ಅಧ್ಯಾಯ ನಲ್ವತ್ತೆಂಟು

[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತನೇ ಕಂತು 

ನನ್ನ ಮುಖ್ಯ ವೃತ್ತಿ ಪುಸ್ತಕಗಳನ್ನು ಬರೆಯುವುದಾಗಿತ್ತು. ಈ ವೃತ್ತಿಯನ್ನು ಬಹು ಶ್ರದ್ಧೆಯಿಂದ ಮಾಡುತ್ತಾ ಬಂದೆ. ನನ್ನ ಸಾಹಿತ್ಯ ಬಹು ಜನಾದರಣೀಯವಾಗುತ್ತ ಬರುತ್ತಿದೆಯೆಂದು ತಿಳಿದೆನು. ನಾನಾ ಜನರು ತಂತಮ್ಮ ಮೆಚ್ಚುಗೆಯನ್ನು ನನಗೆ ತಿಳಿಸುತ್ತಿದ್ದರು. ಆದರೆ, ನನ್ನ ಮನಸ್ಸಿಗೆ ಒಪ್ಪಿದಂಥ ಪ್ರಶಂಸೆಗಳಿಂದ ಮಾತ್ರ ಸಂತೋಷಪಡುತ್ತಾ ಬಾಕಿಯವುಗಳನ್ನು ಕುರಿತು ಯೋಚಿಸದೆ, ಯಾವ ವಿಧದಲ್ಲೂ ಹೆಮ್ಮೆಪಡದೆ, ಕಾರ್ಯವನ್ನು ಸಾಗಿಸುತ್ತಿದ್ದೆನು. ಆದರೆ, ನನ್ನ ಈ ವೃತ್ತಿಗೆ ನನ್ನ ಸಂಪೂರ್ಣ ಸಮಯ ಶಕ್ತಿ, ಶ್ರದ್ಧೆಗಳು ಅಗತ್ಯವೆಂದು ತೋರಿದ್ದರಿಂದ ಪಾರ್ಲಿಮೆಂಟಿನ ವರದಿಗಾರನಾಗಿ ಇನ್ನು ಮುಂದೆ ಕೆಲಸ ಮಾಡುವುದು ಅನುಚಿತವೆಂದು ಗ್ರಹಿಸತೊಡಗಿದೆ. ಕೊನೆಗೊಂದು ದಿನ ಇದನ್ನು ಕುರಿತು ಆಖೈರು ನಿರ್ಧಾರವನ್ನೇ ಮಾಡಿ ವರದಿಗಾರ ವೃತ್ತಿಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟೆ.

ನಮ್ಮ ಮನೆಯೊಳಗಣ ವ್ಯವಸ್ಥೆಗಳು ಏನೊಂದೂ ಬದಲಾವಣೆ ಹೊಂದಲಿಲ್ಲ. ಎಲ್ಲವೂ ಮೊದಲಿನಂತೆಯೇ ಇದ್ದುವು. ಡೋರಾ ಮೊದಲಿನಷ್ಟೇ ಪ್ರಿಯಳೂ ಚದುರೆಯೂ ಆಗಿದ್ದಳಲ್ಲದೆ, ಮೊದಲಿನಷ್ಟೇ ಹೆಡ್ಡಳೂ ಹಸುಳೆಯೂ ಆಗಿದ್ದಳು. ಅವಳ ಪ್ರಾಯ ಮುಂದುವರಿದಿದ್ದರೂ ಅವಳ ಬುದ್ಧಿ ಮುಂದುವರಿದಿರಲಿಲ್ಲ. ಎಷ್ಟೇ ಯೋಗ್ಯ ಅಡುಗೆಯವನನ್ನೂ ಎಷ್ಟೇ ಯೋಗ್ಯ ಮನೆ ಕೆಲಸದವನನ್ನೂ ಗೊತ್ತು ಮಾಡಿಕೊಟ್ಟರೂ ನಮ್ಮ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಊಟ ಸಿಕ್ಕುತ್ತಿರಲಿಲ್ಲ, ಬೇಕಾದ ತಿಂಡಿ ತೀರ್ಥಗಳು ದೊರಕುತ್ತಿರಲಿಲ್ಲ. ಮನೆಯೊಳಗೆ ಎಲ್ಲೆಲ್ಲೂ ಬಟ್ಟೆ, ಪಾತ್ರೆ, ಪುಸ್ತಕ, ಆಟದ ಸಾಮಾನು ಮೊದಲಾದುವು ಹರಗಣಗಳಾಗಿ ಹರಡಿ ಬಿದ್ದಿರುತ್ತಿದ್ದುವು. ಈ ವಿಧದ ಗೃಹ ಕೃತ್ಯವೇ ನನ್ನ ಅನುನಿತ್ಯದ ಅನುಭವವಾಗಿ ಹೋಯಿತು. ಇದಕ್ಕೆಲ್ಲ ಕಾರಣರು ಯಾರು ಎಂದು ಹುಡುಕಿ ಗುರುತಿಸಲೂ ಸಿಕ್ಕುತ್ತಿರಲಿಲ್ಲ. ಮತ್ತೂ ಹಾಗೆ ಹುಡುಕಿ ಗುರುತಿಸಲೂ ಸ್ವಲ್ಪ ಅಂಜುತ್ತಿದ್ದೆನು. ಅಗಸರು ಬಟ್ಟೆಗಳನ್ನು ಕ್ಲುಪ್ತಕಾಲದಲ್ಲಿ ತಂದು ಕೊಡರು; ಬಟ್ಟೆಗಳ ಲೆಕ್ಕ ಬರೆಯುವ ನಮ್ಮ ತಪ್ಪಿನಿಂದ ನಮಗೆ ಬಟ್ಟೆ ನಷ್ಟ. ಜೀನಸಿನ ಅಂಗಡಿ ಲೆಕ್ಕ ತಪ್ಪಿನಿಂದ ಹಣ ನಷ್ಟ! ಇನ್ನು ಮನೆಗೆ ಬೇಕಾಗುವ ಮಾಲು ಯಾವುವು, ಎಷ್ಟು ಎಂದು ತಿಳಿಯದೆ ತರಿಸುವ ಚಟದಿಂದ ಮಾಲು ನಷ್ಟ. ಈ ರೀತಿ ಎಲ್ಲದರಲ್ಲೂ ನಷ್ಟಪಟ್ಟುಕೊಳ್ಳುತ್ತಿದ್ದೆವು. ಮನೆಯಿಂದ ಮಾಲುಗಳು ಕದ್ದು ಹೋಗುವುದು ನಮ್ಮಲ್ಲೊಂದು ಸಂಪ್ರದಾಯವೇ ಆಗಿಹೋಗಿತ್ತು. ಅನಾಥ ಬಾಲಕನೊಬ್ಬನನ್ನು ಕಂಡು, ನನ್ನ ಬಾಲ್ಯದ ಜೀವನವನ್ನು ನೆನೆಸಿ, ನನ್ನನ್ನೇ ಅವನಲ್ಲಿ ಆವಾಹಿಸಿರುವಂತೆ ತಿಳಿದು ಕರುಣೆಗ್ರಹಿಸಿ, ಅವನನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡೆನು. ಅವನ ಸಹಸ್ರ ನ್ಯೂನಾತಿರಿಕ್ತಗಳನ್ನು ಸಹಿಸಿ ಅವನನ್ನು ಸಾಕಿ ಸಲಹಿದೆನು. ಕೊನೆಗೊಂದು ದಿನ ಅವನು ಡೋರಾಳ ಚಿನ್ನದ ಗಡಿಯಾರವನ್ನು ಕದ್ದು ಮಾರಿ, ಬ್ರಾಂದಿ ಕುಡಿದು, ಜಟ್ಕಾ ಸವಾರಿ ಮಾಡಿ, ಮೆರೆದು ಮುಗಿಸಿದನು. ಕೊನೆಗೆ ನಿರ್ವಾಹವಿಲ್ಲದೆ, ಅವನ ಬೇಜವಾಬ್ದಾರಿಯಿಂದಲೇ ಅವನು ಪೋಲಿಸರ ವಶನಾದನು. ನಮ್ಮ ಈ ವಿಧದ ಕಷ್ಟಗಳ ಎದುರೇ ಈ ಬಾಲಕನನ್ನು ಕುರಿತು ನೆರೆಕರೆಯವರು ನಮ್ಮ ಮೇಲೆ ಅಪವಾದವನ್ನು ಆಡಿಕೊಳ್ಳುತ್ತಿದ್ದರು. ಬಾಲಕನ ತಪ್ಪಿಗಾಗಿ ಅವನನ್ನು ಹೊರ ಹಾಕಲು ನಾವು ನ್ಯಾಯವಾಗಿ ಪ್ರಯತ್ನಿಸಿದಾಗಲೆಲ್ಲಾ ಅವನು ತಡೆಯಲಾರದ ರೀತಿಯಲ್ಲಿ ಗೋಳಿಟ್ಟು, ಅತ್ತು ಬೇಡಿಕೊಳ್ಳುತ್ತಿದ್ದುದನ್ನೂ ಪೋಲಿಸರ ವಶವಾದುದನ್ನೂ ಕಂಡು, ಅನಾಥ ಬಾಲಕರ ಪಾಲನೆಯಲ್ಲಿ ನಮಗೆ ಕನಿಕರ ಸಾಲದೆಂದೂ ನಾವು ಮಹಾ ಕ್ರೂರಿಗಳೆಂದೂ ಅದೇ ನೆರೆಕರೆಯವರು ಮಾತಾಡಿಕೊಳ್ಳುತ್ತಿದ್ದರು. ಪೋಲಿಸಿನವರೂ ಸಹ ನಮ್ಮ ಮನೆಯು ದುಷ್ಟ ಚಟಗಳ ಮೂಲಸ್ಥಾನವೆಂದೂ ನಮ್ಮ ಮನೆಗೆ ಕೆಲಸಕ್ಕೆ ಬಂದವರಿಗೆಲ್ಲ ಈ ಚಟಗಳು ಅಂಟು ರೋಗವಾಗಿ ಪರಿಣಮಿಸುತ್ತಿವೆಯೆಂದೂ ಮಾತಾಡಿಕೊಳ್ಳುತ್ತಿದರು. ಈ ರೀತಿ, ನನಗೆ ಹೊರಗಿನಿಂದ ಒಂದು ವಿಧದ ಕೀರ್ತಿ ಬರುತ್ತಿದ್ದಾಗಲೇ ಒಳಗಿನಿಂದ ಒಂದು ವಿಧದ ಅಪಕೀರ್ತಿಯೂ ಬರುತ್ತಿತ್ತು. ಇದಕ್ಕಾಗಿ ನಾನು ವ್ಯಥೆಪಡುತ್ತಿದ್ದೆನು.

ಡೋರಾಳಿಗೆ ನಾನು ಬುದ್ಧಿ ಹೇಳಿದರೆ ಅವಳಿಗೆ ಅದು ಅರ್ಥವೇ ಆಗುತ್ತಿರಲಿಲ್ಲ. ನಾನು ಬುದ್ಧಿ ಮಾತುಗಳನ್ನು ಎತ್ತಿ ಪೂರೈಸುವ ಮೊದಲೇ ಅವಳು ಅಂಜಿ ಅಳುತ್ತಾ “ಇಷ್ಟೊಂದು ಶಿಸ್ತು, ಬುದ್ಧಿವಂತಿಕೆಗಳನ್ನು ನೀರೀಕ್ಷಿಸುವೆಯೆಂದು ನನ್ನನ್ನು ಮದುವೆಯಾಗುವ ಮೊದಲೇ ಏಕೆ ಹೇಳಲಿಲ್ಲ?” ಎಂದು ಕೇಳುವಳು. ಈ ಪ್ರಶ್ನೆಯೂ ಅವಳ ಬಾಯಿಂದ ಆಗಿಂದಾಗ್ಗೆ ಬರುತ್ತಲೇ ಇರುತ್ತಿತ್ತು. ಡೋರಾಳೂ ಜಿಪ್ಪನೂ ಅವರಷ್ಟಕ್ಕೆ, ಅವರದೇ ಆಗಿದ್ದ ಕ್ರಮದಿಂದ, ಬದುಕಿಕೊಂಡು ಇರಬಹುದಾದಾಗ ನನ್ನ ಪ್ರವೇಶ ನ್ಯಾಯವಾಗುವುದೇ ನಾನು ಯಾವುದೇ ವಿಧದ ನಿರ್ಬಂಧವನ್ನು ಅವರ ಮೇಲೆ ಹೊರಿಸಬಹುದೇ ಎಂಬ ಸಂಶಯಗ್ರಸ್ತ ಪ್ರಶ್ನೆಯೂ ನನ್ನಲ್ಲಿ ಆಗಾಗ ಮೂಡುತ್ತಿತ್ತು. ಇನ್ನು ಅವಳ ತರ್ಕಗಳಲ್ಲಿ, ಮಾತುಗಳಲ್ಲಿ – ಪರಿಪೂರ್ಣ ಸರಳತೆ, ಪ್ರೇಮ, ನಿರ್ವಂಚನೆಗಳಿದ್ದುದರಿಂದ ನಾನು ಸಿಟ್ಟುಗೊಳ್ಳಲೂ ಎಡೆಯಿರಲಿಲ್ಲ. ಅವಳ ಮಾತುಗಳನ್ನೆಲ್ಲ ಮರ್ಮಭೇದಕವಾಗಿ ಅಳುತ್ತಾ ಹೇಳುವಳು. ಅವಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಒಂದು ಉಪಾಯವನ್ನು ಮಾಡಿ ನೋಡಿದೆನು. ಟ್ರೇಡಲ್ಸನನ್ನು ಪ್ರತಿ ಆದಿತ್ಯವಾರವೂ ನಮ್ಮ ಮನೆಯ ಊಟಕ್ಕೆ ಆಮಂತ್ರಿಸಿ, ಡೋರಾಳ ಸಮಕ್ಷಮದಲ್ಲಿ, ಸಂದರ್ಭಗಳನ್ನು ಕಲ್ಪಿಸಿಕೊಂಡು, ಗೃಹಕೃತ್ಯದ ವಿಷಯದಲ್ಲಿ ಟ್ರೇಡಲ್ಸನಿಗೆ ಬುದ್ಧಿ ಹೇಳಿ ನೋಡಿದೆನು. ಈ ರೀತಿಯ ನೂತನ ಮತ್ತೂ ಸೂಕ್ಷ್ಮ ಬಲೆಯಲ್ಲಿ ಡೋರಾಳನ್ನು ಹಿಡಿದು ಮೃದುವಾಗಿ ಸರಿಪಡಿಸುವುದನ್ನು ಅವಳ ಕೋಮಲ ಮನಸ್ಸು ಅರಿತು, ಕೊನೆಗೆ ಟ್ರೇಡಲ್ಸನ ಆಗಮನವೇ ತನ್ನ ಹಿಂಸೆಯ ಸಾಧನವೆಂದು ಅವಳು ಗ್ರಹಿಸತೊಡಗಿದಳು. ಹೀಗಾಗಿ ನಾನು ಇನ್ನೊಂದು ಮುಖ್ಯ ನಿರ್ಧಾರಕ್ಕೆ ಬಂದೆನು. ನಾನು ಅವಳ ಮನಸ್ಸನ್ನು ಪರಿವರ್ತನೆ ಮಾಡುವ ಹವ್ಯಾಸಕ್ಕೇ ಹೋಗದೇ ನಾನೇ ಅವಳಿಗೆ ಅನುಕೂಲವಾದ ಬದಲಾವಣೆ ಹೊಂದಿಕೊಳ್ಳಬೇಕೆಂದು ನಿಶ್ಚೈಸಿಕೊಂಡೆನು.

ಡೋರಾಳ ಮೇಲಿನ ನನ್ನ ಪ್ರೇಮ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಅವಳ ಸಕಲ ಲೋಪದೋಷಗಳೂ ನನ್ನ ಪ್ರೀತಿಯನ್ನು ಕಡಿಮೆ ಮಾಡಲಾರದಿದ್ದುವು. ಆದರೆ, ನನ್ನ ಅಂತರಂಗದಲ್ಲಿ ಡೋರಾಳಲ್ಲಿ ಕೊರತೆಯಿದೆ, ಚಿಕ್ಕದೊಂದು ಲೋಪದ ಶೂನ್ಯತೆಯಿದೆ ಎಂದು ತಿಳಿಯುತ್ತಲೇ ಇದ್ದೆನು. ಈ ಶೂನ್ಯತೆಯೇ ನನ್ನನ್ನು ಬಾಧಿಸುತ್ತಿತ್ತು. ಡೋರಾ ಸುಂದರಿ, ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದಾಳೆ. ತನ್ನ ಜೀವನದ ಆಧಾರವೇ ನಾನೆಂಬಂತೆ, ನನ್ನ ನೆರಳಿನಂತೆ ನನ್ನನ್ನು ಹಿಂಬಾಲಿಸುತ್ತಿದ್ದಳು. ಈ ಗುಣಗಳೆಲ್ಲ ನನಗೆ ತೃಪ್ತಿಯನ್ನೀಯುತ್ತಿದ್ದುವು. ಆದರೆ, ಸಂಸಾರ ಸುಖದಲ್ಲಿ, ಗೃಹಕೃತ್ಯದಲ್ಲಿ, ವಿವರಿಸಲು ಬಹು ಕಷ್ಟವಾದ, ತರ್ಕದಿಂದ ಸ್ಪಷ್ಟಪಡಿಸಲಾಗದ, ಒಂದು ಲೋಪ ಕರಾಳ ಛಾಯೆಯಂತೆ ಮನೆಯೊಳಗೂ ಮನಸ್ಸಿನಲ್ಲೂ ನನ್ನನ್ನು ಸದಾ ಹಿಂಬಾಲಿಸುತ್ತಿತ್ತು. ಈ ಲೋಪವೇ ಈ ಛಾಯೆಯೇ ವಾಗ್ರೂಪದಲ್ಲಿ `ಶಿಸ್ತಿಲ್ಲದ ಮನಸ್ಸಿನ ಅಂಧ ಉದ್ವೇಗ’, `ಮನೋಬುದ್ಧಿಗಳ ಸಾಮ್ಯವಿಲ್ಲದೆ ಆದ ವಿವಾಹವು ವಿಷಮ ವಿವಾಹವು’ ಎಂದು ಕಿವಿಯಲ್ಲಿ ಧ್ವನಿಗೈದು ಹಿಂಸಿಸುತ್ತಿತ್ತು. ಕೆಲವೊಮ್ಮೆ ಕನಸಿನಲ್ಲೂ ಈ ವಾಕ್ಯಗಳು ಕೆತ್ತಿಟ್ಟ ಅಕ್ಷರಗಳಿಂದ ಸ್ಪಷ್ಟವಾಗಿ ತೋರಿಬರುತ್ತಿದ್ದುವು. ದುಃಖರಸ ಸಂಗೀತವನ್ನು ಸ್ಮರಣೆಯಲ್ಲಿ ಕೇಳಿ ಅನುಭವಿಸುವಂತೆ ಈ ವಾಕ್ಯಗಳ ಮತ್ತು ನಮ್ಮ ಸಂಸಾರದ ದಿನದಿನದ ಅನುಭವಗಳ ಸಾರ ನನ್ನ ಸ್ಮರಣೆಯಲ್ಲಿ ಸದಾ ತೋರಿಬರುತ್ತಿತ್ತು. ಡೋರಾಳನ್ನು ಮದುವೆಯಾಗುವುದಕ್ಕೆ ಮುಂಚಿನ ದಿನಗಳ ನೆನಪು ನನ್ನ ತುಲನಾತ್ಮಕ ಗ್ರಹಿಕೆಗಾಗಿ ತಾನಾಗಿಯೇ ಎದುರು ಬಂದು ನಿಲ್ಲುತ್ತಿತ್ತು. ಏಗ್ನೆಸ್ಸಳ ಸಾನ್ನಿಧ್ಯದಲ್ಲಿ ನಾನು ಬೆಳೆದು ಬಂದ ಕಾಲದ ಬೆಳಕು, ಆಗಿನ ಕಾಲದ ನನ್ನ ಆನಂದ, ಇವೆಲ್ಲ ಕೇವಲ ಮಾನಸಿಕವೇ ಆದರೂ ಇಂದಿನ ದಿನಗಳ ಬೆಳಕು, ಮತ್ತು ಆನಂದಗಳಿಗಿಂತ ಹೆಚ್ಚು ಪ್ರಭೆಯುಳ್ಳದಾಗಿ ತೋರುತ್ತಿದ್ದುವು. ಈ ತೆರನಾದ ಆಲೋಚನೆಗಳು ಏಳುತ್ತಿದ್ದ ಹಾಗೆಯೇ ಹಠಾತ್ತಾಗಿ ನನ್ನ ಆತ್ಮವಿಮರ್ಶೆಯನ್ನೂ ಮಾಡುತ್ತಿದ್ದೆನು. ಏನು, ಡೋರಾಳ ಮೇಲಿನ ನನ್ನ ಪ್ರೇಮವು ಶಿಥಿಲವಾಗುತ್ತಿದೆಯೇ? ಅವಳನ್ನು ಕುರಿತು ವಂಚನೆಯ ಭಾವನೆಗಳು ಮೂಡುತ್ತಿವೆಯೇ? ಅವಳಲ್ಲಿ ಅಂದು ಇದ್ದ ಗುಣಗಳು ಯೋಗ್ಯತೆಗಳೂ ಇಂದೇನಾದರೂ ಕಡಿಮೆಯಾಗಿವೆಯೇ? ಹೀಗೆಲ್ಲಾ ವಿಮರ್ಶಾತ್ಮಕವಾಗಿ ಪ್ರಶ್ನಿಸಿಕೊಂಡು ಇಂಥ ಭಾವನೆಗಳಿಗಾಗಿಯೇ ಪಶ್ಚಾತ್ತಾಪಪಡುತ್ತಿದ್ದೆ. ನನ್ನ ಮನಸ್ಸಿನಲ್ಲೇ ಈ ಪ್ರಶ್ನೆಗಳಿಗೆಲ್ಲ ಬಲವಾದ, ಸ್ಪಷ್ಟವಾದ, ಬಹು ಅಂತರಂಗದ ಉತ್ತರವೂ ಹೊರಡುತ್ತಿತ್ತು. `ಇಲ್ಲ, ಡೋರಾಳು ಪ್ರಿಯತಮೆಯಾಗಿಯೇ ಇರುವಳು – ಹಗುರವಾಗಿಲ್ಲ. ಅವಳ ಕೋಮಲ, ಸುಂದರ, ಸರಳತೆಯಿಂದ ನನ್ನ ಅಂತರಂಗ ಬಹಿರಂಗಗಳಲ್ಲೂ ಅವಳು ಹೃದಯೇಶ್ವರಿಯಾಗಿಯೇ ಇರುವಳು’ ಎಂದು ಉತ್ತರ ಬರುತ್ತಿತ್ತು.

ಆದರೂ ನನ್ನ ಎಲ್ಲ ಅನುಭವಗಳ ಮಥಿತಾಭಿಪ್ರಾಯ ದಾಂಪತ್ಯ ಜೀವನವು ಪರಿಪೂರ್ಣವಾಗಿರುವುದು ಬಹು ಅಪೂರ್ವವೆಂದೂ ಈ ತೆರನಾದ ಕಷ್ಟಗಳು ಸರ್ವಸಾಮಾನ್ಯವಾದ ಎಲ್ಲರ ಅನುಭವವೆಂದೂ ಇದೆ. ಈ ಅಭಿಪ್ರಾಯಾನುಸಾರವಾಗಿ ಮದುವೆಯ ಮೊದಲಿನ ನನ್ನ ಕಾಲ್ಪನಿಕ ಚಿತ್ರಗಳು ಎಷ್ಟೇ ಶೋಭಾಯಮಾನವಾಗಿದ್ದರೂ ಅವು ಕಾಲ್ಪನಿಕವಾಗಿ ಮಾತ್ರ ಉಳಿಯಬೇಕಾದವೆಂದು ಕೊನೆಯದಾಗಿ ನಿರ್ಧರಿಸಿಕೊಂಡೆನು.

ಒಂದು ದಿನ ಒಂದು ಜೊತೆ ಲೋಲಾಕನ್ನು ತಂದು ಡೋರಾಳಿಗೆ ಕೊಟ್ಟೆ. ಅದರ ಜತೆಯಲ್ಲೇ ಜಿಪ್ಪನಿಗೂ ಒಂದು ಹೊಸ ಕುತ್ತಿಗೆ ಪಟ್ಟಿಯನ್ನು ತಂದು ಕೊಟ್ಟೆ. ಹಾಗೆ ಲೋಲಾಕನ್ನು ಕೊಟ್ಟು, ಅವಳ ಜತೆಯಲ್ಲಿ ಕುಳಿತು –
“ಡೊರಾ ನನ್ನನ್ನು ಕ್ಷಮಿಸಬೇಕು. ನಾನು ಹಿಂದಿನ ಕ್ರಮಗಳನ್ನೆಲ್ಲ ಬಿಟ್ಟು, ಸ್ವಲ್ಪ ಬುದ್ಧಿವಂತನಾಗಲು ಕೆಲ ಸಮಯದಿಂದ ಪ್ರಯತ್ನಿಸಿದೆ” ಎಂದಂದೆನು.
“ನನ್ನನ್ನೂ ಬುದ್ಧಿವಂತಳಾಗಿ ಮಾಡಲು ಪ್ರಯತ್ನಿಸಿದೆಯಲ್ಲವೆ?” ಎಂದು ಡೋರಾಳು ಪ್ರಶ್ನಿಸಿದಳು.
“ಸ್ವಲ್ಪ ಮಟ್ಟಿಗೆ ಹೌದು” ಅಂದೆ.
“ಅದು ಮಾತ್ರ ಅಸಾಧ್ಯ – ಆ ಸಂಗತಿ ಆ ಹೊತ್ತೇ ಹೇಳಿದ್ದೇನೆ. ನನ್ನ ಹೆಸರನ್ನೇ ಬದಲಾಯಿಸಬೇಕೇ ಹೊರತು ಬೇರೆ ಏನೂ ಮಾಡುವುದು ಬೇಡಾಂತ ಹೇಳಿಲ್ಲವೇ?” ಎಂದು ನನ್ನನ್ನು ಮುಖದಿಂದಲೂ ಪ್ರಶ್ನಿಸುವಂತೆ, ಮುದ್ದಾಗಿ ನೋಡಿದಳು.
“ಇಲ್ಲ ಇನ್ನು ಮುಂದೆ ಆ ಪ್ರಯತ್ನ ಮಾಡೋದಿಲ್ಲ” ಎಂದು ನಾನು ಭರವಸೆ ಕೊಟ್ಟೆನು.
“ಹಾಗೆ ಪ್ರಯತ್ನಿಸಿದ್ದರಿಂದ ನಿನಗೂ ಸುಖವಿಲ್ಲ, ನನಗೂ ಇಲ್ಲ. ಹಾಗಾದರೆ ಮಾಡೋದಿಲ್ಲ, ಖಂಡಿತವಷ್ಟೆ?”
“ಖಂಡಿತವಾಗಿಯೂ ಪ್ರಯತ್ನಿಸುವುದಿಲ್ಲ. ನಿನ್ನ ಹುಟ್ಟುಗುಣಗಳನ್ನು ಮೆಚ್ಚಿ ಮದುವೆಯಾಗಿ ಈಗ ಕಟ್ಟು ಗುಣಗಳನ್ನು ಅಪೇಕ್ಷಿಸುವುದು ನನ್ನ ತಪ್ಪು. ನೀನು ಸ್ವಾಭಾವಿಕವಾಗಿರುವಂತೆಯೇ ನನಗೆ ಬಹು ಪ್ರಿಯಳು. ನಾವು ಈಗ ಇರುವಂತೆಯೇ ಸಂತೋಷವಾಗಿರೋಣ” ಎಂದಂದೆ.

ಡೋರಾಳು ಎದ್ದು ನಿಂತು ತನ್ನ ನೂತನ ಲೋಲಾಕುಗಳನ್ನು ಧರಿಸಿ, ಅವನ್ನಲ್ಲಾಡಿಸಿಕೊಂಡು, ಜಿಪ್ಪನ ಕುತ್ತಿಗೆಗೆ ಹೊಸಪಟ್ಟಿಯನ್ನು ತೊಡಿಸಿ, ಸಂತೋಷದಿಂದ ನಲಿದಳು.

`ಶಿಸ್ತಿಲ್ಲದ ಮನಸ್ಸಿನ ಅಂಧ ಉದ್ವೇಗ’ದ ಜ್ಞಾಪಕದಿಂದ ನಾನೇ ಶಿಸ್ತನ್ನು ಅಭ್ಯಸಿಸಿ ಡೋರಾಳಿಗೆ ಅನುವ್ರತನಾಗಿ ನಡೆಯತೊಡಗಿದೆನು. ನನ್ನ ನಡತೆಯಿಂದಲೇ ಅವಳಿಗೆ ದಾರಿ ತೋರಿಸಿ ಕ್ರಮೇಣವಾಗಿ ಅವಳನ್ನು ಸರಿಪಡಿಸಬಹುದೆಂದು ಗ್ರಹಿಸಿಕೊಂಡೆನು. ಅದರಲ್ಲೂ ಅವಳು ಒಂದು ಮಗುವನ್ನು ಹೆತ್ತನಂತರವಾದರೂ ಬುದ್ಧಿ ಬರಬಹುದೆಂದು ಊಹಿಸಿದೆನು. ಆದರೆ ಇದೇ ಸಮಯದಲ್ಲಿ ಅವಳಿಗೆ ಸ್ವಲ್ಪ ಅಸೌಖ್ಯವುಂಟಾಯಿತು. ಈ ಅಸೌಖ್ಯ ಆಗಿಂದಾಗ್ಗೆ ತೋರಿ ಬರತೊಡಗಿತು. ದಿನಗಳು ದಾಟಿದಂತೆ ಅಸೌಖ್ಯ ರೋಗವಾಗಿಯೇ ಕಾಣ ತೊಡಗಿ ದೈವೇಚ್ಛೆಯಲ್ಲಿ ಮುಂದೇನಿದೆಯೋ ಎಂಬ ಭಯ ತೋರತೊಡಗಿತು. ದಿನ ಹೋದಂತೆ ಡೋರಾಳು ತ್ರಾಣ ಕುಂದುತ್ತಾ ಬಂದಳು. ಅವಳ ಅಸೌಖ್ಯದ – ರೋಗದ ಕಾರಣವಾಗಿ ಅವಳು ಮೊದಲಿನಷ್ಟು ಚುರುಕಾಗಿಯೂ ಇರುತ್ತಿರಲಿಲ್ಲ. ಹರ್ಷಚಿತ್ತಳಾಗಿಯೂ ಇರುತ್ತಿರಲಿಲ್ಲ. ತನ್ನ ಅನಾರೋಗ್ಯದ ಸಂಬಂಧದ ಕಷ್ಟಗಳ ಅರಿವು ಅವಳಿಗೆ ಕ್ರಮೇಣವಾಗಿ ಸ್ಪಷ್ಟವಾಗತೊಡಗಿತು. ತನ್ನ ಅಂತರಂಗದ ಹೆದರಿಕೆಯನ್ನು ಸ್ಪಷ್ಟವಾದ ಮಾತುಗಳಿಂದ ಹೇಳಿಕೊಳ್ಳಲು ಅವಳು ಅಂಜುತ್ತಿದ್ದಳು. ಒಂದು ದಿನ ಅತ್ತೆಯೊಡನೆ ಮಾತಾಡುತ್ತಾ –
“ಅತ್ತೆ, ಜಿಪ್ಪ್ ಈಗೀಗ ಸೋಮಾರಿಯಾಗಿ ಬಿದ್ದಿರುತ್ತಾನೆ ನೋಡಿ. ನಾನು ಹುಶಾರಾದ ಮೇಲೆ ಅವನಿಗೆ ಓಡೋದಕ್ಕೆ ಅಭ್ಯಾಸ ಮಾಡಿಸುತ್ತೇನೆ” ಅಂದಳು.
“ಅದು ಜಿಪ್ಪನ ಸೋಮಾರಿತನವಲ್ಲ ಮಗಳೇ, ಅವನಿಗೆ ಪ್ರಾಯವಾಗುತ್ತಾ ಬಂದಿದೆ.”
“ಏನು ಜಿಪ್ಪ್ ಮುದುಕನಾದನೇ?”
“ಹೌದು – ಆಶ್ಚರ್ಯವೇನು ಅದರಲ್ಲಿ? ಎಲ್ಲರೂ ಅನುಭವಿಸಬೇಕಾದ ಅವಸ್ಥೆ, ಕಂದಾ. ನಾನೇ ಮೊದಲಿನಂತಿಲ್ಲ” ಅಂದಳು ಅತ್ತೆ. ಈ ವರೆಗೆ ತನ್ನ ಹಾಸಿಗೆಯಲ್ಲಿ ಕುಳಿತುಕೊಂಡು ಮಾತಾಡುತ್ತಿದ್ದ ಡೋರಾಳು ಅತ್ತೆಯ ಈ ಮಾತಿಗೆ –
“ಜಿಪ್ಪನೂ ಮುದುಕನಾಗುತ್ತಾನಲ್ಲವೇ” ಎಂದು ಮಾತ್ರ ಹೇಳಿ, ದುಃಖದಿಂದ ಹಾಸಿಗೆಯಲ್ಲಿ ಮಲಗಿಬಿಟ್ಟಳು.
“ಬೇಸರಿಸಬೇಡ ಮಗಳೇ. ಜಿಪ್ಪ್ ಹೋದರೆ ನಾನು ಬೇರೊಂದು ಪುಟ್ಟ ನಾಯಿ ತಂದುಕೊಡುತ್ತೇನೆ” ಎಂದು ಹೇಳಿ ಅತ್ತೆ ಡೋರಾಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದಳು.
“ಜಿಪ್ಪ್ ಅಲ್ಲದೆ ಬೇರೊಂದು ನಾಯಿ ನನಗೆ ಬೇಡ, ಅತ್ತೆ. ಬೇರೆ ಯಾವ ನಾಯಿ ಬಂದರೆ ತಾನೆ ಏನು ಪ್ರಯೋಜನ? ನನ್ನ ಡೇವಿಡ್ಡನ ಮದುವೆಗೆ ಮೊದಲು ಅವನನ್ನು ಕಂಡು ಬೊಗಳಿದ ಜಿಪ್ಪ್ – ನಮ್ಮ ಜತೆಯಲ್ಲಿದ್ದು ನಮ್ಮ ಕಥೆಯನ್ನೆಲ್ಲ ಬಲ್ಲ ಜಿಪ್ಪ್ – ಅಂಥವನು ಹೋಗಿ ಮತ್ತೆ ಯಾರು ಬಂದರೆ ಏನು ಪ್ರಯೋಜನ ಅತ್ತೆ? ಜಿಪ್ಪ್ ಹೋದರೆ ಅವನ ಜತೆಯಲ್ಲೇ ನಮ್ಮ ಹಳೆ ಸಂತೋಷವೆಲ್ಲಾ ಹೋಗಿಬಿಡುತ್ತೆ” ಎಂದು ಹೇಳುತ್ತಾ ಜಿಪ್ಪ್ ಸಾಯುವ ದೃಶ್ಯವನ್ನೇ ತಾನು ನೋಡುತ್ತಿದ್ದಂತೆ ಡೋರಾಳು ತೋರಿದಳು.

ದಿನ ಕಳೆದಂತೆ ಅವಳ ಅಶಕ್ತಿ ಹೆಚ್ಚಿತು. ಕಡೆಗೆ ಮಹಡಿಯ ಮೇಲಕ್ಕೂ ಕೆಳಕ್ಕೂ ನಾನೇ ಅವಳನ್ನು ಎತ್ತಿಕೊಂಡು ಹೋಗಬೇಕಾಗಿ ಬಂತು. ಟ್ರೇಡಲ್ಸನು ಸಾಧಾರಣ ಪ್ರತಿ ಆದಿತ್ಯವಾರವೂ ನಮ್ಮ ಮನೆಗೆ ಬರುತ್ತಿದ್ದನು. ಅತ್ತೆಯೂ ಹೆಚ್ಚಾಗಿ ನಮ್ಮ ಮನೆಯಲ್ಲೇ ಇರುತ್ತಿದ್ದಳು. ಡೋರಾಳು ನಾಲ್ಕಾರು ವಾರಗಳಲ್ಲಿ ಹುಶಾರಾಗಬಹುದೆಂದು ಅವಳನ್ನು ನೋಡಿದ ಕೆಲವರು ಅನ್ನುತ್ತಿದ್ದರು. ಮಿ. ಡಿಕ್ಕರು ದೀಪವನ್ನು ಹಿಡಿದುಕೊಂಡು ಮಹಡಿಯ ಮೇಲೆ ಕೋಣೆ ಬಾಗಿಲಲ್ಲಿ ನಿಂತು ನಮಗೆ ದಾರಿ ತೋರಿಸುವುದೂ ನಾನು ಡೋರಾಳನ್ನು ಎತ್ತಿಕೊಂಡು ಮಹಡಿ ಹತ್ತುವುದೂ ಈ ಮಧ್ಯೆ ಜಿಪ್ಪ್ ನಮ್ಮ ಕಾಲ ಸೆರೆಯಲ್ಲೇ ಮಹಡಿಗೆ ಮುಂದಾಗಿ ಹೋಗಿ ಬಾಲ ಅಲ್ಲಾಡಿಸುತ್ತಾ ನಮ್ಮನ್ನು ಸ್ವಾಗತಿಸುತ್ತಾ ನಿಲ್ಲುವುದೂ ನಮ್ಮ ದಿನಂಪ್ರತಿಯ, ರಾತ್ರಿಯ ಅಭ್ಯಾಸವಾಗಿ ಹೋಗಿತ್ತು. ಡೋರಾಳ ರೋಗವು ಏನೆಂದು ನಾನಾ ವಿಧವಾಗಿ ಊಹಿಸಿ, ವಿಚಾರಿಸಿ ನೋಡಿದ್ದಾಯಿತು. ಕೊನೆಗೆ ತಿಳಿದವರಿಂದ ರೋಗ ಇಂಥಾದ್ದೇ ಎಂದೂ ತಿಳಿದೂ ಆಯಿತು. ರೋಗವನ್ನು ತಿಳಿದನಂತರ ಮುಂದಿನ ಪರಿಣಾಮವನ್ನು ಊಹಿಸಿ ದುಃಖಿಸಲೂ ಪ್ರಾರಂಭಿಸಿದೆವು. ದಿನ ಹೋದಂತೆ ಕೊನೆಯ ಚಿತ್ರವೇ ನಮ್ಮ ಊಹನಾಪಟದಲ್ಲಿ ಎದ್ದು ತೋರುತ್ತಿತ್ತು.

ಒಂದು ದಿನ ರಾತ್ರಿ ಅತ್ತೆ ಡೋರಾಳನ್ನು ಬಿಟ್ಟು ತನ್ನ ಮನೆಗೆ ಹೊರಡುವಾಗ `ಸುಖವಾಗಿ ನಿದ್ರಿಸು ನವಕುಸುಮ’ ಎಂದು ಹೇಳಿದ್ದನ್ನು ಕೇಳಿ ಡೋರಾ ಅತ್ತಳು. ಅವಳ ಅಳುವಿನಿಂದಲೇ ಮುಂದಿನ ಘಟನೆಗಳ ಚಿತ್ರವೇ ನನ್ನೆದುರು ತೋರತೊಡಗಿತು! ರೋಗದ ಹೆಸರೇ ನನ್ನನ್ನು ಹೆದರಿಸುತ್ತಿತ್ತು. `ನವಕುಸುಮ’ವು ಅರಳಿ ಫಲಕೊಡುವ ಮೊದಲೇ ಮರದಲ್ಲೇ ಬಾಡಿ ಮುದುಡುವ ದೃಶ್ಯವನ್ನು ನೆನೆಸಿಕೊಂಡು ನಾನೂ ಅತ್ತೆನು.