ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ

ಶನಿವಾರ, ೨೦ ಸೆಪ್ಟೆಂಬರ್, ೨೦೧೪ರಂದು ಬೆಸೆಂಟ್ ಮಹಿಳ ಕಾಲೇಜು ವಠಾರದಲ್ಲಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ವ್ಯವಸ್ಥೆಯಲ್ಲಿ ದಿನ ಪೂರ್ತಿ ನಡೆದ ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು ಎಂಬ ವಿಚಾರಗೋಷ್ಠಿಯ ಪ್ರಥಮ ಕಲಾಪದಲ್ಲಿ ಜಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ (ಎಂ.ಎಸ್ ಶ್ರೀರಾಮ್ ಇನ್ನೋರ್ವ ಪ್ರಬಂಧಕಾರ) ಪೂರ್ವ ನಿಗದಿತ ಇಪ್ಪತ್ತು ಮಿನಿಟಿಗೆ ಹೊಂದಿಸಿ ಮಂಡಿಸಿದ ಪ್ರಬಂಧದ ಪೂರ್ಣ ಪಾಠ.

[ಅಕಾಡೆಮಿ ವಕ್ತಾರರಾಗಿ ನಾದಾ ಶೆಟ್ಟರಿಂದ ದೂರವಾಣಿಯಲ್ಲಿ `ಜಡಿಮಳೆಯ ಬ್ಲಾಗುಗಳು’ ಎಂಬ ವಿಷಯ ಸೂಚನೆ ಮಾತ್ರ ಬಂದಿತ್ತು. ಕುರಿತು ವಿಚಾರಿಸಿದರೂ ವಿಸ್ತರಣೆಗೆ ಯಾವ ಮಾರ್ಗಸೂಚಿಯೂ ಒಟ್ಟಾರೆ ಕಲಾಪಗಳ ವಿವರವೂ ಒದಗಲಿಲ್ಲ. ಸಹ ಪ್ರಬಂಧಕಾರ ಶ್ರೀರಾಮ್ ದೂರವಾಣಿಯಲ್ಲಿ ಮಾತಾಡಿದ ಮೇಲೆ, ನನ್ನ ಪ್ರಬಂಧದ ಮಾರ್ಗಸೂಚಿಯನ್ನು – ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ, ನಾನೇ ಹಾಕಿಕೊಂಡೆ. ಮತ್ತೆ ಪೂರ್ವ ಸೂಚಿತ ಸಮಯಮಿತಿಗೆ ಹೊಂದುವಂತೆ ಸಭೆಯಲ್ಲಿನ ಪ್ರಸ್ತುತಿಗಾಗುವಾಗ ಈ ಪ್ರಬಂಧವನ್ನು ನಾನೇ ಕಡಿತಗೊಳಿಸಿಕೊಂಡಿದ್ದೆ.]

ಸಮೂಹ ಮಾಧ್ಯಮದ ಕ್ರಾಂತಿಯಲ್ಲಿ ಪ್ರತಿಯೊಬ್ಬರಿಗೂ ತಾನು ಕಳೆದು ಹೋಗುತ್ತಿದ್ದೇನೆಂಬ ಕೊರಗು, ನಾನಿದ್ದೇನೆಂದು ತೋರಿಸಿಕೊಳ್ಳುವ ಚಪಲ ಹೆಚ್ಚಿದಂತಿದೆ. ಅಂಥವರು ನಿರಕ್ಷರರಾದರೂ ಚರವಾಣಿ (ಮೊಬೈಲ್), ಫೇಸ್ ಬುಕ್ ಮುಂತಾದವುಗಳ ಮೂಲಕ ಪರೋಕ್ಷ ಸಾಕ್ಷರರಾಗಿ ಬೆಳಗುವುದನ್ನು ಕಾಣುತ್ತಿದ್ದೇವೆ. ಅದರ ಮುಂದಿನ ಹಂತವಾಗಿ, ತುಸು ತಂತ್ರಾಂಶ ಪರಿಣತಿ ಗಳಿಸಿದ್ದಕ್ಕೆ, ಕಾಲ್ಪನಿಕತೆಯ ಸೋಂಕು ಬಡಿದವರೂ ಇದ್ದಾರೆ. ಇವರು ಪೈಸೆ ಖರ್ಚಿಲ್ಲದೆ ಅಂತರ್ಜಾಲದಲ್ಲಿ ನೆಲೆ ಕಾಣುತ್ತಿದ್ದಾರೆ. ಫಲವಾಗಿ ಜಳಜಳ ಜಾಲತಾಣಗಳ ಜಡಿಮಳೆ ಅಥವಾ ಬಳಬಳ ಬ್ಲಾಗುಗಳ ಬಿರುಮಳೆ ಸಹಜವೇ ಇದೆ.

ವೃತ್ತಿಪರವಾಗಿ, ವಿದ್ಯುನ್ಮಾನ ಪತ್ರಿಕೆಗಳಂತೇ ವ್ಯವಹರಿಸುವ – ಅಂದರೆ, ವಿವಿಧ ಲೇಖಕ ಬಳಗದ ಅಭಿವ್ಯಕ್ತಿಗೊಂದು ನಿಯತ ನೆಲೆ ಹಾಗೂ ನಿಶ್ಚಿತ ವೀಕ್ಷಕ ವರ್ಗವನ್ನು ಒದಗಿಸುವ ಜಾಲತಾಣಗಳು – ಅವಧಿ, ದಟ್ಸ್ ಕನ್ನಡ, ಕೆಂಡಸಂಪಿಗೆ ಮುಂತಾದವುಗಳದ್ದು ಒಂದು ಕತೆ. ಇವುಗಳಿಗೆ ಜಾಹೀರಾತು, ಪ್ರಾಯೋಜಕತೆ ಮುಂತಾದ ಆರ್ಥಿಕ ಆಯಾಮಗಳೂ ಇವೆ – ನನ್ನ ತುತ್ತಲ್ಲ. ಇವು ಮಾರ್ಕೆಟ್, ಸೂಪರ್ ಬಜಾರ್, ಮಾಲ್ ಇದ್ದ ಹಾಗೆ. ಅದರೊಳಗೆ ಯಾವ ನಿರೀಕ್ಷೆ ಇಲ್ಲದೆ ಅಡ್ಡಾಡಿದರೂ ಒಂದಷ್ಟು ಪ್ರಭಾವ, ಖರೀದಿ ನಡೆಯಬಹುದು. ಇವನ್ನು ನಿರಾಕರಿಸಿದ…

ಖಾಸಾ ಜಾಲತಾಣಗಳು ಹವ್ಯಾಸಿಗಳದ್ದು, ಬಿಡಿ ಅಂಗಡಿಗಳಿದ್ದ ಹಾಗೆ. (ಉದಾಹರಣೆಗೆ – ಅಭಯಟಾಕೀಸ್, ಮಾಲಾಲಹರಿ, ಹಳ್ಳಿಯಿಂದ, ಸುಂದರರಾವ್, ಇಸ್ಮಾಯಿಲ್, ರಶ್ಮಿ...) ಇವುಗಳ ಬಾಳ್ತನಕ್ಕೆ ಪ್ರಚಾರ, ನಿಯತಕಾಲಿಕತೆ, ವಿಷಯ ವೈವಿಧ್ಯ, ತಾಜಾತನ ಮುಂತಾದವು ಅವಶ್ಯ. ಆದರೆ ಬಹುತೇಕ ಖಾಸಾ ಜಾಲತಾಣಗಳು ವ್ಯಕ್ತಿಗಳ ಕ್ಷಣಿಕ ಭಾವ, ಸೀಮಿತ ವಿಚಾರ ಅಥವಾ ಕಲ್ಪನಾವಿಲಾಸಗಳಾದ ಕವನ, ಸಣ್ಣ ಕತೆ, ಚಿಂತನೆ ಮುಂತಾದವನ್ನು ನೆಚ್ಚಿ ಹೊರಡುತ್ತವೆ. ಇವು ದೀರ್ಘ ಓಟದಲ್ಲಿ ಸರಕು ಖಾಲಿಯಾಗಿಯೋ ಶಿಸ್ತಿನ ಕೊರತೆಯಾಗಿಯೋ ಏಕತಾನತೆ (ಓದುಗನಂತೆ ಲೇಖಕನಿಗೂ) ಕಾಡಿಯೋ ಸಾರ್ವಜನಿಕ ಸಂಪರ್ಕ ಕಳೆದುಕೊಂಡೋ ಇದ್ದೂ ಇಲ್ಲದಂತಾಗಿಬಿಡುತ್ತವೆ. ಇದು ವಸ್ತುವಿಗಿಂತ ವಿನ್ಯಾಸ ನೆಚ್ಚಿ ಬೆಳೆದದ್ದರ ದೋಷವಿರಬೇಕು. ಇಲ್ಲಿ ನಾನು ಅನ್ಯ ಜಾಲತಾಣಗಳ ವಿಮರ್ಶೆ ಬಿಟ್ಟು, ನನ್ನ ಜಾಲತಾಣದ ಹುಟ್ಟಿನ ಅನಿವಾರ್ಯತೆ, ಬೆಳವಣಿಗೆಯ ವಿವರಗಳನ್ನಷ್ಟೇ ನಿವೇದಿಸುತ್ತೇನೆ.

ಮೊದಲನೆಯದಾಗಿ, ನಾನು ದಟ್ಟ ಸಾಹಿತ್ಯಕ ಹಿನ್ನೆಲೆಯಲ್ಲೇ ಬೆಳೆದು ಬಂದವನು. ಶಿಶುವಿಹಾರದಲ್ಲಿ ಕಲಿಕೆಯ ಕನ್ವೇಯರ್ ಬೆಲ್ಟಿಗೆ ಬಿದ್ದವನು ಇನ್ನೊಂದು ಕೊನೆ ತಲಪುವಾಗ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವೀಧರ ಆಗಿ ಎದ್ದಿದ್ದೆ.

ಎರಡನೆಯದಾಗಿ, ನನ್ನ ಮೂಲ ಮತ್ತು ಐದನೇ ತರಗತಿಯವರೆಗಿನ ಬಾಲ್ಯ ಮಡಿಕೇರಿಯದ್ದು. ಉಳಿದ ವಿದ್ಯಾರ್ಥಿ ಜೀವನವನ್ನು ಬಯಲು ಸೀಮೆಯ ಬಳ್ಳಾರಿ, ಬೆಂಗಳೂರು, ಮೈಸೂರುಗಳಲ್ಲಿ ಕಳೆದೆ. ಅಲ್ಲೆಲ್ಲ ನನ್ನನ್ನು ಇತರರು `ಕೊಡಗಿನವನು’ ಎಂದು ಗುರುತಿಸುತ್ತಿದ್ದರು. ಅದು ನನ್ನಲ್ಲಿ ಜಾಗೃತಗೊಳಿಸುತ್ತಿದ್ದ ಹೆಮ್ಮೆ, ನನ್ನನ್ನು ಇತರರಿಂದ ಭಿನ್ನ ಸಾಧನೆಗೆ ಪ್ರೇರಣೆ ಕೊಡುತ್ತಲೇ ಇತ್ತು. ಈ ಎರಡು ಆಕಸ್ಮಿಕಗಳ ಫಲವಾಗಿ ಅಸಾಧಾರಣವಾದ್ದನ್ನು ಸಾಧಿಸಬೇಕು, ಬರವಣಿಗೆಯಲ್ಲಿ ಪ್ರಕಟಿಸಬೇಕು (ನೋಡಿ: ನಾನ್ಯಾಕೆ ಕೊರೆಯುತ್ತೇನೆ!) ಎಂಬ ತುಡಿತ ಸದಾ ನನ್ನಲ್ಲಿತ್ತು. ಬೀಯೇಯಲ್ಲಿದ್ದಾಗ ನನ್ನ ಪ್ರಥಮ ಮುದ್ರಿತ ಪುಸ್ತಕ – ತಾತಾರ್ ಶಿಖರಾರೋಹಣ ಪ್ರಕಟಗೊಂಡಿತ್ತು.

ಮೂರನೇ ಆಕಸ್ಮಿಕವಾಗಿ ನಾನು ವೃತ್ತಿಯಲ್ಲಿ ಪುಸ್ತಕೋದ್ಯಮಿಯಾದೆ. ಇದು ಪುಸ್ತಕಮಾರಾಟ, ಪ್ರಕಾಶನ, ವಿತರಣೆಗಳ ವೃತ್ತಿಪರ ಮುಖದೊಡನೆ ನನಗೆ ಹವ್ಯಾಸೀ ಮುಖದಲ್ಲಿ ಪರ್ವತಾರೋಹಣ, ಪರಿಸರ, ಪ್ರವಾಸ, ಯಕ್ಷಗಾನ, ನಾಟಕ ಮುಂತಾದ ಹಲವು ವೈವಿಧ್ಯ ವಿಚಾರಗಳಿಗೂ ಅವಕಾಶ ಮಾಡಿಕೊಟ್ಟಿತು. ತುಸು ವಿಸ್ತರಿಸಿ ಹೇಳುವುದಿದ್ದರೆ, ಸುಮಾರು ಎರಡು ದಶಕಗಳ ಪ್ರಕಾಶನ ಅನುಭವ – ಅಂದರೆ, ಐವತ್ತಕ್ಕೂ ಮಿಕ್ಕು ಪ್ರಕಟಣೆಗಳೊಡನೆ, ಮೂವತ್ತಾರು ವರ್ಷಗಳ ಪುಸ್ತಕೋದ್ಯಮ ಗಾಢ ಪರಿಚಯ ನನ್ನದು. ಪಶ್ಚಿಮ ಘಟ್ಟದ ಉದ್ದಗಲ ನಡೆದು ನೋಡಿ, ಮೂರು ಬಾರಿ ಭಾರತವನ್ನು ಬೈಕಿನಲ್ಲಿ ಅಳೆದು, ಆಕಾಶಕ್ಕೇಣಿ ಇಟ್ಟು, ಪಾತಾಳವನ್ನು ಹೊಕ್ಕು ಹೊರಟು, ಅನುಭವದ ಗಡಿಯನ್ನು ಈಗಲೂ ಚಲನಶೀಲವಾಗಿಟ್ಟುಕೊಂಡಿದ್ದೇನೆ. ಪ್ರದರ್ಶನ ಕಲೆಗಳ ಗುಣಪಕ್ಷಪಾತದಲ್ಲಿ ಕೆಲವು ಸಣ್ಣ ಕೆಲಸಗಳನ್ನು ಮಾಡಿದ್ದಲ್ಲದೆ, ರುಚಿಶುದ್ಧ ಪ್ರೇಕ್ಷಕನಾಗಿ ಅವಕಾಶವಿದ್ದಲ್ಲೆಲ್ಲ ನಾಟಕ, ಯಕ್ಷಗಾನ, ಸಿನಿಮಾ ಮುಂತಾದವನ್ನು ಸವಿಯುತ್ತಿರುತ್ತೇನೆ. ಮೊತ್ತದಲ್ಲಿ ಅನುಭವಗಳನ್ನು ದಾಖಲಿಸಿ ಸಾಮಾಜಿಕ ಪ್ರೇರಣೆಯನ್ನು ಉತ್ತಮಿಸುವ ಪ್ರಯತ್ನದಲ್ಲಿ ನನ್ನ ಆಸಕ್ತಿ ಇನ್ನೂ ಕುಂದಿಲ್ಲ.

ವೃತ್ತಿರಂಗದಲ್ಲಿ ನೆಲೆಸಿದ ಮೊದಲ ದಿನಗಳಲ್ಲಿ ಸಾಲೋ ಸಾಲು ಟಿಪ್ಪಣಿ, ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿದೆ. ಕಾಲಕ್ರಮದಲ್ಲಿ ಚಕ್ರವರ್ತಿಗಳು, ಪುಸ್ತಕ ಮಾರಾಟ ಹೋರಾಟ, ಬೆಟ್ಟಗುಡ್ಡಗಳಂತ ನನ್ನದೇ ಪುಸ್ತಗಳೂ ಬಂದವು. ಆದರೆ ಇವೆಲ್ಲಕ್ಕೂ ಅನಿವಾರ್ಯವಾಗಿ ನಾನು ನೆಚ್ಚಲೇ ಬೇಕಾಗುತ್ತಿದ್ದದ್ದು ದಿನಪತ್ರಿಕೆ, ನಿಯತಕಾಲಿಕಗಳು, ಪುಸ್ತಕ ಮಾರಾಟಗಾರರು, ಆಕಾಶವಾಣಿ ಮುಂತಾದ ಸಮೂಹ ಮಾಧ್ಯಮಗಳನ್ನೇ. ಅವುಗಳೋ ಆದರ್ಶಕ್ಕೂ ಅನುಷ್ಠಾನಕ್ಕೂ ನಡುವೆ ಎಬ್ಬಿಸುತ್ತಿದ್ದ ಕೃತಕ ಗೋಡೆಗಳು, ಪಾರುಗಾಣಲಾಗದಂತೆ ತೆರೆಯುತ್ತಿದ್ದ ಕಂದರಗಳು ತುಂಬ ಹಿಂಸೆ ಕೊಡುತ್ತಿದ್ದುವು. ಇದನ್ನು ಕೆಲವು ಉದಾಹರಣೆಗಳೊಂದಿಗೆ ವಿಸ್ತರಿಸುತ್ತೇನೆ.

ವ್ಯಾಪ್ತಿ, ವಿಷಯ ವೈವಿಧ್ಯ: ನನ್ನ ಸಾರ್ವಜನಿಕ ಲೇಖನ ಅಥವಾ ಇಂಥಾ ಭಾಷಣಗಳಾದರೂ ವಿಷಯ ಸ್ಪಷ್ಟತೆ, ಅನುಭವದ ಪ್ರಾಮಾಣಿಕತೆ, ಶಬ್ದದ ಮಿತಿ, ಪ್ರಯೋಗದ ಚಂದ, ಸನ್ನಿವೇಶದ ನಾಟಕೀಯತೆ, ಔಚಿತ್ಯ, ಎಲ್ಲಕ್ಕೂ ಮುಖ್ಯವಾಗಿ ಲೋಕೋಪಯುಕ್ತತೆಯನ್ನು ಯೋಚಿಸಿ, ಹಲವು ಬಾರಿ ತಿದ್ದುಪಡಿ ಕಂಡೇ ಹೊರಡುತ್ತವೆ. ನಾನು ಪಶ್ಚಿಮಘಟ್ಟದ ಮಹಾಕಾಯ ಕುದುರೆಮುಖ ಶಿಖರವನ್ನು ಹಲವು ಆಯಾಮಗಳಲ್ಲಿ ಕಂಡವ. ನಕ್ಷೆಗಳು ಗುರುತಿಸಿದಷ್ಟೂ ಎತ್ತರವನ್ನು (ಸುಮಾರು ಆರೂಕಾಲು ಸಾವಿರಡಿ) ಕಠಿಣ ದಾರಿ ಮತ್ತು ಪರಿಸ್ಥಿಯಲ್ಲಿ ಸಾಧಿಸಿದ ಅನುಭವದಲ್ಲಿ ಪತ್ರಿಕಾ ಲೇಖನ ಕೊಟ್ಟಿದ್ದೆ. ಇನ್ಯಾರೋ ಹಿಮಾಲಯಕ್ಕೆ ಹೋಗಿದ್ದರು. ಆತ ವಾಹನದಿಂದಿಳಿದದ್ದೇ ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿ. ಮತ್ತೆ ಆದರ್ಶ ಪರಿಸರದಲ್ಲಿ ಸಾಧಿಸಿದ ಒಂದು ಶಿಖರದ ಒಟ್ಟಾರೆ ಎತ್ತರ ಹನ್ನೆರಡು ಸಾವಿರ ಅಡಿ. ಆತನೂ ಅನುಭವ ಕಥನ ಕೊಟ್ಟ. ಎರಡನ್ನು ಮೌಲ್ಯಮಾಪನಕ್ಕೊಳಪಡಿಸುವ ಪತ್ರಿಕಾ ಸಂಪಾದಕನಾದರೋ ತನ್ನ ಕಛೇರಿಯ ಮೊದಲ ಮಾಳಿಗೆಗೆ ಲಿಫ್ಟ್ ಬಳಸುವವ. ಆತನ ತಿಳುವಳಿಕೆಗೆ ಹಿಮಾಲಯದ ಹೆಸರು ದೊಡ್ಡದು. ಸಹಜವಾಗಿ ಅಲ್ಲಿನ ಚಾರಣದ ಭಾವಾತಿರೇಕಗಳ ಎದುರು ನನ್ನ ಪ್ರಾಮಾಣಿಕತೆ ಸೋಲುತ್ತಿತ್ತು. ಕೊನೆಯಲ್ಲಿ ನನ್ನ ಲೇಖನ ಕಸದಬುಟ್ಟಿ ಸೇರದೆ ಪ್ರಕಟವಾದರೂ ಕತ್ತರಿಗೀಡಾಗಿ, ಎಷ್ಟೋ ಚಿತ್ರಗಳು ಅಪ್ರಸ್ತುತವಾಗಿ ನನ್ನನ್ನೇ ಗೇಲಿಮಾಡುತ್ತಿದ್ದುವು. ಇಂಥ ಹಿಂಸೆಗೆ ಹೆದರಿ ಎಷ್ಟೋ ಬಾರಿ ಪೆನ್ನು ಹಿಡಿಯುವಾಗಲೇ ನನಗೆ ಓದುಗ ಅಕ್ಷೋಹಿಣಿ ಮರೆತು, ಕೈ ಬೆರಳೆಣಿಕೆಯ ದಂಡ(ಕ್ಕೆ)ನಾಯಕರ ನೆನಪಾಗಿ ಅಭಿವ್ಯಕ್ತಿ ಬಾಡುತ್ತಿತ್ತು. ಇದು ಯಾವ ಪತ್ರಿಕೆಗಾದೀತು, ಅದರ ಸಂಪಾದಕನ ದೃಷ್ಟಿಕೋನದಲ್ಲಿ ಇದು ಹೇಗೆ ಕಾಣಬಹುದು ಎಂಬ ಅಂದಾಜುಗಳು ನನ್ನ ಹೊಳಹುಗಳ ಕತ್ತು ಹಿಸುಕುತ್ತಿದ್ದುವು.

ಹತ್ತು ಕಳ್ಳ ಹೆಸರುಗಳನ್ನು ಇಟ್ಟುಕೊಂಡಾದರೂ ಕಸ್ತೂರಿ ಎಂಬ ತಿಂಗಳ ಪತ್ರಿಕೆಯನ್ನು `ಸಮೃದ್ಧ’ವಾಗಿಸಲು ಹೆಣಗಿದ ಪಾವೆಂ ಆಚಾರ್ಯ, ಆರೆಂಟು ದಶಕಗಳ ಹಿಂದೆ ಎಲ್ಲೆಲ್ಲಿನ ಇಂಗ್ಲಿಶ್ ಉದ್ಗ್ರಂಥಗಳನ್ನು ಸಂಗ್ರಹಿಸಿ ಕನ್ನಡಕ್ಕೆ ಚೂರ್ಣಿಸಿ ಕೊಟ್ಟ ಶಿವರಾಮ ಕಾರಂತ, ಜೀವನದ ಉತ್ತರಾರ್ಧದಲ್ಲಿ ಕನ್ನಡದ ಜನಪ್ರಿಯ ವಿಜ್ಞಾನಸಾಹಿತ್ಯವನ್ನು ಸಮೃದ್ಧಗೊಳಿಸಲೆಂದೇ ಹರಕೆತೊಟ್ಟ ಛಲದಿಂದ ನಡೆಸಿದ ನನ್ನ ತಂದೆಯಂಥವರು ನನಗೆ ಆದರ್ಶ. ಆದರೆ ಸಮೂಹಮಾಧ್ಯಮಗಳು ತಾಂತ್ರಿಕವಾಗಿ ಬೆಳೆಯುತ್ತಿದ್ದಂತೆ ವಸ್ತುವಿಗಿಂತ ಪ್ರಸ್ತುತಿಗೆ ಪ್ರಾಶಸ್ತ್ಯ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಸಹಜವಾಗಿ ಸಮೂಹಮಾಧ್ಯಮಗಳ ವಾಣಿಜ್ಯ ಆಯಾಮವೂ ಬದಲಿದೆ. ಪ್ರಭಾವಳಿ ದೊಡ್ಡದಾದ ಲೇಖಕ, ಆಕರ್ಷಕ ಶೀರ್ಷಿಕೆಯ ಲೇಖನವೊಂದು ಗಣಕೀಕೃತವಾಗಿದ್ದರೆ ಮುಗಿದೇ ಹೋಯ್ತು. ಮುದ್ರಾರಾಕ್ಷಸನನ್ನೂ ಉಪೇಕ್ಷಿಸಿ ಪ್ರಕಟಿಸಿಬಿಡುತ್ತಾರೆ. ತಕರಾರೆದ್ದರೆ ಜವಾಬ್ದಾರಿಯನ್ನು `ಲೇಖಕರ ಅಭಿಪ್ರಾಯ’ಕ್ಕೆ ತಗುಲಿಸಿ ನಿರುಮ್ಮಳರಾಗುತ್ತಾರೆ. ಇನ್ನೂ ದೊಡ್ಡ ದುರಂತವೆಂದರೆ, ಇಷ್ಟಾಗಿಯೂ ಪ್ರಕಟಗೊಳ್ಳುವ ಲೇಖನದ ವ್ಯಾಪ್ತಿ ನಿರ್ಧಾರವಾಗುವುದು ಜಾಹೀರಾತುದಾರರ ಕೃಪೆಯಿಂದ!

ಸದಭಿರುಚಿಯ ಸಂಪಾದಕರೊಬ್ಬರು ದೀಪಾವಳಿ ವಿಶೇಷಾಂಕಕ್ಕೆ ನನ್ನಿಂದ ದೀರ್ಘ ಸಾಹಸಿ ಪ್ರವಾಸ ಕಥನ ಬಯಸಿದ್ದರು. ನಾನು ಮೋಟಾರ್ ಸೈಕಲ್ ತಂಡ ಕಟ್ಟಿ ಆಗಷ್ಟೇ ಪೂರೈಸಿದ್ದ ಮೂರು ದಿನಗಳ ಉಕ ಜಲಪಾತಗಳ ಕುರಿತ ಲೇಖನ ಕೊಟ್ಟೆ. ಮುಂದೆ ಸಂಚಿಕೆ ಬಂದಾಗ ನನ್ನ ಲೇಖನ ಇರಲಿಲ್ಲ. ಸಂಪಾದಕೀಯ ವರ್ಗದಿಂದ ನನಗೆ ಸುದ್ದಿಯೂ ಇಲ್ಲ. ನಾನು ಫೋಟೋಗಳಿಗೆ ಖರ್ಚು ಮಾಡಿದ್ದಕ್ಕಾದರೂ ನ್ಯಾಯ ಸಿಗಬೇಕಲ್ಲಾ ಎಂಬ ಸಂಕಟಕ್ಕೆ ವಿಚಾರಿಸಿದೆ. “ಸಂಚಿಕೆಯ ಪೂರ್ವ ನಿಗದಿತ ಪುಟ ಸಂಖ್ಯೆಗೆ ಬಂದ ಜಾಹೀರಾತು ಈ ಬಾರಿ ಹೆಚ್ಚಾಯ್ತು. ಕ್ಷಮಿಸಿ, ಇದನ್ನೇ ಯುಗಾದಿ ವಿಶೇಷಾಂಕಕ್ಕೆ ಅವಶ್ಯ ಬಳಸಿಕೊಳ್ಳುತ್ತೇವೆ” ಸಮಜಾಯಿಷಿ ಸಿಕ್ಕಿತು. ಆದರೆ ಯುಗಾದಿಯಂದೂ ಸಮಸ್ಯೆ ಮರುಕಳಿಸಿತು. ನನ್ನ ಚುಚ್ಚೋಲೆ ಹೋಯ್ತು. ಅಸಹಾಯಕ ಸಜ್ಜನ ಸಂಪಾದಕರು ವೈಯಕ್ತಿಕ ಖರ್ಚಿನಲ್ಲಿ ನನ್ನ ಲೇಖನದ ಬಟರ್ ಪೇಪರ್ ಪ್ರತಿಯನ್ನೂ ಚಿತ್ರಗಳ ವರ್ಣಪಾರದರ್ಶಿಕೆಯನ್ನೂ ವಿಷಾದ ಅಲ್ಲ, ಕ್ಷಮಾಯಾಚನ ಪತ್ರದೊಂದಿಗೆ ಮರಳಿಸಿದರು.

ಇಂದು ಪತ್ರಿಕೆಗಳು ಪೂರ್ಣ ಮುಖಪುಟವನ್ನೇ ಬಹುತೇಕ ಸುದ್ದಿಗಳನ್ನೂ ಜಾಹೀರಾತುದಾರರಿಗೆ ಮಾರಿಕೊಳ್ಳುತ್ತಿರುವುದು ಮಾಮೂಲಾಗಿದೆ. ಸಂಪಾದಕೀಯ ಕತ್ತರಿ ಮಾರ್ಕೆಟಿಂಗ್ ಮ್ಯಾನೇಜರ್ ಕೈಯ್ಯಲ್ಲಿದೆ! ನಾವೇ ಪೋಷಕರು ಎಂಬ ಭ್ರಮೆಯಲ್ಲಿ ನಾನು, ನೀವು ಪ್ರಶ್ನಿಸಿದರೆ ನಿರ್ಲಜ್ಜವಾಗಿ ಹೇಳಿಕೊಳ್ಳುತ್ತಾರೆ – “ನಿಮಗೆ ಪತ್ರಿಕೆ ಮುಫತ್ತಾಗಿಯೇ ಕೊಡುತ್ತಿದ್ದೇವೆ. ನೀವು ಕೊಡುವ ನಾಲ್ಕೋ ಐದೋ ರೂಪಾಯಿ ಪೇಪರ್ ಏಜಂಟನ ಕಮೀಶನ್ ಸ್ವಾಮೀ!”

ಸಮಯ ಹಾಗು ವಿಚಾರ ಮಿತಿ: ಇನ್ನು ಆಕಾಶವಾಣಿ, ಗೋಷ್ಠಿ, ಕಮ್ಮಟಗಳಂಥ ಮೌಖಿಕ ಸಾಹಿತ್ಯವೂ ಅನುಭವದ ಆಳಕ್ಕಿಂತಲೂ ಔಪಚಾರಿಕತೆಯ ಥಳಕುಗಳಿಗೆ ಮಣೆ ಹಾಕುವುದು ಹೆಚ್ಚಾಗಿದೆ. ಪುಸ್ತಕೋದ್ಯಮದ ಬಗ್ಗೆ ನನ್ನ ಆಕಾಶವಾಣಿ ಭಾಷಣಕ್ಕೆ ಎಳಸು ಅಧಿಕಾರಿಯೊಬ್ಬ ಕತ್ತರಿ ಹಾಕುವುದಾಗಿ ಪಟ್ಟು ಹಿಡಿದ. ಅವನದೋ ಅಂಧ ರಾಜನಿಷ್ಠೆ – ಸರಕಾರದ ಟೀಕೆ ಕೂಡದು. ನನ್ನದೋ ಸತ್ಯವನ್ನು ಇನ್ನೊಂದು ಬಗೆಯಲ್ಲಿ ಹೇಳುವುದಿಲ್ಲ ಎಂಬ ಹಠ. ಕಂತ್ರಾಟನ್ನು ತಿರಸ್ಕರಿಸಿ ವಾಪಾಸು ಹೊರಟಿದ್ದೆ. ಆಗ ಬಡಪಾಯಿ ಅಧಿಕಾರಿಗೆ ಹೊಸ ಸಮಸ್ಯೆಯ ಅರಿವಾಗಿರಬೇಕು. ಕಂತ್ರಾಟು ರದ್ದಾದ್ದಕ್ಕೆ ತಾನೆದುರಿಸಬೇಕಾದ ವಿಚಾರಣೆಯ ರಗಳೆಗೆ ಹೆದರಿ ಆತ ನನಗೆ ಶರಣಾದ.

ವಿಚಾರಗೋಷ್ಠಿ, ಕಮ್ಮಟಗಳ ಅವ್ಯವಸ್ಥೆಗೆ ಒಂದು ಉದಾಹರಣೆಯಾಗಿ ನನ್ನೊಂದು ಲೇಖನ – ಗ್ರಂಥಾಲಯ ಸಮ್ಮೇಲನದ ನೇಪಥ್ಯದ ಕ(ವ್ಯ)ಥೆ! ಓದಬಹುದು.

ಇನ್ನು ಪುಸ್ತಕಗಳ ಕುರಿತಂತೆ ಅಸಂಖ್ಯ ಗೋಠಾಳೆಗಳು ಇಲ್ಲೇ `ಪುಸ್ತಕೋದ್ಯಮ’ದ ವಿಭಾಗದಲ್ಲಿ ಎಷ್ಟೂ ಇರುವುದರಿಂದ ವಿಸ್ತರಿಸ ಹೋಗುವುದಿಲ್ಲ. ಇಂಥ ಅಸಂಖ್ಯ ವಿದ್ಯಮಾನಗಳು ನನ್ನಲ್ಲಿನ “ಅರ್ಥಪೂರ್ಣವಾಗಿ ಪ್ರಕಟಗೊಳ್ಳಬೇಕು” ಎಂಬ ತುಡಿತವನ್ನು ಅಂಧಕೂಪದ ಅಂಚಿಗೆ ತಳ್ಳಿದ್ದಾಗ ಕಾಣಿಸಿದ ಬೆಳಕೋಲು – ಜಾಲತಾಣ ಅರ್ಥಾತ್ ಬ್ಲಾಗ್.

ಗಣಕಲೋಕ: ೧೯೯೭ರ ಸುಮಾರಿಗೇ ನಾನು ಗಣಕ ಕೊಂಡರೂ ಅಂಗಡಿಯ ಲೆಕ್ಕಾಚಾರದ ಹೊರಗೆ ಬಳಸಿದ್ದು ಕಡಿಮೆ. ಸುಮಾರು ಹನ್ನೊಂದು ವರ್ಷಗಳುದ್ದಕ್ಕೆ ಅದು ಹೆಚ್ಚೆಂದರೆ ಕೆಲವು ಪತ್ರವ್ಯವಹಾರಕ್ಕೂ ನನ್ನ ಲೇಖನಗಳ ಸುಂದರ ಮುದ್ರಣಕ್ಕೂ ಬೆರಳಚ್ಚು ಯಂತ್ರದ ಕೆಲಸ ಮಾಡಿದ್ದಿತ್ತು. ಕ್ಯಾಲ್ಕುಲೇಟರ್ ಬಳಸುವುದರಿಂದ ತಲೆ ಬಡ್ಡಾಗುತ್ತದೆ, ಚರವಾಣಿ ಬಳಸುವುದರಿಂದ ಆಲೋಚನಾ ಶಕ್ತಿಯೇ ಸೋರಿಹೋಗುತ್ತದೆ, ಗಣಕ ಒಂದು ಗೀಳು ಎಂಬಿತ್ಯಾದಿ `ಯಂತ್ರ ಮತ್ತು ಮನುಷ್ಯಮತಿ’ ಚರ್ಚೆಯ ಒಂದಂಶ ಅಂದು ನನ್ನನ್ನು ಪ್ರಭಾವಿಸಿದ್ದೂ ಇರಬಹುದು! ಆಗ ಇನ್ನೂ ಪ್ರೌಢಶಾಲಾ ಮಟ್ಟದಲ್ಲಿದ್ದ ಮಗ – ಅಭಯಸಿಂಹನಿಗಂತೂ ಗಣಕವನ್ನು ಅಸ್ಪೃಶ್ಯವೇ ಮಾಡಿ, ನಾನು ಹೆಂಡತಿಯೂ ಆತನ ಮೇಲೆ ಪೋಲಿಸ್‍ಗಿರಿ ಕೂಡಾ ಮಾಡಿದ್ದಿತ್ತು! ಆತ ಕದ್ದು ಮುಚ್ಚಿಯೇ ಸಾಕಷ್ಟು ಗಣಕ ಪರಿಣತಿ ಗಳಿಸಿದ. ಮುಂದೆ ಬೀಯೆಯಲ್ಲಿ ಮುಖ್ಯವಾಗಿ ಪತ್ರಿಕೋದ್ಯಮ ಶಾಸ್ತ್ರಕ್ಕೂ ಮತ್ತೆ ಪುಣೆಯ ಸಿನಿ-ನಿರ್ದೇಶನದ ಕಲಿಕೆಯ ಅಂಗವಾಗಿಯೂ ಪೂರ್ಣ ಸ್ವಂತ ಕಲಿಕೆಯಲ್ಲಿ ಗಣಕದ ವಿಸ್ತೃತ ಬಳಕೆಯನ್ನು ರೂಢಿಸಿಕೊಂಡ. ಫಲವಾಗಿ ಜೂನ್ ೨೦೦೮ರಲ್ಲಿ ಆತನೇ ನನ್ನ ಅಂತರ್ಜಾಲದ ಲೋಕ ಸಂಘಟಿಸಿದ. ಮಿಂಚಂಚೆ, ಜಾಲತಾಣ, ಫೇಸ್ ಬುಕ್‍ಗಳನ್ನು ಪರಿಚಯಿಸಿದ. ನಾನು ಹಿಂದಿರುಗಿ ನೋಡಲಿಲ್ಲ. ಇಂದೂ ನನ್ನ ಜಾಲತಾಣದಲ್ಲಿನ ತೋರಿಕೆಯ ಎಲ್ಲಾ ವೈವಿಧ್ಯಗಳ ಬಲ ಅಭಯ. ಕಚ್ಚಾ ಹೂರಣ – ಅಂದರೆ, ಗಣಕದಲ್ಲಿ ಲೇಖನವನ್ನು ಕುಟ್ಟಿ, ಪೂರಕ ಚಿತ್ರ ಮತ್ತು ಅಗತ್ಯವಿದ್ದಲ್ಲಿ ನಕ್ಷೆಗಳನ್ನು ಕಚ್ಚಾ ರೂಪದಲ್ಲಿ ಆತನಿಗೆ ಮಿಂಚಂಚೆ ಮೂಲಕ ಕಳಿಸುವುದಷ್ಟೇ ನನ್ನ ಕೆಲಸ. ಅನ್ಯರ ಬರಹವೇ ಆದರೂ ಸಂಗ್ರಹಿಸಿ, ಇಲ್ಲಿ ಪ್ರಕಟಿಸಲು ನಿರ್ದೇಶಿಸುವ ಜವಾಬ್ದಾರಿಯಷ್ಟೇ ನನ್ನದು.

ಅತ್ರಿಬುಕ್ ಜಾಲತಾಣ: ಎರಡೂವರೆ ವರ್ಷಗಳ ಹಿಂದೆ ಬಲ್ಮಠದಲ್ಲಿದ್ದ ‘ಅತ್ರಿ ಬುಕ್ ಸೆಂಟರ್’ ಎಂಬ ವ್ಯಾಪಾರೀ ಮಳಿಗೆಯನ್ನು ಮುಚ್ಚಿದೆ. ವಾಣಿಜ್ಯ ವಹಿವಾಟುಗಳ ಸ್ಥಿತಿ ಕಳಚಿಕೊಂಡು, ಅತ್ರಿಬುಕ್ ಇಂದು ಜಾಲತಾಣದಲ್ಲಿ ಹೆಚ್ಚು ಸಮಾಜಮುಖಿಯಾಗಿದೆ ಮತ್ತು ಚಿರಕಾಲ ಉಳಿಯಲಿದೆ. ಸುಮಾರು ಆರೂಕಾಲು ವರ್ಷಗಳ ಅಂತರದಲ್ಲಿ ಇದು ಎರಡು ಲಕ್ಷ ವೀಕ್ಷಣೆಯ ಗಡಿ ಮೀರಿ ನಡೆದಿದೆ. ನಾನೂರಕ್ಕೂ ಮಿಕ್ಕು ಲೇಖನಗಳು, ಮೂರು ಸಾವಿರಕ್ಕೂ ಮಿಕ್ಕು ಓದುಗ ಪ್ರತಿಕ್ರಿಯೆಗಳು, ಜಗತ್ತಿನಾದ್ಯಂತ ಹರಡಿಹೋದ ವೀಕ್ಷಕ ತಾಣ ಇದರ ತೀರಾ ತೋರುಗಾಣ್ಕೆಯ ಸಾಧನೆಗಳು. ಇದು ದಿನದ ಎಲ್ಲಾ ಸಮಯವೂ ಮುಕ್ತ, ಒಂದು ಪ್ರಕಟಣಾ ಕೀಲಿ ಒತ್ತಿದ ಕ್ಷಣಮಾತ್ರದಲ್ಲಿ ಜಾಗತಿಕ ವ್ಯಾಪ್ತಿಪಡೆಯುವ ಮತ್ತು ಅಷ್ಟೇ ಸುಲಭದಲ್ಲಿ ಜಾಗತಿಕವಾಗಿ ಲಭ್ಯವೂ ಇರುತ್ತದೆ. ಅಂತರ್ಜಾಲ ಎಂಬ ವ್ಯವಸ್ಥೆ ಚಿರಂಜೀವಿಯಾಗಿರುವವರೆಗೆ ಶಾಶ್ವತವಾಗುಳಿಯುವ ಈ ಮಾಧ್ಯಮ ಅಪ್ಪಟ ಬೆರಗು! ಜಾಲತಾಣ ಸಾರ್ವಜನಿಕದೊಡನೆ, ಸಾರ್ವಕಾಲಿಕವಾಗಿ, ಅನೌಪಚಾರಿಕ ಮತ್ತು ಅಮಿತ ಸಂವಹನಿಸಬಹುದಾದ ಮಾಧ್ಯಮ. ಹಾಗಾಗಿ ಅದರ ಶಕ್ತಿಯನ್ನು ನನ್ನನುಭವ ಸಿದ್ಧವಾದ ಮತ್ತು ಸಾರ್ವಜನಿಕ ಉಪಯುಕ್ತವಾದ ಮಾಹಿತಿಗಳನ್ನು ವಿನಿಮಯಿಸಿಕೊಳ್ಳುತ್ತ ಬಳಸುವಲ್ಲಿ ಉತ್ಸಾಹ ನನಗೆಂದೂ ಹಿಂಗಿದ್ದಿಲ್ಲ. ನನ್ನ ಜಾಲತಾಣ ವಿಕಸಿಸಿದ ಪರಿಯನ್ನು ಮುಂದಿನ ಮಾತುಗಳಲ್ಲಿ ಸ್ಪಷ್ಟಪಡಿಸುತ್ತೇನೆ.

ಪ್ರಚಾರ: ಜಾಲತಾಣಕ್ಕೆ ಪ್ರಚಾರ, ವಿಷಯ ಮತ್ತು ಸಾರ್ವಜನಿಕ ಉಪಯುಕ್ತತೆ ಎಂಬ ಮೂರು ಮುಖ ನಾನು ಕಂಡುಕೊಂಡಿದ್ದೇನೆ. ಪ್ರಚಾರಕ್ಕೆ ನಾನು ಮಿಂಚಂಚೆ ಮತ್ತು ಫೇಸ್ ಬುಕ್ ಚಟುವಟಿಕೆಗಳನ್ನು ಬಳಸುತ್ತೇನೆ. ಕನ್ನಡ ಓದುವ ಆಸಕ್ತಿಯೊಡನೆ ಗಣಕದ ಸೀಮಿತ ಬಳಕೆ ಇರುವ ಯಾರು ನನ್ನ ಸಂಪರ್ಕಕ್ಕೆ ಬಂದರೂ ನಾನವರ ಮಿಂಚಂಚೆ ವಿಳಾಸ ಕೇಳಿ ನನ್ನ ಜಾಲತಾಣದ ಓದುಗರ ಪಟ್ಟಿಯಲ್ಲಿ ದಾಖಲಿಸಿಕೊಳ್ಳುತ್ತೇನೆ. ತಕ್ಷಣವೇ ನನ್ನ ಜಾಲತಾಣದ ಪರಿಚಯಾತ್ಮಕವಾದ ಸ್ವಾಗತ ಪತ್ರ ಹಾಕುತ್ತೇನೆ. ಮುಂದೆ ಹೊಸಲೇಖನ ಪ್ರಕಟವಾದಾಗೆಲ್ಲಾ ತಿಳುವಳಿಕೆಯ ಪತ್ರ ಖಾಯಂ ಹಾಕುತ್ತೇನೆ.

ಪರಿಚಯಾತ್ಮಕ ಪತ್ರದಲ್ಲಿ ಜಾಲತಾಣದ ಮಾಹಿತಿ ಮುಕ್ತ ಹಾಗೂ ಉಚಿತ ಎನ್ನುವುದನ್ನು ತಿಳಿಸುತ್ತೇನೆ. ನನ್ನ ಅನುಭವಕ್ಕೆ ನಿಲುಕಿದ್ದಷ್ಟೇ ನನ್ನ ಜಾಲತಾಣದ ಶಕ್ತಿ ಮತ್ತು ಮಿತಿ ಎಂದೂ ಸ್ಪಷ್ಟಪಡಿಸುತ್ತೇನೆ. ಆದರೆ ಈ ಅನಿವಾರ್ಯದ `ನನ್ನ’ ಯಾವ ಕಾರಣಕ್ಕೂ ಸ್ವಪ್ರಚಾರದ ತೆವಲು ಅಲ್ಲ, ಸ್ವವಿಮರ್ಶೆಯೊಡನೆ ಸಾರ್ವಜನಿಕ ಉಪಯುಕ್ತತೆಗೆ ದಾರಿ. ಹಾಗಾಗಿ ಅವರ ಪ್ರತಿಕ್ರಿಯೆಗಳನ್ನು ಬಯಸುವುದರ ಜತೆಗೆ “ದಯವಿಟ್ಟು ಹೊಗಳಿಕೆಯ ಅಥವಾ ಔಪಚಾರಿಕ ಮಾತುಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಅಂಥ ಮಾತುಗಳನ್ನು ಸಂಗ್ರಹಿಸಿ ನಾನು ಯಾವ ಭವ್ಯ ಭವಿಷ್ಯ ರೂಪಣೆಗೆ, ಪ್ರಶಸ್ತಿ, ದಾಖಲೆಗಳ ಬೇಟೆಗೆ ಇಳಿಯುವವನಲ್ಲ.”

ವ್ಯಾಪ್ತಿ: ಲೇಖನ ಅಥವಾ ಪ್ರತಿಕ್ರಿಯೆಗಾದರೂ ಜಾಲತಾಣದಲ್ಲಿ ಮುದ್ರಣ ಮಾಧ್ಯಮದಂತೆ ಸ್ಥಳ ಮಿತಿ, ಬಾನುಲಿ ಕಲಾಪಗಳಂತೆ ಸಮಯ ಮಿತಿಗಳಿಲ್ಲ. ನನ್ನ ಜಾಲತಾಣದ ಬಳಕೆದಾರರಲ್ಲಿ ಬಹುಮತೀಯರ ಅಭಿವ್ಯಕ್ತಿ ಸಾಮರ್ಥ್ಯವನ್ನು ಲಕ್ಷಿಸಿ ಇತರ ಬಹುತೇಕ ಕನ್ನಡ ಜಾಲತಾಣಗಳಂತೆಯೇ ಭಾಷಾ ಬಿಗುಮಾನವನ್ನು ಕಳಚಿದ್ದೇನೆ. ಕನ್ನಡ ತಂತ್ರಾಂಶ ಪರಿಣತಿ ಇದ್ದರೆ ಸಂತೋಷ. ಇಲ್ಲವಾದರೆ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಅಥವಾ ಶುದ್ಧ ಇಂಗ್ಲಿಷಿನಲ್ಲೂ ಪ್ರತಿಕ್ರಿಯಿಸಬಹುದು. ಪ್ರತಿಕ್ರಿಯೆಯನ್ನು ಮೂರು ಮುಖಗಳಲ್ಲಿ ನಾನು ಆಹ್ವಾನಿಸುತ್ತಿರುತ್ತೇನೆ. ಮೊದಲು ಮತ್ತು ಮುಖ್ಯ ಸೂಚನೆ – ತಪ್ಪುಗಳಿದ್ದರೆ ಅವಶ್ಯ ತಿಳಿಸಿ. ಜಾಲತಾಣದಲ್ಲಿ ಎಂದೂ ತಿದ್ದುಪಡಿ ಅಳವಡಿಸುವುದು ಸಮಸ್ಯೆಯಲ್ಲ. ಹಾಗಾಗಿ ಪುಸ್ತಕಗಳಂತೆ ತಿದ್ದೋಲೆ ಸ್ವತಂತ್ರವಾಗುಳಿಯಬೇಕಾದ ಹಿಂಸೆಯೂ ಇಲ್ಲ. ಎರಡನೆಯ ಸೂಚನೆ – ನಿಮ್ಮ ಅನುಭವದಲ್ಲಿ ಸಮಾನರುಚಿಯವಿದ್ದರೆ ಸವಿವರ ಹಂಚಿಕೊಳ್ಳಿ; ಜಾಲತಾಣವನ್ನು ಹೆಚ್ಚು ಸಮೃದ್ಧಗೊಳಿಸೋಣ. ನಿಮ್ಮ ಅನುಭವಗಳು ಸ್ವತಂತ್ರ ಲೇಖನದ ವ್ಯಾಪ್ತಿಯವೇ ಇದ್ದರೆ, ಸಚಿತ್ರ ನನ್ನ ಮಿಂಚಂಚೆ ವಿಳಾಸಕ್ಕೇ ಕಳಿಸಿಕೊಡಿ. ಇಲ್ಲಿ ಚಿತ್ರ ಹಂಚಿ, ಪುಟ ಕಟ್ಟಿ ಪ್ರಕಟಿಸುವುದು ನನಗೆ ಬಹಳ ಸಂತೋಷದ ಕೆಲಸ. ಅಲ್ಲದೆ ಜಾಲತಾಣವನ್ನು ಸಮೃದ್ಧಗೊಳಿಸುವ ನನ್ನುದ್ದೇಶಕ್ಕೆ ಸಮ್ಮಾನವೂ ಹೌದು. ಇಂಥ ನನ್ನ ವಿನಂತಿಯನ್ನು ಮನ್ನಿಸಿ ಹಿರಿಯ ಲೇಖಕರಾದ ಸಿ.ಎನ್.ರಾಮಚಂದ್ರನ್ ಅವರಿಂದ ತೊಡಗಿ ಸುಮಾರು ಹನ್ನೆರಡಕ್ಕೂ ಮಿಕ್ಕು ವಿದ್ವಾಂಸ ಮಿತ್ರರು ಉದಾರವಾಗಿ ಸಹಕರಿಸಿದ್ದಾರೆ. ಲೇಖನಗಳನ್ನು ಕೊಟ್ಟು, ಈ ಜಾಲತಾಣಕ್ಕೆ ಹೆಚ್ಚಿನ ಘನತೆ ತಂದಿದ್ದಾರೆ. ಇದರಲ್ಲಿ ಈಚೆಗೆ ಆರು ವಾರಗಳ ಕಾಲ ಸಾಪ್ತಾಹಿಕ ಧಾರಾವಾಹಿಯಾಗಿ ಹರಿದ ಡಾ| ವಿದ್ಯಾ ಮನೋಹರ್ ಅವರ ರಾಜಾಸ್ತಾನದ ಪ್ರವಾಸ ಕಥನವನ್ನು ದೈನಿಕ ಸರಾಸರಿಯಲ್ಲಿ ನೂರರವತ್ತು ಮಂದಿ ವೀಕ್ಷಿಸಿದ್ದಂತೂ ಒಂದು ಅಸಾಮಾನ್ಯ ದಾಖಲೆಯೇ ಸರಿ. ಮೂರನೆಯ ಮನವಿ – ಓದಿನನಂತರ ಪ್ರತಿಯೋರ್ವರೂ ಸಹಜ ಭಾವದ ಒಂದೆರಡು ಸಾಲು ಪ್ರತಿಕ್ರಿಯಿಸಿದರೆ ನಾನು ಹಿಡಿದ ದಾರಿ ಸರಿಯಿದೆ ಎಂಬ ಧೈರ್ಯ ಬರುತ್ತದೆ. ಇಲ್ಲವಾದರೆ ಕೇವಲ ತಲೆಗಣನೆಯ ವಿಶ್ವಾಸದಲ್ಲಿ ನಡೆಯುವ ನಮ್ಮ ಪ್ರಜಾಸತ್ತೆಯ ಅಣಕ ಅಥವಾ ದೃಶ್ಯ ಮಾಧ್ಯಮಗಳ ಟೀಯಾರ್ಪೀ ಢೋಂಗಿ ಇಲ್ಲಿ ನಾನೂ ನಡೆಸಿದ್ದೆನೋ ಎಂಬ ಹತಾಶೆ ಕಾಡುತ್ತದೆ.

ಮುದ್ರಣ ಮಾಧ್ಯಮ ಒಮ್ಮೆಗೆ ನಿಗದಿತ ಸಂಖ್ಯೆಯ ಪ್ರಕಟಣೆ ಹಾಗೂ ಪ್ರಸರಣೆಯೊಡನೆ ಕೊನೆಗೊಳ್ಳುತ್ತದೆ. ಮತ್ತೆ ಪರಿಷ್ಕರಣ, ಮರುಮುದ್ರಣ ಎಂಬ ಪ್ರಕರಣಗಳು ಹೆಚ್ಚು ಶ್ರಮ ಬೇಡದಿರಬಹುದಾದರೂ ಪ್ರಸರಣದ ಕಟ್ಟುಪಾಡುಗಳು ಮೊದಲಿನಂತೇ ಇರುತ್ತದೆ. ಈ ಯಾವ ಹಂತದಲ್ಲೂ ಪ್ರಕಟಿತ ಕೃತಿ ಪ್ರಭಾವಿಯಾಗದಿದ್ದರೆ ಅದು ರದ್ದಿಯಾಗುವುದು ಖಾತ್ರಿ. ಇಲ್ಲಿ ದಿನದ ಕೊನೆಯಲ್ಲಿ ಪತ್ರಿಕಾ ಮಳಿಗೆಗಳು ಕಟ್ಟಿ ಮೂಲೆಗೆಸೆಯುವ ದೈನಿಕ ಅಥವಾ ನಿಯತಕಾಲಿಕಗಳನ್ನಷ್ಟೇ ಕುರಿತು ಮಾತಾಡುತ್ತಿಲ್ಲ – ನೆನಪಿರಲಿ. ಇಂದಿನ ಬಹುತೇಕ ಪುಸ್ತಕಗಳ ದೊಡ್ಡ ಸಂಖ್ಯೆಯ ವಹಿವಾಟುಗಳೆಲ್ಲ ಸಗಟು ಖರೀದಿ ಎಂಬ ಸರಕಾರ ಪ್ರಾಯೋಜಿಸಿದ ಬಹುದೊಡ್ಡ ಅನಾಚಾರದ ಉಣಿಸು. ಇದರ ವಿವರಗಳ ವಿಸ್ತರಣೆಗೆ ಅತ್ರಿ ಪ್ರಕಾಶನ ಮುಚ್ಚಿದೆ ಲೇಖನ ನೋಡಬಹುದು. ನನ್ನಂಗಡಿ ಮುಚ್ಚುವ ಕಾಲಕ್ಕೆ ನಾನು ಅರ್ಧಕ್ಕರ್ಧ ಬೆಲೆ ಇಳಿಸಿ ಮಾರಿದ, ಕೊನೆಗೆ ತೂಕಕ್ಕೂ ಹಾಕಿದ ಲಕ್ಷಾಂತರ ರೂಪಾಯಿ ಮುದ್ರಿತ ಮೌಲ್ಯದ ಪುಸ್ತಕಗಳಿಗೂ ನಿಜದಲ್ಲಿ ದಕ್ಕಿದ್ದು ರದ್ದಿಯದ್ದೇ ಲೆಕ್ಕ! ಆದರೆ ಜಾಲತಾಣ ಅಥವಾ ವಿದ್ಯುನ್ಮಾನ ಪ್ರಕಟಣೆ ಮೊದಲ ಹೆಜ್ಜೆಯಲ್ಲೇ ಮುದ್ರಣ ಮಾಧ್ಯಮದಿಂದ ನೂರಾರು ಕಿಮೀ ಮುಂದಿದೆ. ಇಲ್ಲಿ ಪ್ರಕಟಣೆಗೆ ಕಿಂಚಿತ್ ಶ್ರಮ ಸಾಕು; ವೆಚ್ಚ ಅಲ್ಲ. ಮತ್ತೆ ಪ್ರಕಟಣೆ ಪರಮ ಲಕ್ಷ್ಯ ಹಾಗೂ ಕೊನೆ ಅಲ್ಲವೇ ಅಲ್ಲ. ಇಲ್ಲಿ ಬರಹ, ಗಾತ್ರ, ವರ್ಣ, ಚಿತ್ರ, ಚಲನೆ, ಧ್ವನಿ ಮುಂತಾದ ತೋರಿಕೆಗಳೆಲ್ಲ ಭಿನ್ನ ನೆಲೆಗಳ ಒಂದು ಸಂಯೋಜನೆ ಮಾತ್ರ. ಒಂದೆರಡು ಕೀಲಿಗಳನ್ನೊತ್ತುವ ಶ್ರಮದಲ್ಲಿ ಇಲ್ಲಿನ ಪ್ರಕಟಣೆಗಳು ವಿಶ್ವವ್ಯಾಪ್ತಿಯನ್ನು ಗಳಿಸುತ್ತವೆ ಮತ್ತು ಅಷ್ಟೇ ಸುಲಭದಲ್ಲಿ ಚಿರಂಜೀವತ್ವವನ್ನೂ ಪಡೆಯುತ್ತವೆ. ಇದರ ತಾಂತ್ರಿಕ ವಿವರಗಳನ್ನು ವಿಸ್ತರಿಸಲು ನಾನು ಅಧಿಕಾರಿಯೂ ಅಲ್ಲ, ಇಲ್ಲಿ ಅದರ ಅಗತ್ಯವೂ ಇಲ್ಲ.

ಉಪಯುಕ್ತತೆ: ಜಾಲತಾಣ ವ್ಯವಸ್ಥಿತ ಗ್ರಂಥ ಭಂಡಾರ ಅಥವಾ ಒಂದು ಕೈ ಮೇಲಾಗಿ ಎಂದೂ ಬತ್ತದ ಮಾಹಿತಿ ಕೋಶ. ಮುದ್ರಿತ ಪುಸ್ತಕಲೋಕದ ಯಾವ ಔಪಚಾರಿಕ ಮತ್ತು ಆರ್ಥಿಕ ಹೊರೆಯಿಲ್ಲದೇ ಸದಾ ಎಲ್ಲರ ಬಳಕೆಗೆ ಒದಗುವ ದಾಸ್ತಾನು ಕೋಠಿಯೂ ಹೌದು. ಏಕ ಕಾಲದಲ್ಲಿ, ಬಹುದೇಶದಲ್ಲಿ ಇಲ್ಲಿನ ಮಾಹಿತಿಯನ್ನು ಗ್ರಹಿಸಬಹುದು, ಬಳಸಬಹುದು. (ನೆನಪಿರಲಿ, ಗ್ರಂಥಾಲಯದಲ್ಲಿ ಬೇಡಿಕೆ ಹೆಚ್ಚಿದರೆ ಲಭ್ಯ ಪ್ರತಿಗಳ ಸಂಖ್ಯೆ ಕಡಿವಾಣ ಹಾಕುತ್ತದೆ.) ಯಾವುದೇ ಕಾರಣಕ್ಕೆ ನುಸುಳಿದ ತಪ್ಪುಗಳನ್ನು ಎಂದೂ ಕ್ಷಣಮಾತ್ರದಲ್ಲಿ ತಿದ್ದಬಹುದು, ಪರಿಷ್ಕರಿಸಬಹುದು. (ನೆನಪಿರಲಿ, ಮುದ್ರಿತ ಪುಸ್ತಕಗಳಲ್ಲಿ ಪರಿಷ್ಕೃತ ಮರುಮುದ್ರಣದವರೆಗೆ ಕಾಯಲೇಬೇಕು) ಎಲ್ಲವನ್ನೂ ದಿನಾಂಕ, ಶೀರ್ಷಿಕೆ, ವಿಷಯ, ಲೇಖಕ ಎಂದಿತ್ಯಾದಿ ಎಷ್ಟೂ ವರ್ಗೀಕರಣ ಮಾಡಿಟ್ಟರೆ ಹುಡುಕುವುದು, ಮರುಹೆಕ್ಕುವುದು ಕ್ಷಣಮಾತ್ರದ ಕೆಲಸವಾಗುತ್ತದೆ. (ಅಲ್ಲದಲ್ಲಿ ಅಸಂಖ್ಯ ಪುಸ್ತಕಗಳ ಸಂಗ್ರಹ, ಪುಟಗಳ ನಡುವಣ ಹುಡುಕಾಟ ಇತ್ಯಾದಿ ಸಮಸ್ಯಾ ಸರಣಿ ಇದ್ದದ್ದೇ) ಮುದ್ರಿತ ಪುಸ್ತಕದಲ್ಲಿ ಆವಶ್ಯಕತೆಯನ್ನನುಸರಿಸಿ ನಾವು ನೆರಳಚ್ಚುಗಳನ್ನು ನೆಚ್ಚುವುದಿದೆ. ಜಾಲತಾಣದಲ್ಲಿ ಸೇತು ಕೊಡುವ ಮೂಲಕ ಎಲ್ಲರನ್ನೂ ನೇರ ವಿವಿಧ ಮೂಲಗಳಿಗೇ ಮುಟ್ಟಿಸಬಹುದು. ಅಲ್ಲದಿದ್ದರೂ ಶುದ್ಧ ಮುದ್ರಿತ ಪ್ರತಿ ತೆಗೆಯುವುದಾಗಲೀ ಯಥಾ ಪ್ರತಿಯನ್ನೇ ಬೇಕಾದಂತೆ ಬಳಸುವುದಾಗಲೀ ಒಂದೆರಡು ಕೀಲಿಗಳ ಚಳಕ. ಕೆಟ್ಟ ಉದಾಹರಣೆಯಾಗಿ `ಕತ್ತರಿಸು, ಅಂಟಿಸು’ ಪ್ರವೀಣರು ಅನ್ಯರ ಸಂಶೋಧನಾ ಸಂಪ್ರಬಂಧಗಳನ್ನು ತಮ್ಮದನ್ನಾಗಿಯೇ ಬಿಂಬಿಸಿಕೊಂಡ ಎಷ್ಟೂ ಕತೆಗಳನ್ನು ನೀವು ಕೇಳಿಯೇ ಇರುತ್ತೀರಿ. ಸರಳವಾಗಿ ಹೇಳುವುದಿದ್ದರೆ ಮುದ್ರಣ ಮಾಧ್ಯಮದಲ್ಲಿ ಒಂದು ಸಂಶೋಧನಾ ಲೇಖನ ಪೂರ್ಣಗೊಳ್ಳಲು ಲೇಖಕ ಅನುಬಂಧದಲ್ಲಿ ಇಪ್ಪತ್ತೆಂಟು ಗ್ರಂಥಗಳ ಪಟ್ಟಿ ಮಾಡಿದರೆ, ಪರಿಪೂರ್ಣ ಓದಿಗೆ ಅಷ್ಟನ್ನೂ ಸಂಗ್ರಹಿಸುವ ಸಾಹಸಕ್ಕೆ ಓದುಗ ಇಳಿಯಬೇಕಾಗುತ್ತಿತ್ತು ಮತ್ತು ಎಷ್ಟೋ ಪುಸ್ತಕಗಳನ್ನು ಸಂಗ್ರಹಿಸುವಲ್ಲಿ ಸೋಲುವುದೂ ಖಾತ್ರಿ ಇತ್ತು. ಜಾಲತಾಣದಲ್ಲಿ ಪುಸ್ತಕ-ಪುಸ್ತಕಗಳ ಅಂತರ ಕೇವಲ ಒಂದು ಚಿಟಿಕೆ! ನಿಭಾಯಿಸುವ ತಾಕತ್ತನ್ನನುಸರಿಸಿ, ಯೋಗ್ಯ ಜಾಲತಾಣವೆಂದರೆ ಗಣಕಲೋಕದ ಆಳಕ್ಕೂ ಅಂತರ್ಜಾಲದ ವಿಶ್ವವಿಸ್ತಾರಕ್ಕೂ ಸಹಜ ವಾರೀಸುದಾರ. ಸಾರ್ವಜನಿಕಕ್ಕೆ ಕಾಣುವ ಜಾಲತಾಣದ ಲೇಖನಗಳ ಹಿನ್ನೆಲೆಯಲ್ಲಿ ಅಸಂಖ್ಯ, ಅನೂಹ್ಯ ಹೊಂದಾಣಿಕೆಗಳಿವೆ. ಇಲ್ಲಿ ಕಾಣುವ ಚಿತ್ರ, ಸಂಗೀತ, ಮಾತು, ಚಲಚಿತ್ರ ಮುಂತಾದವೆಲ್ಲಾ ಇನ್ನೊಂದೇ ವ್ಯವಸ್ಥೆಯಲ್ಲಿ ನೆಲೆಗೊಂಡಿರುತ್ತವೆ. ಹಾಗೇ ಇಲ್ಲಿನ ಸೇತುಗಳು ಚಿಟಿಕೆ ಮಾತ್ರಕ್ಕೆ ಯಾವುದೋ ನೆಲೆಯಿಂದ ಇನ್ಯಾವುದೋ ನೆಲೆಗೆ, ಕನ್ನಡಿಗೆದುರಾದ ಕನ್ನಡಿಯಂತೆ ಅನಂತವಾಗಿ ನಮ್ಮೆದುರು ಅನಾವರಣಗೊಳ್ಳುತ್ತಲೇ ಹೋಗುತ್ತದೆ. ಜಾಲತಾಣದ ಓದು ಮುದ್ರಿತ ಅಕ್ಷರಗಳ ಓದಿನಿಂದ ಎಷ್ಟೋ ಮಿಗಿಲಾಗಿ ವೀಕ್ಷಣೆ, ಕ್ರಿಯೆ, ಶಬ್ದಗಳೇ ಮೊದಲಾದ ಆಯಾಮಗಳನ್ನೂ ಏಕಕಾಲಕ್ಕೆ ವ್ಯಾಪಿಸಿ, ಪ್ರಭಾವಿಸುತ್ತದೆ.

ದಾಸ್ತಾನು ಕೋಠಿ ಎನ್ನುವುದಕ್ಕೆ ನನ್ನದೇ ಒಂದು ಸಣ್ಣ ಉದಾಹರಣೆ ಹೇಳಬೇಕಾಗುತ್ತದೆ. ನನ್ನ ಕ್ರಿಯಾತ್ಮಕ ಎನ್ನುವ ಸುಮಾರು ಐವತ್ತು ವರ್ಷಗಳ ಅವಧಿಯ ಅನುಭವವನ್ನು ಇತರರಿಗೆ ಉಣಬಡಿಸಬೇಕಾದರೆ ನಾನಿಣುಕುವ ಪಾತ್ರೆಗಳು ಕೈಕೊಡುವ ನೆನಪು, (ಮುದ್ರಿತ ಪುಸ್ತಕವೇ ಆದರೂ) ಮಾಸಲು ಬರವಣಿಗೆ, ಕಳೆಗುಂದಿದ ಚಿತ್ರ ಇತ್ಯಾದಿ. ಈ ಉಪಾಧಿಗಳು ಕಾಲಕರ್ಮದಲ್ಲಿ ಇನ್ನಷ್ತು ಶಿಥಿಲಗೊಳ್ಳುವುದು ಪೂರ್ಣ ನಶಿಸುವುದೂ ಇದೆ. ಬದಲು ಅವನ್ನು ನಿಶ್ಶುಲ್ಕವಾಗಿ ನೀವು ಗಣಕಲೋಕಕ್ಕೆ ಏರಿಸಿದ್ದೇ ಆದಲ್ಲಿ ವ್ಯಕ್ತಿಜೀವನದ ಸೀಮಿತ ಕಾಲಪ್ರಪಂಚಕ್ಕೆ ಹೋಲಿಸಿದಾಗ ಅದು ನಿರ್ವಿವಾದವಾಗಿ ಅಮರವೂ ಅಪಾರವೂ ಆಗುತ್ತದೆ!

ವಿದ್ಯುನ್ಮಾನ (ವಿ.) ಪುಸ್ತಕ: ಪುಸ್ತಕೋದ್ಯಮದ ಕೆಲವು ಹಳೆ ಗೆಳೆಯರು ನನ್ನೆಲ್ಲ ನಿರುತ್ತೇಜನಗಳನ್ನು ತಳ್ಳಿ ಹಾಕಿ, ನನ್ನ ಲೇಖನಗಳ ಸಂಕಲನ ತರಲು ಮುಂದಾದರು. ಆಗ ಜಾಲತಾಣದ ಲೇಖನಗಳನ್ನೇ ಹೊಂದಿಸಿ, ಮುದ್ರಣ ಮಾಧ್ಯಮಕ್ಕೆ ಹೊಂದುವಂತೆ ತುಸು ಪರಿಷ್ಕರಿಸಿ ಕೊಡುವುದು ನಮಗೆ ತುಂಬ ಸುಲಭದ ಮಾತಾಯ್ತು. ಸಹಜವಾಗಿ ಜಾಲತಾಣಕ್ಕೆ ವಿ-ಪುಸ್ತಕವನ್ನೂ ಸೇರಿಸಿ, ಆಸಕ್ತರಿಗೆ ಉಚಿತವಾಗಿ ಕೊಡುವ ಯೋಚನೆ ಸೇರಿಕೊಂಡಿತು. ಎಲ್ಲ ಉಚಿತ ಯಾಕೆಂದು ಒಂದು ಸ್ಪಷ್ಟೀಕರಣ.

ನನ್ನ ತಂದೆ ಒಟ್ಟಾರೆ ಲೇಖನ, ಭಾಷಣಾದಿಗಳನ್ನು ಸದಾ ‘ಸಮಾಜದ ಋಣಸಂದಾಯ’ ಎಂದೇ ಹೇಳುತ್ತಿದ್ದರು. ಅಂದರೆ ಸರಳ ಜೀವನಯಾಪನೆಗೆ ಬೇಕಾದಷ್ಟನ್ನು ಸಮಾಜ ನನಗೆ ಒದಗಿಸಿದೆ. ಹೀಗೆ ಇದರಿಂದ ನನ್ನಲ್ಲಿ ಸೇರಿರುವ ‘ಸಂಪತ್ತ’ನ್ನು ಅಷ್ಟೇ ಜವಾಬ್ದಾರಿಯಿಂದ ನಾನು ಸಮಾಜಕ್ಕೆ ಮರಳಿಸಬೇಕು. ಹೀಗಾಗಿ ನನ್ನ ಮುದ್ರಿತ ಪುಸ್ತಕ ಪ್ರಕಾಶನ ಕಾಲದಲ್ಲಿ ಆರ್ಥಿಕವಾಗಿ ತಂದೆ ನನ್ನಿಂದ ತಂದೆ ಏನೂ ಪಡೆಯಲಿಲ್ಲ. ಅಷ್ಟೇ ಅಲ್ಲ, ಒಟ್ಟಾರೆ ಪ್ರಕಾಶನದ ಗುರುತರ ಜವಾಬ್ದಾರಿಗಳಾದ ಸಂಪಾದನೆ, ಮುದ್ರಣಾಲಯದ ಉಸ್ತುವಾರಿಗಳನ್ನೂ ಉಚಿತವಾಗಿಯೇ ಮಾಡಿಕೊಟ್ಟರು. ನಾನಾದರೋ ಪ್ರಕಾಶನಕ್ಕೆ ಅನುದಾನ, ಬಹುಮಾನ, ಸಗಟು ಖರೀದಿಗಳಂಥ ಒಳದಾರಿಗಳನ್ನು ನಿರಾಕರಿಸಿ ನೇರ ಓದುಗರನ್ನು ಲಕ್ಷ್ಯವಾಗಿಟ್ಟುಕೊಂಡೆ. ಪುಸ್ತಕಗಳನ್ನು ಸುಲಭ ಬೆಲೆಯಲ್ಲೇ ಪ್ರಕಟಿಸಿದೆ.

ಇಂಗ್ಲಿಷ್ ಸೇರಿದಂತೆ ಹಲವು ವಿದೇಶೀ ಭಾಷೆಗಳಲ್ಲಿ ವಿ-ಪುಸ್ತಕಗಳು ಹಳೆಯ ಮಾತು. ಸಹಜವಾಗಿ ಕನ್ನಡದಲ್ಲೂ ವಿ-ಪುಸ್ತಕಗಳ ಪ್ರವೇಶ, ವಾಣಿಜ್ಯ ವಹಿವಾಟು ತೊಡಗಿಯಾಗಿತ್ತು. ಪರಿಚಿತರೊಬ್ಬರು ಎಷ್ಟೋ (ಬಹುಶಃ ೨೫%) ಲಾಭಾಂಶದ ಆಶ್ವಾಸನೆ ಸಹಿತ ನನ್ನ ಪ್ರಕಟಣೆಗಳ ವಿತರಣಾವಕಾಶವನ್ನು ಕೋರಿದ್ದೂ ಇತ್ತು. ಜಾಲತಾಣದಂತೆ ವಿ-ಪುಸ್ತಕಕ್ಕೂ ಸಮರ್ಥವಾದ, ಆದರೆ ಅಂತರ್ಜಾಲದಲ್ಲಿ ಮುಫತ್ತಾಗಿ ಒದಗುವ ವ್ಯವಸ್ಥೆಯನ್ನು ಆಯ್ದು ಮುಂದುವರಿಯುವಲ್ಲಿ ತುಸು ವಿಳಂಬ ಕಾಡಿತ್ತು. ಅದು ದೊರಕಿದ್ದೇ ವಿದ್ಯುನ್ಮಾನ ಪುಸ್ತಕ ವಿಭಾಗವನ್ನು ಜಾಲತಾಣದಲ್ಲಿ ಲೋಕಾರ್ಪಣ ಮಾಡಿದ್ದೇವೆ.

ಅನ್ಯ ವಿಭಾಗಗಳು: ಹೀಗೆ ಉಚಿತವಾಗಿ ಒಂದು ಧ್ವನಿವಾಹಿನಿ (ಗೆಳೆಯ ಮಹಾಲಿಂಗ ಭಟ್ಟರ ಕೃಪೆ), ಒಂದು ಭಾಷಣ (ಹಿರಿಯ ಗೆಳೆಯ ವಿಲ್ಲಿ ಡ ಸಿಲ್ವರ ಕೃಪೆ) ಸಿಕ್ಕಿದಾಗ ನನ್ನ ಜಾಲತಾಣದಲ್ಲಿ ಧ್ವನಿ ವಿಭಾಗ ಸೇರಿಕೊಂಡಿತು. ಲೇಖನಗಳ ಜತೆಯಲ್ಲಿ ಬಂದ ನಕ್ಷೆ ಹಾಗೂ ವಿಡಿಯೋ ಚಿತ್ರಣಗಳನ್ನು ಪ್ರಕಟಿತ ಲೇಖನಗಳಿಂದ ಸ್ವತಂತ್ರವಾಗಿ ಬಳಸುವವರ ಸೌಕರ್ಯಕ್ಕಾಗಿ ಪ್ರತ್ಯೇಕಿಸಿ, ವಿಭಾಗವನ್ನೇ ರಚಿಸಿದ್ದೂ ಆಗಿದೆ. ಹಳತರಲ್ಲಿ ಆಯ್ದು ಓದಬಯಸುವವರ ಅನುಕೂಲಕ್ಕಾಗಿ ಅಸಂಖ್ಯ ರುಚಿ (ಯಕ್ಷಗಾನ, ಪರಿಸರ, ವನ್ಯ, ಜೀವನಚಿತ್ರ ಇತ್ಯಾದಿ), ಶೀರ್ಷಿಕೆ (ಚಕ್ರವರ್ತಿಗಳು, ಕಪ್ಪೆ ಶಿಬಿರ ಇತ್ಯಾದಿ) ಮತ್ತು ಕಾಲಸೂಚಕ ವಿಭಾಗಗಳಲ್ಲೂ ಒದಗಿಸಿದ್ದೇವೆ. ಜಾಲತಾಣದ ಯಾವುದೇ ಪ್ರಕಟಣೆಗಳಿಗೆ ಲಿಖಿತ ಪ್ರತಿಕ್ರಿಯೆ ಕೊಡಲು ಅನುಕೂಲವಾಗದವರಿಗೆ ಧ್ವನಿ ರವಾನೆಯ ವ್ಯವಸ್ಥೆ (ವಾಯ್ಸ್ ಮೇಲ್) ಲಗತ್ತಿಸಿದ್ದಾಯ್ತು. ಈಚೆಗೆ ಮುಖ್ಯವಾಗಿ ದೃಷ್ಟಿಹೀನರ ಅನುಕೂಲಕ್ಕಾಗಿ, ಕೇಳು ಪುಸ್ತಕವನ್ನು ಸೇರಿಸುವ ಕೆಲಸವೂ ನಡೆದಿದೆ. ಮುಂದೆ ಮುದ್ರಣದಲ್ಲಿಲ್ಲದ ತಂದೆಯವೂ ಸೇರಿದಂತೆ ನನ್ನೆಲ್ಲ ಪುಸ್ತಕಗಳನ್ನೂ ವಿ-ಪುಸ್ತಕ ಮಾಡುವ ಯೋಜನೆಯಿದೆ. ಇನ್ಯಾರೇ ಉಚಿತವಾಗಿ ಅವರ ಯಾವುದೇ ಕೃತಿಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಬೆರಳಚ್ಚು ಮಾಡಿಕೊಟ್ಟುದಾದರೆ ಪುಸ್ತಕ ರೂಪಿಸಿ, ನಮ್ಮ ಪ್ರಕಟಣಾ ಪಟ್ಟಿಗೆ ಸೇರಿಸಿ, ಉಚಿತ ಪ್ರಸರಣ ನಡೆಸುವುದೂ ನಮಗೆ ಹೆಮ್ಮೆಯ ಕೆಲಸ. ಈ ನಿಟ್ಟಿನಲ್ಲಿ ಅದ್ವಿತೀಯವಾಗಿ ತಮ್ಮೆರಡು ಕೃತಿಗಳನ್ನು ಪೂರೈಸಿದವರು ಎ.ವಿ.ಗೋವಿಂದರಾವ್. ನಾರಾಯಣ ಯಾಜಿ ಮತ್ತು ಈಚೆಗೆ ವಿದ್ಯಾ ಮನೋಹರ ಕೂಡಾ ನಮ್ಮ ವಿ-ಪುಸ್ತಕದ ಉದಾತ್ತ ಮೌಲ್ಯವನ್ನು ಗೌರವಿಸಿ ಅಂಗೀಕರಿಸಿರುವುದು ಸ್ಮರಣಾರ್ಹ. ಇಂದು ಹದಿನೈದಕ್ಕೂ ಮಿಕ್ಕು ವಿ-ಪುಸ್ತಕಗಳು ನನ್ನ ಜಾಲತಾಣದ ಪುಸ್ತಕ ವಿಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿವೆ, ಇನ್ನಷ್ಟು ಸೇರಲಿವೆ.

ನಿಯತಕಾಲಿಕತೆ: ಜಾಲತಾಣದ ಸಾಮಾನ್ಯ ಓದುಗರ ಸಮಯ ಹಾಗೂ ತಾಳ್ಮೆಗೆ ಹೊರೆ ಮಾಡದ ನಿಲುವು ನನ್ನದು. ಹಾಗಾಗಿ ವಾರಕ್ಕೆರಡು ಬಾರಿ ಮಾತ್ರ ನಾನು ಹೊಸ ಬರೆಹಗಳನ್ನು ಪ್ರಕಟಿಸುತ್ತೇನೆ. ಅವನ್ನೂ ಮೈಕ್ರೋಸಾಫ್ಟ್ ವರ್ಡ್‌ನ ೨೦ ಗಾತ್ರದ ಅಕ್ಷರಗಳಲ್ಲಿ ಕನಿಷ್ಠ ಹತ್ತು ಪುಟ ಮೀರುವಂತೆ ಕೊಡುತ್ತೇನೆ (ಚಿತ್ರ, ನಕ್ಷೆ ಪ್ರತ್ಯೇಕ). ಮತ್ತೆ ಜಾಲತಾಣ ಯಾವುದೇ ಸ್ಥಳಮಿತಿಯನ್ನು ವಿಧಿಸುವುದಿಲ್ಲವಾದ್ದರಿಂದ ಆ ಕಂತು ಅಥವಾ ಸ್ವತಂತ್ರ ಲೇಖನ ಸದಾ ತಾರ್ಕಿಕ ಕೊನೆಗಾಣುವಂತೆ ನೋಡಿಕೊಳ್ಳುತ್ತೇನೆ. (ಮುದ್ರಣ ಮಾಧ್ಯಮದಂತೆ ಪುಟ ಸಂಖ್ಯೆ ನೋಡಿ ಕತ್ತರಿಸಿಲ್ಲ, ಕೆಲವೊಮ್ಮೆ ಕೊರತೆಯಾಯ್ತೆಂದು ಬರಿಯ ನೀರು ಉಪ್ಪು ಬೆರೆಸಿ ‘ಮದುವೆ ಸಾರು’ ಮಾಡಿಲ್ಲ!)

ಜಾಲತಾಣದಲ್ಲಿ ಲೇಖನಗಳ ಪ್ರಕಟಣೆಗೆ ಕಾಲನಿರ್ದೇಶನದೊಡನೆ ಏರಿಸಿಡುವ ಸೌಲಭ್ಯವಿದೆ. ಇಂದು ನನ್ನ ಬಹುತೇಕ ಲೇಖನಗಳು ಕನಿಷ್ಠ ಒಂದು ವಾರಕ್ಕೂ ಮೊದಲೇ ಅಂತರ್ಜಾಲಕ್ಕೇರಿ ಪ್ರಕಟಣೆಗೆ ಮಂಗಳವಾರ ಅಥವಾ ಶುಕ್ರವಾರದ ಮಧ್ಯರಾತ್ರಿಯನ್ನು ಕಾದು ಕುಳಿತಿರುತ್ತವೆ. ಸದ್ಯ ಧಾರಾವಾಹಿಯಾಗಿ ನಡೆಯುತ್ತಿರುವ ಡೇವಿಡ್ ಕಾಪರ್ಫೀಲ್ಡ್ ೨೦೧೫ರ ಜುಲೈ ತಿಂಗಳ ಮೂರನೇ ಮಂಗಳವಾರದವರೆಗೂ ಅಂದರೆ, ಕೊನೆಯ ಅರವತ್ನಾಲ್ಕನೇ ಅಧ್ಯಾಯದವರೆಗೂ ಅಂತರ್ಜಾಲಕ್ಕೇರಿಸಿ ತಿಂಗಳು ಎರಡು ಕಳೆದಿದೆ!! ನಾನು ಆಯಾ ದಿನದಂದು ಜಾಲಿಗ ಬಳಗಕ್ಕೆ ಪತ್ರಗಳನ್ನೂ ಫೇಸ್ ಬುಕ್ಕಿಗೆ ಟಿಪ್ಪಣಿಯನ್ನೂ ಏರಿಸುವುದಷ್ಟೇ ಕೆಲಸ.

ಸ್ವಾಯತ್ತವೇಕೆ?: ವಿದ್ಯುನ್ಮಾನ ವಹಿವಾಟುಗಳು ಇಂದು ವಿಕಸಿಸಿರುವ ಪರಿಯಲ್ಲಿ ಅಂತರ್ಜಾಲಕ್ಕೇರಿಸಿದ ಪುಸ್ತಕ, ಮಾಹಿತಿಗಳೆಲ್ಲವನ್ನೂ ವಾಣಿಜ್ಯ ‘ಸರಕು’ಗಳನ್ನಾಗಿಸುವ ಅವಕಾಶಗಳು ಧಾರಾಳವಿವೆ. (ತಪ್ಪೇನೂ ಅಲ್ಲ.) ಅವನ್ನು ನಾನು ನಿರಾಕರಿಸಿಯೇ ನಡೆದಿರುವುದರಿಂದ ಅಂತರ್ಜಾಲದಲ್ಲಿ ಈಗಾಗಲೇ ‘ಜನಪ್ರಿಯತೆ’ಯನ್ನು ಗಳಿಸಿದ ಇತರ ಜಾಲತಾಣಗಳನ್ನು ಆಶ್ರಯಿಸಿಲ್ಲ. ಸ್ವತಂತ್ರ ಧೋರಣೆಯಂತೇ ನನ್ನ ಜಾಲತಾಣ ರೂಢಿಸಿದ್ದೇನೆ. ಆದರೂ ಕಾಲಕಾಲಕ್ಕೆ ವಿಷಯಾಧಾರಿತವಾಗಿ ಇಲ್ಲಿನ ಹಲವು ಲೇಖನಗಳನ್ನು ಇತರ ಕೆಲವು ಜಾಲತಾಣಗಳು ಮರುಪ್ರಕಟಿಸಲು ಉತ್ಸಾಹ ತೋರಿದ್ದಿದೆ. ಅಂಥಲ್ಲೆಲ್ಲ ಯಾವುದೇ ಆರ್ಥಿಕ ನಿರೀಕ್ಷೆಗಳಿಲ್ಲದೆ ನಾನು ಅನುಮತಿಸಿದ್ದೇನೆ. ಆದರೆ ಅಷ್ಟೇ ಖಡಕ್ಕಾಗಿ ಲೇಖನವನ್ನು ಯಾವುದೇ ತಿದ್ದುಪಡಿಗಳಿಗೊಳಪಡಿಸದೇ (ಮುಖ್ಯವಾಗಿ, ಕತ್ತರಿಸಬಾರದು!) ಪ್ರಕಟಿಸಬೇಕು. ಮೂಲ ಜಾಲತಾಣದ ಸ್ಮರಣೆಯನ್ನು ಸ್ಪಷ್ಟವಾಗಿ ಕಾಣಿಸಬೇಕು ಎಂಬೆರಡು ನಿಬಂಧನೆಗಳನ್ನು ಮಾತ್ರ ಹೇರಿದ್ದೇನೆ. ಹೀಗೆ ಅವಧಿ, ಕೆಂಡಸಂಪಿಗೆ, ದಟ್ಸ್ ಕನ್ನಡ, ಅರೆನ್ನೆನ್ ಲೈವ್ ಮೊದಲಾದ ಜಾಲತಾಣಗಳೂ ವಿಶಿಷ್ಟ ಕಲಾ ಅಥವಾ ಸಾಂಸ್ಕೃತಿಕ ಬಳಗ ಪೋಷಕ ನಿಯತಕಾಲಿಕಗಳಾದ ನೂಪುರಭ್ರಮರಿ, ತುಳುವ, ಬಲ್ಲಿರೇನಯ್ಯಗಳೂ ಬಳಸಿಕೊಂಡದ್ದು ಉಂಟು.

ಓದುಗರು ಯಾರು: ಅಂತರ್ಜಾಲದ ನಿಭಾವಣೆಯಲ್ಲಿ ಪಳಗಿರುವ ಎಷ್ಟೋ ಮಂದಿ ನನ್ನ ತಾಣದ ನೇರ ಸದಸ್ಯತನದ ಪ್ರಯೋಜನವನ್ನು ಪಡೆಯುತ್ತಿರುವುದು ನನಗೆ ಪರೋಕ್ಷವಾಗಿ ತಿಳಿದಿದೆ, ಸಂತೋಷವಿದೆ. (ನನ್ನಲ್ಲಿ ಅವರ ಲೆಕ್ಕವಿಲ್ಲ.) ನಾನು ಉದ್ದೇಶಪೂರ್ವಕವಾಗಿ ಜಾಲತಾಣದ ಪ್ರಚಾರವನ್ನು ಎರಡು ಸ್ತರಗಳಲ್ಲಿ ಮಾಡುತ್ತಿದ್ದೇನೆ. ಮೊದಲನೆಯದು ಈ ಮೊದಲೇ ಹೇಳಿದಂತೆ ಪ್ರತಿ ಲೇಖನ ಪ್ರಕಟವಾದಂದು ವೈಯಕ್ತಿಕವಾಗಿ ಬರೆಯುವ ಪತ್ರ.

ಎರಡನೆಯ ಪ್ರಚಾರಾವಕಾಶ – ಫೇಸ್ ಬುಕ್. ಇಂದು ಚಿತ್ರಗ್ರಹಣ ತ್ರಿವಿಕ್ರಮ ಗಾತ್ರದಲ್ಲಿ ಬೆಳೆದ ಪರಿಗೆ ಅಪ್ಯಾಯಮಾನವಾಗಿ ಒದಗುತ್ತಿದೆ ಈ ಸೌಲಭ್ಯ. ಆಸಕ್ತಿ, ಅನುಭವ ಮತ್ತು ಅಧ್ಯಯನವಿಲ್ಲದಿದ್ದರೂ ಕೈಯಲ್ಲಿ ಹಿಡಿದ (ಬಹುತೇಕ ಚರವಾಣಿ) ಯಂತ್ರ ಸಾಮರ್ಥ್ಯದಿಂದ, ಮಿಂಚಲೆಳಸುವ ಹಲವರ ದೌರ್ಬಲ್ಯವೂ ಆಗಿ ಬೆಳೆದದ್ದಕ್ಕೇ ನಾನಿದನ್ನು ಮುಖ (ತೋರಿಸುವ) ಪುಸ್ತಕ ಎಂದೇ ಗೇಲಿ ಮಾಡುವುದೂ ಇದೆ. ಅದರಲ್ಲಿ ನಾನು ಖಾತೆ ತೆರೆದು, ನಿರ್ಯೋಚನೆಯಿಂದ ಜಾಲತಾಣದ ಪ್ರಚಾರಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದೇನೆ. ಅದರಲ್ಲಿ ನನ್ನ ಇರವನ್ನು ಸ್ಥಾಪಿಸಲಿಕ್ಕಾಗಿ ದೈನಿಕ ಧಾರಾವಾಹಿಯೊಂದನ್ನು (ಆಲ್ಬರ್ಟ್ ಐನ್ಸ್‍ಟೈನರ ದಿನಕ್ಕೊಂದು ಚಿಂತನೆ) ನಡೆಸುತ್ತೇನೆ. ಕೆಲವು ಲಘು ಟಿಪ್ಪಣಿಗಳನ್ನು, ಚುಟುಕು ಪ್ರತಿಕ್ರಿಯೆಗಳನ್ನೂ ಹಾಕಿದ್ದಿದೆ. ಇದು ಮುಖಪುಸ್ತಕದ ಅನೌಪಚಾರಿಕತೆಯನ್ನು ಪೋಷಿಸುತ್ತಲೇ ವಿಚಾರದ ಕಿಡಿಯನ್ನು ಮುಟ್ಟಿಸೀತು ಎನ್ನುವುದು ನನ್ನ ಆಶಯ. ನನ್ನ ಅಥವಾ ಮಿತ್ರರುಗಳದ್ದೇ ಆದರೂ ಹೆಚ್ಚಿನ ಮಾಹಿತಿಯನ್ನೊದಗಿಸುವ ಜಾಲತಾಣದ ಸೇತುವನ್ನಂತು ನಿರ್ಲಜ್ಜವಾಗಿ ತುಂಬುತ್ತಿರುತ್ತೇನೆ.

ನನ್ನ ಅನುಭವಕ್ಕೆ ಬಂದಂತೆ ಫೇಸ್ ಬುಕ್ ಹೆಚ್ಚಾಗಿ ಸಾರ್ವಜನಿಕದಲ್ಲಿ ಮುಖವಿಲ್ಲದವರ (ಕೆಟ್ಟ ಅರ್ಥದಲ್ಲಲ್ಲ, ಶ್ರೀಸಾಮಾನ್ಯರ) ಮುಖವಾಣಿ. ಇಲ್ಲಿ ಗಂಭೀರ ಗ್ರಹಿಕೆಗಳು, ಓದು ಮತ್ತು ಚಿಂತನಾಪರವಾದ ಪ್ರತಿಕ್ರಿಯೆಗಳು ಕಡಿಮೆ. ಕೇವಲ ಯಾಂತ್ರಿಕ ಚಿಟಿಕೆ ಮಾತ್ರದಿಂದ (ಲೈಕ್ ಹೊಡೆಯುವುದು!) ಇಲ್ಲಿ ಜನಪ್ರಿಯತೆಯನ್ನು ಗಳಿಸುವ ಮತ್ತು ಸಾರುವ ಮಂದಿ ಮೆರೆಯುತ್ತಾರೆ. ಸಹಜವಾಗಿ ನನ್ನ ಜಾಲತಾಣಕ್ಕೆ ಭೇಟಿಕೊಡದೆ ‘ಲಾಯಕ್’ ‘ಚಿಟಿಕೆ’ ಹೊಡೆಯುವ ಮಂದಿ ಇದ್ದಾರೆ. ನನ್ನ ನಾಲ್ಕು ಸಾಲಿನ ಪತ್ರವನ್ನಷ್ಟೇ ಓದಿ, ಅದು ಜಾಲತಾಣದಲ್ಲಿರುವ ದೊಡ್ಡ ಲೇಖನಕ್ಕೆ ಕೈಕಂಬ ಎನ್ನುವುದನ್ನು ಅರ್ಥಮಾಡಿಕೊಳ್ಳದೆ, ಅದನ್ನೇ ವಿಮರ್ಶಿಸುವ ಮಂದಿಯನ್ನೂ ಕಂಡಿದ್ದೇನೆ. ಆದರೂ ಜಾಲತಾಣದ ನಿರ್ವಹಣಾ ನಕ್ಷೆಗಳನ್ನು ನೋಡಿದಾಗ ಎರಡು ಲಕ್ಷ ವೀಕ್ಷಣೆಯಲ್ಲಿ ಫೇಸ್ ಬುಕ್ಕಿನ ದಾರಿ ಅನುಸರಿಸಿದವರು ಸಾಕಷ್ಟು ಮಂದಿಯಿದ್ದಾರೆ ಎನ್ನುವುದು ಸಮಾಧಾನದ ಸಂಗತಿ.

ವೀಕ್ಷಕ ವರ್ತನೆ: ಹುಟ್ಟು ದಿನದ ಆಕಸ್ಮಿಕ, ವಿವಾಹದ ವರ್ಷಾಂತಿಕ, ಕ್ಯಾಲೆಂಡರ್ ಬದಲಾವಣೆ, ಗುಡ್ ಮೌರ್ನಿಂಗು, ಗುಡ್ಡೆಗೆ ನಾಯಿಟ್ಟು ಎಂದಿತ್ಯಾದಿ ಹಾರಾಡುವವರನ್ನೆಲ್ಲ ನಾನು ಗೇಲಿಮಾಡುತ್ತಿರುತ್ತೇನೆ. ಭೂಮಿಯಲ್ಲಿ ವಿಕಸಿಸಿದ ಜೀವ ಜಾಲದಲ್ಲಿ ಅತ್ಯಂತ ಕಿರಿದಾದ ಮನುಷ್ಯ ಜೀವಕ್ಕೇ ಲಕ್ಷಾಂತರ ವರ್ಷಗಳು ಸಂದಿವೆ. ಅದರ ವರ್ತಮಾನದ ಮುಖದಲ್ಲಿ ಸರಾಸರಿ ಅರುವತ್ತೆಪ್ಪತ್ತು ವರ್ಷವನ್ನಷ್ಟೇ ಕಾಣಬಲ್ಲ ವ್ಯಕ್ತಿಗೆ ಗ್ರಹಿಸುವ ತಾಕತ್ತಿದ್ದರೆ ಪ್ರತಿ ಕ್ಷಣವೂ ಅದ್ಭುತವಾಗಬೇಕು. ಕ್ಷುಲ್ಲಕ ವೈಯಕ್ತಿಕ ಆಕಸ್ಮಿಕಗಳನ್ನು ಹಿಡಿದುಕೊಂಡು ಅದೇನು ಬೊಬ್ಬೆ! ಹಾಗಾಗಿ ಜಾಲತಾಣ ಅಥವಾ ಫೇಸ್ ಬುಕ್ ಕೊಡುವ ವೀಕ್ಷಣಾ ಅಂಕಿಗಳನ್ನು (ಮುಖಪುಸ್ತಕದಲ್ಲಿ ಲಾಯಕ್ ಅಂತಾರೆ!), ಔಪಚಾರಿಕ ಹೊಗಳಿಕೆಗಳನ್ನು ವೀಕ್ಷಕ ‘ವರ್ತನೆ’ಯ ಭಾಗವಾಗಿ ಅವಶ್ಯ ಗಮನಿಸುತ್ತೇನೆ. ಸ್ಪಷ್ಟ ನನ್ನುತ್ತರ ಬಯಸುವ ಸವಾಲಿದ್ದಾಗ ಮಾತ್ರ ಮರುಮಾತು ಸೇರಿಸುತ್ತೇನೆ. ಅರ್ಥಮಾಡಿಕೊಳ್ಳಬಲ್ಲವರು ಇದನ್ನು ಅಹಂಕಾರದ ನಡೆಯೆಂದು ಕಂಡದ್ದಿಲ್ಲ, ಇತರರಿಗೆ ನಾನು ಏನು ಹೇಳಿಯೂ ಪ್ರಯೋಜನವಿಲ್ಲ.

ಯಾವುದೇ ವಾರದ ದಿನಗಳಲ್ಲಿ ವೀಕ್ಷಣಾ ಜಾಗೃತಿ ಏರುವುದು ಮುಂಜಾನೆ ಹತ್ತು ಗಂಟೆಯಿಂದ ಸಂಜೆಯವರೆಗೆ. ಅಂದರೆ ಅವು ಸಾಮಾನ್ಯವಾಗಿ ಕಛೇರಿಗಳ ಕೆಲಸದ ಅವಧಿಯೇ ಆಗಿರುತ್ತದೆ. ಹೊಸ ಲೇಖನ ಅನಾವರಣಗೊಂಡ ಮೊದಲ ದಿನ ಸಹಜವಾಗಿಯೇ ವೀಕ್ಷಕರ ಸಂಖ್ಯೆ ದೊಡ್ದದಿರುತ್ತದೆ. ಆದರೂ ಅಂದು ಸಾರ್ವಜನಿಕ ರಜೆಯೇನಾದರೂ ಬಂದರೆ ಮತ್ತು ಮುಖ್ಯವಾಗಿ ಸಾಮಾನ್ಯ ರಜಾ ದಿನಗಳಲ್ಲಿ (ಶನಿವಾರ, ಆದಿತ್ಯವಾರ) ದೇಶೀಯ ವೀಕ್ಷಣೆ ಕಡಿಮೆಯಾದರೂ ವಿದೇಶೀ ವೀಕ್ಷಣೆ ಹೆಚ್ಚಿರುವುದು ಅರ್ಥಪೂರ್ಣವಾಗಿಯೇ ಇದೆ. ಅಂದರೆ ಗಣಕಗಳು ನಮ್ಮಲ್ಲಿ ಇನ್ನೂ ಮನೆವಾರ್ತೆಯ ಅಂಗಗಳಾಗಿಲ್ಲ. ಆದರೆ ವಿದೇಶೀಯರಲ್ಲಿ ಅವು ಮನೆಯ ಆವಶ್ಯಕತೆಯಲ್ಲಿ ಒಂದಾಗಿದೆ. ಮತ್ತು ಅವರು ಕಛೇರಿ ಅವಧಿಯಲ್ಲಿ ಅಂತರ್ಜಾಲವನ್ನು ಖಾಸಾ ಕಾರ್ಯಗಳಿಗೆ ಬಳಸುವುದು ಕಡಿಮೆಯೂ ಇರಬಹುದು.

ಮುದ್ರಣವಲ್ಲ, ವಿದ್ಯುನ್ಮಾನದ್ದೇ ಭವಿಷ್ಯ: ಜಾಲತಾಣಗಳಲ್ಲಿ (ಫೇಸ್ ಬುಕ್ಕಿನಲ್ಲೂ) ಒಟ್ಟಾರೆ ಪ್ರತಿಕ್ರಿಯಿಸುವವರು (ಅಲ್ಪಸಂಖ್ಯಾತರು) ಪ್ರಾಥಮಿಕವಾಗಿ ಕನ್ನಡ ತಂತ್ರಾಂಶ ಮತ್ತೆ ಗಣಕ ಪರಿಣತಿಗಳಲ್ಲಿ ಹೆಚ್ಚು ಸ್ವತಂತ್ರರಾದಂತಿಲ್ಲ. ನನ್ನ ತಂದೆ (ಜಿಟಿನಾ) ಲೇಖಕನಾಗಿ ‘ಮುದ್ರಣಕ್ಕಾಗಿ ಸುಂದರ ಹಸ್ತಪ್ರತಿ’ ತಯಾರಿಸುವ ಗರಡಿಯಲ್ಲೇ ಹೆಚ್ಚಿನ ಆಯುಷ್ಯ ಕಳೆದವರು. ಅವರದನ್ನು ಬಹಳ ವೀರಾವೇಶದಿಂದ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಕೊನೆಯಲ್ಲಿ, ಹೆಚ್ಚು ಕಡಿಮೆ ಆರೆಂಟು ವರ್ಷಗಳೊಳಗೇ ಕಾಲಪ್ರಭಾವದಲ್ಲಿ, ಅವರ ವಾದ – ಬೆರಳಚ್ಚು > ಗಣಕಮುದ್ರಣ > ಅಂತಿಮವಾಗಿ ಗಣಕಪರದೆ ಎನ್ನುವವರೆಗೆ ವಿಕಾಸವಾದದ್ದನ್ನು ಆಪ್ತವರ್ಗ ಬಹಳ ಆಶ್ಚರ್ಯದಿಂದಲೇ ಗಮನಿಸಿದ್ದೆವು! (ಅವರು ಕೊನೆಯುಸಿರೆಳೆಯುವ ಕೆಲವುಕ್ಷಣಗಳ ಮೊದಲು ರಮಾಬೆಣ್ಣೂರ್ ಅವರ ಮನೆಯಲ್ಲಿ ಅವರ ಗಣಕದ ಪರದೆಯ ಮೇಲೇ ಲೇಖನ ಒಂದರ ಕರಡು ತಿದ್ದಿದ್ದರು!) ಇಂದಿನ ಸಮಾಜ ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನಕ್ಕೆ ಹೊಂದಿಕೊಳ್ಳುವ ಬಹು ದೊಡ್ಡ ಸಂಕ್ರಮಣ ಕಾಲದಲ್ಲಿದೆ. ಅದು ಬೇಗನೆ ಹೊಸದರಲ್ಲಿ ಮೈಮುರಿದೇಳುವುದರಲ್ಲಿ ಸಂದೇಹವೇನೂ ಇಲ್ಲ. ಹಾಗಾಗಿ ಜಾಲತಾಣದ ಭವಿಷ್ಯದ ಬಗ್ಗೆ, ಇನ್ನೂ ಮುಖ್ಯವಾಗಿ ಅದರ ಸಾರ್ವಜನಿಕ ಉಪಯುಕ್ತತೆಯ ಬಗ್ಗೆ ನನಗೆ ಅಪಾರ ಭರವಸೆಯಿದೆ.

ಪ್ರಸ್ತುತ ವಿಚಾರಗೋಷ್ಠಿಯ ಆಶಯ – ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು, ಇದರ ಗಟ್ಟಿ ಕಾಳುಗಳು ಇನ್ನೇನಿದ್ದರೂ ಕಾಗದದ ಮೇಲಿನ ಮುದ್ರಿತ ರೂಪದಲ್ಲಿ ಪ್ರಕಟವಾಗಲಾರದು. ಮುದ್ರಣಕ್ಕೆ ವರ್ತಮಾನವೇ ಇಲ್ಲ ಎಂದ ಮೇಲೆ ಭವಿಷ್ಯ ಎಲ್ಲಿಂದ ಎಂದೇ ನಾನು ಮೊದಲು ಪ್ರಕಾಶನ ಮತ್ತೆ ಅಂಗಡಿ ಮುಚ್ಚಿದೆ. ಪರ್ಯಾಯವಾಗಿ ಮುದ್ರಣದ ಶ್ರಮ, ಖರ್ಚು, ಅನಿಶ್ಚಿತತೆಗಳೊಂದೂ ಇಲ್ಲದ, ಪೂರ್ಣ ಸ್ವಾವಲಂಬಿಯಾದ ಜಾಲತಾಣದಲ್ಲಿ ವಿಕಸಿಸಿದೆ.

ಸುಮಾರು ಮೂರು ದಶಕಗಳ ಹಿಂದೆ ಬಾಗಲೋಡಿ ದೇವರಾಯರು ಹೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ. “ಅಶೋಕ, ನೀನು ನೋಡಿದ ಕಲ್ಲು, ಮರ, ನೀರು, ಬೆಟ್ಟವೇ ಮುಂತಾದವುಗಳನ್ನು ನಿನಗೆ ದಕ್ಕಿದ ಸಲಕರಣೆಯಲ್ಲೇ ದಾಖಲಿಸುತ್ತ ಬಾ.” ನನಗೆ ಕೂಡಿತಾದ್ದನ್ನು ಮಾಡುತ್ತ ಬಂದೆ. ಹಾಗೆ ಮಾಡುವಂದು ಅದೆಷ್ಟು ಅಸಂಗತವೆಂದು ಕಾಣಿಸಿದ್ದಿದ್ದರೂ ಇಂದಿನ ನನ್ನದೇ ನಡೆಗೆ ಅದು ದೊಡ್ಡ ಸಂಪತ್ತಾದ್ದನ್ನು ಇಲ್ಲಿ ಹೇಳಲೇಬೇಕು. ಆದರೆ ಇಂಥಾ ಸಂಪತ್ತು ಸಾರ್ವಕಾಲಿಕ ಮತ್ತು ಸಾರ್ವದೇಶಿಕವಾಗುವಲ್ಲಿ ಜಾಲತಾಣ ಬಹು ಮಹತ್ತ್ವದ ಮಾಧ್ಯಮ. ಇದರಲ್ಲಿ ನನ್ನದು ಅಂಬೆಗಾಲೇ ಇರಬಹುದು, ಆದರೆ ಮುಂದೆ ಯಾರಿಗೋ ಭೀಮನಡೆಯಾಗಿ ಕಂಡರೆ ಆಶ್ಚರ್ಯವಿಲ್ಲ.