(ಮೊದಲ ಭಾಗ)

ಯಾಂತ್ರಿಕತೆ ಇಲ್ಲದ ವ್ಯಾಯಾಮ ಮತ್ತು ಔಪಚಾರಿಕತೆಗೆ ನಿಲುಕದ ಊರದರ್ಶನಕ್ಕೆ ನಾವು (ದೇವಕಿ ಸಮೇತನಾಗಿ) ಕೆಲವು ಕಾಲ ಸಂಜೆ ನಡಿಗೆಗೆ ತೊಡಗಿದ್ದೆವು. (ನೋಡಿ: ನಡೆದು ನೋಡಿ ಮಂಗಳೂರು ನರಕ) ದಿನಕ್ಕೊಂದು ದಾರಿ, ದಿಕ್ಕು; ಕನಿಷ್ಠ ಒಂದು ಗಂಟೆಯ ಸುತ್ತು. ಮಂಗಳೂರಿನಲ್ಲಿ ವಾಹನ ಸಮ್ಮರ್ದದಿಂದಲೂ ಹೆಚ್ಚು ವಿಷಾದಕರವಾಗಿ ನಗರಾಡಳಿತದಿಂದಲೂ ಸಂಪೂರ್ಣ ತಿರಸ್ಕೃತನಾದವ ಪಾದಚಾರಿ. ಇಲ್ಲದ ಪುಟ್ಟಪಥ ಹುಡುಕುತ್ತಾ ಕೊಳಚೆ ಪಾದ್ಯವನ್ನು ಪಡೆದು, ರಿಕ್ಷಾಕಾರನಿಂದ ಪ್ರಶಸ್ತಿಗಳನ್ನು ಪಡೆದು, ಇನ್ನೂ ದೊಡ್ಡ ವಾಹನಗಳಿಂದ ಅಕ್ಷರಶಃ ಅಭಿಷಿಕ್ತರೇ ಆಗಿ ನಾವು ವಿಭಿನ್ನ ಪಾಡುಪಟ್ಟಿದ್ದೆವು. ಮತ್ತೆ ದೈಹಿಕವಾಗಿ ನನ್ನ ಎತ್ತರಕ್ಕೆ ಒಗ್ಗಿದ ಬೀಸು ನಡೆಗೂ (ನನಗಿಂತ ಆರೇಳಿಂಚು ತಗ್ಗಿನ) ದೇವಕಿಯ ಪಾದಗತಿಗೆ ಹೊಂದಾಣಿಕೆಯೂ ಆಗುತ್ತಿರಲಿಲ್ಲ. ಕಂಬಳ ರಸ್ತೆಯ ಕೇಟರಿಂಗ್ ಮೆನೆಜಿಸರು (ಆನಂದ ಕೇಟರರ್ಸ್) ನಮ್ಮನ್ನು ಎಲ್ಲೆಲ್ಲೋ ಕಂಡು ವೈವಿಧ್ಯಮಯವಾಗಿ ತಮಾಷೆ ಮಾಡಿದ್ದೂ ನೆನಪಾಗುತ್ತದೆ. ನಾನು ಇಪ್ಪತ್ತಡಿ ಮುಂದೆ ಹೋಗುತ್ತಿದ್ದಾಗ “ರಾಯ್ರೇ ಹೆಂಡತಿ ಬಿಟ್ಟೋಡುದಾ?” ದೇವಕಿಯನ್ನು ಮುಂದೆ ಬಿಟ್ಟು ನಾನು ಹಿಂಬಾಲಿಸುವಾಗ “ಓ ಬಚ್ಚಿತಾ? ಪಾಪ” ಎರಡೂ ಬೇಡವೆಂದು ಜತೆಯಲ್ಲೇ ಹೋಗುವಾಗಲೂ “ಅಕೊಳಿ, ಅಮ್ಮ ಓಡ್ತಾ ಇದ್ದಾರೆ, ನಿಧಾನಾ” ಇತ್ಯಾದಿ. (ಅಪ್ಪ, ಮಗ ಸೇರಿ ಹೊತ್ತ ಕತ್ತೆಯದೇ ಕಥೆ!) ಇವೆಲ್ಲಕ್ಕೂ ಪರಿಹಾರವಾಗಿ ದಕ್ಕಿದ್ದು ಜಂಟಿ ಸೈಕಲ್ಲು.

ಜಂಟಿ ಸೈಕಲ್ಲಿಗೆ ವಾಹನದ ಆಯಾಮ ಇದೆ. ನಾವು ಒಂದೇ ವಾಹನದ ಎರಡು ಸವಾರರಾಗಿ ರಸ್ತೆಯ ನುಣುಪಿಗೆ ಅಧಿಕೃತ ಪಾಲುದಾರರೇ ಆಗಿದ್ದೆವು. ಸ್ವಲ್ಪ ದಾರಿಯಲ್ಲಿನ ಇತರ ಮೋಟಾರು ವಾಹನಗಳ ಕರುಣೆಯಲ್ಲೂ (ಒಂಜೆಟ್ ರಡ್ಡ್, ಪೊಂಜೋವು ವೊಚ್ಚುನ ತೂಲಯಾ!) ನಾವು ಇದ್ದೇವೆಂಬ ತಿಳುವಳಿಕೆ ಕಳೆದುಕೊಳ್ಳದೆ ವಿಹರಿಸಿದೆವು. ಆದರೆ ಬೇಗನೆ ಆಸುಪಾಸಿನ ದಾರಿಗಳ ಏಕತಾನತೆ ಮೀರಲು ಹೊಸ ಮತ್ತು ತುಸು ದೂರದ ಜಾಡುಗಳನ್ನು ಆರಿಸಿಕೊಳ್ಳುವುದು ಅವಶ್ಯವಾಯ್ತು. ಆಗೆಲ್ಲಾ ಕರಾವಳಿಗೆ ಸಹಜವಾಗಿ ಒಂದೋ ತುಳಿಯಲಾಗದ (ಗುಡ್ಡದ) ಏರು, ಇಲ್ಲಾ ಬಡಕಲು ಬಿರಿಗೆ (ಬ್ರೇಕು) ತಡೆಯಲಾಗದ (ಪಾತಾಳದ) ತುಯ್ತ. ಏರಿನಲ್ಲೂ `ಇಳಿದು ನೂಕು’, ಇಳಿಜಾರಿನಲ್ಲೂ `ಇಳಿದು ಹಿಡಿ’ ಅನಿವಾರ್ಯವಾಗುತ್ತಿತ್ತು. ಸಾಲದ್ದಕ್ಕೆ ನನಗೆ ಅಲ್ಪಸ್ವಲ್ಪ ಕಾಡಲು ತೊಡಗಿದ್ದ ಸೊಂಟ ನೋವಿಗೂ ಆ ತಗ್ಗಿನ ಸೈಕಲ್ ತುಳಿತವೇ ಕಾರಣ ಎಂದು ಸೈಕಲ್ ಪರಿಣತರು ಹೇಳಿದ ಮೇಲಂತೂ ನನ್ನ ಬೇಡಿಕೆಯ ಪಟ್ಟಿಯೇನೋ ಬಲವಾಯ್ತು. ಚಕ್ರ ಎತ್ತರಿಸಿ, ಗೇರಳವಡಿಸಿ, ಬಿರಿಯನ್ನು ಪರಿಣಾಮಕಾರಿಯಾಗಿಸಿ ಎಂಬಿತ್ಯಾದಿ ನಮ್ಮ ಬೇಡಿಕೆಗೆ ಮೂಲ ಕಂಪೆನಿಯಿಂದ ಸ್ಥಳೀಯ ಕರ್ಮಚಾರಿಯವರೆಗೂ ಸ್ಪಂದನ ಮಾತ್ರ ಶೂನ್ಯ! ಈ ಸಂದಿಗ್ಧದಲ್ಲಿ ನಮ್ಮ ಜೋಡಿ ಕಡಿದರೂ ಉಳಿದೆಲ್ಲ ಕೊರತೆಗಳನ್ನು ನೀಗಿ ಹೆಚ್ಚಿನ ಸಾಧ್ಯತೆಗಳನ್ನು ತೋರಿದ್ದು ನನ್ನ ವಿಶಿಷ್ಟ ಒಂಟಿ ಸೈಕಲ್ಲು.

`ಬೆಂಗಳೂರು – ಮಂಗಳೂರು ಸೈಕಲ್ ಸವಾರಿ’ ಉದ್ಘಾಟನಾ ಯಾನ ನೀವು ಓದಿಯೇ ಇದ್ದೀರಿ. ಅದರ ಬೆನ್ನಿಗೇ ಮಳೆಗಾಲ ತೊಡಗಿದಾಗ ಯಾರೋ `ಶಕುನ’ ಸರಿಯಾಗಲಿಲ್ಲ ಅಂದರು. ಅವರ ಮೌಢ್ಯ ಮುರಿಯಲು ಮತ್ತು ನನ್ನ ವ್ಯಾಯಾಮ ಮುಂದುವರಿಸಲು ಮಳೆ ಬಿಟ್ಟ ಎಡೆಗಳನ್ನು, ನೋಡದುಳಿದ ದಾರಿಗಳನ್ನು ಹುಡುಕಿ ಮತ್ತೆ ಮತ್ತೆ ಚಕ್ರಿಯಾಗುತ್ತಿದ್ದೇನೆ. ದಿನಕ್ಕೆ ಮೂವತ್ತು – ನಲ್ವತ್ತು ಕಿಮೀವರೆಗೂ ಸುತ್ತುತ್ತೇನೆ; ದೂರದ ಮಿತಿ ಜಗ್ಗುವಾಗ ಉದ್ದದ ಹಗ್ಗವಿದ್ದರೂ ಗಾಣಕ್ಕೆ ಕಟ್ಟಿದ ಕೋಣವಾಗಲಿಲ್ಲ ಎಂದು ಸಂತೋಷಿಸುತ್ತೇನೆ. ಈ ಅನುಭವಗಳಲ್ಲಿ ವೈಶಿಷ್ಟ್ಯ ಪೂರ್ಣವಾದವನ್ನು ಅಂದಂದೇ ಸಚಿತ್ರ ಮುಖಪುಸ್ತಕದಲ್ಲಿ ಟಿಪ್ಪಣಿಸಿದೆ, ಈಗ ಸಂಕಲಿಸಿ, ಪರಿಷ್ಕರಿಸಿ, ಪುಷ್ಟೀಕರಿಸಿ ಇಲ್ಲಿ ಬಿತ್ತರಿಸುತ್ತೇನೆ.

ವಿಮಾನ ನಿಲ್ದಾಣದ ಹಿತ್ತಿಲು: ಬಜ್ಪೆ ವಿಮಾನ ನಿಲ್ದಾಣ ವಿಸ್ತೃತಗೊಳ್ಳುವ ಕಾಲಕ್ಕೆ ಹೋಟೆಲ್ ಡೆಕ್ಕನ್ ಅದರ ಬಗಲಿನ ಮುಳ್ಳಾಗಿತ್ತಂತೆ. “ಅದಕ್ಕೀಗ ತೆರವಿನ ಆದೇಶವಾಗಿದೆ” ಎಂದು ಕೇಳಿದಾಗ, ಕುತೂಹಲದ ಪರೀಕ್ಷಕನಾಗಿ ಸೈಕಲ್ಲೇರಿ ಹೊರಟೆ. ಜಂಟಿ ಸೈಕಲ್ಲಿನಲ್ಲಿ ಕದ್ರಿ-ಕಂಬಳ ರಸ್ತೆಗಾಗಿ ಕದ್ರಿಗುಡ್ಡೆ ಏರುವುದೆಂದರೆ ಒಬ್ಬರಿಗೆ ನಡಿಗೆ ಸದಾ ಕಡ್ಡಾಯವಾಗುತ್ತಿತ್ತು. ಬದಲಿಗೆ ಬಿಜೈ ವೃತ್ತದ ಬಳಸು ದಾರಿ ಹಿಡಿದಾಗ ಸೀಮಂತಿನೀಬಾಯಿ (ಬಿಜೈ ಮ್ಯೂಸಿಯಂ) ಗೇಟಿನವರೆಗಾದರೂ ಇಬ್ಬರಿಗೆ ಸಹನೀಯ ಸವಾರಿ ಸಿಕ್ಕುತ್ತಿತ್ತು. ಆಕಾಶವಾಣಿ ವೃತ್ತದವರೆಗೆ ದೇವಕಿ ನಡೆದು ಸಾಗಿದರೆ ನಾನು ಸೀಟಿನಿಂದೆದ್ದು ಪೆಡಲ್ಲುಗಳ ಮೇಲೆ ದಮ್ಮು ಕಟ್ಟಿ ತುಳಿದೇ ಏರಿಸುತ್ತಿದ್ದೆ. ಮತ್ತೆ ಜಂಟಿ ಹೊರಟರೆ – ಪಾಲಿಟೆಕ್ನಿಕ್, ಪದವಿನಂಗಡಿ, ಬೊಂದೇಲ್ ಉದ್ದಕ್ಕೆ ಕಾಂಕ್ರೀಟ್ ಮಾರ್ಗದಲ್ಲಿ ಟಸ್ಪುಸ್ ಮಾಡಿ ಕಾವೂರು ವೃತ್ತಕ್ಕೆ ಮುಕ್ತಾಯ ಹಾಡುತ್ತಿದ್ದೆವು. ಮರಕಡ ಇಳಿಜಾರಿನ ಕಾಂಕ್ರೀಟು, ಮುಂದುವರಿದ ನುಣ್ಣನೆ ಡಾಮರು ಚೆನ್ನಾಗಿಯೇ ಇದ್ದರೂ ಸಣ್ಣ ಅವಧಿಯ (ಹೆಚ್ಚಾಗಿ ಸಂಜೆ ನಾಲ್ಕೂವರೆಯಿಂದ ಆರು ಗಂಟೆಯೊಳಗೆ) ಸವಾರಿಗೆ ವಿಪರೀತ ಎನ್ನಿಸಿಬಿಡುತ್ತಿತ್ತು. ಆದರೀಗ ಗೇರಿನ ಬಲವಂದಿಗನಿಗೆ (ಗೇರು ಹಣ್ಣಿನ ಪರಿಷ್ಕರಣೆಯಲ್ಲಿ ಒದಗುವ ಬಲವಲ್ಲ!) ಕದ್ರಿಗುಡ್ಡೆಯ ದಾರಿ ಸವಾಲೇ ಅಲ್ಲ. ಪಿಂಟೋರವರ ಓಣಿಯಿಂದ ಕಾವೂರು ವೃತ್ತ ಹದಿನೈದೇ ಮಿನಿಟಿನ ದಾರಿ.

ಸುವ್ಯವಸ್ಥಿತ ದಾರಿ ಕಾಂಕ್ರೀಟ್ ಅಥವಾ ನುಣ್ಣನೆ ಡಾಮರಾದರೂ ನನ್ನ ಸೈಕಲ್ಲಿನದೊಂದು ಮಿತಿ ಕಾಡುತ್ತಿತ್ತು. ಎಂಟೀಬಿ ಅಥವಾ ಪರ್ವತಾರೋಹಿ ಸೈಕಲ್ಲಿನ ಟಯರಿನ ವಿಸ್ತೃತ ಗಾತ್ರ ಮತ್ತು ಕಚ್ಚುಗಳು ಕಚ್ಚಾ ರಸ್ತೆಗೆ ಹೇಳಿ ಮಾಡಿಸಿದವು. ಅದು ಒಳ್ಳೇ ದಾರಿಯಲ್ಲಿ ಅಗತ್ಯ ಮೀರಿದ ಘರ್ಷಣೆಯುಂಟು ಮಾಡುತ್ತಿತ್ತು. ಇದು ಒಟ್ಟಾರೆ ಗತಿಯನ್ನು ನಿಧಾನಿಸುವುದರೊಡನೆ ವೇಗೋತ್ಕರ್ಷವಾಗುತ್ತಿದ್ದಂತೆ ದೊಡ್ಡ ವಾಹನಗಳ ಹಾಗೇ ರೊಂಯ್ ರೊಂಯ್ ಸದ್ದೂ ನನಗೆ ಅನಾವಶ್ಯಕ ಅದುರಾಟದ ಗುದ್ದೂ ತಿನಿಸುತ್ತಿತ್ತು. ಸೂತ್ರ ರೂಪದಲ್ಲಿ ಹೇಳುವುದಾದರೆ – ಕಚ್ಚಾ ರಸ್ತೆಯ ದೃಢ ಸವಾರಿಯಲ್ಲಿ ನಾನು ಮುಂದು, ನಯದಾರಿಯಲ್ಲಿ ಸಪುರ ಟಯರಿನ ಸವಾರನೊಡನೆ (ರೋಡೀ) ಸ್ಪರ್ಧೆಗಿಳಿದರೆ ನಿಸ್ಸಂದೇಹವಾಗಿ ಹಿಂದು

ಕಾವೂರು-ಮರಕಡ ದಾರಿಯಿಳಿಯುವುದು ಮರವೂರು ಬಯಲಿಗೆ. ಇದನ್ನೇ ಕೆಳದಂಡೆಯಲ್ಲಿ `ಕೂಳೂರಿ’ನೊಡನೆ ಮೇಲ್ದಂಡೆಯಲ್ಲಿ `ಗುರುಪುರ’ದೊಡನೆ ಸಂಬಂಧ ಬೆಳೆಸುವುದರಲ್ಲೇ ಖ್ಯಾತವಾದ ಫಲ್ಗುಣಿ ನದಿಯ ಕಣಿವೆ ಎಂದೂ ಕಾಣಬಹುದು. ಜಿಲ್ಲೆಯೊಳಗೆ ನಾನು ಕಂಡಂತೆ, ಉಪ್ಪಿನಂಗಡಿ ಮತ್ತು ಪಾಣೆಮಂಗಳೂರಲ್ಲಿ ನೇತ್ರಾವತಿ ನದಿಯ ಮೇಲಿದ್ದಂತೆ, ಗುರುಪುರವಾದ ಮೇಲೆ ಇಲ್ಲೂ ಇತ್ತೊಂದು ಬ್ರಿಟಿಷ್ ಕಾಲದ ಕಬ್ಬಿಣದ ತೊಲೆಗಳ ಮುಂಡಾಸು ಹೊತ್ತ ಸೇತುವೆ. ಆದರೆ ವಿಮಾನ ನಿಲ್ದಾಣದ ಆದ್ಯತೆಯಲ್ಲಿ ಇಲ್ಲಿ ಹಳತನ್ನು ಕಳಚಿ, ಆಧುನಿಕ ಸೇತುವೆಯೂ ತುಸು ಮೇಲ್ದಂಡೆಯಲ್ಲಿ `ಅಭಿವೃದ್ಧಿ ನೀರಾವರಿಗೆ’ ಅಣೆಕಟ್ಟೂ (ಮರವೂರು) ಬಂದು ಕುಳಿತು ಕೆಲವು ಕಾಲವಾಗಿದೆ. ಸೇತುವೆ ಕಳೆದು ಎದುರು ದಂಡೆ ಸೇರಿದ್ದೇ ಸೈಕಲ್ಲಿನ ಸೌಕರ್ಯ (ಎಂಟೀಬಿ) ಮತ್ತು ಗುರಿಯಿಲ್ಲದ ಅಲೆದಾಟದ (ಸರ್ಕೀಟು) ಸ್ವಾತಂತ್ರ್ಯಕ್ಕೆ ಕುತೂಹಲದ ಚೂಪು ಕೊಟ್ಟು ಹೊಳೆಯಂಚಿನ ಕಚ್ಚಾ ದಾರಿಗೆ ಹೊರಳಿಕೊಂಡೆ. ಅಲ್ಲಿನ ಕಿತ್ತ ಜಲ್ಲಿ, ಹುಗಿವ ದೂಳು ಮತ್ತು ಅಡಗಿ ಕುಳಿತು ಗುದ್ದುವ ಗುಂಡುಗಳೆಡೆಯಲ್ಲಿ ಉರುಡುತ್ತ ಇಳಿವಾಗಲೂ ಮರಳುವಾಗಲೂ ಸೈಕಲ್ ಇದಕ್ಕೆ ಹೇಳಿ ಮಾಡಿಸಿದ್ದು ಎಂಬ ಹೆಮ್ಮೆಯೇನೋ ನನಗಿತ್ತು.

ಸಂಶಯ ಇದ್ದದ್ದು ಅದರ ಮೇಲೆ ಕುಳಿತು ನಿಭಾಯಿಸಲು ನಾನೆಷ್ಟು ಸಮರ್ಥಾಂತ ನಂಬಿದರೆ ನಂಬಿ, ಎಲ್ಲೂ ಪಾದವನ್ನು ನೆಲಕ್ಕೆ ಸೋಂಕಿಸದೆ ಅಣೆಕಟ್ಟೆಗೆ ಹೋಗಿ, ಅದರ ಮೇಲೂ ಸವಾರಿ ಹೂಡಿ ಆಚೆ ದಂಡೆ ಈಚೆ ದಂಡೆ ಮಾಡಿ, ನಿರಾಯಾಸವಾಗಿ ಮರಳಿದೆ. (ಮಳೆ ಬಂದ ಮೇಲೆ ಮಣ್ಣ ದಾರಿಗೆ ಕಂಬಳದ ಕೋಣವನ್ನೂ ಮರವೂರ ಕಟ್ಟೆಗೆ ಓಡವನ್ನೂ ಹುಡುಕುತ್ತಾ ಇದ್ದೇನೆ!)

ಇಂದು ಮರವೂರ ಬಯಲಿಗೂ ಬಜ್ಪೆ ಗುಡ್ಡಕ್ಕೂ ಗಡಿರೇಖೆಯಂತೆ ರೈಲ್ವೇ ಮೇಲ್ಸೇತುವೆ ಸಿಕ್ಕುತ್ತದೆ. ಅದು ಕಳೆದದ್ದೇ ಬಲಕ್ಕೊಂದು ಭಾರೀ ಕಡಿದಾದ ಡಾಮರು ದಾರಿ. ಹಿಂದೆ ಇದು ಕಚ್ಚಾ ಮಣ್ಣದಾರಿಯಾಗಿದ್ದಂದೇ ಯಾವುದೋ ಮೋಟಾರ್‍ ರ್‍ಯಾಲಿಯನ್ನನುಸರಿಸಿಕೊಂಡು ಬಜ್ಪೆ ಸೇರಿದ್ದು ನೆನಪಾಯ್ತು. (ತುಸು ಮೇಲೆ ಅದರ ಬಲಕವಲು ಆದ್ಯಪಾಡಿಗೆ ಹೋಗುತ್ತದಂತೆ) ಹೆಚ್ಚು ವಿಚಾರ ಮಾಡದೇ ಸೈಕಲ್ ಅತ್ತ ತಿರುಗಿಸಿದೆ. ಮೊದಲ ಸುಮಾರು ನೂರಿನ್ನೂರು ಮೀಟರ್ ಅಡ್ಡಿಯಿಲ್ಲ, ಮತ್ತೆ ಡಾಮರ್ ಒಂದಲ್ಲದಿದ್ದರೆ ನೇರ ಗುಡ್ಡ ಏರುವುದಕ್ಕೇನೂ ಕಡಿಮೆಯಾಗದ ಚಡಾವು ಅದು! ನನ್ನನ್ನು ಹಿಂದಿಕ್ಕಿದ ಮೊಟಾರ್ ಸೈಕಲ್ಲೊಂದು ಸೇಂಕುತ್ತ ಎರಡರಿಂದ ಒಂದನೇ ಗೇರಿಗಿಳಿದಿತ್ತು. ಅಂಥಲ್ಲೂ ನನಗೆ ಸೈಕಲ್ಲನ್ನು ಒಂದು ಗುಣಿಸು ಒಂದು ಗೇರು ಹಾಕಿ, ಸೀಟಿನಲ್ಲಿ ಕುಳಿತಂತೇ ಏರಿಸಲು ಸಾಧ್ಯವಾದದ್ದು ನಿಜಕ್ಕೂ ಸ್ಮರಣೀಯ. ಬೆವರ ಸೆಲೆ ಇನ್ನಿಲ್ಲದಂತೆ ಉಕ್ಕಿ, ಏದುಸಿರು ಪರಾಕಾಷ್ಠೆ ಮುಟ್ಟುವಷ್ಟರಲ್ಲೇ ವಿಶ್ರಮಿಸಲು ಒಳ್ಳೇ ನೆಪ ಕಾಣಿಸಿತು!

ಏರು ದಾರಿಯ ಕೊನೆಯೆಂಬಂತೆ ಗುಡ್ಡದ ನೆತ್ತಿಯ ಭಗ್ನ `ಅರಮನೆ’, ಅಂದರೆ ಹೋಟೆಲ್ ಡೆಕ್ಕನ್ನಿನ ಕಟ್ಟಡ ಕಾಣಿಸುತ್ತಿತ್ತು. ಅಲ್ಲಿಗೆ ಸಾಂಪ್ರದಾಯಿಕವಾಗಿದ್ದ ಡಾಮರು ದಾರಿಯನ್ನು ಈಗ ಪರಿಷ್ಕೃತ ತಂತ್ರಜ್ಞಾನದ ಅಳವಡಿಕೆಯೊಡನೆ ಅಗಲವೂ ಸುಲಭ ಏರುಕೋನದ್ದೂ ಆಗುವಂತೆ ಮಾಡುತ್ತಿದ್ದರು. ಯಂತ್ರ ಸಾಧನೆಯ ಬೆರಗನ್ನು ನನ್ನ ಕ್ಯಾಮರಾ ತುಂಬಿಕೊಂಡು ಮುಗಿಸಿದೆ. ಆದರೆ ಅಲ್ಲೇ ತಲೆಗೆ ನುಗ್ಗಿದ `ಹುಳು’ ಇಂದೂ ಬಿಟ್ಟಿಲ್ಲ. ಪ್ರಾಕೃತಿಕ ಅಗಾಧತೆಯ ಮೇಲೆ ಯಂತ್ರ-ಸೊಕ್ಕಿನಲ್ಲಿ ನಾವು ಮಾಡುತ್ತಿರುವ ಗಾಯಗಳು ಸಣ್ಣವೇ ಕಾಣಬಹುದು. ಆದರೆ ಪಿಲಿಕುಳದಲ್ಲಿ ಅಗಾಧ ನೀರು ನಿಂತದ್ದಕ್ಕೇ ಕೆತ್ತಿಕಲ್ಲಿನಲ್ಲಿ ಭೂ ಕುಸಿಯಿತಲ್ಲವೇ? ನೆರಿಯದಲ್ಲಿ ಕೊಳವೆಸಾಲಿನ ಕಾಮಗಾರಿಯ ಪಶ್ಚಾತ್ ಗುಡ್ಡಕ್ಕೆ ಗುಡ್ಡವೇ ಜಾರ ತೊಡಗಿದ್ದಲ್ಲವೇ? ಎಲ್ಲಕೂ ಮಿಗಿಲಾಗಿ ಹಿಮಾಲಯದ ಇಪ್ಪತ್ಮೂರು ಕಿರು-ಅಣೆಕಟ್ಟುಗಳ ಒಡೆತಕ್ಕೆ ತಾನೇ ಕೇದಾರದ ದುರಂತ ಸಂಭವಿಸಿದ್ದು? ಇವೆಲ್ಲಾ ನೆನೆಸುವಾಗ ವಿಮಾನ ನಿಲ್ದಾಣದ ಬಾಳ್ತನದ ಬಗ್ಗೆಯೇ ಆತಂಕ ಒಂದೇ ಉಳಿದಿದೆ; ತಪ್ಪೇ?

ಡೆಕ್ಕನ್ ರಿಸಾರ್ಟಿನ ಚಟುವಟಿಕೆಗಳು ಮುಚ್ಚಿ ಹೋಗಿ ಕೆಲವು ವರ್ಷಗಳೇ ಸಂದಂತೆ ಕಟ್ಟಡಗಳು ಹಾಳು ಸುರಿದಿದ್ದವು. ಅದರ ಮುಂಬಾಗಿಲೂ ವಿಮಾನ ನಿಲ್ದಾಣದ ಹಿತ್ತಲಿನ ಬಾಗಿಲೂ ಎದುರುಬದಿರಾಗಿರುವ ಸ್ಥಿತಿ ಮಾತ್ರ ನಿಜಕ್ಕೂ ಅನಪೇಕ್ಷಣೀಯವಾಗಿಯೇ ಇತ್ತು. ನಿಲ್ದಾಣದ ಆ ಗೇಟು ಆಡಳಿತ ವ್ಯವಸ್ಥೆಯ ತೀರಾ ಕನಿಷ್ಠ ಓಡಾಟಕ್ಕೆ ಮಾತ್ರ ಮೀಸಲಿರುವಂತೆ ಬಂದಾಗಿತ್ತು, ಒಳಗಿನಿಂದ ಬೀಗ ಮುದ್ರೆಯೂ ಇದ್ದರೆ ಆಶ್ಚರ್ಯವಿಲ್ಲ. ನಾನು ನಿಲ್ದಾಣದ ಪೌಳಿಯ ಗುಂಟ ಸುತ್ತು ಹಾಕುವ ಕಚ್ಚಾ ರಸ್ತೆಯಲ್ಲಿ ಮುಂದುವರಿದು ನಿಲ್ದಾಣದ ಮುಂದಿನಂಗಳವನ್ನೇ ಸೇರಿದೆ. ನಾನನುಸರಿಸಿದ ದಾರಿಯ ದುರ್ಗಮತೆಗೆ ಪುರಸ್ಕಾರವೆಂಬಂತೆ ಆ ದಿಕ್ಕಿನಲ್ಲಿ ಒಂದು ಕಾವಲುಗಾರ, ಕನಿಷ್ಠ ಒಂದು ಗೇಟೂ ಇರಲಿಲ್ಲ. ನಾನು ಮರಳುವ ದಾರಿಯಲ್ಲಿ ಮುಖ್ಯ ಗೇಟು ಮತ್ತು ದಾರಿಯನ್ನೇ ಬಳಸಿದರೂ ಸೈಕಲ್ ಅಥವಾ ವ್ಯಕ್ತಿಗಳ ಸಂಚಾರಕ್ಕಲ್ಲಿ ಯಾವುದೇ ಲೆಕ್ಕ ಅಥವಾ ನಿರ್ಬಂಧವಿಲ್ಲವಾದ್ದರಿಂದ ನಿಶ್ಚಿಂತನಾದೆ. ನಾಲ್ಕೈದು ಹಿಮ್ಮುರಿ ತಿರುವುಗಳ ಭಾರೀ ಇಳುಕಲಿನಲ್ಲಿ, “ಅಪಾರ ಕೀರ್ತಿ…” ಸಿನಿಸೀಟೀ (ಸೀಟಿಗಾಗಿ ಚಿಟಿಕೆ ಹೊಡೆಯಿರಿ) ಹೊಡ್ಕೊಂಡು ಮತ್ತೆ ಮರವೂರು, ಕೊನೆಯಲ್ಲಿ ಮನೆ ಸೇರಿಕೊಂಡೆ.

ನೆನಪಿನೋಣಿಯಲ್ಲಿ ಕಿನ್ಯಕ್ಕೊಂದು ಓಟ

ಎರಡು ಸಂಜೆ ಯಕ್ಷಗಾನದ ಮೋಹದಲ್ಲಿ ಜಡವಾದ ಸಿಟ್ಟಿಗೆ ಆ ದಿನ ಬೆಳಿಗ್ಗೆಯೇ ಸೈಕಲ್ಲೇರಿದ್ದೆ. ಪಂಪ್ವೆಲ್, ತೊಕ್ಕೊಟ್ಟು – ಸಮತಟ್ಟಿನ ಓಟ, ಏಕತಾನತೆಯ ತುಳಿತ ರೇಗಿಸಿತು. ಎಡ ತಿರುಗಿ ಕುತ್ತಾರು, ದೇರಳ ಕಟ್ಟೆಗಳನ್ನು ಕಳೆದದ್ದೂ ಆಯ್ತು. ಇನ್ನೇನು ಸೀದಾ ನಾಟೇಕಲ್ಲು, ಮಂಜನಾಡಿಗಾಗಿ ನಮ್ಮದೇ ಅಭಯಾರಣ್ಯಕ್ಕೆ ಹೋಗಿ ಬಂದರಾಯ್ತು ಎಂದು ಕೊಳ್ಳುವಾಗ ತಲೆಯೊಳಗೆ ಅಪರಾಧೀ ಪ್ರಜ್ಞೆ ಜಾಗೃತವಾಯ್ತು. ಅಲ್ಲಿನ ಹೆಚ್ಚಿನೆಲ್ಲ ಚಟುವಟಿಕೆಗಳನ್ನು ನಾನೂ ದೇವಕಿಯೂ ಸೇರಿಯೇ ಮಾಡುತ್ತಿದ್ದೆವು. ಈ ಬೇಸಗೆಯಿಡೀ ಏನೇನೋ ನೆಪ ಕಾಡಿ ಅತ್ತ ಹೋಗಿಯೇ ಇರಲಿಲ್ಲ. ಈಗ ಒಮ್ಮೆಲೇ ನಾನು ಒಂಟಿಯಾಗಿ ಅಲ್ಲಿಗೆ ಹೋಗುವುದು ಸರಿಯಾದೀತೇ? ಇಲ್ಲ, ಎಂದುಕೊಳ್ಳುವಾಗಲೇ ನಾಟೇಕಲ್ಲಿನಲ್ಲಿ ಬಲ ದಾರಿಗೆ ತಿರುಗಿಬಿಟ್ಟಿದ್ದೆ. ಆದರೆ ಐವತ್ತೇ ಮೀಟರಿನಲ್ಲಿ ಮರು ಯೋಚನೆಯಿಲ್ಲದೆ ಮತ್ತೆ ಬಲದ ಕವಲು ದಾರಿ ಹಿಡಿದು ಕಿನ್ಯದತ್ತ ಚಕ್ರ ಉರುಳಿಸಿದೆ. ಇಲ್ಲಿನ ವಿಶೇಷ ನಿಮಗರ್ಥವಾಗಬೇಕಾದರೆ ಕಾಲಕೋಶದಲ್ಲಿ ತುಸು ಹಿಂದಕ್ಕೆ ಬನ್ನಿ.

೧೯೭೬-೭೭ರ ಸುಮಾರಿಗೆ ನನ್ನ ರಜಾದಿನದ ಬೆಟ್ಟವೇರುವ ಹುಚ್ಚಿಗೆ ತಂಡ ಕಟ್ಟುತ್ತಿದ್ದೆ. ಬೌದ್ಧಿಕ ಹಾಗೂ ದೈಹಿಕ ಅನೇಕ ಸಾಹಸಗಳ ಇಡ್ಯ ವಿಠಲ ರಾಯರು ತನ್ನ ಇನ್ನೂ ಪ್ರೌಢಶಾಲಾ ಮಟ್ಟದ ಎರಡು ಗಂಡು ಮಕ್ಕಳನ್ನು ತಂದು ನನಗೊಪ್ಪಿಸಿದ್ದರು. ಹಾಗೆ ಸೇರ್ಪಡೆಗೊಂಡ ಸಮೀರ ಹಾಗೂ ಶೌರಿ ನನ್ನ ಅನೇಕ ತಂಡಗಳ ಬಹು ಕ್ರಿಯಾಶೀಲ ಸದಸ್ಯರಾದ ಕತೆ ನನ್ನ ಜಾಲಲೇಖನಗಳಲ್ಲಿ ನೀವೆಲ್ಲಾ ಓದಿಯೇ ಇರುತ್ತೀರಿ. ಹಾಗೆ ಆ ಕುಟುಂಬದಲ್ಲಿದ್ದ `ಬೆಟ್ಟದ ಸೀಕು’ (ಕಾಯಿಲೆ) ಈಗ ಮೂರನೇ ತಲೆಮಾರಿಗೆ ವ್ಯಾಪಿಸಿದೆ. ಮೊನ್ನೆ ಮೊನ್ನೆ ಅಂದರೆ, ಮಳೆಯಜ್ಜ ಇನ್ನೂ ಕೇರಳದಲ್ಲಿ ಕುಟ್ಟಾಣಿಯಾಡಿಸುತ್ತಿದ್ದಾಗಲೇ ಸಮೀರನ ಹೆಂಡತಿ – ಲಲಿತ, ತನ್ನ ಮಗನೇ (ಇಂಜಿನೀರು) ಸಂಘಟಿಸಿದ ತರುಣರ ತಂಡದಲ್ಲಿ ನಿರ್ಯೋಚನೆಯಿಂದ ಸೇರಿಕೊಂಡು ಕುಮಾರಪರ್ವತ ಏರಿ ಬಂದಿದ್ದಾರೆ. ದೂರವಾಣಿಯಲ್ಲಿ ಆಕೆಯ ಕುಮಾರ ವಿಜಯದ ಕತೆ ಹೇಳುವ ಸಂಭ್ರಮ ಯಾವುದೇ ಟೀವೀ ಮೆಗಾ ಸೀರಿಯಲ್ಲುಗಳನ್ನೂ ಸೋಲಿಸುವಷ್ಟಿತ್ತು!

ಈಗ ಮುಖತಃ ಕಂಡೂ ಇನ್ನೊಮ್ಮೆ `ಕೊರೆಸಿಕೊಳ್ಳೋಣ’ ಎಂದು ಅವರ ತೋಟದ ಮನೆಗೇ ಹೋದೆ. ವಿಠಲರಾಯರಾದಿ ಇಡೀ ಕುಟುಂಬ ಕಂಡು, ಕೇಳಿದ್ದಕ್ಕಿಂತಲೂ ಹೆಚ್ಚಿಗೆ ಸಂತೋಷಿಸಿದೆ. ಅವರು ಟೀ, ಕಾಫಿ, ಮಧ್ಯಾಹ್ನದೂಟ ಎಂದು ಹೊಳಹು ಹಾಕುವುದರೊಳಗೆ ನನ್ನ ಸವಾರಿ `ಬಂಧು ಭೇಟಿ’ಯ ಪ್ರಹಸನವಾಗದ ಎಚ್ಚರದಲ್ಲಿ ಮತ್ತೆ ಪೆಡಲೇರಿದೆ. ಆದಷ್ಟು ಹೋದ ದಾರಿಯಲ್ಲೇ ಮರಳಬಾರದೆಂಬ ಯೋಚನೆಗೆ ಸರಿಯಾಗಿ ಕೆಸಿರೋಡಿಗೆ (ಕಾಸರಗೋಡಿಗೋಡುವ ಹೆದ್ದಾರಿಯಲ್ಲಿ ಹೆಸರಾಂತ ಕಿನ್ಯ ಕ್ರಾಸ್ ರೋಡ್) ಮುಂದುವರಿದು ಮತ್ತೆ ಹೆದ್ದಾರಿಯಲ್ಲಿ ಕೋಟೆಕಾರು, ತೊಕ್ಕೋಟು ಎಂದು ಇಳಿಯೆಣಿಕೆ ಮಾಡುತ್ತಾ ಮನೆ ಸೇರಿದೆ.

ಬೋರುಗುಡ್ಡೆಗೆ ಅಮೃತ ಸ್ಪರ್ಷ!

`ಮಂಗಳೂರಿನೊಳಗಿನ ಗಿರಿಧಾಮ – ಬೋರುಗುಡ್ಡೆ’, ಅಂದು ದಿನ ಪತ್ರಿಕೆಯಲ್ಲಿ ಕಂಡಾಗ ನನ್ನ ಹುಬ್ಬು ಹಾರಿತ್ತು. ಸರಿ ಸಂಜೆಯ ಸೈಕಲ್ ಸುತ್ತಿಗೆ ಪತ್ರಿಕೆಯ ಮಾರ್ಗಸೂಚಿ ನೆನಪಿಟ್ಟುಕೊಂಡು – ಕದ್ರಿ, ನಂತೂರಾಗಿ ಕುಲಶೇಖರವನ್ನು ಹತ್ತು ಮಿನಿಟಲ್ಲೇ ತಲುಪಿದೆ. ಆದರೆ ಅಲ್ಲಿನ ರಿಕ್ಷಾ ಚಾಲಕರಿಗೂ ತಮ್ಮ ನೆಲದ `ಗಿರಿಧಾಮ’ದ ಅರಿವು ಇದ್ದಂತಿರಲಿಲ್ಲ. ಅಂದಾಜು ಹಿಡಿದುಕೊಂಡು ನಾನೇ ಇಗರ್ಜಿಯ ಇಳಿಜಾರು ಕಳೆದು, ಬಲದ – ಸಿಲ್ವರ್ ಗೇಟ್, ದಾರಿ ಹಿಡಿದೆ. ಉಮ್ಮಪ್ಪಾ ಉಸ್ಸಪ್ಪಾ ಎಂದು ಒಂದು ಗುಡ್ಡೆ ಹತ್ತಿಸಿದ ದಾರಿ ಮತ್ತೆ ಅಷ್ಟೇ ವೇಗದಲ್ಲಿ ಆಚೆಗಿಳಿಸಿ ಇನ್ನೊಂದೇ ಗುಡ್ಡೆ ಕಾಣಿಸಿತು. ಅದನ್ನೇರುವ ಮೊದಲೇ ನನ್ನ ಪ್ರಾಚೀನ ಗೆಳೆಯ ಜಯಂತರ (ಏಗ್ನೆಸ್ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ) ಮನೆ ಅಲ್ಲೇ ಎಡಕ್ಕಿದ್ದದ್ದು ನೆನಪಿಗೆ ಬಂತು. ಜಯಂತರು ಮನೆಯಲ್ಲಿರಲಿಲ್ಲ. ಆದರೆ ಅಲ್ಲಿದ್ದ ಅವರ ಹೆಂಡತಿ – ನವರತ್ನ, ಇನ್ನೂ ಮುಖ್ಯವಾಗಿ ಕೊನೆ ಮಗಳು – ಅಮೃತ (ಪ್ರಥಮ ಪದವಿಪೂರ್ವ ಕಾಲೇಜು ವಿದ್ಯಾರ್ಥಿ) ನನಗೆ ಮಾರ್ಗದರ್ಶಿಸಲು ಬಹಳ ಉತ್ಸಾಹ ತೋರಿದರು. ಆದರೆ ಅವರಲ್ಲಿನ ಎರಡು ಸೈಕಲ್ಲಾಗಲೀ ಅವಕ್ಕೆ ಗಾಳಿ ತುಂಬಲೆಂದೇ ಇದ್ದ ಪಂಪಾಗಲೀ ಸಹಕಾರ ಕೊಡಲೇ ಇಲ್ಲ.

ಅಮೃತ ಸೋಲಲಿಲ್ಲ – ನಾನೆಷ್ಟು ಬೇಡವೆಂದರೂ ಜಗ್ಗದೇ ಜತೆಗೆ ಓಡುತ್ತಲೇ ಬಂದಳು. ಮತ್ತೆ ಪಾತಾಳಕ್ಕಿಳಿದು, ಯಾರದೋ ಮನೆಯಂಗಳದಲ್ಲಿ ಹುಡುಕಾಡಿ, ಒತ್ತಿನ ಸಪುರ ಗಲ್ಲಿಯಲ್ಲಿ ನುಸಿದು, ಅಡ್ಡ ಮಣ್ಣ ದಾರಿ ಕಳೆದು, ನಾವು ಎಲ್ಲೂ ಅಲ್ಲವೆಂದು ನಿಂತ ಜಾಗವೇ ಬೋರುಗುಡ್ಡ; ಶುದ್ಧ ಬೋರು! ಈ ವಲಯದ ಯಾವುದೇ ಪದವು, ಮಳೆಗಾಲದ ಉಪಚಾರದೊಡನೆ ತುಸು ಪ್ರಾಕೃತಿಕ ಚೇತರಿಕೆಗೆ ಬಿಟ್ಟರೆ ಕಾಣುವಂತದ್ದೇ ದೃಶ್ಯ. ದೂರದಲ್ಲಿ ಪುತ್ತೂರಿನತ್ತ ಹೋಗುವ ಹೆದ್ದಾರಿ, ಆಚೆಗೆ ನೇತ್ರಾವತಿ. ಎಲ್ಲೆಲ್ಲೂ ಮೆರೆವ ಕುರುಚಲ ಕಾಡು ಮಳೆಯಲ್ಲಿ ಮುಖ ತೊಳೆದು, ಮೋಡಮಾಲೆಯನ್ನು ಮುಡಿದು, ಅಲ್ಲಿಲ್ಲಿ ಮೊಳೆತ ಸಾಮಾನ್ಯ ವಸತಿ ಸೌಕರ್ಯಗಳಿಗೂ ತತ್ಕಾಲೀನ ರಮ್ಯತೆಯನ್ನು ಕೊಟ್ಟಿತ್ತು. ಪತ್ರಿಕೆ `ಐಟಂ’ ಮಾಡಿತೆಂದು ಅಲ್ಲಿ ನಂದನವನದ ತುಣುಕೇನೂ ಕಡಿದು ಬಿದ್ದಿರಲಿಲ್ಲ ಎಂಬಷ್ಟಕ್ಕೆ ಸೋತಿದ್ದೆ. ಆದರೆ ನನ್ನ ತಿರುಗೂಳಿ ಉತ್ಸಾಹಕ್ಕೆ, ಪೂರಕವಾಗಿ ಒದಗಿದ ಅಮೃತಸ್ಪರ್ಷಕ್ಕೆ ಅಂದಿನ ಸೈಕಲ್ ಸರ್ಕೀಟ್ ಸಾರ್ಥಕವಾಗಿತ್ತು!

ಹಾರುವ ಕನಸಿನ ಪದವು

ಮೂಡಬಿದ್ರೆ ದಾರಿಯಲ್ಲಿ ಕುಲಶೇಖರ, ಮಂಗಳೂರು ಡೈರಿ ಕಳೆದಮೇಲೆ, ಕುಡುಪು ಸಮೀಪಿಸುವ ಮೊದಲೇ ಬಲಕ್ಕಿರುವ ಕವಲು ನೀರುಮಾರ್ಗಕ್ಕೊಯ್ಯುತ್ತದೆ. ಮಂಗಳೂರಿನ ಪರಿಚಯವಿಲ್ಲದವರು “ಇದೇನಪ್ಪಾ ಜಲಬಟ್ಟೆಯಲ್ಲಿ ಸೈಕಲ್ ಸವಾರಿ?” ಎಂದು ನಿಮ್ಮ ವಿಚಾರಪಥ ಭಿನ್ನವಾಗುವುರೊಳಗೆ ಹೇಳಿಬಿಡ್ತೇನೆ – ನೀರುಮಾರ್ಗವೂ ತಣ್ಣೀರುಬಾವಿ, ಮಣ್ಣಗುಡ್ಡೆ, ಶೇಡಿಗುಡ್ಡೆ, ಹುಲಿಕೊಳ, ಎಮ್ಮೆಕೆರೆ ಮುಂತಾದವುಗಳಂತೆ ಸ್ಥಳನಾಮ ಮಾತ್ರ. ವಾಸ್ತವವಾಗಿ ಇದು ಉತ್ತರ ತಪ್ಪಲಿನಲ್ಲಿ ಫಲ್ಗುಣಿಯನ್ನೂ ದಕ್ಷಿಣ ತಪ್ಪಲಿನಲ್ಲಿ ನೇತ್ರಾವತಿಯನ್ನೂ ಬೇರ್ಪಡಿಸಿರುವ ಗುಡ್ಡಸಾಲು. ಹಿಂದೆ ನಾವು ತೇಲುರೆಕ್ಕೆ ಕಟ್ಟಿಕೊಂಡು ಗಗನಗಮನದ ಕನಸು ಕಾಣುತ್ತಿದ್ದಾಗ ಈ ದಾರಿಯ ತಾರ್ಕಿಕ ಕೊನೆ, ಅಂದರೆ ಬೆಂಜನಪದವನ್ನೇ ಆರಿಸಿಕೊಂಡಿದ್ದೆವು. ಸೈಕಲ್ ಸರ್ಕೀಟಿನ ಒಂದು ಸಂಜೆ ನಾನು ಇದರಲ್ಲೇ ಮುಂದುವರಿದೆ.

ನಾಲ್ಕೈದು ಕಿಮೀಗೆ ನೀರುಮಾರ್ಗ ಪೇಟೆ ಸಿಕ್ಕಿತು. ಮುಂದೆ ಮಳೆರಾಯರು ನನಗೆ ಹತ್ತು ಮಿನಿಟಿನ ವಿಶ್ರಾಂತಿ ಕಡ್ಡಾಯ ಮಾಡಿದರು. ನನ್ನಲ್ಲಿ ಸೈಕಲ್ ಸವಾರಿಗೆ ಹೊಂದುವ ರಾಣೀಕೋಟು (ರೈನ್ ಕೋಟ್!) ಇರಲಿಲ್ಲ. ಒಳ್ಳೇ ಕತೆಯ ನಡುವೆ ಜಾಹೀರಾತು ಬಿಡುವಿನಂತೆ ಮತ್ತೆ ಮಳೆ ಕಾಡುವ ಸಂಭವ ಹೆಚ್ಚಾದ್ದರಿಂದ ಬೆಂಜನಪದವು ಬಿಟ್ಟು ವಿದ್ಯುತ್ ಸರಿಗೆ ಎಳೆಯುತ್ತಿದ್ದ ಒಬ್ಬ ತರುಣನಲ್ಲಿ ಒಳದಾರಿ ವಿಚಾರಿಸಿದೆ. ಅಷ್ಟರಲ್ಲೇ ಎರಡು ಸಲ ಪಾತಾಳಕ್ಕಿಳಿದು, ನಭಕ್ಕೇರಿ ಸೈಕಲ್ ಹೊಡೆದ ಸುಸ್ತು ನನ್ನ ಮುಖದ ಮೇಲೆ ಕಾಣುತ್ತಿತ್ತೋ ಏನೋ. ಆತ `ಅಜ್ಜ’ನ ಮೇಲೆ ಕರುಣೆದೋರಿ ಮೇರ್ಲ ಪದವಿಗಾಗಿ ವಳಚ್ಚಿಲ್ ಉತ್ತಮವೆಂದ. ಸಾಲದ್ದಕ್ಕೆ “ಮತ್ತೆ ಆಚೆ ನೂರಡಿ ಕೊಳ್ಳಕ್ಕೆ ಹಾರಿಕೊಂಡರೆ ಪುತ್ತೂರು ದಾರಿ” ಎಂದೂ ಸಮಾಧಾನಿಸಿದ!

ನನ್ನ ಹಾರುವ ಕನಸಿನ ಕಾಲದಲ್ಲಿ ಪುತ್ತೂರು ದಾರಿ ಬದಿಯಿಂದ ಶರತ್ ಮಾರ್ಗದರ್ಶನದಲ್ಲಿ ನಾವು ಈ ಮೇರ್ಲಪದವಿಗೂ ಬಂದಿದ್ದ ನೆನಪು ನನಗಾಯ್ತು. ಆಗ ಅದು ಹಾಸು ಮುರಕಲ್ಲು, ಕಣ್ಕಟ್ಟಿಗೆ ಚಿನ್ನದಂಥ ಮುಳಿ ಹಾಸು ಮಾತ್ರವಿದ್ದ, `ದೇವರಿಗೂ ಬೇಡ’ದ (ಗಾಡ್ ಫರ್ಸೇಕನ್ ಅಂತಾರಲ್ಲ ಹಾಗೆ. ಒಂದರ್ಥದಲ್ಲಿ ನಿಜವೂ – ಮನುಷ್ಯನಿಲ್ಲದಿದ್ದಲ್ಲಿ ದೇವರೆಲ್ಲಿ?!) ಗುಡ್ಡ. ಶರತ್ ಸ್ವಂತ ವಾಹನವಿಲ್ಲದಿದ್ದರೂ ಭಾರೀ ಚಾಲಾಕೀ ಸವಾರ. ಗೆಳೆಯ ಸುರೇಶನಲ್ಲಿದ್ದ ಓಬೀರಾಯನ ಕಾಲದ ವೆಸ್ಪಾ ಸ್ಕೂಟರ್ ಕಡ ತಂದು ನಮ್ಮ ಹಾರೋಗುರು, ಎನ್ಸಿಸಿಯ ಈ ವಲಯದ ಮುಖ್ಯಸ್ಥ – ಕ| ಸೈರಸ್ ದಲಾಲರನ್ನು ಸಹವಾರಿಗೇರಿಸಿಕೊಂಡಿದ್ದ. ಆ ದಿನಗಳ ಅಷ್ಟೇನೂ ಒಳ್ಳೇದಿರದ ಪುತ್ತೂರು ದಾರಿಯಲ್ಲೇ ಈತ ಎಂಬತ್ತರ ವೇಗದಲ್ಲಿ ಮುನ್ನುಗ್ಗಿದ್ದು ನೋಡಿ, ಬೈಕೇರಿ ಹಿಂಬಾಲಿಸಿದ ನಾವೆಲ್ಲಾ “ಇಂವಾ ದಲಾಲರಿಗೆ ಇಲ್ಲೇ ಟೇಕಾಫ್ ಮಾಡಿಸ್ತಾನೆ” ಎಂದುಕೊಂಡಿದ್ದೆವು. ವಳಚ್ಚಿಲ್ಲಿನಲ್ಲಿ ಎಡಕ್ಕೆ ತಿರುಗಿದರೆ ಒಮ್ಮೆಗೇ ಏರುವ ಕಚ್ಚಾ ಮಾರ್ಗ. ಮೊದಲ ಒಂದೆರಡು ಹಿಮ್ಮುರಿ ತಿರುವಿನಲ್ಲಿ ಹಾಸನ-ಮಂಗಳೂರು ರೈಲ ಹಳಿ ಸಿಗುತ್ತದೆ. ಬಹುಶಃ ಇಲಾಖೆಯ ಕಾಮಗಾರಿಗೆ ಬರುವ ಲಾರಿಗಳ ಸೌಕರ್ಯಕ್ಕೆ ಅಲ್ಲಿವರೆಗೆ ದಾರಿ ತುಸು ಜಲ್ಲಿ ಕಂಡಿತ್ತು. ಮತ್ತೆ ನೆತ್ತಿಯವರೆಗೆ ಯಾವುದೋ ಕಾಲದಲ್ಲಿ ಮುರಕಲ್ಲು ಸಾಗಿಸುವ ಲಾರಿಗಳು ಕಡಿದು, ಬಳಸಿದ ದಾರಿಯಿದ್ದಿರಬೇಕು. ಅರವತ್ತೆಪ್ಪತ್ತು ಡಿಗ್ರಿಯ ಏರು, ಮೂರು ನಾಲ್ಕು ಹಿಮ್ಮುರಿ ತಿರುವು, ನುಣ್ಣನೆಯ ಟಯರು, ಹಾರ್ನಿಗಿಂತ ಬಾಡಿ ಸದ್ದು ಮಾಡುವ ಗಾಡಿ, ಧಡೂತಿ ದಲಾಲರ ಸವಾರಿ ಯಾವುದೂ ಲೆಕ್ಕಿಸದೆ `ದೇವರು’ ರಥ ಏರುವ ಆವೇಶದಲ್ಲಿ ಲಾಚಾರಿ ಶರತ್ ಗುಡ್ಡೆ ಏರಿಸಿದ! ದಡಬಡ ಏರುತ್ತ, ಹಿಂದಿನ ಚಕ್ರ ಜಾರಿದಾಗ ನೆಲ ಒದ್ದು, ಮುಂದಿನದು ಕಲ್ಲು ಹೆಟ್ಟಿದಾಗ “ಓ ಮೈ ಡಾಗ್” ಎಂದು ನಗೆಚಾಟಿಕೆ ಹಾರಿಸಿ, ರೈಲ್ವೇ ಹಳಿ ದಾಟುವಲ್ಲಿ ತುಸು ಉಸಿರು ಹೆಕ್ಕಿ, ಒಮ್ಮೆಯೂ ಅಡ್ಡ ಬೀಳಿಸದೆ ಪದವಿಗೇರಿದ್ದು ಇಂದೂ ನನಗೆ ನಂಬಲಾಗದ ಸಂಗತಿ!

ವರ್ತಮಾನದಲ್ಲಿ ನಾನು ಮುಂದುವರಿದಂತೆ, ಆ ಕ್ರಿಸ್ತಪೂರ್ವ ಸಂಗತಿಗಳನ್ನು ಮರೆಸುವಂತೆ, ಸಪುರವಾದರೂ ಮಟ್ಟ ಡಾಮರು ರಸ್ತೆ, ಆಟೋ ಸಿಟಿಬಸ್ಸಾದಿ ವಾಹನ ಸಂಚಾರ! ನೋಡ ನೋಡುತ್ತಿದ್ದಂತೆ ಧುತ್ತೆಂದು ಕಂಗೊಳಿಸಿತು ಎರಡೆರಡು ವಿದ್ಯಾಸಂಸ್ಥೆಗಳು – ಹೋಟೆಲ್ ಶ್ರೀನಿವಾಸ ಹಾಗೂ ಎಕ್ಸ್‍ಪರ್ಟ್, ಮತ್ತವರ ವಿದ್ಯಾರ್ಥಿ ಸಮೂಹ. ಕರಿಮುರಕಲ್ಲ ಮರಡಿಯಲ್ಲಿ ವರ್ಣಮಯ ಗಗನಚುಂಬಿ, ಗಡಿಗಂಡಿ ನಿಗಿದಿದ್ದಲ್ಲಿ ಭದ್ರ ಪಾಗಾರ, ಮುಳಿ ನಾಚುತ್ತಿದ್ದಲ್ಲಿ ಲಾನು, ವಿರಳ ಕೇಪುಳೆ ಪೊದರು ಕಳೆದು ಗಾರ್ಡನ್ನು, ಕುರ್ಕುರೆ, ಕೋಕು, ತೊಟ್ಟೆ, (ಪರ್ಲ್-) ಪೆಟ್ಟೇ… ಸಾಕೋ ಸಾಕು. ಮಾರ್ಗದರ್ಶಿ ಕೊಟ್ಟ ಸೂಚನೆಯಂತೆ “ಇನ್ನು ಪದವು ಕಳೆದು ನೂರಡಿ ಕೊಳ್ಳ ಹಾರಿಕೊಳ್ಳುವುದೇ ಸರಿ” ಎಂದು ಪಿರಿಪಿರಿ ಮಳೆ ಲೆಕ್ಕಿಸದೆ ಮುಂದುವರಿದೆ. ಆದರೂ…

ಮೇರ್ಲ ಪದವು ಅಂಚಿನಲ್ಲಿ, ದಾರಿ ಕಡಿದುಳಿದ ದಿಬ್ಬದಲ್ಲಿ, ಅಭಿವೃದ್ಧಿಗೆ ಬೆನ್ನು ಹಾಕಿ ಹಾಕಿ ನಿಂತಾಗ ಕಾಣುವ ನೇತ್ರಾವತಿ ಹರಿವು, ಹರಹುಗಳಿಗೆ ಸಿಕ್ಕ ಋತುಮಾನದ ಪಾರಿಸರಿಕ ವಿನ್ಯಾಸಗಳು ಮೋಹಿಸದೇ ಬಿಡಲಿಲ್ಲ. ನದಿಗೆ ಅನತಿ ದೂರದಲ್ಲಿ ಸಮವಾಗಿಯೇ ಹರಿದ ವಿಸ್ತೃತ ಹೆದ್ದಾರಿಯ ಇಣುಕು ದೃಶ್ಯಗಳು, ತೊಳೆದಿಟ್ಟ ಹಸಿರನ್ನು ಕಣ್ಣಿಗೂ, ಕ್ಯಾಮರ ಕಣ್ಣಿಗೂ ತುಂಬಿಕೊಂಡೆ. ಸೈಕಲ್ಲನ್ನು ಹಿಡಿದಿಟ್ಟುಕೊಳ್ಳುವುದೇ ತಪ್ಪೆನ್ನುವಷ್ಟು ನಯವೂ ವ್ಯವಸ್ಥಿತ ಇಳುಕಲಿನಲ್ಲೂ ಇದ್ದ ರಸ್ತೆಯಲ್ಲಿ, ನಾಲ್ಕೈದು ಹಿಮ್ಮುರಿ ತಿರುವು ಮತ್ತು ರೈಲ್ವೇ ಹಳಿಗಳನ್ನು ಕ್ಷಣಾರ್ಧದಲ್ಲಿ ಕಳೆದು ಹೆದ್ದಾರಿ ಸೇರಿಕೊಂಡೆ. ಮತ್ತೆ ಗೊತ್ತಲ್ಲಾ ಬಾಲಪಾಠದಂತೆ `ಅಡ್ಯಾರು-ಕಣ್ಣೂರು, ಪಡೀಲು- ಪಂಪ್ವೆಲ್ಲು…’ ಕಳೆಯುತ್ತ ಮನೆ ಸೇರಿಕೊಂಡೆ.

[ಮಳೆಗಾಲ ಮುಗಿದಿಲ್ಲ. “ಸೈಕಲ್ ಸರ್ಕೀಟು ಹಳಸಿಲ್ಲ” ಎಂದು ನೀವೆಲ್ಲ ಅಭಿಪ್ರಾಯಪಡುವಂತೆ, ಸ್ವಾನುಭವಗಳ ಸುವಿಸ್ತರ ಕಥನವನ್ನು ಪ್ರತಿಕ್ರಿಯೆ ಅಂಕಣ ತುಂಬುತ್ತಿದ್ದಂತೆ, ಹೆಚ್ಚಿನ ಉತ್ಸಾಹದೊಡನೆ ಮುಂದಿನ ಕಂತಿನಲ್ಲಿ ಕಾಡುವ ಭರವಸೆ ಕೊಡುತ್ತೇನೆ ಅಂದರೆ ಚಕ್ರೇಶ್ವರನ ಪರೀಕ್ಷೆಗಳ ದಿಗ್ವಿಜಯ ಮುಂದುವರಿಯಲಿದೆ]