ಅಧ್ಯಾ ಐವತ್ತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿಧಾರಾವಾಹಿಯ ಐವತ್ತೈದನೇ ಕಂತು

ಗತಕಾಲದ ಘಟನೆಗಳನ್ನು ಇನ್ನೊಮ್ಮೆ ನೋಡಲು ಬಯಸುತ್ತೇನೆ. ನನ್ನ ಜೀವನ ಯಾತ್ರೆಯಲ್ಲಿ ನಡೆದು ಮುಂದರಿಯುವ ಜನಸಂದಣಿಯ ಪ್ರವಾಹದ ನಡುವೆ ಸ್ಥಿರವಾಗಿ ನಿಂತಂತೆ ತೋರುತ್ತಿರುವ ನನ್ನ ಪತ್ನಿಯ ಮುದ್ದು ಮುಖದ ಸುಂದರ ಚಿತ್ರವೊಂದು ನನ್ನ ದೃಷ್ಟಿಯನ್ನು ಸೆಳೆಯುತ್ತಿದೆ. `ಒಮ್ಮೆ ನಿಂತು ನನ್ನನ್ನು ಪ್ರೀತಿಯಿಂದ ನೋಡಿ ಮುಂದರಿಸು – ನವಕುಸುಮವು ಬಾಡಿ ಬೀಳಲಿರುವುದನ್ನು ಒಮ್ಮೆ ನೋಡು’ ಎಂದು ಅದು ಸಲಿಗೆಯಿಂದ, ನಿಷ್ಕಳಂಕ ಪ್ರೇಮದಿಂದ ನನ್ನನ್ನು ಕರೆದು ಹೇಳುತ್ತಿದೆ!

`ಗುಣವಾಗಲು ಸ್ವಲ್ಪ ದಿನ ಬೇಕು’ ಎಂಬ ಸಮಾಧಾನದ ಮಾತುಗಳನ್ನು ನಾನು ಪುನಃ ಹೇಳುವ ಹಾಗಿಲ್ಲ – ಇನ್ನೆಂದೂ ಜಿಪ್ಪನೂ ಅವಳೂ ನನ್ನೆದುರು ಜತೆಯಾಗಿ ನಲಿದು ಆಡುವುದನ್ನು ನಾನು ಕಾಣೆನು!

ಜಿಪ್ಪನು ಮುದುಕನಾದನು; ಅವನ ದೃಷ್ಟಿ ಮಂದವಾಗಿದೆ. ಅವನು ಡೋರಾಳ ಹಾಸಿಗೆಯ ಒಂದು ಮೂಲೆಯಲ್ಲಿ ಸದಾ ಕುಳಿತು ಅವಳನ್ನು ಕಾಯುತ್ತಿರುವನು.

ಒಂದು ದಿನ ಡೋರಾಳು ನನ್ನನ್ನು ಕರೆದು –

“ನನ್ನ ತಲೆಗೂದಲಿನ ಗುಂಗುರುಗಳು ಹೇಗಿವೆ?” ಎಂದಳು.

“ಬಹು ಸುಂದರವಾಗಿವೆ – ಅದಕ್ಕಾಗಿ ಅಲ್ಲವೇ ಅಂದು ನಾನು ನಾಲ್ಕು ಗುಂಗುರುಗಳನ್ನು ಕೊಡೆಂದು ಕೇಳಿದ್ದು?” ಎಂದಂದೆನು.

ಇನ್ನೂ ಕೆಲವು ದಿನಗಳು ಕಳೆದನಂತರ ಒಂದು ದಿನ ಅಂದಳು –

“ನಾನು ಬುದ್ಧಿಯಿಲ್ಲದವಳಲ್ಲವೆ ಡೇವಿ?”

“ಇಲ್ಲ ಮುದ್ದೂ – ನೀನಿನ್ನೂ ಚಿಕ್ಕವಳು. ನಿನಗೆ ಬುದ್ಧಿ ಬರುತ್ತದೆ” ಅಂದೆನು.

“ಎಂದಾದರೂ ಬಂದೀತೆಂದು ಖಂಡಿತವಾಗಿಯೂ ನಂಬಿದ್ದೀಯೇನು?”

“ಖಂಡಿತವಾಗಿಯೂ ಬರುತ್ತದೆ – ಬಂದೇ ಬರುತ್ತದೆ.”

“ನೀನು ಹೇಗೆ ಗ್ರಹಿಸಿದರೂ ನನಗೇ ಗೊತ್ತಿದೆ, ನನಗೆ ಬುದ್ಧಿ ಇಲ್ಲಾಂತ. ಸ್ವಲ್ಪ ಹೊತ್ತು ಕೈಯ್ಯನ್ನು ತಿಕ್ಕು” ಎಂದು ನನ್ನ ಕಡೆಗೆ ಕೈಯೊಡ್ದಿ, ಸ್ವಲ್ಪ ಹೊತ್ತು ಆಲೋಚನಾಮಗ್ನಳಾಗಿದ್ದಳು. ಅನಂತರ ಅಂದಳು –

“ಏಗ್ನೆಸ್ಸಳೊಡನೆ ಮಾತಾಡಬೇಕೆಂದು ಆಸೆಯಿದೆ – ಅವಳನ್ನು ಬರಮಾಡುವಿಯೇನು?”

ಏಗ್ನೆಸ್ಸಳನ್ನು ಬರಮಾಡಿದೆ. ಏಗ್ನೆಸ್ಸಳೂ ಡೋರಾಳೂ ಗುಟ್ಟಿನಲ್ಲಿ ಮಾತಾಡಿಕೊಳ್ಳಲಿ ಎಂದು ನಾನು ಮಹಡಿಯಿಂದ ಕೆಳಗಿಳಿದೆನು. ಆಗ ಜಿಪ್ಪ್ ಅಂಗಳಕ್ಕೆ ಹೋಗಿದ್ದನು. ನನ್ನನ್ನು ಮಹಡಿಯ ಕೆಳಗೆ ಕಂಡ ಜಿಪ್ಪನು ತಾನು ಮಹಡಿಯ ಮೇಲೆ ಹತ್ತಬೇಕೆಂದು ಆರ್ತತನದಿಂದ ಕೂಗಿಕೊಂಡನು, ಮಹಡಿ ಹತ್ತಲು ಯತ್ನಿಸಿತು.

“ಈ ಹೊತ್ತು ಸಾಧ್ಯವಿಲ್ಲ ಜಿಪ್ಪ್” ಎಂದು ಹೇಳುತ್ತಾ ಅದರ ಬೆನ್ನನ್ನು ಸವರಿದೆ.

ಜಿಪ್ಪ್ ನನ್ನ ಮುಖ ನೋಡಿ ಕೂಗಿತು; ನನ್ನ ಕಾಲಬುಡದಲ್ಲಿ ಮುದುಡಿ ಮಲಗಿ ಆಗಲೇ ಸತ್ತಿತು. ಈ ವಿಷಯವನ್ನು ಡೋರಾಳಿಗೆ ತಿಳಿಸುವುದೇ ಬೇಡವೇ ಎಂದು ಗ್ರಹಿಸುತ್ತಾ ಮಹಡಿಯನ್ನು ಹತ್ತತೊಡಗಿದೆ. ಆಗಲೇ ಏಗ್ನೆಸ್ಸಳು ನನ್ನನ್ನು ಕರೆಯುವುದಕ್ಕೆಂದು ಎದುರು ಬಂದಳು.ಏಗ್ನೆಸ್ಸಳ ಮುಖದಲ್ಲಿ ಎಲ್ಲವೂ ಲಿಖಿತವಾಗಿತ್ತು. “ಆಗಿಹೋಯ್ತೆ, ಏಗ್ನೆಸ್?” ಎಂದು ನಾನು ಪ್ರಶ್ನಿಸಿದ್ದು ಮಾತ್ರ ಜ್ಞಾಪಕವಿದೆ. ಅನಂತರ ಸರ್ವತ್ರ ಅಂಧಕಾರ – ಏನೂ ಜ್ಞಾಪಕವಿಲ್ಲ.

 

(ಮುಂದುವರಿಯಲಿದೆ)