ಅಧ್ಯಾಯ ಮೂವತ್ತೈದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೇಳನೇ ಕಂತು

ಎಷ್ಟೇ ದುಃಖ ಬಂದರೂ ನಮ್ಮ ದಿನ ನಿತ್ಯದ ಕಾರ್ಯಗಳನ್ನು ಮಾಡದೇ ನಿರ್ವಾಹವಿಲ್ಲವಷ್ಟೆ. ಹೀಗಾಗಿ ನಮ್ಮ ಹೊಸ ಪರಿಸ್ಥಿತಿಗೆ ತಕ್ಕಂಥ ಕೆಲವು ಏರ್ಪಾಡುಗಳನ್ನು ನಾವು ಮಾಡಿಕೊಳ್ಳಬೇಕಾಯಿತು. ನಮ್ಮ ನೆರೆಯವರೊಬ್ಬರ ಅಂಗಡಿಯ ಮೇಲಿನ ಒಂದು ಚಿಕ್ಕ ಕೋಣೆಯನ್ನು ಕುರಿತು ಮಿ. ಡಿಕ್ಕರಿಗೋಸ್ಕರ ಬಾಡಿಗೆಗೆ ಮಾಡಿಕೊಟ್ಟೆನು. ಆ ಕೋಣೆಯನ್ನು ಕುರಿತು ಮಿ. ಡಿಕ್ಕರಿಗೆ ತುಂಬಾ ಸಮಾಧಾನವಾಯಿತು, ಹಾಗಾಗಿ ಅವರು ಒಮ್ಮೆ ನಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟ ಮಿಸೆಸ್ ಕೃಪ್ಸಳಿಗೆ ತೋರಿಸಿ ಹೊಗಳಿದರಂತೆ, ತಾನು ಬಾಡಿಗೆಗೆ ಕೊಟ್ಟಿದ್ದ ಮನೆ ಹೊರತಾಗಿ ಇನ್ನೊಂದು ಕಡೆಯ ಮನೆ ಬಾಡಿಗೆಗೆ ಹೋದದ್ದಕ್ಕೆ ಅವಳಿಗೆ ಸ್ವಲ್ಪ ಸಿಟ್ಟಾಗಿರಬೇಕೆಂದು ತೋರುತ್ತದೆ. ಅವಳು ಅಂದಳಂತೆ “ಅದರಲ್ಲಿ ಒಂದು ಬೆಕ್ಕನ್ನು ತೂಗಹಾಕಲೂ ಸಹ ಸ್ಥಳ ಸಾಲದು” ಎಂದು. ಆ ಮಾತಿಗೆ ಮಿ. ಡಿಕ್ಕರು ಉತ್ತರವಿತ್ತರಂತೆ “ನನ್ನಲ್ಲಿ ತೂಗಹಾಕಲು ಬೆಕ್ಕೂ ಇಲ್ಲ, ಮತ್ತೇನು?” ಎಂದು.

ಅತ್ತೆಯ ಈಗಿನ ಬಡತನದ ಸ್ಥಿತಿಯನ್ನು ಗ್ರಹಿಸಿ ಮಿ. ಡಿಕ್ಕರು ಬಹುವಾಗಿ ಹೆದರಿಕೊಂಡಿದ್ದರು. ಅವರ ಮುಖದ ಲಕ್ಷಣವೇ ಮೊದಲಿನಂತಿರಲಿಲ್ಲ. ಸದಾ ಮುಗುಳ್ನಗೆಯಲ್ಲಿದ್ದು ಸಂತೃಪ್ತಿ ಸೂಚಿಸುತ್ತಿದ್ದ ಮುಖದಲ್ಲಿ ದುಃಖ ಭಾವ ಮಾತ್ರ ಇಂದು ಇತ್ತು. ಬಡತನವೆಂದರೆ ಕ್ಷಾಮಕಾಲದ ಪರಿಸ್ಥಿತಿಯೆಂದು ಅವರು ಅರ್ಥ ಮಾಡಿರಬೇಕು. ಅವರು ಕೆಲವು ಸಮಯಗಳಲ್ಲಿ ಅತ್ತೆಯನ್ನೇ ದೃಷ್ಟಿಸಿ ನೋಡುತ್ತಿದ್ದು, ಅನಂತರ ಅಡಗಿ ಅಳುತ್ತಿದ್ದರು. ಅವರಿಗೆ ಕೊಡುತ್ತಿದ್ದ ರೊಟ್ಟಿಯಲ್ಲಿ ಸಾಧಾರಣ ಅರೆವಾಸಿಯಷ್ಟನ್ನು ಗುಟ್ಟಾಗಿ ಅಡಗಿಸಿ ಶೇಖರಿಸುತ್ತಿದರು. ಕ್ಷಾಮವು ಪ್ರತ್ಯಕ್ಷ ಬಂದಾಗ ನಮ್ಮೆಲ್ಲರ ಸಹಾಯಕ್ಕಾಗಿ ಅವರು ಈ ವಿಧದ ಆಹಾರದ ಒಂದು ನಿಧಿಯನ್ನೇ ಕಾದಿಟ್ಟಿದ್ದರು. ಇಷ್ಟೂ ಅಲ್ಲದೆ ಅವರು ಪಾರ್ಲಿಮೆಂಟಿಗೂ ಒಂದು ಮನವಿಯನ್ನು ಕ್ಷಾಮದ ಸಂಬಂಧವಾಗಿ ಒಪ್ಪಿಸಬೇಕೆಂದು ಅಂಥಾ ಒಂದು ಮನವಿಯನ್ನು ಬರೆಯತೊಡಗಿದ್ದರು.

ಅತ್ತೆಗೆ ನನ್ನ ಕಡೆಯ ವರ್ತಮಾನವಾಗಿ ಡೋರಾಳಿಗೂ ನನಗೂ ನಡೆದಿದ್ದ ಪ್ರೇಮಬಂಧನದ ಕುರಿತು ತಿಳಿಸಿದೆ. ಡೋರಾಳ ಸೌಂದರ್ಯವನ್ನೂ ಗುಣಗಳನ್ನೂ ಅವಳಿಗೆ ವರ್ಣಿಸಿ ತಿಳಿಸಿದೆ. ಅತ್ತೆ ನನ್ನ ಮಾತುಗಳನ್ನೆಲ್ಲ ಸಾವಧಾನವಾಗಿ ಕೇಳಿ ನನಗೆ ಕೆಲವು ಪ್ರಶ್ನೆಗಳನ್ನು ಹಾಕಿದಳು – “ನಿನ್ನ ಡೋರಾಳ ಬುದ್ಧಿ ಹೇಗಿದೆ – ಚುರುಕಾಗಿದೆಯೇ, ಹೆಡ್ಡಳೇ, ಹಿಡಿದ ಕೆಲಸವನ್ನು ಮಾಡಿ ಪೂರೈಸುವಷ್ಟು ಹಟವಿರುವ ಸ್ವಭಾವದವಳೇ, ಶಿಸ್ತು, ಕ್ರಮ ಮರ್ಯಾದೆಗಳನ್ನು ತಿಳಿದು ಅಭ್ಯಸಿಸಿರುವಳೇ, ಸ್ವಸಾಮರ್ಥ್ಯ, ಧೈರ್ಯವಿರುವವಳೇ ಅಥವಾ ಎಲ್ಲದರಲ್ಲೂ ನಿನ್ನ ಶಕ್ತಿಯನ್ನೇ ಆಧರಿಸಿ ಅವಲಂಬಿಸಬಹುದಾದವಳೇ. . .” ಎಂದು ಮೊದಲಾಗಿ ಕೇಳಿದಳು.

ಈ ವಿಧದ ದೃಷ್ಟಿಕೋನಗಳಿಂದ ನಾನು ಡೋರಾಳನ್ನು ನೋಡಿರುವುದಿಲ್ಲವೆಂಬುದು ನನಗೆ ಆಗಲೇ ಅರಿವಾಯಿತು. ಅಷ್ಟೊಂದು ಸುಂದರ, ಸರಳ, ದೈವಿಕ ಪ್ರಭಾವದ ಡೋರಾಳಲ್ಲಿ ಎಲ್ಲಾ ಸದ್ಗುಣಗಳು ಇರಲೇಬೇಕೆಂಬ ದೃಢ ನಂಬಿಕೆಯಿಂದ ಮಾತ್ರ ನಾನು ಅವಳನ್ನು ಮೆಚ್ಚಿ ಒಪ್ಪಿದ್ದೆನಷ್ಟೆ. ಹಾಗಾಗಿ ನಾನು ಅತ್ತೆಯ ಪ್ರಶ್ನೆಗೆ ಕ್ರಮವಾದ ಉತ್ತರ ಕೊಡಲಾರದೆ ಮೌನವಾಗಿದ್ದೆ.

ಅತ್ತೆ ಸ್ವಲ್ಪ ಹೊತ್ತು ಆಲೋಚಿಸುತ್ತ ಕುಳಿತಿದ್ದು, ಅನಂತರ ಮುಗುಳ್ನಗೆ ಆಡುತ್ತಾ – “ಯೌವ್ವನದ ಮನಸ್ಸು, ಎಳೆ ಮನಸ್ಸು, ಕುರುಡು ಕುರುಡಪ್ಪಾ ಕುರುಡು!” ಎಂದಂದಳು. ಅನಂತರ ಸ್ವಲ್ಪ ಹೊತ್ತು ಕಳೆದು – “ಚಿಂತೆಯಿಲ್ಲ, ದೇವರು ನಿನಗೆ ಒಳ್ಳೆಯದೇ ಮಾಡುವನು; ನಿನಗೆ ಶುಭವಾಗಲಿ!” ಅಂದಳು. ಅತ್ತೆಯ ಅತೃಪ್ತಿ ನನಗೆ ಸ್ವಲ್ಪ ಬೇಸರವುಂಟುಮಾಡಿದರೂ ಸ್ವಲ್ಪ ಯೋಚಿಸುತ್ತಾ ಹೋದ ಹಾಗೆ, ಅತ್ತೆಗೆ ಡೋರಾಳ ಪರಿಚಯವಾದ ಪಕ್ಷಕ್ಕೆ ಸಂಪೂರ್ಣ ಸಮಾಧಾನವಾಗುವುದರಲ್ಲಿ ಸಂಶಯವಿಲ್ಲವೆಂದು ನಾನು ಬೇಸರ ಪರಿಹರಿಸಿಕೊಂಡು ಸಮಾಧಾನಪಟ್ಟುಕೊಂಡೆ. ನನ್ನ ಪ್ರಾಕ್ಟರ್ ವೃತ್ತಿ ಸಂಪಾದನೆಗೆ ತಕ್ಕಷ್ಟು ಮುಂದರಿಯದಿದ್ದುದರಿಂದ ಅದನ್ನೇ ಬಿಟ್ಟು, ಈಗಿನ ಬಡತನದ ಪರಿಸ್ಥಿತಿಯಲ್ಲಿ ಸಾಕಷ್ಟು ಸಂಪಾದಿಸಬಲ್ಲ ಇತರ ಯಾವುದಾದರೊಂದು ವೃತ್ತಿಯನ್ನು ಕೈಕೊಂಡರಾಗಬಹುದೆಂದು ನನಗೆ ತೋರಿತು. ಇದಕ್ಕಾಗಿ, ಮೊದಲು ಮಿ.ಸ್ಪೆನ್ಲೋರವರೊಡನೆ ನಾನು ಪ್ರಸ್ತಾಪಿಸಿದಾಗ, ನಾನು ಪ್ರಾಕ್ಟರ್ ಅಭ್ಯಾಸವನ್ನು ನಿಲ್ಲಿಸಲು ಅವರು ನನಗಾಗಿ ಅನುಮತಿಯಿತ್ತರೂ ಮುಂಗಡದ ಹಣವನ್ನು ವಾಪಾಸು ಕೊಡಲು ಅವರ ಜತೆಗಾರ ಮಿ. ಜಾರ್ಕಿನ್ಸರ ನಿರ್ದಾಕ್ಷಿಣ್ಯ ಸ್ವಭಾವದ ಕಾರಣವಾಗಿ ಅನನುಕೂಲವೆಂದು ಉತ್ತರವಿತ್ತರು.

ಒಂದು ದಿನ ಈ ನಮ್ಮ ಮನೆಗೆ ಏಗ್ನೆಸ್ಸಳು ಹಠಾತ್ತಾಗಿ ಬಂದಳು. ಈಗಲೂ ಅವಳು ನನ್ನ ಬಾಲ್ಯದ ವಿದ್ಯಾಭ್ಯಾಸ ಕಾಲದ ಏಗ್ನೆಸ್ಸಳಂತೆಯೇ ಬಹು ಶಾಂತ ಸ್ವಭಾವದವಳಾಗಿಯೇ ತೋರುತ್ತಿದ್ದಳು. ಅವಳು ನಮ್ಮೆಲ್ಲರ ಸುಖ ದುಃಖಗಳನ್ನು ಕೇಳಿ ತಿಳಿದುಕೊಳ್ಳುತ್ತಾ ನಾವು ಕೇಳಿದರೆ ಮಾತ್ರ ತನ್ನ ಕಡೆಯ ವರ್ತಮಾನಗಳನ್ನು ತಿಳಿಸುತ್ತಾ ಬಂದು ಸ್ವಲ್ಪ ಹೊತ್ತಿನಲ್ಲೇ ನಮ್ಮ ಮನೆಯವರ ಪೈಕಿ ಅವಳೂ ಒಬ್ಬಳಂತೆ ಆಗಿಹೋದಳು. ಅವಳ ತಂದೆಯ ಆರೋಗ್ಯ, ವೃತ್ತಿಯ ಅಭಿವೃದ್ಧಿ ಅವರ ಗೃಹಕೃತ್ಯದ ಸುಖ ದುಃಖ ಇವುಗಳನ್ನೆಲ್ಲ ನಾವು ವಿಚಾರಿಸಿ ಮಾತಾಡಿದೆವು. ಏಗ್ನೆಸ್ಸಳು ಆ ಎಲ್ಲಾ ವಿಷಯವನ್ನು ನಿರುದ್ವಿಗ್ನತೆಯಿಂದಲೇ ಹೇಳಿದಳು. ಆದರೂ ಅವಳ ಮಾತಿನಲ್ಲಿ ಸ್ವಲ್ಪ ದುಃಖವು ಕೂಡಿತ್ತು.

ಉರೆಯನೂ ಅವನ ತಾಯಿಯೂ ಈಗ ಮಿ. ವಿಕ್ಫೀಲ್ಡರ ಮನೆಯಲ್ಲೇ ವಾಸಿಸುತ್ತಿದ್ದರಂತೆ. ಮಿ. ವಿಕ್ಫೀಲ್ಡ್ ಮತ್ತು ಹೀಪ್ ಜತೆಕೂಟವು ಕೆಲಸ ಮಾಡತೊಡಗಿದ ಮೇಲೆ ಮಿ. ವಿಕ್ಫೀಲ್ಡರು ಸಂಪೂರ್ಣ ಹಿಂದೆ ನಿಲ್ಲುತ್ತಾ ಕೂಟದ ಮುಖ್ಯಸ್ಥನೇ ಹೀಪ್ ಎಂಬಂತೆ ಅಲ್ಲಿನ ಕೆಲಸ ಕಾರ್ಯಗಳು ಜರುಗುತ್ತಿದ್ದುವಂತೆ. ನಾನು ಶಾಲೆಗೆ ಹೋಗುತ್ತಿದ್ದಾಗ ವಾಸವಾಗಿದ್ದ ಕೋಣೆಯಲ್ಲಿ ಇಂದು ಉರೆಯನೂ ಏಗ್ನೆಸ್ಸಳ ಕೋಣೆಗೆ ಪಕ್ಕದ ಕೋಣೆಯಲ್ಲಿ ಉರೆಯನ ತಾಯಿಯೂ ವಾಸಿಸುತ್ತಿದ್ದರಂತೆ. ಉರೆಯನ ತಾಯಿಗೆ ಬೇಸರವಾದಾಗಲೆಲ್ಲ ಅವಳು ಏಗ್ನೆಸ್ಸಳ ಕೋಣೆಗೆ ಬಂದು ತನ್ನ ಬೇಸರ ಪರಿಹಾರ ಮಾಡಿಕೊಳ್ಳುತ್ತಿದ್ದಳಂತೆ. ಮತ್ತು, ಅವಳಿಗೆ ಅಂಥ ಬೇಸರ ಆಗಿಂದಾಗ್ಗೆಯೇ ಉಂಟಾಗುತ್ತಿದ್ದುವಂತೆ. ಉರೆಯನ ತಾಯಿಯ ಬೇಸರ ಪರಿಹಾರಕ್ಕಾಗಿ ಮಾತಾಡುವಾಗಲೆಲ್ಲ ಅವಳು ಉರೆಯನನ್ನು ಹೊಗಳುತ್ತಾ ಅವನ ಗುಣಕಥನದಿಂದಲೇ ಬೇಸರ ಪರಿಹರಿಸಿಕೊಳ್ಳುತ್ತಿದ್ದಳಂತೆ. ಈ ವಿಧದ ಜೀವನ ಕ್ರಮ – ತಮ್ಮ ಗೃಹಕೃತ್ಯದ ಅವಸ್ಥೆ, ಬಂದಿದ್ದುದರಿಂದ ಈಗೀಗ ಏಗ್ನೆಸ್ಸಳಿಗೆ ತನ್ನ ತಂದೆಯ ಜತೆಯಲ್ಲಿ ಹೆಚ್ಚು ಕಾಲ ಇರಲೂ ಅನುಕೂಲವಿಲ್ಲದೇ ಆಗಿತ್ತಂತೆ.

ಹೀಗೆ ನಾವೆಲ್ಲಾ ಅವರವರ ಕಷ್ಟನಷ್ಟಗಳನ್ನು ಮಾತಾಡುತ್ತಾ ಆತ್ತೆಯೂ ಅವಳ ಕಡೆಯ, ಸದ್ಯ ಈಚಿನ, ಪರಿಸ್ಥಿತಿಗಳನ್ನು ಏಗ್ನೆಸ್ಸಳೊಂದಿಗೆ ಹೇಳಿಕೊಂಡಳು. ಅತ್ತೆಗೆ ಏಗ್ನೆಸ್ಸಳ ಬುದ್ಧಿವಂತಿಕೆಯಲ್ಲೂ ವ್ಯವಹಾರ ಜ್ಞಾನದಲ್ಲೂ ತುಂಬಾ ನಂಬಿಕೆಯಿದ್ದುದರಿಂದ ಈ ಮಾತುಗಳನ್ನು ಸುಖದುಃಖವನ್ನಾಗಿ ಮಾತಾಡುವುದರ ಜತೆಯಲ್ಲೇ ಅಭಿಪ್ರಾಯ ವಿನಿಮಯ, ವಿಮರ್ಶೆಗಳಿಗಾಗಿಯೂ ಮಾತಾಡುತ್ತಿದ್ದಳೆಂದು ನಾನು ತಿಳಿದುಕೊಂಡೆ.

ಅತ್ತೆ ಮಿ. ವಿಕ್ಫೀಲ್ಡರ ಸಲಹೆಯಂತೆ ತನ್ನ ಹಣವನ್ನು ಬಡ್ಡಿಗಾಗಿ ಅಡವಿನ ಮೇಲೆ ಹಾಕಿದ್ದಳು. ಅಂಥ ಅಡವಿನ ಮರುಪಾವತಿಯ ಅವಧಿ ದಾಟಿ ಒಮ್ಮೆ ಹಾಕಿದ್ದ ಹಣವೆಲ್ಲಾ ಅತ್ತೆಗೆ ಮರುಪಾವತಿಯಾಗಿ ಬಂದಿತು. ಇದೇ ಸಮಯದಲ್ಲಿ ಮಿ.ವಿಕ್ಫೀಲ್ಡರ ಆರೋಗ್ಯ ಕೆಡುತ್ತ ಬಂದುದರಿಂದ ಹೀಗೆ ಜಮೆಯಾದ ಹಣವನ್ನು ಅತ್ತೆ ಸ್ವತಂತ್ರವಾಗಿ ಅನೇಕ ಕಂಪೆನಿಗಳ ವಹಿವಾಟದಲ್ಲಿ ಹಾಕಿದಳು. ಅತ್ತೆಯ ದುರದೃಷ್ಟದಿಂದ ಆ ಕಂಪೆನಿಗಳೆಲ್ಲ ದಿವಾಳಿಯಾಗಿ ಅತ್ತೆಗೆ ಇಂದಿನ ಸ್ಥಿತಿ ಬಂದಿತ್ತು. ಈಗ ಅತ್ತೆಯ ಕೈಯ್ಯಲ್ಲಿ ಸ್ವಲ್ಪ ಹಣ ಉಳಿದಿದ್ದುದನ್ನಾದರೂ ಉತ್ತಮ ವ್ಯವಸ್ಥೆಯಿಂದ ಎಲ್ಲಿ, ಹೇಗೆ ಇಡುವುದೆಂಬ ಆಲೋಚನೆಯನ್ನು ಅತ್ತೆ ಮಾಡುತ್ತಿದ್ದಳು. ಆ ವಿಷಯದಲ್ಲಿ ಏಗ್ನೆಸ್ಸಳ ಅಭಿಪ್ರಾಯವನ್ನೂ ಅತ್ತೆ ಕೇಳಿದಳು. ಈ ಮಾತು ನಡೆಯುತ್ತಿದ್ದಾಗಲೇ ಅಲ್ಲಿಗೆ ಮಿ. ವಿಕ್ಫೀಲ್ಡರು ಬಂದರು ಮತ್ತೂ ಅವರ ನೆರಳಿನಂತೆ ಉರೆಯನೂ ಬಂದನು.

ಮಿ. ವಿಕ್ಫೀಲ್ಡರಿಗೆ ಅವರ ಜತೆಕೂಟದ ಒಂದು ಕೆಲಸವಿದ್ದು, ಆ ಕೆಲಸದ ಬಗ್ಗೆ ಉರೆಯನ ಜತೆಯಲ್ಲಿ ಲಂಡನ್ನಿಗೆ ಬಂದಿದ್ದವರೇ ನಮ್ಮ ಮನೆಗೆ ಬಂದದ್ದೆಂದೂ ನಮ್ಮಲ್ಲಿ ಬೇರೆ ಏನೂ ಕೆಲಸವಿಲ್ಲವೆಂದೂ ಕುಳಿತ ಹಾಗೇ ತಿಳಿಸಿದರು. ಉರೆಯನೂ ತನ್ನ ಮೈಯ್ಯನ್ನು ಡೊಂಕಿಸಿಕೊಂಡು ಒಂದು ಕಡೆ ಕುಳಿತನು. ಮಿ. ವಿಕ್ಫೀಲ್ಡರ ರೂಪವೇ ಬಹು ಬದಲಾಗಿತ್ತು. ಅವರ ಕೈ ಮೊದಲಿಗಿಂತಲೂ ಹೆಚ್ಚು ನಡುಗುತ್ತಿತ್ತು. ನಮ್ಮ ಜತೆಯಲ್ಲಿ ಆಗ ಅವರು ಮಾತಾಡುತ್ತಿದ್ದುದನ್ನು ಸೂಕ್ಷ್ಮವಾಗಿ ನೋಡಿದಾಗ ಅವರು ಉರೆಯನು ತನ್ನ ಜತೆಯಲ್ಲಿರುವುದನ್ನು ಸದಾ ಜ್ಞಾಪಕದಲ್ಲಿಟ್ಟುಕೊಂಡು – ಆ ಕಾರಣವಾಗಿ ಸ್ವಲ್ಪ ಅಂಜಿಕೆಯಿಂದಲೇ ಇರುವವರಂತೆ ಇರುತ್ತಿದ್ದರು. ಅವರ ಅಂದಿನ ನಡೆ, ನುಡಿಗಳೆಲ್ಲವೂ ನನ್ನ ಈ ಅಭಿಪ್ರಾಯವನ್ನು ಸಮರ್ಥಿಸುತ್ತಿದ್ದುವು.

ನಮ್ಮೊಳಗೆ ಕುಶಲ ಪ್ರಶ್ನೆ, ಇನ್ನಿತರ ಕೆಲವು ಮಾತುಗಳು ನಡೆದನಂತರ, ಅತ್ತೆಯ ಸ್ವಾಭಾವಿಕವಾದ, ವೈಶಿಷ್ಟ್ಯವಾದ ಕ್ರಮದಿಂದ ಹಠಾತ್ತಾಗಿ ತನ್ನ ಆರ್ಥಿಕ ಪರಿಸ್ಥಿತಿಗಳನ್ನು ಕುರಿತು ಮಾತಾಡತೊಡಗಿದಳು – “ಮಿ. ವಿಕ್ಫೀಲ್ಡರೇ ದಯಮಾಡಿ ಸ್ವಲ್ಪ ಕೇಳಿ – ನೀವು ಇಲ್ಲಿಗೆ ಬರುವ ಮೊದಲು, ಈಗ ತಾನೇ ನಾವು ಮಾತಾಡುತ್ತಿದ್ದ ವಿಷಯವದು. ನನ್ನ ಹಣವೆಲ್ಲ ಕೆಲವು ಕಾರಣ, ಸಂದರ್ಭಗಳಲ್ಲಿ ನಷ್ಟವಾಗಿ ಹೋಗಿ, ಇನ್ನುಳಿದಿರುವ ಹಣವನ್ನು ನಾನು ಬಂದೋಬಸ್ತಿನಿಂದ ಉತ್ತಮ ಬಡ್ಡಿ ಸಿಗುವಂತೆ, ಸಂಚಯವಾಗಿ ಇಡುವುದು ಹೇಗೆ, ಎಲ್ಲಿ, ಎಂದು ನಿಮ್ಮ ಮಗಳ ಹತ್ತಿರ ಕೇಳುತ್ತಿದ್ದೆ. ನಿಮ್ಮನ್ನು ನಾನು ಕೇಳಬಹುದಿತ್ತಾದರೂ ನಿಮ್ಮ ಮಗಳೂ ಸಹ ಯೋಗ್ಯ ಸಲಹೆ ಕೊಡಬಲ್ಲಳೆಂಬ ನನ್ನ ಅಭಿಪ್ರಾಯದಿಂದ ಅವಳನ್ನೇ ವಿಚಾರಿಸಿದೆನು. ನಿಮ್ಮ ಮಗಳೊಬ್ಬಳ ಅಭಿಪ್ರಾಯವೇ ಆದರೂ ಅದು ನಿಮ್ಮ ಜತೆಕೂಟದ ಅಭಿಪ್ರಾಯದಷ್ಟೇ ಘನವಾದುದೆಂದು ನನಗೆ ಗೊತ್ತಿದೆ” ಎಂದಂದಳು ಅತ್ತೆ.

ಉರೆಯ ಈ ಸಂದರ್ಭದಲ್ಲಿ ಎರಡು ಮಾತಾಡಬೇಕೆಂಬ ತವಕದಲ್ಲಿದ್ದಂತೆ ತೋರುತ್ತಿದ್ದ. ಅವನು ತನ್ನ ಕೈಕಾಲುಗಳನ್ನು ತಿರುಟಿಸಿಕೊಂಡು, ಅತ್ತೆಯನ್ನು ನೋಡುತ್ತಾ – “ಈ ಸಂದರ್ಭದಲ್ಲಿ ನನ್ನ ಎರಡು ಮಾತುಗಳನ್ನು ತಾವುಗಳು ದಯಮಾಡಿ ಲಾಲಿಸಬೇಕು. ಮಿಸ್ ಟ್ರಾಟೂಡ್ಡರವರು ಹೇಳಿದ ಮಾತುಗಳು ಬಹು ಸತ್ಯವಾದವು. ಮಿಸ್ ಏಗ್ನೆಸ್ಸರು ನಮ್ಮ ಜತೆಕೂಟದಷ್ಟೇ ಅನುಭವವುಳ್ಳವರೆಂಬುದು ನಿಜವಾದುದೇ. ಅವರು ನಮ್ಮ ಜತೆಕೂಟದ ಒಬ್ಬ ಪಾಲುಗಾರರಾದ ಪಕ್ಷಕ್ಕೆ ಕೂಟದ ಯೋಗ್ಯತೆಯು ಇನ್ನೂ ಹೆಚ್ಚದಿರದು. ಅಂಥ ಸಂದರ್ಭವನ್ನು ನಾವು ಆನಂದದಿಂದ ನಿರೀಕ್ಷಿಸುತ್ತಿದ್ದೇವೆ” ಎಂದನು.

ಅತ್ತೆಯ ಮುಖವನ್ನು ನೋಡಿ ಅವಳ ಮನಸ್ಸಿನ ಅಭಿಪ್ರಾಯವನ್ನು ಊಹಿಸುವುದು ಅಸಾಧ್ಯ. ಮೌನವಾಗಿ ಕುಳಿತು ಈ ಮಾತುಗಳನ್ನು ಕೇಳುತ್ತಿದ್ದ ಅತ್ತೆಯನ್ನು ನೋಡಿ, ನಮ್ಮ ಕೂಟದವರೊಡನೆ ಸರಿಸಮಾನನಾಗಿ ಬೆರೆತು ಮಾತಾಡಿ, ತನ್ನ ಸ್ಥಾನ ಗೌರವವನ್ನು ಹೆಚ್ಚಿಸಲಿಚ್ಛಿಸುತ್ತಿದ್ದ ಉರೆಯನಿಗಂತೂ ಅತ್ತೆಯ ಅಂತರಂಗದ ಹೊಳಹು ಸ್ವಲ್ಪವೂ ಗೋಚರಿಸಲಿಲ್ಲ. ಅತ್ತೆ ಸ್ವಲ್ಪವೂ ಅಂಜಿಕೆ, ದಯಾ, ದಾಕ್ಷಿಣ್ಯವಿಲ್ಲದೆ, ಉರೆಯ ಕನಸಿನಲ್ಲೂ ನಿರೀಕ್ಷಿಸದಂತಿದ್ದ ರೀತಿಯಲ್ಲಿ – “ಉರೆಯಾ ನಿನ್ನನ್ನು ಇಲ್ಲಿ ಕೇಳಿದವರಿಲ್ಲ – ನಿನ್ನ ಪ್ರವೇಶ ನಮಗೆ ಅನಗತ್ಯ. ಮೊದಲು ನೀನು ನಿನಗೆ ದೊರಕಿರುವ ಸ್ಥಾನವನ್ನು ಉಳಿಸಿಕೋ. ಮತ್ತೆ ಅವರಿವರನ್ನು ಜತೆಕೂಟಕ್ಕೆ ಸೇರಿಸಿಕೊಳ್ಳುವ ಆಲೋಚನೆ ಮಾಡಬಹುದು” ಎಂದು ಅಂದಳು.

ಉರೆಯ ತಬ್ಬಿಬ್ಬಾದನು. ಈ ಕಠಿಣ ಪ್ರಸಂಗದಲ್ಲಿ ಅವನ ಸಹಾಯಕ್ಕಾಗಿ ಇದ್ದದ್ದು ಅವನ ಕೈಯಲ್ಲಿದ್ದ ರಿಕಾರ್ಡು ಕಟ್ಟು ಮಾತ್ರವಾಗಿತ್ತು. ಉರೆಯನು ಅತ್ತೆಗೆ ಉತ್ತರಕೊಡದೆ, ರಿಕಾರ್ಡು ಕಟ್ಟನ್ನು ಸವರುತ್ತಾ ಇದ್ದವರಲ್ಲಿ ನಾನು ಸುಲಭನೆಂದು, ನನ್ನೊಡನೆ ಮಾತಾಡಿದನು. “ಮಾಸ್ಟರ್ ಕಾಪರ್ಫೀಲ್ಡ್ – ಅಲ್ಲ ಮಿ. ಕಾಪರ್ಫೀಲ್ಡ್, ನೀವು ಸೌಖ್ಯವಾಗಿದ್ದೀರಷ್ಟೆ” ಎಂದು ಕೇಳುತ್ತಾ ನಮ್ಮ ಇಂದಿನ ಬಡತನದ ಪರಿಸ್ಥಿತಿಯನ್ನು ತಾನು ಅರಿತು ಸಂತೋಷಿಸುತ್ತಿದ್ದವನಂತೆ ತೋರುತ್ತಾ ಮಾತನ್ನು ಮುಂದರಿಸಿ – “ನಿಮ್ಮ ಹಿತಚಿಂತಕರಿಗೆಲ್ಲ ದುಃಖಕರವಾಗಿರುವ ಪರಿಸ್ಥಿತಿ ನಿಮಗೆ ಈಗ ಬಂದಿದೆ ನಿಜ. ಆದರೆ ನಿಮ್ಮ ಯೋಗ್ಯತೆ, ಗೌರವಕ್ಕೆ ಅದು ಅಷ್ಟೊಂದು ಸಂಬಂಧಿಸಿಲ್ಲ. ಮನುಷ್ಯನ ಯೋಗ್ಯತೆಗೆ ಹಣವು ಪ್ರಧಾನವಲ್ಲವಷ್ಟೆ. ಯೋಗ್ಯತೆ ಯಾವುದರಿಂದ ಬರುತ್ತದೆಂದು ವಿವರಿಸುವ ಸಾಮರ್ಥ್ಯ ನನಗಿಲ್ಲ. ಆದರೂ ಹಣದಿಂದ ಮಾತ್ರ ಮನುಷ್ಯನ ಯೋಗ್ಯತೆಯು ಗಣನೆಯಾಗಬಾರದೆಂದೇ ನನ್ನ ಅಭಿಪ್ರಾಯ” ಎಂದು ಹೇಳಿದನು. ಉರೆಯ ಇಷ್ಟು ಮಾತಾಡುವಾಗ, ಮಾತುಗಳಲ್ಲಿ ನನ್ನ ಹಳೆ ಪರಿಚಯಸ್ಥನೆಂಬ ಸಲಿಗೆ ಕಂಡುಬಂದರೂ ಹೇಳುವ ಕ್ರಮ ಠೀವಿಗಳಲ್ಲಿ, ಮುಖಭಂಗಿಯಲ್ಲಿ, ತಾನು ಜತೆಕೂಟದ ಒಬ್ಬ ಗಣ್ಯ ಪಾಲುಗಾರನೆಂಬುದನ್ನೂ ತನ್ನ ಯೋಗ್ಯತೆಯ ಫಲವಾಗಿ, (ನಾವು ವಿರೋಧಿಸುತ್ತಿದ್ದರೂ) ಅವನು ಜಯಶೀಲನಾಗಿ, ಆ ಸ್ಥಾನಕ್ಕೆ ಬಂದವನೆಂಬುದನ್ನು ತೋರಿಸುತ್ತಿದ್ದನು.

ಉರೆಯನು ಪುನಃ ನಮ್ಮ ಮಾತುಗಳ ಮಧ್ಯೆ ಪ್ರವೇಶಿಸಿ, ನಮ್ಮ ಸರಿಸಮಾನಸ್ಥನು ತಾನೆಂದು ಸಿದ್ಧಾಂತಪಡಿಸಿಕೊಳ್ಳುವಂತೆ ತೋರುತ್ತಾ ಪೂರ್ವದ ವಿನೀತತೆಗಳನ್ನೆಲ್ಲ ಬದಿಗಿಟ್ಟು, ಮಿ. ವಿಕ್ಫೀಲ್ಡರನ್ನು ನೋಡುತ್ತಾ – “ಮಿ. ಕಾಪರ್ಫೀಲ್ಡ್, ಮಿ. ವಿಕ್ಫೀಲ್ಡರು ಈಗ ಮೊದಲಿಗಿಂತ ಆರೋಗ್ಯವಂತರಾಗಿಯೂ ಹುಮ್ಮಸ್ಸುಳ್ಳವರಾಗಿಯೂ ತೋರುವುದಿಲ್ಲವೇನು? ವಯಸ್ಸು ಅವರಲ್ಲಿ ವಿಶೇಷ ಬದಲಾವಣೆಯನ್ನು ತಂದಿಲ್ಲ. ಅದು ಏನಾದರೂ ಬದಲಾವಣೆ ತಂದಿದ್ದರೆ, ಆ ಬದಲಾವಣೆ ಅವರ ಹೃದಯದ ಮೇಲೆ ನಡೆದಿದೆ. ನನ್ನನ್ನೂ ನನ್ನ ತಾಯಿಯನ್ನೂ ಉತ್ತಮ ಸ್ಥಿತಿಗೆ ತಂದಿರುತ್ತಾರೆ. ನಮ್ಮ ಉದ್ಧಾರಗೈದ ಮೃದು ಹೃದಯ ಅವರದು. ಅವರ ವೃತ್ತಿಯ, ಜೀವನದ ಮುಖ್ಯ ಗುರಿಯೇ ನಮ್ಮಂಥವರ ಉದ್ಧಾರ ಮತ್ತು ಅವರ ರೂಪವಂತೆ ಮಗಳು ಏಗ್ನೆಸ್ಸಳ ಭವಿಷ್ಯದ ಅಭ್ಯುದಯ ಮಾತ್ರವಾಗಿದೆ. ಇಂಥ ದೃಷ್ಟಿಕೋನವನ್ನು, ಹೃದಯ ಪರಿವರ್ತನೆಯನ್ನು ಮಾತ್ರ ಅವರಲ್ಲಿ ಪ್ರಾಯವು ತಂದಿದೆ” ಎಂದು ಉರೆಯ ಬಹು ವಿನಯದಿಂದೆಂಬಂತೆ ಕೈ ಮೈ ಡೊಂಕಿಸಿಕೊಂಡು ಹೇಳಿದನು. ಅವನ ಮೈ ಕೈ ಅಲುಗಾಟ, ಬಳುಕಾಟಗಳಿಂದ ಅವನ ಅಂತರಂಗದ ಮಾತ್ಸರ್ಯ, ವಕ್ರತೆ, ಉತ್ತಮರ ಮೇಲಿನ ವೈರವೆಲ್ಲ ಹೊರಬೀಳುತ್ತಿತ್ತು. ಅತ್ತೆಗೆ ಅವನನ್ನು ನೋಡಿದಷ್ಟೆಲ್ಲ ಸಿಟ್ಟು ಹೆಚ್ಚುತ್ತಿತ್ತು. ಅವಳು ಸಿಟ್ಟಿನಿಂದ ಗುಡುಗುಟ್ಟುತ್ತಾ –

“ಏನಾಗಿದೆಯೇ ಅವನಿಗೆ? ಭೂತ ಹಿಡಿದವನ ಹಾಗೆ ಮೈ ಅಲ್ಲಾಡಿಸುತ್ತಾನೆ – ಭೂತ ಹೊರಲಿ, ಅವನನ್ನು” ಅಂದಳು ಅತ್ತೆ, ಅವನಿಗೆ ಕೇಳುವ ಹಾಗೆಯೇ! “ನೀವು ಸ್ವಲ್ಪ ಗಾಬರಿಗೊಳ್ಳತಕ್ಕ ಸ್ವಭಾವದವರು. ಈ ವಿಧದ ಕೃತಜ್ಞತಾಪೂರ್ವಕವಾದ ಬಡವರ ಮಾತನ್ನು ಕೇಳಿರಲಾರಿರಿ” ಅಂದನು ಉರೆಯ. “ಗಾಬರಿಯೂ ಇಲ್ಲ, ಹೆದರಿಕೆಯೂ ಇಲ್ಲ. ನಿನ್ನ ಸ್ವಭಾವ ನೋಡಿ ಜಿಗುಪ್ಸೆ ಮಾತ್ರ ಆಗುತ್ತಿದೆ. ನೀನು ಮನುಷ್ಯನಾಗಿದ್ದರೆ ಮನುಷ್ಯನಂತೆ ವರ್ತಿಸು. ಹೊಡೆದು ಹಾಕಿದ, ಅರೆಜೀವದ ಹಾವಿನಂತೆ ಮೈಕೈ ಡೊಂಕಿಸಿ ಠಕ್ಕು ವಿನಮ್ರತೆ ತೋರಿಸಬೇಡ” ಎಂದು ಅತ್ತೆ ಪುನಃ ಉರೆಯನನ್ನು ಗದರಿಸಿದಳು.

ಈ ಮಾತಿನಿಂದ ಉರೆಯ ನಿಜವಾಗಿಯೂ ಹೆದರಿಹೋದ. ಅತ್ತೆಯ ಈಗಿನ ಪರಿಸ್ಥಿತಿಯಲ್ಲಿ ಅವಳು ಮಾತನ್ನೂ ಮುಂದರಿಸಿ ಕೈ ಮಾಡದೆ ತನ್ನನ್ನು ಬಿಟ್ಟದ್ದು ಪುಣ್ಯವೆಂದೇ ಉರೆಯ ಅಂದುಕೊಂಡು, ಸ್ವಲ್ಪ ಎಚ್ಚರಿಕೆಯಿಂದಲೇ ನುಡಿದನು – “ನಮ್ಮಿಬ್ಬರಿಂದ ನಿಮಗೆ ಏನಾದರೂ ಸಹಾಯವಾಗಬೇಕೇ ಎಂದು ವಿಚಾರಿಸಲೋಸ್ಕರವೇ ನಾವು ಇಲ್ಲಿಗೆ ಈಗ ಬಂದಿರುವೆವು.” “ಉರೆಯ ಅವನ ವೃತ್ತಿಯಲ್ಲಿ ತುಂಬಾ ನುರಿತವನು. ನನ್ನ ವೃದ್ಧಾಪ್ಯದಲ್ಲಿ ನನಗೆ ತುಂಬಾ ಸಹಾಯ ಮಾಡುತ್ತಿರುವವನು. ಅವನನ್ನು ನನ್ನ ಜತೆಗೆ ಸೇರಿಸಿಕೊಂಡನಂತರ ನನ್ನ ಕೆಲಸ ಬಹು ಹಗುರವಾಗಿದೆ, ಸುಖಕರವಾಗಿದೆ” ಎಂದು ಮಿ. ವಿಕ್ಫೀಲ್ಡರು (ಉರೆಯ ಈ ಮಾತನ್ನು ಕೇಳಿ ಸಂತೋಷಪಡಬಹುದೆಂದು ನಂಬುತ್ತಿರುವವರಂತೆ ತೋರುತ್ತಾ) – ಹೇಳಿದರು. ಈ ಮಾತುಗಳನ್ನಾಡುವಾಗ ಮಿ. ವಿಕ್ಫೀಲ್ಡರು ತಾವು ಯಾವ ಮಾತುಗಳಿಂದ ಉರೆಯನನ್ನು ಒಲಿಸಬಹುದೆಂದು ತವಕಿಸುತ್ತಿರುವಂತೆಯೂ ಎಲ್ಲಿ ತಪ್ಪಿ ಬೀಳುವರೋ ಎಂದು ಅಂಜುತ್ತಿರುವವರಂತೆಯೂ ತೋರುತ್ತಿದ್ದರು.

“ಎಂಥಾ ಅಮೂಲ್ಯ ಆಶೀರ್ವಚನಗಳು, ಬಹುದೊಡ್ಡ ಬಹುಮಾನ. ಮಿ. ವಿಕ್ಫೀಲ್ಡರ ಜವಾಬ್ದಾರಿಯ ಭಾರಗಳನ್ನು ನನ್ನ ಶಕ್ತ್ಯನುಸಾರ ಹೊತ್ತು ನಾನವರ ಸೇವೆ ಮಾಡುತ್ತಿರುವೆನು” ಎಂದು ಉರೆಯ ನಮ್ರವಾಗಿ ಉತ್ತರವಿತ್ತನು. ಉರೆಯನನ್ನು ನಮ್ಮ ಮನೆಯಿಂದ ಹೊರನೂಕುವ ದಾರಿ ಏನೆಂದು ಏಗ್ನೆಸ್ಸಳು ಗ್ರಹಿಸುತ್ತಾ ಅದಕ್ಕಾಗಿಯೇ ಅವಳು ತನ್ನ ತಂದೆಯ ಸಮೀಪಕ್ಕೆ ಬಂದು ನಿಂತು – “ಅಪ್ಪಾ, ನೀವು ಮಿಸ್ ಟ್ರಾಟೂಡ್ಡರ ಹತ್ತಿರ ಮಾತಾಡಲಿದೆಯೆಂದು ಹೇಳಿದಿರಲ್ಲವೇ. ಆ ಮಾತನ್ನು ಊಟ ತೀರಿಸಿದನಂತರ ನೀವಿಬ್ಬರೇ ತಿರುಗಾಡುತ್ತ ಮಾತಾಡಬಹುದಲ್ಲವೇ?” ಎಂದು ಕೇಳಿದಳು.

ಈ ಮಾತಿಗೆ ಉತ್ತರವನ್ನು ಏನೆಂದು ಕೊಡಬೇಕೆಂದು ಮಿ. ವಿಕ್ಫೀಲ್ಡರು ಉರೆಯನನ್ನು ಕೇಳುವುದರಲ್ಲಿದ್ದಂತೆ ತೋರಿದರು. ಅದನ್ನು ಕಂಡೇ ಉರೆಯ ತಾನು ಅಲ್ಲಿ ನಿಂತಿದ್ದು ಮಿ. ವಿಕ್ಫೀಲ್ಡರ ಮೇಲೆ ತನಗಿದ್ದ ಹಿಡಿತವನ್ನು ಪ್ರದರ್ಶಿಸಬಾರದೆಂದು ಆ ಕೂಡಲೆ, ನಮಗೆ ನಮಸ್ಕರಿಸಿ, ತಮ್ಮ ಜತೆಕೂಟದ ಪ್ರತಿನಿಧಿಯಾಗಿ ಮಿ. ವಿಕ್ಫೀಲ್ಡರು ಅಲ್ಲಿದ್ದರೆ ಸಾಕೆಂದು ಹೇಳುತ್ತಾ ಹೊರಟು ಹೋದನು.

ಮಿ. ವಿಕ್ಫೀಲ್ಡರು ಈಗ ಸ್ವಲ್ಪ ಸ್ವಾಭಾವಿಕ ಸ್ಥಿತಿಗೆ ಬಂದರು. ಅಂದರೆ, ಉರೆಯನ ನಿರ್ಗಮನದನಂತರ ಅವರು ನನ್ನ ಬಾಲ್ಯಕಾಲದ ಮಿ. ವಿಕ್ಫೀಲ್ಡರೇ ಆಗಿ ತೋರಿದರು. ಮತ್ತು, ಅವರ ನಡೆನುಡಿ, ಮುಖಭಾವಗಳೆಲ್ಲ ಸಂತೋಷ ಸಮಾಧಾನಗಳನ್ನು ಸೂಚಿಸತೊಡಗಿದುವು. ನಮ್ಮ ಶಾಲಾ ದಿನಗಳಲ್ಲಿ ನಾನು ಅವರ ಮನೆಯಲ್ಲಿದ್ದದ್ದನ್ನು ನೆನೆನೆದು ಸಂತೋಷಿಸಿಕೊಂಡೆವು. ನನ್ನ ಜೀವನದ ಮುಂದಿನ ವೃತ್ತಿ ಏನಾಗಬಹುದೆಂದು ಆಲೋಚಿಸಿದರು. ಆಗಲೇ ಏಗ್ನೆಸ್ಸಳಿಗೆ ಡಾಕ್ಟರ್ ಸ್ಟ್ರಾಂಗರ ನೆನಪಾಗಿ, ಅವರಲ್ಲಿ ಕಾರ್ಯದರ್ಶಿ ಕೆಲಸವೊಂದು ಖಾಲಿಯಿದ್ದು ಯೋಗ್ಯ ಕಾರ್ಯದರ್ಶಿಯನ್ನು ಹುಡುಕುತ್ತಿದ್ದರಾಗಿ ತಿಳಿಸಿದಳು. ಡಾ| ಸ್ಟ್ರಾಂಗರು ಪೆನ್ಶನ್ ಆದನಂತರ ಲಂಡನ್ನಿನಲ್ಲಿ ನೆಲೆಸಿ ಅಲ್ಲಿ ಅವರ ಬರೆಹದ ಕೆಲಸವನ್ನು ಮಾಡುತ್ತಿದ್ದರಂತೆ. ಏಗ್ನೆಸ್ಸಳ ಸಲಹೆಯಂತೆ ನಾನು ಆ ಕೂಡಲೇ ಡಾ| ಸ್ಟ್ರಾಂಗರಿಗೊಂದು ಪತ್ರ ಬರೆದು ನಾನು ಮರುದಿನ ಅವರನ್ನು ಕಂಡು ಮಾತಾಡಲು ಬರುವುದಾಗಿ ತಿಳಿಸಿದೆನು.

ಆ ದಿನ ಮಿ. ವಿಕ್ಫೀಲ್ಡರೂ ಏಗ್ನೆಸ್ಸಳೂ ನಮ್ಮ ಮನೆಯಲ್ಲೇ ಇದ್ದರು. ಅಪೂರ್ವವಾಗಿ ಬಂದಿದ್ದ – ಮನೆಗೆ ಬಹು ಪ್ರಿಯರೂ, ಗೌರವಾನ್ವಿತರೂ ಆಗಿದ್ದ – ಅವರಿಬ್ಬರ ಜತೆಯಲ್ಲಿ ಆ ದಿನ ನಾವು ಬಹು ಸಂತೋಷದಿಂದ ಕಳೆದೆವು. ಅತ್ತೆಯೂ ಮಿ. ವಿಕ್ಫೀಲ್ಡರೂ ಹೊರಗೆ ತಿರುಗಾಡುತ್ತಾ ತುಂಬಾ ಮಾತಾಡುತ್ತಿದ್ದರು. ನಾನೂ ಏಗ್ನೆಸ್ಸಳೂ ನನ್ನ ಕೋಣೆಯಲ್ಲಿ ಕಿಟಕಿಯ ಬದಿಯಲ್ಲಿ ಕುಳಿತು ಬೇಕು ಬೇಕಾದಂತೆಲ್ಲ ಮಾತಾಡಿದೆವು. ನಮ್ಮ ಕೋಣೆಯಲ್ಲಿ ದೀಪ ಉರಿಸಿರಲಿಲ್ಲ. ಸೂರ್ಯನು ಆಗ ತಾನೇ ಅಸ್ತಂಗತನಾಗಿದ್ದುದರಿಂದ ಆಕಾಶದಲ್ಲಿ ಎದ್ದು ಬಂದಿದ್ದ ನಕ್ಷತ್ರ, ಪಶ್ಚಿಮದ ಕಡೆಯಿಂದ ಕ್ರಮೇಣವಾಗಿ ಕಡಿಮೆಯಾಗುತ್ತಿದ್ದ ಸುವರ್ಣ ವರ್ಣದ ಬೆಳಕು ಬರುತ್ತಿತ್ತು. ಒಂದು ವಿಧದ ಅರುಣೋದಯ ಕಾಲದಲ್ಲಿ ಕುಳಿತು ಮಾತಾಡುತ್ತಿದ್ದಂತೆ ನಾವು ಬಹು ಸಂತೋಷದಿಂದ ಮಾತಾಡಿದೆವು. ನಾನು ಡೋರಾಳನ್ನು ಕುರಿತಾಗಿಯೂ ಏಗ್ನೆಸ್ಸಳೊಂದಿಗೆ ಮಾತಾಡಿದೆನು. ಡೋರಾಳ ಗುಣಗಳನ್ನೆಲ್ಲ ಕೇಳಿ ಅವಳು ಶ್ಲಾಘಿಸಿದಳು. ಏಗ್ನೆಸ್ಸಳ ಶ್ಲಾಘನೆ ದೊರಕಿದ ಮೇಲಂತೂ ಡೋರಾಳು ಮತ್ತಷ್ಟು ಪ್ರಿಯಳೂ ಪವಿತ್ರಳೂ ಆಗಿ ತೋರಿದಳು. ಡೋರಾಳ ಪ್ರಭೆ, ಪ್ರಭಾವ ಎಷ್ಟೇ – ಎಂಥಾದ್ದೇ ಇದ್ದರೂ ಏಗ್ನೆಸ್ಸಳೂ ಸಹ ನನಗೆ ಇನ್ನೊಂದು ವಿಧದಲ್ಲಿ ಒಬ್ಬ ದಿವ್ಯ ದೇವತೆಯಂತೆಯೇ ತೋರುತ್ತಿದ್ದಳು. ಆ ಸಂಜೆಯ ಅರುಣಕಾಂತಿಯಲ್ಲಿ, ಏಗ್ನೆಸ್ಸಳ ಸೌಮ್ಯ ಸ್ವಭಾವ, ಬುದ್ಧಿ ಜ್ಞಾನಯುತವಾದ ಅವಳ ಮಾತುಗಳು, ಇವುಗಳಿಂದೆಲ್ಲ ಏಗ್ನೆಸ್ಸಳು ನನ್ನ ಜೀವನಪಥದ ಮಾರ್ಗದರ್ಶಕ ಜ್ಯೋತಿಯಂತೆ, ನನ್ನ ಶ್ರೇಯೋಭಿವೃದ್ಧಿಯ ತಾರೆಯಂತೆ, ಶೋಭಿಸಿದಳು. ನನ್ನ ಬುದ್ಧಿಯ ಎಷ್ಟೊಂದು ನ್ಯೂನತೆಗಳನ್ನು ಅವಳು ತಿದ್ದಿ ಸರಿಪಡಿಸಿ, ನನ್ನನ್ನು ಉದ್ಧರಿಸಿರುವಳೆಂಬುದನ್ನು ನಾನೆಂದಿಗೂ ಮರೆಯೆನು.

ಓ ಏಗ್ನೆಸ್, ಪ್ರಿಯ ಭಗಿನೀ – ನಿನ್ನ ಅಂತರಂಗದಲ್ಲಿ ಆಗಲೂ ಬಚ್ಚಿಟ್ಟಿದ್ದ ಅಭಿಪ್ರಾಯವನ್ನು ನಾನು ಬಹುಕಾಲದನಂತರ ಮಾತ್ರ ತಿಳಿದುದರ ಬದಲು ಅಂದೇ ನಾನು ತಿಳಿದಿದ್ದರೆ! ಏಗ್ನೆಸ್ಸಳ ಹತ್ತಿರ ಹೀಗೆ ತುಂಬಾ ಹೊತ್ತು ಮಾತಾಡಿದನಂತರ ನಾನು ಒಂದು ಕೆಲಸದ ನಿಮಿತ್ತ ಹೊರಗೆ ಹೋದೆ. ಏಗ್ನೆಸ್ಸಳು ಮೊದಲು ಕುಳಿತಿದ್ದಲ್ಲೇ ಕುಳಿತು ಹೊರಗೆ ನೋಡುತ್ತಿದ್ದಳು. ನಾನು ಏಗ್ನೆಸ್ಸಳ ದಿವ್ಯ ಸ್ವರೂಪ, ಸನ್ನಿಧಿಯನ್ನು ನೆನೆನೆದು ಮಾರ್ಗದಲ್ಲಿ ಹೋಗುತ್ತಿದ್ದ ಹಾಗೆಯೇ ನನ್ನೆದುರಿನಿಂದ ಬೇಡಿಕೊಂಡು ಬರುತ್ತಿದ್ದ ಕುರುಡನೊಬ್ಬನು – “ಕುರುಡಾ, ಕುರುಡನಪ್ಪಾ ಕುರುಡಾ” ಎಂದು ರೋದಿಸಿ ನನ್ನಲ್ಲಿ ದಿಗಿಲೆಬ್ಬಿಸಿದನು. ನನ್ನ ಅತ್ತೆ ಪ್ರೇಮವನ್ನು ಕುರಿತಾಗಿ ಅಂದೇ ಬೆಳಗ್ಗೆ ನನ್ನೊಡನೆ ಹೇಳಿದ್ದ ಮಾತುಗಳ ಪ್ರತಿಧ್ವನಿಯೇ ಇದೆಂಬಂತೆ ತೋರಿ ನನಗೆ ಭಯವೂ ಭ್ರಮೆಯೂ ಉಂಟಾಯಿತು.

(ಮುಂದುವರಿಯಲಿದೆ)