ಶಾಂಭವಿ ಮತ್ತು ಉಚ್ಚಿಲ ಹೊಳೆಗಳ ಮೇಲೆ ವಿಜಯ ಪತಾಕೆ ಹಾರಿಸಿ ಬಂದಮೇಲೆ, “ವರ್ತಮಾನ ಕಾಲದಲ್ಲಿ ಮಂಗಳೂರಿನ ಆಸುಪಾಸಿನ ದೊಡ್ಡ ನೀರಹರಹುಗಳಿಗೆ ಹವ್ಯಾಸೀ ನಾವಿಕರು ಯಾರೂಂತ ಕೇಳಿದ್ದೀರಿ” ಎಂದು ನಾವು ಸಭೆ ಕೊಟ್ಟಿದ್ದೆವು. ಭಟ್ಟಂಗಿಗಳು ಬಿದಿರಾವಳಿ ಸಹಿತ ನಮ್ಮ ನಾಮೋದ್ಧರಣ ಮಾಡುತ್ತಿರುವ ಕಾಲದಲ್ಲಿ, ತರುಣಮಿತ್ರ ರೋಶನ್ ಕಾಮತನ ಅಶರೀರವಾಣಿ (ಚರವಾಣಿ) ಮೊಳಗಿತು “(ದುಷ್ಟಾ, ಅತ್ತ ಯಮುನಾ ತೀರದಲ್ಲಿ ಕೃಷ್ಣ ಬಲರಾಮರೆಂಬ ನಾಮದಲ್ಲಿ…) ಅಶೋಕರೇ ಅಲ್ಲಿ ನೇತ್ರಾವತೀ ಪಾತ್ರೆಯಲ್ಲಿ ಆನಂದ ಪ್ರಭು ಮತ್ತು ಜಾಹೀರ್ ಮಣಿಪ್ಪಾಡಿ ಎಂಬಿಬ್ಬರು ಈಗಾಗಲೇ ಸ್ವಂತ ಕಯಾಕಿನಲ್ಲಿ ಪ್ರಯೋಗ ನಡೆಸಿದ್ದಾರೆ.” ಕೂಡಲೇ ನಾವು ಪರಿಚಯ, ಸಂಬಂಧ ಬೆಳೆಸಿದ್ದಾಯ್ತು. ಉಚ್ಚಿಲದ ತ್ರಿವೇಣಿ ಸಂಗಮವನ್ನು ಜತೆಯಲ್ಲಿ ಮಥಿಸುವ ಕಲಾಪವನ್ನೂ ಹಾಕಿದ್ದಾಯ್ತು.
ಆನಂದ ಪ್ರಭು ಮುಂಬೈ ಡೆಕತ್ಲಾನ್ ಕ್ರೀಡಾ ಮಳಿಗೆ ಮೂಲಕ (ಬಯಸದೇ) ವಿದೇಶೀ ಕಯಾಕನ್ನು ಹೆಚ್ಚು ಬೆಲೆ ಕೊಟ್ಟು ಪಡೆದಿದ್ದರು. ನಮ್ಮದರಲ್ಲಿಲ್ಲದ ಕೆಲವು ಸೌಲಭ್ಯಗಳು – ನೆಲದ ಮೇಲೆ ಎತ್ತಿಕೊಂಡೊಯ್ಯಲು ಹಿಡಿಕೆ, ತಿಂಡಿತೀರ್ಥ ಇಟ್ಟುಕೊಳ್ಳಲು ಪುಟ್ಟ ಗೂಡು ಇತ್ಯಾದಿ ಅದರಲ್ಲಿತ್ತು. ನಾವು ಅತ್ತ ಶಾಂಭವಿಯ ಪ್ರಯೋಗ ನಡೆಸಿದ್ದಂತೆ ಇವರು ನೇತ್ರಾವತಿಯನ್ನು ತುಂಬೆಯಿಂದ ಉಳ್ಳಾಲ ಸಂಕದವರೆಗೆ, ಫಲ್ಗುಣಿಯನ್ನು ಮರವೂರಿನಿಂದ ಕೂಳೂರಿನವರೆಗೆ ತೇಲುಗೋಲು ಹಾಕಿ ಮುಗಿಸಿದ್ದರು.
ನಾನು ಕಯಾಕ್ ತರಿಸುತ್ತಿದ್ದೇನೆ ಎಂದು ಸುಳಿವು ಸಿಕ್ಕ ಕೂಡಲೇ ಹಿಂದೂ ಪತ್ರಿಕೆಯ ಗೆಳೆಯ ಮಂಜುನಾಥ್ ಮತ್ತು ಟೈಮ್ಸ್ ಆಫ್ ಇಂಡಿಯಾದ ರವಿ ಪೊಸವಣಿಕೆ ಸುದ್ದಿ ಮಾಡಲು ಹೊಂಚುಹಾಕತೊಡಗಿದರು. ನಮ್ಮೆರಡು ಕಯಾಕುಗಳು ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ವಿಹರಿಸುವಾಗ ಈ ಪತ್ರಕರ್ತ ಮಿತ್ರರಿಬ್ಬರು ಸ್ವಂತ ಉತ್ಸಾಹದಲ್ಲಿ ಬಂದು, ನಾಲ್ಕೆಂಟು ಚಿತ್ರ ತೆಗೆದು ನಾವು ಬಯಸದ ತುತ್ತೂರಿಯನ್ನು ಊದಿಬಿಟ್ಟರು. ಹಾಗೆಂದು ನಮ್ಮ ಕಲಿಕೆಯ ವಿನಯ (ಎಡವಟ್ಟುಗಳನ್ನೂ) ಮರೆಯದೆ, ಅನುಭವಿಸಿದ ವಿಶೇಷಗಳನ್ನು ಅಂದಂದು ಫೇಸ್ ಬುಕ್ಕಿನಲ್ಲಿ ಕಿರು ಟಿಪ್ಪಣಿಗಳಾಗಿ ಪೋಣಿಸುತ್ತ ಬಂದೆ. ಅವುಗಳಲ್ಲಿ ಕೆಲವನ್ನು ಹೆಚ್ಚಿನ ವಿವರಗಳೊಂದಿಗೆ ಸಂಕಲಿಸುತ್ತೇನೆ.
ಶಾಂಭವಿ ನದಿಯಲ್ಲಿ ಎರಡು ದಿನ ನೀರು ತೊಳಚಿದ ಅನುಭವವಷ್ಟೇ ಇತ್ತು. ಇನ್ನೂ ಇನ್ನೊಂದು ಕಯಾಕಿನವರ ಪರಿಚಯ ಆಗಿರಲಿಲ್ಲ. ನಮ್ಮಷ್ಟಕ್ಕೆ ಕೂಳೂರು ಅಥವಾ ಗುರುಪುರ ನದಿ ಎಂದೇ ಖ್ಯಾತವಾದ ಫಲ್ಗುಣಿ ನದಿಯಲ್ಲಿ ಒಂದು ಸಂಜೆ ಸವಾರಿ ಹಾಕಿಕೊಂಡೆವು. ಹಿಂದಿನ ಲೇಖನದಲ್ಲಿ ಹೇಳಿದಂತೆ, ಸುಲ್ತಾನ್ ಬತ್ತೇರಿಯ ಬೋಟ್ ಕ್ಲಬ್ಬಿನ ಆವರಣ ನಮ್ಮ ಕಾರಿಗೆ ತಂಗುದಾಣ. ಅವರ ವಿಸ್ತಾರ ಹಾಗೂ ಚೊಕ್ಕ ಅಂಗಳದಲ್ಲಿ ದೋಣಿಯನ್ನು ನಾವಿಬ್ಬರೇ ಹೊತ್ತು ನಡೆದೆವು. ನದಿಬದಿಯ ಪುಟ್ಟ ಗೇಟಿಗೆ ಬರಿಯ ಹಗ್ಗ ಕಟ್ಟಿದ್ದನ್ನು ಬಿಚ್ಚಿ, ದೋಣಿಯನ್ನು ಮೆಟ್ಟಲಿಳಿಸಿದೆವು.
ಈ ಹೊಳೆಯನ್ನು ನಾವು ಕಾಣದವರೇನೂ ಅಲ್ಲ. ಆದರೂ ಅದಕ್ಕಿಳಿಯುವುದೆನ್ನುವಾಗ ಒಮ್ಮೆಗೆ ದಂಡೆಯ ಕೊಳಚೆ, ನೀರಿನ ಬಣ್ಣ ಮತ್ತು ವಾಸನೆ ನಮ್ಮನ್ನು ಹೆದರಿಸಿತು. ನಿತ್ಯ ಇದರಲ್ಲಿ ಮೀನು, ಏಡಿ, ಚಿಪ್ಪೆಂದು ಉಡಿ ತುಂಬಲು ಒಡನಾಡುವವರ, ಅವರು ಪೇಟೆಯ ಸುಂದರ ಪರಿಸರದಲ್ಲಿ ಅದನ್ನು ಮಾರಿದಾಗ ಕೊಂಡು, ಉಂಡೂ ಉಳಿದವರ ಮತ್ತು ಅಕ್ಷರಶಃ ಹೊಳೆಯಲ್ಲಿ ಮುಳುಗಿ ಮರಳು ತೋಡುವವರ ಮೇಲೆ ಆಣೆ ಹಾಕಿ ದೋಣಿ ಚಲಾಯಿಸಿದೆವು.
ನಾನು ಕಂಡಂತೆ ಫಲ್ಗುಣಿನದಿ ಗುರುಪುರದಿಂದೀಚೆ ಹರಹು ಹಾಗೂ ಆಳದಲ್ಲಿ ಸಾರ್ವಕಾಲಿಕವಾಗಿ ದೋಣಿ ಸಂಚಾರಕ್ಕೊಡ್ಡಿಕೊಳ್ಳುವಷ್ಟು ದೊಡ್ಡದೇ. ಹಾಗೆಂದು ಘಟ್ಟದತ್ತ ಇದಕ್ಕೆ ಭಾರೀ ಜಲಾನಯನ ಪ್ರದೇಶವೇನೂ ಇಲ್ಲದಿರುವುದರಿಂದ ಸೆಳೆತ, ಸುಳಿಗಳ ಅಪಾಯವೇನೂ ಇಲ್ಲವೆಂಬ ಮಾಹಿತಿ ನಮ್ಮ ಧೈರ್ಯಕ್ಕಿತ್ತು. ಆದರೂ ನಾವಿಳಿದ ಎಡ ದಂಡೆಗೆ (ನದಿಯ ಹರಿವಿನ ದಿಕ್ಕು ಮುಖ. ಹಾಗಾಗಿ ಮಂಗಳೂರಿನ ದಂಡೆ ಎಡವಾದರೆ ಬೆಂಗ್ರೆ ದಂಡೆ ಬಲ) ದೂರಾಗದಂತೆ, ಅಂದರೆ ಹರಿವಿನ ಎದುರು-ಸವಾರಿ ನಡೆಸಿದೆವು. ಕಡಲು ಇಳಿತದಲ್ಲಿತ್ತು, ಗಾಳಿಯ ಸಂಚಲನವಿರಲಿಲ್ಲ. ಸಹಜವಾಗಿ ಕೊಚ್ಚೆಯ ಹೊರೆ ಹೆಚ್ಚು ಬಿಡಿಸಿಟ್ಟ ಹಾಗಾಗಿ, ಗಾಳಿ ನಿಸ್ಪಂದವಾದರೂ ದುರ್ನಾತ ಸರ್ವವ್ಯಾಪಿಯಾಗಿತ್ತು. ಲಂಗರು ಹಾಕಿದ ದೊಡ್ಡ ದೋಣಿಯೊಂದನ್ನು ಬಳಸಿ, ಎದ್ದು ತೋರುತ್ತಿದ್ದ ಒಂದು ಪುಟ್ಟ ಬಂಡೆಮಂಡೆಗೆ ದೂರದಿಂದಲೇ ಸಲಾಮಿಕ್ಕಿ ಹುಟ್ಟುಹಾಕಿದೆವು.
ಸುಮಾರು ನಲ್ವತ್ತೈದು ವರ್ಷಗಳ ಹಿಂದೆ, ನಾನು ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸದಸ್ಯನಾಗಿದ್ದಾಗ, ಒಮ್ಮೆ ಶ್ರೀರಂಗಪಟ್ಟಣದಿಂದ ಟಿ. ನರಸೀಪುರದವರೆಗೂ ಕಾವೇರಿ ನದಿ ಎಡ ದಂಡೆಯಲ್ಲಿ ಉದ್ದಕ್ಕೆ ಚಾರಣ ಮಾಡಿದ್ದೆ. ಎರಡು ಹಗಲು, ಒಂದು ರಾತ್ರಿಯ ಚಾರಣ. ಮೊದಲ ರಾತ್ರಿ ಕರಿಘಟ್ಟದ ನೆರಳಲ್ಲಾದರೆ ಮತ್ತೊಂದು ರಾತ್ರಿ ಬನ್ನೂರಿನ ಶ್ಮಶಾನದಲ್ಲಿ ವಾಸ. ನಂಬಿದರೆ ನಂಬಿ, ಉದ್ದಕ್ಕೂ ನಾವು ಕುಡಿದದ್ದು ಕಾವೇರಿ ತೀರ್ಥ, ಮಿಂದದ್ದು ಕಾವೇರಿ ನದಿ, ಅಡುಗೆಗೆ ಕಾವೇರಿ ಬಾವಿ, ಹೆಚ್ಚೇನು ಕಟ್ಟಿಗೆಯೂ ಕಾವೇರಿ ಕೃಪೆ. ಆಗ ಉದ್ದಕ್ಕೂ ಹೊಳೆ, ಹೊಳೆದಂಡೆಯ ನೆಲ ಮತ್ತು ಕಾಡು ಸಮುದಾಯದ ಆಸ್ತಿಯಾಗಿಯೇ ಇತ್ತು.
ನದಿ ನೀರಿನ ಆರೋಗ್ಯ ನಮ್ಮನ್ನಂತೂ ಕೆಡಿಸಲಿಲ್ಲ ಅಂದ್ರೆ ಒಳ್ಳೆದೇ ಇದ್ದಿರಬೇಕು. ನಮಗೆ ಅಲ್ಲಲ್ಲಿ ಬಂದು ಸೇರುವ ಉಪನದಿಗಳನ್ನು ದಾಟುವುದು ಕಷ್ಟವಾದದ್ದಿರಬಹುದು. ಆದರೆ ಖಾಸಗಿ ಬೇಲಿ, ಯಜಮಾನಿಕೆಗಳ ಭಯ ಕಾಡಿದ್ದೇ ಇಲ್ಲ. (ಉಳಿದ ವಿವರ ಇಲ್ಲಿ ಬೇಡ – ಮುಂದೆಂದಾದರೂ) ಆದರೆ ಇಲ್ಲಿ ಫಲ್ಗುಣಿ ನದಿಯಂಚಿನುದ್ದಕ್ಕೆ ಪ್ರತಿ ಹೆಜ್ಜೆಗೆಂಬಂತೆ, ವೈವಿಧ್ಯಮಯ ಗೋಡೆಗಳನ್ನೇ ತಂದು ನಿಲ್ಲಿಸಿದ `ಯಜಮಾನರು’ಗಳು ನೂರಾರು. ಸಾಲದ್ದಕ್ಕೆ ತಮ್ಮ ವಲಯದಲ್ಲಿ ನೀರಿನ ಶುದ್ಧಾಶುದ್ಧವನ್ನು ತಾವೇ ನಿರ್ದೇಶಿಸಿದ ಕುರುಹುಗಳು ಅಸಂಖ್ಯ. ಇದ್ದಲ್ಲಿಗೆ ಬಿಗಿ ಕಲ್ಲು ಜೋಡಿಸಿದವರು ಸಾಮಾನ್ಯರು. ಎತ್ತರಿಸಿ ಕಲ್ಲು ಕಾಂಕ್ರೀಟುಗಳ ಕೋಟೆಯನ್ನೇ ಖಚಿತವಾಗಿ ನಿಲ್ಲಿಸಿದವರು ಮಧ್ಯಮರು. ಅಲಂಕೃತ ಪೌಳಿ ನಿಲ್ಲಿಸಿ, ದೋಣಿಗಟ್ಟೆ ಸಜ್ಜುಗೊಳಿಸಿ, ಒಳಗೆ ಜೀವಂತ ಹಸುರಿನ ಚಾಪೆ (ನೈಜ ಅನ್ನಲಾರೆ) ಸಹಿತ ಉದ್ಯಾನವನವನ್ನೇ ಮಾಡಿದವರು ಅತ್ಯುತ್ತಮರೇ ಸರಿ. ಬಹುತೇಕ ಎಲ್ಲರೂ ಮಳೆನೀರೋ ಕೊಳೆನೀರೋ ತಂತಮ್ಮ ವಠಾರಗಳಿಂದ ಕೊಳವೆಗಳನ್ನಂತೂ ಹೊಳೆಗೆ ತೆರೆದೇ ಇದ್ದರು.
ನದಿಯೊಂದು ಸಾರ್ವಜನಿಕ ಸೊತ್ತು ಮತ್ತು ಸಂಪತ್ತು ಎಂದು ಯಾರೂ ತಿಳಿದಂತಿರಲಿಲ್ಲ. ಪ್ರತಿ ವಠಾರಗಳ ಈಚೆ, ನದಿಯ ಪ್ರತಿ ತಿರುವಿನ ಹುಲ್ಲು ಪೊದರುಗಳಲ್ಲಿ ಸೇರಿದ್ದ ನಾಗರಿಕ ಕಸ, ಕೊಚ್ಚೆ ನಮ್ಮ ಮೂಗು ಕೊಡುತ್ತಿದ್ದ ಎಚ್ಚರಿಕೆಗೆ ಪೂರಕವಾಗಿಯೇ ಇದ್ದವು. ಎಲ್ಲೋ ಒಬ್ಬ ಬಡಪಾಯಿ ನದಿಗೆ ಪುಕಳಿ ಹಾಕಿ ಕೂತಿದ್ದ. ನಾವು ಒಮ್ಮೆ ಮುಖ ಬೇರೇ ಕಡೆಗೆ ತಿರುಗಿಸಿ ಮುಂದುವರಿದೆವು.
ಸೈಕಲ್ ಸರ್ಕೀಟುಗಳಲ್ಲಿ ನಾನು ಆಗಿಂದಾಗ್ಗೆ ಅಶೋಕನಗರ ಕಳೆದ ಮೇಲೆ ಸಿಗುವ ತೊಟ್ಟಿಲ್ದಗುರಿ ಎನ್ನುವ ಒಂದು ನದಿರಮ್ಯ ಸ್ಥಳಕ್ಕೆ ಹೋಗುವುದಿದೆ. ನಗರದ ಕೊಟ್ಟಾರದ ಆಸುಪಾಸಿನಲ್ಲಿ ಹುಟ್ಟಿ, ಕೊಡಿಕಲ್ ವಲಯದಲ್ಲಿ ಸಾಕಷ್ಟು ಬಲಗೊಂಡ ತೊರೆಯೊಂದು ಇಲ್ಲಿ ಫಲ್ಗುಣಿಯನ್ನು ಸಂಧಿಸುತ್ತದೆ. ಆ ಸಂಗಮ ಸ್ಥಾನದವರೆಗೂ ನಾವು ದೋಣಿ ಚಲಾಯಿಸಿ, ಹಿಮ್ಮುಖರಾದೆವು. ಬಿಸಿಲಿನ ಉರಿ ತುಸು ಮರೆಸಲು ಮತ್ತು ಎದುರು ಹುಟ್ಟುಹಾಕಿದ ತೋಳಿಗೆ ವಿರಾಮ ಕೊಡಲು ತುಸು ಹಸನಾದ ದಂಡೆ, ಅಲ್ಲಿ ಸಹಜ ಛತ್ರಿಯಂಥ ಮರಗಳಾಸರೆ ಎಲ್ಲೂ ಕಾಣಲಿಲ್ಲ. ನಮ್ಮ ಬೆವರಹೊಳೆಗೆ ಪ್ರತಿಯಾಗಿ ಸುತ್ತುವರಿದ ಅಪಾರ ಜಲನಿಧಿ ಒದಗಬಹುದಿತ್ತು. ಆದರೆ ಅಲ್ಲಿನ ಸ್ಥಿತಿಯಲ್ಲಿ ಮುಕ್ತವಾಗಿ ಮುಟ್ಟುವುದಿರಲಿ, ತಪ್ಪು ಚುಕ್ಕಾಣಿ ಹಾಕಿದಾಗ ರಟ್ಟಿದ ನೀರಹನಿ ಮೈ ಸೋಕಿದರೆ ಬಿಸಿ ಎಣ್ಣೆ ಬಿದ್ದಂತಾಗುತ್ತಿತ್ತು.
ಮನೆ ತಲಪಿ ಶುದ್ಧ ಸ್ನಾನ ಮಾಡಿ, ರಮ್ಯ ಚಿತ್ರಗಳಿಗೆ ಸುಂದರ ಕಥಾನಕ ಕುಟ್ಟಲು ಕುಳಿತೆ. ಮೊದಲಿಗೆ ಮನೆಮನೆಯಲ್ಲಿ ನಿರ್ಲಕ್ಷಿಸಿದ ನದಿದಂಡೆ, ಎಸೆದ ಕಸ, ಹರಿಬಿಟ್ಟ ಕೊಳಚೆ, ಕಾಂಡ್ಲಾ ಕಳೆದು ಹೋಗಿ ಬೆಳೆದ ಕಳೆ, ಹೇಲುವವನು ಮುಂತಾದ ಬಿಡಿ ಚಿತ್ರಗಳು ವಿವರಗಳಲ್ಲಿ ರೂಪ ಪಡೆದವು. ಆದರೆ ಒಮ್ಮೆಗೆ ಭವ್ಯ ಮಹಲುಗಳು, ನಳನಳಿಸುವ ಉದ್ಯಾನಗಳು, ಉದ್ದಿಮೆಕ್ರಾಂತಿಯ ತಾರಾಸಂಸ್ಥೆಗಳು ನಗರದ ಕಣ್ಣು ಕಟ್ಟಿ, ವ್ಯವಸ್ಥಿತವಾಗಿ ಹೊಳೆಗೆ ತೆರೆದಿದ್ದ ಚರಂಡಿ, ಕೊಳಚೆನೀರಿನ ಕೊಳಾಯಿಗಳು ಆ ಕ್ಷಣಿಕ ಸಂಕಟ ನಿವಾರಣೆಗಷ್ಟೇ ಕುಳಿತ ನಿರ್ಗತಿಕನ ಪುಕಳಿಯಿಂದ ಎಷ್ಟು ದೊಡ್ಡ, ಎಷ್ಟು ನಿರ್ಲಜ್ಜ ಎಂದು ಕಂಡು, ಮೊದಲು ಬರೆದ ಸುಂದರ ವಿವರಗಳನ್ನು `ಆಯ್ದೆ’ ಮತ್ತೆ `ನಾಶ’ ಮಾಡಿದೆ.
ಕಯಾಕ್ ರೋಮಾಂಚನದಲ್ಲಿ ಪಾಲುಗೊಳ್ಳಲೆಂದೇ ಮೊದಲ ಬಿಡುವಿನಲ್ಲಿ ಅಭಯ (ಬೆಂಗಳೂರಿನಲ್ಲಿರುವ ನಮ್ಮ ಮಗ) ಬಂದಿದ್ದ. ಸೈಕಲ್ ಸರ್ಕೀಟಿನಲ್ಲಿ ಹಲವು ಬಾರಿ ನೋಡಿದ್ದ, ಅಗತ್ಯ ಬಿದ್ದರೆ ಗೆಳೆಯ ವಿಜಯ ಬ್ಯಾಂಕ್ ರವಿ (ರವೀಂದ್ರನಾಥ್) ಸಹಕಾರವೂ ಸಿಗುವಂತಿದ್ದ ಉಚ್ಚಿಲ ಅಳಿವೆಗೇ ಕಯಾಕೇರಿಸಿದ ಕಾರು ಓಡಿಸಿದೆ. ಕೋಟೇಕಾರು ಉಚ್ಚಿಲದ ಕಡಲ ಕಿನಾರೆಯ ದಾರಿ ಕೊನೆಗೊಳ್ಳುವಲ್ಲಿ ಮೂರು ಪುಟ್ಟ ಹೊಳೆಗಳು ಒಂದಾಗಿ ಸಮುದ್ರ ಸೇರುತ್ತವೆ. ಇದೂ ಒಂದು ತ್ರಿವೇಣೀ ಸಂಗಮವೇ ಆದರೂ ಹೆಸರಿನ ವೈಭವ ತಡೆಯದ ಬಡಕಲು ಸ್ಥಿತಿ ಇಲ್ಲಿದೆ. ಉತ್ತರದ ಉಚ್ಚಿಲಹೊಳೆ ತುಸು ದೀರ್ಘವಿದೆ. ಪೂರ್ವದ ತಲಪಾಡಿಹೊಳೆ ಅನತಿ ದೂರದ ರೈಲ್ವೇ ಸೇತುವೆಯಿಂದೀಚೆಗಷ್ಟೇ ತುಂಬಿಸಿಕೊಂಡ ನೀರು ಸಮುದ್ರದಿಂದ ಸಾಲ ಪಡೆದಂತೇ ಕಾಣುತ್ತದೆ. ತಲಪಾಡಿ ಸೇತುವೆಯಿಂದಾಚೆಗೆ ಹೊಳೆ ಅಲ್ಲ, ತೋಡಿನ ಅಸ್ತಿತ್ವವೂ ಕೊಳಚೆ ಚರಂಡಿ ಅಥವಾ ಮಳೆನೀರಗಂಡಿಗಿಂತ ಉತ್ತಮವಿರಲಾರದು. ದಕ್ಷಿಣದ ಕುಂಜತ್ತೂರು ಹೊಳೆಗೆ ಭೂಪಟಲ್ಲಷ್ಟೇ ದಾಖಲೆಯ ಗೌರವ. ಮಳೆಗಾಲದ ಉತ್ತುಂಗದಲ್ಲಷ್ಟೇ ಹರಿವು ತೋರಬಹುದಾದ ಇದನ್ನು ಉಳಿಗಾಲದಲ್ಲಿ ಸಂಗಮಸ್ಥಾನದ ದಕ್ಷಿಣದ ವಿಸ್ತರಣೆಯಲ್ಲಿ ಕೇವಲ ಅಂದಾಜಿಸಬಹುದು!
ಒತ್ತಿನಲ್ಲೇ ವರ್ಷಪೂರ್ತಿ ಅರಬ್ಬಾಯಿಡುವ ಸಾಗರಮಾತೆ, ಮಳೆಗಾಲ ದೂರವಾಗುತ್ತಿದ್ದಂತೆ ಈ ಬಡಕಲು ಮಗಳಂದಿರ ಜಲದಾರಿದ್ರ್ಯ ಹೆಚ್ಚಂದಂತೆ ಅಳಿವೆ ಬಾಗಿಲಿಗೆ ಅಲೆಗೈಗಳಲ್ಲಿ ಮರಳು ಪೇರಿ ಹರಿವನ್ನು ಪೂರ್ಣ ಬಂದ್ ಮಾಡುತ್ತಾಳೆ. ಉಪಯುಕ್ತತೆಯ ಅಗತ್ಯ ಕಾಣದೆಯೋ ಇತ್ತ ಕರ್ನಾಟಕ ಅತ್ತ ಕೇರಳವೆಂಬ ರಾಜಕೀಯ ಗಡಿಗಳ ಅಸಹಕಾರದಲ್ಲೋ ಇಲ್ಲಿ ಸೇತುವೆ ಆಗಿಲ್ಲ. ಸಂಕೊಳಿಕೆ, ಉಚ್ಚಿಲದಿಂದ ಸುಮಾರು ಎರಡು-ಮೂರು ಕಿಮೀ ಉದ್ದಕ್ಕೆ, ಮಟ್ಟಕ್ಕೆ ಹರಿಯುವ ದಾರಿಯ ಕೊನೆಯ ಹಾಡಿಯ ಅನ್ವರ್ಥನಾಮ ಬಟಪಾಡಿ. ಇಲ್ಲಿನ ಜಲ ಹರಹು ಹೆಚ್ಚುಕಡಿಮೆ ನಿಂತ ನೀರೇ ಆದ್ದರಿಂದ ಬಟಪಾಡಿ ಸರೋವರ ಎಂದೇ ನಾನು ಗುರುತಿಸುತ್ತೇನೆ.
ಮುಖ್ಯವಾಗಿ ಕಾಂಡ್ಲಾಮರಗಳು ಇಲ್ಲಿನ ಗೊಸರ ದಿಬ್ಬಗಳನ್ನು ಸುಂದರವಾಗಿ ಗಟ್ಟಿಗೊಳಿಸಿ ಹಲವು ಕುದುರುಗಳನ್ನೇ ರಚಿಸಿದೆ. ಸಹಜವಾಗಿ ರೂಪುಗೊಂಡ ಅಸಂಖ್ಯ ನಾಲೆಗಳು ಪ್ರಾಕೃತಿಕವಾದ ಹಸಿರು, ಕಾಂಡ್ಲಾಗಳ ಬೇರಜಾಲದ ಕುಸುರಿಯಲ್ಲಿ ದೋಣಿ ಸವಾರಿಯನ್ನು ರೋಮಾಂಚಕವಾಗಿಸುತ್ತವೆ. ದಂಡೆಯ ಮೇಲಿಂದಿಣುಕುವ ತೆಂಗಿನ ಮುಡಿ, ಎಲ್ಲಕ್ಕೂ ಮಿಡಿಯುವ ನಾಡಿಯಂತೆ ಸಾಕ್ಷಿಯಾಗುವ ಅಸಂಖ್ಯ ನೆಲ ಜಲ ಗಗನ ಜೀವಿಗಳನ್ನು ವಿರಾಮದಲ್ಲಿ ತಿರುಗುತ್ತ ನೋಡುವುದಕ್ಕೆ ಮುಕ್ತಾಯ ಎನ್ನುವುದಿಲ್ಲ.
ತೆಪ್ಪಗಳು ನಿರ್ದಿಷ್ಟ ದಿಕ್ಕಿನ ಚಲನೆಗೆ ವಿಶೇಷ ಸಹಕಾರಿಯಲ್ಲದ, ಹೆಚ್ಚು ಆಳಗಳಲ್ಲಿ ಸ್ವತಂತ್ರ ಚಾಲನೆಗೂ ಒಡ್ಡಿಕೊಳ್ಳದ ಕೇವಲ ತೇಲು ಸಾಧನಗಳು. ಇವು ಸಾಮಾನ್ಯವಾಗಿ ನೀರ ಮಟ್ಟದಲ್ಲೇ ಇರುವುದರಿಂದ ನಾವಿಕರು ಚಂಡಿಯಾಗುವುದು ಅನಿವಾರ್ಯ. ಇವು ಮುಳುಗಲರಿಯವು ಆದರೆ ಸವಾರರ ಅಸಮತೋಲನಕ್ಕೆ ಎಂದೂ ಮಗುಚಬಹುದು ಎನ್ನುವ ನಿಟ್ಟಿನಲ್ಲಿ ಭದ್ರತೆ ಕಡಿಮೆ. ಆ ಲೆಕ್ಕದಲ್ಲಿ ನೀರಿನಿಂದ ಎತ್ತರದ ಅಂಚು, ಓರೆ ತಳ, ಚೂಪು ತುದಿಗಳಿರುವ ದೋಣಿ ವಿಕಸಿಸಿದ್ದು ಸಹಜವೇ ಇದೆ. ಇದರಲ್ಲಿ ತಳ ಬಿಟ್ಟು ಕೂರುವ ಸೌಕರ್ಯದಿಂದ ಬಗೆತೆರನ ಚಾಲನಾ ಸ್ವಾತಂತ್ರ್ಯವೂ ಇದೆ. ಆದರೆ ಅದು ಅನುಭವಿಗಳ ಮಾರ್ಗದರ್ಶನದಲ್ಲಿ ಕಲಿತು ಸಿದ್ಧಿಸಬೇಕೇ ವಿನಾ ಹವ್ಯಾಸೀ ಕಸರತ್ತುಗಳಿಗಲ್ಲ. ದೋಣಿಯ ಗಾತ್ರಕ್ಕೆ ತಕ್ಕಂತೆ ನೀರು ಆಳವಿಲ್ಲದಲ್ಲಿ ಇದರ ತಳ ಕಚ್ಚಿಕೊಳ್ಳುತ್ತದೆ. ಇಂಥಲ್ಲಿ ಕಯಾಕ್ ತೆಪ್ಪದ ಸೌಕರ್ಯದೊಡನೆ ನಿಶ್ಚಿಂತೆಯಿಂದ ತೇಲುತ್ತದೆ. ಇನ್ನು ಸೆಳವು ನಿಭಾವಣೆಯಲ್ಲಿ ನಾವಿಕ ಸೋತರೆ ದೋಣಿ ಅಡ್ಡ ಮಗುಚಿ, ನೀರು ತುಂಬಿ ಮುಳುಗಿಯೇ ಹೋಗುವ ಅಪಾಯವಿದೆ. ಕಯಾಕ್ ಸ್ವಭಾವತಃ ಪ್ಲ್ಯಾಸ್ಟಿಕ್ಕಿನಂತೆ (ಫೈಬರ್ ಗ್ಲಾಸ್) ತೇಲುಗುಣವುಳ್ಳದ್ದು. ಸಾಲದ್ದಕ್ಕೆ ಒಳಗೆ ಟೊಳ್ಳಿರುವಂಥ ಎರಡು ಪದರದ ರಚನೆಯಾದ್ದರಿಂದ ಇದನ್ನು ನೀರಿನೊಳಕ್ಕೆ ತೂರಿದರೂ ಮುಳುಗದು. ದೊಡ್ಡ ಆಘಾತವಲ್ಲದೇ ನಾವಿಕ ನಾವೆಯನ್ನು ಬಿಟ್ಟಗಲದಂತೆ ಗಟ್ಟಿಯಾಗಿ ಕುಳಿತು, ಬಲವಾಗಿ ಹುಟ್ಟು ಹಾಕಲು ಎಲ್ಲ ಅನುಕೂಲಗಳನ್ನು ಕಯಾಕ್ ಒದಗಿಸುತ್ತದೆ. ಹಾಗಾಗಿ ಕಾಂಡ್ಲಾವನಗಳ ನಡುವೆ ದೋಣಿಗಳೂ ನುಗ್ಗಲು ಧೈರ್ಯ ಮಾಡದ ಸಂದುಗಳೂ ಕಯಾಕಿಗರಿಗೆ ಸಹಜವಾಗಿ ಒಲಿಯುತ್ತವೆ. ಉಚ್ಚಿಲದ ಸರೋವರದಂಥ ಸ್ಥಳಗಳಲ್ಲಿ ನಮ್ಮ ಹುಟ್ಟು ಹಾಕುವ ಕೈಗಳು ದಣಿದರೆ ನಿಶ್ಚಿಂತವಾಗಿ ವಿರಮಿಸಬಹುದು. ಬಿಸಿಲ ಬೇಗೆಗೆ ಹಸಿರ ಮರೆಗಳಲ್ಲೇ ಸಾಗಿ, ಕಣ್ಣು ಮನಸ್ಸುಗಳ ಚೇತರಿಕೆ ಗಳಿಸಬಹುದು.
ಆನಂದ ಪ್ರಭು ಮತ್ತು ಜಹೀರ್ ಮಣಿಪ್ಪಾಡಿ ಜೋಡಿಯೊಡನೆ ಉಚ್ಚಿಲಕ್ಕೆ ಹೋದಂದು ನಾವು ಹೆಚ್ಚಿನ ಲಕ್ಷ್ಯವನ್ನೇ ಇಟ್ಟುಕೊಂಡಿದ್ದೆವು. ಅಭಯನ ಪ್ರೀತಿಗೆ ಹೋಗಿದ್ದಾಗ ಕೇವಲ ಅಂಚಿನಲ್ಲಷ್ಟೇ ಗಸ್ತು ಹೊಡೆದವರು ಈ ಬಾರಿ ಆ ಜಲನಿಧಿಯ ಪೂರ್ಣ ಸ್ವಾಮ್ಯವನ್ನೇ ಪಡೆಯುವ ಛಲದಲ್ಲಿ ನುಗ್ಗಿದ್ದೆವು. ಮುಖ ತೊಳೆಯದ ಸೂರ್ಯ ಕಾಂಡ್ಲಾ ಮರಗಳ ಮರೆಯಲ್ಲಿ ಇಣುಕುತ್ತಿದ್ದಂತೆ (ಸುಮಾರು ಏಳುಗಂಟೆಗೆ) ನಮ್ಮೆರಡು ನಾವೆ ತಲಪಾಡಿ ಹೊಳೆಯಲ್ಲಿ ಎದುರು ಸವಾರಿ ಹೊರಟಿತು. ಸುಂದರ ಕಾಂಡ್ಲಾ ಆವರಿಸಿದ ಕಿನಾರೆ, ಅಲ್ಲಲ್ಲಿ ಸುಂದರ ಮರಗುಚ್ಛವನ್ನೇ ತೇಲಿಬಿಟ್ಟಂತೆ ತೋರುವ ನಡುಗಡ್ಡೆಗಳು.
ಮೊದಲ ಒಂದೆರಡು ಕುದುರುಗಳನ್ನು ಹಿಂದಿನ ಭೇಟಿಯಲ್ಲಿ ಸುತ್ತಿದ್ದರಿಂದ ಎಡ ದಂಡೆಗೆ ಸಮೀಪವಿರುವಂತೆ ಮುಂದುವರಿದೆವು. ಒಂದೆರಡು ಕವಲುಗಳು ಒಳಗೆ ವಿಸ್ತರಿಸಿದಂತೆ ಕಾಣಿಸಿದಾಗ ನಾವು ಹೊಸ ನಾಡ ಶೋಧಕರ ಗಾಂಭೀರ್ಯದಲ್ಲಿ ನುಗ್ಗಿ ಸುತ್ತಿದ್ದಿತ್ತು. ಆದರೆ ಅವೆಲ್ಲ ಕುರುಡುಕೊನೆ ತೋರಿದ್ದವು. ಅದಕ್ಕೂ ಹೆಚ್ಚಿಗೆ ಮಳೆಗಾಲದ ಪ್ರವಾಹ ಅಲ್ಲಿ ತುಂಬಿಟ್ಟ ನಾಗರಿಕತೆಯ ಕೊಳಚೆ ಅಲ್ಲಿನ ಜೀವವೈವಿಧ್ಯವನ್ನು ಸಂಪೂರ್ಣ ನಾಶಮಾಡಿದ ಪರಿಸ್ಥಿತಿ ಸ್ಪಷ್ಟವಾಗಿ ನಮ್ಮ ವಿಷಾದವಷ್ಟೇ ಹೆಚ್ಚುತ್ತಿತ್ತು. ನಾವು ಮರಳಿ ಮುಖ್ಯ ಪ್ರವಾಹದೆದುರು ಮುಂದುವರಿಯುತ್ತಿದ್ದೆವು.
ಶಿಸ್ತಿಲ್ಲದ ಮೀನುಗಾರಿಕೆ, ವಿಷರಸಾಯನಗಳ ಹೆಚ್ಚುಗಾರಿಕೆಯ ಪ್ರಭಾವದಲ್ಲೆಂಬಂತೆ ನೀರು ಕೆನೆಗಟ್ಟಿ, ದುರ್ನಾತ ಬೀರುತ್ತ ನಿಸ್ಪಂದವಾಗಿರುತ್ತಿತ್ತು. ನೀರಿನ ವಿಸ್ತಾರ ಹರಹಿದ್ದಲ್ಲೆಲ್ಲ ಮಾಲಿನ್ಯದ ಕೆನೆ ಹರಿದುಕೊಂಡೇ ನಾವು ಮುಂದುವರಿದಿದ್ದೆವು. ಅದೋ ಮೀನು, ಇದೋ ಹಕ್ಕಿ ಎಂದು ಹೆಚ್ಚು ಹರಿವಿದ್ದ ನದಿಗಳಲ್ಲಿ ಕಂಡು ಸಂಭ್ರಮಿಸಿದ್ದ ಕಣ್ಣುಗಳು ಥರ್ಮಾಕೋಲ್, ಟ್ಯೂಬ್ಲೈಟ್, ನಮನಮೂನೆಯ ಬಾಟಲುಗಳು, ವೈವಿಧ್ಯಮಯ ತೊಟ್ಟೆಗಳನ್ನೆಲ್ಲ ಕೆಕ್ಕರಿಸಿ ನೀರಿಟ್ಟದ್ದಾಯ್ತು. ಮೂಗು ಅಯ್ಯೋ ಕೊಳೆತ ಮಾಂಸದ ಕಟ್ಟು, ಇಶ್ಶೀ ದುರ್ನಾತದ ಗಂಟೂ ಎಂದೆಲ್ಲಾ ಮುಷ್ಕರ ಹೂಡುವುದಷ್ಟೇ ಬಾಕಿ. ಅಂಥಲ್ಲೆಲ್ಲ ಹುಟ್ಟಿನ ಚಾಲನೆಯಲ್ಲಿ ಆಕಸ್ಮಿಕವಾಗಿ ನೀರ ಹನಿಗಳು ಮೈಮೇಲೆ ಬಿದ್ದಾಗ ಫಲ್ಗುಣಿ ನದಿಯಲ್ಲಿ ಗೋಳಾಡಿದಂತೆ, ಜಗತ್ತಿನ ಎಲ್ಲ ಕಾಯಿಲೆಗಳೂ ನಮ್ಮನ್ನು ಮೆಟ್ಟಿದವೆಂಬಂತೆ ಭಯಪಡುವ ಹಾಗಾಯ್ತು. ಇಲ್ಲೊಬ್ಬ ನಾಡ ದೋಣಿಯವ ಸಿಕ್ಕಿದ್ದ. ಅವನ ವೃತ್ತಿ ನದಿಯಿಂದ ಪ್ಲ್ಯಾಸ್ಟಿಕ್ ಗುಜರಿ ಸಂಗ್ರಹ. ಮಳೆ ಬಂದಾಗ ಅವನಿಗೆ ಒಳ್ಳೆಯ ಸಂಪಾದನೆಯಂತೆ. ಇತರ ಸಮಯಗಳಲ್ಲಿ ನಾರುವ ಕೊಳೆ ತುಂಬಿ ಬಾಯಿ ಬಿಗಿದುಕೊಂಡು ತೇಲಿ ಬರುವ ಮೂಟೆಗಳನ್ನು ಹರಿದು ಕೇವಲ ತೊಟ್ಟೆ ಸಂಗ್ರಹಿಸುವ ದರಿದ್ರ ಅವನಿಗಿನ್ನೂ ಬಂದಿಲ್ಲವಂತೆ! ಪ್ರಾಕೃತಿಕ ಈಜುಕೊಳ, ವನಾವೃತ ರಮ್ಯ ಜಲವಿಹಾರಗಳಿಗೆಲ್ಲ ಹೇಳಿ ಮಾಡಿಸಿದಂಥ ತಾಣ ಕೊಳೆತು ನಾರುತ್ತಿತ್ತು.
ವಿಸ್ತಾರ ನಿಗೂಢ ಲೋಕಕ್ಕೆ ದ್ವಾರದಂಥ ಮರಸುದಾರಿಗಳು, ಕೆಂಚುಬೇರುಗಾಲಿನ ಕೋಟೆಗಳು, ಹೊಳೆಯ ಹತ್ತೆಂಟು ಬಳಕುಗಳಲ್ಲಿ ಅನಾವರಣಗೊಳ್ಳುತ್ತ ಹೋಯ್ತು. ನೀರು, ಕೆಸರು, ಪೊದರುಗಳೆಂದು ವಿವಿಧ ಸ್ತರಗಳನ್ನಾಧರಿಸಿ ಜೀವನಚಕ್ರವನ್ನುರುಳಿಸುವ ಹಕ್ಕಿಗಳ ಜಲ ಮತ್ತು ಸೂರ್ಯ ಸ್ನಾನಗಳು, ಬೇಟೆಯ ಜಾಣ್ಮೆಗಳು, ನೀರ ಮೇಲ್ಮೈಯಲ್ಲಿ ನಾಲ್ಕು ಕುಪ್ಪಳಿಸಿ ಗಾಳಿಗೇರುವ ಚಂದ, ನೀರಿನದಾವುದೋ ಕೊಳ್ಳೆಗೆ ದಿಟ್ಟಿದಾರ ಬೆಸೆದಂತೆ ಆಗಸದಲ್ಲಿ ನುಣ್ಣಗೆ ಸುತ್ತುವ ಗತ್ತು, ಗಾನ ವೈವಿಧ್ಯ (ಜೈವಿಕ ಪರಿಸರ ಹಾಳಾಗುತ್ತಾ ನಡೆದದ್ದಕ್ಕೆ ವಿರಳವೇ ಇರಬಹುದು) ನಮ್ಮ ಅನುಭವ ಖಾತೆಯನ್ನು ಧಾರಾಳವಾಗಿ ಶ್ರೀಮಂತಗೊಳಿಸುತ್ತಿತ್ತು.
ಕಾಸರಗೋಡು – ಮಂಗಳೂರಿನ ನಡುವಣ ರೈಲುಮಾರ್ಗವಿಂದು ಎರಡು ಮಾರ್ಗವಾಗಿ, ವಿದ್ಯುದೀಕರಣಗೊಂಡಿದೆ. ಅದು ಕಾಂಡ್ಲಾವನದ ಪೂರ್ವ ಗಡಿರೇಖೆಯಲ್ಲಿ ಹಾದು ಹೋಗುವುದರಿಂದ ನಮ್ಮ ದೃಷ್ಟಿಗೆ ಸೇತುವೆಗಳಲ್ಲಷ್ಟೇ ಕಾಣಿಸುತ್ತಿತ್ತು. ಆದರೆ ಬಟಪಾಡಿ ಸರಸಿಯ ನೌಕಾಯಾನಕ್ಕೆ ಸದಾ ಅಬ್ಬರದ ಹಿಮ್ಮೇಳ ಕೊಡುತ್ತಲೇ ಇರುತ್ತದೆ. ನಮ್ಮ ಬೇರೆ ಬೇರೆ ದಿನಗಳ ಆರೆಂಟು ಸುತ್ತುಗಳಲ್ಲಿ ಒಮ್ಮೆ ಮಾತ್ರ ರೈಲು ತಲಪಾಡಿಯ ಸೇತುವೆ ದಾಟುವುದನ್ನು ದೂರದಿಂದಲೇ ಕಂಡಿದ್ದೆವು. ಆದರೆ ಎಂದೂ ನಮ್ಮ ದೋಣಿ ಸೇತುವೆ ನುಸಿಯುವಾಗ ರೈಲು ಮೇಲೆ ದಾಟದಿರಲಿ ಎಂದು ಹಾರೈಸುತ್ತಲೇ ಇರುತ್ತೇವೆ! (ಗೊತ್ತಲ್ಲಾ, ನಾವು ತೇಲುತ್ತಿದ್ದ ನೀರಿಗೂ ಹೆಚ್ಚಿನ ಕೊಳಚೆಯನ್ನು ಮುಖಕ್ಕೆ ಹೊಡೆದುಕೊಂಡ ಹಾಗಾದೀತು) ಇನ್ನು ಮುಚ್ಚಿದ ತಳವಿರುವ ಮೋಟಾರು ಸೇತುವೆಗಳ ಕತೆ ಬೇರೇ ಇದೆ. ಅಡಿಯಲ್ಲೇನೋ ನಿಶ್ಚಿಂತೆಯಲ್ಲಿ ದಾಟಬಹುದು. ಆದರೆ ಸೇತುವೆಯ ಅಂಚುಗಳನ್ನು ಹಾಯುವಾಗ ಹೆಚ್ಚಿನ ಎಚ್ಚರವಹಿಸಬೇಕಾಗುತ್ತದೆ. ತಪ್ಪಿದಂದು, ಗಣ್ಯ ನಾಗರಿಕರು ಸೇತುವೆ ದಾಟುವಾಗ ತಮ್ಮ ಮನೆಯ ಹೇಸಿಯನ್ನು ಏಸಿ ಕಾರಿನಿಂದೆಸೆದದ್ದನ್ನು ನಾವು ಶಿರೋಧಾರ್ಯ ಮಾಡಿಕೊಳ್ಳಬೇಕಾದೀತು! “ರಾಜ್ಯಾದ್ಯಂತ ದ್ವಿಚಕ್ರಿಗಳಿಗೆ ಹೆಲ್ಮೆಟ್ ಕಡ್ಡಾಯ” – ಬಿಂದಾಸ್ ಸವಾರ ಹತಾಶೆಯಲ್ಲಿ ಸಲಹೆ ಕೊಟ್ಟಾನು, “ದೋಣಿಗನಿಗಿರಲಿ ಹೇಲು-ಮೇಟೂ!”
ಜಲಸಾರಿಗೆ ಸಾರ್ವಜನಿಕರಿಗೆ ತೀರಾ ಆವಶ್ಯವಾದ ಸ್ಥಳಗಳು ನಮ್ಮೂರಲ್ಲೇ ಅನೇಕವಿವೆ. ಉದಾಹರಣೆಗೆ ಬಂದರ್-ಬೆಂಗ್ರೆ, ಸುಲ್ತಾನ್ಬತ್ತೇರಿ-ತಣ್ಣೀರುಬಾವಿ, ಅಡ್ಯಾರುಕಟ್ಟೆ-ಹರೇಕಳ, ಅರ್ಕುಳ-ಇನೊಳಿಪದವು ಇತ್ಯಾದಿ. ಇನ್ನು ಘಟ್ಟದ ಮೇಲಿನ ಮಾನವ ನಿರ್ಮಿತ ಸರೋವರಗಳ (ತುಮರಿ, ಬ್ಯಾಕೋಡು ಇತ್ಯಾದಿ) ನೂರಾರು ದ್ವೀಪವಾಸಿಗಳ ಪಾಡು ಹೇಳಿದಷ್ಟೂ ಮುಗಿಯದು. ಇದು/ ಇಂಥವನ್ನು ಪ್ರಜಾಸತ್ತಾತ್ಮಕ ಆಡಳಿತಗಳು ಎಂದೂ ಜವಾಬ್ದಾರಿಯುತವಾಗಿ ಕಂಡದ್ದೇ ಇಲ್ಲ. ನಮ್ಮೆಲ್ಲಾ ನದಿ ಹೊಳೆಗಳ ಸಾಗರ ಸಂಗಮ ಸ್ಥಾನಗಳಲ್ಲಿ ಹೂಳೆತ್ತದ ಕಾರಣಕ್ಕೇ ಮುಳುಗಿದ ದೋಣಿಗಳು, ಅಳಿದ ಜೀವಗಳು, ತುಮರಿಯಂಥ ಸ್ಥಳಗಳಲ್ಲಿ ಇತ್ತಿಂದತ್ತ ಮಾಡುವಲ್ಲೇ ಕಳೆದ ಜನ್ಮಗಳು ಎಂದೂ ಪ್ರಜಾಡಳಿತಗಳಿಗೆ ಘನವಾಗಿ ಕಂಡದ್ದೇ ಇಲ್ಲ. ಇನ್ನೂ ಹೆಚ್ಚಿಗೆ ಅವುಗಳ ನಿವಾರಣೆಗೆ ಖಚಿತ ಯೋಜನೆಗಳು ರೂಪುಗೊಂಡದ್ದೂ ಇಲ್ಲ. ಹಾಗಿರುವಾಗ ಬೆರಳೆಣಿಕೆಯ ಬೆಸ್ತರಿಗಷ್ಟೇ ಉಪಯುಕ್ತವಾಗಬಹುದಾದ ಉಚ್ಚಿಲ ಹೊಳೆಯ ಹರಿವು, ಏಳು, ಬೀಳನ್ನೆಲ್ಲ ಕಂಡವರು ಖಂಡಿತಾ ಇಲ್ಲ. ಗೊಸರಿನ ದಿಬ್ಬಗಳು, ತೇಲು ಮರ, ಪೊದರು ಅಸ್ವಾಭಾವಿಕವಾಗಿ ಪಾತ್ರೆ ಉದ್ದಕ್ಕೂ ವ್ಯಾಪಿಸಿವೆ. ಮುರಿದು ಬಿದ್ದ ಹಳೆ ಸೇತುವೆಗಳು, ಸೇತುವೆಯ ಕುಂದಗಳ ನಡುವೆ ಸಿಲುಕಿಕೊಂಡ ಅಡರು ಕಸ ಹಸನುಗೊಳ್ಳುವುದಿದ್ದರೆ ಮಳೆಗಾಲಗಳೇ ಬರಬೇಕು. ಸಾಲದ್ದಕ್ಕೆ ಬಹಳ ತಗ್ಗಿನಲ್ಲಿ ಅಡ್ಡ ಹಾಯುವ ವಿದ್ಯುತ್ ತಂತಿ, ಖಾಸಗಿ ನೀರು ಒದಗಣೆಯ ಕೊಳವೆ ಸಾಲು, ಟೀವಿ ಕೇಬಲ್ಲುಗಳು ಹಾಡೇ ಹಗಲಿನಲ್ಲೂ ತುಸು ಎಚ್ಚರ ತಪ್ಪಿದರೆ ನಾವಿಕರ ಜೀವವನ್ನೇ ತೆಗೆಯುವ ಅಪಾಯವಿದೆ.
ಮಳೆಗಾಲದ ಬಿಡುವಿನೊಂದು ದಿನ ನಾನು ಬಟಪಾಡಿಯತ್ತ ಸೈಕಲ್ ಓಡಿಸಿದ್ದೆ. ಕಡಲ ಕೊರೆತದ ಚಿತ್ರಗಳು ಮನೋಭಿತ್ತಿಯಲ್ಲಿ ಎಬ್ಬಿಸುತ್ತಿದ್ದ ತರಂಗಗಳು ಒಂದಕ್ಕೊಂದು ವಿರುದ್ಧವಾಗಿ ಮನಸ್ಸು ತಲ್ಲಣಿಸಿತ್ತು. ಚಂಚಲ ಕಡಲು ಕೆಲವು ವರ್ಷಗಳಲ್ಲಿ ಒಂದೊಂದು ದಂಡೆಯಲ್ಲಿ ಮುಂದೊತ್ತಿ ಬಂದಂತೆ ಮತ್ತೆ ಹಿಂದೆ ಸರಿಯುವುದೂ ಇದೆ. ಈ ಪ್ರಾಕೃತಿಕ ಪ್ರಕ್ರಿಯೆಯಲ್ಲಿ ಮೂಡಿದ ನೆಲದಲ್ಲಿ ಭರ್ಜರಿ ಅಕ್ರಮ ವಸತಿ ಹೂಡಿದವರೇ ಮತ್ತೆಂದೋ ಸಮುದ್ರ ಮುಂದೊತ್ತಿದಾಗ ಸಾರ್ವಜನಿಕ ಅನುಕಂಪ, ನೆರವು ಯಾಚಿಸುವುದು ಇದ್ದದ್ದೇ. ಬೇಜವಾಬ್ದಾರೀ ಪ್ರಜಾಡಳಿತಗಳು ಇಂಥಲ್ಲಿ ವಿಮರ್ಶೆಗಿಳಿಯದೆ ರಕ್ಷಣೆಯ ತೋರಿಕೆ ಮಾಡುವಲ್ಲಿ ಅನ್ಯ ಲಾಭಗಳು ಇರುವುದೂ ಇಂದು ಎಲ್ಲರಿಗೂ ತಿಳಿದದ್ದೇ ಇದೆ. ಹೀಗೆ ಕಡಲಿಗೆ ಕಲ್ಲು ಹೊತ್ತ ಲಾರಿಗಳ ಓಡಾಟದಲ್ಲಿ ಇಡಿಯ ದಾರಿ ತೋಡಿನ ಸ್ವರೂಪ ಪಡೆದಿತ್ತು. ಕೆನ್ನೀರ ಮಡುಗಳನ್ನು ಬಳಸಿ, ಕಿತ್ತ ಜಲ್ಲಿ ಹೂಳುವ ಗೊಸರುಗಳನ್ನು ಸುಧಾರಿಸುತ್ತ ಬಟಪಾಡಿಯ ಕೊನೆಗೆ ಹೋಗಿದ್ದೆ. ಮಾರ್ಗದ ಕೊನೆಯನ್ನು ಸ್ಪಷ್ಟಪಡಿಸುವ ವೃತ್ತದಿಂದಾಚೆ ಹೊಳೆ ಸಮುದ್ರ ಒಂದಾಗಿದ್ದದ್ದನ್ನು ನೋಡಿ ಮರಳಿದ್ದೆ.
ಅದೇ ಬಟಪಾಡಿ ಕೊನೆಗೆ ಮಳೆ ವಿರಳವಾದ ದಿನಗಳಲ್ಲಿ, ಕಯಾಕಿನೊಡನೆ ಮೊದಲ ಬಾರಿ ಹೋದಾಗ ವೃತ್ತದಿಂದಲೂ ತುಸು ಮುಂದೆ ಮಣ್ಣ ದಾರಿಯಲ್ಲಿ ಕಾರಿಳಿಸಿದ್ದೆ. ಮತ್ತೆ ಕಸ ಕೊಚ್ಚೆಯ ನಡುವೆ ಸವಕಲು ಜಾಡಿನಲ್ಲಿ ಸುಮಾರು ಐವತ್ತು ಹೆಜ್ಜೆಗಳಷ್ಟು ದೋಣಿಯನ್ನು ಹೊತ್ತೊಯ್ದೇ ನೀರು ತಲಪಿದ್ದೆವು. ಆದರೂ ನೂರಿನ್ನೂರಡಿ ಆಚೆಗೆ ಅಳಿವೆ ಬಾಗಿಲಿನ ಸಂಪರ್ಕ ತೆರೆದೇ ಇತ್ತು. ಸಹಜವಾಗಿ ನಮ್ಮ `ಸರೋವರ’ ಸಮುದ್ರದ ಭರತ ಇಳಿತಗಳಿಗೆ ಸ್ಪಂದಿಸುತ್ತಿತ್ತು. ಆದರೆ ಮತ್ತೆ ತಿಂಗಳು ಕಳೆಯುವುದರೊಳಗೆ ನಮ್ಮ ಸರಸಿಗೆ ಭೂಪೂರೈಕೆಯ ನೀರು ಪೂರ್ಣ ನಿಂತಿತ್ತು. ಕನಿಕರಿಸಿದ ಕಡಲು ಸರಸಿಯ ಯಥಾಸ್ಥಿತಿ ಕಾಯುವಂತೆ ಸಹಸ್ರಬಾಹುಗಳಲ್ಲಿ ಮರಳ ಮೊಗೆಮೊಗೆದು ಅಳಿವೆ ಮುಚ್ಚಿಬಿಟ್ಟಿತ್ತು.
ವಾರ ಕಳೆಯುವುದರೊಳಗೆ, ಅಕಾಲಿಕ ಒಂದೆರಡು ಭಾರೀ ಮಳೆಯಾಗಿತ್ತು. ಅಳಿವೆ ಮುಚ್ಚಿದ ವಿಚಿತ್ರ ನೋಡಲೆಂದೇ ನಾನು ಸೈಕಲ್ ಸವಾರಿಯನ್ನು ಹೆದ್ದಾರಿಯಲ್ಲೇ ಕಣ್ವತೀರ್ಥಕ್ಕೆ ಒಯ್ದಿದ್ದೆ. ಅಲ್ಲಿ ಮತ್ತೆ ಉತ್ತರಕ್ಕೆ `ತಲಪಾಡಿ ಫಾರ್ಮ್ಸ್’ವರೆಗೆ ದಾರಿಯೇ ಇತ್ತು. ಅನಂತರ ಸೈಕಲ್ಲನ್ನು ಕಡಲಪುಳಿನಕ್ಕಿಳಿಸಿದೆ. ಒಣ ಮರಳ ಹಾಸಿನಲ್ಲಿ ಸೈಕಲ್ ಸವಾರಿ ಬಿಡಿ, ಸರಾಗ ನಡೆಯುವುದೇ ಕಷ್ಟ. ಹಾಗಾಗಿ ನಿರಂತರ ತುಳುಕುವ ಕಡಲಭಾಂಡದಂಚಿನಲ್ಲಿ ಅಲೆಯಲೆಯೊಲೆದಂತೆ ಹಳೆ ಗುರುತು ಮಾಸಿದಂತೆ, ನನ್ನದೇ ಹೊಸ ಗುರುತಾಗಿ ಚಕ್ರರೇಖೆ ಮೂಡಿಸುತ್ತ ಉಚ್ಚಿಲದತ್ತ ಸವಾರಿ ನಡೆಸಿದೆ. ಕೇರಳ-ಕರ್ನಾಟಕದ ಪ್ರಾಕೃತಿಕ ಗಡಿರೇಖೆಯೇ ಇಲ್ಲವಾಗಿತ್ತು; ಅಳಿವೆ ಅಳಿದಿತ್ತು! ಇದೊಂದು ಪ್ರಾಕೃತಿಕ ವಿದ್ಯಮಾನ. ಪೂರ್ವ ಕರಾವಳಿಯ ಚಿಲ್ಕಾ ಸರೋವರ ಇದಕ್ಕೆ ಬಲುದೊಡ್ಡ ಉದಾಹರಣೆಯೂ ಹೌದು. ಇಲ್ಲಿ ಈ ಬಾರಿ ಅಕಾಲಿಕ ಮಳೆ ಹೆಚ್ಚಿದ್ದಕ್ಕೋ ಏನೋ ನಾವು ನಾಲ್ಕು ದಿನಗಳ ಹಿಂದಷ್ಟೇ ನೌಕಾ ವಿಹಾರ ನಡೆಸಿದ್ದ ಬಟಪಾಡಿ ಸರೋವರ ಹೆಚ್ಚಿಕೊಂಡಿತ್ತು. ಅಂದು ನಾವು ಕಾರಿಳಿದು ದೋಣಿ ತಂದ ಜಾಡೆಲ್ಲ ಮುಳುಗಿದ್ದು ದೂರಕ್ಕೇ ಕಾಣುತ್ತಿತ್ತು. ಆದರೆ ಆಶ್ಚರ್ಯದಲ್ಲಿ ಇದೇನು ಎಂಬಂತೆ, ಅಳಿವೆ ಇದ್ದಿರಬಹುದಾದ ತಗ್ಗಿನ ದಂಡೆಯಲ್ಲಿ ಒಂದಷ್ಟು ಯುವಕರು ಗುದ್ದಲಿಗಳೊಂದಿಗೆ ಬಹಳ ಬಿರುಸಿನಲ್ಲಿ ಮರಳು ತೋಡುತ್ತಿದ್ದರು. ವಿಚಾರಿಸಿದೆ. ಸರೋವರದಲ್ಲಿ ನೀರಿನ ಒಂದಡಿ ಏರಿಕೆ ಅಂದರೆ ಹಿಂದಿರುವ ಯಾವುದೋ ಕುದುರಿನ ಕೃಷಿ, ಇನ್ಯಾವುದೋ ದಂಡೆಯಲ್ಲಿನ ಮನೆಗೆ ಅಷ್ಟಷ್ಟು ಮುಳುಗಡೆಯ ಭೀತಿ ಹೆಚ್ಚಿತ್ತು! (ಕೇಳಿಲ್ಲವೇ ಧ್ರುವಪ್ರದೇಶದ ನೀರ್ಗಡ್ಡೆಗಳು ಕರಗಿ ಜಗತ್ತಿನಾದ್ಯಂತ ಸಮುದ್ರದ ಮಟ್ಟದ ಏರಿಕೆ, ಮಾರಿಷಸಿನಂಥ ದ್ವೀಪದೇಶಗಳಿಗೇ ಮುಳುವು!) ಆಡಳಿತ ಯಂತ್ರದ ಜಡದ ಅರಿವಿದ್ದ ಯುವಕರು ಯಾವುದೇ ಔಪಚಾರಿಕತೆ, ಸಮ್ಮಾನ, ಪ್ರಚಾರಗಳನ್ನು ಕಾಯದೇ ಚರಂಡಿ ಹೊಡೆದು ಅಳಿವೆ ತೆರೆಯುವ ಸಾಹಸದಲ್ಲಿದ್ದರು. ಇದರಿಂದ ಪರೋಕ್ಷವಾಗಿ ಸರೋವರಕ್ಕೂ ಲಾಭವಿತ್ತು. ಅಂದರೆ, ದಿನಕ್ಕೆರಡು ಬಾರಿ ಸಮುದ್ರದ ನೀರು ನುಗ್ಗಿ, ಹೊರಡುವ (ಭರತ, ಇಳಿತ) ಕ್ರಿಯೆಯಿಂದ ಸರೋವರದಲ್ಲಿ ಕೊಳೆಯ ಸಾಂದ್ರತೆ ಕಡಿಮೆಯಾಗುತ್ತಿತ್ತು. ಈ ಮಹತ್ತ್ವವನ್ನು ಚಿಲ್ಕಾ ಸರೋವರದ ಸಂದರ್ಭದಲ್ಲಿ ಸರಕಾರವೇ ಮನಗಂಡು ವೈಜ್ಞಾನಿಕವಾಗಿ ಪಕ್ಕಾ ನಾಲೆಯನ್ನು ಮಾಡಿದ್ದಾರಂತೆ. ಇಲ್ಲೂ ಸರಕಾರವೇ ವಿವೇಚನಾಯುತವಾಗಿ ತೊಡಗುವಂಥ ದಿನ ಬರಲುಂಟೇ?
ಮತ್ತೆ ಎರಡು ವಾರ ಕಳೆದೊಮ್ಮೆ ಅಕ್ಷರಿ (ತಮ್ಮನ ಮಗಳು) ಹಾಗೂ ಶ್ರೀದೇವಿಯರ (ತಮ್ಮಣ್ಣ ಭಾವನೆಂದೇ ಖ್ಯಾತನಾದ ಎಪಿ ಸುಬ್ರಹ್ಮಣ್ಯನ ಹೆಂಡತಿ) ಪ್ರೀತ್ಯರ್ಥ ಬಟಪಾಡಿ ಸರೋವರಕ್ಕೆ ಕಯಾಕ್ ಒಯ್ದಿದ್ದೆವು. ಸ್ವಯಂಸೇವಕರ ಕೆಲಸ ಪೂರೈಸಿದ್ದು ಚೆನ್ನಾಗಿಯೇ ಕಾಣುತ್ತಿತ್ತು. ಇವರು ಮರಳಿನಲ್ಲಿ ನೇರ ತೋಡಿ ಕೊಟ್ಟಿದ್ದ ಕಾಲುವೆಯನ್ನು ನೀರು ತನ್ನದೇ ನ್ಯಾಯದಲ್ಲಿ ಬಲು ದೊಡ್ಡ ಹಾವಿನೊಲೆತದಂತೆ ಅಂಕುಡೊಂಕಾಗಿಸಿತ್ತು. ಅದು ಇಳಿತದ ಸಮಯ ಬೇರೆ. ಮತ್ತೂ ಅಲ್ಲಿ ಮರಳ ದಂಡೆ ಕುಸಿಯುತ್ತಾ, ಇಲ್ಲಿ ಮರಳ ಸ್ತರಗಳನ್ನು ಏರಿಸುತ್ತಾ ನೀರು ಹೊರಗೆ ಹರಿದೇ ಇತ್ತು.
ಮತ್ತೆರಡು ವಾರ ಕಳೆದು ಅನ್ಯ ಕೆಲಸದ ಮೇಲೆ ಉಳ್ಳಾಲಕ್ಕೆ ಸೈಕಲ್ಲೇರಿದ್ದವನು, ಪುರುಸೊತ್ತಿದೆಯೆಂದು ಬಟಪಾಡಿಯತ್ತ ಹೊರಳಿದೆ. “ಪರವಾಗಿಲ್ವೇ ಆಡಳಿತ ಯಂತ್ರ” ಎಂದು ಉದ್ಗರಿಸುವಂತೆ ದಾರಿ ನುಣ್ಣನೆ ಡಾಮರು ಕಂಡಿತ್ತು. ಆದರೆ ಬಟಪಾಡಿ ಅಳಿವೆಯನ್ನು ಸಮುದ್ರರಾಜ ಅಸಿಂಧುಗೊಳಿಸಿದ್ದ! ಆಕಾಶ ಭಾರೀ ಮೋಡಗಟ್ಟಿತ್ತು. ಸಂಜೆ ಮಳೆ ಬಂದರೆ ಹೊಳೆಯುಬ್ಬರಿಸುವುದು ಖಾತ್ರಿ. ಕಡಲು ತನ್ನಂಗಳವನ್ನು ತೊಳೆತೊಳೆದು ಶುಚಿ ಮಾಡಿದರೂ `ಮನೋಹರ ಸಂಜೆ’ಯ ನೆಪದಲ್ಲಿ ಊರ ಅಬ್ಬರಗಳನ್ನು ಇಲ್ಲಿ ತಂದು, ಬೇಕಾದ್ದನ್ನು ಬಳಸಿ ಅದಕ್ಕೂ ಹೆಚ್ಚಿನದನ್ನು ಗೊಬ್ಬರ ಮಾಡಿಹೋಗುವವರಿಗೆ ಸುಂದರ ಮಾರ್ಗ ಕೊಟ್ಟ ಆಡಳಿತಕ್ಕೆ ನಿಜ ಬಳಕೆದಾರರತ್ತ “ಅಯ್ಯೋ ಪಾಪ” ಎನ್ನಲೂ ಪುರುಸೊತ್ತಿದ್ದಂತಿಲ್ಲ!
ನಾಗರಿಕತೆಯ ಮಹಾಶಾಪ – ಮಾಲಿನ್ಯ ಉದ್ದಕ್ಕೂ ನಮ್ಮನ್ನು ಕಂಗೆಡಿಸಿತ್ತು. ನೆಲದ ಮೇಲೆ ಸ್ಪಷ್ಟ ಕಾಣುವ, ಕಸಗುಪ್ಪೆ ಕೊಳೆನೀರಪ್ರವಾಹಗಳು ಯಾವ್ಯಾವುದೋ ಒತ್ತಡಗಳಿಗೆ ಸ್ವಲ್ಪವಾದರೂ ನಿವಾರಣೆಗೊಳ್ಳುವುದನ್ನು ಕಾಣುತ್ತೇವೆ. (ಸ್ವಚ್ಛ ಭಾರತ, ಕೊಳಚೆ ನೀರು ಹೀರುವ ಲಾರಿಗಳು, ಜೈವಿಕ ಮತ್ತು ಪ್ಲ್ಯಾಸ್ಟಿಕ್ ಕಸ ಜೀರ್ಣಿಸಿ ಮರುಬಳಕೆಗೆ ಸಿದ್ಧಗೊಳಿಸುವ ಘಟಕಗಳು ಇತ್ಯಾದಿ.) ಆದರೆ ನೇರ ಎಸೆದ ಅಥವಾ ಬಿಟ್ಟ ಮತ್ತು ಮಳೆಗಾಲದಲ್ಲಿ ನೆಲದಿಂದ ಕೊಚ್ಚಿ ಬಂದ ಎಲ್ಲ ನಾಗರಿಕ ಅನಾಚಾರವೂ ಶೇಖರಗೊಳ್ಳುವುದು ಜಲಮೂಲಗಳಲ್ಲೇ. ಆದರೆ ದೊಡ್ಡವರ (ದೊಡ್ಡದರ) ಹೆಸರು ಹೇಳಿ ಸ್ವಾರ್ಥ ಸಾಧಿಸುವ ಕ್ಷುದ್ರರಂತೆ, ಆಗೀಗ `ಗಂಗಾಶುದ್ಧಿ’ ಸುದ್ದಿಯಾಗುವುದು ಬಿಟ್ಟು, ಒಟ್ಟು ಜಲಮೂಲಗಳ ರಕ್ಷಣೆಗೆ ಯೋಜನೆಗಳೇ ಇಲ್ಲ. ಅನಧಿಕೃತ ಮಾಲಿನ್ಯ ಸಾಲದೆಂಬಂತೆ ಪುಡಾರಿಗಳು, ದೇವ ಪ್ರತಿನಿಧಿಗಳೂ ಪೂಜೆ, ಬಾಗಿನ ಎಂದು ಅಧಿಕೃತವಾಗಿ ಕೊಡಗಟ್ಟಲೆ ಹಾಲು ಮುಂತಾದ ಸುವಸ್ತುಗಳನ್ನು, ಸಾಮಾನ್ಯರು ಮೌಢ್ಯ ಭಕ್ತಿಯ ಅತಿರೇಕದಲ್ಲಿ ಗಣೇಶ ದುರ್ಗೆ ಮುಂತಾದ ವಿಗ್ರಹಗಳನ್ನೂ ಜಲಮೂಲಗಳ ಅಮೃತ ಪರಿಸರಕ್ಕೆ ಸೇರಿಸಿ ಕೊಳೆಗುಂಡಿಯಾಗಿಸುವುದಂತೂ ತೀರಾ ನಾಚಿಗೆಗೇಡು, ಅಕ್ಷಮ್ಯ. ಬಟಪಾಡಿ ಸರಸಿಯಂತ ಜಲಮೂಲಗಳು ಮಳೆಗಾಲ ಕಳೆದ ಮೇಲೆ ಹರಿನೀರು, ಸ್ವತಂತ್ರ ಒರತೆ ಏನೂ ಇಲ್ಲದೇ ಹೋದರೂ ತನ್ನದೇ ಜೀವವ್ಯವಸ್ಥೆಯಲ್ಲಿ (ಅಂಚುಗಟ್ಟಿದ ಸಸ್ಯ, ಜಲಜೀವಿಗಳು, ಹಕ್ಕಿ ಇತ್ಯಾದಿ) ನಿರ್ಮಲವಾಗುಳಿಯಬೇಕಾದವು ವಿಷದ ಮಡುಗಳಾಗಿವೆ. ನೌಕಾವಿಹಾರದ ಸವಿ ಹಂಚಬೇಕಾದ ನಮ್ಮಲ್ಲೂ ವಿಷಾದವೊಂದೇ ಮಡುಗಟ್ಟುತ್ತಿದೆ.
ಒಮ್ಮೆ ಒಬ್ಬ ದೋಣಿಯವ ಸರಸಿಯಲ್ಲಿ ಕೊಕ್ಕೆ ಕೋಲು ಜಾಲಾಡಿ ಪ್ಲ್ಯಾಸ್ಟಿಕ್ ಸಂಗ್ರಹಿಸುವುದನ್ನು ನೋಡಿ ವಿಸ್ಮಿತನಾದೆ. ಆತುರದಲ್ಲಿ ಪುಟ್ಟ ಸಂದರ್ಶನವನ್ನೇ ನಡೆಸಿದೆ. ಆತನೂ ನಿರಾಶೆಯಲ್ಲಿದ್ದ “ರೆಕ್ಸಿನ್ನು, ಚಪ್ಪಲಿ, ಥರ್ಮಕೋಲು, ತೆಳುಪಿಶ್ವಿ, ಟ್ಯೂಬುಲೈಟ್, ಹಳೇ ಟಯರು ಮುಂತಾದವೆಲ್ಲ ನಂಗೆ ಪ್ರಯೋಜವಿಲ್ಲ ಸ್ವಾಮಿ. ಮತ್ತೆ ಮಳೆಗಾಲದಲ್ಲಿದ್ದಷ್ಟು ಧಾರಾಳ ಈಗ ಇಲ್ಲ.” ಅವನು ಕೇವಲ ಒಂದು ವಿಧದ ಪ್ಲ್ಯಾಸ್ಟಿಕ್ ಮಾತ್ರ ಸಂಗ್ರಹಿಸಿ ಮರುಬಳಕೆ ಯಂತ್ರಕ್ಕೆ ಮಾರುವ ಗುಜರಿಯವ. ಅಂದೇ ಗುಜರಿಯವನು ಮರೆಯಾಗಿ, ನಾವು ಮನೆ ಕಡೆಗೆ ಹೊರಡುವ ಸಮಯಕ್ಕೆ…
ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಎರಡು ವ್ಯಾನು ಭರ್ತಿ (ಕನಿಷ್ಠ ನಲ್ವತ್ತು ಮಂದಿ) ಬಂದಿಳಿದರು. ಅವರು ಓರ್ವ ಬೆಸ್ತನ ದೋಣಿಗೆ ಮುನ್ಸೂಚನೆ ಕೊಟ್ಟದ್ದು, ಇವರನ್ನು ಕಾದಿತ್ತು. ತಂಡದ ನಾಯಕ – ಪೂರ್ವ ಪರಿಚಿತ ಅಧ್ಯಾಪಕ, ಕಂಡು `ಗ್ಲ್ಯಾಡ್ ಟು ಮೀಟ್ಯೂ’ ಆಯ್ತು. ಕ್ಷೇತ್ರ ಕಾರ್ಯಕ್ಕೆ ಬಂದಿದ್ದರಂತೆ. ಅವರ ಹೊರೆಯಲ್ಲಿ ಕಾಣಿಸಿದ ಒಂದೇ ತೇಲಂಗಿ, (ಲೈಫ್ ಜಾಕೆಟ್) ಹತ್ತೆಂಟು ಕೊಡೆಗಳು ಕ್ಷೇತ್ರ ಕಾರ್ಯದ ಗಾಂಭೀರ್ಯವನ್ನು ಸಾರುವಂತಿತ್ತು. ವಾಲಿ ಬಾಲ್, ಗುಡಾಣಗಳ ತುಂಬ ತಿನಿಸುಗಳು `ಅಧ್ಯಯನ’ದ ವಿವರ ಹೇಳುವಂತಿದ್ದುವು. ಅದೇನೇ ಮಾಡಲಿ, ಉಳಿಕೆಗಳು ನಾಳೆ ಬರುವ ಗುಜರಿಯವನಿಗಾದರೂ ನಾಲ್ಕು ಕಾಸು ಕೊಡುವಂತಿರಲಿ ಎಂದು ಹಾರೈಸುತ್ತಾ (?) ನಾವು ಮನೆ ಸೇರಿದೆವು.
[ನೌಕಾವಿಹಾರದ ಮುಂದಿನ ಅನುಭವಗಳಾದರೂ ಉಲ್ಲಾಸದಾಯಿಯಾದೀತೆಂಬ ಆಶಯದೊಡನೆ ಮುಂದುವರಿಯುತ್ತೇವೆ. ಹೊಸ ಫಸಲು ನನ್ನ ಕಣಜ ತುಂಬಿದಾಗ ಮತ್ತೆ ಜಲಶೋಧದ ಅಂಕಣದಲ್ಲಿ ನಿಮ್ಮೆದುರು ಹುಟ್ಟಾಡಿಸುತ್ತೇನೆ.]
Your write ups have so many interesting words newly coined !! They make a refresing read ..Thank you
Houdu. Ashokavardhanarige vandanegau. nanage Ivara barahagalallela kanisikolluva achchari idu. Achagannadada kasuvina arivu moodisuva mathu englishina soothaka bidisuvua ivara huchchu nanage achumechu. Sadabhiruchige uttama udaharane ivara barahagalu. Innoo hechichina kaanikegalu sallali endu haaraisuttene.