ಅಧ್ಯಾಯ ಐವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೆರಡನೇ ಕಂತು

ನಾವು ಮಾರ್ಥಾಳನ್ನು ನದಿಯ ದಂಡೆಯಲ್ಲಿ ಕಂಡು ಮಾತಾಡಿ ಕೆಲವು ತಿಂಗಳುಗಳೇ ಕಳೆದಿದ್ದುವು. ಮಾರ್ಥಾಳಿಂದ ಯಾವ ವರ್ತಮಾನವೂ ಬರಲಿಲ್ಲ. ಎಮಿಲಿ ಮೃತಪಟ್ಟಿರಬೇಕೆಂದೇ ನಾನು ಊಹಿಸುತ್ತಿದ್ದೆನು. ನನ್ನ ಊಹೆ ನಿಜವೇ ಆಗಿ ಪರಿಣಮಿಸಿದ್ದು, ಮಿ. ಪೆಗಟಿಗೆ ಅದು ತಿಳಿದರೆ ಅವರ ಸ್ಥಿತಿ ಏನಾಗಬಹುದೆಂದು ಊಹಿಸಿಯೇ ನಾನು ಹೆದರುತ್ತಿದ್ದೆನು.

ಮಿ. ಪೆಗಟಿಯ ಮಟ್ಟಿಗೆ, ಅವರ ಊಹನೆಯೇ ಬೇರೆ ತೆರನಾಗಿತ್ತು. ಎಮಿಲಿ ಅವರಿಗೆ ಸಿಕ್ಕಿಯೇ ಸಿಕ್ಕುವಳೆಂದು ಅವರು ದೃಢವಾಗಿ ನಂಬಿಕೊಂಡಿದ್ದರು. ಅವರಿಗೆ ದೇವರಲ್ಲಿದ್ದ ಭಕ್ತಿಯಿಂದಲೂ ಮತ್ತು ತನ್ನ ಗುರಿ ನ್ಯಾಯವಾದುದೆಂಬ ಅವರ ಆತ್ಮವಿಶ್ವಾಸದಿಂದಲೂ ಈ ನಂಬಿಕೆ ಅವರಲ್ಲಿ ಅಚಲವಾಗಿತ್ತು. ಅವರ ಎಲ್ಲಾ ಕೆಲಸಗಳನ್ನೂ ಈ ನಂಬಿಕೆಗೆ ತಕ್ಕಂತೆ ಮಾಡುತ್ತಿದ್ದರು. ಅತ್ಯಂತ ಸಣ್ಣ, ಅಥವಾ ಸಂಶಯಾಸ್ಪದವಾದ, ವರ್ತಮಾನ ಸಿಕ್ಕಿದರೂ ಸಹ ಅವರು ಅದನ್ನು ಸ್ವತಃ ನಡೆದುಹೋಗಿ ಪರೀಕ್ಷಿಸುತ್ತಿದ್ದರು. ಇಪ್ಪತ್ತು ಮೂವತ್ತು ಮೈಲುಗಳನ್ನು ಎಮಿಲಿಗಾಗಿ ನಡೆಯುವುದೆಂದರೆ ಅವರಿಗೆ ಅದು ಬಹು ಸುಲಭದ್ದೇ ಆಗಿತ್ತು. ಮಿಸ್ ಡಾರ್ಟಲ್ಲಳಿಂದ ತಿಳಿದ ವರ್ತಮಾನವನ್ನು ಪರೀಕ್ಷಿಸುವುದಕ್ಕಾಗಿ ಅವರು ನೇಪಲ್ಸಿನವರೆಗೂ ಹೋಗಿ ಬಂದಿದ್ದರು. ಮನಸ್ಸಿನ ಕಲ್ಪನೆಗಳಿಂದ ಅಥವ ಅಂಥ ನಂಬಿಕೆಗಳಿಂದ ಅವರು ಎಂದೂ ತೃಪ್ತಿ ಪಡುತ್ತಿರಲಿಲ್ಲ.

ಒಂದು ದಿನ ಸಾಯಂಕಾಲ, ಹನಿ ಹನಿ ಮಳೆ ಬಂದು ಮರದೆಲೆಗಳು ಜೊಂಪೆ ಜೊಂಪೆಯಾಗಿ ನೇಲುತ್ತಾ ನೆಲದ ಮೇಲಿನ ತರಗೆಲೆಗಳು ಒದ್ದೆಯಾಗಿ ಹೊಸತೊಂದು ವಾಸನೆಯನ್ನು ಹರಡುತ್ತಿದ್ದ ಕಾಲದಲ್ಲಿ ಮಾರ್ಥಾಳು ಬಂದು ನನ್ನನ್ನು ಕರೆದಳು. ಅವಳು ಆ ಮೊದಲು ಮಿ. ಪೆಗಟಿಯ ಕೋಣೆಗೆ ಹೋಗಿದ್ದಳಾಗಿಯೂ ಅವರು ಅಲ್ಲಿ ಇಲ್ಲದಿದ್ದುದರಿಂದ ನನ್ನಲ್ಲಿಗೆ ಬಂದದ್ದಾಗಿಯೂ ತಿಳಿಸಿದಳು. ಆದರೆ ಮಿ. ಪೆಗಟಿಯು ಕೋಣೆಗೆ ಬಂದ ಕೂಡಲೇ ಅವರಿಗೆ ಕಾಣ ಸಿಕ್ಕುವಂತೆ ಏರ್ಪಡಿಸಿ, ಅವರು ಬರಬೇಕಾಗಿರುವ ಸ್ಥಳ, ಮತ್ತು ಅಲ್ಲಿಗೆ ಹೋಗಲಿರುವ ದಾರಿಗಳನ್ನು ವಿವರಿಸಿ, ಅವರಿಗೊಂದು ಪತ್ರ ಬರೆದು ಇಟ್ಟಿದ್ದಳೆಂದೂ ಅವಳು ತಿಳಿಸಿದಳು. ನನ್ನನ್ನು ಕರೆದುಕೊಂಡು ಹೋಗಿ ಎಮಿಲಿಯನ್ನು ತೋರಿಸಿಕೊಡುವುದಾಗಿ ತಿಳಿಸಿದ್ದರಿಂದ ನಾನು ಆ ಕೂಡಲೇ ಅವಳ ಜತೆಯಲ್ಲಿ ಹೊರಟೆನು. ಗೋಲ್ಡನ್ ಕ್ರಾಸ್ ಸ್ಕ್ವೈರಿನವರೆಗೆ ನಾವು ಜಟ್ಕದಲ್ಲಿ ಹೋಗಿ, ಮುಂದೆ ಜಾಗ್ರತೆಯಿಂದ, ಒಬ್ಬರನ್ನೊಬ್ಬರು ಸ್ವಲ್ಪ ದೂರ ದೂರವಿರುವಂತೆ, ಹಿಂಬಾಲಿಸುತ್ತಾ ಹೋಗಬೇಕೆಂದೂ ನಿಶ್ಚೈಸಿಕೊಂಡೆವು. ನಾವು ಹೋಗಿ ತಲುಪಬೇಕಾಗಿದ್ದ ಸ್ಥಳವೂ ಎಮಿಲಿಯ ಮಾನಸಿಕ ಪರಿಸ್ಥಿತಿಯೂ ಈ ಗೋಪ್ಯತೆ, ಜಾಗ್ರತೆಗಳ ಅಗತ್ಯತೆಯನ್ನು ಸೂಚಿಸುತ್ತಿದ್ದುವು.

ಗೋಲ್ಡನ್ ಕ್ರಾಸ್ ಸ್ಕ್ವೈರಿನಲ್ಲಿ ಅನೇಕ ರಸ್ತೆಗಳು ನಗರದ ನಾನಾ ಭಾಗದಿಂದ ಬಂದು ಸೇರುವುವು. ಆ ಸ್ಕ್ವೈರಿನ ದಕ್ಷಿಣದಲ್ಲಿನ ಒಂದು ರಸ್ತೆಯಲ್ಲೇ ಮಾರ್ಥಾಳು ಮುಂದೆ ಹೋಗುತ್ತಿದ್ದ ಪ್ರಕಾರ, ನಾನು ನಡೆದು ಹೋದೆನು. ಹಾಗೆ ಸ್ವಲ್ಪ ದೂರ ಹೋಗುವಾಗ ತುಂಬಾ ಹಳತಾದ ಮನೆಗಳ ಸಮುದಾಯಗಳೇ ನಮಗೆ ಕಾಣಸಿಕ್ಕಿದುವು. ಅಲ್ಲಿನ ಮನೆಗಳೆಲ್ಲಾ ಹಿಂದಿನ ಕಾಲದಲ್ಲಿ ಶ್ರೀಮಂತರ ವಸತಿಗೃಹಗಳಾಗಿದ್ದುವು. ಈಗ ಅವುಗಳಲ್ಲಿ ಬಹು ಹೆಚ್ಚಿನವುಗಳೆಲ್ಲ ಬಾಡಿಗೆಗೆ ಕೊಡಲಾಗಿದ್ದುವು. ಆ ಮನೆಗಳಲ್ಲಿ ಈಗ, ಒಂದೇ ಮನೆಯಲ್ಲಿ ನಾಲ್ಕಾರು ಬಿಡಾರಗಳೂ ಇರುತ್ತಿದ್ದುವು. ಮನೆಯ ಒಳಗಡೆ ಈ ವಿಧದ ವಾಸದ ಅನುಕೂಲಕ್ಕಾಗಿ ಮರದ ಹಲಗೆಗಳಿಂದ ಕೋಣೆಗಳನ್ನು ವಿಂಗಡಿಸಿ ಬಾಡಿಗೆಗೆ ಕೊಡುತ್ತಿದ್ದರು. ಈಗ ಬಡವರೇ ಈ ಮನೆಗಳಲ್ಲಿ ವಾಸಿಸುತ್ತಿದ್ದುದರಿಂದ, ಹಿಂದಿನ ಕನ್ನಡಿ ಕಿಟಕಿಗಳಲ್ಲಿನ ಒಡೆದು ಹೋಗಿದ್ದ ಕನ್ನಡಿಗಳನ್ನು ಅಲ್ಲಲ್ಲಿಗೇ ಬಿಟ್ಟಿದ್ದು, ನೋಡುವವರಿಗೆ ಮನೆಗಳು ಬಹು ವಿಕಾರವಾಗಿಯೂ ಅಪಾಯಕರವಾಗಿಯೂ ಕಾಣುತ್ತಿದ್ದುವು. ಈ ವಿಕಾರದ ಜತೆಯಲ್ಲಿ ದೂಳೂ ದೂಸರವೂ ತುಂಬಿಕೊಂಡು, ಕೆಲವು ಭಾಗಗಳಲ್ಲಿ ಜನರೂ ಇಲ್ಲದೆ, ಇರಬಹುದಾದರೂ ರಾತ್ರಿ ಮಾತ್ರ ಬಂದಿದ್ದು ಬೆಳಗಾದ ಕೂಡಲೆ ತಂತಮ್ಮ ಕಸಬುಗಳಿಗೆ ಹೋಗುತ್ತಾ – ಈ ವಠಾರವೆಲ್ಲ ಬಡತನದ್ದೂ ಹಾಳು ಬಿದ್ದದ್ದೂ ಆಗಿ ತೋರುತ್ತಿತ್ತು.

ಇಂಥ ಮನೆಗಳ ಸಾಲಿನಲ್ಲಿದ್ದ ಒಂದು ಮನೆಗೆ ನಾವು ಹೋಗಬೇಕಿತ್ತು. ನಾವು ಈ ಮನೆಮುಖವಾಗಿ ಮುಂದೆ ಹೋಗುತ್ತಿದ್ದಾಗ ನಮಗಿಂತ ಸ್ವಲ್ಪ ಮುಂದೆ ಒಂದು ಅಡ್ಡದಾರಿಯಿಂದ ಒಬ್ಬಳು ಹೆಂಗುಸು ಬಂದು, ನಮ್ಮ ದಾರಿಯಲ್ಲೇ ಅವಸರದಿಂದ ಮುಂದೆ ನಡೆದು, ನಾವು ಹೋಗಬೇಕಾಗಿದ್ದ ಮನೆಗೇ ನುಗ್ಗಿದಳು. ಆ ರಸ್ತೆಯಲ್ಲಿ ಹೋಗುತ್ತ ಬರುತ್ತಿದ್ದವರನ್ನೆಲ್ಲ ಬಹು ಜಾಗ್ರತೆಯಿಂದ ನೋಡುತ್ತಿದ್ದ ಮಾರ್ಥಾಳು ನಾವು ಬಹು ಎಚ್ಚರಿಕೆಯಿಂದ ಮುಂದೆ ಹೋಗಬೇಕೆಂದು ನನಗೆ ಸೂಚನೆಯಿತ್ತಳು. ನಾವು ಆ ರೀತಿಯಾಗಿಯೇ ಮುಂದೆ ಹೋದೆವು. ನಾವು ನೋಡುತ್ತಿದ್ದ ಹಾಗೆಯೇ ಆ ಅಪರಿಚಿತ ಸ್ತ್ರೀ ನಾವು ನುಗ್ಗಬೇಕಾಗಿದ್ದ ಕೋಣೆಗೆ ನುಗ್ಗಿದಳು! ಇದನ್ನು ಕಂಡು ನಮಗೆ ಆಶ್ಚರ್ಯವೂ ಭಯವೂ ಕುತೂಹಲವೂ ಉಂಟಾಯಿತು. ಹಾಗಾಗಿ ನಾವು ಬಹು ಜಾಗ್ರತೆಯಿಂದ ಆ ಕೋಣೆಯ ಹಿಂಬದಿಯ ಒಂದು ಖಾಲಿ ಕೋಣೆಗೆ ನುಗ್ಗಿದೆವು. ಮಾರ್ಥಾಳಿಗೆ ಈ ಕೋಣೆಗಳ ಪರಿಚಯ ಚೆನ್ನಾಗಿ ಇದ್ದುದರಿಂದ, ಎಲ್ಲಿಗೆ ಬೇಕೋ, ಹೇಗೆ ಬೇಕೋ ಅಲ್ಲಿಗೆ, ಹಾಗೆ, ನನ್ನನ್ನು ಕರೆದುಕೊಂಡು ಹೋದಳು. ನಾವು ಆ ಮನೆಯಲ್ಲಿ ಕೋಣೆಯಿಂದ ಕೋಣೆಗೆ, ಮನೆಯ ಪರಿಚಯವಿದ್ದವರಂತೆ ಧೈರ್ಯವಾಗಿ ಹೋಗುವಾಗ, ನಮ್ಮನ್ನು ಕಂಡವರು ಯಾರೂ, ನಮ್ಮನ್ನು ಮಾತಾಡಿಸಲಿಲ್ಲ. ಬೇರೆ ಬೇರೆ ಸಂಸಾರಗಳು ಇಲ್ಲಿ ವಾಸಮಾಡಿಕೊಂಡು ಅವರವರ ನಾನಾ ವಿಧದ ಕಸಬುಗಳಲ್ಲೋ ದುಃಖಗಳಲ್ಲೋ ಭಯಗಳಲ್ಲೋ ಮಗ್ನರಾಗಿರುತ್ತಿದ್ದುದರಿಂದ ಒಬ್ಬರನ್ನೊಬ್ಬರು ನೋಡುವ ಪದ್ಧತಿಯಾಗಲೀ ಸಾಧಾರಣದ ಗೌಜು ಗಲಭೆಗಳಿಗೆ ನಿಗಾ ಕೊಡುವ ಕ್ರಮವಾಗಲೀ ಇಲ್ಲಿರಲಿಲ್ಲ. ನಾವು ಸಂದರ್ಭವಶದಿಂದ ನುಗ್ಗಿ ನಿಂತಿದ್ದ ಕೋಣೆಗೂ ನಾವು ನಿಜವಾಗಿಯೂ ನುಗ್ಗ ಬೇಕಾಗಿದ್ದ ಕೋಣೆಗೂ ಮಧ್ಯೆ ಮರದ ಹಲಗೆಗಳಿಂದ ವಿಂಗಡಿಸಿದ್ದ ಹಳೆ ಗೋಡೆಯಿತ್ತು. ಆ ಗೋಡೆಯಲ್ಲಿ ತುಂಬಾ ಸೆರೆಯಿದ್ದುದರಿಂದ ಆಚೆ ಕೋಣೆಯೊಳಗೆ ನೋಡಲೂ ಅಲ್ಲಿನ ಮಾತುಗಳನ್ನು ಕೇಳಲೂ ಸಾಕಷ್ಟು ಅನುಕೂಲವಿತ್ತು.

ಈಗಾಗಲೇ ದೀಪ ಹಚ್ಚುವ ಸಮಯವಾಗಿದ್ದುದರಿಂದ ಆ ಕೋಣೆಯಲ್ಲಿ ಒಂದು ದೀಪ ಉರಿಯುತ್ತಿತ್ತು. ಆದರೆ, ಕಟ್ಟಡಗಳಲ್ಲಿ ಹಗಲೆ ದೀಪ ಬೇಕೆನ್ನುವಷ್ಟು ಕತ್ತಲೆಯಿರುವುದೇ ಕ್ರಮವೆಂದು ನೋಡುವಾಗಲೇ ಗೊತ್ತಾಗುತ್ತಿತ್ತು. ನಮ್ಮ ಆಚೆ ಕೋಣೆಯ ನೆಲದ ಮೇಲೆ ಒಬ್ಬಳು ಹೆಂಗುಸು ಕುಳಿತಿದ್ದಳು. ಅವಳ ಬಲ ಭಾಗದಲ್ಲಿ, ಸ್ವಲ್ಪ ದೂರದಲ್ಲಿ, ಸಾಧಾರಣ ನಮಗೆ ಮುಖ ಹಾಕಿಯೇ ನಮಗಿಂತ ಮುಂದೆ ಬಂದಿದ್ದ ಹೆಂಗುಸು ನಿಂತಿದ್ದಳು. ದೀಪ ನಮಗೆ ಸಮೀಪವಾಗಿ ಇದ್ದುದರಿಂದ, ದೀಪದ ಬೆಳಕಿನಲ್ಲಿ ನಿಂತಿದ್ದ ವ್ಯಕ್ತಿ ಮಿಸ್ ಡಾರ್ಟಲ್ಲಳೆಂದು ನಾನು ಸುಲಭದಲ್ಲಿ ಗುರುತಿಸಿದೆನು. ಮಿಸ್ ಡಾರ್ಟಲ್ಲಳು ಮಾತಾಡುತ್ತಿದ್ದಳು. ನಾನು ನನ್ನ ಉಸಿರನ್ನೇ ಬಿಗಿ ಹಿಡಿದು, ಹಲಗೆಯ ಸೆರೆಯಿಂದ ನೋಡುತ್ತಲೂ ಮಾತನ್ನು ಕೇಳುತ್ತಲೂ ನಿಂತೆನು. ಮಿಸ್ ಡಾರ್ಟಲ್ಲಳು ಅಹಂಕಾರ, ದ್ವೇಷ, ಅಸೂಯೆ, ಕ್ರೋಧಗಳಿಂದ ಕೈ ಮೈ ಅಲ್ಲಾಡಿಸುತ್ತಾ ಒಂದು ವಿಧದ ಕುಲಮದದ ಅಧಿಕಾರವಾಣಿಯಿಂದ ಮಾತಾಡುತ್ತಿದ್ದಳು. ನೆಲದಲ್ಲಿ ಕುಳಿತಿದ್ದವಳನ್ನುದ್ದೇಶಿಸಿ ಮಿಸ್ ಡಾರ್ಟಲ್ಲಳು ಅಂದಳು –
“ನಿನ್ನನ್ನು ನೋಡಲು ಬಂದೆ.”
“ಮನೆಯ ಯಜಮಾನಿ ನಾನಲ್ಲ, ಅಮ್ಮಾ. ಯಜಮಾನಿಯನ್ನು ಹುಡುಕಿ ಬಂದದ್ದಲ್ಲವೇ ನೀವು?” ಅಂದಳು ಕುಳಿತಿದ್ದವಳು. ಅವಳು ಆಡಿದ ಮಾತು ಬಹು ಮೃದುವಾದ ವಾಣಿಯಾಗಿತ್ತು. ಅದನ್ನು ಕೇಳಿದೊಡನೆಯೇ ನನ್ನ ಜ್ಞಾಪಕವು ಚುರುಕುಗೊಂಡಿತು. ಆ ಸ್ವರವಿದ್ದ ವ್ಯಕ್ತಿಯನ್ನು ಪೂರ್ಣ ನಿಶ್ಚೈಸುವ ಮೊದಲು, ಮಿಸ್ ಡಾರ್ಟಲ್ಲಳ ಮಾತುಗಳನ್ನು ಗಮನವಿಟ್ಟು ಕೇಳತೊಡಗಿದೆನು.

“ನಿನ್ನ ಯಜಮಾನಿಯು ನನಗೆ ಅಗತ್ಯವಿಲ್ಲ, ಅವಳ ಗುರುತೂ ನನಗಿಲ್ಲ. ಜೇಮ್ಸ್ ಸ್ಟೀಯರ್ಫೋರ್ತನನ್ನು ವಂಚಿಸಿ, ಆಕರ್ಷಿಸಿ, ಹಾಳು ಮಾಡಿದ ಅವಲಕ್ಷಣದ ಸ್ವರೂಪ ಹೇಗಿದೆಯೆಂದು ನೋಡಲು ಬಂದವಳು ನಾನು. ನೀನೇ ತಾನೆ ಆ ಮಾರಿ?” ಅಂದಳು ಮಿಸ್ ಡಾರ್ಟಲ್ಲಳು.

ಈ ಮಾತುಗಳನ್ನು ಕೇಳಿದ ಒಡನೆಯೇ ಕುಳಿತಿದ್ದ ವ್ಯಕ್ತಿಯು ಎದ್ದು ಕೋಣೆಯಿಂದ ಓಡಲು ಪ್ರಯತ್ನಿಸಿದಳು. ಅವಳು ಅಷ್ಟೊಂದು ಗಾಬರಿಗೊಂಡಿದ್ದಳು. ಆದರೆ ಮಿಸ್ ಡಾರ್ಟಲ್ಲಳು ಬಾಗಿಲಿಗೆ ಅಡ್ಡವಾಗಿ ನಿಂತು –
“ರಂಡೇ, ನೀನು ಓಡಿ ತಪ್ಪಿಸುವುದನ್ನು ನೋಡುತ್ತೇನೆ! ನಿನ್ನ ಕಥೆಯನ್ನು ಊರಿಗೇ ತಿಳಿಸಿ, ನಿನಗೆ ಬುದ್ಧಿ ಕಲಿಸಬಲ್ಲೆ ನಾನು, ತಿಳಿಯಿತೇ? ಸುಮ್ಮನೆ ಕುಳಿತರೆ ಸರಿ. ನಿನ್ನಂಥವಳ ಸ್ವರೂಪಕ್ಕೆ ಮರುಳಾದ ಸ್ಟೀಯರ್ಫೋರ್ತನು ಹುಚ್ಚನೇ ಇರಬೇಕು. ನಿನ್ನ ಈ ಚಮತ್ಕಾರಗಳೆಲ್ಲ ನಮ್ಮೊಡನೆ ಇನ್ನು ನಡೆಯದು” ಎಂದು ಗದರಿಸಿದಳು.

ಅಲ್ಲಿದ್ದವಳು ಎಮಿಲಿಯೆಂದು ಈ ಮೊದಲೇ ನನಗೆ ಗೊತ್ತಾಯಿತು. ಎಮಿಲಿ ಬಹು ದೈನ್ಯ ಸ್ವರದಿಂದ –
“ಅಮ್ಮಾ ನೀನು ಯಾರೇ ಇರಬಹುದು. ನನಗೆ ಮಾತ್ರ ನಿನ್ನ ಪರಿಚಯವಿಲ್ಲ. ಆದರೆ ನಿನಗೆ ನನ್ನ ಚರಿತ್ರೆ ತಿಳಿದಿರುವಂತೆ ತೋರುತ್ತದೆ. ಏನಿದ್ದರೂ ನಾನು ಯಾರಿಗೂ ಅಪರಾಧ ಮಾಡಿರುವುದಿಲ್ಲ. ದೇವರೇ ಎಲ್ಲವನ್ನೂ ನೋಡಿಯೂ ಕರುಣಾಳುವಾಗಿರುವಾಗ, ಗುರುತೇ ಇಲ್ಲದ ನನ್ನನ್ನು ನೋಯಿಸಿದರೆ ನಿನಗಾದರೂ ದೊರಕುವ ಫಲವೇನು, ನೀನೇಕೆ ದೇವರ ಕೋಪಕ್ಕೆ ಗುರಿಯಾಗುವೆ?” ಅಂದಳು.

“ದೇವರು – ಯಾವ ದೇವರು? ನಿಮಗೂ ನಮಗೂ ಭೇದವಿಲ್ಲವೇ? ದೇವರೂ ದಿಂಡ್ರೂ ಎಂದೆಲ್ಲ ಮಾತಾಡಲು ನಿಮ್ಮಂಥವರಿಗೂ ನಮಗೂ ಸರಿಸಮಾನತೆಯೆಲ್ಲಿದೆ? ಇಂಥ ಮಾತು ನಿಮ್ಮಂಥವರ ಬಾಯಿಯಿಂದ ಬರುವ ಮೊದಲು ನಿಮಗೆ ಚಡಿ ಕೊಡಿಸಬೇಕು! ಚಡಿ ಕೊಡಿಸಿ ಪಾಶಿಗೆ ಹಾಕಬೇಕು. ಪಾಪ, ಪುಣ್ಯ, ದೇವರು – ಇದೆಲ್ಲಾ ಹಣಕ್ಕಾಗಿ ಹೆಣ್ಣು ಮಾರುವ, ಮೀನು ಮಾರುವ, ಬೆಸ್ತರಿಗೇಕೆ?” ಎಂದು ಮಿಸ್ ಡಾರ್ಟಲ್ಲಳು ಆರ್ಭಟಿಸಿದಳು.

“ನಾನು ತಪ್ಪು ಮಾಡಿರುತ್ತೇನೆಂದು ಒಪ್ಪುತ್ತೇನೆ. ಬಾಲ್ಯದಲ್ಲಿ ನನ್ನನ್ನು ಸಾಕಿದವರು ನನ್ನ ತಪ್ಪುಗಳನ್ನು ಮನ್ನಿಸಿ, ನನ್ನನ್ನು ಮುದ್ದು ಮಾಡಿದ್ದರಿಂದಲೋ ಏನೋ ತಪ್ಪು, ಒಪ್ಪು, ಶಿಕ್ಷೆಯೆಂಬುದನ್ನೆಲ್ಲ ಬದಿಗಿಟ್ಟು ಒಮ್ಮೆ ತಪ್ಪು ಮಾಡಿರುತ್ತೇನೆ, ಹೌದು. ಸ್ಟೀಯರ್ಫೋರ್ತನನ್ನು ಹೃತ್ಪೂರ್ವಕವಾಗಿ ನಂಬಿ, ಪ್ರೀತಿಸಿ, ಅವನಿಗಾಗಿ ನನ್ನ ಜನ್ಮವನ್ನೇ ಒಪ್ಪಿಸಿದೆ. ಆದರೆ ನನಗೆ ದೊರಕಿದ ಪ್ರತಿಫಲ – ಅವಮಾನ, ತಿರಸ್ಕಾರ. ಈಗ ನನ್ನ ಮನೆಯವರ ಮುಖ ನೋಡಲು ನನಗೆ ಸಾಧ್ಯವಿಲ್ಲ, ಧೈರ್ಯವಿಲ್ಲ! ಇಂಥ ಪಾಪಿಯನ್ನು ನೀನೆಷ್ಟು ಬೈದರೂ ನನಗೆ ದುಃಖವಿಲ್ಲ. ಆದರೆ ಮಾನ ಮರ್ಯಾದೆಯುಳ್ಳ, ತಮ್ಮ ಕಾಯಕಷ್ಟಗಳಿಂದ ನ್ಯಾಯ ಧರ್ಮ ಪ್ರಕಾರ ಜೀವನ ನಡೆಸಿ ಬರುವ ನಮ್ಮ ಮನೆಯವರನ್ನು ನೀನು ಬೈಯ್ಯಬಾರದಮ್ಮಾ” ಅಂದಳು ಎಮಿಲಿ, ಬಹು ಕರುಣಾಜನಕವಾಗಿ.

ಸ್ಟೀಯರ್ಫೋರ್ತನನ್ನು ನಂಬಿ, ಪ್ರೀತಿಸಿ, ತನ್ನ ಜನ್ಮವನ್ನು ಒಪ್ಪಿಸಿದ್ದುದಾಗಿ ಎಮಿಲಿ ಹೇಳುವಾಗ ಮಿಸ್ ಡಾರ್ಟಲ್ಲಳ ಮುಖ ಬಹು ಕ್ರೂರವಾಗಿಯೂ ನಿಷ್ಠುರವಾಗಿಯೂ ಕಾಣುತ್ತಿತ್ತು. ಅವಳು ತಡೆಯಲಾರದ ಕೋಪದಿಂದ ಎಮಿಲಿಗೆ ಎದ್ದು ಒಂದು ಪೆಟ್ಟನ್ನೇ ಕೊಟ್ಟಳು. ಆದರೆ, ಸಿಟ್ಟಿನ ಭರದಲ್ಲಿ ಕೊಟ್ಟ ಪೆಟ್ಟು ಗುರಿತಪ್ಪಿ ನೆಲಕ್ಕೆ ಬಿದ್ದದ್ದರಿಂದ ಮಿಸ್ ಡಾರ್ಟಲ್ಲಳಿಗೆ ಮತ್ತಷ್ಟು ಕೋಪ ಬಂದು, ಅವಳು ಕಿಡಿಕಿಡಿಯಾದಳು. ಅಂಥಾ ಕೋಪದಿಂದಲೇ ಮತ್ತು ಜರೆಯತೊಡಗಿದಳು –
“ಏನು? ಪ್ರೀತಿ? ನಿಮ್ಮಂಥ ಸೂಳೆಯರು ಉತ್ತಮ ಕುಲದ ಸ್ಟೀಯರ್ಫೋರ್ತನನ್ನು ಪ್ರೀತಿಸುವುದೆಂದರೇನು! ಏನನ್ಯಾಯ! ಹಣಕ್ಕಾಗಿ ಪ್ರೀತಿಸಿದಂತೆ ನಟಿಸಿ, ದೇಹವನ್ನು ಮಾರಿದ ಹೆಣ! ಈಗ ಅದೇ ಹೆಣ ಪ್ರೀತಿ, ಮಾನ, ಮರ್ಯಾದೆಯೆಂದೆನ್ನುತ್ತದಲ್ಲಾ – ಏನಾಶ್ಚರ್ಯ! ನಿಮ್ಮಂಥವರನ್ನು ಮಣ್ಣಡಿಯಲ್ಲಿ ಹೂಳಲೂ ಸಹ ಕೂಡದು. ನಿಮ್ಮನ್ನು ಹೊಡೆದು ನರಿ ನಾಯಿಗಳಿಗೆ ತುತ್ತಾಗಿ ಎಸೆಯಬೇಕು. ತಾವಾಗಿಯೇ ಬೆಳೆದು ಬದುಕುವ ಮೀನುಗಳನ್ನು ಸುಲಭವಾಗಿ ಹಿಡಿದು ದುಡ್ಡಿಗಾಗಿ ಮಾರಿದಂತೆ, ದುಡ್ಡಿಗಾಗಿ ತಮ್ಮನ್ನು ಮಾರಿಕೊಳ್ಳುವ ಕ್ರೂರ ಮಾರಿಗಳಿಗೆ ಎಷ್ಟು ಮಾತು? ಬಾಯಿ ಮುಚ್ಚು. ನಾನಿಲ್ಲಿಗೆ ಬಂದದ್ದು ನಿನ್ನ ಸೂಳೆ ನಟನೆ ನೋಡುವುದಕ್ಕಲ್ಲ, ಠಕ್ಕಿನ ಭಾಷಣ ಕೇಳುವುದಕ್ಕಲ್ಲ. ನಾನು ನಿನ್ನ ಆಜನ್ಮ ವೈರಿ. ಇನ್ನು ಮುಂದೆ ನಮ್ಮ ಮನೆ ವಠಾರಕ್ಕೆಂದಾದರೂ ಬಂದದ್ದಾದರೆ ನಿನಗೆ ಮಾಡಿಸುವ ಶಿಕ್ಷೆಯೇ ಬೇರೆ. ಇನ್ನು ಪುನಃ ಅವನನ್ನು ಬಗಲೊಳಗೆ ಹಾಕಿಕೊಳ್ಳುವ ಪ್ರಯತ್ನವನ್ನೇನಾದರೂ ಮಾಡಿದರೆ ಜೋಕೆ – ಎಂದೆಚ್ಚರಿಸಲು ಬಂದಿರುತ್ತೇನೆ. ಬೇಕಾದರೆ ನಮ್ಮ ಊರಿನಿಂದ ದೂರವಾಗಿ, ಜನರಿಲ್ಲದಿದ್ದಲ್ಲಿ, ಬಿದ್ದು ನಿನ್ನಂಥವರು ಸತ್ತರೂ ಸಂತೋಷ!” ಎಂದು ಮಿಸ್ ಡಾರ್ಟಲ್ಲಳು ಹೇಳುತ್ತಿದ್ದಾಗಲೇ ಹೊರಗಿನಿಂದ ಯಾರೋ ಬರುವ ಶಬ್ದ ಕೇಳಿಸಿತು. ಆ ಶಬ್ದ ಅವಳಿಗೂ ಕೇಳಿಸಿರಬೇಕು. ಆ ಶಬ್ದವು ಮಿ. ಪೆಗಟಿಯವರದಾಗಿರಬೇಕೆಂದು ನಾನು ಊಹಿಸಿದೆನು. ಅಷ್ಟರಲ್ಲೇ ಮಿಸ್ ಡಾರ್ಟಲ್ಲಳು ಎಮಿಲಿಯ ಮುಖಕ್ಕೆ ಉಗಿದು, ಬೈದುಕೊಂಡು, ಆ ಕೋಣೆಯಿಂದ ಹೊರಟು ಹೋದಳು. ಆಗಲೇ ಮಿ. ಪೆಗಟಿಯು ಆ ಕೋಣೆಯನ್ನು ಪ್ರವೇಶಿಸಿದರು.

“ಮಾವಾ” ಎಂಬ ಬಹು ಪ್ರೀತಿಯ ಸ್ವರವೊಂದು ಕೇಳಿಸಿತು. ನಾವಿಬ್ಬರೂ ನಮ್ಮ ಕೋಣೆಯನ್ನು ಬಿಟ್ಟು ಎಮಿಲಿಯಿದ್ದ ಕೋಣೆಗೆ ಹೋದೆವು. ಮಿ. ಪೆಗಟಿ ಎಮಿಲಿಯನ್ನು ತಬ್ಬಿ ಹಿಡಿದುಕೊಂಡು ಮುತ್ತು ಕೊಡುತ್ತಿದ್ದರು, ಅವರಿಬ್ಬರೂ ಅಳುತ್ತಿದ್ದರು.

ನಮ್ಮನ್ನು ಕಂಡು ಮಿ. ಪೆಗಟಿ –
“ಮಾಸ್ಟರ್ ಡೇವೀ, ದೇವರು ಕರುಣಾಮಯನು. ಅವನಿಗೆ ಸರಿ ಕಂಡ ರೀತಿಯಲ್ಲಿ ನನಗೆ ನನ್ನ ಗುರಿಯನ್ನು ತೋರಿಸಿರುವನು” ಎಂದು ಹೇಳಿ ಎಮಿಲಿಯನ್ನು ಎತ್ತಿಕೊಂಡು ಹೊರಟರು. ಅವರನ್ನು ಹಿಂಬಾಲಿಸುತ್ತಾ ನಾವೂ ಹೊರಟೆವು.

(ಮುಂದುವರಿಯಲಿದೆ)