ಕುದುರೆ ಮುಖದಾಸುಪಾಸು – ೯
“ಪದ ಕುಸಿಯೆ ನೆಲವಿಹುದು ಮಂಕುತಿಮ್ಮ” ಮಳೆ ಬಿಟ್ಟ ಬೆಟ್ಟದ ಇಳಿಜಾಡಿನಲ್ಲಂತೂ ಮತ್ತೆ ಮತ್ತೆ ನೆಗ್ಗಿದ ಅಂಡು ಒರೆಸಿಕೊಳ್ಳುವಾಗ ನೆನಪಿಗೆ ಬರುತ್ತಲೇ ಇತ್ತು! ಆದರೂ ಮಳೆ ತೊಳೆದ ಹಸಿರು, ಕಣಿವೆಬಟ್ಟಲ ಅಂಚಿನಲ್ಲಿ ಉಕ್ಕುತ್ತಿದ್ದ ಮೋಡಗಳ ಆಟ ನಮ್ಮನ್ನು ಆಗಾಗ ಮುಖವೆತ್ತಿ ನೋಡುವಂತೆ ಪ್ರೇರಿಸುತ್ತಿತ್ತು. (೨೦೧೪) ಹಾಗೇ ಐದು ಮಿನಿಟಿಗೊಮ್ಮೆಯಾದರೂ ಪಿಳ್ಳೆ ನೆಪಮಾಡಿ ನಿಂತು, ಹಿಂದೊಮ್ಮೆ ನೋಡಿ, ಬಿಟ್ಟಗಲುವ ಸೌಂದರ್ಯಮೇರುವನ್ನೂ ಮನದುಂಬಿಕೊಳ್ಳುವ ಚಪಲ ಕಾಡುತ್ತಿತ್ತು. ಜಾಡಿನ ಹರಿನೀರೆಲ್ಲ ಸ್ವಚ್ಛ ಒಣಗಿದ್ದರೂ ಹುಲ್ಲೋ ಕಲ್ಲೋ ಎಡವಿ ಬೀಳುವ ಅಪಾಯವಿದ್ದರೂ ಇಳಿಜಾಡು ಬೆಟ್ಟದ ಓರೆಯಲ್ಲಿ ಸಾಗುವಷ್ಟೂ ಉದ್ದಕ್ಕೆ ನಾವು ಸಾಕಷ್ಟು ಚುರುಕಾಗಿಯೇ ನಡೆದೆವು. ಹಿಂದಿನ ರಾತ್ರಿ ತಡವಾಗಿ ರಾಜಪ್ಪನ ಮನೆಗೆ ಬಂದಿದ್ದ ತಂಡದ ನಿಧಾನಿಗಳಲ್ಲಿ ಒಬ್ಬಿಬ್ಬರು ನಮಗೆ ಎದುರು ಸಿಕ್ಕಿದರು. ವಿಚಾರಿಸಿಕೊಂಡೆವು. ದೊಡ್ಡ ಬಳಗ ಆಗಲೇ ಶಿಖರ ವಲಯದ ಇಗರ್ಜಿ ಅವಶೇಷ ನೋಡಲು ಹೋಗಿದ್ದು, ನಮ್ಮ ಕಣ್ಣು ತಪ್ಪಿತ್ತು. ಪುಣ್ಯಾತ್ಮನೊಬ್ಬ ದೇಹತಃ ಕುದುರೆಮುಖ ಚಾರಣದಲ್ಲಿದ್ದರೂ ಕಿವಿಗೆರಡು ಗಾನ-ಬಿರಡೆ ಜಡಿದು, ಎಲ್ಲೋ ಬಾಲಿವುಡ್ಡಿನ ಅಡ್ಡೆಯಲ್ಲಿ ಕುಣಿಯುತ್ತಲೇ ಸಾಗಿದ್ದ.
ನನಗಂತೂ ಕುದುರೆಮುಖದ್ದೇ ಭಿನ್ನ ಕಾಲಘಟ್ಟದ ಚಿತ್ರಗಳ ಹೋಲಿಕೆ ಪಟ್ಟಿ ಮನಸ್ಸಿನಲ್ಲಿ ಬಿಚ್ಚಿಕೊಳ್ಳುತ್ತಲೇ ಇತ್ತು. ಹಿಂದೆಂದೋ ಕತ್ತಲಲ್ಲಿ ಈ ಎತ್ತರಕ್ಕೆ ಬರುತ್ತಿದ್ದಂತೆ ಸೂರ್ಯೋದಯದ ಲಕ್ಷಣಗಳು ನಮ್ಮ ಬಲಬದಿಯಲ್ಲಿ ನಡೆದಿತ್ತು. ಕೆಳಗಿನ ವಿಶಾಲ ಕಣಿವೆಯಲ್ಲಿ, ಸಣ್ಣ ಪುಟ್ಟ ಗುಡ್ಡಗಳ ಎಡೆಯಲ್ಲಿ ನಿಶೆಯೊಡನೆ ತಂಗಿದ್ದ ಮೋಡಗಳು ಆಲಸ್ಯದಲ್ಲೇ ಹೊರಡುತ್ತಿದ್ದವು. ಆದರೆ ಹೇಗೆ ವ್ಯಾಪಿಸಿದವೋ ತಿಳಿಯಲಿಲ್ಲ, ಅರುಣ ಲೀಲೆಗಾಗುವಾಗ ರಾತೋರಾತ್ರಿ ನಾವೇರಿ ಬಂದ ಎತ್ತರವೆಲ್ಲ ನೀರುತುಂಬಿಕೊಂಡ ದೃಶ್ಯ – ಜಲಪ್ರಳಯದ ಮಾತು ಇದನ್ನು ನೋಡಿಯೇ ಮೂಡಿದ್ದಿರಬೇಕು.
ಇನ್ನೊಮ್ಮೆ, ಹಿಂದಿನ ಸಂಜೆ ಶಿಖರದ ಸೌಖ್ಯದಲ್ಲಿ ಸೂರ್ಯನಿಗೆ ವಿದಾಯ ಹೇಳುವಾಗ ಪುಳಕಗೊಂಡ ಮೈ, ಇಳಿದಾರಿಗಾಗುವಾಗ ಉದಯಗಿರಿಯಲ್ಲಿ ಇಣುಕಿದವನನ್ನು ಕಂಡಾಗ ಚಳಿ ಕಳೆದು ಮೈ ಮುದಗೊಂಡಿತ್ತು. ಆದರೆ ಈ ಬಾರಿ ಬಹು ನಿರೀಕ್ಷೆಗಳೊಡನೆ ಕಣಿವೆಯನ್ನೇನೋ ದಿಟ್ಟಿಸುತ್ತಿದ್ದೆವು. ಆದರೆ ಎಲ್ಲಿಂದೆಲ್ಲಿಗೂ ಮೋಡ ತನ್ನ ಸಾಮ್ರಾಜ್ಯ ಸ್ಥಾಪಿಸಿತ್ತು. ಪೆಂಡಿಗಟ್ಟಲೆ ಅರಳೆ ಅಲ್ಲಿ ತುಂಬಿ ನಮ್ಮತ್ತ ಉರುಳುರುಳಿ ಬರುತ್ತಿತ್ತು. ನಾವೂರಿನ ದೂರಕ್ಕೆ ಸಾಗುವ ಧಾವಂತ ಒಂದೇ ಇಟ್ಟುಕೊಂಡು, ಸವಕಲು ಜಾಡಿನ ಬಳಸಾಟಗಳನ್ನು ನಿರಾಕರಿಸಿ ಇಳಿದಿಕ್ಕಿನ ಅಂದಾಜು ನೋಡಿಕೊಂಡು ಮೊಣಕಾಲೆತ್ತರದ ಹುಲ್ಲನ್ನು ಎಳೆದೆಳೆದು ಆಧರಿಸುತ್ತ ನೇರ ಇಳಿದಿದ್ದೆವು. ಕೆಲವೆಡೆಗಳಲ್ಲಿ ಬಂಡೆಮೈಗಳೇ ಪ್ರಕಟವಾದಾಗ ತುಸು ಬಳಸಿ, ಕಷ್ಟಪಟ್ಟು ಮತ್ತೆ ಜಾಡು ಹಿಡಿದರೂ ಬಲುಬೇಗನೆ ಹೇವಳವನ್ನೇ ಸಾಧಿಸಿದ್ದೆವು.
ಅಂದು, ಹೇವಳದ ನೆತ್ತಿಗೆ ಬಂದ ಮೇಲೆ ನಾವು ನಾವೂರ ದಿಕ್ಕಿಗೇ ಮುಂದುವರಿದಿದ್ದೆವು. ಪಶ್ಚಿಮದ ಬೀಸು ಗಾಳಿಗೆ ಬಲಕ್ಕೆ ಕುದುರೆಮುಖದ ತಡೆ, ಎಡಕ್ಕೆ ಹಿರಿಮರುದುಪ್ಪೆಯ ಅಡ್ಡಿ. ಅಲ್ಲಿ ಜಾರಿಬಂದು ಹೇವಳದತ್ತ ನುಗ್ಗಿದ್ದಕ್ಕೇ ಇಲ್ಲಿನ ಕಣಿವೆಗೆ ಗಾಳಿಗಿಂಡಿ ಎಂದೂ ಹೆಸರು. (ಗಿರಿಶ್ರೇಣಿಯಲ್ಲಿ ಹಲವು ಸ್ಥಳನಾಮಗಳು ಶುದ್ಧ ಅನ್ವರ್ಥ ನಾಮಗಳೇ ಆದ್ದರಿಂದ ಹಲವೆಡೆಗಳಲ್ಲಿ ಮತ್ತೆ ಮತ್ತೆ ಕೇಳುವುದಿದೆ. ಅದಕ್ಕೆ ಒಳ್ಳೆಯ ಉದಾಹರಣೆಗಳು ಜೇನುಕಲ್ಲು, ಗಾಳಿಗಿಂಡಿ) ಅಂದು, ನಮ್ಮ ಬುಡವನ್ನೇ ಮಗುಚುವಂಥ ಗಾಳಿಯ ಜೊತೆಗೆ ದಟ್ಟ ಮೋಡದ ಆಕ್ರಮಣವೂ ನಡೆದಿತ್ತು. ಪಕ್ಕದಲ್ಲಿ ಕುಳಿತವರು ಕಾಣಿಸದಷ್ಟು ಮೋಡ, ಹುಲ್ಲು ಬಟ್ಟೆ ಸೊಂಯ್ಗುಟ್ಟುವ ರಭಸ. ಜಾಡೇನೋ ಸ್ಪಷ್ಟವಿದ್ದುದರಿಂದ ನಮಗೆ ಗೊಂದಲವಿರಲಿಲ್ಲ. ಆದರೆ ಎದುರಾಗಬಹುದಾದ ವನ್ಯಜೀವಿಗಳನ್ನು ಎಚ್ಚರಿಸುವಂತೆ, ನಮ್ಮ ಇರವನ್ನು ಜಾಹೀರುಪಡಿಸುವಂತೆ ಗದ್ದಲ ಮಾಡುತ್ತ ನಡೆದಿದ್ದೆವು. ಬಹುಶಃ ಇದು ಕೇಳಿ, ಹೇವಳಿಗರು ನಾವೂರಿನತ್ತ ಹೋಗಲಿದ್ದ ಹುಡುಗನೊಬ್ಬನನ್ನು ನಮ್ಮ ಜತೆಗೆ ಬಿಟ್ಟರು.
ಇಲ್ಲವಾದರೆ ಪ್ರಾಣಿಗಳ ಆಕ್ರಮಣದ ಭೀತಿಯಲ್ಲಿ ಸಣ್ಣವರನ್ನು ಅವರು ಒಂಟಿಯಾಗಿ ಕಳಿಸುವುದಿಲ್ಲವಂತೆ. ಆತ ಸಣ್ಣವನಾದರೂ ಪರಿಸರದವನೇ ಆದ್ದರಿಂದ ಪರೋಕ್ಷವಾಗಿ ನಮಗೆ ಸಹಾಯಕನೂ ಆದ. ಒಬ್ಬರಿಗೆ ಮೊಣಕಾಲ್ನೋವು, ಮತ್ತೊಬ್ಬರಿಗೆ ಮೀನಖಂಡ ಸೆಟೆತ, ಮಗುದೊಬ್ಬರಿಗೆ ಸೊಂಟದಲ್ಲಿ ಛಳಕು, ಒಟ್ಟಾರೆ ಇಳಿಯುವ ವೇಗಕ್ಕೆ ಹತ್ತೆಂಟು ಕಡಿವಾಣ. ಎಲ್ಲೋ ತೊರೆ ದಂಡೆಯಲ್ಲಿ ಊಟದ ನೆಪ, ಇನ್ನೆಲ್ಲೋ ಮೋಸುಂಬಿ ನೆಪ, ಮತ್ತೆಲ್ಲೋ ಮಿಡಿಸೌತೆಯ ನೆಪ ಹೂಡುತ್ತಿರುವುದನ್ನು ನೋಡಿ, ಆ ಹುಡುಗ ನಮಗೆ ಒಳದಾರಿ ತೋರಿದ. ನಿರೀಕ್ಷೆಗೂ ಬೇಗನೆ ತೋಟದ ಮನೆಯೊಂದನ್ನು ಹಾಯ್ದು, ಡಾಮರು ದಾರಿ ಸೇರಿದ್ದೆವು, ಅದೃಷ್ಟಕ್ಕೆ ಬಾಡಿಗೆ ಜೀಪು ಸಿಕ್ಕಿ ಪಾರುಗೊಂಡಿದ್ದೆವು.
ಆದರೆ ಇಂದು, ತೀವ್ರ ಇಳಿಕೆ ಏನಿದ್ದರೂ ಹೇವಳದ ತನಕ, ಅದೂ ಬಹುತೇಕ ತೆರೆದ ಹುಲ್ಲು ಮೈಯಲ್ಲೇ. ಹೋಗುತ್ತಾ ಗಿರಿಧರ ಕೃಷ್ಣ ಬಿದ್ದ ಬಂಡೆಯ ಜಲಪಾತ ಸೌಮ್ಯವಾಗಿತ್ತು. ಮಳೆಯ ಕಾಟ ಇಲ್ಲ, ಬಿಸಿಲಿನದೂ ಕ್ರೂರ ನೋಟವಲ್ಲ! ವಾಟೆ ಹಿಂಡಲಿನ ಗುಹಾಮಾರ್ಗ, ಹಸುರು ಅಲೆಯೊಲೆತದ ತೆರ್ಮೆಪೊದರುಗಳ ನಡುವಣ ತೇಲಾಟ, ತೆರೆದ ಹುಲ್ಲುಗಾವಲುಗಳ ವಿಹಾರ ನಡೆಸಿದ್ದಂತೆ ಹೇವಳ ಬಂದೇ ಬಿಟ್ಟಿತು. ಸಂಜೆ ಮೂರು ಗಂಟೆಯ ಸುಮಾರಿಗೆ ಒಂಟಿ ಮರವನ್ನು ಮತ್ತೆ ಸೇರಿದೆವು. ಅಲ್ಲಿ ತುಸು ದೀರ್ಘ ವಿಶ್ರಾಂತಿ ಮಾಡಿ ತಿನಿಸುಗಳೆಲ್ಲಕ್ಕೂ ನಮ್ಮಿಂದಾದಷ್ಟು ನ್ಯಾಯ ಕೊಟ್ಟೆವು. ಹಾಗೂ ಸುಸ್ಥಿತಿಯಲ್ಲೇ ಉಳಿದವನ್ನು ರಾಜಪ್ಪಗೌಡರ ಊಟದ ಮನೆಗೆ ಉಚಿತ ಕೊಡುಗೆಯಾಗಿ ಕಾಯ್ದಿರಿಸಿದೆವು. ತಡ ಸಂಜೆಯಲ್ಲೂ ನಮಗೊಂದೆರಡು ಅಪ್ಪಟ ನಾಗರಿಕರು (ನಗರದಿಂದಲೇ ಬಂದವರು) ಮಾರ್ಗದರ್ಶಿರಹಿತವಾಗಿ ಹೇವಳದತ್ತ ನಡೆದು ಸಿಕ್ಕಿದರು. ಅವರ ಅಸಡ್ಡಾಳ ನಡೆ, ಹೊರೆಯಿಲ್ಲದ ಚಹರೆ ನಮಗೆ ಅನೂಹ್ಯ ಭಯ ಮೂಡಿಸಿದ್ದಕ್ಕೆ ಮಾತಾಡಿಸಿದೆವು. ದೂರದ ಮುಂಬೈಯಿಂದ ಬಂದ ಅವರ ಪ್ರಸ್ತುತ ಕಲಾಪ – ಕುದುರೆಮುಖ ತಳ ಶಿಬಿರಕ್ಕೊಂದು ಭೇಟಿ ಮಾತ್ರ! ಎವರೆಸ್ಟ್ ತಳ ಶಿಬಿರ, ಕಾಂಚೆನ್ಜುಂಗಾ ನೆರಳಿನಲ್ಲಿ, ಕೈಲಾಸ ಪರಿಕ್ರಮಗಳೆಲ್ಲಾ ಹಿಮಾಲಯದಲ್ಲಿ ಸಹಜವಾದಂತೇ ಇಲ್ಲಿ ಹೀಗಾಗುವುದು ಸರಿಯೇ ಎಂದು ಸಮಾಧಾನವಾಯ್ತು.
ನಾಲ್ಕೂವರೆಯ ಸುಮಾರಿಗೆ ರಾಜಪ್ಪ ಗೌಡರ ಮನೆ ಸೇರಿದೆವು. ಬೈಕ್ ಕೆಲಸ ಏನೂ ಆಗಿರಲಿಲ್ಲ. ಅವಸರದಲ್ಲೇ ಕಾಫಿ ಕುಡಿದು, ಲೆಕ್ಕಾ ಚುಕ್ತಾ ಮಾಡಿ ಬೈಕುಗಳತ್ತ ಧಾವಿಸಿದೆವು. ಗಿರಿಧರ ಕೃಷ್ಣರಿಗೆ ಸಹಜವಾಗಿದ್ದ ಯಂತ್ರಗಳ ಒಲವು, ಹಿಂದಿನ ರಾತ್ರಿಯ ಕತ್ತಲಲ್ಲಿ ಕಾಣದ ಬೈಕ್ ಸಮಸ್ಯೆಯನ್ನು ಪರಿಹರಿಸಿತು.
ಸರಪಳಿ ದುರ್ಬಲವಾದ್ದದ್ದೇನೋ ನಿಜ, ಆದರೆ ಹಾಳತದಲ್ಲೋಡಿಸಿದರೆ ಮೂಡಬಿದ್ರೆವರೆಗೆ ಸಮಸ್ಯೆಯಿಲ್ಲ ಎಂಬ ಧೈರ್ಯದಲ್ಲಿ ಸಂಸೆ ಸೇರಿದೆವು. ಪರೋಕ್ಷವಾಗಿ ಜಗನ್ನಾಥರೈಗಳ ಹಗುರ ಓಟಕ್ಕೆ ಸಹಾಯವಾಗುವಂತೇ ಗಿರಿ ಮೊದಲೇ ಕಳಸದಿಂದ ಬೆಂಗಳೂರಿಗೆ ರಾತ್ರಿ ಬಸ್ಸು ಹಿಡಿಯುವವರಿದ್ದರಿಂದ ತಂಡದಿಂದ ಕಳಚಿಕೊಂಡರು. ಕುದುರೆಮುಖಗಣಿ ಪ್ರದೇಶ ದಾಟುತ್ತಿದ್ದಂತೆ ಕತ್ತಲ ಮುಸುಕು ಪೂರ್ಣ ಕವುಚಿಕೊಂಡಿತು. ಆದರೆ ಮಳೆ, ಹಾಳುದಾರಿ, ವಿಪರೀತ ವಾಹನಸಂಚಾರಗಳ ಕಾಟಮುಕ್ತ ಓಟದಲ್ಲಿ ಎಲ್ಲರಿಗೂ ಮನೆ ದೂರ ಅನ್ನಿಸಲೇ ಇಲ್ಲ.
(ಸರಣಿ ಮುಗಿಯಿತು)
ಅಯ್ಯೋ, ಮುಗಿದೇ ಹೋಯಿತೇ..? ನಾನು ಕಾದು ಕೂತು ಓದುತ್ತಿದ್ದ ವಿದ್ಯುನ್ಮಾನ ಧಾರಾವಾಹಿ ಅಕ್ಷರಶಃ ಇದೊಂದೇ.. ಕಾಡಿನ ವಿಷಯ ಕಾಡಿಸುವಂತಿತ್ತು… ಅನುಭವ ಕಥನವನ್ನು ಓದುಗರಿಗೆ ರುಚಿಸುವಂತೆ ರಚಿಸಿದ್ದೀರಿ…..ಇಂದು ಬಹು ಕಡೆ ಸರಳ ಚಾರಣವೆನ್ನುವುದು ಬಹುಜನರನ್ನು ಆಕರ್ಷಿಸುತ್ತಿದೆ ಹಾಗೆಯೇ ಮಾಲಿನ್ಯದಂತಹ ಹಲವಾರು ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ನಿಮ್ಮ ಕಥನವನ್ನು ಸರಿಯಾಗಿ ಓದಿದ್ದರೆ ಅದೇ ಒಂದು ಮಾರ್ಗದರ್ಶಿ ಸಾಹಿತ್ಯವಾದೀತು….
ಅಂದ ಹಾಗೆ ನಿಮ್ಮ ನೆನಪಿನ ಖಜಾನೆಯಲ್ಲಿ ಇಂತಹ “ನಿಧಿ” ಗಳು ಹಲವಾರಿರಬಹುದಲ್ಲವೇ…. ಓದುಗರೊಂದಿಗೆ ಹಂಚಿಕೊಳ್ಳುವಿರಾ..?
ಗಿರೀಶ್, ಬಜಪೆ
ಶಿಬಿರವಾಸವಿಲ್ಲದ ಚಾರಣ ಉಪ್ಪಿಲ್ಲದ ಉಪ್ಪಿಟ್ಟಿನಂತೆ. ನಿಮ್ಮ ಆ ದಿನಗಳನ್ನು ಹಾಗೇ ಕಲ್ಪಿಸಿಕೊಂಡರೆ ರೋಮಾಂಚವಾಗುತ್ತದೆ. ಇಂದು, “ನಾಗರಿಕ”ರ ಅನಾಚಾರಗಳಿಂದಾಗಿ ಚಾರಣಾನುಮತಿ ಪಡೆಯಲೂ ಪಾಡುಪಡುವ ಪರಿಸ್ಥಿತಿ ಇದೆ. ಹಣ/ಅಧಿಕಾರ ಬಲಗಳು ವನ್ಯಾಸಕ್ತಿ/ಸಂರಕ್ಷಣೆಗಳನ್ನು ಕಡೆಗಣಿಸಿ ಸ್ವಹಿತಾಸಕ್ತಿ ಪೂರೈಸುವ ದುರ್ದಿನ ಬಂದೊದಗಿದೆ.