ಅಧ್ಯಾಯ ಮೂವತ್ತೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತನೇ ಕಂತು

ಪಾರ್ಲಿಮೆಂಟಿನ ವರದಿಗಾರನಾಗಿ ಹಣ ಸಂಪಾದಿಸಬೇಕೆಂದು ವರದಿಗಾರನಿಗೆ ಗೊತ್ತಿರಬೇಕಾದ ಶೀಘ್ರಲಿಪಿಯನ್ನು ಕಲಿಯತೊಡಗಿದೆನು. ಆ ಶೀಘ್ರ ಲಿಪಿ ನಮ್ಮನ್ನು ಹಿಂಸಿಸುವುದಕ್ಕಾಗಿಯೇ ನಿರ್ಮಾಣವಾದಂತೆ ಬಹು ಚಂಚಲ ಸ್ವಭಾವದ್ದು, ಸುಲಭವಾಗಿ ಕೈಗೆ ಎಟಕುವಂಥಾದ್ದಲ್ಲ! ನಮ್ಮನ್ನು ಎಷ್ಟೆಷ್ಟೆಲ್ಲ ಹಿಂಸಿಸಿದರೂ ಅದಕ್ಕೆ ತೃಪ್ತಿಯಿದ್ದಂತೆ ತೋರುತ್ತಿರಲಿಲ್ಲ. ಚುಕ್ಕಿಗಳೂ ನೊಣದ ಕಾಲೂ ಎಲ್ಲವೂ ಸಂಕೇತಗಳೇ! ಚುಕ್ಕಿಗಳು ಒಂದೊಂದು ಕಡೆಯಿದ್ದಾಗ ಒಂದೊಂದು ಅರ್ಥ. ನೊಣದ ಕಾಲಿನವುಗಳ ಚಮತ್ಕಾರವೇ ಇನ್ನೊಂದು ವಿಧದ್ದು! ವೃತ್ತಗಳೋ – ಅವು ಅನರ್ಥಕಾರಿಗಳು. ಇವೆಲ್ಲವೂ ಮಾಯಾವಿಗಳು. ಅವುಗಳನ್ನು ಕಲಿತಿದ್ದೇನೆ, ಸಂಗ್ರಹಿಸಿದ್ದೇನೆ ಎಂದು ಧೈರ್ಯಪಟ್ಟು ಪರೀಕ್ಷಿಸುವಾಗಲೇ ಎಲ್ಲವೂ ಮಾಯವಾಗುವುವು. ಅವು ಎಂಥವುಗಳೇ ಆದರೂ ಅವುಗಳನ್ನು ಬಿಡಲು ನನಗೆ ಅನುಕೂಲವಿರಲಿಲ್ಲ. ಹಾಗಾಗಿ ಶ್ರಮ ಪಟ್ಟು ಅಭ್ಯಾಸ ಮಾಡತೊಡಗಿದೆನು. ಈ ಅಭ್ಯಾಸಕ್ಕೆಲ್ಲ ತಕ್ಕ ಸ್ಫೂರ್ತಿಯನ್ನೂ ಶಕ್ತಿಯನ್ನೂ ಡೋರಾಳ ದಿವ್ಯ ಮೂರ್ತಿ ಕೊಡುತ್ತಿತ್ತು! ಅಂತೂ ಅದನ್ನು ಕಲಿತೆನು.

ಹೀಗೆ ನನ್ನ ವ್ಯಾಸಂಗದಲ್ಲಿ ನನಗೆ ತೃಪ್ತಿಯುಂಟಾಗಿ, ಡೋರಾಳನ್ನು ಪಡೆಯುವ ಮಾರ್ಗದಲ್ಲಿ ಮುಂದುವರಿಯುತ್ತಿದ್ದಾಗ, ಒಂದು ದಿನ ಮಿ. ಸ್ಪೆನ್ಲೋರವರು ನನ್ನನ್ನು ಕರೆದು, ಕಾಮನ್ಸ್ ಕೋರ್ಟಿನ ಹಿಂಬದಿ ಬರ ಹೇಳಿ, ನಾವಿಬ್ಬರೂ ಅಲ್ಲಿಗೆ ಹೋದೆವು. ಅಲ್ಲಿ ಅವರು ನನ್ನನ್ನು ಒಂದು ಖಾಲಿ ಕೋಣೆಗೆ ಕರೆದುಕೊಂಡು ಹೋಗಿ, ಅಲ್ಲಿ ಮೊದಲೇ ಇದ್ದ ಮಿಸ್ ಮರ್ಡ್ಸ್ಟನ್ನಳ ಎದುರು ಹಠಾತ್ತಾಗಿ ನಿಲ್ಲಿಸಿದರು. ಅಲ್ಲಿ ನಾವು ಮೂವರೂ ಕುಳಿತುಕೊಂಡನಂತರ ಮಿಸ್ ಮರ್ಡ್ಸ್ಟನ್ನಳು ನನ್ನನ್ನು ಕುರಿತಾಗಿ ಅವರೊಡನೆ ಹೇಳಿದ್ದ ಮಾತುಗಳನ್ನು ಪುನಃ ನನ್ನ ಸಮಕ್ಷಮದಲ್ಲು ಹೇಳಬೇಕೆಂದು ಮಿ. ಸ್ಪೆನ್ಲೋರವರು ಮಿಸ್ ಮರ್ಡ್ಸ್ಟನ್ನಳಿಗೆ ಆಜ್ಞೆಯಿತ್ತರು. ಆ ಮೊದಲೇ ನಾನು ಸ್ವಲ್ಪ ಗಾಬರಿಗೊಂಡಿದ್ದರೂ ಮಿಸ್ ಮರ್ಡ್ಸ್ಟನ್ನಳು ನನ್ನ ಕೆಲವು ಅಪರಾಧಗಳನ್ನು ಕಂಡು ಹಿಡಿದು ಅವನ್ನೇ ಬಹಿರಂಗಪಡಿಸಲು ತವಕ ಪಡುತ್ತಿದಂತೆ ತೋರುವಾಗ, ನನಗೆ ಮತ್ತಷ್ಟು ಗಾಬರಿಯೂ ಆಶ್ಚರ್ಯವೂ ಆಯಿತು. ಅವಳು ಬಹು ನಿರುದ್ವಿಗ್ನತೆಯಿಂದ – “ಮಾನುಷ ಹೃದಯದ ದುಷ್ಟ ಚಟಗಳಲ್ಲಿ ಒಂದಾದ…” ಎಂದು ಪ್ರಾರಂಭಿಸಿ ಮುಂದುವರಿಯುವ ಮೊದಲು ಅವಳನ್ನು ತಡೆದು, ಮಿ. ಸ್ಪೆನ್ಲೋರವರು – “ಅದೆಲ್ಲ ಅನಗತ್ಯ. ನಡೆದಿರುವ ಸಂಗತಿ ಹೇಳಿ, ನಿನ್ನೊಡನೆ ಇರುವ ರಿಕಾರ್ಡು ತೋರಿಸು. ಅದಕ್ಕಿಂತ ಹೆಚ್ಚಿನ ವಿಷಯ ಅನಗತ್ಯ” ಎಂದು ಹೇಳಿದರು.

ಮಿಸ್ ಮರ್ಡ್ಸ್ಟನ್ನಳು ಕೂಡಲೇ – “ಹಾಗಾದರೆ” ಎಂದಂದು ನಾನು ಡೋರಾಳಿಗೆ ಬರೆದಿದ್ದ ಪತ್ರಗಳ ಒಂದು ಕಟ್ಟನ್ನು ನನಗೆ ಕೊಟ್ಟು “ನಾನು ನನ್ನ ಅಣ್ಣನ ಮದುವೆ ತೀರಿಸಿ ಪೂರ್ವದ ಕೆಲಸಕ್ಕೇ ಸೇರಿದಾಗ, ಒಂದು ದಿನ ಅಕಸ್ಮಾತ್ತಾಗಿ ಜಿಪ್ಪನು ಒಂದು ಪತ್ರವನ್ನು ಕಚ್ಚಿಕೊಂಡು ಆಡುತ್ತಿದ್ದುದನ್ನು ಕಂಡೆನು. ಜಿಪ್ಪನನ್ನು ಹಿಡಿದು ಹೆದರಿಸಿ, ಅದರ ಬಾಯಿಯಲ್ಲಿದ್ದ ಪತ್ರವನ್ನು ತೆಗೆದು ಓದುವಾಗ ಅದು ಕಾಪರ್ಫೀಲ್ಡ್ ಡೋರಾಳಿಗೆ ಬರೆದ ಪತ್ರವೆಂದು ಗೊತ್ತಾಯಿತು. ಈ ವಿಷಯವನ್ನು, ಸಂಶಯವನ್ನು ನಿವೃತ್ತಿಪಡಿಸಿಕೊಳ್ಳಲು ಡೋರಾಳನ್ನು ಒಂದು ವಿಧದಿಂದ ಸ್ವಲ್ಪ ಹೆದರಿಸುವಾಗ ಈ ಎಲ್ಲ ಪತ್ರಗಳೂ ಸಿಕ್ಕಿದುವು” ಎಂದು ಹೇಳಿ, ಬಾಕಿ ಕೆಲವು ವಿಷಯಗಳನ್ನೂ ಅವಳ ಅಭಿಪ್ರಾಯವನ್ನೂ ಹೇಳಿದಳು. ಅನಂತರ ಮಿ.ಸ್ಪೆನ್ಲೋರವರು ಸ್ವಲ್ಪ ಸಿಟ್ಟಿನಿಂದ, ಮತ್ತು ತುಂಬಾ ಘನಸ್ಥಿಕೆಯ ಮರ್ಜಿಯಿಂದ ಮಾತಾಡಲಾರಂಭಿಸಿದರು.

“ಮಿ. ಕಾಪರ್ಫೀಲ್ಡ್, ನೀವು ಗೃಹಸ್ಥರು, ನಂಬಿಕೆಗೆ ಅರ್ಹರು ಎಂದು ನಮ್ಮ ಮನೆಗೆ ಪ್ರವೇಶಿಸಲು ಎಡೆಕೊಟ್ಟೆ. ನೀವು ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ನನ್ನ ಅರಿಯದ ಚಿಕ್ಕ ಮಗಳಿಗೆ ಅನುರಾಗವೆಂಬ ತಪ್ಪು ಅಭಿಪ್ರಾಯವನ್ನು ಮೂಡುವಂತೆ ಮಾಡಿ, ಅದನ್ನೇ ಪ್ರೋತ್ಸಾಹಿಸಿ, ಪತ್ರ ಬರೆಯಲಾರಂಭಿಸಿದಿರಿ. ಆದರೂ ಚಿಂತೆಯಿಲ್ಲ. ಹಿಂದೆ ಬರೆದುದನ್ನು ಮರೆತು ನಮ್ಮ ಕೋರ್ಟು ಸಂಬಂಧದ ಕೆಲಸಗಳಲ್ಲಿ ಮಾತ್ರ ಇನ್ನು ಮುಂದೆ ನಮ್ಮ ಮನೆಗೆ ಬಂದು ಹೋಗತಕ್ಕದ್ದೇ ಹೊರತು, ಬೇರೆ ಸಂಬಂಧವಾಗಿ ಬರಕೂಡದು. ಅಲ್ಲದೆ, ಇನ್ನು ಮುಂದೆ ನಮ್ಮ ಸಂಸಾರ, ಮತ್ತು ನನ್ನ ಮಗಳ ಪ್ರಸ್ತಾಪವನ್ನು ಬಿಟ್ಟುಬಿಡಿ” ಎಂದು ಹೇಳಿದರು.

ಈ ಮಾತುಗಳನ್ನಾಡುವಾಗ ಮಿ.ಸ್ಪೆನ್ಲೋರವರ ಮುಖವು ಹಿಂದೆಂದೂ ನಾನು ಕಾಣದಿದ್ದಷ್ಟು ಸಿಟ್ಟಿನಿಂದ ಕೆಂಪಾಗಿತ್ತು. ಅವರ ಹಿರಿತನಕ್ಕೂ ಅವರ ಪ್ರಾಯಕ್ಕೂ ನಾನು ಅವರನ್ನು ಗೌರವಿಸುತ್ತಾ ಸ್ವಲ್ಪ ಅಂಜಿಕೆಯಿಂದ ಮಾತನಾಡಲಾರಂಭಿಸಿ – “ಡೋರಾಳಿಗೆ…” ಎಂದು ಹೇಳುವಷ್ಟರಲ್ಲೇ ಅವರು ಹೇಳಿದರು – “ಮಿಸ್ ಸ್ಪೆನ್ಲೋ ಎಂದು ಮಾತ್ರ ಕರೆಯುವ ನೆನಪಿಟ್ಟುಕೊಳ್ಳಿ” ಎಂದು. ನಾನು ಈ ಎಚ್ಚರಿಕೆಯನ್ನು ನೆನಪಿಟ್ಟುಕೊಂಡು – “ಮಿಸ್ ಸ್ಪೆನ್ಲೋಳಿಗೆ ನಾನು ಧರ್ಮ ಮತ್ತು ನ್ಯಾಯ ಪ್ರಕಾರ ನನ್ನ ಹೃದಯದ ಪವಿತ್ರ ಭಾವನೆಯನ್ನು ತಿಳಿಸಿ ಅವಳಿಂದ ಸಹಾನುಭೂತಿಯಿಂದ ಉತ್ತರವನ್ನು ಪಡೆದಿರುತ್ತೇನೆ. ನನ್ನ ಪ್ರಕೃತದ ಬಡತನ ಕುರಿತು ನಿಮಗೆ ಜಿಗುಪ್ಸೆ ಇರುವುದಾದರೆ ನನ್ನ ಸಂಪಾದನೆಯು ಹೆಚ್ಚುವವರೆಗೆ ನನಗೆ ದಯಮಾಡಿ ಪುರುಸೊತ್ತು ಕೊಡಿರಿ” ಅಂದೆ. “ನಿಮ್ಮ ಪ್ರಾಯ, ಸ್ಥಾನ, ನನ್ನ ಮಗಳ ಪ್ರಾಯ, ಸ್ಥಾನ ಮತ್ತು ಅವಳ ಭವಿಷ್ಯವನ್ನು ಕುರಿತಾದ ನನ್ನ ಅಭಿಪ್ರಾಯ, ಇವು ಯಾವುದನ್ನಾದರೂ ನೀವು ಗ್ರಹಿಸಿರುವಿರೇನು? ಅದರ ಬದಲು ನನಗೆ ಹಣವಿದೆ, ಆಸ್ತಿಯಿದೆ ಎಂದು ತಿಳಿಯುತ್ತಾ ನನಗಿರುವುದು ಒಬ್ಬಳೇ ಮಗಳೆಂಬುದನ್ನೂ ಗ್ರಹಿಸಿ. . .” ಎಂದು ಹೇಳುತ್ತಾ ಮುಂದುವರೆಯುವ ಮೊದಲೇ ನಾನಂದೆ – “ನಿಮ್ಮ ಐಶ್ವರ್ಯವನ್ನು ಕಂಡು ನಾನು ಹೀಗೆ ವರ್ತಿಸಿರುವುದಿಲ್ಲ. ದಯಮಾಡಿ ನನ್ನ ಅಭಿಪ್ರಾಯವನ್ನು ಸ್ವಲ್ಪ ಗ್ರಹಿಸಿರಿ. ನಿಮ್ಮ ಮಗಳನ್ನು ತಪ್ಪಿತಸ್ಥಳೆಂದು ದಯಮಾಡಿ ಗ್ರಹಿಸಬೇಡಿರಿ. ಇದೆಲ್ಲದಕ್ಕೂ ನಾನೇ ಜವಾಬ್ದಾರನು – ನನಗೆ ದಯಮಾಡಿ ಪುರುಸೊತ್ತು ಕೊಡಿರಿ.”

“ನನ್ನ ಮಗಳನ್ನು ವಿಚಾರಿಸಿಕೊಳ್ಳುವ ಅಥವಾ ಅವಳನ್ನು ಕುರಿತು ಅಭಿಪ್ರಾಯಪಡುವ ಹಕ್ಕು, ಜವಾಬ್ದಾರಿಗಳು ನಮಗೆ ಮಾತ್ರ ಇರುವಂಥವು. ನಿಮ್ಮ ಅನುಕೂಲ ಅವಕಾಶಗಳನ್ನು ವಿಚಾರಿಸಿ, ಸಮಾಧಾನಪಡಿಸುವ ಕೆಲಸವೂ ನಮ್ಮದಲ್ಲ. ನಿಮಗೆ ಪುರಸೊತ್ತು ಕೊಡುವುದು ಬೇರೊಂದು ವಿಷಯಕ್ಕೆ – ಆ ಪುರುಸೊತ್ತೂ ಸಹ ಒಂದು ವಾರದ್ದು ಮಾತ್ರ. ಆ ಒಂದು ವಾರದೊಳಗೆ ಈ ವರೆಗೆ ನಿಮಗೂ ಮಿಸ್ ಸ್ಪೆನ್ಲೋಳಿಗೂ ನಡೆದಿರುವ ಸಂಗತಿಗಳನ್ನೆಲ್ಲಾ ಮರೆತುಬಿಡಬೇಕು” ಎಂದು ಮಿ. ಸ್ಪೆನ್ಲೋರವರು ಹೇಳಿ ಮಾತನ್ನು ಸ್ಪಷ್ಟವಾಗಿ ಮುಗಿಸಿದರು.

ನಾನು ತಲೆ ಬಗ್ಗಿಸಿಕೊಂಡು, ದುಃಖಪಡುತ್ತಾ ಮನೆಗೆ ಬಂದೆನು. ಈ ವರ್ತಮಾನವನ್ನು ಅತ್ತೆಗೂ ತಿಳಿಸಿದೆನು. ಅವಳು ದುಃಖಪಟ್ಟಳು. ನನಗೆ ಮೂಂದೇನೂ ದಾರಿತೋಚದೆ ಒಂದು ಮೂಲೆಯಲ್ಲಿ ಕುಳಿತುಬಿಟ್ಟೆನು. ಈ ಸಂಗತಿಯನ್ನು ನಾನು ಮಿಸ್ ಮಿಲ್ಸಳಿಗೆ ತಿಳಿಸಿದೆನು. ಅವಳು ಸಹಾನುಭೂತಿಯುತವಾಗಿ ಮಾತಾಡಿ, ತನ್ನ ಅನುಭವ, ಉದಾಹರಣೆಗಳಿಂದ, ನನಗೆ ಬುದ್ಧಿ ಹೇಳಿ, ಧೈರ್ಯ ಕೊಟ್ಟಳು. ಮರುದಿನ ಶನಿವಾರವಾಗಿತ್ತು. ಎಂದಿನಂತೆ ನಾನು ಕಾಮನ್ಸ್ ಕೋರ್ಟಿಗೆ ಹೋದೆನು. ಅಲ್ಲಿ ನನಗೆ ಆಶ್ಚರ್ಯವಾಗುವಂತೆ, ಎಂದಿನಂತೆ ಕೆಲಸ ನಡೆಯುತ್ತಿರಲಿಲ್ಲ. ಇದೇನು ಹೀಗಾಗಿದೆಯೆಂದು ಗಾಬರಿಗೊಂಡು ಗುಮಾಸ್ತ ಮಿ. ಟೆಫಿಯನ್ನು ವಿಚಾರಿಸಿದೆನು. “ನಿಮಗೆ ಗೊತ್ತಿಲ್ಲವೇ” ಎಂದು ಅವರು ನನಗೆ ಮರುಪ್ರಶ್ನೆಯಿತ್ತರು. “ಇಲ್ಲ.” “ಮಿ. ಸ್ಪೆನ್ಲೋರವರು ಮೃತಪಟ್ಟಿರುವರು.” ಈ ವರ್ತಮಾನವನ್ನು ಕೇಳಿದ ಕೂಡಲೇ ನನಗೆ ಸುತ್ತಲಿನ ಪ್ರದೇಶವೆಲ್ಲ ಅಲುಗಾಡಿದಂತೆ ತೋರಿತು, ಮತ್ತೆ ನನಗೆ ಮೂರ್ಛೆ ಹೋಯಿತು. ನನ್ನನ್ನು ನೀರು ಹಾಕಿ ಅಲ್ಲಿದ್ದವರು ಎಚ್ಚರಿಸಿದರು. ಎಚ್ಚರವಾದ ಮೇಲೆ ಸಂಗತಿಗಳನ್ನೆಲ್ಲ ತಿಳಿದೆನು.

ಮಿ. ಸ್ಪೆನ್ಲೋರವರು ಅವರ ಮನೆಗೆ ಪ್ರತಿದಿನವೂ ಹೋಗುತ್ತಿದ್ದಂತೆ ಆ ದಿನವೂ ತಮ್ಮ ಕುದುರೆ ಗಾಡಿಯಲ್ಲಿ ಕುಳಿತು, ತಾವೇ ಗಾಡಿ ಹೊಡೆದುಕೊಂಡು ಹೋದರಂತೆ. ಆದರೆ ಮಿ. ಸ್ಪೆನ್ಲೋರವರು ಅವರ ಮನೆಗೆ ತಲುಪಲಿಲ್ಲ. ಕುದುರೆಗಳು ಖಾಲಿ ಬಂಡಿಯನ್ನೆಳೆದುಕೊಂಡು ಮನೆಗೆ ತಲುಪಿದವಂತೆ. ಅವುಗಳ ಲಗಾಮು ತುಂಡಾಗಿ ಕೆಲವಂಶ ಕಾಣೆಯಾಗಿದ್ದುವು. ಮಿ. ಸ್ಪೆನ್ಲೋರವರ ಮನೆ ಆಳುಗಳು ಗಾಡಿ ಬಂದಿದ್ದ ದಾರಿಯಲ್ಲೇ ಹುಡುಕುತ್ತಾ ಬಂದಾಗ, ಮನೆಯಿಂದ ಒಂದು ಮೈಲು ಒಳಗೇ ಮಿ. ಸ್ಪೆನ್ಲೋರವರು ಮೃತಪಟ್ಟು ಮಾರ್ಗದಲ್ಲಿ ಬಿದ್ದಿದ್ದರಂತೆ.

ಈ ಘಟನೆಯ ವರ್ತಮಾನವು ಊರಲ್ಲೆಲ್ಲಾ ಹಬ್ಬಿತು. ಮಿ. ಜಾರ್ಕಿನ್ಸರು ಬಂದು ಕೆಲವು ಗೃಹಸ್ಥರನ್ನು ಮಹಜರಿಗಾಗಿ ಇಟ್ಟುಕೊಂಡು ಮಿ.ಸ್ಪೆನ್ಲೋರವರ ಆಫೀಸನ್ನು ಶೋಧನೆ ಮಾಡಿದರು. ಇಷ್ಟೊಂದು ಹೆಸರುವಾಸಿಗಾಗಿದ್ದ ಮಿ. ಸ್ಪೆನ್ಲೋರವರ ಆಸ್ತಿ ಹೇರಳವಾಗಿರಬಹುದೆಂದೂ ಅವರು ಒಂದು ಉಯಿಲನ್ನು ಮಾಡಿಟ್ಟಿರಬಹುದೆಂದೂ ಎಲ್ಲರೂ ಊಹಿಸುತ್ತಾ ಶೋಧನೆ ಕಾಲದಲ್ಲಿ ತುಂಬಾ ಕುತೂಹಲಿಗಳಾಗಿದ್ದರು. ಆದರೆ ಶೋಧನೆಯಲ್ಲಿ ಕಂಡುಬಂದ ಆಸ್ತಿಯೇನಂದರೆ – ನಾರ್ವುಡ್ಡಿನ ಅವರ ಮನೆ ಮತ್ತೂ ಹಿತ್ತಲು, ಸಾಧಾರಣ ಒಂದು ಸಾವಿರ ಪೌಂಡು ಬೆಲೆಬಾಳುವ ಚರಸ್ವತ್ತುಗಳು ಮಾತ್ರ.

ಮಿ.ಸ್ಪೆನ್ಲೋರವರ ಮರಣದ ಕುರಿತೂ ಜೀವನದ ಕುರಿತೂ ಜನರು ನಾನಾ ವಿಧವಾಗಿ ಮಾತಾಡಿಕೊಳ್ಳುತ್ತಿದ್ದರು. ಮಿ. ಸ್ಪೆನ್ಲೋರವರು ಬಹು ಆಡಂಬರದ ಜೀವನ ನಡೆಸುತ್ತಿದ್ದರೆಂದೂ ಮಾತಾಡಿಕೊಳ್ಳುತ್ತಿದ್ದರು. ಈ ವಕೀಲ ವೃತ್ತಿಯವರು ಒಬ್ಬರನ್ನೊಬ್ಬರು ಅನುಕರಿಸಿಯೂ ಮೀರಿಸಬೇಕೆಂದೂ ತುಂಬಾ ಆಡಂಬರ ಮತ್ತು ಠೀವಿಯಿಂದ ಮೆರೆಯುವುದು ವಾಡಿಕೆಯೆಂದು ಕೆಲವರ ಅಭಿಪ್ರಾಯವಾಗಿತ್ತು. ಕಕ್ಷಿದಾರರ ಹಣ ಕೈಗೆ ಬರುತ್ತಲೂ ಹೋಗುತ್ತಲೂ ಇದ್ದುದರಿಂದ, ಅವರ ಸ್ವಂತ ಅಂಶ ಎಷ್ಟೆಂದು ಯಾವತ್ತೂ ಅವರು ಯೋಚಿಸುತ್ತಿರಲಿಲ್ಲವೆಂಬಂತೆ ಅವರ ವಹಿವಾಟುಗಳು ತೋರುತ್ತಿದ್ದುವು. ಅವರು ಇತರರ ವಹಿವಾಟುಗಳನ್ನು ವ್ಯವಸ್ಥೆಯಿಂದ ನಡೆಸುವ ಪ್ರಯತ್ನದಲ್ಲಿದ್ದರೂ ತಮ್ಮ ವಹಿವಾಟುಗಳನ್ನು ಮಾತ್ರ ಬಹುವಾದ ಅವ್ಯವಸ್ಥೆಯಲ್ಲೆ ಇಟ್ಟುಕೊಂಡಿದ್ದರಂತೆ. ತಮಗೂ ಮರಣವಿದೆ ಎಂಬುದನ್ನೇ ಅವರು ಗ್ರಹಿಸುತ್ತಿರಲಿಲ್ಲವಂತೆ.

ಮಿ. ಸ್ಪೆನ್ಲೋರವರ ಉತ್ತರ ಕ್ರಿಯೆ ಲಂಡನ್ನಿನ ಪುಟ್ನಿ ಎಂಬಲ್ಲಿ ಜರುಗಿತು. ಅವರಿಗೆ ಯಾರೂ ಕುಟುಂಬದ ಬಂಧು ಬಾಂಧವರಾಗಿ ಇರಲಿಲ್ಲವಂತೆ. ಅವರ ಖಾಸಾ ಅಕ್ಕಂದಿರು ಪುಟ್ನಿಯಲ್ಲಿದ್ದ ತಮ್ಮ ಮನೆಯಲ್ಲಿ ಉತ್ತರ ಕ್ರಿಯೆಯನ್ನು ನಡೆಸಿದರು. ಉತ್ತರ ಕ್ರಿಯೆಗೆ ಡೋರಾಳನ್ನೂ ಅವರು ಕರೆದುಕೊಂಡು ಹೋಗಿದ್ದರು. ಈ ಅಕ್ಕಂದಿರಿಗೂ ಮಿ.ಸ್ಪೆನ್ಲೋರವರಿಗೂ ಅಷ್ಟೊಂದು ಒಳ್ಳೆಯದಿರಲಿಲ್ಲ. ಮಿಸೆಸ್ ಸ್ಪೆನ್ಲೋರವರು ಡೋರಾಳ ನಾಮಕರಣಕ್ಕೆ ಈ ಅಕ್ಕಂದಿರಿಗೆ ಆಮಂತ್ರಣವನ್ನು ಕಳುಹಿಸುವಾಗ ಚಹಾ ಸತ್ಕಾರಕ್ಕೆ ಮಾತ್ರ ಆಮಂತ್ರಿಸಿದ್ದರಂತೆ. ಮಿ. ಸ್ಪೆನ್ಲೋರವರ ಶ್ರೀಮಂತ ಸ್ನೇಹಿತರಿಗೆ ಅದೇ ದಿನ, ಅದೇ ನಾಮಕರಣದ ಉದ್ದೇಶ, ಒಂದು ದೊಡ್ಡ ಊಟವನ್ನೇ ಏರ್ಪಡಿಸಿದ್ದರಂತೆ. ಈ ವಿಧದಲ್ಲಿ ತಮ್ಮನ್ನು ಬಡವರೆಂದು ಮಿಸೆಸ್ ಸ್ಪೆನ್ಲೋರವರು ಕಡೆಗಣಿಸಿದ್ದಕ್ಕಾಗಿ ಈ ಅಕ್ಕಂದಿರು ತಮ್ಮ ಬಡತನ ತಮಗೆ ದೊಡ್ಡದೆಂದು, ಮಿಸೆಸ್ ಸ್ಪೆನ್ಲೋರವರು ಜೀವಿಸಿರುವವರೆಗೆ ಅವರ ಮನೆಗೆ ಹೋಗಿರಲಿಲ್ಲ. ಅಭ್ಯಾಸದ ಕಾರಣವಾಗಿ, ಅತ್ತಿಗೆಯ ಮರಣಾನಂತರವೂ ಈ ಅಕ್ಕಂದಿರು ದೂರವಾಗಿಯೇ ಇದ್ದರು. ಈ ಸೋದರತ್ತೆಯವರು ಡೋರಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವಾಗ, ಮಿಸ್ ಜೂಲಿಯಾ ಮಿಲ್ಸಳನ್ನು ಕೇಳಿಕೊಂಡು, ಡೋರಾಳ ಅನುಕೂಲಕ್ಕಾಗಿ ಕೆಲವು ದಿನಗಳಾದರೂ ತಮ್ಮ ಮನೆಯಲ್ಲಿ ನಿಲ್ಲಿಸಿಕೊಳ್ಳುವುದಕ್ಕಾಗಿ ಅವಳನ್ನೂ ಜತೆಯಲ್ಲೇ ಕರೆದುಕೊಂಡು ಹೋಗಿದ್ದರು.

ಮಿಸ್ ಜೂಲಿಯಾ ಮಿಲ್ಸಳು ಡೋರಾಳ ಜತೆಯಲ್ಲಿದ್ದುದು ಡೋರಾಳಿಗೆ ತುಂಬಾ ಅನುಕೂಲ ಮತ್ತು ಪ್ರಯೋಜನವಾಗಿರಬೇಕು. ಮತ್ತೂ ನನ್ನ ಮನಸ್ಸಿಗೂ ತುಂಬಾ ಸಮಾಧಾನ ಕೊಟ್ಟಿತು. ಇಷ್ಟೂ ಅಲ್ಲದೆ ನನಗೂ ಡೋರಾಳಿಗೂ ಸಂದರ್ಭದಿಂದಲೇ ಒಂದು ವಿಧದ ಸಂಪರ್ಕವನ್ನೂ ಮಿಸ್ ಮಿಲ್ಸಳು ಊರ್ಜಿತದಲ್ಲಿರಿಸಿದಳು. ಮಿಸ್ ಜೂಲಿಯಾ ಮಿಲ್ಸಳು ದಿನದಿನದ ವರದಿಯನ್ನು ತನ್ನ ಡೈರಿಯಲ್ಲಿ ಬರೆದಿಡುತ್ತಿದ್ದಳು. ನಾನು ಪ್ರತಿ ದಿನವೂ ಪುಟ್ನಿಗೆ ಹೋಗಿ ಆ ಡೈರಿಯನ್ನು ಓದಿ ಬರುತ್ತಿದ್ದೆ. ಡೈರಿಯಲ್ಲಿ ಮಿಸ್ ಮಿಲ್ಸಳು ಈ ಮುಂದಿನಂತೆ ಬರೆದಿದ್ದಳು. “ಸೋಮವಾರ – ಡೋರಾ ಅಳು ನಿಲ್ಲಿಸಿರುತ್ತಾಳೆ – ತಲೆನೋವು – ಮಾತು ಜಿಪ್ಪನ ಹತ್ತಿರ ಮಾತ್ರ – ಜಿಪ್ಪನ ಆಟ ನೋಡಿ ಅತ್ತಳು. (ಅಶ್ರು ಬಿಂದುಗಳು ಹೃದಯದ ಸಾರತಾನೆ! [ಜೂ.ಮಿ])” “ಮಂಗಳವಾರ – ಡೋ ನಿತ್ರಾಣ. ಬಂಡಿಯಲ್ಲಿ ಗಾಳಿಸವಾರಿ. ಜಿ. ದಾರಿಗರನ್ನು ಕಂಡು ಬೊಗಳಿತು – ಡೋ ನಕ್ಕಳು. (ಜೀವಮಾನದ ಸರಪಳಿಯ ಕೊಣಿಕೆಗಳೇ ಈ ನಗೆಯಷ್ಟೆ! – [ಜೂ. ಮಿ])”

“ಶುಕ್ರವಾರ – ಒಂದು ಘಟನೆ, ಜಿಪ್ ಕಳವಾಯಿತು. ಡೋ ಮೂರ್ಛಿತಳಾದಳು. ಪೋಲಿಸರು ಹುಡುಕಿದರು, ಒಂದು ಪೌಂಡು ಕೊಟ್ಟರೆ ನಾಯಿ ಪತ್ತೇಂತ ಹುಡುಗನೊಬ್ಬ ತಿಳಿಸಿದ. ಪೌಂಡು ತೆತ್ತು ನಾಯಿ ಬಂತು. ಡೋ ಹರ್ಷಯುತಳು. ಜಿ ಹತ್ರ ಮುದ್ದಾಡಿದಳು, ನಲಿದಳು. ಕಾಪರ್ಫೀಲ್ಡ್ ಹೆಸರು ಹೇಳಿದಾಗ ಅತ್ತಳು. ಮೌನ, ಊಟ ತಿಂಡಿ ಬಿಟ್ಟು ನಿದ್ರೆ. (ಕಾ.ಫೀ. ಕಾಲಚಕ್ರದ ಗತಿಯನ್ನು ಕಾದು ಕುಳಿತಿರುವುದು ಲೇಸಲ್ಲವೇ? [ಜೂ.ಮಿ])” ಹೀಗೆ ಆ ಕಾಲದಲ್ಲಿ ನನಗೆ ಶಾಂತಿ ಸಮಾಧಾನ ಕೊಡುತ್ತಿದ್ದುದು ಆ ಡೈರಿ ಮಾತ್ರವಾಗಿತ್ತು. ಇತರ ಎಲ್ಲಾ ವಿಧದಲ್ಲೂ ನಾನು ಹತಾಶನಾಗಿ ದುಃಖಿಸಿ ಕಾಲ ಕಳೆಯುವಂತೆ ಆಗಿತ್ತು. ದಿನ ದಾಟಿದಂತೆ ಡೋರಾಳು ಶಾಂತಚಿತ್ತವಾಗುತ್ತ ನನ್ನ ಜ್ಞಾಪಕವನ್ನು ತಂದುಕೊಳ್ಳಬಹುದು ಎಂದು ನಿರೀಕ್ಷಿಸುತ್ತಿದ್ದುದೆಲ್ಲಾ ನಿಷ್ಪ್ರಯೋಜನವೆಂಬಂತೆ ತೋರಿತು. ಡೋರಾಳ ಸುತ್ತಲೂ ಮಿಸ್ ಮಿಲ್ಸಳ ಸಹಾಯದಿಂದ ನಾನು ನಿರ್ಮಿಸುತ್ತ ಬಂದಿದ್ದ ಸುಂದರ ಗೋಪುರವನ್ನು ಯಾವನೋ ಒಬ್ಬ ಮಾಯಾವಿಯು ತನ್ನ ಮಾಯೆಯಿಂದ ನೂಕಿ ಉರುಳಿಸಿಬಿಟ್ಟಂತೆ ದಿನ ಹೋದಂತೆಲ್ಲ ನನಗೆ ಕಾಣತೊಡಗಿತು. ನನ್ನ ಸಮಸ್ತ ಸುಖದುಃಖಗಳ ಜವಾಬ್ದಾರಿಯನ್ನು ದೇವರ ಮೇಲಿಟ್ಟು ಮನಶ್ಶಾಂತಿ ತರಲು ಪ್ರಯತ್ನಿಸಿದೆ. ಕೊನೆಕೊನೆಗೆ ಈ ಲೋಕದ ಕೋಟ್ಯನುಕೋಟಿ ಜನರನ್ನು ಸಾಗಿಸಿ ಅವರ ದುಃಖಗಳನ್ನು ಅಂತ್ಯಗೊಳಿಸುವ ಕಾಲ ಚಕ್ರವೇ ನನ್ನ ದುಃಖವನ್ನೂ ಶಮನ ಮಾಡಬಹುದೆಂದು ಗ್ರಹಿಸತೊಡಗಿದೆನು.

(ಮುಂದುವರಿಯಲಿದೆ)