ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ!

ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ – ತುಸು ನಗೆ, ತುಸು ಅಳು. ನಾನಾದರೋ ಒಂದೇ ಮನಸ್ಸಿನಲ್ಲಿ ಸೈಕಲ್ ಹೊರಡಿಸಿದೆ. ಮನೋಭಿತ್ತಿಯಲ್ಲಿ ಎರಡು ಚಿತ್ರ ಸ್ಪಷ್ಟವಿತ್ತು. ನನ್ನ ಹಾರುವ ಕನಸಿನ `ಉತ್ತರಾಧಿಕಾರಿ’ ನೆವಿಲ್ ಹೈದರಾಬಾದಿಗೆ ಪೂರ್ಣ ವಲಸೆ ಹೋಗಿದ್ದವನು, ಈಚೆಗೆ ಮಂಗಳೂರಿನಲ್ಲಿ ಮತ್ತೆ ನೆಲೆಸುವ ಅಂದಾಜಿನಲ್ಲಿದ್ದಾನೆ. ಆತ ಮುಖಪುಸ್ತಕದಲ್ಲಿ ಹಳೆಯ ಹಾರೋ ಚಿತ್ರಗಳನ್ನು ರಮ್ಯ ಶೀರ್ಷಿಕೆಗಳೊಡನೆ ಏರಿಸುತ್ತಿದ್ದ. ಇದ್ದಕ್ಕಿದ್ದಂತೆ ಶನಿವಾರ ಸಂಜೆ ಮುಖಪುಸ್ತಕದಲ್ಲೇ ಒಂದು ಪ್ರಕಟಣೆ ಕೊಟ್ಟ – ನಾಳೆ ಬೆಳಗ್ಗೆ ಹ್ಯಾಟ್ ಹಿಲ್ ಹೆಲಿಪ್ಯಾಡಿನಲ್ಲಿ ಯಾಂತ್ರೀಕೃತ ನೇತು ತೇಲಾಟ (ಮೈಕ್ರೋಲೈಟ್) ಪ್ರದರ್ಶನ. ಕದ್ರಿಗುಡ್ಡೆ ಏರಿ, ಪಾಲಿಟೆಕ್ನಿಕ್, ಯೆಯ್ಯಾಡಿ ಹಿಂದಿಕ್ಕಿ ಹದಿನೈದೇ ಮಿನಿಟಿನಲ್ಲಿ ನಾನೇನೋ ಸರಿ ಸಮಯಕ್ಕೇ ಹೆಲಿಪ್ಯಾಡ್ ಸೇರಿದ್ದೆ. ಭರದಿಂದ ಓಲಾಡುವ ಗಾಳಿ, ಎಂದೂ ಗೋಳಿಟ್ಟು ಸುರಿಯಬಹುದಾದ ಮಳೆಯ ವಾತಾವರಣಕ್ಕೋ ಏನೋ ನಿರ್ಜನ, ಯಾರು ಬರುವಂತೆಯೂ ಕಾಣಲಿಲ್ಲ.

ನನ್ನ ಅಕ್ಷಯ ತೂಣೀರದಲ್ಲಿದ್ದ ಎರಡನೆಯ ಮಂತ್ರಾಸ್ತ್ರ – ರಾಮತಾರಕ! ಗಡಿಬಿಡಿಯಾಯ್ತೇ – ಅದು ಕಟೀಲಿನ ತಾಳಮದ್ದಳೆ ಸಪ್ತಾಹದ ಆ ಬೆಳಗ್ಗಿನ ಪ್ರದರ್ಶನದ ಪ್ರಸಂಗದ ಹೆಸರು. ಹ್ಯಾಟ್ ಹಿಲ್ಲನ್ನು ಎಂಟೂಮುಕ್ಕಾಲಕ್ಕೆ ಬಿಟ್ಟು ಕಟೀಲಿಗೆ ಒಂಬತ್ತೂವರೆಗೆ ತಲಪುವುದು ಹೇಳಿದಷ್ಟು ಸುಲಭದ ಮಾತೇನೂ ಅಲ್ಲ. ಬೊಂದೇಲ್, ಕಾವೂರು, ಮರವೂರು ಸರಾಗ. ಬಜ್ಪೆ ಪೇಟೆ (ಹಳೆಯ ವಿಮಾನ ನಿಲ್ದಾಣದ ದಾರಿ ಎನ್ನಿ) ಮಾತ್ರ ಬಲು ಉದ್ದಕ್ಕೆಳೆದ ಗುಡ್ಡದ ಕೊಡಿಯಲ್ಲಿ ಕುಳಿತಿತ್ತು. ಮಳೆಗಾಲದ ತಣ್ಪು, ಎತ್ತರಕ್ಕೆ ಸರಿದಂತೆ ಕುಶಲ ವಿಚಾರಿಸುವ ಗಾಳಿಯೊಡನಾಡುತ್ತ ನಿಧಾನಕ್ಕೆ ಸಾಧಿಸಿದೆ. ಮತ್ತೆ ಬಹುತೇಕ ಸಪಾಟು, ಕೆಲವು ಸಣ್ಣ ಏರು, ಎಕ್ಕಾರಿನಲ್ಲಂತೂ ದೀರ್ಘ ಉಸಿರೆಳೆಯುವ ಇಳುಕಲು. ಸಮಯ ಹಿಡಿದಿಡುವಂತದ್ದಲ್ಲ – ಒಂಬತ್ತೂವರೆ ದಾಟಿತ್ತು, ಎರಡು ಕಿಲೋ ಕಲ್ಲುಗಳು ಇನ್ನೂ ಬಾಕಿಯಿತ್ತು. ಪುಟ್ಟ ಚಡಾವನ್ನು ಏಕಧ್ಯಾನದಲ್ಲಿ ಏರಿಸುತ್ತಿದ್ದೆ. ಕುರುಚಲು ಕಾಡು, ತೋಟ, ಆಗೀಗ ಮನೆ, ಕೆಲವು ಅಂಗಡಿ ಎಂದೆಲ್ಲ ಸರಿಯುತ್ತಿದ್ದ ಮಾಮೂಲೀ ಹಳ್ಳಿ ವಲಯದ ದೃಶ್ಯಗಳ ಎಡೆಯಿಂದೆಲ್ಲೋ ಯಾರೋ ಹಲೋ ಹೇಳಿದ್ದೂ ನಮಸ್ಕಾರ ಕೊಟ್ಟದ್ದೂ ಕೇಳಿದೆ. “ಅಯ್ಯೋ ಪಾಪ, ಚರವಾಣಿಯ ಸಂಪರ್ಕ ವಲಯದ ಅಂಚಿನಲ್ಲಿರಬೇಕು. ಅದು ತಪ್ಪಿದರೂ ಕೂಗು-ವಲಯದೊಳಗಿದ್ದರೆ ನೇರ ಮಾತೇ ಮುಟ್ಟೀತು” ಎಂದು ಮನಸ್ಸಿನಲ್ಲೇ ನಗುತ್ತಾ ಮುಂದುವರಿದೆ. ಇನ್ನೇನು ಮಹಾದ್ವಾರ ಎಂಬ ಶ್ವಾನಮೂತ್ರ ಕಟ್ಟೆ ಬಂತೂ ಎನ್ನುವಾಗ ಮತ್ತದೇ “ಹಲೋ, ನಮಸ್ಕಾರ ಸಾರ್” ಸ್ಕೂಟರೇರಿ ಬಂದು ನನ್ನನ್ನು ಅಡ್ಡಗಟ್ಟಿತು! ನನಗೆ ಅಂಗಡಿಯಿದ್ದ ಕಾಲದಲ್ಲಿ, ಆಗೀಗ ಬಂದಾಗೆಲ್ಲ “ನಮಸ್ಕಾರ ಸಾರ್. ನನ್ನ ಹೆಸರು ಅನಂತ, ಊರು ಕಟೀಲು” ಎಂದು ವಿಶೇಷ ನಿರೀಕ್ಷೆಗಳೇನೂ ಇಟ್ಟುಕೊಳ್ಳದೇ ಪರಿಚಯಿಸಿಕೊಳ್ಳುತ್ತಿದ್ದ ತರುಣ ಇಲ್ಲಿ ಪ್ರತ್ಯಕ್ಷನಾಗಿದ್ದ. ಹಿಂದೆ ಕೊಟ್ಟ ತನ್ನ ನಮಸ್ಕಾರ ವ್ಯರ್ಥವಾಗದಂತೆ, ಕೂಡಲೇ ಸ್ಕೂಟರ್ ಹೊರಡಿಸಿ, ನನ್ನನ್ನು ಬೆನ್ನಟ್ಟಿ ಮುಟ್ಟಿಸಿಯೇ ಬಿಟ್ಟಿದ್ದ. “ಮನೆಗೆ ಬನ್ನಿ ಸಾರ್, ಒಂದು ಚಾ ಆದ್ರೂ ಕುಡ್ದು ಹೋಗಿ ಸಾರ್” ಪ್ರೀತಿಯನ್ನು ನಿರಾಕರಿಸಿ ಮುಂದುವರಿಯುವುದು ಬಹಳ ಕಷ್ಟವಾಯ್ತು. ಅದೃಷ್ಟಕ್ಕೆ ತಾಳಮದ್ದಳೆಯ ನೆಪ ಇತ್ತು, ಎರಡು ಮಿನಿಟು ಕೊಸರಾಡಿ ಸಮಯ ಹೋದರೂ ಬಚಾವಾದೆ. ಹೀಗೆ ಒಂಬತ್ತೂ ಮುಕ್ಕಾಲಕ್ಕೆ ಕಟೀಲು ದೇವಳದೆದುರು ನಾನು ಸೈಕಲ್ಲಿಳಿಯುವುದೂ ಮಳೆ ಸುರಿಯುವುದೂ ಒಟ್ಟಿಗೇ ಆಗಿತ್ತು. ಅರ್ಧ ಯುದ್ಧ ಗೆದ್ದಿದ್ದೆ.

ಭಾರತೀಯತೆಗೂ ಸಮಯಶಿಸ್ತಿಗೂ ನಮ್ಮ ಹೆಚ್ಚಿನ ಕಲಾಪಗಳಲ್ಲಿ ತಾಳೆ ಬೀಳುವುದಿಲ್ಲ. ನಿಜವಾದ ಯುದ್ಧ – ರಾಮಾಂಜನೇಯ ಯುದ್ಧ ಅಥವಾ ರಾಮತಾರಕ ಮಂತ್ರ ಹತ್ತೂ ಕಾಲಕ್ಕೆ ಅಂದರೆ ಮುಕ್ಕಾಲು ಗಂಟೆ ತಡವಾಗಿ ತಾಳ ಮದ್ದಳೆ – ಪ್ರಸಂಗ ರಾಮತಾರಕ ಅಥವಾ ರಾಮಾಂಜನೆಯ ಯುದ್ಧ ಶುರುವಾಯ್ತು! ಯಕ್ಷ ವಿಮರ್ಶೆ ಹಾಗಿರಲಿ.

ಮೊದಲು ದಕ್ಕಿದ ಬಿಡು ಸಮಯದಲ್ಲಿ ಹಾಗೇ ಕಾಲಾಡಿಸುತ್ತ ದೇವಳದ ಒಳಹೋಗಿದ್ದೆ. ಭೋರಿಡುತ್ತಿದ್ದ ಕೆನ್ನೀರ ನಂದಿನಿಯ ಬಲಗವಲನ್ನು ಸೇತುವೆಯ ಮೇಲೆ ದಾಟಿದೆ. ನಡುಗಡ್ಡೆಯ ಮೇಲಿನ ದೇವಳದಲ್ಲಿ ಭಕ್ತಾದಿಗಳ ಗಮನ ಎಡಮಗ್ಗುಲಿನ ಒಳಾಂಗಳ – ಅಂದರೆ, ಗರ್ಭಗುಡಿಯತ್ತ ಹರಿದರೆ ನನ್ನದು ಬಲ ಪಕ್ಷ. ಅಲ್ಲಿನ ಅಂಗಳ, ಆಫೀಸು ವಠಾರಕ್ಕೆಲ್ಲ ನುಣ್ಣನೆ ಕಲ್ಲು ಹಾಸಿದ್ದರು. ಅಷ್ಟನ್ನೂ ಬಿಸಿಲು ಮಳೆಗಳಿಂದ ಮರೆಮಾಡುವಂತೆ ಖಾಯಂ ಚಪ್ಪರವೂ ಇತ್ತು. ಆದರೆ ಗಾಳಿ ಏರಿ ಬಂದ ಇರಿಚಲು ನೆಲವನ್ನೆಲ್ಲಾ ಚಂಡಿ ಮಾಡಿ, ನಡೆಯುವಾಗ ಕಾಲೆತ್ತುವುದಿರಲಿ ಸಡಿಲ ಬಿಡದಷ್ಟೂ ಜಾರುತ್ತಿತ್ತು; ದೇವಿಯ ಭಕ್ತಾದಿಗಳೇನು ನನ್ನಂಥವರೂ ಅಡ್ಡಕ್ಕೂ ಉದ್ದಕ್ಕೂ ಬೀಳುವಂತಿತ್ತು!! ನನಗೋ ಅವನ್ನೆಲ್ಲಾ ಮೀರಿ ನದಿಯ ಕವಲೆರಡು ಒಗ್ಗೂಡುವ, ಅಲ್ಲಿ ಮೋಟು ಅಡ್ಡಗಟ್ಟೆಯ ಮೇಲೆ ಬಿಗಿ ಕುಳಿತು, ನೀರ ಹರಿವಿಗೊಡ್ಡಿದ ಸಲಕರಣೆಗಳ ಬಗ್ಗೆ ಅಪಾರ ಕುತೂಹಲ.

ಬಹುಶಃ ವರ್ಷದ ಹಿಂದೆ, ನೇತ್ರಾವತಿ ನದಿ ತಿರುವಿನ ವಿರುದ್ಧ ಸಮಾನಾಸಕ್ತರ ಸಭೆಯೊಂದು ಸುಬ್ರಹ್ಮಣ್ಯದ ಮಠದಂಗಳದಲ್ಲಿ ಸೇರಿತ್ತು. ಅಲ್ಲಿಗೆ ಮಲೆನಾಡಿನ ಕೃಷಿಕ ರತ್ನಾಕರ್ ಕೂಡಾ ಬಂದಿದ್ದರು. ಅವರು ಸ್ವಂತ ಉಪಯೋಗದಲ್ಲಿ ಹರಿನೀರಿಗೆ ಕಟ್ಟೆ, ತಿರುವುಗಳಂಥ ಅಸಹಜ ಅಡ್ಡಿಯುಂಟು ಮಾಡದೆ ಜಲವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಯಾಗಿದ್ದರು. ಅದನ್ನು ಸಾರ್ವಜನಿಕಕ್ಕೂ ಪ್ರದರ್ಶಿಸಿ, ವಾಣಿಜ್ಯ ಮಟ್ಟದಲ್ಲೇ ಪ್ರಸರಿಸುವ ಉತ್ಸಾಹದಲ್ಲಿದ್ದರು. ಅವರ ಪುಟ್ಟ ಜಲಗಿರಣಿಯನ್ನು ಖಾಲಿ ಕೈಯ್ಯಲ್ಲೇ ತಿರುವಿ ೪೦ ವ್ಯಾಟಿನ ಬಲ್ಬ್ ಬೆಳಗುವುದನ್ನು ತೋರುವುದರಿಂದ ತೊಡಗಿ ತನ್ನೆಲ್ಲಾ ಪ್ರಯೋಗ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಜಲವಿದ್ಯುತ್ ಎಂದರೆ ಲಿಂಗನಮಕ್ಕಿಯ ಮುಳುಗಡೆ, ಜೋಗದ ಆಳ, ವರಾಹಿಯ ಶ್ರಮ, ನಾಗಝರಿಯ ವೆಚ್ಚವೇ ಆಗಬೇಕೆಂದಿಲ್ಲ. ತತ್ತ್ವ (ನನ್ನದೇನಲ್ಲ) ಅದೇ ಅನುಷ್ಠಾನದಲ್ಲಿ ಲಕ್ಷ್ಯ ಶ್ರೀಸಾಮಾನ್ಯ – ಎನ್ನುತ್ತಿದ್ದರು ರತ್ನಾಕರ್. ಅವರು ಅಂದೇ ಹೊಳೆ ಮಧ್ಯೆ ಇರುವ ಕಟೀಲು ದೇವಳದಲ್ಲಿ ಅಳವಡಿಸಲು ಅವಕಾಶ ಒದಗಿರುವುದನ್ನು ಹೇಳಿಕೊಂಡಿದ್ದರು. ಆದರೆ ಇಂದಿನ ಪತ್ರಿಕೆಯಲ್ಲಿ ಅದು ಇನ್ನೂ ಕಟೀಲಿನಲ್ಲಿ ಯಶಸ್ವಿಯಾಗದೇ ಇರುವ ಕುರಿತು ಏಕಪಕ್ಷೀಯ ವರದಿ ಕಂಡು ಆಶ್ಚರ್ಯವಾಗಿತ್ತು.

ದೇವಳದ ನಡುಗಡ್ಡೆಯಿಂದ ಎದುರು ದಂಡೆಗೆ ಹೋಗುವ ಸೇತುವೆಯ ಮೇಲೆ ನಿಂತುಕೊಂಡೇ ರತ್ನಾಕರ್ ಯಂತ್ರ ಕಂಡೆ. ಆ ನೀರಮೊತ್ತ ಮತ್ತದರ ಜತೆ ಆಗೀಗ ತೇಲಿಬಂದು ಯಾವುದೇ ವ್ಯವಸ್ಥೆಗೆ ಹಾನಿ ಮಾಡಬಹುದಾದ ಭಾರೀ ಮರದಿಂದ ಹಿಡಿದು ವೈವಿಧ್ಯಮಯ ಕಸ ಯಾರೂ ಕಾಣದ್ದಲ್ಲ. ಈ ಪ್ರಾಯೋಗಿಕ ಸಮಸ್ಯೆಗಳನ್ನು ನಿವಾರಿಸಿ ಯಶಸ್ವಿಯಾಗುವಲ್ಲಿ ತಗಲುವ ನಿಜ ವೆಚ್ಚಕ್ಕೆ ದೇವಳದ ಕಡತದ ತೋರಿಕೆಯ ಶುದ್ಧಕ್ಕೆ ತಾಳೆ ಬೀಳದೆ ರತ್ನಾಕರ್ ಸೋತಿದ್ದರು. ಇದು ನಿಜಕ್ಕೂ ಶೋಚನೀಯ. ಆದ್ಯತೆಯಲ್ಲಿ ಪ್ರಥಮದ್ದಾಗಬಹುದಾದ ಕಾಮಗಾರಿಗಳು ಕಟೀಲಿನಲ್ಲಿ ಅಸಂಖ್ಯವಿವೆ. ನಿತ್ಯದ ಜನವಾಹನ ಸಮ್ಮರ್ದವನ್ನೇ ನಿಭಾಯಿಸುವಲ್ಲಿ ಕಟೀಲು ಪರಿಸರ ಸೋಲುತ್ತದೆ. ಇನ್ನು ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಬಂದರಂತೂ `ದೇವಿಯ ಕೃಪೆ’ಯೊಂದೇ ಕಾಯುವ ಶಕ್ತಿ. ಸಾರ್ವಜನಿಕ ದಾರಿ, ಮೋರಿ, ಅಂಗಡಿ, ವಾಹನ ಸಂಚಾರ, ತಂಗುನಿಲ್ದಾಣ ಮುಂತಾದ ಒಂದಕ್ಕೂ ಇಲ್ಲಿ ಸೂತ್ರವಿಲ್ಲ, ಕೇಳುವವರೂ ಇದ್ದಂತಿಲ್ಲ. ಆದ್ಯತೆಯಲ್ಲಿ ಕನಿಷ್ಠ ಸ್ಥಾನಿಯಾಗಬಹುದಾಗಿದ್ದ ಊರ ಹೊರಗಿನ ಎರಡೆರಡು ಸ್ವಾಗತ ದ್ವಾರ, ನೆಲಕ್ಕೆಲ್ಲಾ ಅಪ್ರಾಯೋಗಿಕ ನುಣುಪುಗಲ್ಲು, ಆಕಾಶಕ್ಕೆಲ್ಲಾ ವ್ಯರ್ಥ ಚಪ್ಪರ (ಇಲ್ಲಿನ ಮಳೆ ಗಾಳಿಯ ವಾಸ್ತವದರಿವಿದ್ದವರು ಮಾಡಿದ ಕೆಲಸವಾಗಿದ್ದರೆ ಒಳಗೆ ನೀರು ಯಾಕೆ?) ಮುಂತಾದವಕ್ಕೆ ಮೂರಲ್ಲ, ನೂರು ದರಪಟ್ಟಿ ಕೊಟ್ಟು, ಮತ್ತದಕ್ಕೆ ತಕ್ಕ ಕೆಲಸ ಮಾಡಿಕೊಡುವವರು ಸಿಗುತ್ತಾರೆ. ಬಿಡಿ, ಪ್ರಸ್ತುತ ಜಲವಿದ್ಯುತ್ತಿಗೇ ಸೀಮಿತಗೊಳ್ಳುತ್ತೇನೆ…

ಕಟೀಲು ದೇವಳದ ಪ್ರಾಚೀನತೆ ಪುರಾಣ ಕಾಲಕ್ಕೇ ಸಲ್ಲುತ್ತದೆ. ಜಲವಿದ್ಯುತ್ ತತ್ತ್ವವೋ ಸುಮಾರು ಒಂದು ನೂರು ವರ್ಷ ಹಳೆಯದು. (ಇದು ರತ್ನಾಕರ್ ಏನೂ ಕಂಡು ಹಿಡಿದದ್ದಲ್ಲ) ಸಮರ್ಥ ಆಡಿಟ್ ವರದಿಯಾದರೆ ಈ ನೂರು ವರ್ಷಗಳಿಂದ ಇಲ್ಲಿ ಜಲವಿದ್ಯುತ್ ಅನುಷ್ಠಾನವಾಗದೇ ಆದ ನಷ್ಟಕ್ಕೆ ಕಾರಣ ಕೇಳಬೇಕಿತ್ತು. ಬದಲಿಗೆ ಇಲ್ಲೊಬ್ಬ ಏಕಾಂಗಿಯಾಗಿ ನಷ್ಟಕ್ಕೆ ಗಡಿಕಲ್ಲಾಗುತ್ತೇನೆಂದು ಮುಂದೆ ಬಂದವನನ್ನು ಅಡಿಮೇಲು ಮಾಡಲು ಬಳಸುವ ಅಸ್ತ್ರ ಆಡಿಟ್ ವರದಿಯಾಗಿರುವುದು ಅಧಿಕಾರಶಾಹಿಯ ದುರಂತವೇ ಸರಿ.

ಹೀಗೇ ಒಂದು ಸರ್ಕೀಟು: ನನ್ನ ಸೈಕಲ್ ಸರ್ಕೀಟ್ ನಿನ್ನೆ ಸಂಜೆ ನಿರ್ದಿಷ್ಟ ಗುರಿಯಿಲ್ಲದೆ ಉಡುಪಿಯತ್ತ ಹೆದ್ದಾರಿಯಮೇಲೆ ಉದ್ದಕ್ಕೆ ಸಾಗಿತ್ತು. ಮಳೆ ಕಡಿಮೆಯೇ ಆದರೂ ಹೆದ್ದಾರಿ ಅಲ್ಲಲ್ಲಿ ಸಿಪ್ಪೆ ಹೋದ ಹಾಗೆ, (ಸೈಕಲ್ಲಿಗೆ ಜೀವ ಹೋದ ಹಾಗೆ!) ಮುಕ್ಕಾಗತೊಡಗಿದೆ. ಮಾಲೇಮಾರಿಗೆ ತಿರುಗುವಲ್ಲಿನ ಹಳಗಾಲದ ಸಪುರ ಸಂಕವಿರಲಿ – ಕೂಳೂರಿನ ಜೋಡು ಸಂಕಗಳಲ್ಲೂ ಸೈಕಲ್ ಮತ್ತು ಪಾದಚಾರಿಗಳಿಗೆ ಅಧಿಕೃತವಾಗಿ ದಾಟುವ ವ್ಯವಸ್ಥೆಯೇ ಇಲ್ಲ. ಇನ್ನು ಬೈಕಂಪಾಡಿಯ ರೈಲ್ವೇ ಮೇಲ್ಸೇತುವೆ ಕೇಳಬೇಕೇ – ಪಣಂಬೂರಿನ ಹತ್ತೆಂಟು ಸಾಲು ಚಕ್ರದ ಮಹಾರಥಿಗಳು, ನಿತ್ಯದ ಉಡುಪಿ-ಮಂಗಳೂರಿನ ಅಧಿರಥಿಗಳು (> ಅಧಿಕ ಪ್ರಸಂಗ ಮಾಡುವ ಎಕ್ಸ್‍ಪ್ರೆಸ್), ಅವಸರಾರ್ಥಿಗಳೆಡೆಯಲ್ಲಿ ಸೈಕಲ್ಲೇರಿದ ದೊರೆ (ನಾನು) ಪ್ರತಿ ಬಾರಿ ದಾಟುವಾಗಲೂ `ದೊರೆಯ ಮೇಲೆ ದರೆ’ ಜಪಿಸುತ್ತಲೇ ಇರುತ್ತೇನೆ. ನಿನ್ನೆಯೂ ಹಾಗೇ ಅಘಟಿತ ಘಟನೆಗಳೇನೂ ಆಗದಿದ್ದುದಕ್ಕೆ ನಾನು ಮೇಲ್ಸೇತುವೆ ಪಾರುಗಂಡು ಬೈಕಂಪಾಡಿ ಕಡಲ ಕಿನಾರೆಗೆ ತಿರುಗಿಕೊಂಡೆ.

ಬೈಕಂಪಾಡಿಯಲ್ಲಿ ಮೀನುಗಾರಿಕಾ ದಾರಿ ಹಿಡಿದು ಮತ್ತೆ ಮಂಗಳೂರತ್ತ ಪೆಡಲಿದೆ. ಬೇರೆ ಋತುಗಳಲ್ಲಿ ನೂರಿನ್ನೂರು ಮೀಟರಾಚೆಗೆ ಕಲಕಲಿಸುತ್ತಿದ್ದ ಕಡಲು ದಾರಿಯ ಪಶ್ಚಿಮ ಅಂಚನ್ನು ಉದ್ದಕ್ಕೂ ನೆಕ್ಕುತ್ತಿತ್ತು. ದಾರಿ ಕೆಲವೆಡೆ ಹಿನ್ನೀರ ಹರಹುಗಳನ್ನು ನಿವಾರಿಸಲು ತುಸು ಒಳನಾಡಿನತ್ತ ಹಾವಾಡಿದಾಗ ನಾನೂ ಸುತ್ತಿ `ಜನಪ್ರಿಯ’ ಪಣಂಬೂರು ಕಿನಾರೆ ಸೇರಿದೆ. ಹೆದ್ದಾರಿ ಹರಗಣ ಶುದ್ಧ ಮಾಡುವುದು ದಿಲ್ಲಿಯ ಮರ್ಜಿ. ಕಡಲಂಚಿನ ವ್ಯವಸ್ಥೆಯಲ್ಲಾದರೂ ರಾಜ್ಯ ಸರಕಾರ, ಮಹಾನಗರ ಸಭೆ ವ್ಯಸ್ತವಾಗಿರಬಹುದು ಎಂದುಕೊಂಡವನಿಗೆ ಗಾಬರಿಯಾಗುವಂತೆ `ದಿಲ್ಲಿ ದರ್ಬಾರ್’ ಅಲ್ಲಿ ಗುಡಾರ ಹಾಕಿ ನಿಂತಿತ್ತು.

ಕೂಲಿಕಾರರಿಗೆ ಐದು ರೂಪಾಯಿಗೊಂದು ಬಳೆ ಕೊಟ್ಟು, ಎಸೆತದ ಅದೃಷ್ಟ ದಕ್ಕಿದರೆ ಎಂಟು ರೂಪಾಯಿ ಬಿಸ್ಕೆಟ್ ಬಹುಮಾನಿಸುತ್ತಿತ್ತು! (ಆಗಲೇ ಒಂದೆರಡು ಕಳೆದುಕೊಂಡವ “ಇಲ್ಲೊಂದ್ ನಾಕ್ ಕೊಡಪ್ಪಾ” ಎಂದು ಇಪ್ಪತ್ತು ರೂಪಾಯಿ ನೋಟಾಡಿಸಿ, ಕೊನೆಯಲ್ಲಿ ಏನೂ ದಕ್ಕದೇ ಹೋದ!) ಅತಂತ್ರದ ಒಂಟೆ, ಬಡಕಲು ಕುದುರೆ, ಡೊಂಬರ ತೊಟ್ಲು `ಸವಾರಿ ಸುಖ’ಕ್ಕೆ ಆಹ್ವಾನ ನೀಡುತ್ತಿತ್ತು. ಉಸುಕು ಹರಿದು ಕಡಲುಕ್ಕುಕ್ಕಿ ಬರುತ್ತಿರಲು ಮುಸುಕು ಹರಿದ ಜೋಳ ಕಾರಾ ಹಚ್ಚಿಕೊಂಡು ಉರಿಯ ಮೇಲೆ ಹೊರಹೊರಳಿ ಹೊಟ್ಟೆ ತಣಿಸುತ್ತಿತ್ತು. ಹೌದು, ಇನ್ನೊಂದು ಮಳೆಗಾಲವೂ ಇಷ್ಟರಲ್ಲೇ ಸರಿ(ಯಾಗುತ್ತದೆ?)ದು ಹೋಗುತ್ತದೆ ಎಂದು ವಿಷಾದಿಸುತ್ತಾ ಕವುಚಿಕೊಳ್ಳುತ್ತಿದ್ದ ಕರಿ ಮೋಡದ ನೆರಳಿನಲ್ಲಿ ಮಿಂಚಾಗಿ ಮನೆ ಸೇರಿಕೊಂಡೆ.

ಸರ್ಕೀಟೆಲ್ಲ ರೋಚಕವಾಗಬೇಕಿಲ್ಲ: ಮತ್ತೆ ರಾಜಾ ತ್ರಿವಿಕ್ರಮನು ಶವವನ್ನು ಹೆಗಲಿಗೇರಿಸಿ, ಮೌನವಾಗಿ ನಡೆದಂತೆ, ಮೊನ್ನೆ ಸಂಜೆ ನಗುವ ಸೂರ್ಯನೊಡನೆ ಸೈಕಲ್ ಸರ್ಕೀಟ್ ಹೊರಟೆ. `ಪಿಂಟೋ ಬೇಕರಿ’ (ಬೇಡರಿ – ಬ್ರೆಡ್, ಬಿಸ್ಕೆಟಾದಿ ಮೈದಾ ತಿನಿಸುಗಳು ಬೇಡವೇ ಬೇಡಾರೀ) ದರ್ಶಿಸಿ, `ಮೋರ್’ (ಮಾರುಕಟ್ಟೆ ಬೆಲೆಯಿಂದ ಇದು ಸದಾ ಮೋರೇ ಅದಕ್ಕೇ ನಮ್ಮ ಮೋರೆ ಇದಕ್ಕೆ ಸದಾ ಓರೇ) ಒತ್ತಿನಲ್ಲಿ ಜಾರಿ, ಭಾರತೀ ನಗರದ ಕೊಳಚೆ-ಕಾಂಕ್ರೀಟಿನಲ್ಲಿ ಹಾಯುವಾಗ ಆಯಕಟ್ಟಿನ ಜಾಗಗಳಲ್ಲಿ ಸವಾರಿ ಸಾಗಿದ್ದಂತೆ ಸೀಟಿನ ಮೇಲೇ ಪಾದೋಡ್ಡಯನ ಆಸನ ಹಾಕಿ (ಚಕ್ರೋಚ್ಚಾಟಿಸುವ ಕೊಳಚೆ ಪಾದಪ್ರಕ್ಷಾಳನ ಮಾಡದಿರಲು ತುಂಬ ಉಪಯುಕ್ತ. ಜೊತೆಗೆ ನಾಸಿಕಬಂಧ ಮಾಡುವುದು ಜೀರ್ಣಪ್ರಚೋದಕ, ಇಲ್ಲವಾದರೆ ವಮನ ಪರಿಣಮಿಸುವ ಅಪಾಯವಿದೆ – ಗ್ರಂಥಾಧಾರ: ತಿಲಕಾಷ್ಠಮಹಿಷಬಂಧನ, ಮೂರನೇ ಅಧ್ಯಾಯ, ಎಂಟನೇ ಉಪಸರ್ಗ) ಮುಂದುವರಿದೆ. ಕೆಸರಟ್ಟಿಸಿ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಎಲ್ಲರೂ ಷಣ್ಮುಖರಾಗಬೇಕಾಗುತ್ತದೆ. ಇಲ್ಲಿ ಸಪುರದಲ್ಲೂ ದಾರಿಯನ್ನು ವಿಭಾಜಕ ಸಹಿತ ಚತುಷ್ಪಥ ಎಂದು ಹೆಸರಿಸಿದ್ದಾರೆ. ನೇರ ಬಸ್ ನಿಲ್ದಾಣದ ಪ್ರವೇಶದ್ವಾರದ ಬಳಿ ವಿಭಾಜಕದಲ್ಲಿ ದಾರಿ ಬಿಟ್ಟುಕೊಟ್ಟಿಲ್ಲ. ಸಹಜವಾಗಿ ಬಿಜೈ ವಲಯ ಹೊರತಾದ ಇನ್ಯಾವುದೇ ಖಾಸಗಿ ವಾಹನ ಬಸ್ ನಿಲ್ದಾಣಕ್ಕೆ ಪ್ರವೇಶ ಬಯಸಿದ ಇಳಿಜಾರಿನ ಕೊನೆಗೆ ಹೋಗಿ, ಹಿಮ್ಮುರಿ ತಿರುವು ತೆಗೆದು ಬರುವುದು ಕಡ್ಡಾಯ. ಇಲ್ಲಿ ಎಷ್ಟೋ ಬಾರಿ ಸಣ್ಣ ಕಾರುಗಳೂ ಒಂದೇ ಪ್ರಯತ್ನದಲ್ಲಿ ತಿರುಗಲಾಗದೇ ಎಲ್ಲರ ತಿರಸ್ಕಾರ ತಿನ್ನುತ್ತಾ ಕೊಸರಾಡುತ್ತಿರುತ್ತಾರೆ. ಈಗ ಹೆಚ್ಚುವರಿ ಸೌಕರ್ಯವಾಗಿ ಅಲ್ಲೇ ಪಾತಾಳದಲ್ಲೆಲ್ಲೋ ಸ್ಫೋಟಗೊಂಡ ಕೊಳಚೆಕೊಳಾಯಿಯ ಮರಣೋತ್ತರ ಪರೀಕ್ಷೆಗೆ ಕಾಂಕ್ರೀಟ್ ಒಡೆಯುತ್ತಿದ್ದಾರೆ!

ಮುಂದುವರಿದರೆ ಇನ್ನೂ ಕಠಿಣ ಪರೀಕ್ಷಾ ಕೇಂದ್ರ – ಪಂಚ ಕೂಡು ರಸ್ತೆ. (ಬಿಜೈ, ನಿಲ್ದಾಣ, ಲಾಲ್ ಭಾಗ್, ಭಾರತ್ ಮಾಲ್ ಮತ್ತು ಕೊಟ್ಟಾರ) ಇಲ್ಲಿನ ವಾಹನ ವೈವಿಧ್ಯದಲ್ಲಿ, ತರಾತುರಿಯ ಸಂತೆಯಲ್ಲಿ, ಗೊಂದಲದ ಗೂಡಿನಲ್ಲಿ ಸಡಿಲಬಿದ್ದ ತಗಡಿನ ಘ್ರಘ್ರದಿಂದ ತೊಡಗಿ, ಕ್ಞೀ ಪ್ಞೀ ಕಿವಿಕತ್ತರಿಗಳನ್ನು ಮೊಂಡಾಗಿಸುವಂಥಾ ಮೂರು ಸಾಲು ಚಕ್ರದ (ಮಲ್ಟೀ ಯಾಕ್ಸೆಲ್) ವಾಲ್ವೋಗಳವರೆಗಿನ ಅಬ್ಬರ ಕಾಕುವಿನೊಡನೆ ಎಡೆಯಲ್ಲಿ ಆನೆಗಳ ನಡುವಣ ಇಲಿಯಂತೆ ನಾನು ಸೈಕಲ್ಲನ್ನು `ಎರಡು ಗುಣಿಸು ಎರಡು’ ಗೇರಿಗೇರಿಸಿ ಕೊಟ್ಟಾರದತ್ತಣ ದಾರಿಗೆ ನುಸುಳಿಬಿಟ್ಟೆ.

ನನಗೆ ಚರವಾಣಿ ಒಗ್ಗುವುದಿಲ್ಲ. ಆದರೆ ನಿವೃತ್ತಿಯಾಗಿ ಎಲ್ಲೆಂದರಲ್ಲಿ ಸುತ್ತುವ ದಿನಗಳಲ್ಲಿ, ಮಗರಾಯನ ಫಿತೂರಿಯಲ್ಲಿ `ಮುಟ್ಟಿದರೆ ಮುನಿ’ ಆವೃತ್ತಿಯ ಸ್ಯಾಮ್ಸಂಗ್ ಸಾಧನ ಕಿಸೆಯೊಳಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಅದಕ್ಕೂ ನನ್ನ ಹಾಗೆ – ನನ್ನನ್ನು ಒಗ್ಗುವುದಿಲ್ಲ! ಸಾಮಾನ್ಯವಾಗಿ ಅಗತ್ಯದ ಕರೆಗಳೇನು ಬರುವುದಿದ್ದರೂ ನನ್ನನ್ನು ಸಂಪರ್ಕವಲಯದಿಂದ ಹೊರಗೇ ಇಟ್ಟುಬಿಡುತ್ತದೆ. ಆದರೆ ಗ್ರಹಚಾರಗೆಟ್ಟು, ಬಿಜೈ ಚಕ್ರವ್ಯೂಹ ಬೇಧಿಸುತ್ತಿದ್ದಂತೆ ಚರವಾಣಿ ಕಿಸೆಯೊಳಗೆ ಚರೆಚರೆ ಶುರುಮಾಡಿತ್ತು. ನಾನು ಪಕ್ಕಕ್ಕೆ ಸರಿದು ನಿಲ್ಲಬೇಕಾಯ್ತು. ನೋಡಿದೆ – ಅಪರಿಚಿತ ಸಂಖ್ಯೆ. ಆದರೂ ಕಿವಿಗೊಟ್ಟೆ. ಅಚ್ಚ ಇಂಗ್ಲಿಷಿನಲ್ಲಿ “ಶುಭದಿನ ಸಾರ್. ನನ್ನ ಮಗಳು ಹೆಚ್ಚುವರಿ ಪರೀಕ್ಷೆ ಕೊಟ್ಟು ಪದವಿಪೂರ್ವ ತರಗತಿಯನ್ನು ಉನ್ನತ ಎರಡನೇ ದರ್ಜೆಯಲ್ಲಿ ಪಾರುಗಾಣಿಸಿದ್ದಾಳೆ ಸಾರ್. ಅವಳ ವಿಷಯಕ ಅಂಕಗಳಿಕೆ…” ನಾನು ಅವರ ಉತ್ಸಾಹಕ್ಕೆ ಹಾಗೂ ಹೀಗೂ ತಡೆಯೊಡ್ಡಿ “ನಂಗ್ಯಾಕೆ ಹೇಳ್ತಾ ಇದ್ದೀರಿ? ನೀವು ಯಾರೂ? ನಾನು…” ಎನ್ನುವುದರೊಳಗೆ ಕರೆದಾತ ಪರಮಜ್ಞಾನವನ್ನು ಗಳಿಸಿ, ಅಪಾತ್ರನಾದ ನನ್ನಲ್ಲಿ ಕ್ಷಮಾಯಾಚನೆ ಮಾಡಿ ವಿರಮಿಸಿಯೇ ಬಿಟ್ಟ. ಅಷ್ಟರಲ್ಲಿ ನನ್ನ ಸೈಕಲ್ಲಿಗೆ ನೇರ ಮುಖಾಮುಖಿಯಂತೇ ಎದುರು ಬಂದು ನಿಂತ ಬೈಕಿನ, ಪೂರ್ಣ ಹಳೆಮೆಟ್ಟಿನೊಳಗಿನ, ಕನ್ನಡಕದ ಮರೆಯಲ್ಲಿನ, ಕಣ್ಣುಗಳು ಮಿನುಗಿ, ವಿನೀತ ಇಂಗ್ಲಿಷ್ ಧ್ವನಿಯೊಂದು ತೇಲಿಬಂತು “ನಿಮ್ಮೊಂದು ಭಾವಚಿತ್ರ ತೆಗೆದುಕೊಳ್ಳಲೇ? ನಿಮ್ಮ ನೋಟ ನಮಗೆ ಸ್ಫೂರ್ತಿ!” ಒಂದೂವರೆ ಕಾಲು ಮಡಚಿದ್ದರೂ ಪ್ಯಾಂಟಿನ ನೆರಿಗೆ ಸರಿಮಾಡಿ, ದಿಕ್ಕಾಪಾಲಾದ ಮೀಸೆಯ ಕೂದಲುಗಳನ್ನು ಒಟ್ಟು ಮಾಡುವ ವಿಫಲ ಯತ್ನ ಮಾಡಿ, ಜಾರಿದ ಕನ್ನಡಕ ಎತ್ತಿ, ಕಳ್ಳ ನಗೆ ತರುವುದರೊಳಗೆ ಆತ ತ್ಯಾಂಕ್ಸ್ ಹೇಳಿ ಹೋಗಿಯಾಗಿತ್ತು. ಆತನ ಚರವಾಣಿ ಚಮತ್ಕಾರದ ಫಲಿತಾಂಶದಲ್ಲಿ ಸ್ಫೂರ್ತಿಯಿರಲಿ, ಚಿತ್ರವಾದರೂ ಪೂರ್ತಿ ದಕ್ಕಿರಬಹುದೇ?!

ಈ ದಾರಿಯ ವೇಗತಡೆ ಡುಬ್ಬಗಳು ಸೈಕಲ್ಲಿನ ದೊಡ್ಡ ಗಾಲಿಗೆ ಹೇಳಿ ಮಾಡಿಸಿದಂತಿವೆ. ವೇಗವೇನೂ ಇಳಿಸದೆ ನುಗ್ಗಿ, ಮುಂದಿನ ಚಕ್ರ ಶಿಖರಕ್ಕೇರುವಾಗ ಅರ್ಧ ಪೆಡಲಿನಲ್ಲಿ ನಿಂತು, ಇಳಿಯುವಾಗ ಅಷ್ಟೇ ಮೆತ್ತಗೆ ಮತ್ತೆ ಸೀಟಿಗೆ ಅಂಡೂರಿದರಾಯ್ತು; ಉಯ್ಯಾಲೆ ತೂಗಿದಂತಿರುತ್ತದೆ ಕುಂಟಿಕಾನದಲ್ಲಿ ಹೆದ್ದಾರಿ ಸೇರಿದೆ ಎನ್ನುವಾಗ ಎಲ್ಲಿದ್ದನೋ ತಟಪಟ ಹನಿಯಪ್ಪ ಬಂದೇ ಬಂದ, ಒಮ್ಮೆಗೇ ಸೊಕ್ಕಿ ಅಪ್ಪಳಿಸಿದ. ಅಲ್ಲೇ ಇದ್ದ ಮರದ ಮರೆಯಲ್ಲಿ ಹದಿನೈದು ಮಿನಿಟು ಝಕ್ಕು ಮತ್ತೆ ಹೊರಟರೂ ಲಾರಿ, ಬಸ್ಸುಗಳ ವೇಗದ ಗಾಳಿಸುಳಿಯಲ್ಲೇಳುತ್ತಿದ್ದ ಕೆಸರು ನೀರ ಸುಳಿಯಲ್ಲಿ ತೊಯ್ಯದೆ ಅದಕ್ಕೂ ಮಿಗಿಲಾಗಿ ಹೇಸದೆ ಮುಂದುವರಿಯುವುದಕ್ಕೆ ಮನಸ್ಸಾಗಲಿಲ್ಲ. ಹೆದ್ದಾರಿ ಬಿಟ್ಟು ಕೊಡೀಕಲ್ಲು ದಾರಿಗೆ ನುಗ್ಗಿದೆ. ಊಊದ್ದಕ್ಕೆ ಹೋಗಿ ಯಾವ್ಯಾವುದೋ ಗಲ್ಲಿ ಸುತ್ತಿ ಮತ್ತೆ ದಂಬೆಲ್ ಅಂದರೆ ಅದೇ ಗುರುಪುರ ನದೀಕಿನಾರೆಯ ದಾರಿ ಸೇರಿ ಉರ್ವಾ, ಸುಲ್ತಾನ್ ಬತ್ತೇರಿ, ಮಣ್ಣಗುಡ್ಡೆಗಾಗಿ ಮರಳಿದೆ.

ಬೊಳ್ಳದ ಥಾಮಸ್ : “ಮಂಗಳೂರ್ ಕಾರ್ನಿಶ್” – ನಗರದ ದೊಡ್ಡ ಪರಿಧಿಯವನ್ನಾವರಿಸುವಂತೆ ರಸ್ತೆ, ಅರ್ಥಾತ್ ಬೆಂಗಳೂರು ಮೈಸೂರುಗಳಲ್ಲೆಲ್ಲಾ ಜನಪ್ರಿಯವಾಗಿರುವ ರಿಂಗ್ ರೋಟು – ಈಗ ಮಂಗಳೂರಿನಲ್ಲೂ ಭಾರೀ ಸುದ್ದಿ ಮಾಡುತ್ತಿದೆ. ಈ ನಗರಕ್ಕೆ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಗಡಿರೇಖೆಗಳನ್ನು ನೇತ್ರಾವತಿ ಮತ್ತು ಗುರುಪುರ ನದಿಗಳು ಎಂದೋ ಅನುಲ್ಲಂಘನೀಯವಾಗಿ ಎಳೆದದ್ದಾಗಿದೆ. (ನಗರ ಇಂದು ಆಚೆಗೂ ಬೆಳೆದಿರುವುದು ಪ್ರತ್ಯೇಕ) ಆದರೆ ನಗರ ಪಿತೃಗಳು ಈ ನದಿಗಳ ಒಳತಟದ ಉದ್ದಕ್ಕೆ ಎಲ್ಲಾ ಪ್ರಾಕೃತಿಕ ತಟಪಟಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಸಹಾಯದ ಮೀರುತ್ತಾರಂತೆ. ಕಾರ್ನಿಶ್ಶಿನಿಂದ (Cornish) ಗಾರ್ನಿಶ್ (garnish) ಮಾಡಿದ ಮಂಗಳೂರು ನಮ್ಮ ನಿರಂತರ ಬಂಜೆ – ಪ್ರಸವೋದ್ಯಮಕ್ಕೆ, ಅಲ್ಲಲ್ಲ ಪ್ರವಾಸೋದ್ಯಮಕ್ಕೆ ರಸಪಾಕವಾಗಿಸುತ್ತಾರಂತೆ (ಇಲ್ಲ, ನಾನು ಕಟಕಿ ಮುಂದುವರಿಸುವುದಿಲ್ಲ.) ಈ ಯೋಜನೆಗೆ ಪೂರಕವಾಗಿ ಈಗಲೇ ಇರುವ ಕೆಲವು ರಸ್ತೆಗಳನ್ನು ನನ್ನದೇ ಆಸಕ್ತಿಯಲ್ಲಿ, ಸೈಕಲ್ ಸರ್ಕೀಟಿನಲ್ಲಿ ಕಾಣುತ್ತಲೇ ಇದ್ದೇನೆ. ಅದಕ್ಕೊಂದು ಹೊಸ ಸೇರ್ಪಡೆಗೆನ್ನುವಂತೆ ಮೊನ್ನೆ ಸಂಜೆ ಸೈಕಲ್ಲೇರಿದೆ.

ಪಂಪ್ವೆಲ್, ಎಕ್ಕೂರುಗಳಿಗಾಗಿ ನೇತ್ರಾವತಿ ಸಂಕ – ಜನಪ್ರಿಯವಾಗಿ ಹೇಳುವುದಿದ್ದರೆ ಉಳ್ಳಾಲಸಂಕ ಸಮೀಪಿಸಿದೆ. ಅಲ್ಲಿ ಹೊಳೆ ದಂಡೆಗೇ ಇಳಿವಂತಿರುವ ಎಡದ ದಾರಿ ಹಿಡಿದೆ. ಹೆದ್ದಾರಿಯ ಎತ್ತರದಿಂದ ಹೊಸದಾಗಿ ಹಾಕಿದ ಮಣ್ಣದಾರಿಯಲ್ಲಿ ದಡಬಡಿಸಿ ಇಳಿದರೆ ಮೊದಲು ಸಿಗುವ ಕ್ಷೇತ್ರ ಗುರುವನ. ಇದು ಕಳೆದೊಂದೆರಡು ವರ್ಷಗಳಿಂದ ಹೊಸ ಆಡಳಿತದ ಅಲೆ ಏರಿ, ದೇಶದ ದೇವಸಂಖ್ಯೆಗೆ ಕೊರತೆಯಾಗದಂತೆ ನವೀಕೃತಗೊಂಡ, ವಿವಿಧ ದೇವರ್ಕಳ ವೈಭವದ ವಠಾರ. (ಅಲ್ಲೇ ನೂರಡಿ ಮುಂದಕ್ಕೆ ದಾರಿಯ ಎಡ ಬದಿಯಲ್ಲಿ ಮಹಾನಗರದ ಕೊಳಚೆನೀರ ಪರಿಷ್ಕರಣ ಕೇಂದ್ರ ಇರುವುದು ಯಾರೂ ಯೋಜಿಸದ ಅರ್ಥಪೂರ್ಣ ಹೊಂದಾಣಿಕೆಯೇ ಸರಿ.) ಗುರುವನ ನಾನು ಹಿಂದೆ ಕಂಡವನೇ. ಮತ್ತೀಗ ಸೈಕಲ್ ಮೂಲೆಗೆ ತಳ್ಳಿ, ಚಪ್ಪಲಿ ಕಳಚಿ, ಆಚಿನ `ಸುಂದರ’ ನದೀತೀರ ನೋಡುವಷ್ಟು ಸಮಯವಿಲ್ಲದ್ದಕ್ಕೆ ದಾರಿಯಲ್ಲೇ ಮುಂದುವರಿದೆ. ಇದು ಕರ್ಮರ, ಮುಂದಕ್ಕೆ ಅಲಪೆಯಂತೆ, ಕೊನೆಯಲ್ಲಿ ಬಜಾಲ್ ಎಂದೆಲ್ಲಾ ಹೆಸರುಗಳನ್ನು ಹೆಕ್ಕಿಕೊಂಡು ಪೆಡಲ್ ತುಳಿದೆ. ನಡುವೆ ಎಲ್ಲೋ ಒಂದಷ್ಟು ರಸ್ತೆ ಕಾಂಕ್ರೀಟೀಕರಣದಲ್ಲಿ ಚತ್ರುಶ್ಚಕ್ರವಿರಲಿ, ಬೈಕ್ ಸ್ಕೂಟರುಗಳೂ ಬೇಸ್ತು ಬಿದ್ದಿದ್ದವು. ಆದರೆ ನನ್ನ ಸೈಕಲ್ ಪಾದಚಾರಿಯ ಮನ್ನಣೆಯೊಡನೆ ನಿರ್ವಿಘ್ನವಾಗಿ ಮುಂದುವರಿಯಿತು. ಆಗಲೇ ಮೂರ್ನಾಲ್ಕು ದಿನ ಕಳೆದ ಕಾಂಕ್ರೀಟ್ ಹಾಸಿನ ಹುಲ್ಲ ಹೊದಿಕೆಯ ಮೇಲೆ ಚಿರ್ರೆಂದು ಕಾರಂಜಿ ರಟ್ಟಿಸುವ ಕುಶಾಲು ಕಳೆದು ಮತ್ತೆ ಹರಕು ಮುರುಕು ಡಾಮರು.

ಸಪುರ ರಸ್ತೆಯ ಏರೊಂದು ಮುಗಿಸಿ ನಿಂತು, ಅಂಗಡಿಯೊಂದರಲ್ಲಿ ವಿಚಾರಿಸಿದೆ. “ಇಲ್ಲೆಲ್ಲಾದರೂ ನೇತ್ರಾವತಿಯ ನೆರೆ ನೀರ ಉಬ್ಬರ ನೋಡಲು ಅವಕಾಶವಿದೆಯೇ?” ಅಂಗಡಿಯಾತ ನಕ್ಕು ಕೈಮಾಡಿದ “ಓ ಆ ದಾರಿಯ ಕೊನೆಯ ಹೆಸರೇ ಬೊಳ್ಳ (ತುಳು ಶಬ್ದಾರ್ಥ ನೆರೆ)!” ಬಿಟ್ಟೇನೇ, ಅತ್ತ ತಿರುಗಿಸಿದೆ ರಥವ. ಇನ್ನಷ್ಟು ಸಪುರ, ಹರಕು, ತೀವ್ರ ಇಳುಕಲಿನ ದಾರಿಯಲ್ಲಿ ಧಾವಿಸಿ, ಎಡದ ಮಣ್ಣ ದಾರಿಗೆ ಹೊರಳಿದೆ. ಮುಂದುವರಿಯುತ್ತ ಗೊಸರು, ಅಡ್ಡ ಹೊಡೆಯುವ ಮಳೆ ನೀರ ಚರಂಡಿಗಳು ಅಟಕಾಯಿಸಿದುವು. ಚತುಶ್ಚಕ್ರಗಳು ಹಾಯ್ದ ಎರಡು ಸವಕಲು ಜಾಡುಗಳನ್ನೂ ಮುಚ್ಚಿ ಮರೆಯಿಸುತ್ತಿದ್ದ ಹುಲ್ಲು ಹೊದರು. ಒಂದೆರಡು ಕಡೆ ಚೂರುಪಾರು ಹುಗಿದರೂ ನನ್ನದು ಕರ್ಣರಥವಾಗಲಿಲ್ಲ. ಕಣ್ಣು ಚುರುಕಿಟ್ಟು ಮರೆಯಲ್ಲಿ ಹೊಂಡವಿಲ್ಲದ್ದನ್ನು ಮಾತ್ರ ಖಾತ್ರಿ ಮಾಡಿಕೊಳ್ಳುತ್ತಾ ಹುಲ್ಲುಮುಚ್ಚಿದ ಜಾಡಿನಲ್ಲೇ ಪೆಡಲೊತ್ತಿದೆ. ಆ ಅವಸ್ಥೆಯೂ ಮುಗಿದಲ್ಲಿ ಬಂತೇ ಬಂತು ಬೀಸೀ ರೋಡ್ – ಬಂಟ್ವಾಳ ಕ್ರಾಸ್ ರೋಡಲ್ಲ, ಬೊಳ್ಳ ಕ್ರಾಸ್ ರೋಡ್! ಎಡದ ಕೇವಲ ಪಾದಚಾರಿ ಜಾಡು ಹಿಡಿದು ಇನ್ನೂರು ಮೀಟರ್ ಸಾಗುವುದರೊಳಗೆ ನನ್ನ ಕಠಿಣ ತಪಸ್ಸನ್ನು ಮೆಚ್ಚಿ ವರದಾಯಿಯಾಗಿ ಪ್ರತ್ಯಕ್ಷಳಾದಳು ನದಿ ನೇತ್ರಾವತಿ.

ಪ್ರಾಕೃತಿಕ ಲೆಕ್ಕಾಚಾರದಲ್ಲಿ ಥಾಮಸ್ ಅಲ್ಲಿನ ನೇತ್ರಾವತಿ ಒಕ್ಕಲು. ಆದರೆ ಸಾಮಾಜಿಕ ಇತಿಮಿತಿಯಲ್ಲಿ ಹೇಳುವುದಿದ್ದರೆ ಪ್ರತಿ ಮಳೆಗಾಲದಲ್ಲಿ ನೇತ್ರಾವತಿ ಇವರ ಖಾಸಾ ಒಕ್ಕಲು. ಥಾಮಸ್ಸರಿಗೆ ದಮ್ಮಡಿ ಗೇಣಿ ಕೊಡುವುದು ಬಿಟ್ಟು ಆಕೆ ದಂಡ ವಸೂಲು ಮಾಡುತ್ತಲೇ ಇದ್ದಾಳೆ. ಬಹುಶಃ ಆಗೆಲ್ಲೋ ಸರಕಾರೀ ಕೃಪೆಯಲ್ಲಿ ನದಿ ಕೊರೆತದ ತಡೆಗಾಗಿ ಬಂದು ಬಿದ್ದ ಒಂದಷ್ಟು ಬಂಡೆಗಳ ದಿಬ್ಬ, ಇವರ ಹಿತ್ತಲಿನ ಅಂಗಳಕ್ಕೆ ಒದಗಿದ ದೋಣಿಗಟ್ಟೆಯಂತೆ, ನದಿಗೆ ಮೂಗು ತೂರಿ ನಿಂತಿತ್ತು. ಸೈಕಲ್ಲನ್ನು ಅಲ್ಲೇ ಅಡ್ಡ ಹಾಕಿ, ನಾನು ಹುಶಾರಾಗಿ ದಿಬ್ಬದ ಕೊನೆಗೆ ನಡೆದೆ. ಬಿಸಿಲ ದಿನಗಳಲ್ಲಿ ಸಮುದ್ರದ ಭರತ ನೋಡಿಕೊಂಡು ಬರುವ `ಥಾಮಸ್ ಮೋಟಾರ್’ನ (ಪುಟ್ಟ ಹಾಯಿದೋಣಿ) ಬಡಕಲು ತಂಗುದಾಣ – ಮರದ ಕಂಬ, ಬಿದಿರಿನ ರಚನೆ ಅನಾಥವಾಗಿ ತೋರುತ್ತಿತ್ತು. ಇನ್ನೂ ಆಚಿನ ಪೊದರ ಮರಸಿನಿಂದ ಥಾಮಸ್ ನನ್ನೊಡನೆ ಮಾತಾಡುತ್ತಾ ಏನೋ ಕೆಲಸದ ಮೇಲೆ ದೋಣಿ ಹೊರಡಿಸಿದರು. ಮೊಣಕಾಲಾಳದವರೆಗೂ ದೋಣಿ ನೂಕಿ, ತಪಕ್ಕೆಂದು ಹಾರಿಕೊಂಡರು. ಅಲ್ಲಿನ ಸಣ್ಣ ಸುಳಿಯಲ್ಲಿ ಕೊಸರಾಡಿದ ದೋಣಿಯ ಆಚೀಚೆ ನಾಲ್ಕು ಬಾರಿ ತೊಳಚುಗೈ ಹಾಕುತ್ತಿದ್ದಂತೆ ಕಲ್ಲಿನ ದಿಬ್ಬದ ಮರೆ ತಪ್ಪಿ ನೇರ ಪ್ರವಾಹಕ್ಕೇ ನುಗ್ಗಿತು ದೋಣಿ. ಈತ ಒಂದು ಕೈಯ್ಯಲ್ಲಿ ನೀರು ತೊಳಸುತ್ತಲೇ ಪುಟ್ಟ ಕೂವೆಮರದ ಬುಡದ ಹಗ್ಗ ಬಿಚ್ಚಿದ. “ಅಯ್ಯೋ ಈ ಪುಣ್ಯಾತ್ಮ…” ಎಂದು ನಾನು ಕೆನ್ನೀರ ರಕ್ಕಸ ಹರಿವನ್ನು ಕಂಡು ಆತಂಕಿಸುತ್ತಿದ್ದಂತೆ, ಪಟಕ್ಕೆಂದು ನೀಲ ಹಾಯಿ ಬಿಡಿಸಿಕೊಂಡಿತು. ಅದರಲ್ಲಿ ಕಡಲತ್ತಣಿಂದ ಬೀಸುತ್ತಿದ್ದ ಗಾಳಿ ತುಂಬಿ ದೋಣಿ ದೃಢವಾಯಿತು; ನೀರಿನ ಪ್ರವಾಹಕ್ಕೆದುರಾಗಿ ಯಾವ ತೊಳಚುಬಲ ನೆಚ್ಚದೇ `ಥಾಮಸ್ ಮೋಟಾರ್’ ಸಾಗಿ ಹೋಯ್ತು. ನಾನು ಮತ್ತೆ ಸೈಕಲ್ಲೇರಿ ಅಳಪೆ, ಬಜಾಲಿಗಾಗಿ ಪಡೀಲು ಕಂಡೆ. ಮತ್ತೆ ಪಂಪ್ವೆಲ್ ಜ್ಯೋತಿಗಾಗಿ ಮನೆ ಸೇರಿಕೊಂಡೆ.

ರೈಲ್ವೇ ಸೇತುವೆಯಲ್ಲಿ ಉಳ್ಳಾಲಕ್ಕೆ: ಆ ಸಂಜೆ ನಾನು ಆಕಾಶ ಸಮೀಕ್ಷೆ ನಡೆಸಿದೆ. ಕರ್ಮೋಡ ಸೇನೆ ಸುರತ್ಕಲ್ ದಾಳಿಗೆ ಸಜ್ಜಾಗುತ್ತಿತ್ತು. ದುರ್ಬಲ ತೊಕ್ಕೊಟ್ಟಿನತ್ತ ನಾನು ಸೈಕಲ್ ಸರ್ಕೀಟ್ ಹೊರಡಿಸಿದೆ. ಕಂಕನಾಡಿ, ಜೆಪ್ಪುವಿಗಾಗಿ ಮಾರ್ಗನ್ಸ್ ಗೇಟ್ ವೃತ್ತ. ಬಲಕ್ಕೆ ಹೋದರೆ ಮಂಗಳಾದೇವಿ, ಎಡದ ರೈಲ್ವೇ ಗೇಟ್ ದಾಟಿ (ಮಹಾಕಾಳಿ ಪಡ್ಪು) ಮತ್ತೊಂದು ರೈಲ್ವೇ ಮೇಲ್ಸೇತುವಿನಡಿ ನುಸಿದರೆ ಹೆದ್ದಾರಿ; ಮುಗೇರು ಅರ್ಥಾತ್ ಉಲ್ಲಾಳ ಸಂಕದ ಉತ್ತರ ಕೊಡಿ. ಇದು ಗೊತ್ತಲ್ಲಾ – ಮೊನ್ನೆ ಇಲ್ಲೇ ಹೆದ್ದಾರಿಯ ಇನ್ನೊಂದು ಪಕ್ಕಕ್ಕೆ ಇಳಿದು ಮೊನ್ನೆ ನಾನು ನಿಮ್ಮನ್ನು ಬೊಳ್ಳಕ್ಕೊಯ್ದಿದ್ದೆ, ನೆನಪಾಯ್ತಲ್ಲಾ? ಆದರೆ ಈ ಸಲ ನಾನು ನೇರ ಮುಂದುವರಿದು ಎಂಫಸಿಸ್ ಬಳಿ ಎಡದ ಗಲ್ಲಿ ಹಿಡಿದು ಜರ್ರಂಥ ಜಾರುತ್ತಲೇ ಇಳಿದೆ. ಬಲಕ್ಕೆ ಪ್ಲೈವುಡ್ ಕಾರ್ಖಾನೆಯೊಂದರ ದಿಮ್ಮಿ ಪಳಗುವ ಕೊಳ, ಎಡದಲ್ಲಿ ಏರುತ್ತಲೇ ಸಾಗಿದ ರೈಲ್ವೇ ದಿಬ್ಬಕ್ಕೆ ಮುಗಿತಾಯ ಕೊಡುವಂತೆ ಅಡ್ಡ ಬಿದ್ದ ನೇತ್ರಾವತಿ.

ರಸ್ತೆಗಳು ನಾಲ್ಕೇನು, ಆರೆಂಟು ಜಾಡುಗಳಿಗೂ ವಿಸ್ತಾರಗೊಳ್ಳುವುದು ಈಗ ಹೊಸ ವಿಷಯವಲ್ಲ. ಹಾಗೇ ಒಂದು ಕಾಲದಲ್ಲಿ ಬ್ರಾಡ್ಗೇಜಿಗೆ ಪದೋನ್ನತಿ ಪಡೆಯುತ್ತಿದ್ದ ರೈಲದಾರಿಗಳು ಈಗ ದ್ವಿಪಥ ಕಾಣುತ್ತಿವೆ. ಮಂಗಳೂರು ಬ್ರಿಟಿಷ್ ಯುಗದಲ್ಲೇ ರೈಲು ಕಂಡಿತ್ತು. ಮುಂದೆ ಅದು ಸ್ವತಂತ್ರ ಭಾರತದಲ್ಲಿ ಉಳಿದೆಡೆಗಳಂತೆ ವಿಕಸಿಸದೇ ಉಳಿದದ್ದಕ್ಕೆ ಕೇರಳದ ದಬ್ಬಾಳಿಕೆಯಷ್ಟೇ ನಮ್ಮ ಜನಪ್ರತಿನಿಧಿಗಳ ನಿಷ್ಕ್ರಿಯತೆಯೂ ಕಾರಣ. ಇನ್ನೂ ರೈಲ್ವೇ ಸೌಕರ್ಯಗಳ ವಿನಿಕೆಯಲ್ಲಿ ಮಂಗಳಾಪುರ ಕೇರಳದ ನಿಕೃಷ್ಟ ಮೂಲೆ; ಕರ್ನಾಟಕದ ಹೆಮ್ಮೆ ಖಂಡಿತಾ ಅಲ್ಲ. ಮಂಗಳೂರೇನು, ಜಿಲ್ಲೆಯ ಉತ್ತರೋತ್ತರ ಅಭಿವೃದ್ಧಿಗೆ ರಹದಾರಿ ಎಂದೇ ಬಿಂಬಿತವಾದ ಹಾಸನ- ಮಂಗಳೂರು ಮತ್ತು ಕೊಂಕಣ ರೈಲ್ವೇ ಮಾರ್ಗಗಳು ಇದಕ್ಕೆ ಸೇರ್ಪಡೆಯಾದರೂ ಗೌರವ ದಕ್ಕಿದ್ದು ದಾರಿ ಬದಿಯ ನಿಲ್ದಾಣದಷ್ಟೇ. ಸಹಜವಾಗಿ ಕೊಂಕಣಮಾರ್ಗ ಕೇರಳದತ್ತಣಿಂದ ದ್ವಿಪಥಗೊಳ್ಳುತ್ತದೆ ಎಂಬ ಸುದ್ಧಿ, ಇಲ್ಲಿ ನೇತ್ರಾವತಿಗಡ್ಡಲಾದ ಎರಡನೆಯ ಸಂಕದ ರೂಪ ತಾಳಬೇಕಾದರೆ ವರ್ಷ ಹತ್ತರ ಮೇಲೆ ಸಂದಿತ್ತು. ಅತ್ತ ಹೆದ್ದಾರಿಗೆ ಚತುಷ್ಪಥದ ಏರುಜ್ವರ ಹಿಡಿದು, ಉಲ್ಲಾಳ ಸಂಕಕ್ಕೊಂದು ಸಂಗಾತಿ ಬರತೊಡಗಿತ್ತು! (ಇಂದು ಅದೂ ಪೂರೈಸಿದೆ.) ಹೀಗೆ ವರ್ಷಾನುಗಟ್ಟಳೆ ವಿಕಸಿಸಿ ನಿಂತ ರೈಲಿನ ಸಂಕವನ್ನು ನನ್ನ ಸರ್ಕೀಟಿನ ಭಾಗವಾಗಿಸುವ ಬಯಕೆಯಲ್ಲಿ ವಿಚಾರಣೆಗೆ ಆಚೀಚೆ ನೋಡಿದೆ.

ವಾಹನಯೋಗ್ಯ ಮಣ್ಣಿನ ಮಾರ್ಗ ಮುಗಿದಲ್ಲೇ ಕಟ್ಟೆ ಪುರಾಣ ನಡೆಸಿದ್ದವರು ಸವಕಲು ಜಾಡಿನಲ್ಲಿ ಮುಂದುವರಿಯಲು ಸೂಚಿಸಿದರು. ಒತ್ತಿ ನಿಂತ ಪೊದರು, ತೆರಪಿದ್ದಲ್ಲೆಲ್ಲಾ ಮನುಷ್ಯ ಹಾಕಿದ ಕೆಸರು ಅಸಹ್ಯವಾಗಿ ಸೈಕಲ್ಲಿಳಿದೆ. ಎರಡು ಮಹಾಸೇತುಗಳ ಭೀಮ (Beam) ಪಾದಮೂಲದಿಂದ ಮೇಲಕ್ಕೂ ನಡಿಯಡ್ಡಕ್ಕೂ ದಿಟ್ಟಿಯೋಡಿಸಿದೆ. ಸಂಕದೆತ್ತರದಲ್ಲಿ ಯಾರೋ ಮೂವರು ಪೋಕರಿಗಳು ರೈಲ್ವೇ ಇಲಾಖೆ `ಧರ್ಮಾರ್ಥ’ ಒದಗಿಸಿದ ಕಲ್ಲಿನಿಂದ ಹೊಳೆಯಲ್ಲಿ ತೇಲುತ್ತಿದ್ದ ನಿಜ ಮತ್ಸ್ಯ ನಿಶಾನೆ ಸಾಧಿಸಲು ಛಲ ತೊಟ್ಟಂತಿತ್ತು. ಇನ್ನವರ ಈಡಿಗೆ ನಾನು ಮಿಕವಾಗುವುದು ಬೇಡವೆಂದು ಬೇಗ ಹಿಂಬಂದೆ. ಕಟ್ಟೆ ಪುರಾಣ ನಡೆದಲ್ಲೇ ತೀರಾ ಶಿಥಿಲವಾದ ಇನ್ನೊಂದು ಮೆಟ್ಟಿಲ ಸಾಲು ದಿಬ್ಬ ಹತ್ತುವುದನ್ನು ಗಮನಿಸಿದೆ ಮತ್ತು ನನ್ನ ಸೈಕಲ್ ತುಂಬಾ ಹಗುರವಿದ್ದುದರಿಂದ ಅದನ್ನು ಅಕ್ಷರಶಃ ಭುಜಕ್ಕೇರಿಸಿ ಮೇಲೇರಿಯೇ ಬಿಟ್ಟೆ. ಅದೇ ಸಮಯಕ್ಕೆ ನದಿ ದಾಟಿ ಅಲ್ಲಿಗೆ ಬಂದ ಕೇರಳದ ರೈಲೊಂದು ಹಾರ್ನ್ ಬಜಾಯಿಸಿದ್ದನ್ನು ನನ್ನ `ಶಿಖರ’ ಸಾಧನೆಯ ಮಂಗಳ ಘೋಷವೆಂದೇ ಕುಶಿಪಟ್ಟೆ.

ಪಶ್ಚಿಮದ್ದು ಹಳೇ ಸಂಕ – ಉದ್ದಕ್ಕೂ ಉಕ್ಕಿನ ಶಿರೋಭೂಷಣವನ್ನು ಹೊಂದಿ, ಹಳಿಯೋಟಕ್ಕೆ ಮಾತ್ರ ಅವಕಾಶ ಕಲ್ಪಿಸಿತ್ತು. ಅಲ್ಲಿ ಹಳಿಗಳ ನಡುವೆ ಹಾಸಿದ ತಗಡಷ್ಟೇ ಪಾದಚಾರಿಗಳಿಗೆ (ಮುಖ್ಯವಾಗಿ ಹಳಿ ಪರೀಕ್ಷಕರಿಗೆ) ಒದಗುವಂತಿತ್ತು. ಸುಮಾರು ಇಪ್ಪತ್ತು ಅಡಿಯ ಸಮಾನಾಂತರದಲ್ಲಿ ಒಳಗೈಯಾಗಿ ಬಂದದ್ದು ಹೊಸ ಸಂಕ. ಇದರ ಮುಕ್ಕಾಲು ಉದ್ದಕ್ಕೂ ಪಕ್ಕಾ ರಸ್ತೆಯಂತೇ ರೂಪುಗೊಂಡು, ಒತ್ತಿನಲ್ಲಿ ಪುಟ್ಟಪಥವನ್ನೂ ಕೊಟ್ಟಿದ್ದರು. ಹಳಿ ಜಲ್ಲಿ ಹಾಸಿನ ಮೇಲೇ ಓಡೋಡಿ ಆಚೆ ಕೊನೆಯಲ್ಲಿ ಸ್ವಲ್ಪ ಉದ್ದಕ್ಕೆ ಮಾತ್ರ ಹಳೆ ಸೇತುವೆಯದೇ ರೂಪ ತಾಳಿತ್ತು. ಪೋಕರಿ ಹುಡುಗರಿಗೆ ಹೆಚ್ಚಿನ ಪ್ರೇರಣೆಗಳು ಒದಗಿದರೆ ಎಂಬ ಸಣ್ಣ ಅಳುಕು ನನ್ನಲ್ಲಿದ್ದುದಕ್ಕೆ ಬೇಗನೆ ನೆನಪಿಗೆ ಒಂದೆರಡು ಚಿತ್ರಗ್ರಹಣ ನಡೆಸಿ ಪುಟ್ಟಪಥದ ಉದ್ದಕ್ಕೆ ತಣ್ಣಗೆ ಸವಾರಿ ನಡೆಸಿ ಈ ದಡ ಆ ದಡ ಮಾಡಿದೆ. ಎಲ್ಲ ರೈಲ್ವೇ ಸೇತುವೆಗಳಂತೆ ಇಲ್ಲೂ ನಿಗದಿತ ಅಂತರಗಳಲ್ಲಿ ಪುಟ್ಟ ಪುಟ್ಟ ಬಾಲ್ಕನಿಗಳಿದ್ದುವು (ತುರ್ತು ಪರಿಸ್ಥಿತಿಗಳಲ್ಲಿ ತನಿಖಾ ಕೈಗಾಡಿಗಳನ್ನು ಹಳಿ ತಪ್ಪಿಸಿ ಇಲ್ಲಿಗೆ ತಳ್ಳುತ್ತಾರಂತೆ). ಅಂಥಾ ಒಂದರಲ್ಲೂ ಮತ್ತೆರಡು ತರುಣರು ಪಟ್ಟಾಂಗ ಹೊಡೆದುಕೊಂಡಿದ್ದರು. ಸಾಮಾಜಿಕ ಆರೋಗ್ಯಕ್ಕೆ ಇವರೆಲ್ಲ ಸಹಕಾರಿಗಳೇ ಇರಲಿ ಎಂಬ ಹಾರೈಕೆ ಮಾತ್ರ ನನ್ನಲ್ಲುಳಿದಿತ್ತು.

ಎದುರು ದಂಡೆಯಲ್ಲಿ ದಿಬ್ಬದ ಪೂರ್ವ ಮಗ್ಗುಲಿನಲ್ಲಿ ಮೊದಮೊದಲು ಸವಕಲು ಜಾಡು, ಮುಂದುವರಿದಂತೆ ಬಹುಶಃ ಹಳಿ ಹಾಸುವ ಕಾಲದ ಲಾರಿ ಓಡಾಟಕ್ಕೆ ಮಾಡಿದ ಕಚ್ಚಾ ಮಣ್ಣು ದಾರಿಯೇ ಇತ್ತು. ಮಳೆಗಾಲದ ಕೆಸರು, ಸಣ್ಣಪುಟ್ಟ ಅಡ್ಡ ತೊರೆಗಳು, ಮುಚ್ಚಿ ಬರುವಂತಿದ್ದ ಹುಲ್ಲು ಹಸುರು ಮತ್ತೂ ಕೆಳಗೆ ಉದ್ದಕ್ಕೂ ಸುವಿಸ್ತಾರ ಸರಸಿನಂತೆ ಹರಡಿಕೊಂಡಿದ್ದ ಹಿನ್ನೀರು ನನಗೆ ಬಹು ರಮ್ಯ ಓಟವನ್ನೇ ಒದಗಿಸಿತ್ತು. ಅದರ ಕೊನೆಯಲ್ಲಿ ನನಗೆ ಮೊದಲು ಎಡಕ್ಕೆ ಸಿಕ್ಕ ಸರಿಯಾದ ಮಾರ್ಗ ಅನುಸರಿಸಿ, ಕಲ್ಲಾಪು ಬಳಿ ಮತ್ತೆ ಹೆದ್ದಾರಿ ಸೇರಿಕೊಂಡೆ. ಮುಂದೆ ತೊಕ್ಕೊಟ್ಟು, ಅಲೇಕಳ, ಉಳ್ಳಾಲಕ್ಕೊಂದು ಸುತ್ತು ಹಾಕಿ ಮರಳಿ ಮನೆ ಸೇರಿಕೊಂಡೆ.

[ಬಾಲ್ಯ ಮರುಕಳಿಸಿದಂತೆ ನಿತ್ಯ ಸೈಕಲ್ ಹಿಡಿದುಕೊಂಡು ಗುರಿಯಿಲ್ಲದ ಸವಾರಿ ಹೋಗುವುದು ನಡೆದೇ ಇದೆ. ಹಾಗೇ ಅದು ಯಾಂತ್ರಿಕವಾಗದ, ಅಂದರೆ ಮಾನಸಿಕವಾಗಿ ಸಾಕು ಎಂದನ್ನಿಸದ ಹವ್ಯಾಸವಾಗಿಯೇ ಉಳಿಯುವಂತೆ ದಿನಕ್ಕೊಂದು ಹೊಸ ದಿಕ್ಕು, ದಾರಿ, ಊರು ಕಾಣುತ್ತಿದ್ದೇನೆ. ಅವುಗಳನ್ನು ಸಮಾಜ ಕಾಣುವಂತಾಗಬೇಕು (ಏನಾದರೂ ಒಳ್ಳೆಯದಾದರೆ ಎಂಬ ಆಶಯದೊಡನೆ) ಎಂಬ ಉತ್ಸಾಹದಿಂದ ಮೊದಲು ಮುಖಪುಟದಲ್ಲಿ, ಇಲ್ಲಿ ಪರಿಷ್ಕೃತ ಸಂಕಲನವಾಗಿಯೂ ತರುವುದನ್ನು ಅನಿಯತವಾಗಿ ಮುಂದುವರಿಸುತ್ತಿರುತ್ತೇನೆ. ಟೀವೀಯಲ್ಲಿ ಟೀಯಾರ್ಪೀ ಎಂಬ ಮಾಯಾವಿಯಂತೆ, ಮುಖಪುಟದಲ್ಲಿ `ಲಾಯಕ್’ (Like) ಜ್ವರ ಏರಿದಂತೆ, ಇಲ್ಲೂ ಲೇಖನ ನೋಟಕರ ಸಂಖ್ಯೆ ದಾಖಲಾದರೆ ಸಾಲದು, ಪ್ರತಿಕ್ರಿಯಾ ಅಂಕಣದಲ್ಲಿ ನಿಮ್ಮ ಸಮಾನ ಅನುಭವ ನಿರೂಪಣೆಯೊಡನೆ ಸಕ್ರಿಯ ಪಾಲುದಾರರಾಗಬೇಕಾಗಿ ಮತ್ತೆ ಕೇಳಿಕೊಳ್ಳುತ್ತೇನೆ.]