(ಚಕ್ರೇಶ್ವರ ಪರೀಕ್ಷಿತ ೬)
ಜಂಟಿ ಸೈಕಲ್ ಇನ್ನಿಲ್ಲ…

“ಆನಂದನಿಗೆ ಬೇರೆ ಕೆಲಸವಿಲ್ಲ” ಎಂದು ಅರೆ-ಕೋಪದೊಡನೇ ಉಡುಪಿಯ ಮಿಂಚಂಚೆಗೆ ಉತ್ತರಿಸಿದೆ. “ನಿಮ್ಮ ಸಹಪಾಠಿಯ ಗಂಡ, ಅಂದರೆ ನನ್ನ ತಮ್ಮ ಆನಂದನಿಗೆ, ನಮ್ಮ ಜಂಟಿ ಸೈಕಲ್ ಮಾರಾಟಕ್ಕಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ನಾವದನ್ನು ಕೊಂಡು ಈ ಚೌತಿಗೆ ಎರಡು ವರ್ಷವಾಗುತ್ತಿದೆ. ನಾನದರ ಗೇರ್ಯುಕ್ತ ಪರಿಷ್ಕೃತ ಆವೃತ್ತಿಯ ನಿರೀಕ್ಷೆಯಲ್ಲಿದ್ದೇನೆ. “ಅದು ಬಂದರೆ, ಇದು ಮಾರಬಹುದು” ಎಂದು ನನ್ನಷ್ಟಕ್ಕೇ ಹೇಳಿಕೊಂಡದ್ದಿದೆ – ಅಷ್ಟೆ. ಏನೇ ಇರಲಿ, ನೀವು ಕೇಳಿದ್ದಕ್ಕೆ…” ಎಂದು ಕೆಲವು ನಿರುತ್ತೇಜಕ ಕರಾರುಗಳ ಮೇಲೆ ಮಾರಾಟಕ್ಕೆ ಒಪ್ಪಿದೆ. ನನ್ನ ಗ್ರಹಚಾರಕ್ಕೆ ಆ ದಿಟ್ಟ ಮಹಿಳಾ ಗಿರಾಕಿ ಮರು-ಟಪಾಲಿಗೆ “ನನಗೆ ಆ ಬೈಸಿಕಲ್ ನೀವು ಹೇಳಿದ ಸ್ಥಿತಿ ಮತ್ತು ಬೆಲೆಯಲ್ಲಾದರೂ ಬೇಕೇ ಬೇಕು. ಹಣ ತಯಾರಿದೆ. ನೀವೇ ತಂದೊಪ್ಪಿಸುವ ಹಠ ಬಿಟ್ಟರೆ, ನಾನು ಅದನ್ನು ಅಲ್ಲಿಂದಲೇ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಬೇಕಾದರೂ ಮಾಡಬಲ್ಲೆ.” ಎರಡು ದಿನ ಹಗಲು ಒಳ್ಳೇ ಮಳೆ. ಮೂರನೇ ದಿನಕ್ಕಾಗುವಾಗ, ಪೂರ್ವಾಹ್ನ ಮತ್ತೆ ಮಳೆರಾಯ ಚಿಟಪಟ ಹನಿಗಳ ಬಿತ್ತನೆ ನಡೆಸಿದ್ದ. ಆದರೆ ಸಂಜೆಗೂ ಮುನ್ನ ಆತನ ಬುಟ್ಟಿ ಖಾಲಿಯಾಗಿತ್ತು. ಮೂರು ದಿನದಿಂದ ಕಾಡಿದ್ದ ನನ್ನ ಶೀತ ಇಳಿಮುಖದಲ್ಲಿತ್ತು, ದೇವಕಿಗೆ ಶೀತ ಹಿಡಿಯುವುದರಲ್ಲಿತ್ತು. ಹಾಗಾಗಿ ಬರಿಯ ಸಂಜೆ ಸರ್ಕೀಟೆಂದು ಜಂಟಿ ಸೈಕಲ್ ಏರಿದ್ದೆವು. ಶಕುನದ ಸುಭಗತನಕ್ಕೆ ಪಕ್ಕದ ಮನೆಯ ಅತ್ತೆಯ ಹತ್ತಿರ “ನಮ್ಮ ಅಂತಿಮ ಯಾತ್ರೆ” ಎಂದೂ ಹೇಳಿ ಬೈಸಿಕೊಂಡೇ ಬೈಸಿಕಲ್ ಹೊಡೆದೆವು. ಲೇಡಿಹಿಲ್, ಕೊಟ್ಟಾರ, ಕೂಳೂರು ತಲಪುವಾಗ ನಮ್ಮ ತಲೆಯೊಳಗೊಂದು ಹುಳ ಹೊಕ್ಕಿತು. ಸರಿ, ಅದಕ್ಕೆ ಒಲಿದು ಮತ್ತೂ ಮುಂದುವರಿದೆವು. ಅದುವರೆಗೆ ಜಂಟಿ ಸೈಕಲ್ಲನ್ನು ನಾವು ಬೈಕಂಪಾಡಿಯಾಚೆ ಒಯ್ಯುವ ಧೈರ್ಯ ಮಾಡಿರಲಿಲ್ಲ. ಈಗ ಸರಾಗ ಸುರತ್ಕಲ್, ಪಾವಂಜೆ, ಎನ್ನುತ್ತಾ ಮೂಲ್ಕಿ ಹೊರವಲಯದ ಕಿಲ್ಪಾಡಿಯವರೆಗೂ ಓಡಿಸಿದೆವು. ಅಲ್ಲಿ ನನ್ನ ಗೆಳೆಯ ಮೋಹನರಾಯರ ಮನೆ ಸೇರುವಾಗ ನಮ್ಮ ನಿತ್ಯದ ಗರಿಷ್ಠ ಸಮಯ ಎರಡು ಗಂಟೆ ಸಂದಿತ್ತು. ನಿಜ ಅತಿಥಿಗಳಿಗೆ (=ಹೇಳದೇ ಬಂದವರು) ಪಪ್ಪಾಯಿ ಕೊಟ್ಟು ಸತ್ಕರಿಸಿದ ಮೋಹನರಾವ್ ದಂಪತಿ, ಸಂತೋಷದಿಂದ ನಮ್ಮ ಸೈಕಲ್ಲಿಗೆ ರಾತ್ರಿಯ ತಂಗುದಾಣ ಕಲ್ಪಿಸಿದರು. ಅವರು ನಮಗೂ ಆಶ್ರಯ ಕೊಡುವ ಉತ್ಸಾಹದಲ್ಲಿದ್ದರೂ ನಾವು ಒಪ್ಪಿಕೊಳ್ಳಲಿಲ್ಲ. ಬೆಳಕು ಮಾಸಿದ್ದ ಹೊತ್ತಿನಲ್ಲಿ ಬಸ್ಸೇರಿ, ಕತ್ತಲಲ್ಲಿ ಮಂಗಳೂರಿಗೆ ಮರಳಿದೆವು.

ಮರುದಿನ ಬೆಳಗ್ಗೆ ಬಸ್ಸೇರಿ ಆರಾಮವಾಗಿಯೇ ಮೋಹನರಾಯರ ಮನೆಗೆ ಹೋದೆವು. ಅವರು ಸ್ವಂತ ಕೃಷಿಯಿಂದ ಕೊಟ್ಟ ಸೀಬೇ ಹಣ್ಣನ್ನು ಕಚ್ಚಿ ತಿನ್ನುತ್ತ ಸೈಕಲ್ ಸವಾರಿಯನ್ನು ಹೆದ್ದಾರಿಯಲ್ಲೇ ಮುಂದುವರಿದೆವು. ಹಿಂದಿನ ಸಂಜೆಯ ಅನೈಚ್ಛಿಕ ಉಡುಪಿಯಾನವನ್ನು, ಅಧಿಕೃತವಾಗಿ ಮುಂದುವರಿಸಿದ್ದೆವು.

ಹಳೆ ದಾರಿ ನಿರ್ವಾಣದೊಡನೆ (ಇತರೆಡೆಗಳಂತೇ) ಎಲ್ಲಾ ಊರುಗಳು ತಮ್ಮೆಲ್ಲಾ ಆಪ್ತ ಚಹರೆಗಳನ್ನು ಕಳೆದುಕೊಂಡು, ಹುಡುಕಿ ನೋಡಿದರೆ ಕೇವಲ ಬೋರ್ಡುಗಳಾಗಿದ್ದವು. ಸವಾಲಿನ ಏರುಗಳಿಲ್ಲ, ಇಳಿದಾರಿ ಎಂದು ಖಾಲಿ ಕೂರುವ ಹಾಗಿಲ್ಲ, ತಿರುಗಾಸುಗಳ ನಿಗೂಢವಿಲ್ಲ, ಕನಿಷ್ಠ ಹೊಂಡ ಹಾರಿ ಸರಕಾರವನ್ನು ಶಪಿಸುವ ಆನಂದವೂ ಇಲ್ಲ. ಎಲ್ಲ ಸಪಾಟು, ವಿಸ್ತಾರ, ನುಣ್ಣಗೆ, ಬೋಳೋಬೋಳಾದ ಮೇಲೆ ನೋಡುವುದೇನು ಉಳಿಯಿತು. ಎರಡು ಗಂಟೆಗೂ ತುಸು ಕಡಿಮೆಯ ಅವಧಿಯಲ್ಲೇ ನಮ್ಮ ಗಿರಾಕಿಯನ್ನು ಅವರ ಕಛೇರಿಯಲ್ಲೇ ಮುಖಾಮುಖಿ ಮಾಡಿದ್ದೆವು. ಸೈಕಲ್ ಕೊಟ್ಟು, ಹಣಪಡೆದು, “ಮಂಗಳೂರ್ ಎಕ್ಸ್ಪ್ರೆಸ್, ಮಂಗ್ಳೂರು, ಮಂಗ್ಳೂರ್” ಕರೆಗೆ ಓಗೊಟ್ಟೆವು. ಬ್ರಿಟಿಶ್ ಲೋಕೋಕ್ತಿ ಅನ್ವಯಿಸಿಕೊಳ್ಳಿ – ಹಳೆ ಜಂಟಿ ಸೈಕಲ್ ಇನ್ನಿಲ್ಲ, ಹೊಸತು ಚಿರಾಯುವಾಗಲಿ! (ಗೇರ್ಯುಕ್ತವಾದ ವಿದೇಶೀ ಜಂಟಿ ಸೈಕಲ್ ಇನ್ನೂ ಕಾದಿದ್ದೇವೆ.)

ಹೇಳಿದ್ದೊಂದು ಮಾಡಿದ್ದಿನ್ನೊಂದು:

ಜಂಟಿ ಸೈಕಲ್ ಕೊಟ್ಟು ಬಂದು ದಿನ ಎರಡಾಯ್ತು, ಸರ್ಕೀಟು ಹೋಗಲೇ ಇಲ್ಲವೆಂದು ಇಂದು ಬೆಳಿಗ್ಗೆಯೇ ಹೊರಬಿದ್ದೆ. (ಬೆಂಗಳೂರಿನಿಂದ ಬಿಟ್ಟುಕೊಂಡು ಬಂದಿದ್ದ ಒಂಟಿ ಸೈಕಲ್ ಇತ್ತು.) ಗಣಪತಿ ಹೆಸರಿನ, ಸಾಂಸ್ಕೃತಿಕ ಗದ್ದಲ ಸಣ್ಣ ಮಾಡುವಂತೆ ಗಗನದ ಗೌಜಿ ನಡೆದಿತ್ತು. ಉಡುಪಿ ಹೆದ್ದಾರಿ ಹಿಡಿದಿದ್ದೆ. ಪಣಂಬೂರು ವಲಯ ದಾಟುವಾಗ ದಾರಿ ಸಪಾಟು, ನುಣ್ಣಗೇ ಇದ್ದರೂ ಬೀಸು ಗಾಳಿಯ ಪ್ರತಾಪ ಸುಲಭ ಸವಾರಿಗೆ ಅವಕಾಶ ಕೊಡಲಿಲ್ಲ. ಅದ್ಯಾವುದೋ ವಿದೇಶೀ ಮರುಭೂಮಿಯಲ್ಲಿ ಹಾಯಿಪಟವನ್ನೇ ತ್ರಿಚಕ್ರೀ ಸೈಕಲ್ಲಿಗೆ ಅಳವಡಿಸಿ ಯಶಸ್ವಿಯಾದವರ ಕಥನ ನೆನಪಿನಲ್ಲಿತ್ತು. ಆದರೆ ಸದ್ಯಕ್ಕೆ ನನ್ನದು ದೈಹಿಕ ಕಾರ್ಯ-ಕ್ಷಮತೆಯನ್ನೇ ಒರೆಗೆ ಹಚ್ಚುವ ಉದ್ದೇಶದ್ದು. ಮುಕ್ಕಾಲೇ ಗಂಟೆಯಲ್ಲಿ ಸುರತ್ಕಲ್ ಪೇಟೆ ಕಳೆದದ್ದು ಸಣ್ಣದೇನಲ್ಲ ಎಂದುಕೊಂಡರೂ ಪೆಡಲೊತ್ತುವುದನ್ನು ಅವಿರತವಾಗಿಸಿದ್ದೆ.

ಸುಮಾರು ಹತ್ತು ದಿನಗಳ ಹಿಂದೆ ಸಂಜೆ ಸರ್ಕೀಟಿನಲ್ಲಿ ಪಣಂಬೂರಿನಿಂದ ಸುರತ್ಕಲ್ ದೀಪಸ್ತಂಭದವರೆಗೂ ಕಡಲ-ಕಿನಾರೆ (ಕ.ಕಿ. ರಸ್ತೆ) ರಸ್ತೆ ಅನುಸರಿಸಿ ಬಂದವನಿಗೆ “ಮುಂದೆ ದಾರಿಯಿಲ್ಲ” ಸೋಲಿಸಿಬಿಟ್ಟಿತ್ತು. ಹಾಗಾಗಿ ಇಂದು ಎನ್ನೈಟಿಕೆಯನ್ನು ಹೆದ್ದಾರಿಯಲ್ಲೇ ಹಿಂದಿಕ್ಕಿ, ಮುಕ್ಕದಲ್ಲಿ ಎಡಕ್ಕೆ ಹೊರಳಿದೆ. ಒಂದಷ್ಟು ನುಣ್ಣನೆ ಡಾಮರ್ ರಸ್ತೆ ಕಳೆದು, ಕಾಂಕ್ರೀಟ್ ಬಂದೋಬಸ್ತಿದ್ದ ಕ.ಕಿ ರಸ್ತೆ ಸೇರಿದೆ. ಹಿನ್ನೆಲೆಯಲ್ಲಿ ಸಾಗರ-ಮಥನ ನಡೆದೇ ಇತ್ತು. ಎರಡು ಮಾಳಿಗೆಗಳ ಭರ್ಜರಿ ಖಾಸಗಿ ಅತಿಥಿಗೃಹ ಹೆಸರು ಹಾಕಿಕೊಳ್ಳಲು ನಾಚಿದಂತಿತ್ತು. ಆದರೆ ಕಡಲೆಂದೂ ಕದಡಿಬಿಡಬಹುದಾದ ಬಡಪಾಯಿ ಮನೆಯೊಂದು ಪ್ರಾಮಾಣಿಕತೆಯನ್ನು ಇಂಗ್ಳೀಸ್ ಶ್ಟೈಲಿನಲ್ಲಿ ಮೆರೆದಿತ್ತು – ಗುಡ್ಸಲು! ಮಸೀದಿ, ಮಂದಿರಗಳ ಸಾಲಿತ್ತು. ಚೌತಿ ಲೆಕ್ಕದಲ್ಲಿ ಗಣೇಶನ ದೇವಾಲಯವೊಂದು ಮೈಕ್ ಕಟ್ಟಿ ಭಜನೆ ಕುಟ್ಟುತ್ತ ಸಕ್ರಿಯವಾಗಿತ್ತು. ಕೊನೆಯಲ್ಲಿ ಸಿಕ್ಕಿದ್ದು ಭಗವತಿ ದೇವಸ್ಥಾನ. ಇದಕ್ಕೆ ನನ್ನ ನೆನಪಿನ ಕೋಶದಲ್ಲಿ ಸುಮಾರು ಮೂರೂವರೆ ದಶಕಗಳ ಹಿಂದಿನದೇ ಸ್ಥಾನವಿದೆ. ಅಂದು ಸದಾಶಿವ ಮಾಸ್ಟರರ ಕಲಾಗಂಗೋತ್ರಿ, ಅಲ್ಲಿ ಅಮೃತ ಸೋಮೇಶ್ವರ್ ವಿರಚಿಸಿದ ಹೊಸ ಪ್ರಸಂಗವನ್ನು ಪ್ರದರ್ಶಿಸಿದ್ದರು. ಗೆಳೆಯ ಪುರುಷೋತ್ತಮ ಬಿಳಿಮಲೆಯೂ ವೇಷಧಾರಿಯಾಗಿದ್ದರೆಂದು ನೆನಪು.

ಭಗವತಿ ಕ್ಷೇತ್ರದಿಂದ ಮುಂದೆ ಭದ್ರ ದಾರಿ ಹೆಚ್ಚು ಮುಂದುವರಿಯಲಿಲ್ಲ. ಅರಣ್ಯ ಇಲಾಖೆಯ ನೆಡುತೋಪಿನ ಮೂಲಕ ಸಾಗುವ ಕಚ್ಚಾರಸ್ತೆಗಿಳಿಯುವಾಗ ಅದುವರೆಗೆ ತುಸು ವಿರಾಮ ಕೊಟ್ಟಿದ್ದ ಮಳೆ ಹೊಸರಾಗ ಪ್ರಸ್ತುತಿಗೆ ಶ್ರುತಿ ಹಿಡಿಯತೊಡಗಿತ್ತು. ನಾನು ಮನೆ ಬಿಡುವಾಗ “ಊಟದ ಸಮಯದೊಳಗೆ ಮನೆ ಸೇರುತ್ತೇನೆ” ಎಂದು ಹೇಳಿದ್ದ ಮಾತು ಹುಸಿಯಾಯ್ತು. (ಎರಡು ಗಂಟೆಯಾಗಿತ್ತು) ಆದರೆ `ಮಳೆಯೊಳಗೆ ಮನೆ’ ಸೇರುವುದರಲ್ಲಿ ಯಶಸ್ವಿಯಾಗಿದ್ದೆ!

ಹಾಗೂ ಸೋಲು, ಹೀಗೂ ಸೋಲು:

ಗೂಗಲಿಸಿ, ನೇತ್ರಾವತಿ ದಂಡೆಯಲ್ಲಿ ಹೊಸ ಜಾಡು ಅರಸುತ್ತಿದ್ದೆ. ಗೆಳೆಯ ವೇಣು ಹಸಿರು ಕಂದೀಲು ಹಚ್ಚಿಕೊಂಡು `ಲೈನ್’ (ಹೊಡೀತಿರಲಿಲ್ಲ!)ನಲ್ಲಿದ್ದರು. “ಜನ ಉಂಡಾ? ಕಲ್ಲಾಪು, ರಾಣಿಪುರ, ದೇರ್ಲ ಕಟ್ಟೆ, ಸೈಕಲ್ ಸರ್ಕೀಟ್” ಚಾಟಿನಲ್ಲಿ ಬಿಟ್ಟೆ. “ಹೊಟ್ಟೆ ಉರಿಸಬೇಡಿ ಮಾರಾಯ್ರೇ. ೨೦೧೫ರಲ್ಲಿ ಮೊದಲ ಕೆಲಸ ಸೈಕಲ್ ಖರೀದಿ” ಮರುಕುಟ್ಟಿದರು. ನಾನು ಎಂದಿನಂತೆ ಮತ್ತೆ ಒಂಟಿಯಾಗಿಯೇ ಸವಾರಿ ಹೊರಟೆ.

ಝಳ ಝಳ ಬಿಸಿಲು, ಕ್ಷಣ ಬಿಟ್ಟು ಬಳಬಳ ಮಳೆಯ ದಿನ. ರಾಣೀಕೋಟು (ರೈನ್ಕೋಟ್) ಬೆನ್ನಚೀಲದಲ್ಲಿಟ್ಟುಕೊಂಡಿದ್ದೆ. ಪಂಪ್ವೆಲ್, ಉಳ್ಳಾಲ ಸಂಕ ಕಳೆದ ಮೇಲೆ ಕಲ್ಲಾಪಿನಲ್ಲಿ ಎಡಕ್ಕೆ ಹೊರಳಿದೆ. ನೇತ್ರಾವತಿಯ ಸೊಕ್ಕಿನ ಸೆಳಕುಗಳು ಅಲ್ಲಲ್ಲಿ ಒಳದಾರಿಗಳನ್ನು, ಕೆಲವು ಮನೆ ಅಂಗಳಗಳನ್ನು ಇನ್ನೂ ತನ್ನಪ್ಪುಗೆಯಿಂದ ಬಿಟ್ಟುಕೊಟ್ಟಿರಲಿಲ್ಲ. ರಿಕ್ಷಾ ಚಾಲಕನೊಬ್ಬನ ಸೂಚನೆಯ ಮೇರೆಗೆ ಒಂದು ಪಳ್ಳಿ ಕಳೆದದ್ದೇ ಬಲಕ್ಕೆ ಹೊರಳಿದೆ. ದಾರಿ ಎಂದಿನಂತೆ ಗುಡ್ಡೆ ಏರು, ಹಳ್ಳಕ್ಕಿಳಿ. ಮನೆಯಲ್ಲಿ ಸಂಜೆ ಕಾಫಿಯೊಡನೆ ಸಿಕ್ಕದ ಅಂಬಡೆ ಇಲ್ಲಿ ಸ್ಥಳನಾಮವಾಗಿ ಅಣಕಿಸಿತು – ಅಂಬಡಿ! ಮನೆಗಳು, ಮಳಿಗೆಗಳು, ಜಾಡುಗಳೋ ಜಾಡುಗಳು. ಅದೆಲ್ಲೋ ಬಲಕ್ಕೆ ತಿರುಗಿದರೆ ಬಬ್ಬುಕಟ್ಟೆಗೆ, ಮತ್ತೆಲ್ಲೋ ಬಲ-ನುಸಿದರೆ ಕುತ್ತಾರ್ ಎಂದೆಲ್ಲ ವಿವರಿಸುತ್ತಾ “ಎಡ ಪಕ್ಷ ಹಿಡಿಬೇಡಿ – ದೂರದ ಇನೋಳಿ, ಹರೇಕಳಕ್ಕಾಗಿ ಕೊಣಾಜೆ ಮುಟ್ಟುವಾಗ ಕತ್ತಲಾದೀತು” ಎಂದೂ ರಿಕ್ಷಾ ಚಾಲಕ ಎಚ್ಚರಿಸಿದ್ದ. ಹೇಗೂ ಸುತ್ತಾಟಕ್ಕೆ ಹೊರಟವನಿಗೆ ನೂರಾರು ಗೋಜಲಿನಲ್ಲಿ ನಾಲ್ಕಾರು ಕಿಮೀ ಹೆಚ್ಚು ಅಥವಾ ಕಮ್ಮಿ ಎಂದುಕೊಂಡಾಗ ಸಿಕ್ಕಿದ ಊರು – ಮುನ್ನೂರು! ರಾಣಿಪುರ ಇಗರ್ಜಿ ಎದುರು ಇಳಿಜಾರಿನಲ್ಲಿ ಮಿಂಚಿ, ಮದಕದ ವಿಸ್ತಾರ ಬಯಲಿನಲ್ಲಿ ವಿಹರಿಸಿ, ಅಂಬ್ಲಮೊಗರನ್ನು ಎಡಕ್ಕೇ ಬಿಟ್ಟು, ಬೆಳ್ಮದ ಬಯಲಿನಿಂದ ಎತ್ತೆತ್ತರಕ್ಕೇರಿ ಬಯಲಾಗುವಾಗ ದೇರಳ ಕಟ್ಟೆ ಪ್ರತ್ಯಕ್ಷವಾಗಿತ್ತು.

ಸರಿ, ಇನ್ನೇನು ಮುಪ್ಪುರಿಗೊಂಡ ವೈದ್ಯಕೀಯ ಕಾಲೇಜುಗಳನ್ನು ಹಾಯ್ದು… ಎನ್ನುವಾಗ ಮಳೆರಾಯರ ದುಃಖ ಕಟ್ಟೊಡೆಯಿತು. ಫಾ| ಮುಲ್ಲರ್ರೆದುರು ರಾಣಿಕೋಟೇರಿಸಿ ಮುಂದುವರಿಸಿದೆ. ಕೆಯೆಸ್ ಹೆಗಡೆ ಎದುರು ದಮ್ಮೇರಿಸಿ ಮೆಟ್ಟಿದೆ. ಯೇಣೆಪೋಯದೆದುರು (ಮೂರೂ ಮೆಡಿಕಲ್ ಕಾಲೇಜುಗಳು, ಒಟ್ಟಾರೆ ಅಂತರ ಸುಮಾರು ಅರ್ಧ ಕಿಮೀ) ಮಳೆಯಲ್ಲಿ ಮುಖ ತೊಳೆದಂತೆ ಪ್ರಖರವಾಗಿ ಬೆಳಗಿದ ಸೂರ್ಯ ಅಣಕಿಸಿದ.

ಆದರೆ ವಾಹನ ಸಮ್ಮರ್ದದ ಹೋಳಿಯಾಟ ಯಾರಿಗೆ ತಿಳಿದಿಲ್ಲ. ತೊಕ್ಕೊಟ್ಟಿನವರೆಗೆ ದಾರಿಯ ಹೊಂಡಗಳೂ ಮುಂದೆ ಹೆದ್ದಾರಿಯಲ್ಲಿನ ಅಭಿವೃದ್ಧಿಯ ಅವ್ಯವಸ್ಥೆಗಳೂ ಧಾರಾಳ ಸಹಕರಿಸುವುದೂ ನನಗೆ ತಿಳಿದೇ ಇದ್ದುದರಿಂದ ರಾಣೀಕೋಟು ಕಳಚಲಿಲ್ಲ. ಹಾಗೇ ಮನೆ ಸೇರಿದೆ. ದುಃಖವೆಂದರೆ, ಅಲ್ಲಿ ಮಳೆಯ ಲಕ್ಷಣವೂ ಇರಲಿಲ್ಲವಾಗಿ ದೇವಕಿ ಮೊದಲು “ಉರಿ ಬಿಸಿಲಿಗೇಕೆ ಮಳೆಕೋಟ್” ಎಂದು ನಕ್ಕಳು. ಅದನ್ನು ಕಳಚಿದಾಗ ಒಳಗೆ ಬೆವರಿನಿಂದ ತೊಯ್ದ ಜುಬ್ಬಾ ನೋಡಿಯೂ ನಕ್ಕಳು. ☹

ಅಮಲಿನಲ್ಲಿ ಮೂಡಬಿದ್ರೆ:

ಸಂಜೆ ಉಧೋ ಕೇಳಿ “ನಾಳೆ” ಎಂದೆ, ಬೆಳಗ್ಗೆ ಹನಿ ಕುಟ್ಟಣ ಕೇಳಿ “ಸಂಜೆ” ಎಂದೆ. ಹೀಗೆ ಎರಡು ದಿನ ಸರ್ಕೀಟ್ ಸತಾಯಿಸಿತು ಮಳೆ; ಮನಸ್ಸು (ದಲಿತ ಸಿಎಂ ಪದವಿ, ಕನಿಷ್ಠ ಉಪಮುಖ್ಯಮಂತ್ರಿ ಪದವಿಯೂ ಗಿಟ್ಟದ) ಪರಮೇಶ್ವರವಾಗಿತ್ತು! ಮೋಡ, ಬಿಸಿಲುಗಳ ಅವಿತು ಹಿಡಿಯುವಾಟ ಲೆಕ್ಕಿಸದೆ, ಬೆಳಗ್ಗೆ ಒಂಬತ್ತುಮುಕ್ಕಾಲಕ್ಕೇ ಸೈಕಲ್ಲೇರಿ ದಾರಿಗೆ ಬಿದ್ದೆ. ಮೂರು ಬಾರಿ ಹೊರಟು ಸೋತಿದ್ದ ಗುರುಪುರ ಸೇತುವೆ ಲಕ್ಷ್ಯವಾಗಿಸಿಕೊಂಡೆ. ಕುಲಶೇಖರ, ಕುಡುಪು, ವಾಮಂಜೂರು, ಕೆತ್ತಿಕಲ್ಲಿಗಾಗಿ ಫಲ್ಗುಣಿ ಪಾತ್ರೆಗಿಳಿಯಲು ಮುಕ್ಕಾಲೇ ಗಂಟೆ ಸಾಕಾಗಿತ್ತು. ಲೆಕ್ಕಕ್ಕೆ ಹೆದ್ದಾರಿ, ಆದರೆ ಹೊಳೆ ಬಯಲಲ್ಲಿ ಅದರ ಸ್ಥಿತಿ ಗಲ್ಲಿದಾರಿಗೂ ಕಡೆ. ಡಾಮರಿನಂಚಿನವರೆಗೂ ಒತ್ತಿ ಬಂದಿದ್ದ ಪೊದರಿಗೇ ನುಗ್ಗಿಸಿ ಸೈಕಲ್ ನಿಲ್ಲಿಸಿದೆ. ಸೇತುವೆಯುದ್ದಕ್ಕೆ ವಿಡಿಯೋ ಸವಾರಿ ಮಾಡುವ ಅಂದಾಜು ಮಾಡಿದ್ದೆ. ಸುಮಾರು ಹನ್ನೆರಡಡಿ ಎತ್ತರದ ಉಕ್ಕಿನ ತೊಲೆಗಳ ಸಂಯೋಜನೆ ತುಕ್ಕು, ಪಾಚಿ, ಕೆಲವು ಗಿಡಗಳ ಸ್ವಾಮ್ಯವನ್ನು ಧಿಕ್ಕರಿಸಿ ನೂರಕ್ಕೂ ಮಿಕ್ಕು ವರ್ಷಗಳಿಂದ ವಿಶ್ವಾಸಾರ್ಹ ಸೇತುವಾಗಿಯೇ ಉಳಿದಿರುವುದು ಸಣ್ಣ ಸಾಧನೆಯಲ್ಲ. ತುಸು ಕೆಳಪಾತ್ರೆಯಲ್ಲಿ, ಮಳವೂರ ಸೇತುವಿನ ಬಳಿ ಎರಡು ಬಂಡೆಗಳಿದ್ದಂತೇ ಇಲ್ಲೊಂದು ಪುಟ್ಟ ಕುದುರು ಗಮನ ಸೆಳೆಯುತ್ತದೆ. ನೆನಪಿನೋಣಿಯಲ್ಲಿ ಬಾಲ ಹಿಡಿದು ಬಂದಂತೆ ಸ್ವಲ್ಪ ಆಚೆಗಿನ ಕಚ್ಚಾ ರಸ್ತೆಯಲ್ಲಿ ಒಂದೆರಡು ವರ್ಷಗಳ ಹಿಂದೆ ನಡೆದ ಶಾಲಾ ವಾಹನ ದುರಂತವೂ ಕಾಡಿತು. ಸೇತುವೆಯ ಅಗಲ ಮಾತ್ರ, ಲಾರಿ ಕಾರು ಎದುರಾದರೆ ತಡವರಿಸುವ ಕಿಷ್ಕಿಂಧೆ. ಜತೆಗೊಬ್ಬ ಪಾದಚಾರಿಯೂ ಸಿಕ್ಕಿದರೆ – ಅನಾಥ ಶವ! ನಾನು ಒಂದು ಕೈಯಲ್ಲಿ ಕ್ಯಾಮರಾ ಹಿಡಿದು ಸರ್ಕಸ್ ಮಾಡುವ ಯೋಚನೆ ಬಿಟ್ಟು ಮುಂದುವರಿದೆ.

ಸೇತುವೆಯ ಇಕ್ಕಟ್ಟು, ಹೆಚ್ಚಿನ ಬಿಕ್ಕಟ್ಟುಗಳೊಡನೆ ಕೈಸೇರಿಸಿದಂತಿತ್ತು ಗುರುಪುರ ಪೇಟೆ. ಕೊರಕಲು ದಾರಿ, ಮುರುಕಲು ಮನೆಗಳನ್ನು ಹಾದು, ಅಂಗಡಿಗಳ ಜಗುಲಿಯಲ್ಲೇ ದಾರಿ ಮೈಚಾಚಿತ್ತು. ವಾಹನಗಳಿಗೆ ಹಿಂಸೆ ಕಡಿಮೆಯಾಗದಂತೆ ಐನೂರಡಿ ದಾರಿಗೆ ನಾಲ್ಕೈದು ವೇಗತಡೆ; ಗಾಯದ ಮೇಲೆ ಬರೆ, ರಕ್ಷಣೆಯ ಹೆಸರಿನಲ್ಲಿ ಆರ್ತರನ್ನೇ ಬಂಧಿಸಿದ ಹಾಗೆ. ಮತ್ತೆ ದೀರ್ಘ ಗುಡ್ಡೆ ಏರು. ಆ ಕೊನೆಯ ಸ್ಥಾಯೀ ಭಾವ ಇಂದಿಗೂ ಮುಳಿ ಹುಲ್ಲು. ಆದರೆ ಸುಮಾರು ಮೂವತ್ತು ವರ್ಷದ ಹಿಂದೆ ಬಲ ಪಾರ್ಶ್ವದ ಗುಡ್ಡದಂಚಿನಲ್ಲಿ ಅಕೇಸಿಯಾ ವನದೊಡನೆ ಒಂದು ಪುಟ್ಟ ಕೆಂಬಣ್ಣದ ಕೊಟ್ಟಿಗೆ ಮೊಳೆದಿತ್ತು. ಅದು ಕಾಲಕ್ರಮೇಣ ವಿಕಸಿಸುತ್ತಿದ್ದಂತೆ ಜನಪದದಲ್ಲಿ `ರೆಡ್ ಬಿಲ್ಡಿಂಗ್’ ಎಂದೇ ಪ್ರಸಿದ್ಧಿಯನ್ನೂ ಪಡೆದಿತ್ತು. ಇಂದು ಶಾಲೆ, ತೂಗುಸೇತುವೆ, ಲಾನು, ಗಾರ್ಡನು, ಆರೆಂಟು ಬಹುಮಹಡಿ ಕಟ್ಟಡ, ರೆಸಾರ್ಟ್ ಎಂದಿತ್ಯಾದಿ ತೀವ್ರ ಪ್ರಗತಿಪಥದಲ್ಲಿದೆ.

ಹಾಗೇ ತುಸು ಮುಂದಣ ಪೊಳಲಿ ಗೇಟ್. ಮೊದಲು ಇಲ್ಲಿ ಬಲಕ್ಕೆ ಕವಲಾಗುತ್ತಿದ್ದ ದಾರಿ ಹೊಂಬಣ್ಣದ ಹುಲ್ಲಿನ ಎಡೆಯ ಅಸ್ಪಷ್ಟದ ಕೆಂಬಣ್ಣದ ಜಾಡು. ಇಂದು ನುಣ್ಣನೆಯ ಅಚ್ಚ ಕಪ್ಪಿನ ರೋಡು. ಶೂನ್ಯದಿಂದೆದ್ದ ಶುದ್ಧ ಮಾಯೆಯಂತೆ ಅದಕ್ಕೊಂದು ಭಾರೀ ಕಾಂಕ್ರೀಟ್ ತೋರಣ! ಇದೇನು ಸಾರುತ್ತದೆ ಎಂದು ಹುಡುಕುತ್ತ ಹೋದರೆ ಆರೇಳು ಕಿಮೀ ಆಚೆ, ನೂರೆಂಟು ಕೃಷಿ, ಮನೆ, ಜನ ಕಳೆದು ಸಿಗುವ ಉತ್ತರ ರಾಜರಾಜೇಶ್ವರಿ ದೇವಳ. ಈಚೆಗೆ ಆ ದೇವಳದ ಆಚೀಚೆ ಎಲ್ಲೋ ಬಂದ, ಹೆಚ್ಚು ವಿಚಾರಪರವಾಗಬೇಕಿದ್ದ ರಾಮಕೃಷ್ಣಾಶ್ರಮಕ್ಕೂ ಈ ಬೋಳು ಗುಡ್ಡದ ಮೇಲೆ ಮೋಹ.

ಪೊಳಲಿಯ ಸ್ವಾಗತ ದ್ವಾರದೆದುರು ಪಳಪಳ ಕಲ್ಲಿನ ವೃತ್ತ ರಚಿಸಿ, ಮೇಲೆ (ಹಾಳು ಮುಳಿ ಸುಳಿಯದಂತೆ) ಮಕ್ಮಲ್ ಹುಲ್ಲಿನ ಹಾಸು ಹೊದೆಸಿ, ನಡುವೆ ಉರಿಬಿಸಿಲು ಕಾಯುವಂತೆ ವಿವೇಕಾನಂದರ ವಿಗ್ರಹ ಕೂರಿಸಿದ್ದಾರೆ. ಈ ಎಲ್ಲ ಚಟುವಟಿಕೆ ನಿರ್ಜನ ಗುಡ್ಡೆ ಮಂಡೆಗಿಂದು ಪೇಟೆಯ ಗತ್ತನ್ನೇ ತಂದಿದೆ ಎಂದರೆ ತಪ್ಪಾಗದು.

ನಾನು ಹೊರಟ ಒಂದೇ ಗಂಟೆಯಲ್ಲಿ ಮೂಡಬಿದ್ರೆಯ ಮುಕ್ಕಾಲು ದಾರಿಯೇ ಕಳೆದಿತ್ತು. ಹಾಗಾದರೆ ಪೂರ್ತಿ ಮಾಡೋಣವೆಂದು ನಾಲ್ಕು ಸುತ್ತು ಹೆಚ್ಚೇ ತುಳಿದೆ. ಕೈಕಂಬ, ಗಂಜಿಮಠ, ಸೂರಲ್ಪಾಡಿ ಕಳೆದು ಮುಂದುವರಿದರೆ ಒಂದೇ ದಾರಿಯಲ್ಲಿ ಮೂರನೇ ಬಾರಿ ಗುಡ್ಡೆಯೆತ್ತರದಿಂದ ಕಣಿವೆಯಾಳಕ್ಕೆ ಇಳಿಯುವ ಅನಿವಾರ್ಯತೆ. ಅದಕ್ಕೂ ಮುನ್ನ ಕತ್ತೆಕಿವಿ ಖ್ಯಾತಿಯ – ಮೂಡಬಿದ್ರೆಯಾಚೆಯಿದ್ದೂ ಕಂಗೊಳಿಸುವ ಕೊಡಂಜೆಕಲ್ಲಿನ ದರ್ಶನ ಮರೆತರುಂಟೇ!

(ವಿವರಗಳಿಗೆ ನೋಡಿ: ಕೊಡಂಜೆಕಲ್ಲಿನ ಕಥಾಜಾಲ) ಶರವೇಗದಲ್ಲಿ ಎಡಪದವಿನ ಪೇಟೆಗಿಳಿದು, ವಿರಳವಾಗಿರುವ ಭತ್ತದ ಗದ್ದೆಗಳ ನಡುವೆ ಸುಳಿದು, ಶೋಭಾವನ ಕಳೆದು, ಎಂವಿಶೆಟ್ಟಿ ಕಾಲೇಜಿನ ಗುಡ್ಡೆಯನ್ನು ಓರೆಯಲ್ಲೇ ಸುಧಾರಿಸಿ, ಕೊನೆಯ ಘಾಟಿ ಬುಡ ಸೇರಿದೆ. (ಚಾರ್ಮಾಡಿ, ಶಿರಾಡಿ, ಆಗುಂಬೆಗಳ ಮೇಲಾಟದಲ್ಲಿ ಇವನ್ನು ಮನ್ನಿಸಿ ಹೆಸರಿಸಿದವರಿಲ್ಲ ಎಂದೇ ಕಾಣುತ್ತದೆ. ಭಾಷೆಗೆ, ಪುಸ್ತಕಕ್ಕೆ, ಆಡಳಿತ ವಲಯಕ್ಕೆ, ಎಂತೆಂತದ್ದೋ ಅಮೂರ್ತಕ್ಕೆಲ್ಲಾ ಯಾವುದೇ ಪ್ರಾಯೋಗಿಕ ಉಪಯೋಗವಿಲ್ಲದಿದ್ದರೂ ಹೆಸರೂ ಮನ್ನಣೇ ಎಂದೆಲ್ಲಾ ಬಾಯಿಬಡಿಯುವವರು ನಾಳೆ ಇದಕ್ಕೂ ಓರಾಡುವ ದಿನ ಬರಬಹುದು.) ಮಂಗಳೂರು – ಮೂಡಬಿದ್ರೆ ನಡುವಿನ ತೋರ ಲೆಕ್ಕದಲ್ಲಿ ಇದು ಮೂರನೇದೂ ಹೌದು. ಆಳ್ವಾರ ವಿದ್ಯಾನಗರದಂಚನ್ನು ಸವರಿ, ಮೂಡಬಿದ್ರೆ ಸೇರುವಾಗ ಗಂಟೆ ಹನ್ನೆರಡು. ಗೆಳೆಯರಾದ ಕೃಷ್ಣಮೋಹನ್ (ನರವೈದ್ಯ), ಜಗನ್ನಾಥ ರೈ (ಪಶುವೈದ್ಯ) ಅವರನ್ನು ಅವರವರ ವೃತ್ತಿರಂಗದಲ್ಲೇ ಕಂಡು, ಹರಟೆ ಕೊಚ್ಚಿದೆ. ಪಡಿವಾಳರಿಗೆ ಊಟದ ವೆಚ್ಚ ತುಂಬಿದೆ. ಮತ್ತೆ ಮಂಗಳೂರು ಮುಖಿಯಾಗುವಾಗ ಉರಿ ಉರಿ ಅಪರಾಹ್ನ ಎರಡೂ ಮುಕ್ಕಾಲು.

ಹೋಗುವ ದಾರಿಯಲ್ಲಿ ಹತ್ತಿದ ಗುಡ್ಡೆಗಳನ್ನೆಲ್ಲ ಇಳಿಯುವ ಸಂತೊಷದಲ್ಲಿ ಇಳಿದಾರಿಗಳನ್ನೆಲ್ಲಾ ಏರಿಸುವ ಕಷ್ಟ ಮರೆತು ಮಂಗಳೂರು ಸೇರುವಾಗ ಸಂಜೆ ಐದು. ಹಾರಿದ ಗುಂಡಿಗಳು, ಓಲಾಡಿದ ಕೊರಕಲುಗಳು, ಗುದ್ದಿಸಿಕೊಂಡ ಚಡಿಗಳು, ಹರಿದ ಬೆವರು, ಸುಟ್ಟ ಮೈ ನೋಡಿ ಬೇರೆಯವರು ಕೇಳಿಯಾರು “ಬೇಕಿತ್ತಾ?” ವಾಸ್ತವದಲ್ಲಿ ಸೈಕಲ್ ಅಮಲು ಹೇಳುತ್ತದೆ “ಇನ್ನೂ ಹೆಚ್ಚು ಇನ್ನೂ ಹೆಚ್ಚು ☺”

ಸೋಲು ಸೋಲಲ್ಲ!:

ಮಂಗಳೂರು ಸೈಕಲ್ ಸಂಘ (ಎಂ.ಸಿ.ಸಿ) ಆದಿತ್ಯವಾರ ಆಗುಂಬೆಗೆ ಸವಾರಿ ಎಂದಿತ್ತು. ಆದರೆ ಹಿಂದಿನ ದಿನ ನಾನು `ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು’ (ನೋಡಿ: ಜಡಿಮಳೆಯ ಬ್ಲಾಗುಗಳು) ಕಟಾವು ಮಾಡುವಲ್ಲಿ ಇದನ್ನು ಉಪೇಕ್ಷಿಸಿದ್ದೆ. ಹಾಗೆಂದು ಸುತ್ತದ ದಾರಿ, ನೋಡದ ವೈವಿಧ್ಯ ಮುಗಿಯಲುಂಟೇ ಎಂದುಕೊಳ್ಳುತ್ತಾ ಸಂಜೆ ನಾಲ್ಕೂ ಕಾಲಕ್ಕೆ ಸೈಕಲ್ಲೇರಿದೆ. ಕದ್ರಿಕಂಬಳಕ್ಕಿಳಿಯುವಾಗಲೇ ಪೋಲೀಸ್ ಬಂದೋಬಸ್ತು ಕಂಡೆ. ಮುಂದೆ ನನ್ನ ಬಜ್ಪೆ ದಾರಿಯುದ್ದಕ್ಕೂ ಪೋಲಿಸ್ ತುಕಡಿಗಳು ಸಿಕ್ಕಾಗ ಅರಿವಾಯ್ತು – ಉಪರಾಷ್ಠ್ರಪತಿಯ ಆಗಮನ. ಮರವೂರು ಚಡಾವು ಶುರುವಾಗುವಲ್ಲಿ ಬಲಕ್ಕೆ ಹೊರಳಿ, ಮುಖ್ಯ ದಾರಿ ಬಿಟ್ಟು ಪೊಲಿಸ್ ದಿಟ್ಟಿಯಿಂದ ದೂರಾದೆ.

ವಿಮಾನ ನಿಲ್ದಾಣದ ಹಿಂಬಾಗಿಲಿಗೆ ಹೋಗುತ್ತಿದ್ದ ಹಳೆಯ ಕಡಿದಾದ ದಾರಿಯನ್ನು ಕರಗಿಸಿ `ಸುಲಭ ಸುಂದರ’ಗೊಳಿಸುವ ಕಾರ್ಯ ಇನ್ನಷ್ಟು ಮುಂದುವರೆದಿತ್ತು. ನಾನು ಹಾಗೂ ಬಜ್ಪೆಯನ್ನು ನಿರಾಕರಿಸಿ, ಆದ್ಯಪಾಡಿಯ ಕಾಂಕ್ರೀಟ್ ರಸ್ತೆಯಲ್ಲಿ ಜೂಂ – ಮುಂದುವರಿದೆ. ಹಿಂದೆ ಇಲ್ಲಿ ಕಂಡಿದ್ದ (ನೋಡಿ: ಚಕ್ರೇಶ್ವರನ ಸಿಂಹಾವಲೋಕನ) ದಟ್ಟ ಕಾಡಿನ ಒಂದಂಶ ಸೌದೆಯಾಗುತ್ತಿತ್ತು. ಆಗ, ವಾರದ ಹಿಂದೆ ಪತ್ರಿಕೆಗಳೆಲ್ಲ ಗುಲ್ಲೆಬ್ಬಿಸಿದ ಚಿರತೆಯೊಂದು ಇಲ್ಲಿ ಯಾಕೆ ಬಯಲಾಯ್ತು ಎಂದು ನನಗರ್ಥವಾಯ್ತು. ಹಾಗೇ ಅರಣ್ಯ ಇಲಾಖೆ ಬಲೆ, ಬೋನು ಎಂದೆಲ್ಲಾ ಮಾಡಿದ ಅರೆಮನಸ್ಸಿನ ಪ್ರಯತ್ನಗಳು ಇನ್ನು ಯಶಸ್ಸು ಕಾಣದಷ್ಟು ದೂರ (ಸಹಜ ಆಹಾರ, ವಾಸಯೋಗ್ಯ ಕಾಡು ನಾಶವಾದದ್ದಕ್ಕೆ) ಅದು ಓಡಿಹೋಗಿರಲೂಬಹುದು ಎಂದೂ ಆಶಿಸಿದೆ. ಚಿರತೆಯಿಂದ ಹಲ್ಲೆ, ಚಿರತೆಗೆ ಬಲಿ, ಚಿರತೆಯ ಬೇಟೆ ಎಂಬಿತ್ಯಾದಿ ಕೇಳಲಿಲ್ಲವಲ್ಲಾ ಎಂಬ ಸಂತಸವೂ ನನಗಿದೆ. ಇನ್ನೊಂದು ಅಪಸವ್ಯವನ್ನೂ ಕಿರಿದರಲ್ಲಿ ಇಲ್ಲೇ ಹೇಳಬೇಕಾಗಿದೆ. ಚಿರತೆ ಸುದ್ದಿಯ ಹಿಂದೆ ಮುಂದೆ, ಮತ್ತಿಲ್ಲೇ, ವಲಯದ ನಿರ್ಜನತೆಯನ್ನು ದುರುಪಯೋಗಪಡಿಸಿಕೊಂಡ ಯಾರೋ ದುರಾಚಾರಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಪತ್ರಿಕೆಗಳಲ್ಲಿ ವರದಿಯಾಗಿತ್ತು. ವಿಪರ್ಯಾಸವೆಂದರೆ, ನಾಗರಿಕತೆ ಆವರಿಸಿದ ವನ್ಯ, ಮೃಗಕ್ಕೆ ರಕ್ಷಣೆ ಕೊಟ್ಟಂತೇ ಮನುಷ್ಯನ ಮೃಗೀಯ ಭಾವಕ್ಕೆ ಮರೆಯಾಗಿಯೂ ಒದಗಬಲ್ಲುದು!

ಕಚ್ಚಾಮಾರ್ಗಕ್ಕೆ ಸೂಕ್ತವಾದ ನನ್ನ ಚಕ್ರ ಕಾಂಕ್ರೀಟಿನ ಇಳಿಜಾರುಗಳಲ್ಲಿ ಞರಞರ ಸದ್ದು ಮಾಡುತ್ತ ಧಾವಿಸಿದರೆ, ಒಮ್ಮೆಗೇ ಎದುರಾಗುತ್ತಿದ್ದ ದಿಟ್ಟ ಏರುಗಳಲ್ಲಿ ನನ್ನ ಏದುಸುರು ಸದ್ದು ಮಾಡುವಂತಾಗುತ್ತಿತ್ತು. ದಾರಿ ನುಣ್ಣನೆಯ ಕಾಂಕ್ರೀಟ್ ಕಂಡರೂ ಏರಿಳಿತಗಳ ಸಮನ್ವಯ, ತಿರುವುಗಳ ತಿದ್ದುಪಡಿಗಳು ವೈಜ್ಞಾನಿಕವಾಗಿರಲಿಲ್ಲ. ಒಂದೆಡೆಯಂತು ಏಣೊಂದರ ಬುಡಕ್ಕೆ ತೀವ್ರವಾಗಿ ಇಳಿದು, ಎಡಕ್ಕೆ ಹೊರಳಿದ್ದೇ ಮತ್ತೆ ಅನಿರೀಕ್ಷಿತವಾಗಿ ಅಷ್ಟೇ ಕಡಿದಾಗಿ ಏರು ಸಿಕ್ಕಾಗ ನಾನು ಸೋಲಬೇಕಾಯ್ತು. ಪೆಡಲೊತ್ತುವುದನ್ನು ತುಂಬ ಹಗುರಗೊಳಿಸಿ, ಎಂಥಾ ಏರನ್ನೂ ಕುಳಿತೇ ಏರುವ ಸೌಲಭ್ಯವೇ ಗೇರು ಸೈಕಲ್ಲುಗಳ ವಿಶೇಷ. ಹಾಗೆಂದು ಒತ್ತಡ ಶುರುವಾದ ಮೇಲೆ ಗೇರು ಬದಲಾಯಿಸುವುದು ಅಸಾಧ್ಯವಾಗುತ್ತದೆ, ಸಂಬಂಧಿಸಿದ ಬಿಡಿಭಾಗಗಳಿಗೆ ಆಘಾತಕರವೂ ಆಗುತ್ತದೆ. (ಸರಪಳಿ ಕಡಿಯಬಹುದು, ಕಚ್ಚುಗಾಲಿಯ ಹಲ್ಲು ಮುರಿಯಬಹುದು, ಸವಾರನೇ ಮಗುಚಿಬೀಳಬಹುದು.) ನಾನು ಸೈಕಲ್ಲಿಳಿದ ನೆಪದಲ್ಲಿ ಐದು ಮಿನಿಟು ವಿರಮಿಸಿದೆ. ಮತ್ತೆ ನಿಂತಲ್ಲೇ ಹಿಂದಿನ ಚಕ್ರವನ್ನು ಎತ್ತಿ ಹಿಡಿದು ಸೂಕ್ತ ಗೇರನ್ನು ಅಳವಡಿಸಿಕೊಂಡು ಸವಾರಿಯಲ್ಲೇ ಮುಂದುವರಿದೆ.

ಆದ್ಯಪಾಡಿ ಪೇಟೆ ನನ್ನನ್ನು ಸ್ವಾಗತಿಸಿತು. `ಸಿಂಹಾವಲೋಕನ’ದಂದು ಅಲ್ಲಿನ ಮಣ್ಣ ಮಾರ್ಗ ಪೂರ್ಣ ಕಚ್ಚಾವಿತ್ತು. ಈಗ ದಪ್ಪನೆ ಡಾಮರು ಹೊದಿಕೆ ಕಾಣುತ್ತಿದ್ದದ್ದೊಂದು ವಿಶೇಷ. “ಇನ್ನು ಗುಜರಿ ಬೈಕ್ ಕೊಟ್ಟು, ನುಣ್ಣನೆ ಓಟದ ಕೈನೆಟಿಕ್ ಹೊಂಡಾ” ಎಂದೊಬ್ಬ ಹಳ್ಳಿಗ ಯೋಚಿಸಿ, ನಿರ್ಜನ ಬೀದಿಯಲ್ಲಿ ತರಬೇತು ನಡೆಸಿದ್ದ. ಆದ್ಯಪಾಡಿಯ ಎತ್ತರದಿಂದ ಬೀಬೀ ಲಚ್ಚಿಲ್ ದೇವಳದ ಕವಲಿನವರೆಗಿನ ಕಟ್ಟಿಳಿಜಾರು, ಇನ್ನೂ ಪುಡಿ ಕಲ್ಲಿನ ಹಾಸಿನ ಸ್ಥಿತಿಯಲ್ಲಿತ್ತು. ಯಾವ ಕ್ಷಣಕ್ಕೂ ನಾನು ಜಾರಿ ಧರಾಶಾಯಿಯಾಗುವ ಹೆದರಿಕೆಯಲ್ಲೇ ಇಳಿಸಿದೆ. ನನ್ನ ಅಸಂಖ್ಯ ಸರ್ಕೀಟುಗಳಲ್ಲಿ ಈ ವಲಯದ ಏರಿಳಿತಗಳ ತೀವ್ರತೆಗಳಲ್ಲಿ ಬಳಲಿದ್ದ ಬಿರಿ-ರಬ್ಬರು ಸವೆದು, ಲೋಹದ ಶಬ್ದವೇ ಬರತೊಡಗಿತ್ತು! (ಊರಿಗೆ ಮರಳಿದ ಕೂಡಲೇ ಮಾಡಿದ ಮೊದಲ ಕೆಲಸ ಬಿರಿ-ರಬ್ಬರ್ ಬದಲಾವಣೆ. ಇಲ್ಲವಾದರೆ ಲೋಹದ ಚಕ್ರಕ್ಕೆ ಖಾಯಂ ಗಾಯವಾಗುತ್ತದೆ.) ನಾನು ಕ್ಷೇಮವಾಗಿ ಮತ್ತೆ ಡಾಮರು ಮಾರ್ಗ ಸೇರಿಕೊಂಡೆ. ಮತ್ತೂ ಒಂದು ಸಣ್ಣ ಗುಡ್ಡ ಏರಿಳಿದ ಮೇಲೆ ವಿಸ್ತಾರ ಬಯಲು.

ಅಲ್ಲಿನ ಸುಮಾರು ಒಂದೂವರೆ ಕಿಮೀ ಹೊಸದಾಗಿ ಮಣ್ಣು ಹಾಕಿ ಎತ್ತರಿಸಿದಂತಿತ್ತು. ಮಳೆಗಾಲದಲ್ಲಿ ಬಂದಿದ್ದರೆ ಸಿಕ್ಕಿಬೀಳುವುದೂ ಖಾತ್ರಿಯೇ ಇತ್ತು. ಈಗ ಮಾತ್ರ ಆಚೀಚೆ ವಿಸ್ತಾರ ಗಜನಿ ನೆಲದಲ್ಲಿ ದಟ್ಟ ನೊಜೆ ಹುಲ್ಲು, ಮೇಯುವ ಎಮ್ಮೆ ಕೋಣಗಳು, ತೀಡುವ ತಂಪನೆ ಗಾಳಿ, ದಿಗಂತದಲ್ಲಿ ಗೋಡೆ ಕಟ್ಟಿದ ಬೆಟ್ಟದ ಸೌಂದರ್ಯ, ನಡುವೆ ಉಯ್ಯಾಲೆಯಾಡಿಸುವ ಮಾರ್ಗ – ಸರ್ಕೀಟು ಸಾರ್ಥಕ ಅನ್ನಿಸಿಬಿಟ್ಟಿತು. ಒಂದರೆಕ್ಷಣ ನಿಂತು ಕ್ಯಾಮರಕ್ಕೂ ಹಸಿವಾರಿಸಿದೆ. ಆದರೆ ಸೀಮಿತ ಅವಧಿಗೆ, ಅನಿರೀಕ್ಷಿತ ಉದ್ದನ್ನ ದಾರಿಯಲ್ಲಿ ನಾನಿದ್ದೇನೆ ಎಂಬ ಎಚ್ಚರ ಮತ್ತೆ ಓಡಿಸಿತು. ಸಂಶಯವಿದ್ದಲ್ಲೆಲ್ಲ ಅವರಿವರನ್ನು ದಾರಿ ವಿಚಾರಿಸುವುದಿತ್ತು. ದಾರಿ ಹೇಳುವುದು ಹೇಳಿ, ಸೈಕಲ್ ನೋಡುತ್ತಲೇ “ಏನು ವಾಕಿಂಗಾ” ಅಂತಲೂ ಒಬ್ಬರು ಕೇಳಿದರು.

ನಿತ್ಯಾವಶ್ಯಕತೆಗಳಿಗೆ ಕಾಡುಗುಡ್ಡೆ, ಗೊಸರು ದಾರಿ ಮೆಟ್ಟಬೇಕಾದವರಿಗೆ ನಗರವಾಸಿಗಳ ಉದ್ದೇಶವಿಲ್ಲದ ಯಾವುದೇ ಸುತ್ತಾಟ ಹಾಗೆ ಕಾಣುವುದು ತಪ್ಪಲ್ಲ! ಮುಂದಣ ಗುಡ್ಡೆಯ ಎತ್ತರದಲ್ಲಿ ಗುರುಪುರ ಕೈಕಂಬದ ಪೇಟೆಯಂಚು ತೋರುತ್ತಿತ್ತು. ಆದರೆ ಏರುದಾರಿ ಮಾತ್ರ ಅತಿ-ತೀವ್ರ. ಒಂದು ಗುಣಿಸು ಒಂದು ಗೇರು ಹಾಕಿ, ಎರಡೂ ಮೊಣಕೈ ಕಿಸಿದು, ಹ್ಯಾಂಡಲ್ಲಿಗೆ ಹಣೆ ಹಚ್ಚಿ ಸಪುರ ದಾರಿಯಂಚನ್ನಷ್ಟೇ ನೆಚ್ಚಿ ಅವಿರತ ತುಳಿದೆ. ಐದೂಮುಕ್ಕಾಲಕ್ಕೆ ಗುರುಪುರ ಕೈಕಂಬ ತಲಪಿದ್ದೆ. ಸವೆದ ಆಕಾಶ ಪಾತಾಳ ದಾರಿಗೆ ಹೋಲಿಸಿದರೆ ಮುಂದಿನ ಸುಮಾರು ಹದಿನೈದು ಕಿಮೀ ಮಂಗಳೂರು ದಾರಿ ತುಂಬ ಸರಳವಾಗಿಹೋಯ್ತು! ಆದರೆ ರೆಡ್ ಬಿಲ್ಡಿಂಗಿನಿಂದ ಇಳಿಜಾರಿನ ಮಜಾ ತೆಗೆಯುವಲ್ಲಿ ಗುರುಪುರದ ಸೊಂಟ ಮುರಿಯುವ ವೇಗತಡೆ ಮರೆಯಲಿಲ್ಲ. ಹಾಗೇ ಕೆತ್ತಿಕಲ್ಲಿನ ಚಡಾವು ಏರಿಸಿದ ಬಳಲಿಕೆಯನ್ನು, ಕುಡುಪಿನ ಗುಂಡಿಗಿಳಿದು ತೀರಿಸಿಕೊಂಡೆ. ಛಲಬಿಡದೆ ಕುಲಶೇಖರದ ಗುಡ್ಡೆಯನ್ನೂ ಏರಿ ಮುಗಿಸುವಾಗ ಸೂರ್ಯ ಸೋತಿದ್ದ. ಆದರೂ ಕತ್ತಲೆಗೆ ಮುನ್ನ ಮನೆಯೆಂಬ ನನ್ನ ಶಿಸ್ತು ಭಂಗವಾಗುವಂತೆ ಮಾಡಿದ್ದಕ್ಕೆ ನಾನೂ ಸೋತಿದ್ದೆ.

ನವರಾತ್ರಿಗೆ ನವರಂಗಿ:

ಬೆಟ್ಟ ಹತ್ತುವ ಸೈಕಲ್ಲಿಗೆ (ಎಂಟೀಬಿ) ಕೆಸರ್ಗಾಪು (ಮಡ್ಗಾರ್ಡ್) ಬೇಡಾಂತ ನನ್ನ ಸೈಕಲ್ ತಯಾರಕರ ತರ್ಕ, ಸರಿಯಾಗಿಯೇ ಇದೆ. ಆದರೆ ನನಗೆ ಪೇಟೆಯಲ್ಲೂ ಬಳಸುವ ಅನಿವಾರ್ಯತೆಯಿದೆ. ಅಲ್ಲಿ ಕಾಂಕ್ರೀಟ್ ರಸ್ತೆಯೇ ಮಳೆನೀರ ಚರಂಡಿಯಾದ ಔದಾರ್ಯ, ಭೂಗತ ಕೊಳಚೆ ಬೀದಿಗಳಲ್ಲಿ ಉದ್ಭವತೀರ್ಥವಾಗುವ ಪವಾಡ, ಮನೆಮನೆಯ ಕೊಳಕನ್ನು ತುಂಬಿಕೊಂಡು ದಾರಿಯಂಚಿನಲ್ಲಿ ಗುಟ್ಟಾಗಿ ಕೂತ ಪ್ಲ್ಯಾಸ್ಟಿಕ್ ಚೀಲಗಳನ್ನು ಬೀದಿನಾಯಿಗಳು ರಟ್ಟು ಮಾಡಿದ್ದೇ ಮುಂತಾದವನ್ನು ಸೈಕಲ್ ಚಕ್ರ ಪಚಕ್ಕೆನಿಸಿದಾಗ ಕಂಬಳದೋಟಕ್ಕೆ ನಿಶಾನಿ ಸಿಕ್ಕಂತೆ ನನ್ನ ಬೆನ್ನು, ತಲೆಯನ್ನು ಕೆಸರು ಮುಟ್ಟಿದಾಗ ಆಗುವ ಸಂತೋಷ ವರ್ಣಿಸಲಸದಳ!

ಹೆಚ್ಚಿನ ದಂಡ ಕೊಟ್ಟು ನಾನೇ ಸೈಕಲ್ಲಿಗೆ ಕೆಸರ್ಗಾಪು ಹಾಕಿಸಿದೆ. ಆದರೆ ಆ ಮೇಡಿನ್ನಿಂಡಿಯಾ ಗಲಗಲ ಆಡುತ್ತಿದ್ದು ಎರಡೇ ತಿಂಗಳಲ್ಲಿ ಮುರಿದು ಬಿತ್ತು. ಹೇಗೂ ಮಳೆ ಮುಗೀತಲ್ಲಾಂತ ನಿನ್ನೆ ತಣ್ಣೀರುಬಾವಿ ಸುತ್ತು ಹೋಗಿದ್ದೆ. ವಾಪಾಸು ಹೊರಟಾಗ ನನ್ನ ಗ್ರಹಚಾರಕ್ಕೆ ಮಳೆರಾಯರ ಉತ್ಸವ ಶುರುವಾಯ್ತು. ಹನಿ ಹನಿಯಾಗಿಳೆಗಿಳಿಯುತ್ತ, ಹೆದ್ದಾರಿಗಾಗುವಾಗ ಭಾಜಾಬಜಂತ್ರಿಯೊಡನೆ ಪೂರ್ಣ ಮೆರವಣಿಗೆಯನ್ನೇ ತೆಗೆದಿತ್ತು. ಮನೆ ತಲಪುವಾಗ ನಾನು ತೊಟ್ಟ ಬಟ್ಟೆ ಸಹಿತ ನವರಾತ್ರಿಗೆ ನವರಂಗಿಯಾಗಿದ್ದೆ. `ಅಬಕ’ ಸಾಬೂನಿನ ಸ್ನಾನದ ಮಝಾಕ್ಕೆ, `ಡಿಯಿಪ’ ಮಾರ್ಜಕದ ಸಾಮರ್ಥ್ಯಕ್ಕೆ ನಾನೂ ನನ್ನ ಬಟ್ಟೆಯೂ ಅದ್ಭುತ ರೂಪದರ್ಶಿಯಾಗಿದ್ದೆವು ☹

ಸೂಪರ್ ಅಜ್ಜೇರೇ!:

ಸೈಕಲ್ಲೇರಿದೆನೆಂದರೆ ಪ್ರತಿ ಕವಲುದಾರಿಯಲ್ಲೂ ನನಗೆ ಸಾಧ್ಯತೆಗಳ ಸಂಖ್ಯೆ ಏರುತ್ತಲೇ ಹೋಗುತ್ತದೆ. ಮಾಡಿದ್ದೇ ಮಾಡಿದರೆ ರುಚಿ ಕೆಡುತ್ತದೆ. ತಲೆಯೊಳಗೆ ಯೋಚನೆ ಸುತ್ತುತ್ತಿದ್ದಂತೆ, ಆ ಒಂದು ಸಂಜೆ ನನ್ನ ಸೈಕಲ್ ಚಕ್ರ ಪುತ್ತೂರಿನತ್ತ ಓಡಿತ್ತು. ಅಡ್ಯಾರು ಕಟ್ಟೆಯಲ್ಲಿ ಒಮ್ಮೆಗೆ ನೇತ್ರಾವತಿ ನೆನಪಿಗೆ ಬಂದಳು. ಹಿಂದೆ ರಾಣೀಕೋಟು (ರೈನ್ ಕೋಟ್) ಪರೀಕ್ಷೆಗೆ ಹೊರಟವನು ನೇತ್ರಾವತಿಯನ್ನು ದೋಣಿಗಟ್ಟೆಯಲ್ಲೇ ನೋಡಿ ಮರಳಿದ್ದು ನಿಮಗೆ ಗೊತ್ತು. (ಮತ್ತೆಲ್ಲಾದರೂ ದುಷ್ಟ ರಾಜಕಾರಣಿಗಳು ಯಾಮಾರಿಸಿ ಆಕೆಗೆ ಬೆಂಗಳೂರು ಸಂಬಂಧ ಕುದುರಿಸಿದರೋ ಎಂಬ ಭಯವೂ ಇತ್ತೆನ್ನಿ!) ಕ್ಷಣಾರ್ಧದಲ್ಲಿ ನನ್ನ ಸವಾರಿ ಅತ್ತ ಹೊರಳಿಯಾಗಿತ್ತು.

ವಿದ್ಯಾರ್ಥಿಗಳು, ವಿವಿಧ ಕಾರ್ಮಿಕ ವರ್ಗದವರ ಜೊತೆ ಸೈಕಲ್-ಸಂಕೋಚದಲ್ಲೇ ದೋಣಿ ಏರಿದೆ. “ಮಲ್ಲತ್, ಮೋಟರ್ ಸೈಕಲ್ಲಾ ಪೋಪುಂಡ್” ಎಂದು ಐದು ರೂಪಾಯಿ `ಲಗ್ಗೇಜ್’ ರುಸುಮು ಪಡೆದ ನಿರ್ವಾಹಕ ಸಮಾಧಾನಿಸಿದ. ಅತ್ತ ಹರೇಕಳದಲ್ಲಿಳಿದು ಅಲಡ, ಎಲ್ಯಾರ್ ಪದವು, ಅಂಬ್ಲಮೊಗರು ಕಳೆಯುವಾಗ ನನಗೆ ಹಿಂದೆ ಕಲ್ಲಾಪುವಿನಿಂದ ಬಂದ ದಾರಿಯ ಗುರುತು ಹತ್ತಿತು. ಈಗ ಎದುರು ದಿಕ್ಕಿನಲ್ಲಿದ್ದೆ, ಅಷ್ಟೆ. ಮತ್ತೆ ಮುನ್ನೂರು, ಕಲ್ಲಾಪುಗಳಿಗಾಗಿ ಹೆದ್ದಾರಿಗೆ ಬಿದ್ದೆ [ಅಪಾರ್ಥ ಗ್ರಹಿಸಬೇಡಿ].

ಉಳ್ಳಾಲ ಸಂಕದಲ್ಲಿ ನಾನು ಮನೆಮುಖ ಹಿಡಿದದ್ದು ನೋಡಿ ಸೂರ್ಯನೂ ಬಿಡಾರಕ್ಕೆ ಜಾರುತ್ತಲಿದ್ದ. ಅತ್ತಣ ಹಳಿಯ ಮೇಲೆ ಸಾಗಿದ್ದ ರೈಲು ಆತನಿಗೆ ಜೈಕಾರ ಹಾಕಿತ್ತು. ಅದರ ಭೋಗಿಯ ಮೂರನೆಯ ಕಿಟಕಿಯ ಸಂದಿನಿಂದ ಚಾಚಿದ ಒಂದು ಸುಂದರ ಕೈ ಬಲು ಬಿರುಸಾಗಿ ಟಾಟಾ ಮಾಡುತ್ತಿತ್ತು. ನಾನು ಆಚೀಚೆ ನೋಡಿ ಯಾರೂ ಇಲ್ಲವೆಂದಾದ ಮೇಲೆ ಅದು ನನಗೇ ಸರಿ ಎಂದು ಬೀಗಿ ಮೀಸೆಮೇಲೆ ಕೈ ಹಾಕಿದ್ದೆ. ಅಷ್ಟರಲ್ಲೇ ರೊಂಯ್ಯೆಂದು ಪಕ್ಕದಲ್ಲೇ ಹಾದು ಹೋದ ಬೈಕ್ ಪೋಕ್ರಿಯೊಬ್ಬ ಅರಚಿದ್ದ “ಸೂಪರ್ ಅಜ್ಜೇರೇ!”

ಮಸೈಸಸಂ ಅಥವಾ ಎಂಸಿಸಿ:

ಮಂಗಳೂರು ಸೈಕಲ್ ಸವಾರರ ಸಂಘಕ್ಕೇನೂ (ಮಸೈಸಸಂ ಅಥವಾ ಎಂಸಿಸಿ) ಔಪಚಾರಿಕ ಬಂಧಗಳಿಲ್ಲ. ಸೈಕಲ್ವಂದಿಗರು ಬಹುಮತದ ಅನುಕೂಲ ನೋಡಿಕೊಂಡು ಒಟ್ಟು ಸೇರಿ ಸೈಕಲ್ ಮೆಟ್ಟುವುದೊಂದೇ ಕಲಾಪ. ಅಲ್ಲಿ ಕಿರಿಯರಿಗೆ ಹಿರಿಯರಿಂದ ಅನುಭವ ಲಾಭ, ಹಿರಿಯರಿಗೆ ಸಮ`ವ್ಯಸನಿ’ಗಳ ಸಹವಾಸ ಸಂತೋಷ. ಅದು ತರುಣ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳದೇ ಕೂಟ. ಎಲ್ಲರವೂ ವಿವಿಧ ಸಾಮರ್ಥ್ಯಗಳ ಹೊಸ ತಲೆಮಾರಿನ ಸೈಕಲ್ಲುಗಳೇ. ಎಲ್ಲ ಬೆಳಗ್ಗೆ ಸುಮಾರು ಎರಡು ಗಂಟೆಯ ಸೈಕಲ್ ಕಲಾಪ ಮುಗಿಸಿ ತಮ್ಮ ನಿಜವೃತ್ತಿಗೆ ಓಡುವ ತರಾತುರಿಯವರು. ನಿವೃತ್ತನಾದ ನಾನೋ ನಿತ್ಯದಲ್ಲಿ ಸಂಜೆಯನ್ನು ಒಗ್ಗಿಸಿಕೊಂಡವನು. ಆದರೂ ನಿನ್ನೆ ಎಲ್ಲ ಹೊಂದಿಸಿ ಆರು ಗಂಟೆಗೆ ಕದ್ರಿ ಪಾರ್ಕಿನೆದುರು ಆ ತಂಡ ಸೇರಿಕೊಂಡೆ. ನಿಗದಿತ ವೇಳೆಗೆ, ಪಕ್ಕಾ ಯೋಗ್ಯತೆಯ ನಾಯಕತ್ವದ ಗಾಡ್ಫ್ರೀ ಪಿಂಟೋ ಬೆನ್ನಿಗೆ ದೀಪಿಕಾ (ಏಕೈಕ ಮಹಿಳೆ) ಸೇರಿದಂತೆ ಹತ್ತು ಮಂದಿಯ ತಂಡ “ಬಜ್ಪೆ ಚಲೋ” ಎಂದಿತು; ನಮ್ಮದೂ ಮಂಗಳೂರು ದಸ್-ಸೇರಾ!

ಪದವು ಶಾಲೆಯ ಮರೆಯಿಂದ, ಯೆಯ್ಯಾಡಿ ಎದುರಿಂದ…. ಎಂದು ಸಾಗಿದೆವು ಮಾಮೂಲೀ ವಿಮಾನನಿಲ್ದಾಣದ ದಾರಿ. ಅಲ್ಲಿ ಇಲ್ಲಿ ತುಸು ನಿಂತು, ಚದುರುತ್ತಿದ್ದ ತಂಡವನ್ನು ಒಗ್ಗೂಡಿಸುತ್ತ, ಅಗತ್ಯವಿದ್ದಲ್ಲೆಲ್ಲ ಸವಾರಿಯ ಪ್ರಾಯೋಗಿಕ ತತ್ತ್ವಗಳನ್ನು ಎಲ್ಲರೂ ವಿನಿಮಯಿಸಿಕೊಳ್ಳುತ್ತ, ಅಳವಡಿಸಿಕೊಳ್ಳುತ್ತ ಸಾಗಿದೆವು. ಪಿಂಟೋ ಸ್ಫೂರ್ತಿಯ ಚಿಲುಮೆ. ಆತ ಆಗುಂಬೆ, ಚಾರ್ಮಾಡಿಯಾದಿ ದೀರ್ಘ ಓಟಗಳಿಗೆ ರಂಗು ತುಂಬುವಾಗ ಅಳ್ಳೇಶಿಗೂ ಮನದೊಳಗದರದೇ ಗುಂಗು. ಮತ್ತೆ ಕುಂದಾದ್ರಿಯ ಕೋಡುಗಲ್ಲಿಗೇರುವ ಮೂರು ಕಿಮೀ ದಾರಿಯ ಸವಾಲಂತೂ ಸೈಕಲ್ಲಿಗರ ಗೌರೀಶಂಕರ. ಆತ ಅನುಭವದ ಹಿರಿತನವಿದ್ದರೂ ನನ್ನ ವಯೋ ಹಿರಿತನಕ್ಕೆ ಕುಂದುಂಟಾಗದಂತೆ ಕೊಟ್ಟ ಸಲಹೆಗಳು ತೂಕದವೇ ಇತ್ತು.

ಸೀಟಿಳಿಯದೆ ಅಷ್ಟೂ ಜನ ವಿಮಾನ ನಿಲ್ದಾಣದ ನಾಲ್ಕೆಂಟು ಹಿಮ್ಮುರಿ ತಿರುವುಗಳನ್ನು ಏರಿಳಿದೆವು. ಮರಳುವ ದಾರಿಯಲ್ಲಿ ಕಾವೂರು ವೃತ್ತದಿಂದ ಮಹಾಲಿಂಗೇಶ್ವರ ದೇವಳದ ಗುಡ್ಡೆ ದಾರಿಯನ್ನು ಮೇರಿಹಿಲ್ಲಿನ ಹೆಲಿ-ಪ್ಯಾಡಿನೆತ್ತರಕ್ಕೇರಿದ್ದೂ ಆಯ್ತು. ಪಿಂಟೋ ಉತ್ಸಾಹಕ್ಕಿನ್ನೇನೋ ಒಂದು ವಿಶೇಷ ದಿಬ್ಬ-ದಾರಿ ಹತ್ತುವ ಲಕ್ಷ್ಯ ಕಾಡಿದರೂ (ನಾನೂ ಸೇರಿದಂತೆ) ಬಹುತೇಕ ಮಂದಿ ಹೊತ್ತೂ ಏರುತ್ತಿದ್ದುದರಿಂದ ಮನೆಯತ್ತ ಹೊರಳಿದೆವು.

ಮರುದಿನ ಗಾಂಧೀ ಜಯಂತಿ. ಮಸೈಸಸಂ, ಗಾಂಧಿಯ ಸರಳತೆಗೆ ಪರ್ಯಾಯವಾದ ಸೈಕಲ್ ಸವಾರಿಯನ್ನು ಪ್ರಚುರಿಸಲು ನಗರದೊಳಗೊಂದು ಸುತ್ತು ಹಾಕುವುದಿತ್ತು. ಎಲ್ಲ ಬೆಳಿಗ್ಗೆ ಲೇಡಿ ಹಿಲ್ ವೃತ್ತದಲ್ಲಿ ಸೇರಿದೆವು. ಆರೆಕ್ಸ್ ಲೈಫ್ ಬಳಗದವರ ವರ್ಷಂಪ್ರತಿ ಮಹಾರ್‍ಯಾಲೀ ತೊಡಗುವುದೂ ಅಲ್ಲಿಂದಲೇ. ಆದರೆ ಅದರಂತೆ ಪ್ರಚಾರ, ಉದ್ಘಾಟನೆ, ಸಮಾರೋಪ ಮುಂತಾದ ಔಪಚಾರಿಕತೆಗಳನ್ನು ಸರಳತೆಗಾಗಿ ಎಂಸಿಸಿ ಬಿಟ್ಟಿತ್ತು. ಸುಮಾರು ಹದಿನೈದು ಮಂದಿಯಷ್ಟೇ ಒಟ್ಟಾಗಿದ್ದೆವು.

“ಇನ್ನು ದೇವಾಲಯಗಳಲ್ಲ, ವಿದ್ಯಾಲಯಗಳು” ಎಂದೇ ಪ್ರಚುರಿಸಿದ (ಶ್ರೀ ನಾರಾಯಣ) ಗುರುವಾಕ್ಯಕ್ಕೆ ವ್ಯತಿರಿಕ್ತವಾಗಿ ನಡೆಯುವ `ಮಂಗಳೂರು ದಸರಾ’ ದ್ವಾರದಲ್ಲೇ ಸೇರಿದ್ದೆವು. ಪೆಟ್ರೋ ಉರುವಲಿನ ದೆಸೆಯಿಂದ ಭೂಮಿ ಬಿಸಿಯೇರುವುದರ ತಡೆಗೆ ನಮ್ಮದೊಂದು ಸಂಕೇತವೆಂಬಂತೆ, ಪೆಟ್ರೋಲ್ ಬಂಕಿನೆದುರಿಂದ ಹೊರಟೆವು. ಲಾಲ್ಭಾಗ್, ಪೀವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ, ಬೆಂದೂರ್ವೆಲ್. ಕಂಕನಾಡಿ, ಜೆಪ್ಪು, ಮಂಗಳಾದೇವಿ, ಪಾಂಡೇಶ್ವರ, ಮೈದಾನ, ಕಾರ್ನಾಡು ಸ.ರಾ. ರಸ್ತೆ, ನವಭಾರತಕ್ಕಾಗಿ ಒಂದು ನಗರ ಪ್ರದಕ್ಷಿಣೆ ಮಾಡಿದೆವು. ಶಾಲಾ ಮಕ್ಕಳ ಬ್ಯಾಂಡು ಸಹಿತ ಮೆರವಣಿಗೆ, ಇನ್ನೆಲ್ಲೋ ಪರಿಸರ ಹಾಗೂ ಆರೋಗ್ಯಕ್ಕಾಗಿ ಮೆರವಣಿಗೆ, ಮತ್ತೆಲ್ಲೋ ಹೆಸರೂ ಪ್ರಚುರಿಸಲಿಚ್ಛಿಸದ ಬಳಗದಿಂದ ನಗರದ ಒಂದಂಶದ ನಿಜ-ನೈರ್ಮಲೀಕರಣಗಳೆಲ್ಲ ಗಾಂಧಿಯ ವಿವಿಧ ಆದರ್ಶಗಳಿಗೆ ಸಣ್ಣ ಕೃತಜ್ಞತೆಗಳೇ ಇರಬೇಕು. ಮಂಗಳೂರು ಸೈಕಲ್ಲಿಗರ ಸಂಘದ ಕಲಾಪವೂ ಆ ನಿಟ್ಟಿನಲ್ಲೊಂದು ಪುಟ್ಟ ಸುತ್ತು ಎಂಬ ಧನ್ಯತೆ ನಮಗೂ ಇತ್ತು.

ಬರ್ಲಿನ್ ಗೋಡೆ:

ಇಂದು ಸೈಕಲ್ ಸರ್ಕೀಟು ನಂತೂರು ಚೌಕಿ, ಕುಲಶೇಖರ ಕೈಕಂಬ ದಾಟುವವರೆಗೆ ಜಗತ್ತೇ ನನ್ನದು ಎಂದುಕೊಂಡಿದ್ದೆ. ಆದರೆ ಆಕಾಶರಾಯರ `ದಸರಾ ಮೆರವಣಿಗೆ’ ಸಿದ್ಧತೆ ಯಾಕೋ ಹೆಚ್ಚೇ ಇದೆ ಎಂದನ್ನಿಸಿದ ಮೇಲೆ ಉದ್ದದಾರಿಯ ಯೋಚನೆ ಬಿಟ್ಟೆ. ಹಿಂದೊಮ್ಮೆ ಅಪೂರ್ಣಗೊಂಡಿದ್ದ `ಬೋರು ಗುಡ್ಡೆ’ ಬೆಂಬತ್ತಿದೆ.

ಮಂಗಳೂರಿನ ಸಾಂಪ್ರದಾಯಿಕ ದಾರಿಗಳು ಸಪುರ. ಸಾಲದ್ದಕ್ಕೆ ಬಯಲು ಸೀಮೆಯ ನಗರಗಳ ಸರಳ ರೇಖಾತ್ಮಕವೂ ಅಲ್ಲ. ಎಲ್ಲೋ ಹೊರಟು ಎಲ್ಲಿಗೋ ಮುಟ್ಟಿಸುತ್ತದೆ. ಹಾಗಾಗಿ ನನ್ನೆಲ್ಲ ನೆನಪು ಕಲಸಿಹೋಗಿ, ದಿಕ್ಕಂದಾಜೂ ತಪ್ಪಿತ್ತು. ಅಯ್ಯಪ್ಪ ಭಜನಾ ಮಂದಿರ ಕೇಳಿದವ, ದುರ್ಗಾಪರಮೇಶ್ವರಿ ದೇವಾಲಯದೆದುರು ದಾರಿಯ ಸಾಯೋಕೊನೆ (ಡೆಡ್ ಎಂಡ್!) ಕಂಡಿದ್ದೆ. ಜೇಡರ ಬಲೆಯ ತಂತು ಕಡಿದು ಉರುಡುವ ಕೀಟದಂತೆ ಮತ್ತೆ ಅಲ್ಲಿಲ್ಲಿ ಕೇಳಿ ಸರಿಪಳ್ಳದ ಅಯ್ಯಪ್ಪನನ್ನು ಕಾಣುವಾಗ, ಮೂರು ಗುಡ್ಡೆ ಇಳಿದು ನಾಲ್ಕು ಗುಡ್ಡೆ ಏರಿ ನಿಜವಾಗಿ “ಅಯ್ಯಪ್ಪ” ಎನ್ನುವ ಹಾಗಾಗಿತ್ತು. ಚಕ್ರವ್ಯೂಹದಿಂದ ಹೊರಬರಲು ಮುಂದೊಬ್ಬರನ್ನು ಪುತ್ತೂರು ದಾರಿ ಕೇಳಿದೆ. ಆತ ಅಪಾರ ಅನುಕಂಪದಲ್ಲಿ “ಕುಲಶೇಖರಕ್ಕೆ ಮರಳಿ ಹೋಗಿ. ಕೈಕಂಬದಲ್ಲಿ ಮರೋಳಿಯತ್ತ ತಿರುಗುವಲ್ಲಿ ತಪ್ಪಿದಿರಾ?” ಎಂದ. ಹಾಗಲ್ಲ ಎಂದು ನನ್ನುದ್ದೇಶ ಸ್ಪಷ್ಟಪಡಿಸಿದ ಮೇಲೆ ಆತ ಕೊಟ್ಟ ಸೂಚನೆ ಅನುಸರಿಸಿದೆ. ಮುಂಬಿರಿ ಒತ್ತಿದ್ದು ಜಾಸ್ತಿಯಾದರೆ ಹಿಂಚಕ್ರ ನೆಲಬಿಟ್ಟೇಳುವ ಇಳಿಜಾರಿನಲ್ಲಿಳಿದು, ಗದ್ದೆ ಹುಣಿ ಕಂಡೆ. ಅದರಲ್ಲೂ ನೂರಡಿಯಲ್ಲಿ ಸವಾರಿ ಮುಂದುವರಿಸಿ ಮನೆಯೊಂದರ ಅಂಗಳದಂಚಿನ ಸಾರ್ವಜನಿಕ ಸವಕಲು ಜಾಡಿನಲ್ಲೇ ಇದ್ದಾಗ ಮನೆಯಿಂದ ಮುದುಕಿಯೊಬ್ಬಳ ಬೊಬ್ಬೆ ಕೇಳಿಸಿತು. ತನ್ನ ಖಾಸಾ ನೆಲದಲ್ಲಿ ಪಾದಚಾರಿ ಬಳಕೆಯನ್ನೂ ಮೀರಿದ ಸವಾರಿಗೆ ಅವಕಾಶ ಕೊಟ್ಟರೆ ನಾಳೆ ತನ್ನ ಅಲ್ಪ ಹಕ್ಕಿಗೂ ಚ್ಯುತಿ ಬಂದೀತೆಂಬ ಆತಂಕ ಆ ಬಡಪಾಯಿಯದ್ದು. ಆಕೆಯ ಸಮಾಧಾನಕ್ಕೆ ನನ್ನ ಸವಾರಿ ಚಪಲ ಬಿಟ್ಟು, ಸೈಕಲ್ ನೂಕಿ, ಕಲ್ಲ ತಡಮೆಯಲ್ಲಿ ಎತ್ತಿ ದಾಟಿಸಿದೆ. ಮುಂದೊಂದು ತೊರೆ, ಅಂಚುಗಟ್ಟಿದಂತೆ ನೂರಡಿ ಎತ್ತರದ ರೈಲ್ವೇ ದಿಬ್ಬ. ಕಾಲು ಸೇತುವೆಯಲ್ಲಿ ತೊರೆ ಹಾಯ್ದೆ. ಇತ್ತ ತೊರೆ ಅತ್ತ ದಿಬ್ಬ ಎಂಬಂತಿದ್ದ ಭದ್ರ ಕಾಲುದಾರಿಯಲ್ಲಿ ಮುಂದುವರಿದೆ. ತೊರೆ, ಕಾಲುದಾರಿಯ ಜೋಡಿ ರೈಲ್ವೇ ದಿಬ್ಬದಡಿಯಲ್ಲಿ ನುಸಿದಂತೆ ನಾನೂ ಆಚೆಗೆ ಹೋದೆ. ನಲ್ವತ್ತು ವರ್ಷದೀಚಿನ ರೈಲ್ವೇದಿಬ್ಬ ಸಾಮಾಜಿಕ ಅಭಿವೃದ್ಧಿ ಮಟ್ಟದಲ್ಲಿ ಇಲ್ಲಿನ ಬರ್ಲಿನ್ ಗೋಡೆಯೇ ಆಗಿದೆ. ಹೊಸ ಲೋಕ ಕಣ್ಣೂರು–ಕೊಡಕ್ಕಲ್ಲು. ಅಲ್ಲಿನ ವೈದ್ಯನಾಥನ ಗುಡಿ ಹಾಯ್ದು, ನೂರಡಿ ಚೊಕ್ಕ ಡಾಮರು ದಾರಿ ಕಳೆದು ಪುತ್ತೂರು ಹೆದ್ದಾರಿಯಲ್ಲಿ ಕಣ್ದೆರೆದೆ! ಆಚೆ ಮನೆಯಂಗಳದ ಕಲ್ಲ ತಡಮೆ, ಈಚೆ ರಾಷ್ಟ್ರೀಯ ಹೆದ್ದಾರಿ.

ಕ್ಷಣಾರ್ಧದಲ್ಲಿ ಪಡೀಲು. ಅಂದಿಗೆ ಸವಾರಿ ಡೋಸು ಲೈಟಾಯ್ತು ಅನ್ನಿಸಿ, ಅಲ್ಲೇ ಮೇಲಿದ್ದ ಗೆಳೆಯ ಜನಾರ್ದನ ಪೈ (ಕೆನರಾ ಪದವಿಪೂರ್ವ ಕಾಲೇಜಿನ ಮಾಜೀ ಪ್ರಾಂಶುಪಾಲ) ಮನೆಯ ಗುಡ್ಡೆಗೇರಿಸಿದೆ. ಸಂದರ್ಶನ ಸಮಯ ನಿಗದಿಸಿದಂತೆ ಆಕಾಶರಾಯರು ಧ್ವನಿ ಬೆಳಕಿನ ಪ್ರದರ್ಶನ ಶುರು ಮಾಡಿದ್ದರು. ಹೆಚ್ಚಾದರೇನು – ಒಂದು ಸಾರ್ವಜನಿಕ ಸ್ನಾನ, ನನ್ನ ಉಡಾಫೆ ಗೆದ್ದಿತು. ಪೈಗಳೊಡನೆ ತುಸು ಹರಟಿ, ಮರೋಳಿಗಾಗಿ ಮನೆ ಸೇರುವವರೆಗೂ ಆಕಾಶ ಕಳಚಿ ಬೀಳಲಿಲ್ಲ ☺

ಕಡವಿನ ಕಟ್ಟೆಗಳು:

ಸೈಕಲ್ ಸರ್ಕೀಟನ್ನಂದು ಕಯಾಕ್ ವಿಭಾಗಕ್ಕೆ ಎರವಲು ಸೇವೆ ಮಾಡಿಕೊಂಡೆ. ಸೇಡಿಯಾಪು ಕೃಷ್ಣ ಭಟ್ಟರು `ಆಲ’ವೆಂದರೆ ದೋಣಿ ತಂಗುವ ಜಾಗ. ಮುಂದುವರಿದು, ಹಿಂದೆ ನೇತ್ರಾವತಿ ನದಿಯಲ್ಲಿದ್ದ ಜಲಸಾರಿಗೆ ಬಂಟ+ಆಲದಿಂದ (ಬಂಟ್ವಾಳ) ಕೊಡಿಯ+ಆಲದವರೆಗಿನ (ಕೊಡಿಯಾಲ ಅರ್ಥಾತ್ ಮಂಗಳೂರು) ಸ್ಥಳನಾಮ ವಿಶ್ಲೇಷಿಸಿದ್ದು ನನ್ನ ನೆನಪಿನಲ್ಲಿತ್ತು. ನಮ್ಮ ನೇತ್ರಾವತಿ ಕಯಾಕ್ (ದೋಣಿ) ಚಲಾವಣೆಗೆ ಮುಂದಾಗಿ ಈ ತಂಗುದಾಣಗಳ ಪರಿಚಯ ಮಾಡಿಕೊಳ್ಳಬೇಕೆಂದು ಹೊರಟಿದ್ದೆ.

ನಂತೂರು, ಮರೋಳಿ ಕಳೆದು ಪಡೀಲಿನ ದೀರ್ಘ ಇಳಿಜಾರು ಅನುಭವಿಸುವಾಗ ಹೊಸ ಕ್ಯಾಮರಾದ ಪರೀಕ್ಷೆ ನಡೆಸಿದೆ. ಮತ್ತೆ ನೇರ ಅಡ್ಯಾರ್ ಕಟ್ಟೆಯ ಕಡವಿಗೇ ಹೋದೆ. ಅಲ್ಲಿಂದ ಹರೇಕಳಕ್ಕೆ ಹೊಳೆಯನ್ನು ದೋಣಿಯಲ್ಲಿ ದಾಟಿದ್ದು ಹಳೇ ಕತೆ. ಬೇರೆ ಕಡವುಗಳ ಕುರಿತು ಅಲ್ಲಿ ಅವರಿವರಲ್ಲಿ ವಿಚಾರಿಸಿದೆ. ನೇತ್ರಾವತಿಗೆ ಮೇಲ್ದಂಡೆಯಲ್ಲಿ ತುಂಬೆ ಅಣೆಕಟ್ಟೆಗೂ ಮೊದಲು ಇನ್ನೂ ಮೂರು ಕಡವಿನ ಕಟ್ಟೆಗಳಿವೆ (ವಳಚ್ಚಿಲ್, ಅರ್ಕುಳ ಮತ್ತು ಫರಂಗಿಪೇಟೆ) ಎಂದು ತಿಳಿಯಿತು. ಹೆದ್ದಾರಿಯಲ್ಲೇ ಮುಂದುವರಿದು, ಸಹ್ಯಾದ್ರಿ ಕಾಲೇಜು ಕಳೆದದ್ದೇ ಬಲಕ್ಕೊಂದು ಅರೆ ಕಾಂಕ್ರೀಟ್, ಉಳಿದಂತೆ ಕೊರಕಲು ಬಿದ್ದ ಮಣ್ಣ ದಾರಿ ಅನುಸರಿಸಿದೆ.

“ಹೊಳೆಗಲ್ವಾ? ಮುಂದೆ ಮೂರು ದಾರಿ ಸಿಕ್ಕಿದಲ್ಲಿ ನೇರ ಹೋಗಿ” ಎಂದಿದ್ದನೊಬ್ಬ ಮಾರ್ಗದರ್ಶಿ. ಆದರೆ ಸಿಕ್ಕಿದ್ದು ಸ್ಪಷ್ಟ ಎಡ-ಬಲಕ್ಕೊಂದು ಕವಲು ಮಾತ್ರ. ನೀರಿಗಿಳಿದವನು ಚಳಿಗೆ ಹೆದರ, ಸರ್ಕೀಟಿಗಿಳಿದವನು ಶ್ರಮಕ್ಕೆ ಅಂಜ! ಕ್ರಮವಾಗಿ ಎರಡನ್ನೂ ಪರೀಕ್ಷಿಸಿದೆ. ಅವು ಯಾವ್ಯಾವುದೋ ಮನೆಯಂಗಳ ಮಾತ್ರ ತೋರಿದವು. ಎರಡು ನದಿ ಸೇರುವಲ್ಲೆಲ್ಲ ತ್ರಿವೇಣೀ ಸಂಗಮ ಎನ್ನುವುದು ಮತ್ತು ಮೂರನೆಯದನ್ನು ಗುಪ್ತ ಸರಸ್ವತಿ ಎನ್ನುವುದು ನನಗೆ ತಿಳಿದಿತ್ತು. ಹಾಗೆ ಎಡಬಲ ಕವಲಿನ ನಡುವೆ ಎರಡು ಮೆಟ್ಟಲಿಳಿದು ಸಾಗಿದ್ದ ಸವಕಲು ಜಾಡು ಕಂಡುಕೊಂಡೆ. ಯಾರದ್ದೋ ಅಂಗಳದ ನಾಯಿಯೊಂದಷ್ಟು ಬೈದರೂ ಇನ್ಯಾರದ್ದೋ ಹಿತ್ತಲಿನ ಕೊಚ್ಚೆ ಪಚಕ್ ಮಾಡಿದರೂ ದಟ್ಟ ಪೊದರು ಕವಿಯುತ್ತಿದ್ದ ಸವಕಲು ಜಾಡಿನ ನಿಷ್ಠೆ ಉಳಿಸಿಕೊಂಡೆ. ಫ್ಯಾಂಟಮನ ಅರಣ್ಯದ ಪಿಗ್ಮಿಗಳಷ್ಟೇ ನಿಗೂಢವಾಗಿ ಒಮ್ಮೆಗೇ ಐದು ಕುಳ್ಳರ ಹಿಂಡು “ಹೋ ಗೇರ್ ಸೈಕಲ್” ಎಂಬ ಬೊಬ್ಬೆಯೊಡನೆ ನನ್ನ ಬೆನ್ನು ಬಿದ್ದರು. ಅಯಾಚಿತ ಮೆರವಣಿಗೆ ತುಸು ದೂರದಲ್ಲೇ ಮುಗಿದಿತ್ತು. ಅಲ್ಲಿ ಹೊಳೆಯ ಮಹಾಪೂರದ ಪಾತ್ರೆ ಸುಮಾರು ಆರಡಿ ಆಳದಲ್ಲಿತ್ತು. ಅಲ್ಲಿ ಸದ್ಯ ಸವಕಲು ಜಾಡೊಂದುಳಿದು ಪೂರ್ತಿ ಹಸುರು ಹುಲ್ಲು, ಪೊದರು ಕವಿದಿತ್ತು. ಮಳೆಮರದ ದಪ್ಪ ಬೇರುಗಳ ಮೆಟ್ಟಿಲಲ್ಲಿ ಸೈಕಲ್ ಹೊತ್ತು ಕೆಳಗಿಳಿದೆ. ಮತ್ತಷ್ಟು ಪೊದರ ನಡುವಿನ ಸವಕಲು ಜಾಡಿನಲ್ಲಿ ಪೆಡಲ್ ಹೊಡೆದು ಸಾಮಾನ್ಯ ಮಳೆಗಾಲದ ಪಾತ್ರೆಯಂಚು ಮುಟ್ಟಿದೆ. ಅಲ್ಲಿ ಮತ್ತಷ್ಟು ಆಳಕ್ಕೆ ಮರಳ ರಾಶಿಯಲ್ಲೇ ಕುಸಿದಿಳಿದೆ. ಮತ್ತೂ ಸುಮಾರು ನೂರಡಿಯಗಲದ ಮರಳ ಹಾಸು ಕಳೆದರಷ್ಟೇ ನೀರೆಂಬ ಸ್ಥಿತಿ ನೇತ್ರಾವತಿಯದ್ದು! ಎದುರು ದಂಡೆಯೊಂದು ಕುದುರು (ನದಿದ್ವೀಪ) – ಪಾವೂರು ಉಳಿಯ. ಅಲ್ಲಿನ ಇನ್ಫೆಂಟ್ ಜೀಸಸ್ ಪ್ರಾರ್ಥನಾ ಮಂದಿರ ಮತ್ತದರ ಖಾಸಗಿ ಹಾಯಿದೋಣಿಯೊಂದು ಬಂದು ಒಂಟಿ ಪಯಣಿಗಳನ್ನು ಒಯ್ದದ್ದೆಲ್ಲ ಚಿತ್ರ ಕಾವ್ಯದಂತೆ ಕಾಣುತ್ತಿತ್ತು. ವಿರಾಮದಲ್ಲಿ ಹರಿದೂ ಹರಿಯದಂತೆ ತೋರುತ್ತಿದ್ದ ನೇತ್ರಾವತಿ, ಮೇಲ್ದಂಡೆಯ ಬೋಳುಬಂಡೆ, ಕೆಳ ದಂಡೆಯಲ್ಲಿ ಮರಳಮೇಲೆ ಬಿದ್ದುಕೊಂಡಿದ್ದ ಅಸಡ್ಡಾಳ ಮರದ ಬೊಡ್ಡೆ, ದಿನಾಂತ್ಯಕ್ಕೆ ಮೋಡಗಳೊಡನಾಟವನ್ನು ನೆನಪಿಸಿಕೊಳ್ಳುತ್ತ ಜಾರುವ ಸೂರ್ಯ, ಎಂದಿತ್ಯಾದಿ ಚಿತ್ತಚೋರ ಪಟ್ಟಿ ಎಷ್ಟೂ ಬೆಳೆಸಬಹುದಿತ್ತು. ಆದರೆ ಅಷ್ಟರಲ್ಲಿ ಕವಚುವ ಮಳೆ, ಅಲ್ಲದಿದ್ದರೂ ರಾತ್ರಿಯ ತೊಂದರೆ ಪಟ್ಟಿ ಅನುಲಕ್ಷಿಸಿ ಮರಳಿ ಮಂಗಳೂರಿಸಿದೆ.

[ಮುಂದೆ ಮತ್ತೆಂದಾದರೂ ಹೆಚ್ಚಿನ ಸರ್ಕೀಟು ಕಥನಗಳಲ್ಲಿ, ಉಳಿದ ಕಡವಿನ ಕಟ್ಟೆ ಕಂಡ ಅನುಭವ ವಿಸ್ತರಿಸುತ್ತೇನೆ.]