ಕುದುರೆಮುಖದಾಸುಪಾಸು – ೬
ಕುದುರೆಮುಖ ಶಿಖರದ ಕುರಿತಂತೆ ಬಗೆತರದ ಕನವರಿಕೆ ನನ್ನದು. ಒಂದು ವಾರವಾದರೂ ಜನವಿದೂರವಾದ ಆ ಎತ್ತರಗಳಲ್ಲಿ ಕನಿಷ್ಠ ಆವಶ್ಯಕತೆಗಳೊಡನೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮವಿಲ್ಲದೇ ಸುತ್ತಬೇಕು ಎನ್ನುವುದಂತೂ ಬಲವತ್ತರವಾಗಿತ್ತು. ವೃತ್ತಿರಂಗ ಅದಕ್ಕೆಲ್ಲ ಅನುವು ಮಾಡಿಕೊಡುವುದಿಲ್ಲ ಎಂಬ ಸಂಕಟಕ್ಕೆ ಸಣ್ಣ ಪರಿಹಾರವಾಗಿ ಹೊಳೆದ ಕಾರ್ಯಕ್ರಮ `ಕುರಿಯಿಂದ ಕುದುರೆಗೆ.’
ಕಾರ್ಕಳದಿಂದ ಕುದುರೆಮುಖ ಗಣಿನಗರಿಗೆ ಏರುವ ಭಗವತಿ ಘಾಟೀ ದಾರಿಯ ಬಲಕ್ಕಿರುವ ಶಿಖರ ಕುರಿಯಂಗಲ್ಲು (೩೮೧೩ ಅಡಿ). ಇದು ಘಟ್ಟದ ಕಡುಹಸಿರ ಹಿನ್ನೆಲೆಯಲ್ಲಿ, ಶ್ರೇಣಿಯ ಅತ್ಯುನ್ನತಿಯಲ್ಲಿ ಬಿಗಿ ತುಪ್ಪುಳದ ಕುರಿಯೊಂದು ಕುಳಿತಂತೆ ಎದ್ದು ಕಾಣುವ ಕರಿಕಲ್ಲು. ಮೊದಲೆಲ್ಲ ಕರಾವಳಿಯ ಕಾರ್ಕಳ ವಲಯದ ಶೃಂಗೇರಿ ಭಕ್ತಾದಿಗಳಿಗೆ ಕುಗ್ರಾಮ ಮಾಳ, ಕೊನೆಯ ದಾರಿ ಸಂಪರ್ಕ ಮತ್ತು ಜನವಸತಿ ಕೇಂದ್ರ. ಮುಂದೆ ಸವಕಲು ಜಾಡರಸಿಕೊಂಡು ನೇರ ಬೆಟ್ಟ ಏರುವಾಗ ಗುರುತಕ್ಕೆ ಪ್ರಮುಖ ಭೂಲಕ್ಷಣ ಕುರಿಯಂಗಲ್ಲು. ಹಾಗೇ, ಅದರ ಒಳಮೈಯ (ನೇತ್ರಾವತಿ ನದಿಯ ಉಗಮ ಸ್ಥಾನವೆಂದೇ ಖ್ಯಾತ) ಗಂಗಾಮೂಲ ನಿರ್ಜನವಾದರೂ ಭಾವುಕ ಆರಾಧನೆಗೂ ಶಿಬಿರವಾಸಕ್ಕೂ ಪ್ರಶಸ್ತ ಕ್ಷೇತ್ರ. ಇಂದು ಕಬ್ಬಿಣ ಗಣಿಗಾರಿಕೆಯ ಅಗತ್ಯಕ್ಕಾಗಿ ಭರ್ಜರಿ ಭಗವತೀ ಘಾಟಿ ದಾರಿಯೇ ಇದೆ. ಇದು ಮಾಳದ ಏರುಜಾಡಿನಿಂದಲೂ ಎಡ ಮಗ್ಗುಲಿನಲ್ಲಿ ಘಟ್ಟ ಏರಿ, ಕುರಿಯಂಗಲ್ಲಿನ ಹಿಂದೆ ಹಾಯುವುದರೊಡನೆ, ಗಂಗಾಮೂಲದ ದುರ್ಗಮತೆ ಕಳೆದುಹೋಯ್ತು. ಚಾರಣಪ್ರಿಯರು ಮಾಳದಿಂದ ಬಲು ಕಡಿದಾದ ಜಾಡರಸಿ ಏರಬೇಕಾದ ಕುರಿಯಂಗಲ್ಲೂ ಸುಲಭಸಾಧ್ಯವಾಯ್ತೆಂದೂ ಕೇಳಿದ್ದೆ.
ಕುರಿಯಂಗಲ್ಲನ್ನು ಏರುವ ಅವಕಾಶ ನಾನಿನ್ನೂ ಮಾಡಿಕೊಂಡಿರಲಿಲ್ಲ. ಆ ಕಾಲದಲ್ಲಿ ಭೂಲಕ್ಷಣಗಳನ್ನು ನಿಖರವಾಗಿ ಒದಗಿಸುವ ಏಕೈಕ ಸಲಕರಣೆ – ನನ್ನಲ್ಲೂ ಇದ್ದ, ಸರ್ವೇಕ್ಷಣಾ ಇಲಾಖೆಯ ನಕ್ಷೆ. ಅದು ಗಂಗಾಮೂಲ –ಕುರಿಯಂಗಲ್ಲಿನ ಸಾಮೀಪ್ಯವನ್ನು ತೋರಿತು. ಮುಂದುವರಿದು ದಕ್ಷಿಣ-ಪೂರ್ವವಾಗಿ ಸಾಗಿದ ಶಿಖರ ಮಾಲೆ ಕ್ರಮವಾಗಿ – ಗಡಿಕಲ್ಲುಗುಡ್ಡೆ (೩೮೦೬ ಅಡಿ), ಕಡಮಾಡಿಕಲ್ಲು (೪೯೦೦ ಅಡಿ), ಕಡಕೇಜಗುಡ್ಡೆ (೫೪೦೬ ಅಡಿ) ಏರೇರುತ್ತ ಕುದುರೆಮುಖವನ್ನು (೬೨೦೭ ಅಡಿ) ಬಲು ಸುಲಭ ಸಾಧ್ಯವನ್ನಾಗಿಯೂ ಕಾಣಿಸಿತು. ಹೀಗೆ ಕೆಲವು ದಿನಗಳನ್ನಾದರೂ ಮಲೆಯ ಎತ್ತರಗಳಲ್ಲಿ ಕಳೆಯುವ ಹಂಬಲ, ಕರಾವಳಿಯ ಪ್ರಾಕೃತಿಕ ಕೋಟೆಯ ಪ್ರಮುಖ ಕೊತ್ತಳಗಳಂತೇ ಇರುವ ಕೆಲವು ಶಿಖರಗಳ ಮೇಲಿನ ದಿಗ್ವಿಜಯದ ಅವಕಾಶಗಳನ್ನೆಲ್ಲ ಸೇರಿಸಿ ಮೂಡಿದ ಯೋಜನೆ ಕುರಿಯಿಂದ ಕುದುರೆಗೆ.
ದೀಪಾವಳಿ ರಜೆಗಳನ್ನು (೨೫,೨೬-೧೦-೧೯೮೧) ಆದಿತ್ಯವಾರಕ್ಕೆ ಹೊಂದಿಸಿ, ಕನಿಷ್ಠ ಮೂರು ದಿನದೊಳಗೆ ಚಾರಣ ಮುಗಿಸುವ ಯೋಜನೆ. ಅತ್ತ ಸಾಲಿಗ್ರಾಮದಿಂದ ಮಂಜುನಾಥ ಉಪಾಧ್ಯ (ವೆಂಕಟ್ರಮಣ ಉಪಾಧ್ಯರ ಅಣ್ಣ), ಕಾರ್ಕಳದಿಂದ ರಾಧಾಕೃಷ್ಣ ಮತ್ತು ಮುಕುಂದ ಚಿಪ್ಲೂಣ್ಕರ್ ಅಲ್ಲದೆ ಮಂಗಳೂರಿನಿಂದ ನನ್ನ ಜೊತೆಗೆ ಗೋಪಾಲಕೃಷ್ಣ ಬಾಳಿಗ, ಪ್ರಕಾಶ ನಾಟೇಕರ್ ಮತ್ತು ಎ.ಪಿ. ಸುಬ್ರಹ್ಮಣ್ಯ. ಗೆಳೆಯರೊಬ್ಬರು ನಮ್ಮ ಅನುಕೂಲಕ್ಕೆ ಒದಗಿದರು. ಬೆಳಿಗ್ಗೆ ಬೇಗನೆ ನಮ್ಮನ್ನೆಲ್ಲ ತಮ್ಮ ಕಾರಿನಲ್ಲಿ ಒಯ್ದು, ಗಂಗಾಮೂಲಕ್ಕೆ ಬಿಟ್ಟು ಹೋದರು. ಹಿಂದಿನ ರಾತ್ರಿಯಿಡೀ ಅತ್ತು ರಂಪಮಾಡಿದ್ದ ಆಗಸದ ದುಗುಡ ಇನ್ನೂ ಕಡಿಮೆಯಾದಂತಿರಲಿಲ್ಲ. ಹಾಗೆಂದು ರಜಾ ಅನುಕೂಲವನ್ನೂ ಸಿದ್ಧತೆಗಳನ್ನೂ ಬದಲಿಸುವಂತಿರಲಿಲ್ಲ. ಮಾರ್ಗದರ್ಶನಕ್ಕೆ ಸಂಬಂಧಿಸಿದ ಅಮೂಲ್ಯ ಎರಡು ಭೂ ನಕ್ಷೆಗಳನ್ನು (ಮೂರಡಿ, ಎರಡೂವರೆ ಅಡಿ ಉದ್ದಗಲ) ಸುರುಳಿ ಸುತ್ತಿ, ವಿಶೇಷ ರಟ್ಟಿನ ಕೊಳವೆಯೊಳಗಿಟ್ಟು, ತೋರಿಕೆಗೆ ಭಾರೀ ತೋಪಿನಂತೆ ನನ್ನ ಮಗ್ಗುಲಿಗೆ ಕಟ್ಟಿಕೊಂಡಿದ್ದೆ. ಶಿಬಿರವಾಸಗಳ ಅನುಕೂಲಕ್ಕೆ ಲಾಂದ್ರ, ಎರಡು ತಪಲೆ, ದಿನಸಿ ಸಾಮನುಗಳು ಅಲ್ಲದೆ ವೈಯಕ್ತಿಕ ಬಟ್ಟೆಬರೆ ಎಲ್ಲರ ಭರ್ಜರಿ ಬೆನ್ನ ಹೊರೆಯಾಗಿತ್ತು. ಸಾಲದ್ದಕ್ಕೆ ಬೆಳಿಗ್ಗೆ ಕಾರ್ಕಳದಲ್ಲಿ ತಿಂಡಿ ತಿನ್ನುವಾಗಲೇ ಮಧ್ಯಾಹ್ನಕ್ಕೆಂದು ಕಟ್ಟಿಸಿಕೊಂಡ ಬುತ್ತಿಯನ್ನೂ ಬೆನ್ನಚೀಲಕ್ಕೆ ಸೇರಿಸಿದೆವು. ಆದರೆ ಅನಿರೀಕ್ಷಿತವಾಗಿ ಬದಲಾಗಬಹುದಾದ ವಾತಾವರಣಕ್ಕೆ ನಮ್ಮಲ್ಲಿದ್ದದ್ದು ಒಂದೇ ತಯಾರಿ – ಭಂಡತನ; ಇನ್ನು ಮಳೆ ಬಾರದು!
ಗಣಿ ಯೋಜಕರು ಸಾಮಾಜಿಕ ಸೇವೆ ಎಂಬಂತೆ ಮುಖ್ಯ ದಾರಿಯಲ್ಲೊಂದು ನಾಮಫಲಕ ಹಾಕಿ, ಸುಮಾರು ಐನೂರು ಮೀಟರ್ ಅಂತರದ ಗಂಗಾಮೂಲ ವನಪ್ರದೇಶಕ್ಕೆ ಕಚ್ಚಾ ದಾರಿ ಮಾಡಿದ್ದಾರೆ. ನಾವು ಅಷ್ಟನ್ನು ಚುರುಕಾಗಿಯೇ ಕಳೆದೆವು. ಮುಂದಿನದು ಶಿಖರವಲಯದ ದಟ್ಟ ಕಾಡಿನ ಪುಟ್ಟ ಕಣಿವೆ. ಅಲ್ಲಿ ಹತ್ತಿಪ್ಪತ್ತು ಹೆಜ್ಜೆಯ ಅಂತರದಲ್ಲೇ ಮೂರ್ನಾಲ್ಕು ಭಾರೀ ಬಂಡೆಗುಂಡಿನ ಗುಪ್ಪೆಯೊಂದಿದೆ. ಅದರ ಅಡಿಯಲ್ಲುಳಿದ ಸ್ವಾಭಾವಿಕ ಪೊಳ್ಳು – ಗುಹೆ, ಗಂಗಾಮೂಲದ ಆರಾಧನಾ ಸ್ಥಳ. ಅದರಡಿಗೆ ನಾಲ್ಗಾಲಿನಲ್ಲಿ ನುಸುಳಿದರೆ ಮಳೆಗಾಲ ಮುಗಿದ ಹೊಸದರಲ್ಲಿ ನೀರ ಜಿನುಗು ಕಾಣಬಹುದು. ಅದೇ ಭಾವುಕ ಮನಸ್ಸುಗಳ ಗಂಗೆ – ನೇತ್ರಾವತಿಯ ಜಲಕಣ್ಣು. ವರಶಾಪಗಳ ದೇವರ ಕಲ್ಪನೆಯನ್ನು, ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯೆಂದೇ ವಾದಿಸುವವರ ಜತೆ ನಾನಿಲ್ಲ. ಪ್ರಕೃತಿಯ ಮೇರೆವರಿಯದ ಶಕ್ತಿಗೆ ಬೆರಗು (ತಿರಸ್ಕಾರ, ಅವಹೇಳನ ಖಂಡಿತಾ ಅಲ್ಲ) ಮತ್ತು ಸಾಧ್ಯವಾದಷ್ಟು ಅನುಸರಣೆಯ ಪ್ರಯತ್ನ (ಪಳಗಿಸುವ ಛಲ ಅಥವಾ ಒಲಿಸಿಕೊಳ್ಳುವ ತಂತ್ರ ನಿರರ್ಥಕ) ನನ್ನ ಜೀವನಾಸಕ್ತಿ ಮತ್ತು ಉಳಿವಿನ ದಾರಿ. ಅನ್ಯರು ಇದನ್ನೇ ಪೂಜೆಯೆಂದು ಗುರುತಿಸಿದರೆ ನನ್ನ ಆಕ್ಷೇಪವಿಲ್ಲ. ಪ್ರತಿಕ್ರಿಯೆಯಲ್ಲಿ ನನಗೆ ಒದಗುವ ಗುಣಾವಗುಣಗಳನ್ನು ಅಂಥವರು ವರ, ಶಾಪಗಳಾಗಿಯೂ ಗಣಿಸಬಹುದು. ಗಂಗಾಮೂಲ, ನೇತ್ರಾವತಿ ಎಂಬ ಜಲಸಮುಚ್ಛಯದ ಒಂದು ಧಾರೆ ಎನ್ನುವ ಮಟ್ಟಿಗಷ್ಟೇ ಅದನ್ನು ಕಾಣುವ ನಮ್ಮ ತಂಡ ಅಲ್ಲಿ ವಿಳಂಬಿಸಲಿಲ್ಲ. ಮುಂದೆ ಭೂಪಟ, ದಿಕ್ಸೂಚಿ ನಿರ್ದೇಶಿಸಿದ ದಿಸೆಯಲ್ಲಿ, ಸಾಧ್ಯವಾದಷ್ಟು ವನ್ಯಮೃಗ ಸಂಚಾರದ ಜಾಡುಗಳನ್ನು ಅನುಸರಿಸಿ ಕಾಡನ್ನುತ್ತರಿಸಿ ಕುರಿಯಂಗಲ್ಲು ತಲಪುವುದು ಪ್ರಥಮ ಲಕ್ಷ್ಯ.
ಮಲೆಗಳಲ್ಲಿ ಮಳೆಯೆಂದರೆ ಜಿಗಣೆ ಇರಲೇಬೇಕು. ಆ ದಿನಗಳಲ್ಲಿ ನಮಗೆಲ್ಲ, ಜಿಗಣೆ ನಿರ್ವಿಷ ಹಾಗೂ ನಡಿಗೆಯ ಬೀಸಿನಲ್ಲಿ ಆಗೀಗ ಕಿತ್ತು ಹಾಕಿದರಾಯ್ತು – ಗರಿಷ್ಠ ಕಚ್ಚಿದರೂ ನಿರಪಾಯಕಾರಿ ಎನ್ನುವ ಭಂಡತನವಿತ್ತು. ಜಿಗಣೆನಿರೋಧ ಬಗ್ಗೆ ವಿಶೇಷ ತಯಾರಿ ನಡೆಸಿರಲಿಲ್ಲ. ಆದರೆ ಅಲ್ಲಿ ಪ್ರತಿ ಉದುರೆಲೆಗೊಂದು ಜಿಗಣೆ, ನಡೆಯುವಾಗ ಸವರಿದ ಗಿಡ ಬಳ್ಳಿಗಳ ಮೇಲೂ ಜಿಗಣೆ ಎಂಬಷ್ಟು ವಿಪರೀತದ ಸ್ಥಿತಿ. ಜನ-ಜಾನುವಾರುಗಳು ಬಳಸಿದ ಜಾಡುಗಳು ಇರಬಹುದೆಂದು ಊಹಿಸಿದ್ದು ತಪ್ಪಾಗಿತ್ತು. ಅಲ್ಪಸ್ವಲ್ಪ ನುಗ್ಗಿ, ನುಸುಳಿದರೂ ಚುರುಕು ನಡೆ ಅಸಾಧ್ಯ ಎನ್ನುವಂಥ ಕಾಡಿನ ದಟ್ಟಣೆ ಬೇರೆ. ಆಯಕಟ್ಟಿನ ಜಾಗ ಹುಡುಕುತ್ತಾ ಕತ್ತಿ ಹಿಡಿದು ಬಳ್ಳಿ, ಪೊದರು ತರಿಯುತ್ತಾ ನಡೆದೆವು. ನನ್ನಲ್ಲಿದ್ದ ಸಾಮಾನ್ಯ ದಿಕ್ಸೂಚೀ (ಉತ್ತರಮುಖಿ ಮಾತ್ರ) ಮತ್ತು ಕಣ್ಣಂದಾಜಿನಲ್ಲಿ ಪಶ್ಚಿಮ-ದಕ್ಷಿಣಕ್ಕೆ ಸರಿಯುತ್ತ, ಹುಲ್ಲುಗಾವಲನ್ನು ಹಾರೈಸುತ್ತ ಸಾಗಿದೆವು. ಎನ್ಸಿಸಿಯಲ್ಲಿ ನಾನು ಕಲಿತಿದ್ದ ಚೂರುಪಾರು ಮ್ಯಾಪ್ ರೀಡಿಂಗ್ ಪಾಠ ಸಾಲದೆನ್ನಿಸಿತು. ಆದರೆ ಜತೆಯಲ್ಲಿದ್ದ ರಾಧಾಕೃಷ್ಣ (ಹೆಚ್ಚಿನ ಪರಿಚಯಕ್ಕೆ ಹೆಸರಿನ ಮೇಲೆ ಚಿಟಿಕೆ ಹೊಡೆಯಿರಿ) ಕಾರ್ಕಳ ಭುವನೇಂದ್ರ ಕಾಲೇಜಿನ ಅಧ್ಯಾಪಕ, ಸಮರ್ಥ ಎನ್ಸಿಸಿ ಅಧಿಕಾರಿ ತಪ್ಪಲು ಸಾಧ್ಯವೇ ಇರಲಿಲ್ಲ. ಜಾಡರಸುವಲ್ಲಿ ನಿಧಾನಿಸುವುದು ಅನಿವಾರ್ಯ. ಹಾಗೇ ನಿಧಾನಿಸಿದಲ್ಲಿ ಜಿಗಣೆ ಏರುವುದು ಹೆಚ್ಚು. ಜಗ್ಗುವ ಹೊರೆಯಿಳಿಸಿ ತುಸು ವಿಶ್ರಾಂತಿ, ಮೇಲೇರುವ ಜಿಗಣೆಗಳನ್ನು ಕಿತ್ತೆಸೆಯಲು ಇಂಚು ಒಣ ನೆಲ ಎಂದೆಲ್ಲಾ ಆಶಿಸಿದ್ದೇ ಬಂತು, ಅವಕಾಶ ಒದಗಲೇ ಇಲ್ಲ.
ಅವಿರತ ನಡೆದವರಿಗೆ ಸುಮಾರು ಮಧ್ಯಾಹ್ನದ ವೇಳೆಗೆ ಒಂದು ಕಾಡ ತೊರೆ ಸಿಕ್ಕಿತು. ಅದರಲ್ಲಿ ನೀರು ವಿಶೇಷವೇನೂ ಇಲ್ಲದಿದ್ದರೂ ಪಾತ್ರೆಯಲ್ಲಿ ಒಂದೆರಡು ಸ್ವಚ್ಛ ಹಾಸು ಬಂಡೆಗಳಿದ್ದುವು. ಅವು ಸಹಜವಾಗಿ ಜಿಗಣೆಮುಕ್ತವೂ ಇದ್ದುದರಿಂದ ನಾವು ಊಟದ ವಿಶ್ರಾಂತಿಯನ್ನೇ ಕೈಗೊಂಡೆವು. ಜತೆಗೆ ಅಪರಾಹ್ನದ ನಡೆಯ ಕುರಿತು ಚಿಂತಿಸಿದೆವು. ಮಳೆ ಮತ್ತೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿತ್ತು. ಒಂದೊಮ್ಮೆ ನಾವು ಯೋಜನೆಯಂತೇ ಶೃಂಗಶ್ರೇಣಿಯ ಹುಲ್ಲುಗಾವಲನ್ನೇ ತಲಪಿದರೂ ಮಳೆ, ಜತೆಗೊಡುವ ಗಾಳಿಯ ಹೊಡೆತವನ್ನು ತಡೆದುಕೊಳ್ಳುವ ಸಿದ್ಧತೆ ನಮ್ಮಲ್ಲಿರಲಿಲ್ಲ. ಹಾಗಾಗಿ ಯೋಜನೆಯನ್ನು ಪರಿಷ್ಕರಿಸಿಕೊಂಡೆವು. ಕತ್ತಲೆಗೆ ಮುನ್ನ ಮರಳಿ ನಾಗರಿಕತೆಯನ್ನು ಸೇರಿಕೊಳ್ಳುವ ಹೊಳಹು ಹಾಕಿದೆವು. ಅದುವರೆಗಿನ ದಕ್ಷಿಣ-ಪಶ್ಚಿಮ ನಡೆಯನ್ನು ಕೈಬಿಟ್ಟು ಪೂರ್ಣ ಪೂರ್ವಮುಖಿಗಳಾದೆವು. ಇದರಿಂದ ನಾವು ಬಿಟ್ಟು ಬಂದ ಭಗವತಿ ಘಾಟಿ ದಾರಿಯನ್ನು ತುಸು ಮುಂದೆಲ್ಲೋ ಸೇರಿಕೊಳ್ಳುತ್ತೇವೆಂಬ ಆಶಯ ನಮ್ಮದು.
ಅಂತೂ ಸಂಜೆ ಸುಮಾರು ನಾಲ್ಕು ಗಂಟೆಗೆ ನಾವು ಕಾಡಿನಿಂದ ಹೊರಬಿದ್ದು ಹುಲ್ಲುಗಾವಲು ಸೇರಿಕೊಂಡೆವು. ಮತ್ತಲ್ಲಿ ಕೆಲವೇ ಮಿನಿಟುಗಳಲ್ಲಿ ಮನುಷ್ಯರೇ ಬಳಸಿದ ಸವಕಲು ಜಾಡೂ ಮುಂದುವರಿದು ಬಳಕೆಯಲ್ಲಿದ್ದ ಕಚ್ಚಾ ಮಾರ್ಗವೇ ಸಿಕ್ಕಾಗ ನಮಗೆ ಧೈರ್ಯ ಹೆಚ್ಚಿತು.
ದಾರಿಯ ಮೂಲ ಮತ್ತು ಲಕ್ಷ್ಯದ ಯಾವುದೇ ಮಾಹಿತಿ ನಮ್ಮಲ್ಲಿರಲಿಲ್ಲ. ಹಾಗಿರುವಾಗ ನಾವು ಅನುಸರಿಸಬೇಕಾದ ದಿಕ್ಕು ಯಾವುದು? ನಮ್ಮಲ್ಲಿದ್ದ ನಕ್ಷೆಯಾದರೋ ೧೯೦೮ನೇ ಇಸವಿಯದ್ದು, ಅಂದರೆ ಕುದುರೆಮುಖ ಗಣಿಗಾರಿಕಾ ಯೋಜನೆಗೂ ಹಿಂದಿನದು. ಅದರಲ್ಲಿ ಭಗವತಿ ಘಾಟಿ ಮಾರ್ಗದ ನಮೂದೇ ಇಲ್ಲದ ಮೇಲೆ ಈ ಕಚ್ಚಾಮಾರ್ಗವನ್ನು ನಿರೀಕ್ಷಿಸುವುದು ಅಸಾಧ್ಯ. ದಾರಿಗೆ ತಲಪಿಸಿದ ಅದೃಷ್ಟ ಏನೋ ಒಂದು ಆಶ್ರಯವನ್ನೂ ತಲಪಿಸೀತೆಂಬ ಕುರುಡು ನಂಬಿಕೆಯಲ್ಲೇ ತರ್ಕಿಸಿದೆವು. ಭಗವತಿ ಘಾಟಿ ದಾರಿ ಶೃಂಗಶ್ರೇಣಿಯನ್ನು ದಾಟುವವರೆಗೆ ನೇರ ಪೂರ್ವಮುಖಿ. ಅನಂತರ ಅಂದರೆ ಬಹುಶಃ `ದಕ-ಗಡಿ’ಯಿಂದ ಮುಂದೆ ಉತ್ತರ-ದಕ್ಷಿಣವಾಗಿ ದಿಶೆ ಬದಲಿಸಿ ಗಣಿನಗರಿಯತ್ತ ಓಡುತ್ತದೆ. ನಮಗೆ ಸಿಕ್ಕ ಕಚ್ಚಾದಾರಿ ಆ ಮುಖ್ಯದಾರಿಯ ರಚನೆಯ ಕಾಲದಲ್ಲಿ (ಅಂದು ಕೇವಲ ಮೂರು-ನಾಲ್ಕು ವರ್ಷಗಳ ಹಿಂದಿನ ಮಾತು) ಮಾಡಿಕೊಂಡದ್ದಿರಬಹುದು. ಹಾಗಿರುವಾಗ ನಾವು ಬಲಕ್ಕೆ ಹೊರಳುವುದು ಅಂದರೆ ಸಮೀಪದ ಗಣಿನಗರಿಯನ್ನೇ ಉದ್ದೇಶಿಸಿ ನಡೆಯುವುದಾಗಬಹುದೆಂದು ಅಂದಾಜಿಸಿ, ಅನುಸರಿಸಿದೆವು.
ಆಕಾಶ ಹನಿಯತೊಡಗಿತ್ತು. ದಾರಿ ದಟ್ಟ ಕಾಡು ಸೇರಿತು. ಬಯಲಿನಲ್ಲಿ ಜಲ್ಲಿ, ಬೆಣಚುಕಲ್ಲುಗಳು ಎರಚಾಡಿದಂತಿದ್ದುದಕ್ಕೆ ಹುಲ್ಲು ಹಬ್ಬಿರಲಿಲ್ಲ, ಬೇರೇನೂ ನಿಶಾನಿಗಳೂ ಸಿಕ್ಕಲಿಲ್ಲ. ಆದರೆ ಕಾಡು ತರಗೆಲೆ, ಕಸ ತುಂಬಿ ದಾರಿಯನ್ನು ಜೀರ್ಣಿಸಿಕೊಳ್ಳಲು ಹೊರಟಂತಿತ್ತು. ಆದರೆ ಆಗಿಂದಾಗ್ಗೆ ವಾಹನ ಓಡಾಟದ ಸಲ್ಲಕ್ಷಣಗಳು – ಕೆಸರು ನೀರಿನ ನೀರಿನ ತಗ್ಗು ಮತ್ತು ಕೆಸರಿನಲ್ಲೊತ್ತಿದ ಹೊಸ ಚಕ್ರಗುರುತುಗಳು ನಮಗೆ ಹೆಚ್ಚಿನ ಭರವಸೆಯನ್ನು ಕೊಟ್ಟವು. ಹುಲ್ಲುಗಾವಲಿನಲ್ಲಿ ವಿರಳವಾಗಿದ್ದ ಜಿಗಣೆ ಇಲ್ಲಿ ಹೆಚ್ಚಿದರೂ ನಮ್ಮ ನಡೆಗೆ ವೇಗ ಬಂದಿತ್ತು. ಪಶ್ಚಿಮಮುಖಿಯಾಗಿ ಸಾಗಿದ್ದ ದಾರಿ ಒಂದೆಡೆ ಕವಲಾಗಿತ್ತು. ನೇರ ಮುಂದುವರಿಕೆ ಕರಾವಳಿ ವಲಯಕ್ಕೇ ಇಳಿಮುಖವಾಗಿರುವುದು ಕಾಣುತ್ತಿತ್ತು. ಅದು ಸದ್ಯ ಬಳಕೆ ದೂರವಿರುವಂತೆಯೂ ಕಾಣಿಸಿತು. ಹೇಗೂ ನಾವು ಅಂದು ಕತ್ತಲೆಗೆ ಮುನ್ನ ಕರಾವಳಿ ವಲಯವನ್ನು ಮುಟ್ಟುವುದು ಅಸಾಧ್ಯ ಅನಿಸಿತು. ಇನ್ನೊಂದು ಕವಲು ಬಲಕ್ಕೆ ಪೂರ್ಣ ಹಿಮ್ಮುರಿ ತಿರುಗಿ ಏರುಮುಖಿಯಾಗಿತ್ತು ಮತ್ತು ಹೆಚ್ಚು ಬಳಸಿದಂತಿತ್ತು. ನಾವು ನಿರ್ಯೋಚನೆಯಿಂದ ಬಲ ಹೊರಳಿದೆವು. ಹತ್ತು ಹೆಜ್ಜೆಯಲ್ಲೇ ದಾರಿ ಮತ್ತೆ ತೆರೆದ ಹುಲ್ಲು ಮೈಗೇ ಬಂತು. ಅದ್ಯಾವುದೋ ಉನ್ನತ ಶಿಖರದ ಸಪುರ ಏಣನ್ನು ಹಾವಾಡುತ್ತ ತೀವ್ರ ಏರಿತ್ತು. ಅದರಲ್ಲೂ ಕೆಲವು ದಿಬ್ಬಗಳು ಅಸಾಮಾನ್ಯವೆನ್ನಿಸಿದ್ದಕ್ಕೋ ಎಂಬಂತೆ, ದಾರಿಯ ಎರಡೂ ಬದಿಗೆ ಎತ್ತೆತ್ತರದ ದರೆಯುಳಿಸಿ ದೊಡ್ಡ ಚರಂಡಿಯಂತೇ ಮಾಡಿದ್ದರು. ಹಿಂದಿನ ದಿನಗಳ ಮಳೆಗೆ ದಾರಿ ಕೊರಕಲು ಬಿದ್ದು, ಕೆಸರಿನ ರಾಶಿಯಲ್ಲಿ ನಮಗೆ ಬರಿಯ ನಡಿಗೆಯೂ ಬಲು ತ್ರಾಸದಾಯಕವೇ ಆಗಿತ್ತು. ಆದರೆ ಒಟ್ಟಾರೆ ಸುಮಾರು ಮೂರು ಕಿಮೀ ಚಾರಣದ ಕೊನೆಯೆಂಬಂತೆ (ಕವಲಿನಿಂದ ಸುಮಾರು ಒಂದು ಕಿಮೀ) ದಾರಿ ಒಂದು ಪುಟ್ಟ ಕಟ್ಟಡದ ಅಂಗಳ ಸೇರಿದಾಗ, ಅದರಲ್ಲೂ ಒಂದಿಬ್ಬರು ಜನರನ್ನು ಕಂಡಾಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ.
ಗಣಿನಗರಿ ಮಲ್ಲೇಶ್ವರ (- ಚಿಕ್ಕಮಗಳೂರು ಜಿಲ್ಲೆಯ ಒಂದು ಕುಗ್ರಾಮ; ಬೆಂಗಳೂರಿನ ಉಪನಗರವಲ್ಲ.) ಶಿಖರಶ್ರೇಣಿಯ ಹಿಮ್ಮೈಯ ತಗ್ಗಿನಲ್ಲಿದೆ. ಅಲ್ಲಿನ ಕಚ್ಚಾಮಾಲನ್ನು (ಸ್ಲರ್ರಿ ಅಥವಾ ಅದಿರು ಕೆಸರು) ಮಂಗಳೂರು ಬಂದರಕ್ಕೆ ನಿರಂತರ ಕೊಳವೆ ಸಾಲಿನಲ್ಲಿ ಕಳಿಸುವುದು ನಮಗೆ ತಿಳಿದಿತ್ತು. ನಮಗೆ ಸಿಕ್ಕ ಕಚ್ಚಾದಾರಿ ಮೂಲತಃ ಆ ಕೊಳವೆಸಾಲಿನ ಉಸ್ತುವಾರಿಗಾಗಿಯೇ ಗಣಿನಗರಿಯಿಂದ ಹೊರಟಿತ್ತಂತೆ. ನಾವು ಕಂಡ ಅದರ ಎಡಗವಲು, ಅಂದರೆ ಪಶ್ಚಿಮಮುಖಿಯಾದ ಇಳಿದಾರಿಯಂತೂ ಪೂರ್ಣ ಕೊಳವೆಸಾಲಿಗೇ ಮೀಸಲು. ಬಲಗವಲಿನ ಕೊನೆಯ ಕಟ್ಟಡ ಗಣಿನಗರಿಯ ನಿಸ್ತಂತು ಸಂಪರ್ಕಗಳ ಸಮರ್ಪಕತೆಗೆ ತುಂಬಾ ಅವಶ್ಯವಾದ ರಿಪೀಟರ್ ಸ್ಟೇಶನ್. ಕಟ್ಟಡದ ಹಿತ್ತಿಲಿನಲ್ಲೇ ತೊಡಗುವ ಶಿಲಾಮೈ, ಸುಮಾರು ಮುನ್ನೂರಡಿ ಎತ್ತರಕ್ಕೆ ಏರಿ, ಎರಡು ಮೂರು ಸೀಳಿನಲ್ಲೂ ಒಂದು ಶಿಖರವಾಗಿ ಶೋಭಿಸುತ್ತಿತ್ತು. ಅದೇ ಕುರಿಯಂಗಲ್ಲು.
ರಿಪೀಟರ್ ಸ್ಟೇಶನ್ನಿನ ಪುಟ್ಟ ಕಟ್ಟಡದೊಳಗೆ ನಿಸ್ತಂತು ವಿಭಾಗ ಸಣ್ಣದು. ಅದಕ್ಕೆ ನಿರಂತರ ವಿದ್ಯುತ್ ಪೂರೈಸುವ ಬ್ಯಾಟರಿ ಸಾಲು ಮತ್ತವನ್ನು ದಿನಕ್ಕೊಮ್ಮೆಯೋ ಎರಡು ಬಾರಿಯೋ ಗಂಟೆಗಟ್ಟಲೆ ಪುನರುಜ್ಜೀವನಗೊಳಿಸುವ ಡೀಸೆಲ್ ಚಾಲಿತ ವಿದ್ಯುಜ್ಜನಕ, ಅದಕ್ಕೆ ಬೇಕಾದ ಡೀಸೆಲ್ ಡ್ರಂ ಇತ್ಯಾದಿ ಉಳಿದಷ್ಟೂ ಜಾಗವನ್ನು ವ್ಯಾಪಿಸಿತ್ತು. ಇವನ್ನೆಲ್ಲ ಸರದಿಯಲ್ಲಿ ನೋಡಿಕೊಳ್ಳಲು ಇಬ್ಬರು ತಂತ್ರಜ್ಞರು ಅಲ್ಲಿ ಕಡ್ಡಾಯ. ವಾರದಲ್ಲಿ ಎರಡೋ ಮೂರೋ ಬಾರಿ ಬದಲಿ ನೌಕರರು, ಡೀಸೆಲ್, ನೌಕರರ ನಿತ್ಯೋಪಯೋಗೀ ಸಾಮಾನುಗಳನ್ನೆಲ್ಲ ಹೊತ್ತು ಜೀಪ್ ಬರುತ್ತಿತ್ತು. ಮತ್ತೆ ನಿತ್ಯ ಸಂಪರ್ಕ ಅಥವಾ ತುರ್ತು ಸಂದೇಶಗಳಿಗೆ ನಿಸ್ತಂತು ಸೌಕರ್ಯಕ್ಕೆ ಇವರೇ ಯಜಮಾನರು! ಅಲ್ಲೇ ಅಂಗಳದ ಮೂಲೆಯಲ್ಲೊಂದು ಜಿಂಕ್ ಶೀಟಿನ ಕೊಟ್ಟಿಗೆ ನಿಲ್ಲಿಸಿ ಈ ಇಬ್ಬರಿಗೆ ಅಡುಗೆ ಮುಂತಾದ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದರು. ಅವರು ನಮ್ಮ ವಿವರಗಳನ್ನು ತಿಳಿದ ಮೇಲೆ ಹಾರ್ದಿಕವಾಗಿ ಸ್ವಾಗತಿಸಿದರು. ಕತ್ತಲೆ ಬಹುಬೇಗನೆ ಮುತ್ತಿತು, ಮಳೆ ಸಾಕಷ್ಟು ಸುರಿದು ವಿರಮಿಸಿತು. ಹೊರಗೆ ಚಳಿ, ಮಂಜು ಏರುತ್ತಲೇ ಇತ್ತು. ಉಸ್ತುವಾರಿಯವರು ಸ್ಟೇಶನ್ನಿನ ಅಗತ್ಯ ಮತ್ತು ನಮ್ಮನುಕೂಲ ಸೇರಿಸಿ ಜನರೇಟರ್ ಚಾಲೂ ಮಾಡಿದರು. ಅದರ ಸದ್ದು ಮತ್ತು ವಾಸನೆ ನಮಗೆ ಹೊಂದಿಕೊಳ್ಳಲು ತುಸು ಕಷ್ಟಾವಾದರೂ ಉಳಿದಂತೆ ಭಾರೀ ಅನುಕೂಲವೇ ಆಯ್ತು. ಉತ್ತಮ ವಾತಾಯನಕ್ಕಾಗಿ ಕೋಣೆಯ ಕಿಟಕಿಗಳು ಮುಕ್ತವಿಟ್ಟು, ಮೇಲೆ ಫ್ಯಾನುಗಳು ತಿರುಗುತ್ತಿದ್ದರೂ ಕಟ್ಟಡದೊಳಗೆ ಹಿತವಾದ ಬೆಚ್ಚನೆ ವಾತಾವರಣ ಏರ್ಪಟ್ಟಿತ್ತು. ಕೊಟ್ಟಿಗೆಯಲ್ಲಿದ್ದ ಅವರ ಎರಡೂ ವಿದ್ಯುತ್ ಸ್ಟವ್ ನಮ್ಮ ಬಳಕೆಗೆ ಮುಕ್ತವಾಗಿತ್ತು. ಸಹಜವಾಗಿ ನಮ್ಮ ರಾತ್ರಿಯ ಅಡುಗೆ, ಬೆಳಗ್ಗಿನ ತಿನಿಸು ಪಾನೀಯಗಳೆಲ್ಲ ಹೆಚ್ಚು ರುಚಿಸಿದವು (ಇಲ್ಲವಾದರೆ ದಿನವಿಡೀ ಮೈ ಹುಡಿ ಮಾಡಿದ ಮೇಲೆ ಸೌದೆ ಸಂಗ್ರಹದ ಶ್ರಮ, ಬೆಂಕಿಯುರಿಸುವ ಕಷ್ಟ ಸಣ್ಣದಾಗುವುದಿಲ್ಲ). ಕೆಲವು ಬುದ್ಧಿವಂತರು ಉಳಿದ ಸಮಯದಲ್ಲಿ ಬಿಸಿನೀರು ಕಾಯಿಸಿ ಸ್ನಾನ ಮಾಡಿದ್ದೂ ಆಯ್ತು! (ಶೌಚಕ್ಕೆ ಮಾತ್ರ ಕಾಡು ನುಗ್ಗಿದ್ದೆವು.) ವಿದ್ಯುಜ್ಜನಕದ ಕೋಣೆಯ ಬಿಡು ನೆಲದಲ್ಲೆಲ್ಲ ನಮ್ಮ ಜಮಖಾನ ಹರಡಿಕೊಂಡು ಸುಖನಿದ್ರೆ ಮಾಡಿದೆವು. ಅಲ್ಲೇ ಯಂತ್ರಗಳಿಗೆ ತೊಡರದಂತೆ ಎಚ್ಚರವುಳಿಸಿಕೊಂಡು, ಅಡ್ಡಾದಿಡ್ಡಿ ಹಗ್ಗ ಕಟ್ಟಿ ನಮ್ಮ ಚಂಡಿ ಬಟ್ಟೆಗಳನ್ನೂ ಹರವಿದ್ದೆವು. ಬೆಳಗ್ಗೆದ್ದಾಗ ಅವು ಎಲ್ಲ ಬೆವರುವಾಸನೆ, ಮಣ್ಣಕಲೆಗಳ ಸಮೇತ ಗರಿಗರಿಯಾಗಿ ಒಣಗಿದ್ದು ದೊಡ್ಡ ಸಂಭ್ರಮದ ವಿಷಯವೇ ಆಗಿತ್ತು. ಬೆಳಿಗ್ಗೆ ಮಂಜು ಹರಿದ ಮೇಲೆ ಶಿಖರಕ್ಕೊಂದು ದೀರ್ಘ ಭೇಟಿ ಕೊಟ್ಟಿದ್ದೆವು. ಶಿಖರದ ಇನ್ನೊಂದು ಮಗ್ಗುಲಿನಲ್ಲಿ ನಾಲ್ಕೈದು ಕಡವೆಗಳು ನಿಧಾನಕ್ಕೆ ಮೇಯುತ್ತ ಬಯಲಾದದ್ದನ್ನು ನೋಡಿ ನಮಗೆ ಸಂತೋಷ ತಡೆಯಲಿಲ್ಲ. ಆದರೆ ಅಂದಿನ ಅಪ್ರಬುದ್ಧತೆಯಲ್ಲಿ ನಾವು ಬೊಬ್ಬೆ ಹಾಕಿ ಅವನ್ನು ಓಡಿಸಿದ್ದು ನೆನೆಯುವಾಗ ಇಂದು ನಾಚಿಕೆಯಾಗುತ್ತದೆ.
ನಕ್ಷೆಯಿಂದ ವಾಸ್ತವಕ್ಕೆ ಅದೆಷ್ಟು ದೊಡ್ಡ ಅಂತರ! ನಮ್ಮ ಮೂಲ ಯೋಜನೆಯ ಅಗಾಧತೆ, ಎದುರು ನಮ್ಮ ಸಿದ್ಧತೆ ಮತ್ತು ಬಿಡುವಿನ ಕೊರತೆಯನ್ನು ಸ್ಪಷ್ಟ ಮನಗಂಡಿದ್ದೆವು. ರಿಪೀಟರ್ ಸ್ಟೇಶನ್ನಿನವರು ಕರಾವಳಿಯೆಡೆಗಿನ ಕವಲು ಅನೂರ್ಜಿತ ಸ್ಥಿತಿಯಲ್ಲಿದೆ. ಹಲವೆಡೆ ದುರ್ಗಮವೇ ಇರಬಹುದೆಂದು ಸೂಚಿಸಿ, ನಾವು ಮುಂದುವರಿಯುವುದನ್ನು ಶಿಫಾರಸು ಮಾಡಲಿಲ್ಲ. ಹಾಗಾಗಿ ವಿಶೇಷ ವಿಷಾದವಿಲ್ಲದೆ, ಹಿಂದಿನ ದಿನ ಬಂದ ಕಚ್ಚಾದಾರಿಯನ್ನೇ ಪೂರ್ತಿ ಅನುಸರಿಸಿದೆವು. ಮುಖ್ಯ ದಾರಿಯನ್ನು ಗಣಿನಗರಿಗೂ ಹತ್ತು ಕಿಮೀ ದೂರದಲ್ಲೇ ಸಿಕ್ಕಿತು. ಅಲ್ಲಿಗೆ ಕಳಸದತ್ತಣಿಂದ ಬಂದ ಮಂಗಳೂರು ಬಸ್ ಹಿಡಿದು ಮನೆ ಸೇರಿಕೊಂಡೆವು.
* * * * *
ಕುದುರೆಮುಖ ಶಿಖರ ಸಂಬಂಧೀ ಆ ಕನಸು ಮತ್ತೆಂದೂ ನನಸಾಗಲೇ ಇಲ್ಲ. ಆದರೆ ಆಸುಪಾಸಿನ ಬಿಡಿ ಜಾಲಾಟಗಳು ನನಗೆಂದೂ ಪರಕೀಯವಾದದ್ದಿಲ್ಲ, ಮುಗಿಯಿತು ಎಂದನ್ನಿಸಿದ್ದೂ ಇಲ್ಲ. ಇಲ್ಲೇ ನೀವು, ಗಡಿಬಿಡಿಯಲ್ಲಿ ಗಂಗಡಿ ಕಲ್ಲು, ವಾಲಿಕುಂಜದ ವಿವಿಧ ಮುಖ (ಮೂರು ಕಂತಿನಲ್ಲಿ), ಪಾಂಡರಮಕ್ಕಿ ಜಾಡಿನಲ್ಲಿ ಭಗವತಿ, ಕರಡಿಬೆಟ್ಟ ಮುಂತಾದ ದೀರ್ಘ ಲೇಖನಗಳನ್ನು ಅವಶ್ಯ ನೋಡಬಹುದು. ಬಿಡಿ ನೆನಪುಗಳಲ್ಲಿ ಗುರಿಗೆ ಜಾಡು, ಮರುವಸತಿಯ ವೀಕ್ಷಣೆ, ಲಖ್ಯಾ ಅಣೆಕಟ್ಟಿನ ತುರ್ತು ಪರಿಸ್ಥಿತಿ, ಅದಿರುಪಾಕದ ಗುಹೆಯೊಳಗೆ ನಡೆದದ್ದು, ಅದಿರುಪಾಕದ ಕೊಳವೆ ಸಾಲು ಒಡೆದಾಗ ತನಿಖೆ ನಡೆಸಿದ್ದು, ವರಾಹತೀರ್ಥದ ಬೆಳವಣಿಗೆ ತಡೆದದ್ದು… ನೆನಪುಗಳ ಸರಮಾಲೆಯಲ್ಲಿ ಒಂದನ್ನಷ್ಟೇ ವಿಸ್ತರಿಸಿ ವಾರದ ಕಂತಿನಿಂದ ವಿರಮಿಸುತ್ತೇನೆ.
ಆ ವರ್ಷ (೧೯೯೮) ಯಾರೋ ದೊಡ್ಡ ಸುದ್ದಿ ಮಾಡಿದರು – `ಕುದುರೆಮುಖವಾಗಿದೆ ನೀಲಗಿರಿ! ಗಣಿನಗರಿಯ ಸುತ್ತಣ ಬೆಟ್ಟಗಳ ಮೇಲೆ ಕುರುಂಜಿ ಸಂಭ್ರಮ.’ ಮೂರು ದಿನ ಬಿಡುವು ಮಾಡಿಕೊಂಡು ನಾವು ಮೂರು ಬೈಕೇರಿ ಹೋಗಿ, ಗಣಿನಗರಿಯ ಅತಿಥಿಗೃಹ/ ಹೋಟೆಲ್ಲಿನಲ್ಲಿ ಠಿಕಾಣಿ ಹೂಡಿದೆವು. ಸುತ್ತಣ ಕಾರ್ಲೆ ಮತ್ತಿತರ ಬೆಟ್ಟಗಳನ್ನು ಸುತ್ತಿದ್ದೆವು. ಹಕ್ಕಿ, ಹಸಿರು, ಹೂ ವಿಹಾರಕ್ಕೇನೂ ಕೊರತೆಯಾಗಲಿಲ್ಲ. ಲಖ್ಯಾ ಹಿನ್ನೀರಿನ ಮೇಲೆ ಹಕ್ಕಿನೋಟ, ಸಮೀಪದ ಮೇರುತಿ ಬೆಟ್ಟಕ್ಕೊಂದು ಭೇಟಿಯೂ ಅಂದು ಪಾಲುಪಡೆದಿದ್ದುವು.
ಬಹುಮುಖ್ಯವಾಗಿ ಅಂದು ಲಖ್ಯಾ ಅಣೆಕಟ್ಟಿನ ಹಿಮ್ಮೂಲೆಗೆ ನಮಗೆ ಬೈಕೋಡಿಸುವ ಅನುಕೂಲ ಒದಗಿತ್ತು. ಲಖ್ಯಾ ಅಣೆಕಟ್ಟನ್ನು ನೋಡಲು ಬರುವ ಸಾಮಾನ್ಯ ಪ್ರವಾಸಿಗಳಿಗೆ ಎಟುಕದ ದೂರದ ಕೊನೆಯಿದು. ಅಲ್ಲಿ ಅದಿರು ಅರೆಯುವ ಕಾರ್ಯಾಗಾರದಿಂದ ನಿರುಪಯುಕ್ತ ಕೆಸರನ್ನು ಹೊತ್ತು ತರುವ ದಪ್ಪ ಕೊಳವೆ ಸಾಲು ಕೊನೆಗಾಣುತ್ತದೆ. ಕೆಸರು ಕಡುಗಂದು ಬಣ್ಣದ ಪಾಯಸದಂತೆ ಆ ಸರೋವರಕ್ಕೆ ಬಿದ್ದು ಉಂಟುಮಾಡುವ ತಲ್ಲಣ, ಮೇಲ್ಮೈಯಲ್ಲಿ ನಿರಂತರ ವಿಸ್ತರಿಸುವ, ವರ್ಣದಲ್ಲಿ ತೆಳುಗೊಳ್ಳುತ್ತ ಸಾಗುವ ವೃತ್ತಾಕಾರದ ಅಲೆಗಳನ್ನೆಲ್ಲ ನಾವು ಊಹಿಸಿಕೊಂಡೆವಷ್ಟೆ. ಆದರೆ ಅದರಿಂದ ಅನತಿದೂರದಲ್ಲೊಂದು ತೇಲುವ ಪುಟ್ಟ ಪಂಪ್ ಕೊಟ್ಟಿಗೆ ಇತ್ತು – ನಮಗೆ ಹೊಸದು. ಅದನ್ನು ಸರೋವರದಲ್ಲಿ ಕಾಲಕ್ಕೆ ತಕ್ಕಂತೆ ತಿಳಿ ನೀರಿನ ವಲಯಕ್ಕೆ ತೇಲಿಸುತ್ತಾರಂತೆ. ಅಲ್ಲಿಂದ ಅದು ನೀರನ್ನು ಮತ್ತೆ ಗಣಿಯ ಕಲ್ಲು ಅರೆಯುವ ಯಂತ್ರಗಳಿಗೆ ರವಾನಿಸುತಿತ್ತು.
ಗಣಿ ಸಂಸ್ಥೆ ಕೆಸರನ್ನು ನದಿಗೆ ಬಿಡದ ತನ್ನ ಪರಿಸರಪ್ರೇಮವನ್ನು ಜಾಹೀರುಪಡಿಸಿಕೊಂಡಷ್ಟೇ ದೊಡ್ಡ ಗಂಟಲಿನಲ್ಲಿ ಈ ಕ್ರಮವನ್ನೂ ಹೇಳಿಕೊಂಡು, ತನ್ನ ಜಲ ಮಿತವ್ಯಯದ ಬಗ್ಗೆಯೂ ಕೊಚ್ಚಿಕೊಳ್ಳುತ್ತಿತ್ತು. ನ್ಯಾಯಾಲಯದಲ್ಲಿ ಸಂಸ್ಥೆಯ ಪರಿಸರಪ್ರೇಮವನ್ನು ಒರೆಗಲ್ಲಿಗೆ ಉಜ್ಜಿದ್ದಕ್ಕೇ ಹಿತ್ತಾಳೆ ಬಯಲಾಯ್ತು; ಉಚ್ಛಾಟನೆ ಕ್ರಮಬದ್ಧವಾಯ್ತು. ಜಲಮರುಬಳಕೆಯ ಕಥೆಯೂ ಅಷ್ಟೇ ನಿಜ. ಬಹಳ ಸಣ್ಣ ಅಂಶ ಮಾತ್ರ ಸತ್ಯ, ಪ್ರಚಾರ ದೊಡ್ಡದು! ಮೂಲದಲ್ಲಿ ಲಖ್ಯಾ ಹಿನ್ನೆಲೆಯ ಅಷ್ಟೂ ಜಲಾನಯನ ಪ್ರದೇಶದ ಮಳೆನೀರು, ಒರತೆಗಳನ್ನೆಲ್ಲ ಖಾಯಂ ಸಮಾಧಿ ಮಾಡಿಯೇ ಅಣೆಕಟ್ಟು ಎದ್ದಿತ್ತು. ಅಣೆಕಟ್ಟಿನ ಮುಖ್ಯ ಉದ್ದೇಶವೂ ನೀರ ಸಂಗ್ರಹವಲ್ಲ ಎನ್ನುವುದನ್ನು ಮರೆಯುವಂತಿಲ್ಲ. (ಕೊನೆಗಾಲದಲ್ಲಿ ಗಣಿ ಮುಚ್ಚುವುದನ್ನು ತಡೆಯಲು ವಕ್ರಮಾರ್ಗಗಳನ್ನು ಶೋಧಿಸುವ ತರಾತುರಿಯಲ್ಲಿ ಕಂಪೆನಿ ಲಖ್ಯಾ ಜಲನಿಧಿಯಿಂದ ಮಂಗಳೂರಿಗೆ ನೀರು ಕೊಡುವ ಹುಸಿ-ದಾನಶೂರತ್ವ ಮೆರೆದದ್ದನ್ನು ನನ್ನ ಹಳೆ ಬರಹ ಲಕ್ಯಾದಲ್ಲಿ ಮೃಗಜಲ ಓದಿನೋಡಿ) ಈ ಕಟ್ಟೆಯಷ್ಟೇ ಇಲ್ಲಿನ ನೀರಿನ ಮರುಬಳಕೆ ಕಂಪೆನಿಗೆ ಅನಿವಾರ್ಯವೇ ಇತ್ತು, ನೇರ ಉಳಿತಾಯದ ಕ್ರಮವೇ ಆಗಿತ್ತು. ಇಲ್ಲವಾದರೆ ಅದಿರು ಅರೆಯಲು ನೀರಿಗಾಗಿ ಗಣಿನಗರಿ ತನ್ನ ಗೃಹೋಪಯೋಗೀ ನೀರಿನ ವ್ಯವಸ್ಥೆಯನ್ನು ಇಮ್ಮಡಿಗೊಳಿಸಲೇ ಬೇಕಾಗುತ್ತಿತ್ತು ಎನ್ನುವುದನ್ನು ಅವಶ್ಯ ಗಮನಿಸಬೇಕು.
(ಮುಂದುವರಿಯಲಿದೆ)
[ವಿ.ಸೂ: ನೆನಪಿನ ಮೂಟೆಗಳಲ್ಲಿ ಕೆಲವನ್ನಿನ್ನು ಕುದುರೆಮುಖ ಶಿಖರದ ಇಳಿದಾರಿಯಲ್ಲಿ ಇಳಿಸುತ್ತೇನೆ. ಮನೆ ಸೇರಲು ಅವಸರ ಮಾಡಬೇಡಿ.]
“ಅನಿರೀಕ್ಷಿತವಾಗಿ ಬದಲಾಗಬಹುದಾದ ವಾತಾವರಣಕ್ಕೆ ನಮ್ಮಲ್ಲಿದ್ದದ್ದು ಒಂದೇ ತಯಾರಿ – ಭಂಡತನ”
ಭಂಡತನಕ್ಕೆ ನಮ್ಮದೇನೂ ಕಮ್ಮಿಯಿಲ್ಲ. ನನ್ನ ಮೊದಲ ‘ಕುಮಾರಪರ್ವತ ವಿಜಯ’ದ ಹುರುಪು ಹಾಗೂ ಇನ್ನೊಮ್ಮೆ ಎರಬೇಕೆನ್ನುವ ತುಡಿತದಲ್ಲಿ, ನನ್ನ ಸೋದರಮಾವನ ಮಕ್ಕಳಿಬ್ಬರನ್ನು ಗಾಳಿಹಾಕಿ ಹೊರಡಿಸಿದ್ದೆ (ಅವರ ಸಾಮರ್ಥ್ಯ ಅಂದಾಜಿಸದೆ). ದೊಡ್ಡವ ಹತ್ತೊಂಬತ್ತರ ಉತ್ಸಾಹಿ, ಸಣ್ಣವ ಹದಿನೈದರ ಪೋರ. ಇಬ್ಬರದ್ದೂ ಚಾರನಾನುಭವ ಶೂನ್ಯ. ಬೆಳಗ್ಗೆ ಅರ್ಧಂಬರ್ಧ ತಿ೦ದು ಬೇಗ ಹೊರಟವರು ಸುಬ್ರಹ್ಮಣ್ಯದಲ್ಲಿ ೧೨ ಘಂಟೆಗೆ ಮಧ್ಯಾಹ್ನ ಹೊಟ್ಟೆ ಗಟ್ಟಿಮಾಡಿ ಸಂಜೆಗೆ ಭಟ್ರಮನೆ ತಲಪುವ ಪ್ಲಾನು. ದೊಡ್ದವನಂತೂ ಹೊಟ್ಟೆ ಸ್ವಲ್ಪ ಜಾಸ್ತಿಯೇ ಗಟ್ಟಿಮಾಡಿಕೊಂಡಿದ್ದ. ಕಾಡಿನಲ್ಲಿ ಏರಲು ಆರಂಭಿಸಿ ಅರ್ಧ ಏರುವಷ್ಟರಲ್ಲಿ ಹೊಟ್ಟೆ ಜಾಸ್ತಿ ಗಟ್ಟಿ ಮಾಡಿದ ಪ್ರಭಾವವೋ ಏನೋ, ಮುಂದೆ ಎರಲಾರ 🙂 ನನಗೋ, ಈ ಮಕ್ಕಳನ್ನು ಕರೆತಂದು ಅತ್ತ ಏರುವುದೋ ಇತ್ತ ವಾಪಾಸು ಇಳಿಯುವುದೋ ಎಂಬ ಸಂದಿಗ್ಧ(ವಾಪಾಸಾಗಲು ಮನಸಿಲ್ಲ ಆದರೆ ಮೇಲೇರಲು ಆಗುತ್ತಿಲ್ಲ). ಅಂತೂ ಕೊನೆಗೆ ಸಂಜೆ ೫ ಕ್ಕೆ ಭಟ್ರಮನೆ ಸೇರಿ ರಾತ್ರಿ ಅಲ್ಲಿಯೇ ತಂಗಿದೆವು. ಮರುದಿನ ಬೆಳಗ್ಗೆ ೭ಕ್ಕೆ ಆರಂಭಿಸಿ ಶೇಷ ಕುಮಾರಾದಿ ಚಾರಣಿಸಿ, ಮಧಾಹ್ನ ೧ ಕ್ಕೆ ಇಳಿಯತೊಡಗಿ ೪ಕ್ಕೆ ಭಟ್ರ ಊಟ ಉಂಡು, ಕತ್ತಲಾಗುವ ಮುಂಚೆ ಸುಬ್ರಹ್ಮಣ್ಯ ಸೇರಿ ಪುತ್ತೂರಿಗೆ ವಾಪಾಸಾಗುವ ದೂರಾಲೋಚನೆ. ಅರ್ಧ ದಾರಿಯಲ್ಲೇ ಕಾಡಿನೊಳಗೆ ಕತ್ತಲಾದಾಗ ನನ್ನ ಗ್ರಹಚಾರಕ್ಕೆ ಟಾರ್ಚು ಕೈಕೊಟ್ಟು, ಮೊಬೈಲಿನ ಮಿಣಕು ಟಾರ್ಚಿನ ಸಹಾಯದಿಂದ ಸುಬ್ರಹ್ಮಣ್ಯ ಬಸ್ಸು ನಿಲ್ದಾಣಕ್ಕೆ ಬಂದಾಗ ತಿಳಿದುಬಂದದ್ದೇನೆಂದರೆ ಪುತ್ತೂರಿಗೆ ಮರುದಿನದ ಬಸ್ಸೇ ಗತಿ. ದುಬಾರಿ ವಸತಿಗೃಹದಲ್ಲಿ ಉಳಿಯಲೊಲ್ಲದ ನಾವು ರೈಲು ನಿಲ್ದಾಣದಲ್ಲಿ ರಾತ್ರಿ ಕಳೆದು ಮರುದಿನದ ಬೆಳಗ್ಗಿನ ೫.೫೦ ರ ಕಾರವಾರ ರೈಲಿನಲ್ಲಿ ಪುತ್ತೂರು ಸೇರಿದೆವು.
ಅದ್ಭುತ ಸರ್!