ಅಧ್ಯಾಯ ಐವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತಾರನೇ ಕಂತು

ದುಃಖದ ಹೊರೆಯಿಂದ ನನ್ನ ಮನಸ್ಸು ಹೇಗಿತ್ತೆಂದು ತಿಳಿಸುವ ಪ್ರಸಂಗ ಇದಲ್ಲ. ನನ್ನ ಭವಿಷ್ಯ ಮುಂದುವರಿಯದಂತೆ ಭದ್ರವಾದ ಒಂದು ಗೋಡೆಯೇ ಅಡ್ಡವಿದ್ದಂತೆ ನನಗೆ ತೋರುತ್ತಿತ್ತು. ನನ್ನ ಸರ್ವಶಕ್ತಿಗಳೂ ಮುಗಿದು ನಾನು ಪೂರ್ಣ ನಿಶ್ಶಕ್ತನ್ನಾಗಿ ಬಿದ್ದು, ಇನ್ನು ಸುಖ ದೊರಕಬೇಕಾದರೆ ಮರಣ ಒಂದಲ್ಲದೆ ಬೇರೆ ಮಾರ್ಗವೇ ಇಲ್ಲವೆಂಬಂತೆ ನನಗೆ ತೋರುತ್ತಿತ್ತು. ಇದೇ ಸಮಯದಲ್ಲಿ ನಾವು, ಒಂದಲ್ಲದಿದರೆ ಒಂದು ವಿಧದಲ್ಲಿ ಪರದೇಶಕ್ಕೆ ಹೋಗಲಿದ್ದ ಮಿ. ಮೈಕಾಬರರ ವಹಿವಾಟುಗಳಲ್ಲಿ ಕೈ ಹಾಕಿ ಕೆಲಸ ಮಾಡುತ್ತಲಿದ್ದೆವು. ಈ ಕೆಲಸದಲ್ಲಿ ಮನಸ್ಸು ಹಾಕುತ್ತಿದ್ದುದರಿಂದ ಡೋರಾಳ ಮರಣದಿಂದುಂಟಾಗಿದ್ದ ದುಃಖ ಸ್ವಲ್ಪ ಹಗುರವಾಗಿಯೂ ತೋರುತ್ತಿತ್ತು. ಆದರೆ, ಮನಸ್ಸು ತಾತ್ಕಾಲಿಕವಾಗಿ ಬೇರೆ ವಿಷಯಗಳಲ್ಲಿ ಪ್ರವಹಿಸಿ ಪುನರಪಿ ಡೋರಾಳ ನೆನಪನ್ನೇ ಅಪ್ಪಿಕೊಳ್ಳುವಾಗ ದುಃಖದ ತೀಕ್ಷ್ಣತೆ ಮೊದಲಿಗಿಂತಲೂ ಎಷ್ಟೆಷ್ಟೋ ಹೆಚ್ಚಾಗಿರುತ್ತಿತ್ತು. ನನ್ನ ದುಃಖ ಶಮನಕ್ಕೆ ದೇಶಾಟನೆಯು ಉತ್ತಮ ಸಾಧನವೆಂದು ಅತ್ತೆ ಮತ್ತು ನನ್ನ ಮಿತ್ರರು ಸಲಹೆಯನ್ನು ಕೊಡುತ್ತಿದ್ದರು. ಹೇಗಿದ್ದರೂ ಮಿ. ಮೈಕಾಬರರ ಸಾಲಗಳನ್ನು ಪರಿಹರಿಸಿ, ಅವರ ಪರದೇಶ ಯಾತ್ರೆಗೆ ತಕ್ಕ ವ್ಯವಸ್ಥೆಗಳನ್ನು ಮಾಡಿ ಪೂರೈಸದೆ ನಾನು ಯಾವ ಆಲೋಚನೆಗಳನ್ನೂ ಮಾಡುವುದಿಲ್ಲವೆಂದು ನಿರ್ಧರಿಸಿಕೊಂಡೆನು.

ಮಿ. ಮೈಕಾಬರರನ್ನು ಕುರಿತು ಕೆಲಸಗಳಲ್ಲಿ ಟ್ರೇಡಲ್ಸನು ಎಷ್ಟೊಂದು ಕೆಲಸ ಮಾಡುತ್ತಿದ್ದನೆಂದು ನನ್ನಿಂದ ಹೇಳಿ ಪೂರೈಸದು. ಅವನ ಕುರಿತಾದ ನಮ್ಮ ಕೃತಜ್ಞತೆಯನ್ನು ವಂದನೆಗಳಿಂದ ವಿವರಿಸಿ ಮುಗಿಸಲಾರೆವು. ಅವನು ಮಿ. ವಿಕ್ಫೀಲ್ಡರ ರಿಕಾರ್ಡುಗಳನ್ನು ಹಗಲಿರುಳು ಓದಿ ನೋಡಿ, ಪರೀಕ್ಷಿಸಿ, ಬರೆದು ನೋಡಿ, ಅಂಕೆ ಸಂಖ್ಯೆಗಳನ್ನು ಕೂಡಿಸಿ ಕಳೆದು ನೋಡಿ, ಪರೀಕ್ಷಿಸುತ್ತಿದ್ದನು. ಮುಖ್ಯವಾಗಿ ಯಾವ ವಹಿವಾಟುಗಳಲ್ಲಿಯೂ ಮಿ. ವಿಕ್ಫೀಲ್ಡರಿಗೆ ಅಪಮಾನವಾಗಕೂಡದೆಂಬ ಗುರಿಯನ್ನೂ ಸಾಧ್ಯವಾದರೆ – ಸಾಧ್ಯವಾದಷ್ಟು, ಅವರ ಆಸ್ತಿ ಅವರದಾಗಿಯೇ ಉಳಿಯುವಂಥ ಗುರಿಯನ್ನೂ ಇಟ್ಟುಕೊಂಡು ಇಂಥ ಪ್ರಯತ್ನಗಳನ್ನು ಅವನು ಮಾಡುತ್ತಿದ್ದನು.

ಇದೇ ಸಂದರ್ಭದಲ್ಲಿ ನಾವು ಮಿ. ಮೈಕಾಬರರ ಉಪಕಾರಗಳು ಎಷ್ಟಿತ್ತೆಂಬುದನ್ನು ಸ್ಮರಿಸುವುದು ನ್ಯಾಯವಿದೆ. ಮಿ. ಮೈಕಾಬರರಂಥ ಶ್ರಮಸಹಿಷ್ಣುಗಳೂ ಪರಿಶ್ರಮಿಗಳೂ ಯಾವ ವೃತ್ತಿಯಲ್ಲಿದ್ದರೂ ಅವರು ಅಭಿವೃದ್ಧಿಯನ್ನು ಹೊಂದದೆ ಇರಲಾರರು. ಅವರ ಧರ್ಮ ಬುದ್ಧಿ, ಕರ್ತವ್ಯ ನಿಷ್ಠೆ, ತರ್ಕ ಸರಣಿ, ರಿಕಾರ್ಡುಗಳ ಪರಿಶೋಧನಾಕ್ರಮ, ಶೋಧಿಸಿದ ರಿಕಾರ್ಡುಗಳನ್ನು ಕುರಿತು ಮಾಡುವ ಟಿಪ್ಪಣಿ – ಈ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದುದನ್ನೂ ನೋಡಿದರೆ ಅವರ ಯೋಗ್ಯತೆ ಎಷ್ಟಿತ್ತು, ಅವರು ಮಿ. ವಿಕ್ಫೀಲ್ಡರ ಆರ್ಥಿಕ ಉದ್ಧಾರದಲ್ಲಿ ಮಾಡಿರುವ ಉಪಕಾರ ಎಷ್ಟು, ಎಂಬುದು ನಮಗೆ ತೋರುತ್ತಿದ್ದುವು. ತಾವು ಕಡುಬಡತನದಲ್ಲೇ ನರಳುತ್ತಿದ್ದರೂ – ಸರ್ವ ಸಾಧಾರಣದ ವ್ಯಕ್ತಿಗಳು ಹತ್ತಾರು ಪೌಂಡು ಲಂಚಕ್ಕೆ ಸೋಲಬಹುದಾಗಿದ್ದ ಸಂದರ್ಭದಲ್ಲೇ ಉರೆಯನು ನೂರಾರು, ಅಲ್ಲ, ಸಾವಿರಗಟ್ಟಲೆ ಪೌಂಡು ಲಂಚ ಕೊಡಲು ತಯಾರಾಗಿದ್ದಾಗಲೇ ಅವರು ಯಾವ ವಿಧದ ಅನ್ಯಾಯದ ಹಣವನ್ನೂ ಮುಟ್ಟದೆ, ಕರ್ತವ್ಯ ಮತ್ತು ಧರ್ಮರಕ್ಷಣೆಗಾಗಿ, ಉರೆಯನನ್ನು ಎದುರಿಸಿ, ಹಠಗಟ್ಟಿ ಅವನ ತಂತ್ರಗಳನ್ನು ಮುರಿದು ಬೈಲಿಗೆಳೆದು, ಮಿ. ವಿಕ್ಫೀಲ್ಡರ ಸಂಸಾರವನ್ನೂ ಅವರ ಮೂಲಕ ನಷ್ಟಗಳನ್ನು ಹೊಂದಿದ ಇತರರನ್ನೂ ಕಾಪಾಡಿದ ಕಾರ್ಯ ಮಹತ್ತರವಾದುದೆಂಬುದರಲ್ಲಿ ಸಂಶಯವಿಲ್ಲ. ಈ ಕಾರಣಗಳಿಂದಲೇ ಅವರ ಕುಟುಂಬದ ಮುಂದಿನ ಹಿತಗಳನ್ನು ಒದಗಿಸಲು ನಾವೆಲ್ಲರೂ ತವಕಪಡುತ್ತಿದ್ದೆವು.

ನಮ್ಮ ಅತ್ತೆಯ ಜೀವನದಲ್ಲು ಇದೇ ಸಮಯದಲ್ಲಿ ಒಂದು ಅಪೂರ್ವ ಘಟನೆ ಸಂಭವಿಸಿತು. ಅತ್ತೆಯ ಮೇಲೆ ಅವಳ ವೈರಿಯೊಬ್ಬನನ್ನು ಎಚ್ಚರಿಸಿ, ಸಹಾಯ ಕೊಟ್ಟು ಅಟ್ಟುವುದಾಗಿ, ಉರೆಯ ನಮ್ಮೆದುರು ಹೆದರಿಸಿದ್ದನು. ಆದರೆ ಆ ವೈರಿಯು ಯಾರೆಂದು (ಉರೆಯನಿಗೆ ಗೊತ್ತಿರದಿದ್ದರೂ) ಅತ್ತೆಗೆ ಗೊತ್ತಿತ್ತು. ಉರೆಯ (ಆ ವೈರಿಯನ್ನು ಕುರಿತು ತನಗೆ ಮಾತ್ರ ಗೊತ್ತಿದ್ದಿತೆಂದು ಗ್ರಹಿಸಿ) ಬೆದರಿಸಿದಾಗಲೇ ಅವನು ಮೃತಪಟ್ಟಿದ್ದನೆಂದು ಅತ್ತೆಗೆ ಗೊತ್ತಿದ್ದಿತು. ಆ ವೈರಿ ಇನ್ನು ಯಾರೂ ಅಲ್ಲ – ಅತ್ತೆಯ ಗಂಡ ಮಾತ್ರ. ಅವನು ಆಸ್ಪತ್ರೆಯಲ್ಲಿ ಮೃತ್ಯುಶಯ್ಯೆಯಲ್ಲಿದ್ದಾಗ ಅತ್ತೆಯನ್ನು ಬರಮಾಡಿಕೊಂಡಿದ್ದನು. ಅತ್ತೆ ಅವನ ಕೊನೆಯ ಘಳಿಗೆಯವರೆಗೂ ಅವನ ಜತೆಯಲ್ಲೇ ಇದ್ದು, ಅವನು ಮೃತಪಟ್ಟನಂತರ ಉತ್ತರ ಕ್ರಿಯೆಗಳನ್ನೆಲ್ಲಾ ಮಾಡಿ ಮುಗಿಸಿ ಬಂದಿದ್ದಳು. ಈ ಕೆಲಸಗಳನ್ನೆಲ್ಲಾ ಅತ್ತೆ ಗುಟ್ಟಾಗಿಯೇ ನಡೆಸಿದ್ದಳು. ಈ ಕೆಲಸಗಳೆಲ್ಲ ಮುಗಿದನಂತರ ಒಂದು ದಿನ ಅತ್ತೆ ನನ್ನನ್ನು ಕರೆದುಕೊಂಡು ಹೋಗಿ ಗೋರಿಯನ್ನು ತೋರಿಸಿದ್ದಳು. ಅವಳು ಅವನನ್ನು ಪ್ರೀತಿಸಿದ್ದ ಒಂದೇ ಒಂದು ಕಾರಣದಿಂದ ಮತ್ತು ಧರ್ಮದೃಷ್ಟಿಯಿಂದ ಅತ್ತೆ ತನ್ನ ಗಂಡನ ಸಹಸ್ರ ಅಪರಾಧಗಳನ್ನು ಸಹಿಸಿ, ಮನ್ನಿಸಿ, ಹಣಕೊಟ್ಟು ಅವನನ್ನು ರಕ್ಷಿಸಿ, ಅವನ ಅಂತಿಮ ಕ್ರಿಯೆಗಳನ್ನು ಮಾಡಿಸಿದ್ದಳು.

ಅತ್ತೆ ಮಿ. ಮೈಕಾಬರ ದಂಪತಿಗಳನ್ನು ಬಹಳ ಮೆಚ್ಚಿದ್ದಳು. ಅದರಲ್ಲೂ ನಮ್ಮ ಹಣದ ವಹಿವಾಟದಲ್ಲಿ ಯಶಸ್ವಿಯಾಗಿ ಬರಲು ಮಿ. ಮೈಕಾಬರರ ಸಹಾಯ ಅಳತೆಗೆ ಸಿಕ್ಕದ – ಅಳತೆಗೆ ಮೀರಿದ, ಉಪಕಾರವೆಂದು ಅತ್ತೆ ನೆನೆಸುತ್ತಿದ್ದಳು. ಇದಕ್ಕಾಗಿಯೇ ಮಿ. ಮೈಕಾಬರರು ಆಸ್ಟ್ರೇಲಿಯಕ್ಕೆ ಹೋಗುವ, ಅಲ್ಲಿ ನೆಲಸುವ, ಇತ್ಯಾದಿ ಎಲ್ಲಾ ಖರ್ಚುಗಳನ್ನು ತಾನೇ ಕೊಡಬೇಕೆಂದು ನಿರ್ಧರಿಸಿಕೊಂಡಿದ್ದಳು.

ಮಿ. ಮೈಕಾಬರರ ಸಾಲಗಳ ಸಂಖ್ಯೆಯಾಗಲೀ ಮೊತ್ತವಾಗಲೀ ಎಷ್ಟಿತ್ತೆಂದು ಅವರಿಗೇ ಗೊತ್ತಿರಲಿಲ್ಲ. ಹಣದ ಅಡಚಣೆಗಾಗಿ ಮನಸ್ಸು ಕುಗ್ಗಿ ಉರೆಯನಿಗೆ ಪ್ರೋನೋಟು ಬರೆದು ಕೊಡುತ್ತಿದ್ದಾಗ ತನಗೆ ಬಂದ ಹಣಕ್ಕೂ ಬರದಿದ್ದ ಹಣಕ್ಕೂ ನೋಟು ಬರಕೊಟ್ಟಿರಬೇಕೆಂಬ ಸಂಶಯ ಅವರಿಗೆ ಕ್ರಮೇಣವಾಗಿ ಉಂಟಾಯಿತು. ಟ್ರೇಡಲ್ಸನ ಪರಿಶೋಧನೆಯಲ್ಲೂ ಪರಿಸ್ಥಿತಿಗಳು ಹಾಗೆಯೇ ಕಂಡು ಬಂದವು. ಹೀಗಾಗಿ ಅವರ ಸಾಲದ ಮರುಪಾವತಿಗಾಗಿ ಒಂದು ಪ್ರೋನೋಟು ಎದುರು ಬಂದಾಗ ಅದನ್ನು ತೆತ್ತು ಪರಿಹರಿಸಿ, ಮುಂದೆ ಬರಬಹುದಾದುವುಗಳನ್ನು ಎದುರು ನೋಡುತ್ತಲೇ ಇರಬೇಕಾಗಿತ್ತು.

ಇತ್ತ, ಮಿ. ಮೈಕಾಬರರಿಗೆ ತಾವು ಆಸ್ಟ್ರೇಲಿಯಕ್ಕೆ ಹೋಗಿ, ಅಲ್ಲಿ ನೆಲಸಿ, ಶ್ರೀಮಂತರಾಗುವ ವಿಷಯ ಒಂದು ಎಡೆಬಿಡದ ಹಂಬಲವಾಗಿ ಹೋಗಿತ್ತು. ಅವರು ಅವರ ನಡೆ, ನುಡಿ, ವ್ಯವಹಾರಗಳಲ್ಲಿ ಸಂಪೂರ್ಣ ಆಸ್ಟ್ರೇಲಿಯದವರಂತೆಯೇ ವರ್ತಿಸತೊಡಗಿದ್ದರು. ಆಸ್ಟ್ರೇಲಿಯದ ವಿಶಾಲ ಹುಲ್ಲುಗಾವಲುಗಳಲ್ಲಿ ದನಕರು, ಹಂದಿ ಮೊದಲಾದುವುಗಳನ್ನು ಸಾಕಿ ಹಣಮಾಡುವ ಕೆಲಸವನ್ನು ಅಲ್ಲಿಗೆ ಹೋದನಂತರ ಅಭ್ಯಾಸ ಮಾಡುವ ಬದಲು ಇಂಗ್ಲೆಂಡಿನಲ್ಲಿದ್ದಾಗಲೇ ಅಭ್ಯಾಸ ಮಾಡುವುದಕ್ಕಾಗಿ ಈಗಾಗಲೇ ಕೆಲವು ಹಂದಿಗಳನ್ನು ಕ್ರಯಕ್ಕೆ ತೆಗೆದುಕೊಂಡು ಅವುಗಳನ್ನು ಸಾಕುವುದನ್ನೂ ತಮ್ಮಲ್ಲೇ ಇದ್ದ ದನಗಳನ್ನು ತಾವೇ ಸ್ವತಃ ಆಸ್ಟ್ರೇಲಿಯದ ಕೃಷಿಕನಂತೆ ಹಾಲು ಕರೆಯುವುದನ್ನೂ ಅಭ್ಯಾಸ ಮಾಡುತ್ತಿದರು.

ಟ್ರೇಡಲ್ಸನು ರಿಕಾರ್ಡು ಪರಿಶೋಧನೆಯ ಫಲಿತಾಂಶವಾಗಿ ಮಿ. ವಿಕ್ಫೀಲ್ಡರ ಮನೆಯೂ ಹಿತ್ತಲೂ ಕಂಪನಿಗಳಲ್ಲಿದ್ದ ಅವರ ಪಾಲುಗಳೂ ಯಾವ ಸಾಲವು ಇಲ್ಲದೆ ಅವರದಾಗಿ ಉಳಿಯುವುದಾಗಿ ತಿಳಿದೆವು. ಉರೆಯ ತನ್ನ ರಿಕಾರ್ಡುಗಳನ್ನು ತಯಾರಿಸುವಾಗ ಮಿ. ವಿಕ್ಫೀಲ್ಡರ ಆಸ್ತಿಗಳನ್ನು ನಾಶಪಡಿಸುವ ಉದ್ದೇಶವಿರದೆ, ಆ ಆಸ್ತಿಗಳೆಲ್ಲ ತನ್ನದಾಗಬೇಕೆಂಬ ಉದ್ದೇಶ ಮಾತ್ರ ಇಟ್ಟುಕೊಂಡಿದ್ದುದರಿಂದಲೂ ಉರೆಯನು ಸ್ವತಃ ಮಿತವ್ಯಯಿಯಾಗಿದ್ದುದರಿಂದಲೂ ಮತ್ತು ಈ ಕುತಂತ್ರಗಳನ್ನು ಕಂಡು ಹಿಡಿದು ಬಂದೋಬಸ್ತಿನ ಕಾರ್ಯಗಳನ್ನು ಜರುಗಿಸಿದ ಚಮತ್ಕಾರ ಮತ್ತು ಕ್ಷಿಪ್ರತೆಯ ಕಾರಣದಿಂದಲೂ ನಾವು ಹೆದರುತ್ತಿದ್ದಷ್ಟು ನಷ್ಟವಾಗದೆ ಮಿ. ವಿಕ್ಫೀಲ್ಡರಿಗೆ ಅಷ್ಟಾದರೂ ಆಸ್ತಿ ಉಳಿಯಿತು.

ಅತ್ತೆಯ ವಹಿವಾಟುಗಳಲ್ಲಿ ಟ್ರೇಡಲ್ಸನಿಗೆ ಪರಿಹರಿಸಲಾಗದ ಒಂದು ಸಮಸ್ಯೆ ತೋರುತ್ತಿತ್ತು. ಅತ್ತೆಯ ಆಸ್ತಿಯನ್ನು ಮಾರಿ ಸಿಕ್ಕಿದ್ದ ಐದು ಸಾವಿರ ಪೌಂಡುಗಳಲ್ಲಿ ಉರೆಯ ಮೂರು ಸಾವಿರ ಪೌಂಡುಗಳನ್ನು ಅಪಹರಿಸಿದ್ದಾನೆಂಬುದು ಗೊತ್ತು ಹಚ್ಚಲ್ಪಟ್ಟು, ಅಷ್ಟು ಹಣ ತನಿಖೆಯಿಂದ ನಮಗೆ ಸಿಕ್ಕರೂ ಉಳಿದಿದ್ದ ಎರಡು ಸಾವಿರ ಪೌಂಡು ಎಲ್ಲಿ ಹೋದುವೆಂಬುದನ್ನು ಕಂಡು ಹಿಡಿಯಲು ಟ್ರೇಡಲ್ಸನಿಂದ ಸಾಧ್ಯವಾಗಲಿಲ್ಲ. ಟ್ರೇಡಲ್ಸನು ಈ ಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾನೆಂದು ಅತ್ತೆಗೆ ಗೊತ್ತಾದ ಕೂಡಲೇ ಅತ್ತೆ ತನ್ನ ಗುಟ್ಟನ್ನು ಹೊರಬಿಟ್ಟಳು. ಆ ಎರಡು ಸಾವಿರ ಪೌಂಡುಗಳನ್ನು ಅತ್ತೆಯು ಆಪದ್ಧನವಾಗಿ ತನ್ನ ಕೈಯಲ್ಲೇ ಇಟ್ಟುಕೊಂಡಿದ್ದಳೆಂದು ತಿಳಿಯಿತು. ಕೊನೆಗೆ ಟ್ರೇಡಲ್ಸನಿಗೆ ಉಳಿದಿದ್ದ ಕಾರ್ಯ ಎರಡೇ ಆಗಿದ್ದುವು. ಒಂದನೆಯದಾಗಿ, ಮಿ. ಮೈಕಾಬರರ ಸಾಲಗಳನ್ನು ಪರಿಹರಿಸುವುದು. ಎರಡನೆಯದಾಗಿ, ಉರೆಯನನ್ನು ಕುರಿತಾದ ಮುಂದಿನ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.

ಮಿ. ಮೈಕಾಬರರ ಸಾಲಗಳ ತಗಾದೆ ಶಾಸನಬದ್ಧವಾಗಿ ಎದುರು ಬಂದಾಗ ಟ್ರೇಡಲ್ಸನು ಅತ್ತೆಯ ಕೈಯ್ಯಿಂದ ಹಣ ತೆಗೆದುಕೊಂಡು, ತಗಾದೆಯನ್ನು ಪರೀಕ್ಷಿಸಿ, ನ್ಯಾಯವಿದ್ದದ್ದನ್ನು ಕೊಟ್ಟು ಬರತೊಡಗಿದನು. ಈ ಖರ್ಚುಗಳನ್ನು ಅತ್ತೆಯು ಸಹಿಸಿದಳು. ಅಲ್ಲದೆ, ಮಿ. ಮೈಕಾಬರರ ಆಸ್ಟ್ರೇಲಿಯದವರೆಗಿನ ಪ್ರಯಾಣದ ಖರ್ಚನ್ನೂ ಅಲ್ಲದೆ, ಅಲ್ಲಿ ಹೋದ ಮೇಲಿನ ಉದ್ಯಮಗಳ ಬಗ್ಗಾಗಿ ಮಿ. ಮೈಕಾಬರರಿಗೆ ಒಂದು ನೂರು ಪೌಂಡುಗಳನ್ನೂ ಕೊಟ್ಟಳು. ಮತ್ತು ಮಿ. ಮೈಕಾಬರರ ಸ್ವಭಾವ ಮತ್ತು ನಡತೆಗಳಿಗೆ ಅಂಜಿ ಗೋಪ್ಯವಾಗಿ ಮಿ. ಮೈಕಾಬರರಿಗೆ ಆಪತ್ಕಾಲದಲ್ಲಿ ಮಾತ್ರ ಮಿ. ಪೆಗಟಿಯವರು ಕೊಟ್ಟು ಬರುವಂತೆ, ಮಿ. ಪೆಗಟಿಯ ಕೈಯ್ಯಲ್ಲೂ ಒಂದು ನೂರು ಪೌಂಡು ಹಣ ಕೊಟ್ಟಳು.

ಉರೆಯನನ್ನು ಕುರಿತಾದ ಕಾರ್ಯಕ್ರಮಗಳು ಸರಕಾರದ ಇಲಾಖೆಗಳಲ್ಲಿ ಕ್ರಮ ಪ್ರಕಾರವಾಗಿ, ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ನಡೆಯತೊಡಗಿದುವು. ಅವುಗಳಲ್ಲಿ ಅಗತ್ಯವಿದ್ದ ಕೆಲಸಗಳನ್ನು ಟ್ರೇಡಲ್ಸನು ಮಾಡಿಕೊಡುತ್ತಿದ್ದನು.

ಈ ಮೊದಲು ಪ್ರಸ್ತಾಪಿಸಿದ ಹಣದ ಬಟವಾಡೆಗಳನ್ನೆಲ್ಲ ಮಾಡಿದ ಮರುದಿನ ಬೆಳಗ್ಗೆ ಕೇಂಟರ್ಬರಿಯಿಂದ ನಮಗೊಂದು ಪತ್ರ ಬಂತು. ಪತ್ರ ಹೀಗಿತ್ತು:
ಕೇಂಟರ್ಬರಿ, ಶುಕ್ರವಾರ
ಪ್ರಿಯ ಮಹಿಳಾಮಣಿ ಟ್ರಾಟೂಡರೇ ಮತ್ತು ಮಿ. ಕಾಪರ್ಫೀಲ್ಡರೇ
ನಮ್ಮ ಜೀವನಪಥದಲ್ಲಿ ಶುಭೋದಯವಾಗಿ ಪರಿಣಮಿಸಲಿದ್ದ ದೂರ ಪ್ರಾಚ್ಯದ ನಾಡಿನ ದೃಶ್ಯವು ದಿಗಂತದಲ್ಲಿ ಆಕರ್ಷಣೀಯವಾಗಿ ಗೋಚರಿಸತೊಡಗಿದಾಗಲೇ ಕಾರ್ಮೋಡದ ಕತ್ತಲು ದೃಶ್ಯವನ್ನು ಪರಿಪೂರ್ಣ ಮುಚ್ಚಿದೆ. ಈ ಪಾಪಿಯು ಆ ದೃಶ್ಯವನ್ನು ಇನ್ನೆಂದಿಗೂ ನೋಡಲಾರನು.

ನಮ್ಮ ಸರಕಾರದ ನ್ಯಾಯಸ್ಥಾನದ ಹೀಪ್ ಮತ್ತು ಮೈಕಾಬರ್ ವ್ಯವಹರಣೆಯಲ್ಲಿನ ಡಿಕ್ರಿ ಪ್ರಕಾರದ ದಸ್ತಗಿರಿಯ ದೆಸೆಯಿಂದ ನಾನು ಪ್ರಕೃತ ಸರಕಾರದ ಬಂದೋಬಸ್ತಿನಲ್ಲಿದ್ದೇನೆ. ಈ ಸಂದರ್ಭಕ್ಕೆ ಹೋಲಿಸುವಂಥ ಮಹಾಕವಿಯೊಬ್ಬನ ಅಮರ ವಾಕ್ಯಗಳು
ಈಗ ನೆನಪಿಗೆ ಬರುತ್ತವೆ:
ಕಾದಿದ ಯುದ್ಧದಿ ಜಯಪ್ರದನಾಗಿ
ಬಾಳುವೆನೆಂದು ಹರುಷದಿ ಹೋಗಿ,
ಆದನು ವೈರಿಯ ಘನತರ ಖೈದೀ!

ಮಾನಸಿಕ ಹಿಂಸೆಗೂ ಒಂದು ಎಲ್ಲೆಯಿದೆ. ನಾನೀಗ ಈ ಎಲ್ಲೆಯನ್ನು ದಾಟಿರುವೆನು. ಆತ್ಮಹತ್ಯೆ ಮಾತ್ರ ಈ ದುಃಖದ ವಿಮೋಚನಾ ಸಾಧನವೆಂದು ಕ್ರೂರ ವಿಧಿಯು ನನಗೆ ತಿಳಿಸುತ್ತಿದೆ. ಈ ಜೈಲಿನಲ್ಲಿ ಜೀವವನ್ನು ಸವೆಯಿಸಿ ಸತ್ತ ಸಾಲಗಾರರಲ್ಲಿ ಸಹಾನುಭೂತಿಯುಳ್ಳ ಚರಿತ್ರಕಾರನೊಬ್ಬನು ಈ ವಠಾರದಲ್ಲಿ ತಿರುಗಾಡುತ್ತಾ ಬಂದದ್ದಾದರೆ ಇಲ್ಲಿನ ಗೋಡೆಯಲ್ಲಿ ಮುರುಕು ಮೂಳೆಯಿಂದ ಕೆತ್ತಿದ ಈ ಮುಂದಿನ ಎರಡಕ್ಷರಗಳು ಮಾತ್ರ ನಾನೊಬ್ಬ ಮನುಷ್ಯ ಬದುಕಿದ್ದೆನೆಂಬುದಕ್ಕೆ ಕುರುಹಾಗಿ ಉಳಿದು ಕಾಣಬಹುದು
ಸವೆದು ಮಸಕಾಗುವ –
ವಿ.ಮೈ.

ಅನಂತರ ಬರೆದದ್ದು –
ಮೇಲಿನ ಅಂಶವನ್ನು ಬರೆದು ಟಪಾಲಿಗೆ ಪತ್ರವನ್ನು ಹಾಕುವ ಮೊದಲು ನಾನು ತಿಳಿದ ಸಂತೋಷದ ಸಂಗತಿಯೇನೆಂದರೆ – ನಮ್ಮ ಪರಮ ಮಿತ್ರ ಮಿ. ಥಾಮಸ್ ಟ್ರೇಡಲ್ಸರವರು ನನ್ನಿಂದ ಸಲ್ಲಬೇಕಾಗಿದ್ದ ಅಸಲು, ಬಡ್ದಿ, ಕೋರ್ಟು ಖರ್ಚು ಎಲ್ಲವನ್ನೂ ಮಿಸ್ ಟ್ರಾಟೂಡರವರ ಹೆಸರಿನಲ್ಲಿ ಪಾವತಿ ಮಾಡಿ ನನ್ನನ್ನು ಸಾಲದಿಂದ ವಿಮುಕ್ತಗೊಳಿಸಿರುತ್ತಾರೆ. ಈ ಪತ್ರವು ನಿಮಗೆ ತಲಪುವ ಘಳಿಗೆಯಲ್ಲಿ ನಮ್ಮ ಕುಟುಂಬವೂ ನಾನೂ ಸಂತೋಷ ಶಿಖರದಲ್ಲೇ ಇರುವೆವು.