ಅಧ್ಯಾಯ ಹದಿನೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತನೇ ಕಂತು

ಬಾಲಕನೆಂದೇ ತಿಳಿಯುತ್ತಿದ್ದ ನಾನು ಪ್ರಾಯಭರಿತನಾಗತೊಡಗಿದ್ದೇನೆ. ನನ್ನ ಬಾಲ್ಯದಿಂದ ಪ್ರಾರಂಭವಾದ ದಿನಗಳು ಮೃದು ಹೆಜ್ಜೆಯಿಂದ ಮುಂದುವರಿಯುತ್ತಾ ಬರುತ್ತಿವೆ. ದಿನದಿಂದ ದಿನಕ್ಕೆ ಹೋಲಿಸಿ ನೋಡಿದರೆ ತಿಳಿಯಲಾಗದ – ಆದರೂ ಎಡೆಬಿಡದೆ ಬಂದಿರುವ – ಅಭಿವೃದ್ಧಿ, ವರ್ಷಗಳ ಅಂತರದಿಂದ ಅಳೆಯುವಾಗ ಸ್ಪಷ್ಟವಾಗಿ ಕಂಡು ಬರುತ್ತಿದೆ. ನನ್ನ ಜೀವನದ ನೂರಾರು ಘಟನೆ ಸಂದರ್ಭಗಳನ್ನೆಲ್ಲ ನೋಡುವಾಗ ಜೀವನವೇ ಒಂದು ಪ್ರವಾಹದಂತೆ ಹರಿದುಬರುವುದು ಕಂಡು ಬರುತ್ತಿದೆ. ಪ್ರವಾಹ ಹರಿಯುತ್ತಿದ್ದುದು, ಕೆಲವೆಡೆ ನಿಂತುದು, ಬತ್ತಿ ಹೋದುದು, ಕೆಲವೆಡೆ ಕಸಕಡ್ಡಿ, ಅಡ್ಡ ಮರಗಳಿಂದ ಕಾಣದೆ ಆದುದೂ ಇದೆ. ಆದರೂ ಒಂದು ಮುಂದಿನ ಕುರುಹುಗಳನ್ನು ಗುರುತಿಸುತ್ತಾ ಪ್ರವಾಹದ ಗತಿಯನ್ನೂ ದಿಕ್ಕನ್ನೂ ಗುರುತಿಸುತ್ತಿದ್ದೇನೆ.

ನನ್ನೆದುರಿನ ಶಾಲಾ ದಿನಗಳನ್ನು ನೋಡೋಣ: ಅವು ವಿಸ್ಮಯಕರವಾಗಿವೆ. ನನ್ನ ತರಗತಿಯಲ್ಲಿ ಒಂದನೆಯವನಾದ ಏಡೇಮನಿಗೂ ನನಗೂ ಯೋಗ್ಯತೆಯ ಗಣನೆಯಲ್ಲಿ ಬಹು ದೂರವಿದೆ! ಏಡೇಮನು ವಿದ್ಯಾರ್ಜನೆಯನ್ನು ಪೂರೈಸಿ ಲೋಕದ ಕಾರ್ಯರಂಗಕ್ಕೆ ಇಳಿದಾಗ ಅವನ ಯೋಗ್ಯತೆಗೆ ತಕ್ಕವಾದ ಕೆಲಸಗಳನ್ನು ಸಮಾಜ ಕೊಡಬಲ್ಲುದೇ ಎಂಬುದು ನನ್ನ ಸಂಶಯ. ಡಾ. ಸ್ಟ್ರಾಂಗರೆ ಅವನನ್ನು ಕೆಲವು ಮಹಾಸಭೆಗಳಲ್ಲಿ ಪ್ರಶಂಸಿಸುತ್ತಿದ್ದಾರೆ! ಗತಕಾಲದ ಗಭೀರತೆಯಲ್ಲಿ ಎದ್ದು ಕಾಣುವ ಆ ಆಶ್ಚರ್ಯವೇನು? ಓಹೋ ಅದು ಮಿಸ್ ಶಪ್ಪರ್ಡ್ಸಳ ಚಿತ್ರ. ಅವಳ ಸೌಂದರ್ಯಕ್ಕೆ ನಾನು ಮರುಳಾಗಿ ಅವಳ ಸ್ನೇಹ ಸಂಪಾದನೆಗೆ ಪ್ರಯತ್ನಿಸುತ್ತಿದ್ದೇನೆ. ನಮ್ಮ ನರ್ತನ ಶಾಲೆಯಲ್ಲಿ ಅವಳ ಪರಿಚಯವಾಯಿತು. ನನ್ನ ಜತೆ ನರ್ತಕಿಯಾಗಿ ಅವಳನ್ನು ಪಡೆದು, ನಲಿದು, ಸುಖಿಸುತ್ತಿದ್ದೆನೆ! ನರ್ತನ ಶಾಲೆಯೇ ಸ್ವರ್ಗವಾಯಿತು! ಮತ್ತೇನಾಯಿತು? ಅವಳು ಮತ್ತೊಬ್ಬನೊಡನೆ ನಲಿಯುವುದನ್ನು ನೋಡಿ ಮತ್ಸರಪಟ್ಟೆ. ಅವಳು ನನ್ನನ್ನು ಅಣಕಿಸಿದಳು – ಮೈತ್ರಿಯ ಸ್ಥಾನಕ್ಕೆ ವೈರವು ಕಾಲಿಟ್ಟಿತು, ನರ್ತನಶಾಲೆ ನರಕವಾಯಿತು.

ಡಾ. ಸ್ಟ್ರಾಂಗರನ್ನು ಹೀಯಾಳಿಸಿ ಹಾಸ್ಯ ಮಾಡುತ್ತಿದ್ದ ಆ ಯುವಕನ್ಯಾರು? ಅವನೊಬ್ಬ ಕಟುಕ. ಕಟುಕನ ಗರ್ವಭಂಗಮಾಡದೆ ನಿರ್ವಾಹವಿಲ್ಲ. ಪಕ್ಷ ಕಟ್ಟಿಕೊಂಡು ಮಲ್ಲಯುದ್ಧ ಮಾಡಿದೆ. ಆತನ ಪೆಟ್ಟುಗಳಿಂದ ಪುಡಿಯಾಗಿ, ಒಂದು ವಾರ ಬೇಂಡೇಜು ಬಿಗಿದುಕೊಂಡು ತಲೆ ಮರೆಸಿಕೊಂಡು ಅಡಗಿದೆ. ಮುಂದೆ? ನಾನು ಯುವಕನಾದದ್ದನ್ನು ಸ್ಪಷ್ಟವಾಗಿ ನಾನೇ ತಿಳಿಯಲಾರದೇ ಆಗಿದ್ದರೂ ಏಗ್ನೆಸ್ಸಳು ತರುಣಿಯಾದದ್ದನ್ನು ನಾನು ತಿಳಿದೆ. ಈಗ ಅವಳ ರೂಪ ಬದಲಾಗಿದೆ. ಬಾಲ್ಯದ ಸುಂದರ ರೂಪವೇ ಬದಲಾಗಿ ಅವಳು ಈಗ ತೈಲಚಿತ್ರದ ರೂಪವನ್ನು ಹೋಲುತ್ತಾಳೆ.

ಗತಕಾಲದ ಪಥದಲ್ಲಿ ಎದ್ದು ತೋರುವ ಮತ್ತೊಂದು ದೃಶ್ಯ: ಅದು ಮಿಸ್ ಲಾರ್ಕಿನ್ಸಳು – ಅಪ್ರತಿಮ ಸುಂದರಿ. ಅವಳ ಮೃದು ಮಧುರ ಸ್ವರದಂಥ ಸ್ವರ ಇನ್ನು ಯಾರಿಗೂ ಇಲ್ಲ. ಅವಳ ತಂದೆಗೆ ನನ್ನ ಪರಿಚಯವಿದ್ದುದರಿಂದ ಅವನ ಜತೆಯಲ್ಲಿ ಬರುತ್ತಿರುವ ಮಿಸ್ ಲಾರ್ಕಿನ್ಸಳೂ ನನಗೆ ನಮಸ್ಕರಿಸುತ್ತಿದ್ದಾಳೆ. ದಿನಕ್ಕೊಂದಾವೃತ್ತಿಯಾದರೂ ಅವಳನ್ನು ಕಂಡು ನಮಸ್ಕಾರಗಳನ್ನು ಕೊಟ್ಟು ಪಡೆಯದಿದ್ದರೆ, ಆ ದಿನವೆಲ್ಲ ದುಃಖಮಯವಾಗುತ್ತದೆ. ಅವಳ ಮನೆಯ ಸಮೀಪಕ್ಕಾಗಿ ದಾಟುವಷ್ಟು ಅನುಕೂಲದ, ಮತ್ತೂ ಸಮೀಪದ ದಾರಿ ನನಗೆ ಮತ್ತೆ ಯಾವುದೂ ಇರಲಿಲ್ಲ. ರಾತ್ರಿ ನಾನು ಒಮ್ಮೊಮ್ಮೆ ಮಾರ್ಗದಲ್ಲಿ ನಿಂತು ಆ ಸುರಸುಂದರಿಯನ್ನು ಕುರಿತು ಏನೇನೋ ಆಲೋಚಿಸುವುದಿದೆ. ಅವಳ ಮನೆಗೆ ಬೆಂಕಿಬಿದ್ದು, ಅವಳ ರಕ್ಷಣೆಗೆ ಯಾರೂ ಸಿಕ್ಕದಿದ್ದಾಗ ನಾನು ಬೆಂಕಿಗೆ ಧುಮುಕಿ ಅವಳನ್ನು ಎರಡೂ ಕೈಗಳಿಂದ ಎತ್ತಿತಂದು, ಅವಳ ಒಂದು ವಸ್ತು ಹಿಂದೆಯೇ ಉಳಿದು ಹೋಗಿದ್ದುದನ್ನು ತರಲೆಂದು ಪುನಃ ಬೆಂಕಿಗೆ ಹಾರಿ ನಶಿಸುವ ಆನಂದಾತಿಶಯವೂ ಕಾಣುತ್ತದೆ.

ಮಿಸ್ ಲಾರ್ಕಿನ್ಸಳ ಮನೆಯ ಸಂತೋಷ ಸಮಾರಂಭಗಳು ನನಗೂ ಸಂತೋಷಪ್ರದವೇ ಆಗಿವೆ. ಆ ಮನೆಯ ರಾತ್ರಿಯ ಸಂಭ್ರಮಗಳಲ್ಲಿ ನಾನು ರಸ್ತೆಯಲ್ಲಿ ನಿಂತು ಅವಳನ್ನು ನೋಡುತ್ತಿದ್ದೇನೆ! ಆಗ ನನಗೆ ಆಗುವ ಆನಂದ ಪ್ರಪಂಚದಲ್ಲಿ ಇತರ ಯಾರಿಗೂ ಆಗುತ್ತಿಲ್ಲವೆಂದೇ ನನ್ನ ಭಾವನೆ. ಆ ಸಭೆಗಳಲ್ಲಿ, ಪ್ರಜ್ವಲಿಸುವ ಬೆಳಕಿನಲ್ಲಿ, ಅತಿಥಿಗಳೊಂದಿಗೆ ಹಂಚಲಾಗುತ್ತಿದ್ದ ಹೂವಿನಂತೆ ಅವಳು ನಗಾಡುತ್ತಾ ಅತ್ತಿತ್ತ ತಿರುಗಾಡುತ್ತಿದ್ದ ಆನಂದಮಯ ದೃಶ್ಯವೂ ನನಗೆ ದುಃಖಮಯವಾದರೂ ಅದು ಪುನಃ ಪುನಃ ಬರಲೆಂದು ಬಯಸಿ, ಕಾಯುವಂಥಾದ್ದೂ ಆಗಿದೆ.

ಒಂದು ದಿನ ಅವಳ ಮನೆಯ ನರ್ತನಕೂಟಕ್ಕೆ ನನಗೂ ಆಮಂತ್ರಣ ದೊರಕಿತು – ನಾನು ಹೋದೆ. ನಾನು ಸದ್ಯವೇ ಶಾಲೆಯನ್ನು ಬಿಟ್ಟವನಾಗಿದ್ದುದರಿಂದ ನನ್ನನ್ನು ಯಾರೂ ನರ್ತನಕ್ಕೆ ಕರೆಯಲಿಲ್ಲ. ಆದರೆ, ಅದೂ ಒಂದು ನನ್ನ ಭಾಗ್ಯವೇ ಆಗಿದೆ. ಮಿಸ್ ಲಾರ್ಕಿನ್ಸಳು ನಲಿಯುತ್ತಿದ್ದದ್ದನ್ನೇ ನೋಡಿ, ನೋಡಿ ನನ್ನ ಹೃದಯವನ್ನೇ ತುಂಬಿಕೊಂಡೆ. ಅಷ್ಟರಲ್ಲೇ ಆ ಸುಂದರಿ, ತನ್ನ ಮೃದು ಹೃದಯದ ಪ್ರೇರಣೆಯಿಂದ, ನನ್ನನ್ನೇ ತನ್ನ ಜತೆ ನರ್ತಕನನ್ನಾಗಿ ಆರಿಸಿದ್ದಾಳೆ. ಅನಂತರದ ಆನಂದ ಅವರ್ಣನೀಯ. ನೀಲ ವರ್ಣದ ಲಂಗವನ್ನು ತೊಟ್ಟು, ಹೂಗಳಿಂದಲಂಕೃತಳಾಗಿ, ಸುವಾಸನೆಯನ್ನು ಬೀರುತ್ತಿದ್ದ ಆ ಕೋಮಲಾಂಗಿಯನ್ನು ಒಂದು ಕೈಯಿಂದ ಮೈ ಬಳಸಿ ಸುತ್ತಿ, ಮತ್ತೊಂದರಿಂದ ಅವಳ ಮೃದು ಹಸ್ತವನ್ನು ಹಿಡಿದು ನಲಿದ ಅನುಭವವು ಅನಿವರ್ಚನೀಯವೇ ಸರಿ! ಅನಂತ ಕಾಲದಲ್ಲಿ, ಅನಂತ ಕ್ಷೇತ್ರದಲ್ಲಿ ನನ್ನ ಬರೋಣವನ್ನೇ ಮರೆತು, ಆನಂದಾನುಭವದ ಮೇಲೆ ಸತತವೂ ತೇಲುತ್ತಿದ್ದವನಂತೆ ಆಗ ನಲಿದೆನು! ನನ್ನ ನರ್ತನ ಕೌಶಲವನ್ನು ಅವಳು ಮೆಚ್ಚಿ, ನಾನು ಇಚ್ಛಿಸಿದ ಪಾರಿತೋಷಕವನ್ನು ಕೊಡುವುದಾಗಿ ತಿಳಿಸಿದಳು. ಆ ಪ್ರಶ್ನೆಗೆ ಸೀದಾ ಉತ್ತರ ಕೊಡುವಷ್ಟರ ಧೈರ್ಯ ನನಗಿರದೆ – “ಬೆಲೆಗೆ ಸಿಗಲಾರದ – ಬೆಲೆ ಕಟ್ಟಲು ಅಸಾಧ್ಯವಾದ – ಅಮೂಲ್ಯ ಬೆಲೆಯುಳ್ಳ – ಒಂದು ವಸ್ತು ಮಾತ್ರ ನನಗೆ ಬೇಕು” ಎಂದಂದೆ. ಈ ಒಗಟನ್ನು ಅರ್ಥ ಮಾಡದೆ, “ಅದು ಏನೆಂದು ತಿಳಿಸು, ಕೊಡುವೆನು” ಎಂದು ಅಭಯವಿತ್ತಳು.

ಅವಳ ಕೋಮಲಕಂಠದಲ್ಲಿ ಅಲಂಕೃತವಾಗಿ ಮೆರೆದಿದ್ದ ಹೂವೇ ಆ ವಸ್ತುವೆಂದು ತಿಳಿಸಿದೆ. ಅವಳು ಅದನ್ನು ಆ ಕೂಡಲೇ ತೆಗೆದುಕೊಟ್ಟಳು. ಅವಳೆದುರೇ ಹೂವನ್ನು ಚುಂಬಿಸಿ, ಲೋಭಿಯು ಬಂಗಾರವನ್ನು ಇಡುವಂತೆ ನನ್ನ ಹೃದಯಕ್ಕೆ ಮುಟ್ಟುವಂತೆ ಅದನ್ನಿಟ್ಟುಕೊಂಡೆ. ಇದನ್ನು ಕಂಡು ಹೂವಿನ ಕುರಿತು ನನಗೆ ಬಹಳ ಶ್ರದ್ಧೆ ಮತ್ತೂ ಪ್ರೇಮವಿರಬೇಕೆಂದು ನಂಬಿ, ಮಿಸ್ ಲಾರ್ಕಿನ್ಸಳು ಸಭೆಯಲ್ಲಿದ್ದ ಮಿ. ಚೆಸ್ಟರ್ ಎಂಬ ಹೂ ತೋಟಗಾರರೊಬ್ಬರ ಪರಿಚಯ ಮಾಡಿಕೊಟ್ಟಳು. ಮಿಸ್ ಲಾರ್ಕಿನ್ಸಳು ಮಿ. ಚೆಸ್ಟರರನ್ನು ಮದುವೆಯಾದ ವರ್ತಮಾನ ಸಿಕ್ಕಿ ಒಂದು ವಾರ ನನಗೆ ಹಸಿವೆಯೇ ಇಲ್ಲ. ಮಿ. ಲಾರ್ಕಿನ್ಸಳ ವಿಯೋಗ ದುಃಖ ಮುಗಿಯುವುದರೊಳಗೆ ಕಟುಕರವನ ಗರ್ವಭಂಗದ ಪ್ರಶ್ನೆ ಬಂತು. ದುಃಖವೇ ಈಗ ಶಕ್ತಿಯಾಗಿ ಪರಿಣಮಿಸಿರಬೇಕು – ಈ ಸರ್ತಿ ನಾನು ಕಟುಕರ ಯುವಕನನ್ನು, ಸೋಲಿಸಿ ಮಲ್ಲಯುದ್ಧದಲ್ಲಿ ಗೆದ್ದೆನು.

(ಮುಂದುವರಿಯಲಿದೆ)