ಶ್ರೀ ಇಡಗುಂಜಿ ಮೇಳದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಟ್ಯೋತ್ಸವ ಇದೇ ಫೆಬ್ರುವರಿ ೬ರಿಂದ ಹತ್ತರವರೆಗೆ ಮೇಳದ್ದೇ ಸ್ವಂತ ನೆಲೆ – ಯಕ್ಷಾಂಗಣ, ಗುಣವಂತೆಯಲ್ಲಿ ನಡೆಯಿತು. ಅದರ ಎರಡನೇ ದಿನದ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಪ್ರೇಕ್ಷಕರಾಗುವ ಬಯಕೆಯಲ್ಲಿ ಗೆಳೆಯ ಡಾ| ಮಹಾಲಿಂಗ ಭಟ್ಟರ ಜತೆ ನಾನು ಮತ್ತು ದೇವಕಿ ಏಳರ ಬೆಳಗ್ಗಿನ ಆರು ಗಂಟೆಯ ರೈಲೇರಿದೆವು. ಉತ್ತರ ಕನ್ನಡ ಜಿಲ್ಲೆಯ ಮಂಕಿ ನಿಲ್ದಾಣದಲ್ಲಿಳಿದು, ಅರ್ಧ ಕಿಮೀ ಅಂತರದ ಹೆದ್ದಾರಿಗೆ ನಡೆದು, ಸರ್ವಿಸ್ ವ್ಯಾನಿನ ಮಂದೆಯಲ್ಲಿ ಒಂದಾಗಿ, ಸುಮಾರು ನಾಲ್ಕೈದು ಕಿಮೀ ಅಂತರದ ಗುಣವಂತೆಯ ಸಭಾಂಗಣ ಸೇರುವಾಗ ಗಂಟೆ ಹನ್ನೊಂದು ಕಳೆದಿತ್ತು.

ದಿನದ ಮೊದಲ ಗೋಷ್ಠಿ – ಅಪೂರ್ವ ಪೂರ್ವ ಸ್ಮರಣದ ಕೊನೆಯ ಕಲಾಪವಾಗಿ ಹೊಸ್ತೋಟ ಮಂಜುನಾಥ ಭಾಗವತರ ಅಧ್ಯಕ್ಷೀಯ ಭಾಷಣ ನಡೆದಿತ್ತು. ಎಸ್.ಎನ್. ಪಂಜಾಜೆಯವರು ಉದ್ಘಾಟಿಸಿದ ಆ ಗೋಷ್ಠಿಯಲ್ಲಿ, ಉತ್ಸವದ ಪೂರ್ಣ ಸಮರ್ಪಣೆಗೆ ಪಾತ್ರರಾದ ಮಾಯಾರಾವ್ (- ಬಿ.ಎನ್. ಮನೋರಮಾ) ಅಲ್ಲದೆ, ಯು. ಆರ್. ಅನಂತಮೂರ್ತಿ (- ಕೆ.ವಿ ಅಕ್ಷರರ ಲಿಖಿತ ಭಾಷಣ, ಓದಿದವರು ಲಕ್ಷ್ಮೀ ನಾರಾಯಣ ಕಾಶಿ), ಮೂಡ್ಕಣಿ ನಾರಾಯಣ ಹೆಗಡೆ (- ನಾರಾಯಣ ಭಟ್ಟ ಸಂತೆಗುಳಿ) ಹಾರಾಡಿ ರಾಮ ಗಾಣಿಗರ (- ಕೆ.ಎಂ. ಉಡುಪ) ಸಾರ್ಥಕ ಸ್ಮರಣೆಯಾದಂತಿತ್ತು.

ನಾವು ಉದ್ದೇಶಿಸಿ ಬಂದ ಮೊದಲ ರಂಗಕಲಾಪ – ಕೂಡಿಯಾಟ್ಟಂ, ಗೋಷ್ಠಿಯನ್ನು ಹಿಂಬಾಲಿಸಿದಂತೆ ಅದೇ ಒಳಾಂಗಣದಲ್ಲಿ (ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ) ನಡೆಯಿತು. ಕೇರಳದಿಂದ ಬಂದಿದ್ದ ಕಲಾಮಂಡಲಂ ಸಂಗೀತ ಚಾಕ್ಯಾರ, ಯುಕ್ತ ಹಿಮ್ಮೇಳದೊಂದಿಗೆ ಏಕವ್ಯಕ್ತಿ ಪ್ರದರ್ಶನವನ್ನು (ಈ ಪ್ರಸಂಗದಲ್ಲಿ ಮೂರು – ರಾವಣ, ಶಿವ ಮತ್ತು ಪಾರ್ವತಿ ಪಾತ್ರಾಭಿನಯ ಇತ್ತು) ಸಮರ್ಥವಾಗಿ ನಡೆಸಿಕೊಟ್ಟರು. ಪ್ರಸಂಗ – ಕೈಲಾಸೋದ್ಧರಣಂ (ರಾವಣ ಗರ್ವಭಂಗ); ಕೈಲಾಸ ಎತ್ತುವ ಸರಳ ಭಾಗ ಮಾತ್ರ. ಅದರ ಕಲಾಪ ವಿವರಗಳನ್ನು ಸಂಘಟಕರು ಮೊದಲೇ ಕನ್ನಡದಲ್ಲಿ ಹೇಳಿದ್ದುದರಿಂದ ನಾಟ್ಯಭಾಷೆಯ ಅಶಿಕ್ಷಿತರಿಗೂ ಆಂಗಿಕಗಳನ್ನು ಅರ್ಥೈಸಿಕೊಂಡು ಸಂತೋಷಿಸುವುದು ಸಾಧ್ಯವಾಯ್ತು.

ಕೂಡಿಯಾಟ್ಟಂನ ಹಿಮ್ಮೇಳದಲ್ಲಿ ಶ್ರುತಿ ವಾದ್ಯವಿಲ್ಲ, ಸನ್ನಿವೇಶಕ್ಕೆ ಪೂರಕವಾದ ಮಾಧುರ್ಯ ಗುಂಜಿಸುವ ಧ್ವನಿಗಳೇ ಇಲ್ಲ. ಇದರ ಗಾಯನ ಹಾಗೂ ಮಾತಿಲ್ಲದ ಕಲಾಪ ನನ್ನ ಯಕ್ಷ-ಪ್ರೇಕ್ಷಣೆಯ ಸಂಸ್ಕಾರಕ್ಕೆ ಕೂಡಿಯಾಟ್ಟಂನ ಬಹಳ ದೊಡ್ಡ ಕೊರತೆಯಾಗಿಯೇ ತೋರಿತು. ಇವರ ಮುಖ್ಯ ತಾಳವಾದ್ಯ – ಮಿಝವು, ಪುಟ್ಟ ಕಡಾಯಕ್ಕೆ ಮುಚ್ಚಿಗೆ ಹಾಕಿದಂತಿರುವ ವಾದ್ಯ. ಪ್ರದರ್ಶನದ ಬಹುಭಾಗದಲ್ಲಿ ಜೋಡಿ ಮಿಝವುಗಳ ಸದ್ದು, ನಾದರಹಿತ ಚಂಡೆಯಂತೆ ಅಥವಾ ಭರತನಾಟ್ಯ ಶಿಕ್ಷಣದಲ್ಲಿ ಗುರುಗಳು ಕುಟ್ಟುವ ಕೊರಡಿನಂತೆಯೇ ಕರ್ಣ ಕಠೋರವಾಗಿತ್ತು.

ನಮ್ಮ ಚಂಡೆಯ ಜತೆಗಿನ ಮದ್ದಳೆಯಂತೆ, ಇಲ್ಲೊಂದು ಪುಟ್ಟ ಡೋಲು ಇದೆ. ಕೋಲಿನಲ್ಲಿ ನುಡಿಸುವ ಅದು ಪರಿಣಾಮದಲ್ಲಿ ಮದ್ದಳೆಯ ಸುಖದ ಹತ್ತಿರವೂ ಸುಳಿಯುವುದಿಲ್ಲ. ಮಿಝವನ್ನು ಪೂರ್ಣ ಹಸ್ತದಲ್ಲಿ ಅಕ್ಷರಶಃ ಬಡಿಯುತ್ತಾರೆ. ಚಂಡೆ, ಮದ್ದಳೆ, ಮೃದಂಗಾದಿ ವಾದ್ಯಗಳಂತೆ ಬಿಡಿನುಡಿತಗಳ ಅಥವಾ ಬೆರಳುಗಳ ಚಮತ್ಕಾರ ಇದರ ವಾದನದಲ್ಲಿಲ್ಲ. ಕೇವಲ ಲಯವಿನ್ಯಾಸ ಹಾಗೂ ಧ್ವನಿಯ ಏರಿಳಿತದಲ್ಲಷ್ಟೇ ನಡೆಯುವ ಭಾವಪೋಷಣೆ ನನಗಂತೂ ರಸವೈವಿಧ್ಯಕ್ಕೆ ಕುತ್ತಾಗಿಯೇ ಕಾಣಿಸಿತು.

ವೇಷ ಕಥಕ್ಕಳಿಯದ್ದನ್ನು ಹೋಲುತ್ತದೆ. ಪಾತ್ರದ ಉಡುಗೆತೊಡುಗೆ ಮತ್ತು ಬಣ್ಣಗಾರಿಕೆಗಳಲ್ಲಿ ಮುಂಭಾಗದಿಂದ ಕಾಣುವ ವೈಭವ, ಬೆನ್ನು ಹಾಕಿದಾಗ ನೀರಸವಾಗುತ್ತದೆ. ಒಂದು ನಿಟ್ಟಿನಲ್ಲಿ ಹಾಸ್ಯಾಸ್ಪದವಾಗಿಯೇ ಕಾಣುತ್ತಿತ್ತು. ಇವೆಲ್ಲಕ್ಕೆ ಹೊರತಾಗಿ ನಿಂತದ್ದು – ಒಟ್ಟು ತಂಡದ ಶಿಸ್ತು, ನಿರ್ವಹಣಾ ಗಾಂಭೀರ್ಯ ಮತ್ತು ವೇಷಧಾರೀ ಕಲಾವಿದ. ಅತಿ ವಿಳಂಬ ಗತಿಯಲ್ಲಿ ಮತ್ತು ಬಹಳ ನವಿರಾಗಿ ಸಂಗೀತ ಚಾಕ್ಯಾರ್ ಕೊಟ್ಟ ಅಭಿನಯ ಅದ್ವಿತೀಯ. ಆದರೂ ಕೂಡಿಯಾಟ್ಟಂ ನೋಡುವ ಇನ್ನೊಂದು ಅವಕಾಶವನ್ನು ನಾನು ಬಯಸದಷ್ಟು ಶಕ್ತವಾಗಿದೆ ನಮ್ಮ (ತಿಟ್ಟುಗಳ ಬೇಧವಿಲ್ಲದೆ) ಯಕ್ಷಗಾನ ಎಂದು ಇಲ್ಲೇ ಹೇಳುವಲ್ಲಿ ನನಗೆ ಯಾವ ಸಂಕೋಚವೂ ಇಲ್ಲ.

ನಾಟ್ಯೋತ್ಸವದ ಅಪರಾಹ್ನದ ಕಲಾಪಕ್ಕೆ ಸುಮಾರು ಎರಡು ಗಂಟೆಗಳ ಬಿಡುವಿತ್ತು. ಅದನ್ನು ಸದುಪಯೋಗಪಡಿಸುವಂತೆ ನಾವೊಂದು ಬಾಡಿಗೆ ಕಾರು ಹಿಡಿದು, ಕೆರೆಮನೆ ಮೇಳದ ಆರಾಧ್ಯ ದೈವವಾದ ಇಡಗುಂಜಿ ಮಹಾಗಣಪತಿಯ ಕ್ಷೇತ್ರಕ್ಕೆ (ಸುಮಾರು ಆರು ಕಿಮೀ ಅಂತರದಲ್ಲಿದೆ) ಹೋಗಿ ಬಂದೆವು. ಕ್ಷೇತ್ರದ ಭಕ್ತಿಯ ವಾಣಿಜ್ಯೀಕರಣ, ಅರ್ಚಕರ ಗುಂಪುಗಳ ಜಟಾಪಟಿಯಲ್ಲಿ (ನಡುವೆ ಕೆಲವು ದಿನಗಳು ದೇವರಿಗೆ ಅಕ್ಷರಶಃ ಪೂಜೆಯೇ ಇರಲಿಲ್ಲವೆಂದು ನಮ್ಮ ವ್ಯಾನಿನ ಚಾಲಕ ನಗುತ್ತಿದ್ದ) ಲೋಕಾಂತರವಾದದ್ದು ನಮಗೆ ತಿಳಿದೇ ಇತ್ತು. ಅನಂತರ ಬೆಳೆದ ನ್ಯಾಯಾಲಯದ ಜಿಡುಕುಗಳೆಲ್ಲ, ಇಂದಿನ ಇತರ ಗುರು ಮತ್ತು ಗುರುಮಂದಿರಗಳ ರೋಚಕ ಕಥೆಗಳೆದುರು ತೀರಾ ನೀರಸ ಬಿಡಿ. ಅಂದು ಸಂಕಷ್ಟ ಚತುರ್ಥಿಯ ದಿನ. ಆದರೆ `ಪುಣ್ಯಕ್ಕೆ’ ನಾವು ಮೂವರೂ ದೇವ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದವರಾದ್ದರಿಂದ ಕ್ರಮವತ್ತಾದ ದರ್ಶನ, ಕನಿಷ್ಠ ಆರತಿ, ತೀರ್ಥಗಳ ಸರದಿಗೂ ಸಿಕ್ಕಿಬೀಳಲಿಲ್ಲ. ಹಣಕೊಟ್ಟು ಪಡೆಯಬಹುದಾದ ತಿನ್ನುವ ಪ್ರಸಾದ (ಪಂಚಕಜ್ಜಾಯ) ಸಂಗ್ರಹವನ್ನಷ್ಟೇ ಮಾಡಿ ಮರಳಿದೆವು. ಇಲ್ಲವಾದರೆ ವ್ಯಾನಿನವ ಉದಾರವಾಗಿ ಕೊಟ್ಟ ಅರ್ಧ ಗಂಟೆಯ ವಿರಾಮ ಸಾಕಾಗುತ್ತಿರಲಿಲ್ಲ!

ದಿನದ ಮೂರನೆಯ ಬೈಠಕ್ಕು – ಸಂಮಾನ, ಐದು ಗಂಟೆಯ ಸುಮಾರಿಗೆ ಬಯಲು ರಂಗಮಂದಿರದಲ್ಲಿ ತೊಡಗಿತು. ಶತಮಾನಕ್ಕೂ ಮಿಕ್ಕ ಇತಿಹಾಸವಿರುವ ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸಾಂಸ್ಥಿಕ ಸಂಮಾನಕ್ಕೆ ಗುರುತಿಸಿದ್ದರು. ಉಳಿದಂತೆ ಸುಗಮ ಸಂಗೀತದಲ್ಲಿ ಹೆಸರಾಂತ ಹಿರಿಯ ಕಲಾವಿದ ರಾಘಣ್ಣ ಗರ್ತಿಕೆರೆ, (ಇವರು ಸಮ್ಮಾನಕ್ಕೆ ಪ್ರತಿಕ್ರಿಯೆಯನ್ನು ಹಾಡಿನ ಮೂಲಕವೇ ಕೊಟ್ಟದ್ದನ್ನು ಹೆಸರಿನ ಮೇಲೆ ಚಿಟಿಕೆ ಹೊಡೆದು ಕೇಳಬಹುದು)

ಸಂಗೀತ ಗುರುಗಳಾದ ಎಸ್.ಎಂ. ಭಟ್ಟ್ ಕಟ್ಟಿಗೆ, ಹಿರಿಯ ಹಿಂದೂಸ್ಥಾನೀ ಗಾಯನಪಟು ಜಿ. ಆರ್. ಭಟ್ ಬಾಳೆಗದ್ದೆ ಮತ್ತು ಉತ್ತಮ ಸಂಘಟಕನ ನೆಲೆಯಲ್ಲಿ ಹಿರಿಯ ಪತ್ರಕರ್ತ ಜೀಯು ಭಟ್ಟ ಹೊನ್ನಾವರರೂ ಸಂಮಾನ ಪಂಚಕದಲ್ಲಿದ್ದರು. ನಾಟ್ಯೋತ್ಸವದ ಗಹನತೆಗೋ ಪ್ರಾದೇಶಿಕ ಅನಿವಾರ್ಯತೆಗೋ ಮುಖ್ಯ ಅತಿಥಿಗಳ ಪಟ್ಟಿಯಲ್ಲೂ ಏಳು ಮಂದಿಯಿದ್ದರು. ಅಧ್ಯಕ್ಷತೆಯನ್ನು ಮೈಸೂರಿನ ಜಿ.ಎಸ್.ಭಟ್ಟರು ವಹಿಸಿದ್ದರು.

ದಿನದ ಕೊನೆಯ ಕಲಾಪ – ಸಾಂಸ್ಕೃತಿಕ ಪ್ರದರ್ಶನ, ಇದರಲ್ಲಿ ಎರಡು ಭಾಗಗಳಿದ್ದುವು. ಮೊದಲನೆಯದ್ದನ್ನು ಬೆಂಗಳೂರಿನ ಅನನ್ಯ ಸಂಸ್ಥೆಯ ರಾಘವೇಂದ್ರರು ಸಂಘಟಿಸಿ, ಪ್ರಸ್ತುತಪಡಿಸಿದ್ದರು. ಅನುರಾಧಾ ವಿಕ್ರಾಂತ, ಶಮಾಕೃಷ್ಣ ಮತ್ತು ದಿವ್ಯಾ ರವಿಯವರ ಭರತನಾಟ್ಯ, ಕೂಚುಪುಡಿಗಳ ನಾಲ್ಕೆಂಟು ಸಂಯೋಜನೆಗಳು. ಧ್ವನಿಮುದ್ರಿತ ಹಿಮ್ಮೇಳದೊಂದಿಗೆ ಮೂಡಿದ ಈ ಕಲಾಪಗಳು ಗುಣವಂತೆಯಂಥ ಹಳ್ಳಿಮೂಲೆಯ ಪ್ರೇಕ್ಷಕರನ್ನು ತಣಿಸಿದ್ದಿರಬಹುದು.

ವಠಾರಕ್ಕೊಂದು ನಾಟ್ಯಶಾಲೆ, ವರ್ಷಕ್ಕೆಂಟು ಹುಚ್ಚುಚ್ಚು ರಂಗಪ್ರವೇಶಗಳು, ನೂರೆಂಟು ಅನ್ಯ ನೆಪದ ಪ್ರಯೋಗ-ಪ್ರದರ್ಶನ ಹಾಗೂ ಸಂಯೋಜನಾ ಕೂಟಗಳಿಂದ ದೂರ ಉಳಿದರೂ ಆಮಂತ್ರಣ, ಪತ್ರಿಕಾ ವರದಿಗಳ ಮೂಲಕ ಅನುಭವಿಸುತ್ತಲೇ ಬಂದ ಮಂಗಳೂರಿಗನಾದ ನನಗೆ ವಿಶೇಷವಾಗಲಿಲ್ಲ. ತೆಲುಗು ವಲಯದಿಂದ ಯಾವುದೋ ಐತಿಹಾಸಿಕ ಕಾರಣಕ್ಕೆ, ಎಂದೋ ತಮಿಳುನಾಡಿನ ಮೇಲಟ್ಟೂರಿಗೆ ವಲಸೆಗೊಂಡರೂ ಮೂಲ ಭಾಷೆಯೊಡನೆ ಸಾಂಪ್ರದಾಯಿಕ ಆರಾಧನಾ ಕಲೆಯನ್ನು ಉಳಿಸಿಕೊಂಡು ಬಂದದ್ದು ಭಾಗವತರ ಮೇಳ.

ನಾಲ್ಕೈದು ಹಾಡುಗಾರರು, ಹಲವು ವಾದ್ಯ ವೈವಿಧ್ಯಗಳೊಂದಿಗೆ ಸಜ್ಜಾದ ಹಿಮ್ಮೇಳ, ಭರ್ಜರಿ ನಾಟಕೀಯ ವೇಷಭೂಷಣ ಹಾಗೂ ಪಾತ್ರಗಳೊಂದಿಗೆ ರಂಗ ತುಂಬುವ ಮುಮ್ಮೇಳ. ಇದೂ ನಮ್ಮ ಯಕ್ಷಗಾನದಂತೇ ಇಡಿಯ ರಾತ್ರಿಯನ್ನಾವರಿಸುವ ಕಲೆಯಂತೆ. ಆದರೆ ಪ್ರಸ್ತುತ ನಾಟ್ಯೋತ್ಸವದ ಅನುಕೂಲಕ್ಕಾಗಿ ಸುಮಾರು ನಾಲ್ಕು ಗಂಟೆಗಳ ಸಮಯಮಿತಿಯನ್ನಳವಡಿಸಿಕೊಂಡು `ಶ್ರೀ ಕೃಷ್ಣ ಜನನಂ, ಕಂಸ ವಧ’ ಪ್ರಸಂಗದ ಪ್ರದರ್ಶನ ಕೊಟ್ಟರು. ಸಂಗೀತದ ಅಂಶ ಬಹುತೇಕ ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಪ್ರದಾಯಕ್ಕೆ ಶರಣಾದಂತಿದೆ – ಕೇಳಲು ಹಿತಕರವಾಗಿತ್ತು. ಝಗಮಗಿಸುವ ವೇಷಭೂಷಣಗಳಲ್ಲೇನೂ ಸಾಂಪ್ರದಾಯಿಕತೆ ಉಳಿದಂತಿಲ್ಲ. ಸಾತತ್ಯವಿಲ್ಲದ ಬಿರುಸಿನ ಕುಣಿತ ಹಾಗೂ ಕಥಾ ಸಂವಹನಕ್ಕಷ್ಟೇ ಮಿತಗೊಂಡ ಮಾತುಗಳು ವಿಶೇಷ ಕಲಾನುಭೂತಿಯನ್ನೇನೂ ಕೊಡುವಂತಿರಲಿಲ್ಲ. ಕೃಷ್ಣ ಜನನದವರೆಗೆ ಕುಳಿತ ನಮಗೆ ಮುಂದಿನ ಕಥನ ಕುತೂಹಲವೇನೂ ಉಳಿಯಲಿಲ್ಲ. ಹಾಗಾಗಿ ಕುಮಟದಿಂದ ಹನ್ನೊಂದೂಮುಕ್ಕಾಲರ ರೈಲು ಹಿಡಿದು ಮಂಗಳೂರಿಗೆ ಮರಳುವ ನಮ್ಮ ಪೂರ್ವಯೋಜನೆಯಂತೆ ನಾಟ್ಯೋತ್ಸವಕ್ಕೆ ವಿದಾಯ ಹೇಳಲೆದ್ದೆವು. ನಾವು ಅವೇಳೆಯ, ಅತಿಥಿಗಳೇ (ಹೇಳದೇ ಬಂದವರು) ಆದರೂ ಶಿವಾನಂದ ಹೆಗಡೆ ತಮ್ಮ ಆತಿಥ್ಯದಲ್ಲೇನೂ ಕೊರತೆಯಾಗದಂತೆ ಬಿಸಿ ಊಟಮಾಡಿಸಿಯೇ ಕಳಿಸಿಕೊಟ್ಟರು.

ನಾವು ಬಂದ ರೈಲು ಪ್ಯಾಸೆಂಜರ್, ಅದಕ್ಕೆ ಮಂಕಿ ನಿಲುಗಡೆ ಸಹಜವಾದದ್ದು. ಆದರೆ ಹಿಂದಿರುಗುವ ದಾರಿಯಲ್ಲಿ ಹಿಡಿಯಲುಳಿದದ್ದು ನೇತ್ರಾವತಿ ಎಕ್ಸ್‍ಪ್ರೆಸ್, ಅದಕ್ಕೆ ಕುಮಟ ಕಳೆದರೆ ಭಟ್ಕಳವೋ ಉಡುಪಿಯಲ್ಲೋ ಮಾತ್ರ ನಿಲುಗಡೆ. ಹಾಗಾಗಿ ಸುಮಾರು ಮೂವತ್ತೈದು ಕಿಮೀ ಅಂತರದ ಕುಮಟಕ್ಕೇನಾದರೂ ಸಿಕ್ಕೀತೆಂದು ಹೆದ್ದಾರಿ ಕರೆಯಲ್ಲಿ ಐದು ಮಿನಿಟು `ನಲಿದೆವು’. ಕಣ್ಣು ಕೆಕ್ಕರಿಸಿ, ಭೋರ್ಗರೆವ ಹೆದ್ದಾರಿ ಪ್ರವಾಹದಲ್ಲಿ ನೆಚ್ಚಲು ನಮಗೊಂದು ಹುಲುಕಡ್ಡಿಯೂ ದೊರಕಲಿಲ್ಲ. ಆಗ ಅದೃಷ್ಟಕ್ಕೆ ಉತ್ಸವದ ಸಭಾ ಕಲಾಪಕ್ಕೆ ಓರ್ವ ಅತಿಥಿಯಾಗಿ ಬಂದಿದ್ದ ಸ್ಥಳೀಯ ಪಂಚಾಯತ್ ಅಧ್ಯಕ್ಷ – ಶಂಭು ಬೈಲಾರ ಸಿಕ್ಕರು. ಅವರ ಹೊನ್ನಾವರದ ಮನೆ ದಾರಿಯಲ್ಲಿ ನಮ್ಮನ್ನೊಯ್ದು ಸರಿಯಾದ ಬಸ್ಸಿಗೇ ಏರಿಸಿಯೂ ಬಿಟ್ಟರು. ಕುಮಟ ಬಸ್ ನಿಲ್ದಾಣವನ್ನು ಸಾಕಷ್ಟು ಮುಂಚಿತವಾಗಿಯೇ ತಲಪಿದ ವಿಶ್ವಾಸದ ಮೇಲೆ ಅರ್ಧ ಕಿಮೀ ದೂರದ ರೈಲ್ವೇ ನಿಲ್ದಾಣಕ್ಕೆ ನಡೆದೇ ಹೋದೆವು. ಆದರೆ ಅಲ್ಲಿಗೆ ನಮ್ಮನ್ನು ಅದೃಷ್ಟ ಹಿಂಬಾಲಿಸಲಿಲ್ಲ. ಅಪರಾತ್ರಿ ಹನ್ನೊಂದೂ ಕಾಲರಿಂದ (ರೈಲಿನ ನಿಗದಿತ ವೇಳೆ ಹನ್ನೊಂದು ಮುಕ್ಕಾಲು) ಅಪಬೆಳಗ್ಗೆ ಎರಡೂ ಕಾಲರವರೆಗೆ ಚಳಿಯಲ್ಲಿ ನಡುಗುತ್ತ ಕಾದು, ಕಿಕ್ಕಿರಿದ ರೈಲಿನೊಳಗೆ ಸರಿಯಾಗಿ ಕೂರಲು ಜಾಗ ಸಿಗದಿದ್ದರೂ ಜೂಗರಿಸಿ, ಜಾಗರಿಸಿ, ಮನೆ ಸೇರುವಾಗ ಗಂಟೆ ಐದಾಗಿತ್ತು.

ದಿವಂಗತ ಕೆರೆಮನೆ ಶಂಭು ಹೆಗಡೆಯವರೇ ಜೀವಿತಾವಧಿಯಲ್ಲಿ ಕಟ್ಟಿ ನಡೆಸಿದ್ದು – ಶ್ರೀಮಯ (ಯಕ್ಷಗಾನ) ರಂಗ ಶಿಕ್ಷಣ ಕೇಂದ್ರ ಮತ್ತು ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ. ಅವಕ್ಕೆ ಸಮರ್ಥ ಉತ್ತರಾಧಿಕಾರಿಯಾಗಿಯೇ ಒದಗಿದ ಅವರ ಮಗ ಕೆರೆಮನೆ ಶಿವಾನಂದ ಹೆಗಡೆ, ಇಂದು ಶಂಭು ಹೆಗಡೆ ಬಯಲುರಂಗಮಂದಿರ ಹಾಗೂ ಯಕ್ಷ ವಿಗ್ರಹರಚನೆಯ ವೈವಿಧ್ಯಗಳನ್ನು ಸೇರಿಸಿದ್ದಾರೆ. ವಾರ್ಷಿಕ ನಾಟ್ಯೋತ್ಸವವನ್ನಂತೂ ಇದೀಗ ಆರನೇ ಸಲ ರಾಷ್ಟ್ರೀಯ ಮಟ್ಟದ ವೈಭವದಲ್ಲಿ ನಡೆಸುತ್ತಿದ್ದಾರೆ. ಉತ್ಸವದ ಅಂಗವಾಗಿ ಸಭಾಭವನದ ಜಗುಲಿಯಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಗಣ್ಯ ಪ್ರೇಕ್ಷಕರನ್ನೂ ಒಳಗೊಂಡಂತೆ ಎಲ್ಲ ಭಾಗಿಗಳಿಗೆ ಕಾಲಕಾಲಕ್ಕೆ ಹಿತವಾದ ಪಾನೀಯ, ತಿನಿಸುಗಳನ್ನು ಆತ್ಮೀಯವಾಗಿಯೇ ಒದಗಿಸಿದ್ದು ನಮಗಂತೂ ಅಪ್ಯಾಯಮಾನವಾಗಿತ್ತು.

ಇಡಗುಂಜಿ ಮೇಳದ ಎಂಟನೇ ದಶಕದ ನಡೆ, ಮೂರನೇ ತಲೆಮಾರಿನ ಆಡಳಿತ (ನಾಲ್ಕನೆಯದಕ್ಕೂ ಮುಂದುವರಿಯುವ ಸೂಚನೆ – ಸಕ್ರಿಯರಾಗಿದ್ದ ಶಿವಾನಂದರ ಎರಡೂ ಮಕ್ಕಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು) ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ನಾವು ಮನಸಾರೆ ಹಾರೈಸುತ್ತೇವೆ.