ್ಟೆ” ಎಂದು ಮಿ. ಮರ್ಡ್ಸ್ಟನ್ನರು ಉತ್ತರವಿತ್ತರು. “ಸರಿ, ಸರಿ, ನನಗೂ ಬುದ್ಧಿಯಿದೆ, ಅರ್ಥವಾಗುತ್ತೆ. ಅವಳಿಗೆ ಗಂಡ ಕೊಟ್ಟಿದ್ದ `ಸ್ವಾತಂತ್ರ್ಯ’ ಎಂದು ಹೇಳುತ್ತೀರಲ್ಲಾ. ಆ ಸ್ವಾತಂತ್ರ್ಯ ನಿಜವಾಗಿಯೂ ಅವಳಿಗಿತ್ತೇನು? ಅವಳ ಮನಸ್ಸನ್ನು ಮುರಿದು, ಕಾನೂನಿಗೆ ಸರಿದೋರುವಂತೆ, ನಿಮ್ಮ ಹೆಸರಿಗೆ ಅವಳದನ್ನೆಲ್ಲ ಬರೆಸಿಕೊಂಡು ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದು ಹೇಳುತ್ತೀರಲ್ಲಾ – ಇದೆಲ್ಲ ಯಾರ ಹತ್ತಿರ ಹೇಳುವ ಮಾತು! ಮಾಡಿದ್ದೆಲ್ಲ ಬಲಾತ್ಕಾರ. . .” ಎಂದು ಅತ್ತೆ ಚೆನ್ನಾಗಿ ಜರೆದು ಮಾತಾಡಿದಳು.
ಮಿ. ಮರ್ಡ್ಸ್ಟನ್ನರಿಗೆ ಸ್ವಲ್ಪ ಕೋಪ ಬಂತು. ಅವರಂದರು – “ಮಿಸೆಸ್ ಮರ್ಡ್ಸ್ಟನ್ನಳು ಅವಳ ಗಂಡನಿಗೆ ಆಸ್ತಿ ಬರಕೊಟ್ಟ ವಿಷಯದಲ್ಲಿ ನಿಮ್ಮ ಅಯಾಚಿತ ಪ್ರವೇಶ ಅಗತ್ಯವಿಲ್ಲ. ಡೇವಿಡ್ಡನ ಭವಿಷ್ಯದ ಕುರಿತು ಮಾತ್ರ – ಮನಸ್ಸಿದ್ದರೆ – ಮಾತಾಡಿ. ಯಾವ ಶರ್ತವೂ ಇಲ್ಲದೆ ಡೇವಿಡ್ಡನನ್ನು ನನ್ನ ವಶಕ್ಕೆ ಒಪ್ಪಿಸಬೇಕು – ಇಲ್ಲದಿದ್ದರೆ ಇನ್ನು ಮುಂದಿನ ಅವನನ್ನು ಕುರಿತಾದ ವಿಶಿಷ್ಟ ಜವಾಬ್ದಾರಿಯೂ ನಿಮ್ಮದೇ ಆಗಿರಬೇಕು.”
ಈ ಮಾತುಗಳು ನಡೆಯುತ್ತಿದ್ದಾಗ ಅತ್ತೆ ಒಬ್ಬ ನ್ಯಾಯಾಧಿಪತಿಯಂತೆ ಗಂಭೀರವಾಗಿ ಮಾತಾಡುತ್ತಿದ್ದಳು. ಅವಳು ಮಿಸ್ ಮರ್ಡ್ಸ್ಟನ್ನಳನ್ನು ನೋಡಿ – “ಈ ವಿಷಯದಲ್ಲಿ ನೀವೇನಾದರೂ ಹೇಳುವುದಿದೆಯೇ?” ಎಂದು ಕೇಳಿದಳು. “ಅಣ್ಣ ಹೇಳಿದ್ದು ಸಂಪೂರ್ಣ ಸರಿ. ಇನ್ನು ನಿಮ್ಮ ಕಡೆಯಿಂದ ನಮಗೆ ದೊರಕಿರುವ ನಯ – ನುಣುಪಿನ ಆದರಾತಿಥ್ಯಗಳನ್ನು ಕೊಂಡಾಡುವುದು ಮಾತ್ರ ಬಾಕಿಯಿದೆ” ಅಂದಳು ಮಿಸ್ ಮರ್ಡ್ಸ್ಟನ್ನಳು. ಅನಂತರ ನಾನೇನಾದರೂ ಹೇಳುವುದಕ್ಕಿದೆಯೇ – ಅತ್ತೆಯ ಜತೆಯಲ್ಲಿರಲು ಸಮ್ಮತಿಯಿದೆಯೇ – ಅಥವಾ ಮಿ. ಮರ್ಡ್ಸ್ಟನ್ನರ ಜತೆಯಲ್ಲಿ ಹೋಗಲಿಚ್ಛಿಸುವೆನೇ – ಎಂಬಿತ್ಯಾದಿಯಾಗಿ ಅತ್ತೆ ನನ್ನನ್ನು ವಿಚಾರಿಸಿದಳು.
ಅತ್ತೆಯ ಮನೆಯಿಂದ ಹೋಗಲು ನನಗೆ ಇಷ್ಟವಿಲ್ಲವೆಂದು ತಿಳಿಸಿ, ಅತ್ತೆಯೇ ನನ್ನನ್ನು ಸಾಕಬೇಕೆಂದು ಪ್ರಾರ್ಥಿಸಿಕೊಂಡೆ. ಮಿ. ಮತ್ತು ಮಿಸ್ ಮರ್ಡ್ಸ್ಟನ್ನರು ನನ್ನ ವಿರೋಧಿಗಳೆಂದೂ ಹೇಳಿಕೊಂಡೆ. ನನ್ನ ತಾಯಿಯಿಂದ ನನ್ನನ್ನು ದೂರವಿಟ್ಟು, ನನ್ನ ಮೇಲೆ ತಪ್ಪು ಅಭಿಪ್ರಾಯಗಳನ್ನು ತಾಯಿಯಲ್ಲಿ ಉಂಟುಮಾಡಿದವರೇ ಅವರು, ಅಂದೆ. ನನ್ನನ್ನು ಒಂದು ವಿಧದಲ್ಲೂ ನನ್ನ ತಾಯಿಯನ್ನು ಇನ್ನೊಂದು ವಿಧದಲ್ಲೂ ಅವರು ಹಿಂಸಿಸಿರುವರೆಂದು ಹೇಳಿಕೊಂಡೆ. ನನ್ನ ತಾಯಿ ಸತ್ತನಂತರ ಬದುಕಿರಬೇಕಾದರೆ ಅವರಿಂದ ನಾನು ತಪ್ಪಿಸಿ ಓಡದೆ ನಿರ್ವಾಹವಿಲ್ಲದೆ ಓಡಿಬಂದೆನು, ಎಂದೆ. ನಾನು ಈ ಮಾತುಗಳನ್ನಾಡುತ್ತಿದ್ದಾಗ, ಮಿ.ಡಿಕ್ಕರು ತಮ್ಮ ಬಾಯೊಳಗೆ ಒಂದು ಬೆಟ್ಟನಿಟ್ಟುಕೊಂಡು ನನ್ನನ್ನೇ ಹಾಸ್ಯ, ಕನಿಕರ ಮಿಶ್ರವಾಗಿ ನೋಡುತ್ತಿದ್ದರು. ನನ್ನ ಹೇಳಿಕೆ ಪೂರೈಸಿದ ಕೂಡಲೇ ಅತ್ತೆಯು ಮಿ. ಡಿಕ್ಕರನ್ನು ನೋಡಿ –
“ಈ ಹುಡುಗನನ್ನು ಕುರಿತು ನೀವನ್ನುವುದೇನು?” ಎಂದು ಕೇಳಿದಳು. ಮಿ. ಡಿಕ್ಕರು ಅತ್ತೆಯ ಪ್ರಶ್ನೆ ಬಿದ್ದ ಕೂಡಲೇ ಬಹು ಗಂಭೀರ ಭಾವವನ್ನು ತಾಳಿ – “ದರ್ಜಿಯನ್ನು ಬರಮಾಡಿ ಹುಡುಗನಿಗೆ ಕೋಟು, ಶರ್ಟು, ಶರಾಯಿಗಳನ್ನು ಹೊಲಿಸಿರಿ” ಎಂದಂದರು. ಅತ್ತೆಗೆ ಬಹಳ ಸಮಾಧಾನವಾಯಿತು. ಅಂಥ ಉತ್ತಮ ಸಲಹೆಯನ್ನು ಕೇಳಿ ಮಿ. ಡಿಕ್ಕರಿಗೆ ಹಸ್ತಲಾಘವವನ್ನಿತ್ತಳು. ಅನಂತರ ಮಿ. ಮರ್ಡ್ಸ್ಟನ್ನರನ್ನು ನೋಡಿ – “ಹುಡುಗನನ್ನು ಸಾಕುವ ಜವಾಬ್ದಾರಿ ನನ್ನದು. ನಿಮಗೆ ಇಷ್ಟ ಬಂದಂತೆ ನಿಮ್ಮ ದಾರಿ ಹಿಡಿದು ಹೋಗಬಹುದು. ಹುಡುಗ ನೀವು ಹೇಳಿದಂಥವನೇ ಆಗಿದ್ದರೆ ನೀವು ಮಾಡಿದಷ್ಟು ಉಪಚಾರವನ್ನು ನಾನೂ ಅವನಿಗೆ ಮಾಡಬಲ್ಲೆ – ಆದರೆ, ನಾನು ನಿಮ್ಮ ಮಾತನ್ನು ಸ್ವಲ್ಪವೂ ನಂಬುವುದಿಲ್ಲ” ಅಂದಳು.
“ಎಂಥಾ ವಿನಯ” ಎಂದಂದುಕೊಂಡಳು ಮಿಸ್ ಮರ್ಡ್ಸ್ಟನ್ನಳು. “ನಿಮ್ಮ ಸ್ವಂತ ಸ್ವಭಾವವನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ನಿಮ್ಮ ಕ್ರೂರ ದೃಷ್ಟಿಯು ಆ ಮೃದು ಹೃದಯದ ಕ್ಲೇರಾಳ ಮೇಲೆ ಬಿದ್ದಾಗಿನಿಂದ ಅವಳು ಬಾಡಿ, ಬಾಡಿ, ಕೊನೆಗೆ ಸತ್ತಳು. ಪ್ರೀತಿಸುವವರಂತೆ ನಟಿಸಿ, ಹೂವಿನಂತೆ ಮಾತಾಡಿ, ನಿಮ್ಮಣ್ಣ ಮದುವೆಯಾದರು. ಮದುವೆಯಾದ ಮರುದಿನದಿಂದಲೇ ನಿಮ್ಮ ಉಕ್ಕಿನ ಶಿಸ್ತಿನಿಂದ ಅವಳನ್ನು ಬಗ್ಗಿಸಿ, ಹದಮಾಡಿ, ಮುರಿದಿರಿ. ಮೃತ ಡೇವಿಡ್ಡನ ಸ್ಥಾನವನ್ನು ವಂಚಕತನದಿಂದ ಆಕ್ರಮಿಸಿ, ತಾಯಿ ಮಕ್ಕಳನ್ನೇ ಮನುಷ್ಯರಂತೆ ಬದುಕಲು ಬಿಡದೆ, ಮೃಗದಂತೆ ಇರಿಸಿದಿರಿ. ಯಾಂತ್ರಿಕ ಕ್ರೂರತನದ ಮಹಾವ್ಯಕ್ತಿಗಳಿಬ್ಬರ ಪರಿಚಯ ನನಗೆ ಇಂದು ಆದದ್ದು ಸಾಕಪ್ಪಾ ಸಾಕು! ನೀವಿಲ್ಲಿಂದ ಎಷ್ಟು ಬೇಗ ಹೋಗುತ್ತೀರೋ ಅಷ್ಟೆ ಸಂತೋಷ ನನಗಿದೆ!” ಎಂದು ಅತ್ತೆ ಮಿ. ಮತ್ತು ಮಿಸ್ ಮರ್ಡ್ಸ್ಟನ್ನರಿಗೆ ತಿಳಿಸಿದಳು.
“ಇದು ಬುದ್ಧಿಭ್ರಮಣದ ಪರಿಸ್ಥಿತಿಯೋ ಅಥವಾ ಅಮಲಿನ ಪ್ರತಾಪವೋ ನಾವರಿಯೆವು!” ಎಂದನ್ನುತ್ತ ಅಣ್ಣ ತಂಗಿಯರು ನಮ್ಮ ಮನೆಯಿಂದ ಹೊರಟು ಹೋದರು. “ಪುನಃ ನಮ್ಮ ಹುಲ್ಲುಗಾವಲಿಗೆ ಕತ್ತೆ ಸವಾರಿ ಮಾಡಿಕೊಂಡು ಬಂದರೆ, ಜಾಗ್ರತೆ – ಆಗ ಕೊಡುವ ಮರ್ಯಾದೆಯೇ ಬೇರೆ” ಎಂದು ಅತ್ತೆ ಉತ್ತರವಿತ್ತು ಶಾಂತವಾಗತೊಡಗಿದಳು. ಅನಂತರ ಅತ್ತೆ ಮಿ. ಡಿಕ್ಕರನ್ನು ನೋಡಿ – “ಇನ್ನು ಮುಂದೆ ಈ ಬಾಲಕನಿಗೆ ನಾವಿಬ್ಬರೂ ಗಾರ್ಡಿಯನ್ನರು” ಅಂದಳು. “ಡೇವಿಡ್ಡನ ಮಗನ ಗಾರ್ಡಿಯನ್ನು ನಾನು!” ಎಂದಂದುಕೊಂಡು ಮಿ. ಡಿಕ್ಕರು ಸಂತೋಷಪಟ್ಟರು.
ನನ್ನ ಜೀವನ ವೃತ್ತಾಂತದ ಒಂದಂಶವು ಇಲ್ಲಿಗೆ ಮುಗಿಯಿತು. ನನಗೆ ಹೊಸ ಬಟ್ಟೆಗಳು ಬಂದುವು. ಅವುಗಳಲ್ಲೆಲ್ಲ `ಟ್ರಾಟೂಡ್ ಕಾಪರ್ಫೀಲ್ಡ್’ ಎಂದು ಹೆಸರನ್ನೂ ಬರೆದರು. ಹೆಸರು, ಬಟ್ಟೆ, ಜೀವನ ಕ್ರಮ – ಎಲ್ಲವೂ ಹೊಸತೇ ಆದುವು. ಬ್ಲಂಡರ್ಸ್ಟನ್ನಿನ ನೆನಪುಗಳೆಲ್ಲ ಪರದೆಯ ಹಿಂದಿನ ದೃಶ್ಯಗಳಂತೆ ಮಾಯವಾದುವು. ಹಳೆ ಅನುಭವಗಳು ಸ್ವಪ್ನದಂತೆ ತೋರುತ್ತಿದ್ದಾಗಲೇ, ನನ್ನ ಹೊಸ ಪರಿಸ್ಥಿತಿಯೆಲ್ಲ ಸ್ವಪ್ನದ ಆಶ್ಚರ್ಯಗಳಂತೆಯೇ ಆಶ್ಚರ್ಯಮಯವಾಗಿ ತೋರಿದುವು. ಹಿಂದಿನ ನೆನಪುಗಳೆಲ್ಲ ದುಃಖಕರವೇ ಆಗಿದ್ದರೂ ಅವೆಲ್ಲ ನನ್ನದೇ ಅಂಶವೆಂಬ ಭಾವನಾಪಾಶವು ನನ್ನನ್ನು ಬಿಡುತ್ತಿಲ್ಲ. ಆದ್ದರಿಂದಲೇ ಇನ್ನೊಮ್ಮೆ ಪರದೆಯ ಹಿಂದೆ ನೋಡಿ, ಪರದೆಯನ್ನು ಇಳಿಬಿಡುವೆನು
(ಮುಂದುವರಿಯಲಿದೆ)